ಪುಟಗಳು

ಭಾನುವಾರ, ಜನವರಿ 4, 2015

ದ್ವೀಪಾಂತರ



ದ್ವೀಪಾಂತರ
           ಇಂಡೋನೇಷಿಯಾ ಸುಮಾರು ಮೂರುಸಾವಿರ ದ್ವೀಪಗಳನ್ನೊಳಗೊಂಡ ದ್ವೀಪಸ್ತೋಮ. ಬಹುಷ ಇದೇ ಕಾರಣಕ್ಕೆ ಅದರ ಪುರಾತನ ಹೆಸರು "ದ್ವೀಪಾಂತರ" ಎಂದಿರಬೇಕು. ಹದಿನಾಲ್ಕನೆ ಶತಮಾನದಲ್ಲಿ ರಚಿತವಾದ "ನಾಗರ ಕೃತಾಗಮ" ಎಂಬ ಕೃತಿಯೂ ನಾಡನ್ನು ದ್ವೀಪಾಂತರ ಎಂದೇ ಸಂಬೋಧಿಸಿದೆ. ಇಂಡೋನೇಷಿಯಾವನ್ನಾಳಿದ ಮಜಾಪಹಿತ್ ಎಂಬ ರಾಜವಂಶದ ಬಗ್ಗೆ ಸವಿಸ್ತಾರವಾಗಿ ಗ್ರಂಥ ತಿಳಿಸುತ್ತದೆ. ಪುರಾತನ ಕೃತಿಗಳಲ್ಲಿ ನೂಸಾಂತರ ಎಂಬ ಇನ್ನೊಂದು ಹೆಸರಿನಿಂದಲೂ ಇದನ್ನು ಕರೆಯಲಾಗಿದೆ. ನೂಸ ಎಂದರೆ  ದ್ವೀಪ ಎಂದರ್ಥ. ಕಾಳಿದಾಸನ ಮೇಘದೂತದಲ್ಲೂ ದ್ವೀಪಾಂತರದ ಉಲ್ಲೇಖವಿದೆ. ಅಮರಕೋಶ ಸಮ್ಯಾತ್ರಿಕ ಎಂಬ ಪದಕ್ಕೆ ದ್ವೀಪಾಂತರಕ್ಕೆ ಹೋಗುವವರು ಎನ್ನುವ ಅರ್ಥ ಕೊಟ್ಟಿದೆ. ಅಂದರೆ ಭಾರತದೊಂದಿಗಿನ ದ್ವೀಪಾಂತರದ ಸಂಬಂಧ ಬಹಳ ಹಿಂದಿನಿಂದಲೂ ಇದ್ದಿರಬೇಕು. ಕೇವಲ ಆಚಾರ್ಯರು, ಆಳರಸರು ಮಾತ್ರವಲ್ಲ ಕುಶಲಕರ್ಮಿಗಳೂ ಅಲ್ಲಿಗೆ ಹೋದುದರ ನಿದರ್ಶನಗಳಿವೆ. ಅದರಲ್ಲೂ ಗುಜರಾತಿನ ರಾಜಕುಟುಂಬಿಕನೊಬ್ಬ ಐದುಸಾವಿರ ಕುಶಲಕರ್ಮಿಗಳೊಂದಿಗೆ ಅಲ್ಲಿಗೆ ಹೋಗಿದ್ದ! ದ್ವೀಪಾಂತರ ಇಂಡೋನೇಷಿಯಾವಾಗಿ ಬದಲಾದದ್ದು ಡಚ್ಚರಿಂದ. ಬಹುಷಃ ಅವರಿಗೂ ದ್ವೀಪಾಂತರದಲ್ಲಿ ಜಂಬೂದ್ವೀಪವೇ ಕಂಡಿರಬೇಕು!
