ಪುಟಗಳು

ಶುಕ್ರವಾರ, ಅಕ್ಟೋಬರ್ 28, 2016

ತಾಯಿ ಭಾರತಿಗೆ ಆರತಿ ಬೆಳಗಿದ ಅಗ್ನಿಶಿಖೆ

ತಾಯಿ ಭಾರತಿಗೆ ಆರತಿ ಬೆಳಗಿದ ಅಗ್ನಿಶಿಖೆ

           ಉತ್ತರ ಐರ್ಲೆಂಡಿನ ಡಂಗನಾನ್. 1867 ಅಕ್ಟೋಬರ್ 28. ನೊಬೆಲ್ ಕುಟುಂಬದ ಸಂತೋಷ ಮುಗಿಲು ಮುಟ್ಟಿತ್ತು. ಅನುಪಮ ಖನಿಯೊಂದು ಭುವಿಗಿಳಿಯಿತು. ಹೊಳೆಯುವ ನೀಲ ಕಂಗಳು, ಬಾಲ ಸೂರ್ಯ ಕಿರಣಗಳಂತೆ ಮಿನುಗುವ ಕೆಂಗೂದಲನ್ನು ಪಡೆದು ಮೈದುಂಬಿ ಬೆಳೆಯಿತು. ಅಜ್ಜ ಉಗ್ರ ರಾಷ್ಟ್ರಭಕ್ತ. ಅಪ್ಪ ದೀನ-ರೋಗಿಗಳಿಗೆ ಸದಾ ಸಹಾಯ ಮಾಡುತ್ತಿದ್ದ ಧರ್ಮೋಪದೇಶಕ. ಅಪ್ಪನ ಈಶ ಭಕ್ತಿ, ತಾತನ ದೇಶಭಕ್ತಿ ಅವಳಲ್ಲಿ ಮೇಳೈಸಿತು. ಅವಳ ನಿಷ್ಪಕ್ಷಪಾತ ಸೇವೆ ಕಂಡು ಮತಾಂತರಿಗಳ ಕಣ್ಣುರಿಯಿತು. ಅವಳ ಬಗೆಗೆ ಅಪಪ್ರಚಾರವೂ ನಡೆಯಿತು. ರೇಗಿದ ಆಕೆ ಪತ್ರಿಕೆಗಳಿಗೆ ಹರಿತವಾದ ಲೇಖನಗಳನ್ನು ಬರೆದು ಚರ್ಚು-ಪಾದ್ರಿಗಳ ಕುತಂತ್ರವನ್ನು ಬಯಲಿಗೆಳೆದಳು. ಐರ್ಲೆಂಡಿನಂಥ ಅಪ್ಪಟ ಕ್ರೈಸ್ತ ದೇಶದಲ್ಲಿ ಆ ಕಾಲದಲ್ಲಿ ಇಂತಹುದೊಂದು ಪ್ರಕರಣ ಸಾಧ್ಯವೇ? ಹೌದು, ಇಂತಹ ಪ್ರಕರಣವೊಂದು ನಡೆದಿತ್ತು. ಆಕೆ ಮಾರ್ಗರೆಟ್ ನೊಬೆಲ್! ಅಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಅದೇ "ಭಗಿನಿ ನಿವೇದಿತಾ" ಎಂದಾಕ್ಷಣ ಆ ಅಗ್ನಿಶಿಖೆಯ ಚಿತ್ರ ಅಂತಃಪಟಲದಲ್ಲಿ ಹಾದು ಹೋದೀತು.

              ಈ ಪ್ರಕರಣದ ಬಳಿಕ ಆಕೆಗೆ ಕ್ರೈಸ್ತ ಮತದ ಮೇಲಿನ ನಂಬಿಕೆ ಹೊರಟು ಹೋಯಿತು. ಚರ್ಚಿನ ದಾರಿ ಮರೆತು ಹೋಯಿತು. ಆತ್ಮ ಸಮಾಧಾನದ ದಾರಿ ತೋರುವ ಗುರುವಿಗಾಗಿ ಮನ ತಹತಹಿಸಿತು. ಅವಳ ಮನಸ್ಸಿನಲ್ಲಿ ವಿಚಾರಗಳ ಬಿರುಗಾಳಿಯೇ ಎದ್ದಿತು. ಅವಳೇ "ನಾನು ಕ್ರೈಸ್ತ ಮತದಲ್ಲಿ ಹುಟ್ಟಿದೆ. ಆಂಗ್ಲ ಹುಡುಗಿಯರಂತೆಯೇ ಶಿಕ್ಷಣವನ್ನು ಪಡೆದೆ. ಕ್ರೈಸ್ತ ಮತದ ಸಿದ್ಧಾಂತಗಳನ್ನು ನನಗೆ ಎಳವೆಯಿಂದಲೇ ಅರೆದು ಕುಡಿಸಲಾಗಿತ್ತು. ಹದಿನೆಂಟನೆಯ ವಯಸ್ಸಿಗೆ ಕ್ರಿಶ್ಚಿಯನ್ ಸಿದ್ಧಾಂತಗಳ ಮೇಲೆ ನನಗೆ ಸಂದೇಹ ಹೆಚ್ಚಾಯಿತು. ಅವು ಸುಳ್ಳು ಹಾಗೂ ಅಸಂಗತಗಳ ಮಿಶ್ರಣ ಎಂದು ನನಗನಿಸತೊಡಗಿತು. ಅದರ ಮೇಲಿನ ಶೃದ್ಧೆಯೇ ಹೊರಟು ಹೋಯಿತು. ಮನಃಶಾಂತಿ ಸಿಗಲಿಲ್ಲ. ಹೀಗೆಯೇ ಸತ್ಯವನ್ನು ಅರಸುತ್ತಾ ಏಳು ವರ್ಷ ಕಳೆದೆ" ಎಂದು ಬರೆದಿದ್ದಾಳೆ. 1895ರ ನವೆಂಬರಿನಲ್ಲಿ ಆಕೆಯ ಕಲಾವಿದ ಮಿತ್ರನೊಬ್ಬ ಲಂಡನ್ನಿಗೆ ಹಿಂದೂ ಸಂನ್ಯಾಸಿಯೊಬ್ಬರು ಬಂದಿರುವುದಾಗಿಯೂ, ಅವರ ಉಪನ್ಯಾಸಕ್ಕೆ ತಾನು ಹೋಗುವುದಾಗಿ ತಿಳಿಸಿದ. ಆಕೆಯನ್ನೂ ಆಹ್ವಾನಿಸಿದ. ಮಾರ್ಗರೆಟ್ ಅಷ್ಟೇನು ಮನಸ್ಸಿಲ್ಲದಿದ್ದರೂ ಕುತೂಹಲಗೊಂಡು ಅಲ್ಲಿಗೆ ಧಾವಿಸಿದಳು.

               ಎದುರಿಗೆ ಕೆಂಗಾವಿಯ ನಿಲುವಂಗಿ ತೊಟ್ಟ ತೇಜಃಪುಂಜ ಮಖಮಂಡಲ ಅರೆನಿಮೀಲಿತ ನೇತ್ರದ ಪುರುಷಪುಂಗವನೊಬ್ಬ ಕುಳಿತಿದ್ದ. ಆತನ ಬಳಿಯ ಅಗ್ಗಿಷ್ಟಿಕೆಯಲ್ಲಿ ಅಗ್ನಿ ಜ್ವಲಿಸುತ್ತಿತ್ತು. ಆತನ ನಿರರ್ಗಳ ವಾಗ್ಝರಿ, ರಮ್ಯ ಮನೋಹರ ಸ್ವರ, ಸಂಸ್ಕೃತ ಶ್ಲೋಕಗಳ ಉಚ್ಛಾರಕ್ಕೆ ಆಕೆ ಬೆರಗಾದಳು. ಸೂರ್ಯ ನಡುನೆತ್ತಿಗೆ ಬಂದು ದಿಗಂತದಲ್ಲಿ ಸರಿದೂ ಹೋದ. ನಕ್ಷತ್ರಗಳೂ ಕಾಣಿಸಿಕೊಂಡವು. ಮಾಂತ್ರಿಕ ಸ್ವರ ಹೊರಡುತ್ತಲೇ ಇತ್ತು. ಮಾರ್ಗರೆಟಳ ಆತ್ಮ ಅದಕ್ಕೆ ಮಿಡಿಯುತ್ತಲೇ ಸ್ತಬ್ಧವಾಗಿ ಕುಳಿತಿತ್ತು. "ಗೊಡ್ಡು ವಿಚಾರಧಾರೆಯ ತಮಸ್ಸಿನಿಂದ ನಿರಾಶೆಗೊಂಡಿದ್ದ ನಮ್ಮ ಮನಸ್ಸಿಗೆ ಆತ ಸಾಂತ್ವನ ನೀಡಿದ. ನಿರರ್ಥಕ ಸೈದ್ಧಾಂತಿಕ ವಾದವನ್ನು ಧಾರ್ಮಿಕ ಸತ್ವದ ತಿರುಳಿನಿಂದ ಪ್ರತ್ಯೇಕಿಸಿ ನಮ್ಮ ಅಂಜಿಕೆಯನ್ನು ಹೋಗಲಾಡಿಸಿ ಬೌದ್ಧಿಕ-ತಾತ್ವಿಕ ಅಭಿವ್ಯಕ್ತಿಯನ್ನು ಆ ಭವ್ಯ ವ್ಯಕ್ತಿತ್ವ ಪ್ರಸಾದಿಸಿ ಇರುಳ ಜಗತ್ತಿಗೆ ಬೆಳಕನ್ನುಣಿಸಿತು" ಎಂದಿದ್ದಾಳೆ ಮಾರ್ಗರೆಟ್. "ನನ್ನ ದೇಶದ ಮಹಿಳೆಯರ ಸೇವೆಗೆ ಒಂದಷ್ಟು ಯೋಜನೆ ಹಾಕಿಕೊಂಡಿದ್ದೇನೆ. ಅದನ್ನು ಕಾರ್ಯರೂಪಕ್ಕೆ ತರಲು ನೀನು ನೆರವಾಗಬಲ್ಲೆ ಎಂದನಿಸುತ್ತದೆ" ಎಂದ ಗುರು ವಿವೇಕಾನಂದರ ಮಾತು ಮರಳುಗಾಡಿನಲ್ಲಿ ದಾಹದಿಂದ ನರಳುತ್ತಿದ್ದವಳಿಗೆ ಹಿನ್ನೀರಿನ ಒರತೆ ಸಿಕ್ಕಂತಾಯಿತು. ವಿವೇಕಾನಂದರನ್ನು ಕಾಡಿಬೇಡಿ ಭಾರತಕ್ಕೆ ತೆರಳುವುದನ್ನು ನಿಶ್ಚಯಿಸಿಯೇ ಬಿಟ್ಟಳು. 1897 ಡಿಸೆಂಬರ್ ಕೊನೆಯ ಭಾಗ. ತುಂತುರು ಮಳೆ, ದಟ್ಟವಾಗಿ ಕವಿದಿದ್ದ ಮಂಜುವಿನ ನಡುವೆ ಮಾರ್ಗರೆಟಳನ್ನು ಹೊತ್ತಿದ್ದ ಹಡಗು ಬಂಧುಗಳ ಕಣ್ಣಿಂದ ಚಿಕ್ಕದಾಗಿ, ಚುಕ್ಕಿಯಾಗಿ ಮರೆಯಾಗಿ ಹೋಯಿತು. ತುಂಬು ಹರೆಯದ ಸುಶಿಕ್ಷಿತ, ಪ್ರತಿಭಾವಂತೆ ಹುಡುಗಿ ಪದತಲದಲ್ಲಿ ಬಿದ್ದಿದ್ದ ಭೋಗಭಾಗ್ಯಗಳನ್ನು ಒದ್ದು ಹೊರಟಿದ್ದಳು. ಅವಳ ತಾಯಿಗೆ ಹಿಂದೆ ಧರ್ಮಗುರು ನುಡಿದ ಭವಿಷ್ಯ ನೆನಪಾಯಿತು. ಮರಣಶಯ್ಯೆಯಲ್ಲಿ ಪತಿ ನುಡಿದ ಕಡೆಯ ನುಡಿಯೂ ಜ್ಞಾಪಕಕ್ಕೆ ಬಂತು..."ದೇವರ ಕರೆಬಂದಾಗ ಕಳುಹಿಕೊಡು. ಮಹತ್ಕಾರ್ಯವನ್ನೇ ಸಾಧಿಸುತ್ತಾಳೆ"

             1898ರ ಮಾರ್ಚ್. ಮಾತೆ ಶಾರದಾ ದೇವಿ ಹಳ್ಳಿಯಿಂದ ಕಲ್ಕತ್ತೆಗೆ ಬಂದಿದ್ದರು. ಮಾರ್ಚ್ 17ರಂದು ಅವರನ್ನು ನೋಡಲೆಂದು ಮಾರ್ಗರೆಟ್ ಕಲ್ಕತ್ತೆಗೆ ಧಾವಿಸಿದಳು. ಮಾತೆ ಮಾರ್ಗರೆಟ್ ನೊಬೆಲಳನ್ನು ಹತ್ತಿರವೇ ಕೂರಿಸಿಕೊಂಡರು. "ಮಗಳೇ" ಎಂದರು. ಒಂದೇ ತಟ್ಟೆಯಲ್ಲಿ ಫಲಾಹಾರ ಸ್ವೀಕರಿಸಿದರು. ಕಲ್ಪನೆಗೂ ನಿಲುಕದ ಘಟನೆ. ಎಲ್ಲರಿಗೂ ಅಚ್ಚರಿ. ಹಿಂದೂವೊಬ್ಬಳು ಅದರಲ್ಲೂ ಸಂಪ್ರದಾಯಸ್ಥ ವೃದ್ಧೆ ಬ್ರಾಹ್ಮಣಿ ಹಿಂದೂವಲ್ಲದವಳೊಬ್ಬಳ ಜೊತೆ ಒಂದೇ ತಟ್ಟೆಯಲ್ಲಿ ತಿನ್ನುವುದು! ಉಳಿದವರು ಅಂತಿರಲಿ, ಸ್ವತಃ ವಿವೇಕಾನಂದರೆ ಆಶ್ಚರ್ಯಚಕಿತರಾದರು. ಕಲ್ಕತ್ತೆಯ ಬಂದರಿನಲ್ಲಿ ಸಂನ್ಯಾಸಿಯೊಬ್ಬ ಮಾರ್ಗರೆಟಳನ್ನು ಸ್ವಾಗತ ಕೋರಿ ಅರ್ಪಿಸಿದ ಪುಷ್ಪಾಹಾರಕ್ಕೆ ಘಮಘಮಿಸುವ ಪರಿಮಳ ಬಂದಿತ್ತು. ತವರಿಗೆ ಮರಳಿದ ಮಗಳನ್ನು ತಾಯಿ ಭಾರತಿ ಬರಸೆಳೆದು ಬಿಗಿದಪ್ಪಿ ಹೂಮುಡಿಸಿ ಹರಸಿದಂತಾಯಿತು.

             ನೀಲಾಂಬರ ಮುಖರ್ಜಿಯವರ ಉದ್ಯಾನದಲ್ಲಿದ್ದ ಆಶ್ರಮದಲ್ಲಿ, ದೇವಮಂದಿರದ ಸಭಾಂಗಣದಲ್ಲಿ ಮುಂಜಾವಿನ ಮಂಜಿನ ನಡುವೆ ಸ್ವಾಮಿ ವಿವೇಕಾನಂದರಿಂದ ದೀಕ್ಷೆಯನ್ನು ಸ್ವೀಕರಿಸಿದಳು. ಹಳೆಯದ್ದನ್ನೆಲ್ಲಾ ವರ್ಜಿಸಿ ಪರಮೇಶ್ವರನ ಪದತಲದಲ್ಲಿ ಸರ್ವಸ್ವವನ್ನೂ ನಿವೇದಿಸಿ ನವಜನ್ಮ ಪಡೆದು ಗುರುವಿನೆದುರು ನಿಂತಾಗ ಗುರುವಿನ ಅಂತಃಕರಣದಿಂದ ಸಹಜಪ್ರೇರಿತವಾಗಿ ನಿವೇದಿತಾ ಎನ್ನುವ ಅರ್ಥಗರ್ಭಿತ ನಾಮವೊಂದು ಹೊರಬಂತು. ಹೀಗೆ ಮಾರ್ಗರೆಟ್ ನಿವೇದಿತಾ ಆದಳು. ಕಲ್ಕತ್ತಾದ ಸ್ಟಾರ್ ರಂಗಮಂದಿರದಲ್ಲಿ ವಿವೇಕಾನಂದರ ಸಮ್ಮುಖದಲ್ಲಿ "ರಾಮಕೃಷ್ಣ ಸಂಘ"ದ ಉದ್ಘಾಟನೆಯ ಸಮಾರಂಭದಲ್ಲಿ ನಿವೇದಿತಾ ಮಾಡಿದ ಮೊದಲ ಭಾಷಣ ಪ್ರತಿಯೊಬ್ಬ ಭಾರತೀಯ ಕೇಳಿ, ಅರಿಯಬೇಕಾದ ಭಾಷಣ. "ಸಹಸ್ರಾರು ವರ್ಷಗಳ ಅಕ್ಷುಣ್ಣ ಪರಂಪರೆಯ ಸಂಜಾತರಾದ ನೀವು ಜಗದ್ವಂದ್ಯವಾದ ಆಧ್ಯಾತ್ಮಿಕ ರತ್ನಗಳನ್ನು ಕಾಪಿಟ್ಟುಕೊಂಡು ಬಂದಿರುವಿರಿ. ನಾನಿಂದು ಅಂತಹ ಪುಣ್ಯಭೂಮಿಗೆ, ಈ ಪಾವನ ಭೂಮಿಯ ಸೇವೆಗಾಗಿ ನಿಮ್ಮ ಪದತಲದಲ್ಲಿ ಕುಳಿತು ಜೀವನದ ಓನಾಮ ಕಲಿಯಲು ಬಂದಿದ್ದೇನೆ. ನನಗೆ ನೆರವಾಗಿ, ಆಶೀರ್ವದಿಸಿ..." ನಿವೇದಿತೆಯ ಮಾತು ನಿರರ್ಗಳವಾಗಿ ಸಾಗಿತ್ತು. ಪ್ರೇಕ್ಷಕರ ಕರತಾಡನ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

                1898ರಲ್ಲಿ ನಿವೇದಿತಾ, ರವೀಂದ್ರನಾಥ ಟಾಗೋರರನ್ನು ಭೇಟಿಯಾದಾಗ ಅವರು ತಮ್ಮ ಪುತ್ರಿಯ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೇಳಿಕೊಂಡರು. "ಠಾಕೂರ್ ಮನೆತನ ಹೆಮ್ಮಕ್ಕಳೆಲ್ಲರನ್ನೂ ಮೇಡಂಗಳನ್ನಾಗಿ ಮಾಡಬೇಕೆನ್ನುವ ಸನ್ನಾಹವಿದೇನು?" ಎನ್ನುವ ಕಿಡಿನುಡಿಯೊಂದು ನಿವೇದಿತಾಳಿಂದ ಹೊರಬಿತ್ತು. ನಮ್ಮ ದೇಶದ ವೈಶಿಷ್ಟ್ಯಗಳನ್ನು ಪರಕೀಯ ಭಾಷೆಗಳ ಮೂಲಕ ಅರಿಯಲು ಸಾಧ್ಯವಿಲ್ಲ. ಭಾರತೀಯರು ತಮ್ಮ ಮಕ್ಕಳ ಮನಸ್ಸು ಪಕ್ವಗೊಳ್ಳುವ ಮೊದಲೇ ಅದನ್ನು ಪರಕೀಯರಿಗೆ ಮಾರುವಷ್ಟು ಪಾಶ್ಚಾತ್ಯ ದಾಸರಾಗಿದ್ದುದು ಅವಳಿಗೆ ಬೇಸರ ತರಿಸಿತು. ಏತನ್ಮಧ್ಯೆ ನಿವೇದಿತಾ ಕಾಳಿಕಾ ಮಾತೆಯ ಭಕ್ತಳಾದಳು. ಕಾಳಿ ಮಾತೆಯ ಬಗ್ಗೆ ಭಾಷಣ ಮಾಡುತ್ತಾ "ಪ್ರಕೃತಿಯೊಡನೆ ಒಂದಾಗಲು ಹಿಂದುಗಳಲ್ಲಿರುವ ಉತ್ಕಟತೆಯೇ ಕಾಳಿಕಾ ಪೂಜೆ. ಸಮಸ್ತ ಸೃಷ್ಟಿಯೂ ಒಂದೇ ಎನ್ನುವ ಅರಿವು ಇದರಿಂದ ಮೂಡುತ್ತದೆ" ಎಂದಳು. ಇದರಿಂದ ಹಿಂದೂಗಳಿಗೆ ಆಕೆ ತಮ್ಮವಳೆಂಬ ಭಾವ ಮೊಳೆಯಲಾರಂಭಿಸಿತು. ಬಂದ ಒಂದು ವರುಷದೊಳಗೆ ಕಾಳಿಯ ಭಕ್ತೆಯಾದ ನಿವೇದಿತೆಯ ಕಾಳಿಯ ಪೂಜೆ ಕೆಲವು ಬ್ರಹ್ಮಸಮಾಜಿಗಳಿಗೆ ಸರಿಬರಲಿಲ್ಲ. ಅವರಲ್ಲೊಬ್ಬ ಒಂದು ದಿನ "ನೀವು ಮೂರ್ತಿಪೂಜೆ ಮಾಡುವುದಾದರೂ ಅದರಿಂದೇನೂ ಅಡ್ಡಿಯಿಲ್ಲ. ಆದರೆ ಆ ಮಹಾಭಯಾನಕವಾದ ಅಸಹ್ಯ ಹುಟ್ಟಿಸುವ ಕಾಳಿ ಮೂರ್ತಿಯನ್ನೇ ಪೂಜಿಸಬೇಕೇಕೆ?" ಎಂದು ಪ್ರಶ್ನಿಸಿದ. ಅದಕ್ಕೆ ನಿವೇದಿತಾ "ನನಗೆ ಯಾವ ವಿಗ್ರಹದ ಮೇಲೂ ಪ್ರೀತಿಯಿಲ್ಲ. ಆದರೆ ಕಾಳಿ ನನ್ನಲ್ಲಿ ಇರುವ ಪ್ರಮಾಣದಲ್ಲಿ ನಿಮ್ಮಲ್ಲೂ ಇದ್ದಾಳೆ. ಅಂದ ಮೇಲೆ ಅದರಲ್ಲಿ ಅಸಹ್ಯಪಟ್ಟುಕೊಳ್ಳುವುದೇನಿದೆ?" ಎಂದಾಗ ಆತ ಉಸಿರೆತ್ತಲಿಲ್ಲ.

              ಒಂದು ರಾತ್ರಿ ನಿವೇದಿತಾ ಇನ್ನೇನು ಊಟಕ್ಕೆ ಕುಳಿತುಕೊಳ್ಳುವವಳಿದ್ದಳು. ಅಷ್ಟರಲ್ಲಿ ಮಹಿಳೆಯ ರೋದನವೊಂದು ಕೇಳಿತು. ಅದನ್ನನುಸರಿಸಿ ಹೋದ ನಿವೇದಿತೆಗೆ ಸಾವಿನ ಅಂಚಿನಲ್ಲಿದ್ದ ಹೆಣ್ಣುಮಗುವಿನ ಪಕ್ಕದಲ್ಲಿ ಕುಳಿತು ಚಿಕ್ಕವಯಸ್ಸಿನ ಮಹಿಳೆಯೊಬ್ಬಳು  ರೋದಿಸುತ್ತಿದ್ದ ದೃಶ್ಯ ಗೋಚರಿಸಿತು. ನಿವೇದಿತಾ ಆ ತಾಯಿಯ ಪಕ್ಕದಲ್ಲಿ ಹೋಗಿ ಕುಳಿತಳು. ಕುಸಿಯುತ್ತಿದ್ದ ಆಕೆಗೆ ತನ್ನ ತೋಳಲ್ಲಿ ಆಶ್ರಯ ಕೊಟ್ಟಳು. "ನನ್ನ ಮಗಳು...ನನ್ನ ಮಗಳು.." ಎಂದು ಆ ತಾಯಿ ಚೀರಿದಾಗ "ನಿನ್ನ ಮಗುವನ್ನು ಜಗನ್ಮಾತೆ ಎತ್ತಿಕೊಂಡಿದ್ದಾಳೆ...ಸುಮ್ಮನಿರು" ಎಂದು ಸಮಧಾನಿಸಿದಳು. ಈ ಘಟನೆಯ ಬಳಿಕ ಆಕೆಯನ್ನು ತಮ್ಮ ಮನೆಯೊಳಗೆ ಸೇರಿಸಲು ಹಿಂಜರಿಯುತ್ತಿದ್ದವರೂ ಆಕೆಯನ್ನು ತಮ್ಮ ಜೊತೆಯಾಗಿಸಿಕೊಂಡರು. ಏತನ್ಮಧ್ಯೆ ನಿವೇದಿತಾ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನಾರಂಭಿಸಿದಳು. ಆಕೆಯ ಸ್ನೇಹಿತೆಯೊಬ್ಬಳು "ನಾನು ಶಾಲೆಗೆ ಹಣ ನೀಡುತ್ತೇನೆ. ಆದರೆ ಶಾಲೆಯ ಶಿಕ್ಷಣವನ್ನು ಕ್ರೈಸ್ತಪದ್ದತಿಗೆ ಬದಲಿಸಬೇಕು" ಎಂದಾಗ "ನಿನ್ನ ಚಿಕ್ಕಾಸೂ ಬೇಡ. ಕಾಳಿ ದಾರಿ ತೋರುವಳು" ಎನ್ನುತ್ತಾ ಸಿಡಿದಳು. ಶಾಲೆಯಲ್ಲಿ ಪ್ರತಿ ಪುಷ್ಯಮಾಸದಲ್ಲಿ ಸರಸ್ವತಿ ಪೂಜೆ ನೆರವೇರಿಸುತ್ತಿದ್ದಳು. ಸ್ವತಃ ರೇಶ್ಮೆ ಸೀರೆ ಉಟ್ಟು, ಹಣೆಗೆ ಕುಂಕುಮದ ಬೊಟ್ಟಿಟ್ಟು ದೊಡ್ಡದೊಂದು ಮಡಕೆಯಲ್ಲಿ ಸ್ವತಃ ಗಂಗಾಜಲ ತಂದು ಸರಸ್ವತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಳು. ಎರಡು ದಿನದ ಪೂಜೆಯ ಬಳಿಕ ವಿಜೃಂಭಣೆಯಿಂದ ಸರಸ್ವತಿ ವಿಗ್ರಹದ ವಿಸರ್ಜನೆ ನಡೆಯುತ್ತಿತ್ತು. ತನ್ನ ಶಿಷ್ಯೆಯರು ತಯಾರಿಸಿದ ಸ್ವದೇಶೀ ವಸ್ತುಗಳನ್ನು ಪ್ರದರ್ಶನಗಳಿಗೆ ಕಳುಹಿಕೊಡುತ್ತಿದ್ದಳು. 1906ರಲ್ಲಿ ಕಲಕತ್ತೆಯ ಕಾಂಗ್ರೆಸ್ ಅಧಿವೇಶನದಲ್ಲಿ ನಿವೇದಿತೆ ಪ್ರದರ್ಶಿಸಿದ ವಜ್ರದ ಸಂಕೇತ, ವಂದೇಮಾತರಂ ಘೋಷವಾಕ್ಯವಿದ್ದ ರಾಷ್ಟ್ರಧ್ವಜ ಅವಳು ತನ್ನ ಶಿಷ್ಯೆಯರಿಂದ ತಯಾರಿಸಿದ್ದೇ! 1899ರಲ್ಲಿ ಕಲ್ಕತ್ತಾ ನಗರ ಪ್ಲೇಗಿಗೆ ಬಲಿಯಾದಾಗ ಕಾಲಿಗೆ ಚಕ್ರ ಕಟ್ಟಿಕೊಂಡು ರೋಗಿಗಳ ಶುಶ್ರೂಷೆಗೆ ತೊಡಗಿದಳು. ತಾತ್ಕಾಲಿಕ ಔಷಧಾಲಯವನ್ನೂ ತೆರೆದಳು. ಕೈಯಲ್ಲಿ ಪೊರಕೆ ಹಿಡಿದು ಬೀದಿಯನ್ನೆಲ್ಲಾ ಸ್ವಚ್ಛಗೊಳಿಸಿದಳು. ಕಸದ ರಾಶಿಗಳ ಮೇಲೆ ಕ್ರಿಮಿನಾಶಕಗಳನ್ನೂ ಸ್ವತಃ ಹಾಕುತ್ತಿದ್ದಳು.

             ಸ್ವಾಮಿ ವಿವೇಕಾನಂದರ ಪ್ರಕಾರ ಹಿಂದೂಸ್ಥಾನಕ್ಕಾಗಿ ಕೆಲಸ ಮಾಡುವ ವ್ಯಕ್ತಿ ಹಿಂದೂವೇ ಆಗಬೇಕು. ಹಿಂದೂ ಪದ್ದತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಚಾರ-ವಿಚಾರ, ಆಹಾರ-ವಿಹಾರ ಯೋಚನೆ-ಯಾಚನೆಗಳೆಲ್ಲದರಲ್ಲೂ ಹಿಂದೂ ದೃಷ್ಟಿಯಿರಬೇಕು. "ನಿನ್ನ ಯೋಚನೆ, ಅವಶ್ಯಕತೆ, ಕಲ್ಪನೆ, ನಡತೆ ಎಲ್ಲವೂ ಹಿಂದುತ್ವದಿಂದ ಓತಪ್ರೋತವಾಗಬೇಕು. ನಿನ್ನ ಜೀವನದ ಒಳಗು-ಹೊರಗುಗಳೆಲ್ಲಾ ಸಂಪ್ರದಾಯನಿಷ್ಠ ಬ್ರಾಹ್ಮಣ ಬ್ರಹ್ಮಚಾರಿಯ ಬಾಳಿನಂತೆಯೇ ಆಗಬೇಕು. ನಿನ್ನಲ್ಲಿ ಉತ್ಕಟ ಹಂಬಲವಿದ್ದಲ್ಲಿ ಅದಕ್ಕೆ ಬೇಕಾದ ದಾರಿ ತಾನಾಗಿ ಗೋಚರವಾಗುತ್ತವೆ. ಅದಕ್ಕಾಗಿ ನೀನು ನಿನ್ನ ಭೂತಕಾಲವನ್ನು ಮರೆಯಬೇಕು. ಅದರ ಕಿಂಚಿತ್ತೂ ನೆನಪು ನಿನ್ನಲ್ಲಿ ಉಳಿಯಬಾರದು" ಎಂದಿದ್ದರು ವಿವೇಕಾನಂದರು. ಪ್ರಲೋಭನೆಗಳನ್ನು ಹತ್ತಿರ ಸುಳಿಯಲು ಬಿಡಬೇಡ ಎಂದಿದ್ದರವರು. ಈ ಎಲ್ಲವನ್ನೂ ಅಕ್ಷರಶಃ ಪಾಲಿಸಿದಳು ನಿವೇದಿತಾ. 1901ರಲ್ಲಿ ಆಕೆ ಇಂಗ್ಲೆಂಡಿಗೆ ಹೋದಾಗ ಅವಳ ಭಾಷಣಗಳಿಗೆ ಜನ ಇರುವೆಗಳಂತೆ ಮುತ್ತತೊಡಗಿದರು. ಅವಳ ವಾಣಿಯಲ್ಲಿ ಮೊಳಗುತ್ತಿದ್ದ ಭಾರತದ ಮಹೋಜ್ವಲ ಜನಜೀವನ ಬೆಳಕಿನ ಮುಂದೆ ಮಿಷನರಿಗಳು ವರ್ಣಿಸುತ್ತಿದ್ದ ಅನಾಗರಿಕ ಭಾರತದ ಚಿತ್ರ ತಲೆಕೆಳಗಾಯಿತು.

             1902 ಜುಲೈ 5ರಂದು ವಿವೇಕಾನಂದರೇ ನಿರ್ದೇಶಿಸಿದ್ದ ಗಂಗಾತೀರದ ಬಿಲ್ವವೃಕ್ಷದಡಿಯಲ್ಲಿ ಚಿತೆ ಸಿದ್ಧವಾಗಿತ್ತು. ಮೂಕಳಾಗಿ ಕೂತಿದ್ದ ನಿವೇದಿತೆ ಇನ್ನೇನು ಚಿತೆಗೆ ಬೆಂಕಿ ಸೋಕಿಸಬೇಕು ಅನ್ನುವಾಗ "ಅವರು ಕೊನೆಯಲ್ಲಿ ಹಾಕಿಕೊಂಡಿದ್ದ ಬಟ್ಟೆ ಅದು. ಅದನ್ನೂ ಸುಟ್ಟು ಬಿಡುತ್ತೀರಾ" ಎಂದು ಪಕ್ಕದಲ್ಲಿದ್ದ ಸ್ವಾಮಿ ಸದಾನಂದರನ್ನು ಕೇಳಿದಳು. ಸದಾನಂದರು ತೆಗೆದುಕೊಡಲೇ ಎಂದಾಗ ಅಷ್ಟು ಜನರೆದುರಿಗೆ ಅದನ್ನು ತೆಗೆಯುವುದು ಉಚಿತವಲ್ಲವೆನಿಸಿ ಸುಮ್ಮನಾದಳು. ಸಂಜೆಯ ಮಬ್ಬಿನಲ್ಲಿ ಯಾರೋ ಅವಳನ್ನು ಹಿಡಿದೆಳೆದಂತಾಯಿತು. ಹಿಂತಿರುಗಿ ನೋಡಿದಾಗ ಧಗಧಗಿಸುತ್ತಿದ್ದ ಚಿತೆಯಿಂದ ಬಟ್ಟೆಯ ಚೂರೊಂದು ಹಾರಿಬಂದು ಬಿದ್ದಿತ್ತು. ಅವಳು ಆಸೆಪಟ್ಟು ನೋಡುತ್ತಿದ್ದ ಬಟ್ಟೆಯ ಚೂರು! ಗುರುವಿನ ಜೀವನಾದರ್ಶಗಳ ಪ್ರೇರಣೆ ನೀಡುವ ಸ್ಮೃತಿಚಿಹ್ನೆ. ತನ್ನ ಪ್ರಖರ ಚಟುವಟಿಕೆ ಮಠದ ಪ್ರಶಾಂತ ವಾತಾವರಣಕ್ಕೆ ಧಕ್ಕೆ ತರಬಾರದೆಂಬ ಉದ್ದೇಶದಿಂದ ರಾಷ್ಟ್ರೀಯ ವಿಚಾರಧಾರೆಯ ಮೂಲಕ ರಾಷ್ಟ್ರಜಾಗೃತಿ ನಿರ್ಮಿಸಲು ಸ್ವತಂತ್ರಳಾಗಿ ಹೊರಬಿದ್ದಳು.

              ಬ್ರಿಟಿಷರಿಂದ ಭಾರತ ಒಂದಾಯಿತು ಎನ್ನುವವರಿಗೆ 1902ರಲ್ಲಿ ನಿವೇದಿತಾ ಮದರಾಸಿನಲ್ಲಿ ಮಾಡಿದ ಭಾಷಣ ಉತ್ತರವೀಯುತ್ತದೆ.
"ಹಿಂದೂಸ್ಥಾನದ ಏಕತೆ ಮೂಲಭೂತವಾದುದು. ಶಕ್ತಿಪೂರ್ಣವಾದುದು. ಉಜ್ವಲ ಭವಿತವ್ಯವೂ ಅದಕ್ಕಿದೆ. ಮೂಲಭೂತ ಏಕತೆ ಇಲ್ಲ ಎನ್ನುವುದಾದರೆ ಹೊರಗಿನವರಾರೂ ಅದನ್ನು ತಂದುಕೊಡಲಾರರು. ನಮ್ಮ ಮೂಲಭೂತ ಏಕತೆ ಹೊರಗಿನವರಾರೂ ನಮಗೆ ಕಲಿಸಿಕೊಟ್ಟದ್ದಲ್ಲ. ಸಮಾನ ಪರಂಪರೆ, ಸಮಾನ ಪರಿಶ್ರಮ, ಸಮಾನ ಆಸೆ ಆಕಾಂಕ್ಷೆಗಳ ಆಧಾರದ ಮೇಲೆ ಈ ರಾಷ್ಟ್ರ ಮತ್ತೆ ಭವ್ಯ ಭವಿತವ್ಯವನ್ನು ಪಡೆಯಲಿದೆ." ಭಾರತೀಯ ಮುಸ್ಲಿಮರು ನಿವೇದಿತಾಳ ಮಾತನ್ನು ಅರ್ಥೈಸಿಕೊಳ್ಳಬೇಕು. "ಮನಸಿನಲ್ಲಿ ಅರಬಿಸ್ತಾನದ ಕನಸು ಕಾಣುತ್ತಾ ಕೂರುವುದು ಹಿಂದೂಸ್ಥಾನದ ಮುಸಲ್ಮಾನರ ಕರ್ತವ್ಯವಾಗಬಾರದು. ಹಿಂದೂಸ್ಥಾನದ ಜೊತೆ ನಿಮ್ಮ ಸಂಬಂಧ ಜೋಡಿಸಿಕೊಳ್ಳುವುದು ನಿಮ್ಮ ಕರ್ತವ್ಯ. ಭಾರತದ ಜೊತೆ ನಿಮಗೆ ರಕ್ತಸಂಬಂಧವಿದೆ. ಇಲ್ಲಿರುವ ಜನರ ಔದಾರ್ಯದಿಂದ ಇದು ನಿಮ್ಮೆಲ್ಲರ ಮನೆಯಾಗಿದೆ. ಅಂದ ಮೇಲೆ ನೀವು ಇಲ್ಲಿನ ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಒಂದಾಗಲೇಬೇಕು."

            ಜಗದೀಶ ಚಂದ್ರ ಬೋಸರ ಸಂಶೋಧನೆಗೆ, ಪುಸ್ತಕಗಳ ಪ್ರಕಟಣೆಗೆ ನೆರವು ನೀಡಿದ್ದು ನಿವೇದಿತಾಳೇ. ನನ್ನ ಸಂಶೋಧನೆಯಲ್ಲಿ ಅತೀ ಹೆಚ್ಚು ನೆರವಾದ ದೇವತೆ ಎಂದರೆ ನಿವೇದಿತೆ ಎಂದಿದ್ದಾರೆ ಜಗದೀಶರು. ಪಾಶ್ಚಾತ್ಯಪ್ರಭಾವಕ್ಕೊಳಗಾದ ಅವನೀಂದ್ರರ ಕಲಾ ಪ್ರತಿಭೆಯನ್ನು ಶುದ್ಧ ಭಾರತೀಯ ಶೈಲಿಗೆ ಬದಲಾಯಿಸಿದ ಕೀರ್ತಿ ನಿವೇದಿತಾಳದ್ದು. ರಮಾನಂದ ಚಟರ್ಜಿಯವರಿಗೆ ಇಂಗ್ಲೀಷ್ ಮಾಸಪತ್ರಿಕೆ ಹೊರಡಿಸಲೂ ಪ್ರೇರಣೆಯಾದಳು. ಸ್ವದೇಶೀ ವಸ್ತುಗಳನ್ನು ಸ್ವತಃ ಕೈಗಾಡಿಯಲ್ಲಿ ತುಂಬಿಕೊಂಡು ಮನೆಮನೆಗೆ ಮಾರಿದಳು. ಕರ್ಜನನ ಭಾರತ ವಿರೋಧಿ ಭಾಷಣವನ್ನು ಹಾಗೂ ಅದನ್ನು ಬಾಯಿಚಪ್ಪರಿಸಿಕೊಂಡು ಕೇಳಿದ ಭಾರತೀಯರನ್ನು ವ್ಯಂಗ್ಯಭರಿತ ಲೇಖನದಿಂದ ಚುಚ್ಚಿದಳು. ಬರೋಡಾದಲ್ಲಿದ್ದ ಅರವಿಂದರನ್ನು ಬಂಗಾಳಕ್ಕೆ ಬಂದು ರಾಷ್ಟ್ರೀಯ ಚಳುವಳಿಯ ನಾಯಕತ್ವ ವಹಿಸಲು ಕೇಳಿಕೊಂಡಳು. ಭಾರತೀಯರ ಚಿತ್ರಕಾರರಿಗೆ ಧ್ಯಾನ ಮಾಡಿ ಚಿತ್ರ ರಚಿಸುವಂತೆ ಪ್ರೇರೇಪಿಸುತ್ತಿದ್ದಳು. ಹಳ್ಳಿಹಳ್ಳಿಗೂ ಹೋಗಿ ರೈತರೊಂದಿಗೆ ಬೆರೆಯುತ್ತಿದ್ದಳು. ಸಮಾಜದ ಎಲ್ಲಾ ಸ್ತರಗಳ ಜನರ ಪ್ರೀತಿಯನ್ನು ಗಳಿಸಿದ್ದಳು.

                ಯುಗಾಂತರ ಪತ್ರಿಕೆಯ ಕಛೇರಿಗೆ ಮುತ್ತಿಗೆ ಹಾಕಿ ವಿವೇಕಾನಂದರ ತಮ್ಮ ಭೂಪೇಂದ್ರನನ್ನು ಬಂಧಿಸಿದಾಗ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಇಪ್ಪತ್ತುಸಾವಿರ ರೂಪಾಯಿ ಕೇಳಿತು. ನಿವೇದಿತೆ ತಕ್ಷಣ ಅಷ್ಟೂ ಹಣವನ್ನೂ ಕೊಟ್ಟು ಭೂಪೇಂದ್ರನನ್ನು ಬಿಡಿಸಿಕೊಂಡು ಬಂದಳು. ನಿಬ್ಬೆರಗಾದ ಜನ ಸಮೂಹ "ಭಗಿನಿ ನಿವೇದಿತಾ" "ಭಗಿನಿ ನಿವೇದಿತಾ" ಎಂದು ಉದ್ಗರಿಸಿತು. ಅವಳು ಛಾಪೇಕರ್ ಸಹೋದರರ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದದ್ದು ಈ ಅವಧಿಯಲ್ಲೇ. ಪಾಶ್ಚಾತ್ಯ ಸಾಹಿತ್ಯಕ್ಕೆ ಬದಲಾಗಿ ಉನ್ನತಿಗೊಯ್ಯುವ ಶಕ್ತಿಯಿರುವ ಪೌರ್ವಾತ್ಯ ವಾಞಯವನ್ನು ಓದಬೇಕೆಂದು ಭಾರತೀಯರನ್ನು ಪ್ರೇರೇಪಿಸುತ್ತಿದ್ದಳು. ಪ್ರಾಚೀನ ಭಾರತೀಯ ಗೃಹಜೀವನದ ಸರಳತೆ, ಪರಿಶುದ್ಧತೆ ಹಾಗೂ ಘನತೆಗಳನ್ನು ಅಳವಡಿಸಿಕೊಳ್ಳಲು ಗೋಗರೆಯುತ್ತಿದ್ದಳು. ಪಶ್ಚಿಮದ ಬೆಡಗು, ದುಂದುಗಾರಿಕೆ ಹಾಗೂ ಶಿಕ್ಷಣ ಭಾರತೀಯ ನಡವಳಿಕೆ, ರೀತಿ-ನೀತಿಗಳನ್ನು ಹಾಳುಗೆಡವದಂತೆ ಎಚ್ಚರವಹಿಸಿ ಎನ್ನುತ್ತಿದ್ದಳು. ಸಮಾರಂಭವೊಂದರ ಬಹುಮಾನ ವಿತರಣೆಗೆ ಅತಿಥಿಯಾಗಿ ಹೋದ ಆಕೆಗೆ ಅದು ಕ್ರಿಕೆಟ್ ಆಟಗಾರರಿಗೆ ಎಂದು ತಿಳಿದಾಗ ಭೋಂಸ್ಲೆ ರಾಜರ ರಾಜಧಾನಿಯಲ್ಲಿ ಮರಾಠರ ಶೌರ್ಯ ಸಾಹಸ್ಗಳ ಪ್ರದರ್ಶನವಿರಬಹುದೆಂಬ ಆಸೆಯಿಂದ ಬಂದರೆ ಭವಾನಿಯ ಖಡ್ಗವನ್ನೂ ಮರೆತೂ ಪರಕೀಯರ ಆಟಗಳನ್ನು ಪ್ರೋತ್ಸಾಹಿಸುವ ನಿಮಗೆ ನಾಚಿಕೆಯಾಗಬೇಕೆಂದು ಉಗಿದು ಬಂದಿದ್ದಳು. ಪೂರ್ವಬಂಗಾಳ ಪ್ರವಾಹದುರಿಯಲ್ಲಿ ಸಿಲುಕಿದಾಗ ಜೀವ ಸವೆಸಿ ಸೇವೆ ಮಾಡಿದಳು. ಶವಗಳಿಗೂ ಚೈತನ್ಯವೆರೆದು ನಿದ್ರಿಸುತ್ತಿದ್ದ ಜನಾಂಗಕ್ಕೆ ಆತ್ಮಗೌರವ ಕಲಿಸಿಕೊಟ್ಟ ಸ್ವದೇಶಪ್ರೇಮ ದೀಕ್ಷೆಯ ದೇವಾಲಯವದು. ಬೇಡುವುದಲ್ಲ, ಸಾಮೂಹಿಕ ಕ್ರಾಂತಿಯಾಗಬೇಕು; ಪ್ರಾಣಾರ್ಪಣೆಯ ಇಚ್ಛೆ ಪ್ರಕಟಗೊಳ್ಳಬೇಕು ಎಂದು ಹಿಂದೂಸ್ಥಾನವನ್ನು ಬಡಿದೆಬ್ಬಿಸಿದ ಅಗ್ನಿಶಿಖೆಯದು. ಕೈಯಲ್ಲಿ ರುದ್ರಾಕ್ಷಿಯ ಮಾಲೆ ತಿರುಗುತ್ತಿತ್ತು. ಆತ್ಮದೀಪದ ಹೊನ್ನರಶ್ಮಿ ಕಣ್ಣುಗಳಲ್ಲೊಮ್ಮೆ ಮಿಂಚಿತು. ಕೀರ್ತಿ, ಭೋಗಗಳಿಂದ ಮೈಮರೆಯದ ಆ ಜೀವ ನಿರಂತರ ಸೂರ್ಯೋದಯವನ್ನು ಕಾಣಲು ಅಮರವಾಯಿತು.

