ಪುಟಗಳು

ಬುಧವಾರ, ಆಗಸ್ಟ್ 31, 2016

ಯಾರು ಮಹಾತ್ಮ? ಭಾಗ- ೨

ಯಾರು ಮಹಾತ್ಮ? ಭಾಗ- ೨                   ಆಗ ಕಾಂಗ್ರೆಸ್ಸಿನಲ್ಲಿ ಗಾಂಧಿಯವರದ್ದೇ ಅಂತಿಮ ಮಾತು. ಸರಿತಪ್ಪುಗಳ ವಿಚಾರವಾಗಿ ಅವರ ತೀರ್ಮಾನವೇ ಅಂತಿಮ ನಿರ್ಣಯ! ಅವರ ಮುಖಂಡತ್ವ ಬೇಕೆಂದಾದರೆ ಕಾಂಗ್ರೆಸ್ ಅವರ ನಿರ್ಧಾರಗಳನ್ನು ಒಪ್ಪಬೇಕಿತ್ತು. ಇಲ್ಲದಿದ್ದರೆ ಅವರು ತಮ್ಮದೇ ಹಾದಿ ಹಿಡಿಯುತ್ತಿದ್ದರು. ಹಾಗಾಗಿಯೇ ಕಾಂಗ್ರೆಸ್ ತನ್ನ ಬುದ್ಧಿಯನ್ನು ಅಕ್ಷರಶಃ ಗಾಂಧಿಗೆ ಮಾರಿಕೊಂಡಿತ್ತು. ಗಾಂಧಿಯ ಚಂಚಲತೆ, ನೈತಿಕತೆಯೇ ಆಧ್ಯಾತ್ಮಿಕತೆಯೆಂದು ಸಾಧಿಸುವ ರೀತಿ, ದೂರದೃಷ್ಟಿಯಿಲ್ಲದ-ಪರಿಣಾಮದ ಬಗೆಗೆ ಆಲೋಚಿಸದ ನಡೆಗಳಿಗೆ ಕಾಂಗ್ರೆಸ್ ಹೆಜ್ಜೆಹಾಕಲೇಬೇಕಾದಂತಹ ಪರಿಸ್ಥಿತಿಯಿತ್ತು. ಸತ್ಯಾಗ್ರಹಿ ಎಂದಿಗೂ ವಿಫಲನಾಗುವುದಿಲ್ಲ ಎಂದು ಪದೇ ಪದೇ ತನ್ನ ನಿರ್ಧಾರಗಳನ್ನು ಸಮರ್ಥಿಸಲು ಬಳಸುತ್ತಿದ್ದರು ಗಾಂಧಿ. ಆದರೆ ಸತ್ಯಾಗ್ರಹಿ ಯಾರೆಂದು ಅವರ ಹೊರತು ಬೇರಾರಿಗೂ ತಿಳಿದಿರಲಿಲ್ಲ. ಅವರ ಸತ್ಯಾಗ್ರಹಿಯ ವ್ಯಾಖ್ಯೆ ಕಾಲ-ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುತ್ತಿತ್ತು.

                 ಗಾಂಧಿಯ ರಾಜಕೀಯ ಅವೈಚಾರಿಕವಾದುದು ಎಂದು ಯೋಚಿಸಿದವರೆಲ್ಲಾ ಒಂದೋ ಕಾಂಗ್ರೆಸ್ ಬಿಟ್ಟು ದೂರಸರಿಯಬೇಕಾಯಿತು ಅಥವಾ ಗಾಂಧಿಯ ಇಷ್ಟಕ್ಕೆ ತಕ್ಕಂತೆ ಕಷ್ಟವಾದರೂ ನಡೆದುಕೊಳ್ಳಬೇಕಾಯಿತು. ಗಾಂಧಿಯವರ ಹಠಮಾರಿತನ-ಬೇಜವಾಬ್ದಾರಿ-ಪ್ರಮಾದಗಳ ಮೇಲೆ ಪ್ರಮಾದ-ವಿಫಲತೆಗಳಿಂದ ದುರಂತಗಳ ಮೇಲೆ ದುರಂತಗಳಾದವು. 33 ವರ್ಷಗಳ ರಾಜಕೀಯ ಜೀವನದಲ್ಲಿ ಗಾಂಧಿ ಸಾಧಿಸಿದ್ದೇನು? ಒಡೆದ ಭಾರತವೇ? ಲಕ್ಷಗಟ್ಟಲೆ ಹಿಂದೂಗಳ ಕೊಲೆಯೇ? ಸ್ವಾರ್ಥಿ, ಚಪಲಚೆನ್ನಿಗರಾಯ ನೆಹರೂ ಎಂಬ ಉತ್ತರಾಧಿಕಾರಿಯೇ? ಅವರ ಪಟ್ಟ ಶಿಷ್ಯ ನೆಹರೂಗೇ ಗಾಂಧಿಯ ಮುಂದಿನ ನಡೆ ಏನು, ಏಕಾಗಿ ಎನ್ನುವುದರ ಅರಿವಿರಲಿಲ್ಲ. ನೆಹರೂ  ಅತ್ತಲಿರಲಿ ಸ್ವತಃ ಗಾಂಧಿಗೇ ತಾನು ಮುಂದೇನು ಮಾಡುತ್ತೇನೆ ಎನ್ನುವುದರ ಖಚಿತತೆಯಿರಲಿಲ್ಲ. "ನಮ್ಮ ಮೇಲೆ ಅಚ್ಚರಿಯ ಮಳೆ ಸುರಿಸುವುದರಿಂದ ಹೆದರಿಕೆಯಾಗುತ್ತದೆ ಎಂದು ನಾನವರಿಗೆ ಹೇಳಿದ್ದೆ(1931). ಹದಿನಾಲ್ಕು ವರ್ಷಗಳಿಂದ ಅವರ ಒಡನಾಡಿಯಾಗಿದ್ದರೂ ಅವರನ್ನು ಅರ್ಥ ಮಾಡಿಕೊಳ್ಳಲಾಗಲಿಲ್ಲ. ತಮ್ಮಲ್ಲಿ ತಿಳಿಯದಿರುವಿಕೆಯ ಅಸ್ತಿತ್ವವಿದೆ ಎನ್ನುವುದು ಸ್ವತಃ ಅವರಿಗೂ ಗೊತ್ತಿತ್ತು. ಸ್ವತಃ ತಾನು ಅದಕ್ಕೆ ಉತ್ತರ ಕೊಡಲಾರೆ. ಮತ್ತು ಇದು ತನ್ನನ್ನು ಎಲ್ಲಿಗೆ ಒಯ್ಯುತ್ತದೆ ಎಂದು ಹೇಳಲಾರೆ ಎನ್ನುತ್ತಿದ್ದರು" ಎಂದು ನೆಹರೂ ಮಹಾಶಯ ಬರೆದಿಟ್ಟಿದ್ದಾರೆ.

              ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆಚಾರ್ಯ ಕೃಪಲಾನಿ ಗಾಂಧಿ ಜೊತೆ ಸುಮಾರು 30 ವರ್ಷಗಳ ಕಾಲ ಕೆಲಸ ಮಾಡಿದವರು. ಗಾಂಧಿಯ ಬಗ್ಗೆ ಅವರ ಅಭಿಪ್ರಾಯ:- "ಸಾಮೂಹಿಕ ಆಧಾರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಹಾದಿಯನ್ನು ಗಾಂಧಿ ಇನ್ನೂ ಕಂಡುಕೊಂಡಿಲ್ಲ. ಅವರು ಅಹಿಂಸೆ-ಅಸಹಕಾರದ ನಿಶ್ಚಿತ ಪಥ ತೋರಿದಾಗ ನಾವದನ್ನು ಕನಿಷ್ಟ ಯಾಂತ್ರಿಕವಾಗಿಯಾದರೂ ಪಾಲಿಸಿದೆವು. ಆದರೆ ಇಂದು ಸ್ವತಃ ಅವರು ಕತ್ತಲಲ್ಲಿ ತಡಕಾಡುತ್ತಿದ್ದಾರೆ. ಅವರು ಇಡೀ ಭಾರತಕ್ಕಾಗಿ ಬಿಹಾರದಲ್ಲಿ ಹಿಂದೂ-ಮುಸ್ಲಿಮ್ ಸಮಸ್ಯೆ ಬಗೆಹರಿಸುತ್ತಿರುವುದಾಗಿ ಹೇಳುತ್ತಿದ್ದರು. ಆದರೆ ಉದ್ದೇಶಿತ ಗುರಿಯತ್ತ ಒಯ್ಯುವ ಖಚಿತ ಮಾರ್ಗಗಳೇ ಅವರಲ್ಲಿರಲಿಲ್ಲ. ಅವರು ತಮ್ಮ ನೀತಿಗಳನ್ನೇನೋ ಹೇಳುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಅವರಿಂದಾಗುವುದಿಲ್ಲ. ಮೊಮ್ಮಗಳು ಮನು ಜೊತೆ ಹಾಸಿಗೆ ಹಂಚಿಕೊಳ್ಳುವ ಕುರಿತಂತೆ ಅದು ತಮ್ಮ ಬ್ರಹ್ಮಚರ್ಯ ಯಜ್ಞದ ಒಂದು ಭಾಗ ಎಂದು ಗಾಂಧಿ ಹೇಳಿದ್ದರು. ಆಗ ಕೃಪಲಾನಿ "ಯಾವುದೇ ಪಾಪಿಷ್ಟ ವ್ಯಕ್ತಿ ಕೂಡಾ ನೀವು ಮಾಡಿದಂತೆ ಮಾಡುವುದಿಲ್ಲ " ಎಂದು ಪ್ರತಿಕ್ರಿಯಿಸಿದ್ದರು. ಅರವಿಂದರಂತೂ "ಗಾಂಧಿ ಮಾಡುತ್ತಿರುವುದಾದರೂ ಏನು? "ಅಹಿಂಸಾ ಪರಮೋ ಧರ್ಮ, ಜೈನ ಮತ, ಹರತಾಳ, ಸಾತ್ವಿಕ ಪ್ರತಿರೋಧ ಇತ್ಯಾದಿಗಳ ಸತ್ಯಾಗ್ರಹ ಎನ್ನುವ ಕಲಸುಮೇಲೋಗರ. ಅವರು ತರುತ್ತಿರುವುದು ಭಾರತೀಯಕರಣಗೊಳಿಸಿದ ಟಾಲ್ ಸ್ಟಾಯ್ ವಾದ. ಅದು ದೀರ್ಘಕಾಲ ಉಳಿದರೆ ಭಾರತೀಯಕರಣಕ್ಕೊಳಗಾದ ಬೋಲ್ಷೆವಿಕ್ ವಾದವಾಗಬಹುದು. ಆತನ ಕಾರ್ಯ ನೈಜವಾದುದಲ್ಲ" ಎಂದಿದ್ದರು. 1926ರಲ್ಲಿ, "ಗಾಂಧಿಯ ಚಳುವಳಿ ಅಭಾಸಕ್ಕೂ ಗೊಂದಲಕ್ಕೂ ಕಾರಣವಾಗುತ್ತದೆಯೆಂದು ಮೊದಲೇ ಹೇಳಿದ್ದೆ. ಅದೇ ರೀತ್ಯಾ ಆಗಿದೆ" ಎಂದು ಹೇಳಿದ್ದರು ಅರವಿಂದರು.

               ಲಾಲಾ ಲಜಪತ್ ರಾಯರನ್ನು ಲಾಠಿಯಲ್ಲಿ ಸಾಯಬಡಿದು ಅವರ ಕೊಲೆಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಹೊರಟು ಚಂದ್ರಶೇಖರ ಆಜಾದ್ ನೇತೃತ್ವದ ಕ್ರಾಂತಿಕಾರಿಗಳು ಸ್ಯಾಂಡರ್ಸ್ ನನ್ನು ವಧಿಸಿದಾಗ ಇಡೀ ದೇಶ ಸಂಭ್ರಮಿಸಿತ್ತು. ಆದರೆ ಗಾಂಧಿ ಅದನ್ನು ಹೇಡಿತನದ ಕೃತ್ಯ ಎಂದು ಬಣ್ಣಿಸಿದರು. 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಗತ್ ಸಿಂಗ್ ಹಾಗೂ ಸಹಸದಸ್ಯರು ಅಸೆಂಬ್ಲಿ ಮೇಲೆ ಬಾಂಬ್ ಹಾಕಿದಾಗ ಪ್ರದರ್ಶಿಸಿದ ಧೈರ್ಯ ಮತ್ತು ಬಲಿದಾನದ ಸ್ಪೂರ್ತಿಯನ್ನು ಶ್ಲಾಘಿಸುವ ನಿರ್ಣಯವನ್ನು ಬಹಿರಂಗ ಅಧಿವೇಶನದಲ್ಲಿ ಸ್ವೀಕರಿಸಲಾಯಿತು. ಗಾಂಧಿ ಇದನ್ನು ಬಲವಾಗಿ ವಿರೋಧಿಸಿದರು. ಅದಕ್ಯಾರೂ ಸೊಪ್ಪು ಹಾಕಲಿಲ್ಲ. ಆದರೆ ಗಾಂಧಿ ಆ ಸೋಲನ್ನು ಮರೆಯಲಿಲ್ಲ. ಇದಾಗಿ ಕೆಲ ತಿಂಗಳಲ್ಲಿ ಬಾಂಬೆಯ ಉಸ್ತುವಾರಿ ಗವರ್ನರ್ ಹಟ್ಸನ್ ನನ್ನು ಗೋಗಟೆ ಎಂಬ ಕ್ರಾಂತಿಕಾರಿ ಗುಂಡಿಟ್ಟು ಯಮಸದನಕ್ಕಟ್ಟಿದ. ಇದನ್ನೇ ತನ್ನ ಉತ್ಕರ್ಷಕ್ಕೆ ಬಳಸಿಕೊಂಡ ಗಾಂಧಿ ಕರಾಚಿ ಅಧಿವೇಶನದಲ್ಲಿ ಭಗತನನ್ನು ಶ್ಲಾಘಿಸಿ ತೆಗೆದುಕೊಂಡ ನಿರ್ಣಯವೇ ಗೋಗಟೆ ಹಟ್ಸನ್ ನನ್ನು ಕೊಲ್ಲಲು ಮೂಲ ಪ್ರೇರಣೆ ಎಂದು ಅಖಿಲ ಭಾರತೀಯ ಕಾಂಗ್ರೆಸ್ ಸಭೆಯಲ್ಲಿ ತಿರುಗೇಟು ನೀಡಿದರು. ಅಸಂಖ್ಯಾತ ಜನ ಸೇರಿದ್ದ ಸಭೆಯಲ್ಲಿ ಗಾಂಧಿಯವರ ದಿಗ್ಭ್ರಮೆಗೊಳಿಸುವ ಈ ಹೇಳಿಕೆಯನ್ನು ಪ್ರಶ್ನಿಸಿ ಅಸಮಧಾನ ವ್ಯಕ್ತಪಡಿಸಿದವರು ಸುಭಾಷ್ ಚಂದ್ರ ಬೋಸ್ ಒಬ್ಬರೇ! ಭಗತ್ ಸಿಂಗ್ ಮತ್ತು ಇತರ ದೇಶಭಕ್ತರ  ಜೀವ ರಕ್ಷಿಸುವ ಮನವಿಗೆ ಸಹಿ ಹಾಕಲು ಗಾಂಧಿ ಒಪ್ಪಲಿಲ್ಲ. ಅವರೆಲ್ಲಾ ಹಿಂಸೆಯಲ್ಲಿ ಭಾಗವಹಿಸಿದ್ದರು ಎನ್ನುವುದು ಗಾಂಧಿಯ ಈ ನಿಲುವಿಗೆ ಕಾರಣ. ಆದರೆ ಇದೇ ಗಾಂಧಿ ದೇಶಭಕ್ತ ವೀರ ಸಂನ್ಯಾಸಿ ಸ್ವಾಮಿ ಶೃದ್ಧಾನಂದರನ್ನು ಕೊಲೆ ಮಾಡಿದ ಪಾತಕಿ ರಷೀದನನ್ನು "ಸಹೋದರ" ಎಂದು ಕರೆದರು. ಮಾತ್ರವಲ್ಲ ಆತನ ಪರವಾಗಿ ವಾದಿಸಲೂ ಸಿದ್ಧರಾದರು.

                ಕೇವಲ ಕ್ರಾಂತಿಯ ಮಾರ್ಗವನ್ನನುಸರಿಸಿದವರನ್ನು ಮಾತ್ರ ಗಾಂಧಿ ವಿರೋಧಿಸಲಿಲ್ಲ. ಅವರ ಬೂಟಾಟಿಕೆಯನ್ನು ಒಪ್ಪದವರನ್ನೂ ವಿರೋಧಿಸಿದರು. ತಾವು ಒಪ್ಪದವರನ್ನು ಅವರು ಇಷ್ಟಪಡುತ್ತಿರಲಿಲ್ಲ ಎನ್ನುವುದಕ್ಕೆ ಸುಭಾಷ್ ಪ್ರಕರಣವೇ ಸಾಕ್ಷಿ. 1934ರ ಬಳಿಕ ಮಹಾ ವಿರಕ್ತಿ ಭಾವ ಪ್ರದರ್ಶಿಸುತ್ತಾ ತಾನು ಕಾಂಗ್ರೆಸ್ ಪಕ್ಷದ ನಾಲ್ಕಾಣೆ ಸದಸ್ಯನೂ ಅಲ್ಲವೆಂದೂ, ತಮಗೆ ಇದು ಸಂಬಂಧಿಸಿದ್ದಲ್ಲವೆಂದು ಪದೇ ಪದೇ ಹೇಳುತ್ತಿದ್ದ ಗಾಂಧಿ ಬೋಸ್ ಎರಡನೆಯ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗುವುದನ್ನು ತಡೆಯಲು ತನ್ನ ಚೇಲಾ ಪಟ್ಟಾಭಿ ಸೀತಾರಾಮಯ್ಯರನ್ನು ಬೋಸ್ ಎದುರಾಗಿ ನಿಲ್ಲಿಸಿದರು. ಗಾಂಧಿಯ ಕೃಪಾಕಟಾಕ್ಷ ಪಟ್ಟಾಭಿಯ ಕಡೆಯಿದ್ದಾಗ್ಯೂ ಬೋಸ್ ಗಣನೀಯ ಬಹುಮತ ಪಡೆದು ಗೆದ್ದರು. ಪಟ್ಟಾಭಿಯವರ ತವರು ಪ್ರಾಂತ್ಯ ಆಂಧ್ರಪ್ರದೇಶದಲ್ಲೂ ಬೋಸರಿಗೆ ಅವರಿಗಿಂತ ಹೆಚ್ಚಿನ ಮತ ಸಿಕ್ಕಿತ್ತು. ಕ್ರುದ್ಧರಾದ ಗಾಂಧಿ ಪಟ್ಟಾಭಿಯವರ ಸೋಲು ತನ್ನ ಸೋಲೆಂದು ಪ್ರತಿಕ್ರಿಯಿಸಿದರು. ಮುಂದಿನ ತ್ರಿಪುರಾ ಕಾಂಗ್ರೆಸ್ ಅಧಿವೇಶನದಲ್ಲೂ ಭಾಗವಹಿಸದೆ ಹಠ ಸಾಧಿಸಿದರು. ಪೂರ್ತಿ ಕೀಟಲೆಯ ಉಪವಾಸದ ಮೂಲಕ ರಾಜ್ ಕೋಟದಲ್ಲಿ ಪ್ರತಿಯಾಗಿ ಷೋ ನಡೆಸಿದರು. ಬೋಸ್ ಮೇಲಿನ ದ್ವೇಷದಿಂದ ಹನ್ನೆರಡು ಜನರನ್ನು ಕಾರ್ಯಕಾರಿಣಿಗೆ ರಾಜೀನಾಮೆ ನೀಡುವಂತೆ ಮಾಡಿದರು ಗಾಂಧಿ. ಅವರಲ್ಲಿ ಈ ಕಚ್ಛೆಹರುಕ ನೆಹರೂವೂ ಒಬ್ಬ. ಗಾಂಧಿ ಬೋಸ್ ಜೊತೆ ಕೆಲಸ ಮಾಡಲು ಒಪ್ಪಲಿಲ್ಲ. ಸುಭಾಷರನ್ನು  ಬಗೆಬಗೆಯಾಗಿ ನಿಂದಿಸಿದರು. ಇದೆಲ್ಲದರಿಂದ ಬೇಸತ್ತ ಸುಭಾಷರು ಅಧ್ಯಕ್ಷ ಸ್ಥಾನಕ್ಕೂ, ಕಾರ್ಯಕಾರಿಣಿಗೂ ರಾಜೀನಾಮೆ ನೀಡಿ ಹೊರನಡೆದರು. ಮುಂದೆ ಜಗತ್ತೇ ಮೂಗಿನ ಮೇಲೆ ಬೆರಳಿಟ್ಟ ಸಾಹಸಕ್ಕೆ ಸೂತ್ರಧಾರಿಯೂ-ಪಾತ್ರಧಾರಿಯೂ ಆದರು. ಸುಭಾಷರನ್ನು ಅಧ್ಯಕ್ಷಗಾದಿಯಿಂದ ತೆಗೆದುಹಾಕುವವರೆಗೆ ಗಾಂಧಿಯ ಮತ್ಸರ - ಕೋಪ ತಣಿದಿರಲಿಲ್ಲ. ಬ್ರಿಟಿಷ್ ಸರಕಾರ ಬೋಸರನ್ನು ಆರು ವರ್ಷ ದೇಶಭೃಷ್ಟಗೊಳಿಸಿದ್ದಕ್ಕೆ ಕನಿಷ್ಟ ವಿರೋಧವನ್ನೂ ಅವರು ವ್ಯಕ್ತಪಡಿಸಲಿಲ್ಲ.


ಮಂಗಳವಾರ, ಆಗಸ್ಟ್ 30, 2016

ಚೀನಾದ ಪ್ರಿಯತಮೆ ಮಂಗೋಲಿಯಾ ಮಗುಚಿ ಬಿದ್ದಿದೆ!

ಚೀನಾದ ಪ್ರಿಯತಮೆ ಮಂಗೋಲಿಯಾ ಮಗುಚಿ ಬಿದ್ದಿದೆ!


              ಐದು ವರ್ಷಗಳ ಹಿಂದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೋಹಿನಿ ಮಂಗೋಲಿಯಾ ಇಂದು ಕುಸಿದು ಬಿದ್ದಿದೆ. ಯಾರೂ ಊಹಿಸದಂತಹ ಪರಿಸ್ಥಿತಿಗೆ ಮಂಗೋಲಿಯಾದ ಆರ್ಥಿಕತೆ ತಲುಪಿದೆ. ಕಾಲದ ಚಕ್ರದಲ್ಲಿ ಒಂದೆರಡೇ ಸುತ್ತುಗಳಲ್ಲಿ ಬಸವಳಿದು ಬಿದ್ದ ಮಂಗೋಲಿಯಾ ಸಾಲದ ಚಕ್ರದಲ್ಲಿ ಬಿದ್ದು ಹೊರಳಾಡುತ್ತಿದೆ! ಮಂಗೋಲಿಯಾ ವಿತ್ತ ಸಚಿವ ಸೈನಿಕರಿಗೆ ಹಾಗೂ ಸರಕಾರೀ ಉದ್ಯೋಗಿಗಳಿಗೆ ಸಂಬಳ ಕೊಡಲು ಸರಕಾರದ ಬಳಿ ಹಣವಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಆಘಾತಕಾರಿ ಆರ್ಥಿಕ ಕುಸಿತಕ್ಕೆ ಒಳಗಾಗಿರುವ ಮಂಗೋಲಿಯಾದ ಜಿಡಿಪಿ ಅನುಪಾತ ಹಾಗೂ ಸರಕಾರೀ ವೆಚ್ಚ 78% ಕ್ಕೆ ಇಳಿದಿದೆ. ಅಲ್ಲಿನ ಕೇಂದ್ರ ಬ್ಯಾಂಕಿನ ನೆಟ್ ಫಾರಿನ್ ರಿಸರ್ವ್ ಈಗ -$429 ಮಿಲಿಯನ್!

               2012 ರಲ್ಲಿ ವಿಶ್ವ ಬ್ಯಾಂಕ್ ಮಂಗೋಲಿಯಾವನ್ನು ಏಷ್ಯಾದಲ್ಲಿ ಶೀಘ್ರ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ(ಬೆಳವಣಿಗೆ ದರ 17.3%) ದೇಶ ಎಂದು ಶ್ಲಾಘಿಸಿತ್ತು. ವಿಶ್ವ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ 2011ರ ವಾರ್ಷಿಕ ಜಿಡಿಪಿ ಬೆಳವಣಿಗೆಯನ್ನು ಗಮನಿಸಿದರೆ ಮಂಗೋಲಿಯಾ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಅದೇ ವರ್ಷ ಗಣಿಗಾರಿಕೆಯಲ್ಲಿ FDI ಗೆ ಅನುಮತಿಯನ್ನೂ ನೀಡಿತು. ಮುಂದಿನ ಕೆಲವೇ ತಿಂಗಳುಗಳಲ್ಲಿ ದೇಶದ್ಯಾಂತ ಅಗಾಧ ಹಣದ ಹರಿವೇ ಸೃಷ್ಟಿಯಾಯಿತು. 2012ರಲ್ಲಿ ತನ್ನಲ್ಲಿದ್ದ ಡಾಲರ್ ಬಾಂಡ್'ಗಳನ್ನು ಮಾರಾಟ ಮಾಡಿ ಅದೇ ತನ್ನ ಮುಂದಿನ ಯಶಸ್ಸಿಗೆ ಪ್ರತೀಹಾರಿಯಾಗಿ ನಿಲ್ಲಬಲ್ಲುದೆಂಬ ಆಶಾವಾದದೊಂದಿಗೆ ಬೀಗುತ್ತಾ ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ್ದ ಮಂಗೋಲಿಯಾ ಇಂದು ಮಗುಚಿ ಬಿದ್ದಿದೆ. ಉತ್ತುಂಗಕ್ಕೆರಿದ್ದ ಕರೆನ್ಸಿ ನಾಲ್ಕೇ ವರ್ಷಗಳಲ್ಲಿ ಮಕಾಡೆ ಮಲಗಿದೆ. ಆರ್ಥಿಕ ಬೆಳವಣಿಗೆ ದರ 17.3% ಇದೆ ಎಂದು ವಿಶ್ವಬ್ಯಾಂಕಿನಿಂದ ಕೊಂಡಾಡಲ್ಪಟ್ಟಿದ್ದ ದೇಶವಿಂದು ಹೊರಗಿನ ನೆರವಿಲ್ಲದಿದ್ದರೆ ಸತ್ತೇ ಹೋಗುವ ಸ್ಥಿತಿಯಲ್ಲಿದೆ.

            ಅನೇಕ ಹೂಡಿಕೆದಾರರು ಈಗಾಗಾಲೇ ತಮ್ಮ ಹಣವನ್ನು ವಾಪಸು ತೆಗೆದುಕೊಂಡಾಗಿದೆ. ಕಳೆದ ಆರು ತಿಂಗಳಲ್ಲಿ 130,000 ನೋಂದಾಯಿತ ಸಂಸ್ಥೆಗಳಲ್ಲಿ 60,000 ಸಂಸ್ಥೆಗಳು ತಮ್ಮ ವಹಿವಾಟನ್ನು ನಿಲ್ಲಿಸಿವೆ.  ಹಾಂಕಾಂಗ್ ಮೂಲದ ಕ್ವಾಮ್ ಲಿಮಿಟೆಡ್ ಸಮೂಹದ ಮುಖ್ಯಸ್ಥ ಬರ್ನಾಡ್ ಪೌಲಿಟ್ 2020ರವರೆಗೆ ಮಂಗೋಲಿಯಾ ಅಭಿವೃದ್ಧಿಯ ಹಳಿಗೆ ಬರುವ ಯಾವ ಲಕ್ಷಣವೂ ಕಾಣುತ್ತಿಲ್ಲ ಎಂದಿದ್ದಾರೆ. 2011ರಿಂದ ಮಂಗೋಲಿಯಾದ ಸಾರ್ವಜನಿಕ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದ ಈತ ಕಳೆದ ವಾರ ಸುಮಾರು $10 ಮಿಲಿಯನ್ ಮೊತ್ತದ ಬಂಡವಾಳವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಸರಿಹೊಂದಿಸಲು ಸಣ್ಣ ಮಾರುಕಟ್ಟೆಯನ್ನು ಹೊಂದಿರುವ ಹಾಗೂ ರಾಜಕೀಯದ ಮೇಲೆ ಬಹಳಷ್ಟು ಅವಲಂಬನೆ ಹೊಂದಿರುವ  ಮಂಗೋಲಿಯಾಕ್ಕೆ ಸಾಧ್ಯವಿಲ್ಲ ಎನ್ನುವುದು ಆತನ ಅಭಿಪ್ರಾಯ. ಮಂಗೋಲಿಯಾದಲ್ಲಿನ ಇನ್ನೊಬ್ಬ ಹೂಡಿಕೆದಾರ "ಕಡಿಮೆ ಬಡ್ಡಿದರದಲ್ಲಿ ದೊಡ್ಡ ಮೊತ್ತದ ಸಾಲ ಪಡೆದುಕೊಂಡವರಿಗೂ ಇಂದು ಅತಿ ಕಡಿಮೆ ಬಡ್ಡಿದರದಲ್ಲೂ ಮರುಪಾವತಿ ಮಾಡಲಾಗದಂತಹ ವಿಚಿತ್ರ ಸ್ಥಿತಿಗೆ ಮಂಗೋಲಿಯಾ ತಲುಪಿದೆ. ಬಡ್ಡಿದರವನ್ನು ಹೆಚ್ಚು ಮಾಡುವುದರಿಂದಲೂ ಆ ದೇಶದ ಪರಿಸ್ಥಿತಿ ಸುಧಾರಿಸಲಾರದು. ಮಂಗೋಲಿಯಾದಂತಹ ದೇಶಗಳಲ್ಲಿನ ಇಂದಿನ ಪ್ರಕ್ಷುಬ್ಧತೆಗೆ ಕೇಂದ್ರ ಬ್ಯಾಂಕುಗಳ ಸಡಿಲ ಹಣಕಾಸು ನೀತಿಯೇ ಕಾರಣ" ಎನ್ನುತ್ತಾರೆ.

              ಕ್ರಿ.ಶ. 1370 ರ ಸುಮಾರಿಗೆ ಮಂಗೋಲಿಯನ್ನರು ಚೆಂಗೀಸ್ ಖಾನನ ನೇತೃತ್ವದಲ್ಲಿ ಟಿಬೇಟನ್ನು ಆಕ್ರಮಿಸಿದರು. ಆದರೆ ಕೆಲವೇ ವರ್ಷಗಳಲ್ಲಿ ಬೌದ್ಧ ಮತ ಮಂಗೋಲಿಯಾದ್ಯಂತ ವಿಸ್ತರಿಸಿತು. ಮಂಗೋಲಿಯನ್ ದೊರೆ ಕುಬ್ಲಾಯ್ಖಾನ್ ಬೌದ್ಧ ಮತವನ್ನು ಅಪ್ಪಿ ಅದರ ಅನುಯಾಯಿಯಾದ. ಮುಂದೆ ಕ್ರಮೇಣ ಮಂಗೋಲಿಯಾದ ಹಿಡಿತ ಸಡಿಲವಾಗಿ ಟಿಬೆಟ್ ಸ್ವತಂತ್ರ ರಾಷ್ಟ್ರವಾಯಿತು. ಆಗಲೂ ಚೀನಾ ಮಂಗೋಲಿಯಾದ ಹಿಡಿತದಲ್ಲೇ ಇತ್ತು. ಕಾಲಕ್ರಮೇಣ ಚೀನಾ ಮಂಗೋಲಿಯಾದ ಹಿಡಿತದಿಂದ ಬಿಡಿಸಿಕೊಂಡಿತು. ಆದರೆ ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಕಮ್ಯೂನಿಷ್ಟರ ಕಪಿಮುಷ್ಠಿಗೆ ಸಿಕ್ಕಿ ಹಾಕಿಕೊಂಡು ನರಳಿತು. 37 ಲಕ್ಷ ಸೈನಿಕರನ್ನು ಹೊಂದಿದ್ದ ಜಿಯಾಂಗ್'ನ ಪಡೆಯನ್ನು ರಷ್ಯಾದ ನೆರವಿನಿಂದ ಸೋಲಿಸಿದ ಮಾವೋ ಮಂಚೂರಿಯಾವನ್ನು ತನ್ನ ವಶಕ್ಕೆ ತೆಗೆದುಕೊಂಡು ಚೀನಾದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಾ ಸಾಗಿದ. ಕೊಲೆಗಡುಕ ಮಾವೋ ಭೀತಿಯಿಂದ ಝಿಯಾಂಗ್ ತೈವಾನ್ ಸೇರಿಕೊಂಡ. ಝಿಯಾಂಗನ ಅಧಿಪತ್ಯದಲ್ಲಿ ತೈವಾನ್ ಏರುಗತಿಯಲ್ಲಿ ಏಳಿಗೆ ಹೊಂದಿದರೆ, ಇತ್ತ ಕಮ್ಯೂನಿಸಂನ ಪ್ರತಿಪಾದಕ ಮಾವೋನ ಆಳ್ವಿಕೆಯಲ್ಲಿ ಚೀನಾ ಮುದುಡುತ್ತಾ ಸಾಗಿತು. ಬಂಡವಾಳಶಾಹಿಯತ್ತ ತಲೆ ಹಾಕಿಯೂ ಮಲಗದೆ ಸಮಾಜವಾದವನ್ನು ಸಿಕ್ಕಿದಲ್ಲೆಲ್ಲಾ ತುರುಕಿಸಿದ ಮಾವೋನ ಕ್ರೌರ್ಯವೂ ಜೊತೆ ಸೇರಿ ಪರಿಣಾಮ ಚೀನಾದಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಯಿತು. ಆದರೆ ತನ್ನ ವಿಸ್ತರಣಾ ನೀತಿಯನ್ನು ಪ್ರತಿಯೊಂದು ಕ್ಷೇತ್ರಕ್ಕೂ ವಿಸ್ತರಿಸಿದ ಚೀನಾ ಪ್ರತಿಯೊಂದು ದೇಶವನ್ನು ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಹಿಡಿತದಲ್ಲಿರಿಸಿಕೊಂಡಿತು. ಒಂದು ಕಾಲದಲ್ಲಿ ಸಮಗ್ರ ಚೀನಾವನ್ನೇ ಆಳಿದ ಮಂಗೋಲಿಯಾ ಇಂದು ಬದುಕಲು ಚೀನಾದ ಮೇಲೆಯೇ ಅವಲಂಬಿತವಾಗಿದೆ ಎನ್ನುವುದು ಇತಿಹಾಸದ ಬಹುದೊಡ್ಡ ಚೋದ್ಯ!

             ಎರಡನೆ ಮಹಾಯುದ್ಧ, ಹಿರೋಶಿಮಾ-ನಾಗಸಾಕಿಗಳ ಮೇಲಿನ ಬಾಂಬುದಾಳಿಗಳಿಂದ ಅಕ್ಷರಶಃ ಸತ್ತೇ ಹೋಗಿದ್ದ ಜಪಾನ್ 1975ರವರೆಗೂ ಅಗಾಧ ಪರಿಶ್ರಮದ ನಡುವೆಯೂ ಚೇತರಿಸಿಕೊಂಡಿರಲಿಲ್ಲ. ಆಗಲೂ ಅದರ ತಂತ್ರಜ್ಞಾನದ ಆಮದು 20ಬಿಲಿಯನ್ ಯೆನ್ ಹಾಗೂ ರಫ್ತು ಕೇವಲ 5 ಬಿಲಿಯನ್ ಯೆನ್ ಗಳಷ್ಟಿತ್ತು. ಆದರೆ ಆ ಬಳಿಕ ಅದರ ಬೆಳವಣಿಗೆ ಏರುಗತಿಯಲ್ಲಿ ಸಾಗಿತು. 1995ಕ್ಕಾಗುವಾಗ ಅದರ ರಫ್ತು 56.21ಬಿಲಿಯನ್ ಯೆನ್ ಗಳಿಗೆ ಮುಟ್ಟಿದ್ದರೆ ಆಮದು 39.17 ಬಿಲಿಯನ್ ಯೆನ್ ಗಳಾಗಿತ್ತು. ಇಪ್ಪತ್ತೇ ವರ್ಷಗಳಲ್ಲಿ ಪರಿಸ್ಥಿತಿಯನ್ನು ತನಗನುಕೂಲಕರವಾಗುವಂತೆ ಬದಲಾಯಿಸಿಕೊಂಡು ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಿಂತಿತ್ತು ಜಪಾನ್! ಹುಲ್ಲುಕಡ್ಡಿಯೂ ಬೆಳೆಯದ, ಸುತ್ತ ಮತಾಂಧರಿಂದ ತುಂಬಿಕೊಂಡು ಸದಾ ಕಿರಿಕಿರಿ ಅನುಭವಿಸುತ್ತಿರುವ, ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಲ್ಲದ ಶೀತಲ ಭೂಮಿ ಇಸ್ರೇಲ್ ಇಂದು ಸೈನ್ಯ-ಶಸ್ತ್ರೋದ್ಯಮ-ಹೈನೋದ್ಯಮ-ಕೃಷಿಗಳಲ್ಲಿ ನಾಯಕನಾಗಿ ಮೆರೆಯುತ್ತಿದೆ. ತನ್ನರ್ಧ ಉತ್ತರಕೊರಿಯಾದಂತೆ ಕಮ್ಯೂನಿಷ್ಟ್ ಸರ್ವಾಧಿಕಾರವನ್ನು ಒಪ್ಪದ ದಕ್ಷಿಣ ಕೊರಿಯಾ, ಚೀನಾಕ್ಕೆ ಸಡ್ಡು ಹೊಡೆದು ನಿಂತ ತೈವಾನ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಪಾರಮ್ಯ ಮೆರೆದಿವೆ. ಇವೆಲ್ಲಾ ಕನಿಷ್ಟ ಸಂಪನ್ಮೂಲಗಳನ್ನು ಹೊಂದಿದ್ದು ಅಭಿವೃದ್ಧಿ ಪಥದಲ್ಲಿ ಸಾಗಿದ ರಾಷ್ಟ್ರಗಳು. ಇವುಗಳಿಗೆಲ್ಲಾ ಸಾಧ್ಯವಾದದ್ದು ಅಗಾಧ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಮಂಗೋಲಿಯಾಕ್ಕೆ ಯಾಕೆ ಸಾಧ್ಯವಾಗಲಿಲ್ಲ?

               ಒಂದು ಕಡೆ ನಿತ್ಯಹರಿದ್ವರ್ಣದ ಹಸಿರು, ಇನ್ನೊಂದೆಡೆ ಜಗತ್ತಿನ ಮರುಭೂಮಿಗಳಲ್ಲೊಂದಾದ ಗೋಬಿ ಇಂತಹ ಪರಸ್ಪರ ವೈರುಧ್ಯಗಳ ತವರು ಮಂಗೋಲಿಯಾದಲ್ಲಿ ಈ ರೀತಿಯಾಗುವುದು ಆಶ್ಚರ್ಯವೇನಲ್ಲ. ಮೈನವಿರೇಳಿಸುವ ಗಿರಿ ಶಿಖರಗಳು, ಸುಂದರ ಕಟ್ಟಡಗಳು, ಅಪರೂಪದ ವನ್ಯಮೃಗ ಸಂತತಿಯನ್ನು ಹೊಂದಿರುವ ಮಂಗೋಲಿಯಾ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದ್ದೂ ತೀರಾ ಇತ್ತೀಚೆಗೇ! ಚೀನಾದ ಕಾರ್ಖಾನೆಗಳಿಗೆ ಕಚ್ಛಾ ವಸ್ತುಗಳನ್ನು ಪೂರೈಕೆ ಮಾಡುವುದರಲ್ಲೇ ಜೀವಿತಾರ್ಥದ ಸಾರ್ಥಕ್ಯ ಕಂಡುಕೊಂಡಿದ್ದ ಮಂಗೋಲಿಯಾಕ್ಕೆ ಸೊರಗುತ್ತಿರುವ ಚೀನಾದ ಆರ್ಥಿಕತೆ ಶಾಪವಾಗಿ ಕಾಡಿದೆ. ಮಂಗೋಲಿಯಾದ ರಫ್ತಿನ 90% ಭಾಗ ಚೀನಾದೊಂದಿಗೆ ಇತ್ತು. ಅತೀ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಮಂಗೋಲಿಯಾದಲ್ಲಿ ಜಾಗತಿಕ ಆರ್ಥಿಕ ಕುಸಿತದ ಪರಿಣಾಮದಿಂದ ಉಂಟಾದ ಉಪಯುಕ್ತ ವಸ್ತುಗಳ ಮೇಲಿನ ಬೆಲೆ ಕುಸಿತ ಒಂದು ಕಾಲದ ಹಣದ ಮೂಲವಾಗಿದ್ದ ಗಣಿಗಾರಿಕೆಯ ಮೇಲೂ ಭಾರಿಯಾಗಿ ಪರಿಣಮಿಸಿ ವಿದೇಶೀ ನೇರ ಹೂಡಿಕೆಯೂ ನಿಧಾನವಾಗಿ ಕಲ್ಲಿದ್ದಲು ಹಾಗೂ ಚಿನ್ನದ ಗಣಿಗಳನ್ನೇ ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಮಂಗೋಲಿಯಾದ ಕರೆನ್ಸಿ ತುರ್ಗಿಕ್ ಈಗ ಜಗತ್ತಿನ 154 ಕರೆನ್ಸಿಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಕರೆನ್ಸಿ. ಈ ತಿಂಗಳಲ್ಲೇ 7.8%ನಷ್ಟು ಕುಸಿತ ಕಂಡಿರುವ ತುರ್ಗಿಕ್ ಈ ವರ್ಷಾರಂಭದಲ್ಲಿ 11%ನಷ್ಟು ಇಳಿದಿತ್ತು. ಕೇಂದ್ರ ಬ್ಯಾಂಕ್ ತನ್ನ ಬೆಂಚ್ ಮಾರ್ಕ್ ಬಡ್ಡಿದರವನ್ನು 15%ಕ್ಕೆ ಏರಿಸಬೇಕಾಯಿತು. ಮಂಗೋಲಿಯನ್ ಕರೆನ್ಸಿ ಕಳೆದ ಐದು ವರ್ಷಗಳಲ್ಲಿ 60%ನಷ್ಟು ಇಳಿಯಿತು. ಕಳೆದ ವರ್ಷ 2.3% ಇದ್ದ ಜಿಡಿಪಿ ಬೆಳವಣಿಗೆ ಈಗ 1.3%ಕ್ಕೆ ಕುಸಿದಿದೆ. ಮಂಗೋಲಿಯನ್ ತುಗ್ರಿಕ್ ಡಾಲರ್ ಎದುರು 12% ಕುಸಿತ ಕಂಡಾಗ ಮಂಗೋಲಿಯನ್ ಕೇಂದ್ರ ಬ್ಯಾಂಕ್ ತನ್ನ ನೀತಿ ದರ(policy rate)ವನ್ನು 450 ಮೂಲಾಂಕಗಳಷ್ಟು ಎತ್ತರಿಸಬೇಕಾಯಿತು. ಇದರಿಂದ ಅದರ ಕರೆನ್ಸಿ ಮತ್ತೆ ಅಪಮೌಲ್ಯಕ್ಕೀಡಾಯಿತು.

                   2011ರಲ್ಲಿ ತನ್ನ ಸಮೃದ್ಧ ಭೂಮಿಯನ್ನು ವಿದೇಶೀ ಕಂಪೆನಿಗಳಿಗೆ ಧಾರೆಯೆರೆದುಕೊಟ್ಟು ಮುಟ್ಠಾಳನಂತೆ ಮನೆ, ಸಂಬಳ-ಸವಲತ್ತು, ಸಮಾಜ ಕಲ್ಯಾಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡಿ ಐಷಾರಾಮದ ಜೀವನ ನಡೆಸುತ್ತಾ, ವಿಪರೀತ ಸಾಲ ಮಾಡಿತು ಅಲ್ಲಿನ ಆಡಳಿತ ಪಕ್ಷ. ಪ್ರಮುಖ ಒಪ್ಪಂದಗಳನ್ನು ಜಾರಿಗೊಳಿಸುವಲ್ಲಿ ಮೀನ-ಮೇಷ ಎಣಿಸುತ್ತಿರುವಾಗ ಹೂಡಿಕೆದಾರರೂ ದೂರ ಸರಿದರು. ಮಂಗೋಲಿಯಾದಲ್ಲಿ ನೈಸರ್ಗಿಕ ಸಂಪತ್ತು ಬಹಳವಿತ್ತು ನಿಜ. ಆದರೆ ಗಣಿಗಾರಿಕೆಗೆ ಹಿಂದು ಮುಂದು ನೋಡದೆ ಬೇಕಾಬಿಟ್ಟಿಯಾಗಿ ಕೊಟ್ಟ ಅನುಮತಿ, ಅದರಿಂದಾಗಿ ಉಂಟಾದ ಆರ್ಥಿಕ ಅಸಮತೋಲನ, ಸರಿಯಾದ ಯೋಜನೆ-ದೂರದೃಷ್ಟಿಯಿಲ್ಲದ ಅಭಿವೃದ್ಧಿ, ಹಣಕಾಸು-ಉದ್ಯಮ ಕ್ಷೇತ್ರಗಳಲ್ಲಿ ಆಗದ ಬೆಳವಣಿಗೆ ಮಂಗೋಲಿಯಾವನ್ನು ಕಾಲಕ್ರಮೇಣ ದುರ್ಬಲವಾಗುವಂತೆ ಮಾಡಿದವು. ವಿದೇಶೀ ತಂತ್ರಜ್ಞಾನಗಳ ಮೇಲೆಯೇ ಅತ್ಯಂತ ಹೆಚ್ಚು ಅವಲಂಬಿತವಾಗಿರುವುದು ಮಂಗೋಲಿಯಾ ಕುಸಿದು ಬೀಳಲು ಬಹುಮುಖ್ಯ ಕಾರಣ. ಆಡಳಿತದಲ್ಲಿ ಹಾಸಿಹೊಕ್ಕಿರುವ ಭೃಷ್ಟಾಚಾರ, ಅದಕ್ಷ ಆಡಳಿತ ಮಂಗೋಲಿಯಾದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಅಸ್ಥಿರ ಸರಕಾರ, ಮುಂದುವರೆಯದೆ, ಜಾರಿಯಾದ ಕೆಲವೇ ಸಮಯದಲ್ಲಿ ಸ್ಥಗಿತಗೊಳ್ಳುವ ಸರಕಾರದ ಯೋಜನೆ-ನೀತಿಗಳಿಂದ ಉದ್ಯಮಗಳಿಗೆ ಸಮಯಕ್ಕೆ ಸರಿಯಾಗಿ ಅನುಮತಿ ಸಿಗದೆ, ಅವಶ್ಯಕ ಮೂಲ ಸೌಕರ್ಯಗಳು ಸಿಗದೆ ಹೂಡಿಕೆದಾರರು ಪರದಾಡುವಂತಾಯಿತು. ಪ್ರವಾಸೋದ್ಯಮ, ಸೇವೆ, ಉತ್ಪಾದನೆ, ಕೃಷಿ, ಹೈನುಗಾರಿಕೆ, ಹಣಕಾಸಿನಂಥ ಅವಕಾಶವಿದ್ದ ಉದ್ಯಮಗಳಿಗೆ ಪ್ರೋತ್ಸಾಹ ಕೊಡದೆ ಕೇವಲ ಗಣಿಗಾರಿಕೆಯ ಮೇಲೆ ಅವಲಂಬಿತವಾದ ಕಾರಣ ಹಣದ ಹರಿವೇ ನಿಂತು ಹೋಯಿತು.

                    ಅನೇಕ ತಜ್ಞರು ಐ.ಎಮ್.ಎಫ್ ಮತ್ತೊಮ್ಮೆ ಮಧ್ಯ ಪ್ರವೇಶಿಸಿ ಮಂಗೋಲಿಯಾವನ್ನು ಮೇಲೆತ್ತಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಂಗೋಲಿಯಾ ಐ.ಎಮ್.ಎಫ್ ನ ಸರಣಿ ಸಾಲಗಾರ. ಬೀಳುವ ಸ್ಥಿತಿಯಲ್ಲಿರುವ ಮಂಗೋಲಿಯಾಕ್ಕೆ ಮತ್ತೊಮ್ಮೆ ಸಾಲ ಕೊಡುವ ಬಗ್ಗೆಯೂ ಯೋಚಿಸಬೇಕಾಗುತ್ತದೆ. 2009ರಲ್ಲಿ ಐ.ಎಮ್.ಎಫ್ ನಿಂದ ಬೈಲ್ ಔಟ್ ಪಡೆದಿದ್ದ ಮಂಗೋಲಿಯಾದೊಂದಿಗಿನ ಹಣಕಾಸು ಸಮಾಲೋಚನೆಯೂ ಅಂತಿಮ ನಿರ್ಣಯವನ್ನು ತಳೆಯುವುದರ ಬಗ್ಗೆಯೂ ಸಂದೇಹಗಳಿವೆ. ಮುಖ್ಯವಾಗಿ ಮಂಗೋಲಿಯಾದ ಉಳಿವು ಅಗತ್ಯವಾಗಿರುವುದು ಚೀನಾಕ್ಕೆ. ಕಲ್ಲಿದ್ದಲು, ತಾಮ್ರ ಹಾಗೂ ಚಿನ್ನಗಳು ಕಡಿಮೆ ಬೆಲೆಗೆ, ಕಡಿಮೆ ಸಾಗಾಟ ವೆಚ್ಚದಲ್ಲಿ ಸಿಗುವ ಚಿನ್ನದ ಕೋಳಿಯಂತಿರುವ ತನ್ನ ನೆರೆಮನೆಯನ್ನು ಅದೇಕೆ ಕೈಬಿಡುತ್ತದೆ? ಹಾಗಾಗಿ ಐ.ಎಮ್.ಎಫ್ ಮುಂದೆ ಮಂಗೋಲಿಯಾ ಪರ ಚೀನಾ ವಕಾಲತ್ತು ವಹಿಸಬಹುದು.

