ಪುಟಗಳು

ಬುಧವಾರ, ಏಪ್ರಿಲ್ 15, 2015

ಗೋಮುಖದಿಂದ ಜನಿಸಿದವಳನ್ನು ನಿರ್ಲಕ್ಷಿಸಿದರೆ ಗೋಭೂಮಿ ಉಳಿದೀತೇ?

ಗೋಮುಖದಿಂದ ಜನಿಸಿದವಳನ್ನು ನಿರ್ಲಕ್ಷಿಸಿದರೆ ಗೋಭೂಮಿ ಉಳಿದೀತೇ?
ಬ್ರಹ್ಮನ ವರ ಶಿವನ ಕೃಪೆ ಭಗೀರಥನ ಪ್ರಯತ್ನದ ಫಲವಾಗಿ ಸಪ್ತ ಕವಲುಗಳಾಗಿ, ಭಾಗೀರಥಿಯಾಗಿ ಜಾಹ್ನವಿಯೆನಿಸಿ ದೇವಭೂಮಿ ಭಾರತದ ನೆಲದ ಮೇಲೆ ಭೋರ್ಗರೆದು ಹರಿದವಳು ದೇವಗಂಗೆ. ಗಂಗೋತ್ರಿಯ ಬಳಿಯ ಗೋಮುಖದಿಂದ ತನ್ನ ಪಯಣ ಆರಂಭಿಸುವ ಗಂಗೆ ಉಗಮಿಸುವುದು ಸಮುದ್ರಮಟ್ಟದಿಂದ 13,800 ಅಡಿ ಎತ್ತರದಲ್ಲಿ. ಗಂಗೆ ಗೋಮುಖದಿಂದ ಕೆಳಗಿಳಿಯುವುದರಿಂದ ಭಾರತಕ್ಕೆಗೋಭೂಮಿ ಎಂದೇ ಹೆಸರು. ಬದರಿ, ಕೇದಾರಗಳನ್ನು ಬಳಸಿ ದೇವಪ್ರಯಾಗ ತಲುಪಿದಾಗ ಗಂಗೆಯ ಹಲವು ಕವಲುಗಳು ಒಂದುಗೂಡುತ್ತವೆ. ಹರಿದ್ವಾರದಲ್ಲಿ ಬಯಲಿಗಿಳಿವ ಈ ಶ್ವೇತ ಸುರನದಿ ಪ್ರಯಾಗದಲ್ಲಿ ಕೃಷ್ಣವರ್ಣೆ ಯಮುನೆಯನ್ನು ಗುಪ್ತಗಾಮಿನಿ ಸರಸಿರೆಯ ಜೊತೆಗೂಡುತ್ತಾಳೆ. ಕಾಶಿ, ಗಯಾ, ಪಾಟಲೀಪುತ್ರ, ದಕ್ಷಿಣೇಶ್ವರ, ನವದ್ವೀಪಗಳನ್ನು ಪವಿತ್ರಗೊಳಿಸಿದ ಖ್ಯಾತಿ ಆಕೆಯದ್ದು. ಪಾಟ್ನಾ, ಕನೌಜ್, ಕಾಶಿ, ಅಲಹಾಬಾದ್,ಭಾಗಲ್ ಪುರ್ ಮತ್ತು ಕೋಲ್ಕತ್ತಾ ಹೀಗೆ ಅನೇಕ ನಗರ-ಹಳ್ಳಿಗಳ ಲಕ್ಷಾಂತರ ಜನರ ಬದುಕಿಗೆ ಗಂಗೆಯೇ ಆಸರೆ.

ಗಂಗೆಯೇನೂ ನೆಲದ ಬಹುದೊಡ್ಡ ನದಿಯೇನೂ ಅಲ್ಲ. ಸಿಂಧೂ, ಬ್ರಹ್ಮಪುತ್ರಗಳಷ್ಟು ಉದ್ದವೂ ಇಲ್ಲ. ಆದರೆ ಆಕೆ ಭಾವುಕರ ಹೃದಯವನ್ನು ಸೂರೆಗೊಂಡ ನದಿ. ಭಕ್ತರ ಪೂಜೆಗೆ ಪಾತ್ರಳಾದ ಹಿರಿಮೆ ಆಕೆಯದ್ದು. ಗಂಗೆ ನಮ್ಮ ಪಾಲಿಗೆ ಬರಿಯ ನೀರಲ್ಲ. ಪುಣ್ಯಪ್ರದಾಯಿನಿ ಆಕೆ. ತನುಮನಗಳನ್ನು ಪಾವನಗೊಳಿಸುವ ದಿವ್ಯ ರಸವಾಹಿನಿ. ತ್ರಿಪಥಗಾ ನಮಗೆ ಮುಕ್ತಿ, ಮೋಕ್ಷಗಳ ಸಂಕೇತ. ಗಂಗಾಜಲವನ್ನು ಜೀವನದಲ್ಲಿ ಒಮ್ಮೆಯಾದರೂ ಸೇವಿಸಬೇಕೆಂಬುದು ಹಿಂದೂಗಳ ನಂಬಿಕೆ. ಗಂಗೆಯನ್ನು ದಾಟುವುದೆಂದರೆ ಜನನ-ಮರಣಗಳ ಚಕ್ರವನ್ನು ದಾಟುವುದೆಂದೇ ಜನರ ನಂಬಿಕೆ. ಶ್ರೀಕೃಷ್ಣ ಗೀತೆಯಲ್ಲಿ ನದಿಗಳಲ್ಲಿ ನಾನು ಜಾಹ್ನವೀ ಎಂದಿದ್ದಾನೆ. ಮಹಾಭಾರತದಲ್ಲಿ ಗಂಗೆಗೆ ಸಮನಾದ ತೀರ್ಥವಿಲ್ಲ ಎನ್ನಲಾಗಿದೆ. ಆಕೆ ಪುಣ್ಯವಂತರ ತಾರಿಣಿ, ಪಾಪಿಗಳ ದುಸ್ತಾರಿಣಿ ಎಂದಿದ್ದಾರೆ ಭಗವಾನ್ ವೇದವ್ಯಾಸರು. ವಾಗ್ಭಟನ ಅಷ್ಟಾಂಗ ಹೃದಯದಲ್ಲಿ ಗಂಗಾಜಲದ ಆರೋಗ್ಯಕರವಾದ, ಅಮೃತಮಯ ಅಂಶಗಳನ್ನು, ಕೊಳಕಾದ ನೀರನ್ನು ಶುದ್ಧೀಕರಿಸಿ ಪುನಶ್ಚೇತನಗೊಳ್ಳುವ ಅಪೂರ್ವ ಗುಣವನ್ನು ಸಾಧಾರವಾಗಿ ವಿವರಿಸಿದ್ದಾನೆ. ಸ್ನಾನ, ಅಚಮನದಿಂದ ಹಿಡಿದು ಶರೀರ ತ್ಯಜಿಸುವ ವೇಳೆಯಲ್ಲೂ ನಮಗೆ ಬೇಕಾದ್ದು ಗಂಗೋದಕ. ಕೊನೆಗೆ ಅಸ್ಥಿಯನ್ನು ಗಂಗೆಯಲ್ಲಿ ಅಥವಾ ಬೇರೆ ನದಿಯಲ್ಲೇ ಗಂಗೆಯನ್ನು ಆವಾಹಿಸಿಕೊಂಡು ಬಿಡಲಾಗುತ್ತದೆ. ಗಂಗಾ ಜಲ ಸಿಗದೆ ಇರುವ ಸಂದರ್ಭದಲ್ಲಿ ಸಿಗುವ ಜಲವನ್ನೇ ಗಂಗೆಯೆಂದು ಪರಿಭಾವಿಸಿ ಬಳಸುತ್ತೇವೆಂದರೆ ಜನಮಾನಸದಲ್ಲಿ ಗಂಗೆಯ ಸ್ಥಾನದ ಉತ್ಕೃಷ್ಟತೆಯನ್ನು ಊಹಿಸಬಹುದು. ಹಿಂದೆ ಸಾಂಕ್ರಾಮಿಕ ರೋಗಗಳಾದ ಅತಿಸಾರ ಮತ್ತು ಕಾಲರಾಕ್ಕೆ ಕಾರಣವಾಗಿದ್ದ ನೀರುವಾಹಿ ಬ್ಯಾಕ್ಟೀರಿಯಾಗಳು ಗಂಗೆಯನ್ನು ಸೇರುತ್ತಿದ್ದಂತೆಯೇ ಸತ್ತು ಹೋಗುತ್ತಿದ್ದವು! ಗಂಗೆಯಲ್ಲಿನ ಆಮ್ಲಜನಕದ ಪ್ರಮಾಣ ಬೇರೆ ನದಿಗಳಿಗೆ ಹೋಲಿಸಿದರೆ ಬಹಳ ಹೆಚ್ಚಿರುವುದು ಇದಕ್ಕೆ ಕಾರಣ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿತ್ತು.

ಗಂಗೆ ಕೇವಲ ಹಿಂದೂಗಳಿಗಷ್ಟೇ ಅಮೃತವಾಗಿ ಉಳಿಯಲಿಲ್ಲ. ಇತಿಹಾಸದ ಹುಚ್ಚು ದೊರೆ ಎಂದೇ ಕರೆಯಲ್ಪಟ್ಟ ತುಘಲಕ್ ತನ್ನ ಪ್ರತಿದಿನದ ಬಳಕೆಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಗಂಗಾಜಲವನ್ನು ದೌಲತಾಬಾದಿಗೆ ತರಿಸುತ್ತಿದ್ದ. ಇದಕ್ಕೆ ನಲವತ್ತು ದಿನಗಳು ಹಿಡಿಯುತ್ತಿದ್ದವು. ಮತಾಂಧ ಅಕ್ಬರನೂ ತಾನು ಎಲ್ಲೇ ಇರಲಿ ಗಂಗಾಜಲವನ್ನೇ ಉಪಯೋಗಿಸುತ್ತಿದ್ದ ಎಂದು ಅಬ್ದುಲ್ ಫಜಲ್ ತನ್ನ ಐನ್--ಅಕ್ಬರಿಯಲ್ಲಿಬರೆದಿದ್ದಾನೆ. ಹಿಂದೂದ್ವೇಷಿ, ಕ್ರೂರಿ ಔರಂಗಜೇಬ ಕೂಡಾ ಒಂಟೆಗಳಲ್ಲಿ ಗಂಗೆಯನ್ನು