ಪುಟಗಳು

ಗುರುವಾರ, ಜನವರಿ 17, 2019

ಹುತಾತ್ಮನನ್ನು ಜೀವಂತವಾಗಿಸಿದ ಆ ಎಪ್ಪತ್ತೆರಡು ಘಂಟೆಗಳು!

ಹುತಾತ್ಮನನ್ನು ಜೀವಂತವಾಗಿಸಿದ ಆ ಎಪ್ಪತ್ತೆರಡು ಘಂಟೆಗಳು!


             ಯಾರೂ ಇಲ್ಲ ಅಲ್ಲಿ ಎಂಬ ಮಾಹಿತಿ ಪಡೆದು, ಇನ್ನೇನು ಭಾರತದ ಈ ಭೂಭಾಗ ಅನಾಯಾಸವಾಗಿ ತಮಗೆ ದಕ್ಕುತ್ತೆ ಅಂತ ಮುಂಬರೆದು ಬರುತ್ತಿತ್ತು ಚೀನಾ ಪಡೆ! ಗುಂಡೊಂದು ತೂರಿ ಬಂದು ಚೀನೀ ಸೈನಿಕನ ಶಿರವನ್ನು ಹೊಕ್ಕಿತು. ಆತ ಅಲ್ಲೇ ಹೆಣವಾದ. ಯಾರೂ ಇಲ್ಲದ ಮೇಲೆ ಗುಂಡೆಲ್ಲಿಂದ ಬಂತು ಎಂದು ಉಳಿದವರೆಲ್ಲಾ ಸಾವರಿಸಿಕೊಂಡು ನೋಡ ನೋಡುತ್ತಿದ್ದಂತೆ ಮತ್ತೊಬ್ಬ ಸೈನಿಕ ಬಿದ್ದಿದ್ದ. ಈ ಬಾರಿ ಗುಂಡು ಬಂದ ದಿಕ್ಕು ಬದಲಾಗಿತ್ತು. ಒಬ್ಬರ ಹಿಂದೆ ಒಬ್ಬರು ವಿವಿಧ ದಿಕ್ಕುಗಳಿಂದ ಬರುತ್ತಿದ್ದ  ಗುಂಡಿಗೆ ಬಲಿಯಾಗುತ್ತಿದ್ದಂತೆ ಭಾರತೀಯ ಸೈನಿಕರ ಪರಾಕ್ರಮದ ಬಗ್ಗೆ ಕೇಳಿ ಅರಿತಿದ್ದ 600ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಿಯರ ಎದೆಯಲ್ಲೊಂದು ಚಳಿ ಹುಟ್ಟಿತು. ಒಟ್ಟು ಎಷ್ಟು ಜನ ಯೋಧರಿರಬಹುದು ಎನ್ನುವ ಲೆಖ್ಖವೇ ಅವರಿಗೆ ಸಿಗದಾಯಿತು. ತರಗೆಲೆಗಳಂತೆ ತಮ್ಮವರ ತಲೆಗಳುರುಳುವುದನ್ನು ಅವರು ನೋಡುತ್ತಾ ಅಸಹಾಯಕರಾಗಿ ನಿಲ್ಲಬೇಕಾಯಿತು. ಅಲ್ಲೊಂದು ಅದ್ಭುತ ಶಕ್ತಿಯಿತ್ತು; ಅದು ಅಂದೂ ಮಾತೃಭೂಮಿಗಾಗಿ ಹೋರಾಡಿತು; ಇಂದಿಗೂ ಹೋರಾಡುತ್ತಲೇ ಇದೆ!

                ಅರುಣಾಚಲ ಪ್ರದೇಶದ ಬಹುತೇಕ ಊರುಕೇರಿಗಳು 1962ರ ಭಾರತ-ಚೀನಾ ಯುದ್ಧಕ್ಕೆ ವೇದಿಕೆಗಳಾಗಿವೆ, ಸರಿಯಾದ ಶಸ್ತ್ರವಿಲ್ಲದೆಯೂ ಕಾದಾಡಿದ ಭಾರತೀಯ ಸೈನಿಕರ ಪರಾಕ್ರಮಕ್ಕೆ ಸಾಕ್ಷಿಗಳಾಗಿವೆ, ಯುದ್ಧ ಸ್ಮಾರಕಗಳಾಗಿವೆ. ಅಂತಹುದೊಂದು ಜಾಗ ನೂರಾನಾಂಗ್; ಸಮುದ್ರ ಮಟ್ಟದಿಂದ ಆರುಸಾವಿರ ಅಡಿ ಎತ್ತರದ ಪ್ರದೇಶ. ತವಾಂಗ್ ನಗರವನ್ನು ಬೊಮ್ದಿಲಾ ಹಾಗೂ ಅಸ್ಸಾಮಿನ ಚಾರಿದುವಾರ್ ಜೊತೆ ಜೋಡಿಸುವ ರಸ್ತೆ, ಹೃದಯದಲ್ಲಿ ಭೋರ್ಗರೆವ ಜಂಗ್ ಜಲಪಾತ; ಜೊತೆಗೆ ರುದ್ರ ರಮಣೀಯ ಪ್ರಕೃತಿ! ಒಂದು ಕಡೆ ಭೂತಾನ್, ಇನ್ನೊಂದೆಡೆ ಕಪಟಿ ಚೀನಾ; ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಜೊತೆಗೆ ಪಕ್ಕದ ಪುಟ್ಟ ಭೂತಾನಿಗೂ ಚೀನಾದಿಂದ ಧಕ್ಕೆಯಾಗದ ಹಾಗೆ ನೋಡಿಕೊಳ್ಳಬೇಕು. ಹೀಗೆ ಅದೊಂದು ಆಯಕಟ್ಟಿನ ಜಾಗ. ಅಲ್ಲಿತ್ತು ಭಾರತದ ಗಢವಾಲ್ ರೈಫಲ್ಸ್ ಪಡೆ. ಗಢವಾಲಿಗಳು ಹರಿದ್ವಾರ, ಡೆಹ್ರಾಡೂನ್, ರುದ್ರಪ್ರಯಾಗ ಸೇರಿದಂತೆ ಉತ್ತರಾಖಂಡದ ಪಶ್ಚಿಮ ಭಾಗದಲ್ಲಿ(ಗಢವಾಲ್ ಎಂದೇ ಕರೆಯಲ್ಪಡುವ) ಹರಡಿರುವ ಗಢವಾಲೀ ಭಾಷೆಯನ್ನೇ ಮಾತಾಡುವ ಒಂದು ಭಾರತೀಯ ಬುಡಕಟ್ಟು ಜನಾಂಗ. ಕ್ಷಾತ್ರವೃತ್ತಿ ಅದರ ರಕ್ತದಲ್ಲೇ ಹರಿದು ಬಂದಿರಬೇಕು. ಎರಡು ಮಹಾಯುದ್ಧಗಳಲ್ಲೂ ಸಕ್ರಿಯ ಪಾತ್ರವಹಿಸಿದ ಯೋಧಪಡೆಯದು.ಇವತ್ತದು 25000ಕ್ಕೂ ಹೆಚ್ಚು ಸೈನಿಕರುಳ್ಳ, 21 ಬೆಟಾಲಿಯನ್ನುಗಳಾಗಿ ವಿಂಗಡಿಸಲ್ಪಟ್ಟ ಬೃಹತ್ ಪಡೆ.

               ಅಸಾಮಾನ್ಯ ಶಕ್ತಿಯನ್ನು ತೋರಿದ, ಮಾಡಲಸಾಧ್ಯ ಎಂದೇ ತೋರುವ ಸಾಹಸಗಳನ್ನು ಮಾಡಿದ ಮನುಷ್ಯ ಅತಿಮಾನುಷ ವಿಗ್ರಹಿಯಾಗಿ ದಂತಕಥೆಯಾಗುತ್ತಾನೆ. ಆ ದಂತಕಥೆಯಾದರೂ ಜನರ ಬಾಯಲ್ಲಿ ನಲಿದಾಡಿ ಮೆರೆದಾಡಿ ಜಾನಪದವಾಗುತ್ತದೆ. ಆ ಕಥೆಯಲ್ಲಿ ನಿಜದ ಜೊತೆಗೆ ನಂಬಿಕೆಯಿರುತ್ತದೆ; ರೋಮಾಂಚಕ ಅಭಿವ್ಯಕ್ತಿಯಿರುತ್ತದೆ. ಅಂತಹದ್ದೊಂದು ಅದಮ್ಯ ಧೈರ್ಯದ, ಅಸೀಮ ಸಾಹಸದ, ದೇಶಪ್ರೇಮ ಹಾಗೂ ವೃತ್ತಿ ಬದ್ಧತೆಯ ಕಥೆಯೊಂದು ಇಲ್ಲಿ ಪಡಿಮೂಡಿದೆ. 1962ರ ಭಾರತ ಚೀನಾ ಯುದ್ಧದ ಬಗೆಗೆ ಯಾರಿಗೆ ತಾನೇ ಗೊತ್ತಿಲ್ಲ? ಹಿಂದಿ ಚೀನೀ ಭಾಯಿ ಭಾಯಿಯೆಂಬ ಹಿಮಾಲಯದೆತ್ತರದ ಪ್ರಮಾದ ಯಾರಿಗೆ ತಾನೇ ಅರಿವಿಲ್ಲ? ಆಧುನಿಕ ಶಸ್ತ್ರಾಸ್ತ್ರಗಳಿಲ್ಲ, ಉಪಕರಣ, ಸಲಕರಣೆಗಳಿಲ್ಲ; ಕೊರೆಯುವ ಚಳಿ ತಡೆಯಲು ಸರಿಯಾದ ಬಟ್ಟೆಗಳಿಲ್ಲ; ಶಿರಸ್ತ್ರಾಣ, ಎದೆಕವಚ, ಸೂಕ್ತ ಪಾದರಕ್ಷಕಗಳಿಲ್ಲ! ಹೋಗಲು ರಸ್ತೆಗಳಿಲ್ಲ. ಗುದ್ದಲಿ, ಸಲಿಕೆಗಳನ್ನು ಹಿಡಿದು ಸೈನಿಕರೇ ರಸ್ತೆ ಮಾಡಿದ ಬಳಿಕ ಓಬೀರಾಯನ ಕಾಲದ ಜೀಪು ಮುಂದೆ ಸಾಗುತ್ತಿತ್ತು. ಆ ಜೀಪು ಕೊಳ್ಳುವುದರಲ್ಲೂ ದುಡ್ದು ತಿಂದಿದ್ದ ಕಮ್ಯೂನಿಸ್ಟ್ ಪ್ರೇಮಿ ನಾಯಕನ ಅಹಂ, ಅಧಿಕಾರ ದಾಹ, ಜಾಗತಿಕ ವೇದಿಕೆಗಳಲ್ಲಿ ಮಿಂಚುವ-ಇತಿಹಾಸದ ಪುಸ್ತಕಗಳಲ್ಲಿ ತನ್ನ ಸಾಧನೆಯನ್ನು ಬರೆಸಿಕೊಳ್ಳುವ ದುರಾಸೆಗೆ ಅಂದು ಬಲಿಯಾದದ್ದು ಬಡಪಾಯಿ ಭಾರತೀಯ ಯೋಧ! ಯುದ್ಧ ಸಿದ್ಧತೆಯಿಲ್ಲದೆ, ಸರಿಯಾದ ಸೌಕರ್ಯಗಳಿಲ್ಲದಿದ್ದರೂ ದೇಶಕ್ಕೋಸ್ಕರ ರೈಫಲ್ ಹೆಗಲೇರಿಸಿಕೊಂಡು ಕೊರೆವ ಚಳಿಯಲ್ಲಿ ನಡುಗುತ್ತಾ ಹೋದ ಸೈನಿಕರ ನರನಾಡಿಗಳಲ್ಲಿ ತುಂಬಿ ಹರಿಯುತ್ತಿದ್ದ ದೇಶಪ್ರೇಮ ಅಂದು ದೇಶವನ್ನು ರಕ್ಷಿಸದಿದ್ದರೆ ಇಂದಿಲ್ಲಿ ಚೀನೀ ಭಾಯಿಗಳದ್ದೇ ಅಧಿಕಾರವಿರುತ್ತಿತ್ತು! ಆಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದ ಒಂದು ಲಕ್ಷ ಚೀನಿ ಸೈನಿಕರ ಎದುರು ಹನ್ನೆರಡು ಸಾವಿರ ಸೈನಿಕರನ್ನು ಬಲಿಪಶು ಮಾಡಿದವರನ್ನು ಛೀಛೀ ಎಂದು ಕ್ಯಾಕರಿಸಿ ಉಗಿಯುವ ಬದಲು ಚಾಚಾ ಎಂದು ಕೊಂಡಾಡುತ್ತಿರುವ, ಇತಿಹಾಸದಿಂದ ಪಾಠ ಕಲಿಯದ ಗುಲಾಮೀ ಮಾನಸಿಕತೆಗೆ ಈ ದೇಶೀಯರ ರಕ್ತದಲ್ಲೇ ಇಳಿದಿರಬೇಕು!

                  ಸಿದ್ಧತೆ ಸಲಕರಣೆಗಳಿಲ್ಲದೆ ಅಸಹಾಯಕರಾಗಿ ಸೋಲುವ ಸಮಯದಲ್ಲೂ ವೀರೋಚಿತವಾಗಿ ಹೋರಾಡಿತ್ತು ಭಾರತೀಯ ಪಡೆ. ತನ್ನ ಬುದ್ಧಿಮತ್ತೆ, ಸ್ಥೈರ್ಯಗಳಿಂದ ಚೀನೀ ಪಡೆಯನ್ನು ಬೇಸ್ತು ಬೀಳಿಸಿತ್ತು. ಅಂತಹ ಅಪಾರ ಧೈರ್ಯ, ಅಸೀಮ ಸಾಹಸ, ಚಾಣಾಕ್ಷತೆಯ ಒಂದು ಮೂರ್ತಿಯೇ ಜಸ್ವಂತ್ ಸಿಂಗ್ ರಾವತ್. ಆರೂನೂರುಕ್ಕೂ ಹೆಚ್ಚು ಸೈನಿಕರಿದ್ದ ಚೀನೀ ಪಡೆ ಮುಂಬರಿದು ಬರುತ್ತಿತ್ತು. ತವಾಂಗ್ ಅನ್ನು ಆಕ್ರಮಿಸಿ ಅಲ್ಲಿದ್ದ ಬುದ್ಧನ ಮೂರ್ತಿಯ ಕೈ ಕತ್ತರಿಸಿತ್ತು. ನೂರಾನಾಂಗ್ ಬಳಿ ಭಾರತದ ಗಢವಾಲ್ ಪಡೆ ಅದನ್ನು ಸಮರ್ಥವಾಗಿ ಎದುರಿಸಿತು. ಕಲ್ಲುಗಳ ಮಧ್ಯೆ ತೆವಳುತ್ತಾ ಹೋರಾಡಿದ ಗಢ್ವಾಲ್ ಪಡೆ ಚೀನೀಯರಲ್ಲಿದ್ದ ಮೆಷಿನ್ ಗನ್ನುಗಳಲ್ಲಿ ಕೆಲವನ್ನು ವಶಕ್ಕೆ ತೆಗೆದುಕೊಳ್ಳಲು ಯಶಸ್ವಿಯಾಯಿತು. ಈ ನಡುವೆ ಜಸ್ವಂತ್ ಹಾಗೂ ಗೋಪಾಲ್ ಗುಸೈನ್ರನ್ನು ರಕ್ಷಿಸಲು ಕವರ್ ಮಾಡುತ್ತಿದ್ದ ಗಢ್ವಾಲ್ ರೈಫಲ್ಲಿನ ತ್ರಿಲೋಕ್ ಸಿಂಗ್ ನೇಗಿ ವೀರ ಮರಣವನ್ನಪ್ಪಿದ್ದರು. ಗೋಪಾಲ್ ಸಹಿತ ಎಂಟು ಜನ ಗಾಯಗೊಂಡಿದ್ದರು. ವಿಚಾರ ತಿಳಿದ ಮೇಲಾಧಿಕಾರಿಗಳಿಂದ ಹಿಂದಿರುಗುವಂತೆ ಗಢ್ವಾಲ್ ರೈಪಲ್ಸಿನ ಈ ನಾಲ್ಕನೇ ಬೆಟಾಲಿಯನ್ನಿಗೆ ಆದೇಶ ಬಂದಿತ್ತು. ಆದರೆ ಹಿಂದಿರುಗಲು ಜಸ್ವಂತ್ ಸಿಂಗ್ ರಾವತ್ ಮನ ಒಪ್ಪಲಿಲ್ಲ. ಪ್ರಾಣ ಹೋದರೂ ಸರಿ ನಮ್ಮ ಭೂಮಿಯನ್ನು ಬೇರೆಯವರಿಗೆ ಒಪ್ಪಿಸುವುದಿಲ್ಲ ಎಂಬ ದೃಢ ನಿರ್ಧಾರದಿಂದ ಚೀನೀ ಸೈನಿಕರನ್ನು ಎದುರಿಸಲು ಏಕಾಂಗಿಯಾಗಿ ಸಿದ್ಧನಾಗಿ ನಿಂತ. ಬಂಕರಿನ ಕಿಂಡಿಗಳಿಗೆ ಸರಿಯಾಗುವಂತೆ ಬಂದೂಕುಗಳನ್ನು ಸರಪಳಿಯಂತೆ ಬಿಗಿದ. ಬಂಕರಿನಿಂದ ಬಂಕರಿಗೆ ಹಾರುತ್ತಾ ಚೀನೀಯರ ಮೇಲೆ ಗುಂಡಿನ ಮಳೆಗೆರೆಯಲು ಆರಂಭಿಸಿದ. ಸ್ಥಳೀಯ ಮೋನ್ಪಾ ಜನರೊಂದಿಗೆ ಬೆರೆತು ಮಧುರ ಬಾಂಧವ್ಯ ವೃದ್ಧಿಸಿದ್ದ ಜಸ್ವಂತನಿಗೆ ಅದೇ ಈಗ ಸಹಾಯಕ್ಕೊದಗಿತ್ತು. ಏಕಾಂಗಿಯಾಗಿ ಹೋರಾಡುತ್ತಿದ್ದ ಅವನ ಸಾಹಸದಿಂದ ಸ್ಪೂರ್ತಿಗೊಂಡು ಸ್ಥಳೀಯರು ಆತನಿಗೆ ಆಹಾರ ಒದಗಿಸಲಾರಂಭಿಸಿದರು. ಸೆಲಾ ಹಾಗೂ ನೂರಾ ಎನ್ನುವ ಧೈರ್ಯಸ್ಥ ಹುಡುಗಿಯರಿಬ್ಬರು ಜಸ್ವಂತನಿಗೆ ಬೆಂಗಾವಲಾಗಿ ನಿಂತರು. ಪ್ರತಿಯೊಂದು ಬಂಕರುಗಳ ವಿವಿಧ ಭಾಗಗಳಿಂದ ತೂರಿ ಬರುತ್ತಿರುವ ಗುಂಡುಗಳನ್ನು ಕಂಡು ಚೀನೀ ಸೇನೆ ಗಾಬರಿಯಾಯಿತು. ಬಂಕರುಗಳಲ್ಲಿ ಇರುವ ಸೈನಿಕರೆಷ್ಟು ಎಂಬ ಲೆಖ್ಖ ಅವರಿಗೆ ಸಿಗದೇ ಹೋಯಿತು. ಉರುಳುತ್ತಿರುವ ತಮ್ಮವರ ತಲೆಗಳನ್ನು ಕಂಡು ಮನಸ್ಸು ಭೀತಿಗೊಂಡಿತು. ಈ ನಡುವೆ ಜಸ್ವಂತನಿಗೆ ಆಹಾರ ಸಾಗಿಸುತ್ತಿದ್ದ ವ್ಯಕ್ತಿ ಅಚಾನಕ್ಕಾಗಿ ಚೀನೀಯರ ಕೈಗೆ ಸಿಕ್ಕಿಬಿದ್ದ. ಆತನಿಂದ ಬಂಕರುಗಳಲ್ಲಿರುವುದು ಒಬ್ಬನೇ ಸೈನಿಕ ಎಂದು ತಿಳಿದ ಚೀನೀ ಪಡೆ ಏಕತ್ರವಾಗಿ ಅತ್ತ ಮುನ್ನುಗ್ಗಿ ಬಂತು. ಅವರೆಸೆದ ಗ್ರೆನೇಡ್ಗೆ ಸೆಲಾ ಬಲಿಯಾದಳು. ನೂರಾ ಸೆರೆಸಿಕ್ಕಳು. ತಾನು ಸೆರೆಸಿಗುವ ಬದಲು ಆತ್ಮಾರ್ಪಣೆ ಮಾಡಲು ನಿರ್ಧರಿಸಿದ ಜಸ್ವಂತ್ ವೀರ ಮರಣವನ್ನಪ್ಪಿದ. ಆದರೇನು ಆ ಎಪ್ಪತ್ತೆರಡು ಘಂಟೆಗಳ ಏಕಾಂಗಿ ಹೋರಾಟದಲ್ಲಿ ಆತ ಮುನ್ನೂರು ಚೀನಿಯರ ಬಲಿತೆಗೆದುಕೊಂಡಿದ್ದ. ತಮ್ಮನ್ನು ಬೇಸ್ತು ಬೀಳಿಸಿ ತಮ್ಮವರ ಮಾರಣ ಹೋಮ ನಡೆಸಿದ ಜಸ್ವಂತನ ಮೇಲಿನ ಸಿಟ್ಟಿನಿಂದ ಚೀನೀಯರು ಆತನ ತಲೆ ಕಡಿದು ತಲೆಯನ್ನು ತಮ್ಮೊಂದಿಗೆ ಹೊತ್ತೊಯ್ದರು.