ಗುರುವಾರ, ಅಕ್ಟೋಬರ್ 27, 2016

ದೇವರ ನಾಡಿನಲ್ಲಿ ರಕ್ತ ತೊಟ್ಟಿಕ್ಕುತ್ತಲೇ ಇದೆ.....

ದೇವರ ನಾಡಿನಲ್ಲಿ ರಕ್ತ ತೊಟ್ಟಿಕ್ಕುತ್ತಲೇ ಇದೆ.....


                   ದೇವರ ನಾಡು.
ಹೀಗಂದೊಡನೆ ತಿಳಿದವರಿಂದ ನಿಡಿದಾದ ಉಸಿರೊಂದು ಹೊರ ಬೀಳುತ್ತದೆ. ಅಲ್ಲಿ ಹಸಿರ ಸಿರಿಯಿಂದ ತುಂಬಿ ತುಳುಕುವ ವನದೊಳಗಿನ ಮರಗಳಿಂದ ರಕ್ತ ತೊಟ್ಟಿಕ್ಕುತ್ತಲೇ ಇದೆ. ಮಳೆಗಾಲದಲ್ಲೂ, ಬಿರುಬಿಸಿಲಿನಲ್ಲೂ ಅಲ್ಲಿಯ ನದಿಗಳಲ್ಲಿ ಹರಿಯುವ ನೀರು ಕಡುಗೆಂಪೇ! ದುಷ್ಟರ ಚೆಂಡಾಡಿದ ತಾಯಿ ಭಗವತಿ, ಕ್ಷಾತ್ರಧರ್ಮವನ್ನು ಪುನರುಜ್ಜೀವಿಸಿದ ಶ್ರೀಕೃಷ್ಣ ಅಲ್ಲಿ ಮೂಕ ಪ್ರೇಕ್ಷಕರು. ಮಾನವರೆಲ್ಲಾ ಒಂದೇ ಎಂದ ಅಯ್ಯಪ್ಪನ ನಾಡಿನಲ್ಲಿ ಮಾನವರನ್ಯಾರನ್ನೂ ಬದುಕಗೊಡುತ್ತಿಲ್ಲ. ಒಂದೆಡೆ ಜಿಹಾದಿನ ಅಬ್ಬರ ಇನ್ನೊಂದೆಡೆ ಕೆಂಪು ಉಗ್ರರ ಅಟ್ಟಹಾಸಗಳ ನಡುವೆ ಹಿಂದೂಗಳ ಬದುಕು ದುರ್ಭರ. ಇನ್ನೆಲ್ಲಿಯ ದೇವರ ನಾಡು...ಅದೀಗ ದೆವ್ವಗಳ ಬೀಡು, ನರ ರಾಕ್ಷಸರ ತಾಣ. ಈಗಂತೂ ಅವರದ್ದೇ ಆಳ್ವಿಕೆ...ಈಗೇನೂ ಹಿಂದಾದರೂ ಅವರದ್ದೇ ಕಾರ್ಯಭಾರವಲ್ಲವೇ!

               ಕೇರಳದ ಈ ರಕ್ತಸಿಕ್ತ ಅಧ್ಯಾಯ ಇಂದು ನಿನ್ನೆಯದಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ತಮ್ಮ ತತ್ವಗಳಿಗೆ ಗಿರಾಕಿಗಳೇ ಸಿಗದಿದ್ದಾಗ ತಲವಾರು, ಮಚ್ಚು ಹಿಡಿದು ಮಾರ ಹೊರಟಿತು ಕೆಂಪು ಪಡೆ. ಕಣ್ಣೂರಿನಲ್ಲಿ ಸಂಘದ ಮೊದಲ ಶಾಖೆ ಆರಂಭವಾದದ್ದು 1943ರಲ್ಲಿ. ಇಪ್ಪತ್ತೈದು ವರ್ಷಗಳ ಕಾಲ ಸಂಘಟನೆ ನಿರಾತಂಕದಿಂದ ಮುನ್ನಡೆಯಿತು. ಈ ಅವಧಿಯಲ್ಲಿ ಅನೇಕ ಕಮ್ಯೂನಿಷ್ಟ್ ಕಾರ್ಯಕರ್ತರೂ ಸಂಘದ ತತ್ವಗಳಿಂದ ಆಕರ್ಷಿತರಾಗಿ ಸಂಘದ ಕಾರ್ಯಕರ್ತರಾದರು. ದಿನೇ ದಿನೇ ಬಲ ವೃದ್ಧಿಸಿಕೊಳ್ಳುತ್ತಿದ್ದ ಕೇಸರಿ ಪಡೆಯ ಉತ್ಕರ್ಷ ಕೆಂಪು ಉಗ್ರರ ಕಣ್ಣು ಕೆಂಪಗಾಗಿಸಿತ್ತು. ಆಗ ಆರಂಭವಾದದ್ದೇ ಕೇರಳದ ರಕ್ತಚರಿತೆ! ತಮ್ಮ ಪಿತಾಮಹರುಗಳಾದ ಸ್ಟಾಲಿನ್, ಮಾವೋತ್ಸೆತುಂಗರ ಕ್ರೌರ್ಯದ ದಿನಚರಿಯನ್ನೇ ಕಾರ್ಯಗತಗೊಳಿಸಿತು ಕಮ್ಯೂನಿಷ್ಟ್ ಪಡೆ. ವಡಿಕ್ಕಲ್ ರಾಮಕೃಷ್ಣನ್ ತಲಶ್ಶೇರಿ ಶಾಖೆಯ ಮುಖ್ಯ ಶಿಕ್ಷಕರಾಗಿದ್ದರು. ಒಂದು ರಾತ್ರಿ ತಮ್ಮ ಹೊಲಿಗೆ ಅಂಗಡಿಯನ್ನು ಮುಚ್ಚಿ ಅವರು ಮನೆಗೆ ತೆರಳುತ್ತಿದ್ದಾಗ ಸುತ್ತುವರಿದ ಕಮ್ಯೂನಿಷ್ಟರು ಅವರನ್ನು ಸಾಯಬಡಿದರು.  ಈ ಕೊಲೆಯ ರೂವಾರಿ ಇಂದು ಮುಖ್ಯಮಂತ್ರಿಯಾಗಿ ಮೆರೆಯುತ್ತಿರುವ ಪಿಣರಾಯಿ ವಿಜಯನ್. ರಾಮಕೃಷ್ಣನ್ ಕಮ್ಯುನಿಸ್ಟರ ವ್ಯಾಖ್ಯೆಯ ರೀತಿಯ ಯಾವುದೇ ಬಂಡವಾಳಶಾಹಿ ಆಗಿರಲಿಲ್ಲ. ಅತೀ ಸಾಮಾನ್ಯ ಜೀವನ ಸಾಗಿಸುತ್ತಿದ್ದ ಆತ ಸಂಘಕ್ಕೆ ಸೇರುವ ಮುನ್ನ ಕಮ್ಯೂನಿಷ್ಟ್ ಪಾಳೆಯದಲ್ಲೇ ಇದ್ದವರು. ಕೆಲದಿನಗಳ ಹಿಂದಷ್ಟೇ ಅವರಿಗೆ ಮದುವೆಯಾಗಿತ್ತು. ಕಮ್ಯೂನಿಷ್ಟರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೋರ್ವ ಸ್ವಯಂಸೇವಕನ ಆರೋಗ್ಯ ವಿಚಾರಿಸಲು ಹೋಗುತ್ತಿದ್ದ ಸ್ವಯಂಸೇವಕ ಕರಿಂಬಿಲ್ ಸತೀಶನ್ ಅವರನ್ನು ಕಮ್ಯೂನಿಷ್ಟರ ಇನ್ನೊಬ್ಬ ನೇತಾರ ಕೊಡಿಯೇರಿ ಬಾಲಕೃಷ್ಣನ್ ಹತ್ಯೆಗೈದ. ಇವರಿಬ್ಬರೂ ಇಂದು ಕೇರಳ ಕಮ್ಯೂನಿಷ್ಟ್ ಪಕ್ಷದ ವರಿಷ್ಠ ನಾಯಕರು. ಇವರು ತೋರಿದ ಪಥದಲ್ಲೇ ಸಾಗುತ್ತಿದೆ ಕೆಂಪು ಉಗ್ರರ ಪಡೆ! ಅಂದಿನಿಂದ ಸರಣಿಯಾಗಿ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಕಮ್ಯೂನಿಸ್ಟ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

        ಕಣ್ಣೂರಿನಲ್ಲೇ ಕಮ್ಯುನಿಷ್ಟ್ ಹಿಂಸೆ ಯಾಕೆ ತೀವ್ರವಾಗಿದೆ ಎಂದರೆ, ಎಡಪಕ್ಷಗಳು ಅದನ್ನು ಕಮ್ಯುನಿಸಂನ ತೊಟ್ಟಿಲು ಎಂದೇ ಪರಿಗಣಿಸುತ್ತವೆ. 1940ರಲ್ಲಿ ಕಣ್ಣೂರಿನ ಪಿಣರಾಯಿಯಲ್ಲೇ ಕಮ್ಯುನಿಸ್ಟ್ ಪಕ್ಷ ಪ್ರಾರಂಭವಾಯಿತು. ಆರಂಭದಲ್ಲಿ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ ತಮಗಿಂತಲೂ ವೃದ್ಧಿಯಾಗಬಹುದು ಎಂದು ಅಂದುಕೊಂಡಿರಲಿಲ್ಲ. ನಾಗ್ಪುರದಲ್ಲಿ ಶುರುವಾದ ಸಂಘಟನೆ ತಮ್ಮ ನೆಲದಲ್ಲಿ ಬೆಳೆಯಲಾರದು ಎಂದೇ ನಿರ್ಲಕ್ಷಿಸಿದರು. ಆದರೆ, ಸಂಘ ಬಲಗೊಳ್ಳತೊಡಗಿತು. ತಮ್ಮ ತೊಟ್ಟಿಲಾದ ಕಣ್ಣೂರಿನಲ್ಲಿ ಸಿಪಿಎಂ ಹಿಮ್ಮೆಟ್ಟಿದ್ದೇ ಆದರೆ ಉಳಿದೆಡೆ ಅದರ ಪತನ ನಿಶ್ಚಯವೆಂದೇ ಕಮ್ಯುನಿಸ್ಟರು ಹಿಂಸೆ- ಹತ್ಯೆಗಳ ಮೂಲಕ ತಮಗಾಗದ ಸಿದ್ಧಾಂತದವರನ್ನು ಇಲ್ಲವಾಗಿಸಲು ಪ್ರಾರಂಭಿಸಿದರು.

                   ಶಿಕ್ಷಕರಾಗಿದ್ದ ಸದಾನಂದ ಮಾಸ್ಟರರ ತಂದೆ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ಈಗ ಡಿವೈಎಸ್ಎಫ್ ಎಂದು ಕರೆಸಿಕೊಳ್ಳುತ್ತಿರುವ ಆಗಿನ ಕಮ್ಯುನಿಸ್ಟ್ ಸಂಘಟನೆ ಕೆಎಸ್ ವೈಎಫ್ ನಲ್ಲಿ ಸದಾನಂದರ ಇಬ್ಬರು ಸಹೋದರರೂ ಇದ್ದರು. ಇಂಥ ವಾತಾವರಣದಲ್ಲಿ ಬೆಳೆದ ಸದಾನಂದರೂ ಸಹಜವಾಗಿ ಕಮ್ಯುನಿಷ್ಟ್ ಪಕ್ಷವನ್ನು ಸೇರಿಕೊಂಡರು. ಎಸ್ಎಫ್ಐ ಎಂಬ ಕಮ್ಯುನಿಸ್ಟ್ ವಿದ್ಯಾರ್ಥಿ ಕೂಟದ ಸದಸ್ಯನೂ ಆದರು. "ಆ ಸಂದರ್ಭದಲ್ಲೇ ನಮಗೆ ಕಾಲೇಜು ಚುನಾವಣೆಗಳ ವೇಳೆ ಎಬಿವಿಪಿ ಸದಸ್ಯರ ವಿರುದ್ಧ ಕಲ್ಲು ತೂರಬೇಕೆಂಬ ನಿರ್ದೇಶನಗಳನ್ನು ನೀಡಲಾಗುತ್ತಿತ್ತು" ಎಂದಿದ್ದಾರೆ ಸದಾನಂದ ಮಾಸ್ಟರ್. ಆದರೆ ಪ್ರಬುದ್ಧರಾಗುತ್ತಿದ್ದಂತೆ ಸದಾನಂದರಿಗೆ ಸಂಘದ ಬಗ್ಗೆ ತಿಳಿಯುವ ಕುತೂಹಲ ಉಂಟಾಯಿತು. ರಕ್ಷಾಬಂಧನದ ಪ್ರಯುಕ್ತ ಬೌದ್ಧಿಕ ಭಾಷಣವನ್ನು ಕೇಳಿದಾಗ, ಸಮಾಜ ನಿರ್ಮಾಣಕ್ಕೆ ಇದೇ ಸರಿ ಎನ್ನಿಸಿತು. ಸಂಘದ ಕೇಸರಿ ಪತ್ರಿಕೆಗೆ ಚಂದಾದಾರನೂ ಆದರು. ಹೀಗೆ ಶಾಖೆಗೆ ಬಂದರು ಮಾಸ್ಟರ್. ಯಾವಾಗ ಅವರು ಸಂಘ ಸೇರುವ ನಿರ್ಧಾರ ತೆಗೆದುಕೊಂಡರೋ ಆಗ ಅವರ ಸಹವರ್ತಿಗಳಿಗೆ ಆಘಾತವಾಯಿತು. ಕುಟುಂಬದ ಸದಸ್ಯರೆಲ್ಲ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರುವಾಗ ಅವರಲ್ಲೊಬ್ಬ ಸಂಘವನ್ನು ಸೇರಿಕೊಳ್ಳುವುದನ್ನು ಅವರು ಹೇಗೆ ಸಹಿಸಿಯಾರು? ದೊಡ್ಡ ದೊಡ್ಡ ಗುಂಪುಗಳಲ್ಲಿ ಮನೆಗೆ ಬಂದ ಕಮ್ಯುನಿಸ್ಟ್ ಕಾರ್ಯಕರ್ತರು ಮೊದಲಿಗೆ ಪ್ರೀತಿಯಿಂದಲೇ ಉಪದೇಶ ಕೊಟ್ಟರು. ಸಂಘ ಒಂದು ಫ್ಯಾಸಿಸ್ಟ್ ಸಂಘಟನೆ ಎಂದು ಎಚ್ಚರಿಸಿದರು! ಇದಕ್ಕೆ ಒಪ್ಪದಿದ್ದಾಗ ಶಿಕ್ಷಿಸುವ ನಿರ್ಧಾರ ತೆಗೆದುಕೊಂಡರು. ಕೇರಳದಲ್ಲಿ ‘ಪಾರ್ಟಿ ವಿಲೇಜ್’ ಎಂದು ಕರೆಸಿಕೊಳ್ಳುವ ಹಲವು ಹಳ್ಳಿಗಳಿವೆ. ಇವೆಲ್ಲವೂ ಕಮ್ಯುನಿಸ್ಟರ ನಿಯಂತ್ರಣದಲ್ಲಿರುವ ಹಳ್ಳಿಗಳಾದುದರಿಂದ ಆ ಹೆಸರು. ಪಾರ್ಟಿ ವಿಲೇಜ್ ಗಳ ಮುಖ್ಯ ಲಕ್ಷಣ ಎಂದರೆ ಅಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ಆಗಿರುವುದಿಲ್ಲ. ರಸ್ತೆ- ಮೂಲಸೌಕರ್ಯಗಳನ್ನು ರಹಿತವಾಗಿಸಿ ಯಾರೂ ಅತ್ತ ಹೋಗದಂತೆ ಕಾಪಾಡಿಕೊಳ್ಳಲಾಗುತ್ತದೆ. ವಿದ್ಯುತ್ ಇರುವುದೇ ಅಪರೂಪ. ಇದ್ದರೂ ಸಂಜೆಯ ನಂತರ ಸ್ಥಗಿತ. ಕಮ್ಯುನಿಸ್ಟ್ ಪಾರ್ಟಿ ವಿಲೇಜ್ ಜತೆಗೆ ಪಾರ್ಟಿ ಕೋರ್ಟುಗಳೂ ಕೇರಳದಲ್ಲಿವೆ. ಸದಾನಂದ ಮಾಸ್ಟರ್ ಅವರ ಕಾಲು ಕತ್ತರಿಸುವ ನಿರ್ಧಾರವಾಗಿದ್ದು ಇಂಥದೇ ಕೋರ್ಟಿನಲ್ಲಿ. ಯಾವಾಗ ಅವರು ಉಪದೇಶದ ಮಾತುಗಳಿಗೆ ಮಣಿಯುವುದಿಲ್ಲ ಎಂದಾಯಿತೋ, ಆಗಲೇ ಇವರನ್ನು ಪಾರ್ಟಿ ಕೋರ್ಟಿಗೆ ಕರೆತರಲಾಯಿತು. ಅಲ್ಲಿನ ಚರ್ಚೆಯಲ್ಲಿ ಕಮ್ಯುನಿಸ್ಟ್ ಸದಸ್ಯರು ಸದಾನಂದ ಮಾಸ್ಟರಿಗೆ ಮರಣದಂಡನೆ ಆಗಬೇಕು ಅಂತಲೇ ಕೇಳಿದರು. ಆದರೆ, ನಂತರ ಉಳಿದವರಿಗೆ ಭಯ ಹುಟ್ಟಲು ಕಾರಣವಾಗಲಿ ಎಂಬ ಕಾರಣಕ್ಕೆ ಕಾಲು ಕತ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದೇನೂ ಆಕ್ರೋಶದ ಭರದಲ್ಲಿ ಮಾಡಿದ ಕಾರ್ಯವಲ್ಲ. ಯಾರು ಕಾಲು ಕತ್ತರಿಸಬೇಕು, ಯಾರು ಇವರನ್ನು ಹಿಡಿದುಕೊಳ್ಳಬೇಕು, ಯಾರ್ಯಾರು ಮಣ್ಣು-ಸಗಣಿ ಮೆತ್ತಬೇಕು ಎಂಬುದೆಲ್ಲ ಯೋಜನಾಬದ್ಧವಾಗಿ ಸಿದ್ಧಗೊಂಡಿತು. ಸದಾನಂದ ಮಾಸ್ಟರ್ ಮೇಲೆ ಹಲ್ಲೆಯ ದಿನ ವಿದ್ಯುತ್ ತೆಗೆಯಲಾಯಿತು. ಎಲ್ಲಾ ಭೀಬತ್ಸದ ವಿವರಗಳು ಇರುವಂತೆ ಹಲ್ಲೆ ನಡೆಸಲಾಯಿತು. ಸದಾನಂದ್ ಮಾಸ್ಟರ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಕಾಲಿಗೆ ತೂರಿಸಿದ್ದ ಸಗಣಿ, ಮಣ್ಣು ತೆಗೆಯುವುದಕ್ಕೆ ನಾಲ್ಕು ತಾಸು ತೆಗೆದುಕೊಂಡಿತು ಎಂದಿದ್ದರು. “ಜೀವ ತೆಗೆಯದೇ ಬರ್ಬರವಾಗಿ ಹಲ್ಲೆ ನಡೆಸಿ, ಓಡಾಡಲು ಆಗದಂತೆ ಕಾಲು ಕತ್ತರಿಸಿ, ನನ್ನನ್ನು ಧೃತಿಗೆಡಿಸುವುದಲ್ಲದೇ ಇನ್ಯಾರೂ ಆರೆಸ್ಸೆಸ್ ಸೇರದಂತೆ ಮಾಡುವ ಉದ್ದೇಶ ಇದಾಗಿತ್ತು" ಎಂದು ತಮ್ಮ ಹಿಂದಿನ ಸಂಘಟನೆಯ "ಶಾಂತಿ ಸ್ವರೂಪ"ವನ್ನು "ಫ್ಯಾಸಿಸ್ಟ್ ಅಲ್ಲದ" ಗುಣವನ್ನು ಬಿಚ್ಚಿಟ್ಟಿದ್ದಾರೆ ಸದಾನಂದ ಮಾಸ್ಟರ್.

                2000ನೇ ಇಸವಿಯಲ್ಲಿ ಕೊಡಿಯೇರಿ ಬಾಲಕೃಷ್ಣನನ ಅಳಿಯ ಶಾಖೆಯ ಮೇಲೆ ದಾಳಿ ಮಾಡಿದ ನಂತರ ಕೊಡಿಯೇರಿಯ ಎಂಗಾಯಿಲ್ಪೀಡಿಕಾದಲ್ಲಿ ಶಾಖೆ ನಡೆಸಲು ಕೆಂಪು ಉಗ್ರರು ಅವಕಾಶವನ್ನೇ ಕೊಡುತ್ತಿಲ್ಲ. ಅಲ್ಲಿ ಸಂಘದ ಕಾರ್ಯಕರ್ತರ ಮೇಲೆ ಕಮ್ಯೂನಿಸ್ಟ್ ಗೂಂಡಾಗಳ ಅಘೋಷಿತ 144 ಸೆಕ್ಷನ್ ಜಾರಿಯಲ್ಲಿದೆ ಒಂದು ಕಡೆ ಕುಳಿತುಕೊಳ್ಳುವಂತಿಲ್ಲ. ಒಟ್ಟು ಸೇರಿ ಮಾತಾಡುವಂತಿಲ್ಲ. ಒಂದೋ ತಿರುಗಾಡುತ್ತಿರಬೇಕು ಇಲ್ಲವೇ ಒಬ್ಬರೇ ನಡೆದಾಡಬೇಕು. ಕಣ್ಣೂರಿನ ಐವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಶಾಖೆಗಳನ್ನು ನಡೆಸಲು ಕೆಂಪು ಉಗ್ರರು ಬಿಡುವುದೇ ಇಲ್ಲ. ಎಲ್ಲಾದರೂ ಶಾಖೆ ನಡೆಸುವ ಪ್ರಯತ್ನ ಯಾರಾದರೂ ಮಾಡಿದರೆ ತಲವಾರ್, ಮಚ್ಚು, ಬಾಂಬುಗಳೊಂದಿಗೆ ಸ್ಟಾಲಿನ್ ಭಕ್ತರು ಪ್ರತ್ಯಕ್ಷರಾಗುತ್ತಾರೆ. ಕಣ್ಣೂರಿನ 265 ಬೂತುಗಳಲ್ಲಿ ಸಿಪಿಎಂ ಗೂಂಡಾಗಳನ್ನು ಬಿಟ್ಟು ಯಾರೂ ಕೂರುವಂತಿಲ್ಲ.  ಕಣ್ಣೂರಿನ ಭೀಬತ್ಸ ರಕ್ತಸಿಕ್ತ ಅಧ್ಯಾಯವನ್ನು ಕಂಡ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ರಾಮಕುಮಾರ್ 2008ರಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ರಾಜಕೀಯ ಒತ್ತಡವಿಲ್ಲದ ಪಡೆಯೊಂದನ್ನು ಇಲ್ಲಿ ನಿಯೋಜಿಸುವುದೇ ಶಾಂತಿ ಕಾಪಾಡಲು ಇರುವ ಏಕೈಕ ಮಾರ್ಗ ಎಂದಿದ್ದರು.

                ಕೇರಳದ ಕಮ್ಯೂನಿಷ್ಟರ ರಕ್ತ ದಾಹಕ್ಕೆ ಕಿರೀಟಪ್ರಾಯವಾದ ಘಟನೆ ಜಯಕೃಷ್ಣ ಮಾಸ್ತರರ ಕೊಲೆ. ಕಳೆದ ಶತಮಾನದ ಕೊನೆಯ ತಿಂಗಳಲ್ಲೊಂದು ದಿನ ಭಾರತೀಯ ಜನತಾ ಯುವಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷರಾಗಿದ್ದ ಜಯಕೃಷ್ಣನ್ ಮಾಸ್ಟರ್ ಕಣ್ಣೂರು ಜಿಲ್ಲೆಯ ಶಾಲೆಯೊಂದರಲ್ಲಿ ಎಂದಿನಂತೆ 6ನೇ ತರಗತಿಯ ಮಕ್ಕಳಿಗೆ ಪಾಠ ಮಾಡುತಿದ್ದರು. ಕೆಲ ಸಮಯದಲ್ಲಿ ಕಮ್ಯೂನಿಸ್ಟ್ ಗೂಂಡಾಗಳಿಂದ ಅವರ ರಕ್ಷಣೆಗೆಂದು ನೇಮಿಸಿದ್ದ ಅವರ ಅಂಗರಕ್ಷಕ ನಾಪತ್ತೆಯಾದ. ತಕ್ಷಣ ಏಳು ಜನ ಕಮ್ಯುನಿಸ್ಟ್ ಗೂಂಡಾಗಳು ಮಾರಕಾಸ್ತ್ರಗಳನ್ನು ಝಳಪಿಸುತ್ತ ನೇರವಾಗಿ ತರಗತಿಯೊಳಗೆ ನಡೆದು ಬಂದರು. ಮಕ್ಕಳನ್ನು ಕೂತ ಜಾಗದಿಂದ ಕದಲದಂತೆ ಬೆದರಿಸಿ, ಆ ಚಿಣ್ಣರ  ಕಣ್ಣೆದುರೇ ಜಯಕೃಷ್ಣನ್ ಮಾಸ್ತರರಿಗೆ ಭೀಕರವಾಗಿ ಇರಿಯಲಾಯಿತು. 48 ಇರಿತದ ಗಾಯಗಳಿಂದ ಜರ್ಝರಿತವಾದ ಆ ಶರೀರ ನೆಲಕ್ಕೊರಗಿತು. ತಮ್ಮ ನೆಚ್ಚಿನ ಶಿಕ್ಷಕನ ಮೇಲಾದ ಭೀಕರ ದಾಳಿಯನ್ನು ನೋಡಿದ ಆ ಮಕ್ಕಳು ಆಘಾತಕ್ಕೊಳಗಾದರು. ಅವರನ್ನು ಸಹಜ ಸ್ಥಿತಿಗೆ ತರಲು ಕೌನ್ಸೆಲಿಂಗ್ ಮಾಡಬೇಕಾಯಿತು. ಅಮಾನುಷವಾಗಿ ಕೊಲೆ ಮಾಡಿದ ಬಳಿಕ ಶಾಲೆಯ ಬೋರ್ಡಿನಲ್ಲಿ ಸಾಕ್ಷಿ ಹೇಳಿದವರಿಗೂ ಇದೇ ಗತಿ ಎಂದು ಬರೆದ ಕೆಂಪು ಉಗ್ರರು ಕೇಕೆ ಹಾಕುತ್ತಾ ಹೊರನಡೆದರು. 1996ರಲ್ಲಿ ಚಂದ್ರನ್ ಕೊಲೆಯಾದ ಬಳಿಕ ಕಣ್ಣೂರಿನಲ್ಲಿ ಭಾಜಪಾ ನೇತೃತ್ವ ವಹಿಸಿದವರು ಜಯಕೃಷ್ಣನ್ ಮಾಸ್ತರ್. ಅವರ ಭಾಷಣ ಕೇಳಲು ಜನ ಕಿಕ್ಕಿರಿದು ನೆರೆಯುತ್ತಿದ್ದರು. ಅವರ ನೇತೃತ್ವದಲ್ಲಿ ಭಾಜಪಾ ಬೆಳೆಯಲಾರಂಭಿಸಿತು. ಕಾರ್ಯಕರ್ತರ ಉತ್ಸಾಹ ಹೆಚ್ಚಲಾರಂಭಿಸಿತು. ಅನೇಕರು ಭಾಜಪಾ ತೆಕ್ಕೆಗೆ ಸೇರಿದರು. ಈ ಬೆಳವಣಿಗೆ ಕೆಂಪು ಉಗ್ರರ ಕಣ್ಣು ಕುಕ್ಕಿತು. ಅವರು ಬಹಿರಂಗವಾಗಿ ಧಮಕಿ ಹಾಕಲಾರಂಬಿಸಿದರು. ಆದರೆ ಕಣ್ಣೂರಿನಾದ್ಯಂತ ಜನರ ಪ್ರೀತಿಗೆ ಪಾತ್ರರಾಗಿದ್ದ ಸರಳ ಸಜ್ಜನ ಮಾಸ್ತರರನ್ನು ಕೊಲ್ಲುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಐದು ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆ ವಿಧಿಸಿದಾಗ ಕಮ್ಯೂನಿಸ್ಟರು ನ್ಯಾಯಾಧೀಶರಿಗೇ ನ್ಯಾಯಾಲಯದ ಆವರಣದಲ್ಲೇ ಕೊಲೆ ಬೆದರಿಕೆಯೊಡ್ಡಿದ್ದರು.

                 ಕಮ್ಯೂನಿಷ್ಟರ ದಾಂಧಲೆಗೆ ಇಂತಹ ಜಾಗ, ಸಮಯ, ದಿನ ಎನ್ನುವ ನಿಯಮವಿಲ್ಲ. ತಮ್ಮ ಕುಕೃತ್ಯಕ್ಕೆ ಅಡ್ಡಿಯಾದವರು ಯಾರೇ ಆಗಿರಲಿ ಅವರನ್ನು ರಾಜಾರೋಷವಾಗಿ ಅಟ್ಟಾಡಿಸಿ ಕೊಲ್ಲುವುದೇ ಅವರ ಜಾಯಮಾನ. ಕೇರಳದ ಪರುಮಲ ಜಿಲ್ಲೆಯಲ್ಲಿ ದೇವಸ್ವಮ್ ಎನ್ನುವ ಕಾಲೇಜೊಂದಿದೆ. 1996ರ ಸೆಪ್ಟೆಂಬರ್ ಹದಿನೇಳರ ಒಂದು ದಿನ ಈ ಕಾಲೇಜಿಗೆ ನುಗ್ಗಿದ ಕೆಂಪು ಉಗ್ರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಕಮ್ಯೂನಿಷ್ಟ್ ಗೂಂಡಾಗಳಿಂದ ತಪ್ಪಿಸಿಕೊಂಡು ಓಡಿದ ಈ ಹುಡುಗರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪಂಪಾ ನದಿಗೆ ಹಾರಿದರು. ಅಲ್ಲಿಗೂ ಬಂದ ಕಮ್ಯೂನಿಷ್ಟ್ ಗೂಂಡಾಗಳು ವಿದ್ಯಾರ್ಥಿಗಳೆಡೆ ಕಲ್ಲೆಸೆಯಲಾರಂಭಿಸಿದರು. ನದಿಯ ಇನ್ನೊಂದು ತೀರದಲ್ಲಿ ಬಟ್ಟೆಯೊಗೆಯುತ್ತಿದ್ದ ಹೆಂಗಳೆಯರು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರ ಪ್ರಾಣ ಉಳಿಸುವ ಯತ್ನ ಮಾಡಿದಾಗ ಕೆಂಪು ಉಗ್ರರ ಕಲ್ಲು ಆ ಹೆಣ್ಣುಮಕ್ಕಳತ್ತ ತಿರುಗಿತು. ಕೆಲವೇ ಕ್ಷಣಗಳಲ್ಲಿ ಪಂಪೆ ಕೆಂಪಾದಳು. ಅಷ್ಟಕ್ಕೂ ಆ ಹುಡುಗರು ಮಾಡಿದ ತಪ್ಪಾದರೂ ಏನು? ಅವರು ಎಬಿವಿಪಿಯ ಕಾರ್ಯಕರ್ತರಾಗಿದ್ದುದೇ ಕಮ್ಯೂನಿಷ್ಟರ ಕಣ್ಣು ಕೆಂಪಗಾಗಲು ಕಾರಣವಾಗಿತ್ತು.

               ಕೇರಳ, ಅದರಲ್ಲೂ ಮಲಬಾರ್ ಪ್ರದೇಶ ಕಳೆದ ಎರಡು ದಶಕಗಳಲ್ಲಿ ಹಲವಾರು ರಾಜಕೀಯ ಕೊಲೆಗಳನ್ನು ಕಂಡಿದೆ. ಕಣ್ಣೂರಂತೂ ವಧಾಕ್ಷೇತ್ರವೇ ಸರಿ. ಕಣ್ಣೂರಿನಲ್ಲಿ ನೂರಕ್ಕೂ ಹೆಚ್ಚು ಸಂಘ ಕಾರ್ಯಕರ್ತರನ್ನು ಕಮ್ಯೂನಿಷ್ಟರು ಕೊಲೆ ಮಾಡಿದ್ದಾರೆ.  1998ರ ಬಳಿಕ ಕಣ್ಣೂರಿನಲ್ಲಿ 3,500ಕ್ಕೂ ಅಧಿಕ ರಾಜಕೀಯ ಘರ್ಷಣೆಗಳು ನಡೆದಿದ್ದು , ಸುಮಾರು 60 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಬಹಳಷ್ಟು ಜನ ಕೈಕಾಲು ಕಳೆದುಕೊಂಡಿದ್ದಾರೆ. 16 ಲಕ್ಷ ಜನಸಂಖ್ಯೆಯ ಕಣ್ಣೂರು ಪ್ರಾಂತ್ಯದಲ್ಲಿ ಕಮ್ಯೂನಿಷ್ಟ್ ರಕ್ತರಾಜಕೀಯಕ್ಕೆ ಬಲಿಯಾಗಿ ಗಂಭೀರವಾಗಿ ಗಾಯಗೊಂಡು ಜೀವನ ಕೆಡಿಸಿಕೊಂಡವರು 3 ಸಾವಿರ ಸಂಖ್ಯೆಯಲ್ಲಿದ್ದಾರೆ.

               ಕಣ್ಣೂರಿನ ರಕ್ತಚರಿತ್ರೆ ಹೊರಜಗತ್ತಿಗೆ ತಿಳಿದಾಗ ಈಗ ಮುಖ್ಯಮಂತ್ರಿಯಾಗಿರುವ ಸಂಘ ಕಾರ್ಯಕರ್ತರ ಕೊಲೆಗೆ ಅಡಿಪಾಯ ಹಾಕಿದ ಪಿಣರಾಯಿ ವಿಜಯನ್ "ನಾವು ವಿರೋಧಿಗಳನ್ನು ಹೇಗೆ ಕೊಲ್ಲಬೇಕು ಎನ್ನುವುದನ್ನು ಬಂಗಾಳಿಗಳಿಂದ ಕಲಿಯಬೇಕು. ಅವರು ರಕ್ತದ ಒಂದು ಹನಿಯೂ ಸಿಗದ ಹಾಗೆ ಮುಗಿಸಿಬಿಡುತ್ತಾರೆ. ತಮಗಾಗದವರನ್ನು ಅಪಹರಿಸಿ ಹೊಂಡ ತೋಡಿ ಜೀವಂತ ಸಮಾಧಿ ಮಾಡಿ ಉಪ್ಪು ಹಾಕಿ ಬಿಡುತ್ತಾರೆ. ಜಗತ್ತಿಗೆ ರಕ್ತದ ಕಲೆಯಾಗಲೀ, ವ್ಯಕ್ತಿಯ ಚಿತ್ರ ಅಥವಾ ಸುದ್ದಿಯಾಗಲೀ ತಿಳಿಯುವುದೇ ಇಲ್ಲ." ಎಂದಿದ್ದರು. ಇಂತಹ ಮನಃಸ್ಥಿತಿ ಇರುವವರೇ ಮುಖ್ಯಮಂತ್ರಿಯಾಗಿರುವಾಗ ನ್ಯಾಯ ನಿರೀಕ್ಷಣೆ ಬಿಡಿ, ಕನಿಷ್ಟ ಈ ಹತ್ಯೆಗಳಾದರೂ ನಿಲ್ಲುತ್ತವೆ ಎಂಬ ನಿರೀಕ್ಷೆಯಾದರೂ ಉಳಿದೀತೆ? ಅದಕ್ಕೆ ತಕ್ಕಂತೆ ಆತ ಅಧಿಕಾರವಹಿಸಿಕೊಂಡ ಬಳಿಕ ಕೇರಳದಲ್ಲಿ ಅದೆಷ್ಟು ಕೊಲೆಗಳಾದವು. ಕಣ್ಣೂರಿನ ಪಿಣರಾಯಿಯಲ್ಲಂತೂ ಜನ ಭಯದಿಂದಲೇ ನಿತ್ಯ ಬದುಕು ಸಾಗಿಸುತ್ತಿದ್ದಾರೆ. ಕಣ್ಣೆದುರಲ್ಲೇ ಜಯಕೃಷ್ಣ ಮಾಸ್ತರರ ರಕ್ತದೋಕುಳಿಯಾಡಿದ ಕೆಂಪು ಉಗ್ರರ ಅಟ್ಟಹಾಸವನ್ನು ನೋಡಿದ ಎಳೆಯ ಮಕ್ಕಳು, ಮೊನ್ನೆ ಕೆಂಬಾವುಟದ ವಿಜಯೋತ್ಸವಕ್ಕೆ ಮೆರುಗು ನೀಡಲು ಈ ಉಗ್ರರಿಂದ ಕೈಕತ್ತರಿಸಿಕೊಂಡ ಏಳು ವರ್ಷದ ಕಾರ್ತಿಕ...ಮುಂತಾದ ಘಟನೆಗಳೆಲ್ಲಾ ಚಿಕ್ಕಮಕ್ಕಳೆಂಬ ಭಾವವೂ ಇಲ್ಲದ ನರರಾಕ್ಷಸರು ಈ ಕೆಂಪಿಗರು ಎನ್ನುವುದರ ನಿದರ್ಶನಗಳಷ್ಟೇ.

                 ಬಂಗಾಳದಲ್ಲಿ ತಮ್ಮ ರಾಜಕೀಯ ಎದುರಾಳಿಗಳನ್ನು ಕಿಡ್ನ್ಯಾಪ್ ಮಾಡಿ ತಂದು ಗುಂಡಿ ತೆಗೆದು ಜೀವಂತ ಹೂತು ಹಾಕುವುದೇ ಕೆಂಪು ಉಗ್ರರ ಚಾಳಿ. ಹೊರ ಜಗತ್ತಿಗೆ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ. ಪಶ್ಚಿಮ ಬಂಗಾಳದಲ್ಲಿ 1970ರಲ್ಲಿ ಸೈನ್ ಸಹೋದರರನ್ನು ಕೊಂದು ಆ ರಕ್ತದಲ್ಲಿ ಅವರ ತಾಯಿಗೆ ಬಲವಂತವಾಗಿ ಅನ್ನವನ್ನು ಅದ್ದಿ ತಿನ್ನಿಸಿ ಹುಚ್ಚಿಯನ್ನಾಗಿಸಿದ ಸೈನ್ ಬಾರಿ ಹತ್ಯಾಕಾಂಡ, 79ರಲ್ಲಿ ಬಾಂಗ್ಲಾದಿಂದ ಮತಾಂತರಗೊಳ್ಳುವುದರಿಂದ ತಪ್ಪಿಸಿ ಆಶ್ರಯಕ್ಕಾಗಿ ಭಾರತಕ್ಕೆ ಓಡಿ ಬಂದು ಸುಂದರ ಬನದಲ್ಲಿದ್ದ 60ಸಾವಿರ ಹಿಂದೂಗಳ ಸರಕಾರೀ ಪ್ರಾಯೋಜಿತ ಮರೀಚ್ ಝಾಪಿ ಹತ್ಯಾಕಾಂಡ, ಹದಿನೇಳು ಜನ ಆನಂದಮಾರ್ಗಿ ಸನ್ಯಾಸಿ/ನಿಗಳನ್ನು ಜೀವಂತವಾಗಿ ಸುಟ್ಟ ಘಟನೆ, ನಾನೂರ್ ಹಾಗೂ ಇತಿಹಾಸ ಪ್ರಸಿದ್ಧ ನಂದಿಗ್ರಾಮದ ಹತ್ಯಾಕಾಂಡದ ಘಟನೆಗಳೇ ಸಾಕು ಕೆಂಪು ಉಗ್ರರು ಯಾವ ಪರಿಯ ರಾಕ್ಷಸರು ಎನ್ನುವುದನ್ನು ಅರಿಯಲು. ಕಾಮ್ರೇಡುಗಳ ಮಾತಿಗೂ ಕೃತಿಗೂ ಇರುವ ಅಂತರವನ್ನು ಎತ್ತಿ ತೋರಿಸಲು ಬಡವರ ಪರ ಎಂದು ಬಿಂಬಿಸಿಕೊಳ್ಳುವ ಈ ಕಾಮ್ರೇಡುಗಳು ನಂದಿಗ್ರಾಮದಲ್ಲಿ ಬಡವರ ಭೂಮಿಯನ್ನು ಬೈದು-ಬೆದರಿಸಿ-ಕೊಲೆ ಮಾಡಿ ಕಿತ್ತುಕೊಂಡು ಕೇಕೆ ಹಾಕಿದ ಘಟನೆಯೊಂದೇ ಸಾಕು!

                    ಸರಕಾರೀ ಪ್ರಾಯೋಜಿತ ಅಥವಾ ಪಕ್ಷವೇ ಪ್ರಾಯೋಜಿಸಿದ ತಮ್ಮ ಎದುರಾಳಿಗಳ ಹತ್ಯಾಕಾಂಡ ಕೇವಲ ಕೇರಳಕ್ಕೆ ಸೀಮಿತವಾಗಿಲ್ಲ. ಕಮ್ಯೂನಿಷ್ಟರು ಎಲ್ಲೆಲ್ಲಾ ಇದ್ದಾರೋ ಅಲ್ಲೆಲ್ಲಾ ರಕ್ತದ ಕಲೆಗಳೇ ಗೋಚರಿಸುತ್ತವೆ. ಬಂಗಾಳದಲ್ಲಿ 1977-1996ರ ನಡುವೆ 28,000 ರಾಜಕೀಯ ಹತ್ಯೆಗಳಾಗಿದ್ದವು. 1997-2009ರ ನಡುವೆ ಬಂಗಾಳ 27,408 ಹತ್ಯೆಗಳನ್ನು ಕಂಡಿತ್ತು. ಇದೆಲ್ಲಾ ಕಮ್ಯೂನಿಷ್ಟ್ ಆಳ್ವಿಕೆಯಲ್ಲೇ ನಡೆದದ್ದು. ಪ್ರತೀ 5 ಗಂಟೆಗೊಂದು ಕೊಲೆ! ಈ ಅಂಕಿಅಂಶಗಳು ಆಗಿನ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯರೇ ಬಂಗಾಳ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದ ಮಾಹಿತಿ! ಇದು ಲೆಕ್ಕಕ್ಕೆ ಸಿಕ್ಕ ಮಾಹಿತಿ. ಅವರೇ ಹೇಳಿದಂತೆ ಹೊರಜಗತ್ತಿಗೆ ಗೊತ್ತಾಗದಂತೆ ಹೂತು ಹಾಕಿದ್ದೆಷ್ಟೋ? ಕಮ್ಯೂನಿಸ್ಟರಿಗೆ ಇದೇನೂ ಹೊಸತಲ್ಲ. ಮಾವೋ ಆಡಳಿತದಲ್ಲಿ ಆದ ಕೊಲೆಗಳಿಗೆ ಉರಿದ ಗ್ರಂಥಗಳಿಗೆ ಮುಚ್ಚಿದ ವಿವಿಗಳಿಗೆ ಲೆಖ್ಖವಿದೆಯೇ? ಸ್ಟಾಲಿನ್ನನ ಕ್ರೌರ್ಯಕ್ಕೆ ಬಲಿಯಾದವರ ಸಂಖ್ಯೆ ಹಿಟ್ಲರ್ ಮಾಡಿದ ಕೊಲೆಗಳಿಗಿಂತಲೂ ಹೆಚ್ಚು.

