ಪುಟಗಳು

ಶುಕ್ರವಾರ, ಅಕ್ಟೋಬರ್ 31, 2014

ಕಾಲ ಮಾನ

ನಮ್ಮ ಪೂರ್ವಜರು ಕಾಲದ ಸಣ್ಣ ಪ್ರಮಾಣವನ್ನು "ಕ್ರಾಂತಿ" ಎಂದು ಕರೆದಿದ್ದರು. ಒಂದು ಕ್ರಾಂತಿ ಎಂದರೆ ಒಂದು ಸೆಕೆಂಡಿನ 1/34000 ನೇ ಭಾಗಕ್ಕೆ ಸಮ! ಇದು ಸ್ಥಿರ ವಿಶ್ವ ಅಥವಾ ಆಗ ಸಮಯ ಅನಂತ! ಸೆಕೆಂಡಿಗೆ ಇಂತಹ 34000 ಸ್ಥಿರ ವಿಶ್ವವನ್ನು ನಾವು ಅನುಭವಿಸುವುದರಿಂದ ನಮಗೆ ವಿಶ್ವವು ಚಲನೆಯಲ್ಲಿರುವಂತೆ ಗೋಚರಿಸುತ್ತದೆ.
ಮಾನವ ಚರ ವಿಶ್ವವನ್ನು ಗಮನಿಸಲು ಬೇಕಾದ ಕನಿಷ್ಟ ಕಾಲಮಾನವನ್ನು ಒಂದು "ತ್ರುಟಿ" ಎನ್ನಲಾಗಿದೆ. ಇದು ಸೆಕೆಂಡಿನ 1/300 ಭಾಗ!
2 ತ್ರುಟಿ - 1 ಲವ
2 ಲವ - 1 ಕ್ಷಣ
30 ಕ್ಷಣ - 1 ವಿಪಲ
60 ವಿಪಲ - 1 ಪಲ
60 ಪಲ - 1 ಚಡಿ
1 ಚಡಿ - 24 ನಿಮಿಷಗಳಿಗೆ ಸಮ
2.5 ಚಡಿ - 1 ಹೋರಾ ಅಂದರೆ ಒಂದು ಗಂಟೆ.
24 ಹೋರಾ - 1 ದಿನ
15 ದಿನ - 1 ಪಕ್ಷ
2 ಪಕ್ಷ - 1 ಮಾಸ
2 ಮಾಸ - 1 ಋತು
6 ಋತು - 1 ವರ್ಷ
100  ವರ್ಷ - 1 ಶತಾಬ್ಧ
10 ಶತಾಬ್ಧ - 1 ಸಹಸ್ರಾಬ್ಧ
432 ಸಹಸ್ರಾಬ್ಧ - 1 ಯುಗ
ಕಲಿಯುಗ - 432000 ವರ್ಷಗಳು
ದ್ವಾಪರಯುಗ - 864000 ವರ್ಷಗಳು
ತ್ರೇತಾಯುಗ - 1296000 ವರ್ಷಗಳು
ಸತ್ಯಯುಗ - 1728000 ವರ್ಷಗಳು
10 ಯುಗ - 1  ಮಹಾಯುಗ - 43,20,000 ವರ್ಷಗಳು
1000 ಮಹಾಯುಗ - 1 ಕಲ್ಪ - 4.32 ಬಿಲಿಯನ್ ವರ್ಷಗಳು
ಬ್ರಹ್ಮನ ಆಯುಶ್ಯ - 100 ಕಲ್ಪ
ಬ್ರಹ್ಮನ 1 ದಿನ - 1 ಮನ್ವಂತರ

ಸೋಮವಾರ, ಅಕ್ಟೋಬರ್ 6, 2014

ಧನ್ಯಾಸ್ತು ಯೇ ಭಾರತ ಭೂಮಿಭಾಗೇ

ಧನ್ಯಾಸ್ತು ಯೇ ಭಾರತ ಭೂಮಿಭಾಗೇ
            2014  ರ ಸೆಪ್ಟೆಂಬರ್ 24ರ ಮುಂಜಾವು ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಮಂಗಳನ ನೆಲದ ಅಧ್ಯಯನಕ್ಕೋಸ್ಕರ ಕಳೆದ ನವಂಬರ್ ಐದರಂದು ಇಸ್ರೋ ಹಾರಿಬಿಟ್ಟಿದ್ದ MOM(Mars Orbiter Mission) ಮಂಗಳನ ಕಕ್ಷೆಗೆ ಸೇರಿ ಅಂಗಾರಕನ ಸುತ್ತ ತನಗಾಗಿ ನಿಗದಿ ಪಡಿಸಲಾದ ಅಂಡಾಕಾರದ ಕಕ್ಷೆಯೊಳಗೆ ಸೇರುವುದರೊಂದಿಗೆ ಅಂತಹ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವೆನಿಸಿತು. ಇಷ್ಟರವರೆಗೆ ನಡೆದ 54 ವಿವಿಧ ಪ್ರಯತ್ನಗಳಲ್ಲಿ 21 ಪ್ರಯತ್ನಗಳಷ್ಟೇ ಫಲಕಂಡಿದ್ದವು. ಆದರೆ ಭಾರತ ತನ್ನ ಪ್ರಥಮ ಪ್ರಯತ್ನದಲ್ಲೇ ಫಲ ಕಾಣುವುದರೊಂದಿಗೆ ಇತಿಹಾಸವನ್ನೇ ನಿರ್ಮಿಸಿಬಿಟ್ಟಿತು. ಅದರಲ್ಲೂ ಕೇವಲ 450 ಕೋಟಿ ರೂ.ಗಳಲ್ಲೇ ಮಾಡಿದ ಈ ಸಾಧನೆ ಸಾರ್ವತ್ರಿಕವಾಗಿ ದಿಗ್ಭ್ರಮೆ ಹಾಗೂ ಪ್ರಶಂಸೆಗೊಳಗಾಯಿತು. ಈ ಮೊತ್ತ ಅಮೇರಿಕಾ ಇತ್ತೀಚೆಗಷ್ಟೇ ಮಂಗಳನಲ್ಲಿ ಕಳುಹಿಸಿದ ನೌಕೆಗೆ ಬಳಸಿದ ಹಣದ ಹತ್ತು ಪಟ್ಟು ಕಡಿಮೆ! ಅದಕ್ಕಿಂತಲೂ ಮುಖ್ಯವಾಗಿ ಇದಕ್ಕಿಂತಲೂ ಅಧಿಕ ಮೊತ್ತವುಳ್ಳ ಹಗರಣಗಳನ್ನೇ ದೇಶ ಕಂಡಿತ್ತು ಎಂದರೆ ನಮ್ಮ ವಿಜ್ಞಾನಿಗಳ ಬದ್ಧತೆ, ಜ್ಞಾನ, ಕಾರ್ಯಕ್ಷಮತೆ ಅತ್ಯಂತ ಪ್ರಶಂಸನೀಯವಲ್ಲವೆ. ಇಸ್ರೋದ ಈ ಸಾಧನೆ ಹಿಂದೊಮ್ಮೆ ವಿಶ್ವದ ಉಳಿದೆಲ್ಲೆಡೆ ಕತ್ತಲು ಕವಿದಿದ್ದಾಗ "ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಃ ಎಂಬ ಕರೆ ನೀಡಿ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಜಗದ್ಗುರು ಭಾರತವನ್ನು ನೆನಪಿಗೆ ತರುತ್ತಿದೆ. ಹಾಗಾದರೆ ಆ ಭಾರತದ ವಿಶೇಷತೆಯೇನು?