                    ಆದರೆ ಈ ಎಪ್ಪತ್ತೆರಡು ಘಂಟೆಗಳ ಏಕಾಂಗಿ ಹೋರಾಟ ಹಾಗೂ ಬಲಿದಾನ ನೂರಾನಾಂಗಿನ ಕದನದ ಸ್ವರೂಪವನ್ನೇ ಬದಲಾಯಿಸಿತು. ಅರುಣಾಚಲ ಪ್ರದೇಶವನ್ನು ಚೀನಾ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುವುದನ್ನು ಅದು ತಡೆಯಿತು. ಸೇನೆಯ ಅಧಿಕೃತ ಮಾಹಿತಿಯಲ್ಲಿ ಗಢ್ವಾಲ್ ಪಡೆ ಮುನ್ನೂರು ಚೀನೀ ಸೈನಿಕರನ್ನು ಬಲಿ ತೆಗೆದುಕೊಂಡ ಮಾಹಿತಿ ಇದ್ದು, ಜಸ್ವಂತ್ ಏಕಾಂಗಿಯಾಗಿ ಹೋರಾಡಿದ ಬಗ್ಗೆಯಾಗಲೀ ಅಥವಾ ಸೆಲಾ ಹಾಗೂ ನೂರಾ ಬಗ್ಗೆಯಾಗಲೀ ಉಲ್ಲೇಖವಿಲ್ಲವಾದರೂ ಈ ಘಟನೆಯನ್ನು ಅಲ್ಲಗಳೆಯಲಾಗದಷ್ಟು ದಾಖಲೆಗಳು ಸಿಗುತ್ತವೆ. ಕದನ ವಿರಾಮ ಘೋಷಣೆಯಾದ ಬಳಿಕ ಚೀನೀಯರು ಜಸ್ವಂತ್ ಸಿಂಗನ ತಲೆಯನ್ನು ಗೌರವದಿಂದ ಹಿಂದಿರುಗಿಸಿ ಆತನ ಏಕಾಂಗಿ ಸಾಹಸವನ್ನು ಹಾಡಿ ಹೊಗಳಿದುದಲ್ಲದೇ ಆತನ ಹಿತ್ತಾಳೆಯ ಪ್ರತಿಮೆಯೊಂದನ್ನೂ ಕೊಟ್ಟರು. ಸೆಲಾಳ ಶೌರ್ಯಕ್ಕೆ ಪ್ರತೀಕವಾಗಿ 13700 ಅಡಿ ಎತ್ತರದ ಆ ಜಾಗಕ್ಕೆ ಸೆಲಾ ಪಾಸ್ ಎಂದೇ ಹೆಸರಿಡಲಾಗಿದೆ. ನೂರಾಳಿಗೆ ಗೌರವ ಸಮರ್ಪಿಸುವ ಸಲುವಾಗಿ ಯುದ್ಧ ನಡೆದ ಸ್ಥಳವನ್ನು ನೂರಾನಾಂಗ್ ಎಂದೂ, ಅಲ್ಲೇ ಇರುವ ಜಂಗ್ ಜಲಪಾತವನ್ನು ನೂರಾನಾಂಗ್ ಎಂದೂ ಕರೆಯಲಾಗಿದೆ. ಆ ಹಳ್ಳಿಗೆ ಈಗ ಜಸ್ವಂತ್ ಗಢ್ ಎಂದೇ ಹೆಸರಾಗಿದೆ. ಚೀನಾದ ಜೊತೆ ಭಾರತ ಸಾಧಿಸಿದ ಈ ಅಮೋಘ ವಿಜಯ ನೂರಾನಾಂಗ್ ಕದನವೆಂದೇ ಮಿಲಿಟರಿ ಇತಿಹಾಸದಲ್ಲಿ ದಾಖಲಾಗಿದೆ. ಈ ಜಯವನ್ನು ಸಾಧ್ಯವಾಗಿಸಿದ ಜಸ್ವಂತ್ ಸಿಂಗ್ ರಾವತ್ಗೆ ಮರಣೋತ್ತರ ಪರಮವೀರ ಚಕ್ರ ಪ್ರದಾನಿಸಿ ಗೌರವಿಸಲಾಗಿದೆ. ಜಸ್ವಂತ್ ಗಢದಲ್ಲಿ ಆತನ ಸ್ಮೃತಿಗಾಗಿ ಮಂದಿರವೊಂದನ್ನು ನಿರ್ಮಿಸಲಾಗಿದೆ.                ಜಸ್ವಂತ್ ಸಿಂಗ್ ಇಂದಿಗೂ ಜೀವಂತವಾಗಿದ್ದು ಭಾರತದ ಗಡಿಯನ್ನು ಕಾಯುತ್ತಿದ್ದಾರೆ ಎಂಬುದು ಬಹುತೇಕರ ನಂಬಿಕೆಯಾಗಿದೆ. ಅಲ್ಲಿನ ಜನರ ಹಾಡು, ಕಥೆಗಳಲ್ಲಿ ಜಸ್ವಂತ್ ಸಿಂಗರ ಸಾಹಸದ ಪುನಾರಾವರ್ತನೆಯಾಗುತ್ತದೆ. ಇನ್ನೂ ವಿಶೇಷವೆಂದರೆ ಜೀವಂತ ಸೈನಿಕರಿಗೆ ನೀಡಲಾಗುವ ಎಲ್ಲ ಗೌರವ, ಸ್ಥಾನಮಾನ, ಪದೋನ್ನತಿಯನ್ನು ಜಸ್ವಂತ್ ಗೆ ನೀಡಲಾಗಿದೆ. ಅವರ ಹಾಜರಾತಿ ಹಾಕಲಾಗುತ್ತದೆ. ಅವರಿಗಾಗಿ ಒಂದು ಹಾಸಿಗೆ, ತಲೆದಿಂಬು, ಹೊದಿಕೆಯನ್ನು ನೀಟಾಗಿ ಇಡಲಾಗುತ್ತದೆ. ಅದರ ಜತೆ ನೀರಿನ ಬಾಟಲು ಕೂಡ! ಮುಂಜಾನೆಯ ಚಹಾ, ಮಧ್ಯಾಹ್ನ ಹಾಗೂ ರಾತ್ರಿ ಸರಿಯಾದ ಸಮಯಕ್ಕೆ ಭೋಜನ ನೀಡಲಾಗುತ್ತದೆ. ಅವರ ಸಮವಸ್ತ್ರಕ್ಕೆ ನಿತ್ಯವೂ ಇಸ್ತ್ರಿ ಹಾಕಲಾಗುತ್ತದೆ, ಬೂಟುಗಳನ್ನು ಪಾಲಿಶ್ ಮಾಡಲಾಗುತ್ತದೆ. ಜಸವಂತ್ ತನಗೆ ಬೇಕಾದಾಗ ಬಂದು ಹೋಗಲು ಕೋಣೆಯ ಬಾಗಿಲನ್ನು ತೆರೆದಿಡಲಾಗುತ್ತದೆ! ಅವರಿಗೆ ರಜೆ ಘೋಷಣೆಯಾದ ದಿನ ಹರಿಯಾಣದಲ್ಲಿನ ಅವರ ಸ್ವಗ್ರಾಮಕ್ಕೆ ಸೈನಿಕರು ಅವರ ಫೋಟೋವನ್ನು ಕಾಯ್ದಿರಿಸಲಾದ ರೈಲು ಸೀಟಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ರಜೆ ಮುಗಿದ ಬಳಿಕ ಫೋಟೋವನ್ನು ಮರಳಿ ಸ್ಮೃತಿ ಮಂದಿರಕ್ಕೆ ತೆಗೆದುಕೊಂಡು ಬರುತ್ತಾರೆ. ತವಾಂಗ್ ಯತ್ರೆಗೆ ತೆರಳುವ ಜನ ಜನ ಹಣದ ರೂಪದಲ್ಲಿ ಕಾಣಿಕೆಯನ್ನು ಜಸವಂತನ ಪುತ್ಥಳಿಗೆ ಸಮರ್ಪಿಸಿ ಗೌರವಪೂರ್ವಕ ನಮನ ಸಲ್ಲಿಸಿ ಮುಂದಕ್ಕೆ ಸಾಗುತ್ತಾರೆ. ಅದು ಜಗತ್ತಿನಲ್ಲಿಯೇ ಅಪರೂಪದ ದೇಶಭಕ್ತಿಯ ದೇವಾಲಯ! ಜಸ್ವಂತ್ ಸಿಂಗರ ಸಾಹಸ "72 ಅವರ್ಸ್: ಮ್ಯಾರ್ಟಿಯರ್ ಹು ನೆವರ್ ಡೈಡ್" ಎಂಬ ಚಿತ್ರದಲ್ಲಿ ಇದೇ ಹದಿನೆಂಟರಂದು ತೆರೆ ಕಾಣಲಿದೆ.

ಗುರುವಾರ, ಜನವರಿ 10, 2019

ಯಾರ್ಯಾರದೋ ಋಣದಲ್ಲಿ ಯಾಕಿರುತ್ತೀರಿ?

ಯಾರ್ಯಾರದೋ ಋಣದಲ್ಲಿ ಯಾಕಿರುತ್ತೀರಿ?


                  ಸತ್ಯದ ಹುಡುಕಾಟ ಈ ದೇಶದ ಮಣ್ಣಿನ ಗುಣ. ಈ ಹುಡುಕಾಟವೇ ಇಲ್ಲಿ ಪ್ರಶ್ನೆ ಕೇಳುವ ಧೈರ್ಯವನ್ನೂ ಸೃಜಿಸಿತು. ಹುಡುಕಿ ಸತ್ಯವನ್ನು ಕಂಡುಕೊಂಡವನ ಜ್ಞಾನ-ಮಾತು-ಮೌನ ಎಲ್ಲವೂ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಯಿತು. ಈ ಪ್ರಶ್ನೋತ್ತರಗಳೇ ಇಲ್ಲಿನ ಭವ್ಯ ಸಂಸ್ಕೃತಿಯ ಕೀರ್ತಿಶಿಖರಗಳಾದವು. ಆದರೆ ಈಗ ಈ ದೇಶದಲ್ಲಿ ಪ್ರಶ್ನಿಸುವುದು ಕೇವಲ ಜಾತ್ಯಾತೀತ ಎಂದು ಘೋಷಿಸಿಕೊಂಡವರ ಹಾಗೂ ಮತಾಂಧ ಶಕ್ತಿಗಳ ಸೊತ್ತು ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆದರೆ ಅವು ಹುಡುಕಾಟದ ಪ್ರಶ್ನೆಗಳಲ್ಲ; ಹುಡುಗಾಟದ ಪ್ರಶ್ನೆಗಳೂ ಅಲ್ಲ; ತಮಗಾಗದ್ದು ಇಲ್ಲಿ ಇನ್ನೂ ಯಾಕಿದೆ ಎನ್ನುವ ಪ್ರಶ್ನೆಗಳು! ಇಲ್ಲಿ ಹಿಂದೂ ದೇವತೆಗಳನ್ನು, ಹಿಂದೂ ಸಂಸ್ಕೃತಿಯನ್ನು, ಹಿಂದೂಗಳನ್ನು ಹೀಗಳೆಯುವುದು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಪಟ್ಟಿಯೊಳಗೆ ಸೇರುತ್ತದೆ. ಅನ್ಯ ಮತೀಯರ ಆಚಾರ-ವಿಚಾರ ಪಕ್ಕಕ್ಕಿಡಿ, ಅವರ ಸಮಾಜಘಾತುಕ ಕೆಲಸಗಳ ಬಗ್ಗೆ ಪ್ರಶ್ನೆ ಮಾಡಿದರೂ ನೀವು ಕೋಮುವಾದಿ ಎಂದೆನಿಸುಕೊಳ್ಳುವ ಕಾಲಕ್ಕೆ ಬಂದು ಮುಟ್ಟಿದ್ದೇವೆ!