                ಭಾರತದಲ್ಲಿನ ಕಮ್ಯೂನಿಸ್ಟರಿಗೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಆಕ್ಸ್ ಫರ್ಡ್, ಕೇಂಬ್ರಿಡ್ಜ್ ವಿವಿಗಳಲ್ಲಿ ಓದಿ ಬಂದು ಇಲ್ಲಿ ಸಾಮಾನ್ಯ ಜನರನ್ನು ತಮ್ಮ ಉದ್ದೇಶಕ್ಕೆ ಕುಣಿಸಿ ಹೊಟ್ಟೆಹೊರೆದುಕೊಳ್ಳುವವರೇ ಅವರಲ್ಲಿ ನಾಯಕರು. ತಮ್ಮ ಮಕ್ಕಳನ್ನು ಬಂಡವಾಳಶಾಹಿ ಎಂದು ತಾವು ಬೊಬ್ಬಿರಿಯುವ ಉದ್ಯಮಗಳಿಗೆ ಕಳುಹಿಸಿ ಬಡವರನ್ನು ಬಲಿಪಶು ಮಾಡುವ ಗೋಮುಖವ್ಯಾಘ್ರಗಳಿವರು. ಮಾವೋ, ಸ್ಟಾಲಿನ್ನರಿಗೆ ಕನಿಷ್ಟ ದೇಶದ ಮೇಲಾದರೂ ಪ್ರೀತಿ ಇತ್ತೇನೋ. ಇವರು ಎಲ್ಲಾ ಬಿಟ್ಟವರು. ಹಿಂದಿನ ಬ್ರಿಟಿಷರ ವಸಾಹತುಶಾಹಿ ಮಾನಸಿಕತೆಗೆ ತಮ್ಮನ್ನು ಮಾರಿಕೊಂಡವರು. ಸನಾತನವಾದ ಪ್ರತಿಯೊಂದನ್ನೂ ವಿರೋಧಿಸಬೇಕೆಂಬುದೇ ಅವರ ಮಾನಸಿಕತೆಗೆ. ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು. 1920ರ ದಶಕದಲ್ಲಿ ಕಮ್ಯೂನಿಸ್ಟ್ ಪಕ್ಷ ಭಾರತದಲ್ಲಿ ಸ್ಥಾಪನೆಯಾದಾಗ ಅದರಲ್ಲಿ ಇದ್ದವರು ರಷ್ಯಾ, ಜರ್ಮನಿ, ಬ್ರಿಟಿಷರ ದಲ್ಲಾಳಿಗಳೇ. ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸಿದ ಅವರು ಪಾಕಿಸ್ತಾನ ರಚನೆಗೂ ಮುಸ್ಲಿಮ್ ಲೀಗ್ ಜೊತೆ ಕೈಜೋಡಿಸಿದರು. ಸಿಖ್ಖರು ಪ್ರತ್ಯೇಕ ದೇಶ ಕೇಳಿದಾಗ ಅದಕ್ಕೂ ಅಸ್ತು ಎಂದರು. "ಭಾರತ ಬಿಟ್ಟು ತೊಲಗಿ" ಚಳುವಳಿಯ ಸಮಯದಲ್ಲಿ ಬ್ರಿಟಿಷರ ಜೊತೆ ಕೈಜೋಡಿಸಿದರು. ಹೈದರಾಬಾದ್ ನಿಜಾಮನ ಬೆಂಗಾವಲಿಗೆ ನಿಂತರು. ಚೀನಾ ಅತಿಕ್ರಮಿಸಿದಾಗ ಮಾವೋಗೆ ಜೈ ಅಂದ ದೇಶದ್ರೋಹಿಗಳಿವರು. ಸುಭಾಷರನ್ನು ಜನರಲ್ ಟೋಜೋನ ಸಾಕುನಾಯಿ ಎಂದು ಕರೆದ ಮತಿಹೀನರಿವರು. ನಕ್ಸಲ್ ಚಳುವಳಿಯ ಜನ್ಮದಾತರೂ ಇವರೇ. 1998ರಲ್ಲಿ ಅಣ್ವಸ್ತ್ರ ಪರೀಕ್ಷೆಗೂ ತಡೆ ಒಡ್ಡಿದ್ದರು.

                 ಕೇವಲ ಆರೆಸ್ಸೆಸ್ ಸೇರಿದವರ ಮೇಲಷ್ಟೇ ಸಿಪಿಎಂನವರ ಈ ಕ್ರೌರ್ಯ ಎಂದುಕೊಳ್ಳಬೇಡಿ. ತಮ್ಮನ್ನು ತೊರೆದು ಮತ್ತೊಂದು ಕಮ್ಯುನಿಸ್ಟ್ ಪಕ್ಷ ರಚಿಸಲು ಹೋದವರನ್ನೂ ಕೊಂದಿದ್ದಾರೆ. ಈ ಬಗ್ಗೆ ಮಲಯಾಳಂ ವಾಹಿನಿ ಚರ್ಚೆಯೊಂದರಲ್ಲಿ, ರಾಜಕೀಯ ಹಲ್ಲೆಗಳಲ್ಲಿ ಸಂತ್ರಸ್ತರಾದ 83 ಮಂದಿಯಲ್ಲಿ 70 ಮಂದಿ ಸಿಪಿಎಂ ತೊರೆದವರು ಎಂಬ ಅಂಶ ಎತ್ತಿದಾಗ, ಸಿಪಿಎಂ ಪ್ರತಿನಿಧಿ ಫಕ್ರುದ್ದೀನ್ ಪ್ರತಿಕ್ರಿಯಿಸಿದ್ದು- ಇನ್ನೇನು ಪಕ್ಷ ತೊರೆದವರಿಗೆ ಚಹಾ ಕೊಡಲಾಗುವುದೇ ಎಂದು!

               ಈ ಕೆಂಪು ಉಗ್ರರಿಗೆ ಬೌದ್ಧಿಕವಾಗಿ ಸಹಾಯ ಮಾಡುವ ಒಂದು ವರ್ಗವಿದೆ. ಅವರೆಲ್ಲಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪೂರೈಸಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದಾರೆ. ಆರ್ಥಿಕವಾಗಿ ಬಲಿಷ್ಟರಾಗಿರುವ ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಧಿಪತ್ಯವನ್ನು ಸ್ಥಾಪಿಸಿ ತಮ್ಮ ಚಿಂತನೆಯೇ ಮಾನ್ಯತೆ ಪಡೆಯುವಂತೆ, ಅದನ್ನೆ ಜನ ನಂಬುವಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ತಾವು ಜಾತ್ಯಾತೀತರು ಎಂದು ಬೊಬ್ಬಿರಿವ ಇವರು ಅತೀ ದೊಡ್ದ ಜಾತಿವಾದಿಗಳೂ, ಕೋಮುವಾದಿಗಳೂ ಆಗಿರುತ್ತಾರೆ. ಜನರನ್ನು ಜಾತಿವಾದದ ಮೂಲಕ ಪ್ರತ್ಯೇಕಿಸಿ ತಮ್ಮ ಅನ್ನದಾತರಿಗೆ ಅವರನ್ನು ಮತಬ್ಯಾಂಕನ್ನಾಗಿಸಿ ತನ್ಮೂಲಕ ತಮ್ಮ ಧಣಿಗಳ ಋಣ ತೀರಿಸುವುದೇ ಅವರ ಉದ್ದೇಶ. ಶಿಕ್ಷಣ, ಸಾಹಿತ್ಯ, ಮಾಧ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದಲು ಹುಳುಗಳಂತೆ ತುಂಬಿಕೊಂಡ ಇವರುಗಳು ದೊಡ್ಡ ದನಿಯಲ್ಲಿ ಚೀರಾಡುವುದೇ ಜಗತ್ತಿನೆಲ್ಲೆಡೆ ಮೊಳಗುತ್ತದೆ. ಇತ್ತೀಚೆಗೆ "ಪ್ರಶಸ್ತಿ ವಾಪಸಿ' ಅಥವಾ "ಗೋಮಾಂಸ ಭಕ್ಷಣೆಗೆ ಬೆಂಬಲ'ದಂಥ ಘಟನೆಗಳ ಮೂಲಕ ಸುದ್ದಿಯಾದವರೆಲ್ಲಾ ಇಂಥವರೇ. ಇಂಥ ಚಿಂತಕರು ಸುದ್ದಿ ಮಾಧ್ಯಮದಲ್ಲಿ ಎದ್ದು ತೋರುತ್ತಾರೆ. ಆಗಾಗ ಜಾತ್ಯತೀತತೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಅಲ್ಪಸಂಖ್ಯಾಕರ ರಕ್ಷಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಬಿತ್ತರಿಸುತ್ತಿರುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಷ್ಟು ಕಾಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ, ವಿವಿಧ ಅಕಾಡೆಮಿಗಳಲ್ಲಿ ಅಧಿಕಾರ ಅನುಭವಿಸಿ ದೇಶ ಒಡೆವ ಸಾಧನೆ ಮಾಡಿದ ಈ ವಾಮಪಂಥೀಯ ಬುದ್ಧಿಜೀವಿಗಳಿಗೆ ಕೇಂದ್ರದಲ್ಲಿ ಭಾಜಪಾ ಅಧಿಕಾರಕ್ಕೆ ಬಂದೊದನೆ ತಮ್ಮ ಅಡಿಪಾಯ ಕುಸಿದು ಬೀಳುತ್ತಿರುವ ಹತಾಷೆಯ ಭಾವ ಆವರಿಸಿದೆ! ಇವರಿಂದಾಗಿಯೇ ಕೇರಳ, ಬಂಗಾಳಗಳಲ್ಲಾದ ಕೆಂಪು ಉಗ್ರರ ರಕ್ತರಾಜಕೀಯ ಹೊರ ಜಗತ್ತಿಗೆ ಮುಚ್ಚಿ ಹೋದದ್ದು!

                 2013 ಫೆಬ್ರವರಿ 27ರಂದು ಕೇಂದ್ರ ಗೃಹಸಚಿವರು ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ 2001-13ರ ನಡುವೆ ಎಡಪಂಥೀಯ ಉಗ್ರವಾದಕ್ಕೆ ಬಲಿಯಾದವರ ಸಂಖ್ಯೆ 7881! ಒಂದು ಮೂಲದ ಪ್ರಕಾರ ಮಾವೋಗಳು ಸುಲಿಗೆಯಿಂದ ಒಟ್ಟು ಮಾಡುವ ಹಣ ವರ್ಷಕ್ಕೆ 1500 ಕೋಟಿ ರೂಪಾಯಿಗಳು. ಈ ಮೊತ್ತ ಇನ್ನೂ ಹೆಚ್ಚಾಗಿರುವ ಸಾಧ್ಯತೆಯೇ ಅಧಿಕ. ರಸ್ತೆ ಕಂಟ್ರಾಕ್ಟರುಗಳು, ಬಸ್, ಟ್ರಕ್, ಪೆಟ್ರೋಲ್ ಬಂಕ್, ಅಂಗಡಿಯ ಮಾಲಿಕರೇ ಇವರ ಬಲಿಪಶುಗಳು. ಛತ್ತೀಸ್ ಗಢ್, ಒರಿಸ್ಸಾ, ಜಾರ್ಖಂಡ್, ಬಿಹಾರಗಳಲ್ಲಿ ಪಾಪ್ಪಿ(Poppy, ಒಂದು ಬಗೆಯ ಅಫೀಮು) ಬೆಳೆದು ತಮ್ಮ ನಕ್ಸಲ್ ಚಳುವಳಿಗೆ ಹಣ ಒದಗಿಸುವ ಕಳ್ಳರು ಈ ಕಮ್ಯೂನಿಸ್ಟರು. ಗಣಿಕಂಪೆನಿಗಳು ಕೂಡಾ ಇವರ ಆಶ್ರಯದಾತರೇ. ಯುಪಿಎ-1 ಸಮಯದಲ್ಲಿ ರಾಷ್ಟ್ರೀಯ ಸಲಹಾ ಸಮಿತಿಯಂತೂ ಕಮ್ಯೂನಿಸ್ಟರಿಂದಲೇ ತುಂಬಿ ಹೋಗಿತ್ತು. ಹೌದು ಅವರದ್ದು ಬಲಿಷ್ಟವಾದ ಜಾಲ. ಜೆ.ಎನ್.ಯು.ವಿನಿಂದ ಪತ್ರಿಕೋದ್ಯಮದ ಕೆಳಹಂತದವರೆಗೆ, ದೃಶ್ಯಮಾಧ್ಯಮ, ರಂಗಭೂಮಿ, ಸಾಹಿತ್ಯ, ಕಲೆ, ಕಾರ್ಮಿಕ ಸಂಘಟನೆಗಳಿಂದ ರಾಜಕೀಯದವರೆಗೆ ಎಲ್ಲವನ್ನೂ ಕೆಡಿಸಿಟ್ಟಿದ್ದಾರೆ. ಈ ಎಲ್ಲಾ ಕ್ಷೇತ್ರಗಳಲ್ಲೂ ನಿರ್ಣಾಯಕ ಸ್ಥಾನದಲ್ಲಿ ಅವರೇ ಇರುತ್ತಾರೆ. ಅವರ ಜಾಲ ಎಷ್ಟು ಬಲವಾಗಿರುತ್ತದೆಯೆಂದರೆ ಯಾವುದೇ ಕೊಲೆಯ ಪಾತಕಿಗೆ ಶಿಕ್ಷೆಯಾಗುವುದೇ ಇಲ್ಲ. ಕೊಲೆಯಾದವನ ಪರಿವಾರ, ಸಾಕ್ಷಿಯನ್ನೇ ಅವರು ದಮನಿಸಿಬಿಟ್ಟಿರುತ್ತಾರೆ. ಒಂದು ವೇಳೆ ತಿರುಗಿ ನಿಂತರೂ ತಮ್ಮ ಬಲವಾದ ಜಾಲದಿಂದಾಗಿ ಕ್ಷಣಮಾತ್ರದಲ್ಲಿ ಬಿಡುಗಡೆಗೊಳ್ಳುತ್ತಾರೆ. ಕೊಲೆ ನಡೆದುದನ್ನೇ ವ್ಯವಸ್ಥಿತವಾಗಿ ಕೊಲೆ ಮಾಡುವ ಪಕ್ಷ ಎಂದರೆ ಅದು ಎಡಪಕ್ಷ! ಎಲ್ಲಾ ಪಕ್ಷಗಳು, ಮಾಧ್ಯಮಗಳು ಭಾಜಪಾದ ವಿರುದ್ಧ ಯಾಕೆ ಕೆಲಸ ಮಾಡುತ್ತಾರೆ ಎನ್ನುವುದು ಈಗ ನಿಧಾನವಾಗಿ ಜನಸಾಮಾನ್ಯರಿಗೂ ಅರಿವಾಗುತ್ತಿದೆ. ಹಾಗಾಗಿಯೇ ಅವರ ಒಂದೊಂದೇ ಖದೀಮತನ ನಿಧಾನವಾಗಿ ಬೆಳಕಿಗೆ ಬರುತ್ತಿದೆ. ವಾಮಪಂಥೀಯರು ಭಾರತದಲ್ಲಿ ತಾವೇನು ಮಾಡಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿದ್ದಾರೆ. ಅವರ ಗುರಿ ಒಂದೇ...ಹಿಂದೂ ನಾಗರೀಕತೆಯನ್ನು ನಾಶ ಮಾಡಿ ಮಾರ್ಕ್ಸಿಸ್ಟ್ ರಾಜ್ಯದ ಸ್ಥಾಪನೆ. ಇದಕ್ಕಾಗಿ ಕಳೆದ 80 ವರ್ಷಗಳಲ್ಲಿ ಮಾನವ ಹಕ್ಕುಗಳು, ಮಹಿಳಾ ಸಬಲೀಕರಣ, ಮಹಿಳಾ ಹಕ್ಕುಗಳು, ಜಾತ್ಯಾತೀತ ಸಮಾಜ, ಅವರ್ಗೀಕೃತ ಸಮಾಜ ಮುಂತಾದ ಧನಾತ್ಮಕ/ ಜನಪ್ರಿಯ ವಿಷಯಗಳ ಬಗ್ಗೆ ಯಾರಿಗೂ ಅರ್ಥವಾಗದ ರೀತಿಯಲ್ಲಿ ಚರ್ಚೆ ನಡೆಸಿ ಜನರ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಯಾರು ಮಹಾತ್ಮ? ಭಾಗ- ೧೭

ಯಾರು ಮಹಾತ್ಮ?
ಭಾಗ- ೧೭

          ನಾಗ್ಪುರದ ಖಿಲಾಫತ್ ಸಮ್ಮೇಳನದಲ್ಲಿ ಮುಲ್ಲಾಗಳು ಕಾಫಿರರನ್ನು ಕೊಲ್ಲುವ ಜಿಹಾದ್ ಕುರಿತಂತೆ ಪದೇ ಪದೇ ಕುರಾನ್ ಅಯಾತ್'ಗಳನ್ನು ಉಲ್ಲೇಖಿಸುತಿದ್ದರು. ಅದನ್ನು ಗಾಂಧಿಯ ಗಮನಕ್ಕೆ ತಂದಾಗ ಆತ "ಅವರು ಪ್ರಸ್ತಾಪಿಸುತ್ತಿರುವುದು ಬ್ರಿಟಿಷರನ್ನು" ಎಂದುಬಿಟ್ಟರು. "ಇದು ನಿಮ್ಮ ಅಹಿಂಸಾ ವಿಧಾನಕ್ಕೆ ವಿರುದ್ಧವಾದುದಲ್ಲವೇ. ಅಲ್ಲದೆ ಈ ಮೌಲ್ವಿಗಳು ಇದನ್ನು ಹಿಂದೂಗಳ ವಿರುದ್ಧ ಪ್ರಯೋಗಿಸುವುದಿಲ್ಲ ಎನ್ನುವುದರ ಬಗ್ಗೆ ಏನು ಖಚಿತತೆಯಿದೆ" ಎಂದು ನಾನು ಪ್ರಶ್ನಿಸಿದಾಗ ಗಾಂಧಿಯ ಬಳಿ ಉತ್ತರವಿರಲಿಲ್ಲ. ವರ್ಷದೊಳಗೆ ಸ್ವರಾಜ್ಯ ಪ್ರಾಪ್ತಿಗೆ ಇರಿಸಿದ ಮೂರು ಷರತ್ತುಗಳನ್ನು ಮರೆತ ಗಾಂಧಿ ದೇಶದ ಜನರ ಮುಂದೆ ಮತ್ತೊಂದು ಪ್ರಸ್ತಾಪವಿಟ್ಟರು. ಕಾಂಗ್ರೆಸ್ಸಿನ ಬೆಜವಾಡಾ ಅಧಿವೇಶನದಲ್ಲಿ ಗಾಂಧಿಯವರ ಈ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಬೇರೆ ನಾಯಕರ ಪ್ರಸ್ತಾಪಗಳು ಇದಕ್ಕಿಂತ ಎಷ್ಟೋ ಉತ್ತಮವಾಗಿದ್ದಾಗ್ಯೂ ಅವನ್ನು ತಳ್ಳಿ ಹಾಕಲಾಯಿತು. ಚರಕಾವನ್ನು ಮುಖ್ಯ ಸಂಕೇತವಾಗುಳ್ಳ ರಾಷ್ಟ್ರ ಧ್ವಜಕ್ಕೂ ಸಮ್ಮತಿ ಸಿಕ್ಕಿತು. ಒಂದು ಕೋಟಿ ರೂಪಾಯಿ ಸಂಗ್ರಹವಾದರೆ ಮೂರು ತಿಂಗಳ ಒಳಗೆ ಸ್ವರಾಜ್ಯ ತಂದುಕೊಡುತ್ತೇನೆಂಬ ಷರತ್ತು ಅದು. 1921ರ ಜೂನ್ ಅಂತ್ಯದ ವೇಳೆಗೆ ಒಂದು ಕೋಟಿ ಸದಸ್ಯರನ್ನು ಕಾಂಗ್ರೆಸ್ಸಿಗೆ ಸೇರಿಸಿ 20ಲಕ್ಷ ಚರಕಾ ವಿತರಿಸಲಾಯಿತು. ಗಾಂಧಿಯವರ ಈ ನಿರಂಕುಶ ಸರ್ವಾಧಿಕಾರವನ್ನು ಪ್ರತಿಭಟಿಸಿ ಶೃದ್ಧಾ ಪತ್ರಿಕೆಯಲ್ಲಿ ನಾನು ಲೇಖನವನ್ನೂ ಬರೆದೆ. ಗಾಂಧಿಯ ಯಾವುದೇ ಮಾತನ್ನು ಮರುಮಾತಿಲ್ಲದೆ ಅಂಗೀಕರಿಸುವ ಕಾಂಗ್ರೆಸ್ಸಿನ ಮನೋಭೂಮಿಕೆಯಿಂದಾಗಿ ಭಾರತದ ಚಿಂತನಶೀಲ ವರ್ಗ ಗೊಂದಲ ಹಾಗೂ ಬೇಸರಗೊಂಡಿತ್ತು.(ಇನ್ ಸೈಡ್ ಕಾಂಗ್ರೆಸ್ - ಸ್ವಾಮಿ ಶೃದ್ಧಾನಂದ)

         ಒಂದು ಕೋಟಿ ರೂಪಾಯಿ ಸಂಗ್ರಹವಾಯಿತು. ಸದಸ್ಯರ ಪಟ್ಟಿ ತಯಾರಾಗಲಿಲ್ಲ. ಮೂರು ತಿಂಗಳು ಕಳೆಯಿತು. ಸ್ವರಾಜ್ಯದ ಸುಳಿವೇ ಇಲ್ಲ. "ಸ್ವರಾಜ್ಯಕ್ಕೆ ದೇಶ ಸಿದ್ಧವಾಗಿದೆಯೋ ಇಲ್ಲವೋ ಎಂದು ಅಳೆಯಲು ಅದು ಶಿಸ್ತಿನ ಮಾಪನವಾಗಿತ್ತು. ನಿಜವಾದ ಸ್ವರಾಜ್ಯ ತಾನಾಗಿ ಬರುತ್ತದೆ." ಎಂದು ಬಿಟ್ಟರು ಗಾಂಧಿ. ಖಿಲಾಫತ್ ಅಬ್ಬರ ಮೇರೆ ಮೀರುತ್ತಿತ್ತು. ಯಾರು ಬೆಂಕಿಯುಗುಳುವ ಭಾಷಣ ಮಾಡುತ್ತಾರೋ ಅವರಿಗೆ ಶಹಭಾಸ್ ಗಿರಿ ದಕ್ಕುತ್ತಿತ್ತು. ಆದರೆ ಈ ವಾಗ್ಭಟರೇ ಒಳಗಿಂದೊಳಗೆ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋಟ್ಗರ್'ನ ಸ್ಟೋಕ್ಸ್ ನನಗೆ ಹೇಳಿದಾಗ ಅತ್ಯಾಶ್ಚರ್ಯವಾಯಿತು. ಲಾಲಾಲಜಪತ್ ರಾಯರನ್ನು ನಾಣು ಭೇಟಿಯಾದಾಗ ಅವರೂ ಸ್ಟೋಕ್ಸ್ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು. ಉನ್ನತ ನಾಯಕರಿಂದ ಹಿಡಿದು ಮರಿ ಪುಢಾರಿಗಳವರೆಗೆ ಯಾರಿಗೂ ಗಾಂಧಿಯ ಹೋರಾಟ ಎತ್ತ ಸಾಗುತ್ತಿದೆ, ಸಾಗುತ್ತದೆ ಎನ್ನುವುದರ ಅರಿವೇ ಇರಲಿಲ್ಲ. ಗಾಂಧಿಯವರ ಅಂತಿಮ ಗುರಿಯೇನು ಎಂದು ತಿಳಿದುಕೊಳ್ಳುವಂತೆ, ತಮ್ಮ ನಂಬಿಗಸ್ಥ ಬೆಂಬಲಿಗರನ್ನು ಬಿಟ್ಟು ತಾವೇನಾದರೂ ಹಿಮಾಲಯಕ್ಕೆ ಹೋಗುತ್ತಾರೋ ಎನ್ನುವುದನ್ನು ಕಂಡುಕೊಳ್ಳುವಂತೆ ನಾನು ಅವರಿಗೆ ಸಲಹೆ ಮಾಡಿದೆ.(ಇನ್ ಸೈಡ್ ಕಾಂಗ್ರೆಸ್ - ಸ್ವಾಮಿ ಶೃದ್ಧಾನಂದ)

           1922 ಮಾರ್ಚಿನಲ್ಲಿ ಶೃದ್ಧಾನಂದ ಕಾಂಗ್ರೆಸ್ಸಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ "ಗಾಂಧಿ ಹೇಳಿದ ಅಹಿಂಸಾ ಆದರ್ಶದ ಪ್ರಕಾರ ಭಾರತದಲ್ಲಿ ಅಹಿಂಸಾತ್ಮಕ ವಾತಾವರಣ ನೆಲೆಗೊಳ್ಳುತ್ತದೆ ಎನ್ನುವ ಬಗ್ಗೆ ನಂಬಿಕೆ ಇಲ್ಲ. ಕಾನೂ ಭಂಗ ಚಳವಳಿ ಶೀಘ್ರ ಆರಂಭವಾಗಬಹುದೆಂದು ನನಗನಿಸುತ್ತಿಲ್ಲ. ಅಲ್ಲದೆ ಅಸಹಕಾರ ಆಂದೋಲನದ ಪ್ರಚಾರ ಕುರಿತಂತೆ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಜೊತೆ ನಾನು ಭಿನ್ನಾಭಿಪ್ರಾಯ ಹೊಂದಿದ್ದೇನೆ. ಆಡಳಿತ ಶಾಹಿ ಈಗ ಗಾಂಧಿಯನ್ನು ತನ್ನತ್ತ ಸೆಳೆದುಕೊಂಡಿದೆ!" ಎಂದು ಬರೆದಿದ್ದರು. ಆದರೆ ಶೃದ್ಧಾನಂದರ ರೀತಿಯ ದೃಷ್ಟಿಕೋನ ಇರುವವರು ಕಾರ್ಯಕಾರಿ ಸಮಿತಿಯನ್ನು ತ್ಯಜಿಸಬೇಕೆನ್ನುವುದು ಕೇವಲ ಗಾಂಧಿಯವರ ಅಭಿಪ್ರಾಯ ಎಂದು ಪಟೇಲ್ ಮೊದಲಾದ ಕಾಂಗ್ರೆಸ್ ನಾಯಕರು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಅಸ್ಪೃಶ್ಯತಾ ನಿರ್ಮೂಲನಾ ಕಾರ್ಯದ ಮುಂದಾಳತ್ವವನ್ನು ಸ್ವಾಮಿ ಶೃದ್ಧಾನಂದರಿಗೆ ವಹಿಸಲಾಯಿತು. ವಿಚಿತ್ರವೆಂದರೆ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಗೊಳಿಸುತ್ತಿದ್ದ ಮುಸ್ಲಿಮ್ ನಾಯಕರಿಗೆ ಕಾಂಗ್ರೆಸ್ ನೀತಿನಿರೂಪಣೆಯಲ್ಲಿ ಮಾರ್ಗದರ್ಶನ ಮಾಡಲು ಹಾಗೂ ಸಂಸ್ಥೆಯ ಮಾನ್ಯತೆ ಪಡೆದ ಪ್ರತಿನಿಧಿಗಳಂತೆ ಅವಕಾಶ ನೀಡಲಾಗಿತ್ತು. ಹಿಂದೂ ಸಮಾಜ ಭಿನ್ನವಾಗದಂತೆ ರಕ್ಷಿಸುವ ಕೆಲಸ ಮಾಡುತ್ತಿದ್ದವರನ್ನು ಬಹಿಷ್ಕರಿಸಲಾಗಿತ್ತು. ಇದು ಶೃದ್ಧಾನಂದರನ್ನು ಕುಪಿತಗೊಳಿಸಿತು. ಅವರು ಕಾಂಗ್ರೆಸ್ಸಿನಿಂದ ಹೊರಬಂದರು.(ಇನ್ ಸೈಡ್ ಕಾಂಗ್ರೆಸ್ - ಸ್ವಾಮಿ ಶೃದ್ಧಾನಂದ)

            ಗಾಂಧಿಯವರ ವಿಚಿತ್ರ ನೀತಿಗಳಿಂದಾಗಿ 1922ರಲ್ಲಿ ಒಂದು ಕೋಟಿಯಷ್ಟಿದ್ದ ಕಾಂಗ್ರೆಸ್ ಸದಸ್ಯರ ಸಂಖ್ಯೆ ಒಂದೇ ವರ್ಷದಲ್ಲಿ ಕೆಲವೇ ಸಾವಿರಕ್ಕೆ ಕುಸಿಯಿತು. ಸ್ವಾಮಿ ಶೃದ್ಧಾನಂದರು "ವಿವರಿಸಲು ಅಸಾಧ್ಯವಾದ ತಥಾಕಥಿತ ಸ್ವರಾಜ್ಯದ ಮರೀಚಿಕೆಯ ಬೆನ್ನು ಹತ್ತಿ ಹೋಗಿ ಸಮಯ ವ್ಯರ್ಥ ಮಾಡುವ ಬದಲು ನೈಜ ಸ್ವರಾಜ್ಯದ ಗುರಿಗಾಗಿ ಹೋರಾಟ ಮಾಡಿ. ರಾಷ್ಟ್ರೀಯ ಭಾವನೆ ಹೊಂದಿದ ಪ್ರತಿಯೊಬ್ಬರೂ ಕಾಂಗ್ರೆಸ್ ಪ್ರವೇಶಿಸಿ ದೇಶಕ್ಕಾಗಿ ತನ್ನ ಕೈಲಾದ ಅಳಿಲು ಸೇವೆಯನ್ನು ಮಾಡಲು ಉದ್ಯುಕ್ತವಾಗುವಂತೆ ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿ" ಎಂದು ಲೇಖನವನ್ನೂ ಬರೆದರು. ಖಿಲಾಫತ್ ಅತಿರೇಕದಂದ ಮತಾಂತರಕ್ಕೊಳಗಾದ ಹಿಂದೂಗಳ ಶುದ್ದೀಕರಣ ಕಾರ್ಯ ಕೈಗೊಂಡು ಮರಳಿ ಮಾತೃಧರ್ಮಕ್ಕೆ ಕರೆತಂದರು. ಅವರ ಶುದ್ಧಿ ಪ್ರಚಾರದಿಂದ ಉತ್ತರಪ್ರದೇಶವೊಂದರಲ್ಲೇ ಸುಮಾರು 18000 ಮತಾಂತರಿತರು ಮರಳಿ ಮಾತೃಧರ್ಮಕ್ಕೆ ಸೇರಿದರು. ತಮ್ಮ ಕಾಲ ಕೆಳಗಿನ ನೆಲ ಅದುರುತ್ತಿರುವುದನ್ನು ಅರ್ಥೈಸಿಕೊಂಡ ಮುಲ್ಲಾಗಳು ಶೃದ್ಧಾನಂದರ ಮೇಲೆ ದೋಷಾರೋಪಣೆಗೆ ತೊಡಗಿದರು. ಯಾವ ಮುಸಲ್ಮಾನರು ಹಿಂದೊಮ್ಮೆ ಇದೇ ಸಂತರನ್ನು ಮಸೀದಿಯೊಳಗೆ ಕರೆದೊಯ್ದು ಪ್ರವಚನ ಹೇಳಿಸಿಕೊಂಡಿದ್ದರೋ ಅದೇ ಮುಸ್ಲಿಮರು ಅವರ ಮೇಲೆ ದ್ವೇಷಕಾರಲಾರಂಭಿಸಿದರು. 1926 ಡಿಸೆಂಬರ್ 23ರಂದು ಅಬ್ದುಲ್ ರಶೀದ್ ಎಂಬ ಮುಸ್ಲಿಮ್ ಯುವಕ ಸ್ವಾಮಿ ಶೃದ್ಧಾನಂದರನ್ನು ಕಾಣಲೆಂದು ಅವರ ಆಶ್ರಮಕ್ಕೆ ಬಂದು ಅವರ ಮೇಲೆ ಗುಂಡು ಹಾರಿಸಿದ. ಶೃದ್ಧಾನಂದರು ಕೊನೆಯುಸಿರೆಳೆದರು. ಮುಸ್ಲಿಮರು ರಶೀದನ ಪರ ಕಾನೂನು ಹೋರಾಟಕ್ಕೆ ಭಾರಿ ಹಣ ಸಂಗ್ರಹಿಸಿದರು. ಪ್ರಮುಖ ಕಾಂಗ್ರೆಸ್ ಸದಸ್ಯ ಅಸೀಫ್ ಅಲಿ ರಶೀದ್ ಪರ ವಕಾಲತ್ತು ಮಾಡಿದ. ಅಂತಹ ರಶೀದನನ್ನು ಗಾಂಧಿ ಸಹೋದರ ಎಂದು ಕರೆದರು. ಅಬ್ದುಲ್ ರಶೀದ್ ಪರ ವಾದಿಸಲು ನಾನು ಇಚ್ಚಿಸುತ್ತೇನೆ ಎಂದರು. ರಶೀದ್ ಹೊಂದಿದ್ದ ಆಕ್ರೋಶಕ್ಕೆ ನಾವೇ ಕಾರಣ ಎಂದರು. ಭಗತ್ ಹಾಗೂ ಇನ್ನಿತರ ಕ್ರಾಂತಿವೀರರ ಗಲ್ಲುಶಿಕ್ಷೆ ತಪ್ಪಿಸುವ ಮನವಿಗೆ ಅವರು ಹಿಂಸಾನಿರತರಾಗಿದ್ದರು ಎನ್ನುವ ಕಾರಣವೊಡ್ಡಿ ಒಪ್ಪದಿದ್ದ ಗಾಂಧಿ ರಶೀದನ ಕೃತ್ಯವನ್ನು ಸಮರ್ಥಿಸಿಕೊಂಡದ್ದೇಕೆ. ಅದನ್ನೂ ಆ ನೆಲೆಯಲ್ಲಿಯೇ ನೋಡಬೇಕಿತ್ತಲ್ಲವೆ? ಇವತ್ತಿನ ಓಲೈಕೆಯ ರಾಜಕಾರಣಕ್ಕೆ ಭದ್ರ ತಳಹದಿ ಹಾಕಿದ ರಾಜಕಾರಣಿಯಾಗಿ ನನಗೆ ಗಾಂಧಿ ಕಾಣುತ್ತಾರೆ. ಹಿಂದೂಗಳೇನಾದರೂ ಮುಸ್ಲಿಮರನ್ನು ಕೊಲ್ಲುತ್ತಿದ್ದರೆ ಗಾಂಧಿ ಹೀಗೆ ಹೇಳುತ್ತಿದ್ದರೇ? ಹಿಂದೂಗಳಿಗೆ ಅಹಿಂಸೆ ಬೋಧಿಸುವ ಗಾಂಧಿ ಮುಸ್ಲಿಮರು ಮಾಡುವ ಹಿಂಸಾಪಾತಕಗಳನ್ನು ಸಮರ್ಥಿಸಿಕೊಳ್ಳುತ್ತಾರೆ, ಅಂತಹವರನ್ನು ಸಹೋದರರೆಂದು ಅಪ್ಪಿಕೊಳ್ಳುತ್ತಾರೆ, ತಪ್ಪು ನಮ್ಮದೇ ಎನ್ನುತ್ತಾರೆ ಎಂದಾದರೆ ಆ ಅಹಿಂಸೆ ಯಾವ ಬಗೆಯದು. ಗಾಂಧಿ ಹಾಕಿದ ಆ ಅಡಿಪಾಯ ಇಂದಿಗೂ ಅಲುಗಾಡದೆ ನಿಂತಿದೆ. ಇಂದು ಬಂಗಾಳ, ಕೇರಳ, ಕರ್ನಾಟಕಗಳಲ್ಲಿ ಬಹುತೇಕ ದೇಶದಾದ್ಯಂತ ಹಿಂದೂಗಳ ಕಗ್ಗೊಲೆಯಾಗುತ್ತದೆ. ಲಜ್ಜೆಗೆಟ್ಟ ರಾಜಕಾರಣಿಗಳು ಕೊಲೆಗಡುಕರ ಸಹಾಯಕ್ಕೆ ಧಾವಿಸುತ್ತಾರೆ. ಇದು ಯಾವ ಪಕ್ಷವನ್ನೂ ಬಿಟ್ಟಿಲ್ಲ. ಮೊನ್ನೆ ಮೊನ್ನೆ ನವರಾತ್ರಿ ಹಾಗೂ ಮೊಹರಮ್ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ಮಾರಣಹೋಮ ಯಾವುದೇ ಸುದ್ಧಿ ಮಾಧ್ಯಮಗಳಲ್ಲಿ ಪ್ರತಿಫಲಿಸಲಿಲ್ಲ ಎಂದಾಗಲೇ ಈ ಓಲೈಕೆ ಎಷ್ಟು ಆಳವಾಗಿ ಬೇರೂರಿದೆ ಎಂದು ಗೊತ್ತಾಗುತ್ತದೆ.

         ಇತ್ತ ಹಿಂದೂಗಳ ನಾಯಕ, ಮಹಾ ಸಂತರೊಬ್ಬನನ್ನು ಕೊಲೆಗೈದ ಹಂತಕ ರಶೀದನಿಗೆ ಶೃದ್ಧಾಂಜಲಿ ಸಲ್ಲಿಸಲೆಂದು 50ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಮಸೀದಿಗಳಲ್ಲಿ ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಮಾತ್-ಉಲ್-ಉಲೇಮಾ ಪಕ್ಷದ ಅಧಿಕೃತ ಮುಖವಾಣಿ ರಶೀದ್ ಹುತಾತ್ಮ ಎಂದು ಅನೇಕ ವಾದಗಳನ್ನು ಮಂಡಿಸಿ ಕರಪತ್ರಗಳನ್ನು ಹೊರಡಿಸಿತು. ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವ, ಅವರ ಶವಸಂಸ್ಕಾರಕ್ಕೆ ಸಾಗರೋಪಾದಿಯಲ್ಲಿ ತಮ್ಮವರನ್ನು ಒಟ್ಟುಗೂಡಿಸುವ ಮುಸ್ಲಿಮರ ಮತಾಂಧತೆ ಇಂದಾದರೂ ಕಡಿಮೆಯಾಗಿದೆಯೇ?

ಮಂಗಳವಾರ, ಅಕ್ಟೋಬರ್ 25, 2016

ಯಾರು ಮಹಾತ್ಮ? ಭಾಗ- ೧೬

ಯಾರು ಮಹಾತ್ಮ?

ಭಾಗ- ೧೬


ಖಿಲಾಫತ್ತಿನ ಕಿತಾಪತಿಗಳನ್ನು ಈಗಾಗಲೇ ನೋಡಿದ್ದೇವೆ. 1920 ಜೂನ್ 9ರಂದು ಅಲಹಾಬಾದಿನಲ್ಲಿ ನಡೆದ ಖಿಲಾಫತ್ ಸಮ್ಮೇಳನದಲ್ಲಿ ಅಸಹಕಾರದ ವಿಷಯವಾಗಿ ರಚನೆಯಾದ ಕಾರ್ಯಕಾರಿ ಸಮಿತಿಯಲ್ಲಿದ್ದ ಏಕೈಕ ಹಿಂದೂ ಗಾಂಧಿ! ಮುಂದಿನ ತಿಂಗಳು ಆಗಸ್ಟ್ ಒಂದರಿಂದ ಖಿಲಾಫತ್ ಆಂದೋಲನ ಶುರು ಮಾಡುತ್ತೇವೆಂದು ವೈಸ್ ರಾಯ್ ಗೆ ನೋಟಿಸ್ ನೀಡಿದ್ದು ಯಾವುದೇ ಖಿಲಾಫತರಲ್ಲ, ಬದಲಿಗೆ ಗಾಂಧಿ. ಭಾರತದ ರಾಜಕೀಯ ಧುರೀಣನಾಗಿ ಕಾರ್ಯಾರಂಭಿಸಿದ ಕೂಡಲೇ ದೇಶಕ್ಕೆ ಆರು ತಿಂಗಳೊಳಗೆ ಸ್ವರಾಜ್ಯ ತಂದುಕೊಡುವುದಾಗಿ ಭರವಸೆ ನೀಡಿದರು ಗಾಂಧಿ. (ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ - ಡಾ. ಬಿ.ಆರ್. ಅಂಬೇಡ್ಕರ್). ಹೀಗೆ ಆಶ್ವಾಸನೆ ಕೊಟ್ಟು ವಾಸನೆ ಬರಿಸುವ ಭಾರತದ ಇಂದಿನ ರಾಜಕಾರಣಿಗಳ ಗುರು ಗಾಂಧಿ ಎನ್ನಬಹುದು. "ಎರಡೂ ಸಮುದಾಯಗಳು ಏಕತೆ ಸಾಧಿಸಲು ಖಿಲಾಫತ್ ಜೀವಮಾನದಲ್ಲೇ ಒಂದು ಸದವಕಾಶ ಕಲ್ಪಿಸಿದೆ. ಹಿಂದೂಗಳು ಮುಸ್ಲಿಮರ ಜೊತೆ ಶಾಶ್ವತ ಗೆಳೆತನ ಸಂಪಾದಿಸಬೇಕು ಎಂದಾದರೆ, ಇಸ್ಲಾಮ್ ಗೌರವ ಸ್ಥಾಪಿಸುವ ಪ್ರಯತ್ನದಲ್ಲಿ ನಾಶ ಹೊಂದಲೂ ತಯಾರಾಗಿರಬೇಕು." ಎಂದು ಗಾಂಧಿ ಸ್ಪಷ್ಟಪಡಿಸಿದರು. (ಇಂಡಿಯಾ ಆಂಡ್ ಪಾಕಿಸ್ತಾನ - ವಿ.ಬಿ. ಕುಲಕರ್ಣಿ). "ಇಸ್ಲಾಂ ರಕ್ಷಣೆಗಾಗಿ ಷರತ್ತುಬದ್ಧ ಮತ್ತು ಪೂರ್ಣಹೃದಯದ ಸೇವೆ ನೀಡುವುದರಲ್ಲಿಯೇ ಹಿಂದೂ ಧರ್ಮದ ರಕ್ಷಣೆ, ಸುರಕ್ಷಿತತೆಯೂ ಅಡಗಿದೆ ಎನ್ನುವುದನ್ನು ಹಿಂದೂಗಳು ಮನವರಿಕೆ ಮಾಡಿಕೊಳ್ಳಬೇಕು" ಎಂದು ಘೋಷಿಸಿದರು ಗಾಂಧಿ.(ಗಾಂಧಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ).

ರೌಲತ್ ಕಾಯ್ದೆ ವಿರುದ್ಧ ನಡೆದ ಸತ್ಯಾಗ್ರಹ ಪ್ರಚಾರದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಯಾವುದೇ ಘರ್ಷಣೆ ನಡೆಯಲಿಲ್ಲ. ಆದರೂ ಪ್ರಮಾಣ ತೆಗೆದುಕೊಳ್ಳುವಂತೆ ಗಾಂಧಿ ತಮ್ಮ ಬೆಂಬಲಿಗರಿಗೆ ಸೂಚಿಸಿದರು. ಇದು ಆರಂಭದಿಂದಲೇ ಹಿಂದೂ ಮುಸ್ಲಿಮ್ ಐಕ್ಯತೆ ಬಗ್ಗೆ ಅವರೆಷ್ಟು ಹಠವಾದಿಯಾಗಿದ್ದರು ಎನ್ನುವುದನ್ನು ತೋರಿಸುತ್ತದೆ.(ಪಾಕಿಸ್ತಾನ ಆರ್ ಪಾರ್ಟಿಷನ್ ಆಫ್ ಇಂಡಿಯಾ-ಡಾ. ಬಿ.ಆರ್. ಅಂಬೇಡ್ಕರ್). ವಿವೇಕ ಉಳ್ಳ ಯಾರಾದರೂ ಹಿಂದೂ ಮುಸ್ಲಿಮ್ ಐಕ್ಯತೆಗಾಗಿ ಈ ರೀತಿ ವರ್ತಿಸುತ್ತಾರೆಯೇ. ಅಷ್ಟಕ್ಕೂ ಹಿಂದೂ ಮುಸ್ಲಿಮರ ಮಧ್ಯೆ ಐಕ್ಯತೆ ಹಿಂದಾದರೂ ಎಲ್ಲಿತ್ತು? ರಾಷ್ಟ್ರೀಯತೆ, ರಾಷ್ಟ್ರ ಎಂದರೆ ತಾಯಿ ಎನ್ನುವ ಭಾವನೆಯೇ ಇಲ್ಲದ ಇಸ್ಲಾಂ  ಮತೀಯರು ಹಿಂದೂಗಳೊಂದಿಗೆ ಎಂದಾದರೂ ಒಂದಾಗಿದ್ದರೆ? ಒಂದಾಗಲು ಸಾಧ್ಯವೇ? ಎಲ್ಲೋ ಒಂದೆರಡು ಕಡೆ ಕೆಲವೇ ಜನರನ್ನು ಗುಂಪಿನಲ್ಲಿ ಆಗಿರಬಹುದಾದುದನ್ನು ಸಾರ್ವತ್ರಿಕವಾಗಿ ಅನುಸರಿಸಲು ಹೋದ ಮೂರ್ಖತನವಿದು. ಇಲ್ಲದೆ ಇದ್ದುದನ್ನು ಕಲ್ಪಿಸಿಕೊಂಡವರ ಸಾಲಿಗೆ ಗಾಂಧಿಯೂ ಸೇರಿದರು ಅಷ್ಟೇ ಎನ್ನಬಹುದು. ಈ ಮೂರ್ಖತನದ ಪರಿಣಾಮಗಳನ್ನು ಈ ದೇಶ ಅದೆಷ್ಟು ಕಂಡಿಲ್ಲ?

ಬರೇ ಇಷ್ಟೇ ಆಗಿದ್ದರೆ ಯಾವುದೇ ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ. 1920 ಸೆಪ್ಟೆಂಬರ್ 8ರಂದು ಯಂಗ್ ಇಂಡಿಯಾದಲ್ಲಿ ಗಾಂಧಿ ಬರೆದ ಲೇಖನವನ್ನೋದಿದರೆ ಎಂತಹವನಿಗಾದರೂ ರಕ್ತ ಕುದಿಯಬೇಕು. "ದೇವರೊಬ್ಬನೇ ಶ್ರೇಷ್ಠ ಬೇರಾರೂ ಅಲ್ಲ ಎನ್ನುವುದನ್ನು ಬಿಂಬಿಸಲು ಹಿಂದೂ ಮತ್ತು ಮುಸ್ಲಿಮರು ಇಬ್ಬರೂ ಉತ್ಸಾಹದಿಂದ "ಅಲ್ಲಾ ಹೋ ಅಕ್ಬರ್" ಎಂದು ಘೋಷಣೆ ಹಾಕಬೇಕು." ಅಂಬೇಡ್ಕರ್ ತಮ್ಮ "ಪಾಕಿಸ್ತಾನ್ ಆರ್ ಪಾರ್ಟೀಷನ್ ಆಫ್ ಇಂಡಿಯಾ"ದಲ್ಲಿ ಇದನ್ನು "ಇದು ನಮ್ಮ ಅಲ್ಪತನದ ಒಪ್ಪಿಗೆ" ಎಂದು ವಿಶ್ಲೇಷಿಸಿದ್ಡಾರೆ. ಒಂದು ಕಡೆ ವಿದೇಶೀ ವಸ್ತುಗಳ ದಹನ ಚಳುವಳಿ ನಡೆಯುತ್ತಿದ್ದಾಗ, ಗಾಂಧಿ ಅದನ್ನು ಬಡವರಿಗೆ ಹಂಚಬಹುದಲ್ವೇ ಎಂದಿದ್ದರು. ಮುಂದೆ ಇದೇ ಗಾಂಧಿ ವಿದೇಶೀ ವಸ್ತುಗಳ ದಹನದ ಚಳುವಳಿ ಕೈಗೊಂಡರು ಎನ್ನುವುದು ಮಾತ್ರ ಚೋದ್ಯ! ಆದರೆ ಖಿಲಾಫತ್ ಸಂದರ್ಭದಲ್ಲಿ ಅತ್ತ ವಿದೇಶೀ ವಸ್ತುಗಳ ದಹನ ನಡೆಯುತ್ತಿರುವಾಗ ಇತ್ತ ಗಾಂಧಿ, ಮುಸ್ಲಿಮರು ವಿದೇಶೀ ವಸ್ತ್ರಗಳನ್ನು ತುರ್ಕಿಯ ತಮ್ಮ ಸಹೋದರರಿಗೆ ಕಳುಹಿಸಲು ಒಪ್ಪಿಗೆ ನೀಡಿದರು. ಹಿಂದೂಗಳ ಬಗ್ಗೆ ಗಾಂಧಿಯದ್ದು ಯಾವಾಗಲೂ ಬಿಗಿ ನಿಲುವು. ಅದೇ ಮುಸ್ಲಿಮರ ಬಗ್ಗೆ ಸದಾ ಮೃದು ಭಾವನೆ ಹಾಗೂ ಅವರು ಹೇಗೆ ಮಾಡಿದರೂ ಸರಿ ಎನ್ನುವ ಭಾವನೆ ಅವರ ಹೃದಯದಲ್ಲಿರುತ್ತಿತ್ತು.(ಪಾಕಿಸ್ತಾನ್ ಆರ್ ಪಾರ್ಟೀಷನ್ ಆಫ್ ಇಂಡಿಯಾ - ಡಾ. ಬಿ.ಆರ್. ಅಂಬೇಡ್ಕರ್)

ಉತ್ತರಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮುನ್ಷಿರಾಮ್ ಎಂಬಾತ ಸ್ವಾಮಿ ದಯಾನಂದ ಸರಸ್ವತಿಯವರನ್ನು ಭೇಟಿಯಾಗಿ ಅವರಿಂದ ಪ್ರಭಾವಿತಗೊಂಡು ಆರ್ಯ ಸಮಾಜ ಸೇರಿದ್ದರು. 1887ರಲ್ಲಿ ವಕೀಲರಾದ ಆದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸ ಹೀಗೆ ನಾಲ್ಕೂ ಆಶ್ರಮಗಳನ್ನು ಪೂರೈಸಿದರು. ತಮ್ಮ ಹೆಸರನ್ನು ಶೃದ್ಧಾನಂದ ಎಂದು ಬದಲಾಯಿಸಿಕೊಂಡರು. 1902ರಲ್ಲಿ ಹರಿದ್ವಾರದಲ್ಲಿ ಮೊದಲ ಗುರುಕುಲ ಸ್ಥಾಪಿಸಿದ ಅವರು ತಮ್ಮ ಬಳಿಯಿದ್ದ ಸುಮಾರು ನಲವತ್ತು ಸಾವಿರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ತಮ್ಮ ಪುತ್ರರ ಆಸ್ತಿಯೆಲ್ಲವನ್ನು ಅದಕ್ಕೆ ನೀಡಿ ಅಲ್ಲಿ ಅವಿಶ್ರಾಂತ ಸೇವೆ ಸಲ್ಲಿಸಿದರು. 1917ರಲ್ಲಿ ಸಂನ್ಯಾಸ ಸ್ವೀಕರಿಸಿದರು. ರಾಷ್ಟ್ರೀಯತೆಯ ಪ್ರಚಾರಕರಾಗಿ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯನ್ನು ವಿರೋಧಿಸುತ್ತಿದ್ದ ಆತ, ಹಿಂದೂ ದೇಶದ ಬಲವರ್ಧನೆಗೆ ಸರ್ವಸ್ವವನ್ನೂ ತ್ಯಾಗ ಮಾಡಿದರು. ಗಾಂಧಿಯವರು ನಾಗರಿಕ ಹಾಗೂ ಅಹಿಂಸಾತ್ಮಕ ಅಸಹಕಾರ ಎನ್ನುವ ಆಂದೋಲನ ಕೈಗೊಂಡಾಗ ಅದಕ್ಕೆ ಧುಮುಕಿದ ಶೃದ್ಧಾನಂದರು ಅಸಂಖ್ಯ ಹಿಂಬಾಲಕರನ್ನೂ ಪಡೆದರು. ಆಂದೋಲನದ ವೇಳೆ ಬ್ರಿಟಿಷ್ ಸೈನಿಕರ ಗುಂಡಿಗೆ ಎದೆಯೊಡ್ಡಿ ಮುಂದುವರಿದ ವೀರ ಅವರು. ಗಲಭೆಯಲ್ಲಿ ಮೃತಪಟ್ಟವರಿಗಾಗಿ ಜಾಮಾ ಮಸೀದಿಯಲ್ಲಿ ಪ್ರಾರ್ಥನೆ ಕೈಗೊಂಡಿದ್ದಾಗ ಆ ಮಸೀದಿಯಲ್ಲಿ ಪ್ರವಚನ ನೀಡಿದ ಕಾವಿಧಾರಿ ಸಂತ ಶೃದ್ಧಾನಂದ! ದೆಹಲಿಯಲ್ಲಿ ರೌಲತ್ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆತ ಅನೇಕ ಚಳವಳಿಗಳನ್ನು ಯಶಸ್ವಿಯಾಗಿ ಸಂಘಟಿಸಿದರು. ಚೌರಿಚೌರಾ ಘಟನೆಯ ಬಳಿಕ ಗಾಂಧಿ ಅಸಹಕಾರ ಆಂದೋಲನವನ್ನು ಹಿಂದಕ್ಕೆ ತೆಗೆದುಕೊಂಡಾಗ "ಆತ್ಮಸಾಕ್ಷಿ ಎನ್ನುವುದು ನಿಮ್ಮೊಬ್ಬರ ಸ್ವತ್ತಲ್ಲ. ನನಗೂ ಆತ್ಮಸಾಕ್ಷಿ ಇದೆ" ಎಂದು ನೇರವಾಗಿ ಖಾರವಾಗಿ ಗಾಂಧಿಗೆ ಪತ್ರ ಬರೆದಿದ್ದರು. ಹೀಗೆ 1922 ಮಾರ್ಚ್ 12ರಂದು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ನಿಜಾರ್ಥದಲ್ಲಿ ಸಂನ್ಯಾಸಿಯಾದರು ಶೃದ್ಧಾನಂದ.

"ದಿ ಲಿಬರೇಟರ್" ವಾರಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಲೇಖನಗಳು ಮುಂದೆ ಅವರ ಇಪ್ಪತ್ತನೇ ಸ್ಮೃತಿದಿವಸದಂದು "ಇನ್ ಸೈಡ್ ಕಾಂಗ್ರೆಸ್" ಎನ್ನುವ ಹೆಸರಲ್ಲಿ ಪುಸ್ತಕ ರೂಪದಲ್ಲಿ ಹೊರಬಂತು. ಅವರು ಕಾಂಗ್ರೆಸ್ಸಿನಲ್ಲಿದ್ದಾಗಿನ ನಡೆದ ಘಟನೆಗಳ ಗುಚ್ಛವದು. ಅವರು ಹೇಳುತ್ತಾರೆ - "ಬ್ರಿಟಿಷ್ ಸರಕಾರದ ಜೊತೆ ಶಾಂತಿ ಸ್ಥಾಪಿಸಿಕೊಳ್ಳದಂತೆ ಕಾಬೂಲ್ ಸುಲ್ತಾನನನ್ನು ಆಗ್ರಹಿಸುವ ಸಂದೇಶ ಕಳುಹಿಸಲು ರಾಜಕೀಯ ನಾಯಕರು ತನ್ನನ್ನು ಬಳಸಿಕೊಂಡರು ಎಂದು ಮೌಲಾನಾ ಅಲಿ ಆಕ್ಷೇಪಿಸುತ್ತಿದ್ದರು. ಅದು ಜಾಣತನದ ಹೆಜ್ಜೆಯಾಗಿರಲಿಲ್ಲ ಎಂದು ನಾನೂ ಹೇಳಿದೆ. ಆ ಸಂದರ್ಭದಲ್ಲಿ ಸುಮ್ಮನಿದ್ದ ಅವರು ಆನಂದ ಭವನ ತಲುಪುತ್ತಿದ್ದಂತೆ ನನ್ನನ್ನು ಪಕ್ಕಕ್ಕೆ ಕರೆದು ತಮ್ಮ ಕೈಚೀಲದಿಂದ ಕಾಗದವೊಂದನ್ನು ತೆಗೆದು ಓದಲು ಕೊಟ್ಟರು. "ಅಹಿಂಸಾತ್ಮಕ ಅಸಹಕಾರ ಆಂದೋಲನದ ಜನಕನ ಕೈಬರಹದಲ್ಲಿದ್ದ ಅದನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಇದು ಪ್ರಾಯಶಃ ಅಲಿ ಸಹೋದರರನ್ನು ಮುಜುಗರದ ಸನ್ನಿವೇಶಕ್ಕೆ ಸಿಲುಕಿಸುವ ಮೂಲಕ ಗಾಂಧಿ ಮಾಡಿದ ನಾಲ್ಕನೇ ಹಿಮಾಲಯದಂತಹ ಪ್ರಮಾದ."
ಅಲಿ ಸಹೋದರರೇನೂ ಸಾಚಾಗಳಲ್ಲ. ಆದರೆ ಲೇಖನದ ಉದ್ದೇಶ ಅವರ ಕುರಿತಾದ ವಿಮರ್ಶೆಯಲ್ಲ. ಇದು ಮಹಾತ್ಮನ ನಡೆಯ ಬಗ್ಗೆ. ಭಾರತದಲ್ಲಿ ಶಾಂತಿ, ಅಹಿಂಸೆ ಎಂದು ಬಡಬಡಿಸುವ ಮಹಾತ್ಮ ಕಾಬೂಲಿನ ಸುಲ್ತಾನನಿಗೆ ಬ್ರಿಟಿಷರೊಂದಿಗೆ ಶಾಂತಿಯಿಂದಿರಬೇಡ ಎನ್ನುತ್ತಿದ್ದಾರೆ!

ಗುರುವಾರ, ಅಕ್ಟೋಬರ್ 20, 2016

ಯಾರು ಮಹಾತ್ಮ? ಭಾಗ- ೧ ೫

ಯಾರು ಮಹಾತ್ಮ?
ಭಾಗ- ೧ ೫

                     1920ರ ಆಗಸ್ಟಿನಲ್ಲಿ ಕಲ್ಕತ್ತಾದಲ್ಲಿ ನಡೆದ ತುರ್ತು ಅಧಿವೇಶನದಲ್ಲಿ ಖಿಲಾಫತ್ ವಿಷಯದಲ್ಲಿ ಅಸಹಕಾರ ಚಳವಳಿ ಕೈಗೊಳ್ಳಬೇಕು ಎಂದು ಗಾಂಧಿ ನಿರ್ಣಯ ಮಂಡಿಸಿದರು. ನಿರ್ಣಯದ ಮೂಲ ಕರಡಿನಲ್ಲಿ ಖಿಲಾಫತ್ ಮಾತ್ರವೇ ಇತ್ತು. ಆದರೆ ಕಾಂಗ್ರೆಸ್ ಅಧ್ಯಕ್ಷ ವಿಜಯರಾಘವಾಚಾರಿ ಮತ್ತಿರರ ಒತ್ತಾಸೆಗೆ ಸ್ವರಾಜ್ಯ ಬೇಡಿಕೆ, ರೌಲತ್ ಕಾಯ್ದೆಯ ಹಾಗೂ ಜಲಿಯವಾಲಾಬಾಗ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮುಂತಾದ ವಿಷಯಗಳನ್ನು ಸೇರಿಸಲಾಯಿತು. ಅಧಿವೇಶನಕ್ಕೂ ಮುನ್ನವೇ ಗಾಂಧಿ ಖಿಲಾಫತ್ ನಿರ್ಣಯವನ್ನು ಸ್ವತಂತ್ರವಾಗಿ ತೆಗೆದುಕೊಂಡಿದ್ದರು. ಅದರ ನಾಯಕತ್ವವನ್ನೂ ತಾವೇ ಊಹಿಸಿಕೊಂಡಿದ್ದರು. ಕಾಂಗ್ರೆಸ್ ಅಧ್ಯಕ್ಷ ವಿಜಯರಾಘವಾಚಾರಿಯೇ ಇದನ್ನು ವಿರೋಧಿಸಿದರು. ಚಿತ್ತರಂಜನ್ ದಾಸ್, ಬಿಪಿನ್ ಚಂದ್ರ ಪಾಲ್, ಅನಿಬೆಸೆಂಟ್, ಠಾಗೋರ್, ಜಿನ್ನಾ, ಆಂಡ್ರ್ಯೂಸ್ ಇದನ್ನು ವಿರೋಧಿಸಿದ ಪ್ರಮುಖರು. ಆದರೆ ಗಾಂಧಿಯ ಅಧೀನಪಡಿಸಿಕೊಳ್ಳುವ ವ್ಯಕ್ತಿತ್ವದಿಂದಾಗಿ ಕಾಂಗ್ರೆಸ್ ಅವರ್ ಹಾದಿಗೇ ಮರಳಿತು(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟೀಷನ್ - ಹೊ.ವೆ. ಶೇಷಾದ್ರಿ). ಗಾಂಧಿಯ ಖಿಲಾಫತ್ ಆವೇಶದ ಅನಾಹುತವನ್ನು ಹಿಂದಿನ ಭಾಗಗಳಲ್ಲೇ ನೋಡಿದ್ದೇವೆ.

                 ಕೊರೆಯುವ ಚಳಿಯ ದಿನಗಳವು. ಪಾಕಿಸ್ತಾನದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ದೆಹಲಿಗೆ ಬಂದ ನಿರಾಶ್ರಿತರು ದೆಹಲಿಯಲ್ಲಿ ಆಶ್ರಯ ಪಡೆಯಲು ಬೇರಾವುದೇ ಸ್ಥಳ ಸಿಗದಿದ್ದಾಗ ಅಲ್ಲಿದ್ದ ಮಸೀದಿಗಳಲ್ಲಿ ಚಳಿಯಿಂದ ರಕ್ಷಣೆ ಪಡೆದಿದ್ದರು. ಹಲವರು ಮಸೀದಿಯ ಆವರಣಗಳಲ್ಲಿ, ಹೊರ ಛಾವಣಿಯ ಕೆಳಗೆ ಆಶ್ರಯ ಪಡೆದಿದ್ದರು. ಅಷ್ಟರಲ್ಲಿ ಗಾಂಧಿ ಆಮರಣಾಂತ ಉಪವಾಸ ಕೂತರು(1948 ಜನವರಿ 13). ಅವರ ಷರತ್ತುಗಳಲ್ಲಿ ದೆಹಲಿಯಲ್ಲಿ ನಿರಾಶ್ರಿತರು ಆಶ್ರಯಪಡೆದುಕೊಂಡಿದ್ದ ಮಸೀದಿಗಳನ್ನು ತೆರವು ಮಾಡಬೇಕು ಎನ್ನುವುದು ಕೂಡಾ ಸೇರಿತ್ತು. ಕೆಲವು ನಿರಾಶ್ರಿತರು ಗಾಂಧಿಯವರನ್ನು ಭೇಟಿಯಾಗಿ ವಸತಿ ಸಮಸ್ಯೆಯನ್ನು ಹೇಳಿದಾಗ "ಕೆಳಗೆ ಭೂಮಿಯಿದೆ. ಮೇಲೆ ದೇವರ ಆಗಸದ ಆಚ್ಛಾದವಿದೆ. ಅದರಲ್ಲೇ ನೀವು ತೃಪ್ತಿ ಕಾಣಬೇಕು ಎಂದುಬಿಟ್ಟರು ಗಾಂಧಿ(ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಮಾನವತೆಯ ಲವಲೇಶವೂ ಇಲ್ಲದ ಇಂತಹ ವ್ಯಕ್ತಿಯನ್ನು ಭಾರತ ಮಹಾತ್ಮ ಎಂದು ಘೋಷಿಸಿತಲ್ಲಾ?

                    ಮಸೀದಿಯ ಬಳಿ ಬಾಜಭಜಂತ್ರಿ ಇರಬಾರದು ಎಂದು ಮುಸ್ಲಿಮರು ಗಾಂಧಿಯ ಬಳಿ ಹೇಳಿದಾಗ "ಉತ್ಸವಗಳಲ್ಲಿ ಪವಿತ್ರ ಸಂಗೀತ ಇರಬೇಕೆಂದು ಯಾವುದೇ ಪ್ರಾಥಮಿಕ ತತ್ವವಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಮಸೀದಿಗಳ ಎದುರು ಸಂಗೀತ ನುಡಿಸಬೇಕೆಂದು ಹಿಂದೂ ಧರ್ಮದಲ್ಲಿ ಎಲ್ಲಿಯೂ ಹೇಳಲಾಗಿಲ್ಲ ಎಂದು ಇನ್ನೂ ಖಚಿತವಾಗಿ ಹೇಳಬಲ್ಲೆ" ಎಂದು ನುಡಿದರು ಗಾಂಧಿ(ಗಾಂಧೀಜಿ ಇನ್ ಆಂಧ್ರಪ್ರದೇಶ - ತೆಲುಗು ಅಕಾಡೆಮಿ). ಗಾಂಧಿಯ ದೃಷ್ಟಿಯಲ್ಲಿ ಸನಾತನ ಧರ್ಮ ಯಾವುದು. ಎರಡು ಸಾವಿರ ವರ್ಷಗಳ ಹಿಂದೆ ಉತ್ಸವ, ಮೆರವಣಿಗೆ ಆಗುತ್ತಿರುವಾಗ ಈ ಮಸೀದಿಗಳ ಎಲ್ಲಿದ್ದವು? ಮುಸಲ್ಮಾನರು ಎಲ್ಲಿದ್ದರು? ಗಾಂಧಿಯ ಹೇಳಿಕೆ ನೋಡಿದರೆ ಹಿಂದೂ ಧರ್ಮಕ್ಕಿಂತಲೂ ಇಸ್ಲಾಂ ಮತವೇ ಹಳೆಯದು ಎನ್ನುವ ಹಾಗೆ ಇದೆ! ಹಬ್ಬ, ಉತ್ಸವಗಳಲ್ಲಿ ಸಂಗೀತವಿಲ್ಲದಿದ್ದರೆ ಅದ್ಯಾವ ಸೀಮೆಯ ಹಬ್ಬ. ಉತ್ಸವ ಎಲ್ಲಾ ರೀತಿಯ ವೃತ್ತಿಗಳ ಅಂತಿಮ ಫಲವನ್ನು ಕಾಣಬಹುದಾದಂತಹ, ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಪೂರ್ಣ ರೀತಿಯ ಹಬ್ಬ. ಶತಶತಮಾನಗಳ ಪದ್ದತಿಯನ್ನು ಅಲ್ಲಗಳೆಯಲು ಗಾಂಧಿ ಯಾರು? ಮಸೀದಿಗಳ ಎದುರು ಸಂಗೀತ ನುಡಿಸುವಂತಿಲ್ಲ ಎಂದಾದರೆ ತುರ್ಕಿ ಹಾಗೂ ಇತರ ಮುಸ್ಲಿಮ್ ರಾಷ್ಟ್ರಗಳಲ್ಲಿ ಸಂಗೀತ ನುಡಿಸುವ ಪದ್ದತಿ ಯಾಕಿತ್ತು? ಹಿಂದೂಗಳನ್ನು ಅವಮಾನಿಸುವ ಸಲುವಾಗಿ ಮುಸ್ಲಿಮರು ಮಸೀದಿಗಳ ಎದುರು ಬಾಜಾಭಜಂತ್ರಿ ಬಹಿಷ್ಕರಿಸಿದರೆಂಬುದು ಸ್ಪಷ್ಟ. ಮುಸ್ಲಿಮರು ಬಾಗಲು ಹೇಳಿದರೆ ಗಾಂಧಿ ತೆವಳಿದರು!

                  ದೇಶದ ಅನೇಕ ಜನರ ನಾಲಗೆಯ ಮೇಲೆ ಶತಮಾನಗಳ ಪರ್ಯಂತ ನಲಿದು ಹಲವು ಜನರ ಪಾಲಿಗೆ ಮೋಕ್ಷದಾಯಕವಾದ ಭಜನೆ "ರಘುಪತಿ ರಾಘವ ರಾಜಾರಾಮ್". ಪೀಳಿಗೆಯಿಂದ ಪೀಳಿಗೆಗೆ ಭಾರತೀಯರ ನೀತಿ, ಸಂಸ್ಕೃತಿ, ವ್ಯಕ್ತಿತ್ವಗಳನ್ನು ರೂಪಿಸಿದ, ಉದ್ದೀಪಿಸಿದ ದೈವಿಕ ಜೋಡಿ ಸೀತಾರಾಮ. ಆದರ್ಶ ಪುರುಷ, ಆದರ್ಶ ಸ್ತ್ರೀ, ಆದರ್ಶ ದಂಪತಿಗಳಿಗೆ ಪ್ರತೀಕವಾದ ಜೋಡಿಯದು. ಭಾರತವನ್ನು ಮಾನವತೆಯ ಸಾಂಸ್ಕೃತಿಕ ಮಾರ್ಗದರ್ಶಿಯಾಗಿ ರೂಪಿಸಿದ ಜೋಡಿ ಸೀತಾರಾಮ. ರಾಷ್ಟ್ರಭಕ್ತಿಯ ಈ ಸ್ಪೂರ್ತಿ ಚಿಲುಮೆಯನ್ನೂ ಬಿಡಲಿಲ್ಲ ಗಾಂಧಿ. ಮೂಲ ಭಜನೆಗೆ "ಈಶ್ವರ್ ಅಲ್ಲಾ ತೇರೇ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" ಎನ್ನುವ ಸಾಲುಗಳನ್ನು ಸೇರಿಸಿದರು ಗಾಂಧಿ. ಈ ಪರಿಯ ಔದಾರ್ಯ ಮುಸಲ್ಮಾನರಿಂದ ನಿರೀಕ್ಷಿಸಲು ಸಾಧ್ಯವೇ? ಆಧ್ಯಾತ್ಮಿಕತೆಗಿಂತ ರಾಜಕೀಯವೇ ಅದರಲ್ಲೂ ತುಷ್ಟೀಕರಣದ ರಾಜಕೀಯವೇ ಮುಖ್ಯವಾಯಿತು ಗಾಂಧಿಗೆ! "ಹಿಂದೂವೊಬ್ಬ ಮುಸ್ಲಿಮ್ ಸಹೋದರನನ್ನು ಭೇಟಿಯಾದಾಗ ಒಳ್ಳೆ ಭಾವನೆ ಮತ್ತು ನಗೆಯಿಂದ ಸಮೀಪಿಸಲು ಸಲಾಮ್ ಮಾಡಬೇಕು" ಎಂದು ಗಾಂಧಿ ಉಪದೇಶಿಸಿದರು(ಗಾಂಧಿ ಇನ್ ಆಂಧ್ರಪ್ರದೇಶ-ತೆಲುಗು ಅಕಾಡೆಮಿ). ಹೀಗೆ ಗಾಂಧಿ ಸಮರ್ಪಣೆಯ ಸಂಕೇತವಾದ, ಆತ್ಮಕ್ಕೆ ಗೌರವ ಸೂಚಿಸುವ, ನಮಸ್ಕಾರವನ್ನೂ ಕೊಲೆಗೈದು ಮುಸ್ಲಿಮರಿಗೆ ಮುಜುರೆ ಒಪ್ಪಿಸಿದರು! ಕೇವಲ ದಿರಿಸು, ಹೆಸರು, ಗೀತೆಯ ಉಲ್ಲೇಖಗಳಿಂದಷ್ಟೇ ಗಾಂಧಿ ಹಿಂದೂವಂತೆ ಕಾಣುತ್ತಾರೆ. ಆದರೆ ಅಭಿರುಚಿ, ಅಭಿಪ್ರಾಯ, ನೈತಿಕತೆ, ಬುದ್ಧಿ ಹಾಗೂ ಹೃದಯಗಳಲ್ಲಿ ಅವರೆಲ್ಲಾ ಮುಸ್ಲಿಮ್ ಎಂದು ಯಾರಿಗಾದರೂ ಭಾಸವಾದರೆ ತಪ್ಪೇ?

                   "ದೇವದೂತ ಗ್ರೇಬ್ರಿಯಲ್ ಒಂದು ದಿನ ಗುಹೆಯಲ್ಲಿ ತನ್ನ ಬಳಿ ಬಂದುದಾಗಿಯೂ, ದಿವ್ಯಾಶ್ವವಾದ ಹರಾಕ್ ಮೇಲೆ ತನ್ನನ್ನು ಕರೆದೊಯ್ದಿದ್ದಾಗಿಯೂ, ತಾನು ಸ್ವರ್ಗಕ್ಕೆ ಭೇಟಿ ನೀಡಿದ್ದಾಗಿಯೂ ಮಹಮ್ಮದ್ ತಿಳಿಸಿದ್ದಾರೆ.ನೀವು ಕುರಾನ್ ಓದಿದರೆ ಅಚ್ಚರಿಯ ಸತ್ಯಗಳು ಅಂಧವಿಶ್ವಾಸದೊಂದಿಗೆ ಮಿಶ್ರಣವಾದುದನ್ನ ಕಾಣುವಿರಿ. ನೀವದನ್ನು ಹೇಗೆ ವಿವರಿಸುತ್ತೀರಿ? ಅವರು ಪ್ರೇರಣೆ ಪಡೆದಿದ್ದಲ್ಲ. ಆಕಸ್ಮಿಕವಾಗಿ ಸಿಕ್ಕಿದ್ದು, ಅವರು ತರಬೇತಿ ಪಡೆದ ಯೋಗಿಯಲ್ಲ.ತಾವು ಮಾಡುತ್ತಿರುವ ಬಗ್ಗೆ ಅವರಿಗೆ ವಿವರಣೆ ತಿಳಿದಿರಲಿಲ್ಲ. ಮಹಮ್ಮದ್ ರಿಂದ ಜಗತ್ತಿಗೆ ಆದ ಒಳ್ಳೆಯದು ಮತ್ತು ಮತಾಂಧತೆಯಿಂದ ಆದ ಮಹಾ ಕೆಡುಕುಗಳ ಬಗ್ಗೆ ಚಿಂತಿಸಿ. ಅವರ ಭೋದನೆಗಳಿಂದ ಲಕ್ಷಾಂತರ ಜನರು ಸಾಮೂಹಿಕ ಕಗ್ಗೊಲೆಯಾದುದರ ಬಗ್ಗೆ ಮಕ್ಕಳಿಂದ ವಿಯೋಗ ಹೊಂದಿದ ತಾಯಂದಿರು, ಅನಾಥರಾದ ಮಕ್ಕಳು,ಅತ್ಯಾಚಾರಕ್ಕೊಳಗಾದ ಮಾನಿನಿಯರು, ಇಡೀ ದೇಶಗಳು ನಾಶವಾದ ಬಗ್ಗೆ ಯೋಚಿಸಿ. ಎಲ್ಲ ಕಾಲ ಮತ್ತು ದೇಶಗಳಲ್ಲಿ ಮಹಾನ್ ಆಧ್ಯಾತ್ಮಿಕ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನರಲ್ಲ. ನೈಜ ಧರ್ಮವಿರುವಲ್ಲಿ ದೈವಿಕ ಜ್ಯೋತಿ ವಿಶಾಲ ಮನಸ್ಸನ್ನು ಕಾಣುತ್ತೇವೆ. ಇದರಿಂದ ಎಲ್ಲೆಡೆ ಬೆಳಕು ಕಾಣಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಮುಸ್ಲಿಮರು ಅಪಕ್ವರು ಮತ್ತು ಭಿನ್ನ ವರ್ಗದವರು. ಒಬ್ಬನೇ ದೇವರು ಅದಕ್ಕಿಂತ ಮೀರಿದ್ದು ಕೆಟ್ಟದ್ದು ಮತ್ತದನ್ನು ನಂಬುವವರನ್ನು ನಾಶ ಮಾಡಬೇಕು ಬೇರೆಯವರ ಧರ್ಮಗ್ರಂಥಗಳನ್ನು ಸುಡಬೇಕು. ಫೆಸಿಫಿಕ್ ನಿಂದ ಅಟ್ಲಾಂಟದವರೆಗೆ 500 ವರ್ಷಗಳ ಕಾಲ ರಕ್ತದ ಕೋಡಿಯೇ ಹರಿಯಿತು ಅದು ಮಹಮ್ಮದೀಯರ ಧರ್ಮ!" ಎಂದಿದ್ದಾರೆ ಸ್ವಾಮಿ ವಿವೇಕಾನಂದರು(ದಿ ಕಂಪ್ಲೀಟ್ ವರ್ಕ್ಸ್ ಆಫ್ ಸ್ವಾಮಿ ವಿವೇಕಾನಂದ).

                  ತಮ್ಮ ಸಂಖ್ಯೆ ಹೆಚ್ಚಿಸಲು, ಭೌಗೋಳಿಕವಾಗಿ ವಿಸ್ತರಿಸಲು ಜಿಹಾದ್ ಧಾರ್ಮಿಕ ಕರ್ತವ್ಯ ಎಂದು ನಂಬುತ್ತದೆ ಇಸ್ಲಾಮ್. ಇಸ್ಲಾಂ ಅನ್ನು ಅಂಗೀಕರಿಸಿದವ ತನ್ನ ಪರಿವಾರದ, ದೇಶದ, ಮತದ ಇತಿಹಾಸವನ್ನು ಮರೆತು "ಶುದ್ಧೀಕರಣ" ಪ್ರಕ್ರಿಯೆಗೆ ಒಳಗಾಗಿ ತನ್ನ ಹೆಸರನ್ನೂ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಶನ, ವಸನ, ಭಾಷೆ, ಕಲೆ, ಸಾಂಸ್ಕೃತಿಕ ನಂಬಿಕೆ-ಅಭಿರುಚಿ... ಹೀಗೆ ಎಲ್ಲವನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ತನ್ನ ದೇಶದ ಜೊತೆ ಹೊಂದಿರುವ ತಾಯಿ-ಮಗು ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ. ದಾಳಿಕೋರ ಗುಂಪಿನ ಜೊತೆಗೇ ತನ್ನ ಅಸ್ತಿತ್ವ ಗುರುತಿಸಿಕೊಳ್ಳಬೇಕಾಗುತ್ತದೆ. "ಸಾರೇ ಜಹಾಂಸೆ ಅಚ್ಛಾ" ಗೀತೆ ಬರೆದ ಇಕ್ಬಾಲನೇ ರಾಷ್ಟ್ರೀಯ ಸಮಗ್ರತೆ ಸಲುವಾಗಿ ಇಸ್ಲಾಮ್ ಸಹೋದರತ್ವವನ್ನು ನಾವು ತ್ಯಜಿಸಲಾರೆವು ಎಂದಿದ್ದ. ಅಜಂ ಖಾನ್ "ಭಾರತ್ ಮಾತಾ ಈಸ್ ಅ ಬ್ಲಡಿ ಡೆವಿಲ್" ಎಂದು ಕಿರುಚಿದ್ದ. ಇಸ್ಲಾಂನಲ್ಲಿ ಸೆಕ್ಯುಲರಿಸಮ್ಮಿಗೆ ಸ್ಥಾನವೇ ಇಲ್ಲ. ಇಸ್ಲಾಂ ಅನ್ನು ಹರಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ. ಮುಸ್ಲಿಮ್ ಯುವಕರು ಕರದಲ್ಲಿ ತಲವಾರ್ ಹಿಡಿದು ಇಸ್ಲಾಮ್ ಪ್ರಚಾರ ಮಾಡುವರು ಎಂದಿದ್ದ ಇಮಾಮ್ ಬುಖಾರಿ. ಇಸ್ಲಾಂ ಯಾವೆಲ್ಲಾ ದೇಶದ ಮೇಲೆ ದಾಳಿ ಮಾಡಿದೆಯೋ ಆ ದೇಶದ ವ್ಯಕ್ತಿತ್ವ ಸಂಪೂರ್ಣ ನಾಶವಾಗಿದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ನಮ್ಮಲ್ಲೇ ನೋಡಿ, ಮುಸಲರಿಂದಾಗಿ ಎಷ್ಟೊಂದು ಸಾಮೂಹಿಕ ನರಮೇಧವಾಯಿತು. ಕೆಲವರು ಹಿಂದೂಗಳ ಶವಗಳನ್ನುಪಯೋಗಿಸಿ ವಿಜಯ ಸ್ತಂಭವನ್ನೂ ಕಟ್ಟಿದರು. ಕುಶಲ ಕಲೆಗಳು, ಜ್ಞಾನ, ಆಧ್ಯಾತ್ಮಿಕತೆಯ ಕೇಂದ್ರಗಳಾಗಿದ್ದ ದೇವಾಲಯ, ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳು ಮುಸಲರ ಜಿಹಾದ್ ಬೆಂಕಿಗೆ ಉರಿದು ಹೋದವು. ನಮ್ಮ ಜನರ ನಂಬಿಕೆಯ ಕೇಂದ್ರಗಳು ನಾಶವಾದರೆ ಇಸ್ಲಾಂ ಹಬ್ಬಿಸಲು ಸುಲಭ ಎನ್ನುವುದು ಅವರಿಗೆ ತಿಳಿದಿತ್ತು. ಅದಕ್ಕೆಂದೇ ಒಬ್ಬ ಸೋಮನಾಥವನ್ನು ಧರೆಗುರುಳಿಸಿದ. ಮತ್ತೊಬ್ಬ ಕಾಶಿ ವಿಶ್ವೇಶ್ವರಾಲಯವನ್ನು ಮಸಣದಲ್ಲಿ ಮಲಗಿಸಿದ. ಮಗದೊಬ್ಬ ಅಯೋಧ್ಯೆಯನ್ನು...ಹೀಗೆ ಹಿಂದೂಗಳ ಮೇಲಾದ ಅತ್ಯಾಚಾರ, ಅನಾಚಾರಕ್ಕೆ ಲೆಖ್ಖವೇ ಇಲ್ಲ. ಇಂಥ ಇಸ್ಲಾಮನ್ನು, ಹಾಗದನ್ನು ಜೀವ-ಜೀವನಕ್ಕಿಂತ ಶ್ರೇಷ್ಠ ಎಂದು ಅನುಸರಿಸಿದ ಮುಸಲ್ಮಾನರನ್ನು ನಂಬಿ ಅವರನ್ನು ಓಲೈಸಿದ ಗಾಂಧಿಗಿಂತ ದೊಡ್ಡ ದುರಾತ್ಮ ಯಾರಿದ್ದಾರು? ಇವತ್ತಿನ ಓಲೈಕೆ ರಾಜಕಾರಣಕ್ಕೆ ಭದ್ರಬುನಾದಿ ಹಾಕಿದವರು ಗಾಂಧಿ ಎಂದರೆ ತಪ್ಪಾದೀತೇ?

ಬುಧವಾರ, ಅಕ್ಟೋಬರ್ 19, 2016

ಯಾರು ಮಹಾತ್ಮ? ಭಾಗ- ೧೪

ಯಾರು ಮಹಾತ್ಮ?

ಭಾಗ- ೧೪

ನಮ್ಮ ದೇಶದ ಧ್ವಜದ ಜೊತೆ ಯೂನಿಯನ್ ಜಾಕ್ ಕೂಡಾ ಇರುತ್ತದೆ ಎನ್ನುವ ವದಂತಿ ಹರಡಿತ್ತು. ಹಾಗೇನಾದರೂ ಆದಲ್ಲಿ ತಾನು ಯೂನಿಯನ್ ಜಾಕ್ ಅನ್ನು ಚೂರುಚೂರು ಮಾಡುವುದಾಗಿ ಪ್ರತಿನಿಧಿಯೊಬ್ಬ ಗಾಂಧಿಯವರಿಗೆ ಪತ್ರ ಬರೆದ. ಗಾಂಧಿ "ಯೂನಿಯನ್ ಜಾಕ್ ಯಾವ ತಪ್ಪೂ ಮಾಡಿಲ್ಲ. ತಪ್ಪು ಮಾಡಿದ್ದು ಬ್ರಿಟಿಷ್ ಸರಕಾರ. ಭಾರತ ಕಾಮನ್ ವೆಲ್ತ್ ಕೂಟದಲ್ಲಿ ಮುಂದುವರೆಯುವವರೆಗೆ ಹಿಂದಿನ ವಿರೋಧಿಗಳ ಬಗೆಗೆ ಧಾರಾಳತನ ತೋರಿಸಿ, ದೇಶದ ಧ್ವಜದ ಜೊತೆ ಯೂನಿಯನ್ ಜಾಕ್ ಉಳಿಸಿಕೊಳ್ಳುವುದರಿಂದ ಯಾವುದೇ ಹಾನಿಯಿಲ್ಲ. ಇದನ್ನು ಗೌರವದ ವಿಷಯವಾಗಿ ಪರಿಗಣಿಸಬೇಕು" ಎಂದರು(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್ ಪ್ಯಾರೇಲಾಲ್). ನಮ್ಮದೇ ಆದ ಕೇಸರಿ ಧ್ವಜ ಗಾಂಧಿಗೆ ವರ್ಜ್ಯವಾಗಿತ್ತು. ಧರ್ಮದ ಸಂಕೇತವಾದ ಸುದರ್ಶನ ಚಕ್ರ ಅವರ ದೃಷ್ಟಿಯಲ್ಲಿ ಶ್ಲಾಘನೆಗೆ ಅರ್ಹವಾದುದಾಗಿರಲಿಲ್ಲ. ನಮ್ಮ ರಿಪುಗಳ ಧ್ವಜ ಅವರ ಪಾಲಿಗೆ ಗೌರವಾರ್ಹವಾಗಿತ್ತು. ವಿದೇಶೀ ವಸ್ತುಗಳನ್ನು ಬಹಿಷ್ಕರಿಸಿ ಎಂದಿದ್ದ, ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದಿದ್ದ ಗಾಂಧಿ ಈಗ ಯೂನಿಯನ್ ಜಾಕ್ ಯಾವ ತಪ್ಪೂ ಮಾಡಿಲ್ಲ ಎನ್ನುತ್ತಿದ್ದಾರೆ! ಧ್ವಜ ಎಂದರೆ ಏನೆಂಬ ಮೂಲಭೂತ ತಿಳುವಳಿಕೆಯಾದರೂ ಅವರಿಗಿದೆಯೇ? ಎಲ್ಲರ ಪಾಲಿಗೆ ಒಳ್ಳೆಯವರಾಗಲು ಹೋದವರ ಮತಿಗೇಡಿತನವಿದಲ್ಲದೆ ಇನ್ನೇನು?

