ಪುಟಗಳು

ಶನಿವಾರ, ಫೆಬ್ರವರಿ 28, 2015

ಪ್ರಥಮ ಚುಂಬನ

ಮೇಘ ಲಾಸ್ಯದ ನಡುವೆ ಮೊಳಗಿತು
ಯುದ್ಧ ಘೋಷದ ಸಂಭ್ರಮ
ಇಳೆಯ ದೈನ್ಯದ ದನಿಗೆ ಮರುಗುತ
ವರುಣನಿಳಿದಿರೆ ವಿಭ್ರಮ

ಮೇಘ ಘಾತಕೆ ತೋಷ ಹೊಂದಿರೆ
ನವಿಲು ನಲಿದಿದೆ ಒಮ್ಮೆಲೇ
ಪ್ರಥಮ ಚುಂಬನದ ಕಂಪು ಪಸರಿಸೆ
ಮತ್ತೆ ಹಾಡಿದೆ ಕೋಗಿಲೆ

ಇಳೆಯ ತೊಳೆಯುವ ಮೊದಲ ಮಳೆಗೆ
ನೆನೆಯುವಾಸೆ ಮೂಡಿದೆ
ಬೀಸುತಿಹ ತಂಗಾಳಿಯ ಸುಖದಿ
ನಿನ್ನ ನೆನಪು ಕಾಡಿದೆ


ಗುರುವಾರ, ಫೆಬ್ರವರಿ 19, 2015

"ಕೇಸರಿ"ವೃಷ್ಟಿ

ತೆಂಕಣ ಬಡಗಣದೊಳು ಮತಾಂಧತೆಯ ಅಮಲು|
ಸುತ್ತಲೂ ಆವರಿಸಿಹ ಮತಾಂತರಿಗಳ ಘಮಲು||
ಧರ್ಮ ಸಂಸ್ಕೃತಿ ಅಳಿದು ಹೋಗಿರಲು|
ತಾಯಿ ಭಾರತಿ ಕಣ್ಣೀರ್ಗರೆದಿಹಳು||

ಅಂಬಾ ಭವಾನಿಯ ಕಾರುಣ್ಯ ದೃಷ್ಟಿ|
ಸಮರ್ಥ ರಾಮರ ದಿವ್ಯದೃಷ್ಟಿ||
ದೇಶ ರಕ್ಷಣೆಗೆ ಶಿವನಂಶದ ಸೃಷ್ಟಿ|
ಭರತ ಭೂಮಿಯಲಿ "ಕೇಸರಿ"ವೃಷ್ಟಿ||

ಬಾಲ ಮೊಗದಲಿ ಬೀಷ್ಮ ಪ್ರತಿಜ್ಞೆ|
ಧರ್ಮ ಪ್ರತಿಷ್ಠಾಪನೆಯ ಖಡ್ಗ ದೀಕ್ಷೆ||
ಮಾವಳಿ ವೀರರ ಜೊತೆಗಾರ|
ಸೋಲಿಲ್ಲದ ಸರದಾರ||

ಅಡಿಗಡಿಗೆ ಕಿಡಿಯುರಿಸಿದ ವರಮಾತೆ ಜೀಜಾಜಿ|
ಗುರಿ ತೋರಿಸಿದ ಗುರು ದಾದಾಜಿ, ತಂದೆ ಷಾಹಜೀ||
ತಾನಾಜಿ ಏಸಾಜಿ ನೇತಾಜಿ ಕಂಕಾಜಿ|
ಬಡ ಮಾವಳಿಗಳ ಪಡೆ ಕಟ್ಟಿದ್ದು ಶಿವಾಜಿ||

ವಿಶಾಲ ರಾಯ ಪ್ರತಾಪ ಚಾಕಣ|
ಕೊಂಡಾಣ ಪನ್ನಾಳ ಪುರಂದರಗಳ ತೋರಣ||
ಶತ್ರುವಿನ ಮನೆ ಹೊಕ್ಕು ಎದೆ ಮೆಟ್ಟಿ ಧೀಂಗಿಣ|
ಅಫಜಲನೆದೆ ಸೀಳಿದ ತರುಣ ಮನದ ರಿಂಗಣ||

ಹಿಂದೂ ಮಂದಿರ ಸಾಗರವನುಳಿಸಿದ ಕ್ಷಾತ್ರತೇಜ|
ಸಂಸ್ಕೃತಿ ಧರ್ಮ ಪ್ರತಿಷ್ಠಾಪಿಸಿದ ಶಿವತೇಜ||
ಆನಂದ ಸಂವತ್ಸರದ ಜೇಷ್ಠ ಶುದ್ಧ ತ್ರಯೋದಶಿ|
ಸಿಂಹಾಸನವೇರಿದ ಹಿಂದೂ ಸಿಂಹ ಛತ್ರಪತಿ||


ಮಂಗಳವಾರ, ಫೆಬ್ರವರಿ 17, 2015

ಜನ ಮತ ಹಾಕಿದ್ದು ಭಾಜಪಾ ಕಾಂಗ್ರೆಸ್ ಆಗಿ ಬದಲಾಗಲೆಂದೇ?



