ಪುಟಗಳು

ಭಾನುವಾರ, ಏಪ್ರಿಲ್ 12, 2015

ಜೀವಂತ ಭಾರತ ಥಾಯ್ ಲ್ಯಾಂಡ್

ಜೀವಂತ ಭಾರತ ಥಾಯ್ ಲ್ಯಾಂಡ್

               ಥಾಯ್ ಲ್ಯಾಂಡಿನ ರಾಜಧಾನಿ ಬ್ಯಾಂಕಾಕ್. ದೇವಾಲಯಗಳ ನಗರ. ವೇಶಭೂಷಣಗಳಲ್ಲಿ ಅಮೇರಿಕಾದ ಪ್ರಭಾವವಿದ್ದರೂ ತನ್ನ ಸಂಸ್ಕೃತಿ ಹಾಗೂ ಭಾಷೆಯನ್ನು ಬಿಡದ ಮಹಾನತೆ ಇಲ್ಲಿನದ್ದು. ಬ್ಯಾಂಕಾಕಿನ ವಿಶೇಷತೆಯೆಂದರೆ ಯಾವುದೇ ಭವ್ಯ ಕಟ್ಟಡವಾಗಲೀ ಅಲ್ಲಿನ ದೇವಾಲಯಗಳ ಗೋಪುರಗಳಿಗಿಂತ ಕಡಿಮೆ ಎತ್ತರದಲ್ಲೇ ಇರುತ್ತವೆ. ಇರಬೇಕು. ಬ್ಯಾಂಕಾಕಿನಲ್ಲಿ ಸುಮಾರು ಎಂಟುನೂರು ದೇವಾಲಯಗಳಿವೆ.ಪ್ರತಿಯೊಂದೂ ಶಿಲ್ಪಶಾಸ್ತ್ರಕ್ಕನುಗುಣವಾಗಿ ಅತ್ಯುಚ್ಚ ಶೈಲಿಯಲ್ಲಿ ನಿರ್ಮಿಸಿದ ಕಲಾಕೃತಿಗಳು. ಆದರೆ ಜನರು ಪಾಶ್ಚಿಮಾತ್ಯ ಉಡುಪು ಧರಿಸಿ ಪೂಜೆ ಮಾಡುವಂತಿಲ್ಲ. ದೇವಾಲಯ ಪ್ರವೇಶಿಸುವಂತಿಲ್ಲ. ಥಾಯ್ ಭಾಷೆಗೂ ಸಂಸ್ಕೃತಕ್ಕೂ ಬಹು ಸಾಮೀಪ್ಯ ಇರುವಂತೆ ಭಾಸವಾಗುತ್ತದೆ. ಅಲ್ಲದೆ ಥಾಯ್ ಜನರಿಗೆ ಸಂಸ್ಕೃತ ಬಹು ಚೆನ್ನಾಗಿ ಅರ್ಥವಾಗುತ್ತದೆ. ಉದಾಹರಣೆಗೆ ಸುದರ್ಶನ ಎನ್ನುವುದು ಥಾಯ್ ಭಾಷೆಯಲ್ಲಿ ಸುದತ್ ಆಗುತ್ತದೆ. ಹಾಗೆಯೇ ಪಾರತ್ ಎನ್ನುವ ಥಾಯ್ ಪದ ಪಾರದ ಎನ್ನುವ ಸಂಸ್ಕೃತ ಪದದ ತದ್ಭವ ರೂಪ. ಪಾರದ ಅಂದರೆ ಪಾದರಸ.

                 1911ರ ತನಕ ಬ್ಯಾಂಕಾಕಿನ ಜನ ನಗರದ ಉದ್ದಗಲಕ್ಕೂ ಹರಡಿರುವ ಕಾಲುವೆಗಳ ನೀರನ್ನೇ ಬಳಸುತ್ತಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಬೇರೆ ಇರಲಿಲ್ಲ. ಅಲ್ಲಿ ಆಗ ದೊರೆಯಾಗಿದ್ದ ಆರನೆಯ ರಾಮ ಆಧುನಿಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿದ. ಅದಕ್ಕೇನು ಹೆಸರಿಡಬೇಕು ಎನ್ನುವುದರ ಬಗೆಗೆ ಚರ್ಚೆ ನಡೆಯಿತು. ಆಗ ವಜ್ರಾಯನನೆಂಬ ರಾಜಕುಮಾರ ವೇದ, ಸ್ಮೃತಿಗಳಲ್ಲಿ ಉಲ್ಲೇಖಿಸಿರುವ "ಪ್ರಪಾ" ಎನ್ನುವ ಹೆಸರು ಸೂಚಿಸಿದ. ಅದೇ ಹೆಸರಿಡಲಾಯಿತು. ಪ್ರಪಾ ಎಂದರೆ ಹಿಂದಿನ ಕಾಲದಲ್ಲಿ ಸಾರ್ವಜನಿಕವಾಗಿ ಇಡುತ್ತಿದ್ದ ನೀರಿನ ತೊಟ್ಟಿ. ತಂತಿ ವ್ಯವಸ್ಥೆಗೆ ದೂರಲೇಖ, ಮೋಟರ್ ಕಾರಿಗೆ ರಥಯಾನ್, ತುಟಿಗೆ ಬಳಿಯುವ ರಂಗಿ(ಲಿಪ್ ಸ್ಟಿಕ್)ಗೆ ಓಷ್ಠರಾಗ ಹೀಗೆ ಥಾಯ್ ಭಾಷೆ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಪ್ರತಿಧ್ವನಿಸುತ್ತದೆಯಲ್ಲದೆ ಅದು ಸಂಸ್ಕೃತದಿಂದ ಉದ್ಭವಗೊಂಡಿರುವ ಸೂಕ್ಷ್ಮವನ್ನು ತಿಳಿಸುತ್ತದೆ. ಇದಕ್ಕೆ ಕಾರಣವೂ ಇದೆ ಥಾಯ್ ಲೆಂಡಿನ ಉನ್ನತ ಶಿಕ್ಷಣದ ಮಾಧ್ಯಮ ಭಾಷೆ ಥಾಯ್. ಅಲ್ಲಿನ ಜನ ವೇಷ-ಭೂಷಣಗಳಲ್ಲಿ ಅಮೇರಿಕನ್ನರನ್ನು ಅನುಕರಿಸಿದರೂ, ರಾಜಕೀಯವಾಗಿ ಅಮೆರಿಕಾದ ಪ್ರಭಾವದೊಳಗಿದ್ದರೂ ತಮ್ಮ ಭಾಷೆ ಬಿಟ್ಟುಕೊಟ್ಟಿಲ್ಲ. ಹಾಗಾಗಿ ತಮ್ಮ ಸಂಸ್ಕೃತಿ ನಾಗರೀಕತೆಗಳನ್ನು ಉಳಿಸಿಕೊಂಡಿದ್ದಾರೆ. ಥಾಯ್ ಭಾಷೆಯ ಶೇಕಡಾ ಎಂಬತ್ತರಷ್ಟು ಪದಗಳು ಸಂಸ್ಕೃತದಿಂದ ಬಂದಿವೆ. ವಿಜ್ಞಾನ, ತಂತ್ರಜ್ಞಾನ, ಆಡಳಿತ ಹೀಗೆ ವಿಶೇಷ ರಂಗಗಳಲ್ಲಿ ಅವಶ್ಯಕವಾದರೆ ಅದಕ್ಕೆ ಆಕರವು ಸಂಸ್ಕೃತವೇ.

