ಪುಟಗಳು

ಸೋಮವಾರ, ಅಕ್ಟೋಬರ್ 8, 2018

ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ

ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ

               ಸಿರಿ ಸಂಪತ್ತಿನ ಶ್ರೀಮಂತಿಕೆಯ ಸಮುದ್ರಕ್ಕೆ ದ್ವಾರವಾಗಿ ಜಗತ್ತಿನ ಕಣ್ಣುಕುಕ್ಕುತ್ತಿತ್ತು ದ್ವಾರಸಮುದ್ರ. ಹುಲಿಯನ್ನು ಬರಿಗೈಯಲ್ಲಿ ಕೊಂದವನಿಂದ "ಸುದತ್ತ" ಆಶೀರ್ವಾದದೊಂದಿಗೆ ಕಟ್ಟಲ್ಪಟ್ಟ ಕರ್ಮ ಕ್ಷಾತ್ರ ತೇಜಸ್ಸಿನ ಮೂಲದಿಂದ ಎದ್ದು ಬಂದ ಹೊಯ್ಸಳರ ರಾಜಧಾನಿ. ಇಂತಹ ಭವ್ಯ ಸಾಮ್ರಾಜ್ಯದ ಮೇಲೆ ಅಲ್ಲಾವುದ್ದೀನ್ ಖಿಲ್ಜಿಯ ತೀಟೆಗೋಸ್ಕರ ಮತಾಂತರನಾಗಿದ್ದ ಒಂದು ಕಾಲದ ಬ್ರಾಹ್ಮಣ ಮಲ್ಲಿಕಾಫರನ ಕಣ್ಣು ಬಿತ್ತು. ಹಿಂದೂ ಧರ್ಮದ ಅಂತಃಸತ್ವ ಇರುವುದೆಲ್ಲಿ ಎನ್ನುವುದನ್ನು ಒಂದು ಕಾಲದ ಹಿಂದೂವಾಗಿದ್ದ ಖಿಲ್ಜಿಯ ಆ ಪ್ರಿಯಕರನಿಗೆ ಹೇಳಿಕೊಡಬೇಕಾಗಿರಲಿಲ್ಲ. ಪಾಂಡ್ಯ್ರರ ನಡುವಿನ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಹಾಡಲು ಹೊಯ್ಸಳ ನರೇಶ ವೀರ ಬಲ್ಲಾಳ ತೆರಳಿದ್ದ ಸಮಯವನ್ನೇ ಉಪಯೋಗಿಸಿಕೊಂಡ ಈ ಹಿಂದೂ ದ್ವೇಷಿ ದ್ವಾರಸಮುದ್ರದ ಮೇಲೆ ದಂಡೆತ್ತಿ ಬಂದ . ಹಗಲಿಡೀ ಉಪವಾಸವಿದ್ದು ರಾತ್ರಿ ಮುಕ್ಕುವ ಪವಿತ್ರ ರಂಜಾನಿನ ಆ ತಿಂಗಳು ಖಿಲ್ಜಿಯ ಸೇನೆಯ ಮುಸಲರಿಗೆ ಗಾಜಿ ಪಟ್ಟದ ಸ್ಪರ್ದೆಯ ಕಣವಾಯಿತು. ವಿಗ್ರಹಗಳು ಮುರಿದು ಬಿದ್ದವು; ರುಂಡಗಳು ಉರುಳಿದವು; ಮಾನಿಯರ ಶೀಲ ಹರಣವಾಯಿತು; ಸಂಪತ್ತು ಸೂರೆಗೊಂಡಿತು; ರಾಜನಿಲ್ಲದ ಸಾಮ್ರಾಜ್ಯ ಸರ್ವನಾಶಗೊಂಡು ಹಳೆಯ ಬೀಡಾಯಿತು! ಮುಮ್ಮಡಿ ಬಲ್ಲಾಳ ರಾಜಧಾನಿಗೆ ದೌಢಾಯಿಸಿದಾಗ ಕಾಲ ಮಿಂಚಿತ್ತು. ಮತಾಂತರಕ್ಕೆ ಒಪ್ಪದ ಆತ  ಅನಿವಾರ್ಯವಾಗಿ ತನ್ನ ಸೇನೆಯನ್ನು ಮಲ್ಲಿಕಾಫರನಿಗೆ ಪಾಂಡ್ಯರನ್ನು ಗೆಲ್ಲುವ ಸಲುವಾಗಿ ಕಳುಹಿಸಿಕೊಡಬೇಕಾದ, ಮುಸಲ್ಮಾನ ಸೈನ್ಯವನ್ನು ತನ್ನ ರಾಜ್ಯದಲ್ಲಿರಿಸಿ ಪೋಷಿಸಬೇಕಾದ ಷರತ್ತಿಗೆ ಒಪ್ಪಬೇಕಾಯಿತು. ಆ ಸೈನ್ಯದ ಬಲದಿಂದ ಮಲ್ಲಿಕಾಫರ ಪಾಂಡ್ಯರನ್ನು ಗೆದ್ದು ಲೂಟಿಗೈದು ಅಪಾರ ಸಂಪತ್ತಿನೊಂದಿಗೆ ದೆಹಲಿಗೆ ತೆರಳಿದ.

                 ಇತ್ತ ಬಲ್ಲಾಳನ ಮನಸ್ಸು ಮುರಿದಿತ್ತು. ಯಾವ ಪಾಂಡ್ಯ ರಾಜ್ಯದಲ್ಲಿ ಸ್ಥಿರತೆಯನ್ನು ತರಲು ಸಹಾಯಕ್ಕಾಗಿ ಆತ ತೆರಳಿದ್ದನೋ ಅಂತಹ ಪಾಂಡ್ಯಸೇನೆಯನ್ನು ತರಿಯಲು ತನ್ನದೇ ಸೇನೆ ಸಹಾಯ ಮಾಡಬೇಕಾದ ಕಾಲದ ಚೋದ್ಯವನ್ನು ಕಂಡು ಅವನ ಎದೆ ಬಿರಿದಿತ್ತು. ಅವನಿಗೀಗ ತನ್ನ ಸಾಮ್ರಾಜ್ಯ ಬೀಜಾರೋಪವಾಗಿದ್ದುದರ ಉದ್ದೇಶ ನೆನಪಾಯಿತು. ಅದರ ಉದ್ದೇಶಕ್ಕಾಗಿ ಅಕ್ಕಪಕ್ಕದ ಹಿಂದೂರಾಜರುಗಳನ್ನು ಒಗ್ಗೂಡಿಸಲಾರಂಭಿಸಿದ. ಬಗ್ಗದವರನ್ನು ಬಡಿದು ತನ್ನ ಪಾಳಯಕ್ಕೆ ಸೇರಿಸಿಕೊಂಡ. ಪಾಂಡ್ಯರನ್ನು, ಕಾಕತೀಯರನ್ನು ಬಗ್ಗು ಬಡಿದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ತನ್ನ ರಾಜ್ಯದಲ್ಲಿದ್ದ ಮುಸಲ್ಮಾನ ಸೇನೆಯನ್ನು ಒದ್ದು ಹೊರಹಾಕಿದ. ಮಧುರೈಯಲ್ಲಿ ಬೀಡುಬಿಟ್ಟು ನಿತ್ಯ ಕೊಳ್ಳೆಹೊಡೆಯುತ್ತಿದ್ದ, ಹಿಂದೂಗಳ ನರಮೇಧಗೈಯುತ್ತಿದ್ದ ಸುಲ್ತಾನರ ಪಾರುಪತ್ಯವನ್ನು ಕೊನೆಗಾಣಿಸಲು ಸೈನ್ಯ ಸಂಘಟಿಸಿ, ರಾಜ್ಯದ ಮೂರು ಮೂಲೆಗಳಲ್ಲಿ ರಾಜಧಾನಿಯನ್ನು ನಿರ್ಮಿಸಿದ. ಅದರಲ್ಲೊಂದೇ ತಿರುವಣ್ಣಾಮಲೈ. ಭೂಮಂಡಲದಲ್ಲೇ ಅತ್ಯಂತ ಪ್ರಶಾಂತವಾದ ಈ ಜಾಗ ಪದೇ ಪದೇ ಖಿಲ್ಜಿಯ ಸೈನ್ಯದಿಂದ ದಾಳಿಗೊಳಗಾಗುತ್ತಿದ್ದ ಹೊಯ್ಸಳ ನರೇಶನಿಗೆ ತನ್ನ ರಾಜಧಾನಿಯಾಗಲು ಪ್ರಶಸ್ತವೆನಿಸುದುದರಲ್ಲಿ ಆಶ್ಚರ್ಯವೇನಿಲ್ಲ. ಇದೇ ಜಾಗ ಈಗ ಮಧುರೈ ಸುಲ್ತಾನರಿಗೆ ತಡೆಗೋಡೆಯಾಯಿತು. ಹಕ್ಕಬುಕ್ಕರನ್ನು ಆನೆಗೊಂದಿಯ ದಳಪತಿಗಳನ್ನಾಗಿಸಲು ವೇದಿಕೆಯಾಯಿತು. ತಮಿಳುನಾಡಿನಲ್ಲಿ ಬೃಹತ್ ಸೈನ್ಯ ಕಟ್ಟಲು ಬಲ್ಲಾಳನಿಗೆ ಸ್ಪೂರ್ತಿತಾಣವಾಯಿತು. ಮಧುರೈ ಸುಲ್ತಾನರನ್ನು ಬಗ್ಗು ಬಡಿಯಲು ನೆರವಾಯಿತು. ಹಿಂದೂ ಸಹಜ ಭೋಳೆ ಸ್ವಭಾವಕ್ಕೆ ತುತ್ತಾಗಿ, ಸೋತ ಸುಲ್ತಾನನಿಗೆ ಕ್ಷಮೆಕೊಟ್ಟು ಅವನ ಮೋಸದ ಹೂಟಕ್ಕೆ ಬಲಿಯಾದರೂ ಜಗತ್ತಿನ ಭವ್ಯ, ಬಲಿಷ್ಟ ಸಾಮ್ರಾಜ್ಯ ವಿಜಯನಗರಕ್ಕೆ ಸ್ಪೂರ್ತಿಯಾದ ವೀರ ಬಲ್ಲಾಳ. ಅವನ ಶಕ್ತಿಯನ್ನು, ಪ್ರತಿಭೆಯನ್ನು, ಮುತ್ಸದ್ಧಿತನವನ್ನು ಎತ್ತರಕ್ಕೇರಿಸಿದ ತಾಣ ತಿರುವಣ್ಣಾಮಲೈ.