                   ಪತ್ರಕರ್ತ ಎನ್ನುವ ಪದವನ್ನೇ ಗಬ್ಬೆಬ್ಬಿಸಲಾಗಿದೆ. ಯಾರೂ ಈ ನೆಲದ ಸಂಸ್ಕೃತಿಯನ್ನು ತುಚ್ಛೀಕರಿಸಿ, ಸೆಮೆಟಿಕ್ ಮತಗಳ ಕ್ರೌರ್ಯ, ಮತಾಂಧತೆಯ ಬಗ್ಗೆ ಮೌನವಹಿಸುತ್ತಾನೋ ಅವನಿಗಿಲ್ಲಿ ರಾಜಮರ್ಯಾದೆ! ಯಾರು ನಿಷ್ಪಕ್ಷಪಾತವಾಗಿ ಸುದ್ದಿ ಹೇಳುತ್ತಾನೋ, ಯಾರು ಅಧಿಕಾರ, ಜಾತ್ಯಾತೀತ ಸೋಗಿನ ಹಾಗೂ ಮತಾಂಧ ಶಕ್ತಿಗಳಿಗೆ ಹೆದರದೆ ನಿರ್ಭಿಡೆಯಿಂದ ತನ್ನ ವಿಚಾರವನ್ನು ಹೇಳುತ್ತಾನೋ ಅವನು ಕೋಮುವಾದಿ ಎಂದು ಕರೆಯಲ್ಪಡುತ್ತಿದ್ದಾನೆ! ಅವನನ್ನು ಈ ಎಲ್ಲಾ ಶಕ್ತಿಗಳು ಸೇರಿಕೊಂಡು ಈ ನೆಲದ ಕಾನೂನಿನ ಲೋಪದೋಷಗಳನ್ನೇ ಬಳಸಿಕೊಂಡು ಬಲಿಪಶುವನ್ನಾಗಿ ಮಾಡುತ್ತಿವೆ. ಅದಕ್ಕೆ ಸ್ಪಷ್ಟ ನಿದರ್ಶನ ಈ ಘಟನೆ. ಸುವರ್ಣ ನ್ಯೂಸ್ ಕನ್ನಡ ಚಾನೆಲ್ಲಿನ ಚರ್ಚೆಯೊಂದರಲ್ಲಿ ಅಜಿತ್ ಹನಮಕ್ಕನವರ್ ಅವರ "ಟಿಪ್ಪುವಿನ ಮತಾಂಧ ಮಾನಸಿಕತೆಯ ಮೂಲದ ಬಗ್ಗೆ ಹೇಳಿದ ಪತ್ರಕರ್ತರನ್ನು ರಾತ್ರೋರಾತ್ರಿ ಬಂಧಿಸಲಾಯಿತು" ಎನ್ನುವ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು "ಪ್ರವಾದಿಯವರಿಗೆ ಅವಮಾನ ಮಾಡಿದರು" ಎಂದು ಮಂಗಳೂರು ಮುಸ್ಲಿಮ್ ಎಂಬ ಪೇಸ್ ಬುಕ್ ಪೇಜ್ ಒಂದರಲ್ಲಿ ಅವರ ಮೇಲೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಲಾಯಿತು. ಅಜಿತ್ ಕ್ಷಮೆ ಕೇಳಿದರೂ ಪಟ್ಟು ಬಿಡದ ಮತಾಂಧ ಗುಂಪಿನಿಂದ ಅವರಿಕೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಅಲ್ಲದೆ ಈ ಮತಾಂಧ ಶಕ್ತಿಗಳು ಸುವರ್ಣ ನ್ಯೂಸ್ ಚಾನೆಲ್ಲಿನ ಮಾತೃ ಸಂಸ್ಥೆಯಾದ ಏಷಿಯಾ ನೆಟ್ ಅ್ಯಪ್ ನ ರೇಟಿಂಗ್ ಅನ್ನು 2.4.ಕ್ಕೆ ಇಳಿಸಿದ್ದರು. ಸುವರ್ಣ ನ್ಯೂಸ್ ಆ್ಯಪ್ ನ ರೇಟಿಂಗ್ ಅನ್ನು 2.1 ಕ್ಕೆ ಇಳಿಸಿದ್ದರು. ಈ ಪೇಜ್ ವಿಕೃತಿಯನ್ನು ಮೆರೆದದ್ದು ಇದೇ ಮೊದಲಲ್ಲ. ಪತ್ರಕರ್ತ ಸಂತೋಷ್ ತಮ್ಮಯ್ಯರ ಮೇಲೆ ಈ ಗುಂಪು ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿತ್ತು. ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾದಾಗ, "ಬ್ರಾಹ್ಮಣ ಸತ್ತನೆಂದು" ಸಂಭ್ರಮಿಸಿತ್ತು. ಬಂಟ್ವಾಳದಲ್ಲಿ ಶರತ್ ಮಡಿವಾಳನ ಹತ್ಯೆಯಾದಾಗ, ಬಂಟ್ವಾಳದಲ್ಲಿ ಹೆಣಬಿತ್ತು ಕಲ್ಲಡ್ಕದಲ್ಲಿ ಬೀಳುವುದು ಯಾವಾಗ? ಎನ್ನುವ ಪೋಸ್ಟ್ ಹಾಕಿ ಮರಣದಲ್ಲೂ ವಿಕೃತಿ ಮೆರೆದಿತ್ತು.

                   ಸದಾ ಹಿಂದೂಗಳ ಮೇಲೆ ಕೊಲೆ ಬೆದರಿಕೆ ಹಾಕುತ್ತಾ, ಹಿಂದೂ ಧರ್ಮವನ್ನು, ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿರುವ ಇಂತಹಾ ಸಮಾಜ ಘಾತುಕ ಪೇಜಿನ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿಕೊಳ್ಳಬೇಕಿತ್ತು. ಮಾಜಿ ಮುಖ್ಯಮಂತ್ರಿಯನ್ನು ಅಣಕಿಸಿದುದನ್ನೇ ಗುರಿಯಾಗಿಟ್ಟುಕೊಂಡು ಕೇಸು ದಾಖಲಿಸಿಕೊಂಡ ಪೊಲೀಸರಿಗೆ ಕೊಲೆ ಬೆದರಿಕೆ ಮಹತ್ವದ್ದಾಗಿ ಕಾಣಲೇ ಇಲ್ಲ. ಸ್ವಯಂಪ್ರೇರಿತ ಕೇಸು ಬಿಡಿ, ತಿಂಗಳ ಹಿಂದೆ ಈ ಪೇಜಿನ ಮೇಲೆ ಕೇಸು ದಾಖಲಾಗಿದ್ದರೂ ಇದುವರೆಗೂ ಪೇಜನ್ನು ನಿಷ್ಕ್ರಿಯಗೊಳಿಸಿಲ್ಲ, ಅದರ ನಿರ್ವಾಹಕರನ್ನು ಬಂಧಿಸಿಲ್ಲ ಎಂದಾದರೆ ಅಲ್ಲಿ ಯಾವ ಕಾಣದ "ಕೈ" ಕೆಲಸ ಮಾಡುತ್ತಿದೆ? ರಾಜಕಾರಣಿಗಳ 'ಘನ ಕಾರ್ಯ'ವನ್ನು ಅಣಕಿಸಿದವರನ್ನು ತಕ್ಷಣ ಬಂಧಿಸುವ ಪೊಲೀಸರಿಗೆ ಪ್ರಾಣ ಬೆದರಿಕೆ ಹಾಕಿದವರನ್ನು ಬಂಧಿಸಲು ಹುಟ್ಟುತ್ತಲೇ ಅಸಹನೆಯನ್ನು ಹೊತ್ತುಕೊಂಡು ಬಂದವರ ಭಯ ಕಾಡಿದೆಯೇ? ಹಿಂದೂ ದೇವತೆಗಳನ್ನು ನಿಂದಿಸಿದವರಿಗೆ, ಜನರು ಕಟ್ಟಿದ ತೆರಿಗೆಯ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಭದ್ರತೆ ಕೊಟ್ಟು ಸಾಕುವ ಸರಕಾರ ಅನ್ಯ ಮತೀಯರ ಬಗ್ಗೆ ಪ್ರಶ್ನೆ ಮಾಡಿದ ತಕ್ಷಣ ರಾತ್ರೋರಾತ್ರಿ ಬಂಧಿಸಿ ಬಿಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುತ್ತಿಗೆಗೆ ತೆಗೆದುಕೊಂಡವರೆಲ್ಲಾ ಈಗ ಬಹುಷಃ ಹೊಸ ವರ್ಷದ ಮತ್ತಿನಲ್ಲಿ ತೇಲಾಡುತ್ತಿರಬೇಕು!

