ಪುಟಗಳು

ಗುರುವಾರ, ಜುಲೈ 26, 2018

ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ

ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ

                     "ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ....."
ಶತಶತಮಾನಗಳು ಉರುಳಿದವು. ನಗರಗಳು ಕಾಡುಗಳಾದವು, ಅರಣ್ಯ ಬಟಾ ಬಯಲಾಯಿತು, ಪಟ್ಟಣಗಳೇ ಸ್ಮಶಾನವಾದವು; ನದಿಗಳು ತಮ್ಮ ಪಾತ್ರವನ್ನೇ ಬದಲಿಸಿದವು. ರಾಜವಂಶಗಳು ಅನೇಕ ಅಳಿದವು. ಕಟ್ಟಿದವರು ಅಳಿದರು, ಕೆಡವಿದವರೂ ಅಳಿದರು. ರಕ್ಷಕನೂ ಇತಿಹಾಸದ ಪುಟದಲ್ಲಿ ಸೇರಿ ಹೋದ. ಆಕ್ರಮಿಸಿದವನೂ ಮಣ್ಣಾಗಿ ಹೋದ. ನಾವು ಬೇರೆ ಎಂದವರೂ ಸೇರಬೇಕಾಯ್ತು. ನಮ್ಮನ್ನು ಸೇರಿದಿರಾದರೆ ಪುಣ್ಯ ಎಂದವರಿಗೂ ಇದೇ ಸ್ವರ್ಗವಾಯಿತು. ತಮ್ಮ ಗುಂಪಿಗೆ ಸೇರಿಕೊಳ್ಳ ಬಯಸಿದವರ ಖಡ್ಗವೂ ಮೊನಚು ಕಳೆದುಕೊಂಡಿತು. ವಿಶ್ವದ ಎಲ್ಲೆಡೆಯಿಂದ ಜನ ಇಲ್ಲಿ ಬಂದರು. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ಬಂದದ್ದೆಲ್ಲವೂ ಒಂದೋ ಸೇರಿ ಹೋಯಿತು ಅಥವಾ ಸೋತು ಸುಣ್ಣವಾಯಿತು. ಆದರೆ ಈ ವೇದ ಘೋಷ ಇನ್ನೂ ಅನುದಿನವೂ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಸೂರ್ಯನ ಅಂತರಂಗದಲ್ಲಿ ನಿರಂತರ ಮೊಳಗುತ್ತಿರುವ ಓಂಕಾರದಂತೆ ಮೊಳಗುತ್ತಲೇ ಇದೆ.

ಎಂತೆಂತಹಾ ನಾಗರಿಕತೆಗಳೆಲ್ಲಾ ಅಳಿದು ಹೋದವು. ಕ್ಷಿಪ್ರವಾಗಿ ಬೆಳೆದು ಜಗತ್ತಿನ ಕಣ್ಣುಕೋರೈಸಿ ತಾರೆಯೆಂದು ಹೊಗಳಿಸಿಕೊಂಡ ಗ್ರೀಕರು ಉಲ್ಕೆಯಂತೆ ಉರಿದು ನಾಶವಾದರು. ಐಗುಪ್ತ, ಚಾಂಡಿಯನ್ನುಗಳೆಲ್ಲಾ ಹೇಳ ಹೆಸರಿಲ್ಲದಂತೆ ಮಾಯವಾದವು. ಆದರೆ ಈ ಪ್ರಾಚೀನ ಸಂಸ್ಕೃತಿ ಅಗಾಧ ಆಕ್ರಮಣ, ನೈಸರ್ಗಿಕ ವೈಪರೀತ್ಯ, ಬದುಕು-ಬವಣೆಗಳ ನಡುವೆಯೂ ನಿತ್ಯನೂತನವಾಗಿ ಸೂರ್ಯನಂತೆ ಬೆಳಗುತ್ತಾ ನಿಂತಿದೆ. ಏನು ಕಾರಣ? ಹಾಗೆ ಬೆಳಗುತ್ತಲೇ ಇರಬೇಕಾದರೆ ಶೃದ್ಧೆ ಇರಬೇಕು. ಆ ಶೃದ್ಧೆಯನ್ನಿರಿಸಬೇಕಾದ ಕೇಂದ್ರವೂ ಬೇಕು. ಅಂತಹಾ ಕೇಂದ್ರ ಯಾವುದಿತ್ತು? ಅದು ಕರ್ಮಕಾಂಡವನ್ನು ಪ್ರಶ್ನಿಸಿ ಎದ್ದಿದ್ದ ಬುದ್ಧನನ್ನು, ಇನ್ನೇನು ಸಂಪೂರ್ಣ ಹಿಂದೂಧರ್ಮವನ್ನೇ ಆಪೋಷಣ ತೆಗೆದುಕೊಳ್ಳುತ್ತೇನೆ ಎಂದು ಹೊರಟಿದ್ದ ಬೌದ್ಧ ಮತವನ್ನೂ ತನ್ನೊಳಗೆ ಅರಗಿಸಿಕೊಂಡುಬಿಟ್ಟಿತು. ಜೈನ, ಅಜೀವಿಕ, ಚಾರ್ವಾಕಗಳೂ ಅದರಲ್ಲಿ ಸೇರಿ ಹೋದವು. ಇಲ್ಲಿನವರ ನಿಷ್ಠೆ ಇಲ್ಲಿನ ಮಣ್ಣಿಗಿದೆ. ಬೆವರು ಹರಿಸಿದ ಈ ಮಣ್ಣಿನಲ್ಲಿ ನಮ್ಮ ಜೀವನ ಬೆರೆತು ಹೋಗಿದೆ. ಹಾಗಾಗಿಯೇ ಇಲ್ಲಿ ಹುಟ್ಟಿ ಬೆಳೆದು ಇಲ್ಲಿಗೇ ನಿಷ್ಠವಾಗಿದ್ದವೆಲ್ಲಾ ಇಲ್ಲೇ ಕಲೆತು ಹೋದವು. ಇನ್ನೇನು ಹಾನಿ ಮಾಡುತ್ತದೋ ಎನ್ನುವಂತಿದ್ದವುಗಳನ್ನು ಸರಿ ದಾರಿಗೆ ತರಲು ಕಾಲಕಾಲಕ್ಕೆ ಮಹಾಪುರುಷರೇ ಅವತರಿಸಿ ಬಂದರು. ಶುಭ ಕರೋತಿ ಇತಿ ಶಂಕರಃ ಎಂಬಂತೆ ಚತುರ್ ದಿಕ್ಕುಗಳಲ್ಲಿ ಪ್ರಹರಿಗಳಂತೆ ಚತುರಾಮ್ನಾಯ ಪೀಠಗಳು ಎದ್ದು ನಿಂತವು. ನಿರಂತರ ಹರಿದು ಬಂದಿರುವ ಆ ಅವಿಚ್ಛಿನ್ನ ಪರಂಪರೆ ದೇಶವನ್ನು ಈ ದೇಶ, ಇದರ ಸಂಸ್ಕೃತಿಯನ್ನು ಮೌನವಾಗಿಯೇ, ಯಾವುದೇ ಪ್ರಚಾರವಿಲ್ಲದೆ ಕಾಪಾಡಿತು.

