ಪುಟಗಳು

ಬುಧವಾರ, ಜುಲೈ 27, 2016

ರಮಣ

ಕಾಲ ಮಣಿಯುವುದು ತತ್ಪರನಾದವನಿಗೆ ಮಾತ್ರ. ತತ್ಪರನು ವೇದಗಳ ತಾತ್ಪರ್ಯವಾಗಿರುತ್ತಾನೆ. ತತ್ಪರನಾದವ ಸ್ತಬ್ಧನಾಗಿರುತ್ತಾನೆ! ಸ್ತಬ್ಧತೆಯಲ್ಲಿ ಕಾಲವೂ ನಿಶ್ಚಲ! ತನ್ನನ್ನು ನಿಶ್ಚಲಗೊಳಿಸುವವನಿಗಷ್ಟೇ ಕಾಲ ಮಣಿಯುತ್ತದೆ. ಅವನು ಒಂದು ಬ್ರಹ್ಮಾಂಡದಿಂದ ಇನ್ನೊಂದಕ್ಕೆ ಸಂಚರಿಸಬಲ್ಲ. ಸಂಚರಿಸುವುದೆಂದರೇನು ಬ್ರಹ್ಮಾಂಡಗಳೆಲ್ಲವೂ ಅವನಾಗಿರುವಾಗ. ತತ್ಪರದ ಇನ್ನೊಂದು ಅರ್ಥವೇ ಎಲ್ಲಾ ಕಡೆ ಇರುವನೆಂದು. ಎಲ್ಲಾ ಕಡೆ ಇರುವ, ಎಲ್ಲವೂ ಅವನೇ ಆಗಿರುವವನಿಗೆ ಕಾಲ ಮಣಿಯದೆ ಇನ್ನೇನು ಮಾಡಿತು. ಸ್ತಬ್ಧನಾಗಿಯೇ ಅವನು ಜ್ಞಾನ ಪಸರಿಸಿದ. ರಮಣ ಎಂದರೆ ಒಡೆಯ ಎನ್ನುವ ಅರ್ಥವೂ ಇದೆ! ಅರುಣಾಚಲ ಎನ್ನುವ ಹೆಸರಲ್ಲೇ ಎಲ್ಲಾ ಇದೆ! ಸ್ತಬ್ಧತೆಯೂ! ತಾತ್ಪರ್ಯವೂ!
#ರಮಣ

ಶೂನ್ಯವಾದ


           ಮಹಾಭಾರತದಲ್ಲಿ ಕರ್ಣನನ್ನು ಸೂತಪುತ್ರ ಎನ್ನಲಾಗಿದೆ. ಏನಿದು "ಸೂತ" ಅಂದರೆ? ಸೂತರೆಂದರೆ ಬ್ರಾಹ್ಮಣರಲ್ಲ. ಕ್ಷತ್ರಿಯರಲ್ಲ; ವೈಶ್ಯ, ಶೂದ್ರರೂ ಅಲ್ಲ. ಅವರದ್ದು ವಿಲೋಮ ಜಾತಿಯಾಗಿತ್ತು. ಸೂತರಲ್ಲಿ ಎರಡು ಪಂಗಡ: ಕ್ಷತ್ರಿಯ ಪುರುಷ - ಬ್ರಾಹ್ಮಣ ಸ್ತ್ರೀ ಇವರ ಸಂತತಿಯದ್ದು ಒಂದು. ಕ್ಷತ್ರಿಯರ ರಥ ಹೊಡೆಯುವ ವೃತ್ತಿ ಅವರದ್ದು. ಕರ್ಣ ಇಂತಹ ಸೂತರ ಮನೆಯಲ್ಲಿ ಬೆಳೆದ. ರಥ ಹೊಡೆಯುವವನೊಬ್ಬನ ಮಗ ಧನುರ್ವಿದ್ಯಾ ಪ್ರವೀಣನಾದದ್ದು ಕಂಡು ಕ್ಷತ್ರಿಯರಿಗೆ ಈರ್ಷ್ಯೆ ಉಂಟಾಗಿರಬಹುದು. ಆದರೆ ಕರ್ಣ ಇದರ ಮರ್ಮ ಅರಿಯದೆ ಸಪ್ತಮಹಾಪಾತಕಿಗಳಲ್ಲೊಬ್ಬನಾದ. ಅದು ಬೇರೆ ಮಾತು. ಸಮಾಜ ಮುಂದೆ ಕರ್ಣನನ್ನೂ ಕ್ಷತ್ರಿಯನೆಂದೇ ಒಪ್ಪಿತು. ಅವನ ಮಗನನ್ನು ಪಾಂಡವರೇ ಸಲಹಿದರು! ಆ ರೀತಿ ನೋಡಿದರೆ ಈ ತರಹದ ಈರ್ಷ್ಯೆ ಇಂದಿನ  ಸಮಾಜದಲ್ಲಿ ಅತಿರೇಕ ತಲುಪಿಲ್ಲವೇ? ತಮಗಿಂತ ಅಂತಸ್ತು ಅಥವಾ ಜಾತಿಯಲ್ಲಿ ಕೆಳಗಿನವನೊಬ್ಬ ಅಥವಾ ತಮ್ಮ ಸಿದ್ಧಾಂತವನ್ನೊಪ್ಪದವನೊಬ್ಬ ಹೆಚ್ಚಿನ ಪ್ರತಿಭೆ ಹೊಂದಿದ್ದರೆ/ತೋರಿಸಿದರೆ ಅಥವಾ ಪ್ರಬಲನಾದರೆ ಅವನ ಕಥೆ ಮುಗಿಸಲೂ ಹೇಸದ ಸಮಾಜ ಇಂದಿನದ್ದು! ಅಲ್ಲದೆ ಇಂದು ಬಡವ-ಬಲ್ಲಿದರ ನಡುವಣ ಭೇದ, ತಮ್ಮ ಜಾತಿಯವನಲ್ಲದವನೊಬ್ಬ, ಭಾಷಿಕನವನಲ್ಲದವನೊಬ್ಬ ಕಛೇರಿ ಸೇರಿಕೊಂಡನೆಂದರೆ ಅವನನ್ನು ಹೇಗೆ  ಓಡಿಸಬೇಕೆಂದು ಉಪಾಯ ಹೂಡುವಂತಹವರು, ತಮ್ಮ ಮತವೇ ಶ್ರೇಷ್ಠವೆನ್ನುವವರು, ತಮ್ಮ ಜಾತಿ-ಮತ-ಪಂಥವೇ ಮೇಲ್ಮೆಗೆ ಬರುವಂತೆ ಇತಿಹಾಸ ತಿರುಚುವವರು, ತಮ್ಮ ಸಿದ್ಧಾಂತವನ್ನೇ ಹೇರುವವರು, ಜಾತಿಸಂಘಟನೆಗಳು, ಜಾತಿವಾರು ಮಠಗಳು, ಜಾತಿವಾರು ಶಿಕ್ಷಣ ಸಂಸ್ಥೆಗಳು....ಅಬ್ಬಬ್ಬಾ!

            ಇನ್ನೊಂದು ವೈಶ್ಯಪುರುಷ-ಕ್ಷತ್ರಿಯ ಸ್ತ್ರೀ ಇವರ ಸಂತತಿ. ಇವರ ಕೆಲಸ ಪುರಾಣ ಕೇಳುವುದು-ಹೇಳುವುದು. ಮಹಾಭಾರತದ ಸಂಜಯ, ಶೌನಕಾದಿ ಮುನಿಗಳಿಗೆ ಭಾರತ-ಭಾಗವತಗಳನ್ನು ಹೇಳಿದ "ಸೂತ ಪುರಾಣಿಕ" ಎಂತಲೇ ಪ್ರಸಿದ್ಧನಾದ ಉಗ್ರಶ್ರವ ಎಲ್ಲಾ ಈ ವರ್ಗದವರು! ಇಲ್ಲೊಂದು ವಿಚಿತ್ರ ನೋಡಿ..."ಹೇಳುವವನು" ವಿಲೋಮ ಜಾತಿಯ ಸೂತ ಪುರಾಣಿಕ; ಕೇಳುವವನು ಶ್ರೋತ್ರಿಯ ಬ್ರಾಹ್ಮಣ! ಮತ್ತೆ... ಜಾತಿ ಪದ್ದತಿ, ಕಾದ ಸೀಸ ಕಿವಿಗೆ ಸುರಿವುದು.... ಎಲ್ಲಿಂದ ಬಂತು? ಇದ್ದರೂ ಈಗ ಯಾರು ಯಾರಿಗೆ ಸುರಿವುದು? ಯಾರು ಕೆಳಗೆ? ಯಾರು ಮೇಲು? ಸ್ಪೃಷ್ಯ ಯಾರು? ಅಸ್ಪ್ರಶ್ಯನಾರು? ಕಮ್ಯೂನಿಷ್ಟರ ಈ ಕಪೋಲ-ಕಲ್ಪಿತ ಕಥೆಗಳಿವೆಯಲ್ಲ, ಇವುಗಳಿಗೆಲ್ಲಾ ಆಧಾರ ಹುಡುಕಹೊರಟರೆ ಸಿಗುವುದು ನವ ಬೌದ್ಧರ ಶೂನ್ಯವೇ! ನದಿಮೂಲ, ಸ್ತ್ರೀಮೂಲ, ಋಷಿಮೂಲಗಳನ್ನು ಹುಡುಕಲು ಹೋಗಬಾರದೆಂಬ ಮಾತಿದೆ. ಅದೇ ರೀತಿ ಈ ಕಮ್ಯೂನಿಷ್ಟರ ವಾದಗಳಿಗೆ ಆಧಾರಗಳನ್ನು ಹುಡುಕಬಾರದೇನೋ!

ಸೋಮವಾರ, ಜುಲೈ 25, 2016

ಭಾಗವತದಲ್ಲಿ ಅದ್ವೈತ ಭಾವ

ಶುಕ ದ್ವೈಪಾಯನ ವ್ಯಾಸರ ಓರ್ವನೇ ಮಗ. ಮಹಾಜ್ಞಾನಿಯಾಗಿ ತೀವ್ರ ವಿರಾಗ ಭಾವದಿಂದ ಮನೆ ಬಿಟ್ಟು ಹೋದ. ಎಲ್ಲೆಲ್ಲೂ(!) ಅಲೆಯುತ್ತಿದ್ದ. ವ್ಯಾಸರಿಗೆ ಪುತ್ರವಿಯೋಗ ಆವರಿಸಿಕೊಂಡುಬಿಟ್ಟಿತು.  ದೈಪಾಯನ ವ್ಯಾಸರು ಮಗನನ್ನು ಹುಡುಕುತ್ತಾ "ಮಗನೇ" ಎಂದು ಕೂಗಿ ಕರೆಯುತ್ತಾ ಎಲ್ಲೆಲ್ಲೋ ಅಲೆದರು. ಆಗೊಂದು ಅದ್ಭುತ ಘಟಿಸಿತು. ಕಾಡಿನ ತರುಲತೆಗಳೆಲ್ಲಾ ಅವರ ಕರೆಗೆ ಓಗೊಟ್ಟವಂತೆ.
"ದ್ವೈಪಾಯನೋ ವಿರಹಕಾತರಃ ಆಜುಹಾವ| ತರವೋSಭಿನೇದುಃ"

ಶುಕನನ್ನು ವಹಿಸಿಕೊಂಡು ಅವನ ಪರವಾಗಿ ಪ್ರಕೃತಿಯೇ ಪ್ರತಿಸ್ಪಂದಿಸಿದುದನ್ನು ಕಂಡು ವ್ಯಾಸರಿಗೆ "ಅರಿವು" ಉಂಟಾಯಿತು!
ಶುಕನು ಎಲ್ಲಾ ಜೀವಗಳನ್ನು ತನ್ನಂತೆ ಎಂದು ಬಗೆಯುತ್ತಾನೆ. ಅವನಿಗೆ ಎಲ್ಲವೂ ಒಂದೇ ಎನ್ನುವ "ಅದರ" ಅರಿವಾಗಿದೆ. "ಆ ಅದುವೆ" "ನಾನು" ಎನ್ನುವ ಅರಿವು ಈಗ ವ್ಯಾಸರಿಗೂ ಆಗಿದೆ! ಹೀಗೆ ಬಯಲಾದವ ತನ್ನದಾದ ಆಲಯದಲ್ಲಿರಲು ಸಾಧ್ಯವೇ?
ಭಾಗವತದ ಪ್ರವೇಶಿಕೆಯಲ್ಲೇ ಅದ್ವೈತ ಭಾವ! ಮುಂದೆ ಭಾಗವತದಲ್ಲಿರಲಾರದೇ? ಇಲ್ಲ ಎಂದವರಾರು? ಕೃಷ್ಣ ಗೋಪಿಕೆಯರ ಸಂದರ್ಭದಲ್ಲಿ ಕಾಣಿಸಿದ್ದು ಅದೇ ಅಲ್ಲವೇ?

ಸೂಚನೆ: ಶುಕನ ಅಲೆದಾಟಕ್ಕೆ "ಎಲ್ಲೆಲ್ಲೂ" ಹಾಗೂ ವ್ಯಾಸರ ಹುಡುಕಾಟಕ್ಕೆ "ಎಲ್ಲೆಲ್ಲೋ" ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಉಪಯೋಗಿಸಿದ್ದೇನೆ!

