ಪುಟಗಳು

ಬುಧವಾರ, ಆಗಸ್ಟ್ 27, 2014

ಅಗ್ನಿಮೀಳೇ.....

"ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ ಋತ್ವಿಜಮ್|
ಹೋತಾರಂ ರತ್ನಧಾತಮಮ್||"

ಅಪಾರವಾದ ಆನಂದವೆಂಬ ರತ್ನವನ್ನು ಧರಿಸಿದವನಾದ, ಯಜ್ಞದ ಪುರೋಹಿತ, ಹೋತಾರ, ಋತ್ವಿಜ ಹಾಗೂ ದೇವನಾದ ಅಗ್ನಿಯನ್ನು ನಾನು ಪ್ರಾರ್ಥಿಸುತ್ತೇನೆ.

ಇಲ್ಲೊಂದು ವಿಶೇಷವಿದೆ: ಇಲ್ಲಿ ಯಜ್ಞವನ್ನು ನಡೆಸುವ ಋತ್ವಿಜನೂ ಅಗ್ನಿಯೇ, ಯಜ್ಞಕ್ಕೆ ಇತರ ದೇವತೆಗಳನ್ನು ಆಹ್ವಾನಿಸುವವ ಹೋತಾರನೂ ಅಗ್ನಿಯೇ, ನಡೆಸುವ ಯಜ್ಞದ ಅಧಿದೇವತೆಯೂ ಅಗ್ನಿಯೇ!
ಅಂದರೆ ಸಾಧಕನ ಹೃದಯದಲ್ಲಿ ಈ ಅಂತರ್ಯಜ್ಞ ನಡೆಯುತ್ತಿದೆ.

ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ
"ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್
ಮಂತ್ರೋಹಮಹಮೇವಾಜ್ಯಮಹಮಗ್ನಿರಹಂ ಹುತಮ್"

"ಯಜ್ಞವು ನಾನೇ - ಮಂತ್ರವೂ ನಾನೇ - ಆಜ್ಯವೂ ನಾನೇ - ಆಹುತಿಯನ್ನೊಯ್ಯುವ ಅಗ್ನಿಯೂ" ನಾನೇ ಎಂದಿದ್ದಾನೆ.

ಮಂಗಳವಾರ, ಆಗಸ್ಟ್ 26, 2014

ಓಂಕಾರ

ಓಂ : 'ಅ' + 'ಉ' + 'ಮ' ಗಳಿಂದಾಗಿದೆ.
ಇವು ಕ್ರಮವಾಗಿ ಭೌತಿಕ ಸೆಲೆ, ಮಾನಸಿಕ ಸೆಲೆ, ಜಾಗೃತ ಸೆಲೆಗಳನ್ನು ಪ್ರತಿಧ್ವನಿಸುತ್ತದೆ.

ಓಂಕಾರ ಜಪಿಸುವುದರಿಂದಾಗುವ ಉಪಯೋಗಗಳು:
*ಹತ್ತು ಸಾರಿ ಓಂಕಾರವನ್ನು ಕ್ರಮಬದ್ಧವಾಗಿ ಜಪಿಸಿದರೆ ಪ್ರಜ್ಞೆ ಅರಳುತ್ತದೆ. ರಕ್ತದ ಒತ್ತಡ ಮತ್ತು ಹೃದಯ ಬಡಿತ ಕೆಳಗೆ ಬರುತ್ತದೆ.
*ನಿದ್ರಾಭಂಗ ನಿವಾರಣೆಯಾಗುತ್ತದೆ.
*ಗಮನಾರ್ಹ ರೀತಿಯಲ್ಲಿ ಶರೀರದಲ್ಲಿನ ಶರ್ಕರಾಂಶ ಬಳಕೆ ಹೆಚ್ಚುತ್ತದೆ.
*ದೇಹದಲ್ಲಿನ ಆಮ್ಲಜನಕ ಸಂಚಾರ ಉನ್ನತ ಮಟ್ಟದಲ್ಲಿರುತ್ತದೆ.
*ಮನೋಖಿನ್ನತೆ, ನಕರಾತ್ಮಕ ಧೋರಣೆ, ಕುತೂಹಲದ ಉಪಟಳ ಇರುವುದಿಲ್ಲ. ನಿರಾಶೆ ಕುಗ್ಗುತ್ತದೆ.
*ಮನೋಲ್ಲಾಸ, ಪ್ರಫುಲ್ಲತೆ, ಮನೋಶಾಂತಿ ವೃದ್ಧಿಸುತ್ತದೆ.
*ಮನೋದುಗುಡ, ಉದ್ರೇಕ, ಕಳವಳ ಶಮನಕಾರಿ.
*ಶರೀರದ ಅಂಗಕ್ರಿಯೆಗಳು ವೃದ್ಧಿಸುತ್ತವೆ.
*ಏಕಾಗ್ರತೆ ಹೆಚ್ಚುತ್ತದೆ. ಗ್ರಹಣಶಕ್ತಿ ಹೆಚ್ಚುತ್ತದೆ.
*ಬೇಸರ ಹತ್ತಿರ ಸುಳಿಯುವುದಿಲ್ಲ.
*ಜನಾನುರಾಗ ಗುಣ ಉದ್ದೀಪನಗೊಳ್ಳುತ್ತದೆ.
*ವೃತ್ತಿ ತತ್ಪರತೆ - ಕಾರ್ಯ ಕೌಶಲ್ಯ ಶ್ರೇಷ್ಠ ಮಟ್ಟದಲ್ಲಿರುತ್ತದೆ.
*ನೋವಿನಿಂದ ನಿರಾಳತೆ ಲಭಿಸುತ್ತದೆ.
*ನೆನಪಿನ ಶಕ್ತಿ ವೃದ್ಧಿಸುತ್ತದೆ.
*ವೈದ್ಯ ವಿಜ್ಞಾನದ ಪ್ರಕಾರ ಓಂಕಾರ ಮಾನವನ ಸೃಷ್ಟ್ಯಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಪ್ರೇರಕ ಶಕ್ತಿಯ ಸಂಚಾರ ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದರಿಂದ ಸ್ಮೃತಿ ವರ್ಧಿಸುತ್ತದೆ.

ಭಾನುವಾರ, ಆಗಸ್ಟ್ 24, 2014

ವೇದಕಾಲದಲ್ಲಿ ಮಹಿಳೆಯರ ಸ್ಥಿತಿಗತಿ

ವೇದಕಾಲದಲ್ಲಿ ಮಹಿಳೆಯರ ಸ್ಥಿತಿಗತಿ!
             ವೇದದಲ್ಲಿ ಸುಮಾರು 25000 ಮಂತ್ರಗಳನ್ನು ಹಲವಾರು ಋಷಿಗಳ ಹೆಸರಿನಿಂದ ಜೋಡಿಸಲಾಗಿದೆ. ಈ ಮಂತ್ರದೃಷ್ಟಾರ ಋಷಿಗಳಿಗೆ ತಮ್ಮ ದೀರ್ಘಕಾಲದ ತಪಸ್ಸಿನ ಸಿದ್ಧಿಕಾಲದಲ್ಲಿ ಉಂಟಾದ  ಸತ್ಯತತ್ವಗಳ ದರ್ಶನಗಳೇ ಈ ವೇದ ಮಂತ್ರಗಳು. ಒಂದು ಸದ್ವಿಷಯದ ಮೇಲಿನ ತೀವ್ರಾಸಕ್ತಿಯಿಂದ ಮನಸ್ಸು ಸಂಪೂರ್ಣ ಕೇಂದ್ರೀಕೃತವಾಗುವುದೇ ತಪಸ್ಸು. ತಾವು ಬೆಳೆಸಿಕೊಂಡ ತಪಃಶಕ್ತಿಯ ಪ್ರಭಾವದಿಂದ ಈ ವಿಶ್ವದಲ್ಲಡಗಿರುವ ಶಕ್ತಿಯನ್ನು ಮತ್ತು ತನ್ನ ಒಳಗೂ ಹೊರಗೂ ಇರುವ ಅದರ ಪ್ರಭಾವದ ಅರಿವನ್ನು ತೆರೆದು ತೋರಿಸುವುದೇ ಈ ದರ್ಶನ. ವಿಶ್ವಾಮಿತ್ರ, ಪರಾಶರ, ವಸಿಷ್ಠ, ವಾಮದೇವ ಮುಂತಾದ ನೂರಾರು ಋಷಿಗಳೊಂದಿಗೆ ಅದಿತಿ ದಾಕ್ಷಾಯಿಣಿ, ಅಪಾಲಾ ಆತ್ರೇಯಿ, ವಾಗಂಭೃಣೀ ಮೊದಲಾದ ಋಷಿಕೆಯರು ಇಂಥ ದೃಷ್ಟಾರರೇ. ಅಂದರೆ ಮಹಿಳೆಯರಿಗೂ ಪುರುಷರಷ್ಟೇ ಉನ್ನತವಾದ ಸ್ಥಾನಗಳು ವೇದಕಾಲೀನ ಪರಂಪರೆಯಲ್ಲಿ ಇತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ತಾನೆ.

            ಅಂದು ಪುರುಷರಂತೆ ಮಹಿಳೆಯರೂ ವೇದಾಧ್ಯಯನದಲ್ಲಿ ನಿರತರಾಗಿದ್ದರು ಎಂಬುದನ್ನು ಹಲವು ಮಂತ್ರಗಳಲ್ಲಿ ಕಾಣಬಹುದು. ತಮ್ಮ ವಿದ್ಯಾಭ್ಯಾಸದ ನಂತರ ವಿವಾಹವಾಗಿ ಕೌಟುಂಬಿಕ ಜೀವನವನ್ನು ಪ್ರವೇಶಿಸುತ್ತಿದ್ದ ಮಹಿಳೆಯರನ್ನು ಸದ್ಯೋವಧುಗಳೆಂದೂ, ಅಧ್ಯಾಪನ - ತಪಶ್ಚರ್ಯೆಗಳಲ್ಲಿಯೇ ನಿರತರಾದವರನ್ನು ಋಷಿಕೆ - ಬ್ರಹ್ಮವಾದಿನಿಯರೆಂದೂ ಕರೆಯುತ್ತಿದ್ದರು. ಋಗ್ವೇದದಲ್ಲಿ ಇಂತಹ 32 ಬ್ರಹ್ಮವಾದಿನಿಯರು ಮಂತ್ರದೃಷ್ಟಾರೆಯರಾಗಿರುವುದು ಕಂಡು ಬರುತ್ತದೆ. ಹದಿನಾರು ವರ್ಷಗಳ ಕಾಲ ಗುರುಕುಲದಲ್ಲಿದ್ದು ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ ಮೇಲೆ ತನಗೆ ಸರಿಹೊಂದುವ ಪತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಆಕೆ ಹೊಂದಿರುತ್ತಿದ್ದಳು. ಅಂದರೆ ಬಾಲ್ಯವಿವಾಹ ಆ ಕಾಲದಲ್ಲಿ ಇರಲೇ ಇಲ್ಲವೆಂದಾಯಿತು. ಬಾಲ್ಯವಿವಾಹ ಬಹುಷ ಮುಸ್ಲಿಮರ ಆಕ್ರಮಣದ ನಂತರ ಮಗಳ ಶೀಲ ಉಳಿಸಲು ಆರಂಭಿಸಿದ ಉಪಾಯವಿರಬಹುದು. ಸ್ವಯಂವರವಂತೂ ವೇದಕಾಲದಲ್ಲಿ ಪ್ರತಿಯೊಬ್ಬ ಯುವತಿಯ ಹಕ್ಕಾಗಿತ್ತು. ಅದನ್ನು ಋಗ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ.
"ತಮಸ್ಮೇರಾ ಯುವತಯೋ ಯುವಾನಂ
ಮರ್ಮಜ್ಯಮಾನಾ ಪಾರೇಯಂತ್ಯಾಪಃ|
ಸ ಶುಕ್ರೇಭಿಃ ಶಿಕ್ವಭಿಃ ಸ್ವೇದಸ್ಮೇ ದೀನಾಯಾನಿಧ್ಮೋ ಘೃತನಿರ್ಣಿಗತ್ಸು||" ಋ:೨.೩೫.೪
"ಗುರುಕುಲದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ , ಆಪ್ಯಾಯಮಾನವಾಗಿ ಸಿಂಗರಿಸಿಕೊಂಡು ಯುವತಿಯರು ಯುವಕನಾದ, ಅರ್ಹನಾದ ಪತಿಯನ್ನು ಆಯ್ದುಕೊಳ್ಳುತ್ತಾರೆ."