ಕಾಲಕಾಲಕ್ಕೆ ಸನಾತನ ಧರ್ಮದ ಸ್ವರೂಪ ಬದಲಾಗಿರಬಹುದು. ಆದರೆ ಅದರ ಆತ್ಮ ಬದಲಾಗಲಿಲ್ಲ. ಪ್ರಾಚೀನ ಆದರ್ಶ ಹಾಗೂ ಜೀವನ ದೃಷ್ಟಿಯೂ ಬದಲಾಗಲಿಲ್ಲ. ಅದರ ಸಾಧನಗಳಷ್ಟೇ ಬದಲಾದವು. ಗಾರ್ಹ್ಯಸೂತ್ರದ ಸ್ಥಾನವನ್ನು ಸ್ಮೃತಿಗಳು ತೆಗೆದುಕೊಂಡರೆ, ಯಜ್ಞಯಾಗಾದಿಗಳ ಸ್ಥಾನವನ್ನು ಮಂದಿರಗಳು, ಪೂಜೆ ಅರ್ಚನೆಗಳು ತುಂಬಿದವು. ಈ ಕಾಲಘಟ್ಟದಲ್ಲಿ ಸ್ಥಾಪಿಸಲ್ಪಟ್ಟ ತೀರ್ಥಕ್ಷೇತ್ರಗಳು ಆಸೇತುಹಿಮಾಚಲಾದ್ಯಂತ ಭಾರತವಿಡೀ ನಮ್ಮದೇ, ಇಲ್ಲಿನವರೆಲ್ಲಾ ನನ್ನವರೇ ಎಂಬಾ ಭಾವನೆಯನ್ನು ಮತ್ತೆ ಮೂಡಿಸಿದವು. ದೇಶದ ಕಣಕಣದ ಪವಿತ್ರತೆಯ ಗುಣಗಾನ ಭಾರತ-ಪುರಾಣಗಳಲ್ಲೂ ಮೂಡಿಬಂತು. ಈ ದಾರದ ಎಲ್ಲಾ ಎಳೆಗಳನ್ನು ಪೋಣಿಸಿದ ಆಚಾರ್ಯ ಶಂಕರರು ನಾಲ್ಕು ದಿಕ್ಕುಗಳಲ್ಲಿ ಎಲ್ಲಾ ಸಂಪ್ರದಾಯದವರೂ ಅನುಸರಿಸುವ ತೀರ್ಥಕ್ಷೇತ್ರಗಳಲ್ಲಿ ಕೇಂದ್ರ ಸ್ಥಾನವನ್ನು ಸ್ಥಾಪಿಸಿದರು.  ಆ ಶೃದ್ಧಾಕೇಂದ್ರವಾದರೂ ಜನರಿಗೆ ಹತ್ತಿರವಾದದ್ದೇಕೆ? ಜೀವನ ನಶ್ವರವೆಂದು ಅರಿತು ಹೊರಟವನನ್ನು ಅದ್ವೈತ ಆಕರ್ಷಿಸುವುದು ಸರಿ. ಆದರೆ ಜೀವನದ ಜಂಜಾಟದಿಂದ ಹೊರಬರಲಾಗದೆ ಹೊರಳಾಡುವವನು ಮರುಳಾದ ಪರಿ ಎಂತು? ಶಂಕರರು ಯಾವ ದೇವರನ್ನೂ ಖಂಡಿಸಲಿಲ್ಲ. ಜನರ ಶ್ರದ್ಧೆಯನ್ನು ನಾಶಪಡಿಸಲಿಲ್ಲ.  ಅದರ ಕೇಂದ್ರವನ್ನಷ್ಟೇ ಬದಲಾಯಿಸಿದರು. ಯಾವ ದೇವರನ್ನು ಪೂಜಿಸಿದರೂ ಅದು ಅನಂತ ಜ್ಞಾನಸ್ವರೂಪಿಯ ಪೂಜೆಯೇ. ಚೇತನ-ಅಚೇತನಗಳಲ್ಲಿ ವ್ಯಾಪಿಸಿರುವುದು ಅದೇ. ಈ ಎಲ್ಲಾ ಉಪಾಸನಾ ವಿಧಾನಗಳ ಹಿಂದಿರುವುದು ಹಿಂದೂ ಹೃದಯದ ಪ್ರೇರಣೆಯೇ! ಎಲ್ಲಾ ಪೂಜಾಪದ್ದತಿಗಳ ಹಿಂದೆ ಪರಮಾತ್ಮನ ಬಗೆಗಿರುವುದು ಒಂದೇ ವಿಧವಾದ ಕೃತಜ್ಞತಾ ಭಾವನೆ. ನಮ್ಮ ಸನಾತನ ವೈದಿಕ ಪರಂಪರೆಯನ್ನು ರಕ್ಷಿಸುವ ಅಭಿಲಾಷೆ ನಮ್ಮ ರಾಷ್ಟ್ರೀಯ ಜೀವನವನ್ನು ಸ್ವಾಧೀನದಲ್ಲಿಟ್ಟುಕೊಂಡು, ಅಭಿವೃದ್ಧಿಯ ಅತ್ಯುನ್ನತ ಸ್ಥಿತಿ ದೊರೆಯುವಂತೆ ಮಾಡುವ ಮಹತ್ವಾಕಾಂಕ್ಷೆ ಒಂದೆಡೆ ಸೂರ್ಯೋಪಾಸನೆಯ ರೂಪ ಪಡೆದರೆ ಇನ್ನೊಂದೆಡೆ ಗಣಪತಿಯ ಮೃತ್ತಿಕಾ ಮೂರ್ತಿಯನ್ನು ಪೂಜಿಸಿತು. ದೇಶವನ್ನು ಸುತ್ತುವರಿವಂತೆ ಐವತ್ತೊಂದು ಶಕ್ತಿ ಪೀಠಗಳನ್ನು ನಿರ್ಮಿಸಿದಂತೆಯೇ ದ್ವಾದಶ ಜ್ಯೋತಿರ್ಲಿಂಗಗಳೊಂದಿಗೆ ಆರ್ಯಾವರ್ತಕ್ಕೆ ಪ್ರದಕ್ಷಿಣೆ ಹಾಕಿತು. ವಾಲ್ಮೀಕಿಯ ಆದಿಕಾವ್ಯ ಆದರ್ಶಪುರುಷನೊಬ್ಬನನ್ನು ದೇವನಾಗಿಸಿದರೆ ಭಾರತ-ಭಾಗವತಗಳ ನೀತಿ ಪ್ರತಿಯೊಂದು ಪೀಳಿಗೆಗೆ ಕೃಷ್ಣನಂತಹ ವ್ಯಕ್ತಿಯ ಅವಶ್ಯಕತೆಯನ್ನು ಸಾರಿ ಹೇಳಿತು. ಒಂದು ಕಡೆ ಯೋಗದ ಭಂಗಿಯೇ ದರ್ಶನವಿತ್ತರೆ ಮಗದೊಂದೆಡೆ ಕ್ರೂರತೆಯನ್ನೇ ಶಿರಚ್ಛೇದಿಸಿದ ಕಾಪಾಲಿಕರನ್ನು ಕೃತಕೃತ್ಯಗೊಳಿಸಿತು. ಸರಸ್ವತಿಯ ಸೇವೆಗೈವ ಶಾಸ್ತ್ರಕೋವಿದರನ್ನು ಸೃಷ್ಟಿಸಿದ ಉಪಾಸನೆಯೇ ಶಸ್ತ್ರ ಹಿಡಿದು ಶತ್ರುಗಳನ್ನು ಸದೆಬಡಿವ ಯೋಧರಿಗೆ ಜನ್ಮಕೊಟ್ಟಿತು. ಈ ಎಲ್ಲಾ ಆರಾಧನೆಯ ಹಿಂದಿರುವುದು ಅದೇ ಸಹಸ್ರಾನನ, ಸಹಸ್ರಾಕ್ಷ, ಸಹಸ್ರಪಾದಗಳಿರುವ ರಾಷ್ಟ್ರಪುರುಷನೇ! ತಮ್ಮದಾದ ಯಾವುದೊಂದನ್ನೂ ತ್ಯಜಿಸದೆ ಶ್ರೇಷ್ಠವಸ್ತುವೊಂದು ಜನರಿಗೆ ಸಿಕ್ಕಂತಾಯ್ತು; ತಮ್ಮ ಆರಾಧನೆಯ ಹಿಂದಿನ ಶ್ರೇಷ್ಠ ತತ್ತ್ವವೊಂದರ ಅರಿವಾಯಿತು. ಜೀವನದ ಅಗಾಧತೆ, ಧ್ಯೇಯದ ಶ್ರೇಷ್ಠತೆಯೊಂದಿಗೆ ಆಚರಣೆ ಹಾಗೂ ದೇಶದ ಗರಿಮೆಯೊಂದಿಗೆ ಅವರ ಸಂಬಂಧವನ್ನು ಬೆಸೆಯಿತು. ಹೀಗಾಗಿಯೇ ತಮ್ಮ ದೇವ-ದೇವಿಯರೇ, ಪೂಜಾಕ್ರಮಗಳೇ ಶ್ರೇಷ್ಠ ಎಂದೇ ಪರಿಗಣಿಸುತ್ತಿದ್ದವರೆಲ್ಲಾ ಶಂಕರರನ್ನು ಭೇಟಿಯಾದ ಮಾತ್ರಕ್ಕೆ ತಮ್ಮ ಸಂಕುಚಿತತೆಯ ಪರಿಧಿಯನ್ನು ಕಿತ್ತೆಸೆದು ಬಿಟ್ಟರು. ವಿರೋಧ ಭಾವನೆಗಳನ್ನು ಹೊತ್ತು ಬಂದವರೆಲ್ಲಾ ಶಂಕರರ ಅನುಯಾಯಿಗಳಾಗಿ ಬದಲಾದರು. ಶಂಕರರನ್ನು ತಮ್ಮ ಮತಕ್ಕೆ ಸೆಳೆಯಲು ಯತ್ನಿಸಿದವರೆಲ್ಲಾ ಅವರ ಉದಾತ್ತತೆಯನ್ನು ಕಂಡು ನಾಚಿ ಮರಳಿದರು. ಹೀಗೆ ಶಂಕರರು ಕೆಳಗಿನ ಸೋಪಾನದಲ್ಲೇ ಕೊಳೆಯುತ್ತಿದ್ದ ಇಡೀ ಸಮುದಾಯವನ್ನು ಮೇಲಕ್ಕೆತ್ತಿದರು. ಸಂಕುಚಿತ ಧ್ಯೇಯದೊಂದಿಗೆ ನೀರ ಹೊಂಡದಲ್ಲಿ ಕೊಳೆಯುತ್ತಿದ್ದ ಪ್ರವಾಸಿಗನನ್ನು ವಿಶಾಲ ರಾಷ್ಟ್ರಗಂಗೆಯಲ್ಲಿ ಮಿಂದೇಳುವ ಯಾತ್ರಿಕನನ್ನಾಗಿಸಿದರು! ದೇವ-ದೇವಿಯರೆಂಬ ಚಿಕ್ಕಪಾತ್ರೆಗಳಲ್ಲಿ ತುಂಬಲಾಗದೆ ಉಕ್ಕಿ ಇತರರ ಬಗ್ಗೆ ಟೀಕೆಯಲ್ಲೇ ಕಾಲವ್ಯರ್ಥ ಮಾಡುತ್ತಿದ್ದ ಹಿಂದೂ ಹೃದಯದ ಅಗಾಧ ಶ್ರದ್ಧೆ ವಿಶಾಲವಾದ ಏಕತ್ವದ ಅದ್ವೈತ ಸಾಗರದಲ್ಲಿ ಸ್ಥಾನ ಪಡೆಯಿತು.

