ಪುಟಗಳು

ಮಂಗಳವಾರ, ಡಿಸೆಂಬರ್ 5, 2017

ಬರಿಯ ಕಲ್ಲು ಗುಡಿಯಲ್ಲ; ಅದು ದೇಶದ ಅಸ್ಮಿತೆಯ ಪ್ರತೀಕ!

ಬರಿಯ ಕಲ್ಲು ಗುಡಿಯಲ್ಲ; ಅದು ದೇಶದ ಅಸ್ಮಿತೆಯ ಪ್ರತೀಕ!


                  1926ರಲ್ಲಿ ವಾರ್ಸಾದಲ್ಲಿ ಅಲೆಕ್ಸಾಂಡರ್ ನೆವ್ಸ್ಕಿ ಕೆಥೆಡ್ರಲನ್ನು ಕೆಡವಿ ಹಾಕಲಾಯಿತು. ಹಲವು ಚರ್ಚುಗಳೂ ನೆಲಸಮವಾದವು. ಕಾರಣವಿಷ್ಟೇ ಅವನ್ನು ರಷ್ಯಾದ ದೊರೆಗಳು ನಿರ್ಮಿಸಿದ್ದರು ಎನ್ನುವುದು. ಪೋಲಂಡ್ ಕೂಡಾ ಕ್ರೈಸ್ತರೇ ಬಹುಸಂಖ್ಯಾತರಾಗಿರುವ ದೇಶ. ಆದರೆ ಈ ಕೆಥೆಡ್ರಿಯಲ್ ರಷ್ಯನ್ ಚಕ್ರಾಧಿಪತ್ಯದ, ಪೋಲಂಡಿನ ರಾಷ್ಟ್ರೀಯತೆಯನ್ನು, ಸ್ವಾಭಿಮಾನವನ್ನು ಅಣಕಿಸುವ ಸಂಕೇತವೆಂದೇ ಪೋಲಂಡಿಗರ ಅಭಿಪ್ರಾಯವಾಗಿತ್ತು. ಹಾಗಾಗಿಯೇ ಗುಲಾಮೀತನದ ಸಂಕೇತವಾಗಿದ್ದ ಆ ಕಟ್ಟಡ ನಿರ್ಮಾಣಗೊಂಡ ಹದಿನೈದೇ ವರ್ಷಗಳಲ್ಲಿ ನೆಲಸಮಗೊಂಡಿತು. ದೂರ ದೇಶಗಳೇಕೆ, ನಮ್ಮ ದೇಶದಲ್ಲೇ ಸ್ವಾತಂತ್ರ್ಯ ಸಿಕ್ಕಿದ ಹೊಸತರಲ್ಲೇ ಇಂಡಿಯಾ ಗೇಟ್ ಬಳಿ ಇದ್ದ ಕಿಂಗ್ ಜಾರ್ಜನ ಪ್ರತಿಮೆಯನ್ನು ತೆರವುಗೊಳಿಸಲಾಯಿತು. ಚಾಂದನೀ ಚೌಕದಿಂದ ವಿಕ್ಟೋರಿಯಾ ಪ್ರತಿಮೆಯನ್ನು ಕಿತ್ತು ಹಾಕಲಾಯಿತು. ಗುಲಾಮೀತನವನ್ನು, ಅದರ ಸಂಕೇತವನ್ನು ಯಾವ ದೇಶವೂ, ಯಾವ ಜೀವಿಯೂ ಸಹಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ನಮ್ಮಲ್ಲೇ ಇರುವ ನಿದರ್ಶನಗಳಿವು. ಅಂತಹುದರಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಇದೇ ದಿನ ಗುಲಾಮೀತನದ ಸಂಕೇತವೊಂದು ನೆಲಕ್ಕುರುಳಿದುದು ಮತಾಂಧತೆಯ ಪ್ರತೀಕವಾಗುತ್ತದೆಯೆಂದಾದರೆ ಆ ಸೆಕ್ಯುಲರ್ ಚಿಂತನೆಯಲ್ಲಿ ದೋಷವಿದೆಯೆಂದೇ ಅರ್ಥ!

ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿಪ್ರಿಯರ ನೆಲವದಾಗಬೇಕು ಎನ್ನುವ ಭಾವನೆಯಿಂದ ಬಂದ ಹೆಸರು ಅಯೋಧ್ಯೆ. ಅಂತಹ ಪಾವನ ನೆಲ  ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಇತಿಹಾಸಕಾರ ಬಾರಾಬಂಕಿ ತನ್ನ "ಗೆಜೆಟಿಯರ್"ನಲ್ಲಿ ಬಾಬರ್ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ ಎಂದು ಬರೆದಿದ್ದಾನೆ.

ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ’ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ.

ಗುಲಾಮಗಿರಿಯ ಸಂಕೇತವನ್ನು ಕಿತ್ತೊಗೆದು ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದದ್ದು ಒಂದೆರಡಲ್ಲ; ಬರೋಬ್ಬರಿ 76 ಯುದ್ಧಗಳು! ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ನಡೆದವು. ಇಷ್ಟು ಯುದ್ಧಗಳು ನಡೆದದ್ದು ಹಿಂದೂಗಳಿಗೆ ಬೇರೆ ಕೆಲಸವಿರಲಿಲ್ಲವೆಂದಲ್ಲ. ಭಾರತೀಯರಿಗೆ ಧರ್ಮವೇ ಉಸಿರು. ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಅವರು ಜೀವದ ಹಂಗು ತೊರೆದು ಹೋರಾಡಿದುದರಲ್ಲಿ ಆಶ್ಚರ್ಯವೇನಿದೆ? 1885ರಲ್ಲಿ ಮಸೀದಿಯ ಹೊರ ಆವರಣದಲ್ಲಿ ರಾಮನ ಹೆಸರಿನಲ್ಲಿ ಒಂದು ಸಣ್ಣ ಕಟ್ಟೆಯೊಂದನ್ನು ಕಟ್ಟಿಕೊಂಡ ಹಿಂದೂಗಳು ಅಲ್ಲಿ ಪೂಜೆಯನ್ನು ಮಾಡಲಾರಂಭಿಸಿದರು. ಮಹಂತ ರಘುವರ ದಾಸರು ಅಲ್ಲಿ ದೇವಸ್ಥಾನ ಕಟ್ಟುವ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟಾಗ ಅವರಿಗೆ ಅನುಮತಿ ದೊರಕಲಿಲ್ಲ. 1934ರಲ್ಲಿ ಅಯೋಧ್ಯೆಯಲ್ಲಾದ ಹೋರಾಟದಲ್ಲಿ ಹಿಂದೂಗಳು ಬಾಬರಿ ಮಸೀದಿಯಿದ್ದ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಬ್ರಿಟೀಷ್ ಸರ್ಕಾರ ಅದನ್ನು ಬಲವಂತವಾಗಿ ಹಿಂಪಡೆದುಕೊಂಡು ಗುಮ್ಮಟಗಳ ದುರಸ್ತಿಗಾಗಿ ಹಿಂದೂಗಳಿಂದಲೇ ದಂಡವನ್ನೂ ಕಟ್ಟಿಸಿಕೊಂಡಿತು. ಈ ಪಾವನ ಕ್ಷೇತ್ರದಲ್ಲಿ 1940ರಲ್ಲಿ ಸಹಸ್ರಾರು ಭಕ್ತರು ಶೃದ್ಧೆಯಿಂದ ರಾಮಚರಿತ ಮಾನಸ ಪಠಿಸಲು ಆರಂಭಿಸಿದರು. 22 ಡಿಸೆಂಬರ್ 1949ರಂದು ಬ್ರಾಹ್ಮೀ ಮಹೂರ್ತದಲ್ಲಿ ಆಶ್ಚರ್ಯಕರವೆಂಬಂತೆ ದಿವ್ಯಪ್ರಭೆಯೊಂದಿಗೆ ಶ್ರೀರಾಮ, ಲಕ್ಷ್ಮಣ ಮೂರ್ತಿಗಳು ಅಲ್ಲಿ ಕಾಣಿಸಿಕೊಂಡವು. ಆದರೆ ನ್ಯಾಯಾಲಯದ ಆದೇಶದಂತೆ 1986ರವರೆಗೆ ರಾಮ ತನ್ನ ಜನ್ಮಭೂಮಿಯಲ್ಲೇ ಬಂಧನದಲ್ಲಿರಬೇಕಾಯಿತು. ಅಂದರೆ ರಾಮನ ಪ್ರತಿಮೆಗೆ ಬೀಗ ಜಡಿಯಲಾಗಿತ್ತು. 1980ರಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ "ಧರ್ಮಸ್ಥಾನ ಮುಕ್ತಿಯಜ್ಞ" ಸಮಿತಿ ರಚಿತವಾಗಿ 1986ರಲ್ಲಿ ನ್ಯಾಯಾಲಯದ ಆದೇಶದಂತೆ ಮಂದಿರಕ್ಕೆ ಹಾಕಿದ್ದ ಬೀಗ ತೆರೆಯಲ್ಪಟ್ಟಿತು. 1989ರ ನವೆಂಬರ್ 10ರಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಲಾನ್ಯಾಸ ಹರಿಜನ ಸಮುದಾಯಕ್ಕೆ ಸೇರಿದ ಬಿಹಾರದ ಶ್ರೀ ಕಾಮೇಶ್ವರ ಚೌಪಾಲರಿಂದ ನೆರವೇರಿತು. ಶ್ರೀರಾಮ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಎನ್ನುವುದಕ್ಕೆ ನಿದರ್ಶನವಿದು. ಅನಂತರ ಶಿಲಾಪೂಜನಾ, ರಾಮಪಾದುಕಾ, ಸಂತಯಾತ್ರೆಗಳು ಹಾಗೂ ಕರಸೇವೆಗಳು ನಡೆದವು. 1990ರ ಅಕ್ಟೋಬರ್ 30ರಂದು ರಾಮಜನ್ಮಭೂಮಿಯಲ್ಲಿ ಶಾಂತಿಯುತ ಕರಸೇವೆಯನ್ನು ನಡೆಸುತ್ತಿದ್ದ ಸ್ವಯಂಸೇವಕರ ಮೇಲೆ  ಗುಂಡುಹಾರಿಸುವ ಆಜ್ಞೆಯನ್ನು ಅರೆಸೇನಾಪಡೆಗಳಿಗೆ ಮಾಡಿದ ಮುಲಾಯಮ್ ಸಿಂಗ್ ಯಾದವ್ ಸತ್ತವರ ಲೆಕ್ಕ ಸಿಗಬಾರದೆಂಬ ದುರುದ್ದೇಶದಿಂದ ಹೆಣಗಳಿಗೆ ಉಸುಕಿನ ಚೀಲಗಳನ್ನು ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಕರಸೇವಕರು ಕಲಂಕಿತ ಕಟ್ಟಡವನ್ನು ನೆಲಸಮ ಮಾಡಿದರು. ನಾಲ್ಕೂವರೆ ಶತಮಾನಗಳ ಅಪಮಾನದ ಪರಿಮಾರ್ಜನೆಯಾಯಿತು.

ಭಾರತೀಯ ರಕ್ತವಲ್ಲದವನ ಮಸೀದಿಯ ನೆಲಸಮಾಧಿಯಾಗಿದೆ. ಆದರೆ ಧರ್ಮ-ಸಂಸ್ಕೃತಿಯ ರಕ್ಷಣೆಗೆ ಮಾಧ್ಯಮವೂ, ವಾಹಕವೂ ಆದ ನಮ್ಮ ಅಸ್ಮಿತೆಯ ಪ್ರತೀಕದ ಮರುಪ್ರತಿಷ್ಠೆಯಾಗದೇ ಪಡೆದ ಸ್ವಾತಂತ್ರ್ಯಕ್ಕೆ ಏನು ಅರ್ಥವಿದೆ? ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ ಅವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು. ಅಂತಹ ಅಸ್ಮಿತೆಯ ಪ್ರತೀಕವನ್ನು, ಮಾನವೇಂದ್ರನಾದ ಮನುವಿನಿಂದ ನಿರ್ಮಾಣವಾದ ನಗರದಲ್ಲಿ ಆದರ್ಶಮಾನವನ ಪುತ್ಥಳಿಯನ್ನು ಮತ್ತೆ ಸ್ಥಾಪಿಸಲು ಯಾವ ದೊಣ್ಣೆನಾಯಕನ ಅಪ್ಪಣೆ ಬೇಕು?

ಬುಧವಾರ, ನವೆಂಬರ್ 22, 2017

ಮೌನ! ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!

ಮೌನ! ಜಗವ ಬೆಳಗುವ ಶಕ್ತಿ! 

ಸದಾಶಿವನಾಗಲು ಬೇಕಾದ ಯುಕ್ತಿ!


                  ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು  ಮೇರೆ ಮೀರಿದ ಅಬ್ಬರ. ಅವಳ ಅಬ್ಬರವಿಳಿದಾಗಲೂ ಅದೇ ಸ್ಥಿತಿಯಲ್ಲಿದ್ದ ಆ ಧ್ಯಾನಿ ಕೆಲ ಸಮಯದ ಬಳಿಕ ಅಲ್ಲಿಂದ ಏನೂ ಆಗಲೇ ಇಲ್ಲವೆಂಬಂತೆ ಎದ್ದು ಹೊರಟ. ಕೆಲ ಜನ ಅವನನ್ನು ಮರುಳ ಎಂದರು; ಮರಳು ಮೆತ್ತಿಕೊಂಡಿತ್ತಲ್ಲವೇ! ಅವರು ಈ 'ಸಂಸಾರ'ದಲ್ಲಿ ಮಾತ್ರ ಆಸಕ್ತಿಯುಳ್ಳವರು. ಹಲವರು ತಮಗೆ ಸಂಬಂಧವೇ ಇಲ್ಲದವರಂತೆ ನಡೆದುಕೊಂಡರು. ಅವರು ತಮ್ಮ ಸಂಸಾರದಲ್ಲೇ ಮುಳುಗೇಳುತ್ತಿರುವವರು! ಕೆಲವರಿಗಷ್ಟೇ ಅವ ಕುಳಿತ ಸ್ಥಳದಿಂದ ಕೇಳಿ ಬರುತ್ತಿದ್ದ "ಮಾನಸ ಸಂಚರರೇ" ಮರಳಿ ಮರಳಿ ಅವರ ಕರಣಗಳಲ್ಲಿ ಅನುರಣಿಸುತ್ತಿತ್ತು!

                  ಸದಾಶಿವ ಬ್ರಹ್ಮೇಂದ್ರ. ಹದಿನೇಳನೇ - ಹದಿನೆಂಟನೆಯ ಶತಮಾನದಲ್ಲಿ ಆಗಿ ಹೋದ ಅವಧೂತ. ತೆಲುಗು ನಿಯೋಗಿ ಮೂಲದ ಮೋಕ್ಷಯಿಂಟಿ ಸೋಮಸುಂದರ ಅವಧಾನಿ ಹಾಗೂ ಪಾರ್ವತಿ ದಂಪತಿಗಳ ಕುಡಿ. ಸದಾಶಿವ ಬ್ರಹ್ಮೇಂದ್ರರ ಮೊದಲ ಹೆಸರು ಶಿವರಾಮಕೃಷ್ಣನೆಂದು. ವೇದ ವಿದ್ವಾಂಸ ತಂದೆಯೇ ಮೊದಲ ಗುರು. ಮುಂದಿನ ಓದಿಗೆಂದು ತೆರಳಿದ್ದು ಶಾಹಜಿಪುರವೆನಿಸಿಕೊಂಡಿದ್ದ ತಿರುವಿಶೈನಲ್ಲೂರಿಗೆ. ಅಲ್ಲಿ ಗುರು ರಾಮಭದ್ರ ದೀಕ್ಷಿತರಲ್ಲಿ ಶಾಸ್ತ್ರ ಶಿಕ್ಷಣವೂ ಮುಗಿಯಿತು. ತಿರುವಿಶೈನಲ್ಲೂರಿನಲ್ಲಿ ಅವರಿಗೆ ಮರುದಾನಲ್ಲೂರು ಸದ್ಗುರು ಸ್ವಾಮಿಗಳು, ಬೋಧೇಂದ್ರ ಸರಸ್ವತಿಗಳು ಹಾಗೂ ಶ್ರೀಧರ ವೆಂಕಟೇಶ ಅಯ್ಯವಾಳರೆಂಬ ಸಂಕೀರ್ತನ ಸಂಪ್ರದಾಯದ ತ್ರಿಮೂರ್ತಿಗಳ ಸಂಪರ್ಕ ಒದಗಿ ಬಂತು.

              ಶಿಕ್ಷಣ ಮುಗಿಸಿ ಮನೆಗೆ ಬಂದ ಹದಿನೇಳು ವರ್ಷದ ಮಗನ ವೈರಾಗ್ಯದ ಮನಸ್ಥಿತಿಯನ್ನು ಕಂಡು ಹೆತ್ತವರು ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದರು. ಮದುವೆಯ ನಂತರವೂ ಅವರ ವೈರಾಗ್ಯ ತೊಲಗಲಿಲ್ಲ. ಪ್ರಸ್ಥದ ದಿನ ಅವರ ಮಾವನ ಮನೆಯಲ್ಲಿ ವಿಪರೀತ ಜನಜಂಗುಳಿ ಸೇರಿತ್ತು. ಸದಾಶಿವರಿಗೋ ವಿಪರೀತ ಹಸಿವು. ತಮ್ಮ ಅತ್ತೆಯ ಬಳಿ ತಮಗೇನಾದರೂ ತಿನ್ನಲು ಕೊಡುವಂತೆ ಯಾಚಿಸಿದರು. ಆಗ ಅವರ ಅತ್ತೆ "ಇನ್ನೇನು ಕೆಲವೇ ಕ್ಷಣ, ಅಷ್ಟರವರೆಗೆ ತಾಳಿಕೋ. ಒಳಗೆ ಬರಬೇಡ; ಅಲ್ಲೇ ನಿಲ್ಲು" ಎಂದಾಗ ಬ್ರಹ್ಮೇಂದ್ರರ ಮಸ್ತಿಷ್ಕದಲ್ಲಿ ಮಿಂಚೊಂದು ಸುಳಿದಂತಾಯ್ತು. ಅತ್ತೆಯ ಆ ಮಾತುಗಳೇ "ಗೃಹಸ್ಥಾಶ್ರಮದೊಳಗೆ ಬರಬೇಡ; ದೂರವೇ ನಿಲ್ಲು" ಎಂದಂತಾಗಿ ಸದಾಶಿವರು ಬಿಟ್ಟ ಬಾಣದಂತೆ ಅಲ್ಲಿಂದ ಎದ್ದೋಡಿದರು. ಅವರನ್ನು ಹಿಡಿಯಲು ಸಂಬಂಧಿಕರಿಗೆ ಸಾಧ್ಯವಾಗಲಿಲ್ಲ. ಅನಂತ ಜ್ಞಾನದ ಹುಡುಕಾಟಕ್ಕೆ ಅನಂತ ವೇಗದಲ್ಲಿ ಓಡುವವ ಕೈಗೆ ಸಿಗುವುದಾದರೂ ಹೇಗೆ? ಇದು ಅವರ ಜೀವನದ ಮಹತ್ವದ ತಿರುವು.

                     ನೇರವಾಗಿ ತಿರುವಿಶೈನಲ್ಲೂರಿಗೆ ಬಂದ ಶಿವರಾಮಕೃಷ್ಣ ಉಪನಿಷತ್ ಬ್ರಹ್ಮ ಮಠದ ಶ್ರೀ ಪರಮ ಶಿವೇಂದ್ರರೆನ್ನುವ ಪಂಡಿತ ಯತಿಗಳ ಬಳಿ ಸಂನ್ಯಾಸದೀಕ್ಷೆಯನ್ನು ಪಡೆದು ಸದಾಶಿವ ಬ್ರಹ್ಮೇಂದ್ರರಾದರು. ಯೋಗಿಯಾಗಿದ್ದ ಪರಮಶಿವೇಂದ್ರ ಸರಸ್ವತಿಗಳು "ದಹರವಿದ್ಯಾಪ್ರಕಾಶಿಕೆ" ಎನ್ನುವ ಸಂಸ್ಕೃತ ಪ್ರಬಂಧವನ್ನು ಬರೆದವರು. ಸದಾಶಿವ ಬ್ರಹ್ಮೇಂದ್ರರು ತಮ್ಮ ಹಲವು ಕೃತಿಗಳಲ್ಲಿ ಪರಮಶಿವೇಂದ್ರರು ತಮ್ಮ ಗುರುಗಳೆಂದು ಸ್ಪಷ್ಟಪಡಿಸಿದ್ದಾರೆ. ಗುರುಗಳನ್ನು ಸ್ತುತಿಸಿ "ನವಮಣಿಮಾಲೆ", ಗುರುರತ್ನಮಾಲಿಕೆಗಳೆಂಬ ಕೃತಿಗಳನ್ನು ರಚಿಸಿದ್ದಾರವರು. ಸದಾಶಿವ ಬ್ರಹ್ಮೇಂದ್ರರು ಅತ್ಯುತ್ತಮ ತರ್ಕಪಟುವಾಗಿದ್ದವರು. ವಾದ ವಿವಾದದಲ್ಲಿ ಎಂದಿಗೂ ವಾಚಾಳಿಯಾಗಿದ್ದ ಅವರಿಗೇ ಗೆಲುವು. ಸೋತವರಿಂದ ಗುರುಗಳ ಬಳಿ ಇವರ ಮೇಲೆ ಸದಾ ದೂರು. ಇದು ನಿರತ ನಡೆಯುತ್ತಿರಲು ಒಂದು ದಿನ ಬೇಸರಗೊಂಡ ಗುರುಗಳು "ಸದಾಶಿವ, ಸುಮ್ಮನಿರಲು ಎಂದು ಕಲಿತುಕೊಳ್ಳುವೆ?" ಎಂದು ಕೇಳಿದರು. ತಕ್ಷಣ "ಇಂದಿನಿಂದ ಗುರುಗಳೆ!" ಎಂದವರು ಅಂದಿನಿಂದ ಮತ್ತೆ ಮಾತಾಡಲಿಲ್ಲ. ಈ ಸಮಯದಲ್ಲೇ ಸಂಸ್ಕೃತದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದರು. ಬ್ರಹ್ಮಸೂತ್ರವೃತ್ತಿ, ಉಪನಿಷತ್ತುಗಳ ಮೇಲೆ "ಕೈವಲ್ಯಾಮೃತಬಿಂದು" ಎಂಬ ಗ್ರಂಥ, ಸಿದ್ಧಾಂತಕಲ್ಪವಲ್ಲಿ (ಅಪ್ಪಯ್ಯ ದೀಕ್ಷಿತರ ಕೃತಿ ಸಿದ್ಧಾಂತ ಲೇಶ ಸಂಗ್ರಹದ ಮೇಲೆ ಹೇಳಿಕೆಗಳು), ಯೋಗಸುಧಾಕರ(ಪತಂಜಲಿ ಯೋಗ ಸೂತ್ರದ ಮೇಲೆ ವ್ಯಾಖ್ಯೆ), ಮನೋನಿಯಮನ ಮುಂತಾದ ವಿದ್ವತ್ ಗ್ರಂಥಗಳನ್ನು ರಚಿಸಿದರು. ಅವರ "ಆತ್ಮವಿದ್ಯಾವಿಲಾಸ"ವಂತೂ ಪಂಡಿತ, ಸಾಧಕ, ಸಿದ್ಧರಿಗೂ ಪ್ರಿಯವೂ ಮಾರ್ಗದರ್ಶಕವೂ ಆದುದಾಗಿದೆ. ಅರವತ್ತೆರಡು ಶ್ಲೋಕಗಳನ್ನು ಹೊಂದಿರುವ ಸದಾಶಿವ ಬ್ರಹ್ಮೇಂದ್ರರಿಂದ ರಚಿಸಲ್ಪಟ್ಟ ಆತ್ಮವಿದ್ಯಾವಿಲಾಸವು ಆರ್ಯಾವೃತ್ತದಲ್ಲಿದೆ. ಇದರ ಮುಖ್ಯ ವಿಷಯವೇ ವೈರಾಗ್ಯ ಅದಕ್ಕಿಂತಲೂ ಹೆಚ್ಚಾಗಿ ಅವಧೂತ ಚರ್ಯೆ. ಜೀವನ್ಮುಕ್ತರೂ, ಸಿದ್ಧರೂ ಆದ ವಿರಕ್ತ ಸಾಧಕರು ವ್ಯವಹಾರ, ಶಾಸ್ತ್ರ ಸಂಪ್ರದಾಯಗಳನ್ನೆಲ್ಲಾ ಬದಿಗೊತ್ತಿ, ದೇಹಧರ್ಮವನ್ನೆಲ್ಲಾ ಕಡೆಗಣಿಸಿ ಬ್ರಹ್ಮಾನಂದದಲ್ಲಿ ಸದಾ ಇರುವ ಚರ್ಯೆಯದು. "ಅಕ್ಷರತ್ವಾತ್ ವರೇಣ್ಯತ್ವಾತ್  ಧೂತಪಾಪಾದಿಬಂಧನಾತ್ ತತ್ತ್ವಮಸ್ಯಾದಿಲಕ್ಷ್ಯತ್ತ್ವಾತ್ ಅವಧೂತಃ ಪ್ರಕೀರ್ತಿತಃ". ನಾಶರಹಿತವಾದ ಸತ್ಸರೂಪದಲ್ಲೇ ನೆಲೆಗೊಂಡು ಧೂತಪಾಪಾದಿ ಬಂಧನಗಳಿಗೆ ಒಳಗಾಗದೆ ಬ್ರಹ್ಮಸ್ವರೂಪವನ್ನು ತಿಳಿ ಹೇಳುವ ತತ್ತ್ವಮಸಿ ಮೊದಲಾದ ವಾಕ್ಯಗಳಿಗೆ ನಿದರ್ಶನವಾಗಿ ಇರುವುದೇ ಅವಧೂತ ಪ್ರವೃತ್ತಿ. ಅವರ ರಚನೆಗಳು ಇಲ್ಲಿಗೇ ಮುಗಿಯುವುದಿಲ್ಲ. ಅದ್ವೈತ ರಸಮಂಜರಿ, ಬ್ರಹ್ಮ ತತ್ತ್ವ ಪ್ರಕಾಶಿಕಾ, ಜಗದ್ಗುರು ರತ್ನ ಮಲೋತ್ಸವ, ಶಿವ ಮಾನಸ ಪೂಜಾ, ದಕ್ಷಿಣಾಮೂರ್ತಿ ಧ್ಯಾನಮ್, ಶಿವಯೋಗ ಪ್ರದೀಪಿಕಾ, ಸಪರ್ಯ ಪರ್ಯಾಯ ಸ್ತವಃ, ಪರಮಹಂಸ ಚರ್ಯ, ಅದ್ವೈತ ತಾರಾವಳಿ, ಸ್ವಪ್ನೋದಿತಮ್, ಸ್ವಾನುಭೂತಿ ಪ್ರಕಾಶಿಕ, ನವವರ್ಣರತ್ನಮಾಲಾ, ಆತ್ಮಾನುಸಂಧಾನ, ಭಾಗವತ, ಸಂಹಿತೆಗಳ ಸಾರಸಂಗ್ರಹ, ಉಪನಿಷತ್ಗಳ ಮೇಲೆ ವ್ಯಾಖ್ಯೆ..... ಹೀಗೆ ಸಾಗುತ್ತದೆ ಈ ಪಟ್ಟಿ.

              ಕೆಲ ಸಮಯದ ಬಳಿಕ ಶಾಸ್ತ್ರಪರಿಚರ್ಯೆಯನ್ನೂ ಬಿಟ್ಟ ಅವರು ಸಾಧನೆಗೆ ಇಳಿದರು. ತೀವ್ರ ವಿರಕ್ತಿಯುಂಟಾಗಿ ಬೆತ್ತಲೆಯಾಗಿ, ಮೈಮೆಲೆ ಪರಿವೆಯೇ ಇಲ್ಲದೆ, ಸಂನ್ಯಾಸಧರ್ಮವನ್ನೂ ಪರಿಗಣಿಸದೆ ಉನ್ಮತ್ತರಂತೆ ಅಡ್ಡಾಡತೊಡಗಿದರು. ಕಾಡುಮೇಡುಗಳಲ್ಲಿ ಮನಬಂದಂತೆ ಅಲೆದಾಡತೊಡಗಿದರು. ನದೀ ತೀರದ ಮರಳೇ ಅವರಿಗೆ ಹಾಸಿಗೆಯಾಯಿತು. ಮರದ ನೆರಳೇ ಆಸರೆಯಾಯಿತು. ಮಳೆ, ಚಳಿ, ಗಾಳಿ, ಬಿಸಿಲುಗಳಿಗೆ ಅವರ ಮೈ ಭೇದವೆಣಿಸುತ್ತಲೇ ಇರಲಿಲ್ಲ. ಕರೆದರೆ ಬಾರರು, ಸೂರ ಕೆಳಗೆ ತಂಗರು, ಮನೆಯೊಳಗೆ ಬಾರರು. ಯಾರೊಡನೆಯೂ ಮಾತಿಲ್ಲ, ಕಥೆಯಿಲ್ಲ. ಎಂದೂ, ಎಲ್ಲದಕ್ಕೂ ಸಂತೋಷವೇ! "ಬ್ರಹ್ಮೈವಾಹಂ ಕಿಲ ಸದ್ಗುರುಕೃಪಯಾ!" ಎಂದೆನ್ನುತ್ತಲೇ ಅವಧೂತರಾಗಿಬಿಟ್ಟರು. ಯಾರೋ ಪರಮಶಿವೇಂದ್ರರ ಬಳಿ ಬಂದು ನಿಮ್ಮ ಶಿಷ್ಯನಿಗೆ ಹುಚ್ಚು ಹಿಡಿದಿದೆಯೆನ್ನಲು, "ಅಯ್ಯೋ ನನಗೆ ಹೀಗೆ ಹುಚ್ಚು ಹಿಡಿಯಲಿಲ್ಲವಲ್ಲ" ಎಂದರಂತೆ! ಅದು ಸಾಮಾನ್ಯರ ಎಣಿಕೆಗೆ ಸಿಗದ ದಿವ್ಯೋನ್ಮಾದ.

                    ಆಗ ಕಂಚಿ ಕಾಮಕೋಟಿ ಪೀಠದ ಗುರುಗಳಾಗಿದ್ದವರು ಬೋಧೇಂದ್ರ ಸದ್ಗುರುಗಳು. ಅವಧೂತರಾದ ಮೇಲೂ ಸದಾಶಿವ ಬ್ರಹ್ಮೇಂದ್ರರು ತಮಗೆ ಪ್ರೇರಕರಾದ ಈ ಹಿರಿಯ ಗುರುಗಳನ್ನು ನೋಡಲು ಬರುತ್ತಿದ್ದರು. ತಮ್ಮ ಸಹಪಾಠಿಯಾಗಿದ್ದ ವೆಂಕಟೇಶ ಅಯ್ಯವಾಳರನ್ನು ನೋಡಲು ತಿರುವಿಶೈನಲ್ಲೂರಿಗೂ ಹೋಗಿ ಬರುತ್ತಿದ್ದರು. ಮಹಾಚೇತನಗಳ ಸತ್ಸಂಗವಾದರೂ ಮೌನವ್ರತಕ್ಕೆ ಭಂಗ ಬರಲಿಲ್ಲ. ಭಜನಾ ಪದ್ದತಿಯ ಹರಿಕಾರರಾದ ಅವರಿಬ್ಬರೂ ಬ್ರಹ್ಮೇಂದ್ರರಿಗೆ "ಭಗವನ್ನಾಮ ಸಂಕೀರ್ತನೆ ಮೌನವ್ರತಕ್ಕೆ ಭಂಗ ತರುವುದಿಲ್ಲವಲ್ಲ" ಎಂದು ಒತ್ತಾಯಿಸಿದ ಮೇಲೆ ಸದಾಶಿವರಿಂದ ಕೀರ್ತನೆಗಳ ಮಹಾಪೂರವೇ ಹರಿದು ಬಂತು. ಅವು ಇಂದಿಗೂ, ಎಂದೆಂದಿಗೂ ಸಂಗೀತ ಕ್ಷೇತ್ರದ ಔನ್ನತ್ಯದ ಪ್ರತೀಕಗಳಾಗಿ ನಿಂತಿವೆ. ಎಂತೆಂತಹಾ ಹಾಡುಗಳು...ಒಂದಕ್ಕೊಂದು ಮಿಗಿಲು; ಸಂಗೀತ ರಸಿಕರ ಬಾಯಲ್ಲಿ ಇಂದಿಗೂ ನಲಿದಾಡುತ್ತಲೇ ಇರುವ ಕಲಾ ಕುಸುಮಗಳು ಅವು. ರಾಮ, ಕೃಷ್ಣರನ್ನು ಸಗುಣರೂಪಿ ಬ್ರಹ್ಮವೆಂದು ಪರಿಗಣಿಸಿದವರು ಸದಾಶಿವ ಬ್ರಹ್ಮೇಂದ್ರರು. ರಾಮನ ಕುರಿತಾದ ಅಹಿರ ಭೈರವೀರಾಗದ "ಪಿಬರೇ ರಾಮರಸಂ", ಮೋಹನರಾಗದ "ಭಜರೇ ರಘುವೀರಂ", "ಚೇತತಃ ಶ್ರೀರಾಮಂ", "ಖೇಲತಿ ಮಮ ಹೃದಯೇ ರಾಮಃ", ಥೋಡಿ ರಾಗದ "ಪ್ರತಿವಾರಂ ವಾರಂ ಮಾನಸ" ಮೊದಲಾದ ಅದ್ಭುತ ಕೀರ್ತನೆಗಳು ಅವರಿಂದ ಹೊರಹೊಮ್ಮಿದವು. ಚುಮು ಚುಮು ಮುಂಜಾವಿನಲ್ಲಿ ಶುದ್ಧ ಸಾವೇರಿಯಲ್ಲಿ ಹಾಡಿದಾಗ ಗಂಧರ್ವ ಲೋಕವನ್ನೇ ಸೃಷ್ಟಿಗೈವ "ಗಾಯತಿ ವನಮಾಲೀ ಮಧುರಂ", "ಸ್ಮರ ನಂದಕುಮಾರಂ", ಹಿಂದೋಳರಾಗದ "ಭಜ ರೇ ಗೋಪಾಲಂ", "ಭಜ ರೇ ಯದುನಾಥಂ", ಗೌಳದ "ಬ್ರೂಹಿ ಮುಕುಂದೇತಿ", ಸಿಂಧು ಭೈರವಿಯ "ಕ್ರೀಡತಿ ವನಮಾಲೀ ಗೋಷ್ಠೇ" ಇವು ಕೃಷ್ಣನನ್ನೇ ಸಗುಣ ಬ್ರಹ್ಮನನ್ನಾಗಿಸಿದ ಭಕ್ತಿರಸ ಉಕ್ಕೇರಿಸುವ ಕೀರ್ತನೆಗಳು. ಮಿಶ್ರ ಶಿವರಂಜಿನಿ ರಾಗದ "ಸರ್ವಂ ಬ್ರಹ್ಮಮಯ ರೇ", ಸಿಂಧು ಭೈರವಿಯ "ಖೇಲತಿ ಬ್ರಹ್ಮಾಂಡೇ", ಸಂಗೀತ ಕ್ಷೇತ್ರದ ಬಾಗಿಲು ಬಡಿವವರಿಗೂ ಚಿರಪರಿಚಿತವಾದ ಸಾಮರಾಗದ "ಮಾನಸ ಸಂಚರರೇ", "ತದ್ವಜ್ಜೀವತ್ವಂ ಬ್ರಹ್ಮಣಿ" ಮುಂತಾದುವು ಪರಮಹಂಸರೊಬ್ಬರಿಂದ ಸಾಹಿತ್ಯ ಸೃಷ್ಟಿಯಾದರೆ, ಅವು ಸಿಹಿಜೇನಿನ ಸ್ವರವಿದ್ದು ಧೇನಿಸುವ ಸಿರಿಕಂಠಗಳಿಗೆ ಸಿಕ್ಕರೆ ಆಗ ಸೃಷ್ಟಿಯಾಗುವ ಸನ್ನಿವೇಶ ಯಾವ ಸ್ವರ್ಗಲೋಕಕ್ಕಿಂತ ಕಡಿಮೆಯಿದ್ದೀತು? ಹೀಗೆ ಸಂಸ್ಕೃತ ಭಾಷೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು(ಸಿಕ್ಕಿರುವುದು) ಕೀರ್ತನೆಗಳನ್ನು ರಚಿಸಿ ಕರ್ನಾಟಕ ಸಂಗೀತವನ್ನು ಅವು ಶಾಶ್ವತವಾಗಿ ಬೆಳಗುತ್ತಿರುವಂತೆ ಜ್ಯೋತಿ ಹಚ್ಚಿದರವರು.

                       ಅವರು ಮಾಡಿದ ಪವಾಡಗಳೂ ಅನೇಕ. ಅದು ಮಧುರೈ ದೇವಾಲಯದ ವಾರ್ಷಿಕ ಜಾತ್ರೆಯ ಸಮಯ. ಆಗ ಸದಾಶಿವರು ಕಾವೇರೀನದೀ ತೀರದ ಮಹದಾನಪುರದಲ್ಲಿ ಸಂಚರಿಸುತ್ತಿದ್ದರು. ಆಗ ಕೆಲವು ಮಕ್ಕಳು ತಮ್ಮನ್ನು ಮಧುರೈಗೆ ಕರೆದೊಯ್ಯಬೇಕೆಂದು ಪೀಡಿಸಿದರು. ಮಕ್ಕಳಿಗೆ ಕಣ್ಮುಚ್ಚಿಕೊಳ್ಳಲು ಹೇಳಿದ ಸದಾಶಿವ ಬ್ರಹ್ಮೇಂದ್ರರು ಕೆಲ ನಿಮಿಷಗಳ ಬಳಿಕ ಕಣ್ತೆರೆಯಲು ಹೇಳಿದಾಗ ಮಕ್ಕಳೆಲ್ಲಾ ಅದಾಗಲೇ ಮಧುರೈಯಲ್ಲಿ ನಿಂತಿದ್ದರು! ಮಧುರೈ ಅಲ್ಲಿಂದ ನೂರು ಮೈಲಿಗಳಷ್ಟು ದೂರದಲ್ಲಿತ್ತು. ಜಾತ್ರೆಯಲ್ಲೆಲ್ಲಾ ಓಡಾಡಿದ ಬಳಿಕ ಮಕ್ಕಳು ಮತ್ತೆ ಅದೇ ತೀರದಲ್ಲಿ ನಿಂತಿದ್ದರು. ಇದನ್ನು ಪರೀಕ್ಷಿಸಲೆಂದು ಬಂದ ಯುವಕನೊಬ್ಬನನ್ನು ಸದಾಶಿವ ಬ್ರಹ್ಮೇಂದ್ರರು ಅರೆಕ್ಷಣದಲ್ಲಿ ಮಧುರೈಗೇನೋ ಬಿಟ್ಟರು. ಆದರೆ ಹಿಂದಿರುಗುವಾಗ ಮಾತ್ರ ಆ ಯುವಕನಿಗೆ ಸದಾಶಿವ ಬ್ರಹ್ಮೇಂದ್ರರು ಕಾಣಿಸಲೇ ಇಲ್ಲ! ಆತ ಪಾದಯಾತ್ರೆ ಮಾಡುತ್ತಾ ಊರು ಸೇರಿಕೊಳ್ಳಬೇಕಾಯ್ತು. ಬೆಳೆದುನಿಂತು ಪೈರು ತುಂಬಿದ ಹೊಲದಲ್ಲೊಮ್ಮೆ ಸದಾಶಿವ ಬ್ರಹ್ಮೇಂದ್ರರು ಧ್ಯಾನಕ್ಕೆ ಕುಳಿತುಬಿಟ್ಟರು. ಹೊಲದ ಯಜಮಾನ ಅವರನ್ನು ಕಳ್ಳನೆಂದೇ ಭಾವಿಸಿ ಹೊಡೆಯಲೆಂದು ದೊಣ್ಣೆ ಎತ್ತಿದ. ಅಷ್ಟೇ. ಆತನ ಚಲನೆಯೇ ನಿಂತು ಹೋಗಿ ನಿಂತಲ್ಲೇ ವಿಗ್ರಹದಂತಾದ. ಬೆಳ್ಳಂಬೆಳಗ್ಗೆ ಸದಾಶಿವರು ಧ್ಯಾನದಿಂದ ವಿಮುಖರಾಗಿ ಆತನ ಕಡೆಗೆ ನೋಡಿ ಮುಗುಳ್ನಕ್ಕಾಗಲೇ ಆತ ಯಥಾಸ್ಥಿತಿಗೆ ಮರಳಿದ.