ಕ್ರಿಯತಿ ಯೋಷಾ ಮರ್ಯತೋ ವಧೂಯೋಃ
ಪರಿಪ್ರೀತಾ ಪನ್ಯಸಾ ವಾರ್ಯೇಣಾ|
ಭದ್ರಾ ವಧೂರ್ಭವತಿ ಯತ್ಸುಪೇಶಾಃ ಸ್ವಯಂ
ಸಾ ಮಿತ್ರಂ ವನುತೇ ಜನೇ ಚಿತ್|| ಋ: ೧೦.೨೭.೧೨

"ಯಾವ ಕನ್ಯೆಯು ತಾನಾಗಿಯೇ ಸ್ನೇಹದಿಂದ ಪತಿಯನ್ನು ವರಿಸುತ್ತಾಳೋ ಅವಳೇ ಕಲ್ಯಾಣಕಾರಿಣಿಯಾಗಿ ಪತಿಧರ್ಮವನ್ನು ನಿಭಾಯಿಸಬಲ್ಲವಳಾಗುತ್ತಾಳೆ."

ಪತಿಗೃಹಕ್ಕೆ ಹೊರಡುತ್ತಿರುವ ನವವಧುವಿಗೆ
"ಬ್ರಹ್ಮಾಪರಂ ಯುಜ್ಯತಾಂ ಬ್ರಹ್ಮಪೂರ್ವಂ ಬ್ರಹ್ಮಾಂತತೋ ಮಧ್ಯತೋ ಬ್ರಹ್ಮಸರ್ವತಃ
ಅನಾವ್ಯಾಧಾಂ ದೇವಪುರಾಂ ಪ್ರಪದ್ಯ ಶಿವಸ್ಯೋನಾ ಪತಿಲೋಕೇ ವಿರಾಜ|| " ಅ:೧೪.೧.೬೪
"ಎಲೈ ವಧುವೇ, ನಿನ್ನ ಮುಂದೆ, ಹಿಂದೆ, ಮಧ್ಯೆ ಹಾಗೂ ಅಂತ್ಯದಲ್ಲಿ - ಎಲ್ಲೆಲ್ಲಿಯೂ ವೇದ ವಿಷಯಕ ಜ್ಞಾನವಿರಲಿ. ಆರೋಗ್ಯವಂತಳಾಗಿ ಸುಖ- ಸೌಖ್ಯದಿಂದೊಡಗೂಡಿ ಪತಿಯ ಮನೆಯಲ್ಲಿ ವಿರಾಜಮಾನಳಾಗಿರು"

ಅತ್ತೆಯ ಮನೆಯಲ್ಲಿ ಸಿಗುತ್ತಿದ್ದ ಸ್ವಾಗತ ನೋಡಿ;
"ಸಮ್ರಾಜ್ಞೇ ಶ್ವಶುರೋ ಭವ ಸಮ್ರಾಜ್ಞೀ
ಶ್ವಶ್ರ್ವಾಂ ಭವ/ ನನಾಂದರಿ ಸಮ್ರಾಜ್ಞೇ ಭವ ಸಮ್ರಾಜ್ಞೀ ಅಧಿ ದೇವೃಷು|| ಋ:೧೦.೮೫.೪೬
"ಅತ್ತೆ ಮಾವಂದಿರಿಗೆ, ನಾದಿನಿ ಮೈದುನರಿಗೆ ಸಾಮ್ರಾಜ್ಞಿಯಾಗಿರು"
ಆದರೆ ಈ ಭವ್ಯ ಚಿತ್ರಣ ಮರೆಯಾಗಿ ಹೆಣ್ಣನ್ನು ಭೋಗದ ವಸ್ತುವಾಗಿ ಕಾಣಲು ಆರಂಭವಾದದ್ದು ಹೇಗೆ?
ಕ್ರೈಸ್ತ-ಇಸ್ಲಾಂಗಳ ಪ್ರಭಾವವೋ?

ವಿಧವಾ ವಿವಾಹಕ್ಕೆ ಇದ್ದ ಮಾನ್ಯತೆ ನೋಡಿ;
"ಉದೀರ್ಷ್ವ ನಾರ್ಯಭಿ ಜೀವಲೋಕಂ
ಗತಾ ಸುಮೇತಾ ಮುಪಶೇಷ ಏಹಿ|
ಹಸ್ತಗ್ರಾಭಸ್ಯ ದಿಧಿಶೋಸ್ತ ವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ|| " ಋ:೧೦.೧೮.೮
"ಎಲೈ ನಾರಿ ಎದ್ದೇಳು, ನಿನ್ನ ಕೈ ಹಿಡಿದಿರುವ ಈ ಪತಿಯೊಂದಿಗೆ ಬಾಳಲು, ನಿನ್ನ ಗತಿಸಿದ ಪತಿಯನ್ನು ಬಿಟ್ಟು ಜೀವಲೋಕದೆಡೆಗೆ ಬಾ"

               ವೇದಕಾಲದ ಉನ್ನತ ಪರಂಪರೆ ಉಪನಿಷತ್ಕಾಲದಲ್ಲೂ ಮುಂದುವರಿಯಿತು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ- ಮೈತ್ರೇಯೀ ಮತ್ತು ವಾಚಕ್ನವೀ ಗಾರ್ಗೀ - ಯಾಜ್ಞವಲ್ಕರ ನಡುವಿನ ಸಂವಾದಗಳು ಅಂದು ಋಷಿಕೆಯರೂ ಗುರುಕುಲಗಳನ್ನು ನಡೆಸುತ್ತಾ ಕುಲಪತಿ ಹುದ್ದೆಯನ್ನು ನಿರ್ವಹಿಸುತ್ತಿದ್ದರು ಎನ್ನುವುದಕ್ಕೆ ಜ್ವಲಂತ ನಿದರ್ಶನಗಳು.
             ಇದೇ ಪರಂಪರೆ ಮಹಾಭಾರತ ಕಾಲದಲ್ಲೂ ಇತ್ತು. ಭರದ್ವಾಜನ ಮಗಳು ಶೃತಾವತೀ, ಶಾಂಡಿಲ್ಯನ ಮಗಳು ಶ್ರೀಮತೀ ಬ್ರಹ್ಮಚಾರಿಣಿಯರೂ, ಋಷಿಕೆಯರೂ ಆಗಿದ್ದರು. ರಾಮಾಯಣದಲ್ಲಿ ಸೀತೆ ಸಂಧ್ಯಾವಂದನೆ ಮಾಡುತ್ತಿದ್ದ ಬಗ್ಗೆ, ಕೌಸಲ್ಯೆ ವೇದಮಂತ್ರ ಸಹಿತ ಹೋಮ ಮಾಡುತ್ತಿದ್ದ ಬಗ್ಗೆ, ಶಬರಿ - ಅಹಲ್ಯೆಯರು ಮಾಡುತ್ತಿದ್ದ ತಪಸ್ಸಿನ ಬಗ್ಗೆ ಉಲ್ಲೇಖಗಳನ್ನು ಕಾಣಬಹುದು.

"ವಿವಾಹರಹಿತಾನಾಮಪಿ ಬ್ರಹ್ಮವಾದಿನೀಂ ಉಪನಯನಾದಿಭಿರುತ್ತಮಲೋಕ ಸಂಭವಾತ್||"
"ವಿವಾಹವಿಲ್ಲದಿದ್ದರೂ ಬ್ರಹ್ಮವಾದಿನಿಯರಿಗೆ ಉಪನಯನ-ಅಧ್ಯಯನಾದಿಗಳಿಂದ ಉತ್ತಮ ಲೋಕ ಲಭಿಸುವುದು ಎಂದು ಪರಾಶರ ಮಾಧವೀಯದಲ್ಲಿ ಹೇಳಲಾಗಿದೆ. ಏಳನೆಯ ಶತಮಾನದಲ್ಲಿ ಬಾಣಭಟ್ಟನಿಂದ ರಚಿತವಾದ "ಕಾದಂಬರಿ"ಯಲ್ಲಿ ಮಹಾಶ್ವೇತೆಯನ್ನು ಕುರಿತು ಯಜ್ಞೋಪವೀತದಿಂದ ಅಲಂಕೃತಳಾದವಳು ಎಂಬ ವರ್ಣನೆಯಿದೆ.
          ಸಮಾಜವನ್ನು ಸುಸ್ಥಿತಿಯಲ್ಲಿಡುತ್ತಿದ್ದ, "ಸರ್ವರಿಗೂ ಸಮಪಾಲು-ಸಮಬಾಳು" ಎಂದು ನುಡಿದು ನಡೆಯುತ್ತಿದ್ದ ಇಂತಹ ಅನರ್ಘ್ಯ ರತ್ನಗಳನ್ನು ಕಲಿಯದೆ, ಯಾರೋ ಪರಕೀಯ ಮಾಡಿದ ಅನುವಾದವನ್ನು ಓದಿ ಇದಮಿಥ್ಹಂ ಎನ್ನುವ-ತನ್ಮೂಲಕ ವೇದಗಳನ್ನು ದೂರುವ ಕೀಳು ಮನಸ್ಥಿತಿ ಏಕೆ?

ಜಯಂತಿ ಮನೋಹರ್ ಅವರ "ಮಲ್ಹಾರ"ದಲ್ಲಿನ ಲೇಖನದ ಅಂಶಗಳನ್ನು ಆಯ್ದು ನನ್ನದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ.

ಶುಕ್ರವಾರ, ಆಗಸ್ಟ್ 22, 2014

ವೀರ ಸಾವರ್ಕರ್ ಬರೆದ "1857ರ ಸ್ವಾತಂತ್ರ್ಯ ಸಂಗ್ರಾಮ"

"ನಿಮ್ಮಿಂದ ಒಂದು ಕೆಲಸ ಆಗಬೇಕು"
"ಅಪ್ಪಣೆ ಮಹಾಸ್ವಾಮಿ"
"ನೀವು ಸ್ವಾತಂತ್ರ್ಯ ವೀರ ಸಾವರ್ಕರರ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪುಸ್ತಕ ಓದಿದ್ದೀರಾ?"
"ಓದಿದ್ದೀನಿ ಚಿಕ್ಕಂದಿನಲ್ಲಿ"
"ಅದರ ಕನ್ನಡ ಅನುವಾದದ ಕೆಲಸ ನಿಮ್ಮಿಂದ ಆಗಬೇಕು"
ಮೈಯಲ್ಲಿ ಮಿಂಚಿನ ಸಂಚಾರವಾದಂತಾಯಿತು. ಮೈ ರೋಮಾಂಚನಗೊಂಡಿತು.
"ಹಿಂದಿಯಲ್ಲಿ ನಾವು ಅದನ್ನು ಓದಿದ್ದೇವೆ. ಅದು ಬಹಳ ಒಳ್ಳೆಯ ಪುಸ್ತಕ. ನಮ್ಮ ತರುಣರೆಲ್ಲರೂ ಓದಬೇಕಾದ ಪುಸ್ತಕ."
"ಹೌದು ಮಹಾಸ್ವಾಮಿ. ಮೊದಲು ಸಾವರ್ಕರ್ ಅದನ್ನು ಇಂಗ್ಲೀಷಿನಲ್ಲಿ ರಚಿಸಿದರು."
"ಇಲ್ಲ ಇಲ್ಲ. ಮೊದಲು ಅದನ್ನು ಅವರು ಬರೆದಿದ್ದು ಮರಾಠಿಯಲ್ಲಿ. ಅನಂತರ ಇಂಗ್ಲೀಷ್ ಅವತರಣಿಕೆ ಸಿದ್ಧವಾಯಿತು." ಅವರು ನನ್ನನ್ನು ತಿದ್ದಿದರು.
"ಖಂಡಿತಾ ನಿಮ್ಮ ಆಶಯ ನೆರವೇರಿಸುತ್ತೀನಿ ಮಹಾಸ್ವಾಮಿ."
ಇದು ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ಬಾಬುಕೃಷ್ಣಮೂರ್ತಿಯವರ ನಡುವೆ 2005 ಮಾರ್ಚಿನಲ್ಲಿ ನಡೆದ ಸಂಭಾಷಣೆ!
ಮುಂದೆ 2007ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೂರಾ ಐವತ್ತನೇ ವರ್ಷಕ್ಕೆ ಸರಿಯಾಗಿ ಪುಸ್ತಕ ಮುದ್ರಣಗೊಂಡಿತು.
ಇದು ಅಂತಿಂಥ ಗ್ರಂಥವೆಂದುಕೊಂಡಿರೇನು?
ಪ್ರಕಟಣೆಗೆ ಮುನ್ನವೇ ಬ್ರಿಟಿಷ್ ಸರ್ಕಾರ ಬಹಿಷ್ಕರಿಸಿದ ಭಯಂಕರ ಪುಸ್ತಕ!
ಸಹಸ್ರಾರು ಕ್ರಾಂತಿ ವೀರರಿಗೆ ಭಗವದ್ಗೀತೆಯಾಗಿ ಕೆಚ್ಚನ್ನು ತುಂಬಿದ ಪ್ರೇರಕ ಪುಸ್ತಕ!
ಭಗತ್ ಸಿಂಗರಿಂದ ಮೂರನೇ ಬಾರಿ ಪ್ರಕಟವಾದ ಕ್ರಾಂತಿ ಸ್ಪೂರ್ತಿ ಸ್ರೋತ!
ನೇತಾಜಿ ಸುಭಾಷರ "ಆಜಾದ್ ಹಿಂದ್ ಫೌಜ್" ಯೋಧರ ಪವಿತ್ರ ಪಠ್ಯ ಪುಸ್ತಕ!
ಈ ಚರಿತ್ರೆಯ ಪುಸ್ತಕದ ಚರಿತ್ರೆಯೆ ಒಂದು ರೋಮಾಂಚಕಾರಿ ಕಥೆ!
ಪ್ರತಿಯೊಬ್ಬ ಭಾರತೀಯ ತರುಣ ಓದಲೇಬೇಕಾದ ಪುಸ್ತಕ!