                ಒಂದು ದೇಶ ಕಣ್ಮುಚ್ಚಿ ಕಮ್ಯೂನಿಷ್ಟ್ ಆಳ್ವಿಕೆಯನ್ನು ಸ್ವೀಕರಿಸಿದರೆ ಏನಾಗಬಹುದೆಂಬುದಕ್ಕೆ ನಿದರ್ಶನ ಮಂಗೋಲಿಯಾ. ಬಿದ್ದು ಹೋಗಿರುವ ವೆನಿಜುವೆಲ್ಲಾ ಕಣ್ಣಮುಂದೆ ಇರುವಾಗ ಎಚ್ಚೆತ್ತುಕೊಳ್ಳದೆ ಅದೇ ಸಮಾಜವಾದದ ಅಡಿಬಿದ್ದು ಒದ್ದಾಡುತ್ತಿರುವ ಮಂಗೋಲಿಯಾ ಮಕಾಡೆ ಮಲಗಿದಲ್ಲಿ ಯಾವ ಆಶ್ಚರ್ಯವೂ ಇಲ್ಲ. ಫಲವತ್ತಾದ ಭೂಮಿಯನ್ನು ಅನ್ಯರಿಗೆ ಮೇಯಲೊಪ್ಪಿಸಿ ತಾವು ಮನೆಯಲ್ಲಿ ಕೂತು ತಿಂದರೆ ಇನ್ನೇನಾದೀತು? ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು! ಮನಸ್ಸಿಗೆ ಬಂದ ಭಾಗ್ಯಗಳನ್ನು ಕೊಟ್ಟು, ಜನರನ್ನು ಸೋಮಾರಿಗಳನ್ನಾಗಿಸಿ, ಬೊಕ್ಕಸಕ್ಕೆ ಸಾಲದ ಹೊರೆಯನ್ನೇ ಹೊರಿಸಿ, ತಮ್ಮ ಖುರ್ಚಿ ಗಟ್ಟಿ ಮಾಡಿಕೊಳ್ಳುವ ಪ್ರತಿಯೊಬ್ಬ ನಾಯಕನೂ, ಆತನ ಭಕ್ತರೂ ಅರಿಯಬೇಕಾದ ಸತ್ಯವಿದು. ಎಲ್ಲಾ ಕ್ಷೇತ್ರಗಳಲ್ಲಿ FDI ತುರುಕಿಸಲು ಯತ್ನಿಸುವ ಪ್ರತಿಯೊಬ್ಬ ರಾಜನೀತಿಜ್ಞ ಮಂಗೋಲಿಯಾದ ನಿದರ್ಶನವನ್ನು ನೋಡಿಯಾದರೂ ತಮ್ಮ ರಾಜನೀತಿಯನ್ನು ಪರಾಮರ್ಶೆಗೆ ಒಳಪಡಿಸಬೇಕಾದ ಅವಶ್ಯಕತೆ ಇದೆ. ಮಾಹಿತಿ ತಂತ್ರಜ್ಞಾನವನ್ನೇ ಉದ್ಯೋಗಕ್ಕಾಗಿ ಅವಲಂಬಿಸಿರುವ ಜನಾಂಗ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲು ಯೋಜನೆ-ಯೋಚನೆ ಹೊಂದಿರದ ದೇಶಗಳು, ತಮ್ಮಲ್ಲಿರುವ ಭೂಮಿಯನ್ನು ಚಿನ್ನದ ತಟ್ಟೆಯಲ್ಲಿಟ್ಟು ವಿದೇಶೀ ಕಂಪೆನಿಗಳಿಗೆ ಒಪ್ಪಿಸುವ ರಾಷ್ಟ್ರಗಳು ಹಾಗೆಯೇ ತಮ್ಮ ಮೆದುಳನ್ನೇ ಪಾಶ್ಚಾತ್ಯ ಮಾನಸಿಕತೆಗೆ-ಮಿಷನರಿ ಕುತಂತ್ರಕ್ಕೆ-ಸಿಕ್ಯುಲರ್ ರಾಜಕಾರಣಕ್ಕೆ ಅಡವಿಡುವ ಮನಸ್ಸುಗಳು ವೆನಿಜುವೆಲ್ಲಾ, ಮಂಗೋಲಿಯಾದಂತೆ ಸಾಯುವ ದಿನ ದೂರವಿಲ್ಲ.

ಬುಧವಾರ, ಆಗಸ್ಟ್ 24, 2016

ಯಾರು ಮಹಾತ್ಮ? ಭಾಗ-೧

ಯಾರು ಮಹಾತ್ಮ? 
ಭಾಗ-೧

             "ರಾಷ್ಟ್ರ"ದ ಮಹತ್ವ ತಿಳಿಯದವರು, ತಾಯಿನಾಡಿನ ಅರ್ಥ ತಿಳಿಯದವರು ಗಾಂಧಿಗೆ ಕಣ್ಣುಮುಚ್ಚಿ ರಾಷ್ಟ್ರಪಿತ ಎನ್ನುವ ಪಟ್ಟ ಕಟ್ಟಿಬಿಟ್ಟಾಗಿದೆ. ಅವರ ಭಕ್ತರು ಅಥವಾ ಅವರ ಹೆಸರಿನಡಿ ತಮ್ಮ ದಂಧೆ ನಡೆಸುವವರಿಗೆ ಆತ ಮಹಾತ್ಮ! ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದ, ಅವರ ಮನಸ್ಸು-ಮಾತು-ಕೃತಿಗಳನ್ನು ಸರಿಯಾಗಿ ವಿಮರ್ಷಿಸದ ಹಲವರಿಗೂ ಆತ ಮಹಾತ್ಮ! ಉಪ್ಪು, ಚರಕಗಳಂಥ ಸಾಮಾನ್ಯ ವಸ್ತುಗಳನ್ನು ಬಳಸಿಕೊಂಡೇ ಪ್ರತಿಭಟನೆಯ ಸಂಕೇತವನ್ನಾಗಿಸಿದ ಈ ಅರೆನಗ್ನ ಫಕೀರನನ್ನು ಹೊಗಳಿ ಅಟ್ಟಕ್ಕೇರಿಸಿದವರಿಗೆ, ಆತ ಹೇಳಿದ ಆದರ್ಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ನೈಜ ಗಾಂಧಿ ಅನ್ನಿಸಿಕೊಂಡವರಿಗೆ ಲೆಖ್ಖವೇ ಇಲ್ಲ. ಆದರೆ ನಿಜವಾಗಿ ಗಾಂಧಿ ಹಾಗೆ ಇದ್ದರೇ? ನಿಜವಾಗಿಯೂ ಆತ ಮಹಾತ್ಮ ಹೌದೇ ಎನ್ನುವುದನ್ನು ವಿಶ್ಲೇಷಿಸಬಾರದೆಂದೇನೂ ಇಲ್ಲವಲ್ಲ. ಭುವಿಗಿಳಿದ ದೇವರಾದ ರಾಮ-ಕೃಷ್ಣರನ್ನೇ ವಿಚಾರಣೆಗೆ ಒಳಪಡಿಸುವ ಈ ಭಾರತದಲ್ಲಿ ಯಕಃಶ್ಚಿತ್ ಮನುಷ್ಯನೊಬ್ಬನನ್ನು ವಿಶ್ಲೇಷಿಸಿದರೆ ತಪ್ಪೇನು? ಗೆಳೆಯರೊಬ್ಬರ ಪ್ರಶ್ನೆಗಳಿಗೆ ಉತ್ತರವಾಗಿ ಈ ಸರಣಿ ಲೇಖನಕ್ಕೆ ಮುಂದಾಗುತ್ತಿದ್ದೇನೆ. ಪರ-ವಿರೋಧದ ಕಾಮೆಂಟುಗಳು ಸಭ್ಯತೆಯ ಎಲ್ಲೆ ದಾಟದಿರಲಿ-ವಸ್ತುನಿಷ್ಠವಾಗಿರಲಿ.

              ಇತಿಹಾಸ ಕುರುಡು ದೇವರಲ್ಲ. ಬೇರೆಯವರ ಕುರುಡುತನವನ್ನು ಅದು ಕ್ಷಮಿಸುವುದೂ ಇಲ್ಲ. ಇತಿಹಾಸದ ಭಾಗವನ್ನು ನಿರ್ವಹಿಸುವ ವ್ಯಕ್ತಿ ಇತಿಹಾಸಕ್ಕೆ ಸೇರಿ ಬಿಡುತ್ತಾನೆ. ಹಾಗೆಯೇ ಇತಿಹಾಸವನ್ನು ಮರೆತ ಜನಾಂಗ ಇತಿಹಾಸವೇ ಆಗಿಬಿಡುತ್ತದೆ! "ಯಾವ ವ್ಯಕ್ತಿ ಕಾಯಾ-ವಾಚಾ-ಮನಸಾ ಒಂದೇ ರೀತಿ ಇರುತ್ತಾನೋ ಅವನು ಮಾತ್ರ ಮಹಾತ್ಮ". ಇದರ ಅರ್ಥ ಅರಿತವರ್ಯಾರೂ ಗಾಂಧಿಯನ್ನು ಮಹಾತ್ಮ ಎಂದು ತಪ್ಪಿಯೂ ಕರೆಯಲಾರರು. ಅತ್ತ ಭಾರತ ವಿಭಜನೆ ಯೋಜನೆ ಹೊತ್ತು ವೈಸ್ ರಾಯ್ ಲಂಡನ್ ಬಿಟ್ಟು ಹೊರಟಿದ್ದ. ಅದೇ ಸಂಜೆ ಇತ್ತ ಗಾಂಧಿ ತಮ್ಮ ಪ್ರಾರ್ಥನಾ ಸಭೆಯಲ್ಲಿ "ಬೇಕಾದರೆ ಇಡೀ ದೇಶ ಹೊತ್ತಿ ಉರಿಯಲಿ; ನಾವು ಪಾಕಿಸ್ತಾನದ ಒಂದಿಂಚೂ ಜಾಗಕ್ಕೂ ಒಪ್ಪಿಗೆ ಕೊಡುವುದಿಲ್ಲ" ಎಂದು ಗುಡುಗಿದರು. ಹೀಗೆ ಅಬ್ಬರಿಸಿದ್ದ ಗಾಂಧಿ 1947ರ ಜೂನ್ 2 ರಂದು ವೈಸ್ ರಾಯ್ ಭೇಟಿ ಮಾಡಬೇಕಾಯಿತು. ಭೇಟಿಗೆ ಮುನ್ನ ಇತರ ನಾಯಕರ ಜೊತೆ ಒಂದೂವರೆ ಗಂಟೆಗಳಿಗೂ ಹೆಚ್ಚುಕಾಲ ಚರ್ಚೆ ನಡೆಸಿದ್ದರು. ಅತಿ ನಿರೀಕ್ಷೆಯ ಹಾಗೂ ಬಹು ಪ್ರಮುಖವಾದ ಎಲ್ಲ ಭಾರತೀಯರ ಪ್ರತಿಕ್ರಿಯೆಗೆ ದನಿ ನೀಡುವ ಹೊಣೆಗಾರಿಕೆ ಅವರದಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ವೈಸ್ ರಾಯ್ ಕೊಠಡಿ ಪ್ರವೇಶಿಸಿದರು ಗಾಂಧಿ. ಮೌಂಟ್ ಬ್ಯಾಟನ್ ಕುರ್ಚಿಯಿಂದ ಎದ್ದು ಹೋಗಿ ನಗುತ್ತಾ ಹೃದಯಪೂರ್ವಕ ಸ್ವಾಗತ ಕೋರಿದ. ಪ್ರತಿಯಾಗಿ ಗಾಂಧಿ ತಾಯಿ ಮಗುವನ್ನು ಹೆದರಿಸುವ ರೀತಿ ತಮ್ಮ ಬಲಗೈ ತೋರುಬೆರಳನ್ನು ತುಟಿ ಮೇಲೆ ಹಿಡಿದರು. ಮೌಂಟ್ ಬ್ಯಾಟನ್ನಿಗೆ ಅರ್ಥವಾಯಿತು. ಅಂದು ಸೋಮವಾರ; ಗಾಂಧಿಯು ಮೌನವಿರುವ ದಿನ!

                 ಆರಾಮ ಕುರ್ಚಿಯಲ್ಲಿ ಕುಳಿತ ಗಾಂಧಿ ಲಕೋಟೆಗಳ ಕಟ್ಟೊಂದನ್ನು ತೆಗೆದು ಮೌಂಟ್ ಬ್ಯಾಟನ್ನಿನ ವಿಭಜನೆಯ ಯೋಜನೆಯನ್ನು ಕೇಳುತ್ತಾ ಕುಳಿತರು. ಎರಡಿಂಚು ಉದ್ದದ ಮೋಟು ಪೆನ್ಸಿಲನ್ನು ಒಮ್ಮೆ ನಾಲಗೆಗೆ ತಾಗಿಸಿ ಹಳೆ ಲಕೋಟೆಗಳ ಹಿಂಬದಿಯಲ್ಲಿ "ನನ್ನನ್ನು ಕ್ಷಮಿಸಿ, ನಾನು ಮಾತಾಡಲಾರೆ. ನಾನು ಸೋಮವಾರ ಮೌನ ವ್ರತ ಆಚರಿಸುವ ನಿರ್ಧಾರ ಮಾಡಿದಾಗ, ಅದನ್ನು ಪಾಲಿಸದಿರಲು ಎರಡು ಅಪವಾದಗಳನ್ನು ಇಟ್ಟುಕೊಂಡಿದ್ದೆ. ಒಂದು ಉನ್ನತ ಅಧಿಕಾರಸ್ಥರ ಜೊತೆ ತುರ್ತು ವಿಷಯಗಳನ್ನು ಮಾತಾಡುವಾಗ; ಇನ್ನೊಂದು ರೋಗಿಗಳನ್ನು ಭೇಟಿ ಮಾಡಬೇಕಾದಾಗ. ಆದರೆ ನೀವು ನನ್ನ ಮೌನ ಮುರಿಯಲು ಬಯಸುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ನಾನು ಮಾತಾಡಲೇ ಬೇಕಾದ ಒಂದೆರಡು ಸಂಗತಿಗಳಿವೆ. ಆದರೆ ಇಂದಲ್ಲ. ನಾವು ಮತ್ತೊಮ್ಮೆ ಭೇಟಿಯಾದರೆ ಆಗ ಮಾತಾಡುವೆ" ಎಂದು ಬರೆದು ಗಾಂಧಿ ಹೊರಬಂದರು. ಮೌಂಟ್ ಬ್ಯಾಟನ್ ಆ ಕಾಗದಗಳನ್ನು ಜೋಪಾನವಾಗಿ ಎತ್ತಿಟ್ಟುಕೊಂಡ. ಅವು ಚರಿತ್ರೆಯ ಭಾಗವಾಯಿತು. ಆದರೆ ಚರಿತ್ರೆ ಬರೆದವರ್ಯಾರೂ ಗಾಂಧಿಯ ಈ ನಡೆಯನ್ನು ಪ್ರಶ್ನಿಸಲೇ ಇಲ್ಲ!

            ವೈಸ್ ರಾಯ್ ದೇಶವಿಭಜನೆಯ ಯೋಜನೆ ವಿವರಿಸಿದಾಗ ಗಾಂಧಿ ತುಟಿಪಿಟಿಕ್ಕೆನ್ನಲಿಲ್ಲ! ವೈಸ್ ರಾಯ್ ಭೇಟಿಗೆ ಮುನ್ನ ಉಳಿದ ನಾಯಕರೊಡನೆ 90 ನಿಮಿಷಗಳ ಕಾಲ ಚರ್ಚೆ ಮಾಡಿದ್ದ ಗಾಂಧಿ ಅದನ್ಯಾವುದನ್ನೂ ವೈಸ್ ರಾಯ್ ಮುಂದೆ ಹೇಳಲೇ ಇಲ್ಲ! ಕನಿಷ್ಟ ತನ್ನ ಮನಸ್ಸಿನಲ್ಲಿದ್ದುದನ್ನೂ ಹೇಳಲಿಲ್ಲ. ವಿಭಜನೆಯಿಂದ ದೇಶವನ್ನು ರಕ್ಷಿಸುವುದಕ್ಕಿಂತ ಗಾಂಧಿಗೆ ತನ್ನ ಮೌನ ವ್ರತವೇ ಮೇಲಾಯಿತು! ಮೂಟೆಗಟ್ಟಲೆ ಕಾಗದ ಹೊತ್ತೊಯ್ದಿದ್ದ ಗಾಂಧಿ ಕೊನೆ ಪಕ್ಷ ಬರವಣಿಗೆಯ ಮುಖಾಂತರವಾದರೂ ಜನರ ಅಭಿಪ್ರಾಯವನ್ನು ಹೇಳಬಹುದಿತ್ತು. ಕನಿಷ್ಟ ಅದನ್ನೂ ಮಾಡಲಿಲ್ಲ. ಅಪವಾದಾತ್ಮಕ ಸನ್ನಿವೇಶದಲ್ಲಿ ತನ್ನ ಮೌನ ವ್ರತವನ್ನು ಮುರಿಯಬಲ್ಲೆ ಎಂದು ಹೇಳಿದ್ದ ಗಾಂಧಿ ಅದನ್ನು ಪಾಲನೆ ಮಾಡಲಿಲ್ಲ. ತುರ್ತು ವಿಚಾರಗಳ ಬಗೆಗೆ ಉನ್ನತ ಅಧಿಕಾರಸ್ಥರ ಜೊತೆ ಮಾತಾಡುವಾಗ ಮೌನ ಮುರಿಯಬಲ್ಲೆ ಎಂದಿದ್ದ ಗಾಂಧಿಗೆ ವಿಭಜನೆಯ ಯೋಜನೆ ತುರ್ತು ವಿಚಾರ ಅನ್ನಿಸಲಿಲ್ಲವೇ? ಅಥವಾ ವೈಸ್ ರಾಯ್ ತುಂಡು ಬಟ್ಟೆ ತೊಟ್ಟು ತನ್ನ ಹಠಕ್ಕೆ ದೇಶವನ್ನು ಬಲಿ ಕೊಟ್ಟ ಯಕಶ್ಚಿತ್ ನಾಯಕನ ಮೌನ ಮುರಿಯುವಷ್ಟು "ಉನ್ನತ ಅಧಿಕಾರಿ"ಯಾಗಿರಲಿಲ್ಲವೇ? ರೋಗಿಗಳನ್ನು ಭೇಟಿ ಮಾಡಬೇಕಾದಾಗಲೂ ಮೌನ ಮುರಿಯುತ್ತೇನೆ ಅಂದಿದ್ದರು ಗಾಂಧಿ.  ರಕ್ತ ಸೋರುತ್ತಿರುವ, ದೇಹವೇ ತುಂಡಾಗುತ್ತಿರುವ ಭಾರತ ಮಾತೆ ರೋಗದಿಂದ ಬಳಲುತ್ತಿದ್ದಂತೆ ಬೆಂಬಲಿಗರಿಂದ "ಸಂತ" ಎಂದು ಹೊಗಳಿಸಿಕೊಂಡ ವ್ಯಕ್ತಿಯ ದಿವ್ಯದೃಷ್ಟಿಗೆ ಗೋಚರಿಸಲಿಲ್ಲವೆ?

             ಮತ್ತೊಮ್ಮೆ ಭೇಟಿಯಾದರೆ ಒಂದೆರಡು ವಿಷಯಗಳನ್ನು ಮಾತಾಡುವೆ ಎಂದು ಬರೆದು ಬಂದ ಗಾಂಧಿಗೆ ಮತ್ತೆ ಅವಕಾಶ ಸಿಗುವ ಖಚಿತತೆಯೂ ಇರಲಿಲ್ಲ. ದೇಶೀಯರ ಭಾವನೆಯನ್ನು ಹೇಳಬೇಕಾದ ಗಾಂಧಿ ಮೌನಿಯಾದ. ನಾಯಕರ ಜೊತೆ ಮಾಡಿದ ಚರ್ಚೆ ಪಾತಾಳ ಸೇರಿತು. ಸಿಕ್ಕ ಸಂದರ್ಭವನ್ನು ಯಶಸ್ವಿಯಾಗಿ ಉಪಯೋಗಿಸಿಕೊಳ್ಳದ ಗಾಂಧಿಯದ್ದು ವಿಫಲ ನಾಯಕತ್ವವೇ ಸರಿ. ಅವರಿಗೆ ದೇಶಕ್ಕಿಂತ ತನ್ನ ಸ್ವಾರ್ಥವೇ ಮಿಗಿಲಾಯಿತು. ಗಾಂಧಿಯ ಮನಸ್ಸಿನಲ್ಲೇನಿತ್ತೋ ಅರಿತವರ್ಯಾರು? ಆದರೆ ರಕ್ತಪಾತವಾದರೂ ಚಿಂತೆಯಿಲ್ಲ; ಭಾರತವನ್ನು ತುಂಡರಿಸಲೊಪ್ಪುವುದಿಲ್ಲ ಎಂದು ಘರ್ಜಿಸಿದ್ದ ಮನುಷ್ಯ ಅದನ್ನು ಕೃತಿಗಿಳಿಸಬೇಕಾಗಿ ಬಂದಾಗ ಅಂಡು ಸುಟ್ಟ ಬೆಕ್ಕಿನಂತೆ ಮೌನವಾದದ್ದೇಕೆ? ಯೋಚನೆ-ಮಾತು-ಕೃತಿ ಈ ಮೂರರಲ್ಲಿಯೂ ಏಕರೂಪತೆಯಿಲ್ಲದ ಮನುಷ್ಯ ಮಹಾತ್ಮನಾಗಲಾರ. ಗಾಂಧಿಯ ಮಾತು ಮತ್ತು ಕೃತಿಗಳಿಗೆಷ್ಟು ಅಂತರ!ಸನ್ನಿವೇಶಕ್ಕೆ ತಕ್ಕಂತೆ ವರ್ತನೆಯಿಲ್ಲದಿದ್ದ ಮೇಲೆ ಆತ ನಾಯಕನಾಗುವುದು ಹೇಗೆ? ಇತಿಹಾಸವನ್ನೇ ಸೃಷ್ಟಿ ಮಾಡಿದ್ದ ಒಂದು ಸನ್ನಿವೇಶದಲ್ಲಿ ಕಾಗದದ ಚೂರುಗಳ ಮೇಲೆ ತನ್ನ ವ್ರತದ ಬಗ್ಗೆ ವೃಥಾ ಕೊಚ್ಚಿಕೊಂಡ ಗಾಂಧಿ ಮಹಾತ್ಮ ಬಿಡಿ ನಾಯಕನೆನಿಸಿಕೊಳ್ಳಲೂ ಯೋಗ್ಯರಲ್ಲ. ದೇಶಕ್ಕೆ ಭದ್ರತೆ ಸಿಗಬೇಕಾದರೆ ಬ್ರಾಹ್ಮ-ಕ್ಷಾತ್ರಗಳು ಒಟ್ಟಾಗಬೇಕು. ಬ್ರಾಹ್ಮಣನೊಬ್ಬ ಕ್ಷತ್ರಿಯನಾಗಬಹುದು. ಕ್ಷತ್ರಿಯನೊಬ್ಬ ಬ್ರಾಹ್ಮಣನೂ ಆಗಬಹುದು. ಆದರೆ ಕ್ಷತ್ರಿಯನಾಗಿದ್ದುಕೊಂಡು ಸಂನ್ಯಾಸಿಯಾಗುವುದಿದೆಯಲ್ಲ, ಅದರಿಂದ ಹಾನಿ ಶತಃಸಿದ್ಧ! ಅರಸನಾಗಿದ್ದುಕೊಂಡೇ ತನ್ನ ಅಹಿಂಸೆಯೆಂಬ ಮತವನ್ನು ಪ್ರಜೆಗಳ ಮೇಲೆ ಹೇರಹೋದ ಅಶೋಕನಿಂದ ಮೌರ್ಯ ಸಾಮ್ರಾಜ್ಯ ಮಾತ್ರವಲ್ಲ, ಕ್ಷಾತ್ರವೇ ಹ್ರಾಸಗೊಂಡಿತು. ಅತ್ತ ಸಂತನೂ ಅಲ್ಲದ, ಇತ್ತ ಕ್ಷಾತ್ರ ಭಾವವನ್ನೂ ಉದ್ದೀಪಿಸಿಕೊಳ್ಳದ ಗಾಂಧಿಯಂತಹವರಿಗೆ ನಾಯಕತ್ವ ಕೊಟ್ಟು ಭಾರತ ಬಹಳಷ್ಟನ್ನು ಕಳಕೊಂಡಿತು.