ಹೌದು. ಇವತ್ತಿಗೂ ಭಾರತವನ್ನು ಏಕಸೂತ್ರದಲ್ಲಿ ಬೆಸೆದಿರುವುದು ಇಂತಹ ಶೃದ್ಧಾ ಕೇಂದ್ರಗಳೇ. ಹಿಮಾಲಯದ ಗಿರಿಶಿಖರದಲ್ಲಿ ಮೊಳಗುವ ವೇದ ಘೋಷವೇ ರಾಮೇಶ್ವರದ ದೇಗುಲದೊಳಗೂ ಮೊಳಗುತ್ತದೆ. ಅಲ್ಲಿನ ಶಿವಲಿಂಗಕ್ಕೂ ಇಲ್ಲಿನದಕ್ಕೂ ಒಂದೇ ತೆರನಾದ ಅಭಿಷೇಕ! ಇಲ್ಲಿನ ಕಲೆ ಶಿಲ್ಪಗಳಲ್ಲೂ ಏಕಾತ್ಮತೆಯ ಸೂತ್ರವಿದೆ. ಆಸೇತು ಹಿಮಾಚಲದವರೆಗೂ ಎಲ್ಲಾ ದೇವರ ಮೂರ್ತಿಗಳೂ ಒಂದೇ ಸಂಸ್ಥೆಯಿಂದ ಮಾಡಿದ ರೀತಿ ಪಡಿಮೂಡಿವೆ. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ! ನಾಲ್ದೆಸೆಗಳಲ್ಲಿರುವ ಶಂಕರಪೀಠಗಳು ದೇಶದ ನಾಲ್ಕೂ ಮೂಲೆಗಳಿಗೆ ಕರೆದೊಯ್ದರೆ, ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ನಿಂತಿದ್ದಾನೆ. ಹಿಂಗುಲಾತದಿಂದ ಕಾಮಾಕ್ಷಿಯವರೆಗೆ, ಜ್ವಾಲಾಮುಖಿಯಿಂದ ಕುಮಾರಿ ಕ್ಷೇತ್ರದವರೆಗೆ ಹರಡಿರುವ 51 ಶಕ್ತಿಪೀಠಗಳು, ದ್ವಾದಶ ಗಾಣಪತ್ಯ ಕ್ಷೇತ್ರಗಳು, ಅಸಂಖ್ಯ ವೈಷ್ಣವ ಕ್ಷೇತ್ರಗಳು ರಾಷ್ಟ್ರಶಕ್ತಿಯನ್ನು ಉದ್ದೀಪಿಸುತ್ತಾ ನಿಂತಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ದೇಶೀಯರನ್ನು ಬೆಸೆದು ಇಟ್ಟಿರುವುದು ಇಂತಹಾ ಶೃದ್ಧಾ ಕೇಂದ್ರಗಳೇ ಹೊರತು ಯಾವ ರಾಜಕೀಯ ಆಟಾಟೋಪವೂ ಅಲ್ಲ, ಸೆಕ್ಯುಲರ್ ಬುದ್ಧಿಯೂ ಅಲ್ಲ. ಉದಾಹರಣೆಗೆ ಭಾರತದ ನಾಲ್ಕು ಪ್ರಮುಖ ಕ್ಷೇತ್ರಗಳಾದ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕ್ನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು-ಸನ್ಯಾಸಿಗಳು ಅಲ್ಲಿಗೆ ಬರುತ್ತಾರೆ. ಕೋಟ್ಯಾಂತರ ಜನ ಅಲ್ಲಿ ಸೇರುತ್ತಾರೆ. ಯಾವ ರಾಜಕೀಯ ಪಕ್ಷವೂ ಅವರನ್ನು ಹಣ ಕೊಟ್ಟು ಕರೆತರುವುದಿಲ್ಲ. ಯಾವ ರಾಜಕೀಯ ಪಕ್ಷದ ರ್ಯಾಲಿಗೂ ಅವರು ಹೋಗುವುದಲ್ಲ. ಯಾವ ಸಿನಿಮಾ ನಟನನ್ನು ನೋಡಲೂ ಅವರು ಹೋಗುವುದಲ್ಲ. ಅದೊಂದು ರೀತಿ ಅರಿವಿನ ಕರೆ. ಅದೊಂದು ರೀತಿ ರಾಷ್ಟ್ರೀಯ ಸಮ್ಮೇಳನವೇ ಸರಿ.

