ಪುಟಗಳು

ಶನಿವಾರ, ಮಾರ್ಚ್ 22, 2014

ಸಿಂಧುರಕ್ಷಕ್ ಮುಳುಗಿತೆಂದರೆ ಹಿಂದೂಸ್ಥಾನವೂ ಮುಳುಗಿದಂತೆ

                 ಸಿಂಧುರಕ್ಷಕ್ ಮುಳುಗಿತೆಂದರೆ ಹಿಂದೂಸ್ಥಾನವೂ ಮುಳುಗಿದಂತೆ!
                ಭಾರತೀಯ ನೌಕೋದ್ಯಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಋಗ್ವೇದದಲ್ಲಿ ನೌಕೆಗಳ ಉಲ್ಲೇಖವಿದೆ. ವೇದಕಾಲದಲ್ಲಿ ನೌಕೆಗಳ ಬಗ್ಗೆ, ಅವುಗಳನ್ನು ತಯಾರಿಸುವ, ಬಳಸುವ ಬಗ್ಗೆ ಜನತೆಗೆ ಅರಿವು ಇತ್ತು. ಅಂದರೆ ಸಾಗರ ಗರ್ಭದೊಳಗಡಗಿರುವ ಅಪಾರ ಸಂಪನ್ಮೂಲಗಳ ಬಗ್ಗೆ ಜನ ತಿಳಿದಿದ್ದರು. ಆಧುನಿಕ ವಿಜ್ಞಾನದ ಅರಿವಿಗೆ ದೊರಕಿದ ಮಾಹಿತಿಯನ್ನು ಆಧರಿಸಿದರೂ ಭಾರತವೇ ನೌಕೋದ್ಯಮದ ತವರು. ಕ್ರಿ.ಪೂ 2300ರ ಸುಮಾರಿಗೆ ಗುಜರಾತಿನ ಲೋಥಲ್ ಎಂಬ ಪ್ರದೇಶದಲ್ಲಿರುವ ಮಾಂಗ್ರೋಲ್ ಬಂದರಿನ ಬಳಿ ಸಿಂಧೂ ನಾಗರೀಕತೆಯ ಸಮಯದಲ್ಲಿ ಮೊದಲ ಉಬ್ಬರವಿಳಿತದ ಹಡಗು ನಿರ್ಮಾಣವಾಯಿತು. ಮೌರ್ಯರ ಆಳ್ವಿಕೆಯ ಸಮಯದಲ್ಲಿ ಜಲಮಾರ್ಗದ ಸಮಸ್ತ ಆಗು ಹೋಗುಗಳು ನವಾಧ್ಯಕ್ಷನ ನಿಯಂತ್ರಣದಲ್ಲಿತ್ತು. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ನೌಕೆಗಳ ಬಗೆಗಿನ ಅಗಾಧ ಮಾಹಿತಿಯಿದೆ. ಮೌರ್ಯರಲ್ಲದೆ ಚೋಳ, ಶಾತವಾಹನ, ಗುಪ್ತ, ಪಾಲ, ಪಾಂಡ್ಯ, ವಿಜಯನಗರ, ಕಳಿಂಗ, ಮರಾಠರ ಆಳ್ವಿಕೆಯ ಕಾಲದಲ್ಲೂ ನೌಕೋದ್ಯಮ ಪ್ರಸಿದ್ದಿ ಪಡೆದಿತ್ತು. ಪಾಶ್ಚಿಮಾತ್ಯ ದೇಶಗಳೊಡನೆ ವ್ಯಾಪಾರ ವಹಿವಾಟು ಬಹು ಹಿಂದಿನಿಂದಲೂ ಸಾಗರ ಮಾರ್ಗವಾಗಿಯೇ ನಡೆದಿತ್ತು. ಮರಾಠ ನೌಕಾ ಪಡೆಯಂತೂ ಮೂರು ಶತಮಾನಗಳ ಕಾಲ ತನ್ನ ಪಾರುಪತ್ಯ ಸ್ಥಾಪಿಸಿತ್ತು. ಯೂರೋಪಿನ ನೌಕಾಪಡೆಗಳು ಅನೇಕ ಸಲ ಮರಾಠರ ನೌಕಾಪಡೆಗಳೆದುರು ನಿಲ್ಲಲಾರದೆ ಓಡಿ ಹೋಗಿದ್ದವು. ಕನ್ಹೋಜಿ ಆಂಗ್ರೇಯಂತಹ ಸಾಗರ ವೀರ ಎಂದೆಂದಿಗೂ ಅಮರ.
