ಪುಟಗಳು

ಬುಧವಾರ, ನವೆಂಬರ್ 22, 2017

ಮೌನ! ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!

ಮೌನ! ಜಗವ ಬೆಳಗುವ ಶಕ್ತಿ! 

ಸದಾಶಿವನಾಗಲು ಬೇಕಾದ ಯುಕ್ತಿ!


                  ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು  ಮೇರೆ ಮೀರಿದ ಅಬ್ಬರ. ಅವಳ ಅಬ್ಬರವಿಳಿದಾಗಲೂ ಅದೇ ಸ್ಥಿತಿಯಲ್ಲಿದ್ದ ಆ ಧ್ಯಾನಿ ಕೆಲ ಸಮಯದ ಬಳಿಕ ಅಲ್ಲಿಂದ ಏನೂ ಆಗಲೇ ಇಲ್ಲವೆಂಬಂತೆ ಎದ್ದು ಹೊರಟ. ಕೆಲ ಜನ ಅವನನ್ನು ಮರುಳ ಎಂದರು; ಮರಳು ಮೆತ್ತಿಕೊಂಡಿತ್ತಲ್ಲವೇ! ಅವರು ಈ 'ಸಂಸಾರ'ದಲ್ಲಿ ಮಾತ್ರ ಆಸಕ್ತಿಯುಳ್ಳವರು. ಹಲವರು ತಮಗೆ ಸಂಬಂಧವೇ ಇಲ್ಲದವರಂತೆ ನಡೆದುಕೊಂಡರು. ಅವರು ತಮ್ಮ ಸಂಸಾರದಲ್ಲೇ ಮುಳುಗೇಳುತ್ತಿರುವವರು! ಕೆಲವರಿಗಷ್ಟೇ ಅವ ಕುಳಿತ ಸ್ಥಳದಿಂದ ಕೇಳಿ ಬರುತ್ತಿದ್ದ "ಮಾನಸ ಸಂಚರರೇ" ಮರಳಿ ಮರಳಿ ಅವರ ಕರಣಗಳಲ್ಲಿ ಅನುರಣಿಸುತ್ತಿತ್ತು!

                  ಸದಾಶಿವ ಬ್ರಹ್ಮೇಂದ್ರ. ಹದಿನೇಳನೇ - ಹದಿನೆಂಟನೆಯ ಶತಮಾನದಲ್ಲಿ ಆಗಿ ಹೋದ ಅವಧೂತ. ತೆಲುಗು ನಿಯೋಗಿ ಮೂಲದ ಮೋಕ್ಷಯಿಂಟಿ ಸೋಮಸುಂದರ ಅವಧಾನಿ ಹಾಗೂ ಪಾರ್ವತಿ ದಂಪತಿಗಳ ಕುಡಿ. ಸದಾಶಿವ ಬ್ರಹ್ಮೇಂದ್ರರ ಮೊದಲ ಹೆಸರು ಶಿವರಾಮಕೃಷ್ಣನೆಂದು. ವೇದ ವಿದ್ವಾಂಸ ತಂದೆಯೇ ಮೊದಲ ಗುರು. ಮುಂದಿನ ಓದಿಗೆಂದು ತೆರಳಿದ್ದು ಶಾಹಜಿಪುರವೆನಿಸಿಕೊಂಡಿದ್ದ ತಿರುವಿಶೈನಲ್ಲೂರಿಗೆ. ಅಲ್ಲಿ ಗುರು ರಾಮಭದ್ರ ದೀಕ್ಷಿತರಲ್ಲಿ ಶಾಸ್ತ್ರ ಶಿಕ್ಷಣವೂ ಮುಗಿಯಿತು. ತಿರುವಿಶೈನಲ್ಲೂರಿನಲ್ಲಿ ಅವರಿಗೆ ಮರುದಾನಲ್ಲೂರು ಸದ್ಗುರು ಸ್ವಾಮಿಗಳು, ಬೋಧೇಂದ್ರ ಸರಸ್ವತಿಗಳು ಹಾಗೂ ಶ್ರೀಧರ ವೆಂಕಟೇಶ ಅಯ್ಯವಾಳರೆಂಬ ಸಂಕೀರ್ತನ ಸಂಪ್ರದಾಯದ ತ್ರಿಮೂರ್ತಿಗಳ ಸಂಪರ್ಕ ಒದಗಿ ಬಂತು.

              ಶಿಕ್ಷಣ ಮುಗಿಸಿ ಮನೆಗೆ ಬಂದ ಹದಿನೇಳು ವರ್ಷದ ಮಗನ ವೈರಾಗ್ಯದ ಮನಸ್ಥಿತಿಯನ್ನು ಕಂಡು ಹೆತ್ತವರು ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದರು. ಮದುವೆಯ ನಂತರವೂ ಅವರ ವೈರಾಗ್ಯ ತೊಲಗಲಿಲ್ಲ. ಪ್ರಸ್ಥದ ದಿನ ಅವರ ಮಾವನ ಮನೆಯಲ್ಲಿ ವಿಪರೀತ ಜನಜಂಗುಳಿ ಸೇರಿತ್ತು. ಸದಾಶಿವರಿಗೋ ವಿಪರೀತ ಹಸಿವು. ತಮ್ಮ ಅತ್ತೆಯ ಬಳಿ ತಮಗೇನಾದರೂ ತಿನ್ನಲು ಕೊಡುವಂತೆ ಯಾಚಿಸಿದರು. ಆಗ ಅವರ ಅತ್ತೆ "ಇನ್ನೇನು ಕೆಲವೇ ಕ್ಷಣ, ಅಷ್ಟರವರೆಗೆ ತಾಳಿಕೋ. ಒಳಗೆ ಬರಬೇಡ; ಅಲ್ಲೇ ನಿಲ್ಲು" ಎಂದಾಗ ಬ್ರಹ್ಮೇಂದ್ರರ ಮಸ್ತಿಷ್ಕದಲ್ಲಿ ಮಿಂಚೊಂದು ಸುಳಿದಂತಾಯ್ತು. ಅತ್ತೆಯ ಆ ಮಾತುಗಳೇ "ಗೃಹಸ್ಥಾಶ್ರಮದೊಳಗೆ ಬರಬೇಡ; ದೂರವೇ ನಿಲ್ಲು" ಎಂದಂತಾಗಿ ಸದಾಶಿವರು ಬಿಟ್ಟ ಬಾಣದಂತೆ ಅಲ್ಲಿಂದ ಎದ್ದೋಡಿದರು. ಅವರನ್ನು ಹಿಡಿಯಲು ಸಂಬಂಧಿಕರಿಗೆ ಸಾಧ್ಯವಾಗಲಿಲ್ಲ. ಅನಂತ ಜ್ಞಾನದ ಹುಡುಕಾಟಕ್ಕೆ ಅನಂತ ವೇಗದಲ್ಲಿ ಓಡುವವ ಕೈಗೆ ಸಿಗುವುದಾದರೂ ಹೇಗೆ? ಇದು ಅವರ ಜೀವನದ ಮಹತ್ವದ ತಿರುವು.

                     ನೇರವಾಗಿ ತಿರುವಿಶೈನಲ್ಲೂರಿಗೆ ಬಂದ ಶಿವರಾಮಕೃಷ್ಣ ಉಪನಿಷತ್ ಬ್ರಹ್ಮ ಮಠದ ಶ್ರೀ ಪರಮ ಶಿವೇಂದ್ರರೆನ್ನುವ ಪಂಡಿತ ಯತಿಗಳ ಬಳಿ ಸಂನ್ಯಾಸದೀಕ್ಷೆಯನ್ನು ಪಡೆದು ಸದಾಶಿವ ಬ್ರಹ್ಮೇಂದ್ರರಾದರು. ಯೋಗಿಯಾಗಿದ್ದ ಪರಮಶಿವೇಂದ್ರ ಸರಸ್ವತಿಗಳು "ದಹರವಿದ್ಯಾಪ್ರಕಾಶಿಕೆ" ಎನ್ನುವ ಸಂಸ್ಕೃತ ಪ್ರಬಂಧವನ್ನು ಬರೆದವರು. ಸದಾಶಿವ ಬ್ರಹ್ಮೇಂದ್ರರು ತಮ್ಮ ಹಲವು ಕೃತಿಗಳಲ್ಲಿ ಪರಮಶಿವೇಂದ್ರರು ತಮ್ಮ ಗುರುಗಳೆಂದು ಸ್ಪಷ್ಟಪಡಿಸಿದ್ದಾರೆ. ಗುರುಗಳನ್ನು ಸ್ತುತಿಸಿ "ನವಮಣಿಮಾಲೆ", ಗುರುರತ್ನಮಾಲಿಕೆಗಳೆಂಬ ಕೃತಿಗಳನ್ನು ರಚಿಸಿದ್ದಾರವರು. ಸದಾಶಿವ ಬ್ರಹ್ಮೇಂದ್ರರು ಅತ್ಯುತ್ತಮ ತರ್ಕಪಟುವಾಗಿದ್ದವರು. ವಾದ ವಿವಾದದಲ್ಲಿ ಎಂದಿಗೂ ವಾಚಾಳಿಯಾಗಿದ್ದ ಅವರಿಗೇ ಗೆಲುವು. ಸೋತವರಿಂದ ಗುರುಗಳ ಬಳಿ ಇವರ ಮೇಲೆ ಸದಾ ದೂರು. ಇದು ನಿರತ ನಡೆಯುತ್ತಿರಲು ಒಂದು ದಿನ ಬೇಸರಗೊಂಡ ಗುರುಗಳು "ಸದಾಶಿವ, ಸುಮ್ಮನಿರಲು ಎಂದು ಕಲಿತುಕೊಳ್ಳುವೆ?" ಎಂದು ಕೇಳಿದರು. ತಕ್ಷಣ "ಇಂದಿನಿಂದ ಗುರುಗಳೆ!" ಎಂದವರು ಅಂದಿನಿಂದ ಮತ್ತೆ ಮಾತಾಡಲಿಲ್ಲ. ಈ ಸಮಯದಲ್ಲೇ ಸಂಸ್ಕೃತದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದರು. ಬ್ರಹ್ಮಸೂತ್ರವೃತ್ತಿ, ಉಪನಿಷತ್ತುಗಳ ಮೇಲೆ "ಕೈವಲ್ಯಾಮೃತಬಿಂದು" ಎಂಬ ಗ್ರಂಥ, ಸಿದ್ಧಾಂತಕಲ್ಪವಲ್ಲಿ (ಅಪ್ಪಯ್ಯ ದೀಕ್ಷಿತರ ಕೃತಿ ಸಿದ್ಧಾಂತ ಲೇಶ ಸಂಗ್ರಹದ ಮೇಲೆ ಹೇಳಿಕೆಗಳು), ಯೋಗಸುಧಾಕರ(ಪತಂಜಲಿ ಯೋಗ ಸೂತ್ರದ ಮೇಲೆ ವ್ಯಾಖ್ಯೆ), ಮನೋನಿಯಮನ ಮುಂತಾದ ವಿದ್ವತ್ ಗ್ರಂಥಗಳನ್ನು ರಚಿಸಿದರು. ಅವರ "ಆತ್ಮವಿದ್ಯಾವಿಲಾಸ"ವಂತೂ ಪಂಡಿತ, ಸಾಧಕ, ಸಿದ್ಧರಿಗೂ ಪ್ರಿಯವೂ ಮಾರ್ಗದರ್ಶಕವೂ ಆದುದಾಗಿದೆ. ಅರವತ್ತೆರಡು ಶ್ಲೋಕಗಳನ್ನು ಹೊಂದಿರುವ ಸದಾಶಿವ ಬ್ರಹ್ಮೇಂದ್ರರಿಂದ ರಚಿಸಲ್ಪಟ್ಟ ಆತ್ಮವಿದ್ಯಾವಿಲಾಸವು ಆರ್ಯಾವೃತ್ತದಲ್ಲಿದೆ. ಇದರ ಮುಖ್ಯ ವಿಷಯವೇ ವೈರಾಗ್ಯ ಅದಕ್ಕಿಂತಲೂ ಹೆಚ್ಚಾಗಿ ಅವಧೂತ ಚರ್ಯೆ. ಜೀವನ್ಮುಕ್ತರೂ, ಸಿದ್ಧರೂ ಆದ ವಿರಕ್ತ ಸಾಧಕರು ವ್ಯವಹಾರ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಬದಿಗೊತ್ತಿ, ದೇಹಧರ್ಮವನ್ನೆಲ್ಲಾ ಕಡೆಗಣಿಸಿ ಬ್ರಹ್ಮಾನಂದದಲ್ಲಿ ಸದಾ ಇರುವ ಚರ್ಯೆಯದು. "ಅಕ್ಷರತ್ವಾತ್ ವರೇಣ್ಯತ್ವಾತ್  ಧೂತಪಾಪಾದಿಬಂಧನಾತ್ ತತ್ತ್ವಮಸ್ಯಾದಿಲಕ್ಷ್ಯತ್ತ್ವಾತ್ ಅವಧೂತಃ ಪ್ರಕೀರ್ತಿತಃ". ನಾಶರಹಿತವಾದ ಸತ್ಸರೂಪದಲ್ಲೇ ನೆಲೆಗೊಂಡು ಧೂತಪಾಪಾದಿ ಬಂಧನಗಳಿಗೆ ಒಳಗಾಗದೆ ಬ್ರಹ್ಮಸ್ವರೂಪವನ್ನು ತಿಳಿ ಹೇಳುವ ತತ್ತ್ವಮಸಿ ಮೊದಲಾದ ವಾಕ್ಯಗಳಿಗೆ ನಿದರ್ಶನವಾಗಿ ಇರುವುದೇ ಅವಧೂತ ಪ್ರವೃತ್ತಿ. ಅವರ ರಚನೆಗಳು ಇಲ್ಲಿಗೇ ಮುಗಿಯುವುದಿಲ್ಲ. ಅದ್ವೈತ ರಸಮಂಜರಿ, ಬ್ರಹ್ಮ ತತ್ತ್ವ ಪ್ರಕಾಶಿಕಾ, ಜಗದ್ಗುರು ರತ್ನ ಮಲೋತ್ಸವ, ಶಿವ ಮಾನಸ ಪೂಜಾ, ದಕ್ಷಿಣಾಮೂರ್ತಿ ಧ್ಯಾನಮ್, ಶಿವಯೋಗ ಪ್ರದೀಪಿಕಾ, ಸಪರ್ಯ ಪರ್ಯಾಯ ಸ್ತವಃ, ಪರಮಹಂಸ ಚರ್ಯ, ಅದ್ವೈತ ತಾರಾವಳಿ, ಸ್ವಪ್ನೋದಿತಮ್, ಸ್ವಾನುಭೂತಿ ಪ್ರಕಾಶಿಕ, ನವವರ್ಣರತ್ನಮಾಲಾ, ಆತ್ಮಾನುಸಂಧಾನ, ಭಾಗವತ, ಸಂಹಿತೆಗಳ ಸಾರಸಂಗ್ರಹ, ಉಪನಿಷತ್ಗಳ ಮೇಲೆ ವ್ಯಾಖ್ಯೆ..... ಹೀಗೆ ಸಾಗುತ್ತದೆ ಈ ಪಟ್ಟಿ.

              ಕೆಲ ಸಮಯದ ಬಳಿಕ ಶಾಸ್ತ್ರಪರಿಚರ್ಯೆಯನ್ನೂ ಬಿಟ್ಟ ಅವರು ಸಾಧನೆಗೆ ಇಳಿದರು. ತೀವ್ರ ವಿರಕ್ತಿಯುಂಟಾಗಿ ಬೆತ್ತಲೆಯಾಗಿ, ಮೈಮೆಲೆ ಪರಿವೆಯೇ ಇಲ್ಲದೆ, ಸಂನ್ಯಾಸಧರ್ಮವನ್ನೂ ಪರಿಗಣಿಸದೆ ಉನ್ಮತ್ತರಂತೆ ಅಡ್ಡಾಡತೊಡಗಿದರು. ಕಾಡುಮೇಡುಗಳಲ್ಲಿ ಮನಬಂದಂತೆ ಅಲೆದಾಡತೊಡಗಿದರು. ನದೀ ತೀರದ ಮರಳೇ ಅವರಿಗೆ ಹಾಸಿಗೆಯಾಯಿತು. ಮರದ ನೆರಳೇ ಆಸರೆಯಾಯಿತು. ಮಳೆ, ಚಳಿ, ಗಾಳಿ, ಬಿಸಿಲುಗಳಿಗೆ ಅವರ ಮೈ ಭೇದವೆಣಿಸುತ್ತಲೇ ಇರಲಿಲ್ಲ. ಕರೆದರೆ ಬಾರರು, ಸೂರ ಕೆಳಗೆ ತಂಗರು, ಮನೆಯೊಳಗೆ ಬಾರರು. ಯಾರೊಡನೆಯೂ ಮಾತಿಲ್ಲ, ಕಥೆಯಿಲ್ಲ. ಎಂದೂ, ಎಲ್ಲದಕ್ಕೂ ಸಂತೋಷವೇ! "ಬ್ರಹ್ಮೈವಾಹಂ ಕಿಲ ಸದ್ಗುರುಕೃಪಯಾ!" ಎಂದೆನ್ನುತ್ತಲೇ ಅವಧೂತರಾಗಿಬಿಟ್ಟರು. ಯಾರೋ ಪರಮಶಿವೇಂದ್ರರ ಬಳಿ ಬಂದು ನಿಮ್ಮ ಶಿಷ್ಯನಿಗೆ ಹುಚ್ಚು ಹಿಡಿದಿದೆಯೆನ್ನಲು, "ಅಯ್ಯೋ ನನಗೆ ಹೀಗೆ ಹುಚ್ಚು ಹಿಡಿಯಲಿಲ್ಲವಲ್ಲ" ಎಂದರಂತೆ! ಅದು ಸಾಮಾನ್ಯರ ಎಣಿಕೆಗೆ ಸಿಗದ ದಿವ್ಯೋನ್ಮಾದ.

                    ಆಗ ಕಂಚಿ ಕಾಮಕೋಟಿ ಪೀಠದ ಗುರುಗಳಾಗಿದ್ದವರು ಬೋಧೇಂದ್ರ ಸದ್ಗುರುಗಳು. ಅವಧೂತರಾದ ಮೇಲೂ ಸದಾಶಿವ ಬ್ರಹ್ಮೇಂದ್ರರು ತಮಗೆ ಪ್ರೇರಕರಾದ ಈ ಹಿರಿಯ ಗುರುಗಳನ್ನು ನೋಡಲು ಬರುತ್ತಿದ್ದರು. ತಮ್ಮ ಸಹಪಾಠಿಯಾಗಿದ್ದ ವೆಂಕಟೇಶ ಅಯ್ಯವಾಳರನ್ನು ನೋಡಲು ತಿರುವಿಶೈನಲ್ಲೂರಿಗೂ ಹೋಗಿ ಬರುತ್ತಿದ್ದರು. ಮಹಾಚೇತನಗಳ ಸತ್ಸಂಗವಾದರೂ ಮೌನವ್ರತಕ್ಕೆ ಭಂಗ ಬರಲಿಲ್ಲ. ಭಜನಾ ಪದ್ದತಿಯ ಹರಿಕಾರರಾದ ಅವರಿಬ್ಬರೂ ಬ್ರಹ್ಮೇಂದ್ರರಿಗೆ "ಭಗವನ್ನಾಮ ಸಂಕೀರ್ತನೆ ಮೌನವ್ರತಕ್ಕೆ ಭಂಗ ತರುವುದಿಲ್ಲವಲ್ಲ" ಎಂದು ಒತ್ತಾಯಿಸಿದ ಮೇಲೆ ಸದಾಶಿವರಿಂದ ಕೀರ್ತನೆಗಳ ಮಹಾಪೂರವೇ ಹರಿದು ಬಂತು. ಅವು ಇಂದಿಗೂ, ಎಂದೆಂದಿಗೂ ಸಂಗೀತ ಕ್ಷೇತ್ರದ ಔನ್ನತ್ಯದ ಪ್ರತೀಕಗಳಾಗಿ ನಿಂತಿವೆ. ಎಂತೆಂತಹಾ ಹಾಡುಗಳು...ಒಂದಕ್ಕೊಂದು ಮಿಗಿಲು; ಸಂಗೀತ ರಸಿಕರ ಬಾಯಲ್ಲಿ ಇಂದಿಗೂ ನಲಿದಾಡುತ್ತಲೇ ಇರುವ ಕಲಾ ಕುಸುಮಗಳು ಅವು. ರಾಮ, ಕೃಷ್ಣರನ್ನು ಸಗುಣರೂಪಿ ಬ್ರಹ್ಮವೆಂದು ಪರಿಗಣಿಸಿದವರು ಸದಾಶಿವ ಬ್ರಹ್ಮೇಂದ್ರರು. ರಾಮನ ಕುರಿತಾದ ಅಹಿರ ಭೈರವೀರಾಗದ "ಪಿಬರೇ ರಾಮರಸಂ", ಮೋಹನರಾಗದ "ಭಜರೇ ರಘುವೀರಂ", "ಚೇತತಃ ಶ್ರೀರಾಮಂ", "ಖೇಲತಿ ಮಮ ಹೃದಯೇ ರಾಮಃ", ಥೋಡಿ ರಾಗದ "ಪ್ರತಿವಾರಂ ವಾರಂ ಮಾನಸ" ಮೊದಲಾದ ಅದ್ಭುತ ಕೀರ್ತನೆಗಳು ಅವರಿಂದ ಹೊರಹೊಮ್ಮಿದವು. ಚುಮು ಚುಮು ಮುಂಜಾವಿನಲ್ಲಿ ಶುದ್ಧ ಸಾವೇರಿಯಲ್ಲಿ ಹಾಡಿದಾಗ ಗಂಧರ್ವ ಲೋಕವನ್ನೇ ಸೃಷ್ಟಿಗೈವ "ಗಾಯತಿ ವನಮಾಲೀ ಮಧುರಂ", "ಸ್ಮರ ನಂದಕುಮಾರಂ", ಹಿಂದೋಳರಾಗದ "ಭಜ ರೇ ಗೋಪಾಲಂ", "ಭಜ ರೇ ಯದುನಾಥಂ", ಗೌಳದ "ಬ್ರೂಹಿ ಮುಕುಂದೇತಿ", ಸಿಂಧು ಭೈರವಿಯ "ಕ್ರೀಡತಿ ವನಮಾಲೀ ಗೋಷ್ಠೇ" ಇವು ಕೃಷ್ಣನನ್ನೇ ಸಗುಣ ಬ್ರಹ್ಮನನ್ನಾಗಿಸಿದ ಭಕ್ತಿರಸ ಉಕ್ಕೇರಿಸುವ ಕೀರ್ತನೆಗಳು. ಮಿಶ್ರ ಶಿವರಂಜಿನಿ ರಾಗದ "ಸರ್ವಂ ಬ್ರಹ್ಮಮಯ ರೇ", ಸಿಂಧು ಭೈರವಿಯ "ಖೇಲತಿ ಬ್ರಹ್ಮಾಂಡೇ", ಸಂಗೀತ ಕ್ಷೇತ್ರದ ಬಾಗಿಲು ಬಡಿವವರಿಗೂ ಚಿರಪರಿಚಿತವಾದ ಸಾಮರಾಗದ "ಮಾನಸ ಸಂಚರರೇ", "ತದ್ವಜ್ಜೀವತ್ವಂ ಬ್ರಹ್ಮಣಿ" ಮುಂತಾದುವು ಪರಮಹಂಸರೊಬ್ಬರಿಂದ ಸಾಹಿತ್ಯ ಸೃಷ್ಟಿಯಾದರೆ, ಅವು ಸಿಹಿಜೇನಿನ ಸ್ವರವಿದ್ದು ಧೇನಿಸುವ ಸಿರಿಕಂಠಗಳಿಗೆ ಸಿಕ್ಕರೆ ಆಗ ಸೃಷ್ಟಿಯಾಗುವ ಸನ್ನಿವೇಶ ಯಾವ ಸ್ವರ್ಗಲೋಕಕ್ಕಿಂತ ಕಡಿಮೆಯಿದ್ದೀತು? ಹೀಗೆ ಸಂಸ್ಕೃತ ಭಾಷೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು(ಸಿಕ್ಕಿರುವುದು) ಕೀರ್ತನೆಗಳನ್ನು ರಚಿಸಿ ಕರ್ನಾಟಕ ಸಂಗೀತವನ್ನು ಅವು ಶಾಶ್ವತವಾಗಿ ಬೆಳಗುತ್ತಿರುವಂತೆ ಜ್ಯೋತಿ ಹಚ್ಚಿದರವರು.

                       ಅವರು ಮಾಡಿದ ಪವಾಡಗಳೂ ಅನೇಕ. ಅದು ಮಧುರೈ ದೇವಾಲಯದ ವಾರ್ಷಿಕ ಜಾತ್ರೆಯ ಸಮಯ. ಆಗ ಸದಾಶಿವರು ಕಾವೇರೀನದೀ ತೀರದ ಮಹದಾನಪುರದಲ್ಲಿ ಸಂಚರಿಸುತ್ತಿದ್ದರು. ಆಗ ಕೆಲವು ಮಕ್ಕಳು ತಮ್ಮನ್ನು ಮಧುರೈಗೆ ಕರೆದೊಯ್ಯಬೇಕೆಂದು ಪೀಡಿಸಿದರು. ಮಕ್ಕಳಿಗೆ ಕಣ್ಮುಚ್ಚಿಕೊಳ್ಳಲು ಹೇಳಿದ ಸದಾಶಿವ ಬ್ರಹ್ಮೇಂದ್ರರು ಕೆಲ ನಿಮಿಷಗಳ ಬಳಿಕ ಕಣ್ತೆರೆಯಲು ಹೇಳಿದಾಗ ಮಕ್ಕಳೆಲ್ಲಾ ಅದಾಗಲೇ ಮಧುರೈಯಲ್ಲಿ ನಿಂತಿದ್ದರು! ಮಧುರೈ ಅಲ್ಲಿಂದ ನೂರು ಮೈಲಿಗಳಷ್ಟು ದೂರದಲ್ಲಿತ್ತು. ಜಾತ್ರೆಯಲ್ಲೆಲ್ಲಾ ಓಡಾಡಿದ ಬಳಿಕ ಮಕ್ಕಳು ಮತ್ತೆ ಅದೇ ತೀರದಲ್ಲಿ ನಿಂತಿದ್ದರು. ಇದನ್ನು ಪರೀಕ್ಷಿಸಲೆಂದು ಬಂದ ಯುವಕನೊಬ್ಬನನ್ನು ಸದಾಶಿವ ಬ್ರಹ್ಮೇಂದ್ರರು ಅರೆಕ್ಷಣದಲ್ಲಿ ಮಧುರೈಗೇನೋ ಬಿಟ್ಟರು. ಆದರೆ ಹಿಂದಿರುಗುವಾಗ ಮಾತ್ರ ಆ ಯುವಕನಿಗೆ ಸದಾಶಿವ ಬ್ರಹ್ಮೇಂದ್ರರು ಕಾಣಿಸಲೇ ಇಲ್ಲ! ಆತ ಪಾದಯಾತ್ರೆ ಮಾಡುತ್ತಾ ಊರು ಸೇರಿಕೊಳ್ಳಬೇಕಾಯ್ತು. ಬೆಳೆದುನಿಂತು ಪೈರು ತುಂಬಿದ ಹೊಲದಲ್ಲೊಮ್ಮೆ ಸದಾಶಿವ ಬ್ರಹ್ಮೇಂದ್ರರು ಧ್ಯಾನಕ್ಕೆ ಕುಳಿತುಬಿಟ್ಟರು. ಹೊಲದ ಯಜಮಾನ ಅವರನ್ನು ಕಳ್ಳನೆಂದೇ ಭಾವಿಸಿ ಹೊಡೆಯಲೆಂದು ದೊಣ್ಣೆ ಎತ್ತಿದ. ಅಷ್ಟೇ. ಆತನ ಚಲನೆಯೇ ನಿಂತು ಹೋಗಿ ನಿಂತಲ್ಲೇ ವಿಗ್ರಹದಂತಾದ. ಬೆಳ್ಳಂಬೆಳಗ್ಗೆ ಸದಾಶಿವರು ಧ್ಯಾನದಿಂದ ವಿಮುಖರಾಗಿ ಆತನ ಕಡೆಗೆ ನೋಡಿ ಮುಗುಳ್ನಕ್ಕಾಗಲೇ ಆತ ಯಥಾಸ್ಥಿತಿಗೆ ಮರಳಿದ.

                       1732ರಲ್ಲಿ ಸದಾಶಿವ ಬ್ರಹ್ಮೇಂದ್ರರು ಪುದುಕೊಟ್ಟೈ ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ಕೆಲವು ಸೈನಿಕರು ದರ್ಪದಿಂದ ಕಟ್ಟಿಗೆಯ ಹೊರೆಯನ್ನು ಅವರ ತಲೆಯ ಮೇಲೆ ಹೊರೆಸಿ ನಡೆಸಿಕೊಂಡು ಹೋದರು. ಸದಾಶಿವ ಬ್ರಹ್ಮೇಂದ್ರರೇನೋ ಸಂತೋಷದಿಂದಲೇ ಅದನ್ನು ಹೊತ್ತುಕೊಂಡು ಹೋದರು. ಸರ್ವವೂ ಬ್ರಹ್ಮವೇ ಎನ್ನುವ ಆತ್ಮಾನಂದವನ್ನು ಸಾಧಿಸಿಕೊಂಡವರಿಗೆ ಕಟ್ಟಿಗೆಯ ಹೊರೆಯಾದರೇನು, ಚಿನ್ನದ ಮೂಟೆಯಾದರೇನು; ಅಧಿಕಾರವಾದರೇನು, ಊಳಿಗವಾದರೇನು? ಆದರೆ ಯಾವಾಗ ಅವರು ಆ ಹೊರೆಯನ್ನು ಕೆಳಗಿಳಿಸಿದರೋ ತಕ್ಷಣ ಅದು ಸುಟ್ಟು ಬೂದಿಯಾಯಿತು. ಜೊತೆಗೆ ಆ ಸೈನಿಕರ ಅಹಂಕಾರವೂ! ನಿರಕ್ಷರ ಕುಕ್ಷಿಯೂ ಹುಟ್ಟಾ ಮೂಕನೂ ಆಗಿದ್ದ ವ್ಯಕ್ತಿಯೊಬ್ಬ ಸದಾಶಿವ ಬ್ರಹ್ಮೇಂದ್ರರ ಸೇವೆಗೈಯುತ್ತಿದ್ದ. ಒಂದು ದಿವಸ ಇದಕ್ಕಿದ್ದಂತೆ ಬ್ರಹ್ಮೇಂದ್ರರು ತಮ್ಮ ಕೈಯನ್ನು ಅವನ ತಲೆಯ ಮೇಲಿಟ್ಟುಬಿಟ್ಟರು. ಅಂದಿನಿಂದ ಕೇವಲ ಮಾತಲ್ಲ, ಪ್ರವಚನವನ್ನೇ ಕೊಡಲಾರಂಭಿಸಿದ ಆ ವ್ಯಕ್ತಿ! ಮುಂದೆ "ಆಕಾಶ ಪುರಾಣ ರಾಮಲಿಂಗ ಶಾಸ್ತ್ರಿ" ಎಂದೇ ಪ್ರಸಿದ್ಧನಾದ.

                ಬ್ರಹ್ಮಜ್ಞಾನಿಗೆ ಎಲ್ಲವೂ ಬ್ರಹ್ಮಮಯವೇ. ಆತನಿಗೆ ಜಾತಿ-ಮತ-ಪಂಥಗಳ, ಜೀವ-ನಿರ್ಜೀವಗಳ, ಅರಮನೆ-ಸೆರೆಮನೆಗಳ ಭೇದವೇ ಇರುವುದಿಲ್ಲ. ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರನ್ನು ಕೆಲವು ಕಾಲಾನಂತರ ಜನ ಮರೆತುಬಿಟ್ಟರು ಎಂದುಕೊಳ್ಳುವಾಗಲೇ ಒಂದು ಅಚ್ಚರಿಯ ಘಟನೆ ನಡೆಯಿತು. ಬ್ರಹ್ಮೇಂದ್ರರು ನಗ್ನರಾಗಿ ಮುಸ್ಲಿಂ ನವಾಬನ ಅಂತಃಪುರಕ್ಕೆ ನುಗ್ಗಿಬಿಟ್ಟರು. ಅಂತಃಪುರದ ಕಾವಲುಗಾರರು ನೋಡನೋಡುತ್ತಿರುವಂತೆಯೇ ಅವರು ಮೈಮೇಲೆ ಪ್ರಜ್ಞೆಯೇ ಇಲ್ಲದವರಂತೆ ಸಾಗುತ್ತಲೇ ಇದ್ದರು. ಸುದ್ದಿ ತಿಳಿದು ಕೆಂಡಾಮಂಡಲನಾದ ನವಾಬ, ಅವರನ್ನು ತಡೆದು ಶಿಕ್ಷಿಸಲು ತನ್ನ ಸಿಪಾಯಿಗಳಿಗೆ ಆಜ್ಞಾಪಿಸಿದ. ನವಾಬನ  ಕಾವಲುಪಡೆಯವರು ಬ್ರಹ್ಮೇಂದ್ರರನ್ನು ಬೆನ್ನಟ್ಟಿ ಕೈಗಳನ್ನು ಕತ್ತರಿಸಿಹಾಕಿದರು. ಕೈಗಳು ಕೆಳಗೆ ಬಿದ್ದರೂ ಇದ್ಯಾವುದರ ಪರಿವೆಯೇ ಇಲ್ಲದಂತೆ ಬ್ರಹ್ಮೇಂದ್ರರು ಏನೂ ಆಗಲೇ ಇಲ್ಲವೆಂಬಂತೆ ಮುಂದುವರೆಯುತ್ತಲೇ ಇದ್ದರು. ಹೆದರಿದ ನವಾಬ ತುಂಡಾಗಿ ಕೆಳಗೆ ಬಿದ್ದಿದ್ದ ಕೈಗಳನ್ನು ಸ್ವತಃ ಎತ್ತಿತಂದು ಬ್ರಹ್ಮೇಂದ್ರರ ಮುಂದೆ ಹಿಡಿದು ನಡುಗುತ್ತಾ ನಿಂತ. ಬ್ರಹ್ಮೇಂದ್ರರು ಹಾಗೆ ಅವುಗಳನ್ನು ತಮ್ಮ ಕೈಗೆ ಜೋಡಿಸಿದರು. ಕೈಗಳು ಯಥಾಸ್ಥಿತಿಗೆ ಬಂದವು. ಬ್ರಹ್ಮೇಂದ್ರರು ಯಾವುದೇ ಪ್ರತಿಕ್ರಿಯೆಯಿಲ್ಲದೆ ತಮ್ಮ ಪಾಡಿಗೆ ತಾವು ಸಾಗುತ್ತಲೇ ಇದ್ದರು. ನವಾಬ ಮರಗಟ್ಟಿ ನೋಡುತ್ತಲೇ ಇದ್ದ!

                      ಪುದುಕ್ಕೊಟ್ಟೆಯ ಅರಸ ವಿಜಯ ರಘುನಾಥ ತೊಂಡೈಮಾನ್ ಸದಾಶಿವ ಬ್ರಹ್ಮೇಂದ್ರರ ಖ್ಯಾತಿಯ ಬಗ್ಗೆ ತಿಳಿದು ಅವರನ್ನು ತನ್ನ ಆಸ್ಥಾನಕ್ಕೆ ಕರೆತಂದು ಆಶಿರ್ವಾದ ಬೇಡುವ ಸಲುವಾಗಿ ಧಾವಿಸುತ್ತಾನೆ. ಆಗ ತಿರುವರಂಕುಳಮ್ ನಲ್ಲಿದ್ದ ಬ್ರಹ್ಮೇಂದ್ರರು ಸ್ವತಃ ಅರಸನೇ ಬಂದುದರ ಅರಿವಾದರೂ ಯಾವುದೇ ಪ್ರತಿಕ್ರಿಯೆಯನ್ನು ತೋರುವುದಿಲ್ಲ. ಅಲ್ಲೇ ಬಿಡಾರ ಹೂಡಿದ ರಾಜ ಅವಧೂತರ ಸೇವೆಗೆ ತೊಡಗುತ್ತಾನೆ. ಬ್ರಹ್ಮೇಂದ್ರರು ಉತ್ತರರೂಪವಾಗಿ ಮರಳಿನಲ್ಲಿ ದಕ್ಷಿಣಾಮೂರ್ತಿ ಮಂತ್ರವನ್ನು ಬರೆಯುತ್ತಾರೆ(1738). ಅಲ್ಲದೆ ಪಾಣಿನಿಯ ಅಷ್ಟಾಧ್ಯಾಯಿಯ ಮೇಲಿನ ವ್ಯಾಖ್ಯೆ "ಸಬ್ಥಿಕ ಚಿಂತಾಮಣಿ"ಯ ಕರ್ತೃ ಬಿಕ್ಷಾಂದರ್ ಕೊಯಿಲ್'ನ ಗೋಪಾಲಕೃಷ್ಣಶಾಸ್ತ್ರಿಯನ್ನು ಮಂತ್ರಿಯನ್ನಾಗಿ ನೇಮಿಸಿಕೊಳ್ಳುವಂತೆ ಸೂಚನೆ ನೀಡುತ್ತಾರೆ. ಅದಕ್ಕೆ ಒಪ್ಪಿದ ಅರಸ ತನ್ನ ಅಂಗವಸ್ತ್ರದಲ್ಲಿ ಆ ಮರಳನ್ನು ಕಟ್ಟಿಕೊಂಡು ಅರಮನೆಗೆ ತಂದು ಪ್ರತಿಷ್ಠಾಪನೆ ಮಾಡುತ್ತಾನೆ. ಈ ಪವಿತ್ರ ಮರಳು ಇಂದಿಗೂ ಪುದುಕೊಟ್ಟೆಯ ಅರಮನೆಯ ಒಳಗಿರುವ ದಕ್ಷಿಣಾಮೂರ್ತಿ ದೇಗುಲದಲ್ಲಿ ರಾಜನ ಪರಿವಾರದಿಂದ ಪೂಜಿಸಲ್ಪಡುತ್ತಿದೆ. ಈ ಘಟನೆ ನಡೆದ ಸ್ಥಳವೇ ಶಿವಜ್ಞಾನಪುರವೆಂದು ಖ್ಯಾತಿ ಪಡೆಯಿತು. ಇವತ್ತಿಗೂ ಪುದುಕೊಟ್ಟೆ ಜಿಲ್ಲೆಯ ಅವುದಾಯರ್ ಕೊಯಿಲ್ ಪಕ್ಕ ಈ ಸ್ಥಳ ಇದೆ.

