ಪುಟಗಳು

ಶನಿವಾರ, ಮಾರ್ಚ್ 30, 2019

ಪಾಕಿಸ್ತಾನಕ್ಕೆ ವಜ್ರಾಘಾತ! ಎಂಟೆಬೆಯ ಎಂಟೆದೆಯವರನ್ನು ಮೀರಿಸಿದ ರಣತಾಂಡವ!

ಪಾಕಿಸ್ತಾನಕ್ಕೆ ವಜ್ರಾಘಾತ! ಎಂಟೆಬೆಯ ಎಂಟೆದೆಯವರನ್ನು ಮೀರಿಸಿದ ರಣತಾಂಡವ!


            ಜಗವೆಲ್ಲಾ ಮಲಗಿತ್ತು. ಪಾಕಿಸ್ತಾನದ ಸೈನ್ಯವೂ ತನ್ನ ದೇಶೀಯರಿಗೆ "ನೀವು ಚೆನ್ನಾಗಿ ನಿದ್ದೆ ಮಾಡಿ; ನಾವು ಎಚ್ಚರ ಇದ್ದೇವೆ" ಎಂದು ಅಭಯ ಕೊಟ್ಟು ಟ್ವೀಟ್ ಮಾಡಿ ಮಲಗಿತ್ತು. ಪಾಕಿಸ್ತಾನ ಸೇನೆ, ಸರಕಾರದಿಂದ ಸಂರಕ್ಷಿತವಾಗಿದ್ದ ಜಾಗವೊಂದರಲ್ಲಿ, ಪುಲ್ವಾಮದಲ್ಲಿ ನಲವತ್ತು ವೀರ ಯೋಧರನ್ನು ಕಳ್ಳರಂತೆ ಸಾಯಿಸಿದವರು ಉಳಿದವರನ್ನೂ ಸೇರಿಸಿಕೊಂಡು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಎದೆಯಲ್ಲಿ ದ್ವೇಷಾಗ್ನಿ ಧಗಧಗಿಸುತ್ತಿದ್ದರೂ ಬುದ್ಧಿಯನ್ನು, ವಿವೇಕವನ್ನು ಭಾವಕ್ಕೆ ಬಿಟ್ಟುಕೊಡದೆ ಶಾಂತವಾಗಿ ಸಮಯ ಕಾಯುತ್ತಿದ್ದ ಭಾರತೀಯ ವೀರ ಪಡೆ ಸಮಯಕ್ಕೆ ಸರಿಯಾಗಿ ತನ್ನ ಮೀರಜ್ ನೊಂದಿಗೆ ಮೇಲೆದ್ದಿತ್ತು. ಲೈನ್ ಆಫ್ ಕಂಟ್ರೋಲ್ ದಾಟಿ ಪಾಕಿಸ್ತಾನದ ಒಳನುಗ್ಗಿ ಸಾವಿರ ಕೆಜಿಗಳಷ್ಟು ಬಾಂಬುಗಳನ್ನು ಮೂರು ಮೂರು ಕಡೆ ಸುರಿದು ಭಯೋತ್ಪಾದಕರ ಮೂಲನೆಲೆಗಳನ್ನೇ ಹೇಳ ಹೆಸರಿಲ್ಲದಂತೆ ಮಾಡಿತು. ಪಾಕಿಸ್ತಾನಕ್ಕೆ ಕೊಟ್ಟ ಆ ವಜ್ರಾಘಾತ ಎಂಟೆಬೆಯ ಎಂಟೆದೆಯರಿಗಿಂತ ತಾವೇನೂ ಕಡಿಮೆಯಿಲ್ಲ ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ರಣತಾಂಡವ!

               ಹೌದು. ಅಂತಹದ್ದೊಂದು ಪ್ರತೀಕಾರ ಬೇಕಿತ್ತು. ಸಾಮ, ದಾನ, ಭೇದ ಕೊನೆಗೆ ದಂಡದಿಂದಲೂ ಬಾಗದ, ತಲೆಯಲ್ಲಿ ಒಂದು ಪುಸ್ತಕವನ್ನು ಮಾತ್ರ ತುಂಬಿಕೊಂಡ ರಕ್ತಪಿಪಾಸು ಮೂರ್ಖ ಶಿಖಾಮಣಿಗಳಿಗೆ ಅವರು ಊಹಿಸಲೂ ಸಾಧ್ಯವಿರದ ರೀತಿಯಲ್ಲಿ ಬುದ್ಧಿಕಲಿಸುವುದಿದೆಯಲ್ಲಾ, ಅದು ಮಹತ್ವದ್ದು. ಈ ದಾರಿಯನ್ನು ಆಯ್ದುಕೊಂಡ ಪ್ರತಿಯೊಂದು ತಲೆಗೂ ಶಿರಸಾ ನಮಿಸಬೇಕು. ಕೇವಲ ದಾರಿ ಮಾತ್ರವಲ್ಲ, ಆ ಗುರಿಯೂ ಮಹತ್ವದ್ಡೇ! ಅದರಲ್ಲೊಂದು ಬಾಲಕೋಟ್. ಜಿಹಾದೀ ಕುನ್ನಿಗಳು ಜನ್ಮತಾಳುವ ಕಾರ್ಖಾನೆ. ಈ ಜಿಹಾದೀ ಕಾರ್ಖಾನೆ ಅಲ್ಲಿ ಶುರುವಾದದ್ದು ಇಂದು ನಿನ್ನೆಯಲ್ಲ. ಅದಕ್ಕೆ ಕನಿಷ್ಟ ಇನ್ನೂರು ವರ್ಷಗಳ ಇತಿಹಾಸವಿದೆ. ಅಲ್ಲಿಗೂ ಭಾರತದ ರಾಜ್ಯವಾದ ಉತ್ತರಪ್ರದೇಶದ ರಾಯ್ ಬರೈಲಿಗೂ ಒಂದು ಕೊಂಡಿಯಿದೆ. ಖುಷ್ತಾರ್ ನೂರಾನಿ ಎಂಬ ಉರ್ದು ಲೇಖಕ ಬರೆದ "ತೆಹ್ರೀಕ್-ಇ-ಜಿಹಾದ್ & ಬ್ರಿಟಿಷ್ ಗವರ್ನ್ಮೆಂಟ್-ಏಕ್ ತಹ್ಕೀಕೀ ಮುತಾಲಿಯಾ" ಎಂಬ ಪುಸ್ತಕ ಈ ಜಿಹಾದೀ ತಾಣ ಜನ್ಮತಾಳಿದ ಬಗೆಯನ್ನು ವಿವರಿಸುತ್ತದೆ. ಮಾತ್ರವಲ್ಲ ಸಯ್ಯದ್ ಅಹಮದ್ ಬರೇಲ್ವಿ ಎಂಬಾತನ ಜಿಹಾದೀ ದಂಗೆಯನ್ನು ಬ್ರಿಟಿಷರ ವಿರುದ್ಧದ ಹೋರಾಟವೆಂಬಂತೆ ಚಿತ್ರಿಸಿದ ಇತಿಹಾಸ ತಿರುಚಲೆಂದೇ ಬರವಣಿಗೆ ನಡೆಸಿದ ಇತಿಹಾಸ ದ್ರೋಹಿಗಳ ಕಥೆಯನ್ನು ಒಂದೇ ಏಟಿಗೆ ತೊಡೆದು ಹಾಕುತ್ತದೆ. ಹಾಗಂತ ಅದು ಬರೇಲ್ವಿಯನ್ನು ಖಳನಾಯಕನಾಗಿಸಿಲ್ಲ. ಜಿಹಾದ್ ಮಾಡಿ ಮಡಿದ ಮಹಾನ್ ನಾಯಕನಂತೆ ಚಿತ್ರಿಸಿದೆ. ಕೆಲವೊಮ್ಮೆ ನಿಜ ತಿಳಿಯಲು ವಿರೋಧಿಗಳು ಬರೆದ ಇತಿಹಾಸ ಬೇಕಾಗುತ್ತದೆ. ನೆಹರೂ ಪರಂಪರೆ ತಿರುಚಿದ ಭಾರತದ ಇತಿಹಾಸವನ್ನು ಸರಿಯಾಗಿ ತಿಳಿಯಲಂತೂ ಇದು ಬಹುತೇಕ ಸಂದರ್ಭಗಳಲ್ಲಿ ನೆರವಾಗಿದೆ. ವಿರೋಧಿಗಳು ತಾವೇ ತಮ್ಮ ಮತಾಂತರ ಕಾರ್ಯ, ಕೊಲೆ, ಅತ್ಯಾಚಾರ, ಲೂಟಿ, ಬರ್ಬರತೆಯನ್ನು ಹೇಳಿಕೊಂಡರೂ ಅದನ್ನು ತನ್ನ ಆಧಿಕಾರ ಉಳಿಸಿಕೊಳ್ಳಲೋಸುಗ ತಿರುಚಿದ ನೆಹರೂ ಪರಿವಾರದ ತಿರುಚಿದ ಇತಿಹಾಸ ಹೆಚ್ಚು ದಿನ ಬಾಳಿಕೆ ಬರದು!

              ಸೂಫಿ ಪಂಗಡವೊಂದರಲ್ಲಿ ಜನ್ಮ ತಾಳಿದ ಸಯ್ಯದ್ ಅಹ್ಮದ್ ಬರೇಲ್ವಿ ಮದ್ರಸಾಗಳಲ್ಲಿನ ಭಯೋತ್ಪಾದಕ ಶಿಕ್ಷಣವನ್ನು ಮೆದುಳಿಗೆ ತುಂಬಿಸಿಕೊಂಡ ಉತ್ತರಪ್ರದೇಶದ ರಾಯ್ ಬರೈಲಿ ಮೂಲದ ವ್ಯಕ್ತಿ. ದರೋಡೆಕೋರ ಅಮೀರ್ ಅಮೀರ್ ಅಲಿಖಾನನ ತಂಡವನ್ನು ಸೇರಿಕೊಂಡ ಈತ ಮಾಳವ-ರಜಪುತಾನಗಳಲ್ಲಿ ದಾರಿಹೋಕರನ್ನು ಲೂಟಿ ಮಾಡಿ ಜೀವನ ನಡೆಸುತ್ತಿದ್ದ. ತನ್ನ ಹಿಂಬಾಲಕರಿಂದ ಮಾತ್ರ ಸೂಫಿಯೆಂದು ಗೌರವ ಪಡೆದುಕೊಳ್ಳುತ್ತಿದ್ದ! ಈತನ ಬಲಗೈ ಬಂಟ ಶಾಹ್ ಇಸ್ಮಾಯಿಲ್ ದೆಹಲ್ವಿ. ಬಳಿಕ ಕೆಲವು ಕಾಲ ಕೊಹಟ್ ನ ಸರ್ದಾರ್ ಪೀರ್ ಮೊಹಮ್ಮದನ ಬಳಿ ಕೆಲಸಕ್ಕಿದ್ದ. ಆ ಸಮಯದಲ್ಲಿ ಕತ್ತಿವರಸೆ ಹಾಗೂ ಕುದುರೆಸವಾರಿಗಳಲ್ಲಿ ನಿಷ್ಣಾತನಾದ. ಒಂದು ದಿನ ಪೇಷಾವರದ ಹತ್ತಿರದ ಹಳ್ಳಿಯೊಂದರಲ್ಲಿ ತನ್ನ ನಾಯಕನ ಜೊತೆ ಖರ್ಚಿಗೆ ಬೇಕಾದ 30-40 ರೂಪಾಯಿಗಳಷ್ಟು ಹಣ ತೆಗೆದುಕೊಂಡು ಬರುತ್ತಿದ್ದಾಗ ತನ್ನ ನಾಯಕನೊಡನೆ ಆ ಹಣಕ್ಕೋಸ್ಕರ ಜಗಳ ಕಾದು ಆತನನ್ನು ಕೊಂದು, ಹಣವನ್ನು ಕಸಿದುಕೊಂಡು ಪೇಷಾವರಕ್ಕೆ ಓಡಿ ಹೋದ. ಅಲ್ಲಿ ಪೀರ್ ಮೊಹಮ್ಮದನ ಬಂಗಲೆಯ ಮುಂದೆ ಸಜ್ಜಾಗಿ ನಿಂತಿದ್ದ ಕುದುರೆಯನ್ನು ಹತ್ತಿಕೊಂಡು ಕಾಬೂಲಿನ ನದಿಯನ್ನು ದಾಟಿ ಬಜೌರ್ ಗೆ ಪಯಣಿಸಿದ. ಇದು ಆತನ ಜೀವನದ ಮೊದಲ ಭಾಗದ ಬಗ್ಗೆ ದಾಖಲಾಗಿರುವ ಕೆಲ ಅಂಶಗಳು.