          1949ರಲ್ಲಿ ಸ್ವಾತಂತ್ರ್ಯ ಪಡೆದ ಇಂಡೋನೇಷಿಯಾದ ಭಾರತದಲ್ಲಿನ ಮೊದಲ ರಾಯಭಾರಿಯ ಹೆಸರು "ಸುದರ್ಶನ"! ಪಲ್ಲವ ನಾಡಿನ ಸೂತ್ರದ ಬೊಂಬೆಯಾಟ ಇಲ್ಲಿ ಈಗಲೂ ಉಳಿದಿದೆ. ಇದರ ಕಥನ ಕಾವ್ಯ ಯಾವಾಗಲೂ ರಾಮಾಯಣವೋ ಮಹಾಭಾರತವೋ ಆಗಿರುತ್ತದೆ. ಇಂಡೋನೇಷಿಯಾದ ಮೊದಲ ಅಧ್ಯಕ್ಷ ಸುಕರ್ನೋ ಮುಸ್ಲಿಮರಾದರೂ ಅವರ ತಾಯಿ ಬ್ರಾಹ್ಮಣಳು. ಇಂಡೋನೇಷಿಯಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಲ್ಲಿನ ಜನತೆಯನ್ನು ಬಡಿದೆಬ್ಬಿಸಿದ ಪದ "ಮೆರ್ದೆಕಾ" ಅಂದರೆ ಸ್ವಾತಂತ್ರ್ಯ ಎಂದರ್ಥ. ಇದರ ಸಂಸ್ಕೃತ ಮೂಲ "ಮಹಾರ್ದಿಕಾ". ಅದು ""ಕಾರವನ್ನು ಹಗುರವಾಗಿ ಉಚ್ಛರಿಸುವ ಇಂಡೋನೇಷಿಯನ್ನರಿಂದ ಅದು ಮರ್ದಿಕಾ ಆಗಿ ಕೊನೆಗೆ ಮೆರ್ದೆಕಾ ಆಯಿತು. ಮಜಾಪಹಿತ್ ಸಾಮ್ರಾಜ್ಯದ ಕಾಲವನ್ನು ಇಂಡೋನೇಷಿಯಾದ ಸುವರ್ಣ ಯುಗವೆನ್ನಲಾಗಿದೆ. ಇದು ಅಲ್ಲಿನ ಕೊನೆಯ ಹಿಂದೂ ಸಾಮ್ರಾಜ್ಯ. ಮುಂದೆ ಇಂಡೋನೇಷಿಯಾ ಮುಸ್ಲಿಮರ ಬರ್ಬರತೆಗೆ ಒಳಗಾಯಿತು. ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸಂಸ್ಕೃತದಲ್ಲಿ  ರಚಿತವಾದ ಸುಮಾರು ಎರಡೂವರೆಸಾವಿರ ಪುಸ್ತಕಗಳು ದೊರಕಿವೆ. ಇವುಗಳಲ್ಲಿ ಪಾಣಿನಿಯ ವ್ಯಾಕರಣವನ್ನು ಅನುಸರಿಸಿರುವ ಪುಸ್ತಕಗಳು, ಅಮರಕೋಶ ಹಾಗೂ "ಅಮರ ಮಾಲಾ" ಎಂಬ ಬೌದ್ಧರ ಕೃತಿಯೂ ಸೇರಿದೆ. ನಾಲ್ಕುನೂರು ಶ್ಲೋಕಗಳಷ್ಟೇ ಉಪಲಬ್ಧವಿರುವ "ಅಮರ ಮಾಲಾ" ಸುಮಾತ್ರಾ ದ್ವೀಪದಲ್ಲಿ ನೆಲೆಯಾಗಿದ್ದ ಶೈಲೇಂದ್ರ ಸಾಮ್ರಾಜ್ಯದ ಕಾಲದ್ದು. ಶೈವ ಸಿದ್ಧಾಂತವನ್ನು ಕುರಿತ ಅನೇಕ ಕೃತಿಗಳೂ ಇವೆ. ತಾಳೆಗರಿಗಳ ಮೇಲೆ ಬರೆದ ಬಿಂದು ತತ್ವ ಎಂಬ ಕೃತಿಯೊಂದಿದೆ. ಓಂಕಾರದ ಮಹತ್ವವನ್ನು ಸಾರುವ ಇಪ್ಪತ್ತು ಕೃತಿಗಳೂ ದೊರೆತಿವೆ. ಮನುಧರ್ಮ ಶಾಸ್ತ್ರವನ್ನಾಧರಿಸಿ "ಕೂಟರನ ಮಾನವ" ಎಂಬ ಕೃತಿಯೂ ದೊರಕಿದೆ.
          ಭಾರತೀಯ ಅಂತಾರಾಷ್ಟ್ರೀಯ ನೀತಿ ಸೂತ್ರಗಳಿಗೆ "ಪಂಚಶೀಲ" ಎಂಬ ಹೆಸರನ್ನು ಸೂಚಿಸಿದವರು ಸುಕರ್ಣೋ! ಇಲ್ಲದಿದ್ದಲ್ಲಿ ನಮ್ಮ ಸೆಕ್ಯುಲರು ನಾಯಕರಿಗೆ ಇಂಥ ಹೆಸರು ನೆನಪಾದೀತೇ? 1952ರಲ್ಲಿ ಡಾ|| ರಘುವೀರರ ಶಿಷ್ಯರಾಗಿ ಇಬ್ಬರು ಇಂಡೋನೇಷಿಯನ್ನರು ಭಾರತಕ್ಕೆ ಬಂದರು. ಒಬ್ಬ ಭೃಗು ಗೋತ್ರದ ಪುಣ್ಯಾತ್ಮಜ ಓಕಾ ಎನ್ನುವ ಬ್ರಾಹ್ಮಣ. ಇನ್ನೊಬ್ಬ ಮಜಾಪಹಿತ್ ವಂಶೀಯ ಸುದರ್ಥ! ಇಂಡೋನೇಷಿಯಾದ ಪೂಜಾಕ್ರಮವೇ ವಿಶಿಷ್ಠ! ಅಲ್ಲಿನ ಬ್ರಾಹ್ಮಣ ಸ್ನಾನಾನಂತರ ಶುಭ್ರ ಉಡುಗೆಯುಟ್ಟು ಚಿನ್ನದ ಗರುಡಗಳನ್ನು ತೂಗಿಬಿಟ್ಟ ಒಂದು ಜೊತೆ ಯಜ್ಞೋಪವೀತವನ್ನು ಧರಿಸಿ ಅಂಗಾಂಗಗಳನ್ನು ಮಂತ್ರೋಕ್ತ ಆಚಮನದಿಂದ ಶುದ್ಧಗೊಳಿಸುತ್ತಾನೆ. ಮುಂದೆ ಅಭ್ಯಂತರ ಶುಚಿಯನ್ನು ಗಳಿಸಲು ಯೋಗಮಗ್ನನಾಗುತ್ತಾನೆ. ಕೊನೆಯ ಹಂತ ಮುಟ್ಟುವಾಗ ಆತ ಆಂತರಂಗಿಕವಾಗಿಯೂ ಶುದ್ಧನಾಗಿ ತಾನೇ ಶಿವನಾಗುತ್ತಾನೆ. ಇದನ್ನವರು ಶಿವೀಕರಣವೆಂದೇ ಕರೆಯುತ್ತಾರೆ. ಯೋಗವು ಮುಗಿದ ನಂತರ ತನ್ನ ದೇಹದಲ್ಲಿ ಆವಿರ್ಭವಿಸೆಂದು ಶಿವನನ್ನು ಸ್ತ್ರೋತ್ರಗಳಿಂದ ಪ್ರಾರ್ಥಿಸುತ್ತಾನೆ. ಬಳಿಕ ಪೂಜೆ. ಕಲಶ ಪೂಜೆಗೆ ಗಂಗೆಯನ್ನೇ ಆವಾಹಿಸುತ್ತಾರೆ. ತೀರ್ಥವನ್ನು "ಗಂಗಾತೋಯ"ವೆನ್ನುತ್ತಾರೆ. ಮುಂದೆ ಇಂಡೋನೇಷಿಯಾ ಸುದರ್ಥನನ್ನು ಹಿಂದೂ ಧರ್ಮ ವಿಭಾಗದ ಮುಖ್ಯಸ್ಥನಾಗಿಯೂ, ಓಕಾನನ್ನು ಇಂಡೋನೇಷಿಯಾ ಪುರಾತನ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥನಾಗಿ ನೇಮಿಸಿತು.
