ಪುಟಗಳು

ಭಾನುವಾರ, ಜನವರಿ 15, 2023

ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ

ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ 


         ಆಗಷ್ಟೇ ನಾನು ಪ್ರೌಢಶಾಲೆಯಿಂದ ಹೊರಬಂದಿದ್ದೆ. ಪರೀಕ್ಷೆಗಳೂ ಮುಗಿದಿದ್ದವು. ರೈಲ್ವೇ ಪ್ಯಾಕೇಜ್ ಟಿಕೇಟಿನಲ್ಲಿ ದಕ್ಷಿಣ ಭಾರತವನ್ನು ಸುತ್ತುತ್ತಿದ್ದೆ. ಒಂದು ದಿನ ರೈಲು ಹಳ್ಳಿಯೊಂದರ ಹತ್ತಿರ ಇನ್ನೇನು ನಿಲ್ಲುತ್ತದೆ ಎನ್ನುವ ವೇಗದಲ್ಲಿ ಚಲಿಸುತ್ತಿದ್ದಾಗ ನಾನಿದ್ದ ಬೋಗಿಯ ಹೆಚ್ಚಿನ ಜನರು ಅತೀವ ಭಕ್ತಿ ಭಾವಗಳಿಂದ ರೈಲಿನ ಕಿಟಕಿಯ ಹೊರಗೆ ಮುಖ ಮಾಡಿ ತಲೆಬಾಗಿ ನಮಸ್ಕರಿಸತೊಡಗಿದರು. ಅಲ್ಲೊಂದು ಭವ್ಯವಾದ ಆಲಯವಿತ್ತು. ಜನರ ನಡುವಿನ ಸಂಭಾಷಣೆಯಿಂದ ಅದು ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಾಲಯವೆಂದು ತಿಳಿಯಿತು. 

         ಅಲ್ಲಿಂದ ಮುಂದೆ ನನ್ನ ಸಹಪ್ರಯಾಣಿಕರ ಮಾತು ರಮಣ ಮಹರ್ಷಿಗಳತ್ತ ತಿರುಗಿತು. "ಮಹರ್ಷಿ" ಎನ್ನುವ ಪದ ನನ್ನ ಮನಸ್ಸನ್ನು ಹಿಡಿದಿಟ್ಟು ಪ್ರಾಚೀನ ಕಾಲದಲ್ಲಿ ಅರಣ್ಯವಾಸಿಗಳಾಗಿ ತಪೋನಿರತರಾಗಿ ಅನೇಕ ಅಲೌಕಿಕ ಸಾಧನೆಗೈದ ದೈವೀಸ್ವರೂಪೀ ಋಷಿ ಮುನಿಗಳನ್ನು ನೆನಪಿಸಿತು. ಅಲ್ಲದೇ ಮನಸ್ಸಿನ ಆ ಚಿಂತನಾ ಲಹರಿಯು ಆ ಸಮಯದಲ್ಲಿ ನಾಸ್ತಿಕನಾಗಿದ್ದರೂ ನನ್ನನ್ನು ಮಹರ್ಷಿಗಳ ಆಶ್ರಮದತ್ತ ಎಳೆದೊಯ್ಯಿತು. 
    
         ಆಶ್ರಮ ತಲುಪಿದಾಗ ಮಹರ್ಷಿಗಳು ಚಾವಡಿಯಲ್ಲಿರುವರೆಂದೂ ಯಾರು ಬೇಕಾದರೂ ಅವರನ್ನು ಭೇಟಿಯಾಗಲು ಮುಕ್ತರು ಎನ್ನುವ ಮಾಹಿತಿ ಸಿಕ್ಕಿತು. ನಾನು ಒಳಹೊಕ್ಕುತ್ತಿದ್ದಂತೆ ಕಂಡಿದ್ದು ಸೊಂಟಕ್ಕೊಂದು ವಸ್ತ್ರ ಸುತ್ತಿಕೊಂಡು ದಿಂಬಿಗೆ ಒರಗಿ ಕೂತಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು. ನಾನು ಅಲ್ಲೇ ಮಂಚದ ಕೆಳಗೆ ಅವರ ಸನಿಹಕ್ಕೆ ಕೂತೆ. ಮಹರ್ಷಿಗಳು ತಕ್ಷಣ ಕಣ್ಣು ತೆರೆದು ನನ್ನ ಕಣ್ಣುಗಳನ್ನು ನೇರವಾಗಿ ದಿಟ್ಟಿಸಿದರು. ನಾನು ಅವರ ಕಣ್ಣುಗಳನ್ನು ದಿಟ್ಟಿಸಿದೆ. ಮಹರ್ಷಿಗಳು ಆ ಕ್ಷಣದಲ್ಲಿ ನನ್ನ "ಒಳಗಿನ" ಎಲ್ಲವನ್ನೂ :- ನನ್ನ ಗಾಢವಿಲ್ಲದ ಚಿಂತನೆಗಳು, ಗೊಂದಲಗಳು, ಅಪನಂಬಿಕೆಗಳು, ಅಪೂರ್ಣತೆ ಹಾಗೂ ಭಯ ಎಲ್ಲವನ್ನೂ ಬಗೆದು ನೋಡಿದರೆಂಬ ಭಾವನೆ ನನಗುಂಟಾಯಿತು. ಆ ಕ್ಷಣದಲ್ಲಿ ನನಗೆ ಏನಾಯಿತು ಎನ್ನುವುದನ್ನು ವರ್ಣಿಸಲು ನಾನು ಅಸಮರ್ಥ. ನಾನು ತೆರೆದಿಟ್ಟಂತೆ, ಪವಿತ್ರಗೊಂಡಂತೆ, ಸ್ವಸ್ಥನಾದಂತೆ, ಖಾಲಿಯಾದಂತೆ ನನಗನಿಸಿತು. ಸುಂಟರಗಾಳಿಯಂತಹಾ ಸಂದೇಹಗಳು, ನನ್ನ ನಾಸ್ತಿಕತೆ ಕರಗಿ ಹೋದಂತೆ, ನನ್ನ ಸಂದೇಹವಾದವು ಪ್ರಶ್ನೆಗಳು, ಅಚ್ಚರಿ ಹಾಗೂ ಹುಡುಕಾಟದ ಪ್ರವಾಹವಾಗಿ ಬದಲಾಯಿತು. ನನ್ನದೇ ಕಾರಣಗಳು ನನಗೆ ಧೈರ್ಯವನ್ನು ಕೊಟ್ಟವು ಹಾಗೂ ನಾನು ನನಗೇ ಹೇಳಿಕೊಂಡೆ - "ಇವೆಲ್ಲವೂ ಆಕರ್ಷಣೆ ಹಾಗೂ ನನ್ನದೇ ಮೂರ್ಖತನ". ಹೀಗೆ ಹೇಳುತ್ತಾ ನಾನು ಅಲ್ಲಿಂದ ಎದ್ದು ಹೊರಟೆ. 

         ಆದರೆ ಹೀಗೆ ಮಹರ್ಷಿಗಳಿದ್ದ ಚಾವಡಿಯಿಂದ ಎದ್ದು ಹೋದ ಹುಡುಗ ಹತ್ತು ನಿಮಿಷದ ಹಿಂದೆ ಚಾವಡಿಗೆ ಪ್ರವೇಶವಾಗುವ ತನಕ ಇದ್ದ ಹುಡುಗಂತಿರಲಿಲ್ಲ. ನನ್ನ ಕಾಲೇಜು ದಿನಗಳ ಬಳಿಕ, ನನ್ನ ರಾಜಕಾರಣದ ಕೆಲಸಗಳ ಬಳಿಕ ಹಾಗೂ ಉತ್ತರಕಾಶಿಯಲ್ಲಿ ನನ್ನ ಗುರುಗಳ ಪಾದದಡಿಯಲ್ಲಿ ತಪೋವನದಲ್ಲಿ ಹಲವು ವರ್ಷಗಳು ಕಳೆದ ಬಳಿಕ ನನಗೆ ಅರಿವಾದದ್ದೇನೆಂದರೆ ಗಂಗೆಯ ತಟದಲ್ಲಿ ನಾನು ಗಳಿಸಿದ್ದು ಹಲವು ವರ್ಷಗಳ ಹಿಂದೆ ನನಗೆ ಆ ಬಿರುಬೇಸಗೆಯ ದಿನದಂದು ತಿರುವಣ್ಣಾಮಲೈಯ ಆ ಮುನಿಪೋತ್ತಮ ಕರುಣಿಸಿದ್ದೇ ಆಗಿತ್ತು ಎಂಬುದು. ಶ್ರೀರಮಣರು ತರ್ಕದ ವಿಚಾರವಲ್ಲ; ಅವರೊಂದು ಅನುಭವ; ಅವರೊಂದು ಮೇರು ಪ್ರಜ್ಞೆ. ಅವರು ಆತ್ಯಂತಿಕ ಸತ್ಯ ಮತ್ತು ಜಗತ್ತಿನ ಎಲ್ಲಾ ಆಧ್ಯಾತ್ಮಿಕ ಗ್ರಂಥಗಳ ಸಾರ. ಭವಬಂಧನವನ್ನು ಪರಿಪೂರ್ಣವಾಗಿ ಕಳಕೊಂಡ ಓರ್ವ ಗುರು ಹೇಗಿರುತ್ತಾನೆ ಎಂಬುದರ ಪ್ರತ್ಯಕ್ಷ ದ್ಯೋತಕ ಅವರು. ಬಂಧನಗಳನ್ನು ಕಳೆದುಕೊಂಡ ಸ್ಥಿತಿಯಲ್ಲೂ ಅವರು ಜೀವಿಸಿದ್ದು ಅನಂತದ ಸೌಂದರ್ಯ ಮತ್ತು ಪಾವಿತ್ರ್ಯತೆಯಂತೆ. - ಇದು ಚಿನ್ಮಯ ಮಿಷನ್ನಿನ ಅಧ್ವರ್ಯು ಸ್ವಾಮಿ ಚಿನ್ಮಯಾನಂದರು ವರ್ಣಿಸಿದ ಅವರ ಅನುಭವ. 

         ಈ ಅನುಭವ ಇಂದು ನಿನ್ನೆಯದಲ್ಲ; ಚಿನ್ಮಯಾನಂದರದ್ದು ಮಾತ್ರವಲ್ಲ. ಸನಕ ಸನಂದಾದಿಗಳು ದಕ್ಷಿಣಾಮೂರ್ತಿಯ ಪದಕಮಲದಡಿಯಲ್ಲಿ ಪಡೆದುದು ಇದೇ ಅನುಭವ. ಯುಗಯುಗಗಳ ಬ್ರಹ್ಮರ್ಷಿಗಳ ಸಾನಿಧ್ಯದಲ್ಲಿ ಭಕ್ತರು ಪಡೆದದ್ದೂ ಇದೇ ಅನುಭವ. ಜಗದ್ಗುರು ಆದಿಶಂಕರಾಚಾರ್ಯರು ಅಖಂಡ ಭಾರತಕ್ಕೆ ಕೊಟ್ಟುದುದು ಇದೇ ಅನುಭವ. ಸ್ವಾಮಿ ಅಣ್ಣಪ್ಪಯ್ಯರು, ಶ್ರೀ ಸದಾಶಿವ ಬ್ರಹ್ಮೇಂದ್ರರು, ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು, ಶ್ರೀಧರ ಸ್ವಾಮಿಗಳಾದಿಯಾಗಿ ಎಲ್ಲಾ ಅವಧೂತರು ಪಾಮರರಿಗೆ ಕರುಣಿಸಿದ್ದು ಇದೇ ಅನುಭವ. ಮತ್ತದು ಇಂದಿಗೂ ಪ್ರವಹಿಸುತ್ತಿರುವುದು. ಮತ್ತು ಈ ಅನುಭವವನ್ನು ಪಡೆದುಕೊಳ್ಳಲು ಇರುವ ಸರಿಯಾದ ಮಾರ್ಗವೇ ಸನಾತನ ಧರ್ಮದ ಪಾಲನೆ. ಹಾಗೂ ಅಂತಹಾ ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ. ಹಾಗೆ ಅನುಸರಿಸುವ ಕಾರಣಕ್ಕೇ ಇಲ್ಲಿ ವೇದಗಳೆಂಬ ಅತ್ಯುನ್ನತ ಸಾಹಿತ್ಯ ಸ್ಫುರಿಸಿತು. ಉಪನಿಷತ್ತುಗಳ ಧಾರೆಗಳು ಧುಮ್ಮಿಕ್ಕಿದವು. 

         ಇವತ್ತು ಹಿಂದೂ ಶಬ್ಧ ಹಿಂದೆ ಇರಲಿಲ್ಲ; ಪರ್ಷಿಯನ್ನರ ಕೊಡುಗೆ; ಅರಬ್ಬರ ಕೊಡುಗೆ; ಅವಾಚ್ಯ ಶಬ್ಧ ಎಂದೆಲ್ಲಾ ಊಳಿಡುವವರು ಇದನ್ನು ಗಮನಿಸಬೇಕು. ಬರಿಯ ಶಬ್ಧಾರ್ಥಗಳು, ಶಬ್ಧೋತ್ಪತ್ತಿಗಳು ಯಾವುದೇ ಜನಾಂಗವನ್ನು ವರ್ಣಿಸಲಾರವು. ಜನಾಂಗವೊಂದನ್ನು ವರ್ಣಿಸುವುದು ಅದು ಪಾಲಿಸುವ ಧರ್ಮವನ್ನು ಆಧರಿಸಿ. ಇಲ್ಲಿ ಧರ್ಮವೆಂದರೆ ಮತವಲ್ಲ.
 
ಹಿಂಕೃಣ್ವತೀ ವಸುಪತ್ನೀ ವಸೂನಾಂ ವತ್ಸಮಿಚ್ಛಂತೀ ಮನಸಾಭ್ಯಾಗಾತ್ | 
 ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ ಸಾ ವರ್ಧತಾಂ ಮಹತೇ ಸೌಭಗಾಯ || 
ಋಗ್ವೇದ ೧-೧೬೪-೨೭ || 

 ಈ ಮಂತ್ರದ ಸಾರಾಂಶ ರೂಪೀ ಸೂತ್ರವೇ ಆದ್ಯಕ್ಷರ ಸಂಯೋಗದಿಂದ ಉಂಟಾಗುವ “ಹಿಂದು” ಎಂಬ ಶಬ್ದ. ಮೂಲ ಪ್ರಕೃತಿಯನ್ನು ಆಧರಿಸಿದ, ಆದರಿಸಿದ ಜೀವನಕ್ರಮವನ್ನು ಅಳವಡಿಸಿಕೊಂಡು, ಉತ್ತಮ ವಿಚಾರಧಾರೆಯೊಂದಿಗೆ ನಿತ್ಯ ನಿರಂತರ ವರ್ಧಿಸುತ್ತಾ ಮಾತೄ ಸ್ವರೂಪವೆಲ್ಲವನ್ನೂ ಗೌರವಿಸುತ್ತಾ ವೇದ ಹೇಳಿದ ಅನಂತತೆಯೆಡೆಗೆ ಸಾಗುವವನೇ ಹಿಂದೂ. ಬಳಿಕ ಹಿಂದೂ ಪದಕ್ಕೆ ಪುರಾಣಗಳು ವ್ಯಕ್ತಿಗಳು ಆಧ್ಯಾತ್ಮಿಕವಾಗಿ, ಭೌಗೋಳಿಕವಾಗಿ, ಕಾಲದ ದೃಷ್ಟಿಯಿಂದ, ಜನಾಂಗದ ಉಳಿವಿನ ದೃಷ್ಟಿಯಿಂದ ತಮ್ಮದೇ ವ್ಯಾಖ್ಯೆಯನ್ನು ನೀಡುತ್ತಾ ಬಂದರು. ದಾಶರಾಜ್ಞ ಯುದ್ಧದ ಬಳಿಕ ಇಲ್ಲಿಂದ ವಲಸೆ ಹೋದವರ ಬಾಯಲ್ಲಿ ಸಿಂಧೂ ಎಂಬುದು ಅಪಭ್ರಂಶವಾಗಿ ಹಿಂದೂ ಆಯಿತು. ಸಪ್ತಸಿಂಧುವೆನಿಸಿದ ಈ ರಾಷ್ಟ್ರ ಜರತೂಷ್ಟ್ರರ ಪವಿತ್ರಗ್ರಂಥ ಜೆಂದ್ ಅವೆಸ್ಥಾದಲ್ಲಿ ಹಪ್ತಹಿಂದೂ ಆಯಿತು. ಮತ್ತದೇ ಸಾರ್ವತ್ರಿಕವಾಯಿತು. ಆ ರೀತಿಯಲ್ಲೂ ಮೂಲ ಹೆಸರೇ ಉಳಿಯಿತು. ಪರ್ಷಿಯನ್ನರು, ಗ್ರೀಕರು, ಅರ್ಮೇನಿಯರ ಗ್ರಂಥಗಳಲ್ಲಿ ಹಿಂದೂ ಪದ ಕಾಣಸಿಗುತ್ತದೆ. 

     ಹಿಮಾಲಯ ಸಮಾರಭ್ಯಂ ಯಾವದಿಂದು ಸರೋವರಂ 
ತಮ್ ದೇವನಿರ್ಮಿತಂ ದೇಶಂ ಹಿಂದೂಸ್ಥಾನಂ ಪ್ರಚಕ್ಷತೇ|| 

 ಹಿಮಾಲಯದಿಂದ ಆರಂಭಿಸಿ ಸಾಗರದವರೆಗೆ ವಿಶಾಲವಾಗಿ ಹರಡಿಕೊಂಡಿರುವ ಭೂಭಾಗವನ್ನೇ ಹಿಂದೂಸ್ಥಾನವೆಂತಲೂ, ಇಲ್ಲಿರುವ ಜನರೇ ಹಿಂದೂಗಳೆಂತಲೂ ನಾವು ಪುರಾಣ ಕಾಲದಲ್ಲಿ ಒಪ್ಪಿಕೊಂಡಿದ್ದೆವು. ಅಷ್ಟೇ ಅಲ್ಲ, ಹಿಂದೂ ಪದಕ್ಕೆ ಲಕ್ಷಣವನ್ನು ವಿವರಿಸುತ್ತಾ, 
ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮ ದೃಢಾಶ್ರಯಃ 
ಗೋಭಕ್ತಃ ಭಾರತ ಗುರುಃ ಹಿಂದುಃ ಹಿಂಸ ನ ದೂಷಕಃ|| 
ಎಂದು ಹೇಳಲಾಗಿದೆ. ಓಂಕಾರವನ್ನು ಮೂಲಮಂತ್ರವೆಂದು ಭಾವಿಸುವವನೂ, ಪುನರ್ಜನ್ಮವನ್ನು ದೃಢವಾಗಿ ನಂಬುವವನೂ, ಭಾರತವನ್ನು ಗುರುವೆಂದು ಒಪ್ಪಿಕೊಂಡವನೂ, ಗೋಭಕ್ತನೂ ಆದ ಅಹಿಂಸಾ ನಿಷ್ಠನೇ ಹಿಂದೂ ಎಂದಿದೆ. ಮೇರುತಂತ್ರವು, 
ಹೀನಂ ಚ ದೂಷಯಂತ್ಯೇವ ಹಿಂದುರಿತ್ಯುಚ್ಚತೇ 
- ದುಷ್ಟರನ್ನು ಶಿಕ್ಷಿಸುವವ ಹಿಂದೂ ಎಂದಿದೆ. ಇದೆಲ್ಲವನ್ನು ಗಮನಿಸಿ‌ಯೇ ವೀರ ಸಾವರ್ಕರ್ 
ಆಸಿಂಧು ಸಿಂಧು ಪರ್ಯಂತಾ ಯಸ್ಯ ಭಾರತ ಭೂಮಿಕಾ 
ಪಿತೃಭೂಃ ಪುಣ್ಯಭೂಶ್ಚೈವ ಸವೈ ಹಿಂದೂರಿತಿ ಸ್ಮೃತಃ|| 
- ಭಾರತವನ್ನು ತನ್ನ ಪಿತೃಭೂಮಿಯೆಂದು ಪುಣ್ಯಭೂಮಿಯೆಂದು ಭಾವಿಸುವ ಸಿಂಧೂವಿನಿಂದ ರತ್ನಾಕರದವರೆಗೆ ಹರಡಿರುವಾತನೇ ಹಿಂದೂ ಎಂಬ ವ್ಯಾಖ್ಯೆ ನೀಡಿದರು.