             ಬಜೌರಿಗೆ ಹೋದವನಿಗೆ ತಿನ್ನಲಿಕ್ಕೇನೂ ಸಿಗದಿದ್ದಾಗ ಒಂದು ಉಪಾಯ ಹೊಳೆಯಿತು. ಅಲ್ಲಿನ ಮುಸಲ್ಮಾನರಲ್ಲಿ ತಾನು ಶುದ್ಧ ಮುಸ್ಲಿಮನೆನ್ನುತ್ತಾ ಕಾಫಿರರ ಮೇಲೆ ಯುದ್ಧ ಸಾರಬೇಕೆಂದು ಭಾಷಣ ಮಾಡಲಾರಂಭಿಸಿದ. ಮತಕ್ಕಾಗಿ ಏನು ಮಾಡಲೂ ಹೇಸದ ಹಲವರು ಅವನ ಬೆಂಬಲಿಗರಾದರು. ಬಳಿಕ ಪ್ರವಾಸಕ್ಕಾರಂಭಿಸಿದ ಆತ ಹಲವರನ್ನು ತನ್ನ ದುರ್ಬೋಧನೆಗಳಿಂದ ಮತೋನ್ಮತ್ತರಾಗುವಂತೆ ಮಾಡಿ ತನ್ನ ಬೆಂಬಲಿಗರನ್ನಾಗಿಸಿಕೊಂಡ. ಆದರೆ ಆಗಿನ ಅವಿಭಜಿತ ಪಂಜಾಬ್ ರಣಜಿತ್ ಸಿಂಗನ ವಶದಲ್ಲಿತ್ತು. ಹಲಕೆಲವರನ್ನು ಬೆಂಬಲಿಗರನ್ನಾಗಿ ಪಡೆದನಾದರೂ ಕಾಫಿರರ ವಿರುದ್ಧ ಯುದ್ಧ ಸಾರುವ ಆತನ ಯೋಜನೆಗೆ ರಣಜಿತ್ ಸಿಂಗನ ದಕ್ಷ ಆಡಳಿತ ತಡೆಯೊಡ್ಡಿತ್ತು. ಧರ್ಮದ ರಕ್ಷಣೆಗಾಗಿ ಜನ್ಮ ತಾಳಿದ ಖಾಲ್ಸಾ ಸಂಪ್ರದಾಯದ ಮಹಾಯೋಧರಲ್ಲಿ ಅಗ್ರಗಣ್ಯ ಈ ರಣಜಿತ್ ಸಿಂಹ. ಅರಬ್ಬರ ಬರ್ಬರತೆಗೆ ಬಲಿಯಾಗಿ ಅಂತಃಸತ್ತ್ವ ಕಳಕೊಂಡು, ಮೊಘಲರ ದುರಾಡಳಿತಕ್ಕೆ ಬಲಿಯಾಗಿ ಮಾತೃಧರ್ಮವನ್ನೇ ತ್ಯಜಿಸಿದ ದೇಶೀಯರಲ್ಲಿ ಮತ್ತೆ ಜಾಗೃತಿ ಮೂಡಿಸಿ, ಸನಾತನ ಧರ್ಮವನ್ನು ಭಾರತದ ವಾಯುವ್ಯ ದಿಕ್ಕಿನಲ್ಲಿ ಮರುಸ್ಥಾಪಿಸಿದ ವೀರಪುಂಗವನಾತ! ರಣಜಿತ್ ಸಿಂಹ ಸಿಡುಬಿನಿಂದಾಗಿ ಬಾಲ್ಯದಲ್ಲಿಯೇ ಕಣ್ಣೊಂದನ್ನು ಕಳೆದುಕೊಂಡಿದ್ದ. ಅವನ ಯಾವ ಕಣ್ಣು ಕಾಣುವುದಿಲ್ಲವೆಂದು ಯಾರಿಗೂ ತಿಳಿಯುತ್ತಿರಲಿಲ್ಲ. ಆ ಮಟ್ಟಿನ ರೂಪ ಅವನದಾಗಿತ್ತು. ಅಕ್ಷರಾಭ್ಯಾಸವಿಲ್ಲದಿದ್ದರೂ ಶಸ್ತ್ರಾಭ್ಯಾಸ ಚೆನ್ನಾಗಿ ಮಾಡಿಕೊಂಡ ರಣಜಿತ್ ಸಿಂಹ ಸಿಖ್ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಸಂಕಲ್ಪ ಮಾಡಿದ್ದ. ಆ ಸಂಕಲ್ಪ ಅವನನ್ನು ಲಾಹೋರಿನ ಮಹಾರಾಜನನ್ನಾಗಿಸಿತು. "ದೇವರು ಸೌಂದರ್ಯ ವಿತರಣೆ ಮಾಡುವಾಗ ಎಲ್ಲಿಗೆ ಹೋಗಿದ್ದೆ" ಎಂದು ಪ್ರೇಯಸಿ ಅವನ ಕುರೂಪವನ್ನು ಛೇಡಿಸಿದಾಗ "ಏಕನಿಷ್ಠೆಯಿಂದ ಸಿಖ್ ಸಾಮ್ರಾಜ್ಯದ ಖಾಲ್ಸಾದರ್ಬಾರನ್ನು ಕಟ್ಟುತ್ತಿದ್ದೆ" ಎಂದಿದ್ದ. ಅದು ಸತ್ಯವೇ! ಪುರುಷಪುರ(ಪೇಷಾವರ)ದ ಮೇಲೆ ದಾಳಿ ಮಾಡಿ ಮೊಹಮ್ಮದ್ ಖಾನನನ್ನು ಓಡಿಸಿದ. ಸಿಂಧ್ ಪ್ರಾಂತವನ್ನು ಬ್ರಿಟಿಷರಿಂದ ಕಸಿದುಕೊಂಡ. ಖೈಬರ್ ಕಣಿವೆಯವರೆಗೆ ದಂಡೆತ್ತಿ ಬಂದು ಅದನ್ನು ವಶಪಡಿಸಿಕೊಂಡ. ಕಾಶ್ಮೀರ, ಲಢಾಕ್ ಪ್ರಾಂತಗಳನ್ನೂ ಗೆದ್ದ. ಕಾಂಗ್ಡಾ ಕಣಿವೆಯ ಗೂರ್ಖರ ಪರಾಕ್ರಮಕ್ಕೆ ಮೆಚ್ಚಿದ ಅವನ ಔದಾರ್ಯಕ್ಕೆ ಗೂರ್ಖರು ಅವನ ಮಿತ್ರರಾದರು. ಅಫ್ಘಾನಿಸ್ತಾನದ ಹಲವು ಭಾಗಗಳನ್ನು ಗೆದ್ದ. ಟಿಬೆಟಿನಿಂದ ಸಿಂಧ್ ವರೆಗೆ, ಸಟ್ಲೇಜಿನಿಂದ ಖೈಬರ್ ಕಣಿವೆಯವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದ. ಸೋತವರನ್ನು ಯಾವ ಕಾರಣಕ್ಕೂ ಲೂಟಿ ಮಾಡದಂತೆ ನಿಯಮ ರೂಪಿಸಿದ್ದ.

               ಇಷ್ಟೇ ಆಗಿದ್ದರೆ ರಣಜಿತ್ ಹತ್ತರಲ್ಲಿ ಹನ್ನೊಂದನೆಯವನಾಗಿ ಹೋಗುತ್ತಿದ್ದನೇನೋ. ಸಂಖ್ಯೆಯಲ್ಲಿ ಕಡಿಮೆಯಿದ್ದರೂ ವ್ಯವಸ್ಥಿತವಾಗಿದ್ದ ಬ್ರಿಟಿಷ್ ಸೇನೆಯನ್ನು ಕಂಡು ಅವರ ತರಬೇತಿಯನ್ನು ಮಾರುವೇಷದಲ್ಲಿ ಹೋಗಿ ನೋಡಿ ಕಲಿತು ತನ್ನ ಸೇನೆಯಲ್ಲಿ ಅದನ್ನು ಅಳವಡಿಸಿದ. ಬ್ರಿಟಿಷರ ವಿರೋಧಿಗಳಾದ ಫ್ರೆಂಚ್, ಗ್ರೀಕ್, ಇಟಲಿ, ಜರ್ಮನಿ ಹಾಗೂ ಅಮೆರಿಕಾದ ಅಧಿಕಾರಿಗಳನ್ನು ತನ್ನ ಸೈನ್ಯದ ತರಬೇತಿಗೆ ನಿಯಮಿಸಿದ. ಪರಾಕ್ರಮದ ಜೊತೆ ಸುವ್ಯವಸ್ಥೆಯೂ ಸೇರಿ ಸಿಖ್ ಸೈನ್ಯ ಬಲಿಷ್ಟವಾಗಿ ದೇಶದ ರಕ್ಷಣೆಗೆ ಕಟಿಬದ್ಧವಾಯಿತು. ಶಿಸ್ತುಬದ್ಧ ಸೈನ್ಯ ಹಾಗೂ ದಕ್ಷ ಆಡಳಿತದಿಂದಾಗಿ ಮುಸ್ಲಿಮರ ಪುಂಡಾಟಗಳು ತಾನೇ ತಾನಾಗಿ ನಿಂತು ಹೋದವು. ಜರ್ಮನ್ ಯಾತ್ರಿಕ ಕಾರ್ಲ್-ವ್ಯಾನ್-ಹ್ಯೂಗನ್ "ರಣಜಿತ್ ಸಿಂಹನ ರಾಷ್ಟ್ರದಲ್ಲಿ ಅಪರಾಧಿಗಳು ಅತ್ಯಂತ ಕಡಿಮೆಯಿದ್ದರು" ಎಂದು ಬರೆದಿದ್ದಾನೆ. ರಸ್ತೆ, ಆಸ್ಪತ್ರೆ, ವಿಶ್ರಾಂತಿಗೃಹ, ಪಾಠಶಾಲೆಗಳನ್ನು ಈತ ನಿರ್ಮಿಸಿದ. ಜಮೀನಿನ ಕಂದಾಯದಲ್ಲೂ ಸುಧಾರಣೆ ತಂದು ಕೃಷಿಕಸ್ನೇಹಿ ನಿಯಮಗಳನ್ನು ರೂಪಿಸಿದ. ತನ್ನ ಆಸ್ಥಾನವನ್ನು ಖಾಲ್ಸಾ ದರ್ಬಾರ್ ಎಂದೇ ಕರೆಯುತ್ತಿದ್ದ ಆತ ಗುರುನಾನಕರ ಹೆಸರಲ್ಲಿ "ನಾನಕ್ ಶಾಹಿ" ಎಂದು ನಾಣ್ಯಗಳನ್ನು ಅಚ್ಚು ಮಾಡಿಸಿದ್ದ. ಅವನ ಆಡಳಿತದಲ್ಲಿ ಕ್ರೈಸ್ತ ಮತಾಂತರಿಗಳ ಆಟ ನಡೆಯಲಿಲ್ಲ. ಅದಕ್ಕಿಂತಲೂ ಮುಖ್ಯ ಅಂಶವೆಂದರೆ ಆತ ಗೋಹತ್ಯೆ ಹಾಗೂ ಅಜಾನ್ ಅನ್ನು ನಿಷೇಧಿಸಿದ್ದ. ತಮ್ಮ ಆಟಾಟೋಪಗಳಿಗೆ, ಗೋಹತ್ಯೆಗೆ ರಣಜಿತ್ ಸಿಂಹ ಕಡಿವಾಣ ಹಾಕಿದುದು, ತಮ್ಮದೇ ಭಾಷೆಯಲ್ಲಿ ಖಾಲ್ಸಾ ಸೈನಿಕರು ಮಾರುತ್ತರ ಕೊಡುತ್ತಿದ್ದುದನ್ನು ಸಹಿಸಿಕೊಳ್ಳಲಾಗದ, ಇಂದಿನ ಜಾತ್ಯಾತೀತರ "ಶಾಂತಿಪ್ರಿಯ" ಮತೀಯರು ಒಳಗೊಳಗೇ ಕುದಿಯಲು ಆರಂಭಿಸಿದ್ದರು. ಆಗವರಿಗೆ ಆಸರೆಯಾಗಿ ಕಂಡವನೇ ಕಾಫಿರರ ಮೇಲೆ ಜಿಹಾದ್ ಘೋಷಿಸುತ್ತಾ ಪ್ರವಚನ ನೀಡುತ್ತಿದ್ದ ಬರೇಲ್ವಿ. ಅನಾಯಾಸವಾಗಿ ಬಂದ ನಾಯಕತ್ವವನ್ನು, ತಾನು ಕುಳಿತು ತಿಂದುಂಡು ತೇಗಿ ತನ್ನ ಬೆಂಬಲಿಗರಿಗೆ ಸ್ವರ್ಗದ 72 ಕನ್ಯೆಯರ ಆಸೆ ತೋರಿಸಿ ಯಮನ ಬಾಗಿಲಿಗೆ ತಳ್ಳುವ ಅದ್ಭುತ ಉದ್ಯಮವನ್ನು ಒಪ್ಪಿಕೊಳ್ಳದ ಮೂರ್ಖನಂತೂ ಬರೇಲ್ವಿಯಾಗಿರಲಿಲ್ಲ. ಅವನಿಗೆ ಬೇಕಾಗಿದ್ದುದೂ ಅದೇ!

             ಬಲೂಚಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಹಿಂಬಾಲಕರನ್ನು ಗಿಟ್ಟಿಸಿಕೊಂಡ ಬರೇಲ್ವಿ ಈಗ(1819) ರಾಯ್ ಬರೈಲಿಗೆ ಮರಳಿದ್ದ. ಬ್ರಿಟಿಷರ ವಶದಲ್ಲಿದ್ದ ಭಾರತದ ಭೂಭಾಗಗಳಲ್ಲಿ ಜಿಹಾದೀ ಚಟುವಟಿಕೆಗಳು ಅವ್ಯಾಹತವಾಗಿ ಸಾಗಿದ್ದವು. ಪಂಜಾಬ್, ಸಿಂಧ್ ಮಾತ್ರ ಬ್ರಿಟಿಷರ ವಶದಲ್ಲಿರಲಿಲ್ಲ. ಅಲ್ಲಿ ರಣಜಿತ್ ಸಿಂಹನ ಆಳ್ವಿಕೆಯಿದ್ದು ಜಿಹಾದೀ ಚಟುವಟಿಕೆಗಳ ಮೇಲೆ ಕಡಿವಾಣ ಬಿದ್ದಿತ್ತು. ಅದಕ್ಕಿಂತಲೂ ಮುಖ್ಯವಾಗಿ 1819ರಲ್ಲಿ ಬರೆಲ್ವಿ ಜಿಹಾದೀ ಎಂಬ ದಂಗೆಯನ್ನು ಶುರುವಿಟ್ಟುಕೊಂಡಾಗ ಬ್ರಿಟಿಷರು ಕಣ್ಮುಚ್ಚಿ ಕುಳಿತಿದ್ದರು. ಜಿಹಾದೀ ಚಟುವಟಿಕೆಗಳನ್ನು ಜನತೆ ಬ್ರಿಟಿಷ್ ಅಧಿಕಾರಿಗಳ ಗಮನಕ್ಕೆ ತಂದಾಗ "ಎಲ್ಲಿವರೆಗೆ ತಮ್ಮ ವಿರುದ್ಧವಲ್ಲವೋ, ಅಲ್ಲಿವರೆಗೆ ಅವರನ್ನು ನಿರ್ಬಂಧಿಸುವುದಿಲ್ಲವೆಂದು" ಹೇಳಿ ದೂರು ತಂದವರನ್ನೇ ಸುಮ್ಮನಾಗಿಸಿಬಿಟ್ಟರು. ದೆಹಲಿ, ಪಾಟ್ನಾ, ಟೋಂಕ್ ರಾಜ್ಯಗಳಲ್ಲಿ ಬಹಿರಂಗವಾಗಿ ಜಿಹಾದ್ ಕುರಿತ ಭಾಷಣಗಳನ್ನು ಮಾಡಿ ಯುವಕರನ್ನು ಪ್ರೇರೇಪಿಸುತ್ತಿರುವುದನ್ನು, ಜಿಹಾದ್ ಮಾಡುವುದಾಗಿ ಪ್ರತಿಜ್ಞೆ ಕೈಗೊಳ್ಳುತ್ತಿರುವುದನ್ನು, ಜಿಹಾದೀಗಾಗಿ ಧನ ಸಂಗ್ರಹ ಮಾಡುತ್ತಿದ್ದುದನ್ನು, ಬರೇಲ್ವಿ ಹಾಗೂ ಆತನ ಹಿಂಬಾಲಕರು ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿರುವುದನ್ನು ಕಂಡೂ ಕೈಕಟ್ಟಿ ಕೂತರು. ಹೆಚ್ಚೇಕೆ ಬರೇಲ್ವಿಗೆ ಭದ್ರತೆ ನೀಡುವ ಪ್ರಸ್ತಾಪವನ್ನೂ ಆತನ ಮುಂದಿದಿಟ್ಟರು! ಒಂದು ಕಾಲದಲ್ಲಿ ಬರೇಲ್ವಿಯಿದ್ದ ದರೋಡೆಕೋರರ ಗುಂಪಾದ ಅಮೀರ್ ಅಲಿಖಾನನ ತಂಡಕ್ಕೆ ಬ್ರಿಟಿಷರೇ ರಕ್ಷಣೆ ನೀಡುತ್ತಿದ್ದರು. ಬರೇಲ್ವಿ ಆ ಗುಂಪಿನಲ್ಲಿ ಆರು ವರ್ಷಗಳ ಕಾಲವಿದ್ದ. ಈಗ ಅದೇ ತಂಡ ಬರೇಲ್ವಿಗೆ ಧನ ಹಾಗೂ ಯುವಕರನ್ನು ಒದಗಿಸುತ್ತಿತ್ತು. ಇವೆಲ್ಲವನ್ನು ನೋಡಿಯೂ ಈ ದೇಶವನ್ನು ಆಳುತ್ತಿದ್ದ ಕಂಪೆನಿ ಸರಕಾರ ಮುಗುಮ್ಮಾಗಿ ಉಳಿದಿತ್ತು!

                1826ರ ಜನವರಿಯಲ್ಲಿ ಬರೇಲ್ವಿ ತನ್ನ ಬೆಂಬಲಿಗ ಸೈನ್ಯದೊಡನೆ ಪಂಜಾಬಿನತ್ತ ಪಯಣಿಸಿದ. ಕೆಲ ಕಾಲ ದಲ್ಮೌ ಫತೇಪುರದಲ್ಲಿ ಬೀಡುಬಿಟ್ಟ ಬಳಿಕ ಗ್ವಾಲಿಯರಿನ ರಾಜ ದೌಲತ್ ರಾವ್ ಸಿಂಧ್ಯಾನ ಅರಮನೆಗೆ ಪಯಣಿಸಿದ. ದೌಲತ್ ರಾವ್ ಸಿಂಧ್ಯಾ ಹಾಗೂ ಆತನ ಭಾವನೂ, ಬ್ರಿಟಿಷರ ಪಾದಸೇವಕನೂ ಆಗಿದ್ದ ಹಿಂದೂರಾವ್ ನಿಂದ ಹಲವು ಕಾಲ, ಹಲವು ಬಾರಿ ಆತನಿಗೆ ಆತಿಥ್ಯ ಒದಗಿತು. ಉತ್ತರೋತ್ತರ ಸಿಂಧ್ಯಾ ಮನೆತನ ದೇಶ ವಿಭಜಿಸಿದ & ವಿಭಜಿಸುವ ಯತ್ನದಲ್ಲಿರುವ ಕಾಂಗ್ರೆಸ್ಸನ್ನು ಬೆಂಬಲಿಸಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! ಅಲ್ಲಿಂದ ಸಿಂಧ್ ಹಾಗೂ ಕಂದಹಾರ್ ಮುಖಾಂತರ ಕಾಬೂಲಿಗೆ ಬರೇಲ್ವಿಯ ಪಟಾಲಂ ಸಾಗಿತು. ಬಳಿಕ ಖೈಬರ್ ನತ್ತ ಪಯಣಿಸಿ ಪೇಷಾವರಕ್ಕೆ ಬಂದಿತು. ಅಲ್ಲೆಲ್ಲಾ ಹಿಂದೊಮ್ಮೆ ಬುಡಕಟ್ಟು ಜನಾಂಗಗಳಾಗಿದ್ದು ಬಲವಂತದ ಮತಾಂತರಕ್ಕೊಳಗಾಗಿ ಇಸ್ಲಾಮನ್ನು ಅಪ್ಪಿಕೊಂಡಿದ್ದ ಗುಂಪುಗಳಿಂದ ಬರೇಲ್ವಿಗೆ ಬೆಂಬಲವೂ ದೊರಕಿತು. ರಣಜಿತ್ ಸಿಂಹನ ಕಟ್ಟುನಿಟ್ಟಿನ ಆಡಳಿತದಿಂದಾಗಿ ತಮ್ಮ ದರೋಡೆಕೋರ ವೃತ್ತಿ ನಡೆಸದಂತಾದುದು, ಗೋಹತ್ಯೆಗೆ ನಿಷೇಧವಿದ್ದುದೇ ಇದಕ್ಕೆ ಮೂಲಕಾರಣವಾಗಿತ್ತು. 1826ರ ಡಿಸೆಂಬರ್ 21ರ ರಾತ್ರಿ ಅಕೋರಾ(ಈಗಿನ ಖೈಬರ್ ಪಖ್ತೂಂಖ್ವಾ ಪ್ರಾಂತ್ಯ)ದಲ್ಲಿ ಸಿಖ್ಖರ ಮೇಲೆ ಗೆರಿಲ್ಲಾ ದಾಳಿಯೆಸಗಿದ ಬರೇಲ್ವಿ ತಂಡ ಕಾಫಿರರ ಮೇಲಿನ ಜಿಹಾದಿಗೆ ಉಪಕ್ರಮಿಸಿತು. ಹಜ್ರೊದಲ್ಲಿ(ಈಗಿನ ಪಂಜಾಬ್ ಪ್ರಾಂತ್ಯ) ಇನ್ನೊಂದು ದಾಳಿ ಎಸಗಿ ಕಾಫಿರರ ಅಂಗಡಿ-ಮುಂಗಟ್ಟುಗಳನ್ನೆಲ್ಲಾ ದೋಚಿತು. ರಣಜಿತ್ ಸಿಂಗನ ಸೈನ್ಯದ ಮುಖ್ಯಸ್ಥರಲ್ಲೊಬ್ಬನಾಗಿದ್ದ ಬುಧ್ ಸಿಂಹ್ ಬರೇಲ್ವಿಗೆ ಪತ್ರ ಬರೆದು "ನೀನು ನಿಜವಾದ ಸಯ್ಯದ್ ಆಗಿದ್ದರೆ ಕಳ್ಳರಂತೆ ದಾಳಿ ಮಾಡುವ ಬದಲು ಮುಖಾಮುಖಿ ಯುದ್ಧಕ್ಕೆ ಬಾ" ಎಂದು ಸವಾಲೆಸೆದ. ಹಜ್ರೊ ದಾಳಿಯ ಬಳಿಕ ಅವ್ಯವಸ್ಥಿತವಾಗಿದ್ದ ತನ್ನೆಲ್ಲಾ ಹಿಂಬಾಲಕರನ್ನು ಕರೆದು ಸಭೆ ನಡೆಸಿದ ಬರೇಲ್ವಿ. ಅಲ್ಲಿ ಆತನನ್ನು ತಮ್ಮ ನಾಯಕನನ್ನಾಗಿ ಆರಿಸಿಕೊಂಡ ಆ ಮುಜಾಹಿದೀನ್ ಪಡೆ ಆತನಿಗೆ ಖಲೀಫಾ, ಎಮಿರ್-ಉಲ್-ಮೊಮಿನೀನ್, ಸಯ್ಯದ್ ಬಾದ್ ಶಾ ಎಂಬೆಲ್ಲಾ ಬಿರುದು ಕೊಟ್ಟಿತು. ಖಲೀಫನಾದ ಬಳಿಕ ಇಂದಿನ ತಾಲಿಬಾನಿಗಳಂತೆ ಹಲವು ಫತ್ವಾಗಳನ್ನು ಹೊರಡಿಸಿದ ಬರೇಲ್ವಿ. ಅವುಗಳಲ್ಲಿ ಕೆಲವು ೧) ಪ್ರತಿಯೊಂದು ಸ್ಥಳೀಯ ಮುಸ್ಲಿಂ ಗುಂಪು ಷರಿಯಾ ಕಾನೂನನ್ನು ಅನುಸರಿಸಬೇಕು. ೨) ಸ್ಥಳೀಯ ಮುಸ್ಲಿಮರು ತಮ್ಮ ಆದಾಯದ ಒಂದು ಭಾಗವನ್ನು ಮುಜಾಹಿದೀನ್ಗಳಿಗೆ ಕೊಡಬೇಕು. ೩) ಷರಿಯಾ ಜಾರಿಗೆ ತರಲು ಖಾಜಿಗಳನ್ನು ಹಾಗೂ ಇನ್ನಿತರ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ೪) ಗಂಡಸರು, ಮಹಿಳೆಯರು, ವೃದ್ಧ, ಬಾಲರೆನ್ನದೆ ಪ್ರತಿಯೊಬ್ಬ ಮುಸ್ಲಿಂ ಬರೇಲ್ವಿಯನ್ನು ಇಮಾಮ್ ಎಂದು ಒಪ್ಪಬೇಕು. ಒಪ್ಪದವರನ್ನು ಮುನಾಫಿಕ್ ಬಂಡಾಯಗಾರ ಎಂದು ಘೋಷಿಸಿ ತಲೆಕಡಿಯಲಾಗುವುದು. ಆದರೆ ಬರೇಲ್ವಿಯ ಎಣಿಕೆಯಂತೆ ಈ ಕಾರ್ಯ ಸಿಗಲಿಲ್ಲ. ಷರಿಯಾ ಹೇರುವ ಆತನ ಕ್ರಮದಿಂದ ಸ್ಥಳೀಯರು ಹಾಗೂ ಮುಜಾಹಿದೀನ್ಗಳ ನಡುವೆ ನಿತ್ಯ ಕಲಹ ಆರಂಭವಾಯಿತು. ಈ ನಡುವೆ ರಣಜಿತ್ ಸಿಂಗನ ಸೇನೆ ಸುಮ್ಮನಿರಲಿಲ್ಲ. ಅದು ಒಂಬತ್ತು ಬಾರಿ ದಾಳಿ ಮಾಡಿ ಸಾವಿರಾರು ಮುಜಾಹಿದೀನ್ಗಳನ್ನು ಅವರ ಸ್ವರ್ಗದ 72 ಕನ್ಯೆಯರ ಬಳಿ ಅಟ್ಟಿತು.