ಸೋಮವಾರ, ಜುಲೈ 18, 2016

ಕ್ಷಾತ್ರವನ್ನಪ್ಪಿ ಸನಾತನ ಧರ್ಮವನ್ನು ಬೆಳಗಿದ ಪುಷ್ಯಮಿತ್ರನೆಂಬ ಆರ್ಷಪ್ರಜ್ಞೆ

ಕ್ಷಾತ್ರವನ್ನಪ್ಪಿ ಸನಾತನ ಧರ್ಮವನ್ನು ಬೆಳಗಿದ ಪುಷ್ಯಮಿತ್ರನೆಂಬ ಆರ್ಷಪ್ರಜ್ಞೆ


              ಅಶೋಕನ ಕಾಲಕ್ಕೇ ಬುದ್ಧ ತತ್ವ ಭೃಷ್ಟವಾಗಿತ್ತು. ಕ್ಷಾತ್ರತ್ವ ಸೊರಗಿತ್ತು. ಅಶೋಕ ಇತ್ತ ಸರಿಯಾಗಿ ಸನಾತನ ಧರ್ಮವನ್ನೂ ಅನುಸರಿಸಲಿಲ್ಲ. ಅತ್ತ ಅವನಿಗೆ ಬುದ್ಧನ ಬೆಳಕೂ ಸಿಗಲಿಲ್ಲ. ಅಶೋಕ ತಾನೊಬ್ಬನೆ ಬೌದ್ಧನಾಗಿ ಹೋಗಿದ್ದರೆ ಅದರಿಂದ ಸಮಸ್ಯೆಯೇನೂ ಇರಲಿಲ್ಲ. ಅವನು ಅದನ್ನು ಅನವಶ್ಯವಾಗಿ ಪ್ರಜೆಗಳ ಮೇಲೆ ಹೇರಿದ. ಚಾಣಕ್ಯ-ಚಂದ್ರಗುಪ್ತರ ಮಾರ್ಗದರ್ಶನದಲ್ಲಿ ಉದ್ದೀಪನಗೊಂಡಿದ್ದ ಕ್ಷಾತ್ರ ಕೆಲವೇ ವರುಷಗಳಲ್ಲಿ ನಿಸ್ತೇಜಗೊಂಡಿತು. ಪಂಜಾಬ್, ಗಾಂಧಾರಗಳವರೆಗೂ ಬೌದ್ಧ ಮಠಗಳೇ ತುಂಬಿಕೊಂಡವು.  ಬೌದ್ಧ ತತ್ವಗಳನ್ನು ವಿಶಾಲ ಮನಸ್ಸಿನಿಂದ ಅಧ್ಯಯನ ಮಾಡದ ನವ ಬೌದ್ಧರಿಗೆ ಸನಾತನ ಧರ್ಮದ ಮೇಲೆ ದ್ವೇಷ ಸಾಧಿಸುವುದೇ ನಿತ್ಯ ಕಾಯಕವಾಯಿತು. ಅಶೋಕನ ಮೊಮ್ಮಗ ಸಂಪ್ರತಿ ಚಂದ್ರಗುಪ್ತ ಜೈನನಾಗಿ ಸಲ್ಲೇಖನ ಕೈಗೊಂಡ. ಅವನ ಮಗ ದುರ್ಬಲ ಬೃಹದ್ರಥನ ಕಾಲಕ್ಕೆ ಮಗಧ ಯವನರಿಗೆ ಸುಲಭ ತುತ್ತಾಯಿತು. ಕೆಲವೇ ವರ್ಷಗಳ ಹಿಂದೆ ಅಲೆಗ್ಸಾಂಡರನಂತಹ ವೀರನ ನೇತೃತ್ವವಿದ್ದಾಗ್ಯೂ ಅಪಮಾನಕರ ಸೋಲನ್ನುಂಡು ಪರಾರಿಯಾಗಿದ್ದ ಗ್ರೀಕರು ಸಿಂಧೂ ನದಿಯನ್ನು ದಾಟಿ ಬರುವಂತಹ ಧೈರ್ಯ ತೋರಿದ್ದರೆಂದರೆ ಆಗ ಅರಾಜಕತೆ ಹೇಗೆ ತಾಂಡವಾಡುತ್ತಿದ್ದಿರಬಹುದು. ಇವೆಲ್ಲವೂ ಅವಾಸ್ತವಿಕ ಅಹಿಂಸೆಯನ್ನು ಅಪ್ಪಿದುದರಿಂದಲೇ ತಂದುಕೊಂಡದ್ದು. ವಿದಿಶಾ ವಿದರ್ಭಗಳವರೆಗೂ ಅವರು ಏರಿ ಬಂದರು. ಅಂತಹ ಸಂದರ್ಭದಲ್ಲಿ ದೇಶದ ರಕ್ಷಣೆಗೆ ಮುಂದಾದವ ಪುಷ್ಯಮಿತ್ರ ಶುಂಗ. ವಿದೇಶೀಯರಿಂದ ಆಕ್ರಮಣಕ್ಕೊಳಗಾಗುವಷ್ಟು ದುರ್ಬಲವಾಗಿದ್ದ ಕ್ಷಾತ್ರವನ್ನು ಉದ್ದೀಪಿಸಿ ದೇಶೀಯರಿಗೆ ನೆಮ್ಮದಿ ತಂದಿತ್ತದ್ದು ಬ್ರಾಹ್ಮಣನಾಗಿದ್ದೂ ಕ್ಷಾತ್ರವನ್ನವಲಂಬಿಸಿದ ಪುಷ್ಯಮಿತ್ರನ ಆರ್ಷ ಪ್ರಜ್ಞೆ.


                 ದೇಶದ ಸೀಮೆಗಳಲ್ಲಿದ್ದ ಬೌದ್ಧ ಮಠಗಳ ಪ್ರಮುಖರನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡು ತನ್ನ ಸೇನೆಯನ್ನು ಬೌದ್ಧ ಮಠಗಳಲ್ಲಿ ಭಿಕ್ಕುಗಳ ರೂಪದಲ್ಲಿ ಶಸ್ತ್ರಸಜ್ಜಿತವಾಗಿ ನಿಯೋಜಿಸಿದ ಮಿನಾಂದರ. ತನ್ನ ಬುದ್ಧಿ-ಬಾಹು ಬಲದಿಂದ ಸೇನಾಪತಿ ಪಟ್ಟಕ್ಕೇರಿದ್ದ ಪುಷ್ಯಮಿತ್ರನ ಹದ್ದಿನ ಚಕ್ಷುಗಳಿಗೆ ಇದು ಕಂಡಿತು. ಬೌದ್ಧಮಠಗಳ ತಪಾಸಣೆಗೆ ಅವನು ರಾಜ ಬೃಹದೃಥನ ಅನುಮತಿ ಕೇಳಿದಾಗ ರಾಜ ನಿರಾಕರಿಸಿದ. ಆದರೆ ರಾಷ್ಟ್ರೀಯ ಭಾವನೆಗಳಿಂದ ಪ್ರೇರಿತನಾಗಿದ್ದ ಪುಷ್ಯಮಿತ್ರ ರಾಜನ ಅನುಮತಿ ಇಲ್ಲದಿದ್ದರೂ ಮಠಗಳ ತಪಾಸಣೆಮಾಡಿ ಅಡ್ಡ ಬಂದ ದ್ರೋಹಿಗಳನ್ನು ತರಿದು, ಸೆರೆ ಹಿಡಿದು ದೇಶವನ್ನು ರಕ್ಷಿಸಿದ. ಸುದ್ದಿ ತಿಳಿದ ಬೃಹದ್ರಥ ಕಿಡಿಕಿಡಿಯಾದ. ಪುಷ್ಯಮಿತ್ರ ಮಗಧಕ್ಕೆ ಮರಳುವ ಸಮಯಕ್ಕೆ ಸೈನ್ಯದ ಪೆರೇಡ್ ನಡೆಸುತ್ತಿದ್ದ ಬೃಹದ್ರಥ ಪುಷ್ಯಮಿತ್ರನ ಮೇಲೆ ಯುದ್ಧಕ್ಕೆ ಮುಂದಾದ. ಕ್ಷಣ ಮಾತ್ರದಲ್ಲಿ ರಾಜನ ರುಂಡ ಚೆಂಡಾಡಿದ ಪುಷ್ಯಮಿತ್ರನಿಗೆ ಸೈನ್ಯ ಬೆಂಗಾವಲಾಗಿ ನಿಂತಿತು. ತನ್ನ ಸೈನ್ಯವನ್ನು ಬಲಪಡಿಸಿದ ಪುಷ್ಯಮಿತ್ರ ಮಗಧದಿಂದ ಹೊರ ಬಿದ್ದು ಸ್ವಾತಂತ್ರ್ಯ ಘೋಷಿಸಿಕೊಂಡಿದ್ದ ರಾಜ್ಯಗಳನ್ನೆಲ್ಲಾ ಮರುವಶಪಡಿಸಿಕೊಂಡ. ಗ್ರೀಕರನ್ನು ಮೂಲೋಚ್ಛಾಟನೆ ಮಾಡುತ್ತಾ ಬಂದ. ಪುಷ್ಯಮಿತ್ರ ತನ್ನ ಮೊಮ್ಮಗ ವಸುಮಿತ್ರ ಶುಂಗನ ಮೂಲಕ ಸಿಂಧೂ ತೀರದಲ್ಲಿದ್ದ ಗ್ರೀಕರನ್ನು ಗೆದ್ದ ಎಂದು ಕಾಳಿದಾಸ ಮಾಲವಿಕಾಗ್ನಿಮಿತ್ರದಲ್ಲಿ ಹೇಳುತ್ತಾನೆ. ಹೀಗೆ ಅಲೆಗ್ಸಾಂಡರನಿಂದ ಮೊದಲ್ಗೊಂಡು ಮಿನಾಂದರನವರೆಗೆ ಸುಮಾರು ಮುನ್ನೂರು ವರ್ಷಗಳ ಯವನರ ದಾಳಿ ಪುಷ್ಯಮಿತ್ರನಿಂದಾಗಿ ಕೊನೆಯಾಯಿತು. ಅಳಿದುಳಿದವರನ್ನು ಸನಾತನ ಧರ್ಮ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಶುಂಗ ವಂಶದ ಪ್ರವರ್ತಕನಾದ ಪುಷ್ಯಮಿತ್ರ ಕಾಶ್ಯಪ ಗೋತ್ರೀಯನೆಂದು ಕೆಲವರು ಅಂದರೆ ಇನ್ನು ಕೆಲವರು ಭರದ್ವಾಜ ಗೋತ್ರೋತ್ಪನ್ನ ಎಂದಿದ್ದಾರೆ. ಅದೇನೇ ಇರಲಿ ಅಗತ್ಯ ಬಿದ್ದ ಸಂದರ್ಭದಲ್ಲಿ ಪರಶುರಾಮನಂತೆ ಶಸ್ತ್ರ ಹಿಡಿದು ದೇಶವನ್ನು ರಕ್ಷಿಸಿದ ಪುಷ್ಯಮಿತ್ರನ ಸನಾತನ ಪ್ರಜ್ಞೆ ಸರ್ವಕಾಲಕ್ಕೂ ಅನುಕರಣೀಯ.


           ಕಮ್ಯೂನಿಷ್ಟ್ ಇತಿಹಾಸಕಾರರು ಪುಷ್ಯಮಿತ್ರನು ಬ್ರಾಹ್ಮಣ. ಹೀಗಾಗಿ ಅದು ಬ್ರಾಹ್ಮಣರದ್ದೇ ಬಂಡಾಯ. ಬ್ರಾಹ್ಮಣರಿಗೆ ಅಶೋಕ ಹಾಗೂ ಅವನ ಪರಂಪರೆಯ ಮೇಲಿದ್ದ ವೈರದ ಪ್ರತೀಕ ಎಂದೆಲ್ಲಾ ಬರೆದಿದ್ದಾರೆ. ಆದರೆ ಇದು ಬ್ರಾಹ್ಮಣರ ಬಂಡಾಯ ಮಾತ್ರವಾಗಿದ್ದರೆ ಶುಂಗ ವಂಶ ಮುನ್ನೂರು ವರ್ಷಗಳ ಕಾಲ ರಾಜ್ಯವಾಳಿದ್ದು ಹೇಗೆ? ಅಲ್ಲದೆ ಅವರ ತರುವಾಯ ಬಂದ ಬ್ರಾಹ್ಮಣರಾದ ಕಾಣ್ವರು ಶುಂಗರನ್ನು ಎದುರಿಸಬಾರದಿತ್ತಲ್ಲ! ಹಾಗಾಗಿ ಇದು ಮೂಲತಃ ಕಮ್ಯೂನಿಷ್ಟರ ಬ್ರಾಹ್ಮಣ ದ್ವೇಷವೇ ಹೊರತು ಬೇರೇನಲ್ಲ. ಈಗಿನ ನವಬೌದ್ಧರ ಕಥಾ ಕೌಶಲ್ಯ ಎಷ್ಟೆಂದರೆ ಹಿಂದೂಗಳನ್ನು ಹಣಿಯುವ ಅವರ ಕಥೆಗಳು ಪಾಕಿಸ್ತಾನದಲ್ಲಿ ಇತಿಹಾಸದ ಪುಸ್ತಕಗಳಲ್ಲಿ ಸೇರಿಕೊಂಡಿವೆ! ಪುಷ್ಯಮಿತ್ರ ಬೌದ್ಧ ಮೂಲಗ್ರಂಥಗಳನ್ನು ನಾಶಮಾಡಿದ ಎಂದು ಕಥೆಗಳನ್ನು ಸೃಷ್ಟಿಸಿದವರು ಆತ ಪ್ರಾಚೀನ ಭಾರತದ ಅತ್ಯಂತ ಸುಂದರ ಸ್ತೂಪಗಳಲ್ಲೊಂದಾದ ಭಾರ್ಹುತ್'ನ ಸ್ತೂಪವನ್ನು ಕಟ್ಟಿಸಿದುದನ್ನು ಮರೆಯುತ್ತಾರೆ. ಸಾಂಚಿಯ ಸ್ತೂಪದ ಸುತ್ತಲಿನ ಅತ್ಯದ್ಭುತ, ಅಸ್ಖಲಿತ ಕಟಾಂಜನದ ನಿರ್ಮಾತೃ ಅವನೇ ಎನ್ನುವುದು ಈ ದ್ವೇಷ ಕಾರುವ ಇತಿಹಾಸಕಾರರಿಗೆ ನೆನಪಾಗುವುದಿಲ್ಲ. ಪುಷ್ಯಮಿತ್ರ ಎಲ್ಲಾ ಮತಗಳನ್ನೂ ಆದರದಿಂದ ನೋಡಿದ್ದ ಎನ್ನುವುದು ಐತಿಹಾಸಿಕ ಸತ್ಯ. ಸಾಂಚಿ ಮತ್ತು ಭಾರ್ಹುತ್ ಗಳ ಶಿಲ್ಪಕಲೆಯೇ ಬೋಧಗಯಾಕ್ಕೂ ಪ್ರೇರಣೆಯಾಯಿತು. ಶುಂಗರ ಮಂತ್ರಿಯಾಗಿದ್ದ ಬ್ರಹ್ಮಮಿತ್ರನ ಪತ್ನಿ ಇಂದ್ರಾಗ್ನಿಮ್ಹ ಇದರ ನಿರ್ಮಾತೃ. ಬುದ್ಧಗಯೆಯಲ್ಲಿನ ವಿಹಾರ ಆರ್ಯ ಕೌರಾಂಗಿಯಿಂದ ನಿರ್ಮಿತವಾಯಿತು. ಅಲ್ಲದೆ ಜಾತಕ ಕಥೆಗಳನ್ನು, ಸೂರ್ಯಭಗವಾನನ ಸುಂದರ ಶಿಲ್ಪಗಳನ್ನೊಳಗೊಂಡ ಅಲ್ಲಿನ ಕಟಾಂಜನದ ನಿರ್ಮಾತೃಗಳು ಕೂಡಾ ಶುಂಗರೇ. ಮಥುರಾ, ಕೌಶಾಂಭಿ, ಶ್ರಾವಸ್ಥಿ, ಪಾಟಲೀಪುತ್ರ, ಸಾರನಾಥಗಳಲ್ಲೂ ಅನೇಕ ಸ್ತೂಪಗಳನ್ನು ಶುಂಗರು ನಿರ್ಮಿಸಿದರು. ಶುಂಗರೇನಾದರೂ ಮತಾಂಧರಾಗಿರುತ್ತಿದ್ದರೆ ನಾಗಸೇನನಂತಹ ಬೌದ್ಧ ವಿದ್ವಾಂಸ ಬದುಕಲು ಸಾಧ್ಯವಿತ್ತೇ? ಶುಂಗರ ಸಾಮ್ರಾಜ್ಯದಲ್ಲಿ ಬೌದ್ಧ ಮತ ಔನ್ನತ್ಯದಲ್ಲಿತ್ತೆಂಬುದಕ್ಕೆ ಅನೇಕ ಪುರಾತತ್ವಸಂಶೋಧನೆಗಳೇ ಸಾಕ್ಷಿ ಹೇಳುತ್ತವೆ.