                       1732ರಲ್ಲಿ ಸದಾಶಿವ ಬ್ರಹ್ಮೇಂದ್ರರು ಪುದುಕೊಟ್ಟೈ ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ಕೆಲವು ಸೈನಿಕರು ದರ್ಪದಿಂದ ಕಟ್ಟಿಗೆಯ ಹೊರೆಯನ್ನು ಅವರ ತಲೆಯ ಮೇಲೆ ಹೊರೆಸಿ ನಡೆಸಿಕೊಂಡು ಹೋದರು. ಸದಾಶಿವ ಬ್ರಹ್ಮೇಂದ್ರರೇನೋ ಸಂತೋಷದಿಂದಲೇ ಅದನ್ನು ಹೊತ್ತುಕೊಂಡು ಹೋದರು. ಸರ್ವವೂ ಬ್ರಹ್ಮವೇ ಎನ್ನುವ ಆತ್ಮಾನಂದವನ್ನು ಸಾಧಿಸಿಕೊಂಡವರಿಗೆ ಕಟ್ಟಿಗೆಯ ಹೊರೆಯಾದರೇನು, ಚಿನ್ನದ ಮೂಟೆಯಾದರೇನು; ಅಧಿಕಾರವಾದರೇನು, ಊಳಿಗವಾದರೇನು? ಆದರೆ ಯಾವಾಗ ಅವರು ಆ ಹೊರೆಯನ್ನು ಕೆಳಗಿಳಿಸಿದರೋ ತಕ್ಷಣ ಅದು ಸುಟ್ಟು ಬೂದಿಯಾಯಿತು. ಜೊತೆಗೆ ಆ ಸೈನಿಕರ ಅಹಂಕಾರವೂ! ನಿರಕ್ಷರ ಕುಕ್ಷಿಯೂ ಹುಟ್ಟಾ ಮೂಕನೂ ಆಗಿದ್ದ ವ್ಯಕ್ತಿಯೊಬ್ಬ ಸದಾಶಿವ ಬ್ರಹ್ಮೇಂದ್ರರ ಸೇವೆಗೈಯುತ್ತಿದ್ದ. ಒಂದು ದಿವಸ ಇದಕ್ಕಿದ್ದಂತೆ ಬ್ರಹ್ಮೇಂದ್ರರು ತಮ್ಮ ಕೈಯನ್ನು ಅವನ ತಲೆಯ ಮೇಲಿಟ್ಟುಬಿಟ್ಟರು. ಅಂದಿನಿಂದ ಕೇವಲ ಮಾತಲ್ಲ, ಪ್ರವಚನವನ್ನೇ ಕೊಡಲಾರಂಭಿಸಿದ ಆ ವ್ಯಕ್ತಿ! ಮುಂದೆ "ಆಕಾಶ ಪುರಾಣ ರಾಮಲಿಂಗ ಶಾಸ್ತ್ರಿ" ಎಂದೇ ಪ್ರಸಿದ್ಧನಾದ.

                ಬ್ರಹ್ಮಜ್ಞಾನಿಗೆ ಎಲ್ಲವೂ ಬ್ರಹ್ಮಮಯವೇ. ಆತನಿಗೆ ಜಾತಿ-ಮತ-ಪಂಥಗಳ, ಜೀವ-ನಿರ್ಜೀವಗಳ, ಅರಮನೆ-ಸೆರೆಮನೆಗಳ ಭೇದವೇ ಇರುವುದಿಲ್ಲ. ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರನ್ನು ಕೆಲವು ಕಾಲಾನಂತರ ಜನ ಮರೆತುಬಿಟ್ಟರು ಎಂದುಕೊಳ್ಳುವಾಗಲೇ ಒಂದು ಅಚ್ಚರಿಯ ಘಟನೆ ನಡೆಯಿತು. ಬ್ರಹ್ಮೇಂದ್ರರು ನಗ್ನರಾಗಿ ಮುಸ್ಲಿಂ ನವಾಬನ ಅಂತಃಪುರಕ್ಕೆ ನುಗ್ಗಿಬಿಟ್ಟರು. ಅಂತಃಪುರದ ಕಾವಲುಗಾರರು ನೋಡನೋಡುತ್ತಿರುವಂತೆಯೇ ಅವರು ಮೈಮೇಲೆ ಪ್ರಜ್ಞೆಯೇ ಇಲ್ಲದವರಂತೆ ಸಾಗುತ್ತಲೇ ಇದ್ದರು. ಸುದ್ದಿ ತಿಳಿದು ಕೆಂಡಾಮಂಡಲನಾದ ನವಾಬ, ಅವರನ್ನು ತಡೆದು ಶಿಕ್ಷಿಸಲು ತನ್ನ ಸಿಪಾಯಿಗಳಿಗೆ ಆಜ್ಞಾಪಿಸಿದ. ನವಾಬನ  ಕಾವಲುಪಡೆಯವರು ಬ್ರಹ್ಮೇಂದ್ರರನ್ನು ಬೆನ್ನಟ್ಟಿ ಕೈಗಳನ್ನು ಕತ್ತರಿಸಿಹಾಕಿದರು. ಕೈಗಳು ಕೆಳಗೆ ಬಿದ್ದರೂ ಇದ್ಯಾವುದರ ಪರಿವೆಯೇ ಇಲ್ಲದಂತೆ ಬ್ರಹ್ಮೇಂದ್ರರು ಏನೂ ಆಗಲೇ ಇಲ್ಲವೆಂಬಂತೆ ಮುಂದುವರೆಯುತ್ತಲೇ ಇದ್ದರು. ಹೆದರಿದ ನವಾಬ ತುಂಡಾಗಿ ಕೆಳಗೆ ಬಿದ್ದಿದ್ದ ಕೈಗಳನ್ನು ಸ್ವತಃ ಎತ್ತಿತಂದು ಬ್ರಹ್ಮೇಂದ್ರರ ಮುಂದೆ ಹಿಡಿದು ನಡುಗುತ್ತಾ ನಿಂತ. ಬ್ರಹ್ಮೇಂದ್ರರು ಹಾಗೆ ಅವುಗಳನ್ನು ತಮ್ಮ ಕೈಗೆ ಜೋಡಿಸಿದರು. ಕೈಗಳು ಯಥಾಸ್ಥಿತಿಗೆ ಬಂದವು. ಬ್ರಹ್ಮೇಂದ್ರರು ಯಾವುದೇ ಪ್ರತಿಕ್ರಿಯೆಯಿಲ್ಲದೆ ತಮ್ಮ ಪಾಡಿಗೆ ತಾವು ಸಾಗುತ್ತಲೇ ಇದ್ದರು. ನವಾಬ ಮರಗಟ್ಟಿ ನೋಡುತ್ತಲೇ ಇದ್ದ!

                      ಪುದುಕ್ಕೊಟ್ಟೆಯ ಅರಸ ವಿಜಯ ರಘುನಾಥ ತೊಂಡೈಮಾನ್ ಸದಾಶಿವ ಬ್ರಹ್ಮೇಂದ್ರರ ಖ್ಯಾತಿಯ ಬಗ್ಗೆ ತಿಳಿದು ಅವರನ್ನು ತನ್ನ ಆಸ್ಥಾನಕ್ಕೆ ಕರೆತಂದು ಆಶಿರ್ವಾದ ಬೇಡುವ ಸಲುವಾಗಿ ಧಾವಿಸುತ್ತಾನೆ. ಆಗ ತಿರುವರಂಕುಳಮ್ ನಲ್ಲಿದ್ದ ಬ್ರಹ್ಮೇಂದ್ರರು ಸ್ವತಃ ಅರಸನೇ ಬಂದುದರ ಅರಿವಾದರೂ ಯಾವುದೇ ಪ್ರತಿಕ್ರಿಯೆಯನ್ನು ತೋರುವುದಿಲ್ಲ. ಅಲ್ಲೇ ಬಿಡಾರ ಹೂಡಿದ ರಾಜ ಅವಧೂತರ ಸೇವೆಗೆ ತೊಡಗುತ್ತಾನೆ. ಬ್ರಹ್ಮೇಂದ್ರರು ಉತ್ತರರೂಪವಾಗಿ ಮರಳಿನಲ್ಲಿ ದಕ್ಷಿಣಾಮೂರ್ತಿ ಮಂತ್ರವನ್ನು ಬರೆಯುತ್ತಾರೆ(1738). ಅಲ್ಲದೆ ಪಾಣಿನಿಯ ಅಷ್ಟಾಧ್ಯಾಯಿಯ ಮೇಲಿನ ವ್ಯಾಖ್ಯೆ "ಸಬ್ಥಿಕ ಚಿಂತಾಮಣಿ"ಯ ಕರ್ತೃ ಬಿಕ್ಷಾಂದರ್ ಕೊಯಿಲ್'ನ ಗೋಪಾಲಕೃಷ್ಣಶಾಸ್ತ್ರಿಯನ್ನು ಮಂತ್ರಿಯನ್ನಾಗಿ ನೇಮಿಸಿಕೊಳ್ಳುವಂತೆ ಸೂಚನೆ ನೀಡುತ್ತಾರೆ. ಅದಕ್ಕೆ ಒಪ್ಪಿದ ಅರಸ ತನ್ನ ಅಂಗವಸ್ತ್ರದಲ್ಲಿ ಆ ಮರಳನ್ನು ಕಟ್ಟಿಕೊಂಡು ಅರಮನೆಗೆ ತಂದು ಪ್ರತಿಷ್ಠಾಪನೆ ಮಾಡುತ್ತಾನೆ. ಈ ಪವಿತ್ರ ಮರಳು ಇಂದಿಗೂ ಪುದುಕೊಟ್ಟೆಯ ಅರಮನೆಯ ಒಳಗಿರುವ ದಕ್ಷಿಣಾಮೂರ್ತಿ ದೇಗುಲದಲ್ಲಿ ರಾಜನ ಪರಿವಾರದಿಂದ ಪೂಜಿಸಲ್ಪಡುತ್ತಿದೆ. ಈ ಘಟನೆ ನಡೆದ ಸ್ಥಳವೇ ಶಿವಜ್ಞಾನಪುರವೆಂದು ಖ್ಯಾತಿ ಪಡೆಯಿತು. ಇವತ್ತಿಗೂ ಪುದುಕೊಟ್ಟೆ ಜಿಲ್ಲೆಯ ಅವುದಾಯರ್ ಕೊಯಿಲ್ ಪಕ್ಕ ಈ ಸ್ಥಳ ಇದೆ.

             ತಂಜಾವೂರಿನ ದೊರೆ ಶರಭೋಜಿ ಬ್ರಹ್ಮೇಂದ್ರರ ಬಳಿ ಬಂದಾಗ ತಮ್ಮ "ಆತ್ಮವಿದ್ಯಾವಿಲಾಸ"ದ ಪ್ರತಿಯೊಂದನ್ನು ನೀಡಿ ಆತನನ್ನು ಅನುಗ್ರಹಿಸಿದರು. ತಂಜಾವೂರಿನ ಸಮೀಪದ ಪುನ್ನೈನಲ್ಲೂರಿನಲ್ಲಿ ಮಾರಿಯಮ್ಮನನ್ನು ಸ್ಥಾಪಿಸಲು ಕಾರಣೀಭೂತರಾದರು. ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ ಸದಾಶಿವ ಬ್ರಹ್ಮೇಂದ್ರರ ಸಿದ್ಧಿ-ಸಾಧನೆ, ಪವಾಡಗಳ ಬಗೆಗೆ ಶರಭೋಜಿಯ ಆಸ್ಥಾನ ವಿದ್ವಾನ್ ದೀಪಾಂಬಪುರಿಯ ಮಲ್ಲಾರಿ ಪಂಡಿತ್ ಬರೆದ ದಾಖಲೆಗಳು ಈಗಲೂ ದೊರೆಯುತ್ತವೆ.  ತಮಿಳು ವಿದ್ವಾಂಸ, ಕವಿ, ತತ್ತ್ವಶಾಸ್ತ್ರಜ್ಞ ತಯುಮನಾವರ್ ಬ್ರಹ್ಮೇಂದ್ರರ ಆಶೀರ್ವಾದ ಪಡೆದುಕೊಂಡರು. ಅವರು ಸದಾ ಧ್ಯಾನದಲ್ಲಿರುತ್ತಿದ್ದ ತಿರುಗೋಕರ್ಣದ ಶಿವ ದೇವಾಲಯದಲ್ಲಿನ ಜಾಗ ಈಗಲೂ ಗುರುತಿಸಲ್ಪಡುತ್ತಿದೆ. ದೇವದಾನಪಟ್ಟಿ ಕಾಮಾಕ್ಷಿ ದೇವಾಲಯ ಅವರ ಮಾರ್ಗದರ್ಶನದಲ್ಲೇ ನಿರ್ಮಾಣವಾಯಿತು. ತಂಜಾವೂರಿನ ನಲು ಕಲ್ ಮಂಟಪದಲ್ಲಿ ಹನುಮಾನ್ ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ಅವರೇ. ಕುಂಭಕೋಣಂನ ತಿರುರಂಗೇಶ್ವರ ರಾಹುಸ್ಥಲ ದೇವಾಲಯದಲ್ಲಿ ಗಣೇಶ ವಿಗ್ರಹ ಹಾಗೂ ಶಕ್ತಿಯುತ ಗಣೇಶ ಯಂತ್ರ ಅವರು ಪ್ರತಿಷ್ಠಾಪನೆ ಮಾಡಿದುದರ ದಾಖಲೆಯ ಕೆತ್ತನೆ ಆ ದೇವಾಲಯದ ದ್ವಾರದ ಬಳಿಯೇ ಕಾಣಸಿಗುತ್ತದೆ. ಕರೂರಿನ ಸಮೀಪದ ತಂತೋಂದ್ರಿಮಲೈ ಶ್ರೀನಿವಾಸ ದೇವಾಲಯದಲ್ಲಿ ಅವರು ಪ್ರತಿಷ್ಠಾಪಿಸಿದ ಜನಾಕರ್ಷಣ ಯಂತ್ರ ಇಂದಿಗೂ ಅನೇಕರನ್ನು ಆಕರ್ಷಿಸುತ್ತಲೇ ಇದೆ. ಪೆರಂಬದೂರಿನ ಸಿರುವಕೋರ್ ಮಧುರಕಾಳಿ ದೇವಾಲಯದಲ್ಲಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಿದವರೂ ಅವರೇ.

                 ಹೀಗೆ ಯಾರ ಹಂಗಿಗೂ ಸಿಗದೆ, ಯಾವ ಮಾತು-ಕಥೆಗಳಿಲ್ಲದೆ ಸ್ವೇಚ್ಛೆಯಿಂದ ಅಲೆದಾಡುತ್ತ ಅವಧೂತ ಸ್ಥಿತಿಯನ್ನು ಸಾಧಿಸಿಕೊಂಡ ಸದಾಶಿವ ಬ್ರಹ್ಮೇಂದ್ರರು ತಮ್ಮ ಕೊನೆಗಾಲದಲ್ಲಿ ತಿರುವಿಶೈನಲ್ಲೂರನ್ನು ಬಿಟ್ಟು ಕಾವೇರಿ ತೀರದ ನೆರೂರಿಗೆ ಬಂದರು. ನೆರೂರಿನ ಮೂಲ ಹೆಸರು ನೆರುಪ್ಪೂರು ಅಂದರೆ ಅಗ್ನಿ ನಗರವೆಂದೇ ಅರ್ಥ. ಅಲ್ಲಿ ಅಗ್ನಿನೀಶ್ವರ ಎಂಬ ಶಿವ ದೇಗುಲವೂ ಇದೆ. ಅಲ್ಲಿ ಕಾವೇರಿ ದಕ್ಷಿಣಕ್ಕೆ ಹರಿಯುತ್ತದೆ. ಹಾಗಾಗಿ ನೆರೂರನ್ನು ಇನ್ನೊಂದು ಕಾಶಿ ಎಂದೆನ್ನಲಾಗುತ್ತದೆ. ಅವತಾರ ಸಮಾಪ್ತಿಯ ಕಾಲದಲ್ಲಿ ಜೇಷ್ಠ ಶುದ್ಧ ದಶಮಿಯ ದಿನ ಸಮಾಧಿಯ ಗುಂಡಿಯಲ್ಲಿ ಯೋಗಮುದ್ರೆಯಲ್ಲಿ ಕುಳಿತ ಬ್ರಹ್ಮೇಂದ್ರರು ಮುಂದೇನು ಮಾಡಬೇಕಂದು ನಿರ್ದೇಶಿಸಿದರು. ಅಲ್ಲದೇ ಒಂಬತ್ತನೇ ದಿನ ಬಿಲ್ವ ಗಿಡವೊಂದು ಸಮಾಧಿಯಿಂದ ಮೇಲೆದ್ದು ಬರುವುದಾಗಿಯೂ, ಹನ್ನೆರಡನೆಯ ದಿವಸ ಕಾಶಿಯಿಂದ ಬಾಣಲಿಂಗವೊಂದನ್ನು ಭಕ್ತರೊಬ್ಬರು ತರುತ್ತಾರೆಂದೂ ಹೇಳಿದರು. ಅದೇ ರೀತಿ ನಡೆಯಿತೆಂದು ಬೇರೆ ಹೇಳಬೇಕಾಗಿಲ್ಲ. ಪುದುಕೊಟ್ಟೈಯ ದೊರೆ ರಘುನಾಥ ತೊಂಡೈಮಾನನೇ ಬಾಣಲಿಂಗದ ಪ್ರತಿಷ್ಠಾಪನೆಯನ್ನೂ ನೆರವೇರಿಸಿದ. 1912ರಲ್ಲಿ ಲಕ್ಷಾರ್ಚನೈ ಸ್ವಾಮಿ ಎನ್ನುವವರಿಂದ ನೆರೂರಿನಲ್ಲಿ ಆರಂಭವಾದ ಆರಾಧನೆ ಇಂದಿಗೂ ನಡೆಯುತ್ತಿದೆ. ತೀರಾ ಈಚೆಗೆ ಮತ್ತೊಂದು ಅಚ್ಚರಿಯೂ ಸಂಭವಿಸಿತು. ಮಧುರೈಯಿಂದ ಅರವತ್ತು ಕಿ.ಮಿ. ದೂರದಲ್ಲಿರುವ ಮನಮಧುರೈ ಸೋಮನಾಥ ದೇವಾಲಯ ಸಮುಚ್ಚಯದಲ್ಲಿ ಅವರ ಸಮಾಧಿ ಇರುವುದನ್ನು ಕಂಚಿ ಪರಮಾಚಾರ್ಯರು ಪತ್ತೆ ಹಚ್ಚಿದರು. ಹೀಗೆ ಏಕಕಾಲದಲ್ಲಿ ಎರಡೂ ಕಡೆ ಸಜೀವ ಸಮಾಧಿಯಿರುವ ಮಹಾಪುರುಷ ಸದಾಶಿವ ಬ್ರಹ್ಮೇಂದ್ರರು. ಎರಡೂ ಕಡೆ ಅವರ ಆರಾಧನೆ ನಡೆಯುತ್ತಾ ಬರುತ್ತಿದೆ.

                     ಸದಾಶಿವ ಬ್ರಹ್ಮೇಂದ್ರರ ಹಿರಿಮೆಯನ್ನು ಅರಿತಿದ್ದ ಶೃಂಗೇರಿಯ ಜಗದ್ಗುರುಗಳಾಗಿದ್ದ ಉಗ್ರನರಸಿಂಹ ಭಾರತಿಗಳು ನೆರೂರಿನಲ್ಲಿನ ಅವರ ಸಮಾಧಿಯ ದರ್ಶನ ಮಾಡಿದ್ದರು.ಶೃಂಗೇರಿ ಶ್ರೀಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ತಮ್ಮ ತಮಿಳುನಾಡಿನ ಪ್ರವಾಸ ಕಾಲದಲ್ಲಿ ತಿರುಚ್ಚಿಯ ಸಮೀಪ ಪಯಣಿಸುತ್ತಿದ್ದಾಗ ಅವರ ಪಲ್ಲಕ್ಕಿ ಹಠಾತ್ತನೆ ನಿಂತು ಬಿಟ್ಟಿತು. ಪಲ್ಲಕ್ಕಿ ಹೊತ್ತವರು ತಮ್ಮನ್ಯಾವುದೋ ಶಕ್ತಿ ಎಳೆದು ನಿಲ್ಲಿಸಿದೆ ಎಂದು ಅಳಲು ತೋಡಿಕೊಂಡಾಗ ಧ್ಯಾನಸ್ಥರಾದ ಗುರುಗಳು ತುಸು ಸಮಯದ ಬಳಿಕ ಪಲ್ಲಕ್ಕಿಯಿಂದ ಇಳಿದು ನಡೆಯಲಾರಂಭಿಸಿದರು. ಹಾಗೆ ನಡೆದು ಬಂದವರು ನಿಂತಿದ್ದು ನೆರೂರಿನಲ್ಲಿದ್ದ ಸದಾಶಿವ ಬ್ರಹ್ಮೇಂದ್ರರ ಸಮಾಧಿಯ ಮುಂದೆಯೇ! ಸಮಾಧಿಯ ದರ್ಶನ ಪಡೆದ ಬಳಿಕ ಮೂರು ದಿನ ಅಲ್ಲೇ ಉಪವಾಸವಿದ್ದು ಧ್ಯಾನಾವಸ್ಥೆಯಲ್ಲಿದ್ದರು. ಮೂರನೇ ದಿನದ ಕೊನೆಗೆ ಯಾರೋ ಅವರೊಂದಿಗೋ ಮಾತಾಡುತ್ತಿರುವ ದನಿ ಕೇಳಿಸಿತು. ಆದರೆ ಯಾರೂ ಕಾಣಿಸುತ್ತಿರಲಿಲ್ಲ. ಹೀಗೆ ಬ್ರಹ್ಮೇಂದ್ರರ ದರ್ಶನ ಪಡೆದ ಶಿವಾಭಿನವ ನೃಸಿಂಹ ಭಾರತಿಗಳು ಬಳಿಕ ಅಲ್ಲೇ ಸದಾಶಿವ ಬ್ರಹ್ಮೇಂದ್ರರನ್ನು ಕುರಿತು ಸದಾಶಿವೇಂದ್ರ ಸ್ತವ ಹಾಗೂ ಸದಾಶಿವೇಂದ್ರ ಪಂಚರತ್ನ ಎಂಬೆರಡು ಶ್ಲೋಕಗಳನ್ನು ರಚಿಸಿದರು. ಮುಂದೆ ಶೃಂಗೇರಿಯ ಅವಧೂತರೆಂದೇ ಖ್ಯಾತಿವೆತ್ತ ಚಂದ್ರಶೇಖರ ಭಾರತೀ ಸ್ವಾಮಿಗಳು ಕೂಡಾ ಸದಾಶಿವ ಬ್ರಹ್ಮೇಂದ್ರರ ನೆರೂರು ಸಮಾಧಿಯನ್ನು ದರ್ಶಿಸಿ ಆತ್ಮವಿದ್ಯಾವಿಲಾಸದ ಅನುಸಂಧಾನದಲ್ಲಿ ತೊಡಗಿ ಆತ್ಮವಿದ್ಯಾವಿಲಾಸಿಯೇ ಆಗಿ ಹೋದರು. ಶೃಂಗೇರಿ ಜಗದ್ಗುರುಗಳಾದವರು ಸದಾಶಿವ ಬ್ರಹ್ಮೇಂದ್ರರ ಸಮಾಧಿಯನ್ನು ದರ್ಶಿಸಿ ಪೂಜಿಸುವ ಪರಿಪಾಠ ಇಂದಿನವರೆಗೂ ನಡೆದು ಬಂದಿದೆ. ಬಾಲಸುಬ್ರಹ್ಮಣ್ಯ ಯತೀಂದ್ರ ಎನ್ನುವ ಸಂನ್ಯಾಸಿಯೋರ್ವರು ಬ್ರಹ್ಮೇಂದ್ರರ ಕುರಿತಂತೆ ಸದಾಶಿವ ಸ್ತೋತ್ರವನ್ನು ರಚಿಸಿದ್ದಾರೆ.

                   ಬ್ರಹ್ಮವಿದ್ ಬ್ರಹ್ಮೈವ ಭವತಿ - ಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ. ಈ ದೇಶದಲ್ಲಿ ಸಾಧು, ಸಂತ, ಸಂನ್ಯಾಸಿಗಳಿಗೇನೂ ಬರವಿಲ್ಲ. ಆದರೆ ಬ್ರಹ್ಮ ಸಾಕ್ಷಾತ್ಕಾರಗೊಂಡವರು ಅಥವಾ ಅವಧೂತರು ಕಣ್ಣಿಗೆ ಬೀಳುವುದೇ ಅಪರೂಪ. ಒಂದು ವೇಳೆ ಸಿಕ್ಕಿದರೂ ಅವರ ಅನುಗ್ರಹಕ್ಕೆ ಪಾತ್ರರಾಗುವುದು ಅಷ್ಟು ಸುಲಭವೂ ಅಲ್ಲ. ಕೆಲವರ ಬಗ್ಗೆ ಹೆಚ್ಚಿನವರಿಗೆ ತಿಳಿಯುವುದೂ ಇಲ್ಲ. ಅವಧೂತರನ್ನು ಹುಚ್ಚರೆಂದು ಕಣೆಗಣಿಸುವವರ ಸಂಖ್ಯೆಯೇ ಹೆಚ್ಚು. ಆದರೆ ಅವಧೂತರಿಂದಾಗಿಯೇ ಇಲ್ಲೊಂದಷ್ಟು ಪುಣ್ಯ ಸಂಚಯನವಾಗಿದೆ. ಈ ಭರತ ಭೂಮಿ ಉಳಿದುಕೊಂಡಿದೆ. ಇಂದಿಗೂ ಸಾಧನಾ ಕ್ಷೇತ್ರವಾಗಿಯೇ ಉಳಿದಿದೆ. ಕಾಲಕಾಲಕ್ಕೆ ಬೇರೆಬೇರೆ ಜಾಗಗಳಲ್ಲಿ ಅವಧೂತರು ಕಂಡು ಬರುತ್ತಲೇ ಇದ್ದಾರೆ. ದಕ್ಷಿಣಾಮೂರ್ತಿಯಿಂದ ಮೊದಲ್ಗೊಂಡು ಇತ್ತೀಚಿನ ವೆಂಕಾಟಚಲ ಅವಧೂತರವರೆಗೆ. ನಮ್ಮ ಕಣ್ಣಿಗೆ ಬೀಳದ ಅವಧೂತರು ಇನ್ನೆಷ್ಟೋ? ದಕ್ಷಿಣಾಮೂರ್ತಿ-ಸದಾಶಿವ ಬ್ರಹ್ಮೇಂದ್ರ-ರಮಣ ಮಹರ್ಷಿ ಈ ಅವಧೂತ ಪರಂಪರೆಯಲ್ಲೊಂದು ವಿಶೇಷವಿದೆ. ಈ ಕೊಂಡಿ ಮೌನವಾಗಿಯೇ ಹಲವರಲ್ಲಿ ಜ್ಞಾನವನ್ನು, ಭಾಗ್ಯವನ್ನು ಕರುಣಿಸಿದೆ. ಅದು ಎಲ್ಲೊಲ್ಲೋ ಇದ್ದವರನ್ನೂ, ಅವಧೂತ ಬಿಡಿ, ಹಿಂದೂ ಧರ್ಮದ ಬಗ್ಗೆ ಏನೇನೂ ಅರಿಯದವರನ್ನೂ ತಮ್ಮ ಬಳಿಗೆ ಕರೆತಂದಿದೆ. ಜ್ಞಾನಕ್ಕಾಗಿ ಹಲವರನ್ನು ಹಪಹಪಿಸುವಂತೆ ಮಾಡಿದೆ. ಮೌನವಾಗಿಯೇ ಜಗವ ಬೆಳಗಿದೆ. ಮೌನದ ಶಕ್ತಿ ಅದು!

ಗುರುವಾರ, ನವೆಂಬರ್ 9, 2017

ಬಡವರ ಒಡಲಿಗೆ ಕೊಳ್ಳಿ ಇಟ್ಟಾತನೇ ಟಿಪ್ಪು

ಬಡವರ ಒಡಲಿಗೆ ಕೊಳ್ಳಿ ಇಟ್ಟಾತನೇ ಟಿಪ್ಪು


            ಭಾರತವನ್ನು ನಿಧಾನವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಬ್ರಿಟಿಷರಿಗೆ ಇಲ್ಲಿನ ಸಾಮಾಜಿಕ ಪರಿಸ್ಥಿತಿಯ ಅಧ್ಯಯನದ ಅವಶ್ಯಕತೆಯಿತ್ತು. ಅಂತಹಾ ಸಮಯದಲ್ಲಿ ಮದರಾಸು, ಮಲಾಬಾರ್, ಕೆನರಾ ಮತ್ತು ಮೈಸೂರು ಭಾಗಗಳ ಅಧ್ಯಯನಕ್ಕೆ ನಿಯುಕ್ತಿಗೊಂಡವನೇ ಕಲ್ಕತ್ತಾ ಏಷಿಯಾಟಿಕ್ ಸೊಸೈಟಿಯ ಸಂಶೋಧನಾ ವಿದ್ಯಾರ್ಥಿಯೂ ಪ್ರಾಚ್ಯ ವಸ್ತುಗಳ ಅಧ್ಯಯನಕಾರನೂ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ವೈದ್ಯನೂ ಆಗಿದ್ದ ಫ್ರಾನ್ಸಿಸ್ ಬುಕಾನನ್. ಆತನ A journey from madras-through the countries of MYSORE,CANARA AND MALABAR ಆ ಕಾಲದ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವ ಒಂದು ಅಪರೂಪದ ಐತಿಹಾಸಿಕ ದಾಖಲೆಯೆನಿಸಿದೆ. ಟಿಪ್ಪುವಿನ ಅವಸಾನದ ತಕ್ಷಣದಲ್ಲೇ ನಡೆದ ಈ ಅಪೂರ್ವ ದಾಖಲಾತಿ ಇಲ್ಲಿನ ಜನತೆಯ ಮೇಲೆ ಟಿಪ್ಪುವಿನ ದೌರ್ಷ್ಟ್ಯವನ್ನೂ ತನಗರಿವಿಲ್ಲದಂತೆಯೇ ಹೇಳುತ್ತಾ ಹೋಗುತ್ತದೆ.

               ಗಡಾಯಿಕಲ್ಲಿನ ಕೋಟೆಯನ್ನು ಟಿಪ್ಪು ಕಟ್ಟಿದ್ದಲ್ಲ; ಆಕ್ರಮಿಸಿ, ಜಮಲಾಬಾದ್ ಎಂದು ಸುನ್ನತ್ ಮಾಡಿಸಿದ್ದು! ಬಂಗಾರ್ ಅರಸನನ್ನು ಬ್ರಿಟಿಷರ ಪರ ಎಂಬ ಗುಮಾನಿಯ ಮೇರೆಗೆ ಟಿಪ್ಪು ನೇಣಿಗೇರಿಸಿದ. ಅವನ ಮಕ್ಕಳು ನಂದಾವರಕ್ಕೆ ಓಡಿ ಹೋಗಿ ಕೃಷಿ ಮಾಡಿ ಹೊಟ್ಟೆ ಹೊರೆಯಬೇಕಾಯಿತು. ಇಕ್ಕೇರಿಯ ನಾಯಕರಾಗಲೀ, ಹೈದರನಾಗಲೀ ಬೆಳ್ತಂಗಡಿಯ ಜನತೆಯ ಮೇಲೆ ತೆರಿಗೆ ವಿಧಿಸಿರಲಿಲ್ಲ. ಆದರೆ ಟಿಪ್ಪು ಉಳಿದ ಶ್ರೀಮಂತ ಪ್ರದೇಶಗಳ ಮೇಲಿದ್ದ ತೆರಿಗೆಯನ್ನೇ ಬೆಳ್ತಂಗಡಿಯ ಬಡ ರೈತರ ಮೇಲೆ ಹೊರಿಸಿದ. “ಜಮಲಾಬಾದ್ ಮೂಲತಃ ನರಸಿಂಘ ಅಂಗಡಿ. ಇವತ್ತು ಇಲ್ಲಿ ದಟ್ಟವಾಗಿ ಮರಗಳಿವೆಯಾದರೂ ಒಂದು ಕಾಲದಲ್ಲಿ ಕೃಷಿ ಮಾಡಿದ ಕುರುಹುಗಳು ಅಲ್ಲಿವೆ. ಮಣ್ಣಿನ ಫಲವತ್ತತೆಯೂ ಅದನ್ನೇ ಸೂಚಿಸುತ್ತದೆ. ಮಯೂರವರ್ಮನ ಬಳಿಕ ನರಸಿಂಘ ರಾಯನೆಂಬ ಬ್ರಾಹ್ಮಣ ರಾಯ ತುಳುನಾಡನ್ನು ಆಳುತ್ತಿದ್ದಾಗ ಇಲ್ಲಿನ ಸಣ್ಣ ನದಿಯ ದಂಡೆಯಲ್ಲಿ ಈ ನಗರವನ್ನು ನಿರ್ಮಿಸಿದ. ಅವನ ಹೆಸರಿನಿಂದಲೇ ಈ ನಗರ ಕರೆಯಲ್ಪಟ್ಟಿತು. ನರಸಿಂಘ ಘಡದ ಮೇಲಿನ ಈ ಕೊಟೆಯನ್ನು ಕಟ್ಟಿದವನು ಅವನೇ. ಆತನ ವಂಶದ ಮನೆಯೊಂದು ಅಲ್ಲಿದೆಯಾದರೂ ಇದಕ್ಕಿಂತ ಹೆಚ್ಚಿನ ಇತಿಹಾಸ ಅವರಿಗೂ ತಿಳಿದಿಲ್ಲ.” ಎಂದು ಕೋಟೆಯ ನೈಜ ಇತಿಹಾಸವನ್ನು ಹೊರಗೆಡವಿದ್ದಾನೆ ಬುಕಾನನ್. ಇಂತಹ ಕೋಟೆಯನ್ನು ತನ್ನ ಕೈವಶ ಮಾಡಿಕೊಂಡ ಟಿಪ್ಪು ತಕ್ಕ ಮಟ್ಟಿಗೆ ಅದನ್ನು ಸಜ್ಜುಗೊಳಿಸಿದ. ಬಳಿಕ ಬ್ರಿಟಿಷರ ಕೈಗೆ ಸುಲಭದ ತುತ್ತಾಗುವಂತಿದ್ದ ಕಾರಣದಿಂದ ಮಂಗಳೂರು ಕೋಟೆಯನ್ನು ನಾಶಗೊಳಿಸಿದ. ಮಂಗಳೂರಿನ 27 ಚರ್ಚುಗಳ ನಾಶಕ್ಕೆ ಟಿಪ್ಪು ಆದೇಶಿಸಿದ್ದು ಈ ಕೋಟೆಯಲ್ಲಿ ಕುಳಿತೇ! ಮಂಗಳೂರಿನಲ್ಲಿ ಕ್ರೈಸ್ತರ ಮೇಲೆರಗಿ ಮಾರಣಹೋಮ ನಡೆಸಿ ಐವತ್ತು ಸಾವಿರಕ್ಕೂ ಹೆಚ್ಚು ಸೆರೆಯಾಳುಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸುವಾಗ, ಇದೇ ಗಡಾಯಿ ಕಲ್ಲಿನ ಕೋಟೆಯಿಂದ ಕೆಲ ಪ್ರಮುಖರನ್ನು ತಳ್ಳಿ ಕೊಂದಿದ್ದ ಟಿಪ್ಪು.

               ಅರ್ಕುಳದ ಸಮೀಪದ ಫರಂಗಿಪೇಟೆ ಬಹುತೇಕ ನಾಶವಾಗಿತ್ತು. ಪಣ್ಯನಿ(?) ನದಿಯ ಇಕ್ಕೆಲಗಳಲ್ಲಿದ್ದ ಗದ್ದೆ ತೋಟಗಳಿಗೆ ಟಿಪ್ಪು ಮಾರಕವಾಗಿ ಎರಗಿದ್ದ. ಕಾಲು ಭಾಗದಷ್ಟು ಭೂಮಿಯನ್ನೂ ವ್ಯವಸಾಯ ಮಾಡಲಾಗದ ಸ್ಥಿತಿಗೆ ತಂದಿದ್ದ. ಕಾಳು ಮೆಣಸಿನ ಬಳ್ಳಿಗಳು, ಅವುಗಳು ಅಡರಿದ್ದ ಮರಗಳೆಲ್ಲಾ ಟಿಪ್ಪುವಿನ ಆಜ್ಞೆಯಂತೆ ಅವನ ಸೈನ್ಯದ ಕೊಡಲಿಯೇಟಿಗೆ ಧರೆಗುರುಳಿದ್ದವು. ಬಂಟ್ವಾಳದ ಸುಮಾರು 200 ಪರಿವಾರದ ಜನರನ್ನು ಟಿಪ್ಪು ಸೆರೆ ಹಿಡಿದಿದ್ದ. ಬುಕಾನನ್ ಹೋದ ಸಂದರ್ಭದಲ್ಲಿ ಅಲ್ಲಿ ಕೇವಲ 200 ಮನೆಗಳು ಉಳಿದಿದ್ದವು. ನಾಶವಾದ ಮನೆಗಳು ದುರಸ್ಥಿಯಾಗುತ್ತಿದ್ದವು. ದಾರಿಯುದ್ದಕ್ಕೂ ಕಬ್ಬಿಣದ ಕೋವಿಗಳು ಮತ್ತು ಅದರ ಅವಶೇಷಗಳು ಬಿದ್ದಿದ್ದವು. ಮಂಗಳೂರು ಕೋಟೆಯನ್ನು ಧ್ವಂಸಗೊಳಿಸಿದ ಬಳಿಕ ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಲು ಟಿಪ್ಪು ನೀಡಿದ್ದ ಆದೇಶವನ್ನು ಸರಿಯಾಗಿ ಪಾಲಿಸದ ಅವನ ಸೈನಿಕರು ಅವನ್ನು ದಾರಿಯುದ್ದಕ್ಕೂ ಎಸೆದಿದ್ದರು. ಬಿದ್ದಿದ್ದ ಬಂದೂಕುಗಳನ್ನು ಕಂಡು ಜನರು ಹೆದರಿ ಓಡುತ್ತಿದ್ದರು! ಮೂಡಬಿದಿರೆಯಲ್ಲಿ ಏಳುನೂರರಷ್ಟು ಜೈನ ಹಾಗೂ ಶಂಕರಾಚಾರ್ಯ ಅನುಯಾಯಿಗಳಾದ ಶಿವಭಕ್ತ ಬ್ರಾಹ್ಮಣರ ಮನೆಗಳಿದ್ದವು. ಟಿಪ್ಪುವಿನ ಆಡಳಿತದಲ್ಲಿ ಇಲ್ಲಿನ ದೇವಾಲಯಗಳಿಗೆ ಸಿಗುತ್ತಿದ್ದ ಹಣ 360 ಪಗೋಡಾಗಳಿಂದ 90 ಪಗೋಡಾಗಳಿಗಿಳಿಯಿತು. ಟಿಪ್ಪುವಿನ ದಾಳಿಯ ಬಳಿಕ ಅಲ್ಲಿ ಕೇವಲ ನೂರರಷ್ಟು ಮನೆಗಳುಳಿದಿವೆ! ನಾನು ಇಷ್ಟರವರೆಗೆ ನೋಡಿದ ಪ್ರದೇಶಗಳಲ್ಲಿ ಅತೀ ಬಡತನದಲ್ಲಿರುವ ಪ್ರದೇಶ ಎಂದರೆ ಇದೇ ಎಂದು ಬರೆದಿದ್ದಾನೆ ಬುಕಾನನ್!

            "250 ವರ್ಷಗಳ ಹಿಂದೆ ಕಾರ್ಕಳಕ್ಕೆ ಬಂದು ನೆಲೆಸಿದ್ದ ಮರಾಠೀ ಬ್ರಾಹ್ಮಣರು ಅಡಕೆ ಬೆಳೆಗಾರರಾಗಿ ಬದಲಾಗಿದ್ದರು. ಸುಬ್ರಹ್ಮಣ್ಯ ಗೋಕರ್ಣಗಳ ನಡುವೆ ಅವರ 750  ಪರಿವಾರಗಳಿದ್ದವು. ಆದರೆ ಟಿಪ್ಪು ಸಮುದ್ರ ಮಾರ್ಗದ ಮೂಲಕ ವ್ಯಾಪಾರವನ್ನು ನಿಷೇಧಿಸಿದ ಬಳಿಕ ಅಡಕೆಯ ಬೆಲೆ ಕುಸಿದು ತೋಟಗಳು ಪಾಳು ಬೀಳಲಾರಂಭಿಸಿದವು. ಮರಾಠಿ ಬ್ರಾಹ್ಮಣರ ಸಂಖ್ಯೆ 400 ಪರಿವಾರಕ್ಕಿಳಿಯಿತು. ಕಾರ್ಕಳದಲ್ಲಿ ಮುರಿದ ಮನೆಗಳನ್ನು ಮತ್ತೆ ನಿರ್ಮಿಸುವಲ್ಲಿ ಜನ ವ್ಯಸ್ತರಾಗಿದ್ದರು. ತೋಟಗಳಿಗೆ ಬೆಂಕಿ ಬಿದ್ದಂತೆ ಕಾಣುತ್ತಿತ್ತು. ಟಿಪ್ಪುವಿನ ದೌರ್ಜನ್ಯಕ್ಕೆ ವರ್ತಕರೂ ಬಲಿಯಾಗಿ ಪೇಟೆ ಬಿಕೋ ಎನ್ನುತ್ತಿದೆ. ದೇವಸ್ಥಾನವೊಂದರ ದುರಸ್ತಿ ಕೆಲಸ ಅರ್ಧದಲ್ಲೇ ನಿಂತಿದೆ” ಎಂದು ದಾಖಲಿಸಿದ್ದಾನೆ ಬುಕಾನನ್. ಅದು ವೆಂಕಟರಮಣ ದೇವಾಲಯವೆಂದು ಬೇರೆ ಹೇಳಬೇಕಾಗಿಲ್ಲ! ಸಮುದ್ರ ಮಾರ್ಗ ಅಡಕೆ ವಹಿವಾಟಿಗೆ ಮುಕ್ತವಾದದ್ದು ಟಿಪ್ಪು ನಾಶವಾದ ಬಳಿಕವೇ!

           ಹಿರಿಯಡ್ಕದ ಜೈನ ಬಸದಿಯಲ್ಲಿದ್ದ ವಿಗ್ರಹವನ್ನು ಟಿಪ್ಪು ಜಮಲಾಬಾದಿಗೆ ಒಯ್ದು ಕರಗಿಸಿ ನಾಣ್ಯಗಳನ್ನಾಗಿ ಪರಿವರ್ತಿಸಿದ್ದ. ಒಂದೊಮ್ಮೆ ಬ್ರಹ್ಮಾವರದ ಮುಂದಿನ ಕಲ್ಯಾಣಪುರದ ರಸ್ತೆಗಳನ್ನು ಅಲಂಕರಿಸಿದ್ದ ಧೂಪದ ಮರಗಳು ಟಿಪ್ಪುವಿನ ಸೈನ್ಯದ ಕತ್ತಿಯೇಟಿಗೆ ಧರಾಶಾಯಿಯಾಗಿದ್ದವು. ಅಲ್ಲಿನ ಗದ್ದೆ, ತೋಟ ಹಾಗೂ ಮನೆಗಳೆಲ್ಲಾ ಟಿಪ್ಪುವಿನ ಪದಾಘಾತಕ್ಕೆ ಸಿಲುಕಿ ಜನಜೀವನ ಅಸ್ತವ್ಯಸ್ತವಾಗಿತ್ತು.ಹೊನ್ನಾವರದ ಮಾರುಕಟ್ಟೆಯೊಂದರಲ್ಲೇ ಆ ಕಾಲದಲ್ಲಿ ಸುಮಾರು 12ಸಾವಿರ ರೂಪಾಯಿಗಳ ಕೊಪ್ಪರ(ಒಣ ಕೊಬ್ಬರಿ) ಹೊರದೇಶಗಳಿಗೆ ರಫ್ತಾಗುತ್ತಿತ್ತು. ಅಕ್ಕಿ, 9 ಸಾವಿರ ಪಗೋಡ ಮೊತ್ತದ ಕಾಳು ಮೆಣಸು, ಹತ್ತುಸಾವಿರ ಪಗೋಡಾಗಳ ಮೊತ್ತದ ಅಡಕೆ ರಫ್ತಾಗುತ್ತಿತ್ತು. ಇವೆಲ್ಲಾ ಕೇವಲ ಭಟ್ಕಳ ಹಾಗೂ ಮಿರ್ಜಿಯ ನಡುವಿನ ಸಣ್ಣ ಪ್ರದೇಶದ ಸರಕುಗಳು. ಟಿಪ್ಪುವಿನ ದಬ್ಬಾಳಿಕೆಯಿಂದ ಅವೆಲ್ಲಾ ನಿಂತು ಹೋದವು. ಒಂದು ಕಾಲದಲ್ಲಿ ಅಕ್ಕಿಯನ್ನು ರಫ್ತು ಮಾಡುತ್ತಿದ್ದ ಈ ಪ್ರದೇಶಗಳು ಅಕ್ಕಿಯನ್ನು ಆಮದು ಮಾಡಿಕೊಳ್ಳಬೇಕಾದ ದುಃಸ್ಥಿತಿಗೆ ತಲುಪಿದವು. ಕುಮಟಾದ ತೆಂಗಿನ ತೋಟಗಳು ಎರಡೆರಡು ಬಾರಿ ಹತ್ತಿರವೇ ಠಿಕಾಣಿ ಹೂಡಿದ್ದ ಟಿಪ್ಪುವಿನ ಸೇನೆಯ ಬೆಂಕಿಗೆ ಆಹುತಿಯಾಗಿದ್ದವು! ಇದು ಮತಾಂಧನೊಬ್ಬನ ಸೇನೆ ಅವನಂತೆಯೇ ಅಜಾಗರೂಕವೂ, ದುರಾಚಾರಿಯೂ, ಕ್ರೂರವೂ ಆಗದೇ ಉಳಿದೀತೇ? ಹೈದರನ ವಿರುದ್ಧ ಸೆಟೆದು ನಿಂತ ಊರು ಮಿರ್ಜಿ. ವಾಸ್ತವದಲ್ಲಿ ಮಿಡಿಜಯ್ ಮುಸಲ್ಮಾನರ ಬಾಯಲ್ಲಿ ಮಿರ್ಜಿಯಾಗಿ ವಿರೂಪಗೊಂಡಿತ್ತು. ಇಂತಹ ಮಿಡಿಜಯ್ ಟಿಪ್ಪುವಿನ ದಬ್ಬಾಳಿಕೆಗೆ ನಲುಗಿ ನಿರ್ಜನ ಪ್ರದೇಶವಾಗಿ ಹೋಯಿತು.

         ನೀಲೇಶ್ವರದಿಂದ ಕಾರವಾರದವರೆಗೆ ಟಿಪ್ಪುವಿನ ಕೈದಿಗಳಾದ ಕ್ರೈಸ್ತರ ಸಂಖ್ಯೆಯೇ ಬರೋಬ್ಬರಿ 80 ಸಾವಿರ! ಸ್ತ್ರೀ, ಪುರುಷ, ರೋಗಿ, ಅಶಕ್ತ ಎಂದೆಲ್ಲಾ ನೋಡದೆ ಅವರನ್ನು ಬೆಟ್ಟಗುಡ್ಡಗಳಲ್ಲಿ ಎಳೆದುಕೊಂಡು ಹೋಗಿ ಶ್ರೀರಂಗಪಟ್ಟಣದ ಕಾರಾಗೃಹಗಳಲ್ಲಿ ಕೊಳೆಸಲಾಯಿತು. ಇಪ್ಪತ್ತು ಸಾವಿರದಷ್ಟು ಮಂದಿ ದಾರಿಯಲ್ಲೇ ಸತ್ತರು. ಮದಕರಿ ನಾಯಕರನ್ನು ಮೋಸದಿಂದ ಕೊಲ್ಲಿಸಿದ; ಮೈಸೂರು, ಕೊಡಗು, ಮಲಬಾರ್, ತುಳುನಾಡು ಸೀಮೆಗಳಾದ್ಯಂತ ದೇವಾಲಯಗಳನ್ನೂ, ಜನರನ್ನೂ ನಾಶ ಮಾಡಿ, ಮತಾಂತರಿಸಿ ಊರೂರುಗಳನ್ನೇ ಸ್ಮಶಾನವಾಗಿ ಪರಿವರ್ತಿಸಿದ ಮತಾಂಧನೊಬ್ಬನ ಆಡಳಿತದಲ್ಲಿ ಸಮಾಜ ಎಂತಹಾ ದುರ್ದೆಶೆಗೆ ಒಳಗಾಗಿರಬಹುದು? ಮನೆ, ಗದ್ದೆ, ತೋಟಗಳನ್ನೂ ಸುಟ್ಟು, ವ್ಯಾಪಾರಕ್ಕೂ ಅವಕಾಶ ಕೊಡದೆ, ಕಂದಾಯವನ್ನು ಬೇಕಾಬಿಟ್ಟಿ ಏರಿಸಿ ಬಡ ರೈತರ ಒಡಲಿಗೆ ಕೊಳ್ಳಿ ಇಟ್ಟ ಕ್ರೂರಿಯೊಬ್ಬ ಮಾತೆತ್ತಿದರೆ ಸಮಾಜವಾದದ ಮಾತಾಡುವ ಸರಕಾರಕ್ಕೆ ಅಪ್ಯಾಯಮಾನವಾಗಿದ್ದಾನೆಯೆಂದರೆ ಇದು ಕಲಿಯುಗವೇ ಸರಿ. ಏನಿಲ್ಲ, ತಾವು ಬಡವರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಜನ ಬಡಜನರ, ರೈತರ ಭೂಮಿಯ ಮೇಲೆರಗಿದ್ದ ಈ ಧೂರ್ತನ ಪ್ರಶಂಸೆ ಮಾಡುವ ಮೂಲಕ ತಮ್ಮನ್ನು ತಾವು ಬೆತ್ತಲಾಗಿರಿಸಿಕೊಂಡಿದ್ದಾರೆ, ಅಷ್ಟೇ!

ಬುಧವಾರ, ನವೆಂಬರ್ 1, 2017

ಭಾಷೆಯ ಮೇಲಿನ ದುರಭಿಮಾನ...ರಾಷ್ಟ್ರದ್ರೋಹಕ್ಕೆ ಆಹ್ವಾನ!

ಭಾಷೆಯ ಮೇಲಿನ ದುರಭಿಮಾನ...ರಾಷ್ಟ್ರದ್ರೋಹಕ್ಕೆ ಆಹ್ವಾನ!

           "ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ"- ವಸುಧೆಯೊಳಗೆ ವಿಲೀನವಾಗಿದ್ದೂ ತನ್ನ ವಿಶೇಷತೆಯನ್ನು ವಿಶದಗೊಳಿಸುತ್ತಲೇ ಇರುವ ಕಾವೇರಿಯಿಂದ ಗೋದಾವರಿಯವರೆಗಿರುವ ಜನಪದ ಎಂದು ಕನ್ನಡದ ಅನನ್ಯತೆ, ಸ್ವಂತಿಕೆಯನ್ನು ಮನೋಜ್ಞವಾಗಿ ಬಣ್ಣಿಸಿದೆ ಕವಿರಾಜಮಾರ್ಗ. ಕನ್ನಡವೊಂದು ಗುಪ್ತಭಾಷೆಯಾಗಿದ್ದಿತು ಎಂದು ಕುಮುದೇಂದು ಮುನಿಯ 'ಸಿರಿ ಭೂವಲಯ' ಗ್ರಂಥ ತಿಳಿಸುತ್ತದೆ. ಕನ್ನಡ ಭಾಷೆಯ ಈ ಕಾವ್ಯದಲ್ಲಿ ಲಿಪಿಗಳಿರುವ, ಲಿಪಿ ಇಲ್ಲದ ೭೧೮ ಭಾಷೆಗಳಿದ್ದು, ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ; ಅದು "ಸರ್ವಭಾಷಾಮಯಿ ಭಾಷಾ" ಎಂದು ಕನ್ನಡವನ್ನು ಹಾಡಿಹೊಗಳಿದ್ದಾನೆ ಕುಮುದೇಂದು ಮುನಿ. "ಗಾನವ ಬೆರೆಯಿಸಿ ವೀಣೆಯ ದನಿಯೊಳು ವಾಣಿಯ ನೇವುರ ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವ"ವೆಂದು ಒಂದು ಕಾಲದಲ್ಲಿ ಕವಿಗಳ ವರ್ಣನೆಯ ಭಾರಕ್ಕೆ ನಲುಗಿದ ಈ ಮನವ ತಣಿಸುವ ಮೋಹನ ಸುಧೆಯನ್ನು ಇನ್ನೇನು ಕೆಲವೇ ಸಮಯದಲ್ಲಿ ಕಳೆದು ಕೊಳ್ಳುತ್ತೇವೆಯೋ ಎನ್ನುವ ಭಯ ಆರಂಭವಾಗಿರುವುದು ಸುಳ್ಳಲ್ಲ! ಅಪರಿಮಿತ ಸಂಖ್ಯೆಯ ಶಬ್ಧಗಳೂ, ಕರಾರುವಕ್ಕಾದ ಅಗಾಧ ಶಬ್ಧೋತ್ಪತ್ತಿ ಇರುವ ಕನ್ನಡದ ಶಬ್ಧಗಳು ನಮ್ಮ ಕಣ್ಣೆದುರಲ್ಲೇ ಕರಗಿ ಹೋಗುತ್ತಿರುವುದನ್ನು ಕಂಡಾಗ ಅಂತಹಾ ಭಯ ಹುಟ್ಟದಿರುತ್ತದೆಯೇ?

              ಆದರೆ ಕನ್ನಡಿಗರಿಗೆ ಇದರ ಅರಿವಿದೆಯೇ? ಕನ್ನಡಕ್ಕಾಗಿ ಹೋರಾಟ ಮಾಡಲು ಬೀದಿಗೊಂದರಂತೆ ಎದ್ದಿರುವ ಕನ್ನಡ ಸಂಘಟನೆಗಳು ಕನ್ನಡದ ಅಳಿವಿಗೆ ಕಾರಣವಾಗುತ್ತಿರುವ ನೈಜ ಸಮಸ್ಯೆಯನ್ನು ಬಗೆಹರಿಸಲು ಹೋರಾಡುತ್ತಿವೆಯೇ? ಇಂತಹ ಅನುಮಾನ ಬರಲು ಕಾರಣವಿದೆ. ದಿನ ದಿನವೂ ಒಂದೊಂದಾಗಿ ಮುಚ್ಚುತ್ತಿರುವ ಕನ್ನಡ ಶಾಲೆಗಳ ದುಃಸ್ಥಿತಿಯ ಕುರಿತು ಇವರು ತುಟಿಪಿಟಿಕ್ಕೆನ್ನುವುದಿಲ್ಲ. ನಾಯಿಕೊಡೆಗಳಂತೆ ಬೆಳೆಯುತ್ತಿರುವ ಅನ್ಯಭಾಷಾ ಶಾಲೆಗಳ ಬಗ್ಗೆ ಇವರದ್ದು ದಿವ್ಯ ಮೌನ. ಅರೇಬಿಕ್ ಭಾಷೆಯನ್ನು ಪ್ರಾಥಮಿಕ ಶಾಲೆಗಳಲ್ಲಿ ಕಲಿಸುತ್ತೇವೆಂದು ಸರಕಾರ ಘೋಷಣೆ ಮಾಡಿದಾಗ ಮುಗುಮ್ಮಾಗಿ ಉಳಿದ ಈ ಹೋರಾಟಗಾರರು ಇತ್ತೀಚೆಗಷ್ಟೇ "ಮೆಟ್ರೋದಲ್ಲಿ ಹಿಂದಿ ಹೇರಿಕೆ" ಎನ್ನುವ ಕ್ಷುಲ್ಲಕ ವಿಚಾರವನ್ನು ಹಿಡಿದುಕೊಂಡು ಬೆಂಗಳೂರನ್ನು ರಾಡಿ ಎಬ್ಬಿಸಲಾರಂಭಿಸಿದರು!. ಕೇಂದ್ರ ಸರಕಾರದ ತ್ರಿಭಾಷಾ ಸೂತ್ರದ ಅನ್ವಯ ಮೆಟ್ರೋ ರೈಲಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ – ಈ ಮೂರು ಭಾಷೆಗಳಲ್ಲಿ ನಡೆಯುತ್ತಿವೆ. ಮೆಟ್ರೋ ಬೆಂಗಳೂರಿಗೆ ಬಂದ ದಿನದಿಂದಲೂ ಇದು ನಡೆಯುತ್ತಾ ಬಂದಿದೆಯೇ ಹೊರತು ಕೇಂದ್ರದಲ್ಲಿ ಭಾಜಪಾ ಸರಕಾರ ಬಂದ ಮೇಲೆ ಕಾಣಿಸಿಕೊಂಡ ಬೆಳವಣಿಗೆಯಲ್ಲವಲ್ಲ. ಈ ಹೋರಾಟಗಾರರು ಹೇಳುವ ಹಾಗೆ ಕನ್ನಡವನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿಲ್ಲ. ಅದು ಮೊದಲನೆಯ ಸ್ಥಾನದಲ್ಲೇ ಇದೆ. ಕೇವಲ ಮೆಟ್ರೋ ಮಾತ್ರವಲ್ಲ; ಭಾರತೀಯ ರೈಲ್ವೇ, ಸೂಪರ್ ಮಾರ್ಕೆಟ್, ಅಂಚೆ, ಬ್ಯಾಂಕ್, ಬಸ್ ನಿಲ್ದಾಣ ಎಲ್ಲಾ ಕಡೆ ಇದೇ ಕ್ರಮ ಹಲವು ದಶಕಗಳಿಂದಲೂ ಚಾಲ್ತಿಯಲ್ಲಿದ್ದರೂ ಈಗ ಇದ್ದಕ್ಕಿದ್ದಂತೆ ಕೆಲವರು ದಂಗೆ ಎದ್ದದ್ದೇಕೆ? ಈಗ ಮೂರನೇ ಸ್ಥಾನದಲ್ಲಿರುವ ಹಿಂದಿ ಮುಂದೊಂದು ದಿನ ಕನ್ನಡದ ಸ್ಥಾನವನ್ನು ತಾನೇ ಆಕ್ರಮಿಸಿಕೊಳ್ಳುತ್ತದೆ ಎನ್ನುವ ಇವರ ವಾದದಲ್ಲಿ ಹುರುಳಿದೆಯೇ? ಕನ್ನಡ ತನ್ನ ಸ್ಥಾನವನ್ನು ಫಲಕದಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಜನಮಾನಸದಲ್ಲಿ ಉಳಿಸಿಕೊಳ್ಳಬೇಕೇ? ಹಿಂದಿ ಬೇಡವೇ ಬೇಡ ಎನ್ನುವವರಿಗೆ ಕೆಲವು ಪ್ರಶ್ನೆಗಳಿವೆ. ಇಂಗ್ಲೀಷ್ ಬಾರದ ಉತ್ತರ ಭಾರತದ ವ್ಯಕ್ತಿಯೊಬ್ಬ ಕರ್ನಾಟಕಕ್ಕೆ ಬಂದರೆ ಏನು ಮಾಡಬೇಕು? ಇಂಗ್ಲೀಷ್ ಜಾಗತಿಕ ಭಾಷೆ ಎನ್ನುವವರಿಗೆ ಭಾರತದಲ್ಲಿ ಇಂಗ್ಲೀಷ್ಗಿಂತ ಹೆಚ್ಚು ಹಿಂದಿ ಮಾತಾಡುವವರಿದ್ದಾರೆ ಎನ್ನುವುದರ ಅರಿವಿದೆಯೇ? ಇಂಗ್ಲೀಷ್ ಜಾಗತಿಕ ಭಾಷೆ, ಹೊರಗಿನವರು ಬಂದರೆ ಬೇಕು ಎನ್ನುವ ವಾದ ಹೂಡುವವರಿಗೆ ನಮ್ಮವರೇ ಆದ ಭಾರತೀಯರು ಬೇಡವೇ? ಇಂಗ್ಲೀಷ್ ಬರುವುದಕ್ಕಿಂತ ಎಷ್ಟೋ ಮುಂಚೆ ಇಲ್ಲಿನವರು ಬದುಕಿರಲಿಲ್ಲವೇ? ಒಂದು ಸ್ಥಳದಿಂದ ಇನ್ನೊಂದು ಕಡೆ ಅಡ್ಡಾಡುತ್ತಿರಲಿಲ್ಲವೇ?  ಕರ್ನಾಟಕದಲ್ಲಿ 5000ಕ್ಕೂ ಹೆಚ್ಚು ಪ್ರಾಥಮಿಕ / ಮಾಧ್ಯಮಿಕ / ಪ್ರೌಢ ಉರ್ದು ಶಾಲೆಗಳಿವೆ. ಇಷ್ಟೊಂದು ಸಂಖ್ಯೆಯ ಉರ್ದು ಶಾಲೆಗಳು ಮುಂದೊಂದು ದಿನ ರಾಜ್ಯದ ಎರಡನೇ ಬಹುದೊಡ್ಡ ಪಂಗಡವನ್ನು ಕನ್ನಡವೇ ಮರೆಯುವಂತೆ ಮಾಡಬಹುದೆಂದು ಕನ್ನಡದ ಭವಿಷ್ಯದ ಬಗ್ಗೆ ಕಾಳಜಿಯುಳ್ಳ ಈ ಹೋರಾಟಗಾರರಿಗೇಕೆ ಅನಿಸಿಲ್ಲ? ಅವರ್ಯಾಕೆ ಈ ಉರ್ದು ಹೇರಿಕೆಯ ಮೇಲೆ ಹೋರಾಟ ಮಾಡಲೊಲ್ಲರು? ಕನ್ನಡದ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದ ಕನ್ನಡ ವಿರೋಧಿ ಟಿಪ್ಪುವಿನ ವೈಭವೀಕರಣದ ಆಚರಣೆಗೆ ತೊಡಗಿದ ರಾಜ್ಯ ಸರ್ಕಾರದ ಕ್ರಮವನ್ನು ಇವರು ವಿರೋಧಿಸಿಲ್ಲವೇಕೆ? ಹಿಂದಿಯಿಂದಾಗಿ ಕನ್ನಡ ಸಾಯುತ್ತದೆ ಅನ್ನುವುದು ಸುಳ್ಳು. ಹಿಂದಿಯ ನಡುವೆ ಇದ್ದುಕೊಂಡು ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿಲ್ಲವೆ? ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಭೀತಿ ಕೇವಲ ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

            ವಾಸ್ತವದಲ್ಲಿ ಈ ಹೋರಾಟಗಾರರಲ್ಲಿ ಹೆಚ್ಚಿನವರಿಗೆ ಹೋರಾಟವೆಂದರೆ ತಮ್ಮ ಬೇಳೆ ಬೇಯಿಸಿಕೊಳ್ಳಲಿರುವ ಒಂದು ಮಾಧ್ಯಮ ಅಷ್ಟೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸದ ಇವರದ್ದು ಎಂತಹಾ ಹೋರಾಟ? ಅವರಿಗೆ ಕೇವಲ ತಮ್ಮ ಸ್ವಾರ್ಥ ಸಾಧನೆಗಷ್ಟೇ ಕನ್ನಡ ಬೇಕು.  ಮೆಟ್ರೋ ಸಂಚಾರ ವ್ಯವಸ್ಥೆಯಲ್ಲಿ ಯಾರೂ ಗಮನ ಕೊಡದ ಯಃಕಶ್ಚಿತ್ ಬೋರ್ಡುಗಳ ಭಾಷೆಯ ವಿಷಯವೇ ಇವರಿಗೆ ಪ್ರಧಾನವಾಗಿ ಕಾಣಿಸಿಕೊಳ್ಳುವುದರ ಹಿಂದೆ ಏನೋ ಕುಯುಕ್ತಿ, ಹಿತಾಸಕ್ತಿಗಳು ಇರುವುದು ಸುಸ್ಪಷ್ಟ. ಯಾವ ಹೋರಾಟದಿಂದ ಕೇಂದ್ರದ ಭಾಜಪಾ ಸರಕಾರವನ್ನು ಜನರ ಮನಸ್ಸಿನಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ, ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮರೆಸಬಹುದೋ ಅಂಥವಷ್ಟೇ ಇವರಿಗೆ ಬಹುದೊಡ್ಡ ಸಮಸ್ಯೆಗಳಾಗಿ ಕಾಣಿಸುತ್ತವೆ. ಅವಕ್ಕಷ್ಟೇ ಇವರ ಕಪ್ಪು ಬಾವುಟಗಳು ಹಾರಾಡುತ್ತವೆ. ವಿಚಿತ್ರ ಹಾಗೂ ವಿಪರ್ಯಾಸದ ವಿಚಾರವೆಂದರೆ ಹೆಚ್ಚಿನ ಕನ್ನಡಪರ ಚಳವಳಿಗಳಲ್ಲಿ ಭಾಗವಹಿಸುವ ಕಾರ್ಯಕರ್ತರನೇಕರಿಗೆ ತಾವ್ಯಾಕೆ ಹೋರಾಟ ನಡೆಸುತ್ತಿದ್ದೇವೆ ಎನ್ನುವುದರ ಅರಿವೇ ಇರುವುದಿಲ್ಲ. ಹಿಡಿಯಷ್ಟಿರುವ ಪ್ರಾಮಾಣಿಕ ಹೋರಾಟಗಾರರಿಗೆ ತಾವು ಮುಂಚೂಣಿಯಲ್ಲಿರುವವರ ಸ್ವಾರ್ಥಕ್ಕೆ ಬಲಿಯಾಗಿರುವುದು ತಿಳಿದಾಗ ಬೆಳಗಾಗಿರುತ್ತದೆ.

            ಕೆಲ ರಾಜ್ಯಗಳ ಗಡಿ ಭಾಗಗಳಲ್ಲಿ ಭಾಷೆಯ ಬದಲು ಭಾಷಾ ಜಗಳಗಳ ನಿತ್ಯ ಕಲರವ. ಭಾಷೆಯ ಮೇಲಿನ ಅಂಧಾಭಿಮಾನ ಕೇವಲ ಭೂ ಅಥವಾ ಜಲವಿವಾದಕ್ಕಷ್ಟೇ ಸೀಮಿತವಾಗಿಲ್ಲ. ಅದು ರಾಜಕಾರಣದಲ್ಲೂ, ಆಡಳಿತಾತ್ಮಕ ಸೇವೆಗಳಲ್ಲೂ ಕಾರ್ಪೋರೇಟ್ ಜಗತ್ತಿನಲ್ಲೂ ಹಾಸುಹೊಕ್ಕಾಗಿದೆ. ತಮಿಳಿಗರ ಭಾಷಾಂಧತೆ ಎಷ್ಟೆಂದರೆ ಅಲ್ಲಿ ದೇಶವನ್ನು "ರಾಷ್ಟ್ರ"ವನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸ್ಕೃತ ಹಾಗೂ ಇತರ ಭಾಷೆಗಳಿಗೆ ಸ್ಥಾನವೇ ಇಲ್ಲ. ಆದರೆ ತಮಿಳರಿಗೆ ಧರ್ಮ, ಸಂಸ್ಕೃತಿ ಹಾಗೂ ಜೀವನಕ್ರಮ ಹೀಗೆ ಎಲ್ಲವೂ ಆಗಿರುವ ತಮಿಳು ಭಾಷೆ ಇತ್ತೀಚೆಗೆ ಎಷ್ಟು ವಿಸ್ತಾರಗೊಂಡಿದೆ? ಬ್ರಿಟನ್ನಿನ ನೆರೆಯ ರಾಷ್ಟ್ರ ಫ್ರಾನ್ಸ್ ಇಂಗ್ಲೀಷನ್ನು ತನ್ನೊಳಗೆ ಬಿಟ್ಟುಕೊಳ್ಳಲೇ ಇಲ್ಲ. ಜೊತೆಗೇ ತಮ್ಮ ಭಾಷೆಯನ್ನು ಅತಿಯಾಗಿ ಪ್ರೀತಿಸುವ ಅವರು ಅದನ್ನು ಫ್ರಾನ್ಸಿನ ಗಡಿಯೊಳಗೆ ಬಂಧಿಸಿಬಿಟ್ಟರು. ಇದರಿಂದ ಇಂಗ್ಲೀಷಿಗೇನೂ ನಷ್ಟವಾಗಲಿಲ್ಲ. ಆದರೆ ಇವತ್ತು ಫ್ರೆಂಚನ್ನು ಫ್ರಾನ್ಸ್ ಹಾಗೂ ಬೆರಳೆಣಿಕೆಯ ದೇಶಗಳನ್ನು ಬಿಟ್ಟರೆ ಕೆಲವು ಪ್ರತಿಷ್ಠಿತ ವಿದ್ಯಾಲಯಗಳ ಅಹಮಿಕೆಯ ಭಾಷಾ ಕಲಿಕೆಯಾಗಿ ಮಾತ್ರ ನಾವು ನೋಡಬಹುದು ಅಷ್ಟೇ! ಒಂದು ಭಾಷೆಯನ್ನು ನಮ್ಮದು, ನಮ್ಮದು ಮಾತ್ರ ಎಂದು ಹಿಡಿದಿಟ್ಟರೆ, ಒಂದು ಪ್ರಾಂತ್ಯಕ್ಕಷ್ಟೇ ಸೀಮಿತಗೊಳಿಸಿದರೆ ಅದು ಬೆಳೆಯುವುದಾದರೂ ಹೇಗೆ? ಇದನ್ನೇ ಕನ್ನಡಿಗರಿಗೂ ಅನ್ವಯಿಸಬಹುದು. ಕನ್ನಡದ ಹೆಸರಲ್ಲಿ ಕಂಡಕಂಡವರಿಗೆ ಬಡಿದರೆ ಕನ್ನಡ ಉಳಿಯುತ್ತದೆಯೇ? ಕನ್ನಡ ಮಾತಾಡಲು ಬರುವುದಿಲ್ಲವೆಂಬ ಕಾರಣಕ್ಕಾಗಿ ಅನ್ಯಭಾಷಿಕರ ಮೇಲೆ ಹಲ್ಲೆ ನಡೆಸುವ ಅನಗತ್ಯ "ಓರಾಟ"ಗಳಿಗೆ ಬಲಿಬೀಳುವ ಬದಲು ಇಲ್ಲಿರುವ ಅನ್ಯಭಾಷಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ, ಕನ್ನಡ ಕಲಿಸಿ; ಆಗ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ. ಎರಡು ಸಾವಿರ ವರ್ಷಗಳ ಕಾಲ ಮರಳಿನಡಿ ಹೂತುಹೋಗಿದ್ದ ಹೀಬ್ರೂ ಭಾಷೆಯನ್ನು ಮತ್ತೆ ಮೇಲೆ ಚಿಮ್ಮಿಸಿದ  ಇಸ್ರೇಲಿಗಳ ಸಾಹಸಗಾಥೆ ನಮ್ಮ ಕಣ್ಣಮುಂದಿದೆ.

            ಯಾವಾಗ ಕವಿರಾಜಮಾರ್ಗ 'ಕಾವೇರಿಯಿಂದ ಗೋದಾವರಿವರೆಗೆ ಮೆರೆವ ಜನಪದ' ಎಂದು ಕನ್ನಡವನ್ನು ವರ್ಣಿಸಿತ್ತೋ ಆಗ ಇಂಗ್ಲೀಷ್, ಹಿಂದಿಗಳು ಹುಟ್ಟಿರಲೇ ಇಲ್ಲ. ಹಾಗೆ ಮೆರೆದ ಕನ್ನಡ ಭಾಷೆಯ ಉಳಿವಿಗಾಗಿ ಇಂದು ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರಂತೂ ಖಂಡಿತಾ ಅಲ್ಲ. ತಮ್ಮ ಮುಂದಿನ ಪೀಳಿಗೆಯ ಮಾತೃಭಾಷೆಯನ್ನೇ ಬದಲು ಮಾಡುತ್ತಿರುವ ಕನ್ನಡಿಗರೇ ಅಲ್ಲವೇ? ಕನ್ನಡಿಗರು ಎಷ್ಟರ ಮಟ್ಟಿಗೆ ಭಾಷೆಯನ್ನು ದೂರ ಸರಿಸುತ್ತಿದ್ದಾರೆ ಎಂದರೆ ಇಲ್ಲಿ ಬಂದು ನೆಲೆಸಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಯುವ ಶ್ರಮ ಬೇಡವೆಂದು ಕನ್ನಡಿಗರೇ ಅವರ ಭಾಷೆಯನ್ನು ಕಲಿತು ಅವರಿಗೆ ಸಹಕಾರ ಮಾಡುವಷ್ಟು! ನಡುನಡುವೆ ಯಥೇಚ್ಛ ಆಂಗ್ಲ ಪದಗಳನ್ನು ಬಳಸುವುದೇ ಪ್ರತಿಷ್ಠೆಯ ವಿಚಾರವಾಗಿರುವುದು ಕನ್ನಡಿಗರ ಶಬ್ಧ ದಾರಿದ್ರ್ಯದ ಸಂಕೇತ. ಮಾಹಿತಿ ತಂತ್ರಜ್ಞಾನದ ಕೇಂದ್ರ ಎಂದೆನಿಸಿರುವ ಕರ್ನಾಟಕದಲ್ಲಿ ಮಾಹಿತಿಗಾಗಲಿ ಅಥವಾ ಆಡಳಿತಾತ್ಮಕ ವಿಷಯಗಳಿಗಾಗಲೀ ಮಾತೃಭಾಷೆ ಕನ್ನಡವನ್ನು ಬಳಸುವ ತಂತ್ರಜ್ಞಾನದ ಬೆಳವಣಿಗೆ ಆಗಿರುವುದು ಅತ್ಯಲ್ಪ ಎಂದರೆ ವಿಚಿತ್ರವಲ್ಲವೇ? ಹೀಗೆ ನಮ್ಮ ಭಾಷೆಯ ಅಳಿವಿಗೆ ನಾವೇ ಕಾರಣವಾಗಿದ್ದರೂ ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ಭಾಷೆ ಬೆಳೆಯುವುದು ಯಾವುದೋ ಶಾಸ್ತ್ರೀಯ ಸ್ಥಾನಮಾನವೋ ದೊಡ್ಡ ಇಡುಗಂಟು ಸಿಗುವುದರಿಂದಲ್ಲ. ಭಾಷೆ ಬೆಳೆಯಬೇಕಾದರೆ ಜನ ಅದನ್ನು ತಮ್ಮ ನಿತ್ಯ ವ್ಯವಹಾರದಲ್ಲಿ ಬಳಸಬೇಕು. ವಿಚಿತ್ರವೆಂದರೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಡುವವರ ಮಾತಿನಲ್ಲಿ ಕಂಗ್ಲೀಷ್ ತುಂಬಿತುಳುಕಾಡುತ್ತಿರುತ್ತದೆ!

2005ರ ಮೇಯಲ್ಲಿ ಮಣಿಪುರದ ಮಹಾನ್ ಆಸ್ತಿಯಾಗಿದ್ದ ಬೃಹತ್ ಗ್ರಂಥಾಲಯವೊಂದು ಧಗಧಗನೆ ಉರಿದು ಹೋಯಿತು. ಪ್ರಾಚೀನ ಕಾಲದ ಅಪರೂಪದ ಪುಸ್ತಕಗಳು, ಸಾವಿರಾರು ಹಸ್ತಪ್ರತಿಗಳು ಭಸ್ಮವಾದವು. ಗ್ರಂಥಾಲಯದಲ್ಲಿ ಬಂಗಾಳಿ ಹಸ್ತಪ್ರತಿಗಳ ಸ್ಥಾನದಲ್ಲಿ ಸ್ಥಳೀಯ ಮೈತಿಯ್ ಭಾಷೆಯ ಹಸ್ತಪ್ರತಿಗಳಿರಬೇಕು ಎಂಬ ಕಮ್ಯೂನಿಸ್ಟರು ಹಾಗೂ ಚರ್ಚುಗಳಿಂದ ಪ್ರೇರಿತವಾಗಿರುವ ಸ್ಥಳೀಯ ಮೈತಿಯ್ ಆಂದೋಲನದ ತಾಲಿಬಾನ್ ಮನಸ್ಥಿತಿ ಇದಕ್ಕೆ ಕಾರಣವಾಗಿತ್ತು! ಅಧ್ಯಾಪಕರಿಂದ ಹಿಡಿದು ವಿಶ್ವವಿದ್ಯಾಲಯದ ಕುಲಪತಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರವರೆಗೂ ತಮ್ಮವರನ್ನೇ ನೇಮಕ ಮಾಡಬೇಕೆಂದು ಗನ್ ಹಿಡಿದೇ ಬೆದರಿಸುವ ಈ ಸಂಘಟನೆ ರಾಷ್ಟ್ರಗೀತೆಯನ್ನೇ ನಿಷೇಧಿಸಿತ್ತು. ಕನ್ನಡ ಪರ ಹೋರಾಟಗಾರರ ಇತ್ತೀಚೆಗಿನ ನೀತಿ ನಿಲುವುಗಳನ್ನು, ಹೋರಾಟಗಳ ಭವಿಷ್ಯವನ್ನು ಊಹಿಸಿದರೆ ಅವು ಮೇಲಿನ ಘಟನೆಯನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಕನ್ನಡ ಹೋರಾಟದ ಮುಖವಾಡ ಹೊತ್ತು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇಂಥವರ ನಡುವೆ ನಲುಗುತ್ತಿರುವ ಕನ್ನಡಿಗರು ಎಚ್ಚೆತ್ತುಕೊಳ್ಳುವುದು ಅವಶ್ಯ. ಒಂದೇ ಪರಂಪರೆ-ಇತಿಹಾಸ, ಒಂದೇ ಬಗೆಯ ಆಸೆ-ಆಕಾಂಕ್ಷೆಗಳುಳ್ಳ ನಾವು ವರ್ತಮಾನದ ಲೆಕ್ಕಾಚಾರಗಳಿಗೆ ಸಿಲುಕಿ, ಮನಸ್ಸು ಮನಸ್ಸುಗಳ ನಡುವೆ ಪ್ರತ್ಯೇಕತೆಯ ಗೋಡೆ ಎಬ್ಬಿಸಿಕೊಂಡು ಭಾಷಾಂಧರಾಗಿ ನಮ್ಮ ಪರಂಪರೆಯನ್ನು ಮರೆತು ಈ ದೇಶವನ್ನು ತುಂಡರಿಸುತ್ತಾ ಹೋದೆವೆಂದರೆ ಒಂದು ರಾಷ್ಟ್ರವಾಗಿ ಉಳಿಯಲಾರೆವು.

ಪದ್ಮಾವತಿಯ ಇತಿಹಾಸವನ್ನು ಯಥಾವತ್ ಇಳಿಸಲೇನು ಧಾಡಿ?

ಪದ್ಮಾವತಿಯ ಇತಿಹಾಸವನ್ನು ಯಥಾವತ್ ಇಳಿಸಲೇನು ಧಾಡಿ?

           "ಬರೇ ರಾಣಿಯೊಬ್ಬಳೇಕೆ; ನಿಮ್ಮ ಜನಾನವನ್ನು ಅಲಂಕರಿಸಲು ರಾಣೀವಾಸದ ಸುಂದರ ಸ್ತ್ರೀಯರೆಲ್ಲರೂ ಬರುತ್ತಿದ್ದಾರೆ ಜಹಂಪನಾ" ಎನ್ನುವ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸಿ ಸುಲ್ತಾನನ ಕಾಮದ ಹುಚ್ಚು ಕೆರಳುತ್ತಿದೆ. ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುವ ದೃಶ್ಯವನ್ನು ನೋಡಿದ ಮೇಲಂತೂ ಸ್ವರ್ಗಕ್ಕಿನ್ನು ಮೂರೇ ಗೇಣು ಎಂಬಂತೆ ಹುಚ್ಚನಂತೆ ಕುಣಿಯುತ್ತಾನೆ. ಪಲ್ಲಕ್ಕಿಗಳು ಹತ್ತಿರ ಬಂದವು; ಬಂದು ಸೆರೆಯಲ್ಲಿದ್ದ ತಮ್ಮರಸನನ್ನು ಕಂಡವು; ಒಂದು ಪಲ್ಲಕ್ಕಿ ರಾಜನನ್ನು ಹತ್ತಿಸಿಕೊಂಡು ನೋಡನೋಡುತ್ತಿದ್ದಂತೆ ಮರೆಯಾಯಿತು! ತನ್ನ ಮನಸ್ಸನ್ನು ಸೂರೆಗೈದ ಸುಂದರಿಯನ್ನು ಕಾಣಲು ಕಾತರನಾಗಿರುವ ಸುಲ್ತಾನ ಕಂಡದ್ದು ಖರವಾಲ ಹಿಡಿದು ತನ್ನ ಸೇನೆಯನ್ನು ತರಿಯುತ್ತಿರುವ ಏಳುನೂರು ಸುಂದರಿಯನ್ನು! ಕಂಸ ತನ್ನ ಮರಣದ ಹಿಂದಿನ ರಾತ್ರಿ ಕಂಡ ಕೃಷ್ಣನಂತೆ; ಉರಿಯುವ ಒಂದು ದೀಪ ಸಾಸಿರವಾಗಿ ಪ್ರತಿಯೊಂದು ದೀಪವೂ ಕೃಷ್ಣನಾದಂತೆ! ಏಳ್ನೂರು ಜನರೇನೋ ತನ್ನ ಅಳಿದುಳಿದ ಅಗಾಧ ಸೇನೆಗೆ ಬಲಿಯಾಗಿ ಪ್ರಾಣ ಕಳೆದುಕೊಂಡರು! ಆದರೆ ಆ ಸುಂದರಿಯನ್ನು ಪಡೆಯದೇ ತನ್ನ ಪ್ರಾಣವೇ ಹೋಯಿತಲ್ಲ! ಒಂದು ಸುಂದರಿ ನೂರಾಗಿ, ಏಳು ನೂರಾಗಿ ನನ್ನ ಆಸೆಯನ್ನೇ ಹೀರಿಬಿಟ್ಟರಲ್ಲಾ " ಯಾ ಅಲ್ಲಾಹ್" ಎಂದು ಚೀರಿದ ಸುಲ್ತಾನ್!