              1831ರ ಸುಮಾರಿಗೆ ಖೈಬರ್ ಕಣಿವೆಯ ಬಾಲಾಕೋಟ್ ಬರೇಲ್ವಿಯ ಅಡಗುತಾಣವಾಗಿ ಕುಖ್ಯಾತಿ ಗಳಿಸಿತ್ತು. ಅಷ್ಟರಲ್ಲಾಗಲೇ ಮೂರನೇ ಮದುವೆಯಾಗಿದ್ದ ಬರೇಲ್ವಿ. ಆತನ ಬಳಿ 2500ಕ್ಕೂ ಹೆಚ್ಚಿನ ಭಯೋತ್ಪಾದಕ ಮುಜಾಹಿದೀನ್ಗಳಿದ್ದರು. ಆ ಎತ್ತರದ ಪರ್ವತಾಗ್ರದಲ್ಲಿ ಮುಜಾಹಿದೀನ್ಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು.  ಭಾರೀ ಪರ್ವತದ ಜೊತೆ ನದಿಯೂ ಇದ್ದುದರಿಂದ ಅವನಿಗೆ ಅನುಕೂಲವಾಗಿತ್ತು. ನಿಮ್ಮಿಂದ ನನ್ನ ಕೂದಲು ಕೊಂಕಿಸಲೂ ಆಗದು ಎಂದು ಅಹಂಕಾರದಿಂದ ಮಹಾರಾಜ ರಣಜಿತ್ ಸಿಂಹನಿಗೆ ಪತ್ರ ಬರೆದಿದ್ದ ಬರೇಲ್ವಿ. ಅವನ ಸೊಕ್ಕಡಗಿಸಿ, ಭಯೋತ್ಪಾದನೆಗೆ ಪೂರ್ಣವಿರಾಮ ಹಾಡಲು ನಿರ್ಧರಿಸಿದ ರಣಜಿತ್ ಸಿಂಹ ಖೈಬರ್ ಕಣಿವೆಯ ಆಡಳಿತ ನಿರ್ವಹಿಸುತ್ತಿದ್ದ ತನ್ನ ಪ್ರತಿನಿಧಿ ಹರಿಸಿಂಗ್ ಹಾಗೂ ಸೇನಾಧಿಪತಿ ಶೇರ್ ಸಿಂಗನಿಗೆ ಆ ಭಯೋತ್ಪಾದಕರ ನಿರ್ನಾಮ ಮಾಡಿ ಬರುವಂತೆ ವೀಳ್ಯ ಕೊಟ್ಟ. ಶೇರ್ ಸಿಂಗನ ಸೇನೆ ಬಾಲಾಕೋಟ್ ಗುಡ್ಡದತ್ತ ಮುನ್ನಡೆಯಿತು. ಬಾಲಾಕೋಟ್ನಲ್ಲಿ ಭತ್ತದ ಗದ್ದೆಗಳನ್ನು ತನ್ನ ವಶ ಮಾಡಿಕೊಂಡಿದ್ದ ಬರೇಲ್ವಿ ಅವುಗಳಿಗೆ ನೀರುಣಿಸಲು ಮಾಡಿದ್ದ ಕಾಲುವೆಗಳನ್ನು ಯಾವಾಗಲೂ ತನ್ನ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದ. ಎದುರಾಳಿ ಸೈನ್ಯ ಬರುತ್ತಿದ್ದಂತೆ ಈ ಕಾಲುವೆಗಳಿಗಿದ್ದ ನೀರಿನ ಕಟ್ಟೆಯನ್ನೊಡೆದು ಎದುರಾಳಿ ಸೈನ್ಯ ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತಿದ್ದ. ಶೇರ್ ಸಿಂಗನ ಸೈನಿಕರು ಈ ಕಾಲುವೆಗಳನ್ನು ಬಳಸಿಕೊಂಡು ಭತ್ತದ ಕೆಸರು ಗದ್ದೆಗಳಲ್ಲಿ ಪೈರುಗಳೆಡೆಯಲ್ಲಿ ಅವಿತುಕೊಂಡುಬಿಟ್ಟಿದ್ದರು. ಧಾರಾಕಾರ ಮಳೆ ಹಾಗೂ ತಾನು ಕಾಲುವೆಗಳ ಕಟ್ಟೆ ಒಡೆಯುವುದರಿಂದ ಆ ಪ್ರವಾಹಕ್ಕೆದುರಾಗಿ ಎದುರಾಳಿ ಸೈನ್ಯ ಕೊಚ್ಚಿಹೋಗಬಹುದೆಂದು ಉಪಾಯ ಹೂಡಿದ್ದ ಬರೇಲ್ವಿಯ ಎಣಿಕೆ ತಪ್ಪಾಗಿತ್ತು. 1831ರ ಮೇ 6ರಂದು ಶೇರ್ ಸಿಂಗ್ ನೇತೃತ್ವದಲ್ಲಿ ಎದುರಾದ ರಣಜಿತ್ ಸಿಂಹನ ಸೈನ್ಯ ಬರೇಲ್ವಿ ಹಾಗೂ ಆತನ ಮುಜಾಹಿದೀನ್ ಸೇನೆಯನ್ನು ಅಟ್ಟಾಡಿಸಿ ಬಡಿಯಿತು. ಬರೇಲ್ವಿ, ಆತನ ಬಲಗೈ ಬಂಟ ಷಾ ಇಸ್ಮಾಯಿಲ್ ದೆಹಲ್ವಿ ಸೇರಿದಂತೆ ಮುಜಾಹಿದೀನ್ಗಳೆಲ್ಲಾ ರಕ್ತ ಕಾರಿ ಸತ್ತು ಬಿದ್ದಿದ್ದರು. ಅಲ್ಲಿಗೆ ಜಿಹಾದಿಗೆ ಆಧುನಿಕ ರೂಪ ಕೊಟ್ಟು ಮುಸ್ಲಿಂ ಜನಾಂಗ ಲೋಕ ಕಂಟಕವಾಗಲು ತನ್ನ ಕೊಡುಗೆ ನೀಡಿದ್ದ ಬರೇಲ್ವಿಯ ಅವಸಾನವಾಗಿತ್ತು.

                ಆದರೆ.....ಅಲ್ಲಿ, ಬಾಲಾಕೋಟಿನಲ್ಲಿ ಬರೇಲ್ವಿಯ ಸಮಾಧಿ ಎದ್ದಿತು. ಹಸಿರು ಬಳಿದ ಆ ಕಲ್ಲು ಮುಂದಿನ ಮುಜಾಹಿದೀನ್ಗಳಿಗೆ ಮಾತ್ರವಲ್ಲ, ಎಲ್ಲಾ ಮುಸ್ಲಿಮರಿಗೆ ಶ್ರದ್ಧೆಯ ತಾಣವಾಯಿತು. ಯಾತ್ರಾಸ್ಥಳವಾಯಿತು. ಇಂದಿಗೂ ಮುಜಾಹಿದೀನ್ಗಳಿಗೆ ಮಾತ್ರವಲ್ಲ, ಪಾಕಿಸ್ತಾನದ ನಾಗರಿಕರಿಗೂ ಅದೊಂದು ಪವಿತ್ರ ಯಾತ್ರಾಸ್ಥಳ! ಭರತ ಖಂಡವನ್ನು ಇಸ್ಲಾಂ ಆಡಳಿತಕ್ಕೆ ಒಳಪಡಿಸಬೇಕೆಂಬ ಗುರಿ ಹೊಂದಿದ್ದ ಬರೇಲ್ವಿ ಅದನ್ನೇ ತನ್ನ ಅನುಯಾಯಿಗಳಿಗೆ ಬೋಧಿಸುತ್ತಿದ್ದ. ಅದಕ್ಕಾಗಿಯೇ ಆತನನ್ನು ಮುಸ್ಲಿಮರು ಇಂದಿಗೂ ಹುತಾತ್ಮ ಎಂದೇ ಆರಾಧಿಸುತ್ತಾರೆ! ತಾಲೀಬಾನಿಗಳ ವಿಡಿಯೋಗಳನ್ನು ನೋಡಿದರೆ ಬರೇಲ್ವಿ ಹಾಗೂ ದೆಹಲ್ವಿಗಳನ್ನು ತಮ್ಮ ಪಿತಾಮಹರೆಂಬಂತೆ ಸ್ಮರಿಸುವುದನ್ನು ಕಾಣಬಹುದು. ಬರೇಲ್ವಿ ಸತ್ತ ನಂತರ ಆತನ ಹೆಂಡಿರು ಮಕ್ಕಳು ಅಲ್ಲದೇ ಅಲ್ಲಿ ಉಳಿದಿದ್ದ ಹೆಂಗಳೆಯರು, ಮಕ್ಕಳನ್ನೆಲ್ಲಾ ಬ್ರಿಟಿಷ್ ಆಡಳಿತದಲ್ಲಿದ್ದ, ಟೋಂಕ್ ರಾಜ್ಯದ ಅಮೀರ್ ಅಲಿಖಾನನ ಟೋಳಿಗೆ ತರಲಾಯಿತು. ಹೀಗೆ ಮಾಡುವಾಗಲೂ ಬ್ರಿಟಿಷರು ಕಣ್ಮುಚ್ಚಿ ಕುಳಿತಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು; ಅದು ನೇರ ಯುದ್ಧದಲ್ಲಿ ರಣಜಿತ್ ಸಿಂಹನನ್ನು ಎದುರಿಸಲಾಗದೇ ಹೀಗಾದರೂ ಆತನ ರಾಜ್ಯ ತಮ್ಮ ವಶವಾಗಲು ಅನುಕೂಲವಾಗಲೀ ಎಂಬುದಾಗಿತ್ತು. ಆದರೆ ರಣಜಿತ್ ಸಿಂಹ ಅದರಲ್ಲೂ ಗೆದ್ದುಬಿಟ್ಟಿದ್ದ. ಯಾವಾಗ ರಣಜಿತ್ ಸಿಂಹ ಮರಣವನ್ನಪ್ಪಿ ಪಂಜಾಬ್, ಸಿಂಧ್ ಗಳು ಬ್ರಿಟಿಷರ ವಶವಾಯಿತೋ ಮುಜಾಹಿದೀನ್ಗಳು ಮತ್ತೆ ಚಿಗುರಲಾರಂಭಿಸಿದರು. ಅಲ್ಲಲ್ಲಿ ಇಂತಹ ಭಯೋತ್ಪಾದಕ ಕೇಂದ್ರಗಳು ಆರಂಭವಾದವು. ಅವೆಲ್ಲಕ್ಕೂ ಹಣ ಹರಿದು ಬರಲಾರಂಭಿಸಿತು. ಬ್ರಿಟಿಷರು ಆಗಲೇ ಕ್ರಮಕೈಗೊಂಡಿದ್ದರೆ ಇವತ್ತು ಈ ಎಲ್ಲಾ ಉಗ್ರರ ಸ್ವರ್ಗಗಳು ಇರುತ್ತಿರಲಿಲ್ಲ. ಆದರೆ ಒಡೆದಾಳುವುದೇ ಕ್ಷೇಮವೆಂದು ಅರಿತಿದ್ದ ಅವರಿಗೆ ತಮ್ಮದಲ್ಲದ ದೇಶದಲ್ಲಿ ತಲೆಯಲ್ಲಿ ಕುರಾನ್ ಮಾತ್ರ ತುಂಬಿಕೊಂಡ ಮತಾಂಧರಿಂದ ಅಪಾಯ ತಂದುಕೊಳ್ಳುವುದು ಇಷ್ಟವಿರಲಿಲ್ಲ. ಅವರ ಈ ಜಾಣನಡೆಯಿಂದಾಗಿಯೇ ಯಾವುದೇ ಮತಾಂಧ ಮುಸ್ಲಿಂ ಪಡೆ 1857ರ ಸಂಗ್ರಾಮದಲ್ಲಾಗಲೀ ಅಥವಾ ಬ್ರಿಟಿಷರ ವಿರುದ್ಧದ ಯಾವುದೇ ಹೋರಾಟದಲ್ಲಾಗಲೀ ಭಾಗವಹಿಸಲಿಲ್ಲ. ಬದಲಾಗಿ ಬೇಕಾದ ಸೌಲಭ್ಯಗಳನ್ನು ಬ್ರಿಟಿಷರ ಕಾಲಿಗೆ ಬಿದ್ದು ಪಡೆದುಕೊಂಡಿತು.

                ಜೈಷ್ ಉಗ್ರರು ದೇವಬಂದಿ ಸಂಸ್ಥೆಯ ಅನುಯಾಯಿಗಳು. ದೇವಬಂದಿಯ ಸಂಸ್ಥಾಪಕರು ಷಾ ಇಸ್ಮಾಯಿಲ್ ದೆಹಲ್ವಿಯ ಅಜ್ಜ ಷಾ ವಲಿಯುಲ್ಲಾ ವಿಧಿಸಿದ ಕಟ್ಟುಪಾಡುಗಳನ್ನು ಅನುಸರಿಸುತ್ತಾರೆ. ಈ ದೆಹಲ್ವಿ ಬರೇಲ್ವಿಯ ಬಲಗೈ ಬಂಟ ಮಾತ್ರವಲ್ಲ ಸಂಬಂಧಿಯೂ ಕೂಡಾ. ದೆಹಲ್ವಿಯ ಚಿಕ್ಕಪ್ಪ ಷಾ ಅಬ್ದುಲ್ ಅಜೀಜ್, "ಭಾರತ ದಾರ್-ಉಲ್-ಹರ್ಬ್. ಅದನ್ನು ದಾರ್-ಉಲ್-ಇಸ್ಲಾಂ ಆಗಿ ಪರಿವರ್ತಿಸಬೇಕು" ಎಂದು ಫತ್ವಾ ಹೊರಡಿಸಿದ್ದ. ಅಲ್ಲದೇ ರಾಯ್ ಬರೈಲಿ ಸುನ್ನಿಗಳ "ಬರೇಲ್ವಿ ಶಾಖೆಯ" ಪ್ರಧಾನ ಕೇಂದ್ರ. ಬಹಿರ್ಮುಖದಲ್ಲಿ ಸೂಫಿತತ್ವಗಳನ್ನು ಪ್ರತಿಪಾದಿಸುವ ಈ ಶಾಖೆ ಅಂತರಂಗದಲ್ಲಿ ಜಿಹಾದೀ ಕಲಿಸುವ ಗೋಮುಖವ್ಯಾಘ್ರ. ಇತಿಹಾಸದಲ್ಲಿ ಸೂಫಿಗಳು ಮಾಡಿದ್ದೂ ಅದೇ ಅಲ್ಲವೇ?! ಹೀಗೆ ಬರೈಲಿಯ ಬರೇಲ್ವಿ ದರೋಡೆಕೋರನಾಗಿದ್ದು ಕೆಲಸ ಮಾಡಿ ತಿನ್ನಲು ಸೋಮಾರಿತನ ಆವರಿಸಿ ಖಲೀಫಾನೆಂದು ಉದ್ಘೋಷಿಸಿಕೊಂಡು ಮುಜಾಹಿದೀನ್ಗಳನ್ನು ಬೆಳೆಸಿ ಜಿಹಾದಿಗೆ ಆಧುನಿಕ ಸ್ವರೂಪ ಕೊಟ್ಟು ಬಾಲಾಕೋಟ್ ಎಂಬ ಭಯೋತ್ಪಾದಕರ ಸ್ವರ್ಗ ಕಟ್ಟಿ ಇಂದಿನ ಭಯೋತ್ಪಾದಕರಿಗೆ ಮಾತ್ರವಲ್ಲ ಎಲ್ಲಾ ಮುಸ್ಲಿಮರಿಗೆ ಆದರ್ಶನೆನಿಸಿಕೊಂಡದ್ದು ಈಗ ಇತಿಹಾಸ! ಮುಸಲ್ಮಾನರು ಅನ್ನ ಕೊಟ್ಟ ನೆಲಕ್ಕೆ ಕೃತಜ್ಞರಾಗುವ ಮನೋಭಾವದವರಾಗಿದ್ದರೆ ಅಂತಹ ದುರುಳನನ್ನು ತಿರಸ್ಕರಿಸಬೇಕಿತ್ತು. ಹಾಗಾಗಲಿಲ್ಲ. ಕಾಕತಾಳೀಯವೋ ಎಂಬಂತೆ ರಾಯ್ ಬರೈಲಿ ಇತ್ತೀಚಿನವರೆಗೂ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕಿಗೆ ದಾಖಲೆ ಕೇಳುತ್ತಿರುವ ಕಾಂಗ್ರೆಸ್ಸಿನ ಅಧ್ಯಕ್ಷನ ತಾಯಿ ಸ್ಪರ್ದಿಸುತ್ತಿದ್ದ ಲೋಕಸಭಾ ಕ್ಷೇತ್ರ! ಬಾಲಕೋಟಿಗೂ ರಾಯ್ ಬರೈಲಿಗೂ ಇರುವ ಕೊಂಡಿ ಬಹುಷಃ ಇಂದಿಗೂ ಕೆಲಸ ಮಾಡುತ್ತಿದೆ ಎಂದು ನಾನು ಹೇಳಲಾರೆ! ಏನೇ ಆಗಲೀ ಮೋದಿ ಕೊಟ್ಟ ಏಟು ಸರಿಯಾದ ಜಾಗಕ್ಕೆ ಬಿದ್ದಿದೆ. ಅದನ್ನು ತಡೆದುಕೊಳ್ಳಲು ಬಾಲಾಕೋಟಿಗೂ ಆಗುತ್ತಿಲ್ಲ; ರಾಯಬರೈಲಿಗೂ!

