ಪುಟಗಳು

ಮಂಗಳವಾರ, ಜೂನ್ 15, 2021

ಅಮಾಯಕ ರೈತರನ್ನು ಯಾಮಾರಿಸಿದ ದೇಶವಿರೋಧೀ ಷಡ್ಯಂತ್ರ

 ಅಮಾಯಕ ರೈತರನ್ನು ಯಾಮಾರಿಸಿದ ದೇಶವಿರೋಧೀ ಷಡ್ಯಂತ್ರ


        ಕೇಂದ್ರದ ಭಾಜಪಾ ಸರಕಾರದೆಡೆಗಿನ ಕಾಂಗ್ರೆಸ್‍ ಪಾಳಯದ ಅಸಹಿಷ್ಣುತೆ ಇನ್ನೂ ನಿಂತಿಲ್ಲ. 2014ರಲ್ಲಿ ಶ್ರೀಯುತ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿದ್ದಂತೆ ಅಸಹಿಷ್ಣುತೆಯ ಪರಾಕಾಷ್ಠೆಗೆ ತಲುಪಿದ್ದ ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರ ಕುಟಿಲ ನೀತಿಗಳು ಮತ್ತೆ ಮತ್ತೆ ಬೆತ್ತಲಾಗುತ್ತಾ ಇದ್ದರೂ ಕಾಂಗ್ರೆಸ್ಸಿಗರಿನ್ನೂ ಬುದ್ಧಿ ಬಂದಿಲ್ಲ. ಕೇಂದ್ರದ ಯಾವುದೇ ಯೋಜನೆಯನ್ನು, ಅದನ್ನು ಹಿಂದೆ ತಮ್ಮ ಸರ್ಕಾರವೇ ಪ್ರಸ್ಥಾಪಿಸಿದ್ದರೂ ಕೂಡಾ ಶತಾಯಗತಾಯ ವಿರೋಧಿಸುವುದನ್ನೇ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್ ಪಾಳಯ ದೇಶದ ಅಭಿವೃದ್ಧಿಗೆ ಮತ್ತಷ್ಟು ಮಾರಕವಾಗಿ ಪರಿಣಮಿಸಿದೆ. ಮೋದಿಯವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಪಾಳಯ ದೇಶದ ಮೇಲಿನ ಕಾಳಜಿಯ ಉದ್ದೇಶವಿಟ್ಟಾದರೂ ಸರಕಾರವನ್ನು ಬೆಂಬಲಿಸಿದ್ದಿದೆಯೇ ಎಂದರೆ ಶೂನ್ಯವೇ ಉತ್ತರ. ಅಸಲಿಗೆ ಕಾಂಗ್ರೆಸ್ಸಿನಿಂದ ದೇಶದ ಪರ ಕಾಳಜಿಯನ್ನು ನಿರೀಕ್ಷಿಸುವುದೇ ತಪ್ಪು. ಅಂದರೆ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಮಾತ್ರ ಮಾರಕವಾಗಿಲ್ಲ; ದೇಶಕ್ಕೂ ಮಾರಕವಾಗಿದೆ. ದೇಶದ್ರೋಹಿಗಳೊಂದಿಗಿನ ಅದರ ನಂಟಂತೂ ಕಾಲಕಾಲಕ್ಕೆ ಜಗಜ್ಜಾಹೀರಾಗುತ್ತಲೇ ಇದೆ.


   ಕಾಂಗ್ರೆಸ್ಸಿನ ಗುಪ್ತಚರ ವ್ಯವಸ್ಥೆ ಬಹಳ ಚೆನ್ನಾಗಿದೆ. ಮೋದಿಯವರನ್ನು 2014ರ ಚುನಾವಣೆಗೆ ಭಾಜಪಾ ತನ್ನ ಅಭ್ಯರ್ಥಿಯನ್ನಾಗಿಸುತ್ತದೆ ಎಂಬ ಸುಳಿವು ಅದಕ್ಕೆ ಭಾಜಪಾ ಕಾರ್ಯಕರ್ತರಿಗಿಂತಲೂ ಮೊದಲೇ ಸಿಕ್ಕಿರಬೇಕು. ಅದಕ್ಕಾಗಿಯೇ ಅರವಿಂದ ಕೇಜ್ರಿವಾಲ್ ಎಂಬ ತನ್ನ ಏಜೆಂಟನ ನೇತೃತ್ವದಲ್ಲಿ ತನ್ನ ಇನ್ನೊಂದು ತಂಡವನ್ನು ಮಾಡಿ ಯಾರ ಗುಮಾನಿಗೂ ಬಾರದಂತೆ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನೇ, ಯಾರಿಗೂ ಸಂಶಯ ಬಾರದಂತೆ ತನ್ನ ತೆಕ್ಕೆಗೆ ಎಳೆದುಕೊಂಡಿತು. ಇದರ ವಾಸನೆ ಸಿಕ್ಕಿದ ಬಾಬಾ ರಾಮದೇವ್, ಕಿರಣ್ ಬೇಡಿಯಂತಹವರು ಅವರಿಂದ, ಅದರಿಂದ ದೂರಾದರು. ಆದರೆ ಪ್ರಚಂಡ ಮೋದಿ ಅಲೆ ಕಾಂಗ್ರೆಸ್ಸಿನ ಜೊತೆ ಅದರ ಎಲ್ಲ ಬೆಂಬಲಿಗರನ್ನು ಧೂಳೀಪಟ ಮಾಡಿದಾಗ ಆ ಪಾಳಯ ಅಕ್ಷರಶಃ ಮಕಾಡೆ ಮಲಗಿತ್ತು. ಆದರೆ ಪಕ್ಷವಾಗಿ ಕಾಂಗ್ರೆಸ್ ಸತ್ತರೂ ಅದು ಬೆಳೆಸಿದ ವ್ಯವಸ್ಥೆ, ಅದು ಸಾಕಿಕೊಂಡ ಬುದ್ಧಿ ಹೀನ ಜೀವಿ ವರ್ಗಗಳಿವೆಯಲ್ಲ; ಅವೆಲ್ಲಾ ಒಟ್ಟಾಗಿ ಪ್ರತಿಯೊಂದು ರಾಜ್ಯ ಅಥವಾ ಕೇಂದ್ರದ ಚುನಾವಣೆಯ ಪೂರ್ವದಲ್ಲಿ ಜಾತಿಜಗಳವೋ, ಮತೀಯಜಗಳವನ್ನೋ ಹುಟ್ಟು ಹಾಕಲು ನೀಲನಕ್ಷೆ ತಯಾರಿಸಿದವು. ಸ್ವಲ್ಪವೇ ದಿನಗಳಲ್ಲಿ ಎಲ್ಲಾ ಮೋದಿ ವಿರೋಧಿಗಳು ಒಟ್ಟಾದರು.


           ಈ ಯೋಜನೆಯ ಫಲವಾಗಿಯೇ ದನಗಳ್ಳ ಅಖ್ಲಾಕನ ಕೊಲೆಯ ಹಿಂದಿನ ಕಾರಣವನ್ನೇ ತಿರುಚಿ ಅದು ಅಂತಾರಾಷ್ಟ್ರೀಯ ಸುದ್ದಿಯಾಯಿತು. ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ಮುಂತಾದವರ ಹತ್ಯೆಯನ್ನು ಭಾಜಪಾದ ತಲೆಗೆ ಕಟ್ಟುವ ಯತ್ನ ನಡೆಯಿತು. ಎಲ್ಲಿಯೂ ಸಲ್ಲದ, ಯಾವ ಸಂತೆಯಲ್ಲೂ ಬಿಕರಿಯಾಗದ ಪ್ರಕಾಶಗಳಿಂದ ಗೌರಿ ಬೀಜ ಬಿತ್ತುವ ಪ್ರಕ್ರಿಯೆ ನಡೆಯಿತು. ಅಷ್ಟರವರೆಗೆ ಸಾಹಿತಿಗಳೆಂದು ಜನಮಾನಸಕ್ಕೆ ಪರಿಚಿತರಲ್ಲದ, ಓದುವುದು ಬಿಡಿ, ಮುದ್ರಿಸಲೂ ಯೋಗ್ಯವಿಲ್ಲದ ಅಕ್ಷರ ಕಸ ಸೃಷ್ಟಿಸಿದವರಿಂದ ಹಣ, ಸೈಟುಗಳನ್ನು ಕೊಡದೇ ಕೇವಲ ಫಲಕ ಮಾತ್ರ ಕೊಡುವ ಪ್ರಶಸ್ತಿ ವಾಪಸ್ ಎಂಬ ನಕಲಿ ಚಳವಳಿ ಆರಂಭವಾಯಿತು. ಈ ಅಸಹಿಷ್ಣುತೆಯ ಕೂಗು ದೇಶಕ್ಕೆ ಲಿಂಚಿಸ್ತಾನ್, ರೇಪ್ ಕ್ಯಾಪಿಟಲ್ ಎಂದೆಲ್ಲಾ ಹೆಸರು ಹಚ್ಚಿ ಅಪಪ್ರಚಾರಗೈಯುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ  ದೇಶದ ಮಾನ ಕಳೆಯಲು ಶುರು ಮಾಡಿತು. ಜಾಟ್, ಪಟೇಲ್ ಮುಂತಾದ ಜಾತಿಗಳ ಮೀಸಲಾತಿಗಾಗಿ ಕಾಂಗ್ರೆಸ್ ತನ್ನ ಏಜೆಂಟುಗಳನ್ನು ಛೂ ಬಿಟ್ಟು ದಂಗೆ ಎಬ್ಬಿಸಲು ಯತ್ನಿಸಿತು. ಸರಸಂಘಚಾಲಕರು ಮೀಸಲಾತಿಯ ಬಗ್ಗೆ ಆಡಿದ ಮಾತನ್ನು ತಿರುಚಿ ದಮನಿತ ವರ್ಗಗಳನ್ನು ಸಂಘ, ಭಾಜಪಾದ ವಿರುದ್ಧ ತಿರುಗೇಳುವಂತೆ ಪ್ರೇರೇಪಿಸಿತು. ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳನ್ನೂ ಹಿಂದೂ ಸಂಘಟನೆಗಳ ತಲೆಗೆ ಕಟ್ಟುವ ಹುನ್ನಾರ ನಡೆಸಿತು. 370ನೇ ವಿಧಿಗೆ ಮೋದಿಯವರು ಮರಣ ಶಾಸನ ಬರೆದಾಗ ತನಗೇ ಶವಪೆಟ್ಟಿಗೆ ಸಿದ್ಧಪಡಿಸಿದಂತೆ ಕಾಂಗ್ರೆಸ್ ಪಾಳಯ ವರ್ತಿಸಿತು. ಸಿಎಎ & ಎನ್.ಆರ್.ಸಿಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ಹತ್ಯಾಕಾಂಡವನ್ನು ಪ್ರಾಯೋಜಿಸಿತು. ಇವೆಲ್ಲದರ ಮುಂದುವರೆದ ಭಾಗವೇ ಈಗ ನಡೆಯುತ್ತಿರುವ ನಕಲಿ ರೈತ ಆಂದೋಲನ!


           ಸಂಸತ್ತಿನಲ್ಲಿ ಅಂಗೀಕೃತಗೊಂಡ ನಂತರವೂ ಈ ಕಾನೂನಿನ ಪರವಾಗಿ ಮಾತಾಡುತ್ತಿದ್ದ ಅಕಾಲಿದಳ ರಾಜಕೀಯ ಲಾಭಕ್ಕೋಸ್ಕರ ತನ್ನ ನಿಲುವನ್ನು ಬದಲಾಯಿಸಿತು. ಈ ಕಾನೂನನ್ನು ವಿರೋಧಿಸುತ್ತಿರುವ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್.ಸಿ.ಪಿ 2008ರಲ್ಲಿ ತಾವು ಮಹಾರಾಷ್ಟ್ರ ಸರಕಾರದಲ್ಲಿ ಪಾಲುದಾರರಾಗಿದ್ದಾಗ ಪ್ರಸಕ್ತ ಕಾನೂನುಗಳಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತಂದಿದ್ದವು. ತನ್ನ ಚುನಾವಣಾಪ್ರಚಾರದಲ್ಲಿ ಇವೇ ಕಾನೂನುಗಳನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಹೇಳಿದ್ದ ಕಾಂಗ್ರೆಸ್ ಹಾಗೂ ಇವುಗಳನ್ನು ಸಾರ್ವತ್ರಿಕವಾಗಿ ದೇಶದಲ್ಲಿ ಜಾರಿಗೆ ತರುವಂತೆ 2020ರ ಸೆಪ್ಟೆಂಬರ್ ತಿಂಗಳವರೆಗೂ ಪತ್ರಗಳ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದ ಶರದ್ ಪವಾರ್ ಈಗ ಈ ಕಾನೂನಿನ ವಿರೋಧಿಗಳು! ಇದೇ ಕೃಷಿ ಕಾನೂನನ್ನು ಈಗ ನಕಲಿ ರೈತ ದಂಗೆಯ ಮುಖ್ಯ ರೂವಾರಿಯಾಗಿರುವ, ಕೋಟಿಗಟ್ಟಲೆ ಆಸ್ತಿಯುಳ್ಳ ರೈತ ನಾಯಕ ರಾಕೇಶ್ ಟಿಕಾಯತ್ 2020ರ ಜೂನ್'ನಲ್ಲಿ ಹೊಗಳಿದ್ದ. ಈ ರೈತ ದಂಗೆಯಲ್ಲಿ ಮೋದಿ ವಿರೋಧಿಗಳು ಮಾತ್ರವಲ್ಲಾ ದೇಶ ವಿರೋಧಿಗಳೂ ಸೇರಿದ್ದಾರೆ. ಅಸಲಿಗೆ ಅವರಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಮಾವೋವಾದಿಗಳು ಇಲ್ಲಿ ರೈತರಾಗಿದ್ದಾರೆ. ತಾವಿಲ್ಲಿ ಯಾಕೆ ಸೇರಿದ್ದೇವೆಂದು ಅರಿವಿಲ್ಲದವರೂ ಇದ್ದಾರೆ. ಸರಕಾರ ಮಂಡಿಸಿದ ಕೃಷಿ ಕಾನೂನು ತಮಗೇ ಲಾಭಕರ ಎಂಬುದರ ಅರಿವೇ ಇಲ್ಲದ ಪಾಪದ ರೈತರೂ ಕೆಲವರಿದ್ದಾರೆ. ದಿನಕ್ಕಿಷ್ಟು ಹಣ, ಬಿಟ್ಟಿ ಊಟ ಸಿಗುತ್ತದೆಂದು ಬಂದು ಒಟ್ಟಾದವರೂ ಇದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳಲ್ಲಿ ಬಂದು ತಲವಾರ್ ಝಳಪಿಸಿದವರಿದ್ದಾರೆ. ಅಲ್ಲಿ ಖಲಿಸ್ಥಾನೀ ಪರ ಘೋಷಣೆಗಳೂ ಮೊಳಗಿವೆ. ನಕ್ಸಲರ ಬಿಡುಗಡೆಗೆ ಒತ್ತಾಯಿಸುವ ಫಲಕಗಳೂ ಕಾಣಿಸಿಕೊಂಡಿವೆ. ರಾಷ್ಟ್ರಧ್ವಜವನ್ನು ಅವಮಾನಿಸುವ, ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗಳೂ ಅಲ್ಲಿ ನಡೆದಿವೆ. ಇದರ ಜೊತೆಗೆ ದೆಹಲಿಯಲ್ಲಿ ಸುರಕ್ಷಾ ಪಡೆಗಳ ಉಪಯೋಗಕ್ಕಾಗಿ ನೀಡಲಾಗಿರುವ 576 ಬಸ್‌ಗಳನ್ನು ಹಿಂದಕ್ಕೆ ಪಡೆಯುವಂತೆ ಡೆಲ್ಲಿ ಸಾರಿಗೆ ಸಂಸ್ಥೆಗೆ ಅರವಿಂದ್ ಕೇಜ್ರಿವಾಲ್ ಫರ್ಮಾನು ಹೊರಡಿಸಿದ್ದರು. 


         ಜನವರಿ 26ರಂದು ನಕಲಿ ರೈತರ ದಂಗೆಯ ವೇಳೆ ಪೊಲೀಸರು ಗರಿಷ್ಠ ಸಂಯಮವನ್ನು ಪ್ರದರ್ಶಿಸಿದರು. ಒಂದು ವೇಳೆ ಕೇಂದ್ರ ಸರಕಾರ ದಂಗೆಕೋರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದರೆ ಅಂದು ಕೆಲವಾರು ಹೆಣ ಬೀಳುತ್ತಿತ್ತು. ಆಗ ಕಾಂಗ್ರೆಸ್ ಬೆಂಬಲಿತ ಮಾಧ್ಯಮಗಳು ಇದನ್ನೇ ತಿರುಚಿ, ಸರಕಾರದ ವಿರುದ್ಧ ಅಪಪ್ರಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಸಲು ತಯಾರಾಗಿದ್ದರು.  ಟ್ರಾಕ್ಟರನ್ನು ಸ್ವತಃ ತನ್ನ ಮೇಲೆ ಪಲ್ಟಿ ಹೊಡೆಸಿಕೊಂಡು ಸತ್ತವನನ್ನು ಪೊಲೀಸರ ಗುಂಡಿನೇಟಿಗೆ ಸತ್ತ ಎಂದು ರಾಜ್ದೀಪ್ ಸರ್ದೇಸಾಯಿ ಸುಳ್ಳು ಸುದ್ದಿ ಹಬ್ಬಿಸಲು ನೋಡಿದ್ದು ಇದರ ಭಾಗವೇ. ಆದರೆ ಇದರ ಹಿಂದಿನ ಷಡ್ಯಂತ್ರ ಅಷ್ಟೇ ಅಲ್ಲ ಎಂದು ತಿಳಿದದ್ದು ಅಮೆರಿಕನ್ ಗಾಯಕಿ ರಿಹಾನಾ "ದೆಹಲಿಯಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿರುವುದರಿಂದ ಆಂದೋಲನ ನಿರತ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ನಾವೇಕೆ ದನಿ ಎತ್ತುತ್ತಿಲ್ಲ?" ಎಂದು ರಾತ್ರಿ ಎಂಟುಗಂಟೆಗೆ ಟ್ವೀಟ್ ಮಾಡಿದಾಗ. ಹೆಚ್ಚೆಂದರೆ ಐವತ್ತು ಸಾವಿರದಷ್ಟು ರಿಟ್ವೀಟ್ ಆಗುತ್ತಿದ್ದುದು, ಅಂದು ಮಾತ್ರ ಆಕೆಯ ಟ್ವೀಟು ಅರ್ಧ ದಿನದೊಳಗೆ ಎರಡೂವರೆ ಲಕ್ಷ ರಿಟ್ವೀಟ್ ಆಯಿತು! ಜೊತೆಗೆ ಅದರ ಬೆನ್ನಿಗೆ ಬೆಳಿಗ್ಗೆ ನಾಲ್ಕೂವರೆ ಹೊತ್ತಿಗೆ “ಇಂಡಿಯಾ ಈಸ್ ಆಟ್ ವಾರ್ ವಿತ್ ಇಟ್‌ಸೆಲ್ಫ್ – ಆಂಡ್ ಈವನ್ ರಿಹಾನಾ ಈಸ್ ನೋಟೀಸಿಂಗ್” ಎಂಬ ಬರ್ಖಾ ದತ್ತಳ ಲೇಖನ “ವಾಷಿಂಗ್‌ಟನ್ ಪೋಸ್ಟ್” ಪತ್ರಿಕೆಯಲ್ಲಿ ಪ್ರಕಟವಾಯಿತು! ಈ ಷಡ್ಯಂತ್ರ ಪೂರ್ಣವಾಗಿ ಸಾರ್ವಜನಿಕರಿಗೆ ದರ್ಶನವಾದುದು ಶಾಲೆ ಬಿಟ್ಟು ನಕಲಿ ಪರಿಸರವಾದಿಗಳ ದಾಳಕ್ಕೆ ಸಿಲುಕಿರುವ ಸ್ವೀಡನ್‌ ಪೋರಿ ಗ್ರೆಟಾ ಥನ್‌ಬರ್ಗ್ ಟೂಲ್ ಕಿಟ್ ಕೊಂಡಿಯೊಂದನ್ನು ಟ್ವೀಟ್ ಮಾಡುವ ಮೂಲಕ. ಅಂದೊಮ್ಮೆ "ಹೌ ಡೇರ್ ಯು?" ಅಂತ ವಿಶ್ವ ನಾಯಕರಿಗೆ ಕೇಳಿ ತಥಾಕಥಿತ ಪರಿಸರವಾದಿಗಳ ಕಣ್ಮಣಿಯಾಗಿದ್ದ ಗ್ರೇಟಾಳಿಗೆ ಇಂದು ಅದೇ ನಕಲಿ ಪರಿಸರವಾದಿಗಳು ತಮ್ಮ ರಹಸ್ಯ ಬಯಲಾಗಿಸಿದ್ದಕ್ಕಾಗಿ "ಹೌ ಡೇರ್ ಯು?" ಅನ್ನುವ ಪರಿಸ್ಥಿತಿ ಬಂದೊದಗಿದೆ!


           ಈ ಟೂಲ್ ಕಿಟ್'ನಲ್ಲಿ ದಂಗೆಕೋರರು ನಡೆಸಿದ್ದ ಸಭೆಗಳು, ತೆಗೆದುಕೊಂಡಿದ್ದ ನಿರ್ಣಯಗಳು ಎಲ್ಲಾ ಇದ್ದವು. ಜನವರಿ 26ನ್ನು “ಗ್ಲೋಬಲ್ ಡೇ ಆಫ್ ಆಕ್ಷನ್” ಆಗಿಸಿ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಗೊಂದಲ ಹಾಗೂ ಅರಾಜಕತೆಯನ್ನು ಎಬ್ಬಿಸಬೇಕೆಂದೂ ನಿರ್ಣಯಿಸಲಾಗಿತ್ತು!  ಅದನ್ನು ಕಾರ್ಯಗತ ಮಾಡಲು ಸಲಹೆ, ಸೂಚನೆ, ಮಾರ್ಗದರ್ಶನ; ಅಗತ್ಯವಾದ ಸಿದ್ಧ ಟ್ವೀಟ್‌ಗಳು, ಹ್ಯಾಷ್‌ಟ್ಯಾಗ್‌ಗಳು ಎಲ್ಲವೂ ಅದರಲ್ಲಿದ್ದವು. ಗಲಭೆ ಆರಂಭವಾದಾಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೂಲಕ ಹಾಗೂ ಲೈವ್ ಆಗಿ ಎಲ್ಲೆಡೆ ಪ್ರಸಾರ ಮಾಡಬೇಕೆಂದೂ, ಅದಕ್ಕೆ ನೀಡಬೇಕಾದ ಶೀರ್ಷಿಕೆಗಳ ಬಗೆಗೆ ಸಲಹೆಗಳಿದ್ದವು.  