ಹುಸಿ ಜಾತ್ಯಾತೀತವಾದ ಇತಿಹಾಸವನ್ನು ಕೊಂದಿತು! ಹಿಂದೂವಿನ ಶೌರ್ಯದ ತೇಜ ಕುಂದಿತು!
"ಗುರುವಾರ ನಾನು ಆಗ್ರಾವನ್ನು ಪ್ರವೇಶಿಸಿ ಸುಲ್ತಾನ್ ಇಬ್ರಾಹಿಂ ಅರಮನೆಯನ್ನು ನನ್ನದಾಗಿಸಿಕೊಂಡೆ. ಈದ್ ನ ಕೆಲ ದಿನಗಳ ಬಳಿಕ ಗುಮ್ಮಟದ ಕೆಳಗೆ ಕಲ್ಲುಕಂಬಗಳ ಶ್ರೇಣಿಯಿರುವ ರಮ್ಯವಾದ ವಿಶಾಲವಾದ ಹಜಾರವೊಂದರಲ್ಲಿ ಭಾರಿ ಔತಣವೊಂದನ್ನು ನೆರವೇರಿಸಿದೆ..." ಬಾಬರ್ ತನ್ನ ಆತ್ಮಚರಿತ್ರೆ "ಮೆಮರೀಸ್ ಆರ್ ಜೆಹಿರ್-ಉದ್-ದಿನ್-ಬಾಬರ್"ನಲ್ಲಿ ಬರೆದುಕೊಂಡ ಸಾಲುಗಳಿವು. ಆಗ್ರಾದಲ್ಲಿ ಕಲ್ಲಿನ ಗುಮ್ಮಟ, ಸಾಲು ಕಲ್ಲುಕಂಬಗಳಿರುವ ಅರಮನೆ ಯಾವುದು ಎಂದು ಹುಡುಕಹೊರಟರೆ ಅದು ತಾಜ್ ಮಹಲ್ ಒಂದರತ್ತಲೇ ಬೊಟ್ಟು ಮಾಡುತ್ತದೆ. ಆಗ್ರಾದಲ್ಲಿನ ತೋಟದ ಅರಮನೆಯಲ್ಲಿ ಬಾಬರ್ ಸತ್ತನೆಂದು ವಿನ್ಸೆಂಟ್ ಸ್ಮಿತ್ ಉಲ್ಲೇಖಿಸಿದ್ದಾನೆ. ಆಗ್ರಾದಲ್ಲಿ ಉದ್ಯಾನದ ನಡುವಿರುವ ಅರಮನೆ ತಾಜ್ ಮಹಲ್ ಒಂದೇ! ಅರೇ, ಷಾಜಹಾನ್ ತನ್ನ ಪ್ರೀತಿಯ ಮಡದಿಗಾಗಿ ಕಟ್ಟಿಸಿದ್ದ ಎನ್ನಲಾದ ಮಹಲಿನಲ್ಲಿ ಅವನಿಗಿಂತ ನೂರು ವರ್ಷ ಮೊದಲೇ ಅವನ ಅಜ್ಜನ ಅಜ್ಜ ಔತಣ ಮಾಡಿದ್ದು ಹೇಗೆ? ಭಾರತದ ಇತಿಹಾಸವನ್ನು ಬರೆದಿಟ್ಟ ಬಗೆ ಹೀಗೆ; ಸತ್ಯವನ್ನೆಲ್ಲಾ ಮುಚ್ಚಿಟ್ಟು ಸುಳ್ಳುಗಳನ್ನು ಬರೆದಿಟ್ಟು ಆಕ್ರಮಕರನ್ನು ಸಜ್ಜನರು, ಅಮರ ಪ್ರೇಮಿಗಳೆಂಬಂತೆ ವಿಜೃಂಭಿಸಿ ಭಾರತೀಯ ಮಸ್ತಿಷ್ಕವನ್ನು ಮತಾಂತರ ಮಾಡಿರುವ ಪ್ರಕ್ರಿಯೆ! ಅದಕ್ಕೆ ಅಲ್ಲಲ್ಲಿ ಗೋಜಲುಗಳು; ಸತ್ಯಬಿಡಿಸ ಹೊರಟವರೆಲ್ಲಾ ಕೋಮುವಾದಿಗಳು, ಇತಿಹಾಸವನ್ನು ಕೇಸರೀಕರಣಗೊಳಿಸುವವರು!ಈಗೊಂದು ಸ್ವರ ಪಶ್ಚಿಮದಿಂದ ಎದ್ದಿದೆ. ಪ್ರಾಮಾಣಿಕ ಆಧುನಿಕ ವೈಜ್ಞಾನಿಕ ವಿಶ್ವಕೋಶವೆಂದು ಹೆಸರಾದ ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲೂ ಮುಮ್ತಾಜಳ ಮೇಲಿನ ಪ್ರೀತಿಗಾಗಿ ಕಟ್ಟಿದ ಸೌಧವೆಂದೇ ದಾಖಲಾಗಿರುವಾಗಲೂ ಈ ದನಿ ಎದ್ದಿರುವುದು ವಿಶೇಷ. ಹಾಗಂತ ಈ ಸ್ವರ ಇತ್ತೀಚೆಗಷ್ಟೇ ಎದ್ದದ್ದಲ್ಲ. ನ್ಯೂಯಾರ್ಕಿನ ಪ್ರಾಟ್ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ಉಪನ್ಯಾಸಕ ಮಾರ್ವಿನ್ ಎಚ್. ಮಿಲ್ಸ್ ಮೂರು ದಶಕಗಳಿಗೂ ಹಿಂದೆಯೇ ಬರೆದಿದ್ದ ಪತ್ರವೊಂದರ ತುಣುಕು ಇತ್ತೀಚೆಗೆ "ದಿ ನ್ಯೂಯಾರ್ಕ್ ಟೈಮ್ಸ್" ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಹಿಂದೆ ಎದ್ದಿದ್ದ ದನಿಗೊಂದು ಬಲ ನೀಡಿದೆ. ಮಾರ್ವಿನ್ ಎಚ್. ಮಿಲ್ಸ್ ಯಮುನಾ ನದಿಯ ಕಡೆಗಿರುವ ತಾಜ್ ಮಹಲಿನ ದ್ವಾರದಿಂದ ಸ್ಯಾಂಪಲ್ ಸಂಗ್ರಹಿಸಿ ಕಾರ್ಬನ್ ಡೇಟಿಂಗ್(ಕಾರ್ಬನ್-೧೪) ಪರೀಕ್ಷೆಗೆ ಒಳಪಡಿಸಿದಾಗ ಆ ಬಾಗಿಲು ಷಾಜಹಾನ್ ಗಿಂತಲೂ ಮುನ್ನೂರು ವರ್ಷ ಹಳೆಯದೆಂದು ಸಾರಿತು! ಇದರ ಜೊತೆಗೆ ಮಾರ್ವಿನ್ ಹಲವಾರು ಪ್ರಶ್ನೆಗಳನ್ನೂ ಎತ್ತಿದ್ದರು. ಭವನದ ಎಡ ಭಾಗ ಮಸೀದಿಯಾಗಿದೆ. ಒಂದು ವೇಳೆ ಶೂನ್ಯದಿಂದ ಭವನವನ್ನು ಕಟ್ಟಲ್ಪಟ್ಟಿದ್ದರೆ ಮಸೀದಿ ಪಶ್ಚಿಮದತ್ತ ಮುಖ ಮಾಡುವ ಬದಲು ಮೆಕ್ಕಾಕ್ಕೆ ಮುಖ ಮಾಡಿ ಪ್ರಾರ್ಥಿಸುವಂತೆ ಇರಬೇಕಿತ್ತು. ಸಮಾಧಿಯ ನಾಲ್ಕು ಮಿನಾರತ್ತುಗಳು ಅವ್ಯವಸ್ಥಿತವಾಗಿದ್ದು, ನಿಜವಾಗಿ ಮಸೀದಿಯ ಮುಂಭಾಗದಲ್ಲಿರಬೇಕಿತ್ತು. ಯಾಕೆಂದರೆ ಅವು ಪ್ರಾರ್ಥನೆಗೆ ಮುಸ್ಲಿಮರನ್ನು ಕರೆಯುವ ಮಸೀದಿಯ ಎತ್ತರದ ಭಾಗಗಳು. ತಾಜ್ ಮಹಲಿನ ಮುಖ್ಯ ಭವನದ ಅಕ್ಕಪಕ್ಕದಲ್ಲಿರುವ ಸಮರೂಪಿ ಭವನಗಳು ಒಂದು ಮಸೀದಿಗಾಗಿ, ಇನ್ನೊಂದು ಅತಿಥಿ ಗೃಹಕ್ಕೆಂದು ನಿರ್ಮಾಣಗೊಂಡಿದ್ದರೆ ಅವುಗಳ ಕಾರ್ಯಕ್ಕನುಗುಣವಾದ ವಿನ್ಯಾಸದಲ್ಲಿ ಕಟ್ಟಲ್ಪಡಬೇಕಿತ್ತು. ಮೊಘಲರು ಭಾರತದ ಮೇಲೆ ದಾಳಿ ಮಾಡಿದಾಗ ಫಿರಂಗಿಗಳು ಬಳಕೆಯಲ್ಲಿದ್ದವು. ಹಾಗಿದ್ದೂ ತಾಜ್ ಮಹಲ್ ಗೋಡೆಯ ಪರಿಧಿ ಯಾಕೆ ಫಿರಂಗಿಯ ಪೂರ್ವಕಾಲದ ರಕ್ಷಣಾ ಪಾತ್ರದಂತೆ ನಿರ್ಮಿಸಲಾಗಿದೆ? ಅಲ್ಲದೆ ಅದು ಸಮಾಧಿಯಾಗಿದ್ದರೆ ಅದಕ್ಕೆ ಅರಮನೆಗಿರುವಂತೆ ರಕ್ಷಣಾ ಗೋಡೆಯ ಅವಶ್ಯಕತೆ ಏನಿತ್ತು? ತಾರಸಿಯ ಕೆಳಗಿನ ತಾಜ್ ಮಹಲ್ಲಿನ ಉತ್ತರದ ಇಪ್ಪತ್ತು ಕೋಣೆಗಳು ಯಮುನಾ ನದಿಗೇಕೆ ಮುಖ ಮಾಡಿವೆ? ಅರಮನೆಗಾದರೆ ಈ ಕೋಣೆಗಳ ಅವಶ್ಯಕತೆ ಇರುತ್ತದೆ. ಸಮಾಧಿಗೆ ಇವುಗಳೇಕೆ ಬೇಕು? ದಕ್ಷಿಣ ಭಾಗದ ವಿಶಾಲ ಹಜಾರಕ್ಕೆ ಅಭಿಮುಖವಾಗಿರುವ ಇಪ್ಪತ್ತು ಕೋಣೆಗಳೇಕೆ ಮುಚ್ಚಲ್ಪಟ್ಟಿವೆ? ಅವುಗಳ ದ್ವಾರಕ್ಕೆ ಕಲ್ಲುಗಳನ್ನಿಟ್ಟವರಾರು? ಆ ಕೋಣೆಗಳಿಗೆ ಇತಿಹಾಸಕಾರರು, ಅಧ್ಯಯನಕಾರರಿಗೆ ಪ್ರವೇಶವಿಲ್ಲವೇಕೆ? ಭಾರತೀಯ ಪುರಾತತ್ತ್ವ ಇಲಾಖೆ ತಾಜ್ ಮಹಲ್ಲಿನ ಕಾರ್ಬನ್ ಡೇಟಿಂಗ್ ಹಾಗೂ ಥರ್ಮೊ ಲ್ಯೂಮಿನಿಸ್ನಿಸ್ ಪರೀಕ್ಷೆ ಮಾಡದಂತೆ ತಡೆಯುತ್ತಿರುವುದೇಕೆ? ಇವೆಲ್ಲಾ ಪ್ರಶ್ನೆಗಳು ಸುಮ್ಮನೆ ಎದ್ದದ್ದಲ್ಲ. ತಾಜ್ ಮಹಲ್ ಕಟ್ಟುವಾಗಿನ ಮೊಘಲ್ ಸಾಮ್ರಾಜ್ಯದ ಆಜ್ಞೆ/ನಿರ್ದೇಶನಗಳು, ಓಲೆಗಳು, ಯೋಜನೆ, ನಕ್ಷೆಗಳು, ಇತಿಹಾಸಕಾರರ ವಿವರಣೆಗಳು, ತಾಜ್ ಮಹಲ್ಲಿನ ವಿವಿಧ ಚಿತ್ರಗಳ ವಿಶ್ಲೇಷಣೆ ಜೊತೆಗೆ ಕಾರ್ಬನ್ ಡೇಟಿಂಗ್ ಪರೀಕ್ಷೆಯ ಫಲಿತಾಂಶ ಇವೆಲ್ಲಾ ಪ್ರಶ್ನೆಗಳೇಳುವಂತೆ ಮಾಡಿತು.
ಷಾಜಹಾನಿಗೆ ಸುಸಜ್ಜಿತ ಅರಮನೆಯೊಂದು ಬೇಕಾಗಿತ್ತು. ಅಪಾರ ಪ್ರಮಾಣದ ಸಂಪತ್ತನ್ನು ಕೊಟ್ಟು ರಾಜಾ ಜಯಸಿಂಗನ ವಶದಲ್ಲಿದ್ದ ಅರಮನೆಯನ್ನು ಅದರೊಳಗಿದ್ದ ಅಪಾರ ಪ್ರಮಾಣದ ಚಿನ್ನದ ಕಟಾಂಜನಗಳನ್ನು ತನ್ನದಾಗಿಸಿಕೊಂಡ ಷಾಜಹಾನ್. ಹಿಂದೂಗಳು ಮತ್ತೆ ಕೇಳಬಾರದೆಂಬ ಕಾರಣಕ್ಕೆ ಅದನ್ನು ಮುಸ್ಲಿಮ್ ಸಮಾಧಿಯಾಗಿ ಬದಲಾಯಿಸಿದ. ಮುಖ್ಯ ಭವನದ ಪಶ್ಚಿಮ ಭಾಗದಲ್ಲಿದ್ದ ವಸತಿಗೃಹಗಳ ಒಳಭಾಗವನ್ನಷ್ಟೇ ಮಾರ್ಪಡಿಸಿ ಮೆಕ್ಕಾದ ದಿಕ್ಕನ್ನು ತೋರಿಸುವ ಗೂಡನ್ನು(mihrab) ನಿರ್ಮಿಸಿ ಮಸೀದಿಯನ್ನಾಗಿ ಪರಿವರ್ತಿಸಿದ. ಇಸ್ಲಾಮಿಕ್ ಬರಹಗಳುಳ್ಳ ದ್ವಾರ, ಬಾಗಿಲುಗಳಲ್ಲೆಲ್ಲಾ ಕೆತ್ತಿಸಿ ಅದು ಮುಸ್ಲಿಮರದ್ದೇ ಎಂಬ ನಂಬಿಕೆ ಶಾಶ್ವತವಾಗಿ ಉಳಿಯುವಂತೆ ಮಾಡಿದ. ಹೀಗೆಂದು ತಮ್ಮ ಎಲ್ಲಾ ಪರೀಕ್ಷೆ, ಚಿಂತನ-ಮಂಥನಗಳಿಂದ ತಾಜ್ ಮಹಲ್ ಷಾಜಹಾನನಿಂದ ಕಟ್ಟಲ್ಪಟ್ಟದ್ದಲ್ಲ, ಅದು ಸಮಾಧಿಯಾಗಿ ಬದಲಾಯಿಸಲ್ಪಟ್ಟ ಹಿಂದೂ ಅರಮನೆ ಎಂದು ಘಂಟಾಘೋಷವಾಗಿ ಸಾರಿದ್ದಾರೆ ಮಾರ್ವಿನ್.