ಜನ ಮತ ಹಾಕಿದ್ದು ಭಾಜಪಾ ಕಾಂಗ್ರೆಸ್ ಆಗಿ ಬದಲಾಗಲೆಂದೇ?
           ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಅರವಿಂದ ಕೇಜ್ರಿವಾಲರ ವ್ಯವಸ್ಥಿತವಾದ ಪ್ರಚಾರಕ್ಕೆ ತಕ್ಕ ಪ್ರತಿಫಲವೇ ಸಿಕ್ಕಿದೆ. ಅವರಿಗೆ ಅಭಿನಂದನೆ ಸಲ್ಲಲೇಬೇಕು. ಹಿಂದೊಮ್ಮೆ ನಲವತ್ತೊಂಬತ್ತು ದಿನಗಳ ಆಡಳಿತ ನಡೆಸಿ, ಸರಕಾರ ವಿಸರ್ಜಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸ ಹೊರಟ ಪಲಾಯನವಾದಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿದ ದೆಹಲಿಗರ ನಡೆ ಆಶ್ಚರ್ಯಚಕಿತವಾದರೂ ಮತದಾರರ ತೀರ್ಪನ್ನು ಒಪ್ಪಲೇಬೇಕಾಗುತ್ತದೆ. ಇರಲಿ ಸೋಲು ಗೆಲುವುಗಳೇನು ಶಾಶ್ವತವಾದವುಗಳಲ್ಲ. ರಾಜಕೀಯ ಪಂಡಿತರು ಸೋಲು ಗೆಲುವುಗಳ ಕಾರಣ ಹುಡುಕುತ್ತಾ ತಮ್ಮದೇ ಆದ ವಾದ ಮುಂದಿಡುತ್ತಿದ್ದಾರೆ. ಆದರೆ ಇಲ್ಲಿ ಆಮ್ ಆದ್ಮಿಯ ಗೆಲುವಿಗಿಂತಲೂ ಭಾಜಪಾದ ಸೋಲೇ ಅತಿಯಾದ ಚರ್ಚೆಯಲ್ಲಿದೆ. ಅದರಲ್ಲೂ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿನ ಭಾಜಪಾ ಸೋಲು ಸೆಕ್ಯುಲರುಗಳಿಗೆ ಹಾಲು ಕುಡಿದಷ್ಟು ಸಂತಸ ತಂದಿದೆ. ಮುಗಿಲು ಮುಟ್ಟಿರುವ ಸಂತೋಷ ಸಂಭ್ರಮಗಳ ಭರಾಟೆಯ ನಡುವೆ ಹಿಂದಿನ ವಿಧಾನಸಭಾ ಚುನಾವಣೆಗೆ ಹೋಲಿಸಿದಲ್ಲಿ ಭಾಜಪಾಕ್ಕೆ ದೊರಕಿದ ಮತಪ್ರಮಾಣವೇನೂ ಕಡಿಮೆಯಾಗಿಲ್ಲ ಎನ್ನುವುದು ಅವರಿಗೆ ಮರೆತು ಹೋಗಿದೆ. ಅತ್ತ ಅಧಿಕಾರಗ್ರಹಣ ಮಾಡಿದ ಅರವಿಂದ ಕೇಜ್ರಿವಾಲ್ ತಮ್ಮ ಕೆಲವೊಂದು ಭರವಸೆಗಳಿಂದ ಈಗಾಗಲೇ "U-Turn" ತೆಗೆದುಕೊಂಡಾಗಿದೆ. ದೆಹಲಿಯ ಜನ ಉಚಿತವಾಗಿ ಸಿಗಬಹುದಾದ ವಸ್ತುಗಳಿಗೆ ಜಾತಕಪಕ್ಷಿಗಳಂತೆ ಕಾದುಕುಳಿತಿದ್ದಾರೆ, ಕಾಯುತ್ತಲೇ ಇರಬೇಕಾಗುತ್ತದೆ!

             ಭಾಜಪಾದ ಸೋಲಿಗೆ ಕಿರಣ್ ಬೇಡಿಯವರನ್ನು ಕೊನೆಯ ಕ್ಷಣದಲ್ಲಿ ಹಠಾತ್ತನೆ ಪಕ್ಷಕ್ಕೆ ಆಹ್ವಾನಿಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು, ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದುದು, ವ್ಯವಸ್ಥಿತ ಪ್ರಚಾರದ ಕೊರತೆ, ಚುನಾವಣೆಗೆ ಕೆಲವೇ ದಿನಗಳಿರುವಾಗ ಪ್ರಚಾರವನ್ನು ಆರಂಭಿಸಿದ್ದು, ಸತ್ವಹೀನವಾಗಿದ್ದ ದೆಹಲಿ ಭಾಜಪಾ ಘಟಕ, ಅಥವಾ ಇನ್ನೂ ಕೆಲವು ವಿಶ್ಲೇಷಕರ ಊಹೆಯಂತೆ ಭಾಜಪಾಕ್ಕೇ ಬೇಕಾಗಿದ್ದ ಸೋಲು(?) ಹೀಗೆ ಹತ್ತು ಹಲವು ಕಾರಣಗಳಿರಬಹುದು. ಆದರೆ ಮುಖ್ಯವಾದ ಕೆಲವು ಅಂಶಗಳನ್ನು ಬಹುತೇಕ ವಿಶ್ಲೇಷಕರು ಮರೆಮಾಚಿದರು. 2013ರಲ್ಲಿ 33.07% ಮತ ಗಳಿಸಿದ್ದ ಭಾಜಪಾಕ್ಕೆ 2015ರಲ್ಲಿ ದೊರೆತ ಮತ ಪ್ರಮಾಣ 32.20%. ಅಂದರೆ ಕೇವಲ 0.87% ಮತಗಳಷ್ಟೇ ಕಡಿಮೆಯಾಯಿತು. ಅದೇ ಕಾಂಗ್ರೆಸ್ಸಿನ 14%(24.55%-9.7%) ಹಾಗೂ ಬಿ.ಎಸ್.ಪಿ. 4% ಇತರರ 5.14% ಮತಗಳು ಕಡಿಮೆಯಾದವು. ಹಾಗಾದರೆ ಮತಗಳೇನಾದವು? "ನೋಟಾ" ಮತಗಳೇನು? ಅಲ್ಲವೇ ಅಲ್ಲ. ಮತಗಳನ್ನೆಲ್ಲಾ ಪೊರಕೆ ಗುಡಿಸಿಟ್ಟುಕೊಂಡಿತು. ಹಾಗಾಗಿ ಆಪ್' ಮತಗಳಿಕೆ 29%ನಿಂದ 54%ಗೆ ಏರಿತು! ಇಮಾಮ್ ಬುಖಾರಿಯ ಫತ್ವಾವೋ ಅಲ್ಲಾ ಭಾಜಪಾದ ಮೇಲಿನ ದ್ವೇಷವೋ ಮುಸಲ್ಮಾನರಂತೂ ಎದ್ದು ಬಿದ್ದೂ ಹೋಗಿ ಆಪ್'ಗೆ ಮತ ಚಲಾಯಿಸಿದರು. ಹಾಗಂತ ಅವೇನೂ ಭಾಜಪಾಕ್ಕೆ ಬರುವ ಮತಗಳಂತೇನಲ್ಲ. ಇಷ್ಟರವರೆಗೆ ಸೆಕ್ಯುಲರ್ ಪಕ್ಷಗಳ ನಡುವೆ ಹರಿದು ಹಂಚಿಹೋಗುತ್ತಿದ್ದ ಮತಗಳೆಲ್ಲ ಒಂದಾಗಿ ಆಮ್ ಆದ್ಮಿ ಪಕ್ಷಕ್ಕೆ ಬಿದ್ದವು. ಹೀಗಾಗಿ ಜಯಲಕ್ಷ್ಮಿ "ಪೊರಕೆ" "ಕೈ" ಹಿಡಿದಳು! ಅಂದರೆ ಹಿಂದೂಗಳು ಒಟ್ಟಾಗದಿದ್ದರೆ ಏನಾಗಬಹುದು ಎನ್ನುವುದಕ್ಕೆ ನಿದರ್ಶನ ದೆಹಲಿಯ ಚುನಾವಣಾ ಫಲಿತಾಂಶ!