ರಿಹಾನಾ ಮಾಡಿದ ಟ್ವೀಟ್‌, ಯಾವಾಗ, ಯಾವ ಬಗೆಯ ಟ್ವೀಟ್ ಮಾಡಬೇಕೆಂದೂ ಅದರಲ್ಲೇ ಇತ್ತು. ಹೀಗೆ ಪೂರ್ವ ನಿಗದಿತ ಸಮಯಕ್ಕೆ ಟ್ವೀಟ್ ಮಾಡಿದ ಕಾರಣಕ್ಕೆ ಆಕೆಗೆ ಎರಡೂವರೆ ಮಿಲಿಯನ್ ಡಾಲರ್‌ಗಳು ಸಂದಾಯವಾಗಿತ್ತು! ಪೋಸ್ಟ್‌ಗಳಲ್ಲಿ ಹಾಕಬೇಕಾದ ಫೋಟೋಗಳ ಮಾದರಿಗಳೂ ಇದ್ದವು! “ಮೋದಿ ರೈತರ ಹತ್ಯಾಕಾಂಡಕ್ಕೆ ಯೋಜಿಸಿದ್ದಾರೆ” ಎಂಬ ಹ್ಯಾಷ್‌ಟ್ಯಾಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿ ಜನರನ್ನು ಕೆರಳಿಸಿ ನಡೆಸಬೇಕಾದ ಚಕ್ಕಾ ಜಾಮ್ ದಂಗೆಯ ಮಾಹಿತಿ,  ಫೆಬ್ರವರಿ 12-23ರ ಅವಧಿಯಲ್ಲೂ ದಂಗೆ ಎಬ್ಬಿಸುವ ಯೋಜನೆಗಳು ಅದರಲ್ಲಿದ್ದವು. ಅಂಬಾನಿ, ಅದಾನಿಯಂತಹ ದೇಶದ ದೊಡ್ಡ ಕೈಗಾರಿಕೋದ್ಯಮಿಗಳ ವಿರುದ್ಧವೂ ಕಾರ್ಯಾಚರಣೆ ಆರಂಭಿಸಬೇಕೆಂಬ ಸೂಚನೆಗಳೂ ಅದರಲ್ಲಿದ್ದವು. ಜಿಯೋಗೆ ಸೇರಿದ 1300ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಹಾಳುಗೆಡವಿರುವುದರ ಹಿಂದಿನ ಕಾರಣ ಇದೇ. ವಿಶ್ವಸಂಸ್ಥೆ, ಅಮೆರಿಕಾ, ಬ್ರಿಟನ್, ಕೆನಡಾ ಮುಂತಾದೆಡೆ ಭಾರತದ ವಿರುದ್ದ ಅಭಿಪ್ರಾಯ ಮೂಡಿಸುವ ಯೋಜನೆಗಳೂ ಅದರಲ್ಲಿದ್ದವು.  ಸಿದ್ಧ ಟ್ವೀಟ್ ಹಾಗೂ ಹೇಳಿಕೆಗಳು ಇಂಗ್ಲಿಷ್ ಅಲ್ಲದೇ ಫ್ರೆಂಚ್ ಮತ್ತು ಪೋರ್ಚುಗೀಸ್‌ನಲ್ಲೂ ಇದ್ದವು! ಬ್ರಿಟಿಷ್ ಸಂಸತ್ ಸದಸ್ಯೆ ಕ್ಲಾಡಿಯಾ "ಭಾರತದ ರೈತರ ಸಮಸ್ಯೆಯ ಬಗ್ಗೆ ಬ್ರಿಟಿಷ್ ಸಂಸತ್‌ನಲ್ಲಿ ಚರ್ಚೆಯಾಗಬೇಕು" ಎಂದಿರುವುದು ಇದರ ಭಾಗವೇ. ಸರಕಾರದ ಜೊತೆ ಹನ್ನೆರಡು ಬಾರಿ ಮಾತುಕತೆ ನಡೆಸಿದ್ದರೂ ತಮ್ಮ ನಿಲುವುಗಳನ್ನು ಪದೇ ಪದೇ ಬದಲಾಯಿಸುತ್ತಿದ್ದ, ಸರ್ವೋಚ್ಛ ನ್ಯಾಯಾಲಯ ಸೃಷ್ಟಿಸಿದ ಸಮಿತಿಯನ್ನು ತಿರಸ್ಕರಿಸಿದ್ದ, ಕಾನೂನುಗಳ ಜಾರಿಯನ್ನು ಒಂದೂವರೆ ವರ್ಷಗಳವರೆಗೆ ಸರ್ಕಾರ ಸ್ಥಗಿತಗೊಳಿಸಿರುವುದನ್ನು ಕೂಡಾ ನಿರ್ಲಕ್ಷಿಸಿ ತಮ್ಮ ಪ್ರತಿಭಟನೆಯನ್ನು ಜಾರಿಯಲ್ಲಿಟ್ಟಿದ್ದ ಈ ನಕಲಿ ರೈತ ನಾಯಕರ ಉದ್ದೇಶ ದೇಶದ ಅನ್ನದಾತರ ಮೇಲಿನ ಕಾಳಜಿಯಲ್ಲ; ತಮ್ಮ "ಅನ್ನದಾತ"ರನ್ನು ಅಧಿಕಾರದಲ್ಲಿ ಕೂರಿಸುವ ಷಡ್ಯಂತ್ರ ಎನ್ನುವುದನ್ನು ಈ ಟೂಲ್ ಕಿಟ್ ಬಯಲು ಮಾಡಿತು.


