ಪುಟಗಳು

ಸೋಮವಾರ, ಫೆಬ್ರವರಿ 29, 2016

ಮಹಾಭಾರತ

ಕುರುಕ್ಷೇತ್ರದ ಯುದ್ಧವು ಜರುಗಿರುವುದು 18 ದಿನ ಎನ್ನುವುದು ನಿಜ. ಆದರೆ ಆ ಹದಿನೆಂಟು ದಿನಗಳು ನಿರಂತರ ಕಾಲಗಣನೆಯದಲ್ಲ. ಪ್ರಾರಂಭಗೊಂಡ ಯುದ್ಧವು ಅಂತ್ಯಗೊಳ್ಳುವಾಗ 32 ದಿನಗಳಾಗಿದ್ದವು. ಭೀಷ್ಮನ ಸೇನಾಧಿಪತ್ಯದೊಂದಿಗೆ ಮಾರ್ಗಶಿರ ಶುಕ್ಲ ಪ್ರತಿಪದೆಯಂದು ಜ್ಯೇಷ್ಠಾ ನಕ್ಷತ್ರದಲ್ಲಿ ಪ್ರಾರಂಭಗೊಂಡ ಆ ಯುದ್ಧವು ಅಶ್ವಿನಿನಕ್ಷತ್ರವಿರುವ ದಶಮಿಯ ತನಕ ಅಂದರೆ ಹತ್ತು ದಿನಗಳ ಕಾಲ ನಡೆಯಿತು. ಆನಂತರ ಮುಂದಿನ ಹತ್ತು ದಿನಗಳ ಕಾಲ ಯುದ್ಧ ವಿರಾಮವಾಗಿತ್ತು. ಅದೇ ಕೃಷ್ಣಪಕ್ಷದ ಷಷ್ಠಿಯಿಂದ ದಶಮಿಯವರೆಗಿನ ಐದು ದಿನಗಳ ಕಾಲ ದ್ರೋಣಾಚಾರ್ಯರ ಸೇನಾಧಿಪತ್ಯದಲ್ಲಿ ಯುದ್ಧ ಜರುಗಿ ಅವರ ವಧೆಯಾಗಿ ಎರಡು ದಿನಗಳ ಕಾಲ ಯುದ್ಧ ವಿರಾಮಗೊಂಡಿತ್ತು. ಪುನಃ ಆ ಚತುರ್ದಶಿ, ಅಮಾವಾಸ್ಯೆ ಈ ಎರಡೇ ದಿನ ಕರ್ಣನ ಸೇನಾಧಿಪತ್ಯದಲ್ಲಿ ಯುದ್ಧ ಜರುಗಿ ಕರ್ಣನ ವಧೆಯೂ ಆಯಿತು. ಮರುದಿನ ಪುಷ್ಯಮಾಸದ ಪ್ರತಿಪದೆಯಂದು ಒಂದು ದಿನ ಮಾತ್ರ ಯುದ್ಧಕ್ಕೆ ವಿರಾಮ. ಆ ಮರುದಿನ ಶಲ್ಯನ ಸೇನಾಧಿಪತ್ಯದಲ್ಲಿ ಅರ್ಧ ದಿನ ಮಾತ್ರ ಯುದ್ಧ. ಶಲ್ಯನ ವಧೆಯೂ ಆಯಿತು. ಯುದ್ಧ ನಿಲ್ಲಲಿಲ್ಲ. ಅಡಗಿದ್ದ ದುರ್ಯೋಧನನನ್ನು ಶೋಧಿಸಿದ ಅದೇ ದಿನವೇ ಭೀಮ, ಕೌರವರ ದ್ವಂದ್ವ ಗದಾಯುದ್ಧ. ಕೌರವನ ಮರಣದೊಂದಿಗೆ ಇಡೀ ಕುರುಕ್ಷೇತ್ರ ಸಂಗ್ರಾಮ ಅಂತಿಮಗೊಂಡಿತ್ತು. 32 ದಿನ ವ್ಯಾಪಿಸಿಕೊಂಡ ಸಂಗ್ರಾಮವು ಹೀಗೆ ಕೊನೆಗೊಂಡಿತು. ಅಂದರೆ ಪ್ರತ್ಯಕ್ಷವಾಗಿ ಯುದ್ಧ ಜರುಗಿದುದು 18 ದಿನಗಳ ಕಾಲವೆನ್ನುವುದು ಸುಸ್ಪಷ್ಟವಾಗಿದೆ.

ಸ್ವಾಮಿ ವಿವೇಕಾನಂದ

ಆಧುನಿಕ ಶಿಕ್ಷಣ ಪಡೆದ ವ್ಯಕ್ತಿ: "ವೇದಗಳಲ್ಲಿ ಕೆಲಸಕ್ಕೆ ಬಾರದ ಬೋಧನೆಗಳೇ ತುಂಬಿಕೊಂಡಿವೆ."

ಸ್ವಾಮಿ ವಿವೇಕಾನಂದ: "ನಿಮ್ಮ ಪೂರ್ವಿಕರನ್ನು ವಿರೋಧಿಸಲು ನಿಮಗೆ ಎಷ್ಟು ಧೈರ್ಯ? ಒಂದು ಸ್ವಲ್ಪ ವಿದ್ಯೆ ನಿಮ್ಮ ತಲೆಯನ್ನೇ ತಿರುಗಿಸಿಬಿಟ್ಟಿದೆ. ಋಷಿಗಳು ಹೇಳಿರುವುದನ್ನು ನೀವು ಪರೀಕ್ಷೆ ಮಾಡಿ ನೋಡಿರುವಿರಾ? ಕನಿಷ್ಟ ಅವನ್ನು ಓದಿಯಾದರೂ ಇರುವಿರಾ? ಋಷಿಗಳು ನಿಮಗೊಂದು ಸವಾಲನ್ನು ಹಾಕಿದ್ದಾರೆ. ಧೈರ್ಯವಿದ್ದರೆ ಸ್ವೀಕರಿಸಿ"

ವಿವೇಕಾನಂದರ ಈ ಉತ್ತರ ಸರ್ವಕಾಲಕ್ಕೂ ಅನ್ವಯವಾಗುವಂತಹದ್ದು. ಯಾವುದನ್ನೂ ಓದದೆ, ಪರೀಕ್ಷೆ ಮಾಡದೆ ತಮಗೆ ತಿಳಿದದ್ದೇ ಸರಿ ಎಂದು ವಾದಿಸುವ ಪ್ರತಿಯೊಬ್ಬ ಮೂಢನೂ ಕೇಳಬೇಕಾದ, ಅರಿಯಬೇಕಾದ, ಅರ್ಥೈಸಿಕೊಳ್ಳಬೇಕಾದ ಉತ್ತರ ಇದು.

