ಪುಟಗಳು

ಬುಧವಾರ, ನವೆಂಬರ್ 28, 2012

ಇಂಥವರೂ ಇದ್ದಾರೆ...!!!                     ಇವತ್ತು ಮನಸ್ಸು ರೋಷಗೊಂಡ ಘಟನೆಯೊಂದು ನಡೆಯಿತು. ಆಟೋವೊಂದರಲ್ಲಿ ಹೋಗುತ್ತಿದ್ದೆ. ಒಬ್ಬ ಹುಡುಗ ಹಾಗೂ ಹುಡುಗಿಯೊಬ್ಬಳು ಅದೇ ಆಟೋದಲ್ಲಿ ಇದ್ದರು. ಬಹುಷ ಒಂದೇ ಶಾಲೆಯವರಿರಬೇಕು, ಸಮವಸ್ತ್ರ ಏಕರೂಪದ್ದಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಆಟೋ ಚಾಲಕ ಮಾತಾಡಲು ಶುರು ಮಾಡಿದ. ನನ್ನಲ್ಲಿ ಅಂತ ತಿಳಿದಿದ್ದರೆ ನಿಮ್ಮದು ತಪ್ಪು ಕಲ್ಪನೆಯಾದೀತು! ಆ ಹುಡುಗಿಯಲ್ಲಿ...ನೀನ್ಯಾಕೆ ಇನ್ನೂ ನಿನ್ನ ಭಾವಚಿತ್ರ ಕೊಟ್ಟಿಲ್ಲ...ಇವತ್ತು ನನ್ನ ತಂಗಿ ನಿನ್ನ ತರಗತಿ ಬಳಿ ಬರುತ್ತಾಳೆ...ಅವಳ ಕೈಲಿ ಕೊಡು...ಹೀಗೆ ಸಾಗಿತ್ತು ಮಾತು.. ಹುಡುಗಿಯು ಮಧ್ಯ ಮಧ್ಯದಲ್ಲಿ ನಗುವುದು ಅದೇನೋ ಬಡಬಡಿಸುವುದು ಮಾಡುತ್ತಿದ್ದಳು. ಮಾತಿನ ಮಧ್ಯೆ ಆ ಆಟೋ ಚಾಲಕ ಹುಡುಗಿಯಲ್ಲಿ..ನಿನ್ನ ತಾಯಿ ಸತ್ತಿದ್ದಾಳಾ ಇಲ್ಲಾ ಇನ್ನೂ ಬದುಕಿದ್ದಾಳಾ...ಅವಳು ಮೊದಲು ಸಾಯಬೇಕು. ಆಗ ನಿಮ್ಮಪ್ಪ ಆಟೋಮ್ಯಾಟಿಕ್ ಆಗಿ ನಿನ್ನನ್ನು ನನಗೆ ಕೊಡುತ್ತಾನೆ..ಎಂದುಬಿಟ್ಟ. ಆಶ್ಚರ್ಯವೆಂದರೆ ಹುಡುಗಿ ಆಗಲೂ ನಗುತ್ತಿದ್ದಳೇ ಹೊರತು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ!

                   ಅಲ್ಲಾ ಪ್ರೀತಿಸೋದು ತಪ್ಪು ಅಂತಾ ನಾನು ಹೇಳೋದಿಲ್ಲ. ಅಥವಾ ಅವ ಆಟೋ ಚಾಲಕ ಅಂತನೂ ಅಲ್ಲ. ಭಾವನೆ ಎಲ್ಲರಲ್ಲೂ ಇರುವಂತದ್ದೇ! ಪ್ರೀತಿ ಎಂಬುದು ವಯೋ ಸಹಜವೆ! ಆದರೆ ತನ್ನ ಪ್ರೀತಿಗಾಗಿ ಅವಳ ತಾಯಿಯನ್ನು ಸಾಯಬಯಸುವುದು, ಹಾಗೆ ಹೇಳಿದಾಗಲೂ ಆಕೆ ಸುಮ್ಮನಿರುವುದು ಎಷ್ಟು ಸರಿ? ನವ ಮಾಸ ಪರ್ಯಂತ ಅಪಾರ ನೋವುಂಡು ಸಂಸ್ಕೃತಿ, ಬದುಕಿನ ಪಾಠ ಕಲಿಸುವ ಪ್ರತ್ಯಕ್ಷ ದೇವತೆಯನ್ನು ನಿಂದಿಸುವ ಪರಿಗೆ ಬೇರೆಯವರಾಗಿದ್ದರೆ ಕಪಾಳ ಮೋಕ್ಷ ಮಾಡುತ್ತಿದ್ದರು. ಆ ಹುಡುಗ(ಆಟೋ ಚಾಲಕ)ನೂ ಅಷ್ಟೇ. ಒಂದು ವೇಳೆ ಅದೇ ಮಾತನ್ನು ಹುಡುಗಿ ಆಡಿದ್ದಿದ್ದರೆ ಸುಮ್ಮನಿರುತ್ತಿದ್ದನೇ?
                       ಮನ ಕಲಕಿದ ಈ ಘಟನೆ ಇಡೀ ದಿವಸ ನನ್ನ ಮನಸ್ಸನ್ನು ಆವರಿಸಿತ್ತು. ತಡೆದುಕೊಳ್ಳಲಾಗದೇ ನಿಮ್ಮೊಂದಿಗೇ ಹಂಚಿಕೊಂಡಿದ್ದೇನೆ.
ನಿಮಗೆ ಅತೀವ ದುಃಖವಾಗಿದ್ದಾಗ ನಿಮಗೆ ಸಾಂತ್ವನ ಹೇಳುವ ಏಕಮಾತ್ರ ವ್ಯಕ್ತಿ ತಾಯಿ. ನೀವು ದುಃಖ ಮುಚ್ಚಿಟ್ಟು ನಗುತ್ತಿದ್ದರೂ ನಿಮ್ಮ ಮನಸ್ಥಿತಿ ಅವಳಿಗೆ ಅರ್ಥ ಆಗುತ್ತೆ. ನಿಮ್ಮ ಬದುಕಿನ ಮೊದಲ ಗುರು, ಮೊದಲ ಸ್ನೇಹಿತೆ ಆಕೆ! ನೀವು ಮಗುವಾಗಿದ್ದಾಗ, ಅನಾರೋಗ್ಯ ಪೀಡಿತರಾಗಿದ್ದಾಗ, ಉಳಿದವರು ನಿಮ್ಮನ್ನು ಅಪಹಾಸ್ಯ, ದೂಷಣೆಗೊಳಪಡಿಸಿದಾಗಲೂ ನಿಮ್ಮ ಕೈ ಹಿಡಿದು ನಡೆಸುವವಳು ಅವಳೇ! ಆದ್ದರಿಂದ ಅವಳನ್ನು ದೂಷಿಸುವಾಗ ಎಚ್ಚರದಿಂದಿರಿ, ದೂಷಿಸುವ ಮೊದಲು ಯೋಚಿಸಿ.

ಶನಿವಾರ, ನವೆಂಬರ್ 24, 2012

ಭಾರತ ದರ್ಶನ-೨೦:

                  ಸತಿಯೊಂದಿಗೆ ಶ್ರೀರಾಮ ಶಿವನ ಪೂಜೆ ಮಾಡಿದ ಪವಿತ್ರ ಕ್ಷೇತ್ರ ರಾಮೇಶ್ವರ. ಅಲ್ಲಿಂದ ಶಿವಭಕ್ತರು ಉತ್ತರದ ರಾಮೇಶ್ವರದ ಕಡೆಗೆ ಪಯಣಿಸುತ್ತಾರೆ. ಅಲ್ಲೊಂದು ನೈಸರ್ಗಿಕ ಗುಹೆ. ಸಮುದ್ರ ಮಟ್ಟದಿಂದ ೧೩೦೦೦ ಅಡಿ ಎತ್ತರದಲ್ಲಿರುವ ಆ ಗುಹೆಯಲ್ಲೊಂದು ಪವಾಡ.ಪ್ರತಿ ತಿಂಗಳ ಶುಕ್ಲ ಪಕ್ಷದಂದು ನೀರು ಹಿಮದ ರೂಪದಲ್ಲಿ ತೊಟ್ಟಿಕ್ಕಿ ಲಿಂಗ ರೂಪ ಧಾರಣೆ ಮಾಡುತ್ತೆ. ಹುಣ್ಣಿಮೆಯ ದಿನ ಹತ್ತಾರು ಅಡಿ ಎತ್ತರದ ಲಿಂಗವನ್ನು ನಾವಲ್ಲಿ ಕಾಣಬಹುದು. ಕೃಷ್ಣ ಪಕ್ಷದಲ್ಲಿ ಚಂದ್ರ ಕರಗುತ್ತಾ ಹೋದಂತೆ ಲಿಂಗವೂ ಕರಗುತ್ತಾ ಬರುತ್ತೆ! ಅಮವಾಸ್ಯೆ ದಿನ ಬಾನಿನಲ್ಲಿ ಅವನಿರೋದಿಲ್ಲ. ಭುವಿಯಲ್ಲಿ ಇವನಿರೋದಿಲ್ಲ!

                ಶ್ರಾವಣ ಪೂರ್ಣಿಮೆಯ ದಿನ ಅಲ್ಲಿ ದೊಡ್ಡ ಜಾತ್ರೆ ನಡೆಯುತ್ತೆ. ಅಮರನಾಥಕ್ಕೆ ಹೋಗೋದು ಅಷ್ಟು ಸುಲಭವಲ್ಲ. ಕಡಿದಾದ ದಾರಿಯಲ್ಲಿ ನಡೆದು ಸಾಗಬೇಕು. ಎಚ್ಚರದಿಂದ ಹೋದರೆ ಅಮರನಾಥ. ಎಚ್ಚರ ತಪ್ಪಿದರೆ ಕೈಲಾಸ! ಜಾಗೃತಾವಸ್ಥೆಯಲ್ಲಿ ಸಾಗಿದರೆ ಸೃಷ್ಠಿಯ ಸೌಂದರ್ಯವನ್ನು ಸವಿಯಬಹುದು.ವ್ಯತ್ಯಾಸವಾದರೆ ಸೃಷ್ಠಿಯ ರಹಸ್ಯವನ್ನು ನೋಡಬೇಕಾಗುತ್ತೆ! ಅಂಥ ಅಪಾಯಕಾರಿ ದಾರಿ. ಆದರೂ ಜನ ಧಾವಿಸುತ್ತಾರೆ. ಯೋಚನೆ ಮಾಡಿ| ಶ್ರಾವಣ ಮಾಸ, ಮಳೆಗಾಲ, ಕಾರ್ಮುಗಿಲು, ಹಿಮಾಲಯ, ಕಾಲುದಾರಿ, ಅಮರ ಗಂಗೆಯ ಭಯಾನಕ ಆಳವಾದ ಕಣಿವೆ, ಜೊತೆಗೆ ಭಯೋತ್ಪಾದಕರ ಅಟ್ಟಹಾಸ!
ಆದರೂ ಜನ ಹೋಗುತ್ತಾರೆ ಯಾಕೆ?
ಯಾಕೆಂದರೆ ಶ್ರಾವಣ ಪೂರ್ಣಿಮೆಯಂದು ಶಿವ ಪಾರ್ವತಿಗೆ ರಾಮ ಮಂತ್ರ ಉಪದೇಶ ಮಾಡಿದ ಪವಿತ್ರ ಜಾಗವದು!
ಅದಕ್ಕಾಗಿಯೇ
" ಆ ಮಂತ್ರ ಈ ಮಂತ್ರ ಜಪಿಸಿ ನೀ ಕೆಡಬೇಡ|
  ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ||
  ರಾಮ ಮಂತ್ರವ ಜಪಿಸೋ||"
ಎನ್ನುತ್ತಾರೆ ದಾಸರು.

ರಾಮ ಶಿವನ ಪೂಜೆ ಮಾಡುತ್ತಾನೆ, ಶಿವ ಸತಿಗೆ ರಾಮಮಂತ್ರ ಉಪದೇಶ ಮಾಡುತ್ತಾನೆ. ಅವರಿಬ್ಬರ ಭಕ್ತರು ತನ್ನ ದೇವ ದೊಡ್ಡವ ಅಂತ ಹೊಡೆದಾಡಿಕೊಳ್ಳುತ್ತಾರೆ!

ಒಬ್ಬ ಸಂಸ್ಕೃತ ಕವಿ ಅದ್ಭುತ ಸಮನ್ವಯ ಶ್ಲೋಕ ಬರೆಯುತ್ತಾನೆ.

" ಪಾಯಾತ್ ಕುಮಾರ ಜನಕಃ ಶಶಿಖಂಡ ಮೌಳಿಃ|
  ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ||
  ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ|
  ಆಧ್ಯಕ್ಷರೇಣ ಸಹಿತೋ ರಹಿತೋಪಿ ದೇವಾಃ||

ಈ ಎಲ್ಲ ಪದಗಳ ಅರ್ಥ ಶಿವ ನನ್ನನ್ನು ಕಾಪಾಡಲಿ ಎಂದು. ಇವುಗಳೆಲ್ಲದರ ಮೊದಲ ಅಕ್ಷರ ತೆಗೆದರೆ ಹರಿ ನನ್ನನ್ನು ಕಾಪಾಡಲಿ ಎಂದಾಗುತ್ತೆ!
( ಪಾಯಾತ್ = ಕಾಪಾಡಲಿ.
ಕುಮಾರ ಜನಕ = ಸುಬ್ರಹ್ಮಣ್ಯನ ತಂದೆ; ಮಾರ ಜನಕ = ಮನ್ಮಥ ಪಿತ.
ಶಶಿಖಂಡಮೌಳಿಃ = ಚಂದ್ರನ ತುಂಡನ್ನು(ಬಿದಿಗೆ ಚಂದ್ರ) ಶಿರದಲ್ಲಿ ಧರಿಸಿದವ ; ಶಿಖಂಡಮೌಳಿಃ = ನವಿಲು ಗರಿಯನ್ನು ಶಿರದಲ್ಲಿ ಧರಿಸಿದವ.
ಶಂಖಪ್ರಭಶ್ಚ = ಬಿಳುಪಾದ ಮೈಬಣ್ಣದವ ; ಖಪ್ರಭಶ್ಚ = ಆಕಾಶದ ಮೈಬಣ್ಣದವ, ನೀಲಮೇಘಶ್ಯಾಮ.
ನಿಧನಶ್ಚ = ಹಣವಿಲ್ಲದವ, ಲಯಕಾರಿ ; ಧನಶ್ಚ = ಲಕ್ಷ್ಮೀಪತಿ.
ಗವೀಶಯಾನಃ = ಹಸುವಿನ ಒಡೆಯ( ಎತ್ತು )ನನ್ನು ವಾಹನವಾಗುಳ್ಳವ ; ವೀಶಯಾನಃ = ಪಕ್ಷಿಗಳ ಒಡೆಯ( ಗರುಡ )ನನ್ನು ವಾಹನವಾಗುಳ್ಳವ.
ಗಂಗಾಂಚ = ಗಂಗಾಧರ ; ಗಾಂಚ = ಗೋವುಗಳನ್ನು ಸಲಹಿದವ, ಗೋಪಾಲಕೃಷ್ಣ.
ಪನ್ನಗಧರ = ನಾಗಾಭರಣ ; ನಗಧರ = ಪರ್ವತ ಎತ್ತಿಹಿಡಿದವ, ಗೋವರ್ಧನ ಗಿರಿಧಾರಿ.
ಉಮಾ ವಿಲಾಸಃ = ಉಮಾಪತಿ ; ಮಾವಿಲಾಸಃ = ಲಕ್ಷ್ಮೀಪತಿ, ಮಾಧವ.)

ಕೊನೆಯಲ್ಲಿ ಕವಿಯ ಆಶಯವೇನು?
ಮೊದಲಕ್ಷರ ಸಹಿತವಾಗಿ ಅಥವಾ ರಹಿತವಾಗಿ ಸ್ತುತಿಸಲ್ಪಡುವ ಒಬ್ಬನೇ ದೇವರು ನಮ್ಮನ್ನು ಕಾಪಾಡಲಿ. ಎಂಥಾ ಸಾಮರಸ್ಯ! ಎಂಥಾ ಅದ್ಭುತ ಶ್ಲೋಕ!
ಶೈವ ವೈಷ್ಣವರು ತಮ್ಮ ತಮ್ಮ ದೇವರಿಗಾಗಿ ಹೊಡೆದಾಡುವ ಮೊದಲು ಈ ಶ್ಲೋಕದ ಕಡೆ ಗಮನ ಕೊಡಿ, ಮಾತೆಯ ರಕ್ಷಣೆಗಾಗಿ ಹೋರಾಡಿ!

ವಂದೇ ಮಾತರಂ


ಶುಕ್ರವಾರ, ನವೆಂಬರ್ 16, 2012

ಭಾರತ ದರ್ಶನ-೧೯                       ಹಿಮಾಲಯದಲ್ಲಿ ಸುಮಾರು ಹತ್ತು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿಗಳಿವೆ. ಯಮುನೋತ್ರಿಯನ್ನು ನೋಡಿದಾಗ ಇಳಿದು ಸ್ನಾನ ಮಾಡಬೇಕು ಅನ್ನೋ ಬಯಕೆ ಮೂಡೋದು ಸಹಜ. ಆದರೆ ಹಾಗೇನಾದರೂ ಮಾಡಿದರೆ ಅದೇ ಕೊನೆ ಸ್ನಾನ ಆಗಬಹುದು! ಅಷ್ಟು ಕೊರೆಯುವ ಚಳಿ! ಆದರೆ ಭಗವಂತನ ಲೀಲಾ ವಿನೋದ ನೋಡಿ. ಒಂದು ಕಡೆ ನೀರು ಹೆಪ್ಪುಗಟ್ಟಿದೆ. ಅಲ್ಲೇ ಪಕ್ಕದ ಕುಂಡದಲ್ಲಿ ನೀರು ಕುದಿಯುತ್ತಿದೆ! ಎಂತಹ ಕುದಿತ...ಅಲ್ಲಿ ಹೋದ ಯಾತ್ರಿಗಳು ಅಕ್ಕಿಯನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ನೀರೊಳಗೆ ಇಡ್ತಾರೆ, ಐದು ನಿಮಿಷದಲ್ಲಿ ಬೆಂದು ಅನ್ನವಾಗಿರುತ್ತೆ! ಅಲ್ಲಿ ಸ್ನಾನ ಮಾಡಿ ಕೇದಾರ ಮತ್ತು ಬದರಿನಾಥನಿಗೆ ಅಭಿಷೇಕ ಮಾಡಿ ಅಲ್ಲಿನ ತೀರ್ಥವನ್ನು ಬಂಧುಬಾಂಧವರಿಗೆ ಹಂಚೋದು ನಮ್ಮ ವಿಶೇಷ ಪರಂಪರೆ.

                          ಬದರಿ ರಾಷ್ಟ್ರದ ಶೀರ್ಷಸ್ಥಾನ. ನರ ನಾರಾಯಣ ಪರ್ವತಗಳ ನಡುವೆ ಬದರೀನಾಥನ ಭವ್ಯ ಮಂದಿರ. ಭಗವಾನ್ ವೇದ ವ್ಯಾಸರ ತಪೋಭೂಮಿ. ವ್ಯಾಸ ಗುಹೆಯಿರುವ ಜಾಗ. ಸತ್ಯಯುಗದಲ್ಲಿ ನಾರಾಯಣನಿಂದ, ತ್ರೇತೆಯಲ್ಲಿ ದತ್ತಾತ್ರೇಯನಿಂದ, ದ್ವಾಪರದಲ್ಲಿ ವ್ಯಾಸರಿಂದ, ಮತ್ತು ಈ ಕಲಿಯುಗದಲ್ಲಿ ಶಂಕರ ಭಗವತ್ಪಾದರಿಂದ ಬದರಿಯ ಪ್ರತಿಷ್ಠೆ ಹೆಚ್ಚಿತು. ಇಲ್ಲಿನ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ್ದು ಶಂಕರ ಭಗವತ್ಪಾದರು.