               ಇರಲಿ ಅಂಕಿಸಂಖ್ಯೆಗಳೇನಿದ್ದರೂ, ಕೊನೆಗೆ ಉಳಿಯುವುದು ಯಾರು ಹೆಚ್ಚು ಸ್ಥಾನಗಳಿಸಿದರು ಎನ್ನುವ ಅಂಶವೊಂದೇ. ಆದರೆ ದೆಹಲಿಯಲ್ಲಿನ ಭಾಜಪಾ ಸೋಲು ಹಿಂದುತ್ವವಾದಿಗಳ ಮೇಲೆರಗಲು ಸೆಕ್ಯುಲರುಗಳಿಗೆ ಅವಕಾಶ ಮಾಡಿಕೊಟ್ಟದ್ದು ಮಾತ್ರ ವಿಪರ್ಯಾಸ. ಇಲ್ಲದೇ ಇದ್ದಲ್ಲಿ ಭಾಜಪಾ ಸೋಲಿಗೆ ಘರ್ ವಾಪಸಿ ಕಾರಣ, ಸಾವರ್ಕರ್, ಭಗತ್, ಗೋಡ್ಸೆಯವರನ್ನು ವೈಭವೀಕರಿಸಿದ್ದೇ ಕಾರಣ, ಗಾಂಧಿಯವರನ್ನು ರಾಷ್ಟ್ರಪಿತ ಎನ್ನಬಾರದೆಂದು ಕೆಲವು ನಾಯಕರು ಕರೆಕೊಟ್ಟದ್ದೇ ಕಾರಣ, ಸಾಧ್ವಿ ಪ್ರಾಚೀ, ಸಾಕ್ಷಿ ಮಹಾರಾಜರ ಹಿಂದುತ್ವಪರ ಹೇಳಿಕೆಗಳೇ ಕಾರಣ, ಇವರೆಲ್ಲರ ಹೇಳಿಕೆಗೆ ಮೋದಿಯವರ ಮೌನ ಸಮ್ಮತಿಯೇ ಕಾರಣ, ಅಲ್ಲದೇ ಅದಕ್ಕಿಂತಲೂ ಮುಂದೆ ಹೋಗಿ ಇದು ಗಾಂಧಿ v/s ಗೋಡ್ಸೆಯ ನಡುವೆ ಗಾಂಧಿಗೆ ಸಿಕ್ಕ ಜಯ ಅನ್ನುವಂತಹ ವಿಶ್ಲೇಷಣೆಗಳು ಯಾಕೆ ಬರುತ್ತಿದ್ದವು? ಘರ್ ವಾಪಸಿಯೇನು ಮೋದಿಯವರು ಪ್ರಧಾನಿಯಾದ ಮೇಲೆ ಆರಂಭಿಸಿದ್ದೇ? ಅಥವಾ ಅದು ಭಾಜಪಾದ ಕಾರ್ಯಕ್ರಮವೇ? ಸಂಘಪರಿವಾರವಾಗಲೀ ಅದರ ಅಂಗಸಂಸ್ಥೆಗಳೇ ಆಗಲೀ ಭಾಜಪಾದ ನಿರ್ದೇಶನದಂತೆ ಕೆಲಸ ಮಾಡುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದೇ ಹೋಯಿತಲ್ಲ? ಘರ್ ವಾಪಸಿಯನ್ನು "ಶುದ್ದೀಕರಣ"ವೆಂಬ ಚಳುವಳಿಯ ಮೂಲಕ ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಯವರು 1900ಕ್ಕೆ ಮೊದಲೇ ಆರಂಬಿಸಿದ್ದರೆಂಬ ಸಂಗತಿ ತಿಳಿಯದೇ? ಸಾವರ್ಕರರು ಕರಿನೀರ ಶಿಕ್ಷೆ ಅನುಭವಿಸುತ್ತಿದ್ದಾಗ ಮಾತೃಧರ್ಮಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದವರನ್ನು ತುಳಸೀದಳ ಕೊಟ್ಟು ಸಹೋದರರಂತೆ ಸ್ವೀಕರಿಸಿದರು ಎಂಬ ಇತಿಹಾಸ ಮರೆತುಹೋಯಿತೇ? ಒಂದು ಕಾಲದಲ್ಲಿ ಸಾವರ್ಕರರ ಭಾಷಣ ಕೇಳಲು ಆಫ್ರಿಕಾದಿಂದ ಇಂಗ್ಲೆಂಡಿನ ಭಾರತ ಭವನಕ್ಕೆ ಓಡೋಡಿ ಬಂದಿದ್ದ ವ್ಯಕ್ತಿಯೇ ಮುಂದೊಂದು ದಿನ ಸಾವರ್ಕರರ ಬಿಡುಗಡೆಗೆ ಜನತೆ ಸಹಿ ಸಂಗ್ರಹಿಸುತ್ತಿದ್ದಾಗ "ಸಾವರ್ಕರ್" ಎಂದರೆ ಯಾರು ಎಂದು ಕೇಳಿದ್ದವರು ಹಾಗೂ ಶುದ್ದೀ ಚಳುವಳಿಯನ್ನು ಮುಂದುವರಿಸಿದ್ದ, ತನ್ನದೇ ಮಕ್ಕಳ ಪಾಲನೆ-ಪೋಷಣೆ ಮಾಡುತ್ತಿದ್ದ ಸ್ವಾಮಿ ಶೃದ್ಧಾನಂದರನ್ನು ಕೊಂದ ಮತಾಂಧ ರಷೀದನನ್ನು ಸೋದರ ಎಂದು ಅಪ್ಪಿ ಹಿಡಿದಿದ್ದವರು, ಈಗ ಇವರು ರಾಷ್ಟ್ರಪಿತ ಎಂದು ಕರೆವ ಗಾಂಧಿಯೇ ಎಂಬುದು "ಸೆಕ್ಯುಲರುತನ"ದಿಂದಲೇ ಮರೆತು ಹೋದದ್ದಲ್ಲವೇ? ದಶಕಗಳ ಪರ್ಯಂತ ವಿಹಿಂಪ "ಘರ್ ವಾಪಸಿ"ಯನ್ನು ಮಾಡಿಕೊಂಡು ಬಂದಿರುವಾಗೇನು ಕಣ್ಮುಚ್ಚಿ ಕೂತಿದ್ದರೆ? ಒಂದು ವೇಳೆ ದೆಹಲಿಯ ಸೋಲಿಗೆ ಇವೇ ಕಾರಣಗಳಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲೇ ಭಾಜಪಾವನ್ನು ಜನತೆ ತಿರಸ್ಕರಿಸಬೇಕಿತ್ತಲ್ಲವೇ? ಅದಕ್ಕಿಂತಲೂ ಮುಖ್ಯವಾಗಿ ಘರ್ ವಾಪಸಿ ಹಾಗೂ ಮತಾಂತರದ ನಡುವಿನ ಬಹುದೊಡ್ಡ ಅಂತರವನ್ನಾದರೂ ಅರ್ಥ ಮಾಡಿಕೊಳ್ಳಬೇಕಲ್ಲವೇ? ಯಾವನೇ ವ್ಯಕ್ತಿ ಆಮಿಷಕ್ಕೊಳಗಾಗಿ ಮಾತೃಧರ್ಮಕ್ಕೆ ಮರಳುವ ಸಾಧ್ಯತೆ ಎಳ್ಳಷ್ಟೂ ಇಲ್ಲ ಎನ್ನುವ ಸಾಮಾನ್ಯ ಜ್ಞಾನವಾದರೂ ಇದೆಯೇ? ಘರ್ ವಾಪಸಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸುವವರು "ಹಿಂದೊಮ್ಮೆ ಬಲವಂತವಾಗಿ ಮತಾಂತರಗೊಂಡು ಅಥವಾ ಪ್ರಲೋಭನೆಗಳಿಂದ ಮತಾಂತರವಾಗಿ ಭ್ರಮನಿರಸನಗೊಂಡು ಅಥವಾ ತಮ್ಮ ಪೂರ್ವಜರ ಮತಾಂತರದಿಂದಾಗಿ ತಾವು ಅದೇ ಮತದಲ್ಲಿ ಇಷ್ಟವಿಲ್ಲದಿದ್ದರೂ ಇರಬೇಕಾದ ಪರಿಸ್ಥಿತಿಯಿಂದ ಹೊರಬಂದು ಮಾತೃಧರ್ಮವನ್ನು ಸೇರಬೇಕೆಂಬ ತಹತಹಿಕೆಯುಳ್ಳವರ" ಸ್ಥಾನದಲ್ಲಿ ನಿಂತು ಯೋಚಿಸಬೇಕು. ಘರ್ ವಾಪಸೀ ಹಾಗೂ ಹಿಂದೂ ಸಮಾಜೋತ್ಸವಗಳನ್ನು ಶುದ್ಧ ಕೋಮುವಾದಿ ಅನ್ನುವವರ ಸಂಬಂಧಿಗಳ್ಯಾರಾದರೂ ಲವ್ ಜಿಹಾದಿಗೆ ಬಲಿಯಾದಾಗ ಅಥವಾ ಬಲಾತ್ಕಾರದ ಮತಾಂತರಕ್ಕೊಳಗಾದಾಗ ರಕ್ಷಿಸಲು ಬರುವುದು ಇದೇ ಘರ್ ವಾಪಸೀ ಮಾಡುವ ಕೋಮುವಾದಿಗಳು ಎನ್ನುವುದನ್ನು ಮರೆಯಬಾರದು!

