ಪುಟಗಳು

ಮಂಗಳವಾರ, ಜೂನ್ 15, 2021

ಶಂಕರರು = ರಮಣರು = ಅದ್ವೈತ

ಶಂಕರರು = ರಮಣರು = ಅದ್ವೈತ





ಸೃಷ್ಟಿಕರ್ತ ಬ್ರಹ್ಮನು ತನ್ನ ಮನಸ್ಸಿನಿಂದ ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ ಎಂಬ ಹೆಸರಿನ ನಾಲ್ಕು ಮಕ್ಕಳನ್ನು ಸೃಷ್ಟಿಸಿದ. ತಮ್ಮ ಸೃಷ್ಟಿಯ ಉದ್ದೇಶವನ್ನು ಅವರು ಬ್ರಹ್ಮನಲ್ಲಿ ವಿಚಾರಿಸಿದರು. ಆಗ ಆತ "ನಾನು ಪ್ರಪಂಚವನ್ನು ಸೃಷ್ಟಿಸಬೇಕಾಗಿದೆ. ಆದರೆ ಆತ್ಮಸಾಕ್ಷಾತ್ಕಾರಕ್ಕಾಗಿ ನಾನು ತಪಸ್ಸಿಗೆ ತೆರಳುತ್ತೇನೆ. ಆದುದರಿಂದ ಪ್ರಪಂಚ ಸೃಷ್ಟಿಗೆಂದೇ ನಿಮ್ಮನ್ನು ಪಡೆದಿದ್ದೇನೆ. ನಿಮ್ಮನ್ನು ಬಹುವಾಗಿಸಿಕೊಳ್ಳುವುದರಿಂದ ಇದು ಸಾಧ್ಯ" ಎಂದು ಉತ್ತರಿಸಿದ. ಈ ಅಭಿಪ್ರಾಯ ಅವರಿಗೆ ಒಪ್ಪಿಗೆಯಾಗಲಿಲ್ಲ. ಇಷ್ಟೆಲ್ಲಾ ಫಜೀತಿಪಡುವುದಕ್ಕಿಂತ ಎಲ್ಲದರ ಮೂಲವನ್ನು ಹುಡುಕಿ ಆನಂದಾನುಭವಕ್ಕೆ ಅವರು ಬಯಸಿ ಬ್ರಹ್ಮನ ಅಪ್ಪಣೆಯನ್ನು ನೆರವೇರಿಸದೆ ಅವನನ್ನು ತೊರೆದು ತಮಗೆ ಮಾರ್ಗದರ್ಶನ ನೀಡುವ ಗುರುವನ್ನು ಹುಡುಕಿಕೊಂಡು ಹೊರಟರು. ಆತ್ಮಸಾಕ್ಷಾತ್ಕಾರಕ್ಕೆ ಪೂರ್ಣ ಅರ್ಹತೆ ಅವರಿಗಿತ್ತು. ಅತ್ಯುತ್ತಮ ಗುರುವಿನಿಂದಲೇ ಮಾರ್ಗದರ್ಶನ ಬೇಕಿತ್ತು. ಶಿವನಲ್ಲದೆ ಅಂತಹಾ ಗುರು ಮತ್ತಾರು? ಅವನು ಯೋಗಿರಾಜ. ಆಲದ ವೃಕ್ಷದ ನೆರಳಿನಲ್ಲಿ ಕುಳಿತ ಶಿವನು ಅವರಿಗೆ ಗೋಚರನಾದನು. ಕುಳಿತಂತೆಯೇ ಆತ ಸಮಾಧಿಯಲ್ಲಿ ಮುಳುಗಿದ್ದ. ಪೂರ್ಣ ಶಾಂತನಾಗಿದ್ದ. ಮೌನವೇ ಅವನಲ್ಲಿ ತುಂಬಿತ್ತು. ಅಂತಹಾ ಶಿವನನ್ನು ಕುಮಾರರು ಕಂಡರು. ಕೂಡಲೇ ಅವರು ಸಮಾಧಿಸ್ಥರಾದರು. ಅವರ ಸಂದೇಹಗಳೆಲ್ಲಾ ಛಿನ್ನವಾದವು.


ಮೌನವೇ ನಿಜವಾದ ಉಪದೇಶ. ಅದು ಪೂರ್ಣ ಉಪದೇಶ. ಸಾಧನೆಯಲ್ಲಿ ತುಂಬಾ ಮುಂದುವರೆದವನಿಗೆ ಮಾತ್ರ ಮೌನೋಪದೇಶ ಸಿದ್ಧಿಸುತ್ತದೆ. ಉಳಿದವರು ಮೌನದಿಂದ ಪೂರ್ಣ ಪ್ರಭಾವವನ್ನು ಗಳಿಸಲಾರರು. ಸತ್ಯದ ವಿವರಣೆಗಾಗಿ ಅಂಥವರಿಗೆ ಮಾತು ಬೇಕು. ಆದರೆ ಸತ್ಯವೋ ವಾಕ್ಕಿಗೆ ಆತೀತ. ಅದಕ್ಕೆ ಯಾವ ವಿವರಣೆಯೂ ಸಲ್ಲದು. ಅದನ್ನು ಕೇವಲ ಸೂಚಿಸಬಹುದು ಅಷ್ಟೇ. ಮನುಷ್ಯನಿಗಿರುವ ಭ್ರಮೆ ಹೇಗೆ ಮಿಥ್ಯೆ ಎಂಬುದನ್ನು ಅವರಿಗೆ ತಿಳಿಸಬೇಕು. ಆಗ ಅದರಿಂದ ಬಿಡಿಸಿಕೊಳ್ಳಲು ಅವರು ಯತ್ನಿಸುತ್ತಾರೆ. ಆತ್ಮಶೋಧನೆಗೆ ತೊಡಗುತ್ತಾರೆ. ಆತ್ಮವಾಗಿಯೇ ಇರುವುದರಲ್ಲಿ ಅದು ಪರಿಣಮಿಸುತ್ತದೆ. ಶಿವನ ಅವತಾರವೇ ಆದ ಶ್ರೀಶಂಕರರಿಗೆ ಪತಿತ ಜೀವಿಗಳ ಬಗೆಗೆ ತುಂಬಾ ಅನುಕಂಪ. ಪ್ರತಿಯೊಬ್ಬರೂ ಆತ್ಮಾನಂದವನ್ನು ಪಡೆಯಬೇಕೆಂಬುದೇ ಅವರ ಹಂಬಲ. ಮೌನದಿಂದ ಎಲ್ಲರ ಹೃದಯವನ್ನು ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದುದರಿಂದಲೇ ಜನರು ಓದಿ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲಿ ಎಂದು ಶ್ರೀಶಂಕರರು ದಕ್ಷಿಣಾಮೂರ್ತಿ ಶ್ಲೋಕವನ್ನು ರಚಿಸಿದರು. ಮಾಯೆಯ ಮೂಲಭೂತ ಅಂಶಗಳಾದ ಜೀವ, ಪ್ರಪಂಚ ಹಾಗೂ ಈಶ್ವರ ಇವ್ಯಾವುವೂ ಆತ್ಮನಿಗೆ ಅತೀತವಲ್ಲ ಎಂದು ತಿಳಿದಾಗ ಮಾಯೆ ಇಲ್ಲವಾಗುತ್ತದೆ. ಗುರು ಹಾಗೂ ಶಿಷ್ಯನ ಆತ್ಮಗಳಿಂದ ಜಗತ್ತು ಬೇರೆಯಲ್ಲ ಎಂದು ಜಗತ್ತನ್ನು ಕುರಿತು ಮೊದಲ ನಾಲ್ಕು ಶ್ಲೋಕ ಹೇಳಿದರೆ, ಎರಡನೆಯ ನಾಲ್ಕು ಶ್ಲೋಕಗಳು ಶರಣಾಗತನಾದ ಶಿಷ್ಯನು ಗುರುವಿನ ಆತ್ಮನೇ ಆಗಿದ್ದಾನೆ ಎಂದು ಜೀವವನ್ನು, ಒಂಬತ್ತನೆಯ ಶ್ಲೋಕ ಈಶ್ವರನನ್ನು ಹಾಗೂ ಹತ್ತನೆಯ ಶ್ಲೋಕ ಸಾಕ್ಷಾತ್ಕಾರವನ್ನು ಕುರಿತು ಹೇಳುತ್ತವೆ. ಇದು ಶ್ರೀಶಂಕರರ ದಕ್ಷಿಣಾಮೂರ್ತಿ ಸ್ತ್ರೋತ್ರಕ್ಕೆ ಶ್ರೀರಮಣರು ರಚಿಸಿದ ವ್ಯಾಖ್ಯಾನದ ಸಂಕ್ಷಿಪ್ತ ಪಾಠ. 


ಎಸ್. ಕೃಷ್ಣನ್ ಅವರಿಂದ ಅನುವಾದಿತವಾದ ಶ್ರೀಶಂಕರರ "ವಿವೇಕ ಚೂಡಾಮಣಿ"ಗೆ ರಮಣ ಮಹರ್ಷಿಗಳು ಮುನ್ನುಡಿ ಬರೆದಿದ್ದಾರೆ. ಅಲ್ಲಿ ಶಂಕರರ ಅವತಾರದ ಉದ್ದೇಶವನ್ನು ಬಹು ಚೆನ್ನಾಗಿ ವರ್ಣಿಸಿದ್ದಾರೆ. ಮೌನವಾಗಿ ಆತ್ಮಜ್ಞಾನದ ಉಪದೇಶ ಕೊಡುವ ದಕ್ಷಿಣಾಮೂರ್ತಿಯ ಅವತಾರಿಯ ಮಾತುಗಳೂ ಅದ್ಭುತವೇ. "ಜಗತ್ತಿನ ಪ್ರತಿಯೊಂದು ಜೀವಿಯೂ ದುಃಖ ಸ್ಪರ್ಶವೇ ಇಲ್ಲದ ಸುಖವನ್ನು ಹೊಂದಲು ಬಯಸುತ್ತದೆ. ಅಲ್ಲದೆ ಪ್ರತಿಯೊಬ್ಬನೂ ತನ್ನನ್ನು ತಾನು ತುಂಬಾ ಪ್ರೀತಿಸುತ್ತಾನೆ. ಸುಖದ ಅಭಾವದಲ್ಲಿ ಈ ಪ್ರೀತಿ ಸಾಧ್ಯವಿಲ್ಲ. ನಿದ್ರೆಯಲ್ಲಿ ಎಲ್ಲವೂ ಮಾಯವಾಗಿದ್ದರೂ ಸುಖದ ಅನುಭವ ಮಾತ್ರ ಇರುತ್ತದೆ. ಆದರೂ ತನ್ನ ಸಹಜ ಸ್ವಭಾವದ ಬಗೆಗೆ ಅಜ್ಞಾನದಿಂದ, ಜನರು ಲೌಕಿಕ ಜಗತ್ತಿನಲ್ಲಿ ಸುಖದ ಅನ್ವೇಷನೆಯಲ್ಲಿ ತೇಲುತ್ತಾರೆ; ಸುಖದ ನೇರ ಮಾರ್ಗವನ್ನು ಮರೆಯುತ್ತಾರೆ; ತಪ್ಪು ತಿಳುವಳಿಕೆಯಿಂದ ಇಹಲೋಕ ಮತ್ತು ಪರಲೋಕದ ಸುಖಗಳಲ್ಲಿ ಆನಂದ ಅಡಗಿದೆ ಎಂದು ಭ್ರಮಿಸುತ್ತಾರೆ. ಆದರೆ ದುಃಖ ಲೇಪವಿಲ್ಲದೆ ಸುಖ ಆತನಿಗೆ ದೊರಕುವುದೇ ಇಲ್ಲ. ಸುಖಕ್ಕೆ ನೇರ ಹಾದಿಯನ್ನು ತೋರಿಸಿ ಕೊಡುವುದಕ್ಕೆಂದೇ ಈಶ್ವರನು ಶ್ರೀ ಶಂಕರರ ರೂಪದಲ್ಲಿ ಅವತರಿಸಿದ; ವೇದಾಂತದ ಪ್ರಸ್ಥಾನತ್ರಯಗಳಿಗೆ ಭಾಷ್ಯವನ್ನು ರಚಿಸಿದ. ಅವೆಲ್ಲವೂ ಆನಂದದ ಔನ್ನತ್ಯವನ್ನು ಎತ್ತಿ ತೋರುತ್ತದೆ. ಅಲ್ಲದೆ ಶ್ರೀಶಂಕರರೂಪೀ ಶಿವನು ತನ್ನ ಇಹಲೋಕದ ಜೀವನ ವಿಧಾನದ ಮೂಲಕ ಅದನ್ನು ಪ್ರಮಾಣಿಸಿ ತೋರಿದ. ಆದರೆ ಮೋಕ್ಷದ ಆನಂದಕ್ಕಾಗಿ ಆತುರರಾದರೂ ಅಗತ್ಯ ಪಾಂಡಿತ್ಯವಿಲ್ಲದ ಸಾಧಕರಿಂದ ಈ ಭಾಷ್ಯಗಳಿಗೆ ಅಷ್ಟಾಗಿ ಪ್ರಯೋಜನವಿಲ್ಲ. ಅಂಥ ಸಾಧಕರ ಪ್ರಯೋಜನಕ್ಕಾಗಿಯೇ ಶ್ರೀಶಂಕರರು ಭಾಷ್ಯಗಳ ಸಾರವನ್ನೇ "ವಿವೇಕ ಚೂಡಾಮಣಿ"ಯಾಗಿ ಬರೆದರು. ಮೋಕ್ಷವನ್ನು ಹುಡುಕುವ ಸಾಧಕರಿಗೆ ಅಗತ್ಯ ವಿವರಗಳನ್ನು ತಿಳಿಸುವ ಮೂಲಕ ಅದು ಅವರನ್ನು ನೇರವಾದ ಹಾದಿಯಲ್ಲಿ ನಡೆಸುತ್ತದೆ. 



ಮಾನವ ಜನ್ಮವನ್ನು ಗಳಿಸುವುದೇ ಬಹು ಕಷ್ಟ. ಹಾಗೆ ಪಡೆದಿರುವಾಗ ತನ್ನ ಸಹಜ ಸ್ವರೂಪವಾದ ಆನಂದಕ್ಕಾಗಿ ಮಾನವನು ಯತ್ನಿಸಬೇಕು. ಜ್ಞಾನದಿಂದ ಮಾತ್ರ ಈ ಆನಂದಾನುಭವ ಸಾಧ್ಯ, ಸತತ ವಿಚಾರದಿಂದಲೇ ಜ್ಞಾನ ಸಾಧನೆ. ಈ ವಿಚಾರ ಮಾರ್ಗವನ್ನು ಅರಿಯುವುದಕ್ಕಾಗಿ ಗುರುವಿನ ಕೃಪೆಯನ್ನು ಸಾಧಕನು ಪಡೆಯಬೇಕು; ಎಂದು ತಿಳಿಸಿ ಮುಂದೆ ಗುರು ಹಾಗೂ ಶಿಷ್ಯನ ಅರ್ಹತೆಗಳನ್ನು ಶ್ರೀ ಶಂಕರರು ವಿವರಿಸುತ್ತಾರೆ. ಶಿಷ್ಯನು ಹೇಗೆ ಗುರುವನ್ನು ಹೊಂದಿ ಅವನನ್ನು ಸೇವಿಸಬೇಕು, ಮೋಕ್ಷದ ಆನಂದವನ್ನು ಪಡೆಯಲು ಗುರೂಪದೇಶದ ಶ್ರವಣ, ಮನನ, ನಿಧಿಧ್ಯಾಸನಗಳ ಸಾಧನೆ ಅಗತ್ಯ ಎಂದು ಸೂಚಿಸುತ್ತಾರೆ. ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ದೇಹಗಳು ಅನಾತ್ಮ ವಸ್ತುಗಳು. ಅನಿತ್ಯವಾದ ಇವುಗಳನ್ನು ತಾನೆಂದು ಭ್ರಮಿಸುವುದು ಅವಿದ್ಯೆಯ ಕಾರಣದಿಂದ. ಇದೇ ಬಂಧನ. ಈ ಅಜ್ಞಾನವನ್ನು ನಿವಾರಿಸಿಕೊಂಡರೆ ಮುಕ್ತಿ ದೊರಕುತ್ತದೆ. ಇದನ್ನು ಗುರೂಪದೇಶದ ಮೂಲಕ ತಿಳಿಯುವುದು ಶ್ರವಣ. ದರ್ಭೆಯ ಅಗ್ರವನ್ನು ಅದರ ಬೇರಿನಿಂದ ಕಿತ್ತುಕೊಳ್ಳುವಂತೆ, ಅನ್ನಮಯಾದಿ ಪಂಚಕೋಶಗಳಿಂದ ಕೂಡಿದ ಈ ಮೂರು ದೇಹಗಳನ್ನೂ ನೇತಿ ನೇತಿ ಎಂದು ತಿರಸ್ಕರಿಸಿ, ಸೂಕ್ಷ್ಮ ವಿಚಾರದಿಂದ ಹೃದಯ ಕುಹರದಲ್ಲಿ ಅಹಂ-ಅಹಂ ಎಂಬ ರೂಪದಲ್ಲಿ ಹಾಗೂ ಸಮಷ್ಟಿಯಲ್ಲಿ ಪ್ರಕಾಶಿಸುವ ಅದನ್ನು ಗುರುತಿಸಿ, ತತ್ತ್ವಮಸಿ ಮಹಾವಾಕ್ಯದಲ್ಲಿನ ತತ್ ಸ್ವರೂಪನಾಗಿ ಅದನ್ನು ತಿಳಿದು ಚಿಂತಿಸುವುದೇ ಮನನ.


ದಿವ್ಯ ಆನಂದ: ನಾಮರೂಪಗಳಿಂದಾದ ಜಗತ್ ಸತ್ ಅಥವಾ ಬ್ರಹ್ಮನ ಅಧೀನವೇ ಆಗಿದೆ, ಬ್ರಹ್ಮನಿಂದ ಅದು ಬೇರೆಯಲ್ಲ. ಆದುದರಿಂದ ಬ್ರಹ್ಮವೊಂದೇ ಸತ್ಯ. ಜೀವ-ಬ್ರಹ್ಮೈಕ್ಯವನ್ನು ತತ್ತ್ವಮಸಿ ಮಹಾವಾಕ್ಯದ ರಹಸ್ಯವಾಗಿ ಗುರುವಿನಿಂದ ತಿಳಿಯುವುದು ಉಪದೇಶ. ಆಗ ಶಿಷ್ಯನು ಅಹಂ ಬ್ರಹ್ಮಾಸ್ಮಿ ಎನ್ನುವ ಸ್ಥಿತಿಯನ್ನು ಅನುಭವಿಸುತ್ತಾನೆ. ಆದರೆ ಅತ್ಯಂತ ಗಾಢವೂ ಬಲಿಷ್ಟವೂ ಆದ ಪೂರ್ವ ವಾಸನೆಗಳು ಉದ್ಬುದ್ಧವಾಗಿ ಆತ್ಮಾನುಭವಕ್ಕೆ ತಡೆಯೊಡ್ಡುತ್ತವೆ. ಮೂರು ಬಗೆಯ ಈ ವಾಸನೆಗಳಿಗೆ ಅಹಂಕಾರವೇ ಮೂಲ. ಅದು ಬಹಿರ್ಜಗತ್ತಿನಲ್ಲಿ ವಿವಿಧ ಸ್ವರೂಪಗಳಲ್ಲಿ ವರ್ಧಿಸುವಂತೆ ಮಾಡುವುದೇ ವಿಕ್ಷೇಪ. ಅದು ರಜೋಗುಣದ ಪರಿಣಾಮವಾದ ಆವರಣ. ಈ ವಾಸನೆಗಳೆಲ್ಲಾ ನಾಶವಾಗುವವರೆಗೂ ಮನಸ್ಸನ್ನು ದೃಢವಾಗಿ ಇರಿಸುವುದು, ಸತತ ಎಚ್ಚರದಿಂದ ಜಾಗೃತವಾಗುವುದು, ತನ್ನ ಸಹಜ ಸ್ವರೂಪವನ್ನು ಅನುಭವಿಸುವುದು - ಇದನ್ನೇ ಅಹಂ ಬ್ರಹ್ಮಾಸ್ಮಿ, ಬ್ರಹ್ಮೈವಾಹಂ ಎನ್ನಲಾಗಿದೆ. ಈ ಅನುಭವವೇ ನಿದಿಧ್ಯಾಸನ ಅಥವಾ ಆತ್ಮಾನುಸಂಧಾನ. ಈ ಪ್ರಕ್ರಿಯೆ ಮೊಸರನ್ನು ಕಡೆದು ಬೆಣ್ಣೆ ತೆಗೆಯುವ ಹಾಗೆ, ತೈಲಧಾರೆಯಂತೆ ಸತತವಾಗಿ ಹರಿಯುವ ಸಾಧನೆಯಿಂದ ನಿರ್ವಿಕಲ್ಪ ಸಮಾಧಿಯ ಸಹಜ ಶಾಶ್ವತ ಸ್ಥಿತಿ ಉಂಟಾಗುತ್ತದೆ. ಅದರಿಂದ ನೇರವಾದ, ತಕ್ಷಣದ , ತಡೆಯಿಲ್ಲದ ಬ್ರಹ್ಮನ ಅನುಭವ ಉಂಟಾಗುತ್ತದೆ. ಅದು ಏಕ ಕಾಲದಲ್ಲಿ ಜ್ಞಾನವೂ ಹೌದು, ಅನುಭವವೂ ಹೌದು. ಅದು ಕಾಲ-ದೇಶಾತೀತ. 


ಅಖಂಡ ಆನಂದ: ಅಜ್ಞಾನದ ಭ್ರಮೆ, ಮನೋ ಪ್ರವೃತ್ತಿಗಳ ವಿಷವೃತ್ತ ನಾಶವಾಗಿ ಸಂದೇಹಗಳು ಅಳಿದು ಸಂಚಿತ, ಆಗಾಮೀ, ಪ್ರಾರಬ್ಧ ಕರ್ಮಬಂಧನಗಳು ಕಳಚಿ ಹೃದಯಗ್ರಂಥಿ ಕತ್ತರಿಸಲ್ಪಡುವ ಇದೇ ಆತ್ಮಸಾಕ್ಷಾತ್ಕಾರ. ಈ ದ್ವಂದ್ವಾತೀತವಾದ ಸ್ಥಿತಿಯನ್ನು ಅನುಭವಿಸುವುದೇ ಜೀವನದ ಪರಮಪುರುಷಾರ್ಥ. ಅದನ್ನು ಸಾಧಿಸಿದವನೇ ಜೀವನ್ಮುಕ್ತ. ಅವನು ತನ್ನ ಇಚ್ಛೆಯಂತೆ ವರ್ತಿಸಲು ಸ್ವತಂತ್ರ. ಈ ಭೌತಿಕ ದೇಹವನ್ನು ತ್ಯಜಿಸಿದಾಗ ಮುಕ್ತನಾಗುತ್ತಾನೆ - ಮರಣವೇ ಆಗಿರುವ ಜನ್ಮವನ್ನು ಮತ್ತೆ ಪಡೆಯುವುದಿಲ್ಲ. ಅದು ಅಂತಿಮ ಮೋಕ್ಷ. ವಿದೇಹ ಮುಕ್ತಿ.



"ಇಂಡಿಯನ್ ಫಿಲಾಸಫಿ ಕೃತಿಯಲ್ಲಿ ಪ್ರೊಫೆಸರ್ ರಾಧಾಕೃಷ್ಣನ್ ಶ್ರೀ ಶಂಕರ ಹಾಗೂ ಗೌಡಪಾದರ ಸಿದ್ಧಾಂತಗಳಲ್ಲಿ ವ್ಯತ್ಯಾಸವನ್ನು ಸೂಚಿಸಿದ್ದಾರೆ. ಪರಮ ಸತ್ಯದ ದೃಷ್ಟಿಯಿಂದ ಸ್ವಪ್ನ ಹಾಗೂ ಜಾಗೃತ್ ಸ್ಥಿತಿಗಳಲ್ಲಿ ವ್ಯತ್ಯಾಸವಿಲ್ಲವೆಂದು ಗೌಡಪಾದರು ತಮ್ಮ ಮಾಂಡೂಕ್ಯ ಕಾರಿಕೆಯಲ್ಲಿ ಸೂಚಿಸಿದರೆ ಶಂಕರರು ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಈ ಎರಡೂ ಅವಸ್ಥೆಗಳ ನಡುವೆ ವ್ಯತ್ಯಾಸವನ್ನು ಸೂಚಿಸಿದ್ದಾರೆ ಎಂದು ರಾಧಾಕೃಷ್ಣನ್ ಅವರ ಅಭಿಪ್ರಾಯ. ಆದರೆ ಇವರೀರ್ವರ ಸಿದ್ಧಾಂತಗಳಲ್ಲಿ ವ್ಯತ್ಯಾಸವಿರುವುದು ಹೌದೇ?" ಎಂದು ಬಂಗಾಳಿ ಇಂಜಿನಿಯರ್ ಬೋಸ್ ಎಂಬಾತ ಪ್ರಶ್ನಿಸುತ್ತಾರೆ. ಆಗ ಮಹರ್ಷಿಗಳು ಕೊಡುವ ಉತ್ತರ ಹೀಗಿದೆ. " ವ್ಯತ್ಯಾಸ ಇರುವುದು ನಮ್ಮ ಕಲ್ಪನೆಯಲ್ಲಿ ಮಾತ್ರ. ತಾನು ಎಚ್ಚೆತ್ತಿದ್ದೇನೆ ಎಂದು ಹೇಳುವವನಿಗೆ ಮಾತ್ರ ಸ್ವಪ್ನದ ಅನುಭವ. ನಿಜವಾಗಿ ನೋಡಿದರೆ ಈ ಎಚ್ಚರ ಹಾಗೂ ಕನಸು ಎರಡೂ ಮಿಥ್ಯೆಯೇ. ಆದರೆ ಮಿಥ್ಯೆಯ ಪ್ರಮಾಣವೇನು? ಜಗತ್ತು ಬರಿಯ ಶಬ್ದವಲ್ಲ, ಅದೊಂದು ವಸ್ತುಸ್ಥಿತಿ. ಬ್ರಹ್ಮವೇ ಆರೋಪಿಸಿಕೊಂಡ ಸ್ಥಿತಿ - ನಸುಕು ಬೆಳಕಿನಲ್ಲಿ ಹಗ್ಗವು ಹಾವಾಗಿ ತೋರುವಂತೆ. ಅಲ್ಲಿಯಾದರೋ ಹಾವಲ್ಲವೆಂದು ತಿಳಿದಾಗ ಮಿಥ್ಯಾ ಸಂಬಂಧ ನಶಿಸಿ ಹೋಗುತ್ತದೆ. ಆದರೆ ಇಲ್ಲಿ ಜಗತ್ತು ಬಳಿಕವೂ ಇರುತ್ತದೆ; ಹೇಗೆಂದರೆ ಮರೀಚಿಕೆ ಎಂಬ ಜ್ಞಾನ ಉಂಟಾದ ಮೇಲೂ ನೀರಿರುವುದೆಂಬ ಭ್ರಮೆ ತೋರುವ ಹಾಗೆ. ಆದರೆ ಮರೀಚಿಕೆಯಲ್ಲಿ ನೀರಿಲ್ಲವೆಂದು ತಿಳಿದ ಬಳಿಕ ಮನುಷ್ಯ ಅದರ ಬೆನ್ನು ಹತ್ತುವುದನ್ನು ಬಿಡುತ್ತಾನೆ. ಅಂದರೆ ಈ ಎಲ್ಲಾ ಉದಾಹರಣೆಗಳನ್ನು ಪ್ರತ್ಯೇಕ ಹೇಳಿಕೆಯಾಗಿ ಪರಿಗಣಿಸದೆ ಅದರ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು. ಸಾಧಕನನ್ನು ಈ ಎಲ್ಲಕ್ಕೂ ಆಧಾರಭೂತವಾದ ಅಂತಿಮ ಸತ್ಯದ ಕಡೆ ಸೆಳೆಯುವುದೇ ಸರಪಳಿಯ ಕೊಂಡಿಯಂತಿರುವ ಈ ಉದಾಹರಣೆಗಳ ಉದ್ದೇಶವಾಗಿರುತ್ತದೆ.


ಅದಕ್ಕಾಗಿಯೇ ಪ್ರಾತಿಭಾಸಿಕ, ವ್ಯಾವಹಾರಿಕ ಹಾಗೂ ಪಾರಮಾರ್ಥಿಕ ಸತ್ಯಗಳೆಂದು ಮೂರು ಬಗೆಗಳಾಗುತ್ತವೆ. ವ್ಯಾವಹಾರಿಕದಲ್ಲಿ ಮಾನವ ಜಗತ್ತನ್ನು ಅದರ ಎಲ್ಲಾ ವೈವಿಧ್ಯಗಳೊಂದಿಗೆ ನೋಡುತ್ತಾನೆ. ಇದರ ಕರ್ತೃವೊಬ್ಬನನ್ನು ಊಹಿಸುತ್ತಾನೆ. ಜಗತ್ತನ್ನು ತಾನು ಅನುಭವಿಸುತ್ತಿದ್ದೇನೆ ಎಂದು ನಂಬುತ್ತಾನೆ. ಈ ಮೂರು ಮೂಲಭೂತ ತತ್ತ್ವಗಳೇ ಜಗತ್ತು, ಜೀವ ಮತ್ತು ಈಶ್ವರ. ಅವನು ಸೃಷ್ಟಿಕರ್ತನ ಬಗ್ಗೆ ವಿಚಾರ ಮಾಡಿ ತಿಳಿಯುತ್ತಾನೆ. ಅಮೃತತ್ವದ ಹಂಬಲದಿಂದ ಅವನನ್ನು ಸೇರಲು ಯತ್ನಿಸುತ್ತಾನೆ. ಒಬ್ಬನು ಹೀಗೆ ಬಂಧನದಿಂದ ಮುಕ್ತನಾದರೆ ಉಳಿದವರೂ ಹೀಗೆಯೇ ತಮ್ಮ ತಮ್ಮ ಮುಕ್ತಿಯನ್ನು ಸಾಧಿಸಬೇಕು. ಈ ಎಲ್ಲಾ ದೃಶ್ಯಗಳ ಹಿಂದಿನ ಸತ್ಯವಸ್ತುವನ್ನು ಅವನು ಒಂದು ರೀತಿಯಲ್ಲಿ ಒಪ್ಪುತ್ತಾನೆ. ಮಾಯೆಯೇ ವೈವಿಧ್ಯಕ್ಕೆ ಕಾರಣ. ಅದು ಈಶ್ವರನ ಶಕ್ತಿ ಅಥವಾ ಬ್ರಹ್ಮದ ಕ್ರಿಯೆ. ಹೀಗಾಗಿ ಹಲವು ಜೀವಿಗಳ ಇರವು, ವಸ್ತುಗಳ ಅಸ್ತಿತ್ವ ಮುಂತಾದ ಕಲ್ಪನೆಗಳಿಂದಲೂ ಅದ್ವೈತಕ್ಕೆ ಬಾಧೆಯಿಲ್ಲ. ಅವುಗಳೊಂದಿಗೆ ಅದ್ವೈತದ ಸಂಘರ್ಷವಿಲ್ಲ. ಪ್ರಾತಿಭಾಸಿಕದಲ್ಲಿ ಜಗತ್ತು, ಜೀವ ಹಾಗೂ ಈಶ್ವರ ಇವು ನೋಟಕನ ದೃಷ್ಟಿಯಿಂದ ಮಾತ್ರ. ಅವನಿಂದ ಸ್ವತಂತ್ರವಾಗಿ ಅವು ಇರಲಾರವು. ಇರುವುದು ಒಂದೇ ಜೀವ ಅದು ಈಶ್ವರನೇ. ಉಳಿದೆಲ್ಲ ಮಿಥ್ಯೆ. ಪಾರಮಾರ್ಥಿಕ ಎಂದರೆ ಎರಡನೆಯದನ್ನು ಒಪ್ಪದ ಅಜಾತವಾದ. ತ್ರಿಕಾಲಾಬಾಧಿತವಾದ ಸತ್ಯ. ಸತ್ಯ ಇರುವುದು ಅಥವಾ ಇಲ್ಲದಿರುವುದು, ಹುಡುಕುವುದು  ಪಡೆಯುವುದು ಎಂದಿಲ್ಲ. ಬಂಧ ಮೋಕ್ಷ ಮುಂತಾದುವೂ ಇಲ್ಲ.


