ತಾಯಿ ಭಾರತಿಯ ಮುಕುಟಮಣಿಯರ್ಧ ಮರಳಿ ಬಂದಿತು
ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ ಮುಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ.
ಗಾಂಧಿ-ನೆಹರೂ ಜೋಡಿಯ ದುರಾಸೆಗೆ ಬಲಿಯಾಗಿ ದೇಶ ಒಡೆದು ಭಾರತ, ಪಾಕಿಸ್ತಾನಗಳೆಂಬ ಎರಡು ಭಾಗವಾಗಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ತನ್ನ ಪ್ರಧಾನಿ ರಾಮಚಂದ್ರ ಕಾಕ್ ಸಲಹೆಯಂತೆ ಸ್ವತಂತ್ರವಾಗಿ ಕಾಶ್ಮೀರವನ್ನಾಳುವ ಉದ್ಡೇಶದಿಂದ ಸುಮ್ಮನುಳಿದುಬಿಟ್ಟ. ಭಾರತದ ಜೊತೆಗೆ ಮಾತುಕತೆಗೂ ನಿರಾಕರಿಸಿಬಿಟ್ಟ. ಅತ್ತ ಅನಾರೋಗ್ಯದಿಂದ ಬಳಲುತ್ತಿದ್ದ ಜಿನ್ನಾ ವಿಶ್ರಾಂತಿ ಪಡೆಯಲು ಕಾಶ್ಮೀರಕ್ಕೆ ತೆರಳಲು ನಿರ್ಧರಿಸಿ ಆಗಸ್ಟ್ 24ರಂದು ತನ್ನ ಬ್ರಿಟಿಷ್ ಕಾರ್ಯದರ್ಶಿ ವಿಲಿಯಮ್ ಬರ್ನಿಯನ್ನು ಕರೆದು "ಎರಡು ವಾರ ಕಾಶ್ಮೀರದಲ್ಲಿ ಉಳಿಯುವ ವ್ಯವಸ್ಥೆ ಮಾಡಿ" ಎಂದು ಆದೇಶಿಸಿದ. ಮುಸ್ಲಿಂ ಬಾಹುಳ್ಯವಿದ್ದ ಕಾರಣ ಕಾಶ್ಮೀರ ಎಂದಿದ್ದರೂ ತಮಗೇ ಸೇರುವುದು ಎಂದು ಬಗೆದಿದ್ದ ಜಿನ್ನಾನ ಲೆಕ್ಕಾಚಾರ ತಪ್ಪಾಗಿತ್ತು. ಹರಿಸಿಂಗ್ "ಜಿನ್ನಾನನ್ನು ಪ್ರವಾಸಿಯಾಗಿಯೂ ಕಾಶ್ಮೀರಕ್ಕೆ ಕಾಲಿಡಲು ಬಿಡುವುದಿಲ್ಲ" ಎಂದು ಬರ್ನಿಯ ಬಳಿ ಗುಡುಗಿದ್ದ. ಆಗ ಕಾಶ್ಮೀರದಲ್ಲಿ ಮುಸ್ಲಿಮರ ಸಂಖ್ಯೆ 70%. ರಾಜಾ ಹರಿಸಿಂಗನ ಸೇನೆಯಲ್ಲಿ 50%ಕ್ಕಿಂತ ಹೆಚ್ಚು ಮುಸಲ್ಮಾನರಿದ್ದರು. ಪಾಕಿಸ್ತಾನಿಗಳು ಸೇನೆಯನ್ನು ಹೊಕ್ಕು ವಿದ್ರೋಹ ಎಸಗುತ್ತಾರೆ ಎಂದ ಹಿತೈಷಿಗಳ ಬುದ್ಧಿವಾದವನ್ನು ಕೇಳದ ಆತ "ಇಲ್ಲ, ಇಲ್ಲ; ನನ್ನ ಸೈನಿಕರು ನನಗೆ ನಿಷ್ಠರಾಗಿದ್ದಾರೆ" ಎಂದುಬಿಟ್ಟ. ಆದರೆ ಯಾವುದು ಆಗುವುದಿಲ್ಲ ಎಂದು ಅವನು ಹೇಳಿದ್ದನೋ ಅದೇ ಆಯಿತು. ಅಳಿದುಳಿದ ಸೇನೆಯೂ ಅವ್ಯವಸ್ಥಿತವಾಯಿತು. ಕಬೈಲಿ, ಪಠಾಣ್, ಮೈಸೂದ್ ಮುಂತಾದ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬುಡಕಟ್ಟುಗಳು ಕಾಶ್ಮೀರದ ಲೂಟಿಗೆ ಅಕ್ಟೋಬರ್ 22ರಂದು ಬಂದಿಳಿದವು. ಅಸಂಖ್ಯ ಹಿಂದೂಗಳ ಬರ್ಬರ ಅತ್ಯಾಚಾರ, ಕೊಲೆ ನಡೆದು ಹೋಯಿತು. ಕಾನ್ವೆಂಟುಗಳಲ್ಲಿದ್ದ ನರ್ಸುಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಬಾರಾಮುಲ್ಲಾದ ಜನಸಂಖ್ಯೆ ಮೂರನೇ ಒಂದು ಭಾಗಕ್ಕಿಳಿದಿತ್ತು. ಪರಿಸ್ಥಿತಿ ಕೈಮೀರಿದಾಗ ಗಾಬರಿಗೊಂಡ ರಾಜಾ ಹರಿಸಿಂಗ್ ಯಾವುದೇ ಶರತ್ತಿಲ್ಲದೆ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಒಪ್ಪಂದದ ಸಹಿ ಹಾಕಿದ ಪತ್ರವನ್ನು ಭಾರತಕ್ಕೆ ಕಳುಹಿಸಿ ರಕ್ಷಿಸಬೇಕೆಂದು ಗೋಳಿಟ್ಟ(ಅಕ್ಟೋಬರ್ 24). ಶೇಖ್ ಅಬ್ದುಲ್ಲಾ ಬರುವ ತನಕ ಮಾತಾಡುವುದಿಲ್ಲವೆಂದ ನೆಹರೂ ಆ ಪತ್ರವನ್ನು ಕಸದ ಬುಟ್ಟಿಗೆ ಎಸೆದರು. ಕಾಶ್ಮೀರ ಭಾರತದ ಭಾಗವಲ್ಲ; ಹಾಗಾಗಿ ಭಾರತದ ಸೈನ್ಯವನ್ನು ಕಾಶ್ಮೀರದ ರಕ್ಷಣೆಗೆ ಯಾಕೆ ಉಪಯೋಗಿಸಬೇಕು ಅಂದು ಬಿಟ್ಟರು! ಅಕ್ಟೋಬರ್ 26ರಂದು ಇನ್ನೊಂದು ಒಪ್ಪಂದ ಪತ್ರವನ್ನು ನೇರ ಲಾರ್ಡ್ ಮೌಂಟ್ ಬ್ಯಾಟನ್ನಿಗೆ ಕಳುಹಿಸಿಬಿಟ್ಟ ಹರಿಸಿಂಗ್. ತನ್ನ ಆಪ್ತನನ್ನು ಕರೆದು ತನ್ನ ಪಿಸ್ತೂಲನ್ನು ಕೊಟ್ಟು “ಈ ಪ್ರಸ್ತಾಪವೂ ತಿರಸ್ಕೃತವಾದರೆ ನಾನು ಮಲಗಿರುವಾಗಲೇ ನನಗೆ ಗುಂಡು ಹಾರಿಸಿಬಿಡು” ಅಂದುಬಿಟ್ಟ! ಅತ್ತ ನಿರ್ಧಾರ ತೆಗೆದುಕೊಳ್ಳಲು ಸೇರಿದ್ದ ಸಭೆಯಲ್ಲಿ ಮೌಂಟ್ ಬ್ಯಾಟನ್, ಸ್ಯಾಮ್ ಮಾಣಿಕ್ ಶಾ ಮುಂತಾದವರ ಎದುರು ಜಾಗತಿಕ ಯುದ್ಧ, ವಿಶ್ವಸಂಸ್ಥೆ ಎಂದು ಭಾಷಣ ಬಿಗಿಯಲಾರಂಭಿಸಿದ ನೆಹರೂವನ್ನು ಅರ್ಧದಲ್ಲಿ ತಡೆದ ಪಟೇಲ್ ಭಾರತೀಯ ಸೇನೆಗೆ ಕಾಶ್ಮೀರಕ್ಕೆ ಹೋಗಲು ಅನುಮತಿ ದೊರಕಿಸಿಕೊಟ್ಟರು. ಹೀಗೆ 1947 ಅಕ್ಟೋಬರ್ 26ರಂದು ಕಾಶ್ಮೀರ ಭಾರತಕ್ಕೆ ಅಧಿಕೃತವಾಗಿ ಸೇರಿಬಿಟ್ಟಿತ್ತು.
ನಮ್ಮ ಸೈನಿಕರು ಕಾಶ್ಮೀರಕ್ಕೆ ತೆರಳಿದ್ದೇನೋ ನಿಜ. ಆದರೆ ಅಲ್ಲಿನ ಸ್ಥಿತಿ ಭಯಾನಕವಾಗಿತ್ತು. ರಸ್ತೆ ಸಂಪರ್ಕವಿರಲಿಲ್ಲ. ವಿಮಾನ ನಿಲ್ದಾಣವೊಂದಿತ್ತು. ಇವರು ಹೋದ ಮೊದಲ ವಿಮಾನವೇ ನಿಲ್ದಾಣದಲ್ಲಿ ದೊಪ್ಪನೆ ಬಿತ್ತು. ಅದನ್ನು ಸರಿಪಡಿಸಿಕೊಂಡು ಯುದ್ಧಕ್ಕಿಳಿದ ಕುಮಾವ್ ರೆಜಿಮೆಂಟ್ ಸಮಯಕ್ಕೆ ಸರಿಯಾಗಿ ಬರದೇ ಇದ್ದಿದ್ದರೆ ಇವತ್ತು ಕಾಶ್ಮೀರ ಭಾರತದ ಪಾಲಿಗಿರುತ್ತಿರಲಿಲ್ಲ! ಸ್ವತಂತ್ರ ಭಾರತದ ಮೊದಲ ಬಲಿದಾನಿ ಮೇಜರ್ ಸೋಮನಾಥ ಶರ್ಮಾರಿಗೆ ಇದಕ್ಕಾಗಿ ನಾವು ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು. ಅಲ್ಲಿ ಇನ್ನೊಂದು ಸವಾಲಿತ್ತು. ಬುಡಕಟ್ಟುಗಳ ಜನರೊಂದಿಗೆ ಅವರದ್ದೇ ವೇಶ ಧರಿಸಿ ಪಾಕೀ ಸೈನಿಕರೂ ಒಳ ನುಗ್ಗಿದ್ದರು. ಭಾರತ ಈ ಪುರಾವೆಗಳನ್ನು ತೆಗೆದುಕೊಂಡು ಮೌಂಟ್ ಬ್ಯಾಟನ್ ಸೂಚನೆಯಂತೆ ನಮ್ಮ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿದೆ ಎಂದು ಜೂನ್ 1, 1948ರಲ್ಲಿ ವಿಶ್ವಸಂಸ್ಥೆಯ ಬಾಗಿಲು ತಟ್ಟಿತು. ಪಾಕಿಸ್ತಾನ, ಭಾರತವೇ ಬಲಾತ್ಕಾರವಾಗಿ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುತ್ತಿರುವಾಗ ಅಲ್ಲಿನ ಬುಡಕಟ್ಟುಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ನುಣುಚಿಕೊಳ್ಳಲು ಯತ್ನಿಸಿತಾದರೂ ವಿಶ್ವಸಂಸ್ಥೆ ನೇಮಿಸಿದ ಆಯೋಗ ತೋರಿಸಿದ ದಾಖಲೆಗಳನ್ನು ನೋಡಿ "ತಮ್ಮ ಸೈನಿಕರು ಅಲ್ಲಿನ ಮುಸಲ್ಮಾನರಿಗೆ ಸಹಾಯ ಮಾಡಿರಬೇಕು, ನಾವು ಆದೇಶ ನೀಡಿಲ್ಲ" ಎಂದು ಭಾಗಶಃ ಅದನ್ನು ಒಪ್ಪಿಕೊಂಡಿತು. ಈಗಾಗಲೇ ಕಾಶ್ಮೀರದ ಹಳ್ಳಿ-ಗಲ್ಲಿಗಳಲ್ಲಿ ಸೇರಿಕೊಂಡಿರುವ ಪಾಕೀ ಸೈನ್ಯವನ್ನು ಸೋಲಿಸಬೇಕಾದರೆ ಕಾಶ್ಮೀರ-ಪಾಕ್ ಗಡಿಯಲ್ಲಿ ಸೇನೆಯನ್ನು ನಿಯುಕ್ತಗೊಳಿಸಬೇಕು ಎಂದಾಗ ನೆಹರೂ "ಇಲ್ಲ, ಇಲ್ಲ; ಪಾಕಿಸ್ತಾನ ವಿಧಿವತ್ತಾಗಿ ಯುದ್ಧ ಘೋಷಣೆ ಮಾಡಿಲ್ಲ. ಕಾಶ್ಮೀರದಲ್ಲೇ ಯುದ್ಧ ಮಾಡಿ" ಎಂದು ಬಿಟ್ಟರು! ಇಂಥಾ ಪರಿಸ್ಥಿತಿಯಲ್ಲೂ ಭಾರತೀಯ ಸೇನೆ ಡಕೋಟಾ ವಿಮಾನಗಳು, ಓಬೀರಾಯನ ಕಾಲದ ಶಸ್ತ್ರಾಸ್ತ್ರಗಳೊಂದಿಗೂ ರಣಭಯಂಕರವಾಗಿ ಹೋರಾಡಿ ಕಾಶ್ಮೀರವನ್ನು ಶತ್ರುಮುಕ್ತಗೊಳಿಸುತ್ತಾ ಸಾಗುತ್ತಿತ್ತು. ಕಾಶ್ಮೀರದ ಅರವತ್ತು ಪ್ರತಿಶತ ಭಾಗ ಮುಕ್ತಗೊಂಡಿದ್ದಾಗ, "ಉಳಿದ ಕಾಶ್ಮೀರವನ್ನು ವಿಶ್ವಸಂಸ್ಥೆಯ ನೇತೃತ್ವದಲ್ಲಿ ತೆಗೆದುಕೊಳ್ಳೋಣ" ಎಂದ ನೆಹರೂ 1949 ಜನವರಿ 1 ರಂದು ಕದನ ವಿರಾಮ ಘೋಷಿಸಿಬಿಟ್ಟರು! "ಇನ್ನು ಕೆಲ ದಿನ ಸಮಯ ಕೊಡಿ; ಇಡೀ ಕಾಶ್ಮೀರವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ" ಎಂದು ಸೈನ್ಯ ಕೈಮುಗಿದು ಬೇಡಿಕೊಂಡರೂ ನೆಹರೂವಿಗೆ ತನ್ನ ಮೆರೆದಾಟವೇ ಮುಖ್ಯವಾಗಿತ್ತು! ಆಗ ನೀಲಂ ಕಣಿವೆಯಲ್ಲಿರುವ ಶಾರದಾ ಪೀಠ ಭಾರತೀಯ ಸೇನೆಯಿಂದ ಕೇವಲ ಮೂವತ್ತು ಕಿ.ಮೀ ದೂರದಲ್ಲಿತ್ತು!
ಇತ್ತ ಕಾಶ್ಮೀರದಲ್ಲಿ ಗುಳ್ಳೆ ನರಿ ಶೇಖ್ ಅಬ್ದುಲ್ಲಾನಿಗೆ ಕಾಶ್ಮೀರವನ್ನು ಆಳುವ ದುರಾಸೆ ಹುಟ್ಟಿತ್ತು. ಆತ ಮುಸ್ಲಿಂ ಲೀಗ್ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ. 1939ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಕಟ್ಟಿದ್ದ ಅಬ್ದುಲ್ಲಾ, ತನ್ನ ಪಕ್ಷವನ್ನು ಮುಸ್ಲಿಂ ಕಾನ್ಫರೆನ್ಸ್ ಜೊತೆ ವಿಲೀನಗೊಳಿಸಿದ. ಈ ತಂಡ ಸ್ವತಂತ್ರವಾಗಿ ಉಳಿಯುತ್ತೇವೆ ಎಂದು ಘೋಷಿಸಿ, ಜಿನ್ನಾನನ್ನು ಪೇಷಾವರದಲ್ಲಿ ಭೇಟಿಯಾಗಿ ಕಾಶ್ಮೀರದ ಮೇಲೆ ದಾಳಿ ಮಾಡಲು ಸಮಯ ಕಾಯುತ್ತಿತ್ತು. ಕಾಶ್ಮೀರದ ಅರ್ಧ ಭಾಗ ಭಾರತಕ್ಕೆ ಸೇರುತ್ತಿದ್ದಂತೆ ಅಬ್ದುಲ್ಲಾ ಹಾಗೂ ಆತನ ಪ್ರಾಣಮಿತ್ರ ನೆಹರೂ ಕಾಶ್ಮೀರದಲ್ಲಿ ಅಬ್ದುಲ್ಲಾನಿಗೆ ಅಧಿಕಾರ ದೊರಕಿಸಿಕೊಡುವ ಉದ್ದೇಶದಿಂದ (ಕು)ತಂತ್ರವೊಂದನ್ನು ಹೆಣೆದರು. ಕಾಶ್ಮೀರ ವ್ಯವಹಾರಗಳಿಗೆ ಸಂಬಂಧಿಸಿ ಕೇಂದ್ರ ಸಚಿವರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರರ ಮೇಲೆ ಒತ್ತಡ ಹೇರಿದ ನೆಹರೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 306-ಎ ವಿಧಿಯನ್ನು ಸೇರಿಸಿದರು. ಅಯ್ಯಂಗಾರ್ ಸಂಸತ್ತಿನಲ್ಲಿ ಇದರ ಪ್ರಸ್ತಾಪ ಮಾಡುತ್ತಿದ್ದಂತೆ ಕೋಲಾಹಲ ಉಂಟಾಯಿತು. ಆಗ ಕಾರ್ಯಕಾರಿಣಿಯ ಮನವೊಲಿಸುವಂತೆ ಪಟೇಲರನ್ನು ಒಪ್ಪಿಸಲಾಯಿತು. ಅಂಬೇಡ್ಕರರನ್ನು ಕಂಡು ಮಾತಾಡಿ ಮನವೊಲಿಸಲು ಶೇಖ್ ಅಬ್ದುಲ್ಲಾನಿಗೆ ಸೂಚಿಸಿದರು ನೆಹರೂ. ಹಾಗೆ ಬಂದ ಅಬ್ದುಲ್ಲಾನಿಗೆ "ಕಾಶ್ಮೀರಿಗಳಿಗೆ ಭಾರತದ ಪ್ರಜೆಗಳಿಗಿರುವಂತೆ ಸಮಾನ ಹಕ್ಕುಗಳನ್ನು ಬಯಸುವ ನೀವು, ಭಾರತೀಯರಿಗೆ ಕಾಶ್ಮೀರದಲ್ಲಿ ಯಾವುದೇ ಹಕ್ಕುಗಳಿರಬಾರದು