ಪುಟಗಳು

ಮಂಗಳವಾರ, ಜನವರಿ 20, 2015

ಕಾಫಿರರ ಮಾನ-ಪ್ರಾಣ ಹೋದರೂ ಪರವಾಗಿಲ್ಲ, ಬಾಂಧವರನ್ಯಾರೂ ಮುಟ್ಟಬಾರದು...! ಅಯ್ಯೋ ಭಾರತವೇ!           ಅದು ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಜೆಜೆ ನಗರದ ಗುಡ್ಡದಹಳ್ಳಿಯಲ್ಲಿರುವ ಶಾಲೆ. ಶಾಲೆಯ ದೈಹಿಕ ಶಿಕ್ಷಕರ ಮೇಲೆ ಜನವರಿ ಏಳರ ಬೆಳಿಗ್ಗೆ ಪ್ರಕರಣವೊಂದು ದಾಖಲಾಗುತ್ತದೆ. ಏನು ಪ್ರಕರಣ? ಏಳು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪ. ಪೊಲೀಸರು ಶಿಕ್ಷಕನನ್ನು ಬಂಧಿಸಲೆಂದು ಶಾಲೆಗೆ ಬರುತ್ತಾರೆ. ಇನ್ನೇನು ಬಂಧಿಸಬೇಕೆನ್ನುವಷ್ಟರಲ್ಲಿ ಜನ ಜಾಗಕ್ಕೆ ಬರತೊಡಗಿದರು. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಎಂಟುನೂರು ಜನ! ಬಂದ ಜನರಲ್ಲಿ ಹೆಚ್ಚಿನವರಿ 16-30 ವರ್ಷ ವಯಸ್ಸಿನ ಯುವಕರು. ಬಂದವರೇ ಶಿಕ್ಷಕನನ್ನು ತಮಗೆ ಒಪ್ಪಿಸಬೇಕೆಂದು ಪೊಲೀಸರನ್ನು ಆಗ್ರಹಪಡಿಸತೊಡಗಿದರು. ಆದರೆ ಪೊಲೀಸರು ನಿರಾಕರಿಸಿದಾಗ ಪೊಲೀಸರ ಮೇಲೆಯೇ ಕಲ್ಲು ತೂರಾಟ ಆರಂಭವಾಯಿತು. ಶಿಕ್ಷಕನಿಗೂ ಪ್ರಾಣಾಂತಿಕ ಹಲ್ಲೆ ನಡೆಸಲಾಯಿತು. ಒಂದಷ್ಟು ಬೈಕ್-ಸ್ಕೂಟರುಗಳನ್ನೂ ಸುಟ್ಟುಹಾಕಿದರು, ಶಾಲಾ ಕಟ್ಟದದೊಳಗೆ ಕಲ್ಲು, ಪ್ಲಾಸ್ಟಿಕ್ ಬಾಟಲ್ ತೂರಾಟ ನಡೆಸಿ, ಶಾಲಾ ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿ ಒಳಗಿರುವ ಮಕ್ಕಳಿಗೆ ಹೆದರಿಕೆ ಹುಟ್ಟಿಸಿದರು. ಹಿಂಸಾಚಾರ ಹಲವಾರು ಘಂಟೆಗಳವರೆಗೆ ನಡೆಯಿತು. ಕೊನೆಗೆ ಪೊಲೀಸರು ಹೆಚ್ಚುವರಿ ಪಡೆಯನ್ನು ಕರೆಸಿ ಅಶ್ರುವಾಯು ಪ್ರಯೋಗ ಮಾಡಿ ಆರೋಪಿಯನ್ನು ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಆದರೆ ಹಿಂಸಾಚಾರದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಘಟನೆಯ ಬಳಿಕ ೫೦ ಗಲಭೆಕೋರರನ್ನು ಬಂಧಿಸಲಾಗಿದೆ.
               ಪೊಲೀಸರ ವಿಚಾರಣೆಯ ನಂತರ ತಿಳಿದುಬಂದದ್ದೇನೆಂದರೆ ಇದೊಂದು ಕಟ್ಟುಕಥೆ. ಅಸಲಿಗೇ ಅತ್ಯಾಚಾರ ನಡೆದೇ ಇರಲಿಲ್ಲ. ಯಾವುದೋ ದುರುದ್ದೇಶವಿಟ್ಟುಕೊಂಡೇ ಇಂತಹ ಪ್ರಕರಣವನ್ನು ಸೃಷ್ಟಿಸಲಾಗಿತ್ತು. ಮತ್ತು ಮೊದಲೇ ರೀತಿ ತಮ್ಮದೇ ಸಮುದಾಯದವರನ್ನು ಸೇರಿಸುವುದೆಂದು ನಿರ್ಧರಿಸಲಾಗಿತ್ತು. ಇನ್ನೇನು ಕೆಲವೇ ದಿವಸಗಳಲ್ಲಿ ಕಸ್ಟಡಿಯಲ್ಲಿರುವ ಶಿಕ್ಷಕನ ಬಿಡುಗಡೆಯಾಗಲಿದೆ. ಆದರೆ ಮಾಧ್ಯಮಗಳಿಗೆ ಸಂಗತಿ ಈಗ ಮರೆತೇ ಹೋಗಿದೆ. ಶಿಕ್ಷಕನ ಕಳೆದು ಹೋದ ಮಾನವನ್ನು ಮರಳಿ ಕೊಡುವವರಾರು? ಶಿಕ್ಷಕನ ಮಗಳ ನಿಶ್ಚಿತಾರ್ಥವೂ ನಿಂತು ಹೋಗಿದೆ. ಅವರ ಮನೆಯ ಘನತೆಯನ್ನು ಹಾಳುಮಾಡಿದ ದ್ರೋಹಿಗಳಿಗೆ ಏನನ್ನೋಣ?
          ಘಟನೆಗೆ ಕಾರಣವೇನೆಂದು ಒಳಹೊಕ್ಕು ನೋಡಿದಾಗ ಅನೇಕ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದವು. ಮೊದಲನೆಯದಾಗಿ ಪೊಲೀಸರಿಗೆ ದೂರು ಕೊಟ್ಟವರು ಐವರು ಮುಸ್ಲಿಮ್ ಹೆಂಗಳೆಯರು. ಗಂಡಂದಿರಿಲ್ಲದ ಮಹಿಳೆಯರ ಬಗ್ಗೆ ಸ್ಥಳೀಯರಿಗೆ ಅನೇಕ ಸಂಶಯಗಳಿವೆ. ಇವರ ಮೇಲೆ ಅನೈತಿಕ ವ್ಯವಹಾರದ ಆರೋಪ ಜನರಿಂದ ಕೇಳಿ ಬರುತ್ತಿದೆ. ದೂರು ನೀಡಿದ ಇವರೇ, ಅತ್ಯಾಚಾರ ಪೀಡಿತೆ ಎಂದು ಹೇಳಲಾದ ಹುಡುಗಿಯ ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ ಕೊಡಲಿಲ್ಲ. ಅಲ್ಲದೆ ಪೊಲೀಸರು ಶಿಕ್ಷಕನನ್ನು ಬಂಧಿಸಿ ಒಯ್ದ ಮೇಲೆ ಶಿಕ್ಷಕನ ಮನೆಗೆ ಹೋಗಿ ಅವರ ಹೆಂಡತಿಯ ಬಳಿ "ನಿನ್ನ ಗಂಡ ನಿನ್ನ ಪಾಲಿಗೆ ಸತ್ತು ಹೋದ, ನೀನಿನ್ನು ಬೇರೆ ಮದುವೆಯಾಗು" ಹೀಗೆಂದು ಬಗೆಬಗೆಯಲ್ಲಿ ಪೀಡಿಸಿ ಅವರ ಮನಸ್ಥೈರ್ಯವನ್ನೂ ಕೆಡಿಸಿದ್ದಾರೆ.
           ಕೆಲವೇ ನಿಮಿಷಗಳಲ್ಲಿ ಒಂದೇ ಸಮುದಾಯದ 800 ಜನ ಒಟ್ಟಾಗಿದ್ದು ಹೇಗೆ ಮತ್ತು ಯಾಕೆ? ಕಾರಣವಿದೆ, ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಹೇಳಲಾದ ಬಾಲೆ ಮುಸ್ಲಿಂ. ಶಾಲೆ ಹಿಂದೂಗಳಿಂದ ನಡೆಸಲ್ಪಡುವಂತಹದ್ದು. ಅಲ್ಲಿನ 70% ವಿದ್ಯಾರ್ಥಿಗಳು ಮುಸ್ಲಿಮರು. ಶಾಲೆಯ ಪಕ್ಕದಲ್ಲೆ ಒಂದು ಮಸೀದಿಯಿದೆ. ಅಕ್ರಮವಾಗಿ ಕಟ್ಟಿದ್ದು ಮಾತ್ರವಲ್ಲದೆ ಅದರ ಕಟ್ಟಡ ಮೋರಿಯನ್ನೂ ನುಂಗಿದೆ. ಹಾಗಾಗಿ ಶಾಲೆಯನ್ನು ಕೆಡವಿ ಮಸೀದಿಯನ್ನು ಸಕ್ರಮಗೊಳಿಸುವ ಹುನ್ನಾರ ಒಂದು ಕಡೆ. ಇನ್ನು ಅದೇ ಶಿಕ್ಷಕನ ಮೇಲೆ ಯಾಕೆ ಆರೋಪ ಮಾಡಲಾಯಿತು? ಕಾರಣವಿದೆ. ಮೂರು ದಿವಸದ ಹಿಂದೆ ಈದ್ ಸಂದರ್ಭ ಶಾಲೆಯ ಆವರಣದೊಳಗೆ ಕೆಲ ಮುಸ್ಲಿಮ್ ಯುವಕರು ತಮ್ಮ ಧ್ವಜ ಊರಲು ಮುಂದಾದಾಗ ಇದೇ ಶಿಕ್ಷಕ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸೇಡು ಒಂದು ಕಡೆಯಾಗಿದ್ದರೆ, ಆತ ಭಾಜಪಾ ಹಾಗೂ ನಮೋ ಪರ ಒಲವು ಹೊಂದಿದ್ದು ಇನ್ನೊಂದು ಕಾರಣ. ಅದಕ್ಕಿಂತಲೂ ಮುಖ್ಯವಾಗಿ ಕೆಲ ದಿವಸಗಳ ಹಿಂದೆ ಪೊಲೀಸರು ಸ್ಥಳದಲ್ಲಿದ್ದ ಕೆಲವು ಗುಜರಿ ಅಂಗಡಿಗಳ ತಪಾಸಣೆ ನಡೆಸಿದ್ದರು. ಹಾಗಾಗಿ ಪೊಲೀಸರು ಇನ್ನು ತಮ್ಮ ತಂಟೆಗೆ ಬರಬಾರದೆನ್ನುವ ಉದ್ದೇಶ ಹಿಂಸಾಚಾರದ ಹಿಂದೆ ಇರುವಂತೆ ಮೇಲ್ನೋಟಕ್ಕೇ ಕಾಣುತ್ತಿದೆ. ಹಾಗಾದರೆ ಇಲ್ಲೇನೋ ಅಕ್ರಮದ ವಾಸನೆ ಬರುತ್ತಿರುವುದು ಸಹಜ ತಾನೇ. ಅದರ ವಿಚಾರಣೆ ನಡೆಸಬೇಕಾದವರು ಸುಮ್ಮನಿದ್ದಾರೆ. ಅವರಿಗೆ ವಿಚಾರಣೆಯ ಆಜ್ಞೆ-ಅನುಮತಿ ಕೊಡಬೇಕಾದವರು ನಿದ್ದೆ ಮಾಡುತ್ತಿದ್ದಾರೆ.
             ಗುಜರಿ ಅಂಗಡಿಯಲ್ಲಿ ತಪಾಸಣೆ ನಡೆಸಿದ ಕಾರಣಕ್ಕೇ ಹಿಂಸಾಚಾರ ನಡೆಸಿದ ಬಾಂಧವರು, ತಮ್ಮವನನ್ನು ಭಯೋತ್ಪಾದನೆಯ ತನಿಖೆಯಲ್ಲಿ ಬಂಧಿಸಿದಾಗ ಮುಗ್ಧ ಎನ್ನದೆ ಇದ್ದಾರೆಯೇ? ಆತನಿಗೆ ಸಹಾಯ ಮಾಡೋದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?(ಭಟ್ಕಳದಲ್ಲಿ ಈಗಾಗಲೇ ಭಯೋತ್ಪಾದಕರ ಪರ ವಕೀಲಿಕೆ ಧನಸಹಾಯ ಆರಂಭವಾಗಿದೆ) ಹೀಗೆ ಮುಂದುವರಿದರೆ ಹಿಂದೂಗಳ ಪರಿಸ್ಥಿತಿ ಏನಾದೀತು? ಒಬ್ಬ ವ್ಯಕ್ತಿಯ ಮಾನ ಹಾನಿಯಾದರೂ ಪರವಾಗಿಲ್ಲ, ತಮ್ಮ ಅವ್ಯವಹಾರಕ್ಕೆ ಕುತ್ತು ಬರಬಾರದೆಂದರೆ ಮನಸ್ಥಿತಿ ಹೇಗಿರಬಹುದು? ನನಗೇನೋ ಇಲ್ಲಿ ದೇಶದ್ರೋಹದ ಗುಮಾನಿ ಉಂಟಾಗುತ್ತಿದೆ. ನಿಮಗೆ? ಹೌದು ಘಟನೆಯ ಬಗೆಗಿನ ಮಾಧ್ಯಮಗಳ ದಿವ್ಯ ಮೌನಕ್ಕೇನು ಹೇಳಬೇಕು? ಇಂದು ಇದು ಶಿಕ್ಷಕರೊಬ್ಬರ ಕಥೆ...ಮುಂದೆ ನಮ್ಮದ್ದೂ! ಅಬ್ಬಾ ಹಿಂದೂವಿನ ದುರವಸ್ಥೆಯೇ?