             ಗೋಡ್ಸೆಯನ್ನು ದೂಷಿಸುವವರಿಗೆ ಗೋಡ್ಸೆಯ ಪೂರ್ವಾಪರ ಖಂಡಿತಾ ತಿಳಿದಿರುವುದಿಲ್ಲ. ಆತ ಕೇವಲ ಹಿಂದುತ್ವವಾದಿಯಲ್ಲ; ಆತ ರಾಷ್ಟ್ರವಾದಿ(ಹಿಂದುತ್ವವಾದಿಯೊಬ್ಬ ರಾಷ್ಟ್ರವಾದಿಯಾಗಿಯೇ ಇರುತ್ತಾನೆ. ಅದು ಬೇರೆ ಮಾತು) ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವನು, ಸ್ವತಃ ಗಾಂಧಿಯವರ ಅಸಹಕಾರದಂತಹ ಚಳವಳಿಗಳನ್ನು ತಾನಿದ್ದ ಕಡೆಯಲ್ಲೆಲ್ಲಾ ನಾಯಕತ್ವ ವಹಿಸಿ ರೂಪಿಸಿದವನು. ಒಂದು ಕಾಲದಲ್ಲಿ ಗಾಂಧಿಯ ಅನುಯಾಯಿಯಾಗಿದ್ದಾತ ಅವರ ಬಗ್ಗೆ ವಿರೋಧೀ ಭಾವ ತಳೆದದ್ದೇಕೆ? ಗಾಂಧಿಯ ಇಬ್ಬಗೆಯ ನೀತಿಯಿಂದಲೇ ಅಲ್ಲವೇ. ತುಷ್ಟೀಕರಣವನ್ನು ಆರಂಭಿಸಿದವರೇ ಗಾಂಧಿ(ಇದನ್ನು ಯಾರೂ ಅಲ್ಲಗೆಳೆಯಲಿಕ್ಕಾಗದು, ಇದು ಐತಿಹಾಸಿಕ ಸತ್ಯ); ಗೋಡ್ಸೆಯ ರಾಷ್ಟ್ರವಾದದ ಹಿಂದೆ ನಮ್ಮ ಪುರಾತನ ಸಂಸ್ಕೃತಿಯ ಸ್ಪುರಣೆಯಿದೆ, ಸ್ಮರಣೆಯಿದೆ, ಕೃಷ್ಣ-ಚಾಣಕ್ಯರ ನೀತಿಯಿದೆ. ಅದು ಶುದ್ಧವಾದ, ಯಾರಿಗೂ ಅನ್ಯಾಯ ಮಾಡದ, ಆದರೆ ತನಗೆ ಅನ್ಯಾಯ ಆಗುವುದನ್ನು ಸಹಿಸದ ಆತ್ಮಗೌರವವುಳ್ಳ ರಾಷ್ಟ್ರವಾದ. ಗಾಂಧಿಯ ಬಗ್ಗೆ ಜನರಿಗಿರುವ ಪ್ರೇಮಕ್ಕೆ ಕಾರಣ ನಮ್ಮ ಇತಿಹಾಸವನ್ನು ಆ ರೀತಿ ಬಿಂಬಿಸಿದ್ದು; ಹಾಗಂತ ನೈಜ ಇತಿಹಾಸವನ್ನು ಮುಚ್ಚಿಡಲು ಸಾಧ್ಯವೇ? ಹಾಗಾಗಿ ರಾಷ್ಟ್ರಭಕ್ತನೊಬ್ಬನ ಪುತ್ಥಳಿ ಅನಾವರಣ ಮಾಡಿದರೆ ತಪ್ಪೇನು? ರಾಷ್ಟ್ರಭಕ್ತನನ್ನು ಹೊಗಳಿದರೆ ಸೆಕ್ಯುಲರುಗಳಿಗೇಕೆ ಉರಿಯಬೇಕು?