ಎನ್ನುತ್ತೀರಿ. ಕಾಶ್ಮೀರದ ರಕ್ಷಣೆಗೆ, ಅಭಿವೃದ್ಧಿಗೆ ಭಾರತ ಬೇಕು. ಆದರೆ ಅಲ್ಲಿ ಉಳಿದ ಭಾರತೀಯರಿಗೆ ಹಕ್ಕಿಲ್ಲ ಎಂದರೇನರ್ಥ? ಈ ದೇಶದ ಕಾನೂನು ಮಂತ್ರಿಯಾಗಿ ನಾನು ನನ್ನ ದೇಶೀಯರ ಹಿತಾಸಕ್ತಿಯನ್ನು, ದೇಶದ ಸಾರ್ವಭೌಮತ್ವವನ್ನು ಎಂದಿಗೂ ಕಡೆಗಣಿಸುವುದಿಲ್ಲ" ಎಂದು ಖಂಡತುಂಡವಾಗಿ ನಿರಾಕರಿಸುತ್ತಾರೆ ಅಂಬೇಡ್ಕರ್. ಆದರೂ ಪಟೇಲರ ಕಣ್ಣಿಗೆ ಮಣ್ಣೆರಚಿ, ಅಂಬೇಡ್ಕರ್ ಮೇಲೆ ಒತ್ತಡ ಹೇರಿ ಅದನ್ನು ತಾತ್ಕಾಲಿಕ ಎಂದೂ, ವಿಧಿ 370 ಎಂಬುದಾಗಿ ಸೇರಿಸುವಲ್ಲಿ ಯಶಸ್ವಿಯಾಗುತ್ತಾರೆ ನೆಹರೂ ಹಾಗೂ ಶೇಖ್ ಅಬ್ದುಲ್ಲಾ! ಅಲ್ಲದೆ 1954ರಲ್ಲಿ ಕಾಶ್ಮೀರಕ್ಕೆ ವಿಶೇಷ ಸವಲತ್ತು ನೀಡುವ ಸಲುವಾಗಿ 35ಎ ಎನ್ನುವ ಇನ್ನೊಂದು ವಿಧಿಯನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮೂಲಕ ಸೇರಿಸುತ್ತಾರೆ ನೆಹರೂ. ಹೀಗೆ ವಿಧಿ 370 ಹಾಗೂ 35ಎ ಗಳು ಯಾವುದೇ ರಾಜ್ಯಕ್ಕಿರದ ವಿಶೇಷ ಸ್ಥಾನಮಾನ, ರಿಯಾಯಿತಿಗಳನ್ನು ಜಮ್ಮುಕಾಶ್ಮೀರಕ್ಕೆ ಕೊಟ್ಟವು.
ಹೇಗಿತ್ತು ವಿಧಿ 370?
ಈ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರ ರಾಜ್ಯದ ಹೊರಗಿನವರಾರೂ ಅಲ್ಲಿ ಭೂಮಿ ಖರೀದಿಸುವಂತಿರಲಿಲ್ಲ. ಭಾರತದ ಉಳಿದ ಭಾಗದವರು ಅಲ್ಲಿ ಹೋಗಿ ನೆಲೆಸಿದರೆ ಅಲ್ಲವರಿಗೆ ಮತದಾನದ ಹಕ್ಕು ಇರಲಿಲ್ಲ. ಸರ್ಕಾರಿ ನೌಕರಿಯ ಹಕ್ಕೂ ಇರಲಿಲ್ಲ. ವ್ಯಾಪಾರ ಮಾಡುವಂತಿರಲಿಲ್ಲ. ಶಾಶ್ವತವಾಗಿ ನೆಲೆಸುವಂತಿರಲಿಲ್ಲ. ಹೊರಗಿನವರಾರೂ ಅಲ್ಲಿ ಆಸ್ತಿ ಖರೀದಿ ಮಾಡುವಂತಿರಲಿಲ್ಲ. ರಾಜ್ಯದ ಹೊರಗಿನವರನ್ನು ವಿವಾಹವಾಗುವ ಮಹಿಳೆಗೂ ಈ ವಿಧಿಯ ಪ್ರಕಾರ ಸಿಗುತ್ತಿದ್ದ ಹಕ್ಕು, ಸೌಲಭ್ಯಗಳೆಲ್ಲಾ ತಪ್ಪಿ ಹೋಗುತ್ತಿದ್ದವು. ಆದರೆ ಆಕೆ ಪಾಕಿಸ್ತಾನದವನೊಬ್ಬನನ್ನು ಮದುವೆಯಾದರೆ ಆಕೆಯ ಹಕ್ಕುಗಳೆಲ್ಲಾ ಹಾಗೆಯೇ ಉಳಿಯುತ್ತಿದ್ದವು. ಮಾತ್ರವಲ್ಲಾ ಆ ಪಾಕಿಸ್ತಾನಿಗೂ ಜಮ್ಮುಕಾಶ್ಮೀರದ ನಾಗರಿಕತ್ವ ತನ್ಮೂಲಕ ಭಾರತದ ನಾಗರಿಕತ್ವವೂ ಸಿಗುತ್ತಿತ್ತು. ಅಂದರೆ ಇದು ಭಯೋತ್ಪಾದಕರಿಗೆ ಭಾರತಕ್ಕೆ ಬರಲು ಇದ್ದ ರಹದಾರಿಯಾಗಿತ್ತು. ಹಾಗೆಯೇ ಜಮ್ಮು-ಕಾಶ್ಮೀರದ ಪುರುಷ ಹೊರ ರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕು ಅಬಾಧಿತ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತಿತ್ತು. ಷರಿಯಾ ಕಾನೂನಿನ ಕುಣಿಕೆ ಮಹಿಳೆಯರ ಮೇಲಿರುತ್ತಿತ್ತು. ಈ ಅಸಮಾನತೆಯ ಬಗ್ಗೆ ಯಾವುದೇ ಮಹಿಳಾ ಸಂಘಟನೆಗಳು ಹೋರಾಡಿದ್ದು ಕಾಣೆ. ಇಲ್ಲಿನವರು ಭಾರತ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗಿರಲಿಲ್ಲ. ಆದರೆ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಹಣ ಇಲ್ಲಿಗೆ ಹೋಗುತ್ತಿತ್ತು!