ಜಂತರ್ ಮಂತರ್ ಚತುರ ಶಿಲ್ಪಿಯೊಬ್ಬನ ಸಾಹಸದ ಕಥೆ ಹೇಳುತ್ತದೆ...

ಜಂತರ್ ಮಂತರ್ ಚತುರ ಶಿಲ್ಪಿಯೊಬ್ಬನ ಸಾಹಸದ ಕಥೆ ಹೇಳುತ್ತದೆ...


              ನಾಲ್ಕು ಮಹಾಕ್ಷತ್ರಿಯ ಯಾಗಗಳಲ್ಲಿ ಅಗ್ರಗಣ್ಯವಾದುದು ಅಶ್ವಮೇಧ. ರಾಷ್ಟ್ರದ ಅಭ್ಯುತ್ಥಾನದ ಹಾಗೂ ಕ್ಷಾತ್ರತ್ತ್ವದ ಸಂಕೇತವದು. ಸೂರ್ಯವಂಶೀಯ ದಿಗ್ಗಜ ಚಕ್ರವರ್ತಿಗಳಾದ ಭರತ, ದಿಲೀಪ, ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ, ಚಂದ್ರವಂಶೀಯ ಧರ್ಮರಾಯರುಗಳಿಂದ ಹಿಂದಿನ ಎರಡು ಯುಗಗಳಲ್ಲಿ ನಡೆಸಲ್ಪಟ್ಟ ಮಹಾಯಾಗ. ಕಲಿಯುಗದಲ್ಲಿ ಪುಷ್ಯಮಿತ್ರ ಶುಂಗ, ಗೌತಮೀಪುತ್ರಶಾತಕರ್ಣಿ, ಸಮುದ್ರಗುಪ್ತ, ಪುಲಕೇಶೀ, ರಾಜರಾಜ ಚೋಳರಂತಹ ಕೆಲವೇ ಕೆಲವು ಅರಸರಿಂದ ನಡೆಸಲ್ಪಟ್ಟ ಬಲು ಅಪರೂಪವೆನ್ನಬಹುದಾದ ಯಾಗ. ಇವೆಲ್ಲವೂ ರಾಷ್ಟ್ರಗೌರವದ, ಸಾರ್ವಭೌಮತ್ವದ ಪ್ರತೀಕಗಳೇ. ಆದರೆ ಇವೆಲ್ಲಕ್ಕಿಂತಲೂ ವಿಶೇಷ ಎನ್ನಿಸುವ ಅಶ್ವಮೇಧ ಯಾಗ ಮತಾಂಧ ಇಸ್ಲಾಮೀ ಬರ್ಬರತೆಗೆ ಬೆಂಡಾಗಿದ್ದ, ಆಂತರಿಕ ಕಚ್ಚಾಟಗಳಿಂದ ಬಳಲಿದ್ದ, ಬಡತನದಿಂದಾಗಿ, ಕ್ಷಾತ್ರ ಹೀನತೆಯಿಲ್ಲದೆ ಸ್ವಾತಂತ್ರ್ಯವನ್ನು ಕಳೆದುಕೊಂಡು ಧರ್ಮದ ರಕ್ಷಣೆಯಿಲ್ಲದೆ, ಸಾಂಸ್ಕೃತಿಕ ವೈಭವವಿಲ್ಲದೆ ಬಸವಳಿದು ಬ್ರಿಟಿಷರ ತೆಕ್ಕೆಗೆ ಜಾರುತ್ತಿದ್ದ ಭಾರತದಲ್ಲಿ ಹದಿನೆಂಟನೆಯ ಶತಮಾನದ ಪೂರ್ವಾರ್ಧದಲ್ಲಿ ಮತ್ತೆ ನಡೆದಿತ್ತು. ಅದರ ರೂವಾರಿಯೇ ಸವಾಯಿ ಜಯಸಿಂಹ.

                 ಆ ಕಾಲದಲ್ಲಿ ಈ ದೇಶದಲ್ಲಿ ಹಿಂದೂವಾಗಿ ಹುಟ್ಟುವುದು, ಹಿಂದೂವಾಗಿ ಬಾಳುವುದೇ ಅಪರಾಧವಾಗಿತ್ತು. ಹಿಂದೂ ಎಂಬ ಒಂದೇ ಕಾರಣದಿಂದ ಇಸ್ಲಾಮೀ ಪ್ರಭುತ್ವಕ್ಕೆ ತನ್ನದೇ ಸ್ವಂತ ನೆಲದಲ್ಲಿ ತಲೆಗಂದಾಯ(ಜೆಜಿಯಾ) ಪಾವತಿಸಬೇಕಾದ ದುರ್ಗತಿಗೆ ಹಿಂದೂ ಈಡಾಗಿದ್ದ.  ಹಿಂದೂ ಕೃಷಿಕರು, ವರ್ತಕರು ಹೆಚ್ಚಿನ ತೆರಿಗೆ ಪಾವತಿಸಬೇಕಿತ್ತು. ಮುಸ್ಲಿಮರಿಗೆ ಮಾತ್ರ ಇದರಿಂದ ವಿನಾಯಿತಿ. ತೀರ್ಥಕ್ಷೇತ್ರಗಳ ಮೇಲೆ, ತೀರ್ಥಯಾತ್ರೆಗಳ ಮೇಲೆ, ತೀರ್ಥಸ್ನಾನಗಳ ಮೇಲೂ ತೆರಿಗೆ ಹಾಕಲ್ಪಟ್ಟಿತ್ತು. ಯಾರೇ ಮುಸ್ಲಿಂ ಯಾತ್ರಿಕರಿರಲಿ, ಅವರಿಗೆ ಹಿಂದೂವೊಬ್ಬ ತನ್ನ ಮನೆಯಲ್ಲಿ ಉಚಿತವಾಗಿ ಆಶ್ರಯವೀಯಬೇಕಿತ್ತು. ತಮ್ಮ ಖಾಸಗಿ ಸಮಾರಂಭಕ್ಕೂ ಅವರಿಗೆ ಆದ್ಯತೆ ನೀಡಬೇಕಿತ್ತು. ಹೊಸ ಗುಡಿಗಳನ್ನು ಕಟ್ಟುವಂತಿರಲಿಲ್ಲ. ಹಳತನ್ನು ಜೀರ್ಣೋದ್ಧಾರ ಮಾಡುವಂತಿರಲಿಲ್ಲ. ಮುಸ್ಲಿಮರ ಯಾವುದೇ, ಎಂತಹದ್ದೇ ಕೆಲಸವಾದರೂ ದೇವಾಲಯಗಳನ್ನು ಬಿಟ್ಟುಕೊಡಬೇಕಿತ್ತು. ಉತ್ಸವಗಳನ್ನು ಬಹಿರಂಗವಾಗಿ ಆಚರಿಸುವಂತಿರಲಿಲ್ಲ. ಅರಸುಕುವರರಲ್ಲದ ಹಿಂದೂಗಳಾರೂ ಆಯುಧಗಳನ್ನು ಹೊಂದುವಂತಿರಲಿಲ್ಲ. ಕುದುರೆ, ಮೇನೆ, ಆನೆಗಳನ್ನು ಹತ್ತುವಂತಿರಲಿಲ್ಲ. ಯಾರಾದರೂ ಮನೆಯವರು ಸತ್ತರೆ ಗಟ್ಟಿ ಅಳುವಂತಿರಲಿಲ್ಲ.  ಮುಸ್ಲಿಮರಿಗಿಂತ ಕೆಳ ದರ್ಜೆಯ ವಸನಗಳನ್ನು ಧರಿಸಬೇಕಿತ್ತು. ಮುಸ್ಲಿಮರ ಕೇರಿಗೆ ದೂರದಲ್ಲಿ ಅವರಿಗಿಂತ ಕಡಿಮೆ ಸವಲತ್ತಿನ ವಸತಿ ಏರ್ಪಡಿಸಿಕೊಳ್ಳಬೇಕಿತ್ತು. ಒಟ್ಟಾರೆ ಮುಸ್ಲಿಮರಿಗಿಂತ ಕೆಳಮಟ್ಟದ ಬದುಕನ್ನು ಸಾಗಿಸಬೇಕಾಗಿತ್ತು. ಹಿಂದೂ ಹೆಂಗಳೆಯರ ಮೇಲಾಗಲೀ, ಸಂಪತ್ತಿನ ಮೇಲಾಗಲೀ ಇಸ್ಲಾಂ ಪ್ರಭುತ್ವದ ಕಣ್ಣು ಬಿದ್ದರೆ ಅವೆಲ್ಲಾ ದೋಚಲ್ಪಡುತ್ತಿದ್ದವು. ಅನುದಿನವು ಹಿಂದೂಗಳನ್ನು ಹೀಗಳೆವ, ಗೇಲಿ ಮಾಡುವ, ಮತಾಂತರಿಸುವ, ಅತ್ಯಾಚಾರ ಮಾಡುವ, ಕೊಲ್ಲುವ ಮುಸ್ಲಿಮರ ಮೇಲೆ ಯಾವ ಕ್ರಮವನ್ನು ಕೈಗೊಳ್ಳುತ್ತಿರಲಿಲ್ಲ. ಅದು ಅವರ ಅನುದಿನದ ಹಕ್ಕಾಗಿತ್ತು. ಇಂತಹಾ ಯಾವುದೇ ದೌರ್ಜನ್ಯದ ವಿರುದ್ಧ ಉನ್ನತ ಸ್ಥಾನದಲ್ಲಿದ್ದ ಹಿಂದೂವೊಬ್ಬ ಪ್ರತಿರೋಧಿಸುವಂತಿರಲಿಲ್ಲ.