ಅರವಿಂದ ಅರಳಿದಾಗ ಕಂಡ ಭಾರತದ ಮರುಹುಟ್ಟು

ಅರವಿಂದ ಅರಳಿದಾಗ ಕಂಡ ಭಾರತದ ಮರುಹುಟ್ಟು


    "ರಾಷ್ಟ್ರವೆಂದರೆ ಭೂಮಿಯ ತುಣುಕಲ್ಲ; ಭಾಷಾಲಂಕಾರವಲ್ಲ; ಮನಸ್ಸಿನ ಕಲ್ಪನೆಯೂ ಅಲ್ಲ. ಅದೊಂದು ಪ್ರಬಲ ಶಕ್ತಿ. ಅದು ಕೋಟ್ಯಾಂತರ ದೇವತೆಗಳು ಒಂದು ಶಕ್ತಿ ಸಮೂಹವಾಗಿ ಏಕತ್ರವಾಗಿ ಭವಾನಿಯು ಎದ್ದು ಬಂದಂತೆ! ತಾಯಿ ಭಾರತಿಯು ಇಲ್ಲಿನ ಕೋಟ್ಯಾಂತರ ಜನಶಕ್ತಿಯ ಜೀವಂತ ಐಕ್ಯ ಸ್ವರೂಪಿಣಿ. ಆದರೆ ಆಕೆ ತನ್ನ ಮಕ್ಕಳ ತಮಸ್ಸು, ಜಡತೆಯ ವರ್ತುಲದಲ್ಲಿ ಬಂಧಿತಳಾಗಿ ನಿಷ್ಕ್ರಿಯಳಾಗಿದ್ದಾಳೆ. ಇದರರ್ಥ ಭಾರತ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ದುರ್ಬಲವಾಗಿದೆಯೆಂದಲ್ಲ. ಸ್ವ ಇಚ್ಛೆಯಿಂದ ಅಳಿವನ್ನು ಒಪ್ಪಿಕೊಳ್ಳದೆ ಯಾವುದೇ ವ್ಯಕ್ತಿ ಅಥವಾ ರಾಷ್ಟ್ರ ನಾಶವಾಗದು. ನಮ್ಮದು ಯುಗಯುಗಾಂತರಗಳ ನಾಡು. ತಾಯಿ ಭಾರತಿ ಜಗತ್ತಿಗೆ ಕೊಡಬೇಕಾದುದು ಇನ್ನೂ ಇದೆ. ಆಕೆಯಿನ್ನೂ ತನ್ನ ಅಂತಿಮ ಸೃಜನಾತ್ಮಕ ಮಂತ್ರವನ್ನು ಜಗತ್ತಿಗೆ ಕೊಡಬೇಕಷ್ಟೆ. ನಾವು ಈಗ ಜಾಗೃತಗೊಳಿಸಬೇಕಾದುದು ಆಂಗ್ಲೀಕರಣಕ್ಕೊಳಗಾದ ಪಶ್ಚಿಮದ ಯಶಸ್ಸು-ವೈಫಲ್ಯಗಳನ್ನು ಪುನರಾವರ್ತಿಸುವ ದೌರ್ಭಾಗ್ಯಕ್ಕೆ ಗುರಿಯಾದ ಪಶ್ಚಿಮದ ವಿಧೇಯ ಅನುಯಾಯಿಗಳನ್ನಲ್ಲ. ಬದಲಾಗಿ ತನ್ನ ಆತ್ಮವನ್ನು ಪುನಃ ಪಡೆಯಲು ಉದ್ಯುಕ್ತವಾಗಿ ಬ್ರಾಹ್ಮ-ಕ್ಷಾತ್ರಗಳ ಪರಮೋಚ್ಛತೆಯೆಡೆಗೆ ಸಾಗುತ್ತಾ ತನ್ನ ಧರ್ಮದ ಸಂಪೂರ್ಣ ಅರ್ಥ ಹಾಗೂ ಅದರ ವಿಸ್ತೃತ ರೂಪದ ಶೋಧಕ್ಕಾಗಿ ಸನ್ನದ್ಧವಾಗಿರುವ ಅವಿಸ್ಮರಣೀಯ ಶಕ್ತಿಯನ್ನು!" ಕೃಷ್ಣನ ಜೀವನ ದೃಷ್ಠಿ ಮರುಕಳಿಸಿತೇ? ಚಾಣಕ್ಯನ ಕಾರ್ಯತಂತ್ರ ಗೋಚರಿಸಿತೇ? 

    ಸ್ವಾತಂತ್ರ್ಯ ಹೋರಾಟವೆನ್ನುವುದು ಮುಸ್ಲಿಮರ ಓಲೈಕೆಯ - ಸ್ವಾರ್ಥದ ರಾಜಕಾರಣವಾಗಿ, ಕಮ್ಯೂನಿಷ್ಟ್ ಗೊಂದಲಗಳ ಆಡುಂಬೋಲವಾಗಿ ಬದಲಾಗುತ್ತಿದ್ದಾಗ ಅದಕ್ಕೆ ಪ್ರಾಚೀನ ಭಾರತದ ಪರಂಪರೆಯ-ಸಂಸ್ಕೃತಿಯ ಸ್ಪರ್ಷ ಕೊಟ್ಟು ಕ್ರಾಂತಿಕಾರಿಗಳ ಗುರುವಾಗಿ, ಭವಾನಿ ಮಂದಿರದ ಅಧ್ವರ್ಯುವಾಗಿ ತಕ್ಷಣದ ರಾಜಕೀಯ ಸ್ವಾತಂತ್ರ್ಯಕ್ಕಿಂತ ಪ್ರಾಚೀನ ಭಾರತಕ್ಕೆ ಭವ್ಯತೆಯನ್ನು ಒದಗಿಸಿಕೊಟ್ಟ ಆಧ್ಯಾತ್ಮ ದೀವಿಗೆಯನ್ನು ನಂದಾದೀಪವನ್ನಾಗಿರಿಸುವುದೇ ಭಾರತದ ಮರುಹುಟ್ಟಿಗೆ ಬೇಕಾದ ನಿಜವಾದ ಬೀಜರೂಪವೆಂದು ಗುರುತಿಸಿ ಆ ನಿಟ್ಟಿನಲ್ಲಿ ಸಾಗಿ ಮಹರ್ಷಿಯೆಂದೆನಿಸಿಕೊಂಡ, ಗುರುದೇವ ರವೀಂದ್ರರಿಂದ "ಭಾರತೀಯ ಚೇತನದ ಮುಕ್ತ, ಮೂರ್ತಿಮಂತ ವಾಣಿ" ಎಂದು ಗೌರವಿಸಲ್ಪಟ್ಟ ಅರವಿಂದರಿಗೆ ಕೃಷ್ಣ-ಚಾಣಕ್ಯರು ಸ್ಪೂರ್ತಿಯಾಗಿದ್ದಲ್ಲಿ ಆಶ್ಚರ್ಯವೇನಿದೆ?

     ಅರವಿಂದರು ಭಾರತಕ್ಕೆ ಮರುಹುಟ್ಟು ಇದೆ ಎಂದು ಖಡಾಖಂಡಿತವಾಗಿ ಪ್ರತಿಪಾದಿಸಿದವರು. ಅದರ ಸೂಚನೆಯೇನೋ ಅನ್ನುವಂತೆ ಭಾರತಕ್ಕೆ ಸ್ವಾತಂತ್ರ್ಯವೂ ಅರವಿಂದರ ಜನ್ಮದಿನದಂದೇ ದೊರಕಿತು. ಆಂಗ್ಲ ಕಾಲಗಣನೆ ವೈಜ್ಞಾನಿಕವಲ್ಲ ಎನ್ನುವುದು ನಿಜವಾಗಿದ್ದರೂ ಅರವಿಂದರ ಹೆಸರು, ವಿಚಾರಗಳು ಇದರೊಂದಿಗೆ ತಳುಕು ಹಾಕಿರುವುದು ಕಾಕತಾಳೀಯವಾಗಿರಲಿಕ್ಕಿಲ್ಲ. ದೇಶದ ಜನತೆಗೆ ಈಗ ಅರವಿಂದರು ನೆನಪಾಗದಿದ್ದರೂ ಕಾಲ ಅವರನ್ನು ಸರಿಯಾದ ಸಮಯಕ್ಕೆ ನೆನಪಿಸಬಹುದು. ಅವರು ಜನಿಸಿ ಇಂದಿಗೆ ನೂರೈವತ್ತು ವರ್ಷಗಳಾದವು. 1872ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ಅರವಿಂದರು ಬಾಲ್ಯಕಳೆದದ್ದು ಈಗ ಬಾಂಗ್ಲಾದಲ್ಲಿರುವ ರಂಗಪುರದಲ್ಲಿ. ಐದನೇ ವರ್ಷದಲ್ಲಿ ಅವರನ್ನು ಕಾನ್ವೆಂಟಿಗೆ ಸೇರಿಸಿದ ಹೆತ್ತವರು ಎಂಟನೆಯ ವಯಸ್ಸಿಗೆ ತಮ್ಮೊಂದಿಗೆ ಇಂಗ್ಲೆಂಡಿಗೆ ಕರೆದೊಯ್ದರು. ಇಪ್ಪತ್ತನೇ ವರ್ಷದಲ್ಲೇ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರವಿಂದರು ಮರು ವರ್ಷವೇ ಭಾರತಕ್ಕೆ ಮರಳಿದರು. ಅದೇ ಸಮಯಕ್ಕೆ ಇಂದುಪ್ರಕಾಶ ಎನ್ನುವ ಮರಾಠಿ-ಇಂಗ್ಲೀಷ್ ಪತ್ರಿಕೆಗೆ "ನ್ಯೂ ಲ್ಯಾಂಪ್ಸ್ ಫಾರ್ ದಿ ಓಲ್ಡ್" ಎನ್ನುವ ಹೆಸರಲ್ಲಿ ಸರಣಿ ಲೇಖನಗಳನ್ನು ಬರೆದರು. ಆಂಗ್ಲ ಸರಕಾರದ ಮುಂದೆ ಭಿಕ್ಷೆ ಬೇಡುತ್ತಿದ್ದ ಕಾಂಗ್ರೆಸ್ಸಿನ ನೀತಿಯನ್ನು ತೀಕ್ಷ್ಣವಾಗಿ ಟೀಕಿಸಿದ್ದ ಈ ಲೇಖನಸರಣಿ ಸಂಪಾದಕರ ಮೇಲೆ ಬಂದ ಧಮಕಿಯಿಂದ ನಿಂತು ಹೋಯಿತು. 

     ತಮ್ಮ ಸೋದರ ಬಾರೀಂದ್ರ ಹಾಗೂ ಜತೀಂದ್ರರ ಸಹಾಯದಿಂದ ಕ್ರಾಂತಿಸಂಘಟನೆಗಳನ್ನು ಸಂಪರ್ಕಿಸಿ ಅವುಗಳ ಕಾರ್ಯವನ್ನು ಸಂಯೋಜಿಸಲು ಪ್ರಯತ್ನಿಸಿದರು ಅರವಿಂದರು. ಅದಕ್ಕಾಗಿ ಚಿತ್ತರಂಜನ್ ದಾಸ್, ಮಿತ್ರ, ಸೋದರಿ ನಿವೇದಿತಾ ಹಾಗೂ ಸುರೇಂದ್ರರೊಡಗೂಡಿ ರಹಸ್ಯ ಪರಿಷತ್ತನ್ನೂ ಸ್ಥಾಪಿಸಿದರು. ದೇಶವನ್ನು ಕ್ರಾಂತಿ ಹೋರಾಟಕ್ಕೆ ಸಜ್ಜುಗೊಳಿಸಲು ಭವಾನಿಮಂದಿರ ಎಂಬ ಕರಪತ್ರವನ್ನೂ ಹಂಚಿ ಅದರ ಸಿದ್ಧತೆಗೂ ತೊಡಗಿದರು. ಲಾಲ್, ಬಾಲ್, ಪಾಲ್ ರೊಡನೆ ಸೇರಿ ಸ್ವಾತಂತ್ರ್ಯ ಹೋರಾಟದ ಅಧ್ವರ್ಯುವಾದರು. ಅವರ ಸಂಪಾದಕತ್ವದಲ್ಲಿ "ವಂದೇಮಾತರಂ"ನ ಪ್ರಚಾರ-ಪ್ರಸಾರ-ಪ್ರಭಾವಗಳಿಂದ, ಬಂಗಾಳದ ರಾಷ್ಟ್ರೀಯ ವಿದ್ಯಾಲಯವನ್ನು ಸಹಯೋಗಿ ಸುಭೋದ್ ಮಲ್ಲಿಕನ ಸಹಾಯದಿಂದ ಸ್ಥಾಪಿಸಿ ವ್ಯಾಪಿಸಿದ ರಾಷ್ಟ್ರೀಯತೆಯ ದೀಕ್ಷೆಗಳಿಂದ ಬೆಚ್ಚಿದ ಆಂಗ್ಲ ಸರಕಾರ ಅವರನ್ನು ಬಂಧಿಸಿತು. ಸೂರತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಮಂದ ನಿಲುವಿನಿಂದ ರೋಸಿ ಹೋಗಿ ಅರವಿಂದರಿದ್ದ ರಾಷ್ಟ್ರೀಯತಾವಾದಿ ಪಕ್ಷ ಕಾಂಗ್ರೆಸ್ಸಿನಿಂದ ಬೇರೆಯಾಯಿತು. 

    ಬರೋಡಾದಲ್ಲಿ ವಿಷ್ಣು ಭಾಸ್ಕರ ಲೇಲೆ ಎನ್ನುವ ಮಹಾರಾಷ್ಟ್ರೀಯ ಯೋಗಿಯ ಭೇಟಿಯ ಸಮಯದಲ್ಲಿ ಬ್ರಹ್ಮಪ್ರಜ್ಞೆಯ ಮೊದಲ ಅನುಭೂತಿ ಅವರಿಗುಂಟಾಯಿತು. ಆಲೀಪುರ ಬಾಂಬು ಪ್ರಕರಣದಲ್ಲಿ ಮತ್ತೆ ಸರಕಾರ ಅರವಿಂದರನ್ನು ಬಂಧಿಸಿತು. ಒಂದು ವರ್ಷದಲ್ಲಿ ಬಿಡುಗಡೆಯಾದ ಬಳಿಕ "ಕರ್ಮಯೋಗಿ" ಎನ್ನುವ ಆಂಗ್ಲ ಸಾಪ್ತಾಹಿಕ ಹಾಗೂ "ಧರ್ಮ" ಎನ್ನುವ ಬಂಗಾಳಿ ಸಾಪ್ತಾಹಿಕವನ್ನು ಅವರು ಆರಂಬಿಸಿದರು. ಅದೇ ಸಂದರ್ಭದಲ್ಲಿ ಭಾರತದ ಭವಿಷ್ಯಕ್ಕೆ ಬೇಕಾದ ಆಧ್ಯಾತ್ಮಿಕ ಶಕ್ತಿಯನ್ನು ಮನಗಂಡು ಆತ್ಮಶಕ್ತಿಯ ಉದ್ದೀಪನೆಗೆ ಪಾಂಡಿಚೇರಿಗೆ ಬಂದು ನೆಲೆಸಿದರು. 

     ತಮ್ಮ ಧರ್ಮಪತ್ನಿ ಮೃಣಾಲಿನಿ ದೇವಿಗೆ ಬರೆದ ಪತ್ರದಲ್ಲಿ "ಭಾರತವೆಂದರೆ ಹೊಲ-ಗದ್ದೆ,ಬೆಟ್ಟ-ಗುಡ್ಡಗಳಿಂದ ಕೂಡಿದ ಜಡವಸ್ತುವಲ್ಲ. ಆಕೆ ನನ್ನ ತಾಯಿ.ರಕ್ಕಸನೊಬ್ಬ ನನ್ನ ತಾಯಿಯ ಎದೆಯ ಮೇಲೆ ಕುಳಿತು ರಕ್ತ ಹೀರಲು ಮುಂದಾದರೆ ಮಗನಾದ ನಾನು ಸುಮ್ಮನಿರಬೇಕೇನು" ಎಂದು ಬರೆಯುತ್ತಾರೆ. ಯುಗಯುಗಗಳಿಂದ ಬೆಳಗಿ ಬಂದ ತಾಯಿ ಭಾರತಿಯ ಶಕ್ತಿಯಿನ್ನೂ ಉಡುಗಿಲ್ಲ. ಆಕೆಯಿನ್ನೂ ಅಂತಿಮ ಸೃಜನಾತ್ಮಕ ಮಂತ್ರವನ್ನು ನೀಡುವುದಕ್ಕಿದೆ. ನಮ್ಮ ನಮ್ಮ ಸ್ವಭಾವಗಳನ್ನು ಬದಲಾಯಿಸಿಕೊಂಡು ಪಶ್ಚಿಮದ ಭೋಗಗಳ, ಅಲ್ಲಿನ ಯಶಸ್ಸಿನ ಮಂತ್ರಗಳ ದಾಸರಾಗದೇ ನಮ್ಮ ಪ್ರಾಚೀನ ಅವಿಸ್ಮರಣೀಯ ಶಕ್ತಿಯನ್ನು ಮರು ಸೃಷ್ಟಿಸಿಕೊಂಡರೆ ಅದು ಸ್ರೋತವಾಗಿ ಹರಿದು ಭಾರತಾಂಬೆಯೆಂಬ ಶಕ್ತಿ ಮಾತೆ ಮರುಹುಟ್ಟು ಪಡೆದು ಜಗವ ಬೆಳಗುತ್ತಾಳೆ ಎಂದ ದಾರ್ಶನಿಕ ಅವರು. ಅದನ್ನೇ ತಮ್ಮ ಮಹಾಕಾವ್ಯ ಸಾವಿತ್ರಿಯಲ್ಲಿ ಅನುಭಾವಿಸಿದ್ದು ಹೀಗೆ...(ಅನುವಾದ ಬೇದ್ರೆಯವರದ್ದು) ಬುವಿಯೊಡಲಿನಲ್ಲಿ ಘನಸಮಾಧಿಯಾ ಆ ಸ್ಥೂಲ-ಮೂಲಗಳಿಗೆ| ಋತದ ಜ್ಯೊತಿ ತಾ ಹಿತದ ಸ್ಪರ್ಶದಲಿ ವಿಕಸನಕೆ ಶುಭದ ಘಳಿಗೆ|| ಕಾಲಸರ್ಪವದು –ದೀರ್ಘನಿದ್ರೆಯಲಿ ಬಲಹೀನವಾಗಿ ನಿಂದ| ಅಚಿತಿಯಾಳದಲಿ ವಾಕ್-ಸ್ತಂಭಗೊಂಡ ಆತ್ಮಕ್ಕೆ ನೀಡಿ ಸ್ಪಂದ|| 

     ಪ್ರಾಚೀನ ಭಾರತದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರವಿಂದರ ಪ್ರತಿಪಾದನೆ ಬಹುಷಃ ಆ ಕಾಲದಲ್ಲಿನ ಯಾವ ಇತಿಹಾಸಕಾರನೂ ಯೋಚಿಸಿರದ ದಿಕ್ಕಿನಲ್ಲಿ ಸಾಗಿತ್ತು. ಅದೇ ಈಗ ಸೂರ್ಯ ಸತ್ಯದಂತೆ ನಮ್ಮ ಕಣ್ಣಮುಂದೆ ದಾಖಲೆ ಸಮೇತ ಧರ್ಮಪಾಲರ ಬರಹಗಳಲ್ಲಿ ದರ್ಶನವಿತ್ತಿದೆ. ಪ್ರಾಚೀನ ಭಾರತದ ಸಮಾಜ ಧರ್ಮದ ತಳಹದಿಯಲ್ಲಿ ನಿರ್ಮಾಣವಾಗಿತ್ತು ಎಂದರು ಅರವಿಂದರು. ಇಲ್ಲಿ ಧರ್ಮವೆಂದರೆ ಸಂಕುಚಿತ ಮತಾಚರಣೆಯಲ್ಲ. ನಮ್ಮ ಅಸ್ತಿತ್ವದ ಅತ್ಯುನ್ನತ ನಿಯಮವಾದ ಧರ್ಮ. ಅಲ್ಲಿದ್ದುದು ಸಮುದಾಯ ಸ್ವಾತಂತ್ರ್ಯ. ಪ್ರತಿಯೊಂದು ಸಮುದಾಯ ತನ್ನದೇ ಆದ ಧರ್ಮವನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯವಿತ್ತು. ತನ್ನೊಳಗೇ ಅದು ಸ್ವತಂತ್ರವಾಗಿತ್ತು. ಯಾವ ಹಾದಿ ಹಿಡಿಯಬೇಕೆಂಬುದು ವ್ಯಕ್ತಿಗೆ ಮುಕ್ತ ಆಯ್ಕೆಯ ವಿಷಯವಾಗಿತ್ತು. ಪ್ರತಿ ಗ್ರಾಮ - ನಗರಗಳೂ ರಾಜಕೀಯ ನಿಯಂತ್ರಣದಿಂದ ಮುಕ್ತವಾದ ತಮ್ಮದೇ ವ್ಯವಸ್ಥೆಯನ್ನು ಹೊಂದಿದ್ದವು. ಅದರೊಳಗಿನ ಪ್ರತಿಯೊಬ್ಬ ವ್ಯಕ್ತಿ ತನ್ನ ಅಭಿವೃದ್ಧಿಗೆ ಒಂದು ಪಥವನ್ನು ಬಿಟ್ಟು ಇನ್ನೊಂದನ್ನು ಆಯ್ದುಕೊಳ್ಳಲು ಸ್ವತಂತ್ರನಿದ್ದ. ರಾಜನು ಸಮುದಾಯದ ಹಕ್ಕನ್ನು ಉಲ್ಲಂಘಿಸುವಂತಿರಲಿಲ್ಲ. ಉಲ್ಲಂಘಿಸಿದರೆ ಜನರಿಂದ ಪ್ರತಿರೋಧ ಎದುರಿಸಬೇಕಾಗುತ್ತಿತ್ತು. ನಮ್ಮ ಜನಾಂಗದ ಪ್ರತಿಭೆಯು ವಿಕಾಸಗೊಂಡ ರೂಪವದು. ಪ್ರತಿ ಸಮುದಾಯವೂ ತನ್ನ ಸ್ವಂತ ಹಿತಾಸಕ್ತಿಗೆ ಹೋರಾಡುತ್ತಿರಲಿಲ್ಲ. ರಾಷ್ಟ್ರೀಯ ಜೀವನವನ್ನು ಕೇಂದ್ರೀಕರಿಸಿದ ಧರ್ಮದ ಪರಿಕಲ್ಪನೆಯಿತ್ತು. ಅಲ್ಲಿ ಈಗಿನಂತೆ ಜಾತೀಯ ಸಂಸ್ಥೆಗಳಿರಲಿಲ್ಲ. ಸಮುದಾಯ ಜೀವನಕ್ಕೆ ಸಂಘಟಿತವಾದ ವೃತ್ತಿಪರ ಶ್ರೇಣಿಗಳಿದ್ದವು. ಆಡಳಿತ ಯಂತ್ರವು ಯಾಂತ್ರಿಕವಾಗಿರದೆ ನಮ್ಯಶೀಲವಾಗಿತ್ತು. ಮಹಮ್ಮದೀಯರು ಇದನ್ನೇ ಅನುಸರಿಸಿದರಾದರೂ ರಾಜನೇ ನಿರಂಕುಶ ಪ್ರಭುವೆಂಬ ಮಧ್ಯ ಏಷ್ಯಾದ ತಮ್ಮ ಕಲ್ಪನೆಯನ್ನೇ ಇಲ್ಲಿ ತಂದು ತುರುಕಿದರು. ಬ್ರಿಟಿಷರು ಈ ವ್ಯವಸ್ಥೆಯನ್ನು ಹೊಸಕಿ ಹಾಕಿದರು. 