ಗುರುವಾರ, ಆಗಸ್ಟ್ 18, 2016

ಹಿಂಗುಲಾಂಬೆಯ ರಕ್ಷಣೆ ಭಾರತಾಂಬೆಯ ಕರ್ತವ್ಯವಲ್ಲವೇ?

ಹಿಂಗುಲಾಂಬೆಯ ರಕ್ಷಣೆ ಭಾರತಾಂಬೆಯ ಕರ್ತವ್ಯವಲ್ಲವೇ?

                ಸ್ವಾತಂತ್ರ್ಯದ ಇಚ್ಛೆ ಯಾರಿಗಿಲ್ಲ. ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಇನ್ನು ಭೂಮಂಡಲವನ್ನೇ ಭೇದಿಸಿ ಅನ್ಯಗ್ರಹಗಳತ್ತ ಪಾದ ಬೆಳೆಸಿರುವ ಮನುಷ್ಯ ಬಿಟ್ಟಾನೆಯೇ? ಪ್ರತಿಯೊಂದು ಶತಮಾನಗಳಲ್ಲೂ ಸ್ವಾತಂತ್ರ್ಯದ ಉಳಿಕೆಗೆ-ಗಳಿಕೆಗೆ ಮಹಾಯುದ್ಧಗಳೇ ನಡೆದವು. ಈಗಲೂ ನಡೆಯುತ್ತಲೇ ಇವೆ. ತನ್ನ ಲಾಭಕ್ಕಾಗಿ ಇನ್ನೊಬ್ಬರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು ವೀರರ ಲಕ್ಷಣವಂತೂ ಅಲ್ಲ. ವಿಪರ್ಯಾಸವೆಂದರೆ ಬಹುಜನರ ಸ್ವಾತಂತ್ರ್ಯದ ಬೇಡಿಕೆಯನ್ನು ಬಂದೂಕಿನ ನಳಿಕೆಯಲ್ಲಿ ಮುಚ್ಚಿಡಲಾಗುತ್ತದೆ. ಅದೇ ಕೆಲವೇ ಜನರ ಸ್ವಾರ್ಥದ ಪ್ರತ್ಯೇಕತೆಯ ಹೋರಾಟವು ನಕಲಿ ಮಾನವೀಯತೆಯೆಂಬ ಮುಖ ಹೊಂದಿ ಲೇಖನಿಯ ತುದಿಯಲ್ಲಿ ನಲಿದು ಬಹುಜನರ ಒಂದಾಗುವ ಬೇಡಿಕೆ ಕಾಲಗರ್ಭದಲ್ಲಿ ಮುಚ್ಚಿಹೋಗುತ್ತದೆ. ಎರಡರಲ್ಲೂ ಸ್ವಾತಂತ್ರ್ಯದ ಹಸಿವು. ಮೊದಲನೆಯದ್ದರಲ್ಲಿ ನೈಜತೆಯದ್ದು, ಇನ್ನೊಂದರಲ್ಲಿ ಕೊಳ್ಳೆಹೊಡೆಯುವಂತಹದ್ದು. ಕೊಳ್ಳೆ ಹೊಡೆಯುವವ ಬಹುಜನರ ಸ್ವಾತಂತ್ರ್ಯವನ್ನು ಕಿತ್ತು ಹಾಕುವುದೇ ತನಗೆ ಸ್ವಾತಂತ್ರ್ಯ ಎಂದು ಭಾವಿಸಿ ಕಾರ್ಯವೆಸಗುತ್ತಾನೆ. ಹಾಗಾಗಿ ಎರಡರಲ್ಲೂ ಬಲಿಯಾಗುವುದು ನೈಜ ಸ್ವಾತಂತ್ರ್ಯವನ್ನು ಅಪೇಕ್ಷಿಸಿದವರೇ! ಆದರೂ ಈ ಬಂಧನಗಳ ನಡುವೆ ಸ್ವಾತಂತ್ರ್ಯಗಳಿಕೆಯ ಸಣ್ಣದೊಂದು ಮಿಂಚು ಗೋಚರಿಸುತ್ತಲೇ ಇರುತ್ತದೆ. ಈ ಎರಡಕ್ಕೂ ಪಕ್ಕಾ ಉದಾಹರಣೆ ಬಲೂಚಿಸ್ತಾನ್ ಹಾಗೂ ಕಾಶ್ಮೀರ!

                     ಪಾಕಿಸ್ತಾನದ ಅರ್ಧಕ್ಕೂ ಹೆಚ್ಚು ಭೂಪ್ರದೇಶವನ್ನು ವ್ಯಾಪಿಸಿರುವ ಪ್ರಾಂತ್ಯ ಬಲೂಚಿಸ್ತಾನ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಬಲೂಚಿಸ್ತಾನ ನಾಲ್ಕು ಹೋಳಾಗಿತ್ತು. ಒಂದು ಸಣ್ಣ ಪ್ರದೇಶ ಬ್ರಿಟಿಷರ ವಶದಲ್ಲಿದ್ದರೆ. ಉಳಿದ ಮೂರರಲ್ಲಿ ರಾಜರ ಆಳ್ವಿಕೆಯಿತ್ತು. ಆದಾಗ್ಯೂ ಕಲಾಟ್ ಪ್ರಾಂತ್ಯದ "ಖಾನ್"ನ ಮಾತೇ ಬಲೂಚಿಸ್ತಾನದಾದ್ಯಂತ ನಡೆಯುತ್ತಿದ್ದುದು. ಬ್ರಿಟಿಷರು ಈ ದೇಶ ಬಿಟ್ಟು ಹೋಗುವಾಗ ಕಲಾಟಿನ ಖಾನ್ ಭಾರತದೊಟ್ಟಿಗೆ ತನ್ನ ಸಂಸ್ಥಾನವನ್ನು ವಿಲೀನಗೊಳಿಸಬಯಸಿದ. ಆದರೆ ನೆಹರೂ ಬಲೂಚ್ ಭಾರತದೊಟ್ಟಿಗೆ ಭೂಸಂಪರ್ಕ ಹೊಂದಿಲ್ಲ ಎನ್ನುವ ಬಾಲಿಶ ಕಾರಣವೊಡ್ಡಿ ಅವನ ಪ್ರಸ್ತಾಪವನ್ನು ತಿರಸ್ಕರಿಸಿದರು. ಭಾರತೀಯರು ಇನ್ನೂ ಗುಲಾಮೀ ಮನಃಸ್ಥಿತಿಯಿಂದ ಹೊರಬಂದಿರಲಿಲ್ಲ ಎನ್ನುವುದಕ್ಕೆ ಸ್ವತಂತ್ರ ಭಾರತದಲ್ಲಿ ನೆಹರೂವಿಗೆ ಪರಮಾಧಿಕಾರ ಕೊಟ್ಟುದುದೇ ಸಾಕ್ಷಿ! ಇಲ್ಲದಿದ್ದರೆ ಕೇವಲ 300ಕಿಮೀ ಜಲಮಾರ್ಗವೊಂದು ಭಾರತ-ಬಲೂಚನನ್ನು ಜೋಡಿಸಿರುವಾಗ, ಮುಕ್ತ ವಾಯುಮಾರ್ಗ ಇರುವಾಗ ಭೂಸಂಪರ್ಕವಿಲ್ಲ ಎಂದು ವಿಲೀನದ ಪ್ರಸ್ತಾಪವನ್ನೇ ತಿರಸ್ಕರಿಸಿದ ಮೂರ್ಖನೊಬ್ಬ ಭಾರತೀಯರಿಗೆ ಯಾವ ಕೋನದಿಂದ ರಾಜಕೀಯ & ಅಂತರಾಷ್ಟ್ರೀಯ ಮುತ್ಸದ್ಧಿಯಾಗಿ ಕಂಡನೋ ದೇವರೇ ಬಲ್ಲ!

                  ಆದರೆ ಖಾನ್'ಗೆ ಪಾಕಿಸ್ತಾನಕ್ಕೆ ಸೇರುವುದು ಇಷ್ಟವಿರಲಿಲ್ಲ. ಅವನು ಸ್ವಾತಂತ್ರ್ಯ ಘೋಷಿಸಿಕೊಂಡ. ಪಾಕಿಸ್ತಾನ ಸೇನೆಯ ಸಹಾಯದಿಂದ ಎರಡು ವರ್ಷ ಗುದ್ದಾಡಿ ಬಲೂಚನ್ನು ತನ್ನದಾಗಿಸಿಕೊಂಡಿತು. ಹೇರಳವಾದ ಕಬ್ಬಿಣ, ಮ್ಯಾಂಗನೀಸ್, ಅಲ್ಯೂಮಿನಿಯಂ ಅದಿರುಗಳು, ತೈಲ ನಿಕ್ಷೇಪವನ್ನು ಹೊಂದಿದ್ದ ಈ ಪ್ರಾಂತ್ಯವನ್ನು ಪಾಕ್ ಬಿಟ್ಟೀತೆ? ಈ ಪ್ರಾಂತ್ಯವೇನಾದರೂ ಪಾಕಿಸ್ತಾನದ ಕೈ ತಪ್ಪಿ ಹೋಗುತ್ತಿದ್ದರೆ ಅದರ ಆರ್ಥಿಕತೆ-ಭೌಗೋಳಿಕತೆಗೆ ಇನ್ನಷ್ಟು ಹೊಡೆತ ಬೀಳುತ್ತಿತ್ತು. ಬಲೂಚಿಸ್ತಾನದ ಹಿಂಗಲ್ ಗಂಜ್ ನಲ್ಲಿ ಈಗಲೂ ದೇವಿಯ ಪುರಾತನ ಮಂದಿರವಿದೆ. ಅಸಂಖ್ಯಾತ ಹಿಂದೂಗಳು ಯಾತ್ರೆ ಕೈಗೊಳ್ಳುತ್ತಿದ್ದ ತಾಣವದು. ಆದರೆ ಪಾಕ್, ಭಾರತೀಯರು ಬಲೂಚಿಗಳೊಂದಿಗೆ ಸ್ನೇಹ ಬೆಸೆದರೆ ತನಗೆ ಅಪಾಯವೆಂದರಿತು "ಭಾರತ ಬಲೂಚಿಗಳನ್ನು ಪ್ರೇರೇಪಿಸಲೆಂದೇ ತನ್ನ ಏಜೆಂಟರನ್ನು ಕಳುಹಿಸಿ ತನ್ನ ನೆಲದಲ್ಲಿ ಹಸ್ತಕ್ಷೇಪ ಮಾಡುತ್ತಿದೆ" ಎನ್ನುವ ನೆಪವೊಡ್ಡಿ ಈ ಯಾತ್ರೆಯನ್ನು ರದ್ದುಗೊಳಿಸಿತು. ಬಲೂಚಿನಲ್ಲಿದ್ದ "ಭಾವಸಾರ ಕ್ಷತ್ರಿಯ" ಜನಾಂಗ ಕಾಲಕಾಲಕ್ಕೆ ಮುಸಲರ ದಾಳಿಯಿಂದ ಬೇಸತ್ತು ಈಗ ಭಾರತಾದ್ಯಂತ ಹರಡಿಕೊಂಡಿದೆ.

                  ಬಲೂಚಿಗಳು ಇಂದಿಗೂ ಪಾಕಿಸ್ತಾನವನ್ನು ತಮ್ಮ ದೇಶವಾಗಿ ಸ್ವೀಕರಿಸಿಲ್ಲ. ಅವರು 1947ರಿಂದಲೂ ಪಾಕಿಸ್ತಾನಿ ಸೇನೆಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದಾರೆ. 1948, 1958, 1962 ಹಾಗೂ 1973ರಲ್ಲಿ ಪಾಕಿಸ್ತಾನ ತನ್ನ ಸೈನ್ಯವನ್ನು ಬಳಸಿ ದೊಡ್ಡ ಸಂಖ್ಯೆಯಲ್ಲಿ ಬಲೂಚಿಗಳ ಮಾರಣಹೋಮವನ್ನೇ ನಡೆಸಿತು. ಪಾಕಿಸ್ತಾನ "ಬುಚರ್ ಆಫ್ ಬಲೂಚಿಸ್ತಾನ್" ಎಂದೇ ಕುಖ್ಯಾತನಾದ ಲೆಫ್ಟಿನೆಂಟ್ ಜನರಲ್ ಟಿಕ್ಕಾ ಖಾನ್'ನನ್ನು(1973-77) ಅಲ್ಲಿ ನೇಮಿಸಿ ಬಲೂಚರ ಮಾರಣ ಹೋಮ ನಡೆಸಿತ್ತು. ನಿರ್ದಯವಾಗಿ ಹಸುಳೆಗಳನ್ನೂ ಬಿಡದೆ ಜನರನ್ನು ಕೊಲ್ಲುವ, ಸ್ತ್ರೀಯರ ಮೇಲೆ ಅತ್ಯಾಚಾರ ಎಸಗುವ ಸಂಪೂರ್ಣ ಸ್ವಾತಂತ್ರ್ಯವನ್ನು ತನ್ನ ಅಡಿಯಾಳು ಪಡೆಗೆ ನೀಡಿದ್ದನಾತ. ಬಾಂಗ್ಲಾ ವಿಮೋಚನೆಗೆ ಮುನ್ನ ಪೂರ್ವ ಬಂಗಾಳದ ಜನರ ಮೇಲೆ ನಡೆದ ಅತ್ಯಾಚಾರ-ಅನ್ಯಾಯಗಳ ಸೂತ್ರಧಾರಿಯೂ ಈತನೇ! ಮಹಾಕ್ರೂರಿ ಟಿಕ್ಕಾಖಾನನ ರಕ್ತದಾಹಕ್ಕೆ ಬಹುತೇಕ ಸರ್ವನಾಶಗೊಂಡಿದ್ದ ಬಲೂಚರು 2003ಕ್ಕಾಗುವಾಗ ಮೈಕೊಡವಿಕೊಂಡು ಮತ್ತೆ ಮೇಲೆದ್ದರು. ಆಗ ಪಾಕಿಸ್ತಾನ ತನ್ನ ಸೈನ್ಯವನ್ನು ಕಳುಹಿಸಿ ಆರಂಭಿಸಿದ ದೌರ್ಜನ್ಯವಂತೂ ಇಂದಿಗೂ ಮುಗಿದಿಲ್ಲ. 2006ರಲ್ಲಿ ಬಲೂಚಿ ಸ್ವಾತಂತ್ರ್ಯ ಹೋರಾಟದ ನಾಯಕ ಅಕ್ಬರ್ ಬುಗ್ಟಿಯನ್ನು ಕೊಲ್ಲುವುದಕ್ಕಾಗಿ ಹೋದ ಪಾಕ್ ಸೇನೆ ಅವನ ಆಶ್ರಯದಲ್ಲಿದ್ದ 73 ಹಿಂದೂ ಮಹಿಳೆಯರು ಹಾಗೂ ಮಕ್ಕಳನ್ನೂ ಕೊಂದು ಹಾಕಿತು. ಬುಗ್ಟಿಯ ಹತ್ಯೆಯ ನಂತರ ಬಹುತೇಕ ಬಲೂಚರು ಸಿಂಧ್ ಪ್ರಾಂತಕ್ಕೆ ವಲಸೆ ಹೋದರಾದರೂ ಸೇನೆ ಅವರನ್ನು ಅಲ್ಲೂ  ನೆಮ್ಮದಿಯಿಂದಿರಲು ಬಿಡಲಿಲ್ಲ. ಕಳೆದ ವರ್ಷವೊಂದರಲ್ಲೇ 250ಕ್ಕೂ ಹೆಚ್ಚು ಬಲೂಚಿಗಳನ್ನು ಪಾಕಿಸ್ತಾನೀ ಸೇನೆ ಕೊಂದು ಹಾಕಿದೆ. ಬಲೂಚಿಸ್ತಾನವನ್ನು ಪ್ರವೇಶಿಸಲು ಯಾವುದೇ ಸುದ್ದಿ ಮಾಧ್ಯಮ, ಪತ್ರಕಾರ, ಮಾನವ ಹಕ್ಕು ಸಂಘಟನೆಗಳಿಗೆ ಪಾಕಿಸ್ತಾನ ಅನುಮತಿ ಕೊಡುವುದಿಲ್ಲ. ಹಾಗಾಗಿ ಈ ಅಂಕಿ-ಸಂಖ್ಯೆಗಳಿಗಿಂತಲೂ ಹೆಚ್ಚಿನ ಮಾರಣ ಹೋಮ ಅವ್ಯಾಹತವಾಗಿ ನಡೆದಿರುವುದಂತೂ ಸತ್ಯ. ಪ್ರತಿ ದಿನ ಒಬ್ಬ ವ್ಯಕ್ತಿಯಾದರೂ ಅಲ್ಲಿ ಕಾಣೆಯಾಗಿರುತ್ತಾನೆ. ಮತ್ತೆ ಸಿಕ್ಕಾಗ ಅವನ ದೇಹ ಪ್ರಾಣದ ಬದಲು ಗುಂಡುಗಳಿಂದ ತುಂಬಿರುತ್ತದೆ. ಅಲ್ಲಿನ ಮಕ್ಕಳು ಬಟಾಬಯಲಲ್ಲಿ ಸೇನೆಯ ಬಂದೂಕಿನ ನಳಿಗೆಯ ತುದಿಯಲ್ಲಿ ಪಾಕಿಸ್ತಾನ ಪ್ರೇರಿತ ಶಿಕ್ಷಣ ಪಡೆಯುವಂತಹ ದುಃಸ್ಥಿತಿ ಇದೆ. ಒಂದು ಕಾಲದಲ್ಲಿ ಗುಬ್ಬಚ್ಚಿಗಳ ಕಲರವ ಕೇಳುತ್ತಿದ್ದ ಜಾಗದಲ್ಲಿಂದು ಗುಂಡು, ಬಾಂಬುಗಳ ಭೋರ್ಗರೆತ ಕೇಳುತ್ತಿದೆ. ಅಭಿವೃದ್ಧಿಯ ಲವಲೇಶವೂ ಅಲ್ಲಿಲ್ಲ. ಅದು ಪಾಕಿಸ್ತಾನದಲ್ಲೇ ಇಲ್ಲ ಬಿಡಿ. ಸಂಪೂರ್ಣ ಪಾಕಿಸ್ತಾನಕ್ಕೇ ಬಹುತೇಕ ತೈಲ ಪೂರೈಸುವ ನಿಕ್ಷೇಪ ಹೊಂದಿರುವ ಬಲೂಚಿಗರು ಆಹಾರ ಬೇಯಿಸಲು ಇಂದಿಗೂ ಉರುವಲನ್ನೇ ಅವಲಂಬಿಸಿದ್ದಾರೆ ಎನ್ನುವಾಗಲೇ ಪಾಕಿಸ್ತಾನದ ಮಲತಾಯಿ ಧೋರಣೆಯ ಅರಿವಾದೀತು.

                    ಆದಾಗ್ಯೂ ಬಲೂಚರ ನಿರೀಕ್ಷೆ, ಹೋರಾಟ ನಿಂತಿರಲಿಲ್ಲ. ಹತ್ತು ಹಲವು ಸಂಘಟನೆಗಳನ್ನು ಕಟ್ಟಿ ಬಲೂಚಿಗರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎನ್ನುವ ಪಾಪಿ ಪಾಕಿಸ್ತಾನ ಹಾಗೂ ಅದನ್ನು ಬೆಂಬಲಿಸಿ ಗಂಜಿ ಗಿಟ್ಟಿಸಿಕೊಳ್ಳುವ ದೇಶದ್ರೋಹಿಗಳು, ಅಂತರಾಷ್ತ್ರೀಯ ಮಟ್ಟದಲ್ಲಿ ಭಾರತವನ್ನು ಕುಗ್ಗಿಸಲು ಯತ್ನಿಸುವ ವಿದೇಶೀ ಸಂಸ್ಥೆಗಳ್ಯಾವುದಕ್ಕೂ ಬಲೂಚಿಗರ ಮೇಲೆ ಪಾಕಿಸ್ತಾನ ಮಾಡುತ್ತಿರುವ ದೌರ್ಜನ್ಯ ಕಾಣುತ್ತಲೇ ಇಲ್ಲ. ನಿರಂತರ ಅತ್ಯಾಚಾರಕ್ಕೊಳಗಾಗುತ್ತಿರುವ ಬಲೂಚಿಗರ ಅಳಲು ಇವರ ಕಿವಿಗಳಿಗೆ ಇಂಪಾದ ಸಂಗೀತದಂತೆ ಕೇಳುತ್ತದೆ! ಮುಸ್ಲಿಮರು ಬಿಡಿ. ಮಾನವ ಹಕ್ಕುಗಳ ಬಗ್ಗೆ ಮಾತನ್ನಾಡುವ ಯಾವ ನಾಯಕನೂ ಬಲೂಚಿಗಳ ಕಣ್ಣೀರು ಕಂಡು ಮರುಗಲಿಲ್ಲ. ಅವರ ಅಳಲನ್ನು ಜಗತ್ತಿಗೆ ತೆರೆದಿಡಲು ಒಬ್ಬ ಹಿಂದೂ ನಾಯಕನೇ ಬರಬೇಕಾಯಿತು.

                ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಬಲೂಚಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಪಾಕ್ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಯನ್ನು ಪ್ರಸ್ತಾಪಿಸುತ್ತಿದ್ದಂತೆ ಇಡೀ ಜಗತ್ತು ಮತ್ತೊಮ್ಮೆ ಬಲೂಚಿನತ್ತ ಮುಖ ಮಾಡಿದೆ. ಇಷ್ಟರವರೆಗೆ ವಿಶ್ವಸಂಸ್ಥೆಯ ಅಂಗಳದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತವನ್ನು ದೂಷಿಸುತ್ತಾ ಕೂರುತ್ತಿದ್ದ ಪಾಕಿಸ್ತಾನ ಈಗ ಮುಖ ಉಳಿಸಿಕೊಳ್ಳಲು ಯಾವ ಮುಖವಾಡ ಧರಿಸುತ್ತದೋ ಕಾದು ನೋಡಬೇಕು. ಎಂದಿನಂತೆ ನಮ್ಮಲ್ಲಿನ ತಥಾಘೋಷಿತ ಬುದ್ಧಿಜೀವಿಗಳ ಆಚಾರವಿಲ್ಲದ ನಾಲಗೆ ತನ್ನ ನೀಚ ಬುದ್ಧಿಯನ್ನು ಬಿಟ್ಟಿಲ್ಲ. "ನಮ್ಮಲ್ಲಿರುವ ಕೆಲ ಪ್ರದೇಶಗಳನ್ನೇ ಸಂಭಾಳಿಸಲಾಗುತ್ತಿಲ್ಲ. ಅಂತಹುದರಲ್ಲಿ ಬಲೂಚಿಸ್ತಾನದ ವಿಷಯ ನಮಗೇಕೆ? ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಕೈಹಾಕಿ ನಮ್ಮ ನೈತಿಕ ಬಲವನ್ನು ನಾವೇ ಕುಗ್ಗಿಸಿಕೊಂಡಂತಾಗಿದೆ" ಎನ್ನುವ ಅಪಲಾಪ ಶುರುವಾಗಿದೆ. ಆದರೆ ಇವರ ಎಂದಿನ ಗೊಣಗಾಟಗಳಿಗೆ ಕಿವಿಕೊಡಬೇಕಾಗಿಲ್ಲ. ಇಂತಹವರಿಗೆ ರಕ್ಷಣಾ ನೀತಿಯ ಗಂಧಗಾಳಿಯೂ ಇರುವುದಿಲ್ಲ. ಇಷ್ಟರವರೆಗೆ ಕಾಶ್ಮೀರದ ಬಗೆಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದ ಭಾರತ ಈಗ ಪಾಕಿಸ್ತಾನದ ಬುಡಕ್ಕೇ ಕೈ ಹಾಕಿದೆ. ಈಗ ತಡಬಡಾಯಿಸುವ ಸ್ಥಿತಿ ಪಾಕಿಗಳದ್ದು. ಪಾಕಿಸ್ತಾನದ ಸೇನಾ ಮುಖ್ಯಸ್ಥರಂತೂ ಮೋದಿಯ ಹೇಳಿಕೆ ಯುದ್ಧದ ಬೆದರಿಕೆಯೆಂದೇ ಪರಿಗಣಿಸಿದ್ದಾರೆ. ಅಲ್ಲಿನ ಆಡಳಿತ-ಪ್ರತಿಪಕ್ಷಗಳ ನಾಯಕರು ಜಿದ್ದಿಗೆ ಬಿದ್ದವರಂತೆ ಮೋದಿಯ ಮೇಲೆ ಹರಿಹಾಯುತ್ತಿದ್ದಾರೆ. ಈಗ ತಲ್ಲಣಗೊಂಡಿರುವುದು ಕೇವಲ ಪಾಕ್ ಮಾತ್ರವಲ್ಲ. ಒಳಗಿಂದೊಳಗೆ ಪಾಕ್ ಪರವಾಗಿದ್ದ ಅಮೇರಿಕಾದ ಅಧಿಕಾರಿಗಳಿಗೂ ಬಿಸಿ ಮುಟ್ಟಿದೆ ಎನ್ನುವುದಕ್ಕೆ ಲೀಸಾ ಕರ್ಟಿಸ್, ವಿಕ್ರಮ್ ಸಿಂಗ್ ಮುಂತಾದ ಮಾಜಿ ಅಧಿಕಾರಿಗಳ, ಬುದ್ಧಿಜೀವಿಗಳ ಹೇಳಿಕೆಗಳೇ ಸಾಕ್ಷಿ. ಅಲ್ಲಿಗೆ ಭಾರತಕ್ಕೆ ಒಂದು ಹಂತದ ಗೆಲುವು ದಕ್ಕಿಬಿಟ್ಟಿದೆ. ಇದೊಂಥರ ಚಾಣಕ್ಯ ನೀತಿಯ ಹಾಗೆ. ಶತ್ರುವಿನ ದೌರ್ಬಲ್ಯವನ್ನು ತನಗೆ ಅನುಕೂಲವಾಗುವಂತೆ ಪರಿವರ್ತಿಸುವುದು. ದುರುಳ ನಂದರ ನಾಶಕ್ಕೆ ಚಾಣಕ್ಯ ಪರ್ವತರಾಜ ಹಾಗೂ ಇನ್ನಿತರ ಅರಸರನ್ನು ಉಪಯೋಗಿಸಿಕೊಳ್ಳಲಿಲ್ಲವೇ ಅದೇ ರೀತಿ. "ಮತ್ತೊಮ್ಮೆ ಮುಂಬೈ ಮೇಲೆ ದಾಳಿ ಮಾಡಿದರೆ ಬಲೂಚಿಸ್ತಾನವನ್ನೇ ಕಳೆದುಕೊಳ್ಳುತ್ತೀರಿ" ಎನ್ನುವ ಅಜಿತ್ ಧೋವಲ್ ಮಾತಿನಲ್ಲೇ ಸರಕಾರದ ಚಾಣಾಕ್ಷ ನೀತಿಯ ಎಳೆ ಗೋಚರಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಭಾರತ ಬಲೂಚಿಸ್ತಾನವನ್ನು ಆಯುಧವನ್ನಾಗಿ ಪ್ರಯೋಗಿಸಿದರೆ ತಪ್ಪೇನು? ವಿಶ್ವವನ್ನೇ ತನ್ನ ಕುಟುಂಬವನ್ನಾಗಿ ಪರಿಗಣಿಸುವ ಭಾರತಕ್ಕೆ ತನ್ನ ನೆರೆಯ ರಾಷ್ಟ್ರದಲ್ಲಾಗುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವುದು ಜನ್ಮಜಾತ ಹಕ್ಕಲ್ಲವೇ? ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಯ ಕಥೆಗಳನ್ನು ಸೃಷ್ಟಿಸಿ ಜಗದೆದುರು ದೇಶದ ಮಾನ ಹರಾಜು ಹಾಕುವ ದ್ರೋಹಿಗಳಿಗೆ ಈ ಬಗ್ಗೆ ಮಾತನಾಡಲು ಯಾವ ಹಕ್ಕಿದೆ?

                ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಬ್ರಾಹುಮ್ದಾಘ್ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಅರ್ಪಿಸಿ ಪಾಕ್ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದಾಗಲೇ ಪಾಕಿನ ಬೆನ್ನು ಹುರಿಯಲ್ಲಿ ನಡುಕ ಶುರುವಾಗಿದೆ. ಬಲೂಚಿಗರು ಮೋದಿಯ ಮಾತಿನಿಂದ ಪುಳಕಿತರಾಗಿ ಮೋದಿಯೇ ತಮಗೆ ರಕ್ಷಕರಾಗಿ ಸ್ವಾತಂತ್ರ್ಯ ದೊರಕಿಸಿಕೊಡುತ್ತಾರೆ ಎನ್ನುವ ಆಶೆ ವ್ಯಕ್ತಪಡಿಸುತ್ತಿರುವುದಂತೂ ಸ್ವಾತಂತ್ರ್ಯದ ಅಪೇಕ್ಷೆ ಜೀವಿಯಲ್ಲಿ ಯಾವ ಮಟ್ಟದಲ್ಲಿರುತ್ತದೆ ಎನ್ನುವುದರ ಸಾದೃಶ್ಯ ರೂಪವೇ ಸರಿ. ಚಾಬಹಾರ್ ಬಂದರು ಗ್ವಾಡಾರ್ ಬಂದರಿಗೆ ಪ್ರತಿಯಾಗಿ ನೀಡಿದ ಪ್ರತ್ಯುತ್ತರವೇನೋ ಹೌದು. ಅದು ಚೀನಾದ ಪಾರುಪತ್ಯವನ್ನು ಹಣಿಯಲು ಉಪಯೋಗವಾದೀತು. ಆದರೆ ಪದೇ ಪದೇ ಕಾಲು ಕೆದರಿ ಜಗಳಕ್ಕೆ ಬರುತ್ತಿರುವ, ಗಡಿಗಳಲ್ಲಿ ಭಯೋತ್ಪಾದಕರನ್ನು ನುಗ್ಗಿಸುತ್ತಿರುವ, ದೇಶದೊಳಗೆ ಕ್ಷೋಭೆ ಸೃಷ್ಟಿಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಬಲೂಚಿಸ್ತಾನವನ್ನು ಅದರಿಂದ ಕಿತ್ತು ಕೊಳ್ಳುವುದೇ ಸೂಕ್ತ. ಭಾರತ ಅವರ ಹೋರಾಟಕ್ಕೆ ಸಹಾಯ ಮಾಡಿದರೆ 1947ರವರೆಗೆ "ಹಿಂದೂ ವಿವಾಹ ಕಾಯ್ದೆ"ಯನ್ನೇ ಅನುಸರಿಸಿದ್ದ, ಹಿಂದೂಗಳೊಂದಿಗೆ ತಕ್ಕ ಮಟ್ಟಿಗೆ ಸಹಿಷ್ಣುತೆಯಿಂದಿರುವ ಬಲೂಚಿಗಳು  ಋಣ - ಕೃತಜ್ಞತೆಯ ಭಾವದಿಂದ ಭಾರತದೊಂದಿಗೆ ಬಲೂಚ್ ಸೇರಲೂಬಹುದು. ಅಖಂಡ ಭಾರತದ ಮರು ನಿರ್ಮಾಣಕ್ಕೆ ಅದು ಮೊದಲ ಮೆಟ್ಟಿಲಾಗಬಹುದು. ಈ ದಿಶೆಯಲ್ಲಿ ಭಾರತ ಸಾಗಬೇಕಾದುದು ಅದರ ಕರ್ತವ್ಯವೂ ಹೌದಾದರೂ ಭಾರತ ಕೆಲವು ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಸುಬ್ರಹ್ಮಣ್ಯನ್ ಸ್ವಾಮಿಯವರೆಂದಂತೆ ಭಾರತದಲ್ಲಿ ಬಲೂಚ್ ನಿರಾಶ್ರಿತ ಶಿಬಿರಗಳನ್ನು ಮಾಡಬಹುದಾದರೂ ಭವಿಷ್ಯವನ್ನೂ ಯೋಚಿಸಬೇಕಾಗುತ್ತದೆ. ಬಲೂಚ್ ಭಾರತದ ಭಾಗವಾದರೆ ಅಡ್ಡಿಯಿಲ್ಲ. ಒಂದು ವೇಳೆ ಸ್ವತಂತ್ರವಾದರೆ ಆಗ ಈ ನಿರಾಶ್ರಿತ ಶಿಬಿರಗಳಲ್ಲಿರುವವರನ್ನು ನಿರ್ದಾಕ್ಷಿಣ್ಯವಾಗಿ ಅಲ್ಲಿಗೆ ರವಾನಿಸುವ ಕೆಲಸವನ್ನೂ ಮಾಡಬೇಕು. ಇಲ್ಲದಿದ್ದರೆ ಹಿಂದೆ ಎಸಗಿದ ತಪ್ಪುಗಳೇ ನಮ್ಮನ್ನು ಸುಡುತ್ತಿರುವಾಗ ಹೊಸದೊಂದು ಸಮಸ್ಯೆ ಸೃಷ್ಟಿಯಾಗಬಹುದು. ಬಾಂಗ್ಲಾ ನುಸುಳುಕೋರರನ್ನು "ಓಟ್ ಬ್ಯಾಂಕ್" ಮಾಡಿಕೊಳ್ಳಲೆಂದೇ ಒಳಗೆ ಬಿಟ್ಟುಕೊಂಡ ಕಪಟಿ ರಾಜಕಾರಣಿಗಳಿರುವ ದೇಶ ನಮ್ಮದು. ಪಾರ್ಸಿ, ಯಹೂದ್ಯರನ್ನು ಬಿಟ್ಟು ಉಳಿದವರೆಲ್ಲಾ ಇಲ್ಲಿ ಬಂದು ಒಂದಲ್ಲಾ ಒಂದು ರೀತಿಯ ದ್ರೋಹ ಬಗೆದವರೇ! ಅಂತಹ ಅಧ್ವಾನಗಳಾಗದಂತೆ ಮೊದಲೇ ಎಚ್ಚರವಹಿಸುವುದೂ ಅಗತ್ಯ. ಹಿಂಗುಲಾಂಬೆ ಭಾರತಾಂಬೆಯ ಬಳಿ ಅಂಗಲಾಚುತ್ತಿದ್ದಾಳೆ. ವಸುದೈವ ಕುಟುಂಬಕಮ್ ಎನ್ನುವ ಭಾರತಕ್ಕೆ ಈ ಕೂಗು ಕೇಳದೆ?

ಮಂಗಳವಾರ, ಆಗಸ್ಟ್ 16, 2016

ಅರವಿಂದರೊಳಗೆ ಕಂಡ ಅರವಿಂದ ಲೋಚನನ ದೃಷ್ಟಿ

ಅರವಿಂದರೊಳಗೆ ಕಂಡ ಅರವಿಂದ ಲೋಚನನ ದೃಷ್ಟಿ

            "ರಾಷ್ಟ್ರವೆಂದರೆ ಭೂಮಿಯ ತುಣುಕಲ್ಲ; ಭಾಷಾಲಂಕಾರವಲ್ಲ; ಮನಸ್ಸಿನ ಕಲ್ಪನೆಯೂ ಅಲ್ಲ. ಅದೊಂದು ಪ್ರಬಲ ಶಕ್ತಿ. ಅದು ಕೋಟ್ಯಾಂತರ ದೇವತೆಗಳು ಒಂದು ಶಕ್ತಿ ಸಮೂಹವಾಗಿ ಏಕತ್ರವಾಗಿ ಭವಾನಿಯು ಎದ್ದು ಬಂದಂತೆ! ತಾಯಿ ಭಾರತಿಯು ಇಲ್ಲಿನ ಕೋಟ್ಯಾಂತರ ಜನಶಕ್ತಿಯ ಜೀವಂತ ಐಕ್ಯ ಸ್ವರೂಪಿಣಿ. ಆದರೆ ಆಕೆ ತನ್ನ ಮಕ್ಕಳ ತಮಸ್ಸು, ಜಡತೆಯ ವರ್ತುಲದಲ್ಲಿ ಬಂಧಿತಳಾಗಿ ನಿಷ್ಕ್ರಿಯಳಾಗಿದ್ದಾಳೆ. ಇದರರ್ಥ ಭಾರತ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ದುರ್ಬಲವಾಗಿದೆಯೆಂದಲ್ಲ. ಸ್ವ ಇಚ್ಛೆಯಿಂದ ಅಳಿವನ್ನು ಒಪ್ಪಿಕೊಳ್ಳದೆ ಯಾವುದೇ ವ್ಯಕ್ತಿ ಅಥವಾ ರಾಷ್ಟ್ರ ನಾಶವಾಗದು. ನಮ್ಮದು ಯುಗಯುಗಾಂತರಗಳ ನಾಡು. ತಾಯಿ ಭಾರತಿ ಜಗತ್ತಿಗೆ ಕೊಡಬೇಕಾದುದು ಇನ್ನೂ ಇದೆ. ಆಕೆಯಿನ್ನೂ ತನ್ನ ಅಂತಿಮ ಸೃಜನಾತ್ಮಕ ಮಂತ್ರವನ್ನು ಜಗತ್ತಿಗೆ ಕೊಡಬೇಕಷ್ಟೆ. ನಾವು ಈಗ ಜಾಗೃತಗೊಳಿಸಬೇಕಾದುದು ಆಂಗ್ಲೀಕರಣಕ್ಕೊಳಗಾದ ಪಶ್ಚಿಮದ ಯಶಸ್ಸು-ವೈಫಲ್ಯಗಳನ್ನು ಪುನರಾವರ್ತಿಸುವ ದೌರ್ಭಾಗ್ಯಕ್ಕೆ ಗುರಿಯಾದ ಪಶ್ಚಿಮದ ವಿಧೇಯ ಅನುಯಾಯಿಗಳನ್ನಲ್ಲ. ಬದಲಾಗಿ ತನ್ನ ಆತ್ಮವನ್ನು ಪುನಃ ಪಡೆಯಲು ಉದ್ಯುಕ್ತವಾಗಿ ಬ್ರಾಹ್ಮ-ಕ್ಷಾತ್ರಗಳ ಪರಮೋಚ್ಛತೆಯೆಡೆಗೆ ಸಾಗುತ್ತಾ ತನ್ನ ಧರ್ಮದ ಸಂಪೂರ್ಣ ಅರ್ಥ ಹಾಗೂ ಅದರ ವಿಸ್ತೃತ ರೂಪದ ಶೋಧಕ್ಕಾಗಿ ಸನ್ನದ್ಧವಾಗಿರುವ ಅವಿಸ್ಮರಣೀಯ ಶಕ್ತಿಯನ್ನು!"
ಕೃಷ್ಣನ ಜೀವನ ದೃಷ್ಠಿ ಮರುಕಳಿಸಿತೇ? ಚಾಣಕ್ಯನ ಕಾರ್ಯತಂತ್ರ ಗೋಚರಿಸಿತೇ? ಸ್ವಾತಂತ್ರ್ಯ ಹೋರಾಟವೆನ್ನುವುದು ಮುಸ್ಲಿಮರ ಓಲೈಕೆಯ - ಸ್ವಾರ್ಥದ ರಾಜಕಾರಣವಾಗಿ, ಕಮ್ಯೂನಿಷ್ಟ್ ಗೊಂದಲಗಳ ಆಡುಂಬೋಲವಾಗಿ ಬದಲಾಗುತ್ತಿದ್ದಾಗ ಅದಕ್ಕೆ ಪ್ರಾಚೀನ ಭಾರತದ ಪರಂಪರೆಯ-ಸಂಸ್ಕೃತಿಯ ಸ್ಪರ್ಷ ಕೊಟ್ಟು ಕ್ರಾಂತಿಕಾರಿಗಳ ಗುರುವಾಗಿ, ಭವಾನಿ ಮಂದಿರದ ಅಧ್ವರ್ಯುವಾಗಿ ತಕ್ಷಣದ ರಾಜಕೀಯ ಸ್ವಾತಂತ್ರ್ಯಕ್ಕಿಂತ ಪ್ರಾಚೀನ ಭಾರತಕ್ಕೆ ಭವ್ಯತೆಯನ್ನು ಒದಗಿಸಿಕೊಟ್ಟ ಆಧ್ಯಾತ್ಮ ದೀವಿಗೆಯನ್ನು ನಂದಾದೀಪವನ್ನಾಗಿರಿಸುವುದೇ ಭಾರತದ ಮರುಹುಟ್ಟಿಗೆ ಬೇಕಾದ ನಿಜವಾದ ಬೀಜರೂಪವೆಂದು ಗುರುತಿಸಿ ಆ ನಿಟ್ಟಿನಲ್ಲಿ ಸಾಗಿ ಮಹರ್ಷಿಯೆಂದೆನಿಸಿಕೊಂಡ, ಗುರುದೇವ ರವೀಂದ್ರರಿಂದ "ಭಾರತೀಯ ಚೇತನದ ಮುಕ್ತ, ಮೂರ್ತಿಮಂತ  ವಾಣಿ" ಎಂದು ಗೌರವಿಸಲ್ಪಟ್ಟ ಅರವಿಂದರಿಗೆ ಕೃಷ್ಣ-ಚಾಣಕ್ಯರು ಸ್ಪೂರ್ತಿಯಾಗಿದ್ದಲ್ಲಿ ಆಶ್ಚರ್ಯವೇನಿದೆ?

             ಅರವಿಂದರು ಭಾರತಕ್ಕೆ ಮರುಹುಟ್ಟು ಇದೆ ಎಂದು ಖಡಾಖಂಡಿತವಾಗಿ ಪ್ರತಿಪಾದಿಸಿದವರು. ಅದರ ಸೂಚನೆಯೇನೋ ಅನ್ನುವಂತೆ ಭಾರತಕ್ಕೆ ಸ್ವಾತಂತ್ರ್ಯವೂ ಅರವಿಂದರ ಜನ್ಮದಿನದಂದೇ ದೊರಕಿತು. ಆಂಗ್ಲ ಕಾಲಗಣನೆ ವೈಜ್ಞಾನಿಕವಲ್ಲ ಎನ್ನುವುದು ನಿಜವಾಗಿದ್ದರೂ ಅರವಿಂದರ ಹೆಸರು, ವಿಚಾರಗಳು ಇದರೊಂದಿಗೆ ತಳುಕು ಹಾಕಿರುವುದು ಕಾಕತಾಳೀಯವಾಗಿರಲಿಕ್ಕಿಲ್ಲ. ದೇಶದ ಜನತೆಗೆ ಈಗ ಅರವಿಂದರು ನೆನಪಾಗದಿದ್ದರೂ ಕಾಲ ಅವರನ್ನು ಸರಿಯಾದ ಸಮಯಕ್ಕೆ ನೆನಪಿಸಬಹುದು. 1872ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ಅರವಿಂದರು ಬಾಲ್ಯಕಳೆದದ್ದು ಈಗ ಬಾಂಗ್ಲಾದಲ್ಲಿರುವ ರಂಗಪುರದಲ್ಲಿ. ಐದನೇ ವರ್ಷದಲ್ಲಿ ಅವರನ್ನು ಕಾನ್ವೆಂಟಿಗೆ ಸೇರಿಸಿದ ಹೆತ್ತವರು ಎಂಟನೆಯ ವಯಸ್ಸಿಗೆ ತಮ್ಮೊಂದಿಗೆ ಇಂಗ್ಲೆಂಡಿಗೆ ಕರೆದೊಯ್ದರು. ಇಪ್ಪತ್ತನೇ ವರ್ಷದಲ್ಲೇ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರವಿಂದರು ಮರು ವರ್ಷವೇ ಭಾರತಕ್ಕೆ ಮರಳಿದರು. ಅದೇ ಸಮಯಕ್ಕೆ ಇಂದುಪ್ರಕಾಶ ಎನ್ನುವ ಮರಾಠಿ-ಇಂಗ್ಲೀಷ್ ಪತ್ರಿಕೆಗೆ "ನ್ಯೂ ಲ್ಯಾಂಪ್ಸ್ ಫಾರ್ ದಿ ಓಲ್ಡ್" ಎನ್ನುವ ಹೆಸರಲ್ಲಿ ಸರಣಿ ಲೇಖನಗಳನ್ನು ಬರೆದರು. ಆಂಗ್ಲ ಸರಕಾರದ ಮುಂದೆ ಭಿಕ್ಷೆ ಬೇಡುತ್ತಿದ್ದ ಕಾಂಗ್ರೆಸ್ಸಿನ ನೀತಿಯನ್ನು ತೀಕ್ಷ್ಣವಾಗಿ ಟೀಕಿಸಿದ್ದ ಈ ಲೇಖನಸರಣಿ ಸಂಪಾದಕರ ಮೇಲೆ ಬಂದ ಧಮಕಿಯಿಂದ ನಿಂತು ಹೋಯಿತು.

              ತಮ್ಮ ಸೋದರ ಬಾರೀಂದ್ರ ಹಾಗೂ ಜತೀಂದ್ರರ ಸಹಾಯದಿಂದ ಕ್ರಾಂತಿಸಂಘಟನೆಗಳನ್ನು ಸಂಪರ್ಕಿಸಿ ಅವುಗಳ ಕಾರ್ಯವನ್ನು ಸಂಯೋಜಿಸಲು ಪ್ರಯತ್ನಿಸಿದರು ಅರವಿಂದರು. ಅದಕ್ಕಾಗಿ ಚಿತ್ತರಂಜನ್ ದಾಸ್, ಮಿತ್ರ, ಸೋದರಿ ನಿವೇದಿತಾ ಹಾಗೂ ಸುರೇಂದ್ರರೊಡಗೂಡಿ ರಹಸ್ಯ ಪರಿಷತ್ತನ್ನೂ ಸ್ಥಾಪಿಸಿದರು. ದೇಶವನ್ನು ಕ್ರಾಂತಿ ಹೋರಾಟಕ್ಕೆ ಸಜ್ಜುಗೊಳಿಸಲು ಭವಾನಿಮಂದಿರ ಎಂಬ ಕರಪತ್ರವನ್ನೂ ಹಂಚಿ ಅದರ ಸಿದ್ಧತೆಗೂ ತೊಡಗಿದರು. ಲಾಲ್, ಬಾಲ್, ಪಾಲ್ ರೊಡನೆ ಸೇರಿ ಸ್ವಾತಂತ್ರ್ಯ ಹೋರಾಟದ ಅಧ್ವರ್ಯುವಾದರು. ಅವರ ಸಂಪಾದಕತ್ವದಲ್ಲಿ "ವಂದೇಮಾತರಂ"ನ ಪ್ರಚಾರ-ಪ್ರಸಾರ-ಪ್ರಭಾವಗಳಿಂದ, ಬಂಗಾಳದ ರಾಷ್ಟ್ರೀಯ ವಿದ್ಯಾಲಯವನ್ನು ಸಹಯೋಗಿ ಸುಭೋದ್ ಮಲ್ಲಿಕನ ಸಹಾಯದಿಂದ ಸ್ಥಾಪಿಸಿ ವ್ಯಾಪಿಸಿದ ರಾಷ್ಟ್ರೀಯತೆಯ ದೀಕ್ಷೆಗಳಿಂದ ಬೆಚ್ಚಿದ ಆಂಗ್ಲ ಸರಕಾರ ಅವರನ್ನು ಬಂಧಿಸಿತು. ಸೂರತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಮಂದ ನಿಲುವಿನಿಂದ ರೋಸಿ ಹೋಗಿ ಅರವಿಂದರಿದ್ದ ರಾಷ್ಟ್ರೀಯತಾವಾದಿ ಪಕ್ಷ ಕಾಂಗ್ರೆಸ್ಸಿನಿಂದ ಬೇರೆಯಾಯಿತು. ಬರೋಡಾದಲ್ಲಿ ವಿಷ್ಣು ಭಾಸ್ಕರ ಲೇಲೆ ಎನ್ನುವ ಮಹಾರಾಷ್ಟ್ರೀಯ ಯೋಗಿಯ ಭೇಟಿಯ ಸಮಯದಲ್ಲಿ ಬ್ರಹ್ಮಪ್ರಜ್ಞೆಯ ಮೊದಲ ಅನುಭೂತಿ ಅವರಿಗುಂಟಾಯಿತು. ಆಲೀಪುರ ಬಾಂಬು ಪ್ರಕರಣದಲ್ಲಿ ಮತ್ತೆ ಸರಕಾರ ಅರವಿಂದರನ್ನು ಬಂಧಿಸಿತು. ಒಂದು ವರ್ಷದಲ್ಲಿ ಬಿಡುಗಡೆಯಾದ ಬಳಿಕ "ಕರ್ಮಯೋಗಿ" ಎನ್ನುವ ಆಂಗ್ಲ ಸಾಪ್ತಾಹಿಕ ಹಾಗೂ "ಧರ್ಮ" ಎನ್ನುವ ಬಂಗಾಳಿ ಸಾಪ್ತಾಹಿಕವನ್ನು ಅವರು ಆರಂಬಿಸಿದರು. ಅದೇ ಸಂದರ್ಭದಲ್ಲಿ ಭಾರತದ ಭವಿಷ್ಯಕ್ಕೆ ಬೇಕಾದ ಆಧ್ಯಾತ್ಮಿಕ ಶಕ್ತಿಯನ್ನು ಮನಗಂಡು ಆತ್ಮಶಕ್ತಿಯ ಉದ್ದೀಪನೆಗೆ ಪಾಂಡಿಚೇರಿಗೆ ಬಂದು ನೆಲೆಸಿದರು.

