ಪುಟಗಳು

ಬುಧವಾರ, ಜುಲೈ 27, 2016

ಶೂನ್ಯವಾದ


           ಮಹಾಭಾರತದಲ್ಲಿ ಕರ್ಣನನ್ನು ಸೂತಪುತ್ರ ಎನ್ನಲಾಗಿದೆ. ಏನಿದು "ಸೂತ" ಅಂದರೆ? ಸೂತರೆಂದರೆ ಬ್ರಾಹ್ಮಣರಲ್ಲ. ಕ್ಷತ್ರಿಯರಲ್ಲ; ವೈಶ್ಯ, ಶೂದ್ರರೂ ಅಲ್ಲ. ಅವರದ್ದು ವಿಲೋಮ ಜಾತಿಯಾಗಿತ್ತು. ಸೂತರಲ್ಲಿ ಎರಡು ಪಂಗಡ: ಕ್ಷತ್ರಿಯ ಪುರುಷ - ಬ್ರಾಹ್ಮಣ ಸ್ತ್ರೀ ಇವರ ಸಂತತಿಯದ್ದು ಒಂದು. ಕ್ಷತ್ರಿಯರ ರಥ ಹೊಡೆಯುವ ವೃತ್ತಿ ಅವರದ್ದು. ಕರ್ಣ ಇಂತಹ ಸೂತರ ಮನೆಯಲ್ಲಿ ಬೆಳೆದ. ರಥ ಹೊಡೆಯುವವನೊಬ್ಬನ ಮಗ ಧನುರ್ವಿದ್ಯಾ ಪ್ರವೀಣನಾದದ್ದು ಕಂಡು ಕ್ಷತ್ರಿಯರಿಗೆ ಈರ್ಷ್ಯೆ ಉಂಟಾಗಿರಬಹುದು. ಆದರೆ ಕರ್ಣ ಇದರ ಮರ್ಮ ಅರಿಯದೆ ಸಪ್ತಮಹಾಪಾತಕಿಗಳಲ್ಲೊಬ್ಬನಾದ. ಅದು ಬೇರೆ ಮಾತು. ಸಮಾಜ ಮುಂದೆ ಕರ್ಣನನ್ನೂ ಕ್ಷತ್ರಿಯನೆಂದೇ ಒಪ್ಪಿತು. ಅವನ ಮಗನನ್ನು ಪಾಂಡವರೇ ಸಲಹಿದರು! ಆ ರೀತಿ ನೋಡಿದರೆ ಈ ತರಹದ ಈರ್ಷ್ಯೆ ಇಂದಿನ  ಸಮಾಜದಲ್ಲಿ ಅತಿರೇಕ ತಲುಪಿಲ್ಲವೇ? ತಮಗಿಂತ ಅಂತಸ್ತು ಅಥವಾ ಜಾತಿಯಲ್ಲಿ ಕೆಳಗಿನವನೊಬ್ಬ ಅಥವಾ ತಮ್ಮ ಸಿದ್ಧಾಂತವನ್ನೊಪ್ಪದವನೊಬ್ಬ ಹೆಚ್ಚಿನ ಪ್ರತಿಭೆ ಹೊಂದಿದ್ದರೆ/ತೋರಿಸಿದರೆ ಅಥವಾ ಪ್ರಬಲನಾದರೆ ಅವನ ಕಥೆ ಮುಗಿಸಲೂ ಹೇಸದ ಸಮಾಜ ಇಂದಿನದ್ದು! ಅಲ್ಲದೆ ಇಂದು ಬಡವ-ಬಲ್ಲಿದರ ನಡುವಣ ಭೇದ, ತಮ್ಮ ಜಾತಿಯವನಲ್ಲದವನೊಬ್ಬ, ಭಾಷಿಕನವನಲ್ಲದವನೊಬ್ಬ ಕಛೇರಿ ಸೇರಿಕೊಂಡನೆಂದರೆ ಅವನನ್ನು ಹೇಗೆ  ಓಡಿಸಬೇಕೆಂದು ಉಪಾಯ ಹೂಡುವಂತಹವರು, ತಮ್ಮ ಮತವೇ ಶ್ರೇಷ್ಠವೆನ್ನುವವರು, ತಮ್ಮ ಜಾತಿ-ಮತ-ಪಂಥವೇ ಮೇಲ್ಮೆಗೆ ಬರುವಂತೆ ಇತಿಹಾಸ ತಿರುಚುವವರು, ತಮ್ಮ ಸಿದ್ಧಾಂತವನ್ನೇ ಹೇರುವವರು, ಜಾತಿಸಂಘಟನೆಗಳು, ಜಾತಿವಾರು ಮಠಗಳು, ಜಾತಿವಾರು ಶಿಕ್ಷಣ ಸಂಸ್ಥೆಗಳು....ಅಬ್ಬಬ್ಬಾ!

            ಇನ್ನೊಂದು ವೈಶ್ಯಪುರುಷ-ಕ್ಷತ್ರಿಯ ಸ್ತ್ರೀ ಇವರ ಸಂತತಿ. ಇವರ ಕೆಲಸ ಪುರಾಣ ಕೇಳುವುದು-ಹೇಳುವುದು. ಮಹಾಭಾರತದ ಸಂಜಯ, ಶೌನಕಾದಿ ಮುನಿಗಳಿಗೆ ಭಾರತ-ಭಾಗವತಗಳನ್ನು ಹೇಳಿದ "ಸೂತ ಪುರಾಣಿಕ" ಎಂತಲೇ ಪ್ರಸಿದ್ಧನಾದ ಉಗ್ರಶ್ರವ ಎಲ್ಲಾ ಈ ವರ್ಗದವರು! ಇಲ್ಲೊಂದು ವಿಚಿತ್ರ ನೋಡಿ..."ಹೇಳುವವನು" ವಿಲೋಮ ಜಾತಿಯ ಸೂತ ಪುರಾಣಿಕ; ಕೇಳುವವನು ಶ್ರೋತ್ರಿಯ ಬ್ರಾಹ್ಮಣ! ಮತ್ತೆ... ಜಾತಿ ಪದ್ದತಿ, ಕಾದ ಸೀಸ ಕಿವಿಗೆ ಸುರಿವುದು.... ಎಲ್ಲಿಂದ ಬಂತು? ಇದ್ದರೂ ಈಗ ಯಾರು ಯಾರಿಗೆ ಸುರಿವುದು? ಯಾರು ಕೆಳಗೆ? ಯಾರು ಮೇಲು? ಸ್ಪೃಷ್ಯ ಯಾರು? ಅಸ್ಪ್ರಶ್ಯನಾರು? ಕಮ್ಯೂನಿಷ್ಟರ ಈ ಕಪೋಲ-ಕಲ್ಪಿತ ಕಥೆಗಳಿವೆಯಲ್ಲ, ಇವುಗಳಿಗೆಲ್ಲಾ ಆಧಾರ ಹುಡುಕಹೊರಟರೆ ಸಿಗುವುದು ನವ ಬೌದ್ಧರ ಶೂನ್ಯವೇ! ನದಿಮೂಲ, ಸ್ತ್ರೀಮೂಲ, ಋಷಿಮೂಲಗಳನ್ನು ಹುಡುಕಲು ಹೋಗಬಾರದೆಂಬ ಮಾತಿದೆ. ಅದೇ ರೀತಿ ಈ ಕಮ್ಯೂನಿಷ್ಟರ ವಾದಗಳಿಗೆ ಆಧಾರಗಳನ್ನು ಹುಡುಕಬಾರದೇನೋ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