             ತಂಜಾವೂರಿನ ದೊರೆ ಶರಭೋಜಿ ಬ್ರಹ್ಮೇಂದ್ರರ ಬಳಿ ಬಂದಾಗ ತಮ್ಮ "ಆತ್ಮವಿದ್ಯಾವಿಲಾಸ"ದ ಪ್ರತಿಯೊಂದನ್ನು ನೀಡಿ ಆತನನ್ನು ಅನುಗ್ರಹಿಸಿದರು. ತಂಜಾವೂರಿನ ಸಮೀಪದ ಪುನ್ನೈನಲ್ಲೂರಿನಲ್ಲಿ ಮಾರಿಯಮ್ಮನನ್ನು ಸ್ಥಾಪಿಸಲು ಕಾರಣೀಭೂತರಾದರು. ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ ಸದಾಶಿವ ಬ್ರಹ್ಮೇಂದ್ರರ ಸಿದ್ಧಿ-ಸಾಧನೆ, ಪವಾಡಗಳ ಬಗೆಗೆ ಶರಭೋಜಿಯ ಆಸ್ಥಾನ ವಿದ್ವಾನ್ ದೀಪಾಂಬಪುರಿಯ ಮಲ್ಲಾರಿ ಪಂಡಿತ್ ಬರೆದ ದಾಖಲೆಗಳು ಈಗಲೂ ದೊರೆಯುತ್ತವೆ.  ತಮಿಳು ವಿದ್ವಾಂಸ, ಕವಿ, ತತ್ತ್ವಶಾಸ್ತ್ರಜ್ಞ ತಯುಮನಾವರ್ ಬ್ರಹ್ಮೇಂದ್ರರ ಆಶೀರ್ವಾದ ಪಡೆದುಕೊಂಡರು. ಅವರು ಸದಾ ಧ್ಯಾನದಲ್ಲಿರುತ್ತಿದ್ದ ತಿರುಗೋಕರ್ಣದ ಶಿವ ದೇವಾಲಯದಲ್ಲಿನ ಜಾಗ ಈಗಲೂ ಗುರುತಿಸಲ್ಪಡುತ್ತಿದೆ. ದೇವದಾನಪಟ್ಟಿ ಕಾಮಾಕ್ಷಿ ದೇವಾಲಯ ಅವರ ಮಾರ್ಗದರ್ಶನದಲ್ಲೇ ನಿರ್ಮಾಣವಾಯಿತು. ತಂಜಾವೂರಿನ ನಲು ಕಲ್ ಮಂಟಪದಲ್ಲಿ ಹನುಮಾನ್ ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ಅವರೇ. ಕುಂಭಕೋಣಂನ ತಿರುರಂಗೇಶ್ವರ ರಾಹುಸ್ಥಲ ದೇವಾಲಯದಲ್ಲಿ ಗಣೇಶ ವಿಗ್ರಹ ಹಾಗೂ ಶಕ್ತಿಯುತ ಗಣೇಶ ಯಂತ್ರ ಅವರು ಪ್ರತಿಷ್ಠಾಪನೆ ಮಾಡಿದುದರ ದಾಖಲೆಯ ಕೆತ್ತನೆ ಆ ದೇವಾಲಯದ ದ್ವಾರದ ಬಳಿಯೇ ಕಾಣಸಿಗುತ್ತದೆ. ಕರೂರಿನ ಸಮೀಪದ ತಂತೋಂದ್ರಿಮಲೈ ಶ್ರೀನಿವಾಸ ದೇವಾಲಯದಲ್ಲಿ ಅವರು ಪ್ರತಿಷ್ಠಾಪಿಸಿದ ಜನಾಕರ್ಷಣ ಯಂತ್ರ ಇಂದಿಗೂ ಅನೇಕರನ್ನು ಆಕರ್ಷಿಸುತ್ತಲೇ ಇದೆ. ಪೆರಂಬದೂರಿನ ಸಿರುವಕೋರ್ ಮಧುರಕಾಳಿ ದೇವಾಲಯದಲ್ಲಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಿದವರೂ ಅವರೇ.

                 ಹೀಗೆ ಯಾರ ಹಂಗಿಗೂ ಸಿಗದೆ, ಯಾವ ಮಾತು-ಕಥೆಗಳಿಲ್ಲದೆ ಸ್ವೇಚ್ಛೆಯಿಂದ ಅಲೆದಾಡುತ್ತ ಅವಧೂತ ಸ್ಥಿತಿಯನ್ನು ಸಾಧಿಸಿಕೊಂಡ ಸದಾಶಿವ ಬ್ರಹ್ಮೇಂದ್ರರು ತಮ್ಮ ಕೊನೆಗಾಲದಲ್ಲಿ ತಿರುವಿಶೈನಲ್ಲೂರನ್ನು ಬಿಟ್ಟು ಕಾವೇರಿ ತೀರದ ನೆರೂರಿಗೆ ಬಂದರು. ನೆರೂರಿನ ಮೂಲ ಹೆಸರು ನೆರುಪ್ಪೂರು ಅಂದರೆ ಅಗ್ನಿ ನಗರವೆಂದೇ ಅರ್ಥ. ಅಲ್ಲಿ ಅಗ್ನಿನೀಶ್ವರ ಎಂಬ ಶಿವ ದೇಗುಲವೂ ಇದೆ. ಅಲ್ಲಿ ಕಾವೇರಿ ದಕ್ಷಿಣಕ್ಕೆ ಹರಿಯುತ್ತದೆ. ಹಾಗಾಗಿ ನೆರೂರನ್ನು ಇನ್ನೊಂದು ಕಾಶಿ ಎಂದೆನ್ನಲಾಗುತ್ತದೆ. ಅವತಾರ ಸಮಾಪ್ತಿಯ ಕಾಲದಲ್ಲಿ ಜೇಷ್ಠ ಶುದ್ಧ ದಶಮಿಯ ದಿನ ಸಮಾಧಿಯ ಗುಂಡಿಯಲ್ಲಿ ಯೋಗಮುದ್ರೆಯಲ್ಲಿ ಕುಳಿತ ಬ್ರಹ್ಮೇಂದ್ರರು ಮುಂದೇನು ಮಾಡಬೇಕಂದು ನಿರ್ದೇಶಿಸಿದರು. ಅಲ್ಲದೇ ಒಂಬತ್ತನೇ ದಿನ ಬಿಲ್ವ ಗಿಡವೊಂದು ಸಮಾಧಿಯಿಂದ ಮೇಲೆದ್ದು ಬರುವುದಾಗಿಯೂ, ಹನ್ನೆರಡನೆಯ ದಿವಸ ಕಾಶಿಯಿಂದ ಬಾಣಲಿಂಗವೊಂದನ್ನು ಭಕ್ತರೊಬ್ಬರು ತರುತ್ತಾರೆಂದೂ ಹೇಳಿದರು. ಅದೇ ರೀತಿ ನಡೆಯಿತೆಂದು ಬೇರೆ ಹೇಳಬೇಕಾಗಿಲ್ಲ. ಪುದುಕೊಟ್ಟೈಯ ದೊರೆ ರಘುನಾಥ ತೊಂಡೈಮಾನನೇ ಬಾಣಲಿಂಗದ ಪ್ರತಿಷ್ಠಾಪನೆಯನ್ನೂ ನೆರವೇರಿಸಿದ. 1912ರಲ್ಲಿ ಲಕ್ಷಾರ್ಚನೈ ಸ್ವಾಮಿ ಎನ್ನುವವರಿಂದ ನೆರೂರಿನಲ್ಲಿ ಆರಂಭವಾದ ಆರಾಧನೆ ಇಂದಿಗೂ ನಡೆಯುತ್ತಿದೆ. ತೀರಾ ಈಚೆಗೆ ಮತ್ತೊಂದು ಅಚ್ಚರಿಯೂ ಸಂಭವಿಸಿತು. ಮಧುರೈಯಿಂದ ಅರವತ್ತು ಕಿ.ಮಿ. ದೂರದಲ್ಲಿರುವ ಮನಮಧುರೈ ಸೋಮನಾಥ ದೇವಾಲಯ ಸಮುಚ್ಚಯದಲ್ಲಿ ಅವರ ಸಮಾಧಿ ಇರುವುದನ್ನು ಕಂಚಿ ಪರಮಾಚಾರ್ಯರು ಪತ್ತೆ ಹಚ್ಚಿದರು. ಹೀಗೆ ಏಕಕಾಲದಲ್ಲಿ ಎರಡೂ ಕಡೆ ಸಜೀವ ಸಮಾಧಿಯಿರುವ ಮಹಾಪುರುಷ ಸದಾಶಿವ ಬ್ರಹ್ಮೇಂದ್ರರು. ಎರಡೂ ಕಡೆ ಅವರ ಆರಾಧನೆ ನಡೆಯುತ್ತಾ ಬರುತ್ತಿದೆ.

                     ಸದಾಶಿವ ಬ್ರಹ್ಮೇಂದ್ರರ ಹಿರಿಮೆಯನ್ನು ಅರಿತಿದ್ದ ಶೃಂಗೇರಿಯ ಜಗದ್ಗುರುಗಳಾಗಿದ್ದ ಉಗ್ರನರಸಿಂಹ ಭಾರತಿಗಳು ನೆರೂರಿನಲ್ಲಿನ ಅವರ ಸಮಾಧಿಯ ದರ್ಶನ ಮಾಡಿದ್ದರು.ಶೃಂಗೇರಿ ಶ್ರೀಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ತಮ್ಮ ತಮಿಳುನಾಡಿನ ಪ್ರವಾಸ ಕಾಲದಲ್ಲಿ ತಿರುಚ್ಚಿಯ ಸಮೀಪ ಪಯಣಿಸುತ್ತಿದ್ದಾಗ ಅವರ ಪಲ್ಲಕ್ಕಿ ಹಠಾತ್ತನೆ ನಿಂತು ಬಿಟ್ಟಿತು. ಪಲ್ಲಕ್ಕಿ ಹೊತ್ತವರು ತಮ್ಮನ್ಯಾವುದೋ ಶಕ್ತಿ ಎಳೆದು ನಿಲ್ಲಿಸಿದೆ ಎಂದು ಅಳಲು ತೋಡಿಕೊಂಡಾಗ ಧ್ಯಾನಸ್ಥರಾದ ಗುರುಗಳು ತುಸು ಸಮಯದ ಬಳಿಕ ಪಲ್ಲಕ್ಕಿಯಿಂದ ಇಳಿದು ನಡೆಯಲಾರಂಭಿಸಿದರು. ಹಾಗೆ ನಡೆದು ಬಂದವರು ನಿಂತಿದ್ದು ನೆರೂರಿನಲ್ಲಿದ್ದ ಸದಾಶಿವ ಬ್ರಹ್ಮೇಂದ್ರರ ಸಮಾಧಿಯ ಮುಂದೆಯೇ! ಸಮಾಧಿಯ ದರ್ಶನ ಪಡೆದ ಬಳಿಕ ಮೂರು ದಿನ ಅಲ್ಲೇ ಉಪವಾಸವಿದ್ದು ಧ್ಯಾನಾವಸ್ಥೆಯಲ್ಲಿದ್ದರು. ಮೂರನೇ ದಿನದ ಕೊನೆಗೆ ಯಾರೋ ಅವರೊಂದಿಗೋ ಮಾತಾಡುತ್ತಿರುವ ದನಿ ಕೇಳಿಸಿತು. ಆದರೆ ಯಾರೂ ಕಾಣಿಸುತ್ತಿರಲಿಲ್ಲ. ಹೀಗೆ ಬ್ರಹ್ಮೇಂದ್ರರ ದರ್ಶನ ಪಡೆದ ಶಿವಾಭಿನವ ನೃಸಿಂಹ ಭಾರತಿಗಳು ಬಳಿಕ ಅಲ್ಲೇ ಸದಾಶಿವ ಬ್ರಹ್ಮೇಂದ್ರರನ್ನು ಕುರಿತು ಸದಾಶಿವೇಂದ್ರ ಸ್ತವ ಹಾಗೂ ಸದಾಶಿವೇಂದ್ರ ಪಂಚರತ್ನ ಎಂಬೆರಡು ಶ್ಲೋಕಗಳನ್ನು ರಚಿಸಿದರು. ಮುಂದೆ ಶೃಂಗೇರಿಯ ಅವಧೂತರೆಂದೇ ಖ್ಯಾತಿವೆತ್ತ ಚಂದ್ರಶೇಖರ ಭಾರತೀ ಸ್ವಾಮಿಗಳು ಕೂಡಾ ಸದಾಶಿವ ಬ್ರಹ್ಮೇಂದ್ರರ ನೆರೂರು ಸಮಾಧಿಯನ್ನು ದರ್ಶಿಸಿ ಆತ್ಮವಿದ್ಯಾವಿಲಾಸದ ಅನುಸಂಧಾನದಲ್ಲಿ ತೊಡಗಿ ಆತ್ಮವಿದ್ಯಾವಿಲಾಸಿಯೇ ಆಗಿ ಹೋದರು. ಶೃಂಗೇರಿ ಜಗದ್ಗುರುಗಳಾದವರು ಸದಾಶಿವ ಬ್ರಹ್ಮೇಂದ್ರರ ಸಮಾಧಿಯನ್ನು ದರ್ಶಿಸಿ ಪೂಜಿಸುವ ಪರಿಪಾಠ ಇಂದಿನವರೆಗೂ ನಡೆದು ಬಂದಿದೆ. ಬಾಲಸುಬ್ರಹ್ಮಣ್ಯ ಯತೀಂದ್ರ ಎನ್ನುವ ಸಂನ್ಯಾಸಿಯೋರ್ವರು ಬ್ರಹ್ಮೇಂದ್ರರ ಕುರಿತಂತೆ ಸದಾಶಿವ ಸ್ತೋತ್ರವನ್ನು ರಚಿಸಿದ್ದಾರೆ.

                   ಬ್ರಹ್ಮವಿದ್ ಬ್ರಹ್ಮೈವ ಭವತಿ - ಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ. ಈ ದೇಶದಲ್ಲಿ ಸಾಧು, ಸಂತ, ಸಂನ್ಯಾಸಿಗಳಿಗೇನೂ ಬರವಿಲ್ಲ. ಆದರೆ ಬ್ರಹ್ಮ ಸಾಕ್ಷಾತ್ಕಾರಗೊಂಡವರು ಅಥವಾ ಅವಧೂತರು ಕಣ್ಣಿಗೆ ಬೀಳುವುದೇ ಅಪರೂಪ. ಒಂದು ವೇಳೆ ಸಿಕ್ಕಿದರೂ ಅವರ ಅನುಗ್ರಹಕ್ಕೆ ಪಾತ್ರರಾಗುವುದು ಅಷ್ಟು ಸುಲಭವೂ ಅಲ್ಲ. ಕೆಲವರ ಬಗ್ಗೆ ಹೆಚ್ಚಿನವರಿಗೆ ತಿಳಿಯುವುದೂ ಇಲ್ಲ. ಅವಧೂತರನ್ನು ಹುಚ್ಚರೆಂದು ಕಣೆಗಣಿಸುವವರ ಸಂಖ್ಯೆಯೇ ಹೆಚ್ಚು. ಆದರೆ ಅವಧೂತರಿಂದಾಗಿಯೇ ಇಲ್ಲೊಂದಷ್ಟು ಪುಣ್ಯ ಸಂಚಯನವಾಗಿದೆ. ಈ ಭರತ ಭೂಮಿ ಉಳಿದುಕೊಂಡಿದೆ. ಇಂದಿಗೂ ಸಾಧನಾ ಕ್ಷೇತ್ರವಾಗಿಯೇ ಉಳಿದಿದೆ. ಕಾಲಕಾಲಕ್ಕೆ ಬೇರೆಬೇರೆ ಜಾಗಗಳಲ್ಲಿ ಅವಧೂತರು ಕಂಡು ಬರುತ್ತಲೇ ಇದ್ದಾರೆ. ದಕ್ಷಿಣಾಮೂರ್ತಿಯಿಂದ ಮೊದಲ್ಗೊಂಡು ಇತ್ತೀಚಿನ ವೆಂಕಾಟಚಲ ಅವಧೂತರವರೆಗೆ. ನಮ್ಮ ಕಣ್ಣಿಗೆ ಬೀಳದ ಅವಧೂತರು ಇನ್ನೆಷ್ಟೋ? ದಕ್ಷಿಣಾಮೂರ್ತಿ-ಸದಾಶಿವ ಬ್ರಹ್ಮೇಂದ್ರ-ರಮಣ ಮಹರ್ಷಿ ಈ ಅವಧೂತ ಪರಂಪರೆಯಲ್ಲೊಂದು ವಿಶೇಷವಿದೆ. ಈ ಕೊಂಡಿ ಮೌನವಾಗಿಯೇ ಹಲವರಲ್ಲಿ ಜ್ಞಾನವನ್ನು, ಭಾಗ್ಯವನ್ನು ಕರುಣಿಸಿದೆ. ಅದು ಎಲ್ಲೊಲ್ಲೋ ಇದ್ದವರನ್ನೂ, ಅವಧೂತ ಬಿಡಿ, ಹಿಂದೂ ಧರ್ಮದ ಬಗ್ಗೆ ಏನೇನೂ ಅರಿಯದವರನ್ನೂ ತಮ್ಮ ಬಳಿಗೆ ಕರೆತಂದಿದೆ. ಜ್ಞಾನಕ್ಕಾಗಿ ಹಲವರನ್ನು ಹಪಹಪಿಸುವಂತೆ ಮಾಡಿದೆ. ಮೌನವಾಗಿಯೇ ಜಗವ ಬೆಳಗಿದೆ. ಮೌನದ ಶಕ್ತಿ ಅದು!

ಗುರುವಾರ, ನವೆಂಬರ್ 9, 2017

ಬಡವರ ಒಡಲಿಗೆ ಕೊಳ್ಳಿ ಇಟ್ಟಾತನೇ ಟಿಪ್ಪು

ಬಡವರ ಒಡಲಿಗೆ ಕೊಳ್ಳಿ ಇಟ್ಟಾತನೇ ಟಿಪ್ಪು


            ಭಾರತವನ್ನು ನಿಧಾನವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಬ್ರಿಟಿಷರಿಗೆ ಇಲ್ಲಿನ ಸಾಮಾಜಿಕ ಪರಿಸ್ಥಿತಿಯ ಅಧ್ಯಯನದ ಅವಶ್ಯಕತೆಯಿತ್ತು. ಅಂತಹಾ ಸಮಯದಲ್ಲಿ ಮದರಾಸು, ಮಲಾಬಾರ್, ಕೆನರಾ ಮತ್ತು ಮೈಸೂರು ಭಾಗಗಳ ಅಧ್ಯಯನಕ್ಕೆ ನಿಯುಕ್ತಿಗೊಂಡವನೇ ಕಲ್ಕತ್ತಾ ಏಷಿಯಾಟಿಕ್ ಸೊಸೈಟಿಯ ಸಂಶೋಧನಾ ವಿದ್ಯಾರ್ಥಿಯೂ ಪ್ರಾಚ್ಯ ವಸ್ತುಗಳ ಅಧ್ಯಯನಕಾರನೂ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ವೈದ್ಯನೂ ಆಗಿದ್ದ ಫ್ರಾನ್ಸಿಸ್ ಬುಕಾನನ್. ಆತನ A journey from madras-through the countries of MYSORE,CANARA AND MALABAR ಆ ಕಾಲದ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವ ಒಂದು ಅಪರೂಪದ ಐತಿಹಾಸಿಕ ದಾಖಲೆಯೆನಿಸಿದೆ. ಟಿಪ್ಪುವಿನ ಅವಸಾನದ ತಕ್ಷಣದಲ್ಲೇ ನಡೆದ ಈ ಅಪೂರ್ವ ದಾಖಲಾತಿ ಇಲ್ಲಿನ ಜನತೆಯ ಮೇಲೆ ಟಿಪ್ಪುವಿನ ದೌರ್ಷ್ಟ್ಯವನ್ನೂ ತನಗರಿವಿಲ್ಲದಂತೆಯೇ ಹೇಳುತ್ತಾ ಹೋಗುತ್ತದೆ.