             ಯಾವ ಸಿನಿಮೀಯ ದೃಶ್ಯಕ್ಕಿಂತ ಕಡಿಮೆಯಿದೆ ಇದು? ಆದರೆ ಅದು ಬರಿಯ ಕಥೆಯಲ್ಲಾ; ಇತಿಹಾಸ, ಅದನ್ನು ತಿರುಚಬೇಡ ಎಂದು ರಜಪೂತ ಕರಣಿ ಸೇನಾ ಕೊಟ್ಟ ಪ್ರಹಾರವನ್ನು ಬನ್ಸಾಲಿ ನೆನಪಲ್ಲಿಟ್ಟುಕೊಂಡಿರುವ ಸಾಧ್ಯತೆಯಿದೆಯೇ? ಬನ್ಸಾಲಿ ಜಗತ್ತಿಗೆ ತನ್ನ ಸೆಕ್ಯುಲರ್ ರೀಲ್ ತೋರಿಸುವುದಕ್ಕೆ ಮುಂಚೆ, ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸಿದ ಆ ಧರ್ಮಾತ್ಮೆಯ ರಿಯಲ್ ಇತಿಹಾಸದ, ಅಲಾವುದ್ದೀನನ ನಿಜ ಸ್ವರೂಪದ ಪರಿಚಯವಾಗಬೇಕಲ್ಲ? ಮಹಾರಾಣಿ ಪದ್ಮಿನಿ! ಚಿತ್ತೂರಿನಿಂದ 64. ಕಿ.ಮೀ. ದೂರದಲ್ಲಿರುವ  ಸಿಂಗೋಲ್ ಎನ್ನುವ ಸಣ್ಣ ಸಂಸ್ಥಾನವೊಂದರ ಸರದಾರನ ಮಗಳು. ರಾಣಾ ರತನ್ ಸಿಂಹನ ಧರ್ಮಪತ್ನಿ; ಅಪ್ರತಿಮ ಸುಂದರಿ. ತನ್ನ ಜೀವಕ್ಕಿಂತಲೂ  ಪತಿಯ ಬಗೆಗೆ, ತನ್ನ ರಾಜ್ಯದ ಬಗೆಗೆ, ತನ್ನ ಪ್ರಜೆಗಳ ಬಗೆಗೆ, ತನ್ನ ನಾಡಿನ ಸ್ವಾತಂತ್ರ್ಯದ ಬಗೆಗೆ ಹೆಚ್ಚು  ಪ್ರೀತ್ಯಾದರಗಳನ್ನು ಹೊಂದಿದವಳು. ಆದರ್ಶ ನಾರಿಯರು ಹೇಗಿರಬೇಕು ಎನ್ನುವುದಕ್ಕೆ ಪಥದರ್ಶಕಳಾದವಳು. ಆದರ್ಶ ನಾರಿಯ ಮೌಲ್ಯಗಳಿಗೇ ಧಕ್ಕೆ ಉಂಟಾಗುವ ಸನ್ನಿವೇಶ ಬಂದಾಗ ಧೈರ್ಯ-ಸ್ಥೈರ್ಯಗಳಿಂದ ಎದುರಿಸಿ, ಕೊನೆಗೆ ಬೇರೆ ದಾರಿಯೇ ಇಲ್ಲದಿದ್ದಾಗ ಆತ್ಮಸಮರ್ಪಣೆ ಮಾಡಿಕೊಂಡ ಧೀರ ವನಿತೆ ಆಕೆ. ಅವಳ ಜೀವನದಿಂದ ಸ್ಫೂರ್ತಿಗೊಂಡ ಕವಿಗಳು ಅನೇಕ. ರಾಜಸ್ಥಾನದ ಉದ್ದಕ್ಕೂ ಅವಳ ಬಗೆಗಿನ ಜಾನಪದ ಕಥೆಗಳು, ಹಾಡುಗಳು ಹರಡಿವೆ. ಜಟ್ಮಲ್ನ ಗೋರಾ-ಬಾದಲ್, ಮಲ್ಲಿಕ್ ಮೊಹಮ್ಮದ್ ಜಾಯಸೀಯ ಪದ್ಮಾವತ್, ಐನೆ ಅಕ್ಬರಿ, ಫರಿಸ್ತಾನ ಕೃತಿಗಳಲ್ಲಿ ಪದ್ಮಿನಿಯ ಕಥಾನಕವು ಕಾಣಿಸಿಕೊಂಡಿದೆ.

            ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಬಲಿಷ್ಠನಾಗಿದ್ದ ಅಲಾವುದ್ದೀನ್ ಖಿಲ್ಜಿ ದೊಡ್ಡಪ್ಪ ಸುಲ್ತಾನ ಜಲಾಲುದ್ದೀನ್ ಖಿಲ್ಜಿಯ ಕೈಕೆಳಗೆ ಸುಬೇದಾರನಾಗಿದ್ದ. ಖಾರ ಮತ್ತು ಮಾಳವ ರಾಜ್ಯಗಳ ಪ್ರಾಂತ್ಯಾಧಿಕಾರಿಯಾಗಿದ್ದ, ಅತೀವ ಮಹತ್ವಾಕಾಂಕ್ಷಿಯಾಗಿದ್ದ ಈತ ಆಗ ಸಿರಿಸಂಪದಗಳಿಂದ ಮೆರೆಯುತ್ತಿದ್ದ ದೇವಗಿರಿಯ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆಯಲು ನಿಶ್ಚಯಿಸಿದ. ದೆಹಲಿಯಿಂದ ದೇವಗಿರಿಗೆ 700 ಮೈಲುಗಳು. ಸೈನಿಕರಿಗೆ ಆಹಾರ, ಕುದುರೆಗಳಿಗೆ ಮೇವು ಸಿಗದಿದ್ದರೆ ಇಡೀ ಸೈನ್ಯ ಹಸಿವಿನಿಂದ ನರಳಿ ನಾಶವಾಗುವ ಭಯ. ಪಥದಲ್ಲೆಷ್ಟೋ ಹಿಂದೂ ರಾಜ್ಯಗಳು. ಆದರೂ ದೊಡ್ಡಪ್ಪನಿಗೆ ಧೈರ್ಯ ತುಂಬಿ ಎಂಟು ಸಾವಿರ ಸೈನಿಕರೊಡನೆ ಹೊರಟ. ಮಾರ್ಗಮಧ್ಯದಲ್ಲಿ ಇಷ್ಟು ದೊಡ್ದ ಸೈನ್ಯವನ್ನು ಒಡಗೂಡಿ ಹೋಗುತ್ತಿರುವ ಇವನನ್ನು ಯಾರೂ ತಡೆಯಲಿಲ್ಲ. ದೇವಗಿರಿಯೂ ಯುದ್ಧದ ಸಿದ್ಧತೆಯಲ್ಲಿರಲಿಲ್ಲ. ದೇವಗಿರಿಯ ರಾಜ ರಾಮದೇವ ಆ ಸಮಯದಲ್ಲಿ ಬೇರೊಂದು ಊರಿನಲ್ಲಿ ದೇವರ ದರ್ಶನಕ್ಕೆ ತೆರಳಿದ್ದ. ನಮ್ಮವರ ಗೂಢಚಾರ ವ್ಯವಸ್ಥೆ ಎಷ್ಟು ದುರವಸ್ಥೆಯಲ್ಲಿತ್ತು ಎನ್ನುವುದಕ್ಕೆ ಉದಾಹರಣೆ ಇದು. ಸೈನ್ಯವೂ ಮಗ ಶಂಕರದೇವನ ನೇತೃತ್ವದಲ್ಲಿ ಬೇರೊಂದು ಕಡೆ ಯುದ್ಧಕ್ಕೆ ತೆರಳಿತ್ತು. ಸುದ್ದಿ ತಿಳಿದಾಕ್ಷಣ ಬಂದು ಹಳ್ಳಿಯ ಜನರನ್ನೇ ಒಟ್ಟು ಸೇರಿಸಿ ಖಿಲ್ಜಿಯನ್ನು ಎದುರಿಸಿದನಾದರೂ ಗೆಲ್ಲಲಾಗಲಿಲ್ಲ. ಆ ಸಮಯಕ್ಕೆ ಕೋಟೆಗೆ ಮುತ್ತಿಗೆ ಹಾಕಿದ ಖಿಲ್ಜಿ "ನಾನು ಚಿಕ್ಕ ಸೈನ್ಯದೊಂದಿಗೆ ಬಂದಿದ್ದೇನೆ, ಹಿಂದೆ ಸುಲ್ತಾನರ ದೊಡ್ಡ ಸೈನ್ಯ ಸಾಗರದಂತೆ ಬರುತ್ತಿದೆ" ಎಂದು ಬೆದರಿಸಿದ. ಭೀಮದೇವನ ಸಂಬಂಧಿಕರು, ಪುರಪ್ರಮುಖರು ಹಾಗೂ ಬ್ರಾಹ್ಮಣರನ್ನು ಬಂಧಿಸಿ ಸಂಕೋಲೆಗಳಿಂದ ಬಿಗಿದು ಕೋಟೆಯ ಎದುರು ಮೆರವಣಿಗೆ ನಡೆಸಿ ರಾಜನ ಮೇಲೆ ಒತ್ತಡ ಹೇರಿದ ಆ ಧೂರ್ತ. ರಾಜ ಬೇರೆ ದಾರಿ ಕಾಣದೆ ಕಪ್ಪ ಕೊಟ್ಟು ಸಂಧಿ ಮಾಡಿಕೊಳ್ಳಬೇಕಾಯಿತು. ಹೊರರಾಜ್ಯಕ್ಕೆ ಯುದ್ಧಕ್ಕೆ ಹೋದ ದೇವಗಿರಿಯ ಸೈನ್ಯ ಬಂದರೆ ತನ್ನ ಕಥೆ ಮುಗಿದಂತೆಯೇ ಎಂಬ ಭಯದಿಂದ ಖಿಲ್ಜಿ ಸಂಧಿಗೆ ಮರುಮಾತಿಲ್ಲದೆ ಒಪ್ಪಿದ. ರಾಜ ಹಣ ಕೊಟ್ಟು ತನ್ನವರಲ್ಲಿ ಅನೇಕರನ್ನು ಸೆರೆಯಿಂದ ಬಿಡಿಸಿಕೊಳ್ಳುವ ಹೊತ್ತಿಗೆ ಯುವರಾಜ ಶಂಕರದೇವನ ಸೈನ್ಯ ಬಂದು ಖಿಲ್ಜಿಯ ಸೈನ್ಯವನ್ನು ಸದೆಬಡಿಯಲಾರಂಭಿಸಿತು. ಇನ್ನೇನು ಖಿಲ್ಜಿಯ ಕಥೆ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಯುವರಾಜನಿಗೆ ಸಹಾಯಕ್ಕೆಂದು ಕೋಟೆಯೊಳಗಿನಿಂದ ಸೈನಿಕರು ಉತ್ಸಾಹದಿಂದ ಹೊರಬರಲಾರಂಭಿಸಿದರು. ಆಗ ಎದ್ದ ಧೂಳನ್ನು ಕಂಡು ಇದು ದೆಹಲಿಯ ಮಹಾಸೈನ್ಯ ಎಂದು ಬೆದರಿದ ಶಂಕರದೇವನ ಸೈನಿಕರು ಓಡಿ ಹೋದರು. ಗೊಂಡ್ವಾನ ಹಾಗೂ ಖಾನ್ ದೇಶಗಳ ಮೂಲಕ ಹಿಂದಿರುಗುವಾಗ ಖಿಲ್ಜಿ ತಾನು ಸೆರೆಯಲ್ಲಿರಿಸಿಕೊಂಡು ಬಂದಿದ್ದ ಕೃಷಿಕರನ್ನು ಹಾಗೂ ಇತರ ಪ್ರಮುಖ ಜನರನ್ನು ಅಪಾರ ಪ್ರಮಾಣದ ಹಣಕ್ಕೆ ಮಾರಿದ. ಚಿನ್ನ, ಬೆಳ್ಳಿ, ರತ್ನ ಮೊದಲಾದ ಅಪಾರ ಸಂಪತ್ತಿನೊಡನೆ ಹಿಂದಿರುಗಿದ ವಿಜಯಿ ಅಲಾವುದ್ದೀನನನ್ನು ಸುಲ್ತಾನ್ ಜಲಾಲುದ್ದೀನನು ಗಂಗಾತೀರದಲ್ಲಿ ಸ್ವಾಗತಿಸುವಂತೆ ನಿಷ್ಕರ್ಷೆಯಾಯಿತು. ಗುಪ್ತವಾಗಿ ಮೊದಲೇ ನಿರ್ಧರಿಸಿದ್ದಂತೆ ಸಂದರ್ಶನದ ವೇಳೆಯಲ್ಲಿ ಅಲಾವುದ್ದೀನ್ ಕುತಂತ್ರದಿಂದ ದೊಡ್ಡಪ್ಪನನ್ನು ಕೊಲೆಮಾಡಿ, ತನ್ನ ವಿರೋಧಿಗಳನ್ನೂ ಕೊಲೆಗೈದು ದಕ್ಷಿಣದಿಂದ ದೋಚಿ ತಂದಿದ್ದ ಐಶ್ವರ್ಯವನ್ನು ತನಗೆ ಬೇಕಾದವರಿಗೆ ಹಂಚಿ, ದೆಹಲಿ ಸಿಂಹಾಸನದ ಮೇಲೆ ಅಭಿಷಿಕ್ತನಾದ.

            ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ ಅಲಾವುದ್ದೀನ್. ದಕ್ಷಿಣದ ಹಿಂದು ರಾಜ್ಯಗಳ ಮೇಲೆ ಮೊಟ್ಟಮೊದಲು ಮಹಮ್ಮದೀಯರ ರಾಜಕೀಯ ಪ್ರಭಾವವನ್ನು ಸ್ಥಾಪಿಸಿದ ಈತನ ಆಳ್ವಿಕೆ ಭಯೋತ್ಪಾದನೆಯ, ರಕ್ತಪಾತದ ಕಾಲವಾಗಿತ್ತು. ಕ್ರೌರ್ಯ, ಮೋಸಗಳಿಂದ ಗುಜರಾತ್, ರಣತಂಬೂರ್ ಮತ್ತು ಮೇವಾರ್ ರಾಜ್ಯಗಳನ್ನು ವಶಪಡಿಸಿಕೊಂಡ ಖಿಲ್ಜಿಯ ಮತಾಂಧತೆಗೆ ನಹರ್ವಾಲ್, ಅಸಾವಾಲ್, ವನ್ಮನ್ತಾಲಿ, ಸೂರತ್, ಕ್ಯಾಂಬೇ ಹಾಗೂ ಸೋಮನಾಥಗಳಲ್ಲಿ ಹಲವು ದೇವಾಲಯಗಳು ಬಲಿಯಾದವು. ಚಿತ್ತೋಡಿನಲ್ಲಿ ಮೂವತ್ತು ಸಾವಿರ ಕಾಫಿರರು ಖಿಲ್ಜಿಯೆಂಬ ಇಸ್ಲಾಮೀ ಖಡ್ಗಕ್ಕೆ ಬಲಿಯಾದರು. ಅಪಾರ ಪ್ರಮಾಣದ ಸಂಪತ್ತು, ಸ್ತ್ರೀಪುರುಷರು ಅವನ ವಶವಾದರು. ಮಾಳವ, ಸೇವಣ, ಜಾಲೋರಗಳ ಮೇಲಿನ ದಾಳಿಯಲ್ಲೂ ಹಲವರು ಸೆರೆಸಿಕ್ಕು ಖಿಲ್ಜಿಯ ಗುಲಾಮರಾಗಬೇಕಾಯಿತು. ರಾಜ ರಾಮಚಂದ್ರ ಕ್ರಮವಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿರಲಿಲ್ಲವೆಂಬ ನೆಪದ ಮೇಲೆ ತನ್ನ ಮೊದಲ ದಾಳಿಯಲ್ಲಿ ದೇವಗಿರಿಯನ್ನು ಮುತ್ತಿ ಕೊಳ್ಳೆ ಹೊಡೆದ. ಎರಡನೆಯ ದಂಡಯಾತ್ರೆಯಲ್ಲಿ ವಾರಂಗಲ್ಲಿನ ಪ್ರತಾಪರುದ್ರನನ್ನು ಸೋಲಿಸಿದ. 1313ರಲ್ಲಿ ಹೊಯ್ಸಳ 3ನೆಯ ವೀರಬಲ್ಲಾಳನನ್ನು ಸೋಲಿಸಿ ದೋರಸಮುದ್ರವನ್ನು ಕೊಳ್ಳೆ ಹೊಡೆದ. ಮಧುರೈ ಹಾಗೂ ರಾಮೇಶ್ವರದವರೆಗೂ ದಂಡೆತ್ತಿ ಹೋಗಿ ಪಾಂಡ್ಯರನ್ನು ಸೋಲಿಸಿ ವಿಶೇಷವಾದ ಐಶ್ವರ್ಯವನ್ನು ದೋಚಿದ. ಈ ದಂಡಯಾತ್ರೆಗಳಿಂದ ಲಕ್ಷಾಂತರ ಮಂದಿ ಮಡಿದರು, ಅನೇಕ ಪಟ್ಟಣಗಳು ಹಾಗೂ ದೇವಾಲಯಗಳು ಸರ್ವನಾಶವಾದವು. ಹಲವಾರು ಮಸೀದಿಗಳು ಮೇಲೆದ್ದವು. ಅಪಾರ ಸಂಪತ್ತು ಸೂರೆಯಾಯಿತು. ಮತಾಂಧ ಅಲ್ಲಾವುದ್ದೀನನು ಎರಡನೆ ಸಿಕಂದರನಾಗುವೆನೆಂಬ ಕನಸು ಕಾಣುತ್ತಿದ್ದ.  ಹಿಂದುತ್ವವನ್ನೇ ಸಂಪೂರ್ಣವಾಗಿ ನಾಶಗೊಳಿಸಬೇಕೆಂದು ಪಣ ತೊಟ್ಟಿದ್ದನಾತ. ಆಕ್ರಮಿತ ರಾಜ್ಯಗಳ ರಾಣಿ, ಮಹಾರಾಣಿಯರನ್ನು ತನಗೆ, ತನ್ನ ಸರದಾರಿಗೆ ಹಂಚಿ, ಹಿಂದೂಗಳ ಪಾವಿತ್ರ್ಯವನ್ನು ಭಗ್ನಗೊಳಿಸುವುದು, ಇಸ್ಲಾಮೀ ಮತವನ್ನು ಇಲ್ಲಿನವರ ಮೇಲೆ ಹೇರುವುದು ಅವನ ಗುರಿಯಾಗಿತ್ತು.

              ಗುಜರಾತಿನ ಮೇಲೆ ದಂಡೆತ್ತಿ ಹೋದಾಗ ಸೆರೆಸಿಕ್ಕ ಗುಲಾಮರಲ್ಲಿ ಸ್ವುರದ್ರೂಪಿ ಯುವಕನಾಗಿದ್ದ ಮಲ್ಲಿಕಾಫರ್ ಕೂಡ ಒಬ್ಬ. ಸಲಿಂಗಕಾಮಿಯಾಗಿದ್ದ ಖಿಲ್ಜಿ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರಗೊಳಿಸಿ ಆತನಿಗೆ ಮಲ್ಲಿಕಾಫರ್ ಎಂದು ಹೆಸರಿಟ್ಟು, ತನ್ನೊಡನೆ ಇರಿಸಿಕೊಂಡಿದ್ದ. ಸುಂದರ ಯುವಕರನ್ನು ನಪುಂಸಕರನ್ನಾಗಿಸಿ ತನ್ನ ಜನಾನಕ್ಕೆ ಸೇರಿಸಿಕೊಳ್ಳುವುದು ಮೊಘಲ್ ಸುಲ್ತಾನರ ಚಟವಾಗಿತ್ತು. ಅಲ್ಲಾವುದ್ದೀನನ ಜನಾನದಲ್ಲೇ ಇಂತಹ ಐವತ್ತು ಸಾವಿರ ಜನ ಇದ್ದರಂತೆ! ಸೋಮನಾಥದ ಮೇಲೆ ದಾಳಿ ಮಾಡಿದಾಗ ಖಿಲ್ಜಿ ವಶಪಡಿಸಿಕೊಂಡ ಸ್ತ್ರೀಯರ ಹಾಗೂ ಎಳೆಯ ಹುಡುಗ-ಹುಡುಗಿಯರ ಸಂಖ್ಯೆ ಇಪ್ಪತ್ತು ಸಾವಿರ! ಇವರೆಲ್ಲರೂ ಖಿಲ್ಜಿಯ ಜನಾನಾ ಸೇರಿದರು ಎಂದು ಬೇರೆ ಹೇಳಬೇಕಾಗಿಲ್ಲ! ಮಂಗೋಲಿಯನ್ನರ ಜೊತೆಗಿನ ಯುದ್ಧದಲ್ಲಿ 1700 ಅಧಿಕಾರಿಗಳು, ಪುರುಷ ಹಾಗೂ ಸ್ತ್ರೀಯರನ್ನು ಗುಲಾಮರನ್ನಾಗಿಸಿ ದೆಹಲಿಗೆ ರವಾನಿಸಿದ. ಮುಸ್ಲಿಮರಾಗಿದ್ದೂ ನಾಸ್ತಿಕರಾದ ಕಾರಣ ಮಂಗೋಲಿಯನ್ನರನ್ನು ನಿಯೋಮುಸ್ಲಿಮರೆನ್ನಲಾಗುತ್ತಿತ್ತು. 1305ರಲ್ಲಿ ಜೈಲಲ್ಲಿದ್ದ 8000 ಮಂಗೋಲಿಯನ್ನರ ತಲೆ ಕಡಿದು ಅವರ ರುಂಡಗಳನ್ನು ನಿರ್ಮಾಣ ಹಂತದಲ್ಲಿದ್ದ ಸಿರಿ ಕೋಟೆಯ ಮೇಲೆ ನೇತು ಹಾಕಿದ! ಅನೇಕ ಮಂಗೋಲಿಯನ್ ಸ್ತ್ರೀ, ಪುರುಷ ಹಾಗೂ ಮಕ್ಕಳನ್ನು ದೆಹಲಿ ಹಾಗೂ ಭಾರತದ ಹಲವೆಡೆ ಮಾರಲಾಯಿತು! ಹೀಗೆ ಗುಲಾಮರ ಸಂಗ್ರಹ ಅವನ ದಿನನಿತ್ಯದ ಕಾಯಕವಾಗಿತ್ತು. ಹೊಸ ಮಂದೆ ಬಂದಂತೆ ಹಳೆಯವರನ್ನು ಗುಲಾಮ ಸಂತೆಯಲ್ಲಿ ಮಾರಲಾಗುತ್ತಿತ್ತು. ಸೂಫಿ ಅಮೀರ್ ಖುಸ್ರು ಬರೆಯುತ್ತಾನೆ "ತುರ್ಕರು ಯಾವಾಗ ಬೇಕಾದರೂ ಹಿಂದೂಗಳನ್ನು ವಶಪಡಿಸಿಕೊಳ್ಳಬಹುದು, ಖರೀದಿಸಬಹುದು ಹಾಗೂ ಮಾರಬಹುದು. ಹಾಗಾಗಿ ಖಿಲ್ಜಿಯ ಈ ಕಾರ್ಯದಲ್ಲೇನೂ ತಪ್ಪಿಲ್ಲ!" ಎಂದು! ಎಪ್ಪತ್ತು ಸಾವಿರ ಗುಲಾಮರು ಖಿಲ್ಜಿಯ ಬಳಿ ಇದ್ದರೆಂದು ಅವನು ತನ್ನ "ನಹ್ ಸಿಪೇರ್ಹ್"ನಲ್ಲಿ ಬರೆಯುತ್ತಾನೆ. ಖಿಲ್ಜಿ ತನ್ನ ಗುಲಾಮ ಸಂತೆಯಲ್ಲಿ ದರವನ್ನೂ ನಿಗದಿಪಡಿಸಿದ್ದ. ಕೆಲಸದ ಹುಡುಗಿಯರಿಗೆ 5ರಿಂದ 12 ತನ್ಖಾಗಳು, ಸುಂದರ ಸ್ತ್ರೀಯರಿಗೆ 20-40 ತನ್ಖಾಗಳು, ಸುಂದರ ಹುಡುಗರಿಗೆ 20-30 ತನ್ಖಾಗಳು, ಸಣ್ಣ ಮಕ್ಕಳಿಗೆ 80-100 ತನ್ಖಾಗಳು, ಗಂಡಸರ ದರ 100-200 ತನ್ಖಾಗಳಾಗಿತ್ತು.

             ಖಿಲ್ಜಿಯ ಆಡಳಿತ ವ್ಯವಸ್ಥೆಯಂತೂ ಹಿಂದೂಗಳನ್ನು ಗೋಳು ಹೊಯ್ದುಕೊಂಡಿತ್ತು. ಆತ ಭೂಮಿಯ ಆದಾಯವನ್ನು ಉತ್ಪಾದನೆಯ ಅರ್ಧಕ್ಕೇರಿಸಿ ಅದಕ್ಕೆ ತಕ್ಕಂತೆ ತೆರಿಗೆ ವಿಧಿಸಿದ. ಜಾನುವಾರುಗಳು ಹಾಗೂ ಮನೆಯ ತೆರಿಗೆಯ ಮೇಲೆ ತೆರಿಗೆ ವಿಧಿಸಿದ. ರೈತರು ತಾವು ಬೆಳೆದುದನ್ನು ಕಡ್ಡಾಯವಾಗಿ ನಿಗದಿ ಪಡಿಸಿದ ಬೆಲೆಗೆ ವ್ಯಾಪಾರಿಗಳಿಗೆ ಮಾರಬೇಕಾಗಿತ್ತು. ಈ ವ್ಯಾಪಾರಿಗಳು ತಿರುಗಿ ಅದನ್ನು ಸುಲ್ತಾನನ ಖಜಾನೆಗೆ ಮಾರಬೇಕಾಗಿತ್ತು. ಇದರಲ್ಲಿ ಅವರಾರಿಗೂ ಕನಿಷ್ಟ ಲಾಭವೂ ಉಳಿಯುತ್ತಿರಲಿಲ್ಲ. ವ್ಯಾಪಾರಿಗಳು ಸುಲ್ತಾನನಿಗೆ ನಿಯಮಿತ ಸರಬರಾಜು ಮಾಡುತ್ತಿದ್ದಾರೆ ಎಂದು ಖಚಿತಪಡಿಸಲು ತಮ್ಮ ಹೆಂಡತಿ ಮಕ್ಕಳನ್ನು ರಾಜಧಾನಿಯಲ್ಲಿ ಒತ್ತೆಯಾಳುಗಳನ್ನಾಗಿ ಇಡಬೇಕಾಗಿತ್ತು. ಹೀಗೆ ಬಡವರಾದ ಹಿಂದೂಗಳು ಹೊಟ್ಟೆಪಾಡಿಗಾಗಿ ತಮ್ಮ ಮನೆಯ ಹೆಂಗಳೆಯರನ್ನು ಮುಸ್ಲಿಮರ ಮನೆಗೆಲಸಕ್ಕೆ ಕಳುಹಿಸಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಯಿತು. ಅಲ್ಲಾವುದ್ದೀನನ ಮರಣದ ಹದಿನೆಂಟು ವರ್ಷಗಳ ಬಳಿಕ ದೆಹಲಿಗೆ ಭೇಟಿ ನೀಡಿದ್ದ ಇಬ್ನ್ ಬತ್ತುತಾಹ್ ತಾನುಂಡದ್ದು ಅರಮನೆಯ ಉಗ್ರಾಣದಲ್ಲಿದ್ದ ಅಲಾವುದ್ದೀನನ ಕಾಲದ ಅಕ್ಕಿ ಎಂದು ಬರೆದಿದ್ದಾನೆ. ಅಷ್ಟರ ಮಟ್ಟಿಗೆ ಖಜಾನೆ ತುಂಬಿ ಕೊಳೆಯುತ್ತಿತ್ತು. ಹಿಂದೂಗಳು ಸುಲಿಗೆಗೊಳಗಾಗಿ ಸಾಯುತ್ತಿದ್ದರು!

              ಇಂತಹ ಕ್ರೂರಿ ಕಾಮಾಂಧನ ಕಿವಿಗೆ ಪದ್ಮಿನಿಯ ಸುದ್ದಿ ಬಿತ್ತು. ಮಹಾರಾಣಿ ಪದ್ಮಿನಿಯ ಸೌಂದರ್ಯದ ಗುಣಗಾನವನ್ನು ಕೇಳಿದ ಅಲಾವುದ್ದೀನ್ ಖಿಲ್ಜಿ ಹೇಗಾದರೂ ಮಾಡಿ ಆಕೆಯನ್ನು ತನ್ನವಳನ್ನಾಗಿಸಬೇಕೆಂಬ ದುರಾಸೆಯಲ್ಲಿ ಚಿತ್ತೋಡನ್ನು ಮುತ್ತಿದ. ಯುದ್ಧವೆಂದರೇ ಕಳೆಗಟ್ಟುವ ಕುಲ ರಜಪೂತರದ್ದು. ಹುಟ್ಟಿದ್ದೇ ಯುದ್ಧಕ್ಕಾಗಿಯೇನೋ ಎನ್ನುವಂತೆ ಹೋರಾಡುವ ರಣಕಲಿಗಳು ಅವರು. ಗುರ್ಜರದ ರಾಣಿ ಕಮಲಾದೇವಿಯನ್ನು ಅಪಹರಿಸಿ ಅವಳ ಬಾಳನ್ನು ಸರ್ವನಾಶಗೈದಿದ್ದ ಖಿಲ್ಜಿಗೆ ರಜಪೂತ ವೀರರ ಶೌರ್ಯ ಸಾಹಸಗಳ ಪರಿಚಯವಾಗಿರಲಿಲ್ಲವೇನೋ. ಚಿತ್ತೋಡಿನ ಕಲಿಗಳು ಬೆಂಕಿಯ ಚೆಂಡುಗಳಂತೆ ಉರಿದೆದ್ದರು. ಖಿಲ್ಜಿಯ ಸೈನ್ಯ ಸುಟ್ಟುರಿದು ಹೋಯಿತು. ಯಾವಾಗ ಸೋಲು ಖಚಿತವಾಯಿತೋ ಆಗ ಮೋಸದ ಹಾದಿಗಿಳಿದ ಖಿಲ್ಜಿ. "ಪದ್ಮಿನಿ ದೇವಿ ನನಗೆ ಸೋದರಿ ಸಮಾನ; ಒಂದು ಸಲ ಆಕೆಯ ಮುಖ ತೋರಿಸಿ ಸಾಕು, ಸಂತೋಷದಿಂದ ಹಿಂದಿರುಗುತ್ತೇನೆ" ಎಂದು ಮಹಾರಾಜ ರಾವಲ್ ರತನ್ ಸಿಂಹನಲ್ಲಿ ಗೋಗರೆದ. "ನಮ್ಮ ರಾಣಿಯ ಮುಖ ನಿನಗೇಕೆ ತೋರಿಸಬೇಕು?" ಎಂದು ಕ್ಯಾಕರಿಸಿ ಉಗಿದಿದ್ದರೆ ಕೇಳುವವರ್ಯಾರೂ ಇರಲಿಲ್ಲ. ಆದರೆ ಔದಾರ್ಯಕ್ಕೆ ಹೆಸರಾದ ರಜಪೂತರು "ನಿನಗೆ ನೇರವಾಗಿ ಮುಖ ತೋರಿಸಲು ಸಾಧ್ಯವಿಲ್ಲ. ಬೇಕಾದರೆ ಕನ್ನಡಿಯಲ್ಲಿ ನೋಡಿಕೋ" ಎಂದು ದಯಾಳುತನ ತೋರಿದರು. ಸಪರಿವಾರ ಸಮೇತ ರಾಣಿಯ ಪ್ರತಿಬಿಂಬ ನೋಡಲು ಚಿತ್ತೈಸಿದ ಖಿಲ್ಜಿ. ಗ್ರಹಸ್ಥ ಧರ್ಮದಂತೆ ಅವನನ್ನು ಬೀಳ್ಕೊಡುವ ಸಲುವಾಗಿ ಅವನ ಡೇರೆಯವರೆಗೆ ನಡೆದ ಮಹಾರಾಜ. ಈ ಧರ್ಮ ಕರ್ಮಗಳು ಕಾಫಿರರಿಗೆ ಮಾತ್ರ. ಧರ್ಮದ ಪರಿಕಲ್ಪನೆಯೇ ಇಲ್ಲದ ವಿಗ್ರಹ ಭಂಜಕರಿಗೆ ಇವೆಲ್ಲಾ ಅರ್ಥವಾಗುವುದಾದರೂ ಹೇಗೆ? ರಾಜ ತಮ್ಮ ಜೊತೆ ಬಂದ ಸಮಯ ಸಾಧಿಸಿ ಅವನನ್ನು ಬಂಧಿಸಿ ಸೆರೆಯಲ್ಲಿಟ್ಟ ಖಿಲ್ಜಿ. ಪದ್ಮಿನಿಯನ್ನು ನನಗೆ ಒಪ್ಪಿಸಿದರೆ ಮಾತ್ರ ರಾಜನನ್ನು ಸೆರೆಯಿಂದ ಬಿಟ್ಟು ಬಿಡುವುದಾಗಿ ಷರತ್ತು ವಿಧಿಸಿದ. ಅಮಾಯಕನಂತೆ ಶತ್ರುವಿನ ಕೈಯಲ್ಲಿ ಬಿದ್ದ ತಮ್ಮ ಅರಸನನ್ನು ಬಿಡಿಸಿಕೊಳ್ಳಲು ರಾಣಿಯೊಡನೆ ರಜಪೂತ ಯೋಧರು ಕೈಗೊಂಡ ಉಪಾಯದ ಪ್ರಕಾರ ನಡೆದದ್ದೇ ಮೇಲೆ ವರ್ಣಿಸಿದ ಘಟನೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಪದ್ಮಿನಿಯೂ ಒಂದು ಕೂಟನೀತಿಯನ್ನು  ಯೋಜಿಸಿದಳು. ತಾನು ಬರುತ್ತಿರುವುದಾಗಿಯೂ, ತನ್ನೊಂದಿಗೆ ಮಹಾರಾಣಿಗೆ ಯೋಗ್ಯವಾಗಿರುವಂತೆ ಏಳುನೂರು ಸಖಿಯರು, ಇನ್ನೂ ಕೆಲವು ರಜಪೂತ ಕನ್ಯೆಯರು ಬರುತ್ತಾರೆ,  ಅವರಲ್ಲಿ ಕೆಲವರು ತನ್ನೊಂದಿಗೆ ದೆಹಲಿಗೆ ಬರುತ್ತಾರೆ, ಉಳಿದವರು ಹಿಂತಿರುಗುತ್ತಾರೆಂದೂ,  ದೆಹಲಿಗೆ ಹೊರಡುವುದಕ್ಕೆ ಮುಂಚೆ ಸೈನಿಕ ಪಹರೆ ಇಲ್ಲದೆ ತನ್ನ ಪತಿಯನ್ನು  ಸಂಧಿಸಬೇಕಾಗಿದೆ. ಇದಕ್ಕೆ ಒಪ್ಪಿದಲ್ಲಿ ಮಾತ್ರ ತಾನು ಬರುವುದಾಗಿಯೂ ಬರೆದು ತಿಳಿಸಿದಳು. ಹೆಚ್ಚು ಯೋಚನೆ ಮಾಡದೆ ಖಿಲ್ಜಿ ಒಪ್ಪಿಕೊಂಡ. ಅಂತೆಯೇ ವೀರರಾದ ಗೋರಾ ಮತ್ತು ಸುಂದರ ಮೈಕಟ್ಟಿನ ಬಾದಲ್ ಎನ್ನುವ ಈರ್ವರು ಸಾಹಸಿಗಳ ಸಹಾಯದಿಂದ 700 ಪಲ್ಲಕ್ಕಿಗಳಲ್ಲಿ ಸಖಿಯರಾಗಿ ವೇಷ ಬದಲಾಯಿಸಿಕೊಂಡ ಸಶಸ್ತ್ರ ಸೈನಿಕರು ಪದ್ಮಿನಿ ಸಮೇತ ಅಲ್ಲಾವುದ್ದೀನನ ಬಿಡಾರವನ್ನು  ತಲುಪಿದರು. ಕೂಡಲೆ ರತ್ನಸಿಂಹನ ಬಿಡುಗಡೆ ಮಾಡಿ ಪದ್ಮಿನಿಯು ಚಿತ್ತೂರಿಗೆ ಹಿಂತಿರುಗಿದಳು. ಸ್ತ್ರೀ ರೂಪದಲ್ಲಿದ್ದ ಸೈನಿಕರು ಸುಲ್ತಾನನ ಸೈನ್ಯದ ಮೇಲೆ ಬಿದ್ದರು. ಅಲ್ಲಾವುದ್ದೀನನಿಗೆ ಜ್ಞಾನೋದಯವಾಗುವ ವೇಳೆ ಹಕ್ಕಿ ಹಾರಿಹೋಗಿತ್ತು. ಆದರೆ ಈ ಸಾಹಸ ಕಾರ್ಯದಲ್ಲಿ ಗೋರಾ, ಬಾದಲ್ ಎಂಬ ಇಬ್ಬರು ಅದ್ವಿತೀಯ ಯೋಧರನ್ನು ಕಳೆದುಕೊಳ್ಳಬೇಕಾಯಿತು ರಜಪೂತ ಸೇನೆ.

              ಈ ಘಟನೆಯಿಂದ ದಿಘ್ಭ್ರಮೆಗೊಂಡು ಬಳಿಕ ಚೇತರಿಸಿಕೊಂಡು ತನ್ನ ಪುರಕ್ಕೆ ನಡೆದ ಖಿಲ್ಜಿ. ಅವನು ಪದ್ಮಿನಿಯ ಮೋಹದಲ್ಲಿ ಮತ್ತನಾಗಿ ಹೋಗಿದ್ದ. ಮರು ವರ್ಷವೇ ಸರ್ವ ಸನ್ನದ್ಧನಾಗಿ ಬೃಹತ್ ಸೈನ್ಯದೊಂದಿಗೆ ಚಿತ್ತೋಡ್ ಮೇಲೆ ದಂಡೆತ್ತಿ ಬಂದ. ಆರು ತಿಂಗಳ ಕಾಲ ಕೋಟೆಗೆ ಮುತ್ತಿಗೆ ಹಾಕಿ ದಿಗ್ಬಂಧನ ಮಾಡಿದ. ಎಲ್ಲಾ ದಾಸ್ತಾನು ಮುಗಿಯುತ್ತಾ ಬಂದಾಗ ಆಹಾರವಿಲ್ಲದೆ ಸಾಯುವ ಬದಲು ಯುದ್ಧವೇ ಉತ್ತಮವೆಂದು ಭಾವಿಸಿ ಯುದ್ಧಕ್ಕಿಳಿದ ರಜಪೂತ ಪಡೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ವೀರ ಸ್ವರ್ಗ ಪಡೆಯಿತು. ಮಹಾರಾಜ ರತನ್ ಸಿಂಗ್ ತನ್ನ ಮೂವತ್ತು ಸಾವಿರ ಸೈನಿಕರೊಂದಿಗೆ ಅಸುನೀಗಿದ. ಸೈತಾನನ ತೆವಲಿಗೆ ತನ್ನ ಪಾವಿತ್ರ್ಯತೆಯನ್ನು ಕೆಡಿಸಿಕೊಳ್ಳುವುದಕ್ಕಿಂತ ಅಗ್ನಿದೇವನ ಪವಿತ್ರ ಮಡಿಲೇ ಸೂಕ್ತವೆಂದು ಪದ್ಮಿನಿ ನಿರ್ಧರಿಸಿಯಾಗಿತ್ತು. ನಿಗಿನಿಗಿ ಉರಿಯುವ ಅಗ್ನಿಕುಂಡದೊಳಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ಜೀವಹರ ವಿಧಾನವೇ ಎಷ್ಟು ಭಯಂಕರ! ಸೇನೆ ಸೋಲನ್ನಪ್ಪುತ್ತಿರುವ ಸುದ್ದಿ ಕೇಳಿದೊಡನೆ ಅಂತಃಪುರದೆದುರು ವಿಶಾಲವಾದ ಅಗ್ನಿಕುಂಡ ರಚನೆಯಾಯ್ತು. ಕಟ್ಟಿಗೆಗಳನ್ನು ಉರಿಸಲಾಯ್ತು. ರಾಣಿ ಪದ್ಮಿನಿ ಸಹಿತವಾಗಿ ರಜಪೂತ ಸ್ತ್ರೀಯರೆಲ್ಲಾ ಅಗ್ನಿ ಪ್ರವೇಶ ಮಾಡಿದರು. ತಮ್ಮ ಕುಲಗೌರವ, ಮಣ್ಣಿನ ಗೌರವವನ್ನು ಕಾಪಾಡಲು ಅಗ್ನಿಪ್ರವೇಶ ಮಾಡಿದ ಅವರ ಆತ್ಮಬಲದ ಮುಂದೆ ಅಲಾವುದ್ದೀನನ ಗೆಲುವು ತೃಣಸಮಾನವಾಯಿತು. ತುಂಬು ಆಸೆಯಿಂದ ಕೋಟೆ ಹೊಕ್ಕ ಖಿಲ್ಜಿಗೆ ಕಂಡಿದ್ದು ಸ್ಮಶಾನ ಸದೃಶ ನಗರ. ಕಾಮಾಂಧ ಖಿಲ್ಜಿಗೆ ಸಿಕ್ಕಿದ್ದು ಒಂದು ಹಿಡಿ ಬೂದಿ! ನಿಜಹೇಳಬೇಕೆಂದರೆ ಸತ್ತದ್ದು ಅಲಾವುದ್ದೀನನೇ. ಪರಸ್ತ್ರೀಯನ್ನು ಬಯಸಿದವ ಇದ್ದೂ ಸತ್ತಂತಲ್ಲವೇ? ಪದ್ಮಿನಿ ತನ್ನ ಪಾತಿವ್ರತ್ಯವನ್ನು ಅಸೀಮ ಆತ್ಮಬಲದಿಂದ ರಕ್ಷಿಸಿಕೊಂಡು ಅಜರಾಮರಳಾದಳು.