ಸತ್ಯ ಹಾಗೂ ಕಲ್ಪನೆಯ ವಿಚಾರವನ್ನು ಭಗವಾನ್ ರಮಣ ಮಹರ್ಷಿಗಳು ವಿಮರ್ಶಿಸಿದ್ದು ಹೀಗೆ. ಸರಿಯಾಗಿ ಅರ್ಥಮಾಡಿಕೊಳ್ಳದೆ ತಾಂತ್ರಿಕರು ಮೊದಲಾದವರು ಶ್ರೀಶಂಕರರ ಸಿದ್ಧಾಂತವನ್ನು  ಮಾಯಾವಾದ ಎಂದು ತಿರಸ್ಕರಿಸುತ್ತಾರೆ. ಅವರು ಹೇಳುವುದೇನು? ಶಂಕರರ ಪ್ರಕಾರ ಬ್ರಹ್ಮವೊಂದೇ ಸತ್ಯ; ಜಗತ್ತು ಮಿಥ್ಯೆ; ಬ್ರಹ್ಮವೇ ಜಗತ್ತು. ಎರಡನೆಯ ಸಿದ್ಧಾಂತದಲ್ಲಿ ಅವರು ನಿಲ್ಲುವುದಿಲ್ಲ. ಮೂರನೆಯದರಿಂದ ಅದನ್ನು ಸಮರ್ಥಿಸುತ್ತಾರೆ. ಇದರ ಮಹತ್ವವೇನು? ವಿಶ್ವವು ಬ್ರಹ್ಮನಿಂದ ಬೇರೆ ಎಂದು ಕಲ್ಪಿಸಿಕೊಳ್ಳಲಾಗಿದೆ - ಇದು ತಪ್ಪು. ರಜ್ಜು-ಸರ್ಪದ ದೃಷ್ಟಾಂತವನ್ನು ಅವರ ವಿರೋಧಿಗಳು ಎತ್ತಿ ತೋರಿಸುತ್ತಾರೆ. ಇದು ಷರತ್ತು ರಹಿತ ಆರೋಪಣೆ. ಹಗ್ಗದ ಸತ್ಯವನ್ನು ತಿಳಿಯುತ್ತಿದ್ದಂತೆಯೇ, ಹಾವಿನ ಭ್ರಾಂತಿ ಕೂಡಲೇ ತನಗೆ ತಾನೇ ಅಳಿದು ಹೋಗುತ್ತದೆ. ಇದರ ಜೊತೆಗೆ ಮರು ಮರೀಚಿಕಾ, ಮೃಗತೃಷ್ಣಾ ಮುಂತಾದ ಆರೋಪಿತ ಸಂಗತಿಗಳನ್ನೂ ಗಣನೆಗೆ ತಂದುಕೊಳ್ಳಬೇಕು. ಮಿಥ್ಯೆ ಎಂದು ತಿಳಿದ ಮೇಲೂ ಭ್ರಾಂತಿ ಮಾಯವಾಗದು. ಅದರ ನೋಟ ಇದ್ದೇ ಇದೆ. ಆದರೆ ಮನುಷ್ಯನು ಅದರ ಬೆನ್ನು ಹತ್ತಿ ಹೋಗುವುದಿಲ್ಲ. ಈ ಎರಡು ಉದಾಹರಣೆಗಳ ಬೆಳಕಿನಲ್ಲೂ ಶ್ರೀ ಶಂಕರರನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತು ಮಿಥ್ಯೆ. ಅದು ತಿಳಿದ ಮೇಲೂ ಜಗತ್ತಿನ ತೋರಿಕೆ ಮುಂದುವರೆಯುತ್ತದೆ. ಆದರೆ ಜಗತ್ತು ಬ್ರಹ್ಮನಿಂದ ಬೇರೆಯಲ್ಲ ಎಂದು ಚೆನ್ನಾಗಿ ಅರಿಯಬೇಕು. ಪ್ರಪಂಚವು ತೋರಿ ಬರುತ್ತದೆ ಎಂದರೆ - ಅದು ಯಾರಿಗೆ? ಅವರು ಕೇಳುತ್ತಾರೆ. ನಿಮ್ಮ ಉತ್ತರ ಏನು? ಆತ್ಮನಿಗೆ ಎಂದೇ ಹೇಳಬೇಕು. ಆದುದರಿಂದ ಆತ್ಮವೊಂದೇ ಸತ್ಯ. ಇದು ಶ್ರೀ ಶಂಕರರ ತೀರ್ಮಾನ. ಆತ್ಮವೆಂದೇ ಭಾವಿಸಿದಾಗ ಜಗತ್ತು ಸತ್ಯ. ಆತ್ಮನಿಂದ ಬೇರೆ ಎಂದು ತಿಳಿದಾಗ ಮಿಥ್ಯೆ. ಈಗ ತಾಂತ್ರಿಕರು ಮೊದಲಾದವರು ಹೇಳುವುದೇನು? ಸತ್ಯ ವಸ್ತುವಿನ ಭಾಗವೇ ಆಗಿರುವುದರಿಂದ ಈ ತೋರಿಕೆಗಳೂ ಈ ತೋರಿಕೆಗಳೂ ಸತ್ಯ ಎಂದು ಅವರೆನ್ನುತ್ತಾರೆ. ಇವೆರಡೂ ಹೇಳಿಕೆಗಳೂ ಒಂದೇ ಅಲ್ಲವೇ? ಸತ್ಯ - ಅಸತ್ಯಗಳು ಒಂದೇ ಎಂದು ಹೇಳಿದಾಗ ನನ್ನ ಅಭಿಪ್ರಾಯ ಇದೇ ಆಗಿತ್ತು.


ವಿರೋಧಿಗಳು ಮುಂದುವರೆದು ಹೇಳುತ್ತಾರೆ: ನಿರ್ಬಂಧಿತ - ನಿರ್ಬಂಧರಹಿತ ಭ್ರಮೆಗಳನ್ನು ಪರಿಶೀಲಿಸಿದಾಗ ಮರೀಚಿಕೆಯಲ್ಲಿನ ನೀರು ಪೂರ್ಣವಾಗಿ ಮಿಥ್ಯೆ. ಏಕೆಂದರೆ ಆ ನೀರನ್ನು ಯಾವುದಕ್ಕೂ ಬಳಸಲಾಗುವುದಿಲ್ಲ. ಆದರೆ ಜಗತ್ತಿನ ತೋರಿಕೆ ಬೇರೆ ಬಗೆಯದು. ಅದರಿಂದ ಪ್ರಯೋಜನ ಉಂಟು. ಅದಕ್ಕೆ ಉದ್ದೇಶ ಉಂಟು. ಎಂದ ಮೇಲೆ ಅವೆರಡೂ ಉದಾಹರಣೆಗಳು ಎಷ್ಟರಮಟ್ಟಿಗೆ ಸರಿ ಹೊಂದುತ್ತವೆ? ಯಾವುದೋ ಉದ್ದೇಶ ಅಥವಾ ಉದ್ದೇಶಗಳನ್ನು ಸಾಧಿಸುತ್ತದೆ ಎಂಬ ಕಾರಣದಿಂದ ಮಾತ್ರ ತೋರಿಕೆಯು ಸತ್ಯವಾಗಲು ಸಾಧ್ಯವಿಲ್ಲ. ಸ್ವಪ್ನದ ಉದಾಹರಣೆಯನ್ನು ತೆಗೆದುಕೊಳ್ಳಿ. ಸ್ವಪ್ನದ ಸೃಷ್ಟಿಗಳಿಗೂ ಉದ್ದೇಶವುಂಟು. ಕನಸಿನ ಉದ್ದೇಶಗಳನ್ನು ಅವು ಪೂರೈಸುತ್ತವೆ. ಕನಸಿನ ತೃಷ್ಣೆಯನ್ನು ಕನಸಿನ ನೀರು ತೃಪ್ತಿಗೊಳಿಸುತ್ತದೆ. ಆದರೆ ಜಾಗೃತ ಸ್ಥಿತಿಯಲ್ಲಿ ಈ ಸ್ವಪ್ನಸೃಷ್ಟಿ ಒಂದು ಮಿಥ್ಯೆಯೇ. ಯಾವುದು ಸತತವಾಗಿ ಇಲ್ಲವೋ ಅದು ಸತ್ಯವಲ್ಲ. ಸತ್ಯವಸ್ತು ಯಾವಾಗಲೂ ಸತ್ಯವಾಗಿರಬೇಕು - ಒಂದು ಕಾಲದಲ್ಲಿ ಸತ್ಯ ಮತ್ತೊಂದರಲ್ಲಿ ಅಲ್ಲ ಎಂಬಂತೆ ಇರಬಾರದು. ಯಕ್ಷಿಣಿಗಾರನ ಸೃಷ್ಟಿಯೂ ಹೀಗೆಯೇ. ಸತ್ಯವೆಂದು ತೋರುತ್ತದೆ. ಆದರೆ ಕೇವಲ ಭ್ರಮೆ. ಹೀಗೆಯೇ ಪ್ರಪಂಚವೂ ತನಗೆ ತಾನೇ ಸತ್ಯವಾಗಿರಲಾರದು. ಎಂದರೆ ಸತ್ಯ ವಸ್ತುವಿನಿಂದ ಸ್ವತಂತ್ರವಾಗಿ ಬೇರೆಯಾಗಿ ಇರದು. ಸಿನಿಮಾ ತೆರೆಯ ಮೇಲೆ ಬೆಂಕಿಯ ದೃಶ್ಯವಿದೆ. ಅದು ತೆರೆಯನ್ನು ಸುಟ್ಟು ಹಾಕುತ್ತದೆಯೇ? ನೀರಿನ ಪ್ರವಾಹವಿದೆ, ಅದು ತೆರೆಯನ್ನು ತೋಯಿಸುತ್ತದೆಯೇ? ಆಯುಧಗಳು-ಉಪಕರಣಗಳು ಇವೆ. ಅವು ತೆರೆಯನ್ನು ಹರಿದು ಹಾಕಬಲ್ಲವೇ? ಅಚ್ಛೇದ್ಯೋಯಂ, ಅದಹ್ಯೋಯಂ, ಅಕ್ಲೇದ್ಯೋಯಂ, ಮುಂತಾಗಿ ಹೇಳಿರುವುದು ಈ ಅರ್ಥದಲ್ಲಿಯೇ. ಬೆಂಕಿ, ನೀರು ಮುಂತಾದುವೆಲ್ಲಾ ಬ್ರಹ್ಮ ಅಂದರೆ ಆತ್ಮವೆಂಬ ತೆರೆಯ ಮೇಲಿನ ತೋರಿಕೆಗಳು: ಅದನ್ನು ಅವು ಬಾಧಿಸುವುದಿಲ್ಲ.


ಆಲಿವರ್ ಲಕೋಂಬಿ ಎನ್ನುವ ಫ್ರೆಂಚ್ ವ್ಯಕ್ತಿ 1936ರಲ್ಲಿ ಶ್ರೀರಮಣ ಮಹರ್ಷಿಗಳ ದರ್ಶನಕ್ಕಾಗಿ ಬರುತ್ತಾನೆ. ಆತ ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಅವುಗಳ ಮೇಲಿನ ಶಾಂಕರ ಭಾಷ್ಯ, ರಾಮಾನುಜ ಭಾಷ್ಯಗಳನ್ನು ಸಂಸ್ಕೃತ ಮೂಲದಲ್ಲೇ ಓದಿಕೊಂಡಿದ್ದ. ಆತ ರಮಣರನ್ನು ಭೇಟಿಯಾದ ಸಮಯದಲ್ಲಿ ಮಹರ್ಷಿಗಳ ಬೋಧನೆ ಶಂಕರ ಸಿದ್ಧಾಂತಕ್ಕೆ ಅನುಗುಣವಾಗಿದೆಯೇ ಎಂದು ಕೇಳುತ್ತಾನೆ. ಆಗ ರಮಣ ಮಹರ್ಷಿಗಳು "ಮಹರ್ಷಿಯ ಬೋಧನೆ ಅನುಭವ ಹಾಗೂ ಸಾಕ್ಷಾತ್ಕಾರಗಳಿಗೆ ಅನುಗುಣವಾಗಿದೆ. ಶ್ರೀಶಂಕರರ ಸಿದ್ಧಾಂತದೊಡನೆ ಸಾಮ್ಯತೆಯನ್ನು ಅಲ್ಲಿ ಇತರರು ಕಾಣುತ್ತಾರೆ" ಎಂದು ಉತ್ತರಿಸುತ್ತಾರೆ. "ಲೋಕವ್ಯವಹಾರದಲ್ಲಿ ದಲ್ಲಾಳಿಗಳಿರಬಹುದು. ಲೋಕಾತೀತದೊಳಗೆ ದಲ್ಲಾಳಿಗಳಿಗೆ ಅವಕಾಶವಿಲ್ಲ. ದಲ್ಲಾಳಿಗಳಿಲ್ಲದ ಏಕೈಕ ದರ್ಶನ ಅದ್ವೈತ. ಉಳಿದೆಲ್ಲಾ ಮತ ಪ್ರವರ್ತಕರಲ್ಲಿ ನಾನು ಹೇಳಿದ್ದೇನೆ ನೀನು ಒಪ್ಪಿಕೋ ಎನ್ನುವ ಭಾವವಿದ್ದರೆ, ಇಲ್ಲಿ ನಿನ್ನ ಬದುಕಿನಿಂದಲೇ ನೀನು ಹುಡುಕಿಕೋ ಎನ್ನುವ ಸತ್ಯಪಥದ ದಿಗ್ದರ್ಶನವಿದೆ." ಎಂದು ಶ್ರೀಶಂಕರರ ಬಗ್ಗೆ ಉಪನ್ಯಾಸ ಮಾಡುವಾಗ ಒಂದು ಕಡೆ ಶತಾವಧಾನಿಗಳು ಹೇಳುತ್ತಾರೆ. ಆದಿಯೋಗಿಯ ಅಪರಾವತಾರರಾದ ದಕ್ಷಿಣಾಮೂರ್ತಿ, ಶ್ರೀಶಂಕರ ಹಾಗೂ ಶ್ರೀರಮಣರಂತಹಾ ಅವಧೂತ ಪರಂಪರೆಯ ಜೀವನ ಇದಕ್ಕೆ ನಿದರ್ಶನವಾಗಿ ನಿಂತಿವೆ.

ದಂಗಾ ದೀದಿಯ ಸೆಕ್ಯುಲರ್ ಉನ್ಮಾದ; ಬಸವಳಿಯಿತು ವಂಗ!

 ದಂಗಾ ದೀದಿಯ ಸೆಕ್ಯುಲರ್ ಉನ್ಮಾದ; ಬಸವಳಿಯಿತು ವಂಗ!


ಮನೆ, ಕಛೇರಿಗಳಿಗೆ ಬೆಂಕಿ ಹಚ್ಚಲಾಯಿತು. ಮನೆಗಳಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಲಾಯಿತು. ಹೇಗೆಂದರೆ ಮರು ದಿವಸಕ್ಕೆ ಅಡುಗೆ ಮಾಡಲು ಅಕ್ಕಿ, ದವಸಧಾನ್ಯ, ಗ್ಯಾಸ್ ಯಾವುದೂ ಉಳಿಯದಂತೆ! ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಲಾಯಿತು. ಹಸುಳೆ ಮಕ್ಕಳ ಅಪ್ಪಂದಿರ ಎರಡೂ ಕಾಲುಗಳನ್ನು ಕತ್ತರಿಸಲಾಯಿತು. ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಯುವಕರನ್ನು ಅಟ್ಟಾಡಿಸಿ ಬಡಿಯಲಾಯಿತು. ಪ್ರಾಯದ ಮುದುಕ ಮುದುಕಿಯರಿಗೂ ತದುಕಲಾಯಿತು. ಒಬ್ಬನೇ ಒಬ್ಬ ಪತ್ರಕರ್ತ ಅಲ್ಲಿಗೆ ಧಾವಿಸಿ ಘಟನೆಗಳನ್ನು ವರದಿ ಮಾಡಲಿಲ್ಲ. ತಮ್ಮ ಬಳಿ ಬಂದ ಮಾಹಿತಿಯನ್ನೂ ಪ್ರಕಟಿಸಲಿಲ್ಲ. ಪೊಲೀಸರು ಯಾವುದೇ ಕೇಸು ದಾಖಲಿಸಲಿಲ್ಲ. ಸರಕಾರ ಪ್ರಜೆಗಳ ಸಹಾಯಕ್ಕೆ ನಿಲ್ಲಲಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಬಂಗಾಳದ ಕಣ್ಣೀರಿನ ಕಥೆಗಳನ್ನು, ದಂಗೆಯ ಭೀಕರತೆಯನ್ನು ರಾಜ್ಯವಿಡೀ ಸುತ್ತಾಡಿ ಕಂಡ ರಾಜ್ಯಪಾಲರು ಪತ್ರಿಕಾ ಘೋಷ್ಠಿಯಲ್ಲಿ ಪ್ರಕಟಿಸಿದ ಪರಿ ಇದು. ಪರಿಶೀಲನೆಗೆಂದು ಹೋದ ರಾಜ್ಯಪಾಲರ ವಾಹನವನ್ನೇ ತಡೆದು ನಿಲ್ಲಿಸಲಾಯಿತು. ಅದರ ವಿರುದ್ಧ ಕೇಸು ದಾಖಲು ಮಾಡಲು ಐದು ದಿವಸ ಹಿಡಿಯಿತು. ಅದೂ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಕಾರ್ಯದರ್ಶಿ, ಪೊಲೀಸ್ ಕಮೀಷನರ್ ಮತ್ತಿತರ ಉನ್ನತ ಅಧಿಕಾರಿಗಳನ್ನು ಒಟ್ಟುಗೂಡಿಸಿ ವಿಡೀಯೋ ಕಾನ್ಪರೆನ್ಸ್ ಮಾಡಿದ ಬಳಿಕ. ಇನ್ನು ಜನಸಾಮಾನ್ಯರ ಪಾಡೇನು? "ಜನ ಸಾವಿರಾರು ಸಂಖ್ಯೆಯಲ್ಲಿ ತಮ್ಮ ವಾಸಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುತ್ತಾರೆಂದರೆ ಇನ್ನು ನಮ್ಮನ್ಯಾವ ಸರಕಾರ, ಆರಕ್ಷಕ ಪಡೆ ರಕ್ಷಿಸಲಾರದು ಎಂಬ ಭೀತಿಯಿಂದ ಪ್ರಾಣ ಉಳಿಸಿಕೊಳ್ಳಲಲ್ಲದೆ ಮತ್ತೇನು? ಸಂತ್ರಸ್ತರು ಯಾರು, ದಂಧೆಕೋರರು ಯಾರು ಎನ್ನುವುದು ರಹಸ್ಯವೇನಲ್ಲವಲ್ಲ? ನಾವು ಸಂವಿಧಾನದ ಕಗ್ಗೊಲೆಯನ್ನು ಕಣ್ಣಾರೆ ಕಂಡು ಸುಮ್ಮನಿದ್ದೇವೆ ಎಂದರೆ ಶಿಕ್ಷೆಯಾಗಬೇಕಾದ್ದು ನಮಗೆ ಅಲ್ಲವೇ? ಇದೇ ದಿಕ್ಕಿನಲ್ಲಿ ಮುಂದುವರೆದರೆ ಬಂಗಾಳವನ್ನು ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ" ಇದು ರಾಜ್ಯಪಾಲರ ಬಾಯಿಯಿಂದ ಉದುರಿದ ರಾಜಕೀಯ ಭಾಷಣವಲ್ಲ. ಇದು ಬಂಗಾಳೀ ಹಿಂದೂಗಳು ರಾಜ್ಯಪಾಲರನ್ನು ಕಂಡು ಕಾಲು ಹಿಡಿದು ಕಣ್ಣೀರಿಟ್ಟು ತಮ್ಮ ಅಳಲು ತೋಡಿಕೊಂಡುದದರ ಸಂಕ್ಷಿಪ್ತ ರೂಪ.


ದೇಶದ ಉಳಿದೆಡೆಯ ಹಿಂದೂಗಳಿಗೆ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗೆಗೆ ಒಂದು ಸಣ್ಣ ಕಲ್ಪನೆಯೂ ಇಲ್ಲ. ಅಷ್ಟು ವ್ಯವಸ್ಥಿತವಾಗಿ ಮಾಧ್ಯಮಮಾಫಿಯಾ ದಂಗೆಯ ಸುದ್ದಿಗಳನ್ನು ಮುಚ್ಚಿಟ್ಟಿದೆ. ಪ್ರತ್ಯಕ್ಷದರ್ಶಿಗಳು ಮಾಡಿರುವ ವಿಡೀಯೋಗಳನ್ನು ತಮ್ಮದೇ "ಫ್ಯಾಕ್ಟ್ ಚೆಕ್ ಸ್ಟಾಂಡರ್ಡ್"ಗೆ ಒಗೆದು ಅವುಗಳೆಲ್ಲಾ ನಕಲಿ ಎನ್ನುತ್ತಾ ದಂಗೆಯ ಸುದ್ಧಿಗಳನ್ನು ಹಂಚಿದವರ ನೈತಿಕ ಸ್ಥೈರ್ಯವನ್ನೂ ಉಡುಗಿಸಿದ ಈ ವ್ಯವಸ್ಥೆ ಮಾಫಿಯಾವಲ್ಲದೇ ಮತ್ತೇನು? ದೂರದ ಪ್ಯಾಲೆಸ್ಟೈನಿನ ರಕ್ತಕಾರುವಂತೆ ಬಣ್ಣ ಹಚ್ಚಿಕೊಂಡ ವಿಡೀಯೋಗಳಿಗೆಲ್ಲಾ ಅಸಲಿ ಪ್ರಮಾಣಪತ್ರ ಕೊಟ್ಟು ಹಿಂದೂಗಳ ವಿರುದ್ಧದ ದೌರ್ಜನ್ಯವನ್ನು ಮಾತ್ರ ನಕಲಿ ಎನ್ನುವವರ ಕಣ್ಣುಗಳಲ್ಲಿರುವುದು ಹಿಂದೂವಿರೋಧದ ದಾಹ ಮಾತ್ರ. ದೂರದ ಪ್ಯಾಲೆಸ್ಟೈನಿಗೆ ಮಿಡಿದ ಪಠಾಣನ ಮಾನವೀಯತೆಯು ಹತ್ತಿರದ ಹಿಂದೂಗಳಿಗೆ ಮಿಡಿಯಲೇ ಇಲ್ಲ. ಯಾವ ಮಾಧ್ಯಮಗಳು ಸರಿಯಾದ ವರದಿ ಮಾಡುತ್ತವೆಯೋ ಅವುಗಳನ್ನು ಹತ್ತಿಕ್ಕಲಾಗುತ್ತದೆ. ಫೇಕ್ ನ್ಯೂಸ್ ಫ್ಯಾಕ್ಟರಿಗಳು ಹಿಂದೂಗಳ ತಲೆಯಲ್ಲಿ ಸುದ್ದಿಮಲವನ್ನು ತುಂಬಿಸುತ್ತಿವೆ. ನಮ್ಮ ಸಂಘ ಬಂಧುಗಳಿಂದಾಗಿ, ತಮ್ಮ ತವರು ನೆಲದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಬಂಗಾಳೀ ಹಿಂದೂ ಸ್ನೇಹಿತರಿಂದ ಈ ವಿಚಾರ ಕೆಲವಷ್ಟು ಜನರಿಗಾದರೂ ತಿಳಿದಿದೆ ಎಂಬುದೇ ಸಮಾಧಾನದ ಸಂಗತಿ.


ಹಾಗಾದರೆ ಬಂಗಾಳದಲ್ಲಿ ನಡೆದದ್ದು ನಕಲಿ ದಂಗೆಯೇ? ಸೆಕ್ಯುಲರುಗಳ ದೃಷ್ಟಿಯಲ್ಲಿ ಹೌದು. ಆದರೆ ಬಂಗಾಳೀ ಸ್ನೇಹಿತರ ಮ್ಲಾನವದನ, ಭೀತಿ, ಕಣ್ಣೀರುಗಳನ್ನು ನೋಡುವ ಮಾನವೀಯತೆಯಿರುವ ಯಾವ ವ್ಯಕ್ತಿಗಾದರೂ ಅಲ್ಲಿ ನಡೆದ ದೌರ್ಜನ್ಯವನ್ನು ಊಹಿಸಬಹುದು. ಅದೇ ಅನುಭವ ಬಂಗಾಳದ ರಾಜ್ಯಪಾಲರಿಗಾದದ್ದು. ಸೆಕ್ಯುಲರು ಉನ್ಮಾದದ ಆಡಳಿತ ಅರಾಜಕತೆಗಿಂತಲೂ ಎಷ್ಟು ಭಯಂಕರ ಎನ್ನುವುದು ಗೋಚರಕ್ಕೆ ಸಿಕ್ಕಿದ್ದು. ಅಲ್ಲಿ ನಡೆದದ್ದು ಮತ್ತೊಂದು ನವಖಾಲೀ ಹತ್ಯಾಕಾಂಡ. ಕಲ್ಕತ್ತಾದ ಮುಸ್ಲಿಂ ಬಾಹುಳ್ಯವಿರುವ ಸ್ಥಳಗಳಿಂದ ಜಿಹಾದೀಗಳನ್ನು ಬಂಗಾಳದ ಮೂಲೆಮೂಲೆಗೂ ಅಟ್ಟಿ ಹಿಂದೂಗಳಿಗೆ ತಿರುಗಿ ಬೀಳಲೂ ಕಿಂಚಿತ್ತೂ ಕ್ಷಣವೂ ಸಿಗದಂತೆ ನಡೆಸಿದ ವ್ಯವಸ್ಥಿತ ದಂಗೆ. ಬಂಗಾಳೀ ಸ್ನೇಹಿತನೊಬ್ಬ ಹೇಳುತ್ತಿದ್ದ. ಆತನ ಅಕ್ಕನ ಮನೆಗೆ ನುಗ್ಗಿದ ಜಿಹಾದೀಗಳು ಮನೆಗೆ ಬೆಂಕಿ ಕೊಟ್ಟದ್ದಲ್ಲದೆ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದರು. ಕಣ್ಣಿನ ಕೆಳ ಭಾಗಕ್ಕೆ ಬಿದ್ದ ಏಟು ಒಂದೂವರೆ ದಿವಸ ಆಕೆ ಏನನ್ನೂ ತಿನ್ನಲಾಗದ, ಕುಡಿಯಲಾಗದ ಸ್ಥಿತಿಗೆ ತಂದೊಡ್ಡಿತು. ದೌರ್ಜನ್ಯಕ್ಕೆ ಕಾರಣ ಒಂದೇ ಆಕೆ ಭಾಜಪವನ್ನು ಬೆಂಬಲಿಸಿದುದು. ಇದೊಂದು ಉದಾಹರಣೆ ಮಾತ್ರ. ಇಂತಹಾ ಹಲವು ದೌರ್ಜನ್ಯದ ಘಟನೆಗಳನ್ನು ಬಂಗಾಳದ ಸ್ನೇಹಿತರಿಂದ ಕೇಳಿದ್ದೇನೆ.  ಇಂತಹಾ ಹಲವು ದೌರ್ಜನ್ಯಗಳು ನಡೆದವು, ಭಾಜಪಾದ ಕಾರ್ಯಾಲಯಗಳನ್ನು ಸುಟ್ಟು ಹಾಕಲಾಯಿತು. ಭಾಜಪಾ ಬೆಂಬಲಿತರ ಮನೆಗಳು ಬೆಂಕಿಗೆ ಆಹುತಿಯಾದವು. ಅವರ ಮೇಲೆ ಹಲ್ಲೆ, ಅತ್ಯಾಚಾರ ನಡೆಯಿತು. ಜಿಹಾದೀಗಳ ಉನ್ಮತ್ತತೆ ಯಾವ ಪ್ರಮಾಣದಲ್ಲಿತ್ತೆಂದರೆ ಸಾವಿರಾರು ಹಿಂದೂಗಳು ಮಾನ, ಪ್ರಾಣ ರಕ್ಷಣೆಗೆ ಅಸ್ಸಾಂಗೆ ತೆರಳಬೇಕಾಯಿತು!