                  ಅಂತಹಾ ವಿಷಮ ಪರಿಸ್ಥಿತಿಯಲ್ಲಿ ದೇಶವಿದ್ದಾಗ ಹುಟ್ಟಿದವನು ಜಯಸಿಂಹ(1688). ಅಪ್ಪ(ಕಛರಾಹಾ ವಂಶದ ಬಿಶನಸಿಂಹ) ಸಮೃದ್ಧವಾಗಿದ್ದ ಅಂಬೇರಿನ ರಾಜನಾದರೂ ಮೊಘಲರಿಗೆ ಮಣಿದು ಅವರ ಅಧೀನನಾಗಿ ದುಡಿಯುತ್ತಿದ್ದ. ತಾಯಿ ಇಂದ್ರಕುವರ್. ಬಿಶನಸಿಂಹ ಅನಿವಾರ್ಯವಾಗಿ ಮೊಘಲ್ ಸೇವಕನಾಗಿದ್ದರೂ ಸಾಹಸಿಯಾಗಿದ್ದ. ಹದಿನೆಂಟನೇ ವರ್ಷ ವಯಸ್ಸಿನಲ್ಲೇ ಪಟ್ಟವೇರಿದ್ದ ಆತನ ಸಾಹಸ, ಸದ್ಗುಣಗಳು ಜಯಸಿಂಹನಲ್ಲೂ ಮೇಳೈಸಿದ್ದವು. ಬಿಶನ್ ಸಿಂಹ ತನ್ನ ಮಕ್ಕಳು ಜಯ ವಿಜಯರಿಬ್ಬರಿಗೂ ಕುದುರೆ ಸವಾರಿ, ಧನುರ್ವಿದ್ಯೆ, ಕತ್ತಿವರಸೆ ಮುಂತಾದ ಕ್ಷಾತ್ರ ವಿದ್ಯೆಗಳನ್ನು, ಸಂಸ್ಕೃತ ಸಹಿತ ದೇಶೀ-ವಿದೇಶೀ ಭಾಷೆಗಳನ್ನೂ, ರಾಜಕಾರಣದ ಪಟ್ಟುಗಳನ್ನು ಕಲಿಸುವ ವ್ಯವಸ್ಥೆಯನ್ನು ಮಾಡಿದ್ದ. ಜಯಸಿಂಹನಿಗೆ ಹನ್ನೊಂದು ವರ್ಷವಾಗಿದ್ದಾಗಲೇ ಕೋಹಾತ್ ಪ್ರಾಂತದಲ್ಲಿ ಬಿಶನ್ ಸಿಂಹ ಅಕಾಲಮೃತ್ಯುವಿಗೀಡಾದ. ಹೀಗೆ ಬಹು ಕಿರಿಯ ವಯಸ್ಸಿನಲ್ಲೇ(12) ಪಟ್ಟಕ್ಕೇರಿದ ಕಾರಣ ಗುರುತರ ಹೊಣೆಗಾರಿಕೆ ಜಯಸಿಂಹನದಾಯಿತು. ಆದರೇನು ಮೊಘಲರ ಸೇವೆಯನ್ನು ಅವನು ನಿಲ್ಲಿಸುವಂತಿರಲಿಲ್ಲ. ರಾಜ್ಯಾಭಿಷೇಕವಾದ ಮೂರು ತಿಂಗಳಲ್ಲಿಯೇ ದಕ್ಷಿಣಕ್ಕೆ ತೆರಳಿ ಮರಾಠರೊಡನೆ ಹೋರಾಡುವಂತೆ ಜಯಸಿಂಹನಿಗೆ ಮೊಘಲ್ ಅರಸ ಆಜ್ಞೆ ಮಾಡಿದ. ಎತ್ತರದ ಬೆಟ್ಟಗಳು, ಆಳ ಕಣಿವೆಗಳ ನಡುವೆ ಗೆರಿಲ್ಲಾ ಯುದ್ಧ ತಂತ್ರ ಉಪಯೋಗಿಸಿ ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಮರಾಠ ಪಡೆಗಳ ಖಡ್ಗಕ್ಕೆ ಆಹುತಿಯಾಗಲು ಯಾವ ಮೊಘಲ್ ಸರದಾರರೂ ಒಪ್ಪುತ್ತಿರಲಿಲ್ಲ. ಆದರೆ ಎಳೆಯ ಜಯಸಿಂಹ ಬಾದಶಹಾನ ಅಪ್ಪಣೆಯನ್ನು ಮೀರುವಂತಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅವನೀಗ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ್ದ. ಅಪ್ಪನಿಗೆ ಸಿಕ್ಕಿದ್ದ ಜಾಗೀರುಗಳನ್ನು ಮೊಘಲ್ ಅಧಿಕಾರಶಾಹಿ ಹಿಂದಕ್ಕೆ ತೆಗೆದುಕೊಂಡಿತ್ತು. ಅದಕ್ಕಾಗಿ ಬಾದಶಹಾನ ಮಾತಿಗೆ ಒಪ್ಪಿ ಬೀದಾರ್ ಬಖ್ತ್ ಎಂಬ ಸೇನಾಧಿಕಾರಿಯ ಸಹಾಯಕನಾದ. ಕೊಂಕಣದುರ್ಗವನ್ನು ಗೆಲ್ಲುವಲ್ಲಿ ಅವನು ತೋರಿದ ಸಾಹಸ ಬಖ್ತ್ ಹಾಗೂ ಬಾದಶಹಾರಿಬ್ಬರ ಪ್ರಶಂಸೆಗೆ ಪಾತ್ರವಾಗಿ ಬಡ್ತಿ ಸಿಕ್ಕು ಮಾಳವ ಪ್ರಾಂತದ ಉಪ ಪ್ರಾಂತಾಧಿಕಾರಿ ಪಟ್ಟ ಒಲಿದು ಬಂತು. ಇತ್ತ ಔರಂಗಜೇಬನೆಂಬ ಕ್ರೂರಿ ಮತಾಂಧ ಮೊಘಲ್ ಬಾದಶಹಾನ ಅವಸಾನವಾಗಿತ್ತು. ಅವನ ಮಕ್ಕಳಲ್ಲೇ ಕಚ್ಚಾಟ ಶುರುವಾಗಿತ್ತು. ಅಜಮನನ್ನು ನಿವಾರಿಸಿ ಬಹಾದ್ದೂರ್ ಶಹಾ ಮೊಘಲ್ ಚಕ್ರವರ್ತಿ ಎಂದು ಘೋಷಿಸಿಕೊಂಡ ಬಳಿಕ ಅಜಮನ ಪಕ್ಷ ವಹಿಸಿದ್ದ ಜಯಸಿಂಹನ ಕಷ್ಟದ ದಿನಗಳು ಆರಂಭವಾಯಿತು. ಅವನಲ್ಲಿ ಸ್ವಾಭಿಮಾನದ ಜ್ವಾಲೆ ಎದ್ದು ಉರಿಯಿತು. ಮಾರುವೇಶದಿಂದ ಅಲ್ಲಿಂದ ತಪ್ಪಿಸಿಕೊಂಡು ಅಂಬೇರಿಗೆ ಬಂದು ರಜಪೂತರನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತನಾದ.

              ಅಷ್ಟರಲ್ಲಿ ಜಯಸಿಂಹ ಮತ್ತು ಅವನ ತಮ್ಮ ವಿಜಯಸಿಂಹ ರಾಜ್ಯಕ್ಕಾಗಿ ಕಾದಾಡುತ್ತಾರೆ ಎಂಬ ಕುಂಟು ನೆಪವನ್ನು ಒಡ್ಡಿ ಬಹಾದೂರ್ ಶಾಹ ಜಯಸಿಂಹನ ರಾಜ್ಯವನ್ನು ವಶ ಪಡಿಸಿಕೊಂಡ. ಅಲ್ಲಿ ಮುಸಲ್ಮಾನ ಅಧಿಕಾರಿಗಳನ್ನು ನೇಮಿಸಿದ. ಇದು ರಜಪೂತರನ್ನು ರೊಚ್ಚಿಗೆಬ್ಬಿಸಿತು. ಹೆಚ್ಚಿನ ರಜಪೂತರು ಮೊಘಲ್ ಸೇನೆಯನ್ನು ತೊರೆದು ಉದಯಪುರಕ್ಕೆ ಬಂದು ಮಹಾರಾಣಾನ ಜೊತೆಗೂಡಿದರು. ಜಯಸಿಂಹ, ಮಾರವಾಡದ ಅಜಿತಸಿಂಹ, ಮೇವಾಡದ ಅಮರಸಿಂಹ ಹಾಗೂ ಮಹಾವೀರ ದುರ್ಗಾದಾಸರ ನೇತೃತ್ವದ ರಜಪೂತರ ಬೃಹತ್ ಸೈನ್ಯ ಉದಯಪುರ ನಗರವನ್ನು ಬೆಳಗಿದ್ದು ರಜಪೂತರ ಚರಿತ್ರೆಯಲ್ಲಿ ಮರೆಯಲಾಗದ ಕ್ಷಣವಾಗಿತ್ತು. ಈ ನಡುವೆ ಮಹಾರಾಣಾ ಮಗಳು ಚಂದ್ರಕುವರಿಯನ್ನು ಜಯಸಿಂಹನಿಗೆ ಕೊಟ್ಟು ಮದುವೆ ಮಾಡಿದ. ರಜಪೂತರೀಗ ಮೊಘಲರ ವಿರುದ್ಧ ತೊಡೆ ತಟ್ಟಲಾರಂಭಿಸಿದರು. ಇತ್ತ ಮೊಘಲರು ಜಯಸಿಂಹನನ್ನು ತಮ್ಮ ಕಡೆಗೆ ಸೆಳೆಯುವ ಪ್ರಯತ್ನಕ್ಕಾರಂಭಿಸಿದರು. ಆಂಬೇರ್ ರಾಜ್ಯವನ್ನು ಜಯಸಿಂಹನಿಗೇ ಹಿಂದಿರುಗಿಸುವುದಾಗಿ ಪುಸಲಾಯಿಸಿದರು. ಆದರೆ ಜಯಸಿಂಹ ಯಾವುದಕ್ಕೂ ಜಗ್ಗಲಿಲ್ಲ. ರಜಪೂತರೆಲ್ಲಾ ಒಟ್ಟುಗೂಡಿ ಮೊಘಲರ ವಶದಲ್ಲಿದ್ದ ಜೋಧಪುರದ ಮೇಲೆ ದಂಡೆತ್ತಿ ಹೋದರು. ಅದನ್ನು ವಶಪಡಿಸಿಕೊಂಡು ಮಹಾರಾಜಾ ಅಜಿತಸಿಂಹನನ್ನು ಸಿಂಹಾಸನದ ಮೇಲೆ ಕೂರಿಸಿದರು. ಅಂಬೇರ್ ಅನ್ನು ಜಯಸಿಂಹ ಮರುವಶಪಡಿಸಿಕೊಂಡ. ಅಜಿತಸಿಂಹನ ಮಗಳನ್ನು ವಿವಾಹವಾಗುವುದರೊಂದಿಗೆ ಅವರೀರ್ವರ ಬಾಂಧವ್ಯ ಮತ್ತಷ್ಟು ವೃದ್ಧಿಯಾಯಿತು. ಪ್ರಬಲರಾಗಿದ್ದ ಮರಾಠರೊಂದಿಗೆ ಮಾತುಕತೆ ನಡೆಸಿ ರಜಪೂತರು ಹಾಗೂ ಮರಾಠರ ನಡುವೆ ಕೊಂಡಿಯಾದ. ರಜಪೂತರನ್ನು ಒಡೆಯಲು ಮೊಘಲರು ನಡೆಸಿದ ಪ್ರಯತ್ನಗಳಿಗೆಲ್ಲಾ ಜಯಸಿಂಹ ಅಡ್ಡಲಾಗಿ ನಿಂತಿದ್ದರಿಂದ ಅವೆಲ್ಲವೂ ನಿಷ್ಫಲವಾದವು. ಮಹಾರಾಣಾ ಅಲ್ಪ ವಯಸ್ಸಿನಲ್ಲೇ ತೀರಿಕೊಂಡ ಸಂದರ್ಭವನ್ನು ಉಪಯೋಗಿಸಿಕೊಂಡು ಮೊಘಲರು ರಾಜಸ್ತಾನಕ್ಕೆ ದಾಳಿಯಿಟ್ಟಾಗ ಜಯಸಿಂಹ ರಜಪೂತರನ್ನೆಲ್ಲಾ ಒಗ್ಗೂಡಿಸಿ, ಮರಾಠರ ಬೆಂಬಲವನ್ನೂ ಪಡೆದು ಮೊಘಲರನ್ನು ಒದ್ದೋಡಿಸಿದ.

                ಬಹಾದೂರ್ ಶಾಹನ ಅವಸಾನದ ಬಳಿಕ ಮೊಘಲರಲ್ಲಿ ಸಿಂಹಾಸನಕ್ಕಾಗಿ ಕಾದಾಟಗಳು ಸಾಮಾನ್ಯವಾಯಿತು. ಜಯಸಿಂಹನ ಬುದ್ಧಿಶಕ್ತಿ, ಸಾಮರ್ಥ್ಯಗಳನ್ನು ಅರಿತು ಅವನಿಗೆ ಸವಾಯಿ ಎಂಬ ಬಿರುದು ನೀಡಿದವನು ಮಹಮದ್ ಷಹಾ. ಬಿರುದಿಗೆ ತಕ್ಕ ಲಾಂಛನಗಳನ್ನೂ ಸವಲತ್ತುಗಳನ್ನೂ ಜಯಸಿಂಹನಿಗೆ ದೊರಕಿತು. ಈಗ ಜಯಸಿಂಹನ ಪ್ರಭಾವ ಎಷ್ಟೆಂದರೆ ಅವನನ್ನು ಆನೆಯ ಮೇಲೆ ಮೆರವಣಿಗೆಯೊಂದಿಗೆ ಆಸ್ಥಾನಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ರತ್ನಾಭರಣಗಳು ಅವನಿಗೆ ಸಮರ್ಪಿತವಾಗುತ್ತಿತ್ತು. ತನ್ನ ಈ ಪ್ರಭಾವವನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಜಯಸಿಂಹ ಭಾರತದಿಂದ ಜೆಜಿಯಾ ಸಹಿತ ತೀರ್ಥಯಾತ್ರೆ, ತೀರ್ಥಸ್ನಾನಗಳ ಮೇಲಿದ್ದ ಕರವನ್ನು ಶಾಶ್ವತವಾಗಿ ತೆಗೆದುಹಾಕಿಸಿದ. ಬಹಾದೂರ್ ಷಹಾ ಕೊಡಬಂದ ಎರಡು ಕೋಟಿ ರೂಪಾಯಿಗಳ ಬದಲಾಗಿ ಕರನಿರ್ಮೂಲನದ ಶಾಸನವನ್ನು ನೆರವೇರಿಸಿಕೊಂಡ. ಮಥುರಾ, ವೃಂದಾವನ, ಕಾಶಿ, ಗಯಾ, ಹರದ್ವಾರ, ಅಯೋಧ್ಯೆ, ಚಿತ್ರಕೂಟ, ಉಜ್ಜಯಿನಿ, ಪುಣೆ, ಆಗ್ರಾ, ದೆಹಲಿ, ಕಾಬೂಲ್, ಲಾಹೋರ್ಗಳ ಅನೇಕ ಕ್ಷೇತ್ರಗಳಲ್ಲಿ, ನಗರಗಳಲ್ಲಿ ಧರ್ಮಸತ್ರಗಳನ್ನು, ಧರ್ಮಛತ್ರಗಳನ್ನು, ವಸತಿಮಂದಿರಗಳನ್ನೂ ನಿರ್ಮಿಸಿದ. ಮಹಂತರ, ಸನ್ಯಾಸಿಗಳ ಸಾವಿನ ಅನಂತರ ಅವರ ಗಳಿಕೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಾರದೆಂದು ಆಜ್ಞೆ ಹೊರಡಿಸಿದ. ಈಗ ಮೊಘಲರನ್ನೇ ಉಪೇಕ್ಷಿಸಿ ರಾಜಪುತ್ರವಲಯಕ್ಕೆಲ್ಲಾ ಅನಭಿಷಿಕ್ತ ದೊರೆಯಾಗಿ ಮೊಘಲರ ದುರಾಡಳಿತದಿಂದ ಹದಗೆಟ್ಟಿದ್ದ ವ್ಯವಸ್ಥೆಯನ್ನು ಸರಿಪಡಿಸಲು ರಚನಾತ್ಮಕ ಕಾರ್ಯಗಳನ್ನು ಕೈಗೊಂಡ. ಅವನು ರಾಣಾಪ್ರತಾಪನಂತೆ ಮೊಘಲರೆದುರು ಸೆಡ್ಡುಹೊಡೆದು ನಿಲ್ಲಲಿಲ್ಲ. ಆದರೆ ಒಳಗಿದ್ದುಕೊಂಡೇ ಸಾಕಷ್ಟು ಪ್ರತಿರೋಧವನ್ನೊಡ್ಡಿದ. ಇಸ್ಲಾಮಿನ ಘಾತುಕತೆಯ ಬಗ್ಗೆ, ಇಸ್ಲಾಮೀ ಆಡಳಿತದ ರೀತಿ-ನೀತಿಗಳನ್ನು, ಆಗ್ರಹ-ಅನ್ಯಾಯಗಳನ್ನು ತಿಳಿದುಕೊಂಡಿದ್ದ ಆತ ಅವರ ಜೊತೆಗಿದ್ದುಕೊಂಡೇ ಹಿಂದೂಗಳಿಗೆ ನೆರವಾದ. ಮೊಘಲರೊಂದಿಗೆ ಇರುತ್ತಿದ್ದಾಗಲೇ ರಜಪೂತರ ಸಂಘಟನೆಯಲ್ಲಿ ತೊಡಗಿಕೊಂಡುದುದು, ಮೊಘಲ್ ಪ್ರಭುತ್ವವನ್ನು ಬಳಸಿಕೊಂಡೇ ಬಾಜೀರಾಯನ ಜೊತೆ ಸ್ನೇಹ ಬೆಸೆದುದು, ಹಿಂದೂಗಳ ಮೇಲಿನ ಅನ್ಯಾಯದ ಕರಗಳನ್ನು ತೆಗೆದುಹಾಕಿದುದು, ರಚನಾತ್ಮಕ ಆಡಳಿತ ನಡೆಸಿದುದು, ಕೊನೆಗೆ ಮೊಘಲರನ್ನೇ ಮೂಲೆಗುಂಪು ಮಾಡಿ ಅನಭಿಷಿಕ್ತನಾಗಿ ಮೆರೆದುದು ಸಾಮಾನ್ಯ ಸಾಧನೆಯೇನಲ್ಲ.