             ಶೀಲ ರಕ್ಷಣೆಗಾಗಿ ಅಗ್ನಿಗೆ ಹಾರಿದ ಪವಿತ್ರ ಪದ್ಮಿನಿಯನ್ನು ಅಲಾವುದ್ದೀನ ಜೊತೆ "ಕಿಸ್ಸಿಂಗ್ ಸೀನ್"ನಲ್ಲಿ ತನಗಿಷ್ಟ ಬಂದಂತೆ ಅಪವಿತ್ರೆಯನ್ನಾಗಿ ತೋರಿಸಹೊರಟ ಬನ್ಸಾಲಿಯಾಗಲೀ, ಬಾಲಿವುಡ್ಡಿನ ಇತರ ನಿರ್ದೇಶಕರಾಗಲೀ ಇತಿಹಾಸವನ್ನು ತಿರುಚುತ್ತಿರುವುದು ಇದೇ ಮೊದಲೇನಲ್ಲ. ಬಾಲಿವುಡ್ಡಿನ ಒಂದು ಸಿನಿಮಾವಾದರೂ ಈ ದೇಶದ ಮೇಲೆ ಮುಗಿಬಿದ್ದು ಮಾನ, ಪ್ರಾಣ, ಧನ ಹೀಗೆ ಸಕಲವನ್ನೂ ದೋಚಿದ ಮುಸ್ಲಿಂ ಪೈಶಾಚಿಕತೆಯ ದರ್ಶನ ಮಾಡಿಸಿದ್ದಾವೆಯೇ? ಮುಸ್ಲಿಂ ಬಾದಶಹಾರನ್ನು ವೀರರಂತೆ, ಆದರ್ಶ ಪ್ರೇಮಿಗಳಂತೆ, ಮಾನವೀಯತೆಯೇ ಮೈವೆತ್ತವರಂತೆ ತೋರಿಸಿದ ಚಿತ್ರಗಳೇ ಎಲ್ಲವೂ! ಮೊಘಲ್-ಇ-ಅಜಂ, ಅನಾರ್ಕಲಿ, ಜೋಧಾ ಅಕ್ಬರ್ ಮುಂತಾದ ಚಿತ್ರಗಳು ಒಂದೇ ದಿವಸದಲ್ಲಿ ಮೂವತ್ತು ಸಾವಿರ ಜನರನ್ನು ಕೊಚ್ಚಿ ಹಾಕಿದ, ತನ್ನ ಗುರು ಭೈರಾಂಖಾನನನ್ನೇ ಕೊಂದು ಅವನ ಹೆಂಡತಿಯನ್ನು ತನ್ನ ಜನಾನಾಕ್ಕೆ ಸೇರಿಸಿಕೊಂಡ, ನೌಕರರ ಸಣ್ಣ ತಪ್ಪಿಗೇ ಗೋಪುರದ ಕೆಳಕ್ಕೆ ತಳ್ಳಿ ಶಿಕ್ಷಿಸುತ್ತಿದ್ದ, ಮಾನಧನರಾದ ಎಂಟು ಸಾವಿರ ಸ್ತ್ರೀಯರು ಧಗಧಗಿಸುವ ಬೆಂಕಿಯಲ್ಲಿ ಉರಿಯುವುದನ್ನು ಕಂಡು ವಿಕಟ್ಟಹಾಸ ಮಾಡಿದ, ಮೀನಾ ಬಜಾರನ್ನು ಮಾಡಿ ಸಾಲು ಸಾಲು ಹಿಂದೂ ಸ್ತ್ರೀಯರ ಅತ್ಯಾಚಾರ ಮಾಡಿದ ಅಕ್ಬರನನ್ನು ಧೀರೋದಾತ್ತನಂತೆ ಬಿಂಬಿಸಿದವು! ತಾಜ್ ಮಹಲ್ ಚಿತ್ರ ತನ್ನ ಮಗಳನ್ನೇ ಕಾಮಿಸಿದ್ದ, ಮಕ್ಕಳನ್ನು ಹೆರುವ ಯಂತ್ರದಂತೆ ಪತ್ನಿ ಮುಮ್ತಾಜಳನ್ನು ಬಳಸಿಕೊಂಡ ಮದನಕಾಮರಾಜ ಷಹಜಹಾನನನ್ನು ಅಮರ ಪ್ರೇಮಿಯಂತೆ ವೈಭವೀಕರಿಸಿತು. ಎಷ್ಟು ರೀಲು ಸುತ್ತುತ್ತೀರೋ ಅಷ್ಟು ಕೋಟಿ ರೂಪಾಯಿಗಳನ್ನು ನಿಮಗೆ ಬಿಸಾಕುತ್ತೇವೆ ಎನ್ನುವ ದಾವೂದ್ ಹಿಡಿತದ ಭೂಗತ ಸಾಮ್ರಾಜ್ಯವಿರುವಾಗ ಇತಿಹಾಸವನ್ನೇಕೆ ವರ್ತಮಾನವನ್ನೂ ಇವರು ತಿರುಚಬಲ್ಲರು. ಸುದ್ದಿವಾಹಿನಿಗಳು ಮಾತ್ರವಲ್ಲ ಮತಿಗೆಟ್ಟ ಹಿಂದೂ ಸಮಾಜ ಇಂತಹ ಚಿತ್ರಗಳನ್ನು ಬೆಂಬಲಿಸುತ್ತಲೇ ಬಂದಿವೆ. ಪದ್ಮಾವತ್ ಕೇವಲ ಕಲ್ಪಿತ ಕಾವ್ಯ, ಅಂಥ ನಿಜ ಘಟನೆಗಳು ನಡೆಯಲೇ ಇಲ್ಲ ಎಂದು ಬೊಬ್ಬಿರಿವ ಪಡೆಯೇ ಇದೆ. ಇತಿಹಾಸವನ್ನು ನಮಗೆ ಬೇಕಾದಂತೆ ತಿರುಚುವ ಕಲಾಸ್ವಾತಂತ್ರ್ಯ ನಮಗಿದೆ ಎನ್ನುವ ಇದೇ ವೈಚಾರಿಕ ಭಂಡರು ಭಗವಂತ ಶಿವನನ್ನು ಟಾಯ್ಲೆಟ್ಟಿನಲ್ಲಿ ಅಟ್ಟಾಡಿಸಿದರೂ ನಮ್ಮವರು ಕಲೆಯ ಹೆಸರಲ್ಲಿ ವೀಕ್ಷಿಸಿ ಆನಂದಿಸುತ್ತಾರೆ! ಇಂತಹ ಚಿತ್ರಗಳನ್ನು ನೋಡಿ ಆಸ್ವಾದಿಸುವ ದಡ್ಡಶಿಖಾಮಣಿ ಹಿಂದೂಗಳು ಇರುವವರೆಗೆ ಕಲೆಯ ಹೆಸರಲ್ಲಿ ತಮ್ಮ ಅಜೆಂಡಾಗಳನ್ನು ಹಿಂದೂ ಮನಸ್ಸಿನಲ್ಲಿ ನೆಟ್ಟು ಬೆಳೆಸುವ ಧೂರ್ತರು ಇದ್ದೇ ಇರುತ್ತಾರೆ.

ಗುರುವಾರ, ಅಕ್ಟೋಬರ್ 5, 2017

ಸ್ವಾತಂತ್ರ್ಯದ ಅಧ್ವರಕ್ಕೆ ಪ್ರಾಣವೇ ಪೂರ್ಣಾಹುತಿ

ಸ್ವಾತಂತ್ರ್ಯದ ಅಧ್ವರಕ್ಕೆ ಪ್ರಾಣವೇ ಪೂರ್ಣಾಹುತಿ

       ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ 1857ರಂತಹಾ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಅಂತಹ ಅಂಧಕಾರದ ಸಮಯದಲ್ಲಿ ರತ್ನಗರ್ಭಾ ವಸುಂಧರೆಯಾದ ತಾಯಿ ಭಾರತಿ, ಮಹರ್ಷಿ ದಯಾನಂದ ಎಂಬ ಅತ್ಯಂತ ತೇಜಸ್ವೀ ಪುರುಷನೊಬ್ಬನಿಗೆ ಜನ್ಮ ನೀಡಿದಳು. ಅವರು ಗಾಢಾಂಧಕಾರವನ್ನು ತೊಲಗಿಸಲು ಆರ್ಯ ಸಮಾಜವೆಂಬ ದೀಪವೊಂದನ್ನು ಹಚ್ಚಿದರು. ಆ ದೀವಿಗೆಯ ಒಂದೊಂದು ಕಿಡಿಯೂ ಕ್ರಾಂತಿಯ ಕಿಡಿ!

              ಭಾರತೀಯರ ಮುಂದೆ ಈಗ ಎರಡು ದಾರಿಗಳಿದ್ದವು. ಬ್ರಿಟಿಷ್ ಸರಕಾರದ ಆಶೀರ್ವಾದ ಪಡೆದು ಅವರ ಮಾತುಗಳಿಗೆ ಅನುಕೂಲಕರವಾಗಿ ನಡೆಯಬಲ್ಲ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ ಒಂದು ಕಡೆಯಾದರೆ ವೇದಕಾಲೀನ ಮೌಲ್ಯಗಳನ್ನಾಧರಿಸಿ ಭಾರತದ ಪುನರ್ನಿರ್ಮಾಣ ಮಾಡಲು ಹೊರಟಿದ್ದ ಆರ್ಯ ಸಮಾಜ ಇನ್ನೊಂದೆಡೆ. ಈ ಎರಡೂ ಪ್ರಭಾವಗಳು ತರುಣ ಪೀಳಿಗೆಯ ಮರಣ ಭಯ ನೀಗಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್ ಸಿಂಗನ ವಂಶವೃಕ್ಷಕ್ಕಾಯಿತು ಎಂಬುದೇ ವಿಚಿತ್ರ ಹಾಗೂ ವಿಶೇಷ ಸಂಗತಿ. ಆ ವಂಶದ ಪೂರ್ವಜ ಖೇಮ ಸಿಂಹನ ಅಗ್ರ ಪುತ್ರ ಸುರ್ಜನ ಸಿಂಹ ಬ್ರಿಟಿಷರ ಪಾದಸೇವೆ ಮಾಡುವುದರೊಂದಿಗೆ ಆ ಧಾರೆಯೇ ಭಾರತಕ್ಕೆ ವಿಷಧಾರೆಯಾದರೆ ಮಧ್ಯಮ ಅರ್ಜುನ ಸಿಂಹನ ಕ್ಷಾತ್ರ-ಬ್ರಹ್ಮತೇಜ ಕ್ರಾಂತಿಧಾರೆಯಾಗಿ ಅವನ ಪೀಳಿಗೆಯೇ ತಾಯಿ ಭಾರತಿಯ ಪಾಲಿಗೆ ಅಮೃತಧಾರೆಯಾಗಿ ಹರಿಯಿತು. ಅಂತಹ ಅಮೃತಧಾರೆಯ ಒಂದು ಬಿಂದುವೇ ಸರದಾರ ಭಗತ್ ಸಿಂಗ್!

             1907 ಸೆಪ್ಟೆಂಬರ್ 28... ವಿಕ್ರಮ ಸಂವತ್ಸರದ 1964ರ ಆಶ್ವಯುಜ ಶುಕ್ಲ ತ್ರಯೋದಶಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನ ಲಾಯಲಾಪುರದ ಬಂಗಾ ಗ್ರಾಮದಲ್ಲಿ ಸೂರ್ಯ ತೇಜಸ್ಸೊಂದು ಭೂಮಿಗೆ ಬಿದ್ದಿತು! ಅದೇ ದಿನ ಚಿಕ್ಕಪ್ಪ ಅಜಿತನ  ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲರೂ ಮಗುವನ್ನು "ಭಾಗ್ಯವಂತ" ಎಂದು ಕರೆದರು. ಅಜ್ಜಿ ಜಯಾ ಕೌರ್ "ಭಗತ್" ಎಂದು ಹೆಸರಿಟ್ಟಳು! ಎಲ್ಲರ ಕಣ್ಮಣಿಯಾಗಿ ಬೆಳೆದ ಸುಂದರ-ಆಕರ್ಷಕ ರೂಪದ ಮಗು ಎರಡೂವರೆ ವರ್ಷವಾಗಿದ್ದಾಗ ತಂದೆಯ ಜೊತೆ ಜಮೀನಿಗೆ ಹೋದಾಗ ತಂದೆಯ ಕೈಬಿಟ್ಟು ಜಮೀನಿನಲ್ಲಿ ಚಿಕ್ಕ ಚಿಕ್ಕ ಹುಲ್ಲಿನ ಕಡ್ಡಿಗಳನ್ನು ನೆಡಲಾರಂಭಿಸಿತು. ತಂದೆ ಪ್ರೀತಿಯಿಂದ ಏನು ಮಾಡುತ್ತಿದ್ದೀಯಾ ಎಂದು ಕೇಳಿದರೆ "ಬಂದೂಕುಗಳನ್ನು ನೆಡುತ್ತಿದ್ದೇನೆ" ಎಂದು ಇನ್ನೂ ಸರಿಯಾಗಿ ಶಬ್ಧ ಉಚ್ಛಾರಣೆ ಮಾಡಲಾಗದ ಮಗುವಿನ ಉತ್ತರವನ್ನು ಕೇಳಿ ತಂದೆ ಹಾಗೂ ಸ್ನೇಹಿತ ಮೆಹ್ತಾ ದಿಗ್ಭ್ರಮೆಗೊಳಗಾದರು. ಬೆಳೆಯುವ ಸಿರಿ ಮೊಳಕೆಯಲ್ಲಿ!

        ಸ್ವಾಮಿ ದಯಾನಂದ ಸರಸ್ವತಿಗಳಿಂದಲೇ ಜನಿವಾರ ಹಾಕಿಸಿಕೊಂಡು ತನ್ನ ವಂಶವನ್ನುದ್ಧರಿಸಿದ. ದೇವಸ್ಥಾನಗಳೇ ಆರ್ಯ ಸಮಾಜದಿಂದ ದೂರವಿದ್ದ ಕಾಲದಲ್ಲಿ ಬಹುದೂರದ ಗುರುದ್ವಾರದಿಂದ ಆತ ಆರ್ಯ ಸಮಾಜದ ಭವನವನ್ನು ಪ್ರವೇಶಿಸಿದ್ದ. ಅದು ಬಹುದೊಡ್ಡ ಕ್ರಾಂತಿ. ಅದೇ ರಕ್ತಗತವಾಗಿ ಆ ವಂಶದಲ್ಲಿ ಬಂತು. ಸದಾ ದೇಶದ ಕುರಿತಾಗೇ ಚಿಂತಿಸುತ್ತಿದ್ದ ಆತ ತನ್ನ ತಮ್ಮ ಮೆಹರ್ ಸಿಂಹನ ಮಗ ಹರಿಸಿಂಹನ ಜೊತೆಗೂಡಿ ಬಾಂಬೊಂದನ್ನು ತಯಾರಿಸಿ ಪರೀಕ್ಷಿಸಿದ್ದ. ದೇಶಕ್ಕಾಗಿ ನಡೆದ ಯಾವುದೇ ಕ್ರಾಂತಿಯಾದರೂ ಭಾಗವಹಿಸುತ್ತಿದ್ದ ಅರ್ಜುನನ ಅಗ್ರ ಪುತ್ರ ಕಿಶನ್ ಸಿಂಹ ತುಂಬು ಯೌವನದಲ್ಲಿ ಅಮರನಾದ! ದ್ವಿತೀಯ ಅಜಿತ್ ಸಿಂಹ ಭಾರತ ಮಾತಾ ಸೊಸೈಟಿಯ ಮುಖೇನ ಚಾಪೇಕರ್ ಸಹೋದರರು ಹಾರಿಸಿದ್ದ ಕಿಡಿಯನ್ನು ವಿದೇಶಗಳಿಗೂ ಹಬ್ಬಿಸಿದ, ತಾನೂ ಗಡೀಪಾರಾಗಿ ಹೋದ! ಮೂರನೆಯವ ಸ್ವರ್ಣ ಸಿಂಹ ಕೈಕೋಳ-ಬೇಡಿಗಳ ಚದುರಂಗದಾಟದಲ್ಲಿ ಜೀವನ ಪೂರ್ತಿ ಕಳೆದ! ಅರ್ಜುನ ಸಿಂಹ ತನ್ನ ಹಿರಿಯ ಮೊಮ್ಮಕ್ಕಳಾದ ಜಗತ್-ಭಗತ್ ರನ್ನು ಅವರ ಬ್ರಹ್ಮೋಪದೇಶದ ಸಮಯದಲ್ಲಿ ಯಜ್ಞವೇದಿಕೆಯ ಮೇಲೆ ನಿಲ್ಲಿಸಿಕೊಂಡು ದೇಶದ ಬಲಿ ವೇದಿಕೆಗೆ ದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ. ಅವರಿಬ್ಬರಿಗೂ ರಾಷ್ಟ್ರೀಯ ವಿಚಾರ-ಕ್ರಾಂತಿಯ ಸಂಸ್ಕಾರ ನೀಡಿದ.

             ನಾಲ್ಕನೆಯ ತರಗತಿಯಲ್ಲಿರುವಾಗಲೇ ಆತ ತನ್ನ ಮನೆಯಲ್ಲಿದ್ದ ಅಜಿತ್ ಸಿಂಹ, ಸೂಫೀ ಅಂಬಾಪ್ರಸಾದ, ಲಾಲಾ ಹರದಯಾಳ್ ಬರೆದಿದ್ದ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಮುಗಿಸಿದ್ದ. ಅವುಗಳಲ್ಲಿದ್ದದ್ದು ಬರೇ ರಾಜಕೀಯ-ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು! ಆತನಲ್ಲಿ ಬ್ರಿಟಿರ ವಿರುದ್ಧ ದ್ವೇಷಾಗ್ನಿ ಝಗಝಗಿಸಲಾರಂಭಿಸಿತು! ಭಾರತಾ ಮಾತಾ ಸೊಸೈಟಿಯ ಆಂದೋಳನ ಶುರುವಾದಾಗ ಶಿಶುವಾಗಿದ್ದ, ಗದರ್ ಪಾರ್ಟಿಯ ಆಂದೋಳನದ ಬೆಳವಣಿಗೆಯನ್ನು ಹೆಜ್ಜೆಹೆಜ್ಜೆಗೂ ಕೇಳಿಸಿಕೊಂಡಿದ್ದ ಆತ ಗದರ್ ಆಂದೋಳನ ತಾರಕಕ್ಕೇರಿದಾಗ ಅದರಲ್ಲೊಬ್ಬನಾದ! 1919ರ ಏಪ್ರಿಲ್ 13! ಜಲಿಯನ್ ವಾಲಾ ಬಾಗ್ ನಲ್ಲಿ ಬ್ರಿಟಿಷರು ದೇಶೀರಕ್ತದ ಹೋಳಿ ಆಚರಿಸಿದ್ದರು! ಹನ್ನೆರಡು ವರ್ಷದ ಭಗತ್ ಮರುದಿನ ಶಾಲೆಗೆ ಹೋದವನು ಸಮಯಕ್ಕೆ ಸರಿಯಾಗಿ ಮರಳಲಿಲ್ಲ. ಜಲಿಯನ್ ವಾಲಾ ಬಾಗಿಗೆ ಹೋಗಿ ರಕ್ತದಿಂದ ನೆನೆದಿದ್ದ ಮಣ್ಣನ್ನು ಹಣೆಗೆ ಹಚ್ಚಿಕೊಂಡ. ಸ್ವಲ್ಪ ಮಣ್ಣನ್ನು ಶೀಶೆಯಲ್ಲಿ ತುಂಬಿಸಿಕೊಂಡು ಮನೆಗೆ ಬಂದ. ಆ ಶೀಶೆಯ ನಾಲ್ಕೂ ಕಡೆ ಹೂವುಗಳನ್ನಿರಿಸಿ ಭಕ್ತಿಯಿಂದ ನಮಿಸಿದ. ಅದು ದಿನನಿತ್ಯದ ಪೂಜೆಯಾಯಿತು! ಸ್ನೇಹಿತ ಜಯದೇವನ ಮುಖೇನ ತಂದೆಗೆ ಶಾಲೆ ಬಿಟ್ಟು ಕ್ರಾಂತಿಗೆ ಧುಮುಕುವ ವಿಚಾರ ಅರುಹಿದ ಭಗತ್ ಗೆ ವಿದೇಶೀ ವಸ್ತುಗಳ ಹೋಳಿ ಆಚರಣೆ ಕ್ರಾಂತಿಯ ಎರಡನೆ ಮೆಟ್ಟಿಲಾಯಿತು.

               ಆಗ ಸಿಡಿದಿತ್ತು ಚೌರಿಚೌರಾ! ಪೊಲೀಸರನ್ನು ಠಾಣೆಯೊಳಗೆ ಕೂಡಿ ಹಾಕಿದ ದೇಶಭಕ್ತ ಗುಂಪು ಠಾಣೆಗೇ ಬೆಂಕಿ ಹಚ್ಚಿತು. ಗಾಂಧಿ ಹಿಂಸೆ ತಲೆದೋರಿದೆ ಎಂದು ತನ್ನ ಆಂದೋಲನವನ್ನೇ ಹಿಂತೆಗೆದುಕೊಂಡರು. ಡಾ. ಮೂಂಜೆ, ಲಾಲಾ ಲಜಪತ್ ರಾಯ್ ಇದನ್ನು ಕಟುವಾಗಿ ಟೀಕಿಸಿದರು. ಭಗತನ ಮನಸ್ಸು ಹೊಯ್ದಾಟವಾಡುತ್ತಿತ್ತು. ಕ್ರಾಂತಿಯೇ.....ಅಹಿಂಸೆಯೇ? ಆಗ ನಗುನಗುತ್ತ ಬಲಿವೇದಿಯನ್ನೇರಿದ ಕರ್ತಾರ್ ಸಿಂಗ್ ಸರಾಬಾನ ಪುಣ್ಯಕರ್ಮವು ಭಗತ್ ಸಿಂಹನ ಎದೆಯಲ್ಲಿ ಹೊಳೆಯುತ್ತಾ ಕರ್ತಾರನ ಆತ್ಮವೇ ಅವನ ನರನಾಡಿಗಳಲ್ಲಿ ತುಂಬಿಕೊಂಡಿತು! ಅಸಂಖ್ಯಾತ ಜನರನ್ನು ಸೆಳೆದರೂ ಅಹಿಂಸೆಯ ಹಾದಿ ದೇಶವನ್ನು ಸ್ವಾತಂತ್ರ್ಯ ಸಾಧನೆಯ ಕಡೆಗೆ ಕೊಂಡೊಯ್ಯುವುದಿಲ್ಲ ಎಂದವನ ಅಂತರ್ವಾಣಿ ನುಡಿಯಲಾರಂಭಿಸಿತು.

              ಒಂಭತ್ತನೇ ತರಗತಿಯಲ್ಲಿ ಅಸಹಕಾರೀ ಆಂದೋಲನಕ್ಕಾಗಿ ಶಾಲೆ ಬಿಟ್ಟಿದ್ದ ಅವನ ಬುದ್ಧಿಮತ್ತೆಯನ್ನು ಗುರುತಿಸಿದ್ದ ಭಾಯಿ ಪರಮಾನಂದರು ಆತನನ್ನು ನ್ಯಾಷನಲ್ ಕಾಲೇಜಿಗೆ ಸೇರಿಸಲು ನೆರವಾದರು. ಪ್ರೊ. ಜಯಚಂದ್ರ ವಿದ್ಯಾಲಂಕಾರರ ಸಂಪರ್ಕದಿಂದ ಭಗತನೊಳಗಿನ ಭೂಗತ ಕ್ರಾಂತಿಕಾರಿ ಅರಳಲಾರಂಭಿಸಿದ. ಕಾಲೇಜಿನಲ್ಲಿ ನಾಟಕದ ಕ್ಲಬ್ವೊಂದನ್ನು ಸ್ಥಾಪಿಸಿ ಅದರ ಮೂಲಕ ರಾಣಾ ಪ್ರತಾಪ, ಸಾಮ್ರಾಟ್ ಚಂದ್ರಗುಪ್ತರ ನಾಟಕವನ್ನು ಆರಂಭಿಸಿದ. ಅದಕ್ಕೆ ಸರ್ಕಾರದ ಕಾಕದೃಷ್ಟಿ ಬಿತ್ತು. ಮದುವೆಗೆ ಮನೆಯವರ ಒತ್ತಡ ಹೆಚ್ಚಾದಾಗ ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳಿರುವಾಗ ಆತ ಲಾಹೋರಿಗೆ ಪರಾರಿಯಾದ. ಅಲ್ಲಿಂದ ಕಾನ್ಪುರ ತಲುಪಿದ. ಅಲ್ಲಿ ಬಂಗಾಲಿ ಕ್ರಾಂತಿಕಾರಿಗಳೊಡನೊಂದಾಗಿ ಹೋದ. ಗಣೇಶ ಶಂಕರ ವಿದ್ಯಾರ್ಥಿಯ "ಪ್ರತಾಪ್" ಪತ್ರಿಕೆಗೆ ಬಲವಂತ ಸಿಂಹ ಎಂಬ ಹೆಸರಲ್ಲಿ ಲೇಖನಗಳನ್ನು ಬರೆಯಲಾರಂಭಿಸಿದ. ಲಾಹೋರಿನಲ್ಲಿ ನೌಜವಾನ್ ಭಾರತ್ ಸಭಾದ ಸ್ಥಾಪನೆಯಲ್ಲಿ ತೊಡಗಿದ. ಕರ್ತಾರನ ಬಲಿದಾನದ ದಿನವನ್ನು ಕರ್ತಾರನ ಫೋಟೋ ಮೇಲೆ ರಕ್ತದ ಅಭಿಷೇಕ ಮಾಡಿ ಕ್ರಾಂತಿದೀಕ್ಷೆ ನೀಡುವ ಮೂಲಕ ಬಹಿರಂಗವಾಗಿ ಆಚರಿಸಲಾಯಿತು. ಈ ನಡುವೆ ಪಂಡಿತ್ ರಾಮ ಪ್ರಸಾದರ ನೇತೃತ್ವದಲ್ಲಿ ನಡೆದ ಕಾಕೋರಿ ಕಾಂಡದಲ್ಲಿ ಭಾಗಿಯಾದ. 1927ರ ಜುಲೈನಲ್ಲಿ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ. ಕೆಲವು ವಾರಗಳ ಬಳಿಕ ಅರವತ್ತು ಸಾವಿರ ರೂಪಾಯಿಗಳ ಮುಚ್ಚಳಿಕೆ ಬರೆಸಿಕೊಂಡು ಅವನನ್ನು ಬಿಡುಗಡೆ ಮಾಡಲಾಯಿತು. ಸೈಮನ್ ಕಮೀಷನ್ನಿನ ವಿರುದ್ಧ ಹೋರಾಡುತ್ತಿದ್ದ ಲಾಲಾ ಲಜಪತ್ ನೇತೃತ್ವದ ಹೋರಾಟಗಾರರ ಮೇಲೆ ಸ್ಕಾಟ್ ನ ಆದೇಶದಂತೆ ಸ್ಯಾಂಡರ್ಸ್ ಮುಗಿಬಿದ್ದ. ಪಂಜಾಬಿನ ವೃದ್ಧ ವೀರ ಕೇಸರಿಯ ಶರೀರ ಸ್ಯಾಂಡರ್ಸನ ಲಾಠಿ ಏಟುಗಳ ಆಘಾತಕ್ಕೆ ಜರ್ಝರಿತವಾಯಿತು. ಸ್ಕಾಟ್ ನ ಬಲಿಗೆ ಬೀಸಿದ ಬಲೆಗೆ, ಜಯಗೋಪಾಲ ತಪ್ಪಾಗಿ ಗುರುತಿಸಿದ್ದರಿಂದ ಸ್ಕಾಟಿನ ಬದಲಾಗಿ ಸ್ಯಾಂಡರ್ಸ್, ರಾಜಗುರು ಹಾಗೂ ಭಗತ್ ಸಿಂಹನ ಗುಂಡುಗಳಿಗೆ ಬಲಿಯಾದ. ಅದು ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಆದ ಮರ್ಮಾಘಾತ!

           ಅಸೆಂಬ್ಲಿಯಲ್ಲಿ ಬಾಂಬು ಎಸೆಯುವ ಯೋಜನೆ ಭಗತನದ್ದು. ವ್ಯೂಹ ರಚನೆ ಆಜಾದರದ್ದು. ಆಜಾದ್ ಅಂದರು "ಬಾಂಬು ಎಸೆದವರು ಕೂಡಲೇ ಓಡಿ ಬರಬೇಕು. ಅವರನ್ನು ನಾನು ರಕ್ಷಿಸುತ್ತೇನೆ". ಆದರೆ ಬಾಂಬು ಎಸೆದು ಎಲ್ಲರೆದುರು ನಿಂತು ನಾವು ಯಾಕೆ ಎಸೆದೆವೆಂದು ಹೇಳಬೇಕು, ಓಡಬಾರದು ಎಂಬುದು ಭಗತ್ ನಿಲುವಾಗಿತ್ತು. ಭಗತ್ ನ ಹಠಕ್ಕೆ ಎಲ್ಲರೂ ಒಪ್ಪಲೇಬೇಕಾಯಿತು. ಸೂರ್ಯ ಮುಳುಗದ ಸಾಮ್ರಾಜ್ಯದ ಕಿವುಡರ ಅಸೆಂಬ್ಲಿಯಲ್ಲಿ ಕ್ರಾಂತಿಯ ಬಾಂಬು ಸಿಡಿದಿತ್ತು. ಆದರೆ ಭಗತ್-ದತ್ತ ತ್ಯಾಗದ ಹುಚ್ಚಿಗೊಳಗಾಗಿ ಬಂಧನಕ್ಕೊಳಗಾದರು! ಚಂದ್ರಶೇಖರ್ ಆಜಾದ್ ವೇಶಮರೆಸಿಕೊಂಡು ಬಂದು ಭಗತ್ ನನ್ನು ಬಿಡಿಸಲೆತ್ನಿಸಿದರು. ಆದರೆ ಭಗತನ ಹಠ ಅದಕ್ಕೊಪ್ಪಲಿಲ್ಲ...ಹೇಡಿಗಳು ತಮ್ಮ ಸ್ವಾಭಾವಿಕ ಮೃತ್ಯುವಿನ ಮೊದಲೇ ಎಷ್ಟೋ ಸಲ ಸಾಯುತ್ತಾರೆ. ಆದರೆ ವೀರನಿಗೆ ಮೃತ್ಯು ಬರುವುದು ಒಂದೇ ಸಲ! ಫಾಸಿಕೋಣೆಯಲ್ಲಿ ಗಂಭೀರ ಅಧ್ಯಯನಗಳೊಂದಿಗೆ ತನ್ನ "ಆತ್ಮಕಥೆ", "ದಿ ಡೋರ್ ಟು ಡೆತ್", "ಐಡಿಯಲ್ ಆಫ್ ಸೋಷಿಯಾಲಿಸಮ್", "ಸ್ವಾಧೀನತಾ ಕೀ ಲಢಾಯೀ ಮೇಂ ಪಂಜಾಬ್ ಕಾ ಪಹಲಾ ಉಭಾರ್" ಎಂಬ ಪುಸ್ತಕಗಳನ್ನೂ ಬರೆದ. ಆತ ಸಾಮ್ರಾಜ್ಯಶಾಹಿಗಳಿಗೆ ಪದಾಘಾತ ನೀಡಿ ರಾಜಗುರು-ಸುಖದೇವರೊಂದಿಗೆ ನಗುನಗುತ್ತಾ ಸ್ವಾತಂತ್ರ್ಯ ಯಜ್ಞಕ್ಕೆ ಪೂರ್ಣಾಹುತಿ ನೀಡಿ ತಾತ ಅರ್ಜುನನ ಸಂಕಲ್ಪವನ್ನು ಪೂರೈಸಿದ.

             ಆರ್ಯ ಸಮಾಜದ ಅನುಯಾಯಿಗಳಾಗಿ ಅತ್ಯಂತ ಸಾಹಸದಿಂದ ಅಂಧವಿಶ್ವಾಸ ಮತ್ತು ಪರಂಪರಾವಾದಗಳ ಜಡತೆಯಿಂದ ಮುಚ್ಚಿಹೋಗಿದ್ದ ತನ್ನ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದು ಅಲ್ಲೊಂದು ಯಜ್ಞವೇದಿಕೆಯನ್ನು ಅಣಿ ಮಾಡಿದ್ದ ಅಜ್ಜ, ಆ ಯಜ್ಞವೇದಿಕೆಯ ಮೇಲೆ ವಿಶಾಲವಾದ ಯಜ್ಞಕುಂಡವೊಂದನ್ನು ಸ್ಥಾಪಿಸಿ, ಸಮಿತ್ತುಗಳನ್ನು ಜೋಡಿಸಿ ಅದರಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ, ಉರಿಯನ್ನೆಬ್ಬಿಸಿದ್ದ ಅಪ್ಪ, ಚಿಕ್ಕಪ್ಪಂದಿರ ಪಥದಲ್ಲಿ ನಡೆದ ಭಗತ್ ಸಿಂಗ್ ತನ್ನ ಜೀವನವನ್ನೇ ಆಜ್ಯವನ್ನಾಗಿಸಿ ಆ ಯಜ್ಞಕುಂಡಕ್ಕೆ ಧುಮುಕಿದ. ಅದರ ಜ್ವಾಲೆ ದೇಶದಾದ್ಯಂತ ಹರಡಿತು. ಅಮೃತಧಾರೆಯು ತಾಯಿ ಭಾರತಿಗೆ ಅಭಿಷೇಕ ಮಾಡಿ ಅಮರವಾಯಿತು.


ಬುಧವಾರ, ಅಕ್ಟೋಬರ್ 4, 2017

ರೋಹಿಂಗ್ಯಾ ಪರ ನಿಲ್ಲೋ ಮುನ್ನ ಅರೆಖಾನಿನತ್ತ ಅರೆಕ್ಷಣ ನೋಡಿ!

ರೋಹಿಂಗ್ಯಾ ಪರ ನಿಲ್ಲೋ ಮುನ್ನ ಅರೆಖಾನಿನತ್ತ ಅರೆಕ್ಷಣ ನೋಡಿ!


          "ನಾವು ದುರ್ಬಲರಾಗಿದ್ದರೆ ನಮ್ಮ ಮಾತೃಭೂಮಿ ಮುಸ್ಲಿಮರ ವಶವಾಗುತ್ತೆ. ನಿಮ್ಮ ಹೃದಯದಲ್ಲಿ ಅಗಾಧವಾದ ದಯೆ ಹಾಗೂ ಪ್ರೇಮವಿರಬಹುದು; ಹಾಗಿದ್ದ ಮಾತ್ರಕ್ಕೆ ನೀವು ಹುಚ್ಚು ನಾಯಿಯ ಜೊತೆ ಮಲಗಲು ಸಾಧ್ಯವಿಲ್ಲ" ಬ್ರಹ್ಮದೇಶ(ಬರ್ಮಾ)ದ ಬೌದ್ಧ ಭಿಕ್ಷು ಅಶಿನ್ ವಿರಥುವಿನ ಈ ದಿಟ್ಟ ನುಡಿ ಅಹಿಂಸಾ ಪ್ರಿಯ ಬೌದ್ಧರನ್ನೇ ಶಸ್ತ್ರ ಹಿಡಿಯಲು ಪ್ರೇರೇಪಿಸಿತು. ಅರೇ ಒಬ್ಬ ಬೌದ್ಧ ಭಿಕ್ಷು ಮುಸ್ಲಿಮರನ್ನು ಹುಚ್ಚುನಾಯಿಗಳೆಂದು ಯಾಕೆ ಕರೆದ? ಅಹಿಂಸೆಯೇ ಮೈವೆತ್ತವರು ಎಂದು ಇತಿಹಾಸಕಾರರಿಂದ, ಸ್ವತಃ ಸೆಕ್ಯುಲರುಗಳಿಂದಲೇ ಹೊಗಳಿಸಿಕೊಂಡ ಬೌದ್ಧರು ಮುಸ್ಲಿಮರ ವಿರುದ್ಧ ಯುದ್ಧ ಸಾರಿದ್ದೇಕೆ ಎಂದು ಯಾರೂ ವಿಚಾರ ಮಾಡಲಿಲ್ಲವೇಕೆ? ಪ್ರಸ್ತುತ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿರುವ ಈ ರೋಹಿಂಗ್ಯಾಗಳೆಂದರೆ ಯಾರು? ಅವರ ಅಸಲಿಯತ್ತೇನು ಎನ್ನುವುದನ್ನು ಯಾಕೆ ಯಾರೂ ಕೆದಕುತ್ತಿಲ್ಲ? ಹಾಗೆ ನೋಡಿದರೆ ಈ ಸಮಸ್ಯೆಯ ಮೂಲ ಸ್ವತಃ ರೋಹಿಂಗ್ಯಾಗಳೇ ಹೊರತು ಬರ್ಮೀಯರಲ್ಲ ಎನ್ನುವ ಸತ್ಯ ತಿಳಿಯಬೇಕಾದರೆ ಸ್ವಲ್ಪ ಗತಕಾಲಕ್ಕೋಡಬೇಕು!