                           ಬದರಿಯಿಂದ ಉತ್ತರದಲ್ಲಿ ಅಲಕೆಯ ದಡದಲ್ಲಿ ಬ್ರಹ್ಮಕಪಾಲವಿದೆ. ಹೃಷಿಕೇಶ ಶೈವ ವೈಷ್ಣವರಿಬ್ಬರಿಗೂ ಶೃದ್ಧಾಕೇಂದ್ರ. ಇಲ್ಲಿಯ ವಿಶೇಷ ಆಚಾರ್ಯ ಶಂಕರರಿಂದ ಸ್ಥಾಪಿತವಾದ ಭರತ ಮಂದಿರ. ಭರತನಿಗಾಗಿ ಮಂದಿರ ಇರೋದು ಹೃಷಿಕೇಶ ಮತ್ತು ಕೇರಳದಲ್ಲಿ ಮಾತ್ರ. ರಾಮಾಯಣದಲ್ಲಿ ದೇವತ್ವ ಪ್ರಾಪ್ತವಾದದ್ದು ರಾಮ ಮತ್ತು ಹನುಮನಿಗೆ ಮಾತ್ರ. ಅವರಿಗಾಗಿ ದೇವಾಲಯಗಳೂ ಇವೆ.ಸೀತೆ, ಲಕ್ಷ್ಮಣರೂ ಇವರೊಂದಿಗೇ ಪೂಜಿಸಲ್ಪಡುತ್ತಾರೆ. ಆದರೆ ಭರತ!
ಅವನಿಗಾಗಿ ಶಂಕರರು ಮಂದಿರವನ್ನೇಕೆ ನಿರ್ಮಿಸಿದರು? ಯಾಕೆಂದರೆ ಭರತ ಕೇವಲ ವ್ಯಕ್ತಿಯಲ್ಲ. ಅದೊಂದು ಮೌಲ್ಯ! ಅದೊಂದು ನೀತಿ! ತತ್ವಜ್ಞಾನ! ತಾಯಿಯ ಪಿತೂರಿಯಿಂದ ಸಿಕ್ಕ ಸಾಮ್ರಾಜ್ಯದ ಅಧಿಕಾರವನ್ನು ತ್ಯಜಿಸಿ ಅಣ್ಣನಂತೆ ಜಟಾವಲ್ಕಲಧಾರಿಯಾಗಿ ೧೪ ವರ್ಷ ನಂದಿಗ್ರಾಮದಲ್ಲಿ ದರ್ಭೆಯ ಹಾಸಿಗೆಯ ಮೇಲೆ ಮಲಗಿ ಅಣ್ಣನ ಪಾದುಕೆಗಳನ್ನು ಸಿಂಹಾಸನದಲ್ಲಿರಿಸಿ ರಾಜ್ಯಭಾರ ಮಾಡುತ್ತಾನೆ. ಇಂತಹ ತಮ್ಮನನ್ನು ಪಡೆಯಲು ದೇವರೇ ಹುಟ್ಟಿ ಬರಬೇಕಾಯಿತು! ಹೃಷಿಕೇಶ ಸ್ವಾಮಿ ಶಿವಾನಂದರ ಸಾಧನಾ ಕೇಂದ್ರ.

                            ಹರಿದ್ವಾರ ಹಿಮಾಲಯದ ಶ್ರೇಷ್ಠ ಕ್ಷೇತ್ರಗಳಲ್ಲೊಂದು. ಇದನ್ನು ಮಾಯಾಪುರಿ, ಗಂಗಾದ್ವಾರ ಮತ್ತು ಕಂಕಲ ಮೊದಲಾದ ಹೆಸರುಗಳಿಂದ ಕರೆದಿದ್ದಾರೆ. ಗಂಗೆ ತನ್ನ ಪ್ರವಹಿಸುವ ಹಾದಿಯಲ್ಲಿ ಮೊತ್ತ ಮೊದಲು ಬಯಲು ಪ್ರದೇಶ ಕಾಣೋದು ಇಲ್ಲೇ. ಹಾಗಾಗಿಯೇ ಇಡೀ ಮೈದಾನವನ್ನು ಬಳಸಿ ಬಾಚಿ ತಬ್ಬಿ ಹರಿದಿದ್ದಾಳೆ. ಒಂದು ದಡದಲ್ಲಿ ನಿಂತರೆ ಇನ್ನೊಂದು ದಡ ಕಾಣ್ಸೊಲ್ಲ. ಹೀಗಾಗಿಯೆ ಇದು ಗಂಗಾದ್ವಾರ. ಗಂಗೆ ಶಂತನುವನ್ನು ಮೋಹಿಸಿ ದೇವವ್ರತ(ಭೀಷ್ಮ)ನಿಗೆ ಜನ್ಮವಿತ್ತದ್ದು ಇಲ್ಲೇ. ಭರದ್ವಾಜರು ಘೃತಾಚಿ ಎಂಬ ಅಪ್ಸರೆಯನ್ನು ಮೋಹಿಸಿ ದ್ರೋಣಾಚಾರ್ಯರು ಜನಿಸಿದ್ದು ಇಲ್ಲಿಯೇ. ದಕ್ಷಯಜ್ಞ ನಡೆದ ಕ್ಷೇತ್ರ ಇದು. ರಾಮಲಕ್ಷ್ಮಣರ ಪಾದಸ್ಪರ್ಶ ಆದ ಭೂಮಿ. ಭರ್ತೃಹರಿ ಮುಕ್ತಿ ಕಂಡ ತಾಣ ಇದು. ಹರಿದ್ವಾರ ಹರದ್ವಾರವೆಂದೂ ಕರೆಯಲ್ಪಡುತ್ತದೆ. ಒಟ್ಟಾರೆ ಹಿಮಾಲಯದ ದ್ವಾರ ಇದು. ಮುಂದೆ ಹೋದರೆ ಕೇದಾರ, ಶಿವಕ್ಷೇತ್ರ ಮತ್ತು ಬದರಿ, ಹರಿಕ್ಷೇತ್ರ!
ಇದನ್ನು ಬಿಟ್ಟು ಶೈವ ವೈಷ್ಣವರು ಸಂಕುಚಿತ ಮನೋಭಾವದಿಂದ ವರ್ತಿಸಿದರೆ ರಾಷ್ಟ್ರದ ಆತ್ಮ ದುರ್ಬಲವಾಗುತ್ತೆ.

 (ಮುಂದಿನ ಭಾಗ ಶೈವ ವೈಷ್ಣವ ಸಮನ್ವಯ ಶ್ಲೋಕ ಸಹಿತ, ನಿರೀಕ್ಷಿಸಿ...)