                         ಕಲ್ಬುರ್ಗಿ, ಗೌರಿ ಹತ್ಯೆಯ ಬಗ್ಗೆ ಗೋಳೋ ಎಂದು ಅಳುತ್ತಿದ್ದವರಿಗೆಲ್ಲಾ ಸಾಲಾಸಾಲು ಸಂಘದ ಕಾರ್ಯಕರ್ತರು ಕೊಲೆಯಾಗುತ್ತಿದ್ದಾಗ ಕಣ್ಣೀರು ಬತ್ತಿ ಹೋಗಿತ್ತು. ಧಾರವಾಡದ ಸಾಹಿತ್ಯ ಸಂಭ್ರಮದ ಗೋಷ್ಠಿಯೊಂದರಲ್ಲಿ ಕಲಬುರ್ಗಿ ಹತ್ಯೆಯನ್ನು ಕುರಿತು ಅಜ್ಜಂಪುರ ಮಂಜುನಾಥ್ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಜಾತ್ಯಾತೀತ ಸೋಗಿನ ಸಾಹಿತಿಗಳು ದಾಂಧಲೆ ಎಬ್ಬಿಸಿ ಆಕ್ರಮಣಕ್ಕೆ ಉಪಕ್ರಮಿಸಿದ್ದರು. ರಾಜ್ಯದಲ್ಲಿ ಬಲವಂತವಾಗಿ ಮತಾಂಧ ಟಿಪ್ಪುವಿನ ಜಯಂತಿಯನ್ನು ಹೇರಲಾಗಿತ್ತು. ಟಿಪ್ಪುವಿನ ಮತಾಂಧತೆಯನ್ನು ಅನಾವರಣ ಮಾಡಿದವರ ಮೇಲೆಲ್ಲಾ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ, ಉ.ಪ್ರ. ಮುಖ್ಯಮಂತ್ರಿ ಯೋಗಿಯವರನ್ನು ಅಸಭ್ಯವಾಗಿ ಚಿತ್ರಿಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವೇದ, ರಾಮ, ರಾಮಾಯಣ, ಕೃಷ್ಣರು ಸುಳ್ಳು, ಭಗವದ್ಗೀತೆಯನ್ನು ಸುಡಬೇಕು, ಮನುವಾದ, ಜಗತ್ತೇ ಸುಳ್ಳೆಂದು ಹೇಳಿದರೂ ಆರ್ಯರು ವಲಸಿಗರು; ಇಲ್ಲಿನವರನ್ನು ಆಕ್ರಮಿಸಿದರು ಎಂದೆಲ್ಲಾ ನಿತ್ಯ ನಿಜವಾದ ಇತಿಹಾಸವನ್ನೂ, ಹಿಂದೂ ಭಾವನೆಯನ್ನು ಘಾಸಿಗೊಳಿಸುವವರೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಲ್ಲಿ ಪಾರಾಗುತ್ತಿದ್ದಾರೆ. ಆದರೆ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯ ಯಾರಾದರೂ ಸೆಮೆಟಿಕ್ ಮತಗಳ ಹುಟ್ಟನ್ನು ಪ್ರಶ್ನೆ ಮಾಡಿದಾಗ, ಅವುಗಳ ಇತಿಹಾಸವನ್ನು ಹೇಳಿದಾಗ ಇಲ್ಲವಾಗುತ್ತದೆ. ಯಾವ ಅಭಿವ್ಯಕ್ತಿ ಸ್ವಾತಂತ್ರ್ಯ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆಯನ್ನೇ ಕೋಮುವಾದಿ ಮಾಡಿಬಿಟ್ಟಿದೆಯೋ, ದೇಶದ ವಿರುದ್ಧ, ಸೈನಿಕರ ವಿರುದ್ಧ ಭಾಷಣಗಳನ್ನು ಮಾಡಿ, ಘೋಷಣೆಗಳನ್ನು ಕೂಗುತ್ತದೆಯೋ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯ ಸೆಮೆಟಿಕ್ ಮತಗಳ ಮೂಲ ಕೆದಕುವಾಗ ಅಸಹಿಷ್ಣುತೆಯ ರೂಪ ತಾಳುತ್ತಿದೆ.


                   ಐದು ವರ್ಷಗಳ ತುಘಲಕ್ ದರ್ಬಾರ್ ಈಗಲೂ ಮುಂದುವರೆದಿದೆ. ಸಾಲಾಸಾಲು ಹೆಣಗಳು ಬಿದ್ದಾಗಲೂ ಹೊದ್ದು ಮಲಗಿದ್ದ ಸರಕಾರ ಯಕಶ್ಚಿತ್ ಕೊಲೆ ಬೆದರಿಕೆಗೆಲ್ಲಾ ಎದ್ದು ಕುಳಿತು ಬಿಡುವುದೇ? ಅಲ್ಲಾ... ಆರು ವರ್ಷಗಳಿಂದ ಸರಿಯಾಗಿ ಗೃಹ ಸಚಿವರೇ ಇಲ್ಲದಿರುವಾಗ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿವಾಗಿರುವುದಾದರೂ ಹೇಗೆ? "ಅಹಿಂಸೈವಾಸಾಧು ಹಿಂಸಾ ಪಶುಮ್ ಶ್ರುತಿಚೋದನಾತ್" - ಹಂತಕರಿಗೂ, ಸಮಾಜದ್ರೋಹಿಗಳಿಗೂ ನೀಡಿದ ದಂಡನೆಯು ಯಜ್ಞದ ಬಲಿಪ್ರದಾನಕ್ಕೆ ಸಮನಾದ ಶಿಷ್ಟ ಕಾರ್ಯ ಎಂದಿದ್ದಾನೆ ಕೌಟಿಲ್ಯ ಅರ್ಥಶಾಸ್ತ್ರದಲ್ಲಿ. ಯಾಗ ಮಾಡಿ ಅಧಿಕಾರ ಪಡೆದುಕೊಂಡರಾಯಿತೇ ಮುಖ್ಯಮಂತ್ರಿಗಳೇ? ಯಾಗದಷ್ಟೇ ಪುಣ್ಯ ಕಾರ್ಯವಾದ ಸಮಾಜಘಾತುಕರನ್ನು ಬಂಧಿಸಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ತರುವುದನ್ನು ಬಿಟ್ಟು ಎಲ್ಲಿ ಮಲಗಿದ್ದೀರಿ? ಯಾರ್ಯಾರದೋ ಋಣದಲ್ಲಿ ಯಾಕಿರುತ್ತೀರಿ ಮುಖ್ಯಮಂತ್ರಿಗಳೇ? ನೀವು ಅಧಿಕಾರ ಪಡೆದುಕೊಂಡ ರಾಜ್ಯದ ಜನತೆಯ ಋಣದಲ್ಲಿದ್ದೀರಿ ಎನ್ನುವುದನ್ನು ಮರೆಯಬೇಡಿ.

ಗುಬ್ಬಚ್ಚಿಗಳು ಗಿಡುಗಗಳಾಗಿದ್ದವು; ಗಿಡುಗಗಳೀಗ ಗುಲಾಮರಾಗುತ್ತಿವೆ!

ಗುಬ್ಬಚ್ಚಿಗಳು ಗಿಡುಗಗಳಾಗಿದ್ದವು; ಗಿಡುಗಗಳೀಗ ಗುಲಾಮರಾಗುತ್ತಿವೆ!


            ಕೊನೆಗೂ ಖಲಿಸ್ತಾನ್ ಲಿಬರೇಷನ್ ಪೋರ್ಸ್(ಕೆ.ಎಲ್.ಎಫ್) ಎಂಬ ಭಯೋತ್ಪಾದಕ ಸಂಘಟನೆಯ ಮೇಲೆ ನಿಷೇಧ ಹೇರಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ(ಯುಎಪಿಎ)ಯಡಿಯಲ್ಲಿ ನಿಷೇಧವಾಗಿರುವ ನಲವತ್ತನೇ ಸಂಸ್ಥೆ ಇದು. ಹಾಗೆಯೇ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್, ಖಲಿಸ್ತಾನ್ ಕಮಾಂಡೋ ಫೋರ್ಸ್, ಖಲೀಸ್ತಾನ್ ಜಿಂದಾಬಾದ್ ಫೋರ್ಸ್ ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಷನ್ ಎಂಬ ನಾಲ್ಕು ನಿಷೇಧಿತ ಸಿಖ್ ಭಯೋತ್ಪಾದಕ ಸಂಘಟನೆಗಳಂತೆ ತಾನೂ ಕೂಡಾ ದೇಶದ್ರೋಹಿ ಎಂದು ಬಹಿರಂಗವಾಗಿ ಸಾರಿಕೊಂಡಿತ್ತದು. ಅಸಲಿಗೆ ಅದನ್ನು ಎಂದೋ ನಿಷೇಧಿಸಬೇಕಿತ್ತು. 1986ರಲ್ಲಿ ಅದು ಹುಟ್ಟಿಕೊಂಡಿದ್ದೇ ಸಶಸ್ತ್ರ ಕ್ರಾಂತಿಯ ಮೂಲಕ ಸ್ವತಂತ್ರ ರಾಜ್ಯವಾದ ಖಲಿಸ್ತಾನವನ್ನು ಸ್ಥಾಪಿಸುವ ಉದ್ದೇಶದೊಂದಿಗೆ. 1994ರವರೆಗೆ ಖಲಿಸ್ತಾನೀ ಸ್ವಾತಂತ್ರ್ಯ ಚಟುವಟಿಕೆಗಳನ್ನು ಉತ್ತೇಜಿಸುತ್ತಾ ಬೆಂಗಾವಲಾಗಿ ನಿಂತಿದ್ದ ಅರೂರ್ ಸಿಂಗನಿಂದ ಸ್ಥಾಪಿಸಲ್ಪಟ್ಟಿದ್ದ ಈ ಸಂಘಟನೆ ಬಳಿಕ ಕಳೆದ ಏಪ್ರಿಲ್ನಲ್ಲಿ ಪಟಿಯಾಲಾ ಕೇಂದ್ರೀಯ ಜೈಲಿನಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟ ಹರ್ಮೀಂದರ್ ಸಿಂಗ್ ಮಿಂಟೂನ ನೇತೃತ್ವದಲ್ಲಿ ಬಲಗೊಂಡಿತ್ತು. ಐಎಸ್ಐ ಮತ್ತು ಹಲವು ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಹರಮಿಂದರ್ ಸಿಂಗ್ ಮಿಂಟೂ ಥಾಯ್ಲೆಂಡ್ನಲ್ಲಿ ನೆಲೆಸಿ ಖಲಿಸ್ತಾನ ಚಳವಳಿಗೆ ದೇಣಿಗೆ ಸಂಗ್ರಹಿಸುತ್ತಿದ್ದ. ನಕಲಿ ಪಾಸ್ಪೋರ್ಟ್ ಮತ್ತು ವೀಸಾ ಬಳಸಿ ಪಾಕಿಸ್ತಾನ, ಶ್ರೀಲಂಕಾ ಮತ್ತು ಯೂರೋಪ್ನ ಹಲವು ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದ್ದ. 2014ರ ನವೆಂಬರ್ನಲ್ಲಿ ಥಾಯ್ಲೆಂಡ್ನಿಂದ ಹಿಂತಿರುಗಿದಾಗ ಆತನನ್ನು ಬಂಧಿಸಲಾಗಿತ್ತು. ಬಹುಷಃ ಈಗಿರುವವರು “ಆಕಸ್ಮಿಕ ಪ್ರಧಾನಿ” ಅಲ್ಲ ಎನ್ನುವುದರ ಅರಿವಿರಲಿಲ್ಲವೇನೋ! 10ಕ್ಕೂ ಹೆಚ್ಚು ಭಯೋತ್ಪಾದನಾ ದಾಳಿಗಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಪಂಜಾಬ್ನ ನಾಭಾ ಸೆರೆಮನೆಯಲ್ಲಿ ಬಂಧಿಯಾಗಿದ್ದ ಮಿಂಟೂ ಹಾಗೂ ಇತರ ಐವರನ್ನು 12 ಜನ ಬಂದೂಕುಧಾರಿ ಯುವಕರ ಗುಂಪೊಂದು ಪೊಲೀಸ್ ಸಮವಸ್ತ್ರದಲ್ಲಿ ಬಂದು ಬಿಡಿಸಿಕೊಂಡು ಹೋಗಿತ್ತು. ಮರುದಿನವೇ ಆತನನ್ನು ಸೆರೆ ಹಿಡಿಯಲಾಗಿತ್ತು. ಅದು ಮೋದಿ ಸರ್ಕಾರದ ತಾಕತ್ತು!