           ಅಶೋಕ ಬೌದ್ಧ ತತ್ವಗಳನ್ನು ತನ್ನ ಪ್ರಜೆಗಳ ಮೇಲೂ ಹೇರಿದರೆ ಅವನ ಬಳಿಕ ಬಂದ ಅರಸರ ಕಾಲದಲ್ಲಿ ಬೌದ್ಧರ ಮತಾಂತರ ಪ್ರಕ್ರಿಯೆ ಬಿರುಸಾಯಿತು. ಬಲವಂತದ ಮತಾಂತರಗಳು ಹೆಚ್ಚಾದವು. ಇದಕ್ಕೆ ಆಳರಸರ ಕೃಪಾಕಟಾಕ್ಷವೂ ಇತ್ತು. ತಮ್ಮ ಮತವೇ ಶ್ರೇಷ್ಠವೆನ್ನುವ ನವ ಬೌದ್ಧರು ತಾವು ಹುಟ್ಟಿದ್ದೇ ಸನಾತನ ಧರ್ಮದ ಸಹಿಷ್ಣುತೆಯಿಂದ ಎನ್ನುವುದನ್ನೂ ಮರೆತು ಮತಾಂತರಕ್ಕೆ ತೊಡಗಿದರು. ಪುಷ್ಯಮಿತ್ರ ಸಿಂಹಾಸನವೇರಿದ ಬಳಿಕ ಎಗ್ಗಿಲ್ಲದ ಮತಾಂತರಕ್ಕೆ ಕುತ್ತುಂಟಾಯಿತು. ಮತಾಂಧ ಬೌದ್ಧರಿಂದ ರಚಿಸಲ್ಪಟ್ಟ ಅಶೋಕವಧಾನದಲ್ಲಂತೂ ಕಟ್ಟು ಕಥೆಗಳನ್ನೇ ಹೆಣೆಯಲಾಗಿದೆ. ಶುಂಗರು ಬೌದ್ಧರನ್ನು ನಾಶ ಮಾಡಿದರೂ ಅನ್ನುವ ಅಶೋಕವಧಾನ ಅಶೋಕ ಜೈನರ ಕಗ್ಗೊಲೆ ಮಾಡಿದ ಎಂದು ಉಲ್ಲೇಖಿಸಿದ್ದನ್ನು ಶುಂಗ ವಿರೋಧಿಗಳು ಮರೆಯುತ್ತಾರೆ. ಒಂದು ವೇಳೆ ಬೌದ್ಧರ ಗ್ರಂಥಗಳೆನ್ನುವಂತೆ ಪುಷ್ಯಮಿತ್ರ ಬೌದ್ಧ ವಿರೋಧಿಯಾಗಿದ್ದರೆ ಬೌದ್ಧ ಮಠಗಳಿಗೆ, ವಿದ್ಯಾಲಯಗಳಿಗೆ ಧನಸಹಾಯ ಮಾಡುತ್ತಾ ಪೋಷಕ ಪಾತ್ರ ನಿರ್ವಹಿಸುತ್ತಿರಲಿಲ್ಲ. ಆಗಿಂದಾಗ್ಗೆ ಬುದ್ಧ ಭಿಕ್ಕುಗಳಿರುವ ವಿಹಾರಗಳಿಗೆ ಸಂಚಾರವನ್ನೂ ಕೈಗೊಳ್ಳುತ್ತಿರಲಿಲ್ಲ. ಅವರೊಂದಿಗೆ ಧ್ಯಾನ ಸಾಧನೆಯನ್ನೂ ಮಾಡುತ್ತಿರಲಿಲ್ಲ. ಹೀಗೆ ಶುಧ್ದ ಸನಾತನನಾಗಿದ್ದ ಪುಷ್ಯಮಿತ್ರ ಬೌದ್ಧರನ್ನು ಕೆಟ್ಟದಾಗಿ ನೋಡಿಕೊಳ್ಳಲಿಲ್ಲ. ಹಾಗೆಯೇ ಅಶೋಕನಂತೆ ಬುದ್ಧ ತತ್ವಗಳನ್ನು ಜನತೆಯ ಮೆಲೆ ಹೇರಲಿಲ್ಲ. ಪುಷ್ಯಮಿತ್ರ ವಿದೇಶೀಯ ದಾಳಿಕೋರರೊಡನೆ ಶಾಮೀಲಾದ ದೇಶದ್ರೋಹಿ ಬೌದ್ಧರನ್ನು ಕ್ಷಾತ್ರಧರ್ಮದಂತೆ ಶಿಕ್ಷಿಸಿದ್ದು ನಿಜ. ಪುಷ್ಯಮಿತ್ರನ ಕಟ್ಟುನಿಟ್ಟಾದ ಆಳ್ವಿಕೆಯಿಂದಾಗಿ ತಮಗೆ ಸಿಗುತ್ತಿದ್ದ ರಿಯಾಯಿತಿ, ಸೌಲಭ್ಯಗಳು ದುರ್ಲಭವಾದ ಕಾರಣ ಬೌದ್ಧರ ಸಿಟ್ಟು ಪುಷ್ಯಮಿತ್ರನ ಕಡೆ ತಿರುಗಿತು.


             ಪುಷ್ಯಮಿತ್ರ ಶುಂಗನ ಬಗ್ಗೆ ಇಲ್ಲಸಲ್ಲದ, ಕಟ್ಟು ಕಥೆ, ಅನೈತಿಹಾಸಿಕ ವಿಚಾರಗಳನ್ನು ಕಾರಿದ ಗ್ರಂಥ ಬೌದ್ಧರ " ದಿವ್ಯವದಾನ ". ಇದೇ ಆಕರವನ್ನು ಆಧಾರವಾಗಿರಿಸಿ ಇಂದಿನ ನವಬೌದ್ಧರೂ, ಕಮ್ಯೂನಿಷ್ಟರೂ ಪುಷ್ಯಮಿತ್ರನಿಗೆ ಬೌದ್ಧ ವಿರೋಧಿ ಪಟ್ಟಕಟ್ಟಿಬಿಟ್ಟರು. ಎಷ್ಟೆಂದರೆ ಗಾರ್ಗಿ ಚಕ್ರವರ್ತಿಯಂತೂ " ದಿವ್ಯವದಾನ " ಎಂದರೆ ಒಂದು ವ್ಯಕ್ತಿಯೆಂದೇ ಭ್ರಮಿಸಿ ಆತ ಬರೆದ ಗ್ರಂಥದಲ್ಲಿ “ಪುಷ್ಯಮಿತ್ರ ಇಂದಿನ ಸಿಯಾಲ್ ಕೋಟ್'ನವರೆಗೆ ಬೌದ್ಧರ ಕೊಲೆ ಮಾಡಿದ ಬಗ್ಗೆ, ಸೈನ್ಯದ ಮುಖಾಂತರ ಸ್ತೂಪಗಳನ್ನು ಹಾಳುಗೆಡವಿದ ಬಗ್ಗೆ, ಬೌದ್ಧ ಸಂನ್ಯಾಸಿಗಳ ತಲೆಗೆ ನೂರು ಚಿನ್ನದ ನಾಣ್ಯ ನಿಗದಿಮಾಡಿದ್ದ ಬಗ್ಗೆ ಉಲ್ಲೇಖಿಸಿದ್ದಾನೆ” ಎಂದೂ ಬರೆದರು(Gargi Chakravartty: "BJP-RSS and Distortion of History"). ಪಾಪ, ಹಿಂದೂಗಳನ್ನು ತೆಗಳುವ ಭರದಲ್ಲಿ ಗ್ರಂಥವೇ ಅವರಿಗೆ ಕರ್ತೃವಾಗಿ ಕಂಡಿತು! ಗ್ರಂಥವನ್ನೂ ಓದದೆಯೇ ಅದರಲ್ಲಿನ ವಿಷಯ ಗ್ರಹಿಸುವ ಪ್ರಖರಮತಿ ಬಹುಷಃ ಮಾವೋ ಪ್ರಸಾದಿಸಿದ ವರವಾಗಿರಬಹುದು! ವಿಪರ್ಯಾಸ ಏನು ಗೊತ್ತಾ? ಶಿವಾಜಿಗೆ ಅನ್ಯಾಯ ಮಾಡಿದ ಬ್ರಾಹ್ಮಣರ ದುರಾಸೆ, ಕುತಂತ್ರಬುದ್ಧಿಯನ್ನು ಹಿಂದೂಗಳ ಜೊತೆ ಕಮ್ಯೂನಿಷ್ಟರೂ ಖಂಡಿಸುತ್ತಾರೆ. ಆದರೆ ಇದೇ ವಿಚಾರ ಬೌದ್ಧ ಸಂನ್ಯಾಸಿಗಳ ಬಗೆಗೆ ಬಂದಾಗ ಅವರಿಗೆ ಬೌದ್ಧರು ನಿರಪರಾಧಿಗಳ ಹಾಗೆ ಕಾಣಿಸುತ್ತಾರೆ.


             ಶಬ್ಧಶಃ ಸಾಮ್ಯವುಳ್ಳ ಈ ಅಶೋಕವದಾನ ಹಾಗೂ ದಿವ್ಯವದಾನ ಎರಡೂ ಶುಂಗರ ಕಾಲದ(ಕ್ರಿ.ಪೂ 1200- ಕ್ರಿ.ಪೂ.900) ಸಹಸ್ರ ವರ್ಷಗಳ(ಕ್ರಿ.ಶ. ಎರಡನೇ ಶತಮಾನ) ಬಳಿಕ ರಚಿತವಾದ ಬೌದ್ಧಪುರಾಣಗಳು. ಹಾಗಾಗಿ ಇವುಗಳ ಸತ್ಯಾಸತ್ಯತೆ ಎಷ್ಟು ಎನ್ನುವ ಪ್ರಶ್ನೆಗಳು ಸಾಮಾನ್ಯನಿಗೂ ಇದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅಶೋಕವದಾನದಲ್ಲಿ ಅಶೋಕ ಜೈನರನ್ನು ಹತ್ಯೆಗೈದ ಉಲ್ಲೇಖ ಸಿಗುತ್ತದೆ. ಜೈನ ಮತೀಯನೊಬ್ಬ ಬುದ್ಧನು ಮಹಾವೀರನ ಪಾದಕ್ಕೆರಗುವ ಚಿತ್ರವೊಂದನ್ನು ರಚಿಸುತ್ತಾನೆ. ಇದರಿಂದ ಕ್ರೋಧಗೊಂಡ ಅಶೋಕ ಪೌಂಢ್ರ(ಇಂದಿನ ಬಂಗಾಳ-ಬಿಹಾರ)ದೇಶದಲ್ಲಿದ್ದ ಜೈನರನ್ನೆಲ್ಲ ಕೊಲ್ಲಲು ಆಜ್ಞಾಪಿಸುತ್ತಾನೆ. ಅಲ್ಲದೆ ಚಿತ್ರಕಾರನನ್ನು ಅವನ ಪರಿವಾರ ಸಹಿತ ಜೀವಂತ ಸುಡಲಾಯಿತು. ಒಂದೇ ದಿವಸದಲ್ಲಿ ಹದಿನೆಂಟು ಸಾವಿರ ಅಜೀವಿಕರ ಕಗ್ಗೊಲೆಯಾಯಿತು. ಪಾಟಲಿಪುತ್ರದಲ್ಲಿದ್ದ ಜೈನರಿಗೂ ಇದೇ ಗತಿಯಾಗುತ್ತದೆ. ಜೈನನೊಬ್ಬನ ತಲೆಗೆ ನೂರು ಬಂಗಾರದ ನಾಣ್ಯಗಳ ಬಹುಮಾನವನ್ನೂ ಅಶೋಕ ಘೋಷಿಸುತ್ತಾನೆ. ಹೀಗೆ ಸಾವಿರಾರು ಜೈನರು ಪ್ರಾಣ ಕಳೆದುಕೊಳ್ಳುತ್ತಾರೆ. ಕಮ್ಯೂನಿಷ್ಟ್ ಇತಿಹಾಸಕಾರರು ಇಂತಹದ್ದು ನಡೆದಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ. "ಜಾತ್ಯತೀತ ಮನೋಭಾವವಿದ್ದ ಅಶೋಕ ಹಾಗೆ ಮಾಡಿರಲು ಸಾಧ್ಯವೇ ಇಲ್ಲ. ಕಥನಕಾರ ನಿರ್ಗ್ರಂಥಿ(ಜೈನ) ಹಾಗೂ ಅಜೀವಿಕರ ಮಧ್ಯೆ ಗೊಂದಲವನ್ನುಂಟುಮಾಡಿಕೊಂಡಿದ್ದಾನೆ. ಅಶೋಕನನ್ನೇ ನಾಯಕನಾಗಿ ಹೊಂದಿರುವ ಕೃತಿಯೊಂದು ಅವನನ್ನು ಅತೀ ಕ್ರೂರವಾಗಿ ಚಿತ್ರಿಸಿರುವುದು ಅವಾಸ್ತವಿಕವಲ್ಲದೆ ಮತ್ತೇನು? ಅಶೋಕ ಮಾತ್ರವಲ್ಲ ಯಾವ ಬೌದ್ಧ ದೊರೆಯೂ ಜೈನರ, ಹಿಂದೂಗಳ ನರಮೇಧವನ್ನು ಮಾಡಿರಲೇ ಇಲ್ಲ" ಎನ್ನುತ್ತಾರೆ. ಇದೇ ಅಶೋಕವದಾನ ಪುಷ್ಯಮಿತ್ರ ಬೌದ್ಧರ ಕಗ್ಗೊಲೆ ಮಾಡಿದ ಎನ್ನುವುದನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಾರೆ. ತಮ್ಮದೆ ನಾಯಕನ ಗುಣಗಾನ ಮಾಡಿದ್ದನ್ನು ಒಪ್ಪಿಕೊಳ್ಳದೆ ಶತ್ರುವನ್ನು ತೆಗಳಿ ಬರೆದಿರುವುದನ್ನು ಶಬ್ಧಶಃ ಒಪ್ಪಿಕೊಳ್ಳುವ ಈ ನೆಹರೂ ಬಾಲಬಡುಕರ ಅಶೋಕನನ್ನು ಎಣೆಯಿಲ್ಲದೆ ಎತ್ತಿ ಹಿಡಿವ ಪೃಥೆಗೆ ಏನೆನ್ನಬೇಕು? ಹೀಗೆ ಅಶೋಕನ ಐತಿಹಾಸಿಕತೆಗೆ ಅವಾಸ್ತವಿಕವಾಗುವ ಅಶೋಕವದಾನ ಪುಷ್ಯಮಿತ್ರನ ವಿಚಾರದಲ್ಲಿ ಮುಖ್ಯವೂ ಪವಿತ್ರವೂ ಆಗಿಬಿಡುತ್ತದೆಯೆಂದರೆ ಇಂತಹ ಇತಿಹಾಸಕಾರರನ್ನು ನಂಬುವುದು ಹೇಗೆ? ಬೌದ್ಧ ಮತದ ಮಹಾನತೆಯನ್ನು ಸಾರಲು ಹೋಗಿ ಉಚ್ಛ ಬೌದ್ಧನೋರ್ವನನ್ನು ಮತಾಂಧನನ್ನಾಗಿ ಚಿತ್ರಿಸಲಾಯಿತು ಎನ್ನುವ ಇವರೇ ಸನಾತನ ಧರ್ಮದ ಮೇಲಿನ ದ್ವೇಷಮಾತ್ರದಿಂದಲೇ ಅಶೋಕವದಾನ ಹಾಗೂ ಅದನ್ನು ಆಧರಿಸಿ ತಾವು ಕೂಡಾ ಪುಷ್ಯಮಿತ್ರನನ್ನು ಕ್ರೂರಿಯೆಂಬಂತೆ ಚಿತ್ರಿಸಿರುವುದನ್ನು ಮರೆಮಾಡುತ್ತಾರೆ.


          ಇದೇ ವೇಳೆ ಹಲವು ಬೌದ್ಧ ಗ್ರಂಥಗಳು ಪುಷ್ಯಮಿತ್ರ ಬೌದ್ಧರೊಡನೆ ಸಹಿಷ್ಣುವಾಗಿದ್ದುದನ್ನೂ ಉಲ್ಲೇಖಿಸಿವೆ. ಶ್ರೀಲಂಕಾದ ಬೌದ್ಧ ಗ್ರಂಥ ಮಹಾವಂಶ ಆ ಕಾಲಕ್ಕೆ ಅನೇಕ ಬೌದ್ಧ ಮಠಗಳು ಮಾಳವ, ಅವಧ್, ಬಿಹಾರಗಳಲ್ಲಿದ್ದುದನ್ನು ಉಲ್ಲೇಖಿಸಿದೆ. ಬೌದ್ಧ ಇತಿಹಾಸಕಾರ ಎತಿನ್ ಲಾಮೋಟ್ಟಿ "ಪುಷ್ಯಮಿತ್ರ ಬೌದ್ಧ ಸಂನ್ಯಾಸಿಗಳನ್ನು ಹತ್ಯೆಗೈದ ಎನ್ನುವುದಕ್ಕೆ ಸಾಕ್ಷ್ಯಾಧಾರಗಳೇನಿಲ್ಲ" ಎಂದು ತನ್ನ "ಹಿಸ್ಟರಿ ಆಫ್ ಇಂಡಿಯನ್ ಬುದ್ಧಿಸಮ್" ಗ್ರಂಥದಲ್ಲಿ ಹೇಳುತ್ತಾನೆ.

               ಅವನ ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ಸಾಹಿತ್ಯಾಭಿವೃದ್ಧಿಗೂ ಪ್ರೋತ್ಸಾಹ ದೊರಕಿತು.  ಅನೇಕ ಗ್ರಂಥಗಳು ಪ್ರಾಕೃತದಿಂದ ಸಂಸ್ಕೃತಕ್ಕೆ ಅನುವಾದಗೊಂಡವು. ಮಥುರಾದ ಕಲಾ ಶಾಲೆ, ಪತಂಜಲಿ ಮುನಿಗಳ ಅನೇಕ ರಚನೆಗಳು ಮುಖ್ಯವಾದವು. ಮುಖ್ಯವಾಗಿ ಮರೆತು ಹೋಗಿದ್ದ ವೇದಕಾಲೀನ ಕಲೆ-ಸಾಹಿತ್ಯಗಳು ಒಂದೊಂದಾಗಿ ಪುನರುಜ್ಜೀವನಗೊಂಡು ಮುಂದಿನ ಗುಪ್ತಯುಗದಲ್ಲಿ ಭಾರತ ಸುವರ್ಣಯುಗವನ್ನು ಕಾಣುವಂತೆ ಮಾಡಿದವು. ಪುಷ್ಯಮಿತ್ರ ಅಶ್ವಮೇಧವನ್ನೂ ಕೈಗೊಂಡ. ಪಾಣಿನೀ ಸೂತ್ರಗಳಿಗೆ ಮಹಾಭಾಷ್ಯ ಬರೆದ ಪತಂಜಲಿ ಮುನಿಗಳ ನೇತೃತ್ವದಲ್ಲಿ ಭೋಪಾಲದಿಂದ 55  ಕಿ.ಮೀ. ದೂರದಲ್ಲಿರುವ ವಿದಿಶಾ ನಗರದಲ್ಲಿ ವಿಜೃಂಭಣೆಯಿಂದ ನಡೆಯಿತು ಅಶ್ವಮೇಧ ಯಾಗ. ಇಲ್ಲಿ ಭಾಗವತ ದೀಕ್ಷೆ ಸ್ವೀಕರಿಸಿದ ಹಿಲಿಯೋದೋರಸ್ ಎಂಬ ಗ್ರೀಕ ವಿಷ್ಣುಸ್ತಂಭವನ್ನು ಸ್ಥಾಪನೆ ಮಾಡಿದ. ಹೀಗೆ ಎರಡುಸಾವಿರದಿನ್ನೂರು ವರುಷಗಳ ಹಿಂದೆಯೇ ವಿದೇಶಿಯರನ್ನು ಸನಾತನ ಧರ್ಮದ ತೆಕ್ಕೆಗೆ ಬರುವಂತೆ ಮಾಡಿದ್ದು ಶುಂಗರ ಸಾಧನೆ. ಇದು ಬಲತ್ಕಾರದ ಪ್ರಲೋಭನೆಯ ಮತಾಂತರವಲ್ಲ. ಸನಾತನ ಧರ್ಮದ ಮೌಲ್ಯಗಳನ್ನು ಮೆಚ್ಚಿಕೊಂಡು ಸ್ವೀಕರಿಸಿದ ಶುದ್ಧ ವೈಚಾರಿಕ ಪಲ್ಲಟನ.

ಶುಕ್ರವಾರ, ಜುಲೈ 15, 2016

ಭಾರತೀಯರ ಚಿತ್ತಭಿತ್ತಿಯಲ್ಲೂ "ಅಜೇಯ"ನಾಗುಳಿದ ಪ್ರಳಯರುದ್ರ

ಭಾರತೀಯರ ಚಿತ್ತಭಿತ್ತಿಯಲ್ಲೂ "ಅಜೇಯ"ನಾಗುಳಿದ ಪ್ರಳಯರುದ್ರ


    ವಿಶ್ವನಾಥನ ಮೇಲಿನ ಮೋಹದಿಂದ ಹರಿಯುವುದನ್ನೇ ಮರೆತ ಗಂಗೆ; ಜಟೆಗಟ್ಟಿದಕೂದಲು, ನೆಲಮುಟ್ಟುತ್ತಿರುವ ಗಡ್ದ, ಚಳಿ-ಮಳೆ-ಗಾಳಿಗೆ ಲೆಕ್ಕಿಸದ ಬರೀ ಮೈಯ ತೇಜಸ್ವೀ ಸಾಧುಗಳು, ಕಾಷಾಯ ವಸ್ತ್ರಧಾರಿ ಸಂತ-ಮಹಂತರು, ವಿಭೂತಿ ಬಳಿದು ಓಡಾಡುತ್ತಿರುವ ಸಂನ್ಯಾಸಿಗಳ ಹರ್ ಹರ್ ಮಹಾದೇವ್ ಘರ್ಜನೆ; ಪಂಡಿತರ ವೇದ ಘೋಷ; ತಿಲಕ ಧರಿಸಿ, ಜುಟ್ಟು ಬಿಟ್ಟು, ಕಚ್ಛೆ ಹಾಕಿ ಪಾಠ ಶಾಲೆಗೆ ಹೋಗುತ್ತಿರುವ ವಟುಗಳು-ಪಾಶ್ಚಾತ್ಯ ದಿರಿಸು ಧರಿಸಿ ತರುಣಿಯರನ್ನು ಕೆಣಕುತ್ತಿರೋ ಕಾಲೇಜು ವಿದ್ಯಾರ್ಥಿಗಳು; ಭಿಕ್ಷೆ ಎತ್ತುತ್ತಿರುವವರ ಆರ್ತದನಿಗಳು, ಜೋಳಿಗೆ ದಾಸಯ್ಯರ ಶಂಖ-ಜಾಗಟೆಗಳು, ಶಕುನದವರ ಬುಡಬುಡಿಕೆಗಳು, ಕ್ಷಾತ್ರವನ್ನು ಹ್ರಾಸಗೊಳಿಸುತ್ತಿರುವ ಅಹಿಂಸಾ ಜಾಥಾಗಳು; ಗಂಗೆಯ ತಟ-ವಿಶ್ವನಾಥನ ಮಠದಿಂದ ಮೊಳಗುತ್ತಿರುವ ಶಂಖನಾದದ ನಡುವೆ ಮರಿಸಿಂಹವೊಂದು ಹೂಂಕರಿಸಿತು...
"ಮೈ ಆಜಾದ್ ಹೂಂ, ಆಜಾದ್ ಹೀ ರಹೂಂಗಾ, ಆಜಾದ್ ಹೀ ಮರೂಂಗಾ!"
ಅಗಲವಾದ ತೇಜಸ್ವೀ ಮೊಗ ನಿಗಿ ನಿಗಿ ಹೊಳೆಯುವ ಅರಳು ಕಣ್ಣುಗಳು ದೃಢವಾದ ಮೈಕಟ್ಟಿನ ಚಂದ್ರಶೇಖರ ಶರ್ಮ, ತ್ರಿವರ್ಣ ಧ್ವಜ ಹಿಡಿದು ಶಂಖನಾದ ಮಾಡುತ್ತಾ ಮೆರವಣಿಗೆಯ ಮುಂದಾಳತ್ವ ವಹಿಸಿದ್ದ ವೀರ ಸಂನ್ಯಾಸಿ ಸ್ವಾಮಿ ಶಂಕರಾನಂದ ಬ್ರಹ್ಮಚಾರಿಯನ್ನು ಲಾಠಿಯಿಂದ ಸಾಯ ಬಡಿಯುತ್ತಿದ್ದ ಸಬ್ ಇನ್ಸ್ಪೆಕ್ಟರನ ಹಣೆಗೆ ಕಲ್ಲಿಂದ ಗುರಿಯಿಟ್ಟು ಹೊಡೆದಿದ್ದ! "ಅಹಿಂಸಾ ಪರಮೋ ಧರ್ಮ" ಎನ್ನುತ್ತಿದ್ದ ಚಳುವಳಿಯಲ್ಲಿ ಭಾಗವಹಿಸಿದ್ದ ಹದಿನೈದು ವರುಷದ ಹುಡುಗನಲ್ಲಿ "ಧರ್ಮ ಹಿಂಸಾ ತಥೈವಚಾ" ಎನ್ನುವ ಅದರ ಉತ್ತರಾರ್ಧ ಕಾಯಾ-ವಾಚಾ-ಮನಸಾ ಪ್ರತಿಧ್ವನಿಸಿತ್ತು. ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುತ್ತಾ ಹೆಸರೇನೆಂದು ಕೇಳಿದಾಗ "ಆಜಾದ್" ಎಂದು ಸಿಡಿಗುಂಡಿನಂತೆ ಹೊರಟ ಆ ಸ್ವರ ಮಧ್ಯಪ್ರದೇಶದ ಝೂಬುವಾ ಜಿಲ್ಲೆಯ ಭಾವರಾ ಎಂಬ ಪರ್ವತ, ಹಚ್ಚಹಸಿರಿನ ವನಸಿರಿ, ಬಳುಕುವ ತರಂಗಿಣಿಯನ್ನೊಳಗೊಂಡ ರಮಣೀಯ ಹಳ್ಳಿಯಲ್ಲಿ ಸೀತಾರಾಮ್ ತಿವಾರಿ-ಜಗರಾಣಿ ದೇವಿ ಸ್ವಾಭಿಮಾನಿ ದಂಪತಿಗಳ ದ್ವಿತೀಯ ಸಂಜಾತನಾಗಿ 1906 ಜುಲೈ 23, ಶ್ರಾವಣ ಶುದ್ಧ ದ್ವಿತೀಯ, ಸೋಮವಾರ ಧರೆಗಿಳಿದಿತ್ತು.