ತರಿಸಿ ಕುಡಿಯುತ್ತಿದ್ದ. ಆತ ಗಂಗಾವ್ರತವನ್ನೇ ಮಾಡಿಸಿದ್ದ ಎಂದು ಫ್ರೆಂಚ್ ಪ್ರವಾಸಿ ಬಾರ್ನಿಯರ್ ಹೇಳಿದ್ದಾನೆ. ಪೆಲ್ಸಾರ್ಟ್ ಎಂಬ ಡಚ್ ಪ್ರವಾಸಿ "ಗಂಗಾಜಲ ನೂರು ವರ್ಷ ಇಟ್ಟರೂ ಕೊಳೆಯುವುದಿಲ್ಲ, ಹುಳುಗಳಾಗುವುದಿಲ್ಲ" ಎಂದಿದ್ದ. ಹೀಗೆ ಭಾರತೀಯರು ಮಾತ್ರವಲ್ಲದೆ ವಿದೇಶೀಯರಿಂದಲೂ ಹೊಗಳಿಸಿಕೊಂಡ ಗಂಗೆ ಇತಿಹಾಸದುದ್ದಕ್ಕೂ ಹಲವು ಬಾರಿ ತನ್ನ ಪಥವನ್ನೂ ಬದಲಾಯಿಸಿದ್ದಾಳೆ. ಪಾಂಡವರ ಆರು ತಲೆಮಾರುಗಳ ಕಾಲ ಹಸ್ತಿನೆಯನ್ನು ಬಳಸಿ ಹರಿದ ಗಂಗೆ ನಿಚಕ್ನುವಿನ ಕಾಲದಲ್ಲಿ ಹಸ್ತಿನೆಯನ್ನು ತನ್ನ ಒಡಲಿಗೇ ಸೇರಿಸಿಕೊಂಡಳು. ಗಂಗೆಯ ಹರಿವಿನ ಝಲಕಿಗೆ, ವೈಯ್ಯಾರಕ್ಕೆ ಮನಸೋತ ಜಗನ್ನಾಥ ಪಂಡಿತ ಗಂಗಾಲಹರಿ ಎಂಬ ಖಂಡಕಾವ್ಯವನ್ನೇ ಬರೆದ.

ಸೈಬೀರಿಯಾದಲ್ಲಿರುವ ಬುರ್ಯಾತರಿಗೆ ಗಂಗೆಯೆಂದರೆ ಪೂಜ್ಯ ಭಾವಅವರು ಬೈಕಲ್ ಸರೋವರದ ಜಲವನ್ನೇ ಪವಿತ್ರ ಮಂತ್ರಗಳಿಂದ ಸಂಸ್ಕರಿಸಿ ಗಂಗಾಜಲದಂತೆ ತಮ್ಮ ಧಾರ್ಮಿಕ ಕಾರ್ಯಗಳಲ್ಲಿಉಪಯೋಗಿಸುತ್ತಾರೆಬೈಕಲ್ ಸರೋವರದ ನೀರು ಹರಳುಗಲ್ಲುಗಳೊಡನೆ ಇಟ್ಟರೆ ಹತ್ತು ವರ್ಷಗಳ ಕಾಲಬರಿದೇ ಇಟ್ಟರೆ ಐದು ವರ್ಷಗಳ ಕಾಲ ಕೆಡದೇ ಇರುತ್ತೆ.  ಭಾರತದಿಂದ ಯಾರಾದರೂ ಗಂಗಾಜಲ ಒಯ್ದರೆ,ಅವರು ಪವಿತ್ರ ಪಾತ್ರದಲ್ಲಿಯೇ ಸಂಸ್ಕೃತ ಮಂತ್ರಗಳನ್ನು ಉಚ್ಛರಿಸಿ ಸ್ವೀಕರಿಸುತ್ತಾರೆ.

ಆದರೆ ತಮ್ಮ ಮನೋಕಾಮನೆಯನ್ನು ಪೂರೈಸುವ ಈ ಕಾಮಧೇನುವನ್ನು ಭಾರತೀಯರು ನಡೆಸಿಕೊಂಡ ಪರಿ ಮಾತ್ರ ಅಸಹ್ಯ, ಆಕ್ರೋಶ ಹುಟ್ಟಿಸುವಂತಹದ್ದು. ನಮ್ಮ ಬದುಕಿಗೆ ಆಧಾರವಾಗಿರುವ ಗಂಗೆಯನ್ನು ನಾವು ನಮಗೆ ಬೇಕಾದ ಹಾಗೆ ಬಳಸಿಕೊಂಡೆವು. ಗಂಗಾತಟದಲ್ಲಿದ್ದ ರೈತರನ್ನೆಲ್ಲಾ ಒಕ್ಕಲೆಬ್ಬಿಸಿ ಕೈಗಾರಿಕೆಗಳಿಗೆ ಆ ಫಲವತ್ತಾದ ಭೂಮಿಗಳನ್ನು ಹಂಚಲಾಯಿತು. ಗಂಗಾಮೂಲದ ಸಮೀಪದಲ್ಲೇ ಅಣೆಕಟ್ಟುಗಳನ್ನು ಕಟ್ಟಲಾಯಿತು. ಗಂಗೆ ರಭಸದಿಂದ ಹರಿಯುವ ಮನೇರಿ ಹಾಗೂ ತೇಹ್ರೀ ಎಂಬಲ್ಲಿ ನದಿಯನ್ನು  ತಿರುಗಿಸಿ ಜಲವಿದ್ಯುತ್ ಯೋಜನೆ ಆರಂಭಿಸಲಾಯಿತು. ಗಂಗೆಯ ಒಡಲಲ್ಲಿ ಕಲ್ಲು ಗಣಿಗಾರಿಕೆಯೂ ಆರಂಭವಾಯಿತು. ಗಂಗೆಯನ್ನು ಅರೆಬೆಂದ ಶವಗಳ, ಕಾರ್ಖಾನೆಗಳ ವಿಷಕಾರೀ ರಾಸಾಯನಿಕಗಳ ಆಗರವನ್ನಾಗಿಸಿದೆವು. ನಮ್ಮ ಪಾಪ ಪರಿಹಾರಕ್ಕಾಗಿ ಗಂಗೆಯನ್ನು ನರಕ ಸದೃಶವನ್ನಾಗಿಸಿದೆವು. ದಡದಲ್ಲಿಯೇ ಮತಾಂಧರು ಗೋ ಮಾತೆಯ ಕರುಳ ಕೊಯ್ದು ರಕ್ತ-ತ್ಯಾಜ್ಯವನ್ನು ಗಂಗಾ ಮಾತೆಗೆ ಎಸೆದರು. ಗೋಮುಖದಲ್ಲಿ ಹುಟ್ಟಿದವಳಿಗೆ ಅಮ್ಮನ ಹಸಿ-ಬಿಸಿ ರಕ್ತವನ್ನು ಹೊತ್ತೊಯ್ಯುವ ದೌರ್ಭಾಗ್ಯ. ಉತ್ತರ ಪ್ರದೇಶದ ಸಮತಟ್ಟು ಭಾಗ ಬಹುತೇಕ ಕೃಷಿಯನ್ನು ಅವಲಂಬಿಸಿದೆ. ಅಲ್ಲಿ ಬಳಸಲಾಗುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸೇರುವುದು ಗಂಗೆಯನ್ನೇ. ಪ್ರತಿ ವರ್ಷ ಗಂಗೆಯ ತಟದಲ್ಲಿ ಸಾವಿರಾರು ದೇಹಗಳ ಅಂತ್ಯ ಸಂಸ್ಕಾರ ನಡೆಯುತ್ತದೆ. ಇದರಿಂದ ಉದ್ಭವವಾಗುವ ಅಸ್ಥಿಯ ಪ್ರಾಮಾಣ 300 ಟನ್ಗಳಿಗಿಂತಲೂ ಹೆಚ್ಚು. ಇದು ಸಾಲದೆಂಬಂತೆ, 200 ಟನ್ಗಳಷ್ಟು ಅರೆಬೆಂದ ದೇಹದ ಅಂಗಾಂಗಗಳು ಗಂಗೆಯನ್ನು ಸೇರುತ್ತವೆ. ಇತ್ತೀಚಿನ ಸಮೀಕ್ಷೆಯೊಂದು ಸುಮಾರು 3,000 ದೇಹಗಳು ಗಂಗೆಯಲ್ಲಿ ತೇಲುತ್ತಿರುವುದನ್ನು ಪತ್ತೆ ಹಚ್ಚಿತ್ತು! ಗಂಗಾ ತಟದ ಉದ್ದಕ್ಕೂ ಇರುವ ರಾಸಾಯನಿಕ ಕೈಗಾರಿಕೆಗಳು, ಕಸಾಯಿಖಾನೆಗಳು, ಆಸ್ಪತ್ರೆಗಳು ಮುಲಾಜಿಲ್ಲದೇ ತ್ಯಾಜ್ಯಗಳನ್ನೆಲ್ಲ ಗಂಗೆಗೇ ಹರಿಯಬಿಡುತ್ತವೆ. ಇದರ ಪರಿಣಾಮವಾಗಿಯೇ 2007 ವೇಳೆಗೆ ಪ್ರಪಂಚದ 5 ಅತಿ ಕಲುಷಿತ ನದಿಗಳಲ್ಲಿ ಒಂದೆಂಬ ಅಗ್ಗಳಿಕೆಗೆ ಗಂಗೆ ಪಾತ್ರವಾಗಬೇಕಾಯಿತು. ವಾರಾಣಸಿಯಲ್ಲೇ ವಾರ್ಷಿಕ 300-350 ಮಿಲಿಯನ್ ಲೀಟರ್ ಕೊಳಚೆ ನೀರು ಗಂಗೆಯನ್ನು ಸೇರುತ್ತದೆ. ಅಲ್ಲಿನ ಕೊಳಚೆ ಶುದ್ಧೀಕರಣ ಘಟಕಕ್ಕೆ 100 ಮಿಲಿಯನ್ ಲೀಟರ್ ಕೊಳಚೆ ನೀರನ್ನಷ್ಟೇ ಶುದ್ಧಗೊಳಿಸುವ ಸಾಮರ್ಥ್ಯವಿದೆ. ಇವೆಲ್ಲದರಿಂದಾಗಿ ರುದ್ರಪ್ರಯಾಗ, ದೇವಪ್ರಯಾಗ ಮತ್ತು ವಾರಾಣಸಿಗಳಲ್ಲಿ ಬಯೋಲಾಜಿಕಲ್ ಆಕ್ಸಿಜನ್ ಡಿಮಾಂಡ್(ಬಿಓಡಿ) ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ತತ್ಪರಿಣಾಮ ಜನರು ಮಾತ್ರವಲ್ಲ, 'ಗ್ಯಾಂಗಸ್ ಫಿಶ್‌' ಎಂದೇ ಪ್ರಖ್ಯಾತವಾದ ಡಾಲ್ಫಿನ್ ಮತ್ತು ಸುಮಾರು 140 ಪ್ರಬೇಧದ ಮೀನುಗಳು ಅಪಾಯ ಎದುರಿಸುತ್ತಿವೆ.

ಸುರನದಿಯನ್ನು ಸ್ವಚ್ಛಗೊಳಿಸಲು 1985ರಲ್ಲಿ ರಾಜೀವ್ ಗಾಂಧಿ "ಗಂಗಾ ಆ್ಯಕ್ಷನ್ ಪ್ಲಾನ್(ಜಿಎಪಿ) ಜಾರಿಗೆ ತಂದಿದ್ದರು. ಆದರೆ ಅದು ಕಾಗದದಲ್ಲಷ್ಟೇ ಉಳಿಯಿತು. ಆದಾದ 15 ವರ್ಷಗಳ ಬಳಿಕವೂ ಕೊಳಚೆ ಕಡಿಮೆಯಾಗಲಿಲ್ಲ. ಆದರೆ 901.71 ಕೋಟಿ ರುಪಾಯಿಗಳು ಖರ್ಚಾಗಿದ್ದವು. ಬೇರೆ ನದಿಯಿಂದ ಹೆಚ್ಚುವರಿ ನೀರನ್ನು ಹರಿಸಿ ಗಂಗೆಯ ನೀರನ್ನು ತೆಳುವಾಗಿಸಲು ಜಿಎಪಿ ಯಾವುದೇ ಕಠಿಣ ನಿಯಮಗಳನ್ನು ಜಾರಿಗೆ ತರಲೇ ಇಲ್ಲ. ಅಲ್ಲದೆ ಕಸ ವಿಲೇವಾರಿ ಪ್ರಕ್ರಿಯೆಯನ್ನೂ ಸರಿಯಾಗಿ ಕೈಗೊಂಡಿರಲಿಲ್ಲ. ಉದ್ಯಮಗಳು ರಾಸಾಯನಿಕಗಳನ್ನು ನದಿಯಲ್ಲಿ ವಿಸರ್ಜಿಸದಂತೆ ತಡೆಯಲೇ ಇಲ್ಲ. ಗಂಗೆಯ ದಡದಲ್ಲಿರುವ ಕಸಾಯಿಖಾನೆಗಳನ್ನೂ ನಿಷೇಧಿಸಲಿಲ್ಲ. ಗಂಗೆಯ ಮಾಲಿನ್ಯಕ್ಕೆ ಅವ್ಯವಸ್ಥಿತ ಘಾಟಿಗಳೇ ಮೂಲ ಕಾರಣ ಎಂಬ ನೆಪವೊಡ್ಡಿ ಘಾಟಿಗಳ ಆಧುನೀಕರಣ ಮಾಡಲಾಯಿತು. ಇದಕ್ಕೆಂದೇ ವಾರಣಾಸಿ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಗಂಗೆ ಮತ್ತಷ್ಟು ಕೊಳಕಾದಳು. ಒಳರಾಜಕೀಯದಲ್ಲಿ, ಅಧಿಕಾರದಾಟದಲ್ಲೇ ಮೂಳುಗಿ ಹೋಗಿದ್ದ ಗಂಗಾನದಿ ಜಲಾನಯನ ಪ್ರಾಧಿಕಾರ ಹಾಗೂ ಜಲ ಸಂಪನ್ಮೂಲ ಸಚಿವಾಲಯದ ಬೆಂಬಲವಿಲ್ಲದೆ ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಯೆನ್ನುವುದು ಹಣ ದೋಚುವ ದಂಧೆಯಾಗಿ ಬದಲಾಯಿತು.

ಅಲ್ಲದೆ ಗಂಗೆಗೆ ಅಡ್ಡಲಾಗಿ ಅಣಿಕಟ್ಟು, ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯ, ಹೋಟೆಲ್, ವಸತಿ ಗೃಹಗಳು ಪರಿಸರಕ್ಕೆ ಅಪಾರ ಧಕ್ಕೆ ಉಂಟುಮಾಡಿದುದರ ಪರಿಣಾಮ ಪ್ರತಿವರ್ಷ ಉತ್ತರಾಖಂಡದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತಿದೆ. ಮೇಘ ಸ್ಫೋಟದಿಂದ ಭೂಮಿಗೆ ಧುಮುಕುವ ನೀರು, ಅದರ ಹರಿವು ಮತ್ತು ಅದರಿಂದಾಗುವ ಹಾನಿಯ ಮಟ್ಟವನ್ನು ಕಡಿಮೆ ಮಾಡುವುದು ಪರ್ವತಗಳಿಂದ ಮಾತ್ರ ಸಾಧ್ಯ. ಮಂದಾಕಿನಿ ಕಣಿವೆಯ ಇಳಿಜಾರು ಪ್ರದೇಶಗಳಲ್ಲಿ ಬೆಳೆಯುವ ಹುಲ್ಲು, ಪೈನ್ ಮತ್ತು ಬರ್ಚ್ ಮರಗಳು ಹಿಮದ ಕುಸಿಯುವಿಕೆಯನ್ನು ತಡೆಯಲು ಸಶಕ್ತವಾಗಿಲ್ಲಇದ್ದ ನೈಸರ್ಗಿಕ ತಡೆಗೋಡೆಗಳು ಜಲವಿದ್ಯುತ್ ಕಾಮಗಾರಿಗೋ, ಕಟ್ಟಡಗಳ ನಿರ್ಮಾಣಕ್ಕೋ ಬಳಕೆಯಾಗಿ ಸತ್ವಹೀನವಾಗಿವೆ.