    ಭಾರತದಲ್ಲಿ ರಾಜಕೀಯ "ರಾಷ್ಟ್ರ"ದ ಕಲ್ಪನೆ ಇಲ್ಲದಿದ್ದಿರಬಹುದು. ಆದರೆ ಇಲ್ಲಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ "ರಾಷ್ಟ್ರ" ಕಲ್ಪನೆಯಿತ್ತು. ಅದೇ ಭಾರತವನ್ನು ಆಸೇತುಹಿಮಾಚಲ ಬೆಸೆದಿತ್ತು. ಸಂಸದೀಯ ವ್ಯವಸ್ಥೆ ನಮ್ಮ ಜನತೆಗೆ ಸರಿ ಹೊಂದುವುದಿಲ್ಲ ಎನ್ನುವುದು ಅರವಿಂದರ ವಾದವಾಗಿತ್ತು. ಬರೋಡಾದಲ್ಲಿ ಬ್ರಹ್ಮ ಸಾಕ್ಷಾತ್ಕಾರದ ಮೊಟ್ಟ ಮೊದಲ ಅನುಭವವಾದ ಬಳಿಕ ಮಾಡಿದ ಅನೇಕ ಭಾಷಣಗಳಲ್ಲಿ ರಾಷ್ಟ್ರೀಯ ಶಿಕ್ಷಣದ ಅವಶ್ಯಕತೆಯನ್ನು ಒತ್ತಿ ಹೇಳಿದ್ದರು. ಗತಕಾಲದಿಂದ ಆರಂಭವಾಗಿ ವರ್ತಮಾನದ ಸಂಪೂರ್ಣ ಉಪಯೋಗ ಪಡೆದು ಶಕ್ತಿಶಾಲಿ ರಾಷ್ಟ್ರವೊಂದನ್ನು ನಿರ್ಮಿಸುವ ಅಗತ್ಯತೆಯನ್ನು ಅವರು ಸಾರಿ ಹೇಳಿದರು. ಭಾರತ ಅನಾದಿಯಿಂದ ಹೊಂದಿರುವ ಜ್ಞಾನ, ಚಾರಿತ್ರ್ಯ, ಉದಾತ್ತ ತತ್ತ್ವಗಳ ಭಂಡಾರವನ್ನು ಭಾರತಕ್ಕಾಗಿ ಉಳಿಸಿ ಯಂತ್ರ ನಿರ್ಮಾಣ ಮಾಡದೆ ವ್ಯಕ್ತಿ ನಿರ್ಮಾಣದ ಕಡೆಗೆ ಕರೆ ಕೊಟ್ಟರು. ನಮ್ಮ ಮಕ್ಕಳ ಮನಸ್ಸನ್ನು ರಾಷ್ಟ್ರಭಾವನೆಯಿಂದ ಉದ್ದೀಪನಗೊಳಿಸಬೇಕು. ಪ್ರತೀ ಹಂತದಲ್ಲೂ ಅದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ದೇಶಭಕ್ತ ನಾಗರಿಕರನ್ನಾಗಿಸುವಂತಹ ಸದ್ಗುಣಗಳ ಅಭ್ಯಾಸಕ್ಕೆ ಅಣಿಗೊಳಿಸಬೇಕು. ಇಂತಹ ಪ್ರಯತ್ನವಿಲ್ಲದಿದ್ದರೆ "ರಾಷ್ಟ್ರ"ವೆನ್ನುವುದು ನಿರ್ಮಾಣವಾಗದು. ಶಿಸ್ತಿಲ್ಲದ ರಾಷ್ಟ್ರೀಯತೆ, ದೇಶಭಕ್ತಿ, ಪುನರ್ನಿರ್ಮಾಣ ಇವು ರಾಷ್ಟ್ರಚೇತನದ ಭಾಗಗಳಾಗದೆ ಕೇವಲ ಶುಷ್ಕಪದಗಳಾಗಿ, ವಿಚಾರಗಳಾಗಿ ಬಿಡುತ್ತವೆ. ಕೇವಲ ಪಠ್ಯಪುಸ್ತಕಗಳು ಬೋಧಿಸುವ ದೇಶಭಕ್ತಿಯಿಂದ ಯಾವ ಉಪಯೋಗವೂ ಇಲ್ಲ. ಶಿಕ್ಷಣವೆಂದರೆ ಜ್ಞಾನಗಳಿಕೆ ಅಷ್ಟೇ ಅಲ್ಲ. ಗಳಿಸಿದ್ದನ್ನು ಉತ್ತಮ ರೀತಿಯಲ್ಲಿ ಬಳಸುವುದೂ ಮುಖ್ಯ. ಐರೋಪ್ಯ ಶಿಕ್ಷಣವು ನಮ್ಮ ಬುದ್ಧಿ, ಚಾರಿತ್ರ್ಯ ಹಾಗೂ ಅಭಿರುಚಿಗಳನ್ನು ಭೃಷ್ಟಗೊಳಿಸಿದೆ. ನಮ್ಮ ಪರಂಪರೆಯಿಂದ ಬೌದ್ಧಿಕ ಹಾಗೂ ಆಧ್ಯಾತ್ಮಿಕವಾಗಿ ದೂರ ಸರಿಯುವಂತೆ ಮಾಡಿದ ಈಗಿನ ಶಾಲೆಗಳು ಸ್ವಂತಿಕೆಯನ್ನು ತರಬಲ್ಲ ಅಭಿಲಾಶೆ-ಚೈತನ್ಯವನ್ನೇ ಉಡುಗಿಸಿವೆ. ಸಂಕುಚಿತವೂ ಭಾವಹೀನವೂ ಆದ ಇಂತಹ ಶಿಕ್ಷಣವನ್ನು ಪಡೆದ ವ್ಯಕ್ತಿ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಿ ಪಂಚಭೂತಗಳನ್ನು ತನ್ನ ಸೇವೆಗೆ ಇಳಿಸಿಕೊಂಡ ಆದರೆ ಚೇತನವನ್ನು ವಿಕಸಿತಗೊಳಿಸದ ಪಶುಸ್ವಭಾವದ ರಕ್ಕಸನಾಗಿಬಿಡುತ್ತಾನೆ. ಪರಂಪರೆಯನ್ನು ಜೀವಂತವಾಗಿರಿಸುವ ಋಜುತ್ವ, ಕಾಣ್ಕೆಯ ಸ್ಪೂರ್ತಿ, ಭಾರತೀಯ ದೃಷ್ಟಿಯ ಅಂತರ್ನೋಟಗಳ ಶಿಕ್ಷಣ ನಮ್ಮನ್ನು ಮತ್ತೆ ಔನ್ನತ್ಯಕ್ಕೆ ಏರಿಸಬಲ್ಲುದು ಎಂದು ಶಿಕ್ಷಣದ ಸ್ವರೂಪ ಸಿದ್ಧವಾಗಬೇಕಾದ ಬಗೆಗೆ ಸಲಹೆ ಮಾಡಿದ್ದರು. 

     ಅರವಿಂದರ ಜೊತೆಯಲ್ಲಿದ್ದ ಕ್ರಾಂತಿಸಂನ್ಯಾಸಿ ಭಾರತೀ ಕೃಷ್ಣರು ಮುಂದೆ ಪುರಿ ಹಾಗೂ ದ್ವಾರಕೆಗಳಿಗೆ ಶಂಕರ ಪೀಠಾಧಿಪತಿಯಾದರು. ವರ್ತಮಾನದಲ್ಲಿನ ಆಧ್ಯಾತ್ಮಿಕ ಶಕ್ತಿಯು ಭವಿಷ್ಯದಲ್ಲಿ ಭೌತಿಕ ಶಕ್ತಿಯನ್ನು ಸೃಷ್ಟಿಸುತ್ತದೆ. ವರ್ತಮಾನದಲ್ಲಿ ಭೌತಿಕ ಶಕ್ತಿಯ ಮೇಲುಗೈಯಾದರೆ ಆಧ್ಯಾತ್ಮಿಕ ಶಕ್ತಿಯು ಭವಿಷ್ಯವನ್ನು ರೂಪಿಸಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದರಿತ ಅರವಿಂದರು ಸಕ್ರಿಯ ರಾಜಕಾರಣದಿಂದ ದೂರವಾಗಿ ಆತ್ಮಶಕ್ತಿಯ ಜಾಗೃತಿಗಾಗಿ ಆಧ್ಯಾತ್ಮಿಕ ಪಥ ತುಳಿದರು. ಆ ನಂತರವೂ ಅವರು ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಗಳ ಬಗ್ಗೆ ತಮ್ಮ ಸಲಹೆ ಕೇಳಿದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ತಮ್ಮ "ಸೀಕ್ರೆಟ್ ಆಫ್ ವೇದ" ಗ್ರಂಥದಲ್ಲಿ ಅರವಿಂದರು ವೇದಾರ್ಥವನ್ನು ಸಾಂಕೇತಿಕವಾಗಿ ವಿವರಿಸುವ ಮೂಲಕ "ಆರ್ಯ ಆಕ್ರಮಣ ಸಿದ್ಧಾಂತ"ವನ್ನು ಖಂಡಿಸಿದರು. ಅವರು ಆರ್ಯನೆಂದರೆ ಯಾವುದಕ್ಕೂ ಹೆದರದೆ, ಹಿಂಜರಿಯದೆ, ದೌರ್ಬಲ್ಯಕ್ಕೊಳಗಾಗದೆ ದೈವಿಕತೆಯ ಶಿಖರವನ್ನು ಹಂತಹಂತವಾಗಿ ಏರಲಿಚ್ಛಿಸುವ ಅಂತರಂಗ ಹಾಗೂ ಬಾಹ್ಯದಲ್ಲಿ ಆದರ್ಶದ ಔನ್ನತ್ಯದ ಆತ್ಮಸಂಸ್ಕಾರವುಳ್ಳವ ಎಂದು ವ್ಯಾಖ್ಯಾನಿಸಿದರು.

     ಆ ಸಮಯದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅರವಿಂದ ಘೋಷ್ ಅಭಿಪ್ರಾಯಗಳು ಅವರು ಬರೆದ ಪತ್ರಗಳ ಮೂಲಕ ಸಿಗುತ್ತವೆ. ಮುಸ್ಲಿಮ್ ಪುಂಡುತನ ಹಾಗೂ ಕಾಂಗ್ರೆಸ್ಸಿನ ಓಲೈಕೆಯ ನೀತಿಯನ್ನು ಕಟು ಶಬ್ಧಗಳಲ್ಲಿ ಟೀಕಿಸಿದರು ಅರವಿಂದರು. "ಪರರನ್ನು ಪೀಡಿಸುವವನು ಶೂರನೂ ಅಲ್ಲ, ಶಕ್ತಿವಂತನೂ ಅಲ್ಲ. ಹಿಂದೂವಿನ ಆತ್ಮನಿಯಂತ್ರಣ ಗುಣ ಅವನ ರಾಷ್ಟ್ರೀಯ ಸ್ವಭಾವದ ಲಕ್ಷಣ ಎನ್ನುವುದು ಅವನ ಹೇಡಿತನ ಎಂದು ಪರಿಗಣಿಸಿದರೆ ಅದು ಮೂರ್ಖತನ. ಮುಸ್ಲಿಂ ಅಧ್ಯಕ್ಷನನ್ನು ಆರಿಸುವುದರಿಂದ ಕಾಂಗ್ರೆಸ್ ವಿರೋಧಿ ಮುಸಲ್ಮಾನರ ಮನಸ್ಸನ್ನು ಓಲೈಸಬಹುದೆಂಬ ಕಾಂಗ್ರೆಸ್ಸಿನ ವಿಚಾರಧಾರೆ ಮೂರ್ಖತನದ್ದು. "ನಾನು ನಿನ್ನನ್ನು ಸಹಿಸಲಾರೆ" ಎನ್ನುವ ತತ್ವವಿರುವ ಮತದ ಜೊತೆ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಅವರು ನಮ್ಮನ್ನು ಮತಾಂತರಗೊಳಿಸುತ್ತಲೇ ಸಾಗುತ್ತಾರೆ. ನಾವು ಅಹಿಂಸೆ ಎಂದು ಹೇಳುತ್ತಾ ಯಾವ ಮುಸಲ್ಮಾನನನ್ನೂ ಶುದ್ಧೀಕರಣಗೊಳಿಸದಿದ್ದರೆ ಐಕ್ಯತೆ ಬಿಡಿ, ನಾವೇ ಉಳಿಯಲಾರೆವು. ತಮ್ಮ ಪರವಾಗಿ ಹಾಗೂ ತಮ್ಮ ಹೆಸರಿನಲ್ಲಿ ಏನನ್ನು ಹೇಳಬೇಕು ಅಥವಾ ಹೇಳಬಾರದು, ಮಾಡಬೇಕು ಅಥವಾ ಮಾಡಬಾರದು ಎನ್ನುವುದನ್ನು ನಿರ್ಧರಿಸುವ ಸಾರ್ವಜನಿಕರ ಹಕ್ಕನ್ನು ಕಾಂಗ್ರೆಸ್ ಹುಟ್ಟಿದಂದಿನಿಂದ ಈ ರಾಷ್ಟ್ರೀಯ ಚಳುವಳಿಯ ನೇತಾರರು ನಿರಾಕರಿಸುತ್ತಲೇ ಬಂದಿದ್ದಾರೆ. ಆರೇಳು ಜನ ಗುಪ್ತ ಸಭೆ ನಡೆಸಿ ತೆಗೆದುಕೊಳ್ಳುವ ನಿರ್ಣಯವನ್ನು ದೇಶದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳು ಸುಮ್ಮನೆ ಅನುಮೋದಿಸುವುದು ಕಾಂಗ್ರೆಸ್ಸಿನ ವೈಖರಿಯಾಗಿಬಿಟ್ಟಿದೆ. ಸರ್ವಾಧಿಕಾರಿಗಳಂತಾಗದೆ ಸೇವಕರಂತೆ ವರ್ತಿಸಿದಲ್ಲಿ ಮಾತ್ರ ನಾಯಕರು ಗೌರವಕ್ಕೆ ಅರ್ಹರಾಗುತ್ತಾರೆ. ರಾಜಕಾರಣ ಕ್ಷತ್ರಿಯನ ಕೆಲಸ. ತೋಳ್ಬಲವಿಲ್ಲದ ಮೆದುಳು ನಿರ್ವೀರ್ಯವಾದದ್ದು. ಸ್ವಾತಂತ್ರ್ಯಕ್ಕೆ ನೈತಿಕ ಅರ್ಹತೆ ಪಡೆಯಬೇಕಾದರೆ ನಾವು ಕ್ಷಾತ್ರ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಾಸ್ತವಾಂಶವನ್ನು ಎತ್ತಿ ಹಿಡಿಯಲು ಹೆದರುವ ಅತಿಯಾದ ಸಜ್ಜನಿಕೆ, ಚಕ್ಷು ಲಜ್ಜೆಯಿಂದ ಯಾವ ಉಪಯೋಗವೂ ಇಲ್ಲ! ಜನತೆಯ ನಡುವಿನ ಪ್ರತಿಯೊಂದು ಘಟಕವನ್ನು -ಪಂಡಿತ, ಕಾರ್ಮಿಕ, ರೈತ - ಸಂಘಟಿಸಿ ಯಾರು ಮುನ್ನಡೆಸುವನೋ ಅವನಿಗೇ ರಾಜಕೀಯದಲ್ಲಿ ಗೆಲುವೇ ಹೊರತು ವಾಗ್ಝರಿ ಹರಿಸುವ ಮಾತಿನ ಚತುರರಿಗಲ್ಲ. ಆದರೆ ಕಾಂಗ್ರೆಸ್ ಜನರಿಂದ ದೂರವಿದ್ದು ಬ್ರಿಟಿಷ್ ಸರಕಾರದೆಡೆ ಗಮನ ಹರಿಸಿ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ಸಿನ ಸ್ವಾರ್ಥದಾಟವನ್ನು ಅಂದೇ ಬಯಲಿಗೆಳೆದಿದ್ದರು. 

     ಗಾಂಧಿಯವರ ಖಿಲಾಫತ್ ಅತಿರೇಕದಿಂದ ದೇಶಾದ್ಯಂತ ಹಿಂದೂಗಳು ಅಪಾರ ಹಾನಿಗೆ ತುತ್ತಾದಾಗ ಅರವಿಂದರು "ಹಿಂದೂ ಮುಸ್ಲಿಂ ಐಕ್ಯತೆಯೆಂದರೆ ಹಿಂದೂಗಳು ಅಧೀನರಾಗುವುದಲ್ಲ. ಹಿಂದೂಗಳ ಮೃದು ಗುಣ ಮುಸ್ಲಿಂ ದೌರ್ಜನ್ಯಕ್ಕೆ ಎಡೆಮಾಡಿದೆ. ಹಿಂದೂಗಳು ಸಂಘಟಿತರಾಗುವುದೇ ಇದಕ್ಕೆ ಪರಿಹಾರ. ಆಗ ಐಕ್ಯತೆ ತಾನಾಗಿಯೇ ಸಾಧಿತವಾಗುವುದು. ಮುಂದೊಂದು ದಿನ ಮುಸ್ಲಿಮರು ನಮ್ಮ ಮೇಲೆ ದಾಳಿಗೆ ಬಂದಾಗಲೂ ಇದು ನೆರವಾಗುವುದು" ಎಂದು ಸ್ಪಷ್ಟ ಶಬ್ಧಗಳಲ್ಲಿ ಹಿಂದೂಗಳು ಸಂಘಟಿತರಾಗಬೇಕಾದ ಅಗತ್ಯತೆಯನ್ನು ಹೇಳಿದ್ದರು. ಬಹುತೇಕ ನಾಯಕರು ಕುರಿಗಳಂತೆ ಗಾಂಧಿಯವರನ್ನು ಹಿಂಬಾಲಿಸಿದಾಗ ಕೆಲವೇ ಕೆಲವರು ಅವರ ಚಳುವಳಿಯ ಅನಿಶ್ಚಿತತೆಯನ್ನು, ಅದರಿಂದ ದೇಶೀಯರಲ್ಲುಂಟಾಗಬಹುದಾದ ಗೊಂದಲವನ್ನು, ಭಾರತಕ್ಕಾಗಬಹುದಾದ ಹಾನಿಯನ್ನು ಮನಗಂಡು ದೇಶದ ಜನತೆಯನ್ನು ಎಚ್ಚರಿಸಿದ್ದರು. ಅಂತಹವರಲ್ಲಿ “ಕಾಂಗ್ರೆಸ್ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ತೋರುವ ಉತ್ಸಾಹ ಹೃದಯಪೂರ್ವಕವಾದುದಲ್ಲ. ನಿಷ್ಕಪಟವಾದುದೂ ಅಲ್ಲ. ಅದರ ನಾಯಕರುಗಳು ನಾಯಕರಾಗುವುದಕ್ಕೆ ಯೋಗ್ಯತೆಯನ್ನೇ ಹೊಂದಿಲ್ಲ” ಎಂದು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ನಿರ್ಭೀತವಾಗಿ ಹೇಳಿದ್ದ ಅರವಿಂದರೂ ಒಬ್ಬರು. 

