ಪುಟಗಳು

ಶುಕ್ರವಾರ, ಜನವರಿ 16, 2015

ಅನ್ನದಾತನಿಗೂ ಇರಲಿ ಮನ್ನಣೆ, ನೀಗಿಸೋಣ ಆತನ ಬವಣೆ



 ಅನ್ನದಾತನಿಗೂ ಇರಲಿ ಮನ್ನಣೆ, ನೀಗಿಸೋಣ ಆತನ ಬವಣೆ

            ಭಾರತೀಯ ಕೃಷಿ ಎಂದರೆ ಅದು "ಮಳೆಯೊಂದಿಗೆ ಜೂಜಾಟ". ಯಾಕೆ ಹೀಗೆ ಎಂದು ಯೋಚಿಸಿದಾಗ ನಾವು ಮಾಡಬಹುದಾಗಿದ್ದ ನೀರಾವರಿ ವ್ಯವಸ್ಥೆಗಳನ್ನು ಸರಿಯಾಗಿ ಅಳವಡಿಸಿಕೊಂಡಿಲ್ಲ. ಒಂದು ಕಾಲದಲ್ಲಿ ವೈಜ್ಞಾನಿಕವಾಗಿದ್ದ ನಮ್ಮ ಕೃಷಿ ಸಂಸ್ಕೃತಿಯನ್ನು ಕಳೆದುಕೊಂಡಿದ್ದೇವೆ. ಬಿತ್ತನೆ ಬೀಜಗಳ ಬಗ್ಗೆ ನಾವೇ ಮುತುವರ್ಜಿ ವಹಿಸುವುದರ ಬದಲಾಗಿ ಸರ್ಕಾರದ ಕಡೆ ಮುಖಮಾಡುತ್ತೇವೆ. ಗೊಬ್ಬರಕ್ಕಾಗಿಯೂ ಸರ್ಕಾರವನ್ನೇ ಗೋಗರೆಯುತ್ತೇವೆ. ಭೂಮಿಗೆ ಸಾವಯವದ ಬದಲು ರಾಸಾಯನಿಕಗಳನ್ನೇ ಉಣಬಡಿಸುತ್ತೇವೆ. ಹೊಸದನ್ನು ಆವಿಷ್ಕರಿಸುವ, ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಬದಲು ಅಪ್ಪ ನೆಟ್ಟ ಆಲದ ಮರಕ್ಕೇ ನೇತು ಹಾಕುವ ನಮ್ಮ ಪ್ರವೃತ್ತಿ ನಮ್ಮ ಕೃಷಿ ವ್ಯವಸ್ಥೆಯನ್ನು ನಿಂತ ನೀರಿನಂತಾಗಿಸಿದೆ. ಒಂದು ವೇಳೆ ಎಲ್ಲವೂ ಸರಿಯಾಗಿದ್ದು ಬೆಳೆ ಸರಿಯಾಗಿ ಬಂದಲ್ಲಿ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ, ಕಾರ್ಮಿಕರ ಕೊರತೆ, ಮಧ್ಯವರ್ತಿಗಳ ಹಾವಳಿ, ಸರಕಾರದ ಗೋಮುಖವ್ಯಾಘ್ರತನ ಹೀಗೆ ಹತ್ತು ಹಲವು ಸಮಸ್ಯೆಗಳು ರೈತನನ್ನು ಕೃಷಿಯಿಂದ ವಿಮುಖನನ್ನಾಗಿ ಮಾಡುತ್ತಿವೆ. ಇಲ್ಲಿ ಸ್ವಯಂಕೃತ ಅಪರಾಧವೂ ಇದೆ, ಅದಕ್ಕಿಂತ ಹೆಚ್ಚಾಗಿ ಉದ್ಯಮಿ-ರಾಜಕಾರಣಿಗಳ ಸ್ವಾರ್ಥವೇ ಕೃಷಿಕರನ್ನು ಕೊಲ್ಲುತ್ತಿದೆ.