ಬುಧವಾರ, ಫೆಬ್ರವರಿ 24, 2016

ಸೋಲು-ಗೆಲುವಿನ ಪರಿಕಲ್ಪನೆಯನ್ನೇ ಬದಲಾಯಿಸಿದ ಪಥದರ್ಶಕ ನಡೆ

ಸೋಲು-ಗೆಲುವಿನ ಪರಿಕಲ್ಪನೆಯನ್ನೇ ಬದಲಾಯಿಸಿದ ಪಥದರ್ಶಕ ನಡೆ


              ಸ್ವಯಂ ಮನುವೇ ನಿರ್ಮಿಸಿದ ನಗರ, ಗೋ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಚಕ್ರವರ್ತಿ ದಿಲೀಪ "ವಿಶ್ವಜಿತ್" ಯಾಗ ಮಾಡಿದ ತಾಣ, ಇಕ್ಷ್ವಾಕು ವಂಶವನ್ನೇ ತನ್ನ ಹೆಸರಿನಿಂದ ಕರೆವಂತಹ ಆಡಳಿತ ನೀಡಿದ ಶ್ರೇಷ್ಠ, ರಾಜಾ ರಘುವಿನ ರಾಜಧಾನಿ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನಾಳಿದ ಭೂಮಿ, ಬ್ರಹ್ಮರ್ಷಿ ವಸಿಷ್ಠರೇ ನೆಲೆ ನಿಂತ ಪುಣ್ಯ ಭೂಮಿ. ಮಾನಸ ಪುತ್ರಿ ಸರಯೂ ಬಳಸಿ ಹರಿಯುತ್ತಿರುವ ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿಪ್ರಿಯ ಅಯೋಧ್ಯೆಯಲ್ಲೂ ದುಃಖ ಮಡುಗಟ್ಟಿದೆ. ಪಾಮರನಿಂದ ಹಿಡಿದು ಪಂಡಿತನವರೆಗೂ, ಆಸ್ತಿಕ-ನಾಸ್ತಿಕ, ಹಿರಿ-ಕಿರಿಯ, ಗುರು-ಶಿಷ್ಯ ಭೇದವಿಲ್ಲದೆ ಸರ್ವರೂ ದು:ಖಿಸುತ್ತಿದ್ದಾರೆ... ಒಬ್ಬ, ರಾಮನನ್ನು ಹೊರತುಪಡಿಸಿ! ಹೌದು ಅವನು ಸ್ಥಿತಪ್ರಜ್ಞ.

            ಸೀತಾ ರಾಮರ ಪರಿಣಯ ಉತ್ಸವ ಆಗಷ್ಟೇ ಮುಗಿದಿತ್ತು. ರಾಮನ ಯುವರಾಜ ಪಟ್ಟಾಭಿಷೇಕಕ್ಕೆ ಅಯೋಧ್ಯೆ ಅಣಿಯಾಗುತ್ತಿತ್ತು. ಎಲ್ಲಿದ್ದಳೋ ಆ ಮಂಥರೆ. ದಶರಥನ ಮೆಚ್ಚಿನ ಮಡದಿ ಸುಂದರಿ ಕೈಕೆಯ ಕಿವಿಯೂದಿದಳು. ಈ ಕಿವಿಯೂದುವವರು ಸರ್ವ ಕಾಲಕ್ಕೂ ಇರುವವರೇ. ಸಾರ್ವಜನಿಕ ಜೀವನದಲ್ಲಿ, ಒಂದು ಸ್ಥಾನದಲ್ಲಿ ಇರುವವರು ಮಾತ್ರವಲ್ಲ ಸಾಮಾನ್ಯನೂ ಕೂಡಾ ತನ್ನ ಕಿವಿ ಹಿತ್ತಾಳೆಯಾಗದಂತೆ ನೋಡಿಕೊಂಡರೆ ಅವರಿಗೂ ಕ್ಷೇಮ, ಸಮಾಜಕ್ಕೂ ನೆಮ್ಮದಿ. ಈ ಕಿವಿಯೂದುವಿಕೆಯಿಂದಲೇ ಅದೆಷ್ಟು ಸಂಸಾರಗಳು ಒಡೆದಿಲ್ಲ? ಅದೆಷ್ಟು ಸಂಬಂಧಗಳು ಹಾಳಾಗಿಲ್ಲ? ಕಿವಿಯೂದುವಿಕೆಯಿಂದಲೇ ವಿಭಕ್ತವಾದ ಕುಟುಂಬಗಳೆಷ್ಟಿಲ್ಲ? ಕೈಕೆ ಮೊದಲು ಜಗ್ಗಲಿಲ್ಲ. ಮಂಥರೆ ಬಿಡಬೇಕಲ್ಲ. ಕೈಕೆಯನ್ನು ಕೈಯಲ್ಲಿ ಹಿಡಿದಾಡಿಸಿದವಳು ಆಕೆ. ದಶರಥ ಹಿಂದೆ ವಾಗ್ದಾನ ಮಾಡಿದ್ದ ವರಗಳನ್ನು ಉಪಯೋಗಿಸುವಂತೆ ಕೈಕೆಯ ಮನವೊಲಿಸಿದಳು. ಕೈಕೆ ಶೋಕಾಗಾರವನ್ನು ಹೊಕ್ಕಳು. ಮಲಿನ ವಸನವನ್ನುಟ್ಟಳು. ಅನ್ನ-ಆಹಾರವನ್ನು ತ್ಯಜಿಸಿದಳು. ಹಠ...ಅದರಲ್ಲೂ ಪ್ರಿಯ ಪತ್ನಿಯ ಹಠಕ್ಕೆ ಕರಗಿ ಹೋಗಿ ಕಾರಣ ಕೇಳಿದ ದಶರಥನ ಎದೆ ಬಿರಿಯಿತು. ಒಂದೆಡೆ ಪ್ರಿಯ ಪತ್ನಿಗೆ ಕೊಟ್ಟ ಮಾತನ್ನು ಉಳಿಸಬೇಕಾದ ಕರ್ತವ್ಯ. ಇನ್ನೊಂದೆಡೆ ಪ್ರಿಯ ಪುತ್ರನ ವಿಯೋಗದ ದುಃಖ.  ಪರಿಣಾಮ… ಭರತನಿಗೆ ಪಟ್ಟ. ರಾಮನಿಗೆ ವನವಾಸ. ಅಯೋಧ್ಯೆಯ ದು:ಖಕ್ಕೆ ಕಾರಣ ಇದು.