               ಪ್ರಾಚೀನ ಭಾರತದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರವಿಂದರ ಪ್ರತಿಪಾದನೆ ಬಹುಷಃ ಆ ಕಾಲದಲ್ಲಿನ ಯಾವ ಇತಿಹಾಸಕಾರನೂ ಯೋಚಿಸಿರದ ದಿಕ್ಕಿನಲ್ಲಿ ಸಾಗಿತ್ತು. ಅದೇ ಈಗ ಸೂರ್ಯ ಸತ್ಯದಂತೆ ನಮ್ಮ ಕಣ್ಣಮುಂದೆ ದಾಖಲೆ ಸಮೇತ ಧರ್ಮಪಾಲರ ಬರಹಗಳಲ್ಲಿ ದರ್ಶನವಿತ್ತಿದೆ. ಪ್ರಾಚೀನ ಭಾರತದ ಸಮಾಜ ಧರ್ಮದ ತಳಹದಿಯಲ್ಲಿ ನಿರ್ಮಾಣವಾಗಿತ್ತು ಎಂದರು ಅರವಿಂದರು. ಇಲ್ಲಿ ಧರ್ಮವೆಂದರೆ ಸಂಕುಚಿತ ಮತಾಚರಣೆಯಲ್ಲ. ನಮ್ಮ ಅಸ್ತಿತ್ವದ ಅತ್ಯುನ್ನತ ನಿಯಮವಾದ ಧರ್ಮ. ಅಲ್ಲಿದ್ದುದು ಸಮುದಾಯ ಸ್ವಾತಂತ್ರ್ಯ. ಪ್ರತಿಯೊಂದು ಸಮುದಾಯ ತನ್ನದೇ ಆದ ಧರ್ಮವನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯವಿತ್ತು. ತನ್ನೊಳಗೇ ಅದು ಸ್ವತಂತ್ರವಾಗಿತ್ತು. ಯಾವ ಹಾದಿ ಹಿಡಿಯಬೇಕೆಂಬುದು ವ್ಯಕ್ತಿಗೆ ಮುಕ್ತ ಆಯ್ಕೆಯ ವಿಷಯವಾಗಿತ್ತು. ಪ್ರತಿ ಗ್ರಾಮ - ನಗರಗಳೂ ರಾಜಕೀಯ ನಿಯಂತ್ರಣದಿಂದ ಮುಕ್ತವಾದ ತಮ್ಮದೇ ವ್ಯವಸ್ಥೆಯನ್ನು ಹೊಂದಿದ್ದವು. ಅದರೊಳಗಿನ ಪ್ರತಿಯೊಬ್ಬ ವ್ಯಕ್ತಿ ತನ್ನ ಅಭಿವೃದ್ಧಿಗೆ ಒಂದು ಪಥವನ್ನು ಬಿಟ್ಟು ಇನ್ನೊಂದನ್ನು ಆಯ್ದುಕೊಳ್ಳಲು ಸ್ವತಂತ್ರನಿದ್ದ. ರಾಜನು ಸಮುದಾಯದ ಹಕ್ಕನ್ನು ಉಲ್ಲಂಘಿಸುವಂತಿರಲಿಲ್ಲ. ಉಲ್ಲಂಘಿಸಿದರೆ ಜನರಿಂದ ಪ್ರತಿರೋಧ ಎದುರಿಸಬೇಕಾಗುತ್ತಿತ್ತು. ನಮ್ಮ ಜನಾಂಗದ ಪ್ರತಿಭೆಯು ವಿಕಾಸಗೊಂಡ ರೂಪವದು. ಪ್ರತಿ ಸಮುದಾಯವೂ ತನ್ನ ಸ್ವಂತ ಹಿತಾಸಕ್ತಿಗೆ ಹೋರಾಡುತ್ತಿರಲಿಲ್ಲ. ರಾಷ್ಟ್ರೀಯ ಜೀವನವನ್ನು ಕೇಂದ್ರೀಕರಿಸಿದ ಧರ್ಮದ ಪರಿಕಲ್ಪನೆಯಿತ್ತು. ಅಲ್ಲಿ ಈಗಿನಂತೆ ಜಾತೀಯ ಸಂಸ್ಥೆಗಳಿರಲಿಲ್ಲ. ಸಮುದಾಯ ಜೀವನಕ್ಕೆ ಸಂಘಟಿತವಾದ ವೃತ್ತಿಪರ ಶ್ರೇಣಿಗಳಿದ್ದವು. ಆಡಳಿತ ಯಂತ್ರವು ಯಾಂತ್ರಿಕವಾಗಿರದೆ ನಮ್ಯಶೀಲವಾಗಿತ್ತು. ಮಹಮ್ಮದೀಯರು ಇದನ್ನೇ ಅನುಸರಿಸಿದರಾದರೂ ರಾಜನೇ ನಿರಂಕುಶ ಪ್ರಭುವೆಂಬ ಮಧ್ಯ ಏಷ್ಯಾದ ತಮ್ಮ ಕಲ್ಪನೆಯನ್ನೇ ಇಲ್ಲಿ ತಂದು ತುರುಕಿದರು. ಬ್ರಿಟಿಷರು ಈ ವ್ಯವಸ್ಥೆಯನ್ನು ಹೊಸಕಿ ಹಾಕಿದರು. ಭಾರತದಲ್ಲಿ ರಾಜಕೀಯ "ರಾಷ್ಟ್ರ"ದ ಕಲ್ಪನೆ ಇಲ್ಲದಿದ್ದಿರಬಹುದು. ಆದರೆ ಇಲ್ಲಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ "ರಾಷ್ಟ್ರ" ಕಲ್ಪನೆಯಿತ್ತು. ಅದೇ ಭಾರತವನ್ನು ಆಸೇತುಹಿಮಾಚಲ ಬೆಸೆದಿತ್ತು. ಸಂಸದೀಯ ವ್ಯವಸ್ಥೆ ನಮ್ಮ ಜನತೆಗೆ ಸರಿ ಹೊಂದುವುದಿಲ್ಲ ಎನ್ನುವುದು ಅರವಿಂದರ ವಾದವಾಗಿತ್ತು.

               ಬರೋಡಾದಲ್ಲಿ ಬ್ರಹ್ಮ ಸಾಕ್ಷಾತ್ಕಾರದ ಮೊಟ್ಟ ಮೊದಲ ಅನುಭವವಾದ ಬಳಿಕ ಮಾಡಿದ ಅನೇಕ ಭಾಷಣಗಳಲ್ಲಿ ರಾಷ್ಟ್ರೀಯ ಶಿಕ್ಷಣದ ಅವಶ್ಯಕತೆಯನ್ನು ಒತ್ತಿ ಹೇಳಿದ್ದರು. ಗತಕಾಲದಿಂದ ಆರಂಭವಾಗಿ ವರ್ತಮಾನದ ಸಂಪೂರ್ಣ ಉಪಯೋಗ ಪಡೆದು ಶಕ್ತಿಶಾಲಿ ರಾಷ್ಟ್ರವೊಂದನ್ನು ನಿರ್ಮಿಸುವ ಅಗತ್ಯತೆಯನ್ನು ಅವರು ಸಾರಿ ಹೇಳಿದರು. ಭಾರತ ಅನಾದಿಯಿಂದ ಹೊಂದಿರುವ ಜ್ಞಾನ, ಚಾರಿತ್ರ್ಯ, ಉದಾತ್ತ ತತ್ತ್ವಗಳ ಭಂಡಾರವನ್ನು ಭಾರತಕ್ಕಾಗಿ ಉಳಿಸಿ ಯಂತ್ರ ನಿರ್ಮಾಣ ಮಾಡದೆ ವ್ಯಕ್ತಿ ನಿರ್ಮಾಣದ ಕಡೆಗೆ ಕರೆ ಕೊಟ್ಟರು. ನಮ್ಮ ಮಕ್ಕಳ ಮನಸ್ಸನ್ನು ರಾಷ್ಟ್ರಭಾವನೆಯಿಂದ ಉದ್ದೀಪನಗೊಳಿಸಬೇಕು. ಪ್ರತೀ ಹಂತದಲ್ಲೂ ಅದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ದೇಶಭಕ್ತ ನಾಗರಿಕರನ್ನಾಗಿಸುವಂತಹ ಸದ್ಗುಣಗಳ ಅಭ್ಯಾಸಕ್ಕೆ ಅಣಿಗೊಳಿಸಬೇಕು. ಇಂತಹ ಪ್ರಯತ್ನವಿಲ್ಲದಿದ್ದರೆ "ರಾಷ್ಟ್ರ"ವೆನ್ನುವುದು ನಿರ್ಮಾಣವಾಗದು. ಶಿಸ್ತಿಲ್ಲದ ರಾಷ್ಟ್ರೀಯತೆ, ದೇಶಭಕ್ತಿ, ಪುನರ್ನಿರ್ಮಾಣ ಇವು ರಾಷ್ಟ್ರಚೇತನದ ಭಾಗಗಳಾಗದೆ ಕೇವಲ ಶುಷ್ಕಪದಗಳಾಗಿ, ವಿಚಾರಗಳಾಗಿ ಬಿಡುತ್ತವೆ. ಕೇವಲ ಪಠ್ಯಪುಸ್ತಕಗಳು ಬೋಧಿಸುವ ದೇಶಭಕ್ತಿಯಿಂದ ಯಾವ ಉಪಯೋಗವೂ ಇಲ್ಲ. ಶಿಕ್ಷಣವೆಂದರೆ ಜ್ಞಾನಗಳಿಕೆ ಅಷ್ಟೇ ಅಲ್ಲ. ಗಳಿಸಿದ್ದನ್ನು ಉತ್ತಮ ರೀತಿಯಲ್ಲಿ ಬಳಸುವುದೂ ಮುಖ್ಯ. ಐರೋಪ್ಯ ಶಿಕ್ಷಣವು ನಮ್ಮ ಬುದ್ಧಿ, ಚಾರಿತ್ರ್ಯ ಹಾಗೂ ಅಭಿರುಚಿಗಳನ್ನು ಭೃಷ್ಟಗೊಳಿಸಿದೆ. ನಮ್ಮ ಪರಂಪರೆಯಿಂದ ಬೌದ್ಧಿಕ ಹಾಗೂ ಆಧ್ಯಾತ್ಮಿಕವಾಗಿ ದೂರ ಸರಿಯುವಂತೆ ಮಾಡಿದ ಈಗಿನ ಶಾಲೆಗಳು ಸ್ವಂತಿಕೆಯನ್ನು ತರಬಲ್ಲ ಅಭಿಲಾಶೆ-ಚೈತನ್ಯವನ್ನೇ ಉಡುಗಿಸಿವೆ. ಸಂಕುಚಿತವೂ ಭಾವಹೀನವೂ ಆದ ಇಂತಹ ಶಿಕ್ಷಣವನ್ನು ಪಡೆದ ವ್ಯಕ್ತಿ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಿ ಪಂಚಭೂತಗಳನ್ನು ತನ್ನ ಸೇವೆಗೆ ಇಳಿಸಿಕೊಂಡ ಆದರೆ ಚೇತನವನ್ನು ವಿಕಸಿತಗೊಳಿಸದ ಪಶುಸ್ವಭಾವದ ರಕ್ಕಸನಾಗಿಬಿಡುತ್ತಾನೆ. ಪರಂಪರೆಯನ್ನು ಜೀವಂತವಾಗಿರಿಸುವ ಋಜುತ್ವ, ಕಾಣ್ಕೆಯ ಸ್ಪೂರ್ತಿ, ಭಾರತೀಯ ದೃಷ್ಟಿಯ ಅಂತರ್ನೋಟಗಳ ಶಿಕ್ಷಣ ನಮ್ಮನ್ನು ಮತ್ತೆ ಔನ್ನತ್ಯಕ್ಕೆ ಏರಿಸಬಲ್ಲುದು ಎಂದು ಶಿಕ್ಷಣದ ಸ್ವರೂಪ ಸಿದ್ಧವಾಗಬೇಕಾದ ಬಗೆಗೆ ಸಲಹೆ ಮಾಡಿದ್ದರು.

                  ಅರವಿಂದರ ಜೊತೆಯಲ್ಲಿದ್ದ ಕ್ರಾಂತಿಸಂನ್ಯಾಸಿ ಭಾರತೀ ಕೃಷ್ಣರು ಮುಂದೆ ಪುರಿ ಹಾಗೂ ದ್ವಾರಕೆಗಳಿಗೆ ಶಂಕರ ಪೀಠಾಧಿಪತಿಯಾದರು. ವರ್ತಮಾನದಲ್ಲಿನ ಆಧ್ಯಾತ್ಮಿಕ ಶಕ್ತಿಯು ಭವಿಷ್ಯದಲ್ಲಿ ಭೌತಿಕ ಶಕ್ತಿಯನ್ನು ಸೃಷ್ಟಿಸುತ್ತದೆ. ವರ್ತಮಾನದಲ್ಲಿ ಭೌತಿಕ ಶಕ್ತಿಯ ಮೇಲುಗೈಯಾದರೆ ಆಧ್ಯಾತ್ಮಿಕ ಶಕ್ತಿಯು ಭವಿಷ್ಯವನ್ನು ರೂಪಿಸಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದರಿತ ಅರವಿಂದರು ಸಕ್ರಿಯ ರಾಜಕಾರಣದಿಂದ ದೂರವಾಗಿ ಆತ್ಮಶಕ್ತಿಯ ಜಾಗೃತಿಗಾಗಿ ಆಧ್ಯಾತ್ಮಿಕ ಪಥ ತುಳಿದರು. ಆ ನಂತರವೂ ಅವರು  ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಗಳ ಬಗ್ಗೆ ತಮ್ಮ ಸಲಹೆ ಕೇಳಿದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು.  ತಮ್ಮ "ಸೀಕ್ರೆಟ್ ಆಫ್ ವೇದ" ಗ್ರಂಥದಲ್ಲಿ ಅರವಿಂದರು ವೇದಾರ್ಥವನ್ನು ಸಾಂಕೇತಿಕವಾಗಿ ವಿವರಿಸುವ ಮೂಲಕ "ಆರ್ಯ ಆಕ್ರಮಣ ಸಿದ್ಧಾಂತ"ವನ್ನು ಖಂಡಿಸಿದರು. ಅವರು ಆರ್ಯನೆಂದರೆ ಯಾವುದಕ್ಕೂ ಹೆದರದೆ, ಹಿಂಜರಿಯದೆ, ದೌರ್ಬಲ್ಯಕ್ಕೊಳಗಾಗದೆ ದೈವಿಕತೆಯ ಶಿಖರವನ್ನು ಹಂತಹಂತವಾಗಿ ಏರಲಿಚ್ಛಿಸುವ ಅಂತರಂಗ ಹಾಗೂ ಬಾಹ್ಯದಲ್ಲಿ ಆದರ್ಶದ ಔನ್ನತ್ಯದ ಆತ್ಮಸಂಸ್ಕಾರವುಳ್ಳವ ಎಂದು ವ್ಯಾಖ್ಯಾನಿಸಿದರು.


                 ಆ ಸಮಯದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅರವಿಂದ ಘೋಷ್ ಅಭಿಪ್ರಾಯಗಳು ಅವರು ಬರೆದ ಪತ್ರಗಳ ಮೂಲಕ ಸಿಗುತ್ತವೆ. ಮುಸ್ಲಿಮ್ ಪುಂಡುತನ ಹಾಗೂ ಕಾಂಗ್ರೆಸ್ಸಿನ ಓಲೈಕೆಯ ನೀತಿಯನ್ನು ಕಟು ಶಬ್ಧಗಳಲ್ಲಿ ಟೀಕಿಸಿದರು ಅರವಿಂದರು. "ಪರರನ್ನು ಪೀಡಿಸುವವನು ಶೂರನೂ ಅಲ್ಲ, ಶಕ್ತಿವಂತನೂ ಅಲ್ಲ. ಹಿಂದೂವಿನ ಆತ್ಮನಿಯಂತ್ರಣ ಗುಣ ಅವನ ರಾಷ್ಟ್ರೀಯ ಸ್ವಭಾವದ ಲಕ್ಷಣ ಎನ್ನುವುದು ಅವನ ಹೇಡಿತನ ಎಂದು ಪರಿಗಣಿಸಿದರೆ ಅದು ಮೂರ್ಖತನ. ಮುಸ್ಲಿಂ ಅಧ್ಯಕ್ಷನನ್ನು ಆರಿಸುವುದರಿಂದ ಕಾಂಗ್ರೆಸ್ ವಿರೋಧಿ ಮುಸಲ್ಮಾನರ ಮನಸ್ಸನ್ನು ಓಲೈಸಬಹುದೆಂಬ ಕಾಂಗ್ರೆಸ್ಸಿನ ವಿಚಾರಧಾರೆ ಮೂರ್ಖತನದ್ದು. "ನಾನು ನಿನ್ನನ್ನು ಸಹಿಸಲಾರೆ" ಎನ್ನುವ ತತ್ವವಿರುವ ಮತದ ಜೊತೆ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಅವರು ನಮ್ಮನ್ನು ಮತಾಂತರಗೊಳಿಸುತ್ತಲೇ ಸಾಗುತ್ತಾರೆ. ನಾವು ಅಹಿಂಸೆ ಎಂದು ಹೇಳುತ್ತಾ ಯಾವ ಮುಸಲ್ಮಾನನನ್ನೂ ಶುದ್ಧೀಕರಣಗೊಳಿಸದಿದ್ದರೆ ಐಕ್ಯತೆ ಬಿಡಿ, ನಾವೇ ಉಳಿಯಲಾರೆವು. ತಮ್ಮ ಪರವಾಗಿ ಹಾಗೂ ತಮ್ಮ ಹೆಸರಿನಲ್ಲಿ ಏನನ್ನು ಹೇಳಬೇಕು ಅಥವಾ ಹೇಳಬಾರದು, ಮಾಡಬೇಕು ಅಥವಾ ಮಾಡಬಾರದು ಎನ್ನುವುದನ್ನು ನಿರ್ಧರಿಸುವ ಸಾರ್ವಜನಿಕರ ಹಕ್ಕನ್ನು ಕಾಂಗ್ರೆಸ್ ಹುಟ್ಟಿದಂದಿನಿಂದ ಈ ರಾಷ್ಟ್ರೀಯ ಚಳುವಳಿಯ ನೇತಾರರು ನಿರಾಕರಿಸುತ್ತಲೇ ಬಂದಿದ್ದಾರೆ. ಆರೇಳು ಜನ ಗುಪ್ತ ಸಭೆ ನಡೆಸಿ ತೆಗೆದುಕೊಳ್ಳುವ ನಿರ್ಣಯವನ್ನು ದೇಶದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳು ಸುಮ್ಮನೆ ಅನುಮೋದಿಸುವುದು ಕಾಂಗ್ರೆಸ್ಸಿನ ವೈಖರಿಯಾಗಿಬಿಟ್ಟಿದೆ. ಸರ್ವಾಧಿಕಾರಿಗಳಂತಾಗದೆ ಸೇವಕರಂತೆ ವರ್ತಿಸಿದಲ್ಲಿ ಮಾತ್ರ ನಾಯಕರು ಗೌರವಕ್ಕೆ ಅರ್ಹರಾಗುತ್ತಾರೆ. ರಾಜಕಾರಣ ಕ್ಷತ್ರಿಯನ ಕೆಲಸ. ತೋಳ್ಬಲವಿಲ್ಲದ ಮೆದುಳು ನಿರ್ವೀರ್ಯವಾದದ್ದು. ಸ್ವಾತಂತ್ರ್ಯಕ್ಕೆ ನೈತಿಕ ಅರ್ಹತೆ ಪಡೆಯಬೇಕಾದರೆ ನಾವು ಕ್ಷಾತ್ರ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಾಸ್ತವಾಂಶವನ್ನು ಎತ್ತಿ ಹಿಡಿಯಲು ಹೆದರುವ ಅತಿಯಾದ ಸಜ್ಜನಿಕೆ, ಚಕ್ಷು ಲಜ್ಜೆಯಿಂದ ಯಾವ ಉಪಯೋಗವೂ ಇಲ್ಲ! ಜನತೆಯ ನಡುವಿನ ಪ್ರತಿಯೊಂದು ಘಟಕವನ್ನು -ಪಂಡಿತ, ಕಾರ್ಮಿಕ, ರೈತ - ಸಂಘಟಿಸಿ ಯಾರು ಮುನ್ನಡೆಸುವನೋ ಅವನಿಗೇ ರಾಜಕೀಯದಲ್ಲಿ ಗೆಲುವೇ ಹೊರತು ವಾಗ್ಝರಿ ಹರಿಸುವ ಮಾತಿನ ಚತುರರಿಗಲ್ಲ. ಆದರೆ ಕಾಂಗ್ರೆಸ್ ಜನರಿಂದ ದೂರವಿದ್ದು ಬ್ರಿಟಿಷ್ ಸರಕಾರದೆಡೆ ಗಮನ ಹರಿಸಿ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ಸಿನ ಸ್ವಾರ್ಥದಾಟವನ್ನು ಅಂದೇ ಬಯಲಿಗೆಳೆದಿದ್ದರು.

             ಗಾಂಧಿಯವರ ಖಿಲಾಫತ್ ಅತಿರೇಕದಿಂದ ದೇಶಾದ್ಯಂತ ಹಿಂದೂಗಳು ಅಪಾರ ಹಾನಿಗೆ ತುತ್ತಾದಾಗ ಅರವಿಂದರು "ಹಿಂದೂ ಮುಸ್ಲಿಂ ಐಕ್ಯತೆಯೆಂದರೆ ಹಿಂದೂಗಳು ಅಧೀನರಾಗುವುದಲ್ಲ. ಹಿಂದೂಗಳ ಮೃದು ಗುಣ ಮುಸ್ಲಿಂ ದೌರ್ಜನ್ಯಕ್ಕೆ ಎಡೆಮಾಡಿದೆ. ಹಿಂದೂಗಳು ಸಂಘಟಿತರಾಗುವುದೇ ಇದಕ್ಕೆ ಪರಿಹಾರ. ಆಗ ಐಕ್ಯತೆ ತಾನಾಗಿಯೇ ಸಾಧಿತವಾಗುವುದು. ಮುಂದೊಂದು ದಿನ ಮುಸ್ಲಿಮರು ನಮ್ಮ ಮೇಲೆ ದಾಳಿಗೆ ಬಂದಾಗಲೂ ಇದು ನೆರವಾಗುವುದು" ಎಂದು ಸ್ಪಷ್ಟ ಶಬ್ಧಗಳಲ್ಲಿ ಹಿಂದೂಗಳು ಸಂಘಟಿತರಾಗಬೇಕಾದ ಅಗತ್ಯತೆಯನ್ನು ಹೇಳಿದ್ದರು.