           ಭಾರತದಲ್ಲಿ ಕೃಷಿಯೆಂದರೆ ಅದು ಕೇವಲ ಉದ್ಯಮವಲ್ಲ. ಇಲ್ಲಿನ ಕೃಷಿಯಲ್ಲಿ ಒಂದು ಉನ್ನತ ಸಂಸ್ಕೃತಿಯೇ ಇದೆ. ಈ ನಾಡಿನ ರೈತ ಭೂಮಿಯನ್ನು ತಾಯಿಯೆಂದೇ ಪರಿಗಣಿಸುತ್ತಾನೆ. ತನ್ನ ಕೆಲಸಕ್ಕೆ ಉಪಯೋಗಿಸುವ ವಸ್ತುಗಳೆಲ್ಲವನ್ನೂ ದೇವತಾ ಸ್ವರೂಪದಿಂದ ಕಾಣುತ್ತಾನೆ. ಬ್ರಿಟಿಷರು ನಮ್ಮ ರೈತರ ವೈಜ್ಞಾನಿಕ ಪ್ರವೃತ್ತಿಯನ್ನು ನಾಶಗೊಳಿಸಿದರೂ ಈ ಸಂಸ್ಕೃತಿಗೆ ತೊಡಕಾಗಿರಲಿಲ್ಲ. ಆದರೆ ನಮ್ಮದೇ ರಾಜಕೀಯ ವ್ಯಕ್ತಿಗಳ ಹಣದಾಹಕ್ಕೆ, ದೇಶದ್ರೋಹಿತನಕ್ಕೆ ಇಲ್ಲಿನ ಕೃಷಿ ಸಂಸ್ಕೃತಿ ಹದಗೆಡುತ್ತಾ ಬಂತು. ಸಾವಯವ ಇದ್ದಲ್ಲಿ ರಾಸಾಯನಿಕಗಳು ಬಂದವು, ನಮ್ಮವರ ಮಾನಸಿಕ ಗುಲಾಮಗಿರಿಗೆ ಆರೋಗ್ಯಕರವಾದ ಇಲ್ಲಿನ ತಳಿಗಳು ನಶಿಸಿಹೋದವು. ಅದಕ್ಕಿಂತಲೂ ಹೆಚ್ಚಾಗಿ ವಿವೇಚಿಸುವ ಪ್ರವೃತ್ತಿ ನಾಶವಾಗಿ ಹೋಯಿತು. ಭಾರತದಲ್ಲಿದ್ದ ಪ್ರತಿಯೊಂದು ಸಾಮ್ರಾಜ್ಯ, ಸಂಸ್ಥಾನಗಳು ಕೃಷಿಯ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದವು. ವಿಜಯನಗರ ಸಾಮ್ರಾಜ್ಯ ಈ ನಿಟ್ಟಿನಲ್ಲಿ ಮೇರುಪಂಕ್ತಿಯಲ್ಲಿ ಕಂಡುಬರುತ್ತದೆ. ಅಂದು ವಿಜಯನಗರದ ಅರಸರು ನಾಡಿನಾದ್ಯಾಂತ ನಿರ್ಮಿಸಿದ  ಕೆರೆಗಳು, ತೊರೆಗಳು, ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟುಗಳು ಅಲ್ಲದೆ ಇತರ ನೀರಾವರಿ ವ್ಯವಸ್ಥೆಗಳು ಮೂಕಸಾಕ್ಷಿಯಾಗಿ ನಿಂತಿವೆ. ಆದರೆ ನಗರ ಪ್ರದೇಶಗಳಲ್ಲಿದ್ದ ಹೆಚ್ಚಿನವು ಭೂಮಾಫಿಯಾಕ್ಕೆ ಬಲಿಯಾಗಿ ಸತ್ತುಹೋಗಿವೆ.
            ಹದಿನೆಂಟನೆ ಶತಮಾನದ ಹೊಸ್ತಿಲವರೆಗೂ ಭಾರತ ಅಕ್ಷರಷಃ ಬಂಗಾರದ ಬೆಳೆಯ ನಾಡಾಗಿತ್ತು. ಭತ್ತ, ಗೋಧಿ, ಹತ್ತಿ, ಸಂಬಾರ ಪದಾರ್ಥಗಳು, ವಿವಿಧ ಬೆಳೆಗಳ ಉತ್ಪಾದನೆ, ವಿವಿಧ ರೀತಿಯ ಸಂಸ್ಕರಿತ ತಳಿಗಳ ಶೋಧನೆ ಹಾಗೂ ಬೆಳೆಸುವಿಕೆಯಲ್ಲಿ ಭಾರತ ಮುಂಚೂಣಿಯಲ್ಲಿತ್ತು.  ೧೮೦೪ರಲ್ಲಿ ಇಂಗ್ಲೆಂಡಿನ "ಎಡಿನ್ ಬರ್ಗ್ ರಿವ್ಯೂ" ಪತ್ರಿಕೆ ಬ್ರಿಟನ್ನಿನ ಕೃಷಿ ಕಾರ್ಮಿಕರಿಗೆ ಹೋಲಿಸಿದಲ್ಲಿ ಭಾರತದಲ್ಲಿ ದೊರಕುವ ಕೂಲಿ ಎಷ್ಟೋ ಅಧಿಕವಾಗಿದೆ. ಅರ್ಥ ವ್ಯವಸ್ಥೆ ಕುಸಿಯುತ್ತಿರುವ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ಭಾರತೀಯರ ಕೃಷಿ ಕಾರ್ಮಿಕರ ಕೂಲಿ ಇಷ್ಟು ಹೆಚ್ಚಿರಬೇಕಾದರೆ ಈ ಹಿಂದೆ ಆ ಮೌಲ್ಯ ಎಷ್ಟು ಹೆಚ್ಚಿರಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿತ್ತು! ಆ ಕಾಲದಲ್ಲಿ ಭಾರತದಲ್ಲಿ ಗೋಧಿಯ ಉತ್ಪಾದನೆ ಇಂಗ್ಲೆಂಡಿಗಿಂತ ಎಷ್ಟೋ ಪಟ್ಟು ಹೆಚ್ಚಾಗಿತ್ತು.  ಆಗ್ರಾದಂತಹ ಸ್ಥಳಗಳಲ್ಲಿ ಸಾಮಾನ್ಯನಿಗೂ ತಿನ್ನಲು ಬೆಣ್ಣೆ ಬೆರೆಸಿದ ಖಿಚಡಿ ಪ್ರತಿದಿನ ದೊರೆಯುತ್ತಿತ್ತು ಎಂದು ಡಚ್ ಯಾತ್ರಿಕನೊಬ್ಬ ಬರೆದಿದ್ದಾನೆ. ೧೭೩೬ರಲ್ಲಿ ದೆಹಲಿಯ ಲೇಖಕನೊಬ್ಬ "ಕೂಲಿವಂಶದಲ್ಲಿ ಜನಿಸಿದ ಯುವಕ ತನ್ನ ಸಾಮಾನ್ಯ ಅವಶ್ಯಕತೆಗಳಿಗಾಗಿ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡುತ್ತಾನೆ " ಎಂದು ಬರೆದಿದ್ದಾನೆ. ೧೯ನೇ ಶತಮಾನದ ಆರಂಭದವರೆಗೆ ಭಾರತದಲ್ಲಿನ ಬಡವರ ಅಲ್ಲದೆ ಆಂಗ್ಲ ಭಾಷೆಯಲ್ಲಿ "ಕೆಳವರ್ಗ" ಎಂದು ಕರೆಯಲ್ಪಡುವ ಜನರ ಜೀವನಮಟ್ಟ ಬ್ರಿಟನ್ನಿನ  ಸೂರ್ಯ ಮುಳುಗದ ನಾಡಿನ ಜನರಿಗೆ ಹೋಲಿಸಿದಲ್ಲಿ ಉನ್ನತಮಟ್ಟದಲ್ಲಿತ್ತು. ಕೃಷಿಯ ಉಪಕರಣಗಳು, ತಂತ್ರಜ್ಞಾನವು ಉತ್ಕೃಷ್ಟವಾಗಿತ್ತು. ೧೮೦೦ಕ್ಕೆ ಮೊದಲು ಬ್ರಿಟಿಷ್ ಕಲೆಕ್ಟರುಗಳು ಬ್ರಿಟನ್ನಿನ ಕೃಷಿ ಉಪಕರಣಗಳ ಸುಧಾರಣೆಗೆ ಸಹಾಯವಾಗಲೆಂದು ಇಲ್ಲಿನ ಅನೇಕ ಕೃಷಿ ಉಪಕರಣಗಳನ್ನು ತಮ್ಮ ದೇಶಕ್ಕೆ ಕಳುಹಿಸುತ್ತಿದ್ದ ದಾಖಲೆಗಳಿವೆ.