ಬಂಗಾಳೀ ಹಿಂದೂಗಳಿಗೆ ಈಗಲಾದ್ರೂ ಬುದ್ಧಿ ಬರಬಹುದು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉಢಾಫೆಯ ಮಾತಾಡುತ್ತ ತೌಡು ಕುಟ್ಟುತ್ತಾರೆ. ಆದರೆ ಅಲ್ಲಿನ ವಸ್ತುಸ್ಥಿತಿಯನ್ನು ಇವರು ಅರಿತಿಲ್ಲ. ಬಂಗಾಳೀ ಹಿಂದೂ ಈ ಬಾರಿ ಭಾಜಪಾವನ್ನು ಗೆಲ್ಲಿಸಲೆಂದೇ ತುದಿಗಾಲಲ್ಲಿ ನಿಂತಿದ್ದ. ಭಾಜಪಾ ಅಧಿಕಾರಕ್ಕೆ ಬರುತ್ತದೆ, ತನ್ನ ಮೇಲಿನ ದೌರ್ಜನ್ಯಗಳಿಗೆಲ್ಲಾ ಮಂಗಳ ಹಾಡುತ್ತದೆ ಎಂದು ಭಾವಿಸಿದ್ದ. ಆದರೆ ಬಂಗಾಳದ ಬಾಬೂಗಳನ್ನು ತನ್ನ ಹಣದ ಥೈಲಿಯ ರುಚಿ ತೋರಿಸಿ ಅಂಗೈಯಲ್ಲಿಟ್ಟುಕೊಂಡಿರುವ ದೀದಿಯ ಷಡ್ಯಂತ್ರದಿಂದ ಭಾಜಪ ಅಧಿಕಾರದ ಹತ್ತಿರವೂ ಸುಳಿಯಲಿಕ್ಕಾಗಲಿಲ್ಲ. ದಂಗಾ ದೀದಿ ಗೆದ್ದದ್ದು ಇವಿಎಮ್ ಯಂತ್ರಗಳನ್ನೇ ಬದಲಾಯಿಸಿ ಎಂದು ಬಂಗಾಳಿಗಳೇ ಹೇಳುತ್ತಾರೆ. ಈ ಆರೋಪಕ್ಕೆ ಮತ ಎಣಿಕೆ ಮುಗಿದ ನಂತರ ಟಿ.ಎಂ.ಸಿ ಕಾರ್ಯಾಲಯ ಮತ್ತು ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕ ಇವಿಎಮ್ ಯಂತ್ರಗಳೇ ಸಾಕ್ಷಿ. ಆದರೆ ಈ ತನಿಖೆ ದೀದಿ ಅಧಿಕಾರ ವಹಿಸಿಕೊಂಡ ಕೂಡಲೇ ಹಳ್ಳ ಹಿಡಿಯಿತು. ಸೋತ ಬಳಿಕ ದೀದಿಯ ಮೇಲೆ ಗೂಬೆ ಕೂರಿಸುವುದು ಅಂತ ನಿಮಗನ್ನಿಸಿದರೆ ಒಂದು ಬೂತ್ ಲೆವೆಲಿನ ಉದಾಹರಣೆ ಕೊಡುತ್ತೇನೆ. ನನ್ನೋರ್ವ ಬಂಗಾಳೀ ಸ್ನೇಹಿತನ ಬೂತ್ ನಲ್ಲಿ ಭಾಜಪಾ ಮೇಲುಗೈ ಖಚಿತವಾಗಿತ್ತು. ಆದರೆ ಮತ ಎಣಿಕೆಯ ದಿನ ದೀದಿಯ ಪಕ್ಷಕ್ಕೆ 770 ಮತ, ಭಾಜಪಾಕ್ಕೆ 10 ಮತ, ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ಮತ ಸಿಕ್ಕಿತ್ತು. ಇಂತಹಾ ದೊಡ್ಡ ಅಂತರ ಅದರಲ್ಲೂ ಭಾಜಪಾಕ್ಕೆ ಕೇವಲ ಹತ್ತೇ ಮತ ಹೇಗೆ ಸಾಧ್ಯ? ಅದೂ ಭಾಜಪ ಪ್ರಬಲವಾಗಿದ್ದ ಬೂತ್'ನಲ್ಲಿ? ಬೂತ್ನಲ್ಲಿ ಸಿಗುವ ಮತದ ಲೆಖ್ಖ ಯಾವಾಗಲೂ ಬಹುತೇಕ ಖಚಿತವಾದದ್ದು ಎನ್ನುವುದು ಬೂತ್ ಮಟ್ಟದ ಚುನಾವಣಾ ಕಾರ್ಯತಂತ್ರದ ಜ್ಞಾನವುಳ್ಳ ಎಂತಹವರಿಗಾದರೂ ತಿಳಿದಿರುತ್ತದೆ. ಬಂಗಾಳದ ಚುನಾವಣೆಯಲ್ಲಿ ಬಾಂಗ್ಲಾದೇಶದವರೆಷ್ಟು ಮಂದಿ ಮತ ಹಾಕಿದ್ದಾರೋ ದೇವರಿಗೇ ಗೊತ್ತು! ಬಾಂಗ್ಲಾದೇಶಿಗಳಿಗೆ ಹಣಕೊಟ್ಟು ಓಟು ಹಾಕಿಸಲು ಯತ್ನಿಸಿ ಸಿಕ್ಕಿ ಬಿದ್ದ ಪ್ರಕರಣವೂ ನಿಮಗೆ ನೆನಪಿರಬಹುದು. ಗೆದ್ದವರಲ್ಲಿ 29 ಶಾಸಕರು ರೋಹಿಂಗ್ಯಾಗಳು!


ಬಂಗಾಳದಿಂದ ಹೊರಗಿರುವ ನನ್ನ ಬಂಗಾಳೀ ಮಿತ್ರರು ಅದೆಷ್ಟು ಕುಸಿದಿದ್ದರೆಂದರೆ ಕೆಲ ದಿವಸ ಸರಿಯಾಗಿ ಕೆಲಸ ಮಾಡುವ ಮನಸ್ಥಿತಿಯಲ್ಲೂ ಇರಲಿಲ್ಲ. ಕೆಲವರು ವಿಜಯಿಯಾಗಿದ್ದ ಭಾಜಪಾ ಶಾಸಕರು ಜನರ ರಕ್ಷಣೆಗೆ ನಿಲ್ಲಬೇಕಿತ್ತು ಎಂದು ಭಾಜಪಾವನ್ನು ಆಕ್ಷೇಪಿಸುತ್ತಾರೆ. ಆದರೆ ಅವರೇನಾದ್ರೂ ಆವತ್ತು ಮನೆಯಿಂದ ಹೊರಬೀಳುತ್ತಿದ್ದರೂ ಹೆಣವಾಗುತ್ತಿದ್ದರು. ಇದಕ್ಕೆ ದಂಗೆಕೋರರು ಹಲವು ಭಾಜಪಾ ನಾಯಕರ ಮನೆಯ ಸುತ್ತ ಠಳಾಯಿಸಿ ಮನೆಯನ್ನೇ ಧ್ವಂಸಗೊಳಿಸಲು ಆರಂಭಿಸಿದ್ದು, ಬಳಿಕ ಅವರನ್ನು ಅಲ್ಲಿಂದ ಚದುರಿಸಲು ಕೇಂದ್ರ ಸೈನಿಕಪಡೆಯನ್ನು ಕಳುಹಿಸಬೇಕಾಗಿಬಂದದ್ದೇ ಸಾಕ್ಷಿ. ಇನ್ನು ಕೆಲವರು ಕೇಂದ್ರ ಸರಕಾರ ತಕ್ಷಣ ಸೈನಿಕರನ್ನು ನಿಯೋಜಿಸಬೇಕಿತ್ತು ಅನ್ನುತ್ತಾರೆ. ಸಹಜವಾದದ್ದೇ. ಆದರೆ ಒಂದು ವ್ಯವಸ್ಥಿತ ದಂಗೆಯನ್ನು ಹತ್ತಿಕ್ಕಲು ಕೇಂದ್ರ ಸೈನಿಕ ಪಡೆಯನ್ನು ಎಷ್ಟೂಂತಾ, ಎಲ್ಲೀಂತಾ ಕಳುಹಿಸಬಹುದು. ಸೇನೆಯನ್ನು ಕಳುಹಿಸಿದ ಬಳಿಕವೂ ಸಂಪೂರ್ಣ ದಂಗೆಯನ್ನು ಹತ್ತಿಕ್ಕಲು ಕೆಲದಿನಗಳಾದರೂ ಬೇಕು. ಇದು ಕೇಂದ್ರದ ಸಮರ್ಥನೆಯಲ್ಲ. ವಸ್ತುಸ್ಥಿತಿ. ಕೇಂದ್ರ ಇದನ್ನೆಲ್ಲಾ ಮುಂಚೆಯೇ ಅರಿವಿಗೆ ತಂದುಕೊಂಡು ವ್ಯವಸ್ಥೆ ಮಾಡಬೇಕಿತ್ತು ಎನ್ನುವುದು ಸ್ವಲ್ಪಮಟ್ಟಿಗೆ ಸರಿ ಅನ್ನಿಸುತ್ತದೆ. ಜನರ ರಕ್ಷಣೆಗೆ ಮೊದಲೇ ವ್ಯವಸ್ಥೆ ಮಾಡಬೇಕಿತ್ತು. ದೀದಿ ಮೋಸ ಮಾಡುತ್ತಾಳೆ ಎಂಬ ಗುಮಾನಿಯೂ ಕೇಂದ್ರ ಸರಕಾರಕ್ಕೆ ಬರಲಿಲ್ಲ ಎಂದರೆ ವಿಚಿತ್ರ & ವಿಪರ್ಯಾಸವೇ ಸರಿ.


ಪ್ರತಿಪಕ್ಷಗಳು ಮೋದಿಯವರನ್ನು ಹಿಟ್ಲರ್, ಡಿಕ್ಟೇಟರ್ ಎಂದು ಬಿಂಬಿಸಲು ಪ್ರಯತ್ನಿಸಿದವು. ಮೋದಿಯವರ ಕೂದಲೂ ಕೊಂಕಿಸಲೂ ಸಾಧ್ಯವಾಗಲಿಲ್ಲ. ಆಗ ಅವರ ಕಣ್ಣಿಗೆ ಬಿದ್ದುದು ಬಡಪಾಯಿ ಹಿಂದೂಗಳು. ಅದರ ಪ್ರತ್ಯಕ್ಷ ಸಾಕ್ಷಿ ಬಂಗಾಳದಲ್ಲಿದೆ. ತಾನು ಗೆದ್ದುದೇ ತಡ, ತನ್ನ ಗೂಂಡಾಗಳಿಗೆ ಬೇಕಾದ್ದನ್ನು ಮಾಡುವ ಸ್ವಾತಂತ್ರ್ಯ ಕೊಟ್ಟಳು ಆಕೆ. ಹೀಗೆ ಕಾಯುತ್ತಿರುವ ಅದೆಷ್ಟು ನಾಯಕರುಗಳಿದ್ದಾರೋ? ದೆಹಲಿಯಲ್ಲಿ, ಬೆಂಗಳೂರಿನ ಡಿಜೆಹಳ್ಳಿಯಲ್ಲಿ ಆದದ್ದು ನೆನಪಿದೆಯಲ್ಲಾ! ಇದೆಲ್ಲಾ ಉದ್ದೇಶಪೂರ್ವಕವಾಗಿಯೇ, ವ್ಯವಸ್ಥಿತವಾಗಿಯೇ ನಡೆಯಿತು ಎನ್ನುವುದಕ್ಕೆ ಸಾಕ್ಷಿಗಾಗಿ ನಾವು ಚುನಾವಣಾ ಪೂರ್ವದ ಸಮಯಕ್ಕೆ ಧಾವಿಸಬೇಕು. ತೃಣಮೂಲ ಶಾಸಕ ಹಮೀದುಲ್ ರಹಮಾನ್ ತಮಗೆ ಮತ ಹಾಕದವರನ್ನು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದ.ಶೇಖ್ ಅಲಾಮ್ ಎನ್ನುವವ ಭಾರತದ ಮೂವತ್ತು ಪ್ರತಿಶತ ಮುಸ್ಲಿಮರು ಒಂದಾದರೆ ನಾವು ನಾಲ್ಕು ಪಾಕಿಸ್ತಾನಗಳನ್ನು ನಿರ್ಮಿಸಬಹುದು ಎಂದಿದ್ದ. ಇವರೆಲ್ಲಾ ಬಿಡಿ ಸ್ವತಃ ದಂಗಾ ದೀದಿಯೇ "ಕೇಂದ್ರ ಪಡೆಗಳು ತೆರಳಿದ ಬಳಿಕ ಅವರನ್ನು ಯಾರು ರಕ್ಷಿಸುತ್ತಾರೆ?" ಎಂದು ಚುನಾವಣಾ ರ್ಯಾಲಿಯಲ್ಲಿ ಬೆದರಿಕೆ ಹಾಕಿದ್ದಳು. ಕೇಂದ್ರ ಸರಕಾರ ನೇತಾಜಿಯವರ 125ನೇ ಜಯಂತಿಯನ್ನು "ಪರಾಕ್ರಮ್ ದಿವಸ್" ಎಂದು ವಿಶಿಷ್ಟವಾಗಿ ಆಚರಿಸಲು ತೊಡಗಿದಾಗ ದೀದಿ ಅದಕ್ಕೂ ಅಡ್ಡಗಾಲು ಹಾಕಿದಳು. ಜನರು ಜೈಶ್ರೀರಾಮ್ ಘೋಷಣೆ ಹಾಕಿದ್ದೂ ಅವಳ ಪಿತ್ಥವನ್ನು ನೆತ್ತಿಗೇರಿಸಿತು. ಜೈ ಶ್ರೀರಾಮ್ ಎಂಬುದು ಆತಂಕವಾದಿಗಳ ಘೋಷಣೆ ಎಂದುಬಿಟ್ಟಳು. ರಾಮನವಮಿಯ ಮೆರವಣಿಗೆಗಳಲ್ಲಿ ಬಿಲ್ಲು-ಬಾಣಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದಳು. ಮುಸಲ್ಮಾನರ ಹಬ್ಬವೂ ದುರ್ಗಾಪೂಜೆಯ ಸಮಯದಲ್ಲೇ ಬಂದುದಕ್ಕಾಗಿ ದುರ್ಗಾಪೂಜೆಯ ಮೆರವಣಿಗೆಯಯನ್ನೇ ನಿಲ್ಲಿಸಿದಳು. ಎಲ್ಲಾ ದೇಶ ವಿರೋಧಿಗಳು ಒಟ್ಟಾಗಿದ್ದರು. ನಕಲಿ ಪರಿಸರ ಹೋರಾಟಗಾರ್ತಿ ಗ್ರೇಟಾನ ಟೂಲ್ ಕಿಟ್ ನೋಡಿದರೆ ಅದರಲ್ಲಿ ದಂಗೆಯ ಬಗೆಗಿನ ಯೋಜನೆಯ ಹೊಳಹುಗಳು ಕಾಣಿಸುತ್ತವೆ.  


ಕೆಲ ವರ್ಷಗಳ ಹಿಂದೆ ಮಾಲ್ಡಾದಲ್ಲಿ ಎದ್ದ ದಂಗೆಯ ಉರಿಯೇ ಇಂದು ಬಂಗಾಳದಾದ್ಯಂತ ಹಬ್ಬಿದೆ. ಅಂದು ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮುಸಲರು ಮಾರಕಾಯುಧ, ದೊಡ್ಡ ದೊಡ್ಡ ಹಸಿರು ಬಾವುಟಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ 34ನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಕಿರುಚಾಡುತ್ತಿದ್ದರು. ಗಡಿ ಭದ್ರತಾ ಪಡೆಯ ವಾಹನವೂ ಸೇರಿ ಇಪ್ಪತ್ತೈದಕ್ಕೂ ಹೆಚ್ಚು ವಾಹನಗಳು ಮತಾಂಧತೆಯ ಕಿಚ್ಚಿಗೆ ಆಹುತಿಯಾಗಿದ್ದವು. ಅಂಗಡಿ-ಮನೆ, ಪೊಲೀಸ್ ಸ್ಟೇಷನ್ನಿಗೂ ಬೆಂಕಿಬಿದ್ದಿತ್ತು. ಆಸ್ತಿ ಪಾಸ್ತಿಯ ಲೂಟಿಯೂ ನಡೆದಿತ್ತು. ಹತ್ತಾರು ಹಿಂದೂ ದೇವಾಲಯಗಳನ್ನು ಸುಡಲಾಯಿತು. ಇಪ್ಪತ್ತೈದಕ್ಕು ಹೆಚ್ಚು ಹಿಂದೂಗಳ ಮನೆ, ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದವು. ಕಾಲಿಯಾಚಾಕ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಅಲ್ಲಿದ್ದ ಕಡತಗಳನ್ನೆಲ್ಲಾ ಸುಟ್ಟು ಹಾಕಲಾಗಿತ್ತು. ಇದೆಲ್ಲವೂ ಒಂದೇ ದಿನ ಕೆಲವೇ ಕ್ಷಣಗಳಲ್ಲಿ ನಡೆದು ಹೋಗಿತ್ತು.


ಲವ್ ಜಿಹಾದ್ ಮತಾಂಧರ ಕೈಯಲ್ಲಿರುವ ಬಹು ಮುಖ್ಯ ಅಸ್ತ್ರ. ಇದರ ದುಷ್ಪರಿಣಾಮಗಳು ಒಂದೆರಡಲ್ಲ. 2014ರಲ್ಲಿ ಪಶ್ಚಿಮ ಬಂಗಾಳದ ಆರಾಮ್ ಭಾಗ್ ಕ್ಷೇತ್ರದಿಂದ ಗೆದ್ದಾಕೆ ಆಫ್ರಿನ್ ಅಲಿ. ಅದು ಎಸ್.ಸಿ ಮೀಸಲು ಕ್ಷೇತ್ರ! ಆಕೆ ಹುಟ್ಟಿದ್ದು ಹಿಂದೂವಾಗಿ(ಅಪರೂಪಾ ಪೊದ್ದರ್) ಮದುವೆಯಾಗಿ ಮತಾಂತರವೂ ಆದಳು. ಭಾಜಪಾ ಆಕೆಯ ಮೇಲೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದಾಗ ತಾನು ಹೆಸರು ಮಾತ್ರ ಬದಲಾಯಿಸಿದ್ದೇನೆ,ಮತವನ್ನಲ್ಲ ಎಂದಳು! ಮೀಸಲಾತಿ ಕಾನೂನಿನ ದುರುಪಯೋಗ! ಸಂಸ್ಕೃತ ಪದವಿ ವಿದ್ಯಾರ್ಥಿನಿ ಪ್ರಜ್ಞಾ ದೇಬನಾಥಳ ಬಳಿ ಪ್ರೀತಿಯ ನಾಟಕ ಮಾಡಿ, ಮತಾಂತರಿಸಿ ಮದುವೆಯಾದ ಮತಾಂಧನೊಬ್ಬ ಅವಳ ತಲೆಯಲ್ಲಿ "ಕ್ರೈಮ್ ರಿಪೋರ್ಟ"ನ್ನು ತುಂಬಿಸಿದ. ಬಳಿಕ ಅವಳನ್ನು ಬಾಂಗ್ಲಾದೇಶದ ಭಯೋತ್ಪಾದಕರ ಗುಂಪಿಗೆ ಪರಿಚಯಿಸಿದ. ಆಯೇಷಾ ಎಂಬ ಹೊಸ ಹೆಸರು ಸಿಕ್ಕಿದ ಬಳಿಕ ಆಕೆ  ಬಾಂಗ್ಲಾದೇಶದ ಮದರಸಾಗಳಲ್ಲಿ ಪುಟ್ಟ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯಾದಳು. ಜೊತೆಗೆ ಜಾಲತಾಣಗಳಲ್ಲಿ ತನ್ನ ಸಂಪರ್ಕಕ್ಕೆ ಬಂದ ತರುಣ-ತರುಣಿಯರನ್ನು ಹಿಂದೂಧರ್ಮದ ವಿರುದ್ಧ ಎತ್ತಿಕಟ್ಟುವ, ಭಯೋತ್ಪಾದನೆಗೆ ಸಜ್ಜುಗೊಳಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಳು. ಐಸಿಸ್ ಬೆಂಬಲಿತ ಜಮಾತ್-ಉಲ್ ಮುಜಾಹಿದ್ದೀನ್ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥೆಯೂ ಆದಳು. ಅವಳಿಗೆ ಬಲೆ ಬೀಸಿದ ಬಾಂಗ್ಲಾದೇಶ ಉಗ್ರನಿಗ್ರಹ ಪಡೆ ಢಾಕಾದಲ್ಲಿ ಆಕೆಯನ್ನು ಬಂಧಿಸಿತು. ವಿಚಾರಣೆ ವೇಳೆಗೆ ಆಕೆ ತಾನು ಹೇಗೆ ಗಡಿಯಲ್ಲಿ ಲೀಲಾಜಾಲವಾಗಿ ಎರಡೂ ಕಡೆ ಸಂಚರಿಸುತ್ತಿದ್ದೆ, ಪಶ್ಚಿಮ ಬಂಗಾಳದ ಹಳ್ಳಿ-ಹಳ್ಳಿಗಳೂ ಹೇಗೆ ಮತಾಂತರಗೊಳ್ಳುತ್ತಿವೆ ಎನ್ನುವುದನ್ನು ವಿವರವಾಗಿ ಬಿಚ್ಚಿಟ್ಟಳು. ಈ ಎಲ್ಲಾ ಪ್ರಕರಣ ಬೆಳಕಿಗೆ ಬಂದದ್ದು ಬಂಗಾಳದ ಬಸಿರ್ ಹಾತ್ ನಲ್ಲಿದ್ದ  ಐಸಿಸ್ ಏಜೆಂಟ್ ತಾನಿಯಾ ಫವ್ರೀನಳನ್ನು ಎನ್ಐಎ ಬಂಧಿಸಿದ ಮೇಲೆ. ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕಲು ಶತಪ್ರಯತ್ನ ನಡೆಸಿದ್ದರು!



ಕಾಂಗ್ರೆಸ್, ಕಮ್ಯೂನಿಸ್ಟ್ ಆಳ್ವಿಕೆಯಲ್ಲಿ ಬೆಳೆದ ಕೈಗಾರಿಕೆಗಳೂ ನೆಲಕಚ್ಚಿದ್ದವು. ನಂದಿಗ್ರಾಮದಲ್ಲಿ ನಡೆದ ಪ್ರಹಸನವನ್ನು ನೋಡಿದವರಿಗೆ ಅದಕ್ಕಿರುವ ಕಾರಣಗಳನ್ನು ಊಹಿಸಲು ಸಾಧ್ಯವಾಗಬಹುದು. ದೀದಿ ಈ ಕ್ಷೇತ್ರಕ್ಕೆ ಅವೆರಡೂ ಪಕ್ಷಗಳನ್ನೂ ನಾಚಿಸುವಂತೆ ಘಾತಕವಾಗೆರಗಿದಳು. ದಿನನಿತ್ಯದ ಮುಷ್ಕರ, ದಂಗೆ, ಭ್ರಷ್ಟಾಚಾರಗಳಿಗೆ ಬೇಸತ್ತ ಸಂಸ್ಥೆಗಳು ಒಂದೊಂದಾಗಿ ಬಂಗಾಳದಿಂದ ಕಾಲ್ತೆಗೆದವು. ಒಂದು ಕಾಲದಲ್ಲಿ ಎಂಬತ್ತರಿಂದ ತೊಂಬತ್ತು ಪ್ರತಿಶತ ಕ್ಯಾಂಪಸ್ ಸೆಲೆಕ್ಷನ್ ಆಗುತ್ತಿದ್ದ, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಮ್ಮೆ ಮುಂಚೂಣಿಗೆ ಬರುವ ಪ್ರಯತ್ನದಲ್ಲಿದ್ದ ತಾಂತ್ರಿಕ ವಿದ್ಯಾಲಯಗಳಲ್ಲಿ ಈಗ ಕ್ಯಾಂಪಸ್ ಸೆಲೆಕ್ಷನ್ ಎಂಬ ಪದವೇ ಅಪರಿಚಿತವಾಗಿದೆ. ಅವುಗಳಲ್ಲಿ ಶಿಕ್ಷಣ ಶುಲ್ಕ ಏರುತ್ತಲೇ ಇದೆ. ಶಿಕ್ಷಕರ ಸಂಬಳ ಇಳಿಮುಖವಾಗುತ್ತಿದೆ. ತತ್ಪರಿಣಾಮ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದು ಕೇವಲ ತಾಂತ್ರಿಕ ವಿದ್ಯಾಲಯಗಳ ಕಥೆ ಮಾತ್ರವಲ್ಲ. ಪ್ರಾಥಮಿಕ, ಪ್ರೌಢ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಇದು ದಂಗಾ ದೀದಿಯ ಆಡಳಿತದ ನೇರ ಪರಿಣಾಮ.



ಹೇಗಿತ್ತು ಬಂಗಾಳ? ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಫ್ರೆಂಚ್ ಪ್ರವಾಸಿ ಫ್ರಾಂಸ್ವಾ ಬರ್ನಿಯರ್ ಬಂಗಾಳದ ಕುರಿತು ಇಂತೆಂದಿದ್ದಾನೆ..."ಈಜಿಪ್ಟ್ ಅನ್ನು ವಿಶ್ವದ ಅತೀ ಹೆಚ್ಚು ಸಮೃದ್ಧಭರಿತ ಮತ್ತು ಪ್ರಕೃತಿವರಪ್ರಸಾದಿತವಾದ ಸುಭಿಕ್ಷ ನಾಡು ಎನ್ನುತ್ತಾರೆ. ಆದರೆ, ಬಂಗಾಳಕ್ಕೆ ಎರಡು ಬಾರಿ ಭೇಟಿ ನೀಡಿದ ನನ್ನ ಅನುಭವದಲ್ಲಿ ಈ ಗೌರವ ಬಂಗಾಳಕ್ಕೇ ಸಲ್ಲಬೇಕಿದೆ. ಬಂಗಾಳದಲ್ಲಿ ಬೆಳೆದ ಭತ್ತ ದೇಶ ವಿದೇಶಗಳಿಗೂ ಸರಬರಾಜಾಗುತ್ತದೆ. ಗಂಗಾ ನದಿಯ ಮೂಲಕ ಪಾಟ್ನಾಕ್ಕೂ ಸಮುದ್ರ ಮಾರ್ಗದ ಮೂಲಕ ದೇಶದ ವಿವಿದೆಡೆಗಳಿಗೆ ಹಾಗೂ ವಿದೇಶಗಳಿಗೂ ರಫ್ತಾಗುತ್ತದೆ. ಇಲ್ಲಿ ಉತ್ಪಾದನೆಯಾದ ಸಕ್ಕರೆ ಗೋಲ್ಕೊಂಡಾ ಮತ್ತು ಕರ್ನಾಟಕ ಪ್ರಾಂತಗಳಿಗೂ ಸರಬರಾಜಾಗುತ್ತದೆ. ಇಲ್ಲಿನ ಸಾಮಾನ್ಯರೂ ದಿನನಿತ್ಯದ ಊಟದಲ್ಲಿ ಯಥೇಚ್ಛವಾಗಿ ಉಪಯೋಗಿಸುವ ಬೇರೆ ಕಡೆ ದುಬಾರಿ ಅನಿಸುವ ವಸ್ತುಗಳು ಇಲ್ಲಿನ ಆಹಾರ ಸಮೃದ್ಧಿಗೆ ಸಾಕ್ಷಿಯಾಗಿದೆ. ಅದು ಹತ್ತಿ-ರೇಷ್ಮೆಗಳ ಸಮೃದ್ಧ ತಾಣ. ಇದು ಕೇವಲ ಭಾರತದ ಮುಖ್ಯ ಪ್ರಾಂತವಲ್ಲ, ಇಡೀ ಯೂರೋಪಿಗೆ ರಾಜಧಾನಿ  ಎಂದರೂ ಉತ್ಪ್ರೇಕ್ಷೆಯಿಲ್ಲ." ತಾಂತ್ರಿಕರ, ರಾಮಕೃಷ್ಣ, ಅರವಿಂದ, ವಿವೇಕಾನಂದರ ಆಧ್ಯಾತ್ಮ ಲೋಕ; ರವೀಂದ್ರ, ಶರತ್ ಚಂದ್ರ, ಬಂಕಿಮ, ವಿಭೂತಿಭೂಷಣರ ಸಾಹಿತ್ಯ ಲೋಕ; ರತ್ನಾಕರನ ತೆರೆಗಳನ್ನೇ ನಿಯಂತ್ರಿಸುತ್ತಿದ್ದ ಸಂಗೀತೋತ್ಸವ; ಇಡೀ ಬಂಗಾಳವನ್ನು ಒಂದಾಗಿಸುತ್ತಿದ್ದ ದುರ್ಗಾಪೂಜೆಯ ವೈಭವ ಎಲ್ಲಿ ಹೋದವು? ವಂಗಭಂಗದ ವಿರುದ್ಧ ಬಂಗಾಳ ಹೇಗೆ ಸಿಡಿದೆದ್ದಿತ್ತೆಂದರೆ ಅದನ್ನು ವಿರೋಧಿಸದ ಬಂಗಾಳಿಯೇ ಇರಲಿಲ್ಲ. ಪ್ರತೀ ಬಂಗಾಳಿ ತನ್ನನ್ನು ತಾನು ಕ್ರಾಂತಿಗೆ ಸಮರ್ಪಿಸಿಕೊಂಡಿದ್ದ. ಆ ದೇಶ ನಿಷ್ಠೆ ಎಲ್ಲಿ ಹೋಯಿತು? ಇಂದು ಬಂಗಾಳ ಯೋಚಿಸಿದ್ದನ್ನು ನಾಳೆ ಭಾರತ ಯೋಚಿಸುತ್ತದೆ ಎಂಬ ಮಾತ್ಯಾಕೆ ಸವಕಲಾಗಿ ಹೋಯಿತು?