            ಬಿಬಿಸಿಯಂತಹ ಸುದ್ದಿ ಮಾಧ್ಯಮಗಳು, ಇಸ್ಲಾಮಿನ ಪಾದ ನೆಕ್ಕುವ ಹುಸಿ ಜಾತ್ಯಾತೀತವಾದಿಗಳು ಹಾಗೂ ಅನ್ಯ ಭಾಗದ ಮುಸ್ಲಿಮರು ಬೊಬ್ಬಿರಿಯುವಂತೆ ರೋಹಿಂಗ್ಯಾಗಳು ಬರ್ಮಾದ ಮೂಲನಿವಾಸಿಗಳೂ ಅಲ್ಲ, ನಶಿಸುತ್ತಿರುವ ಬರ್ಮಾದ ಬುಡಕಟ್ಟು ಜನಾಂಗವೂ ಅಲ್ಲ. ಅವರೆಲ್ಲಾ ಹೊರಗಿನಿಂದ ವಲಸೆ ಬಂದವರು. ಬರ್ಮಾದ ಬೌದ್ಧರ ಈ ಮಾತುಗಳಲ್ಲಿ ಸುಳ್ಳೇನೂ ಇಲ್ಲ. 15ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ 24 ವರ್ಷ ಬಂಗಾಳದಲ್ಲಿ ಕಳೆದು ಬಳಿಕ ಮತ್ತೆ ರಾಜ್ಯ ಪಡೆದಾಗ ಆತನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ತೆರಳಿದರು. ಇದು ಆ ಬೌದ್ಧರ ನೆಲಕ್ಕೆ ಜಿಹಾದಿಗಳ ಮೊದಲ ಮುಕ್ತ ಪ್ರವೇಶ! ಬಂಗಾಳಕೊಲ್ಲಿಯ ಪೂರ್ವಭಾಗದ ರಖಾಯಿಂಗ್ ಎನ್ನುವ ಪ್ರದೇಶ ಐತಿಹಾಸಿಕ ಬೌದ್ಧ ನೆಲ. ಹೇರಳ ಪ್ರಾಕೃತಿಕ ಸಂಪನ್ಮೂಲಗಳಿಂದ ಕೂಡಿದ್ದ, ಆಯಕಟ್ಟಿನ ವ್ಯಾಪಾರ ಸ್ಥಳವಾಗಿದ್ದ ಅಖಂಡ ಭಾರತದ ಈ ಭೂಭಾಗ ಬ್ರಿಟಿಷರ ಕಣ್ಣು ಕುಕ್ಕಿತು. ಬ್ರಿಟೀಷ್ ಆಕ್ರಮಣವಾದೊಡನೆ ಕೇವಲ ರಖಾಯಿಂಗ್'ನ ಹೆಸರು ಅರಖಾನ್ ಎಂದು ಬದಲಾದುದು ಮಾತ್ರವಲ್ಲ, ಬರ್ಮಾದ ಸಂಪದ್ಭರಿತ ಅರಣ್ಯಗಳಲ್ಲಿದ್ದ ಬೆಲೆಬಾಳುವ ಮರಗಳು ಇದೇ ಅರಖಾನ್ ಮುಖಾಂತರ ಚಿತ್ತಗಾಂಗ್ ಸೇರಿ ಇಂಗ್ಲೆಂಡಿಗೆ ರವಾನೆಯಾಗಲಾರಂಭಿಸಿತು. ಬ್ರಿಟಿಷರ ಈ "ನಾಟಾ" ನಾಟಕಕ್ಕೆ ಮಾತ್ರವಲ್ಲದೆ ಬರ್ಮಾದ ಕೃಷಿ ಕೆಲಸಕ್ಕೆ ನೆರವಾಗುತ್ತಿದ್ದವರು ಬಂಗಾಳದ ಕೂಲಿ ಕಾರ್ಮಿಕರೇ! ಇವರಲ್ಲಿ ಚಿತ್ತಗಾಂಗಿನ ಮುಸಲ್ಮಾನರ ಸಂಖ್ಯೆಯೇ ಹೆಚ್ಚು. ಕೆಲವರು ಉದ್ಯೋಗದ ಅನುಕೂಲಕ್ಕಾಗಿ ಅಲ್ಲೇ ನೆಲೆ ನಿಂತರು. ಬೆರಳು ಕೊಟ್ಟರೆ ಹಸ್ತ ನುಂಗುವ ಬುದ್ಧಿಯ ಮುಸಲ್ಮಾನರು ಕ್ರಮೇಣ ಹಿಂಡುಹಿಂಡಾಗಿ ಬರ್ಮಾಕ್ಕೆ ವಲಸೆ ಹೋಗತೊಡಗಿದರು. ಈ ವಲಸೆಯ ಪ್ರಮಾಣ ಎಷ್ಟೊಂದು ತೀವ್ರವಾಗಿತ್ತೆಂದರೆ 1940ರ ದಶಕದಲ್ಲಿ “ದಿ ಸ್ಟೇಟ್ಸ್ ಮೆನ್” ಚಿತ್ತಗಾಂಗಿನ ಹತ್ತನೇ ಒಂದರಷ್ಟು ಜನ ಪ್ರತಿವರ್ಷ ಅರೆಖಾನ್'ಗೆ ವಲಸೆ ಹೋಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿತ್ತು. ಬೌದ್ಧ ಎಷ್ಟೆಂದರೂ ಹಿಂದೂ ಧರ್ಮದ ಒಂದು ಪಂಥವೇ. ಬೌದ್ಧರಾದವರಿಗೆ ಹಿಂದೂ ಭೋಳೆ ಸ್ವಭಾವ ಬಿಟ್ಟು ಹೋಗಲು ಹೇಗೆ ಸಾಧ್ಯ. ಸಹಜವಾಗಿಯೇ ಅವರು ಸಹಾನುಭೂತಿಯಿಂದ ಮುಸ್ಲಿಮರ ಕಾಪಟ್ಯವನ್ನು ಅರಿಯದೇ, ಭವಿಷ್ಯದ ಕರಾಳತೆಯನ್ನು ಅರ್ಥೈಸದೇ ಬಂದವರಿಗೆ ಅನ್ನ ಕೊಟ್ಟರು, ಉಳಿವಿಗೆ ಜಾಗ ಕೊಟ್ಟರು. ಹೀಗೆ ಅಂದು ವಲಸೆ ಹೋದವರೇ ಈ ರೋಹಿಂಗ್ಯಾ ಮುಸಲ್ಮಾನರು.

            ಅಹಿಂಸೆಯನ್ನು ಪ್ರತಿಪಾದಿಸುವ ಜನರ ನಾಡೇನೋ ಆಶ್ರಯ ಕೊಟ್ಟಿತು. ಆದರೆ ಈ ಜನ ಅದನ್ನು ಉಳಿಸಿಕೊಳ್ಳಲಿಲ್ಲ. ಉಳಿಸಿಕೊಳ್ಳುವ ಮನಸ್ಸಿದ್ದರೂ ಅವರಿಗಂಟಿರುವ ಮತ ಬಿಡಬೇಕಲ್ಲ? ಕ್ರಮೇಣ ಅಲ್ಲಿ ಮಸೀದಿಗಳು ತಲೆಯೆತ್ತಲಾರಂಭಿಸಿದವು. ಎಷ್ಟೆಂದರೆ ನಲವತ್ತು ಜನರ ಸಣ್ಣ ಗುಂಪಿಗೂ ಒಂದು ಮಸೀದಿ! ಅಲ್ಲಿಂದ ದಿನ ಬೆಳಗಾದರೆ ಕಾಫಿರರನ್ನು ಕೊಲ್ಲಿರಿ ಎಂಬ ಸುಪ್ರಭಾತ ಕೇಳಿ ಬರಲಾರಂಭಿಸಿತು. ಯಾವ ಮಾಲಿಕ ಕೆಲಸ ಕೊಟ್ಟನೋ ಆತನ ಜಾಗವನ್ನೇ ಈ ರೋಹಿಂಗ್ಯಾಗಳು ತಮ್ಮದಾಗಿಸಿಕೊಂಡರು. ವಿರೋಧಿಸಿದ ಮಾಲಿಕನನ್ನು ಹತ್ಯೆಗೈದರು. ಆತನ ಪರಿವಾರದ ಹೆಂಗಳೆಯರ ಮೇಲೆ ಅತ್ಯಾಚಾರಗೈದರು. ಆತನ ಮಗಳನ್ನು ಹೊತ್ತೊಯ್ದರು. ಮುಸ್ಲಿಂ ರಾಷ್ಟ್ರೀಯವಾದ ಮೊಳೆಯಲಾರಂಭಿಸಿತು. ಜಿನ್ನಾನ ದ್ವಿರಾಷ್ಟ್ರವಾದ ಅವರಿಗೆ ಪ್ರಿಯವಾಯಿತು. ಭಾರತದ ವಿಭಜನೆಯ ಸಮಯದಲ್ಲಿ ಆದ ಇತಿಹಾಸದ ಬಹು ದೊಡ್ಡ ಭಯಾನಕ ಕಗ್ಗೊಲೆಯಲ್ಲೇ ಪಾತ್ರವಹಿಸಿ ಹಿಂದೂಗಳ ಜೀವ ತಿಂದರು. ಬರ್ಮಾ ಸ್ವಾತಂತ್ರ್ಯ ಹೊಂದುವ ಹೊಸ್ತಿಲಲ್ಲಿ ಇದೇ ರೋಹಿಂಗ್ಯಾಗಳು ಅರಖಾನ್ ಪ್ರಾಂತ್ಯವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಬೇಡಿಕೆಯಿಟ್ಟು ದಂಗೆಯನ್ನಾರಂಭಿಸಿದರು.  ಬರ್ಮಾ ಸರ್ಕಾರ ಒಲ್ಲೆ ಎಂದಾಗ ಜಿನ್ನಾನ ಜೊತೆ ಮಾತುಕತೆ ನಡೆಸಿ ಬರ್ಮಾ ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ಈ ಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಖಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದಿಂದ ಮತ್ತಷ್ಟು ಮುಸ್ಲಿಮರನ್ನು ಕರೆತರಲಾರಂಭಿಸಿದರು. ಹೀಗೆ ಆಶ್ರಯ ಬೇಡಿಕೊಂಡು ಹೋದವರು ಪ್ರತ್ಯೇಕ ದೇಶವನ್ನೇ ಕೇಳಲಾರಂಭಿಸಿದರು. ಪ್ರತ್ಯೇಕ ರೋಹಿಂಗ್ಯಾ ಚಳವಳಿಯಲ್ಲಿದ್ದ ಕೆಲವು ಯುವಕರು ತಾಲೀಬಾನಿನಲ್ಲೂ ಕಂಡುಬಂದರು. ಮುಂದೆ ಕಾಶ್ಮೀರ ಮತ್ತು ಪ್ಯಾಲೆಸ್ಟೈನ್ ಉಗ್ರರ ಜೊತೆ ನಂಟಿರುವುದೂ ಹೊರಬಂತು.

               ಯಾವಾಗ ರೋಹಿಂಗ್ಯಾಗಳು ಪ್ರತ್ಯೇಕ ದೇಶ ಕೇಳಲಾರಂಭಿಸಿದರೋ ಅಹಿಂಸಾವಾದಿ ಬೌದ್ಧರೂ ಎಚ್ಚೆತ್ತರು. ರಖಾಯಿಂಗ್(ರಖೈನ್) ಪ್ರಾಂತ್ಯದಿಂದ ಮೂಲನಿವಾಸಿಗಳಾದ ತಮ್ಮವರನ್ನು ರೋಹಿಂಗ್ಯಾಗಳು ಒದ್ದೋಡಿಸುತ್ತಿರುವ ಸುದ್ದಿಯನ್ನು ಪದೇ ಪದೇ ಕೇಳಿ ಬರ್ಮೀಯರು ರೊಚ್ಚಿಗೆದ್ದರು. ರೋಹಿಂಗ್ಯಾಗಳ ಕ್ರೌರ್ಯದ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಬರ್ಮಾ ಸರಕಾರ ಸೇನೆಯನ್ನು ಬಳಸಿಕೊಂಡು ರೋಹಿಂಗ್ಯಾಗಳನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ ಅದು ರಕ್ತಬೀಜಾಸುರನ ವಂಶವಿರಬೇಕು. ಹಲವು ಬಾರಿ ಸೇನಾ ಕಾರ್ಯಾಚರಣೆ ನಡೆದರೂ ರೋಹಿಂಗ್ಯಾ ಪಡೆ ಮತ್ತೆ ಮತ್ತೆ ಹುಟ್ಟುತ್ತಲೇ ಬೆಳೆಯುತ್ತಲೇ ಸಾಗಿತು. ಈ ನಡುವೆ ರೋಹಿಂಗ್ಯಾಗಳು ತಮ್ಮ ಆರ್ಥಿಕ ಅಗತ್ಯಕ್ಕಾಗಿ ಗಡಿಯಲ್ಲಿ ಅಕ್ಕಿ, ಶಸ್ತ್ರಾಸ್ತ್ರ, ಮಾದಕವಸ್ತುಗಳ  ಕಳ್ಳಸಾಗಣೆಯನ್ನೂ ಆರಂಭಿಸಿದರು. 1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿದ ರೋಹಿಂಗ್ಯಾಗಳು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಎಂಬ ಪಕ್ಷವನ್ನೇ ಹುಟ್ಟುಹಾಕಿದರು. ರೋಹಿಂಗ್ಯಾ ಭಯೋತ್ಪಾದಕರ ಪರ ಮಾತಾಡುವ ಭಾಷಣಕಾರರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಇವರಲ್ಲಿ ಪ್ರಮುಖರು. 1980ರ ಬಳಿಕ ರೋಹಿಂಗ್ಯಾಗಳಿಗೆ ವಿಶ್ವದ ವಿವಿಧ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆಯಲಾರಂಭಿಸಿತು. ತಾಲಿಬಾನ್, ಅಲ್ ಖೈದಾಗಳಂತ ಭಯೋತ್ಪಾದಕ ಸಂಘಟನೆಗಳಲ್ಲದೆ ಹಲವು ಸಿರಿವಂತ ಮುಸ್ಲಿಂ ದೇಶಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಆದರೆ ಅಹಿಂಸಾ ಪ್ರತಿಪಾದಕರಾದರೂ ಬರ್ಮಾದ ಬೌದ್ಧರು ಇದಕ್ಕೆಲ್ಲಾ ಬೆದರಲಿಲ್ಲ. ಸುಮ್ಮನಿದ್ದೂ ಬಿಡಲಿಲ್ಲ. ಮುಗುಮ್ಮಾಗುಳಿಯಲು ಅವರೇನು ಭಾರತೀಯರೇ? ಬರ್ಮಾ ಸೈನ್ಯ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ರೋಹಿಂಗ್ಯಾಗಳಿಗೆ ಪೌರತ್ವ ಕೊಡಿ ಎಂದ ಯು.ಎನ್.ಓ ಮಾತಿಗೂ ಅದು ಸೊಪ್ಪು ಹಾಕಲಿಲ್ಲ. ಇಲ್ಲಿರಬೇಕಾದರೆ ಬಂಗಾಳಿ ಅಂತ ಗುರುತಿಸಿಕೊಳ್ಳಿ ಎಂದು ಕಟ್ಟುನಿಟ್ಟಾಗಿ ರೋಹಿಂಗ್ಯಾಗಳಿಗೆ ಆಜ್ಞಾಪಿಸಿತು.

                  ಅನ್ನ ಕೊಟ್ಟ ಮನೆಗೆ ಕನ್ನ ಹಾಕಲು ಯತ್ನಿಸಿ ಪೆಟ್ಟು ತಿಂದ ಮೇಲೆ ಹತಾಶೆಗೊಂಡ ರೋಹಿಂಗ್ಯಾಗಳು ಈಗ ಅಕ್ಕಪಕ್ಕದ ದೇಶಗಳಿಗೆ ನುಗ್ಗಲಾರಂಭಿಸಿದ್ದಾರೆ. ಹದಿನೈದು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ನೆರೆಯ ರಾಷ್ಟ್ರಗಳಿಗೆ ಪಲಾಯನಗೈದಿದ್ದಾರೆ. 2016 ಕೊನೆಯ ಮೂರು ತಿಂಗಳಲ್ಲೇ 21000 ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ನುಗ್ಗಿದ್ದರೆಂದರೆ ರೋಹಿಂಗ್ಯಾಗಳ ವಲಸೆಯ ಪ್ರಮಾಣವನ್ನು ಊಹಿಸಬಹುದು. ಎಲ್ಲಾ ನಿರಾಶ್ರಿತರಿಗೂ ಆಪ್ಯಾಯಮಾನ ರಾಷ್ಟ್ರವಾಗಿರುವುದು ಭಾರತವೇ. ಇಲ್ಲಿ ಕೇಳುವವರಿಲ್ಲ, ಹೇಳುವವರಿಲ್ಲ! ಈಗ ರೋಹಿಂಗ್ಯಾಗಳೂ ಬಾಂಗ್ಲಾ ಮೂಲಕ ನುಸುಳಿಕೊಂಡು ಭಾರತದೊಳಗೆ ಬರುತ್ತಿದ್ದಾರೆ. ಈ ನುಸುಳುಕೋರರು ಈಗಾಗಲೇ ದೆಹಲಿ, ಜಮ್ಮು, ಬಂಗಾಲ, ಬಿಹಾರ, ತೆಲಂಗಾಣಗಳಲ್ಲಿ ಬೀಡು ಬಿಟ್ಟಿದ್ದಾರೆ. ಕಾಶ್ಮೀರದಿಂದ ಹೊರದಬ್ಬಿರುವ ಲಕ್ಷೋಪಲಕ್ಷ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಯಾವುದೇ ಯೋಜನೆಯನ್ನು ಹಮ್ಮಿಕೊಳ್ಳದೆ ರೋಹಿಂಗ್ಯಾ ಸಮುದಾಯಕ್ಕೆ ಜಮ್ಮುವಿನಲ್ಲಿ ವಸತಿಗಾಗಿ ಭೂಮಿಯನ್ನು ನೀಡಲಾಗಿದೆ. ಈಗಾಗಲೇ ಇವರಿಗೆ ಆಧಾರ್ ಹಾಗೂ ಮತದಾರ ಗುರುತಿನ ಚೀಟಿಯನ್ನು ಕೊಡಲಾಗಿದೆ. ಇದಕ್ಕೆ ಕಾರಣರಾರು ಎಂದು ನೋಡ ಹೊರಟರೆ ಆ ದೃಷ್ಟಿ ನೇರ ಅಬ್ದುಲ್ಲಾ ಕುಟುಂಬದತ್ತ ಹೊರಳುತ್ತದೆ. ಅಲ್ಲಿಗೆ ದೇಶದೊಳಕ್ಕೆ ನುಸುಳುವ ರೋಹಿಂಗ್ಯಾಗಳು ಕಾಶ್ಮೀರದಲ್ಲೇ ನೆಲೆ ನಿಲ್ಲುವುದೇಕೆ ಎನ್ನುವುದರ ಅರಿವಾಗಬಹುದು. ಜಮ್ಮು ಕಾಶ್ಮೀರದ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಜಮ್ಮುವಿಗೆ 5,700 ಹಾಗೂ ಲಡಾಕ್ ಗೆ 7,664 ರೊಹಿಂಗ್ಯಾಗಳು ವಲಸೆ ಬಂದಿದ್ದಾರೆ. ವಿಶ್ವಸಂಸ್ಥೆ ನಿರಾಶ್ರಿತ ರಾಷ್ಟ್ರಗಳ ಸಮಿತಿಯ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ರೊಹಿಂಗ್ಯಾಗಳು ನೆಲೆಸಿದ್ದಾರೆ. ಗೃಹ ಇಲಾಖೆಯ ವರದಿ ಪ್ರಕಾರ ಇವರ ಸಂಖ್ಯೆ 40 ಸಾವಿರಕ್ಕಿಂತಲೂ ಹೆಚ್ಚು. ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರಲ್ಲಿ ರೋಹಿಂಗ್ಯಾಗಳೂ ಇದ್ದರು. 2016ರ ಬುದ್ಧಗಯಾ ಸ್ಫೋಟದಲ್ಲಿ ಶಾಮೀಲಾಗಿರುವ, ಈಗಾಗಲೇ ಹಲವು ಉಗ್ರ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ಈ ಜನಾಂಗಕ್ಕೆ ಆಶ್ರಯ ನೀಡುವುದೆಂದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆಯೇ. ಮೊದಲೇ ಭಯೋತ್ಪಾದಕತೆ, ಪ್ರತ್ಯೇಕತಾವಾದದಿಂದ ನರಳುತ್ತಿರುವ ಕಾಶ್ಮೀರಕ್ಕೆ ಇನ್ನೊಂದು ಉರುಳು ಬಿಗಿದಂತಾಯ್ತು! ಬಾಂಗ್ಲಾದೇಶೀ ನುಸುಳುಕೋರರ ಸಮಸ್ಯೆಯನ್ನೇ ಬಗೆಹರಿಸಲಾಗದ ಭಾರತ ರೋಹಿಂಗ್ಯಾಗಳನ್ನು ನಿಯಂತ್ರಿಸುತ್ತದೆಯೇ?



               ರೋಹಿಂಗ್ಯಾಗಳ ಹಿತರಕ್ಷಣೆಗಾಗಿರುವ ‘ಎ.ಆರ್.ಎನ್.ಓ’(ಅರೆಖಾನ್ ರೋಹಿಂಗ್ಯಾ ನ್ಯಾಷನಲ್ ಆರ್ಗನೈಸೇಷನ್) ಅಧ್ಯಕ್ಷ ನೂರುಲ್ ಇಸ್ಲಾಂ ‘ಸಾವಿರಾರು ರೋಹಿಂಗ್ಯಾಗಳು ಭಾರತದಲ್ಲೂ ಬದುಕುತ್ತಿದ್ದಾರೆ. ಭಾರತೀಯರು ಎಂದಿಗೂ ನಮ್ಮನ್ನು ಕೀಳಾಗಿ ಕಂಡಿಲ್ಲ. ನಮಗೆ ಭಾರತದ ಬಗ್ಗೆ ಕೃತಜ್ಞತೆ ತುಂಬಿದ ಗೌರವ ಭಾವನೆ ಇದೆ.’ ಎನ್ನುತ್ತಾರೆ. ಈ ಕೃತಜ್ಞತೆಯ ಭಾವನೆಯಿಂದಲೇ ರೋಹಿಂಗ್ಯಾಗಳು ಬುದ್ಧಗಯಾದಲ್ಲಿ ಸ್ಫೋಟ ಮಾಡಿದರೋ? ನಾವು ಕೀಳಾಗಿ ಕಂಡಿಲ್ಲವೆಂದೇ ರೋಹಿಂಗ್ಯಾಗಳು ಕಾಶ್ಮೀರ ಉಗ್ರರೊಡನೆ ಸೇರಿಕೊಂಡರೋ? ಬರ್ಮಾ ಸರ್ಕಾರ ತಮಗೆ ಮಾನವ ಹಕ್ಕುಗಳನ್ನು ಕೊಡುತ್ತಿಲ್ಲವೆಂದು ಆರೋಪಿಸುವ ಇದೇ ನೂರುಲ್ ಬರ್ಮಾದ ರಂಗೂನ್ ವಿವಿಯಲ್ಲಿ ಪದವಿ ಪಡೆಯಲು ಸಾಧ್ಯವಾದದ್ದಾದರೂ ಹೇಗೆ? ಆಸ್ಟ್ರೇಲಿಯಾ, ಲಂಡನ್ನುಗಳಲ್ಲಿ ವಿದ್ಯಾಭ್ಯಾಸ ಮಾಡಿ ಪದವಿಗಳ ಮೇಲೆ ಪದವಿ ಪಡೆಯಲು ಹೇಗೆ ಅವಕಾಶ ಸಿಕ್ಕಿತು? ಒಂದು ವೇಳೆ ಈಗ ಪರಿಸ್ಥಿತಿ ಬದಲಾಗಿದೆ ಎಂದರೂ ಅದಕ್ಕೆ ಉಪ್ಪು ತಿಂದ ಮನೆಗೆ ಎರಡು ಬಗೆಯ ಹೊರಟ ರೋಹಿಂಗ್ಯಾಗಳೇ ಕಾರಣರಲ್ಲವೇ? ಮೊದಲು ಆಶ್ರಯ ಕೊಟ್ಟವರನ್ನೇ ಹುರಿದು ಮುಕ್ಕಿ ತಿನ್ನಲು ಹೊರಟ ರೋಹಿಂಗ್ಯಾಗಳು ಭೋಳೆ ಸ್ವಭಾವದ ಭಾರತೀಯರನ್ನು ಬಿಟ್ಟಾರೆಯೇ? ಅಂದಹಾಗೆ, ನೂರುಲ್'ಗೆ ಅಲ್ಕೈದಾ ಮತ್ತಿತರ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟಿದೆ ಎಂದು ‘ವಿಕಿಲೀಕ್ಸ್’  ವರದಿ ಹೇಳುತ್ತಿದೆ!

                  ಐಸಿಸ್'ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಇಂತಹ ರಾಕ್ಷಸೀ ಪ್ರವೃತ್ತಿಯ ರೋಹಿಂಗ್ಯಾಗಳನ್ನು ಬೆಂಬಲಿಸಿ ಭಾರತದ ಮುಸ್ಲಿಮರು ಎಂದಿನಂತೆ ತಮ್ಮ ನಿಜಬಣ್ಣ ತೋರಿಸಿಯಾಗಿದೆ. ಮುಸ್ಲಿಂ ಮಹಿಳಾ ಒಕ್ಕೂಟ, ಅಂಜುಮನ್ ಇಸ್ಲಾಂ, ಎಸ್.ಡಿ.ಪಿ.ಐ ಮುಂತಾದ ಸಂಘಟನೆಗಳು ಭಾರತದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಿವೆ. ಮುಸ್ಲಿಮರಿಗೆ ಆಶ್ರಯ ನೀಡಬೇಕೆಂದು ಓವೈಸಿ, ಎಸ್.ಕೆ.ಎಸ್.ಎಸ್.ಎಫ್ ನಂತಹ ಸಂಘಟನೆ(ಈ ಸಂಘಟನೆಯ ಮೇಲೆ ಗುಪ್ತಚರ ಇಲಾಖೆ ಕಣ್ಣಿರಿಸಬೇಕು)ಗಳು ತಮ್ಮ ಗಂಟಲು ಹರಿದುಕೊಂಡಿವೆ. ಇದೇ ಸಂಘಟನೆಗಳು ಕಾಶ್ಮೀರಿ ಪಂಡಿತರ ವಿಷಯದಲ್ಲಿ ಕನಿಷ್ಟ ಸಹಾನುಭೂತಿಯನ್ನೂ ತೋರಿಸಿಲ್ಲವೇಕೆ? ದೆಹಲಿಯ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಾ, ಆರೋಗ್ಯಕರವಲ್ಲದ ನೀರು, ಆಹಾರ ಸೇವಿಸುತ್ತಾ ಶಿಕ್ಷಣ ವಂಚಿತರಾಗಿ ಚಿಂದಿ ಆಯುವ ಕೆಲಸಗಳಲ್ಲಿ ಪರದೇಶೀ ರೋಹಿಂಗ್ಯಾಗಳು ನಿರತರಾಗಿದ್ದಾರೆ ಎಂದು ಕಣ್ಣೀರ್ಗರೆವ ಇದೇ ಸೆಕ್ಯುಲರುಗಳು, ಮುಸ್ಲಿಂ ಸಂಘಟನೆಗಳು, ಇಂತಹುದೇ ಪರಿಸ್ಥಿತಿಯಲ್ಲಿ ದಶಕಗಟ್ಟಲೇ ಇರುವ ತಮ್ಮದೇ ದೇಶಬಾಂಧವರಾದ ಕಾಶ್ಮೀರಿ ಪಂಡಿತರ ಬಗ್ಗೆ ಅನುಕಂಪ ಸೂಚಿಸಿದ ಒಂದೇ ಉದಾಹರಣೆಯನ್ನು ನಾ ಕಾಣೆ! ಆದರೆ ಎಲ್ಲಿನದ್ದೋ ರೋಹಿಂಗ್ಯಾಗಳ ಬಗ್ಗೆ ಇವರದ್ದು ಅಪಾರ ಪ್ರೀತಿ. ಈ ಪ್ರೀತಿಗೆ 2012ರಲ್ಲಿ ಲಖ್ನೋದ ಪಾರ್ಕಿನ ಬೌದ್ಧ ವಿಗ್ರಹಗಳು ಬಲಿಯಾದವು; ಆಜಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ಸೇರಿದ್ದ ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರು ಹಾಕಿದ ಬೆಂಕಿಗೆ ಪೊಲೀಸರು, ಸುದ್ದಿ ವಾಹಿನಿಗಳ ವಾಹನಗಳು ಸುಟ್ಟು ಹೋದವು; ಅಮರ್ ಜವಾನ್ ಸ್ಮಾರಕ ಧ್ವಂಸಗೊಂಡಿತು!

                 ತಮ್ಮ ಅನುಕೂಲಕ್ಕೆ ತಕ್ಕಂತೆ ವಿಷಯವನ್ನು ತಿರುಚುವ ಸೆಕ್ಯುಲರುಗಳು ರೋಹಿಂಗ್ಯಾಗಳ ಮೇಲಿನ ಬೌದ್ಧರ ದೌರ್ಜನ್ಯವನ್ನು ಕಂಡು ಬುದ್ಧನೇ ಕಣ್ಣೀರ್ಗರೆಯುತ್ತಿದ್ದಾನೆ ಎಂಬಂತೆ ಪದ್ಯಕಟ್ಟುತ್ತಿರುವುದು ನೋಡಿದಾಗ ಇಂತಹವರು ಬುದ್ಧನನ್ನು ಅರಿತುಕೊಂಡ ಪರಿಯನ್ನು ನೆನೆದು ಅಯ್ಯೋ ಅನಿಸುತ್ತದೆ! ಲಿಚ್ಛವಿಗಳು "ಮಾಗಧರು ನಮ್ಮ ಮೇಲೆ ನಿರಂತರ ಯುದ್ಧ ಮಾಡುತ್ತಾರೆ. ನಮ್ಮ ಸ್ವಾತಂತ್ರ್ಯ-ಸಾರ್ವಭೌಮತ್ವದ ಉತ್ಕರ್ಷವನ್ನು ಕಾಪಾಡಿಕೊಳ್ಳುವುದು ಹೇಗೆ" ಎಂದು ಪ್ರಶ್ನಿಸಿದಾಗ ಬುದ್ಧ ಹೇಳುತ್ತಾನೆ - " ಎಲ್ಲಿಯವರೆಗೂ ನೀವೆಲ್ಲರೂ ಐಕ್ಯಮತ್ಯದಿಂದ ಇರುತ್ತೀರೋ ಅಲ್ಲಿಯವರೆಗೆ ನಿಮಗೆ ಸ್ವಾತಂತ್ರ್ಯವಿರುತ್ತದೆ. ಒಳಜಗಳಗಳನ್ನು ಬಿಟ್ಟು ಗಣತಂತ್ರದ ಕೇಂದ್ರಕ್ಕೆ ಎಲ್ಲರೂ ಬಂದು ಪಾಲ್ಗೊಳ್ಳುವವರೆಗೆ ಹಾಗೂ ರಣದುಂಧುಬಿ ಮೊಳಗಿದಾಕ್ಷಣ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ರಣರಂಗಕ್ಕೆ ಧುಮುಕುವವರೆಗೆ ನಿಮ್ಮ ಸ್ವಾತಂತ್ರ್ಯ ಉಳಿಯುತ್ತದೆ." ಅಹಿಂಸೆಯ ಮೂರ್ತಿ ಎಂದು ಖ್ಯಾತಿವೆತ್ತಾತನೂ ಹೇಳಿದ್ದು ಸನಾತನ ಧರ್ಮದ ವ್ಯಾಖ್ಯೆಯನ್ನೇ! ರಾಷ್ಟ್ರರಕ್ಷಕರು ಸದಾ ಆಯುಧಪಾಣಿಗಳಾಗಿ ಮೌಲ್ಯಯುತ ಜೀವನ ನಡೆಸಬೇಕೆಂದು ಹೇಳಿದ ಬುದ್ಧ ವಿನಯಪಿಟಿಕದಲ್ಲಿ ಭಿಕ್ಷುಗಳಿಗೂ ಯುದ್ಧತಂತ್ರ ಮತ್ತು ಆತ್ಮರಕ್ಷಣೆಯ ಮಾರ್ಗಗಳು ಗೊತ್ತಿರಬೇಕೆಂದು ಹೇಳಿದ್ದಾನೆ. "ನಾವು ಹಿಂದೂಗಳು ಕೃಷ್ಣನ ಉಪದೇಶವನ್ನು ದೂರವಿಟ್ಟಿದ್ದೇವೆ; ಆದರೆ ಬರ್ಮಾದ ಬೌದ್ಧರು ಬುದ್ಧನ ಉಪದೇಶವನ್ನು ಸರಿಯಾಗಿ ಕಾರ್ಯಗತಗೊಳಿಸಿದ್ದಾರೆ" ಎಂಬ ಅರಿವು ನಿಮಗಾಗದಿದ್ದರೆ ನೀವು "ಇಂದಿನ" ಸೆಕ್ಯುಲರುಗಳೇ ಆಗಿರಬೇಕು!

                 ಎಷ್ಟೇ ಅಹಿಂಸಾ ಪ್ರಿಯನಾಗಿರಲಿ ಅಸ್ತಿತ್ವದ, ಅಸ್ಮಿತೆಯ ಪ್ರಶ್ನೆ ಬಂದಾಗ ಅವನು ಜಾಗೃತನಾಗದಿದ್ದರೆ ಅವನೊಟ್ಟಿಗೆ ಅವನ ಅಹಿಂಸೆಯೂ ಸಮಾಧಿಯಾಗುವುದು ನಿಶ್ಚಿತ. ಇದರ ಅರಿವು ಬರ್ಮಾದ ಬೌದ್ಧರಿಗಿದೆ, ಬರ್ಮಾದ ಬೌದ್ಧರ ದಿಟ್ಟ ಪ್ರತಿದಾಳಿ ನೋಡಿದ ಶ್ರೀಲಂಕಾದ ಬೌದ್ಧರಿಗೂ ಇದರ ಅರಿವಾಗಿದೆ. ಅರಿವಾಗದೇ ಇದ್ದ ಟಿಬೆಟ್ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದೆ. ಅರಿವಾಗದೆ ಬಂದವರನ್ನೆಲ್ಲಾ ಅಪ್ಪಿಕೊಂಡ ಯೂರೋಪು ಯೂರೋಬಿಯಾವಾಗುವತ್ತ ಸಾಗಿದೆ. ಬುದ್ಧಿ ಇಲ್ಲದ ಜೀವಿಗಳ ಪ್ರಭಾವದಿಂದ ಭಾರತವೂ ಅಂತಹುದೇ ದುರಂತಕ್ಕೀಡಾಗುತ್ತಿದೆ. ಇವತ್ತು ರೋಹಿಂಗ್ಯಾಗಳನ್ನು ನೆಪವಾಗಿರಿಸಿ ಬರ್ಮಾದ ಸರಕಾರವನ್ನು, ಬರ್ಮಾದ ಬೌದ್ಧರನ್ನು ಎಲ್ಲರೂ ಹಿಗ್ಗಾಮುಗ್ಗ ತೆಗಳಲಾರಂಭಿಸಿದ್ದಾರೆ. ವಿರಥುವನ್ನು ಮತಾಂಧನಂತೆ ಚಿತ್ರಿಸಲಾಗಿದೆ. ಆದರೆ ಬರ್ಮಾದಿಂದ ಓಡಿ ಬರುತ್ತಿರುವ ರೋಹಿಂಗ್ಯಾಗಳ ನಿಜಬಣ್ಣವನ್ನು ಯಾವುದೇ ಸೆಕ್ಯುಲರುಗಳಾಗಲೀ, ಬಿಬಿಸಿಯಂತಹ ಯಾವುದೇ ಮಾಧ್ಯಮಗಳಾಗಲೀ, ವಿಶ್ವಸಂಸ್ಥೆಯಾಗಲೀ ಜಗತ್ತಿನ ಮುಂದೆ ಬಿಚ್ಚಿಡುತ್ತಿಲ್ಲವೇಕೆ? ರಕ್ತದ ಕಲೆ ಇದ್ದವನೇ ಯಾವತ್ತೂ ಅಪರಾಧಿಯಾಗಬೇಕೆಂದೇನಿಲ್ಲ!

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ

            ಸ್ನಾನ ಮಾಡುವುದಿಲ್ಲವಂತೆ! ಊಟವಿಲ್ಲ, ನಿದ್ರೆಯಿಲ್ಲ; ಒಂದೆಡೆ ಕೂರದೆ ಸದಾ ಅತ್ತಿಂದಿತ್ತ ಓಡಾಡುತ್ತಲೇ ಇರುವರಂತೆ! ಉಡುಗೆಯ ಮೇಲೆ ಎಚ್ಚರವಿಲ್ಲ. ಮಾತಿನಲ್ಲಿ ಅರ್ಥವಿಲ್ಲ! ನಿತ್ಯಾಹ್ನಿಕವಿಲ್ಲ, ಶಾರದೆಯ ಪೂಜೆಯಿಲ್ಲ; ನರಸಿಂಹ ವನದಲ್ಲಿ ಏನನ್ನೋ ಗುನುಗುನಿಸುತ್ತಾ ಓಡಾಡುವರಂತೆ! ಮನಸ್ಸು ಉದ್ವಿಗ್ನವಾಗಿದೆಯಂತೆ! ಅವರಿಗೆ ಬುದ್ಧಿ ಭ್ರಮಣೆಯಂತೆ; ಪೂರ್ವಾಶ್ರಮದ ತಾಯಿ ತೀರಿಕೊಂಡ ಮೇಲೆ ಅದು ಹೆಚ್ಚಿದೆಯಂತೆ!

               ನಂಜನಗೂಡಿನ ಅರಮನೆಯ ಮುಂಭಾಗದ ಮನೆ. ಮನೆಯ ಮುಂಭಾಗದ ಸಣ್ಣ ಕೋಣೆಯಲ್ಲಿ ಹದಿನೈದು - ಇಪ್ಪತ್ತು ಮಂದಿ ನಿಂತಿದ್ದಾರೆ. ಎಲ್ಲರೂ ಭಕ್ತಿ ಪರವಶರು. ಕೆಲವರು ಕೈಮುಗಿದು, ಕೆಲವರು ಕಣ್ಮುಚ್ಚಿ, ಕೆಲವರು ಕೈಕಟ್ಟಿ, ಕೆಲವರು ನೆಲನೋಟಕರಾಗಿ ನಿಂತಿದ್ದಾರೆ. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ. ತುಸು ಸಮಯದ ಬಳಿಕ ಮಿಂಚು ಕೋರೈಸಿದಂತಾಯ್ತು; ಕೋಣೆಯ ತುಂಬಾ ಹೊಂಬೆಳಕೊಂದು ಮೂಡಿದಂತಾಯ್ತು! ಒಂದು ಅಪೂರ್ವವಾದ ಅಲೌಕಿಕ ದೃಶ್ಯ ಕಾಣಿಸಿದಂತಾಯ್ತು. ಎಲ್ಲರೂ ಬೆಚ್ಚಿ ಕೋಣೆಯ ಒಳಬಾಗಿಲ ಕಡೆ ದೃಷ್ಟಿ ಹರಿಸಿದರು. ಅವರೇ, ಬುದ್ಧಿ ಭ್ರಮಣೆಯಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದ ಸ್ವಾಮಿಗಳು ಆಗತಾನೆ ಹೊಸ್ತಿಲನ್ನು ದಾಟಿ ಕೋಣೆಗೆ ಬಂದು ನಿಂತಿದ್ದರು. ಅವರ ಹಿಂಬಂದಿ ಎಡಬಲಗಳಲ್ಲಿ ಸೇವಕರಿಬ್ಬರು. ಕೃಶ ಶರೀರಿ, ಆಕರ್ಷಕವಾಗಿ ತೋರದ ಮೈಕಟ್ಟು, ಬಣ್ಣ. ನಡುವಿಗೂ, ಹೊದೆಯಲೂ ಒಂದೇ ಶುಭ್ರ ಕಾವಿ ಬಟ್ಟೆ; ಅದಕ್ಕೆ ಮೆರುಗೂ ಇರಲಿಲ್ಲ, ಅಂಚೂ ಇರಲಿಲ್ಲ! ಕೊರಳಲ್ಲಿ ರುದ್ರಾಕ್ಷಿ ಮಾಲೆಯಿಲ್ಲ; ಕಾಲುಗಳಲ್ಲಿ ಹಾವುಗೆಯೂ ಇಲ್ಲ. ಜಗದ್ಗುರುವಿನ ಆಡಂಬರವೂ ಇಲ್ಲ. ಬಡ ಸಂನ್ಯಾಸಿಯಂತೆ ತೋರುತ್ತಿದ್ದರು. ಆದರೆ ಆ ಮುಖದ ಮೇಲಿನ ಅಪೂರ್ವವಾದ ಕಳೆ ನೋಡಿದವರ ಕಣ್ಣು ಕೋರೈಸುವಂತಿತ್ತು. ತುಟಿಗಳಲ್ಲಿ ಒಸರುತ್ತಿದ್ದ ಮಂದಹಾಸ ನೆರೆದವರ ಮನವನ್ನು ತಣಿಸಿತ್ತು. ಅಲ್ಲಿ ನೀರವ ಮೌನ. ಸೇರಿದವರಿಗೆ ಸ್ವಚ್ಛ ಸಲಿಲದಲ್ಲಿ ಮಿಂದು, ತಂಗಾಳಿಗೆ ಮೈಯೊಡ್ಡುತ್ತಿರುವ ಅನುಭವ! ಐದು ನಿಮಿಷಗಳ ಬಳಿಕ ಆ ಪ್ರಕಾಶ ಕಡಿಮೆಯಾದಂತೆ ಅನಿಸಿತು. ನೋಡಿದರೆ ಸ್ವಾಮಿಗಳು ಬೆನ್ನು ತಿರುಗಿಸದೆ ಹಾಗೆಯೇ ಕಾಲುಗಳನ್ನು ಹೊಸ್ತಿಲ ಹಿಂದಕ್ಕಿಟ್ಟು ಕೋಣೆಯ ಹೊರನಡೆದಿದ್ದಾರೆ. ಅವರ ಎಡಬಲದಲ್ಲಿದ್ದ ಸೇವಕರಷ್ಟೇ ಕಾಣಿಸುತ್ತಿದ್ದಾರೆ.

               ಬುದ್ಧಿಭ್ರಮಣೆಯಾಗಿದೆಯೆಂದು ಜನ ಆಡಿಕೊಳ್ಳುತ್ತಿದ್ದ ವ್ಯಕ್ತಿಯ ಅಲೌಕಿಕ ರೂಪ ಅದು. ಅವರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು. ಶೃಂಗೇರಿ ಮಠದ ಪರಂಪರೆಯ ಮೂವತ್ನಾಲ್ಕನೇ ಪೀಠಾಧಿಪತಿಗಳು. ಅವರ ಪೂರ್ವಾಶ್ರಮದ ಹೆಸರು ಪಟಗುಪ್ಪೆ ಈಶ್ವರೀ ನರಸಿಂಹ ಶಾಸ್ತ್ರಿ. ಸಾಗರ ಮತ್ತು ನಗರಗಳ ನಡುವೆ ಕುಶಾವತೀ ನದಿ ದಂಡೆಯ ಮೇಲಿನ ಸಣ್ಣ ಅಗ್ರಹಾರ ಈ ಪಟಗುಪ್ಪೆ. ಈಶ್ವರೀ ಎನ್ನುವುದು ಮನೆತನದ ಹೆಸರು. ಅವರ ಪಿತಾಮಹ ಸುಬ್ಬಾಶಾಸ್ತ್ರಿಗಳು ಘನಪಂಡಿತರು. ಅವಧೂತರಾಗಿ ಹಿಮಾಲಯದತ್ತ ತೆರಳಿದವರು. ಅಪ್ಪ ಗೋಪಾಲಶಾಸ್ತ್ರಿ, ಅಮ್ಮ ಲಕ್ಷ್ಮಮ್ಮನದ್ದು ಕಪಟವರಿಯದ ಸರಳ ಜೀವನ. ಇದ್ದುದರಲ್ಲಿ ತೃಪ್ತರಾಗುವ, ಹೆಚ್ಚು ಗಳಿಸುವ ಆಶೆಯಿಲ್ಲದ, ಹೆರವರನ್ನು ನೋಡಿ ಕರುಬದ, ಜನರ ಗುಂಪಿನಲ್ಲಿ ಬೆರೆಯದ ತಮ್ಮ ಪಾಡಿಗೆ ತಾವಿರುವ ಹಸುವಿನಂತಹ ಮುಗ್ಧತೆ ಅವರದ್ದು. ಅದೇ ಸ್ವಭಾವವನ್ನು ಮೈವೆತ್ತಿಕೊಂಡು ಅವರ ಹದಿನಾಲ್ಕನೆಯ ಕುಡಿಯಾಗಿ ಹುಟ್ಟಿ ಉಳಿದು, ಉಳಿಸಿ, ನಾಡ ಬೆಳಗಿದ ಮಗುವೇ ನರಸಿಂಹ. ನಂದನ ಸಂವತ್ಸರದ ಆಶ್ವೀಜ ಬಹುಳ ಏಕಾದಶಿ(1892, ಅಕ್ಟೋಬರ್ 16)ರಂದು ಭುವಿಗಿಳಿದ ಈ ಪ್ರಭೆ ನರಸಿಂಹನಾಗಿ, ಚಂದ್ರಶೇಖರನಾಯಿತು; ಸಾವಿರಾರು ಸಾಧಕರಿಗೆ ದಾರಿದೀಪವಾಯಿತು.

               ಲೋಯರ್ ಸೆಕೆಂಡರಿಯವರೆಗೆ ಆಧುನಿಕ ಶಿಕ್ಷಣವನ್ನು ಪಡೆದ ನರಸಿಂಹ. ಮುಂದೆ ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ಅಪ್ಪಣೆಯಂತೆ ಶೃಂಗೇರಿಯ ಪ್ರಾಚೀನ ವಿದ್ಯಾಶಿಕ್ಷಣ ಶಾಲೆ "ಸದ್ವಿದ್ಯಾಸಂಜೀವಿನೀ"ಯಲ್ಲಿ ತರ್ಕ, ವ್ಯಾಕರಣಗಳನ್ನು ಮುಗಿಸಿ ಬಳಿಕ ಸ್ವಾಮಿಗಳ ಅಪೇಕ್ಷೆಯಂತೆ ಬೆಂಗಳೂರಿನ ಶಂಕರ ಮಠದಲ್ಲಿ ಅವರಿಂದಲೇ ನಿರ್ಮಿಸಲ್ಪಟ್ಟ "ಗೀರ್ವಾಣಪ್ರೌಢವಿದ್ಯಾಭಿವರ್ಧಿನೀ" ಶಾಲೆಯಲ್ಲಿ ಪೂರ್ವಮೀಮಾಂಸಾಶಾಸ್ತ್ರ ಶಿಕ್ಷಣವನ್ನು ಪಡೆದ ನರಸಿಂಹ. ಹಿಂದೆ ಮಠದ ಅಧಿಕಾರಿ ಶ್ರೀಕಂಠಶಾಸ್ತ್ರಿಗಳ ಮನೆಯಲ್ಲಿದ್ದುಕೊಂಡು ಅವರ ಮೇಲ್ವಿಚಾರಣೆಯಲ್ಲಿ ಬೆಳೆದ ಬಡಹುಡುಗ ನರಸಿಂಹ ಮುಂದೆ ಮಠಾಧಿಪತಿಯಾದುದೂ ವಿಚಿತ್ರ ಘಟನೆಯೇ. ನರಸಿಂಹನ ಸ್ವಭಾವ, ಚರ್ಯೆಯಲ್ಲಿದ್ದ ವಿರಕ್ತಿ, ವ್ಯಾಸಂಗತತ್ಪರತೆ, ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದ ಮುಗ್ಧತೆ, ವೇದಾಂತ ಬರೇ ಪ್ರಚಾರಕ್ಕಲ್ಲ, ಆಚಾರಕ್ಕೆನ್ನುವ ನಿಷ್ಠೆ, ಸಂನ್ಯಾಸಿಗೆ ಇರಬೇಕಾದ ಸಹನೆ, ಸಮತ್ವ, ಪರಮಾರ್ಥಶೃದ್ಧೆ, ಏಕಾಂತ ಪ್ರೀತಿ ಇವೆಲ್ಲವನ್ನೂ ನೋಡಿದ ಆಗಿನ ಮಠಾಧೀಶರಾಗಿದ್ದ ನೃಸಿಂಹ ಭಾರತೀ ಸ್ವಾಮಿಗಳು ತಮ್ಮ ಮುಂದಿನ ಉತ್ತರಾಧಿಕಾರಿ ನರಸಿಂಹನೆಂದೇ ಮನಸ್ಸಲ್ಲಿ ನಿಶ್ಚಯಿಸಿಕೊಂಡಿದ್ದರು. ಕಾಲಡಿಯಲ್ಲಿ ಶಂಕರಾಚಾರ್ಯರ ಆಲಯದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಿಂದಿರುಗಿದ ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ಆರೋಗ್ಯದಲ್ಲಿ ಏರುಪೇರಾಯಿತು. ನಂದಿಬೆಟ್ಟದಲ್ಲಿ ತುಸು ವಿಶ್ರಮಿಸಿದರಾದರೂ ಅವರ ಆರೋಗ್ಯ ಸುಧಾರಿಸಲಿಲ್ಲ. ತಮ್ಮ ಅಂತ್ಯಕಾಲ ಹತ್ತಿರವಾಯಿತೆಂದು ತಿಳಿದ ಶ್ರೀಗಳು ನರಸಿಂಹನನ್ನು ಬೆಂಗಳೂರಿನಿಂದ ಕರೆತರುವಂತೆ ತಮ್ಮ ಆಪ್ತರೂ, ಅರಮನೆಯ ಧರ್ಮಾಧಿಕಾರಿಗಳೂ ಆಗಿದ್ದ ಕುಣಿಗಲ್ಲು ರಾಮಾಶಾಸ್ತ್ರಿಗಳಿಗೆ ಅಪ್ಪಣೆ ಮಾಡಿದರು. ರಾಮಾಶಾಸ್ತ್ರಿಗಳಿಂದ ಸ್ವಾಮಿಗಳ ಪತ್ರ ಪಡೆದು ಸ್ವಾಮಿಗಳ ಇಚ್ಛೆಯಂತೆ ಸ್ವಾಮಿಗಳ ಆಯ್ಕೆಯ ಉತ್ತರಾಧಿಕಾರಿ ನರಸಿಂಹನನ್ನು ನೋಡಲು ಹೋದ ಮೈಸೂರು ಮಹಾರಾಜರಿಗೂ ಸ್ವಾಮಿಗಳ ಆಯ್ಕೆ ಒಪ್ಪಿಗೆಯಾಗಲಿಲ್ಲವಂತೆ. ಆದರೆ ಸ್ವಾಮಿಗಳ ಸಂಕಲ್ಪವನ್ನು ಪರಿಗಣಿಸಿ ತಮ್ಮ ಸಮ್ಮತಿ ಸೂಚಿಸಿದರು. ಇತ್ತ ಗುರುಗಳ ಬದುಕು ತೂಗುಯ್ಯಾಲೆಯಲ್ಲಿತ್ತು. ಈ ನಡುವೆ ಮಠದ ಸರ್ವಾಧಿಕಾರಿಗಳಾದ ಶ್ರೀಕಂಠ ಶಾಸ್ತ್ರಿಗಳು ನರಸಿಂಹ ಬರುವುದು ತಡವಾಗಿ ಅದರೊಳಗೆ ಗುರುಗಳು ತೀರಿಕೊಂಡರೆ ಎಂಬ ಶಂಕೆಯಿಂದ ಒಂದಿಬ್ಬರನ್ನು ಉತ್ತರಾಧಿಕಾರಿ ಪಟ್ಟಕ್ಕೆ ಸೂಚಿಸಿದಾಗ ಶ್ರೀಗಳು ಸ್ವಲ್ಪ ಕಟುವಾಗಿಯೇ "ನರಸಿಂಹ ಬರಲಿ, ಸುಮ್ಮನಿರಿ" ಎಂದು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಸೂಚಿಸಿದರು. ಆದರೆ ನರಸಿಂಹ ಬರುವಷ್ಟರಲ್ಲಿ ಗುರುಗಳು ತೀರಿಕೊಂಡಾಗಿತ್ತು. ನರಸಿಂಹನನ್ನು, ಆತನ ಕುಟುಂಬವನ್ನು ತುಚ್ಛವಾಗಿ ಕಾಣುತ್ತಿದ್ದವರಿಗೆ, ತಮ್ಮ ಬೇಳೆ ಬೇಯಿಸಿಕೊಳ್ಳುವ ಹಂಬಲವಿದ್ದವರಿಗೆಲ್ಲಾ ಈ ಬಡಕಲು ಹುಡುಗ ಜಗದ್ಗುರು ಪಟ್ಟವೇರುವುದು ಇಷ್ಟವಾಗುವುದಾದರೂ ಹೇಗೆ? ಆದರೆ ಅದಾಗಲೇ ಗುರುಗಳ ನಿಲುವು, ಮಹಾರಾಜರ ಸಮ್ಮತಿ ನರಸಿಂಹನಿಗಲ್ಲದೆ ಬೇರಾರಿಗೂ ಉತ್ತರಾಧಿಕಾರಿ ಪಟ್ಟ ಸಿಗದಂತೆ ಪಿತೂರಿಗಾರರನ್ನು ತಡೆದಿತ್ತು.

                  ವಿಚಿತ್ರವೆಂದರೆ ಮುಂದಿನ ಪೀಠಾಧಿಪತಿಯ ಸಂನ್ಯಾಸ, ಪಟ್ಟ ಮೊದಲಾದ ವಿಧಿಗಳ ಕಾರ್ಯಕ್ರಮಗಳನ್ನು ನಿರ್ಧರಿಸಲು ನಡೆದ ಸಭೆಯಲ್ಲಿ ಮಠದ ಹಿರಿಯ ಅಧಿಕಾರಿಗಳು, ವಿದ್ವಾಂಸರು, ಮಹಾರಾಜರ ಪ್ರತಿನಿಧಿಗಳು ಇದ್ದರೂ, ಮುಂದೆ ಪೀಠಾಧಿಪತಿಯಾಗಲಿದ್ದ ನರಸಿಂಹನೇ ಅಲ್ಲಿರಲಿಲ್ಲ! ಸ್ವಲ್ಪ ಸಮಯದ ಬಳಿಕ ಅವರಲ್ಲೊಬ್ಬರು ಈ ವಿಧಿಗಳೆಲ್ಲಾ ನಡೆಯಬೇಕಾದುದು ನರಸಿಂಹನಿಗೇ, ನಾವು ನಿರ್ಧರಿಸುವ ಕಾರ್ಯಕ್ರಮ ಅವನಿಗೆ ತಿಳಿಯಬೇಡವೇ ಎಂದಾಗ ನರಸಿಂಹನಿಗೆ ಕರೆಕಳುಹಿಸಲಾಯಿತು. ಬಂದು ಕೈಕಟ್ಟಿಕೊಂಡು ನಿಂತ ನರಸಿಂಹನನ್ನು ಕುಳ್ಳಿರೆಂದು ಯಾರೂ ಹೇಳಲಿಲ್ಲ. ಸ್ವಲ್ಪ ಸಮಯದ ಬಳಿಕ ಹಿರಿಯರ ನಡುವೆ ಕುಳ್ಳಿರಲು ಸಂಕೋಚಗೊಂಡು ನಿಂತೇ ಇದ್ದ ನರಸಿಂಹನನ್ನು ಕಂಡು ರಾಮಚಂದ್ರ ಅಯ್ಯರರು "ನೀವು ನಾಳೆ ಜಗದ್ಗುರುಗಳಾಗಲಿಕ್ಕಿರುವವರು. ನಿಂತಿರಬಾರದು ಕೂಡಿ" ಎಂದರಂತೆ. ಅದಕ್ಕೆ ನರಸಿಂಹ "ಅದು ನಾಳೆ ತಾನೇ" ಎಂದು ನಸುನಗುತ್ತ ಉತ್ತರಕೊಟ್ಟನಂತೆ! ವಿಶೇಷವೆಂದರೆ ಮುಂದೆ ರಾಮಚಂದ್ರ ಅಯ್ಯರ್ ಹಾಗೂ ಈ ಘಟನೆಯನ್ನು ತಮ್ಮ ಸ್ವಾಮಿಗಳ ಕುರಿತ ಗ್ರಂಥದಲ್ಲಿ ಉಲ್ಲೇಖಿಸಿದ ಅವರ ಮಗ ಕೃಷ್ಣಸ್ವಾಮಿ ಅಯ್ಯರ್ ಇಬ್ಬರೂ ಇದೇ ಸ್ವಾಮಿಗಳಿಂದ ಸಂನ್ಯಾಸ ಸ್ವೀಕರಿಸಿದರು. ಹೀಗೆ ಶೃಂಗೇರಿಯ ಬಡಹುಡುಗ ನರಸಿಂಹ ಸಂನ್ಯಾಸ ಸ್ವೀಕರಿಸಿ ತಾನು ಬಯಸದೇ, ತನ್ನ ಪರಿವಾರದವರು ಬಯಸದೆ, ಮಠಾಧಿಪತಿಗಳಿಗಿರಬೇಕಾದ ಮನೋಧರ್ಮ, ಶಿಕ್ಷಣವಿಲ್ಲದೆ ಹಲವಾರು ಅರಮನೆಗಳಿಗೆ, ಲಕ್ಷಾಂತರ ಜನರಿಗೆ ಗುರುಪೀಠವೆನಿಸಿದ ಜಗದ್ಗುರುಪಟ್ಟವನ್ನು ಏರಿ ಮಠದ ಪರಂಪರೆಯ ಮೂವತ್ನಾಲ್ಕನೇ ಯತಿಯಾಗಿ ಶ್ರೀಚಂದ್ರಶೇಖರ ಭಾರತೀ ಸ್ವಾಮಿಗಳಾದರು.

           ಸ್ವಾಮಿಗಳದ್ದು ಕವಿಹೃದಯ. ಸಂಗೀತದಲ್ಲೂ ಅವರಿಗೆ ತುಂಬಾ ಅಭಿರುಚಿಯಿತ್ತು. ಶ್ಲೋಕಗಳನ್ನು ರಸವತ್ತಾಗಿ ಹಾಡುವ ಸಾಮರ್ಥ್ಯವೂ ಇತ್ತು. ಕವಿಹೃದಯದವರಿಗೆ ವಿರಕ್ತಿ ಸಹಜವಾಗಿ ಬರಲಾರದು. ಸ್ವಾಮಿಗಳಿಗೆ ವಿರಕ್ತಿ ಬಂದುದು ಸ್ವಭಾವದಿಂದಲೂ ಅಲ್ಲ, ದುಃಖದರ್ಶನದಿಂದಲೂ ಅಲ್ಲ. ಅವರು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಪಡೆದ ಶಿಕ್ಷಣವೇ ಅವರಿಗೆ ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಗುರಿ(ಆತ್ಮತತ್ತ್ವದ ಅನುಸಂಧಾನ)ಯನ್ನು ಸಾಧಿಸುವ ದಾರಿಯನ್ನು ತೋರಿಸಿತು. ವಿರೂಪಾಕ್ಷ ಶಾಸ್ತ್ರಿಗಳು ಒದಗಿಸಿದ ಶ್ರವಣದ ಮುಖೇನ ಸಂಸಾರವು ನಿಃಸಾರವೆಂಬುದನ್ನು, ಬ್ರಹ್ಮವೇ ಪರಮಾರ್ಥವೆಂಬುದನ್ನು ದೃಢವಾಗಿ ನಿಶ್ಚಯಿಸಿದ ಅವರು ಅದರ ಆಧಾರದ ಮೇಲೆ ಮನನ ನಿದಿಧ್ಯಾಸನಗಳನ್ನು ಕೈಗೊಳ್ಳಲು ತಮ್ಮ ಬಾಳನ್ನೇ ಮುಡಿಪಾಗಿಟ್ಟರು. ಹಾಗೆ ಮಾಡುವಾಗ ತಾವು ಬಿಡಿಸಂನ್ಯಾಸಿಗಳಲ್ಲ, ಮಠಾಧಿಪತಿಗಳೆಂಬುದನ್ನೇ ಮರೆತರು. ಹೀಗೆ ಆರಂಭವಾಯಿತು 'ಆತ್ಮವಿದ್ಯಾವಿಲಾಸ'ದ ಅನುಸಂಧಾನ. ಮಠಾಧಿಪತಿಗಳಾಗಿ ಮಾಡಲೇಬೇಕಾದ ಕಾರ್ಯಗಳನ್ನೆಲ್ಲಾ ಯಾಂತ್ರಿಕವಾಗಿಯೇ ನಡೆಯುತ್ತಿತ್ತು.

             ತಾಯಿ ತೀರಿಕೊಂಡ ಒಂದೂವರೆ ತಿಂಗಳುಗಳಲ್ಲಿಯೇ ಅವರಿಗಾದ "ಬುದ್ಧಿ ಭ್ರಮಣೆ" ಎಲ್ಲರಿಗೂ ತಿಳಿದು ಬಂತು. ಶಾರದೆಯ ಗುಡಿಗೆ ಬಂದ ಸ್ವಾಮಿಗಳು ಗಣೇಶನ ದರ್ಶನವಾದೊಡನೆ ಹಿಂದಿರುಗಿ ನದಿಗೆ ಬಂದುಬಿಟ್ಟರು. ಸ್ನಾನ ಮಾಡಿ ಮತ್ತೆ ಗುಡಿಗೆ ಬಂದರಾದರೂ ತಾವೇ ಪೂಜೆ ಮಾಡಲಾರದೆ ಪುರೋಹಿತರ ಕೈಯಿಂದಲೇ ಪೂಜೆ ಮಾಡಿಸಿ ತಾವು ಸುಮ್ಮನೆ ಕುಳಿತುಬಿಟ್ಟರು. ಆ ರಾತ್ರಿ ನಿದ್ದೆ ಬಾರದೆ ಅತ್ತಿಂದಿತ್ತ ಠಳಾಯಿಸುತ್ತಿದ್ದರು. ತಮ್ಮ ಸುತ್ತಲಿರುವುದೆಲ್ಲ ತಿರುಗುತ್ತಿದೆಯೆಂದಾಗ ಅವರನ್ನು ನರಸಿಂಹ ವನದಲ್ಲಿ ಇರಿಸುವ ವ್ಯವಸ್ಥೆ ಮಾಡಲಾಯಿತು. ವೈದ್ಯರು ಕೊಟ್ಟ ಲೇಹ್ಯವನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿಬಿಟ್ಟರು. ತೈಲಧಾರೆಯ ಫಲದಿಂದ ಅವರ ಉದ್ವೇಗವೇನೋ ಕಡಿಮೆಯಾಯಿತು. ಆದರೆ ಸ್ನಾನಕ್ಕೆಂದು ನೀರಿಗಿಳಿದವರು ಪದ್ಮಾಸನ ಹಾಕಿ ಗಂಟೆಗಟ್ಟಲೇ ಪರಿವೆಯೇ ಇಲ್ಲದೆ ಕುಳಿತುಬಿಡುವರು; ಪೂಜೆ ಮಾಡಲು ತೊಡಗಿದರೆ ನಡುವೆ ದೀಪವನ್ನು ನೋಡುತ್ತಲೋ, ಹೂವಿನ ಎಸಳನ್ನು ಹಾಕುತ್ತಲೋ ಮೈಮರೆವರು. ಪಾಠ ಹೇಳಲು ತೊಡಗಿದವರು ಇದ್ದಕ್ಕಿದ್ದಂತೆಯೇ ಎದ್ದು ಹೊರಡುವರು. ಮತ್ತೆ ಮೊದಲಿನ ದಿನಗಳು; ನಿದ್ದೆಯಿಲ್ಲ, ಊಟವಿಲ್ಲ; ನಿಂತಲ್ಲಿ ನಿಲ್ಲುವುದಿಲ್ಲ! ಈ ನಡುವೆ ತುಸು ಸಮಯ ಅಂತರ್ಮುಖರಾಗದೇ ಇದ್ದಾಗ ಅಧಿಕಾರಿಗಳ ಒತ್ತಾಯದಿಂದ ದೇಶ ಸಂಚಾರ ಹೊರಟು ಕಿಗ್ಗ, ಕೊಪ್ಪ, ಚಿಕ್ಕಮಗಳೂರು, ಬೇಲೂರು, ಬೆಳವಾಡಿ, ಹೊಳೆನರಸೀಪುರಗಳಲ್ಲೆಲ್ಲಾ ಸಂಚರಿಸಿ ಮೈಸೂರಿನಲ್ಲಿ ನೂತನ ಶಂಕರಾಲಯದ ಕುಂಭಾಭಿಷೇಕ ನೆರವೇರಿಸಿದರು. ಮುಂದೆ ಸತ್ಯಮಂಗಲ, ತಮಿಳುನಾಡಿನ ಶ್ರೀರಂಗ, ತಿರುಚಿರಪಳ್ಳಿ, ರಾಮೇಶ್ವರದಲ್ಲಿ ಸಂಚರಿಸಿದರು. ತಮಿಳು ಭಾಷೆ ತಿಳಿಯದ ಅವರು ತಮಿಳಿನಲ್ಲಿಯೇ ಉಪನ್ಯಾಸ ಮಾಡಿದ್ದು ಎಲ್ಲರಿಗೂ ಆಶ್ಚರ್ಯತಂದ ವಿಚಾರವಾಗಿತ್ತು! ಮಧುರೈ ಮೀನಾಕ್ಷಿಯ ಎದುರು ನಿಂತಾಗ ಭಾವಪರವಶರಾದ ಅವರಿಂದ ಮೀನಾಕ್ಷಿ ಸ್ತುತಿ ಹಾಗೂ ಮೀನಾಕ್ಷಿ ಸ್ತೋತ್ರವೇ ಹೊರಹೊಮ್ಮಿತು. ಮುಂದೆ ಕನ್ಯಾಕುಮಾರಿ, ಕಾಲಡಿಯಲ್ಲಿ ವೇದಾಂತ ಪಾಠಶಾಲೆಯನ್ನು ವ್ಯವಸ್ಥೆ ಮಾಡಿ, ಹಿಂದಿರುಗುವಾಗ ನಂಜನಗೂಡಿನಲ್ಲಿ ಶಂಕರಮಠ, ವೇದಪಾಠಶಾಲೆಯನ್ನು ನಿರ್ಮಿಸಿ ಚಾತುರ್ಮಾಸ್ಯವನ್ನು ಅಲ್ಲೇ ಕಳೆದರು. ಆದರೆ ಈ ತಿರುಗಾಟದಲ್ಲಿ "ರಾಜಕೀಯ ಉಡುಪಿನ" ಮೇಲಾಟ, ಜನಸಂದಣಿ-ಜಂಜಾಟಗಳಿಂದ ಅವರು ಬೇಸತ್ತಿದ್ದರು. ಹಿಂದಿರುಗಿದ ಬಳಿಕ ಕೆಲ ಕಾಲ ಮಠದ ಪೂಜೆಯನ್ನು ನೆರವೇರಿಸಿದರಾದರೂ ಅವರ ಮನಸ್ಸು ಅದರಲ್ಲಿರಲಿಲ್ಲ. ಮುಂದೆ ಪೂಜೆ, ಪಾಠ, ಊಟ, ಮಾತು ಎಲ್ಲವನ್ನೂ ಬಿಟ್ಟರು. ನರಸಿಂಹ ವನದಲ್ಲಿ ಆತ್ಮವಿದ್ಯಾ ವಿಲಾಸವನ್ನು ಗುನುಗುನಿಸಿಕೊಳ್ಳುತ್ತಾ ಅಂತರ್ಮುಖರಾಗಿ ಅಲೆದಾಡುತ್ತಿದ್ದರು. ಆಗ ಅವರ ಮುಖದಲ್ಲಿ ಯಾವುದೇ ಉದ್ವೇಗವಿಲ್ಲದೆ ಮಂದಹಾಸ ಮಿನುಗುತ್ತಿತ್ತು. ಯಾವುದೋ ಅಲೌಕಿಕ ಪ್ರಭೆ ಎದ್ದು ಕಾಣುತ್ತಿತ್ತು.

          ಶಿಷ್ಯಪರಿಗ್ರಹವಾದ ಮೇಲಂತೂ ಮಠದೊಂದಿಗಿನ ಅಲ್ಪಸ್ವಲ್ಪ ಸಂಬಂಧವನ್ನೂ ಕಡಿದುಕೊಂಡು ಜೀವನ್ಮುಕ್ತರಂತೆ ನಿಃಸಂಗರಾಗಿ, ನಿರುದ್ವಿಗ್ನರಾಗಿ ಮುಂದಿನ ಇಪ್ಪತ್ಮೂರು ವರ್ಷಗಳ ಕಾಲ ನರಸಿಂಹ ವನದಲ್ಲೇ ತಪಶ್ಚರ್ಯೆಯಲ್ಲಿ ತೊಡಗಿದರು. ಹೀಗೆ ನಿಧಿದ್ಯಾಸನ ಕೈಗೊಂಡು ಏಳು ವರ್ಷಗಳ ಬಳಿಕ ಬಹಿರ್ಮುಖರಾದಾಗ ಅಪೂರ್ವ ತೇಜಸ್ಸಿನಿಂದ ಅವರ ಮುಖ ಕಂಗೊಳಿಸುತ್ತಿತ್ತು.

                ಒಮ್ಮೆ ಮಠದ ಆನೆ ಬಹಳ ದಿನಗಳವರೆಗೆ ಆಹಾರವನ್ನು ಮುಟ್ಟದೆ, ಯಾರನ್ನೂ ತನ್ನ ಬಳಿ ಸೇರಿಸದೆ ಚಂಡಿ ಹಿಡಿದಿತ್ತು. ಮಾವುತನನ್ನೂ ಅದು ಲೆಕ್ಕಿಸಲಿಲ್ಲ. ಆನೆಗೆ ಹುಚ್ಚು ಹಿಡಿದಿದೆ ಎಂದು ತೀರ್ಮಾನಿಸಿ ಅದನ್ನು ಕಾಡಿಗೆ ಕಳುಹಿಸುವ ತೀರ್ಮಾನವಾಗಿತ್ತು. ಆನೆಯ ಕೂಗಾಟ ಕೇಳಿಸಿದ ಕೂಡಲೇ ಗುರುಗಳು ಗಜಶಾಲೆಯತ್ತ ಧಾವಿಸಿದರು. ಅಲ್ಲಿದ್ದವರು ‘ಆನೆಗೆ ಹುಚ್ಚು ಹಿಡಿದಿದೆ, ಹತ್ತಿರ ಹೋಗಬೇಡಿರಿ’ ಎಂದು ಗುರುಗಳ ಬಳಿ ವಿನಂತಿಸಿಕೊಂಡರು. ಗುರುಗಳು ಆನೆಯ ಹತ್ತಿರ ಹೋಗಿ ಅದರ ಸೊಂಡಿಲಿನ ಮೇಲೆ ಕೈಯಾಡಿಸುತ್ತ ಮೃದುವಾದ ಧ್ವನಿಯಲ್ಲಿ ‘ಯಾಕಪ್ಪ ಏನಾಗಿದೆ?’ ಎಂದು ಕೇಳಿದರು. ಆನೆಯು ತಲೆಬಾಗಿ ತನ್ನ ಮುಂಗಾಲನ್ನು ಎತ್ತಿ ತೋರಿಸಿತು. ಅದರ ಅಂಗಾಲಿಗೆ ಮೊಳೆಯೊಂದು ಚುಚ್ಚಿಕೊಂಡಿತ್ತು. ಗುರುಗಳು ಆ ಮೊಳೆಯನ್ನು ಜೋಪಾನವಾಗಿ ತೆಗೆಸಿ ಗಾಯಕ್ಕೆ ಚಿಕಿತ್ಸೆ ಮಾಡಿಸಿದರು. ಆನೆ ಯಾವ ತಕರಾರನ್ನು ಮಾಡದೆ ಚಿಕಿತ್ಸೆಗೆ ಸ್ಪಂದಿಸಿತು. ಗುರುಗಳ ದರ್ಶನಕ್ಕಾಗಿ ಮನವಿ ಮಾಡಿದ್ದ ಗಣ್ಯ ವ್ಯಕ್ತಿಯೊಬ್ಬ ತನಗೆ ಯಾವುದೇ ಉತ್ತರ ಬರದಿದ್ದಾಗ ಮೈಸೂರು ದಿವಾನರ ಮೂಲಕ ಮನವಿ ಸಲ್ಲಿಸಿದ. ವಿಚಾರ ತಿಳಿದ ಗುರುಗಳು ‘ಇದಕ್ಕೆ ಹಿಂದೆ ಬಂದ ಪತ್ರದ ಬಗ್ಗೆ ನನಗೇಕೆ ತಿಳಿಸಲಿಲ್ಲ?’ ಎಂದು ಅಧಿಕಾರಿಗಳಲ್ಲಿ ಕೇಳಿದಾಗ ಅಧಿಕಾರಿಗಳು ‘ಗುರುಗಳೇ, ಸಂದರ್ಶನ ಬಯಸಿದ್ದ ವ್ಯಕ್ತಿಯ ಚಾರಿತ್ರ್ಯ ಸರಿ ಇರಲಿಲ್ಲ. ಎಲ್ಲ ರೀತಿಯ ದುರಭ್ಯಾಸಗಳು ಇವೆ. ಆದ್ದರಿಂದ ತಮಗೆ ಅರಿಕೆ ಮಾಡಲು ಹಿಂಜರಿದಿದ್ದೆ’ ಎಂದರು. ಆಗ ಗುರುಗಳು ಕೊಡುವ ಉತ್ತರ ಸಮಾಜದ ಕಣ್ಣು ತೆರೆಸುವಂತಹದ್ದು. ‘ಉತ್ತಮ ಚಾರಿತ್ರ್ಯವಿದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯವಿಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ." ಬಳಿಕ ಗುರುಗಳ ದರ್ಶನ ಪಡೆದ ಆ ವ್ಯಕ್ತಿ ಗುರುಗಳಿಂದ ಪ್ರಭಾವಿತರಾಗಿ, ತಮ್ಮ ನಡೆನುಡಿಯನ್ನು ಬದಲಾಯಿಸಿಕೊಂಡು ಗುರುಗಳ ಪರಮ ಭಕ್ತರಾದರು. ಹೀಗೆ ಅವರು ಮನುಷ್ಯ-ಪಶುಗಳೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದರು. ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮನಿರುತ್ತಾನೆ ಎಂದು ಅವರ ಬಲವಾದ ನಂಬಿಕೆಯಾಗಿತ್ತು. ಹಾಗಾಗಿ ಗುರುಗಳು ರಾಮಾಯಣವನ್ನು ಪಾರಾಯಣ ಮಾಡುವಾಗ ಯಾವಾಗಲೂ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರಂತೆ, ಹನುಮಂತನಿಗಾಗಿ!

               ಹಿಂದೂ ಧರ್ಮದ ಬಗ್ಗೆ ಗುರುಗಳ ವಿಶ್ಲೇಷಣೆ ಅದರಲ್ಲೂ ಅವಧೂತರೊಬ್ಬರ ವಿಶ್ಲೇಷಣೆ ಬಲು ಮಹತ್ವವಾದದ್ದು. ಹಿಂದೂ ಧರ್ಮ ಸನಾತನವಾದದ್ದು. "ಹಿಂದೂ" ಎಂಬ ಅದರ ಹೆಸರು ಇತ್ತೀಚಿನದ್ದಾಗಿರಬಹುದು; ಆದರೆ ಅದು ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಪ್ರಾಣಿಗಳೂ ಜೀವಿಗಳೂ ಅವು ಒಪ್ಪಲಿಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುತ್ತದೆ ಎಂಬುದು ಸತ್ಯ. ಅದು ತನ್ನ ಪ್ರಮಾಣಕ್ಕೆ ಯಾವುದನ್ನೂ ಅವಲಂಬಿಸಿಲ್ಲ. ನಾವು ಒಪ್ಪಿದರೂ ಒಪ್ಪದೇ ಇದ್ದರೂ ಅಗ್ನಿಯ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಕುಂದೂ ಬರುವುದಿಲ್ಲ. ನಾವು ಅರಿತು ಒಪ್ಪಿಕೊಂಡಲ್ಲಿ ನಮಗೆ ಒಳಿತು. ಇಲ್ಲದಿದ್ದಲ್ಲಿ ಕೆಡುಕು ನಮಗೇ. ಸನಾತನ ಧರ್ಮವು ಈ ರೀತಿಯಾದದ್ದು. ಇತರ ಎಲ್ಲ ಧರ್ಮಗಳ ಉತ್ಕೃಷ್ಟ ಬೋಧನೆಗಳು ತಮ್ಮ ಸ್ಥಾನವನ್ನು ಸನಾತನ ಧರ್ಮದಲ್ಲಿಯೂ ಪಡೆದುಕೊಂಡಿವೆ. ಅವು ಸನಾತನಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ.

ಜಾತಿಪದ್ದತಿಯ ಬಗ್ಗೆ ಅವರ ವಿಶ್ಲೇಷಣೆ: 
              "ಎಲ್ಲರೂ ಹಿಂದೂಗಳೇ ಎಂದರೆ ಎಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿ ಮಾರ್ಗದರ್ಶನ ಪಡೆಯಲು ಅರ್ಹರು ಎಂದರ್ಥ.  ಆದರೆ ಈ ಮಾರ್ಗದರ್ಶನವು ಎಲ್ಲರಿಗೂ ಒಂದೇ ರೀತಿ ಇರುತ್ತದೆ ಎಂದರ್ಥವಲ್ಲ. ಮನುಷ್ಯನಿಗೆ ಹುಟ್ಟಿನಿಂದ ಬಂದ ಒಲವು, ಸ್ವಭಾವ, ಪೂರ್ವಜನ್ಮದ ಸಂಸ್ಕಾರ, ಪರಿಸರ ಮತ್ತು ಅವನು ಹುಟ್ಟಿದ ಮೇಲೆ ಪಡೆದುಕೊಳ್ಳುವ ತರಬೇತು ಇವೆಲ್ಲವೂ ಒಂದೇ ಆಗಿರಲು ಸಾಧ್ಯವಿಲ್ಲ. ಈ ಅವಿರೋಧ ಸತ್ಯವನ್ನು ಗಣನೆಗೆ ತೆಗೆದುಕೊಂಡು ಸನಾತನ ಧರ್ಮವು ಸಾಮಾನ್ಯಧರ್ಮ ಮತ್ತು ವಿಶೇಷಧರ್ಮಗಳು ಎಂದು ವಿಂಗಡಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ.  ಸಾಮಾನ್ಯ ಧರ್ಮ ಇಡೀ ಮಾನವಕುಲಕ್ಕೆ ಸಹಕಾರಿಯಾದರೆ ಸಾಮಾನ್ಯ ಧರ್ಮ ಮತ್ತು ವಿಶೇಷ ಧರ್ಮ ಎರಡೂ ಸೇರಿ ಜಾತಿ ಚೌಕಟ್ಟಿನೊಳಗೆ ಬರುವವರಿಗೆ ಉಪಯುಕ್ತವಾಗಿವೆ."

ಇತರ ಮತಗಳ ಬಗ್ಗೆ ಸ್ವಾಮಿಗಳ ಅಭಿಪ್ರಾಯ:
           ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ. ಅದೇ ರೀತಿ ಈ ಅವಕಾಶವನ್ನು ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ನಿರಾಕರಿಸಬೇಕಾಗುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ?  ಇಲ್ಲವಾದಲ್ಲಿ ಮುಕ್ತಿಸಾಧನವನ್ನು ರೂಪಿಸುವಲ್ಲಿ ಅವನು ಎಚ್ಚರವಹಿಸಿದನೇ? ಹಾಗೆ ಎಚ್ಚರವಹಿಸಿದ್ದಲ್ಲಿ ಆತನ ಮುಕ್ತಿಸಾಧನವು ಮುಂದೆ ಜನಿಸುವ ಕ್ರಿಸ್ತನಲ್ಲಿನ ನಂಬಿಕೆಯು ಅದಕ್ಕೆ ಕಡ್ಡಾಯ ಎಂಬ ನಿಯಮವನ್ನು ಒಳಗೊಂಡಿರಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಆದ್ದರಿಂದ ಭಗವಂತನು ಜಗತ್ತಿನ ಮೊಟ್ಟಮೊದಲ ವ್ಯಕ್ತಿಯನ್ನು ಸೃಷ್ಟಿಸಿದಾಗಲೇ, ಅಂತಹ ಸೃಷ್ಟಿಯ ಆದಿಕಾಲವೊಂದಿತ್ತು ಎಂದು ನಂಬುವುದಾದಲ್ಲಿ, ಭಗವಂತನು ಆ ಮೊಟ್ಟಮೊದಲ ವ್ಯಕ್ತಿಗೂ ಮುಕ್ತಿಯ ಅವಕಾಶವನ್ನು ಕಲ್ಪಿಸಿರಲೇಬೇಕು. ಇದೇ ವೈಚಾರಿಕ ಉಪಕಲ್ಪನೆ. ಏಕೆಂದರೆ ಆ ಮೊಟ್ಟಮೊದಲ ಮಾನವನಿಗೂ ಮುಕ್ತಿಯ ಅಗತ್ಯವಿರುತ್ತದೆ. ಆದ್ದರಿಂದಲೇ ನಾವು ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ “ವ್ಯಕ್ತಗೊಂಡವು” ಅಥವಾ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ.