    ನಡೆಯಲು ಬರುವ ಮೊದಲೇ ಅಂಬೆಗಾಲಿಕ್ಕಿಕೊಂಡು ಹಳ್ಳಿಯ ಮನೆಮನೆಗೂ ನುಗ್ಗುತ್ತಿದ್ದ ಚಂದ್ರಶೇಖರ ಹಳ್ಳಿಯ ಹುಡುಗರ ಸೇನಾಪತಿಯಾಗಿ ಕಾಡು-ಮೇಡುಗಳಲ್ಲಿ ಅಲೆದಾಡುವುದು, ಬೆಟ್ಟಗುಡ್ದಗಳನ್ನು ಹತ್ತಿಳಿಯುವುದು, ತೋಟಗಳಿಗೆ ನುಗ್ಗಿ ಮರವೇರಿ ಹಣ್ಣುಗಳನ್ನು ಕಿತ್ತು ಪರಾರಿಯಾಗುವುದರ ಜೊತೆಜೊತೆಗೆ ಭಿಲ್ಲ ಹುಡುಗರ ಜೊತೆ ಶಿಕಾರಿಗೂ ಹೋಗುತ್ತಿದ್ದ. ಹುಲಿ ಶಿಕಾರಿಯಲ್ಲಿ ಅವನದು ಎತ್ತಿದ ಕೈ! ಜೋಬಟ್, ಧಾಂದಲಾ, ಮೇಘನಗರ್, ಪೆಟ್ಲಾವದ್, ಅಂಬುಮಾ, ರಾಣಾಪುರಗಳಲ್ಲಿ ಅವನದೇ ಪಾರಮ್ಯ. ಅವನ ದಂಡಯಾತ್ರೆಗೆ ಅಲಿರಾಜಪುರ ಮಾತ್ರವಲ್ಲದೆ ಸುತ್ತಮುತ್ತಲಿನ ಸಂಸ್ಥಾನಗಳೂ ಬಲಿಯಾಗಿದ್ದವು. ಅವನ ಸಾಹಸಗಾಥೆಗಳು ಮನೆಮಾತಾಗಿದ್ದವು. ಅನೇಕ ಯುವತಿಯರ ಶೀಲ ಕೆಡಿಸಿದ್ದ ತರುಣನೊಬ್ಬನಿಗೆ ಭಿಲ್ಲ ಪದ್ದತಿಯಂತೆ ಶಿಕ್ಷೆ ವಿಧಿಸುವಾಗ ಆಜಾದ್ ಪ್ರಯೋಗಿಸಿದ್ದ ಮೊದಲ ಬಾಣವೇ ಅವನ ಕಣ್ಣನ್ನು ಛೇದಿಸಿತ್ತು! ಮುಂದೆ ಭಾರತದ ಅತ್ಯಂತ ತೀಕ್ಷ್ಣ, ಕುಶಲ, ನಿಖರ ಗುರಿಕಾರನೆಂದು ಶತ್ರುಗಳಿಂದಲೇ ಮೆಚ್ಚುಗೆ ಗಳಿಸಿದ್ದ ಆಜಾದನಿಗೇ ಆ ಭಿಲ್ಲರೇ ಗುರುಗಳು! ಅವನು ಮನೆ ಬಿಟ್ಟು ಹೋದ ಎಷ್ಟೋ ವರ್ಷಗಳ ನಂತರವೂ ಅವನ ಮನೆಯ ಗೋಡೆಯಲ್ಲಿ ಅವನೇ ತಯಾರಿಸಿದ್ದ ಬಿಲ್ಲುಬಾಣಗಳು ನೇತಾಡುತ್ತಿದ್ದವು!

    ನ್ಯಾಯಪರತೆಯ ಗುಣಗಳು ಎಳವೆಯಿಂದಲೇ ಅವನಲ್ಲಿ ಗೋಚರಿಸುತ್ತಿದ್ದವು. ಎಂಟು ವರ್ಷದವನಿದ್ದಾಗ, ಹಿಂದಿ ಪಾಠ ಹೇಳಿಕೊಡುತ್ತಿದ್ದ ಗುರು ಮನೋಹರ್ ಒಮ್ಮೆ ತಪ್ಪು ಮಾಡಿದಾಗ ಬೆತ್ತದಲ್ಲಿ ಛಟೀರೆಂದು ಗುರುವಿಗೇ ಎರಡೇಟು ಬಿಗಿದಿದ್ದನಾತ. ಯಾಕೆಂದು ಪ್ರಶ್ನಿಸಿದರೆ "ಅಣ್ಣ ತಪ್ಪು ಮಾಡುವಾಗ ಪಂಡಿತಜೀ ಹೊಡೆಯೋಲ್ಲವೆ. ಈಗ ಅವರು ತಪ್ಪು ಮಾಡಿದರು. ಅದಕ್ಕೇ ಹೊಡೆದೆ" ಎಂದಿದ್ದ. ಆದರೆ ತಂದೆಯ ರೌದ್ರಾವತಾರ ಮುಂದೆಂದೂ ಹಿರಿಯರಿಗೆ ಅಗೌರವ ತೋರಿಸಬಾರದೆಂಬ ಪಾಠ ಕಲಿಸಿತ್ತು. ಶಾಲೆಗೆಂದು ಕಳುಹಿಸಿದರೆ ಗೆಳೆಯರ ಜೊತೆ ಕಾಡು ಸೇರಿ ಯುದ್ಧದಾಟವಾಡುವ, ಶಿಕಾರಿ ಮಾಡುವ ಮಗ ಸುಧಾರಿಸುವುದಿಲ್ಲ ಎಂದರಿತ ಅಪ್ಪ ತಹಶೀಲ್ದಾರೊಬ್ಬರ ಬಳಿ ಕೆಲಸಕ್ಕೆ ಸೇರಿಸಿದರು. ಆಗವನಿಗೆ ಬರೇ ಹನ್ನೊಂದು ವರ್ಷ! ಅಧಿಕಾರಿಗಳಿಗೆ ಸಲಾಂ ಹಾಕಲೊಪ್ಪದ ಅವನ ಪರಿಸ್ಥಿತಿ ಪಂಜರದೊಳಗೆ ಕೂಡಿ ಹಾಕಿದ ಸಿಂಹದಂತಾಗಿತ್ತು. ಹವಳದ ವ್ಯಾಪಾರಿಯೊಬ್ಬನ ಸಹಾಯದಿಂದ ಮುಂಬೈಗೆ ಬಂದಿಳಿದ ಈ ಹದ್ದಿನ ಮುಂದಿನ ಹಾರಾಟಕ್ಕೆ ಮೇರೆಯೇ ಇರಲಿಲ್ಲ! ಕೆಲವೇ ದಿವಸಗಳಲ್ಲಿ ಮೂಟೆ ಹೊರುವ ಕೆಲಸವೂ ಬೇಜಾರಾಗಿ, ಅಪ್ಪನ ಅಪೇಕ್ಷೆಯ ನೆನಪು ಬಂದು ಸಂಸ್ಕೃತ ಪಂಡಿತನಾಗುವ ಹಂಬಲದಿಂದ ಕಾಶಿಯ ಹಾದಿ ಹಿಡಿದ. ಚಂದ್ರಶೇಖರೀರ್ವರೂ ತಮ್ಮೀ ಮಿಲನಕ್ಕೆ ಕಾಯುತ್ತಿದ್ದರೇನೋ?

    ಕಾಶಿಯಲ್ಲಿ ಸಂಸ್ಕೃತ ಛಾತ್ರ ಸಮಿತಿಯ ಬೆನ್ನುಲುಬಾಗಿ ಕಾಂಗ್ರೆಸ್ಸಿನ ಚಳುವಳಿಗಳ ನೇತಾರನಾಗಿದ್ದರೂ ಅನ್ಯಾಯವಾಗುತ್ತಿದ್ದಾಗ ಅಹಿಂಸೆ ಎಂದು ಕೈಕಟ್ಟಿ ಕೂರಲಿಲ್ಲ. ಕಾಶಿಯ ಕುಖ್ಯಾತ ಗೂಂಡಾನನ್ನು ಸದೆಬಡಿದ, ಯುವತಿಯ ಮೇಲುಗುಳಿದ ಅಪ್ಘನ್ ವ್ಯಾಪಾರಿಯನ್ನು ಚಚ್ಚಿದ, ಆಂಗ್ಲ ಹುಡುಗರನ್ನು ತರಿದಂತಹ ಅನೇಕ ಘಟನೆಗಳಲ್ಲಿ ಶತಶತಮಾನಗಳಿಂದ ಹ್ರಾಸಗೊಂಡಿದ್ದ ಕ್ಷಾತ್ರ ಬ್ರಾಹ್ಮಣ ಆಜಾದನಲ್ಲಿ ಪುನರ್ಜನ್ಮ ಪಡೆದುದನ್ನು ಕಾಣಬಹುದು! 'ಆನಂದಮಠ'ದ ಸಂತಾನರ ಬ್ರಹ್ಮಚರ್ಯ ಜೀವನ ಆಜಾದನಲ್ಲಿ ಧೃಢನಿರ್ಧಾರವೊಂದನ್ನು ಮಾಡಿಸಿತ್ತು. ಚೌರಿಚೌರಾದ ನಂತರದ ಗಾಂಧಿಯ ನಿಷ್ಕ್ರಿಯತೆ ಆಜಾದನ ಸುಪ್ತಮನಸ್ಸಿನಲ್ಲಿದ್ದ ನಿಶಿತ ಗುರಿಯೆಡೆ ಸಾಗುವಂತೆ ಮಾಡಿತ್ತು. ಮಣಿಕರ್ಣಿಕಾ ಘಾಟಿನಲ್ಲಿ ಧಗಧಗಿಸುತ್ತಿದ್ದ ಅಸಂಖ್ಯ ಚಿತಾಗ್ನಿ ಚರಕದ ಬದಲು ಪಿಸ್ತೂಲ್ ಹಿಡಿದು ದುರ್ಗೆಯ ಆರಾಧಕನಾಗುವ ಪ್ರತಿಜ್ಞೆಗೆ ಸಾಕ್ಷಿಯಾಗಿತ್ತು!

    ಪಂಡಿತ ರಾಮಪ್ರಸಾದನ ಆತ್ಮೀಯ ಶಿಷ್ಯನಾಗಿ ತನ್ನ ಪ್ರತಿಭೆ, ಶಕ್ತಿ, ಬುದ್ಧಿಚಾತುರ್ಯಗಳಿಂದ ಕ್ರಾಂತಿಪಾಳಯದಲ್ಲಿ ಗಣನೀಯ ಸ್ಥಾನ ಗಳಿಸಿಬಿಟ್ಟ ಆಜಾದ್. ಅವನ ಗುಂಡು ಹಾರಿಸುವ ತರಬೇತಿಗೆ ಸಾಕ್ಷಿಯಾಗಿದ್ದ, ರಾಣಿ ಲಕ್ಷ್ಮೀಬಾಯಿಯ ಸಾಹಸಗಾಥೆ ಹಾಡುತ್ತಿದ್ದ, ನಾಡಿಗಿಂತ ಕಾಡೇ ವಾಸಿ ಎನ್ನುತ್ತಿದ್ದ ಅವನ ಮನೋಭಾವನೆಗೆ ಸ್ಪಂದಿಸಿದ್ದ ಝಾನ್ಸಿಯ ಕಾಡಂತೂ ಅವನಿಗೆ ಆಪ್ಯಾಯಮಾನವಾಗಿತ್ತು. ಒಮ್ಮೆ ಶಚೀಂದ್ರ ಗುಂಡು ತುಂಬಿದ್ದ ರಿವಾಲ್ವರನ್ನು ಹಿಡಿದು ಅದನ್ನು ಚಲಾಯಿಸುವುದರ ಬಗ್ಗೆ ಭಾವೋನ್ಮತ್ತನಾಗಿ ಭಾಷಣ ಬಿಗಿಯುತ್ತಿದ್ದ. ಅವನಿಗರಿವಿಲ್ಲದಂತೆ ಅವನ ಬೆರಳು ರಿವಾಲ್ವರಿನ ಕುದುರೆಯನ್ನದುಮಿತ್ತು. ಎದುರುಗಡೆ ಭಗವಾನ್ ದಾಸ್ ಕೂತಿದ್ದ. ಎಲ್ಲರೂ ಅವನ ಭಾಷಣದ ಝಲಕಿನಲ್ಲಿ ತೇಲಿ ಹೋಗಿದ್ದರು. ಆಜಾದ್ ತಕ್ಷಣ ಜಿಗಿದು ರಿವಾಲ್ವರ್ ಬಾಯಿಯನ್ನು ಛಾವಣಿಯ ಕಡೆ ತಿರುಗಿಸಿದ. ಮಿಕ್ಕವರೆಲ್ಲಾ ಭಾವಜೀವಿಗಳಾಗಿ ವಾಸ್ತವಲೋಕವನ್ನು ತೊರೆದಿದ್ದರೂ ಆಜಾದ್ ಯಾವಾಗಲೂ ಎಚ್ಚೆತ್ತಿರುತ್ತಿದ್ದ. ಇಂತಹ ಹಲವಾರು ಘಟನೆಗಳನ್ನು ಅವನ ಜೀವನದುದ್ದಕ್ಕೂ ಕಾಣಬಹುದು. ಕಾಕೋರೀ ಕಾಂಡದ ಮುಖ್ಯ ರೂವಾರಿಯಾಗಿದ್ದರೂ, ತನ್ನ ನಾಯಕರು-ಸಹವರ್ತಿಗಳೆಲ್ಲರೂ ಸಿಕ್ಕಿಬಿದ್ದಿದ್ದರೂ, ಪೊಲೀಸರು ಸತತವಾಗಿ ಹಿಂಬಾಲಿಸುತ್ತಿದ್ದರೂ ಆಜಾದ್ ಸಿಕ್ಕಿಬೀಳಲಿಲ್ಲ. ಕಾಕೋರಿ ಮೊಕದ್ದಮೆಗೆ ಬೇಕಾದ ಹಣ, ವಿಷಯಸಾಮಗ್ರಿ ಸಂಗ್ರಹ ಮಾಡುತ್ತಾ, ವಕೀಲರನ್ನು ನೇಮಿಸುತ್ತಾ ತನ್ನನ್ನು ಹುಡುಕುತ್ತಿದ್ದ ಪೊಲೀಸರ ಜೊತೆಯೇ "ಕಲಾಯಿ ಪಂಜಾ" ಆಡುತ್ತಾ ಕ್ರಾಂತಿ ಸಂಘಟನೆ ಮುಂದುವರೆಸಿದ್ದ. ಪೊಲೀಸ್ ಸೂಪರಿಡೆಂಟನ ಕೈಯಿಂದಲೇ ವಾಹನ ಚಾಲನ ಪರವಾನಗಿ ಪತ್ರವನ್ನು ಪಡೆದಿದ್ದ ಅವನ ಚಾಣಕ್ಷತೆಯಂತೂ ಅದ್ಭುತ!