ಶುಕ್ರವಾರ, ನವೆಂಬರ್ 9, 2012

ಭಾರತ ದರ್ಶನ-೧೮

ಭಾರತ ದರ್ಶನ-೧೮:

              ಜಗತ್ತಿನ ಇತರ ದೇಶಗಳಿಗೆ ಜಡವಾಗಿ ಕಾಣುವ ಪರ್ವತಗಳು ನಮ್ಮ ಪಾಲಿಗೆ ಭಗವದಂಶವೇ ಸರಿ. ಇದಕ್ಕೆ ಕಾರಣಗಳು ಹಲವು. ಕೆಲವು ಪರ್ವತಗಳು ದೇವತೆಗಳ ವಾಸಸ್ಥಾನ ಅಂತ ನಾವು ನಂಬುತ್ತೇವೆ. ಕೆಲವು ಪರ್ವತಗಳು ಋಷಿಮುನಿಗಳ ತಪೋಭೂಮಿ. ಇನ್ನು ಕೆಲವು ಪವಿತ್ರ ನದಿಗಳ ಉಗಮ ಸ್ಥಾನ. ಹೆಚ್ಚಿನವುಗಳಲ್ಲಿ ನಮ್ಮ ಹಿರಿಯರು ದೇವಾಲಯಗಳನ್ನು ನಿರ್ಮಿಸಿದ್ದಾರೆ.

          ಭಾರತದ ಉತ್ತರ ಸೀಮೆಯುದ್ದಕ್ಕೂ ಹಬ್ಬಿಕೊಂಡಿರುವ ಪ್ರಚಂಡ ಪರ್ವತ ಸೀಮಾ ಹಿಮಾಲಯ. ಹಿಮಾಲಯ ಅನ್ನೋ ಶಬ್ಧ ಹಿಂದೂವಿನ ಕಿವಿಗೆ ಬಿದ್ದೊಡನೆ ಅವನ ಹೃದಯ ಅರಳಿ ಹಲವು ದಿವ್ಯ ಭಾವಗಳ ನಾಡಿಗಳು ಮೀಟತೊಡಗುತ್ತವೆ. ಭಾರತದ ಇತಿಹಾಸದ ಘಟನಾವಳಿಗಳಿಗೆ ಮೂಕ ಸಾಕ್ಷಿ ಹಿಮಾಲಯ. ಜಗತ್ತಿನ ಅತ್ಯಂತ ಎತ್ತರದ ಶಿಖರವನ್ನು ಕವಿಯೊಬ್ಬ ಮುಗಿಲ ಹಾರ ಅಂತ ವರ್ಣಿಸಿದ್ದಾನೆ.
    "ಹರನ ಮಂದಿರ ಗಿರಿಯ ಕಂದರ
     ಅತುಲ ಸುಂದರ ಮುಗಿಲ ಹಾರ!
     ನರ ಕಿರಾತನ ಸೆಣಸಿ ದಣಿಸಿ
     ಪಾಶುಪತ ಪಡೆದವರ ಕ್ಷೇತ್ರ!
     ಶೈಲ ಕುಲ ಸಾಮ್ರಾಟ ಪೀಠ!"
ಎಂದು ವರ್ಣಿಸಿದ್ದಾನೆ.

       ಕುಮಾರ ಸಂಭವದಲ್ಲಿ ಕಾಳಿದಾಸ ಹಿಮಾಲಯವನ್ನು ಪರ್ವತಗಳ ರಾಜ, ದೇವತೆಗಳ ಆತ್ಮ, ಭೂಮಿಯ ಅಳತೆಗೋಲು ಅಂದಿದ್ದಾನೆ. ವಾಲ್ಮೀಕಿ ಶ್ರೀರಾಮನ ಧೈರ್ಯವನ್ನು ಹಿಮಾಲಯಕ್ಕೆ ಹೋಲಿಸಿದ್ದಾನೆ. ಭಾರವಿ ಹಿಮಾಲಯವನ್ನು ವೇದಗಳಿಗೆ ಹೋಲಿಸಿದ್ದಾನೆ.
       ಹಲವು ಋಷಿ ಮುನಿಗಳ ಆಶ್ರಮ ಹಿಮಾಲಯದಲ್ಲಿತ್ತು. ವಸಿಷ್ಠರ ಆಶ್ರಮ ಹಿಮಾಲಯದ ತಪ್ಪಲಲ್ಲಿತ್ತು. ಮಾಲಿನೀ ತೀರದಲ್ಲಿ ಕಣ್ವಾಶ್ರಮ, ತಮಸೆಯ ತಟಿಯಲ್ಲಿ ವಾಲ್ಮೀಕಿ ಆಶ್ರಮ, ಬದರಿಯ ಮಾಣಾ ಗ್ರಾಮದಲ್ಲಿ ವ್ಯಾಸಾಶ್ರಮ ಇತ್ತು. ಇಲ್ಲೇ ವ್ಯಾಸರು ಭಾರತ ಮತ್ತು ಭಾಗವತಗಳನ್ನು ಬರೆದರು. ಆಚಾರ್ಯ ಶಂಕರರು ಹಿಮಾಲಯದ ಭಾಗಗಳಲ್ಲಿ ದೇವಾಲಯಗಳ ಸಮೂಹವನ್ನೇ ಸೃಷ್ಠಿಸಿದರು.

           ಈ ನಗಾಧಿರಾಜನಿಂದ ಆರ್ವಾಚೀನ ಕಾಲದಲ್ಲಿ ಸ್ವಾಮಿ ವಿವೇಕಾನಂದ, ರಾಮತೀರ್ಥ, ಅಖಂಡಾನಂದ, ಶೃದ್ಧಾನಂದ, ಮಹರ್ಷಿ ದಯಾನಂದ ಸರಸ್ವತೀ, ಶ್ರೀ ಗುರೂಜಿ ಗೊಳ್ವಾಲ್ಕರ ಕೂಡಾ ಪ್ರಭಾವಿಸಲ್ಪಟ್ಟರು. ಅನೇಕ ಸಾಧು ಸಂತರು ಇಂದಿಗೂ ಹಿಮಾಲಯದಲ್ಲಿ ಅವ್ಯಕ್ತ ರೂಪದಲ್ಲಿ ಸಾಧನಾನಿರತರಾಗಿದ್ದಾರೆ. ಉತ್ತುಂಗ ಹಿಮಚ್ಛಾದಿತ ಶುಭ್ರದವಳ ಶಿಖರಗಳು, ನೇರವಾಗಿ ತಲೆಯೆತ್ತಿ ನಿಂತ ಗಿರಿಗಳು, ಆಳವಾದ ಕಣಿವೆಗಳು, ವೇಗವಾಗಿ ಹರಿಯುವ ನದಿಗಳು,ಗಹನಾರಣ್ಯ, ಬಗೆ ಬಗೆಯ ಫಲ ಪುಷ್ಪಗಳಿಂದ ಅಲಂಕೃತವಾದ ವೃಕ್ಷವಲ್ಲಿಗಳು, ಈ ಎಲ್ಲ ಹಿಮಾದ್ರಿಯ ನೈಸರ್ಗಿಕ ವೈಭವ ನೋಡುವಾಗ ಮನಸ್ಸು ಪ್ರಸನ್ನಗೊಳ್ಳುತ್ತದೆ. ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತ, ಶಿಲ್ಪ ಇತ್ಯಾದಿ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಹಿಮಾಲಯ ಪ್ರಭಾವ ಬೀರಿದೆ. ಆದ್ದರಿಂದಲೇ ಅದು ಕಲ್ಲು ಮಣ್ಣುಗಳ ಬೆಟ್ಟವಲ್ಲ, ಪರಶಿವನ ಆಲಯವೆಂದೇ ನಮ್ಮ ನಂಬಿಕೆ.