              ಸಂಖ್ಯಾನುಕ್ರಮಣಿಕೆಯನ್ನು, ದಶಮಾಂಶ ಪದ್ದತಿಯನ್ನೂ, ಶೂನ್ಯದ ಬಳಕೆಯನ್ನೂ ಜಗತ್ತಿಗೆ ಪರಿಚಯಿಸಿದವರು ಭಾರತೀಯರು. "ಪೈ"ನ ಬೆಲೆಯನ್ನು ಕಂಡುಹಿಡಿದವನು ಬೋಧಾಯನ. ಪೈಥಾಗೋರಸ್ ಪ್ರಮೇಯ ಎಂದು ಹೇಳಲಾಗುವ ಪ್ರಮೇಯವನ್ನೂ ಇವನೇ ಕಂಡು ಹಿಡಿದನು.(ಕ್ರಿ.ಪೂ. ೬ನೇ ಶತಮಾನ). ಬೀಜಗಣಿತ, ತ್ರಿಕೋಣಮಿತಿ, ಕ್ಯಾಲ್ಕುಲಸ್ - ಇವುಗಳು ಪ್ರಪಂಚಕ್ಕೆ ಭಾರತ ನೀಡಿದ ಕೊಡುಗೆಗಳು. 11 ಶತಮಾನದಲ್ಲಿ ಶ್ರೀಧರಾಚಾರ್ಯನು ವರ್ಗ ಸಮೀಕರಣ(quadratic equation)ವನ್ನು ಕಂಡುಹಿಡಿದನು. ಗ್ರೀಕರು, ರೋಮನ್ನರು ಉಪಯೋಗಿಸಿದ್ದ ಅತೀ ದೊಡ್ಡ ಸಂಖ್ಯೆ ಎಂದರೆ 10ರ ಘಾತ 6. ಆದರೆ ವೇದಕಾಲದಲ್ಲಿ ಭಾರತೀಯರು 10ರ ಘಾತ 53(10 to the power 53)ನ್ನು ನಿಶ್ಚಿತ ಹೆಸರಿನೊಡನೆ ಬಳಸುತ್ತಿದ್ದರು. ನಾವು ಈಗಲಾದರೂ ಅಷ್ಟು ದೊಡ್ಡ ಸಂಖ್ಯೆಯನ್ನು ಬಳಸುತ್ತಿಲ್ಲ!  ಬೈನರಿ ಸಂಖ್ಯೆಗಳ(0 ಮತ್ತು 1) ಉಲ್ಲೇಖ ಮತ್ತು ಬಳಕೆ ವೇದಕಾಲದಲ್ಲೇ ಇತ್ತು. ವೇದಗಣಿತ ಎಂಥಾ ಕ್ಲಿಷ್ಟ ಸಮಸ್ಯೆಯನ್ನೂ ಕ್ಷಣಮಾತ್ರದಲ್ಲಿ, ಒಂದೆರಡು ಸಾಲುಗಳಲ್ಲಿ ಪರಿಹರಿಸಬಲ್ಲ ಪ್ರಾಚೀನ ಹಿಂದೂ ಗಣಿತ ಯಂತ್ರ, ವಿವಿಧ ಆಕೃತಿಗಳ ಘನಫಲ ನಿರ್ಣಯ, ಅನಿರ್ಣೀತ ಸಮೀಕರಣಗಳು(Indeterminate equations), ಸರಳ ಹಾಗೂ ಸಂಕೀರ್ಣ ಶ್ರೇಢಿಗಳು, ತ್ರಿಕೋನಮಿತಿಗೆ ಆಧಾರವಾದ "ಜ್ಯಾ"ದ (Sine function) ಪರಿಕಲ್ಪನೆ ಇವೆಲ್ಲವನ್ನೂ ಪ್ರಾಚೀನ ಭಾರತೀಯರು ಆವಿಷ್ಕರಿಸಿದ್ದರು. ಗೆಲಿಲಿಯೋಗಿಂತ ಸಾವಿರ ವರ್ಷಗಳ ಹಿಂದೆಯೇ ಆರ್ಯಭಟ, ಸ್ಥಿರ ಸೂರ್ಯನ ಸುತ್ತ ಭೂಮಿ ಸುತ್ತುತ್ತೆ ಅಂತ ಈ ನೆಲದಲ್ಲಿ ಹೇಳಿದ್ದ. ಸ್ಥಿರ ಸೂರ್ಯನ ಸುತ್ತ ಭೂಮಿ ಪ್ರದಕ್ಶಿಣೆ ಹಾಕುತ್ತಾ ಅಕ್ಷದ ಮೇಲೆ ಒಂದು ಸುತ್ತು ಹಾಕಿದಾಗ ಒಂದು ದಿನ ಆಗುತ್ತೆ. ಸುತ್ತುವಾಗ ಜರಗುತ್ತೆ. ಜರಗುತ್ತಾ, ಜರಗುತ್ತಾ ಸೂರ್ಯನಿಗೆ ಪ್ರದಕ್ಶಿಣೆ ಬರೋವಾಗ ಒಂದು ಸಂವತ್ಸರ ಆಗುತ್ತೆ ಎಂದಿದ್ದ.  ಖಗೋಳ ವಿಜ್ಞಾನಿ ಸ್ಮಾರ್ಟಗಿಂತ ಮೊದಲೇ ಭೂಮಿ ಸೂರ್ಯನನ್ನು ಸುತ್ತಲು 365.2587756484 ಎಂದು 5ನೇ ಶತಮಾನದಲ್ಲೇ ಭಾಸ್ಕರಾಚಾರ್ಯ ಲೆಕ್ಕಹಾಕಿದ್ದನು. ಚದುರಂಗ( ಚೆಸ್, ಶತರಂಜ್, ಅಷ್ಟಪಾದ)ದ ಮೂಲಸ್ಥಾನ ಭಾರತ. "ಫಿಬೋನಸಿ" ಶ್ರೇಣಿಯನ್ನು ಆತನಿಗಿಂತ ಐನೂರು ವರ್ಷಗಳ ಮೊದಲೇ "ಮಾತ್ರಾ ಮೇರು" ಎಂಬ ಹೆಸರಿನಲ್ಲಿ ಛಂದಃ ಶಾಸ್ತ್ರಕಾರ ಪಿಂಗಳ ನಿರೂಪಿಸಿದ್ದ. ವೈರ್ ಲೆಸ್ ತಂತ್ರಜ್ಞಾನವನ್ನು ಕಂಡುಹಿಡಿದವರು ಜಗದೀಶ ಚಂದ್ರ ಬೋಸರೇ ಹೊರತು ಮಾರ್ಕೋನಿಯಲ್ಲ ಎಂದು IEEE ಧೃಢಪಡಿಸಿದೆ.
        ಜಗತ್ತಿನ ಪ್ರಪ್ರಥಮ ವಿಶ್ವವಿದ್ಯಾಲಯ ಕ್ರಿ.ಪೂ. ೭೦೦ರಲ್ಲಿ ತಕ್ಷಶಿಲೆಯಲ್ಲಿ ಸ್ಥಾಪಿಸಲಾಯಿತು. ಪ್ರಪಂಚದ ವಿವಿದೆಡೆಯಿಂದ ೧೦,೫೦೦ ವಿಧ್ಯಾರ್ಥಿಗಳು, ೬೦ಕ್ಕೂ ಹೆಚ್ಚು ವಿಷಯಗಳನ್ನು ಕಲಿಯುತ್ತಿದ್ದರು. ನೌಕಾಯಾನದ ಕಲೆ ವೇದಕಾಲದಲ್ಲೇ ಪ್ರಚಲಿತದಲ್ಲಿತ್ತು.(ವಿವರಣೆ ಮುಂದಿನ ಭಾಗದಲ್ಲಿ) ನ್ಯಾವಿಗೇಷನ್ ಪದ ಸಂಸ್ಕೃತದ 'ನವಗತಿ' ಪದದಿಂದ ಉತ್ಪತ್ತಿಯಾಗಿದೆ. ಅಂತೆಯೇ ನೇವಿ ಪದ ಸಂಸ್ಕೃತದ 'ನೌ' ಶಬ್ಧದಿಂದ ಹುಟ್ಟಿದೆ. 