ಪುಟಗಳು

ಶನಿವಾರ, ಡಿಸೆಂಬರ್ 29, 2018

ಜಗವ ಕೋರೈಸಿದ ಕೋಲ್ಮಿಂಚು

ಜಗವ ಕೋರೈಸಿದ ಕೋಲ್ಮಿಂಚು


                  ಭಾರತವೆಂಬ ನಾಡು ಬಗೆದಷ್ಟು ಮೊಗೆದು ಕೊಡುವ ಬೀಡು. ಯಾವುದನ್ನು ಅರಸಿ ಯಾರೇ ಬಂದರೂ ಅವರಿಗೆ ಬೇಕಾದುದನ್ನು ದಯಪಾಲಿಸಿದ ಸಂಪದ್ಭರಿತ ರಾಷ್ಟ್ರ ಇದು. ಆಧ್ಯಾತ್ಮಿಕತೆಯನ್ನು ಅರಸಿ ಬಂದವರಿಗೆ ಇದು ಗುರುವಾಯಿತು; ವಿವಿಧ ಶ್ರೇಣಿಗಳಿದ್ದೂ, ಎಷ್ಟೇ ಕುಟಿಲ ತಂತ್ರಗಳನ್ನು ಉಪಯೋಗಿಸಿದರೂ ಒಡೆಯದ ಇಲ್ಲಿನ ಸಾಮಾಜಿಕ ವ್ಯವಸ್ಥೆ ಹಲವರಿಗೆ ಅಧ್ಯಯನದ ವಸ್ತುವಾಯಿತು; ಸಂಪತ್ತನ್ನೇ ಲೂಟಿ ಮಾಡಲು ಬಂದವರಿಗೂ ಇದು ತನ್ನ ಎದೆಯನ್ನೇ ಬಗೆದಿಟ್ಟಿತು! ದಾಸ್ಯದ ಅವಧಿಯ ದುಸ್ತರ ಸನ್ನಿವೇಶದಲ್ಲೂ ಇಲ್ಲಿ ಕ್ಷಾತ್ರ ಮೆರೆಯಿತು; ಆಧ್ಯಾತ್ಮಿಕತೆಯ ಔನ್ನತ್ಯ ತಲುಪಿದ ಯೋಗಿಗಳ ಮುಂದೆ ಹಲವರು ನತಮಸ್ತಕರಾದರು; ಕೊಳ್ಳೆ ಹೊಡೆದಷ್ಟು ಮುಗಿಯದ ಸಂಪನ್ಮೂಲ ಕಾಣಿಸಿಕೊಂಡಿತು! ಅಂತಹಾ ಒಂದು ಕೋಲ್ಮಿಂಚೇ ಕೋಲಾರದ ಚಿನ್ನದ ಗಣಿ!

                     ಮತಾಂಧ, ರಕ್ಕಸ ಪ್ರವೃತ್ತಿಯ ಟಿಪ್ಪುವೆಂಬ ಇಲಿಯನ್ನು ಬೇಟೆಯಾಡಿದ ಬಳಿಕ ಈಸ್ಟ್ ಇಂಡಿಯಾ ಕಂಪನಿ ಆಗಿನ ಮೈಸೂರು ರಾಜ್ಯದ ಗಡಿಯನ್ನು ಗುರುತಿಸಲು ಎಚ್.ಎಂ. 33ನೇ ರೆಜಿಮೆಂಟಿನ ಲೆಫ್ಟಿನೆಂಟ್ ಜಾನ್ ವಾರೆನ್ ನನ್ನು 1802ರಲ್ಲಿ ನೇಮಿಸಿತು. ಆ ಸಮಯದಲ್ಲೇ ಎರ್ರಕೊಂಡ ಗುಡ್ಡದ (ಕೆ.ಜಿ.ಎಫ್. ನಿಂದ 15 ಕಿ.ಮೀ.) ಬಳಿ ಬಂಗಾರ ಸಿಗುತ್ತದೆ, ಕೆಲವು ಸ್ಥಳೀಯರು ಅಲ್ಲಿ ಚಿನ್ನವನ್ನು ಅಗೆದು ತೆಗೆಯುತ್ತಿದ್ದಾರೆ ಎಂಬ ವದಂತಿ ಅವನ ಕಿವಿಗೆ ಬಿತ್ತು. ಅದರ ವಿವರಗಳನ್ನು ಸಂಗ್ರಹಿಸಲೆಂದು ಕೋಲಾರಕ್ಕೆ ತೆರಳಿದ ಆತ ಅಲ್ಲಿನ ಚಿನ್ನವನ್ನು ತೋರಿಸಿದವರಿಗೆ ಪಾರಿತೋಷಕ ಕೊಡುವ ಬಗ್ಗೆ ಡಂಗುರ ಸಾರಿದ. ತುಸು ಸಮಯದಲ್ಲಿ ಹಳ್ಳಿಗನೊಬ್ಬ ಎತ್ತಿನ ಗಾಡಿಯಲ್ಲಿ ಕಲ್ಲುಮಣ್ಣನ್ನು ಹೇರಿಕೊಂಡು ಬಂದು ವಾರೆನ್ ಎದುರೇ ಅದನ್ನು ತೊಳೆದು ತೋರಿಸಿದಾಗ ಅದು ಫಳಫಳ ಹೊಳೆದು ಅವನ ಕಣ್ಣು ಕೋರೈಸಿತ್ತು; ಬ್ರಿಟಿಷ್ ಸಾಮ್ರಾಜ್ಯದ್ದೂ! ಆತ ಮರುಕ್ಷಣವೇ 1804ರ ಏಷಿಯಾಟಿಕ್ ಜರ್ನಲ್ನಲ್ಲಿ ಇದರ ಕುರಿತು ವರದಿಯೊಂದನ್ನು ಪ್ರಕಟಿಸಿದ. ವರದಿ ಮಾಡಿ ಆತ ಸುಮ್ಮನೆ ಕೂರಲಿಲ್ಲ. ಮಾರಿಕುಪ್ಪಂ ಮತ್ತು ಉರಿಗಾಂನಲ್ಲಿ ಚಿನ್ನ ಸಿಕ್ಕಿದೆಯೆಂಬ ವದಂತಿಯನ್ನು ಕೇಳಿ ಆತ ಆ ಪ್ರದೇಶದಲ್ಲಿ ಅನ್ವೇಷಣೆ ನಡೆಸಿದ. ಅವನ ಗಮನಕ್ಕೆ ಬಂದ ವಿಚಾರವೆಂದರೆ ಪರಿಯ ಎನ್ನುವ ಜನಾಂಗ ಅಲ್ಲಿ ಗಣಿಗಾರಿಕೆ ನಡೆಸುವಲ್ಲಿ ಪರಿಣತಿ ಪಡೆದಿತ್ತು. ಕೂಲಿಯಾಳುಗಳು 30 ಅಡಿ ಆಳದವರೆಗೆ ಇಳಿಯುತ್ತಿದ್ದರು. ಸಿಕ್ಕಿದ ಅದುರನ್ನು ಹೆಂಗಸರು ಅರೆದು ಜಾಲಿಸುತ್ತಿದ್ದರು. ಹನ್ನೆರಡು ಮಂದಿ ಕೆಲಸ ಮಾಡಿದರೆ ಒಂದು ದಿನದಲ್ಲಿ ಒಂದು ಗುಂಡಿ ತೆಗೆಯಬಹುದಾಗಿತ್ತು. ಆದರೆ ಅವರು ಬೇಸಗೆಯಲ್ಲಿ ಮಾತ್ರ ಗಣಿಗಾರಿಕೆ ನಡೆಸಬೇಕಾಗಿ ಬರುತ್ತಿತ್ತು. ಆಗ ಕೋಲಾರಕ್ಕೆ ಗಣಿಗಾರಿಕೆ ಮಾಡಲು ಬೇಕಾಗಿದ್ದ ಹಗ್ಗ, ಬುಟ್ಟಿ, ಕಂದೀಲು, ಕಟ್ಟಿ ಇವುಗಳ ಬೆಲೆ ದುಬಾರಿಯಾಗಿದ್ದರಿಂದ(ಇದು ಟಿಪ್ಪುವಿನ ಕೊಡುಗೆ) ಬೇರಾರಿಗೂ ಇದು ಆಕರ್ಷಕ ಉದ್ದಿಮೆಯಾಗಿ ಕಂಡಿರಲಿಲ್ಲ. ವಾರೆನ್ ಹತ್ತೆನ್ನರಡು ಕೂಲಿಕಾರರೊಡನೆ ಮಾರಿಕುಪ್ಪಮ್ಗೆ ತೆರಳಿ ಹಳೆಯಗಣಿಯಿಂದ ಅದುರನ್ನು ತೆಗೆದು ಅರೆದು ಪುಡಿ ಮಾಡಿಸಿದ. ಅದನ್ನು ಜಾಲಿಸಿ ಮೂವತ್ತು ಪಗೋಡ ತೂಕದಷ್ಟು ಚಿನ್ನವನ್ನು ಸಂಗ್ರಹಿಸಿದ ವಾರೆನ್, ಅದರ ಪರಿಶುದ್ಧತೆಯನ್ನು ತಿಳಿಯಲು ಮದ್ರಾಸಿನ ಟಂಕಸಾಲೆಗೆ ಕಳಿಸಿದ. ಅಲ್ಲಿಂದ ಇದು ಉತ್ತಮ ಗುಣಮಟ್ಟದ ಚಿನ್ನವೆಂದು ವರದಿ ಬಂತು. ಹಳ್ಳಿಗರ ಚಿನ್ನವನ್ನು ತೆಗೆಯಲು ಬಳಸಿದ ವಿಧಾನದಿಂದ, 56ಕೆಜಿಯಷ್ಟು ನಿಕ್ಷೇಪದಿಂದ ಸುಮಾರು ಒಂದು ಗ್ರೈನ್ ನಷ್ಟು ಚಿನ್ನವನ್ನು ಅಲ್ಲಿ ತೆಗೆಯಬಹುದು;  ಸರ್ಕಾರ ಈ ಪರಿಶೋಧನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಆತ ಶಿಫಾರಸು ಮಾಡಿದ. ಆದರೆ ಸರ್ಕಾರ ಆಗ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

                   ಆದರೆ ಅಷ್ಟು ಹೊತ್ತಿಗೆ ಜಗದಾದ್ಯಂತ ಇದರ ಸುದ್ದಿ ಹಬ್ಬಿ ಹಲವರ ಬಾಯಲ್ಲಿ ನೀರೂರಿತ್ತು. ಹಲವು ದರೋಡೆಕೋರರು ದಾಳಿಯಿಟ್ಟು ವಿಫಲರಾದರು. ಕೆಲವರು ತಮ್ಮದೇ ಗುಂಪುಕಟ್ಟಿಕೊಂಡು ಬಂದು ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಬೇಕಾಯಿತು. 1860ರವರೆಗೆ ಹಲವಾರು ರೀತಿಯ ಅಧ್ಯಯನ ಕೈಗೊಂಡು, ಗಣಿಗಾರಿಕೆ ನಡೆಸುವ ವಿಧಾನಗಳನ್ನು ಬ್ರಿಟಿಷರು ಪ್ರಯೋಗಿಸಿದರಾದರೂ ಅದು ಫಲ ಕಾಣಲಿಲ್ಲ. ಬ್ರಿಟಿಷ್ ಸೇನೆಯಲ್ಲಿದ್ದ ಮೈಕೇಲ್ ಫಿಟ್ಜ್ ಗೆರಾಲ್ಡ್ ಲಾವೆಲ್ ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದ ಐರಿಷ್ ಯೋಧ. ಆತ ಆಗಷ್ಟೇ ನ್ಯೂಝಿಲ್ಯಾಂಡಿನಲ್ಲಿ ಮಾವೋರಿ ಯುದ್ಧ ಮುಗಿಸಿ ಬಂದಿದ್ದ. ವಿಪರೀತ ಓದುವ ಹುಚ್ಚಿದ್ದ ಆತನಿಗೆ ವಾರೆನ್ ವರದಿ ಕಣ್ಣಿಗೆ ಬಿತ್ತು. ಮಾವೋರಿ ಯುದ್ಧದಲ್ಲಿ ಭಾಗವಹಿಸಿದ್ದಾಗ ನಡೆಸಿದ್ದ ಚಿನ್ನದ ಗಣಿಗಾರಿಕೆಯ ಅನುಭವ ಆತನಲ್ಲಿ ಸಾಹಸವೊಂದಕ್ಕೆ ಅಣಿಯಾಗಲು ಪ್ರೇರೇಪಿಸಿತು. 1871ರಲ್ಲಿ ಎತ್ತಿನ ಬಂಡಿಯಲ್ಲಿ ಕೋಲಾರಕ್ಕೆ ಬಂದಿಳಿದ ಆತ ಹಲವು ಸಂಭಾವ್ಯ ಗಣಿಗಳನ್ನು ಗುರುತಿಸಿಕೊಂಡ. ಚಿನ್ನದ ನಿಕ್ಷೇಪದ ಕುರುಹುಗಳೂ ಅವನಿಗೆ ಸಿಕ್ಕವು. ಎರಡು ವರ್ಷಗಳ ಸತತ ಅಧ್ಯಯನದ ಬಳಿಕ 1873ರಲ್ಲಿ ಗಣಿಗಾರಿಕೆಗೆ ಅನುಮತಿ ಬೇಡಿ ಆತ ಮೈಸೂರು ಮಹಾರಾಜರಿಗೆ ಪತ್ರ ಬರೆದ. ಆದರೆ ಚಿನ್ನದ ಗಣಿಗಾರಿಕೆಗೆ ಕಾರ್ಯಸಾಧುವಲ್ಲ ಎಂದು ನಂಬಿದ್ದ ಅಧಿಕಾರಿಗಳು ಕಲ್ಲಿದ್ದಲು ತೆಗೆಯಲಷ್ಟೇ ಆತನಿಗೆ ಅನುಮತಿ ಕೊಟ್ಟರು. "ನನ್ನ ಹುಡುಕಾಟದಲ್ಲಿ ನಾನು ಯಶಸ್ವಿಯಾದೆನೆಂದರೆ ಸರಕಾರಕ್ಕೂ ಅದೊಂದು ಘನತೆಯ ವಿಚಾರವಾಗಿರುತ್ತದೆ. ಒಂದು ವೇಳೆ ನಾನು ಯಶಸ್ವಿಯಾಗದಿದ್ದರೂ ಸರಕಾರಕ್ಕೆ ಅದರಿಂದ ನಷ್ಟವೇನೂ ಇಲ್ಲ" ಎಂದು ಸರಣಿ ಪತ್ರಗಳ ಮೂಲಕ ಮನವಿ/ಮನವರಿಕೆ ಮಾಡಿದ ಆತ 1875ರಲ್ಲಿ ಚಿನ್ನದ ಗಣಿಗಾರಿಕೆಗೆ ಅನುಮತಿ ಗಿಟ್ಟಿಸಲು ಯಶಸ್ವಿಯಾದ. ಅವನು ಆರಿಸಿದ ಒಂದು ಕ್ಲಿಪ್ತ ಪ್ರದೇಶದಲ್ಲಿ ಚಿನ್ನ ತೆಗೆಯಲು ಇಪ್ಪತ್ತು ವರ್ಷಗಳ ಗುತ್ತಿಗೆ ನೀಡಲು ಸರ್ಕಾರ ಒಪ್ಪಿತು. ಅವನು ಉರಿಗಾಂ ಬಳಿ ತೋಡುದಾರಿ ತೆಗೆಸಿದ. ಲಾವೆಲ್ಗೆ ಗಣಿಗಾರಿಕೆಯಲ್ಲಿ ಅಲ್ಪಸ್ವಲ್ಪ ಅನುಭವವಿತ್ತೇ ಹೊರತು ತಜ್ಞತೆಯಿರಲಿಲ್ಲ; ಹಣವೂ ಇರಲಿಲ್ಲ. ಹಾಗಾಗಿ ಅವನ ಸಾಹಸ ನಿಕ್ಷೇಪದ ಅನ್ವೇಷಣೆಗಷ್ಟೇ ಸೀಮಿತವಾಯಿತು. ಆದರೆ ಅವನ ಅನ್ವೇಷಣಾ ದೃಷ್ಟಿ ಹಾಗೂ ಗಣಿಗಾರಿಕೆಯೆಂಬ ಅಪಾಯಕಾರಿ ಸಾಹಸ ಎಫ್. ಇ. ಪೆನ್ನಿಯ "ಲಿವಿಂಗ್ ಡೇಂಜರಸ್ಲಿ" ಎಂಬ ಕಾದಂಬರಿಗೆ ಮೂಲಸ್ತ್ರೋತವಾಗಿ ಆತನನ್ನು ಜನಪ್ರಿಯಗೊಳಿಸಿತು. ಆದರೆ ಬಂಡವಾಳದ ಕೊರತೆಯಿಂದ ತನ್ನ ಉದ್ಯಮವನ್ನು ಹೆಚ್ಚು ಮುಂದುವರೆಸಲಾರದೆ ಆತ 1877ರಲ್ಲಿ ಮದ್ರಾಸಿನ ಮೇಜರ್ ಜನರಲ್ ಡಿ ಲಾ ಪೋರ್ ಬಿಯರ್ಸ್ಫರ್ಡ್, ಮೆಕೆಂಜಿ, ಸರ್ ವಿಲಿಯಂ ಮತ್ತು ಕೋಲ್ ವಿಲಿಯಂ ಆರ್ಬುತ್ನಾಟರಿಗೆ ತನ್ನ ಹಕ್ಕನ್ನು ಮಾರಿದ. ಅವರು ಅನಂತರ ಕೋಲಾರ ಕನ್ಸೆಸಷನರೀಸ್ ಕಂಪೆನಿ ಲಿಮಿಟೆಡ್ ಎಂಬ ಸಂಸ್ಥೆ ರಚಿಸಿಕೊಂಡು ಕೆಲಸ ಮುಂದುವರಿಸಿದರು.