    ಗಾಂಧಿಯವರ ಅಹಿಂಸಾ ಹೋರಾಟದ ಅನರ್ಥವನ್ನು ತಮ್ಮ ಶಿಷ್ಯರಿಗೆ ಅವರು ಈ ರೀತಿ ವಿವರಿಸಿದ್ದಾರೆ - ಮನುಷ್ಯ ಅಹಿಂಸೆಯನ್ನು ಕೈಗೊಂಡಾಗ ಶುದ್ಧಗೊಳ್ಳುತ್ತಾನೆ ಎಂದು ಗಾಂಧಿ ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ಸ್ವ ಇಚ್ಛೆಯಿಂದ ಯಾತನೆ ಅನುಭವಿಸಿದಾಗ ಪ್ರಾಣಕೋಶಗಳು ಬಲಗೊಳ್ಳುತ್ತವೆ. ಹಾಗಾಗಿ ಗಾಂಧಿಯವರ ಈ ಅಹಿಂಸಾ ಚಳುವಳಿ ಪ್ರಾಣಕೋಶಗಳನ್ನಷ್ಟೇ ಬಾಧಿಸುತ್ತದೆ. ದಬ್ಬಾಳಿಕೆ ನಡೆಸುವ ಶಕ್ತಿಯನ್ನು ಎದುರಿಸುವ ಸಾಮರ್ಥ್ಯವಿಲ್ಲದಿದ್ದಾಗ ಅದನ್ನು ಸಹಿಸಿ ಬವಣೆ ಅನುಭವಿಸುವುದರಿಂದ ಯಾವ ಪ್ರಯೋಜನವಿದೆ? ಯಾತನೆಯನ್ನುಂಡ ಮನುಷ್ಯ ಅಧಿಕಾರ ದೊರೆತಾಗ ಹೀನ ಶೋಷಕನಾಗುತ್ತಾನೆ. ನಾವು ಹಿಂಸಾ ಪ್ರವೃತ್ತಿಯನ್ನಷ್ಟೇ ಪರಿವರ್ತಿಸಬಹುದು. ಆದರೆ ಸತ್ಯಾಗ್ರಹದ ಮಾರ್ಗದಿಂದ ಅದು ಸಾಧ್ಯವಿಲ್ಲ. ಹಿಂಸಾ ಪ್ರವೃತ್ತಿಯ ಶುದ್ಧೀಕರಣಕ್ಕೆ ಪ್ರಾಚೀನ ಕ್ಷಾತ್ರ ಪ್ರವೃತ್ತಿಯೇ ಬೇಕು. ಅದು ಯಾವ ದಬ್ಬಾಳಿಕೆಯನ್ನೂ ಸಹಿಸದೆ ಹೋರಾಡುತ್ತಿತ್ತು. ಅದರ ಉನ್ನತ ಗುರಿ ಆಧ್ಯಾತ್ಮೀಕರಣವಾಗಿತ್ತು. ಸತ್ಯಾಗ್ರಹಿಯು ತಾನು ಇತರರ ಮೇಲೆ ತರುವ ಒತ್ತಡದ ಬಗ್ಗೆ ತನಗೆ ಕಾಳಜಿಯಿಲ್ಲ ಎನ್ನುವುದು ಕೂಡಾ ಹಿಂಸೆಯೇ! ನಿಜವಾದ ಅಹಿಂಸೆ ಬಾಹ್ಯ ಕ್ರಿಯೆಯಲ್ಲಿ/ಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ಇರದ ಒಂದು ಮನಸ್ಥಿತಿ. ಆಂತರಿಕ ಅಸ್ತಿತ್ವದಲ್ಲಿ ಯಾವುದೇ ಒತ್ತಡವೂ ಅಹಿಂಸೆಯ ಉಲ್ಲಂಘನೆಯೇ! ಗಾಂಧಿಯವರು ಆಫ್ರಿಕಾದಿಂದ ಹಿಂದಿರುಗಿದ ನಂತರ ಅವರು ಪಡೆದ ರಿಯಾಯಿತಿಗಳೆಲ್ಲಾ ಏನಾದವು? ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತೇಕೆ? ಒಂದು ವೇಳೆ ಅಫ್ಘನ್ನರು ಭಾರತವನ್ನು ಆಕ್ರಮಿಸಿದರೆ ಅಹಿಂಸೆಯಿಂದ ಅವರನ್ನು ಎದುರಿಸಲು ಸಾಧ್ಯವೆ? ಗಾಂಧಿಯವರು ತಮ್ಮ ಗೀತೆಯ ವ್ಯಾಖ್ಯೆಯನ್ನು ಪ್ರಶ್ನಿಸಿದವರಿಗೆ ಹಾರಿಕೆಯ ಉತ್ತರ ನೀಡಿದರು. ಮಹರ್ಷಿ ದಯಾನಂದರು ವಿಗ್ರಹಾರಾಧನೆಯನ್ನು ರದ್ದು ಪಡಿಸಿ ವೇದಗಳ ಮೂರ್ತಿಪೂಜೆಯನ್ನು ಸೃಷ್ಟಿಸಿದ್ದಾರೆಂದು ಹೇಳುವ ಗಾಂಧಿಯವರು ತಾವು ಚರಕ-ಖಾದಿ-ಅಹಿಂಸೆಗಳ ಮೂಲಕ ಸೃಷ್ಟಿಸಿದ್ದೂ ಅದನ್ನೇ ಎನ್ನುವುದನ್ನು ಮರೆತಿದ್ದಾರೆ. ಭಾರತೀಯ ಸಂಸ್ಕೃತಿಗೆ ನೈತಿಕತೆಯ ಮೌಲ್ಯವೂ ಗೊತ್ತಿತ್ತು. ಅದರ ಮಿತಿಗಳೂ! ಗಾಂಧಿಯವರು ನೈತಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಒಂದೇ ಎಂದು ಪರಿಗಣಿಸಿದ್ದಾರೆ. ಗಾಂಧಿಯವರ ಉಪವಾಸವೆನ್ನುವುದು ಪಾಪಮಾರ್ಜನೆಗಾಗಿ ಇರುವ ಕ್ರೈಸ್ತರ ಕಲ್ಪನೆ. ಆತ ಬೋಧಿಸಿರುವುದೆಲ್ಲವೂ ಕ್ರೈಸ್ತ ಮತದಿಂದ ಎರವಲು ಪಡೆದದ್ದು. ಅವರ ರೂಪ ಭಾರತೀಯ. ಆದರೆ ಅಂತಃಸತ್ತ್ವ ಕ್ರೈಸ್ತಮತದ್ದು. ಅವರ ವ್ಯಕ್ತಿತ್ವವಂತೂ ನೀರಸ, ಅದು ಅವರು ತಮ್ಮ ಸಿದ್ಧಾಂತಗಳನ್ನು ಎರವಲು ಪಡೆದ ರಷ್ಯನ್ ಕ್ರೈಸ್ತರಿಗಿಂತಲೂ ನೀರಸ ಹಾಗೂ ಅವರ ಮನಸ್ಸು ಚಂಚಲ. ಟಾಲ್ ಸ್ಟಾಯ್, ಬೈಬಲುಗಳಿಂದ ಪ್ರಭಾವಿತರಾದ ಅವರ ಉಪದೇಶಗಳಲ್ಲಿ ಕೆಲ ಮಟ್ಟಿಗೆ ಜೈನ ಮತದ ಛಾಯೆಯಿದೆ. ಗಾಂಧಿಯವರ ಚಳುವಳಿ ಅಭಾಸಕ್ಕೂ, ಗೊಂದಲಕ್ಕೂ ಕಾರಣವಾಗುತ್ತದೆ. ಭಾರತದ ರಾಜಕಾರಣಿಗಳು ವಿಚಾರಹೀನರಾಗಿ ಗಾಂಧಿಯ ಖಿಲಾಫತ್ತಿಗೆ ಬೆಂಬಲ ಸೂಚಿಸಿದರು. ವಾಸ್ತವತೆಯನ್ನು ನೇರವಾಗಿ ಎದುರಿಸುವ ಬದಲು ತಮ್ಮ ಮಾನಸಿಕ ವಿಚಾರಗಳ ಬಲದಿಂದ ಮುಸಲರ ದೌರ್ಷ್ಟ್ಯವನ್ನು ಎದುರಿಸುವ ಅರ್ಥಹೀನ ಪ್ರಯತ್ನ ಮಾಡಿದರು. ಅಸಹಕಾರ ಚಳುವಳಿ ಅಸತ್ಯದ ಮೇಲೆ ನಿಂತಿದೆ. ಸ್ವರಾಜ್ಯಗಳಿಕೆ ನೂಲುವುದರಿಂದ ಸಾಧ್ಯವೇ? ಗ್ರಾಮಸಂಘಟನೆಗಳ ಮಾತಾಡುವ ಗಾಂಧಿಯವರು ಮೊದಲು ಹಳ್ಳಿಗಳಿಗೆ ಜೀವ ತರಲಿ. ಆಗ ಅವು ತಾವಾಗಿ ಸಂಘಟನೆಗೊಳ್ಳುತ್ತವೆ. ಗಾಂಧಿಯವರು ಗೋಪ್ಯತೆಯನ್ನು ಪಾಪ ಎಂದಿದ್ದಾರೆ. ಆದರೆ ಅದು ಅವರ ಅತಿರೇಕಗಳಲ್ಲೊಂದು ಅಷ್ಟೇ! 

     ಆಧುನಿಕ ವೃತ್ತ ಪತ್ರಿಕೆಗಳು ಕಪೋಲಕಲ್ಪಿತ ವರದಿಯನ್ನು ಪ್ರಕಟಿಸುತ್ತವೆ. ಜನಸಾಮಾನ್ಯರ ರಂಜನೆಗೆ ಅವು ಇಳಿಯುವ ಕಾರಣ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತವೆ ಎಂದಿದ್ದರು ಅರವಿಂದರು. 

    1950ರಲ್ಲಿ ಅರವಿಂದರು ಚೀನಾ ನೈಋತ್ಯ ಏಷ್ಯಾ ಹಾಗೂ ಟಿಬೆಟುಗಳನ್ನು ನುಂಗಿ ನೊಣೆದು ಭಾರತದ ಭದ್ರತೆಗೆ ಬೆದರಿಕೆಯೊಡ್ಡಬಹುದು ಎಂದು ಎಚ್ಚರಿಸಿದ್ದರು. ಅವರು ಹೇಳಿದ ಆರುತಿಂಗಳಲ್ಲೇ ಚೀನಾ ಟಿಬೆಟನ್ನು ಆಕ್ರಮಿಸಿತು. 1962 ರಲ್ಲಿ ಭಾರತದ ಮೇಲೂ ದಾಳಿಯೆಸಗಿತು. 

     ಮಹಾಭಾರತ ಅರಣ್ಯಪರ್ವದ ಸಾವಿತ್ರಿ ಉಪಾಖ್ಯಾನವನ್ನು ಹಿಡಿದು ಹಿರಿದಾಗಿಸಿ ಎತ್ತರಕ್ಕೇರಿಸಿದ ಅವರ ಕೃತಿಯೇ ಸಾವಿತ್ರಿ. ಧೀರ ಗಂಭೀರ ರಮಣೀಯ ಪ್ರೌಢ ಕಾವ್ಯಭಾಷೆ ಅದರದ್ದು. ಜಗತ್ತಿನಲ್ಲಿ ಆಂಗ್ಲ ಭಾಷೆಯಲ್ಲಿ ರಚಿತವಾದ ಕೃತಿಗಳಲ್ಲೇ ಅತ್ಯಂತ ದೊಡ್ಡ ಕಾವ್ಯ ಇದು. ಮೇರು ಕವಿ ಬೇಂದ್ರೆಯವರು ಮಹರ್ಷಿ ಅರವಿಂದರ ಅನುಯಾಯಿ. ಅರವಿಂದರ ಅನುಭಾವ ಚಿಂತನೆಯನ್ನು ಕನ್ನಡಕ್ಕೆ ತಂದ ಅಕ್ಷರ ಯೋಗಿ ಅಂಬಿಕಾತನಯದತ್ತ. ಅರವಿಂದರ ಸಾವಿತ್ರಿಯ ಚರಣವೊಂದನ್ನು ಬೇಂದ್ರೆಯವರು ಅನುವಾದಗೊಳಿಸಿದ್ದು ಹೀಗೆ... ಆ ಪರಮಪುರುಷ | ಪಾತಾಳ ನಿಶೆಯ | ಪರದೆಯನು ತೆಗೆಯುವತ್ತ | ಜೊತೆಜೊತೆಗೆ | ದೈವ ಪ್ರತ್ಯೂಷ ಸರಣಿ | ತಮವನು ಕರಗಿಸುತ್ತ | | ಪ್ರಕೃತಿ ತಾನಾಗ | ಅನಂತತೆಯಲಿ ವಿಶ್ವವನು | ವ್ಯಾಪಿಸುತ್ತ |ಅದಕಾಗಿ ಖಚಿತ | ಅವನ ಜೊತೆಯವಳು ಅದ್ವೈತವಾಗುವತ್ತ | | 

     ಮನಸ್ಸಿನ ಮೂಲಕ ಸುಪ್ರಮಾನಸ ಹಂತದವರೆಗೆ ಆಧ್ಯಾತ್ಮಿಕ ಆರೋಹಣಗೈಯಲು ಮೂರು ರೀತಿಯ ರೂಪಾಂತರ ಅಗತ್ಯ ಇದೆ ಎಂದು ಅರವಿಂದರು ತಮ್ಮ ಕೃತಿ `ದಿ ಲೈಫ್ ಡಿವೈನ್’ನಲ್ಲಿ ಹೇಳುತ್ತಾರೆ. ಪ್ರಪ್ರಥಮವಾಗಿ, ನಮ್ಮಲ್ಲಿರುವ ಚೈತ್ಯಪುರುಷನು ಜಾಗೃತನಾಗಬೇಕು. ಎರಡನೆಯದು ಆಧ್ಯಾತ್ಮಿಕ ಪರಿವರ್ತನೆ. ಇದರಿಂದ ಮಹತ್ತರ ಜ್ಯೋತಿ, ಶಕ್ತಿ , ಜ್ಞಾನ, ಆನಂದ, ನೈರ್ಮಲ್ಯಗಳು ಅವತರಿಸಿ, ಚೇತನದ ಗರ್ಭಕ್ಕೂ ಇಳಿದು ಅಲ್ಲಿಯೂ ಪರಿವರ್ತನೆಯಾಗಬೇಕು. ಚೇತನವು ಸುಪ್ರಮಾನಸದಲ್ಲಿ ನೆಲೆಸುವುದೇ ಮೂರನೆಯ ಪರಿವರ್ತನೆ. ಈ ಮೂರು ರೀತಿಯ ರೂಪಾಂತರಗಳಿಂದ ಚಿನ್ಮಯ ಸಿದ್ಧಿ. 

     1950ರ ಡಿಸೆಂಬರ್ 5ರಂದು ಅರವಿಂದರು ತಮ್ಮ ಕಾಯ ತ್ಯಜಿಸಿದರು. ಜೀವಿತದ ಮೊದಲ ಇಪ್ಪತ್ತು ವರ್ಷಗಳನ್ನು ಪಾಶ್ಚಾತ್ಯ ಸಂಸ್ಕೃತಿಯ ಪರಿಧಿಯೊಳಗೆ ಬೆಳೆದ ಅರವಿಂದರನ್ನು ತಾಯಿನಾಡು ಕೂಗಿ ಕರೆಯಿತು. ಮುಂದಿನ ಎಂಟು ವರುಷಗಳಲ್ಲಿ ತಮ್ಮ ಸಿದ್ಧಾಂತವನ್ನು ಪಕ್ವಗೊಳಿಸುವ ಪ್ರಕ್ರಿಯೆ ಮೊದಲಾಯಿತು. 1900 ಸುಮಾರಿಗೆ ಬಂಗಾಳ ಹಾಗೂ ಮಹಾರಾಷ್ಟ್ರಗಳ ಕ್ರಾಂತಿಸಂಘಟನೆಗಳ ಸಂಪರ್ಕವುಂಟಾಯಿತು. ಕ್ರಾಂತಿ ದೀಕ್ಷಿತರಾದರು. ಮುಂದಿನ ಹತ್ತು ವರುಷಗಳು ಮಾತೃಭೂಮಿಯನ್ನು ವಿದೇಶೀ ಆಡಲಿತದ ಕಪಿಮುಷ್ಠಿಯಿಂದ ಬಿಡಿಸುವ ಪ್ರಯತ್ನ ಮಾಡಿದರು. ಅವರಿಗೆ ಭಾರತಿ ತಾಯಿಯ ರೂಪದಲ್ಲಿ ಕಂಡಳು. ಅದರ ಫಲವೇ "ಭವಾನಿಮಂದಿರ!". 1908ರ ಸುಮಾರಿಗೆ ಉಂಟಾದ ಬ್ರಹ್ಮಪ್ರಜ್ಞೆಯ ಅನುಭೂತಿ ಎರಡು ವರುಷಗಳಲ್ಲಿ ಅವರನ್ನು ಪಾಂಡಿಚೇರಿಗೆ ಒಯ್ಯಿತು. ವೇದಗಳ ಮೇಲೆ ನಡೆಸಿದ ಆಳವಾದ ಅಧ್ಯಯನ ಬ್ರಹ್ಮಸತ್ಯದ ಸಾರ ಹಾಗೂ ಪ್ರಾದುರ್ಭಾವದ ಸತ್ಯವನ್ನು ಅರಸುವತ್ತ ಅವರನ್ನು ಪ್ರೇರೇಪಿಸಿತು. ಆಗ ಅವರಿಗಾದ "ದರ್ಶನ" ಭೂಮಿಯನ್ನು ಮೃತಪಾಯವಾಗಿರುವ ಯುಗದಿಂದ ಬಿಡಿಸುವ ಕಾರ್ಯದಲ್ಲಿ ಅನುವಾಗುವಂತೆ ಮಾಡಿತು. ಕಾಲಗರ್ಭದಲ್ಲಿ ತುಕ್ಕು ಹಿಡಿದಿರುವ ಮಾನವ ಜನಾಂಗದ ಭವಿಷ್ಯದ ಕೀಲಿಕೈ ಭಾರತದಲ್ಲಿದೆ. ನಿದ್ರಾವಸ್ಥೆಯಲ್ಲಿರುವ ಅದನ್ನು ಎಚ್ಚರಿಸಲು ಆಧ್ಯಾತ್ಮಿಕ ಶಕ್ತಿಸಂಚಯನವೇ ಅಗತ್ಯವೆಂದು ಮನಗಂಡು ಮುಂದಿನ ನಲವತ್ತು ವರುಷಗಳ ಕಾಲ ಅಂತರ್ಮುಖಿಯಾದ ಆ ಯೋಗಿ!

ಶೃಂಗೇರಿ ಮಠದ ಮೇಲೆ ಮರಾಠರ ದಾಳಿ: ಒಂದು ವಿವೇಚನೆ

ಶೃಂಗೇರಿ ಮಠದ ಮೇಲೆ ಮರಾಠರ ದಾಳಿ: ಒಂದು ವಿವೇಚನೆ


             ಜಗತ್ತು ಕಂಡ ಕ್ರೂರ ಮತಾಂಧರಲ್ಲಿ ಒಬ್ಬ ಟಿಪ್ಪು. ಅವನೇ ಬರೆದ ಪತ್ರಗಳು, ಸಾಲು ಸಾಲು ದಾಖಲೆಗಳು, ಇಂದಿಗೂ ಉಳಿದಿರುವ ನಾಶದ, ಅತಿಕ್ರಮದ ಅವಶೇಷಗಳು ಅವನು ನಡೆಸಿದ ಹಿಂದೂಗಳ ಮಾರಣಾಧ್ವರ, ಮತಾಂತರ, ಅತ್ಯಾಚಾರ; ದೇಗುಲ, ಮನೆ, ಆಸ್ತಿ-ಪಾಸ್ತಿ, ಅರ್ಥ ವ್ಯವಸ್ಥೆಗಳ ನಾಶ; ಭಾಷೆಯ ಕಗ್ಗೊಲೆಗಳು ಅವನ ಮತಾಂಧತೆ, ಬರ್ಬರತೆ, ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಒಂದು ಸಮುದಾಯಕ್ಕೆ ದೀಪಾವಳಿಯನ್ನೇ ನರಕಸದೃಶವನ್ನಾಗಿಸಿ ಪ್ರತೀ ವರ್ಷ ಆ ಸಮಯಕ್ಕೆ ಶ್ರಾದ್ಧ ಆಚರಿಸುವಂತೆ ಮಾಡಿ ಆ ಸಮುದಾಯದ ಅನವರತ ದೀಪಾವಳಿಯ ಸಂಭ್ರಮವನ್ನೇ ಕಿತ್ತುಕೊಂಡಾತನ ನೆನಪೂ ಈ ದೀಪಾವಳಿಯ ಸಮಯದಲ್ಲಿ ಮಾಡಬಾರದು. ಆದರೆ ಕೆಲವರಿಗೆ ಆತ ತನ್ನ ಕೊನೆಗಾಲದಲ್ಲಿ ಕೆಲ ದೇವಾಲಯಗಳಿಗೆ ನೀಡಿದ ದಾನ, ಮರಾಠರದ್ದು ಎನ್ನಲಾದ ದಾಳಿಯ ಸಮಯದಲ್ಲಿ ಶೃಂಗೇರಿಗೆ ನೀಡಿದ ಸಹಾಯ ಇವೆಲ್ಲಾ ಆತ ಮತಾಂಧನಾಗಿಯೇ ಸದಾಕಾಲ ಇದ್ದದ್ದು ಹೌದೇ ಎನ್ನುವ ಸಂಶಯ ಮೂಡಲೂ ಕಾರಣವಾಗಿದೆ. ಅದಕ್ಕಾಗಿ ಒಂದಷ್ಟು ಇತಿಹಾಸದ ಕೆದಕುವಿಕೆ ಅನಿವಾರ್ಯವಾಗಿದೆ. ಟಿಪ್ಪುವನ್ನು ಆತ ಮುಸ್ಲಿಂ ಎನ್ನುವ ಕಾರಣಕ್ಕೆ ವೈಭವೀಕರಿಸುವ ಹಾಗೂ ಅವನು ಕೊನೆಗಾಲದಲ್ಲಿ ತನ್ನ ಹಾಗೂ ತನ್ನ ಮಕ್ಕಳ ಜೀವ ಉಳಿಸಿಕೊಳ್ಳುವ ಸಲುವಾಗಿ ಮಾಡಿದ ಕೆಲವೇ ಕೆಲವು ಪುಣ್ಯಕಾರ್ಯಗಳನ್ನು ಬಳಸಿ ಅವನ ಕ್ರೌರ್ಯವನ್ನು ಮುಚ್ಚಿಡಲು ಪ್ರಯತ್ನಿಸುವ ಮುಸ್ಲಿಮರ ಹಾಗೂ ಜಾತ್ಯಾತೀತವಾದಿಗಳ ಕಣ್ಣು ತೆರೆಸಲು ಸಾಧ್ಯವೇ ಇಲ್ಲ. ನಿಜೇತಿಹಾಸವನ್ನು ಒಪ್ಪುವ ಸಹೃದಯಿಗಳ ಸಂಶಯವನ್ನು ನಿವಾರಿಸುವುದಂತೂ ಸರ್ವಮಾನ್ಯ.