               ಗಡಾಯಿಕಲ್ಲಿನ ಕೋಟೆಯನ್ನು ಟಿಪ್ಪು ಕಟ್ಟಿದ್ದಲ್ಲ; ಆಕ್ರಮಿಸಿ, ಜಮಲಾಬಾದ್ ಎಂದು ಸುನ್ನತ್ ಮಾಡಿಸಿದ್ದು! ಬಂಗಾರ್ ಅರಸನನ್ನು ಬ್ರಿಟಿಷರ ಪರ ಎಂಬ ಗುಮಾನಿಯ ಮೇರೆಗೆ ಟಿಪ್ಪು ನೇಣಿಗೇರಿಸಿದ. ಅವನ ಮಕ್ಕಳು ನಂದಾವರಕ್ಕೆ ಓಡಿ ಹೋಗಿ ಕೃಷಿ ಮಾಡಿ ಹೊಟ್ಟೆ ಹೊರೆಯಬೇಕಾಯಿತು. ಇಕ್ಕೇರಿಯ ನಾಯಕರಾಗಲೀ, ಹೈದರನಾಗಲೀ ಬೆಳ್ತಂಗಡಿಯ ಜನತೆಯ ಮೇಲೆ ತೆರಿಗೆ ವಿಧಿಸಿರಲಿಲ್ಲ. ಆದರೆ ಟಿಪ್ಪು ಉಳಿದ ಶ್ರೀಮಂತ ಪ್ರದೇಶಗಳ ಮೇಲಿದ್ದ ತೆರಿಗೆಯನ್ನೇ ಬೆಳ್ತಂಗಡಿಯ ಬಡ ರೈತರ ಮೇಲೆ ಹೊರಿಸಿದ. “ಜಮಲಾಬಾದ್ ಮೂಲತಃ ನರಸಿಂಘ ಅಂಗಡಿ. ಇವತ್ತು ಇಲ್ಲಿ ದಟ್ಟವಾಗಿ ಮರಗಳಿವೆಯಾದರೂ ಒಂದು ಕಾಲದಲ್ಲಿ ಕೃಷಿ ಮಾಡಿದ ಕುರುಹುಗಳು ಅಲ್ಲಿವೆ. ಮಣ್ಣಿನ ಫಲವತ್ತತೆಯೂ ಅದನ್ನೇ ಸೂಚಿಸುತ್ತದೆ. ಮಯೂರವರ್ಮನ ಬಳಿಕ ನರಸಿಂಘ ರಾಯನೆಂಬ ಬ್ರಾಹ್ಮಣ ರಾಯ ತುಳುನಾಡನ್ನು ಆಳುತ್ತಿದ್ದಾಗ ಇಲ್ಲಿನ ಸಣ್ಣ ನದಿಯ ದಂಡೆಯಲ್ಲಿ ಈ ನಗರವನ್ನು ನಿರ್ಮಿಸಿದ. ಅವನ ಹೆಸರಿನಿಂದಲೇ ಈ ನಗರ ಕರೆಯಲ್ಪಟ್ಟಿತು. ನರಸಿಂಘ ಘಡದ ಮೇಲಿನ ಈ ಕೊಟೆಯನ್ನು ಕಟ್ಟಿದವನು ಅವನೇ. ಆತನ ವಂಶದ ಮನೆಯೊಂದು ಅಲ್ಲಿದೆಯಾದರೂ ಇದಕ್ಕಿಂತ ಹೆಚ್ಚಿನ ಇತಿಹಾಸ ಅವರಿಗೂ ತಿಳಿದಿಲ್ಲ.” ಎಂದು ಕೋಟೆಯ ನೈಜ ಇತಿಹಾಸವನ್ನು ಹೊರಗೆಡವಿದ್ದಾನೆ ಬುಕಾನನ್. ಇಂತಹ ಕೋಟೆಯನ್ನು ತನ್ನ ಕೈವಶ ಮಾಡಿಕೊಂಡ ಟಿಪ್ಪು ತಕ್ಕ ಮಟ್ಟಿಗೆ ಅದನ್ನು ಸಜ್ಜುಗೊಳಿಸಿದ. ಬಳಿಕ ಬ್ರಿಟಿಷರ ಕೈಗೆ ಸುಲಭದ ತುತ್ತಾಗುವಂತಿದ್ದ ಕಾರಣದಿಂದ ಮಂಗಳೂರು ಕೋಟೆಯನ್ನು ನಾಶಗೊಳಿಸಿದ. ಮಂಗಳೂರಿನ 27 ಚರ್ಚುಗಳ ನಾಶಕ್ಕೆ ಟಿಪ್ಪು ಆದೇಶಿಸಿದ್ದು ಈ ಕೋಟೆಯಲ್ಲಿ ಕುಳಿತೇ! ಮಂಗಳೂರಿನಲ್ಲಿ ಕ್ರೈಸ್ತರ ಮೇಲೆರಗಿ ಮಾರಣಹೋಮ ನಡೆಸಿ ಐವತ್ತು ಸಾವಿರಕ್ಕೂ ಹೆಚ್ಚು ಸೆರೆಯಾಳುಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸುವಾಗ, ಇದೇ ಗಡಾಯಿ ಕಲ್ಲಿನ ಕೋಟೆಯಿಂದ ಕೆಲ ಪ್ರಮುಖರನ್ನು ತಳ್ಳಿ ಕೊಂದಿದ್ದ ಟಿಪ್ಪು.

               ಅರ್ಕುಳದ ಸಮೀಪದ ಫರಂಗಿಪೇಟೆ ಬಹುತೇಕ ನಾಶವಾಗಿತ್ತು. ಪಣ್ಯನಿ(?) ನದಿಯ ಇಕ್ಕೆಲಗಳಲ್ಲಿದ್ದ ಗದ್ದೆ ತೋಟಗಳಿಗೆ ಟಿಪ್ಪು ಮಾರಕವಾಗಿ ಎರಗಿದ್ದ. ಕಾಲು ಭಾಗದಷ್ಟು ಭೂಮಿಯನ್ನೂ ವ್ಯವಸಾಯ ಮಾಡಲಾಗದ ಸ್ಥಿತಿಗೆ ತಂದಿದ್ದ. ಕಾಳು ಮೆಣಸಿನ ಬಳ್ಳಿಗಳು, ಅವುಗಳು ಅಡರಿದ್ದ ಮರಗಳೆಲ್ಲಾ ಟಿಪ್ಪುವಿನ ಆಜ್ಞೆಯಂತೆ ಅವನ ಸೈನ್ಯದ ಕೊಡಲಿಯೇಟಿಗೆ ಧರೆಗುರುಳಿದ್ದವು. ಬಂಟ್ವಾಳದ ಸುಮಾರು 200 ಪರಿವಾರದ ಜನರನ್ನು ಟಿಪ್ಪು ಸೆರೆ ಹಿಡಿದಿದ್ದ. ಬುಕಾನನ್ ಹೋದ ಸಂದರ್ಭದಲ್ಲಿ ಅಲ್ಲಿ ಕೇವಲ 200 ಮನೆಗಳು ಉಳಿದಿದ್ದವು. ನಾಶವಾದ ಮನೆಗಳು ದುರಸ್ಥಿಯಾಗುತ್ತಿದ್ದವು. ದಾರಿಯುದ್ದಕ್ಕೂ ಕಬ್ಬಿಣದ ಕೋವಿಗಳು ಮತ್ತು ಅದರ ಅವಶೇಷಗಳು ಬಿದ್ದಿದ್ದವು. ಮಂಗಳೂರು ಕೋಟೆಯನ್ನು ಧ್ವಂಸಗೊಳಿಸಿದ ಬಳಿಕ ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಲು ಟಿಪ್ಪು ನೀಡಿದ್ದ ಆದೇಶವನ್ನು ಸರಿಯಾಗಿ ಪಾಲಿಸದ ಅವನ ಸೈನಿಕರು ಅವನ್ನು ದಾರಿಯುದ್ದಕ್ಕೂ ಎಸೆದಿದ್ದರು. ಬಿದ್ದಿದ್ದ ಬಂದೂಕುಗಳನ್ನು ಕಂಡು ಜನರು ಹೆದರಿ ಓಡುತ್ತಿದ್ದರು! ಮೂಡಬಿದಿರೆಯಲ್ಲಿ ಏಳುನೂರರಷ್ಟು ಜೈನ ಹಾಗೂ ಶಂಕರಾಚಾರ್ಯ ಅನುಯಾಯಿಗಳಾದ ಶಿವಭಕ್ತ ಬ್ರಾಹ್ಮಣರ ಮನೆಗಳಿದ್ದವು. ಟಿಪ್ಪುವಿನ ಆಡಳಿತದಲ್ಲಿ ಇಲ್ಲಿನ ದೇವಾಲಯಗಳಿಗೆ ಸಿಗುತ್ತಿದ್ದ ಹಣ 360 ಪಗೋಡಾಗಳಿಂದ 90 ಪಗೋಡಾಗಳಿಗಿಳಿಯಿತು. ಟಿಪ್ಪುವಿನ ದಾಳಿಯ ಬಳಿಕ ಅಲ್ಲಿ ಕೇವಲ ನೂರರಷ್ಟು ಮನೆಗಳುಳಿದಿವೆ! ನಾನು ಇಷ್ಟರವರೆಗೆ ನೋಡಿದ ಪ್ರದೇಶಗಳಲ್ಲಿ ಅತೀ ಬಡತನದಲ್ಲಿರುವ ಪ್ರದೇಶ ಎಂದರೆ ಇದೇ ಎಂದು ಬರೆದಿದ್ದಾನೆ ಬುಕಾನನ್!

            "250 ವರ್ಷಗಳ ಹಿಂದೆ ಕಾರ್ಕಳಕ್ಕೆ ಬಂದು ನೆಲೆಸಿದ್ದ ಮರಾಠೀ ಬ್ರಾಹ್ಮಣರು ಅಡಕೆ ಬೆಳೆಗಾರರಾಗಿ ಬದಲಾಗಿದ್ದರು. ಸುಬ್ರಹ್ಮಣ್ಯ ಗೋಕರ್ಣಗಳ ನಡುವೆ ಅವರ 750  ಪರಿವಾರಗಳಿದ್ದವು. ಆದರೆ ಟಿಪ್ಪು ಸಮುದ್ರ ಮಾರ್ಗದ ಮೂಲಕ ವ್ಯಾಪಾರವನ್ನು ನಿಷೇಧಿಸಿದ ಬಳಿಕ ಅಡಕೆಯ ಬೆಲೆ ಕುಸಿದು ತೋಟಗಳು ಪಾಳು ಬೀಳಲಾರಂಭಿಸಿದವು. ಮರಾಠಿ ಬ್ರಾಹ್ಮಣರ ಸಂಖ್ಯೆ 400 ಪರಿವಾರಕ್ಕಿಳಿಯಿತು. ಕಾರ್ಕಳದಲ್ಲಿ ಮುರಿದ ಮನೆಗಳನ್ನು ಮತ್ತೆ ನಿರ್ಮಿಸುವಲ್ಲಿ ಜನ ವ್ಯಸ್ತರಾಗಿದ್ದರು. ತೋಟಗಳಿಗೆ ಬೆಂಕಿ ಬಿದ್ದಂತೆ ಕಾಣುತ್ತಿತ್ತು. ಟಿಪ್ಪುವಿನ ದೌರ್ಜನ್ಯಕ್ಕೆ ವರ್ತಕರೂ ಬಲಿಯಾಗಿ ಪೇಟೆ ಬಿಕೋ ಎನ್ನುತ್ತಿದೆ. ದೇವಸ್ಥಾನವೊಂದರ ದುರಸ್ತಿ ಕೆಲಸ ಅರ್ಧದಲ್ಲೇ ನಿಂತಿದೆ” ಎಂದು ದಾಖಲಿಸಿದ್ದಾನೆ ಬುಕಾನನ್. ಅದು ವೆಂಕಟರಮಣ ದೇವಾಲಯವೆಂದು ಬೇರೆ ಹೇಳಬೇಕಾಗಿಲ್ಲ! ಸಮುದ್ರ ಮಾರ್ಗ ಅಡಕೆ ವಹಿವಾಟಿಗೆ ಮುಕ್ತವಾದದ್ದು ಟಿಪ್ಪು ನಾಶವಾದ ಬಳಿಕವೇ!

           ಹಿರಿಯಡ್ಕದ ಜೈನ ಬಸದಿಯಲ್ಲಿದ್ದ ವಿಗ್ರಹವನ್ನು ಟಿಪ್ಪು ಜಮಲಾಬಾದಿಗೆ ಒಯ್ದು ಕರಗಿಸಿ ನಾಣ್ಯಗಳನ್ನಾಗಿ ಪರಿವರ್ತಿಸಿದ್ದ. ಒಂದೊಮ್ಮೆ ಬ್ರಹ್ಮಾವರದ ಮುಂದಿನ ಕಲ್ಯಾಣಪುರದ ರಸ್ತೆಗಳನ್ನು ಅಲಂಕರಿಸಿದ್ದ ಧೂಪದ ಮರಗಳು ಟಿಪ್ಪುವಿನ ಸೈನ್ಯದ ಕತ್ತಿಯೇಟಿಗೆ ಧರಾಶಾಯಿಯಾಗಿದ್ದವು. ಅಲ್ಲಿನ ಗದ್ದೆ, ತೋಟ ಹಾಗೂ ಮನೆಗಳೆಲ್ಲಾ ಟಿಪ್ಪುವಿನ ಪದಾಘಾತಕ್ಕೆ ಸಿಲುಕಿ ಜನಜೀವನ ಅಸ್ತವ್ಯಸ್ತವಾಗಿತ್ತು.ಹೊನ್ನಾವರದ ಮಾರುಕಟ್ಟೆಯೊಂದರಲ್ಲೇ ಆ ಕಾಲದಲ್ಲಿ ಸುಮಾರು 12ಸಾವಿರ ರೂಪಾಯಿಗಳ ಕೊಪ್ಪರ(ಒಣ ಕೊಬ್ಬರಿ) ಹೊರದೇಶಗಳಿಗೆ ರಫ್ತಾಗುತ್ತಿತ್ತು. ಅಕ್ಕಿ, 9 ಸಾವಿರ ಪಗೋಡ ಮೊತ್ತದ ಕಾಳು ಮೆಣಸು, ಹತ್ತುಸಾವಿರ ಪಗೋಡಾಗಳ ಮೊತ್ತದ ಅಡಕೆ ರಫ್ತಾಗುತ್ತಿತ್ತು. ಇವೆಲ್ಲಾ ಕೇವಲ ಭಟ್ಕಳ ಹಾಗೂ ಮಿರ್ಜಿಯ ನಡುವಿನ ಸಣ್ಣ ಪ್ರದೇಶದ ಸರಕುಗಳು. ಟಿಪ್ಪುವಿನ ದಬ್ಬಾಳಿಕೆಯಿಂದ ಅವೆಲ್ಲಾ ನಿಂತು ಹೋದವು. ಒಂದು ಕಾಲದಲ್ಲಿ ಅಕ್ಕಿಯನ್ನು ರಫ್ತು ಮಾಡುತ್ತಿದ್ದ ಈ ಪ್ರದೇಶಗಳು ಅಕ್ಕಿಯನ್ನು ಆಮದು ಮಾಡಿಕೊಳ್ಳಬೇಕಾದ ದುಃಸ್ಥಿತಿಗೆ ತಲುಪಿದವು. ಕುಮಟಾದ ತೆಂಗಿನ ತೋಟಗಳು ಎರಡೆರಡು ಬಾರಿ ಹತ್ತಿರವೇ ಠಿಕಾಣಿ ಹೂಡಿದ್ದ ಟಿಪ್ಪುವಿನ ಸೇನೆಯ ಬೆಂಕಿಗೆ ಆಹುತಿಯಾಗಿದ್ದವು! ಇದು ಮತಾಂಧನೊಬ್ಬನ ಸೇನೆ ಅವನಂತೆಯೇ ಅಜಾಗರೂಕವೂ, ದುರಾಚಾರಿಯೂ, ಕ್ರೂರವೂ ಆಗದೇ ಉಳಿದೀತೇ? ಹೈದರನ ವಿರುದ್ಧ ಸೆಟೆದು ನಿಂತ ಊರು ಮಿರ್ಜಿ. ವಾಸ್ತವದಲ್ಲಿ ಮಿಡಿಜಯ್ ಮುಸಲ್ಮಾನರ ಬಾಯಲ್ಲಿ ಮಿರ್ಜಿಯಾಗಿ ವಿರೂಪಗೊಂಡಿತ್ತು. ಇಂತಹ ಮಿಡಿಜಯ್ ಟಿಪ್ಪುವಿನ ದಬ್ಬಾಳಿಕೆಗೆ ನಲುಗಿ ನಿರ್ಜನ ಪ್ರದೇಶವಾಗಿ ಹೋಯಿತು.

         ನೀಲೇಶ್ವರದಿಂದ ಕಾರವಾರದವರೆಗೆ ಟಿಪ್ಪುವಿನ ಕೈದಿಗಳಾದ ಕ್ರೈಸ್ತರ ಸಂಖ್ಯೆಯೇ ಬರೋಬ್ಬರಿ 80 ಸಾವಿರ! ಸ್ತ್ರೀ, ಪುರುಷ, ರೋಗಿ, ಅಶಕ್ತ ಎಂದೆಲ್ಲಾ ನೋಡದೆ ಅವರನ್ನು ಬೆಟ್ಟಗುಡ್ಡಗಳಲ್ಲಿ ಎಳೆದುಕೊಂಡು ಹೋಗಿ ಶ್ರೀರಂಗಪಟ್ಟಣದ ಕಾರಾಗೃಹಗಳಲ್ಲಿ ಕೊಳೆಸಲಾಯಿತು. ಇಪ್ಪತ್ತು ಸಾವಿರದಷ್ಟು ಮಂದಿ ದಾರಿಯಲ್ಲೇ ಸತ್ತರು. ಮದಕರಿ ನಾಯಕರನ್ನು ಮೋಸದಿಂದ ಕೊಲ್ಲಿಸಿದ; ಮೈಸೂರು, ಕೊಡಗು, ಮಲಬಾರ್, ತುಳುನಾಡು ಸೀಮೆಗಳಾದ್ಯಂತ ದೇವಾಲಯಗಳನ್ನೂ, ಜನರನ್ನೂ ನಾಶ ಮಾಡಿ, ಮತಾಂತರಿಸಿ ಊರೂರುಗಳನ್ನೇ ಸ್ಮಶಾನವಾಗಿ ಪರಿವರ್ತಿಸಿದ ಮತಾಂಧನೊಬ್ಬನ ಆಡಳಿತದಲ್ಲಿ ಸಮಾಜ ಎಂತಹಾ ದುರ್ದೆಶೆಗೆ ಒಳಗಾಗಿರಬಹುದು? ಮನೆ, ಗದ್ದೆ, ತೋಟಗಳನ್ನೂ ಸುಟ್ಟು, ವ್ಯಾಪಾರಕ್ಕೂ ಅವಕಾಶ ಕೊಡದೆ, ಕಂದಾಯವನ್ನು ಬೇಕಾಬಿಟ್ಟಿ ಏರಿಸಿ ಬಡ ರೈತರ ಒಡಲಿಗೆ ಕೊಳ್ಳಿ ಇಟ್ಟ ಕ್ರೂರಿಯೊಬ್ಬ ಮಾತೆತ್ತಿದರೆ ಸಮಾಜವಾದದ ಮಾತಾಡುವ ಸರಕಾರಕ್ಕೆ ಅಪ್ಯಾಯಮಾನವಾಗಿದ್ದಾನೆಯೆಂದರೆ ಇದು ಕಲಿಯುಗವೇ ಸರಿ. ಏನಿಲ್ಲ, ತಾವು ಬಡವರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಜನ ಬಡಜನರ, ರೈತರ ಭೂಮಿಯ ಮೇಲೆರಗಿದ್ದ ಈ ಧೂರ್ತನ ಪ್ರಶಂಸೆ ಮಾಡುವ ಮೂಲಕ ತಮ್ಮನ್ನು ತಾವು ಬೆತ್ತಲಾಗಿರಿಸಿಕೊಂಡಿದ್ದಾರೆ, ಅಷ್ಟೇ!

ಬುಧವಾರ, ನವೆಂಬರ್ 1, 2017

ಭಾಷೆಯ ಮೇಲಿನ ದುರಭಿಮಾನ...ರಾಷ್ಟ್ರದ್ರೋಹಕ್ಕೆ ಆಹ್ವಾನ!

ಭಾಷೆಯ ಮೇಲಿನ ದುರಭಿಮಾನ...ರಾಷ್ಟ್ರದ್ರೋಹಕ್ಕೆ ಆಹ್ವಾನ!