                ಅದು ಬರಿಯ ಪ್ರತ್ಯೇಕ ಸಿಖ್ ರಾಷ್ಟ್ರದ ಉದ್ದೇಶಕ್ಕಾಗಿನ ಹೋರಾಟವಲ್ಲ. ಅಲ್ಲಿ ತೆರೆಯ ಹಿಂದೆ ಭಾರತವನ್ನು ಕಂಡರಾಗದ ಪಾಕಿಸ್ತಾನವೆಂಬ ಮತ್ಸರಿಯೊಂದಿದೆ. ಭಾರತವನ್ನು ನೇರವಾಗಿ ಎದುರಿಸುವ ತಾಕತ್ತು ಇಲ್ಲದ, ಭಾರತವನ್ನು ಛಿದ್ರಗೊಳಿಸುವ ತನ್ನ ಉದ್ದೇಶ ಸಾಫಲ್ಯಗೊಳ್ಳದೇ ಇದ್ದಾಗ ಅದು ಇಳಿದದ್ದು ಇಂತಹಾ ಕಾರ್ಯಕ್ಕೆ. ಎಲ್ಲಿ ಅಸಮಧಾನ ಇದೆಯೋ ಅದನ್ನು ಮತ್ತಷ್ಟು ಉಬ್ಬಿಸಿ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ, ಸಮಾಜವನ್ನು ಪ್ರಕ್ಷುಬ್ಧಗೊಳಿಸುವ ಯೋಜನೆ ಅದರದ್ದು. 1970 ಹಾಗೂ 80ರ ದಶಕದಲ್ಲಿ ಖಲಿಸ್ತಾನೀ ಭಯೋತ್ಪಾದನೆಗೆ ನೀರೆರೆದ ಪಾಕಿಸ್ತಾನ ಇಂದಿಗೂ ತನ್ನ ಚಾಳಿ ನಿಲ್ಲಿಸಿಲ್ಲ. ಹಾಗಾಗಿಯೇ ಭಾರತ ನಭದ ಗ್ರಹಗಳಿಗೆ ಇಳಿವ ವಿಧಾನ ಹುಡುಕುತ್ತಿದ್ದರೆ ಪಾಕಿಸ್ತಾನ ಇನ್ನೂ ಭಾರತದೊಳಕ್ಕೆ ನುಸುಳುವುದರಲ್ಲೇ ಕೈ ಸುಟ್ಟುಕೊಳ್ಳುತ್ತಿದೆ! ಹಿರಿಯ ಗೂಢಚಾರ ಬಿ.ರಾಮನ್'ರ "ದಿ ಕೌಬಾಯ್ಸ್ ಆಫ್ ರಾ" ರಿಚರ್ಡ್ ನಿಕ್ಸನ್ , ಯಾಹ್ಯಾಖಾನ್ ಸರಕಾರದ ಜೊತೆ ಸೇರಿ 1971ರಲ್ಲಿ ಪ್ರತ್ಯೇಕತಾವಾದಿ ಚಳವಳಿ ಹುಟ್ಟುಹಾಕಲು ನಡೆಸಿದ ರಹಸ್ಯ ಯೋಜನೆಯನ್ನು ಎಳೆ ಎಳೆಯಾಗಿ ವಿವರಿಸುತ್ತದೆ.

                ದೇಶ ವಿಭಜನೆ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂಸ್ತಾನ ಮತ್ತು ಮುಸ್ಲಿಮರಿಗಾಗಿ ಪಾಕಿಸ್ತಾನ ರಚನೆಯಾಗುವಂತೆ ತಮಗಾಗಿ ಪಂಜಾಬ್, ಲಾಹೋರ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ತಾನದ ಕೆಲ ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಖಲಿಸ್ತಾನ ರಚನೆಯಾಗಬೇಕೆಂಬುದು ಕೆಲ ಸಿಖ್ಖರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಆದಾಗ್ಯೂ ಪ್ರತ್ಯೇಕತಾವಾದಿ ಹೋರಾಟ ನಿಲ್ಲಲಿಲ್ಲ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗ ತಾವು ಪ್ರತ್ಯೇಕಗೊಳ್ಳಬೇಕೆಂದು ಸಿಖ್ ಗುಂಪೊಂದು ದಂಗೆಯೆದ್ದಿತ್ತು. ಭಾಷಾವಾರು ರಾಜ್ಯ ಪುನರ್ ವಿಂಗಡನೆಯಾದಾಗ ಪ್ರತ್ಯೇಕ ಪಂಜಾಬ್ ರಾಜ್ಯ ಅಸ್ತಿತ್ವಕ್ಕೆ ಬಂದರೂ ಈ ಪ್ರತ್ಯೇಕವಾದಿ ಗುಂಪು ಸಮಾಧಾನಗೊಳ್ಳಲಿಲ್ಲ. ಈ ನಡುವೆ ಪ್ರತ್ಯೇಕ ಪಂಜಾಬ್ ರಾಜ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಅಕಾಲಿ ದಳ ಪ್ರತ್ಯೇಕ ಸಿಖ್ ರಾಷ್ಟ್ರದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. 1971ರಲ್ಲಿ ಜಗ್ಜಿತ್ ಸಿಂಗ್ ಚೌಹಾಣ್ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರತ್ಯೇಕ ಖಲಿಸ್ತಾನ ರಚಿಸುವ ಬಗ್ಗೆ, ಅದಕ್ಕಾಗಿ ಅನಿವಾಸಿ ಸಿಖ್ಖರು ಧನಸಹಾಯ ಮಾಡಬೇಕು ಎಂದು ಜಾಹೀರಾತು ನೀಡಿದ್ದ. ಇಂದಿರಾ ಸರಕಾರದ ಜೊತೆಗಿನ ಮಾತುಕತೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದಾಗ ಜಗ್ಜಿತ್ ಸಿಂಗ್ ‘ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್’  ರಚಿಸಿದ. ಇತ್ತ ಅಮೃತ್ಸರದಲ್ಲಿ ಬಲ್ಬೀರ್ ಸಿಂಗ್ ಸಂಧು ಖಲಿಸ್ತಾನದ ಪ್ರತ್ಯೇಕ ಸ್ಟಾಂಪ್ ಹಾಗೂ ಕರೆನ್ಸಿಯನ್ನು ಬಿಡುಗಡೆ ಮಾಡಿದ! ಇಂದಿರಾ ಗಾಂಧಿಯೇ ಬೆಳೆಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ತಿರುಗಿಬಿದ್ದು ಖಲಿಸ್ತಾನಿಗಳ ಜೊತೆ ಸೇರಿಕೊಂಡದ್ದು, ಅಪಾರ ಶಸ್ತ್ರಾಸ್ತ್ರಗಳ ಸಹಿತ ಸ್ವರ್ಣಮಂದಿರವನ್ನು ತೆಕ್ಕೆಗೆ ತೆಗೆದುಕೊಂಡು ಭಕ್ತರನ್ನು ಒತ್ತೆಯಾಳಾಗಿ ಇಟ್ಟುಕೊಂಡದ್ದು, ಮುಂದೆ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಸಹಿತ ಐನೂರಕ್ಕೂ ಹೆಚ್ಚು ಸಿಖ್ಖರು ಸಾವನ್ನಪ್ಪಿ, ಹಲವಾರು ಸಾವಿರ ಜನ ಗಾಯಗೊಂಡದ್ದು ಸಿಖ್ಖರ ಕೋಪವನ್ನು ಕಾಂಗ್ರೆಸ್ಸಿನತ್ತ ತಿರುಗಿಸಿತು. ಪ್ರತೀಕಾರವಾಗಿ ನಡೆದ ಇಂದಿರಾ ಹತ್ಯೆ, ಹಾಗೂ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡ ಈಗ ಇತಿಹಾಸ! ಸ್ವರ್ಣ ಮಂದಿರದ ಮೇಲಿನ ದಾಳಿಗೆ ಪ್ರತೀಕಾರವಾಗಿ 1985ರಲ್ಲಿ ಏರ್ ಇಂಡಿಯಾ-184 ವಿಮಾನವನ್ನು ಸ್ಫೋಟಿಸಲಾಗಿ 329 ಮಂದಿ ಮೃತಪಟ್ಟಿದ್ದರು. ಮುಂದೆ ಆಪರೇಷನ್ ಬ್ಲಾಕ್ ಥಂಡರ್ ಎಂಬ ಸರಣಿ ಕಾರ್ಯಾಚರಣೆ ಖಲಿಸ್ತಾನ್ ಭಯೋತ್ಪಾದನೆಯನ್ನು ಅಕ್ಷರಶಃ ತಣ್ಣಗಾಗಿಸಿಬಿಟ್ಟಿತ್ತು.