             ಆದರೆ ಮುಂದೆ ಬ್ರಿಟಿಷರು ಭಾರತವನ್ನು ತಮ್ಮ ದೇಶದಲ್ಲಿ ತಯಾರಾದ ಸಿದ್ಧ ವಸ್ತುಗಳ ಮಾರುಕಟ್ಟೆಯನ್ನಾಗಿಸಿ ಬದಲಾಯಿಸಿದರು. ಇಲ್ಲಿನ ಕೃಷಿ ಸಂಸ್ಕೃತಿಯ ಕೊರಳ ಕೊಯ್ದರು. ಭಾರತದ ಇಂದಿನ ಹದಗೆಟ್ಟ ಕೃಷಿ ವ್ಯವಸ್ಥೆ - ಅವೈಜ್ಞಾನಿಕ ಕೃಷಿ ಪದ್ದತಿ - ಅಸ್ಥಿರ ಮಾರುಕಟ್ಟೆ - ಮಧ್ಯವರ್ತಿ ಹಾವಳಿ - ರೈತರ ಆತ್ಮಹತ್ಯೆ ಇವುಗಳಿಗೆ ಅಡಿಪಾಯ ಹಾಕಿದ್ದು ಬ್ರಿಟಿಷರೇ. ನಾವು ಸ್ವತಂತ್ರಗೊಂಡ ನಂತರ ನಮ್ಮ ರಾಜಕೀಯ ನಾಯಕರು ಬ್ರಿಟಿಷರನ್ನೇ ಕುರಿಗಳಂತೆ ಅನುಸರಿಸಿದರು. ಒಂದು ಕಾಲದಲ್ಲಿ ಶಾಸನ ಗ್ರಾಮಗಳು, ಸಮುದಾಯ ಗ್ರಾಮಗಳು ಎಂದು ಕರೆಯಲ್ಪಡುತ್ತಿದ್ದ, ಇಸ್ರೇಲಿನ ಇಂದಿನ ಹಳ್ಳಿಗಳಂತಿದ್ದ ಸೌಂದರ್ಯ-ವಿನ್ಯಾಸ-ಯೋಜನೆ-ಕೃಷಿ-ಸೌಕರ್ಯಗಳಲ್ಲಿ ಸರ್ವಾಂಗ ಸುಂದರವಾಗಿದ್ದ ಬ್ರಿಟಿಷರ ಆಕ್ರಮಣದ ನಡುವೆಯೂ ಉಳಿದಿದ್ದ ದೇಶದ ಅನೇಕ ಗ್ರಾಮಗಳು "ಉಳುವವನೇ ಭೂಮಿಯ ಒಡೆಯ" ಎಂಬ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಕೊಚ್ಚಿಹೋದವು ಎಂದಿದ್ದಾರೆ ಶ್ರೀ ಧರ್ಮಪಾಲ್!
               ಭಾರತದಲ್ಲಿ ರಾಜಕಾರಣಿಗಳು ಉದ್ಯಮಿಗಳ ತಾಳಕ್ಕೆ ಕುಣಿದು ರೈತರ ಹಳೆಯ ಕೃಷಿ ಪದ್ಧತಿಗಳನ್ನು ಕೆಡಿಸಿದ್ದಾರೆ. ರಾಸಾಯನಿಕ ಗೊಬ್ಬರದಿಂದ ಹೊಲಗಳಿಗೆ ಹಾನಿಯಾಗಿದೆ. ಅವು ಜೈವಿಕಗೊಬ್ಬರ ಬಯಸಿವೆ. ರೈತರಿಗೆ ಅನುಕೂಲವಾಗುವಂತೆ ಕೃಷಿ ಬೆಲೆ ನೀತಿ ಅಳವಡಿಸುವಿಕೆ ಹಾಗೂ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಸೂಕ್ತವಾದ ಬದಲಾವಣೆಯ ಅಗತ್ಯವಿದೆ.  