           "ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ"- ವಸುಧೆಯೊಳಗೆ ವಿಲೀನವಾಗಿದ್ದೂ ತನ್ನ ವಿಶೇಷತೆಯನ್ನು ವಿಶದಗೊಳಿಸುತ್ತಲೇ ಇರುವ ಕಾವೇರಿಯಿಂದ ಗೋದಾವರಿಯವರೆಗಿರುವ ಜನಪದ ಎಂದು ಕನ್ನಡದ ಅನನ್ಯತೆ, ಸ್ವಂತಿಕೆಯನ್ನು ಮನೋಜ್ಞವಾಗಿ ಬಣ್ಣಿಸಿದೆ ಕವಿರಾಜಮಾರ್ಗ. ಕನ್ನಡವೊಂದು ಗುಪ್ತಭಾಷೆಯಾಗಿದ್ದಿತು ಎಂದು ಕುಮುದೇಂದು ಮುನಿಯ 'ಸಿರಿ ಭೂವಲಯ' ಗ್ರಂಥ ತಿಳಿಸುತ್ತದೆ. ಕನ್ನಡ ಭಾಷೆಯ ಈ ಕಾವ್ಯದಲ್ಲಿ ಲಿಪಿಗಳಿರುವ, ಲಿಪಿ ಇಲ್ಲದ ೭೧೮ ಭಾಷೆಗಳಿದ್ದು, ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ; ಅದು "ಸರ್ವಭಾಷಾಮಯಿ ಭಾಷಾ" ಎಂದು ಕನ್ನಡವನ್ನು ಹಾಡಿಹೊಗಳಿದ್ದಾನೆ ಕುಮುದೇಂದು ಮುನಿ. "ಗಾನವ ಬೆರೆಯಿಸಿ ವೀಣೆಯ ದನಿಯೊಳು ವಾಣಿಯ ನೇವುರ ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವ"ವೆಂದು ಒಂದು ಕಾಲದಲ್ಲಿ ಕವಿಗಳ ವರ್ಣನೆಯ ಭಾರಕ್ಕೆ ನಲುಗಿದ ಈ ಮನವ ತಣಿಸುವ ಮೋಹನ ಸುಧೆಯನ್ನು ಇನ್ನೇನು ಕೆಲವೇ ಸಮಯದಲ್ಲಿ ಕಳೆದು ಕೊಳ್ಳುತ್ತೇವೆಯೋ ಎನ್ನುವ ಭಯ ಆರಂಭವಾಗಿರುವುದು ಸುಳ್ಳಲ್ಲ! ಅಪರಿಮಿತ ಸಂಖ್ಯೆಯ ಶಬ್ಧಗಳೂ, ಕರಾರುವಕ್ಕಾದ ಅಗಾಧ ಶಬ್ಧೋತ್ಪತ್ತಿ ಇರುವ ಕನ್ನಡದ ಶಬ್ಧಗಳು ನಮ್ಮ ಕಣ್ಣೆದುರಲ್ಲೇ ಕರಗಿ ಹೋಗುತ್ತಿರುವುದನ್ನು ಕಂಡಾಗ ಅಂತಹಾ ಭಯ ಹುಟ್ಟದಿರುತ್ತದೆಯೇ?

              ಆದರೆ ಕನ್ನಡಿಗರಿಗೆ ಇದರ ಅರಿವಿದೆಯೇ? ಕನ್ನಡಕ್ಕಾಗಿ ಹೋರಾಟ ಮಾಡಲು ಬೀದಿಗೊಂದರಂತೆ ಎದ್ದಿರುವ ಕನ್ನಡ ಸಂಘಟನೆಗಳು ಕನ್ನಡದ ಅಳಿವಿಗೆ ಕಾರಣವಾಗುತ್ತಿರುವ ನೈಜ ಸಮಸ್ಯೆಯನ್ನು ಬಗೆಹರಿಸಲು ಹೋರಾಡುತ್ತಿವೆಯೇ? ಇಂತಹ ಅನುಮಾನ ಬರಲು ಕಾರಣವಿದೆ. ದಿನ ದಿನವೂ ಒಂದೊಂದಾಗಿ ಮುಚ್ಚುತ್ತಿರುವ ಕನ್ನಡ ಶಾಲೆಗಳ ದುಃಸ್ಥಿತಿಯ ಕುರಿತು ಇವರು ತುಟಿಪಿಟಿಕ್ಕೆನ್ನುವುದಿಲ್ಲ. ನಾಯಿಕೊಡೆಗಳಂತೆ ಬೆಳೆಯುತ್ತಿರುವ ಅನ್ಯಭಾಷಾ ಶಾಲೆಗಳ ಬಗ್ಗೆ ಇವರದ್ದು ದಿವ್ಯ ಮೌನ. ಅರೇಬಿಕ್ ಭಾಷೆಯನ್ನು ಪ್ರಾಥಮಿಕ ಶಾಲೆಗಳಲ್ಲಿ ಕಲಿಸುತ್ತೇವೆಂದು ಸರಕಾರ ಘೋಷಣೆ ಮಾಡಿದಾಗ ಮುಗುಮ್ಮಾಗಿ ಉಳಿದ ಈ ಹೋರಾಟಗಾರರು ಇತ್ತೀಚೆಗಷ್ಟೇ "ಮೆಟ್ರೋದಲ್ಲಿ ಹಿಂದಿ ಹೇರಿಕೆ" ಎನ್ನುವ ಕ್ಷುಲ್ಲಕ ವಿಚಾರವನ್ನು ಹಿಡಿದುಕೊಂಡು ಬೆಂಗಳೂರನ್ನು ರಾಡಿ ಎಬ್ಬಿಸಲಾರಂಭಿಸಿದರು!. ಕೇಂದ್ರ ಸರಕಾರದ ತ್ರಿಭಾಷಾ ಸೂತ್ರದ ಅನ್ವಯ ಮೆಟ್ರೋ ರೈಲಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ – ಈ ಮೂರು ಭಾಷೆಗಳಲ್ಲಿ ನಡೆಯುತ್ತಿವೆ. ಮೆಟ್ರೋ ಬೆಂಗಳೂರಿಗೆ ಬಂದ ದಿನದಿಂದಲೂ ಇದು ನಡೆಯುತ್ತಾ ಬಂದಿದೆಯೇ ಹೊರತು ಕೇಂದ್ರದಲ್ಲಿ ಭಾಜಪಾ ಸರಕಾರ ಬಂದ ಮೇಲೆ ಕಾಣಿಸಿಕೊಂಡ ಬೆಳವಣಿಗೆಯಲ್ಲವಲ್ಲ. ಈ ಹೋರಾಟಗಾರರು ಹೇಳುವ ಹಾಗೆ ಕನ್ನಡವನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿಲ್ಲ. ಅದು ಮೊದಲನೆಯ ಸ್ಥಾನದಲ್ಲೇ ಇದೆ. ಕೇವಲ ಮೆಟ್ರೋ ಮಾತ್ರವಲ್ಲ; ಭಾರತೀಯ ರೈಲ್ವೇ, ಸೂಪರ್ ಮಾರ್ಕೆಟ್, ಅಂಚೆ, ಬ್ಯಾಂಕ್, ಬಸ್ ನಿಲ್ದಾಣ ಎಲ್ಲಾ ಕಡೆ ಇದೇ ಕ್ರಮ ಹಲವು ದಶಕಗಳಿಂದಲೂ ಚಾಲ್ತಿಯಲ್ಲಿದ್ದರೂ ಈಗ ಇದ್ದಕ್ಕಿದ್ದಂತೆ ಕೆಲವರು ದಂಗೆ ಎದ್ದದ್ದೇಕೆ? ಈಗ ಮೂರನೇ ಸ್ಥಾನದಲ್ಲಿರುವ ಹಿಂದಿ ಮುಂದೊಂದು ದಿನ ಕನ್ನಡದ ಸ್ಥಾನವನ್ನು ತಾನೇ ಆಕ್ರಮಿಸಿಕೊಳ್ಳುತ್ತದೆ ಎನ್ನುವ ಇವರ ವಾದದಲ್ಲಿ ಹುರುಳಿದೆಯೇ? ಕನ್ನಡ ತನ್ನ ಸ್ಥಾನವನ್ನು ಫಲಕದಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಜನಮಾನಸದಲ್ಲಿ ಉಳಿಸಿಕೊಳ್ಳಬೇಕೇ? ಹಿಂದಿ ಬೇಡವೇ ಬೇಡ ಎನ್ನುವವರಿಗೆ ಕೆಲವು ಪ್ರಶ್ನೆಗಳಿವೆ. ಇಂಗ್ಲೀಷ್ ಬಾರದ ಉತ್ತರ ಭಾರತದ ವ್ಯಕ್ತಿಯೊಬ್ಬ ಕರ್ನಾಟಕಕ್ಕೆ ಬಂದರೆ ಏನು ಮಾಡಬೇಕು? ಇಂಗ್ಲೀಷ್ ಜಾಗತಿಕ ಭಾಷೆ ಎನ್ನುವವರಿಗೆ ಭಾರತದಲ್ಲಿ ಇಂಗ್ಲೀಷ್ಗಿಂತ ಹೆಚ್ಚು ಹಿಂದಿ ಮಾತಾಡುವವರಿದ್ದಾರೆ ಎನ್ನುವುದರ ಅರಿವಿದೆಯೇ? ಇಂಗ್ಲೀಷ್ ಜಾಗತಿಕ ಭಾಷೆ, ಹೊರಗಿನವರು ಬಂದರೆ ಬೇಕು ಎನ್ನುವ ವಾದ ಹೂಡುವವರಿಗೆ ನಮ್ಮವರೇ ಆದ ಭಾರತೀಯರು ಬೇಡವೇ? ಇಂಗ್ಲೀಷ್ ಬರುವುದಕ್ಕಿಂತ ಎಷ್ಟೋ ಮುಂಚೆ ಇಲ್ಲಿನವರು ಬದುಕಿರಲಿಲ್ಲವೇ? ಒಂದು ಸ್ಥಳದಿಂದ ಇನ್ನೊಂದು ಕಡೆ ಅಡ್ಡಾಡುತ್ತಿರಲಿಲ್ಲವೇ?  ಕರ್ನಾಟಕದಲ್ಲಿ 5000ಕ್ಕೂ ಹೆಚ್ಚು ಪ್ರಾಥಮಿಕ / ಮಾಧ್ಯಮಿಕ / ಪ್ರೌಢ ಉರ್ದು ಶಾಲೆಗಳಿವೆ. ಇಷ್ಟೊಂದು ಸಂಖ್ಯೆಯ ಉರ್ದು ಶಾಲೆಗಳು ಮುಂದೊಂದು ದಿನ ರಾಜ್ಯದ ಎರಡನೇ ಬಹುದೊಡ್ಡ ಪಂಗಡವನ್ನು ಕನ್ನಡವೇ ಮರೆಯುವಂತೆ ಮಾಡಬಹುದೆಂದು ಕನ್ನಡದ ಭವಿಷ್ಯದ ಬಗ್ಗೆ ಕಾಳಜಿಯುಳ್ಳ ಈ ಹೋರಾಟಗಾರರಿಗೇಕೆ ಅನಿಸಿಲ್ಲ? ಅವರ್ಯಾಕೆ ಈ ಉರ್ದು ಹೇರಿಕೆಯ ಮೇಲೆ ಹೋರಾಟ ಮಾಡಲೊಲ್ಲರು? ಕನ್ನಡದ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದ ಕನ್ನಡ ವಿರೋಧಿ ಟಿಪ್ಪುವಿನ ವೈಭವೀಕರಣದ ಆಚರಣೆಗೆ ತೊಡಗಿದ ರಾಜ್ಯ ಸರ್ಕಾರದ ಕ್ರಮವನ್ನು ಇವರು ವಿರೋಧಿಸಿಲ್ಲವೇಕೆ? ಹಿಂದಿಯಿಂದಾಗಿ ಕನ್ನಡ ಸಾಯುತ್ತದೆ ಅನ್ನುವುದು ಸುಳ್ಳು. ಹಿಂದಿಯ ನಡುವೆ ಇದ್ದುಕೊಂಡು ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿಲ್ಲವೆ? ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಭೀತಿ ಕೇವಲ ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

            ವಾಸ್ತವದಲ್ಲಿ ಈ ಹೋರಾಟಗಾರರಲ್ಲಿ ಹೆಚ್ಚಿನವರಿಗೆ ಹೋರಾಟವೆಂದರೆ ತಮ್ಮ ಬೇಳೆ ಬೇಯಿಸಿಕೊಳ್ಳಲಿರುವ ಒಂದು ಮಾಧ್ಯಮ ಅಷ್ಟೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸದ ಇವರದ್ದು ಎಂತಹಾ ಹೋರಾಟ? ಅವರಿಗೆ ಕೇವಲ ತಮ್ಮ ಸ್ವಾರ್ಥ ಸಾಧನೆಗಷ್ಟೇ ಕನ್ನಡ ಬೇಕು.  ಮೆಟ್ರೋ ಸಂಚಾರ ವ್ಯವಸ್ಥೆಯಲ್ಲಿ ಯಾರೂ ಗಮನ ಕೊಡದ ಯಃಕಶ್ಚಿತ್ ಬೋರ್ಡುಗಳ ಭಾಷೆಯ ವಿಷಯವೇ ಇವರಿಗೆ ಪ್ರಧಾನವಾಗಿ ಕಾಣಿಸಿಕೊಳ್ಳುವುದರ ಹಿಂದೆ ಏನೋ ಕುಯುಕ್ತಿ, ಹಿತಾಸಕ್ತಿಗಳು ಇರುವುದು ಸುಸ್ಪಷ್ಟ. ಯಾವ ಹೋರಾಟದಿಂದ ಕೇಂದ್ರದ ಭಾಜಪಾ ಸರಕಾರವನ್ನು ಜನರ ಮನಸ್ಸಿನಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ, ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮರೆಸಬಹುದೋ ಅಂಥವಷ್ಟೇ ಇವರಿಗೆ ಬಹುದೊಡ್ಡ ಸಮಸ್ಯೆಗಳಾಗಿ ಕಾಣಿಸುತ್ತವೆ. ಅವಕ್ಕಷ್ಟೇ ಇವರ ಕಪ್ಪು ಬಾವುಟಗಳು ಹಾರಾಡುತ್ತವೆ. ವಿಚಿತ್ರ ಹಾಗೂ ವಿಪರ್ಯಾಸದ ವಿಚಾರವೆಂದರೆ ಹೆಚ್ಚಿನ ಕನ್ನಡಪರ ಚಳವಳಿಗಳಲ್ಲಿ ಭಾಗವಹಿಸುವ ಕಾರ್ಯಕರ್ತರನೇಕರಿಗೆ ತಾವ್ಯಾಕೆ ಹೋರಾಟ ನಡೆಸುತ್ತಿದ್ದೇವೆ ಎನ್ನುವುದರ ಅರಿವೇ ಇರುವುದಿಲ್ಲ. ಹಿಡಿಯಷ್ಟಿರುವ ಪ್ರಾಮಾಣಿಕ ಹೋರಾಟಗಾರರಿಗೆ ತಾವು ಮುಂಚೂಣಿಯಲ್ಲಿರುವವರ ಸ್ವಾರ್ಥಕ್ಕೆ ಬಲಿಯಾಗಿರುವುದು ತಿಳಿದಾಗ ಬೆಳಗಾಗಿರುತ್ತದೆ.

            ಕೆಲ ರಾಜ್ಯಗಳ ಗಡಿ ಭಾಗಗಳಲ್ಲಿ ಭಾಷೆಯ ಬದಲು ಭಾಷಾ ಜಗಳಗಳ ನಿತ್ಯ ಕಲರವ. ಭಾಷೆಯ ಮೇಲಿನ ಅಂಧಾಭಿಮಾನ ಕೇವಲ ಭೂ ಅಥವಾ ಜಲವಿವಾದಕ್ಕಷ್ಟೇ ಸೀಮಿತವಾಗಿಲ್ಲ. ಅದು ರಾಜಕಾರಣದಲ್ಲೂ, ಆಡಳಿತಾತ್ಮಕ ಸೇವೆಗಳಲ್ಲೂ ಕಾರ್ಪೋರೇಟ್ ಜಗತ್ತಿನಲ್ಲೂ ಹಾಸುಹೊಕ್ಕಾಗಿದೆ. ತಮಿಳಿಗರ ಭಾಷಾಂಧತೆ ಎಷ್ಟೆಂದರೆ ಅಲ್ಲಿ ದೇಶವನ್ನು "ರಾಷ್ಟ್ರ"ವನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸ್ಕೃತ ಹಾಗೂ ಇತರ ಭಾಷೆಗಳಿಗೆ ಸ್ಥಾನವೇ ಇಲ್ಲ. ಆದರೆ ತಮಿಳರಿಗೆ ಧರ್ಮ, ಸಂಸ್ಕೃತಿ ಹಾಗೂ ಜೀವನಕ್ರಮ ಹೀಗೆ ಎಲ್ಲವೂ ಆಗಿರುವ ತಮಿಳು ಭಾಷೆ ಇತ್ತೀಚೆಗೆ ಎಷ್ಟು ವಿಸ್ತಾರಗೊಂಡಿದೆ? ಬ್ರಿಟನ್ನಿನ ನೆರೆಯ ರಾಷ್ಟ್ರ ಫ್ರಾನ್ಸ್ ಇಂಗ್ಲೀಷನ್ನು ತನ್ನೊಳಗೆ ಬಿಟ್ಟುಕೊಳ್ಳಲೇ ಇಲ್ಲ. ಜೊತೆಗೇ ತಮ್ಮ ಭಾಷೆಯನ್ನು ಅತಿಯಾಗಿ ಪ್ರೀತಿಸುವ ಅವರು ಅದನ್ನು ಫ್ರಾನ್ಸಿನ ಗಡಿಯೊಳಗೆ ಬಂಧಿಸಿಬಿಟ್ಟರು. ಇದರಿಂದ ಇಂಗ್ಲೀಷಿಗೇನೂ ನಷ್ಟವಾಗಲಿಲ್ಲ. ಆದರೆ ಇವತ್ತು ಫ್ರೆಂಚನ್ನು ಫ್ರಾನ್ಸ್ ಹಾಗೂ ಬೆರಳೆಣಿಕೆಯ ದೇಶಗಳನ್ನು ಬಿಟ್ಟರೆ ಕೆಲವು ಪ್ರತಿಷ್ಠಿತ ವಿದ್ಯಾಲಯಗಳ ಅಹಮಿಕೆಯ ಭಾಷಾ ಕಲಿಕೆಯಾಗಿ ಮಾತ್ರ ನಾವು ನೋಡಬಹುದು ಅಷ್ಟೇ! ಒಂದು ಭಾಷೆಯನ್ನು ನಮ್ಮದು, ನಮ್ಮದು ಮಾತ್ರ ಎಂದು ಹಿಡಿದಿಟ್ಟರೆ, ಒಂದು ಪ್ರಾಂತ್ಯಕ್ಕಷ್ಟೇ ಸೀಮಿತಗೊಳಿಸಿದರೆ ಅದು ಬೆಳೆಯುವುದಾದರೂ ಹೇಗೆ? ಇದನ್ನೇ ಕನ್ನಡಿಗರಿಗೂ ಅನ್ವಯಿಸಬಹುದು. ಕನ್ನಡದ ಹೆಸರಲ್ಲಿ ಕಂಡಕಂಡವರಿಗೆ ಬಡಿದರೆ ಕನ್ನಡ ಉಳಿಯುತ್ತದೆಯೇ? ಕನ್ನಡ ಮಾತಾಡಲು ಬರುವುದಿಲ್ಲವೆಂಬ ಕಾರಣಕ್ಕಾಗಿ ಅನ್ಯಭಾಷಿಕರ ಮೇಲೆ ಹಲ್ಲೆ ನಡೆಸುವ ಅನಗತ್ಯ "ಓರಾಟ"ಗಳಿಗೆ ಬಲಿಬೀಳುವ ಬದಲು ಇಲ್ಲಿರುವ ಅನ್ಯಭಾಷಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ, ಕನ್ನಡ ಕಲಿಸಿ; ಆಗ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ. ಎರಡು ಸಾವಿರ ವರ್ಷಗಳ ಕಾಲ ಮರಳಿನಡಿ ಹೂತುಹೋಗಿದ್ದ ಹೀಬ್ರೂ ಭಾಷೆಯನ್ನು ಮತ್ತೆ ಮೇಲೆ ಚಿಮ್ಮಿಸಿದ  ಇಸ್ರೇಲಿಗಳ ಸಾಹಸಗಾಥೆ ನಮ್ಮ ಕಣ್ಣಮುಂದಿದೆ.

            ಯಾವಾಗ ಕವಿರಾಜಮಾರ್ಗ 'ಕಾವೇರಿಯಿಂದ ಗೋದಾವರಿವರೆಗೆ ಮೆರೆವ ಜನಪದ' ಎಂದು ಕನ್ನಡವನ್ನು ವರ್ಣಿಸಿತ್ತೋ ಆಗ ಇಂಗ್ಲೀಷ್, ಹಿಂದಿಗಳು ಹುಟ್ಟಿರಲೇ ಇಲ್ಲ. ಹಾಗೆ ಮೆರೆದ ಕನ್ನಡ ಭಾಷೆಯ ಉಳಿವಿಗಾಗಿ ಇಂದು ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರಂತೂ ಖಂಡಿತಾ ಅಲ್ಲ. ತಮ್ಮ ಮುಂದಿನ ಪೀಳಿಗೆಯ ಮಾತೃಭಾಷೆಯನ್ನೇ ಬದಲು ಮಾಡುತ್ತಿರುವ ಕನ್ನಡಿಗರೇ ಅಲ್ಲವೇ? ಕನ್ನಡಿಗರು ಎಷ್ಟರ ಮಟ್ಟಿಗೆ ಭಾಷೆಯನ್ನು ದೂರ ಸರಿಸುತ್ತಿದ್ದಾರೆ ಎಂದರೆ ಇಲ್ಲಿ ಬಂದು ನೆಲೆಸಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಯುವ ಶ್ರಮ ಬೇಡವೆಂದು ಕನ್ನಡಿಗರೇ ಅವರ ಭಾಷೆಯನ್ನು ಕಲಿತು ಅವರಿಗೆ ಸಹಕಾರ ಮಾಡುವಷ್ಟು! ನಡುನಡುವೆ ಯಥೇಚ್ಛ ಆಂಗ್ಲ ಪದಗಳನ್ನು ಬಳಸುವುದೇ ಪ್ರತಿಷ್ಠೆಯ ವಿಚಾರವಾಗಿರುವುದು ಕನ್ನಡಿಗರ ಶಬ್ಧ ದಾರಿದ್ರ್ಯದ ಸಂಕೇತ. ಮಾಹಿತಿ ತಂತ್ರಜ್ಞಾನದ ಕೇಂದ್ರ ಎಂದೆನಿಸಿರುವ ಕರ್ನಾಟಕದಲ್ಲಿ ಮಾಹಿತಿಗಾಗಲಿ ಅಥವಾ ಆಡಳಿತಾತ್ಮಕ ವಿಷಯಗಳಿಗಾಗಲೀ ಮಾತೃಭಾಷೆ ಕನ್ನಡವನ್ನು ಬಳಸುವ ತಂತ್ರಜ್ಞಾನದ ಬೆಳವಣಿಗೆ ಆಗಿರುವುದು ಅತ್ಯಲ್ಪ ಎಂದರೆ ವಿಚಿತ್ರವಲ್ಲವೇ? ಹೀಗೆ ನಮ್ಮ ಭಾಷೆಯ ಅಳಿವಿಗೆ ನಾವೇ ಕಾರಣವಾಗಿದ್ದರೂ ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ಭಾಷೆ ಬೆಳೆಯುವುದು ಯಾವುದೋ ಶಾಸ್ತ್ರೀಯ ಸ್ಥಾನಮಾನವೋ ದೊಡ್ಡ ಇಡುಗಂಟು ಸಿಗುವುದರಿಂದಲ್ಲ. ಭಾಷೆ ಬೆಳೆಯಬೇಕಾದರೆ ಜನ ಅದನ್ನು ತಮ್ಮ ನಿತ್ಯ ವ್ಯವಹಾರದಲ್ಲಿ ಬಳಸಬೇಕು. ವಿಚಿತ್ರವೆಂದರೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಡುವವರ ಮಾತಿನಲ್ಲಿ ಕಂಗ್ಲೀಷ್ ತುಂಬಿತುಳುಕಾಡುತ್ತಿರುತ್ತದೆ!

2005ರ ಮೇಯಲ್ಲಿ ಮಣಿಪುರದ ಮಹಾನ್ ಆಸ್ತಿಯಾಗಿದ್ದ ಬೃಹತ್ ಗ್ರಂಥಾಲಯವೊಂದು ಧಗಧಗನೆ ಉರಿದು ಹೋಯಿತು. ಪ್ರಾಚೀನ ಕಾಲದ ಅಪರೂಪದ ಪುಸ್ತಕಗಳು, ಸಾವಿರಾರು ಹಸ್ತಪ್ರತಿಗಳು ಭಸ್ಮವಾದವು. ಗ್ರಂಥಾಲಯದಲ್ಲಿ ಬಂಗಾಳಿ ಹಸ್ತಪ್ರತಿಗಳ ಸ್ಥಾನದಲ್ಲಿ ಸ್ಥಳೀಯ ಮೈತಿಯ್ ಭಾಷೆಯ ಹಸ್ತಪ್ರತಿಗಳಿರಬೇಕು ಎಂಬ ಕಮ್ಯೂನಿಸ್ಟರು ಹಾಗೂ ಚರ್ಚುಗಳಿಂದ ಪ್ರೇರಿತವಾಗಿರುವ ಸ್ಥಳೀಯ ಮೈತಿಯ್ ಆಂದೋಲನದ ತಾಲಿಬಾನ್ ಮನಸ್ಥಿತಿ ಇದಕ್ಕೆ ಕಾರಣವಾಗಿತ್ತು! ಅಧ್ಯಾಪಕರಿಂದ ಹಿಡಿದು ವಿಶ್ವವಿದ್ಯಾಲಯದ ಕುಲಪತಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರವರೆಗೂ ತಮ್ಮವರನ್ನೇ ನೇಮಕ ಮಾಡಬೇಕೆಂದು ಗನ್ ಹಿಡಿದೇ ಬೆದರಿಸುವ ಈ ಸಂಘಟನೆ ರಾಷ್ಟ್ರಗೀತೆಯನ್ನೇ ನಿಷೇಧಿಸಿತ್ತು. ಕನ್ನಡ ಪರ ಹೋರಾಟಗಾರರ ಇತ್ತೀಚೆಗಿನ ನೀತಿ ನಿಲುವುಗಳನ್ನು, ಹೋರಾಟಗಳ ಭವಿಷ್ಯವನ್ನು ಊಹಿಸಿದರೆ ಅವು ಮೇಲಿನ ಘಟನೆಯನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಕನ್ನಡ ಹೋರಾಟದ ಮುಖವಾಡ ಹೊತ್ತು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇಂಥವರ ನಡುವೆ ನಲುಗುತ್ತಿರುವ ಕನ್ನಡಿಗರು ಎಚ್ಚೆತ್ತುಕೊಳ್ಳುವುದು ಅವಶ್ಯ. ಒಂದೇ ಪರಂಪರೆ-ಇತಿಹಾಸ, ಒಂದೇ ಬಗೆಯ ಆಸೆ-ಆಕಾಂಕ್ಷೆಗಳುಳ್ಳ ನಾವು ವರ್ತಮಾನದ ಲೆಕ್ಕಾಚಾರಗಳಿಗೆ ಸಿಲುಕಿ, ಮನಸ್ಸು ಮನಸ್ಸುಗಳ ನಡುವೆ ಪ್ರತ್ಯೇಕತೆಯ ಗೋಡೆ ಎಬ್ಬಿಸಿಕೊಂಡು ಭಾಷಾಂಧರಾಗಿ ನಮ್ಮ ಪರಂಪರೆಯನ್ನು ಮರೆತು ಈ ದೇಶವನ್ನು ತುಂಡರಿಸುತ್ತಾ ಹೋದೆವೆಂದರೆ ಒಂದು ರಾಷ್ಟ್ರವಾಗಿ ಉಳಿಯಲಾರೆವು.

ಪದ್ಮಾವತಿಯ ಇತಿಹಾಸವನ್ನು ಯಥಾವತ್ ಇಳಿಸಲೇನು ಧಾಡಿ?

ಪದ್ಮಾವತಿಯ ಇತಿಹಾಸವನ್ನು ಯಥಾವತ್ ಇಳಿಸಲೇನು ಧಾಡಿ?

           "ಬರೇ ರಾಣಿಯೊಬ್ಬಳೇಕೆ; ನಿಮ್ಮ ಜನಾನವನ್ನು ಅಲಂಕರಿಸಲು ರಾಣೀವಾಸದ ಸುಂದರ ಸ್ತ್ರೀಯರೆಲ್ಲರೂ ಬರುತ್ತಿದ್ದಾರೆ ಜಹಂಪನಾ" ಎನ್ನುವ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸಿ ಸುಲ್ತಾನನ ಕಾಮದ ಹುಚ್ಚು ಕೆರಳುತ್ತಿದೆ. ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುವ ದೃಶ್ಯವನ್ನು ನೋಡಿದ ಮೇಲಂತೂ ಸ್ವರ್ಗಕ್ಕಿನ್ನು ಮೂರೇ ಗೇಣು ಎಂಬಂತೆ ಹುಚ್ಚನಂತೆ ಕುಣಿಯುತ್ತಾನೆ. ಪಲ್ಲಕ್ಕಿಗಳು ಹತ್ತಿರ ಬಂದವು; ಬಂದು ಸೆರೆಯಲ್ಲಿದ್ದ ತಮ್ಮರಸನನ್ನು ಕಂಡವು; ಒಂದು ಪಲ್ಲಕ್ಕಿ ರಾಜನನ್ನು ಹತ್ತಿಸಿಕೊಂಡು ನೋಡನೋಡುತ್ತಿದ್ದಂತೆ ಮರೆಯಾಯಿತು! ತನ್ನ ಮನಸ್ಸನ್ನು ಸೂರೆಗೈದ ಸುಂದರಿಯನ್ನು ಕಾಣಲು ಕಾತರನಾಗಿರುವ ಸುಲ್ತಾನ ಕಂಡದ್ದು ಖರವಾಲ ಹಿಡಿದು ತನ್ನ ಸೇನೆಯನ್ನು ತರಿಯುತ್ತಿರುವ ಏಳುನೂರು ಸುಂದರಿಯನ್ನು! ಕಂಸ ತನ್ನ ಮರಣದ ಹಿಂದಿನ ರಾತ್ರಿ ಕಂಡ ಕೃಷ್ಣನಂತೆ; ಉರಿಯುವ ಒಂದು ದೀಪ ಸಾಸಿರವಾಗಿ ಪ್ರತಿಯೊಂದು ದೀಪವೂ ಕೃಷ್ಣನಾದಂತೆ! ಏಳ್ನೂರು ಜನರೇನೋ ತನ್ನ ಅಳಿದುಳಿದ ಅಗಾಧ ಸೇನೆಗೆ ಬಲಿಯಾಗಿ ಪ್ರಾಣ ಕಳೆದುಕೊಂಡರು! ಆದರೆ ಆ ಸುಂದರಿಯನ್ನು ಪಡೆಯದೇ ತನ್ನ ಪ್ರಾಣವೇ ಹೋಯಿತಲ್ಲ! ಒಂದು ಸುಂದರಿ ನೂರಾಗಿ, ಏಳು ನೂರಾಗಿ ನನ್ನ ಆಸೆಯನ್ನೇ ಹೀರಿಬಿಟ್ಟರಲ್ಲಾ " ಯಾ ಅಲ್ಲಾಹ್" ಎಂದು ಚೀರಿದ ಸುಲ್ತಾನ್!

             ಯಾವ ಸಿನಿಮೀಯ ದೃಶ್ಯಕ್ಕಿಂತ ಕಡಿಮೆಯಿದೆ ಇದು? ಆದರೆ ಅದು ಬರಿಯ ಕಥೆಯಲ್ಲಾ; ಇತಿಹಾಸ, ಅದನ್ನು ತಿರುಚಬೇಡ ಎಂದು ರಜಪೂತ ಕರಣಿ ಸೇನಾ ಕೊಟ್ಟ ಪ್ರಹಾರವನ್ನು ಬನ್ಸಾಲಿ ನೆನಪಲ್ಲಿಟ್ಟುಕೊಂಡಿರುವ ಸಾಧ್ಯತೆಯಿದೆಯೇ? ಬನ್ಸಾಲಿ ಜಗತ್ತಿಗೆ ತನ್ನ ಸೆಕ್ಯುಲರ್ ರೀಲ್ ತೋರಿಸುವುದಕ್ಕೆ ಮುಂಚೆ, ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸಿದ ಆ ಧರ್ಮಾತ್ಮೆಯ ರಿಯಲ್ ಇತಿಹಾಸದ, ಅಲಾವುದ್ದೀನನ ನಿಜ ಸ್ವರೂಪದ ಪರಿಚಯವಾಗಬೇಕಲ್ಲ? ಮಹಾರಾಣಿ ಪದ್ಮಿನಿ! ಚಿತ್ತೂರಿನಿಂದ 64. ಕಿ.ಮೀ. ದೂರದಲ್ಲಿರುವ  ಸಿಂಗೋಲ್ ಎನ್ನುವ ಸಣ್ಣ ಸಂಸ್ಥಾನವೊಂದರ ಸರದಾರನ ಮಗಳು. ರಾಣಾ ರತನ್ ಸಿಂಹನ ಧರ್ಮಪತ್ನಿ; ಅಪ್ರತಿಮ ಸುಂದರಿ. ತನ್ನ ಜೀವಕ್ಕಿಂತಲೂ  ಪತಿಯ ಬಗೆಗೆ, ತನ್ನ ರಾಜ್ಯದ ಬಗೆಗೆ, ತನ್ನ ಪ್ರಜೆಗಳ ಬಗೆಗೆ, ತನ್ನ ನಾಡಿನ ಸ್ವಾತಂತ್ರ್ಯದ ಬಗೆಗೆ ಹೆಚ್ಚು  ಪ್ರೀತ್ಯಾದರಗಳನ್ನು ಹೊಂದಿದವಳು. ಆದರ್ಶ ನಾರಿಯರು ಹೇಗಿರಬೇಕು ಎನ್ನುವುದಕ್ಕೆ ಪಥದರ್ಶಕಳಾದವಳು. ಆದರ್ಶ ನಾರಿಯ ಮೌಲ್ಯಗಳಿಗೇ ಧಕ್ಕೆ ಉಂಟಾಗುವ ಸನ್ನಿವೇಶ ಬಂದಾಗ ಧೈರ್ಯ-ಸ್ಥೈರ್ಯಗಳಿಂದ ಎದುರಿಸಿ, ಕೊನೆಗೆ ಬೇರೆ ದಾರಿಯೇ ಇಲ್ಲದಿದ್ದಾಗ ಆತ್ಮಸಮರ್ಪಣೆ ಮಾಡಿಕೊಂಡ ಧೀರ ವನಿತೆ ಆಕೆ. ಅವಳ ಜೀವನದಿಂದ ಸ್ಫೂರ್ತಿಗೊಂಡ ಕವಿಗಳು ಅನೇಕ. ರಾಜಸ್ಥಾನದ ಉದ್ದಕ್ಕೂ ಅವಳ ಬಗೆಗಿನ ಜಾನಪದ ಕಥೆಗಳು, ಹಾಡುಗಳು ಹರಡಿವೆ. ಜಟ್ಮಲ್ನ ಗೋರಾ-ಬಾದಲ್, ಮಲ್ಲಿಕ್ ಮೊಹಮ್ಮದ್ ಜಾಯಸೀಯ ಪದ್ಮಾವತ್, ಐನೆ ಅಕ್ಬರಿ, ಫರಿಸ್ತಾನ ಕೃತಿಗಳಲ್ಲಿ ಪದ್ಮಿನಿಯ ಕಥಾನಕವು ಕಾಣಿಸಿಕೊಂಡಿದೆ.

            ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಬಲಿಷ್ಠನಾಗಿದ್ದ ಅಲಾವುದ್ದೀನ್ ಖಿಲ್ಜಿ ದೊಡ್ಡಪ್ಪ ಸುಲ್ತಾನ ಜಲಾಲುದ್ದೀನ್ ಖಿಲ್ಜಿಯ ಕೈಕೆಳಗೆ ಸುಬೇದಾರನಾಗಿದ್ದ. ಖಾರ ಮತ್ತು ಮಾಳವ ರಾಜ್ಯಗಳ ಪ್ರಾಂತ್ಯಾಧಿಕಾರಿಯಾಗಿದ್ದ, ಅತೀವ ಮಹತ್ವಾಕಾಂಕ್ಷಿಯಾಗಿದ್ದ ಈತ ಆಗ ಸಿರಿಸಂಪದಗಳಿಂದ ಮೆರೆಯುತ್ತಿದ್ದ ದೇವಗಿರಿಯ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆಯಲು ನಿಶ್ಚಯಿಸಿದ. ದೆಹಲಿಯಿಂದ ದೇವಗಿರಿಗೆ 700 ಮೈಲುಗಳು. ಸೈನಿಕರಿಗೆ ಆಹಾರ, ಕುದುರೆಗಳಿಗೆ ಮೇವು ಸಿಗದಿದ್ದರೆ ಇಡೀ ಸೈನ್ಯ ಹಸಿವಿನಿಂದ ನರಳಿ ನಾಶವಾಗುವ ಭಯ. ಪಥದಲ್ಲೆಷ್ಟೋ ಹಿಂದೂ ರಾಜ್ಯಗಳು. ಆದರೂ ದೊಡ್ಡಪ್ಪನಿಗೆ ಧೈರ್ಯ ತುಂಬಿ ಎಂಟು ಸಾವಿರ ಸೈನಿಕರೊಡನೆ ಹೊರಟ. ಮಾರ್ಗಮಧ್ಯದಲ್ಲಿ ಇಷ್ಟು ದೊಡ್ದ ಸೈನ್ಯವನ್ನು ಒಡಗೂಡಿ ಹೋಗುತ್ತಿರುವ ಇವನನ್ನು ಯಾರೂ ತಡೆಯಲಿಲ್ಲ. ದೇವಗಿರಿಯೂ ಯುದ್ಧದ ಸಿದ್ಧತೆಯಲ್ಲಿರಲಿಲ್ಲ. ದೇವಗಿರಿಯ ರಾಜ ರಾಮದೇವ ಆ ಸಮಯದಲ್ಲಿ ಬೇರೊಂದು ಊರಿನಲ್ಲಿ ದೇವರ ದರ್ಶನಕ್ಕೆ ತೆರಳಿದ್ದ. ನಮ್ಮವರ ಗೂಢಚಾರ ವ್ಯವಸ್ಥೆ ಎಷ್ಟು ದುರವಸ್ಥೆಯಲ್ಲಿತ್ತು ಎನ್ನುವುದಕ್ಕೆ ಉದಾಹರಣೆ ಇದು. ಸೈನ್ಯವೂ ಮಗ ಶಂಕರದೇವನ ನೇತೃತ್ವದಲ್ಲಿ ಬೇರೊಂದು ಕಡೆ ಯುದ್ಧಕ್ಕೆ ತೆರಳಿತ್ತು. ಸುದ್ದಿ ತಿಳಿದಾಕ್ಷಣ ಬಂದು ಹಳ್ಳಿಯ ಜನರನ್ನೇ ಒಟ್ಟು ಸೇರಿಸಿ ಖಿಲ್ಜಿಯನ್ನು ಎದುರಿಸಿದನಾದರೂ ಗೆಲ್ಲಲಾಗಲಿಲ್ಲ. ಆ ಸಮಯಕ್ಕೆ ಕೋಟೆಗೆ ಮುತ್ತಿಗೆ ಹಾಕಿದ ಖಿಲ್ಜಿ "ನಾನು ಚಿಕ್ಕ ಸೈನ್ಯದೊಂದಿಗೆ ಬಂದಿದ್ದೇನೆ, ಹಿಂದೆ ಸುಲ್ತಾನರ ದೊಡ್ಡ ಸೈನ್ಯ ಸಾಗರದಂತೆ ಬರುತ್ತಿದೆ" ಎಂದು ಬೆದರಿಸಿದ. ಭೀಮದೇವನ ಸಂಬಂಧಿಕರು, ಪುರಪ್ರಮುಖರು ಹಾಗೂ ಬ್ರಾಹ್ಮಣರನ್ನು ಬಂಧಿಸಿ ಸಂಕೋಲೆಗಳಿಂದ ಬಿಗಿದು ಕೋಟೆಯ ಎದುರು ಮೆರವಣಿಗೆ ನಡೆಸಿ ರಾಜನ ಮೇಲೆ ಒತ್ತಡ ಹೇರಿದ ಆ ಧೂರ್ತ. ರಾಜ ಬೇರೆ ದಾರಿ ಕಾಣದೆ ಕಪ್ಪ ಕೊಟ್ಟು ಸಂಧಿ ಮಾಡಿಕೊಳ್ಳಬೇಕಾಯಿತು. ಹೊರರಾಜ್ಯಕ್ಕೆ ಯುದ್ಧಕ್ಕೆ ಹೋದ ದೇವಗಿರಿಯ ಸೈನ್ಯ ಬಂದರೆ ತನ್ನ ಕಥೆ ಮುಗಿದಂತೆಯೇ ಎಂಬ ಭಯದಿಂದ ಖಿಲ್ಜಿ ಸಂಧಿಗೆ ಮರುಮಾತಿಲ್ಲದೆ ಒಪ್ಪಿದ. ರಾಜ ಹಣ ಕೊಟ್ಟು ತನ್ನವರಲ್ಲಿ ಅನೇಕರನ್ನು ಸೆರೆಯಿಂದ ಬಿಡಿಸಿಕೊಳ್ಳುವ ಹೊತ್ತಿಗೆ ಯುವರಾಜ ಶಂಕರದೇವನ ಸೈನ್ಯ ಬಂದು ಖಿಲ್ಜಿಯ ಸೈನ್ಯವನ್ನು ಸದೆಬಡಿಯಲಾರಂಭಿಸಿತು. ಇನ್ನೇನು ಖಿಲ್ಜಿಯ ಕಥೆ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಯುವರಾಜನಿಗೆ ಸಹಾಯಕ್ಕೆಂದು ಕೋಟೆಯೊಳಗಿನಿಂದ ಸೈನಿಕರು ಉತ್ಸಾಹದಿಂದ ಹೊರಬರಲಾರಂಭಿಸಿದರು. ಆಗ ಎದ್ದ ಧೂಳನ್ನು ಕಂಡು ಇದು ದೆಹಲಿಯ ಮಹಾಸೈನ್ಯ ಎಂದು ಬೆದರಿದ ಶಂಕರದೇವನ ಸೈನಿಕರು ಓಡಿ ಹೋದರು. ಗೊಂಡ್ವಾನ ಹಾಗೂ ಖಾನ್ ದೇಶಗಳ ಮೂಲಕ ಹಿಂದಿರುಗುವಾಗ ಖಿಲ್ಜಿ ತಾನು ಸೆರೆಯಲ್ಲಿರಿಸಿಕೊಂಡು ಬಂದಿದ್ದ ಕೃಷಿಕರನ್ನು ಹಾಗೂ ಇತರ ಪ್ರಮುಖ ಜನರನ್ನು ಅಪಾರ ಪ್ರಮಾಣದ ಹಣಕ್ಕೆ ಮಾರಿದ. ಚಿನ್ನ, ಬೆಳ್ಳಿ, ರತ್ನ ಮೊದಲಾದ ಅಪಾರ ಸಂಪತ್ತಿನೊಡನೆ ಹಿಂದಿರುಗಿದ ವಿಜಯಿ ಅಲಾವುದ್ದೀನನನ್ನು ಸುಲ್ತಾನ್ ಜಲಾಲುದ್ದೀನನು ಗಂಗಾತೀರದಲ್ಲಿ ಸ್ವಾಗತಿಸುವಂತೆ ನಿಷ್ಕರ್ಷೆಯಾಯಿತು. ಗುಪ್ತವಾಗಿ ಮೊದಲೇ ನಿರ್ಧರಿಸಿದ್ದಂತೆ ಸಂದರ್ಶನದ ವೇಳೆಯಲ್ಲಿ ಅಲಾವುದ್ದೀನ್ ಕುತಂತ್ರದಿಂದ ದೊಡ್ಡಪ್ಪನನ್ನು ಕೊಲೆಮಾಡಿ, ತನ್ನ ವಿರೋಧಿಗಳನ್ನೂ ಕೊಲೆಗೈದು ದಕ್ಷಿಣದಿಂದ ದೋಚಿ ತಂದಿದ್ದ ಐಶ್ವರ್ಯವನ್ನು ತನಗೆ ಬೇಕಾದವರಿಗೆ ಹಂಚಿ, ದೆಹಲಿ ಸಿಂಹಾಸನದ ಮೇಲೆ ಅಭಿಷಿಕ್ತನಾದ.

            ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ ಅಲಾವುದ್ದೀನ್. ದಕ್ಷಿಣದ ಹಿಂದು ರಾಜ್ಯಗಳ ಮೇಲೆ ಮೊಟ್ಟಮೊದಲು ಮಹಮ್ಮದೀಯರ ರಾಜಕೀಯ ಪ್ರಭಾವವನ್ನು ಸ್ಥಾಪಿಸಿದ ಈತನ ಆಳ್ವಿಕೆ ಭಯೋತ್ಪಾದನೆಯ, ರಕ್ತಪಾತದ ಕಾಲವಾಗಿತ್ತು. ಕ್ರೌರ್ಯ, ಮೋಸಗಳಿಂದ ಗುಜರಾತ್, ರಣತಂಬೂರ್ ಮತ್ತು ಮೇವಾರ್ ರಾಜ್ಯಗಳನ್ನು ವಶಪಡಿಸಿಕೊಂಡ ಖಿಲ್ಜಿಯ ಮತಾಂಧತೆಗೆ ನಹರ್ವಾಲ್, ಅಸಾವಾಲ್, ವನ್ಮನ್ತಾಲಿ, ಸೂರತ್, ಕ್ಯಾಂಬೇ ಹಾಗೂ ಸೋಮನಾಥಗಳಲ್ಲಿ ಹಲವು ದೇವಾಲಯಗಳು ಬಲಿಯಾದವು. ಚಿತ್ತೋಡಿನಲ್ಲಿ ಮೂವತ್ತು ಸಾವಿರ ಕಾಫಿರರು ಖಿಲ್ಜಿಯೆಂಬ ಇಸ್ಲಾಮೀ ಖಡ್ಗಕ್ಕೆ ಬಲಿಯಾದರು. ಅಪಾರ ಪ್ರಮಾಣದ ಸಂಪತ್ತು, ಸ್ತ್ರೀಪುರುಷರು ಅವನ ವಶವಾದರು. ಮಾಳವ, ಸೇವಣ, ಜಾಲೋರಗಳ ಮೇಲಿನ ದಾಳಿಯಲ್ಲೂ ಹಲವರು ಸೆರೆಸಿಕ್ಕು ಖಿಲ್ಜಿಯ ಗುಲಾಮರಾಗಬೇಕಾಯಿತು. ರಾಜ ರಾಮಚಂದ್ರ ಕ್ರಮವಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿರಲಿಲ್ಲವೆಂಬ ನೆಪದ ಮೇಲೆ ತನ್ನ ಮೊದಲ ದಾಳಿಯಲ್ಲಿ ದೇವಗಿರಿಯನ್ನು ಮುತ್ತಿ ಕೊಳ್ಳೆ ಹೊಡೆದ. ಎರಡನೆಯ ದಂಡಯಾತ್ರೆಯಲ್ಲಿ ವಾರಂಗಲ್ಲಿನ ಪ್ರತಾಪರುದ್ರನನ್ನು ಸೋಲಿಸಿದ. 1313ರಲ್ಲಿ ಹೊಯ್ಸಳ 3ನೆಯ ವೀರಬಲ್ಲಾಳನನ್ನು ಸೋಲಿಸಿ ದೋರಸಮುದ್ರವನ್ನು ಕೊಳ್ಳೆ ಹೊಡೆದ. ಮಧುರೈ ಹಾಗೂ ರಾಮೇಶ್ವರದವರೆಗೂ ದಂಡೆತ್ತಿ ಹೋಗಿ ಪಾಂಡ್ಯರನ್ನು ಸೋಲಿಸಿ ವಿಶೇಷವಾದ ಐಶ್ವರ್ಯವನ್ನು ದೋಚಿದ. ಈ ದಂಡಯಾತ್ರೆಗಳಿಂದ ಲಕ್ಷಾಂತರ ಮಂದಿ ಮಡಿದರು, ಅನೇಕ ಪಟ್ಟಣಗಳು ಹಾಗೂ ದೇವಾಲಯಗಳು ಸರ್ವನಾಶವಾದವು. ಹಲವಾರು ಮಸೀದಿಗಳು ಮೇಲೆದ್ದವು. ಅಪಾರ ಸಂಪತ್ತು ಸೂರೆಯಾಯಿತು. ಮತಾಂಧ ಅಲ್ಲಾವುದ್ದೀನನು ಎರಡನೆ ಸಿಕಂದರನಾಗುವೆನೆಂಬ ಕನಸು ಕಾಣುತ್ತಿದ್ದ.  ಹಿಂದುತ್ವವನ್ನೇ ಸಂಪೂರ್ಣವಾಗಿ ನಾಶಗೊಳಿಸಬೇಕೆಂದು ಪಣ ತೊಟ್ಟಿದ್ದನಾತ. ಆಕ್ರಮಿತ ರಾಜ್ಯಗಳ ರಾಣಿ, ಮಹಾರಾಣಿಯರನ್ನು ತನಗೆ, ತನ್ನ ಸರದಾರಿಗೆ ಹಂಚಿ, ಹಿಂದೂಗಳ ಪಾವಿತ್ರ್ಯವನ್ನು ಭಗ್ನಗೊಳಿಸುವುದು, ಇಸ್ಲಾಮೀ ಮತವನ್ನು ಇಲ್ಲಿನವರ ಮೇಲೆ ಹೇರುವುದು ಅವನ ಗುರಿಯಾಗಿತ್ತು.

              ಗುಜರಾತಿನ ಮೇಲೆ ದಂಡೆತ್ತಿ ಹೋದಾಗ ಸೆರೆಸಿಕ್ಕ ಗುಲಾಮರಲ್ಲಿ ಸ್ವುರದ್ರೂಪಿ ಯುವಕನಾಗಿದ್ದ ಮಲ್ಲಿಕಾಫರ್ ಕೂಡ ಒಬ್ಬ. ಸಲಿಂಗಕಾಮಿಯಾಗಿದ್ದ ಖಿಲ್ಜಿ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರಗೊಳಿಸಿ ಆತನಿಗೆ ಮಲ್ಲಿಕಾಫರ್ ಎಂದು ಹೆಸರಿಟ್ಟು, ತನ್ನೊಡನೆ ಇರಿಸಿಕೊಂಡಿದ್ದ. ಸುಂದರ ಯುವಕರನ್ನು ನಪುಂಸಕರನ್ನಾಗಿಸಿ ತನ್ನ ಜನಾನಕ್ಕೆ ಸೇರಿಸಿಕೊಳ್ಳುವುದು ಮೊಘಲ್ ಸುಲ್ತಾನರ ಚಟವಾಗಿತ್ತು. ಅಲ್ಲಾವುದ್ದೀನನ ಜನಾನದಲ್ಲೇ ಇಂತಹ ಐವತ್ತು ಸಾವಿರ ಜನ ಇದ್ದರಂತೆ! ಸೋಮನಾಥದ ಮೇಲೆ ದಾಳಿ ಮಾಡಿದಾಗ ಖಿಲ್ಜಿ ವಶಪಡಿಸಿಕೊಂಡ ಸ್ತ್ರೀಯರ ಹಾಗೂ ಎಳೆಯ ಹುಡುಗ-ಹುಡುಗಿಯರ ಸಂಖ್ಯೆ ಇಪ್ಪತ್ತು ಸಾವಿರ! ಇವರೆಲ್ಲರೂ ಖಿಲ್ಜಿಯ ಜನಾನಾ ಸೇರಿದರು ಎಂದು ಬೇರೆ ಹೇಳಬೇಕಾಗಿಲ್ಲ! ಮಂಗೋಲಿಯನ್ನರ ಜೊತೆಗಿನ ಯುದ್ಧದಲ್ಲಿ 1700 ಅಧಿಕಾರಿಗಳು, ಪುರುಷ ಹಾಗೂ ಸ್ತ್ರೀಯರನ್ನು ಗುಲಾಮರನ್ನಾಗಿಸಿ ದೆಹಲಿಗೆ ರವಾನಿಸಿದ. ಮುಸ್ಲಿಮರಾಗಿದ್ದೂ ನಾಸ್ತಿಕರಾದ ಕಾರಣ ಮಂಗೋಲಿಯನ್ನರನ್ನು ನಿಯೋಮುಸ್ಲಿಮರೆನ್ನಲಾಗುತ್ತಿತ್ತು. 1305ರಲ್ಲಿ ಜೈಲಲ್ಲಿದ್ದ 8000 ಮಂಗೋಲಿಯನ್ನರ ತಲೆ ಕಡಿದು ಅವರ ರುಂಡಗಳನ್ನು ನಿರ್ಮಾಣ ಹಂತದಲ್ಲಿದ್ದ ಸಿರಿ ಕೋಟೆಯ ಮೇಲೆ ನೇತು ಹಾಕಿದ! ಅನೇಕ ಮಂಗೋಲಿಯನ್ ಸ್ತ್ರೀ, ಪುರುಷ ಹಾಗೂ ಮಕ್ಕಳನ್ನು ದೆಹಲಿ ಹಾಗೂ ಭಾರತದ ಹಲವೆಡೆ ಮಾರಲಾಯಿತು! ಹೀಗೆ ಗುಲಾಮರ ಸಂಗ್ರಹ ಅವನ ದಿನನಿತ್ಯದ ಕಾಯಕವಾಗಿತ್ತು. ಹೊಸ ಮಂದೆ ಬಂದಂತೆ ಹಳೆಯವರನ್ನು ಗುಲಾಮ ಸಂತೆಯಲ್ಲಿ ಮಾರಲಾಗುತ್ತಿತ್ತು. ಸೂಫಿ ಅಮೀರ್ ಖುಸ್ರು ಬರೆಯುತ್ತಾನೆ "ತುರ್ಕರು ಯಾವಾಗ ಬೇಕಾದರೂ ಹಿಂದೂಗಳನ್ನು ವಶಪಡಿಸಿಕೊಳ್ಳಬಹುದು, ಖರೀದಿಸಬಹುದು ಹಾಗೂ ಮಾರಬಹುದು. ಹಾಗಾಗಿ ಖಿಲ್ಜಿಯ ಈ ಕಾರ್ಯದಲ್ಲೇನೂ ತಪ್ಪಿಲ್ಲ!" ಎಂದು! ಎಪ್ಪತ್ತು ಸಾವಿರ ಗುಲಾಮರು ಖಿಲ್ಜಿಯ ಬಳಿ ಇದ್ದರೆಂದು ಅವನು ತನ್ನ "ನಹ್ ಸಿಪೇರ್ಹ್"ನಲ್ಲಿ ಬರೆಯುತ್ತಾನೆ. ಖಿಲ್ಜಿ ತನ್ನ ಗುಲಾಮ ಸಂತೆಯಲ್ಲಿ ದರವನ್ನೂ ನಿಗದಿಪಡಿಸಿದ್ದ. ಕೆಲಸದ ಹುಡುಗಿಯರಿಗೆ 5ರಿಂದ 12 ತನ್ಖಾಗಳು, ಸುಂದರ ಸ್ತ್ರೀಯರಿಗೆ 20-40 ತನ್ಖಾಗಳು, ಸುಂದರ ಹುಡುಗರಿಗೆ 20-30 ತನ್ಖಾಗಳು, ಸಣ್ಣ ಮಕ್ಕಳಿಗೆ 80-100 ತನ್ಖಾಗಳು, ಗಂಡಸರ ದರ 100-200 ತನ್ಖಾಗಳಾಗಿತ್ತು.

             ಖಿಲ್ಜಿಯ ಆಡಳಿತ ವ್ಯವಸ್ಥೆಯಂತೂ ಹಿಂದೂಗಳನ್ನು ಗೋಳು ಹೊಯ್ದುಕೊಂಡಿತ್ತು. ಆತ ಭೂಮಿಯ ಆದಾಯವನ್ನು ಉತ್ಪಾದನೆಯ ಅರ್ಧಕ್ಕೇರಿಸಿ ಅದಕ್ಕೆ ತಕ್ಕಂತೆ ತೆರಿಗೆ ವಿಧಿಸಿದ. ಜಾನುವಾರುಗಳು ಹಾಗೂ ಮನೆಯ ತೆರಿಗೆಯ ಮೇಲೆ ತೆರಿಗೆ ವಿಧಿಸಿದ. ರೈತರು ತಾವು ಬೆಳೆದುದನ್ನು ಕಡ್ಡಾಯವಾಗಿ ನಿಗದಿ ಪಡಿಸಿದ ಬೆಲೆಗೆ ವ್ಯಾಪಾರಿಗಳಿಗೆ ಮಾರಬೇಕಾಗಿತ್ತು. ಈ ವ್ಯಾಪಾರಿಗಳು ತಿರುಗಿ ಅದನ್ನು ಸುಲ್ತಾನನ ಖಜಾನೆಗೆ ಮಾರಬೇಕಾಗಿತ್ತು. ಇದರಲ್ಲಿ ಅವರಾರಿಗೂ ಕನಿಷ್ಟ ಲಾಭವೂ ಉಳಿಯುತ್ತಿರಲಿಲ್ಲ. ವ್ಯಾಪಾರಿಗಳು ಸುಲ್ತಾನನಿಗೆ ನಿಯಮಿತ ಸರಬರಾಜು ಮಾಡುತ್ತಿದ್ದಾರೆ ಎಂದು ಖಚಿತಪಡಿಸಲು ತಮ್ಮ ಹೆಂಡತಿ ಮಕ್ಕಳನ್ನು ರಾಜಧಾನಿಯಲ್ಲಿ ಒತ್ತೆಯಾಳುಗಳನ್ನಾಗಿ ಇಡಬೇಕಾಗಿತ್ತು. ಹೀಗೆ ಬಡವರಾದ ಹಿಂದೂಗಳು ಹೊಟ್ಟೆಪಾಡಿಗಾಗಿ ತಮ್ಮ ಮನೆಯ ಹೆಂಗಳೆಯರನ್ನು ಮುಸ್ಲಿಮರ ಮನೆಗೆಲಸಕ್ಕೆ ಕಳುಹಿಸಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಯಿತು. ಅಲ್ಲಾವುದ್ದೀನನ ಮರಣದ ಹದಿನೆಂಟು ವರ್ಷಗಳ ಬಳಿಕ ದೆಹಲಿಗೆ ಭೇಟಿ ನೀಡಿದ್ದ ಇಬ್ನ್ ಬತ್ತುತಾಹ್ ತಾನುಂಡದ್ದು ಅರಮನೆಯ ಉಗ್ರಾಣದಲ್ಲಿದ್ದ ಅಲಾವುದ್ದೀನನ ಕಾಲದ ಅಕ್ಕಿ ಎಂದು ಬರೆದಿದ್ದಾನೆ. ಅಷ್ಟರ ಮಟ್ಟಿಗೆ ಖಜಾನೆ ತುಂಬಿ ಕೊಳೆಯುತ್ತಿತ್ತು. ಹಿಂದೂಗಳು ಸುಲಿಗೆಗೊಳಗಾಗಿ ಸಾಯುತ್ತಿದ್ದರು!