               ಭಾರತೀಯ ನೌಕಾಪಡೆ ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5,000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು. ಸ್ವತಂತ್ರ ಭಾರತದ ನೌಕಾಪಡೆ ಇತಿಹಾಸದಲ್ಲಿ ಹಡಗಿನೊಂದಿಗೇ ಜಲಸಮಾಧಿಯಾದ ಹಾಗೂ ಸಾಯುವ ಮೊದಲು 67 ಜನರ ಜೀವ ರಕ್ಷಣೆ ಮಾಡಿದ್ದ ಮೊದಲ ಹಾಗೂ ಏಕೈಕ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲಾರಂತಹ ವೀರರನ್ನು ಹೊಂದಿದ್ದ ನೌಕಾಪಡೆ ನಮ್ಮದ್ದು.  1961ರಲ್ಲಿ ಗೋವಾ ವಿಮೋಚನಾ ಸಂದರ್ಭದಲ್ಲಿ ನೌಕಾಪಡೆಯನ್ನು ಬಳಸಲಾಯಿತಾದರೂ ಅದು ನೊಣ ಹೊಡೆಯಲು ಸುತ್ತಿಗೆ ಬಳಸಿದಂತಾಗಿತ್ತು. 1962ರ ಚೀನಿ ಆಕ್ರಮಣದ ಸಮಯದಲ್ಲಿ ನೌಕಾಪಡೆ ಮೂಕ ಪ್ರೇಕ್ಷಕರಾಗುಳಿಯಬೇಕಾಯಿತು. 1965ರ ಪಾಕ್ ಯುದ್ಧದಲ್ಲಿ ಕೂಡಾ ನೌಕಾ ಪಡೆ ಪಾತ್ರ ಸೀಮಿತವಾಗಿತ್ತು. ಆದರೆ 1971ರ ಯುದ್ಧದಲ್ಲಿ ನೌಕಾಪಡೆ ನಿರ್ಣಾಯಕ ಪಾತ್ರ ವಹಿಸಿತ್ತು. 1971ರ ಯುದ್ಧದಲ್ಲಿ ಪಶ್ಚಿಮ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಆಕ್ರಮಣ ಮಾಡಲು ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳಿಗೆ ಹೊರಗಿನಿಂದ ನೆರವು ದೊರೆದಂತೆ ನೌಕಾ ದಿಗ್ಬಂಧನ ಮಾಡಲು ನಿರ್ಧರಿಸಲಾಯಿತು. ಅದಕ್ಕಾಗಿ ಕೇವಲ 300ರಿಂದ 400 ಕಿ.ಮೀ. ಮಾತ್ರ ಸಾಗಬಲ್ಲ ಕ್ಷಿಪಣಿ ನಾವೆಗಳನ್ನು ಹಡಗುಗಳಿಂದ ಎಳೆದುಕೊಂಡು ಹೋಗಿ ಕರಾಚಿ ಬಂದರು ಹತ್ತಿರ ಬಿಡಲಾಯಿತು. ಕರಾಚಿ ಬಂದರು, ಹಡಗು ಹಾಗೂ ತೈಲಭಂಡಾರ ಭುಗಿಲೆದ್ದು ಉರಿದವು. ಪಾಕ್ ನೌಕಾಪಡೆ ಹೇಳ ಹೆಸರಿಲ್ಲದಂತಾಯಿತು. ಈ ನೌಕಾ ವಿಜಯದ ದಿನವನ್ನು ಭಾರತೀಯ ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತಿದೆ.