              ಬಹುತೇಕ ನಾಯಕರು ಕುರಿಗಳಂತೆ ಗಾಂಧಿಯವರನ್ನು ಹಿಂಬಾಲಿಸಿದಾಗ ಕೆಲವೇ ಕೆಲವರು ಅವರ ಚಳುವಳಿಯ ಅನಿಶ್ಚಿತತೆಯನ್ನು, ಅದರಿಂದ  ದೇಶೀಯರಲ್ಲುಂಟಾಗಬಹುದಾದ ಗೊಂದಲವನ್ನು, ಭಾರತಕ್ಕಾಗಬಹುದಾದ ಹಾನಿಯನ್ನು ಮನಗಂಡು ದೇಶದ ಜನತೆಯನ್ನು ಎಚ್ಚರಿಸಿದ್ದರು. ಅಂತಹವರಲ್ಲಿ “ಕಾಂಗ್ರೆಸ್ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ತೋರುವ ಉತ್ಸಾಹ ಹೃದಯಪೂರ್ವಕವಾದುದಲ್ಲ. ನಿಷ್ಕಪಟವಾದುದೂ ಅಲ್ಲ. ಅದರ ನಾಯಕರುಗಳು ನಾಯಕರಾಗುವುದಕ್ಕೆ ಯೋಗ್ಯತೆಯನ್ನೇ ಹೊಂದಿಲ್ಲ” ಎಂದು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ನಿರ್ಭೀತವಾಗಿ ಹೇಳಿದ್ದ ಅರವಿಂದರೂ ಒಬ್ಬರು. ಗಾಂಧಿಯವರ ಅಹಿಂಸಾ ಹೋರಾಟದ ಅನರ್ಥವನ್ನು ತಮ್ಮ ಶಿಷ್ಯರಿಗೆ ಅವರು ಈ ರೀತಿ ವಿವರಿಸಿದ್ದಾರೆ - ಮನುಷ್ಯ ಅಹಿಂಸೆಯನ್ನು ಕೈಗೊಂಡಾಗ ಶುದ್ಧಗೊಳ್ಳುತ್ತಾನೆ ಎಂದು ಗಾಂಧಿ ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ಸ್ವೈಚ್ಛೆಯಂದ ಯಾತನೆ ಅನುಭವಿಸಿದಾಗ ಪ್ರಾಣಕೋಶಗಳು ಬಲಗೊಳ್ಳುತ್ತವೆ. ಹಾಗಾಗಿ ಗಾಂಧಿಯವರ ಈ ಅಹಿಂಸಾ ಚಳುವಳಿ ಪ್ರಾಣಕೋಶಗಳನ್ನಷ್ಟೇ ಬಾಧಿಸುತ್ತದೆ. ದಬ್ಬಾಳಿಕೆ ನಡೆಸುವ ಶಕ್ತಿಯನ್ನು ಎದುರಿಸುವ ಸಾಮರ್ಥ್ಯವಿಲ್ಲದಿದ್ದಾಗ ಅದನ್ನು ಸಹಿಸಿ ಬವಣೆ ಅನುಭವಿಸುವುದರಿಂದ ಯಾವ ಪ್ರಯೋಜನವಿದೆ? ಯಾತನೆಯನ್ನುಂಡ ಮನುಷ್ಯ ಅಧಿಕಾರ ದೊರೆತಾಗ ಹೀನ ಶೋಷಕನಾಗುತ್ತಾನೆ. ನಾವು ಹಿಂಸಾ ಪ್ರವೃತ್ತಿಯನ್ನಷ್ಟೇ ಪರಿವರ್ತಿಸಬಹುದು. ಆದರೆ ಸತ್ಯಾಗ್ರಹದ ಮಾರ್ಗದಿಂದ ಅದು ಸಾಧ್ಯವಿಲ್ಲ. ಹಿಂಸಾ ಪ್ರವೃತ್ತಿಯ ಶುದ್ಧೀಕರಣಕ್ಕೆ ಪ್ರಾಚೀನ ಕ್ಷಾತ್ರ ಪ್ರವೃತ್ತಿಯೇ ಬೇಕು. ಅದು ಯಾವ ದಬ್ಬಾಳಿಕೆಯನ್ನೂ ಸಹಿಸದೆ ಹೋರಾಡುತ್ತಿತ್ತು. ಅದರ ಉನ್ನತ ಗುರಿ ಆಧ್ಯಾತ್ಮೀಕರಣವಾಗಿತ್ತು. ಸತ್ಯಾಗ್ರಹಿಯು ತಾನು ಇತರರ ಮೇಲೆ ತರುವ ಒತ್ತಡದ ಬಗ್ಗೆ ತನಗೆ ಕಾಳಜಿಯಿಲ್ಲ ಎನ್ನುವುದು ಕೂಡಾ ಹಿಂಸೆಯೇ! ನಿಜವಾದ ಅಹಿಂಸೆ ಬಾಹ್ಯ ಕ್ರಿಯೆಯಲ್ಲಿ/ಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ಇರದ ಒಂದು ಮನಸ್ಥಿತಿ. ಆಂತರಿಕ ಅಸ್ತಿತ್ವದಲ್ಲಿ ಯಾವುದೇ ಒತ್ತಡವೂ ಅಹಿಂಸೆಯ ಉಲ್ಲಂಘನೆಯೇ! ಗಾಂಧಿಯವರು ಆಫ್ರಿಕಾದಿಂದ ಹಿಂದಿರುಗಿದ ನಂತರ ಅವರು ಪಡೆದ ರಿಯಾಯಿತಿಗಳೆಲ್ಲಾ ಏನಾದವು? ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತೇಕೆ? ಒಂದು ವೇಳೆ ಅಫ್ಘನ್ನರು ಭಾರತವನ್ನು ಆಕ್ರಮಿಸಿದರೆ ಅಹಿಂಸೆಯಿಂದ ಅವರನ್ನು ಎದುರಿಸಲು ಸಾಧ್ಯವೆ? ಗಾಂಧಿಯವರು ತಮ್ಮ ಗೀತೆಯ ವ್ಯಾಖ್ಯೆಯನ್ನು ಪ್ರಶ್ನಿಸಿದವರಿಗೆ ಹಾರಿಕೆಯ ಉತ್ತರ ನೀಡಿದರು. ಮಹರ್ಷಿ ದಯಾನಂದರು ವಿಗ್ರಹಾರಾಧನೆಯನ್ನು ರದ್ದು ಪಡಿಸಿ ವೇದಗಳ ಮೂರ್ತಿಪೂಜೆಯನ್ನು ಸೃಷ್ಟಿಸಿದ್ದಾರೆಂದು ಹೇಳುವ ಗಾಂಧಿಯವರು ತಾವು ಚರಕ-ಖಾದಿ-ಅಹಿಂಸೆಗಳ ಮೂಲಕ ಸೃಷ್ಟಿಸಿದ್ದೂ ಅದನ್ನೇ ಎನ್ನುವುದನ್ನು ಮರೆತಿದ್ದಾರೆ. ಭಾರತೀಯ ಸಂಸ್ಕೃತಿಗೆ ನೈತಿಕತೆಯ ಮೌಲ್ಯವೂ ಗೊತ್ತಿತ್ತು. ಅದರ ಮಿತಿಗಳೂ! ಗಾಂಧಿಯವರು ನೈತಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಒಂದೇ ಎಂದು ಪರಿಗಣಿಸಿದ್ದಾರೆ. ಗಾಂಧಿಯವರ ಉಪವಾಸವೆನ್ನುವುದು ಪಾಪಮಾರ್ಜನೆಗಾಗಿ ಇರುವ ಕ್ರೈಸ್ತರ ಕಲ್ಪನೆ. ಆತ ಬೋಧಿಸಿರುವುದೆಲ್ಲವೂ ಕ್ರೈಸ್ತ ಮತದಿಂದ ಎರವಲು ಪಡೆದದ್ದು. ಅವರ ರೂಪ ಭಾರತೀಯ. ಆದರೆ ಅಂತಃಸತ್ತ್ವ ಕ್ರೈಸ್ತಮತದ್ದು. ಅವರ ವ್ಯಕ್ತಿತ್ವವಂತೂ ನೀರಸ, ಅದು ಅವರು ತಮ್ಮ ಸಿದ್ಧಾಂತಗಳನ್ನು ಎರವಲು ಪಡೆದ ರಷ್ಯನ್ ಕ್ರೈಸ್ತರಿಗಿಂತಲೂ ನೀರಸ ಹಾಗೂ ಅವರ ಮನಸ್ಸು ಚಂಚಲ. ಟಾಲ್ ಸ್ಟಾಯ್, ಬೈಬಲುಗಳಿಂದ ಪ್ರಭಾವಿತರಾದ ಅವರ ಉಪದೇಶಗಳಲ್ಲಿ ಕೆಲ ಮಟ್ಟಿಗೆ ಜೈನ ಮತದ ಛಾಯೆಯಿದೆ. ಗಾಂಧಿಯವರ ಚಳುವಳಿ ಅಭಾಸಕ್ಕೂ, ಗೊಂದಲಕ್ಕೂ ಕಾರಣವಾಗುತ್ತದೆ. ಭಾರತದ ರಾಜಕಾರಣಿಗಳು ವಿಚಾರಹೀನರಾಗಿ ಗಾಂಧಿಯ ಖಿಲಾಫತ್ತಿಗೆ ಬೆಂಬಲ ಸೂಚಿಸಿದರು. ವಾಸ್ತವತೆಯನ್ನು ನೇರವಾಗಿ ಎದುರಿಸುವ ಬದಲು ತಮ್ಮ ಮಾನಸಿಕ ವಿಚಾರಗಳ ಬಲದಿಂದ ಮುಸಲರ ದೌರ್ಷ್ಟ್ಯವನ್ನು ಎದುರಿಸುವ ಅರ್ಥಹೀನ ಪ್ರಯತ್ನ ಮಾಡಿದರು. ಅಸಹಕಾರ ಚಳುವಳಿ ಅಸತ್ಯದ ಮೇಲೆ ನಿಂತಿದೆ. ಸ್ವರಾಜ್ಯಗಳಿಕೆ ನೂಲುವುದರಿಂದ ಸಾಧ್ಯವೇ? ಗ್ರಾಮಸಂಘಟನೆಗಳ ಮಾತಾಡುವ ಗಾಂಧಿಯವರು ಮೊದಲು ಹಳ್ಳಿಗಳಿಗೆ ಜೀವ ತರಲಿ. ಆಗ ಅವು ತಾವಾಗಿ ಸಂಘಟನೆಗೊಳ್ಳುತ್ತವೆ. ಗಾಂಧಿಯವರು ಗೋಪ್ಯತೆಯನ್ನು ಪಾಪ ಎಂದಿದ್ದಾರೆ. ಆದರೆ ಅದು ಅವರ ಅತಿರೇಕಗಳಲ್ಲೊಂದು ಅಷ್ಟೇ!  

                ಆಧುನಿಕ ವೃತ್ತ ಪತ್ರಿಕೆಗಳು ಕಪೋಲಕಲ್ಪಿತ ವರದಿಯನ್ನು ಪ್ರಕಟಿಸುತ್ತವೆ. ಜನಸಾಮಾನ್ಯರ ರಂಜನೆಗೆ ಅವು ಇಳಿಯುವ ಕಾರಣ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತವೆ ಎಂದಿದ್ದರು ಅರವಿಂದರು. 1950ರಲ್ಲಿ ಅರವಿಂದರು ಚೀನಾ ನೈಋತ್ಯ ಏಷ್ಯಾ ಹಾಗೂ ಟಿಬೆಟುಗಳನ್ನು ನುಂಗಿ ನೊಣೆದು ಭಾರತದ ಭದ್ರತೆಗೆ ಬೆದರಿಕೆಯೊಡ್ಡಬಹುದು ಎಂದು ಎಚ್ಚರಿಸಿದ್ದರು. ಅವರು ಹೇಳಿದ ಆರುತಿಂಗಳಲ್ಲೇ ಚೀನಾ ಟಿಬೆಟನ್ನು ಆಕ್ರಮಿಸಿತು. 1962 ರಲ್ಲಿ ಭಾರತದ ಮೇಲೂ ದಾಳಿಯೆಸಗಿತು.

                 1950ರ ಡಿಸೆಂಬರ್ 5ರಂದು ಅರವಿಂದರು ತಮ್ಮ ಕಾಯ ತ್ಯಜಿಸಿದರು. ಜೀವಿತದ ಮೊದಲ ಇಪ್ಪತ್ತು ವರ್ಷಗಳನ್ನು ಪಾಶ್ಚಾತ್ಯ ಸಂಸ್ಕೃತಿಯ ಪರಿಧಿಯೊಳಗೆ ಬೆಳೆದ ಅರವಿಂದರನ್ನು ತಾಯಿನಾಡು ಕೂಗಿ ಕರೆಯಿತು. ಮುಂದಿನ ಎಂಟು ವರುಷಗಳಲ್ಲಿ ತಮ್ಮ ಸಿದ್ಧಾಂತವನ್ನು ಪಕ್ವಗೊಳಿಸುವ ಪ್ರಕ್ರಿಯೆ ಮೊದಲಾಯಿತು. 1900 ಸುಮಾರಿಗೆ ಬಂಗಾಳ ಹಾಗೂ ಮಹಾರಾಷ್ಟ್ರಗಳ ಕ್ರಾಂತಿಸಂಘಟನೆಗಳ ಸಂಪರ್ಕವುಂಟಾಯಿತು. ಕ್ರಾಂತಿ ದೀಕ್ಷಿತರಾದರು. ಮುಂದಿನ ಹತ್ತು ವರುಷಗಳು ಮಾತೃಭೂಮಿಯನ್ನು ವಿದೇಶೀ ಆಡಲಿತದ ಕಪಿಮುಷ್ಠಿಯಿಂದ ಬಿಡಿಸುವ ಪ್ರಯತ್ನ ಮಾಡಿದರು. ಅವರಿಗೆ ಭಾರತಿ ತಾಯಿಯ ರೂಪದಲ್ಲಿ ಕಂಡಳು. ಅದರ ಫಲವೇ  "ಭವಾನಿಮಂದಿರ!". 1908ರ ಸುಮಾರಿಗೆ ಉಂಟಾದ ಬ್ರಹ್ಮಪ್ರಜ್ಞೆಯ ಅನುಭೂತಿ ಎರಡು ವರುಷಗಳಲ್ಲಿ ಅವರನ್ನು ಪಾಂಡಿಚೇರಿಗೆ ಒಯ್ಯಿತು. ವೇದಗಳ ಮೇಲೆ ನಡೆಸಿದ ಆಳವಾದ ಅಧ್ಯಯನ ಬ್ರಹ್ಮಸತ್ಯದ ಸಾರ ಹಾಗೂ ಪ್ರಾದುರ್ಭಾವದ ಸತ್ಯವನ್ನು ಅರಸುವತ್ತ ಅವರನ್ನು ಪ್ರೇರೇಪಿಸಿತು. ಆಗ ಅವರಿಗಾದ "ದರ್ಶನ" ಭೂಮಿಯನ್ನು ಮೃತಪಾಯವಾಗಿರುವ ಯುಗದಿಂದ ಬಿಡಿಸುವ ಕಾರ್ಯದಲ್ಲಿ ಅನುವಾಗುವಂತೆ ಮಾಡಿತು. ಕಾಲಗರ್ಭದಲ್ಲಿ ತುಕ್ಕು ಹಿಡಿದಿರುವ ಮಾನವ ಜನಾಂಗದ ಭವಿಷ್ಯದ ಕೀಲಿಕೈ ಭಾರತದಲ್ಲಿದೆ. ನಿದ್ರಾವಸ್ಥೆಯಲ್ಲಿರುವ ಅದನ್ನು ಎಚ್ಚರಿಸಲು ಆಧ್ಯಾತ್ಮಿಕ ಶಕ್ತಿಸಂಚಯನವೇ ಅಗತ್ಯವೆಂದು ಮನಗಂಡು ಮುಂದಿನ ನಲವತ್ತು ವರುಷಗಳ ಕಾಲ ಅಂತರ್ಮುಖಿಯಾದ ಆ ಯೋಗಿ!

ಕಲ್ಲನ್ನೂ ಚಿನ್ನವಾಗಿಸಿದ ಕಲಿಯುಗದ ಅಹಲ್ಯೆ

ಕಲ್ಲನ್ನೂ ಚಿನ್ನವಾಗಿಸಿದ ಕಲಿಯುಗದ ಅಹಲ್ಯೆ


              ರಾಜಾ ಹರಿಶ್ಚಂದ್ರನ ಸತ್ಯಸಂಧತೆಗೆ ಸಾಕ್ಷೀಭೂತವಾಗಿದ್ದ ಕಾಶಿಯಲ್ಲಿ "ಸತ್ಯ ನಾಥ" ಬಟಾಬಯಲಲ್ಲಿ ನಿಂತಿದ್ದ. ಔರಂಗಜೇಬನ ಮತಾಂಧತೆಯ ಎದುರು ಭೀಷ್ಮನ ಪರಾಕ್ರಮಕ್ಕೆ ಸಾಕ್ಷಿಯಾಗಿದ್ದ ಭೂಮಿಯಲ್ಲಿ ಕ್ಷಾತ್ರವೇ ಸೊರಗಿ ಹೋಗಿತ್ತು. ವಿದ್ವಜ್ಜನರು ಆಶ್ರಯವಿಲ್ಲದೆ ನಿರ್ಗತಿಕರಾಗಿದ್ದರು. ಕೃಷಿಕರು ಜಜಿಯಾ ತೆತ್ತು ಬದುಕುವ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆಲಯವಿಲ್ಲದೆ ದಿಗಂಬರನಾಗಿದ್ದ ಒಡೆಯನನ್ನು ಕಂಡು ಗಂಗೆ ಕಣ್ಣೀರು ಸುರಿಸುತ್ತಿದ್ದಳು. ಪಾಪಿ ಔರಂಗಜೇಬನಿಂದ ನಾಶಗೊಂಡು 70 ವರ್ಷಗಳ ಪರ್ಯಂತ ಮಣ್ಣಲ್ಲಿ ಮಣ್ಣಾಗಿದ್ದ ವಿಶ್ವನಾಥನ ಆಲಯವನ್ನು ಮತ್ತೆ ನಿರ್ಮಿಸಿ ರಾಷ್ಟ್ರೀಯ ಅಪಮಾನವೊಂದನ್ನು ಮುಕ್ತಿಗೊಳಿಸಿದಳು ಓರ್ವ ಮಹಿಳೆ! ಹೌದು ದೇಶವಿಡೀ ಅದೆಷ್ಟೋ ರಾಜಮಹಾರಾಜರುಗಳಿಂದ ಸಾಧ್ಯವಾಗದೇ ಉಳಿದಿದ್ದ ಧೀರಕಾರ್ಯವನ್ನು ಮಾಡಿ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗುಳಿದ ಆ ಮಹಾಮಾತೆ ಅಹಲ್ಯಾಬಾಯಿ ಕಟ್ಟಿದ ಶಿವಾಲಯವೇ ಇಂದಿಗೂ ಕಾಶಿ ವಿಶ್ವೇಶ್ವರನ ಸದನವಾಗಿದೆ.

            ಅಹಲ್ಯಾಬಾಯಿ ಔರಂಗಾಬಾದಿನ ಚೌಂಡಿ ಗ್ರಾಮದ ಮಾಣಕೋಜಿ ಪಟೇಲನ ಮಗಳು. ಹಿಂದುಳಿದ ವರ್ಗದಲ್ಲಿ ಹುಟ್ಟಿದ್ದರೂ ಶಿಕ್ಷಣ - ಸಂಸ್ಕಾರದಲ್ಲಿ ಅವಳಿಗೆ ಕೊರತೆಯಾಗಲಿಲ್ಲ ಎನ್ನುವುದರಲ್ಲಿಯೇ ಆಧುನಿಕಪೂರ್ವ ಭಾರತದಲ್ಲಿ ಈಗಿನ ಸೆಕ್ಯುಲರುಗಳೆನ್ನುವಂತೆ "ತುಳಿತ" ಸಾರ್ವತ್ರಿಕವೂ, ಸರ್ವೇಸಾಮಾನ್ಯವೂ ಆಗಿರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ! ಆ ಕಾಲದಲ್ಲಿ ದೇಶದ ಯಾವುದೇ ಪ್ರಾಂತ್ಯದಲ್ಲೂ ಎಲ್ಲ ಬಗೆಯ ಆರ್ಥಿಕ-ಸಾಮಾಜಿಕ ಸ್ತರದವರಿಗೂ ಲಿಂಗಾತೀತವಾಗಿ ಆರ್ಷಸಂಸ್ಕೃತಿಯ ಅರಿವು-ಅನ್ವಯಗಳಿತ್ತು ಎನ್ನುವುದು ಇಂತಹ ಹಲವು ಉದಾಹರಣೆಗಳಿಂದ ಗೊತ್ತಾಗುತ್ತದೆ. ಇದಕ್ಕಾಗಿ ಆಸಕ್ತರು ಶ್ರೀ ಧರ್ಮಪಾಲರ ಗ್ರಂಥಗಳನ್ನು ನೋಡಬಹುದು. ಅವರು ಅಂಕಿಅಂಶಗಳ ಸಮೇತ ಆಂಗ್ಲರ ಮೊದಲಿನ ಹಾಗೂ ನಂತರದ ಭಾರತವನ್ನು ಚಿತ್ರಿಸಿಟ್ಟಿದ್ದಾರೆ. ಸುಯೋಗವೋ ಎನ್ನುವಂತೆ ಅಹಲ್ಯಾಬಾಯಿ ದಕ್ಷ ಮರಾಠ ನಾಯಕ, ಮಾಳವ ಸುಬೇದಾರ ಮಲ್ಹಾರೀ ರಾವ್ ಹೋಳ್ಕರನ ಮಗ ಖಂಡೇರಾಯನಿಗೆ ಪತ್ನಿಯಾದಳು. ಭೋಗಲಾಲಸಿ ಮಗನಿಂದ ರಾಜ್ಯ ಉದ್ಧಾರವಾಗದು ಎಂದು ಮನಗಂಡ ಮಲ್ಹಾರೀರಾಯ ವಿದ್ಯಾ-ವಿಕ್ರಮವಂತೆಯಾದ ಸೊಸೆಗೆ ರಾಜಕೀಯ ಶಿಕ್ಷಣ ನೀಡಿದ. ಯುದ್ಧವಿದ್ಯೆಯನ್ನೂ ಕಲಿಸಿದ. ಪಾಣಿಪತ್ ಕದನದ ಸಮಯದಲ್ಲಿ ತಾನೇ ಮುಂದೆ ನಿಂತು ಮದ್ದುಗುಂಡಿನ ವ್ಯವಸ್ಥೆ ಮಾಡಿದ್ದಳು ಅಹಲ್ಯಾಬಾಯಿ. ಆದರೆ ಮದುವೆಯಾದ ಕೆಲವೇ ಸಮಯದಲ್ಲಿ ಅಹಲ್ಯಾಬಾಯಿ ವಿಧವೆಯಾದಳು. ತನ್ನ ರಾಜಕೀಯ ಗುರು ಮಾವನನ್ನೂ ಕಳೆದುಕೊಂಡಳು. ಮಗ-ಮಗಳು-ಅಳಿಯನನ್ನೂ ಕಳೆದುಕೊಂಡು ಅಕ್ಷರಶಃ ಅನಾಥಳಾದಳು. ಇಂತಹ ದುರ್ಭರ ಸನ್ನಿವೇಶದಲ್ಲೂ ದೇಶಕ್ಕಾಗಿ ತಾನು ಬದುಕಿ ಎಲ್ಲಾ ಕಿರುಕುಳಗಳನ್ನೂ ಹತ್ತಿಕ್ಕಿ ಜಗತ್ತು ಮೂಗಿನ ಮೇಲೆ ಬೆರಳಿಡುವಂತೆ ಮೂವತ್ತುವರ್ಷಗಳ ಪರ್ಯಂತ ವಿಚಕ್ಷಣೆಯಿಂದ ರಾಜ್ಯವಾಳಿದಳು. ಮಾಳವವನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಿ ಶಾಂತಿ-ಸೌಖ್ಯ-ಸಾಂಸ್ಕೃತಿಕ ನಗರಿಯನ್ನಾಗಿಸಿದಳು.