              ಇಂತಹ ಕ್ರೂರಿ ಕಾಮಾಂಧನ ಕಿವಿಗೆ ಪದ್ಮಿನಿಯ ಸುದ್ದಿ ಬಿತ್ತು. ಮಹಾರಾಣಿ ಪದ್ಮಿನಿಯ ಸೌಂದರ್ಯದ ಗುಣಗಾನವನ್ನು ಕೇಳಿದ ಅಲಾವುದ್ದೀನ್ ಖಿಲ್ಜಿ ಹೇಗಾದರೂ ಮಾಡಿ ಆಕೆಯನ್ನು ತನ್ನವಳನ್ನಾಗಿಸಬೇಕೆಂಬ ದುರಾಸೆಯಲ್ಲಿ ಚಿತ್ತೋಡನ್ನು ಮುತ್ತಿದ. ಯುದ್ಧವೆಂದರೇ ಕಳೆಗಟ್ಟುವ ಕುಲ ರಜಪೂತರದ್ದು. ಹುಟ್ಟಿದ್ದೇ ಯುದ್ಧಕ್ಕಾಗಿಯೇನೋ ಎನ್ನುವಂತೆ ಹೋರಾಡುವ ರಣಕಲಿಗಳು ಅವರು. ಗುರ್ಜರದ ರಾಣಿ ಕಮಲಾದೇವಿಯನ್ನು ಅಪಹರಿಸಿ ಅವಳ ಬಾಳನ್ನು ಸರ್ವನಾಶಗೈದಿದ್ದ ಖಿಲ್ಜಿಗೆ ರಜಪೂತ ವೀರರ ಶೌರ್ಯ ಸಾಹಸಗಳ ಪರಿಚಯವಾಗಿರಲಿಲ್ಲವೇನೋ. ಚಿತ್ತೋಡಿನ ಕಲಿಗಳು ಬೆಂಕಿಯ ಚೆಂಡುಗಳಂತೆ ಉರಿದೆದ್ದರು. ಖಿಲ್ಜಿಯ ಸೈನ್ಯ ಸುಟ್ಟುರಿದು ಹೋಯಿತು. ಯಾವಾಗ ಸೋಲು ಖಚಿತವಾಯಿತೋ ಆಗ ಮೋಸದ ಹಾದಿಗಿಳಿದ ಖಿಲ್ಜಿ. "ಪದ್ಮಿನಿ ದೇವಿ ನನಗೆ ಸೋದರಿ ಸಮಾನ; ಒಂದು ಸಲ ಆಕೆಯ ಮುಖ ತೋರಿಸಿ ಸಾಕು, ಸಂತೋಷದಿಂದ ಹಿಂದಿರುಗುತ್ತೇನೆ" ಎಂದು ಮಹಾರಾಜ ರಾವಲ್ ರತನ್ ಸಿಂಹನಲ್ಲಿ ಗೋಗರೆದ. "ನಮ್ಮ ರಾಣಿಯ ಮುಖ ನಿನಗೇಕೆ ತೋರಿಸಬೇಕು?" ಎಂದು ಕ್ಯಾಕರಿಸಿ ಉಗಿದಿದ್ದರೆ ಕೇಳುವವರ್ಯಾರೂ ಇರಲಿಲ್ಲ. ಆದರೆ ಔದಾರ್ಯಕ್ಕೆ ಹೆಸರಾದ ರಜಪೂತರು "ನಿನಗೆ ನೇರವಾಗಿ ಮುಖ ತೋರಿಸಲು ಸಾಧ್ಯವಿಲ್ಲ. ಬೇಕಾದರೆ ಕನ್ನಡಿಯಲ್ಲಿ ನೋಡಿಕೋ" ಎಂದು ದಯಾಳುತನ ತೋರಿದರು. ಸಪರಿವಾರ ಸಮೇತ ರಾಣಿಯ ಪ್ರತಿಬಿಂಬ ನೋಡಲು ಚಿತ್ತೈಸಿದ ಖಿಲ್ಜಿ. ಗ್ರಹಸ್ಥ ಧರ್ಮದಂತೆ ಅವನನ್ನು ಬೀಳ್ಕೊಡುವ ಸಲುವಾಗಿ ಅವನ ಡೇರೆಯವರೆಗೆ ನಡೆದ ಮಹಾರಾಜ. ಈ ಧರ್ಮ ಕರ್ಮಗಳು ಕಾಫಿರರಿಗೆ ಮಾತ್ರ. ಧರ್ಮದ ಪರಿಕಲ್ಪನೆಯೇ ಇಲ್ಲದ ವಿಗ್ರಹ ಭಂಜಕರಿಗೆ ಇವೆಲ್ಲಾ ಅರ್ಥವಾಗುವುದಾದರೂ ಹೇಗೆ? ರಾಜ ತಮ್ಮ ಜೊತೆ ಬಂದ ಸಮಯ ಸಾಧಿಸಿ ಅವನನ್ನು ಬಂಧಿಸಿ ಸೆರೆಯಲ್ಲಿಟ್ಟ ಖಿಲ್ಜಿ. ಪದ್ಮಿನಿಯನ್ನು ನನಗೆ ಒಪ್ಪಿಸಿದರೆ ಮಾತ್ರ ರಾಜನನ್ನು ಸೆರೆಯಿಂದ ಬಿಟ್ಟು ಬಿಡುವುದಾಗಿ ಷರತ್ತು ವಿಧಿಸಿದ. ಅಮಾಯಕನಂತೆ ಶತ್ರುವಿನ ಕೈಯಲ್ಲಿ ಬಿದ್ದ ತಮ್ಮ ಅರಸನನ್ನು ಬಿಡಿಸಿಕೊಳ್ಳಲು ರಾಣಿಯೊಡನೆ ರಜಪೂತ ಯೋಧರು ಕೈಗೊಂಡ ಉಪಾಯದ ಪ್ರಕಾರ ನಡೆದದ್ದೇ ಮೇಲೆ ವರ್ಣಿಸಿದ ಘಟನೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಪದ್ಮಿನಿಯೂ ಒಂದು ಕೂಟನೀತಿಯನ್ನು  ಯೋಜಿಸಿದಳು. ತಾನು ಬರುತ್ತಿರುವುದಾಗಿಯೂ, ತನ್ನೊಂದಿಗೆ ಮಹಾರಾಣಿಗೆ ಯೋಗ್ಯವಾಗಿರುವಂತೆ ಏಳುನೂರು ಸಖಿಯರು, ಇನ್ನೂ ಕೆಲವು ರಜಪೂತ ಕನ್ಯೆಯರು ಬರುತ್ತಾರೆ,  ಅವರಲ್ಲಿ ಕೆಲವರು ತನ್ನೊಂದಿಗೆ ದೆಹಲಿಗೆ ಬರುತ್ತಾರೆ, ಉಳಿದವರು ಹಿಂತಿರುಗುತ್ತಾರೆಂದೂ,  ದೆಹಲಿಗೆ ಹೊರಡುವುದಕ್ಕೆ ಮುಂಚೆ ಸೈನಿಕ ಪಹರೆ ಇಲ್ಲದೆ ತನ್ನ ಪತಿಯನ್ನು  ಸಂಧಿಸಬೇಕಾಗಿದೆ. ಇದಕ್ಕೆ ಒಪ್ಪಿದಲ್ಲಿ ಮಾತ್ರ ತಾನು ಬರುವುದಾಗಿಯೂ ಬರೆದು ತಿಳಿಸಿದಳು. ಹೆಚ್ಚು ಯೋಚನೆ ಮಾಡದೆ ಖಿಲ್ಜಿ ಒಪ್ಪಿಕೊಂಡ. ಅಂತೆಯೇ ವೀರರಾದ ಗೋರಾ ಮತ್ತು ಸುಂದರ ಮೈಕಟ್ಟಿನ ಬಾದಲ್ ಎನ್ನುವ ಈರ್ವರು ಸಾಹಸಿಗಳ ಸಹಾಯದಿಂದ 700 ಪಲ್ಲಕ್ಕಿಗಳಲ್ಲಿ ಸಖಿಯರಾಗಿ ವೇಷ ಬದಲಾಯಿಸಿಕೊಂಡ ಸಶಸ್ತ್ರ ಸೈನಿಕರು ಪದ್ಮಿನಿ ಸಮೇತ ಅಲ್ಲಾವುದ್ದೀನನ ಬಿಡಾರವನ್ನು  ತಲುಪಿದರು. ಕೂಡಲೆ ರತ್ನಸಿಂಹನ ಬಿಡುಗಡೆ ಮಾಡಿ ಪದ್ಮಿನಿಯು ಚಿತ್ತೂರಿಗೆ ಹಿಂತಿರುಗಿದಳು. ಸ್ತ್ರೀ ರೂಪದಲ್ಲಿದ್ದ ಸೈನಿಕರು ಸುಲ್ತಾನನ ಸೈನ್ಯದ ಮೇಲೆ ಬಿದ್ದರು. ಅಲ್ಲಾವುದ್ದೀನನಿಗೆ ಜ್ಞಾನೋದಯವಾಗುವ ವೇಳೆ ಹಕ್ಕಿ ಹಾರಿಹೋಗಿತ್ತು. ಆದರೆ ಈ ಸಾಹಸ ಕಾರ್ಯದಲ್ಲಿ ಗೋರಾ, ಬಾದಲ್ ಎಂಬ ಇಬ್ಬರು ಅದ್ವಿತೀಯ ಯೋಧರನ್ನು ಕಳೆದುಕೊಳ್ಳಬೇಕಾಯಿತು ರಜಪೂತ ಸೇನೆ.

              ಈ ಘಟನೆಯಿಂದ ದಿಘ್ಭ್ರಮೆಗೊಂಡು ಬಳಿಕ ಚೇತರಿಸಿಕೊಂಡು ತನ್ನ ಪುರಕ್ಕೆ ನಡೆದ ಖಿಲ್ಜಿ. ಅವನು ಪದ್ಮಿನಿಯ ಮೋಹದಲ್ಲಿ ಮತ್ತನಾಗಿ ಹೋಗಿದ್ದ. ಮರು ವರ್ಷವೇ ಸರ್ವ ಸನ್ನದ್ಧನಾಗಿ ಬೃಹತ್ ಸೈನ್ಯದೊಂದಿಗೆ ಚಿತ್ತೋಡ್ ಮೇಲೆ ದಂಡೆತ್ತಿ ಬಂದ. ಆರು ತಿಂಗಳ ಕಾಲ ಕೋಟೆಗೆ ಮುತ್ತಿಗೆ ಹಾಕಿ ದಿಗ್ಬಂಧನ ಮಾಡಿದ. ಎಲ್ಲಾ ದಾಸ್ತಾನು ಮುಗಿಯುತ್ತಾ ಬಂದಾಗ ಆಹಾರವಿಲ್ಲದೆ ಸಾಯುವ ಬದಲು ಯುದ್ಧವೇ ಉತ್ತಮವೆಂದು ಭಾವಿಸಿ ಯುದ್ಧಕ್ಕಿಳಿದ ರಜಪೂತ ಪಡೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ವೀರ ಸ್ವರ್ಗ ಪಡೆಯಿತು. ಮಹಾರಾಜ ರತನ್ ಸಿಂಗ್ ತನ್ನ ಮೂವತ್ತು ಸಾವಿರ ಸೈನಿಕರೊಂದಿಗೆ ಅಸುನೀಗಿದ. ಸೈತಾನನ ತೆವಲಿಗೆ ತನ್ನ ಪಾವಿತ್ರ್ಯತೆಯನ್ನು ಕೆಡಿಸಿಕೊಳ್ಳುವುದಕ್ಕಿಂತ ಅಗ್ನಿದೇವನ ಪವಿತ್ರ ಮಡಿಲೇ ಸೂಕ್ತವೆಂದು ಪದ್ಮಿನಿ ನಿರ್ಧರಿಸಿಯಾಗಿತ್ತು. ನಿಗಿನಿಗಿ ಉರಿಯುವ ಅಗ್ನಿಕುಂಡದೊಳಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ಜೀವಹರ ವಿಧಾನವೇ ಎಷ್ಟು ಭಯಂಕರ! ಸೇನೆ ಸೋಲನ್ನಪ್ಪುತ್ತಿರುವ ಸುದ್ದಿ ಕೇಳಿದೊಡನೆ ಅಂತಃಪುರದೆದುರು ವಿಶಾಲವಾದ ಅಗ್ನಿಕುಂಡ ರಚನೆಯಾಯ್ತು. ಕಟ್ಟಿಗೆಗಳನ್ನು ಉರಿಸಲಾಯ್ತು. ರಾಣಿ ಪದ್ಮಿನಿ ಸಹಿತವಾಗಿ ರಜಪೂತ ಸ್ತ್ರೀಯರೆಲ್ಲಾ ಅಗ್ನಿ ಪ್ರವೇಶ ಮಾಡಿದರು. ತಮ್ಮ ಕುಲಗೌರವ, ಮಣ್ಣಿನ ಗೌರವವನ್ನು ಕಾಪಾಡಲು ಅಗ್ನಿಪ್ರವೇಶ ಮಾಡಿದ ಅವರ ಆತ್ಮಬಲದ ಮುಂದೆ ಅಲಾವುದ್ದೀನನ ಗೆಲುವು ತೃಣಸಮಾನವಾಯಿತು. ತುಂಬು ಆಸೆಯಿಂದ ಕೋಟೆ ಹೊಕ್ಕ ಖಿಲ್ಜಿಗೆ ಕಂಡಿದ್ದು ಸ್ಮಶಾನ ಸದೃಶ ನಗರ. ಕಾಮಾಂಧ ಖಿಲ್ಜಿಗೆ ಸಿಕ್ಕಿದ್ದು ಒಂದು ಹಿಡಿ ಬೂದಿ! ನಿಜಹೇಳಬೇಕೆಂದರೆ ಸತ್ತದ್ದು ಅಲಾವುದ್ದೀನನೇ. ಪರಸ್ತ್ರೀಯನ್ನು ಬಯಸಿದವ ಇದ್ದೂ ಸತ್ತಂತಲ್ಲವೇ? ಪದ್ಮಿನಿ ತನ್ನ ಪಾತಿವ್ರತ್ಯವನ್ನು ಅಸೀಮ ಆತ್ಮಬಲದಿಂದ ರಕ್ಷಿಸಿಕೊಂಡು ಅಜರಾಮರಳಾದಳು.

             ಶೀಲ ರಕ್ಷಣೆಗಾಗಿ ಅಗ್ನಿಗೆ ಹಾರಿದ ಪವಿತ್ರ ಪದ್ಮಿನಿಯನ್ನು ಅಲಾವುದ್ದೀನ ಜೊತೆ "ಕಿಸ್ಸಿಂಗ್ ಸೀನ್"ನಲ್ಲಿ ತನಗಿಷ್ಟ ಬಂದಂತೆ ಅಪವಿತ್ರೆಯನ್ನಾಗಿ ತೋರಿಸಹೊರಟ ಬನ್ಸಾಲಿಯಾಗಲೀ, ಬಾಲಿವುಡ್ಡಿನ ಇತರ ನಿರ್ದೇಶಕರಾಗಲೀ ಇತಿಹಾಸವನ್ನು ತಿರುಚುತ್ತಿರುವುದು ಇದೇ ಮೊದಲೇನಲ್ಲ. ಬಾಲಿವುಡ್ಡಿನ ಒಂದು ಸಿನಿಮಾವಾದರೂ ಈ ದೇಶದ ಮೇಲೆ ಮುಗಿಬಿದ್ದು ಮಾನ, ಪ್ರಾಣ, ಧನ ಹೀಗೆ ಸಕಲವನ್ನೂ ದೋಚಿದ ಮುಸ್ಲಿಂ ಪೈಶಾಚಿಕತೆಯ ದರ್ಶನ ಮಾಡಿಸಿದ್ದಾವೆಯೇ? ಮುಸ್ಲಿಂ ಬಾದಶಹಾರನ್ನು ವೀರರಂತೆ, ಆದರ್ಶ ಪ್ರೇಮಿಗಳಂತೆ, ಮಾನವೀಯತೆಯೇ ಮೈವೆತ್ತವರಂತೆ ತೋರಿಸಿದ ಚಿತ್ರಗಳೇ ಎಲ್ಲವೂ! ಮೊಘಲ್-ಇ-ಅಜಂ, ಅನಾರ್ಕಲಿ, ಜೋಧಾ ಅಕ್ಬರ್ ಮುಂತಾದ ಚಿತ್ರಗಳು ಒಂದೇ ದಿವಸದಲ್ಲಿ ಮೂವತ್ತು ಸಾವಿರ ಜನರನ್ನು ಕೊಚ್ಚಿ ಹಾಕಿದ, ತನ್ನ ಗುರು ಭೈರಾಂಖಾನನನ್ನೇ ಕೊಂದು ಅವನ ಹೆಂಡತಿಯನ್ನು ತನ್ನ ಜನಾನಾಕ್ಕೆ ಸೇರಿಸಿಕೊಂಡ, ನೌಕರರ ಸಣ್ಣ ತಪ್ಪಿಗೇ ಗೋಪುರದ ಕೆಳಕ್ಕೆ ತಳ್ಳಿ ಶಿಕ್ಷಿಸುತ್ತಿದ್ದ, ಮಾನಧನರಾದ ಎಂಟು ಸಾವಿರ ಸ್ತ್ರೀಯರು ಧಗಧಗಿಸುವ ಬೆಂಕಿಯಲ್ಲಿ ಉರಿಯುವುದನ್ನು ಕಂಡು ವಿಕಟ್ಟಹಾಸ ಮಾಡಿದ, ಮೀನಾ ಬಜಾರನ್ನು ಮಾಡಿ ಸಾಲು ಸಾಲು ಹಿಂದೂ ಸ್ತ್ರೀಯರ ಅತ್ಯಾಚಾರ ಮಾಡಿದ ಅಕ್ಬರನನ್ನು ಧೀರೋದಾತ್ತನಂತೆ ಬಿಂಬಿಸಿದವು! ತಾಜ್ ಮಹಲ್ ಚಿತ್ರ ತನ್ನ ಮಗಳನ್ನೇ ಕಾಮಿಸಿದ್ದ, ಮಕ್ಕಳನ್ನು ಹೆರುವ ಯಂತ್ರದಂತೆ ಪತ್ನಿ ಮುಮ್ತಾಜಳನ್ನು ಬಳಸಿಕೊಂಡ ಮದನಕಾಮರಾಜ ಷಹಜಹಾನನನ್ನು ಅಮರ ಪ್ರೇಮಿಯಂತೆ ವೈಭವೀಕರಿಸಿತು. ಎಷ್ಟು ರೀಲು ಸುತ್ತುತ್ತೀರೋ ಅಷ್ಟು ಕೋಟಿ ರೂಪಾಯಿಗಳನ್ನು ನಿಮಗೆ ಬಿಸಾಕುತ್ತೇವೆ ಎನ್ನುವ ದಾವೂದ್ ಹಿಡಿತದ ಭೂಗತ ಸಾಮ್ರಾಜ್ಯವಿರುವಾಗ ಇತಿಹಾಸವನ್ನೇಕೆ ವರ್ತಮಾನವನ್ನೂ ಇವರು ತಿರುಚಬಲ್ಲರು. ಸುದ್ದಿವಾಹಿನಿಗಳು ಮಾತ್ರವಲ್ಲ ಮತಿಗೆಟ್ಟ ಹಿಂದೂ ಸಮಾಜ ಇಂತಹ ಚಿತ್ರಗಳನ್ನು ಬೆಂಬಲಿಸುತ್ತಲೇ ಬಂದಿವೆ. ಪದ್ಮಾವತ್ ಕೇವಲ ಕಲ್ಪಿತ ಕಾವ್ಯ, ಅಂಥ ನಿಜ ಘಟನೆಗಳು ನಡೆಯಲೇ ಇಲ್ಲ ಎಂದು ಬೊಬ್ಬಿರಿವ ಪಡೆಯೇ ಇದೆ. ಇತಿಹಾಸವನ್ನು ನಮಗೆ ಬೇಕಾದಂತೆ ತಿರುಚುವ ಕಲಾಸ್ವಾತಂತ್ರ್ಯ ನಮಗಿದೆ ಎನ್ನುವ ಇದೇ ವೈಚಾರಿಕ ಭಂಡರು ಭಗವಂತ ಶಿವನನ್ನು ಟಾಯ್ಲೆಟ್ಟಿನಲ್ಲಿ ಅಟ್ಟಾಡಿಸಿದರೂ ನಮ್ಮವರು ಕಲೆಯ ಹೆಸರಲ್ಲಿ ವೀಕ್ಷಿಸಿ ಆನಂದಿಸುತ್ತಾರೆ! ಇಂತಹ ಚಿತ್ರಗಳನ್ನು ನೋಡಿ ಆಸ್ವಾದಿಸುವ ದಡ್ಡಶಿಖಾಮಣಿ ಹಿಂದೂಗಳು ಇರುವವರೆಗೆ ಕಲೆಯ ಹೆಸರಲ್ಲಿ ತಮ್ಮ ಅಜೆಂಡಾಗಳನ್ನು ಹಿಂದೂ ಮನಸ್ಸಿನಲ್ಲಿ ನೆಟ್ಟು ಬೆಳೆಸುವ ಧೂರ್ತರು ಇದ್ದೇ ಇರುತ್ತಾರೆ.