1896ನೇ ಇಸವಿಯವರೆಗೇ ಭಾರತ ರತ್ನಗಳ ಏಕಮಾತ್ರ ಆಗರವಾಗಿತ್ತು. ಮಾನವನಿಗೆ ತಿಳಿದಿದ್ದ ಪ್ರಪ್ರಥಮ ಚಿಕಿತ್ಸಾಪದ್ದತಿ ಆಯುರ್ವೇದ. ಇದರ ಜನಕ ಚರಕ, ಗ್ರಂಥ ಚರಕಸಂಹಿತಾ. ಶಸ್ತ್ರಚಿಕಿತ್ಸೆಯ ಜನಕ ಸುಶ್ರುತ. ಆಗಿನ ಕಾಲದಲ್ಲಿಯೇ ಸಿಜೇರಿಯನ್, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಕೃತಕ ಅಂಗಜೋಡಣೆ, ಮೂಳೆ ಮುರಿತ, ಮೂತ್ರಕೋಶದ ಕಲ್ಲುಗಳು, ಪ್ಲಾಸ್ಟಿಕ್ ಸರ್ಜರಿ, ಮೆದುಳಿನ ಶಸ್ತ್ರಚಿಕಿತ್ಸೆಗಳನ್ನೂ ಮಾಡುತ್ತಿದ್ದರು. ಅನಸ್ತೇಶಿಯಾ, 125ಕ್ಕೂ ಹೆಚ್ಚು ಶಲ್ಯಚಿಕಿತ್ಸೆಯ ಶಸ್ತ್ರಗಳನ್ನು ಅವರು ಉಪಯೋಗಿಸುತ್ತಿದ್ದರು. ಶರೀರಶಾಸ್ತ್ರ, ಜಂತು-ವನಸ್ಪತಿ,....ಗಳಿಗೆ ಸಂಬಧಿಸಿದ ಅನೇಕ ಉಲ್ಲೇಖಗಳೂ, ಗ್ರಂಥಗಳೂ ಇವೆ. ವ್ಯವಸಾಯಕ್ಕಾಗಿ ಜಲಾಶಯ ಅಣೆಕಟ್ಟುಗಳ ನಿರ್ಮಾಣ ಪ್ರಥಮ ಬಾರಿಗೆ ಆದದ್ದು ಸೌರಾಷ್ಟ್ರದಲ್ಲಿ. ಕ್ರಿ.ಪೂ. 150ರಲ್ಲಿದ್ದ ಶಕರ ದೊರೆ ಪ್ರಥಮ ರುದ್ರಮಾನನ ಪ್ರಕಾರ ರೈವತಕ ಪರ್ವತದಲ್ಲಿ 'ಸುದರ್ಶನ' ಎಂಬ ಕೊಳವನ್ನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಕಟ್ಟಲಾಗಿತ್ತು.
       ಕೊಲಂಬಸ್ಗಿಂತ ಮೊದಲೇ ಭಾರತೀಯರು ಅಮೇರಿಕಾಕ್ಕೆ ತಲುಪಿದ್ದರು ಎನ್ನುವುದಕ್ಕೆ ಅಜ್ತೀಸರ ದೇವಾಲಯದಲ್ಲಿ ದೊರೆತಿರುವ ಭಾರತೀಯ ಕಲೆಗಳ ನಮೂನೆಗಳು ಸಾಕ್ಷಿ. ವಾಸ್ಕೋಡಗಾಮನ ಹಡಗನ್ನು ನಾವಿಕನೊಬ್ಬ ಆಫ್ರಿಕಾದಿಂದ ದಕ್ಷಿಣ ಭಾರತಕ್ಕೆ ಕರೆ ತಂದನು. ಭಾರತೀಯ ಹಡಗು ಅವನ ಹಡಗಿಗಿಂತ ಹಲವು ಪಟ್ಟು ದೊಡ್ಡದಿತ್ತು.  