                 ಅಲ್ಲಿಂದಾಚೆಗೆ ಪಂಜಾಬ್ ಶ್ರೀಮಂತ ಕೃಷಿ, ಉದ್ಯಮ ಹಾಗೂ ಹಣದ ಹರಿವಿನಿಂದ ಶಾಂತಿ ಹಾಗೂ ಸಂಪದ್ಭರಿತ ರಾಜ್ಯಗಳಲ್ಲೊಂದಾಗಿಬಿಟ್ಟಿತ್ತು. ಆದರೆ ಖಲಿಸ್ತಾನದ ಬೇಡಿಕೆ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಆಗಲೂ ಇತ್ತು. ಅಮೇರಿಕಾ, ಯೂರೋಪ್, ಕೆನಡಾಗಳ ರಾಜಕಾರಣ ಈ ದೇಶಗಳಲ್ಲಿರುವ ಸಿಖ್ಖರಲ್ಲಿ ಪ್ರತ್ಯೇಕತಾ ಭಾವನೆಯನ್ನು ಪೋಷಿಸಿಕೊಂಡು ಬರುವಲ್ಲಿ ಸಹಾಯಕವಾಗಿತ್ತು. ಅದರಲ್ಲೂ ದಲ್ ಖಲ್ಸಾ ಮತ್ತು ದುಮ್ದಾಮಿ ತಕ್ಸಲ್ ಮೊದಲಾದ ಸಿಖ್ ಸಂಘಟನೆಗಳು ಕೆಲವು ರಾಜಕೀಯ ಪಕ್ಷಗಳ ರಹಸ್ಯ ಪೋಷಣೆಯೊಂದಿಗೆ ಖಾಲಿಸ್ತಾನ್ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡಿದ್ದವು. ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಹತರಾದ ಭಿಂದ್ರನ್ ವಾಲೆ ಹಾಗೂ ಸಂಗಡಿಗರಿಗೆ ಸ್ಮಾರಕವನ್ನೂ ನಿರ್ಮಿಸಲು ಇವು ಯಶಸ್ವಿಯಾಗಿದ್ದವು. ಖಲಿಸ್ತಾನಿ ಉಗ್ರರು ಯುಎಇನಲ್ಲಿ ಇತ್ತೀಚೆಗಷ್ಟೇ ಕೇಂದ್ರೀಯ ನೆಲೆಯೊಂದನ್ನು ಸ್ಥಾಪಿಸಿದ್ದರು. ಭಾರತದ ಬಗ್ಗೆ ಜಾಗತಿಕವಾಗಿ ಕೆಟ್ಟ ಭಾವನೆ ಬಿತ್ತುವುದರ ಜೊತೆಗೆ ಪಂಜಾಬ್ನಲ್ಲಿ ಭಯೋತ್ಪಾದನೆಗೆ ಕಾಯಕಲ್ಪ ನೀಡಿ, ಹಿಂಸಾಚಾರ ಭುಗಿಲೇಳುವಂತೆ ಮಾಡಲು ಯುಎಇಯ ಪ್ರತಿಷ್ಠಿತ ಶೂಟಿಂಗ್ ಕ್ಲಬ್ನಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಪಂಜಾಬ್ನ ಕುಖ್ಯಾತ ಅಪರಾಧಿಗಳನ್ನು ಸಂರ್ಪಸಿ ಅವರಿಗೆ ಹಣ ನೀಡಿ ಹಿಂದೂ ಮುಖಂಡರ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆಗೈಯುವ ಮೂಲಕ ಪಂಜಾಬ್ನಲ್ಲಿ ಕೋಮುಗಲಭೆ ಸೃಷ್ಟಿಸುವುದು ಉಗ್ರರ ಹುನ್ನಾರವಾಗಿತ್ತು. ಅಪರೇಷನ್ ಬ್ಲೂಸ್ಟಾರ್ ನೇತೃತ್ವ ವಹಿಸಿದ್ದ ನಿವೃತ ಲೆ.ಜ. ಕುಲದೀಪ್ ಸಿಂಗ್ ಬ್ರಾರ್ ಮೇಲೆ 2013ರಲ್ಲಿ ಲಂಡನ್ನಿನಲ್ಲಾದ ದಾಳಿ, ಸೆರೆಮನೆಗೆ ದಾಳಿ ಮಾಡಿ ಮಿಂಟೂ ಸಹಿತ ಐವರನ್ನು ಬಿಡಿಸಿಕೊಂಡ ಘಟನೆ, ಇತ್ತೀಚೆಗಷ್ಟೇ ಕಾರಿನಲ್ಲಿ ಭಾರಿ ಸ್ಫೋಟಕಗಳನ್ನಿರಿಸಿಕೊಂಡು ದೆಹಲಿಯ ಮೇಲೆ ದಾಳಿಗೆ ಬಂದು ಸಿಕ್ಕಿಬಿದ್ದ ಪ್ರಕರಣ, ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ದಿನ ಸ್ವರ್ಣಮಂದಿರದ ಎದುರು ಖಡ್ಗ ಹಿಡಿದು ಖಲಿಸ್ತಾನ್ ಪರ ಘೋಷಣೆ ಕೂಗಿದ್ದು, ನಿರಂಕಾರಿ ಭವನದ ಮೇಲಾದ ದಾಳಿ ಇವೆಲ್ಲಾ ಇದರ ಭಾಗಗಳೇ. ಅವರ ನೆಲೆಗಳೀಗ ಇಟಲಿ, ಆಸ್ಟ್ರೇಲಿಯಾ, ಜರ್ಮನಿ, ಬ್ರಿಟನ್, ಕೆನಡಾ, ಯುಎಇ ಸಹಿತ ಹಲವು ದೇಶಗಳಲ್ಲಿವೆ. ಕೆನಡಾದಲ್ಲಂತೂ ಜನಸಂಖ್ಯೆ, ಉದ್ಯಮ ಹಾಗೂ ರಾಜಕೀಯದಲ್ಲಿ ಪ್ರಭಾವಿಗಳಾಗಿರುವ ಸಿಖ್ಖರು ಕೆನಡಾ ಸರಕಾರ ಸಿಖ್ ಪ್ರತ್ಯೇಕತಾವಾದಿಗಳ ಬಗ್ಗೆ ಮೃಧು ಧೋರಣೆ ತಳೆಯುವಂತೆ ಮಾಡಲು ಸಫಲರಾಗಿದ್ದಾರೆ.

                   ಮೋದಿಯವರು ಪ್ರಧಾನಿಯಾದ ಬಳಿಕ ಕಾಶ್ಮೀರ ಗಡಿಯಲ್ಲಿ ಸತತ ಮುಖಭಂಗಕ್ಕೊಳಗಾದ ಪಾಕಿಸ್ತಾನ ಮತ್ತೆ ಸಿಖ್ ಪ್ರತ್ಯೇಕತಾವಾದಿಗಳನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿತು. ಪ್ರತ್ಯೇಕತಾವಾದಿಗಳಿಗೆ ಶಸ್ತ್ರಾಸ್ತ್ರ ಹಾಗೂ ಧನ ಸಹಾಯವನ್ನು ಒದಗಿಸಿತು. ಸಿಖ್ಖರ ಪವಿತ್ರ ಗ್ರಂಥವನ್ನು ಅಪಚಾರ ಗೈದು ಪರಾರಿಯಾಗುವ ಛದ್ಮವೇಶಧಾರಿಗಳನ್ನೂ ಅದು ನೇಮಿಸಿತು. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಸಿಖ್ ಯುವಕರನ್ನು ಕೆರಳಿಸಿತು. ಹಿಂದುತ್ವದ ವಿರುದ್ಧದ ನಿರೂಪಣೆಯನ್ನು ಸಿಖ್ ಹಿಂಸಾಚಾರದ ನಿರೂಪಣೆಗೆ ಸರಿ ಹೊಂದುವಂತೆ ರಾಷ್ಟ್ರಮಟ್ಟದಲ್ಲಿ ಕಥೆ ಸೃಷ್ಟಿಸುವ ಬರಹಗಾರರನ್ನು ಬಿಸ್ಕತ್ ಹಾಕಿ ಬಳಸಿತು. ಜಗದೀಶ್ ಕುಮಾರ್ ಕೊಲೆ ಪ್ರಕರಣ ತನಿಖೆ ವೇಳೆ ರಾ.ಸ್ವ.ಸಂ., ಶಿವಸೇನೆ, ಹಿಂದೂ ತಖ್ತ್ ಸಂಘಟನೆಗಳ ಮುಖಂಡರ (ಒಟ್ಟು 6) ಕೊಲೆಗಳಲ್ಲಿ ಐಎಸ್ಐ ಕೈವಾಡ ಬೆಳಕಿಗೆ ಬಂತು. ಖಲಿಸ್ತಾನ್ ಬೆಂಬಲಿಗರಿಂದ ರಾ.ಸ್ವ.ಸಂ.ದ ಕಾರ್ಯಕರ್ತರ, ಹಿಂದೂ ಮುಖಂಡರ ಹತ್ಯೆ ಮಾಡಿಸಿ ಕೋಮುದಳ್ಳುರಿ ಸೃಷ್ಟಿಸುವುದು ಐಎಸ್ಐ ಉದ್ದೇಶವಾಗಿತ್ತು.  ಪಾಕಿಸ್ತಾನದ ಸೈನ್ಯದಲ್ಲಿ ಚೌಧರಿ ಸಾಹಿಬ್ ಎಂದೇ ಪ್ರಸಿದ್ಧನಾದ ಲೆ. ಕ. ಶಾಹಿದ್ ಮಹಮೂದ್ ಮಾಲ್ಹಿ ನೇತೃತ್ವದಲ್ಲಿ "ರೆಫರೆಂಡಮ್ 2020" ಸಿದ್ಧಗೊಳಿಸಿ ಸಿಖ್ ಪ್ರತ್ಯೇಕವಾದಿಗಳಿಗೆ ಹಂಚಿತು. ಪಂಜಾಬನ್ನು 2020ರೊಳಗೆ ಸ್ವತಂತ್ರಗೊಳಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಬೇಕಾದ ಕಾರ್ಯಾಚರಣೆಗಳ ಬಗ್ಗೆ ಹಾಗೂ ವಿಶ್ವಸಂಸ್ಥೆಯ ಮಧ್ಯಪ್ರದೇಶದೊಂದಿಗೆ ಪಂಜಾಬಿನಲ್ಲಿ ಜನಮತ ಸಂಗ್ರಹಣೆ ಮಾಡುವ ಬಗ್ಗೆ ಈ ದಸ್ತಾವೇಜಿನಲ್ಲಿ ವಿವರಿಸಲಾಗಿದೆ. ಭಾರತ ಸರಕಾರದ ವಿರೋಧದ ನಡುವೆಯೂ ರೆಫರೆಂಡಮ್ 2020ಯನ್ನು ಉದ್ಘೋಷಿಸುವ ಲಂಡನ್ ಘೋಷಣೆ ಕಾರ್ಯಕ್ರಮಕ್ಕೆ ಬ್ರಿಟನ್ ಸರಕಾರ ಅನುಮತಿ ಕೊಟ್ಟಿತ್ತು. ಜೊತೆಗೆ ವಿವಿಧ ಸಂದರ್ಭಗಳಲ್ಲಿ ಅಮೇರಿಕಾ ಹಾಗೂ ಕೆನಡಾಗಳಲ್ಲಿ ಭಾರತೀಯ ರಾಜತಾಂತ್ರಿಕ ವರ್ಗಕ್ಕೆ ಗುರುದ್ವಾರ ಪ್ರವೇಶವನ್ನು ನಿರಾಕರಿಸಲಾಗಿತ್ತು. 2015ರ ಬಳಿಕದ ಮೂರು ವರ್ಷಗಳಲ್ಲಿ ಐವತ್ತರಷ್ಟು ಖಲಿಸ್ತಾನೀ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಐಎಸ್ಐ, ಸಿಖ್ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ, ಕಾಶ್ಮೀರದ ಗಡಿಯಲ್ಲಿ ಕಾರ್ಯಾಚರಿಸುವ ಭಯೋತ್ಪಾದಕ ಸಂಘಟನೆಗಳೊಂದಿಗೆ ಬೆಸೆಯಲು ಯತ್ನಿಸುತ್ತಿದೆ. ಭಯೋತ್ಪಾದಕ ಝಾಕೀರ್ ಮೂಸಾ ಇದರ ರೂವಾರಿ. ಕಾಶ್ಮೀರದ ವಿದ್ಯಾರ್ಥಿಗಳು ಕೆಲವರು ಉದ್ದೇಶಪೂರ್ವಕವಾಗಿ ಪಂಜಾಬಿನ ವಿದ್ಯಾಲಯಗಳಲ್ಲಿ ನೇಮಕಾತಿ ಪಡೆದು ಈ ಎರಡೂ ಭಯೋತ್ಪಾದಕ ಗುಂಪುಗಳ ನಡುವೆ ಕೊಂಡಿಯಾಗಿ ಕಾರ್ಯವೆಸಗುತ್ತಿದ್ದಾರೆ! ಇದರ ಜೊತೆಗೆ ಹಿಂದೂ ರಾಷ್ಟ್ರವಾದಿಗಳು ಹಾಗೂ ಭಾರತ ಸರಕಾರ ಸಿಖ್ಖರನ್ನು ತುಳಿಯುತ್ತಿದ್ದಾರೆ ಎನ್ನುವ ಭಾವನೆಯನ್ನು ಸಿಖ್ ಯುವಕರ ತಲೆಯಲ್ಲಿ ಇಂದಿಗೂ ತುಂಬಿಸಲಾಗುತ್ತಿದೆ. ಭಾರತದ ಸಂಸ್ಕೃತಿ, ಮತ ಸಾಮರಸ್ಯ ಹಾಗೂ ವೈವಿಧ್ಯತೆಗಳ ಅರಿವಿಲ್ಲದ ನವ ಸಿಖ್ ಪೀಳಿಗೆ ಸುಲಭವಾಗಿ ಈ ಮತಾಂಧರ ಕೈವಶವಾಗುತ್ತಿದೆ.