ಗಂಗೆಯನ್ನು ಶುದ್ದೀಕರಿಸಲು ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಪವಿತ್ರ ನದಿಯನ್ನು ಮಲಿನಗೊಳಿಸುತ್ತಿರುವ ಕೈಗಾರಿಕಾ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ. ಜತೆಗೆ, ನದಿ ತೀರದಲ್ಲಿ ಪರಿಸರ ಸ್ನೇಹಿ ಚಿತಾಗಾರ ಸ್ಥಾಪಿಸುವಂತೆಯೂ ಸೂಚಿಸಿದ್ದಾರೆ. ಗಂಗೆಗೆ ಉಗುಳುವುದು, ಹೆಣಗಳನ್ನು ಬಿಸಾಕುವುದನ್ನು ನಿಷೇಧಿಸಲಾಗಿದೆ. ಗಂಗೆಗೆ ರಕ್ತದ ಹೊಳೆ ಹಾಗೂ ಮಾಂಸದ ತ್ಯಾಜ್ಯವನ್ನು ಹರಿಸುತ್ತಿದ್ದ ಇನ್ನೂರಕ್ಕೂ ಹೆಚ್ಚು ಕಂಪೆನಿಗಳಿಗೆ ಬೀಗ ಜಡಿಯಲಾಗಿದೆ. ಗಂಗಾನದಿ ಜಲಾನಯನ ಪ್ರಾಧಿಕಾರದ ಯೋಜನೆಯಡಿಯಲ್ಲಿ ಗಂಗಾ ಶುದ್ಧೀಕರಣಕ್ಕೆ 2589 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಸಾಧ್ವಿ ಉಮಾಭಾರತಿ ಗಂಗಾ ಶುದ್ಧೀಕರಣದ ಹೊಣೆ ಹೊತ್ತಿದ್ದಾರೆ. ಅನೇಕ ಸಾಧು ಸಂತರು, ಸಂಘಟನೆಗಳು ಅಲ್ಲದೆ ಜನ ಸಾಮಾನ್ಯರೂ ಕೈಜೋಡಿಸಿದ್ದಾರೆ. ಹೌದು ಗಂಗೆ ಕೋಟ್ಯಂತರ ಹಿಂದುಗಳ ರಕ್ತದಲ್ಲಿ ಒಂದಾಗಿರುವ ಪುಣ್ಯಗರ್ಭೆ, ಮಹಾತಾಯಿ.. ಅವಳ ದಡದಲ್ಲಿ ಅನೇಕ ನಾಗರೀಕತೆಗಳು ಬೆಳಗಿವೆ. ಭಾರತದ ಐತಿಹಾಸಿಕ ಘಟನೆಗಳಿಗೆಲ್ಲಾ ಪ್ರತ್ಯಕ್ಷ ಸಾಕ್ಷಿ ಆಕೆ. ಅದು ಕನಖಲದಲ್ಲಿ ನಡೆದ ದಕ್ಷಯಜ್ಞವಿರಬಹುದು, ಹಿಂದೂಗಳ ಮೇಲಿನ ಮೊಘಲರ ದೌರ್ಜನ್ಯವಿರಬಹುದು, ನರ್ಮದೆಯನ್ನು ಥೇಮ್ಸ್ ನದಿಯಂತೆ ಹೊಳಪಿಸಿದ ದೇಶಭಕ್ತ ಪ್ರಧಾನಿಯ ಐತಿಹಾಸಿಕ ವಿಜಯವಿರಬಹುದು...  ಆಕೆಯಿಲ್ಲದ ಭಾರತವನ್ನು, ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿದೆಯೇ?