ಪುಟಗಳು

ಶುಕ್ರವಾರ, ನವೆಂಬರ್ 16, 2012

ಭಾರತ ದರ್ಶನ-೧೯



                       ಹಿಮಾಲಯದಲ್ಲಿ ಸುಮಾರು ಹತ್ತು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿಗಳಿವೆ. ಯಮುನೋತ್ರಿಯನ್ನು ನೋಡಿದಾಗ ಇಳಿದು ಸ್ನಾನ ಮಾಡಬೇಕು ಅನ್ನೋ ಬಯಕೆ ಮೂಡೋದು ಸಹಜ. ಆದರೆ ಹಾಗೇನಾದರೂ ಮಾಡಿದರೆ ಅದೇ ಕೊನೆ ಸ್ನಾನ ಆಗಬಹುದು! ಅಷ್ಟು ಕೊರೆಯುವ ಚಳಿ! ಆದರೆ ಭಗವಂತನ ಲೀಲಾ ವಿನೋದ ನೋಡಿ. ಒಂದು ಕಡೆ ನೀರು ಹೆಪ್ಪುಗಟ್ಟಿದೆ. ಅಲ್ಲೇ ಪಕ್ಕದ ಕುಂಡದಲ್ಲಿ ನೀರು ಕುದಿಯುತ್ತಿದೆ! ಎಂತಹ ಕುದಿತ...ಅಲ್ಲಿ ಹೋದ ಯಾತ್ರಿಗಳು ಅಕ್ಕಿಯನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ನೀರೊಳಗೆ ಇಡ್ತಾರೆ, ಐದು ನಿಮಿಷದಲ್ಲಿ ಬೆಂದು ಅನ್ನವಾಗಿರುತ್ತೆ! ಅಲ್ಲಿ ಸ್ನಾನ ಮಾಡಿ ಕೇದಾರ ಮತ್ತು ಬದರಿನಾಥನಿಗೆ ಅಭಿಷೇಕ ಮಾಡಿ ಅಲ್ಲಿನ ತೀರ್ಥವನ್ನು ಬಂಧುಬಾಂಧವರಿಗೆ ಹಂಚೋದು ನಮ್ಮ ವಿಶೇಷ ಪರಂಪರೆ.

                          ಬದರಿ ರಾಷ್ಟ್ರದ ಶೀರ್ಷಸ್ಥಾನ. ನರ ನಾರಾಯಣ ಪರ್ವತಗಳ ನಡುವೆ ಬದರೀನಾಥನ ಭವ್ಯ ಮಂದಿರ. ಭಗವಾನ್ ವೇದ ವ್ಯಾಸರ ತಪೋಭೂಮಿ. ವ್ಯಾಸ ಗುಹೆಯಿರುವ ಜಾಗ. ಸತ್ಯಯುಗದಲ್ಲಿ ನಾರಾಯಣನಿಂದ, ತ್ರೇತೆಯಲ್ಲಿ ದತ್ತಾತ್ರೇಯನಿಂದ, ದ್ವಾಪರದಲ್ಲಿ ವ್ಯಾಸರಿಂದ, ಮತ್ತು ಈ ಕಲಿಯುಗದಲ್ಲಿ ಶಂಕರ ಭಗವತ್ಪಾದರಿಂದ ಬದರಿಯ ಪ್ರತಿಷ್ಠೆ ಹೆಚ್ಚಿತು. ಇಲ್ಲಿನ ವಿಗ್ರಹದ ಪ್ರಾಣ ಪ್ರತಿಷ್ಠೆ ಮಾಡಿದ್ದು ಶಂಕರ ಭಗವತ್ಪಾದರು.