          ನಿಜಕ್ಕೂ 1791ರ ಏಪ್ರಿಲ್ನ ಆ ದಿನಗಳಲ್ಲಿ ಶೃಂಗೇರಿಯಲ್ಲಿ ಏನು ನಡೆಯಿತು? ಇದಕ್ಕಾಗಿ ಸ್ವಲ್ಪ ಆಗಿನ ರಾಜಕೀಯ ಸನ್ನಿವೇಶವನ್ನೂ ಅವಲೋಕಿಸಬೇಕಾಗುತ್ತದೆ. ನಾನಾ ಫಡ್ನವೀಸನು ಮಹದಾಜಿ ಸಿಂಧಿಯಾಗೆ 1784ರ ಸೆಪ್ಟೆಂಬರ್ 5ರಂದು ಬರೆದ ಪತ್ರ ಹಾಗೂ ಅದರ ಬಳಿಕ ನಡೆದ ಘಟನೆಗಳು ಆಗಿನ ಬದಲಾದ ರಾಜಕೀಯ ಸನ್ನಿವೇಶವನ್ನು ಹೊರಗೆಡಹುತ್ತದೆ. ಅದರಲ್ಲಿರುವ ಒಕ್ಕಣೆ ಹೀಗಿದೆ :- "ಟಿಪ್ಪುವಿನ ನಡೆಗಳು ಸರಿಯಾಗಿಲ್ಲ. ಅವನು ಅಹಂಕಾರದಿಂದ ವರ್ತಿಸುತ್ತಿದ್ದಾನೆ. ಇತ್ತೀಚೆಗೆ ನೂರ್ ಮುಹಮ್ಮದನಿಗೆ ಬರೆದ ಪತ್ರದಲ್ಲಿ ಟಿಪ್ಪು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50,000 ಹಿಂದೂಗಳನ್ನು ತಾನು ಇಸ್ಲಾಂಗೆ ಮತಾಂತರಿಸಿದ ಘನಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ, ಈ ಹಿಂದೆ ಯಾವುದೇ ಪದಿಶಾಹ್ ಅಥವಾ ವಜೀರ್ ಮಾಡಲಾಗದ ಕಾರ್ಯ ತನ್ನಿಂದ ಅಲ್ಲಾಹನ ಕೃಪೆಯಿಂದ ಸಾಧ್ಯವಾಗಿದೆ, ಇಡೀ ಹಳ್ಳಿಗಳನ್ನೇ ತಾನು ಮತಾಂತರಿಸಿದೆ ಎಂದು ಬೀಗಿದ್ದಾನೆ."

            ಈ ಪತ್ರ ಮರಾಠರು ಹಿಂದೂ ವಿರೋಧಿ ಮತಾಂಧ ಟಿಪ್ಪುವಿನಿಂದ ದೂರ ಸರಿಯುತ್ತಿರುವುದರ ದ್ಯೋತಕವಾಗಿದೆ. ದಶಕದ ಹಿಂದೆ ಹೈದರನ ಜೊತೆ ಮೈತ್ರಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ್ದ ಮರಾಠರು ಹಿಂದೂಗಳ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯಗಳಿಂದ ಕ್ರೋಧಗೊಂಡು ಟಿಪ್ಪುವಿನಿಂದ ದೂರ ಸರಿದರು. ಅಂತಹಾ ಮರಾಠರು ಸನಾತನ ಸಂಸ್ಕೃತಿಯನ್ನು ಉಳಿಸಲು ಧರೆಗವತರಿಸಿದ್ದ ದಿವ್ಯತೇಜ ಶಂಕರರು ಸ್ಥಾಪಿಸಿದ್ದ, ಶಂಕರರ ತತ್ತ್ವವನ್ನು ಅನವರತ ಪಾಲಿಸುತ್ತಿದ್ದ ಪೀಠವೊಂದರ ಮೇಲೆ ಆಕ್ರಮಣ ಮಾಡಲು, ದೇವರ ವಿಗ್ರಹ ಚಲನೆ ಮಾಡಲು ಸಾಧ್ಯವೇ? ಅದರಲ್ಲೂ ಮತಾಂಧ ಆಕ್ರಮಣಕಾರ ದುಶ್ಶಕ್ತಿಗಳ ದುರಾಡಳಿತದ ನಡುವಿನಿಂದ ಜೈ ಭವಾನಿ ಎಂದು ಘರ್ಜಿಸಿ ಎದ್ದು ಸುತ್ತಲಿದ್ದ ಮತಾಂಧ ಶಕ್ತಿಗಳ ಎದೆಗೆ ಒದ್ದು ಗೆದ್ದು ಸ್ಥಾಪಿಸಿದ್ದ ಶಿವಛತ್ರಪತಿಯ ಹಿಂದೂಪದಶಾಹಿ ತಾನು ಜಗದ್ಗುರು ಪೀಠವೆಂದು ಪೂಜಿಸುತ್ತಿದ್ದ ಹಿಂದೂಧರ್ಮಪೀಠವೊಂದಕ್ಕೆ ಅನ್ಯಾಯ ಮಾಡಲು ಸಾಧ್ಯವೇ? ಟಿಪ್ಪುವಿನ ಹಿಂದೂ ವಿರೋಧಿ ನೀತಿ ಟಿಪ್ಪುವನ್ನು ಸದೆಬಡಿಯುವ ಸಲುವಾಗಿ ಮರಾಠರು ಬ್ರಿಟಿಷರ ಜೊತೆಗೂ ಸೇರುವಂತೆ ಮಾಡಿತು. ಈ ಮೈತ್ರಿಯನ್ನು ರೂಪಿಸುವಲ್ಲಿ ಪುಣೆಯ ಇಂಗ್ಲಿಷ್ ನಿವಾಸಿ ಚಾರ್ಲ್ಸ್ ಡಬ್ಲ್ಯೂ ಮಾಲೆಟ್ ನ ಪಾತ್ರ ಪ್ರಮುಖವಾದದ್ದು. ಶನಿವಾರ ವಾಡಾ ದರ್ಬಾರ್‌ನ ಪ್ರಸಿದ್ಧ ಥಾಮಸ್ ಡೇನಿಯಲ್-ಜೇಮ್ಸ್ ವೇಲ್ಸ್ ವರ್ಣಚಿತ್ರವು ಮಾಲೆಟ್ ಮರಾಠರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ತೋರಿಸುತ್ತದೆ. ಆದರೆ ಈ ಪ್ರಕರಣವನ್ನಿಟ್ಟುಕೊಂಡು ಮರಾಠರು ಬ್ರಿಟಿಷರ ಪರ ಎನ್ನಲಾಗದು. ಅದು ಹಿಂದೂ ವಿರೋಧಿ ಮತಾಂಧ ಟಿಪ್ಪುವನ್ನು ಕೊನೆಗಾಣಿಸಲು ಮರಾಠರು ಮಾಡಿಕೊಂಡ ತಾತ್ಕಾಲಿಕ ಸಂಧಿಯಷ್ಟೇ. ಶತ್ರುವನ್ನು ನಿವಾರಿಸಲು ಅವನ ಶತ್ರುವಿನೊಡನೆ ಮಿತ್ರನಾಗುವ ಕೂಟ ನೀತಿ.

            1790-1792ರ ಟಿಪ್ಪು ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ, ಮರಾಠಾ ಮುಖ್ಯಸ್ಥ ರಘುನಾಥ ರಾವ್ ‘ದಾದಾ’ ಕುರುಂದವಾಡಕರ್ ಅವರ ಸೈನ್ಯಕ್ಕೆ ಸೇರಿದ ತಂಡವೊಂದು ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಲೂಟಿಗೈದು ಅಪವಿತ್ರಗೊಳಿಸಿತು. ಈ ದಾಳಿಯ ಕಳಂಕವು ಇಂದಿಗೂ ಉಳಿದುಕೊಂಡಿದೆ ಮತ್ತು ಮರಾಠರು ಹಾಗೂ ದಾಳಿ ಮಾಡಿದ ತಂಡದ ನಾಯಕತ್ವವನ್ನು ಹೊಂದಿದ್ದ ಪರಶುರಾಮ್ ಭಾವು ಪಟವರ್ಧನ್ ಅವರನ್ನು ಈ ದಾಳಿಗೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಆದರೆ 1791ರ ಮರಾಠಾ ಪತ್ರಗಳು ಭಾಷೆಯ ಪರಿಚಯವಿಲ್ಲದ ಅನೇಕ ವ್ಯಾಖ್ಯಾನಕಾರರನ್ನು ದಾರಿ ತಪ್ಪಿಸಿವೆ ಮತ್ತು ಈ ಅಸಹ್ಯಕರ ಪ್ರಸಂಗದ ಮೇಲೆ ವಿಭಿನ್ನ ಬೆಳಕನ್ನು ಚೆಲ್ಲುತ್ತವೆ.

             1774ರಿಂದ, ಆಂಗ್ಲರೊಂದಿಗಿನ ಒಂಬತ್ತು ವರ್ಷಗಳ ಯುದ್ಧದಲ್ಲಿ ಮತ್ತು ನಂತರ, ಮರಾಠರ ವಶದಲ್ಲಿದ್ದ ಕೃಷ್ಣ ಹಾಗೂ ತುಂಗಭದ್ರಾ ನದಿಗಳ ನಡುವಿನ ಪ್ರದೇಶ ಹೈದರ್ ಅಲಿ ಮತ್ತು ಟಿಪ್ಪುವಿನ ಪಾಲಾಯಿತು. ಟಿಪ್ಪು ಮರಾಠರೊಂದಿಗೆ ಮಾತುಕತೆಯಲ್ಲಿ ತೊಡಗಿರುವಾಗಲೇ ಮರಾಠಾ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದ. ಮಾತ್ರವಲ್ಲ 1784-85ರಲ್ಲಿ ನರಗುಂದದ ಮುಖ್ಯಸ್ಥ ವ್ಯಂಕಟ್ ರಾವ್ ಭಾವೆ ಮತ್ತು ಅವರ ದಿವಾನ ಕಲೋಪಂತ್ ಪೇಠೆ ಅವರನ್ನು ಬಂಧಿಸಿ ಸರಪಳಿಯಲ್ಲಿ ಬಿಗಿದು ಮೆರವಣಿಗೆ ಮಾಡಿದ. ಪೇಠೆ ಟಿಪ್ಪುವಿನ ಸೆರೆಮನೆಯಲ್ಲಿ ಸಾವನ್ನಪ್ಪಿದರು. ಅದೇ ವರ್ಷ ತನ್ನ ಏಜೆಂಟ್ ನೂರ್ ಮುಹಮ್ಮದನಿಗೆ "ಕೇವಲ ಒಂದೇ ದಿನದಲ್ಲಿ ಮಹಿಳೆಯರು ಸೇರಿದಂತೆ ಐವತ್ತು ಸಾವಿರ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ್ದೇನೆ. ಧಾರವಾಡ ವಶವಾಯಿತು. ಅನೇಕ ಸುಂದರ ಮಹಿಳೆಯರನ್ನು ಮುಸ್ಲಿಂ ಜನಾನಗಳಿಗೆ ಕರೆದೊಯ್ಯಲಾಯಿತು." ಎಂದು ಹೆಮ್ಮೆಯಿಂದ ಪತ್ರ ಬರೆಯುತ್ತಾನೆ.

           ಟಿಪ್ಪುವಿನ ಆಕ್ರಮಣದ ಸುದ್ದಿ ಕೇಳಿ ಪುಣೆಯಲ್ಲಿ ಅಸಮಧಾನ ಭುಗಿಲೆದ್ದಿತು. ಕೆರಳಿದ ನಾನಾ ಫಡ್ನವೀಸ, ಪರಶುರಾಮ್ ಭಾವು ಜೊತೆಗೆ ಸೇರುವಂತೆ ಹೋಳ್ಕರರನ್ನು ವಿನಂತಿಸಿ 1786ರಲ್ಲಿ ಟಿಪ್ಪು ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿ ಬಾದಾಮಿ ಕೋಟೆಯನ್ನು ವಶಪಡಿಸಿಕೊಂಡರು. ನಾನಾ ಪುಣೆಗೆ ಹಿಂದಿರುಗಿದ ನಂತರ, ತುಕೋಜಿ ಹೋಳ್ಕರ್ ಮತ್ತು ಪರಶುರಾಮ್ ಭಾವು ಒಪ್ಪಂದವೊಂದಕ್ಕೆ ಟಿಪ್ಪುವಿನ ಸಹಿ ಹಾಕಿಸಿಕೊಂಡರು. ಅದರಂತೆ ಟಿಪ್ಪು 48 ಲಕ್ಷ ರೂಪಾಯಿಗಳ ಗೌರವಧನವನ್ನು ನೀಡಬೇಕಾಯಿತು. ಜೊತೆಗೆ ಕೈದಿಗಳನ್ನೂ ವಿನಿಮಯ ಮಾಡಿಕೊಳ್ಳಬೇಕಾಯಿತು.

           1786ರಲ್ಲಿ ಸಹಾಯಕ್ಕಾಗಿ ನಾನಾ ಮಾಡಿದ ಕೋರಿಕೆಯನ್ನು ಇಂಗ್ಲೀಷರು ಸ್ವೀಕರಿಸಲಿಲ್ಲವಾದರೂ, 1790ರಲ್ಲಿ  ಟಿಪ್ಪು ವಿರುದ್ಧ ಮರಾಠರ ಸಹಾಯವನ್ನು ಪಡೆಯಲು ತಾವೇ ಆಸಕ್ತಿ ವಹಿಸಿದರು. ಆ ಸಮಯದಲ್ಲಿ ಒಂದು ಸಂಘಟಿತ ಕಾರ್ಯತಂತ್ರವನ್ನು ಜಾರಿಗೆ ತರಲಾಯಿತು. ಲಾರ್ಡ್ ಕಾರ್ನ್‌ವಾಲಿಸ್ ಟಿಪ್ಪುವಿನ ವಿರುದ್ಧ ಕಣಕ್ಕಿಳಿದು ಚೆನ್ನೈ ತಲುಪಿದ. ಮರಾಠರು ಹರಿ ಪಂತ್ ಫಡ್ಕೆ ಅವರ ನೇತೃತ್ವದಲ್ಲಿ ಪುಣೆಯನ್ನು ತೊರೆದರು. ನಂತರ ಪಟವರ್ಧನ್ ಸಹೋದರರ(ಪರಶುರಾಮ ಭಾವು ಮತ್ತು ರಘುನಾಥ ರಾವ್ ‘ದಾದಾ’) ನೇತೃತ್ವದಲ್ಲಿ ಮತ್ತೊಂದು ಸೈನ್ಯವು ಬಂದಿತು. ಪಟವರ್ಧನರು ಟಿಪ್ಪುವಿನ ಆಕ್ರಮಣವನ್ನು ಎದುರಿಸುತ್ತಾ ಈ ಯುದ್ಧಗಳಲ್ಲಿ ತಮ್ಮ ಕುಟುಂಬದ ಅನೇಕರನ್ನು ಕಳೆದುಕೊಂಡರು. ಶ್ರೀರಂಗಪಟ್ಟಣದ ಕಡೆಗೆ ಮುಖ ಮಾಡಿದ್ದ ಕಾರ್ನ್‌ವಾಲಿಸನ ಜೊತೆ ಸೇರುವುದಾಗಿ ಈ ಹಿಂದೆಯೇ ಭರವಸೆ ನೀಡಿದ್ದ ಪರಶುರಾಮ್ ಭಾವು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ತಾವು ಹಿಂದಿನ ದಶಕದಲ್ಲಿ ಕಳೆದುಕೊಂಡ ಪ್ರದೇಶವನ್ನು ಮರಳಿ ಗೆಲ್ಲಲು ಹೆಚ್ಚಿನ ಆದ್ಯತೆನೀಡುವುದು ಸರಿಯೆಂದು ಆತನಿಗೆ ಅನ್ನಿಸಿತು. ಅದರಂತೆಯೇ ಮುಂದುವರಿದ ಆತ ತಿಂಗಳುಗಳ ಮುತ್ತಿಗೆಯ ಬಳಿಕ 1791ರ ಏಪ್ರಿಲ್ 6 ರಂದು ಧಾರವಾಡದ ಕೋಟೆಯನ್ನು ವಶಪಡಿಸಿಕೊಂಡು ತುಂಗಭದ್ರಾವನ್ನು ದಾಟಿ ಹರಿಹರದಲ್ಲಿ ರಘುನಾಥ ರಾವ್ ಅವರನ್ನು ಸೇರಿದ. ರಘುನಾಥ ರಾವ್ ನಂತರ ದಕ್ಷಿಣಕ್ಕೆ ಮಾಯಕೊಂಡ ಮತ್ತು ಚೆಂಗಿರಿ ಕೋಟೆಯನ್ನು ವಶಪಡಿಸಿಕೊಂಡರು.

             ಈ ಸಮಯದಲ್ಲಿ ನೀಲಕಂಠ ಅಪ್ಪಾ (ರಘುನಾಥ ರಾವ್ ದಾದಾ ಅವರ ತಂದೆ) ಮೀರಜ್‌ನಲ್ಲಿರುವ ಬಾಳಾಸಾಹೇಬರಿಗೆ ಬರೆದ ಪತ್ರವು ಶೃಂಗೇರಿ ಮಠದ ಮೇಲೆ ನಡೆದ ದಾಳಿಯ ಮೊದಲ ಸೂಚನೆಯನ್ನು ನೀಡುತ್ತದೆ. ಪತ್ರದಲ್ಲಿ ಹೀಗಿದೆ - "ದಾದಾಸಾಹೇಬರ ಸೈನ್ಯದ ಲಮಾಣರು ಮತ್ತು ಪಿಂಡಾರಿಗಳು ಹೋಗಿ ಶೃಂಗೇರಿ ಮಠದಿಂದ ಆನೆ ಸೇರಿದಂತೆ ಲಕ್ಷಗಟ್ಟಲೆ ಧನವನ್ನು ಲೂಟಿ ಮಾಡಿದರು. ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದಾದಾಗೆ ನಾನು ಪತ್ರ ಬರೆದಿದ್ದೇನೆ." ಇದರ ನಂತರ ಏಪ್ರಿಲ್ ಮಧ್ಯಭಾಗದಲ್ಲಿ ಬರೆದ ಮತ್ತೊಂದು ಪತ್ರವು ಈ ರೀತಿಯಿದೆ; "ಲೂಟಿಕೋರರನ್ನು ಬಂಧಿಸಿ ಮಠಕ್ಕೆ ಸೇರಿದ ಜಂಬೂರಾ(?) ಮತ್ತು ಆನೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಹತ್ತು ಅಥವಾ ಇಪ್ಪತ್ತು ಅಪರಾಧಿಗಳನ್ನು ಬಂಧಿಸಲಾಯಿತು. ಆಗ ದಾದಾಸಾಹೇಬರು ತಮ್ಮ ಆಳುಗಳಾದ್ದರಿಂದ ಅವರ ವಿರುದ್ಧ ತಾನು ಕ್ರಮ ಕೈಗೊಳ್ಳುವುದಾಗಿ ಬರೆದರು. ಬಳಿಕ ಅಪರಾಧಿಗಳನ್ನು ಮತ್ತು ಆನೆಯನ್ನು ಅವರ ಬಳಿಗೆ ಕಳುಹಿಸಲಾಯಿತು. ಮೇ 14 ರಂದು, ರಘುನಾಥ ರಾವ್ ಅವರ ಮಗ ತ್ರಯಂಬಕ್ ರಾವ್ ಅವರು ಮೀರಜ್‌ನಲ್ಲಿರುವ ತಮ್ಮ ಚಿಕ್ಕಪ್ಪನಿಗೆ ಹೀಗೆ ಬರೆದರು, "ಸೇನೆ ತುಂಗಾ ನದಿಯನ್ನು ದಾಟುವ ಮೊದಲೇ, ಲಮಾಣಿ ಮತ್ತು ಪಿಂಡಾರಿಗಳು ಶಿವಮೊಗ್ಗವನ್ನು ತಲುಪಿದ್ದರು. ಅವರು ಹೋಗಿ ಶೃಂಗೇರಿಯಲ್ಲಿದ್ದ ಸ್ವಾಮಿಗಳ ಮಠವನ್ನು ಲೂಟಿ ಮಾಡಿದರು. ಸ್ವಾಮಿಗಳ ದಂಡ, ಕಮಂಡಲಗಳನ್ನು ಕೂಡಾ ದೋಚಿದರು. ಏನೂ ಉಳಿಯಲಿಲ್ಲ. ಮಹಿಳೆಯರ ಮೇಲೆ ಹಲ್ಲೆ (ಮತ್ತು ಅತ್ಯಾಚಾರ) ಮಾಡಲಾಯಿತು. ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾಮಿಗಳ ವಿಗ್ರಹ, ಲಿಂಗ ಇತ್ಯಾದಿಗಳನ್ನು ಲೂಟಿ ಮಾಡಲಾಗಿದೆ. ಆನೆಯ ಲಾಯವನ್ನು ಲಮಾಣಿಗಳು ಖಾಲಿ ಮಾಡಿ ತಂದರು. ಸ್ವಾಮಿಗಳು ಧ್ಯಾನದಲ್ಲಿದ್ದು ಐದು ದಿನಗಳಿಂದಲೂ ಉಪವಾಸದಿಂದಿದ್ದು ಪ್ರಾಣತ್ಯಾಗ ಮಾಡುವ ಮನಸ್ಥಿತಿಯಲ್ಲಿದ್ದಾರೆ."

           ವಸ್ತುಶಃ ಕೊನೆಯಲ್ಲಿ ಸ್ವಾಮಿಗಳು ಪ್ರಾಣ ತ್ಯಾಗ ಮಾಡುವ ಮನಸ್ಥಿತಿಯಲ್ಲಿದ್ದಾರೆಂದು ಹೇಳಿದುದು ಸತ್ಯವಾಗಿರಲಿಲ್ಲ. ಪತ್ರವು ಹೀಗೆ ಮುಂದುವರೆಯುತ್ತದೆ, "ತಂದೆಯವರಿಗೆ ಈ ಲೂಟಿಯ ಬಗ್ಗೆ ತಿಳಿದಾಗ, ಅವರು ಲಮಾಣರನ್ನು ಬಂಧಿಸಲು ಅಶ್ವಸೈನ್ಯವನ್ನು ಕಳುಹಿಸಿದರು. ಆನೆಯನ್ನು ವಶಕ್ಕೆ ಪಡೆಯಲಾಯಿತು. ಕಳವು ಮಾಡಿದ ಉಳಿದ ವಸ್ತುಗಳು ಪತ್ತೆಯಾಗಿಲ್ಲ." ಈ ವಿಷಯವು ಉಲ್ಬಣಗೊಳ್ಳುತ್ತಲೇ ಹೋಯಿತು. ಪುಣೆಯಲ್ಲಿರುವ ನಾನಾ ಫಡ್ನವೀಸ್ ಅವರ ಕಿವಿಗೂ ತಲುಪಿತು. ಡಿಸೆಂಬರ್ 1791ರಲ್ಲಿ ಅವರ ಗುಮಾಸ್ತರಿಂದ ಒಂದು ಪತ್ರವು ರಘುನಾಥ ರಾವ್ ಅವರಿಗೆ ತಲುಪಿತು. ಪತ್ರದಲ್ಲಿ ಹೀಗಿದೆ :- ಲಮಾಣರು ಮತ್ತು ಲೂಟಿಕೋರರು ಶೃಂಗೇರಿ ಮಠವನ್ನು ಲೂಟಿ ಮಾಡಿದ ಸುದ್ದಿ ನ್ಯಾಯಾಲಯಕ್ಕೆ ತಲುಪಿದೆ. ಎಲ್ಲಾ ವಿವರಗಳನ್ನು ಕಲೆಹಾಕಬೇಕು. "ಲೂಟಿಕೋರರು ನಾಲ್ಕೂ ದಿಕ್ಕಿನಿಂದ ಬಂದವರು. ನೀವು ಕ್ರಮ ಕೈಗೊಂಡಿದ್ದೀರಿ ಮತ್ತು ಇತರರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಬರೆದಿದ್ದೀರಿ. "ಸ್ವಾಮಿಗಳ ಮಠ ಲೂಟಿಯಾಗಿದೆ, ಹೀಗಾಗಿ ಸ್ವಾಮಿಗಳು ಉಪವಾಸ ಮಾಡುತ್ತಿದ್ದಾರೆ. ಸ್ವಾಮಿಗಳ ಅಸಮಾಧಾನ ಒಳ್ಳೆಯದಲ್ಲ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸ್ವಾಮಿಗಳಿಗೆ ಪರಿಹಾರ ನೀಡಬೇಕು ಮತ್ತು ಅವರ ತೃಪ್ತಿ, ಸಂತೋಷವನ್ನು ಕೋರಬೇಕು" ಎಂದು ನಾನಾ ಉತ್ತರಿಸಿದ್ದಾರೆ.