ಋಗ್ವೇದದ ಕಾಲದಲ್ಲೇ ಸಾರಿಗೆ ಸಂಪರ್ಕ ಅತ್ಯುನ್ನತ ಮಟ್ಟದಲ್ಲಿತ್ತು. ಋಗ್ವೇದದಲ್ಲಿ 'ಜಲಯಾನ'- ನೀರು ಮತ್ತು ಗಾಳಿಯಲ್ಲಿ ನಡೆಸಬಹುದಾದ ವಾಹನ; 'ಕಾರಾ'- ನೆಲ ಮತ್ತು ನೀರಿನಲ್ಲಿ ನಡೆಸಬಹುದಾದ ವಾಹನ;ತ್ರಿತಳ, ತ್ರಿಚಕ್ರರತ್ನ, ವಾಯುರತ್ನ ಇವುಗಳ ಉಲ್ಲೇಖವಿದೆ. ಆಗಸ್ತ್ಯ ಸಂಹಿತೆಯಲ್ಲಿ ಎರಡು ರೀತಿಯ ವಿಮಾನಗಳ ಉಲ್ಲೇಖವಿದೆ. 'ಛತ್ರ' ಯಾ ಅಗ್ನಿಯಾನ: ಶತ್ರುಗಳು ಬೆಂಕಿ ಹಚ್ಚಿದರೆ ಅಥವಾ ನೈಸರ್ಗಿಕ ಕಾಡ್ಗಿಚ್ಚು ಸಂಭವಿಸಿದರೆ ಪಾರಾಗಲು ಇದನ್ನು ಬಳಸುತ್ತಿದ್ದರು. 'ವಿಮಾನ ದ್ವಿಗುಣಂ' ಎಂಬ ವಾಯುಯಾನ ಈಗಿನ ಪ್ಯಾರಾಚೂಟ್ಗಳಂತೆ ಬಳಕೆಯಲ್ಲಿತ್ತು. ವಿಮಾನಶಾಸ್ತ್ರದ ಜನಕ ಮಹರ್ಷಿ ಭರಧ್ವಾಜ.  ಭರಧ್ವಾಜನ ಯಾತ್ರಾ ಸರ್ವಸ್ವ ಅಥವಾ ಬ್ರಹದ್ವಿಮಾನ ಶಾಸ್ತ್ರದಲ್ಲಿ ವಿಮಾನ ತಯಾರಿಸುವ ಮತ್ತು ಹಾರಿಸುವ ತಂತ್ರಜ್ಞಾನದ, ವಿವಿಧ ಗಾತ್ರದ, ವೇಗದ, ಇಂಧನ ಕ್ಷಮತೆಯ ವಿಮಾನಗಳ ತಯಾರಿಕಾ ವಿಧಾನಗಳ ವಿವರಗಳಿವೆ. ವಿಮಾನ ತಯಾರಿಕೆಗೆ ಬೇಕಾದ ಲೋಹ, ಮಿಶ್ರಲೋಹಗಳು, ಬಳಸಬಹುದಾದ ಇಂಧನ ಮತ್ತು ಅದನ್ನು ತಯಾರಿಸುವ ವಿಧಾನಗಳ ವಿವರಣೆ ಇದೆ. ಎಂಥ ಹೊಡೆತ ಬಿದ್ದರು ತುಂಡಾಗದ 'ಅಭೇದ್ಯ', ಬೆಂಕಿ ತಗುಲಿದರು ಸುಡದ 'ಅದಾಹ್ಯ', ಬೇರ್ಪಡಿಸಲಾಗದ 'ಅಛೇದ್ಯ' ಎಂಬ ಮೂರು ರೀತಿಯ ವಿಮಾನಗಳನ್ನು ತಯಾರಿಸುವ ಮಾಹಿತಿ ಇದೆ! ಭರಧ್ವಾಜನ ಇದೇ ಗ್ರಂಥದಲ್ಲಿ ದೂರದಿಂದಲೇ ವಿವಿಧ ತಂತ್ರಜ್ಞಾನ ಬಳಸಿ ಶತ್ರು ವಿಮಾನ ನಾಶ ಮಾಡುವ, ಪಕ್ಕದ ವಿಮಾನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಲ್ಲ 'ಶಬ್ಧಗ್ರಾಹಿ' ಯಂತ್ರದ, ಪೈಲಟ್ ಮತ್ತು ಪ್ರಯಾಣಿಕರು ಧರಿಸಬೇಕಾದ ಬಟ್ಟೆ, ತಿನ್ನಬಹುದಾದ ಆಹಾರ ಮತ್ತಿತರ ವಿಚಾರಗಳಿವೆ.
           ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹರಿಶ್ಚಂದ್ರನ ಕಾಲದಲ್ಲಿದ್ದ ವೈಮಾನಿಕ ನಗರ 'ಸೌಭ ದೇಶ', ಆಕಾಶದಲ್ಲಿ ಯುದ್ಧ ಮಾಡುವ ತರಬೇತಿ ಪಡೆದ ಸೈನಿಕರ(ಆಕಾಶ ಯೋಧಿನ: ) ಉಲ್ಲೇಖವಿದೆ. ಅಂದರೆ ಆ ಕಾಲದಲ್ಲೇ ವಾಯುಯುದ್ಧಗಳು ಸಂಭವಿಸುತ್ತಿದ್ದವು ಎಂದಾಯಿತಲ್ಲವೇ? ಕ್ರಿ. ಪೂ. 240ರ ಸುಮಾರಿಗೆ ಸಾಮ್ರಾಟ ಅಶೋಕನ ಕಾಲದಲ್ಲಿ ಆಕಾಶಯಾನಕ್ಕೆ ಬಳಸುವ ರಥಗಳಿದ್ದವು. 1896ರಲ್ಲಿ ಆನೇಕಲ್ ಸುಬ್ರಾಯ ಭಟ್ಟರ ಮಾರ್ಗದರ್ಶನದಲ್ಲಿ ಶಿವಕರ್ ಬಾಪೂಜಿ ತಲ್ಪಾಡೆ ಮತ್ತವರ ಪತ್ನಿ ವಿಮಾನ ರಚಿಸಿದ್ದು ಭರಧ್ವಾಜನ ವಿಮಾನ ಶಾಸ್ತ್ರ ಆಧರಿಸಿಯೇ! ಆಗ ಅವರು ಸೂರ್ಯಕಿರಣ, ಪಾದರಸ, ನಕ್ಷರಸಗಳನ್ನು ಇಂಧನವಾಗಿ ಬಳಸಿದ್ದರು. 1500 ಅಡಿ ಎತ್ತರಕ್ಕೆ ಹಾರಿ ಯಶಸ್ವಿಯಾಗಿ ಕೆಳಗಿಳಿದ ಈ ವಿಮಾನ ಪರೀಕ್ಷೆಯ ಬಗ್ಗೆ ಅಂದಿನ ಪ್ರಸಿದ್ಧ ಮರಾಠಿ ಪತ್ರಿಕೆ 'ದಿ ಕೇಸರಿ' ವರದಿ ಪ್ರಕಟಿಸಿತ್ತು. ಈ ಪರೀಕ್ಷೆಗೆ ಅಂದಿನ ಬರೋಡಾ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡ್ ಮತ್ತು ಜಸ್ಟೀಸ್ ಗೋವಿಂದ ರಾನಡೆ ಸಾಕ್ಷಿಯಾಗಿದ್ದರು. ಪತ್ನಿಯ ನಿಧನದ ನಂತರ ತಲ್ಪಾಡೆ ಇದರ ಬಗ್ಗೆ ಆಸಕ್ತಿ ಕಳಕೊಂಡರು. ಅವರ ನಿಧನಾನಂತರ ಅವರ ಸಂಬಂಧಿಕರು ಈ ತಂತ್ರಜ್ಞಾನವನ್ನು ರೈಟ್ ಸಹೋದರರಿಗೆ ಮಾರಿದರು! ವಿಶ್ವದ ಬಹುತೇಕ ರಾಷ್ಟ್ರಗಳು ಹುಟ್ಟುವ ಮೊದಲೇ ಭಾರತ ವೈಜ್ಞಾನಿಕತೆಯ ತುತ್ತತುದಿಯಲ್ಲಿತ್ತು ಎಂಬುದಕ್ಕೆ ವಿಮಾನ ಶಾಸ್ತ್ರ ಒಂದು ಸಣ್ಣ ಉದಾಹರಣೆ. ನಮ್ಮ ಕಲ್ಪನೆಗೂ ನಿಲುಕದ ಹಲವು ಸಂಶೋಧನೆಗಳು ಆಗಿಹೋಗಿವೆ. ಅವುಗಳ ದಾಖಲೀಕರಣ ಆಗಿಲ್ಲ. ಅಥವಾ ಅಳಿದು ಹೋಗಿವೆ. ಅಥವಾ ಅಳಿಸಲಾಗಿದೆ!
             ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ಮಾನವ ಜೀವನ ವ್ಯವಸ್ಥೆಯ ಅನೇಕ ಪ್ರಯೋಗಗಳ ಪರಿಪಾಕವಾಗಿ ಶ್ರೇಷ್ಠ ಸಾಂಸ್ಕೃತಿಕ ಸಂಪತ್ತು, ಆದರ್ಶ ಜೀವನ ಪದ್ದತಿಯನ್ನು ನಮ್ಮ ಪೂರ್ವಜರು ಬಹು ಮೊದಲೇ ನಿರ್ಮಿಸಿದರು. ತಮ್ಮ ದೇಶವನ್ನು ತಾಯಿ ಎಂದು ಕರೆದು ತಮ್ಮೆಲ್ಲಾ ಶೃದ್ಧಾಭಕ್ತಿಗಳನ್ನು ಆಕೆಯ ಪದತಲದಲ್ಲಿ ಅರ್ಪಿಸಿದರು. ಭೃ ಎನ್ನುವ ಧಾತುವಿನಿಂದ ಭಾರತ ಹುಟ್ಟಿಕೊಂಡಿತು. ಅಂದರೆ ಪೋಷಿಸು, ಭರಿಸು ಎಂದರ್ಥ. ಇದಕ್ಕೆ ಬೆಳಕು, ಜ್ಞಾನ, ಭಗವಂತ ಎಂಬೀ ಅರ್ಥಗಳಿವೆ. ಆದ್ದರಿಂದ ವಿಶ್ವವನ್ನೇ ಪೋಷಿಸಿದ, ವಿಶ್ವಕ್ಕೆ ಬೆಳಕು ನೀಡಿದ, ಜ್ಞಾನ ನೀಡಿದ, ಭಗವಂತನ ನಾಡು ಭಾರತ! 'ಭಾರತ' ಇದು ಪ್ರಗತಿಯ ಚಿಹ್ನೆ. ನಾಟ್ಯಶಾಸ್ತ್ರದ ಹರಿಕಾರ ಭರತಮುನಿಯ ಬೀಡು. ನಟರಾಜನ ಪದತಲ ಸೋಂಕಿದ ಪುಣ್ಯನೆಲ. 'ಭಾ'ವ, 'ರಾ'ಗ, 'ತಾ'ಳಗಳ ಸಾಮರಸ್ಯದ ಭೂಮಿ! ಇದೇ ಇಲ್ಲಿನ ವಿವಿಧತೆಯಲ್ಲೂ ಏಕನಾದ ಹೊರಡಿಸಿಹುದು!
             ಅಂದರೆ ಒಂದು ಕಾಲದಲ್ಲಿ ಜಗತ್ತಿನ ಗುರುವಾಗಿ, ಜ್ಞಾನದ ಕುರುಹಾಗಿದ್ದ ಭಾರತ ಮತ್ತೊಮ್ಮೆ ಅದೇ ಸ್ಥಾನವನ್ನೇರಲು ದಾಪುಗಾಲು ಹಾಕುತ್ತಿದೆ ಅಂತ ಇಸ್ರೋದ  ಸಾಧನೆಯಿಂದ ಅನ್ನಿಸಲು ಆರಂಭವಾಗಿದ್ದರೆ ಆಶ್ಚರ್ಯವೇ ಇಲ್ಲ. ಅಭಿವೃದ್ಧಿಯೇ ನನ್ನ ಗುರಿ, ದೇಶವೇ ತನಗೆ ಮೊದಲು ಎನ್ನುವ ಪ್ರಧಾನಿ, ಮನೆ-ಮಠ ತೊರೆದು ತಾಯಿ ಭಾರತಿಯ ಸೇವೆಗೈಯ್ಯುತ್ತಿರುವ ಭಾರತೀಯ ಸೇನೆ, ಮನೆ-ಮಠ ಮರೆತು ದೇಶಸೇವೆಯಲ್ಲಿ ನಿರತರಾಗಿರೋ ವಿಜ್ಞಾನಿಗಳು, ಸೇವೆಯೇ ಪರಮಧ್ಯೇಯವೆಂಬಂತೆ ಸದಾ ಚಟುವಟಿಕೆಯಲ್ಲಿರುವ ಸ್ವಯಂಸೇವಕರು, "ನನ್ನ ಭಾರತ" ಹೀಗಿರಬೇಕು ಎಂದು ಕನಸು ಹೊತ್ತು ಅದರ ಸಾಕಾರಕ್ಕೆ ಮುಂದಾಗಿರುವ ಬೃಹತ್ ಯುವಪಡೆಯಿಂದ ಇದು ಅಸಾಧ್ಯವೇನೂ ಅಲ್ಲ ಅಲ್ಲವೇ?
"ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ।
ಸ್ವರ್ಗಾಪವರ್ಗಾಸ್ಪದ ಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್॥"

ಸ್ವರ್ಗಕ್ಕೆ ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು ಎಂದು ದೇವತೆಗಳೇ ಹಾಡಿ ಹೊಗಳಿದ ಈ ನಾಡನ್ನು ಮತ್ತೊಮ್ಮೆ ಜಗದ್ಗುರುವಾಗಿ ಮಾಡೋಣ ಬನ್ನಿ.