ಇಂತಹ ನೈಜ ಭಾರತೀಯ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಗೊಳಿಸಲು ಹೇಳಿದ ಜಗದ್ಗುರುಗಳಿಗೆ, ಅನುವಾದಿಸಿದ ಬಾಬು ಕೃಷ್ಣಮೂರ್ತಿಯವರಿಗೆ ಎಷ್ಟು ಕೃತಜ್ಞರಾದರೂ ಕಡಿಮೆಯೇ ಅಲ್ಲವೇ?

ಕಿರಣೋತ್ಸವ

ಕೊಲ್ಹಾಪುರದ ಮಹಾಲಕ್ಷ್ಮಿಯ ವಿಗ್ರಹ ಪಶ್ಚಿಮಾಭಿಮುಖವಾಗಿದ್ದು ಸುಮಾರು 6000 ವರ್ಷಗಳಷ್ಟು ಹಳೆಯದು. ದೇವಿಯ ಕಿರೀಟದಲ್ಲಿ ಸರ್ಪಲಾಂಛನ ಹಾಗೂ ಶಿವಲಿಂಗವಿದೆ. ಆದಿಶಂಕರಾಚಾರ್ಯರು ರಚಿಸಿರುವ ಅಷ್ಟಾದಶ ಶಕ್ತಿಪೀಠಗಳನ್ನು ಕುರಿತ ಸ್ತ್ರೋತ್ರದಲ್ಲಿ ಕೊಲ್ಹಾಪುರದ ಮಹಾಲಕ್ಷ್ಮಿಯ ಉಲ್ಲೇಖವಿದೆ. ಸತೀದೇವಿ ತನ್ನ ಯೋಗಾಗ್ನಿಯಿಂದ ಆತ್ಮಾರ್ಪಣೆ ಮಾಡಿಕೊಂಡಾಗ, ದಕ್ಷಸಂಹಾರದ ಬಳಿಕ ಪತ್ನಿಯ ದೇಹ ಹೊತ್ತು ರುದ್ರನರ್ತನ ಮಾಡತೊಡಗಿದ ಶಿವನ ಕೋಪವನ್ನು ತಣಿಸಲು ಹರಿ ಸತೀದೇವಿಯ ಶರೀರವನ್ನು ತುಂಡರಿಸಿ ಹದಿನೆಂಟು ದಿಕ್ಕುಗಳಲ್ಲಿ ಚೆಲ್ಲುತ್ತಾನೆ. ಆ ಹದಿನೆಂಟು ಸ್ಥಳಗಳು ಶಕ್ತಿಪೀಠಗಳೆಂದು ಪ್ರಸಿದ್ಧಿ ಹೊಂದುತ್ತವೆ. ಈ ಪುರಾಣ ಕಥೆಗೂ ವಿಗ್ರಹದ ಕಿರೀಟದಲ್ಲಿರುವ ಶಿವಲಿಂಗಕ್ಕೆ ಏನಾದರೂ ಸಂಬಂಧವಿರಬಹುದೇ? ಸಂಶೋಧನೆಯ ಅಗತ್ಯವಿದೆ!
ಅಲ್ಲದೆ ಈ ದೇವಾಲಯ ನಿರ್ಮಿಸಿದ ಶಿಲ್ಪಿಯ ಚಾತುರ್ಯ ಈ ಕಾಲದ ಯಾವ ಆರ್ಕಿಟೆಕ್ಟಿಗೂ ಸವಾಲೇ ಸರಿ! ರಥ ಸಪ್ತಮಿಯ ಸಮಯದಲ್ಲಿ ಮೂರು ದಿನಗಳ ಕಾಲ ಸೂರ್ಯ ರಶ್ಮಿಯು ಮೊದಲದಿನ ದೇವಿಯ ಪಾದಕ್ಕೂ, ಎರಡನೆಯ ದಿನ ವಿಗ್ರಹದ ಮಧ್ಯಭಾಗಕ್ಕೂ, ಮೂರನೇ ದಿನ ದೇವಿಯ ಪವಿತ್ರ ವದನದ ಮೇಲೆ ಬೀಳುತ್ತದೆ! ಆ ರೀತಿ ಬೀಳುವಂತೆ ಗರ್ಭಗುಡಿಯ ಪಶ್ಚಿಮ ಭಾಗದಲ್ಲಿ ಒಂದು ಕಿಂದಿಯೊಂದನ್ನು ರಚಿಸಲಾಗಿದೆ. ಆ ಕಾಲವನ್ನು ಕಿರಣೋತ್ಸವವೆಂದು ಆಚರಿಸಲಾಗುತ್ತದೆ.

ಬುಧವಾರ, ಆಗಸ್ಟ್ 20, 2014

ಕೇಸರಿ ನಾಡನ್ನುಳಿಸಲು ಕೇಸರಿ ಕ್ರಾಂತಿಯೇ ಸರಿ

              ಕೇಸರಿ ನಾಡನ್ನುಳಿಸಲು ಕೇಸರಿ ಕ್ರಾಂತಿಯೇ ಸರಿ
               ಕೆಲವು ಘಟನೆಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದೇ ಇಲ್ಲ. ಅದರಲ್ಲೂ ಜಮ್ಮು ಕಾಶ್ಮೀರದಲ್ಲಿನ ವಿದ್ಯಮಾನಗಳು ಇಂದಿಗೂ ಕತ್ತಲೆಯ ಗರ್ಭದಲ್ಲೇ ಅಡಗಿರುತ್ತವೆ. ಪ್ರಕಟವಾದರೂ ಮಿಣುಕುಹುಳುಗಳಂತೆ ಚಿಕ್ಕದಾಗಿ ಎಲ್ಲೋ ಒಂದು ಬದಿಯಲ್ಲಿ ಮಿಂಚಿ ಮರೆಯಾಗುತ್ತವೆ. ಅಲ್ಲಿ ರಾಷ್ಟ್ರಧ್ವಜವನ್ನು ಸುಡಲಾಗುತ್ತದೆ, ಅಮರನಾಥ ಯಾತ್ರಿಗಳಿಗೆಂದು ನೀಡಲಾದ ತಾತ್ಕಾಲಿಕ ಜಮೀನನ್ನು ಕಿತ್ತುಕೊಳ್ಳಲಾಗುತ್ತದೆ, ಯಾತ್ರಿಕರ ಮೇಲೆ ಹಲ್ಲೆ ನಡೆಸಲಾಗುತ್ತದೆ, ದೇವಾಲಯಗಳು ಧರೆಗುರುಳುತ್ತವೆ, ಮೂರ್ತಿಗಳು ಭಗ್ನಗೊಳ್ಳುತ್ತವೆ, ಭಾರತದ ವಿರುದ್ದ-ಪಾಕಿಸ್ತಾನ ಪರ ಘೋಷಣೆಗಳನ್ನು ಅಡಿಗಡಿಗೆ ಕೂಗಲಾಗುತ್ತದೆ. ಪ್ರತ್ಯೇಕ ಧ್ವಜ, ಪ್ರತ್ಯೇಕ ಲಾಂಛನ, ಪ್ರತ್ಯೇಕ ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ದೇಶದ ಏಕೈಕ ರಾಜ್ಯವೊಂದರಲ್ಲಿ ಪ್ರತ್ಯೇಕತಾವಾದಿಗಳು ಮಾಡುತ್ತಿರುವ ಬಾನಗಡಿ ಮೀರಿದ ವ್ಯವಹಾರಗಳು ಮಾನವ ಹಕ್ಕುಗಳ ಮುಖವಾಡ ತೊಟ್ಟು ಮರೆಯಾಗುತ್ತವೆ. ಇದಕ್ಕೆ ಇತ್ತೀಚಿಗಿನ ಉದಾಹರಣೆಯೆಂದರೆ ರದ್ದುಗೊಂಡ ಕೌನ್ಸರ್ ನಾಗ್ ಯಾತ್ರೆ!
                    ಕಾಶ್ಮೀರ ಕಣಿವೆಯ ಕುಲ್ ಗಾವ್ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 3840 ಮೀ ಎತ್ತರದಲ್ಲಿ ಪರ್ವತಗಳ ನಡುವೆ ದೋಣಿಯಾಕಾರದಲ್ಲಿರುವ ನಯನ ಮನೋಹರ ಸರೋವರ ಕೌಸರ್ ನಾಗ್ ಅಥವಾ ಕೌನ್ಸರ್ ನಾಗ್. ಅಹರ್ ಬಾಲ್ ಪ್ರವಾಸಿ ತಾಣದಿಂದ 30 ಕಿ. ಮೀ ದೂರದಲ್ಲಿ  ಪಿರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿ ಈ ಅತ್ಯಂತ ಸುಂದರ ಸರೋವರವಿದೆ. ಇದು ಅತೀ ಎತ್ತರದ ಹಾಗೂ ಬೃಹತ್ತಾದ ನೀರ ಬುಗ್ಗೆಗಳುಳ್ಳ ಪುರಾತನ ಸರೋವರ. ಪುರಾಣ ಪ್ರತೀತಿಯಂತೆ ಹರ ಜಗತ್ತನ್ನು ಲಯಗೊಳಿಸುವ ಸಂದರ್ಭದಲ್ಲಿ ಜಗತ್ತಿನ ಪುನರ್ ಸೃಷ್ಟಿಗಾಗಿ ತನ್ನ ಸತಿಯನ್ನು ದೋಣಿಯಾಕಾರ ತಳೆಯಲು ಹೇಳಿ ಎಲ್ಲಾ ಮರಗಳ ಬೀಜಗಳನ್ನು ಅದರಲ್ಲಿ ತುಂಬಿಸಿದ. ಹರಿ ಪ್ರಳಯದಲ್ಲಿ ಅದು ಕೊಚ್ಚಿಕೊಂಡು ಹೋಗದಂತೆ ಪರ್ವತದ ತುದಿಗೆ ಅದನ್ನು ಕಟ್ಟಿದ. ಅದೇ ಕೌನ್ಸರ್ ನಾಗ್ ಸರೋವರ.  ಅಲ್ಲದೇ ವಿಷ್ಣುಪಾದವಿರುವ ಜಾಗವೆಂಬ ಪ್ರತೀತಿಯಿಂದಾಗಿ ಕ್ರಮಸರಸ್ ಎಂದೂ, ನಾಗ ಕೌಂಡಿನ್ಯನ ನಿವಾಸ ಸ್ಥಾನವಾಗಿದ್ದುದರಿಂದ ಕೌಂಡಿನ್ಯಾಸರ ಎಂದೂ ಕರೆಯಲ್ಪಡುತ್ತಿದ್ದ ಈ ಪವಿತ್ರ ಸರೋವರ ಮುಂದೆ ಕೌಂಸರ್ ನಾಗ್ ಆಗಿ ಬದಲಾಯಿತು. ಬಹಳ ಹಿಂದಿನಿಂದಲೂ ಹಿಂದೂಗಳು ಈ ಗಮ್ಯ ಸ್ಥಾನಕ್ಕೆ ತೀರ್ಥಯಾತ್ರೆ ಮಾಡುತ್ತಿದ್ದಿದ್ದು ಈಗ ಇತಿಹಾಸ. ಜುಲೈ 29ರಿಂದ ಪ್ರಾರಂಭವಾಗಲಿದ್ದ ಈ ಯಾತ್ರೆಗೆ ಪ್ರತ್ಯೇಕವಾದಿಗಳ ಉಪಟಳ ಶುರುವಾದದ್ದು ವಿಪರ್ಯಾಸ. ಜುಲೈ 30ರ ಗುರುವಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸ್ಥಳೀಯರು ಮತ್ತು ಪ್ರತ್ಯೇಕತಾವಾದಿಗಳ ಕೂಗಾಟದಿಂದ ದಕ್ಷಿಣ ಕಾಶ್ಮೀರದಲ್ಲಿ ಕೌನ್ಸರ್ ನಾಗ್ ಯಾತ್ರೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿತು.
               1989ರ ನಂತರ ಕಾಶ್ಮೀರಿ ಪಂಡಿತರ ಪಾಲಿಗೆ ಗಗನ ಕುಸುಮವಾಗಿದ್ದ ಯಾತ್ರೆ ಕೇಂದ್ರದಲ್ಲಿ ಕಮಲವರಳಿದಾಗ ಯಾತ್ರೆಯ ಸಾಧ್ಯತೆಯೂ ಗರಿಗೆದರಿತ್ತು. ನವದೆಹಲಿಯಲ್ಲಿರುವ ಕಾಶ್ಮೀರಿ ಪಂಡಿತರ ಸಂಘಟನೆ APMCC ಜುಲೈ 31 ರಿಂದ ಯಾತ್ರೆಯ ಆರಂಭಿಸುವುದಾಗಿ ಘೋಷಿಸಿತು. ನಾಲ್ಕು ವರ್ಷಗಳ ಹಿಂದೆ ಪುನರಾರಂಭಗೊಂಡ ಯಾತ್ರೆಗೆ ಜಮ್ಮುವಿನ ರೀಸಿ ಜಿಲ್ಲೆಯ ಮುಖಾಂತರ ಹೋಗಬೇಕಾಗಿತ್ತು. ಅದು ಪರಂಪರಾಗತವಾಗಿ ಯಾತ್ರೆ ನಡೆಯುತ್ತಿದ್ದ ದಾರಿ. ಆದರೆ ಈ ದಾರಿಯಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಪ್ರಯಾಣಕ್ಕೆ ಎರಡು ದಿನ ತಗಲುತ್ತಿತ್ತು. ಇನ್ನೊಂದು ದಾರಿ ಅಹರ್ ಬಾಲ್ ಮುಖೇನವೂ ಯಾತ್ರೆಗೆ ಎರಡು ದಿನ ತಗುಲುತ್ತದೆ. ಆದರೆ ಕುಲ್ಗಾಂವಿನ ಡೆಪ್ಯುಟಿ ಕಮೀಷನರ್ ನಿಸಾರ್ ಅಹಮದ್ ವಾನಿ ಕೇವಲ ಪ್ರವಾಸಿಗರಿಗಷ್ಟೇ ರೀಸಿ ಜಿಲ್ಲೆಯ ದಾರಿ ತೆರೆದಿರುತ್ತೆ. ಯಾತ್ರಾರ್ಥಿಗಳಿಗಲ್ಲ ಎಂಬ ಆದೇಶ ಹೊರಡಿಸಿದರು. ಇವೆಲ್ಲವೂ ಪ್ರತ್ಯೇಕವಾದಿಗಳ ಒತ್ತಡದಿಂದಾದ ಆದೇಶಗಳು!
                  ಕುಲ್ ಗಾವ್ ಜಿಲ್ಲೆಯ ನಲವತ್ತು ಜನ ಕಾಶ್ಮೀರಿ ಪಂಡಿತರು ಇತರ ಹಿಂದೂಗಳೊಡನೆ ಕೌನ್ಸರ್ ನಾಗ್ ಯಾತ್ರೆಗೆ ಹೋಗಲು ಅಗತ್ಯ ಅನುಮತಿ ತೆಗೆದುಕೊಂಡಿದ್ದರು. ಆದರೆ ಕಾಶ್ಮೀರದ ಆಂಗ್ಲ ಪತ್ರಿಕೆಯೊಂದು ಕೇವಲ ನಲವತ್ತು ಜನವಲ್ಲ, ದೇಶದ ವಿವಿಧ ಭಾಗಗಳಿಂದ ನಾಲ್ಕು ಸಾವಿರ ಕಾಶ್ಮೀರಿ ಪಂಡಿತರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಬರೆಯಿತು. ಅದಕ್ಕಾಗಿಯೇ ರಣಹದ್ದುಗಳಂತೆ ಕಾದುಕುಳಿತಿದ್ದ ಕೆಲವರು ಪರಿಸರ ಹಾನಿ ಎಂಬ ನೆಪವೊಡ್ಡಿ ಪ್ರತಿಭಟನೆ ಆರಂಭಿಸಿಬಿಟ್ಟರು. ಅವರೇನು ಪರಿಸರವಾದಿಗಳಲ್ಲ. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ತುದಿಗಾಲಲ್ಲಿ ನಿಂತಿರುವ ಅದಕ್ಕಾಗಿ ಕಾಶ್ಮೀರಿ ಪಂಡಿತರನ್ನು ಕಾಡಿಸಿ-ಪೀಡಿಸಿ-ಓಡಿಸಿದ ಪ್ರತ್ಯೇಕತಾವಾದಿಗಳು! ಪ್ರತ್ಯೇಕವಾದಿಗಳು "ಸೇವ್ ಕೌಸರ್ ನಾಗ್ ಪ್ರಂಟ್" ಎನ್ನುವ ಸಂಘಟನೆಯನ್ನೂ ರಚಿಸಿಕೊಂಡು ಪ್ರತಿಭಟನೆಗೆ ಇಳಿದಿರುವುದು, ಹುರಿಯತ್ ಅಧ್ಯಕ್ಷ ಗೀಲಾನಿ ಆಗಷ್ಟ್ 2 ರಂದು ಹರತಾಳಕ್ಕೆ ಕರೆ ನೀಡಿದ್ದು ಇದಕ್ಕೆ ಪುಷ್ಟಿ ನೀಡುತ್ತವೆ. SKNF ಯಾತ್ರಿಗಳು ಪರಿಸರವನ್ನು ಹಾಳು ಮಾಡುತ್ತಾರೆ ಎಂಬ ತಗಾದೆ ತೆಗೆದರೆ ಗೀಲಾನಿ ಕೋಮುವಾದಿ ಕೇಂದ್ರ ಸರಕಾರ ಕಾಶ್ಮೀರಿ ಮುಸ್ಲಿಮರ ಅಲ್ಪಸಂಖ್ಯಾತ ಗುರುತನ್ನು ತೆಗೆದು ಹಾಕುವ ಪ್ರಯತ್ನ ಮಾಡುತ್ತಿದೆ ಎನ್ನುವ ಹಾಸ್ಯಾಸ್ಪದ ಆರೋಪ ಮಾಡುತ್ತಿದ್ದಾರೆ. "ಕೌನ್ಸರ್ ನಾಗ್ ಯಾತ್ರೆ ಎನ್ನುವುದು ಒಂದು ಸಾಂಸ್ಕೃತಿಕ ಆಕ್ರಮಣ. ಇದು ರಾಜ್ಯದ ಪರಿಸರವನ್ನು ಹಾಳುಮಾಡುವ ಹುನ್ನಾರ. ಯಾತ್ರಿಕರು ಇಲ್ಲಿನ ಪರಿಸರವನ್ನು ಮಲಿನಗೊಳಿಸುತ್ತಾರೆ. ಮಾತ್ರವಲ್ಲ ಈಗಾಗಲೇ ಬಹುತೇಕ ಭೂಮಿಯನ್ನು ಭಾರತೀಯ ಸೇನಾ ಸಿಬ್ಬಂದಿಗೆ ನೀಡಿದ ಕಾಶ್ಮೀರದ ಭೂಮಿಯನ್ನು ಮತ್ತಷ್ಟು ಕಬಳಿಸುವ ಯೋಜನೆ. ಹಾಗಾಗಿ ಯಾತ್ರೆಗೆ ಜಮ್ಮು ಕಾಶ್ಮೀರ ಸರಕಾರ ಅನುಮತಿ ನೀಡಬಾರದು" ಎನ್ನುವುದು ಪ್ರತ್ಯೇಕವಾದಿಗಳ ಅರಚಾಟ. ಪ್ರತ್ಯೇಕವಾದಿಗಳ ಬೆದರಿಕೆಗೆ ಜಗ್ಗಿ ಕುಲ್ ಗಾಂವಿನ ಜಿಲ್ಲಾಧಿಕಾರಿ ತಾನು ಅಂತಹ ಅನುಮತಿ ಕಾಶ್ಮೀರಿ ಪಂಡಿತರಿಗೆ ನೀಡಿಯೇ ಇಲ್ಲವೆಂದು ತನ್ನ ದ್ವಿಮುಖ ನೀತಿಯನ್ನು ಪ್ರದರ್ಶಿಸಿದ್ದು ವಿಪರ್ಯಾಸ!
                ಕಾಶ್ಮೀರದಲ್ಲಿ ಮುಘಲ್ ರಸ್ತೆ ನಿರ್ಮಿಸಲು ಸುಮಾರು 10000 ಮರಗಳನ್ನು ಕಡಿಯಲಾಗಿತ್ತು. ಇದರಿಂದ ಮೂವತ್ತು ಸಾವಿರಕ್ಕಿಂತಲೂ ಅಧಿಕ ವನ್ಯಜೀವಿಗಳ ಅವಸಾನವಾಗಿತ್ತು. ಈಗ ಪರಿಸರ ನಾಶದ ನೆಪವೊಡ್ಡಿ ಯಾತ್ರೆಗೆ ಅಡ್ಡಿಪಡಿಸುತ್ತಿರುವ ಮೊಘಲ್ ಪಳಿಯುಳಿಕೆಗಳು ಮುಘಲ್ ರಸ್ತೆಯ ನಿರ್ಮಾಣದಿಂದ ಪರಿಸರ ನಾಶವಾದಾಗ ಬಗ್ಗೆ ಯಾಕೆ ಪ್ರತಿಭಟಿಸಲಿಲ್ಲ? ಕಾರಣವಿಲ್ಲದೇ ಇಲ್ಲ, ಆ ರಸ್ತೆ ಬಹುಸಂಖ್ಯಾತ ಮುಸ್ಲಿಮರು ವಾಸಿಸುವ ಕಡೆಗಳಲ್ಲಿ ಹಾದುಹೋಗುತ್ತದೆ! ದಾಲ್, ನಾಗಿನ್, ವುಲ್ಲರ್, ಮಾನಸಬಲ್ ಸರೋವರಗಳು ಮತ್ತು ನಿರ್ನಾಮವಾಗಿರುವ ಅಂಚಾರ್ ಸರೋವರದ ಮೇಲಿನ ಮಾನವ ಆಕ್ರಮಣದ ಬಗ್ಗೆ ಯಾಕೆ ತುಟಿಪಿಟಿಕ್ಕೆನ್ನುವುದಿಲ್ಲ? ಅಲ್ಲದೆ ಗುಲ್ಮಾರ್ಗ್, ತಂಗ್ಮಾರ್ಗ್ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡುವ ಪ್ರವಾಸಿಗರಿಂದಾಗುವ ಹಾನಿಯ ಬಗ್ಗೆ ಮೌನವಾಗುಳಿಯಲು ಕಾರಣವೇನು? ಯಾಕೆಂದರೆ ಕಾಶ್ಮೀರಿ ಮುಸ್ಲಿಮರ ಬದುಕು ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಒಂದು ವೇಳೆ ಇವೆಲ್ಲವನ್ನು ವಿರೋಧಿಸಿದರೆ ಮುಂದೆ ಮುಷ್ಟಿ ಅನ್ನಕ್ಕೂ ಪರದಾಡಬೇಕಾದೀತು ಎನ್ನುವ ಭಯ!
              ಪ್ರವಾಸಿಗರು ಹೋದಾಗ ಹಾಳಾಗದ ಪರಿಸರ ಕಾಶ್ಮೀರಿ ಪಂಡಿತರು ಹಾಗೂ ಇತರ ಹಿಂದೂಗಳು ಹೋದಾಗ ಹೇಗೆ ಹಾಳಾಗುತ್ತದೆ ಎಂದು ಪ್ರಶ್ನಿಸುತ್ತಾರೆ APMCC ನೇತಾರ ಅಮಿತ್ ರೈನಾ. ಕೌಸರ್‌ ನಾಗ್‌ ಯಾತ್ರೆಗೆ ನೀಡಲಾಗಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರ ನಿರ್ಧಾರದ ಬಗೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಾಗರೋತ್ತರ ಕಾಶ್ಮೀರಿ ಅಸೋಸಿಯೇಶನ್‌ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ವ್ಯವಹಾರಗಳ ಖಾತೆಯ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರವೊಂದನ್ನು ಬರೆದು ಪ್ರತೀವರ್ಷ ಶಾಂತಿಯುತವಾಗಿ ನಡೆಯುತ್ತಾ ಬಂದಿರುವ ಕೌಸರ್‌ ನಾಗ್‌ ಯಾತ್ರೆಗೆ ಅನುಮತಿಯನ್ನು ನೀಡುವಂತೆ ಮನವಿ ಮಾಡಿಕೊಂಡಿದೆ. ಕಾಶ್ಮೀರಿ ಕಣಿವೆಯ ಪರಿಸರವನ್ನು ಕಾಶ್ಮೀರಿ ಪಂಡಿತರು ಸಂರಕ್ಷಿಸಿಕೊಂಡು ಬಂದಿದ್ದು ಇಲ್ಲಿನ ನದಿ, ಪರ್ವತಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ಕೆಲ ದಶಕಗಳಲ್ಲಿ ಕಣಿವೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗಿವೆ. ಕಾಶ್ಮೀರಿ ಪಂಡಿತರ ಪುನವರ್ಸತಿಗೆ ಅಗತ್ಯ ಕ್ರಮ ಕೈಗೊಳ್ಳುವ ಕೇಂದ್ರ ಸರಕಾರದ ಭರವಸೆಯ ಬಳಿಕ ಇದೀಗ ಮೂರನೇ ಬಾರಿಗೆ ಕಾಶ್ಮೀರಿ ಪಂಡಿತರ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
              ಮೊನ್ನೆ ಮೊನ್ನೆ ಕಟ್ರಾ ರೈಲು ಉದ್ಘಾಟನೆಗೊಂಡ ದಿವಸ ಅದನ್ನು ಸ್ವಾಗತಿಸುವ ಬದಲು ಜಮ್ಮು ಕಾಶ್ಮೀರದ ಬಾಂಧವರು ಪ್ರತಿಭಟನೆ ನಡೆಸಿದರು. ಅಮರನಾಥ ಯಾತ್ರಿಕರೊಂದಿಗೆ ಜಗಳವಾಡಿ ನೂರಾರು ಭಂಡಾರಗಳನ್ನು ಸುಟ್ಟು ನೂರಾರು ಜನರನ್ನು ಗಾಯಗೊಳಿಸಿ ವಾಗ್ಯುದ್ದ ಶಮನಗೊಳಿಸಲು ಬಂದ ಯೋಧರಿಗೆ ಮಾರಣಾಂತಿಕ ಗಾಯಗಳಾಗುವಂತೆ ಬಡಿದರು. ಹಂತಹಂತವಾಗಿ ಕಾಶ್ಮೀರಿ ಪಂಡಿತರಿಗೆ ಕಣಿವೆಯಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಭಾರತ ಸರಕಾರ ಘೋಷಿಸಿದಾಗ ತಮ್ಮನ್ನು ಕಾಶ್ಮೀರದಿಂದ ಹೊರಗಟ್ಟುವ ಷಡ್ಯಂತ್ರ ನಡೆದಿದೆ ಎಂದು ಬೊಬ್ಬಿರಿದರು.  ಈದ್‌ನ ನಮಾಜಿನ ನಂತರ ಕಾಶ್ಮೀರ ಕಣಿವೆಯಲ್ಲಿ ಮತಾಂಧ ರಿಂದ ಇಸ್ರೇಲ್ ವಿರುದ್ಧ ಮತ್ತು ಪ್ಯಾಲೆಸ್ಟೇನ್‌ನ ಬೆಂಬಲಿಸಿ ಜುಲೈ ೨೯ ರಂದು ಹಿಂಸಾತ್ಮಕ ಮೆರವಣಿಗೆಯೂ ನಡೆಯಿತು. ಮತಾಂಧರು ನಮಾಜು ಮುಗಿದ ತಕ್ಷಣ ಹೈದರಪೋರಾ ಮತ್ತು ಮೌಲಾನಾ ಆಝಾದನ ರಸ್ತೆಗೆ ಬಂದು ತೀವ್ರ ಕಲ್ಲು ತೂರಾಟ ಮಾಡಿ ಭಾರತದ ವಿರುದ್ಧ ಘೋಷಣೆ ಕೂಗಿದರು. ಐ.ಎಸ್.ಐ.ಎಸ್.ನ  ಧ್ವಜವನ್ನೂ ಹಾರಿಸಿದರು.

             ದಶಕಗಳ ಪರ್ಯಂತ ಕಶ್ಯಪ ಭೂಮಿಯ ಮೇಲಾದ ಅನ್ಯಾಯ ಆಕ್ರಮಣಗಳಿಗೆ ಅಂತ್ಯಗೀತೆ ಹಾಡುವ ಅವಶ್ಯಕತೆ ಇದೆ. ಅದಕ್ಕಾಗಿ 370ನೇ ವಿಧಿಯನ್ನು ರದ್ದು ಮಾಡಲೇ ಬೇಕು. ತಮ್ಮ ಪಾಂಡಿತ್ಯದಿಂದ ಭಾರತದ ಶ್ರೇಷ್ಠತೆಯನ್ನು ಎತ್ತಿಹಿಡಿದ ಜನಾಂಗವನ್ನು ಅವರದೇ ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಿದಾಗಲೇ ಆ ಹೆಸರಿಗೂ ಅರ್ಥ ಬರುವುದು. ಆಗಲೇ ಹಿಮಾಲಯದ ಅದರ ಮಡಿಲಲ್ಲಿರುವ ಹಿಮನದಿಗಳ, ಸರೋವರಗಳ, ಮಠ-ಮಂದಿರಗಳ ರಕ್ಷಣೆಯೂ ಸಾಧ್ಯ. ಕೇಸರಿ ನಾಡಿನಲ್ಲಿ ಕೇಸರಿ ಪಡೆ ಕೇಸರಿ ಕ್ರಾಂತಿಗೆ ಮುನ್ನುಡಿ ಬರೆದೀತೇ?

ಗುರುವಾರ, ಆಗಸ್ಟ್ 14, 2014

ಆತನಹುದು ನಿಜ ನೇತಾ...ಬ್ರಿಟಿಷರ ಬಡಿದಟ್ಟಿದಾತ...

ಆತನಹುದು ನಿಜ ನೇತಾ...ಬ್ರಿಟಿಷರ ಬಡಿದಟ್ಟಿದಾತ...


                           ಇನ್ನೇನು ಕೆಚ್ಚೆದೆಯ ಗಂಡುಗಲಿಗಳ ಕ್ರಾಂತಿಪರ್ವ ಮುಗಿದುಹೋದಂತೆ ಭಾಸವಾದ ಕಾಲವದು. ಬ್ರಿಟಿಷರ ಕಸದ ಬುಟ್ಟಿಗಳನ್ನು ತನ್ನ ಮನವಿ ಪತ್ರಗಳಿಂದ ತುಂಬುತ್ತಾ ತನಗೆ ಬೇಕಾದ ಸ್ಥಾನ, ಮಾನ, ಧನ ಪಡೆಯುತ್ತಿತ್ತು ಕಾಂಗ್ರೆಸ್. ತನ್ನ ಬಾಲಬಡುಕರಿಂದ ಮಹಾತ್ಮ ಎಂದು ಘೋಷಿಸಿಕೊಂಡ ತಥಾಕಥಿತ ನಾಯಕನೊಬ್ಬ ಹೇಳಿದ್ದೇ ಸತ್ಯ, ಮಾಡಿದ್ದೇ ಧರ್ಮ, ಅನುಸರಿಸಿದ್ದೇ ನೀತಿ ಎಂದು ಮುಗ್ಧಜನತೆ ತನ್ನ ಕ್ಷಾತ್ರ ತೇಜವನ್ನು ಕಳೆದುಕೊಂಡು ಅಪ್ಪಿ ಒಪ್ಪಿಕೊಳ್ಳುತ್ತಿದ್ದ ದುರಂತ ಸಮಯ. ಆದರೆ ಅವನೊಬ್ಬನಿದ್ದ ಗಂಡುಗಲಿ. ಅವನೆದ್ದ. ಬ್ರಿಟಿಷರು ಬೆಚ್ಚಿದರು, ಕಾಂಗ್ರೆಸ್ಸಿನ ತಥಾಕಥಿತ ನಾಯಕರು ಬೆದರಿದರು. ಯಾಕೆಂದರೆ ಅವನು ಜನ್ಮತಃ ನಾಯಕ. ಸುಭಾಷ್ ಚಂದ್ರ ಬೋಸ್. ಸೂರ್ಯ ಎಂದಿಗೂ ಸೂರ್ಯನೇ ಅಲ್ಲವೇ?

                             ಅತಿ ಬುದ್ಧಿವಂತನಾಗಿದ್ದ ಆತ . ಸಿ. ಎಸ್ ನಲ್ಲಿ(೧೯೨೦) ನಾಲ್ಕನೇ ಶ್ರೇಯಾಂಕ ಅಲಂಕೃತ. ಆದರೆ ಮಾತೃಭೂಮಿ ಕೈ ಬೀಸಿ ಕರೆಯಿತು. ಸೈನ್ಯಕ್ಕೆ ಸೇರೋಣವೆ? ನಿನಗೆ ದೃಷ್ಟಿ ದೋಷವಿದೆ ಎಂದುಬಿಟ್ಟರು ಅಧಿಕಾರಿಗಳು. ದೃಷ್ಟಿ ಸರಿಯಿಲ್ಲದಿದ್ದರೇನು, ದೂರದೃಷ್ಟಿಯಿತ್ತಲ್ಲ! ಮುಂದೆ ಈತ ಸ್ವತಂತ್ರ ಭಾರತದ ಮೊದಲ ಸೈನ್ಯವನ್ನು ಕಟ್ಟಬಹುದೆಂದು ಯಾರಾದರೂ ಊಹಿಸಿದ್ದರೆ? ಕಾಂಗ್ರೆಸ್ ಸೇರಿದ ಆತ. ಆತನ ವರ್ಚಸ್ಸು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿಯೂ ಸ್ಪರ್ದಿಸುವಂತೆ ಮಾಡಿತು. ಆದರೆ ಅಂತಹ ಅಪ್ರತಿಮ ನಾಯಕ ಗೆದ್ದರೆ ತನ್ನ ಕೆಲಸ ಕೆಡುತ್ತದೆಂದು ಗಾಂಧಿ ತನ್ನ ಬೆಂಬಲಿಗ ಸೀತಾರಾಮ್ ಕೇಸರಿಯನ್ನು ಎದುರಾಳಿಯಾಗಿ ನಿಲ್ಲಿಸಿದರು (೧೯೩೯). ಭಾರತದ ಕೆಟ್ಟ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ್ದೇ ಗಾಂಧಿ! ಆದರೇನು ಸುಭಾಷ್ ಭರ್ಜರಿ ಮತಗಳಿಂದ ಗೆದ್ದರು. ಗಾಂಧಿ ಸುಮ್ಮನುಳಿದಾರೆ? ಸೀತಾರಾಮ ಕೇಸರಿಯ ಸೋಲು ಎಂದರೆ ನನ್ನ ಸೋಲು ಅಂದುಬಿಟ್ಟರು ಗಾಂಧಿ. ಮಾತ್ರವಲ್ಲ ಅಡಿಗಡಿಗೆ ಸುಭಾಷರನ್ನು ಅವರ ಕಾರ್ಯವನ್ನು ವಿರೋಧಿಸುತ್ತಲೇ ಬಂದರು. ಇದರಿಂದ ರೋಸಿ ಹೋದ ಸುಭಾಷ್ ರಾಜಿನಾಮೆ ಬಿಸಾಕಿ ತನ್ನದೇ ಆದ ಹಾದಿಯನ್ನು ಅನುಸರಿಸತೊಡಗಿದರು. ಆದರೂ ಗಾಂಧಿ ಮಹಾತ್ಮ!!! ಮುಂದೆ ಹಾಗೂ ಇಂದಿಗೂ ರಾಷ್ಟ್ರಪಿತ!!! ಕಾಲದ ವಿಪರ್ಯಾಸವೇ? ಹಿಂದೂಗಳ ಹೇಡಿತನವೇ? ಮರೆಗುಳಿತನವೇ?

                          ವಿಗ್ರಹಗಳನ್ನು ಭಗ್ನಗೊಳಿಸುತ್ತ ಬ್ರಿಟಿಷರ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದ ಸುಭಾಷರಿಗೆ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರರನ್ನು ಭೇಟಿಯಾಗುವ ಅವಕಾಶ ಒದಗಿ ಬಂತು. ಸಾವರಕರ್ ಸುಭಾಷರಿಗೆ ವಿಗ್ರಹ ಭಗ್ನಗೊಳಿಸುವ ಬದಲು ದೇಶದ ಹೊರಗೆ ನಿಂತು ಹೋರಾಡಲು ಸಲಹೆ ಮಾಡಿದರು. ಅದು ಪರಶುರಾಮ ಮತ್ತು ಆಗಸ್ಥ್ಯರು ಭೇಟಿಯಾಗಿ ಪರಶುರಾಮರು ತನ್ನ ಕೆಲಸವನ್ನು ಮುಂದುವರಿಸಲು ಆಗಸ್ಥ್ಯರಿಗೆ ಆಶೀರ್ವಾದ ನೀಡಿದಂತೆ. ಮನದೊಳಗಿನ ಕಿಡಿಗೆ ಆಜ್ಯ ದೊರಕಿತು. ಸಮಯಕ್ಕೆ ಸರಿಯಾಗಿ ಸರಕಾರ ಸುಭಾಷರನ್ನು ಗೃಹಬಂಧನದಲ್ಲಿರಿಸಿತು. ಈಗ ಸುಭಾಷರಿಗೆ ತಿಂಗಳು ಕಳೆದರೂ ಗುಣವಾಗದ ಕಾಯಿಲೆ. ತಮ್ಮ ಹಿತೈಷಿಗಳನ್ನು ಬಿಟ್ಟು ಬೇರೆ ಯಾರೂ ಭೇಟಿಯಾಗುವಂತೆ ಇಲ್ಲ. ಸರಕಾರಕ್ಕೆ ಗುಮಾನಿ ಬಂದು ಮನೆಗೆ ಬಂದು ನೋಡಿದರೆ ಪಂಜರದ ಬಾಗಿಲು ತೆರೆದಿತ್ತು. ಸುಭಾಷರು ಟೋಕಿಯೋದ ಆಕಾಶವಾಣಿಯಿಂದ ಮಾತನಾಡಿದ ಮೇಲೆಯೇ ಗೊತ್ತಾದುದು ಅವರಿಗೆ ಬಂದ ರೋಗ ಅಗಾಧ ದೇಶಪ್ರೇಮವೆಂದು.

                       ಅದೊಂದು ಅಪರಿಮಿತ ಸಾಹಸ. ಊಹಿಸಿಕೊಳ್ಳಿ ಒಂದುಕಡೆ ಸರಕಾರದ ಹದ್ದಿನ ಕಣ್ಣು, ಮನೆಯ ಸುತ್ತಲು ಪೋಲಿಸರು. ಇನ್ನೊಂದು ಕಡೆ ತನಗಾಗದ ಸುಭಾಷರನ್ನು ಹೇಗಾದರೂ ಮಣ್ಣು ಮುಕ್ಕಿಸಲು ಕಾದಿದ್ದ ಗಾಂಧಿ ಮತ್ತವರ ಬೆಂಬಲಿಗರು. ಸುಭಾಷರ ನಿಜವಾದ ಅಂತಃಶಕ್ತಿ ಬಾಹ್ಯಜಗತ್ತಿಗೆ ಸ್ಥೂಲವಾಗಿ ಪರಿಚಯವಾದದ್ದೇ ಆವಾಗ. ಭಾರತದಲ್ಲಿ ಅಗಾಧ ಕ್ರಾಂತಿ ಸಂಘಟನೆ ಮಾಡಿದ್ದ, ವೈಸ್ ರಾಯನ ಮೇನೆಯ ಮೆಲೆ, ಬ್ರಿಟಿಷರ ಕಟ್ಟಡಗಳಿಗೆ ಬಾಂಬ್ ಎಸೆದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೊಡ್ಡಿದ, ಅಡಿಗಡಿಗೆ ತನ್ನ ರೂಪ ಬದಲಾಯಿಸುತ್ತಾ ಕ್ರಾಂತಿ ಸಂಘಟನೆ ಮಾಡುತ್ತಿದ್ದ, ಬ್ರಿಟಿಷರ ಅಧಿಕಾರಿಗಳ ಮಧ್ಯೆ ಇದ್ದು ಅವರಿಗೆ ಚಳ್ಳೆಹಣ್ಣು ತಿನ್ನಿಸಿದ, ಸೈನ್ಯವನ್ನು ಹುರಿದುಂಬಿಸಿ ಬ್ರಿಟಿಷರ ವಿರುದ್ಧ ದಂಗೆಯೇಳುವಂತೆ ಪ್ರೇರೇಪಿಸಿದ, ಕೊನೆಗೆ ಬ್ರಿಟಿಷರ ಕೈಗೆ ಸಿಗದೆ ಜಪಾನಿಗೆ ಹೋಗಿ ಜಪಾನಿನಲ್ಲಿದ್ದುಕೊಂಡು ಕ್ರಾಂತಿ ಸಂಘಟನೆ ಮಾಡಿದ್ದ ಶಿವಾಜಿ, ತಾತ್ಯಾಟೋಪೆ, ಸಾವರಕರರ, ಮುಂದುವರಿಕೆ ಎಂದೇ ಪರಿಗಣಿತನಾದ ರಾಸ್ ಬಿಹಾರಿ ಬೋಸ್ ತನ್ನ ಕ್ರಾಂತಿ ಪರಿವಾರವನ್ನು ಸುಭಾಷರಿಗೊಪ್ಪಿಸಿ ತಾನು ಕಾಲನ ಮೊರೆ ಹೊಕ್ಕರು. ಜಪಾನ್, ಜರ್ಮನಿಗಳ ಸಹಕಾರದೊಂದಿಗೆ ಭಾರತದ ಮೊದಲ ರಾಷ್ಟ್ರೀಯ ಸೇನೆ ಸಿದ್ಧವಾಗಿಯೇಬಿಟ್ಟಿತು. ಆಜಾದ್ ಹಿಂದ್ ಫೌಝ್- ಸ್ವತಂತ್ರ ಹಿಂದು ಸೇನೆ ಸುಭಾಷರ ನಾಯಕತ್ವದಲ್ಲಿ ಬೆಳೆಯತೊಡಗಿತು.

                     ಅಷ್ಟೇ ಅಲ್ಲ ಸುಭಾಷರ ದೂರದೃಷ್ಟಿ ನೋಡಿ, ಜಗತ್ತಿನ ಏಳೆಂಟು ರಾಷ್ಟ್ರಗಳಿಂದ ಮಾನ್ಯತೆ ಪಡೆದ ಪ್ರಪ್ರಥಮ ಭಾರತೀಯ ಸರಕಾರ ಮತ್ತು ಸಂವಿಧಾನ ರಚನೆಯಾಯಿತು ವಿದೇಶಿ ನೆಲದಲ್ಲಿ! ಸಾವರಕರ್ ಬರೆದ ಪ್ರಕಟಣೆಗೆ ಮುನ್ನವೇ ಎರಡೆರಡು ದೇಶಗಳಲ್ಲಿ ನಿಷೇಧಿಸಲ್ಪಟ್ಟಿದ್ದ, ಅಸಂಖ್ಯ ಕ್ರಾಂತಿಕಾರಿಗಳಿಗೆ ಸ್ಪೂರ್ತಿಗೀತೆಯಾಗಿದ್ದ "ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ" ಐಎನ್ಎಯ ಭಗವದ್ಗೀತೆಯಾಯಿತು. ಸುಬಾಷ್ ಗುಡುಗಿದರು " ನನಗೆ ಒಂದು ತೊಟ್ಟು ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ." ಬ್ರಿಟಿಷರು ನಡುಗಿದರು. ಗಾಂಧಿ ಪರಿವಾರ ಥರಗುಟ್ಟಿತು. ಆಗ ನೆಹರೂ ಹೇಳಿದ್ದು " ಸುಬಾಷರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಬಂದರೆ ನಾನು ಖಡ್ಗ ಹಿಡಿದು ಬ್ರಿಟಿಷರನ್ನೆದುರಿಸುತ್ತೇನೆ."
                  ಶುರುವಾಯಿತು ಐಎನ್ಎಯ ಅಭಿಯಾನ. ದಿಲ್ಲಿಚಲೋ... ಅಂಡಮಾನ್, ನಿಕೋಬಾರ್ ಗಳು ಸ್ವತಂತ್ರವಾದವು. ಸುಭಾಷರು ಅವುಗಳಿಗೆ ಶಹೀದ್ ಮತ್ತು ಸ್ವರಾಜ್ಯ್ ಎಂದು ಮರುನಾಮಕರಣ ಮಾಡಿದರು. ನಾವದನ್ನು ಉಳಿಸಿಕೊಂಡಿಲ್ಲ. ಇಂಫಾಲ್, ಮಣಿಪುರ ವಶವಾದವು. ಪ್ರಕೃತಿ ಮುನಿಯಿತು. ಐಎನ್ಎಗೆ ಅದು ಶಾಪವಾಗಿ ಕಾಡಿತು. ಮಳೆ, ಮಂಜು, ಭೂಕುಸಿತದಂತಹ ವಿಕೋಪಗಳಿಂದ ಐಎನ್ಎ ಧರಾಶಾಯಿಯಾಗಬೇಕಾಯಿತು, ಬ್ರಿಟಿಷರ ಶೌರ್ಯದಿಂದಲ್ಲ. ಮಧ್ಯೆ ಸುಭಾಷರ ಸಹವರ್ತಿಗಳು ಅವರನ್ನು ಜಪಾನಿಗೆ ತೆರಳುವಂತೆ ಮನವಿ ಮಾಡಿದರು. ಮೊದಲು ಒಪ್ಪದ ಸುಭಾಷ್ ಭವಿಷ್ಯದ ಸಂಘಟನೆಯ ಹಿತದೃಷ್ಟಿಯಿಂದ ಒಪ್ಪಲೇ ಬೇಕಾಯಿತು. ಐಎನ್ಎಯ ಸೈನಿಕರು ಬ್ರಿಟಿಷರ ಸೆರೆ ಸಿಕ್ಕರು. ಆದರೆ ಐಎನ್ಎಯ ಪರಾಕ್ರಮ ಸೇನೆಯಲ್ಲಿ ಸಂಚಲನ ಮೂಡಿಸಿತು. ಸೇನೆ ದಂಗೆ ಎದ್ದಿತು. ತಾವು ಬೂಟುಗಾಲಿಂದ ಒದ್ದವರು ಇನ್ನು ತಮ್ಮನ್ನೇ ಒದೆಯುತ್ತಾರೆ ಎಂದು ಬೆದರಿದ ಬ್ರಿಟಿಷರು , ಗಾಂಧಿಯ ದೇಹವನ್ನು ತುಂಡರಿಸದೇ ಭಾರತವನ್ನು ವಿಭಜಿಸಿ ಗಂಟುಮೂಟೆ ಕಟ್ಟಿದರು. ವಿಭಜನೆಯೊಂದು ದುರಂತ ಕಥೆ. ಲಕ್ಷಾಂತರ ಹಿಂದೂಗಳ ಕೊಲೆ, ಮಾನಿನಿಯರ ಅತ್ಯಾಚಾರ, ದರೋಡೆ, ಅಸಹ್ಯ ಹುಟ್ಟಿಸಿದ  ಮಹಾತ್ಮರೆಂದೆನಿಸಿಕೊಂಡವರ ಮೌನ, ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದವರ ನಡವಳಿಕೆ ಎಲ್ಲವೂ ಇತಿಹಾಸದ ಕಾಲಗರ್ಭದಲ್ಲಿ ಸೇರಿ ಹೋದವು.

                             ಇತ್ತ ಸುಭಾಷರು ಜಪಾನಿಗೆ ತೆರಳಿ ಅಲ್ಲಿಂದ ತೈಪೆ ತಲುಪಿದರು. ನಂತರ ರಷಿಯಾ ಮುಖಾಂತರ ಭಾರತಕ್ಕೆ ಬರಲು ಅವರು ಹಾಕಿಕೊಂಡಿದ್ದ ಯೋಜನೆ ತಲೆಕೆಳಗಾಯಿತು. ರಷ್ಯಾ ಬ್ರಿಟಿಷರ ಆಣತಿಯಂತೆ ಅವರನ್ನು ಸೈಬೀರಿಯಾದ ಕೊರೆಯುವ ಚಳಿಗೆ ನೂಕಿತು. ನೆಹರೂ, ಗಾಂಧಿ ಪರಿವಾರ ಇಲ್ಲದ ವಿಮಾನ ದುರಂತ ಸೃಷ್ಟಿಸಿ ಸುಭಾಷರನ್ನು ಜೀವಂತ ಕೊಂದರು. ಮಾತ್ರವಲ್ಲದೆ ರಷಿಯಾ ಮತ್ತು ಬ್ರಿಟಿಷರಿಗೆ ಪತ್ರ ಬರೆದು ಸುಭಾಷರನ್ನು ಬಿಡುಗಡೆ ಮಾಡದಂತೆ ನೋಡಿಕೊಂಡರು. ಆದರೆ ಸಿಂಹ ಎಂದೆಂದಿಗೂ ಸಿಂಹವೇ. ಅದು ತಪ್ಪಿಸಿಕೊಂದು ನೇಪಾಳದ ಮುಖಾಂತರ ಭಾರತವನ್ನು ಸೇರಿತು. ಗುಮ್ ನಾಮೀ ಬಾಬಾ, ಭಗವಾನ ದಾಸ್ ಎಂಬ ಹೆಸರಲ್ಲಿ ತಿಂಗಳಿಗೊಮ್ಮೆ ಮನೆ ಬದಲಾಯಿಸುತ್ತಾ ತನ್ನದೇ ದೇಶದಲ್ಲಿ ಪರಕೀಯನಂತೆ ಬದುಕಿತು.

ಸಾಕ್ಷಿ ಏನು?
ಸುಬಾಷರ ಬಳಿ ಇದ್ದ ಎಲ್ಲಾ ವಸ್ತುಗಳು( ಅವರ ಚಿನ್ನ ಕಟ್ಟಿಸಿಕೊಂಡಿದ್ದ ಹಲ್ಲು, ಕನ್ನಡಕ, ಅವರ ಪ್ರೀತಿಯ ಕೊಡೆ, ಅವರ ಪತ್ರಗಳು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಪ್ರತಿ...ಇತ್ಯಾದಿ) ಭಗವಾನ್ ದಾಸ್ ಬಳಿ ಇದ್ದವು. ಯಾರು ಸುಭಾಷರು ತಪ್ಪಿಸಿಕೊಳ್ಳಲು ಸಹಾಯ ಮಾಡಿದರೋ, ಯಾರು ಅವರಿಗೆ ಆಪ್ತರಾಗಿದ್ದರೋ ಅವರೇ ಭಗವಾನ್ ದಾಸ್ ಜೊತೆ ಇದ್ದರು. ಅಪರಿಚಿತರು ಬಂದಾಗ ಭಗವಾನ್ ದಾಸ್ ಪರದೆಯ ಹಿಂದೆ ಕುಳಿತು ಮಾತಾಡುತ್ತಿದ್ದರು. ಸುಭಾಷ್ ಮತ್ತು ಭಗವಾನ್ ದಾಸರ ಕೈಬರಹಗಳು ಒಂದೇ ಆಗಿದ್ದವು. ನೆಹರೂ ಅಂತ್ಯಕ್ರಿಯೆಯಲ್ಲಿ ಇವರೂ ಭಾಗಿಯಾಗಿದ್ದ ಚಿತ್ರಗಳಿವೆ. ಇಂತಹ ಹತ್ತು ಹಲವು ದಾಖಲೆಗಳಿವೆ. ಇದಕ್ಕಾಗಿ ಮುಖರ್ಜಿ ಆಯೋಗ ಮತ್ತು ಸರಕಾರಗಳು ನೇಮಿಸಿದ್ದ ವಿವಿಧ ಆಯೋಗಗಳ ವರದಿಯನ್ನು ಪರಿಶೀಲಿಸಬಹುದು. ಮುಂದೆ 1985ರಲ್ಲಿ ಭಗವಾನ್ ದಾಸ್ ಅರ್ಥಾತ್ ಸುಭಾಷರು ಇಹಲೋಕ ತ್ಯಜಿಸಿದರು. ಆಗ ೧೩ ಮಂದಿ ಮಾತ್ರ ಹಾಜರಿದ್ದರು.

                      ಹೌದು ಆತ ನಿಜವಾದ ನೇತಾ! ನಮ್ಮೆಲ್ಲರನ್ನು ಬಡಿದೆಚ್ಚರಿಸಿದಾತ! ಬ್ರಿಟಿಷರನ್ನು ಬಡಿದಟ್ಟಿದಾತ! ನಮ್ಮ ಸ್ವಾತಂತ್ರ್ಯದಾತ! ಆದರೆ ಯಾರು ನಮಗೆ ಸ್ವಾತಂತ್ರ್ಯ ತಂದುಕೊಟ್ಟನೋ ಅವನನ್ನು ನೆಹರೂ, ಗಾಂಧಿ ಜೀವಂತ ಕೊಂದುಬಿಟ್ಟರು. ನಾವು ಮರೆತು ಬಿಟ್ಟೆವು. ಆತನ ಸ್ವಾತಂತ್ರ್ಯ ಕಸಿದುಕೊಂಡೆವು. ಎಂತಹ ಪಾಪಿಗಳು ನಾವು! ಸಾವರ್ಕರ್ ತಾತ್ಯಾಟೋಪೆಯ ಕಥನ ಬರೆದ ನಂತರ ಹೇಳಿದರು " ತಾತ್ಯಾ ದೌರ್ಭಾಗ್ಯ ಪೂರ್ಣ ದೇಶದಲ್ಲಿ ಯಾಕೆ ಹುಟ್ಟಿದಿ. ಜಪಾನಿನಲ್ಲೋ, ಜರ್ಮನಿಯಲ್ಲೋ ಹುಟ್ಟಿದ್ದಿದ್ದರೆ ನಿನ್ನನ್ನು ಗುಡಿ ಕಟ್ಟಿ ಪೂಜಿಸುತ್ತಿದ್ದರು" ಇದೇ ಮಾತು ಮಾತು ಹೇಳಿದ ಸಾವರ್ಕರರಿಗೂ, ಸುಭಾಷರಿಗೂ ಹಾಗೂ ಅಸಂಖ್ಯಾತ ದೇಶಭಕ್ತ ಯೋಧರಿಗೂ ನಾವು ಅನ್ವಯಿಸಿಬಿಟ್ಟೆವಲ್ಲಾ? ಇವರಿಗೆಲ್ಲ ಸಿಗಬೇಕಾದ ಗೌರವ ಸಿಕ್ಕು ಇತಿಹಾಸಕ್ಕೆ ನ್ಯಾಯ ದೊರಕಿಸಿಕೊಡಬೇಕಾದುದು ನಮ್ಮ ಕರ್ತವ್ಯವಲ್ಲವೇ?

ಜೈಹಿಂದ್...

ಭಾನುವಾರ, ಆಗಸ್ಟ್ 10, 2014

ಜೀವ ಸೆಲೆ

ಹುರುಪಿನಲಿ ಯುವ ಮೇಘ
ಪ್ರೀತಿಯಲಿ ಮುತ್ತಿಕ್ಕಿ
ಸೆಳೆಮಿಂಚು ಹರಿದಿರಲು
ಜಗದಗಲ ಗುಡುಗುಡುಗಿ||

ಬಿರಬಿರನೆ ಬೀಸುತಿಹ
ಮಾರುತಗೆ ತುಸು ಬೆದರಿ
ಭರಭರನೆ ಬೀಳುತಿದೆ
ಸುರನದಿಯ ನೆನೆನೆನೆದು||

ಇಳೆ ಸೆಳೆಯೆ ಕೊಳೆ ತೊಳೆದು
ಜೀವಸಿರಿ ತಾ ಮೊಳೆತು
ಇನಿಯನೆಡೆ ಸೇರುತಿದೆ
ತಿರುತಿರುಗಿ ನೋಡದೆಯೇ||

ಪ್ರಕೃತಿಯನ್ನು ದಹಿಸುತ್ತಿದೆ ಮಾನವನ ವಿಕೃತಿ

ಪ್ರಕೃತಿಯನ್ನು ದಹಿಸುತ್ತಿದೆ ಮಾನವನ ವಿಕೃತಿ
               ಕಳೆದ ಕೆಲವು ದಿವಸಗಳ ಹಿಂದೆ ಕೇಳಿ ಬರುತ್ತಿದ್ದ ಮಾತು ಅನಾವೃಷ್ಟಿ...ಈಗ ಅತಿವೃಷ್ಟಿ! ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ ಇನ್ನು ಕೆಲವೆಡೆ ಒಂದು ಹನಿಯೂ ಇಲ್ಲ. ಕುಡಿಯುವ ನೀರಿಗೂ ತತ್ವಾರ. ಆಷಾಢ ಮಾಸದಲ್ಲಿ ನಿರಂತರ ಮಳೆಯಿಂದ ಚಳಿ ಹಿಡಿಸುತ್ತಿದ್ದ ಮಲೆನಾಡ ಪ್ರಾಂತ್ಯದಲ್ಲಿ ಅಗಾಧ ಮಳೆ ಸುರಿಯುತ್ತಿದ್ದಾಗ್ಯೂ ಧಗೆ ತಡೆಯಲಾಗದ ಪರಿಸ್ಥಿತಿ. ಹಿಂದೆ ಇದ್ದಂತೆ ಕ್ರಮವಾಗಿ ಬರುತ್ತಿದ್ದ ಮಳೆ-ಚಳಿ-ಬೇಸಗೆಗಳು ಇಂದು ಅಸ್ತವ್ಯಸ್ತ. ಯಾಕೆ ಹೀಗೆ ಎಂದು ಚಿಂತಿಸುವ ವ್ಯವಧಾನ ಹಣದ ಹಿಂದೆ ಓಡುತ್ತಿರುವ ಇಂದಿನ ಪೀಳಿಗೆಗೆ ಇದೆಯೇ? ನಗರೀಕರಣ, ಹಣದ ಹಪಹಪಿ, ಕೃಷಿಕರ ಕಡೆಗಣನೆಯೇ ಇದಕ್ಕೆ ಕಾರಣಗಳೆನ್ನುವುದು ಕಣ್ಣಿಗೆ ರಾಚುತ್ತಿರುವ ಸತ್ಯ. ಮಲೆನಾಡಿನಲ್ಲಿ ಕೃಷಿಗೆ ಸರಿಯಾದ ಮೌಲ್ಯವಿರದೇ ಇದ್ದಾಗ ಜೀವ ಉಳಿಸಿಕೊಳ್ಳಲು ಅಡಿಕೆ ಗಿಡ ಕಡಿದು, ಇದ್ದ ಗದ್ದೆಗಳನ್ನು ಒಡೆದು ರಬ್ಬರ್ ಬೆಳೆದುದರ ಪರಿಣಾಮ ಇಂದು ಗೋಚರವಾಗುತ್ತಿದೆ. ಪಶ್ಚಿಮ ಘಟ್ಟಗಳ ಜೀವರಾಶಿಯನ್ನು ಪೊರೆಯುವ ಸಸ್ಯಸಂಕುಲ ಜೀವ ಕಳೆದುಕೊಂಡು ರಬ್ಬರ್ ಗುಡ್ಡಗಳಾಗಿರುವುದು ವಿಪರ್ಯಾಸ. ಇನ್ನು ರಸ್ತೆ ಬದಿಗಳಲ್ಲಿ ಅಕೇಶಿಯಾಗಳದ್ದೇ ಕಾರುಬಾರು. ಇದ್ದ ನೀರಿನಂಶವನ್ನು ಹೀರಿಕೊಂಡು ಮಣ್ಣಿನ ಜೀವೋತ್ಪಾದಕ ಗುಣವನ್ನೆಲ್ಲಾ ಹೀರಿ ಬರಡಾಗಿಸಿ ತಾವು ಮಾತ್ರ ಬದುಕುವ ಈ ರಬ್ಬರ್, ಅಕೇಶಿಯಾಗಳು ಇಡೀ ಜೀವಸಂಕುಲವನ್ನೇ ನಿಧಾನವಾಗಿ ಆಪೋಶನಗೈಯ್ಯುತ್ತಿರುವುದು ಮಾನವನ ಗಣನೆಗೆ ಬಾರದಿರುವುದು ದುರಂತ.
            ಮಲೆನಾಡಿನಲ್ಲಿ ಗುಡ್ಡದಿಂದ ಇಳಿದು ಬರುವ ಶುದ್ಧ ಸ್ಫಟಿಕ ಅಬ್ಬಿಯ ನೀರನ್ನೇ ಬಳಸುತ್ತಿದ್ದಿದ್ದು ತಿಳಿದಿರಬಹುದು. ಆದರೆ ಅಂತಹ ಚಿತ್ರಣ ಇಂದು ಮರೆಯಾಗಿದೆ. ಬಯಲು ಪ್ರದೇಶಗಳಲ್ಲಿ ಕೆರೆಗಳು ಬತ್ತಿ ಹೋಗುತ್ತಿವೆ. ಕಾರಣವೇನು? ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವ ಧಾರಣಾಶಕ್ತಿ ಭೂಮಿಯಲ್ಲಿ ಕುಸಿದಿದೆ. ಮಳೆಗೆ ಮೈಯೊಡ್ಡಿ ನಿಲ್ಲುತ್ತಿದ್ದ ಬಂಡೆಗಳು ಪುಡಿಯಾಗಿ ರಸ್ತೆಗಳಿಗೋ, ಕಟ್ಟಡಗಳಿಗೋ ಬಳಕೆಯಾಗುತ್ತವೆ. ಇದ್ದ ಮರಗಳನ್ನು ಕಡಿದುದರ ಪರಿಣಾಮ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಗುಡ್ಡಗಳಿಗೆ ಇಲ್ಲವಾಗಿದೆ. ಒರತೆಗಳ ಮೂಲವಾಗಿದ್ದ ಬೆಟ್ಟಗಳೂ ಹಣದಾಸೆಗೆ ಬಟ್ಟಬಯಲಾಗುತ್ತಿವೆ. ಕಾಂಕ್ರೀಟಿಕರಣದ ನಡುವೆ ನೀರು ಇಂಗುವುದು ಹೇಗೆ? ನೀರಿನ, ಭೂಮಿಯ ಒಟ್ಟಾರೆ ಪರಿಸರದ ನಿರ್ವಹಣೆಯ ಕೊರತೆ, ನಿರ್ಲಕ್ಷ್ಯ ಪಾರಂಪರಿಕ ವ್ಯವಸ್ಥೆಯೊಂದನ್ನೇ ನಾಶ ಮಾಡಿ, ನಿಸರ್ಗದತ್ತ ಸಂಪನ್ಮೂಲಗಳನ್ನು ಕಸಿದುಕೊಂಡು, ಕೃಷಿ ಬದುಕು ಡೋಲಾಯಮಾನವಾಗಿದೆ. ಈ ತಪ್ಪಿರುವ ನಿಸರ್ಗ ಕ್ರಮ ಕೇವಲ ಮಲೆನಾಡು, ಬಯಲುಸೀಮೆ ಒಳಗೊಂಡಿರುವ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರಭಾರತದ್ದೂ, ಉತ್ತರವನ್ನು ಪೊರೆಯುತ್ತಿರುವ ಭೌಮಿಕ-ಜೈವಿಕ-ಆಧ್ಯಾತ್ಮಿಕ ವಿಸ್ಮಯಗಳನ್ನೊಳಗೊಂಡ ಹಿಮಾಲಯದ್ದೂ ಇದೇ ಪರಿಸ್ಥಿತಿ!
               ಶತಮಾನದ ಅತ್ಯಂತ ಭೀಕರ ದುರಂತವಾದ ಉತ್ತರಾಖಂಡದ ಮೇಘಸ್ಫೋಟ ಸಂಭವಿಸಿ ಒಂದು ವರ್ಷ ಕಳೆದಿದೆ. ನಾಲ್ಕು ದಿನಗಳ ಪರ್ಯಂತ ನಡೆದ ದುರಂತದಿಂದ ತತ್ತರಿಸಿದ ರಾಜ್ಯಕ್ಕೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಅನಾಹುತದ ಪ್ರಮಾಣವನ್ನು ಎಷ್ಟಿರಬಹುದು. ಕುಂಭದ್ರೋಣ ಮಳೆಯೊಂದಿಗೆ ಹಿಮಪಾತವೂ ಸೇರಿ ಮಂದಾಕಿನಿ, ಅಲಕಾನಂದಗಳು ರೌದ್ರರೂಪ ತಾಳಿದವು. ಯಾತ್ರಿಕರು, ರಸ್ತೆ, ಸೇತುವೆ, ಕಟ್ಟಡ, ವಾಹನಗಳು, ವಿದ್ಯುತ್ ಸ್ಥಾವರಗಳು... ಎಲ್ಲವೂ ನಿರ್ನಾಮವಾದವು. ಹಿಮಾಲಯದ ತಪ್ಪಲಿನ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಲಕ್ಷಾಂತರ ಮಂದಿಯನ್ನು ಸೇನೆ, ಗುಜರಾತ್ ಸರಕಾರ, ರಾ.ಸ್ವ.ಸಂ.ದ ಸದಸ್ಯರು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು. ಸುಮಾರು 6,000ಕ್ಕೂ ಹೆಚ್ಚು ಜನ ಮರಣವನ್ನಪ್ಪಿದ್ದರೆ, ಉತ್ತರಾಖಂಡ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನ ನಿರಾಶ್ರಿತರಾಗಿದ್ದರು. ಅಂತಹ ಮೇಘಸ್ಫೋಟ ಅಷ್ಟು ಪ್ರಮಾಣದಲ್ಲಲ್ಲದಿದ್ದರೂ ಈ ಬಾರಿ ಮತ್ತೆ ಸಂಭವಿಸಿದೆ. ಧಾರಾಕಾರ ವರ್ಷಧಾರೆ, ಹಿಮಪಾತ, ಭೂಕುಸಿತದಿಂದಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ವೈಪರೀತ್ಯಗಳಿಂದ ಕೆಲವು ದಿನಗಳ ಪರ್ಯಂತ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಈಗಷ್ಟೇ ಆರಂಭಗೊಂಡಿದೆ.
               ಈ ರೀತಿಯಾಗಿ ಒಮ್ಮಿಂದೊಮ್ಮೆಲೇ ಪ್ರಕೃತಿ ಮುನಿಯಲು ಕಾರಣವೇನು ಎಂದು ಯೋಚಿಸತೊಡಗಿದರೆ ಕಾಣಿಸತೊಡಗುವುದು ಮತ್ತದೇ ಮಾನವ ಅತಿಕ್ರಮಣ. ಹೆಚ್ಚುತ್ತಿರುವ ಅಣಿಕಟ್ಟು, ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯ, ಹೋಟೆಲ್, ವಸತಿ ಗೃಹಗಳು ಪರಿಸರಕ್ಕೆ ಅಪಾರ ಧಕ್ಕೆ ಉಂಟುಮಾಡಿದುದೇ ಈ ದುರಂತಕ್ಕೆ ಕಾರಣವೆಂದು ಪರಿಸರ-ಭೂ ವಿಜ್ಞಾನಿಗಳ ವರದಿ ಹೇಳುತ್ತಿದೆ. ಮೇಘ ಸ್ಫೋಟದಿಂದ ಭೂಮಿಗೆ ಧುಮುಕುವ ನೀರು, ಅದರ ಹರಿವು ಮತ್ತು ಅದರಿಂದಾಗುವ ಹಾನಿಯ ಮಟ್ಟವನ್ನು ಕಡಿಮೆ ಮಾಡುವುದು ಪರ್ವತಗಳಿಂದ ಮಾತ್ರ ಸಾಧ್ಯ. ಮಂದಾಕಿನಿ ನದಿಗೆ ಮೂಲ ನೀರು ಬರುವುದು ಚೌರಾಬಾರಿ ಮತ್ತು ಅದರೊಂದಿಗಿನ ಅಗಣಿತ ಹಿಮಜಲ ಬುಗ್ಗೆಗಳಿಂದ. ಅವೆಲ್ಲಾ ವೃತ್ತಾಕಾರದಲ್ಲಿ ಹರಿದು ಕೆಳಗಿನ ಕೇದಾರ ನಗರವನ್ನು ಬಳಸಿ ಹರಿಯುತ್ತವೆ. ಈ ಸರೋವರಗಳಲ್ಲಿ ಮಂಜಿನ ಸವಕಳಿ ಸಹಜ. ಹಿಮಾಲಯ ಶ್ರೇಣಿಯಲ್ಲಿನ ಕಟ್ಟಡ-ಕಾಮಗಾರಿ-ಜನ ದಟ್ಟಣೆ ಮೇಲ್ಪದರದಲ್ಲಿ ಹಿಮ ಕುಸಿಯುವಂತೆ ಮಾಡಿ ಈ ಸ್ಥಳದಲ್ಲಿರುವ ನದಿಯ ಒತ್ತಡವನ್ನು ಹೆಚ್ಚಿಸುತ್ತಿದೆ. ಅಲ್ಲದೆ ಕೇದಾರ ನಾಥದ ಹಿಂಭಾಗದಲ್ಲಿರುವ ಬಟ್ಟಲಾಕಾರದ ಸರೋವರವು, ಕಣಿವೆಯಲ್ಲಿ ಚಂಡ ಮಾರುತದ ಅಲೆಗಳನ್ನು ಉಂಟುಮಾಡುವುದು. ಸರ್ಕಾರ ಇದಾವುದನ್ನೂ ಅರಿಯದೆ ಸಾಲುಸಾಲು ಜಲವಿದ್ಯುತ್ ಯೋಜನೆಗಳ ಕಾಮಗಾರಿ ಆರಂಭಿಸಿದ್ದು ಸ್ವಾಭಾವಿಕವಾಗಿಯೇ ಅಲ್ಲಿನ ಭೌಗೋಳಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿತು. ಮಂದಾಕಿನಿ ಕಣಿವೆಯ ಇಳಿಜಾರು ಪ್ರದೇಶಗಳಲ್ಲಿ ಬೆಳೆಯುವ ಹುಲ್ಲು, ಪೈನ್ ಮತ್ತು ಬರ್ಚ್ ಮರಗಳು ಹಿಮದ ಕುಸಿಯುವಿಕೆಯನ್ನು ತಡೆಯಲು ಸಶಕ್ತವಾಗಿಲ್ಲ.  ಇದ್ದ ನೈಸರ್ಗಿಕ ತಡೆಗೋಡೆಗಳು ಜಲವಿದ್ಯುತ್ ಕಾಮಗಾರಿಗೋ, ಕಟ್ಟಡಗಳ ನಿರ್ಮಾಣಕ್ಕೋ ಬಳಕೆಯಾಗಿ ಸತ್ವಹೀನವಾಗಿವೆ. ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಮಿತಿಯಲ್ಲಿರಬೇಕು. ಪರಿಸರ ಹಾನಿ ನಿಲ್ಲಿಸದೇ ಇದ್ದರೆ ಇಂತಹ ಘಟನೆಗಳು ಆಗುತ್ತಲೇ ಇರುತ್ತವೆ.
               ಹಿಮಾಲಯದ ಶಿಖರಗಳು, ನದಿಗಳು ಹಾಗೂ ಅವುಗಳ ಪಾವಿತ್ರ್ಯತೆ ಉಳಿಯಬೇಕಾದರೆ ಪಾದಚಾರಿ ಯಾತ್ರೆಯೇ ಸಮರ್ಪಕವಾದದ್ದು. ಪರ್ವತಗಳನ್ನು ಅಗೆದಗೆದು ಸಡಿಲಗೊಳಿಸಿ ರಸ್ತೆಗಳನ್ನು ಮಾಡಿದ್ದುದರಿಂದ, ದುರಾಸೆಯಿಂದ ಕಾಡುಗಳನ್ನು ಕಡಿದು ಕಟ್ಟಡ ಕಾಮಗಾರಿ ಮಾಡಿದ್ದುದರಿಂದ ಅಲ್ಲಿ ದುರಂತಗಳು ಸಂಭವಿಸುತ್ತಲೇ ಇವೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ದೇಶದ ರಕ್ಷಣೆಯ ದೃಷ್ಟಿಯಿಂದ ಹಿಮಾಲಯದ ತುದಿಗಳಲ್ಲಿ ರಸ್ತೆ-ರೈಲುಮಾರ್ಗಗಳನ್ನು ಮಾಡಲೇ ಬೇಕಾದ ಅನಿವಾರ್ಯತೆಗೆ ದೇಶ ಸಿಲುಕಿದೆ. ಟಿಬೆಟನ್ನು ಆಕ್ರಮಿಸಿದ ಚೀನೀಯರು ಹಿಮಾಲಯದ ಭಾಗಗಳಲ್ಲಿ ರಸ್ತೆ-ರೈಲು ಮಾರ್ಗಗಳನ್ನು ಮಾಡಿ, ಅಣು ಪರೀಕ್ಷೆಗೂ ಆ ನೆಲವನ್ನು ಬಳಸಿಕೊಂಡು ದೇಶದ ಚಿಂತೆಯನ್ನು ಹೆಚ್ಚಿಸಿರುವುದರಿಂದ ಕನಿಷ್ಟ ಈ ಸೌಲಭ್ಯಗಳನ್ನು ಒದಗಿಸಲೇಬೇಕಾಗುತ್ತದೆ. ಆದರೆ ಉಳಿದ ಅನಗತ್ಯ ಕಾಮಗಾರಿಗಳಿಗೆ ಕಡಿವಾಣಹಾಕಲೇಬೇಕು. ಆಗ ಹಿಮಾಲಯ ಹಿಮಾಲಯವಾಗಿಯೇ ಉಳಿಯುತ್ತದೆ. ಪ್ರಕೃತಿಯೆಂಬ ಆಲಯವನ್ನು ಕೆಡಿಸದೇ ಕಾಪಾಡೋಣ. ಆಗ ಅದು ನಮ್ಮನ್ನು ಪೊರೆಯುತ್ತದೆ.