ಬಕ್ತಿಯಾರ್ ಖಿಲ್ಜಿ ಬಂಗಾಳವನ್ನು ಆಕ್ರಮಿಸಿದ ಬಳಿಕ ಬಂಗಾಳದಲ್ಲಿ ಅಪಾರ ಪ್ರಮಾಣದ ಹಿಂದೂಗಳ ಸುನ್ನತ್ ನಡೆಯಿತು. ಇದಕ್ಕೆ ಕಾರಣರಾದವರು ಅವನೊಟ್ಟಿಗೆ ಬಂದ ಹನ್ನೆರಡು ಸೂಫಿಗಳು! ಅವರನ್ನು ಯೋಧ ಸಂತರೆಂದೇ ಮುಸ್ಲಿಮ್ ಪಂಡಿತರು ಗುರುತಿಸುತ್ತಾರೆ! 17-18ನೇ ಶತಮಾನದ ವೇಳೆಗೆ ಬಂಗಾಳದ ಬಟ್ಟೆ ಈಜಿಪ್ಟ್, ಪರ್ಷಿಯಾ, ಜಾವಾ, ಜಪಾನ್, ಚೀನಾಗಳಿಗೆ ರಫ್ತಾಗುತ್ತಿದ್ದವು. ಬಂಗಾಳವೊಂದೇ ಪ್ರತಿವರ್ಷ ಒಂದೂವರೆ ಕೋಟಿ ರೂಪಾಯಿಗಳಷ್ಟು ವಾರ್ಷಿಕ ವಹಿವಾಟು ನಡೆಸುತ್ತಿತ್ತು. ಬಂಗಾಳದ ರೇಷ್ಮೆ ಉತ್ಪಾದನೆ ಜಗತ್ತಿನ ಶೇಕಡಾ 33ರಷ್ಟಿತ್ತು. ಬ್ರಿಟಿಷರ ಆಕ್ರಮಣದ ಬಳಿಕ ಎಲ್ಲವೂ ಬದಲಾಯಿತು.  ವಿದೇಶಕ್ಕೆ ರಫ್ತು ಮಾಡುವುದಕ್ಕೂ ಪ್ರತಿಬಂಧ ಹಾಕಲಾಯಿತು.  ಬ್ರಿಟಿಷರ ಒಡೆದಾಳುವ ಹಾಗೂ ಬ್ರಿಟಿಷ್ ಶಿಕ್ಷಣ ನೀತಿ ಬಂಗಾಳವನ್ನು ಭಾರತದ ಉಳಿದ ಪ್ರಾಂತ್ಯಗಳಿಗಿಂತಲೂ ಹೆಚ್ಚಾಗಿ ಜರ್ಝರಿತವನ್ನಾಗಿ ಮಾಡಿತು. ಅದರ ಜೊತೆಗೆ ಮುಸ್ಲಿಂ ಮತಾಂಧತೆಯ ಕ್ರೌರ್ಯ ಬಂಗಾಳವನ್ನು ಸುಡಲಾರಂಭಿಸಿತು. ಪ್ರತ್ಯೇಕ ರಾಷ್ಟ್ರಕ್ಕಾಗಿ ಹಪಹಪಿಸುತ್ತಿದ್ದ ಮುಸ್ಲಿಮ್ ಲೀಗ್, ತನ್ನ ಕಾರ್ಯ ಸಾಧನೆಗಾಗಿ 1946ರ ಆಗಸ್ಟ್ 16ರಂದು “ನೇರ ಕಾರ್ಯಾಚರಣೆ ದಿನ” ಹೆಸರಲ್ಲಿ ಬಂಗಾಳದಲ್ಲಿ ರಕ್ತದ ಹೊಳೆ ಹರಿಸಿತು. ಅದು ಬಂಗಾಳದ ಮಂತ್ರಿಯಾಗಿದ್ದ ಸುಹ್ರಾವರ್ದಿ ಎಂಬ ನರರಾಕ್ಷಸ ನಡೆಸಿದ ಸರಕಾರೀ ಪ್ರಾಯೋಜಿತ ದಂಗೆ. ಹಿಂದೂಗಳ ಮನೆ-ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಹಿಂದೂ ಹೆಂಗಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು. ಅಬಾಲವೃದ್ಧರಾದಿಯಾಗಿ ಹಿಂದೂಗಳನ್ನು ಕತ್ತರಿಸಿ ಬೀದಿ ಬೀದಿಗಳಲ್ಲಿ ಚೆಲ್ಲಲಾಯಿತು. ರಸ್ತೆರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿಹೋದವು. ಬಂಗಾಳದ ನದಿ, ಕಾಲುವೆಗಳು ರಕ್ತದಿಂದ ಕೆಂಪಾದವು. ಮೂರು ದಿನಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಹಿಂದೂಗಳು ಕೊಲೆಯಾಗಿ ಹೋದರು. ಲಕ್ಷಕ್ಕೂ ಹೆಚ್ಚುಮಂದಿ ಪ್ರಾಣ-ಮಾನ ಭಯದಿಂದ ಕೋಲ್ಕತ್ತಾವನ್ನು ಬಿಟ್ಟು ತೆರೆಳಬೇಕಾಯಿತು. ಒಬ್ಬ ಗೋಪಾಲ್ ಮುಖ್ಯೋಪಾಧ್ಯಾಯರು ಇಲ್ಲದಿರುತ್ತಿದ್ದರೆ  ಕೋಲ್ಕತ್ತಾ, ಹೂಗ್ಲಿ ಸೇರಿದಂತೆ ಬಂಗಾಳದ ಬಹುಭಾಗ ಇಸ್ಲಾಮ್ ಮಯವಾಗಿ ಪಾಕಿಸ್ತಾನದ ಭಾಗವಾಗಿ ಬಿಡುತ್ತಿದ್ದವು!


ಬ್ರಿಟಿಷರ ನೀತಿಯನ್ನೇ ತಮ್ಮದಾಗಿಸಿಕೊಂಡ ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ದಂಗಾ ದೀದಿ ಉಳಿದ ಬಂಗಾಳವನ್ನೂ ವಿಭಜಿಸುತ್ತಾ ಸಾಗಿದರು. ಮೇರೆ ಮೀರಿದ ತುಷ್ಟೀಕರಣ ಬಂಗಾಳವನ್ನು ಇಸ್ಲಾಂಮಯವಾಗಿಸುತ್ತಾ ಸಾಗಿತು. ತಮ್ಮ ದೇವನ ಕ್ರೈಮ್ ರಿಪೋರ್ಟ್ ಅನ್ನೇ ಪವಿತ್ರ ಗ್ರಂಥವೆನ್ನುವ ಮತಾಂಧತೆ ಒಮ್ಮೆ ಹೊಕ್ಕರೆ ಅಲ್ಲಿ ದಂಗೆಯಲ್ಲದೆ ಇನ್ನೇನು ಉಳಿದೀತು? ಬಂಗಾಳದ ಅತ್ಯದ್ಭುತವಾದ  ಭಾರತೀಯ ಸಾಂಸ್ಕೃತಿಕ ಪರಂಪರೆ, ಶಾಂತಿ-ಸುವ್ಯವಸ್ಥೆ-ಆತ್ಮಗೌರವಗಳ ಜೀವನ ವ್ಯವಸ್ಥೆಯ ನಾಮಾವಶೇಷವಾಗುತ್ತಿರುವುದರ ಹಿಂದಿನ ಕಾರಣ ಇದೇ. ಸೀಸ್ತಾನ್'ನಿಂದ ಬ್ರಾಹ್ಮಣಬಾರಿಯವರೆಗೆ ಜೀವರುಗಳನ್ನು, ಪ್ರಾಣಪ್ರತಿಷ್ಠೆಯಾದ ದೇವರುಗಳ ವಿಗ್ರಹಗಳನ್ನು ಚೆಲ್ಲಾಡಿ ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದ ಮತಾಂಧತೆಯ ಕಾರಣದಿಂದಲೇ ಈಗ ನಮ್ಮ ಕಣ್ಣೆದುರಿಗೇ "ಸ್ವರ್ಣಸದೃಶ ಬಂಗಾಳ" ನಶಿಸಿಹೋಗುತ್ತಿದೆ. ಈ ವಿನಾಶಕ್ಕೆ ಕಾಂಗ್ರೆಸ್ - ಕಮ್ಯೂನಿಸ್ಟ್ ಹಾಗೂ ಅವರ ಗಂಜಿಯನ್ನೇ ನಂಬಿಕೊಂಡುಬಂದಿರುವ ಬೂಸಾ ಸಾಹಿತ್ಯ, ಸಿನೇಮಾ ಮಾಫಿಯಾ ಪಡೆಯ ಕೊಡುಗೆಯೂ ಬಹಳವೇ ಇದೆ.


ಬಂಗಾಳದ ಪುನರ್ನಿರ್ಮಿತಿ ಸುಲಭವಲ್ಲ. ಸುಟ್ಟುಹಾಕಿದ್ದನ್ನು ಪುನರ್ ನಿರ್ಮಿಸುವುದು ಸುಲಭದ ಮಾತೇನು? ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಮುದಾಯ ಉಳಿದರೆ ತಾನೇ ಪುನರ್ ನಿರ್ಮಾಣ ಸಾಧ್ಯ! ಬಂಗಾಳದಲ್ಲಿ ನಡೆಯುವ ದಂಗೆಗಳು ದೀದಿಯ ನಿರ್ದೇಶನದಲ್ಲೇ ನಡೆಯುತ್ತವೆ. "ಮಾಡಬೇಕಾದ ಕೆಲಸಗಳು ತುಂಬಾ ಇವೆ" ಎಂದು ಆಕೆ ಮುಲ್ಲಾಗಳ ಗುಂಪಲ್ಲಿ ಮಾತಾಡಿರುವ ವಿಡೀಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನೆಯಲ್ಲೇ ಬಾಂಬು ತಯಾರಿಸುವ, ಭಯೋತ್ಪಾದಕರಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ, ನುಸುಳುಕೋರರಿಗೆ, ಕಳ್ಳಸಾಗಣಿಕೆಗಾರರಿಕೆ, ನಕಲಿನೋಟುಜಾಲಕ್ಕೆ ಸುವ್ಯವಸ್ಥೆ ಒದಗಿಸಿಕೊಡುವ, ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ಕಾಣುವ ಸಂಸದ, ಶಾಸಕರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಒಂದು ದೊಡ್ಡ ಭಯೋತ್ಪಾದಕ ಸಂಘಟನೆ. ಅಂತಹಾ ಸಂಘಟನೆಯನ್ನು ನಿಷೇಧಿಸಿ, ಜನರಿಗೆ ರಕ್ಷಣೆ ಕೊಡದ ಭಯೋತ್ಪಾದಕ ಸರಕಾರವನ್ನು ಕಿತ್ತೊಗೆದು ಅಲ್ಲಿ ರಾಷ್ಟ್ರಪತಿ ಆಡಳಿತ ನಡೆಸುವುದೇ ಬಂಗಾಳವನ್ನು ಉಳಿಸುವ ಏಕೈಕ ದಾರಿ.

ಕಾವ್ಯಕಂಠ ಮಹಾತಪಸ್ವಿ ದಕ್ಷಿಣಾಪಥದ ಗಣಪತಿ

 ಕಾವ್ಯಕಂಠ ಮಹಾತಪಸ್ವಿ ದಕ್ಷಿಣಾಪಥದ ಗಣಪತಿ



ನವದ್ವೀಪ; ತಕ್ಷಶಿಲೆ, ನಳಂದಾ, ಉಜ್ಜಯಿನಿಗಳಂತೆ ವಿದ್ಯೆಗೆ ಅಧಿರಾಜನಾಗಿ ಮೆರೆದ ಸ್ಥಳ. ಉಳಿದೆಲ್ಲವೂ ಪರಕೀಯರ ದಾಳಿಗೆ ತುತ್ತಾಗಿ ನಾಶವಾಗಿ ಹೋದರೆ ಬಂಗಾಳದ ನವದ್ವೀಪ ಮಾತ್ರ ಅಂತಹಾ ದಾಳಿಗಳಿಗೆ ತುತ್ತಾಗಿಯೂ ತನ್ನ ಕನಿಷ್ಟ ವೈಭವನ್ನಾದರೂ ಹೊತ್ತುಕೊಂಡು ಉಳಿಯಿತು. ತೀರಾ ಇತ್ತೀಚಿನವರೆಗೂ ಅಲ್ಲಿ ವಿದ್ವತ್ ಸಮ್ಮೇಳನಗಳು ನಡೆಯುತ್ತಿದ್ದವು. ಅವುಗಳಲ್ಲಿ ದೇಶದ ವಿವಿಧ ಪ್ರದೇಶಗಳ ವಿದ್ವಾಂಸರುಗಳು ಭಾಗವಹಿಸುತ್ತಿದ್ದರು. ಆದರೆ ದಕ್ಷಿಣದಿಂದ ಭಾಗವಹಿಸುವವರ ಸಂಖ್ಯೆ ಇಳಿಮುಖವಾಗಿ ಕೊನೆಗೆ ಶೂನ್ಯವಾಗಿತ್ತು. ಅಲ್ಲಿ ಸ್ಪರ್ದಿಗಳನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಲಾಗುತ್ತಿತ್ತು. ಚರ್ಚಾಕೂಟಗಳನ್ನು ನಡೆಸಲಾಗುತ್ತಿತ್ತು. ವಿಜೇತರಾದವರಿಗೆ ಸರಸ್ವತಿಯು ಸ್ಥಿತವಾದ ನವದ್ವೀಪ ವಿದ್ಯಾಪೀಠದಿಂದ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿತ್ತು. ಹಾಗಂತ ಎಲ್ಲರಿಗೂ ಅಲ್ಲಿ ಅವಕಾಶ ಸುಲಭವಾಗಿ ಸಿಗುತ್ತಿರಲಿಲ್ಲ. ಹೆಸರಾಂತ ವಿದ್ವಾಂಸರಿಗಷ್ಟೇ ಅಲ್ಲಿ ಸ್ಪರ್ದೆಗೆ ಅವಕಾಶ ದೊರಕುತ್ತಿತ್ತು. ಕ್ರಮೇಣ ಅದು ಈಗಾಗಲೇ ಪ್ರಶಸ್ತಿ ಪಡೆದಿರುವ, ಪ್ರಸಿದ್ಧರೂ, ಹಿರಿಯರೂ ಆದವರಿಗಷ್ಟೇ ಪ್ರವೇಶ ಸಿಗುವ ಹಂತಕ್ಕೆ ತಲುಪಿತು. ಆದಾಗ್ಯೂ ಕಲಾರಸಿಕರಿಗೆ, ಸಾಮಾನ್ಯರಿಗೆ ವೀಕ್ಷಣೆಗೆ ಅವಕಾಶ ಅಲ್ಲಿ ಇದ್ದೇ ಇರುತ್ತಿತ್ತು.


ವಿದ್ವಾಂಸರ ವಿದ್ವತ್ತಿನ ಪರೀಕ್ಷೆಯ "ಹರಿ ಸಭಾ" ಪ್ರಸಿದ್ಧ ಆಶುಕವಿ ಅಂಬಿಕಾದತ್ತರು ವೇದಘೋಷದೊಂದಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಆರಂಭವಾಯಿತು. ಘನ ಅಧ್ಯಕ್ಷರ ಉಪಸ್ಥಿತಿಯಿಂದಾಗಿ ಮೌನವಾಗಿದ್ದ ಆ ಸಭೆಯಲ್ಲಿ ಸಿತಿಕಂಠ ವಾಚಸ್ಪತಿಗಳೊಂದಿಗೆ ಬಂದಿದ್ದ ಯುವಕನೋರ್ವ ಅವರ ಬಳಿ ಅಧ್ಯಕ್ಷರನ್ನು ಕುರಿತು "ಈ ಮಹನೀಯರು ಯಾರು?" ಎಂದು ಕೇಳಿದ್ದು ಮೌನವಾಗಿದ್ದ ಸಭೆಯಲ್ಲಿ ಸ್ಪಷ್ಟವಾಗಿ ಎಲ್ಲರಿಗೂ ಕೇಳಿತು. ಅಧ್ಯಕ್ಷರು ಅದನ್ನು ಹಾಸ್ಯಾಸ್ಪದವಾಗಿ ಕಂಡು "ಸತ್ವರ ಕವಿತಾ ಸವಿತಾ ಗೌಡೋಹಂ ಕಶ್ಚಿದಂಬಿಕಾದತ್ತಃ - ನಾನು ಗೌಡ ದೇಶದ ಅಂಬಿಕಾದತ್ತ, ಆಶುಕವಿಗಳಲ್ಲಿ ಸೂರ್ಯ ಸಮಾನನು" ಎಂದು ಪದ್ಯವನ್ನು ಸಂಪೂರ್ಣ ಮಾಡದೆ ಉತ್ತರಿಸಿದರು. ತಕ್ಷಣ ಆ ಯುವಕ "ಗಣಪತಿರಿತಿ ಕವಿಕುಲಪತಿರಿತಿ ದಕ್ಷೋ ದಾಕ್ಷಿಣೋತ್ಯೋಹಮ್ - ನಾನು ಕವಿಕುಲಕ್ಕೆ ನಾಯಕನು, ಕಾವ್ಯರಚನೆಯಲ್ಲಿ ದಕ್ಷನು. ನಾನು ದಕ್ಷಿಣಾಪಥದ ಗಣಪತಿ" ಎಂದು ಉತ್ತರಿಸಿದನು. ಮಾತ್ರವಲ್ಲ "ಭವಾನ್ ದತ್ತಃ ಅಹಂತ್ವೌರಸಃ- ತಾವು ಅಂಬಿಕೆಯ ಮಾನಸಪುತ್ರರು, ನಾನಾದರೋ ಔರಸಪುತ್ರನು" ಎಂದು ಆ ಚಿಕ್ಕ ವಯಸ್ಸಿನ ಯುವಕನು ಉತ್ತರಿಸಲಾಗಿ ಸಭೆಯು ದಿಘ್ಭ್ರಮೆಗೊಂಡಿತಲ್ಲದೆ, ಕೆಲವರಂತೂ ಈ ಹುಡುಗನದ್ದು ಉದ್ಧಟತನವೆಂದೇ ಬಗೆದರು. ಯುವಕನ ದೈರ್ಯ ಪ್ರತಿಭೆಯ ಅರಿವಾಗಿ ಅಧ್ಯಕ್ಷರು ಆತನನ್ನೇ ಪರೀಕ್ಷಿಸಲು ತೊಡಗಿದರು.  ಕ್ಲಿಷ್ಟಕರ ಸಮಸ್ಯೆಗಳೆಲ್ಲವನ್ನೂ ತನ್ನ ಚತುರತೆಯಿಂದ ಬಿಡಿಸಿದ, ರಘುವಂಶ, ಕಾವ್ಯಪ್ರಕಾಶಗಳಲ್ಲಿನ ಶ್ಲೋಕಗಳಿಗೆ ಅರ್ಥ, ವಿರುದ್ಧಾರ್ಥ ಹಾಗೂ ಸಮನ್ವಯತೆಗಳನ್ನು ಸಾಧಿಸಿದ, ಅಂಬಿಕಾದತ್ತರಂಥ ಮಹಾನ್ ವಿದ್ವಾಂಸರ ಕಾವ್ಯಗಳಲ್ಲಿನ ತಪ್ಪುಗಳನ್ನು ಗುರುತಿಸಿ ಧೈರ್ಯದಿಂದ ಎತ್ತಿಹಿಡಿದ, ಅಪಿ, ಹಿ, ಚ ಪದಗಳನ್ನು ಬಳಸದೇ ಮಹಾಭಾರತದ ಪ್ರತಿಯೊಂದು ಅಧ್ಯಾಯಕ್ಕೂ ಒಂದೊಂದು ಶ್ಲೋಕಗಳನ್ನು ರಚಿಸುವ ಪರೀಕ್ಷೆಯಲ್ಲೂ ತೇರ್ಗಡೆಯಾದ ಆ ಯುವಕನಿಗೆ ವಿದ್ವಾಂಸರೆಲ್ಲರೂ ಸೇರಿ ಕಾವ್ಯಕಂಠ ಎಂಬ ಬಿರುದು ನೀಡಿ ಗೌರವಿಸಿದರು. ಅಂದಿನಿಂದ ಸೂರ್ಯಗಣಪತಿಯ ಹೆಸರು ಕಾವ್ಯಕಂಠ ಗಣಪತಿಮುನಿಯೆಂದೇ ಪ್ರಸಿದ್ಧವಾಯಿತು. ಈ ಪ್ರಕರಣವೇ ಒಂದು ದೀರ್ಘ ಕಥನವೋ, ಚಿತ್ರಕಥೆಯನ್ನು ಬರೆಯುವಷ್ಟು ಸ್ವಾರಸ್ಯವಾಗಿರುವುದು ಸಂಸ್ಕೃತ ಕಾವ್ಯಗಳ ಹಿರಿಮೆಯನ್ನೂ, ಕವಿಗಳ ಫ್ರೌಢಿಮೆಯನ್ನು, ಕಾವ್ಯಕಂಠ ಹೆಸರಿನ ಗರಿಮೆಯನ್ನು ಶ್ರುತಪಡಿಸುತ್ತದೆ.


ನೃಸಿಂಹ ಶಾಸ್ತ್ರಿಗಳು ಕಾಶಿ ವಿಶ್ವೇಶ್ವರನ ಮಂದಿರದ ಬಳಿ ದುಮ್ಟಿ ಗಣಪತಿ ಮೂರ್ತಿಯನ್ನೇ ತದೇಕಚಿತ್ತರಾಗಿ ನೋಡುತ್ತಾ ನವಾಕ್ಷರ ಗಣಪತಿ ಮಂತ್ರವನ್ನು ಜಪಿಸುತ್ತಿದ್ದಾಗ ವಿಗ್ರಹದಿಂದ ಮಗುವೊಂದು ಅಂಬೆಗಾಲಿಕ್ಕಿ ಅವರ ತೊಡೆಯೇರಿ ಕುಳಿತಂತೆ ಭಾಸವಾದ ಸಮಯಕ್ಕೇ ಸರಿಯಾಗಿ ಅತ್ತ ಆಂಧ್ರದ ಕಲುವರೈನಲ್ಲಿ ಅವರ ಪತ್ನಿಯು ದಿವ್ಯ ಶಿಶುವೊಂದಕ್ಕೆ ಜನ್ಮವಿತ್ತರು. ಅರಸವಲ್ಲಿ ಸೂರ್ಯ ನಾರಾಯಣ ಹಾಗೂ ಗಣಪತಿಯ ಅನುಗ್ರಹದಿಂದ ಜನಿಸಿದ ಶಿಶುವಿಗೆ ಸೂರ್ಯಗಣಪತಿ ಎಂದೇ ನಾಮಕರಣ ಮಾಡಲಾಯಿತು. ಆರು ವರ್ಷಗಳವರೆಗೂ ಅಮ್ಮಾ ಎಂದೂ ಕರೆಯದ,ಆಟ-ಪಾಠ, ಆಹಾರಗಳ ಕಡೆಗೆ ಆಸಕ್ತಿ ಇರದ ಆ ಮಗು ಸದಾ ಒಂದೆಡೆ ಕಣ್ಮುಚ್ಚಿ ಕುಳಿತಿರುತ್ತಿತ್ತು. ಕಾರಣವಿಲ್ಲದೆಯೇ ಶರೀರ ಬಿಸಿಯೇರುತ್ತಿತ್ತು, ಪ್ರಜ್ಞೆ ತಪ್ಪುತ್ತಿತ್ತು. ಯಾವ ರೋಗ ಲಕ್ಷಣಗಳೂ ಇರದ ಕಾರಣ ನರಶುದ್ಧೀಕರಣ ಚಿಕಿತ್ಸೆ ಮಾಡಲು ಆಲೋಚಿಸಿದರು. ಒಂದು ಅರಶಿನ ಕೊಂಬನ್ನು ಚೆನ್ನಾಗಿ ಕಾಯಿಸಿ ಅಮೃತನಾಡಿಯ ಜಾಗದಲ್ಲಿ ಇಟ್ಟರು. ಮೊದಲ ಬಾರಿಗೆ ಮಗುವು ಅಮ್ಮಾ ಎಂದು ಚೀರಿತು. ಬಳಿಕ ಸುಂದರವಾದ ಕಾವ್ಯಾತ್ಮಕ ಮಾತುಗಳು ಮಗುವಿನ ಬಾಯಿಂದ ಬರಲು ಆರಂಭವಾಯಿತು. ಗಣಪತಿಯ ನಾಲಗೆಯಲ್ಲಿ ಸರಸ್ವತಿಯು ನಾಟ್ಯವಾಡತೊಡಗಿದಳು. ಉಳಿದವರು ಹೇಳಿದಂತೆ ಮಗುವಿಗೆ ಮೂರ್ಛೆ ರೋಗವಾಗಿದ್ದಲ್ಲಿ ತನ್ನ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲ ಎಂದು ಶಾಸ್ತ್ರಿಗಳು ಭಾವಿಸಿದರು. ಆದರೆ ಉತ್ತರೋತ್ತರ ಭಗವಾನ್ ರಮಣ ಮಹರ್ಷಿಗಳ ದರ್ಶನ ಪಡೆದ ಬಳಿಕ ತನ್ನ ಚಿಕಿತ್ಸೆಯು ತಪ್ಪು ಹಾಗೂ ಅಪಾಯಕಾರಿಯಾಗಿತ್ತೆಂಬುದು ಅವರಿಗೆ ಅರಿವಾಯಿತು. ವಾಸ್ತವದಲ್ಲಿ ಯೋಗಸ್ಥಿತಿಯಲ್ಲಿ ಮುಂದುವರೆಯುತ್ತಿದ್ದ ತನ್ನ ಮಗನಿಗೆ ಅವರು ಅಡ್ಡಿಪಡಿಸಿದ್ದರು!


ಎಂಟನೇ ವರ್ಷದಲ್ಲೇ ಅಮರಕೋಶ, ಬಾಲರಾಮಾಯಣ, ಶಿವಸಹಸ್ರಗಳನ್ನು ಕರತಲಾಮಲಕ ಮಾಡಿಕೊಂಡ ಗಣಪತಿ ಒಂಬತ್ತನೇ ವಯಸ್ಸಿಗೆ ತಂದೆಯಿಂದ ಜ್ಯೋತಿಷ್ಯವನ್ನು ಕಲಿತು ವಿಶೇಷ ಪಂಚಾಂಗವನ್ನೂ ತಯಾರಿಸಿದ. ಭವಿಷ್ಯವನ್ನು ಕರಾರುವಕ್ಕಾಗಿ ಹೇಳುತ್ತಿದ್ದ ಕಾರಣ ಆತನ ಖ್ಯಾತಿ ಎಲ್ಲೆಡೆ ಹಬ್ಬಿತು. ಇಸ್ಪೀಟು, ಚದುರಂಗ, ಈಜುವುದರಲ್ಲಿ ಎಲ್ಲರನ್ನೂ ಬಾಲಕ ಮೀರಿಸಿದ್ದ. ಇಸ್ಪೀಟಿನ ಎಲೆಗಳನ್ನೆಲ್ಲಾ ರಹಸ್ಯವಾಗಿ ಹಂಚಿದ ನಂತರ ಬೇರೆ ಆಟಗಾರರ ಬಳಿ ಯಾವ ಎಲೆಗಳಿವೆ ಎನ್ನುವುದನ್ನು ನಿಖರವಾಗಿ ಹೇಳುತ್ತಿದ್ದ. ಹತ್ತು ವರ್ಷಗಳಾಗುವುದರೊಳಗೇ ವ್ಯಾಕರಣ, ತರ್ಕ, ನ್ಯಾಯಶಾಸ್ತ್ರಗಳಲ್ಲಿ ಪರಿಣತನಾಗಿ ಸಂಸ್ಕೃತದಲ್ಲಿ ಪದ್ಯರಚನೆಗೂ ತೊಡಗಿದ. ಗುರುಗಳು ಸವಾಲು ಹಾಕಿದಾಗ ಮೂವತ್ತನಾಲ್ಕೇ ನಿಮಿಷಗಳಲ್ಲಿ ಕೌರವ-ಪಾಂಡವ ಜನನ ವೃತ್ತಾಂತವನ್ನು ಮೂವತ್ತನಾಲ್ಕು ಸಂಸ್ಕೃತ ಶ್ಲೋಕಗಳಲ್ಲಿ ರಚಿಸಿದ. ಸುಕನ್ಯಾ ಚರಿತಮ್ ಎಂಬ ಖಂಡಕಾವ್ಯವನ್ನು ತಂದೆಯ ಪ್ರೀತ್ಯರ್ಥವಾಗಿ ರಚಿಸಿದ. ಗರ್ಭಿಣಿಯಾಗಿದ್ದ ತಾಯಿ ತನ್ನ ಅತಿಯಾದ ಸುಸ್ತು, ನಿಶ್ಶಕ್ತಿಯಿಂದ ಬೆದರಿ, ಗಣಪತಿಯನ್ನು ಕರೆದು ಈ ದಿನ ಹೆರಿಗೆಗೆ ಪ್ರಶಸ್ತವೇ ಎಂದು ಕೇಳಿದಾಗ ತಾಯಿಯ ಆತಂಕವನ್ನು ಅರಿಯದ ಗಣಪತಿ "ಈ ದಿನ ಹೆರಿಗೆಯಾದರೆ ಅವಳಿ ಮಕ್ಕಳಾಗುವುದು ಹಾಗೂ ತಾಯಿ ಮತ್ತು ಮಕ್ಕಳು ಉಳಿಯುವುದಿಲ್ಲ" ಎಂದುಬಿಟ್ಟ. ಮನೆಯವರು ಬೈದರು. ಅದರಂತೆಯೇ ಆದಾಗ ಬಂದವರೆಲ್ಲಾ ಬೈದುಬಿಟ್ಟರು. ಗಣಪತಿಯಾದರೋ ಅವಾವುದರ ಪರಿವೆಯಿಲ್ಲದೆ ತನ್ನ ತಾಯಿಯ ಶರೀರದಿಂದ ಹೊರಹೋದ ವಸ್ತು ಯಾವುದು? ನಶ್ವರವಾದ ಈ ಜೀವನದ ಉದ್ದೇಶವೇನು" ಎನ್ನುವುದರ ಹುಡುಕಾಟದಲ್ಲಿ ತೊಡಗಿದ್ದ.