            ದುಃಖ ಕೇವಲ ರಾಮನ ಪಟ್ಟಾಭಿಷೇಕವಾಗುವುದಿಲ್ಲ ಎಂಬ ಕಾರಣಕ್ಕೆ ಮಾತ್ರವಲ್ಲ. ಸೂಕ್ಷ್ಮವಾಗಿ ನೋಡಿದರೆ ಅದು ಅಗಲಿಕೆಯ ದುಃಖ. ತಂದೆ ತಾಯಂದಿರ ವಾತ್ಸಲ್ಯದ ಪುತ್ರನಾಗಿ, ಸದಾ ತನ್ನ ನೆರಳಾಗಿರುವ ಅನುಜರಿಗೆ ಹಿರಿಯಣ್ಣನಾಗಿ, ಗೆಳೆಯರಿಗೆ ನಲ್ಮೆಯ ಸಖನಾಗಿ, ಮಡದಿ ಸೀತೆಯ ಪ್ರೇಮದ ಪತಿಯಾಗಿ, ಗುರು ಹಿರಿಯರಿಗೆ ವಿಧೇಯನಾಗಿ, ಹಿರಿಕಿರಿಯ ಬಡವ-ಬಲ್ಲಿದ ಭೇದವಿಲ್ಲದೆ ಎಲ್ಲರಿಗೂ ಗೌರವ ತೋರುತ್ತಾ ಎಲ್ಲರೊಂದಿಗೂ ಒಡನಾಡುತ್ತಾ ಎಲ್ಲರ ಮನೆಯ ಮಗನಂತೆ ಬೆಳೆದ ರಾಮಚಂದ್ರನ ಅಗಲುವಿಕೆಯೆಂದರೆ ಊಹಿಸಲು ಸಾಧ್ಯವೇ? ದುಃಖಕ್ಕೆ ಕಾರಣ ಕೈಕೆ ದಶರಥರೇ ಆದರೂ ದುಃಖವೂ ಅವರಿಗೇ! ಕಂಡ ದುಃಸ್ವಪ್ನಗಳಿಂದ ಕಂಗೆಟ್ಟು ಲಗುಬಗನೇ ಪಟ್ಟಾಭೀಷೇಕ ಮುಗಿಸಿ ತನ್ನ ಕರ್ತವ್ಯವನ್ನು ಮುಗಿಸಿಯೇ ತೀರುತ್ತೇನೆ ಎಂದು ಹೊರಟ ದಶರಥ ಕೊಟ್ಟ ಮಾತಿಗೆ ಕಟ್ಟು ಬಿದ್ದು ವೃದ್ದಾಪ್ಯದ ಕಾಲದಲ್ಲಿ ಪುತ್ರವಿಯೋಗದ ಅತೀವ ದುಃಖಕ್ಕೆ ಒಳಗಾಗಬೇಕಾದುದು ವಿಪರ್ಯಾಸವೇ ಸರಿ. ಪುತ್ರ ವಾತ್ಸಲ್ಯ ಆತನನ್ನು "ನನ್ನನ್ನು ಕೊಂದು ಪಟ್ಟವೇರು" ಎನ್ನುವ ಹತಾಶೆಗೆ ಮುಟ್ಟಿಸಿತು! ಮಾತಿಗೆ ತಪ್ಪಬಾರದೆಂಬ ವಂಶಗೌರವದ ಪ್ರಜ್ಞೆ, ಪ್ರಿಯ ಪುತ್ರನ ಅಗಲುವಿಕೆಯ ತಡೆಯಲಾಗದ ನೋವಿನ ನಡುವಿನ ತೊಳಲಾಟ ಅವನದ್ದು. ಕೈಕೆಯದ್ದೂ ಪುತ್ರ ವಾತ್ಸಲ್ಯವೇ. ರಾಮನಿಗೆ ತನ್ನ ಮಗನಿಗಿಂತಲೂ ಹೆಚ್ಚು ವಾತ್ಸಲ್ಯ ತೋರಿಸುತ್ತಿದ್ದ ಆಕೆ ಮಂಥರೆಯ ಮಾತಿಗೆ ಮರುಳಾಗಿ ಕುರುಡು ಪುತ್ರ ಪ್ರೇಮಕ್ಕೊಳಗಾದರೂ ಆ ಕ್ಷಣದ ಅವಳ ಭಾವ ಶಾಶ್ವತವಲ್ಲ. ರಾಮನ ಅಗಲುವಿಕೆ ಆಕೆಗೂ ದುಃಖ ತಂದೊಡ್ಡುವಂತಹುದ್ದೇ! ಆದರೆ ತುಸು ತಡವಾಗಿ. ಈ ದುಃಖವೆನ್ನುವುದು ರಾಮನನ್ನೂ ಬಿಟ್ಟಿರಲಿಲ್ಲ. ಆದರೆ ಆತನಿಗೆ ವನಗಮನವು ದುಃಖಕಾರಕವಲ್ಲ. ತನ್ನ ಪ್ರೀತಿಪಾತ್ರರನ್ನು ಬಿಟ್ಟು ಹೋಗಬೇಕೆನ್ನುವುದೂ ಅಲ್ಲ. ಅವರೆಲ್ಲರ ದುಃಖವಿದೆಯಲ್ಲ ಅದನ್ನಾತ ಹೇಗೆ ಸಹಿಸಿಯಾನು? ತಮ್ಮ ಲಕ್ಷ್ಮಣ ಒಡನೆ ಬರುವೆಯೆಂದಾಗ ಲಕ್ಷ್ಮಣನನ್ನು ಅಗಲಿ ಇರಬೇಕಾದ ಊರ್ಮಿಳೆಯ ದುಃಖವನ್ನು ಕಂಡು ಆತ ಕರಗದೇ ಇದ್ದಾನೆಯೇ. ತನ್ನ ವಿಯೋಗದಿಂದ ಮಾತಾಪಿತರಿಗಾಗುವ ದುಃಖವನ್ನು ಕಂಡು ರಾಮನ ಅಂತಃಕರಣ ಮಿಡಿಯದೇ. ವಸಿಷ್ಠರು ಉದ್ವೇಗಕ್ಕೊಳಗಾದಾಗ, ರಾಜಕುಮಾರಿ ಸೀತೆ ನಾರುಡೆಯುಟ್ಟು ತನ್ನೊಡನೆ ಹೊರಟಾಗ, ಅನುಜ ಲಕ್ಷ್ಮಣ ಎಲ್ಲೆಲ್ಲೂ ನಿನ್ನನ್ನೇ ನೆರಳಿನಂತೆಯೇ ಹಿಂಬಾಲಿಸುವೆ ಎಂದಾಗ ರಾಮನ ಹೃದಯದ ವೇದನೆಯೇನು ಕಡಿಮೆಯೇ? ಪ್ರಜೆಗಳ ಕಣ್ಣೀರಿನೊಡನೆ ಅವನ ಅಶ್ರುಬಿಂದುಗಳು ಬೆರೆಯದೇ?

             "ವ್ಯಸನೇಷು ಮನುಷ್ಯಾಣಾಂ ಭೃಷಂಭವತಿ ದುಃಖಿತಃ":- ಇನ್ನೊಬ್ಬನ ಸಂಕಟವನ್ನು ಕಂಡಾಗ ತೀವ್ರವಾದ ದುಃಖಕ್ಕೆ ಒಳಗಾಗುವವನು" ಎಂದು ರಾಮನನ್ನು ವರ್ಣಿಸಿದ್ದಾನೆ ಮಹರ್ಷಿ ವಾಲ್ಮೀಕಿ. ಅಂತಹವನ ಅಗಲುವಿಕೆ ಪ್ರಜೆಗಳಿಗೆ ಸಹಿಸಲು ಸಾಧ್ಯವೇ?  "ಪ್ರಜಾನಾಂ ಚ ಹಿತೇ ರತಃ" ರಾಮನನ್ನು "ದೂರ್ವಾದಲ ಶ್ಯಾಮ" ನೆಂದಿದ್ದಾನೆ ವಾಲ್ಮೀಕಿ! ದೂರ್ವೆ ಎಂಬ ಮಂಗಲ ಸಸ್ಯ ಒಂಟಿಯಾಗಿ ಬೆಳೆಯುವುದೇ ಇಲ್ಲ. ಅದು ಗುಂಪು ಗುಂಪಾಗಿಯೇ ಬೆಳೆಯುವುದು. ಮಂಗಲಪುರುಷ  ಶ್ರೀರಾಮನೂ ಹಾಗೆಯೇ. ಸಮಷ್ಠಿಯ ಹಿತವನ್ನಾತ ಬಯಸುತ್ತಿದ್ದ. ಹಾಗಾಗಿ ಸರ್ವರಿಗೂ ದುಃಖ ಸಹಜವೇ. ಆದರೆ ರಾಮ ಈ ಸಂದರ್ಭದಲ್ಲಿ ಅವರೆಲ್ಲರಿಗೂ ದುಃಖವನ್ನೇ ಯಾಕೆ ಕೊಟ್ಟ? ದಶರಥನ ಹೃದಯ ರಾಮನ ಪರವಾಗಿತ್ತು. ಈ ಅನ್ಯಾಯದ ವಿರುದ್ಧ ಲಕ್ಷ್ಮಣ ಸಿಡಿದೆದ್ದಿದ್ದ. ಪ್ರಜೆಗಳೆಲ್ಲರೂ ರಾಮನ ಪರವಾಗಿದ್ದರು. ಮಂತ್ರಿ ಮಾಗಧ ಸೇನೆಯೆಲ್ಲವೂ ರಾಮ ಪಟ್ಟವೇರುವುದನ್ನೇ ಬಯಸಿತ್ತು. ನಿರ್ವಿಕಾರ ಸ್ವರೂಪಿ ಬ್ರಹ್ಮರ್ಷಿ ವಸಿಷ್ಠರೇ ಉದ್ವೇಗಕ್ಕೊಳಗಾಗಿದ್ದರು. ಎಲ್ಲರೂ ರಾಮನ ಪರವಾಗಿದ್ದರು. ರಾಮನೊಬ್ಬನೇ...ಅಲ್ಲಲ್ಲಾ "ರಾಮನೇ" ಕೈಕೆಯ ಪರವಾಗಿ ನಿಂತ!

           ಯಾವುದೇ ಕಾಲದಲ್ಲಾಗಲೀ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿ ಪ್ರಯತ್ನಿಸುತ್ತಲೇ ಇರುತ್ತಾನೆ. ಪ್ರತಿಯೊಬ್ಬನೂ ತನಗಾಗಬಹುದಾದ ಲಾಭದ ಬಗ್ಗೆಯೇ ಚಿಂತಿಸುತ್ತಾನೆ. ಅಧಿಕಾರದ ವಿಚಾರ ಎದುರಾದಾಗ ಎಂತಹವನೂ ಕಟುಕನಂತೆಯೇ ವರ್ತಿಸುತ್ತಾನೆ. ಅಧಿಕಾರಕ್ಕಾಗಿ ತಂದೆಯ ತಲೆ ತೆಗೆದವರೂ ಎಷ್ಟಿಲ್ಲ? ತಮ್ಮಂದಿರ ಶಿರ ಕಡಿದವರಿಗೇನು ಕಡಿಮೆಯೇ. ಔರಂಗಜೇಬನಂತೂ ತನ್ನ ಅಣ್ಣನ ತಲೆಯನ್ನೇ ಬಂಗಾರದ ಹರಿವಾಣದಲ್ಲಿಟ್ಟು ತಾನು ಜೈಲಲ್ಲಿರಿಸಿದ್ದ ತಂದೆಗೆ ಉಡುಗೊರೆಯಾಗಿ ಕಳುಹಿಸಿದ್ದ. ಮೊಘಲರು-ಮುಸಲರ ಗುಣವೇ ಹಾಗೆ, ಅದರಲ್ಲೇನು ವಿಶೇಷವಿಲ್ಲ. ಆದರೆ ಈ ಅಧಿಕಾರದ ದಾಹ ಸಾಮಾನ್ಯ ಜನರನ್ನೂ ಬಿಟ್ಟಿಲ್ಲ. ಹೆಚ್ಚಿನ ಅವಿಭಕ್ತ ಕುಟುಂಬಗಳೆಲ್ಲಾ ಒಡೆದು ಹೋದದ್ದು ಇಂತಹ ಅಧಿಕಾರದ ದಾಹದಿಂದಲೇ, ಅಹಮಿಕೆಯಿಂದಲೇ! ಪ್ರಸಕ್ತ ರಾಜಕಾರಣವಂತೂ ಹೇಸಿಗೆ ಹುಟ್ಟಿಸುವಷ್ಟು ಬದಲಾಗಿದೆ. ಈ ವರ್ಗವೇನಾದರೂ ರಾಮನ ಸ್ಥಾನದಲ್ಲಿರುತ್ತಿದ್ದರೆ ರಘು ವಂಶವೇ ಮೊಘಲರ ವಂಶವಾಗುತ್ತಿತ್ತೇನೋ! ಇದು ಪಕ್ಕಾ ಅಧರ್ಮಿ ಎಂದು ಲೋಕಕ್ಕೆ ತಿಳಿದ ವಿಚಾರ. ಈಗಂತೂ ಇಂತಹವರ ಸಂಖ್ಯೆ ವಿಪರೀತ. ಉಂಡ ಮನೆಗೆ ನೂರು ಬಗೆದು ತಾವು ಮಾಡಿದ್ದೇ ಸರಿ ಎಂದು ಬೊಬ್ಬಿರಿವ ಮಂದಿಗೇನು ಕೊರತೆಯೇ? ತಾಜಾ ಉದಾಹರಣೆಯೇ ಜೆ.ಎನ್.ಯು ವಿವಿಯಲ್ಲಿ ನಡೆದ ಪ್ರಕರಣ. ಎರಡನೇ ವರ್ಗಕ್ಕೆ ಕನಿಷ್ಟ ಅಧಿಕಾರ ದಾಹವಿಲ್ಲದಿದ್ದರೂ ಅದು ತನ್ನನ್ನು ತಾನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಬಯಸುತ್ತದೆ. ಹೇಗೆಂದರೆ ಪಟ್ಟ ಬೇಕಾದರೆ ಭರತನಿಗಿರಲಿ, ಆದರೆ ನಾನು ವನವಾಸ ಮಾಡಲಾರೆ ಎಂಬಂತಹ ಮನಸ್ಥಿತಿ. ಈ ವರ್ಗ ತನಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲೂಬಹುದೂ! ಈ ವರ್ಗದಿಂದ ಸಮಾಜಕ್ಕೇನೂ ಹಾನಿಯಿಲ್ಲ. ಈ ವರ್ಗ ಬಹುಪಾಲು ಎಲ್ಲಾ ಕಾಲದಲ್ಲೂ ಕಂಡು ಬರುತ್ತದೆ. ಆದರೆ ಧರ್ಮ ಬಲು ಸೂಕ್ಷ್ಮವಾದದ್ದು. ಈ ವರ್ಗದ ನಡವಳಿಕೆಯೂ ಧರ್ಮಸಮ್ಮತವಲ್ಲ. ಇಲ್ಲಿ ಇನ್ನೊಂದು ಧರ್ಮ ಸೂಕ್ಷ್ಮವೂ ಇದೆ.  ಹೆಚ್ಚಿನ ಧಾರ್ಮಿಕ/ಸಾಮಾಜಿಕ ಮುಖಂಡರು, ವಿದ್ವಾಂಸರು ಕೆಲವರನ್ನು ತಪ್ಪಾಗಿ ಎರಡನೇ ವರ್ಗಕ್ಕೆ ಸೇರಿಸಿಬಿಡುತ್ತಾರೆ. ಉದಾಹರಣೆಗೆ ಶಿವಾಜಿ, ಸಾವರ್ಕರ್ ಸಹಿತ ಭಾರತದ ಕ್ರಾಂತಿಕಾರಿಗಳನ್ನು ಗಾಂಧಿ ಕಂಡ ಬಗೆ ಈ ತೆರನದ್ದು. ಎರಡನೇ ವರ್ಗ "ಮಾತು" ತಪ್ಪಿದುದರಿಂದ ಧರ್ಮ ಪಾಲಿಸಿಲ್ಲ ಎಂದುದುದು. ಆದರೆ ಕ್ರಾಂತಿಕಾರಿಗಳು ಹಾಗಲ್ಲ, ತಮ್ಮದೆಲ್ಲವನ್ನೂ ತ್ಯಾಗ ಮಾಡಿ ಮಾತೃಭೂಮಿಯ ರಕ್ಷಣೆಗೆ ಮುಂದಾದವರು. ಅಲ್ಲಿ ಮಾತು ತಪ್ಪುವ ನೀತಿ ತಪ್ಪುವ ಪ್ರಮೇಯವೇ ಇಲ್ಲ. ಅಹಿಂಸೆಯೂ ಧರ್ಮದ ಲಕ್ಷಣವೇ. ಆದರೆ ಅಧರ್ಮವನ್ನು ಹೋಗಲಾಡಿಸಲು ಹಿಂಸೆ ಅನಿವಾರ್ಯ. ಈ ಹಿಂಸೆ ನಿಸ್ವಾರ್ಥದ್ದು. ಅದಕ್ಕಾಗಿಯೇ "ಅಹಿಂಸಾ ಪರಮೋ ಧರ್ಮ" ವನ್ನು ಮುಂದುವರಿಸಿ "ಧರ್ಮ ಹಿಂಸಾ ತಥೈವಚಾ" ಎಂದು ನಮ್ಮ ಹಿರಿಯರು ನಿರ್ಣಯಿಸಿದ್ದು. ರಾಮನೇ ಧರ್ಮ ರಕ್ಷಣೆಗಾಗಿ ಯುದ್ಧಕ್ಕಿಳಿಯಲಿಲ್ಲವೇ? ಸ್ವಂತದ ಸುಖಕ್ಕಾಗಿ ಒಬ್ಬರನ್ನು ಕೊಂದರೆ ಅದು ಕೊಲೆ,ಹಿಂಸೆ. ಸಮಾಜದ ಹಿತಕ್ಕಾಗಿ ಒಬ್ಬರನ್ನು ಕೊಂದರೆ ಅದು ವಧೆ, ಸಂಹಾರ! ಅದುವೇ ಧರ್ಮ! ಶಿವಾಜಿ, ಸಾವರ್ಕರ್ ಸಹಿತ ಕ್ರಾಂತಿವೀರರ ಕಾರ್ಯ ಈ ಬಗೆಯದ್ದು. ಅವರನ್ನು ಈ ವರ್ಗಕ್ಕೆ ಗಾಂಧಿಯಂತಹ ಆಷಾಢಭೂತಿಗಳಷ್ಟೇ ಸೇರಿಸಿಯಾರು! ಅಷ್ಟಕ್ಕೂ ಗಾಂಧಿಯನ್ನು ಈ ಎರಡು ವರ್ಗಗಳಲ್ಲಿ ಯಾವುದಕ್ಕೆ ಸೇರಿಸಬಹುದೆಂಬುದೇ ಬಹುದೊಡ್ಡ ಸಮಸ್ಯೆ!

          ಮೂರನೇ ವರ್ಗ...ಅದು ರಾಮನದ್ದು! ಧರ್ಮ ಮಾರ್ಗದ್ದು! ಮನಸ್ಸು ಮಾಡಿದ್ದರೆ ರಾಮ ಅನಾಯಾಸವಾಗಿ ಪಟ್ಟವೇರಬಹುದಿತ್ತು. ಉಳಿದವರಿಗಾದರೋ ಸ್ವತಃ ತಂದೆಯೇ ತನ್ನನ್ನು ಕೊಂದು ಪಟ್ಟವೇರು ಎನ್ನಬೇಕಿರಲಿಲ್ಲ. ಮಾತು ಮುಗಿಯುವುದರೊಳಗೆ ತಂದೆಯ ಶಿರ ಬೇರೆಯಾಗುತ್ತಿತ್ತೋ ಏನೋ. ಕನಲಿದ್ದ ಲಕ್ಷ್ಮಣನಿಗೆ ರಾಮನ ಒಂದು ನಿಟ್ಟುಸಿರಿನ "ಹೂಂಕಾರ" ಸಾಕಾಗುತ್ತಿತ್ತು. ವಸಿಷ್ಠರು ರಾಮನ ಒಂದು ಒಪ್ಪಿಗೆಗೆ ತುದಿಗಾಲಲ್ಲಿ ನಿಂತಿದ್ದರು. ತಾಯಂದಿರ ಪುತ್ರವಾತ್ಸಲ್ಯ, ಬಂಧುಗಳ ಪ್ರೇಮ, ಮಂತ್ರಿ ಮಾಗಧರ ಗೌರವ ರಾಮನನ್ನು ಅನಾಯಾಸವಾಗಿ ಪಟ್ಟದಲ್ಲಿ ಕೂರಿಸುತ್ತಿತ್ತು. ಪ್ರಜೆಗಳ ಅನುರಾಗ ರಾಮನ ದ್ವೇಷಾಸೂಯೆಗಳಿಲ್ಲದ ಸರ್ವಜನ ಹಿತದ ಆಡಳಿತಕ್ಕೆ ಹಾತೊರೆಯುತ್ತಿತ್ತು. ಎಲ್ಲರೂ ರಾಮನ ಪರವಾಗಿದ್ದರು. ಆದರೆ ರಾಮ ಮಾತ್ರ ಕೈಕೆ ಪರವಾಗಿ ನಿಂತ!

         ಇಲ್ಲ ರಾಮ ಕೈಕೆ ಪರವಾಗಿ ನಿಂತುದುದಲ್ಲ. ಸತ್ಯ ಕೈಕೆ ಪರವಾಗಿ ಇತ್ತು. ಅದನ್ನೊಪ್ಪುವುದು ದಶರಥನಿಗೆ ಅನಿವಾರ್ಯವಾಗಿತ್ತು. ಸೂರ್ಯವಂಶದವನಾಗಿ "ಮಾತಿಗೆ ತಪ್ಪುವುದು" ದಶರಥನಿಗೆ ಸಾಧ್ಯವಿರಲಿಲ್ಲ. ಸತಿಗೆ ಕೊಟ್ಟ ಮಾತಿಗೆ ದಶರಥ ಕಟ್ಟುಬಿದ್ದಿದ್ದ. ರಾಮಚಂದ್ರ ಅದನ್ನು ಗ್ರಹಿಸಿದ. ತನ್ನ ಕರ್ತವ್ಯವನ್ನು ಆ ಕ್ಷಣದಲ್ಲೇ ನಿರ್ಧರಿಸಿದ. "ಅಪ್ಪ" ಕೊಟ್ಟ ಮಾತನ್ನು ಪೂರೈಸುವುದಕ್ಕಾಗಿ "ಮಗ" ಕಾಡಿಗೆ ಹೊರಟು ನಿಂತ. ರಾಮ ಧರ್ಮದ ಪರವಾಗಿ ನಿಂತ. ವಂಶದ ಗೌರವ ಉಳಿಸಲೋಸುಗ ತನ್ನ ಸುಖವನ್ನು ಬಲಿಕೊಡಲು ಸಿದ್ಧನಾದ. ಧರ್ಮ ಹಾಗೂ ಸಂಸ್ಕೃತಿಯ ತಿರುಳು ಏನು ಎಂದು ಆಚರಿಸಿ ತೋರಿದ ರಾಮ. ರಾಮನೇನಾದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದರೆ ಕೈಕೆ, ಮಂಥರೆಯರಿಬ್ಬರನ್ನು ಹೊರತುಪಡಿಸಿ ಎಲ್ಲರೂ ಸಂತೋಷಿಸುತ್ತಿದ್ದರು. ಬಹುಷಃ ಸಿಂಹಾಸನವೇರಬೇಕೆಂದು ಒತ್ತಾಯಿಸುತ್ತಿದ್ದ ಪ್ರಜೆಗಳಿಂದ ಪಾರಾಗುವುದನ್ನು ಚಿಂತಿಸುತ್ತಿದ್ದ ಏಕಮಾತ್ರ ರಾಜಕುಮಾರನಿರಬೇಕು ಶ್ರೀರಾಮಚಂದ್ರ! ಇಂದಿನ ಪರಿಸ್ಥಿತಿ ನೋಡಿ, ಅರ್ಹತೆಯಿಲ್ಲದಿದ್ದರೂ, ಜನರಿಂದ ತಿರಸ್ಕೃತರಾಗಿದ್ದರೂ ವಾಮಮಾರ್ಗದಿಂದ ಪಟ್ಟವೇರಲು ಪ್ರಯತ್ನಿಸುವವರು ಎಷ್ಟಿಲ್ಲ! ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ ಶ್ರೀರಾಮನೇ ಹೀಗೆ ಹೇಳುತ್ತಾನೆ..
"ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |
ನ ತು ಪ್ರತಿಜ್ಞಾಂ ಸಂಶ್ರುತ್ಯ  ಬ್ರಾಹ್ಮಣೇಭ್ಯೋ ವಿಶೇಷತಃ ||”
ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣವನ್ನಾದರೂ ಬಿಟ್ಟೇನು! ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು! ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು! ಆದರೆ ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ!!

       ಋಷ್ಯಶೃಂಗ ಕಾಲಿಟ್ಟೆಡೆ ಪ್ರಕೃತಿ ಫಲವತ್ತಾಗುತ್ತಿತ್ತು. ಕಾಡಿನ ಜೀವವಾಗಿದ್ದ ಋಷ್ಯಶೃಂಗ ಬರದಿ ಬಸವಳಿದಿದ್ದ ಅಂಗ ರಾಜ್ಯಕ್ಕೆ ಬಂದುದೇ ಸರಿ ಕುಂಭದ್ರೋಣ ಮಳೆ! ಅಲ್ಲಿಂದ ಅಯೋಧ್ಯೆಗೆ ಬಂದ. ಪುತ್ರಕಾಮೇಷ್ಠಿ ಸಫಲವಾಯಿತು. ಸೂರ್ಯವಂಶದಲ್ಲಿ ಬಾಲಸೂರ್ಯರ ಉದಯವಾಯಿತು. ತನ್ನ ಮಗನಿಗೆ ಪಟ್ಟ ಸಿಗಬೇಕೆಂಬ ಈರ್ಶ್ಯೆ ವರದ ರೂಪದಲ್ಲಿ ಶಾಪವಾಗಿ ರಾಮ ವನದತ್ತ ವದನವಿಡಬೇಕಾಯಿತು. ಮಾನವನ ಉಳಿವಿಗಾಗಿ ಕಾಡಿನಿಂದ ನಾಡಿಗೆ ಬಂದ ಋಷ್ಯಶೃಂಗ. ಮಾನವತ್ವದ ಉಳಿವಿಗಾಗಿ ಕಾಡಿನೆಡೆಗೆ ಮುಖ ಮಾಡಿದ ರಾಮಚಂದ್ರ! ವನಗಮನವೇನೂ ರಾಮನಿಗೆ ಹೊಸದಲ್ಲ. ಯಜ್ಞ ಸಂರಕ್ಷಣೆಯ ನೆಪದಲ್ಲಿ ರಾಮ ಲಕ್ಷ್ಮಣರನ್ನು ತನ್ನೊಡನೆ ಕರೆದೊಯ್ದು ಸೂಕ್ತ ಶಿಕ್ಷಣವನ್ನೇ ನೀಡಿದ್ದ ವಿಶ್ವಾಮಿತ್ರ. ಸ್ವತಃ ರಾಕ್ಷಸರುಗಳನ್ನು ಸಂಹಾರ ಮಾಡುವ ಸಾಮರ್ಥ್ಯವಿದ್ದಾಗ್ಯೂ ಆ ಬ್ರಹ್ಮರ್ಷಿ ರಾಮನನ್ನು ಮಾಧ್ಯಮವಾಗಿ ಬಳಸಿ ಧರ್ಮದ ಒಳಸೂಕ್ಷ್ಮತೆಯ ಅರಿವನ್ನೂ ಮೂಡಿಸಿದ. ಈ ಜಗದಲ್ಲಿ ಧರ್ಮದ-ಸಂಸ್ಕೃತಿಯ ರಕ್ಷಣೆಗೆ ತಾನೊಂದು ಮಾಧ್ಯಮ ಎನ್ನುವುದನ್ನು ಬಾಲರಾಮ ಅರ್ಥ ಮಾಡಿಕೊಂಡಿದ್ದ. ಅದು ತನ್ನ ಸ್ವಂತ ಬದುಕಿಗೆ ಅನ್ವಯವಾದಾಗಲೂ ಸ್ವಂತ ಸುಖದ ಸ್ವಾರ್ಥವನ್ನು ತ್ಯಾಗ ಮಾಡಿ ಧರ್ಮದ ಪಥದಲ್ಲಿ ನಡೆದ. ಮಾಧ್ಯಮಕ್ಕೆ ವೈಯುಕ್ತಿಕತೆ ಇರುವುದಿಲ್ಲ. ಅದಕ್ಕೆ ತನ್ನ ಪರಂಪರೆಯ ಬಗೆಗೆ ಪೂಜ್ಯ ಭಾವನೆ ಇರುತ್ತದೆ. ಸಂಸ್ಕೃತಿಯ ಉಳಿವಿಗೆ ಅದು ಹಾತೊರೆಯುತ್ತದೆ. ಧರ್ಮಪಥ ದರ್ಶಕವದು. ಹೇಗಿರಬೇಕೆಂದು ಆಚರಿಸಿ ತೋರಿಸುವುದಷ್ಟೇ ಅದರ ಕರ್ತವ್ಯ. ಈಗಿನ ಮಾಧ್ಯಮಗಳೋ ಪಥಭೃಷ್ಟರ ಅಡ್ಡೆಗಳು! ರಾಮನ ಈ ನಡೆ ತನ್ನನ್ನು ಸೋಲಿಸ ಹೊರಟವರನ್ನೇ ಗೆಲ್ಲಿಸುವ ಬಗೆ! ಸೋತು ಗೆಲ್ಲುವ ಬಗೆ! ಸೋಲು ಗೆಲುವಿನ ಪರಿಕಲ್ಪನೆಯನ್ನೇ ಬದಲಾಯಿಸುವ ಬಗೆ!