          ಇಂಡೋನೇಷಿಯಾದ ಪುರಾತನ ಭಾಷೆ "ಕವಿ" ಹುಟ್ಟಿದ್ದು ಸಂಸ್ಕೃತದಿಂದ! ಬಾಲಿ ಅಥವ ಬಲಿ ದ್ವೀಪದಲ್ಲಿ ಅತೀ ಹೆಚ್ಚು ಹಿಂದೂಗಳಿದ್ದಾರೆ. ಇಲ್ಲಿನ ರೇಡಿಯೋ ಕೇಂದ್ರ ಪ್ರತಿದಿನ ಗಾಯತ್ರಿ ಮಂತ್ರವನ್ನೊಳಗೊಂಡ ಮಂತ್ರಘೋಷದಿಂದ ತನ್ನ ಕಾರ್ಯಕ್ರಮವನ್ನು ಆರಂಭಿಸುತ್ತದೆ. ಸಂಧ್ಯಾವಂದನೆ ದಿನನಿತ್ಯದ ಭಾಗ. ವರ್ಣಾಶ್ರಮ ಧರ್ಮ ಆಚರಣೆಯಲ್ಲಿದ್ದರೂ ಅಸ್ಪೃಶ್ಯತೆಯಿಲ್ಲ. ಬ್ರಾಹ್ಮಣರನ್ನು ತ್ರಿವರ್ಣರೆಂದೂ, ಕ್ಷತ್ರಿಯರನ್ನು ದ್ವಿವರ್ಣ ಹಾಗೂ ಶೂದ್ರರನ್ನು ಏಕವರ್ಣರೆಂದೂ ಕರೆಯುತ್ತಾರೆ. ಬ್ರಾಹ್ಮಣ ಕ್ಷತ್ರಿಯ, ಶೂದ್ರರ ನಡುವೆ ಮದುವೆ ಸಂಬಂಧಗಳು ಸಾಮಾನ್ಯ ಹೀಗಾಗಿ ಮೇಲುಕೀಳೆಂಬ ಭಾವನೆಯೇ ಇಲ್ಲ. ಹಿಂದೂ ಧರ್ಮದ ಪುನರುಜ್ಜೀವನದಲ್ಲಿ ಅಮೋಘಪಾತ್ರ ವಹಿಸಿದವರು ಏಕವರ್ಣರೇ! ಐರೋಪ್ಯ ಉಡುಪು ಧರಿಸಿ ದೇವಾಲಯ ಪ್ರವೇಶಿಸುವಂತಿಲ್ಲ! ದಿನನಿತ್ಯ ಜಕಾರ್ತಾದಲ್ಲಿ ರಾಮಾಯಣ ಮಹಾಭಾರತಗಳ ರೂಪಕವೋ, ನಾಟಕವೋ ಅಥವಾ ಗೊಂಬೆಯಾಟವೋ ಇದ್ದೇ ಇರುತ್ತದೆ.
          ಭಾರತೀಯ ಸಂಸ್ಕೃತಿ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ಸಾಮಾನ್ಯ ಜಾಗಗಳಲ್ಲೂ ರಾಮಾಯಣ-ಮಹಾಭಾರತದ ಚಿತ್ರಪಟಗಳಿರುತ್ತವೆ. ಪ್ರವಾಸೀತಾಣವಾದ ಪುಂಚಟ್ ಪಾಯಿಂಟಿನ ಹೋಟಲ್ವೊಂದರಲ್ಲಿ "ಸೀತಾ ಸತ್ಯ" ಸೀತೆಯ ಅಗ್ನಿಪರೀಕ್ಷೆಯ ವರ್ಣಚಿತ್ರವನ್ನು ಲೋಕೇಶಚಂದ್ರರು ಕಂಡು ಬೆರಗಾಗಿ ಭಾರತದಲ್ಲೂ ಇಂತಹುದೊಂದು ಇಲ್ಲ ಎಂದಿದ್ದಾರೆ. ಸುಕರ್ಣೋ ಅವರಿಗೆ ಹೆಸರು ಇಡಲು ಕಾರಣ ಅವರ ಹೆತ್ತವರು ಮಹಾಭಾರತದ ಕರ್ಣನ ಅಭಿಮಾನಿಯಾಗಿದ್ದುದು. ಕರ್ಣ ಅಧರ್ಮದ ಪಕ್ಷ ಹಿಡಿದ ತಮ್ಮ ಮಗ ಧರ್ಮದ ಪಕ್ಷ ವಹಿಸುವ "ಸು"ಕರ್ಣನಾಗಬೇಕೆಂಬುದೇ ಅವರ ಆಶಯವಾಗಿತ್ತಂತೆ! ಗುಪ್ತರ ಕಾಲದ ಕಲಾ ಶೈಲಿಗಳು, ದೇವದೇವತೆಯರ ಚಿತ್ರಗಳೂ ಹೋಟಲುಗಳಲ್ಲಿವೆ. ಜಾವಾದಲ್ಲಿ ಘಟೋತ್ಕಜ ಜನಪ್ರಿಯ ಪಾತ್ರ. ಅರ್ಜುನ ಅವರ ರಾಷ್ಟ್ರವೀರ. ಸುಕರ್ಣೋ ಅವರೊಂದಿಗೆ ಭಿನ್ನಾಬಿಪ್ರಾಯವುಂಟಾದಾಗ ವಿರೋಧಿಗಳು ಅವರನ್ನು "ದುರ್ಯೋಧನ" ಎಂದಿದ್ದರು. ಅಲ್ಲಿನ ಮುಸಲ್ಮಾನ ರೈತರ ಜಾನಪದ ಸಾಹಿತ್ಯವೆಂದರೆ ಮಹಾಭಾರತದ ಗೀತೆಗಳೇ! ಕವಿ ಭಾಷೆಯಲ್ಲಿ ರಾಮಾಯಣವನ್ನು ಬರೆದಾತ ಯೋಗೀಶ್ವರ ಎನ್ನುವ ಕವಿ! ಅಲ್ಲಿನ ಒಂದು ವಿಶ್ವವಿದ್ಯಾಲಯದ ಹೆಸರು "ಉದಯನ"! ಐದನೆಯ ಶತಮಾನದ ಶಾಸನವೊಂದು ರಾಜೇಂದ್ರವರ್ಮನೆಂಬ ಅರಸ ಮಹಾಯಜ್ಞವನ್ನು ಮಾಡಿ, ಐದು ಸಾವಿರ ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ, ಸ್ತೂಪ ರಚಿಸಿದುದನ್ನು ಉಲ್ಲೇಖಿಸುತ್ತದೆ.
         ಇಂಡೋನೇಷಿಯಾದ ಪತ್ರಿಕಾಕೂಟದ ಹೆಸರು ವಿಸ್ಮವಾರ್ತಾ. ಸುದ್ದಿಗಾರನನ್ನು "ವಾರ್ತಾವಾನ್" ಎನ್ನುತ್ತಾರೆ. ವಿಸ್ಮ ಎನ್ನುವುದು ಸಂಸ್ಕೃತದ ವೇಶ್ಮಾ ಪದದ ರೂಪಾಂತರ ಅಂದರೆ ಕೂಟ ಅಥವಾ ಕೊಡುವ ಜಾಗ ಎಂದರ್ಥ! ಎಲ್ಲಾ ಅಂಗಡಿ-ಮುಂಗಟ್ಟುಗಳ ಹೆಸರು ಸಂಸ್ಕೃತದ್ದೇ! ನಿರ್ಮಾಣ ಕಾರ್ಯಕ್ಕೆ ಆದಿಕಾರ್ಯವೆಂದೂ, ನಿದ್ದೆ ಮಾಡುವುದಕ್ಕೆ ನಿಂದ್ಯಾಕಾರ್ಯವೆಂತಲೂ ಕರೆಯುತ್ತಾರೆ. ಅಲ್ಲಿನ ಒಂದು ನದಿಯ ಹೆಸರು ಗಂಗಾ, ಗುಣುಂಗ್ ಅಗುಂಗ್ ಎಂಬ ಪರ್ವತದಲ್ಲಿ ಕೈಲಾಸ ಎಂದು ಕರೆಯಲ್ಪಡುವ ಜ್ವಾಲಾಮುಖಿ ಶಿಖರವಿದೆ. ಅಲ್ಲಿನ ಅಗ್ನಿಕುಂಡದಲ್ಲಿ ಶಿವ ವಾಸಿಸುತ್ತಾನೆ ಎಂದು ಅವರು ನಂಬುತ್ತಾರೆ. ಅಲ್ಲಿ ವಿವೇಕಾನಂದರ ಬಗೆಗಿನ ಕೃತಿಗಳೂ ಇವೆ. ಅಲ್ಲಿನ ಜನರ ಹೆಸರೂಗಳು ರಾಮಾಯಣ ಮಹಾಭಾರತವನ್ನೇ ಅವಲಂಬಿಸಿವೆ. ಪಾರ್ಲಿಮೆಂಟು ಸದಸ್ಯರೊಬ್ಬರ ಹೆಸರು ವಿರಾಟ ಎಂದಿದ್ದ ಬಗೆಗೆ ಲೋಕೇಶಚಂದ್ರರು ಹೇಳಿದ್ದಾರೆ. ಮಿತ್ರವ್ರತ ಎನ್ನುವ ಪಾರ್ಲಿಮೆಂಟಿನ ಸದಸ್ಯನ ಬಳಿ ಮೂರು ಸಾವಿರ ಭಾರತೀಯ ಋಷಿವರ್ಯರ ತೊಗಲಿನ ಸೂತ್ರಬೊಂಬೆಗಳಿದ್ದುದನ್ನು ಅವರು ಹೇಳಿದ್ದಾರೆ. ಇಂಡೋನೇಷಿಯಾದ ರಾಜ್ಯಾಂಗದ ಹೆಸರು ಪಂಚಶೀಲ. ಅದರ ಮೊಟ್ಟಮೊದಲ ಸೂತ್ರವಾಕ್ಯ "ಧರ್ಮೋ ರಕ್ಷತಿ ರಕ್ಷಿತಃ! ರಾಜ್ಯಾಂಗದ ಮೂಲಭೂತ ನಿಯಮ "ಪ್ರತಿಯೊಬ್ಬ ನಾಗರಿಕ  ಮಹಾ ಈಶ್ವರನ ಅಸ್ತಿತ್ವದಲ್ಲಿ ನಂಬಿಕೆಯಿಡತಕ್ಕದ್ದು". ಇಂಡೋನೇಷಿಯನ್ನರು ಮುಸ್ಲಿಮರಾದರೂ ಅವರ ಸಂಸ್ಕೃತಿ, ಪರಂಪರೆ ಹಿಂದೂ, ಅವರಿಗೆ ಅದರ ಮೇಲೆ ಗೌರವವೂ ಇದೆ! ನಮ್ಮಲ್ಲಿ?
            ಹತ್ತು ಸಾವಿರ ದೇವಾಲಯಗಳಿರುವ ನಾಡು "ಬಲಿ" ಅಥವಾ ಇಂದು ಕರೆಯಲ್ಪಡುತ್ತಿರುವ "ಬಾಲಿ"! ಉದಯನ್ ವಿವಿ ಇರುವುದು ಇಲ್ಲಿಯೇ. ವಿವಿಯ ಅಂಗಳದಲ್ಲಿ ಸರಸ್ವತಿಯ ಸುಂದರ ಬೃಹತ್ ವಿಗ್ರಹವೊಂದಿದೆ. ಉದಯನ ಬಲಿದ್ವೀಪದ ವೀರ ಅರಸರಲ್ಲೊಬ್ಬ. ಜಗತ್ತಿನ ಮೂರು ನೃತ್ಯಮೇಳಗಳಲ್ಲಿ ಇಂಡೋನೇಷಿಯಾದ್ದೂ ಒಂದು. ಇನ್ನೆರಡು ಕಾಂಬೋಡಿಯಾ ಹಾಗೂ ಥಾಯಲೆಂಡುಗಳಲ್ಲಿವೆ. ರಾಮಾಯಣಕ್ಕೆ ಸಾಕ್ಷಿಯಾದ ನಮ್ಮಲ್ಲೇ ಇಂತಹ ಮೇಳವಿಲ್ಲ! ಜೋಗ್ಯ ಎಂಬ ಜಾಗದಲ್ಲಿ ಒಮ್ಮೆಗೇ 450 ನಟರು ಒಂದೇ ದೃಶ್ಯದಲ್ಲಿ ಅಭಿನಯಿಸಬಹುದಾದ ರಂಗಭೂಮಿಯಿದೆ! ಗುಣುಂಗ್ ಅಗುಂಗಿಗೆ ತೆರಳುವ ಮೊದಲು ಧ್ಯಾನ ಮಾಡಬೇಕು. ಅದಿರುವುದು ಬಲಿದ್ವೀಪದಲ್ಲೇ. ಬಳಿಯೇ ಬಸಾಕಿ ದೇವಾಲಯವಿದೆ. ಕೆಲವು ವರ್ಷಗಳ ಹಿಂದೆ ಬಸಾಕಿ ದೇವಾಲಯದಲ್ಲಿ ಬಲಿದ್ವೀಪದ ಜನತೆ ಏಕಾದಶ ರುದ್ರಯಾಗ ನಡೆಸಿತ್ತು. ಹನ್ನೊಂದನೆಯ ದಿನ ಯಾಗ ಮುಗಿದೊಡನೆ ಗುಣುಂಗ್ ಅಗುಂಗ್ ಉರಿಗೆದರಿತು. ರುದ್ರ ಸುಷುಪ್ತಾವಸ್ಥೆಯನ್ನು ಬಿಟ್ಟು ತಾಂಡವಕ್ಕಿಳಿದ. ಸುತ್ತ ಹಳ್ಳಿಯಲ್ಲೆಲ್ಲಾ ಕಾದ ಶಿಲಾರಸ ಹರಿಯಿತು ಬಸಾಕಿ ದೇವಾಲಯವೊಂದನ್ನು ಬಿಟ್ಟು! ಮುಗಿಲು ಚುಂಬಿಸುವ ಪ್ರಾಂಬಣದ ಬ್ರಹ್ಮಾನಂದ ದೇವಾಲಯ 224 ದೇವಾಲಯಗಳನ್ನೊಳಗೊಂಡಿದೆ. ಇವು ಭುವನಕೋಶ ಉಲ್ಲೇಖಿಸುವ ಶೈವ ಸಿದ್ಧಾಂತ ವಿಶ್ವ ವ್ಯವಸ್ಥೆಯ 224 ಜಗತ್ತುಗಳ ಪ್ರತೀಕ. ಹೊರಾವರಣದ ದೇವಾಲಯಗಳು ಚಕ್ರವಾಳ ಪರ್ವತಗಳನ್ನು ಸೂಚಿಸುತ್ತಿದ್ದರೆ, ಒಳಾವರಣದ ದೇವಾಲಯಗಳು ಮಾನಸ ಪರ್ವತದ ಎಂಟು ಶಿಖರಗಳನ್ನು ಸೂಚಿಸುತ್ತವೆ. ಇಂಡೋನೇಷಿಯಾದ ಅಭಿಮಾನ ಮಂದಿರವದು. ದೇವಾಲಯಗಳು, ಉಪದೇವಾಲಯಗಳು ಅಂತರ್ಬೋಧೆಯ ವಿಶ್ವ ವಿವರಣೆಯ ಮೂರ್ತ ರೂಪಗಳು. ಉಪದೇವಾಲಯಗಳನ್ನು ಪ್ರದಕ್ಷಿಣೆ ಮಾಡುತ್ತಾ, ಶಿಲ್ಪದ ಪದರಪದರಗಳನ್ನು ಸುತ್ತಿಕೊಂಡು ಒಳಹೊಕ್ಕಾಗ ಕೇಂದ್ರ ಮಂದಿರದಲ್ಲಿ ಸೃಷ್ಟಿ ಪ್ರಥಮ ಪ್ರಜ್ಞೆಯ ಅಖಂಡತೆಯ ಮೂರ್ತರೂಪವಾದ ಶಿವನನ್ನು ಕಾಣುತ್ತೇವೆ.
ಆಧಾರ: ಅಂತಾರಾಷ್ಟ್ರೀಯ ಭಾರತೀಯ ಸಂಸ್ಕೃತಿ ಅಕಾಡೆಮಿಯ ನಿರ್ದೇಶಕರಾಗಿದ್ದ ಡಾ|| ಲೋಕೇಶಚಂದ್ರರ ಉಪನ್ಯಾಸ ಮಾಲಿಕೆ ಯ ಕನ್ನಡಾನುವಾದ ಗಡಿಯಾಚೆಯ ಗುಡಿಗಳು - ಎನ್ ಪಿ ಶಂಕರನಾರಾಯಣರಾವ್





1 ಕಾಮೆಂಟ್‌: