ಪುಟಗಳು

ಗುರುವಾರ, ಮೇ 26, 2016

ರುಧಿರ ತರ್ಪಣ-ಮಾತೃ ಪೂಜನ

ರುಧಿರ ತರ್ಪಣ-ಮಾತೃ ಪೂಜನ


      ಬೃಂದಾವನದ ರಾಜಮಾರ್ಗ. ಎಲ್ಲೆಲ್ಲೂ ತಲೆ ಬೋಳಿಸಿಕೊಂಡು, ಗಂಧದ ನಾಮ ಧರಿಸಿ, ಬಿಳಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಾ ಓಡಾಡುತ್ತಿರುವ ಅನಾಥ ವಿಧವೆಯರು, ಊರು ತುಂಬಾ ಓಡಾಡುತ್ತಿರುವ ಕಾವಿಧಾರಿಗಳು( ಸಾಧುಗಳೆಷ್ಟೋ, ಕಪಟಿಗಳ್ಯಾರೋ ಶಿವನೇ ಬಲ್ಲ!)...ಈ ದೃಶ್ಯಗಳನ್ನು ನೋಡುತ್ತಾ ಮನದಲ್ಲಿ ಕೃಷ್ಣ ಭಗವಾನನ ಪ್ರೇಮ, ತಂತ್ರ-ಪ್ರತಿತಂತ್ರ, ಧೈರ್ಯ, ಕುಶಲಮತಿ ರಾಜಕಾರಣ, ತ್ಯಾಗದ ಗುಣಗಳನ್ನು ಮೆಲುಕು ಹಾಕುತ್ತಾ ಬಿರಬಿರನೇ ನಡೆದು ಬರುತ್ತಿದ್ದಾನೆ ಜತೀನ್ ಮುಖರ್ಜಿ. ಅವನೇ ಒಂದು ವಿಶೇಷ, ಅವನ ಹೆಸರು ಇನ್ನೊಂದು ವಿಶೇಷ. ಕಡುಗತ್ತಲಿನಲ್ಲಿ ಬರಿಗೈಯಿಂದ ಹುಲಿಯನ್ನು ಕೊಂದ ಧೀರ ಅವನು. ಅದಕ್ಕಾಗಿಯೇ ಅವನು "ಬಾಘಾ" ಜತೀನ್! ಕಟ್ಟು ಮಸ್ತಿನ ಹುರಿಯಾಳು, ಯೋಗದಿಂದ ಸುದೃಢವಾದ ದೇಹ, ಸೇನಾಧಿಪತಿ ಪಟ್ಟಕ್ಕೆ ಯೋಗ್ಯ. ಹಾಗೆಂದು ಮಹರ್ಷಿ ಅರವಿಂದರಿಂದಲೇ ಆಶೀರ್ವದಿಸಲ್ಪಟ್ಟು ರಣವೀಳ್ಯ ಪಡೆದವನು. ಬಂಗಾಳಿ ಕ್ರಾಂತಿಪಾಳಯಕ್ಕೆ ನಾಯಕನೀಗ! ಅಂತಹವನಿಗೆ ಇಲ್ಲೇನು ಕೆಲಸ? ಅದೂ ಪ್ರೇಮದುದ್ಯಾನದಲ್ಲಿ!

           ಬಂದವನೇ ನಿಂತಿದ್ದು ಒಂದು ಆಶ್ರಮದ ಮುಂದೆ. ಅವನ ಸ್ವಾಗತಕ್ಕೆಂದೇ ಎದ್ದು ಬಂದಿದ್ದರು ಸ್ವಾಮಿ ನಿರಾಲಂಬರು. ಅವರಿಗೆ ಪಾದಾಭಿವಂದನ ಮಾಡಿದ ಜತೀನ್. ಕುಶಲೋಪರಿಗಳು ನಡೆದವು. ಮಾತಾಡುತ್ತಿದ್ದಂತೆಯೇ ಧ್ಯಾನಸ್ಥರಾದರು ನಿರಾಲಂಬರು. ನಿರಾಲಂಬರ ಪೂರ್ವಾಶ್ರಮದ ಹೆಸರು ಜತೀಂದ್ರನಾಥ ಬ್ಯಾನರ್ಜಿ. ಅತ್ತ ಅರವಿಂದರು ಬಂಗಾಳದಲ್ಲಿ ಕ್ರಾಂತಿ ನೇತೃತ್ವ ವಹಿಸಿದ್ದರೆ ಇತ್ತ ಪಂಜಾಬಿನಲ್ಲಿ ಜತೀಂದ್ರಬ್ಯಾನರ್ಜಿ ವಹಿಸಿದ್ದರು. ಅರವಿಂದರು ತಪಶ್ಚರ್ಯೆಗೆ ತೆರಳಿದರೆ ಇತ್ತ  ಕೆಲವು ನಾಯಕರ ಭಿನ್ನಾಭಿಪ್ರಾಯಗಳಿಂದ ಬೇಸತ್ತು ಸನ್ಯಾಸ ಸ್ವೀಕರಿಸಿದ್ದರು ಜತೀಂದ್ರನಾಥ ಬ್ಯಾನರ್ಜಿ. ಆದರೆ ಕ್ರಾಂತಿಕಾರಿಗಳ ಒಡನಾಟ, ಸಂಘಟನೆ, ಮಾರ್ಗದರ್ಶನ ನಡೆದೇ ಇತ್ತು. ವರ್ತಮಾನದ ಜತೀಂದ್ರ ಪೂರ್ವದ ಜತೀಂದ್ರರ ಮಾರ್ಗದರ್ಶನ ಪಡೆಯಲು ಬಂದಿದ್ದ. ಕೇವಲ ಮಾರ್ಗದರ್ಶನವೇ?...ಅಲ್ಲ. ಅಲ್ಲಿ ೧೮೫೭ರ ಕ್ರಾಂತಿಯ ಪುನಾರವರ್ತನೆಗೆ ಶಿಲಾನ್ಯಾಸ ಮಾಡುವುದಿತ್ತು. ಅಲ್ಲಿ ಮತ್ತೊಬ್ಬ ಬರುವವನಿದ್ದ. ಮುಂದೆ ಸೈನಿಕ ಕ್ರಾಂತಿಗೆ ಮೂಲಕಿಡಿಯಾದ ಉತ್ತರಭಾರತದಾದ್ಯಂತ ಪಸರಿಸಿದ ಒಂದು ಮಹಾಕ್ರಾಂತಿಗೆ ಭದ್ರ ಬುನಾದಿ ಅಲ್ಲಿ ಆಗುವುದರಲ್ಲಿತ್ತು. ಆಗಲೇ ಧ್ಯಾನಾವಸ್ಥೆಯಿಂದ ಸಹಜತೆಗೆ ಬಂದ ನಿರಾಲಂಬರು ಅವನು ಬರಲು ಒಂದು ವಾರ ಆಗುವುದೆಂದು ಅಲ್ಲಿಯ ತನಕ ಜತೀನ ಸಾಧನೆಯಲ್ಲಿ ಕಳೆಯಬೇಕೆಂದು ತಿಳಿಸಿ ಮತ್ತೆ ಧ್ಯಾನಸ್ಥರಾದರು. ಮರು ಪ್ರಶ್ನೆಯಿಲ್ಲ.

      ಜತೀನನ ಸಮಯ ಧ್ಯಾನ, ಯೋಗದಲ್ಲೇ ಕಳೆಯುತ್ತಿದೆ. ಈಗವನು ಮಿತಾಹಾರಿ. ಅವನ ದೇಹದಲ್ಲೊಂದು ಹೊಸ ಶಕ್ತಿ ಸಂಚಯನವಾಗುತ್ತಿದೆ. ಮುಖದ ತೇಜಸ್ಸು ಹೆಚ್ಚುತ್ತಿದೆ. ಅವನಲ್ಲಿಗೆ ಬಂದು ಆರು ದಿವಸಗಳು ಗತಿಸಿವೆ. ಏಳನೆಯ ದಿನ ಯೋಗ, ಅಂಗಸಾಧನೆ ಮುಗಿಸಿ ಇನ್ನೇನು ಸ್ನಾನ-ಧ್ಯಾನಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ನಿರಾಲಂಬರ ಧ್ವನಿ ಕೇಳಿಸಿತು. "ಅಗೋ ಬಂದ". ಜತೀನನ ದೃಷ್ಟಿ ಕ್ಷಣ ಮಾತ್ರದಲ್ಲಿ ದ್ವಾರದ ಕಡೆ ಸರಿಯಿತು. ಬಂಗಾಳಿ ದಿರಿಸು, ಆಳೆತ್ತರ, ತನಗಿಂತ ತುಸು ಚಿಕ್ಕ ಪ್ರಾಯ, ತೇಜಃಪೂರ್ಣ ಮುಖ. ಹಿಂದೊಮ್ಮೆ ನೋಡಿದ ನೆನಪು. ಆ ವ್ಯಕ್ತಿ ನಿರಾಲಂಬರಿಗೆ ಸಾಷ್ಟಾಂಗವೆರಗಿದಾಗ ಆಶೀರ್ವದಿಸಿದ ನಿರಾಲಂಬರು ಜತೀನನ ಕಡೆ ಕೈತೋರಿಸಿ " ಈತನಾರು ಗೊತ್ತೇ?" ಎಂದು ಕೇಳಿದರು. ಅರೆಕ್ಷಣ ಜತೀನನನ್ನು ನೋಡಿದ ಆತ "ಗೊತ್ತಿಲ್ಲದೆ ಏನು" ಎಂದು ಜತೀನನ್ನು ಗಾಢವಾಗಿ ಆಲಂಗಿಸಿದ. ಬೆಂಕಿ, ಗಾಳಿಗಳು ಒಂದಾದಂತಾಯಿತು!
ಯಾರಾತ?
ರಾಸ್ ಬಿಹಾರಿ ಬೋಸ್!  ಎಲ್ಲರ ಮೆಚ್ಚಿನ ರಾಸುದಾ...!

            ತಂದೆ ವಿನೋದ ಬಿಹಾರಿ ಬೋಸ್. ತಾಯಿ ಬಂಗಾಳಿ ಕುಲೀನ ಮನೆತನದ ಸರಳತೆಯ ಪತಿಭಕ್ತಿ ಪರಾಯಣೆ. ಹೂಗ್ಲಿ ಜಿಲ್ಲೆಯ ಭದ್ರೇಶ್ವರದ ಪರಲವಿಘಟಿ ಎಂಬ ಹಳ್ಳಿಯಲ್ಲಿ ಜನನ(೧೮೮೬).  ೩ ವರುಷವಾದಾಗ ತಾಯಿ ಸ್ವರ್ಗವಾಸಿಯಾದರು. ತಾತ ಕಾಳಿಚರಣ ಬೋಸ್. ಬರ್ದ್ವಾನಿನ ಸುಬಲ್ದಹ ಗ್ರಾಮದಲ್ಲಿದ್ದ ಆತ ರಾಮಕೃಷ್ಣ ಪರಮಹಂಸರ ಪರಮ ಭಕ್ತರು. ಅವರಿಂದ ಭರತಖಂಡದ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ವಿಚಾರಗಳ ಅರಿವು ರಾಸುದಾಗಾಯಿತು. ಚಿಕ್ಕಂದಿನಲ್ಲಂತೂ ಬಲು ತುಂಟ. ಜಗಳಗಂಟ. ಆದರೆ ಸಾಹಿತ್ಯ ಪ್ರೇಮಿ. ಭಾರತವನ್ನು ವಂದೇಮಾತರಂನಿಂದ ವಶೀಕರಿಸಿದ ಬಂಕಿ ಬಾಬುಗಳ ಅಭಿಮಾನಿ.

          ಒಂದು ದಿನ ಚಂದನ್ ನಗರದ ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲೀಷರ ಬಗ್ಗೆ ಘನ ಅಭಿಪ್ರಾಯ ಹೊಂದಿದ್ದ ಇತಿಹಾಸದ ಪ್ರಾದ್ಯಾಪಕರೊಬ್ಬರು ಪಾಠ ಮಾಡುತ್ತಾ " ಭಾರತೀಯರು ಹೇಡಿಗಳು. ಆದ್ದರಿಂದಲೇ ೧೭ ಮಂದಿ ಕುದುರೆ ಸವಾರರೊಂದಿಗೆ ಬಂದ ಬಖ್ತಿಯಾರ್ ಖಿಲ್ಜಿ ಯಾವ ಅಡೆತಡೆಯಿಲ್ಲದೆ ನಮ್ಮ ದೇಶವನ್ನು ಲೂಟಿ ಮಾಡಿದ. ಗೋರಿ, ಘಜ್ನಿಗಳು ಕೊಳ್ಳೆ ಹೊಡೆದರು. ಆಂಗ್ಲರೇನಾದರೂ ಇರುತ್ತಿದ್ದರೆ ಅವರ ಅವಸಾನವಾಗುತ್ತಿತ್ತು....."  ಎಂದು ತಮ್ಮ ಎಂದಿನ ರಾಗ ಹಾಡಲಾರಂಭಿಸಿದರು. ಇದನ್ನು ಅಲ್ಲಗಳೆದ ರಾಸುದಾ " ನೀವು ಹೇಳುವುದು ಅಪ್ಪಟ ಸುಳ್ಳು. ಯಾರೋ ಕೆಲವರನ್ನು ಹೆಸರಿಸಿ ನಮ್ಮಿಡೀ ಜನಾಂಗವನ್ನು ಹಳಿಯುವುದು ಎಷ್ಟು ಸರಿ? ಪೃಥ್ವಿರಾಜ ಚೌಹಾಣ್ ಹೇಡಿಯೇ? ಪುರೂರವ ಹೇಡಿಯೇ? ಚಂದ್ರಗುಪ್ತ, ಸಮುದ್ರಗುಪ್ತ, ರಾಣಾ ಸಂಗ, ಸಂಗ್ರಾಮ ಸಿಂಹ, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿಯರು ಪುಕ್ಕಲರೇ? ನಮ್ಮವರ ಸದ್ಗುಣಗಳೇ ನಮಗೇ ಮುಳುವಾಯಿತಲ್ಲದೇ ಬೇರೇನಲ್ಲ. ಕೇವಲ ಒಳ್ಳೆಯವರಾಗಿದ್ದರೆ ಪ್ರಯೋಜನವಿಲ್ಲ. ತಂತ್ರಕ್ಕೆ ಪ್ರತಿತಂತ್ರ, ವ್ಯೂಹಕ್ಕೆ ಚಕ್ರವ್ಯೂಹ ರಚಿಸಿ ಕೃಷ್ಣ, ಚಾಣಕ್ಯ, ಶಿವಾಜಿಯರಂತೆ ಸಮರ ನೀತಿ ಅನುಸರಿಸಿದರೇನೇ ನಮಗೆ ಉಳಿಗಾಲ. ಎದುರಾಳಿ ಯುದ್ಧಧರ್ಮ ಪಾಲಿಸಿದಾಗ ಮಾತ್ರ ನಾವು ಧರ್ಮವನ್ನು ಯುದ್ಧದಲ್ಲಿ ಪಾಲಿಸಬೇಕು. ಕಪಟಿಗಳನ್ನು ಕಪಟದಿಂದಲೇ ಒದ್ದೋಡಿಸಬೇಕು. ಆದ್ದರಿಂದ ನಿಮ್ಮ ಮಾತನ್ನು ವಾಪಾಸು ತೆಗೆದುಕೊಳ್ಳಿ" ಎಂದ. ಕುಪಿತಗೊಂಡ ಆ ಆಂಗ್ಲ ಚೇಲಾ "ನಿಲ್ಲಿಸೋ ನಿನ್ನ ವಿತಂಡವಾದ. ಯಾರಲ್ಲಿ ಮಾತನಾಡುತ್ತಿದ್ದೀಯಾ ನೆನಪಿರಲಿ" ಎಂದು ಭುಸುಗುಡುತ್ತಾ ಹೇಳಿದರು. ಹುಡುಗ ಸುಮ್ಮನುಳಿದಾನೇ..ನನ್ನದು ವಿತಂಡವಾದವಲ್ಲ. ವಾಸ್ತವವಾದ. ನಿಮ್ಮದು ಅಭಿಮಾನ ಶೂನ್ಯರ ಮಾತೆಂದು ಅಬ್ಬರಿಸಿದ. ತರಗತಿಯ ಹುಡುಗರಿಂದ ಚಪ್ಪಾಳೆಗಳ ಸುರಿಮಳೆ!
ಆಂಗ್ಲ ಚೇಲಾನಿಗೆ ಮುಖಭಂಗ. ತತ್ಪರಿಣಾಮ ರಾಸುದಾಗೆ ಶಾಲೆಯಿಂದಲೇ ಅರ್ಧಚಂದ್ರ!

           ಅಪ್ಪ ಛೀಮಾರಿ ಹಾಕಿ ಕಲ್ಕತ್ತೆಗೆ ಅಟ್ಟಿದರು. ವಿವೇಕಾನಂದರ ಸಮಗ್ರ ಕೃತಿಗಳು, ಜದುನಾಥ ಸರ್ಕಾರರ ಉಪನ್ಯಾಸಗಳು ಪ್ರಭಾವಿಸಿದವು. ಜೋಗೇಂದ್ರನಾಥ ವಿದ್ಯಾಭೂಷಣರ "ಮ್ಯಾಝಿನಿ ಚರಿತೆ" ಸೈನ್ಯ ಕಟ್ಟಿ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸುವ ಕನಸಿಗೆ ಹವಿಸ್ಸೊದಗಿಸಿತು. ಸುಳ್ಳು ಹೇಳಿ ಪೋರ್ಟ್ ವಿಲಿಯಂ ಸೇನಾವಿಭಾಗದಲ್ಲಿ ಗುಮಾಸ್ತನಾದ. ಬಂಗಾಳಿ ಎಂದು ತಿಳಿದೊಡನೆ ಆ ಕೆಲಸಕ್ಕೆ ಸಂಚಕಾರ! ಛಲ ನೂರ್ಮಡಿಯಾಯಿತು. ಯೋಗ, ಅಂಗಸಾಧನೆಯಿಂದ ದೇಹ ಬಲಿಷ್ಟವಾಯಿತು. ಯುದ್ಧಕ್ಕೆ ಬೇಕಾದ ಆತ್ಮವಿಶ್ವಾಸ ಹೆಚ್ಚಿಸಿದ ದೈಹಿಕ ಚಿಂತನೆ ಅದು.