ಈ 370ನೇ ವಿಧಿಯ ಲಾಭ ಪಡೆದು ಜಮ್ಮುಕಾಶ್ಮೀರ ರಾಜ್ಯ ತನ್ನದೇ ಆದ ಸಂವಿಧಾನವನ್ನು 1957ರಲ್ಲಿ ಅಳವಡಿಸಿಕೊಂಡಿತು. ಒಂದು ದೇಶದಲ್ಲಿ ಎರಡು ಸಂವಿಧಾನ! ಈಗ 370ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿರುವ ಜಾತ್ಯಾತೀತರು ಹಾಗೂ ಸಮಾಜವಾದಿಗಳೆಂದು ಕರೆಯಿಸಿಕೊಳ್ಳುತ್ತಿರುವವರೂ ಗಮನಿಸಬೇಕಾದ ವಿಷಯವೇನೆಂದರೆ ಅವೆರಡೂ ಪದಗಳಿಗೆ ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಜಾಗವೇ ಇರಲಿಲ್ಲ! ಕೇಂದ್ರ ಸರಕಾರ ಇತ್ತೀಚೆಗೆ ಆರ್.ಟಿ.ಐ ಕಾಯ್ದೆಗೆ ತಿದ್ದುಪಡಿ ತಂದಾಗ ಇದೇ 370ನೇ ವಿಧಿಯ ಪರವಾಗಿರುವವರು ವಿರೋಧಿಸಿದ್ದರು. ಆದರೆ 370ನೇ ವಿಧಿಯ ಕಾರಣ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಆರ್.ಟಿ.ಐಗೆ ಯಾವುದೇ ಕಿಮ್ಮತ್ತಿರಲಿಲ್ಲ. ಕೌಟುಂಬಿಕ ದೌರ್ಜನ್ಯ ಪರಿಹಾರ, ವನ್ಯಜೀವಿ ಸಂರಕ್ಷಣೆ,ಸಿಎಜಿ, ಭ್ರಷ್ಟಾಚಾರ ನಿಯಂತ್ರಣಗಳಂತಹಾ ಕಾಯ್ದೆಗಳ ಸಹಿತ ಯಾವುದೇ ಕಾಯ್ದೆ ಅನ್ವಯವಾಗುತ್ತಿರಲಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐಗೆ ಇಲ್ಲಿ ಅಧಿಕಾರವಿರಲಿಲ್ಲ. ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯ ಸರಕಾರದ ಅನುಮತಿ ಪಡೆಯಬೇ ಕಿತ್ತು! ಸರ್ವೋಚ್ಚ ನ್ಯಾಯಾಲಯ ಕೇವಲ ಮನವಿ ಮಾಡಬಹುದಿತ್ತು! ವಿಧಾನ ಸಭೆ ಅವಧಿ ಇಲ್ಲಿ 6 ವರ್ಷ. ಪಂಚಾಯತ್ಗಳಿಗೆ ಅಧಿಕಾರವಿಲ್ಲ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಾದರೂ ಅನುಮತಿ ಪಡೆದುಕೊಳ್ಳಬೇಕಿತ್ತು. ಬಳಿಕವೂ ಜಮ್ಮು ಕಾಶ್ಮೀರದ ಧ್ವಜದ ಜೊತೆಗೆಯೇ ಹಾರಿಸಬೇಕಿತ್ತು. ರಾಷ್ಟ್ರಧ್ವಜವನ್ನು ಸುಡುವ, ಹರಿಯುವ ಮುಂತಾದ ರಾಷ್ತ್ರೀಯ ಸಂಕೇತಗಳಿಗೆ ಮಾಡುವ ಅವಮಾನ ಇಲ್ಲಿ ಅಪರಾಧವಾಗಿರಲಿಲ್ಲ. ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ-ಸಂಪರ್ಕ ಕ್ಷೇತ್ರ ಬಿಟ್ಟು ಯಾವುದೇ ಕಾಯಿದೆ-ಕಾನೂನುಗಳನ್ನು ಜಮ್ಮು ಕಾಶ್ಮೀರದಲ್ಲಿ ಮಾಡಲು ಕೇಂದ್ರ ಸರಕಾರ ಅಲ್ಲಿನ ರಾಜ್ಯ ಸರಕಾರದ ಅನುಮತಿ ಪಡೆಯಬೇಕಿತ್ತು.
ರಾಷ್ಟ್ರಾದ್ಯಂತ ಮಂಡಲ ಆಯೋಗದ ಬಗ್ಗೆ ಬೊಬ್ಬೆ ಕೇಳಿ ಬರುತ್ತದೆ. ಆದರೆ ಕಾಶ್ಮೀರದಲ್ಲಿ ಮಂಡಲ ಆಯೋಗದ ವರದಿ ಜಾರಿಗೇ ಬರಲಿಲ್ಲ. 1991ರವರೆಗೆ ಹಿಂದುಳಿದ ವರ್ಗಕ್ಕೆ ಯಾವುದೇ ಮೀಸಲಾತಿಯೇ ಸಿಗುತ್ತಿರಲಿಲ್ಲ. 91ರ ಬಳಿಕವೂ ರಾಜಕೀಯ ಮೀಸಲಾತಿ ಸಿಗಲಿಲ್ಲ. ಅಸಲಿಗೆ ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಎಷ್ಟಿದೆಯೆಂಬ ಅಂಕಿ ಅಂಶಗಳೇ ಇಲ್ಲ. 1956ರಲ್ಲಿ ಪಂಜಾಬಿನಿಂದ ಕರೆತಂದ ವಾಲ್ಮೀಕಿ ಜನಾಂಗಕ್ಕೆ ಯಾವುದೇ ನಾಗರಿಕ ಹಕ್ಕುಗಳು ಸಿಕ್ಕಿಲ್ಲ. 1947ರಲ್ಲಿ ಅಪಾರ ಪ್ರಮಾಣದ ಹಿಂದೂಗಳು, ಸಿಕ್ಖರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. ಆಗ ಬಂದವರಲ್ಲಿ ಕೆಲವರು ಕಾಶ್ಮೀರದಲ್ಲಿ ನೆಲೆ ನಿಂತರು. ಆದರೆ ಅವರಿಗೆ ಯಾವ ನಾಗರಿಕ ಹಕ್ಕುಗಳೂ ಸಿಗಲಿಲ್ಲ. ಆದರೆ ವಿಭಜನೆ ಸಂದರ್ಭದಲ್ಲಿ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರು ಬೇಕಾದರೆ ಮರಳಿ ಬರಬಹುದು, ತಮ್ಮ ಭೂಮಿಯನ್ನು ಮರಳಿ ಪಡೆಯಬಹುದು, ಪರಿಹಾರವನ್ನೂ ಪಡೆದುಕೊಳ್ಳಬಹುದು!