                       ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ತಿರುವಣ್ಣಾಮಲೈ ಹಲವು ನಗರಗಳನ್ನು ಜೋಡಿಸುವ ಸಂಧಿಸ್ಥಳ. ಹಾಗಾಗಿ ಜಾನುವಾರು ಜಾತ್ರೆಗೆ ಹಾಗೂ ವ್ಯಾಪಾರದ ಕೇಂದ್ರವಾಗಿಯೂ ಇದು ಪ್ರಸಿದ್ಧ. ಹಲವು ಬೆಟ್ಟಗಳಿಂದ ಆವೃತವಾದ ಇದು 18ನೆಯ ಶತಮಾನದಲ್ಲಿ ಒಂದು ಪ್ರಮುಖ ಸೈನಿಕ ನೆಲೆಯಾಗಿತ್ತು. ಇಲ್ಲಿಯ ಬೆಟ್ಟಗಳು ಕರ್ಣಾಟಕ ಯುದ್ಧಗಳಲ್ಲಿ ಪ್ರಧಾನಪಾತ್ರ ನಿರ್ವಹಿಸಿದವು. 1753-1790ರ ಅವಧಿಯಲ್ಲಿ ಈ ನಗರ ಅನೇಕ ಮುತ್ತಿಗೆಗಳಿಗೆ ಗುರಿಯಾಗಿತ್ತು. ತಿರುವಣ್ಣಾಮಲೈಗೆ ಆ ಹೆಸರು ಬರಲು, ಪ್ರಸಿದ್ಧವಾಗಲು ಕಾರಣ ಅಲ್ಲಿನ 2,671 ಅಡಿ ಎತ್ತರದ ಅಣ್ಣಾಮಲೈ ಅಥವಾ ಅರುಣಾಚಲ ಬೆಟ್ಟ. ಬ್ರಹ್ಮ ಮತ್ತು ವಿಷ್ಣು ಆತ್ಮವಿಸ್ಮೃತಿಗೊಳಗಾಗಿ "ನಾನು ಹೆಚ್ಚು, ತಾನು ಹೆಚ್ಚು" ಎಂಬ ಕಲಹಕ್ಕೆ ತೊಡಗಿದಾಗ ಅದನ್ನು ಕೊನೆಗಾಣಿಸುವ ಸಲುವಾಗಿ ಆದಿ ಅಂತ್ಯಗಳಿಲ್ಲದ ಜ್ಯೋತಿಸ್ಥಂಭದ ರೂಪದಲ್ಲಿ ಶಿವ ಪ್ರಕಟನಾದ. ಇದರ ಆದಿ ಅಥವಾ ಅಂತ್ಯಗಳನ್ನು ಯಾರು ಕಂಡುಬರಬಲ್ಲರೋ ಅವರೇ ಹೆಚ್ಚಿನವರು ಎಂಬ ಗಂಭೀರ ವಾಣಿಯೊಂದು ಕೇಳಿಸಿತು. ಎಷ್ಟು ಪ್ರಯತ್ನಿಸಿದರೂ ತುದಿಬುಡ ತಿಳಿಯದ ಅವರಿಬ್ಬರೂ ಶಿವನ ಶರಣು ಹೊಕ್ಕು ಎಲ್ಲರೂ ಕಾಣಲು ಸಾಧ್ಯವಾಗುವ ಲೋಕಾನುಗ್ರಹ ಕಾರಕವಾದ ಲಿಂಗರೂಪದಲ್ಲಿ ಅರುಣಾಚಲನೆಂದು ಪ್ರಕಟವಾಗಬೇಕೆಂದು ಬೇಡಿದರು. ಹೀಗೆ ಆದಿ ಅಂತ್ಯಗಳಿಲ್ಲದೆ ವಾದಿಸುತ್ತಿದ್ದವರ ಮುಂದೆ ಆದಿ ಅಂತ್ಯಗಳಿಲ್ಲದೆ ಅಚಲವಾಗಿ ನಿಂತು ಅವರ ಅಹಂ ಅನ್ನು ಮುರಿದ ಅಗ್ನಿಸ್ಥಂಭ ಲೋಕವನ್ನು ತಪ್ತಗೊಳಿಸಿದ ತನ್ನ ಶಾಖವನ್ನು ಶಮನಮಾಡಿ ಶಾಂತವಾಗಿ ಅರುಣಾಚಲವಾಗಿ ಭೂಮಂಡಲದಲ್ಲಿ ಎದ್ದು ನಿಂತಿತು. ಅದು ಅಗ್ನಿಯ ಬೆಟ್ಟ; ಋಗ್ವೇದ ಯಜುರ್ವೇದಗಳೆರಡರಲ್ಲೂ ಅಗ್ನಿಯನ್ನು ರುದ್ರನೆಂದೇ ಸಮೀಕರಿಸಲಾಗಿದೆ. ಪಂಚಭೂತ ಕ್ಷೇತ್ರಗಳಲ್ಲಿ ಒಂದಾದ ಇದು "ಅಗ್ನಿ"ಲಿಂಗ ಕ್ಷೇತ್ರ. ಅಗ್ನಿಯು ಊರ್ಧ್ವಮುಖಿ. ಹಾಗಾಗಿ ಅದು ಧರ್ಮದ ಪ್ರತೀಕ; ಆತ್ಮದ ಪ್ರತೀಕ. ಅದು "ಅಹಂ" ಇರುವವರು ತಲುಪಲಾಗದ ಬೆಟ್ಟ. "ಅಹಂ ಎಂದರೆ ಯಾರು?" ಎಂದು ಅರಿಯಲು ಹೊರಡುವವರಿಗೆ ಗುರುವಾಗಿರುವ ಬೆಟ್ಟ! ಸ್ಕಂದಪುರಾಣದ ಮಾಹೇಶ್ವರ ಕಾಂಡ ಸುಮಾರು ಎರಡುಸಾವಿರ ಶ್ಲೋಕಗಳಲ್ಲಿ ಅರುಣಾಚಲದ ಮಹಾತ್ಮೆಯನ್ನು ವರ್ಣಿಸಿದೆ.
ದರ್ಶನಾತ್ ಅಪ್ರಸಾಧಸಿ ಜನನಾತ್ ಕಮಲಾಲಯೇ |
ಕಾಶ್ಯಾಮ್  ಮರಣಾನ್  ಮುಕ್ತಿ: ಸ್ಮರಣಾತ್ ಅರುಣಾಚಲೇ ||
ಚಿದಂಬರದ ನಟರಾಜನ ದರ್ಶನಮಾತ್ರದಿಂದ, ತಿರುವಾರೂರಿನಲ್ಲಿ ಜನ್ಮಮಾತ್ರದಿಂದ, ಕಾಶಿಯಲ್ಲಿ ದೇಹತ್ಯಾಗಮಾತ್ರದಿಂದ, ಅರುಣಾಚಲನ ಸ್ಮರಣೆ ಮಾತ್ರದಿಂದ ಮುಕ್ತಿ ಸಿಗುತ್ತದೆ. ಮಾರ್ಕಂಡೇಯ ಮುನಿಗಳು ನಂದಿಕೇಶ್ವರನಲ್ಲಿ ಕೇವಲ ಸ್ಮರಣೆ ಮಾತ್ರದಿಂದ ಮೋಕ್ಷ ನೀಡುವ ಪರಮ ಶಿವ ಕ್ಷೇತ್ರ ಯಾವುದೆಂದು ಪ್ರಶ್ನಿಸಿದಾಗ ಆತ ಅರುಣಾಚಲನನ್ನು ನೆನೆದು ಭಾವಪರವಶನಾಗಿ "ಅಂಥಾ ಕ್ಷೇತ್ರ ಅರುಣಾಚಲ. ಮೇರು ಹಾಗೂ ಕೈಲಾಸಗಳು ಶಿವನ ಆವಾಸ ಸ್ಥಾನಗಳು. ಆದರೆ ಅರುಣಾಚಲ ಪ್ರತ್ಯಕ್ಷ ಶಿವನೇ ಆಗಿದೆ" ಎಂದು ಉತ್ತರಿಸುತ್ತಾನೆ.