                 ಅವಿರತ ಯುದ್ಧ, ಸಂಧಾನ, ರಾಜಕಾರಣಗಳ ನಡುವೆ ದಕ್ಷ ಆಡಳಿತ ನಡೆಸುತ್ತಿದ್ದ ಜಯಸಿಂಹನ ರಾಜ್ಯ ವಿಸ್ತಾರವಾಗುತ್ತಿದ್ದಂತೆ ರಾಜ್ಯದ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ರಾಜ್ಯ ರಾಜಧಾನಿ ಅಂಬೇರನ್ನು ವಿಸ್ತರಿಸುವುದು ಅನಿವಾರ್ಯವಾಗಿತ್ತು. ಅಂಬೇರಿನಲ್ಲಿ ಸುಂದರವಾದ ಅರಮನೆಗಳೇನೋ ಇದ್ದವು. ಆದರೆ ದೊಡ್ಡ ವ್ಯಾಪಾರ ಕೇಂದ್ರಗಳಾಗಲಿ ಉತ್ತಮವಾದ ರಸ್ತೆ ಉದ್ಯಾನವನಗಳಾಗಲಿ ಇರಲಿಲ್ಲ. ಸುತ್ತಲೂ ಬೆಟ್ಟಗುಡ್ಡಗಳಿದ್ದುದರಿಂದ ಆಂಬೇರನ್ನು ವಿಸ್ತರಿಸುವುದು ಕಷ್ಟವಾಗಿತ್ತು. ಆದ್ದರಿಂದ ಅವನು ಒಂದು ಸುವ್ಯವಸ್ಥಿತ ನಗರವನ್ನು ನಿರ್ಮಿಸಲು ತೀರ್ಮಾನಿಸಿದ. ಹಾಗೆ ಮೂಡಿ ಬಂದದ್ದೇ ಇಂದಿನ ರಾಜಸ್ಥಾನದ ರಾಜಧಾನಿಯಾಗಿರುವ ಜಯಪುರ! 1728ರಲ್ಲಿ ಜಯಪುರ ನಗರಕ್ಕೆ ಅಡಿಪಾಯ ಹಾಕಲಾಯಿತು. ವಾಸ್ತುಶಿಲ್ಪ, ಕಲೆ ಮತ್ತು ಸೌಂದರ್ಯ ಶಾಸ್ತ್ರಗಳಲ್ಲಿ ಆಸಕ್ತಿಯಿದ್ದ ಜಯಸಿಂಹ ನಗರ ನಿರ್ಮಾಣಕ್ಕಾಗಿ ನಕ್ಷೆಯನ್ನು ಸಿದ್ಧಪಡಿಸಿದ. ಒಂಬತ್ತು ಆಯತಾಕಾರ ಭಾಗಗಳಲ್ಲಿ ನಗರವನ್ನು ವಿಂಗಡಿಸಿ ಉತ್ತರದಿಕ್ಕಿನ ಎರಡು ಭಾಗಗಳನ್ನು ಅರಮನೆಗಳು, ಕಚೇರಿಗಳು ಮತ್ತು ವೀಕ್ಷಕಾಲಯಗಳಿಗೆಂದು ಕಾದಿರಿಸಿದ. ಅಲ್ಲಿ ಮನೆಗಳನ್ನು ಚೊಕ್ಕವಾಗಿ ಸಾಲುಸಾಲಾಗಿ ಕಟ್ಟಿ ಅಲಂಕಾರಗಳನ್ನು ಮಾಡುತ್ತಿದ್ದರು. ನಗರ ಮಧ್ಯದಲ್ಲೊಂದು ಏಳು ಅಂತಸ್ತುಗಳಿಂದ ಕೂಡಿದ ಭವ್ಯ ಅರಮನೆ ಚಂದ್ರ ಮಹಲ್, ಅಮೃತಶಿಲೆಯ ಗೋಪುರ, ಸುತ್ತಲೂ ತಿಳಿನೀರಿನ ಕೊಳಗಳು ಮತ್ತು ಸುಂದರ ಉದ್ಯಾನವನಗಳು, ಅನೇಕ ದೇವಸ್ಥಾನಗಳನ್ನೂ ಧರ್ಮಛತ್ರಗಳು ಹಾಗೂ ಹಲವು ಭವ್ಯ ಕಟ್ಟಡಗಳ ನಿರ್ಮಾಣವಾಯಿತು. ನಗರದ ಸುತ್ತಲೂ 20-25 ಅಡಿ ಎತ್ತರದ ಹಾಗೂ ಒಂಬತ್ತು ಅಡಿ ಅಗಲದ ಗೋಡೆಯನ್ನು ಕಟ್ಟಿಸಿದ. ಅದಕ್ಕೆ ಏಳು ಪ್ರವೇಶ ದ್ವಾರಗಳಿದ್ದವು. ಅರಮನೆಯ ಭಾಗದಲ್ಲಿ ವಾಸ್ತುಶಿಲ್ಪದ ದೃಷ್ಟಿಯಿಂದ ಸುಂದರವಾದ ಅನೇಕ ಕಟ್ಟಡಗಳು ನಿರ್ಮಾಣಗೊಂಡವು. ಜಯಪುರದ ಕೆಲವು ರಾಜಮಾರ್ಗಗಳು ಎಷ್ಟು ವಿಶಾಲವಾಗಿತ್ತೆಂದರೆ ಅವುಗಳಲ್ಲಿ ಆರು ಏಳು ಗಾಡಿಗಳು ಒಟ್ಟಿಗೆ ಒಂದರ ಪಕ್ಕದಲ್ಲೊಂದು ಹೋಗಬಹುದಿತ್ತು.  1733ರ ವೇಳೆಗೆ ಭಾರತೀಯನಗರನಿರ್ಮಾಣ ಶಾಸ್ತ್ರಗಳ ಅನುಸಾರ ಕಟ್ಟಲ್ಪಟ್ಟ ಅಚ್ಚುಕಟ್ಟಾದ, ಸುಂದರ, ಭವ್ಯ ನಗರ ಎದ್ದು ನಿಂತಿತ್ತು.

                ಜಯಸಿಂಹ ತನ್ನ ಆಳ್ವಿಕೆಯ ಎಲ್ಲಾ ದಾಖಲೆಗಳನ್ನು ಸಂಸ್ಕೃತ, ಫಾರ್ಸೀ ಮತ್ತು ಆಯಾ ಸ್ಥಳೀಯ ಭಾಷೆಗಳಲ್ಲಿ ಬರೆಸುತ್ತಿದ್ದ. ಸಂಸ್ಕೃತವನ್ನು ಪಾಲನಾ ಭಾಷೆಯನ್ನಾಗಿಸಿದ್ದ. ತೋಪು, ತುಪಾಕಿಗಳ ಮಹತ್ವವನ್ನು ಅವನು ಅರಿತಿದ್ದ. ಅವನ ಐವತ್ತು ಸಾವಿರ ಸೈನಿಕರ ಸುಶಿಕ್ಷಿತ ಪಡೆ ದೇಶದಲ್ಲಿಯೇ ಅತ್ಯಾಧುನಿಕವಾಗಿತ್ತು. ಅವನು ನಿರ್ಮಿಸಿದ್ದ ಪ್ರಯೋಗಾತ್ಮಕವಾದ ಚಕ್ರಗಳ ಫಿರಂಗಿ "ಜೈವಾನ" ಪ್ರಪಂಚದ ಅತಿ ದೊಡ್ಡ ಫಿರಂಗಿಯಾಗಿತ್ತು. ಸ್ತ್ರೀ ಹತ್ಯೆ, ಶಿಶುವಧೆಗಳನ್ನು ಕಠಿಣ ಶಾಸನಗಳ ಮೂಲಕ ತಡೆದಿದ್ದ. ದುಂದು ವೆಚ್ಚದ ಮದುವೆಗೆ ಕಡಿವಾಣ ಹಾಕಿದ್ದ. ಕೃಷಿ, ವಾಣಿಜ್ಯೋದ್ಯಮ, ಕಲೆಗಳನ್ನು ಚೆನ್ನಾಗಿ ಪೋಷಿಸಿದ್ದ ಅವನ ರಾಜ್ಯದಲ್ಲಿ ಭಕ್ತಿ-ಅದ್ವೈತ ತತ್ತ್ವಾದಿಗಳು, ಯಜ್ಞಶ್ರದ್ಧೆಗಳು ಚೆನ್ನಾಗಿ ಬೆಳೆದವು. ಸದಾ ಯುದ್ಧ ಮಗ್ನನಾಗಿದ್ದಾಗಲೂ ಖಗೋಳಶಾಸ್ತ್ರದ ಮೇಲಿನ ತನ್ನ ಪ್ರೀತಿ ಕಿಂಚಿತ್ತೂ ಮುಕ್ಕಾಗದಂತೆ ಕಾಪಿಟ್ಟುಕೊಂಡು ಬಂದುದರಲ್ಲಿಯೇ ಇವನ ವ್ಯಕ್ತಿತ್ವದ ಹಿರಿಮೆ ವ್ಯಕ್ತವಾಗುತ್ತದೆ. ಖಗೋಲಶಾಸ್ತ್ರದಲ್ಲಿ ನಿಷ್ಣಾತನಾಗಿದ್ದ ಜಯಸಿಂಹ ಪಂಚಾಂಗ ಪರಿಷ್ಕರಣೆ, ಗ್ರಹಗಳ ಚಲನಾಧ್ಯಯನ, ಆಕಾಶಕಾಯಗಳ ವೀಕ್ಷಣೆಯನ್ನು ಚೆನ್ನಾಗಿ ಬಲ್ಲವನಾಗಿದ್ದುದು ಮಾತ್ರವಲ್ಲದೆ ಅವುಗಳ ಕಲಿಕೆಗೆ ಪ್ರೋತ್ಸಾಹವನ್ನೂ ಕೊಟ್ಟ. ಯೂಕ್ಲಿಡ್ನ ಜ್ಯಾಮಿತಿಯ ಗ್ರಂಥ, ಟಾಲೆಮಿಯ ರಸಶಾಸ್ತ್ರಗ್ರಂಥ, ಜಾನ್ ನೇಪಿಯರ್ನ ಕೃತಿಗಳನ್ನು ಸ್ವತಃ ಸಂಸ್ಕೃತಕ್ಕೆ ಅನುವಾದಿಸಿದ್ದ. ಗ್ರಹನಕ್ಷತ್ರಗಳನ್ನು ನೋಡುವುದು, ಅವುಗಳ ಚಲನೆಯನ್ನು ಲೆಕ್ಕ ಹಾಕುವುದು ಅವನಿಗೆ ಪ್ರಿಯವಾದ ಹವ್ಯಾಸಗಳಾಗಿದ್ದವು. ಅವುಗಳ ವೀಕ್ಷಣೆಗಾಗಿ ಯಂತ್ರೋಪಕರಣಗಳನ್ನು ತಾನೇ ಸ್ವತಃ ತಯಾರಿಸುತ್ತಿದ್ದ. ಇಂದು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ, ಜಂತರ್ ಮಂತರ್ ಬಯಲು ಖಗೋಳವೀಕ್ಷಣಾಲಯದಲ್ಲಿರುವ ಇಂದಿಗೂ ಅತ್ಯಂತ ನಿಖರವಾಗಿ ಸಮಯವನ್ನಳೆಯಬಲ್ಲ ಪ್ರಪಂಚದ ಅತಿ ದೊಡ್ಡ ಸೂರ್ಯಯಂತ್ರವನ್ನು ನಿರ್ಮಿಸಿದವ ಜಯಸಿಂಹನೇ. ಕಲ್ಲು, ಇಟ್ಟಿಗೆ ಸುಣ್ಣಗಾರೆ, ಕಬ್ಬಿಣದ ಸರಳುಗಳಿಂದ ನಿರ್ಮಿತವಾದ ಈ ಖಗೋಳ ವೀಕ್ಷಣಾಲಯದ ವೈಜ್ಞಾನಿಕ ನಿಖರತೆ ಎಂಥವರನ್ನೂ ಬೆರಗಾಗಿಸುತ್ತದೆ. ಇದಲ್ಲದೆ ದೆಹಲಿಯ ಜಂತರ್ ಮಂತರ್, ಮಥುರಾ, ಉಜ್ಜಯಿನಿ, ವಾರಾಣಸಿಗಳಲ್ಲೂ ಖಗೋಲ ವೀಕ್ಷಣಾಲಯಗಳನ್ನು ತಾನೇ ರೂಪಿಸಿ ನಿರ್ಮಿಸಿದ. ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿದ್ದ ಯಾರೇ ವಿದ್ವಾಂಸರೂ ಯಾವುದೇ ಸಮಯದಲ್ಲಿ ಹೋಗಿ ಈ ಯಂತ್ರಗಳನ್ನು ಬಳಸಿ ಗ್ರಹಗಳ ಕುರಿತು ಅಧ್ಯಯನ ನಡೆಸಬಹುದಿತ್ತು. ದೇಶ-ವಿದೇಶಗಳ ವಿದ್ವಾಂಸರನ್ನು ಕರೆಸಿ ಗೋಷ್ಠಿ ನಡೆಸುತ್ತಿದ್ದ. ಮಧ್ಯ ಏಷ್ಯ ಮತ್ತು ಯೂರೋಪುಗಳಲ್ಲಿ ಬಳಕೆಯಲ್ಲಿದ್ದ ಗ್ರಂಥಗಳನ್ನು, ಯಂತ್ರೋಪಕರಣಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದ. ಅನೇಕ ಪಾಶ್ಚಾತ್ಯ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದುದಲ್ಲದೆ ಯಂತ್ರ ರಾಜ ಮತ್ತು ಯಂತ್ರ ರಾಜ ರಚನಾ ಪ್ರಕಾರ ಎಂಬುದಾಗಿ ಖಗೋಳ ವಿಜ್ಞಾನದಲ್ಲಿ ಬಳಸುವ ಯಂತ್ರಗಳ ಮೇಲೆ ಎರಡು ಗ್ರಂಥಗಳನ್ನು ರಚಿಸಿದ. ಅರಬ್ ಹಾಗೂ ಐರೋಪ್ಯ ಖಗೋಲಶಾಸ್ತ್ರಾಧ್ಯಯನಕ್ಕೆ ಭಾರತೀಯ ಜ್ಯೋತಿರ್ವಿದ್ಯೆಯನ್ನು ಬೆಸೆದುದು ಅವನ ಬಹುದೊಡ್ಡ ಸಾಧನೆ. ಅವನ ಬಳಿ ಕೆಲಸ ಮಾಡುತ್ತಿದ್ದ ಗುಜರಾತಿನ ಕೇವಲರಾಮ ಖಗೋಳ ವಿಜ್ಞಾನದ ಮೇಲೆ ಎಂಟು ಗ್ರಂಥಗಳನ್ನು ರಚಿಸಿದ. ಜನಸಾಮಾನ್ಯರಿಗೆಂದೇ ನಕ್ಷತ್ರಗಳ ಸ್ಥಿತಿಗತಿಗಳು ಹಾಗೂ ಗ್ರಹಗಳು ಉದಯವಾಗುವ ಹಾಗೂ ಅಸ್ತವಾಗುವ ಕಾಲಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ಕಲೆಹಾಕಿ ಕೋಷ್ಟಕಗಳನ್ನು ತಯಾರಿಸಿದ. ಅವನು ರಚಿಸಿದ ಲೋಹಯಂತ್ರಗಳನ್ನು ನಾವು ಇಂದಿಗೂ ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.