1951ರಲ್ಲಿ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರ ವಿಂಗಡಣೆ ನಡೆಯಿತು. ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾತ್ರವಲ್ಲ, ಅಲ್ಲಿನ ಭೌಗೋಳಿಕ ಸನ್ನಿವೇಶವನ್ನೂ ಪರಿಗಣಿಸಬೇಕು ಅಂತ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಮತ್ತು ಜಮ್ಮು-ಕಾಶ್ಮೀರ ಸಂವಿಧಾನದ 50ನೇ ವಿಧಿ ಇವೆರಡರಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕ್ಷೇತ್ರ ಮರುವಿಂಗಡಣಾ ಆಯೋಗಗಳು ಸಂವಿಧಾನ ಮತ್ತು ಪ್ರಜಾಪ್ರಾತಿನಿಧ್ಯ ಕಾಯಿದೆಯ ಆಶಯವನ್ನು ಎಂದೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. 2001ರಲ್ಲಿ ನಡೆಸಿದ ಜನಗಣತಿ ಪ್ರಕಾರ, ಜಮ್ಮುವಿನ 26 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 30,59,986 ಮತದಾರರಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಜಮ್ಮುವಿನ ಮೂರನೇ ಎರಡರಷ್ಟು ಪ್ರದೇಶ ದುರ್ಗಮ ಗುಡ್ಡಗಾಡು, ಪರ್ವತ ಪ್ರದೇಶಗಳಿಂದ ಕೂಡಿದೆ. ಅಲ್ಲಿ ಸುವ್ಯವಸ್ಥಿತವಾದ ರಸ್ತೆ ಸಂಪರ್ಕವೂ ಇಲ್ಲ. ಆದರೆ ಈ ಪ್ರದೇಶಕ್ಕೆ 37 ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೇವಲ 15,953 ಚ.ಕಿ.ಮೀ. ವಿಸ್ತಾರವಾದ ಪ್ರದೇಶ ಮತ್ತು 29 ಲಕ್ಷ ಮತದಾರರನ್ನಷ್ಟೇ ಹೊಂದಿರುವ ಕಾಶ್ಮೀರ ಕಣಿವೆಗೆ 46 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿದೆ! ಯಾಕೆ ಹೀಗೆ? ಕಾರಣ ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ!
1992ರಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಅನುಸಾರ ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಯತ್ನ ನಡೆದಿತ್ತು. ಇನ್ನೇನು ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಬೇಕು ಅನ್ನುವಷ್ಟರಲ್ಲಿ ಆಯೋಗದ ಅಧ್ಯಕ್ಷ ಜಸ್ಟೀಸ್ ಕೆ.ಕೆ. ಗುಪ್ತಾ ಆ ಯೋಜನೆಯನ್ನು ತಿರಸ್ಕರಿಸಿಬಿಟ್ಟರು! ಕೇವಲ ರಾಜಕೀಯ ಮಾತ್ರವಲ್ಲ ಅಭಿವೃದ್ಧಿಯೂ ಜಮ್ಮು ಪಾಲಿಗೆ ಮರೀಚಿಕೆಯೇ! ಪ್ರವಾಸೋದ್ಯಮ ಬಜೆಟ್ನಲ್ಲಿ ಶೇ.90ರಷ್ಟನ್ನು ಕಾಶ್ಮೀರಕ್ಕೆ ಕೊಡಲಾಗಿದೆ.. ವ್ಯಾಪಾರ ಮತ್ತು ಪ್ರವಾಸೋದ್ಯಮದಿಂದ ಬರುವ ಬಹುತೇಕ ಆದಾಯ ಜಮ್ಮುವಿನಿಂದಲೇ ಆಗಿದ್ದರೂ ಅಲ್ಲಿಗೆ ಅನುದಾನವಿಲ್ಲ! ಮಾತ್ರವಲ್ಲ, ಕಾಶ್ಮೀರ ಕಣಿವೆಗೆ ಉಚಿತ ವಿದ್ಯುತ್, ಜಮ್ಮು ಪ್ರಾಂತ್ಯದಲ್ಲಿ ದುಬಾರಿ ವಿದ್ಯುತ್ ಶುಲ್ಕ, ಇವೆಲ್ಲವೂ 370ನೇ ವಿಧಿಯ ಅಪಸವ್ಯಗಳು! ಹೀಗೆ ದೇಶಕ್ಕೇ ಒಂದು ಕಾನೂನಿದ್ದರೆ ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು, ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನವಿತ್ತು. ಒಂದು ದೇಶದಲ್ಲಿ "ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್, ದೋ ಸಂವಿಧಾನ್"! ಎಂತಹಾ ವಿಚಿತ್ರ!