          ತನ್ನವರಿಂದ ಸೂಚನೆ ಸಿಕ್ಕಿದ ಕೂಡಲೇ ಗ್ರೇಟಾ ಆ ಟೂಲ್ ಕಿಟ್ ಕೊಂಡಿಯಿದ್ದ ಟ್ವೀಟನ್ನೇನೋ ತೆಗೆದು ಹಾಕಿದಳು. ಆದರೆ ಆ ಲಿಂಕ್ ಬಳಸಿ ಟೂಲ್ ಕಿಟ್ ನೋಡಿದಾಗ ಹಲವು ರಹಸ್ಯಗಳು ಹೊರಬಂದವು. ಆಗ ಅಲ್ಲಿನ ಸಾಲುಗಳು ಮಾಯವಾಗಿ ಹೊಸ ಸಾಲುಗಳು ಮೂಡುತ್ತಿದ್ದವು. ಹಾಗೆ ಮಾಯವಾದ ಸಾಲುಗಳಲ್ಲಿ, “ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಜತೆ ಸಂಪರ್ಕದಲ್ಲಿರಿ” ಎಂದು ದಂಗೆಕೋರರಗಿಗೆ ನೀಡಿದ ಸೂಚನೆ ಕೂಡಾ ಒಂದಾಗಿತ್ತು! ಹಾಗೆ ಟೂಲ್‌ಕಿಟ್ ಅನ್ನು ಎಡಿಟ್ ಮಾಡುತ್ತಿದ್ದಾಕೆ ಆಮ್ ಆದ್ಮಿ ಪಕ್ಷದ, ಮುಂಬೈ ಉಚ್ಛ ನ್ಯಾಯಾಲಯದ ವಕೀಲೆ ನಿಕಿತಾ ಜೇಕಬ್. 137 ಜಿಬಿಯಷ್ಟು ಮಾಹಿತಿ ಆಕೆಯ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳಿಂದ ದೊರೆತಿದೆ. ಅವುಗಳಲ್ಲಿ ದಂಗೆಯ ಬಗ್ಗೆ ಮಾಹಿತಿ, ದಂಗೆ ಎಬ್ಬಿಸಿ ಹಬ್ಬಿಸಲು ಪ್ರೇರೇಪಿಸುವ ವಿಡಿಯೋಗಳೆಲ್ಲಾ ದೊರೆತಿವೆ. ಆಕೆ "ಸಿಖ್ ಫಾರ್ ಜಸ್ಟೀಸ್" ಎಂಬ ನಿಷೇಧಿತ ಉಗ್ರ ಸಂಘಟನೆಯ ಇಮೈಲ್'ಗಳನ್ನು ನಿರ್ವಹಿಸುತ್ತಿದ್ದಾಕೆ. ಮಿಯಾ ಕ್ಯಾಂಪಸೀನಾ, ಎಕ್ಸ್‌ಟಿಂಕ್ಷನ್ ರೆಬೆಲಿಯನ್, ಯುಗ್ಮಾ ನೆಟ್‌ವರ್ಕ್ ಮುಂತಾದ ಅಂತಾರಾಷ್ಟ್ರೀಯ ಎಡಪಂಥೀಯ ಉಗ್ರ ಸಂಘಟನೆಗಳೆಲ್ಲಾ ಈ ದಂಗೆಗೆ ಸಹಾಯ ಹಸ್ತ ನೀಡಿವೆ! ಎಕ್ಸ್‌ಟಿಂಕ್ಷನ್ ರೆಬೆಲಿಯನ್ ಎಂಬ ಉಗ್ರ ಸಂಘಟನೆಗೆ ಹಣ ಕೊಡುವುದು ಭಾರತದಿಂದ ನಿಷೇಧವಾಗಿರುವ ಗ್ರೀನ್ ಪೀಸ್ ಸಂಘಟನೆ. ದಂಗೆಯ ನೀಲನಕ್ಷೆಯನ್ನು ತಯಾರಿಸಿದ “ಆಸ್ಕ್ ಇಂಡಿಯಾ ವೈ.ಕಾಮ್” ಎಂಬ ವೆಬ್‌ಸೈಟಿನ ನಿರ್ಮಾತೃ ಖಲಿಸ್ತಾನಿ ಉಗ್ರ ಧಲಿವಾಲನಿಂದ ಸ್ಥಾಪಿಸಲ್ಪಟ್ಟ ಕೆನಡಾದ “ಪೊಯೆಟಿಕ್ ಜಸ್ಟಿಸ್ ಫೌಂಡೇಶನ್” ಎಂಬ ಉಗ್ರ ಸಂಘಟನೆ. ಟೂಲ್ ಕಿಟ್ ತಯಾರಿಸಿದ "21 ವರ್ಷದ ಹಸುಳೆ" ಎಂದು ಕಾಂಗ್ರೆಸ್ ಪಾಳಯ ಮುದ್ದು ಮಾಡುತ್ತಿರುವ ದಿಶಾಳನ್ನು ಈತನೊಂದಿಗೆ ಬೆಸೆದವಳು ವಕೀಲೆ ನಿಕಿತಾ ಜೇಕಬ್. ಟೂಲ್ ಕಿಟ್ ನಿರ್ಮಾತೃಗಳಲ್ಲಿ ಒಬ್ಬನಾದ ಶಂತನು ಮುಲೂಕ್ ದಂಗೆಯ ಸಮಯದಲ್ಲಿ ಗಾಜಿಪುರ್ - ಸಿಂಘು, ಟೀಕ್ರಿ ಬಾರ್ಡರ್‌ಗಳಲ್ಲಿದ್ದ!