                   ಜಗತ್ತಿನ ಐದನೇ ಅತಿ ದೊಡ್ಡ ನೌಕಾ ಪಡೆ ಹೊಂದಿದ್ದರೂ ಭಾರತದ ಸರಕಾರಗಳಿಗೆ ಅದರ ಮೌಲ್ಯದ ಅರಿವೇ ಇಲ್ಲ. ಬೇರೆ ದೇಶಗಳು ಉಪಯೋಗಿಸಿ ಸಾಕೆಂದು ಹರಾಜಿಗಿಟ್ಟ ನೌಕೆಗಳನ್ನು ನಮ್ಮ ಮಾನಗೆಟ್ಟ ಸರಕಾರಗಳು ಜಿದ್ದಿಗೆ ಬಿದ್ದು ಖರೀದಿ ಮಾಡಿದವು. ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ರಷ್ಯಾದಿಂದಲೂ, ಐಎನ್‌ಎಸ್‌ ವಿಕ್ರಾಂತ್‌ ಹಾಗೂ ಎಚ್‌ಎಮ್‌ಎಸ್‌ ಹರ್ಮಸ್‌(ಐಎನ್‌ಎಸ್‌ ವಿರಾಟ್‌) ಅನ್ನು ಬ್ರಿಟನ್‌ ನೌಕಾಪಡೆಯಿಂದಲೂ ಖರೀದಿಸಲಾಗಿತ್ತು. 2004ರಲ್ಲಿ ರಷ್ಯಾದ ಅಡ್ಮಿರಲ್‌ ಗೋರ್ಷಕೋವ್‌(ಐಎನ್‌ಎಸ್‌ ವಿಕ್ರಮಾದಿತ್ಯ)ವನ್ನು ಖರೀದಿಸಲಾಗಿತ್ತು. 1978ರಲ್ಲಿ ಉಕ್ರೇನ್‌ನ ನಿಕೊಲೇವ್‌ ಹಡಗು ಕಟ್ಟೆಯಲ್ಲಿ ನಿರ್ಮಾಣಗೊಂಡ ಈ ಹಡಗನ್ನು, 1982ರಲ್ಲಿ ರಷ್ಯಾ ನೌಕಾ ಪಡೆಗೆ ಸೇರ್ಪಡೆಗೊಳಿಸಲಾಗಿತ್ತು. 1996ರಲ್ಲಿ ನೌಕೆಯನ್ನು ಸೇವೆಯಿಂದ ಮುಕ್ತಗೊಳಿಸಿ ಹರಾಜಿಗಿಡಲಾಗಿತ್ತು. ಬಳಿಕ 2004ರಲ್ಲಿ ಈ ನೌಕೆಯನ್ನು ಭಾರತ ಖರೀದಿಸಿದ್ದು, ಆಧುನೀಕರಣಕ್ಕೆ ರಷ್ಯಾಕ್ಕೇ ನೀಡಿತ್ತು! ನೌಕೆಯನ್ನು 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಕ್ಕೆ ಭಾರತ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅಂದರೆ ಹೊಸ ನೌಕೆ ನಿರ್ಮಾಣಕ್ಕಿಂತಲೂ ಹೆಚ್ಚಿಗೆ ಆಧುನೀಕರಣಕ್ಕೆ ಬಳಸಲಾಗಿತ್ತು. ಅಲ್ಲದೆ ಆಧುನೀಕರಣ ವಿಳಂಬವಾದ್ದರಿಂದ ವೆಚ್ಚಗಳು ಹೆಚ್ಚಾಗಿ, ಭಾರತ ಹೆಚ್ಚುವರಿ ಪಾವತಿ ಮಾಡಬೇಕು ಎಂದು ರಷ್ಯಾ ಹಟ ಹಿಡಿದಿತ್ತು!
                ಕಳೆದ ಡಿಸೆಂಬರಿನಿಂದ ಪ್ರತಿವಾರ ನೌಕಾಪಡೆಯಲ್ಲಿ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇದೆ. ಕಳೆದ ಮೂರು ತಿಂಗಳಲ್ಲಿ ಎಂಟು ದುರಂತಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಲೇ ಬಂದವು. ನೌಕಾಪಡೆಯ ಮುಖ್ಯಸ್ಥ ಡಿ.ಕೆ ಜೋಶಿ ಕಣ್ಣೆದುರು ಸಂಭವಿಸುತ್ತಲೇ ಇರುವ ಅಪಘಾತಗಳನ್ನು ನೋಡಲಾರದೇ ರಾಜೀನಾಮೆ ಕೊಟ್ಟುಬಿಟ್ಟರು. ಆದರೆ ಇದ್ದಷ್ಟೂ ದಿನ ತಿಂದು ತೇಗಿಯೇ ಸಾಯೋದು ಎಂದು ಸದಾ ದೇಶವನ್ನು ಹಾಳು ಮಾಡುವತ್ತಲೇ ಯೋಚಿಸುವ ತನ್ನನ್ನು ತಾನು ದುರಸ್ಥಿ ಮಾಡಿಕೊಳ್ಳಲಾಗದ ಆಳುವ ಸರಕಾರಕ್ಕೆ ನೌಕಾಪಡೆಯನ್ನು ದುರಸ್ಥಿ ಮಾಡುವ ಮನ ಎಲ್ಲಿಂದ ಬರಬೇಕು? ಕಳೆದ ಆಗಸ್ಟ್ ನಿಂದ ಎಂಟು ತಿಂಗಳಲ್ಲಿ ಸರದಿಯಂತೆ ಸಂಭವಿಸಿದ ಹನ್ನೊಂದು ದುರಂತಗಳು ಆಳುವ ಸರಕಾರದ ಶಿಥಿಲಗೊಂಡ ಆಡಳಿತ ವ್ಯವಸ್ಥೆಯ ಫಲ. 2013ರ ಆಗಸ್ಟ್ ತಿಂಗಳಲ್ಲಿ ಮುಂಬಯಿ ನೌಕಾ ನೆಲೆಯಲ್ಲಿ ಐ ಎನ್ ಎಸ್ ಸಿಂಧುರಕ್ಷಕ್ ನಲ್ಲಿ ಉಂಟಾದ ಅಗ್ನಿದುರಂತದಲ್ಲಿ ಹದಿನೆಂಟು ಜನರು ಮೃತರಾದರು. ಅಲ್ಲಿಂದ ಮುಂದೆ ಸೆಪ್ಟೆಂಬರಿನಲ್ಲಿ ವಿರಾಟ್, ಡಿಸೆಂಬರಿನಲ್ಲಿ ತರ್ಕಷ್ ಮತ್ತು ತಲ್ವಾರ್, ಜನವರಿಯಲ್ಲಿ ಕೊಂಕಣ್, ಸಿಂಧುಘೋಷ್, ವಿಪುರ್ ಹಾಗೂ ಬೆತ್ವಾ, ಫೆಬ್ರವರಿಯಲ್ಲಿ ಐರಾವತ ಮತ್ತು ಸಿಂಧುರತ್ನ ಮತ್ತೀಗ ಮಾರ್ಚ್ ನಲ್ಲಿ ಐ ಎನ್ ಎಸ್ ಕೋಲ್ಕತ್ತಾ ಹೀಗೆ ಒಂದರ ಹಿಂದೆ ಒಂದರಂತೆ ಆದ ದುರಂತಗಳು ನೌಕಾಪಡೆಯನ್ನು ತನ್ನದೇ ಸ್ಥಿತಿಗೆ ತಂದಿಟ್ಟ ಕಾಂಗ್ರೆಸ್ ಸರಕಾರ ದೇಶದ ಜನತೆಗೆ ಕೊಟ್ಟ 'ಸಾವಿನ' ಭಾಗ್ಯವೇ ಸರಿ! ಸೇನೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೇ ಒದಗಿಸದ ರಾಷ್ಟ್ರದ್ರೋಹಿಗಳಿಂದ ದೇಶರಕ್ಷಣೆಯನ್ನು ನಿರೀಕ್ಷಿಸಲಾದೀತೇ?
                    ಆರ್ಭಟಿಸುತ್ತಿರುವ ಚೀನಾ ಅಮೇರಿಕಾಗಳನ್ನು ನಿಯಂತ್ರಿಸಲು ಮಾತ್ರವಲ್ಲ ಭವಿಷ್ಯದಲ್ಲಿ ತನ್ನದೇ ರಕ್ಷಣೆಗಾಗಿಯೂ ಭಾರತ ಅಂಡಮಾನ್-ನಿಕೋಬಾರ್ ಹಾಗೂ ಲಕ್ಷದ್ವೀಪಗಳನ್ನು ಸಮರ್ಥವಾಗಿ ನೌಕಾ ಉದ್ದೇಶಗಳಿಗಾಗಿ ಸಜ್ಜುಗೊಳಿಸಬೇಕಾಗಿತ್ತು. ಭಾಜಪಾ ಸರಕಾರದ ಅವಧಿಯಲ್ಲಿ ಕಾರ್ಗಿಲ್ ಯುದ್ಧದ ವಿಜಯಾನಂತರ ಅಂಡಮಾನ್-ನಿಕೋಬಾರ್ ಕಮಾಂಡ್ ಅನ್ನು ಸ್ಥಾಪಿಸಿತ್ತು. ಆದರೆ ಆ ಬಳಿಕ ಬಂದ ಕಾಂಗ್ರೆಸ್ ಹತ್ತು ವರ್ಷಗಳ ಅವಧಿಯಲ್ಲಿ ಅಂಡಮಾನ್-ನಿಕೋಬಾರಿನಲ್ಲಿ ನೌಕಾ ನೆಲೆಯ ಅಭಿವೃದ್ಧಿ ಒತ್ತಟ್ಟಿಗಿರಲಿ ಕನಿಷ್ಟ ಈ ಪಡೆಯ ಅವಶ್ಯಕತೆಗಳನ್ನೇ ಪೂರೈಸಲಿಲ್ಲ. ಲಕ್ಷದ್ವೀಪಗಳಲ್ಲಿ ಕವರಟ್ಟಿಯಲ್ಲಿ ನೌಕಾನೆಲೆ ಸ್ಥಾಪಿಸಿದ್ದು ಬಿಟ್ಟರೆ ಮತ್ತೇನೂ ಮಾಡಲೇ ಇಲ್ಲ. ಆದರೆ ಅತ್ತ ಚೀನಾ ಭಾರತವನ್ನು ಸುತ್ತುವರಿದಿರುವ ಮೂರೂ ಸಮುದ್ರಗಳ ಮೇಲೆ ಹಸ್ತಕ್ಷೇಪ ಮಾಡಲಾರಂಭಿಸಿದೆ. 21ನೇ ಶತಮಾನದಲ್ಲಿ ಭಾರತದ ಪ್ರಮುಖ ಶತ್ರು ರಾಷ್ಟ್ರ ಚೀನಾವೆಂಬುದು ಜಗತ್ತಿಗೇ ಗೊತ್ತಿರುವ ಸತ್ಯ! ಇತ್ತ ಭಾರತದ ಸರಕಾರಗಳ ಸ್ವಹಿತ, ಮೂರ್ಖ, ಅದೂರದರ್ಶಿ ಹಾಗೂ ದೇಶದ್ರೋಹಿ ಆಡಳಿತ ನೀತಿಯ ಫಲವಾಗಿ ಭಾರತದ ನೌಕಾಪಡೆಯ ಬಲ ದಿನದಿಂದ ದಿನಕ್ಕೆ ಕುಗ್ಗುತ್ತಿದ್ದರೆ ಅತ್ತ ಸಾಮ್ರಾಜ್ಯಶಾಹೀ ಮನೋಭಾವದ ಚೀನಾದ ನೌಕಾಪಡೆಯ ಕಾರ್ಯ ಚಟುವಟಿಕೆ ಹಿಗ್ಗುತ್ತಲೇ ಇದೆ! ಭಾರತದ ಸನಿಹ ಯಾವುದೇ ಸಾಗರ ತೀರ ಹೊಂದಿಲ್ಲದ ಚೀನಾ, ಈ ಶತಮಾನದ ಅಗ್ರಣಿಯಾಗಿ ಮೆರೆಯಬೇಕಾದರೆ ಸಾಗರದ ಮೇಲೆ ಹತೋಟಿ ಸಾಧಿಸುವುದು ಮುಖ್ಯವೆಂದು ಅರಿತಿದೆ. ಅದಕ್ಕಾಗಿಯೇ ಭಾರತದ ನೆರೆಯರಾಷ್ಟ್ರಗಳೆಲ್ಲವನ್ನೂ ಹಣದ ಆಮಿಷವೊಡ್ಡಿ ತನ್ನ ಬಲೆಗೆ ಬೀಳಿಸಿ ಅಲ್ಲಿ ತನ್ನ ನೌಕಾನೆಲೆಗಳನ್ನು ಸ್ಥಾಪಿಸುತ್ತಿದೆ. ಈಗಾಗಲೇ ಪಾಕಿಸ್ಥಾನದ ಗ್ವಾಡಾರ್ನಲ್ಲಿ ಚೀನಾ ನೌಕಾನೆಲೆಯೊಂದನ್ನು ನಿರ್ಮಿಸಿದೆ. ಬ್ರಹ್ಮ ದೇಶ(ಮಯನ್ಮಾರ್)ದ ಸಿಟ್ವೇಯಲ್ಲಿ ಬಂದರೊಂದನ್ನು ನಿರ್ಮಿಸಿದೆ. ಬರ್ಮಾದ ಕೋಕೋ ದ್ವೀಪಗಳಲ್ಲಿ ಚೀನಾ ನೌಕಾನೆಲೆಯೊಂದನ್ನು ಸ್ಥಾಪಿಸಿದೆ. ಶ್ರೀಲಂಕಾದ ಹಂಬನ್ ತೋಟದಲ್ಲಿ ಬಂದರೊಂದನ್ನು ನಿರ್ಮಿಸುತ್ತಿದೆ ಚೀನಾ! ಚೀನಾವನ್ನು ರತ್ನಾಕರ(ಅರಬ್ಬಿ ಸಮುದ್ರ)ದೊಂದಿಗೆ ಹಾಗೂ ಬ್ರಹ್ಮ ದೇಶದ ಮೂಲಕ ಮಹೋದಧಿ(ಬಂಗಾಳ ಕೊಲ್ಲಿ)ಯೊಂದಿಗೆ ಜೋಡಿಸಲು ರೈಲು ಮಾರ್ಗ ನಿರ್ಮಿಸತೊಡಗಿದೆ. ಇದರಿಂದ ಸಿಟ್ವೇ ಬಂದರು ಹಾಗೂ ಕೋಕೋ ದ್ವೀಪಗಳಲ್ಲಿರುವ ತನ್ನ ನೆಲೆಗಳಿಗೆ ಸಮರ ಸಾಮಗ್ರಿಗಳನ್ನು ಹಾಗೂ ಸೈನಿಕರನ್ನು ಸಾಗಿಸಲು ಸುಲಭವಾಗುತ್ತದೆ. ಇದರ ಜೊತೆಗೆ ಹೈನಾನ್ ಹಾಗೂ ಪರಾಸೆಲ್ ದ್ವೀಪಗಳಲ್ಲಿ ಚೀನಾದ ನೌಕಾನೆಲೆ ಸದಾ ಸಮರೋತ್ಸಾಹಿಯಾಗಿ ಸಿದ್ಧವಿರುತ್ತದೆ.
                     ಆದರೆ ಎದುರಾಳಿ ಮುನ್ನುಗ್ಗುತ್ತಾ ಬರುತ್ತಿರುವಾಗಲೂ ಭಾಯಿ ಭಾಯಿ ಎಂದೆನ್ನುತ್ತಾ ತಮ್ಮ ಖಜಾನೆ ತುಂಬುತ್ತಾ ಕುಳಿತಿರುವ ನಾಯಕರಿಂದ ದೇಶ ಉಳಿದೀತೇ? ಭಾರತದ 2020 ಕನಸು ನನಸಾಗಬೇಕಾದರೆ ಸಾಗರ ತೀರಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು, ಅದಕ್ಕಾಗಿ ನೌಕಾಪಡೆಯನ್ನು ಬಲಿಷ್ಟಗೊಳಿಸುವುದು, ನೌಕಾನೆಲೆಗಳನ್ನು ಉನ್ನತೀಕರಣಗೊಳಿಸುವುದು ಅತ್ಯಗತ್ಯ. ಇದನ್ನು ಕಾರ್ಯಗತಗೊಳಿಸಬೇಕಾದರೆ ಸಮರ್ಥ ನಾಯಕನ ಅಗತ್ಯವಿದೆ. ಡ್ರ್ಯಾಗನ್ ಬಾಲವನ್ನು ಮೆಟ್ಟಬಲ್ಲ, ದೊಡ್ಡಣ್ಣನನ್ನೇ ತನ್ನ ಕಾಲಿಗೆ ಬೀಳಿಸಿದ ದೂರದರ್ಶಿ-ದೇಶಭಕ್ತಿ-ಸಾಮರ್ಥ್ಯವುಳ್ಳ ನಾಯಕನೊಬ್ಬ ಸಿದ್ಧವಾಗಿ ನಿಂತಿದ್ದಾನೆ. ಈಗ ನಮೋ ಎನ್ನದಿದ್ದರೆ ಮುಂದೆಂದೂ ನಮೋ ಎನ್ನದ ಪರಿಸ್ಥಿತಿ ಬಂದೀತು! ಜೋಕೆ!