    ಅತ್ಯಾಚಾರಿಗಳು, ಕಾಮುಕರು, ಲಂಪಟರು, ಕುಡಿದು ಹೆಂಡತಿ ಮಕ್ಕಳನ್ನು ಬಡಿಯುವವರನ್ನು ಕಂಡರೆ ಆಜಾದನಿಗಾಗುತ್ತಿರಲಿಲ್ಲ. ಅಸಹಾಯಕರ ಪರ ನಿಂತು ಅವನು ಅನ್ಯಾಯಗಾರರಿಗೆ ಬುದ್ಧಿಕಲಿಸಿದ ಘಟನೆಗಳು ಅಸಂಖ್ಯ. ಢಿಮರಾಪುರದ ಹನುಮಾನ್ ದೇವಸ್ಥಾನದಲ್ಲುಳಿದು ಪಂಡಿತ್ ಜೀ ಎನಿಸಿಕೊಂಡು ಇಡೀ ಊರಿನ ಮನೆಯ ಮಗನಂತೆ ಬಾಳಿದ ಆಜಾದ್ ಆ ಊರು ಬಿಡುವಾಗ ಊರಿಗೇ ಊರೇ ಅತ್ತು ಸ್ಮಶಾನ ಮೌನ ತಾಳಿತ್ತು! ಯೌವನವತಿ ವಿಧವೆಯೊಬ್ಬಳು ಕಾಮವಾಂಛೆಯಿಂದ ಅಜಾದನನ್ನು ಕಾಡಿದಾಗ ಇಪ್ಪತ್ತಡಿ ಎತ್ತರದ ಮಹಡಿಯಿಂದ ಜಿಗಿದು ಸ್ತ್ರೀಮೋಹ ಜಾಲದಿಂದಲೂ ಆಜಾದನಾಗುಳಿದದ್ದು ಇಲ್ಲೇ! ತನಗಾಗಿಯಾಗಲೀ ತನ್ನ ಹೆತ್ತವರಿಗಾಗಲೀ ಯಾರಿಂದಲೂ ಸಹಾಯ ಯಾಚಿಸದ, ಭಿಕ್ಷೆ ಬೇಡದ, ಕೊಟ್ಟವರಿಗೇ ಬೈದು ಕಳುಹಿದ, ತನ್ನ ಮಾತಾಪಿತರ ಸೇವೆಗೆ ತನ್ನ ಪಿಸ್ತೂಲಿನ ಎರಡು ಗುಂಡುಗಳು ಸಾಕು ಎಂದ ತ್ಯಾಗ ಮೂರ್ತಿ ಅವನು. ಹೊಕ್ಕ ಮನೆಯ ಅವಿಭಾಜ್ಯ ಅಂಗವಾಗಿ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಮನೆಯ ವಾತಾವರಣ-ಸಂದರ್ಭ-ಆಚರಣೆಗೆ ತಕ್ಕಂತೆ ಮನೆಯ ಮಗನಂತೆ ಇರುತ್ತಿದ್ದ ಆಜಾದ್ ತನ್ನ ಗುರಿಯತ್ತ ಮುನ್ನಡೆಯಲು ನಾನಾವೇಶಗಳನ್ನೂ ಧರಿಸಬೇಕಾಗಿತ್ತು. ಆಂಗ್ಲ ಸಿಪಾಯಿಗಳೊಡನೆಯೇ ಸೈಕಲ್ ರೇಸ್ ಮಾಡುತ್ತಿದ್ದ ಅವನನ್ನು ಬುಂದೇಲ್ ಖಂಡದ ಅನೇಕ ರಾಜರೂ, ಸರದಾರರೂ ಆತ್ಮೀಯವಾಗಿ ಕಾಣುತ್ತಿದ್ದರು. ಆಜಾದನನ್ನು ಕಾಣುವ ಬಯಕೆ ಅನೇಕ ಗಣ್ಯರಿಗಿತ್ತು. ರಾಜಕೀಯ ನಾಯಕಿಯಾಗಿದ್ದ ಶ್ರೀಮಂತ ಮಹಿಳೆಯೋರ್ವಳು ತನಗೆ ಆಜಾದನೊಡನೆ ಭೇಟಿ ಕಲ್ಪಿಸಿದರೆ ಸಂಘಟನೆಗೆ 2000 ರೂಪಾಯಿ ಕೊಡುವುದಾಗಿ ರುದ್ರನಾರಾಯಣರ ಬಳಿ ಹೇಳಿದಾಗ ಆಜಾದ್ "ಜನರಿಗೆ ದರ್ಶನ ಕೊಟ್ಟು, ಹಸ್ತಾಕ್ಷರ ಕೊಟ್ಟು, ಹಣ ಸಂಗ್ರಹಿಸುತ್ತಾ ಓಡಾಡಲು ನಾನೇನು ಗಾಂಧಿಯಲ್ಲ" ಎಂದಿದ್ದ.

    ಒಂದೆರಡು ಒಣಗಿದ ರೊಟ್ಟಿಗಳು, ಒಂದು ಬೆಲ್ಲದ ತುಂಡೇ ಅವನ ಆಹಾರ. ಊಟಕ್ಕೆ ಕುಳಿತಾಗ ಉಳಿದೆಲ್ಲರನ್ನು ವಿಚಾರಿಸದೆ ಊಟ ಮಾಡುತ್ತಿರಲಿಲ್ಲ. ಸಂಗಡಿಗರು ಯಾರಾದರೂ ಉಪವಾಸವಿದ್ದದ್ದು ಗೊತ್ತಾದರೆ ತನ್ನ ಪಾಲಿನದ್ದನ್ನು ಅವರಿಗೆ ನೀಡಿ ತನ್ನ ಊಟವಾಗಿದೆ ಎನ್ನುತ್ತಿದ್ದ. ಸಾವಿರಾರು ರೂಪಾಯಿಗಳಿರುತ್ತಿದ್ದರೂ ಅವಶ್ಯಕತೆಗಿಂತ ಹೆಚ್ಚು ಚಿಕ್ಕಾಸನ್ನೂ ಖರ್ಚು ಮಾಡುತ್ತಿರಲಿಲ್ಲ. ಸಂಸ್ಥೆಯ ಒಂದೊಂದು ಕಾಸನ್ನು ವ್ಯರ್ಥವಾಗದಂತೆ ರಕ್ಷಿಸುವುದು, ಪ್ರತಿ ಖರ್ಚಿನ ಲೆಖ್ಖ ಇಡುವುದು ಸೇನಾಧಿಪತಿಯಾದ ತನ್ನ ನೈತಿಕ ಜವಾಬ್ದಾರಿ ಎನ್ನುವುದು ಅವನ ನಿಲುವಾಗಿತ್ತು. ಅನೇಕ ಬಾರಿ ಉಪವಾಸವೇ ಇರುತ್ತಿದ್ದ. ಒಮ್ಮೆ ಕಲ್ಕತ್ತೆಯ ಶ್ರೀಮಂತ ಮುದುಕಿಯ ಮನೆಗೆ ಡಕಾಯಿತಿ ಮಾಡಲು ಹೋಗಿದ್ದಾಗ ಸಂಗಡಿಗನೊಬ್ಬ ಮುದುಕಿಯ ಮಗಳನ್ನು ಅತ್ಯಾಚಾರ ಮಾಡಲು ಧಾವಿಸಿದಾಗ ಸರಕ್ಕನೆ ಅವನ ಕೈಹಿಡಿದು ನಿಲ್ಲಿಸಿದ್ದು ಮಾತ್ರವಲ್ಲದೆ, ತಮ್ಮ ಕಾರ್ಯ ಅಪವಿತ್ರವಾಯಿತೆಂದು ದರೋಡೆಯನ್ನೇ ನಿಲ್ಲಿಸಿ ಮುದುಕಿಯ ಕ್ಷಮೆ ಕೇಳಿದ್ದ ಆಜಾದ್! ಅವನು ಕಳ್ಳತನ ಮಾಡುವಾಗಲೂ ಉದಾತ್ತ ಧ್ಯೇಯದ ಪಾವಿತ್ರ್ಯತೆ ಇರುತ್ತಿತ್ತು. ಆಂಗ್ಲರನ್ನು ಶಿಕ್ಷಿಸಬೇಕಾಗಿ ಬಂದಾಗ ಅವರ ಪತ್ನಿ ಮಕ್ಕಳ ಮೇಲೆ ಕೈಮಾಡದಂತೆ ನಿರ್ದೇಶಿಸುತ್ತಿದ್ದ.
   
    1927ರಲ್ಲೊಮ್ಮೆ ಲಾರಿಯ ಹ್ಯಾಂಡಲ್ ತಿರುಗಿಸುವ ಸಹಾಯ ಮಾಡಲು ಹೋಗಿ ಆಜಾದನ ಕೈಯ ಮೂಳೆ ಮುರಿದಿತ್ತು. ವೈದ್ಯರ ಬಳಿ ಕ್ಲೋರೋಫಾರಂ ಕೊಡದೆಯೇ ಶಸ್ತ್ರಚಿಕಿತ್ಸೆ ಮಾಡಲು ಹೇಳಿದ ಆಜಾದ್. ಕ್ಲೋರೋಫಾರಂನಿಂದ ಜ್ಞಾನ ತಪ್ಪಿದಾಗ ತನ್ನ ರಹಸ್ಯಳನ್ನೆಲ್ಲಾ ಬಡಬಡಿಸಿದರೆ ಅನಾಹುತವಾದೀತೆಂಬ ಎಚ್ಚರಿಕೆ ಅವನದ್ದು. ಆದರೆ ವೈದ್ಯರು ರೋಗಿಯ ಮಾತು ಕೇಳುವುದು ಎಲ್ಲಾದರೂ ಉಂಟೇ? ಶಸ್ತ್ರಚಿಕಿತ್ಸೆ ನಡೆಯಿತು. ಆಜಾದ್ ಊಹಿಸಿದ್ದ ಅನಾಹುತ ನಡೆದೇ ಹೋಗಿತ್ತು. ಆದರೆ ವೈದ್ಯ ಆಂಗ್ಲರ ಬಾಲಬಡುಕನಾಗಿರಲಿಲ್ಲವಾದ್ದರಿಂದ ಆಜಾದ್ ಬಚಾವಾದ. ಮುಂದೆ ಅದೇ ಕೈ ಪ್ರಚಂಡ ಪರಾಕ್ರಮದಿಂದ ಶತ್ರುಗಳ ಮೇಲೆ ಅವಿರತ ಗುಂಡಿನ ಮಳೆಗರೆದುದನ್ನು ಕೇಳಿದಾಗ ಆ ವೈದ್ಯನಲ್ಲಿ ಎಂತಹ ಭಾವನೆಗಳು ಉಕ್ಕಿರಬಹುದು?

    ಬಿಸ್ಮಿಲ್ಲನ ಬಳಿಕ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಿದ ಆಜಾದ್. ಲಾಲಾಜಿಯನ್ನು ಕೊಂದ ಸೇಡಿಗೆ ಸ್ಯಾಂಡರ್ಸನ ವಧೆಯ ನೇತೃತ್ವ ಆಜಾದನದ್ದೇ! ಬಾಂಬು ತಯಾರಿಕಾ ತಜ್ಞ ಜತೀನ್ ದಾಸನ ಮನವೊಲಿಸಿ ತನ್ನ ಸಂಗಡಿಗರಿಗೆ ಬಾಂಬು ತಯಾರಿಸುವ ತರಬೇತಿ ಕೊಡಿಸಿದ. ಮುಂದೆ ಆಜಾದನ ಯೋಜನೆಯಂತೆ ಅಸೆಂಬ್ಲಿಯಲ್ಲಿ ಭಗತ್-ದತ್ತರು ಸ್ಫೋಟಿಸಿದ್ದು ಹೀಗೆ ತಯಾರಾದ ಬಾಂಬುಗಳನ್ನೇ! ವಾಸ್ತವವಾಗಿ ಭಗತ್ ಸಿಂಗನ "ಶತ್ರುಗಳ ಕೈಗೆ ಸಿಕ್ಕಿ ಬೀಳುವ ಆತ್ಮಾರ್ಪಣೆ" ಆಜಾದನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕೆಚ್ಚೆದೆಯಿಂದ ಹೋರಾಡಿ ವಿಜಯಿಯಾಗುವ ಚಾಣಕ್ಯ ನೀತಿ ಅವನದ್ದು. ಸಾವು ಬಂದಾಗಲೂ ವೀರರಂತೆ ಹೋರಾಡಿ ಸಾಯಬೇಕೆ ಹೊರತು ಶತ್ರುಗಳ ಕೈಗೆ ಸಿಕ್ಕಿ ಬೀಳುವುದು ವ್ಯಾವಹಾರಿಕವೂ ಅಲ್ಲ, ತರ್ಕಬದ್ಧವೂ ಅಲ್ಲ ಎನ್ನುವುದು ಅವನ ನಿಲುವು. ಆದರೆ ಭಗತನ ಹುಚ್ಚು ಆವೇಶದ ಮುಂದೆ ಆಜಾದ್ ಸೋಲಬೇಕಾಯ್ತು. ಭಗತನನ್ನು ಹಾರಿಸಿಕೊಂಡು ಬರುವ ಯೋಜನೆಯೂ ಭಗತನಿಂದ ಸಂಕೇತ ಬರದ ಕಾರಣ ವಿಫಲವಾಯಿತು.