              ಎಲ್ಲಾ ಜನಗಳೂ ಸಾಂಪ್ರದಾಯಿಕ ರೀತಿಯಲ್ಲಿ ಪೂಜಿಸಲು ಸಾಧ್ಯವಾಗುವಂತೆಯೂ ಪ್ರಕಟವಾಗಬೇಕೆಂದು ಬ್ರಹ್ಮ ಮತ್ತು ವಿಷ್ಣು ಕೇಳಿಕೊಂಡಾಗ ಶಿವ ಅರುಣಾಚಲದ ಪೂರ್ವ ಭಾಗದಲ್ಲಿ ಸ್ವಯಂಭೂ ಆದ ಒಂದು ತೇಜಸ ಲಿಂಗವಾಗಿ ಪ್ರಕಟವಾದ. ಇವತ್ತಿಗೂ ಅರುಣಾಚಲೇಶ್ವರ ದೇವಾಲಯದಲ್ಲಿ ಪೂಜಿಸಲ್ಪಡುತ್ತಿರುವ ಶಿವಲಿಂಗ ಇದೇ. ಮೂರನೆಯ ತಮಿಳು ಸಾಹಿತ್ಯದ ಕಾಲದಲ್ಲಿದ್ದ ನಕ್ಕಿಯಾರ್ ಕವಿಯ ಕೃತಿಗಳಲ್ಲಿ ಇದರ ಪ್ರಸ್ತಾಪವಿದೆ. ಈ ದೇವಾಲಯದ ಕಾಲ ಕನಿಷ್ಟ ಎರಡು ಸಾವಿರ ವರ್ಷಗಳಷ್ಟು ಹಿಂದಿನದ್ದು. ತೇಜೋ ಲಿಂಗದ ಜೊತೆಗೆ ಪಾರ್ವತಿ ದೇವಿಯನ್ನು ಇಲ್ಲಿ ಉನ್ನಮುಲ್ಯಮ್ಮ ಎಂದು ಕರೆದು ಪೂಜಿಸಲಾಗುತ್ತದೆ. ಸಂತ ನಾಯನ್ಮಾರರ ಪದ್ಯಗಳಲ್ಲಿ ದೇವಾಲಯ ಉಲ್ಲೇಖಗೊಂಡಿದೆ. ದೇವಾಲಯದಲ್ಲಿ ನಂದಿ ಮತ್ತು ಸೂರ್ಯರ ಮೂರ್ತಿಗಳು, ಗರ್ಭಗುಡಿಯ ಹಿಂದಿನ ಗೋಡೆಯಮೇಲೆ ವೇಣುಗೋಪಾಲ ಸ್ವಾಮಿಯ ಚಿತ್ತಾರ, ಗರ್ಭಗೃಹದ ಗೋಡೆಯ ಆವರಣದ ಮೇಲೆ ಸೋಮಸ್ಕಂದ, ದುರ್ಗಾ, ಚಂಡಿಕೇಶ್ವರ, ಗಜಲಕ್ಷ್ಮಿ, ಆರುಮುಗಸ್ವಾಮಿ, ದಕ್ಷಿಣಾಮೂರ್ತಿ, ಸ್ವರ್ಣಭೈರವರ್,  ನಟರಾಜ ಮತ್ತು  ‘ಲಿಂಗೋದ್ಭವರ್’ ಗಳ ಕೆತ್ತನೆಗಳಿವೆ. ದೀಪದರ್ಶನ ಮಂಟಪ, ಸಾವಿರ ಸ್ಥಂಭಗಳ ಮಂಟಪ, ಕಲ್ಯಾಣ ಮಂಟಪ, ಮತ್ತು ವಸಂತ ಮಂಟಪಗಳೆಂಬ ಸುಂದರ ಪ್ರಾಂಗಣಗಳು ಇದರ ಭವ್ಯತೆಯನ್ನು ಹೆಚ್ಚಿಸಿವೆ. ಒಟ್ಟು ಒಂಬತ್ತು ಗೋಪುರ ಹಾಗೂ ಐದು ಪ್ರಾಕಾರಗಳನ್ನು ಹೊಂದಿರುವ ಈ ದೇವಾಲಯ ಇಪ್ಪತ್ತೈದು ಎಕರೆಯಲ್ಲಿ ಹಬ್ಬಿದ್ದು ಅತ್ಯಂತ ಪ್ರಾಚೀನ ವಿಶಾಲ ದೇವಾಲಯ. ದೇವಾಲಯಕ್ಕೆ ಸಂಬಂಧಿಸಿದ ಮೊದಲ ಶಾಸನ ಕ್ರಿ.ಶ ಒಂಬತ್ತನೆಯ ಶತಮಾನದ್ದು, ಚೋಳರ ಕಾಲದ್ದು. ಅತ್ಯಂತ ಒಳಗಿನ ಗೋಪುರವನ್ನು 11ನೆಯ ಶತಮಾನದಲ್ಲಿ ಚೋಳರ ಶೈಲಿಯಲ್ಲಿ ಕಟ್ಟಲಾಗಿದ್ದು ಇದಕ್ಕೆ ಗಿಣಿ ಗೋಪುರವೆಂದು ಹೆಸರು. ಉನ್ನತ ಗೋಪುರಗಳಿಂದಲೂ ಸಾವಿರ ಕಂಬಗಳ ಮಂಟಪದಿಂದಲೂ ಸುಂದರವಾದ ತಟಾಕ ಮತ್ತು ತೋಟಗಳಿಂದಲೂ ಅಲಂಕೃತವಾದ ದೇವಾಲಯ ಪೂರ್ವಾಭಿಮುಖವಾಗಿದ್ದು ಚೋಳ ಮತ್ತು ಹೊಯ್ಸಳರ ಶಿಲ್ಪಕಲೆಯಿಂದ ಶ್ರೀಮಂತವಾಗಿದೆ. ಪೂರ್ವಕ್ಕೆ ನಡುಪ್ರಾಕಾರದಲ್ಲಿ ಇರುವ, ಮೊದಲನೆಯದಕ್ಕಿಂತ ಪ್ರಾಚೀನವಾದ, ವಲ್ಲಾಲ ನಾಮಾಂಕಿತ ಗೋಪುರವನ್ನು ಹೊಯ್ಸಳ ನರೇಶ ವೀರ ಬಲ್ಲಾಳ ಕಟ್ಟಿಸಿದ. ಆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ತಾನು ರಾಜಗೋಪುರವನ್ನು ಕಟ್ಟಿದ ಬಗೆಗಿನ ಗರ್ವವು ಬಲ್ಲಾಳನ ಮನಸ್ಸಿನಲ್ಲಿತ್ತು. ಅರುಣಾಚಲನ ಉತ್ಸವದ ಸಮಯದಲ್ಲಿ ಉತ್ಸವ ಮೂರ್ತಿ ಈ ದ್ವಾರದ ಮೂಲಕ ಹೋಗಲು ಒಪ್ಪದೆ ತಟಸ್ಥವಾಯಿತು. ತನ್ನ ತಪ್ಪಿನ ಅರಿವಾದ ಬಲ್ಲಾಳ ಕ್ಷಮೆ ಕೇಳಿದ ಬಳಿಕವಷ್ಟೇ ಉತ್ಸವಮೂರ್ತಿ ಬಲ್ಲಾಳ ಕಟ್ಟಿಸಿದ ರಾಜಗೋಪುರದ ದ್ವಾರದ ಮೂಲಕ ಮುನ್ನಡೆಯಿತು. ತಿರುವಣ್ಣಾಮಲೈ ನಗರವನ್ನು ನಿರ್ಮಿಸಿದ, ಗಿರಿಪ್ರದಕ್ಷಿಣೆ ಹಾಗೂ ಅರುಣಾಚಲ ದೇವಾಲಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ ವೀರ ಬಲ್ಲಾಳನ ಕೊಡುಗೆಯನ್ನು ಎಲ್ಲಪ್ಪ ನಾಯನಾರ್ ತನ್ನ ಅರುಣಾಚಲ ಪುರಾಣಮ್ ಕೃತಿಯಲ್ಲಿ ವರ್ಣಿಸಿದ್ದಾನೆ. ಒಂದು ಐತಿಹ್ಯದ ಪ್ರಕಾರ ಅರುಣಾಚಲನೇ ತನ್ನ ಭಕ್ತ ಬಲ್ಲಾಳನ ಭಕ್ತಿಗೆ ಮೆಚ್ಚಿ ಮಗನಾಗಿ ಅವನ ತಿರುವಣ್ಣಾಮಲೈನ ಪಳ್ಳಿಕೊಂಡಪಟ್ಟು ಅರಮನೆಯಲ್ಲಿ ಜನಿಸಿದ. ಆದರೆ ಶೀಘ್ರವಾಗಿ ಆ ಮಗು ಕಣ್ಮರೆಯಾಯಿತು. ದುಃಖಿತನಾದ ರಾಜನಿಗೆ ಶಿವ ತಾನು ರಾಜನ ಅವಸಾನದ ಸಮಯದಲ್ಲಿ ಚಿತೆಗೆ ಬೆಂಕಿ ಇಡುವ ವೇಳೆಯಲ್ಲಿ ಹಾಜರಿರುವುದಾಗಿ ಅಭಯ ನೀಡಿದ. ಇಂದಿಗೂ ಬಲ್ಲಾಳನ ವಾರ್ಷಿಕ ಶ್ರಾದ್ಧದ ದಿನ ಪಳ್ಳಿಕೊಂಡಪಟ್ಟು ಅರಮನೆಯಲ್ಲಿ ಶಿವ ಆತನ ಮಗನಾಗಿ ಬರುವ "ಮಾಸಿ ಮಗಮ್ ತೀರ್ಥಾವರಿ ಉರ್ಚವಮ್" ಹಬ್ಬವನ್ನು ಆಚರಿಸಲಾಗುತ್ತಿದೆ. ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ದೇವಸ್ಥಾನದ ರಥ, ವಸಂತೋತ್ಸವಕ್ಕೆ ಉಪಯೋಗಿಸುವ ಬೃಹತ್ ಅಗ್ನಿ ಕುಂಡ ,ಸಾವಿರ ಕಂಬಗಳ ಮಂಟಪ, ದೇವಸ್ಥಾನದ ಹತ್ತಿರವಿರುವ ಪುಷ್ಕರಿಣಿ ಮುಂತಾದವನ್ನು ಕಟ್ಟಿಸಿದ. ದೇವಳದ ಪ್ರಧಾನದ್ವಾರದ ರಾಜಗೋಪುರ 217 ಅಡಿ ಎತ್ತರ, 98 ಅಡಿ ಅಗಲವಿದ್ದು ಕ್ರಿ.ಶ. 1516ರಲ್ಲಿ ಕೃಷ್ಣದೇವರಾಯನಿಂದ ನಿರ್ಮಿತವಾಯಿತು. ಚೋಳ, ಹೊಯ್ಸಳ, ವಿಜಯನಗರದ ಅರಸರ ಶಾಸನಗಳಲ್ಲದೆ ಕಾದವರು, ಚೇದಿಗಳು, ನಾಯಕರು ಹಾಗೂ ಆರ್ಕಾಟ್ ನವಾಬರ ಶಾಸನಗಳೂ ಈ ದೇವಾಲಯದಲ್ಲಿವೆ.

                 ಶಿವನಾಜ್ಞೆಯಂತೆ ದುಷ್ಟ ಸಂಹಾರಕ್ಕಾಗಿ ಅರುಣಾಚಲದಲ್ಲಿ ತಪಃಗೈದ ಪಾರ್ವತಿ, ತಪಸ್ಸು ಮುಗಿದ ಬಳಿಕ ಅರುಣಾಚಲಕ್ಕೆ ಪ್ರದಕ್ಷಿಣೆ ಬಂದಳು. ಪ್ರತ್ಯಕ್ಷನಾದ ಶಿವ ಅವಳಿಂದ ವರಣಮಾಲೆಯನ್ನು ಸ್ವೀಕರಿಸಿ ತನ್ನಲ್ಲೇ ಅವಳಿಗೆ ಸ್ಥಾನವನ್ನು ನೀಡಿ ಅರ್ಧನಾರೀಶ್ವರನಾದ. ಪಾರ್ವತಿಯ ಪ್ರಾರ್ಥನೆಯಂತೆ ಆ ದಿನವನ್ನು ಪ್ರತೀ ವರ್ಷ ಉತ್ಸವದ ದಿನವಾಗಿ ಆಚರಿಸಲಾಗುತ್ತದೆ. ಅಹಮಿಕೆಗೊಳಗಾಗಿ ವಾದ ಹೂಡಿ ಶಿವನ ಮಹಿಮೆಯನ್ನು ಹರಿ-ವಿರಂಚಿಗಳೀರ್ವರು ಅರಿತು ಶಿವನ ಕೃಪೆಗೆ ಪಾತ್ರರಾದ ಕಾರ್ತಿಕಪೂರ್ಣಿಮೆಯ ದಿನವೂ ಇದು ಹೌದು. ಹನ್ನೆರಡು ದಿನ ಅರುಣಾಚಲೇಶ್ವರನಿಗೆ ವಿಜೃಂಭಣೆಯ ಪೂಜೆ, ಉತ್ಸವ ನಡೆಯುತ್ತದೆ. ಹತ್ತನೆಯ ದಿನ ದೇವಾಲಯದಲ್ಲಿ ಹಚ್ಚಿದ ಪವಿತ್ರ ಜ್ಯೋತಿಯಿಂದ ದೀಪವನ್ನು ಕೊಂಡೊಯ್ದು ಅರುಣಾಚಲದ ಶಿಖರದಲ್ಲಿ ಜ್ಯೋತಿಯನ್ನು ಬೆಳಗಲಾಗುತ್ತದೆ. ಸುತ್ತ ಹತ್ತಾರು ಮೈಲುಗಳಿಗೆ ಕಾಣುವ ಈ ಜ್ಯೋತಿಯನ್ನು ಕಂಡೊಡನೆ ಅರುಣಾಚಲೇಶ್ವರ ದೇವಾಲಯ ಹಾಗೂ ರಮಣಾಶ್ರಮದಲ್ಲಿ ಅರುಣಾಚಲ ಶಿವ ಘೋಷಣೆ ಮುಗಿಲು ಮುಟ್ಟುತ್ತದೆ. ಹನ್ನೆರಡನೇ ದಿವಸ ಅರುಣಾಚಲೇಶ್ವರ ಮತ್ತು ಪಾರ್ವತಿಯ ಉತ್ಸವ ಮೂರ್ತಿಗಳನ್ನು ವಸ್ತ್ರಾಭರಣ, ಪುಷ್ಪಮಾಲೆಗಳಿಂದ ಅಲಂಕರಿಸಿ ಪಲ್ಲಕ್ಕಿಯಲ್ಲಿ ಅರುಣಾಚಲ ಬೆಟ್ಟದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಪಾರ್ವತಿ ತಪಸ್ಸು ಮಾಡಿದ್ದು ಮುನಿ ಗೌತಮರ ಆಶ್ರಮದ ಬಳಿಯಲ್ಲಿ. ಅಲ್ಲಿ ಈಗ ಪಾರ್ವತಿಯು "ಹಸಿರು ವರ್ಣದ ತಾಯಿ" ಎಂದು ಪೂಜಿಸಲ್ಪಡುವ, 1000 ವರ್ಷಗಳಿಗೂ ಹಳೆಯದಾದ ಪಚ್ಚೈ ಅಮ್ಮಾಳ್ ದೇವಾಲಯವಿದೆ.