                ಜಂತರ್ ಎಂದರೆ ಯಂತ್ರ, ಮಂತರ್ ಎಂದರೆ ಗಣನೆಮಾಡುವುದು ಎಂದರ್ಥ. ದಿಗಂಶ ಯಂತ್ರ, ಕಪಾಲಿಯಂತ್ರ, ಜಯಪ್ರಕಾಶ ಯಂತ್ರ, ರಾಮಯಂತ್ರ, ನಾರೀ ವಲಯ ಯಂತ್ರ, ಮಿಶ್ರ ಯಂತ್ರ, ಸಾಮ್ರಾಟ್ ಯಂತ್ರ, ಧ್ರುವದರ್ಶಿಕೆ ಪಟ್ಟಿಕೆ, ಷಷ್ಠಾಂಶ ಯಂತ್ರ, ಛಾಯಾಯಂತ್ರ, ದಕ್ಷಿಣಾವೃತ್ತಿ ಯಂತ್ರ ಮುಂತಾಗಿ ಹಲವು ವಿವಿಧ ಉಪಕರಣಗಳು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲಿದ್ದವು. ಜಯಪ್ರಕಾಶ ಯಂತ್ರದಲ್ಲಿ ನಿಮ್ನ ಅರ್ಧವೃತ್ತಾಕಾರದ ಭಾಗಗಳೆರಡು ಸರದಿಯಲ್ಲಿ ಗಂಟೆಗೊಂದರಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದ ಸ್ಥಳೀಯ ಕಾಲವನ್ನು, ಸೂರ್ಯನ ಸ್ಥಾನ, ಸಂಕ್ರಾಂತಿ ವೃತ್ತ ಮತ್ತು ಇಲ್ಲಿ ಗುರುತು ಹಾಕಿರುವ ರಾಶಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಸಹಾಯದಿಂದ ಮಧ್ಯಾಹ್ನ ರೇಖೆಯ ಮೇಲೆ ಯಾವ ರಾಶಿ ಇದೆ ಎನ್ನುವುದನ್ನು ತಿಳಿಯಬಹುದು. ನಾರೀ ವಲಯ ಯಂತ್ರದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ಎರಡು ಭಾಗಗಳಿವೆ. ಈ ಭಾಗಗಳಲ್ಲಿ ಡಿಸೆಂಬರ್ 22 ಹಾಗೂ ಜೂನ್ 21ರಂದು ಸೂರ್ಯನ ಕಿರಣಗಳು ಕರ್ಕಾಟಕಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ಮೇಲೆ ನೇರವಾಗಿ ಬೀಳುವ ಹಾಗೂ ಮಾರ್ಚ್ 21 ಮತ್ತು ಸೆಪ್ಟೆಂಬರ್ 23ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುವ ಕಾಲಗಣನೆಯನ್ನು ತೋರಿಸುತ್ತದೆ. ನಿಯತ ಚಕ್ರ, ಚಿಕ್ಕ ಸಾಮ್ರಾಟಯಂತ್ರ, ದಕ್ಷಿಣ ವೃತ್ತ ಯಂತ್ರ ಹಾಗೂ ಕರ್ಕಾಟಕ ರಾಶಿವಲಯವೆಂಬ ನಾಲ್ಕು ಬೇರೆ ಬೇರೆ ಯಂತ್ರಗಳಿಂದ ಕೂಡಿದುದೇ ಮಿಶ್ರಯಂತ್ರ. ವಿರಾಟ್ ಸಾಮ್ರಾಟ್ ಯಂತ್ರ ದೃಕ್ಸಿದ್ಧಿ ಕಾಲವನ್ನು ಸೂಚಿಸುತ್ತದೆ. ಇದು ಕೇವಲ ಎರಡು ಸೆಕೆಂಡ್ಗಳ ವ್ಯತ್ಯಾಸದಲ್ಲಿ ಸ್ಥಳೀಯ ಕಾಲವನ್ನು ತೋರಿಸುತ್ತದೆ. ಇದರಲ್ಲಿರುವ ಷಷ್ಠಾಂಶವೆಂಬ ವೃತ್ತಖಂಡಾಕೃತಿಯ ಮೇಲೆ ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವಾಗ ಬೆಳಕು ಒಂದು ಕಿಂಡಿಯ ಮೂಲಕ ಬಿದ್ದು ಮಧ್ಯಾಹ್ನ ರೇಖೆಯ ಎತ್ತರ ಎಷ್ಟೆಂದು ಸೂಚಿಸುತ್ತದೆ. ದುಂಡನೆಯ ಕಂಬವೊಂದು ದಿಗಂಶವನ್ನು, ಛಾಯಾ ಯಂತ್ರ ಕಾಲವನ್ನೂ ತೋರಿಸುತ್ತವೆ. ಈ ಯಂತ್ರದಿಂದ ಸೂರ್ಯನ ಘಂಟಾವೃತ್ತಾಂಶವನ್ನು ತಿಳಿಯಬಹುದು. ಧ್ರುವ ನಕ್ಷತ್ರವನ್ನು ನೋಡಲು ಇರುವ ಧ್ರುವದರ್ಶಿಕೆ ಪಟ್ಟಿಕೆಯಿಂದ ಹನ್ನೆರಡು ರಾಶಿಗಳ ಸ್ಥಾನ ಹಾಗೂ ಸಮಭಾಜಕ ವೃತ್ತದಿಂದ ಸೂರ್ಯ ಯಾವ ದಿಕ್ಕಿನಲ್ಲಿ, ಯಾವ ಕೋನದಲ್ಲಿರುವನೆಂದೂ ತಿಳಿಯಬಹುದು. ರಾಮಯಂತ್ರ ಔನ್ನತ್ಯ ಮತ್ತು ಕ್ಷಿತಿಜಾಂಶಗಳನ್ನು ಸೂಚಿಸುತ್ತದೆ. ಉಜ್ಜಯಿನಿ ಮೊದಲಿನಿಂದಲೂ ಖಗೋಳಶಾಸ್ತ್ರ ಕೇಂದ್ರವಾಗಿಯೇ ಇತಿಹಾಸ ಪ್ರಸಿದ್ಧ. ಅಲ್ಲಿ ಜಯಸಿಂಹ ನಿರ್ಮಿಸಿದ್ದ ವೀಕ್ಷಣಾಲಯ ಬಹುತೇಕ ಶಿಥಿಲವಾಗಿದೆ. ಕಾಶಿಯಲ್ಲಿ ರಾಜಾ ಮಾನಸಿಂಗ್ ನಿರ್ಮಿಸಿದ್ದ ಮಾನಮಂದಿರದ ಮಹಡಿಯ ಮೇಲೆ ಜಯಸಿಂಹ ವೀಕ್ಷಣಾಲಯವನ್ನು ನಿರ್ಮಿಸಿದ. ಮಥುರೆಯ ಕೋಟೆಯ ಮೇಲೆ ಅವನು ಕಟ್ಟಿಸಿದ್ದ ವೀಕ್ಷಣಾಲಯವೂ ಈಗ ಸಂಪೂರ್ಣವಾಗಿ ನಾಶವಾಗಿದೆ.

               ಉತ್ತಮ ಯೋಧನಾಗಿದ್ದ ಜಯಸಿಂಹ ತನ್ನ ಕಾಲದ ಪ್ರತಿಭಾಶಾಲಿ ಹಾಗೂ ಪ್ರಭಾವಶಾಲಿ ರಾಜಕಾರಣಿಯಾಗಿದ್ದ. ಅವನ ಉನ್ನತ ವಿದ್ವತ್, ದಕ್ಷ ಆಡಳಿತ, ಸಮಾಜ ಸುಧಾರಣೆ, ವಿಚಾರಮತಿತ್ವ, ಬಹುಮುಖ ಪ್ರತಿಭೆ ಅವನನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದವು. ಆ ಕಾಲದಲ್ಲಿ ಅವನ ಮಟ್ಟಕ್ಕೆ ನಿಲ್ಲಬಲ್ಲಂಥ ಖಗೋಳ ವಿಜ್ಞಾನಿಗಳು, ಗಣಿತ ಶಾಸ್ತ್ರಜ್ಞರು, ಧರ್ಮಶಾಸ್ತ್ರ ಪರಿಣತರು, ನೀತಿಜ್ಞರು ವಿರಳವಾಗಿದ್ದರು. ಸುಮಾರು ಮೂವತ್ತು ವರ್ಷಗಳ ಕಾಲ ಅವನ ಪ್ರಭಾವಕ್ಕೆ ಒಳಗಾಗದ, ಅವನ ದೃಷ್ಟಿಗೆ ಬೀಳದ ಪ್ರಮುಖ ಘಟನೆಗಳಾವುವೂ ನಡೆಯಲಿಲ್ಲ ಎನ್ನಬಹುದು. ರಾಣಾಪ್ರತಾಪನಂತೆ ಮೊಘಲರ ವಿರುದ್ಧ ತೊಡೆತಟ್ಟಿ ನಿಲ್ಲುವ ಛಾತಿ ಅವನದಾಗಿರಲಿಲ್ಲ. ಆದರೆ ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಅವರೊಳಗಿದ್ದುಕೊಂಡೇ ಹಿಂದೂಗಳಿಗೆ ನೆರವಾದ; ಮರಾಠರ ಆಪ್ತಮಿತ್ರನಾದ; ಕೊನೆಗೆ ಮೊಘಲರನ್ನೇ ಧಿಕ್ಕರಿಸಿ ಏಕಚಕ್ರಾಧಿಪತಿಯಾಗಿ ಮೆರೆದ. ವಿಜ್ಞಾನವೊಂದನ್ನೇ ಕೇಂದ್ರವಾಗಿರಿಸಿಕೊಂಡು ಅವನು ಕೆಲಸ ಮಾಡಿದ್ದರೆ ಬಹುದೊಡ್ಡ ಕೆಲಸಗಳು ಇನ್ನಷ್ಟು ಅವನಿಂದಾಗುತ್ತಿತ್ತೇನೋ. ತಾನು ಮಾಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ, ನಿಷ್ಠೆಯಿಂದ, ಪ್ರಭಾವಶಾಲಿಯಾಗಿ ಮಾಡಿ ಜಯಪುರದ ನಹರ್ ಗಢ ಪರ್ವತಾಗ್ರದಲ್ಲಿ ಅಶ್ವಮೇಧವೆಂಬ ಮಹಾಯಾಗವನ್ನೇ ಮಾಡಿದ. ಜಂತರ್ ಮಂತರಿನ ಇತಿಹಾಸದ ಹಿಂದಿರುವ ಜಯಸಿಂಹನೆಂಬ ಚತುರ ಶಿಲ್ಪಿಯೊಬ್ಬನ ಸಾಹಸವನ್ನು ಭಾರತೀಯರು ಅರಿಯಬೇಕು.