    ಆಲ್ಫ್ರೆಡ್ ಪಾರ್ಕಿನಲ್ಲಿ ಸ್ನೇಹಿತ ಸುಖದೇವನ ಜೊತೆ ಭವಿಷ್ಯದ ಕ್ರಾಂತಿ ಸಂಘಟನೆಯ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಾ ಪತ್ರವಾಹಕನೊಬ್ಬನನ್ನು ನಿರೀಕ್ಷಿಸುತ್ತಾ ನೇರಳೆ ಮರದ ಕೆಳಗೆ ಕುಳಿತಿದ್ದ ಆಜಾದನನ್ನು ದ್ರೋಹಿ ವೀರಭದ್ರ ತಿವಾರಿಯ ಸೂಚನೆಯಂತೆ ಪೊಲೀಸ್ ಪಡೆ ಸುತ್ತುವರಿಯಿತು. ಗೆಳೆಯನನ್ನು ಸುರಕ್ಷಿತವಾಗಿ ರವಾನಿಸಿ ಬರೋಬ್ಬರಿ ಮೂವತ್ತೆರಡು ನಿಮಿಷಗಳ ಕಾಲ ಪ್ರಳಯರುದ್ರನಂತೆ, ಚಕ್ರವ್ಯೂಹ ಹೊಕ್ಕ ಅಭಿಮನ್ಯುವಿನಂತೆ ರಣ ಹೂಂಕಾರ ಮಾಡುತ್ತಾ ಹೋರಾಡಿತು ಆ ರಣಕೇಸರಿ! ಅವನ ರಣವಿಕ್ರಮ ಕಂಡು ಜಿಲ್ಲಾಧಿಕಾರಿ ಮಮ್ ಫೋರ್ಡ್ ಮೈಮರೆತು "ವ್ಹಾವ್ ವ್ಹಾಟ್ ಎ ವಂಡರ್ ಫುಲ್ ಷಾಟ್" ಎಂದು ಬೊಬ್ಬಿರಿಯುತ್ತಿದ್ದ. ಈ ಕಾಳಗವನ್ನು ವೀಕ್ಷಿಸಲು ಸುತ್ತಲೂ ಅಸಂಖ್ಯ ಜನ ಸೇರಿದ್ದರು. ಸಂಸ್ಥೆಯ ಹಣದ ಖರ್ಚಿನ ಲೆಖ್ಖದಂತೆ ಆಜಾದನಿಗೆ ಗುಂಡಿನ ಲೆಖ್ಖವೂ ಇತ್ತು. ಕಡೆಯ ಗುಂಡು...ಆಜಾದನ ಕಣ್ಣ ಮುಂದೆ ಅವನ ಪ್ರತಿಜ್ಞೆ ನಲಿಯತೊಡಗಿತು. ಪೊಲೀಸರತ್ತ ಗುರಿ ಮಾಡಿದ್ದ ಪಿಸ್ತೂಲು ತಲೆಯ ಕಡೆ ತಿರುಗಿತು. ಕ್ಷಣಾರ್ಧದಲ್ಲಿ ಅವನು ಅಜೇಯನಾಗಿಯೇ ವೀರಸ್ವರ್ಗ ಪಡೆದಿದ್ದ. ಅವನ ಸ್ವಾತಂತ್ರ್ಯದ ಪ್ರತಿಜ್ಞೆಯ ಘರ್ಜನೆಗೆ, ಸ್ವಾತಂತ್ರ್ಯ ಹೋರಾಟದ ದೀಕ್ಷೆಗೆ ಸಾಕ್ಷಿಯಾಗಿದ್ದ ಗಂಗೆ ಅವನ ಅಂತಿಮ ರಣಹೂಂಕಾರಕ್ಕೂ-ಪ್ರತಿಜ್ಞೆಯ ಸಾಕಾರಕ್ಕೂ ಸಾಕ್ಷಿಯಾಗಿ ಅವನನ್ನು ತನ್ನೊಡಲಲ್ಲಿ ಸೇರಿಸಿಕೊಂಡಳು.

    ತೇಜಸ್ವೀ ಕಂಗಳ ಹೊಳಪಿನ ಕೆಳಗೆ ಹುರಿಮೀಸೆ ಹೊಸೆಯುವ ಭೀಮಬಾಹುಗಳು; ಸದ್ಗುಣಗಳ ಗಣಿ, ಅಪ್ರತಿಮ ದೇಶಪ್ರೇಮ, ತೀಕ್ಷ್ಣ ಬುದ್ಧಿ, ಪ್ರಸಂಗಾವಧಾನ, ಲೋಕಸಂಗ್ರಹ, ಕಾರ್ಯ ಕೌಶಲ್ಯ, ಪ್ರಚಂಡ ಧೈರ್ಯ, ಭೀಮ ಪರಾಕ್ರಮ, ಅವಿರತ ಚಟುವಟಿಕೆ, ಅಮಿತ ಆಶಾವಾದದ ಮೇರು ಮೂರ್ತಿ; ಕ್ರಾಂತಿ ಸಂಘಟನೆಯ ಪ್ರಧಾನ ದಂಡನಾಯಕನಾಗಿ ಉತ್ತರ-ದಕ್ಷಿಣಾದ್ಯಂತ ಕ್ರಾಂತಿ ಸಂಘಟನೆ ಮಾಡಿ, ದೇಶವನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡು ಪರಿವ್ರಾಜಕ ಜೀವನ ನಡೆಸಿದ ಅಮಿತ ಸಾಹಸಿ. ಎಲ್ಲರಂತೆ ಹುಟ್ಟಿ ಬೆಳೆದ ಮಣ್ಣಿನ ಮಗನಾದರೂ ಅವನು ಶೀಲ ಕೆಡುವ ಸಮಯದಲ್ಲಿ ಜಾರಲಿಲ್ಲ. ಮೋಹಕ್ಕೆ ಬಲಿಯಾಗಲಿಲ್ಲ. ಹತಾಶೆಯಲ್ಲಿ ಮುಳುಗಲಿಲ್ಲ. ಪ್ರಳಯರುದ್ರನಂತೆ ಕಾದಿದ. ಕೇವಲ ಇಪ್ಪತ್ತೈದು ವರ್ಷಗಳ ಜೀವನಾವಧಿಯಲ್ಲಿ ಮಹಾದ್ಭುತವನ್ನು ಸಾಧಿಸಿದ. ಭಾರತ ಸರಕಾರ ಆಜಾದನ ಪಿಸ್ತೂಲನ್ನು ಕೇಳಿದಾಗ ನಾಟ್ ಬಾವರ್ "ಒಂದೇ ಒಂದು ಗುಂಡಿನಿಂದ ನನ್ನ ಇಡೀ ಕೈಯನ್ನು ಉಧ್ವಸ್ತಗೊಳಿಸಿದ ಆ ಮಹಾವೀರನ ಪಿಸ್ತೂಲನ್ನು ಹೇಗೆ ಕೊಡಲಿ?" ಎಂದಿದ್ದ. ಶತ್ರುವಿನ ಹೃದಯವನ್ನೂ ಗೆದ್ದ ಗಂಡುಗಲಿ ಅವನು. ಆಜಾದನದ್ದು ಒಂದು ಲೇಖನದಲ್ಲಿ ಹಿಡಿದಿಡಲು ಸಾಧ್ಯವಿಲ್ಲದ ವಿಕ್ರಮ!ಸೋಮವಾರ, ಜುಲೈ 4, 2016

ನಿದ್ದೆ ಮಾಡುತ್ತಿರೋ ನೆಪೋಲಿಯನ್, ಬೋಳುಮಂಡೆ ಸ್ಕ್ವೀಲರ್

ನಿದ್ದೆ ಮಾಡುತ್ತಿರೋ ನೆಪೋಲಿಯನ್, ಬೋಳುಮಂಡೆ ಸ್ಕ್ವೀಲರ್

          ಜಾರ್ಜ್ ಆರ್ವೆಲ್ ಬರೆದ ವಿಡಂಬನೆ "ಅನಿಮಲ್ ಫಾರ್ಮ್" ಬಗ್ಗೆ ಕೇಳಿದ್ದೀರಾ? ಸ್ಟಾಲಿನ್ನನ ಸರ್ವಾಧಿಕಾರವನ್ನು ಲೇವಡಿ ಮಾಡಿ ಬರೆದ ಈ ವಿಡಂಬನಾತ್ಮಕ ಕಥನ ದಶಕಗಳುರುಳಿದರು ಬಹಳ ಪ್ರಖ್ಯಾತ! ಆ ಕಥೆಯ ಸಂಕ್ಷಿಪ್ತ ರೂಪವನ್ನು ಎಸ್. ಆರ್. ರಾಮಸ್ವಾಮಿಯವರು ಜಾರ್ಜ್ ಆರ್ವೆಲನ ಬಗ್ಗೆ ಬರೆದ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದರು. ಅದನ್ನು ಓದಿದಾಗ ನಿಮಗೆ ನಿಮ್ಮ ಸರಕಾರವೋ, ಕೆಲಸ ಮಾಡುವ ಸಂಸ್ಥೆಯೋ ನೆನಪಾದರೆ ಅಚ್ಚರಿಯೇನಲ್ಲ.

         "ಮೇನರ್ ಫಾರ್ಮ್"ನ ಪ್ರಾಣಿಗಳೆಲ್ಲಾ ಒಂದಾಗಿ ಬಂಡಾಯವೆದ್ದು ಜಮೀನಿನ ಯಜಮಾನನನ್ನು ಹೊರಗಟ್ಟಿ ತಮ್ಮದೇ ಅಧಿಕಾರವನ್ನು ಸ್ಥಾಪಿಸುತ್ತವೆ. ಪ್ರಾಣಿಗಳ ಬಂಡಾಯದ ಗುಂಪಿನ ಮುಖ್ಯಸ್ಥರು ಮೂರು ಹಂದಿಗಳು. ಸ್ಟಾಲಿನ್ನನ ಪ್ರತಿರೂಪವೆನಿಸಿದ ನೆಪೋಲಿಯನ್ ಎನ್ನುವ ನಾಯಕ, ಟ್ರಾಟ್ ಸ್ಕಿಯನ್ನು ಹೋಲುವ ಸ್ನೋಬಾಲ್ ಎನ್ನುವ ಬುದ್ಧಿಜೀವಿ, ಸ್ಕ್ವೀಲರ್ ಎನ್ನುವ ಸರಕಾರದ ಯೋಜನೆಗಳನ್ನು ಪ್ರಚಾರ ಮಾಡುವವರೇ ಈ ಮೂರು ಹಂದಿಗಳು. ಸ್ನೋಬಾಲ್ ಬಂಡಾಯದ ಮೂಲತತ್ವಗಳನ್ನು ಏಳು ಸೂತ್ರಗಳಲ್ಲಿ ಅಡಕಗೊಳಿಸುತ್ತಾನೆ.

೧. ಎರಡು ಕಾಲಿನ ಮೇಲೆ ನಡೆಯುವವರೆಲ್ಲಾ ನಮ್ಮ ಶತ್ರುಗಳು.
೨. ನಾಲ್ಕು ಕಾಲಿನವು ಹಾಗೂ ರೆಕ್ಕೆಯುಳ್ಳವು ನಮ್ಮ ಮಿತ್ರವರ್ಗ.
೩. ಯಾವ ಪ್ರಾಣಿಯೂ ಬಟ್ಟೆ ಧರಿಸಕೂಡದು.
೪. ಯಾವ ಪ್ರಾಣಿಯೂ ಹಾಸಿಗೆಯಲ್ಲಿ ಮಲಗಕೂಡದು.
೫. ಯಾವ ಪ್ರಾಣಿಯೂ ಹೆಂಡ ಕುಡಿಯಕೂಡದು.
೬. ಯಾವ ಪ್ರಾಣಿಯೂ ಬೇರೆ ಪ್ರಾಣಿಯನ್ನು ಕೊಲ್ಲಕೂಡದು.
೭. ಎಲ್ಲಾ ಪ್ರಾಣಿಗಳೂ ಸಮಾನ.

ಪ್ರಾಣಿಗಳು ಅನಕ್ಷರಸ್ಥ ಹಾಗೂ ಅಜ್ಞಾನಿಗಳಾದುದರಿಂದ ಅವುಗಳಿಗೆ ಈ ಸೂತ್ರಗಳು ತಿಳಿಯದಾದಾಗ ಸ್ನೋಬಾಲ್ ಈ ಸೂತ್ರಗಳನ್ನು ಮತ್ತಷ್ಟು ಸರಳಗೊಳಿಸಿದ; "ನಾಲ್ಕು ಕಾಲು, ಒಳ್ಳೆಯವರು; ಎರಡು ಕಾಲು, ಕೆಟ್ಟವರು!"

            ಪ್ರಾಣಿಗಳು ಎಷ್ಟು ಮುಗ್ಧವೆಂದರೆ ಉಳಿದೆಲ್ಲಾ ಪ್ರಾಣಿಗಳ ಆವಶ್ಯಕತೆಗಳು ತಮ್ಮ ಆವಶ್ಯಕತೆಗಳು ಒಂದೇ ಎಂದು ಭಾವಿಸಿದ್ದವು. ಆಗ ಸ್ಕ್ವೀಲರ್ ಬುದ್ಧಿಜೀವಿಗಳು ಅರ್ಥಾತ್ ಹಂದಿಗಳಿಗೆ ವಿಶೇಷ ಆಹಾರ ಆವಶ್ಯಕವೆಂದು ತಿಳಿಯಪಡಿಸುತ್ತಾನೆ. ಹೀಗೆ ಸೇಬು, ಹಾಲು ಮುಂತಾದ ಶ್ರೀಮಂತ ಆಹಾರವೆಲ್ಲಾ ಹಂದಿಗಳಿಗೆ ಮೀಸಲು. ಹಂದಿಗಳಿಗೆ ಆಹಾರದಲ್ಲಿ ಪೋಷಣೆ ಸಾಲದೆ ಹೋದರೆ ನಮ್ಮ "ಪ್ರಾಣಿಗಳ ಬೀಡು" ಮತ್ತೆ ಹಿಂದಿನ ಯಜಮಾನನ ವಶವಾಗುತ್ತೆ ಎಂದು ಪ್ರಾಣಿಗಳನ್ನು ನಂಬಿಸಲಾಗುತ್ತದೆ.