                           ಬದರಿಯಿಂದ ಉತ್ತರದಲ್ಲಿ ಅಲಕೆಯ ದಡದಲ್ಲಿ ಬ್ರಹ್ಮಕಪಾಲವಿದೆ. ಹೃಷಿಕೇಶ ಶೈವ ವೈಷ್ಣವರಿಬ್ಬರಿಗೂ ಶೃದ್ಧಾಕೇಂದ್ರ. ಇಲ್ಲಿಯ ವಿಶೇಷ ಆಚಾರ್ಯ ಶಂಕರರಿಂದ ಸ್ಥಾಪಿತವಾದ ಭರತ ಮಂದಿರ. ಭರತನಿಗಾಗಿ ಮಂದಿರ ಇರೋದು ಹೃಷಿಕೇಶ ಮತ್ತು ಕೇರಳದಲ್ಲಿ ಮಾತ್ರ. ರಾಮಾಯಣದಲ್ಲಿ ದೇವತ್ವ ಪ್ರಾಪ್ತವಾದದ್ದು ರಾಮ ಮತ್ತು ಹನುಮನಿಗೆ ಮಾತ್ರ. ಅವರಿಗಾಗಿ ದೇವಾಲಯಗಳೂ ಇವೆ.ಸೀತೆ, ಲಕ್ಷ್ಮಣರೂ ಇವರೊಂದಿಗೇ ಪೂಜಿಸಲ್ಪಡುತ್ತಾರೆ. ಆದರೆ ಭರತ!
ಅವನಿಗಾಗಿ ಶಂಕರರು ಮಂದಿರವನ್ನೇಕೆ ನಿರ್ಮಿಸಿದರು? ಯಾಕೆಂದರೆ ಭರತ ಕೇವಲ ವ್ಯಕ್ತಿಯಲ್ಲ. ಅದೊಂದು ಮೌಲ್ಯ! ಅದೊಂದು ನೀತಿ! ತತ್ವಜ್ಞಾನ! ತಾಯಿಯ ಪಿತೂರಿಯಿಂದ ಸಿಕ್ಕ ಸಾಮ್ರಾಜ್ಯದ ಅಧಿಕಾರವನ್ನು ತ್ಯಜಿಸಿ ಅಣ್ಣನಂತೆ ಜಟಾವಲ್ಕಲಧಾರಿಯಾಗಿ ೧೪ ವರ್ಷ ನಂದಿಗ್ರಾಮದಲ್ಲಿ ದರ್ಭೆಯ ಹಾಸಿಗೆಯ ಮೇಲೆ ಮಲಗಿ ಅಣ್ಣನ ಪಾದುಕೆಗಳನ್ನು ಸಿಂಹಾಸನದಲ್ಲಿರಿಸಿ ರಾಜ್ಯಭಾರ ಮಾಡುತ್ತಾನೆ. ಇಂತಹ ತಮ್ಮನನ್ನು ಪಡೆಯಲು ದೇವರೇ ಹುಟ್ಟಿ ಬರಬೇಕಾಯಿತು! ಹೃಷಿಕೇಶ ಸ್ವಾಮಿ ಶಿವಾನಂದರ ಸಾಧನಾ ಕೇಂದ್ರ.

                            ಹರಿದ್ವಾರ ಹಿಮಾಲಯದ ಶ್ರೇಷ್ಠ ಕ್ಷೇತ್ರಗಳಲ್ಲೊಂದು. ಇದನ್ನು ಮಾಯಾಪುರಿ, ಗಂಗಾದ್ವಾರ ಮತ್ತು ಕಂಕಲ ಮೊದಲಾದ ಹೆಸರುಗಳಿಂದ ಕರೆದಿದ್ದಾರೆ. ಗಂಗೆ ತನ್ನ ಪ್ರವಹಿಸುವ ಹಾದಿಯಲ್ಲಿ ಮೊತ್ತ ಮೊದಲು ಬಯಲು ಪ್ರದೇಶ ಕಾಣೋದು ಇಲ್ಲೇ. ಹಾಗಾಗಿಯೇ ಇಡೀ ಮೈದಾನವನ್ನು ಬಳಸಿ ಬಾಚಿ ತಬ್ಬಿ ಹರಿದಿದ್ದಾಳೆ. ಒಂದು ದಡದಲ್ಲಿ ನಿಂತರೆ ಇನ್ನೊಂದು ದಡ ಕಾಣ್ಸೊಲ್ಲ. ಹೀಗಾಗಿಯೆ ಇದು ಗಂಗಾದ್ವಾರ. ಗಂಗೆ ಶಂತನುವನ್ನು ಮೋಹಿಸಿ ದೇವವ್ರತ(ಭೀಷ್ಮ)ನಿಗೆ ಜನ್ಮವಿತ್ತದ್ದು ಇಲ್ಲೇ. ಭರದ್ವಾಜರು ಘೃತಾಚಿ ಎಂಬ ಅಪ್ಸರೆಯನ್ನು ಮೋಹಿಸಿ ದ್ರೋಣಾಚಾರ್ಯರು ಜನಿಸಿದ್ದು ಇಲ್ಲಿಯೇ. ದಕ್ಷಯಜ್ಞ ನಡೆದ ಕ್ಷೇತ್ರ ಇದು. ರಾಮಲಕ್ಷ್ಮಣರ ಪಾದಸ್ಪರ್ಶ ಆದ ಭೂಮಿ. ಭರ್ತೃಹರಿ ಮುಕ್ತಿ ಕಂಡ ತಾಣ ಇದು. ಹರಿದ್ವಾರ ಹರದ್ವಾರವೆಂದೂ ಕರೆಯಲ್ಪಡುತ್ತದೆ. ಒಟ್ಟಾರೆ ಹಿಮಾಲಯದ ದ್ವಾರ ಇದು. ಮುಂದೆ ಹೋದರೆ ಕೇದಾರ, ಶಿವಕ್ಷೇತ್ರ ಮತ್ತು ಬದರಿ, ಹರಿಕ್ಷೇತ್ರ!
ಇದನ್ನು ಬಿಟ್ಟು ಶೈವ ವೈಷ್ಣವರು ಸಂಕುಚಿತ ಮನೋಭಾವದಿಂದ ವರ್ತಿಸಿದರೆ ರಾಷ್ಟ್ರದ ಆತ್ಮ ದುರ್ಬಲವಾಗುತ್ತೆ.

 (ಮುಂದಿನ ಭಾಗ ಶೈವ ವೈಷ್ಣವ ಸಮನ್ವಯ ಶ್ಲೋಕ ಸಹಿತ, ನಿರೀಕ್ಷಿಸಿ...)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