 ಪಂಜರದ ಬಾಗಿಲು ತೆರೆದಿತ್ತು
                 
           ತಂದೆ, ಮಗ ತನ್ನ ಕಣ್ಣೆದುರೇ ಇರಲಿ, ಸಂಭಾಳಿಸಬಹುದೆಂದು ತಾನು ಕೆಲಸ ಮಾಡುತ್ತಿದ್ದ ಶಿಮ್ಲಾದ ಸರಕಾರೀ ಪ್ರೆಸ್ನಲ್ಲಿಯೇ ಕೆಲಸ ಕೊಡಿಸಿದರು. ಆದರೆ ರಾಸುದಾನೊಳಗಿದ್ದ ಹುಟ್ಟು ಹೋರಾಟಗಾರ ಸುಮ್ಮನಿರಬೇಕಲ್ಲ. ಮ್ಯಾನೇಜ್ ಮೆಂಟ್ ಮತ್ತು ಕೆಲಸಗಾರರ ನಡುವೆ ಘರ್ಷಣೆಯಾದಾಗ ಕೆಲಸಗಾರರ ಪರ ವಕಾಲತ್ತು ವಹಿಸಿದ. ಪರಿಣಾಮ ದಿನಂಪ್ರತಿ ಮನೆಯಲ್ಲಿ ಜಗಳ. ಪರಿಣಾಮ ಕೆಲಸಕ್ಕೆ ರಾಜೀನಾಮೆ. ಮನೆಯಿಂದ ಪರಾರಿ. ಸ್ವಾತಂತ್ರ್ಯ ಬಯಸುವ ಮನ ಎಷ್ಟು ದಿನ ಪಂಜರದೊಳಗಿದ್ದೀತು?

               ಡೆಹ್ರಾಡೂನಿನ ಫಾರೆಸ್ಟ್ ರೀಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಸಿಕ್ಕಿತು. ಬಾಸ್ ಸರ್ದಾರ್ ಪೂರಣ ಸಿಂಗ್. ವಸತಿಗಾಗಿ ಪರದಾಡುತ್ತಿದ್ದಾಗ "ಟಾಗೋರ್ ವಿಲ್ಲಾ" (ಶ್ರೀಮಂತ ಪ್ರಪುಲ್ಲನಾಥ ಟಾಗೋರನ ಎಸ್ಟೇಟ್)ದ ಮ್ಯಾನೇಜರ್ ಅತುಲ್ ಚಂದ್ರ ಬೋಸನ ಪರಿಚಯವಾಗಿ ಅದೇ ತೋಟದಲ್ಲಿ ವಾಸಕ್ಕೆ ಮನೆಯೂ ಸಿಕ್ಕಿತು. ಮುಂದೆ ಕ್ರಾಂತಿ ಕಾರ್ಯಕ್ಕೆ ಶ್ರೀಗಣೇಶವಾದದ್ದು ಇಲ್ಲಿಯೇ. ಮೊದಲೇ ಅದ್ಭುತ ಮಾತುಗಾರನಾಗಿದ್ದ ರಾಸುದಾ ತರುಣರ ಸಂಘಟನೆಗಾರಂಭಿಸಿದರು. ತನ್ನ ಮನೆಯಲ್ಲೇ ತರುಣರಿಗೆ ಬಾಂಬ್ ತಯಾರಿಸುವ ವಿಧಾನ ಮತ್ತು ಕ್ರಾಂತಿಯ ತರಬೇತಿಗಳನ್ನಾರಂಭಿಸಿದರು. ತನ್ಮಧ್ಯೆ ಶಿರೀಷ ಚಂದ್ರ ಬೋಸ್ ಎಂಬ ಮಹಾನ್ ಕ್ರಾಂತಿಕಾರಿಯ ಪರಿಚಯವಾಯಿತು. ಅವರಿಂದ ಪ್ರವರ್ತಕ ಸಂಘದ ಹರಿಕಾರ , ಚಂದನ್ ನಗರದ ಕ್ರಾಂತಿಕಾರಿಗಳ ಅನಭಿಷಿಕ್ತ ದೊರೆ ಮೋತಿಲಾಲ ರಾಯರ ಭೇಟಿಯಾಗಿ ತನ್ಮೂಲಕ ಮಹರ್ಷಿ ಅರವಿಂದರ ದರ್ಶನ ಭಾಗ್ಯ ಲಭಿಸಿತು.

             ಒಂದು ದಿನ ಮೋತಿಲಾಲರು ರಾಸುದಾರನ್ನು ತನಗೆ ಅರವಿಂದರು ಗೀತೆಯ ಅಂತರ್ದರ್ಶನ ಮಾಡಿಸಿದ ಅರವಿಂದರು ಅಜ್ಞಾತವಾಸದಲ್ಲಡಗಿದ್ದ ಗುಹೆಯಂತಿದ್ದ ಪುಟ್ಟ ಕೋಣೆಯೊಳಗೆ ಕರೆದೊಯ್ದರು. ಅರವಿಂದರ ನೆನಪಾಗಿ ಮೈ ಮನ ಪುಳಕಗೊಂಡಿತು. ಅರವಿಂದರ ವಾಣಿ ಗುಂಯ್ಗುಡಲಾರಂಭಿಸಿತು. "....ಕ್ರಾಂತಿವೀರನಿಗೆ ಗೀತೆಯೇ ಗುರು. ಆತ್ಮಸಮರ್ಪಣ ಭಾವ ಶ್ರೀಕೃಷ್ಣ ನೀಡಿದ ಸಂದೇಶ. ಅದು  ಪ್ರತಿಯೊಬ್ಬ ಕ್ರಾಂತಿಕಾರಿಗೆ ಆದರ್ಶ....".  ಡೆಹರಾಡೂನಿನ ಮದುವೆ ಮನೆಯೊಂದರಲ್ಲಿ ಜಿತೇಂದ್ರ ಮೋಹನ ಚಟರ್ಜಿಯ ಪರಿಚಯವಾಗಿ ಪಂಜಾಬಿನ ಕ್ರಾಂತಿಕಾರಿಗಳೊಂದಿಗೆ ಅವನಿಗಿದ್ದ ನಂಟು ರಾಸುದಾಗೆ ಪಂಜಾಬಿನ ತನಕ ತನ್ನ ಕ್ರಾಂತಿಸಂಘಟನೆ ವಿಸ್ತರಿಸಲು ನೆರವಾಯಿತು.

          ಅಂತಹ ಅಪ್ರತಿಮ ದೇಶಭಕ್ತನೇ ಈಗ ಬಾಘಾ ಜತೀನನನ್ನು ಭೇಟಿ ಮಾಡಿದ್ದು. ಮಾತ್ರವಲ್ಲ ನಿರಾಲಂಬ ಸ್ವಾಮಿಗಳ ಸಮಕ್ಷಮದಲ್ಲಿ ಕಂಸ-ತೀಲ (ಶ್ರೀ ಕೃಷ್ಣ- ಬಲರಾಮರು ಕಂಸನನ್ನು ವಧಿಸಿದ ಸ್ಥಳ) ದಲ್ಲಿ ಧ್ಯಾನಸ್ಥರಾಗಿ ಶತ್ರು ಸಂಹಾರದ ದೀಕ್ಷೆ ತೊಟ್ಟರು ಅವರೀರ್ವರು. ಧ್ಯಾನಮಗ್ನನಾಗಿದ್ದ ರಾಸುದಾ ಮನದಲ್ಲಿ ಒಂದು ಚಿತ್ರ ಮೂಡತೊಡಗಿತ್ತು. ಅದು ವೈಸ್ ರಾಯ್ ಹಾರ್ಡಿಂಗನ ಚಿತ್ರ!


ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಗದಗುಟ್ಟಿಸಿದ ಬಾಂಬು

                ಚಂದನ್ ನಗರದ ೫ ಪ್ರಮುಖ ಬಾಂಬು ತಯಾರಿಕಾ ಕೇಂದ್ರಗಳ ಪೈಕಿ ತನ್ನ ಮನೆಯಲ್ಲಿದ್ದುದನ್ನೇ ಅತೀ ದೊಡ್ಡ ಕೇಂದ್ರವಾಗಿ ಪರಿವರ್ತಿಸಿದ್ದರು ರಾಸುದಾ. ತಯಾರಿಕೆಗೆ ಬೇಕಾದ ನೈಟ್ರಿಕ್ ಆಮ್ಲ ಮತ್ತು ಕಾರ್ಬೋಲಿಕ್ ಆಮ್ಲಗಳನ್ನು ರಾಸುದಾ ಗೆಳೆಯ ವೃತ್ತಿಯಲ್ಲಿ ಅಕ್ಕಸಾಲಿಗನಾಗಿದ್ದ ಅಶುತೋಶ್ ನಿಯೋಗಿ ಸರಬರಾಜು ಮಾಡುತ್ತಿದ್ದ. ರಾಸುದಾ ಈಗ ನಿತ್ಯ ಪ್ರವಾಸಿ. ಎಲ್ಲೇ ಇದ್ದರೂ ತನ್ನ ಬಾಂಬು ಕೇಂದ್ರದ ಮೇಲೆ ನಿಯಂತ್ರಣ ಇದ್ದೇ ಇರುತ್ತಿತ್ತು. ರಾಸುದಾ ದೆಹಲಿ, ಪಂಜಾಬ್, ಸಂಯುಕ್ತ ಪ್ರಾಂತಗಳಲ್ಲಿ ಬಿರುಗಾಳಿಯಂತೆ ಪ್ರವಾಸ ಮಾಡುತ್ತಾ ಸಂಘಟನೆಯ ಕಾರ್ಯದಲ್ಲಿ ತೊಡಗಿದ್ದರು. ಒಂದು ದಿನ ಚಂದನ್ ನಗರದಲ್ಲಿದ್ದರೆ ಮರುದಿನ ಕಲ್ಕತ್ತೆಯಲ್ಲೋ, ಕಾಶಿಯಲ್ಲೋ, ಲಾಹೋರ್ನಲ್ಲೋ, ದೆಹಲಿಯಲ್ಲೋ ಇರುತ್ತಿದ್ದರು.

             ಸ್ವಾಮಿ ನಿರಾಲಂಬರ(ಜತೀಂದ್ರನಾಥ ಬ್ಯಾನರ್ಜಿ) ಕಾರ್ಯಕ್ಷೇತ್ರವಾಗಿದ್ದ ಕಾರಣ ಪಂಜಾಬಿನಲ್ಲಿ ರಾಸುದಾಗೆ ಪೂರಕ ವಾತಾವರಣವಿತ್ತು. ಅಲ್ಲದೇ ಆರ್ಯಸಮಾಜದ ವಿಚಾರಗಳಿಂದಾಗಿ ಪಂಜಾಬಿನಲ್ಲಿ ದೇಶಪ್ರೇಮದ ವಾತಾವರಣವಿತ್ತು. ಜತೀಂದ್ರರಿಂದ ಆಕರ್ಷಿತರಾಗಿ ಲಾಲಾ ಲಜಪತ್ ರಾಯ್, ಸರ್ದಾರ್ ಅಜಿತ್ ಸಿಂಗ್, ಸರ್ದಾರ್ ಕಿಶನ್ ಸಿಂಗ್(ಕ್ರಾಂತಿವೀರ ಭಗತ್ ಸಿಂಗನ ತಂದೆ), ಲಾಲಾ ಅಮರದಾಸ್, ಲಾಲ್ ಚಂದ್ ಫಾಲಕ್ ಮುಂತಾದ ಸಮರ್ಥ ಯುವಕರು ಅಲ್ಲಿ ಸಂಘಟನೆಯ ಜವಾಬ್ದಾರಿ ಹೊತ್ತಿದ್ದರು. ರಾಸುದಾ ಪಂಜಾಬಿಗೆ ಕಾಲಿಟ್ಟದ್ದೇ, ಸ್ವಾಮಿ ವಿವೇಕಾನಂದ ಮತ್ತು ಅರವಿಂದರು ಹಚ್ಚಿದ ಜ್ಯೋತಿಯು ಮಹರ್ಷಿ ದಯಾನಂದ ಸರಸ್ವತಿಯವರು ಹಚ್ಚಿದ ದೀಪದೊಂದಿಗೆ ಕೂಡಿಕೊಂಡಂತಾಯಿತು. ಮಾತ್ರವಲ್ಲ ಲಾಲಾ ಹರದಯಾಳ್ ವಿದೇಶಕ್ಕೆ ಹಾರುವ ಮುನ್ನ ಸಂಘಟಿಸಿದ್ದ ದೇಶಭಕ್ತರ ಗಡಣ ರಾಸುದಾಗೆ ಸಹಾಯಕವಾಯಿತು. ರಾಸುದಾ ಈಗ ಲಾಹೋರ್, ಪಂಜಾಬ್, ದೆಹಲಿ, ಕಾಶಿ, ಬಂಗಾಳ, ಮಹಾರಾಷ್ಟ್ರದ ಎಲ್ಲ ಕ್ರಾಂತಿಕಾರಿಗಳನ್ನು ಏಕಛತ್ರದೊಳಗೆ ತರುವ ಪ್ರಯತ್ನ ಆರಂಭಿಸಿದರು. ೧೯೧೧ ಡಿಸೆಂಬರ್ ೧೨ರಂದು ಭಾರತಕ್ಕೆ ಭೇಟಿ ನೀಡಲು ಬಂದಿದ್ದ ಆಂಗ್ಲ ರಾಜ ೫ನೇ ಜಾರ್ಜ್ ಬಂಗಾಳದ ವಿಭಜನೆಯನ್ನು ರದ್ದುಗೊಳಿಸಿರುವುದಾಗಿಯೂ ಸರ್ಕಾರದ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸುವುದಾಗಿಯೂ ಘೋಷಿಸಿದ. ರಾಸುದಾ ಕಾಯುತ್ತಿದ್ದ ಸಮಯ ಈಗ ಒದಗಿ ಬಂದಿತ್ತು.

    ೧೯೧೨ರ ಡಿಸೆಂಬರ್ ೨೩. ವೈಸ್ರಾಯ್ ದೆಹಲಿ ಪ್ರವೇಶಕ್ಕಾಗಿ ರಾಜಧಾನಿ ಸಿಂಗಾರಗೊಂಡಿತ್ತು. ರಂಗವಲ್ಲಿಗಳು, ತಳಿರುತೋರಣ ನಡುವೆ ಸೈನಿಕರಿಂದ ಬ್ಯಾಂಡು ವಾದನ ಹಾಗೂ ಕವಾಯತು. ಭವ್ಯೋಪೇತ ವೈಸ್ರಾಯ್ ಮೆರವಣಿಗೆ ನೋಡಲು ಅಪಾರ ಜನಸಂದಣಿ ಸೇರಿತ್ತು. ರೈಲಿನಿಂದಿಳಿದ ವೈಸ್ ರಾಯ್ ಕವಾಯತು ಹಾಗೂ ಮಿಲಿಟರಿ ಗೌರವ ಸ್ವೀಕರಿಸಿ ತನ್ನ ಪತ್ನಿಯೊಡನೆ ಅಂಬಾರಿ ಮೇಲೆ ಕೂತ. ಇತ್ತ ಮಂದಗತಿಯ ಮೆರವಣಿಗೆ ಸಾಗುತ್ತಿದ್ದಂತೆಯೇ ಅತ್ತ ಕಡೆಯಿಂದ ಮದುವೆ ದಿಬ್ಬಣವೊಂದು ಹೊರಟಿತ್ತು! ಕಚ್ಚೆ ಬಿಗಿದಿದ್ದ ವರ ಮಹಾಶಯನೊಂದಿಗೆ "ಆಭರಣ" ತುಂಬಿದ ಚೀಲವನ್ನು ಸೆರಗಿನ ಮರೆಯಲ್ಲಿರಿಸಿಕೊಂಡು ಹೊರಟಿದ್ದಳು ನವ ವಧು ಲಕ್ಷ್ಮೀ ಬಾಯಿ! ಅವರೊಂದಿಗೆ "ಬಂಧುಗಳೂ" ಕೂಡಾ! ಟಾಂಗಾದಿಂದ ಇಳಿದ ವಧು ಸರಸರನೆ ಮೇಲುಪ್ಪರಿಗೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಕೂಡಿಕೊಂಡಳು. ಆದರೆ ವರನಿಗೆ ಮೇಲೆ ಹೋಗಲು ನೆರೆದಿದ್ದ ಹೆಂಗಳೆಯರು ಅವಕಾಶ ಕೊಡಲಿಲ್ಲ. ಮಹೂರ್ತ ಸಮೀಪಿಸುತ್ತಿತ್ತು!

          ಉಪ್ಪರಿಗೆಯ ಬಳಿ ಆನೆ ಬರುತ್ತಿದ್ದಂತೆಯೇ "ನವ ವಧು" ತನ್ನ ಕೈಚೀಲದಿಂದ ಒಂದು ಆಭರಣ ಹೊರತೆಗೆದಳು. ಅತ್ತ ವರಮಹಾಶಯ ತನ್ನ ಬಲಗೈ ಮೇಲಕ್ಕೆತ್ತುತ್ತಿದ್ದಂತೆ ನವ ವಧು ಲಕ್ಷ್ಮೀಬಾಯಿಯ ಕೈಯಲ್ಲಿದ್ದ ಆಭರಣ ಅಂಬಾರಿಯತ್ತ ಹಾರಿತು. ಕಿವಿಗಡಚಿಕ್ಕುವ ಆಸ್ಫೋಟ!
ನಿಮಿಷಾರ್ಧದಲ್ಲಿ ನವವಧು ಲಕ್ಷೀಬಾಯಿ ಉಪ್ಪರಿಗೆಯಿಂದ ಕೆಳಕ್ಕಿಳಿದಳು. ಕೆಳಗೆ ಬರುವಷ್ಟರಲ್ಲಿ ಅವಳ ಸೀರೆ ಕುಪ್ಪಸಗಳು ಮಾಯವಾಗಿ ರಾಸುದಾ ಬಂಟ ಬಸಂತ್ ಕುಮಾರ್ ಬಿಶ್ವಾಸ್ ಆಗಿ ಮಾರ್ಪಟ್ಟಿದ್ದಳು! ಕಚ್ಚಿ ಪಂಚೆಯ ವರ ಮಹಾಶಯ ಯಾರೆಂದು ಬಲ್ಲಿರಿ?
ರಾಸ್ ಬಿಹಾರಿ ಬೋಸ್...ರಾಸುದಾ...!!!
ಇಬ್ಬರೂ ಅಲ್ಲಿಂದ ಮರೆಯಾದರು. ಮಾವುತ ಸಾವನ್ನಪ್ಪಿ ವೈಸ್ ರಾಯ್ ಹಾರ್ಡಿಂಗನಿಗೆ ಮಾರಣಾಂತಿಕ ಗಾಯಗಳಾದರೂ ದುರದೃಷ್ಟವಶಾತ್ ಅವನು ಸಾವಿನಿಂದ ಪಾರಾಗಿದ್ದ. ಆದರೇನು ಆ ಬಾಂಬಿನ ಪ್ರತಿಧ್ವನಿ ಸೂರ್ಯ ಮುಳುಗದ ನಾಡಿನಲ್ಲಿ ಪ್ರತಿಧ್ವನಿಸಿತ್ತು!

ದಿನಕ್ಕೊಂದು ವೇಶ ರಾಸುದಾ ಸಶೇಷ

                ಬಸಂತ್ ಕಲ್ಕತ್ತೆಗೆ ಪಲಾಯನ ಮಾಡಿದರೆ, ರಾಸುದಾ ಡೆಹ್ರಾಡೂನಿಗೆ ಪರಾರಿ. ರಾಸುದಾ ಚಮತ್ಕಾರ ನೋಡಿ. ತನ್ನ ಅರಣ್ಯ ಸಂಶೋಧನಾ ಇಲಾಖೆಯ ನೌಕರರನ್ನೆಲ್ಲಾ ಸೇರಿಸಿ ಬಹಿರಂಗ ಸಭೆಯಲ್ಲಿ ಲಾರ್ಡ್ ಹಾರ್ಡಿಂಗನ ಮೇಲೆ ಆದ ಬಾಂಬು ದಾಳಿಯನ್ನು ಖಂಡಿಸಿದರು. ಇದನ್ನು ಆಂಗ್ಲ ಭಕ್ತರು ಮಾತ್ರವಲ್ಲದೆ ಪೊಲೀಸರು ಕೂಡಾ ಎಷ್ಟು ನಂಬಿದರೆಂದರೆ ರಾಸುದಾ ಸ್ವಯಂ ವೈಸ್ರಾಯ್ ಹಾರ್ಡಿಂಗನ ದರ್ಶನ ಮಾಡಿ ಶೀಘ್ರ ಗುಣಮುಖವಾಗಲೆಂದು ಹಾರೈಸಿ ಬಂದರು. ಮತ್ತೊಮ್ಮೆ ಡೆಹರಾಡೂನಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವು ಜನರನ್ನು ಕಟ್ಟಿಕೊಂಡು ಕೈ ಬೀಸಿ ಹಸ್ತಲಾಘವ ಕೊಟ್ಟು ಹೋದರು. ಮುಂದೊಂದು ದಿನ ಅನುಮಾನಾಸ್ಪದ ವ್ಯಕ್ತಿಗಳ ಚಿತ್ರದಲ್ಲಿದ್ದವ ತನಗೆ ಹಸ್ತಲಾಘವ ಮಾಡಿದವನೊಬ್ಬ ಇರುವುದನ್ನು ಕಂಡು ವೈಸ್ರಾಯ್ ಅದುರಿ ಹೋದ. ಮಾತ್ರವಲ್ಲ ರಾಸುದಾ ಕ್ರಾಂತಿಕಾರಿಗಳೇನಾದರೂ ಸಿಕ್ಕರೆ ತಾನೇ ವಿಷಯ ತಿಳಿಸುವುದಾಗಿಯೂ ಪೊಲೀಸರನ್ನು ನಂಬಿಸಿ ತನ್ಮೂಲಕ ಪೊಲೀಸರು ತಮ್ಮ ಮೇಲಿನವರಿಗೆ ರಾಸುದಾ ಬಗ್ಗೆ ಒಳ್ಳೆ ಅಭಿಪ್ರಾಯ ಬರುವಂತೆ ಪತ್ರ ಬರೆದಿದ್ದೂ ಆಯಿತು.

       ಚಾಂದನಿ ಚೌಕದ ಆ ಬಾಂಬು ಸ್ಫೋಟ ಬ್ರಿಟಿಷರನ್ನು ಗದಗುಟ್ಟಿಸಿದರೆ ಕ್ರಾಂತಿವೀರರಲ್ಲಿ ಮಿಂಚಿನ ಸಂಚಾರವನ್ನೇ ಉಂಟು ಮಾಡಿತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆ ವೇಳೆಗೆ ನೆಲೆಸಿದ್ದ ಹರದಯಾಳರು "ಯುಗಾಂತರದ ಸುತ್ತೋಲೆ" ಎಂಬ ಸುದೀರ್ಘ ಅಮೋಘ ಲೇಖನ ಬರೆದರು. ಅದು ಬೆಲ್ಜಿಯಂನಲ್ಲಿ ಮುದ್ರಣಗೊಂಡು ದೇಶವಿದೇಶಗಳಲ್ಲಿ ವಿತರಣೆಯಾಯಿತು. ಇತ್ತ ರಾಸುದಾ ಬಂಗಾಳದ ಪೂರ್ಣ ಹೊಣೆಯನ್ನು ಬಾಘಾ ಜತೀನನಿಗೊಪ್ಪಿಸಿ ವಾರಾಣಾಸಿ ಕಡೆ ನಡೆದರು. ಇತ್ತ ಇನ್ನಿತರ ಕಡೆಗಳಲ್ಲಿ ಬಾಂಬು ಸ್ಫೋಟವಾಗುತ್ತಿದ್ದಂತೆ ಅವೆಲ್ಲಾ ಬಾಂಬುಗಳು ಏಕ ಪ್ರಕಾರದವುಗಳೆಂದು, ಒಂದೇ ಕಡೆ ತಯಾರಾದವುಗಳೆಂದೂ ಪೊಲೀಸರಿಗೆ ತಿಳಿದು ಹನುಮಂತ್ ಸಹಾಯ್, ಅವಧ್ ಬಿಹಾರಿ, ಬಲರಾಜ್ ಭಲ್ಲಾ ಬಂಧಿತರಾದರು. ದೀನಾನಾಥ ಅಪ್ರೂವರ್ ಆಗಿ ಬದಲಾದದ್ದೂ ಇದಕ್ಕೆ ಕಾರಣವಾಯಿತು. ಆದರೆ ಹುಲಿ ಸಿಗಲೇ ಇಲ್ಲ. ಇದರಿಂದ ಕಂಗೆಟ್ಟ ಪೊಲೀಸರು ಮಾಸ್ಟರ್ ಅಮೀರ್ ಚಂದರನ್ನೇ ಪ್ರಮುಖ ಆರೋಪಿಯನ್ನಾಗಿಸಿ ಮೊಕದ್ದಮೆ ಆರಂಭಿಸಿದರು. ಇತ್ತ ರಾಸುದಾ ಹೃದಯದ ತೊಂದರೆ ಎಂದು ಹೇಳಿ ಕಛೇರಿಗೆ ವಿನಂತಿ ಪತ್ರ ಕೊಟ್ಟು ಜಾಗ ಖಾಲಿ ಮಾಡಿದರು. ಮತ್ತು ಢಾಕಾ ಹಾಗೂ ಅನುಶೀಲನ ಸಮಿತಿಯನ್ನು ಒಗ್ಗೂಡಿಸಲು ಆರಂಭಿಸಿದರು.

       ಒಂದು ದಿನ ಬದೂರ್ ಬಾಗ್ನ ಮನೆಯೊಂದರಲ್ಲಿ ಹೊಸ ರಿವಾಲ್ವರ್ ಗಳನ್ನು ಪರಿಶೀಲಿಸುತ್ತಿದ್ದಾಗ ಯಾರದೋ ರಿವಾಲ್ವರಿನಿಂದ ಅಚಾನಕ್ಕಾಗಿ ಒಂದು ಗಂಡು ಹಾರಿ ರಾಸುದಾರ ಮೂರನೇ ಬೆರಳಿಗೆ ತಗುಲಿತು. ಸ್ಫೋಟದ ಕಾರಣ ಪೊಲೀಸರ ಗಮನ ಅತ್ತ ಬರಬಹುದೆಂದು ರಾಸುದಾ ಬೆಡ್ ಶೀಟ್ ಹೊದ್ದುಕೊಂಡು ಹಿಂದಿನ ಬಾಗಿಲಿನಿಂದ ಹೊರಬಿದ್ದು ರಾಜಾಬಜಾರಿನ ಮನೆಗೆ ಬಂದರು. ರಾಸುದಾ ಬಂಧನದ ವಾರಂಟ್ ಹೊರಡಿಸಿ ೧೮ ದಿನಗಳಾಗಿದ್ದವು. ಒಂದು ದಿನ ರಾತ್ರಿ ಸಮಯ ಪೊಲೀಸರು ಲಾಂದ್ರ ಹಿಡಿದುಕೊಂಡು ಮನೆಗೆ ಬರುತ್ತಿರುವುದು ಕಂಡಿತು. ಕೂಡಲೇ ಶಿರೀಷ್ ಚಂದ್ರ ರಾಸುದಾರನ್ನು ಹೊರಕ್ಕೆ ಕಳುಹಿಸಿ ತಾನು ಷೇಕ್ಸ್ ಫಿಯರನ ಪುಸ್ತಕ ಓದುತ್ತಾ ಕುಳಿತ. ರಾಸುದಾ ಮನೆ ಪಕ್ಕದ ಮರ ಏರಿ ಅಲುಗಾಡದೇ ಕುಳಿತರು. ಸುಮಾರು ಒಂದು ಗಂಟೆ ಕಾಲ ಮನೆಯ ಮೂಲೆ ಮೂಲೆ ಹುಡುಕಿದ ಪೊಲೀಸರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಬೇಕಾಯಿತು.

ಮಹಾ ಸೈನಿಕ ಕ್ರಾಂತಿ

             ಸದಾ ಸ್ವತಂತ್ರನಾಗಿರಬೇಕೆಂಬ ಮನಸ್ಥಿತಿಯ ರಾಸುದಾಗೆ ಅಡಗಿ ಕೂರುವುದು ಸಹ್ಯವಾಗಲಿಲ್ಲ. ಅವರು ಮಾರುವೇಶದಿಂದ ಕಲ್ಕತ್ತೆಗೆ ಬಂದು ಮುಂದೆ ಕಾಶಿಯನ್ನು ತನ್ನ ಕೇಂದ್ರವಾಗಿಸಿಕೊಂಡು ಪಂಜಾಬ್ ಹಾಗೂ ಬಂಗಾಳವನ್ನು ಬೆಸೆಯುವ ಕಾರ್ಯ ಮುಂದುವರೆಸಿದರು. ಇತ್ತ ಸರಕಾರ ರಾಸುದಾರನ್ನು ಹಿಡಿದು ಕೊಟ್ಟವರಿಗೆ ಕೊಡುವ ಬಹುಮಾನವನ್ನು ಐದರಿಂದ ಹನ್ನೆರಡು ಸಾವಿರಗಳಿಗೆ ಏರಿಸಿತು. ರಾಸುದಾ ಬಗ್ಗೆ ಬರುತ್ತಿದ್ದ ಸುದ್ದಿಗಳಿಂದ ವಿಚಲಿತಗೊಂಡ ಮನೆಯವರು ಕೂಡಾ ಅವರನ್ನು ಹುಡುಕಲಾರಂಭಿಸಿದರು. ತಂದೆಯಂತೂ ಮಗನ ಪರವಾಗಿ ವಕೀಲರನ್ನು ನೇಮಿಸುವ ಪ್ರಯತ್ನದಲ್ಲಿ ತೊಡಗಿದರು. ಇದರಿಂದ ಖೇದಗೊಂಡ ರಾಸುದಾ ತಂದೆಗೆ ಆ ರೀತಿ ಮಾಡಕೂಡದೆಂದೂ, ದೇಶಸೇವೆಯೇ ನಿಮ್ಮ ಸೇವೆಯಾಗಬೇಕೆಂದು ಸುದೀರ್ಘ ಪತ್ರ ಬರೆದರು. ಕಾಶಿಯಲ್ಲಿ ರಾಸುದಾ ಒಂದು ದಿನ ಬಂಗಾಳಿಯಂತೆ, ಒಂದು ದಿನ ಸಿಖ್ಖರಂತೆ, ಇನ್ನೊಂದು ದಿನ ಪಠಾಣ, ಆಂಗ್ಲ ಹೀಗೆ ವಿವಿಧ ವೇಶಗಳನ್ನು ಮಾಡುತ್ತಾ ಸಂಘಟನೆಯಲ್ಲಿ ನಿರತರಾದರು. ಮಾತ್ರವಲ್ಲ ಪಂಜಾಬ್, ಕಾಶಿ, ದೆಹಲಿ, ಬಂಗಾಳ, ಢಾಕಾ ಈ ಐದೂ ಪ್ರಾಂತ್ಯಗಳ ಕ್ರಾಂತಿಕಾರಿಗಳನ್ನು ಒಗ್ಗೂಡಿಸಿ ಅದಕ್ಕೆ ಬಾಘಾ ಜತೀನನನ್ನು ಸರ್ವಾನುಮತದ ನಾಯಕನನ್ನಾಗಿಸಿದರು. ಹಾಗೂ ಅಪ್ರತಿಮ ಕ್ರಾಂತಿವೀರ ದೇಶಭಕ್ತರಿಗೆ ಜನ್ಮವಿತ್ತ ಮಹಾರಾಷ್ಟ್ರವನ್ನೂ ಇದಕ್ಕೆ ಬೆಸೆದು ಒಂದು ಮಹಾಕ್ರಾಂತಿಗೆ ಮುನ್ನುಡಿ ಬರೆದರು.

        ಅಮೃತಸರದಲ್ಲಿ ಪಂಜಾಬ್ ಮೈಲನ್ನು ರಾಸ್ ಬಿಹಾರಿ ತಡೆದು ನಿಲ್ಲಿಸುವುದೇ ಕ್ರಾಂತಿಗೆ ಸೂಚನೆಯಾಗಿತ್ತು. ಎಲ್ಲ ಪ್ರಾಂತ್ಯಗಳ ಕ್ರಾಂತಿವೀರರನ್ನು ಒಗ್ಗೂಡಿಸಿ ಜತೀನನನ್ನು ನಾಯಕನನ್ನಾಗಿಸಿದ ಆ ಸಭೆಯಲ್ಲಿ ರಾಸುದಾ ಎಲ್ಲರಿಗೂ ವಿಭಿನ್ನ ಜವಾಬ್ದಾರಿಗಳನ್ನು ಹಂಚಿದರು. ಅಲಹಾಬಾದಿಗೆ ದಾಮೋದರ ಸ್ವರೂಪ್ ಸೇಠ್ ನನ್ನು ನಾಯಕನಾಗಿಯೂ, ಭಿಭೂತಿ ಭೂಷಣ ಹಲ್ದರ್ ಮತ್ತು ಪ್ರಿಯನಾಥ್ ಭಟ್ಟಾಚಾರ್ಯರನ್ನು ಬನಾರಸಿನ ದಂಡು ಪಾಳಯದಲ್ಲಿ ಸೈನಿಕರನ್ನು ಪ್ರಚೋದಿಸಲು ನೇಮಿಸಿದರು. ಪ್ರಿಯನಾಥ ಭಟ್ಟಾಚಾರ್ಯ ನರೇಂದ್ರನಾಥ್ ಬ್ಯಾನರ್ಜಿಯೊಂದಿಗೆ ಸೇರಿ ಬಂಗಾಳದಿಂದ ಬಾಂಬು ಮತ್ತಿತರ ಶಸ್ತ್ರಾಸ್ತ್ರಗಳನ್ನು ತಂದು ವಿನಾಯಕ ರಾವ್ ಹಾಗೂ ಹೇಮಚಂದ್ರ ದತ್ತರಿಗೆ ಒಪ್ಪಿಸಬೇಕಾಗಿತ್ತು. ಅದನ್ನು ಪಂಜಾಬಿಗೆ ತಲುಪಿಸುವ ಜವಾಬ್ದಾರಿ ಅವರಿಬ್ಬರದು. ನಳಿನಿ ಮೋಹನಗೆ ಜಬಲ್ಪುರ ಹಾಗೂ ಕಾನ್ಪುರಗಳಲ್ಲಿ ಸೈನಿಕ ಪಾಳಯವನ್ನು ಸಂಪರ್ಕಿಸುವ ಕೆಲಸ. ಪಿಂಗಳೆ ಪಂಜಾಬಿಗೆ ನಾಯಕ. ಕಾಶಿಗೆ ಕಾಳಿಪಾದ ಮುಖರ್ಜಿ, ಆನಂದಚರಣ ಭಟ್ಟಾಚಾರ್ಯ. ಬಂಗಾಳದ ಜವಾಬ್ದಾರಿ ಜತೀನನಿಗೆ. ಅದೇ ಸಭೆಯಲ್ಲಿ ರಾಸುದಾ ಸೇತುವೆಗಳನ್ನು ಉಡಾಯಿಸುವ, ಟೆಲಿಗ್ರಾಫ್ ಸಂಪರ್ಕ ಕತ್ತರಿಸುವ, ರೈಲು ಹಳಿಗಳನ್ನು ನಾಶಪಡಿಸುವ, ಸರ್ಕಾರಿ ಬ್ಯಾಂಕು, ಖಜಾನೆಗಳನ್ನು ಲೂಟಿ ಮಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕ ತರಬೇತಿ ನೀಡಿದರು. ಮಹಾರಾಷ್ಟ್ರ ಗುಂಪಿಗೆ ಬಿನಯ ಭೂಷಣ ದತ್ತ ನಾಯಕನಾಗಿದ್ದು, ಡಾ|| ನಾರಾಯಣ ರಾವ್ ಸಾವರ್ಕರ( ವೀರ ಸಾವರ್ಕರರ ತಮ್ಮ) , ಭೀಮಾರಾವ್ ಮುಂತಾದವರಿದ್ದರು. ಹೀಗೆ ಎಲ್ಲೆಲ್ಲಿ ಯಾವ ರೀತಿ ಯಾವ ಸಮಯಕ್ಕೆ ಕ್ರಾಂತಿ ಆರಂಭಿಸುವುದೆಂದು ನಿರ್ಧರಿಸಿ ಸಭೆ ಸಮಾಪನಗೊಂಡಿತು.

       ಇತ್ತ ರಾಸುದಾ ಕಾಶಿ ತೊರೆದು ಪಂಜಾಬ ತಲುಪುತ್ತಿದ್ದಂತೆ ಅಲ್ಲಿ ಇನ್ನೊಂದು ಅಪಾಯ ಕಾದಿತ್ತು. ಪೊಲೀಸರಿಗೆ ಪಂಜಾಬಿನಲ್ಲಿ ಕ್ರಾಂತಿಯ ವಾಸನೆ ಬಡಿದಿತ್ತು. ಲಾಹೋರಿಗೆ ಬಂದು ಹೋಗುವವರಿಗೆ, ಹೊಸಬರಿಗೆ, ಗೃಹಸ್ಥರಲ್ಲದವರಿಗೆ ಮನೆಬಾಡಿಗೆ ನೀಡಬಾರದೆಂದು ಕಟ್ಟುನಿಟ್ಟಿನ ಆಜ್ಞೆಯಾಗಿತ್ತು. ಹಾಗಾಗಿ ರಾಸುದಾಗೆ ತಾತ್ಕಾಲಿಕ ಹೆಂಡತಿಯೊಬ್ಬಳು ಬೇಕಾಯಿತು. ಸಮಯದ ಗಂಭೀರತೆ ಅರಿತ ಮಿತ್ರ ರಾಮಚರಣ ದಾಸನ ಹೆಂಡತಿ ಹಾಗೆ ನಟಿಸಲು ಒಪ್ಪಿಕೊಂಡರು. ಆದರೆ ಅತ್ಯುತ್ತಮ ನಟನಾ ಕೌಶಲಾ ಹೊಂದಿದ್ದರೂ ಇನ್ನೊಬ್ಬರ ಹೆಂಡತಿಗೆ ಗಂಡನಾಗಿ ನಟಿಸುವುದು ಹೇಗೆಂಬ ಆತಂಕ ರಾಸುದಾಗೆ. ಅಮೃತಸರದ ಮುಸ್ಸಮತ್ ಆತ್ರಿಯ ಮನೆಯಲ್ಲಿ ಸಂಸಾರ ಆರಂಭವಾಯಿತು. ಸಂತ ಗುಲಾಬ್ ಸಿಂಗ್ ಧರ್ಮಶಾಲೆಯಲ್ಲಿ ಕಾರ್ಯಕಲಾಪಗಳು, ರಹಸ್ಯ ಸಭೆಗಳು.
                    ರಾಸುದಾ ತುರ್ತಿನಲ್ಲಿ ಝಬೆವಲ್ನಲ್ಲಿ ಬಾಂಬು ಕಾರ್ಖಾನೆಯೊಂದನ್ನು ಸ್ಥಾಪಿಸಿದರು. ಝನೀರ್, ರಾಭೋಂ, ಷಾನೇವಾಲ್, ಮನ್ಸುಲಾನ್, ಛಟ್ಟಾದಲ್ಲಿ ಡಕಾಯಿತಿ ಮಾಡಲಾಯಿತು. ಛಟ್ಟಾದಲ್ಲಿ ಡಕಾಯಿತಿ ಮಾಡುತ್ತಿದ್ದಾಗ ಪೊಲೀಸರೊಂದಿಗೆ ಗುಂಡಿನ ಕಾಳಗ ನಡೆದು ಒಬ್ಬ ಸದಸ್ಯ ಸಿಕ್ಕಿ ಬಿದ್ದು ರಾಸುದಾ ಬಗ್ಗೆ ಪೊಲೀಸರಿಗೆ ಮೊದಲ ಸುಳಿವು ನೀಡಿದ. ವಿಷಯವರಿತ ರಾಸುದಾ ಲಾಹೋರಿಗೆ ಪರಾರಿ. ಇತ್ತ ಕಾಶಿ, ಕಲ್ಕತ್ತೆ, ಜಲಂಧರ್, ಜಕೋಬಾಬಾದ್, ಬನ್ನು, ಕೋಹಟ್, ರಾವಲ್ಪಿಂಡಿ, ಪೇಶಾವರ್, ಹೋತಿಮರ್ದನ್, ಝೀಲಂಗಳಲ್ಲಿ ರಾಸುದಾ ಪಾಳಯ ಬ್ರಿಟಿಷರ ಸೇನೆಯಲ್ಲಿದ್ದ ಭಾರತೀಯ ಸೈನಿಕರನ್ನು ಹುರಿದುಂಬಿಸಿ ಬಂಡಾಯವೇಳಲು ಸಿದ್ಧಗೊಳಿಸಿತು. ಹಳ್ಳಿ, ಗ್ರಾಮಗಳಲ್ಲೂ ಜನರನ್ನು ಸಂಘಟಿಸುವ ಪ್ರಯತ್ನಗಳೂ ನಡೆದವು. ರಾಸುದಾ ಸಹಕಾರಿ ಕರ್ತಾರ್ ಸಿಂಗ್ ತನ್ನ ಸೈಕಲ್ ಮೇಲೆ ದಿನಕ್ಕೆ ೫೦-೬೦ ಮೈಲು ಕ್ರಮಿಸುತ್ತಾ ಗದ್ದರ್ ಸಂದೇಶ ಬಿತ್ತರಿಸುತ್ತಿದ್ದ. ಒಮ್ಮೆಯಂತೂ ತನ್ನನ್ನು ಕಾಯುತ್ತಿದ್ದ ಪೊಲೀಸರ ಎದುರೇ ವೇಗವಾಗಿ ಸೈಕಲ್ ತುಳಿದುಕೊಂಡು ಹೋಗಿದ್ದ! ಮೀಯಾಮೀರ್, ಫಿರೋಜ್ ಪುರದ ಸೈನ್ಯವೂ ಬಂಡಾಯವೇಳಲು ಸಿದ್ಧವಾಯಿತು. ಮೊದಲು ಪಂಜಾಬಿನಲ್ಲಿ ದಂಗೆ ಎದ್ದು ವಿಜಯಧ್ವಜ ಹಾರಿಸಿ ಅಪ್ಘಾನಿಸ್ಥಾನದ ಮನ್ನಣೆ ಪಡೆಯುವುದು  ರಾಸುದಾ ವಿಚಾರವಾಗಿತ್ತು. ರಾಸುದಾ ಧ್ವಜವೊಂದನ್ನು ಸಿದ್ಧ ಪಡಿಸಿದರು. ಇಷ್ಟು ಸಿದ್ದತೆ ಆಗಿದ್ದರೂ ರಾಸುದಾ ಆಲೋಚನೆ ಒಂದಿದ್ದರೆ ವಿಧಿ ಇನ್ನೊಂದು ಬಗೆದಿತ್ತು.

 ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು

     ರಾಸುದಾ ಬೆನ್ನ ಹಿಂದೆ ಅವರಿಗರಿಯದಂತೆ ಷಡ್ಯಂತ್ರವೊಂದು ನಡೆದಿತ್ತು. ಅವರ ಗುಂಪಿನಲ್ಲಿದ್ದ ಕೃಪಾಲ್ ಸಿಂಗ್ ಮತ್ತು ನವಾಬ್ ಖಾನ್ ಬ್ರಿಟಿಷರ ಒಲವು ಗಳಿಸಲು ಸಂಗ್ರಾಮದ ಎಲ್ಲಾ ವಿಚಾರ ಅರುಹಿದರು. ಒಂದು ದಿನ ಸಭೆ ನಡೆಸುತ್ತಿದ್ದಾಗ ಕೃಪಾಲ್ ಪೊಲೀಸರಿಗೆ ಮಾಹಿತಿ ಒದಗಿಸಿದ. ಕೃಪಾಲನ ವರ್ತನೆ ಕಂಡು ಅನುಮಾನಗೊಂಡ ರಾಸುದಾ ತಮ್ಮ ಯೋಜನೆ ಬದಲಾಯಿಸಿದರು. ಕೃಪಾಲನ ಮಾಹಿತಿ ಆಧರಿಸಿ ಬಂದ ಪೊಲೀಸರು ಬರಿಗೈಯಲ್ಲಿ ಹಿಂದಿರುಗಬೇಕಾಯಿತು. ಇತ್ತ ಕೃಪಾಲನ ಮಾಹಿತಿ ಆಧರಿಸಿ ಪೊಲೀಸರು ಬಂಡಾಯವೇಳಲು ಸಿದ್ಧವಾಗಿದ್ದ ತುಕಡಿಗಳನ್ನು ನಿಶ್ಯಸ್ತ್ರೀಕರಣಗೊಳಿಸಿದರು. ಅನೇಕ ಕಡೆ ಕ್ರಾಂತಿಕಾರಿ ಸೈನಿಕರು ತಿರುಗಿಬಿದ್ದರು. ಫಿರೋಜ್ ಪುರದಲ್ಲಿ ಬ್ರಿಟಿಷರಿಗೂ ಕ್ರಾಂತಿಕಾರಿ ಸೈನಿಕರಿಗೂ ಸಮರವೇ ನಡೆದು ಹೋಯಿತು. ಸರಕಾರಿ ಸೈನ್ಯ ಮೆಷಿನ್ ಗನ್ ಬಳಸಿ ೫೦ ಯೋಧರನ್ನು ಸಾಯಿಸಿತು. ಲಾಹೋರ್ ಸುತ್ತುವರಿದ ಪೊಲೀಸರು ರಾಸುದಾಗಾಗಿ ಶೋಧಿಸಿದರು. ರಾಸುದಾ ಸಿಗದಿದ್ದರೂ ಕ್ರಾಂತಿಕಾರಿಗಳ ಎಲ್ಲಾ ಶಸ್ತ್ರ, ಸಲಕರಣೆಗಳು, ಬಾಂಬುಗಳು, ಸಾಹಿತ್ಯ, ಧ್ವಜಗಳು, ಬಾಂಬು ಉತ್ಪಾದಿಸುವ ಸಲಕರಣೆಗಳು, ವಿಷ್ಣು ಪಿಂಗಳೆ ತಂದಿದ್ದ ದೊಡ್ಡ ಪ್ಲಟೂನನ್ನೇ ನಾಶಪಡಿಸಬಹುದಾದ ಬೃಹತ್ ಬಾಂಬುಗಳು ಪೊಲೀಸರಿಗೆ ಸಿಕ್ಕಿದವು. ಪಂಜಾಬಿನ ಸಮಚಾರ ತಿಳಿದ ಬಂಗಾಳಿ ಕ್ರಾಂತಿವೀರರು ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರ್ಧಾರ ತಳೆದರು.

             ತನ್ನ ಪ್ರಯತ್ನ ನೀರಿನ ಮೇಲಣ ಹೋಮದಂತಾದುದನ್ನು ಕಂಡ ರಾಸುದಾ ಕಾಶಿಗೆ ಬಂದರು. ಆದರೆ ಅದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಪೊಲೀಸರ ಬಲವಾದ ವ್ಯೂಹದ ಮಧ್ಯೆಯೇ ರಾಸುದಾ ಸ್ವಾಮಿ ವಿದ್ಯಾನಂದರ ಗಿಧೋರಿಯಾ ಮಠದಲ್ಲಿ ಆಶ್ರಯ ಪಡೆದರು. ಸ್ವಾಮಿ ವಿದ್ಯಾನಂದರ ಪೂರ್ವಾಶ್ರಮದ ಹೆಸರು ಮಾನವೇಂದ್ರ ಚಟರ್ಜಿ. ಆತ "ಸಂಧ್ಯಾ" ಎಂಬ ಕ್ರಾಂತಿ ಪತ್ರಿಕೆಯ ವ್ಯವಸ್ಥಾಪಕರಾಗಿದ್ದರು. ರಾಸುದಾ ತನ್ನ ಸಹಕಾರಿಗಳನ್ನು ಭೇಟಿಯಾಗಲು ದಶಾಶ್ವಮೇಧ್, ಹನುಮಾನ್ ಘಾಟ್ ಗಳನ್ನು ಬಳಸುತ್ತಿದ್ದರು. ದಿನಕ್ಕೊಂದು ವೇಷ ಧರಿಸುತ್ತಿದ್ದ ರಾಸುದಾರನ್ನು ಪತ್ತೆ ಹಚ್ಚುವುದೇ ಅವರ ಸಹಕಾರಿಗಳಿಗೆ ದೊಡ್ದ ಸಮಸ್ಯೆಯಾಗುತ್ತಿತ್ತು. ಇತ್ತ ಮೀರತಿನಲ್ಲಿ ಬಂಡಾಯವೆಬ್ಬಿಸಲು ಹೋಗಿದ್ದ ವಿಷ್ಣು ಪಿಂಗಳೆ ನಾದಿರ ಖಾನನೆಂಬ ದ್ರೋಹಿಯಿಂದಾಗಿ ಸಿಕ್ಕಿ ಬಿದ್ದ. ಹೀಗೆ ರಾಸುದಾ ಆಪ್ತರಾದ ಆಮೀರ್ ಚಾಂದ್, ಹನುಮಂತ ಸಹಾಯ್, ಅವಧ್ ಬಿಹಾರಿ, ಬಾಲಮುಕುಂದ್, ಕರ್ತಾರ್ ಸಿಂಗ್ ಸರಾಬ್,....ವಿಷ್ಣು ಪಿಂಗಳೆ ಎಲ್ಲರೂ ಸಿಕ್ಕಿಬಿದ್ದರು.

                 ಪೊಲೀಸರು ಬರುವ ಸೂಚನೆಯರಿತ ರಾಸುದಾ ಶಚೀಂದ್ರನೊಂದಿಗೆ ಕಲಕತ್ತೆಗೆ ತೆರಳುವ ಯೋಜನೆ ಹಾಕಿಕೊಂಡರು. ಆದರೆ ಸಿದ್ಧತೆ ಮಾಡುತ್ತಿದ್ದಂತೆ ಪೊಲೀಸರು ಮನೆ ಮನೆ ತಪಾಸಣೆ ಮಾಡುತ್ತಾ ಬರುತ್ತಿರುವುದು ಕಂಡಿತು. ಸ್ವಲ್ಪ ಹೊತ್ತಿನಲ್ಲೇ ಪೊಲೀಸರ ಎದುರೇ ಇಬ್ಬರು ಸ್ತ್ರೀಯರು ಪೂಜಾ ಸಾಮಗ್ರಿ ಹಿಡಿದುಕೊಂಡು ದೇವಸ್ಥಾನಕ್ಕೆ ಹೊರಟರು! ಇತ್ತ ಶಚೀನ್ ಹಾಗೂ ನಳಿನಿ ಮೋಹನ್ ತಮ್ಮ ನಾಯಕನೇಕೆ ಇನ್ನೂ ಬಂದಿಲ್ಲ ಎಂದು ಚಡಪಡಿಸುತ್ತಿದ್ದರೆ ಸುಂದರ ಸ್ತ್ರೀಯೊಬ್ಬಳು ಅವರೆದುರು ಪ್ರತ್ಯಕ್ಷಳಾದಳು. ಪರೀಕ್ಷಿಸಿದ ಅವರಿಬ್ಬರಿಗೂ ನಗು ತಡೆಯಲಾಗಲಿಲ್ಲ. ಮಿತ್ರನ ಹೆಂಡತಿಯಿಂದ ಸೀರೆ ಪಡೆದ ರಾಸುದಾ ನವ ಯುವತಿಯಂತೆ ಅಲಂಕರಿಸಿಕೊಂಡು ದೇವಾಸ್ಥಾನಕ್ಕೆ ಬಂದಿದ್ದರು!

                 ಚಂದನ್ ನಗರ ತಲುಪುತ್ತಿದ್ದಂತೆ ರಾಸುದಾ ಆಪ್ತ ಶಿರೀಷ್ ಚಂದ್ರ ಹೌರಾದಲ್ಲಿ ಬಂಧಿತನಾದ ಆಘಾತಕಾರಿ ಸುದ್ದಿ ತಿಳಿಯಿತು. ಈಗ ತನ್ನ ಮುಂದಿನ ನಡೆಯನ್ನು ನಿಶ್ಚಯಗೊಳಿಸಿದ  ರಾಸುದಾ ಇಲ್ಲಿದ್ದು ಅಡಗಿಕೊಂಡು ಸುಮ್ಮನೇ ಕೂರುವುದು ವ್ಯರ್ಥವೆಂದು ತಾನು ಜಪಾನಿಗೆ ತೆರಳಿ ಸಂಘಟನೆಯನ್ನೂ, ಶಸ್ತ್ರ ಸರಬರಾಜು ಮಾಡುವುದಾಗಿಯೂ, ಕ್ರಾಂತಿವೀರರೆಲ್ಲಾ ಜತೀನನ ನೇತೃತ್ವದಲ್ಲಿ ಕ್ರಾಂತಿ ಕಾರ್ಯ ಮುಂದುವರೆಸಬೇಕೆಂದು ತನ್ನ ಸಂಗಡಿಗರ ಸಭೆ ಕರೆದು ತನ್ನ ಮನಸ್ಸಿನ ಅಭಿಮತ ವಿಶದ ಪಡಿಸಿದರು.

ಹುಲಿ ಹಾರಿತು

            ರಾಸುದಾಗೆ ಕಲ್ಕತ್ತೆ ಕೂಡಾ ಅಪಾಯವಾಗುವ ಲಕ್ಷಣ ಗೋಚರಿಸಿದ ಕೂಡಲೇ ನವದ್ವೀಪಕ್ಕೆ ತನ್ನ ವಾಸ್ತವ್ಯ ಬದಲಾಯಿಸಿದರು. ಅಲ್ಲಿ ಭಟ್ಟಾಚಾರ್ಯ ಬ್ರಾಹ್ಮಣರಂತೆ ವೇಷ ಮರೆಸಿದರು. ಎಷ್ಟೆಂದರೆ ಪೊಲೀಸರು ಅನುಮಾನವಿಲ್ಲದೇ ಆಶೀರ್ವಾದ ಬೇಡುವಷ್ಟು! ರಾಸುದಾ ಜಪಾನ್ ಸೇರುವ ಉಪಾಯ ಯೋಚಿಸಲಾರಂಭಿಸಿದರು. ಆಗಷ್ಟೇ ರವೀಂದ್ರನಾಥ ಟ್ಯಾಗೋರರ ನೇತೃತ್ವದಲ್ಲಿ ಸಾಂಸ್ಕೃತಿಕ ನಿಯೋಗವೊಂದು ಜಪಾನಿಗೆ ತೆರಳುವ ತಯಾರಿಯಲ್ಲಿರುವುದು ತಿಳಿಯಿತು. ರಾಸುದಾ ತಾನು ಪ್ರಿಯನಾಥ ಟ್ಯಾಗೋರ್ ಎಂಬ ಹೆಸರಿಟ್ಟುಕೊಂದು ತಾನು ಆ ನಿಯೋಗದ ಸಂಚಾಲಕನಂತೆ ನಟಿಸಲಾರಂಭಿಸಿದರು. ಅದೇ ಹೆಸರಿನಲ್ಲಿ ಪಾಸ ಪೋರ್ಟಿಗೆ ಅರ್ಜಿ ಹಾಕಿದ ಆತ ಪೊಲೀಸರು ತನಗಾಗಿ ಕಣ್ಣಿಗೆ ಎಣ್ಣೆ ಹಚ್ಚಿ ಹುಡುಕಾಟ ನಡೆಸಿದ್ದರೂ ತಾನೇ ಪೊಲೀಸ್ ಕಮೀಷನರ್ ಕಛೇರಿಗೆ ತೆರಳಿ ಅವನ ಕೈಯಿಂದಲೇ ಐಡೆಂಟಿಟಿ ಕಾರ್ಡು ಪಡೆದು ಹಸ್ತಲಾಘವ ಮಾಡಿ ಹೊರಬಂದಿದ್ದರು!

              "ನಿಪ್ಪಾನ್ ಯುಸೆನ್" ಎಂಬ ಹಡಗು ಕಂಪೆನಿಯ 'ಸನುಕಿಮಾರು' ಎಂಬ ಹಡಗಿನಲ್ಲಿ ಸಾಮಾನ್ಯ ದರ್ಜೆಯ ಟಿಕೇಟು ಖರೀದಿಸಿದ ರಾಸುದಾ ಜಪಾನಿಗೆ ಹಾರುವ ಸಿದ್ಧತೆಯಲ್ಲಿದ್ದರೆ ಅತ್ತ ಅವರ ಜೊತೆಗಾರರು ಒಬ್ಬೊಬ್ಬರಾಗಿ ಗಲ್ಲಿಗೇರಲು ಸಿದ್ಧವಾಗುತ್ತಿದ್ದ ದಾರುಣವಾರ್ತೆ ಕಿವಿಗಪ್ಪಳಿಸಿ ದುಃಖತಪ್ತರಾಗಿ ಮೌನವಾಗಿ ಕುಸಿದು ಕುಳಿತು ಬಿಡುತ್ತಿದ್ದರು. ತನ್ನ ಆತ್ಮೀಯರನ್ನೆಲ್ಲಾ ಕಳೆದುಕೊಂಡ ರಾಸುದಾ ತನ್ನ ತಾಯ್ನೆಲದಿಂದಲೂ ಶಾಶ್ವತವಾಗಿ ದೂರ ಹೋಗುವಂತಹ ದುರ್ಭರ ಕ್ಷಣ ಅದೆಂದು ಅವರೆಂದಾದರೂ ಎಣಿಸಿದ್ದರೆ? ತನ್ನ ಪ್ರಾಣಪ್ರಿಯ ಪಿಸ್ತೂಲನ್ನು ಪ್ರಾಣಪ್ರಿಯ ಸ್ನೇಹಿತ ಶಚೀಂದ್ರನಿಗೆ ನೀಡಿದಾಗ ತನ್ನ ದೇಹದ ಮುಖ್ಯ ಭಾಗವೊಂದನ್ನು ಕಳೆದುಕೊಂಡ ಅನುಭವ ರಾಸುದಾಗಾಗಿತ್ತು. ಪ್ರಾಣಪ್ರಿಯ ನಾಯಕನ ಅಗಲುವಿಕೆಯನ್ನು ಭಾರ ಕಂಗಳಿಂದ ಶಚೀನ್ ನೋಡುತ್ತಿರಲು ಮತ್ತೆಂದೂ ತಾಯಿನಾಡಿನ ಕಡೆ ಬರಲಾಗದೇ ಜಪಾನಿನ ನೆಲದ ಮೇಲೆ ನಿಂತು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಆಯಾಮ ನೀಡಲು ಹೊರಟಿದ್ದ ಮಹಾಯೋಧನನ್ನು ಸಾಗಿಸಿಕೊಂಡು 'ಸನುಕಿಮಾರು' ಹೋಗುತ್ತಿತ್ತು.

ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್:

                   ೧೯೧೫ ಮೇ ೧೨ರಂದು ಹೊರಟ ರಾಸುದಾ ಜೂನ್ ೧೫ರಂದು ಜಪಾನ್ ತಲುಪಿದರು. ಜರ್ಮನಿಯ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ ರಾಸುದಾ ಶಸ್ತ್ರ ಸಹಾಯದ ಬೇಡಿಕೆ ಮುಂದಿಟ್ಟರು. ಇಬ್ಬರು ಚೀನಿಯರೊಂದಿಗೆ ಕಳುಹಿಸಿದ ಆ ೧೨೯ ಪಿಸ್ತೂಲುಗಳು, ೧೨ಸಾವಿರ ಸುತ್ತು ಗುಂಡುಗಳು ಷಾಂಗೈ ಪೊಲೀಸರ ವಶವಾದವು. ತನ್ನ ಸಹಕಾರಿ ಅಬನಿನಾಥನನ್ನು ತನ್ನ ಯೋಜನೆಯ ಬಗ್ಗೆ ತಿಳಿಸಲು ಭಾರತಕ್ಕೆ ಕಳುಹಿಸಿದರೆ ಆತನನ್ನು ಸಿಂಗಾಪುರದಲ್ಲಿ ೧೯೧೫ ಸೆಪ್ಟೆಂಬರಿನಲ್ಲಿ ಬಂಧಿಸಿದೊಡನೆ ರಾಸುದಾ ಯೋಜನೆಗಳು ಪೊಲೀಸರಿಗೆ ತಿಳಿದು ಹೋಯಿತು. ಆದರು ಛಲ ಬಿಡದ ತ್ರಿವಿಕ್ರಮನಂತೆ ಜರ್ಮನ್ ರಾಯಭಾರಿಯ ಬೆನ್ನ ಹಿಂದೆ ಬೇತಾಳನಂತೆ ಬಿದ್ದ ರಾಸುದಾ ಎರಡು ಹಡಗು ತುಂಬಾ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದರು. ಆದರೆ ಅದೂ ಬ್ರಿಟಿಷರಿಗೆ ತಿಳಿದು ಅವನ್ನು ಮುಟ್ಟುಗೋಲು ಹಾಕಿಕೊಂಡರು.

                ಲಾಲಾ ಲಜಪತ್ ರಾಯ್ ಜಪಾನಿಗೆ ಬಂದಾಗ ರಾಸುದಾ ಹೇರಂಭಗುಪ್ತನೊಡನೆ ಸೇರಿಕೊಂಡು ಒಂದು ಬಹಿರಂಗ ಸಭೆ ಏರ್ಪಡಿಸಿ ಜಪಾನಿನಲ್ಲಿ ನೆಲೆಸಿರುವ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಹಕರಿಸಬೇಕೆಂದು ಕರೆ ಕೊಟ್ಟರು. ಬ್ರಿಟಿಷರ ವಿರುದ್ಧ ಬಹಿರಂಗವಾಗಿಯೇ ಗುಡುಗಿದ ರಾಸುದಾ, ಲಾಲ್ ಹಾಗೂ ಹೇರಂಭಗುಪ್ತರನ್ನು ಗಡೀಪಾರು ಮಾಡುವಂತೆ ಬ್ರಿಟಿಷ್ ಸರಕಾರ ಜಪಾನಿಗೆ ತಾಕೀತು ಮಾಡಿತು. ಲಾಲ್ ಅಮೇರಿಕಾಕ್ಕೆ ಹೋದರೆ ರಾಸುದಾ ಜಪಾನಿನಲ್ಲೇ ಉಳಿದರು. ಬ್ರಿಟಿಷ್ ಸರಕಾರ ೫ ದಿವಸದೊಳಗೆ ರಾಸುದಾರನ್ನು ಬಂಧಿಸಬೇಕೆಂದು ತನ್ನ ಕೊನೆಯ ನಿರ್ಧಾರವನ್ನು ಜಪಾನಿಗೆ ತಿಳಿಸಿತು. ಬೆದರಿದ ಜಪಾನ್ ಬಂಧನದ ವಾರಂಟ್ ಹೊರಡಿಸಿತು. ರಾಸುದಾ ಭೂಗತರಾದರು. ಆದರೆ ಜಪಾನೀಯರ ಮಧ್ಯೆ ಭಾರತೀಯನೊಬ್ಬ ಭೂಗತನಾಗುವುದು ಅಷ್ಟು ಸುಲಭದ ಮಾತಲ್ಲ.

                       ಒಂದು ದಿನ ರಾಸುದಾ ಹಾಗೂ ಹೇರಂಭಗುಪ್ತ ಟೋಕಿಯೋ ರಸ್ತೆಯಲ್ಲಿ ನಡೆಯುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದರು. ಇನ್ನೇನು ಪೊಲಿಸರು ಅವರನ್ನು ಬಂಧಿಸ ಬೇಕೆನ್ನುವಷ್ಟರಲ್ಲಿ ಕಾರೊಂದು ಭರ್ರನೆ ಬಂದು ಅವರನ್ನು ಹತ್ತಿಸಿಕೊಂಡು ಹೋಯಿತು. ಮತ್ತೆ ಅದು ನಿಂತದ್ದು ಜಪಾನಿನ ಸಮುರಾಯ್ ಯೋಧರ ನಾಯಕ ತೊಯಾಮ ಮನೆಯಲ್ಲಿ. ಅವರ ಬಳಿ ಸುಳಿಯಲು ಅಧಿಕಾರಿಗಳಿಗ್ಯಾರಿಗೂ ಧೈರ್ಯವಿರಲಿಲ್ಲ. ಜಪಾನಿನ ಜನರ ಪ್ರೀತಿ, ಆದರ, ಗೌರವಗಳಿಗೆ ಪಾತ್ರನಾಗಿದ್ದ ಆ ವ್ಯಕ್ತಿಗೆ ಭಗವಾನ ಬುದ್ಧನ ಜನ್ಮಭೂಮಿಯಾಗಿದ್ದ ಭರತ ಖಂಡವೆಂದರೆ ಅತೀವ ಪ್ರೀತಿ, ಪೂಜ್ಯ ಭಾವ. ಭಾರತದ ಸ್ವಾತಂತ್ರ್ಯ ಹೋರಾಟಗಾರರೆಡೆಗೆ ಅಪಾರ ಸಹಾನುಭೂತಿ. ರಾಸುದಾ ಹಾಗೂ ಹೇರಂಭರ ಚಪ್ಪಲಿ ಕಾಯುತ್ತಾ ನಿಂತಿದ್ದ ಪೊಲೀಸರಿಗೆ ಅವರಿಬ್ಬರು ಜಪಾನೀಯರ ಕಿಮೊನೋ ಉಡುಪು ಧರಿಸಿ ತಮ್ಮ ಮುಂದೆಯೇ ಹಾದು ಹೋದದ್ದು ತಿಳಿಯಲೇ ಇಲ್ಲ. ರಾಸುದಾ ಗೆ ಐಸೋಸೋಮಾ ದಂಪತಿಗಳು ಆಶ್ರಯ ಒದಗಿಸಿದರು. ೪ ತಿಂಗಳಲ್ಲಿ ತೊಯಾಮಾ ಪ್ರಯತ್ನದಿಂದ ಸರಕಾರ ವಾರಂಟ್ ಹಿಂದಕ್ಕೆ ಪಡೆಯಿತು.

               ಆದರೆ ಕ್ರೂರಿ ಬ್ರಿಟಿಷ್ ಸರಕಾರ ಸುಮ್ಮನಿರಬೇಕಲ್ಲ. ರಾಸುದಾರನ್ನು ಮುಗಿಸಿ ಹಾಕಲು ಜಪಾನಿ ಗೂಂಡಾಗಳನ್ನು ನೇಮಿಸಿತು. ಆದರೆ ಚಾಣಾಕ್ಷ ರಾಸುದಾ ಗುಪ್ತಚರರ ಕಣ್ಣುಗಳಿಂದಲೂ ಮಾಯವಾಗಿ ಬಿಡುತ್ತಿದ್ದರು. ಕೊನೆಗೇ ತೊಯಾಮಾ ರಾಸುದಾಗೆ ಸಂಪೂರ್ಣ ರಕ್ಷಣೆ ಸಿಗಬೇಕಾದರೆ ರಾಸುದಾ ಜಪಾನ್ ಪ್ರಜೆಯಾಗುವುದೇ ಸೂಕ್ತ ಎಂದು ಸೂಚಿಸಿದರು. ಅದಕ್ಕೆ ಜಪಾನೀ ಯುವತಿಯನ್ನು ಮದುವೆಯಾಗುವುದೊಂದೇ ದಾರಿ. ಆದರೆ ಹೆಣ್ಣು ಕೊಡುವವರ್ಯಾರು? ಆಗ ಸೋಮಾ ದಂಪತಿಗಳು ತಮ್ಮ ಸಂಪ್ರದಾಯಕ್ಕೆ ವಿರುದ್ಧವಾದರೂ ರಾಸುದಾ ರಕ್ಷಣೆಗಾಗಿ ತಮ್ಮ ಮಗಳು ತೋಷಿಕೋಳನ್ನು ೧೯೧೮ರಲ್ಲಿ ಮದುವೆ ಮಾಡಿಸಿದರು. ಆದರೂ ಹಾದಿ ಸುಗಮವಾಗಲಿಲ್ಲ. ಗೂಢಚಾರರಿಂದಾಗಿ ವಾರಕ್ಕೊಮ್ಮೆ ಮನೆ ಬದಲಾಯಿಸಬೇಕಾದ ಪರಿಸ್ಥಿತಿ. ಹೀಗೆ ೫ ವರ್ಷದ ತರುವಾಯ ಜಪಾನೀ ಪೌರತ್ವ ಸಿಕ್ಕಿತು.

               ೧೯೨೪ರಲ್ಲಿ ರಾಸುದಾ "ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್" ಹುಟ್ಟು ಹಾಕಿದರು. ಟೋಕಿಯೋ ಅದರ ಕೇಂದ್ರ ಬಿಂದು. ಸ್ವಾತಂತ್ರ್ಯ ಸಾಧನೆಯ ಸಲುವಾಗಿ ಅದರ ಚಟುವಟಿಕೆಗಳು ನಿರಂತರವಾಗಿ ಸಾಗಿದವು. ಸುಭಾಷ್ ಜಪಾನಿಗೆ ಬಂದಿಳಿದಾಗ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಹೆಮ್ಮರವಾಗಿ ಬೆಳೆದಿತ್ತು. ಸ್ವಾತಂತ್ರ್ಯ ವೀರ ಸಾವರ್ಕರರ ಸಲಹೆಯಂತೆ ವಿದೇಶದಿಂದ ಹೋರಾಟ ನಡೆಸಲು ಬರುತ್ತಿದ್ದ ಸುಭಾಷರಿಗೆ ರಾಸುದಾ ಜಪಾನಿನಲ್ಲಿ ಎಲ್ಲಾ ಸಿದ್ಧಗೊಂಡಿರುವುದಾಗಿಯೂ ಜರ್ಮನಿ, ಇಟಲಿಗಳಲ್ಲಿ ಶಸ್ತ್ರ ಸಹಾಯ ಪಡೆದು ಬರುವಂತೆ ಸಂದೇಶ ಕಳುಹಿಸಿದರು. ಅಷ್ಟರಲ್ಲೇ ರಾಸುದಾ ಬಯಸಿದ್ದ ಭಾಗ್ಯ ಬಂದೇ ಬಿಟ್ಟಿತು. ಯಾವ ಮೊದಲ ಮಹಾಯುದ್ಧದ ಕಾಲದಲ್ಲಿ (೧೯೧೪) ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಲುವಾಗಿ ವಿದೇಶಗಳ ಸಹಾಯ ಪಡೆಯಲು ಆರಂಭಿಸಿದ್ದರೋ ಅಂತಹ ಪ್ರಯತ್ನಕ್ಕೆ ೨೮ ವರ್ಷಗಳ ತರುವಾಯ ದ್ವಿತೀಯ ಮಹಾಯುದ್ಧ ಅವಕಾಶ ಹಾಗೂ ಫಲ ಒದಗಿಸಿತ್ತು. ಈ ನಡುವೆ ರಾಸುದಾ ಆರೋಗ್ಯ ಕೆಟ್ಟಿತು. ೧೯೪೩ರ ಜುಲೈ ೪ರಂದು ಸಿಂಗಾಪುರದ ಸಾರ್ವಜನಿಕ ಸಮಾರಂಭದಲ್ಲಿ ತನ್ನ ಇಂಡಿಯನ್ ಇಂಡಿಪೆಂಡೆನ್ಸ್ ಲೀಗನ್ನು ಸುಭಾಷರಿಗೊಪ್ಪಿಸಿ ಅವರನ್ನು ಅದರ ಹಾಗೂ ಮಹಾಸಂಗ್ರಾಮದ ಮಹಾನಾಯಕರನ್ನಾಗಿಸಿ ತಾವು ನೇಪಥ್ಯಕ್ಕೆ ಸರಿದು ಅಮರರಾದರು.
ಧನ್ಯ ನೀ ರಾಸುದಾ !

ಸೋಮವಾರ, ಮೇ 23, 2016

ಹಿಂದುತ್ವ: ಸಾವರ್ಕರ್ ಪರಿಕಲ್ಪನೆಯಲ್ಲಿ ಅರಳಿದ ರಾಷ್ಟ್ರೀಯತೆ

ಹಿಂದುತ್ವ: ಸಾವರ್ಕರ್ ಪರಿಕಲ್ಪನೆಯಲ್ಲಿ ಅರಳಿದ ರಾಷ್ಟ್ರೀಯತೆ

"ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|
ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದುರಿತಿಸ್ಮೃತಃ||"

ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಹಿಂದೂ ಯಾರೆನ್ನುವುದಕ್ಕೆ ಸಾವರ್ಕರ್ ಕೊಟ್ಟ ಸ್ಪಷ್ಟ ವಿವರಣೆಯಿದು. ಈ ನಿಟ್ಟಿನಲ್ಲಿ ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ ಆದಿಯಾಗಿ ಭಾರತೀಯ ಮತಾವಲಂಬಿಗಳೆಲ್ಲಾ ಹಿಂದೂಗಳೇ. ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ,ಭಾರತವೇ ಅವರಿಗೆ ಮಾತೃಭೂಮಿ. ಈ ವ್ಯಾಖ್ಯೆಯನ್ನು ಸರಕಾರ ಒಪ್ಪಿಕೊಂಡು ಮುಂಬರುವ ಸರಕಾರೀ ಜನಗಣತಿಯಲ್ಲಿ ಹಿಂದೂ ಜನಸಂಖ್ಯೆಯನ್ನು ನಮೂದಿಸುವಲ್ಲಿ "ಹಿಂದುತ್ವವನ್ನು" ಗುರುತಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು ಸಾವರ್ಕರ್.

             ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಬಹುವಾಗಿ ಪ್ರಶಂಸಿಸಿ ಒಪ್ಪಿಕೊಂಡಿದ್ದರು ಅಂಬೇಡ್ಕರ್. ಸಾವರ್ಕರರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವವರನ್ನು ಕೋಮುವಾದಿಗಳೆಂದು ಜರೆಯುವ ಆಷಾಢಭೂತಿಗಳ ಅಮಲು ಇಳಿಸುವ ಇನ್ನೊಂದು ವಿಚಾರವೆಂದರೆ ಇದೇ ವ್ಯಾಖ್ಯೆಯನ್ನು ಅಂಬೇಡ್ಕರ್ ಕೂಡಾ ಬಳಸಿಕೊಂಡಿರುವುದು. ಸಾವರ್ಕರ್ ಭಾರತದಲ್ಲಿದ್ದ ಜನರನ್ನು ಈ ಆಧಾರದಲ್ಲಿ ಕೇವಲ ವರ್ಗೀಕರಣ ಮಾತ್ರ ಮಾಡಿ ಇಡುವುದಿಲ್ಲ. ಅವರು ಅಧಿಕಾರ ಯಾರ ಕೈಯಲ್ಲಿ ಇರಬೇಕೆನ್ನುವುದನ್ನೂ ನೇರವಾಗಿ ಹೇಳಿದ್ದರು. ಭಾರತವನ್ನು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಸಾವರ್ಕರ್ ಹಿಂದೂಗಳಿಗೆ ಪ್ರಧಾನ ಸ್ಥಾನಮಾನಗಳಿರಬೇಕೆಂದೂ ಉಳಿದ ಸೆಮೆಟಿಕ್ ಮತಗಳವರು ಹಿಂದೂಗಳೊಂದಿಗೆ ಸಹಕಾರದಿಂದ ಬಾಳಬೇಕೆನ್ನುವುದು ಸಾವರ್ಕರ್ ಪ್ರತಿಪಾದನೆಯಾಗಿತ್ತು. ಸಾವರ್ಕರರದ್ದು ರಾಷ್ಟ್ರೀಯವಾದದ ರಾಜಕಾರಣ. ವೈಯುಕ್ತಿಕ ಅಥವಾ ಸಾಮೂಹಿಕ ಲಾಭಗಳಿಗಂದೂ ರಾಷ್ಟ್ರೀಯತೆಯ ಜೊತೆ ರಾಜೀ ಮಾಡಿಕೊಂಡವರಲ್ಲ ಅವರು. ಅವರ ಹಿಂದುತ್ವದ ವ್ಯಾಖ್ಯೆ ಅವೈದಿಕ ಮತಗಳನ್ನು ಹಿಂದೂ ಜನಾಂಗದಲ್ಲಿ ಸೇರಿಸಿಕೊಂಡರೂ ಅದು ಹಿಂದೂ ಯಾರೆಂಬ ಪ್ರಾಚೀನ ವ್ಯಾಖ್ಯೆಗೇನೂ ಧಕ್ಕೆ ಎಸಗಿಲ್ಲ. ವೇದಗಳಲ್ಲಿ ಉಲ್ಲೇಖಿತವಾದ ರಾಷ್ಟ್ರ-ರಾಷ್ಟ್ರೀಯತೆಯ ವ್ಯಾಖ್ಯೆಯೂ ಸಾವರ್ಕರ್ ರಾಷ್ಟ್ರೀಯತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೊಟ್ಟ ಹಿಂದುತ್ವದ ವ್ಯಾಖ್ಯೆಯೂ ಏಕರೂಪದವು. ಹಿಂದುತ್ವ ಮತ್ತು ರಾಷ್ಟ್ರೀಯತೆ ಬೇರೆಬೇರೆಯಲ್ಲ. ಸಾವರ್ಕರರ ವ್ಯಾಖ್ಯೆ ಈ ದೇಶವನ್ನು "ರಾಷ್ಟ್ರ"ವಾಗಿ ಸ್ವೀಕರಿಸದ ಪ್ರತಿಯೊಬ್ಬರನ್ನೂ ಹಿಂದುತ್ವದಿಂದ ಪ್ರತ್ಯೇಕಿಸಿತು. ಈ ಅಂಶವನ್ನು "ಸಾವರ್ಕರರದ್ದೂ ಒಂದು ರೀತಿಯ ದ್ವಿರಾಷ್ಟ್ರ ಸಿದ್ಧಾಂತ. ಇದರಿಂದ ದೇಶದೊಳಗೇ ಹಿಂದೂ- ಮುಸ್ಲಿಂ ಎನ್ನುವ ಎರಡು ದೇಶಗಳನ್ನು ನಿರ್ಮಿಸುವ ಅಪಾಯವಿದೆ" ಎಂದು ವಿಶ್ಲೇಷಿಸಿದ ಅಂಬೇಡ್ಕರ್ ಆಗಲೀ ಅವರನ್ನೇ ಆಧಾರವಿರಿಸಿದ ಇನ್ನುಳಿದವರಾಗಲೀ ಗಮನಿಸದೇ ಹೋದರು. ವ್ಯಕ್ತಿಯೊಬ್ಬ ಈ ದೇಶವನ್ನು ತನ್ನ ರಾಷ್ಟ್ರವಾಗಿ ಪೂಜಿಸದೇ ಇದ್ದರೇ ಆತ ರಾಷ್ಟ್ರೀಯ ಹೇಗಾದಾನು? ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ರಾಷ್ಟ್ರವೆಂದರೆ ಸಂಸ್ಕೃತಿಯ ಪ್ರವಾಹ. "ರಾಷ್ಟ್ರ" ಎಂದರೇನೆಂದು ಅರಿತವರಿಗಷ್ಟೇ ಸಾವರ್ಕರ್ ಪ್ರತಿಪಾದಿಸಿದ "ಹಿಂದುತ್ವ " ಸಿದ್ಧಾಂತ ಅರ್ಥವಾದೀತು. ಹಾಗಂತ ಅಲ್ಲಿ ಉಳಿದ ಮತಗಳೆಡೆಗಿನ ದ್ವೇಷಕ್ಕೆ ಅವಕಾಶವಿಲ್ಲ. ಆದರೆ ಉಳಿದ ಮತಗಳು ಆಕ್ರಮಣಕ್ಕೆ ಬಂದಾಗ ಅದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅಂದರೆ ಅದು ಕೇವಲ "ಅಹಿಂಸಾ ಪರಮೋ ಧರ್ಮ" ಎಂದು ಆಚರಿಸುವುದಿಲ್ಲ. "ಧರ್ಮ ಹಿಂಸಾ ತಥೈವಚಾ" ಎನ್ನುವುದನ್ನೂ ಅರಿತು ಆಚರಿಸುತ್ತದೆ. ದುಷ್ಟ ದಮನವನ್ನೂ ಶಿಷ್ಟ ರಕ್ಷಣೆಯನ್ನೂ ಮಾಡಿ ಸಮಾಜದಲ್ಲಿ ಶಾಂತಿಯನ್ನು ತರುತ್ತದೆ.

              ಸಾವರ್ಕರ್ ಸೆಮೆಟಿಕ್ ಮತಗಳನ್ನು ಹೊರಗಿಟ್ಟುದುದಕ್ಕೆ ಕಾರಣವಿಲ್ಲದೆ ಇಲ್ಲ. ಈ ಮತಾವಲಂಬಿಗಳು ಎಂದಿಗೂ ಭಾರತವನ್ನು ತಮ್ಮ ಮಾತೃಭೂಮಿಯೆಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳಲಾರರು. ಅವರಿಗೆ ದೇಶಕ್ಕಿಂತ ತಮ್ಮ ಮತವೇ ಶ್ರೇಷ್ಠ. ರಾಷ್ಟ್ರ ಎನ್ನುವ ಪರಿಕಲ್ಪನೆಯೇ ಅವರಿಗಿಲ್ಲ. ಹಾಗಾಗಿ "ಭಾರತ"ದಲ್ಲಿ ಅವರ ಸ್ಥಾನ ಎಂದಿಗೂ ಹೊರಗಿನವರದ್ದೇ! ಜಿನ್ನಾ, ಇಕ್ಬಾಲ್ ಮುಸ್ಲಿಂ ಲೀಗನ್ನು ಬಳಸಿಕೊಂಡು ಮುಸ್ಲಿಮರಿಗೆ ಪ್ರತ್ಯೇಕ ಜಾಗ ಕೊಡಬೇಕು ಎಂದು ನೇರ ಕಾರ್ಯಾಚರಣೆಗೆ ಇಳಿದಾಗ ಅವರನ್ನು ಖಂಡತುಂಡವಾಗಿ ವಿರೋಧಿಸಿದರು ಸಾವರ್ಕರ್. ಬಹುಷಃ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಭಾರತದ ಸಂವಿಧಾನದಲ್ಲಿ ಸೆಮೆಟಿಕ್ ಮತಾನುಯಾಯಿಗಳಿಗಿಂತಲೂ ಹಿಂದೂಗಳಿಗೇ ಪ್ರಧಾನ ಸ್ಥಾನಮಾನವಿರಬೇಕೆಂದು ಗಟ್ಟಿಸ್ವರದಲ್ಲಿ ಪ್ರತಿಪಾದಿಸಿದ ರಾಜಕೀಯ ನಾಯಕ ಸಾವರ್ಕರ್ ಒಬ್ಬರೇ! ಬೆರಳು ತೋರಿಸಿದರೆ ಹಸ್ತ ನುಂಗುವ ಮುಸ್ಲಿಮರು, ಕ್ರೈಸ್ತರ ಮನೋವೃತ್ತಿಯನ್ನು ಸಾವರ್ಕರ್ ಅರ್ಥಮಾಡಿಕೊಂಡಷ್ಟು ನಿಖರವಾಗಿ ಯಾರೂ ಅರ್ಥಮಾಡಿಕೊಂಡಿರಲಿಲ್ಲ. ಹಾಗಾಗಿಯೇ ಭಾರತ ರಾಷ್ಟ್ರವಾಗಿ ಉಳಿಯಬೇಕಾದರೆ ಹಿಂದೂಗಳಿಗೇ ಪ್ರಧಾನ ಸ್ಥಾನಮಾನ ನೀಡಬೇಕೆಂದು ಸಾವರ್ಕರ್ ಪ್ರತಿಪಾದಿಸಿದರು.  "ನೀವು ಬಂದರೆ ನಿಮ್ಮ ಜೊತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ವಿರೋಧಿಸಿದರೆ ನಿಮ್ಮನ್ನು ಎದುರಿಸಿ ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ ಎಂದ ಸಾವರ್ಕರ್ ಮಾತನ್ನು ಉಳಿದ ನಾಯಕರು ಅನುಕರಿಸಿದ್ದರೆ ಭಾರತಕ್ಕೆ ಈ ದುಃಸ್ಥಿತಿ ಬರುತ್ತಿರಲಿಲ್ಲ. ಹಿಂದೂಗಳಿಗೆ ಭಾರತದ ಸಂವಿಧಾನದಲ್ಲಿ ಪರಮಾಧಿಕಾರ ನೀಡಬೇಕೆಂದು ಪ್ರತಿಪಾದಿಸಿದಾಗ, ಅಂಬೇಡ್ಕರ್ ಇದರಿಂದ ಬಹುಸಂಖ್ಯಾತರು ತಮ್ಮ ಭಾಷೆ, ಧರ್ಮ, ಸಂಸ್ಕೃತಿಯನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಅಪಾಯವಿರುತ್ತದೆ ಎಂದಿದ್ದರು. ಆದರೆ ಸಹಸ್ರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿಲ್ಲ, ಅಲ್ಪಸಂಖ್ಯಾತರ ಮೇಲೆ ಯಾವುದೇ ರೀತಿಯ ಅಧಿಕಾರ ಚಲಾಯಿಸಿಲ್ಲ, ಅದು ಹಿಂದೂ ಮನೋಭೂಮಿಕೆಯಲ್ಲಿಯೇ ಇಲ್ಲ ಎನ್ನುವುದನ್ನು ಮರೆತರು ಅಂಬೇಡ್ಕರ್. ಮುಸ್ಲಿಮ, ಕ್ರೈಸ್ತರ ಕೈಗೆ ಅಧಿಕಾರ ಸಿಕ್ಕರೆ ಕೆಲವೇ ಸಮಯದಲ್ಲಿ ಅವರು ದೇಶವನ್ನು ಕುಟಿಲತೆಯಿಂದ ಒಡೆಯುವ ಅಪಾಯವನ್ನು ಸಾವರ್ಕರ್ ಮನಗಂಡಿದ್ದರು. ಅಲ್ಲದೆ ಮೀಸಲಾತಿಯಂತಹ ಸೌಲಭ್ಯಗಳನ್ನು ಈ ಜನಾಂಗಕ್ಕೆ ಕೊಟ್ಟುದುದರಿಂದ ಇಂದು ಉಂಟಾಗಿರುವ ಅನರ್ಥವನ್ನೂ, ರಾಜಕಾರಣಿಗಳ ಸೆಕ್ಯುಲರ್-ಮತಬ್ಯಾಂಕ್ ರಾಜಕಾರಣವನ್ನೂ, ಹಿಂದೂಗಳನ್ನು ಎರಡನೆ ದರ್ಜೆಯನ್ನಾಗಿಸಿರುವ ಅವರ ಕುತಂತ್ರವನ್ನು ಸಾವರ್ಕರ್ ಅಂದೇ ಅರ್ಥೈಸಿಕೊಂಡಿದ್ದರೆನಿಸುತ್ತದೆ.

"ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ" ಎಂದಿದ್ದರು ಸಾವರ್ಕರ್. ಸೈನ್ಯವನ್ನು ಹಿಂದೂಕರಣಗೊಳಿಸುವುದೇನೋ ಸರಿ, ರಾಜಕೀಯವನ್ನೇಕೆ ಸೈನಿಕೀಕರಣಗೊಳಿಸಬೇಕು? ಸಾವರ್ಕರ್ ಸೈನ್ಯಾಡಳಿತವನ್ನು ಹೇರಿ ಎನ್ನುತ್ತಿದ್ದಾರೆಯೇ? ಸಾವರ್ಕರರದ್ದು ಕಮ್ಯೂನಿಸ್ಟ್ ಚಿಂತನೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇದು ವೇದಗಳಲ್ಲಿ ಉಲ್ಲೇಖಿಸಿದ, ಸನಾತನ ಧರ್ಮ ಆಚರಿಸಿಕೊಂಡು ಬಂದ, ಮಾನವ ಸಹಜ ಧರ್ಮವಾದ "ಕ್ಷಾತ್ರ"ವೇ ಈ ಮಾತಿನ ಮೂಲ. ಅಧಿಕಾರಕ್ಕೆ ಬರುವವನಲ್ಲಿ ಕ್ಷಾತ್ರ ಗುಣ ಇರಲೇಬೇಕು. ಅನ್ಯಾಯವನ್ನು ಹತ್ತಿಕ್ಕಿ, ಅಸಹಾಯಕರನ್ನು ರಕ್ಷಿಸಿ ಧರ್ಮ ಸಂಸ್ಕೃತಿಗಳನ್ನು ಉಳಿಸುವ ಕ್ಷಾತ್ರ ತೇಜವಿರಬೇಕು. ಸಾವರ್ಕರರ ಮಾತಿನ ಮೊದಲಾರ್ಧವನ್ನು ದ್ವಿತೀಯಾರ್ಧದೊಂದಿಗೆ ಸಮ್ಮಿಳಿತಗೊಂಡರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಹಾಗಾಗಿಯೇ ತನ್ನನ್ನು ಭೇಟಿಯಾದ ಸುಭಾಷರನ್ನು "ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತಾ ಕುಸಿದಿರುವಾಗ ನಿಮ್ಮಂಥ ಮೇಧಾವಿ ನಾಯಕ ಹಳೆಯ ಬ್ರಿಟಿಷ್ ಸ್ಮಾರಕಗಳನ್ನು ಕೆಡಹುವ ಜುಜುಬಿ ಕೆಲಸಗಳನ್ನು ಮಾಡಿ ಸೆರೆ ಸೇರುವುದರಿಂದೇನು ಲಾಭ? ಹಲ ಸಾವಿರ ಉನ್ಮತ್ತರು ಕಣ್ಣೆದುರೇ ದಮನ ನಡೆಸುತ್ತಿರುವಾಗ ಹಿಂದೆಂದೋ ಸತ್ತವರ ಪ್ರತಿಮೆಗಳನ್ನು ಕೆಡಹುವುದರಿಂದುಂಟಾಗುವ ಸಮಾಧಾನ ಕಳಪೆಯದೇ ಅಲ್ಲವೇ? ಸೆರೆಯಲ್ಲಿರಬೇಕಾದವರು ಬ್ರಿಟಿಷರೇ ಹೊರತು ನಾವಲ್ಲ. ಸಶಸ್ತ್ರ ಬಂಡಾಯ ಅಸಾಧ್ಯವೇನಲ್ಲ. ಸೇನೆಗೆ ಹಿಂದೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕೆಂದು ನಾನು ಹಿಂದಿನಿಂದ ಹೇಳುತ್ತಾ ಬಂದಿರುವುದು ಇದಕ್ಕೆ ಸಿದ್ಧತೆಯಾಗಿಯೇ ಅಲ್ಲವೇ?" ಎಂದು ಸಶಸ್ತ್ರ ಬಂಡಾಯಕ್ಕೆ ಪ್ರೇರೇಪಿಸಿದರು ಸಾವರ್ಕರ್. "ರಾಸ್ ಬಿಹಾರಿ ಬೋಸ್ ಕಳೆದ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆನಿಂತು ಸಶಸ್ತ್ರ ಸೈನ್ಯವೊಂದನ್ನು ಕಟ್ಟಲು ಶ್ರೀಗಣೇಶ ಹಾಡಿದ್ದಾರೆ. ನೀವೂ ಅವರಂತೆ ಜರ್ಮನಿ, ಇಟಲಿಯಲ್ಲಿ ಯುದ್ಧ ಕೈದಿಗಳಾಗಿರುವ ಭಾರತೀಯರ ಸಶಸ್ತ್ರ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ. ಜಪಾನ್ ಹಾಗೂ ಜರ್ಮನಿ ನಿಮ್ಮನ್ನು ಬೆಂಬಲಿಸುತ್ತವೆ. ಅವರ ಸಹಾಯ ದೊರೆತೊಡನೆ ಬರ್ಮಾ ಅಥವಾ ಬಂಗಾಳಕೊಲ್ಲಿ ಕಡೆಯಿಂದ ಆಕ್ರಮಣ ಮಾಡಿ. ಇಂತಹ ಯಾವುದಾದರೂ ಸಾಹಸ ನಡೆಯದೆ ಭಾರತ ಮುಕ್ತವಾಗಲಾರದು. ನನ್ನ ದೃಷ್ಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಾಹಸ ಕೈಗೊಳ್ಳಲು ಸಮರ್ಥರಾದ ಇಬ್ಬರು ಮೂವರ ಪೈಕಿ ನೀವು ಒಬ್ಬರು" ಎಂದು ಸುಭಾಷರಿಗೆ ಧೈರ್ಯ ತುಂಬಿ ಸುಭಾಷರ ಮುಂದಿನ ಯೋಜನೆಗೆ ರೂಪುರೇಷೆ ಒದಗಿಸಿದರು. ದೇಹ ಕರಿನೀರ ರೌರವದಿಂದ ಜರ್ಝರಿತಗೊಂಡಿದ್ದರೂ, ವೃದ್ದಾಪ್ಯದಿಂದ ಶಿಥಿಲಗೊಂದಿದ್ದರೂ ಅವರ ಮನಸ್ಸು ಕುಸಿದಿರಲಿಲ್ಲ. INA ಕಟ್ಟಿದ ಸುಭಾಷ್ ಸಿಂಗಾಪುರದಿಂದ ಮಾಡಿದ "ಫ್ರೀ ಇಂಡಿಯಾ ರೇಡಿಯೋ ಭಾಷಣದಲ್ಲಿ ಸ್ಮರಿಸಿದ್ದು ಸಾವರ್ಕರರನ್ನೇ - "ರಾಜಕೀಯ ಪ್ರಬುದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ವೀರ ಸಾವರ್ಕರ್ ಸೇನೆಗೆ ಸೇರಿ ಎಂದು ತರುಣರನ್ನು ಹುರಿದುಂಬಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ಅವರ ಮಾತಿನಂತೆ ಭಾರತ ರಾಷ್ಟ್ರೀಯ ಸೇನೆಗೆ ಬೇಕಾದ ತರುಣ ತಂಡ ಸಿದ್ಧಗೊಂಡಿದೆ."

            ಸಾವರ್ಕರರ ಹಿಂದುತ್ವದ ಚಿಂತನೆ ಕೇವಲ ಮುಸಲ್ಮಾನ ಮಾನಸಿಕತೆಗೆ ಪ್ರತಿಕ್ರಿಯೆಯಲ್ಲ. ಅದು ಈ ದೇಶ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ವೇದೋಲ್ಲೇಖಿತ ಚಿಂತನೆಯೂ ಹೌದು. ಭಾರತೀಯ ದೃಷ್ಠಿಯಿಂದ ನೋಡದೆ ಸೆಕ್ಯುಲರ್ ದೃಷ್ಠಿಯಿಂದ ನೋಡುವವರಿಗೆ ಹಿಂದೂಗಳು ಹಾಗೂ ಹಿಂದೂಯೇತರರು ತಂತಮ್ಮ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ರಕ್ಷಿಸಿಕೊಂಡು ಒಂದೇ ದೇಶದೊಳಗೆ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ಬಾಳಬೇಕೆಂಬುದು ಸಾವರ್ಕರ್ ಪ್ರತಿಪಾದನೆ ಅಂತನ್ನಿಸಬಹುದು. ಪ್ರಧಾನ ಜನಾಂಗಕ್ಕೆ ಪರಮಾಧಿಕಾರ ಕೊಡುವುದರಿಂದ ಎರಡು ಜನಾಂಗಗಳು ಪರಸ್ಪರ ಪ್ರೀತಿ ಗೌರವದಿಂದ, ಹೊಂದಾಣಿಕೆಯಿಂದ ಬದುಕಲು ಸಾಧ್ಯವಿಲ್ಲ ಎಂದು ಆಲೋಚಿಸುವ ಸೆಕ್ಯುಲರ್ ಚಿಂತಕರಿಗೆ ಅಲ್ಪ ಸಂಖ್ಯಾತ ಜನಾಂಗಕ್ಕೆ ಸಮಾನ ಅಥವಾ ಹೆಚ್ಚಿನ ಅಧಿಕಾರ ಕೊಟ್ಟ ಬಳಿಕವೂ ಆ ಜನಾಂಗಗಳು ಹಿಂದೂಗಳೊಟ್ಟಿಗೆ ಹೊಂದಾಣಿಕೆಯಿಂದ ಬದುಕಿಲ್ಲ/ಬದುಕುತ್ತಿಲ್ಲ ಎನ್ನುವುದು ಮರೆತು ಹೋಗಿದೆ. ಗಾಂಧಿ ಅಂತಾರಾಷ್ಟ್ರೀಯ ಸಮಸ್ಯೆಯನ್ನು(ಖಿಲಾಫತ್ ಚಳುವಳಿ)  ಸ್ವಾತಂತ್ರ್ಯ ಚಳುವಳಿಗೆ ವೃಥಾ ತಳುಕು ಹಾಕಲು ಯತ್ನಿಸಿದರು. ಮುಸ್ಲಿಮರನ್ನು ಓಲೈಸಿ ಹಿಂದೂ ಮುಸ್ಲಿಂ ಐಕ್ಯ ಸಾಧಿಸಲು ಮೂರ್ಖ ಪ್ರಯತ್ನ ನಡೆಸಿಯೂ ಮುಸ್ಲಿಮರ ಕಣ್ಣಲ್ಲಿ ಕಾಫಿರರಾಗಿಯೇ ಉಳಿದರು. ಇನ್ನು ಉಳಿದ ನಾಯಕರ ಪಾಡೇನು? ಗಾಂಧಿ ಕ್ರಿಸ್ತನ ಚಂತನೆಯನ್ನು ಹಿಂದೂ ಧರ್ಮಕ್ಕೆ ಎರವಲು ತಂದು ಅಹಿಂಸೆಯ ನಾಟಕವಾಡಿದರೆ, ಸಾವರ್ಕರ್ ಕಾಯಾ ವಾಚಾ ಮನಸಾ "ಅಹಿಂಸಾ ಪರಮೋ ಧರ್ಮ, ಧರ್ಮ ಹಿಂಸಾ ತಥೈವಚಾ" ಎಂದು ಆಚರಿಸಿದರು. ವಿಪರ್ಯಾಸ ಹಾಗೂ ವಿಷಾದವೆಂದರೆ ಭಾರತದ ರಾಜಕಾರಣ ಸಾವರ್ಕರರ ಸನಾತನ ಚಿಂತನೆಯನ್ನು ಅನುಸರಿಸುವ ಬದಲು ಗಾಂಧಿಯ ಸೆಕ್ಯುಲರ್, ನಾಟಕದ, ಸ್ವಜನಪಕ್ಷಪಾತದ, ಸ್ವಹಿತದ ರಾಜಕಾರಣವನ್ನು ತನ್ನದಾಗಿಸಿಕೊಂಡಿತು.

ಗುರುವಾರ, ಮೇ 5, 2016

ಜಗತ್ತನ್ನೇ ಕಾಡುತ್ತಿದೆ "ಇಸ್ಲಾಂ ಪಾಪ" ಎನ್ನುವ ಸೆಕ್ಯುಲರ್ ಭೂತ

ಜಗತ್ತನ್ನೇ ಕಾಡುತ್ತಿದೆ "ಇಸ್ಲಾಂ ಪಾಪ" ಎನ್ನುವ ಸೆಕ್ಯುಲರ್ ಭೂತ

                  ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ಎಂದರೆ ಅದು ಸರ್ವನಾಶಕ್ಕೆ ಹೇತು. ಅಂತಹ ನಾಶಕ್ಕೆ ಜಗತ್ತು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ. ಭಯ, ದುರಾಸೆ, (ಕು)ಪ್ರಸಿದ್ಧಿಯ ಹುಚ್ಚು, ಎಲ್ಲರಿಗೂ ಸಲ್ಲಬೇಕೆಂಬ ಭಾವ ಎಲ್ಲವೂ ಈ ಓಲೈಕೆಗೆ ಕಾರಣ.  ಕ್ಷಣಿಕ ಲಾಭಕ್ಕಾಗಿ ಓಲೈಕೆಯ ಒಂದು ಇಟ್ಟಿಗೆ ಇಡುವ ವ್ಯಕ್ತಿ ತನ್ನ ಮಹತ್ವಾಕಾಂಕ್ಷೆಯ ಪೂರೈಕೆಗಾಗಿ ಓಲೈಕೆಯ ಮಹಲನ್ನೇ ಕಟ್ಟುತ್ತಾನೆ. ಆದರೆ ತತ್ವ, ಆದರ್ಶಗಳೆಂಬ ಸ್ವಂತ ಮನೆ ಮುರುಕಲಾಗಿ ಬಿದ್ದಿರುತ್ತದೆ. ಸೆಕ್ಯುಲರ್ ಪದದ ಅರ್ಥ ಎಂದೋ ಬದಲಾಗಿದೆ! ಭಾರತದಲ್ಲಿ ಮತಕ್ಕೋಸ್ಕರ ರಾಜಕಾರಣಿಯೊಬ್ಬ ಓಲೈಕೆಯ ಯಾವ ಹಂತವನ್ನಾದರೂ ತಲುಪಬಲ್ಲ. ಈ ಓಲೈಕೆಯಿಂದಾಗಿಯೇ ಇಲ್ಲಿನ ಇತಿಹಾಸವೇ ತಿರುಚಿ, ವರ್ತಮಾನವೇ ಅಡಗಿ ಭವಿಷ್ಯ ಕತ್ತಲಾಗಿದೆ. ಇದಕ್ಕೆ ಉಳಿದ ಜಗತ್ತೇನೂ ಹೊರತಲ್ಲ.

     ಈಗ ಅಮೇರಿಕಾದಂತಹ ದೊಡ್ಡಣ್ಣನಿಗೂ ಇದೇ ಪರಿಸ್ಥಿತಿ ಎದುರಾಗಿದೆ. ತನ್ನ ಶತ್ರುಗಳನ್ನು ಮಣಿಸಲು, ತನ್ನ ಸಾರ್ವಭೌಮತ್ವವನ್ನು ಉಳಿಸಲು ಭಯೋತ್ಪಾದಕ ಸಂಘಟನೆಗಳನ್ನು ಜಗತ್ತಿನ ಕಣ್ಣಿಗೆ ಮಣ್ಣೆರಚಿ ಕಟ್ಟಿ ಬೆಳೆಸಿದ ಅಮೇರಿಕಾಕ್ಕೆ ಈಗ ಅದೇ ಸರ್ಪದಂತೆ ಕೊರಳು ಬಿಗಿಯುತ್ತಿದೆ. ಸೌದಿಯ ಸ್ನೇಹ ಬೆಳೆಸಿ ಹಣ, ಶಸ್ತ್ರಾಸ್ತ್ರಗಳನ್ನು ಪೂರೈಸಿ ಒಂದು ಕಡೆ ತೈಲ ಸಾಮ್ರಾಜ್ಯವನ್ನೂ ತನ್ನ ಶಸ್ತ್ರಾಸ್ತ್ರ ಮಾರುಕಟ್ಟೆಯನ್ನೂ ವಿಸ್ತರಿಸಿದ್ದ ಅಮೇರಿಕಾದ ತಲೆಯ ಮೇಲೆ ಕುಳಿತು ಅದೇ ಸೌದಿ ಕುಟುಕುತ್ತಿದೆ. ಅಮೇರಿಕಾದ ಕಾಂಗ್ರೆಸ್ ಸೆಪ್ಟೆಂಬರ್ 11, 2001ರ ಪೆಂಟಗಾನ್ ದಾಳಿಯ ಹಿಂದೆ ಸೌದಿಯಿದೆ ಎನ್ನುವುದನ್ನು ಘೋಷಿಸುವ 9/11 ಮಸೂದೆಯ ಬಗ್ಗೆ ಮಾತಾಡಲಾರಂಭಿಸಿದ್ದೇ ತಡ ವಾಷಿಂಗ್ಟನ್ನಿಗೆ ಭೇಟಿ ಕೊಟ್ಟ ಸೌದಿಯ ವಿದೇಶಾಂಗ ಸಚಿವ ಮಸೂದೆಯೇನಾದರೂ ಅಂಗೀಕಾರವಾದಲ್ಲಿ ತಮ್ಮಲ್ಲಿರುವ 750 ಬಿಲಿಯನ್ ಡಾಲರ್ ಮೊತ್ತದ ಅಮೇರಿಕಾದ ಭದ್ರತಾ ಠೇವಣಿಯನ್ನು ಮಾರುವುದಾಗಿ ಬಾಂಬ್ ಹಾಕಿದ್ದಾರೆ. ಸೌದಿಯ ಈ ಸಂದೇಶ ಜಗತ್ತಿನಾದ್ಯಂತ ಕುತೂಹಲ ಮೂಡಿಸಿ ಚರ್ಚೆಯೊಂದನ್ನು ಹುಟ್ಟು ಹಾಕಿದೆ. ಇಂತಹುದ್ದೇನಾದರೂ ಸಂಭವಿಸಿದರೆ ಆಗ ಅಮೇರಿಕಾದ ಆರ್ಥಿಕತೆ ಬುಡ ಮೇಲಾಗುವುದರ ಜೊತೆಗೆ ರಾಜತಾಂತ್ರಿಕ ಅಲ್ಲೋಲಕಲ್ಲೋಗಳಾಗುವುದೂ ಸುಸ್ಪಷ್ಟ. ದುರಾಸೆಯಿಂದ ಜಗತ್ತನ್ನು ತನ್ನ ಮುಷ್ಠಿಯಲ್ಲಿರಿಸಿಕೊಳ್ಳಲು ಹೋಗಿ ರಕ್ಕಸರನ್ನು ಬೆಳೆಸಿದ ಅಮೇರಿಕಾ ಈಗ ಅದೇ ರಕ್ಕಸರ ಮಾತಿಗೆ ಕುಣಿಯಬೇಕಾಗಿರುವುದು ಮಾತ್ರ ವಿಪರ್ಯಾಸ.

 9/11 ಮಸೂದೆ ಅಂಗೀಕಾರವಾದರೆ ಅದು ಸೌದಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದರ ಜೊತೆಗೆ ಅಮೇರಿಕಾದ ನ್ಯಾಯಾಲಯಗಳ ವಿಚಾರಣೆ ಎದುರಿಸಬೇಕಾಗುತ್ತದೆ. ಈ ಮಸೂದೆ ಅಮೇರಿಕಾ ನೆಲದಲ್ಲಿ ಅಮೇರಿಕಾ ಪ್ರಜೆಯೊಬ್ಬನ ಮೇಲೆ ವಿದೇಶೀಯೊಬ್ಬ ದಾಳಿ ಎಸಗಿದರೆ ಆ ದೇಶ ವಿಚಾರಣೆಯಿಂದ ಪಾರಾಗುವುದನ್ನು ತಪ್ಪಿಸುತ್ತದೆ. ಇಂತಹುದೊಂದು ಮಸೂದೆಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಬುಸುಗುಟ್ಟಿದ ಸೌದಿಯ ನಡೆ ಪ್ರಕರಣದಲ್ಲಿ ಅದರ ನೇರ ಪಾತ್ರವಿರುವುದರ ಕಡೆ ಬೊಟ್ಟು ಮಾಡುತ್ತಿರುವುದು ಸಹಜ. ಆದರೆ ಈ ಬುಸುಗುಟ್ಟುವಿಕೆಗೆ ಅಮೇರಿಕಾ ಎಷ್ಟು ಬೆದರಿದೆಯೆಂದರೆ ಸ್ವತಃ ಅಧ್ಯಕ್ಷ ಒಬಾಮಾ ಮಸೂದೆ ಜಾರಿಯಾಗದಂತೆ ತಡೆಯಲು ಅಮೇರಿಕಾದ ಕಾಂಗ್ರೆಸ್ ಜೊತೆ ಲಾಬಿ ನಡೆಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಪೆಂಟಗಾನ್, ಶ್ವೇತಭವನದ ಅಧಿಕಾರಿಗಳು, ಸಂಸದರ ನಡುವೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವುದು, ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ 9/11 ವರದಿಯ ಸೌದಿ ಅರೇಬಿಯಾ ಬಗೆಗಿನ "28 ರಹಸ್ಯ ಪುಟಗಳು" ರಹಸ್ಯವಾಗಿಯೇ ಉಳಿಯಬೇಕೆಂದು ಸಲಹೆ ಮಾಡಿರುವುದು, ಆರ್ಥಿಕ ತಜ್ಞರು ಅಮೇರಿಕಾದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆಂದು ಚರ್ಚಿಸಿಯೂ "ಅಷ್ಟು ದೊಡ್ಡ ಮೊತ್ತವನ್ನು ಮಾರುವುದು ಸುಲಭವಲ್ಲ, ಅದರಿಂದ ಸೌದಿಗೇನೂ ಲಾಭವಾಗುವುದಿಲ್ಲ, ಸೌದಿಯ ಆರ್ಥಿಕತೆಗೇ ಕುತ್ತು ಬರಬಹುದೆಂದು" ಕ್ಷೀಣ, ಅಸಹಾಯಕ ದನಿಯಲ್ಲಿ ಬೆದರಿಸಿರುವುದು, ಅಮೇರಿಕಾದ ಬುದ್ಧಿಜೀವಿಗಳು "ಮಸೂದೆ ಜಾರಿಯಾಗುವುದರಿಂದ ಸೌದಿಗೇನೂ ಹಾನಿಯಿಲ್ಲ, ಅದೇನೂ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗಿಲ್ಲ, ದಾಳಿಯಲ್ಲಿ ಭಾಗಿಯಾಗಿದ್ದ ಅಲ್ಲಿನ ಹದಿನೈದು ಪ್ರಜೆಗಳ ಮೇಲೆ ಮಾತ್ರ ಅದು ಪರಿಣಾಮ ಬೀರುತ್ತದೆ" ಎಂದು ಬೆಣ್ಣೆ ಹಚ್ಚತೊಡಗಿರುವುದು ಸೌದಿಯ ಬೆದರಿಕೆಗೆ ಅಮೇರಿಕಾ ಭಯಭೀತಗೊಂಡಿರುವುದಕ್ಕೆ ಸಾಕ್ಷಿ.