           ದುಃಖ...ಒಂದು ಸನ್ನಿವೇಶದಲ್ಲಿ ನೀವು ಭಾಗಿಯಾದಾಗಲೇ ಬರಬೇಕೆಂದೇನಿಲ್ಲ. ಆಪ್ತರೊಬ್ಬರಿಗೆ ಅನಾನುಕೂಲ ಪರಿಸ್ಥಿತಿ ತಲೆದೋರಿದಾಗ ಉಂಟಾಗಬೇಕೆಂದೂ ಇಲ್ಲ. ಸನ್ನಿವೇಶ ಯಾವುದೇ ಆಗಿರಲಿ, ಯಾವ ಕಾಲದ್ದೇ ಆಗಿರಲಿ, ಅದರ ಒಳಹೊಕ್ಕಾಗ ಭಾವ ಮೀಟಿ ತಂತಾನೆ ಅದು ಹೊರ ಹೊಮ್ಮುವುದು. ಅದು ರಾಮನ ವನ ಗಮನದ ಸನ್ನಿವೇಶವಾದ ಪಿತೃವಿಯೋಗ ಇರಬಹುದು, ಸೀತಾ ಪರಿತ್ಯಾಗ ಅಥವಾ ಪತ್ನಿವಿಯೋಗ ಇರಬಹುದು. ನಿರ್ಯಾಣದ ಸಮಯದಲ್ಲಿ ಅನುಜ ಲಕ್ಷ್ಮಣಗೆ ನೀಡುವ ಆದೇಶದಿಂದಾಗುವ ಭ್ರಾತೃ ವಿಯೋಗವೇ ಇರಬಹುದು! ರಾಮನ ಕಾಲದಲ್ಲಿ, ಅವನ ಪ್ರಜೆಯಾಗಿಯಲ್ಲ, ರಾಮನನ್ನು ಆದರ್ಶವಾಗಿ ಕಾಣುವಾಗಲೇ ಅಥವಾ ಅದಕ್ಕಿಂತಲೂ ರಾಮನನ್ನು ಒಂದು ಕಥಾ ಪಾತ್ರವಾಗಿ ಈ ಮೇಲಿನ ಸನ್ನಿವೇಶಗಳಲ್ಲಿ ಕಾಣುವಾಗ ಉಂಟಾಗುವ ದುಃಖವಿದೆಯಲ್ಲ ಅದೇನು ಸಾಮಾನ್ಯದ್ದೇ! ಈ ಘಟನೆಗೆ ಕಾವ್ಯರೂಪ ಕೊಡುವಾಗ ವಾಲ್ಮೀಕಿ ಅನುಭವಿಸಿದ ದುಃಖದ ಪರಿ ಎಂತಿರಬಹುದು! ಅದನ್ನು ವಾಲ್ಮೀಕಿ ಕ್ರೌಂಚದ ಕೂಗಿನಲ್ಲೇ ಕಂಡ! ಈ ಎಲ್ಲಾ ಸಂದರ್ಭಗಳಲ್ಲಿ ರಾಮ ಅನುಭವಿಸುವ ದುಃಖ ... ಹೇಳಲಸದಳ! ಆದರೆ ಆ ಎಲ್ಲಾ ಕಾಲದಲ್ಲೂ ಆತ ದುಃಖವನ್ನು ನುಂಗಿ ಸ್ಥಿತಪ್ರಜ್ಞನಾಗಿಯೇ ಉಳಿದುಬಿಟ್ಟ! ಕೊನೆಗೆ ಕಾಲನೇ ಬಂದು ಕರೆದಾಗಲೂ!
ಹೌದು, ರಾಮ ದೇವರಾದುದು ಸುಮ್ಮನೆ ಅಲ್ಲ!