              ಇತಿಹಾಸದ ಘಟನೆಗಳೇ ಸಾರುತ್ತವೆ, ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಕಾರಣ ಸುಭಾಷರ "ಮಹಾಯುದ್ಧ", ಸೇನೆಯೊಳಗಿನ ಬಂಡಾಯ, ಮತ್ತೆ ಮತ್ತೆ ಹುಟ್ಟಿಬರುತ್ತಿದ್ದ ಕ್ರಾಂತಿಪಡೆಯೆಂದು! ಸ್ವತಃ ಬ್ರಿಟಿಷರ ಮಾತು, ಪತ್ರ, ಬ್ರಿಟನ್ನಿನ ಸಂಸತ್ತಿನಲ್ಲೂ ಇದು ವ್ಯಕ್ತವಾಗಿದೆ. ಸತ್ಯ ಕಣ್ಣ ಮುಂದೆ ಇರುವಾಗ ಮತ್ತದೇ ಅಹಿಂಸೆಯಿಂದಲೇ ಸ್ವಾತಂತ್ರ್ಯ ಬಂತು ಎಂದರೆ ಅದು ಇತಿಹಾಸಕ್ಕೆ, ಭಾರತ ಮಾತೆಗೆ, ದೇಶಭಕ್ತರಿಗೆ ಮಾಡುವ ಅಪಮಾನ! ಇಂದಿಗೂ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಓಲೈಸುವವರನ್ನು ಹೊರತುಪಡಿಸಿದರೆ ದೇಶವಾಸಿಗಳಿಗೆಲ್ಲಾ ಆದರ್ಶವಾಗಿರುವುದು ಕ್ರಾಂತಿಕಾರಿಗಳೇ! ಒಬ್ಬ ವ್ಯಕ್ತಿ "ಮಹಾತ್ಮ"ನಾಗಬೇಕಾದರೆ ಆತ ಕಾಯಾ-ವಾಚಾ-ಮನಸಾ ಶುದ್ಧ, ಸಮ ಹಾಗೂ ನೇರವಾಗಿರಬೇಕಾಗುತ್ತದೆ. ಗಾಂಧಿಯವರ "ಗಾಂಧಿವಾದ"ವನ್ನು ಅವರ ಕೆಲವು ಅನುಯಾಯಿಗಳು ಪಾಲಿಸಿದರೇ ವಿನಃ ಸ್ವತಃ ಗಾಂಧಿಯವರೇ ಪಾಲಿಸಲಿಲ್ಲ!

                   ಹಿಂದೂಗಳು ನಾಲ್ಕು ಮಕ್ಕಳನ್ನು ಹೆರಬೇಕು ಅನ್ನುವ ಸಾಕ್ಷಿ ಮಹಾರಾಜ್ ಹೇಳಿಕೆಯಲ್ಲಿ ಏನು ತಪ್ಪಿದೆ? ಆರತಿಗೊಬ್ಬಳು ಕೀರ್ತಿಗೊಬ್ಬ ಎಂಬ ಘೋಷಣೆ, ನಾವಿಬ್ಬರು ನಮಗೊಬ್ಬ ಎನ್ನುವುದಕ್ಕೆ ಇಳಿದು ಈಗ "ನಾವಿಬ್ಬರೇ" ಎನ್ನುವ ಸ್ಥಿತಿ ಮುಟ್ಟಿದೆ. ಆದರೆ ಯಾರದ್ದು ಹಿಂದೂಗಳದ್ದು ಮಾತ್ರ! ಲವ್ ಜಿಹಾದ್, ಮತಾಂತರಗಳಿಂದ ಹಿಂದೂಗಳ ಸಂಖ್ಯೆ ಕುಸಿಯುತ್ತಿರುವಾಗ, ಕುಟುಂಬ ನಿಯಂತ್ರಣ ಎನ್ನುವುದು ತಮಗೆ ಅನ್ವಯಿಸುವುದಿಲ್ಲ ಎನ್ನುವ ಮುಸ್ಲಿಮ್ ಮನಸ್ಥಿತಿಯಿಂದ ವ್ಯಾಪಕವಾಗಿ ಹೆಚ್ಚುತ್ತಿರುವ ಮುಸ್ಲಿಮ್ ಜನಸಂಖ್ಯೆ ಭಾರತಕ್ಕೆ ಹೇಗೆ ಮಾರಕವಾಗುತ್ತಿದೆ ಎನ್ನುವುದನ್ನು ಅರಿತವರಿಗಷ್ಟೇ ಸಾಕ್ಷಿ ಮಹರಾಜರ ನುಡಿಯ ಅಂತರಾರ್ಥ ಅರ್ಥವಾದೀತು! ಅಷ್ಟು ಮಾತ್ರವಲ್ಲ ಸಂಘಪರಿವಾರ ತನ್ನ ಕಾರ್ಯಸೂಚಿಯಿಂದ ನರೇಂದ್ರ ಮೋದಿಯವರಿಗೆ ಮುಜುಗರ ಉಂಟು ಮಾಡುತ್ತಿದೆ,ಅವರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎನ್ನುವ ವ್ಯರ್ಥಾಲಾಪ ಬೇರೆ. ಒಟ್ಟಾರೆಯಾಗಿ ಚುನಾವಣೆಗೆ ಮೊದಲು ಹಾಗೂ ಆನಂತರ ಸೆಕ್ಯುಲರುಗಳು ಸಂಘಪರಿವಾರ ಹಾಗೂ ಭಾಜಪಾದ ನಡುವೆ ಒಡಕು ಹುಟ್ಟಿಸಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಹಾಗಾಗಿಯೇ ಮೋದಿ, ಒಬಾಮಾರಿಂದ ಭಾಷಣದಲ್ಲಿ ಕೋಮುಸೌಹಾರ್ದದ ಬಗೆಗೆ ಹೇಳಿಸಿದರು ಎನ್ನುವ ಮೂರ್ಖ ವಾದವೊಂದು ಹುಟ್ಟಿಕೊಂಡಿದೆ. ಇದು ಸಂಘ ಪರಿವಾರ ಹಾಗೂ ಸರಕಾರದ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಜನರ ತಲೆಯಲ್ಲಿ ಹುಳ ಬಿಡುವ ತಂತ್ರದ ಒಂದು ಭಾಗ. ಇದಕ್ಕೆ ಚುನಾವಣಾ ಪೂರ್ವದಲ್ಲೇ ಕೆಸರುಗಲ್ಲು ಹಾಕಲಾಗಿತ್ತು. ಇಲ್ಲದಿದ್ದಲ್ಲಿ ಏಳು ಸಾವಿರ ರೂಪಾಯಿ ಬೆಲೆಯ ಭಾರತದಲ್ಲಿ ತಯಾರಿಸಲಾದ ಮೋದಿಯವರ ಕೋಟಿನ ಬೆಲೆ, ಹತ್ತು ಲಕ್ಷವೆಂದು, ಜರ್ಮನಿಯಲ್ಲಿ ತಯಾರಿಸಿದ್ದೆಂದು ಸುಳ್ಳು ಸುದ್ದಿ ಪ್ರಕಟಿಸುತ್ತಿರಲಿಲ್ಲ. ಚರ್ಚುಗಳ ಮೇಲಿನ ದಾಳಿಗೆ ಭಾಜಪಾದ ಮೇಲೆ ಗೂಬೆ ಕೂರಿಸುತ್ತಿರಲಿಲ್ಲ. ದೆಹಲಿಯ 206 ದೇವಾಲಯಗಳಲ್ಲಿ ನಡೆದ ಕಳ್ಳತನಕ್ಕಿಂತ ಮೂರು ಚರ್ಚುಗಳಲ್ಲಿ ನಡೆದ ಕಳ್ಳತನವೇ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಭಾಜಪಾ ಗೆದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆಯಾದದ್ದು, ವಿಧಾನಸಭೆ ಚುನಾವಣೆಯಲ್ಲಿ ಭಾಜಪಾ ಸೋತೊಡನೆ ಪ್ರಜಾಪ್ರಭುತ್ವದ ಭವ್ಯ ವಿಜಯವಾಗಿ ಬದಲಾಗುತ್ತಿರಲಿಲ್ಲ! ಚುನಾವಣಾನಂತರದಲ್ಲಿ ಭಾಜಪಾ ಸೋಲಿಗೆ ಹಿಂದುತ್ವ ಪರ ನಿಲುವುಗಳೇ ಕಾರಣ ಎಂದು ಬೊಬ್ಬಿರಿಯುತ್ತಿರಲಿಲ್ಲ. ಇರಲಿ ಸೆಕ್ಯುಲರುಗಳೆಂದಿಗೂ ಬದಲಾಗುವುದಿಲ್ಲ. ಅವರ ತಂತ್ರವನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಷ್ಟಕ್ಕೂ ಜನ ಭಾಜಪಾಕ್ಕೆ ಮತ ಹಾಕಿದ್ದು, ಅದು ಇನ್ನೊಂದು ಕಾಂಗ್ರೆಸ್ ಆಗಿ ಬದಲಾಗಲೆಂದೇ?