ಇದನ್ನು ಕಿತ್ತು ಹಾಕಬೇಕೆಂದು ಅದೆಷ್ಟು ಹೋರಾಟಗಳು ನಡೆದವು. "ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ಔರ್ ದೋ ನಿಷಾನ್ ನಹಿ ಚಲೇಗಾ" ಎನ್ನುತ್ತಾ ಪ್ರತಿಭಟನೆ ನಡೆಸಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರನ್ನು ಅಲ್ಲಿನ ಸರಕಾರ ಸೆರೆಮನೆಯಲ್ಲಿಟ್ಟು ಹತ್ಯೆ ಮಾಡಿತು. ಅಮರನಾಥ ಯಾತ್ರಿಗಳ ಮೇಲಂತೂ ಪ್ರತಿವರ್ಷ ಭಯೋತ್ಪಾದಕ ತಂಡಗಳು ದಾಳಿಯೆಸಗುತ್ತಿದ್ದವು. ಮುಫ್ತಿ ಮಹಮದ್ ಸಯೀದ್ ಮುಖ್ಯಮಂತ್ರಿಯಾಗಿದ್ದಾಗ ತನ್ನ ಮಗಳನ್ನೇ ಭಯೋತ್ಪಾದಕರಿಗೆ ಕೊಟ್ಟು ಅಪಹರಣದ ನಾಟಕವಾಡಿ ಸೆರೆಮನೆಯಲ್ಲಿದ್ದ ಭಯೋತ್ಪಾದಕರನ್ನು ಬಿಡಿಸಿದ್ದ. ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದಾಗ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ರೋಹಿಂಗ್ಯಾಗಳನ್ನು ಕರೆತಂದು ಎಲ್.ಓ.ಸಿಯಿಂದ 50ಕಿಮೀ ದೂರದಲ್ಲಿರುವ ಜಮ್ಮುವಿನ ಭಟಿಂಡಾದಲ್ಲಿ ನೆಲೆಗೊಳಿಸಿಬಿಟ್ಟ. ಅವರೀಗ ಎಲ್ಲಾ ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಮರನಾಥ ಯಾತ್ರಿಗಳಿಗೆ ಯಾತ್ರಿನಿವಾಸಗಳನ್ನು ಕಟ್ಟಿಕೊಡಿ ಎಂದರೆ ಇದೇ ಕಾಶ್ಮೀರಿ ರಾಜಕಾರಣಿಗಳು ಆಕಾಶ ಭೂಮಿ ಒಂದು ಮಾಡಿ ಕಿರುಚಾಡಿದ್ದರು. ಪ್ರತ್ಯೇಕತಾವಾದಿಗಳು ಇಲ್ಲಿಯ ತರುಣರ ಕೈಗೆ ಕಲ್ಲು ಕೊಟ್ಟು ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸಿ, ಕೆಲಸ ಕೊಡಿಸಿದರು.
ದೇಶದ 1% ಜನಸಂಖ್ಯೆ ಇರುವ ಜಮ್ಮು ಕಾಶ್ಮೀರಕ್ಕೆ ಕೇಂದ್ರದ ಅನುದಾನದ ಪಾಲು 10%! ದೇಶದ 13% ಜನಸಂಖ್ಯೆಯುಳ್ಳ ಉತ್ತರ ಪ್ರದೇಶ ಪಡೆಯುವ ಪಾಲು 8.2%. 2000-2016ರ ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರತಿಯೊಬ್ಬ ವ್ಯಕ್ತಿ ತಲಾ 91,300 ರೂ. ಪಡೆದರೆ ಉತ್ತರಪ್ರದೇಶದ ವ್ಯಕ್ತಿಗೆ ಸಿಕ್ಕಿದ್ದು ಬರೇ 4300 ರೂ. ಈ ಅವಧಿಯಲ್ಲಿ ಜಮ್ಮು ಕಾಶ್ಮೀರ ಗಿಟ್ಟಿಸಿದ್ದು ಬರೋಬ್ಬರಿ 1.14 ಲಕ್ಷ ಕೋಟಿ ರೂ.! ಇವೆಲ್ಲವೂ ವಿಧಿ 370ರ ಫಲಶ್ರುತಿಗಳೇ. ಈ ಅವಧಿಗೆ ಮುನ್ನವೂ ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಪ್ರಮಾಣದ ಅನುದಾನವನ್ನು ಜಮ್ಮು ಕಾಶ್ಮೀರ ಪಡೆದುಕೊಂಡು ಬಂದಿತ್ತು. ಆದರೆ ಆ ಹಣದ ಹಂಚಿಕೆ, ವಿನಿಯೋಗ, ಉಳಿತಾಯದಲ್ಲಿ ಯಾವುದೇ ಪಾರದರ್ಶಕತೆಯಿರಲಿಲ್ಲ ಎಂದು 2016ರ ಕೇಂದ್ರ ಸಿಎಜಿ ವರದಿ ಹೇಳಿದೆ. ಇಷ್ಟು ಅನುದಾನವಿದ್ದರೂ ಕಾಶ್ಮೀರ ಯಾಕೆ ಅಭಿವೃದ್ಧಿಯಾಗಲಿಲ್ಲ? ಕಾರಣ ಇವೆಲ್ಲವೂ ಮೂರು ಕುಟುಂಬಗಳ ಖಜಾನೆ ಸೇರಿತ್ತು!
ಈ ವಿಧಿಯಿಂದಾಗಿಯೇ ಜಮ್ಮುಕಾಶ್ಮೀರದಲ್ಲಿ ಯಾವುದೇ ಬಂಡವಾಳ ಹೂಡಿಕೆಯಾಗಲಿಲ್ಲ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ಹೀಗಾಗಿ ಬಡ ಕಾಶ್ಮೀರಿಯ ಕೊಳ್ಳುವ ಸಾಮರ್ಥ್ಯವೂ ವೃದ್ಧಿಯಾಗಲಿಲ್ಲ. ಹಾಗಾಗಿಯೇ ಅನಾಯಾಸವಾಗಿ ಕಲ್ಲು ಬಿಸಾಕಿದರೆ ಬರುವ 500ರೂಪಾಯಿ ಭಿಕ್ಷೆಗೆ ಅವ ಇಳಿದದ್ದು. ಅದಕ್ಕೆ ಕುರಾನಿನ ಬೋಧನೆ ಕೂಡಾ ಜತೆಯಾಯಿತು! ತನ್ನ ಹೊಟ್ಟೆಗೆ ಕಲ್ಲು ಹೊಡೆಯುತ್ತಿರುವುದು ವಿಧಿ 370 ಹಾಗೂ ಕಾಶ್ಮೀರದ ಮೂರು ರಾಜಕೀಯ ಕುಟುಂಬಗಳು ಎಂದು ಅರಿಯದ ಆತ ಭಯೋತ್ಪಾದನೆಗೂ ಬೆಂಬಲ ಕೊಟ್ಟ. ಅದು ಪಾಕಿಸ್ತಾನ ಹಾಗೂ ಅದರ ಕೈಗೊಂಬೆಯಾಗಿ ವರ್ತಿಸುವ ಕಾಶ್ಮೀರದ ರಾಜಕಾರಣಿಗಳು ಹಾಗೂ ಸಂಘಟನೆಗಳು ತನ್ನನ್ನು ಆಡಿಸಿ ತಾವು ಮೆರೆಯುವ ಆಟ ಎಂದು ಆತನಿಗೆ ಅರಿವಾಗಲೇ ಇಲ್ಲ! ಇದ್ದ ಕೆಲವೇ ಕೆಲವು ಸರಕಾರೀ ಉದ್ಯೋಗಗಳಲ್ಲಿ ಮುಸ್ಲಿಮರಿಗೇ ಹೆಚ್ಚು ರಿಯಾಯಿತಿ ಇದ್ದ ಕಾರಣ ಹಿಂದೂ ಕೂಡಾ ಬಡವನಾಗಿಯೇ ಉಳಿದ. ಕಳೆದ ಏಳು ದಶಕಗಳಲ್ಲಿ ಕೇಂದ್ರ ಸರಕಾರಗಳು ಸುರಿದ ಅಪಾರ ಪ್ರಮಾಣದ ಹಣ ಕೆಲವೇ ಕೆಲವು ಕೈಗಳಲ್ಲಿಯೇ ಉಳಿದು, ಜಮ್ಮು ಕಾಶ್ಮೀರ ಭ್ರಷ್ಟಾಚಾರದ ಗೂಡಾಯಿತು. ಕೇವಲ ಆರು ತಿಂಗಳ ಪ್ರವಾಸೋದ್ಯಮ, ಅಲ್ಲಲ್ಲಿ ಬೆಳೆವ ಕೇಸರಿ, ಸೇಬು, ಬಾಸ್ಮತಿಯಿಂದ ಎಷ್ಟು ಗಳಿಕೆಯಾದೀತು?