ಹಿಂದಿ ಮತ್ತು ಉರ್ದುವಿನ ಮಿಶ್ರತಳಿ ಹಿಂದೂಸ್ತಾನಿ. ಮುಸ್ಲಿಮರನ್ನು ಸಂತೈಸುವ ಏಕೈಕ ಉದ್ದೇಶದಿಂದ ಹಿಂದೂಸ್ತಾನಿ ಮಾತ್ರ ನಮ್ಮ ರಾಷ್ಟ್ರೀಯ ಭಾಷೆಯಾಗಬೇಕು ಎಂದು ಒತ್ತಾಯಿಸಿದರು ಗಾಂಧಿ. ಅವರ ಅಂಧಾಭಿಮಾನಿಗಳು ಕುರುಡುಕುರುಡಾಗಿ ಅದನ್ನು ಬೆಂಬಲಿಸಿದರು. ಹಿಂದೂಸ್ತಾನಿ ಎನ್ನುವ ಭಾಷೆಯೇ ಇಲ್ಲ ಎಂದು ದೇಶೀಯರೆಲ್ಲರಿಗೂ ಗೊತ್ತು. ಆದರೆ ಗಾಂಧಿಯ ನಿಲುವು ಹಾಗೂವರ ಅಂಧನುಕರಣೆ ಮಾಡುವವರಿಂದ ಈ ಹೈಬ್ರಿಡ್ ಭಾಷೆಯ ಬಳಕೆ ಶುರುವಾಯಿತು. ಸೂಕ್ಷ್ಮವಾಗಿ ನೋಡಿದರೆ ಗಾಂಧಿ ಉರ್ದುವನ್ನು ಹಿಂದೂಸ್ತಾನಿ ಎನ್ನುವ ಮಾರುವೇಶದಲ್ಲಿ ತರಲು ಹೊರಟಿದ್ದರು. ಪ್ರಾಯೋಗಿಕವಾಗಿ ನೋಡಿದರೆ ಹಿಂದೂಸ್ತಾನಿ ಎನ್ನುವುದು ಉರ್ದುವೇ. ಉರ್ದು ಹಿಂದಿಯ ಪರ್ಷಿಯನೀಕರಣಗೊಂಡ ಭಾಷೆ. ಮೊಘಲ್ ಸೈನಿಕರು ಬಳಸುತ್ತಿದ್ದ ಭಾಷೆ. ಆದರೆ ಬಾಬರನಿಂದ ಔರಂಗಜೇಬನವರೆಗೆ ಎಲ್ಲಾ ಮೊಘಲ್ ಅರಸರು ಬಳಸುತ್ತಿದ್ದುದು ತುರ್ಕಿ ಹಾಗೂ ಪರ್ಷಿಯನ್ ಭಾಷೆಯನ್ನು. ಭಾಷೆಯ ಗುಣಲಕ್ಷಣಗಳಾದ ವ್ಯಾಕರಣ ಹಾಗೂ ಕ್ರಿಯಾಪದಗಳ ವಿಶಿಷ್ಟ ಮಾದರಿಯನ್ನು ಉರ್ದು ಹೊಂದಿಲ್ಲ. ಹಾಗಾಗಿ ಹಿಂದಿಗೆ ವಿರುದ್ಧವಾಗಿ ಉರ್ದುವನ್ನು ತರುವ ಧೈರ್ಯ ಗಾಂಧಿಗಿರಲಿಲ್ಲ. ಉರ್ದುವನ್ನು ಹಿಂದಿಯಿಂದ ಪ್ರತ್ಯೇಕಿಸುವ ಇನ್ನೊಂದು ವಿಚಾರವೆಂದರೆ ಉರ್ದು ಪರ್ಷಿಯನ್ ಗುಣಲಕ್ಷಣಗಳನ್ನು ಉಪಯೋಗಿಸಿದರೆ, ಹಿಂದಿ ದೇವನಾಗರಿ ಲಕ್ಷಣಗಳನ್ನು ಬಳಸುತ್ತದೆ. ಹಿಂದಿಯ ಜಾಗದಲ್ಲಿ ಹಿಂದೂಸ್ತಾನಿಯನ್ನು ಬಳಸಲು ಗಾಂಧಿ ನಾಯಕತ್ವದ ಕಾಂಗ್ರೆಸ್ ಒಪ್ಪಿಗೆ ನೀಡಿತು!

"ಅಲ್ಲಾನಿಗೆ ಅರೇಬಿಕ್ ಮಾತ್ರ ಗೊತ್ತಿರುವುದೇ? ನಾವು ತುರ್ಕಿ ಭಾಷೆಯಲ್ಲಿ ಪ್ರಾರ್ಥನೆ ಮಾಡಿದರೆ ಅರ್ಥವಾಗುವುದಿಲ್ಲವೇ?" ಎಂದು ಪ್ರಶ್ನಿಸಿದ ತುರ್ಕಿಯ ಜನರು ಕಮಲ್ ಪಾಷಾನ ನೇತೃತ್ವದಲ್ಲಿ ಅರೇಬಿಕ್ ಲಿಪಿ ಅಕ್ರಮ ಎಂದು ಸಾರಿ ಅದರ ಜಾಗದಲ್ಲಿ ರೋಮನ್ ಲಿಪಿ ಅಳವಡಿಸಿಕೊಂಡರು. ತುರ್ಕಿಯ ಮುಸ್ಲಿಮರು ತುರ್ಕಿ ಭಾಷೆಯಿಂದ ಎಲ್ಲಾ ಅರೇಬಿಕ್ ಶಬ್ದಗಳನ್ನು ತೆಗೆದು ಹಾಕಿ ಶುದ್ಧಗೊಳಿಸಿದರು. ತುರ್ಕಿ ಭಾಷೆಗೆ ಕುರಾನನ್ನು ಭಾಷಾಂತರಿಸಿದರು. ಅಲ್ಲಾ ಪದವನ್ನು ತುರ್ಕಿಗೆ ತರ್ಜುಮೆ ಮಾಡಿ "ತಾರೀ" ಎಂದು ಕರೆದರು. ನಮಗೆ ನಮ್ಮ ದೇಶ ಮೊದಲು, ಇಸ್ಲಾಂ ನಂತರ ಎಂದು ಕಮಲ್ ಪಾಷಾ ಘೋಷಿಸಿದ. ತುರ್ಕಿ ಮುಸ್ಲಿಮರು ಹೊಂದಿದ್ದ ರಾಷ್ಟ್ರೀಯ ಭಾವನೆಯ ಕಿಂಚಿತ್ ಭಾಗವನ್ನಾದರೂ ಗಾಂಧಿ ಹೊಂದಿದ್ದರೆ ಅವರು ಹಿಂದೂಸ್ತಾನಿಯನ್ನು ಭಾರತೀಯರ ಮೇಲೆ ಹೇರಲು ಪ್ರಯತ್ನಿಸುತ್ತಿರಲಿಲ್ಲ. ತುರ್ಕಿಯ ಮುಸ್ಲಿಮರಿಗೆ ದೇಶ ಮೊದಲಾಯಿತು. ಆದರೆ ತುರ್ಕಿಯ ಖಿಲಾಫತನ್ನು ಬೆಂಬಲಿಸಿದ್ದ ಭಾರತದ ಮುಸ್ಲಿಮರಿಗೆ ಅರೇಬಿಕ್, ಇಸ್ಲಾಂಗಳೇ ಸರ್ವೋಚ್ಛವಾಯಿತು! ಕಮಲ್ ಪಾಷಾನ ರಾಷ್ಟ್ರೀಯ ಭಾವನೆಯ ಸ್ವಲ್ಪಾಂಶವೂ ಇಲ್ಲದ ಗಾಂಧಿ ಮಹಾತ್ಮ ಆದದ್ದು ಮಾತ್ರ ವಿಪರ್ಯಾಸವೇ ಸರಿ.

"ಹಿಂದೂ ಧರ್ಮ ಗೋಹತ್ಯೆ ನಿಷೇಧಿಸುತ್ತದೆ. ಅದು ಹಿಂದೂಗಳಿಗೆ ಮಾತ್ರವೇ ವಿನಾ ಇಡೀ ಜಗತ್ತಿಗಲ್ಲ" ಎನ್ನುತ್ತಾ ಹಿಂದೂ ಭಾವನೆಗಳನ್ನು ಅಪಮಾನಿಸಿದ ಅವರು ಗೋಹತ್ಯೆಯನ್ನು ವಿರೋಧಿಸಲಿಲ್ಲ. ಹಿಂದೂ ದೇಶವಾದರೂ ಹಿಂದೂ ಕಾನೂನುಗಳನ್ನು ಹಿಂದೂಯೇತರರ ಮೇಲೆ ಹೇರಲಾಗದು ಎಂದರು ಗಾಂಧಿ. ಗೋಹತ್ಯೆಯನ್ನು ವಿರೋಧಿಸದೆ ಇದ್ದದ್ದು ಮಾತ್ರವಲ್ಲ ಗೋವಧೆಗೂ ಗಾಂಧಿ ಒಂದು ಹಂತದಲ್ಲಿ ಬೆಂಬಲ ನೀಡಿದಂತೆ ಭಾಸವಾಗುತ್ತದೆ. "ಮುಸ್ಲಿಮರಿಂದ ಗೋವಧೆಯನ್ನು ತಡೆಗಟ್ಟಲಾಗದಿದ್ದರೆ ಹಿಂದೂಗಳು ಪಾಪವನ್ನೇನೂ ಮಾಡಿದಂತಾಗುವುದಿಲ್ಲ. ಆದರೆ ಗೋವಿನ ರಕ್ಷಣೆಯ ಭರದಲ್ಲಿ ಅವರು ಮುಸ್ಲಿಮರ ಜೊತೆ ಜಗಳವಾಡಿದರೆ ತೀವ್ರ ಪಾಪ ಮಾಡಿದಂತಾಗುತ್ತದೆ. ಗೋರಕ್ಷಣೆ ಎನ್ನುವುದು ಮುಸ್ಲಿಮರ ಜೊತೆ ವೈರತ್ವದ ಮಟ್ಟಕ್ಕೆ ಇಳಿದಿದೆ. ಗೋರಕ್ಷಣೆ ಎಂದರೆ ಮುಸ್ಲಿಮರನ್ನು ಪ್ರೀತಿಯಿಂದ ಗೆಲ್ಲುವುದೆಂದರ್ಥ. ಗೋರಕ್ಷಣೆಯ ಭರದಲ್ಲಿ ಸಂಭವಿಸಿದ ಗಲಭೆಗಳೆಲ್ಲಾ ಈ ವ್ಯರ್ಥ ಪ್ರಯತ್ನದ ಮೂರ್ಖತನ" ಎಂದರು ಗಾಂಧಿ(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್:ಪ್ಯಾರೇಲಾಲ್)

1925 ಅಕ್ಟೋಬರ್ 3ರ 'ಪ್ರತಾಪ್'ದಲ್ಲಿ(ಲಾಹೋರ್) ಗಾಂಧಿ "ಕೃಷ್ಣನ ಕುರಿತು ನನ್ನ ಮನಸ್ಸಿನಲ್ಲಿರುವ ಊಹಾತ್ಮಕ ಚಿತ್ರವೆಂದರೆ ರಾಜರ ರಾಜ ಎಂದು. ಹಿಂಸೆಯನ್ನು ಅನುಸರಿಸುವ ಇತರರಂತೆ ಮಹಾಭಾರತದ ಕೃಷ್ಣನನ್ನೂ ನಾನು ವಿಕೃತ ದೇಶಭಕ್ತ ಎನ್ನುವುದಾಗಿ ಪರಿಗಣಿಸುತ್ತೇನೆ" ಎಂದು ಬರೆದಿದ್ದರು. 1927 ಜುಲೈ 27ರ 'ಹರಿಜನ'ದಲ್ಲಿ ಗಾಂಧಿ "ರಾಮ ಅಥವಾ ಕೃಷ್ಣ ಐತಿಹಾಸಿಕ ವ್ಯಕ್ತಿಗಳಲ್ಲವಾದ್ದರಿಂದ ಅವರ ಬಗ್ಗೆ ಮಾತಾಡಲು ನನಗೆ ಇಷ್ಟವಿಲ್ಲ. ಆದರೆ ಅಬೂಬಕರ್ ಹಾಗೂ ಉಮರ್ ಹೆಸರನ್ನು ಉಲ್ಲೇಖಿಸಲು ನಾನು ತೀವ್ರಾಸಕ್ತನಾಗಿದ್ದೇನೆ. ಮಹಾನ್ ಸಾಮ್ರಾಜ್ಯದ ಚಕ್ರವರ್ತಿಗಳಾಗಿದ್ದರೂ ಅವರು ಏಕಾಂಗಿ ಜೀವನ ಸಾಗಿಸಿದರು" ಎಂದು ಬರೆದರು. ಹೀಗೆ ಮುಸ್ಲಿಮರನ್ನು ಓಲೈಸುವ ಸಲುವಾಗಿ ರಾಮ, ಕೃಷ್ಣರ ಅಸ್ತಿತ್ವವನ್ನೇ ಪ್ರಶ್ನಿಸಲೂ ಗಾಂಧಿ ಹಿಂಜರಿಯಲಿಲ್ಲ.

ದೆಹಲಿಯ ಭಂಗಾಯ್ ಕಾಲೊನಿಯ ದೇವಾಲಯದಲ್ಲಿ ಗಾಂಧಿಯ ಪ್ರಾರ್ಥನಾ ಸಭೆಗಳು ನಡೆಯುತ್ತಿತ್ತು. ಪ್ರಾರ್ಥನೆಯ ಸಮಯದಲ್ಲಿ ಪಟ್ಟು ಹಿಡಿದು ಕುರಾನ್ ವಾಕ್ಯಗಳನ್ನು ಓದತೊಡಗಿದರು. ಹಿಂದೂಗಳ ವಿರೋಧದ ನಡುವೆಯೂ ಇದು ಮುಂದುವರಿಯಿತು. ಆದರೆ ಮುಸ್ಲಿಮರ ಪ್ರತಿಭಟನೆಯ ಹೆದರಿಕೆಯಿಂದ ಅವರು ಮಸೀದಿಯಲ್ಲಿ ಗೀತಾಪಠಣದ ಧೈರ್ಯ ತೋರಲಿಲ್ಲ. ಶಿವಾಜಿಯ ಅಸಾಮಾನ್ಯ ಶಕ್ತಿ ಸಾಹಸಗಳನ್ನು, ಆತ ಹಿಂದೂ ಧರ್ಮವನ್ನು ರಕ್ಷಿಸಿದ ಪರಿಯನ್ನು ಸ್ತುತಿಸುವ ಐವತ್ತೆರಡು ಚರಣಗಳನ್ನೊಳಗೊಂಡ ಕವಿ ಭೂಷಣನ ಕೃತಿ ಶಿವಬಾವನಿ.
"ಕಾಶಿಜಿ ಕೀ ಕಳಾ ಜಾತೀ ಮಧುರಾ ಮಸ್ಜಿದ್ ಹೋತಿ
ಶಿವಾಜಿ ಜೋ ನ ಹೋತೆ ತೋ ಸುನ್ನತ್ ಹೋತೋ ಸಬ್ ಕೀ" ಎಂದು ಶಿವಾಜಿಯ ಮಹತ್ವವನ್ನು ಸಾರಿ ಹೇಳಿದ ಕಾವ್ಯವಿದು. ಅದಕ್ಕೂ ಗಾಂಧಿಯ ಕೆಟ್ಟ ದೃಷ್ಟಿ ಬಿತ್ತು. ಸಾರ್ವಜನಿಕವಾಗಿ ಶಿವಬಾವನಿಯನ್ನು ಪಠಿಸದಂತೆ ಗಾಂಧಿ ತಾಕೀತುಮಾಡಿದರು. ಶಿವಾಜಿಯನ್ನು ವಿಕೃತ ದೇಶಭಕ್ತ ಎಂದು ಕರೆದರು. ಶಿವಾಜಿ ಇತಿಹಾಸ ನೆನಪಿಸಿಕೊಳ್ಳದಂತೆ ಜನರಿಗೆ ಕರೆ ನೀಡಿದರು(ವೈ ಐ ಅಸಾಸಿನೇಟೆಡ್ ಮಹಾತ್ಮಗಾಂಧಿ - ನಾಥೂರಾಮ್ ಗೋಡ್ಸೆ; ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟಿಷನ್-ಹೊ.ವೆ.ಶೇಷಾದ್ರಿ)

ಆಡಳಿತ ನಡೆಸುವುದರಲ್ಲಿ ನಿಷ್ಣಾತವಾದ ಸರ್ಕಾರವೊಂದರ ಅಡಿಯಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಬಲಪ್ರಯೋಗ ನಡೆಸಲು ಒಂದು ಕ್ಷಣದ ಅವಕಾಶ ನೀಡುವುದು ಸಹ ಕಲ್ಪನಾತೀತ ಎಂದು 1947ರ ಆಗಸ್ಟ್ 11ರಂದು ಪ್ರಾರ್ಥನಾ ಸಭೆಯೊಂದರಲ್ಲಿ ಗಾಂಧಿ ಕರೆ ನೀಡಿದರು. "ಹಿಂದೂ ಪೊಲೀಸ್ ಮತ್ತು ಅಧಿಕಾರಿಗಳು ನ್ಯಾಯಾಡಳಿತದಲ್ಲಿ ಪಕ್ಷಪಾತಿಗಳಾಗಿದ್ದಾರೆ. ಹಿಂದೆ ಮುಸ್ಲಿಮ್ ಪೊಲೀಸ್ ಹಾಗೂ ಅಧಿಕಾರಿಗಳ ಮೇಲೆ ಯಾವ ಆರೋಪ ಹೊರಿಸಲಾಗಿತ್ತೋ ಅದನ್ನೇ ಅವರು ಈಗ ಮಾಡುತ್ತಿದ್ದಾರೆ."(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್:ಪ್ಯಾರೇಲಾಲ್). ಈ ಆರೋಪದಲ್ಲಿ ಯಾವುದೇ ಹುರುಳಿರಲಿಲ್ಲ.

ಯಾರು ಮಹಾತ್ಮ ಭಾಗ- ೧೩

ಯಾರು ಮಹಾತ್ಮ?
ಭಾಗ- ೧೩

ದಾಳಿಕೋರರ ವಿರುದ್ಧ ಸಶಸ್ತ್ರ ಹೋರಾಟವೇ ನಮ್ಮ ಮಾರ್ಗ. ಶತ್ರುವನ್ನು ನಿಗ್ರಹಿಸುವುದು, ಅನಿವಾರ್ಯವಾದರೆ ತೊಡೆದುಹಾಕುವುದು ನಮ್ಮ ನಿಯಮ. ಚತುರೋಪಾಯಗಳಾದ ಸಾಮ, ದಾನ, ಭೇದ ಹಾಗೂ ದಂಡ ಇವು ನಮಗೆ ಸಮ್ಮತವೇ. ನಮ್ಮಲ್ಲಿ ವಿವೇಚನೆ ಇರುವುದು ಧರ್ಮ-ಅಧರ್ಮಗಳ ನಡುವೆ ಮಾತ್ರ. ಹಿಂಸೆ-ಅಹಿಂಸೆಗಳ ಕುರಿತಂತೆ ಅಲ್ಲ. ನಾರದ ಪರಿವ್ರಾಜಕ ಉಪನಿಷದ್ ಹಾಗೂ ಮನುಸ್ಮೃತಿಗಳಲ್ಲಿ
"ದ್ರುತಿ ಕ್ಷಮಾ ದಾಮಸ್ತೇಯಮ್ ಶೌಚಮಿಂದ್ರಿಯ ನಿಗ್ರಹ
ಹ್ರೀರ್ವಿದ್ಯಾ ಸತ್ಯಮಾಕ್ರೋಧೋ ದಶಮಮ್ ಧರ್ಮ ಲಕ್ಷಣಮ್" ಎಂದಿದೆ. ಅಂದರೆ ಸಂತಸ, ಕ್ಷಮೆ, ಆತ್ಮನಿಗ್ರಹ, ಕಳ್ಳತನ ಮಾಡದಿರುವುದು, ಶುಚಿತ್ವ, ಬ್ರಹ್ಮಚರ್ಯ, ಗ್ರಂಥಗಳ ರಹಸ್ಯ ಅರಿಯುವುದು, ಸ್ವಯಂಜ್ಞಾನ, ಸತ್ಯ, ಶಾಂತಚಿತ್ತತೆ ಇವೇ ಧರ್ಮದ ಹತ್ತು ಲಕ್ಷಣಗಳು. ಅಹಿಂಸಾ ಪರಮೋ ಧರ್ಮ ಎನ್ನುವುದು ಬ್ರಾಹ್ಮಣ ಮತ್ತು ಸಂನ್ಯಾಸ ಧರ್ಮಗಳಲ್ಲಿ ಮಾತ್ರ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಇಡೀ ಸಮಾಜಕ್ಕಲ್ಲ. ಅಲ್ಲದೆ "ಅಹಿಂಸಾ ಪರಮೋ ಧರ್ಮ" ಎನ್ನುವುದು "ಧರ್ಮ ಹಿಂಸಾ ತಥೈವಚಾ" ಎಂದು ಮುಂದುವರೆಯುತ್ತದೆ. ಅಂದರೆ ಧರ್ಮ ರಕ್ಷಣೆಗೆ ಹಿಂಸೆ ಅನಿವಾರ್ಯವಾದಲ್ಲಿ ಮಾಡಲೇಬೇಕು. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಹೆಸರು "ಶಿವಾಜಿ"! ಭಾರತದಲ್ಲಿ ಮುಸ್ಲಿಮರ ಆಡಳಿತಕ್ಕೆ ಸಿಂಹಸ್ವಪ್ನನಾಗಿ ಅವರನ್ನು ಧ್ವಂಸಗೊಳಿಸಿದ್ದು ಛತ್ರಪತಿ ಶಿವಾಜಿ ಮಹಾರಾಜರು ಆರಂಭಿಸಿದ ವೀರೋಚಿತ ಹೋರಾಟ. ಸ್ವಾಭಿಮಾನಿ ರಾಣಾಪ್ರತಾಪನ ಹೆಸರು ಕೇಳಿದರೇನೇ ಮೈ ರೋಮಾಂಚನವಾಗುತ್ತದೆ. ಗುಬ್ಬಚ್ಚಿಗಳನ್ನು ಗಿಡುಗಗಳನ್ನಾಗಿ ಬದಲಿಸಿ ಧರ್ಮರಕ್ಷಣೆ ಮಾಡಿದ ತ್ಯಾಗಿ ಗುರುಗೋವಿಂದ ಸಿಂಗ್. ನಮ್ಮ ದೇಶದ ಮೇಲಿನ ವಿದೇಶೀಯರ ಆಕ್ರಮಣವನ್ನು ಪ್ರತಿಭಟಿಸಿದ, ಮತಾಂಧರ ದುಷ್ಖೃತ್ಯ,ಅತ್ಯಾಚಾರಗಳಿಂದ ದೇಶೀಯರನ್ನು ರಕ್ಷಿಸಿದ, ತಾಯ್ನಾಡನ್ನು ದಾಳಿಕೋರರಿಂದ ಮರಳಿ ಗೆದ್ದ ಇಂತಹ ಮಹಾನ್ ನಾಯಕರು ಗಾಂಧಿಯ ಕಣ್ಣಲ್ಲಿ ದಾರಿ ತಪ್ಪಿದ ದೇಶಭಕ್ತರಾಗಿಬಿಟ್ಟರು. ಅಲ್ಲದೆ ಅಲ್ಲೂರಿ ಸೀತಾರಾಮ ರಾಜು ಅವರ ವೀರೋಚಿತ ಸಾಹಸಗಳನ್ನು ವಿಕೃತ ಕ್ರಮಗಳು ಎಂದು ಟೀಕಿಸಿದರು(ಗಾಂಧೀಜಿ ಇನ್ ಆಂಧ್ರಪ್ರದೇಶ-ತೆಲುಗು ಅಕಾಡೆಮಿ). ಇದೇ ಕಾರಣವೊಡ್ಡಿ ಗಾಂಧಿ ಭಗತನ ಗಲ್ಲು ಶಿಕ್ಷೆ ತಪ್ಪಿಸುವ ಮನವಿಗೆ ಸಹಿ ಹಾಕಲು ನಿರಾಕರಿಸಿದ್ದು(1931ರ ಮಾರ್ಚಿನಲ್ಲಿ ನಡೆದ ಕರಾಚಿ ಅಧಿವೇಶನ).

ಭಾರತದ ಸ್ವಾತಂತ್ರ್ಯ ಪಡೆವ ಇಚ್ಛೆಯನ್ನು ದ್ವಿಗುಣಗೊಳಿಸಿದ್ದು ವಂದೇ ಮಾತರಂ. ವಂಗಭಂಗವಾದಾಗ ದೇಶೀಯರನ್ನು ಬಡಿದೆಬ್ಬಿಸಿದ ರಣಕಹಳೆಯದು. ಮುಂಜಾನೆಯ ಸಮಯದಲ್ಲಿ ಅಲೌಕಿಕ ಭಾವದಲ್ಲಿ ದೃಷ್ಟಾರ ಬಂಕಿಮರಿಗೆ ಮೂಡಿದ ದರ್ಶನ ವಂದೇಮಾತರಂ. ಬ್ರಿಟಿಷರೆದೆಯನ್ನು ನಿದ್ದೆಯಲ್ಲೂ ಡವಗುಟ್ಟಿಸಿದ ಮಂತ್ರವದು. ಬ್ರಿಟಿಷರೆಷ್ಟು ಬೆದರಿದ್ದರೆಂದರೆ ವಂದೇಮಾತರಂ ಗಟ್ಟಿಗಂಟಲಿನಲ್ಲಿ ಹೇಳುವುದನ್ನೇ ನಿಷೇಧಿಸಿದ್ದರು. ಮುಸ್ಲಿಮರನ್ನು ಸಂತೈಸುವ ಏಕೈಕ ಉದ್ದೇಶದಿಂದ ಇಂತಹ ಸ್ವಾತಂತ್ರ್ಯ ಮಂತ್ರವನ್ನು ಜನರ ಮನಸ್ಸಿನಿಂದ ಮರೆಯಾಗುವಂತೆ ಮಾಡಲು ಪಾಕಿಸ್ತಾನ ಸೃಷ್ಟಿಗೆ ಮೂಲಕಾರಣಕರ್ತೃಗಳಲ್ಲೊಬ್ಬನಾದ ಮಹಮ್ಮದ್ ಇಕ್ಬಾಲನ "ಸಾರೆ ಜಹಾಂಸೆ ಅಚ್ಛಾ" ಹಾಡನ್ನು ವಂದೇ ಮಾತರಂ ಜೊತೆ ಹಾಡುವುದನ್ನು ಗಾಂಧಿ ನೇತೃತ್ವದ ಕಾಂಗ್ರೆಸ್ ಜನಪ್ರಿಯಗೊಳಿಸಿತು. ಮಾತ್ರವಲ್ಲ ದೇಶವನ್ನು ತಾಯಿ ಎಂದು ಒಪ್ಪಿಕೊಳ್ಳದ ಮುಸ್ಲಿಮರ ಮನೋಭೂಮಿಕೆಯನ್ನು ಸಂತೈಸುವ ಸಲುವಾಗಿ ವಂದೇಮಾತರಂನ ಮೊದಲೆರಡು ಚರಣಗಳನ್ನಷ್ಟೇ ಉಳಿಸಿಕೊಂಡು ಉಳಿದವುಗಳನ್ನು ಕೈಬಿಟ್ಟಿತು. "ವಂದೇ ಮಾತರಂನ ಮಧ್ಯ ಮತ್ತು ಕೊನೇ ಚರಣಗಳಲ್ಲಿ ಭಾರತದ ಅನ್ಯ ಮತೀಯರ ಧಾರ್ಮಿಕ ಸಿದ್ಧಾಂತಗಳಿಗೆ ಅನುಕೂಲಕರವಲ್ಲದ ಸೂಚನೆ ಮತ್ತು ಧಾರ್ಮಿಕ ತತ್ವಗಳಿವೆ. ಹೀಗಾಗಿ ವಂದೇ ಮಾತರಂಗೆ ಪರ್ಯಾಯವಾಗಿ ಅಥವಾ ಹೆಚ್ಚುವರಿಯಾಗಿ ಯಾವುದೇ ಆಕ್ಷೇಪಣೆಗಳಿಲ್ಲದೆ ಹಾಡು ಹಾಡುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾತಂತ್ರ್ಯವಿದೆ." ಎಂದು ಗಾಂಧಿ ನೇತೃತ್ವದ ಕಾಂಗ್ರೆಸ್ ನಿರ್ಣಯ ಕೈಗೊಂಡಿತು. "ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಸ್ಥಳದಲ್ಲಿ ಸೇರಿದಾಗ ವಂದೇ ಮಾತರಂ ಹಾಡುವ ಕುರಿತಾಗಿ ಜಗಳ ಉಂಟಾದರೆ ನಾನು ಸಹಿಸುವುದಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ವಂದೇ ಮಾತರಂ ಹಾಡಬಾರದು" ಎಂದು 1938ರ ಮಾರ್ಚ್ 17ರಂದು ಗಾಂಧಿ ನೆಹರೂವಿಗೆ ಸಲಹೆ ನೀಡಿದರು.(ವಂದೇ ಮಾತರಂ ಗಾಥಾ- ಸೇವಿಕಾ ಪ್ರಕಾಶನ). ವಿಪರ್ಯಾಸವೆಂದರೆ 1930ರ ದಶಕದಲ್ಲಿ ನಡೆದ ಖಿಲಾಫತ್ ಆಂದೋಲನದಲ್ಲಿ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಬದಲಿಗೆ "ಅಲ್ಲಾ ಹೋ ಅಕ್ಬರ್" ಎಂದು ಕೂಗುವಾಗ ಗಾಂಧಿಗೆ ಧಾರ್ಮಿಕ ತತ್ವಗಳ ವೈರುಧ್ಯ ನೆನಪಿಗೆ ಬರಲಿಲ್ಲ! ಆಗ ದೇಶಕ್ಕೆ ಸಂಬಂಧ ಪಡದುದನ್ನು ಚಳುವಳಿಯಾಗಿ ತೆಗೆದುಕೊಂಡ ಗಾಂಧಿಗೆ ಈಗ ದೇಶವನ್ನೇ ತಾಯಿ ಎಂದು ಪೂಜಿಸುವ ಮಂತ್ರವೊಂದು ದೇಶವನ್ನು ಸ್ವತಂತ್ರಗೊಳಿಸುವ ಕಾರ್ಯಕ್ಕೆ "ಮುಸಲ್ಮಾನರ ಕಾರಣದಿಂದ" ಬೇಡವಾದುದು ವಿಪರ್ಯಾಸವಲ್ಲದೆ ಇನ್ನೇನು. ತುಷ್ಟೀಕರಣದ ಗುರು ಗಾಂಧಿ ಎಂದರೆ ತಪ್ಪಾದೀತೇ?

1923ರ ಕಾಂಗ್ರೆಸ್ ಕಾಕಿನಾಡ ಅಧಿವೇಶನದಲ್ಲಿ ಮಹಾರಾಷ್ಟ್ರದ ವಿಷ್ಣುದಿಗಂಬರ ಪಲುಸ್ಕರ್ ವಂದೇ ಮಾತರಂ ಹಾಡಲು ಅನುವಾದಾಗ ಅಧ್ಯಕ್ಷ ಮಹಮ್ಮದ್ ಅಲಿ ಇಸ್ಲಾಮಿನಲ್ಲಿ ಸಂಗೀತ ಹಾಡುವುದನ್ನು ನಿಷೇಧಿಸಲಾಗಿದೆ. ತಾವು ವಂದೇ ಮಾತರಂ ಹಾಡಲು ಅವಕಾಶ ಕೊಡುವುದಿಲ್ಲ ಎಂದಾಗ ಯಾರೂ ಮಾತಾಡಲಿಲ್ಲ. ಆದರೆ ಪಲುಸ್ಕರ್ "ಇದೇನು ಮಸೀದಿಯಲ್ಲ. ರಾಷ್ಟ್ರೀಯ ಕಾಂಗ್ರೆಸಿನ ಅಧಿವೇಶನ. ನಾನು ವಂದೇ ಮಾತರಂ ಹಾಡುವುದನ್ನು ತಡೆಯಲು ನಿಮಗೆ ಅಧಿಕಾರವಿಲ್ಲ. ಇಲ್ಲಿ ಹಾಡುವುದು ನಿಮ್ಮ ಮತದ ತತ್ವಕ್ಕೆ ವಿರುದ್ಧವಾಗುತ್ತದೆಯೆಂದಾದರೆ ನಿಮ್ಮ ಅಧ್ಯಕ್ಷೀಯ ಮೆರವಣಿಗೆಯಲ್ಲಿ ಸಂಗೀತವನ್ನು ಹೇಗೆ ಸಹಿಸಿಕೊಂಡಿರಿ" ಎಂದು ಕೇಳಿದಾಗ ಮೌಲಾನ ಬಳಿ ಉತ್ತರವಿರಲಿಲ್ಲ. ಪಲುಸ್ಕರ್ ಗಾಯನ ಮುಂದುವರಿಸಿದಾಗ ಆತ ವೇದಿಕೆಯಿಂದ ನಿರ್ಗಮಿಸಿದ. ಪವಿತ್ರ ರಾಷ್ಟ್ರಗೀತೆಗೆ ಕಾಂಗ್ರೆಸ್ ಅಧ್ಯಕ್ಷರಿಂದ ಅಗೌರವ ಪ್ರದರ್ಶಿತವಾಗುತ್ತಿದ್ದರೂ ಕಾಂಗ್ರೆಸ್ ಮಾರ್ಗದರ್ಶಿ ಗಾಂಧಿ ಮೂಕಪ್ರೇಕ್ಷಕರಾಗಿ ಕುಳಿತಿದ್ದರು! ಹಾಗೆಯೇ ಇನ್ನೊಂದು ವಿಚಾರವನ್ನು ಗಮನಿಸಿ: ದೇಶದ ಸ್ವಾತಂತ್ರ್ಯ ಹೋರಾಟಕ್ಕೆಂದು ರೂಪಿತವಾದ ಕಾಂಗ್ರೆಸ್ ಸಂಘಟನೆ ಅಧಿವೇಶನಕ್ಕೆ ಅಧ್ಯಕ್ಷರನ್ನು ಭಾಜಾಭಜಂತ್ರಿಗಳೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳುತ್ತಿತ್ತು. ಯಾರದ್ದೋ ಹಣ, ಎಲ್ಲಮ್ಮನ ಜಾತ್ರೆ! ದೇಶೀಯರು ಸ್ವಾತಂತ್ರ್ಯ ಚಳವಳಿಗಾಗಿ ಕೊಟ್ಟ ಹಣ ಕಾಂಗ್ರೆಸ್ಸಿಗರ ಮೋಜುಮಸ್ತಿಗಾಗಿ ಬಳಕೆಯಾಗುತ್ತಿದ್ದ ಬಗೆ ಇದು. ಅಂತಹ ದುಸ್ತರ ಸನ್ನಿವೇಶದಲ್ಲಿ ಈ ಮೆರವಣಿಗೆ, ಮೆರೆದಾಟಗಳ ಅಗತ್ಯವಿತ್ತೇ?

ಪಾವಿತ್ರ್ಯತೆ, ಪೂರ್ಣತೆ ಹಾಗೂ ಪರಿಪೂರ್ಣ ರಾಷ್ಟ್ರ ಜೀವನವನ್ನು ಜೀವಂತವಾಗಿ ಅಭಿವ್ಯಕ್ತಿಸುವ ಭಗವಾಧ್ವಜ ನಮ್ಮ ರಾಷ್ಟ್ರಧ್ವಜ. ನಮ್ಮ ಧರ್ಮ, ಸಾಂಸ್ಕೃತಿಕ ಪರಂಪರೆ, ಆದರ್ಶಗಳನ್ನು ಪ್ರತಿನಿಧಿಸುವ ಇದು ಬಲಿದಾನದ ಸಂದೇಶ ನೀಡುತ್ತದೆ. ಬಲಿದಾನದ ಪವಿತ್ರ ಅಗ್ನಿ ಹಾಗೂ ಕತ್ತಲೆಯನ್ನು ಬೆನ್ನತ್ತಿರುವ ಕೇಸರಿ ಸೂರ್ಯಕಿರಣದ ವರ್ಣವನ್ನಿದು ಒಳಗೊಂಡಿದೆ. ವೇದ, ಪುರಾಣ ಹಾಗೂ ಮಹಾಕಾವ್ಯಗಳಲ್ಲಿ ವರ್ಣಿಸಲ್ಪಟ್ಟಿರುವ ರಾಮ, ಕೃಷ್ಣ, ಶಿವಾಜಿ, ಪ್ರತಾಪರಾದಿಯಾಗಿ 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಬಳಕೆಯಾದದ್ದು ಇದೇ ಧ್ವಜವೇ. ನಮ್ಮ ರಾಷ್ಟ್ರೀಯತೆಯ ಏಕಮಾತ್ರ ನೈಜ ಸಂಕೇತವದು. 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಧ್ವಜ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಏಳು ಜನರ ಸಮಿತಿಯೊಂದರ ನೇಮಕವಾಯಿತು. ಸರ್ದಾರ್ ಪಟೇಲ್, ಮೌಲಾನ ಆಜಾದ್, ತಾರಾ ಸಿಂಗ್, ನೆಹರೂ, ಕಾಲೇಕರ್, ಹರ್ಡೀಕರ್, ಪಟ್ಟಾಭಿ ಈ ಸಮಿತಿಯಲ್ಲಿದ್ದ ಸದಸ್ಯರು. ಈ ಸಮಿತಿ ಎಲ್ಲಾ ಕಾಂಗ್ರೆಸ್ ಸಮಿತಿಗಳು ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿತು. ಧ್ವಜವು ಯಾವುದೇ ಕೋಮು ಚಿಹ್ನೆ ಹೊಂದಿರಬಾರದು ಎನ್ನುವುದು ಸಮಿತಿಯ ಸರ್ವಸಮ್ಮತ ಅಭಿಪ್ರಾಯವಾಗಿತ್ತು. "ಹೊಸ ಧ್ವಜವನ್ನು ಶಿಫಾರಸ್ಸು ಮಾಡುವಾಗ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಕಲಾತ್ಮಕವಾದ, ಆಯತಾಕಾರದ, ಏಕಬಣ್ಣದ,  ಕೋಮುಯೇತರವಾದುದನ್ನು ಅಂಗೀಕರಿಸಬೇಕು. ದೇಶದ ಸುದೀರ್ಘ ಪರಂಪರೆಯೊಂದಿಗೆ ಸಹಯೋಗ ಹೊಂದಿರುವ, ಬೇರೆ ಎಲ್ಲಾ ವರ್ಣಗಳಿಂದ ಭಿನ್ನವಾದ ವರ್ಣವಾದ ಕೇಸರಿಯನ್ನು ನಾವು ಶಿಫಾರಸ್ಸು ಮಾಡುತ್ತೇವೆ" ಎಂದು ಧ್ವಜ ಸಮಿತಿ ಹೇಳಿತು(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟೀಷನ್-ಹೊ.ವೆ. ಶೇಷಾದ್ರಿ)

ಆದರೆ ಧ್ವಜ ಸಮಿತಿಯ ನಿರ್ಣಯವನ್ನು ಗಾಂಧಿ ತಿರಸ್ಕರಿಸಿದರು. ನಮ್ಮ ಪಾರಂಪರಿಕ ಧ್ವಜವನ್ನು ಬದಿಗೆ ತಳ್ಳಿದರು. ಬದಲಾಗಿ ತ್ರಿವರ್ಣ ಧ್ವಜವನ್ನು ಪರಿಚಯಿಸಿದರು. ಆ ಧ್ವಜದಲ್ಲಿ ಕೇಸರಿ ಹಿಂದೂಗಳನ್ನು, ಹಸಿರು ಮುಸ್ಲಿಮರನ್ನು, ಬಿಳಿ ಕ್ರೈಸ್ತರನ್ನು ಹಾಗೂ ಇತರ ಸಮುದಾಯಗಳನ್ನು ಪ್ರತಿನಿಧಿಸಬೇಕೆಂದು ಅವರು ಸಲಹೆ ಮಾಡಿದರು. ಹೀಗೆ ಭಾರತ ಭಿನ್ನ ರಾಷ್ಟ್ರಗಳ ಸಂಯೋಜನೆ ಎನ್ನುವ ಬ್ರಿಟಿಷರ ವಾದವನ್ನು ಗಾಂಧಿ ಪುರಸ್ಕರಿಸಿದಂತಾಯಿತು. ಗಾಂಧಿ ಆಯ್ಕೆಗೆ ಆಕ್ಷೇಪ ವ್ಯಕ್ತಪಡಿಸಲು ಸಮಿತಿಗೆ ಧೈರ್ಯವೇ ಇರಲಿಲ್ಲ. ಹೈಕಮಾಂಡ್ ಸಂಸ್ಕೃತಿ ಇಲ್ಲಿಂದಲೇ ಆರಂಭವಾಯಿತು. ಮೆಕಾಲೆ ಶಿಕ್ಷಣದ ಪ್ರಭಾವ ಗಾಂಧಿಯವರನ್ನೂ ಬಿಟ್ಟು ಹೋಗಲಿಲ್ಲ. ತ್ರಿವರ್ಣ ಧ್ವಜದಲ್ಲಿ ನೂಲುವ ಚಕ್ರದ ಬದಲು ಅಶೋಕ ಚಕ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿರ್ಣಯಿಸಿತ್ತು. "ಅಶೋಕ ಚಕ್ರ ನೂಲುವ ಚಕ್ರದ ಜೊತೆ ಯಾವುದೇ ಸಾಮ್ಯ ಹೊಂದಿಲ್ಲ. ನೂಲುವ ರಾಟೆ ವೃದ್ಧೆಯೊಬ್ಬಳ ಸಮಾಧಾನ ಮತ್ತು ಗಾಂಧಿಯ ಗೊಂಬೆ. ಆದರೆ ಸ್ವರಾಜ್ಯ ಕೇವಲ ವೃದ್ಧೆಗೆ ಸೇರಿದ್ದಲ್ಲ. ಅದು ಯೋಧರಿಗೆ ಸಂಬಂಧಿಸಿದ್ದು. ಹೀಗಾಗಿ ನಾವು ಸಿಂಹಗಳಿಂದ ಸುತ್ತುವರಿಯಲ್ಪಟ್ಟ ಅಶೋಕ ಚಕ್ರವನ್ನು ಬಯಸುತ್ತೇವೆ. ನಾವು ಸಾಕಷ್ಟು ಹೇಡಿತನ ಪ್ರದರ್ಶಿಸಿದ್ದೇವೆ. ಕೇವಲ ಸಿಂಹ ಮಾತ್ರ ಕಾಡಿನ ರಾಜ. ಆಡು, ಕುರಿಗಳೆಲ್ಲಾ ಅದರ ಆಹಾರ" ಎಂದು ಕಾಂಗ್ರೆಸ್ಸಿಗರೊಬ್ಬರು ತೀಕ್ಷ್ಣವಾಗಿ ಹೇಳಿದಾಗಲೂ ಗಾಂಧಿ ಬದಲಾವಣೆಗೆ ಸಮ್ಮತಿಸಲಿಲ್ಲ. "ಈಗ ನಡೆಯುತ್ತಿರುವ ವ್ಯಾಖ್ಯಾನದಂತೆ ನಡೆಯುತ್ತಿರುವ ಧ್ವಜ ಎಷ್ಟೇ ಕಲಾತ್ಮಕವಾಗಿದ್ದರೂ ಅದಕ್ಕೆ ವಂದನೆ ಸಲ್ಲಿಸಲು ನಾನು ನಿರಾಕರಿಸುತ್ತೇನೆ" ಎಂದು ಕೆಟ್ಟ ಹಠ ಪ್ರದರ್ಶಿಸಿದರು(ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್:ಪ್ಯಾರೇಲಾಲ್). ಹೀಗೆ ಒಬ್ಬನ ಹಠಕ್ಕೆ ಒಂದು ದೇಶದ ಧ್ವಜವೇ ಬದಲಾಯಿತು!

ಪುಟ್ಟ ಜೀವಂತ ಭಾರತ ಸಂಕಟದಲ್ಲಿದೆ

ಪುಟ್ಟ ಜೀವಂತ ಭಾರತ ಸಂಕಟದಲ್ಲಿದೆ


                     ಥೈಲ್ಯಾಂಡಿನ ಅರಸ 9ನೇ ರಾಮ ನಿಧನವಾಗುವುದರೊಂದಿಗೆ ರಾಜನನ್ನು ದೇವರಂತೆ ಪೂಜಿಸುವ ಥೈಲ್ಯಾಂಡ್ ದುಃಖ ಸಾಗರದಲ್ಲಿ ಮುಳುಗಿದೆ. ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷ ವಯಸ್ಸಿನ ಭೂಮಿಬಲರ ಕಿಡ್ನಿ ವೈಫಲ್ಯಗೊಂಡಿತ್ತು. ಕೆಲ ಸಮಯಗಳ ಹಿಂದೆಯೇ ವೈದ್ಯರು ಯಾವುದೇ ಆಡಳಿತಾತ್ಮಕ ಚಟುವಟಿಕೆ ನಡೆಸದಂತೆ ಅವರಿಗೆ ಸಲಹೆ ನೀಡಿದ್ದರು. ಭೂಮಿಬಲ ಅತುಲ್ಯತೇಜ 234 ವರ್ಷಗಳ ಇತಿಹಾಸವಿರುವ ಚಕ್ರಿ ರಾಜವಂಶದ ಒಂಭತ್ತನೆಯ ರಾಮ. ಭೂಮಿಬಲರ ದೊಡ್ಡಪ್ಪ ಪ್ರಜಾಧೀಪಕ್ ಅರಸು ಪೀಠದಲ್ಲಿದ್ದಾಗ, 1932ರಲ್ಲಿ ನಡೆದ ದಂಗೆ ರಾಜವಂಶದ ಅಧಿಕಾರವನ್ನು ಸೀಮಿತ ರೂಪಕ್ಕಿಳಿಸಿತು. 1935ರಲ್ಲಿ ಪ್ರಜಾಧೀಪಕ್ ಇಹಲೋಕ ತ್ಯಜಿಸಿದಾಗ ಭೂಮಿಬಲರ ಅಣ್ಣ ಒಂಬತ್ತು ವರ್ಷದ ಆನಂದ ಮಹಿದಳರನ್ನು ಸಿಂಹಾಸನದಲ್ಲಿ ಕೂರಿಸಲಾಯಿತು. 1946ರ ಜೂನ್ ನಲ್ಲಿ ಅಜ್ಞಾತ ಗುಂಡಿನ ದಾಳಿಗೆ ಆನಂದ ಬಲಿಯಾದರು. ಎಲ್ಲರ ರಾಜಕೀಯಕ್ಕೆ ತನ್ನಣ್ಣ ಬಲಿಯಾದರೆಂದು ಭೂಮಿಬಲರೇ ಒಮ್ಮೆ ಬಿಬಿಸಿಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದರು. ಹೀಗೆ ರಾಜಪಟ್ಟ ಭೂಮಿಬಲರಿಗೆ ಬಯಸದೇ ಬಂದ ಭಾಗ್ಯ.