                ಈ ಕಂಪೆನಿ ಐದು ಸಾವಿರ ಪೌಂಡ್ ಬಂಡವಾಳ ಹೂಡಿತು. ಆಸ್ಟ್ರೇಲಿಯದಿಂದ ಇಬ್ಬರು ಗಣಿ ತಜ್ಞರನ್ನು ಕರೆಸಿಕೊಂಡು ಗಣಿ ಕೆಲಸ ಪ್ರಾರಂಭಿಸಿತು. ಸ್ವಲ್ಪಕಾಲದ ಅನಂತರ ಅವರ ಪ್ರಯತ್ನಕ್ಕೆ ಫಲ ದೊರಕಿತು. ಮದ್ರಾಸಿನ ಉರಿಗಾಂ ಕಂಪನಿ ಲಿ. ಸ್ಥಾಪಿತವಾಗಿ ಕೆಲಸ ಮಾಡತೊಡಗಿದ ಮೇಲೆ ಇನ್ನೂ ಹಲವಾರು ಕಂಪನಿಗಳು ಆರಂಭವಾದುವು. ವೈನಾಡಿನಲ್ಲಿ ಚಿನ್ನದ ಉದ್ಯಮದಲ್ಲಿ ಕೈಸುಟ್ಟುಕೊಂಡ ಅನೇಕ ಮಂದಿ ಇಲ್ಲಿಗೆ ದೌಡಾಯಿಸಿದರು. 1881ರ ವೇಳೆಗೆ ಅಲ್ಲಿ 11 ಕಂಪನಿಗಳಿದ್ದುವು. ಇವುಗಳಲ್ಲಿ ತೊಡಗಿಸಿದ್ದ ಬಂಡವಾಳ 13,00,000 ಫೌಂ. ಮುಂದೆ ಹೂಡಿಕೆದಾರರ ಒತ್ತಡದಿಂದಾಗಿ ಜಾನ್ ಟೈಲರನ ಕಂಪೆನಿಗೆ ಗಣಿಗಾರಿಕೆಯ ಅವಕಾಶ ಸಿಕ್ಕಿತು. ಗಣಿಗಾರಿಕಾ ತಂತ್ರಜ್ಞರನ್ನು ತನ್ನ ಜೊತೆಗೆ ಕರೆದುಕೊಂಡು ಬಂದ ಈ ಕಂಪೆನಿ ನೂತನ ವಿಧಾನಗಳನ್ನು ಅಳವಡಿಸಿಕೊಂಡು ಅಪಾರ ಪ್ರಮಾಣದ ಚಿನ್ನವನ್ನು ತೆಗೆಯಿತು. ಮೈಸೂರು ಗಣಿಯನ್ನು ಮರುಪರಿಶೀಲಿಸಿದ ಕ್ಯಾಪ್ಟನ್ ಪ್ಲಮರ್ ಎಂಬ ತಜ್ಞ, ಪುರಾತನರು ಹಾಗೆಯೇ ಉಳಿಸಿದ್ದ ಭಾಗದಲ್ಲಿ ಗಣಿ ಮಾಡಿದಾಗ ಒಂದು ಟನ್ ಅದುರಿನಲ್ಲಿ ನಾಲ್ಕು ಔನ್ಸ್ ಚಿನ್ನ ಸಿಕ್ಕಿತು. ಅಲ್ಲಿಂದೀಚೆಗೇ ಈ ಉದ್ಯಮ ಲಾಭಪ್ರದವಾದ್ದು. 1894-95ರ ವೇಳೆಗೆ ಅಲ್ಲಿ ಒಟ್ಟು 13 ಕಂಪನಿಗಳು 35,00,000 ಪೌಂಡ್ಸ್ ಬಂಡವಾಳ ತೊಡಗಿಸಿದ್ದುವು. 1886-87ರ ಚಿನ್ನದ ಉತ್ಪನ್ನ ರೂ.8,88,606 ಮೌಲ್ಯದ 16,325 ಔನ್ಸ್ಗಳು!

             ಮುಂದಿನ ಮುಕ್ಕಾಲು ಶತಮಾನ ನಡೆದದ್ದು ಅಗಾಧ ಪ್ರಮಾಣದ ಲೂಟಿ! ಭಾರತ ಸ್ವಾತಂತ್ರ್ಯಗೊಂಡಾಗ ಈ ಸಂಸ್ಥೆಗಳು ತಮ್ಮ ಆಡಳಿತ ಕೇಂದ್ರವನ್ನು ಲಂಡನ್ನಿನಿಂದ ಭಾರತಕ್ಕೆ ವರ್ಗಾಯಿಸಿದವು. ಮೈಸೂರು ಸರ್ಕಾರ ಈ ಕೈಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಿದ್ದು 1956ರಲ್ಲಿ. ಇದಕ್ಕಾಗಿ ವಿದೇಶೀ ಕಂಪನಿಗಳಿಗೆ ನೀಡಲಾದ ಹಣ ರೂ.1,64,00,000. ಆ ಹೊತ್ತಿಗೆ ಅಪಾರ ಪ್ರಮಾಣದ ಚಿನ್ನ ಹೊರಹೋಗಿತ್ತು. 1962ರಲ್ಲಿ ಕೇಂದ್ರ ಸರ್ಕಾರ ಇದನ್ನು ತನ್ನ ವಶಕ್ಕೆ ತೆಗೆದುಕೊಂಡಿತು.  ಚಿನ್ನದಗಣಿ ಬೆಳೆದಂತೆಲ್ಲಾ ಮಾರಿಕುಪ್ಪಮ್ ಮೈಸೂರು ಮೈನ್ಸ್, ನಂದಿದುರ್ಗಮ್ ಮೈನ್ಸ್, ಉರಿಗಾಂ ಮೈನ್ಸ್, ಪಾಲಕ್ಕಾಡು ಮೈನ್ಸ್ ಮತ್ತು ಚಾಂಪಿಯನ್ ರೀಫ್ ಮೈನ್ಸ್ ಮುಂತಾದುವುಗಳಲ್ಲಿ ಗಣಿ ಕೆಲಸಗಳು ನಡೆದವು. 2000ಕ್ಕಾಗುವಾಗ ಊರಿಗಾಂ ಮೈನ್ಸ್ 13,000 ಅಡಿಗಳಷ್ಟು ಆಳಕ್ಕೆ ಹೋಗಿ ಪ್ರಪಂಚದಲ್ಲೇ 2ನೆಯ ಅತೀ ಆಳದ ಗಣಿಗಾರಿಕೆಯ ಸ್ಥಾನ ಪಡೆದುಕೊಂಡಿತು. ಮುಂದೆ ಚಿನ್ನ ತೆಗೆಯುವ ಖರ್ಚು ಸಿಗುವ ಚಿನ್ನದ ಮೌಲ್ಯಕ್ಕಿಂತ ಹೆಚ್ಚಾಗುತ್ತಾ ಸಾಗುತ್ತಿದ್ದಂತೆ 2001ರಲ್ಲಿ ಅನಿವಾರ್ಯವಾಗಿ ಗಣಿಗಾರಿಕೆಯನ್ನು ಸ್ಥಗಿಸಗೊಳಿಸಬೇಕಾಯಿತು.

ಕೋಲಾರದ ಚಿನ್ನದ ಗಣಿಯಲ್ಲಿ ಎಂದಿನಿಂದ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ನಿಖರ ಇತಿಹಾಸ ದೊರಕುವುದಿಲ್ಲ. ಸಿಂಧೂ ನಾಗರಿಕತೆಯ ಸಮಯದಿಂದಲೂ ಇಲ್ಲಿಂದ ಚಿನ್ನ ರಫ್ತಾಗುತ್ತಿದೆ ಎಂದು ಕೆಲ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಗುಪ್ತರು ಇಲ್ಲಿನ ಚಾಂಪಿಯನ್ ರೀಫಿನಲ್ಲಿ ಐವತ್ತು ಮೀಟರ್ ಆಳದವರೆಗೆ ಗಣಿಗಾರಿಕೆ ನಡೆಸಿದ್ದರು; ಚೋಳರೂ ಇಲ್ಲಿಂದ ಚಿನ್ನ ತೆಗೆದಿದ್ದರು; ವಿಜಯನಗರದವರೂ ತೆಗೆದಿದ್ದರು ಎನ್ನುವ ಅಂತೆಕಂತೆಗಳಿವೆ. ಇದ್ದರೂ ಇರಬಹುದು. ಆದರೆ ಆಧಾರಗಳು ಸಿಗುವುದಿಲ್ಲ.

               ಸಂಪದ್ಭರಿತ ಭಾರತಕ್ಕೆ ಕೀರ್ತಿ ಎಂಬ ಬಂಗಾರದ ತಿಲಕವನ್ನಿಟ್ಟಿದ್ದು ಕೋಲಾರ ಚಿನ್ನದ ಗಣಿ. ಬರೋಬ್ಬರಿ 150 ವರ್ಷಗಳ ಕಾಲ ಬಗೆ ಬಗೆದು ಚಿನ್ನವನ್ನು ಇಡೀ ವಿಶ್ವಕ್ಕೆ ಕೊಟ್ಟಿತದು. ಆದರೆ ಬ್ರಿಟಿಷರು ಅಲ್ಲಿ ಕಟ್ಟಿದ್ದು ಹೊಸತೊಂದು ವಸಾಹತನ್ನೇ! ಜಾನ್ ಟೈಲರ್ ಈ ನೂತನ ವಸಾಹತುಶಾಹಿ ಗಣಿಗಾರಿಕೆಗೆ ಮೂಲ ಕಾರಣನಾದ. ತಮಿಳುನಾಡಿನ ಧರ್ಮಪುರಿ, ಸೇಲಂ, ಈರೋಡಿನಿಂದ ಕಾರ್ಮಿಕರನ್ನು ಇಲ್ಲಿಗೆ ಕರೆದುಕೊಂಡು ಬಂದ ಬ್ರಿಟಿಷರು ಅವರನ್ನು ಜೀತದಾಳುಗಳಂತೆ ಶೋಷಿಸಿದರು. ಯಾವುದೇ ರಕ್ಷಣಾ ಕವಚಗಳಿಲ್ಲದೆ, ಸರಿಯಾದ ಸವಲತ್ತುಗಳಿಲ್ಲದೆ ಅವರನ್ನು ಗಣಿಹೊಂಡಗಳೊಳಕ್ಕೆ ಇಳಿಸಿದರು. ಅಲ್ಲೊಂದು ನಗರವೇ ನಿರ್ಮಾಣವಾಯಿತು. ಆದರೆ ಸೌಲಭ್ಯಗಳೆಲ್ಲಾ ಸಿಕ್ಕಿದ್ದು ಬ್ರಿಟಿಷರಿಗೆ. ಕಾರ್ಮಿಕರಿಗೆ ದಕ್ಕಿದ್ದು ಸುಡುಬಿಸಿಲು, ಗಣಿಹೊಂಡದೊಳಗಿನ ಬಿಸಿ ಅಷ್ಟೇ! ಚಿನ್ನದ ಗಣಿಗಾರಿಕೆಯ ಜೊತೆ ಜೊತೆಗೆ ಪೂರ್ವ-ಪಶ್ಚಿಮದ ಬೆರಕೆ ಸಂಸ್ಕೃತಿಯೊಂದು ಅಲ್ಲಿ ಶುರುವಾಗಿ ಮಿನಿ ಇಂಗ್ಲೆಂಡ್ ಎಂದೇ ಕರೆಯಲ್ಪಟ್ಟಿತು. ಬ್ರಿಟಿಷರಿಗೆ ಬಂಗಲೆಗಳು, ಕಾರ್ಮಿಕರಿಗೆ ಶೆಡ್ಡುಗಳು! ಒಂದೊಂದು ಶೆಡ್ಡಿನಲ್ಲೂ ಒಂದಕ್ಕಿಂತ ಹೆಚ್ಚು ಪರಿವಾರಗಳು ಬಾಳಬೇಕಾದ ಅನಿವಾರ್ಯ ಪರಿಸ್ಥಿತಿ. ಅದರ ಮೇಲೆ ನಿತ್ಯ ಇಲಿಗಳ ದಾಳಿ. ಅಲ್ಲಿನ ಕಾರ್ಮಿಕರು ವರ್ಷವೊಂದಕ್ಕೆ ಕನಿಷ್ಟ 50ಸಾವಿರ ಇಲಿಗಳನ್ನು ಕೊಲ್ಲುತ್ತಿದ್ದರಂತೆ! 55 ಡಿಗ್ರೀ ಸೆಲ್ಷಿಯಸ್ ಗಿಂತಲೂ ಹೆಚ್ಚು  ತಾಪಮಾನದಲ್ಲಿ ನಿತ್ಯ ಕೆಲಸ! 1893ರಲ್ಲಿ ಕೋಲಾರ ಚಿನ್ನದ ಗಣಿಗೆ ರೈಲುಮಾರ್ಗವೂ ನಿರ್ಮಾಣವಾಯಿತು. ಬ್ರಿಟಿಷರು ಬಂದು ರೈಲು ಮಾರ್ಗ ನಿರ್ಮಿಸಿದರು ಎಂದು ಹೊಗಳುವವರು ಬ್ರಿಟಿಷರು ಯಾಕೆ ನಿರ್ಮಿಸಿದರು ಎಂದು ತಮ್ಮನ್ನೇ ತಾವು ಪ್ರಶ್ನೆ ಕೇಳಿಕೊಂಡರೆ ರೈಲು ಮಾರ್ಗಗಳನ್ನು ನಿರ್ಮಿಸಿದ ಔಚಿತ್ಯ ತಿಳಿಯುತ್ತದೆ. ಶಿವನ ಸಮುದ್ರ ಜಲವಿದ್ಯುತ್ ಸ್ಥಾವರದಿಂದ ಉತ್ಪನ್ನವಾದ ವಿದ್ಯುತ್ ಮೊದಲು ಬೆಳಗಿದ್ದು ಕೋಲಾರದ ಚಿನ್ನದ ಗಣಿಯನ್ನು. ಮುಂದುವರೆದ ದೇಶಗಳು ಈ ಕ್ಷೇತ್ರದಲ್ಲಿ ಶೈಶವಾವಸ್ಥೆಯಲ್ಲಿದ್ದಾಗಲೇ ಪ್ರಪಂಚದಲ್ಲೇ ಅತ್ಯಂತ ಉದ್ದದ ಹೈ ವೋಲ್ಟೇಜ್ ಮಾರ್ಗವನ್ನು ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿಯವರೆಗೆ ನಿರ್ಮಿಸಲಾಗಿತ್ತು! 1930ರಲ್ಲಿ ಕಾರ್ಮಿಕರಿಗೆ ಗುರುತಿನ ಸಂಖ್ಯೆ ನೀಡಿ, ತಾಮ್ರದ ತಗಡಿನಲ್ಲಿ ಗುರುತಿನ ಪಟ್ಟಿಯನ್ನು ಸಿದ್ಧಪಡಿಸಿ ಕಬ್ಬಿಣದ ಬಳೆಯಲ್ಲಿ ಒಂದು ಕೈಗೆ ಬೇಡಿಯಂತೆ ತೊಡಿಸಲಾಗುತ್ತಿತ್ತು. ಇವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತಿತ್ತು. ಜೀತದಾಳುಗಳಂತೆ ಕೈಗಳಿಗೆ ಹಾಕಿರುವ ಪಟ್ಟಿಗಳನ್ನು ತೆಗೆಯಬೇಕೆಂದು ಹಾಗೂ ತೀವ್ರವಾದ ಚಳಿಯಿಂದ ತಪ್ಪಿಸಿಕೊಳ್ಳಲು ಜಾಗಬೇಕೆಂದೂ ಒತ್ತಾಯಿಸಿ ಬೇಡಿಕೆಯನ್ನು ಮುಂದಿಟ್ಟು ಕೆ. ಆರ್. ಷಣ್ಮುಗಂ ಚೆಟ್ಟಿಯಾರ್ ನೇತೃತ್ವದಲ್ಲಿ 24 ದಿನಗಳ ಕಾಲ ಹೋರಾಟ ನಡೆಯಿತು. ಗೋಲಿಬಾರು ನಡೆದು 44 ಜನರಿಗೆ ತೀವ್ರ ಗಾಯಗಳಾದವು. ಈ ಭಾರಿ ಹೋರಾಟದ ನಂತರ ಕೈಗಳಿಗೆ ಹಾಕಿದ್ದ ಬೇಡಿಯಂತಹ ಪಟ್ಟಿಗಳನ್ನು ತೆಗೆಯಲಾಯಿತು. ಬಳಿಕವೂ ಹಲವು ಹೋರಾಟಗಳು ನಡೆದವಾದರೂ ಫಲಪ್ರದವಾಗಲಿಲ್ಲ. ಗಣಿಗಾರಿಕೆಯ ಸ್ಥಳದಲ್ಲಿನ ಧೂಳಿನಿಂದ ಸಿಲಿಕಾಸಿಸ್ ಎಂಬ ಖಾಯಿಲೆಗೆ ಬಲಿಯಾದ, ಗಣಿಯೊಳಗಿನ ಸ್ಫೋಟ, ಅಪಘಾತಗಳಿಗೆ ಸಿಕ್ಕಿ ಸತ್ತವರ, ಜೀವಚ್ಛವವಾದ ಕಾರ್ಮಿಕರ ಸಂಖ್ಯೆಗೆ ಲೆಖ್ಖವೇ ಇಲ್ಲ. ಶ್ವಾಸಕೋಶವನ್ನು ಧೂಳು ಹೊಕ್ಕು ಉಸಿರಾಟದ ತೊಂದರೆಯ ಸಹಿತ ಕಂಡು ಕೇಳರಿಯದ ಕಾಯಿಲೆಗೆ ತುತ್ತಾದವರಿಗೆ ಕನಿಷ್ಟ ವೈದ್ಯಕೀಯ ಸೌಲಭ್ಯವೂ ಕಂಪೆನಿಗಳಿಂದ ಸಿಗುತ್ತಿರಲಿಲ್ಲ. ಆಳಕ್ಕೆ ಇಳಿದರೆ ಹೆಣ, ಮೇಲೆ ಬಂದರೆ ಹಣ; ಇದು ಕೆಜಿಎಫ್ ಕಾರ್ಮಿಕ ವಲಯದಲ್ಲಿ ಜನಜನಿತವಾಗಿದ್ದ ಮಾತು! ನಾಯಿಗಳಿಗೂ, ಸ್ಥಳೀಯರಿಗೂ ಪ್ರವೇಶವಿಲ್ಲ ಎಂಬ ಫಲಕಗಳು ಬ್ರಿಟಿಷ್ ಬಂಗಲೆಗಳ ಮುಂದೆ ತೂಗುತ್ತಿದ್ದವು!