               ತುಕ್ಕೋಜಿರಾವ್ ಹೋಳ್ಕರ್ ಉತ್ತರಭಾರತದಲ್ಲಿ ಯುದ್ಧ ಮಾಡುತ್ತಿದ್ದ ಸಂದರ್ಭದಲ್ಲಿ ರಘುನಾಥ ಪೇಶ್ವೆ ಮಾಳವ ರಾಜ್ಯವನ್ನು ವಶಪಡಿಸಿಕೊಳ್ಳಲು ಮಹೇಶ್ವರ ಕೋಟೆಗೆ ಮುತ್ತಿಗೆ ಹಾಕಿದಾಗ, ಅಹಲ್ಯಾಬಾಯಿ ರಾಜಕೀಯ ಮುತ್ಸದ್ದಿತನ ಮೆರೆದಳು. ಶಾಂತಿಪ್ರಿಯಳಾಗಿದ್ದ ಅಹಲ್ಯಾಬಾಯಿ ಯುದ್ಧಗಳನ್ನು ಆದಷ್ಟು ಮುಂದೂಡುತ್ತಿದ್ದಳು. ಯುದ್ಧದಿಂದ ವಿನಾಶ, ಜನಸಾಮಾನ್ಯರು ಕಷ್ಟಕ್ಕೆ ಈಡಾಗುತ್ತಾರೆ ಎಂದು ತಿಳಿದಿದ್ದಳು. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ರಣಚಂಡಿಯಾಗುತ್ತಿದ್ದಳು. ಸ್ವಯಂ ರಣರಂಗಕ್ಕಿಳಿಯುತ್ತಿದ್ದ ಈ ತರುಣಿ ಚಂದ್ರಚೂಡ, ರಾಘೋಬಾರನ್ನು ದಿಟ್ಟತನದಿಂದ ಎದುರಿಸಿ ಬಡಿದಟ್ಟಿದಳು. ದಾಳಿಯೆಸಗಿದ ಚಂದ್ರಾವತದ ರಾಜಪುತ್ರರನ್ನು ಒದ್ದೋಡಿಸಿದಳು. ಸ್ತ್ರೀಶಕ್ತಿಯ ಪಡೆಯೊಂದನ್ನು ಕಟ್ಟಿದಳು. ಇಂದೋರಿನಿಂದ ಪುರಾಣ ಪ್ರಸಿದ್ಧ ಮಾಹಿಷ್ಮತಿ(ಮಹೇಶ್ವರ)ಗೆ ಬಂದು ಆ ಊರನ್ನು ಭವ್ಯ ದೇಗುಲಗಳಿಂದ, ಸ್ನಾನಘಟ್ಟಗಳಿಂದ, ವಿವಿಧ ಉದ್ಯಮ-ಅಭಿವೃದ್ಧಿ ಕಾರ್ಯಗಳಿಂದ ಅಲಂಕರಿಸಿದಳು. ಅವಳದ್ದು ಚಾಣಾಕ್ಷ-ಆದರ್ಶ ಪ್ರಜಾಪಾಲನೆ. ಕ್ಷಾತ್ರಧರ್ಮಕ್ಕೆ ಚ್ಯುತಿ ತಾರದ ಆಡಳಿತ. ಪ್ರಜೆಗಳಿಗೆ ಚೋರರ ಭಯವಿರಲಿಲ್ಲ. ದುಷ್ಟ ಅಧಿಕಾರಿಗಳ ತೊಂದರೆಯೂ ಇರಲಿಲ್ಲ. ದೀನದಲಿತರಿಗೆ ಅನ್ನಾಶ್ರಯ, ವಿದ್ವಜ್ಜನರಿಗೆ ಗೌರವ, ಅನವಶ್ಯಕ ಕರಭಾರವಿಲ್ಲದ ದಕ್ಷ ಆಡಳಿತ, ವೈಯುಕ್ತಿಕ ಶುದ್ಧ ಚಾರಿತ್ರ್ಯದ ಸರಳ ಜೀವನ ಹೀಗೆ ಸನಾತನ ಧರ್ಮಕ್ಕೆ ಕಿರೀಟಪ್ರಾಯವಾದ ಆಡಳಿತ ಅವಳದ್ದು. ಸ್ತ್ರೀಧನ, ವಿಧವಾ ಸೌಕರ್ಯ, ದತ್ತುಸ್ವೀಕಾರಕ್ಕೆ ಅವಳು ಮಾಡಿದ ಕಾನೂನುಗಳು ಸರ್ವಕಾಲಕ್ಕೂ ಅನುಕರಣೀಯ. ಅವಳ ಪ್ರಜಾವಾತ್ಸಲ್ಯ, ಸ್ವಯಂ ಬೇಹುಗಾರಿಕೆ, ಪ್ರಾಮಾಣಿಕ ಅಧಿಕಾರಿಗಳ, ಸೇವಕರ ಮೇಲಿನ ಔದಾರ್ಯ-ಹಿತಚಿಂತನೆಗಳು ದಂತಕಥೆಗಳೇ ಆಗಿ ಹೋಗಿವೆ. ತಾಯಿಯಂತೆ ಅವಳು ರಾಜ್ಯವನ್ನು ಪರಿಪಾಲಿಸಿದಳು. ದರೋಡೆಕೋರರನ್ನೂ ಚತುರೋಪಾಯಗಳಂದ ಮಣಿಸಿ ಸಂಸ್ಕರಿಸಿ ನಾಗರಿಕರನ್ನಾಗಿಸುತ್ತಿದ್ದಳು. ಕಳ್ಳರ ನಿಯಂತ್ರಣ ಮಾಡುವ ವೀರನಿಗೆ ಮಗಳು ಮುಕ್ತಾಬಾಯಿಯನ್ನು ಧಾರೆಯೆರೆಯುವುದಾಗಿ ಸಾರಿ ಅದರಂತೆ ನಡೆದು ವಿಕ್ರಮ ತೋರಿದ ಸಾಮಾನ್ಯ ಯೋಧ ಯಶವಂತರಾಯನನ್ನು ಅಳಿಯನನ್ನಾಗಿಸಿಕೊಂಡ ರಾಜಕೀಯ ಚತುರಮತಿ ಆಕೆ. ನ್ಯಾಯ ನಿರ್ಣಯದಲ್ಲಂತೂ ಆಕೆ ಅಸಮಾನಳು.

             ಅಹಲ್ಯಾ ಬಾಯಿಯ ಮಗ ಮಾಲೋಜಿ ಮಹಾಕ್ರೂರಿಯಾಗಿದ್ದ. ಅವನೊಮ್ಮೆ ಮುದ್ದು-ಮುಗ್ಧ ಕರುವಿನ ಮೇಲೆ ತನ್ನ ರಥವನ್ನು ಹಾಯಿಸಿಬಿಟ್ಟ. ತನ್ನ ಕರುವನ್ನು ಕಳೆದುಕೊಂಡ ಹಸು ತ್ವರಿತ ನ್ಯಾಯಕ್ಕಾಗಿ ಕಟ್ಟಿದ್ದ ಗಂಟೆಯ ಹಗ್ಗವನ್ನು ಎಳೆದೇ ಬಿಟ್ಟಿತು. ಮಾತು ಬಾರದ ಗೋಮಾತೆ ಮಾತಿಗೆ ಮೀರಿದ ವೇದನೆಯನ್ನು ಘಂಟಾನಾದದ ಮೂಲಕ ವ್ಯಕ್ತಪಡಿಸಿತ್ತು! ತಕ್ಷಣ ಹೊರಬಂದು ನೋಡಿ ಆಶ್ಚರ್ಯಗೊಂಡು ಗೋವಿನ ಮಾಲಕನ ಮೂಲಕ ನಿಜ ವಿಷಯ ಅರಿತ ಅಹಲ್ಯೆಯ ಮುಖದಿಂದ ಅಗ್ನಿವರ್ಷದಂತಹ ಆಜ್ಞೆಯೇ ಹೊರಹೊಮ್ಮಿತು. ಆಕೆ "ಮಾಲೋಜಿಯ ಕೈ-ಕಾಲು ಕಟ್ಟಿ, ಕರುವಿನ ಪ್ರಾಣಹರಣವಾದ ಸ್ಥಳದಲ್ಲಿಯೇ ಕೆಡವಿ, ಯಾವ ರಥವೇರಿ ಆ ಘೋರ ಕೃತ್ಯವನ್ನಾತ ನಡೆಸಿದ್ದನೋ ಅದೇ ರಥವನ್ನು ಆತನಮೇಲೆ ಹರಿಸಬೇಕೆಂದು" ಆಜ್ಞಾಪಿಸಿದಳು. ಯಾರೂ ರಾಜವಂಶದ ಕುಡಿಯ ಕೊಲೆಗೆ ಒಪ್ಪದಿದ್ದಾಗ ತಾನೇ ರಥವೇರಿ ಹಾಯಿಸಲು ಮುಂದಾದಳು. ಏನಾಶ್ಚರ್ಯ...ತನ್ನ ಕರುವನ್ನು ಕಳೆದುಕೊಂಡು ಅತೀವ ದುಃಖಗೊಳಗಾಗಿ ನ್ಯಾಯ ಬೇಡಿದ್ದ ಅದೇ ಗೋಮಾತೆ ರಥಕ್ಕೆ ಅಡ್ಡಲಾಗಿ ನಿಂತುಕೊಂಡಿತು. ಏನೋ ಕಾಕತಾಳೀಯ ಇರಬೇಕೆಂದು ಮತ್ತೆ ಮತ್ತೆ ಯತ್ನಿಸಲಾಗಿಯೂ ಗೋಮಾತೆ ಅಡ್ಡಬಂದು ರಾಜಕುಮಾರನನ್ನು ರಕ್ಷಿಸಿತು. ಆ ಸ್ಥಳಕ್ಕೆ ಇಂದಿಗೂ ಆಡಾ ಬಜಾರ್ ಎಂದು ಕರೆಯಲಾಗುತ್ತಿದೆ. ಹೀಗೆ ತನ್ನ ಮಗನೆಂಬ ಮಮಕಾರವನ್ನು ಬದಿಗಿಟ್ಟು ವಜ್ರಕಠೋರ ನಿರ್ಧಾರವನ್ನು ಕೈಗೊಂಡು ಸ್ವತಃ ಮಾಡಿ ತೋರಿಸಿದ ನ್ಯಾಯತತ್ಪರತೆ ಅವಳದ್ದು.

                ಕೃಷಿ, ಗೋರಕ್ಷೆ, ವಾಣಿಜ್ಯಕ್ಕೆ ಒತ್ತಾಸೆಯಾಗಿ ಅದ್ಭುತ ದಂಡನೀತಿಯಿಂದ ಪ್ರಜಾನುರಾಗಿಯಾಗಿ, ಸುಸಜ್ಜಿತ ಸೈನ್ಯ, ಸದಾ ತುಂಬಿತುಳುಕುವ ಬೊಕ್ಕಸದಿಂದ ಮಾಳವ ಪ್ರಾಂತವನ್ನು ಶ್ರೀಮಂತಗೊಳಿಸಿದಳಾಕೆ. ಅಹಲ್ಯಾಬಾಯಿಯು ಮಾವ ಕುಳಿತ ಚಿನ್ನದ ಸಿಂಹಾಸನದ ಮೇಲೆ ಕೂರದೆ ನೆಲಹಾಸಿಗೆಯ ಮೇಲೆ ಕುಳಿತು ರಾಜಸಭೆಯನ್ನು ನಡೆಸುತ್ತಿದ್ದಳು. ತನ್ನ ಖಾಸಗಿ ಬೊಕ್ಕಸಕ್ಕೆ ಸೇರಿದ ಹದಿನಾರು ಕೋಟಿ ರೂಪಾಯಿಗಳೆಲ್ಲವನ್ನೂ ದೇಶಹಿತಕ್ಕೆ ವಿನಿಯೋಗಿಸಿದ ಕರ್ಮಯೋಗಿನಿಯಾಕೆ. ಪುಣೆಯ ದರ್ಬಾರಿನಲ್ಲಿ ತನ್ನ ಮಾತಿಗೆ ಸದಾ ಮನ್ನಣೆ ಪಡೆಯುತ್ತಿದ್ದ ಗೌರವ ಮೂರ್ತಿ ಆಕೆ. ಇಡಿಯ ಮರಾಠವಾಡೆ ಆರಾಧಿಸಿದ ಮಾತಾ ಮೂರ್ತಿ ಆಕೆ. ಸಂಸ್ಥಾನವೊಂದರ ಅಧಿಕಾರಿಣಿಯಾಗಿದ್ದರೂ ಬಿಳಿಯ ಸೀರೆ ಧರಿಸಿ, ಭಸ್ಮ ಬಳಿದು ನಿಸ್ಪೃಹಳಾಗಿ ಸಂನ್ಯಾಸಿನಿಯಂತೆ ಜೀವನ ಸಾಗಿಸಿದ ತಪಸ್ವಿನಿ ಅವಳು. ಅಹಲ್ಯಾಬಾಯಿ ತನ್ನ ಮುಖಸ್ತುತಿಯನ್ನು ಎಂದೂ ಇಷ್ಟಪಡುತ್ತಿರಲಿಲ್ಲ. ಒಮ್ಮೆ ಪಂಡಿತ್ ಕುಶಾಲಿ ರಾಮ್ ಅಹಲ್ಯಾಬಾಯಿಯ ಧರ್ಮ ಕಾರ್ಯಗಳು ಮತ್ತು ಅವಳ ಸದ್ಗುಣಗಳ ವರ್ಣನೆಯುಳ್ಳ 'ಅಹಲ್ಯಾಬಾಯಿ ಕಾಮಧೇನು' ಹಲವು ಸಾವಿರ ಪದ್ಯಗಳ ಕೃತಿರಚಿಸಿ ಅವಳ ಸಮ್ಮುಖದಲ್ಲಿ ಓದಲು ತೊಡಗಿದಾಗ ನನ್ನ ಬಗ್ಗೆ ಬರೆದು ಜೀವನವನ್ನೇಕೆ ವ್ಯರ್ಥ ಮಾಡುತ್ತಿ. ದೇವರ ಬಗ್ಗೆ ಬರೆ ಎಂದು ಬುದ್ಧಿವಾದ ಹೇಳಿದಳು. ಪಂಡಿತ ಹೊರಟುಹೋದ ಬಳಿಕ ಆ ಕೃತಿಯನ್ನು ನರ್ಮದೆಯಲ್ಲಿ ಬಿಸುಟಲು ಆಜ್ಞಾಪಿಸಿದಳು. ಸಂಸ್ಕೃತ, ಮರಾಠಿ, ಹಿಂದಿಗಳಲ್ಲಿ ಪಾಂಡಿತ್ಯ ಹೊಂದಿದ್ದು, ರಾಜ್ಯದ ಸರ್ವಸ್ವವೂ ಶಿವಾರ್ಪಣೆಯೆಂದುಸುರಿ ತಾನು ಹೊರಡಿಸುವ ಆಜ್ಞೆಗಳೆಲ್ಲದರ ಮೇಲೆ "ಶ್ರೀಶಂಕರ" ಎಂದು ಸಹಿ ಮಾಡುತ್ತಿದ್ದಳಾಕೆ. ಸರ್ವ ಮತ-ಸಂಪ್ರದಾಯಗಳನ್ನೂ, ಕವಿಪಂಡಿತರನ್ನು, ಕಲೆಸಾಹಿತ್ಯಗಳನ್ನು ಪೋಷಿಸಿ ಬೆಳೆಸಿದಳು. ಕಾಶಿಯಲ್ಲಿ ಬ್ರಹ್ಮಪುರಿಯೆಂಬ  ಮಹಾ ಅಗ್ರಹಾರವನ್ನೇ ಸ್ಥಾಪಿಸಿ ಆಜೀವ ಪರ್ಯಂತ ಅಶನ-ವಸನ-ಸಂಭಾವನೆಗಳ ವ್ಯವಸ್ಥೆ ಮಾಡಿದಳು. ಸಂಸ್ಕೃತ ಪಾಠ ಶಾಲೆಗಳನ್ನು ಪ್ರಾರಂಭಿಸಿದಳು.

                 ರಾಷ್ಟ್ರದ ಎಲ್ಲಾ ಪ್ರಮುಖ ನಗರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಅಹಲ್ಯಾಬಾಯಿಯ ಅಧಿಕಾರಿಗಳೂ, ಆಶ್ರಯಸ್ಥಾನಗಳೂ ಇದ್ದವೆಂದರೆ ಅವಳ ದೂರದೃಷ್ಟಿ ಅರಿವಾದೀತು. ಆಸೇತುಹಿಮಾಚಲದ ಎಲ್ಲಾ ಪುಣ್ಯಕ್ಷೇತ್ರಗಳಲ್ಲೂ ಮಂದಿರ-ಧರ್ಮಛತ್ರ-ಸತ್ರ-ಸ್ನಾನಘಟ್ಟಗಳನ್ನು ನಿರ್ಮಾಣ ಮಾಡಿದಳು. ನರ್ಮದಾ ಪರಿಕ್ರಮಕ್ಕೆ ಇವಳ ಯೋಗದಾನ ಅಪರಿಮಿತ. ಅವಳು ನಿರ್ಮಿಸಿದ ಕೆರೆ, ಬಾವಿ, ಕಟ್ಟೆ-ಅಣೆಕಟ್ಟು, ಮಂಟಪ, ತೋಪುಗಳು ಲೆಖ್ಖವಿಲ್ಲದಷ್ಟು. ಶಿವರಾತ್ರಿಯಂತಹ ವಿಶೇಷ ದಿನಗಳಂದು ಗಂಗೋತ್ರಿಯಿಂದ ಗಂಗಾಜಲವನ್ನು ತಂದು ಎಲ್ಲಾ ದೇವಾಲಯಗಳಲ್ಲೂ ಅಭಿಷೇಕಗೈಯ್ಯುವ ವ್ಯವಸ್ಥೆಯನ್ನು ಅವಳು ರೂಪಿಸಿದ್ದಳು. ಗೋ, ಬ್ರಾಹ್ಮಣ, ಯಾತ್ರಿಕ, ಸಾಧು-ಸಂತರಿಗೆ ಆಶ್ರಯತಾಣಗಳನ್ನು ನಿರ್ಮಿಸಿದಳು. ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಗೋಮಾಳಗಳ ವ್ಯವಸ್ಥೆ, ಪ್ರಾಣಿ-ಪಕ್ಷಿಗಳಿಗಾಗಿ ಕಾಳು-ಹುಲ್ಲು-ನೀರುಗಳ ವ್ಯವಸ್ಥೆ ಮಾಡಿದ್ದಳು. ಜಲಚರಗಳ ಆಹಾರಕ್ಕೆ ಕೆರೆಕಟ್ಟೆಗಳಿಗೆ ಮೂಟೆ ಮೂಟೆ ಆಹಾರವನ್ನು ಸುರಿಸುತ್ತಿದ್ದಳು. ಇರುವೆಗಳಿಗೆ ಸಿಹಿಹಿಟ್ಟಿನಗುಳಿಗೆಗಳನ್ನು ಸಿದ್ಧಪಡಿಸಿದ್ದಳೆಂದರೆ ಆಕೆ ಎಂತಹ ಸೂಕ್ಷ್ಮಮತಿಯಾಗಿರಬೇಕು. ಹೀಗೆ ಮತಾಂಧತೆಯಿಂದ ಜರ್ಝರಿತಗೊಂಡಿದ್ದ ದೇಶಕ್ಕೆ ಧೈರ್ಯ-ಸಾಂತ್ವನಗಳನ್ನು ನೀಡಿದಳು ಈ ಕಲಿಯುಗದ ಅಹಲ್ಯೆ. ಇವಳ ಕಾರಣದಿಂದ ಹಿಂದೂಗಳು ಜೆಜಿಯಾ, ತೀರ್ಥಯಾತ್ರಾಕರ, ತೀರ್ಥಸ್ನಾನಕರಗಳಿಂದ ಮುಕ್ತರಾಗಿ ಪುಣ್ಯಕ್ಷೇತ್ರ ದರ್ಶನ ಮಾಡುವಂತಾಯಿತು. ನಮ್ಮ ಕಲೆ-ಸಾಹಿತ್ಯ-ಉತ್ಸವ-ಸಂಸ್ಕೃತಿಗಳು ಪುನರುತ್ಥಾನಗೊಂಡವು.

                  ಭಾರತೀಯ ಸಂಸ್ಕೃತಿಕೋಶದಲ್ಲಿ ಅವಳು ಕಟ್ಟಿಸಿದ ದೇವಾಲಯಗಳು, ಜೀಣೋದ್ಧಾರ ಮಾಡಿಸಿರುವ ದೇವಾಲಯಗಳು, ನಿತ್ಯಪೂಜೆಗಾಗಿ ನೀಡಿರುವ ಶಾಶ್ವತ ಉಂಬಳಿಗಳ ಪಟ್ಟಿಯೇ ಇದೆ. ಅವಳು ತೆಗೆದಿರಿಸಿರುವ ಹಣದಲ್ಲಿ ಇಂದಿಗೂ ಶಿವರಾತ್ರಿ, ಏಕಾದಶಿಗಳಂದು ಕೇಂದ್ರ ಸರ್ಕಾರದ ಮುಖಾಂತರ ಪ್ರತಿ ರಾಜ್ಯಕ್ಕೂ ಗಂಗಾಜಲ ವಿತರಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಾಣ ಮಾಡಿಸಿದಳು. ಪ್ರಮುಖವಾಗಿ ಭಾರತದ ದ್ವಾದಶ ಜ್ಯೋತಿರ್ಲಿಂಗಗಳ ದೇವಾಲಯಗಳನ್ನು ಜೀಣೋದ್ಧಾರ ಮಾಡಿದಳು. ಮತಾಂಧ ಮೊಘಲರ ದುರಾಡಳಿತ, ಹಿಂದೂ ವಿರೋಧಿ ನೀತಿಗೆ ತನ್ನದೇ ರೀತಿಯ ಉತ್ತರ ಕೊಟ್ಟಳು. ಮಹೇಶ್ವರದಲ್ಲಿ ಅಹಲ್ಯಾಬಾಯಿಗೆ ದೇವಾಲಯವನ್ನೂ ನಿರ್ಮಿಸಲಾಗಿದೆ. ವಿಷ್ಣುಗಯಾದಲ್ಲೂ ಇವಳ ಮೂರ್ತಿಯಿದ್ದು ಪ್ರತಿನಿತ್ಯ ಪೂಜಿಸಲ್ಪಡುತ್ತಿದ್ದಾಳೆ. ಕೇಂದ್ರ ಸರ್ಕಾರ ಇವಳ ಗೌರವಾರ್ಥವಾಗಿ 1996ರಲ್ಲಿ ಇವಳ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಸ್ತ್ರೀಶಕ್ತಿಯ ಪ್ರಶಸ್ತಿಗಳಲ್ಲಿ ಅಹಲ್ಯಾಬಾಯಿ ಹೋಳ್ಕರ್ ಪ್ರಶಸ್ತಿಯನ್ನೂ ಸ್ಥಾಪಿಸಿದೆ. ಇಂದೋರ್ನ ವಿಶ್ವವಿದ್ಯಾಲಯಕ್ಕೆ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಇಂದೋರ್ ವಿಮಾನ ನಿಲ್ದಾಣಕ್ಕೆ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ.

ಮಂಗಳವಾರ, ಆಗಸ್ಟ್ 2, 2016

ಧನುರ್ವೇದ

ಮಂತ್ರ ಮುಕ್ತ : ಉಪಸಂಹಾರವಿಲ್ಲದೆ ಮಂತ್ರಪೂರ್ವಕವಾಗಿ ಮಾಡುವ ಬಾಣ ಪ್ರಯೋಗ
ಪಾಣಿ ಮುಕ್ತ : ಧನುಸ್ಸಿಗೆ ಬಾಣವನ್ನು ಯೋಜಿಸಿ ಕೈಚಳಕದಿಂದ ಮಾಡುವ ಬಾಣ ಪ್ರಯೋಗ
ಮುಕ್ತಾಮುಕ್ತಾ : ಪ್ರಯೋಗ ಹಾಗೂ ಉಪಸಂಹಾರ ಎರಡೂ ಇರುವುದು
ಅಮುಕ್ತ : ಪ್ರಯೋಗ ಮಾಡದೆ ಕೇವಲ ಮಂತ್ರಶಕ್ತಿ ಸ್ಥಾಪಿತವಾಗಿರುವ ಧ್ವಜ ಅಥವಾ ಆಯುಧಗಳು

ಬತ್ತಳಿಕೆಯಿಂದ ಬಾಣವನ್ನು ತೆಗೆಯುವುದು - ಆದಾನ
ಬಾಣವನ್ನು ಧನುಸ್ಸಿನಲ್ಲಿ ಯೋಜಿಸುವುದು - ಸಂಧಾನ
ಬಿಲ್ಲಿನ ಶಿಂಜಿನಿಯನ್ನು ಸೆಳೆದು ಬಾಣ ಬಿಡುವುದು - ಮೋಕ್ಷಣ
ಎದುರಾಳಿಯು ದುರ್ಬಲನಾಗಿದ್ದಲ್ಲಿ, ಶಸ್ತ್ರರಹಿತನಾಗಿದ್ದಲ್ಲಿ ಬಿಟ್ಟ ಬಾಣವನ್ನು ಹಿಂದಕ್ಕೆ ತೆಗೆದುಕೊಳ್ಳುವುದು - ವಿನಿವರ್ತನ

ಶರಸಂಧಾನ ಮಾಡುವ ಧನುಸ್ಸಿನ ಮಧ್ಯಭಾಗ - ಸ್ಥಾನ
ಮೂರು ಅಥವಾ ನಾಲ್ಕು ಬೆರಳುಗಳ ಸಹಯೋಗದಿಂದ ಬಾಣ ಬಿಡುವುದು - ಮುಷ್ಠಿ
ಮಧ್ಯಮ ಮತ್ತು ಅಂಗುಷ್ಠಗಳಿಂದ ಬಾಣ ಸೆಳೆದು ಬಿಡುವುದು - ಪ್ರಯೋಗ
ಬಾಣಗಳ ಆಘಾತವನ್ನು ತಪ್ಪಿಸಿಕೊಳ್ಳಲು ಬಿಡುವ ಬಾಣ ಪ್ರಯೋಗ - ಪ್ರಾಯಶ್ಚಿತ್ತ
ಚಕ್ರಾಕಾರವಾಗಿ ರಥವನ್ನು ತಿರುಗಿಸುತ್ತಾ ಬಾಣ ಪ್ರಯೋಗ ಮಾಡುವುದು - ಮಂಡಲ
ಶಬ್ಧ ಬರುವ ಕಡೆ ಬಾಣ ಪ್ರಯೋಗ - ಶಬ್ಧವೇಧಿ
ಒಂದೇ ಕಾಲದಲ್ಲಿ ಅನೇಕರ ಮೇಲೆ ಬಾಣಪ್ರಯೋಗ - ರಹಸ್ಯ