                     1946ರಲ್ಲಿ ಅಧಿಕಾರಕ್ಕೆ ಬಂದ ಭೂಮಿಬಲ ಸ್ವಿಜರ್ ಲ್ಯಾಂಡಿನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದರು. 1948ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಅವರು ತಮ್ಮ ಬಲಗಣ್ಣದೃಷ್ಟಿಯನ್ನು ಕಳೆದುಕೊಂಡಿದ್ದರು. ಆದರೆ ಜನ್ಮತಃ ರಾಜನಾಗುವ ಅವಕಾಶವಿಲ್ಲದೆ, ಅನಿವಾರ್ಯವಾಗಿ ರಾಜನಾದ ಕಾರಣ ಜನರ ಪ್ರೀತಿಯನ್ನು ತನ್ನ ನಡೆ-ನುಡಿಗಳಿಂದಲೇ ಗಳಿಸಬೇಕಾಯಿತು ಭೂಮಿಬಲ. ತನ್ನ ಪರಿಶ್ರಮ, ಜಾಣ್ಮೆಗಳಿಂದ ದೇಶವನ್ನು ನಿಭಾಯಿಸಿದ ಆತ ರಾಜಮನೆತನದ ಘನತೆಯನ್ನು, ದೇಶದ ಸ್ವಾತಂತ್ರ್ಯ- ಸುವ್ಯವಸ್ಥೆ - ಸಾರ್ವಭೌಮತ್ವವನ್ನು ಕಾಪಾಡಿದ್ದು ಮಾತ್ರವಲ್ಲ, ಥಾಯ್ ಲ್ಯಾಂಡಿನ ಸಂಪ್ರದಾಯ-ಸಂಸ್ಕೃತಿಗಳಿಗೆ ಅಪಚಾರವಾಗದಂತೆ ಅವುಗಳನ್ನು ಉಳಿಸಿ ಬೆಳೆಸಿದರು. ಬಡವರ ಪಾಲಿಗೆ ಸಂಜೀವಿನಿಯಾಗಿ, ಆಧುನಿಕ ಬುದ್ಧನಾಗಿ ಜನರ ಪ್ರೀತಿ ಗೌರವಗಳನ್ನು ಗಳಿಸಿದರು ಎನ್ನುವುದಕ್ಕೆ ಮನೆ, ವಾಹನ, ಶಾಲಾ-ಕಛೇರಿಗಳಲ್ಲಿ ತೂಗಾಡುವ ಅವರ ಚಿತ್ರಪಠಗಳೇ ಸಾಕ್ಷಿ.


                  ಒಂಭತ್ತನೇ ರಾಮ ಎಂದಾಗ ನೆನಪಾಯಿತು ನೋಡಿ, ಅಲ್ಲೊಂದು ಪುಟ್ಟ ಭಾರತವೇ ಇದೆ! ಥಾಯ್ ಲ್ಯಾಂಡಿನ ರಾಜಧಾನಿ ಬ್ಯಾಂಕಾಕ್ ದೇವಾಲಯಗಳ ನಗರ. ವೇಶಭೂಷಣಗಳಲ್ಲಿ ಅಮೇರಿಕಾದ ಪ್ರಭಾವವಿದ್ದರೂ ತನ್ನ ಸಂಸ್ಕೃತಿ ಹಾಗೂ ಭಾಷೆಯನ್ನು ಬಿಡದ ಮಹಾನತೆ ಇಲ್ಲಿನದ್ದು. ಬ್ಯಾಂಕಾಕಿನ ವಿಶೇಷತೆಯೆಂದರೆ ಯಾವುದೇ ಭವ್ಯ ಕಟ್ಟಡವಾಗಲೀ ಅಲ್ಲಿನ ದೇವಾಲಯಗಳ ಗೋಪುರಗಳಿಗಿಂತ ಕಡಿಮೆ ಎತ್ತರದಲ್ಲೇ ಇರುತ್ತವೆ, ಇರಬೇಕು. ಬ್ಯಾಂಕಾಕಿನಲ್ಲಿ ಸುಮಾರು ಎಂಟುನೂರು ದೇವಾಲಯಗಳಿವೆ. ಪ್ರತಿಯೊಂದೂ ಶಿಲ್ಪಶಾಸ್ತ್ರಕ್ಕನುಗುಣವಾಗಿ ಅತ್ಯುಚ್ಚ ಶೈಲಿಯಲ್ಲಿ ನಿರ್ಮಿಸಿದ ಕಲಾಕೃತಿಗಳು. ಆದರೆ ಜನರು ಪಾಶ್ಚಿಮಾತ್ಯ ಉಡುಪು ಧರಿಸಿ ಪೂಜೆ ಮಾಡುವಂತಿಲ್ಲ. ದೇವಾಲಯ ಪ್ರವೇಶಿಸುವಂತಿಲ್ಲ. ದೇವತಾರ್ಚನೆಗೆಂದು ನಿಯಮಿತವಾದ ಉಡುಪುಗಳನ್ನೇ ಧರಿಸಬೇಕು. ಥಾಯ್ ಭಾಷೆಗೂ ಸಂಸ್ಕೃತಕ್ಕೂ ಬಹು ಸಾಮೀಪ್ಯ ಇರುವಂತೆ ಭಾಸವಾಗುತ್ತದೆ. ಅಲ್ಲದೆ ಥಾಯ್ ಜನರಿಗೆ ಸಂಸ್ಕೃತ ಬಹು ಚೆನ್ನಾಗಿ ಅರ್ಥವಾಗುತ್ತದೆ. ಉದಾಹರಣೆಗೆ 'ಸುದರ್ಶನ'ಕ್ಕೆ ಥಾಯ್ ಭಾಷೆಯಲ್ಲಿ ಸುದತ್ ಎನ್ನುವ ಉಚ್ಛಾರ. ಬರೆಯುವುದು ಸುದರ್ಶನವೆಂದೇ. ಹಾಗೆಯೇ ಪಾರತ್ ಎನ್ನುವ ಥಾಯ್ ಪದ ಪಾರದ ಎನ್ನುವ ಸಂಸ್ಕೃತ ಪದದ ತದ್ಭವ ರೂಪ. ಪಾರದ ಅಂದರೆ ಪಾದರಸ. ಫರ್ಸ್ಟ ಎನ್ನುವುದು 'ಪರಿಷತ್'ನ ಅಪಭೃಂಶಗೊಂಡ ರೂಪ.

                   1911ರ ತನಕ ಬ್ಯಾಂಕಾಕಿನ ಜನ ನಗರದ ಉದ್ದಗಲಕ್ಕೂ ಹರಡಿರುವ ಕಾಲುವೆಗಳ ನೀರನ್ನೇ ಬಳಸುತ್ತಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಬೇರೆ ಇರಲಿಲ್ಲ. ಅಲ್ಲಿ ಆಗ ದೊರೆಯಾಗಿದ್ದ ಆರನೆಯ ರಾಮ ಆಧುನಿಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿದ. ಅದಕ್ಕೇನು ಹೆಸರಿಡಬೇಕು ಎನ್ನುವುದರ ಬಗೆಗೆ ಚರ್ಚೆ ನಡೆಯಿತು. ಆಗ ವಜ್ರಾಯನನೆಂಬ ರಾಜಕುಮಾರ ವೇದ, ಸ್ಮೃತಿಗಳಲ್ಲಿ ಉಲ್ಲೇಖಿಸಿರುವ "ಪ್ರಪಾ" ಎನ್ನುವ ಹೆಸರು ಸೂಚಿಸಿದ. ಅದೇ ಹೆಸರಿಡಲಾಯಿತು. ಪ್ರಪಾ ಎಂದರೆ ಹಿಂದಿನ ಕಾಲದಲ್ಲಿ ಸಾರ್ವಜನಿಕವಾಗಿ ಇಡುತ್ತಿದ್ದ ನೀರಿನ ತೊಟ್ಟಿ. ತಂತಿ ವ್ಯವಸ್ಥೆಗೆ ದೂರಲೇಖ, ಮೋಟರ್ ಕಾರಿಗೆ ರಥಯಾನ್, ತುಟಿಗೆ ಬಳಿಯುವ ರಂಗಿ(ಲಿಪ್ ಸ್ಟಿಕ್)ಗೆ ಓಷ್ಠರಾಗ, ರಾಯಭಾರಿ-ರಾಜದೂತ್, ನಿರ್ಮಾಣ ಹೇಮ-ನಿಮ್ಮಿ ಹೇಮ ಹೀಗೆ ಥಾಯ್ ಭಾಷೆ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಪ್ರತಿಧ್ವನಿಸುತ್ತದೆಯಲ್ಲದೆ ಅದು ಸಂಸ್ಕೃತದಿಂದ ಉದ್ಭವಗೊಂಡಿರುವ ಸೂಕ್ಷ್ಮವನ್ನು ತಿಳಿಸುತ್ತದೆ. ಇದಕ್ಕೆ ಕಾರಣವೂ ಇದೆ. ಥಾಯ್ ಲೆಂಡಿನ ಉನ್ನತ ಶಿಕ್ಷಣದ ಮಾಧ್ಯಮ ಭಾಷೆ ಥಾಯ್. ಅಲ್ಲಿನ ಜನ ವೇಷ-ಭೂಷಣಗಳಲ್ಲಿ ಅಮೇರಿಕನ್ನರನ್ನು ಅನುಕರಿಸಿದರೂ, ರಾಜಕೀಯವಾಗಿ ಅಮೆರಿಕಾದ ಪ್ರಭಾವದೊಳಗಿದ್ದರೂ ತಮ್ಮ ಭಾಷೆ ಬಿಟ್ಟುಕೊಟ್ಟಿಲ್ಲ. ಹಾಗಾಗಿ ತಮ್ಮ ಸಂಸ್ಕೃತಿ ನಾಗರೀಕತೆಗಳನ್ನು ಉಳಿಸಿಕೊಂಡಿದ್ದಾರೆ. ಥಾಯ್ ಭಾಷೆಯ ಶೇಕಡಾ ಎಂಬತ್ತರಷ್ಟು ಪದಗಳು ಸಂಸ್ಕೃತದಿಂದ ಬಂದಿವೆ. ವಿಜ್ಞಾನ, ತಂತ್ರಜ್ಞಾನ, ಆಡಳಿತ ಹೀಗೆ ವಿಶೇಷ ರಂಗಗಳಲ್ಲಿ ಅವಶ್ಯಕವಾದರೆ ಅದಕ್ಕೆ ಆಕರವು ಸಂಸ್ಕೃತವೇ.

                   ಥಾಯ್ ಲೆಂಡಿನ ಪ್ರಮುಖ ದೇವಾಲಯಗಳಲ್ಲೊಂದು ವಾಟ ಅರುಣ ದೇವಾಲಯ. ಅಲ್ಲಿಯ ಸೂರ್ಯೋದಯವಂತೂ ಆವರ್ಣನೀಯ. ಶಿವನನ್ನು ಕಾಣಲು ಭಾಸ್ಕರನೇ ಧರೆಗಿಳಿದು ಬಂದಂತೆ. ಬಾಲ ಸೂರ್ಯ ದೇವಾಲಯವನ್ನು ಬೆಳಗುವ ಆ ದೃಶ್ಯ ಪ್ರಕೃತಿಯೂ ಪರಮಾತ್ಮನೂ ಸಹಯೋಗದಲ್ಲಿರುವಂತೆ ಅಸದೃಶ, ಅಸದಳ. ಬ್ಯಾಂಕಾಕಿನ ಬೃಹತ್ ದೇವಾಲಯಗಳೆಲ್ಲಾ ಚಕ್ರಿ ಮನೆತನದವರು ನಿರ್ಮಿಸಿರುವಂತಹ ದೇವಾಲಯಗಳು. ಅವುಗಳಲ್ಲೊಂದು ರಬ್ಬಿಂಗ್ ದೇವಾಲಯ. ಈ ದೇವಾಲಯದಲ್ಲಿ ರಾಮಾಯಣದ ಇಡೀ ಘಟನೆ ಚಿತ್ರಿತವಾಗಿದೆ. ನಾಲ್ಕುನೂರಕ್ಕೂ ಹೆಚ್ಚು ಶಿಲಾಫಲಕಗಳ ಮೇಲೆ ಇವು ಚಿತ್ರಿತವಾಗಿವೆ. ಹೆಚ್ಚುಕಡಿಮೆ ಥಾಯ್ ಜನರೆಲ್ಲರೂ ಚಿತ್ರಕಾರರೇ. ಯಾರೇ ಆದರೂ ಈ ದೇವಾಲಯದಲ್ಲಿನ ಚಿತ್ರಗಳನ್ನು ಪ್ರತಿ ಮಾಡಬಹುದು. ಈ ದೇವಾಲಯ ಪ್ರಪಂಚದ ಎಲ್ಲಾ ಭಾಗಗಳಿಗೂ ರಾಮಾಯಣದ ಚಿತ್ರಗಳನ್ನೊದಗಿಸುತ್ತದೆ. ರಾಮಾಯಣದ ಕರ್ಮಭೂಮಿ ಭಾರತದಲ್ಲೇ ಇಂತಹ ಸೌಲಭ್ಯವಿಲ್ಲ. ಚಕ್ರಿ ಮನೆತನದ ಮೊದಲ ರಾಜನ ಅಧಿಕೃತ ನಾಮಧೇಯ ರಾಮ. ತಮ್ಮ ಪೂರ್ವಿಕರ ರಾಜಧಾನಿಯಾಗಿದ್ದ ಅಯೋಧ್ಯಾ ನಗರವನ್ನು ಬಿಟ್ಟು ಬ್ಯಾಂಕಾಕನ್ನು ರಾಜಧಾನಿಯಾಗಿ ಮಾಡಿದ ಮೊದಲನೇ ರಾಮ ಅಲ್ಲಿ ನೂರಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ. ರಾಮಾಯಣವನ್ನು ಸಂಸ್ಕೃತ ಛಂದಸ್ಸಿನಲ್ಲಿ ರಚಿಸಿದ. ಆತ ರಚಿಸಿದ ರಾಮಾಯಣವೇ ಅಲ್ಲಿನ ರಾಮಾಯಣ ರೂಪಕಕ್ಕೆ ಆಧಾರ. ಪ್ರತಿ ಹೋಟಲಿನಲ್ಲೂ ರಾಮಾಯಣದ ರೂಪಕಗಳು ಕಂಡುಬರುತ್ತವೆ. ಪ್ರತಿದಿನ ರಾಮಾಯಣಕ್ಕೆ ಸಂಬಂಧಿಸಿದ ನಾಟಕಗಳು, ರೂಪಕಗಳು, ನೃತ್ಯ-ಗೀತ ರೂಪಕಗಳು ಪರಂಪಾರಗತ ಶೈಲಿ, ವಿನ್ಯಾಸ, ವರ್ಣ, ವೇಶಭೂಷಣಗಳಲ್ಲಿ ಪ್ರದರ್ಶಿಸಲ್ಪಡುತ್ತವೆ. ವಿವಿಧ ಪಾತ್ರಗಳ ಮುಕುಟಗಳಿಂದಲೇ ಆ ಪಾತ್ರವನ್ನು ಗುರುತಿಸಬಹುದು. ಅಂತಹ ಪರಿಷ್ಕೃತ ಕಲಾಕುಸುಮಗಳು ಅಲ್ಲಿನ ರಾಮಾಯಣ ರೂಪಕಗಳು. ಅಲ್ಲಿನ ಪತ್ರಿಕೆಗಳು ರಾಮಾಯಣ ಪಾತ್ರ-ಪ್ರಸಂಗಗಳ ಬಗ್ಗೆ ವಿಶೇಷ ಲೇಖನಗಳನ್ನೇ ಪ್ರಕಟಿಸುತ್ತವೆ. ಅಲ್ಲಿನ ಲಲಿತಕಲಾ ವಿಭಾಗವನ್ನು ಶಿಲ್ಪಾಧಿಕರಣ ಎನ್ನುತ್ತಾರೆ. ಅಲ್ಲಿ ಇಂದ್ರ, ಬ್ರಹ್ಮ ಮುಂತಾದ ದೇವತೆಗಳ ಪ್ರತಿಮೆಗಳೂ ನಿರ್ಮಾಣವಾಗುತ್ತವೆ. ಥಾಯ್ ಜನರ ಪ್ರತಿಮನೆಯಲ್ಲೂ ರಾಮಾಯಣಕ್ಕೆ ಸಂಬಂಧಿಸಿದ ಕಲಾಕೃತಿಗಳು ಇರುತ್ತವೆ. ಒಟ್ಟಾರೆ ಥಾಯ್ ಸಾಹಿತ್ಯ ಭಾರತದ ಪರಂಪರೆಯನ್ನು ಆದರ್ಶವಾಗಿ ಪರಿಭಾವಿಸುತ್ತದೆಯೇ ಹೊರತು ಪಾಶ್ಚಿಮಾತ್ಯ ಪರಂಪರೆಯನ್ನಲ್ಲ. ಥಾಯ್ ಲಿಪಿ ಪಲ್ಲವರ ಕಾಲದ ಭಾರತೀಯ ಲಿಪಿಯಿಂದ ರೂಪಿತವಾದ ಕಾಂಬೋಡಿಯಾ ಲಿಪಿಯನ್ನು ಬಹುಮಟ್ಟಿಗೆ ಅನುಸರಿಸಿದೆ.

                    ಥಾಯ್ಲೆಂಡಿನ ಕ್ರೀಡೆಗಳ ಅಭಿಮಾನ ದೇವತೆ ಇಂದ್ರ. ಬ್ಯಾಂಕಾಕಿನ ವಿಶಾಲ, ಸುಂದರ ಕ್ರೀಡಾಂಗಣದ ಮಹಾದ್ವಾರದಲ್ಲಿ ಐರಾವತವನ್ನೇರಿ ಹೊರಟಿರುವ ಧೀರ ಇಂದ್ರನ ಬೃಹತ್ ವಿಗ್ರಹವೊಂದಿದೆ. ಅಲ್ಲಿನ "ದೇವ ರೂಪಾವಳಿ" ಎಂಬ ಹಸ್ತಪ್ರತಿ ಶಿಲ್ಪಶಾಸ್ತ್ರ ಗ್ರಂಥದಲ್ಲಿ 300ಕ್ಕೂ ಹೆಚ್ಚು ದೇವ ದೇವಿಯರ ಚಿತ್ರಗಳಿವೆ. ಅಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ರಾಮ-ಶಿವ-ವಿಷ್ಣು-ಬ್ರಹ್ಮ ಹಾಗೂ ಅನೇಕ ತಾಂತ್ರಿಕ ವಿಗ್ರಹಗಳು ಸಾಮಾನ್ಯ. ಅಲ್ಲಿನ ಪ್ರತಿ ಹೋಟಲಿಗೂ ಒಂದೊಂದು ಅಭಿಮಾನ ದೇವತೆ ಇರುತ್ತದೆ. ಆ ದೇವತೆಗೆ ಸಂಬಂಧಿಸಿದ ಛಾಯಾ ನಾಟಕವನ್ನು ಪ್ರತಿದಿವಸ ಆಡಿಸುತ್ತಾರೆ. ಪ್ರತಿಯೊಂದು ದೇವಾಲಯದಲ್ಲಿ ಒಂದು ಋಷಿ ಸ್ಥಂಭವಿರುತ್ತದೆ. ಸ್ತಂಭದ ಕೆಳಗೆ ಆಯಾ ಋಷಿಯ ಕುಳಿತಿರುವ ಚಿತ್ರವಿರುತ್ತದೆ. ಪುರಾತನ ಧನುರ್ವೇದದ ಅನೇಕ ಹಸ್ತಪ್ರತಿಗಳಿವೆ. ನಮ್ಮಲ್ಲಿನ ತುಲಾಭಾರ ರೀತಿಯ ಝೂಲಾ ಎಂಬ ಸಮಾರಂಭ ಅಲ್ಲಿನ ದೇವಾಲಯಗಳಲ್ಲಿ ನಡೆಯುತ್ತದೆ. ಬ್ರಹ್ಮ, ವಿಷ್ಣು, ಮಹೇಶ್ವರರಲ್ಲದೆ ಹನುಮಂತ, ಪರಶುರಾಮ, ಗಣೇಶರನ್ನೂ ಆರಾಧಿಸುತ್ತಾರೆ. ನಮ್ಮ ಪುರಾಣದ ಮಣಿಮೇಖಲೆ ಅಲ್ಲಿಯೂ ಪ್ರಸಿದ್ಧಳು. ಥಾಯ್ ಲ್ಯಾಂಡಿನ ಇತಿಹಾಸ ಒಂಭೈನೂರು ಸಂಪುಟಗಳಷ್ಟಿದೆ! ಭಗವದ್ಗೀತೆಯನ್ನೂ ಥಾಯ್ ಭಾಷೆಗೆ ಅನುವಾದಿಸಲಾಗಿದೆ. ಪ್ರತಿಯೊಬ್ಬ ಕವಿ, ಪಂಡಿತ, ಅರಸರ ಐತಿಹ್ಯ ಅಲ್ಲಿ ದೊರೆಯುತ್ತದೆ. ಅಲ್ಲಿನ ರಾಷ್ಟ್ರೀಯ ಗ್ರಂಥ ಭಂಡಾರದಲ್ಲಿ ಎಲ್ಲಾ ಹಸ್ತಪ್ರತಿಗಳನ್ನು ಛಾಯಾಗ್ರಹಣ ಮಾಡಿ ಸಂಗ್ರಹಿಸಿಟ್ಟಿದ್ದಾರೆ.

                  ಪ್ರಪಂಚದಲ್ಲಿ ವಿಷ್ಣುಶಯನ, ಉತ್ಥಾನಗಳನ್ನು ಸ್ವತಃ ರಾಜನೇ ಅಭಿನಯಿಸುವ ದೇಶವೆಂದರೆ ಥಾಯ್ಲಂಡ್ ಒಂದೇ. ಅಲ್ಲಿ ರಾಜನು ಭೂಮಿಯ ಮೇಲೆ ವಿಷ್ಣುವಿನ ಪ್ರತಿನಿಧಿ ಸ್ವರೂಪ. ವರ್ಷದಲ್ಲಿ ನಿಯಮಿತ ದಿನವೊಂದರಂದು ಆತ ಶಯನ ಮಾಡುತ್ತಾನೆ. ಆರು ತಿಂಗಳ ನಂತರ ದೇವೋತ್ಥಾನ, ರಾಜನೇ ಭಾಗವಹಿಸುವ ತೆಪ್ಪೋತ್ಸವ ನಡೆಯುತ್ತದೆ ಕೂಡಾ. ಶಯನ ಉತ್ಥಾನ ಎರಡಕ್ಕೂ ವಿಶೇಷ ಸಂಗೀತವಿದೆ. ಥಾಯ್ಲೆಂಡಿನಲ್ಲಿ ಪಟ್ಟಾಭಿಷೇಕ ಮಹೋತ್ಸವ ವೈದಿಕ ಕ್ರಮದಲ್ಲೇ ಜರಗುತ್ತದೆ. ತೀರಿಕೊಂಡಾಗಲೂ "ಅಂತ್ಯೇಷ್ಟಿ" ನಡೆಸಿ, ಚಿತಾಭಸ್ಮವನ್ನು ತೀರ್ಥಗಳಲ್ಲಿ ಬಿಡುತ್ತಾರೆ.  ಭಿಕ್ಷಾಟನೆ ಅಲ್ಲಿ ಧರ್ಮಕಾರ್ಯ. ಪ್ರತಿಯೊಬ್ಬನು ತನ್ನ ಜೀವನದ ಸ್ವಲ್ಪ ಕಾಲವನ್ನಾದರೂ ದೇವಾಲಯದಲ್ಲಿ ಕಳೆದು ಭಿಕ್ಷಾಟನೆ ಮಾಡಲೇಬೇಕು. ರಾಜನೂ ಇದಕ್ಕೆ ಹೊರತಲ್ಲ. ಭಿಕ್ಷೆ ನೀಡಲೆಂದೇ ವಿಶೇಷ ಪಾತ್ರೆಗಳಿರುತ್ತವೆ. ಒಟ್ಟಾರೆ ಭಾರತೀಯ ಧರ್ಮ-ದೇವತೆಗಳು, ಶಿಲ್ಪಶಾಸ್ತ್ರ-ಧನುರ್ವೇದಾದಿಗಳು, ಭಾವ-ಭಾಷೆಗಳು ಥಾಯ್ಲೆಂಡ್ ಜನಜೀವನದ ನೆಲೆಗಟ್ಟು. ನಮ್ಮ ಪುರಾತನ ರೀತಿನೀತಿಗಳ ಪರಿಶುದ್ಧ ರೂಪ ಅಲ್ಲಿ ಸಂರಕ್ಷಿಸಲ್ಪಟ್ಟಿದೆ. ಅಲ್ಲೊಂದು ಜೀವಂತ ಭಾರತವೇ ಇದೆ.

               ಥಾಯ್ಗಳು ರಾಜನನ್ನು ದೇಶದ ಏಕತೆಯ ಸಂಕೇತವಾಗಿ, ಪ್ರೀತಿ, ಗೌರವಾದರಗಳಿಂದ ನೋಡುತ್ತಾರೆ. ಜನ ದೇವರಂತೆ ಪೂಜಿಸುವ ಅಂತಹ ಮಹಾನ್ ದೇಶದ ರಾಜ ತೀರಿಕೊಂಡಾಗ ಸಹಜವಾದ ಶೂನ್ಯಭಾವ ಆವರಿಸಿದೆ. ರಾಜ ಮನೆತನದ ನಿಯಮದಂತೆ ರಾಜಪೀಠ ವಜ್ರಲಂಗ್ ಕರ್ಣರಿಗೇ ಸಿಗಬೇಕು. ರಾಜಕೀಯ ಪರಿಣತರ ಪ್ರಕಾರ ವಜ್ರಲಂಗ್ ಕರ್ಣ ಅರಸರಾದರೂ ಅವರ ಸ್ಥಾನ ಕಲ್ಲುಶಿಲ್ಪದಂತೆ! ಥಾಯ್ ಲ್ಯಾಂಡಿನಲ್ಲಿ ರಾಜ ಬದುಕಿರುವಾಗ ಆತನ ಉತ್ತರಾಧಿಕಾರಿಯ ಬಗ್ಗೆಯಾಗಲೀ ಅಥವಾ ಆತನ ಆರೋಗ್ಯದ ಬಗ್ಗೆ ಚರ್ಚೆ ನಡೆಸುವುದು ಕಾನೂನು ರೀತ್ಯಾ ಅಪರಾಧ(lese majeste). ತನ್ನ ಮಗನನ್ನು ಉತ್ತರಾಧಿಕಾರಿ ಎಂದು ಭೂಮಿಬಲ ಹಿಂದೊಮ್ಮೆ ಘೋಷಿಸಿದ್ದರೂ ಜನತೆಯ ಒಲವು ಅವರ ಕಡೆ ಅಷ್ಟಾಗಿ ಇಲ್ಲದಿರುವುದರಿಂದ ಉತ್ತರಾಧಿಕಾರಿ ಯಾರಾಗುತ್ತಾರೆಂಬ ವಿಚಾರದಲ್ಲಿ ಗೊಂದಲಗಳೇ ತುಂಬಿವೆ. ಈ ವಿವಾದ ಸೈನ್ಯ ಹಾಗೂ ಯುವರಾಜ ವಜ್ರಲಂಗ್ ಕರ್ಣ, ಭೂಮಿಬಲರ ಮಗಳು ಮಹಾಚಕ್ರಿ ಸಿರಿಂಧರ್ಣ್ ಮಧ್ಯೆ ಸಮರಕ್ಕೆ ಕಾರಣವಾಗುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ.

               ಅರಸ ಭೂಮಿಬಲರ ನಿರ್ದೇಶನದಂತೆ ಕಳೆದ ಆಗಸ್ಟಿನಲ್ಲಿ ಹೊಸ ಸಂವಿಧಾನವನ್ನು ಸಾರ್ವಜನಿಕ ಅಭಿಪ್ರಾಯದ ಮೂಲಕ ಜಾರಿಗೆ ತರಲಾಗಿತ್ತು. ಸೇನಾ ಮುಖ್ಯಸ್ಥ, ಪ್ರಧಾನಿ ಪ್ರಯೂಧ್ ಖನೋಖಾ ನೇತೃತ್ವದ ಸೇನಾ ಸರಕಾರ ಸಂವಿಧಾನವನ್ನು ಮತ್ತೆ ಸೈನ್ಯಕ್ಕೆ ಸಹಾಯಕವಾಗುವಂತೆ, ಮುಂದೆ ಮಾರ್ಪಡಿಸಲು ಅಸಾಧ್ಯವಾಗುವಂತೆ ಬದಲಾಯಿಸಿತು. ಸಾರ್ವಜನಿಕ ಅಭಿಪ್ರಾಯ ನಾಗರಿಕ ಸರ್ಕಾರದ ಕಡೆಗಿದ್ದರೂ ಪ್ರಧಾನಿ ಹಾಗೂ ಸಂಸದರನ್ನು ಚುನಾಯಿಸದೇ ಸೈನ್ಯವೇ ನೇಮಕ ಮಾಡುವಂತೆ ಸಂವಿಧಾನವನ್ನು ಬದಲಾಯಿಸಲಾಯಿತು. ಹೀಗೆ ಜನತೆ ಚುನಾಯಿಸುವ, ಸರಕಾರದ ನೀತಿಯನ್ನು ವಿರೋಧಿಸುವ ಹಕ್ಕನ್ನು ಕಳೆದುಕೊಂಡಿತು. ತನ್ನ ಮೇಲಿನ ಭೃಷ್ಟಾಚಾರದ ಆರೋಪವನ್ನು ಮುಚ್ಚಿಹಾಕಲು 2014ರಲ್ಲಿ ಥೈಲ್ಯಾಂಡಿನ ಬೀದಿಗಳಲ್ಲಿ ದಂಗೆ ಎಬ್ಬಿಸಿದ್ದರು ಖನೋಖ. ಮಧ್ಯಂತರವಾಗಿ ಎರಡು ವರ್ಷದ ಅವಧಿಗೆಂದು ನೇಮಿಸಲ್ಪಟ್ಟ ಖನೋಖಾ ಸರಕಾರ 220 ಸಂಸದರನ್ನು ಹೊಂದಿದ್ದು ಭೃಷ್ಟಾಚಾರದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದೆ. ಶಾಶ್ವತ ಶಾಸಕಾಂಗವನ್ನು ಹೊಂದಿಲ್ಲದಿದ್ದರೂ ಚುನಾವಣೆ ನಡೆಸುವ ಯಾವುದೇ ಇರಾದೆಯೂ ಸರಕಾರಕ್ಕೆ ಇದ್ದಂತಿಲ್ಲ.

                2011ರ ಬಳಿಕ ಥಾಯ್ ಲ್ಯಾಂಡಿನಲ್ಲಿ ಚುನಾವಣೆಯೇ ನಡೆದಿಲ್ಲ. ಉದ್ಯಮಪತಿಯಾಗಿದ್ದು ರಾಜಕೀಯ ಸೇರಿ ಪ್ರಧಾನಿಯಾಗಿದ್ದ ಟೆಲಿಕಾಮ್ ಕ್ಷೇತ್ರದ ದಿಗ್ಗಜ ಬಿಲಿಯನೇರ್ ದಕ್ಷಿಣ್ ಶಿನವಾತ್ರರನ್ನು 2006ರಲ್ಲಿ ನಡೆದ ದಂಗೆಯಲ್ಲಿ ಕೆಳಕ್ಕಿಳಿಸಿದ ನಂತರ ದೇಶ ಇಬ್ಬಾಗವಾದಂತಾಗಿತ್ತು. 2014ರಲ್ಲಿ ದಕ್ಷಿಣ್ ಅವರ ತಂಗಿ ಇಂಗ್ಲುಕ್ ಶಿನವಾತ್ರರ ಸರಕಾರವನ್ನು ಪ್ರಯೂಧ್ ನೇತೃತ್ವದ ಸೇನೆ ಕಿತ್ತೆಸೆದಿತ್ತು. ಥಾಯ್ ಲ್ಯಾಂಡಿನ ಬಡ ಹಾಗೂ ಮಧ್ಯಮವರ್ಗ ಈಗಲೂ ಶಿನವಾತ್ರ ಪರಿವಾರದ ಪರವಿದ್ದು ಶ್ರೀಮಂತ ವರ್ಗ ಅವರನ್ನು ಸದಾ ವಿರೋಧಿಸುತ್ತದೆ. ಪ್ರಧಾನಿಯನ್ನು ನೇಮಿಸುವುದು ಅರಸುಮನೆತನವಾದರೂ ಶಾಸಕಾಂಗಸಭೆಯಿಂದ ಅದು ಒಪ್ಪಿತವಾಗಬೇಕು. ಕಾಲಕಾಲಕ್ಕೆ ಬದಲಾಗಿರುವ ಥಾಯ್ ಸಂವಿಧಾನದ ಪ್ರಕಾರ ಹೊಸ ರಾಜನನ್ನು ಸಂಸತ್ತು ಘೋಷಿಸಬೇಕು. ಹಾಗೆಯೇ ಥಾಯ್ ಉನ್ನತ ವರ್ಗ ಹೊಸ ರಾಜನಾಗುವವನಿಗೆ ಸರಕಾರದ ಮೇಲೆ ಹತೋಟಿಯಿದೆ ಎಂದು ವಿಶದೀಕರಿಸಬೇಕು. ಇಲ್ಲೇನೋ ದ್ವಂದ್ವ ಇರುವಂತೆ ಮೇಲ್ನೋಟಕ್ಕೇ ಅರಿವಾಗುವುದಿಲ್ಲವೇ? ಸಹಜವಾಗಿಯೇ ಖನೋಖ ತನಗೆ ಸಹಾಯಕರಾಗುವವರನ್ನೇ ಮುಂದಿನ ರಾಮನನ್ನಾಗಿ ನೇಮಿಸಲು ಉತ್ಸುಕರಾಗಿರುತ್ತಾರೆ. ಅಲ್ಲದೆ ಜನಮಾನಸದಲ್ಲಿ ಯುವರಾಜ ವಜ್ರಲಂಗ್ ಕರ್ಣರ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ದುರಾಚಾರಿ, ಲೋಭಿಯಾದ ಆತನಿಗಿಂತ ಯುವರಾಣಿ ಮಹಾಚಕ್ರಿ ಸಿರಿಂಧರ್ಣ್ ಪಟ್ಟಕ್ಕೆ ಸೂಕ್ತ ಎನ್ನುವ ಅಭಿಪ್ರಾಯ ಥಾಯ್ ಗಳಲ್ಲಿದೆ. ಯೂರೋಪಿನಲ್ಲಿ ಐಷಾರಾಮಿ ಹಾಗೂ ಸ್ವೇಚ್ಛಾ ಜೀವನ ಸಾಗಿಸುತ್ತಿದ್ದ ವಜ್ರಲಂಗ್ ಕರ್ಣರ "ಪ್ಲೇ ಬಾಯ್" ಪರಿಯ ಜೀವನವನ್ನು ಕಂಡೇ 2014ರಲ್ಲಿ ಪ್ರತ್ಯೂಧ್ ನೇತೃತ್ವದ ಸೇನೆ ಸರಕಾರದ ಮೇಲೆ ದಂಗೆಯೆದ್ದು ತನ್ನ ಹಿಡಿತವನ್ನು ಬಲಪಡಿಸಿಕೊಂಡಿತ್ತು ಎನ್ನುತ್ತಾರೆ ರಾಜಕೀಯ ಪರಿಣತರು.

              ಭೂಮಿಬಲರ ವಿರೋಧಿಗಳು ಆತ ಮಿಲಿಟರಿ ದಂಗೆಗಳ ಪರವಾಗಿದ್ದರು ಹಾಗೂ ಮಾನವ ಹಕ್ಕುಗಳ ದಮನವಾದಾಗ ಸುಮ್ಮನಿದ್ದರು ಎಂದು ಆರೋಪಿಸುತ್ತಾರೆ. 2003ರಲ್ಲಿ ಭೂಮಿಬಲ್ ಮಾದಕ ದ್ರವ್ಯಗಳ ವಿರುದ್ಧ ಕಾರ್ಯಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಕಾರ್ಯಾಚರಣೆ 2000 ವ್ಯಸನಿ ಯಾ ಬೆಂಬಲಿತರ ಹತ್ಯೆಗೆ ಕಾರಣವಾಯಿತು. ಎಂದಿನಂತೆ ಮಾನವ ಹಕ್ಕು ಹೋರಾಟಗಾರರು ಬೀದಿಗಿಳಿದು ತನಿಖೆ ನಡೆಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿಕೊಂಡರು. ಆದರೆ ಇದರಿಂದ ಜನರ ಪ್ರೀತಿಯೇನೂ ಕಡಿಮೆ ಆಗಲಿಲ್ಲ ಎನ್ನುವುದಕ್ಕೆ ಅವರ ಜನ್ಮದಿನ ಸೋಮವಾರದ ಬಣ್ಣವಾದ(ಥಾಯ್ ಪ್ರಕಾರ) ಹಳದಿ, ಪ್ರಧಾನಿ ಶಿನವಾತ್ರರ ಕೆಂಪಂಗಿಗಳ ವಿರುದ್ಧ ಸಮರದಲ್ಲಿ ಪ್ರಮುಖ ಚಿಹ್ನೆಯಾದದ್ದು, ಅವರ ಪಟ್ಟವೇರಿದ ಅರವತ್ತನೇ ವರ್ಷಾಚರಣೆ, ಎಂಬತ್ತನೇ ಜನ್ಮಾಚರಣೆಯಲ್ಲಿ ಸೇರಿದ ಜನ ಸಮೂಹವೇ ಸಾಕ್ಷಿ. ಈಗಲೂ ಶಿನವಾತ್ರ ಪರಿವಾರದ ವಿರುದ್ಧ ನಡೆದ ಎರಡೂ ದಂಗೆಗೂ ಭೂಮಿಬಲರ ಬೆಂಬಲವಿತ್ತು, ರಾಜಪರಿವಾರದ ಅಧಿಕಾರವನ್ನು ಉಳಿಸಿಕೊಳ್ಳಲು ಅವರೇ ದಂಗೆಯೇಳಲು ಕುಮ್ಮಕ್ಕು ಕೊಟ್ಟರು ಎಂದೇ ಅವರ ವಿರೋಧಿಗಳು ಹೇಳುತ್ತಾರೆ. ಆಸ್ಟ್ರೇಲಿಯನ್ ಫೈನಾನ್ಶಿಯಲ್ ರಿವ್ಯೂನ ಪತ್ರಕಾರ ಆಂಡ್ರ್ಯೂ ಮಾರ್ಷಲ್ " ಹಿಂಬಾಗಿಲಿನಿಂದ ಆಡಳಿತದ ಮೇಲೆ ಪ್ರಭಾವ ಬೀರುವ ಥೈಲ್ಯಾಂಡಿನ ಶ್ರೀಮಂತ ಪರಿವಾರಗಳಿಗೆ ಶಿನವಾತ್ರ ಕಂಟಕಪ್ರಾಯರಾಗಿರುವುದೇ 2014ರಲ್ಲಿ ಅವರ ತಂಗಿಯ ಸರ್ಕಾರವನ್ನು ವಜಾ ಮಾಡಲು ಕಾರಣ" ಎನ್ನುತ್ತಾರೆ.


                  ಮಾರ್ಷಲ್ ಪ್ರಕಾರ ವಜ್ರಲಂಗ್ ಶಿನವಾರ ಪರಿವಾರದ ಸಮೀಪವರ್ತಿಯಾಗಿರುವುದರಿಂದ ಆತ ಅರಸನಾದರೆ ಅಧಿಕಾರ ಸೂತ್ರ ಶಿನವಾರ ಕೈಗೆ ಸಿಕ್ಕು ಥಾಯ್ ಬಡಜನರ ಪಾಲಿಗೆ ಮಂಗಳದಾಯಕವಾಗಬಹುದು. ಆದರೆ ಆಗ ಇನ್ನೊಂದು ವರ್ಗ ಅಸಮಧಾನಗೊಳ್ಳುವುದು ನಿಶ್ಚಿತ. ಥಾಯ್ ಲ್ಯಾಂಡಿನ ಪರಿಸ್ಥಿತಿಯನ್ನು ಎರಡು ರೀತಿಯಲ್ಲಿ ಅವಲೋಕಿಸಬಹುದು. ಒಂದು ಕಡೆ ಸೇನೆ ತನ್ನ ಪ್ರಾಬಲ್ಯವನ್ನು ತೋರಿಸಲು ಬಯಸಿ 2014ರಲ್ಲಿ ಮತ್ತೆ ದಂಗೆಯೆದ್ದಿದ್ದರೆ, ಇನ್ನೊಂದು ಕಡೆ ರಾಜಕಾರಣಿಗಳು ಅಧಿಕಾರವನ್ನು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸಧ್ಯದ ಮಟ್ಟಿಗೆ ಸೇನೆ ಯಶಸ್ವಿಯಾದಂತೆ ಕಂಡರೂ ಮುಂದಿನ ದಿನಗಳಲ್ಲಿ ದಂಗೆಯಾಗಿ ಅಸ್ಥಿರತೆ ಉಂಟಾಗಲಾರದು ಎನ್ನುವಂತಿಲ್ಲ. ಜನತೆ ನಾಗರಿಕ ಸರಕಾರವನ್ನು ಬಯಸಿದ್ದರೂ ಈ ಎರಡೂ ಪಕ್ಷಗಳಿಂದ ಅದನ್ನು ಸಂಪೂರ್ಣವಾಗಿ ನಿರೀಕ್ಷಿಸುವುದು ಅಸಾಧ್ಯ. ಥಾಯ್ಗಳಿಗೆ ರಾಜನೇ ರಾಮನಾದ ಕಾರಣ ಇಬ್ಬರೂ ರಾಜನನ್ನು ಓಲೈಸುವುದು ಶತಃಸಿದ್ಧ. ಮುಂದೆ ಯಾರು ರಾಜರಾಗುತ್ತಾರೆ ಎನ್ನುವುದು ಈಗ ಯಾರ ಪ್ರಭಾವ ಹೆಚ್ಚಿದೆ ಅನ್ನುವುದನ್ನು ಅವಲಂಬಿಸಿದೆ. ಪ್ರಭಾವಿಗಳು ಮತ್ತೆ ಹಿಂಬಾಗಿಲಿನಿಂದ ಆಡಳಿತ ನಡೆಸುವುದು ನಿಶ್ಚಿತ. ತಮ್ಮ ಮಾತಿಗೆ ಒಪ್ಪದಿದ್ದಾಗ ಅವರು ದಂಗೆಯೇಳಲೂಬಹುದು. ಭೂಮಿಬಲ ತಮ್ಮ ಎಪ್ಪತ್ತು ವರ್ಷಗಳ ಆಳ್ವಿಕೆಯಲ್ಲಿ ಇಂತಹ ಅನೇಕ ದಂಗೆಗಳನ್ನು ಅಡಗಿಸಿದವರು. ಆದರೆ ಆ ಸಾಮರ್ಥ್ಯ ವಿಷಯಲೋಲುಪರಾದ ಅವರ ಮಗನಲ್ಲಿ ಇದ್ದೀತೆಂದು ನಿರೀಕ್ಷಿಸಲಾಗದು. ಹಾಗಾಗಿ ಜನ ಬಯಸಿದ ನಾಗರಿಕ ಸರ್ಕಾರ ಬಿಡಿ ಶಾಂತಿ, ಸುವ್ಯವಸ್ಥೆಗಳೇ ಮರೀಚಿಕೆಯಾಗಬಹುದು.