           ಮರಾಠಾ ಸೇನೆಯಲ್ಲಿನ ಪಿಂಡಾರಿಗಳು ಮತ್ತು ಟಿಪ್ಪುವಿನ ಸೇನೆಯಲ್ಲಿನ ಬೇಯ್ಡ್(Bayed) ಪಡೆಗಳು ಅನಿಯಮಿತ, ಅರೆಕಾಲಿಕ ಪಡೆಗಳು. ಯುದ್ಧದ ಬಳಿಕದ ಮಾಪಿಂಗ್ ಅಪ್ ಕಾರ್ಯಾಚರಣೆಗಗಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಅವರಿಗೆ ಸಂಬಳವಿರಲಿಲ್ಲ. ಯುದ್ಧದ ಬಳಿಕ ಲೂಟಿಯಿಂದ ಸಿಕ್ಕಿದ್ದಷ್ಟೇ ಅವರ ಪಾಲಿಗೆ.  ಗವರ್ನರ್ ಜನರಲ್, 24 ಏಪ್ರಿಲ್ 1792 ರಂದು ಲಾರ್ಡ್ ಕಾರ್ನ್‌ವಾಲಿಸ್ ಪರವಾಗಿ ಬರೆದ ಪತ್ರದಲ್ಲಿ-
"ಟಿಪ್ಪುವಿನ ಬೇಯ್ಡ್ ಪಡೆ ಮತ್ತು ಮರಾಠ ಸೈನ್ಯದ ಪಿಂಡಾರಿ ಪಡೆಗಳನ್ನು ಯಾವುದೇ ತಪಾಸಣೆ ಅಥವಾ ನಿಯಂತ್ರಣವಿಲ್ಲದೆ ಬಳಸಿಕೊಳ್ಳಲಾಗಿದ್ದ ಅನಿಯಮಿತ ಮತ್ತು ಘೋರ ವ್ಯವಸ್ಥೆಯ ಕಡೆಗೆ ಆತ ಗಮನ ಹರಿಸಲಿಲ್ಲ. ಆ ಪಡೆಗಳ ಸ್ವಭಾವದಿಂದಲಾಗಿ ಯಾವುದೇ ರಾಜ್ಯದಲ್ಲಿ ಸೈನ್ಯವು ಸಾಗಿದಾಗ ಅಲ್ಲಿನ ಅಧಿಕಾರಿಗಳಿಗೆ ವಿವರಣೆ ನೀಡಬೇಕಾದ ಸಂದರ್ಭ ಒದಗುತ್ತಿತ್ತು. ಇವೆಲ್ಲಾ ತಾತ್ಕಾಲಿಕವಾದ ಅನಾನುಕೂಲತೆಗಳೆಂದು ಪರಿಗಣಿಸಲಾಗುತ್ತದೆ ಎನ್ನುವ ವಿಶ್ವಾಸವನ್ನು ಆತ ಹೊಂದಿದ್ದ."

            ಪಿಂಡಾರಿಗಳು 17ರಿಂದ 19ನೇ ಶತಮಾನದ ಪೂರ್ವಾರ್ಧದಲ್ಲಿ ಭಾರತೀಯ ಉಪಖಂಡದಲ್ಲಿದ್ದ ಮುಸ್ಲಿಮ್ ಮತಾವಲಂಬಿಗಳಾದ ಅಕ್ರಮ ಸೇನಾ ಲೂಟಿಕೋರರು ಮತ್ತು ಅನ್ವೇಷಕರು. ಪಿಂಡ ಎನ್ನುವ ಮದ್ಯವನ್ನು ಸೇವಿಸುತ್ತಿದ್ದ ಇವರು ಆರಂಭದಲ್ಲಿ ಮೊಘಲ್ ಸೇನೆಯ ಜೊತೆಗಿದ್ದರು. ಬಳಿಕ ಮರಾಠಾ ಸೇನೆಗೆ ಸಹಾಯಕರಾಗಿದ್ದರು. ಅಂತಿಮವಾಗಿ ಸ್ವತಂತ್ರವಾಗಿದ್ದ ಇವರು ೧೮೧೭-೧೮ರ ಪಿಂಡಾರಿ ಯುದ್ಧದಲ್ಲಿ ನಾಶವಾದರು. ಪಿಂಡಾರಿಗಳು ವೇತನರಹಿತರಾಗಿದ್ದರು ಮತ್ತು ಯುದ್ಧದಲ್ಲಿ ಲೂಟಿಮಾಡಿದ ವಸ್ತುಗಳೇ ಅವರ ಸಂಪೂರ್ಣ ವೇತನವಾಗಿತ್ತು. ಇವರು ಕುದುರೆ ಸವಾರರು, ಪದಾತಿ ದಳಗಳಾಗಿದ್ದು, ಭಾಗಶಃ ಶಸ್ತ್ರಸಜ್ಜಿತರಾಗಿರುತ್ತಿದ್ದರು. ತಾವು ಜೊತೆಗೂಡಿದ್ದ ಸೇನೆಗೆ ಲಾಭವಾಗಲು ಅವ್ಯವಸ್ಥೆ ಸೃಷ್ಟಿಸುವುದು ಮತ್ತು ಶತ್ರು ಸ್ಥಾನಗಳ ಬಗ್ಗೆ ಸುದ್ದಿ ಒದಗಿಸುವ ಕೆಲಸ ಇವರದಾಗಿತ್ತು. ಆದರೆ ತಮಗಿದ್ದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಮಿತ್ರಸೇನೆಗಳಿಗೆ ಹಾನಿ, ಅವಮಾನ ಮಾಡಿದ್ದೂ ಉಂಟು. ಶೃಂಗೇರಿ ಪ್ರಕರಣವೂ ಅದರಲ್ಲೊಂದು.

            1791ರಲ್ಲಿ, ಮೂರು ಮಿತ್ರಪಕ್ಷಗಳು ಶ್ರೀರಂಗಪಟ್ಟಣದತ್ತ ಧಾವಿಸಿದಾಗ, ಟಿಪ್ಪುವಿನ ವಕೀಲ ಅಪಾಜಿ ರಾಮ್ ಮರಾಠರನ್ನು ತೃಪ್ತಿಗೊಳಿಸಲು ಬಯಸಿದ. "ಟಿಪ್ಪು ಕಂಚಿಯಲ್ಲಿದ್ದಾನೆ ಮತ್ತು ಅವಮಾನಕರವಾದ ಮಾತುಕತೆಗಳು ನಡೆಯುತ್ತಿದೆ. ಆತ ಪ್ರಜೆಗಳಿಗೆ ಕಿರುಕುಳ ನೀಡುತ್ತಿಲ್ಲ. ಕಾರ್ನ್‌ವಾಲಿಸ್ ಚೆನ್ನೈನಲ್ಲಿದ್ದಾನೆ ಮತ್ತು ಎರಡೂ ಕಡೆಯಿಂದ ಯುದ್ಧದ ಸಿದ್ಧತೆಗಳು ನಡೆಯುತ್ತಿವೆ. ಹೈದರ್ ಅಲಿ ತನ್ನ ಆಳ್ವಿಕೆಯು ಶುರುವಾದಾಗ ಆರಂಭಿಸಿದ್ದ ಕಂಚಿ ದೇವಾಲಯದ ಗೋಪುರದ ಕೆಲಸವನ್ನು ಪೂರ್ಣಗೊಳಿಸಲು ಟಿಪ್ಪು ಈಗ ಆದೇಶಿಸಿದ್ದಾನೆ. ತಾನೇ ನಿಲ್ಲಿಸಿದ್ದ ರಥೋತ್ಸವಕ್ಕೂ ಅನುಮತಿ ನೀಡಿದ್ದಾನೆ. ಕಂಚಿಯಲ್ಲಿ ವಾರ್ಷಿಕ ಉತ್ಸವದ ಸುಡುಮದ್ದು ಪ್ರದರ್ಶನದಲ್ಲೂ ಭಾಗವಹಿಸಿದ್ದಾನೆ" ಎಂದು ಮರಾಠ ಗುಪ್ತಚರರು ವರದಿ ಮಾಡಿದರು. ಹಿಂದೂ ದೇವತೆಗಳನ್ನು ತೃಪ್ತಿಪಡಿಸಲು ಪ್ರಾಯಶ್ಚಿತ್ತ ಪೂಜೆಗಳನ್ನು ಶ್ರೀರಂಗಪಟ್ಟಣಂನಲ್ಲಿ ಮಾಡಲು ಟಿಪ್ಪು ಬ್ರಾಹ್ಮಣರಿಗೆ ಆಜ್ಞಾಪಿಸಿದ. ಅದೇ ಸಮಯದಲ್ಲಿ ಹರಿಪಂತ್ ಫಡ್ಕೆ "ಟಿಪ್ಪುವಿನ ಆದೇಶದ ಮೇರೆಗೆ ರಂಗಸ್ವಾಮಿ ಮತ್ತು ಶಿವಾಲಯಗಳಲ್ಲಿ ಬ್ರಾಹ್ಮಣರು  ಪ್ರಾಯಶ್ಚಿತ್ತಾದಿ ಪೂಜಾಕಾರ್ಯಕ್ರಮಗಳನ್ನು ಕೈಗೊಂಡರು. ಒಬ್ಬರು ನೀರಿನಲ್ಲಿ ಕುಳಿತು, ನಲವತ್ತು ಬ್ರಾಹ್ಮಣರು ಇನ್ನೊಂದು ರೀತಿಯ ಜಪವನ್ನು ಮಾಡುತ್ತಿದ್ದಾರೆ. ಆತ ಶೃಂಗೇರಿ ಸ್ವಾಮಿಗಳನ್ನು ಅಲ್ಲಿಗೆ ಕರೆದೊಯ್ದಿದ್ದಾನೆ. ಶ್ರೀಗಳು ಉಪವಾಸದಲ್ಲಿದ್ದಾರೆ. ತಾನು ಎಲ್ಲವನ್ನೂ ಸರಿಪಡಿಸುತ್ತೇನೆ, ನೀವು ನಿಶ್ಚಿಂತರಾಗಿರಿ ಎಂದು ಅವರನ್ನು ಟಿಪ್ಪು ವಿನಂತಿಸುತ್ತಿದ್ದಾನೆ. ಗುರುಗಳಿಗೆ ಚಿನ್ನದ ವಿಗ್ರಹಗಳನ್ನೂ ಮತ್ತು ಬ್ರಾಹ್ಮಣಾರ್ಥಕ್ಕಾಗಿ ನಲವತ್ತು ಸಾವಿರ ರೂಪಾಯಿಗಳನ್ನು ಆತ ಕೊಟ್ಟಿದ್ದಾನೆ" ಎಂದು ಪತ್ರ ಬರೆದ. ಮತ್ತೊಂದು ಪತ್ರ, ‘ಅಪಾಜಿ ರಾಮ್ ಒಪ್ಪಂದಕ್ಕಾಗಿ ಮನವಿ ಮಾಡುತ್ತಿದ್ದಾರೆ’ ಎಂದು ಹೇಳುತ್ತದೆ. ಮಿತ್ರಪಡೆಗಳು ಅಂತಿಮವಾಗಿ ಫೆಬ್ರವರಿ 1792ರಲ್ಲಿ ಶ್ರೀರಂಗಪಟ್ಟಣವನ್ನು ಸುತ್ತುವರೆದವು. ಕಾರ್ನ್‌ವಾಲಿಸ್ ಟಿಪ್ಪುವಿನ ಬಲವನ್ನೆಲ್ಲಾ ನಾಶಮಾಡಲು ಉತ್ಸುಕನಾಗಿದ್ದ. ಆದರೆ ನಿಜಾಮ ಮತ್ತು ಮರಾಠಾ ಕಮಾಂಡರ್ ಹರಿ ಪಂತ್ ಟಿಪ್ಪುವನ್ನು ಬಂಧಿಯಾಗಿಸಲು ಮಾತ್ರ ಬಯಸಿದ್ದರು. ಆದಾಗ್ಯೂ ಟಿಪ್ಪು ಉಗ್ರವಾಗಿ ಹೋರಾಡಿದ. ಅಂತಹ ಯುದ್ಧಕ್ಕಾಗಿ ಹರಿ ಪಂತ್ ಆಂಗ್ಲರು ಮತ್ತು ಟಿಪ್ಪು ಇಬ್ಬರನ್ನೂ ಹೊಗಳಿದ್ದಾನೆ. "ಇಂಗ್ಲಿಷರು ಹೋರಾಡಿ ದಣಿದಿದ್ದರು, ಆದ್ದರಿಂದ ಒಪ್ಪಂದವೊಂದಕ್ಕೆ ಒಪ್ಪಿಕೊಳ್ಳಬೇಕಾಯಿತು" ಎಂದು ಹರಿ ಪಂತ್ ಹೇಳಿದ್ದಾನೆ. ಬಿದನೂರು ಮತ್ತು ತುಂಗಭದ್ರೆಯ ಉತ್ತರದ ಸಂಪೂರ್ಣ ಪ್ರದೇಶವನ್ನು ವಶಪಡಿಸಿಕೊಂಡ ನಂತರ ಪರಶುರಾಮ ಭಾವು, ಟಿಪ್ಪುವಿನ ಮಕ್ಕಳನ್ನು ಕಾರ್ನ್‌ವಾಲಿಸ್‌ಗೆ ಒತ್ತೆಯಾಳಾಗಿ ಕಳುಹಿಸಿದ ದಿನದಂದು ಶ್ರೀರಂಗಪಟ್ಟಣವನ್ನು ತಲುಪಿದ.

            ಶೃಂಗೇರಿಯ ಪ್ರಸಂಗ ಮರಾಠರ ಪಾಲಿಗೆ ರಾಜನೀತಿಯೂ ಆಗಿರಲಿಲ್ಲ, ಯುದ್ಧ ಯೋಜನೆಯೂ ಆಗಿರಲಿಲ್ಲ. ನಿಜವಾದ ಯುದ್ಧದಲ್ಲಿ ಭಾಗವಹಿಸದ ಪರಭಕ್ಷಕ ಪಡೆಗಳಾದ ಪಿಂಡಾರಿಗಳು ಮತ್ತು ಲಮಾಣರಿಂದ ಇದು ನಡೆದುಹೋಯಿತು. ಮರಾಠರು ಹಿಂದೂಗಳಾಗಿದ್ದು ಬ್ರಾಹ್ಮಣ ನಾಯಕರ ನೇತೃತ್ವವಿದ್ದ ಕಾರಣ ಅವರು ಹಾನಿಮಾಡುವ ಭಯವಿಲ್ಲದಿದ್ದುದರಿಂದ ಶೃಂಗೇರಿ ಮಠವು ಈ ಪ್ರದೇಶದ ಎಲ್ಲಾ ಶ್ರೀಮಂತರಿಗೆ ಸುರಕ್ಷಿತ ಭಂಡಾರವಾಗಿ ಕಾಣುತ್ತಿತ್ತು ಎಂದು ಬೃಹತ್ ಸಂಖ್ಯೆಯಲ್ಲಿ ಐತಿಹಾಸಿಕ ಪತ್ರಗಳನ್ನು ಸಂಗ್ರಹಿಸಿರುವ ಇತಿಹಾಸಕಾರ ವಿವಿ ಖರೆ ಬರೆಯುತ್ತಾರೆ. ಮರಾಠರ ನಿಯಮಿತ ಸ್ಥಾಯೀ ಪಡೆಗಳು ಮಠದ ಮೇಲೆ ದಾಳಿ ಮಾಡದಿದ್ದರೂ, 'ಯಾವುದೇ ತಪಾಸಣೆ ಅಥವಾ ನಿಯಂತ್ರಣ'ದೊಂದಿಗೆ ಕಾರ್ಯನಿರ್ವಹಿಸದ ಪಿಂಡಾರಿಗಳು ಮಠದ ಮೇಲೆ ದಾಳಿ ಮಾಡಿದರು. ಮರಾಠಾ ಆಡಳಿತವು ಈ ಕೃತ್ಯದ ಬಗ್ಗೆ ದುಃಖಿತವಾಗಿತ್ತು ಮತ್ತು ಸುಮಾರು ಒಂದು ವರ್ಷದ ಬಳಿಕವೂ ಸ್ವಾಮಿಗಳಿಗೆ ಪರಿಹಾರ ಒದಗಿಸಿ ಸಮಾಧಾನಪಡಿಸಲು ಪ್ರಯತ್ನಗಳು ನಡೆಯುತ್ತಿದ್ದವು. ಇಂದಿಗೂ ಪೇಶ್ವೆಗಳ ಮನೆತನ ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಈ ತಪ್ಪಿನ ಪ್ರಾಯಶ್ಚಿತ್ತಾದಿ ಕ್ರಮಗಳನ್ನು ಮಾಡಿಸುತ್ತಿದೆ ಎಂಬ ಮಾಹಿತಿ ಇದೆ(ಅಧಿಕೃತವಲ್ಲ). 1791 ರಲ್ಲಿ, ಸುತ್ತಲಿಂದ ದಾಳಿ ಆರಂಭವಾಗಿ ತಾನು ಇನ್ನೇನು ಜೀವ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಹುಟ್ಟಿದಾಗ ಟಿಪ್ಪು, ದೇವಾಲಯಗಳು ಹಾಗೂ ಬ್ರಾಹ್ಮಣರ ಕಡೆಗಿನ ತನ್ನ ನಿಲುವನ್ನು ಬದಲಾಯಿಸಿದ. ಮರಾಠಾ ಪತ್ರ ಬರೆದವರು ಟಿಪ್ಪುವಿನ ಹೊಸ ನೀತಿಗಳ ಬಗೆಗೂ ಟೀಕೆ ಮಾಡಿದ್ದಾರೆ, ಏಕೆಂದರೆ ಅವುಗಳು ಅವನ ಲಕ್ಷಣವಾಗಿರಲೇ ಇಲ್ಲ. ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಬೆದರಿ ಆತ ಇಂದಿನ ರಾಜಕಾರಣಿಗಳಂತೆ ದೇವಾಲಯ ಸುತ್ತುವ ಕೆಲಸಕ್ಕಿಳಿದಿದ್ದ. ಕಂಚಿ ಮತ್ತು ಶೃಂಗೇರಿ ಪ್ರಕರಣಗಳು ಅದರದ್ದೇ ಅಧ್ಯಾಯಗಳಷ್ಟೆ. ಹಾಗಾಗಿ ಈ ಪ್ರಕರಣಗಳನ್ನಿಟ್ಟುಕೊಂಡು ಟಿಪ್ಪುವನ್ನು ಹಿಂದೂ ಹಿತರಕ್ಷಕ ಅನ್ನುವಂತೆಯೂ ಇಲ್ಲ; ಅವು ಆತ ಹಿಂದೆ ಹಿಂದೂಗಳ, ಹಿಂದೂ ದೇವಾಲಯಗಳ ಮೇಲೆ ಎಸಗಿದ್ದ ಘನಘೋರ ಅತ್ಯಾಚಾರವನ್ನು ಮರೆಸುವುದೂ ಇಲ್ಲ. ಜೊತೆಗೆ ಈ ಪ್ರಕರಣವನ್ನಿಟ್ಟುಕೊಂಡು  ಮರಾಠರನ್ನು ಖಂಡಿಸಲೂ ಸಾಧ್ಯವಿಲ್ಲ.

ಶನಿವಾರ, ಆಗಸ್ಟ್ 20, 2022

ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು

 ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು


ಖಗೋಳ ಶಾಸ್ತ್ರಕ್ಕೆ ಪ್ರಾಚೀನ ಭಾರತದ ಕೊಡುಗೆ ಅಪಾರ. ಪ್ರಸಕ್ತ ಲಭ್ಯವಿರುವ ಐತಿಹಾಸಿಕ ದಾಖಲೆಗಳನ್ನು ಗಮನಿಸಿದರೆ ಪ್ರಾಚೀನ ಭಾರತದಲ್ಲಿ ಮೂರು ಮಹತ್ತಾದ ಖಗೋಳ ವೀಕ್ಷಣಾಲಯಗಳಿದ್ದವು. ಮೆಹರೂಲಿ, ಉಜ್ಜಯಿನಿ ಹಾಗೂ ಮಹೋದಯಪುರಂಗಳಲ್ಲಿ ಈ ವೀಕ್ಷಣಾಲಯಗಳು ಸ್ಥಿತವಾಗಿದ್ದವು. ಮೆಹರೂಲಿಯಲ್ಲಿ ವರಾಹಮಿಹಿರ ವಿನ್ಯಾಸಗೊಳಿಸಿದ, ಶಕಪುರುಷ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ ವೀಕ್ಷಣಾಲಯವಿತ್ತು. ಉಜ್ಜಯಿನಿಯ ವೀಕ್ಷಣಾಲಯವೂ ಬಹುಷಃ ವಿಕ್ರಮಾದಿತ್ಯನಿಂದಲೇ ನಿರ್ಮಿಸಲ್ಪಟ್ಟಿತ್ತು. ಉಜ್ಜಯಿನಿಯಲ್ಲಿ ಹಲವು ಬುದ್ಧಿವಂತ ತಲೆಗಳು ಒಟ್ಟುಗೂಡಿದ್ದವು. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ ೧ & ೨, ವಟೇಶ್ವರ ಮುಂತಾದ ಘಟಾನುಘಟಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು. ಮಹೋದಯಪುರಂನಲ್ಲಿನ ವೀಕ್ಷಣಾಲಯವನ್ನು ಶಂಕರನಾರಾಯಣ ಎನ್ನುವ ವಿದ್ವಾಂಸ (~ ಸಾ.ಶ. 860) ವಿನ್ಯಾಸಗೊಳಿಸಿದ. ಹಲವು ಪರಿಚಿತ ವೀಕ್ಷಣಾ ಉಪಕರಣಗಳು ಇಲ್ಲಿದ್ದವು. ಆದರೆ ಈ ವೀಕ್ಷಣಾಲಯದ ಒಂದು ಇಟ್ಟಿಗೆಯೂ ಈಗ ಉಳಿದಿಲ್ಲ.


ಜ್ಯೋತಿಷ್ಯ ಮತ್ತು ಕಾಲಗಣನೆಗೆ ಅವಂತಿಯ ಕೊಡುಗೆ ಅನನ್ಯ. ಶಕಕರ್ತ ವಿಕ್ರಮಾದಿತ್ಯನ ಆಡಳಿತಕ್ಕೂ ಇದು ಒಳಪಟ್ಟಿತ್ತು. ಪ್ರಾಚೀನ ಮಾಲವವೇ ಅವಂತೀ. ಅದರ ಒಂದು ಭಾಗ ಉಜ್ಜಯಿನಿಯಾದರೆ ಇನ್ನೊಂದು ಮಾಹಿಷ್ಮತಿಯಾಗಿತ್ತು.ಜಗದ್ಗುರು ಶ್ರೀ ಶಂಕರಾಚಾರ್ಯರ ವೇದಾಂತ ಸಂವಾದ ನಡೆದುದು ಈ ಮಾಲವದಲ್ಲೇ. ಮಾಲವ ಜ್ಯೋತಿಷಿ ಹಾಗೂ ಖಗೋಳ ವಿಜ್ಣಾನಿಗಳ ಅಚ್ಚುಮೆಚ್ಚಿನ ಕ್ಷೇತ್ರವಾಗಿತ್ತು. ಉಜ್ಜಯಿನಿಯಲ್ಲಿದ್ದ ಖಗೋಳ ವೀಕ್ಷಣಾಲಯವೂ ಅದಕ್ಕೆ ಕಾರಣ. ಬಹುಷಃ ವಿಕ್ರಮಾದಿತ್ಯನೇ ಇದನ್ನು ಸ್ಥಾಪಿಸಿರಬಹುದು. ಸೂರ್ಯಕೇಂದ್ರಿತ ಅವಧಿಗಳಿಗೆ ತ್ರಿಕೋನಮಿತಿಯ ಕೋಷ್ಟಕಗಳಿಂದ ಹಿಡಿದು ಅಕ್ಷಾಂಶ ಮತ್ತು ರೇಖಾಂಶ ನಿರ್ಣಯದ ತತ್ವಗಳವರೆಗೆ ಎಲ್ಲವೂ ಇಲ್ಲಿಂದ ಬಂದವು. ಶೂನ್ಯ ಡಿಗ್ರಿ ಮಧ್ಯರೇಖೆ ಹಾದು ಹೋಗುವುದೇ ಇಲ್ಲಿ. ಉಜ್ಜಯಿನಿ ಮಹಾಕಾಲನ ನೆಲೆ ಆಗಲೂ ಕಾರಣವೇ ಅದು. ಸೃಷ್ಟಿಯ ಆರಂಭದಲ್ಲೇ ಈ ನಗರವಿತ್ತು (ಸ್ಕಂದಪುರಾಣ ಉಜ್ಜಯಿನಿಯನ್ನು ಪ್ರತಿಕಲ್ಪ ಎಂಬುದಾಗಿ ಹೆಸರಿಸಿದೆ.) ಎನ್ನುವ ಪ್ರತೀತಿಗೂ ಅದೇ ಕಾರಣ. ಅಂತಹಾ ಮಧ್ಯಬಿಂದುವಿನಲ್ಲಿ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಿದ್ದೂ ಪ್ರಾಚೀನ ಭಾರತೀಯರ ಅಪ್ರತಿಮ ಖಗೋಳ ಜ್ಣಾನಕ್ಕೆ ಸಾಕ್ಷಿ.


ಉಜ್ಜಯಿನಿಯ ವಿಕ್ಷಣಾಲಯದಿಂದ ಹೊರಬಿದ್ದ ಅದ್ವಿತೀಯ ಸಂಶೋಧನೆಗಳಿಂದ ಭಾರತೀಯ ಕೃಷಿ ಮತ್ತು ವ್ಯಾಪಾರಗಳು ನಿಖರವಾದ ಸಂಚರಣೆ ಹಾಗೂ ದಿನಸೂಚಿಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದವು. ಅರಬ್ಬರು ಹಾಗೂ ಯೂರೋಪಿಯನ್ನರು ಇಲ್ಲಿಂದಲೇ ಖಗೋಳ ವಿಜ್ಞಾನದ ತಂತ್ರಗಳನ್ನು ಪಡೆದರು.  ಭೋಜರಾಜನ ತರುವಾಯ ಉಜ್ಜಯಿನಿ ದುರ್ಬಲವಾಯಿತು. ದೆಹಲಿಯನ್ನು ಆಳುತ್ತಿದ್ದ ಇಲ್ತಮಿಶ್ ಉಜ್ಜಯಿನಿಯ ಮೇಲೆ ದಾಳಿ ಮಾಡಿ ಮಹಾಕಾಲನ ಮಂದಿರವನ್ನೂ , ಖಗೋಳ ವೀಕ್ಷಣಾಲಯವನ್ನೂ ನಾಶ ಮಾಡಿ ಚಿನ್ನದ ಮಹಾಕಾಲನ ಮೂರ್ತಿಯನ್ನು ದೆಹಲಿಗೆ ಹೊತ್ತೊಯ್ಯುತ್ತಾನೆ. ಉಜ್ಜಯಿನಿಯನ್ನು ಲೂಟಿಗೈದು ಮಹಾಕಾಲನ ದೇವಾಲಯದ ಸ್ಥಳದಲ್ಲೇ ಮಸೀದಿಯನ್ನೂ ನಿರ್ಮಿಸುತ್ತಾನೆ. ಶಕಪುರುಷ ವಿಕ್ರಮನ ದೊಡ್ಡದಾದ ಕಂಚಿನ ಪ್ರತಿಮೆಯೊಂದನ್ನು ಈ ವೀಕ್ಷಣಾಲಯದಲ್ಲಿ ಖಗೋಳ ಶಾಸ್ತ್ರಜ್ಞರು ಬಳಸಿದ್ದರು. ಇಲ್ತಮಿಶ್ ಅವಮಾನಿಸಲೆಂದೇ ಅದನ್ನು ದೆಹಲಿಗೆ ಕೊಂಡೊಯ್ದು ಒಡೆದು ಹಾಕಿದ. ಅಬು ಉಮ್ರ್‌ನ ತಬ್ಕತ್-ಇ-ನಾಸಿರಿ ಇಲ್ತುಮಿಶ್‌ನಿಂದ ಉಜ್ಜಯಿನಿಯ ನಾಶವನ್ನು ದಾಖಲಿಸಿದೆ. ಜಲಾಲುದ್ದೀನ್ ಫಿರೋಜ್ ಶಾ ಖಿಲ್ಜಿ ಎರಡೆರಡು ಬಾರಿ ದಾಳಿ ಮಾಡಿ ಅಳಿದುಳಿದ ದೇವಾಲಯಗಳನ್ನು ನಾಶಮಾಡಿ ನಗರವನ್ನು ನರಕ ಸದೃಶಗೊಳಿಸುತ್ತಾನೆ. ಬಳಿಕ ಹಲವು ಮುಸ್ಲಿಮ್ ರಾಜರುಗಳ ಆಡಳಿತವನ್ನು ಕಂಡ ಉಜ್ಜಯಿನಿ ನಲುಗಿ ಹೋಯಿತು.


ಮುಂದೆ 1725ರಲ್ಲಿ ರಾಜಾ ಜಯಸಿಂಹ ಇಲ್ಲಿನ ಖಗೋಳ ವೀಕ್ಷಾಣಾಲಯವನ್ನು ಪುನರುಜ್ಜೀವನಗೊಳಿಸಿದ. ಖಗೋಳ ಶಾಸ್ತ್ರಕ್ಕೆ ಈತನ ಕೊಡುಗೆ ಅನನ್ಯ. ಖಗೋಲಶಾಸ್ತ್ರದಲ್ಲಿ ನಿಷ್ಣಾತನಾಗಿದ್ದ ಜಯಸಿಂಹ ಪಂಚಾಂಗ ಪರಿಷ್ಕರಣೆ, ಗ್ರಹಗಳ ಚಲನಾಧ್ಯಯನ, ಆಕಾಶಕಾಯಗಳ ವೀಕ್ಷಣೆಯನ್ನು ಚೆನ್ನಾಗಿ ಬಲ್ಲವನಾಗಿದ್ದುದು ಮಾತ್ರವಲ್ಲದೆ ಅವುಗಳ ಕಲಿಕೆಗೆ ಪ್ರೋತ್ಸಾಹವನ್ನೂ ಕೊಟ್ಟಿದ್ದ. ಯೂಕ್ಲಿಡ್‌ನ‌ ಜ್ಯಾಮಿತಿಯ ಗ್ರಂಥ, ಟಾಲೆಮಿಯ ರಸಶಾಸ್ತ್ರಗ್ರಂಥ, ಜಾನ್‌ ನೇಪಿಯರ್‌ನ ಕೃತಿಗಳನ್ನು ಸ್ವತಃ ಸಂಸ್ಕೃತಕ್ಕೆ ಅನುವಾದಿಸಿದ್ದ. ಗ್ರಹನಕ್ಷತ್ರಗಳನ್ನು ನೋಡುವುದು, ಅವುಗಳ ಚಲನೆಯನ್ನು ಲೆಕ್ಕ ಹಾಕುವುದು ಅವನಿಗೆ ಪ್ರಿಯವಾದ ಹವ್ಯಾಸಗಳಾಗಿದ್ದವು. ಅವುಗಳ ವೀಕ್ಷಣೆಗಾಗಿ ಯಂತ್ರೋಪಕರಣಗಳನ್ನು ತಾನೇ ಸ್ವತಃ ತಯಾರಿಸುತ್ತಿದ್ದ. ಇಂದು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ, ಜಂತರ್ ಮಂತರ್ ಬಯಲು ಖಗೋಳವೀಕ್ಷಣಾಲಯದಲ್ಲಿರುವ ಇಂದಿಗೂ ಅತ್ಯಂತ ನಿಖರವಾಗಿ ಸಮಯವನ್ನಳೆಯಬಲ್ಲ ಪ್ರಪಂಚದ ಅತಿ ದೊಡ್ಡ ಸೂರ್ಯಯಂತ್ರವನ್ನು ನಿರ್ಮಿಸಿದವ ಜಯಸಿಂಹನೇ. ಕಲ್ಲು, ಇಟ್ಟಿಗೆ ಸುಣ್ಣಗಾರೆ, ಕಬ್ಬಿಣದ ಸರಳುಗಳಿಂದ ನಿರ್ಮಿತವಾದ ಈ ಖಗೋಳ ವೀಕ್ಷಣಾಲಯದ ವೈಜ್ಞಾನಿಕ ನಿಖರತೆ ಎಂಥವರನ್ನೂ ಬೆರಗಾಗಿಸುತ್ತದೆ. ದೆಹಲಿಯ ಜಂತರ್ ಮಂತರ್, ಮಥುರಾ, ಉಜ್ಜಯಿನಿ, ವಾರಾಣಸಿಗಳಲ್ಲಿ ಖಗೋಲ ವೀಕ್ಷಣಾಲಯಗಳನ್ನು ತಾನೇ ರೂಪಿಸಿ ನಿರ್ಮಿಸಿದ. ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿದ್ದ ಯಾರೇ ವಿದ್ವಾಂಸರೂ ಯಾವುದೇ ಸಮಯದಲ್ಲಿ ಹೋಗಿ ಈ ಯಂತ್ರಗಳನ್ನು ಬಳಸಿ ಗ್ರಹಗಳ ಕುರಿತು ಅಧ್ಯಯನ ನಡೆಸಬಹುದಿತ್ತು. ದೇಶ-ವಿದೇಶಗಳ ವಿದ್ವಾಂಸರನ್ನು ಕರೆಸಿ ಗೋಷ್ಠಿ ನಡೆಸುತ್ತಿದ್ದ. ಮಧ್ಯ ಏಷ್ಯಾ ಮತ್ತು ಯೂರೋಪುಗಳಲ್ಲಿ ಬಳಕೆಯಲ್ಲಿದ್ದ ಗ್ರಂಥಗಳನ್ನು, ಯಂತ್ರೋಪಕರಣಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದ. ಅನೇಕ ಪಾಶ್ಚಾತ್ಯ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದುದಲ್ಲದೆ ಯಂತ್ರ ರಾಜ ಮತ್ತು ಯಂತ್ರ ರಾಜ ರಚನಾ ಪ್ರಕಾರ ಎಂಬುದಾಗಿ ಖಗೋಳ ವಿಜ್ಞಾನದಲ್ಲಿ ಬಳಸುವ ಯಂತ್ರಗಳ ಮೇಲೆ ಎರಡು ಗ್ರಂಥಗಳನ್ನು ರಚಿಸಿದ. ಅರಬ್ ಹಾಗೂ ಐರೋಪ್ಯ ಖಗೋಲಶಾಸ್ತ್ರಾಧ್ಯಯನಕ್ಕೆ ಭಾರತೀಯ ಜ್ಯೋತಿರ್ವಿದ್ಯೆಯನ್ನು ಬೆಸೆದುದು ಅವನ ಬಹುದೊಡ್ಡ ಸಾಧನೆ. ಅವನ ಬಳಿ ಕೆಲಸ ಮಾಡುತ್ತಿದ್ದ ಗುಜರಾತಿನ ಕೇವಲರಾಮ ಖಗೋಳ ವಿಜ್ಞಾನದ ಮೇಲೆ ಎಂಟು ಗ್ರಂಥಗಳನ್ನು ರಚಿಸಿದ. ಜನಸಾಮಾನ್ಯರಿಗೆಂದೇ ನಕ್ಷತ್ರಗಳ ಸ್ಥಿತಿಗತಿಗಳು ಹಾಗೂ ಗ್ರಹಗಳು ಉದಯವಾಗುವ ಹಾಗೂ ಅಸ್ತವಾಗುವ ಕಾಲಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ಕಲೆಹಾಕಿ ಕೋಷ್ಟಕಗಳನ್ನು ತಯಾರಿಸಿದ. ಅವನು ರಚಿಸಿದ ಲೋಹಯಂತ್ರಗಳನ್ನು ನಾವು ಇಂದಿಗೂ ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.


ಜಂತರ್ ಎಂದರೆ ಯಂತ್ರ, ಮಂತರ್ ಎಂದರೆ ಗಣನೆಮಾಡುವುದು ಎಂದರ್ಥ. ದಿಗಂಶ ಯಂತ್ರ, ಕಪಾಲಿಯಂತ್ರ, ಜಯಪ್ರಕಾಶ ಯಂತ್ರ, ರಾಮಯಂತ್ರ, ನಾರೀ ವಲಯ ಯಂತ್ರ, ಮಿಶ್ರ ಯಂತ್ರ, ಸಾಮ್ರಾಟ್ ಯಂತ್ರ, ಧ್ರುವದರ್ಶಿಕೆ ಪಟ್ಟಿಕೆ, ಷಷ್ಠಾಂಶ ಯಂತ್ರ, ಛಾಯಾಯಂತ್ರ, ದಕ್ಷಿಣಾವೃತ್ತಿ ಯಂತ್ರ ಮುಂತಾಗಿ ಹಲವು ವಿವಿಧ ಉಪಕರಣಗಳು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲಿದ್ದವು. ಜಯಪ್ರಕಾಶ ಯಂತ್ರದಲ್ಲಿ ನಿಮ್ನ ಅರ್ಧವೃತ್ತಾಕಾರದ ಭಾಗಗಳೆರಡು ಸರದಿಯಲ್ಲಿ ಗಂಟೆಗೊಂದರಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದ ಸ್ಥಳೀಯ ಕಾಲವನ್ನು, ಸೂರ್ಯನ ಸ್ಥಾನ, ಸಂಕ್ರಾಂತಿ ವೃತ್ತ ಮತ್ತು ಇಲ್ಲಿ ಗುರುತು ಹಾಕಿರುವ ರಾಶಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಸಹಾಯದಿಂದ ಮಧ್ಯಾಹ್ನ ರೇಖೆಯ ಮೇಲೆ ಯಾವ ರಾಶಿ ಇದೆ ಎನ್ನುವುದನ್ನು ತಿಳಿಯಬಹುದು. ನಾರೀ ವಲಯ ಯಂತ್ರದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ಎರಡು ಭಾಗಗಳಿವೆ. ಈ ಭಾಗಗಳಲ್ಲಿ ಡಿಸೆಂಬರ್ 22 ಹಾಗೂ ಜೂನ್ 21ರಂದು ಸೂರ್ಯನ ಕಿರಣಗಳು ಕರ್ಕಾಟಕಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ಮೇಲೆ ನೇರವಾಗಿ ಬೀಳುವ ಹಾಗೂ ಮಾರ್ಚ್ 21 ಮತ್ತು ಸೆಪ್ಟೆಂಬರ್ 23ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುವ ಕಾಲಗಣನೆಯನ್ನು ತೋರಿಸುತ್ತದೆ. ನಿಯತ ಚಕ್ರ, ಚಿಕ್ಕ ಸಾಮ್ರಾಟಯಂತ್ರ, ದಕ್ಷಿಣ ವೃತ್ತ ಯಂತ್ರ ಹಾಗೂ ಕರ್ಕಾಟಕ ರಾಶಿವಲಯವೆಂಬ ನಾಲ್ಕು ಬೇರೆ ಬೇರೆ ಯಂತ್ರಗಳಿಂದ ಕೂಡಿದುದೇ ಮಿಶ್ರಯಂತ್ರ. ವಿರಾಟ್ ಸಾಮ್ರಾಟ್ ಯಂತ್ರ ದೃಕ್ಸಿದ್ಧಿ ಕಾಲವನ್ನು ಸೂಚಿಸುತ್ತದೆ. ಇದು ಕೇವಲ ಎರಡು ಸೆಕೆಂಡ್ಗಳ ವ್ಯತ್ಯಾಸದಲ್ಲಿ ಸ್ಥಳೀಯ ಕಾಲವನ್ನು ತೋರಿಸುತ್ತದೆ. ಇದರಲ್ಲಿರುವ ಷಷ್ಠಾಂಶವೆಂಬ ವೃತ್ತಖಂಡಾಕೃತಿಯ ಮೇಲೆ ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವಾಗ ಬೆಳಕು ಒಂದು ಕಿಂಡಿಯ ಮೂಲಕ ಬಿದ್ದು ಮಧ್ಯಾಹ್ನ ರೇಖೆಯ ಎತ್ತರ ಎಷ್ಟೆಂದು ಸೂಚಿಸುತ್ತದೆ. ದುಂಡನೆಯ ಕಂಬವೊಂದು ದಿಗಂಶವನ್ನು, ಛಾಯಾ ಯಂತ್ರ ಕಾಲವನ್ನೂ ತೋರಿಸುತ್ತವೆ. ಈ ಯಂತ್ರದಿಂದ ಸೂರ್ಯನ ಘಂಟಾವೃತ್ತಾಂಶವನ್ನು ತಿಳಿಯಬಹುದು. ಧ್ರುವ ನಕ್ಷತ್ರವನ್ನು ನೋಡಲು ಇರುವ ಧ್ರುವದರ್ಶಿಕೆ ಪಟ್ಟಿಕೆಯಿಂದ ಹನ್ನೆರಡು ರಾಶಿಗಳ ಸ್ಥಾನ ಹಾಗೂ ಸಮಭಾಜಕ ವೃತ್ತದಿಂದ ಸೂರ್ಯ ಯಾವ ದಿಕ್ಕಿನಲ್ಲಿ, ಯಾವ ಕೋನದಲ್ಲಿರುವನೆಂದೂ ತಿಳಿಯಬಹುದು. ರಾಮಯಂತ್ರ ಔನ್ನತ್ಯ ಮತ್ತು ಕ್ಷಿತಿಜಾಂಶಗಳನ್ನು ಸೂಚಿಸುತ್ತದೆ. ಉಜ್ಜಯಿನಿ ಮೊದಲಿನಿಂದಲೂ ಖಗೋಳಶಾಸ್ತ್ರ ಕೇಂದ್ರವಾಗಿಯೇ ಇತಿಹಾಸ ಪ್ರಸಿದ್ಧ. ಅಲ್ಲಿ ಜಯಸಿಂಹ ನಿರ್ಮಿಸಿದ್ದ ವೀಕ್ಷಣಾಲಯ ಬಹುತೇಕ ಶಿಥಿಲವಾಗಿದೆ. ಕಾಶಿಯಲ್ಲಿ ರಾಜಾ ಮಾನಸಿಂಗ್ ನಿರ್ಮಿಸಿದ್ದ ಮಾನಮಂದಿರದ ಮಹಡಿಯ ಮೇಲೆ ಜಯಸಿಂಹ ವೀಕ್ಷಣಾಲಯವನ್ನು ನಿರ್ಮಿಸಿದ. ಮಥುರೆಯ ಕೋಟೆಯ ಮೇಲೆ ಅವನು ಕಟ್ಟಿಸಿದ್ದ ವೀಕ್ಷಣಾಲಯವೂ ಈಗ ಸಂಪೂರ್ಣವಾಗಿ ನಾಶವಾಗಿದೆ.


ಭಾಸ್ಕರ ಉಜ್ಜಯಿನಿಯ ವೀಕ್ಷಣಾಲಯದ ಮುಖ್ಯಸ್ಥನಾಗಿದ್ದ. ಆತ ಕಾಲವಾದದ್ದು ಸಾ.ಶ. 1185ರಲ್ಲಿ. ಸಾ.ಶ. 1233ರಲ್ಲಿ ತುರ್ಕರು ಉಜ್ಜಯಿನಿಯನ್ನು ನಾಶಪಡಿಸಿದರು. ನಮ್ಮ ಅದೃಷ್ಟಕ್ಕೆ ಭಾಸ್ಕರ ಆ ಮೊದಲೇ ಇದ್ದ ಕಾರಣ ಆತ ಹಾಕಿದ ತಳಪಾಯದಿಂದ ಮಾಧವ ಕಲನಶಾಸ್ತ್ರ(ಕ್ಯಾಲ್ಕುಲಸ್)ವನ್ನು ಅಭಿವೃದ್ಧಿಪಡಿಸುವಂತಾಯಿತು. ಆರ್ಯಭಟೀಯ ಗಣಿತೀಯ ಶಾಲೆಯು ತ್ರಿಕೋನಮಿತಿಯ ಕೋಷ್ಟಕಗಳನ್ನು ಬಳಸುತ್ತಿತ್ತು. ಆರ್ಯಭಟನ ಸೈನ್-ವ್ಯತ್ಯಾಸ ಕೋಷ್ಟಕವು 1 ನೇ ನಿಮಿಷದವರೆಗೆ ನಿಖರವಾಗಿತ್ತು. ವಟೇಶ್ವರ (ಸಾ.ಶ. 904) ಇದರ ನಿಖರತೆಯನ್ನು 2ನೇ ನಿಮಿಷಕ್ಕೆ ತಳ್ಳಿದ. ಬಳಿಕ ಇದು ಮುಂದುವರೆದದ್ದು ಕೇರಳದಲ್ಲಿ. ಆರ್ಯಭಟನ ಅತ್ಯಂತ ಉತ್ಕಟ ಅನುಯಾಯಿಗಳು ಕೇರಳದಲ್ಲಿದ್ದರು. ಅಲ್ಲಿ ಅನೇಕ ವ್ಯಾಖ್ಯಾನಗಳನ್ನು ರಚಿಸಲಾಯಿತು. ಆದರೆ ಹೆಚ್ಚಿನ ಆರಂಭಿಕ ಕೇರಳದ ಗಣಿತಜ್ಞರ ಕೃತಿಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕಳೆದುಹೋಗಿವೆ.

             ಹರಿದತ್ತ (ಸಾ.ಶ.683), ಗೋವಿಂದಸ್ವಾಮಿ (ಸಾ.ಶ.830CE), ಶಂಕರನಾರಾಯಣ (ಸಾ.ಶ.869CE), ಜಯದೇವ (ಸಾ.ಶ.950CE), ಉದಯದಿವಾಕರ (ಸಾ.ಶ.1073CE) ಇವರಲ್ಲಿ ಪ್ರಮುಖರು. ಮಹೋದಯಪುರಂನಿಂದ ಆಳುತ್ತಿದ್ದ ಕೇರಳದ ಚೇರ ಚಕ್ರವರ್ತಿಯಾದ ಸ್ಥಾಣು ರವಿ ಕುಲಶೇಖರ (ಸಾ.ಶ.844-883)ನಿಗೆ ಸೇವೆ ಸಲ್ಲಿಸುತ್ತಿದ್ದ ಗೋವಿಂದಸ್ವಾಮಿ 3ನೇ ನಿಮಿಷಕ್ಕೆ ಸೈನ್-ವ್ಯತ್ಯಾಸ ಕೋಷ್ಟಕವನ್ನು ಸುಧಾರಿಸಲು ಪ್ರಯತ್ನಿಸಿದ. ಆತನ ದೂರದ ಉತ್ತರಾಧಿಕಾರಿ ಮಾಧವ ಇದನ್ನು ಸಾಧಿಸಿದ. ಆತ  ಇಂದು ನ್ಯೂಟನ್-ಗಾಸ್ ಇಂಟರ್ಪೋಲೇಷನ್ (2 ನೇ ಕ್ರಮ) ಎಂದು ಕರೆಯಲ್ಪಡುವುದನ್ನು ಕಂಡುಹಿಡಿದ. ಗೋವಿಂದಸ್ವಾಮಿಯ ಶಿಷ್ಯನೇ ಶಂಕರನಾರಾಯಣ. ಈ ದಾರ್ಶನಿಕ ವ್ಯಕ್ತಿ ಮಹೋದಯಪುರಂನಲ್ಲಿ ದಕ್ಷಿಣ ಭಾರತದ ಮೊದಲ ಭವ್ಯವಾದ ವೀಕ್ಷಣಾಲಯವನ್ನು ನಿರ್ಮಿಸಿದ. 'ರವಿವರ್ಮ ಯಂತ್ರ ವಲಯ' ಎಂದು ಕರೆಯಲ್ಪಡುವ ಇದು ಅದ್ಭುತವಾಗಿತ್ತು, ಅತ್ಯುತ್ತಮವಾದ ಉಪಕರಣಗಳೊಂದಿಗೆ (ರಾಶಿ ಚಕ್ರ, ಜಲೇಸ ಸೂತ್ರ, ಗೋಲಯಂತ್ರ ಇತ್ಯಾದಿ) ಸಂಪೂರ್ಣವಾಗಿ ಸುಸಜ್ಜಿತವಾಗಿತ್ತು. ಶಂಕರನಾರಾಯಣ ಸಮಯ ಪಾಲನೆ/ಸೂಚನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ. ಯಂತ್ರವಲಯದಿಂದ ಸೂಚಿಸಿದಂತೆ ಪ್ರತಿ ಘಟಿಕ (24 ನಿಮಿಷಗಳು) ಅಥವಾ ಅರ್ಧ ಮುಹೂರ್ತವನ್ನು ಹಾದುಹೋಗುವಾಗ, ಸರಿಯಾದ ಸಮಯವನ್ನು ಸಾರ್ವಜನಿಕರಿಗೆ ತಿಳಿಸಲು ಮಹೋದಯಪುರಂನಾದ್ಯಂತ ಗಂಟೆಗಳನ್ನು(ಕೂಟು) ಬಾರಿಸಲು ಸೈನಿಕರಿಗೆ ತರಬೇತಿ ನೀಡಲಾಗಿತ್ತು.


ವಿಕ್ರಮಾದಿತ್ಯನಿಗೆ ಪುತ್ರೋತ್ಸವವಾದಾಗ, ಬಾಲಕನ ಜನ್ಮಕುಂಡಲಿಯನ್ನು ನೋಡಿ ಹದಿನೆಂಟನೆಯ ವಯಸ್ಸಿನಲ್ಲಿ ಇಂತಹದೇ ದಿನ, ಇದೇ ಸಮಯದಲ್ಲಿ ಹುಡುಗನಿಗೆ ಕಾಡುಹಂದಿಯಿಂದ ಮೃತ್ಯು ಬರುವುದು, ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವರಾಹಮಿಹಿರ ಹೇಳುತ್ತಾನೆ. ಮಗನನ್ನು ಉಳಿಸುವ ಸಲುವಾಗಿ ತನ್ನ ಮಂತ್ರಿಮಹೋದಯರಲ್ಲಿ ಸಮಾಲೋಚಿಸಿದ ವಿಕ್ರಮಾದಿತ್ಯ 80 ಅಡಿ ಎತ್ತರದ ರಾಜ ಮಂದಿರವನ್ನು ಕಟ್ಟಿಸಿ, ಅದರಲ್ಲಿಯೇ ಸಕಲ ಸೌಕರ್ಯಗಳನ್ನು ಏರ್ಪಡಿಸಿ, ಅಲ್ಲಿ ಮಗನನ್ನು ದಾಸದಾಸಿಯರೊಂದಿಗೆ ಇರಿಸಿ ಭದ್ರ ಕಾವಲನ್ನು ಏರ್ಪಡಿಸುತ್ತಾನೆ. ಆದರೆ ರಾಜಕುಮಾರ ಧ್ವಜದಲ್ಲಿದ್ದ ಹಂದಿಯ ಪ್ರತಿಮೆ ತಲೆಗೆ ಬಿದ್ದು ಮರಣವನ್ನಪ್ಪುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ಗೋಪುರಾಕಾರದ ಆ ರಾಜಮಂದಿರದಲ್ಲಿ ಏಳು ಗ್ರಹಗಳ ಆಧಾರದ ಮೇಲೆ ಏಳು ಅಂತಸ್ತುಗಳೂ, ಹನ್ನೆರಡು ರಾಶಿಗಳಿಗೆ ಅನುಗುಣವಾಗಿ ಹನ್ನೆರಡು ಮುಖಗಳೂ, ಇಪ್ಪತ್ತೇಳು ನಕ್ಷತ್ರಗಳಿಗೆ ತಕ್ಕಂತೆ ಇಪ್ಪತ್ತೇಳು ದಳಗಳೂ ಇದ್ದವು. ಕುತುಪ(ದಿನದ ಎಂಟನೇ ಮುಹೂರ್ತ) ಮಂದಿರವೆಂದು ಕರೆಯಲಾದ ಈ ಮನಾರನ್ನು ಕಟ್ಟಿದ್ದು ಗ್ರಹ, ನಕ್ಷತ್ರ, ಮುಹೂರ್ತಾದಿ ಖಗೋಳದ ತನ್ಮೂಲಕ ಜ್ಯೋತಿಷ್ಯದ ಅಧ್ಯಯನಕ್ಕೇ ಆಗಿತ್ತು. ಅದೇ ಈಗ ಕುತುಬ್ ಮಿನಾರ್ ಎಂದು ಅಪಭೃಂಶವಾಗಿ ಕರೆಯಲ್ಪಡುತ್ತಿರುವ ಮನಾರ್! ವರಾಹಮಿಹಿರ ಅಲ್ಲೇ ವಾಸಿಸುತ್ತಿದ್ದರಿಂದ ಆ ಊರಿನ ಹೆಸರು ಮಿಹಿರೋಲಿ ಅಪಭೃಂಶವಾಗಿ ಮೆಹರೋಲಿ ಎಂದು ಇಂದಿಗೂ ಕರೆಯಲ್ಪಡುತ್ತಿದೆ. 


ದೇವಾಲಯಗಳ ಸಮುಚ್ಚಯದ ಮಧ್ಯದಲ್ಲಿ ಈ ವೀಕ್ಷಣಾ ಗೋಪುರವನ್ನು ನಿರ್ಮಾಣ ಮಾಡಲಾಗಿತ್ತು. ಸೂರ್ಯನು ಭೂಮಧ್ಯರೇಖೆಯಲ್ಲಿ ಬರುವ ದಿನ ಹಗಲು ಮತ್ತು ರಾತ್ರಿ ಸಮಾನವಾಗಿರುತ್ತವೆ. ಆ ದಿನ ಮಧ್ಯಾಹ್ನ ೧೨ ಗಂಟೆ ೨೫ ನಿಮಿಷಕ್ಕೆ ಕರಾರುವಕ್ಕಾಗಿ ಈ ಸ್ತಂಭದ ನೆರಳು ಭೂಮಿಯ ಮೇಲೆ ಬಿದ್ದಾಗ ಸ್ತಂಭದ ೧೦೮ ಅಡಿ ಉದ್ದದ ನೆರಳು ಬೀಳುತ್ತದೆ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಗಳು ಹಾಗೂ ೨೭ ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರಕ್ಕೆ ನಾಲ್ಕು ಪಾದಗಳಿದ್ದು, ಒಂದೊಂದು ರಾಶಿಚಕ್ರದಲ್ಲಿ ಎರಡೂ ಕಾಲು ನಕ್ಷತ್ರಗಳಿರುವಂತೆ ವಿಭಾಗಿಸಲಾಗಿದೆ. ಅಂದರೆ ೨೭X೪=೧೦೮ ನಕ್ಷತ್ರ ಪಾದಗಳು. ಮೆಹರೂಲಿಯ ಮೇರು ಸ್ತಂಭದಲ್ಲಿ ೨೭ ದೀಪಸ್ತಂಭಗಳಿವೆ. ಸ್ತಂಭಗಳ ಸುತ್ತಲೂ ನಕ್ಷತ್ರ ವೀಕ್ಷಣೆಗಾಗಿ ೨೭ ಭವನಗಳಿದ್ದವು. ಇವುಗಳನ್ನು ತಾನೇ ಸ್ವತಃ ನಾಶಮಾಡಿದುದಾಗಿ ಕುತುಬುದ್ದೀನ್ ಐಬಕ್ ಕುವ್ವತ್-ಉಲ್-ಇಸ್ಲಾಮ್ ಮಸೀದಿಯ ಪೂರ್ವ ದ್ವಾರದ ಶಿಲಾಶಾಸನದಲ್ಲಿ ಹೇಳಿಕೊಂಡಿದ್ದಾನೆ. ಈ ಮನಾರ್'ಗೆ ಹನ್ನೆರಡು ಮುಖಗಳಿವೆ. ಅವು ಹನ್ನೆರಡು ರಾಶಿ ಚಕ್ರಗಳನ್ನು ಪ್ರತಿನಿಧಿಸುತ್ತವೆ. ಅದರಲ್ಲಿರುವ ಏಳು ಮಹಡಿಗಳು ಏಳು ವಿಧದ ಸ್ವರ್ಗಗಳನ್ನು ಸೂಚಿಸುತ್ತವೆ. ಮನಾರ್ ತನ್ನ ಹಿಂದಿರುವ ನೀರಿನಲ್ಲಿ ನಕ್ಷತ್ರಗಳ ಆಧಾರದಲ್ಲಿ ನೆರಳನ್ನು ಬೀಳಿಸುತ್ತಿತ್ತು. ಆಗಸವನ್ನು ನಿರಂತರ ನೋಡುತ್ತಾ ಕಣ್ಣುಗಳಿಗೆ ಹಾನಿಯಾಗದಿರಲೆಂದು ಸುತ್ತಲೂ ಈ ಕೊಳಗಳ ನಿರ್ಮಾಣವಾಗಿತ್ತು. ಅಂದರೆ 27 ಮಂದಿರಗಳ ಮೇಲೆ ನಕ್ಷತ್ರಗಳ ಆಧಾರದಲ್ಲಿ ಕಿರಣಗಳು ಹಾದು ಹೋಗುತ್ತಿದ್ದವು. 

ಗುರುವಾರ, ಮಾರ್ಚ್ 17, 2022

ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ


ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ


ಕಾಶ್ಮೀರದ ಕಣ್ಣೀರ ಕಥೆಯ ಒಂದು ಕಡತ ಬಹು ಜನ ವೀಕ್ಷಿಸುವ ಮಾಧ್ಯಮದ ಮೂಲಕ ಪ್ರಕಟವಾಗಿದೆ. ಕಾಶ್ಮೀರದ ಕಣ್ಣೀರಿನ ಕಥೆಗಳ ಬಗೆಗೆ ಹಲವು ಲೇಖನಗಳು, ಪುಸ್ತಕಗಳು, ಭಾಷಣಗಳು, ಡಾಕ್ಯುಮೆಂಟರಿಗಳು ಇದ್ದರೂ ಅವು ತಲುಪದ ಜನಸಮೂಹವನ್ನು ಕೂಡಾ ತಲುಪುವ ಶಕ್ತಿ ಇರುವ ಮಾಧ್ಯಮ ಚಲನಚಿತ್ರ. ಹಾಗಾಗಿ ಈ ಬಾರಿ ದೇಶದ್ರೋಹಿ ಶಕ್ತಿಗಳ ಸಕಲ ವಿರೋಧ, ಷಡ್ಯಂತ್ರಗಳ ನಡುವೆಯೂ ಕಾಶ್ಮೀರದ ಹಿಂದೂಗಳ, ಪರಿಸರದ ಮೇಲಿನ ದೌರ್ಜನ್ಯದ ಇತಿಹಾಸದ ಒಂದು ತುಣುಕಾದರೂ ರಾಷ್ಟ್ರೀಯವಾದಿ ಸರಕಾರದ ಅಭಯ ಹಸ್ತದ ನೆರಳಲ್ಲಿ ಚಲನಚಿತ್ರ ಮಾಧ್ಯಮದ ಮೂಲಕ ಬಹು ಸಂಖ್ಯೆಯ ಜನ ಮಾನಸಕ್ಕೆ ತಲುಪುವಂತಾಯಿತು. ಈ ಪ್ರಯತ್ನಕ್ಕಾಗಿ ದುಡಿದವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಜೊತೆಗೆ ಕ್ರೌರ್ಯವೇ ತುಂಬಿರುವ ಘಟನೆಯನ್ನು ಎಲ್ಲರೂ ನೋಡುವಂತೆ ನಿರೂಪಿಸಿದ ಪರಿಗೂ ಅಭಿನಂದನೆ ಸಲ್ಲಬೇಕು. ಈ ಚಿತ್ರವನ್ನು ನೋಡುವುದು, ಇನ್ನೊಬ್ಬರು ನೋಡುವಂತೆ ಪ್ರೇರೇಪಿಸುವುದು ತನ್ಮೂಲಕ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸಿ ಮುಂದೆ ಅಂತಹಾ ಪರಿಸ್ಥಿತಿ ಒದಗದಂತೆ ಪ್ರಯತ್ನಿಸುವುದೇ ನಿಜವಾಗಿ ನಾವು ಸಲ್ಲಿಸಬಹುದಾದ ಅಭಿನಂದನೆ.



ಕಾಶ್ಮೀರದ ಕಣ್ಣೀರಿನ ಕಥೆ ಕಳೆದ ಶತಮಾನದ 90ರ ದಶಕದಲ್ಲಾಗಲೀ ಅಥವಾ 40ರ ದಶಕದಲ್ಲಾಗಲೀ ಪ್ರಾರಂಭವಾದದ್ದಲ್ಲ. ಅದಕ್ಕೆ ಐನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಅಂದರೆ "ಕಾಶ್ಮೀರ್ ಫೈಲ್ಸ್" ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಸಾವಿರದಲ್ಲೊಂದು ಭಾಗವಷ್ಟೇ. ಈ ದೌರ್ಜನ್ಯಗಳಿಗೆಲ್ಲಾ ಮೂಲ ಪುರುಷನೊಬ್ಬನಿದ್ದಾನೆ. ಅವನು ಅದೇ "ಕಾಶ್ಮೀರ್ ಫೈಲ್ಸ್" ಚಿತ್ರದಲ್ಲಿ ನಾಯಕ ನಟ ತನ್ನ ಭಾಷಣದಲ್ಲಿ ಉಲ್ಲೇಖಿಸಿದ ಶಂಸುದ್ದೀನ್ ಅರಾಖಿ. ಕಾಶ್ಮೀರಿಗಳ ಮೇಲಿನ ದೌರ್ಜನ್ಯದ ಕಡತ ಆರಂಭವಾದುದು ಅವನಿಂದ. ಇಸ್ಲಾಂ ಮತದಲ್ಲಿರುವ ಶಾಂತಿದೂತರು, ಜಾತ್ಯಾತೀತರು, ಹಿಂದೂ-ಮುಸ್ಲಿಂ ಸಮನ್ವಯತೆಗೆ ಕಾರಣವಾದವರು, ಸಂತರು ಎಂದು ಭಾರತೀಯರಿಗೆಲ್ಲಾ ಭ್ರಾಂತಿ ಇರುವ, ಸೂಫಿ ವರ್ಗಕ್ಕೆ ಸೇರಿದ ಪೈಶಾಚಿಕ ಪ್ರವೃತ್ತಿಯ ವ್ಯಕ್ತಿ. ಇಸ್ಲಾಂ ಮತ್ತು ಶಾಂತಿ, ಇಸ್ಲಾಂ ಮತ್ತು ಜಾತ್ಯಾತೀತತೆ, ಇಸ್ಲಾಂ ಮತ್ತು ಸಂತ, ಎಂದಾದರೂ ಒಂದಾಗಲು ಸಾಧ್ಯವೇ? ಭಾರತೀಯರ ಭ್ರಮೆ ಕಳಚುವುದೆಂದು? ಅಂದರೆ ಈ ದೌರ್ಜನ್ಯಗಳಿಗೆಲ್ಲಾ ಕಾರಣ ಯಾವುದು? ಅದೇ...ಅದೇ ಪುಸ್ತಕ...ಯಾವುದು ಮತಭ್ರಾಂತತೆಯನ್ನು ಚಿಕ್ಕಪ್ರಾಯದಿಂದಲೂ ಚೊಕ್ಕವಾಗಿ ಮಸ್ತಕಕ್ಕೆ ತುಂಬಿಸಿತೋ ಅದೇ ಗ್ರಂಥ! ಅಸಲಿಗೆ ಗ್ರಂಥ ಎಂದು ಹೇಳಿಸಿಕೊಳ್ಳುವ ಯೋಗ್ಯತೆಯೂ ಅದಕ್ಕಿಲ್ಲ.


ಯಾರು ಈ ಶಂಸುದ್ದೀನ್ ಅರಾಖಿ? ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್"  ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.


                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು, ಪಾಶುಪತ ಮಠವನ್ನೂ ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).


                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.


               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!


               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.


                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.


                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.