              ತಿರುವಣ್ಣಾಮಲೈನಲ್ಲಿಯ ಅತ್ಯಂತ ಹಳೆಯ ದೇವಸ್ಥಾನ ಆದಿ ಅಣ್ಣಾಮಲೈ. ಸುಮಾರು ಅರ್ಧ ಎಕರೆ ಜಾಗದಲ್ಲಿ ವ್ಯಾಪಿಸಿರುವ ಮೊದಲು ಮರಗಳಿಂದ ನಿರ್ಮಿತವಾಗಿದ್ದ ಈ ದೇವಾಲಯವನ್ನು 1200 ವರ್ಷಗಳ ಕೆಳಗೆ ಕಲ್ಲುಗಳಿಂದ ಕಟ್ಟಲಾಯಿತು. ಇಲ್ಲಿ ಪೂಜಿಸಲ್ಪಡುವ ಲಿಂಗವನ್ನು ಸ್ವತಃ ಬ್ರಹ್ಮನೇ ಕೆತ್ತಿದನೆಂಬ ಪ್ರತೀತಿ. ಅರುಣಾಚಲ ಬೆಟ್ಟದ ತಳದಲ್ಲಿ ಅಷ್ಟದಿಕ್ಕುಗಳಲ್ಲಿ ಅಷ್ಟಲಿಂಗಗಳು ಸ್ಥಾಪಿಸಲ್ಪಟ್ಟಿವೆ. ಇವುಗಳಿಗೆ ಕಿರು ಮಂದಿರವನ್ನೂ ನಿರ್ಮಿಸಲಾಗಿದೆ. ಅಷ್ಟಲಿಂಗಗಳೆಂದರೆ ಇಂದ್ರಲಿಂಗ, ಅಗ್ನಿಲಿಂಗ, ಯಮ ಲಿಂಗ, ನಿಋತಿ ಲಿಂಗ, ವರುಣಲಿಂಗ, ವಾಯುಲಿಂಗ, ಕುಬೇರಲಿಂಗ ಹಾಗೂ ಈಶಾನ್ಯಲಿಂಗ. ಈ ಎಂಟು ಲಿಂಗಗಳು 12 ಚಂದ್ರಾಕೃತಿಗಳೊಂದಿಗೆ ಬೆಸೆದುಕೊಂಡಿವೆ. ಅರುಣಾಚಲದ ಸುತ್ತ 14 ಕಿಮೀ ವ್ಯಾಪ್ತಿಯಲ್ಲಿ ಈ ಅಷ್ಟಲಿಂಗ ಮಂದಿರಗಳಿವೆ. ಈ ಎಂಟು ಲಿಂಗಗಳು ಗಿರಿವಲಂನ ಭಾಗವಾಗಿದೆ. ಶಕ್ತಿ ಸ್ಥಳಗಳಲ್ಲೊಂದಾದ ಪಡವೇಡು ರೇಣುಕಾಂಬ ದೇವಸ್ಥಾನ ತಿರುವಣ್ಣಾಮಲೈನಲ್ಲಿದೆ. ಜಮದಗ್ನಿಯ ಪತ್ನಿ ರೇಣುಕೆಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಸೋಮನಾಥಲಿಂಗವು ಇಲ್ಲಿದೆ.

             ಪಾಲ್ ಬ್ರಂಟನ್, ಬ್ರಿಟಿಷ್ ಪತ್ರಕರ್ತ. ಆಧ್ಯಾತ್ಮ ಜೀವನದ ವಿಪರೀತ ಕುತೂಹಲ ಅವನ ಎದೆಯಲ್ಲೊಂದು ಬೆಂಕಿಯನ್ನೆಬ್ಬಿಸಿಬಿಟ್ಟಿತ್ತು. ಆ ಕುತೂಹಲ ಅವನನ್ನು ನಿಗೂಢ ಭಾರತದಲ್ಲಿ ಹುಡುಕಾಟ ನಡೆಸಲು ಪ್ರೇರೇಪಿಸಿತು. ಹಾಗೆ ಬಂದವ ಭಾರತದಲ್ಲಿ ಅನೇಕ ಕಡೆ ಸುತ್ತಾಡಿ ಅನೇಕ ಸಾಧು, ಸಂತರ ದರ್ಶನಗೈದ. ಕೆಲವರಿಂದ ಪ್ರೇರಣೆ ಪಡೆದ, ಕೆಲವರ ಪೊಳ್ಳುತನದಿಂದ ಜಿಗುಪ್ಸೆಗೊಂಡು ದೂರ ಸರಿದ. ಕಂಚಿ ಪರಮಾಚಾರ್ಯರಿಂದ ಪ್ರಭಾವಿತನಾದ ಅವನಿಗೆ ಕಂಚಿ ಶ್ರೀಗಳು ಅರುಣಾಚಲದ ದಾರಿ ತೋರಿದರು. ಹಿಂದೆ ತನಗೆ ಮಾರ್ಗದರ್ಶನ ಮಾಡಿದ್ದ ಯುವ ಯೋಗಿ ಸುಬ್ರಹ್ಮಣ್ಯನ ಸಹಾಯದಿಂದ ಇದೇ ಅರುಣಾಚಲ ಬೆಟ್ಟದ ತಪ್ಪಲಲ್ಲಿ ಬಂದು ನಿಂತ ಪಾಲ್ ಬ್ರಂಟನ್. ಬೆಟ್ಟದಲ್ಲೊಂದು ಆಶ್ರಮ. ಅಲ್ಲೊಬ್ಬ ಬರಿಯ ಕೌಪೀನಧಾರಿ. ಅವನ ಸುತ್ತ ಕುಳಿತ ಹದಿನೈದಿಪ್ಪತ್ತು ಜನ ಧ್ಯಾನದಲ್ಲಿ ಮುಳುಗಿದ್ದಾರೆ. ಅಗ್ಗಿಷ್ಟಿಕೆಯ ಸುಗಂಧ ಅಲ್ಲಿ ಹರಡಿತ್ತು. ಅದಕ್ಕೆ ಮಿಗಿಲಾದ ಪ್ರಶಾಂತತೆ ಮಹದಾನಂದ ಅಲ್ಲಿ ಮೆರೆದಿತ್ತು. ಆ ಕೌಪೀನಧಾರಿಯ ದೃಷ್ಟಿ ದೂರದಾಗಸದೆಲ್ಲೋ ದೃಢವಾಗಿ ನಿಂತಿತ್ತು. ಪಾಲ್ ಬ್ರಂಟನ್ನನ್ನಾಗಲೀ, ಅವನು ತಂದ ಫಲವನ್ನಾಗಲೀ, ಅವನ ಜೊತೆ ಅಥವಾ ಬಳಿಕ ಬಂದವರನ್ನು ಆತ ಲಕ್ಷಿಸಲೇ ಇಲ್ಲ. ಕೆಲವೇ ಹೊತ್ತು. ಬ್ರಂಟನ್ನಿಗೆ ಅವರತ್ತ ನೋಡುತ್ತಿದ್ದ ತನ್ನ ದೃಷ್ಟಿಯನ್ನು ಬದಿಗೆ ಸರಿಸಲಾಗಲಿಲ್ಲ. ಅವನ ಮನದಲ್ಲಿದ್ದ ಅಪನಂಬಿಕೆ, ಸಂದೇಹಗಳೆಲ್ಲಾ ಹೇಳ ಹೆಸರಿಲ್ಲದಂತೆ ಕರಗಿ ಹೋದವು. ಅಸಂಖ್ಯ ಪ್ರಶ್ನೆಗಳನ್ನವನು ಹೊತ್ತು ತಂದಿದ್ದ. ಆದರೆ ಅವನಲ್ಲಿದ್ದ "ನಾನು" ಕರಗಿ ಹೋಗಿತ್ತು. ಇನ್ನು ಪ್ರಶ್ನೆಗಳೇನು ಮಹಾ? ಅವನು ಕಾಲದ ಪರಿವೆಯೇ ಇಲ್ಲದೆ ಆನಂದದ ಹರಿವಿನಲ್ಲಿ ಕರಗಿ ಹೋಗಿದ್ದ. ಆಗ ಕೌಪೀನಧಾರಿಯ ದೃಷ್ಟಿ ಪಾಲ್ ಬ್ರಂಟನ್ ಮೇಲೆ ಬಿತ್ತು. ತಾನು ಬಂದ ಉದ್ದೇಶವನ್ನು ಪಾಲ್ ವಿವರಿಸಿದಾಗ ಆ ಕೌಪೀನಧಾರಿ "ನೀವು ಪದೇ ಪದೇ ನಾನು, ನಾನು ಎನ್ನುತ್ತೀರಿ. ಆ ನಾನು ಯಾರು?" ಎಂದು ನೇರ ಪ್ರಶ್ನೆ ಹಾಕಿದ. ಪಾ.ಬ್ರ: "ನಾನು ಪಾಲ್ ಬ್ರಂಟನ್". ಕೌ:"ಅದು ನಿಮ್ಮ ಹೆಸರಾಯಿತು, ನೀವಾರು?" ಪಾ.ಬ್ರ: "ನನ್ನ ಜೀವನ ಪೂರ್ತಿ ಅವನನ್ನು ಬಲ್ಲೆ." ಕೌ:"ಅದು ನಿಮ್ಮ ದೇಹ; ನೀವು ಯಾರು?" ಪಾಲ್ ಬ್ರಂಟನ್ನನಿಗೆ ತಲೆಕೆಟ್ಟುಹೋಯಿತು. ಆ ಕೌಪೀನಧಾರಿಯ ಮಾರ್ಗದರ್ಶನ ಪಡೆದು "ನಾನು ಯಾರು?" ಎನ್ನುವ ಹುಡುಕಾಟಕ್ಕಾಗಿ ಅಲ್ಲೇ ಗುಡಿಸಲು ಕಟ್ಟಿಕೊಂಡು ಕುಳಿತ. ಕೆಲವೇ ಸಮಯದಲ್ಲಿ ತಿರುವಣ್ಣಾಮಲೈ ಬಿಟ್ಟು ಮತ್ತೆಲ್ಲೂ ತೆರಳದ ಆ ಕೌಪೀನಧಾರಿಯ ಕಾಲ ಕೆಳಗೆ ಸಮಸ್ತ ವಿಶ್ವವೇ ಬಂದು ಬಿತ್ತು.