ಸೋಮವಾರ, ಜನವರಿ 19, 2015

ಗತ ವೈಭವದ ಪ್ರವರವಲ್ಲವಿದು, ಅಗಾಧ ಜ್ಞಾನದ ವಿವರ-ಶೋಧನೆ!ಕೆ.ಪಿ ಸುರೇಶರವರ "ಗತವೈಭವದ ಪ್ರವರ - ವಿಜ್ಞಾನಕ್ಕೆದುರಾದ ಹೊಸ ಕುತ್ತು" ಲೇಖನಕ್ಕೆ ಪ್ರತಿಕ್ರಿಯೆ

ಗತ ವೈಭವದ ಪ್ರವರವಲ್ಲವಿದು, ಅಗಾಧ ಜ್ಞಾನದ ವಿವರ-ಶೋಧನೆ!
            ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆ ಭಾರತೀಯರನ್ನು ಎಂತಹ ಕೂಪಕ್ಕೆ ತಳ್ಳಿದೆಯೆಂದರೆ ತಮ್ಮ ಅತ್ಯುನ್ನತ ಪ್ರಾಚೀನ ಪರಂಪರೆಯನ್ನು ಮರೆತು ಭಾರತದ ಇತಿಹಾಸವೆನ್ನುವುದು ಅವಮಾನಭರಿತ ಎಂಬ ಭ್ರಮೆಯಲ್ಲಿಯೇ ಇಂದಿಗೂ ಕಾಲ ಕಳೆಯುತ್ತಿದ್ದಾರೆ. ತಮ್ಮ ಪ್ರಾಚೀನ ಜ್ಞಾನ-ವಿಜ್ಞಾನ, ಸಂಶೋಧನೆಗಳ ಬಗ್ಗೆ ಭಾರತೀಯರಿಗೆ ಇಂದಿಗೂ ಅಪನಂಬಿಕೆಯೇ ತುಂಬಿಕೊಂಡಿದೆ. ಇಲ್ಲದಿದ್ದಲ್ಲಿ ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಮಂಡಿಸಲಾದ ಪ್ರಬಂಧಗಳ ಕುರಿತಂತೆ ಅಂತಹ ಲೇಖನವೊಂದು ಖಂಡಿತಾ ಮೂಡಿಬರುತ್ತಿರಲಿಲ್ಲ. ಅದರಲ್ಲೂ ಅವುಗಳನ್ನು ಕೋಡಂಗಿ ಪ್ರಬಂಧಗಳೆಂದೂ, ನಮ್ಮ ವಿಜ್ಞಾನ ಸಾಧನೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾಗುವಂತಹ ಸನ್ನಿವೇಶ ಎದುರಾಯಿತೆಂದೂ ಹೇಳಬೇಕೆಂದರೆ ನಮ್ಮ ಪ್ರಾಚೀನ ಸಾಧನೆ ಇವರಲ್ಲಿ ಎಷ್ಟು ಅಸಹ್ಯ ಹುಟ್ಟಿಸಿರಬೇಕು. ಇವರೇ ಹೇಳುವಂತೆ "7000 ವರ್ಷಗಳ ಹಿಂದೆ ಭಾರದ್ವಾಜ ಮಹರ್ಷಿ ಬರೆದ ಎನ್ನಲಾದ ವೈಮಾನಿಕ ಶಾಸ್ತ್ರ ಎನ್ನುವ ಸಂಸ್ಕೃತ ಕೃತಿ" ಇವರ ಪಾಲಿಗೆ ಆಧಾರ ಗ್ರಂಥವಾಗಿ ಗೋಚರಿಸಲೇ ಇಲ್ಲ!
             ಹೌದು, ವಿಮಾನಶಾಸ್ತ್ರದ ಜನಕ ಮಹರ್ಷಿ ಭರಧ್ವಾಜ. ಭರಧ್ವಾಜನ ಯಾತ್ರಾ ಸರ್ವಸ್ವ ಅಥವಾ ಬ್ರಹದ್ವಿಮಾನ ಶಾಸ್ತ್ರದಲ್ಲಿ ವಿಮಾನ ತಯಾರಿಸುವ ಮತ್ತು ಹಾರಿಸುವ ತಂತ್ರಜ್ಞಾನದ ವಿವರಗಳಿವೆ. ವಿಮಾನ ತಯಾರಿಕೆಗೆ ಬೇಕಾದ ಲೋಹ, ಮಿಶ್ರಲೋಹಗಳು, ಬಳಸಬಹುದಾದ ಇಂಧನ ಮತ್ತು ಅದನ್ನು ತಯಾರಿಸುವ ವಿಧಾನಗಳ ವಿವರಣೆ ಇದೆ. ಎಂತಹ ಹೊಡೆತ ಬಿದ್ದರು ತುಂಡಾಗದ 'ಅಭೇದ್ಯ', ಬೆಂಕಿ ತಗುಲಿದರು ಸುಡದ 'ಅದಾಹ್ಯ', ಬೇರ್ಪಡಿಸಲಾಗದ 'ಅಛೇದ್ಯ' ಎಂಬ ಮೂರು ರೀತಿಯ ವಿಮಾನಗಳನ್ನು ತಯಾರಿಸುವ ಮಾಹಿತಿ ಇದೆ! ಭರಧ್ವಾಜನ ಇದೇ ಗ್ರಂಥದಲ್ಲಿ ದೂರದಿಂದಲೇ ವಿವಿಧ ತಂತ್ರಜ್ಞಾನ ಬಳಸಿ ಶತ್ರು ವಿಮಾನ ನಾಶ ಮಾಡುವ, ಪಕ್ಕದ ವಿಮಾನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಲ್ಲ 'ಶಬ್ಧಗ್ರಾಹಿ' ಯಂತ್ರದ, ಪೈಲಟ್ ಮತ್ತು ಪ್ರಯಾಣಿಕರು ಧರಿಸಬೇಕಾದ ಬಟ್ಟೆ, ತಿನ್ನಬಹುದಾದ ಆಹಾರ ಮತ್ತಿತರ ವಿಚಾರಗಳಿವೆ. 1895ರಲ್ಲಿ ಆನೇಕಲ್ ಸುಬ್ರಾಯ ಭಟ್ಟರ ಮಾರ್ಗದರ್ಶನದಲ್ಲಿ ಶಿವಕರ್ ಬಾಪೂಜಿ ತಲ್ಪಾಡೆ "ಮರುತಶಕ್ತಿ" ಎಂಬ ವಿಮಾನ ರಚಿಸಿದ್ದು ಭರಧ್ವಾಜನ ವಿಮಾನ ಶಾಸ್ತ್ರ ಆಧರಿಸಿಯೇ! ಆಗ ಅವರು ಸೂರ್ಯಕಿರಣ, ಪಾದರಸ, ನಕ್ಷರಸಗಳನ್ನು ಇಂಧನವಾಗಿ ಬಳಸಿದ್ದರು. 1500 ಅಡಿ ಎತ್ತರಕ್ಕೆ ಹಾರಿ ಯಶಸ್ವಿಯಾಗಿ ಕೆಳಗಿಳಿದ ವಿಮಾನ ಪರೀಕ್ಷೆಯ ಬಗ್ಗೆ ಅಂದಿನ ಪ್ರಸಿದ್ಧ ಮರಾಠಿ ಪತ್ರಿಕೆ 'ದಿ ಕೇಸರಿ' ವರದಿ ಪ್ರಕಟಿಸಿತ್ತು. ಪರೀಕ್ಷೆಗೆ ಅಂದಿನ ಬರೋಡಾ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡ್ ಮತ್ತು ಜಸ್ಟೀಸ್ ಗೋವಿಂದ ರಾನಡೆ ಸಾಕ್ಷಿಯಾಗಿದ್ದರು. ಈ ಮನುಷ್ಯ ರಹಿತ ವಿಮಾನ ಹಾರಾಟ  ನಡೆದದ್ದು ಮುಂಬಯಿಯ ಚೌಪತಿ ಸಮುದ್ರ ತೀರದಲ್ಲಿ, ಬಹು ಜನರ ಸಮ್ಮುಖದಲ್ಲಿ. ಆದರೆ ಬ್ರಿಟಿಷ್ ಸರಕಾರ ಇಂತಹ ಪ್ರಯೋಗಗಳನ್ನು ಮಾಡದಂತೆ ಬರೋಡಾದ ಮಹಾರಾಜರಿಗೆ ಆಜ್ಞೆ ಮಾಡಿತು. ಇದೇ ಸಂದರ್ಭದಲ್ಲಿ ಪತ್ನಿವಿಯೋಗದಿಂದ ತಲ್ಪಾಡೆ ಪ್ರಯೋಗದಲ್ಲಿ ಆಸಕ್ತಿಯನ್ನು ಕಳೆದುಕೊಂಡರು. ಅವರ ಸಂಬಧಿಗಳು ತಾವು ಕೊಟ್ಟ ಹಣವನ್ನು ಪಡೆಯಲೋಸುಗ "ಮರುತ ಶಕ್ತಿ" ವಿಮಾನವನ್ನು ಬ್ರಿಟಿಷರಿಗೇ ಮಾರಿದರು.  ರೈಟ್ ಸಹೋದರರು ಎಂಟು ವರುಷಗಳ ತರುವಾಯ ಮನುಷ್ಯ ಸಹಿತ ವಿಮಾನವನ್ನು 120 ಅಡಿಗಳವರೆಗೆ ಹಾರಿಸಿದರು.