ಹಾಡುತ್ತಿದ್ದ ಕೋಗಿಲೆ ಮೂಕವಾಗಿತ್ತು. ತಂದೆ, ಗುರುಗಳು ಯಾರೇ ಮಾತಾಡಿದರೂ ಮೌನವೇ ಅವರ ಉತ್ತರವಾಗಿತ್ತು. ತಂದೆಯು ಕೆಲವು ವರುಷಗಳ ಬಳಿಕ ಅನುನಯಿಸಿ ಕೇಳಿದಾಗಲೂ ತಂದೆಯ ಸಂಕಟ ಅರ್ಥವಾದರೂ ಮೌನವನ್ನು ಮುರಿಯಲು ಅವರು ಇಚ್ಛೆ ಪಡಲಿಲ್ಲ. ತಂದೆಯು ಕಟುವಾಗಿ "ಮೌನವು ಋಷಿಗಳ ಚರ್ಯೆ. ಅವರು ಅನುಸರಿಸುವ ಮೌನವು ತಪಸ್ಸು. ನೀನು ಅವರಂತಲ್ಲ. ಪ್ರಾಪಂಚಿಕ ಜೀವನದಲ್ಲಿದ್ದು ಈ ರೀತಿ ವರ್ತಿಸುವುದು ಬುದ್ಧಿವಂತರ ಲಕ್ಷಣವಲ್ಲ" ಎಂದಾಗ ತಪಸ್ಸು ಎಂಬ ಪದವು ಅವರ ಹೃದಯದೊಳಗಿಳಿಯಿತು. ಸತ್ಯವನ್ನರಸಲು ಇದೇ ಮಾರ್ಗವೆಂದು ಅರಿತು ಕೂಡಲೇ "ತಂದೆಯೇ, ನಾನು ತಪಸ್ಸನ್ನಾಚರಿಸಬೇಕು, ಆಶೀರ್ವದಿಸಿ" ಎಂದರು. ಮಗನ ತುಮುಲವನ್ನು ಅರ್ಥವಿಸಿಕೊಂಡ ಶಾಸ್ತ್ರಿಗಳು ಮೊದಲು ವಿದ್ಯೆಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ ಬಳಿಕ ತಪಸ್ಸನ್ನಾಚರಿಸಲು ತಿಳಿ ಹೇಳಿದರು. ಗಣಪತಿ ಮುನಿಗಳ ಈ ಬಯಕೆಗೆ ಕಾರಣವು ಅವರ ಉಮಾಸಹಸ್ರದ ಒಂದು ಶ್ಲೋಕದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲಿ ಅವರು ಉಮೆಯಲ್ಲಿ ಹೇಳುತ್ತಾರೆ..."ಮಾಹೇಶ್ವರಿ, ಮೊದಲು ನನಗೆ ಹೃದಯ ವಿದ್ಯೆ ತಿಳಿದಿತ್ತು. ಮನಸ್ಸಿನಲ್ಲಿ ಅದ್ಭುತ ಶಕ್ತಿಯಿತ್ತು. ಮಾತಿನಲ್ಲಿ ಮಹತ್ತರ ಭಾಗ್ಯವಿತ್ತು. ನಾನು ಭುವಿಗಿಳಿದಂತೆ ಅವೆಲ್ಲವೂ ನನ್ನಿಂದ ಜಾರಿ ಹೋಯಿತು!"


ಹದಿನೈದನೇ ವರ್ಷಕ್ಕೇ ಸಂಸ್ಕೃತದ ಐದು ಮಹಾಕಾವ್ಯಗಳ ಅಧ್ಯಯನವನ್ನು ಮುಗಿಸಿದ ಗಣಪತಿ ಚಂಪೂ ರಾಮಾಯಣ, ಕುವಲಯಾನಂದ, ಪ್ರತಾಪ ರುದ್ರೀಯಮ್ ಅಂತಹಾ ಕಾವ್ಯಗಳನ್ನೂ ಅಭ್ಯಸಿಸಿದರು. ರಾಷ್ಟ್ರೀಯ ಕಾಂಗ್ರೆಸ್ಸಿನ ಸಮ್ಮೇಳನವೊಂದರಲ್ಲಿ ಗಾಂಧಿಯವರನ್ನು ಭೇಟಿಯಾಗಿ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ಅದು ರಾಷ್ಟ್ರದ ಐಕ್ಯತೆಗೆ ಅಪಾರ ಶಕ್ತಿಯನ್ನು ತುಂಬುವುದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಗಾಂಧಿ ಕೆಲವೇ ಕೆಲವು ಜನಗಳಿಗೆ ಸಂಸ್ಕೃತ ಜ್ಞಾನವಿರುವುದೆಂದು ಆ ಸಲಹೆಯನ್ನು ತಳ್ಳಿ ಹಾಕಿದರು. ಛಲ ಬಿಡದ ಗಣಪತಿ ಸಂಸ್ಕೃತವನ್ನು ಸುಲಭವಾಗಿ ಕಲಿಯುವ, ಕಲಿಸುವ ಸಲುವಾಗಿ "ಲಾಲಿ ಭಾಷಾ"  ಎಂಬ ಪುಸ್ತಕವನ್ನು ಮಾಡಿ ಕಾಂಗ್ರೆಸ್ ವರಿಷ್ಠರ ಮುಂದೆ ಇಟ್ಟರು. ಯಥಾ ಪ್ರಕಾರ ಅದಕ್ಕೂ ನಿರ್ಲಕ್ಷ್ಯವೇ ಗತಿಯಾಯಿತು.


ಛಿನ್ನಾಂ ಭಿನ್ನಾಂ ಸುತರಾಂ ಸನ್ನಾಮನ್ನಾಭಾವಾದಭಿತಃ ಖಿನ್ನಾಂ |

ಏತಾಂ ಪಾತುಂ ಭರತಕ್ಷೋಣೀಂ ಜಾಯೇ ಜಿಷ್ನೋಃ ಕುರು ಮಾಂ ಶಕ್ತಃ ||

ಬ್ರಿಟಿಷರ ಒಡೆದಾಳುವ ನೀತಿಯಿಂದಾಗಿ ಛಿನ್ನವೂ, ಭಿನ್ನವೂ ಆಗಿ ದೈಹಿಕ, ಮಾನಸಿಕ ಶಕ್ತಿ, ಕುಶಾಗ್ರಮತಿತ್ವಗಳಿಲ್ಲದೆ ಬಳಲುತ್ತಿರುವ ಭರತ ಭೂಮಿಯನ್ನುಳಿಸಲು ನನಗೆ ಶಕ್ತಿಯನ್ನು ನೀಡು. ಕಾವ್ಯಕಂಠ ಗಣಪತಿ ಮುನಿಗಳ "ಉಮಾಸಹಸ್ರಮ್"ನಲ್ಲಿರುವ ಒಂದು ಶ್ಲೋಕ ಇದು. ಮಾತೃಭೂಮಿಯ ಬಗ್ಗೆ ಅಪಾರವಾದ ಭಕ್ತಿ, ಕಾಳಜಿ ಮತ್ತು ಹೆಮ್ಮೆಯನ್ನಿರಿಸಿಕೊಂಡ ಆಧುನಿಕ ಕಾಲದ ತಪಸ್ವಿಯೊಬ್ಬನಿಂದ ಹೊರಹೊಮ್ಮಿದ ಭಾವಾವೇಶ ಇದು. ಕೇವಲ ವಾಕ್ಯಾರ್ಥವನ್ನು ಗಮನಿಸಿದರೆ ಛಿನ್ನಭಿನ್ನವಾಗಿ ಆಹಾರದ ಕೊರತೆಯಿಂದ ಬಳಲುತ್ತಿರುವ ಭರತ ಭೂಮಿಯನ್ನುಳಿಸಲು ನನಗೆ ಶಕ್ತಿ ನೀಡು ಎನ್ನುವ ಅರ್ಥವನ್ನು ಇದು ಹೊರಹೊಮ್ಮಿಸುತ್ತದೆ. ಉಮೆಗೂ ತನ್ನ ಭಕ್ತನನ್ನು ಕೀಟಲೆ ಮಾಡುವ ಮನಸ್ಸಾಗಿರಬೇಕು. ಈ ಶ್ಲೋಕವನ್ನು ರಮಣ ಮಹರ್ಷಿಗಳ ಮುಂದೆ ಪ್ರಸ್ತುತ ಪಡಿಸುತ್ತಿರುವಂತೆಯೇ ಗಣಪತಿ ಮುನಿಗಳಿಗೆ ತೀವ್ರ ಹಸಿವುಂಟಾಯಿತು. ಆದರೆ ಎಚ್ಚಮ್ಮಾಳ್ ಆಗಷ್ಟೇ ಅಕ್ಕಿ ಬೇಳೆ ಬೇಯಲು ಹಾಕಿ ಒಲೆ ಹೊತ್ತಿಸಿದ್ದಳು. ಆಗ ಅವಳಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ಗಣಪತಿ ಮುನಿಗಳಿಗೆ ತೀವ್ರ ಹಸಿವೆಯಾಗಿದೆಯೆಂದು ಕೂಡಲೇ ಊಟ ನೀಡಬೇಕೆಂದು ಸೂಚಿಸಿದಳು. ಎಚ್ಚಮ್ಮಾಳ್ ಬೇಯಲು ಇನ್ನೂ ಸಮಯವಿದೆಯೆಂದು ಹೇಳಿದರೆ ಆ ಮಹಿಳೆ ಪಾತ್ರೆಯ ಮುಚ್ಚಳವನ್ನು ತೆರೆದು ನೋಡುವಂತೆ ಹೇಳಿದಳು. ನೋಡಿದರೆ ಎಚ್ಚಮ್ಮಾಳಿಗೆ ಆಶ್ಚರ್ಯ ಕಾದಿತ್ತು. ಆಹಾರ ಆಗಲೇ ಬೆಂದಿತ್ತು. ನಡೆದ ಘಟನೆಯನ್ನು ಎಚ್ಚಮ್ಮಾಳ್ ಗಣಪತಿ ಮುನಿಗಳಿಗೆ ವಿವರಿಸಿದಾಗ ಉಮೆಯ ಅನುಗ್ರಹದ ಪ್ರಾಪ್ತಿಗೆ ಆತ ಬಹು ಸಂತಸಭರಿತರಾದರು. ಇಂತಹಾ ಹಲವು ಪವಾಡಗಳು ಗಣಪತಿ ಮುನಿಗಳ ಬದುಕಿನಲ್ಲಿ ಈಗಾಗಲೇ ನಡೆದುದ್ದರಿಂದ ಅವರಿಗೆ ಅದರಿಂದ ಆಶ್ಚರ್ಯವೇನೂ ಆಗದಿದ್ದರೂ ತಾಯಿಯ ಕರುಣೆಯಿಂದಾಗಿ ಅವರ ಕೊರಳ ಸೆರೆ ಉಬ್ಬಿತು.


ಉ ಎಂದರೆ ಶಿವ. ಮ ಎಂದರೆ ಶಿವನ ಸೀಮಿತ ಶಕ್ತಿ. ದೇವಿಯು ಪ್ರಪಂಚವನ್ನೇ ಸೃಷ್ಟಿಸುವ ಶಿವನ ಸೀಮಿತ ಶಕ್ತಿ. ಇದು ಉಮಾ ಪದಕ್ಕೆ ಮುನಿಗಳ ವಿವರಣೆ. ಇಪ್ಪತ್ತು ದಿನಗಳಲ್ಲೇ ಉಮಾ ಸಹಸ್ರಮ್ ಅನ್ನು ಪೂರ್ತಿಗೊಳಿಸಲು ಗಣಪತಿ ಮುನಿಗಳು ಸಂಕಲ್ಪಿಸಿದ್ದರು. ಶಿವನಿಗೂ, ಸುಬ್ರಹ್ಮಣ್ಯನಿಗೂ ಪ್ರಿಯವಾದ ಕಾರ್ತಿಕ ಮಾಸದ ಷಷ್ಠಿ ತಿಥಿಯಂದು ಗುಹಾವತಾರಿ ಭಗವಾನ್ ರಮಣ ಮಹರ್ಷಿಗಳ ಸಮ್ಮುಖದಲ್ಲಿ ಅವರು ಕೃತಿ ರಚನೆಯನ್ನು ಆರಂಭಿಸಿದ್ದರು. ಹತ್ತು ದಿನ ಸತತವಾಗಿ ಬರೆದ ಪರಿಣಾಮ ಅವರ ಹೆಬ್ಬೆಟ್ಟು ಊದಿಕೊಂಡಿತು. ಹತ್ತೊಂಬನೇ ದಿನಕ್ಕೆ ಹೆಬ್ಬೆಟ್ಟು ಅತಿಯಾಗಿ ಊದಿಕೊಂಡು ಬರೆಯುವುದೇ ದುಸ್ತರವಾಯಿತು. ಅಲ್ಲದೇ ಮುನ್ನೂರು ಶ್ಲೋಕಗಳು ಇನ್ನೂ ಬಾಕಿ ಉಳಿದಿದ್ದವು. ಆ ರಾತ್ರಿ ತಿರುವಣ್ಣಾಮಲೈನ ವೈದ್ಯ ಪುಣ್ಯಕೋಟಿಯ ಕನಸ್ಸಿನಲ್ಲಿ ಬ್ರಾಹ್ಮಣನೊಬ್ಬ ಕಾಣಿಸಿಕೊಂಡು "ಅರುಣಗಿರಿಯಲ್ಲಿರುವ ಮುನೀಶ್ವರನೊಬ್ಬನಿಗೆ ಹೆಬ್ಬೆಟ್ಟು ಊದಿಕೊಂಡಿದೆ. ಆತನಿಗೆ ಅಲ್ಲಿ ಹೋಗಿ ಚಿಕಿತ್ಸೆ ನೀಡು" ಎಂದಂತಾಯಿತು. ಬೆಳಗಿನ ಝಾವವೇ ಆತ ಗಣಪತಿ ಮುನಿಗಳಿಗೆ ಚಿಕಿತ್ಸೆ ಮಾಡಿದ. ಆದರೂ ಬರೆಯುವುದು ಅಸಾಧ್ಯವಾದ್ದರಿಂದ, ಮುನಿಗಳು ಸಂಪೂರ್ಣ ನಿಃಶಕ್ತರಾಗಿದ್ದುದರಿಂದ ತಮ್ಮ ಐದು ಮಂದಿ ಶಿಷ್ಯರಿಗೆ ಕ್ರಮವಾಗಿ ವಿವಿಧ ಛಂದಸ್ಸಿನಿಂದ ಕೂಡಿದ ಬೇರೆ ಬೇರೆ ಶ್ಲೋಕಗಳನ್ನು ಹೇಳುತ್ತಾ ಬರೆಯಿಸಿದರು. ಭಗವಾನ್ ರಮಣರು ಸಮಾಧಿ ಸ್ಥಿತಿಯಲ್ಲಿದ್ದರು. ಅವರ ಪಾದದಡಿಯಲ್ಲಿ ಕಾವ್ಯಕಂಠ ಗಣಪತಿ ಮುನಿಗಳು ಕುಳಿತು ಶಿಷ್ಯರಿಗೆ ಉಮಾಸಹಸ್ರಮ್ ನ ಕಡೆಯ ಮುನ್ನೂರು ಶ್ಲೋಕಗಳನ್ನು ಹೇಳಿ ಬರೆಯಿಸುತ್ತಿದ್ದರು. ಆಹಾ... ಈ ದೃಶ್ಯವನ್ನೊಮ್ಮೆ ಕಣ್ಣ ಮುಂದೆ ಬರಿಸಿಕೊಳ್ಳಬೇಕು. ವಿವಿಧ ಛಂದಸ್ಸಿನ ಐದು ಶ್ಲೋಕಗಳು ಏಕಕಾಲದಲ್ಲಿ ಹೊರಬರುತ್ತಿದ್ದವು. ಎಲ್ಲಾ ಶ್ಲೋಕಗಳನ್ನು ಬರೆದು ಮುಗಿಸಿದ ತಕ್ಷಣ ಶಿಷ್ಯರು ದೀರ್ಘ ನಿಟ್ಟುಸಿರನ್ನು ಬಿಟ್ಟು ಗಣಪತಿ ಮುನಿಗಳತ್ತ ನೋಡಿದರೆ ಆತ ಅರೆ ಎಚ್ಚರ ಸ್ಥಿತಿಯಲ್ಲಿದ್ದರು. ಐದು ನಿಮಿಷದ ಬಳಿಕ ಸಮಾಧಿ ಸ್ಥಿತಿಯಿಂದ ಹೊರಬಂದ ಭಗವಾನ್ ರಮಣ ಮಹರ್ಷಿಗಳು "ನಾಯನಾ, ನಾನು ಹೇಳಿದ್ದೆಲ್ಲವನ್ನೂ ಬರೆದುಕೊಂಡೆಯಾ?" ಎಂದರು. ಎಚ್ಚೆತ್ತ ಗಣಪತಿ ಮುನಿಗಳು ಭಾವಗದ್ಗಿತರಾಗಿ ತಮ್ಮೆರಡೂ ಕೈಗಳಿಂದ ಭಗವಾನರ ಪಾದಗಳನ್ನು ಮುಟ್ಟಿ "ಹೌದು ಭಗವನ್, ನೀವು ಹೇಳಿದ್ದೆಲ್ಲವನ್ನೂ ಪಡೆದುಕೊಂಡೆ" ಎಂದರು! ಹೌದು, ಈ ಘಟನೆಗೆ ಪೂರಕವಾಗಿ ತಾವು ಉಮಾಸಹಸ್ರಮ್ ಅನ್ನು ಹೇಗೆ ರಚಿಸಿದೆ ಎಂದು ವಿವರಿಸುವಾಗ ಗಣಪತಿ ಮುನಿಗಳು, ರಮಣ ಮಹರ್ಷಿಗಳು ನೀಡಿದ ಸಂಕ್ಷಿಪ್ತ ಪದಗಳ ಸಹಾಯದಿಂದ ರಚಿಸಿರುವೆ ಎಂದಿದ್ದಾರೆ. ಗುರುವಿನ, ಮೌನದ ಉಪದೇಶದ, ತಪಸ್ಸಿನ, ತೀವ್ರತರವಾದ ಭಕ್ತಿ, ಉದ್ದೇಶ ಹಾಗೂ ಶ್ರದ್ಧೆಯ ಮಹತ್ವ ಇದು. 


ಒಮ್ಮೆ ತಿರುವತ್ತಿಯೂರಿನ ತ್ರಿಪುರಸುಂದರಿ ದೇವಾಲಯದ ಪ್ರಾಂಗಣದ ಮೂಲೆಯಲ್ಲಿದ್ದ ಗಣಪತಿಯ  ಸಣ್ಣ ದೇಗುಲದ ಮಾನಸೋಲ್ಲಾಸ ವಾತಾವರಣವನ್ನು ನೋಡಿದ ಗಣಪತಿ ಮುನಿಗಳು ಆ ದೇಗುಲದೊಳಗೆ ಪ್ರವೇಶಿಸಿದರು. ಪ್ರವೇಶಿಸಿದಂತೆಯೇ ಅಂತರ್ಮುಖಿಗಳಾದರು.  ಅಲ್ಲಿ ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ ಅವರು ಧ್ಯಾನದಲ್ಲಿ ಮುಳುಗಿದ್ದು ಬರೋಬ್ಬರಿ ಹದಿನಾರು ದಿನ! ಶಕ್ತಿ ಸ್ರೋತ ಮೇಲ್ಮುಖವಾಗಿ ಹರಿಯುತ್ತಿತ್ತು. ಇದ್ದಕ್ಕಿದ್ದಂತೆ ಯಾವುದೋ ತಡೆಯುಂಟಾಗಿ ಅವರ ಬೆನ್ನಿನಲ್ಲಿ ವಿಪರೀತ ನೋವು ಕಾಣಿಸಿಕೊಂಡು ಅಂಗಾತ ಮಲಗಬೇಕಾಯಿತು. "ಸ್ಕಂದಾಗ್ರಜನೇ, ಮೂಲಾಧಾರದಲ್ಲಿನ ನಿನ್ನ ನಾಟ್ಯವನ್ನು ಸ್ವಲ್ಪ ನಿಧಾನಿಸು" ಎಂದು ಪ್ರಾರ್ಥಿಸಿದರು. ಕೂಡಲೇ ಯಾರೋ ಅವರನ್ನು ಸ್ಪರ್ಶಿಸಿದಂತಾಗಿ ಬೆನ್ನು ನೋವು ಮಾಯವಾಯಿತು. ನಾಯನರು ಕಣ್ತೆರೆದು ನೋಡಿದರೆ ಅಲ್ಲಿ ಭಗವಾನ್ ರಮಣ ಮಹರ್ಷಿಗಳು ನಿಂತಿದ್ದರು. ಗಣಪತಿ ಮುನಿಗಳು ಆನಂದಭಾಷ್ಪಭರಿತರಾಗಿ ಭಗವಾನರ ಪಾದಗಳನ್ನು ಗಟ್ಟಿಯಾಗಿ ಹಿಡಿದು ನಮಸ್ಕರಿಸಿದರು. ಅರುಣಾಚಲವನ್ನು ಬಿಟ್ಟು ತೆರಳದ ವಿರೂಪಾಕ್ಷ ಗುಹೆಯಲ್ಲಿ ಸದಾ ಆತ್ಮಾನಂದದಲ್ಲಿ ಮುಳುಗಿದ್ದ ರಮಣರು ತಿರುವತ್ತಿಯೂರಿನಲ್ಲಿ ಕಂಡದ್ದು ಹೇಗೆ? ಮುಂದೆ ಅಕ್ಟೋಬರ್ 17, 1929ರಂದು ನಾಯನರು ಅರುಣಾಚಲಕ್ಕೆ ಬಂದಾಗ ರಮಣರ ಬಳಿ ಈ ವಿಷಯವನ್ನು ಪ್ರಸ್ಥಾಪಿಸಿದಾಗ "ತಾನು ಸಿದ್ಧರ ರೀತಿ ಗಣಪತಿ ಮಂದಿರಕ್ಕೆ ಪಯಣಿಸಿದ" ಆ ಘಟನೆಯನ್ನು ಖಚಿತಪಡಿಸಿದರು!


"ವಿದ್ಯಾ ಸಂಸ್ಥೆಗಳು ಜ್ಞಾನಪ್ರಸಾರದ ಕೇಂದ್ರವಾಗಿರಬೇಕೆ ಹೊರತು ಮತ ಪ್ರಸಾರದ ಕೇಂದ್ರಗಳಲ್ಲ" ಎನ್ನುತ್ತಾ ಮತಾಂತರಿಗಳ ವಿರುದ್ಧ ತೊಡೆತಟ್ಟಿದ ಗಣಪತಿ ಮುನಿಗಳು ಸನಾತನ ಸಂಸ್ಕೃತಿ ಹಾಗೂ ವೇದಗಳ ಬಗೆಗೆ ಭಾಷಣಗಳನ್ನು ಆರಂಭಿಸಿದರು. ವೆಲ್ಲೂರಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ತಮಗೆ ನೀಡಿದ್ದ ಗೌರವಯುತ ತೆಲುಗು ಪಂಡಿತ ಹುದ್ದೆಯು ಅವರನ್ನು ಈ ನಿಟ್ಟಿನಲ್ಲಿ ಮತ್ತಷ್ಟು ಗಟ್ಟಿಗೊಳಿಸಿತು. ತಮ್ಮನ್ನು ಮತಾಂತರಗೊಳಿಸಬಂದವರಿಗೆ "ನಮ್ಮದು ಋಷಿಮುನಿಗಳಿಂದ ಪ್ರಣೀತವಾದ ಜ್ಞಾನದ ಭಂಡಾರವೇ ಉಳ್ಳ ಅದ್ಭುತ ಸಂಸ್ಕೃತಿ. ಈ ದೇಶಕ್ಕೆ ಬಂದ ನೀವು ನಿಮ್ಮದಕ್ಕಿಂತಲೂ ವಿಕಸಿತವಾದ ಈ ಸಂಸ್ಕೃತಿಯನ್ನು ಯಾಕೆ ಸ್ವೀಕರಿಸಬಾರದು?" ಎಂದು ಸವಾಲೆಸೆದರು. ಭಾರತೀಯತೆಯ ಪ್ರಸಾರಕ್ಕಾಗಿ ಇಂದ್ರಸೇನಾ ಎನ್ನುವ ಲಿಂಗ, ಜಾತಿ, ವರ್ಣ ಭೇದವಿಲ್ಲದ, ನಿಃಸ್ವಾರ್ಥ ಸೇವೆಯೇ ಪ್ರಮುಖವಾಗುಳ್ಳ ಸಂಘಟನೆಯನ್ನು ಆರಂಭಿಸಿದರು. "ಇಂದ್ರೋ ವಿಶ್ವಸ್ಯ ರಾಜತಿ" ಎನ್ನುವುದು ಅದರ ಶಪಥ ಮಂತ್ರವಾಗಿತ್ತು. "ಉಮಾಮ್ ವಂದೇ ಮಾತರಂ" ಎಂಬುದು ಅವರ ಘೋಷವಾಕ್ಯವಾಗಿತ್ತು. ದೈವೀ ಸಹಾಯವಿಲ್ಲದೆ, ಆಧ್ಯಾತ್ಮಿಕ ಸ್ವಾತಂತ್ರ್ಯ ಹೊಂದದೇ ಬರಿಯ ರಾಜಕೀಯ ಸ್ವಾತಂತ್ರ್ಯ ಗಳಿಸಿದಲ್ಲಿ ಅದು ಅಸ್ಥಿರ ಸ್ವಾತಂತ್ರ್ಯವೆಂದು ಗಣಪತಿ ಮುನಿಗಳು ಪದೇಪದೇ ಹೇಳುತ್ತಿದ್ದರು. ಮದ್ರಾಸ್, ಚಿತ್ತೂರು ಪ್ರಾಂತ್ಯಗಳಲ್ಲಿ ಈ ಸಂಘಟನೆಯ ಅನೇಕ ಶಾಖೆಗಳು ಹುಟ್ಟಿಕೊಂಡವು. ಸಹಜವಾಗಿ ಬ್ರಿಟಿಷರ ಕಣ್ಣು ಕೆಂಪಾಗತೊಡಗಿತು.


ಕುಂಡಲಿನಿಯು ಜಾಗೃತವಾಗಿ ಮೇಲ್ಮುಖವಾಗಿ ಶಕ್ತಿಯು ಹರಿಯುವುದಕ್ಕೆ ರೇಣುಕ ಎನ್ನಲಾಗುತ್ತದೆ. ಕಾರ್ತವೀರ್ಯನ ಸಂಹಾರ ಎಂದರೆ ಅಹಂಗೆ ಕಾರಣವಾದ ಮನಸ್ಸಿನ ಸಂಹಾರ. ರೇಣುಕೆಯ ಶಿರಚ್ಛೇದನವೇ ನಾಡೀಭೇದನ. ರೇಣುಕೆಯ ತಲೆಯನ್ನು ಕತ್ತರಿಸುವಾಗ ಅವಳಿಂದ ಬೋಧನಾರೂಪವಾಗಿ ಹೊರಬಂದ ಮಂತ್ರದಲ್ಲಿದ್ದದ್ದು  20 ಅಕ್ಷರಗಳು.  ( ರಾಯಸ್ಕಾಮೋ ವಜ್ರಹಸ್ತಂ ಸುದಕ್ಷಿಣಂ ಪುತ್ರೋ ನ ಪಿತರಂ ಹುವೇ । -  ಋ 7; ಸೂ- 32) . ರೇಣುಕೆಯು 20  ಬಾರಿ ತನ್ನ ಎದೆಯನ್ನು ಹೊಡೆದುಕೊಂಡಳೆಂಬ ಪುರಾಣ ಕಥೆಗೆ ಮೂಲ ಇದು. ಈ ಮಂತ್ರವನ್ನು ಸ್ವೀಕರಿಸಿದವ ಪರಶುರಾಮ. ಆತ 20 ಬಾರಿ ಪ್ರಪಂಚ ಗೆದ್ದ ಕಥೆಗೂ ಮೂಲ ಇದು. ಉಪನಿಷತ್ತಿನಲ್ಲಿ ಜ್ಯೋತಿರವಿದ್ಯಾಪದ್ದತಿ ಎಂದು ಉಲ್ಲೇಖಿಸಲ್ಪಟ್ಟಿರುವ ಈ ವಿದ್ಯೆಯನ್ನು ಕಾವ್ಯಕಂಠ_ಗಣಪತಿ_ಮುನಿ ಗಳು ಸ್ವತಃ ಅನುಭವಕ್ಕೆ ತಂದುಕೊಂಡಿದ್ದರು. ನಾಯನರ "ಸಾಂಗ್ ಆಫ್ ರೇಣುಕಾ" ಇಂದ್ರಸೇನಾನಿಗಳ ರಕ್ಷಣಾಮಂತ್ರವಾಯಿತು. ದೇಶವನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸುವಂತೆ ರಚಿಸಿದ್ದ ಶ್ಲೋಕಗಳಿಂದ ತುಂಬಿದ್ದ ಉಮಾಸಹಸ್ರಮ್ ಇಂದ್ರಸೇನಾದ ಸದಸ್ಯರಿಗೆ ನಿತ್ಯಸ್ತೋತ್ರವಾಯಿತು. ಬ್ರಿಟಿಷರ ಪರವಾಗಿದ್ದವರು ಸರಕಾರಕ್ಕೆ ಗಣಪತಿ ಮುನಿಗಳ ಸಂಘಟನಾತ್ಮಕ ಹೋರಾಟದ ಬಗ್ಗೆ ಕಿವಿಚುಚ್ಚತೊಡಗಿದರು. ಸರಕಾರವು ನಾಯನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ರಿಕೆಗಳಲ್ಲಿ ಪ್ರಕಟಿಸಿತು. ಗವರ್ನರ್ ಉಮಾಸಹಸ್ರಮ್ ಅನ್ನು ಮುಟ್ಟುಗೋಲು ಹಾಕಿ ಪುಸ್ತಕ ಸಮೇತ ನಾಯನರನ್ನು ಬಂಧಿಸುವಂತೆ ಫರ್ಮಾನು ಹೊರಡಿಸಿದರು. ಆದರೆ ಉಮೆಯ ಕೃಪೆಯಿಂದ ನಾಯನರ ಎದುರೇ ಇದ್ದ ದಪ್ಪಕ್ಷರಗಳ ಪುಸ್ತಕ ಪೊಲೀಸರು ಶೋಧನೆಗೆ ಬಂದಾಗ ಅವರ ಕಣ್ಣಿಗೆ ಬೀಳಲಿಲ್ಲ! ಪೊಲೀಸರು ಸಂಧಿಗ್ಧರಾಗಿ ಪುಸ್ತಕವಿಲ್ಲದೆ ಬಂಧಿಸಲು ಹೆದರಿ ಮತ್ತೊಮ್ಮೆ ಬರುವುದಾಗಿ ತಿಳಿಸಿ ತೆರಳಿದರು. ನಾಯನರ ಶಿಷ್ಯರು ಬ್ರಿಟಿಷರ ಕಿರಿಕಿರಿ ತಪ್ಪಿಸಲು ಪುಸ್ತಕವನ್ನು ಪಂಬದಿಚ್ಚನ್ ಪರೈ ಬೆಟ್ಟದ ತಳದಲ್ಲಿನ ಕುಂಡಲಿನಿ ನದಿಯ ತಟದಲ್ಲಿ ಹೂತು ಹಾಕಿದರು. ಆ ರಾತ್ರಿಯೇ ಧಾರಾಕಾರ ಮಳೆ ಸುರಿದು ಕುಂಡಲಿನಿಯು ಉಕ್ಕಿ ಹರಿದು ಪುಸ್ತಕವು ಕೊಚ್ಚಿ ಹೋಯಿತು. ಅಲ್ಲಲ್ಲಾ ಅದು ದೇಶೀಯರೊಂದಿಗೆ ಐಕ್ಯವಾಗಿ ಸ್ವಾತಂತ್ರ್ಯದ ಕಹಳೆಯನ್ನೂದಲು ಶಕ್ತಿಸ್ತ್ರೋತವಾಯಿತು.


ನಾಯನರು ಮಹಾನ್ ತಪಸ್ವಿಗಳು. ಒಮ್ಮೆ ತಪಸ್ಸಿಗೆ ಕುಳಿತರೆಂದರೆ ಹದಿನೈದು-ಇಪ್ಪತ್ತು ದಿನಕ್ಕಿಂತಲೂ ಹೆಚ್ಚು ಅದು ಮುಂದುವರಿಯುತ್ತಿತ್ತು. ವಿರೂಪಾಕ್ಷ ಗುಹೆಯಲ್ಲಿದ್ದಾಗ ಛಿನ್ನಮಸ್ತ ಶಕ್ತಿಯಿಂದ ಕಪಾಲಭೇದನವಾಗಿ ಬಳಿಕ ರಮಣಮಹರ್ಷಿಗಳು ಅವರ ತಲೆಗೆ ಹರಳೆಣ್ಣೆ ತಿಕ್ಕಿ ತಂಪಾಗಿಸಿ, ಮರದ ಚಪ್ಪಲಿಯನ್ನು ಕೊಟ್ಟು ಸದಾ ಧರಿಸುವಂತೆ ಸೂಚಿಸಬೇಕಾಯಿತು. ಅವರ ಶಿಷ್ಯರಲ್ಲೂ ಈ ತಪಃ ಪ್ರವೃತ್ತಿ ಮಂದುವರೆಯಿತು. ಗೋಕರ್ಣದಲ್ಲಿ ನಾಯನರ ಶಿಷ್ಯನಾಗಿ ಗುರು ಸೇವೆ ಮಾಡಿದ ಗಣೇಶಭಟ್ಟನು ಮುಂದೆ ವೇದ ದ್ರಷ್ಟಾರನಾಗಿ, ಗುರು ನಾಯನರಿಂದಲೇ ಬ್ರಹ್ಮರ್ಷಿ ಎಂದು ಕರೆಯಿಸಿಕೊಂಡು ದೈವರಾತನಾಗಿ ಪ್ರಸಿದ್ಧನಾದನು. ಪಾದೈವೀಡುವಿನಲ್ಲಿ ಈ ಗುರುಶಿಷ್ಯರಿಬ್ಬರೂ ತಪವನ್ನಾಚರಿಸುತ್ತಿದ್ದಾಗ ದೈವರಾತನು ಸಮಾಧಿಸ್ಥಿತಿಯನ್ನು ತಲುಪಿ ಅಸ್ಪಷ್ಟವಾಗಿ ಏನೋ ಹೇಳಲಾರಂಭಿಸಿದನು. ಮೊದಲ ದಿನ ನಾಯನರು ಅದನ್ನು ನಿರ್ಲಕ್ಷಿಸಿದರು. ಎರಡನೇ ದಿನ ಅವರು ಆ ಶಬ್ಧಗಳನ್ನು ಕೇಳಿ ಆಶ್ಚರ್ಯಚಕಿತರಾದರು. ಅವು ವೇದ ಮಂತ್ರಗಳಾಗಿದ್ದವು. ಅಪ್ರಯತ್ನವಾಗಿ ದೈವರಾತನಿಂದ ಹೊರಬರುತ್ತಿದ್ದವು. ನಾಯನರು ಅವುಗಳನ್ನು ಬರೆದಿಟ್ಟುಕೊಂಡು ಛಂದೋದರ್ಶನಮ್ ಎನ್ನುವ ಹೆಸರಿಟ್ಟರು. ಉಮಾ ಸಹಸ್ರಮ್, ಶ್ರೀರಮಣಚತ್ವಾರಿಂಶತ್, ಶ್ರೀ ರಮಣ ಗೀತ, ಋಗ್ವೇದ ಭಾಷ್ಯ, ಇಂದ್ರಾಣಿಸಪ್ತಶತಿ, ಸದ್ದರ್ಶನಮ್ ಸಹಿತ ನೂರ ಹದಿನೈದಕ್ಕೂ ಹೆಚ್ಚು ಕೃತಿಕಾವ್ಯಗಳ ಬರವಣಿಗೆ ಕಾವ್ಯಕಂಠರದ್ದು. ಇಂತಹಾ ಮಹಾನ್ ಚೇತನ ತಪಗೈಯುತ್ತಲೇ ಮರೆಯಾಯಿತು. ಅವರು ಆತ್ಮಸಾಕ್ಷಾತ್ಕಾರ ಸಾಧಿಸಿಕೊಂಡರೇ ಎಂದು ಭಕ್ತರೊಬ್ಬರು ಪ್ರಶ್ನಿಸಿದಾಗ ಭಗವಾನ್ ರಮಣರು "ಅದು ಅವರಿಗೆ ಹೇಗೆ ಸಾಧ್ಯ? ಅವರ ಸಂಕಲ್ಪಗಳು ಬಹಳ ಪ್ರಬಲವಾಗಿದ್ದವು. ಅಂತಹಾ ಮತ್ತೊಬ್ಬ ವ್ಯಕ್ತಿಯು ಎಂದು ಬರುವನು?" ಎಂದು ಉದ್ಘರಿಸಿದರು. ವಾಸಿಷ್ಠ ಕುಲದಲ್ಲಿ ಉದ್ಭವರಾಗಿ ಕಾವ್ಯಕಂಠರಾಗಿ, ಗಣಪತಿಯಾಗಿ, ಮಹಾಮುನಿಯಾಗಿ ಮರೆಯಾದ ಈ ಮಹಾತಪಸ್ವಿಯ ಬಗೆಗಿನ ಪುಸ್ತಕವೊಂದು ಅದೇ ಹೆಸರಲ್ಲಿ ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡಿರುವುದು ಕನ್ನಡಿಗರ ಭಾಗ್ಯ.

ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್

 ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್


1931ರ ಫೆಬ್ರವರಿ 22. ವೇದಮಂತ್ರ ಘೋಷಗಳು ಮೊಳಗುತ್ತಿರಲು, ಕರವೀರ ಪೀಠದ ಶಂಕರಾಚಾರ್ಯರ ನೇತೃತ್ವದಲ್ಲಿ, ಐದು ಸಾವಿರಕ್ಕೂ ಹೆಚ್ಚು ಹಿಂದೂಗಳ ಸಮ್ಮುಖದಲ್ಲಿ ಭಂಗಿ ಬಾಲಕನೊಬ್ಬ  ಭಗವಾನ್ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ. ಭಂಗಿ ಬಾಲಕನೊಬ್ಬ ಶಂಕರಾಚಾರ್ಯರ ಪಾದ ಪೂಜೆ ಮಾಡಿ ಅವರಿಗೆ ಪುಷ್ಪ ಮಾಲೆಯೊಂದನ್ನು ಅರ್ಪಿಸಿದ. ಆದಿ ಶಂಕರರು ದೇವನದಿ ಗಂಗೆಯ ತಟದಲ್ಲಿ ಆತ್ಮ ತತ್ತ್ವವನ್ನು ಅರಿತಿದ್ದ ಚಾಂಡಾಲನನ್ನು ಅಪ್ಪಿಕೊಂಡ ಐತಿಹಾಸಿಕ ಘಟನೆಯನ್ನು ಆ ದೃಶ್ಯ ನೆನಪಿಸಿತು. ಉಪೇಕ್ಷಿತ ವರ್ಗಕ್ಕೆ ಸೇರಿದ ಬಾಲಕಿಯರೀರ್ವರು "ನಾನು ಜಡದೇಹ, ಅವನೆನ್ನ ಪ್ರಾಣ; ಅವನು ಹಿಂದೂ ದೇವ, ನಾನು ಹಿಂದು; ನಾನು ದೀನ, ಅವನು ದಯಾ ಸಿಂಧು, ನೀ ಎನ್ನ ಧರ್ಮಬಂಧು - ನನ್ನನ್ನು ತಡೆಯದಿರು, ಮುಂದೆ ಹೋಗಲು ಬಿಡು" ಎಂದು ಆರ್ತ ಸ್ವರದಲ್ಲಿ ಹಾಡಿದ ಪ್ರಾರ್ಥನೆ ನೆರೆದಿದ್ದವರ ಹೃದಯ ಕರಗಿಸಿತು. " ಹೇ ಪತಿತಪಾವನ ಸ್ವಾಮಿ ರಾಷ್ಟ್ರಕ್ಕೆ ರಾಷ್ಟ್ರವೇ ಪತಿತರಾಗಿರುವ ನಮ್ಮನ್ನು ಎಂದಿಗೆ ಉದ್ಧರಿಸುವೆ" ಎಂದು ನೆರೆದಿದ್ದ ಹಿಂದೂ ಜನಸ್ತೋಮ ಕರವ ಜೋಡಿಸಿ ಹಾಡಿತು. ಅಂದಿನಿಂದ ಅದು ಪತಿತಪಾವನ ಮಂದಿರವಾಯಿತು. ಅಲ್ಲಿ "ಸಹನಾವವತು| ಸಹನೌ ಭುನಕ್ತು" ಎಂಬ ಮಂತ್ರ ಸಾಕ್ಷಾತ್ಕಾರಗೊಂಡು ಅಖಿಲ ಹಿಂದೂಗಳ ಪೂಜೆಗೆ, ಸಹಭೋಜನಗಳಿಗೆ, ಸಭೆ ಸಮಾರಂಭಗಳಿಗೆ, ಹಿಂದೂಗಳ ಏಕತ್ವಕ್ಕೆ ಅದು ವೇದಿಕೆಯಾಯಿತು. ಪತಿತರನ್ನು ಪಾವನಗೊಳಿಸುವ ಈ ಮಹಾ ಕಾರ್ಯಕ್ಕೆ ಅಧ್ವರ್ಯುವಾಗಿ ನಿಂತಿದ್ದವರೇ ಸ್ವಾತಂತ್ರ್ಯ ವೀರ ಸಾವರ್ಕರ್.



ಅಂದು ಛಾಪೇಕರರಿಗೆ ಅನ್ಯಾಯವಾದಾಗ ಕಣ್ಣೀರ್ಗರೆಯುತ್ತಾ, ಫಡಕೆಯೆಂಬ ಕಿಡಿಯನ್ನು ಅಗ್ನಿದಿವ್ಯವನ್ನಾಗಿಸುತ್ತೇನೆಂಬ ಪ್ರತಿಜ್ಞೆಗೈಯ್ಯುವಾಗ ಭವತಾರಿಣಿಯ ಪಾದ ಸ್ಪರ್ಶಿಸಿದ್ದ ಪುಟ್ಟ ಹಸ್ತಗಳ ಮೂಲಕ ಯಾವ ಶಕ್ತಿ ಸ್ತ್ರೋತ ತನುವಿನಾದ್ಯಂತ ಸಂಚರಿಸಿ ಸ್ಪೂರ್ತಿ ತುಂಬಿತ್ತೋ ಅದೇ ಶಕ್ತಿ ಸ್ತ್ರೋತ ಇಂದು ಅಸ್ಪೃಶ್ಯರನ್ನು ಸ್ಪೃಶ್ಯರನ್ನಾಗಿಸಲು ದಾರಿ ತೋರಿಸಿತ್ತು. ಹಾಗೆಂದು ಅದೇನೂ ಆ ಕ್ಷಣದ ನಿರ್ಧಾರವೂ ಆಗಿರಲಿಲ್ಲ. ಅಥವಾ ಇಂದಿನ ಜಾತ್ಯಾತೀತರನ್ನುವಂತೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ದಮನಿತ ವರ್ಗವನ್ನು ಸೆಳೆದು ಬಲಿಪಶು ಮಾಡುವ ಹುನ್ನಾರವೂ ಆಗಿರಲಿಲ್ಲ. ತನ್ನ ಪ್ರಚಾರಕ್ಕಾಗಿ ಮಾಡಿಕೊಂಡ ಕಾರ್ಯವೂ ಅದಾಗಿರಲಿಲ್ಲ. ಅದಕ್ಕೆ ಅಂಡಮಾನಿನಲ್ಲಿ ಕರಿನೀರ ರೌರವವನ್ನು ಉಣುವಾಗಲೇ ಬೀಜಾರೋಪವಾಗಿತ್ತು. "ಏಕ ದೇವ ಏಕ ದೇಶ ಏಕ ಆಶಾ | ಏಕ ಜಾತಿ ಏಕ ಜೀವ ಏಕ ಭಾಷಾ ||" ಎಂಬ ಮಂತ್ರ ಅಲ್ಲಿಯೇ ಮೊಳೆದಿತ್ತು. ಅಂಡಮಾನಿನಿಂದ ಯರವಡಾ ಜೈಲಿಗೆ, ಬಳಿಕ ರತ್ನಗಿರಿಗೆ ಸ್ಥಾನಬದ್ಧತೆಯ ಶಿಕ್ಷೆಗೆ ಬಂದು ಸೇರಿದಾಗ ಅದರ ವ್ಯಾಪ್ತಿ ಮತ್ತಷ್ಟು ಹಿಗ್ಗಿತು. "ಅರಿಶಿನ-ಕುಂಕುಮ" ಕಾರ್ಯಕ್ರಮದ ಮೂಲಕ ಎಲ್ಲಾ ವರ್ಗದ ಮಹಿಳೆಯರ ನಡುವೆ ಸಮರಸ ಬೆಸೆಯುವ ಪ್ರಯತ್ನ ನಡೆಯಿತು. ಉಚ್ಛ ವರ್ಣೀಯ ಸ್ತ್ರೀಯರು ಉಪೇಕ್ಷಿತ ವರ್ಗದ ಮಹಿಳೆಯರಿಗೆ ಅರಿಶಿನ ಕುಂಕುಮ ಕೊಡಲು ನಿರಾಕರಿಸಿದಾಗ ತನ್ನ ಪತ್ನಿ ಯಮುನಾಳ ಮುಖಾಂತರ ಉಚ್ಛ ವರ್ಗದವರೊಬ್ಬರ ಮನೆಯಲ್ಲೇ ಅದನ್ನು ನೆರವೇರಿಸಿದರು. ಆರಂಭದ ವಿರೋಧ ನಿಧಾನವಾಗಿ ಕರಗುತ್ತಾ ಬಂದಿತು.


ಇದರ ನಡುವೆ ಹಿಂದೂ ಸಂಘಟನೆಗಾಗಿ ಸಾವರ್ಕರ್ ಕಾರ್ಯಕರ್ತರೊಡನೆ ಬೀದಿ ಬೀದಿ ಸುತ್ತಿದರು. ಸಮಾಜದ ಮೇಲ್ವರ್ಗದ ಮನೆಯ ಜೊತೆಗೆ ಸಮಾಜದಿಂದ ಉಪೇಕ್ಷಿತರಾಗಿದ್ದ ಬಂಧುಗಳ ಮನೆಗೂ ಅವರು ಸಂಪರ್ಕ ಬೆಸೆದರು. ಹಾಗೆ ಮಾಡುವಾಗ ಬೈಗುಳ, ಅವಹೇಳನ, ಅಪಮಾನಗಳನ್ನೂ ಅವರು ಸಹಿಸಬೇಕಾಯಿತು. ಅಂತಹಾ ಮೇರು ವ್ಯಕ್ತಿ ಅದೆಲ್ಲವನ್ನೂ ಮೌನವಾಗಿ ಸ್ವೀಕರಿಸಿದರು. ಸಾರ್ವಜನಿಕ ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳಿಗೂ ಪ್ರವೇಶ ದೊರಕಿಸಲು ಅವರ ಹೋರಾಟ ನಡೆಯಿತು. ವಿರೋಧಿಸಿದವರಿಗೆ ಸಾವರ್ಕರ್ ಹೇಳಿದ್ದು ಒಂದೇ ಮಾತು - "ನಿಮ್ಮ ಮಕ್ಕಳನ್ನು ಮ್ಲೇಚ್ಛರೊಂದಿಗೆ ಕುಳಿತುಕೊಳ್ಳಲು ಬಿಡುತ್ತೀರಿ. ಒಂದು ವೇಳೆ ಅಸ್ಪೃಶ್ಯನೊಬ್ಬ ಮತಾಂತರವಾಗಿ ಮುಸ್ಲಿಮನೋ, ಕ್ರೈಸ್ತನೋ ಆದರೆ ಅವನ ಜೊತೆ ಸೇರುವಿಕೆಗೂ ನಿಮ್ಮ ಆಕ್ಷೇಪಗಳಿಲ್ಲ. ಆದರೆ ನಮ್ಮದೇ ದೇವರನ್ನು ಪೂಜಿಸುವ, ನಮ್ಮದೇ ಸಂಸ್ಕೃತಿಯನ್ನು ಆಚರಿಸುವ, ನಮ್ಮ ಪೂಜಾಪದ್ದತಿಯನ್ನೇ ಅನುಸರಿಸುವ ನಮ್ಮದೇ ಬಾಂಧವರನ್ನು ತುಚ್ಛವಾಗಿ ಕಾಣುವುದು ಯಾವ ಧರ್ಮ? ಯಾವ ನೀತಿ?". ಸಾವರ್ಕರರ ಈ ಹೋರಾಟ ಎಷ್ಟು ಪರಿಣಾಮ ಬೀರಿತೆಂದರೆ ಸ್ವತಃ ಶಾಲೆಗಳಿಗೆ ಸಂದರ್ಶನವಿತ್ತ ಜಿಲ್ಲಾ ನ್ಯಾಯಾಧೀಶರು " ಸಾವರ್ಕರರ ಪ್ರಯತ್ನಗಳ ಪರಿಣಾಮವಾಗಿ ಅಸ್ಪೃಶ್ಯ ಮಕ್ಕಳೂ ಎಲ್ಲರೊಡನೆ ಸಮವಾಗಿ ಕುಳಿತು ಶಿಕ್ಷಣ ಪಡೆಯುವಂತಾಗಿದೆ" ಎಂದು ತಮ್ಮ ವರದಿಯಲ್ಲಿ ಬರೆದರು.


ತಾವು ಅಂಡಮಾನಿನಲ್ಲಿ ಆರಂಭಿಸಿದ್ದ ಶುದ್ಧಿಕಾರ್ಯವನ್ನು ರತ್ನಗಿರಿಯಲ್ಲೂ ಮುಂದುವರೆಸಿದರು ಸಾವರ್ಕರ್. ಮೋಸಕ್ಕೋ, ಆಸೆಗೋ ಬಲಿಯಾಗಿ ಮತಾಂತರವಾಗಿದ್ದವರು ಮಾತೃಧರ್ಮಕ್ಕೆ ಮರಳಿ ಬಂದರು. ಕೆಲವು ಕ್ರೈಸ್ತ ಪಾದ್ರಿಗಳು ಮುಂಬೈ ಗವರ್ನರನಿಗೆ ದೂರು ನೀಡಿ, ಸರಕಾರ ಈ ಬಗ್ಗೆ ಸಾವರ್ಕರರಿಂದ ಸ್ಪಷ್ಟೀಕರಣ ಕೇಳಿದಾಗ, ಸಾವರ್ಕರ್ "ನಿಮ್ಮ ಅಧಿಕಾರವಿರುವ ಪ್ರದೇಶದಲ್ಲಿ ಮತಪರಿವರ್ತನಾ ಸ್ವಾತಂತ್ರ್ಯ ಇದೆಯೆಂದು ನಿಮ್ಮದೇ ಕಾನೂನು ಹೇಳುತ್ತದೆ. ಹಿಂದೂಗಳು ಕ್ರೈಸ್ತರಾಗುವುದನ್ನು ನೀವು ನಿಲ್ಲಿಸಿದರೆ ಆಗ ಶುದ್ಧಿ ಚಳುವಳಿಯ ಅವಶ್ಯಕತೆಯೇ ಇರುವುದಿಲ್ಲ" ಎಂದು ಮರು ಸವಾಲು ಹಾಕಿದರು. ರತ್ನಗಿರಿಯಲ್ಲಿದ್ದ ಕ್ರೈಸ್ತ ಮಿಷನರಿಗಳು ರಾತ್ರೋ ರಾತ್ರಿ ಗಂಟುಮೂಟೆ ಕಟ್ಟಬೇಕಾಯಿತು. ಮುಂದೆ ಸಾವರ್ಕರ್ ಕೈಗೊಂಡುದುದು ಅಸ್ಪೃಶ್ಯರಿಗೆ ದೇವಾಲಯಕ್ಕೆ ಪ್ರವೇಶ ದೊರಕಿಸಿಕೊಡುವಂತಹಾ ಮಹಾನ್ ಕಾರ್ಯ. ಮಹಾರರೋ, ಭಂಗಿಗಳೋ ದೇವಾಲಯದೊಳಕ್ಕೆ ಬಂದರೆ ಮೈಲಿಗೆಯಾಗುತ್ತದೆಯೆಂದು ಮೇಲ್ಜಾತಿಗಳವರು ಶರಂಪರ ವಿರೋಧಿಸಿದಾಗ ಸಾವರ್ಕರ್ " ಅಷ್ಟಕ್ಕೆಲ್ಲಾ ಮೈಲಿಗೆಯಾಗುವವನು ಅವನೆಂತಹಾ ದೇವರು?" ಎಂದು ಪ್ರಶ್ನಿಸಿದರು. "ದೇವರೆಂದರೆ ಪತಿತಪಾವನ, ಅವನ ದರ್ಶನ ಮಾತ್ರದಿಂದ ಎಂತಹಾ ವ್ಯಕ್ತಿಯೂ ಪುನೀತರಾಗುತ್ತಾರೆ. ನಿಜವಾದ ಅಸ್ಪೃಶ್ಯತಾ ನಿವಾರಣೆಯೆಂದರೆ, ತಮ್ಮ ಸಹಬಂಧುಗಳನ್ನೇ ದೂರವಿಟ್ಟು ಮನುಷ್ಯತ್ವಕ್ಕೆ ಕಳಂಕಪ್ರಾಯರಾಗಿ ನೀಚ ದೆಸೆಗಿಳಿದಿರುವ, ನಿಜವಾದ ಸನಾತನ ಧರ್ಮದಿಂದ ಹಾದಿ ತಪ್ಪಿರುವ, ತಾವು ಮಾತ್ರ ಸ್ಪೃಶ್ಯರೆಂದು ಭಾವಿಸಿರುವವರ ಉದ್ಧಾರ ಕಾರ್ಯ ಎಂದು ಈ ವಿರೋಧವನ್ನು ಕಟುವಾಗಿ ವಿಮರ್ಶಿಸಿದರು. ಇದರ ಪರಿಣಾಮ 1929ರ ನವೆಂಬರ್ ತಿಂಗಳಲ್ಲಿ ರತ್ನಗಿರಿಯ ಪ್ರಸಿದ್ಧ ವಿಠೋಬಾ ಮಂದಿರಕ್ಕೆ ಉಪೇಕ್ಷಿತ ವರ್ಗಕ್ಕೆ ಪ್ರವೇಶಾವಕಾಶ ದೊರೆತು ಶತಶತಮಾನಗಳ ಪರ್ಯಂತ ಭಾರತದ ಧರ್ಮಕ್ಕೆ, ಇತಿಹಾಸಕ್ಕೆ, ಯೋಗ್ಯತೆಗೆ ಕಳಂಕವಾಗಿದ್ದ ಕಪ್ಪು ಚುಕ್ಕೆಯೊಂದರ ಅಳಿಸುವಿಕೆಯ ಆರಂಭವಾಯಿತು. "ಯುಗಯುಗಗಳ ಕಳಂಕ ಕಳೆಯಿತು. ಮೈಲಿಗೆಯ ವಿಧಿಲಿಖಿತ ತೊಳೆದುಹೋಯಿತು. ಜನ್ಮಜನ್ಮಾಂತರಗಳ ಜಗಳ ಅಳಿಯಿತು. ಸಮಾಜದ ಶತ್ರುಗಳ ಸಂಚು ಮುರಿಯಿತು. ದಾಸರಾಗಿದ್ದವರಿಂದು ನಿಮ್ಮ ಸಹಕಾರಿಗಳಾಗಿದ್ದೇವೆ. ದೇವರ ಬಾಗಿಲನ್ನೂ, ನಿಮ್ಮ ಮನದ ಬಾಗಿಲನ್ನೂ ತೆರೆದುದಕ್ಕೆ ಕೃತಜ್ಞತೆಗಳು" ಎನ್ನುವ ಸಾವರ್ಕರರ ಗೀತೆಯನ್ನೇ ಒಕ್ಕೊರಲಿನಿಂದ ಹಾಡುತ್ತಿದ್ದ ಹಿಂದೂ ಜನಾಂಗದಿಂದ ಉಪೇಕ್ಷಿತವಾಗಿದ್ದು ಈಗ ಅಪೇಕ್ಷೆ ಈಡೇರಿದ ಆ ಕಣ್ಣುಗಳು ಕಾಂತಿಯಿಂದ ಮಿನುಗುತ್ತಿದ್ದವು. ಇದರ ಜೊತೆಗೆ ಹಿಂದೂ ಗಣಪತಿ ಉತ್ಸವ ಮೇರೆ ಮೀರಿದ ಸಂಭ್ರಮದೊಂದಿಗೆ ವರ್ಷಂಪ್ರತಿ ನಡೆಯತೊಡಗಿತು.


ಈ ಸಮಯದಲ್ಲೇ ಸಾವರ್ಕರ್ ಮನದಲ್ಲಿ "ಸರ್ವ ಹಿಂದೂ ಕೇಂದ್ರ"ವೊಂದರ ಸ್ಥಾಪನೆಯ ಯೋಚನೆಯೊಂದು ಮೂಡಿತು. ಅದರ ಫಲವಾಗಿ ಎದ್ದು ನಿಂತದ್ದೇ "ಪತಿತಪಾವನ"ವೆಂಬ ಭವ್ಯ ಮಂದಿರ. ಉದ್ಯಮಿಯಾಗಿದ್ದ ಭಾಗೋಜಿ ಕೀರ್ ಅವರ ಶ್ರದ್ಧೆ ಹಾಗೂ ಧನಸಹಾಯದ ಫಲವಾಗಿ ಈ ಮಂದಿರದ ನಿರ್ಮಾಣವಾಯಿತು. ಮಂದಿರದ ಉದ್ಘಾಟನೆಗೆ ಮೊದಲು ಸಾವರ್ಕರ್ ಕಾಶಿ ಪ್ರಯಾಗ ಸೇರಿದಂತೆ ಹಲವು ಕಡೆಗಳಿಂದ ವೇದಶಾಸ್ತ್ರ ಪಂಡಿತರನ್ನೆಲ್ಲಾ ಕರೆಯಿಸಿ ಅಸ್ಪೃಶ್ಯತೆಯ ಬಗೆಗೆ ಮೂರು ದಿನಗಳ ಸಂವಾದವೊಂದನ್ನು ಏರ್ಪಡಿಸಿದರು. ಒಂದು ಕಡೆ 125 ಜನ ಮಹಾ ಪಂಡಿತರು, ಇನ್ನೊಂದು ಕಡೆ ಸ್ವಾತಂತ್ರ್ಯ ವೀರ ಸಾವರ್ಕರ್. ಸಾವರ್ಕರರ ವಾದಕ್ಕೆ ಮನಸೋತ ವಿದ್ವಾಂಸರುಗಳು "ಶಾಸ್ತ್ರ ರೀತ್ಯಾ ನಿಮ್ಮ ಮಾತುಗಳಿಗೆ ನಮ್ಮ ಸಹಮತವಿದೆ. ಆದರೆ ಸಮಾಜ ಅದನ್ನು ಸ್ವೀಕರಿಸುವ ಪಕ್ವತೆಯನ್ನು ಸಾಧಿಸಿಲ್ಲ" ಎಂದು ಸಾವರ್ಕರರಿಗೆ ಜಯಘೋಷ ಹಾಡಿದರು. ದೇವರು ನಮ್ಮ ಪಾಲಿಗೆ ಎಂತಹಾ ಸತ್ಪುರುಷನನ್ನು ಕಳುಹಿಸಿದ್ದಾನೆ ಎಂಬ ಕೃತಜ್ಞ ಭಾವ ನಮ್ಮಲ್ಲಿ ಮೂಡಿ ಅಂತಃಕರಣ ತುಂಬಿ ಬಂತು ಎಂದು ಈ ವಾದದ ಪ್ರತ್ಯಕ್ಷದರ್ಶಿಯಾಗಿದ್ದ ಹಿಂದುಳಿದ ವರ್ಗಗಳ ನಾಯಕ ಕೃಷ್ಣರಾವ್ ಗಾಂಗುರ್ಡೆ ಬರೆದಿದ್ದಾರೆ. ಭಾಗೋಜಿ ಕೀರರು ಕಾಶಿ, ನಾಸಿಕ್ ಗಳಿಂದ ಮಂದಿರ ಪ್ರತಿಷ್ಠಾಪನೆಗೆ ವೇದ ವಿದ್ಯಾ ಸಂಪನ್ನ ಪಂಡಿತರನ್ನು ಕರೆಯಿಸಿದ್ದನ್ನು ನೋಡಿ ಸಹಿಸದ ಸ್ಥಳೀಯ ಬ್ರಾಹ್ಮಣರು "ಭಂಡಾರಿ ಜಾತಿಗೆ ಸೇರಿದ ಭಾಗೋಜಿ ಕೀರ್ ನಿರ್ಮಿಸಿದ ಮಂದಿರದಲ್ಲಿ ವೇದೋಕ್ತ ಪದ್ದತಿಯಿಂದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ಸಮಂಜಸವಲ್ಲ" ಎಂದು ಆ ಬ್ರಾಹ್ಮಣರ ಕಿವಿಯೂದಿದರು. ಇದನ್ನು ಕೇಳಿ ಅವರೂ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಲು ನಿರಾಕರಿಸಿದಾಗ ಸಾವರ್ಕರ್ " ನೀವು ವೇದೋಕ್ತವಾಗಿಯೇ ಎಲ್ಲವನ್ನೂ ನಡೆಸಿಕೊಡಬೇಕು. ಇಲ್ಲವಾದರೆ ನಾನು ಹಿಂದೂ ಧರ್ಮ್ ಕೀ ಜೈ" ಎಂಬ ಒಂದೇ ಮಂತ್ರದೊಂದಿಗೆ ಮೂರ್ತಿಯನ್ನು ಸ್ಥಾಪಿಸಿ ಬಿಡುತ್ತೇನೆ" ಎಂದು ಖಡಕ್ ಧ್ವನಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದರು. ಈ ಮಾತು ಕೇಳಿ ಆ ಬ್ರಾಹ್ಮಣರ ನಿರ್ಧಾರವೂ ಬದಲಾಯಿತು. ಪತಿತ ಪಾವನ ನೆಲೆನಿಂತು ಪತಿತರನ್ನು ಉದ್ಧರಿಸಿದ. ಬಳಿಕ ರತ್ನಗಿರಿಯ ಭಾಗೇಶ್ವರ ದೇವಾಲಯದ ಬಾಗಿಲೂ ಪತಿತರಿಗೆ ಸಾವರ್ಕರ್ ನೇತೃತ್ವದಲ್ಲಿ ತೆರೆಯಲ್ಪಟ್ಟಿತು. ನಿಧಾನವಾಗಿ ಯಾರು ತಮ್ಮ ಜಾತಿಯ ಸಂಕುಚಿತ ಸಂಕಲೆಗಳಲ್ಲಿ ಬಂಧಿತರಾಗಿ ಕಟ್ಟರ್ ಜಾತಿವಾದಿಗಳಾಗಿದ್ದರೋ ಅವರೆಲ್ಲಾ ಕಟ್ಟರ್ ಸಾವರ್ಕರ್ ವಾದಿಗಳಾಗಿ ಬದಲಾಗತೊಡಗಿದರು. 


ದೀನರ ಬವಣೆ ಕಂಡು ಅವರ ಮನಸ್ಸು ಕರಗುತ್ತಿತ್ತು. ಸಮುದ್ರ ತಟದಲ್ಲಿ ಕುಷ್ಠರೋಗದಿಂದ ನರಳುತ್ತಾ, ಕೊಳೆತು ನಾರುತ್ತಿದ್ದ ಕೃಶ ದೇಹದಿಂದ ಬಿದ್ದಿದ್ದ ಮಹಿಳೆಯೋರ್ವಳಿಗೆ ತನ್ನ ಹೆಗಲ ಮೇಲಿದ್ದ ಶಲ್ಯವನ್ನೆ ಹೊದೆಸಿ, ಅನ್ನ ನೀರು ಕೊಟ್ಟು, ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅನಾಥ ಮಹಿಳೆಯೊಬ್ಬಳು ಸತ್ತಾಗ ಆಕೆಯ ಮಗು ಬೀದಿಯಲ್ಲಿ ಬಿದ್ದಿದ್ದರೂ ಸಮಾಜ ಬಾಂಧವರು ಮುಗುಮ್ಮಾಗುಳಿದಾಗ ಆ ಮಗುವನ್ನು ಎದೆಕವಚಿಕೊಂಡು ಬೋರಕರ್ ನಾಟಕ ಮಂಡಲಿಯವರ ಬಳಿ ಕೊಟ್ಟು ಸಾಕುವಂತೆ ತಾಕೀತು ಮಾಡಿದರು. ಆದರೆ ಸಾವರ್ಕರರ ಹಿಂದೂ ಸುಧಾರಣೆಯಂತಹಾ ಸಾಮಾಜಿಕ ಕ್ರಾಂತಿಯಿಂದ ಅವರ ಸ್ಥಾನಬದ್ಧತೆಯ ಶಿಕ್ಷೆ ಮತ್ತೆ ಎಂಟು ವರ್ಷ ಮುಂದುವರೆಯಿತು. ಹೌದು ಕರಿನೀರ ಶಿಕ್ಷೆಯಿಂದ ಬಿಡುಗಡೆಯಾಗಿ ಭಾರತಕ್ಕೆ ಬಂದಾಗ ಭಾರತದಲ್ಲಿ ನಕಲಿ ಜಾತ್ಯಾತೀತವಾದ ಹಾಗೂ ನಕಲಿ ಅಹಿಂಸೆಯ ರಾಜಕಾರಣ ಬೇರು ಬಿಟ್ಟು ಹಿಂದೂ ಧರ್ಮವೆಂಬ ವೃಕ್ಷ ನಲುಗುತ್ತಿತ್ತು. ಅದಕ್ಕಾಗಿಯೇ ಸಾವರ್ಕರ್ ಹಿಂದುತ್ವಕ್ಕೊಂದು ವ್ಯಾಖ್ಯೆ ಕೊಡಬೇಕಾದ ಅಗತ್ಯತೆಯನ್ನು ಮನಗಂಡರು. ಹಾಗೆ ಮೂಡಿದ್ದೇ "ಹಿಂದುತ್ವ" ಎಂಬ ಕೃತಿ. ಜೊತೆಗೆ ಅವರು ಪ್ರತಿಪಾದಿಸಿ ಕಾರ್ಯಾಚರಿಸಿದ್ದು ಅಹಿಂದೂಗಳ ಶುದ್ಧೀಕರಣ, ಹಿಂದೂಗಳ ಸಂಘಟನೆ ಹಾಗೂ ಹಿಂದೂ ಸೈನಿಕೀಕರಣ ಎಂಬ ಮೂರು ಮುಖ್ಯ ಅಂಶಗಳು.


"ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|

ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದುರಿತಿಸ್ಮೃತಃ||"


ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಹಿಂದೂ ಯಾರೆನ್ನುವುದಕ್ಕೆ ಸಾವರ್ಕರ್ ಕೊಟ್ಟ ಸ್ಪಷ್ಟ ವಿವರಣೆಯಿದು. ಈ ನಿಟ್ಟಿನಲ್ಲಿ ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ ಆದಿಯಾಗಿ ಭಾರತೀಯ ಮತಾವಲಂಬಿಗಳೆಲ್ಲಾ ಹಿಂದೂಗಳೇ. ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ,ಭಾರತವೇ ಅವರಿಗೆ ಮಾತೃಭೂಮಿ. ಈ ವ್ಯಾಖ್ಯೆಯನ್ನು ಸರಕಾರ ಒಪ್ಪಿಕೊಂಡು ಮುಂಬರುವ ಸರಕಾರೀ ಜನಗಣತಿಯಲ್ಲಿ ಹಿಂದೂ ಜನಸಂಖ್ಯೆಯನ್ನು ನಮೂದಿಸುವಲ್ಲಿ "ಹಿಂದುತ್ವವನ್ನು" ಗುರುತಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು ಸಾವರ್ಕರ್. ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಬಹುವಾಗಿ ಪ್ರಶಂಸಿಸಿ ಒಪ್ಪಿಕೊಂಡಿದ್ದರು ಅಂಬೇಡ್ಕರ್. ಸಾವರ್ಕರರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವವರನ್ನು ಕೋಮುವಾದಿಗಳೆಂದು ಜರೆಯುವ ಆಷಾಢಭೂತಿಗಳ ಅಮಲು ಇಳಿಸುವ ಇನ್ನೊಂದು ವಿಚಾರವೆಂದರೆ ಇದೇ ವ್ಯಾಖ್ಯೆಯನ್ನು ಅಂಬೇಡ್ಕರ್ ಕೂಡಾ ಬಳಸಿಕೊಂಡಿರುವುದು. ಸಾವರ್ಕರ್ ಭಾರತದಲ್ಲಿದ್ದ ಜನರನ್ನು ಈ ಆಧಾರದಲ್ಲಿ ಕೇವಲ ವರ್ಗೀಕರಣ ಮಾತ್ರ ಮಾಡಿ ಇಡುವುದಿಲ್ಲ. ಅವರು ಅಧಿಕಾರ ಯಾರ ಕೈಯಲ್ಲಿ ಇರಬೇಕೆನ್ನುವುದನ್ನೂ ಸ್ಪಷ್ಟವಾಗಿ ಹೇಳಿದ್ದರು. ಭಾರತವನ್ನು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಸಾವರ್ಕರ್ ಹಿಂದೂಗಳಿಗೆ ಪ್ರಧಾನ ಸ್ಥಾನಮಾನಗಳಿರಬೇಕೆಂದೂ ಉಳಿದ ಸೆಮೆಟಿಕ್ ಮತಗಳವರು ಹಿಂದೂಗಳೊಂದಿಗೆ ಸಹಕಾರದಿಂದ ಬಾಳಬೇಕೆನ್ನುವುದನ್ನು ಪ್ರತಿಪಾದಿಸಿದ್ದರು. ಸಾವರ್ಕರರದ್ದು ರಾಷ್ಟ್ರೀಯವಾದದ ರಾಜಕಾರಣ. ವೈಯುಕ್ತಿಕ ಅಥವಾ ಸಾಮೂಹಿಕ ಲಾಭಗಳಿಗೆ ಎಂದೂ ರಾಷ್ಟ್ರೀಯತೆಯ ಜೊತೆ ರಾಜೀ ಮಾಡಿಕೊಂಡವರಲ್ಲ ಅವರು. ವ್ಯಕ್ತಿಯೊಬ್ಬ ಈ ದೇಶವನ್ನು ತನ್ನ ರಾಷ್ಟ್ರವಾಗಿ ಪೂಜಿಸದೇ ಇದ್ದರೇ ಆತ ರಾಷ್ಟ್ರೀಯ ಹೇಗಾದಾನು? "ರಾಷ್ಟ್ರ" ಎಂದರೇನೆಂದು ಅರಿತವರಿಗಷ್ಟೇ ಸಾವರ್ಕರ್ ಪ್ರತಿಪಾದಿಸಿದ "ಹಿಂದುತ್ವ " ಸಿದ್ಧಾಂತ ಅರ್ಥವಾದೀತು. ಹಾಗಂತ ಅಲ್ಲಿ ಉಳಿದ ಮತಗಳೆಡೆಗಿನ ದ್ವೇಷಕ್ಕೆ ಅವಕಾಶವಿಲ್ಲ. ಆದರೆ ಉಳಿದ ಮತಗಳು ಆಕ್ರಮಣಕ್ಕೆ ಬಂದಾಗ ಅದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅಂದರೆ ಅದು ಕೇವಲ "ಅಹಿಂಸಾ ಪರಮೋ ಧರ್ಮ" ಎಂದು ಆಚರಿಸುವುದಿಲ್ಲ. "ಧರ್ಮ ಹಿಂಸಾ ತಥೈವಚಾ" ಎನ್ನುವುದನ್ನೂ ಅರಿತು ಆಚರಿಸುತ್ತದೆ. ದುಷ್ಟ ದಮನವನ್ನೂ ಶಿಷ್ಟ ರಕ್ಷಣೆಯನ್ನೂ ಮಾಡಿ ಸಮಾಜದಲ್ಲಿ ಶಾಂತಿಯನ್ನು ತರುತ್ತದೆ. 


   "ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ" ಎಂದಿದ್ದರು ಸಾವರ್ಕರ್. ಸೈನ್ಯವನ್ನು ಹಿಂದೂಕರಣಗೊಳಿಸುವುದೇನೋ ಸರಿ, ರಾಜಕೀಯವನ್ನೇಕೆ ಸೈನಿಕೀಕರಣಗೊಳಿಸಬೇಕು? ಸಾವರ್ಕರ್ ಸೈನ್ಯಾಡಳಿತವನ್ನು ಹೇರಿ ಎನ್ನುತ್ತಿದ್ದಾರೆಯೇ? ಸಾವರ್ಕರರದ್ದು ಕಮ್ಯೂನಿಸ್ಟ್ ಚಿಂತನೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ವೇದಗಳಲ್ಲಿ ಉಲ್ಲೇಖಿಸಿದ, ಸನಾತನ ಧರ್ಮ ಆಚರಿಸಿಕೊಂಡು ಬಂದ, ಮಾನವ ಸಹಜ ಧರ್ಮವಾದ "ಕ್ಷಾತ್ರ"ವೇ ಈ ಮಾತಿನ ಮೂಲ. ಅಧಿಕಾರಕ್ಕೆ ಬರುವವನಲ್ಲಿ ಕ್ಷಾತ್ರ ಗುಣ ಇರಲೇಬೇಕು. ಅನ್ಯಾಯವನ್ನು ಹತ್ತಿಕ್ಕಿ, ಅಸಹಾಯಕರನ್ನು ರಕ್ಷಿಸಿ ಧರ್ಮ ಸಂಸ್ಕೃತಿಗಳನ್ನು ಉಳಿಸುವ ಕ್ಷಾತ್ರ ತೇಜವಿರಬೇಕು. ಸಾವರ್ಕರರ ಮಾತಿನ ಮೊದಲಾರ್ಧವನ್ನು ದ್ವಿತೀಯಾರ್ಧದೊಂದಿಗೆ ಸಮ್ಮಿಳಿತಗೊಂಡರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಹಾಗಾಗಿಯೇ ತನ್ನನ್ನು ಭೇಟಿಯಾದ ಸುಭಾಷರನ್ನು "ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತಾ ಕುಸಿದಿರುವಾಗ ನಿಮ್ಮಂಥ ಮೇಧಾವಿ ನಾಯಕ ಹಳೆಯ ಬ್ರಿಟಿಷ್ ಸ್ಮಾರಕಗಳನ್ನು ಕೆಡಹುವ ಜುಜುಬಿ ಕೆಲಸಗಳನ್ನು ಮಾಡಿ ಸೆರೆ ಸೇರುವುದರಿಂದೇನು ಲಾಭ? ಹಲ ಸಾವಿರ ಉನ್ಮತ್ತರು ಕಣ್ಣೆದುರೇ ದಮನ ನಡೆಸುತ್ತಿರುವಾಗ ಹಿಂದೆಂದೋ ಸತ್ತವರ ಪ್ರತಿಮೆಗಳನ್ನು ಕೆಡಹುವುದರಿಂದುಂಟಾಗುವ ಸಮಾಧಾನ ಕಳಪೆಯದೇ ಅಲ್ಲವೇ? ಸೆರೆಯಲ್ಲಿರಬೇಕಾದವರು ಬ್ರಿಟಿಷರೇ ಹೊರತು ನಾವಲ್ಲ. ಸಶಸ್ತ್ರ ಬಂಡಾಯ ಅಸಾಧ್ಯವೇನಲ್ಲ. ಸೇನೆಗೆ ಹಿಂದೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕೆಂದು ನಾನು ಹಿಂದಿನಿಂದ ಹೇಳುತ್ತಾ ಬಂದಿರುವುದು ಇದಕ್ಕೆ ಸಿದ್ಧತೆಯಾಗಿಯೇ ಅಲ್ಲವೇ?" ಎಂದು ಸಶಸ್ತ್ರ ಬಂಡಾಯಕ್ಕೆ ಪ್ರೇರೇಪಿಸಿದರು ಸಾವರ್ಕರ್. "ರಾಸ್ ಬಿಹಾರಿ ಬೋಸ್ ಕಳೆದ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆನಿಂತು ಸಶಸ್ತ್ರ ಸೈನ್ಯವೊಂದನ್ನು ಕಟ್ಟಲು ಶ್ರೀಗಣೇಶ ಹಾಡಿದ್ದಾರೆ. ನೀವೂ ಅವರಂತೆ ಜರ್ಮನಿ, ಇಟಲಿಯಲ್ಲಿ ಯುದ್ಧ ಕೈದಿಗಳಾಗಿರುವ ಭಾರತೀಯರ ಸಶಸ್ತ್ರ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ. ಜಪಾನ್ ಹಾಗೂ ಜರ್ಮನಿ ನಿಮ್ಮನ್ನು ಬೆಂಬಲಿಸುತ್ತವೆ. ಅವರ ಸಹಾಯ ದೊರೆತೊಡನೆ ಬರ್ಮಾ ಅಥವಾ ಬಂಗಾಳಕೊಲ್ಲಿ ಕಡೆಯಿಂದ ಆಕ್ರಮಣ ಮಾಡಿ. ಇಂತಹ ಯಾವುದಾದರೂ ಸಾಹಸ ನಡೆಯದೆ ಭಾರತ ಮುಕ್ತವಾಗಲಾರದು. ನನ್ನ ದೃಷ್ಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಾಹಸ ಕೈಗೊಳ್ಳಲು ಸಮರ್ಥರಾದ ಇಬ್ಬರು ಮೂವರ ಪೈಕಿ ನೀವು ಒಬ್ಬರು" ಎಂದು ಸುಭಾಷರಿಗೆ ಧೈರ್ಯ ತುಂಬಿ ಸುಭಾಷರ ಮುಂದಿನ ಯೋಜನೆಗೆ ರೂಪುರೇಷೆ ಒದಗಿಸಿದರು. ದೇಹ ಕರಿನೀರ ರೌರವದಿಂದ ಜರ್ಝರಿತಗೊಂಡಿದ್ದರೂ, ವೃದ್ದಾಪ್ಯದಿಂದ ಶಿಥಿಲಗೊಂದಿದ್ದರೂ ಅವರ ಮನಸ್ಸು ಕುಸಿದಿರಲಿಲ್ಲ. INA ಕಟ್ಟಿದ ಸುಭಾಷ್ ಸಿಂಗಾಪುರದಿಂದ ಮಾಡಿದ "ಫ್ರೀ ಇಂಡಿಯಾ ರೇಡಿಯೋ ಭಾಷಣದಲ್ಲಿ ಸ್ಮರಿಸಿದ್ದು ಸಾವರ್ಕರರನ್ನೇ - "ರಾಜಕೀಯ ಪ್ರಬುದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ವೀರ ಸಾವರ್ಕರ್ ಸೇನೆಗೆ ಸೇರಿ ಎಂದು ತರುಣರನ್ನು ಹುರಿದುಂಬಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ಅವರ ಮಾತಿನಂತೆ ಭಾರತ ರಾಷ್ಟ್ರೀಯ ಸೇನೆಗೆ ಬೇಕಾದ ತರುಣ ತಂಡ ಸಿದ್ಧಗೊಂಡಿದೆ." ದೇಶ ಸ್ವತಂತ್ರಗೊಂಡ ಬಳಿಕ ಮಹಾರಾಷ್ಟ್ರದ ಶಿಕ್ಷಣ ಸಚಿವ ಬಾಳಾಸಾಹೇಬ ದೇಸಾಯಿಯವರಿಗೆ ಪತ್ರ ಬರೆದು ಶಾಲಾಕಾಲೇಜುಗಳಲ್ಲಿ ಸೈನಿಕ ಶಿಕ್ಷಣ ಆರಂಭಿಸುವಂತೆ ಸಾವರ್ಕರ್ ಸಲಹೆಯಿತ್ತರು. ಅದರಂತೆ ಬಾಳಾಸಾಹೇಬರು ಯೋಜನೆಯೊಂದನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಚವ್ಹಾಣರ ಸಮ್ಮತಿಯೊಡನೆ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಿದರು. ಪಂಚಶೀಲದ ಕನಸಿನ ಕಂಬಗಳ ಮೇಲೆ ರಕ್ಷಣಾ ಸೌಧ ಸ್ಥಾಪಿಸಿದ್ದ ನೆಹರೂ ಅದನ್ನು ಕಸದ ಬುಟ್ಟಿಗೆ ಎಸೆದರು! ಮೃತ್ಯುಂಜಯ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸರಕಾರ ಸೇನಾಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಬೇಕೆಂದೂ, ಹೈಡ್ರೋಜನ್ ಬಾಂಬ್ ಅನ್ನೂ ತಯಾರಿಸಬೇಕೆಂದೂ, ಯುವ ಜನತೆಗೆ ಸೈನಿಕ ಶಿಕ್ಷಣ ಕೊಡಬೇಕೆಂದು ಸಾರಿದರು. ಚೀನಾದ ಕುರಿತು ಎಚ್ಚರಿಕೆಯಿಂದಿರಿ ಎಂದೂ ಅವರು ನೀಡಿದ ಎಚ್ಚರಿಕೆಯನ್ನು ನೆಹರೂ ನಿರ್ಲಕ್ಷ್ಯಿಸಿಬಿಟ್ಟರು. 


      ಬಯಸಿದ್ದರೆ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆ ಗೆಲ್ಲಬಹುದಾಗಿದ್ದ ಸಾವರ್ಕರ್ ಹಿಂದೂಗಳ ಐಕ್ಯತೆ, ದೇಶದ ಸಮಗ್ರತೆಗೆಗಾಗಿಯೇ ತಮ್ಮ ಜೀವ ತೇಯ್ದರು. ಯಾವ ಭಾರತಕ್ಕಾಗಿ ಸಾವರ್ಕರ್ ತಾನು, ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದರೋ, ಯಾವ ಭಾರತಕ್ಕಾಗಿ ಸಾಲು ಸಾಲು ಗುಂಡಿನ ಮಳೆಯನ್ನೂ ಲಿಕ್ಕಿಸದೆ ಅಗಾಧ ಸಾಗರವನ್ನು ಈಜಿ ಸ್ವಾತಂತ್ರ್ಯಕ್ಕಾಗಿ ತಹತಹಿಸಿದರೋ, ಯಾವ ಭಾರತಕ್ಕಾಗಿ ೫೦ ವರ್ಷಗಳ ಕರಿ ನೀರಿನ ಶಿಕ್ಷೆಯನ್ನು ಎದುರಿಸಿ ನಿರ್ಲಿಪ್ತರಾಗಿ ಅಂಡಮಾನಿಗೆ ಹೆಜ್ಜೆ ಹಾಕಿದರೋ, ಯಾವ ಭಾರತಕ್ಕಾಗಿ ಸಾವರ್ಕರ್ ಎತ್ತಿನ ಹಾಗೆ ಗಾಣ ಸುತ್ತಿ, ತೆಂಗಿನ ನಾರು ಸುಲಿದು ಛಡಿ ಏಟು ತಿಂದರೋ, ಯಾವ ಭಾರತಕ್ಕಾಗಿ ಮೊಟ್ಟ ಮೊದಲ ಬಾರಿ ಹರಿಜನೋದ್ಧಾರದ ಬಗ್ಗೆ ಧ್ವನಿ ಎತ್ತಿ ನೀವೂ ನಮ್ಮವರೇ ಎಂದು ಆಲಿಂಗಿಸಿ ಹಿಂದೂಗಳ ಸಂಘಟನೆಗೆ, ಸಮಗ್ರತೆಗೆ ಜೀವನವನ್ನು ಮುಡಿಪಾಗಿಟ್ಟರೋ… ಆ ಭಾರತ ಅವರಿಗೆ ಕೊನೆಗೆ ಕೊಟ್ಟಿದ್ದಾದರೂ ಏನು…? ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರರ ಮನೆಯನ್ನು ಹಿಂದಿರುಗಿಸುವುದಕ್ಕೂ ನೆಹರೂ ಒಲ್ಲೆ ಎಂದರು. ಆಂಗ್ಲರ ವಿರುದ್ದ ನಿರಂತರ ಬಡಿದಾಡಿ ಬೆಂಡಾದ ಆ ಮುದಿ ಜೀವವನ್ನು ಸ್ವತಂತ್ರ ಭಾರತ ಎರಡೆರಡು ಬಾರಿ ಜೈಲಿಗೆ ನೂಕಿತು. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಒಮ್ಮೆ, ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಆತನಿಗೆ ತೊಂದರೆಯಾಗಬಾರದೆಂದು ಮತ್ತೊಮ್ಮೆ. ಸ್ಟಾಲಿನ್ ಗೆ ಶೃದ್ಧಾಂಜಲಿ ಸಲ್ಲಿಸಿದ ಭಾರತದ ಸಂಸತ್ತಿಗೆ ಸಾವರ್ಕರ್ ನೆನಪೇ ಆಗಲಿಲ್ಲ. ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಸಾವರ್ಕರ್ ಅಂಡಮಾನಿನ ಕಲ್ಲಿನ ಗೋಡೆಯ ಮೇಲೆ ಬರೆದ ಕಾವ್ಯಗಳನ್ನು ಅಳಿಸಿ ಹಾಕಿ ಬಿಟ್ಟ. ಅಲ್ಲಿದ್ದ ಸಾವರ್ಕರ್ ಫಲಕವನ್ನೂ ಕಿತ್ತೊಗೆದ. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಇಂದಿಗೂ ವಿದ್ಯಾಲಯಗಳಲ್ಲಿ ಸಾವರ್ಕರ್ ಬಗೆಗೆ ಅಧ್ಯಯನ ಮಾಡಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ ನಿರ್ಧಾರ’ಗಳಿವೆ.

ಅಮಾಯಕ ರೈತರನ್ನು ಯಾಮಾರಿಸಿದ ದೇಶವಿರೋಧೀ ಷಡ್ಯಂತ್ರ

 ಅಮಾಯಕ ರೈತರನ್ನು ಯಾಮಾರಿಸಿದ ದೇಶವಿರೋಧೀ ಷಡ್ಯಂತ್ರ


        ಕೇಂದ್ರದ ಭಾಜಪಾ ಸರಕಾರದೆಡೆಗಿನ ಕಾಂಗ್ರೆಸ್‍ ಪಾಳಯದ ಅಸಹಿಷ್ಣುತೆ ಇನ್ನೂ ನಿಂತಿಲ್ಲ. 2014ರಲ್ಲಿ ಶ್ರೀಯುತ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿದ್ದಂತೆ ಅಸಹಿಷ್ಣುತೆಯ ಪರಾಕಾಷ್ಠೆಗೆ ತಲುಪಿದ್ದ ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರ ಕುಟಿಲ ನೀತಿಗಳು ಮತ್ತೆ ಮತ್ತೆ ಬೆತ್ತಲಾಗುತ್ತಾ ಇದ್ದರೂ ಕಾಂಗ್ರೆಸ್ಸಿಗರಿನ್ನೂ ಬುದ್ಧಿ ಬಂದಿಲ್ಲ. ಕೇಂದ್ರದ ಯಾವುದೇ ಯೋಜನೆಯನ್ನು, ಅದನ್ನು ಹಿಂದೆ ತಮ್ಮ ಸರ್ಕಾರವೇ ಪ್ರಸ್ಥಾಪಿಸಿದ್ದರೂ ಕೂಡಾ ಶತಾಯಗತಾಯ ವಿರೋಧಿಸುವುದನ್ನೇ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್ ಪಾಳಯ ದೇಶದ ಅಭಿವೃದ್ಧಿಗೆ ಮತ್ತಷ್ಟು ಮಾರಕವಾಗಿ ಪರಿಣಮಿಸಿದೆ. ಮೋದಿಯವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಪಾಳಯ ದೇಶದ ಮೇಲಿನ ಕಾಳಜಿಯ ಉದ್ದೇಶವಿಟ್ಟಾದರೂ ಸರಕಾರವನ್ನು ಬೆಂಬಲಿಸಿದ್ದಿದೆಯೇ ಎಂದರೆ ಶೂನ್ಯವೇ ಉತ್ತರ. ಅಸಲಿಗೆ ಕಾಂಗ್ರೆಸ್ಸಿನಿಂದ ದೇಶದ ಪರ ಕಾಳಜಿಯನ್ನು ನಿರೀಕ್ಷಿಸುವುದೇ ತಪ್ಪು. ಅಂದರೆ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಮಾತ್ರ ಮಾರಕವಾಗಿಲ್ಲ; ದೇಶಕ್ಕೂ ಮಾರಕವಾಗಿದೆ. ದೇಶದ್ರೋಹಿಗಳೊಂದಿಗಿನ ಅದರ ನಂಟಂತೂ ಕಾಲಕಾಲಕ್ಕೆ ಜಗಜ್ಜಾಹೀರಾಗುತ್ತಲೇ ಇದೆ.


   ಕಾಂಗ್ರೆಸ್ಸಿನ ಗುಪ್ತಚರ ವ್ಯವಸ್ಥೆ ಬಹಳ ಚೆನ್ನಾಗಿದೆ. ಮೋದಿಯವರನ್ನು 2014ರ ಚುನಾವಣೆಗೆ ಭಾಜಪಾ ತನ್ನ ಅಭ್ಯರ್ಥಿಯನ್ನಾಗಿಸುತ್ತದೆ ಎಂಬ ಸುಳಿವು ಅದಕ್ಕೆ ಭಾಜಪಾ ಕಾರ್ಯಕರ್ತರಿಗಿಂತಲೂ ಮೊದಲೇ ಸಿಕ್ಕಿರಬೇಕು. ಅದಕ್ಕಾಗಿಯೇ ಅರವಿಂದ ಕೇಜ್ರಿವಾಲ್ ಎಂಬ ತನ್ನ ಏಜೆಂಟನ ನೇತೃತ್ವದಲ್ಲಿ ತನ್ನ ಇನ್ನೊಂದು ತಂಡವನ್ನು ಮಾಡಿ ಯಾರ ಗುಮಾನಿಗೂ ಬಾರದಂತೆ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನೇ, ಯಾರಿಗೂ ಸಂಶಯ ಬಾರದಂತೆ ತನ್ನ ತೆಕ್ಕೆಗೆ ಎಳೆದುಕೊಂಡಿತು. ಇದರ ವಾಸನೆ ಸಿಕ್ಕಿದ ಬಾಬಾ ರಾಮದೇವ್, ಕಿರಣ್ ಬೇಡಿಯಂತಹವರು ಅವರಿಂದ, ಅದರಿಂದ ದೂರಾದರು. ಆದರೆ ಪ್ರಚಂಡ ಮೋದಿ ಅಲೆ ಕಾಂಗ್ರೆಸ್ಸಿನ ಜೊತೆ ಅದರ ಎಲ್ಲ ಬೆಂಬಲಿಗರನ್ನು ಧೂಳೀಪಟ ಮಾಡಿದಾಗ ಆ ಪಾಳಯ ಅಕ್ಷರಶಃ ಮಕಾಡೆ ಮಲಗಿತ್ತು. ಆದರೆ ಪಕ್ಷವಾಗಿ ಕಾಂಗ್ರೆಸ್ ಸತ್ತರೂ ಅದು ಬೆಳೆಸಿದ ವ್ಯವಸ್ಥೆ, ಅದು ಸಾಕಿಕೊಂಡ ಬುದ್ಧಿ ಹೀನ ಜೀವಿ ವರ್ಗಗಳಿವೆಯಲ್ಲ; ಅವೆಲ್ಲಾ ಒಟ್ಟಾಗಿ ಪ್ರತಿಯೊಂದು ರಾಜ್ಯ ಅಥವಾ ಕೇಂದ್ರದ ಚುನಾವಣೆಯ ಪೂರ್ವದಲ್ಲಿ ಜಾತಿಜಗಳವೋ, ಮತೀಯಜಗಳವನ್ನೋ ಹುಟ್ಟು ಹಾಕಲು ನೀಲನಕ್ಷೆ ತಯಾರಿಸಿದವು. ಸ್ವಲ್ಪವೇ ದಿನಗಳಲ್ಲಿ ಎಲ್ಲಾ ಮೋದಿ ವಿರೋಧಿಗಳು ಒಟ್ಟಾದರು.


           ಈ ಯೋಜನೆಯ ಫಲವಾಗಿಯೇ ದನಗಳ್ಳ ಅಖ್ಲಾಕನ ಕೊಲೆಯ ಹಿಂದಿನ ಕಾರಣವನ್ನೇ ತಿರುಚಿ ಅದು ಅಂತಾರಾಷ್ಟ್ರೀಯ ಸುದ್ದಿಯಾಯಿತು. ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ಮುಂತಾದವರ ಹತ್ಯೆಯನ್ನು ಭಾಜಪಾದ ತಲೆಗೆ ಕಟ್ಟುವ ಯತ್ನ ನಡೆಯಿತು. ಎಲ್ಲಿಯೂ ಸಲ್ಲದ, ಯಾವ ಸಂತೆಯಲ್ಲೂ ಬಿಕರಿಯಾಗದ ಪ್ರಕಾಶಗಳಿಂದ ಗೌರಿ ಬೀಜ ಬಿತ್ತುವ ಪ್ರಕ್ರಿಯೆ ನಡೆಯಿತು. ಅಷ್ಟರವರೆಗೆ ಸಾಹಿತಿಗಳೆಂದು ಜನಮಾನಸಕ್ಕೆ ಪರಿಚಿತರಲ್ಲದ, ಓದುವುದು ಬಿಡಿ, ಮುದ್ರಿಸಲೂ ಯೋಗ್ಯವಿಲ್ಲದ ಅಕ್ಷರ ಕಸ ಸೃಷ್ಟಿಸಿದವರಿಂದ ಹಣ, ಸೈಟುಗಳನ್ನು ಕೊಡದೇ ಕೇವಲ ಫಲಕ ಮಾತ್ರ ಕೊಡುವ ಪ್ರಶಸ್ತಿ ವಾಪಸ್ ಎಂಬ ನಕಲಿ ಚಳವಳಿ ಆರಂಭವಾಯಿತು. ಈ ಅಸಹಿಷ್ಣುತೆಯ ಕೂಗು ದೇಶಕ್ಕೆ ಲಿಂಚಿಸ್ತಾನ್, ರೇಪ್ ಕ್ಯಾಪಿಟಲ್ ಎಂದೆಲ್ಲಾ ಹೆಸರು ಹಚ್ಚಿ ಅಪಪ್ರಚಾರಗೈಯುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ  ದೇಶದ ಮಾನ ಕಳೆಯಲು ಶುರು ಮಾಡಿತು. ಜಾಟ್, ಪಟೇಲ್ ಮುಂತಾದ ಜಾತಿಗಳ ಮೀಸಲಾತಿಗಾಗಿ ಕಾಂಗ್ರೆಸ್ ತನ್ನ ಏಜೆಂಟುಗಳನ್ನು ಛೂ ಬಿಟ್ಟು ದಂಗೆ ಎಬ್ಬಿಸಲು ಯತ್ನಿಸಿತು. ಸರಸಂಘಚಾಲಕರು ಮೀಸಲಾತಿಯ ಬಗ್ಗೆ ಆಡಿದ ಮಾತನ್ನು ತಿರುಚಿ ದಮನಿತ ವರ್ಗಗಳನ್ನು ಸಂಘ, ಭಾಜಪಾದ ವಿರುದ್ಧ ತಿರುಗೇಳುವಂತೆ ಪ್ರೇರೇಪಿಸಿತು. ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳನ್ನೂ ಹಿಂದೂ ಸಂಘಟನೆಗಳ ತಲೆಗೆ ಕಟ್ಟುವ ಹುನ್ನಾರ ನಡೆಸಿತು. 370ನೇ ವಿಧಿಗೆ ಮೋದಿಯವರು ಮರಣ ಶಾಸನ ಬರೆದಾಗ ತನಗೇ ಶವಪೆಟ್ಟಿಗೆ ಸಿದ್ಧಪಡಿಸಿದಂತೆ ಕಾಂಗ್ರೆಸ್ ಪಾಳಯ ವರ್ತಿಸಿತು. ಸಿಎಎ & ಎನ್.ಆರ್.ಸಿಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ಹತ್ಯಾಕಾಂಡವನ್ನು ಪ್ರಾಯೋಜಿಸಿತು. ಇವೆಲ್ಲದರ ಮುಂದುವರೆದ ಭಾಗವೇ ಈಗ ನಡೆಯುತ್ತಿರುವ ನಕಲಿ ರೈತ ಆಂದೋಲನ!


           ಸಂಸತ್ತಿನಲ್ಲಿ ಅಂಗೀಕೃತಗೊಂಡ ನಂತರವೂ ಈ ಕಾನೂನಿನ ಪರವಾಗಿ ಮಾತಾಡುತ್ತಿದ್ದ ಅಕಾಲಿದಳ ರಾಜಕೀಯ ಲಾಭಕ್ಕೋಸ್ಕರ ತನ್ನ ನಿಲುವನ್ನು ಬದಲಾಯಿಸಿತು. ಈ ಕಾನೂನನ್ನು ವಿರೋಧಿಸುತ್ತಿರುವ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್.ಸಿ.ಪಿ 2008ರಲ್ಲಿ ತಾವು ಮಹಾರಾಷ್ಟ್ರ ಸರಕಾರದಲ್ಲಿ ಪಾಲುದಾರರಾಗಿದ್ದಾಗ ಪ್ರಸಕ್ತ ಕಾನೂನುಗಳಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತಂದಿದ್ದವು. ತನ್ನ ಚುನಾವಣಾಪ್ರಚಾರದಲ್ಲಿ ಇವೇ ಕಾನೂನುಗಳನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಹೇಳಿದ್ದ ಕಾಂಗ್ರೆಸ್ ಹಾಗೂ ಇವುಗಳನ್ನು ಸಾರ್ವತ್ರಿಕವಾಗಿ ದೇಶದಲ್ಲಿ ಜಾರಿಗೆ ತರುವಂತೆ 2020ರ ಸೆಪ್ಟೆಂಬರ್ ತಿಂಗಳವರೆಗೂ ಪತ್ರಗಳ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದ ಶರದ್ ಪವಾರ್ ಈಗ ಈ ಕಾನೂನಿನ ವಿರೋಧಿಗಳು! ಇದೇ ಕೃಷಿ ಕಾನೂನನ್ನು ಈಗ ನಕಲಿ ರೈತ ದಂಗೆಯ ಮುಖ್ಯ ರೂವಾರಿಯಾಗಿರುವ, ಕೋಟಿಗಟ್ಟಲೆ ಆಸ್ತಿಯುಳ್ಳ ರೈತ ನಾಯಕ ರಾಕೇಶ್ ಟಿಕಾಯತ್ 2020ರ ಜೂನ್'ನಲ್ಲಿ ಹೊಗಳಿದ್ದ. ಈ ರೈತ ದಂಗೆಯಲ್ಲಿ ಮೋದಿ ವಿರೋಧಿಗಳು ಮಾತ್ರವಲ್ಲಾ ದೇಶ ವಿರೋಧಿಗಳೂ ಸೇರಿದ್ದಾರೆ. ಅಸಲಿಗೆ ಅವರಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಮಾವೋವಾದಿಗಳು ಇಲ್ಲಿ ರೈತರಾಗಿದ್ದಾರೆ. ತಾವಿಲ್ಲಿ ಯಾಕೆ ಸೇರಿದ್ದೇವೆಂದು ಅರಿವಿಲ್ಲದವರೂ ಇದ್ದಾರೆ. ಸರಕಾರ ಮಂಡಿಸಿದ ಕೃಷಿ ಕಾನೂನು ತಮಗೇ ಲಾಭಕರ ಎಂಬುದರ ಅರಿವೇ ಇಲ್ಲದ ಪಾಪದ ರೈತರೂ ಕೆಲವರಿದ್ದಾರೆ. ದಿನಕ್ಕಿಷ್ಟು ಹಣ, ಬಿಟ್ಟಿ ಊಟ ಸಿಗುತ್ತದೆಂದು ಬಂದು ಒಟ್ಟಾದವರೂ ಇದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳಲ್ಲಿ ಬಂದು ತಲವಾರ್ ಝಳಪಿಸಿದವರಿದ್ದಾರೆ. ಅಲ್ಲಿ ಖಲಿಸ್ಥಾನೀ ಪರ ಘೋಷಣೆಗಳೂ ಮೊಳಗಿವೆ. ನಕ್ಸಲರ ಬಿಡುಗಡೆಗೆ ಒತ್ತಾಯಿಸುವ ಫಲಕಗಳೂ ಕಾಣಿಸಿಕೊಂಡಿವೆ. ರಾಷ್ಟ್ರಧ್ವಜವನ್ನು ಅವಮಾನಿಸುವ, ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗಳೂ ಅಲ್ಲಿ ನಡೆದಿವೆ. ಇದರ ಜೊತೆಗೆ ದೆಹಲಿಯಲ್ಲಿ ಸುರಕ್ಷಾ ಪಡೆಗಳ ಉಪಯೋಗಕ್ಕಾಗಿ ನೀಡಲಾಗಿರುವ 576 ಬಸ್‌ಗಳನ್ನು ಹಿಂದಕ್ಕೆ ಪಡೆಯುವಂತೆ ಡೆಲ್ಲಿ ಸಾರಿಗೆ ಸಂಸ್ಥೆಗೆ ಅರವಿಂದ್ ಕೇಜ್ರಿವಾಲ್ ಫರ್ಮಾನು ಹೊರಡಿಸಿದ್ದರು. 


         ಜನವರಿ 26ರಂದು ನಕಲಿ ರೈತರ ದಂಗೆಯ ವೇಳೆ ಪೊಲೀಸರು ಗರಿಷ್ಠ ಸಂಯಮವನ್ನು ಪ್ರದರ್ಶಿಸಿದರು. ಒಂದು ವೇಳೆ ಕೇಂದ್ರ ಸರಕಾರ ದಂಗೆಕೋರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದರೆ ಅಂದು ಕೆಲವಾರು ಹೆಣ ಬೀಳುತ್ತಿತ್ತು. ಆಗ ಕಾಂಗ್ರೆಸ್ ಬೆಂಬಲಿತ ಮಾಧ್ಯಮಗಳು ಇದನ್ನೇ ತಿರುಚಿ, ಸರಕಾರದ ವಿರುದ್ಧ ಅಪಪ್ರಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಸಲು ತಯಾರಾಗಿದ್ದರು.  ಟ್ರಾಕ್ಟರನ್ನು ಸ್ವತಃ ತನ್ನ ಮೇಲೆ ಪಲ್ಟಿ ಹೊಡೆಸಿಕೊಂಡು ಸತ್ತವನನ್ನು ಪೊಲೀಸರ ಗುಂಡಿನೇಟಿಗೆ ಸತ್ತ ಎಂದು ರಾಜ್ದೀಪ್ ಸರ್ದೇಸಾಯಿ ಸುಳ್ಳು ಸುದ್ದಿ ಹಬ್ಬಿಸಲು ನೋಡಿದ್ದು ಇದರ ಭಾಗವೇ. ಆದರೆ ಇದರ ಹಿಂದಿನ ಷಡ್ಯಂತ್ರ ಅಷ್ಟೇ ಅಲ್ಲ ಎಂದು ತಿಳಿದದ್ದು ಅಮೆರಿಕನ್ ಗಾಯಕಿ ರಿಹಾನಾ "ದೆಹಲಿಯಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿರುವುದರಿಂದ ಆಂದೋಲನ ನಿರತ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ನಾವೇಕೆ ದನಿ ಎತ್ತುತ್ತಿಲ್ಲ?" ಎಂದು ರಾತ್ರಿ ಎಂಟುಗಂಟೆಗೆ ಟ್ವೀಟ್ ಮಾಡಿದಾಗ. ಹೆಚ್ಚೆಂದರೆ ಐವತ್ತು ಸಾವಿರದಷ್ಟು ರಿಟ್ವೀಟ್ ಆಗುತ್ತಿದ್ದುದು, ಅಂದು ಮಾತ್ರ ಆಕೆಯ ಟ್ವೀಟು ಅರ್ಧ ದಿನದೊಳಗೆ ಎರಡೂವರೆ ಲಕ್ಷ ರಿಟ್ವೀಟ್ ಆಯಿತು! ಜೊತೆಗೆ ಅದರ ಬೆನ್ನಿಗೆ ಬೆಳಿಗ್ಗೆ ನಾಲ್ಕೂವರೆ ಹೊತ್ತಿಗೆ “ಇಂಡಿಯಾ ಈಸ್ ಆಟ್ ವಾರ್ ವಿತ್ ಇಟ್‌ಸೆಲ್ಫ್ – ಆಂಡ್ ಈವನ್ ರಿಹಾನಾ ಈಸ್ ನೋಟೀಸಿಂಗ್” ಎಂಬ ಬರ್ಖಾ ದತ್ತಳ ಲೇಖನ “ವಾಷಿಂಗ್‌ಟನ್ ಪೋಸ್ಟ್” ಪತ್ರಿಕೆಯಲ್ಲಿ ಪ್ರಕಟವಾಯಿತು! ಈ ಷಡ್ಯಂತ್ರ ಪೂರ್ಣವಾಗಿ ಸಾರ್ವಜನಿಕರಿಗೆ ದರ್ಶನವಾದುದು ಶಾಲೆ ಬಿಟ್ಟು ನಕಲಿ ಪರಿಸರವಾದಿಗಳ ದಾಳಕ್ಕೆ ಸಿಲುಕಿರುವ ಸ್ವೀಡನ್‌ ಪೋರಿ ಗ್ರೆಟಾ ಥನ್‌ಬರ್ಗ್ ಟೂಲ್ ಕಿಟ್ ಕೊಂಡಿಯೊಂದನ್ನು ಟ್ವೀಟ್ ಮಾಡುವ ಮೂಲಕ. ಅಂದೊಮ್ಮೆ "ಹೌ ಡೇರ್ ಯು?" ಅಂತ ವಿಶ್ವ ನಾಯಕರಿಗೆ ಕೇಳಿ ತಥಾಕಥಿತ ಪರಿಸರವಾದಿಗಳ ಕಣ್ಮಣಿಯಾಗಿದ್ದ ಗ್ರೇಟಾಳಿಗೆ ಇಂದು ಅದೇ ನಕಲಿ ಪರಿಸರವಾದಿಗಳು ತಮ್ಮ ರಹಸ್ಯ ಬಯಲಾಗಿಸಿದ್ದಕ್ಕಾಗಿ "ಹೌ ಡೇರ್ ಯು?" ಅನ್ನುವ ಪರಿಸ್ಥಿತಿ ಬಂದೊದಗಿದೆ!


           ಈ ಟೂಲ್ ಕಿಟ್'ನಲ್ಲಿ ದಂಗೆಕೋರರು ನಡೆಸಿದ್ದ ಸಭೆಗಳು, ತೆಗೆದುಕೊಂಡಿದ್ದ ನಿರ್ಣಯಗಳು ಎಲ್ಲಾ ಇದ್ದವು. ಜನವರಿ 26ನ್ನು “ಗ್ಲೋಬಲ್ ಡೇ ಆಫ್ ಆಕ್ಷನ್” ಆಗಿಸಿ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಗೊಂದಲ ಹಾಗೂ ಅರಾಜಕತೆಯನ್ನು ಎಬ್ಬಿಸಬೇಕೆಂದೂ ನಿರ್ಣಯಿಸಲಾಗಿತ್ತು!  ಅದನ್ನು ಕಾರ್ಯಗತ ಮಾಡಲು ಸಲಹೆ, ಸೂಚನೆ, ಮಾರ್ಗದರ್ಶನ; ಅಗತ್ಯವಾದ ಸಿದ್ಧ ಟ್ವೀಟ್‌ಗಳು, ಹ್ಯಾಷ್‌ಟ್ಯಾಗ್‌ಗಳು ಎಲ್ಲವೂ ಅದರಲ್ಲಿದ್ದವು. ಗಲಭೆ ಆರಂಭವಾದಾಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೂಲಕ ಹಾಗೂ ಲೈವ್ ಆಗಿ ಎಲ್ಲೆಡೆ ಪ್ರಸಾರ ಮಾಡಬೇಕೆಂದೂ, ಅದಕ್ಕೆ ನೀಡಬೇಕಾದ ಶೀರ್ಷಿಕೆಗಳ ಬಗೆಗೆ ಸಲಹೆಗಳಿದ್ದವು.  ರಿಹಾನಾ ಮಾಡಿದ ಟ್ವೀಟ್‌, ಯಾವಾಗ, ಯಾವ ಬಗೆಯ ಟ್ವೀಟ್ ಮಾಡಬೇಕೆಂದೂ ಅದರಲ್ಲೇ ಇತ್ತು. ಹೀಗೆ ಪೂರ್ವ ನಿಗದಿತ ಸಮಯಕ್ಕೆ ಟ್ವೀಟ್ ಮಾಡಿದ ಕಾರಣಕ್ಕೆ ಆಕೆಗೆ ಎರಡೂವರೆ ಮಿಲಿಯನ್ ಡಾಲರ್‌ಗಳು ಸಂದಾಯವಾಗಿತ್ತು! ಪೋಸ್ಟ್‌ಗಳಲ್ಲಿ ಹಾಕಬೇಕಾದ ಫೋಟೋಗಳ ಮಾದರಿಗಳೂ ಇದ್ದವು! “ಮೋದಿ ರೈತರ ಹತ್ಯಾಕಾಂಡಕ್ಕೆ ಯೋಜಿಸಿದ್ದಾರೆ” ಎಂಬ ಹ್ಯಾಷ್‌ಟ್ಯಾಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿ ಜನರನ್ನು ಕೆರಳಿಸಿ ನಡೆಸಬೇಕಾದ ಚಕ್ಕಾ ಜಾಮ್ ದಂಗೆಯ ಮಾಹಿತಿ,  ಫೆಬ್ರವರಿ 12-23ರ ಅವಧಿಯಲ್ಲೂ ದಂಗೆ ಎಬ್ಬಿಸುವ ಯೋಜನೆಗಳು ಅದರಲ್ಲಿದ್ದವು. ಅಂಬಾನಿ, ಅದಾನಿಯಂತಹ ದೇಶದ ದೊಡ್ಡ ಕೈಗಾರಿಕೋದ್ಯಮಿಗಳ ವಿರುದ್ಧವೂ ಕಾರ್ಯಾಚರಣೆ ಆರಂಭಿಸಬೇಕೆಂಬ ಸೂಚನೆಗಳೂ ಅದರಲ್ಲಿದ್ದವು. ಜಿಯೋಗೆ ಸೇರಿದ 1300ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಹಾಳುಗೆಡವಿರುವುದರ ಹಿಂದಿನ ಕಾರಣ ಇದೇ. ವಿಶ್ವಸಂಸ್ಥೆ, ಅಮೆರಿಕಾ, ಬ್ರಿಟನ್, ಕೆನಡಾ ಮುಂತಾದೆಡೆ ಭಾರತದ ವಿರುದ್ದ ಅಭಿಪ್ರಾಯ ಮೂಡಿಸುವ ಯೋಜನೆಗಳೂ ಅದರಲ್ಲಿದ್ದವು.  ಸಿದ್ಧ ಟ್ವೀಟ್ ಹಾಗೂ ಹೇಳಿಕೆಗಳು ಇಂಗ್ಲಿಷ್ ಅಲ್ಲದೇ ಫ್ರೆಂಚ್ ಮತ್ತು ಪೋರ್ಚುಗೀಸ್‌ನಲ್ಲೂ ಇದ್ದವು! ಬ್ರಿಟಿಷ್ ಸಂಸತ್ ಸದಸ್ಯೆ ಕ್ಲಾಡಿಯಾ "ಭಾರತದ ರೈತರ ಸಮಸ್ಯೆಯ ಬಗ್ಗೆ ಬ್ರಿಟಿಷ್ ಸಂಸತ್‌ನಲ್ಲಿ ಚರ್ಚೆಯಾಗಬೇಕು" ಎಂದಿರುವುದು ಇದರ ಭಾಗವೇ. ಸರಕಾರದ ಜೊತೆ ಹನ್ನೆರಡು ಬಾರಿ ಮಾತುಕತೆ ನಡೆಸಿದ್ದರೂ ತಮ್ಮ ನಿಲುವುಗಳನ್ನು ಪದೇ ಪದೇ ಬದಲಾಯಿಸುತ್ತಿದ್ದ, ಸರ್ವೋಚ್ಛ ನ್ಯಾಯಾಲಯ ಸೃಷ್ಟಿಸಿದ ಸಮಿತಿಯನ್ನು ತಿರಸ್ಕರಿಸಿದ್ದ, ಕಾನೂನುಗಳ ಜಾರಿಯನ್ನು ಒಂದೂವರೆ ವರ್ಷಗಳವರೆಗೆ ಸರ್ಕಾರ ಸ್ಥಗಿತಗೊಳಿಸಿರುವುದನ್ನು ಕೂಡಾ ನಿರ್ಲಕ್ಷಿಸಿ ತಮ್ಮ ಪ್ರತಿಭಟನೆಯನ್ನು ಜಾರಿಯಲ್ಲಿಟ್ಟಿದ್ದ ಈ ನಕಲಿ ರೈತ ನಾಯಕರ ಉದ್ದೇಶ ದೇಶದ ಅನ್ನದಾತರ ಮೇಲಿನ ಕಾಳಜಿಯಲ್ಲ; ತಮ್ಮ "ಅನ್ನದಾತ"ರನ್ನು ಅಧಿಕಾರದಲ್ಲಿ ಕೂರಿಸುವ ಷಡ್ಯಂತ್ರ ಎನ್ನುವುದನ್ನು ಈ ಟೂಲ್ ಕಿಟ್ ಬಯಲು ಮಾಡಿತು.


          ತನ್ನವರಿಂದ ಸೂಚನೆ ಸಿಕ್ಕಿದ ಕೂಡಲೇ ಗ್ರೇಟಾ ಆ ಟೂಲ್ ಕಿಟ್ ಕೊಂಡಿಯಿದ್ದ ಟ್ವೀಟನ್ನೇನೋ ತೆಗೆದು ಹಾಕಿದಳು. ಆದರೆ ಆ ಲಿಂಕ್ ಬಳಸಿ ಟೂಲ್ ಕಿಟ್ ನೋಡಿದಾಗ ಹಲವು ರಹಸ್ಯಗಳು ಹೊರಬಂದವು. ಆಗ ಅಲ್ಲಿನ ಸಾಲುಗಳು ಮಾಯವಾಗಿ ಹೊಸ ಸಾಲುಗಳು ಮೂಡುತ್ತಿದ್ದವು. ಹಾಗೆ ಮಾಯವಾದ ಸಾಲುಗಳಲ್ಲಿ, “ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಜತೆ ಸಂಪರ್ಕದಲ್ಲಿರಿ” ಎಂದು ದಂಗೆಕೋರರಗಿಗೆ ನೀಡಿದ ಸೂಚನೆ ಕೂಡಾ ಒಂದಾಗಿತ್ತು! ಹಾಗೆ ಟೂಲ್‌ಕಿಟ್ ಅನ್ನು ಎಡಿಟ್ ಮಾಡುತ್ತಿದ್ದಾಕೆ ಆಮ್ ಆದ್ಮಿ ಪಕ್ಷದ, ಮುಂಬೈ ಉಚ್ಛ ನ್ಯಾಯಾಲಯದ ವಕೀಲೆ ನಿಕಿತಾ ಜೇಕಬ್. 137 ಜಿಬಿಯಷ್ಟು ಮಾಹಿತಿ ಆಕೆಯ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳಿಂದ ದೊರೆತಿದೆ. ಅವುಗಳಲ್ಲಿ ದಂಗೆಯ ಬಗ್ಗೆ ಮಾಹಿತಿ, ದಂಗೆ ಎಬ್ಬಿಸಿ ಹಬ್ಬಿಸಲು ಪ್ರೇರೇಪಿಸುವ ವಿಡಿಯೋಗಳೆಲ್ಲಾ ದೊರೆತಿವೆ. ಆಕೆ "ಸಿಖ್ ಫಾರ್ ಜಸ್ಟೀಸ್" ಎಂಬ ನಿಷೇಧಿತ ಉಗ್ರ ಸಂಘಟನೆಯ ಇಮೈಲ್'ಗಳನ್ನು ನಿರ್ವಹಿಸುತ್ತಿದ್ದಾಕೆ. ಮಿಯಾ ಕ್ಯಾಂಪಸೀನಾ, ಎಕ್ಸ್‌ಟಿಂಕ್ಷನ್ ರೆಬೆಲಿಯನ್, ಯುಗ್ಮಾ ನೆಟ್‌ವರ್ಕ್ ಮುಂತಾದ ಅಂತಾರಾಷ್ಟ್ರೀಯ ಎಡಪಂಥೀಯ ಉಗ್ರ ಸಂಘಟನೆಗಳೆಲ್ಲಾ ಈ ದಂಗೆಗೆ ಸಹಾಯ ಹಸ್ತ ನೀಡಿವೆ! ಎಕ್ಸ್‌ಟಿಂಕ್ಷನ್ ರೆಬೆಲಿಯನ್ ಎಂಬ ಉಗ್ರ ಸಂಘಟನೆಗೆ ಹಣ ಕೊಡುವುದು ಭಾರತದಿಂದ ನಿಷೇಧವಾಗಿರುವ ಗ್ರೀನ್ ಪೀಸ್ ಸಂಘಟನೆ. ದಂಗೆಯ ನೀಲನಕ್ಷೆಯನ್ನು ತಯಾರಿಸಿದ “ಆಸ್ಕ್ ಇಂಡಿಯಾ ವೈ.ಕಾಮ್” ಎಂಬ ವೆಬ್‌ಸೈಟಿನ ನಿರ್ಮಾತೃ ಖಲಿಸ್ತಾನಿ ಉಗ್ರ ಧಲಿವಾಲನಿಂದ ಸ್ಥಾಪಿಸಲ್ಪಟ್ಟ ಕೆನಡಾದ “ಪೊಯೆಟಿಕ್ ಜಸ್ಟಿಸ್ ಫೌಂಡೇಶನ್” ಎಂಬ ಉಗ್ರ ಸಂಘಟನೆ. ಟೂಲ್ ಕಿಟ್ ತಯಾರಿಸಿದ "21 ವರ್ಷದ ಹಸುಳೆ" ಎಂದು ಕಾಂಗ್ರೆಸ್ ಪಾಳಯ ಮುದ್ದು ಮಾಡುತ್ತಿರುವ ದಿಶಾಳನ್ನು ಈತನೊಂದಿಗೆ ಬೆಸೆದವಳು ವಕೀಲೆ ನಿಕಿತಾ ಜೇಕಬ್. ಟೂಲ್ ಕಿಟ್ ನಿರ್ಮಾತೃಗಳಲ್ಲಿ ಒಬ್ಬನಾದ ಶಂತನು ಮುಲೂಕ್ ದಂಗೆಯ ಸಮಯದಲ್ಲಿ ಗಾಜಿಪುರ್ - ಸಿಂಘು, ಟೀಕ್ರಿ ಬಾರ್ಡರ್‌ಗಳಲ್ಲಿದ್ದ!


          ಹೌದು ದೇಶ ವಿರೋಧೀ ಶಕ್ತಿಗಳೆಲ್ಲಾ ಒಟ್ಟು ಸೇರಿವೆ. ಖಲಿಸ್ಥಾನೀ, ಐಎಸ್ಐ ಏಜೆಂಟರುಗಳಿಂದ ಸಹಾಯಹಸ್ತವೂ ಅವುಗಳಿಗೆ ಸಿಕ್ಕಿವೆ. ಆದರೆ ಇದರ ಹಿಂದಿರುವ ಮುಖ್ಯ ಪಾತ್ರಧಾರಿಯೊಬ್ಬನ ಬಗ್ಗೆ ಜಗತ್ತು ಜಾಗೃತವಾಗಬೇಕು. ಆತ ಜಾರ್ಜ್ ಸೋರೋಸ್. ಆತ ಮೋದಿಯವರನ್ನು ಸರ್ವಾಧಿಕಾರಿ ಎನ್ನುತ್ತಾನೆ. ಯಾರೆಲ್ಲಾ ಕ್ರೈಸ್ತ ಮಿಷನರಿಗಳಿಗೆ, ದೇಶವಿರೋಧೀ ವಿಚಾರವಾದಿಗಳಿಗೆ ಸೊಪ್ಪು ಹಾಕುವುದಿಲ್ಲವೋ ಅವರೆಲ್ಲಾ ಆ ಮತಾಂಧನ ದೃಷ್ಟಿಯಲ್ಲಿ ಸರ್ವಾಧಿಕಾರಿಗಳು. ಈ ಎಲ್ಲಾ ಸರ್ವಾಧಿಕಾರಿಗಳ ವಿರುದ್ಧ ಹೋರಾಡಲು ಆತ ಬಿಲಿಯನ್ಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾನೆ. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ ಆತ ಹೂಡಿಕೆ ಮಾಡಿದ್ದಾನೆ. ಅಲ್ಲದೇ ಈ ದೇಶದ ವಿರುದ್ಧ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ, ಮೋದಿಯವರ ವಿರುದ್ಧ ಯಾವೆಲ್ಲಾ ಬರ್ಖಾ, ಸರ್ದೇಸಾಯಿಗಳು ಬರೆಯುತ್ತಿದ್ದಾರೋ, ಧ್ರುವ್ ರಾಥೀ ಮುಂತಾದ ದೇಶ ವಿರೋಧಿಗಳು ಯೂಟ್ಯೂಬ್'ನಂತಹಾ ಮಾಧ್ಯಮಗಳಲ್ಲಿ ವಿಡಿಯೋ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೋ ಅವರಿಗೆಲ್ಲಾ ಈ ಸೋರೋಸ್ ಬಿಸ್ಕೀಟ್ ಹಾಕುತ್ತಿದ್ದಾನೆ. ಈ ನಕಲಿ ರೈತರ ದಂಗೆಗೂ ಅವನಿಂದ ಪರೋಕ್ಷ ರೂಪದಲ್ಲಿ ಹಣ ಹರಿದಿದೆ. ವೀರ ಸಾವರ್ಕರರ ನಾಯಕತ್ವವನ್ನು ನಾವು ಬಳಸಿಕೊಳ್ಳಲಿಲ್ಲ, ನೇತಾಜಿ ಸುಭಾಷರನ್ನು ಉಳಿಸಿಕೊಳ್ಳಲಿಲ್ಲ; ಎಪ್ಪತ್ತು ವರ್ಷಗಳ ಬಳಿಕ ಸಿಕ್ಕಿದ ಅಪರೂಪದ ಹಿಂದೂ ನಾಯಕ ನರೇಂದ್ರ ಮೋದಿಯನ್ನಾದರೂ ಉಳಿಸಿಕೊಳ್ಳೋಣ. ಸೋರೋಸ್ನ ಎಂಜಲಿಗೆ ನಾಲಗೆಯೊಡ್ಡುವ ದೇಶ ವಿರೋಧೀ ಶಕ್ತಿಗಳ ಅಪಪ್ರಚಾರವನ್ನು ನಂಬದೆ ಮೋದಿಯವರ ಜೊತೆ ನಿಂತು ರಾಷ್ಟ್ರಧರ್ಮವನ್ನು ಪಾಲಿಸೋಣ.