                 ಆತ ರಮಣ ಮಹರ್ಷಿ. ಕರ್ಮಬಂಧನಗಳಿಂದ ಕಳಚಿಕೊಳ್ಳಬೇಕೆಂಬ, ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕೆಂಬ ಯಾವ ಅಭಿಲಾಶೆಯೂ ಇಲ್ಲದ ಜೀವನದ ಬಗ್ಗೆ ಅರಿತುಕೊಳ್ಳುವ ಚಿಕ್ಕ ಪ್ರಾಯದಲ್ಲಿ "ನಾನು ಯಾರು?" ಎಂಬ ಅರಿವು ಅವರಲ್ಲಿ ಝಗ್ಗನೆದ್ದು ಪ್ರಕಾಶಿಸಿತು. ಲೌಕಿಕ ಜೀವನದ ನಿರರ್ಥಕತೆ ಅರ್ಥವಾದೊಡನೆ ಹಿಂದೊಮ್ಮೆ ಕೇಳಿದ್ದ ಅರುಣಾಚಲವೆಂಬ ಹೆಸರು ಕೂಗಿ ಕರೆಯಿತು. ಹಾಗೆ ಬಂದವರು ಎಲ್ಲವನ್ನೂ ಕಿತ್ತೆಸೆದು ಗಾಢ ಸಮಾಧಿಯಲ್ಲಿ ಮುಳುಗಿ ಜೀವನದ ಔನ್ನತ್ಯವನ್ನು ಮುಟ್ಟಿಬಿಟ್ಟರು. ಜನ ಅವರನ್ನು ದೇವರೆಂದರು. ಜನರೇ ಆತನಿಗೆ ಆಶ್ರಮ ಕಟ್ಟಿದರು. ಶುಕ ಮಾರ್ಗದಿ ಆತ್ಮ ಸಾಕ್ಷಾತ್ಕರಿಸಿಕೊಂಡ ಈ ಪ್ರಖರ ಸೂರ್ಯನ ಕಿರಣ ಭೂಮಂಡಲದ ಇಂಚು ಇಂಚಿಗೂ ಮುಟ್ಟಿತು. ಅದಕ್ಕೆ ಪಾಲ್ ಬ್ರಂಟನ್ ನೆಪವಾದ. ಜಗತ್ತಿನ ಎಲ್ಲಾ ಭಾಗಗಳಿಂದ ಜಾತಿ, ಮತ, ಪಂಥ, ಲಿಂಗ, ಪ್ರಾಯ, ಬಡವ ಬಲ್ಲಿದ ಮನುಷ್ಯ-ಪ್ರಾಣಿ ಎಂಬ ಭೇದಗಳಿಲ್ಲದೆ ಸಹಸ್ರಾರು ಜನರು ಆ ಕಿರಣದ ಜಾಡು ಹುಡುಕುತ್ತಾ ಬಂದು ಸನ್ನಿಧಿಯಲ್ಲಿ ಶಾಂತಿ, ನೆಮ್ಮದಿಯನ್ನು ಅನುಭವಿಸಿದರು, ಆತ್ಮಜ್ಞಾನ ಗಳಿಸುವತ್ತ ಹೊರಳಿದರು, ಜ್ಞಾನದ ಸ್ವರ್ಣಫಲಗಳನ್ನೇ ಪಡೆದುಕೊಂಡರು. ಆತನನ್ನು ಭಗವಾನನೆಂದೂ, ಮಹರ್ಷಿಯೆಂದೂ ಆರಾಧಿಸಿದರು. ಹಾಗಂತ ಆತನೇನು ಮಠ ಕಟ್ಟಿಕೊಳ್ಳಲಿಲ್ಲ. ಪೀಠಾಧಿಪತಿಯೆಂದು ಘೋಷಿಸಿಕೊಳ್ಳಲಿಲ್ಲ. ಭಗವಂತನೆಂದು ಸ್ವಯಂಘೋಷ ಮಾಡಲಿಲ್ಲ. ಅನೇಕ ಪವಾಡಗಳು ಆತನಿಂದ ಜರಗಿದವು. ಅವನ್ನೇನು ತನ್ನದೆಂದು ಹೇಳಲಿಲ್ಲ. ಸಹಜ ಪ್ರಾಕೃತಿಕ ಕ್ರಿಯೆಯೆಂಬಂತೆ ಬದಿಗೆ ಸರಿಸಿದ. ಆತ ಶಿಷ್ಯರೆಂದು ಯಾರನ್ನೂ ಬಹಿರಂಗವಾಗಿ ಘೋಷಿಸಲಿಲ್ಲ. ಆದರೆ ಬಳಿ ಬಂದವರೆಲ್ಲರಿಗೂ ಜ್ಞಾನವನ್ನು ಮೌನವಾಗಿ ಪಸರಿಸಿದರು. ಪಶುಪಕ್ಷಿಗಳಿಗೂ ಆತ್ಮಭೋಧೆ ಉಂಟುಮಾಡಿದ. ಅವುಗಳಿಗೂ ಆತ್ಮವಿದೆ ಎಂದ ಪ್ರಾಚೀನ ಭಾರತದ ಋಷಿವರ್ಯರ ಜೀವನವನ್ನು ಸ್ವತಃ ಬದುಕಿ ಜಗತ್ತಿಗೆ ನೆನಪು ಮಾಡಿಸಿದ. ಮೌನವಾಗಿಯೇ ಜಗವನ್ನಾಳಿದ. ಬಳಿ ಬಂದವರ ಅಹಂ ಅನ್ನು ಮೌನವಾಗಿಯೇ ಮುರಿದ. ದಕ್ಷಿಣಾಮೂರ್ತಿಯ ಅಪರಾವತಾರವೆನಿಸಿದ. ಈಗಲೂ ದೇಶವಿದೇಶಗಳಿಂದ ರಮಣಾಶ್ರಮ-ಅರುಣಾಚಲ ಜನರನ್ನು ಸೆಳೆಯುತ್ತಲೇ ಇದೆ. ಇಂದಿಗೂ ರಮಣಾಶ್ರಮದಲ್ಲಿ, ಅರುಣಾಚಲದ ತುತ್ತತುದಿಗೆ ಎಲ್ಲಿಂದಲೋ ಬಂದ ಪ್ರಾಣಿಗಳು ಹೋಗಿ ಧ್ಯಾನಿಸುತ್ತವೆ. ಸ್ವಘೋಷಿತ ಆಧ್ಯಾತ್ಮ ಜೀವಿಗಳೆಲ್ಲಾ ರಮಣರ ಎದುರು ಬರಲು ಹೆದರುತ್ತಿದ್ದರೆಂದರೆ ಅವರ ಮಹಾನತೆ ಅರಿಯಬಹುದು. ಅರಿತವರಿಗೆ ಆತ ಜ್ಞಾನಿ, ಮೂಢರಿಗೆ ಬರಿಯ ಕೌಪೀನಧಾರಿ! ಆತ ಭಾರತದ ಅಂತಃಸತ್ವವನ್ನು ಬೆಳಗಿ ಜಗಕೆ ಪಸರಿಸಿದ ಆತ್ಮಜ್ಯೋತಿ! ಅರುಣಾಚಲ ಬೇರೆಯಲ್ಲ, ರಮಣ ಬೇರೆಯಲ್ಲ, ಶಿವ ಬೇರೆಯಲ್ಲ; ರಮಣರ ಸಾನ್ನಿಧ್ಯ ತಿರುವಣ್ಣಾಮಲೈಯ ಮಣ್ಣನ್ನು ಸಾರ್ಥಕಗೊಳಿಸಿತು. ಭಾರತದ ಮಣ್ಣನ್ನೂ!

                 ಅನೇಕ ಋಷಿಗಳು ಅರುಣಾಚಲದಿಂದ ಆಕರ್ಷಿತರಾಗಿ ಅಲ್ಲಿ ತಪಸ್ಸನ್ನಾಚರಿಸಿದ್ದಾರೆ. ಆಧುನಿಕ ಕಾಲದಲ್ಲಿಯೂ ಅರುಣಾಚಲದಿಂದ ಸೆಳೆಯಲ್ಪಟ್ಟವರು ಅನೇಕ. ಅವರಲ್ಲಿ ಮಾಣಿಕವಾಚಿಕರ್, ಅಪ್ಪಾರ್, ಸಂಬಂದಾರ್, ಸುಂದರಾರ್, ಗುಹಾ ನಮಶ್ಶಿವಾಯ, ಗುರು ನಮಶ್ಶಿವಾಯ, ವಿರೂಪಾಕ್ಷ ದೇವ, ಈಶಾನ್ಯ ದೇಶಿಕರ್, ಅರುಣಗಿರಿನಾಥರ್, ಮಹಾರ್ ಶೇಷಾದ್ರಿ ಸ್ವಾಮಿ ಮತ್ತು ಭಗವಾನ್ ರಮಣ ಮಹರ್ಷಿ ಪ್ರಮುಖರು. ವರ್ಷದ 365 ದಿನವೂ ಭಕ್ತರೂ ಅರುಣಾಚಲ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಒಟ್ಟು 14ಕೀಮೀ.ನಷ್ಟಾಗುವ ಇದಕ್ಕೆ ಗಿರಿವಲಂ ಎಂದು ಹೆಸರು. ಹುಣ್ಣಿಮೆ ದಿನವಂತೂ ಬೆಳಗಿನಿಂದ ರಾತ್ರಿವರೆಗೆ ಪ್ರದಕ್ಷಿಣೆ ನಡೆಯುತ್ತಿರುತ್ತದೆ. ತಮಿಳು ಕಾರ್ತಿಕ ಮಾಸದ ಪೌರ್ಣಿಮೆ ಗಿರಿ ಪ್ರದಕ್ಷಿಣೆಗೆ ಶ್ರೇಷ್ಠ ದಿನ. ಆ ದಿನ ಶಿವನನ್ನು ಭಜಿಸುತ್ತಾ, ನೆನೆಯುತ್ತಾ, ನರ್ತಿಸುತ್ತಾ ಜನಸಮೂಹವೇ ಹಗಲು-ರಾತ್ರಿಯಿಡೀ ಪ್ರದಕ್ಷಿಣೆ ಬರುತ್ತದೆ. ಪ್ರದಕ್ಷಿಣೆಯ ಸಮಯದಲ್ಲಿ ಜನರ ಜೊತೆಗೆ ದೇವತೆಗಳು, ಸಿದ್ಧರೂ ಸಾಗುತ್ತಾರೆ ಎನ್ನುವ ಪ್ರತೀತಿ ಇದೆ. ಪ್ರದಕ್ಷಿಣೆಗೆ ವಾಹನ ಬಳಸಬಾರದು, ನಡೆದೇ ಹೋಗಬೇಕು ಎನ್ನುವ ಅಲಿಖಿತ ನಿಯಮ ಅಲ್ಲಿದೆ. ಗಿರಿಪ್ರದಕ್ಷಿಣೆ ಭಕ್ತನ ಪಾಪವನ್ನು ನಿವಾರಿಸಿ, ಪುನರ್ಜನ್ಮವನ್ನು ತಡೆದು ಜ್ಞಾನವನ್ನು ದಯಪಾಲಿಸಿ ಲೋಕದಿಂದ ಬಿಡುಗಡೆಗೊಳಿಸುತ್ತದೆ ಎಂದು ರಮಣರು ಗಿರಿಪ್ರದಕ್ಷಿಣೆಯ ಮಹತ್ವವನ್ನು ವಿವರಿಸಿದ್ದಾರೆ. ಅರುಣಾಚಲವನ್ನು ಹತ್ತುವುದು(ಬರಿಗಾಲಲ್ಲಿ) ಕೂಡಾ ಗಿರಿಪ್ರದಕ್ಷಿಣೆಯ ಭಾಗವೇ. ಅರುಣಾಚಲ ದೇವಾಲಯದ ಉತ್ತರ ಗೋಪುರದ ಬಳಿ ಇರುವ ಪೂರ್ವದ ಬದಿಯಿಂದ ಗಿರಿಯನ್ನು ಹತ್ತಬೇಕು. ಮೊದಲು ಹದಿಮೂರನೇ ಶತಮಾನದಲ್ಲಿ ಜೀವಿಸಿದ್ದ ಸಂತ ಶಿವಭಕ್ತ ಗುಹಾ ನಮಶ್ಶಿವಾಯರ ವಾಸಸ್ಥಳ ಸಿಗುತ್ತದೆ. ಗುಹೆಯೊಳಗೆ ಸಮಾಧಿಲಿಂಗ ಹಾಗೂ ದಕ್ಷಿಣಾಮೂರ್ತಿಯ ಪ್ರತಿಮೆಯಿದೆ. ಮುಂದೆ ಸಿಗುವುದೇ ವಿರೂಪಾಕ್ಷ ಗುಹೆ. ಹದಿಮೂರನೇ ಶತಮಾನದಲ್ಲಿದ್ದ ಸಂತ ವಿರೂಪಾಕ್ಷ ಓಂಕಾರದ ಆಕೃತಿಯಲ್ಲಿರುವ ಈ ಗುಹೆಯಲ್ಲಿ ತಪಸ್ಸನ್ನಾಚರಿಸಿದ. ಭಗವಾನ್ ರಮಣ ಮಹರ್ಷಿಗಳು 1899ರಿಂದ 1916ರವರೆಗೆ ಹದಿನೇಳು ವರ್ಷಗಳ ಕಾಲ ಇಲ್ಲಿ ತಪಸ್ಸನ್ನಾಚರಿಸಿದರು. ತಮ್ಮ ಮೊದಲ ಭಕ್ತರಾದ ಗಂಭೀರಂ ಶೇಷಯ್ಯರ್ ಹಾಗೂ ಶಿವಪ್ರಕಾಶಂ ಪಿಳ್ಳೈಯವರಿಗೆ ಜ್ಞಾನಮಾರ್ಗವನ್ನು ಅವರು ಬೋಧಿಸಿದ್ದು ಇಲ್ಲೇ. ಅವರ ಮೊದಲ ಆಂಗ್ಲಭಕ್ತ ಕೃತಾರ್ಥನಾದದ್ದೂ ಇಲ್ಲೇ. ಕಾವ್ಯಕಂಠ ಗಣಪತಿ ಮುನಿಗಳು ರಮಣಾನುಗ್ರಹಕ್ಕೆ ಪಾತ್ರರಾಗಿ, ರಮಣರನ್ನು ಮಹರ್ಷಿ ಎಂದು ಹೆಸರಿಸಿದ್ದು ಇಲ್ಲೇ. ಮುಂದೆ ರಮಣರ ಶಿಷ್ಯ ಕಂದಸ್ವಾಮಿ ಕಟ್ಟಿದ ಸುಂದರ ಸ್ಕಂದಾಶ್ರಮ ಸಿಗುತ್ತದೆ. ಇಲ್ಲಿಂದ ಅರುಣಾಚಲೇಶ್ವರ ದೇಗುಲ ರಮ್ಯ ಮನೋಹರವಾಗಿ ಕಂಗೊಳಿಸುವುದನ್ನು ಕಾಣಬಹುದು. ರಮಣರ ತಾಯಿ ಜನನ ಮರಣಗಳ ಚಕ್ರದಿಂದ ಬಿಡುಗಡೆ ಹೊಂದಿದ್ದು ಇಲ್ಲೇ. ಇನ್ನಷ್ಟು ಮೇಲಕ್ಕೆ ತೆರಳಿದಾಗ ರಮಣರು ಆಗಾಗ ಭೇಟಿ ನೀಡುತ್ತಿದ್ದ ಏಳು ಚಿಲುಮೆಗಳಿರುವ ಸ್ಥಳ ಸಿಗುತ್ತದೆ. ಕಡಿದಾದ ದಾರಿಯಲ್ಲಿ ಹತ್ತಿ ಸಾಗಿದಾಗ ಅದು ಅರುಣಾಚಲದ ನೆತ್ತಿಯನ್ನು ಮುಟ್ಟುತ್ತದೆ. ಅಲ್ಲಿ ಎರಡು ಹೆಜ್ಜೆ ಗುರುತಿರುವ ಚಪ್ಪಟೆಯಾಕಾರದ ಕಲ್ಲು ಇದೆ. ಪಕ್ಕದಲ್ಲೇ ಕಾರ್ತಿಕ ದೀಪವನ್ನು ಉರಿಸುವ ಕಡಾಯಿಯಿದೆ. ಅಲ್ಲೇ ಹಲವಾರು ವರ್ಷಗಳಿಂದ ಸಾಧುವೊಬ್ಬ ವಾಸವಾಗಿದ್ದಾನೆ! ತಿರುವಣ್ಣಾಮಲೈಯಲ್ಲಿ ಹದಿನಾಲ್ಕನೇ ಶತಮಾನದಲ್ಲಿ ಜನಿಸಿದ್ದ ಸುಬ್ರಹ್ಮಣ್ಯ ಭಕ್ತನಾಗಿದ್ದ ಅರುಣಗಿರಿನಾಥರ್ ಮುರುಗನನ್ನು ಕುರಿತಿ ತಿರುಪುಳಲ್ ಎಂಬ ಅಮೋಘ ಸ್ತೋತ್ರ ರಚಿಸಿದ್ದಾರೆ. ಅದು ಸ್ಕಂದ ಭಕ್ತರಿಗೆ ನಿತ್ಯಪಾರಾಯಣದ ಗ್ರಂಥ.

                 ಭಕ್ತರನ್ನು ಅಂತರ್ಮುಖಿಗಳನ್ನಾಗಿ ಮಾಡಿ ಅವರ ಹೃದಯದತ್ತ ಹೊರಳಿಸುತ್ತದೆ ಎನ್ನುವ ಕಾರಣಕ್ಕೆ ಅರುಣಾಚಲಕ್ಕೆ ಗುರುಸ್ಥಾನ ಪ್ರಾಪ್ತಿಯಾಗಿದೆ. ಹದಿಮೂರನೇ ಶತಮಾನದಲ್ಲಿದ್ದ ಗುಹಾನಮಶ್ಶಿವಾಯ ತಮ್ಮ ಸ್ತೋತ್ರಗಳಲ್ಲಿ ಬಹು ಸೊಗಸಾಗಿ ಇದನ್ನು ವರ್ಣಿಸಿದ್ದಾರೆ. ಭಗವಾನ್ ರಮಣರಿಂದ ಒಮ್ಮೆ ಇದನ್ನು ಕುರಿತು ಅದ್ಭುತವಾದ ಐದು ಸ್ತೋತ್ರಗಳು ಹೊರಹೊಮ್ಮಿದವು. ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಅದ್ಭುತ ಆಧ್ಯಾತ್ಮಿಕ ಸಾಧನೆ ಮಾಡಿದ ವ್ಯಕ್ತಿಗಳು ಇರುವುದು ಅಪರೂಪ. ಆದರೆ ತಿರುವಣ್ಣಾಮಲೈಗೆ ಅದೇನೂ ವಿಶೇಷವಲ್ಲ. ರಮಣ ಮಹರ್ಷಿಗಳು ಇದ್ದ ಸಮಯದಲ್ಲೇ ಅರುಣಾಚಲದಲ್ಲಿ ಶೇಷಾದ್ರಿ ಸ್ವಾಮಿಗಳೆಂಬ ಭಕ್ತಿಮಾರ್ಗದ ಸಂತರಿದ್ದರು. ತಮಗಿಂತ ಸಾಧನೆಯಲ್ಲಿ ಎತ್ತರಕ್ಕೇರಿದ್ದ ರಮಣರನ್ನು ಬಹು ಗೌರವದಿಂದ ನೋಡುತ್ತಿದ್ದರು. ವಯಸ್ಸಿನಲ್ಲಿ ಚಿಕ್ಕವರಾದ ಅವರನ್ನು ತಮ್ಮನೆಂದು ಕರೆಯುತ್ತಿದ್ದರು. ತಮ್ಮ ಬಳಿಗೆ ಬಂದವರಿಗೆ "ಬೆಟ್ಟದ ಮೇಲಿರುವ ನನ್ನ ತಮ್ಮ ಹತ್ತುಸಾವಿರ ಸಂಪಾದಿಸುತ್ತಾನೆ. ನಾನಾದರೋ ಸಾವಿರ ರೂಪಾಯಿ ಸಂಪಾದಿಸುತ್ತೇನೆ. ನೀವು ಕನಿಷ್ಟ ನೂರು ರೂಪಾಯಿ ಸಂಪಾದಿಸಲಾಗದೇ?" ಎಂದು ಆಧ್ಯಾತ್ಮಿಕ ಸಿದ್ಧಿಯನ್ನು ಗಳಿಸಲು ಒತ್ತಾಯಿಸುತ್ತಿದ್ದರು. ದೀಕ್ಷೆಯನ್ನು ಬೇಡಿ ಬಂದವರಿಗೆ ಸೂಕ್ತ ಮಂತ್ರವನ್ನು ಬೋಧಿಸುತ್ತಿದ್ದರು. ರಮಣಸ್ವಾಮಿಯಲ್ಲಿ ನಿಷ್ಠೆಯನ್ನಿಟ್ಟುಕೊಂಡವರು ಅವರನ್ನೇ ಅನುಸರಿಸಬೇಕೆಂದು ಹೇಳುತ್ತಿದ್ದರು. ತಾವು ತಿನ್ನುವ ಮೊದಲು ಆಹಾರವನ್ನು ಸುತ್ತ ಜೀವಜಂತು,ಪಂಚಭೂತ, ಯಕ್ಷಾದಿಗಳಿಗೆಂದು ಚೆಲ್ಲಿ ಉಳಿದುದನ್ನು ತಿನ್ನುತ್ತಿದ್ದರು. ತಿರುವಣ್ಣಾಮಲೈಯಲ್ಲಿ ಮೂರು ಲಿಂಗಗಳಿವೆ; ಒಂದು ಅರುಣಾಚಲ, ಇನ್ನೊಂದು ರಮಣಸ್ವಾಮಿ, ಮಗದೊಂದು ಶೇಷಾದ್ರಿ ಎನ್ನುತ್ತಿದ್ದರು. ತಾವು ಬೇರೆಯಲ್ಲ, ರಮಣರು ಬೇರೆಯಲ್ಲ ಎಂದು ಹಲವಾರು ಘಟನೆಗಳ ಮೂಲಕ ನಿರೂಪಿಸಿದ್ದರು. ರಮಣ ಆಶ್ರಮಕ್ಕೆ ಸಮೀಪದಲ್ಲಿಯೇ ಇದೆ ಬಂಗಾರದ ಕೈಯ ಸಂತನೆಂದೇ ಪ್ರಸಿದ್ದಿ ಪಡೆದ ಶೇಷಾದ್ರಿ ಸ್ವಾಮಿಗಳ ಆಶ್ರಮ. ಅಲ್ಲಿ ಬೇರೆ ನಗರಗಳಿಂದ ಬರುವ ಭಕ್ತರಿಗೆ ಅತ್ಯಂತ ಕಡಿಮೆ ಖರ್ಚಿನ ವಸತಿ ವ್ಯವಸ್ಥೆಯಿದೆ. ಕೆಲವೊಮ್ಮೆ ಹಣ ನೀಡಲಾಗದ ಭಕ್ತರಿಗೆ ರಮಣಾಶ್ರಮದಲ್ಲಿ ಇರುವಂತೆ ಉಚಿತ ವಸತಿ ಸೌಲಭ್ಯವೂ ಇದೆ.

               ಹೌದು ಆಧ್ಯಾತ್ಮದ ಜ್ಯೋತಿ ಅಲ್ಲಿ ನಿರಂತರ ಬೆಳಗುತ್ತಿದೆ. ಸೋತೆನೆಂಬ ಭಾವ ಕಾಡಿದಾಗ, ಕಷ್ಟ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ಮಾನಸಿಕವಾಗಿ ಜರ್ಜರಿತನಾದಾಗ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುವಂತೆ ಮಾಡುವ ಚೈತನ್ಯ ಅಲ್ಲಿದೆ. ಅಂತಹ ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ. ಹಿಮಾಲಯವಲ್ಲವಾದರೂ, ಹಿಮಾಲಯದೆತ್ತರಕ್ಕೆ ನಿಂತ ಜ್ಞಾನ ಜ್ಯೋತಿ ಅಲ್ಲಿ ಸದಾ ಉರಿಯುತ್ತಿದೆ. ನಿರಂತರ ಅಂತರ್ಗಂಗೆಯಂತೆ ಅದರ ಪ್ರಭಾವ ದಶದಿಕ್ಕುಗಳಿಗೂ ಹರಡುತ್ತಲೇ ಇದೆ.  ಅಪಾರ ವಿದ್ವತ್ತಿನ ಅನುಪಮ ಸತ್ವ ಅಲ್ಲಿದೆ. ಅದು ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ. ಅದು ಭವ್ಯ ಭಾರತದ ಮುಕುಟಮಣಿ!
ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

              "ಹಿಂದೂ ಧರ್ಮ ಯಾವುದೇ ನಿರ್ದಿಷ್ಟ ಕಾಲದಲ್ಲಿ ಸ್ಥಾಪಿತವಾದದ್ದಲ್ಲ. ಯಾವ ಮತಸ್ಥಾಪಕನಿಂದಲೂ ಸ್ಥಾಪನೆಗೊಂಡಿಲ್ಲ. ಅದು ಯಾವುದೇ ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಅದು ಸನಾತನ, ಸಾರ್ವತ್ರಿಕ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಜೀವಿಗಳೂ ಅವು ಒಪ್ಪಲಿ ಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುವುದಕ್ಕೆ ಯಾವುದಾದರೂ ಪ್ರಮಾಣವನ್ನು ಅವಲಂಬಿಸಿದೆಯೇ? ನಾವು ಒಪ್ಪಿದರೂ, ಒಪ್ಪದೇ ಇದ್ದರೂ ಅದರ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಸನಾತನ ಧರ್ಮ ಈ ರೀತಿಯಾದದ್ದು. ನಾವು ಅರಿತು ಒಪ್ಪಿದರೆ ನಮಗೆ ಒಳಿತು. ಒಪ್ಪದಿದ್ದರೆ ಕೆಡುಕು ನಮಗೇ. ಯಾವುದೆಲ್ಲಾ ಉತ್ಕೃಷ್ಟ ಬೋಧನೆಗಳಿವೆಯೋ ಅವೆಲ್ಲಾ ಸನಾತನ ಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ." ಅವಿನಾಶಿಯಾದ ವರೇಣ್ಯ ಬ್ರಹ್ಮಸ್ವರೂಪದಲ್ಲಿ ನೆಲೆಗೊಂಡು ಪಾಪವೇ ಮೊದಲಾದ ಕಟ್ಟುಗಳನ್ನೆಲ್ಲಾ ದೂರಕ್ಕೆಸೆದು ತತ್ತ್ವಮಸಿ ಮೊದಲಾದ ವಾಕ್ಯಗಳಿಗೆ ನಿದರ್ಶನವಾಗಿರುವವನೇ ಅವಧೂತ. ಶಾಸ್ತ್ರ-ಸಂಪ್ರದಾಯ-ಮತಗಳ ಕಟ್ಟುಕಟ್ಟಳೆಗಳನ್ನೆಲ್ಲಾ ಬದಿಗೊತ್ತಿ, ದೇಹಧರ್ಮವನ್ನೂ ಕಡೆಗಣಿಸಿ, ಲೌಕಿಕ ವ್ಯವಹಾರವನ್ನೇ ದೂರ ಸರಿಸಿ ಬದುಕುವ ಅವಧೂತರ ಮುಖದಿಂದ ಹೊರಡುವ ಮಾತುಗಳೆಲ್ಲಾ ಮಂತ್ರಗಳು. ಅಂತಹಾ ಅವಧೂತರಲ್ಲೊಬ್ಬರಾದ ಶೃಂಗೇರಿಯನ್ನು ಬೆಳಗಿದ ಚಂದ್ರಶೇಖರ ಭಾರತಿ ಸ್ವಾಮಿಗಳು ಹಿಂದೂ ಧರ್ಮಕ್ಕೆ ಕೊಡುವ ವಿಶ್ಲೇಷಣೆ ಇದು.

             ಎಂತಹಾ ಅದ್ಭುತ ವಿಶ್ಲೇಷಣೆ! ಹಿಂದೂ ಧರ್ಮ ಎಂದರೆ ಶ್ರೇಷ್ಠ. ಜನ್ಮ ತಳೆದಾಗಿನ, ಕಪಟವರಿಯದ, ಅನ್ಯರಿಗೆ ಕೇಡು ಬಯಸದ ಮನಸ್ಸು ಹಿಂದೂ. ಆದರೆ ಪ್ರಪಂಚದ ವೈಚಿತ್ರ್ಯ ಏನು ಗೊತ್ತೇ? ಕಪಟವರಿಯದ ಮನಸ್ಸು ಬುದ್ಧಿ ಬೆಳೆದಂತೆ ಯಾರದ್ದೋ "ಮತ"ಕ್ಕೆ ಜೋತು ಬೀಳುತ್ತದೆ. ಹಾಗಾದರೆ ಬೆಳೆದಿದ್ದು ಬುದ್ಧಿ ಎನ್ನುವುದು ಹೇಗೆ? ತನ್ನದಾದ ಮತವೂ ಇಲ್ಲದೆ, ಯಾರೋ ಯಾವ ಕಾಲದಲ್ಲಿ ಮಾಡಿಟ್ಟ ಅಭಿಪ್ರಾಯ, ಕಟ್ಟುಪಾಡುಗಳಿಗೆ ಜೋತು ಬೀಳುವ ಮನಸ್ಸು ವಿವೇಚನೆಯ ಶಕ್ತಿಯನ್ನೂ ಕಳೆದುಕೊಂಡು ಜಗತ್ತಿನ ಇತರರೂ ತಾನು ನಂಬಿದ್ದನ್ನೇ ನಂಬಬೇಕೆಂದೂ ಆಗ್ರಹಿಸುವ ಕುರುಡುತನಕ್ಕೆ ಇಳಿಯುತ್ತದೆ. ಒಪ್ಪದವರನ್ನು ಬಲವಂತವಾಗಿಯೋ, ಕುತಂತ್ರದಿಂದಲೋ ಎಳೆಯುತ್ತದೆ. ತನ್ನ ಮತವನ್ನು ಒಪ್ಪುವವರ ಸಂಖ್ಯೆಯನ್ನು ಹೆಚ್ಚು ಮಾಡಲೆಳಸುತ್ತದೆ. ಜೀವನದ ಪರಮಗುರಿ ತನ್ನ ಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಮೌಢ್ಯದಲ್ಲಿ ಸಿಲುಕುವುದೋ, ಜಗತ್ತಿನ ಸತ್ಯವನ್ನು ಅರ್ಥೈಸುವ ಜ್ಞಾನದ ನಿಧಿಯ ಹುಡುಕಾಟವೋ? ಹಾಗೆ ನೋಡಿದರೆ ಪ್ರಸಕ್ತ ಕಾಲದಲ್ಲಿ ಮನುಷ್ಯೇತರ ಜೀವಿಗಳ ಜೀವನವೇ ಲೇಸು. ತೃಷೆ ನೀಗುವಷ್ಟರವರೆಗೆ ಮಾತ್ರ ಅವುಗಳದ್ದು ಹೋರಾಟ. ಆಮೇಲೆ ನಿರ್ಲಿಪ್ತತೆ. ಮನುಷ್ಯನದ್ದು ಹಾಗಲ್ಲ; ಅವನು ಜನ್ಮ ನೀಡಿದ ದೇಶಕ್ಕೂ ಕೃತಜ್ಞನಾಗಿಲ್ಲ;ಭೂಮಿಗೂ! ಹಿಂದೂ ಧರ್ಮವನ್ನು ಮತವಾಗಿ ಕಾಣುವ, ತುಚ್ಛವಾಗಿ ಕಾಣುವವರೆಲ್ಲಾ ಚಂದ್ರಶೇಖರ ಭಾರತಿ ಸ್ವಾಮಿಗಳ ಈ ಮಾತುಗಳ ಮಥಿತಾರ್ಥವನ್ನು ಅರಿಯಲು ಯತ್ನಿಸಬೇಕು. ಯಾರಿಗೆ ಈ ಮಾತುಗಳ ಅರಿವಾಗುತ್ತದೋ ಅವನು ತನ್ನ "ಮತ"ವನ್ನು ಇನ್ನೊಬ್ಬನ ಮೇಲೆ ಹೇರಲಾರ. ಹೆಚ್ಚೇಕೆ ಮೌಢ್ಯ ತುಂಬಿದ ತನ್ನ ಮತವನ್ನು ತೊರೆದು ಜ್ಞಾನದ ಹುಡುಕಾಟದಲ್ಲಿ ತೊಡಗುವುದು ಶತಃಸಿದ್ಧ.

              "ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅದೂ ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಒಂದೇ ಒಂದು ಕ್ಷುಲ್ಲಕ ಕಾರಣಕ್ಕಾಗಿ! ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ಈ ವಾದ ನಿರಾಕರಿಸುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ? ಹಾಗಾಗಿಯೇ ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಾವು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ" ಎನ್ನುವ ಅವರ ಮಾತುಗಳು ಮತಗಳ ಮೇಲಾಟದಲ್ಲಿ ಮುಳುಗೇಳುತ್ತಿರುವವರ ಕಣ್ಣು ತೆರೆಸಬೇಕು.