ಇದನ್ನು ಹಲವಾರು ರೀತಿಯಲ್ಲಿ ವಿಶ್ಲೇಷಿಸಬಹುದಾದರೂ ದಾಳಿಯಲಿ ಸೌದಿ ತನ್ನ ಪಾತ್ರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ ಎನ್ನುವುದು ಕಣ್ಣಿಗೆ ರಾಚುವ ಸತ್ಯ. ಜೊತೆಗೆ ಅಧೋಗತಿಯತ್ತ ಸಾಗುತ್ತಿರುವ ತನ್ನ ಆರ್ಥಿಕತೆಯಿಂದ ತತ್ತರಿಸಿರುವ ಅಮೇರಿಕಾ ಸೌದಿಯ ಬೆದರಿಕೆಗೆ ಹೆದರಿರುವುದೂ ಅಷ್ಟೇ ಸತ್ಯ. 9/11 ವರದಿಯ ಆ "28 ರಹಸ್ಯ ಪುಟಗಳು" ರಹಸ್ಯವಾಗೇ ಉಳಿಯಬೇಕೆಂದು ಪ್ರತಿಪಾದಿಸಿದ ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಮರುಕ್ಷಣದಲ್ಲೇ ದಾಳಿಯ ಹಿಂದೆ ಸೌದಿಯ ಕೈವಾಡವನ್ನಾಗಲಿ ಅದು ಹಣಸಹಾಯ ಮಾಡಿದೆ ಎನ್ನುವ ಆರೋಪವನ್ನು ಖಚಿತಪಡಿಸುವಂತಹ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನುತ್ತಾರೆ. ಸಾಕ್ಷ್ಯಾಧಾರಗಳಿಲ್ಲ ಎಂದ ಮೇಲೆ ಆ ರಹಸ್ಯ ಪುಟಗಳನ್ನು ಬಹಿರಂಗಪಡಿಸಲೇನಡ್ಡಿ? 19ರಲ್ಲಿ ಹದಿನೈದು ಜನ ಅಪಹರಣಕಾರರು ಸೌದಿಯವರಾಗಿದ್ದೂ ಅಮೇರಿಕಾ ಸೌದಿಯ ಜೊತೆ "ಅತ್ಯುತ್ತಮ ಬಾಂಧವ್ಯ" ಹೊಂದಿದೆ ಎನ್ನುವ ಬ್ರೆನ್ನನ್ ಮಾತಲ್ಲಿ ಅಮೇರಿಕಾ ಸೌದಿಯ ಕಾಲಿಗೆ ಬೀಳಬಹುದಾದ ಎಲ್ಲಾ ಲಕ್ಷಣಗಳು ಬಿಂಬಿತವಾಗುತ್ತವೆ. ಸೂಕ್ಷ್ಮ ವಿಚಾರವಾದುದರಿಂದ ಇದನ್ನು ಸಾರ್ವಜನಿಕಗೊಳಿಸದಿರುವುದೇ ಉತ್ತಮ ಎನ್ನುವ ಅವರ ನಿಲುಮೆ ವರದಿ ಬಹಿರಂಗಗೊಳಿಸುವುದರಿಂದ ತನ್ನ ದೇಶೀಯರಿಂದ ಎದುರಾಗಬಹುದಾದ ಒತ್ತಡದ ಜೊತೆಜೊತೆಗೆ ಇಸ್ಲಾಂ ಬರ್ಬರತೆಯನ್ನು ಊಹಿಸಿಕೊಂಡೇ ಬೆವರಿರುವ ಸ್ಪಷ್ಟ ಮುನ್ಸೂಚನೆ. ಅದೇ ಸಮಯಕ್ಕೆ 9/11 ದಾಳಿಯ ಹಿಂದಿನ ಇಸ್ರೇಲಿನ ಪಾತ್ರದ ಬಗ್ಗೆ ಅಮೇರಿಕನ್ನರು ತಿಳಿದರೆ "ಟೆಲ್ ಅವಿವ್" ಪ್ರಭುತ್ವಕ್ಕೆ ಕುತ್ತು ಬರಬಹುದೆನ್ನುವ ಅವರ ವಾದ ಇಸ್ರೇಲನ್ನು ತೆಗಳುವ ಮೂಲಕ ಸೌದಿಗೆ ಮತ್ತಷ್ಟು ಹತ್ತಿರವಾಗುವ, ಅಮೇರಿಕನ್ನರ ಗಮನವನ್ನು ಬೇರೆಡೆಗೆ ಸೆಳೆಯುವ ಚರ್ಚೆ ಅಷ್ಟೇ!

ಸೌದಿ ದೊರೆಗಳು ಅಮೇರಿಕಾದಲ್ಲಿ ಹೂಡಿಕೆ ಮಾಡಿರುವುದು ಕಡಿಮೆ ಏನಲ್ಲ. ರಿಯಲ್ ಎಸ್ಟೇಟ್, ವ್ಯಾಪಾರ, ಆಸ್ಪತ್ರೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ಸೌದಿಯ ಹೂಡಿಕೆ ಇದೆ. ಹಲವು ಸಾಮಾಜಿಕ ತಾಣಗಳ ಸೌದಿಯ ದೊರೆಗಳು ಬಹುಪಾಲು ಹೊಂದಿರುವುದರ ಜೊತೆಗೆ ತಮಗೆ ಬೇಕಾದಂತೆ ಅಭಿಪ್ರಾಯ ರೂಪಿಸುವಲ್ಲೂ ನಿಷ್ಣಾತರು. ಕೆಲ ದಿನಗಳ ಹಿಂದಷ್ಟೇ ಟ್ವಿಟರಿನಲ್ಲಿ ಕೆಲವೇ ಗಂಟೆಗಳಲ್ಲಿ ತಮಗೆ ವಿರುದ್ಧವಾಗಿದ್ದ ಟ್ರೆಂಡನ್ನೇ ಕಿತ್ತು ಹಾಕಿದ್ದು ನೆನಪಿರಬಹುದು. ಇದೆಲ್ಲವೂ ಹಿಂದೆ ಮಾಡಿದ ಓಲೈಕೆಯ ಫಲಗಳೇ. ಆದರೆ ಇಸ್ರೇಲ್ ಹೊರತುಪಡಿಸಿ ಪಾಶ್ಚಿಮಾತ್ಯ ಜಗತ್ತು ಎಚ್ಚೆತ್ತುಕೊಳ್ಳುತ್ತಿಲ್ಲ. ಹಣ ಮತ್ತು ಅಧಿಕಾರದ ಅಮಲಿನಲ್ಲಿ ಮುಳುಗುತ್ತಿರುವ ಅಮೇರಿಕಾದ ರಾಜಕಾರಣಿಗಳು ವೇಗವಾಗಿ ಕುಸಿಯುತ್ತಿರುವ ಅಮೇರಿಕಾದ ಆರ್ಥಿಕತೆಯನ್ನು ಮೇಲೆತ್ತುವ ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದರಿಂದ ಕ್ರೋಧಗೊಂಡಿರುವ ತಮ್ಮ ದೇಶೀಯರ ಗಮನವನ್ನು ಬೇರೆಡೆಗೆ ಸೆಳೆಯಲು ಭಯೋತ್ಪಾದಕ ಸಂಘಟನೆಗಳ ಮೇಲೆ ದಾಳಿಯಂತಹ ನಾಟಕಗಳನ್ನು ಆಗಾಗ ಆಡುತ್ತಿರುತ್ತಾರೆ. ಹಲವಾರು ವರ್ಷಗಳಿಂದ ಸೆಣಸಿದರೂ ಭಯೋತ್ಪಾದನೆಯನ್ನು ತಹಬಂದಿಗೆ ತರುವುದು ಒತ್ತಟ್ಟಿಗಿರಲಿ, ಕನಿಷ್ಟ ಭಯೋತ್ಪಾದಕರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗದ ಅಮೇರಿಕಾದ ಬಲಹೀನತೆಗೆ ಏನೆನ್ನಬೇಕು?

              ತೀರಾ ಇತ್ತೀಚೆಗೆ ಮತ್ತೊಮ್ಮೆ ಇದೇ ಬೆದರಿಕೆ ಒಡ್ಡಿದ ಸೌದಿ ಹೇಳಿದ್ದೇನು ಗೊತ್ತೇ? "ಈ ಮಸೂದೆಯೇನಾದರೂ ಅಂಗೀಕಾರವಾದಲ್ಲಿ ಅಮೇರಿಕಾದ ಮೇಲೆ ಹೂಡಿಕೆದಾರರಿಗಿರುವ ನಂಬಿಕೆ ಹೊರಟು ಹೋಗುತ್ತೆ" ಎಂದು. ಈವರೆಗಿನ ಹೂಡಿಕೆಯಿಂದ ಪೆಂಟಗಾನ್ ಸೊಂಟ ಮುರಿದು ಹೋಗಿದ್ದು ಇನ್ನೂ ಹಸಿರಾಗಿರುವಾಗಲೇ ಅಮೇರಿಕಾ ಮತ್ತೆ ಸೌದಿಗೆ ಸಲಾಮ್ ಹಾಕುತ್ತದೆ ಎಂದಾದರೆ ಭವಿಷ್ಯದಲ್ಲಿ ಅಮೇರಿಕಾ ಜಗತ್ತಿನ ದೊಡ್ದ ಭಯೋತ್ಪಾದಕ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಶ್ವಸಂಸ್ಥೆಯಿರಲಿ, ಜಗತ್ತಿನ ಯಾವುದೇ ಪ್ರಮುಖ ಚಲನೆಯಿರಲಿ(ಕೆಲವು ದೇಶಗಳನ್ನು ಹೊರತುಪಡಿಸಿ) ಅದರ ಹಿಂದೆ ಅಮೇರಿಕಾದ ಧ್ವನಿ ಇರುತ್ತದೆ ಎನ್ನುವುದೂ ಯಾರೂ ಅಲ್ಲಗೆಳೆಯಲಾಗದ ಸತ್ಯ. ಮುಂದೆ ಋಣ ತೀರಿಸಲು ಸೌದಿಯ ನಿರ್ಧಾರವೇ ಅಮೇರಿಕಾದ ಮುಖದಿಂದ ಹೊರಹೊಮ್ಮಿದರೂ ಅಚ್ಚರಿಯಿಲ್ಲ. ಇದರಿಂದ ವಿಶ್ವದ ಆಗುಹೋಗುಗಳು ಪರೋಕ್ಷವಾಗಿ ಸೌದಿಯಿಂದ ನಿಯಂತ್ರಿಸಲ್ಪಡುತ್ತವೆ. ಆಗ ಭಯೋತ್ಪಾದನೆಯ ವಿರುದ್ಧ ಹೋರಾಟವೆಂಬುದು ಮತ್ತೊಂದು ಹಾಸ್ಯಾಸ್ಪದ ಸಂಗತಿಯಾಗುತ್ತದೆಯಷ್ಟೇ!

             ನಮ್ಮಲ್ಲಿ ದೇಶದೊಳಗೆ ಓಲೈಕೆ ನಡೆದರೆ ಇಲ್ಲಿ ದೇಶಗಳ ನಡುವೆ ಓಲೈಕೆ. ಇದನ್ನು ರಾಜಕಾರಣ ಅಥವಾ ದೇಶಗಳ ನಡುವಿನ ರಾಜತಾಂತ್ರಿಕ ವಿಚಾರ ಎಂದು ತಳ್ಳಿ ಹಾಕುವುದು ಕೂಡಾ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿರ್ಲಕ್ಷ್ಯಿಸಿದಂತೆ. ಇಸ್ಲಾಂ ಬೆಳೆದದ್ದೇ ಹಾಗೆ. ಎದುರಾಳಿಯ ಬಲಹೀನತೆಯನ್ನು ಕರಾರುವಕ್ಕಾಗಿ ಬಳಸಿಕೊಂಡೇ ಅದು ತನ್ನ ಪ್ರಭುತ್ವ ಸ್ಥಾಪಿಸಿದ್ದು. ಸಂಖ್ಯೆ ಕ್ಷೀಣವಾಗಿದ್ದಾಗ ಡೊಗ್ಗು ಸಲಾಮು ಹಾಕಿ ಮಾತು, ಕೃತಿಗಳಿಂದ ಹತ್ತಿರವಾಗಿ, ಸೌಲಭ್ಯ-ಸವಲತ್ತುಗಳನ್ನು ಪಡೆದುಕೊಂಡು ತಕ್ಕಮಟ್ಟಿಗೆ ಸಂಖ್ಯೆ ಏರಿದಾಗ ಅನ್ನ ಕೊಟ್ಟವನ ಮೇಲೆಯೇ ಏರಿ ಹೋದ ಮತವದು. ಇದರಿಂದ ಸೌದಿಗಷ್ಟೇ ಲಾಭ, ಮುಸ್ಲಿಮರಿಗೇನು ಎಂದು ಸೆಕ್ಯುಲರುಗಳ ಚಿಂತನೆಯಿಂದ ಪ್ರಭಾವಿತರಾದವರು ಆಲೋಚಿಸಬಹುದು. ಆದರೆ ಇಂದಿಗೂ ಜಗತ್ತಿನ ಸಾಬಿಗಳು ದೇವರೆಂದು ಪೂಜಿಸುವುದು ಸೌದಿಯ ದೊರೆಗಳನ್ನೇ. ಅಂದು ತುರ್ಕಿಯಲ್ಲಿ ಖಲೀಫನಿಗೆ ಮತ್ತೆ ಪಟ್ಟ ಕಟ್ಟಬೇಕೆಂದು ಅಲ್ಲಿಗೆ ಸಂಬಂಧವೇ ಇಲ್ಲದ ಮುಸ್ಲಿಮರು ತಾವಿರುವಲ್ಲಿನ ಇತರ ಮತೀಯರ ಪ್ರಾಣ ಹಿಂಡಲಿಲ್ಲವೇ? ಅದೇ ರೀತಿ ಅವರಲ್ಲೆಂದೂ ಮತಕ್ಕಿರುವ ಪ್ರಾಶಸ್ತ್ಯ ಜನ್ಮ-ಅನ್ನ ಕೊಟ್ಟ ನಾಡಿಗಿರದು.

             ಶರವೇಗದಲ್ಲಿ ಏರುತ್ತಿರುವ ಮುಸ್ಲಿಂ ಜನಸಂಖ್ಯೆ ಕೆಲವೇ ವರ್ಷಗಳಲ್ಲಿ ಕ್ರೈಸ್ತರನ್ನೂ ಹಿಂದಿಕ್ಕಲಿದೆ ಎನ್ನುವುದನ್ನು ವರದಿಗಳನೇಕ ಹೇಳಿದರೂ ಜಗತ್ತಿಗೆ ಬುದ್ಧಿ ಬಂದಿಲ್ಲ. ಯೂರೋಪಿನಲ್ಲಿ ಇಸ್ಲಾಂ ಬಹು ವೇಗವಾಗಿ ಹಬ್ಬುತ್ತಿದೆ. ಯೂರೋಪಿನ ಕೆಲವು ದೇಶಗಳಲ್ಲಂತೂ ಅವರದ್ದೇ ಸಾಮ್ರಾಜ್ಯ. ತೀರಾ ಇತ್ತೀಚೆಗೂ ನಿರಾಶ್ರಿತರೆಂಬ ಮಾನವೀಯತೆಯಿಂದ ಸಾಬಿಗಳನ್ನು ಒಳ ಬಿಟ್ಟುಕೊಂಡ ದೇಶಗಳು ದಿನನಿತ್ಯ ಅವರ ಅಟ್ಟಹಾಸದಿಂದ ತಲೆಗೆಟ್ಟು ಹೋಗಿವೆ. ಅವರ ಭಯೋತ್ಪಾದಕ ಕೃತ್ಯಗಳಿಗೆಲ್ಲಾ ಹಣ ಪೂರೈಸುವುದು ಈ ಸೌದಿಯೇ. ಅದರ ನಡುವೆ ಭಾರತದಲ್ಲಿರುವ ಹಾಗೆ ಸೆಕ್ಯುಲರುಗಳು ಅಲ್ಲೂ ತುಂಬಿ ತುಳುಕಾಡುತ್ತಿದ್ದು ದೇಶರಕ್ಷಣೆಯ ಮಾತಾಡುವವರಿಗೆಲ್ಲಾ ಇಸ್ಲಾಂ ವಿರೋಧಿ, ಪ್ರಗತಿ ವಿರೋಧಿ, ಕೋಮುವಾದಿ ಎಂಬೆಲ್ಲಾ ಪಟ್ಟ ಕಟ್ಟಿ ಸುಮ್ಮನಾಗಿಸುತ್ತಿದ್ದಾರೆ. ಇತ್ತೀಚೆಗೆ ಡಚ್ ರಾಜಕಾರಣಿ ಅಯಾನ್ ಹಿರ್ಸಿ ಅಲಿ ಎನ್ನುವ ಸೋಮಾಲಿಯ ಸಂಜಾತೆ ಇಸ್ಲಾಮಿನಲ್ಲಿ ಮಹಿಳೆಯರ ದೌರ್ಜನ್ಯದ ಬಗ್ಗೆ ಕಟುವಾಗಿ ಮಾತಾಡಿದಾಗ ಪಶ್ಚಿಮದ ಪ್ರಗತಿಪರರು ಒಟ್ಟು ಸೇರಿ ಆಕೆಯ ಮೇಲೆ ಮುಗಿಬಿದ್ದದ್ದು ನೆನಪಿರಬಹುದು. ಇಸ್ಲಾಂನಿಂದಾಗಿ ಯುರೋಪ್ ಸರ್ವನಾಶವಾಗುತ್ತಿದೆ. ಅಮೆರಿಕವನ್ನು ಹಾಗಾಗಲು ಬಿಡುವುದಿಲ್ಲ ಎನ್ನುತ್ತಿರುವ ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಂದು ವೇಳೆ ವಿಜಯಿಯಾದರೆ ತನ್ನ ಮಾತನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ಯಾವ ನಂಬಿಕೆಯೂ ಇಲ್ಲ. ಒಣಮಾತಿನ ಮಲ್ಲರನ್ನು ಈ ಜಗತ್ತು ಬಹಳಷ್ಟು ಕಂಡಿದೆ.