ಆತ್ಮಾರ್ಪಣೆ:
                 1954ರ ಭಾದ್ರಪದ ಬಹುಳ ಅಮವಾಸ್ಯೆಯ ಮುನ್ನಾ ದಿನ ರಾತ್ರಿ. ಸ್ವಾಮಿಗಳು ಮಲಗಲೇ ಇಲ್ಲ. ಸಚ್ಚಿದಾನಂದ ವಿಲಾಸದಲ್ಲಿದ್ದ ತಮ್ಮ ಗುರುಗಳ ಸಮಾಧಿಗೆ ಮತ್ತೆ ಮತ್ತೆ ಪ್ರದಕ್ಷಿಣೆ ಮಾಡುತ್ತಿದ್ದರು. ನಡುವೆ ಕಾಲಭೈರವನ ಗುಡ್ಡಕ್ಕೂ ಹೋಗಿ ಬಂದರು. ಆತ್ಮವಿದ್ಯಾವಿಲಾಸವನ್ನು ಗಟ್ಟಿಯಾಗಿಯೇ ಹೇಳಿಕೊಂಡು ತಿರುಗಾಡುತ್ತಿದ್ದರು. ಆಗ ನದಿಯ ಆಚೆ ದಡದಲ್ಲಿ ನವರಾತ್ರಿಗೆ ಭರ್ಜರಿ ಸಿದ್ಧತೆಗಳಾಗಿತ್ತು. ಸ್ವಾಮಿಗಳು ಬೆಳಕು ಹರಿಯುವ ಮುನ್ನವೇ ಅಲ್ಲೇ ಮಲಗಿದ್ದ ಮಹಾಬಲಭಟ್ಟರನ್ನು ಕರೆದು ಸ್ನಾನಕ್ಕೆ ಹೊರಡೋಣವೆಂದು ಹೊರಟುನಿಂತರು. ಮಳೆ, ಚಳಿಯ ಕಾರಣ ತಣ್ಣೀರು ಸ್ನಾನ ಬೇಡವೆಂದು ಭಟ್ಟರು ಅರಿಕೆ ಮಾಡಿಕೊಂಡಾಗ "ಇವತ್ತು ಪುಣ್ಯದಿನವಲ್ಲವೇ, ತುಂಗಾ ಸ್ನಾನವೇ ಆಗಲಿ" ಎಂದುತ್ತರಿಸಿ ಹೊರಟೇ ಬಿಟ್ಟರು. ಇನ್ನೂ ಕತ್ತಲಿದ್ದುದರಿಂದ ಪರಿಚಾರಕ ರಾಮಸ್ವಾಮಿ ಲಾಟೀನು ಹಿಡಿದುಕೊಂಡರು. ರಾಮಸ್ವಾಮಿಯನ್ನು ಮೇಲೆಯೇ ನಿಲ್ಲಿಸಿ ಭಟ್ಟರೊಂದಿಗೆ ಕೆಳಗಿಳಿದು ಹೋದ ಅವರು ನೀರಿನಲ್ಲಿ ಮುಳುಗು ಹಾಕಿ ಪಕ್ಕದ ಕಟ್ಟೆಯ ಮೇಲೆ ಪ್ರಾಣಾಯಾಮ ಮಾಡಲು ಪದ್ಮಾಸನ ಹಾಕಿ ಕೂತರು. ಬೆನ್ನು ತಿರುಗಿಸಿ ಬಟ್ಟೆ ಒಗೆಯುತ್ತಿದ್ದ ಭಟ್ಟರು ಏನೋ ಬಿದ್ದ ಸದ್ದಾದಂತಾಗಿ ತಿರುಗಿ ನೋಡುತ್ತಾರೆ, ಸ್ವಾಮಿಗಳು ಪದ್ಮಾಸನದಲ್ಲಿಯೇ ತೇಲಿ ಹೋಗುತ್ತಿದ್ದಾರೆ. ಭಟ್ಟರು ಸಹಾಯಕ್ಕಾಗಿ ಕೂಗು ಹಾಕಿ ಈಜಿಕೊಂಡು ಸ್ವಾಮಿಗಳನ್ನು ಕೇಶವಚಾರಿಯ ಸಹಾಯದಿಂದ ದಡಕ್ಕೆ ತಂದರಾದರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶರೀರದೊಳಗೆ ಕಿಂಚಿತ್ತೂ ನೀರು ಹೋಗಿರಲಿಲ್ಲ. ಪ್ರಾಣವನ್ನು ಬಂಧನ ಮಾಡಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿದ್ದರು. ವಿಶೇಷವೆಂದರೆ ಅವರ ಜನನ, ಉಪನಯನ, ಸಂನ್ಯಾಸ ಸ್ವೀಕಾರ, ಆತ್ಮಾರ್ಪಣೆ, ಅವರ ಸಮಾಧಿಯ ಮೇಲಿನ ಲಿಂಗ ಪ್ರತಿಷ್ಠೆ ಎಲ್ಲವೂ ನಡೆದದ್ದು ಭಾನುವಾರವೇ!

                ಪೀಠಾಧಿಪತಿಗಳಾಗಿದ್ದೂ ಪೀಠದ ಪ್ರಚಾರಕ್ಕೆ ಇದ್ದ ಪರಿಕರಗಳನ್ನು ಬದಿಗೊತ್ತಿ, ಪೀಠದ ಬಿಂಕವನ್ನು ಬಿಸುಟು ನಿಂತವರು ಅವರು. ಸಾಧನೆಯಿಂದ ಪಡೆದುಕೊಂಡ ಸಿದ್ಧಿಗಳನ್ನು ಮೆರೆಯಿಸದೆ ಅಂತರ್ಮುಖರಾಗಿ ಉಳಿದ ಮಹಾ ಸಾಧಕ ಅವರು. ಅವರ "ಬುದ್ಧಿವಿಕಲ್ಪ"ದ ಜಾಡನ್ನು ವೈದ್ಯರಿಗೇ ಹಿಡಿಯಲಾಗಲಿಲ್ಲ. ಅವರ ಬಳಿ ಇದ್ದೋ, ಮಾತನಾಡಿಯೋ, ಕಿರುನಗೆ ನೋಡಿಯೋ, ದೂರದಿಂದಲೇ ಆರಾಧಿಸಿಯೋ ಆಳವಾದ ಮನಃಶಾಂತಿಯನ್ನು ಅನುಭವಿಸಿದವರು ಹಲವರು. ಅವರು ದಕ್ಷಿಣಾಮೂರ್ತಿಯಂತೆ, ಸದಾಶಿವ ಬ್ರಹ್ಮೇಂದ್ರರಂತೆ ಮೌನವಾಗಿಯೇ ಶೃದ್ಧೆಯುಳ್ಳ ಹಲವರಿಗೆ ಉಪದೇಶಿಸಿದರು. ಒಂದು ಲೇಖನದಲ್ಲೋ ಕೆಲವು ಪದಗಳಲ್ಲೋ ಅವರನ್ನು ಕಟ್ಟಿಡಲಾಗದು. ಅವರ ಸಾಮಾನ್ಯ ವ್ಯಕ್ತಿತ್ವವೇ ವರ್ಣನೆಗೆ ನಿಲುಕದ್ದು; ಇನ್ನು ಅವರ ಅಸಾಮಾನ್ಯ ಸಿದ್ಧಿಯನ್ನು, ವ್ಯಕ್ತಿತ್ವವನ್ನು ಏನೆಂದು ಬಣ್ಣಿಸಲಿ. ಅದು ಶೃಂಗ ಗಿರಿಯಲ್ಲಿ ಪಡಿಮೂಡಿದ ಪೂರ್ಣ ಚಂದಿರ. ತುಂಗೆಯ ತಟದಲ್ಲಿ ಅವಳಂತೆ ಗಂಭೀರವಾಗಿ, ಮೌನವಾಗಿ, ಶಾಂತವಾಗಿ ಹರಿದ ಜ್ಞಾನ ಸರಸಿರೆ. ವೀಣಾವಾದಿನಿ, ಜ್ಞಾನ ನಿನಾದಿನಿ ಶಾರದೆಯೇ ಧರೆಗಿಳಿದ ಪರಿ. ಶಂಕರರ ಬಳಿಕ ಶೃಂಗಗಿರಿಯಲ್ಲಿ ಅದ್ವೈತವನ್ನು ಸಾಕ್ಷಾತ್ಕರಿಸಿಕೊಂಡ ಚಂದ್ರಶೇಖರ.

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಮಣಿಪಾಲದಿಂದ ಹೊರಟಾಗಲೇ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಸೋಮೇಶ್ವರ ತಲುಪುತ್ತಿದ್ದಂತೆ ನಾಪತ್ತೆಯಾಗಿತ್ತು. ಮೋಡ ಮುಸುಕಿದ್ದರೂ ಮಳೆ ಬಂದುದರ ಕಿಂಚಿತ್ ಕುರುಹೂ ಅಲ್ಲಿರಲಿಲ್ಲ. ಮಂಜು ಮುಸುಕಿದ ಆಗುಂಬೆ ಘಟ್ಟ ಬೆಳಗಿನ ಇಬ್ಬನಿಯನ್ನು ಪ್ರೋಕ್ಷಿಸುತ್ತಾ ಸ್ವಾಗತವೀಯುತ್ತಿತ್ತು. ನೀವು ಕರಾವಳಿಯವರು ಅದೃಷ್ಟವಂತರು, ನಮಗೆ ಇಲ್ಲಿ ಮಳೆಯೇ ಇಲ್ಲ ಎಂದು ಸದಾ ಗೊಣಗುತ್ತಿದ್ದ ಘಟ್ಟದ ಮೇಲಿನವರ ಮಾತಿನ ಸತ್ಯ ಕಣ್ಣಿಗೆ ರಾಚುತ್ತಿತ್ತು. ಆಗುಂಬೆ ದಾಟಿದೊಡನೆ ಅಲ್ಲಲ್ಲಿ ಕಾಣಸಿಕ್ಕಿದ ರಬ್ಬರ್ ಹಾಡಿಗಳು ಮಳೆ ಕಡಿಮೆಯಾಗಿದ್ದಕ್ಕೆ ಕಾರಣವಾದ ಅಂಶದ ನಗ್ನದರ್ಶನವಿತ್ತಿತ್ತು. ತೀರ್ಥಹಳ್ಳಿಯಲ್ಲಿ ಹೆದ್ದಾರಿ ಬಿಟ್ಟು ಹಳ್ಳಿಯ ದಾರಿ ಹಿಡಿದ ನಮಗೆ ನಾವು ಗತ ವೈಭವವೊಂದರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದೇವೆಂಬ ಭಾವವಾದರೂ ಹೇಗುಂಟಾದೀತು? ಕವಳೆದುರ್ಗ, ತೀರ್ಥಹಳ್ಳಿಯ ಬಳಿಯಿರುವ ಸ್ಥಳ ಎಂಬ ಕನಿಷ್ಟ ಮಾಹಿತಿಯೊಂದಿಗೆ ಎಂದಿನ ಅಭ್ಯಾಸದಂತೆ ಮಾರ್ಗದರ್ಶಕರಿಲ್ಲದೆ, ನಿಖರ ಮಾರ್ಗ ಗೊತ್ತಿಲ್ಲದೆ, ಅಲ್ಲಿನ ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳದೆ ಸಾಗುತ್ತಿದ್ದ ನಮಗೆ ಆರಂಭದಲ್ಲಿ ಕಾದಿದ್ದು ನಿರಾಶೆಯೇ. ಒಂದೆರಡು ಮನೆಗಳಲ್ಲಿ ವಿಚಾರಿಸಿಕೊಂಡು, ಹದಗೊಳಿಸಿದ ಗದ್ದೆಗಳನ್ನೂ, ಪಾಳು ಬಿದ್ದು ಈಗ ಕೆರೆಯಂತಾಗಿರುವ ಗದ್ದೆಗಳನ್ನು ದಾಟಿ ಬಂದು ನಿಂತವರಿಗೆ ಕಂಡಿದ್ದು ಅಷ್ಟೇನೂ ದಟ್ಟವಲ್ಲದ ಮರಗಳು, ಪೊದೆಗಳಿಂದಾವೃತವಾದ ಕಲ್ಲು, ಮಣ್ಣುಗಳಿಂದಾವೃತವಾದ ಒಂದು ಗುಡ್ಡ. ಅದರ ಮೇಲೆ ಕೋಟೆಯ ಕುರುಹು!


ಕೋಟೆಯ ಒಳ ಹೋಗಲು ಕರಿಯ ದೊರಗು ಕಲ್ಲುಗಳನ್ನು ನೆಲಕ್ಕೆ ಅನುಕ್ರಮವಿಲ್ಲದೆ ಜೋಡಿಸಿದ ಒರಟಾದ ಅಗಲವಾದ ಈಗಿನ ದ್ವಿಪಥ ಎನ್ನಬಹುದಾದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ತುಳುವಿನಲ್ಲಿ "ಅಗರ್(ಅಥವಾ ಅಗಳ್)"ನಂತೆಯೇ ಇರುವ ಕಲ್ಲುಗಳನ್ನು ಜೋಡಿಸಿ ರೂಪಿಸಿದ ದಂಡೆಗಳು. ಮೇಲಿಂದ ಕೆಲ ಬಂಡೆಗಳು ಜಾರಿ ರಸ್ತೆಗೆ ಬಿದ್ದಿವೆಯಾದರೂ ಆ ರಸ್ತೆ ದಂಡೆಗಳ ಸಮೇತ ಇಂದಿಗೂ ಸುಸ್ಥಿತಿಯಲ್ಲಿರುವುದು ವಿಶೇಷ. ಮುಂದುವರಿದಂತೆ ಕೋಟೆಯ ಮುಖ್ಯ ದ್ವಾರದಲ್ಲಿ ಕಾಣಸಿಕ್ಕಿದ ರಸ್ತೆಯ ಇಕ್ಕೆಲಗಳಲ್ಲಿರುವ ಎರಡು ಬೃಹತ್ ಕಾವಲು(ಅಥವಾ ವೀಕ್ಷಕ) ಗೋಪುರಗಳು ನಮ್ಮ ಕುತೂಹಲವನ್ನು ಬಡಿದೆಬ್ಬಿಸಿದವು. ಯಾವುದೋ ಕಾಲದಲ್ಲಿ ನೇತು ಹಾಕಿದ ಭಾರತೀಯ ಪುರಾತತ್ವ ಇಲಾಖೆಯ ಭಿತ್ತಿಪತ್ರ ಇತಿಹಾಸವನ್ನು ತುಸು ನೆನಪಿಸುವುದರ ಜೊತೆಜೊತೆಗೆ ಒಳಗಿರಬಹುದಾದ ವಿಶೇಷತೆಯನ್ನೂ ಹಾಗೂ ಅವ್ಯಾವುವೂ ಸರಿಯಾಗಿ ನಿರ್ವಹಣೆಗೊಳಗಾಗುತ್ತಿಲ್ಲವೆನ್ನುವುದನ್ನು ಸಾರಿ ಹೇಳುತ್ತಿತ್ತು! ಒಳಹೊಕ್ಕಾಗ ನಮ್ಮನ್ನು ಸ್ವಾಗತಿಸಿದ್ದು ಇಳಿಜಾರಾದ ಕಲ್ಲುಗಳ ನಡುವೆಯೂ ಮೇವನ್ನರಸಿ ಕೋಟೆಯೊಳಗೆ ಹೊರಟಿದ್ದ ಗೋವುಗಳು!

ಅದು ಕವಳೆದುರ್ಗ. ತೀರ್ಥಹಳ್ಳಿಯಿಂದ 16ಕಿಮೀ ದೂರದಲ್ಲಿ ಸಮುದ್ರ ಮಟ್ಟದಿಂದ 1541ಮೀ ಎತ್ತರದ ಬೆಟ್ಟದಲ್ಲಿ ನಿರ್ಮಿತವಾದ ಕೋಟೆ. ಅನೇಕ ಸಾಧುಗಳ ಸಾಧನೆಗೆ ನೆರವಾದ ಪುಣ್ಯಭೂಮಿ. ಕೃತಯುಗದಲ್ಲಿ ಇದು ಪರಶುರಾಮ ಕ್ಷೇತ್ರಕ್ಕೇ ಸೇರಿತ್ತು ಎನ್ನುವ ಪ್ರತೀತಿ ಇದೆ. ತ್ರೇತೆಯಲ್ಲಿ ಅಗಸ್ತ್ಯ ಹಾಗೂ ವಾಲ್ಮೀಕಿ ಮಹರ್ಷಿಗಳು ಇಲ್ಲಿ ತಪಃಗೈದಿದ್ದರು ಎನ್ನುವ ಪುರಾಣ ಕಥೆಗಳೂ ಇವೆ. ದ್ವಾಪರೆಯಲ್ಲಿ ಪಾಂಡವರು ಇಲ್ಲಿ ನೆಲೆಸಿದ್ದರು ಎನ್ನುವ ಕಥೆಗಳೂ ಇವೆ. ಸ್ಕಂದ ಪುರಾಣದಲ್ಲಿ ಕಾವ್ಯ ವನ ಹಾಗೂ ಕಪಿಲದುರ್ಗ ಎಂದು ಹೆಸರಿಸಿರುವ ಸ್ಥಳ ಇದೇ ಎನ್ನುವ ವಾದಗಳೂ ಇವೆ. ಆದರೆ ಐತಿಹಾಸಿಕವಾಗಿ ಇದರ ಕುರುಹು ಸಿಗುವುದು 9ನೇ ಶತಮಾನದ ಬಳಿಕವೇ.  ಈ ಕೋಟೆ ನಿರ್ಮಾಣಗೊಂಡದ್ದು ಸುಮಾರು 9ನೇ ಶತಮಾನದಲ್ಲಿ. 14ನೇ ಶತಮಾನದಲ್ಲಿ ಬೇಲಗುತ್ತಿಯ ಅರಸ ಚೆಲುವರಂಗಪ್ಪ ಕೋಟೆಯನ್ನು ನವೀಕರಣಗೊಳಿಸಿ ಅಭಿವೃದ್ಧಿಪಡಿಸಿದ. ಧೋಲಾಯ್ತಮ ಹಾಗೂ ಮುಂಡಿಗೆ ಎನ್ನುವ ಸಹೋದರರು ಈ ಕೋಟೆಯನ್ನು ವಶಪಡಿಸಿದ ಬಳಿಕ ಇದು ಕೌಳಿ ಎನ್ನುವ ಹಳ್ಳಿಯಲ್ಲಿದ್ದ ಕಾರಣಕ್ಕಾಗಿ ಇದನ್ನು ಕೌಳಿ ದುರ್ಗ ಎಂದೇ ಕರೆದರು. ಹದಿನಾರನೇ ಶತಮಾನದಲ್ಲಿ ಕೆಳದಿಯ ಅರಸ ಹಿರಿಯ ವೆಂಕಟಪ್ಪನಾಯಕ ಕೋಟೆಯನ್ನು ತನ್ನ ಕೈವಶ ಮಾಡಿಕೊಂಡು ಅದಕ್ಕೆ ಏಳು ಸುತ್ತಿನ ತಡೆಗೋಡೆಗಳ ರಕ್ಷಣೆಯನ್ನು ಒದಗಿಸಿದ. ಆ ಸಮಯದಲ್ಲಿ ಇದು ಭುವನಗಿರಿಯೆಂದೇ ಹೆಸರು ಪಡೆಯಿತು. ಅದು ಕೋಟೆಯ ಸ್ವರ್ಣಮಯ ಕಾಲ! 1763ರಲ್ಲಿ ಹೈದರ್ ಅಲಿ ಆಕ್ರಮಣ ಮಾಡಿದ ಬಳಿಕ ಕೋಟೆ ಅವಸಾನದತ್ತ ಸಾಗಿತು. ತನ್ನ ಒಂದಷ್ಟು ಸೈನಿಕರನ್ನು ಕೋಟೆಯ ಕಾವಲಿಗೆ ಆತ ನಿಲ್ಲಿಸಿದ ಕಾರಣದಿಂದ ಈ ಕೋಟೆ ಜನರ ಬಾಯಲ್ಲಿ ಕಾವಲು ದುರ್ಗವಾಗಿ ಬದಲಾಯಿತು. ಟಿಪ್ಪುವಿನ ಬಳಿಕ ಮೈಸೂರು ಒಡೆಯರ ವಶಕ್ಕೆ ಈ ಕೋಟೆ ಸಿಕ್ಕಿತಾದರೂ ಅದರ ಅಭಿವೃದ್ಧಿ ಕಡೆಗೆ ಅವರೂ ಮನ ಮಾಡಿದಂತೆ ಕಾಣಲಿಲ್ಲ. 1882ರವರೆಗೂ ತಾಲೂಕು ಕೇಂದ್ರವಾಗಿ ಮೆರೆದಿದ್ದ, ಅನೇಕ ಹೆಸರುಗಳನ್ನು ಪಡೆಯುತ್ತ ಅವಸಾನದತ್ತ ಸಾಗುತ್ತಿದ್ದ ಕೋಟೆಗೆ ಇಂದಿನ ಹೆಸರು ಕವಳೆ ದುರ್ಗವೇ. ಕ್ರಮೇಣ ತಾಲೂಕು ಕೇಂದ್ರ ತೀರ್ಥರಾಜಪುರ ಅಂದರೆ ಇಂದಿನ ತೀರ್ಥಹಳ್ಳಿಗೆ ಸ್ಥಳಾಂತರಗೊಂಡಿತು.

ಕೋಟೆಯ ಅಭಿವೃದ್ಧಿಗೆ ವೆಂಕಟಪ್ಪ ನಾಯಕನ ಕೊಡುಗೆ ಅಪಾರ. ಆತ ಇಲ್ಲಿ ಅರಮನೆಯೊಂದನ್ನು ಕಟ್ಟಿಸಿದ. ಅಗ್ರಹಾರ ಹಾಗೂ ಮಹತ್ತಿನ ಮಠವನ್ನು ಕಟ್ಟಿಸಿದ. ಶೃಂಗೇರಿ ಮಠ, ಖಜಾನೆ, ಧಾನ್ಯದ ಕಣಜ, ಟಂಕಸಾಲೆ, ದೇವಾಲಯಗಳು, ಕೊಳಗಳು ಹಾಗೂ ಆನೆ ಮತ್ತು ಕುದುರೆ ಲಾಯಗಳಿಂದ ಕೋಟೆಯ ವೈಭವವನ್ನು ಹೆಚ್ಚಿಸಿದ. ನೈಸರ್ಗಿಕ ಗುಡ್ಡದ ರೂಪುರೇಷೆಯನ್ನಾಧರಿಸಿ ಬೃಹತ್ ಕಣಶಿಲೆಗಳಿಂದ ಮೂರು ಸುತ್ತಿನ ಗೋಡೆಗಳನ್ನು ನಿರ್ಮಿಸಿದ. ಪ್ರತಿಯೊಂದು ಸುತ್ತಿನ ದ್ವಾರದ ಇಕ್ಕೆಲಗಳಲ್ಲಿ ರಕ್ಷಣಾ ಕೊಠಡಿಗಳನ್ನು ಕಾಣಬಹುದು. ಪ್ರತಿಯೊಂದು ಸುತ್ತಿನಲ್ಲೂ ಕಾವಲುಗಾರರ ಕೋಟೆಗಳನ್ನೊಳಗೊಂಡ ಪ್ರವೇಶದ್ವಾರವಿದ್ದು ಪ್ರತಿಯೊಂದು ಸುತ್ತಿನ ಮಧ್ಯಭಾಗದಲ್ಲಿ ದೇವಾಲಯಗಳ ಅವಶೇಷಗಳು, ಶಿಥಿಲಗೊಂಡ ಅರಮನೆಯ ನಿವೇಶನಗಳು, ಕಟ್ಟಡಗಳ ಅವಶೇಷಗಳಿವೆ. ಮೊದಲ ಸುತ್ತಿನ ಸಂಕಲಿಸಿದ ಎರಡು ವೃತ್ತಾಕಾರದ ರಚನೆಗಳು ಎರಡನೆ ಸುತ್ತಿಗೆ ದ್ವಾರಗಳಾಗಿವೆ. ಇವಕ್ಕೆ ನಗಾರಿ ಬಾಗಿಲು ಎಂದೇ ಹೆಸರು. ಇದೊಂದು ಸುಭದ್ರವಾದ, ಭವ್ಯ, ಸುಸಜ್ಜಿತ ಕೋಟೆಯಾಗಿತ್ತೆಂದು ಅದರ ಅವಶೇಷಗಳೇ ಸಾರಿ ಹೇಳುತ್ತವೆ. ಕೋಟೆ ಸುಮಾರು 8 ಕಿ.ಮೀ ವಿಸ್ತೀರ್ಣದಲ್ಲಿ ವಿಸ್ತರಿಸಿದೆ. ಹಳ್ಳಿಯನ್ನೇ ಸುತ್ತುವರಿದಿದ್ದ ಹೊರಗಿನ ಎರಡು ರಕ್ಷಣಾ ಗೋಡೆಗಳು ಕಾಲದ ಹೊಡೆತಕ್ಕೆ ಸಿಕ್ಕಿ ಬಹುತೇಕ ಅಳಿದು ಹೋಗಿವೆ. ಉಳಿದ ಐದು ಸುತ್ತಿನ ಗೋಡೆಗಳಲ್ಲೂ ಒಳಗಿನ ಎರಡಷ್ಟೇ ಭದ್ರವಾಗಿ ನಿಂತಿವೆ. ಕೆಲವು ಕಡೆಗಳಲ್ಲಿ ಗೋಡೆಗಳು ಈಗಲೂ 40 ಅಡಿಗಳಷ್ಟು ಎತ್ತರವಿರುವುದನ್ನು ನೋಡಿದರೆ ಕೋಟೆಯ ಅಗಾಧತೆ ಹಾಗೂ ಬಲಿಷ್ಟತೆಯನ್ನು ಊಹಿಸಬಹುದು.






ಕೋಟೆಯೊಳಗಿದ್ದ ಹದಿನೈದು ದೇವಾಲಯಗಳಲ್ಲಿ ಈಗ ಉಳಿದಿರುವುದು ಕೆಲವೇ ಕೆಲವು. ಅವುಗಳಲ್ಲಿ ಮೈಲಾರೇಶ್ವರ, ಕಾಶಿ ವಿಶ್ವನಾಥ, ಲಕ್ಷ್ಮೀನಾರಾಯಣ, ಶಿಖರೇಶ್ವರ ದೇವಾಲಯಗಳು ಪ್ರಮುಖವಾದವು. ಆಸ್ಥಾನದ ಅವಶೇಷಗಳು ಹದಿನಾರನೇ ಶತಮಾನದ ರಾಜದರ್ಬಾರನ್ನು ಕಣ್ತುಂಬಿಕೊಳ್ಳಬಯಸುತ್ತವೆ. ಲಕ್ಷ್ಮೀನಾರಾಯಣ ದೇಗುಲ ಮೊದಲ ಸುತ್ತಿನ ಕೋಟೆಯ ಒಳಭಾಗದಲ್ಲಿ ಬೃಹದಾಕಾರದ ಬಂಡೆಯ ಮೇಲೆ ಕಟ್ಟಲ್ಪಟ್ಟಿದೆ. ಇಲ್ಲೇ ಆಸ್ಥಾನದ ಅವಶೇಷಗಳು, ರಾಣಿಯ ಪ್ರತ್ಯೇಕ ಈಜುಕೊಳ, ಜೈಲಿನ ಅವಶೇಷಗಳು, ಶಸ್ತ್ರಾಗಾರ, ಕಾಲವನ್ನು ಅಳೆಯುತ್ತಿದ್ದ ತಾಮ್ರದ ಘಳಿಗೆ ಬಟ್ಟಲು, ಆನೆ ಮತ್ತು ಕುದುರೆ ಲಾಯಗಳನ್ನು ಕಾಣಬಹುದು. ಬೃಹದಾಕಾರದ ಬಂಡೆಯ ಮೇಲೆ ನಿಂತಿದೆ ಶಿಖರೇಶ್ವರ ದೇವಾಲಯ. ಇಡಿಯ ಕೋಟೆಗೆ ಕಿರೀಟದಂತೆ ಪರ್ವತದ ತುತ್ತತುದಿಯಲ್ಲಿ ಶೋಭಿಸುತ್ತ ನಿಂತಿರುವ ಈ ದೇವಾಲಯ ಬೃಹದಾಕಾರದ ಕಲ್ಲುಗಳಿಂದ ಕಟ್ಟಲ್ಪಟ್ಟ ಒಂದು ಸುಂದರ ಗುಡಿ. ಕೆಳಗಿಂದ ನೋಡಿದರೆ ಈ ದೇವಾಲಯವೇ ಒಂದು ಶಿವಲಿಂಗದಂತೆ ಭಾಸವಾಗುತ್ತದೆ. ಈ ದೇವಾಲಯವು ತಲವಿನ್ಯಾಸದಲ್ಲಿ ಗರ್ಭಗೃಹ, ನಂದಿ ಮಂಟಪ ಹಾಗೂ ಮುಖ ಮಂಟಪವನ್ನು ಹೊಂದಿದ್ದು ಅನುಪಮ ಸೂರ್ಯಾಸ್ತದ ವೀಕ್ಷಣೆಗೆ ಸಹಕಾರಿಯಾಗಿದೆ. ಮೂರನೇ ಸುತ್ತಿನ ಕೋಟೆಯೊಳಗಿರುವ ಕಾಶಿ ವಿಶ್ವನಾಥ ದೇವಾಲಯ ವಿಶೇಷವಾದದ್ದು. ದೇಗುಲದ ಎದುರಿಗೆ ಇಕ್ಕೆಲಗಳಲ್ಲಿರುವ ಎರಡು ಶಿಲಾಸ್ಥಂಭಗಳು ಇತಿಹಾಸಕಾರರ ಕುತೂಹಲಕ್ಕೆ ಕಾರಣವಾಗಬಹುದಾದ ಸಂಗತಿ. ಇದು ದಕ್ಷಿಣ ಭಾರತದ ದೇಗುಲಗಳಲ್ಲಿ ಅಪರೂಪ ಎನ್ನಬಹುದಾದ ರಚನೆಯೇ ಸರಿ. ದೇವಾಲಯದ ಎದುರಿಗಿರುವ ಮಂಟಪವನ್ನು ತುಲಾಭಾರ ಮಂಟಪವೆಂದೇ ಕರೆಯಲಾಗುತ್ತಿತ್ತು. ಬಹುಷಃ ತುಲಾಭಾರ ಸೇವೆ ಇಲ್ಲಿಯೇ ನಡೆಯುತ್ತಿದ್ದಿರಬಹುದೆಂಬ ಊಹೆ. ಆಸ್ಥಾನ ನೃತ್ಯಾಂಗನೆಯ ಚಿತ್ರವೊಂದು ಈ ಮಂಟಪದ ಗೋಡೆಯಲ್ಲಿ ಕೆತ್ತಲ್ಪಟ್ಟಿದೆ. ಹಾಂ, ಮುಸಲರಿಂದ ಆಕ್ರಮಣಗೊಂಡ ಎಲ್ಲಾ ದೇವಾಲಯಗಳಲ್ಲಿ ಇರುವಂತೆ ಇಲ್ಲಿಯೂ ಮತಾಂಧತೆಯ ಕುರುಹು ಇದ್ದೇ ಇದೆ. ಕಾಶಿ ವಿಶ್ವನಾಥ ದೇವಾಲಯದ ಗರ್ಭಗೃಹದ ಹೊರಕೋಣೆಯ ದ್ವಾರವನ್ನು ಹೈದರ್ ಇಸ್ಲಾಮಿಕ್ ಶೈಲಿಗೆ ಬದಲಾಯಿಸಿದ್ದಾನೆ.


ವ್ಯವಸ್ಥಿತವಾದ ಅಡುಗೆ ಒಲೆಗಳು, ಸ್ನಾನಗೃಹ, ನೀರಿನ ತೊಟ್ಟಿಗಳು, ನೀರು ಪೂರೈಕೆ ವ್ಯವಸ್ಥೆಗಳು, ನೀರಿನ ಸಂಪು, ಮುಚ್ಚಿಗೆಯಿರುವ ಬಾವಿ ಎಲ್ಲವೂ ಇದರೊಳಗಿವೆ. ಅರಮನೆಯ ನಿವೇಶನ ಎತ್ತರವಾದ ಮಜಲುಗಳುಳ್ಳ ಅಲಂಕೃತ ಅಧಿಷ್ಠಾನವನ್ನು ಹೊಂದಿದೆ. ಒಂದಕ್ಕೊಂದು ಸಂಪರ್ಕವಿರುವ ಹಲವಾರು ಕೋಣೆಗಳುಳ್ಳ ಸ್ಥಂಭಗಳ ಜಗತಿಯುಳ್ಳ ಒಳಾಂಗಣ ಇತ್ತೀಚಿನ ಸರ್ವೇಕ್ಷಣೆಯಲ್ಲಿ ಬೆಳಕಿಗೆ ಬಂತು. ಮೂಮ್ಭಾಗದಲ್ಲಿ ಸ್ಥಂಭಗಳುಳ್ಳ ಜಗತಿ, ನೈಮಿತ್ತಿಕ ಪೂಜಾ ಕೋಣೆ, ಅಡುಗೆ ಮನೆ, ತನ್ನದೇ ನೀರು ಸರಬರಾಜು ಉಳ್ಳ ಸ್ನಾನಗೃಹ, ಆವರಣವಿರುವ ಹಿತ್ತಲ ಕೋಣೆ, ಪಾವಟಿಕೆಗಳುಳ್ಳ ನೀರಿನ ಕೊಳ ಅಂದಿನ ವಾಸ್ತುಶಿಲ್ಪದ ಕಡೆಗೆ ಬೆಳಕು ಚೆಲ್ಲುತ್ತವೆ. ಐದು ಕಡೆ ಜ್ವಾಲೆಗಳನ್ನು ಹೊರಸೂಸುವ ಕಲ್ಲಿನ ಒಲೆ ಪಾಕಶಾಲೆಯಲ್ಲಿ ಕಂಡುಬಂದಿರುವುದು ಅಂದಿನ ತಂತ್ರಜ್ಞಾನದ ಮಟ್ಟವನ್ನು ಬಿಂಬಿಸುತ್ತದೆ.

ಒಂದು ಗುಹೆಯಂತಹಾ ರಚನೆ, ಅಲ್ಲಿಂದ ಹೊರಹೊಮ್ಮುತ್ತಿತ್ತು ಪುಷ್ಕಳವಾದ ಜಲ. ಗದಾ ತೀರ್ಥವದು. ಭೀಮನ ಗದೆಯಿಂದ ಸೃಷ್ಟಿಯಾದುದೆಂಬ ಪ್ರತೀತಿ. ಕಲ್ಲಿನಿಂದ ನಿರ್ಮಿಸಲ್ಪಟ್ಟ ಎರಡು ಪುಟ್ಟ ಕೊಳಗಳು ಒಳ ಸುತ್ತಿನ ಕೋಟೆಯಲ್ಲಿವೆ. ಒಟ್ಟು ಏಳು ಕೊಳಗಳು ಕೋಟೆಯೊಳಗಿವೆ. ಬಿರು ಬೇಸಗೆಯಲ್ಲೂ ಅವು ತುಂಬಿಕೊಂಡಿರುತ್ತವೆ. ನಾವು ಇಂದಿಗೂ ಅಳವಡಿಸಿಕೊಳ್ಳಲು ಮೀನಮೇಷ ಎಣಿಸುತ್ತಿರುವ ಮಳೆಕೊಯ್ಲನ್ನು ಆ ಕಾಲದಲ್ಲೇ ಈ ಕೋಟೆಯಲ್ಲಿ ಅಳವಡಿಸಲಾಗಿದೆ. ಹೀಗೆ ಸಂಗ್ರಹಿಸಲ್ಪಟ್ಟ ಮಳೆ ನೀರು ಕೋಟೆಯ ತುದಿಯಿಂದ ತಳದವರೆಗೆ ವಿಶೇಷವಾಗಿ ನಿರ್ಮಿಸಿದ ನೀರಿನ ಕಾಲುವೆಗಳಲ್ಲಿ ಹರಿಯುತ್ತದೆ. ದಟ್ಟವಾಡ ಕಾಡಿನಿಂದ ಬೆಟ್ಟದ ಮೂಲಕ ಹರಿದು ಬರುವ ನೀರನ್ನೂ ಕಾಲುವೆಗಳ ಮೂಲಕ ಕೊಳಗಳನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ನೀರು ಸಾಗುವಂತೆ ನೆಲದಡಿಯಲ್ಲಿ ಕಾಲುವೆಗಳನ್ನು ರೂಪಿಸಲಾಗಿದೆ. ಅವು ಇಂದಿಗೂ ಸುಸ್ಥಿತಿಯಲ್ಲಿವೆ. ಹೀಗೆ ಹರಿದ ನೀರು ಕೆಳಗಿರುವ ದೊಡ್ಡ ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದುವರಿದು ಹಳ್ಳಿಯ ಹಳ್ಳದಲ್ಲಿ ಹರಿದು ದೊಡ್ಡದಾದ "ತಿಮ್ಮರಸ ನಾಯಕನ ಕೆರೆ"ಗೆ ಸಾಗುತ್ತದೆ. ಇದೊಂದು ಯೋಜನಾಬದ್ಧವಾಗಿ ರೂಪಿಸಿರುವ ವ್ಯವಸ್ಥಿತ ಕೋಟೆಯೇ ಸರಿ. ಒಳಸುತ್ತಿನ ಕೋಟೆಯಲ್ಲಿ ಆದಿಶೇಷನ ಸುಂದರ ವಿಗ್ರಹವೊಂದು ಕಾಣಸಿಗುತ್ತದೆ. ನಾಗದೇವರುಗಳು ಕೋಟೆಯನ್ನು ಹೊರಗಿನ ಶತ್ರುಗಳಿಂದ ರಕ್ಷಿಸುತ್ತಿದ್ದರೆಂಬ ಪ್ರತೀತಿ. ತುಪಾಕಿ ಬುರುಜು ಎಂದು ಕರೆಯಲ್ಪಡುತ್ತಿದ್ದ ಶಸ್ತ್ರಾಗಾರವೂ ಅಲ್ಲೇ ಇದೆ.




ಕವಳೆದುರ್ಗ ನಿಜವಾಗಿಯೂ ಭುವನಗಿರಿಯೇ ಸರಿ. ಅದನ್ನು ಹತ್ತಿ ನಿಂತಾಗ ಸುತ್ತ ಕಾಣುವ ನೋಟ ಬಲು ರಮ್ಯವಾದದ್ದು. ಪಶ್ಚಿಮಕ್ಕೆ ವಾರಾಹಿ ಹಾಗೂ ಚಕ್ರಾ ನದಿಗಳ ಜಲಧಾರೆಯೂ, ವಾರಾಹಿ ಅಣೆಕಟ್ಟು ದೂರದಲ್ಲಿ ಗೋಚರಿಸುತ್ತದೆ. ವಾರಾಹಿ ಅಣೆಕಟ್ಟಿನಿಂದಾಗಿ ಜಲಾವೃತಗೊಂಡ ಪ್ರದೇಶದಲ್ಲಿ ದಟ್ಟವಾದ ಪುಟ್ಟ ಪುಟ್ಟ ಅರಣ್ಯಗಳು ಮಿಂದೆದ್ದಂತೆ ಗೋಚರಿಸಿದರೆ ದಕ್ಷಿಣಕ್ಕೆ ಕುಂದಾದ್ರಿ ಧಿಗ್ಗನೆದ್ದು ನಿಂತಿದೆ. ಉತ್ತರದಲ್ಲಿ ಮನೋಹರ ಸುಂದರಿ ಕೊಡಚಾದ್ರಿ ಏನನ್ನೋ ಉಸುರುತ್ತಿದೆ.

ಕೆಳದಿಯ ನಾಯಕರು ನಿರ್ಮಿಸಿದ ಈ ಅತ್ಯದ್ಭುತ ಕೋಟೆಯು ಸರಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲನ ಗರ್ಭದೊಳಗೆ ಮೆಲ್ಲನೆ ನುಸುಳಿ ಮರೆಯಾಗುತ್ತಿದೆ. ಇಂದಿನ ಜನಾಂಗಕ್ಕೆ ಇತಿಹಾಸದ ಸತ್ಯ - ತಥ್ಯ ದರ್ಶನವನ್ನೂ, ತಂತ್ರಜ್ಞಾನದ ಮಾರ್ಗದರ್ಶನವನ್ನೂ ಮಾಡಬಹುದಾಗಿದ್ದ ಅಮೂಲ್ಯ ನಿಧಿಯನ್ನು ನಾವು ಬಳಸಿಕೊಳ್ಳುತ್ತಿರುವ/ಉಳಿಸಿಕೊಂಡಿರುವ ಸ್ಥಿತಿ ಶೋಚನೀಯ. ಕೋಟೆಯ ಸಮಗ್ರ ನಿರ್ವಹಣೆ ಹಾಗು ಸಮರ್ಪಕ ಉತ್ಖನನದಿಂದ ಅರಣ್ಯ ಗರ್ಭದೊಳಗೆ ಹುದುಗಿರುವ ಸತ್ಯಗಳು ಹಾಗು ಕೆಳದಿಯ ನಾಯಕರ ಬಗೆಗಿನ ವಿವರಗಳು ಇನ್ನಷ್ಟು ಹೊರಬರಬಹುದು. ಹೊರ ಖಂಡಗಳಿಗೆ ಕಾಳು ಮೆಣಸನ್ನು ಮಾರಾಟ ಮಾಡುತ್ತಾ ಅಗಾಧ ಶ್ರೀಮಂತಿಕೆಯನ್ನು ಹೊಂದಿದ್ದ ಸಂಸ್ಥಾನ ಕೆಳದಿ. ಅಲ್ಲಿ ಕಾಶಿ ವಿಶ್ವನಾಥನ ದೇಗುಲದ ಗೋಡೆಯಲ್ಲಿ ನಿಧಿಯನ್ನು ಸೂಚಿಸುವ ನಾಗನ ಚಿತ್ರವನ್ನು ಕೆತ್ತಲಾಗಿದೆ. ಅದು ನನಗೆ ಬಳ್ಳಿ ಕಾಳ ಬೆಳ್ಳಿಯು ಬಳುಕಿದಂತೆ ಅನಿಸುತ್ತಿದೆ.