                 ಥಾಯ್ ಲೆಂಡಿನ ಪ್ರಮುಖ ದೇವಾಲಯಗಳಲ್ಲೊಂದು ವಾಟ ಅರುಣ ದೇವಾಲಯ. ಅಲ್ಲಿಯ ಸೂರ್ಯೋದಯವಂತೂ ಆವರ್ಣನೀಯ. ಶಿವನನ್ನು ಕಾಣಲು ಭಾಸ್ಕರನೇ ಧರೆಗಿಳಿದು ಬಂದಂತೆ. ಬಾಲ ಸೂರ್ಯ ದೇವಾಲಯವನ್ನು ಬೆಳಗುವ ಆ ದೃಶ್ಯ ಪ್ರಕೃತಿಯೂ ಪರಮಾತ್ಮನೂ ಸಹಯೋಗದಲ್ಲಿರುವಂತೆ ಅಸದೃಶ, ಅಸದಳ. ಬ್ಯಾಂಕಾಕಿನ ಬೃಹತ್ ದೇವಾಲಯಗಳೆಲ್ಲಾ ಚಕ್ರಿ ಮನೆತನದವರು ನಿರ್ಮಿಸಿರುವಂತಹ ದೇವಾಲಯಗಳು. ಅವುಗಳಲ್ಲೊಂದು ರಬ್ಬಿಂಗ್ ದೇವಾಲಯ. ಈ ದೇವಾಲಯದಲ್ಲಿ ರಾಮಾಯಣದ ಇಡೀ ಘಟನೆ ಚಿತ್ರಿತವಾಗಿದೆ. ನಾಲ್ಕುನೂರಕ್ಕೂ ಹೆಚ್ಚು ಶಿಲಾಫಲಕಗಳ ಮೇಲೆ ಇವು ಚಿತ್ರಿತವಾಗಿವೆ. ಹೆಚ್ಚುಕಡಿಮೆ ಥಾಯ್ ಜನರೆಲ್ಲರೂ ಚಿತ್ರಕಾರರೇ. ಯಾರೇ ಆದರೂ ಈ ದೇವಾಲಯದಲ್ಲಿನ ಚಿತ್ರಗಳನ್ನು ಪ್ರತಿ ಮಾಡಬಹುದು. ಈ ದೇವಾಲಯ ಪ್ರಪಂಚದ ಎಲ್ಲಾ ಭಾಗಗಳಿಗೂ ರಾಮಾಯಣದ ಚಿತ್ರಗಳನ್ನೊದಗಿಸುತ್ತದೆ. ಈಗ ಆಳುತ್ತಾ ಇರುವ ಚಕ್ರಿ ಮನೆತನ ಹದಿನೆಂಟನೇ ಶತಮಾನದಲ್ಲಿ ಸ್ಥಾಪಿತವಾಯಿತು. ಈ ವಂಶದ ಮೊದಲ ರಾಜನ ಅಧಿಕೃತ ನಾಮಧೇಯ ರಾಮ. ಈಗ ಆಳುತ್ತಿರುವವ ಒಂಭತ್ತನೆಯ ರಾಮ. ಭೂಮಿಬಲ ಅತುಲ್ಯತೇಜ ಎಂದು ಆತನ ಹೆಸರು. ತಮ್ಮ ಪೂರ್ವಿಕರ ರಾಜಧಾನಿಯಾಗಿದ್ದ ಅಯೋಧ್ಯಾ ನಗರವನ್ನು ಬಿಟ್ಟು ಬ್ಯಾಂಕಾಕನ್ನು ರಾಜಧಾನಿಯಾಗಿ ಮಾಡಿದ ಮೊದಲನೇ ರಾಮ ಅಲ್ಲಿ ನೂರಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ. ರಾಮಾಯಣವನ್ನು ಸಂಸ್ಕೃತ ಛಂದಸ್ಸಿನಲ್ಲಿ ರಚಿಸಿದ. ಆತ ರಚಿಸಿದ ರಾಮಾಯಣವೇ ಅಲ್ಲಿನ ರಾಮಾಯಣ ರೂಪಕಕ್ಕೆ ಆಧಾರ. ಪ್ರತಿ ಹೋಟಲಿನಲ್ಲೂ ರಾಮಾಯಣದ ರೂಪಕಗಳು ಕಂಡುಬರುತ್ತವೆ. ಪ್ರತಿದಿನ ರಾಮಾಯಣಕ್ಕೆ ಸಂಬಂಧಿಸಿದ ನಾಟಕಗಳು, ರೂಪಕಗಳು, ನೃತ್ಯ-ಗೀತ ರೂಪಕಗಳು ಅಭಿನಯಿಸಲ್ಪಡುತ್ತವೆ. ವಿವಿಧ ಪಾತ್ರಗಳ ಮುಕುಟಗಳಿಂದಲೇ ಆ ಪಾತ್ರವನ್ನು ಗುರುತಿಸಬಹುದು. ಅಂತಹ ಪರಿಷ್ಕೃತ ಕಲಾಕುಸುಮಗಳು ಅಲ್ಲಿನ ರಾಮಾಯಣ ರೂಪಕಗಳು. ಅಲ್ಲಿನ ಲಲಿತಕಲಾ ವಿಭಾಗವನ್ನು ಶಿಲ್ಪಾಧಿಕರಣ ಎನ್ನುತ್ತಾರೆ. ಥಾಯ್ ಜನರ ಪ್ರತಿಮನೆಯಲ್ಲೂ ರಾಮಾಯಣಕ್ಕೆ ಸಂಬಂಧಿಸಿದ ಕಲಾಕೃತಿಗಳು ಇರುತ್ತವೆ. ಒಟ್ಟಾರೆ ಥಾಯ್ ಸಾಹಿತ್ಯ ಭಾರತದ ಪರಂಪರೆಯನ್ನು ಆದರ್ಶವಾಗಿ ಪರಿಭಾವಿಸುತ್ತದೆಯೇ ಹೊರತು ಪಾಶ್ಚಿಮಾತ್ಯ ಪರಂಪರೆಯನ್ನಲ್ಲ. ಥಾಯ್ ಲಿಪಿ ಪಲ್ಲವರ ಕಾಲದ ಭಾರತೀಯ ಲಿಪಿಯಿಂದ ರೂಪಿತವಾದ ಕಾಂಬೋಡಿಯಾ ಲಿಪಿಯನ್ನು ಬಹುಮಟ್ಟಿಗೆ ಅನುಸರಿಸಿದೆ.

                   ಥಾಯ್ಲೆಂಡಿನ ಕ್ರೀಡೆಗಳ ಅಭಿಮಾನ ದೇವತೆ ಇಂದ್ರ. ಬ್ಯಾಂಕಾಕಿನ ವಿಶಾಲ, ಸುಂದರ ಕ್ರೀಡಾಂಗಣದ ಮಹಾದ್ವಾರದಲ್ಲಿ ಐರಾವತವನ್ನೇರಿ ಹೊರಟಿರುವ ಬೃಹತ್ ವಿಗ್ರಹವೊಂದಿದೆ. ಅಲ್ಲಿನ "ದೇವ ರೂಪಾವಳಿ" ಎಂಬ ಹಸ್ತಪ್ರತಿ ಶಿಲ್ಪಶಾಸ್ತ್ರ ಗ್ರಂಥದಲ್ಲಿ 300ಕ್ಕೂ ಹೆಚ್ಚು ದೇವ ದೇವಿಯರ ಚಿತ್ರಗಳಿವೆ. ಅಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ರಾಮ-ಶಿವ-ವಿಷ್ಣು-ಬ್ರಹ್ಮ ಹಾಗೂ ಅನೇಕ ತಾಂತ್ರಿಕ ವಿಗ್ರಹಗಳು ಸಾಮಾನ್ಯ. ಅಲ್ಲಿನ ಪ್ರತಿ ಹೋಟಲಿಗೂ ಒಂದೊಂದು ಅಭಿಮಾನ ದೇವತೆ ಇರುತ್ತದೆ. ಆ ದೇವತೆಗೆ ಸಂಬಂಧಿಸಿದ ಛಾಯಾ ನಾಟಕವನ್ನು ಪ್ರತಿದಿವಸ ಆಡಿಸುತ್ತಾರೆ. ಪ್ರತಿಯೊಂದು ದೇವಾಲಯದಲ್ಲಿ ಒಂದು ಋಷಿ ಸ್ಥಂಭವಿರುತ್ತದೆ. ಸ್ತಂಭದ ಕೆಳಗೆ ಆಯಾ ಋಷಿಯ ಕುಳಿತಿರುವ ಚಿತ್ರವಿರುತ್ತದೆ. ಪುರಾತನ ಧನುರ್ವೇದದ ಅನೇಕ ಹಸ್ತಪ್ರತಿಗಳಿವೆ. ನಮ್ಮಲ್ಲಿನ ತುಲಾಭಾರ ರೀತಿಯ ಝೂಲಾ ಎಂಬ ಸಮಾರಂಭ ಅಲ್ಲಿನ ದೇವಾಲಯಗಳಲ್ಲಿ ನಡೆಯುತ್ತದೆ. ಬ್ರಹ್ಮ, ವಿಷ್ಣು, ಮಹೇಶ್ವರರಲ್ಲದೆ ಹನುಮಂತ, ಪರಶುರಾಮ, ಗಣೇಶರನ್ನೂ ಆರಾಧಿಸುತ್ತಾರೆ.

                   ಪ್ರಪಂಚದಲ್ಲಿ ವಿಷ್ಣುಶಯನ, ಉತ್ಥಾನಗಳನ್ನು ಸ್ವತಃ ರಾಜನೇ ಅಭಿನಯಿಸುವ ದೇಶವೆಂದರೆ ಥಾಯ್ಲಂಡ್ ಒಂದೇ. ಅಲ್ಲಿ ರಾಜನು ಭೂಮಿಯ ಮೇಲೆ ವಿಷ್ಣುವಿನ ಪ್ರತಿನಿಧಿ ಸ್ವರೂಪ. ವರ್ಷದಲ್ಲಿ ನಿಯಮಿತ ದಿನವೊಂದರಂದು ಆತ ಶಯನ ಮಾಡುತ್ತಾನೆ. ಆರು ತಿಂಗಳ ನಂತರ ದೇವೋತ್ಥಾನ, ರಾಜನೇ ಭಾಗವಹಿಸುವ ತೆಪ್ಪೋತ್ಸವ ನಡೆಯುತ್ತದೆ ಆಗ. ಥಾಯ್ಲೆಂಡಿನಲ್ಲಿ ಪಟ್ಟಾಭಿಷೇಕ ಮಹೋತ್ಸವ ವೈದಿಕ ಕ್ರಮದಲ್ಲೇ ಜರಗುತ್ತದೆ. ಭಿಕ್ಷಾಟನೆ ಅಲ್ಲಿ ಧರ್ಮಕಾರ್ಯ. ಪ್ರತಿಯೊಬ್ಬನು ತನ್ನ ಜೀವನದ ಸ್ವಲ್ಪ ಕಾಲವನ್ನಾದರೂ ದೇವಾಲಯದಲ್ಲಿ ಕಳೆದು ಭಿಕ್ಷಾಟನೆ ಮಾಡಲೇಬೇಕು. ರಾಜನೂ ಇದಕ್ಕೆ ಹೊರತಲ್ಲ. ಭಿಕ್ಷೆ ನೀಡಲೆಂದೇ ವಿಶೇಷ ಪಾತ್ರೆಗಳಿರುತ್ತವೆ. ಒಟ್ಟಾರೆ ಭಾರತೀಯ ಧರ್ಮ-ದೇವತೆಗಳು, ಶಿಲ್ಪಶಾಸ್ತ್ರ-ಧನುರ್ವೇದಾದಿಗಳು, ಭಾವ-ಭಾಷೆಗಳು ಥಾಯ್ಲೆಂಡ್ ಜನಜೀವನದ ನೆಲೆಗಟ್ಟು. ನಮ್ಮ ಪುರಾತನ ರೀತಿನೀತಿಗಳ ಪರಿಶುದ್ಧ ರೂಪ ಅಲ್ಲಿ ಸಂರಕ್ಷಿಸಲ್ಪಟ್ಟಿದೆ. ಅಲ್ಲೊಂದು ಜೀವಂತ ಭಾರತವೇ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