ಹಿಂದೂ ಶ್ರದ್ಧಾ ಬಿಂದುವಿನ ಮೇಲೆ ಬಿದ್ದಿದೆ "ಕಾಕ" ದೃಷ್ಟಿ

ಹಿಂದೂ ಶ್ರದ್ಧಾ ಬಿಂದುವಿನ ಮೇಲೆ ಬಿದ್ದಿದೆ "ಕಾಕ" ದೃಷ್ಟಿ


            ನೇರ ಆಕ್ರಮಣವಾದಾಗ ಸೆಟೆದು ನಿಂತು ಗೆಲ್ಲಬಹುದು. ಆಗ ಶತ್ರು ಯಾರು ಎನ್ನುವುದರ ಅರಿವಿರುತ್ತದೆ. ಆದರೆ ಛದ್ಮ ಆಕ್ರಮಣವಾದಾಗ ಗೆಲ್ಲುವುದು ಪಕ್ಕಕ್ಕಿರಲಿ, ಎದುರಿಸುವುದು ಹೇಗೆ? ಹಿಂದೂಗಳ ಇಂದಿನ ಸಮಸ್ಯೆ ಇದು. ಹಿಂದೂಗಳನ್ನೇ ಬಳಸಿಕೊಂಡು, ಈ ನೆಲದ, ಜಾತ್ಯಾತೀತ ಎಂಬಂತೆ ಮೆರುಗು ನೀಡಲ್ಪಟ್ಟ ಕಾನೂನುಗಳನ್ನು, ಹಿಂದೂವಿನ ವಿಶ್ವಭ್ರಾತೃತ್ವದ ಭಾವನೆಯನ್ನು ಬಳಸಿಕೊಂಡು ಆಕ್ರಮಣ! ತನ್ನ ಮೇಲೆಯೇ ಆಕ್ರಮಣವಾಗುತ್ತಿದೆ ಎಂದು ಹಿಂದೂವಿನ ಅರಿವಿಗೆ ಬಾರದ ರೀತಿಯಲ್ಲಿ, ಬಂದರೂ ಅಸಹಾಯಕನಾಗಿ ಎದುರಿಸಲಾಗದೇ ಒದ್ದಾಡುವ ರೀತಿಯಲ್ಲಿ ನಡೆಯುತ್ತಿದೆ ಈ ಛದ್ಮ ಯುದ್ಧ. ತನ್ನ ನಂಬಿಕೆಯನ್ನು ಹತ್ತಿಕ್ಕಲಾಗುತ್ತಿದೆ, ಭಾವನೆಯನ್ನು ಅವಹೇಳನಗೈಯಲಾಗುತ್ತಿದೆ, ತನ್ನ ಸಂಸ್ಕೃತಿಯನ್ನು ನಾಶಗೈಯಲು ಸಾಲಾಸಾಲಾಗಿ ಟೊಂಕಕಟ್ಟಿ ನಿಂತಿದ್ದಾರೆ ಎಂಬ ಅರಿವು ಇದ್ದರೂ ತನ್ನ ಅಸ್ಮಿತೆಯನ್ನು ತಾನು ಉಳಿಸಿಕೊಳ್ಳಲಾಗದೆ ಒದ್ದಾಡುವ ಹಿಂದೂವಿನ ಪರಿಸ್ಥಿತಿ ಶತ್ರುವಿಗೂ ಬರಬಾರದು!