            ಕೇವಲ ಭರದ್ವಾಜನ ಬೃಹದ್ವಿಮಾನಶಾಸ್ತ್ರದಲ್ಲಿ ಮಾತ್ರ ಉಲ್ಲೇಖ ಇರುವುದಲ್ಲ. ಆಗಸ್ತ್ಯ ಸಂಹಿತೆಯಲ್ಲಿ ಎರಡು ರೀತಿಯ ವಿಮಾನಗಳ ಉಲ್ಲೇಖವಿದೆ. 'ಛತ್ರ' ಯಾ ಅಗ್ನಿಯಾನ: ಶತ್ರುಗಳು ಬೆಂಕಿ ಹಚ್ಚಿದರೆ ಅಥವಾ ನೈಸರ್ಗಿಕ ಕಾಡ್ಗಿಚ್ಚು ಸಂಭವಿಸಿದರೆ ಪಾರಾಗಲು ಇದನ್ನು ಬಳಸುತ್ತಿದ್ದರು. 'ವಿಮಾನ ದ್ವಿಗುಣಂ' ಎಂಬ ವಾಯುಯಾನ ಈಗಿನ ಪ್ಯಾರಾಚೂಟ್ಗಳಂತೆ ಬಳಕೆಯಲ್ಲಿತ್ತು. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹರಿಶ್ಚಂದ್ರನ ಕಾಲದಲ್ಲಿದ್ದ ವೈಮಾನಿಕ ನಗರ 'ಸೌಭ ದೇಶ', ಆಕಾಶದಲ್ಲಿ ಯುದ್ಧ ಮಾಡುವ ತರಬೇತಿ ಪಡೆದ ಸೈನಿಕರ(ಆಕಾಶ ಯೋಧಿನ:) ಉಲ್ಲೇಖವಿದೆ. ವಾಯುಯುದ್ಧಗಳು ಸಂಭವಿಸುತ್ತಿರಲಿಲ್ಲವಾದರೆ ಆಕಾಶ ಯೋಧಿನಃ ಎಂಬ ಹೆಸರೇ ಬರುತ್ತಿರಲಿಲ್ಲ ಅಲ್ಲವೇ. ಕ್ರಿ. ಪೂ. 240 ಸುಮಾರಿಗೆ ಸಾಮ್ರಾಟ ಅಶೋಕನ ಕಾಲದಲ್ಲಿ ಆಕಾಶಯಾನಕ್ಕೆ ಬಳಸುವ ರಥಗಳಿದ್ದವು. ಸಮರಂಗ ಸೂತ್ರದಾರಾ ಎನ್ನುವ ಗ್ರಂಥ ಪಾದರಸದ ಎಂಜಿನ್ನುಗಳ ಬಗ್ಗೆ, ವಿಮಾನಗಳಲ್ಲಿ ಅವುಗಳ ಉಪಯೋಗದ ಬಗ್ಗೆ ಸವಿಸ್ತಾರವಾಗಿ ವಿವರಿಸಿದೆ. ನಾರಾಯಣ ಮುನಿಯ ವಿಮಾನ ಚಂದ್ರಿಕಾ, ಶೌನಿಕನ ವಿಮಾನ ಯಂತ್ರ, ಗರ್ಗನ ಯಂತ್ರ ಕಲ್ಪ, ವಾಚಸ್ಪತಿಯ ವಿಮಾನ ಬಿಂದು ಮುಂತಾದ ಗ್ರಂಥಗಳು ಪ್ರಾಚೀನ ಭಾರತದ ವೈಮಾನಿಕ ವಿಜ್ಞಾನದ ಬಗ್ಗೆ ಬೆಳಕು ಚೆಲ್ಲುತ್ತವೆ.
             ಬೃಹದ್ವಿಮಾನ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪಾದರಸ ಆವರ್ತ ಎಂಜಿನುಗಳನ್ನು ನಾಸಾ ಕೂಡಾ ತಯಾರಿಸುತ್ತದೆ. ನಾಸಾ ಇಂದು ಉಪಯೋಗಿಸುತ್ತಿರುವ ಪಾದರಸದ ವಿಮಾನ ಎಂಜಿನ್ನುಗಳಲ್ಲಿ ಪಾದರಸ ಘರ್ಷಣೆ ಘಟಕಗಳು ಸೌರ ಬ್ಯಾಟರಿಯಿಂದಲೇ ಶಕ್ತಿ ಪಡೆಯುತ್ತವೆ. ಅಂದರೆ ಬೃಹದ್ವಿಮಾನ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ಸೌರ ಶಕ್ತಿಯನ್ನೇ ಬಳಸುತ್ತದೆ ನಾಸಾ! ಅರೇ ಭಾರತೀಯ ವಿಜ್ಞಾನ ಸಂಸ್ಥೆಯವರು ನೆಲ ಬಿಟ್ಟೇ ಏಳಲಸಾಧ್ಯ ಎಂದ ತಂತ್ರಜ್ಞಾನವನ್ನು ನಾಸಾ ಹೇಗೆ ಅಳವಡಿಸಿಕೊಂಡಿತು? ಭಾರದ್ವಾಜನ ವಿಮಾನ ಶಾಸ್ತ್ರದಲ್ಲಿ ಹೇಳಿದ್ದು ಕೇವಲ ಐದು ವಿಮಾನ ತಯಾರಿಕ ತಂತ್ರಗಳಲ್ಲ. ಲಭ್ಯವಿರುವವೇ 32! ನ್ಯೂಟನ್ನನ ನಿಯಮಕ್ಕೆ ವಿರುದ್ಧವಾದುದಾದರೆ ನಾಸಾದ ವಿಮಾನಗಳು ಹೇಗೆ ಹಾರುತ್ತಿವೆ? ಭರದ್ವಾಜನ ವಿಮಾನ ಶಾಸ್ತ್ರವೊಂದು ಇಲ್ಲವೇ ಇಲ್ಲ ಎಂದಾದರೆ, 1904ರಲ್ಲಿ ಶಾಸ್ತ್ರಿಗಳೇ ಬರೆದ ಕೃತಿಯೆಂದಾದರೆ 1900ಕ್ಕೂ ಮೊದಲು ಅದರ ಉಲ್ಲೇಖ ಯಾಕೆ ಮಾಡುತ್ತಾರೆ? ವಿದೇಶೀಯರೇಕೆ ಅದರ ಬಗ್ಗೆ ವಿಪರೀತ ಆಸಕ್ತಿ ತಾಳುತ್ತಾರೆ? ಅದಕ್ಕಿಂತಲೂ ಮುಖ್ಯವಾಗಿ ಪ್ರಯೋಗಕ್ಕೆ ಹಣ ಸಹಾಯ ಮಾಡಲು ಬರೋಡಾದ ಮಹಾರಾಜರಿಗೇನು ಹುಚ್ಚು ಹಿಡಿದಿತ್ತೇ?
       ಮುಖ್ಯವಾಗಿ ಹೇಳಬೇಕೆಂದರೆ, ಲೇಖಕರು ಪೂರ್ವಾಗ್ರಹ ಪೀಡಿತರೇ. ಇಲ್ಲದಿದ್ದಲ್ಲಿ ಮೋದಿ ಸರಕಾರ ಇರುವ ಕಾರಣ ಹಿಂದುತ್ವ ಪ್ರಣಾಳಿಕೆಯ ಬ್ರಿಗೇಡ್ ನಮ್ಮ ಗತವನ್ನು ವೈಭವೀಕರಿಸಲೆತ್ನಿಸುತ್ತಿದೆ ಎಂಬ ಅಂಶವನ್ನು ಅವರು ಹೇಳುತ್ತಿರಲಿಲ್ಲ. ಒಂದು ಸಂಸ್ಕೃತ ಚೀಟಿ ದೊರೆತರೂ ಅದನ್ನು ವೈಭವೀಕರಿಸುತ್ತಿದ್ದಾರೆ ಎನ್ನುತ್ತಿರಲಿಲ್ಲ. ಪುಣ್ಯಕ್ಕೆ ಚರಕ, ಸುಶ್ರುತರ ಬಗ್ಗೆ ತಿಳಿದುಕೊಂಡಿದ್ದಾರೆ. ಇಲ್ಲದಿದ್ದಲ್ಲಿ ಅವರನ್ನೂ ಇತಿಹಾಸದ ವೈಭವೀಕರಣ ಎನ್ನುತ್ತಿದ್ದರೇನೋ? ಅಲ್ಲದೆ ಮೋದಿಯವರು ಹೇಳಿದ ಜೆನೆಟಿಕ್ ಇಂಜಿನಿಯರಿಂಗ್-ಪ್ಲಾಸ್ಟಿಕ್ ಸರ್ಜರಿ ಬಗೆಗಿನ ಗಣಪತಿ-ಕುಂತಿ-ದ್ರೋಣಾದಿಗಳ ದೃಷ್ಟಾಂತಕ್ಕೂ ಕುಹಕವಾಡಿದ್ದಾರೆ. ಬಲಪಂಥೀಯರನ್ನು, ಹಿಂದುತ್ವವನ್ನು ಕಂಡರಾಗದ ಅವರ ಭಾವ ಲೇಖನದಲ್ಲಿ ಢಾಳಾಗಿ ಎದ್ದು ಕಾಣುತ್ತಿದೆ. ಬಹುಷಃ ಲೇಖಕರಿಗೆ ತಿಳಿದಿಲ್ಲವೆನ್ನುತ್ತದೆ, ರಸಶಾಸ್ತ್ರ ಚೀನಾ, ಜಪಾನುಗಳಿಗೆ ಹೋದದ್ದು ಭಾರತದಿಂದಲೇ. ಅವರೇ ಹೇಳಿದ ಜಪಾನ್, ಕೊರಿಯಾಗಳು ಇಂದಿಗೂ ಭಾರತದತ್ತಲೇ-ಅದರ ಗತದತ್ತಲೇ ಗೌರವದಿಂದ ನೋಡುತ್ತಿವೆ. ಜರ್ಮನಿಯ ವಿದ್ವಾಂಸರಂತೂ ಇನ್ನೂ, ಭಾರತದಲ್ಲಿ ಏನಿತ್ತು ಎನ್ನುವ ಹುಡುಕಾಟದಲ್ಲೇ ಇದ್ದಾರೆ. ರಷ್ಯಾದಲ್ಲಿ ನಮ್ಮ ವೇದಮಂತ್ರಗಳ ಕುರಿತಂತೆ ವೈಜ್ಞಾನಿಕ ಸಂಶೋಧನೆಗಳಾಗುತ್ತಿವೆ. ಸ್ವೀಡನ್ನಿನ ವಿಜ್ಞಾನಿಗಳು ನಟರಾಜನ ಕುರಿತಂತೆ ಸಂಶೋಧನೆಗೆ ತೊಡಗಿದ್ದಾರೆ. ಇತ್ತೀಚೆಗಷ್ಟೇ ಗಾಡ್ ಪಾರ್ಟಿಕಲ್ ಸಂಶೋಧನೆಗೆ ಸ್ಪೂರ್ತಿ ನೀಡಿದ್ದು ನಮ್ಮದೇ ನಟರಾಜನ ಭಂಗಿ! ಇಡೀ ಜಗತ್ತು ನಮ್ಮ ಗತದ ಅಪ್ರತಿಮ ಜ್ಞಾನದ ಕಡೆಗೆ ಕಣ್ಣು ಹಾಯಿಸಿ ಸಂಶೋಧನೆಯಲ್ಲಿ ತೊಡಗಿದ್ದರೆ ನಾವು ನಮ್ಮಲ್ಲೇನೂ ಇರಲಿಲ್ಲ, ಎಲ್ಲವೂ ಬೊಗಳೆ ಎನ್ನುತ್ತಾ ಕೀಳರಿಮೆಯಿಂದ ನರಳುತ್ತಿದ್ದೇವೆ. ಅಷ್ಟಕ್ಕೂ ನಮ್ಮ ಹಿಂದಿನ ವಿಜ್ಞಾನದ ಉಲ್ಲೇಖಗಳಿಗೆ ಆಧಾರಗಳು ಸಿಗದೇ ಇರಬಹುದು. ಹಾಗಂತ ಅವು ಸುಳ್ಳೆಂದು ಹೇಳಲಿಕ್ಕಾಗದು. ಅದರ ಬಗ್ಗೆ ಸಂಶೋಧನೆಗಳು ನಡೆಯಬೇಕು, ಅದಕ್ಕಾಗಿ ಸೆಕ್ಯುಲರು ವ್ಯಾಧಿ ಮೊದಲು ಗುಣವಾಗಬೇಕು. ಆಧುನಿಕ ವಿಜ್ಞಾನದಲ್ಲೇ ಪ್ರೋಟಾನ್-ನ್ಯೂಟ್ರಾನ್-ಇಲೆಕ್ಟ್ರಾನುಗಳೇ ಅತೀ ಸಣ್ಣ ಕಣಗಳೆಂದು ತಿಳಿದುಕೊಂಡದ್ದೇ ಮೇಲುಕೆಳಗಾಗಿದೆ. ಇಂದಿನ ಮನುಷ್ಯ ಪ್ರಕೃತಿಯ ಆಳಕ್ಕೆ ಇಳಿಯುತ್ತಲೇ ಇದ್ದಾನೆ ಆದರೆ ವಿಧಾನ ಬೇರೆ ಅಷ್ಟೇ. ಇನ್ನೊಂದು ವಿಪರ್ಯಾಸವೇನೆಂದರೆ ವೇದದಲ್ಲಿ ಹೇಳಿದ ಎಲ್ಲವೂ ಈಗ ಸಂಶೋಧನೆಗೊಂಡು ಹೊರಬರುತ್ತಿವೆ. ನಾವು ಅದನ್ನು ನಂಬುತ್ತಿದ್ದೇವೆ, ಮೊದಲೇ ಹೇಳಿದ್ದ ವೇದವನ್ನು ನಂಬಲು ನಮಗೆ ದೊರಕಿರೋ ಮೆಕಾಲೆ ಶಿಕ್ಷಣ ಅಡ್ಡಿಯಾಗುತ್ತಿದೆ! ಹಾ ಭಾರತವೇ...!