                 ಅಲ್ಲಿ ಗಣಿಗಾರಿಕೆ ನಡೆದು ಹೊರಹಾಕಿದ ಟೈಲಿಂಗ್ ಡಂಪ್ ಎಂದು ಕರೆಯುವ ಸೈನೈಡ್ ರಾಶಿಗಳನ್ನು ಯುಪಿಎ ಸರಕಾರ 2013ರಲ್ಲಿ ಆಸ್ಟ್ರೇಲಿಯಾದ ಕಂಪೆನಿಯೊಂದಕ್ಕೆ ಧಾರೆ ಎರೆಯಲು ಹವಣಿಸಿತ್ತು. ಇಲ್ಲಿ ಇಂತಹ 38 ಮಿಲಿಯನ್ ಟನ್ ಸೈನೈಡ್ ಗುಡ್ಡಗಳು ಇವೆ. ಒಂದು ಟನ್ ಸೈನೈಡ್ ಗುಡ್ಡೆದಿಂದ 0.7 ಗ್ರಾಂ ಚಿನ್ನ ತೆಗೆಯಬಹುದು. ಇದಕ್ಕಾಗಿ ಗಣಿ ಅಗೆಯಬೇಕಾಗಿಲ್ಲ. ಅದನ್ನು ಅರೆದು ಸೋಸಿದರೆ ಸಾಕು ಲಾಭವೋ ಲಾಭ!

ಪರಕೀಯ ದಾಳಿಯಿಂದ ದೇಶವನ್ನು ಮುಕ್ತಗೊಳಿಸಿ ಪ್ರಜ್ವಲಿಸಿದ ಮಾರ್ತಾಂಡ

ಪರಕೀಯ ದಾಳಿಯಿಂದ ದೇಶವನ್ನು ಮುಕ್ತಗೊಳಿಸಿ ಪ್ರಜ್ವಲಿಸಿದ ಮಾರ್ತಾಂಡ

            ಸಮಗ್ರ ಭಾರತವನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿದ ಅದ್ಭುತ ರಚನೆ ಏಕಾತ್ಮತಾ ಸ್ತೋತ್ರ. ಅಲ್ಲಿ ಭಾರತದ ಔನ್ನತ್ಯ ಸಾರುವ ಇತಿಹಾಸದ ಬಿಂದುಗಳಿವೆ. ನದಿ-ಕಂದರ-ಗಿರಿ-ಸಾಗರಗಳ ಚಿತ್ರವಿದೆ. ಋಷಿಮುನಿಗಳ, ಅರಸ-ಯೋಧರುಗಳ, ಕರ್ತೃ-ಕರ್ಮಿಗಳ, ಚಿಂತಕ-ಹೋರಾಟಗಾರರ ಚಿತ್ರಣವಿದೆ. ಅದರ ಓದು, ಹುಟ್ಟಿನಿಂದ ಇಂದಿನವರೆಗಿನ ಸಮಗ್ರ ಭಾರತವನ್ನು ಒಮ್ಮೆ ಸುತ್ತಿಬಂದ ಆವರ್ಣನೀಯ ಆನಂದವನ್ನು ಕೊಡುತ್ತದೆ. ಅಲ್ಲೊಂದು ಶ್ಲೋಕ ಈ ರೀತಿ ಇದೆ;
ಲಾಚಿದ್ ಭಾಸ್ಕರವರ್ಮಾ ಚ ಯಶೋಧರ್ಮಾ ಚ ಹೂಣಜಿತ್ |
ಶ್ರೀಕೃಷ್ಣದೇವರಾಯಶ್ಚ ಲಲಿತಾದಿತ್ಯ ಉದ್ಭಲಃ ||೨೪||
ಈ ಶ್ಲೋಕದಲ್ಲಿರುವ ಲಲಿತಾದಿತ್ಯ ಎನ್ನುವ ಹೆಸರು ನನ್ನ ಗಮನ ಸೆಳೆಯಿತು. ನಮ್ಮ ಪಠ್ಯಪುಸ್ತಕಗಳಲ್ಲಾಗಲೀ, ಇತಿಹಾಸದ ಪುಸ್ತಕಗಳಲ್ಲಾಗಲೀ ಕಾಣದ ಹೆಸರದು. ಆದರೆ ಆತ ನಾವು ಕಾಣುವುದಕ್ಕೆ ಕಾರಣನಾದ ಸೂರ್ಯನಿಗೊಂದು ದೇವಾಲಯವನ್ನೇ ನಿರ್ಮಿಸಿದ್ದ. ತನ್ನ ಕಾಲ ಬಂದಾಗ ಸಮರ್ಥವಾಗಿ ರಾಜ್ಯವಾಳಿದ. ತಾನು ಅಧಿಕಾರದಲ್ಲಿದ್ದಷ್ಟು ಕಾಲ ಭಾರತವನ್ನು ಪರಕೀಯ ದಾಳಿಯಿಂದ ರಕ್ಷಿಸಿದ. ಇನ್ನು ಸಾಕು ಎಂದು ಅರಿವಾದಾಗ ಹಿಮಾಲಯಕ್ಕೆದ್ದು ಹೊರಟ! ಹೌದು ಈ ಬಾರಿ ಅವನ ಕಥೆಯೇ!

        ಕಾಶ್ಮೀರದಲ್ಲಿ ಗೋನಂದ ಎನ್ನುವ ವಂಶದ ದೊರೆಗಳ ಆಡಳಿತ ಕ್ರಿ.ಶ. 627ರವರೆಗೆ ನಡೆದಿತ್ತು. ಈ ವಂಶದ ಕೊನೆಯ ದೊರೆ ಬಾಲಾದಿತ್ಯ. ಆತನಿಗೆ ಗಂಡು ಸಂತಾನವಿರಲಿಲ್ಲ. ಹೀಗಾಗಿ ಆತನ ಮಗಳನ್ನು ವಿವಾಹವಾದ, ಕಾಶ್ಮೀರದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಕೋಟ ವಂಶದ ದುರ್ಲಭವರ್ಧನನಿಗೆ ಕಾಶ್ಮೀರದ ಪಟ್ಟ ಒಲಿದು ಬಂತು. ಅಪಾರ ಧೈರ್ಯ-ಶೌರ್ಯಕ್ಕೆ ಹೆಸರಾಗಿದ್ದ ಕಾರ್ಕೋಟ ವಂಶಜರಿಗೆ ಸಖಸೇನ ಎಂಬ ಬಿರುದನ್ನೇ ಕಾಶ್ಮೀರದ ರಾಜರುಗಳು ದಯಪಾಲಿಸಿದ್ದರು. ದುರ್ಲಭವರ್ಧನ 36 ವರ್ಷಗಳ ಕಾಲ ರಾಜ್ಯಭಾರ ಮಾಡಿದ. ಇವನ ಮರಣಾನಂತರ ಮಗ ದುರ್ಲಭಕ 50 ವರ್ಷ ಕಾಲ ರಾಜ್ಯವಾಳಿದರೂ ಆತನ ವಿಷಯವಾಗಿ ಚಾರಿತ್ರಿಕ ವಿವರಗಳಾವುವೂ ಲಭ್ಯವಿಲ್ಲ. ದುರ್ಲಭಕನ ಮಕ್ಕಳೇ ಚಂದ್ರಾಪೀಡ (ವಜ್ರಾದಿತ್ಯ), ತಾರಾಪೀಡ (ಉದಯಾದಿತ್ಯ) ಮತ್ತು ಮುಕ್ತಾಪೀಡ (ಲಲಿತಾದಿತ್ಯ). ದುರ್ಲಭಕನ ಬಳಿಕ ಪಟ್ಟವನ್ನೇರಿದವ ಹಿರಿಯನಾದ ಚಂದ್ರಾಪೀಡ (ಕ್ರಿ.ಶ. 713). ಅರಬ್ಬರ ಆಕ್ರಮಣವನ್ನು ನಿವಾರಿಸಲು ಈತ ಚೀನಾದ ಅರಸನ ನೆರವು ಕೇಳಿದ. ಆದರೆ ಚೀನಾದಿಂದ ಇಂದಿನ ಹಾಗೆ ಅಂದೂ ಪುಡಿಗಾಸಿನ ನೆರವೂ ಸಿಗಲಿಲ್ಲ. ಆದರೂ ತನ್ನ ಸಾಮರ್ಥ್ಯದಿಂದಲೇ ದೇಶವನ್ನು ಅರಬ್ಬರ ಬರ್ಬರತೆಯಿಂದ ರಕ್ಷಿಸಿಕೊಂಡಿದ್ದ ಚಂದ್ರಾಪೀಡ. ಇವನ ಸಾಹಸವನ್ನು ಕಂಡು ಚೀನಾದ ಚಕ್ರವರ್ತಿ ಕ್ರಿ.ಶ 720ರಲ್ಲಿ ರಾಜನೆಂದು ಗೌರವಿಸಿದ್ದನ್ನು ಚೀನಾದ ಇತಿಹಾಸದ ಪುಟಗಳು ಸಾರುತ್ತವೆ. ಉತ್ತಮ, ನ್ಯಾಯಪರ ಆಡಳಿತಕ್ಕೆ ಹೆಸರಾಗಿದ್ದ ಚಂದ್ರಾಪೀಡನ ಬಗೆಗಿನ ಕಥೆಯೊಂದು ಇಂದಿಗೂ ಪ್ರಚಲಿತದಲ್ಲಿದೆ. ಒಮ್ಮೆ ಚಂದ್ರಾಪೀಡನ ಅಧಿಕಾರಿಗಳು ದೇವಸ್ಥಾನವೊಂದನ್ನು ಕಟ್ಟಲು ಒಬ್ಬ ಚಮ್ಮಾರನ ಮನೆ ಇದ್ದ ಸ್ಥಳವನ್ನು ಆರಿಸಿದರು. ಚಮ್ಮಾರ ರಾಜನ ಬಳಿ ತನ್ನ ವಿಪತ್ತಿನ ಬಗ್ಗೆ ದೂರು ಕೊಟ್ಟ. ವಿಚಾರಣೆ ನಡೆಸಿದ ರಾಜ ತನ್ನ ಅಧಿಕಾರಿಗಳ ತಪ್ಪನ್ನರಿತು ಅವರಿಗೆ ಶಿಕ್ಷೆ ವಿಧಿಸಿದ. ಚಮ್ಮಾರ ರಾಜನ ನ್ಯಾಯವನ್ನು ಮೆಚ್ಚಿ ಸ್ವತಃ ಆ ಸ್ಥಳವನ್ನು ದೇವಸ್ಥಾನಕ್ಕಾಗಿ ಬಿಟ್ಟು ಕೊಟ್ಟ. ರಾಜ ಸೂಕ್ತ ಮೌಲ್ಯ ನೀಡಿಯೇ ಆ ಜಾಗವನ್ನು ಚಮ್ಮಾರನಿಂದ ಪಡೆದುಕೊಂಡ. ಇಂತಹ ಉತ್ತಮ ಆಡಳಿತಗಾರ ಸ್ವಂತ ತಮ್ಮ ತಾರಾಪೀಡನ ಕುತಂತ್ರಕ್ಕೆ ಕೊಲೆಯಾಗಿ ಹೋದ(ಕ್ರಿ.ಶ 722). ಕ್ರೂರಿಯೂ, ಕೊಲೆಗಡುಕನೂ, ನಿರ್ದಯಿಯೂ ಆಗಿದ್ದ, ಆಡಳಿತ ಕೌಶಲ್ಯವಿಲ್ಲದ ತಾರಾಪೀಡ ಪಟ್ಟಕ್ಕೆ ಬಂದ ಮೇಲೆ ಅವನ ಕಾಟ ತಾಳಲಾರದೆ ಅನೇಕರು ದೇಶಬಿಟ್ಟು ಹೋದರು. ಕ್ರಿ.ಶ. 724ರಲ್ಲಿ ಈತ ಪಾರ್ಶ್ವವಾಯು ಪೀಡಿತನಾಗಿ ಸಾವನ್ನಪ್ಪಿದ ಬಳಿಕ ಪಟ್ಟಕ್ಕೆ ಬಂದವನೇ ಲಲಿತಾದಿತ್ಯ. ಇವನ ಆಡಳಿತದಲ್ಲಿ ಕಾಶ್ಮೀರದ ನಕ್ಷೆ, ಚಿತ್ರಣ ಎಲ್ಲವೂ ಬದಲಾದವು.

            ಲಲಿತಾದಿತ್ಯ ಸಿಂಹಾಸನವನ್ನೇರಿದಾಗ ಕಾಶ್ಮೀರದ ಸ್ಥಿತಿ ಹದಗೆಟ್ಟಿತ್ತು. ಅವನ ಅಣ್ಣನ ಕ್ರೌರ್ಯಕ್ಕೆ ಸ್ವಾಭಿಮಾನಿಗಳೆಲ್ಲಾ ಊರು ಬಿಟ್ಟು ತೆರಳಿದ್ದರು. ನಡುವೆಯೇ ರಾಜ್ಯವನ್ನು ವಶಪಡಿಸಿಕೊಳ್ಳಲು ಶತ್ರುಗಳ ಕಾಟ. ಇದರಿಂದಾಗಿ ಅವನ  ಸಂಪೂರ್ಣ ಆಡಳಿತ ಕಾಲದಲ್ಲಿ ಸದಾ ಯುದ್ಧನಿರತನಾಗಬೇಕಾದ ಅನಿವಾರ್ಯತೆ ಉಂಟಾಯಿತು. ಅದರಿಂದ ರಾಜ್ಯಕ್ಕೇ, ಆಡಳಿತಕ್ಕೇನೂ ಹಾನಿಯಾಗಲಿಲ್ಲ. ಬದಲಾಗಿ ಕಾಶ್ಮೀರ ತನ್ನ ಸುವರ್ಣಯುಗವನ್ನೇ ಕಂಡಿತು. ತನ್ನ ಶತ್ರುಗಳನ್ನು ಬಡಿಯಲು ಹೊರಟವ ಇಡೀ ಭಾರತವನ್ನು ತನ್ನ ಚಕ್ರಾಧಿಪತ್ಯಕ್ಕೆ ಒಳಪಡಿಸಿಕೊಳ್ಳುವ ದಿಗ್ವಿಜಯಕ್ಕೂ ಅಣಿಯಾದ. ಪರ್ವತವಾಸಿಗಳಾದ ದರ್ದ, ಕಾಂಬೋಜ ಮತ್ತು ತುರುಷ್ಕರನ್ನೂ ಸದೆಬಡಿದ ಬಳಿಕ ಆತ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡು ಕನೌಜಿನ ಯಶೋವರ್ಮನ ಮೇಲೆ ಜಯ ಗಳಿಸಿದ. ಯಶೋವರ್ಮನನ್ನು ಸೋಲಿಸಿದ ಬಳಿಕ ಆತನ ಸಖ್ಯವನ್ನು ಬಯಸಿದ. ಇದು ಹಿಂದೂ ಅರಸರಿಗೂ ತುರ್ಕರಿಗೂ ನಡುವಣ ಇರುವ ವ್ಯತ್ಯಾಸ. ಶತ್ರುವನ್ನು ಕ್ಷಮಿಸಿ ತನ್ನವರಲ್ಲೊಂದಾಗಿಸಿದ ರಾಜಧರ್ಮ ನೀತಿ. ಅವನ ಈ ಧರ್ಮ ಮಾರ್ಗವೇ  ಮುಂದೆ ಆತನಿಗೆ ಅರಬ್ಬರೊಂದಿಗೆ ಕಾದಾಡುವಾಗ, ಟಿಬೆಟನ್ನರನ್ನು ಮಣಿಸುವಾಗ ಸಹಾಯಕ್ಕೊದಗಿತು. ತರುವಾಯ ಆತ ಬಿಹಾರ, ಬಂಗಾಳ, ಕಾಮರೂಪ, ಒರಿಸ್ಸಾಗಳನ್ನೂ ಗೆದ್ದು ಪೂರ್ವ ಸಮುದ್ರದವರೆಗೆ ತನ್ನ ಅಧಿಪತ್ಯವನ್ನು ವಿಸ್ತರಿಸಿದ. ದಕ್ಷಿಣ ಭಾರತದಲ್ಲಿ ಪ್ರಬಲರಾಗಿದ್ದ ರಾಷ್ತ್ರಕೂಟರನ್ನು ಸೋಲಿಸಿ ಕಾಶ್ಮೀರಕ್ಕೆ ಹಿಂತಿರುಗುವಾಗ ಗುಜರಾತ್, ಕಾಠಿಯಾವಾಡ, ಮಾಳ್ವ ಮತ್ತು ಮಾರ್ವಾಡಗಳ ಮೂಲಕ ಹಾದು ಹೋಗಿ ವಲ್ಲಭಿಯ ಮೈತ್ರಕ ಮತ್ತು ಚಿತ್ತೂರಿನ ರಾಜ್ಯಗಳನ್ನು ಗೆದ್ದು ಕಾಶ್ಮೀರಕ್ಕೆ ಹಿಂತಿರುಗಿದ. ದಕ್ಷಿಣ ದಿಗ್ವಿಜಯದ ಅನಂತರ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಅನೇಕ ಯುದ್ಧಗಳನ್ನು ಕೈಕೊಂಡ.

            ಆಗ ಬಲಾಢ್ಯವಾಗಿದ್ದ ಟಿಬೆಟಿಯನ್ನರು ಲಲಿತಾದಿತ್ಯನಿಗೆ ಸವಾಲಾಗಿದ್ದರು. ಒಂದು ಕಡೆ ಟಿಬೆಟಿಯನ್ನರ ಉಪಟಳ, ಇನ್ನೊಂದೆಡೆ ಸ್ವಾತ್, ಮುಲ್ತಾನ್, ಸಿಂಧ್ ಪ್ರಾಂತ್ಯಗಳನ್ನು ಗೆದ್ದು ಹಿಂದೂಗಳನ್ನು ತರಿಯುತ್ತಾ, ಮತಾಂತರಿಸುತ್ತಾ ಮುಂದೊತ್ತಿ ಬಂದು ಕಾಶ್ಮೀರದ ಬಾಗಿಲು ತಟ್ಟುತ್ತಿದ್ದ ಅರಬ್ಬರು. ಇಬ್ಬರಿಗೂ ಪಾಠ ಕಲಿಸಬೇಕಾದರೆ ಬೃಹತ್ ಸೈನ್ಯದ ಸಂಚಯನದ ಅಗತ್ಯತೆಯ ಮನಗಂಡ ಮುಕ್ತಾಪೀಡ ಚೀನಾದ ಸಹಾಯ ಕೋರಿದ. ಆಗ ಚೀನಾದಲ್ಲಿ ತಾಂಗ್ ವಂಶ ಉತ್ತುಂಗದಲ್ಲಿದ್ದ ಕಾಲ. ಜೊತೆಗೇ ಕೇಂದ್ರ ಚೀನಾದ ಕೆಲ ಭಾಗಗಳನ್ನು ಟಿಬೆಟಿಯನ್ನರಿಗೆ ಕಳೆದುಕೊಂಡು ಟಿಬೆಟಿಯನ್ನರ ಭೀತಿಯಲ್ಲಿದ್ದ ಕಾಲ. ಚೀನಾದ ದೊರೆ ತಾನು ಲಲಿತಾದಿತ್ಯನನ್ನು ಕಾಶ್ಮೀರದ ರಾಜ ಹಾಗೂ ಗೆಳೆಯನೆಂದು ಗೌರವಿಸುತ್ತೇನೆಯೇ ಹೊರತು ಸೈನ್ಯದ ನೆರವು ನೀಡಲು ಸಾಧ್ಯವಿಲ್ಲವೆಂದ. ಉರಿದೆದ್ದ ಲಲಿತಾದಿತ್ಯ ಚೀನಾದ ಮೇಲೆ ದಂಡೆತ್ತಿ ತನ್ನ ಸಾಮಂತ ರಾಜ್ಯವನ್ನಾಗಿಸಿದ. ಇದರಿಂದ ಚೀನಾದ ಪದಾತಿದಳದ ಜೊತೆ, ಸಸಾನಿಡ್-ಚೀನೀ ಅಶ್ವಸೈನ್ಯ ಲಲಿತಾದಿತ್ಯನ ಸಹಾಯಕ್ಕೆ ಒದಗಿತು. ಈ ಸಸಾನಿಡ್ ಪರ್ಷಿಯಾವನ್ನು ಆಳುತ್ತಿದ್ದ ರಾಜವಂಶ. ಅರಬ್ಬರು ಪರ್ಷಿಯಾವನ್ನು ಆಕ್ರಮಿಸಿದಾಗ ಸಸಾನಿಡ್ ವಂಶದ ಕೊನೆಯ ದೊರೆಯ ಮಗ ಚೀನಾದ ತಾಂಗ್ ರಾಜವಂಶದ ಆಸರೆ ಪಡೆದ. ಬಹುಷಃ ಅವನಿಂದಲೇ ಸಸಾನಿಡ್ ಅಶ್ವ ಸೈನ್ಯ ಚೀನಿಯರಿಗೆ ಸಿಕ್ಕಿರುವ ಸಾಧ್ಯತೆಗಳಿವೆ. ಹೀಗೆ ಚೀನಾದ ಸೈನ್ಯ ಹಾಗೂ ಯಶೋವರ್ಮನ ಸಹಾಯದೊಂದಿಗೆ ಲಲಿತಾದಿತ್ಯ ಟಿಬೆಟಿಯನ್ನರ ಮೇಲೆ ದಂಡೆತ್ತಿ ಹೋಗಿ ತುಖಾರಿ ಸ್ಥಾನ, ಲಡಕ್ ಪ್ರಾಂತ್ಯಗಳನ್ನಲ್ಲದೆ ಸಂಪೂರ್ಣ ಟಿಬೆಟನ್ನು ವಶಪಡಿಸಿಕೊಂಡ.

           ಈಗ ಮುಕ್ತಾಪೀಡ ಅರಬ್ಬರನ್ನು ಭಾರತದಿಂದ ಕೊತ್ತೊಗೆಯಲು ಸಿದ್ಧನಾದ. ಸ್ವಾತ್, ಸಿಂಧ್, ಮುಲ್ತಾನ್ಗಳಿಂದ ಅರಬ್ಬರನ್ನು ಓಡಿಸಿದ ಲಲಿತಾದಿತ್ಯನಿಗೆ ಅಫ್ಘನ್ನಿನಲ್ಲಿ ಹಿಂದೂಗಳನ್ನು ಗೋಳುಹೊಯ್ದುಗೊಳ್ಳುತ್ತಿರುವ ವಿಚಾರ ಕಿವಿಗೆ ಬಿತ್ತು. ತಕ್ಷಣ ಅಫ್ಘನ್ನರ ಮೇಲೆ ದಾಳಿ ಮಾಡಿ ಆತ ಕಾಬೂಲನ್ನು ಗೆದ್ದ. ಇರಾನಿನ ಕೆಲ ಭಾಗಗಳನ್ನೂ ತನ್ನ ವಶವಾಗಿಸಿಕೊಂಡ. ಕಾಬೂಲಿನ ಮುಖಾಂತರ   ಅಫ್ಘನ್ನಿನ ಈಶಾನ್ಯ ಭಾಗಗಳನ್ನು, ತುರ್ಕಿಸ್ತಾನ, ಟ್ರಾನ್ಸೊಕ್ಸಿಯಾನಾ(ಆಧುನಿಕ ಉಜ್ಬೇಕಿಸ್ತಾನ್, ತಜಕಿಸ್ತಾನ್, ದಕ್ಷಿಣ ಕಿರ್ಗಿಸ್ತಾನ್ ಮತ್ತು ನೈಋತ್ಯ ಕಝಕಿಸ್ತಾನಗಳೊಂದಿಗೆ ಕೂಡಿದ ಮಧ್ಯ ಏಷ್ಯದ ಭಾಗ)ಗಳಲ್ಲಿದ್ದ ಮುಸಲರ ಸೊಕ್ಕು ಮುರಿದ. ಬುಖಾರ್ ಪ್ರಾಂತ್ಯದ ಆಡಳಿತಗಾರ ಮುಮಿನ್ ನಾಲ್ಕು ನಾಲ್ಕು ಬಾರಿ ಲಲಿತಾದಿತ್ಯನ ಕೈಯಲ್ಲಿ ಏಟು ತಿಂದ. ಬುಖಾರ ಸಂಸ್ಕೃತದ ವಿಹಾರ ಪದದಿಂದ ಬಂದಿದೆ. ಈಗಿನ ಉಜ್ಬೆಕಿಸ್ತಾನಿನಲ್ಲಿ ಈ ಪ್ರಾಂತವಿದೆ. "ತನಗೆ ಸೋತು ಶರಣಾಗತರಾದುದರ ಕುರುಹಾಗಿ ತುರುಷ್ಕರ ಅರ್ಧ ತಲೆ ಬೋಳಿಸುವಂತೆ ಲಲಿತಾದಿತ್ಯ ಆದೇಶಿಸಿದ್ದ. ಹಿಂದೆ ಆಕ್ರಮಿಸಿಕೊಂಡು ಮುಂದುವರಿದಿದ್ದ ಭಾಗಗಳಿಂದ ಮುಸ್ಲಿಮರು ಹಿಂದೆ ಹಿಂದೆ ಸರಿಯಬೇಕಾಯಿತು. ವಾಯುವ್ಯ ಭಾರತದ ಅನೇಕ ಭಾಗಗಳಿಂದಲೂ ಕಾಲು ಕೀಳಬೇಕಾಯಿತು. ಕಸಬಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳ ಜನರು ಮತ್ತೆ ವಿಗ್ರಹಾರಾಧನೆಯಲ್ಲಿ ತೊಡಗಿದರು. ಸೋತು ಓಡಿದ ಮುಸ್ಲಿಮರಿಗೆ ಎಲ್ಲಿ ಹೋಗುವುದು ಎಂಬುದೇ ಗೊಂದಲವಾದಾಗ, ಅರಬ್ಬರ ಸಾಮಂತನೊಬ್ಬ ಸರೋವರದಾಚೆಯ ಆಲ್-ಹಿಂದ್ ಬಳಿ ಅವರೆಲ್ಲಾ ಇರಲು ವ್ಯವಸ್ಥೆ ಮಾಡಿದ. ಅದನ್ನು ಅತ್ ಮೆಹಫುಜಾ(ರಕ್ಷಿತ) ಎಂದು ಹೆಸರಿಟ್ಟು ಕರೆಯಲಾಯಿತು" ಎಂದು ಮುಸ್ಲಿಂ ಇತಿಹಾಸಕಾರ ಬಿಲಾದುರಿ ಬರೆದಿದ್ದಾನೆ.(ಇಂಡಿಯನ್ ರೆಸಿಸ್ಟೆನ್ಸ್ ಟು ಅರ್ಲಿ ಮುಸ್ಲಿಂ ಇನ್ವೇಡರ್ಸ್ ಅಪ್ ಟು 1206 ಎ.ಡಿ. - ಡಾ|| ರಾಮಗೋಪಾಲ್ ಮಿಶ್ರಾ). ಮಸೂದಿ ಎಂಬ ಅರಬ್ ಇತಿಹಾಸಕಾರ "ಹಜ್ಜಾಜನು ಅರಬ್ ಸೇನಾಧಿಕಾರಿ ಅಬ್ದುಲ್ ರಹಮಾನನ ಅಧಿಕಾರವನ್ನು ವಜಾಗೊಳಿಸಿ ಬೇರೊಬ್ಬನನ್ನು ನೇಮಿಸುವುದಾಗಿ ಬೆದರಿಕೆ ಹಾಕಿದಾಗ ಅಬ್ದುಲ್ ರಹಮಾನನು ದಂಗೆಯೆದ್ದು ಹಿಂದೂರಾಜನೊಬ್ಬನ ಜೊತೆ ಹೊಂದಾಣಿಕೆ ಮಾಡಿಕೊಂಡು ಹಜ್ಜಾಜನ ವಿರುದ್ಧವೇ ಯುದ್ಧಕ್ಕೆ ಸಿದ್ಧನಾದ. ಈ ಒಪ್ಪಂದ ಕಾರ್ಯರೂಪಕ್ಕೆ ಬರದ ಕಾರಣ ಅಬ್ದುಲ್ ರಹಮಾನ್ ಆತ್ಮಹತ್ಯೆ ಮಾಡಿಕೊಂಡ. ಆದರೆ ಆ ಹಿಂದೂ ರಾಜ ಯುದ್ಧ ಮುಂದುವರೆಸಿದ. ಆತ ಪೂರ್ವ ಪರ್ಷಿಯಾವನ್ನು ವಶಪಡಿಸಿಕೊಂಡು ಟೈಗ್ರಿಸ್ ಮತ್ತು ಯುಫ್ರೆಟಿಸ್ ನಡಿಗಳ ದಡದವರೆಗೆ ಮುಂದುವರೆದಿದ್ದ. ಹಜ್ಜಾಜ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದರೂ ಆತ ಖಲೀಫನಿಗೆ ಬಗ್ಗಲಿಲ್ಲ" ಎಂದು ಬರೆದಿದ್ದಾನೆ. ಆ ಸಮಯದಲ್ಲಿ ಅಂತಹಾ ಬಲಾಢ್ಯ ಹಿಂದೂ ಅರಸನಿದ್ದದ್ದು ಲಲಿತಾದಿತ್ಯನೇ. ಕಲ್ಹಣನ ರಾಜತರಂಗಿಣಿ ಒದಗಿಸಿದ ಮಾಹಿತಿಯೂ ಇದರೊಡನೆ ತಾಳೆಯಾಗುತ್ತದೆ.

         ಪೂರ್ವ ಸಮುದ್ರ ಮಹೋದಧಿಯಿಂದ ಪಶ್ಚಿಮದ ಯುಫ್ರೆಟಿಸ್ & ಟೈಗ್ರಿಸ್ ನದಿಗಳವರೆಗೆ, ಕಜಕಿಸ್ತಾನದಿಂದ ಒರಿಸ್ಸಾ ಹಾಗೂ ರಾಷ್ಟ್ರಕೂಟರು ಆಳುತ್ತಿದ್ದ ದಕ್ಷಿಣದ ಭಾಗಗಳವರೆಗೆ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿ ಕಾಶ್ಮೀರವನ್ನು ಕೇಂದ್ರವನ್ನಾಗಿಸಿಕೊಂಡು ಮೂವತ್ತಾರು ವರ್ಷಗಳ ಕಾಲ ಏಕಚಕ್ರಾಧಿಪತಿಯಾಗಿ ಮೆರೆದ ಲಲಿತಾದಿತ್ಯ. ಅವನ ಅವಧಿಯಲ್ಲಿ ಕಾಶ್ಮೀರ ಸರ್ವಾಂಗೀಣ ಪ್ರಗತಿ ಕಂಡಿತು. ಸ್ವತಃ ಸೈನ್ಯವನ್ನು ನಡೆಸಿ ಮಾಡಿದಷ್ಟೂ ಯುದ್ಧಗಳನ್ನು ಗೆದ್ದ ಅವನು ಅಲೆಗ್ಸಾಂಡರನೊಡನೆ ಹೋಲಿಸಬೇಕಾದ ಜಗದೇಕವೀರ. ಈತನ ಕಾಲದಲ್ಲಿ ಕಾಶ್ಮೀರ ನಾನಾ ಮುಖವಾಗಿ ಪ್ರಗತಿಹೊಂದಿ ಸಂಪದ್ಭರಿತ ನಾಡಾಯಿತು. ಲಲಿತಾದಿತ್ಯ ತನ್ನ ದಂಡಯಾತ್ರೆಗಳಿಂದ ಗಳಿಸಿದ ಅಪಾರ ಐಶ್ವರ್ಯದಿಂದ ಭವನಗಳನ್ನೂ, ದೇವಾಲಯಗಳನ್ನೂ, ಸರೋವರ, ಕಾಲುವೆಗಳನ್ನೂ ನಿರ್ಮಿಸಿದ. ಮಾರ್ತಾಂಡ ಸೂರ್ಯ ದೇವಾಲಯ ಒಂದು ಸಾಕು ಅವನ ಹಿರಿಮೆಯನ್ನು ಸಾರಲು. ಯಶೋವರ್ಮನನ್ನು ಸೋಲಿಸಿದ ಬಳಿಕ ಕನೌಜನಿಂದ ಭವಭೂತಿ ಮತ್ತು ವಾಕ್ಪತಿರಾಜ ಎಂಬ ಸುಪ್ರಸಿದ್ಧ ಕವಿಗಳನ್ನು ಕಾಶ್ಮೀರಕ್ಕೆ ಆಹ್ವಾನಿಸಿ ತನ್ನ ರಾಜ್ಯದಲ್ಲೇ ನೆಲೆಸುವಂತೆ ಮಾಡಿದ. ಮಹಾಪದ್ಮವೆಂಬ ಬೃಹತ್ ಸರೋವರಕ್ಕೆ ಅನೇಕ ಕಾಲುವೆಗಳನ್ನು ಕಡಿಸಿ ಕಾಶ್ಮೀರದ ಬಹುಭಾಗವನ್ನು ನದೀ ಮಾತೃಕವನ್ನಾಗಿಸಿ ಸಸ್ಯ ಸಂಪನ್ನವಾಗಿ ಮಾಡಿದ. ಅಲ್ಲಿನ ವಿವಿಧ ರೀತಿಯ ಕಾಲುವೆಗಳ ರಚನಾಕೌಶಲ್ಯವನ್ನು ಇಂದಿಗೂ ಶಿಲ್ಪಿಗಳನ್ನು ನಿಬ್ಬೆರಗಾಗಿಸುತ್ತವೆ. ಸರಸ್ವತಿ ಅಥವಾ ಕಲ್ನೋತ್ರಿ ಹಾಗೂ ಮಧುಮತಿ ನದಿಗಳ ಸಂಗಮಸ್ಥಾನದಲ್ಲಿ ಶಾರದಿ ಗ್ರಾಮದಲ್ಲಿರುವ ಶಾರದಾಪೀಠಕ್ಕೆ ಲಲಿತಾದಿತ್ಯ ಭೇಟಿಕೊಡುತ್ತಿದ್ದ ಉಲ್ಲೇಖ ರಾಜತರಂಗಿಣಿಯಲ್ಲಿ ದಾಖಲಾಗಿದೆ.

         ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂ ಕ್ರಿ.ಶ. 711-12ರಲ್ಲಿ ಸಿಂಧ್ ಮೇಲೆ ದಾಳಿಯೆಸಗಿ ಆಕ್ರಮಿಸಿಕೊಂಡದ್ದು ಭಾರತದ ಇತಿಹಾಸದ ಅತಿಮುಖ್ಯ ಘಟನೆಗಳಲ್ಲಿ ಒಂದೆಂದು ದಾಖಲಾಗಿದೆ. ಆದರೆ ಮುಂದಿನ 2 ದಶಕಗಳಲ್ಲಿ ಭಾರತದ ಮೇಲೆ ಅರಬ್ಬರು 3 ಸಲ ದಂಡೆತ್ತಿ ಬಂದಾಗ ಮೂರು ಸಲವೂ ಅವರನ್ನು ಲಲಿತಾದಿತ್ಯ ಮುಕ್ತಾಪೀಡ ಸೋಲಿಸಿ ಓಡಿಸಿದ್ದು ಇತಿಹಾಸ ಪಠ್ಯಪುಸ್ತಕಗಳಲ್ಲಿ ದಾಖಲಾಗಲೇ ಇಲ್ಲ. ಅಶೋಕ, ಅಕ್ಬರ್, ಔರಂಗಜೇಬ, ಕೊನೆಯಲ್ಲಿ ಬ್ರಿಟಿಷ್ ಭಾರತೀಯ ಸಾಮ್ರಾಜ್ಯ ಭಾರತ ಕಂಡ ಅತಿದೊಡ್ಡ ಸಾಮ್ರಾಜ್ಯಗಳು ಎಂದು ಬ್ರಿಟಿಷರು ರಚಿಸಿದ, ಇಂದೂ ಅದೇ ಜಾಡಿನಲ್ಲಿರುವ ನಮ್ಮ ಪಠ್ಯಪುಸ್ತಕಗಳು ಹೇಳುತ್ತವೆ. ಆದರೆ ಭಾರತದ ಇತಿಹಾಸದಲ್ಲೇ ಅತ್ಯಂತ ಬೃಹತ್ತಾದ ಸಾಮ್ರಾಜ್ಯವನ್ನು ಸ್ಥಾಪಿಸಿದ ಲಲಿತಾದಿತ್ಯ ಮುಕ್ತಾಪೀಡನ ಹೆಸರೇ ಇಲ್ಲಿನ ಪಠ್ಯಪುಸ್ತಕಗಳಲ್ಲಿಲ್ಲ. ಆತ ಅರಬ್ಬರನ್ನು ಮಾತ್ರ ಸೋಲಿಸಲಿಲ್ಲ. ಚೀನಿಯರನ್ನು, ಟಿಬೆಟಿಯನ್ನರನ್ನು, ಬಲಿಷ್ಟ ಯಶೋವರ್ಮ, ರಾಷ್ಟ್ರಕೂಟ, ವಂಗ ದೇಶಾಧಿಪರನ್ನು ಜಯಿಸಿದ. ಅವನ ಸಾಮ್ರಾಜ್ಯ ಕ್ಯಾಸ್ಪಿಯನ್ ಸಮುದ್ರದಿಂದ ಮಹೋದಧಿವರೆಗೆ, ಕಜಕ್ನಿಂದ ಕರ್ಣಾಣದವರೆಗೆ ಹರಡಿತ್ತು. ಅಕ್ಬರನ ಸಾಮ್ರಾಜ್ಯ ಲಲಿತಾದಿತ್ಯನ ಸಾಮ್ರಾಜ್ಯದ ಅರ್ಧದಷ್ಟೂ ಇರಲಿಲ್ಲ. ಇಂತಹ ಬೃಹತ್ ಸಾಮ್ರಾಜ್ಯವನ್ನು ಲಲಿತಾದಿತ್ಯ ಕಟ್ಟಿದ್ದು ಮುಂದೊತ್ತಿ ಬರುತ್ತಿದ್ದ ಅರಬ್ಬರ ವಿರೋಧದ ನಡುವೆ ಎಂಬುದು ಗಮನಾರ್ಹ ಅಂಶ. ಅಂದಿನ ದಿನಗಳಲ್ಲಿ ತಾವು ಆಕ್ರಮಿಸಿಕೊಂಡ ನಾಡಲ್ಲೆಲ್ಲಾ ತಮ್ಮ ಮತವನ್ನು ಬಲವಂತವಾಗಿ ಹೇರಲು ಯತ್ನಿಸಿದ ಮುಸಲರು, ಕ್ರೈಸ್ತರಂತೆ ಲಲಿತಾದಿತ್ಯ ತನ್ನ ಆಡಳಿತದಲ್ಲಿದ್ದ ನಾಡುಗಳಲ್ಲಿ ಒಮ್ಮೆಯೂ ಮಾಡಲಿಲ್ಲ. ಲಲಿತಾದಿತ್ಯ ತನ್ನ ಜೀವಮಾನದಲ್ಲಿ ಒಮ್ಮೆಯೂ ಸೋಲು ಅನುಭವಿಸಲಿಲ್ಲ. ಅಲಿಗ್ಸಾಂಡರನನ್ನು ಬಿಟ್ಟರೆ ಇಂತಹಾ ದಾಖಲೆ ಇರುವ ಐತಿಹಾಸಿಕ ವ್ಯಕ್ತಿ ಮತ್ತೊಬ್ಬನಿಲ್ಲ. ತನ್ನ ಪಾಲಿನ ಕೆಲಸ ಇನ್ನು ಮುಗಿಯಿತು ಎಂದು ಅರಿವಾದೊಡನೆ ಲಲಿತಾದಿತ್ಯ ಮುಕ್ತಾಪೀಡ ತನ್ನ 60ನೆಯ ವಯಸ್ಸಿನಲ್ಲಿ ಭಾರತೀಯ ಜೀವನಧರ್ಮದಂತೆ ಜೀವನ್ಮುಕ್ತನಾಗುವ ದೃಷ್ಟಿಯಂತೆ ಸಿಂಹಾಸನ ತ್ಯಜಿಸಿ ಸಂನ್ಯಾಸ ಸ್ವೀಕರಿಸಿ ಹಿಮಾಲಯಕ್ಕೆ ಹೊರಟುಹೋದ. ಇಂತಹ ಮಹಾನ್ ಅರಸನ ಬಗ್ಗೆ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಒಂದಕ್ಷರವೂ ಇಲ್ಲ!


ಶನಿವಾರ, ಡಿಸೆಂಬರ್ 15, 2018

ಕ್ಷಮಿಸಬೇಕು, ದೇಶದ್ರೋಹಿಗಳನ್ನಲ್ಲ!

ಕ್ಷಮಿಸಬೇಕು, ದೇಶದ್ರೋಹಿಗಳನ್ನಲ್ಲ!


             ಒಂದು ಕಡೆ ಮೊಘಲರು, ಇನ್ನೊಂದು ಕಡೆ ಆಂಗ್ಲರು, ಮತ್ತೊಂದು ಕಡೆ ಪೋರ್ಚುಗೀಸರು, ಮಗದೊಂದು ಕಡೆ ಜಂಜೀರಾದ ಸಿದ್ದಿಗಳು. ಏಕಕಾಲದಲ್ಲಿ ಈ ನಾಲ್ವರೊಡನೆ ಹೋರಾಡುತ್ತಲೇ ಒಂಬತ್ತು ವರ್ಷ ರಾಜ್ಯವಾಳಿ ಶಿವಾಜಿಯಿಂದ ಸ್ಥಾಪಿಸಲ್ಪಟ್ಟಿದ್ದ ಸಾಟಿಯಿಲ್ಲದ ಹಿಂದೂ ಮಹಾ ಸಾಮ್ರಾಜ್ಯವನ್ನು ಪೋಷಿಸಿದ್ದ ಸಂಭಾಜಿ. ಆ ಸಮಯಕ್ಕೆ ಸಂಭಾಜಿಯ ಭಾವ ಗಜೋಜಿ ಶಿರ್ಕೆ ಮೊಗಲ್ ಸರದಾರ್ ಮುಕರಾಬ್ ಖಾನನಿಗೆ ಸಂಭಾಜಿ ತಂಗಿದ್ದ ಸಂಗಮೇಶ್ವರವೆಂಬ ದುರ್ಭೇದ್ಯ ಕೋಟೆಗೆ ಸ್ವಯಂ ತಾನೇ ದಾರಿ ತೋರಿಸುತ್ತಾ ಕರೆದುಕೊಂಡು ಹೋದ. ಲಕ್ಷಾಂತರ ಸೈನಿಕರನ್ನು ಹೊಂದಿದ್ದೂ ಒಬ್ಬ ಮೊಘಲ್ ಸಾಮ್ರಾಟ ಔರಂಗಜೇಬ ಸಾಧಿಸಲಾಗದ ಕಾರ್ಯ ನಂಬಿಕೆ ದ್ರೋಹಿ, ದೇಶದ್ರೋಹಿಯೊಬ್ಬನಿಂದ ಸುಲಲಿತವಾಗಿ ನಡೆದು ಹೋಯಿತು. ಮುಂದೆ ಸಂಭಾಜಿಯ ಕಣ್ಣುಗಳನ್ನು ಕಿತ್ತು, ನಾಲಿಗೆಯನ್ನು ತುಂಡರಿಸಿ, ದೇಹದ ಒಂದೊಂದೇ ತುಂಡನ್ನು ಕಡಿದು ಅವನೆದುರೇ ನಾಯಿಗಳಿಗೆಸೆದು ಚಿತ್ರಹಿಂಸೆ ಕೊಟ್ಟು ಕೊಂದ ಔರಂಗಜೇಬನಂತಹ ಪರಮ ಕ್ರೂರಿಯ ಹೆಸರನ್ನೂ ಈ ದೇಶದ ರಸ್ತೆಗಳಿಗಿಟ್ಟದ್ದು ಇತಿಹಾಸ. ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದು ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಮುಂದೆ ಚಿಸ್ತಿಗೊಂದು ಗೋರಿ ಕಟ್ಟಲಾಯಿತು. ಇವತ್ತಲ್ಲಿ ಅನ್ನ ನೀರು ಕೊಟ್ಟ ದೇಶಕ್ಕೆ ದ್ರೋಹ ಬಗೆದ ವಿಶ್ವಾಸಘಾತುಕನಿಗೆ ಹಿಂದೂಗಳೂ ಚಾದರ ಅರ್ಪಿಸುತ್ತಿದ್ದಾರೆ!

                ಇತಿಹಾಸದಿಂದ ಈ ದೇಶೀಯರು ಪಾಠ ಕಲಿತಿಲ್ಲ. ದ್ರೋಹಿಗಳೂ ಹುಟ್ಟುತ್ತಿದ್ದಾರೆ, ಕ್ಷಮಿಸುವವರೂ, ಗೋರಿ ಕಟ್ಟಿ ಪೂಜಿಸುವವರೂ! ಮಣಿಶಂಕರ ಅಯ್ಯರ್ ಎಂಬ ಕೊಳಕು ಮನುಷ್ಯನ ನೆನಪಿರಬೇಕಲ್ಲ. "ಕೊಳಕು ಮನುಷ್ಯ" ಎಂಬ ಪದ ಪ್ರಯೋಗ ಸುಮ್ಮನೆ ಮಾಡಿದ್ದಲ್ಲ. ಆತ ಮಾಡಿರೋ ಘನ ಕಾರ್ಯಗಳಿಗೆ ಹೋಲಿಸಿದರೆ ಈ ಹೆಸರು ಏನೇನೂ ಅಲ್ಲ! ಸ್ವಾತಂತ್ರ್ಯ ವೀರ ಎಂದು ಜಗತ್ತೇ ಕೊಂಡಾಡಿದ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್. ಶತ್ರು ಪಾಳಯಕ್ಕೆ ನುಗ್ಗಿ ಶತ್ರುವಿನೊಡನೆ ಯುದ್ಧ, ಸಾಗರ ಈಜಿದ ಸಾಹಸ, ಅಂಡಮಾನಿನ ಕರಿ ನೀರ ಶಿಕ್ಷೆ, ಅಸಂಖ್ಯ ಯೋಧರಿಗೆ ಸ್ಪೂರ್ತಿ, ಅದ್ಭುತ ಸಾಹಿತ್ಯ, ಇತಿಹಾಸ ರಚನೆ, ಸಮಾಜ ಸುಧಾರಣೆ ಹೀಗೆ ಪಟ್ಟಿ ಮಾಡಿದಷ್ಟು ಬೆಳೆಯುವ ಸಾಧನೆಗಳ ಪಾರಿತೋಷಕ ಹೊತ್ತ ವೀರ ಸಾವರ್ಕರರ ಧ್ಯೇಯವಾದವನ್ನು ಉದ್ಘೋಷಿಸುವ ಅಂಡಮಾನಿನ ಸ್ಮೃತಿಸ್ತಂಭದ ಮೇಲಿದ್ದ ಅಜರಾಮರ ಕವಿತೆಯ ಸಾಲನ್ನು ಕಿತ್ತು ಹಾಕಿದ ದೇಶದ್ರೋಹಿ ಈ ಮಣಿಶಂಕರ ಅಯ್ಯರ್. ಅಂಡಮಾನಿನ ಕರಿನೀರ ರೌರವದಿಂದಲೂ ಕೊಂಕದ ಸಾವರ್ಕರರ ದೇಶಭಕ್ತಿಗೆ ಗುಲಾಮನೊಬ್ಬನ ಹೀನ ಕಾರ್ಯದಿಂದ ಅವಮಾನವಾಯಿತು.

                 2010ರಲ್ಲಿ ಭಾರತ ಆತಿಥ್ಯ ವಹಿಸಿದ್ದ ಕಾಮನ್ವೆಲ್ತ್ ಕ್ರೀಡಾಕೂಟ ಹಾಳಾದ್ರೇ ಒಳ್ಳೇದು ಎಂದಿದ್ದ ಈ ಮನುಷ್ಯ. ಮುಂಬಯಿ ಸ್ಫೋಟದ ರೂವಾರಿ ಯಾಕೂಬ್ ಮೆನನ್ನಿಗೆ ಗಲ್ಲುಶಿಕ್ಷೆ ಕೊಡಬಾರದೆಂದು ಮನವಿ ಸಲ್ಲಿಸಿದ ದಾನವ ಹಕ್ಕು ಹೋರಾಟಗಾರರ ಪಟ್ಟಿಯಲ್ಲಿ ಇವನ ಹೆಸರೂ ಇತ್ತು. ಭಾರತಕ್ಕೆ ಯೋಜನೆಯಿಂದಲೂ, ಪ್ರಕರಣದಿಂದಲೂ ಭಾರೀ ನಷ್ಟವನ್ನುಂಟುಮಾಡಿದ್ದ ಅಮೆರಿಕಾದ ಬೃಹತ್ ವಿದ್ಯುತ್ ಉತ್ಪಾದನಾ ಕಂಪೆನಿ ಎನ್ರಾನ್ ವಿರುದ್ಧದ ಪ್ರಕರಣದಲ್ಲಿ ವಾದಿಸುತ್ತಿದ್ದ ವಕೀಲ ಹರೀಶ್ ಸಾಳ್ವೆಯನ್ನು ಬದಲಿಸಿ ಪಾಕಿಸ್ತಾನದ ವಕೀಲ ಖವಾರ್ ಖುರೇಷಿಯನ್ನು ನೇಮಿಸಲಾಗಿತ್ತು. ಇದರ ಹಿಂದೆ ಇದ್ದವರು ಆಗಿನ ಸಚಿವರುಗಳಾದ ಸಲ್ಮಾನ್ ಖುರೇಷಿ, ಚಿದಂಬರಂ, ಮಣಿಶಂಕರ್ ಐಯ್ಯರ್ ಮತ್ತು ಶರದ್ ಪವಾರ್! ಮಯನ್ಮಾರ್ ಗಡಿಯಲ್ಲೊಂದು ಸರ್ಜಿಕಲ್ ಸ್ಟ್ರೈಕ್ ನಡೆದಾಗ "ಮಯನ್ಮಾರಿನ ಗಡಿಯೊಳಗೆ ನುಗ್ಗಲು ಪೌರುಷದ ಆವಶ್ಯಕತೆಯೇ ಇಲ್ಲ. ಹಸುಗೂಸೇ ಸಾಕಾಗುತ್ತದೆ. ಇದು ಭಾರತ-ಪಾಕ್ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುತ್ತದೆ. ಪಾಕಿಸ್ಥಾನದ ಬಳಿಯೂ ಅಣ್ವಸ್ತ್ರಗಳಿವೆ ಎಂಬುದನ್ನು ಮರೆಯಬಾರದು" ಎಂದು ತನ್ನ ಲೇಖನದಲ್ಲಿ ಪ್ರಧಾನಿ ಮೋದಿಯವರನ್ನು, ದೇಶದ ಸೈನಿಕರನ್ನು ಲೇವಡಿ ಮಾಡಿದ್ದ ಅಯ್ಯರ್.  ಕಳೆದ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಅಹ್ಮದ್ ಪಟೇಲನನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಲು ಪಾಕಿಸ್ತಾನದ ಸಹಾಯ ಪಡೆಯುವ ಸಂಚು ಹೂಡಲಾಗಿತ್ತು. ಆ ಸಮಾಲೋಚನೆ ನಡೆದುದು ಮಣಿಶಂಕರ್ ಅಯ್ಯರ್ ಮನೆಯಲ್ಲೇ! ಪಾಕಿಸ್ತಾನದ ಮಾಜಿ ರಾಯಭಾರಿ ಖುರ್ಷಿದ್ ಮಹಮದ್ ಖಸೂರಿಯೊಡನೆ ನಡೆದ ಈ ಸಮಾಲೋಚನೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಕೂಡಾ ಭಾಗಿಯಾಗಿದ್ದರು. ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಕೆಳಗಿಳಿಸಲು ಕಾಂಗ್ರೆಸ್ಸಿನ ಗೆಲುವಿಗೆ ಸಹಾಯ ಯಾಚನೆ ಮಾಡಿದ್ದ ತುಚ್ಛ ರಾಜಕಾರಣಿ ಮಣಿಶಂಕರ ಅಯ್ಯರ್. ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರಮಾಣದಲ್ಲಿ ಪಾಕಿಸ್ತಾನವನ್ನೂ ಪ್ರೀತಿಸುತ್ತೇನೆ ಎನ್ನುವ ಮಣಿಶಂಕರ ಅಯ್ಯರ್ ಈ ನಡೆ ಹೊಸದೇನೂ ಅಲ್ಲ. ಆದರೆ ಈ ದೇಶದ ಅನ್ನ ತಿಂದು ತನ್ನ ವೈಯುಕ್ತಿಕ ಲಾಭಕ್ಕೋಸ್ಕರ ಶತ್ರು ದೇಶದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಯಾವ ಗಜೋಜಿ ಶಿರ್ಕೆಯ ದೇಶದ್ರೋಹಕ್ಕಿಂತಲೂ ಕಡಿಮೆಯದೇನಲ್ಲ.

                    ನವಜೋತ್ ಸಿಂಗ್ ಸಿಧು. ಕ್ರಿಕೆಟ್ ಆಟಗಾರನಾಗಿ ಪಡೆದಿದ್ದ ಮಾನವನ್ನು ರಾಜಕೀಯ ಆಟದಲ್ಲಿ ಹರಾಜು ಹಾಕುತ್ತಿರುವ ವಿಫಲ ವ್ಯಕ್ತಿ. ಅಷ್ಟೇ ಆಗಿದ್ದರೆ ಕ್ಷಮಿಸಿಬಿಡಬಹುದಿತ್ತು. ಭಾರತದಿಂದ ಯಾರೂ ಹೋಗದಿದ್ದ ಸಂದರ್ಭದಲ್ಲಿ ಇಮ್ರಾನ್ ಖಾನನ ಪ್ರಧಾನಿ ಪದಗ್ರಹಣ ಕಾರ್ಯಕ್ರಮಕ್ಕೆ ಹೋದ ಭಂಡ ಈತ. ಅಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಾಜ್ವಾನನ್ನು ತಬ್ಬಿಕೊಂಡ. ಪಾಕಿಸ್ಥಾನದ ಸೇನಾ ಮುಖ್ಯಸ್ಥರು ತನ್ನ ಕಿವಿಯಲ್ಲಿ ಶಾಂತಿ ಮಂತ್ರವನ್ನು ಜಪಿಸಿದರು ಎನ್ನುವ ಹೇಳಿಕೆಯಂತೂ ಸಿಧುವಿನ ನಗುವಿನಷ್ಟೇ ಹಾಸ್ಯಾಸ್ಪದ. ಇತ್ತೀಚೆಗೆ ಮತ್ತೊಮ್ಮೆ ಪಾಕಿಗೆ ತೆರಳಿ ಕರ್ತಾರ್ ಪುರ ಕಾರಿಡಾರ್ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಧು, ಅಲ್ಲಿ ಅಮೃತಸರ ಸಮೀಪ ನಿರಂಕಾರಿ ಭವನದ ಮೇಲೆ ನಡೆದ ಗ್ರೆನೇಡ್ ದಾಳಿಯ ರೂವಾರಿ, ಖಲಿಸ್ತಾನೀ ಉಗ್ರ, ಲಷ್ಕರೆ ತೊಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಜತೆಗೆ ಸಂಪರ್ಕವುಳ್ಳ ಗೋಪಾಲ್ ಸಿಂಗ್ ಚಾವ್ಲಾ ಜತೆ ಫೋಟೊ ತೆಗೆಸಿಕೊಂಡ. ಸಿಧುವಿಗೆ ರಾಜಕೀಯದಲ್ಲಿ ಅನ್ನ ಕೊಟ್ಟಿದ್ದು ಬಿಜೆಪಿ. ಆತ ಅನ್ನ ಕೊಟ್ಟವರಿಗೆ ಮಾತ್ರ ವಿಶ್ವಾಸಘಾತ ಮಾಡಿದ್ದಲ್ಲ. ಇಡೀ ದೇಶಕ್ಕೆ ನಂಬಿಕೆ ದ್ರೋಹ ಬಗೆದಿದ್ದಾನೆ; ಈ ದ್ರೋಹ ಚಿಸ್ತಿಯ ಘಾತುಕತನಕ್ಕಿಂತ ಕಡಿಮೆಯದೇನಲ್ಲ.

                   ರಾಹುಲ್ ಗಾಂಧಿ ಹೇಳಿದ್ದಕ್ಕೆ ತಾನು ಹೋದೆ ಎನ್ನುವ ಸಿಧುವಿನ ಹೇಳಿಕೆ ಸಂಪೂರ್ಣ ಕಾಂಗ್ರೆಸ್ಸನ್ನೇ ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ; ಅದರ ಬೆಂಬಲಿಗ ಮಾಧ್ಯಮಗಳು ಮಾಡುತ್ತಿರುವುದೂ ಅದನ್ನೇ. ಸಾಗರದಲ್ಲಿ ಪಾಕಿಸ್ಥಾನದ ಅಕ್ರಮ ದೋಣಿಯೊಂದನ್ನು ಭಾರತೀಯ ನೌಕಾಪಡೆ ಹೊಡೆದುರುಳಿದ್ದನ್ನು ಅಪರಾಧ ಎಂದು ಈ ಗುಲಾಮರು ಬಡಬಡಿಸಿ ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ಘೋಷಿಸಿದರು. ಭಾರತೀಯ ಸೈನ್ಯ ಮಯನ್ಮಾರ್ ಗಡಿಯಲ್ಲಿ ಬಂಡುಕೋರರನ್ನು ಬಗ್ಗುಬಡಿದ ಸುದ್ದಿಗೆ ದೇಶಕ್ಕೆ ದೇಶವೇ ಹೆಮ್ಮೆ ಪಡುತ್ತಿದ್ದರೆ ಸಿಎನ್ಎನ್-ಐಬಿಎನ್ ಎಂಬ ಮತಿಗೆಟ್ಟ ಚಾನಲ್ ಪಾಕಿಸ್ಥಾನದ ಮಾಜಿ ಸರ್ವಾಕಾರಿ ಮುಷರಫ್ನನ್ನು ಕರೆದು ಕೂರಿಸಿ ಅಭಿಪ್ರಾಯವನ್ನು ಕೇಳುತ್ತಿತ್ತು. ಮೋದಿ ಪ್ರಧಾನಿಯಾದ ಬಳಿಕ ಶತಾಯಗತಾಯ ಮೋದಿಯನ್ನು ಹಣಿಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಟಾಲಂ ಮೋದಿ ಧರಿಸಿದ ಬಟ್ಟೆ, ಹೋದ ಮಾರ್ಗ, ಆಡಿದ ಮಾತುಗಳೆಲ್ಲವನ್ನೂ ಟೀಕಿಸುತ್ತಾ ಕೊನೆಗೆ ಮೋದಿ ಆಳುವ ದೇಶವನ್ನೂ ಟೀಕಿಸುತ್ತಾ ಬಹಿರಂಗವಾಗಿಯೇ ದೇಶದ ಶತ್ರುಗಳ ಜೊತೆ ಸೇರಿ ಮೋದಿಯನ್ನು ಮಣಿಸಲು ನೋಡುತ್ತಿದೆ. ಕ್ರಾಂತಿಕಾರಿಗಳನ್ನು ಬ್ರಿಟೀಷರಿಗೆ ಹಿಡಿದುಕೊಟ್ಟು ಅಧಿಕಾರ ಹೊಡೆದುಕೊಂಡವರ ಬುದ್ಧಿ ಇನ್ನೂ ಬದಲಾಗಿಲ್ಲ.

                    ಈ ದೇಶದ ನ್ಯಾಯಾಂಗ ವ್ಯವಸ್ಥೆ ಹೇಗಿದೆಯೆಂದರೆ ಇಲ್ಲಿ ದೇಶದ್ರೋಹಿಯನ್ನು, ಅವನ ಕಾರ್ಯವನ್ನು ಖಂಡಿಸುವವನ ಮೇಲೆ ಕೇಸು ದಾಖಲಾಗುತ್ತದೆ. ದೇಶದ್ರೋಹಿ, ವೇದಿಕೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಷಣ ಕುಟ್ಟುತ್ತಾ, ಮಾಧ್ಯಮಗಳಲ್ಲಿ ಜನರನ್ನು ರಂಜಿಸುತ್ತಾ, ಉಗ್ರರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಾ ರಾಜಾರೋಷವಾಗಿ ಓಡಾಡುತ್ತಿರುತ್ತಾನೆ. ಕ್ಷಣ ಕಾಲದಲ್ಲಿ ಇತಿಹಾಸ ಮರೆಯುವ ಹಿಂದೂ ಇಂತಹವರಿಗೆ ಗೋರಿ ಕಟ್ಟಿದರೆ ಚಾದರ ತಲೆಯ ಮೇಲೆ ಹೊತ್ತು ಅರ್ಪಿಸಲು ಸಿದ್ಧನಾಗಿರುತ್ತಾನೆ! ನಟರನ್ನೇ ನಿಜವಾದ ಹೀರೋಗಳೆಂದು ಭ್ರಮಿಸಿ ಪ್ರತಿಮೆ ಕಟ್ಟುವ ಜನಕ್ಕೆ ದೇಶಪ್ರೇಮ ಬರಿಯ ಆಗಸ್ಟ್ ಹದಿನೈದಕ್ಕಷ್ಟೇ ಸೀಮಿತವಾಗಿಬಿಡುತ್ತದೆ!

ಹುಸಿ ಜಾತ್ಯಾತೀತವಾದ ಇತಿಹಾಸವನ್ನು ಕೊಂದಿತು! ಹಿಂದೂವಿನ ಶೌರ್ಯದ ತೇಜ ಕುಂದಿತು!

ಹುಸಿ ಜಾತ್ಯಾತೀತವಾದ ಇತಿಹಾಸವನ್ನು ಕೊಂದಿತು! ಹಿಂದೂವಿನ ಶೌರ್ಯದ ತೇಜ ಕುಂದಿತು!

                "ಗುರುವಾರ ನಾನು ಆಗ್ರಾವನ್ನು ಪ್ರವೇಶಿಸಿ ಸುಲ್ತಾನ್ ಇಬ್ರಾಹಿಂ ಅರಮನೆಯನ್ನು ನನ್ನದಾಗಿಸಿಕೊಂಡೆ. ಈದ್ ನ ಕೆಲ ದಿನಗಳ ಬಳಿಕ ಗುಮ್ಮಟದ ಕೆಳಗೆ ಕಲ್ಲುಕಂಬಗಳ ಶ್ರೇಣಿಯಿರುವ ರಮ್ಯವಾದ ವಿಶಾಲವಾದ ಹಜಾರವೊಂದರಲ್ಲಿ ಭಾರಿ ಔತಣವೊಂದನ್ನು ನೆರವೇರಿಸಿದೆ..." ಬಾಬರ್ ತನ್ನ ಆತ್ಮಚರಿತ್ರೆ "ಮೆಮರೀಸ್ ಆರ್ ಜೆಹಿರ್-ಉದ್-ದಿನ್-ಬಾಬರ್"ನಲ್ಲಿ ಬರೆದುಕೊಂಡ ಸಾಲುಗಳಿವು. ಆಗ್ರಾದಲ್ಲಿ ಕಲ್ಲಿನ ಗುಮ್ಮಟ, ಸಾಲು ಕಲ್ಲುಕಂಬಗಳಿರುವ ಅರಮನೆ ಯಾವುದು ಎಂದು ಹುಡುಕಹೊರಟರೆ ಅದು ತಾಜ್ ಮಹಲ್ ಒಂದರತ್ತಲೇ ಬೊಟ್ಟು ಮಾಡುತ್ತದೆ. ಆಗ್ರಾದಲ್ಲಿನ ತೋಟದ ಅರಮನೆಯಲ್ಲಿ ಬಾಬರ್ ಸತ್ತನೆಂದು ವಿನ್ಸೆಂಟ್ ಸ್ಮಿತ್ ಉಲ್ಲೇಖಿಸಿದ್ದಾನೆ. ಆಗ್ರಾದಲ್ಲಿ ಉದ್ಯಾನದ ನಡುವಿರುವ ಅರಮನೆ ತಾಜ್ ಮಹಲ್ ಒಂದೇ! ಅರೇ, ಷಾಜಹಾನ್ ತನ್ನ ಪ್ರೀತಿಯ ಮಡದಿಗಾಗಿ ಕಟ್ಟಿಸಿದ್ದ ಎನ್ನಲಾದ ಮಹಲಿನಲ್ಲಿ ಅವನಿಗಿಂತ ನೂರು ವರ್ಷ ಮೊದಲೇ ಅವನ ಅಜ್ಜನ ಅಜ್ಜ ಔತಣ ಮಾಡಿದ್ದು ಹೇಗೆ?  ಭಾರತದ ಇತಿಹಾಸವನ್ನು ಬರೆದಿಟ್ಟ ಬಗೆ ಹೀಗೆ; ಸತ್ಯವನ್ನೆಲ್ಲಾ ಮುಚ್ಚಿಟ್ಟು ಸುಳ್ಳುಗಳನ್ನು ಬರೆದಿಟ್ಟು ಆಕ್ರಮಕರನ್ನು ಸಜ್ಜನರು, ಅಮರ ಪ್ರೇಮಿಗಳೆಂಬಂತೆ ವಿಜೃಂಭಿಸಿ ಭಾರತೀಯ ಮಸ್ತಿಷ್ಕವನ್ನು ಮತಾಂತರ ಮಾಡಿರುವ ಪ್ರಕ್ರಿಯೆ! ಅದಕ್ಕೆ ಅಲ್ಲಲ್ಲಿ ಗೋಜಲುಗಳು; ಸತ್ಯಬಿಡಿಸ ಹೊರಟವರೆಲ್ಲಾ ಕೋಮುವಾದಿಗಳು, ಇತಿಹಾಸವನ್ನು ಕೇಸರೀಕರಣಗೊಳಿಸುವವರು!

                 ಈಗೊಂದು ಸ್ವರ ಪಶ್ಚಿಮದಿಂದ ಎದ್ದಿದೆ. ಪ್ರಾಮಾಣಿಕ ಆಧುನಿಕ ವೈಜ್ಞಾನಿಕ ವಿಶ್ವಕೋಶವೆಂದು ಹೆಸರಾದ ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲೂ ಮುಮ್ತಾಜಳ ಮೇಲಿನ ಪ್ರೀತಿಗಾಗಿ ಕಟ್ಟಿದ ಸೌಧವೆಂದೇ ದಾಖಲಾಗಿರುವಾಗಲೂ ಈ ದನಿ ಎದ್ದಿರುವುದು ವಿಶೇಷ. ಹಾಗಂತ ಈ ಸ್ವರ ಇತ್ತೀಚೆಗಷ್ಟೇ ಎದ್ದದ್ದಲ್ಲ. ನ್ಯೂಯಾರ್ಕಿನ ಪ್ರಾಟ್ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ಉಪನ್ಯಾಸಕ ಮಾರ್ವಿನ್ ಎಚ್. ಮಿಲ್ಸ್ ಮೂರು ದಶಕಗಳಿಗೂ ಹಿಂದೆಯೇ ಬರೆದಿದ್ದ ಪತ್ರವೊಂದರ ತುಣುಕು ಇತ್ತೀಚೆಗೆ "ದಿ ನ್ಯೂಯಾರ್ಕ್ ಟೈಮ್ಸ್" ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಹಿಂದೆ ಎದ್ದಿದ್ದ ದನಿಗೊಂದು ಬಲ ನೀಡಿದೆ. ಮಾರ್ವಿನ್ ಎಚ್. ಮಿಲ್ಸ್ ಯಮುನಾ ನದಿಯ ಕಡೆಗಿರುವ ತಾಜ್ ಮಹಲಿನ ದ್ವಾರದಿಂದ ಸ್ಯಾಂಪಲ್ ಸಂಗ್ರಹಿಸಿ ಕಾರ್ಬನ್ ಡೇಟಿಂಗ್(ಕಾರ್ಬನ್-೧೪) ಪರೀಕ್ಷೆಗೆ ಒಳಪಡಿಸಿದಾಗ ಆ ಬಾಗಿಲು ಷಾಜಹಾನ್ ಗಿಂತಲೂ ಮುನ್ನೂರು ವರ್ಷ ಹಳೆಯದೆಂದು ಸಾರಿತು! ಇದರ ಜೊತೆಗೆ ಮಾರ್ವಿನ್ ಹಲವಾರು ಪ್ರಶ್ನೆಗಳನ್ನೂ ಎತ್ತಿದ್ದರು. ಭವನದ ಎಡ ಭಾಗ ಮಸೀದಿಯಾಗಿದೆ. ಒಂದು ವೇಳೆ ಶೂನ್ಯದಿಂದ ಭವನವನ್ನು ಕಟ್ಟಲ್ಪಟ್ಟಿದ್ದರೆ ಮಸೀದಿ ಪಶ್ಚಿಮದತ್ತ ಮುಖ ಮಾಡುವ ಬದಲು ಮೆಕ್ಕಾಕ್ಕೆ ಮುಖ ಮಾಡಿ ಪ್ರಾರ್ಥಿಸುವಂತೆ ಇರಬೇಕಿತ್ತು. ಸಮಾಧಿಯ ನಾಲ್ಕು ಮಿನಾರತ್ತುಗಳು ಅವ್ಯವಸ್ಥಿತವಾಗಿದ್ದು, ನಿಜವಾಗಿ ಮಸೀದಿಯ ಮುಂಭಾಗದಲ್ಲಿರಬೇಕಿತ್ತು. ಯಾಕೆಂದರೆ ಅವು ಪ್ರಾರ್ಥನೆಗೆ ಮುಸ್ಲಿಮರನ್ನು ಕರೆಯುವ ಮಸೀದಿಯ ಎತ್ತರದ ಭಾಗಗಳು. ತಾಜ್ ಮಹಲಿನ ಮುಖ್ಯ ಭವನದ ಅಕ್ಕಪಕ್ಕದಲ್ಲಿರುವ ಸಮರೂಪಿ ಭವನಗಳು ಒಂದು ಮಸೀದಿಗಾಗಿ, ಇನ್ನೊಂದು ಅತಿಥಿ ಗೃಹಕ್ಕೆಂದು ನಿರ್ಮಾಣಗೊಂಡಿದ್ದರೆ ಅವುಗಳ ಕಾರ್ಯಕ್ಕನುಗುಣವಾದ ವಿನ್ಯಾಸದಲ್ಲಿ ಕಟ್ಟಲ್ಪಡಬೇಕಿತ್ತು. ಮೊಘಲರು ಭಾರತದ ಮೇಲೆ ದಾಳಿ ಮಾಡಿದಾಗ ಫಿರಂಗಿಗಳು ಬಳಕೆಯಲ್ಲಿದ್ದವು. ಹಾಗಿದ್ದೂ ತಾಜ್ ಮಹಲ್ ಗೋಡೆಯ ಪರಿಧಿ ಯಾಕೆ ಫಿರಂಗಿಯ ಪೂರ್ವಕಾಲದ ರಕ್ಷಣಾ ಪಾತ್ರದಂತೆ ನಿರ್ಮಿಸಲಾಗಿದೆ? ಅಲ್ಲದೆ ಅದು ಸಮಾಧಿಯಾಗಿದ್ದರೆ ಅದಕ್ಕೆ ಅರಮನೆಗಿರುವಂತೆ ರಕ್ಷಣಾ ಗೋಡೆಯ ಅವಶ್ಯಕತೆ ಏನಿತ್ತು? ತಾರಸಿಯ ಕೆಳಗಿನ ತಾಜ್ ಮಹಲ್ಲಿನ ಉತ್ತರದ ಇಪ್ಪತ್ತು ಕೋಣೆಗಳು ಯಮುನಾ ನದಿಗೇಕೆ ಮುಖ ಮಾಡಿವೆ? ಅರಮನೆಗಾದರೆ ಈ ಕೋಣೆಗಳ ಅವಶ್ಯಕತೆ ಇರುತ್ತದೆ. ಸಮಾಧಿಗೆ ಇವುಗಳೇಕೆ ಬೇಕು? ದಕ್ಷಿಣ ಭಾಗದ ವಿಶಾಲ ಹಜಾರಕ್ಕೆ ಅಭಿಮುಖವಾಗಿರುವ ಇಪ್ಪತ್ತು ಕೋಣೆಗಳೇಕೆ ಮುಚ್ಚಲ್ಪಟ್ಟಿವೆ? ಅವುಗಳ ದ್ವಾರಕ್ಕೆ ಕಲ್ಲುಗಳನ್ನಿಟ್ಟವರಾರು? ಆ ಕೋಣೆಗಳಿಗೆ ಇತಿಹಾಸಕಾರರು, ಅಧ್ಯಯನಕಾರರಿಗೆ ಪ್ರವೇಶವಿಲ್ಲವೇಕೆ? ಭಾರತೀಯ ಪುರಾತತ್ತ್ವ ಇಲಾಖೆ ತಾಜ್ ಮಹಲ್ಲಿನ ಕಾರ್ಬನ್ ಡೇಟಿಂಗ್ ಹಾಗೂ ಥರ್ಮೊ ಲ್ಯೂಮಿನಿಸ್ನಿಸ್ ಪರೀಕ್ಷೆ ಮಾಡದಂತೆ ತಡೆಯುತ್ತಿರುವುದೇಕೆ? ಇವೆಲ್ಲಾ ಪ್ರಶ್ನೆಗಳು ಸುಮ್ಮನೆ ಎದ್ದದ್ದಲ್ಲ. ತಾಜ್ ಮಹಲ್ ಕಟ್ಟುವಾಗಿನ ಮೊಘಲ್ ಸಾಮ್ರಾಜ್ಯದ ಆಜ್ಞೆ/ನಿರ್ದೇಶನಗಳು, ಓಲೆಗಳು, ಯೋಜನೆ, ನಕ್ಷೆಗಳು, ಇತಿಹಾಸಕಾರರ ವಿವರಣೆಗಳು, ತಾಜ್ ಮಹಲ್ಲಿನ ವಿವಿಧ ಚಿತ್ರಗಳ ವಿಶ್ಲೇಷಣೆ ಜೊತೆಗೆ ಕಾರ್ಬನ್ ಡೇಟಿಂಗ್ ಪರೀಕ್ಷೆಯ ಫಲಿತಾಂಶ ಇವೆಲ್ಲಾ ಪ್ರಶ್ನೆಗಳೇಳುವಂತೆ ಮಾಡಿತು.

                ಷಾಜಹಾನಿಗೆ ಸುಸಜ್ಜಿತ ಅರಮನೆಯೊಂದು ಬೇಕಾಗಿತ್ತು. ಅಪಾರ ಪ್ರಮಾಣದ ಸಂಪತ್ತನ್ನು ಕೊಟ್ಟು ರಾಜಾ ಜಯಸಿಂಗನ ವಶದಲ್ಲಿದ್ದ ಅರಮನೆಯನ್ನು ಅದರೊಳಗಿದ್ದ ಅಪಾರ ಪ್ರಮಾಣದ ಚಿನ್ನದ ಕಟಾಂಜನಗಳನ್ನು ತನ್ನದಾಗಿಸಿಕೊಂಡ ಷಾಜಹಾನ್. ಹಿಂದೂಗಳು ಮತ್ತೆ ಕೇಳಬಾರದೆಂಬ ಕಾರಣಕ್ಕೆ ಅದನ್ನು ಮುಸ್ಲಿಮ್ ಸಮಾಧಿಯಾಗಿ ಬದಲಾಯಿಸಿದ. ಮುಖ್ಯ ಭವನದ ಪಶ್ಚಿಮ ಭಾಗದಲ್ಲಿದ್ದ ವಸತಿಗೃಹಗಳ ಒಳಭಾಗವನ್ನಷ್ಟೇ ಮಾರ್ಪಡಿಸಿ ಮೆಕ್ಕಾದ ದಿಕ್ಕನ್ನು ತೋರಿಸುವ ಗೂಡನ್ನು(mihrab) ನಿರ್ಮಿಸಿ ಮಸೀದಿಯನ್ನಾಗಿ ಪರಿವರ್ತಿಸಿದ. ಇಸ್ಲಾಮಿಕ್ ಬರಹಗಳುಳ್ಳ ದ್ವಾರ, ಬಾಗಿಲುಗಳಲ್ಲೆಲ್ಲಾ ಕೆತ್ತಿಸಿ ಅದು ಮುಸ್ಲಿಮರದ್ದೇ ಎಂಬ ನಂಬಿಕೆ ಶಾಶ್ವತವಾಗಿ ಉಳಿಯುವಂತೆ ಮಾಡಿದ. ಹೀಗೆಂದು ತಮ್ಮ ಎಲ್ಲಾ ಪರೀಕ್ಷೆ, ಚಿಂತನ-ಮಂಥನಗಳಿಂದ ತಾಜ್ ಮಹಲ್ ಷಾಜಹಾನನಿಂದ ಕಟ್ಟಲ್ಪಟ್ಟದ್ದಲ್ಲ, ಅದು ಸಮಾಧಿಯಾಗಿ ಬದಲಾಯಿಸಲ್ಪಟ್ಟ ಹಿಂದೂ ಅರಮನೆ ಎಂದು ಘಂಟಾಘೋಷವಾಗಿ ಸಾರಿದ್ದಾರೆ ಮಾರ್ವಿನ್.

                 ಬಾದಷಹಾನಾಮಾ. ಷಾಜಹಾನನೇ ತನ್ನ ಆಡಳಿತದ ವಿಶೇಷಗಳನ್ನು ಕೀರ್ತಿಸಲು ಪಾಟ್ನಾದಿಂದ ಅಬ್ದುಲ್ ಹಮೀದ್ ಲಾಹೋರಿ ಎಂಬವನನ್ನು ಕರೆಯಿಸಿ ಬರೆಯಿಸಿದ ಷಾಜಹಾನ್ ಆಡಳಿತದ ಮೊದಲ ಇಪ್ಪತ್ತು ವರ್ಷಗಳ ಚರಿತ್ರೆ. ಭಾರತ ಸರಕಾರದ ನ್ಯಾಷನಲ್ ಆರ್ಕೈವ್ಸ್ ನಲ್ಲಿ ಸಂರಕ್ಷಿಸಿಡಲಾದ ಈ ಗ್ರಂಥದ ಕೆಲ ಕುತೂಹಲಕಾರಿ ಅಂಶಗಳನ್ನು ಆಂಗ್ಲಾನುವಾದ ಮಾಡಿದ್ದಾರೆ ಪ್ರೊ. ಪಿ.ಎನ್.ಓಕ್. ಅಸಲಿಗೆ ಇಪ್ಪತ್ತನೇ ಶತಮಾನದಲ್ಲಿ ತಾಜ್ ಮಹಲಿನ ಇತಿಹಾಸವನ್ನು ಕೆದಕಲು ತೊಡಗಿ ಅದೊಂದು ಹಿಂದೂ ಅರಮನೆ ಎಂದು ಮೊದಲು ಸಾರಿದವರೇ ಪಿ.ಎನ್.ಓಕ್. ಅವರು ಅನುವಾದಿಸಿದ ಕೆಲವು ಸಾಲುಗಳು ಇಂತಿವೆ - "ಆ ಮಹಾನ್ ನಗರದ ದಕ್ಷಿಣದಲ್ಲಿ ಭವ್ಯವಾದ ರಮಣೀಯವಾದ ಹುಲುಸಾಗಿ ಬೆಳೆದಿರುವ ಉದ್ಯಾನದಿಂದ ಆವರಿಸಲ್ಪಟ್ಟ ಪ್ರದೇಶದ ನಡುವೆ ಭವನವೊಂದಿದೆ. ಅದನ್ನು ರಾಜಾ ಮಾನ್ ಸಿಂಗ್ ಮಹಲ್ ಎನ್ನುತ್ತಾರೆ. ಪ್ರಸ್ತುತ ಮಾನ್ ಸಿಂಗನ ಮೊಮ್ಮಗ ರಾಜಾ ಜಯಸಿಂಗ್ ಅದರ ಯಜಮಾನ. ಸ್ವರ್ಗಸ್ಥಳಾದ ರಾಣಿಯನ್ನು ಹೂಳುವ ಸಲುವಾಗಿ ಆಯ್ಕೆ ಮಾಡಿದರು. ಅತ್ಯಮೂಲ್ಯವಾದ ಅದು ತನ್ನ ಮನೆತನದ ಪಾರಂಪರಿಕ ಆಸ್ತಿಯಾಗಿದ್ದರೂ ಜಯಸಿಂಗನು ಷಾಜಹಾನಿಗೆ ಅದನ್ನು ಉಚಿತವಾಗಿ ಬಿಟ್ಟುಕೊಡಲು ತಯಾರಾಗಿದ್ದ. ವಿಯೋಗ ಹಾಗೂ ಮತಪರವಾದ ಪಾವಿತ್ರ್ಯತೆಗೆ ಸಂಬಂಧಿಸಿದ ವಿಷಯಗಳಲ್ಲಿರಬೇಕಾದ ಧರ್ಮಭೀರು ದೃಷ್ಟಿಯ ಕಾರಣ ನಿಷ್ಠೆಯಿಂದ ಷರೀಫಾಬಾದ್ ಅನ್ನು ರಾಜಾ ಜಯಸಿಂಗನಿಗೆ ಪ್ರತಿಫಲವಾಗಿ ಕೊಡಲಾಯಿತು. ಮಾರನೇ ವರ್ಷ ಸ್ವರ್ಗವಾಸಿಯಾದ ಪ್ರಖ್ಯಾತ ಮಹಾರಾಣಿಯ ಶರೀರವನ್ನು ಸಮಾಧಿ ಮಾಡಲಾಯಿತು." ಷಾಜಹಾನನೇ ಹೇಳಿ ಬರೆಸಿದ ಅವನ ಚರಿತ್ರೆಯಲ್ಲಿ "ಷಾಜಹಾನಿಗೂ ಪೂರ್ವದಲ್ಲೇ ಸುಂದರ ಉದ್ಯಾನದಿಂದ ಕಂಗೊಳಿಸುತ್ತಿದ್ದ ಹಿಂದೂ ಅರಮನೆಯೊಂದು ಇತ್ತು. ಅದನ್ನು ಪಡೆದ ಷಾಜಹಾನ್ ಅಲ್ಲಿ ತನ್ನ ಪತ್ನಿಯ ಮೃತದೇಹವನ್ನು ಹೂತು ಅದನ್ನು ತಾಜ್ ಮಹಲ್ಲಾಗಿ ಪರಿವರ್ತಿಸಿದ" ಎಂದು ಉಲ್ಲೇಖವಾಗಿರುವಾಗ ಉಳಿದ ಇತಿಹಾಸಕಾರರೆಲ್ಲಾ ದಾರಿ ತಪ್ಪಿದ್ದು ಅಥವಾ ಜಗತ್ತಿನ ದಾರಿ ತಪ್ಪಿಸಿದ್ದು ಏಕೆ? ಅಲ್ಲದೆ ಆತ ಆ ಭವನವನ್ನು ನೆಲಸಮವೂ ಮಾಡಲಿಲ್ಲ. ಅದನ್ನೇ ತನ್ನ ಮತಕ್ಕೆ ಸರಿಯಾಗುವಂತೆ ಮಾರ್ಪಾಟುಗೊಳಿಸಿದ. ಭವ್ಯವಾದ ಹಿಂದೂ ಅರಮನೆಯ ಒಂದು ಭಾಗ ಮಸೀದಿಯಾಯಿತು. ಒಂದು ಕಡೆ ಹೆಣವನ್ನು ಹೂಳಲಾಯಿತು. ಅಲ್ಲಲ್ಲಿ ಇಸ್ಲಾಮಿನ ಬರಹಗಳನ್ನು ಕೆತ್ತಿಸಿ ವಿರೂಪಗೊಳಿಸಲಾಯಿತು. ಇಷ್ಟೇ ಷಾಜಹಾನ್ ಮಾಡಿದ್ದು! ಪ್ರೇಮ ಸೌಧವನ್ನೂ ಕಟ್ಟಲಿಲ್ಲ; ಅಸಲಿಗೆ ಅವನೇನು ಅಮರ ಪ್ರೇಮಿಯೂ ಆಗಿರಲಿಲ್ಲ.

                ಗಂಡ ಅನುಮಾನಾಸ್ಪದವಾಗಿ ಕೊಲೆಯಾದ ಬಳಿಕ ಜಹಾಂಗೀರನ ಮಲತಾಯಿಯ ಆಶ್ರಯದಲ್ಲಿದ್ದ ನೂರ್ ಜಹಾನಳನ್ನು ರಾಣಿಯಾಗಿ ಸ್ವೀಕರಿಸಿದ ಮೇಲೆ ತನ್ನ ಅಧಿಕಾರವನ್ನು ಹೆಂಡತಿಯ ಕೈಗಿತ್ತಿದ್ದ ಜಹಾಂಗೀರ್. ಆಕೆಯ ಸೋದರ ಸೊಸೆಯೇ ಮುಮ್ತಾಜ್. ತನ್ನ ರಾಜಕೀಯ ತಂತ್ರದ ಭಾಗವಾಗಿ ಆಕೆಯನ್ನು ತಂದು ಯುವರಾಜ ಖುರ್ರಂ(ಷಾಜಹಾನ್)ಗೆ ಗಂಟುಹಾಕಿದವಳು ನೂರ್ ಜಹಾನೇ. ನಿಶ್ಚಿತಾರ್ಥವಾಗಿ ಐದು ವರ್ಷ ಕಳೆದರೂ ಆತ ಅವಳನ್ನು ವಿವಾಹವಾಗಲಿಲ್ಲ. ಆ ನಡುವೆ ಪಾರ್ಸಿ ರಾಜಕುಮಾರಿಯೊಬ್ಬಳನ್ನು ವಿವಾಹವಾಗಿದ್ದೂ ಆಯಿತು. ಸತತ ಹದಿನಾಲ್ಕು ಮಕ್ಕಳನ್ನು ಹಡೆದ ಅವಳನ್ನು ಹೆರಿಗೆಯಂತ್ರವಾಗಿ ಉಪಯೋಗಿಸಿದ್ದು ಬಿಟ್ಟರೆ ಅವಳ ಮೇಲೆ ಯಾವುದೇ ಪ್ರೇಮವೂ ಷಾಜಹಾನಿಗಿರಲಿಲ್ಲ. ಒಂದು ವೇಳೆ ಅಂತಹ ಅತಿಶಯ ಪ್ರೇಮವಿದ್ದಿದ್ದರೆ ಅವನೇ ನೇಮಿಸಿದ್ದ ಅವನ ಚರಿತ್ರಕಾರರು ಅದನ್ನು ರಮ್ಯವಾಗಿ ಬರೆಯದೇ ಇರುತ್ತಾರೆಯೇ? ಅಂತಹಾ ಯಾವುದೇ ಉಲ್ಲೇಖಗಳು ಕಾಣುವುದಿಲ್ಲ. ತನ್ನ ಹದಿನಾಲ್ಕನೆಯ ಹೆರಿಗೆಯ ಸಂದರ್ಭದಲ್ಲಿ ಮುಮ್ತಾಜ್ ಸತ್ತಾಗ ಅವಳಿದ್ದ ಬುರ್ಹಾನ್ ಪುರದಲ್ಲಿಯೇ ಅವಳನ್ನು ಹೂಳಲಾಯಿತು. ಜಯಸಿಂಗನಿಂದ ಮಾನ್ ಸಿಂಗ್ ಅರಮನೆಯನ್ನು ಪಡೆದ ಬಳಿಕ ಬುರ್ಹಾನ್ ಪುರದಲ್ಲಿನ ಗೋರಿಯನ್ನು ಅಗೆದು ಶವವನ್ನು 600 ಮೈಲು ದೂರದಲ್ಲಿದ್ದ ಈಗ ತಾಜ್ ಮಹಲ್ ಎಂದು ಹೇಳಲಾಗುವ ಹಿಂದೂ ಅರಮನೆಯಲ್ಲಿ ಸಮಾಧಿ ಮಾಡಲಾಯಿತು. ಅಲ್ಲಿ ಕೇವಲ ಮುಮ್ತಾಜ್ ಒಬ್ಬಳದ್ದೇ ಅಲ್ಲ, ಅವನ ಇನ್ನೊಬ್ಬ ಪತ್ನಿ ಸಿರ್ಹಿಂದ್ ಬೇಗಂ, ಮುಮ್ತಾಜಳ ಪ್ರಿಯ ಪರಿಚಾರಿಕೆ ಸತೀಉನ್ನೀಸಾಗೂ ಗೋರಿ ಕಟ್ಟಲಾಯಿತು. ಹೀಗೆ ಷಾಜಹಾನಿಗೆ ಆ ಅರಮನೆಯನ್ನು ಸ್ಮಶಾನವಾಗಿ ಪರಿವರ್ತಿಸುವ ಉದ್ದೇಶವಿತ್ತೇ ವಿನಾ ತನ್ನ ಹೆಂಡತಿಗೆ ಪ್ರೀತಿಯ ಸೌಧವಾಗಲ್ಲ! ರಾಣಿಗೂ ಆಕೆಯ ಪರಿಚಾರಿಕೆಗೂ ಒಂದೇ ಭವನದಲ್ಲಿ, ಏಕತೆರನಾದ ಗೋರಿ ಕಟ್ಟಿಸಿದಾತನ ದೃಷ್ಟಿಯಲ್ಲಿ ರಾಣಿಗೆ ಇದ್ದ ಸ್ಥಾನಮಾನ ಎಷ್ಟೆಂದೂ ಸಾಮಾನ್ಯನೂ ಊಹಿಸಬಹುದು! ತನ್ನ ಸ್ವಂತ ಮಗಳು ಜಹನಾರಾಳನ್ನೇ ಜೀವನ ಪರ್ಯಂತ ತನ್ನ ಕಾಮದಾಟಕ್ಕೆ ಬಳಸಿಕೊಂಡ ವ್ಯಕ್ತಿ ತನ್ನ ಹೆರಿಗೆ ಯಂತ್ರ ಮುಮ್ತಾಜಳಿಗೆ ಪ್ರೇಮ ಸೌಧ ಸ್ಥಾಪಿಸಿದನೆಂದರೆ ಅದು ಬಹು ದೊಡ್ಡ ಅಚ್ಚರಿಯೇ ಸರಿ!

                   ಷಾಜಹಾನನ ಹೆಂಡತಿಯ ಹೆಸರು ಮುಮ್ತಾಜ್ ಮಹಲ್ ಅಲ್ಲ. ಮುಮ್ತಾಜ್ ಉಲ್ ಜಾಮಾನಿ ಅಥವಾ ಅಂಜುಮಾನ್ ಬಾನು ಬೇಗಂ. ಇಸ್ಲಾಮಿಕ್ ಸಂಪ್ರದಾಯದಂತೆ ಮುಮ್ತಾಜ್ ಹೆಸರಿನಲ್ಲಿನ ತಾಜ್ ಅನ್ನು ತೆಗೆದು ಅದಕ್ಕೆ ಮಹಲ್ ಎಂದು ಜೋಡಿಸುವುದಿಲ್ಲ. ಅಲ್ಲದೆ ಯಾವುದೇ ಸಮಾಧಿಯನ್ನು ಮಹಲ್ ಎಂದು ಕರೆದಿರುವುದು ಮುಸ್ಲಿಮ್ ಸಮುದಾಯದಲ್ಲಿ ಕಂಡು ಬಂದಿಲ್ಲ. ತಾಜ್ ಮಹಲನ್ನು ಷಾಜಹಾನ್ ಕಟ್ಟಿಸಿದ್ದಾನೆ ಎನ್ನುವುದಕ್ಕೆ ಯಾವುದೇ ಶಾಸನ, ಶಿಲಾಫಲಕಗಳಿಲ್ಲ. ಅಷ್ಟು ದೊಡ್ಡ ನಿರ್ಮಾಣದ ಖರ್ಚು-ಲೆಕ್ಕಗಳಾಗಲೀ, ರಚನೆಯ ಮಾದರಿ ಚಿತ್ರವಾಗಲೀ, ಉಪಯೋಗವಾದ ಸಾಮಗ್ರಿ, ಕೆಲಸಗಾರರ ವಿವರಗಳಾವುವೂ ಇಲ್ಲ! ತನ್ನ ಚರಿತ್ರೆ ಬರೆಯಲೆಂದೇ ಜನರನ್ನು ನೇಮಿಸಿಕೊಂಡಿದ್ದ ಆತ. ಅಂತಹುದರಲ್ಲಿ ತಾಜ್ ಮಹಲನ್ನು ಆತ ಕಟ್ಟಿಸಿದ್ದೆಂದು ಅವುಗಳಲ್ಲೆಲ್ಲಾ ಯಾಕೆ ಉಲ್ಲೇಖವಾಗಲಿಲ್ಲ? ತನ್ನ ಪ್ರತಿಯೊಂದು ಕಾರ್ಯವನ್ನು ಬರೆಯಲು ತಾನೇ ನೇಮಿಸಿದ ಬರಹಗಾರರು ಬರೆದುದನ್ನು ಖುದ್ದು ತಾನೇ ತನಿಖೆ ಮಾಡುತ್ತಿದ್ದವ  ಅಂತಹಾ ದೊಡ್ಡ ಮಹಲನ್ನು ತಾನು ಕಟ್ಟಿಸಿದುದರ ಬಗೆಗೆ ಒಂದಕ್ಷರವನ್ನು ಬರೆಸಲಿಲ್ಲವೆಂದರೆ ಏನರ್ಥ? ಅಷ್ಟು ದೊಡ್ಡ ಭವನವನ್ನು ಕಟ್ಟಿಸಿದ್ದ ಸಣ್ಣ ದಾಖಲೆಯೂ ಇಲ್ಲದಿದ್ದಾಗ ಅದು ನೇರಾನೇರ ಷಾಜಹಾನನೇ ಕಟ್ಟಿಸಿದ್ದೆಂದು ಹೇಳಿದವರನ್ನು ಇತಿಹಾಸಕಾರರೆಂದು ಹೇಗೆ ಮನ್ನಿಸೋಣ? ತಾಜ್ ನಿರ್ಮಾಣಕ್ಕೆ 22 ವರ್ಷ ಹಿಡಿಯಿತಂತೆ! 1632-1654ರವರೆಗೆ. 1652ರಲ್ಲಿ ಔರಂಗಜೇಬ್ ತನ್ನ ತಂದೆಗೆ ಬರೆದ ಪತ್ರದಲ್ಲಿ ತನ್ನ ತಾಯಿಯನ್ನು ಸಮಾಧಿ ಮಾಡಿದ ಏಳಂತಸ್ತುಗಳ ಭವನ ಪುರಾತನವಾಗಿದೆಯೆಂದೂ, ಅಲ್ಲಲ್ಲಿ ನೀರು ಸೋರುತ್ತಿದೆಯೆಂದೂ, ಉತ್ತರ ದಿಕ್ಕಿನಲ್ಲಿರುವ ಗುಮ್ಮಟ ಬಿರುಕು ಬಿಟ್ಟಿದೆಯೆಂದು ತುರ್ತಾದ ದುರಸ್ಥಿ ಕಾರ್ಯಗಳನ್ನು ತಾನು ಮಾಡುವುದಾಗಿಯೂ, ಹೆಚ್ಚಿನ ದುರಸ್ಥಿಯನ್ನು ಚಕ್ರವರ್ತಿಗಳು ಮಾಡಿಸಬಹುದೆಂದು ತಿಳಿಸಿದ್ದ(ಆದಾಬ್-ಇ-ಅಲಾಮ್ಗಿರಿ, ಯದ್ಗರ್ನಾಮಾ, ಮುರುಕ್ಖಾ ಇ ಅಕ್ಬರಾದಿ). 1654ರವರೆಗೆ ನಿರ್ಮಾಣವೇ ಮುಗಿದಿರಲಿಲ್ಲವಾದರೆ 1652ರಲ್ಲಿ ದುರಸ್ಥಿಯೇಕೆ ಮಾಡಿಸಬೇಕು?

                ಸಮಾಧಿಗಳ ಹಿಂದೆ ನೆಲಮನೆಯಲ್ಲಿ 14 ಕೊಠಡಿಗಳಿವೆ. ಅವುಗಳ ದ್ವಾರವನ್ನು ಕಲ್ಲುಚಪ್ಪಡಿಗಳಿಂದ ಮುಚ್ಚಲಾಗಿದೆ. ಮೂರನೇ ಅಂತಸ್ತಿನಲ್ಲಿ ನಾಲ್ಕು ಕೊಠಡಿಗಳ ಸಮುಚ್ಚಯಗಳಿವೆ. ಇದೇ ಅಂತಸ್ತಿನ ಮೂಲೆಗಳಲ್ಲಿ ಅಷ್ಟಭುಜಾಕಾರದ ಕೊಠಡಿಗಳಿವೆ. ಒಂದೊಂದಕ್ಕೆ ನಾಲ್ಕು ಬಾಗಿಲುಗಳು; ನಾಲ್ಕು ಸೋಪಾನ ಮಾರ್ಗಗಳು. ಅಲ್ಲಿಂದ ಮೂವತ್ನಾಲ್ಕು ಮೆಟ್ಟಲು ಹತ್ತಿ ಹೋದರೆ ನಾಲ್ಕು ಮೂಲೆಗಳಲ್ಲಿರುವ ನಾಲ್ಕು ಗೋಪುರಗಳು ಕಾಣ ಸಿಗುತ್ತವೆ. ಒಂದೊಂದಕ್ಕೂ ಎಂಟು ಬಾಗಿಲುಗಳು. ನಾಲ್ಕೂ ಗೋಪುರದ ಮೇಲೂ ಹಿತ್ತಾಳೆಯ ಕಲಶಗಳು! ಮುಖ್ಯದ್ವಾರ ಎಂಟು ಲೋಹಗಳ ಮಿಶ್ರಣದಿಂದ ಮಾಡಲಾಗಿದ್ದು ಹಿತ್ತಾಳೆಯ ತಗಡಿನ ಲೇಪನವಿದೆ. ಭವನದ ಹೊರ ಪ್ರಾಕಾರದ ಒಳ ಭಾಗದಲ್ಲಿ ಹಲವು ಅಂತಸ್ತುಗಳುಳ್ಳ ಬಾವಿಯೊಂದಿತ್ತು. ಅದು ಪ್ರತಿ ಅಂತಸ್ತಿನ ಒಂದು ಕೊಠಡಿಗಳ ಸಮುಚ್ಚಯಕ್ಕೆ ಹೊಂದಿಕೊಂಡಿತ್ತು. ಯಮುನೆಯ ನೀರು ಅದಕ್ಕೆ ಸರಬರಾಜಾಗುತ್ತಿತ್ತು. ಒಂದು ಸಮಾಧಿಗೆ ಇವೆಲ್ಲಾ ಅಲ್ಲದೆ ಕುದುರೆ ಲಾಯಗಳು, ಹಿತ್ತಲ ಮನೆಗಳು, ಉಪಭವನಗಳೆಲ್ಲಾ ಯಾಕಿವೆ ಎಂದು "ದಿ ತಾಜ್ ಆಂಡ್ ಇಟ್ಸ್ ಎನ್ವಿರಾನ್ಮೆಂಟ್ಸ್" ಗ್ರಂಥ ಬರೆದ ಮೌಲ್ವಿ ಮೊಯಿನುದ್ದೀನ್ ಅಹ್ಮದಿಗೆ ಕಾಡಿತ್ತು! ಎರಡು ನೆಲ ಮಾಳಿಗೆಗಳು, ಏಳು ಅಂತಸ್ತುಗಳು, ಅತಿಥಿ ಗೃಹ, ರಕ್ಷಕರ ಕೊಠಡಿಗಳು ಸೇರಿದಂತೆ ಮುನ್ನೂರೈವತ್ತು ಕೊಠಡಿಗಳು, ಭೂಗರ್ಭ ಮಾರ್ಗಗಳು, ಕುದುರೆಲಾಯ, ಗೋಶಾಲೆ, ವಾದ್ಯಶಾಲೆ, ಅಷ್ಟಭುಜ ಮಂದಿರಗಳು, ಗೋಪುರ-ಕಲಶಗಳು, ಪ್ರತಿ ಅಂತಸ್ತಿನಲ್ಲೂ ಬಾವಿಗಳು ಅದೊಂದು ಹಿಂದೂ ಅರಮನೆ ಎಂದು ಇಂದಿಗೂ ಸಾರುತ್ತಿದೆ..

                 ಇತ್ತೀಚೆಗೆ ತಾಜ್ ಮಹಲ್ ಆವರಣದಲ್ಲಿ ಶುಕ್ರವಾರ ಹೊರತುಪಡಿಸಿ ಉಳಿದ ದಿನ ನಮಾಜ್ ಮಾಡುವಂತಿಲ್ಲ ಎಂದು ಎಎಸ್ಐ ನೀಡಿದ ಆದೇಶವನ್ನು ಉಲ್ಲಂಘಿಸಿ, ಸ್ಥಳೀಯ ಮುಸಲ್ಮಾನರು ಹಾಗೂ ತಾಜ್ ಮಹಲ್ ಮಸೀದಿ ಇಂತೆಝಾಮಿಯಾ ಕಮಿಟಿಯ ಸದಸ್ಯರು ತಾಜ್ ಮಹಲ್ ನಲ್ಲಿ ನಮಾಜ್ ಮಾಡಿದ್ದರು. ಇದನ್ನು ಖಂಡಿಸಿ ಅದು ಮೂಲತಃ ಶಿವ ಮಂದಿರವಾಗಿದ್ದು, ತೇಜೋಮಹಾಲಯ ಎಂದು ಕರೆಯಲ್ಪಡುತ್ತಿತ್ತು ಎಂದಿರುವ ಹಿಂದೂ ಕಾರ್ಯಕರ್ತೆಯರು ನೇರ ತಾಜ್ ಮಹಲ್ಲಿನ ಒಳಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ತಾಜ್ ಮಹಲ್ಲಿನ ನಿಜವಾದ ಇತಿಹಾಸ ಹೊರ ಬೀಳುವ ದಿನ ದೂರವಿಲ್ಲ ಅನಿಸುತ್ತಿದೆ.