              ಸದ್ಯಕ್ಕೆ ಅಂತಹ ದಾಳಿಗೆ ತುತ್ತಾಗಿರುವುದು ಹಿಂದೂವಿನ ಶ್ರದ್ಧಾಕೇಂದ್ರ ಪುರಿ ಜಗನ್ನಾಥ. ಮರಕತದಿಂದ ಮೈವೆತ್ತ ತನ್ನ ಆರಾಧ್ಯ ದೈವ ನೀಲಮಾಧವನನ್ನು ವಿಶ್ವವಸುವಿನಿಂದ ವಶಪಡಿಸಿಕೊಂಡು ತನ್ನವನನ್ನಾಗಿಸಿಕೊಳ್ಳಲು ಹವಣಿಸಿದ ಅವಂತಿಯರಸ ಇಂದ್ರದ್ಯುಮ್ನ ವಿಫಲನಾದಾಗ ಅಶರೀರವಾಣಿಯಂತೆ ಇಂದ್ರದ್ಯುಮ್ನನಿಂದ ನಿರ್ಮಿಸಲ್ಪಟ್ಟ ದೇವಾಲಯ. ಇಂದ್ರದ್ಯುಮ್ನನ ಕನಸಿನಲ್ಲಿ ಕಾಣಿಸಿದಂತೆ ಸಮುದ್ರದಲ್ಲಿ ತೇಲಿಬಂದ ಮರದ ದಿಮ್ಮಿಯಿಂದ ವಿಶ್ವಕರ್ಮನಿಂದಲೇ ಕೆತ್ತಲ್ಪಟ್ಟ ಅಪೂರ್ಣ-ಅಪೂರ್ವ ದಾರುಶಿಲ್ಪ ಇಲ್ಲಿಗೆ ಶಿಖರಪ್ರಾಯ. ಶಂಕರ ಪೀಠವಾಗಿ, ಕಲಿಯುಗದ ವೈಕುಂಠವಾಗಿ ಜಾತಿಭೇದವಿಲ್ಲದ ತಾಣವಾಗಿ, ಆಧುನಿಕ ವಿಜ್ಞಾನಕ್ಕೆ ಸವಾಲಾಗಿ ಹತ್ತು ಹಲವು ವಿಸ್ಮಯಗಳೊಂದಿಗೆ ಕಂಗೊಳಿಸುತ್ತಾ ಇರುವ ಪುರಿಯ ಮೇಲೆ "ಕಾಕ" ದೃಷ್ಟಿ ಬಿದ್ದಿದೆ. ಹತ್ತಾರು ವರ್ಷಗಳ ಹಿಂದಿನ ಪ್ರಕರಣಗಳನ್ನೇ ಮುಗಿಸಲಾಗದೇ ಒದ್ದಾಡುವ ನ್ಯಾಯಾಲಯಗಳು ಒಂದು ದೇವಸ್ಥಾನಕ್ಕೆ ಯಾರು ಹೋಗಬೇಕು/ಬಾರದು ಎನ್ನುವ ಅರ್ಜಿಯ ವಿಚಾರಣೆ ನಡೆಸಲು ಬೇಗನೆದ್ದು ಕಚ್ಚೆ ಕಟ್ಟಿ ನಿಲ್ಲುತ್ತವೆಯೆಂದರೆ ಇದರ ಹಿಂದೆ ಛದ್ಮವೇಶಧಾರಿಗಳಾರೋ ಇರಲೇ ಬೇಕು.


               ಅಷ್ಟಕ್ಕೂ ಹಿಂದೂವೇತರನೊಬ್ಬ ಪುರಿಯ ಒಳಗೆ ಅಡಿಯಿಟ್ಟರೆ ಗಾಳಿಯ ದಿಕ್ಕಿಗೆ ವಿರುದ್ಧವಾಗಿ ಹಾರಾಡುವ ದೇವಾಲಯದ ಗೋಪುರದ ಬಾವುಟದ ಹಾರಾಟದ ದಿಕ್ಕೇನೂ ಬದಲಾಗಲಿಕ್ಕಿಲ್ಲ. ಯಾವ ದಿಕ್ಕಿನಂದ ನೋಡಿದರೂ ನಮ್ಮೆಡೆಗೇ ಮುಖ ಮಾಡಿದಂತೆ ಕಾಣುವ ಗೋಪುರದ ಮೇಲಿನ 20 ಅಡಿ ಎತ್ತರದ ಸುದರ್ಶನ ಚಕ್ರದ ಭಂಗಿಯೂ ಬದಲಾಗಲಿಕ್ಕಿಲ್ಲ. ಮಂದಿರದ ಮೇಲೆ ಖಗಗಳೇನೂ ತಪ್ಪಿ ಹಾರಲು ಶುರು ಮಾಡಲಿಕ್ಕಿಲ್ಲ. ಇಷ್ಟರವರೆಗೆ ಬೀಳದ ಗೋಪುರದ ನೆರಳು ದೇವಾಲಯದ ಆವರಣದಲ್ಲಿ ಬೀಳುವಂತೆ ಗೋಪುರದ ವಿನ್ಯಾಸವೂ ಬದಲಾಗಲಿಕ್ಕಿಲ್ಲ. ಬೆಳಗ್ಗೆ ಭೂಮಿಯಿಂದ ಸಮುದ್ರದೆಡೆಗೆ ಮತ್ತು ಸಂಜೆ ಸಮುದ್ರದಿಂದ ಭೂಮಿಯೆಡೆಗೆ ಬೀಸುವ ಗಾಳಿಯ ದಿಕ್ಕೂ ಬದಲಾಗಲಿಕ್ಕಿಲ್ಲ. ಸಿಂಗದ್ವಾರವನ್ನು ಪ್ರವೇಶಿಸುವಾಗ ಸಮುದ್ರದ ಭೋರ್ಗರೆತವೂ ಕೇಳಲಿಕ್ಕಿಲ್ಲ. ಆದರೆ ಇಂತಹುದರ ಮೇಲೆ ನಂಬಿಕೆಯೇ ಇಲ್ಲದವರಿಗೆಲ್ಲಾ, ತಮ್ಮ ಏಕದೇವನೇ ಸರ್ವಶಕ್ತನೆಂದು ನಂಬಿ ಉಳಿದ ಎಲ್ಲವನ್ನೂ ನಿಕೃಷ್ಟವಾಗಿ ಕಾಣುವವರಿಗೆ ಪ್ರವೇಶ ಯಾಕೆ ಕೊಡಬೇಕು? ಹಿಂದೂಗಳಲ್ಲದವರು ಅಂದರೆ ವೇದಗಳನ್ನು ಒಪ್ಪದವರು, ಹಿಂದೂ ಸಂಪ್ರದಾಯ, ಸಂಸ್ಕೃತಿ, ದೇವರನ್ನು ಒಪ್ಪದವರಿಗೆ ಜಗನ್ನಾಥನಲ್ಲೇನು ಕೆಲಸ?
ಜಗನ್ನಾಥನ ಅರ್ಚಕರು ಪ್ರತಿ ದಿನವೂ 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸಬೇಕು. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯದ ಬಾಗಿಲು ತೆರೆಯುವಂತಿಲ್ಲ. ಭಕ್ತರು ಎಷ್ಟೇ ಸಂಖ್ಯೆಯಲ್ಲಿ ಬರಲಿ ಮಾಡುವ ಪ್ರಸಾದದ ಪ್ರಮಾಣದಲ್ಲಿ ವ್ಯತ್ಯಯವಾಗುವುದಿಲ್ಲ. ಅಲ್ಲದೆ ಪ್ರಸಾದ ಕಡಮೆಯೂ ಆಗುವುದಿಲ್ಲ; ವ್ಯರ್ಥವೂ ಆಗುವುದಿಲ್ಲ. ಜಗನ್ನಾಥನಿಗೆ ಪ್ರತೀ ಜೇಷ್ಠ ಪೌರ್ಣಮಿಯಂದು 35 ಚಿನ್ನದ ಕುಡಿಕೆಗಳಲ್ಲಿ ಮಜ್ಜನ ಮಾಡಿಸಿ ಸ್ವರ್ಣ ಸಿಂಹಾಸನದ ಮೇಲೆ ಪೀಠಾರೋಹಣ ಮಾಡಿಸಿ ಮಾವಿನ ಹಣ್ಣಿನ ರಸದಿಂದ ಅಭಿಷೇಕಗೈಯಲಾಗುತ್ತದೆ. ಈ ದೀರ್ಘ ಸ್ನಾನ ಮತ್ತು ಮಾವಿನ ಹಣ್ಣಿನ ರಸ ಸೇವನೆಯಿಂದಾಗಿ ದೇವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎನ್ನುವ ನಂಬಿಕೆಯಿಂದ 15 ದಿನಗಳ ಕಾಲ ಗಿಡಮೂಲಿಕೆಗಳ ಔಷಧಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಯಾವ ಭಕ್ತರಿಗೂ ದೇವರ ದರ್ಶನವಿಲ್ಲ. ಇದೆಲ್ಲವೂ ಅನೂಚಾನಾಗಿ ಇಂದಿನವರೆಗೆ ನಡೆದುಕೊಂಡು ಬಂದಿದೆ. ಶ್ರದ್ಧೆ ಅಂದರೆ ಇದು. ಹೇಗೆ ಭಕ್ತನ ಮನಸ್ಸು ಜಗನ್ನಾಥನಲ್ಲಿರುತ್ತದೋ, ಹಾಗೆಯೇ ನಿತ್ಯ ಸೇವೆಗೈವ ಪರಿಕರ್ಮಿಯ ಶ್ರದ್ಧೆಯೂ ಬದಲಾಗುವುದಿಲ್ಲ. ಈ ಶ್ರದ್ಧೆಗೆ ಸಹಕಾರಿಯಾಗಿ ಯಾತ್ರಿಕನಿಗೆ ಬೇಕಾದ ವ್ಯವಸ್ಥೆಯನ್ನು ಆ ಪರಿಸರದಲ್ಲಿ ಮಾಡುವುದನ್ನು ಬಿಟ್ಟು ಸೆಕ್ಯುಲರ್ ಗಾಳಿ ಸೋಂಕು ತಗುಲಿಸಿಕೊಳ್ಳುವ ನ್ಯಾಯಾಲಯಗಳಿಗೆ ಏನನ್ನಬೇಕು? ಇಂತಹ ಶ್ರದ್ಧೆ ಅನ್ಯಮತೀಯನಲ್ಲಿ ಇರಲು ಸಾಧ್ಯವೇ? ಇವತ್ತು ದೇವಾಲಯದೊಳಗೆ ನುಗ್ಗುವ ಹಿಂದೂ ಪೂಜಾ ಪದ್ದತಿ, ಆಚರಣೆಗಳ ಮೇಲೆ ನಂಬಿಕೆಯಿಲ್ಲದ ಅನ್ಯಮತೀಯ ನಾಳೆ ಆ ಹದಿನೈದು ದಿವಸಗಳಲ್ಲೂ ತನಗೆ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಮೇಲಿನ ಆಚರಣೆಗಳ ಮೇಲೆ ತನಗೆ ನಂಬಿಕೆ ಇಲ್ಲದಿರುವುದರಿಂದ ಅದನ್ನೆಲ್ಲಾ ನಿಲ್ಲಿಸಬೇಕು ಎಂದು ಕೇಳದಿರುವನೇ? ಅನ್ಯಮತೀಯರಿಗೆ ನಿರ್ಬಂಧವಿರುವುದು ಬರೇ ಪುರಿಯ ಜಗನ್ನಾಥನಲ್ಲಿ ಮಾತ್ರವಲ್ಲ. ನೇಪಾಳದ ಪಶುಪತಿನಾಥನಿಂದ ಹಿಡಿದು ಭಾರತದ ಹಲವು ದೇವಾಲಯಗಳಲ್ಲಿ ಈ ನಿಯಮವಿದೆ. ಒಂದು ಧಾರ್ಮಿಕ ಸ್ಥಳವೆಂದ ಮೇಲೆ ಅಲ್ಲಿ ಪೂರ್ವದಿಂದ ಆಚರಿಸಿಕೊಂಡು ಬಂದಂತಹ ಹಲವು ಕಟ್ಟಳೆಗಳಿರುತ್ತವೆ. ಸೆಕ್ಯುಲರ್ ಎಂದು ತೋರಿಸಿಕೊಳ್ಳುವ ಭರದಲ್ಲಿ ಅಂತಹ ಕಟ್ಟಳೆಗಳನ್ನು ಯಾಕೆ ಮುರಿಯಬೇಕು? ಕಾಬಾದಲ್ಲಿ ಇಸ್ಲಾಮೇತರರನ್ನು ಬಿಡುವರೇ? ಎಲ್ಲರನ್ನು ಒಳಬಿಡಲು ದೇವಾಲಯವೆಂದರೆ ಜಾತ್ರೆಗದ್ದೆಯೇ ಅಥವಾ ಸಂತೆಯೇ?