ಬಾದಷಹಾನಾಮಾ. ಷಾಜಹಾನನೇ ತನ್ನ ಆಡಳಿತದ ವಿಶೇಷಗಳನ್ನು ಕೀರ್ತಿಸಲು ಪಾಟ್ನಾದಿಂದ ಅಬ್ದುಲ್ ಹಮೀದ್ ಲಾಹೋರಿ ಎಂಬವನನ್ನು ಕರೆಯಿಸಿ ಬರೆಯಿಸಿದ ಷಾಜಹಾನ್ ಆಡಳಿತದ ಮೊದಲ ಇಪ್ಪತ್ತು ವರ್ಷಗಳ ಚರಿತ್ರೆ. ಭಾರತ ಸರಕಾರದ ನ್ಯಾಷನಲ್ ಆರ್ಕೈವ್ಸ್ ನಲ್ಲಿ ಸಂರಕ್ಷಿಸಿಡಲಾದ ಈ ಗ್ರಂಥದ ಕೆಲ ಕುತೂಹಲಕಾರಿ ಅಂಶಗಳನ್ನು ಆಂಗ್ಲಾನುವಾದ ಮಾಡಿದ್ದಾರೆ ಪ್ರೊ. ಪಿ.ಎನ್.ಓಕ್. ಅಸಲಿಗೆ ಇಪ್ಪತ್ತನೇ ಶತಮಾನದಲ್ಲಿ ತಾಜ್ ಮಹಲಿನ ಇತಿಹಾಸವನ್ನು ಕೆದಕಲು ತೊಡಗಿ ಅದೊಂದು ಹಿಂದೂ ಅರಮನೆ ಎಂದು ಮೊದಲು ಸಾರಿದವರೇ ಪಿ.ಎನ್.ಓಕ್. ಅವರು ಅನುವಾದಿಸಿದ ಕೆಲವು ಸಾಲುಗಳು ಇಂತಿವೆ - "ಆ ಮಹಾನ್ ನಗರದ ದಕ್ಷಿಣದಲ್ಲಿ ಭವ್ಯವಾದ ರಮಣೀಯವಾದ ಹುಲುಸಾಗಿ ಬೆಳೆದಿರುವ ಉದ್ಯಾನದಿಂದ ಆವರಿಸಲ್ಪಟ್ಟ ಪ್ರದೇಶದ ನಡುವೆ ಭವನವೊಂದಿದೆ. ಅದನ್ನು ರಾಜಾ ಮಾನ್ ಸಿಂಗ್ ಮಹಲ್ ಎನ್ನುತ್ತಾರೆ. ಪ್ರಸ್ತುತ ಮಾನ್ ಸಿಂಗನ ಮೊಮ್ಮಗ ರಾಜಾ ಜಯಸಿಂಗ್ ಅದರ ಯಜಮಾನ. ಸ್ವರ್ಗಸ್ಥಳಾದ ರಾಣಿಯನ್ನು ಹೂಳುವ ಸಲುವಾಗಿ ಆಯ್ಕೆ ಮಾಡಿದರು. ಅತ್ಯಮೂಲ್ಯವಾದ ಅದು ತನ್ನ ಮನೆತನದ ಪಾರಂಪರಿಕ ಆಸ್ತಿಯಾಗಿದ್ದರೂ ಜಯಸಿಂಗನು ಷಾಜಹಾನಿಗೆ ಅದನ್ನು ಉಚಿತವಾಗಿ ಬಿಟ್ಟುಕೊಡಲು ತಯಾರಾಗಿದ್ದ. ವಿಯೋಗ ಹಾಗೂ ಮತಪರವಾದ ಪಾವಿತ್ರ್ಯತೆಗೆ ಸಂಬಂಧಿಸಿದ ವಿಷಯಗಳಲ್ಲಿರಬೇಕಾದ ಧರ್ಮಭೀರು ದೃಷ್ಟಿಯ ಕಾರಣ ನಿಷ್ಠೆಯಿಂದ ಷರೀಫಾಬಾದ್ ಅನ್ನು ರಾಜಾ ಜಯಸಿಂಗನಿಗೆ ಪ್ರತಿಫಲವಾಗಿ ಕೊಡಲಾಯಿತು. ಮಾರನೇ ವರ್ಷ ಸ್ವರ್ಗವಾಸಿಯಾದ ಪ್ರಖ್ಯಾತ ಮಹಾರಾಣಿಯ ಶರೀರವನ್ನು ಸಮಾಧಿ ಮಾಡಲಾಯಿತು." ಷಾಜಹಾನನೇ ಹೇಳಿ ಬರೆಸಿದ ಅವನ ಚರಿತ್ರೆಯಲ್ಲಿ "ಷಾಜಹಾನಿಗೂ ಪೂರ್ವದಲ್ಲೇ ಸುಂದರ ಉದ್ಯಾನದಿಂದ ಕಂಗೊಳಿಸುತ್ತಿದ್ದ ಹಿಂದೂ ಅರಮನೆಯೊಂದು ಇತ್ತು. ಅದನ್ನು ಪಡೆದ ಷಾಜಹಾನ್ ಅಲ್ಲಿ ತನ್ನ ಪತ್ನಿಯ ಮೃತದೇಹವನ್ನು ಹೂತು ಅದನ್ನು ತಾಜ್ ಮಹಲ್ಲಾಗಿ ಪರಿವರ್ತಿಸಿದ" ಎಂದು ಉಲ್ಲೇಖವಾಗಿರುವಾಗ ಉಳಿದ ಇತಿಹಾಸಕಾರರೆಲ್ಲಾ ದಾರಿ ತಪ್ಪಿದ್ದು ಅಥವಾ ಜಗತ್ತಿನ ದಾರಿ ತಪ್ಪಿಸಿದ್ದು ಏಕೆ? ಅಲ್ಲದೆ ಆತ ಆ ಭವನವನ್ನು ನೆಲಸಮವೂ ಮಾಡಲಿಲ್ಲ. ಅದನ್ನೇ ತನ್ನ ಮತಕ್ಕೆ ಸರಿಯಾಗುವಂತೆ ಮಾರ್ಪಾಟುಗೊಳಿಸಿದ. ಭವ್ಯವಾದ ಹಿಂದೂ ಅರಮನೆಯ ಒಂದು ಭಾಗ ಮಸೀದಿಯಾಯಿತು. ಒಂದು ಕಡೆ ಹೆಣವನ್ನು ಹೂಳಲಾಯಿತು. ಅಲ್ಲಲ್ಲಿ ಇಸ್ಲಾಮಿನ ಬರಹಗಳನ್ನು ಕೆತ್ತಿಸಿ ವಿರೂಪಗೊಳಿಸಲಾಯಿತು. ಇಷ್ಟೇ ಷಾಜಹಾನ್ ಮಾಡಿದ್ದು! ಪ್ರೇಮ ಸೌಧವನ್ನೂ ಕಟ್ಟಲಿಲ್ಲ; ಅಸಲಿಗೆ ಅವನೇನು ಅಮರ ಪ್ರೇಮಿಯೂ ಆಗಿರಲಿಲ್ಲ.
ಗಂಡ ಅನುಮಾನಾಸ್ಪದವಾಗಿ ಕೊಲೆಯಾದ ಬಳಿಕ ಜಹಾಂಗೀರನ ಮಲತಾಯಿಯ ಆಶ್ರಯದಲ್ಲಿದ್ದ ನೂರ್ ಜಹಾನಳನ್ನು ರಾಣಿಯಾಗಿ ಸ್ವೀಕರಿಸಿದ ಮೇಲೆ ತನ್ನ ಅಧಿಕಾರವನ್ನು ಹೆಂಡತಿಯ ಕೈಗಿತ್ತಿದ್ದ ಜಹಾಂಗೀರ್. ಆಕೆಯ ಸೋದರ ಸೊಸೆಯೇ ಮುಮ್ತಾಜ್. ತನ್ನ ರಾಜಕೀಯ ತಂತ್ರದ ಭಾಗವಾಗಿ ಆಕೆಯನ್ನು ತಂದು ಯುವರಾಜ ಖುರ್ರಂ(ಷಾಜಹಾನ್)ಗೆ ಗಂಟುಹಾಕಿದವಳು ನೂರ್ ಜಹಾನೇ. ನಿಶ್ಚಿತಾರ್ಥವಾಗಿ ಐದು ವರ್ಷ ಕಳೆದರೂ ಆತ ಅವಳನ್ನು ವಿವಾಹವಾಗಲಿಲ್ಲ. ಆ ನಡುವೆ ಪಾರ್ಸಿ ರಾಜಕುಮಾರಿಯೊಬ್ಬಳನ್ನು ವಿವಾಹವಾಗಿದ್ದೂ ಆಯಿತು. ಸತತ ಹದಿನಾಲ್ಕು ಮಕ್ಕಳನ್ನು ಹಡೆದ ಅವಳನ್ನು ಹೆರಿಗೆಯಂತ್ರವಾಗಿ ಉಪಯೋಗಿಸಿದ್ದು ಬಿಟ್ಟರೆ ಅವಳ ಮೇಲೆ ಯಾವುದೇ ಪ್ರೇಮವೂ ಷಾಜಹಾನಿಗಿರಲಿಲ್ಲ. ಒಂದು ವೇಳೆ ಅಂತಹ ಅತಿಶಯ ಪ್ರೇಮವಿದ್ದಿದ್ದರೆ ಅವನೇ ನೇಮಿಸಿದ್ದ ಅವನ ಚರಿತ್ರಕಾರರು ಅದನ್ನು ರಮ್ಯವಾಗಿ ಬರೆಯದೇ ಇರುತ್ತಾರೆಯೇ? ಅಂತಹಾ ಯಾವುದೇ ಉಲ್ಲೇಖಗಳು ಕಾಣುವುದಿಲ್ಲ. ತನ್ನ ಹದಿನಾಲ್ಕನೆಯ ಹೆರಿಗೆಯ ಸಂದರ್ಭದಲ್ಲಿ ಮುಮ್ತಾಜ್ ಸತ್ತಾಗ ಅವಳಿದ್ದ ಬುರ್ಹಾನ್ ಪುರದಲ್ಲಿಯೇ ಅವಳನ್ನು ಹೂಳಲಾಯಿತು. ಜಯಸಿಂಗನಿಂದ ಮಾನ್ ಸಿಂಗ್ ಅರಮನೆಯನ್ನು ಪಡೆದ ಬಳಿಕ ಬುರ್ಹಾನ್ ಪುರದಲ್ಲಿನ ಗೋರಿಯನ್ನು ಅಗೆದು ಶವವನ್ನು 600 ಮೈಲು ದೂರದಲ್ಲಿದ್ದ ಈಗ ತಾಜ್ ಮಹಲ್ ಎಂದು ಹೇಳಲಾಗುವ ಹಿಂದೂ ಅರಮನೆಯಲ್ಲಿ ಸಮಾಧಿ ಮಾಡಲಾಯಿತು. ಅಲ್ಲಿ ಕೇವಲ ಮುಮ್ತಾಜ್ ಒಬ್ಬಳದ್ದೇ ಅಲ್ಲ, ಅವನ ಇನ್ನೊಬ್ಬ ಪತ್ನಿ ಸಿರ್ಹಿಂದ್ ಬೇಗಂ, ಮುಮ್ತಾಜಳ ಪ್ರಿಯ ಪರಿಚಾರಿಕೆ ಸತೀಉನ್ನೀಸಾಗೂ ಗೋರಿ ಕಟ್ಟಲಾಯಿತು. ಹೀಗೆ ಷಾಜಹಾನಿಗೆ ಆ ಅರಮನೆಯನ್ನು ಸ್ಮಶಾನವಾಗಿ ಪರಿವರ್ತಿಸುವ ಉದ್ದೇಶವಿತ್ತೇ ವಿನಾ ತನ್ನ ಹೆಂಡತಿಗೆ ಪ್ರೀತಿಯ ಸೌಧವಾಗಲ್ಲ! ರಾಣಿಗೂ ಆಕೆಯ ಪರಿಚಾರಿಕೆಗೂ ಒಂದೇ ಭವನದಲ್ಲಿ, ಏಕತೆರನಾದ ಗೋರಿ ಕಟ್ಟಿಸಿದಾತನ ದೃಷ್ಟಿಯಲ್ಲಿ ರಾಣಿಗೆ ಇದ್ದ ಸ್ಥಾನಮಾನ ಎಷ್ಟೆಂದೂ ಸಾಮಾನ್ಯನೂ ಊಹಿಸಬಹುದು! ತನ್ನ ಸ್ವಂತ ಮಗಳು ಜಹನಾರಾಳನ್ನೇ ಜೀವನ ಪರ್ಯಂತ ತನ್ನ ಕಾಮದಾಟಕ್ಕೆ ಬಳಸಿಕೊಂಡ ವ್ಯಕ್ತಿ ತನ್ನ ಹೆರಿಗೆ ಯಂತ್ರ ಮುಮ್ತಾಜಳಿಗೆ ಪ್ರೇಮ ಸೌಧ ಸ್ಥಾಪಿಸಿದನೆಂದರೆ ಅದು ಬಹು ದೊಡ್ಡ ಅಚ್ಚರಿಯೇ ಸರಿ!
ಷಾಜಹಾನನ ಹೆಂಡತಿಯ ಹೆಸರು ಮುಮ್ತಾಜ್ ಮಹಲ್ ಅಲ್ಲ. ಮುಮ್ತಾಜ್ ಉಲ್ ಜಾಮಾನಿ ಅಥವಾ ಅಂಜುಮಾನ್ ಬಾನು ಬೇಗಂ. ಇಸ್ಲಾಮಿಕ್ ಸಂಪ್ರದಾಯದಂತೆ ಮುಮ್ತಾಜ್ ಹೆಸರಿನಲ್ಲಿನ ತಾಜ್ ಅನ್ನು ತೆಗೆದು ಅದಕ್ಕೆ ಮಹಲ್ ಎಂದು ಜೋಡಿಸುವುದಿಲ್ಲ. ಅಲ್ಲದೆ ಯಾವುದೇ ಸಮಾಧಿಯನ್ನು ಮಹಲ್ ಎಂದು ಕರೆದಿರುವುದು ಮುಸ್ಲಿಮ್ ಸಮುದಾಯದಲ್ಲಿ ಕಂಡು ಬಂದಿಲ್ಲ. ತಾಜ್ ಮಹಲನ್ನು ಷಾಜಹಾನ್ ಕಟ್ಟಿಸಿದ್ದಾನೆ ಎನ್ನುವುದಕ್ಕೆ ಯಾವುದೇ ಶಾಸನ, ಶಿಲಾಫಲಕಗಳಿಲ್ಲ. ಅಷ್ಟು ದೊಡ್ಡ ನಿರ್ಮಾಣದ ಖರ್ಚು-ಲೆಕ್ಕಗಳಾಗಲೀ, ರಚನೆಯ ಮಾದರಿ ಚಿತ್ರವಾಗಲೀ, ಉಪಯೋಗವಾದ ಸಾಮಗ್ರಿ, ಕೆಲಸಗಾರರ ವಿವರಗಳಾವುವೂ ಇಲ್ಲ! ತನ್ನ ಚರಿತ್ರೆ ಬರೆಯಲೆಂದೇ ಜನರನ್ನು ನೇಮಿಸಿಕೊಂಡಿದ್ದ ಆತ. ಅಂತಹುದರಲ್ಲಿ ತಾಜ್ ಮಹಲನ್ನು ಆತ ಕಟ್ಟಿಸಿದ್ದೆಂದು ಅವುಗಳಲ್ಲೆಲ್ಲಾ ಯಾಕೆ ಉಲ್ಲೇಖವಾಗಲಿಲ್ಲ? ತನ್ನ ಪ್ರತಿಯೊಂದು ಕಾರ್ಯವನ್ನು ಬರೆಯಲು ತಾನೇ ನೇಮಿಸಿದ ಬರಹಗಾರರು ಬರೆದುದನ್ನು ಖುದ್ದು ತಾನೇ ತನಿಖೆ ಮಾಡುತ್ತಿದ್ದವ ಅಂತಹಾ ದೊಡ್ಡ ಮಹಲನ್ನು ತಾನು ಕಟ್ಟಿಸಿದುದರ ಬಗೆಗೆ ಒಂದಕ್ಷರವನ್ನು ಬರೆಸಲಿಲ್ಲವೆಂದರೆ ಏನರ್ಥ? ಅಷ್ಟು ದೊಡ್ಡ ಭವನವನ್ನು ಕಟ್ಟಿಸಿದ್ದ ಸಣ್ಣ ದಾಖಲೆಯೂ ಇಲ್ಲದಿದ್ದಾಗ ಅದು ನೇರಾನೇರ ಷಾಜಹಾನನೇ ಕಟ್ಟಿಸಿದ್ದೆಂದು ಹೇಳಿದವರನ್ನು ಇತಿಹಾಸಕಾರರೆಂದು ಹೇಗೆ ಮನ್ನಿಸೋಣ? ತಾಜ್ ನಿರ್ಮಾಣಕ್ಕೆ 22 ವರ್ಷ ಹಿಡಿಯಿತಂತೆ! 1632-1654ರವರೆಗೆ. 1652ರಲ್ಲಿ ಔರಂಗಜೇಬ್ ತನ್ನ ತಂದೆಗೆ ಬರೆದ ಪತ್ರದಲ್ಲಿ ತನ್ನ ತಾಯಿಯನ್ನು ಸಮಾಧಿ ಮಾಡಿದ ಏಳಂತಸ್ತುಗಳ ಭವನ ಪುರಾತನವಾಗಿದೆಯೆಂದೂ, ಅಲ್ಲಲ್ಲಿ ನೀರು ಸೋರುತ್ತಿದೆಯೆಂದೂ, ಉತ್ತರ ದಿಕ್ಕಿನಲ್ಲಿರುವ ಗುಮ್ಮಟ ಬಿರುಕು ಬಿಟ್ಟಿದೆಯೆಂದು ತುರ್ತಾದ ದುರಸ್ಥಿ ಕಾರ್ಯಗಳನ್ನು ತಾನು ಮಾಡುವುದಾಗಿಯೂ, ಹೆಚ್ಚಿನ ದುರಸ್ಥಿಯನ್ನು ಚಕ್ರವರ್ತಿಗಳು ಮಾಡಿಸಬಹುದೆಂದು ತಿಳಿಸಿದ್ದ(ಆದಾಬ್-ಇ-ಅಲಾಮ್ಗಿರಿ, ಯದ್ಗರ್ನಾಮಾ, ಮುರುಕ್ಖಾ ಇ ಅಕ್ಬರಾದಿ). 1654ರವರೆಗೆ ನಿರ್ಮಾಣವೇ ಮುಗಿದಿರಲಿಲ್ಲವಾದರೆ 1652ರಲ್ಲಿ ದುರಸ್ಥಿಯೇಕೆ ಮಾಡಿಸಬೇಕು?