           ಏತನ್ಮಧ್ಯೆ ಸ್ನೋಬಾಲ್ ಹಾಗೂ ನೆಪೋಲಿಯನ್ನರ ನಡುವೆ ಭಿನ್ನಮತ ತಲೆದೋರಿ ಸ್ನೋಬಾಲ್'ನ ಗಡಿಪಾರಾಗುತ್ತದೆ. ನೆಪೋಲಿಯನ್ ಪ್ರಾಣಿಗಳ ಸಂಸತ್ತಿಗೆ ಬದಲಾಗಿ ವಾರಕ್ಕೊಮ್ಮೆ ಬುಜೀಗಳ(ಹಂದಿಗಳ) ತಜ್ಞ ಸಮಿತಿ ಸಮಾವೇಶಗೊಂಡು ನಿರ್ಣಯ ಕೈಗೊಳ್ಳುವಂತೆ ಏರ್ಪಾಡು ಮಾಡುತ್ತಾನೆ. ಆಡಳಿತವನ್ನೆಲ್ಲಾ ನಾವೇ ನೋಡಿಕೊಳ್ಳುತ್ತೇವೆ. ನೀವು ಶ್ರಮ ಪಡುವ ಅಗತ್ಯವಿಲ್ಲ ಎಂದು ಸ್ಕ್ವೀಲರ್ ಪ್ರಾಣಿಗಳಿಗೆ ತಿಳುವಳಿಕೆ ಕೊಡುತ್ತಾನೆ. ಸ್ನೋಬಾಲ್ ಗಾಳಿಯಂತ್ರ ಸ್ಥಾಪಿಸೋಣ ಎಂದಾಗ ಅದನ್ನು ದೇಶದ್ರೋಹವೆಂತಲೂ ಗುಲಾಮಗಿರಿಯ ಮರುಸ್ಥಾಪನೆಯೆಂತಲೂ ಹೇಳಿದ್ದ ನೆಪೋಲಿಯನ್ ಈಗ ತಾನೇ ಗಾಳಿಯಂತ್ರ ಸ್ಥಾಪಿಸುತ್ತಾನೆ. ವಾಸ್ತವವಾಗಿ ಈ ಯೋಜನೆ ಹಾಕಿದ್ದವ ನೆಪೋಲಿಯನ್ನೇ, ಸ್ನೋಬಾಲ್ ಇದನ್ನು ಕದ್ದಿದ್ದ ಎಂದು ಸಾರಲಾಗುತ್ತದೆ. ಹಾಗಿದ್ದರೆ ನೆಪೋಲಿಯನ್ ತನ್ನದೇ ಯೋಜನೆಯನ್ನು ವಿರೋಧಿಸಿದ್ದೇಕೆಂದು ತಲೆಯಲ್ಲಿ ಅಲ್ಪಸ್ವಲ್ಪ ಬೊಂಡಿದ್ದ ಪ್ರಾಣಿಗಳು ವಿಚಾರಿಸಿದಾಗ ಅದು ದೇಶಹಿತದ ದೃಷ್ಟಿಯಿಂದ ಸ್ನೋಬಾಲನ್ನು ಓಡಿಸುವುದಕ್ಕೆ ಕೈಗೊಂಡ ನಿರ್ಧಾರ ಎನ್ನಲಾಗುತ್ತದೆ. ನೆಪೋಲಿಯನ್ನನ ದೂರದೃಷ್ಟಿಯನ್ನೂ, ಪ್ರಾಜ್ಞತೆಯನ್ನೂ ಪ್ರಾಣಿಗಳೆಲ್ಲಾ ಕೊಂಡಾಡುತ್ತವೆ.

ಗುಲಾಮಗಿರಿಯ ಸ್ಮರಣೆಯನ್ನು ಅಳಿಸಿಹಾಕುವ ಉದ್ದೇಶದಿಂದ ನೆಪೋಲಿಯನ್ ಪ್ರಾಣಿಗಳ ದುಡಿಮೆಯ ಅವಧಿಯನ್ನು ಹೆಚ್ಚಿಸುತ್ತಾನೆ. ಭಾನುವಾರದ ರಜೆಯನ್ನು ರದ್ದುಗೊಳಿಸುತ್ತಾನೆ. ನೆರೆಹೊರೆಯ ಜಮೀಂದಾರರೊಡನೆ ಸಂಪರ್ಕ ಬೆಳೆಸುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದಾಗ ಪ್ರಾಣಿಗಳ ಹುಬ್ಬೇರುತ್ತವೆ. ಯಾಕೆಂದರೆ ಮನುಷ್ಯವರ್ಗದೊಡನೆ ಯಾವ ಸಂಪರ್ಕವನ್ನೂ ಇರಿಸಿಕೊಳ್ಳಬಾರದೆಂಬುದೇ ಪ್ರಾಣಿಗಳ ಬಂಡಾಯದ ಪ್ರೇರಕಸೂತ್ರವಾಗಿದ್ದುದು. ಈ ಮೂಲಕಲ್ಪನೆ ಸ್ನೋಬಾಲ್'ನ ಅವಿವೇಕದ ಫಲ ಎನ್ನುತ್ತಾನೆ ನೆಪೋಲಿಯನ್! ನೆಪೋಲಿಯನ್ನನ ದಕ್ಷ ಆಡಳಿತದ ಪರಿಣಾಮ ಆಹಾರಾಭಾವ ತಲೆದೋರುತ್ತದೆ. ಇದು ಸುಳ್ಳೆಂದು ಸಾಬೀತು ಮಾಡಲು ಮನುಷ್ಯವರ್ಗದ ಪ್ರತಿನಿಧಿಯೊಬ್ಬನನ್ನು ಕರೆಸಿ ತುಂಬಿತುಳುಕುತ್ತಿದ್ದ ಧಾನ್ಯದ ಗೂಡೆಗಳನ್ನು ಪ್ರದರ್ಶಿಸಲಾಗುತ್ತದೆ. ವಾಸ್ತವವಾಗಿ ಮೇಲ್ಪದರದಲ್ಲಿ ಧಾನ್ಯವಿದ್ದರೆ ಕೆಳಗೆ ಮರಳಿನಿಂದ ಗೂಡೆಯನ್ನು ತುಂಬಿಸಲಾಗಿರುತ್ತದೆ. ಹಾಲಿನ ಕೊರತೆ, ಮೊಟ್ಟೆಗಳ ನಾಶ, ಧಾನ್ಯದ ಕಳವು ಎಲ್ಲಕ್ಕೂ ಸ್ನೋಬಾಲ್ನ ಪಿತೂರಿಯೇ ಕಾರಣವೆಂದು ಸರ್ಕಾರ ಪ್ರಚಾರ ಮಾಡುತ್ತದೆ. ಸ್ನೋಬಾಲ್ ಬೀಡಿನ ಹಿಂದಿನ ಯಜಮಾನನ ಜೊತೆ ಕೈ ಜೋಡಿಸಿದ್ದಾನೆಂದು ಸಾರಲಾಗುತ್ತೆ. ಭಾನುವಾರದ ದುಡಿಮೆಗೆ ಆಕ್ಷೇಪಿಸಿದ ನಾಲ್ವರು ಹಂದಿಗಳನ್ನು ಸ್ನೋಬಾಲ್ ಏಜೆಂಟರೆಂದು ದಸ್ತಗಿರಿ ಮಾಡಲಾಗುತ್ತೆ. "ಯಾವ ಪ್ರಾಣಿಯೂ ಬೇರೆ ಪ್ರಾಣಿಯನ್ನು ಕೊಲ್ಲಕೂಡದು" ಎಂಬ ಸೂತ್ರಕ್ಕೆ "_ಕಾರಣವಿಲ್ಲದೆ" ಎಂದು ಸೇರಿಸಲಾಗುತ್ತೆ. ಹಂದಿಗಳು ಮಾತ್ರ ನೆಮ್ಮದಿಯಿಂದಿರುತ್ತವೆ. ಅವು ಮದ್ಯಪಾನ ಮಾಡಿದುದಕ್ಕೆ ಕೆಲ ಪಾನಪ್ರಿಯ ಪ್ರಾಣಿಗಳು ಆಕ್ಷೇಪಿಸಿದಾಗ "ಅತಿಯಾಗಿ ಕುಡಿಯಬಾರದೆಂದು ಮಾತ್ರ ನಿಯಮವಿರುವುದು" ಎನ್ನಲಾಗುತ್ತೆ. ಉಳಿದ ಪ್ರಾಣಿಗಳ ದುಡಿಮೆಗೆ ದೊರಕುವ ಫಲ ಹಿಂದಿಗಿಂತ ಹೆಚ್ಚು ಹಾಡುಗಳು, ಭಾಷಣಗಳು, ಮೆರವಣಿಗೆಗಳು! "ಪ್ರಾಣಿಗಳ ಬೀಡಿ"ನ ಯಶಸ್ಸನ್ನು ಕೀರ್ತಿಸಲು ವಾರಕ್ಕೊಮ್ಮೆ ಮೇಳ ನಡೆಸುವಂತೆ ನೆಪೋಲಿಯನ್ ಆಜ್ಞಾಪಿಸುತ್ತಾನೆ. "ನಾಲ್ಕು ಕಾಲು ಒಳ್ಳೆಯವರು, ಎರಡು ಕಾಲು ಕೆಟ್ಟವರು" ಪಲ್ಲವಿಯನ್ನು ಎಲ್ಲರೂ ಒಕ್ಕೊರಲಿನಿಂದ ಹಾಡುತ್ತಾರೆ.

ಶಿಸ್ತು ತಪ್ಪಿದರೆ ಶತ್ರುಗಳು ಮೇಲೆರಗುತ್ತಾರೆ ಎಂದು ಹೆದರಿಸಲಾಗುತ್ತೆ. ಅಧಿಕ ದುಡಿಮೆ, ಕಡಿಮೆ ಪ್ರತಿಫಲದಿಂದ ಪ್ರಾಣಿಗಳೆಲ್ಲಾ ಸೊರಗಿದ್ದರೂ ನಾಯಕವರ್ಗದ ಹಂದಿಗಳು, ಪೊಲೀಸ್ ವ್ಯವಸ್ಥೆ ನಿರ್ವಹಿಸುತ್ತಿದ್ದ ನಾಯಿಗಳು ಮಾತ್ರ ಸೊಂಪಾಗಿರುತ್ತವೆ. ಕಾಲಕ್ರಮದಲ್ಲಿ ಹಂದಿಗಳು ಬಟ್ಟೆ ಧರಿಸುತ್ತವೆ. ಹಾಸಿಗೆಯ ಮೇಲೆ ಮಲಗುತ್ತವೆ. ಎರಡು ಕಾಲಿನ ನಡಿಗೆಯನ್ನೂ ಪ್ರಾರಂಭಿಸುತ್ತವೆ. ಕೈಯಲ್ಲಿ ಚಬುಕು ಹಿಡಿದು ನೆಪೋಲಿಯನ್ ರಾಜಗಾಂಭೀರ್ಯದಿಂದ ಎರಡು ಕಾಲುಗಳಲ್ಲಿ ನಡೆಯತೊಡಗಿದಾಗ ಹೊಸ ಘೋಷಣೆ ಮೊಳಗುತ್ತದೆ. "ನಾಲ್ಕು ಕಾಲು ಒಳ್ಳೆಯದು; ಎರಡು ಕಾಲು ಅದಕ್ಕಿಂತ ಉತ್ಕೃಷ್ಟ!" ಜೊತೆಗೆ ಪ್ರಾಣಿಗಳ ಏಳು ಸೂತ್ರ "ಎಲ್ಲ ಪ್ರಾಣಿಗಳೂ ಸಮಾನ, ಆದರೆ ಕೆಲವು ಪ್ರಾಣಿಗಳು ಉಳಿದವಕ್ಕಿಂತ ಹೆಚ್ಚು ಸಮಾನ" ಎಂದಾಗುತ್ತದೆ! ಪ್ರಾಣಿವರ್ಗದ ಪ್ರತಿನಿಧಿ ಪಿಲ್ಕಿಂಗ್ ಟನ್'ನನ್ನು ಔತಣಕ್ಕೆ ಆಹ್ವಾನಿಸಿದ ನೆಪೋಲಿಯನ್ ಪ್ರಾಣಿಗಳ ಬೀಡನ್ನು ಮತ್ತೆ "ಮೇನರ್ ಫಾರ್ಮ್" ಎಂದು ಮರುನಾಮಕರಣ ಮಾಡುತ್ತಾನೆ! ನೆಪೋಲಿಯನ್, ಪಿಲ್ಕಿಂಗ್ ಟನ್ನರನ್ನು ಅಕ್ಕಪಕ್ಕದಲ್ಲಿ ನೋಡಿದಾಗ ಮನುಷ್ಯ ಯಾರು ಹಂದಿ ಯಾರು ಎಂದು ಗುರುತಿಸಲೇ ಕಷ್ಟವಾಗುತ್ತದೆ!

ಪ್ರಖ್ಯಾತವಾದ ಈ ಕಥೆಯ ಪ್ರಸ್ತುತತೆ ಇಂದಿಗೂ ಕುಂದಿಲ್ಲ. ಈ ಕಥೆ ಒಂದು ತಿಂಗಳು ಪೂರೈಸಿರುವ ಕೇರಳದ ವಾಮರಂಗ ಸರಕಾರಕ್ಕೆ ಹೇಳಿ ಮಾಡಿಸಿದಂತಿದೆ! ಇದನ್ನೋದಿದಾಗ ಬ್ರಿಟಿಷರ ತರುವಾಯ ಬಂದ ಕಾಂಗ್ರೆಸ್ ಸರಕಾರ, ಬಂಗಾಳದಲ್ಲಿನ ಸರಕಾರಗಳು, ಕೇಜ್ರಿವಾಲನ ದೆಹಲಿಯ ಆಡಳಿತ ನೆನಪಾದರೂ ಆಶ್ಚರ್ಯವಿಲ್ಲ. ಹೆಚ್ಚೇಕೆ, ನಿದ್ದೆ ಮಾಡುತ್ತಿರೋ ನೆಪೋಲಿಯನ್, ಬೋಳುಮಂಡೆ ಸ್ಕ್ವೀಲರ್ ಏನಾದರೂ ನಿಮ್ಮ ಮನಃಪಟಲದಲ್ಲಿ ಹಾದುಹೋದರೆ ನಾನು ಜವಾಬ್ದಾರನಲ್ಲ!