              ಹಿಂದೂ ಧರ್ಮ ಸನಾತನವಾದದ್ದು. ಅದು ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಪ್ರಾಣಿಗಳೂ ಜೀವಿಗಳೂ ಅವು ಒಪ್ಪಲಿಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುತ್ತದೆ ಎಂಬುದು ಸತ್ಯ. ಅದು ತನ್ನ ಪ್ರಮಾಣಕ್ಕೆ ಯಾವುದನ್ನೂ ಅವಲಂಬಿಸಿಲ್ಲ. ನಾವು ಒಪ್ಪಿದರೂ ಒಪ್ಪದೇ ಇದ್ದರೂ ಅಗ್ನಿಯ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಕುಂದೂ ಬರುವುದಿಲ್ಲ. ಆದರೆ ಈ ಅರಿವು ಆಗದ ಹೊರತು ಸೆಮೆಟಿಕ್ ಮತೀಯನೊಬ್ಬ ಹಿಂದೂವಾಗಲು ಸಾಧ್ಯವೇ ಇಲ್ಲ. ಈ ಅರಿವೇ ಆಗದೆ ಹಿಂದೂ ದೇವರ ಬಗ್ಗೆ ನಂಬಿಕೆ, ಶ್ರದ್ಧೆ ಹೇಗೆ ಬಂದೀತು?