           ಸಮುದ್ರ ಮಟ್ಟದಿಂದ ಸುಮಾರು ೨೩೦೦೦ ಅಡಿ ಎತ್ತರದಲ್ಲಿದೆ ಕೈಲಾಸ. ಅದು ಶಿವನ ನಿವಾಸ. ನಮ್ಮೆಲ್ಲರ ಶ್ವಾಸ. ಸಧ್ಯಕ್ಕೆ ಚೀನಾದ ವಶ. ಅಷ್ಟದಳಾಕೃತಿಯ ಬಿಳಿಯ ಹೂವಿನ ಮಧ್ಯದಲ್ಲಿ ಸ್ಪಟಿಕದ ಶಿವಲಿಂಗ ಇಟ್ಟರೆ ಹೇಗೆ ಕಾಣುತ್ತೋ ಹಾಗೆ ಕೈಲಾಸ ನಮಗೆ ಗೋಚರವಾಗುತ್ತೆ. ಅದರ ಬುಡದಲ್ಲಿದೆ ರಾಕ್ಷಸ ತಲ. ರಾವಣ ಆತ್ಮಲಿಂಗ ಪ್ರಾಪ್ತಿಗಾಗಿ ಕೈಲಾಸವನ್ನು ಅಲುಗಾಡಿಸಲು ಹೋಗಿ ಸೋತು ತಪಸ್ಸು ಮಾಡಿದ ಸ್ಥಳ ಅದು.ರಾಕ್ಷಸ ತಲದಿಂದ ಅನತಿ ದೂರದಲ್ಲಿ ಮಾನಸ. ಮನಸ್ಸಿನಷ್ಟು ತಿಳಿಯಾದ ಸ್ಪಟಿಕ ಶುಭ್ರ ಜಲವುಳ್ಳ ತಳ ಕಾಣುವ ರಾಜ ಹಂಸಗಳು ವಿಹರಿಸುವ ಸರೋವರ. ಅಂಡಾಕೃತಿಯ ಈ ಸರೋವರದಿಂದ ಸಿಂಧೂ, ಸರಯೂ, ಬ್ರಹ್ಮಪುತ್ರಗಳು ಹುಟ್ಟುತ್ತವೆ. ಇದೊಂದು ಶಕ್ತಿ ಪೀಠವು ಹೌದು.

ಶನಿವಾರ, ನವೆಂಬರ್ 3, 2012

ಭಾರತ ದರ್ಶನ-೧೭

ಭಾರತ ದರ್ಶನ-೧೭:                 ಭೂಮಿಯನ್ನು ನಾವು ತಾಯಿ ಅಂತ ಗೌರವಿಸುತ್ತೇವೆ. ನಮ್ಮ ಹಿರಿಯರು ಹೇಳಿದರು

"ಅಮ್ಮಾ ನಾನು ನಿನ್ನಲ್ಲಿ ಅರಳ್ತೀನಿ, ಹೊರಳ್ತೀನಿ, ಕೊನೆಗೆ ನಿನ್ನಲ್ಲೇ ಮರಳ್ತೀನಿ. ನಿನ್ನ ಅಂಗಳದಲ್ಲೇ ಆಟ ಆಡ್ತೀನಿ. ಕೊನೆಗೆ ನಿನ್ನ ಮಡಿಲಲ್ಲೇ ವಿಶ್ರಾಂತಿ ಪಡೀತೀನಿ." ಹೀಗೆ ನಮ್ಮ ಭೌತಿಕ ಮತ್ತು ಭೌದ್ಧಿಕ ಸಾಹಸಗಳಿಗೆ ಪ್ರೇರಣೆಯಾಗಿರುವ ಮನುಕುಲಕ್ಕೆ ಆಧಾರವಾಗಿರುವ ಬದುಕಿದ್ದಾಗಲೂ ಸತ್ತ ಮೇಲೂ ನೆಲೆ ಕಲ್ಪಿಸುವ ಭೂಮಿ ತಾಯಿಯಲ್ಲದೆ ಮತ್ತೇನು?                    ನೀರನ್ನು ಗಂಗಾಜಲ ಅಂತ ಪೂಜಿಸ್ತೀವಿ. ಮನೆಗೆ ಬಂದವರಿಗೆ ಗಂಗೋದಕ ಕೊಟ್ಟು ಉಪಚರಿಸುತ್ತೇವೆ. ಮನೆಯಲ್ಲಿ ಕಲಷದಲ್ಲಿ ಗಂಗೆಯನ್ನು ಆವಾಹಿಸಿ ಪೂಜಿಸುತ್ತೇವೆ. ಹಿರಿಯರು ಸತ್ತಾಗ ದುಃಖವಾದರೂ ಅವರು ಗಂಗೋದಕ ಸ್ವೀಕರಿಸಿ ಪ್ರಾಣ ತೊರೆದರೆಂದರೆ ಸಮಾಧಾನವೂ ಆಗುತ್ತೆ. ಗಂಗೆಯನ್ನು ಸ್ವೀಕರಿಸೋದು ಅಥವಾ ಗಂಗೆಯನ್ನು ದಾಟೋದು ಅಂದರೆ ಜನನ ಮರಣಗಳ ಚಕ್ರ ದಾಟೋದು ಅಂತರ್ಥ.

                       ಮನೆಯಲ್ಲಿ ನೀರು ಕುಡಿಯುವಾಗ ಮಗೂ ಅದು ಗಂಗೆ,ತೀರ್ಥ ಎಂಜಲು ಮಾಡಬಾರದು ಅಂತ ತಾಯಿ ಮಗುವನ್ನು ಎಚ್ಚರಿಸುತ್ತಾಳೆ(ಇಂದು???). ಸ್ನಾನ ಮಾಡುವಾಗ, ಪೂಜೆ ಮಾಡುವಾಗ ಗಂಗೆ ಯಮುನೆಯರೇ ಮೊದಲಾದ ಸಪ್ತ ಜಾಹ್ನವಿಗಳನ್ನು ನಾವು ಆವಾಹನೆ ಮಾಡುತ್ತೇವೆ. ಜಗತ್ತಿನ ಎಲ್ಲಾ ನಾಗರೀಕತೆಗಳು ಬೆಳಕು ಕಂಡು ಬೆಳೆದದ್ದು ನದೀ ತಟಗಳಲ್ಲೇ. ಅತ್ಯಂತ ಪ್ರಾಚೀನ ಸಂಸ್ಕೃತಿ ನಾಗರೀಕತೆಯ ಜೋಗುಳ ಹಾಡಿದ್ದು ಸಿಂಧೂ-ಸರಸ್ವತೀಯರ ಮಡಿಲಲ್ಲೇ. ಅದರಿಂದಾಗಿಯೇ ಅದಕ್ಕೆ ಮಾತೃ ಸ್ಥಾನ. ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ ನಿರ್ಮಾಣವಾದದ್ದು ಸರಯೂ ನದೀ ತೀರದಲ್ಲಿ. ಮನುಕುಲದ ಮೊದಲ ವಿಶ್ವವಿದ್ಯಾಲಯ ನಿರ್ಮಾಣವಾದದ್ದೂ ಗಂಗೆಯ ತಟದಲ್ಲಿ. ಲೋಕ ಕಲ್ಯಾಣಕ್ಕಾಗಿ ಪ್ರಜಾಪತಿ ಬ್ರಹ್ಮ ಮಾಡಿದ ಮೊದಲ ಯಾಗ ನಡೆದದ್ದು ತ್ರಿವೇಣಿ ಸಂಗಮ ಪ್ರಯಾಗದಲ್ಲಿ.

                      ಮಗಧದ ರಾಜಧಾನಿ ಪಾಟಲೀಪುತ್ರ ಗಂಗೆಯ ತಟದಲ್ಲಿ ನಿರ್ಮಾಣವಾಯಿತು. ಚಂದ್ರವಂಶೀಯರ ರಾಜಧಾನಿಗಳಾದ ಹಸ್ತಿನಾವತಿ, ಇಂದ್ರಪ್ರಸ್ಥ ನಿರ್ಮಾಣವಾದದ್ದು ಗಂಗೆ ಯಮುನೆಯರ ತಟಗಳಲ್ಲೇ. ಶಕಕರ್ತರಾದ ವಿಕ್ರಮ, ಶಾಲಿವಾಹನರ ರಾಜಧಾನಿಗಳು ಕ್ಷಿಪ್ರ ಮತ್ತು ಗೋದೆಯರ ಆರೈಕೆ ಪಡೆದವು. ತುಂಗೆಯ ತಟದಲ್ಲಿ ವಿಜಯನಗರವಿದ್ದಿತು.ದಕ್ಷಿಣದ ಬಹುತೇಕ ರಾಜ ಮನೆತನಗಳಿಗೆ ಕಾವೇರಿಯ ಬಗ್ಗೆ ಅಪಾರವಾದ ಗೌರವವಿತ್ತು. ನೀರನ್ನು ತಾಯಿ ಅಂತ ಗೌರವಿಸಿದ್ದು ಕೃತಜ್ಞತೆಯ ಕಾರಣಕ್ಕಾಗಿ. ಶಾಲಾ, ಕಾಲೇಜುಗಳಲ್ಲಿ ನೀರು ಜಲಜನಕ ಆಮ್ಲಜನಕಗಳ ಮಿಶ್ರಣ ಅಂತ ಕಲಿತ ಹುಡುಗ ಮನೆಗೆ ಬಂದು ಅಮ್ಮಾ H2O ಕೊಡು ಅಂತ ಕೇಳಲ್ಲ. ನೀರನ್ನು ಗಂಗೆ ಅಂತ ಮಗುವಿಗೆ ಹೇಳಿಕೊಡಬೇಕಾದವಳು ತಾಯಿ. ಅದಕ್ಕೇ ಮೇಷ್ಟ್ರ H2O ತರಗತಿ ಕೋಣೆಗಷ್ಟೇ ಸೀಮಿತವಾಗುತ್ತೆ. ತಾಯಿ ಹೇಳಿಕೊಟ್ಟ ಪಾಠ ಕೊನೇತನಕ ಉಳಿಯುತ್ತೆ.                     "ಗಾವೋ ವಿಶ್ವಸ್ಯ ಮಾತರಃ" ಅಂದರು ಹಿರಿಯರು. ತಾಯ ಎದೆ ಹಾಲು ನಿಂತ ನಂತರ ಜೇವನ ಪೂರ್ತಿ ಹಾಲುಣಿಸೋ ಹಸುವನ್ನು ತಾಯಿ ಅನ್ನದೇ ಇರಲಿಕ್ಕಾಗುತ್ತದೆಯೇ? ಕೃಷಿ ಆಧಾರಿತ ಭಾರತದ ಅರ್ಥ ವ್ಯವಸ್ಥೆಯ ಪ್ರತೀಕ ಹಸು. ಹಸುಗಳಿಂದ ಭಾರತಕ್ಕೆ ಪ್ರತೀ ವರ್ಷ ೨ ಲಕ್ಷ ಕೋಟಿ ವರಮಾನ ಬರುತ್ತೆ. ೫ ಲಕ್ಷ ಗ್ಯಾಲನ್ ನಷ್ಟು ಹಾಲು ಸಿಗುತ್ತೆ. ಗೋಮೂತ್ರದಲ್ಲಿ ಔಷಧೀಯ ಗುಣ ಇದೆ. ಭಾರತಕ್ಕೆ ಅದರ ಪೇಟೆಂಟ್ ಸಿಕ್ಕಿದೆ. ಭೂಮಿಯ ಸಾರ ಹೆಚ್ಚಿಸಲು ಗೋಮಯ ಬೇಕು. ದೇಹಶುದ್ಧಿಗೆ ಪಂಚಗವ್ಯ ಸ್ವೀಕಾರ ಮಾಡುತ್ತೇವೆ. ಅಮೃತದಂತಹ ಹಾಲು, ಔಷಧಿ ತುಂಬಿದ ಗೋಮೂತ್ರ, ನೆಲಕ್ಕೆ ಶಕ್ತಿ ಕೊಡೋ ಗೋಮಯ, ಅಷ್ಟೇ ಅಲ್ಲ ಹಸುವಿನ ಉಸಿರಿನಿಂದ ಮನುಕುಲ ಉಳಿದಿದೆ! ಯಂತ್ರೋಪಕರಣಗಳು ಬಂದ ನಂತರವೂ ಗ್ರಾಮೀಣ ಭಾರತದ ನೂರಕ್ಕೆ ಎಪ್ಪತ್ತು ಶೇಕಡಾ ಸಾಗಾಣಿಕೆ ಎತ್ತಿನ ಗಾಡಿಗಳಿಂದ ಆಗುತ್ತೆ. ಇವುಗಳಿಂದ ಭಾರತಕ್ಕೆ ವರ್ಷಕ್ಕೆ ಒಂದು ಲಕ್ಷ ಲೀಟರ್ ಡೀಸೆಲ್ ಉಳಿತಾಯ ಆಗುತ್ತೆ. ಅಂದರೆ ವರ್ಷಕ್ಕೆ ೧೨೦೦೦ ಕೋಟಿ ರೂಪಾಯಿಗಳ ವಿದೇಶಿ ವಿನಿಮಯದ ಉಳಿತಾಯ. ಈ ಜೀವಿಗಳ ಮೇಲೆ ಸ್ವಲ್ಪನಾದರೂ ಕೃತಜ್ಞತೆ ಬೇಡ್ವಾ?ಮೈಸೂರಿನ ಸಾವಯುವ ಕೃಷಿಕ ಮಿತ್ರರೊಬ್ಬರು ತಮ್ಮ ಹೊಲದಲ್ಲಿ ಈ ರೀತಿ ಬರೆದು ಹಾಕಿದ್ದಾರೆ,