                     ಅತ್ತ ಅರಸನ ಸಾವಿನಿಂದ ಶೇರು ಮಾರುಕಟ್ಟೆಯೂ ಕುಸಿತ ಕಂಡಿದೆ. ಈಗಾಗಲೇ ಒಂದು ವರ್ಷ ಪರ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಅರಸನ ತಾಯಿ 1995ರಲ್ಲಿ ತೀರಿಕೊಂಡಾಗ ಎಂಟು ತಿಂಗಳ ಕಾಲ ಶವಸಂಸ್ಕಾರ ಮಾಡಿರಲಿಲ್ಲ. ಇದೇ ಪರಿಸ್ಥಿತಿಯಾದರೆ ಥೈಲ್ಯಾಂಡಿನ ಉದ್ಯಮಗಳು ನೆಲಕಚ್ಚಿ, ಮೊದಲೇ ಕೆಳಮುಖವಾಗಿರುವ ಆರ್ಥಿಕ ಪ್ರಗತಿ ಮತ್ತಷ್ಟು ಹದಗೆಡುವುದು ಖಂಡಿತ. ಪ್ರಯೂಧರ "ಯುವರಾಜ ಕೆಲ ದಿನಗಳ ಶೋಕಾಚರಣೆಯ ಬಳಿಕ ಪಟ್ಟವನ್ನಲಂಕರಿಸುವುದಾಗಿ ಹೇಳಿದ್ದಾರೆ" ಎನ್ನುವ ಪತ್ರಿಕಾಗೋಷ್ಠಿಯಲ್ಲಿನ ಮಾತು ಎಷ್ಟು ಸತ್ಯ ಎನ್ನುವುದನ್ನು ದೇವರೇ ಬಲ್ಲ. ಸೇನೆಯ ಸರ್ವಾಧಿಕಾರವನ್ನು ವಿರೋಧಿಸಿದ 120 ಜನರನ್ನು ಈಗಾಗಲೇ ಜೈಲಿಗೆ ತಳ್ಳಲಾಗಿದೆ. ರಾಜಪರಿವಾರದ ವಿರುದ್ಧ ಅವಹೇಳನ ಮಾಡಿದವರಿಗೆ ಹದಿನೈದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಕಾನೂನು ಥಾಯ್ ಸಂವಿಧಾನದಲ್ಲಿದೆ. ಏತನ್ಮಧ್ಯೆ ಏಳು ದಶಕಗಳ ಪರ್ಯಂತ ಭೂಮಿಬಲರ ಶಾಂತಿ, ಸುವ್ಯವಸ್ಥೆಯ ಆಡಳಿತ ಕಂಡಿದ್ದ ಥಾಯ್ ಲ್ಯಾಂಡಿನಲ್ಲಿ ಕಳೆದ ಮಂಗಳವಾರ ಬುಧವಾರಗಳಂದು ಮತಾಂಧ ಮುಸ್ಲಿಮರಿಂದ ಬಾಂಬ್ ದಾಳಿಯೂ ಆಗಿ ನಾಲ್ಕು ಜನ ಮೃತಪಟ್ಟಿದ್ದಾರೆ. ಒಟ್ಟಾರೆ ಪುಟ್ಟ ಜೀವಂತ ಭಾರತ ಸಂಕಟದಲ್ಲಿದೆ.

ಸೋಮವಾರ, ಅಕ್ಟೋಬರ್ 17, 2016

ಯಾರು ಮಹಾತ್ಮ? ಭಾಗ- ೧೨

ಯಾರು ಮಹಾತ್ಮ?
ಭಾಗ- ೧೨


            ಇಡೀ ದೇಶ ಮೋಪ್ಲಾ ಅತ್ಯಾಚಾರಕ್ಕೆ ಆತಂಕಗೊಂಡಿದ್ದರೆ, ಗಾಂಧಿ ಅದಾವುವೂ ತನಗೆ ತಿಳಿಯದೆಂದರು. ಆಗ್ರಹಿಸಿ ಪ್ರಶ್ನಿಸಿದಾಗ " ಮೋಪ್ಲಾಗಳು ತಮ್ಮ ಧಾರ್ಮಿಕ ಆದೇಶದಂತೆ ವರ್ತಿಸಿದ್ದಾರೆ. ಹಿಂದೂಗಳು ಹಿಂದೆ ಮಾಡಿದ ಪಾಪವೇ ಈ ಘಟನೆಗಳಿಗೆ ಕಾರಣವಿರಬಹುದು" ಎಂದು ಅತ್ಯಾಚಾರಿಗಳನ್ನೇ ಸಮರ್ಥಿಸಿದರು.  ಅಲ್ಲದೆ ತಮ್ಮ "ಯಂಗ್ ಇಂಡಿಯಾ" ದಲ್ಲಿ “ವ್ಯಾಪಕ ಮತಾಂತರ ನಡೆದಿಲ್ಲ. ಕೇವಲ ಒಂದೇ ಒಂದು ಪ್ರಕರಣ ನಡೆದಿದೆ. " ಎಂದು ಬರೆದರು. "ಇಂಥಾ ಬಾಲಿಶ ಹೇಳಿಕೆಗಳನ್ನು ಕೊಡಬೇಡಿ" ಎಂದು ಗಾಂಧಿಗೆ ಹೇಳಿದ ತಪ್ಪಿಗೆ ಕೆ.ಪಿ. ಕೇಶವ ಮೆನನರ(ಕಲ್ಲಿ ಕೋಟೆಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ) ಮನೆಯ ಮೇಲೇ ಕಾಂಗ್ರೆಸ್ಸಿಗರು ಕಲ್ಲು ತೂರಿದರು. ಕಾಂಗ್ರೆಸ್ ತನಗೂ ಮೋಪ್ಲಾ ಗಲಭೆಗೂ ಸಂಬಂಧವಿಲ್ಲವೆಂದೂ, ಉತ್ಪ್ರೇಕ್ಷಿತ ವರದಿಗಳಿಂದ ವಿಚಲಿತರಾಗಿ ಮೋಪ್ಲಾಗಳು ಹಿಂಸಾಚಾರಕ್ಕಿಳಿದರೆಂದೂ ನಿರ್ಣಯ ಮಾಡಿತು. ಮದರಾಸ್ ಸರಕಾರದ ಅಧಿಕೃತ ದಾಖಲೆಯಲ್ಲಿ ಹಲವು ಸಾವಿರ ಮತಾಂತರ ಪ್ರಕರಣಗಳ ಅಧಿಕೃತ ವರದಿಗಳು ಇದ್ದಾಗ್ಯೂ ಗಾಂಧಿ ಈ ವರೆಗೆ ಅಂತಹ ಕೇವಲ ೩ ಪ್ರಕರಣಗಳು ನಡೆದಿವೆ ಎಂದರು (1922 ಜನವರಿ). ಕಾಂಗ್ರೆಸ್ ಮಗುಮ್ಮಾಗಿ ಬೆಂಬಲಿಸಿತು.

                ಸರ್ವೆಂಟ್ಸ್ ಆಫ್ ಸೊಸೈಟಿಯ ವರದಿಯಂತೆ ಮೋಪ್ಲಾಗಳಿಂದ 1000 ಹಿಂದೂಗಳ ಕಗ್ಗೊಲೆ, 20,000 ಬಲವಂತದ ಮತಾಂತರಗಳು, ಹಲವು ಸಾವಿರ ಮಹಿಳೆಯರ ಅತ್ಯಾಚಾರ, ಜನರಿಂದ 3 ಕೋಟಿಗೂ ಮಿಕ್ಕಿದ ಹಣದ ಲೂಟಿ ಆಗಿತ್ತು. ಎಡಬಿಡಂಗಿ ಕಮ್ಯೂನಿಷ್ಟರು "ಮೋಪ್ಲಾಗಳು 1100 ದೇವಾಲಯಗಳ ಪೈಕಿ 100 ದೇವಾಲಯಗಳನ್ನು ಮಾತ್ರ ಧ್ವಂಸ ಮಾಡಿದರು. 500 ಮಂದಿ ಮಾತ್ರ ಕೊಲೆಯಾದರು. 2500 ಮಂದಿ ಮಾತ್ರ ಮತಾಂತರಗೊಂಡರು" ಎಂಬ ತನ್ನ ಎಂದಿನ ಹಿಂದೂ ವಿರೋಧಿ ಮನಸ್ಥಿತಿಯ ವರದಿಗಳನ್ನೇ ತಯಾರು ಮಾಡಿದರು. ಈ ದಂಗೆಗಳನ್ನು ತಹಬಂದಿಗೆ ತರಲು ಪೊಲೀಸ್ ಪಡೆಗಳಿಗೆ ಸಾಧ್ಯವಾಗದೇ ಸೈನಿಕ ತುಕಡಿಗಳನ್ನೇ ಕರೆಸಿಕೊಳ್ಳಲಾಯಿತು. ಈ ಹಂತದಲ್ಲಿ ಗೆರಿಲ್ಲಾ ಯುದ್ಧ ತಂತ್ರಕ್ಕೆ ಶರಣು ಹೋದ ಮೋಪ್ಲಾಗಳನ್ನು ನಿಯಂತ್ರಿಸಲು ಒಂದು ವಿಶೇಷ ಅನುಭವಿ ಪಡೆಯನ್ನೇ ತರಬೇತುಗೊಳಿಸಿ ನೇಮಿಸಲಾಯಿತು. ಹೀಗೆ ಏಳೆಂಟು ತಿಂಗಳುಗಳ ಪರ್ಯಂತ ಮೋಪ್ಲಾಗಳೊಂದಿಗೆ ಕಾದಾಡಿದ ಈ ಪಡೆ ದಂಗೆಯನ್ನು ನಿಯಂತ್ರಿಸಿತು.

              ಮೋಪ್ಲಾ ಬಂಡಾಯದ ಕುರಿತು ಆನಿಬೆಸೆಂಟ್, ಅಂಬೇಡ್ಕರ್, ಶಂಕರನ್ ನಾಯರ್ ಮುಂತಾದವರ ಭಾಷಣಗಳೂ, ಆರ್ಯಸಮಾಜ, ವೈಎಂಸಿಎ, ಸರ್ವೆಂಟ್ಸ್ ಆಫ್ ಇಂಡಿಯಾದ ವರದಿಗಳನ್ನು ಓದಿದರೆ ಎಂತಹವನಿಗಾದರೂ ರಕ್ತ ಕುದಿಯಲೇಬೇಕು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಜಿ. ಕೆ ದೇವಧರ್, ಆರ್ಯ ಸಮಾಜದ ಋಷಿರಾಂ, ವೈಎಂಸಿಯ ಕೆಟಿ ಪಾಲ್ & ಎಚ್ ಎ ಪಾಪ್ಲೇ ಮೊದಲಾದವರು ಏರ್ಪಡಿಸಿದ ಸಂತ್ರಸ್ಥ ಸಹಾಯ ಶಿಬಿರಗಳಲ್ಲಿ 26,000ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದರು. ಜಾಮೋರಿನ್ ದೊರೆಯ ಮನಕಾವು, ಕೊಟ್ಟಕ್ಕಲ್ ಅರಮನೆಗಳು, ಕೃಷ್ಣವರ್ಮ ರಾಜನ ಅರಮನೆಗಳಲ್ಲಿ ಸಾವಿರಾರು ಮಂದಿ ಆಸರೆ ಪಡೆದರು. ದಂಗೆ ನಡೆಯಲಿಲ್ಲವೆಂದಾದರೆ ಇಷ್ಟೊಂದು ಮಂದಿ ತಮ್ಮ ಮನೆಮಠ ತೊರೆದು ಹಲವು ತಿಂಗಳುಗಳ ಪರ್ಯಂತ  ಆಶ್ರಯ ಪಡೆದದ್ದು ಯಾಕೆ ಉಚಿತ ಊಟ ಸಿಗುತ್ತದೆಂದೇ? ನೀಲಂಬೂರು ರಾಣಿ ಅತ್ಯಾಚಾರಕ್ಕೊಳಗಾದ 2 ಸಾವಿರ ಮಹಿಳೆಯರ ಪರವಾಗಿ ವೈಸ್ ರಾಯ್ ರೆಡಿಂಗನ ಪತ್ನಿಗೆ ಬರೆದ ಮನವಿ ಪತ್ರ ಕರುಣಾಜನಕವಾಗಿದೆ.
" ಈ ಪ್ರಮಾಣದ ಬರ್ಬರತೆ ಎಲ್ಲಿಯೂ ನಡೆದದ್ದಿಲ್ಲ. ನಮ್ಮ ಬಂಧುಗಳ ಶವಗಳಿಂದ ಇಲ್ಲಿಯ ಕೆರೆಗಳು, ಬಾವಿಗಳು ತುಂಬಿ ಹೋಗಿವೆ. ದುರ್ನಾತ ಹರಡಿದೆ. ನಮ್ಮ ಒಂದೇ ಒಂದು ಅಪರಾಧವೆಂದರೆ ನಮ್ಮ ಮಾತೃ ಧರ್ಮವನ್ನು ತ್ಯಜಿಸಲು ನಾವು ಒಪ್ಪದೇ ಇದ್ದುದು. ಗರ್ಭಿಣಿಯರನ್ನೂ ನಿರ್ದಯವಾಗಿ ಕೊಲ್ಲಲಾಗಿದೆ. ನಮ್ಮ ಹಸುಳೆ ಮಕ್ಕಳನ್ನು ನಮ್ಮೆದುರಿನಲ್ಲಿಯೇ ತುಂಡು ತುಂಡು ಮಾಡಿದ್ದಾರೆ. ಆ ಮಕ್ಕಳ ಅಳು ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಹಸುಗಳನ್ನು ಕೊಂದು ಅವುಗಳ ರಕ್ತಗಳನ್ನು ದೇವಾಲಯಗಳಲ್ಲಿ ಚೆಲ್ಲಾಡಿದ್ದಾರೆ. ತಲೆ ತಪ್ಪಿಸಿಕೊಂಡು ಅರಣ್ಯವಾಸಿಗಳಾಗಿರುವ ನಮಗೆ ಮೈ ಮುಚ್ಚುವಷ್ಟು ಬಟ್ಟೆಯೂ ಇಲ್ಲವಾಗಿದೆ. ಶ್ರೀಮಂತ ಮನೆತನದ ಮಹಿಳೆಯರನ್ನು ಬಲಾತ್ಕಾರವಾಗಿ ಮೋಪ್ಲಾ ಕೂಲಿಗಳಿಗೆ ಲಗ್ನ ಮಾಡಿಸಿದ್ದಾರೆ. ನಮ್ಮ ಅಕ್ಕ, ತಂಗಿಯರು, ಗೆಳತಿಯರನೇಕರು ದಾರುಣ ಅತ್ಯಾಚಾರಗಳಿಗೆ ಬಲಿಯಾಗಿದ್ದಾರೆ. ನಾವೀಗ ರಕ್ಷಣೆಗೆ ನಿಮ್ಮ ಸರಕಾರವನ್ನು ಮೊರೆ ಹೋಗದೇ ಬೇರೆ ದಾರಿಯೇ ಇಲ್ಲ."

                 ಪೊಲೀಸರಿಗೆ ಬಲಿಯಾದ ಮೋಪ್ಲಾನೊಬ್ಬ ಸಾಯುವ ಸಂದರ್ಭದಲ್ಲಿ ಹೇಳಿದ ಮಾತು -"ನಾನು ನೆಮ್ಮದಿಯಿಂದ ಸಾಯುತ್ತಿದ್ದೇನೆ. ಹದಿನಾಲ್ಕು ಮಂದಿಯನ್ನು ನಾನು ಸಾಯಿಸಿದ್ದೇನೆ. ೫ ಮಹಿಳೆಯರನ್ನು ಅತ್ಯಾಚಾರ ಮಾಡಿ, ಹತ್ತು ಜನರ ಮತಾಂತರ ಮಾಡಿರುವ ನನಗೆ ಸತ್ತ ಮೇಲೆ ಮಾನಿನಿಯರಿಂದ ಸ್ವರ್ಗ ಸುಖ ದೊರೆಯುತ್ತದೆ". ಮಾಧವನ್ ನಾಯರ್ ಪ್ರತ್ಯಕ್ಷ ಕಂಡು ಕಳುಹಿಸಿದ ವರದಿ--"...A pregnant woman carrying 7 months was cut through the abdomen by a rebel and she was seen lying dead on the way with the dead child projecting out....Another baby of 6 months was snatched away from the breast of mother and cut into two pieces...."

                ಅಬುಲ್ ಕಲಾಮ್ ಆಜಾದ್, ಹಕೀಂ ಅಜ್ಮಲ್ ಖಾನ್ ಮೊದಲಾದವರ ಉದ್ರೇಕಕಾರಿ ಭಾಷಣಗಳೇ ದಂಗೆಗೆ ಬೀಜಾರೋಪ ಮಾಡಿದವು ಎಂದು ಪಿ.ಸಿ. ಬಮ್ ಪರ್ಡ್ ವರದಿ ಮಾಡಿದರೆ, ಕಾಂಗ್ರೆಸ್ಸಿನ ಖಿಲಾಫತ್ ಪ್ರಚಾರವೇ ಇಡೀ ದುರಂತದ ಮೂಲವೆಂದು ರಾಲಿನ್ ಸನ್ ವರದಿ ಮಾಡಿದ್ದ. 'ವಿಚಾರಣೆ'(!)ಗಾಗಿ ಕಾಂಗ್ರೆಸ್ ನೇಮಿಸಿದ್ದ 'ತೈಯಬ್ಜಿ' ಮಹಾಶಯ ಮಲಬಾರಿಗೆ ಕಾಲಿಡದೇ ಮದರಾಸಿನಲ್ಲೇ ಕುಳಿತು ತನ್ನ ವರದಿ ಬರೆದ! ಶೌಕತ್ ಆಲೀಯಂತು "ಸ್ವರಾಜ್ಯ ಆಂದೋಲನ ಹಿಂದೂ ರಾಜ್ಯಕ್ಕಾಗಿ ನಡೆದಿದೆ. ಹಾಗಾಗಿ ಮುಸಲ್ಮಾನರೆಲ್ಲಾ ಅದನ್ನು ತ್ಯಜಿಸಬೇಕು" ಎಂದು ಕರೆ ಕೊಟ್ಟ. ಇಷ್ಟೆಲ್ಲಾ ಆದರೂ ಗಾಂಧಿ ಹೇಳಿದ್ದೇನು ಗೊತ್ತೇ? " Hindus will have to learn to die in the face of hewrest odds in order to convert musalman full into a respecting friend." ಗಾಂಧಿಯವರ ಇನ್ನೊಂದು ಮಾನಗೆಟ್ಟ ಕಾರ್ಯವೆಂದರೆ ಮೋಪ್ಲಾಗಳಿಗಾಗಿ ಹಿಂದೂಗಳಿಂದಲೇ "ಪರಿಹಾರ ನಿಧಿ" ಸಂಗ್ರಹ ಮಾಡಿದ್ದು. ಮಾತ್ರವಲ್ಲ ಇಂಥವರು 10ರೂ. ಕಳಿಸಿದ್ದಾರೆ, ಒಂದು ರೂಪಾಯಿ ಕಳುಹಿಸಿದ್ದಾರೆ...ಎಂದು ದಾಖಲೆ ಮಾಡುತ್ತಾ ಹೋಗಿದ್ದು!

                ಆರ್ಯಸಮಾಜ ಹಿಂದೂಗಳಿಗೆ ರಕ್ಷಣೆ ನೀಡಿದ್ದಲ್ಲದೆ ಮತಾಂತರಿತರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಪ್ರಯತ್ನ ನಡೆಸಿತು. ಸರ್ವೆಂಟ್ಸ ಆಫ್ ಇಂಡಿಯಾ, ವೈಎಂಸಿಎ ಮೊದಲಾದ ತಂಡಗಳು ನಿಷ್ಪಕ್ಷಪಾತ ವರದಿ ಪ್ರಕಟಿಸಿ, ಸಂತ್ರಸ್ಥರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದವು. ಮಹಾರಾಷ್ಟ್ರದ ಶ್ರೀ ಬಾಲಕೃಷ್ಣ ಮೂಂಜೆ ಜನರನ್ನು ನೇರ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ, ಸಹಾಯ ಹಸ್ತವನ್ನೂ ಚಾಚಿದರು. ಭಾರತೀಯ ಚರಿತ್ರಕಾರರು ಇತಿಹಾಸದ ಪುಟಗಳಿಂದ ಮೋಪ್ಲಾ ದಂಗೆಯನ್ನು ಕಿತ್ತೆಸೆದರೂ ಬ್ರಿಟಿಷರ ಸಚಿತ್ರ ವರದಿಗಳು, ಆಧಾರ ಸಹಿತ ಸತ್ಯ ಚಿತ್ರಣ ನೀಡಿದ ಅಮೃತಸರ-ಸಹರಾನ್ ಪುರದ ವ್ಯಕ್ತಿಗಳು ಬರೆದ ಕೆಲವು ಪುಸ್ತಕಗಳು ಹಾಗೂ ಸ್ವಾತಂತ್ರ್ಯ ವೀರ ಸಾವರ್ಕರ್ ಕಾದಂಬರಿ ರೂಪದಲ್ಲಿ ಬರೆದ "ಮೋಪ್ಳಾ ದಂಗೆ" ಈ ಘೋರ ದುರಂತವನ್ನು ಜಗತ್ತಿಗೇ ತೆರೆದಿಟ್ಟಿವೆ. ದಂಗೆಗಳು ಶಾಂತವಾದ ಮೇಲೆ ಪುನರ್ವಸತಿ, ಮನೆ ದುರಸ್ತಿ, ಎತ್ತು, ದನ, ನೇಗಿಲು ಖರೀದಿ ಮೊದಲಾದ ಜೀವನಾಗತ್ಯಗಳಿಗೆ ಸಾಲ ಪಡೆದವರ ಸಂಖ್ಯೆಯೇ 13,500. ಆರ್ಯ ಸಮಾಜದ ಮುಖಾಂತರ ಮಾತೃಧರ್ಮಕ್ಕೆ ಮರಳಿದವರ ಸಂಖ್ಯೆಯೇ 1776.

                 ಮೋಪ್ಲಾ ಬಂಡಾಯ ಕೇವಲ ಕೇರಳಕ್ಕೆ ಸೀಮಿತವಾಗುಳಿಯಲಿಲ್ಲ. 1924ರಲ್ಲಿ ಕೊಹಟ್, 1925ರಲ್ಲಿ ದೆಹಲಿ & ನಾಗಪುರ, ಭಾಗಲ್ಪುರ, ಲಖ್ನೋ, ಲಾಹೋರ್, ಗುಲ್ಬರ್ಗಾ, 1926ರಲ್ಲಿ ಕಲ್ಕತ್ತಾ, ಉತ್ತರ ಪ್ರದೇಶ, ಮುಂಬೈ, 1927ರಲ್ಲಿ ಕಲ್ಕತ್ತಾದಿಂದ ಲಾಹೋರ್ ಮಧ್ಯದ ವಿವಿಧ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಮುಸ್ಲಿಮ್ ದೌರ್ಜನ್ಯ ನಡೆಯಿತು. 1930-31ರಲ್ಲಿ ಬಂಗಾಳ, ವೆಲ್ಲೂರ್, ಜಬಲ್ಪುರ, ಷಿಕಾರ್ ಪುರ, ಮೊದಲಾದ ಕಡೆ ಜಿಹಾದ್ ನಡೆಯಿತು. 1922-27ರ 5 ವರ್ಷಗಳ ಅವಧಿಯಲ್ಲಿ ಬಂಗಾಳ ಪ್ರಾಂತವೊಂದರಲ್ಲೇ 35 ಸಾವಿರ ಮಹಿಳೆಯರ ಅಪಹರಣ, ಮಾನಭಂಗಗಳಾದವು. ಅಂದು ಕೇರಳವನ್ನು ಸುಟ್ಟ ಜಿಹಾದ್ ಇಂದಿಗೂ ನಿಂತಿಲ್ಲ. ಅದು ಈಗ ಲವ್ ಜಿಹಾದ್, ರೇಪ್ ಜಿಹಾದ್, ಕಾರ್ಪೋರೇಟ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್, ಬ್ಯಾಂಕ್ ಜಿಹಾದ್, ರಾಜಕೀಯ ಜಿಹಾದ್ ಮುಂತಾದ ಹಲವು ಸ್ವರೂಪಗಳೊಂದಿಗೆ ಹಿಂದೂ ಸಮಾಜವನ್ನು ಸುಡುತ್ತಾ ಬರುತ್ತಿದೆ.

ಗುರುವಾರ, ಅಕ್ಟೋಬರ್ 13, 2016

ಯಾರು ಮಹಾತ್ಮ? ಭಾಗ- ೧೧

ಯಾರು ಮಹಾತ್ಮ?
ಭಾಗ- ೧೧

                 ಕಲ್ಲಿಕೋಟೆಯ ಮುದುಮಣೆಯಿಲ್ಲಂ ದೇವಾಲಯದ ಗರ್ಭಗೃಹದಲ್ಲಿ ಮೋಪ್ಲಾ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ! ಸ್ಥಳೀಯರನ್ನು ಬಂಧಿಸಿ ಅವನ ಮುಂದೆ ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರ ತಲೆ ಛೇದಿಸಿ ಪಕ್ಕದ ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ ತೂವೂರ್ ಎಂಬ ಬಾವಿಗೆ ಮೋಪ್ಲಾಗಳು ೨೭ ಮಂದಿ ಸ್ಥಳೀಯರ ತಲೆಗಳನ್ನು ಗರಗಸದಿಂದ ಕತ್ತರಿಸಿ ಎಸೆದರು. ಸ್ತ್ರೀಯರನ್ನು ಹಿಡಿದು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದರು. ನಂತರ ಎಲ್ಲರ ಎದುರೇ ಅತ್ಯಾಚಾರ. ಗರ್ಭಿಣಿಯರ ಗರ್ಭ ಸೀಳಿ ಮಗುವನ್ನು ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ, ಹಸುಳೆ, ವೃದ್ಧೆ ಎನ್ನದೇ ಎಲ್ಲರನ್ನು ಮಾನಭಂಗಗೊಳಿಸುತ್ತಿದ್ದರು.

               ಯಾವುದೋ ಮೊಘಲರ ಆಳ್ವಿಕೆ ಅಥವಾ ಮತಾಂಧ ಟಿಪ್ಪುವಿನ ಸಮಯದಲ್ಲಿ ನಡೆದ ಘಟನೆಯಲ್ಲ ಇದು. ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ಖಿಲಾಫತ್ ಎಂಬ ಹೆಸರಿನಲ್ಲಿ ಅಸಹಕಾರದ ಚಳುವಳಿಯ ಸಹಯೋಗದಲ್ಲಿ ಗಾಂಧಿ ಮಹಾತ್ಮನ ಸಹಕಾರದಲ್ಲಿ ನಡೆದ ಘನ ಘೋರ ಭಯೋತ್ಪಾದಕ ಕೃತ್ಯವಿದು. ಬಾಗ್ದಾದಿನಲ್ಲಿ ಖಲೀಫನ ಸುಲ್ತಾನಿಕೆ ಪುನಃ ನೆಲೆಗೊಳಿಸಬೇಕೆಂಬ ಉದ್ದೇಶದಿಂದ ಶುರುವಾದದ್ದೇ ಖಿಲಾಫತ್ ಆಂದೋಲನ! ಮೊದಲ ಮಹಾಯುದ್ಧ ಮುಗಿದ ತರುವಾಯ ಬ್ರಿಟಿಷ್ ಸಾಮ್ರಾಜ್ಯ ನಿಸ್ಸತ್ವಗೊಂಡುದುದರಿಂದ ತುರ್ಕಿಯ ಪ್ರಭುತ್ವವನ್ನು ಮರುಸ್ಥಾಪಿಸಬಹುದೆಂಬ ಭ್ರಮೆಯಲ್ಲಿ ಶುರುವಾದ ಈ ಖಿಲಾಫತ್ ಆಂದೋಲನದ ಮುಖ್ಯ ಉದ್ದೇಶಗಳು ಖಲೀಫನ ಸಾಮ್ರಾಜ್ಯದ ಮರುಸ್ಥಾಪನೆ ಹಾಗೂ ಆಟೋಮನ್ ಸಾಮ್ರಾಜ್ಯದ ಅಖಂಡತೆಯನ್ನು ಸಾಧಿಸುವುದು. 1912ರಲ್ಲಿ ಬಾಲ್ಕನ್ ರಾಜ್ಯಗಳಿಂದ ಟರ್ಕಿ ಸೋತು ಸುಣ್ಣವಾದ ಮೇಲೆ ಯೂರೋಪಿನ ಜನ ಇಸ್ಲಾಂನ್ನು ತಿರಸ್ಕರಿಸಲಾರಂಭಿಸಿದ್ದರು. ಆದರೆ ಭಾರತದೊಳಗಿನ ಮತಭ್ರಾಂತರನ್ನು ಹುಚ್ಚೆಬ್ಬಿಸಲು ನಾಮಾವಶೇಷವಾಗಿದ್ದ ಖಲೀಫನ ಪ್ರಭುತ್ವವನ್ನು ಪುನರುಜ್ಜೀವಿಸುವ ಈ ಪ್ರಯತ್ನ ಸಾಕಾಯಿತು. ಆದರೆ ಮಹಾತ್ಮ ಎಂದು ತನ್ನ ಸ್ತುತಿಪಾಠಕರಿಂದ ಕರೆಸಿಕೊಂಡ ಗಾಂಧಿಯ ಈ ಖಿಲಾಫತ್ ಪರ ಆವೇಶಕ್ಕೆ ಬೆಲೆ ತೆತ್ತವರು ಮಲಬಾರಿನ ಹಿಂದೂಗಳು.

                     ಖಿಲಾಫತ್ ಚಳವಳಿ ಘೋಷಿತವಾದೊಡನೆ ಗಾಂಧಿಯ ಸೂಚನೆಯಂತೆ ದೇಶದಾದ್ಯಂತ ಖಿಲಾಫತ್ ದಿನವನ್ನು ಕಾಂಗ್ರೆಸ್ ಘಟಕಗಳ ಮೂಲಕ ಆಚರಿಸಲಾಯಿತು. ಅಲಹಾಬಾದ್, ಕರಾಚಿಗಳಲ್ಲಿ ಖಿಲಾಫತ್ ಸಮ್ಮೇಳನಗಳೂ ನಡೆದವು. ಗಾಂಧಿ, ಮಹಮದ್ ಆಲಿ ಜೊತೆ ಸೇರಿ ಖಿಲಾಫತ್ ಪರ ಯಾತ್ರೆಯನ್ನೂ ನಡೆಸಿದರು. ಖಿಲಾಫತ್ ಆಂದೋಲನದಲ್ಲಿ ಅಲ್ಲಾ-ಹೋ-ಅಕ್ಬರ್ ದೇಶದ ಮೂಲೆಮೂಲೆಯಿಂದ ಕೇಳಲಾರಂಭಿಸಿತು. ಗಾಂಧಿ ಇದನ್ನು ಭಾರತ್ ಮಾತಾ ಕೀ ಜೈ ಗಿಂತ ದೊಡ್ಡ ದನಿಯಲ್ಲಿ ಘೋಷಿಸಿದರು. ದೇಶಕ್ಕಿಂತ ಅಲ್ಲಾ ಹೆಚ್ಚು ಎನ್ನುವ ಮತಾಂಧರ ಮನೋಭೂಮಿಕೆಗೂ ಗಾಂಧಿಯ ಮನಃಸ್ಥಿತಿಗೂ ಏನು ವ್ಯತ್ಯಾಸವಿದೆ? ಮಾತ್ರವಲ್ಲ ಖಿಲಾಫತಿಗಾಗಿ ಹಣಸಂಗ್ರಹ ಅಭಿಯಾನ ಕೂಡಾ ಆರಂಭವಾಯಿತು. ಕೆಲವು ಕಡೆ ಅದ್ದೂರಿ ಪ್ರಚಾರ ನಡೆಸಿದಾಗ್ಯೂ ಜನ ಸೇರದೇ ಇದ್ದುದರಿಂದ ಮಸೀದಿಗಳಲ್ಲಿಯೇ ಸಭೆಯ ಶಾಸ್ತ್ರ ಮುಗಿಸಿದರು. ಕಾಂಗ್ರೆಸ್ಸಿನ ಅಧಿಕೃತ ಅನುಮೋದನೆ ಪಡೆಯದೇ ಗಾಂಧಿ ಖಿಲಾಫತ್ ಆಂದೋಲನ ಘೋಷಿಸಿಯೇ ಬಿಟ್ಟಿದ್ದರು. ಆದರೆ ಖಿಲಾಫತ್ ಪರ ನಿರ್ಣಯಕ್ಕೆ ಮತ ಹಾಕಲು ಕಲ್ಕತ್ತಾದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ(8-9-1920) ಕಾಂಗ್ರೆಸ್ ದಳಗಳು ಟ್ಯಾಕ್ಸಿ ಡ್ರೈವರ್ ಗಳನ್ನೂ ಹಣಕೊಟ್ಟು ಕರೆತರಬೇಕಾಯಿತು! ಬಹುತೇಕರಿಗೆ ಖಿಲಾಫತ್ ಆಂದೋಲನ ಒಪ್ಪಿತವಿಲ್ಲದಿದ್ದರೂ ಗಾಂಧಿಯನ್ನು ವಿರೋಧಿಸುವವರೇ ಇರಲಿಲ್ಲ! ಇದಕ್ಕೆ ಪ್ರತಿಯಾಗಿ ಖಿಲಾಫತ್ ಖಂಡಿಸಲು ಒಟ್ಟಾಪಳಂನಲ್ಲಿ ನಡೆದ ಆನಿಬೆಸೆಂಟ್ ಉಪನ್ಯಾಸದಲ್ಲಿ ಜನ ಕಿಕ್ಕಿರಿದು ಸೇರಿದ್ದರು." ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನ ಮತೀಯ ಆಂದೋಲನವಾಗಲಿದೆ. ಇದರಿಂದ ದೇಶಕ್ಕೆ ಭಾರೀ ಅಪಾಯವಿದೆ" ಎಂದು ಡಾ|| ಹೆಡಗೆವಾರರು ಎಚ್ಚರಿಸಿದ್ದರು. ಆದಾಗ್ಯೂ  ಖಿಲಾಫತಿಗಾಗಿ ಸ್ವಾತಂತ್ರ್ಯಕ್ಕಾಗಿನ ಚಳುವಳಿಯನ್ನು ಮುಂದೂಡಲೂ ನಾನು ಸಿದ್ಧ ಎಂದು ಬಿಟ್ಟರು ಗಾಂಧಿ.

                 ಪುಕ್ಕಟ್ಟೂರು ಭಾಗದ ಎಲ್ಲಾ ಹಿಂದೂಗಳನ್ನು 1921ರ ಆಗಸ್ಟ್ ನಲ್ಲಿ ಮತಾಂತರಿಸಲಾಯಿತು. ಕಾರಾಗೃಹದ ಅಪರಾಧಿಗಳನ್ನು ಮುಕ್ತಗೊಳಿಸಿದ ಖಿಲಾಫತಿಗರು ಅವರನ್ನು ಕೊಲೆ ಲೂಟಿಗಳಿಗೆ ಬಳಸಿಕೊಂಡರು. ಹಿಂದೆ ಹಿರಿಯರೆಂದು ತಾವೇ ಗೌರವಿಸಿದ್ದ ಕೋಮು ಮೆನನ್ ಪರಿವಾರವನ್ನೂ ಲೂಟಿಗೈದು ಮತಾಂತರಿಸಿದರು.(ಮುಂದೆ ಕೋಮು ಮೆನನ್ ಪರಿವಾರ ಮಾತೃಧರ್ಮಕ್ಕೆ ಮರಳಿತು) ಕೇರಳದೆಲ್ಲೆಡೆ ಕಾಂಗ್ರೆಸ್ ಕಾರ್ಯಾಲಯಗಳ ಮೇಲೆ ಖಿಲಾಫತ್ ಬಾವುಟಗಳು ಕಾಂಗ್ರೆಸ್ ಬಾವುಟಗಳ ಜೊತೆ ರಾರಾಜಿಸತೊಡಗಿದವು. ಕಾಂಗ್ರೆಸ್ ಕಾರ್ಯಕರ್ತರು ಖಿಲಾಫತ್ ವಾಲಂಟಿಯರ್ ಗಳಾದರು. ಯಾವ ಕಡೆ ನೋಡಿದರೂ ಖಿಲಾಫತ್ ಧ್ವಜಗಳ ವಿಜೃಂಭಣೆ, ಖಿಲಾಫತ್ ಪರ ಘೋಷಣೆ, ಖಿಲಾಫತ್ ರಾಜ್ಯಕ್ಕೆ ಜೈಕಾರ ಹಾಗೂ ಟರ್ಕಿಷ್ ಟೋಪಿ ಧರಿಸಿದ ಕಾಂಗ್ರೆಸ್ಸಿಗರು....ಹೀಗೆ ಕಾಂಗ್ರೆಸ್ ಪೂರ್ತಿ ಬಣ್ಣಗೆಟ್ಟಿತ್ತು! ಅದರಲ್ಲೂ ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆಗಳು ಕತ್ತಿ, ಗುರಾಣಿ ಮುಂತಾದ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಮದೋನ್ಮತ್ತರಂತೆ ವರ್ತಿಸಲಾರಂಭಿಸಿದ್ದರು.  ಜನರ ಮೇಲಿನ ಅತ್ಯಾಚಾರವನ್ನು ನಿವಾರಿಸಲು ಬಂದ ಪೊಲೀಸರನ್ನು ಕೊಚ್ಚಿ ಹಾಕುತ್ತಿದ್ದರು. " ಇಸ್ಲಾಮಿಗೆ ಮತಾಂತರಗೊಳ್ಳಿ ಇಲ್ಲವೇ ಸಾಯಲು ಸಿದ್ಧರಾಗಿ" ಎನ್ನುತ್ತಾ ಬಲಾತ್ಕಾರದ ಮತಾಂತರ, ಮಹಿಳೆಯರ ಅತ್ಯಾಚಾರ, ಹಿಂದೂಗಳ ಚರ್ಮ ಸುಲಿಯುವುದು, ಆಸ್ತಿಪಾಸ್ತಿ ಲೂಟಿ, ಕೊಲೆ,ಹಗಲು ದರೋಡೆ, ಸರಕಾರೀ ಖಜಾನೆಗಳ ದರೋಡೆ ಎಗ್ಗಿಲ್ಲದೆ ನಡೆದವು. ಮರಗಳ ಛೇದನ, ಸೇತುವೆಗಳ ಧ್ವಂಸ ಈ ಎಲ್ಲಾ ತಂತ್ರಗಳನ್ನು ಖಿಲಾಫತಿಗರು ಬಳಸಿದರು. ದೇವಾಲಯಗಳ ಲೂಟಿ, ವಿಗ್ರಹ ಭಂಜನೆಗಳು ಅಗಾಧ ಪ್ರಮಾಣದಲ್ಲಿ ನಡೆದವು. ದಂಗೆಕೋರರಿಗೆ ಅಹಿಂಸೆ ಭೋಧಿಸಹೊರಟ ಮಂಜೇರಿಯ ಕೆ. ಮಾಧವನ್ ನಾಯರ್, ಎರ್ನಾಡಿನ ಎಂ.ಪಿ. ನಾರಾಯಣ ಮೆನನ್ ಮೊದಲಾದವರ ಪ್ರಯತ್ನಗಳು ವಿಫಲಗೊಂಡವು. "ನಾವೇನು ಮಾಡುತ್ತಿದ್ದೇವೆಂದು ನಮಗೆ ಗೊತ್ತು. ನಿಮ್ಮ ಉಪದೇಶ ನಮಗೆ ಬೇಕಾಗಿಲ್ಲ" ಎಂದರು ಮೋಪ್ಲಾಗಳು.

               ಪೊಣ್ಣನಿಯ ಸರಕಾರೀ ಕಾಲೇಜಿನ ಆಸುಪಾಸಿನಲ್ಲಿಯೇ ಖಿಲಾಫತಿಗರು ಲೂಟಿ ದಾಂಧಲೆ ನಡೆಸಿದರು. ಇಲ್ಲಿ 67 ಪೊಲೀಸರು ಕೊಲೆಯಾದರು, 155 ಮಂದಿ ಮಾರಣಾಂತಿಕವಾಗಿ ಗಾಯಗೊಂಡರು. ಮಂಜೇರಿ, ತಿರುರಂಗಾಡಿಗಳಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದರು. ಉಗ್ರ ಮತಪ್ರವರ್ತಕರಾಗಿದ್ದ ಮುಸ್ಲಿಂ ಭಯೋತ್ಪಾದಕರಿಗಂತೂ ಖಿಲಾಫತ್ ಆಂದೋಲನ ಸುಸಂಧಿಯಾಗಿ ಒದಗಿ ಬಂತು. ಇಂತಹವರೆಲ್ಲರೂ ಏಕಾಏಕಿ ಗಾಂಧಿ ಅನುಯಾಯಿಗಳಾಗಿ ತಮ್ಮ ಮತಾಂತರ, ಲೂಟಿ, ಮಾನಭಂಗವನ್ನು ಮತ್ತಷ್ಟು ನಿರ್ಭಿಡೆಯಿಂದ ಮಾಡತೊಡಗಿದರು. ಅಲೀ ಮುಸಲಿಯಾರ್ ಎಂಬ ಮೌಲ್ವಿ ಏರ್ನಾಡ್, ತಿರುರಂಗಾಡಿಗಳಲ್ಲಿ ತಾನೇ ರಾಜನೆಂದು ಘೋಷಿಸಿಕೊಂಡು ಕಪ್ಪ ವಸೂಲು ಮಾಡತೊಡಗಿದ. ಉಗ್ರ ಮತಾಂತರ ಮಾಡುತ್ತಿದ್ದ ಈ ಕ್ರೂರ ಅತ್ಯಾಚಾರಿಯನ್ನು ಹಾಗೂ ಅವನ ಸಂಗಡಿಗರನ್ನು ಹಿಡಿದ ಪೊಲೀಸರು ಅವನಿಗೆ ಮರಣದಂಡನೆಯಾಗುವಂತೆ ಮಾಡಿ ಹಿಂದೂಗಳ ತುಸು ನೆಮ್ಮದಿಗೆ ಕಾರಣವಾದರು. ನೀಲಂಬೂರಿನಲ್ಲಿ ವಿ. ಕೆ. ಹಾಜಿ ಎಂಬಾತನ ಕ್ರೌರ್ಯ ಹೇಗಿತ್ತೆಂದರೆ ಅವನ ಹೆಸರು ಹೇಳಲೂ ಜನ ಹೆದರುತ್ತಿದ್ದರು. ಅಪಾರ ಶಸ್ತ್ರ ಸಂಗ್ರಹ ಮಾಡಿದ್ದ ಅವನು ತನ್ನ ಕೊಲೆ, ಲೂಟಿ, ಮಾನಭಂಗಗಳ ಸುದ್ದಿ ಮಂಜೇರಿ, ನೀಲಂಬೂರುಗಳಿಂದಾಚೆಗೆ ಹೋಗದಂತೆ ಎಚ್ಚರ ವಹಿಸಿದ್ದ. ಅವನನ್ನು ಬಂಧಿಸಿ ಮರಣದಂಡನೆ ವಿಧಿಸಲು ವಿಶೇಷ ಪೊಲೀಸ್ ಪಡೆಯನ್ನೇ ರಚಿಸ ಬೇಕಾಯಿತು. ಪಂದಲೂರಿನ ಹೆಡ್ ಕಾನ್ ಸ್ಟೇಬಲ್ ಹೈಡ್ರಾಸನನ್ನು ಅವನ ಪತ್ನಿ, ಮಕ್ಕಳ ಎದುರೇ ಕೊಚ್ಚಿ ಹಾಕಿದರು.