               ದೇವಾಲಯಗಳೆಂದರೆ ಬರೇ ಕಲ್ಲು, ಮಣ್ಣಿನ ಕಟ್ಟಡಗಳಲ್ಲ. ಬುದ್ಧಿಜೀವಿಗಳು ಗಳಹುವಂತೆ ಹಣ ಮಾಡುವ ಕೇಂದ್ರಗಳೂ ಅಲ್ಲ. ಅದು ಹಿಂದೂವಿನ ಶ್ರದ್ಧಾ ಕೇಂದ್ರಗಳು. ದೇವಾಲಯದ ಹುಂಡಿಗೋ, ಆರತಿ ತಟ್ಟೆಗೋ ಹಣ ಹಾಕುವಾಗ ಆ ಹಣ ಎಲ್ಲಿ ಹೋಗುತ್ತದೆ ಎನ್ನುವ ವಿಚಾರ ಹಿಂದೂವೊಬ್ಬನ ಮನಸ್ಸಿನಲ್ಲಿ ಏಳುವುದೇ ಇಲ್ಲ. ಅದರ ಅಗತ್ಯವೂ ಅವನಿಗಿಲ್ಲ. ಅದೇನಿದ್ದರೂ ಅರ್ಪಣೆ ಅಷ್ಟೇ. ಮನಃಪೂರ್ವಕವಾಗಿ ತನಗೆ ಸಾಧ್ಯವಾಗಿರುವುದರ ಅರ್ಪಣೆ. ದೇವಾಲಯದೊಳಗಿನ ಹೊರಗಿನ ರಾಜಕೀಯ ಎಷ್ಟಿದ್ದರೂ ಅವನು ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಇಂದಿಗೂ ದೇವಾಲಯಗಳು ಶ್ರದ್ಧಾಕೇಂದ್ರಗಳಾಗಿ ಉಳಿದಿರುವುದು. ಇದೇ ಭಾವನೆ ಸೆಮೆಟಿಕ್ ಮತೀಯನೊಬ್ಬನಲ್ಲಿ ಬಂದರೆ ಅವನು ತನ್ನ ಮಾತೃಧರ್ಮಕ್ಕೆ ಸ್ವ ಇಚ್ಛೆಯಿಂದ ಮರಳುತ್ತಾನೆ. ಆದರೆ ಮಾತೃಧರ್ಮಕ್ಕೆ ಮರಳದೆ ತನಗೆ ದೇವಾಲಯದೊಳಗೆ ಪ್ರವೇಶ ಬೇಕು ಎನ್ನುವುದು ತನ್ನ ಆಸೆ ಪೂರೈಸಿಕೊಳ್ಳಲು ಇರುವ ಸವಲತ್ತನ್ನು ಈ ನೆಲದ ದುರ್ಬಲ ಕಾನೂನನ್ನು ಬಳಸಿಕೊಂಡು ಪೂರೈಸಿಕೊಳ್ಳುವ ರೀತಿಯಂತೆ ಕಾಣುತ್ತದೆ. ತನ್ನ ಯಾವುದೋ ಸಂಕಟವನ್ನು ಪರಿಹರಿಸಿಕೊಳ್ಳಲು, ತನ್ನ ಯಾವುದೋ ಆಸೆಯನ್ನು ಪೂರೈಸಿಕೊಳ್ಳಲು ಹಿಂದೂ ದೇವರು ಬೇಕು; ಉಳಿದಂತೆ ಮಾತೃಧರ್ಮವೂ ಬೇಡ, ಹಿಂದೂ ದೇವರು ಬೇಡ ಎಂದರೆ ಮುಖ್ಯವಾಗಿ ಇರಬೇಕಾದ ಶ್ರದ್ಧೆಯೇ ಅಲ್ಲಿ ಇಲ್ಲ ಎಂದಾಯಿತು. ಅವರ ಸರ್ವಶಕ್ತ ಏಕದೇವನಿಗೆ ಅವರ ಸಮಸ್ಯೆ ಪರಿಹರಿಸುವ, ಬಯಕೆ ಪೂರೈಸುವ ತಾಕತ್ತು ಇಲ್ಲವೇ ಎನ್ನುವ ಪ್ರಶ್ನೆಯೂ ಆಗ ಏಳುತ್ತದೆ.


                   ದೇವಾಲಯಗಳನ್ನು ಅಧಿಕಾರಶಾಹಿ ತನ್ನ ವಶವಾಗಿಸಿಕೊಳ್ಳಲು ಹವಣಿಸುವ ಸಂಗತಿ ಇಂದು ನಿನ್ನೆಯದಲ್ಲ. ರಾಜಪ್ರಭುತ್ವವಿದ್ದ ಕಾಲದಲ್ಲಿ ರಾಜನೇ ಮುಂದೆ ನಿಂತು ದೇವಾಲಯದ ಬೇಕು ಬೇಡಗಳನ್ನು ಪೂರೈಸಿದರೆ, ಬ್ರಿಟಿಷ್ ಪ್ರಭುತ್ವ ದೇವಾಲಯಗಳಿಗಿದ್ದ ಉಂಬಳಿಯನ್ನು ಕಿತ್ತುಕೊಂಡಿತು. ಸ್ವಾತಂತ್ರ್ಯದ ಬಳಿಕ ಬಂದ ಸೆಕ್ಯುಲರ್ ಸರಕಾರಗಳು ಬ್ರಿಟಿಷರ ಈ ನೀತಿಯನ್ನು ಇನ್ನಷ್ಟು ಬಿಗಿಯಾಗಿಯೇ ಅನುಸರಿಸಿದವು. ಇದಕ್ಕೆ ಪುರಿಯೂ ಹೊರತಲ್ಲ. ಇನ್ನೂರು ವರ್ಷಗಳ ಹಿಂದೆ ಪೈಕಾ ಕ್ರಾಂತಿಯಿಂದಾಗಿ ಬ್ರಿಟಿಷರಿಂದ ನಾಶವಾಗದೇ ಉಳಿದಿದ್ದ ಪುರಿಯ ಜಗನ್ನಾಥ ಮಂದಿರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬ್ರಿಟಿಷರು ಆರಂಭಿಸಿದಾಗ ಗಜಪತಿ(ರಾಜಾ ಮುಕುಂದ ದೇವ) ವಂಶದ ರಾಣಿ ಸೂರ್ಯಮಣಿ ಮುಂಚೂಣಿಯಲ್ಲಿ ನಿಂತು ಎದುರಿಸಿದಳು. ದುರ್ಭೀಕ್ಷ್ಯದಿಂದಾಗಿ ಒರಿಸ್ಸಾ ತನ್ನ ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಕಳಕೊಂಡ ವರ್ಷವದು(1866). ಆಡಳಿತದಲ್ಲಿ ಅನುಭವವೇ ಇಲ್ಲದ ಕಿರಿ ವಯಸ್ಸಿನ ರಾಣಿ ತನ್ನ ಪತಿಯ ಮರಣದ ದುಃಖದ ಸನ್ನಿವೇಶವನ್ನೂ ತಾಳಿಕೊಂಡು ದತ್ತುಪುತ್ರನೊಬ್ಬನನ್ನು ಪಡೆದು, ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡು, ದೇವಾಲಯದಿಂದಲೇ ಅನ್ನಛತ್ರವನ್ನು ತೆರೆದು ಒರಿಸ್ಸಾದ ಪ್ರಜೆಗಳನ್ನು ಬದುಕಿಸಿದಳು. ದತ್ತುಪುತ್ರನನ್ನು ಬ್ರಿಟಿಷರು ಅಂಡಮಾನಿಗೆ ತಳ್ಳಿ ದೇವಾಲಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದಾಗ ಹಸುಳೆ ಮೊಮ್ಮಗನಿಗೆ ಪಟ್ಟಕಟ್ಟಿ ತಾನೇ ಮತ್ತೊಮ್ಮೆ ಅಧಿಕಾರ ಸೂತ್ರವನ್ನು ಕೈಗೆ ತೆಗೆದುಕೊಂಡು ದೇವಾಲಯವನ್ನು ಅನ್ಯಮತೀಯರ ತೆಕ್ಕೆಗೆ ಜಾರದಂತೆ ಕಾಪಾಡಿದಳು ಆ ಮಾತೆ. ದೇವಾಲಯದ ಆಡಳಿತ ಸಮಿತಿ ಸರಿಯಿಲ್ಲವೆಂದು ಬ್ರಿಟಿಷರು ಮತ್ತೆ ದೇವಾಲಯವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿದಾಗ ಕೋಲ್ಕತ್ತಾ ನ್ಯಾಯಾಲಯದಲ್ಲಿ ದಾವೆ ಹೂಡಿದಳಾಕೆ. ಇವತ್ತಿನಂತೆ ಹಿಂದೂಗಳು ಮುಗುಮ್ಮಾಗಿ ಉಳಿಯದೆ ಸಾಧು, ಸಂತ, ಮಹಾಂತ, ಸಾಮಾನ್ಯ ಜನರು ಒರಿಸ್ಸಾದ ಬೀದಿ ಬೀದಿಗಿಳಿದು ಪ್ರತಿಭಟಿಸಿದರು. ದೇವಾಲಯವೊಂದು ಹಿಂದೂಗಳನ್ನು ಯಾವುದೇ ಭೇದವಿಲ್ಲದೆ ಹೇಗೆ ಏಕತ್ರಗೊಳಿಸುತ್ತದೆ ಎನ್ನುವುದಕ್ಕೆ ನಿದರ್ಶನವಿದು. ಅಂತಹ ಏಕತೆಯನ್ನು ಮುರಿಯಬೇಕಾದರೆ ಹೇಗಾದರೂ ಮಾಡಿ ಶೃದ್ಧಾಕೇಂದ್ರದ ಮೇಲಿನ ಶ್ರದ್ಧೆಯನ್ನು ಮುರಿಯಬೇಕು. ಅದರ ಮೊದಲ ಹಂತವೇ ಇಂತಹ ಅಪಸವ್ಯಗಳು ಎನ್ನುವ ಗುಮಾನಿ ಹಿಂದೂಗಳಿಗೆ ಬರದಿದ್ದರೆ ಹಿಂದೂ ಅಸ್ಮಿತೆಯ ಈ ಪುಣ್ಯನೆಲ ಉಳಿಯದು.


                    ಭಾರತವನ್ನು ಏಕಸೂತ್ರದಲ್ಲಿ ಬೆಸೆದಿರುವುದು ಶೃದ್ಧಾ ಕೇಂದ್ರಗಳೇ. ಹಿಮಾಲಯದ ಗಿರಿಶಿಖರದಲ್ಲಿ ಮೊಳಗುವ ವೇದ ಘೋಷವೇ ರಾಮೇಶ್ವರದ ದೇಗುಲದೊಳಗೂ ಮೊಳಗುತ್ತದೆ. ಅಲ್ಲಿನ ಶಿವಲಿಂಗಕ್ಕೂ ಇಲ್ಲಿನದಕ್ಕೂ ಒಂದೇ ತೆರನಾದ ಅಭಿಷೇಕ! ಇಲ್ಲಿನ ಕಲೆ ಶಿಲ್ಪಗಳಲ್ಲೂ ಏಕಾತ್ಮತೆಯ ಸೂತ್ರವಿದೆ. ಆಸೇತು ಹಿಮಾಚಲದವರೆಗೂ ಎಲ್ಲಾ ದೇವರ ಮೂರ್ತಿಗಳೂ ಒಂದೇ ಸಂಸ್ಥೆಯಿಂದ ಮಾಡಿದ ರೀತಿ ಪಡಿಮೂಡಿವೆ. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ! ನಾಲ್ದೆಸೆಗಳಲ್ಲಿರುವ ಶಂಕರಪೀಠಗಳು ದೇಶದ ನಾಲ್ಕೂ ಮೂಲೆಗಳಿಗೆ ಕರೆದೊಯ್ದರೆ, ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ನಿಂತಿದ್ದಾನೆ. ಹಿಂಗುಲಾತದಿಂದ ಕಾಮಾಕ್ಷಿಯವರೆಗೆ, ಜ್ವಾಲಾಮುಖಿಯಿಂದ ಕುಮಾರಿ ಕ್ಷೇತ್ರದವರೆಗೆ ಹರಡಿರುವ 51 ಶಕ್ತಿಪೀಠಗಳು, ದ್ವಾದಶ ಗಾಣಪತ್ಯ ಕ್ಷೇತ್ರಗಳು, ಅಸಂಖ್ಯ ವೈಷ್ಣವ ಕ್ಷೇತ್ರಗಳು ರಾಷ್ಟ್ರಶಕ್ತಿಯನ್ನು ಉದ್ದೀಪಿಸುತ್ತಾ ನಿಂತಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ದೇಶೀಯರನ್ನು ಬೆಸೆದು ಇಟ್ಟಿರುವುದು ಇಂತಹಾ ಶೃದ್ಧಾ ಕೇಂದ್ರಗಳೇ ಹೊರತು ಯಾವ ರಾಜಕೀಯ ಆಟಾಟೋಪವೂ ಅಲ್ಲ, ಸೆಕ್ಯುಲರ್ ಬುದ್ಧಿಯೂ ಅಲ್ಲ. ಉದಾಹರಣೆಗೆ ಭಾರತದ ನಾಲ್ಕು ಪ್ರಮುಖ ಕ್ಷೇತ್ರಗಳಾದ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕ್ನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು-ಸನ್ಯಾಸಿಗಳು ಅಲ್ಲಿಗೆ ಬರುತ್ತಾರೆ. ಕೋಟ್ಯಾಂತರ ಜನ ಅಲ್ಲಿ ಸೇರುತ್ತಾರೆ. ಯಾವ ರಾಜಕೀಯ ಪಕ್ಷವೂ ಅವರನ್ನು ಹಣ ಕೊಟ್ಟು ಕರೆತರುವುದಿಲ್ಲ. ಯಾವ ರಾಜಕೀಯ ಪಕ್ಷದ ರ್ಯಾಲಿಗೂ ಅವರು ಹೋಗುವುದಲ್ಲ. ಯಾವ ಸಿನಿಮಾ ನಟನನ್ನು ನೋಡಲೂ ಅವರು ಹೋಗುವುದಲ್ಲ. ಅದೊಂದು ರೀತಿ ಅರಿವಿನ ಕರೆ. ಅದೊಂದು ರೀತಿ ರಾಷ್ಟ್ರೀಯ ಸಮ್ಮೇಳನವೇ. ಈಗ ಇಂತಹ ಶ್ರದ್ಧಾಕೇಂದ್ರಗಳಿಗೆ ಅನ್ಯ ಮತೀಯರನ್ನು ನುಗ್ಗಿಸಿ ಅಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿ ಹಿಂದೂಗಳನ್ನು ಬೆಸೆದು ಇಟ್ಟಿರುವ ಏಕಸೂತ್ರವನ್ನು ತುಂಡರಿಸುವುದೇ ಛದ್ಮವೇಶಧಾರಿಗಳ ಉದ್ದೇಶವೇ?
(ವಿಕ್ರಮದಲ್ಲಿ ಪ್ರಕಟಿತ)