ದೇಶದಲ್ಲಿ ಈಗ ಉಳಿದಿರುವುದು 1.42 ಕೋಟಿ ಹೆಕ್ಟೇರ್ ಕೃಷಿ ಪ್ರದೇಶ ಮಾತ್ರ. ಅವು ಕೂಡಾ ಸರಿಯಾದ ಆರೈಕೆ ಇಲ್ಲದೆ, ಅಥವಾ ಕಾರ್ಮಿಕರ ಅಭಾವದಂತಹ ಸಮಸ್ಯೆಗಳಿಗೊಳಗಾಗಿ ಅಥವಾ ಉದ್ದಿಮೆದಾರರ ಹಿತಾಸಕ್ತಿಗೆ ಬಲಿಯಾಗುತ್ತಿವೆ. ತಮ್ಮ ಕೃಷಿಭೂಮಿಯನ್ನು ಉಳಿಸುಕೊಳ್ಳುವುದು ಮಾತ್ರವಲ್ಲ, ಗುಜರಾತಿನಲ್ಲಿ ಮಾಡಿದಂತೆ ಹೆಚ್ಚಿಸಿಕೊಳ್ಳುವುದು ಹಾಗೂ ಸಮರ್ಥವಾಗಿ ಬಳಸಿಕೊಳ್ಳುವುದರ ಬಗ್ಗೆ ನಾವು ಯೋಚಿಸಬೇಕಾಗಿದೆ. ಕೃಷಿ ಕಾರ್ಮಿಕರ ಕೊರತೆ ಹೆಚ್ಚಿದ್ದು, ಸಮಸ್ಯೆ ನೀಗಿಸುವಂತಹ ಯಾಂತ್ರೀಕರಣ ವ್ಯವಸ್ಥೆ ಆಗಬೇಕಿದೆ.  ಹಿಮಾಲಯದ ತುದಿಯಿಂದ ಕಡಲ ತಡಿಯ ಕನ್ಯಾಕುಮಾರಿವರೆಗೆ ದೇಶದಲ್ಲಿ 127 ವಿಧದ ಹವಾಗುಣದ ಕೃಷಿ ವಲಯಗಳಿವೆ. ಒಂದೊಂದು ವಲಯದ್ದೂ ವಿಭಿನ್ನವಾದ ಸಮಸ್ಯೆ. ಯಾವುದೇ ಒಂದು ಸಂಶೋಧನೆಯನ್ನು ದೇಶಕ್ಕೆ ಇಡಿಯಾಗಿ ಅನ್ವಯಿಸಲು ಸಾಧ್ಯವಿಲ್ಲ. ಒಂದು ಭಾಗಕ್ಕೆ ಅನ್ವಯ ಆಗುವಂತಹ ಯಾವುದೋ ಶೋಧವನ್ನು ಮತ್ತೊಂದು ಭಾಗದಲ್ಲಿ ಪ್ರಯೋಗಕ್ಕೆ ಒಡ್ಡಿ, ಅದು ನಿರರ್ಥಕ ಎನ್ನುವುದರಲ್ಲಿ ಅರ್ಥವಿಲ್ಲ. ನಮ್ಮ ವಿವಿಧ ಬೆಳೆಗಳ ತಳಿಗಳನ್ನು ಉಳಿಸಿಕೊಳ್ಳುವುದು, ಮಧ್ಯವರ್ತಿಗಳ ಹಾವಳಿಯಿಲ್ಲದ ನೇರ ಮಾರುಕಟ್ಟೆ, ಪ್ರತಿಯೊಂದು ಬೆಲೆಗೂ ಸರ್ವಋತುವಿಗೆ ಅನುಗುಣವಾಗಿ ಒಂದು ಕನಿಷ್ಟ ಮೌಲ್ಯ ಹಾಗೂ ಕಾಲಕ್ಕೆ ತಕ್ಕಂತೆ ಅದರಲ್ಲಿ ಹೆಚ್ಚಳ, ಉದ್ದಿಮೆಗಳಿಗೆ ಸರಕಾರಗಳಿಂದ ಭೂಕಬಳಿಕೆ ಆಗದಂತಹ ನೀತಿ, ಸಣ್ಣ ಹಿಡುವಳಿದಾರನಿಗೂ ಮೌಲ್ಯ, ಕೃಷಿಯಲ್ಲಿ ಕಾಲಕ್ಕೆ ತಕ್ಕಂತೆ ಸಂಶೋಧನೆಗಳೂ ಮಾರ್ಪಾಟುಗಳು, ನಮ್ಮದೇ ಉತ್ಪಾದನೆಯನ್ನು ಉತ್ಪನ್ನಗಳಾಗಿ ಪರಿವರ್ತಿಸಬಲ್ಲ ಸ್ವದೇಶೀ ಉದ್ದಿಮೆಗಳು, ಹಾಗೂ ಅವುಗಳನ್ನು ವೈಜ್ಞಾನಿಕವಾಗಿ ಮಾರ್ಕೆಟಿಂಗ್ ಮಾಡುವುದು...ಇವೆಲ್ಲವೂ ಆದರೆ ಭಾರತದ ಕೃಷಿ ಅಭಿವೃದ್ಧಿಯನ್ನು ಸಾಧಿಸುತ್ತದೆ. ನಮ್ಮ ವಸ್ತುಗಳನ್ನು ನಾವೇ ಉಪಯೋಗಿಸುವಂತಾಗುತ್ತದೆ.
            ಹಾಗೆಂದು ಅಭಿವೃದ್ಧಿಯೇ ಆಗಿಲ್ಲವೇ? ಇಲ್ಲ ಎಂದರೆ ತಪ್ಪಾದೀತು. ಅಭಿವೃದ್ಧಿಯಾಗಿದೆ, ಆದರೆ ನಿರೀಕ್ಷಿಸಿದಷ್ಟಲ್ಲ. ಕಳೆದ ವರ್ಷ ಮುಂಗಾರು ಕೊರತೆಯಿಂದ ದೇಶದಲ್ಲಿ ಅಂದಾಜು ಶೆ.3ರಷ್ಟು ಬಿತ್ತನೆ ಕಡಿಮೆಯಾಗಿದೆ. ಆದರೂ ದೇಶದಲ್ಲಿ 265 ದಶಲಕ್ಷ ಟನ್ (26.5 ಕೋಟಿ ಟನ್) ಬತ್ತ, ಗೋದಿ, ಜೋಳ, ದ್ವಿದಳ ಧಾನ್ಯ, ಎಣ್ಣೆ ಕಾಳು ಉತ್ಪಾದನೆಯಾಗಿದೆ. ತೋಟಗಾರಿಕೆಯಲ್ಲಿ ಸಾಕಷ್ಟು ಪ್ರಗತಿ ಆಗುತ್ತಿದೆ. 270 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ ಉತ್ಪತ್ತಿಯಾಗಿದ್ದು, ಕೃಷಿ ಉತ್ತುಂಗದತ್ತ ಸಾಗುತ್ತಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮುತುವರ್ಜಿಯಿಂದ ಬೆಟ್ಟ, ಕರಾವಳಿ, ಬಯಲುಸೀಮೆ, ಒಣಭೂಮಿ ಹಾಗೂ ನೀರಾವರಿ ಪ್ರದೇಶಕ್ಕೆ ಅನ್ವಯ ಆಗುವಂತೆ ಪ್ರತ್ಯೇಕ ಕೃಷಿ ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗುತ್ತಿದೆ. ಬರವನ್ನೂ ಮೆಟ್ಟಿ ನಿಲ್ಲುವಂತಹ ತಳಿಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಪರಿಷತ್ತು ಹಸಿರು ಕ್ರಾಂತಿಗೆ ಬದಲಾಗಿ ಸುಸ್ಥಿರ ಕೃಷಿಯತ್ತ ಗಮನಹರಿಸಿದೆ. ಸಮಗ್ರ ಕೃಷಿಯನ್ನು ಸಹ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ತಳಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದೆ. ವಾತಾವರಣದ ವಿಕೋಪಗಳನ್ನು ತಡೆದುಕೊಳ್ಳಬಲ್ಲ ಆಹಾರ ಧಾನ್ಯಗಳ ತಳಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ . ದೇಶದಲ್ಲೇ ಮೊಟ್ಟಮೊದಲ ಸೆನ್ಸರ್ ಕೃಷಿ ತಂತ್ರಜ್ಞಾನ ಸಂಶೋಧನಾ ಕೇಂದ್ರ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಮ್ಮ ರಾಜ್ಯದಲ್ಲಿ ಆರಂಭವಾಗುತ್ತಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ಚಿತ್ರದುರ್ಗದಲ್ಲಿ ಆರಂಭಿಸಲಿರುವ ನೂತನ ಕ್ಯಾಂಪಸ್ನಲ್ಲಿ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದ್ದು ಒಂದು ವರ್ಷದೊಳಗೆ ಕಾರ್ಯಾರಂಭ ಮಾಡಲಿದೆ. ಕೃಷಿ ಕ್ಷೇತ್ರದ ಹೊಸ ತಂತ್ರಜ್ಞಾನ ರೂಪಿಸಲು ಭಾರತೀಯ ಕೃಷಿ ಸಂಶೋಧನಾ ಪರಿಷತ್, ಐಐಟಿ ಹೈದ್ರಾಬಾದ್ ಐಐಎಸ್ಸಿ ಬೆಂಗಳೂರು, ಅಣುಶಕ್ತಿ ಸಂಶೋಧನಾ ಸಂಸ್ಥೆಗಳು ಕೈಜೋಡಿಸುತ್ತಿವೆ. ಕೃಷಿಯಲ್ಲಿ ಸೆನ್ಸರ್ ಅಳವಡಿಸುವ ಮೂಲಕ, ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಬೇಕೋ, ಎಷ್ಟು ಪ್ರಮಾಣದಲ್ಲಿ ಗೊಬ್ಬರ, ಪೌಷ್ಟಿಕಾಂಶ, ಬೆಳಕು, ಉಷ್ಣಾಂಶ ಸಿಗಬೇಕೋ ಅಷ್ಟನ್ನು ಕೊಡುವ ವ್ಯವಸ್ಥೆ ಮಾಡಬಹುದು.
              ಗುಜರಾತಿನಲ್ಲಿ ಸಮುದ್ರ ಪಾಲಾಗುತ್ತಿದ್ದ ನರ್ಮದಾ ಅಣೆಕಟ್ಟಿನ ಹೆಚ್ಚುವರಿ ನೀರನ್ನು ಸದಾ ನೀರಿನ ಅಭಾವವಿರುವ ಸೌರಾಷ್ಟ್ರ ಪ್ರದೇಶದ ಏಳು ಜಿಲ್ಲೆಗಳಲ್ಲಿ 115 ಚಿಕ್ಕ ಅಣೆಕಟ್ಟುಗಳನ್ನು ಕಟ್ಟಿ 1115 ಕಿ.ಮೀ ಉದ್ದದ ಕಾಲುವೆಯಿಂದ ನೀರನ್ನು ತುಂಬಲಾಗುತ್ತದೆ. ಗುರುತ್ವಾಕರ್ಷಣ ಶಕ್ತಿಯಿಂದ ಹರಿಯುವ ಈ ನೀರಿನಿಂದ 10 ಲಕ್ಷ ಎಕರೆ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ನಿಲ್ಲಲಿದೆ. ಅಲ್ಲದೆ ನದಿ ಜೋಡಣೆಯ ಮೂಲಕ ತನ್ನೆಲ್ಲಾ ಬತ್ತಿದ ನದಿಗಳನ್ನು ತುಂಬಿ ಹರಿಯುವಂತೆ ಮಾಡಿದ ಗುಜರಾತ್ ತನ್ನ ಕೃಷಿ ಉತ್ಪಾದನೆಯನ್ನು ವೇಗವಾಗಿ ಹಿಗ್ಗಿಸಿಕೊಂಡಿತು. ಹೀಗಾಗಿ ಕಳೆದ ವರ್ಷ ದೇಶದ ಕೃಷಿ ಅಭಿವೃದ್ಧಿ ದರ ಕೇವಲ 3%ವಿದ್ದರೆ ಗುಜರಾತಿನಲ್ಲಿ ಅದು 1೦%! ಮಾತ್ರವಲ್ಲ ಜಗತ್ತಿನಲ್ಲೇ ಇಸ್ರೇಲ್ ಬಿಟ್ಟರೆ ಕೃಷಿಭೂಮಿ ಜಾಸ್ತಿ ಆಗಿರುವುದು ಗುಜರಾತಿನಲ್ಲೇ! ಹೀಗೆ ಗುಜರಾತಿನಂಥ ಒಣ ಭೂಮಿಯಲ್ಲಿ ಅಭಿವೃದ್ಧಿಗಾಥೆ ಹಾಡಿದ ನಾಯಕ ಈಗ ಪ್ರಧಾನಿಯಾಗಿರುವುದು ದೇಶದ ಕೃಷಿಕರ ಬಾಳನ್ನು ಹಸನು ಮಾಡಿಸಬಲ್ಲರೆಂಬ ಬೆಟ್ಟದಷ್ಟು ನಿರೀಕ್ಷೆಗಳಿರುವುದು ಸುಳ್ಳಲ್ಲ. ಆದರೆ ಕೇವಲ ಒಬ್ಬ ಪ್ರಧಾನಿಯಿಂದ ಮಾತ್ರ ಆಗುವಂತಹ ಕೆಲಸವಲ್ಲ ಇದು. ಅದಕ್ಕೆ ಭಾರತೀಯರೆಲ್ಲರ ಸಹಕಾರದ ಅವಶ್ಯಕತೆ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