                ಜಗದ್ಗುರು ಪೀಠಾಧಿಪತ್ಯ ಬಿಡಿ ಸಂನ್ಯಾಸವನ್ನೂ ಕೂಡಾ ಅವರು ಬಯಸಿ ಪಡೆದುದಲ್ಲ. ಅವಧೂತರಾಗಿ ಎದ್ದು ಹೋದ ಅವರ ಅಜ್ಜನ ಪುಣ್ಯಫಲ; ಅವರ ಸ್ವಭಾವ, ಚರ್ಯೆಯಲ್ಲಿದ್ದ ವಿರಕ್ತಿ, ವ್ಯಾಸಂಗತತ್ಪರತೆ, ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದ ಮುಗ್ಧತೆ, ವೇದಾಂತ ಬರೇ ಪ್ರಚಾರಕ್ಕಲ್ಲ, ಆಚಾರಕ್ಕೆನ್ನುವ ನಿಷ್ಠೆ, ಸಂನ್ಯಾಸಿಗೆ ಇರಬೇಕಾದ ಸಹನೆ, ಸಮತ್ವ, ಪರಮಾರ್ಥಶೃದ್ಧೆ, ಏಕಾಂತ ಪ್ರೀತಿ ಆಗಿನ ಜಗದ್ಗುರು ನೃಸಿಂಹ ಭಾರತೀ ಸ್ವಾಮಿಗಳ ಮನಸೂರೆಗೊಂಡು ಅವರು ಮಾಡಿದ ದೃಢನಿಶ್ಚಯ ಹಾಗೂ ಆಜ್ಞೆ ಮತ್ತು ಶೃಂಗೇರಿಯ ಅವಿಚ್ಛಿನ್ನ ಐತಿಹಾಸಿಕ ಶಿಷ್ಯಪರಿಗ್ರಹ ಪರಂಪರೆ ಈ ಬಡ, ಬಡಕಲು ಹುಡುಗನನ್ನು ಎತ್ತರದ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಿತು. ಶ್ಲೋಕಗಳನ್ನು ರಸವತ್ತಾಗಿ ಹಾಡುತ್ತಿದ್ದ, ಸಂಗೀತದಲ್ಲಿ ಅಭಿರುಚಿಯಿದ್ದ ಕವಿಹೃದಯಿಗೆ ವಿರಕ್ತಿ ಸಹಜವಾಗಿ ಹೇಗೆ ಬಂದೀತು? ಹಾಗಂತ ಅದು ದುಃಖದರ್ಶನದಿಂದಲೂ ಬಂದುದಲ್ಲ. ವಿರೂಪಾಕ್ಷ ಶಾಸ್ತ್ರಿಗಳು ಒದಗಿಸಿದ ಶ್ರವಣದ ಮುಖೇನ ಸಂಸಾರವು ನಿಃಸಾರವೆಂಬುದನ್ನು, ಬ್ರಹ್ಮವೇ ಪರಮಾರ್ಥವೆಂಬುದನ್ನು ದೃಢವಾಗಿ ನಿಶ್ಚಯಿಸಿದ ಅವರಿಗೆ ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಆತ್ಮತತ್ತ್ವದ ಅನುಸಂಧಾನವೇ ಗುರಿಯಾಯಿತು. ಆತ್ಮವಿದ್ಯಾವಿಲಾಸವಂತೂ ತಾವು ಬಿಡಿಸಂನ್ಯಾಸಿಗಳಲ್ಲ, ಮಠಾಧಿಪತಿಗಳೆಂಬುದನ್ನೇ ಮರೆಯಿಸಿತು. ಮಠಾಧಿಪತಿಗಳಾಗಿ ಮಾಡಲೇಬೇಕಾದ ಕಾರ್ಯಗಳೆಲ್ಲಾ ಯಾಂತ್ರಿಕವಾಗಿಯೇ ನಡೆಯುತ್ತಿತ್ತು. ಸ್ನಾನಕ್ಕೆಂದು ನೀರಿಗಿಳಿದವರು ಪದ್ಮಾಸನ ಹಾಕಿ ಗಂಟೆಗಟ್ಟಲೇ ಪರಿವೆಯೇ ಇಲ್ಲದೆ ಕುಳಿತುಬಿಡುವರು; ಪೂಜೆ ಮಾಡಲು ತೊಡಗಿದರೆ ನಡುವೆ ದೀಪವನ್ನು ನೋಡುತ್ತಲೋ, ಹೂವಿನ ಎಸಳನ್ನು ಹಾಕುತ್ತಲೋ ಮೈಮರೆವರು. ಪಾಠ ಹೇಳಲು ತೊಡಗಿದವರು ಇದ್ದಕ್ಕಿದ್ದಂತೆಯೇ ಎದ್ದು ಹೊರಡುವರು. ಮತ್ತೆ ನಿದ್ದೆಯಿಲ್ಲ, ಊಟವಿಲ್ಲ; ನಿಂತಲ್ಲಿ ನಿಲ್ಲುವುದಿಲ್ಲ! ಇವೆಲ್ಲದರ ಪುನರಾವರ್ತನೆ. ಈ ನಡುವೆ ಅಧಿಕಾರಿಗಳ ಒತ್ತಾಯದಿಂದ ದೇಶ ಸಂಚಾರ ಹೊರಟವರು ಮೈಸೂರಿನಲ್ಲಿ ನೂತನ ಶಂಕರಾಲಯದ ಕುಂಭಾಭಿಷೇಕ ನೆರವೇರಿಸಿದರು. ತಮಿಳು ಭಾಷೆ ತಿಳಿಯದ ಅವರು ತಮಿಳುನಾಡಿನಲ್ಲಿ ತಮಿಳಿನಲ್ಲಿಯೇ ಉಪನ್ಯಾಸ ಮಾಡಿದರು! ಮಧುರೈ ಮೀನಾಕ್ಷಿಯ ಎದುರು ನಿಂತಾಗ ಭಾವಪರವಶರಾದ ಅವರಿಂದ ಮೀನಾಕ್ಷಿ ಸ್ತೋತ್ರವೇ ಹೊರಹೊಮ್ಮಿತು. ಕನ್ಯಾಕುಮಾರಿ, ಕಾಲಡಿಯಲ್ಲಿ ವೇದಾಂತ ಪಾಠಶಾಲೆ, ನಂಜನಗೂಡಿನಲ್ಲಿ ಶಂಕರಮಠ, ವೇದಪಾಠಶಾಲೆಯನ್ನು ನಿರ್ಮಿಸಿದರು. ಆದರೆ ಈ ತಿರುಗಾಟದಲ್ಲಿ "ರಾಜಕೀಯ ಉಡುಪಿನ" ಮೇಲಾಟ, ಜನಸಂದಣಿ-ಜಂಜಾಟಗಳಿಂದ ಅವರು ಬೇಸತ್ತಿದ್ದರು. ಹಿಂದಿರುಗಿದ ಬಳಿಕ ಕೆಲ ಕಾಲ ಮಠದ ಪೂಜೆಯನ್ನು ನೆರವೇರಿಸಿದರಾದರೂ ಅವರ ಮನಸ್ಸು ಅದರಲ್ಲಿರಲಿಲ್ಲ. ಮುಂದೆ ಪೂಜೆ, ಪಾಠ, ಊಟ, ಮಾತು ಎಲ್ಲವನ್ನೂ ಬಿಟ್ಟರು. ನರಸಿಂಹ ವನದಲ್ಲಿ ಆತ್ಮವಿದ್ಯಾ ವಿಲಾಸವನ್ನು ಗುನುಗುನಿಸಿಕೊಳ್ಳುತ್ತಾ ಅಂತರ್ಮುಖರಾಗಿ ಅಲೆದಾಡುತ್ತಿದ್ದರು. ಆಗ ಅವರ ಮುಖದಲ್ಲಿ ಯಾವುದೇ ಉದ್ವೇಗವಿಲ್ಲದೆ ಮಂದಹಾಸ ಮಿನುಗುತ್ತಿತ್ತು. ಯಾವುದೋ ಅಲೌಕಿಕ ಪ್ರಭೆ ಎದ್ದು ಕಾಣುತ್ತಿತ್ತು.

             ‘ಉತ್ತಮ ಚಾರಿತ್ರ್ಯವಿದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯವಿಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ" ಎನ್ನುತ್ತಿದ್ದ ಅವರು ಅಂತಹವರನ್ನು ತಿದ್ದುತ್ತಿದ್ದರು. ಮನುಷ್ಯ-ಪಶುಗಳೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದರು. ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮನಿರುತ್ತಾನೆ ಎನ್ನುತ್ತಿದ್ದ ಅವರು ರಾಮಾಯಣವನ್ನು ಪಾರಾಯಣ ಮಾಡುವಾಗ ಯಾವಾಗಲೂ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರು, ಹನುಮಂತನಿಗಾಗಿ!

              1954ರ ಭಾದ್ರಪದ ಬಹುಳ ಅಮವಾಸ್ಯೆಯ(ನವರಾತ್ರಿಯ ಹಿಂದಿನ) ದಿನ ಬೆಳಕು ಹರಿಯುವ ಮುನ್ನವೇ ಕೊರೆಯುವ ಚಳಿಯಲ್ಲಿ ತುಂಗೆಯಲ್ಲಿ ಸ್ನಾನಕ್ಕೆಂದು ಇಳಿದ ಅವರು ನೀರಿನಲ್ಲಿ ಮುಳುಗು ಹಾಕಿ ಪ್ರಾಣಾಯಾಮ ಮಾಡಲು ಪದ್ಮಾಸನ ಹಾಕಿ ಕೂತವರು ಪದ್ಮಾಸನದಲ್ಲಿಯೇ ನೀರಿನಲ್ಲಿ ತೇಲಿ ಹೋದರು. ಜೊತೆಗಿದ್ದವರು ಸ್ವಾಮಿಗಳನ್ನು ದಡಕ್ಕೆ ತಂದರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶರೀರದೊಳಗೆ ಕಿಂಚಿತ್ತೂ ನೀರು ಹೋಗಿರಲಿಲ್ಲ. ಪ್ರಾಣವನ್ನು ಬಂಧನ ಮಾಡಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿದ್ದರು. ವಿಶೇಷವೆಂದರೆ ಅವರ ಜನನ, ಉಪನಯನ, ಸಂನ್ಯಾಸ ಸ್ವೀಕಾರ, ಆತ್ಮಾರ್ಪಣೆ, ಅವರ ಸಮಾಧಿಯ ಮೇಲಿನ ಲಿಂಗ ಪ್ರತಿಷ್ಠೆ ಎಲ್ಲವೂ ನಡೆದದ್ದು ಭಾನುವಾರವೇ! ಸಾಧನೆಯಿಂದ ಪಡೆದುಕೊಂಡ ಸಿದ್ಧಿಗಳನ್ನು ಮೆರೆಯಿಸದೆ ಅಂತರ್ಮುಖರಾಗಿ ಉಳಿದ ಮಹಾ ಸಾಧಕ ಅವರು. ಅವರ "ಬುದ್ಧಿವಿಕಲ್ಪ"ದ ಜಾಡನ್ನು ವೈದ್ಯರಿಗೇ ಹಿಡಿಯಲಾಗಲಿಲ್ಲ. ಅವರ ಬಳಿ ಇದ್ದೋ, ಮಾತನಾಡಿಯೋ, ಕಿರುನಗೆ ನೋಡಿಯೋ, ದೂರದಿಂದಲೇ ಆರಾಧಿಸಿಯೋ ಆಳವಾದ ಮನಃಶಾಂತಿಯನ್ನು ಅನುಭವಿಸಿದವರು ಹಲವರು. ಅವರು ದಕ್ಷಿಣಾಮೂರ್ತಿಯಂತೆ, ಸದಾಶಿವ ಬ್ರಹ್ಮೇಂದ್ರರಂತೆ ಮೌನವಾಗಿಯೇ ಶೃದ್ಧೆಯುಳ್ಳ ಹಲವರಿಗೆ ಉಪದೇಶಿಸಿದರು. ಅದು ಶೃಂಗ ಗಿರಿಯಲ್ಲಿ ಪಡಿಮೂಡಿದ ಪೂರ್ಣ ಚಂದಿರ. ತುಂಗೆಯ ತಟದಲ್ಲಿ ಅವಳಂತೆ ಗಂಭೀರವಾಗಿ, ಮೌನವಾಗಿ, ಶಾಂತವಾಗಿ ಹರಿದ ಜ್ಞಾನ ಸರಸಿರೆ. ವೀಣಾವಾದಿನಿ, ಜ್ಞಾನ ನಿನಾದಿನಿ ಶಾರದೆಯೇ ಧರೆಗಿಳಿದ ಪರಿ.