" ಎತ್ತು ಹೊಗೆ ಉಗುಳಲ್ಲ ಮತ್ತು ಟ್ರಾಕ್ಟರ್ ಸಗಣಿ ಹಾಕಲ್ಲ"

ಎಂಥಾ ಮಾತು. ಅದಕ್ಕೆ ನಾವು ಗೋವನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ.                            ೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಜನಸಂಖ್ಯೆ ೩೩ ಕೋಟಿ ಇದ್ದರೆ ಪಶುಗಳ ಸಂಖ್ಯೆ ೪೧ ಕೋಟಿ ಇತ್ತು. ಇವತ್ತು ಜನಸಂಖ್ಯೆ ೧೨೦ ಕೋಟಿಗೇರಿದೆ, ಪಶುಗಳ ಸಂಖ್ಯೆ ೧೧ ಕೋಟಿಗಿಳಿದಿದೆ! ಕಸಾಯಿ ಖಾನೆಗಳ ಸಂಖ್ಯೆ ೩೦೬ರಿಂದ ೩೬ಸಾವಿರಕ್ಕೇರಿದೆ!! ಕೇವಲ ದೆಹಲಿಯೊಂದರಲ್ಲಿಯೇ ೫೦ಸಾವಿರ ಕಟುಕರು ಪ್ರತಿನಿತ್ಯ ೧ ಲಕ್ಷ ಲೀಟರ್ ಹಸುವಿನ ರಕ್ತವನ್ನು ಗಟಾರದ ಮೂಲಕ ಯಮುನೆಗೆ ಹರಿಸುತ್ತಾರೆ! ಎಂತಹ ಮಾಲಿನ್ಯ!! ಎಂತಹ ಪೈಶಾಚಿಕ ಕೃತ್ಯ!!! ನಾವು ಈಗಲೂ ಕಣ್ಣು ತೆರೆಯದಿದ್ದರೆ, ಕಣ್ಣು ತೆರೆಯೋ ಭಾಗ್ಯದಿಂದ ವಂಚಿತರಾಗಬೇಕಾಗುತ್ತೆ.                        ಈ ನೆಲ, ಜಲ, ಪ್ರಕೃತಿ, ವೇದ, ಗೋವುಗಳು ತಾಯಿ ಅಂತ ನಮಗೆ ಕಲಿಸಿಕೊಡಬೇಕಾದವಳು ನಮ್ಮ ತಾಯಿ. ತಾಯಿಯ ನಡವಳಿಕೆ ನೋಡಿ ಮಗು ಕಲಿಯುತ್ತೆ. ತಾಯಿ ನೆಲ, ಜಲ, ಸೂರ್ಯ, ಗೋವು, ತುಳಸಿ, ವಟವೃಕ್ಷಗಳಿಗೆ ನಮಸ್ಕರಿಸುವಾಗ ಜತೆಗಿದ್ದು ಅನುಕರಿಸುವ ಮಗುವಿಗೆ ಕ್ರಮೇಣ ತಾನಿವುಗಳಿಗೆ ಋಣಿಯಾಗಿರಬೇಕೆಂಬ ಭಾವ ಬಲಿಯುತ್ತೆ. ಹಾಗಾದರೆ ಇಂದಿನ ತಾಯಂದಿರು ತಮ್ಮ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆಂದಾಯಿತಲ್ಲವೇ?                         ಕಬಡ್ಡಿ ಆಟಕ್ಕೆ ಮುಂಚೆ ಆಟಗಾರನೊಬ್ಬ ಮಧ್ಯ ರೇಖೆಯಲ್ಲಿನ ಮಣ್ಣನ್ನು ಹಣೆಗೊತ್ತಿಕೊಳ್ಳೋದು ಕಬಡ್ಡಿ ಆಟದ ನಿಯಮಗಳಲ್ಲೇನಾದರೂ ಬರೆದಿದೆಯಾ? ಕಟ್ಟಡ ಕಟ್ಟೋಕೆ ಮುಂಚೆ ಭೂಮಿ ಪೂಜೆ ಮಾಡ್ತೇವೆ. ನೇಗಿಲು ನೆಲಕ್ಕೆ ತಾಗಿಸುವ ಮುಂಚೆ ಅಮ್ಮಾ ಬಂಗಾರದ ಬೆಳೆ ಕೊಡು ಅಂತ ಪ್ರಾರ್ಥನೆ ಮಾಡುತ್ತೇವೆ. ಇವೆಲ್ಲಾ ತಾಯಿ ಕಲಿಸಿದ ಪಾಠ. ಇಂತಹ ಶಿಕ್ಷಣ ಸಿಕ್ಕಿದ ಮಗುವಿನ ಮನಸ್ಸಿನಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನ ಮೂಡುತ್ತೆ, ರಾಷ್ಟ್ರಕ್ಕೆ ಅಪಮಾನ ಆದರೆ ಮನಸ್ಸು ಸಿಡಿದೇಳುತ್ತೆ. ಇದನ್ನೇ ಶಾಲೆಗಳಲ್ಲಿ ಕಲಿಸಹೋದರೆ ಕೇಸರೀಕರಣ ಅಂತಾರಲ್ಲ! ತಾಯಿಯನ್ನು ತಾಯಿ ಅಂತ ಗೌರವಿಸುವುದನ್ನು ನಿಮ್ಮ ಮುಂದಿನ ಪೀಳಿಗೆಗೆ ಹೇಳಿಕೊಡೋದು ನಿಮಗೆ ಬೇಡವೆ? ನಮ್ಮ ಇತಿಹಾಸದ ಸಾರ್ವಭೌಮತ್ವವನ್ನು ಹೇಳಿಕೊಡೋದನ್ನು, ನಮ್ಮ ರಾಷ್ಟ್ರಪುರುಷ ಸ್ವಾತಂತ್ರ್ಯ ವೀರರ ಹೆಸರುಗಳನ್ನು ಪಠ್ಯ ಪುಸ್ತಕಗಳಿಂದ ತೆಗೆಯಲಾಗಿದೆ. ನಮ್ಮ ಮಕ್ಕಳು ಭೃಷ್ಟ, ಲಂಚಕೋರ. ಮತಾಂಧ, ದೇಶದ್ರೋಹಿ ರಾಜಕಾರಣಿಗಳ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಓದಬೇಕಾದ ದೌರ್ಭಾಗ್ಯ ಬಂದಿದೆ!