          ಹೌದು ದೇಶ ವಿರೋಧೀ ಶಕ್ತಿಗಳೆಲ್ಲಾ ಒಟ್ಟು ಸೇರಿವೆ. ಖಲಿಸ್ಥಾನೀ, ಐಎಸ್ಐ ಏಜೆಂಟರುಗಳಿಂದ ಸಹಾಯಹಸ್ತವೂ ಅವುಗಳಿಗೆ ಸಿಕ್ಕಿವೆ. ಆದರೆ ಇದರ ಹಿಂದಿರುವ ಮುಖ್ಯ ಪಾತ್ರಧಾರಿಯೊಬ್ಬನ ಬಗ್ಗೆ ಜಗತ್ತು ಜಾಗೃತವಾಗಬೇಕು. ಆತ ಜಾರ್ಜ್ ಸೋರೋಸ್. ಆತ ಮೋದಿಯವರನ್ನು ಸರ್ವಾಧಿಕಾರಿ ಎನ್ನುತ್ತಾನೆ. ಯಾರೆಲ್ಲಾ ಕ್ರೈಸ್ತ ಮಿಷನರಿಗಳಿಗೆ, ದೇಶವಿರೋಧೀ ವಿಚಾರವಾದಿಗಳಿಗೆ ಸೊಪ್ಪು ಹಾಕುವುದಿಲ್ಲವೋ ಅವರೆಲ್ಲಾ ಆ ಮತಾಂಧನ ದೃಷ್ಟಿಯಲ್ಲಿ ಸರ್ವಾಧಿಕಾರಿಗಳು. ಈ ಎಲ್ಲಾ ಸರ್ವಾಧಿಕಾರಿಗಳ ವಿರುದ್ಧ ಹೋರಾಡಲು ಆತ ಬಿಲಿಯನ್ಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾನೆ. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ ಆತ ಹೂಡಿಕೆ ಮಾಡಿದ್ದಾನೆ. ಅಲ್ಲದೇ ಈ ದೇಶದ ವಿರುದ್ಧ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ, ಮೋದಿಯವರ ವಿರುದ್ಧ ಯಾವೆಲ್ಲಾ ಬರ್ಖಾ, ಸರ್ದೇಸಾಯಿಗಳು ಬರೆಯುತ್ತಿದ್ದಾರೋ, ಧ್ರುವ್ ರಾಥೀ ಮುಂತಾದ ದೇಶ ವಿರೋಧಿಗಳು ಯೂಟ್ಯೂಬ್'ನಂತಹಾ ಮಾಧ್ಯಮಗಳಲ್ಲಿ ವಿಡಿಯೋ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೋ ಅವರಿಗೆಲ್ಲಾ ಈ ಸೋರೋಸ್ ಬಿಸ್ಕೀಟ್ ಹಾಕುತ್ತಿದ್ದಾನೆ. ಈ ನಕಲಿ ರೈತರ ದಂಗೆಗೂ ಅವನಿಂದ ಪರೋಕ್ಷ ರೂಪದಲ್ಲಿ ಹಣ ಹರಿದಿದೆ. ವೀರ ಸಾವರ್ಕರರ ನಾಯಕತ್ವವನ್ನು ನಾವು ಬಳಸಿಕೊಳ್ಳಲಿಲ್ಲ, ನೇತಾಜಿ ಸುಭಾಷರನ್ನು ಉಳಿಸಿಕೊಳ್ಳಲಿಲ್ಲ; ಎಪ್ಪತ್ತು ವರ್ಷಗಳ ಬಳಿಕ ಸಿಕ್ಕಿದ ಅಪರೂಪದ ಹಿಂದೂ ನಾಯಕ ನರೇಂದ್ರ ಮೋದಿಯನ್ನಾದರೂ ಉಳಿಸಿಕೊಳ್ಳೋಣ. ಸೋರೋಸ್ನ ಎಂಜಲಿಗೆ ನಾಲಗೆಯೊಡ್ಡುವ ದೇಶ ವಿರೋಧೀ ಶಕ್ತಿಗಳ ಅಪಪ್ರಚಾರವನ್ನು ನಂಬದೆ ಮೋದಿಯವರ ಜೊತೆ ನಿಂತು ರಾಷ್ಟ್ರಧರ್ಮವನ್ನು ಪಾಲಿಸೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