ಸಮಾಧಿಗಳ ಹಿಂದೆ ನೆಲಮನೆಯಲ್ಲಿ 14 ಕೊಠಡಿಗಳಿವೆ. ಅವುಗಳ ದ್ವಾರವನ್ನು ಕಲ್ಲುಚಪ್ಪಡಿಗಳಿಂದ ಮುಚ್ಚಲಾಗಿದೆ. ಮೂರನೇ ಅಂತಸ್ತಿನಲ್ಲಿ ನಾಲ್ಕು ಕೊಠಡಿಗಳ ಸಮುಚ್ಚಯಗಳಿವೆ. ಇದೇ ಅಂತಸ್ತಿನ ಮೂಲೆಗಳಲ್ಲಿ ಅಷ್ಟಭುಜಾಕಾರದ ಕೊಠಡಿಗಳಿವೆ. ಒಂದೊಂದಕ್ಕೆ ನಾಲ್ಕು ಬಾಗಿಲುಗಳು; ನಾಲ್ಕು ಸೋಪಾನ ಮಾರ್ಗಗಳು. ಅಲ್ಲಿಂದ ಮೂವತ್ನಾಲ್ಕು ಮೆಟ್ಟಲು ಹತ್ತಿ ಹೋದರೆ ನಾಲ್ಕು ಮೂಲೆಗಳಲ್ಲಿರುವ ನಾಲ್ಕು ಗೋಪುರಗಳು ಕಾಣ ಸಿಗುತ್ತವೆ. ಒಂದೊಂದಕ್ಕೂ ಎಂಟು ಬಾಗಿಲುಗಳು. ನಾಲ್ಕೂ ಗೋಪುರದ ಮೇಲೂ ಹಿತ್ತಾಳೆಯ ಕಲಶಗಳು! ಮುಖ್ಯದ್ವಾರ ಎಂಟು ಲೋಹಗಳ ಮಿಶ್ರಣದಿಂದ ಮಾಡಲಾಗಿದ್ದು ಹಿತ್ತಾಳೆಯ ತಗಡಿನ ಲೇಪನವಿದೆ. ಭವನದ ಹೊರ ಪ್ರಾಕಾರದ ಒಳ ಭಾಗದಲ್ಲಿ ಹಲವು ಅಂತಸ್ತುಗಳುಳ್ಳ ಬಾವಿಯೊಂದಿತ್ತು. ಅದು ಪ್ರತಿ ಅಂತಸ್ತಿನ ಒಂದು ಕೊಠಡಿಗಳ ಸಮುಚ್ಚಯಕ್ಕೆ ಹೊಂದಿಕೊಂಡಿತ್ತು. ಯಮುನೆಯ ನೀರು ಅದಕ್ಕೆ ಸರಬರಾಜಾಗುತ್ತಿತ್ತು. ಒಂದು ಸಮಾಧಿಗೆ ಇವೆಲ್ಲಾ ಅಲ್ಲದೆ ಕುದುರೆ ಲಾಯಗಳು, ಹಿತ್ತಲ ಮನೆಗಳು, ಉಪಭವನಗಳೆಲ್ಲಾ ಯಾಕಿವೆ ಎಂದು "ದಿ ತಾಜ್ ಆಂಡ್ ಇಟ್ಸ್ ಎನ್ವಿರಾನ್ಮೆಂಟ್ಸ್" ಗ್ರಂಥ ಬರೆದ ಮೌಲ್ವಿ ಮೊಯಿನುದ್ದೀನ್ ಅಹ್ಮದಿಗೆ ಕಾಡಿತ್ತು! ಎರಡು ನೆಲ ಮಾಳಿಗೆಗಳು, ಏಳು ಅಂತಸ್ತುಗಳು, ಅತಿಥಿ ಗೃಹ, ರಕ್ಷಕರ ಕೊಠಡಿಗಳು ಸೇರಿದಂತೆ ಮುನ್ನೂರೈವತ್ತು ಕೊಠಡಿಗಳು, ಭೂಗರ್ಭ ಮಾರ್ಗಗಳು, ಕುದುರೆಲಾಯ, ಗೋಶಾಲೆ, ವಾದ್ಯಶಾಲೆ, ಅಷ್ಟಭುಜ ಮಂದಿರಗಳು, ಗೋಪುರ-ಕಲಶಗಳು, ಪ್ರತಿ ಅಂತಸ್ತಿನಲ್ಲೂ ಬಾವಿಗಳು ಅದೊಂದು ಹಿಂದೂ ಅರಮನೆ ಎಂದು ಇಂದಿಗೂ ಸಾರುತ್ತಿದೆ..
ಇತ್ತೀಚೆಗೆ ತಾಜ್ ಮಹಲ್ ಆವರಣದಲ್ಲಿ ಶುಕ್ರವಾರ ಹೊರತುಪಡಿಸಿ ಉಳಿದ ದಿನ ನಮಾಜ್ ಮಾಡುವಂತಿಲ್ಲ ಎಂದು ಎಎಸ್ಐ ನೀಡಿದ ಆದೇಶವನ್ನು ಉಲ್ಲಂಘಿಸಿ, ಸ್ಥಳೀಯ ಮುಸಲ್ಮಾನರು ಹಾಗೂ ತಾಜ್ ಮಹಲ್ ಮಸೀದಿ ಇಂತೆಝಾಮಿಯಾ ಕಮಿಟಿಯ ಸದಸ್ಯರು ತಾಜ್ ಮಹಲ್ ನಲ್ಲಿ ನಮಾಜ್ ಮಾಡಿದ್ದರು. ಇದನ್ನು ಖಂಡಿಸಿ ಅದು ಮೂಲತಃ ಶಿವ ಮಂದಿರವಾಗಿದ್ದು, ತೇಜೋಮಹಾಲಯ ಎಂದು ಕರೆಯಲ್ಪಡುತ್ತಿತ್ತು ಎಂದಿರುವ ಹಿಂದೂ ಕಾರ್ಯಕರ್ತೆಯರು ನೇರ ತಾಜ್ ಮಹಲ್ಲಿನ ಒಳಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ತಾಜ್ ಮಹಲ್ಲಿನ ನಿಜವಾದ ಇತಿಹಾಸ ಹೊರ ಬೀಳುವ ದಿನ ದೂರವಿಲ್ಲ ಅನಿಸುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