                ಇದಲ್ಲದೆ ಪಾಕಿಸ್ತಾನ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಹಾಗೂ ನಕಲಿ ನೋಟುಗಳನ್ನು ಫಿರೋಜ್ಪುರ್, ಪಠಾನ್ಕೋಟ್, ತಾರಾಂತರಣ್, ಮತ್ತು ಗುರುದಾಸ್ಪುರದ ಗಡಿ ಜಿಲ್ಲೆಗಳ ಮೂಲಕ ಪಂಜಾಬಿಗೆ ಕಳ್ಳಸಾಗಾಟ ಮಾಡಿದೆ. ಸುಮಾರು ಎಂಟೂವರೆ ಲಕ್ಷ ಪಂಜಾಬೀ ಯುವಕರು ಮಾದಕ ದ್ರವ್ಯಗಳ ದಾಸರಾಗಿದ್ದಾರೆ. ಇಂತಹಾ ಯುವಕರಿಗೆ ಉಗ್ರಗಾಮೀ ಚಟುವಟಿಕೆಗಳ ಬಗ್ಗೆ ಬೋಧಿಸಲಾಗುತ್ತಿದೆ. ಇದಲ್ಲದೆ ಖಲಿಸ್ತಾನಿ ಉಗ್ರರಿಗೆ ತನ್ನ ಸ್ನೇಹಿತ ಟರ್ಕಿಯ ಸಹಾಯ ಸಿಗುವಂತೆಯೂ ಮಾಡಿದೆ. ಹಲವಾರು ಖಲೀಸ್ಥಾನಿ ಉಗ್ರಗಾಮಿಗಳಿಗೆ ಪಾಕ್ ಆಶ್ರಯತಾಣ. ಐಎಸ್ಐ ಜನರಲ್ಗಳಂತೂ ಬಹಿರಂಗವಾಗಿ ಖಲಿಸ್ತಾನ್ ಉಗ್ರವಾದವನ್ನು ಬೆಂಬಲಿಸುತ್ತಾರೆ. ಇತ್ತೀಚೆಗೆ ಪಾಕ್ ಸರಕಾರ ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಹತರಾದ ಸಿಖ್ಖರ ನೆನಪಿಗಾಗಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತು. ಬಳಿಕ ಹೆಲ್ಮೆಟ್ ಧರಿಸುವುದರಿಂದ ಸಿಖ್ಖರಿಗೆ ವಿನಾಯಿತಿ ನೀಡಿತು. ಕರ್ತಾರ್ಪುರ ಧಾರ್ಮಿಕ ಕಾರಿಡಾರ್ ತೆರೆಯಿತು. ಇವೆಲ್ಲದರ ಹಿಂದೆ ಏನೋ ದುರುದ್ದೇಶವಂತೂ ಖಂಡಿತಾ ಇದೆ. ಅಲ್ಲಿ ಭೇಟಿ ನೀಡುವ ಯಾತ್ರಿಕರನ್ನು ಉಗ್ರಗಾಮಿಗಳಾಗಿ ಪರಿವರ್ತಿಸುವ ಹವಣಿಕೆ ಪಾಕಿನದ್ದಾಗಿರಬಹುದು. ಕರ್ತಾರ್ಪುರ  ಕಾರಿಡಾರಿಗೆ ಅಡಿಗಲ್ಲು ಹಾಕಿದ ಸಮಾರಂಭದಲ್ಲಿ ಹಫೀಜ್ ಸಯೀದ್ ಜೊತೆ ವೇದಿಕೆ ಹಂಚಿಕೊಂಡಿದ್ದ ಖಲಿಸ್ತಾನೀ ಉಗ್ರ ಗೋಪಾಲ್ ಸಿಂಗ್ ಚಾವ್ಲಾನ ಜೊತೆ ಸಿಧು ಎಂಬ ಟ್ರಾಜಿಡಿಯನ್ ಫೋಟೋ ತೆಗೆಸಿಕೊಂಡದ್ದು, ಬಳಿಕ ಸಿಧು ತಾನು ರಾಹುಲ್ ಗಾಂಧಿಯ ನಿರ್ದೇಶನದಂತೆ ಅಲ್ಲಿ ಹೋಗಿದ್ದೆ ಎಂದದ್ದು ನೆನಪಿರಬಹುದು. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ದೇಶದ್ರೋಹಿಗಳೊಡನೆ ಕೈ ಜೋಡಿಸಿದೆಯೇ?

               ಬಾಬಾ ಬೂತಾ ಸಿಂಗನಿಂದ ಆರಂಭಗೊಂಡ ನಿರಾಂಕರಿ ಮಿಷನ್ " ದೇವರು ಒಬ್ಬನೇ. ಆತ ಎಲ್ಲಾ ಕಡೆಯಲ್ಲೂ ಇದ್ದಾನೆ. ಆದರೆ ಆತನನ್ನು ಅರಿಯಲು ಗುರುವೊಬ್ಬನ ಅವಶ್ಯಕತೆ ಇದೆ" ಎನ್ನುತ್ತದೆ. ಆದರೆ ಗುರುಗ್ರಂಥ ಸಾಹಿಬ್ ಕಡೆಗೆ ಮಾತ್ರ ನಿಷ್ಠೆಯಿರಬೇಕು ಎನ್ನುವ ಸಿಖ್ ಮೂಲಭೂತವಾದಕ್ಕೆ ಈ ಗುಂಪು ಪಾಷಂಡಿಗಳಂತೆ ಕಂಡಿತು. ಖಲಿಸ್ತಾನೀ ಉಗ್ರರ ಮೊದಲ ಗುರಿ ಇವರೇ. 1978ರಲ್ಲಿ 13 ನಿರಾಂಕರಿಗಳನ್ನು ಕೊಂದ ಖಲಿಸ್ತಾನೀ ಉಗ್ರರು 1980ರಲ್ಲಿ ನಿರಾಂಕರಿಗಳ ಗುರು ಬಾಬಾ ಗುರುಬಚನ್ ಸಿಂಗರನ್ನು ಹತ್ಯೆಗೈದಿದ್ದರು. ಪಾಕಿಸ್ತಾನ ಪ್ರೇರಿತ ಖಲಿಸ್ತಾನೀ ಭಯೋತ್ಪಾದನೆಯ ಜೊತೆಜೊತೆಗೆ ಕುರಾನ್ ಮಾತ್ರ ಸತ್ಯ ಎನ್ನುವ ಇಸ್ಲಾಂ ಮತಾಂಧತೆ ಖಲಿಸ್ತಾನೀ ಉಗ್ರರಲ್ಲೂ ತುಂಬಿತು. ಕಾಶ್ಮೀರದ ಹಿಂದೂಗಳನ್ನು ಔರಂಗಜೇಬನೆಂಬ ಮತಾಂಧ ಮುಸ್ಲಿಂ ರಾಜನಿಂದ ರಕ್ಷಿಸಲು ಸಿಖ್ಖರ ಗುರು ತೇಗ್ ಬಹಾದ್ದೂರ್ ಬಲಿದಾನವನ್ನೇ ಮಾಡಿದ್ದರು. ಗುರು ಗೋವಿಂದ್ ಸಿಂಗ್ ಮುಸ್ಲಿಂ ಮತಾಂಧತೆಯ ವಿರುದ್ಧ ಹೋರಾಡಲು ಗುಬ್ಬಚ್ಚಿಗಳಂತಿದ್ದ ಸಿಖ್ಖರನ್ನು ಗಿಡುಗಗಳನ್ನಾಗಿಸಿದ್ದರು. ಅಸಂಖ್ಯ ಸಿಖ್ಖರು ದೇಶದ ಸ್ವಾತಂತ್ರ್ಯಕ್ಕಾಗಿ ಮನೆಮಠ ತೊರೆದು ಕ್ರಾಂತಿವೀರರಾಗಿ ಹುತಾತ್ಮರಾದರು. ಭಗತ್ ಸಿಂಗನ ತಾತ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳನ್ನು ಹೇಳಿ ಅವುಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ. ಆದರೆ ಕೆಲವೇ ಕೆಲವು ಸಿಖ್ಖರು ಪಾಕಿಗಳಿಂದ ಪ್ರಚೋದನೆಕ್ಕೊಳಗಾಗಿ ಹಿಂದೂಗಳನ್ನು ದ್ವೇಷಿಸುತ್ತಿದ್ದಾರೆ. 1984ರಲ್ಲಿ ಹಿಂದೂಗಳು ಸಿಖ್ಖರನ್ನು ಕೊಂದರೆಂದು ಕೆಲವರು ಹೇಳುವುದಿದೆ. ಆದರೆ ಅದು ಕಾಂಗ್ರೆಸ್ ಪ್ರೇರಿತ ಹತ್ಯಾಕಾಂಡ. ವಂಶವೊಂದರ ಗುಲಾಮರು ಮಾಡಿದ ಮಾರಣಹೋಮ. ಸಿಖ್ಖರು ಕೋಪ ತಾಳುವುದಿದ್ದರೆ ಆ ವಂಶದ ವಿರುದ್ಧ, ಆ ಪಕ್ಷದ ವಿರುದ್ಧ ತಾಳಬೇಕಿತ್ತು. ವಿಪರ್ಯಾಸವೆಂದರೆ ಸಿಖ್ಖರಲ್ಲೇ ಹಲವರು ಅವರ ಗುಲಾಮಗಿರಿಯಲ್ಲಿದ್ದಾರೆ.