ಈಗ ಕೇಂದ್ರ ಸರಕಾರ ವಿಧಿ 370ಯನ್ನು ಕಿತ್ತೊಗೆದಿದೆ. ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುವ ಕಾನೂನು, ಸಂವಿಧಾನ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಶಾಸನ ಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಢಕ್ ಶಾಸನ ಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ವಿಧಿ 370 ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಹೈಕೋರ್ಟ್ 2015ರ ಅಕ್ಟೋಬರ್ ರಂದು ನೀಡಿದ್ದ ಆದೇಶದ ಪ್ರಕಾರ ಅನುಚ್ಛೇದ 3 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನಿರ್ಧರಿಸುವ ಹಕ್ಕು ಸಾಂವಿಧಾನಿಕ ಶಾಸನ ಸಭೆಗೆ ಇದೆ. ವಿಧಾನಸಭೆ ವಿಸರ್ಜನೆಯಾಗಿರುವ ಜಮ್ಮು ಕಾಶ್ಮೀರದಲ್ಲಿ ಈಗ ರಾಜ್ಯಪಾಲರ ಆಳ್ವಿಕೆ. ಹಾಗಾಗಿ ಕಾಶ್ಮೀರದ ರಾಜ್ಯಪಾಲರ ಸಹಿಯೊಂದು ಸಾಕು. ಯಾವ ರಾಷ್ಟ್ರಪತಿಗಳ ಹುದ್ದೆಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತೋ ಈಗ ಅದೇ ರಾಷ್ಟ್ರಪತಿಗಳ ಅಂಕಿತದ ಮೂಲಕ ವಿಧಿ 370ರ ವಿಧಿಬರೆಹವನ್ನು ಬದಲಾಯಿಸಿ ಅಂತಿಮ ಸಂಸ್ಕಾರ ಮಾಡಲಾಗಿದೆ. ಈಗ ಜಮ್ಮು ಕಾಶ್ಮೀರ ನಿಜಾರ್ಥದಲ್ಲಿ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಮರಳಿದೆ. ವಿಧಿ 370ನ್ನು ತೆಗೆದರೆ ಭೂಕಂಪನವಾಗುತ್ತದೆ ಎನ್ನುತ್ತಿದ್ದವರಿಗೆ ಈಗ ತಮ್ಮ ಕಾಲ ಕೆಳಗಿನ ನೆಲ ಕುಸಿಯುತ್ತಿರುವ ಅನುಭವವಾಗುತ್ತಿದೆ! ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ ಜಮ್ಮು ಕಾಶ್ಮೀರವನ್ನು ನರಕಕ್ಕೆ ತಳ್ಳಿದ ಮೂರು ಪರಿವಾರಗಳಿಗೆ ಇನ್ನು ಕಾದಿದೆ ಹಬ್ಬ! ಜಮ್ಮು ಕಾಶ್ಮೀರದ ಕ್ಷೇತ್ರ ಮರುವಿಂಗಡನೆಗೂ ಕಾಲ ಕೂಡಿ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ, ಪ್ರವಾಸೋದ್ಯಮ, ಮೌಲ್ಯ ವೃದ್ಧಿಗೊಳಿಸುವ ಉಪಾಯದೊಂದಿಗಿನ ಆಹಾರ-ಔಷಧೀಯ ಬೆಳೆಗಳ ವ್ಯಾಪಾರ ಅಲ್ಲಿ ಉದ್ಯೋಗವಕಾಶವನ್ನು ಹೆಚ್ಚಿಸಿ ಕಾಶ್ಮೀರವನ್ನು ಮತ್ತೆ ಭೂಸ್ವರ್ಗವನ್ನಾಗಿಸಲಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳು ಹತ್ತಿರವಾಗಿವೆ. ಕಾಶ್ಮೀರದ ಉಳಿದರ್ಧವನ್ನು ಪಡೆವ ಆಸೆಯೂ ಗರಿಗೆದರಿದೆ. ಅಷ್ಟೇ ಏಕೆ ರಾಜಕೀಯ ಅಸ್ಥಿರತೆಯುಳ್ಳ, ದಾರಿದ್ರ್ಯದಿಂದ ಕೊಳೆಯುತ್ತಿರುವ ಪಾಕಿಸ್ತಾನ ಸ್ವಯಂಕೃತ ಅಪರಾಧದಿಂದ ನಾಲ್ಕು ಭಾಗಗಳಾಗಿ ವಿಭಜಿತಗೊಂಡು ಮತ್ತೆ ಭಾರತದ ತೆಕ್ಕೆಗೆ ಬರುವ ದಿನವೂ ದೂರವಿಲ್ಲ ಅನಿಸುತ್ತಿದೆ.