                     1891ರಲ್ಲಿ ಎರ್ನಾಡ್, ವಳ್ಳುವನಾಡ್, ಪೊಣ್ಣನಿ ಈ ಮೂರು ತಾಲೂಕುಗಳಲ್ಲಿ ನೂರರಲ್ಲಿ ಎಪ್ಪತ್ತರಷ್ಟಿದ್ದ ಮಾಪಿಳ್ಳೆಗಳ ಸಂಖ್ಯೆ ಮೂರೇ ದಶಕಗಳಲ್ಲಿ ೮೫ ಪ್ರತಿಶತವನ್ನೂ ದಾಟಿತು. ಹಿಂದೂಗಳ ಸಂಖ್ಯೆ ೫೨೦೧೭ ಇದ್ದರೆ ಮಾಪ್ಪಿಳ್ಳೆಗಳ ಸಂಖ್ಯೆ ೧,೫೦,೫೩೨ ಆಗಿತ್ತು.  "ಶಸ್ತ್ರಾಸ್ತ್ರಗಳು, ಸರಂಜಾಮುಗಳು ಹಾಗೂ ಸೈನಿಕರನ್ನು ಹೊತ್ತ ಹಡಗುಗಳು ಭಾರತದತ್ತ ಹೊರಟಿವೆ. ಅವು ತಲುಪಿದೊದನೆ ಹಿಂದೂಗಳ ಮಾರಣ ಹೋಮ ಆದಂತೆ" ಎಂದು ಹೆದರಿಸಿ ಮತಾಂತರವನ್ನು ಮತ್ತಷ್ಟು ಹೆಚ್ಚಿಸಲಾಯಿತು. " ಇನ್ನು ಮುಂದೆ ನೀವು ಮಾಪಿಳ್ಳೆಗಳ ಹೆಸರುಗಳನ್ನು ಹೊಂದಬೇಕಾಗುತ್ತೆ" ಎಂದು ನಾಯರ್ ಮಹಿಳೆಯರಿಗೆ ಹೇಳಿ ಆ ಹೊಸ ಹೆಸರುಗಳನ್ನು ಲೆಡ್ಜರುಗಳಲ್ಲಿ ಬರೆದಿಡಲಾಗುತ್ತಿತ್ತು. ಹಿಂದೂಗಳ ಮೇಲೆ ಆಕ್ರಮಣ ನಡೆಸುವ ಪ್ರವೃತ್ತಿ ಕೇರಳದ ಮುಸ್ಲಿಮರಲ್ಲಿ ದೀರ್ಘಕಾಲ ಮನೆ ಮಾಡಿದ್ದುದರಿಂದ ಗಾಂಧಿ ಹೊತ್ತಿಸಿದ ಕಿಡಿ ಉರಿದೆದ್ದು ನಂದಿಸದ ಜ್ವಾಲೆಯಾಗಿ ಅಸಂಘಟಿತ ಹಿಂದೂಗಳ ಮಾರಣ ಹೋಮ ಪ್ರಾರಂಭವಾಯಿತು. ಶೌರ್ಯಕ್ಕೆ ಹೆಸರಾಗಿದ್ದ ನಾಯರ್ ಸಮುದಾಯವನ್ನು ನಿಶ್ಯಸ್ತ್ರಗೊಳಿಸಿದ್ದ ಬ್ರಿಟಿಷರ ಕ್ರಮ ಮಾಪ್ಪಿಳ್ಳೆಗಳಿಗೆ ಲಾಭದಾಯಕವಾಯಿತು.

           ಅದೇ ಸಮಯದಲ್ಲಿ ಕರ್ಣಾವತಿ(ಅಹ್ಮದಾಬಾದ್)ಯಲ್ಲಿ ನಡೆದ ಮುಸ್ಲಿಮ್ ಲೀಗ್ ಅಧಿವೇಶನದ ಅಧ್ಯಕ್ಷ ಭಾಷಣದಲ್ಲಿ ಹಸರತ್ ಮೊಹಾನಿ ಮೋಪ್ಳಾ ದಂಗೆಯನ್ನು ಸಮರ್ಥಿಸುತ್ತಾ "ಹಿಂದೂಗಳು ಜಿಹಾದನ್ನು ಸ್ವೀಕರಿಸಿಲ್ಲ ಎಂದ ಮೇಲೆ ಅವರು ನಮ್ಮ ಶತ್ರುಗಳೇ. ಹಾಗಾಗಿ ಅವರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರ ದೋಷವೆನಿಸುವುದಿಲ್ಲ" ಎಂದು ಬೊಬ್ಬಿರಿದ. ವಿಪರ್ಯಾಸವೆಂದರೆ ಖಿಲಾಫತಿಗೆ ಹೆಗಲು ಕೊಟ್ಟ ಮಹಾತ್ಮ(!) ಅದೇ ಸಭೆಯಲ್ಲಿದ್ದರೂ ತುಟಿ ಬಿಚ್ಚಲಿಲ್ಲ. ವ್ಯತಿರಿಕ್ತವಾಗಿ ಆನಿಬೆಸೆಂಟ್ ಮೋಪ್ಳಾ ದಂಗೆಯನ್ನು ಖಂಡಿಸುತ್ತಾ "ಮುಸ್ಲಿಮರ ಸ್ವಭಾವಗತ ಹಿಂಸಾ ಪ್ರವೃತ್ತಿಯೇ ಈ ದೌರ್ಜನ್ಯಗಳಿಗೆ ಕಾರಣ" ಎಂದು ಹಿಂದೂಗಳನ್ನು ಎಚ್ಚರಿಸಿದರು. ಕಲ್ಲಿಕೋಟೆಯಲ್ಲಿ ಜಾಮೋರಿನ್ ದೊರೆಯ ನೇತೃತ್ವದಲ್ಲಿ ನಡೆದ ಸಮಾವೇಶ ಈ ಎಲ್ಲಾ ಕೃತ್ಯಗಳನ್ನು ವಿವರವಾಗಿ ದಾಖಲೆ ಮಾಡಿತು. ಕೇರಳ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಕೆ.ಪಿ. ಕೇಶವ ಮೆನನ್, 1921ರ ಸೆಪ್ಟೆಂಬರ್ 7 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಬರೆದ ಪತ್ರ,...ಹೀಗೆ ಹತ್ತು ಹಲವು ವರದಿಗಳು ಮೋಪ್ಲಾಗಳ ಕೃತ್ಯಗಳನ್ನು ವರದಿ ಮಾಡಿದವು. ಆದಾಗ್ಯೂ ಕಾಂಗ್ರೆಸ್ ಖಿಲಾಫತಿಗೆ ತನ್ನ ಬೆಂಬಲವನ್ನು ಹಿಂತೆಗೆಯಲೇ ಇಲ್ಲ. ಈ ಸಂದರ್ಭದಲ್ಲಿ ಬ್ರಿಟಿಷ್ ರಕ್ಷಣಾ ಪಡೆಗಳು ಕಣಕ್ಕಿಳಿಯದಿದ್ದರೆ ಅದಾಗಲೇ ಕೇರಳ ಪಾಕಿಸ್ತಾನವಾಗಿ ಪರಿವರ್ತಿತವಾಗುತ್ತಿತ್ತು.

ಬುಧವಾರ, ಅಕ್ಟೋಬರ್ 12, 2016

ಯಾರು ಮಹಾತ್ಮ? ಭಾಗ- ೧೦

ಯಾರು ಮಹಾತ್ಮ?ಭಾಗ- ೧೦

ನೌಕಾಲಿಯಲ್ಲಿ ಮನು ಜೊತೆ ಸಂಬಂಧ ಆರಂಭವಾಗುವ ಬಹಳ ಮೊದಲೇ ಗಾಂಧಿ ಬ್ರಹ್ಮಚರ್ಯ ಪ್ರಯೋಗ ಶುರುವಾಗಿತ್ತು. ಆಗಿನ್ನೂ ಕಸ್ತೂರಬಾ ಬದುಕಿದ್ದರು. ಈ ಪ್ರಯೋಗ ನಡೆಸಲು ಅವರು ಅನುಮತಿ ನೀಡಿದ್ದರು. ರಾಜಕುಮಾರಿ ಅಮೃತಕೌರ್ ಸೇರಿದಂತೆ ಗಾಂಧಿ ಜೊತೆ ಪ್ರವಾಸದಲ್ಲಿದ್ದ ಎಲ್ಲಾ ಮಹಿಳೆಯರೂ ಬ್ರಹ್ಮಚರ್ಯ ಪ್ರಯೋಗದಲ್ಲಿ ಭಾಗವಹಿಸಿದ್ದರು. ನೆಹರೂವಿನ ಕಾರ್ಯದರ್ಶಿ ಎಂ.ಓ. ಮಥಾಯ್ ಅವರ ಜೊತೆ ಈ ವಿಷಯವನ್ನು ಅಮೃತ ಕೌರ್ ಬಿಚ್ಚು ಮನಸ್ಸಿನಿಂದ ಹೇಳಿಕೊಂಡಿದ್ದರು. ರಾಜಕುಮಾರಿ ಅಮೃತಕೌರ್'ರಲ್ಲಿ ಗಾಂಧಿ ವಿಶ್ವಾಸವಿಟ್ಟಿದ್ದರು. ಪ್ರಯೋಗದ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಸಲ ಗಾಂಧಿಯಲ್ಲಿ ಕೆಟ್ಟ ಯೋಚನೆಗಳು ಪ್ರವೇಶಿಸಿದ್ದವು. ಈ ಆಚರಣೆಯನ್ನು ಗಾಂಧಿಯವರ ಪ್ರಮುಖ ಸಹೋದ್ಯೋಗಿಗಳು ಖಾಸಗಿಯಾಗಿ ಪ್ರತಿಭಟಿಸುತ್ತಿದ್ದರು. ಪ್ರಯೋಜನವಾಗಿರಲಿಲ್ಲ. ಗಾಂಧಿಯ ಮನವೊಲಿಸುವಂತೆ ನೆಹರೂರಲ್ಲಿ ವಿನಂತಿಸಿಕೊಂಡರು. ಆದರೆ ಇಂಥ ಖಾಸಗಿ ವಿಷಯದಲ್ಲಿ ಮಧ್ಯಪ್ರವೇಶಿಸಲು ನೆಹರೂ ಖಡಾಖಂಡಿತವಾಗಿ ನಿರಾಕರಿಸಿದರು.(ರೆಮಿನಿಸೆನ್ಸಸ್ ಆಫ್ ದಿ ನೆಹರೂ ಏಜ್, ಎಂ.ಓ.ಮಥಾಯ್)

              ಬೇರೆಯವರನ್ನು ಬಲಿಕೊಟ್ಟು ನಾವು ಆಧ್ಯಾತ್ಮಿಕವಾಗಿ ಮುಂದುವರಿಯಲು ಸಾಧ್ಯವಿಲ್ಲ. ಅದೇ ಸಂದರ್ಭದಲ್ಲಿ ವಿವೇಚನಾಯುಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮನುಕುಲ ಮುನ್ನಡೆಯುವುದಿಲ್ಲ. ಆದರೆ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಗಾಂಧಿ "ಕುಂಬಾರನೊಬ್ಬ ಮಣ್ಣಿನ ಮಡಕೆ ತಯಾರು ಮಾಡಲು ಸಿದ್ಧನಾದಾಗ ಕುಲುಮೆಯಲ್ಲಿ ಬೆಂದ ನಂತರ ಅದು ಸೀಳು ಬಿಡುತ್ತದೆಯೋ ಅಥವಾ ಚೆನ್ನಾಗಿ ಸುಡುತ್ತದೆಯೋ ಎನ್ನುವುದು ಆತನಿಗೆ ಗೊತ್ತಿರುವುದಿಲ್ಲ. ಕೆಲವು ಮಾತ್ರ ಚೆನ್ನಾಗಿ ಬೆಂದು ಪರಿಪೂರ್ಣ ಮಡಕೆಯಾಗುತ್ತವೆ. ನಾನು ಸಹ ಕುಂಬಾರನಂತೆ. ಒಂದು ನಿರ್ದಿಷ್ಟ ಮಡಕೆಯಲ್ಲಿ ಬಿರುಕು ಉಂಟಾಗುವುದು ಹಣೆಬರಹವನ್ನು ಅವಲಂಬಿಸಿರುತ್ತದೆ. ಇದಕ್ಕಾಗಿ ಕುಂಬಾರ ಕಳವಳಬೇಕಾದ ಅವಶ್ಯಕತೆಯಿಲ್ಲ" ಎನ್ನುತ್ತಿದ್ದರು. ಗಾಂಧಿ ಏನು ಹೇಳಹೊರಟಿದ್ದಾರೆ. ಕುಂಬಾರ ಅವರೆಂದಾದರೆ ಮಣ್ಣು ಯಾರು? ಮಡಕೆ ಯಾರು? ಅದನ್ನು ಅವರೇ ಹೇಳಬೇಕು. ಮೊದಲನೆಯದಾಗಿ ಈ ಉದಾಹರಣೆ ಅವರ ಕಾರ್ಯಕ್ಕೆ ಯಾವ ಕಾಲ-ದೇಶಕ್ಕೂ ಪೂರಕವಲ್ಲ ಎನ್ನುವುದು ಗಾಂಧಿ ಮರೆಯುತ್ತಾರೆ. ಯಾವುದೇ ಮಣ್ಣಾದರೂ ಅದು ಪವಿತ್ರ ಎನ್ನುವ ಭಾವನೆ ಅವರಲ್ಲಿಲ್ಲ. ಯಾವುದೇ ಮಣ್ಣಾದರೂ ತಾನು ಉಪಯೋಗಿಸಬಹುದು ಎನ್ನುವ ದಾರ್ಷ್ಟ್ಯವೂ ಅವರ ಮಾತಲ್ಲಿ ಎದ್ದು ಕಾಣುತ್ತಿದೆ. ಮಡಕೆಯೊಂದು ಒಡೆದರೂ ಕುಂಬಾರ ಕಳವಳಪಡಬೇಕಾದ ಅವಶ್ಯಕತೆಯಿಲ್ಲ ಎನ್ನುವುದರಲ್ಲೇ ಅವರ ಹೀನಮನಃಸ್ಥಿತಿ ಗೋಚರವಾಗುತ್ತದೆ. ತಮ್ಮ ಆಧ್ಯಾತ್ಮಿಕ ಸಾಧನೆಗಾಗಿ ಯಾವ ಜೀವಿಯನ್ನೂ ಬೇಕಾಬಿಟ್ಟಿ ಬಳಸಿಕೊಳ್ಳಬಹುದು ಎನ್ನುವ ಮನಃಸ್ಥಿತಿಯುಳ್ಳವರನ್ನೂ ನಾಗರಿಕ ಸಮಾಜ ಎಂದಿಗೂ ತಮ್ಮೊಟ್ಟಿಗೆ ಇರಿಸಿಕೊಳ್ಳುವುದಿಲ್ಲ. ಅಂತಹ ವಿಧಾನವನ್ನು ಬಳಸುವ ಸಮುದಾಯಗಳಾದರೂ ನಾಗರಿಕ ಸಮಾಜದಿಂದ ದೂರವೇ ಇದ್ದು ಸಾಧನೆ ಮಾಡುತ್ತವೆ. ಅಲ್ಲದೆ ಆ ಸಮುದಾಯಗಳು ಎಂದಿಗೂ ತಮ್ಮ ತೀಟೆಗಾಗಿ ಇನ್ನೊಬ್ಬರನ್ನು ಬಳಸಿಕೊಳ್ಳುವ ಹಾಗಿರುವುದಿಲ್ಲ. ಆದರೆ ಗಾಂಧಿಯದ್ದು ಎರಡೂ ಸಮುದಾಯಗಳ ದೃಷ್ಟಿಯಿಂದ ಅಕ್ಷಮ್ಯ ಅಪರಾಧ. ತನ್ನ ಆಧ್ಯಾತ್ಮಿಕ ಸಾಧನೆ(?)ಗಾಗಿ ತನಗೆ ಮನಸ್ಸಿಗೆ ಬಂದವರೆಲ್ಲಾ ತನ್ನ ಜೊತೆ ಮಲಗಬೇಕೆನ್ನುವ ಈ ಮನಃಸ್ಥಿತಿಯ ವ್ಯಕ್ತಿಗೆ ಮಹಾತ್ಮ ಪಟ್ಟ ಕಟ್ಟಿದವರ ಮನಃಸ್ಥಿತಿ ಹೇಗಿರಬಹುದು. ಗಾಂಧಿಯನ್ನು ಮಹಾತ್ಮ ಎಂದು ಸುಭಾಷ್ ಕೂಡಾ ಕರೆದರು ಎನ್ನುವ ವಾದ ಹೂಡುವವರು ಗಮನಿಸಬೇಕಾದ ಅಂಶವೊಂದಿದೆ. ಸುಭಾಷ್ ಹೇಳಿದ ಕಾಲವೇ ಬೇರೆ. ಸುಭಾಷ್ ಹಾಗೆ ಕರೆದ ಬಳಿಕ ಈ ಮಹಾತ್ಮ ಅದೆಷ್ಟು ಬದಲಾದರು. ಸ್ವತಃ ಸುಭಾಷರನ್ನೇ ಕಾಂಗ್ರೆಸ್ಸಿನಿಂದ ಹೊರತಳ್ಳುವಷ್ಟು. ಗಾಂಧಿಯ ಕಂಡಕಂಡವರ ಜೊತೆ ಮಲಗುವ ಬ್ರಹ್ಮಚರ್ಯದ ಹುಚ್ಚು ಆರಂಭವಾದುದು 1946-47ರ ಅವಧಿಯಲ್ಲಿ ಇವ್ಯಾವುವೂ ಸುಭಾಷರಿಗೆ ತಿಳಿದಿರಲು ಸಾಧ್ಯವೂ ಇಲ್ಲ. ತಿಳಿದಿದ್ದರೆ ಸುಭಾಷರು ಅಂತಹ ಪಾಪಿಷ್ಟ ವ್ಯಕ್ತಿಯನ್ನು ಮಹಾತ್ಮ ಎಂದು ಖಂಡಿತ ಕರೆಯಲಾರರು!

             ಮನುಳನ್ನು ಮಹಾಪ್ರಲೋಭನೆ ಎಂದು ಕರೆಯುವ ಮೂಲಕ ಗಾಂಧಿಯನ್ನು ಆ ಕೃತ್ಯದಿಂದ ಹೊರತರಲು ಅವರ ಅನೇಕ ಗೆಳೆಯರು ಪ್ರಯತ್ನಿಸಿದರು. ಋಷಿಗಳ ತಪಸ್ಸನ್ನು ಭಂಗಗೊಳಿಸಲು ದೇವತೆಗಳು ಅಪ್ಸರೆಯರನ್ನು ಪ್ರಯೋಗಗೊಡ್ಡುತ್ತಿದ್ದ ಪುರಾಣಕಥೆಗಳನ್ನು ಗಾಂಧಿಗೆ ಹೇಳಿ ಗಾಂಧಿಯನ್ನು ಈ ಪಥದಿಂದ ವಿಮುಖರನ್ನಾಗಿಸಲು ಯತ್ನಿಸಿದವರು ಅನೇಕ. "ಬ್ರಹ್ಮಚರ್ಯವನ್ನು ಸಾಧಿಸಲು ಮೂಲಭೂತ ಅವಲೋಕನದ ಪ್ರಯೋಗ ಎಂದಿಗೂ ಅವಶ್ಯಕವೂ ಅಲ್ಲ; ಹಾಗೆಯೇ ನಿರರ್ಥಕ ಕೂಡಾ. ಈ ರೀತಿ ತಾನು ಸಾಧಿಸಿದೆ ಎಂದುಕೊಂಡ ವ್ಯಕ್ತಿಯನ್ನು ಗುಪ್ತಪ್ರಭಾವಗಳು ಬಾಧಿಸದೇ ಇರುವುದಿಲ್ಲ. ಅಲ್ಲದೇ ಮನುಷ್ಯನ ಮೂಲಭೂತ ಅವಶ್ಯಕತೆಗಳಿಂದ ಸಮಾಜದ ಆತ್ಮ ನಾಶವಾಗುವುದಿಲ್ಲ. ಮೊದಲಾಗಿ ಪ್ರಯೋಗವೇ ನಿರರ್ಥಕ. ಹಾಗೆಯೇ ಅದನ್ನು ಇತರರ ಮೇಲೆ ಹೇರುವುದು, ಇತರರನ್ನು ಬಳಸಿಕೊಳ್ಳುವುದು ಸರ್ವಥಾ ಸರಿಯಲ್ಲ" ಎಂದು ಅವರ ಸಹವರ್ತಿಗಳನೇಕರು ಬುದ್ಧಿವಾದ ಹೇಳಿದರೂ ಗಾಂಧಿ ಒಪ್ಪಲಿಲ್ಲ.

               ಸಮಾಜ ತನ್ನ ಉಳಿವಿಗಾಗಿ ದೀರ್ಘಕಾಲದಿಂದ, ಶಿಸ್ತಿನಿಂದ ಕಟ್ಟಿಕೊಂಡಿರುವ ನೈತಿಕ ವ್ಯವಸ್ಥೆಯ ಅಡಿಪಾಯವನ್ನು ನೀವು ದುರ್ಬಲಗೊಳಿಸುತ್ತಿದ್ದೀರಿ. ಇದರಿಂದ ದುರಸ್ತಿಪಡಿಸಲಾಗದ ಹಾನಿಯಾಗುವುದು ಖಂಡಿತ ಎಂದು ಗಾಂಧಿಯ ಸ್ನೇಹಿತರನೇಕರು ಎಚ್ಚರಿಸಿದರೂ ಗಾಂಧಿ ತನ್ನ ಹಾದಿಯಿಂದ ಮರಳಲಿಲ್ಲ. ಗಾಂಧಿಯ ಮಿತ್ರರೋರ್ವರು  "ನಿಮ್ಮ ಪ್ರಯೋಗ ಅಷ್ಟು ಪ್ರಗತಿ ಸಾಧಿಸಿದೆಯೆಂದಾದರೆ ನಿಮ್ಮ ಸುತ್ತಲಿನವರಲ್ಲಿ ಅದರ ಪರಿಣಾಮವೇಕೆ ಕಂಡುಬರುತ್ತಿಲ್ಲ? ನಿಮ್ಮ ಸುತ್ತ ಅಷ್ಟು ವ್ಯಾಕುಲತೆ ಮತ್ತು ಅಸಂತೋಷವೇಕೆ? ನಿಮ್ಮ ಸಂಗಾತಿಗಳು ಭಾವನಾತ್ಮಕವಾಗಿ ಅಷ್ಟು ಕಿಲುಬುಗಟ್ಟಿದವರಂತೆ ಕಾಣುತ್ತಿರುವುದೇಕೆ?" ಎಂದು ಪ್ರಶ್ನಿಸಿದಾಗ  ಗಾಂಧಿ "ನನ್ನ ಸಂಗಾತಿಗಳ ಸದ್ಗುಣ ಹಾಗೂ ನ್ಯೂನತೆಗಳೆರಡೂ ನನಗೆ ಗೊತ್ತಿವೆ. ನೀವೆಣಿಸಿದಷ್ಟು ನಾನು ಕಳೆದು ಹೋಗಿಲ್ಲ" ಎಂದುತ್ತರಿಸಿದರು. ಆದರೆ ಗಾಂಧಿ ಎಷ್ಟರ ಮಟ್ಟಿಗೆ ಕಳೆದುಹೋಗಿದ್ದಾರೆ ಎನ್ನುವುದೂ ಪ್ರಶ್ನಾರ್ಥಕವೇ ಆಗಿ ಉಳಿಯಿತು. ಗಾಂಧಿ "ನನ್ನಲ್ಲಿ ಲೈಂಗಿಕ ಭಾವನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿಕೊಂಡಿದ್ದೇನೆ ಎಂದು ನಾನು ಪ್ರತಿಪಾದಿಸುವುದಿಲ್ಲ" (ಮಹಾತ್ಮಗಾಂಧಿ ಲಾಸ್ಟ್ ಫೇಸ್; ಪ್ಯಾರೇಲಾಲ್) ಎಂದು ಒಂದು ಕಡೆ ಹೇಳುತ್ತಾರೆ. ಮತ್ಯಾವ ಸೀಮೆಯ ಬ್ರಹ್ಮಚರ್ಯ?

               ನಾನು ರೂಪಿಸಿಕೊಂಡ ದೇವರ ಏಕಾಂಗಿ ಹಾದಿಯಲ್ಲಿ ನನಗೆ ಐಹಿಕ ಸಂಗಾತಿಗಳ ಅವಶ್ಯಕತೆಯಿಲ್ಲ ಎಂದ ಗಾಂಧಿ ತನ್ನ ಪ್ರಯೋಗಕ್ಕೆ ಮಾತ್ರ ನಿರ್ದಿಷ್ಟ ಸಂಗಾತಿಗಳನ್ನೇ ಬಯಸಿದರು. ಇಂತಹ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಇರಲೇಬಾರದು. ಜನರ ನಡುವೆ ಬದುಕುತ್ತಾ ನಾಯಕತ್ವ ವಹಿಸಿಕೊಂಡು ಅವರಿಗೆ ಮಾರ್ಗದರ್ಶನ ನೀಡುವ ವ್ಯಕ್ತಿ ತನ್ನ ವ್ಯಕ್ತಿತ್ವ ಹಾಗೂ ನಡಾವಳಿಗಳನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕಾಗುತ್ತದೆ. "ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ| ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||". ತಮ್ಮ ಹಿಂಬಾಲಕರು ತಮ್ಮನ್ನು ಅನುಸರಿಸುತ್ತಾರೆಂಬ ಅರಿವಿದ್ದು ಗಾಂಧಿ ಗೀತೆಯ ಈ ಬೋಧನೆಯನ್ನು ನಿರ್ಲಕ್ಷಿಸಿದರು. ಬಹುಷಃ ಭಗವದ್ಗೀತೆಗಿಂತ ಬಲಯುತವಾದ ಆಕರ್ಷಣೆಯನ್ನು ಅವರು ಕಂಡುಕೊಂಡಿರಬೇಕು. ಜಯ ಎಂದೇ ಹೆಸರಿದ್ದ ಮಹಾಭಾರತ ಹಾಗೂ ಮನುಸ್ಮೃತಿಯಲ್ಲಿ
"ನಜಾತು ಕಾಮ ಕಾಮಾನಾಂ ಉಪಭೋಗೇನ ಸಮ್ಯತಿ|
ಹವಿಷಾ ಕೃಷ್ಣ ವ್ರತಮೇನಾ ಭೂಯಾ ಏವಾಭಿ ವರ್ಧತೇ||" ಎಂದಿದೆ. ಎಲ್ಲಿಯವರೆಗೆ ಸ್ತ್ರೀಯರ ಸಹವಾಸ, ಒಡನಾಟ ಇರುವುದೋ ಅಲ್ಲಿಯವರೆಗೆ ಪುರುಷನಲ್ಲಿ ಇಂದ್ರಿಯ ಲಾಲಸೆ ಜಾಸ್ತಿಯಾಗುತ್ತಲೇ ಹೋಗುತ್ತದೆ. ಬಯಕೆಗಳ ಪೂರೈಕೆಯೊಡನೆ ಅವು ಮತ್ತಷ್ಟು ಜಾಸ್ತಿಯಾಗುತ್ತವೆ. ಬೆಂಕಿಗೆ ಎಣ್ಣೆ ಹಾಕಿದಷ್ಟು ಬೆಂಕಿ ಪ್ರಜ್ವಲಿಸುತ್ತಲೇ ಇರುತ್ತದೆ. ಪುರುಷ ಬೆಣ್ಣೆ, ಸ್ತ್ರೀಯು ಅಗ್ನಿಯಿದ್ದಂತೆ. ಮಹಿಳೆಯ ಸಾಮೀಪ್ಯದಲ್ಲಿ ಪುರುಷನ ಮನಸ್ಸು ಕರಗುತ್ತದೆ. "ನನಗೆ ಪುರುಷ ಮತ್ತು ಮಹಿಳೆಯ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ" ಎಂದು ಸುಲಭವಾಗಿ ಹೇಳಿದ ಮಾತ್ರಕ್ಕೆ ನಿಸರ್ಗದತ್ತವಾಗಿರುವುದು ಮರೆಯಾಗುತ್ತದೆಯೇ? ಸದಾ ಮಹಿಳೆಯರನ್ನು ನೋಡುವುದು, ಅವರದ್ದೇ ಕುರಿತ ಆಲೋಚನೆ, ಅವರೊಡನೆ ಮಾತು-ಸಂಪರ್ಕಗಳಿಂದ ಬ್ರಹ್ಮಚರ್ಯ ಆಚರಣೆ ಸಾಧ್ಯ ಎನ್ನುವುದನ್ನು ಈ ಲೋಕದಲ್ಲಿ ಗಾಂಧಿ ಮಾತ್ರ ಆಲೋಚಿಸಿದ್ದು. ಸೃಷ್ಟಿಕರ್ತನನ್ನೇ ಬಿಡದ ಈ ಮಾಯೆ ಹುಲುಮಾನವ ಗಾಂಧಿಯನ್ನು ಬಿಟ್ಟೀತೇ? ಹಾಗಾಗಿ ಇದು ಬ್ರಹ್ಮಚರ್ಯವೂ ಅಲ್ಲ ಯಾವುದೂ ಅಲ್ಲ, ಮುದಿ ವಯಸ್ಸಿನ ಮನೋವಿಕಾರವಷ್ಟೇ!


ಬುಧವಾರ, ಅಕ್ಟೋಬರ್ 5, 2016

ಯಾರು ಮಹಾತ್ಮ? ಭಾಗ- ೯

ಯಾರು ಮಹಾತ್ಮ?
ಭಾಗ- ೯

                    1947ರ ಫೆಬ್ರವರಿ 24ರಂದು ಗಾಂಧಿ ತಮ್ಮ ನಿಕಟ ಸ್ನೇಹಿತರ ಅಭಿಪ್ರಾಯ ತಿಳಿಯ ಬಯಸಿ ಬಹಳಷ್ಟು ಪತ್ರಗಳನ್ನು ಕಳುಹಿದರು. ಒಂದು ದಿನವಂತೂ ಸುಮಾರು ಹನ್ನೆರಡು ಪತ್ರಗಳನ್ನು ಬರೆದರು. ಅವುಗಳೆಲ್ಲಾ ಸ್ವಯಂ ಆತ್ಮಾವಲೋಕನದ ಧಾಟಿಯಲ್ಲಿತ್ತು. ಆಚಾರ್ಯ ಕೃಪಲಾನಿಯವರಿಗೆ ಬರೆದ ಪತ್ರ,
"ಇದು ತೀರಾ ವೈಯುಕ್ತಿಕ ಪತ್ರ, ಆದರೆ ಖಾಸಗಿಯಲ್ಲ. ನಾವು ರಕ್ತಸಂಬಂಧಿಗಳು ಎಂದು ಪರಿಗಣಿಸುವ, ನನ್ನ ಮೊಮ್ಮಗಳು ಮನು ನನ್ನ ಜೊತೆ ಹಾಸಿಗೆ ಹಂಚಿಕೊಂಡಿದ್ದಳು. ಇದರಿಂದ ನಾನು ನನ್ನ ಕೆಲ ಪ್ರೀತಿಪಾತ್ರ ಸಹವರ್ತಿಗಳನ್ನು ಕಳೆದುಕೊಳ್ಳಬೇಕಾಯಿತು. ನನ್ನ ಪ್ರಥಮ ಹಾಗೂ ಪ್ರೀತಿಯ ಕಾಮ್ರೇಡುಗಳಲ್ಲೊಬ್ಬರಾದ ನೀವು ನಿಮ್ಮ ಮನೋಭಾವವನ್ನು ಮರುಪರಿಶೀಲಿಸಿಕೊಳ್ಳಬೇಕು. ನಾನು ಈ ವಿಚಾರದಲ್ಲಿ ಮನಃಪೂರ್ವಕವಾಗಿದ್ದೇನೆ. ಜಗತ್ತೇ ಕೈಬಿಟ್ಟರೂ ನನಗೆ ಸತ್ಯ ಎಂದು ತೋಚಿದ್ದನ್ನು ತ್ಯಜಿಸುವ ಧೈರ್ಯ ನನಗಿಲ್ಲ. ಇದೊಂದು ಭ್ರಾಂತಿ ಮತ್ತು ಬಲೆಯಾಗಿರಬಹುದು. ಹಾಗೆ ಆಗಿದ್ದರೆ ನಾನು ಮನವರಿಕೆ ಮಾಡಿಕೊಳ್ಳುತ್ತೇನೆ. ನಾನೀಗ ವಿನಾಶದ ಅಪಾಯಕ್ಕೆ ಒಡ್ಡಿಕೊಂಡಿದ್ದೇನೆ. (ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್, ಪ್ಯಾರೇಲಾಲ್)

ಇದಕ್ಕೆ ಉತ್ತರಿಸಿದ(1947, ಮಾರ್ಚ್ 1) ಆಚಾರ್ಯ ಕೃಪಲಾನಿ "ನಿಮ್ಮೊಡನೆ ನಿಕಟ ಒಡನಾಟ ಇರುವ ಅನೇಕರಿಂದ ನಾನು ವಿಚಾರ ತಿಳಿದಿದ್ದೇನೆ. ಈ ಸುದ್ದಿ ನನ್ನನ್ನು ಶೂಲದಂತೆ ಚುಚ್ಚಿದೆ. ಈ ಕುರಿತು ಚಿಂತಿಸಲು ನಾನು ತಯಾರಿಲ್ಲ. ನನಗೆ ಯಾವ ಜವಾಬ್ದಾರಿಯನ್ನು ವಹಿಸಲಾಗಿದೆಯೋ ಅಷ್ಟಕ್ಕೆ ನನ್ನ ಕೆಲಸ ಮಿತಿಗೊಳಿಸಿದ್ದೇನೆ. ನೀವಾಗಿಯೇ ಈ ವಿಷಯದ ಕುರಿತು ಪತ್ರ ಬರೆದುದರಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ. "ಯಾವುದೇ ಪಾಪಿಷ್ಟ ವ್ಯಕ್ತಿ ಕೂಡಾ ನೀವು ಮಾಡಿದ ರೀತಿ ಮಾಡುವುದಿಲ್ಲ. ನೀವು ಲೋಕಸಂಗ್ರಹ ತತ್ವಕ್ಕೆ ಹಾನಿಯೆಸಗುತ್ತಿದ್ದೀರಿ. ಭಗವದ್ಗೀತೆಯಲ್ಲಿ ಈ ವಿಚಾರವನ್ನು ಚೆನ್ನಾಗಿ ವಿವರಿಸಲಾಗಿದೆ. ಆದರೆ ನೀವು ನಿಮ್ಮ ಪ್ರಯೋಗಕ್ಕೆ ಮುನ್ನ ಅದನ್ನು ಪರಿಗಣಿಸಲೇ ಇಲ್ಲ. ನಿಮ್ಮಿಂದ ದೂರದಲ್ಲಿದ್ದು ನಾನು ನನ್ನ ಬದುಕನ್ನು ರೂಪಿಸಿಕೊಂಡಿದ್ದೇನೆ. ನಿಮ್ಮೊಡನೆ ನನ್ನ ಸಂಪರ್ಕ ಯಾವಾಗಲೂ ರಾಜಕೀಯವಾಗಿ ಮಾತ್ರ. ವೈಯುಕ್ತಿಕ ಬದುಕಿನ ವಿಚಾರವಾಗಿ ನಾನೆಂದೂ ನಿಮ್ಮ ಸಲಹೆ ಕೇಳಿದ್ದಿಲ್ಲ."( ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್, ಪ್ಯಾರೇಲಾಲ್)

ಹೈಮಚಾರ್ ನಲ್ಲಿ 1947, ಫೆಬ್ರವರಿ 25ರಂದು ಥಕ್ಕರ್ ಬಾಪಾ(ಅಮೃತಲಾಲ್ ಥಕ್ಕರ್)ರನ್ನು ಗಾಂಧಿ ಭೇಟಿಯಾದರು. ಥಕ್ಕರ್ ಬಾಪಾ ಈ ಪ್ರಯೋಗವೇಕೆ ಎಂದು ಪ್ರಶ್ನಿಸಿದಾಗ ಗಾಂಧಿ, ಅದು ತನ್ನ ಯಜ್ಞದ ಅವಿಭಾಜ್ಯ ಅಂಗ. ಯಾರಾದರೂ ತಮ್ಮ ಪ್ರಯೋಗವನ್ನು ಬಿಡಬಹುದು. ಆದರೆ ಯಾರೂ ಕರ್ತವ್ಯ ತ್ಯಜಿಸಲಾಗದು. ಸಾರ್ವಜನಿಕ ಅಭಿಪ್ರಾಯ ಇದಕ್ಕೆ ಸಂಪೂರ್ಣ ವಿರುದ್ಧವಾಗಿದ್ದರೂ ತಾನಿದನ್ನು ಬಿಡಲಾರೆ. ಸ್ವಯಂಶುದ್ಧೀಕರಣ ಪ್ರಕ್ರಿಯೆಯಲ್ಲಿ ತಾನು ತೊಡಗಿರುವುದಾಗಿ ಹೇಳಿದರು. "ಬ್ರಹ್ಮಚರ್ಯವನ್ನು ಜಗತ್ತು ನೀವು ಮಾಡುವ ರೀತಿ ಯೋಚಿಸುವುದಿಲ್ಲ" ಎಂದು ಬಾಪಾ ಹೇಳಿದಾಗ ತನಗೆ ಸರಿಕಂಡದ್ದನ್ನು ತಾನು ಮಾಡುವುದಾಗಿ ಹೇಳಿದರು ಗಾಂಧಿ.
ಗಾಂಧಿ: "ನನ್ನ ಪ್ರಸ್ತುತ ಕಾರ್ಯವನ್ನು ಯಜ್ಞ ಎಂದು ಕರೆದಿದ್ದೇನೆ. ಒಂದು ತ್ಯಾಗ, ಒಂದು ತಪಸ್ಸು. ಇದರ ಅರ್ಥ ಆತ್ಯಂತಿಕ ಆತ್ಮ ಶುದ್ಧೀಕರಣ. ನನ್ನ ಮನಸ್ಸಿನಲ್ಲಿರುವುದನ್ನು ಬಹಿರಂಗವಾಗಿ ಆಚರಿಸುವ ಧೈರ್ಯ ತೋರದೆ ಇದ್ದರೆ ಅದು ಹೇಗೆ ಆತ್ಮ ಶುದ್ಧೀಕರಣವಾಗುತ್ತದೆ. ಒಬ್ಬಾತ ತಾನು ನಂಬಿದ್ದನ್ನು ನಡೆಸಲು ಬೇರೆಯವರ ಅನುಮತಿ ಬೇಕೇನು? ಇಂಥ ಪರಿಸ್ಥಿತಿಯಲ್ಲಿ ನನ್ನ ಸ್ನೇಹಿತರಿಗೆ ಎರಡು ಅವಕಾಶಗಳಿವೆ. ನನ್ನ ಹಾದಿಯನ್ನು ಅನುಸರಿಸಲು ಅವರು ಅಸಮರ್ಥರಾಗಿದ್ದರೂ ಅಥವಾ ನನ್ನ ನಿಲುವನ್ನು ಒಪ್ಪದೇ ಇದ್ದರೂ ನನ್ನ ಉದ್ದೇಶದಲ್ಲಿ ನಂಬಿಕೆ ಇಡಬೇಕು. ಅಥವಾ ನನ್ನೊಟ್ಟಿಗೆ ಭಾಗವಹಿಸಬೇಕು. ದೇವರ ಈ ಏಕಾಂಗಿ ಹಾದಿಯಲ್ಲಿ ನನಗೆ ಪ್ರಾಪಂಚಿಕ ಸಂಗಡಿಗರ ಅವಶ್ಯಕತೆಯಿಲ್ಲ. ನನ್ನನ್ನು ದೂಷಿಸುವವರು ದೂಷಿಸಲಿ. ಸಾವಿರಾರು ಹಿಂದೂ ಮುಸ್ಲಿಮ್ ಮಹಿಳೆಯರು ನನ್ನಲ್ಲಿ ಬರುತ್ತಾರೆ. ಅವರೆಲ್ಲಾ ನನ್ನ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರಿದ್ದಂತೆ. ಆದರೆ ಅವರಲ್ಲಿ ಯಾರೊಬ್ಬರೊಂದಿಗಾದರೂ ಹಾಸಿಗೆ ಹಂಚಿಕೊಳ್ಳುವ ಸಂದರ್ಭ ಉದ್ಭವಿಸಿದರೆ ನಿಜವಾಗಿಯೂ ನಾನು ಹೇಳಿಕೊಳ್ಳುವಂತೆ ಬ್ರಹ್ಮಚಾರಿಯಾಗಿದ್ದ ಪಕ್ಷದಲ್ಲಿ ಅದಕ್ಕೆ ಮುಜುಗರಪಡುವುದಿಲ್ಲ. ಈ ಪರೀಕ್ಷೆಯಲ್ಲಿ ನಾನು ಹಿಂದಕ್ಕೆಳೆಸಿದರೆ ನನ್ನನ್ನು ನಾನು ಹೇಡಿ ಮತ್ತು ವಂಚಕ ಎಂದು ಬರೆದುಕೊಳ್ಳುತ್ತೇನೆ."
ಅಂದರೆ ತನ್ನ ಮನಸ್ಸಿಗೆ ಬಂದುದೆಲ್ಲವನ್ನೂ ಅದು ಸಾರ್ವಜನಿಕ ನಂಬಿಕೆಯನ್ನು ಘಾಸಿ ಮಾಡುವಂತಿದ್ದರೂ ಯಾರಾದರೂ ಆಚರಿಸಬಹುದು ಎಂದು ಗಾಂಧಿ ಹೇಳಿದಂತಾಯಿತು. ಬ್ರಹ್ಮಚರ್ಯ ಪಾಲನೆಯಿಂದ ಆತ್ಮಶುದ್ಧೀಕರಣವಾಗುತ್ತದೆ ಎನ್ನುವುದು ಗಾಂಧಿಯ ಗಾಂಧಿಯೊಬ್ಬರದೇ ವಿಚಾರವಷ್ಟೇ. ಬ್ರಹ್ಮಚರ್ಯ ನಿಜವಾಗಿ ಆತ್ಮ ಶುದ್ಧೀಕರಣಗೊಂಡು ಆತ್ಮಜ್ಞಾನ ಪಡೆಯಲು ನೆರವಾಗಬಹುದಷ್ಟೇ. ಆದರೆ ಆ ಬ್ರಹ್ಮಚರ್ಯವೂ ಗಾಂಧಿಯವರು ಮಾಡಿದ ರೀತಿಯದ್ದಲ್ಲ. ಅವರ ನಿಲುವನ್ನು ಒಪ್ಪದಿದ್ದರೂ ಅವರ ಉದ್ದೇಶದಲ್ಲಿ ನಂಬಿಕೆಯಿಡಬೇಕೆನ್ನುವುದು ಉದ್ಧಟತನ ಹಾಗೂ ಎಡಬಿಡಂಗಿತನವಲ್ಲದೆ ಇನ್ನೇನು? ಪ್ರಾಪಂಚಿಕ ಸಂಗಡಿಗರ ಅವಶ್ಯಕತೆಯಿಲ್ಲ ಎಂದ ಗಾಂಧಿ ಅದಕ್ಕಾಗಿ ಹಲವಾರು ಹೆಂಗಳೆಯರನ್ನು ಬಳಸಿಕೊಂಡದ್ದೇಕೆ? ಇಂತಹ ಜೀವನ ಸಾಗಿಸುವವರು ಸಮಾಜದ ಮಧ್ಯೆ ಇರಬಾರದು ಎನ್ನುವ ಮೂಲ ವಿಚಾರವನ್ನೇ ಮರೆತುಬಿಟ್ಟರು ಗಾಂಧಿ! ಇದೆಲ್ಲವೂ ತನ್ನನ್ನು ತಾನು ಮಹಾ ವ್ಯಕ್ತಿ ಎಂದುಕೊಳ್ಳುವ ಮೂರ್ಖನ ವಿಚಾರವಲ್ಲದೆ ಮತ್ತೇನೂ ಅಲ್ಲ.

"ನನ್ನ ದರ್ಶನದ ಪ್ರಾಮಾಣಿಕ ಪ್ರಯತ್ನ ನಡೆದರೆ ಸಮಾಜ ಅದನ್ನು ಸ್ವಾಗತಿಸಬೇಕು. ಅಂಥ ಪ್ರಯತ್ನದಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ನನ್ನ ಸಂಶೋಧನೆ ಪೂರ್ಣಗೊಂಡ ಕೂಡಲೇ ನಾನದರ ಫಲಿತಾಂಶವನ್ನು ವಿಶ್ವಕ್ಕೆ ತಿಳಿಸುತ್ತೇನೆ" ಎಂದರು ಗಾಂಧಿ.(ಮಹಾತ್ಮಗಾಂಧಿ - ದಿ ಲಾಸ್ಟ್ ಫೇಸ್, ಪ್ಯಾರೇಲಾಲ್). ಎಂತಹ ವಿಪರ್ಯಾಸ. ತನ್ನ ಹುಚ್ಚಾಟವನ್ನು ಗಾಂಧಿ ದರ್ಶನ ಎಂದು ಕರೆಯುತ್ತಾರೆ! ಸಮಾಜದಲ್ಲಿ ಯಾರಾದರೂ ಇದನ್ನು ಅನುಸರಿಸಬಹುದು ಅನ್ನುತ್ತಾರೆ ಕೂಡಾ. ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದಂತೆ! ಅದರ ಫಲಿತಾಂಶವನ್ನೂ ವಿಶ್ವಕ್ಕೆ ಪ್ರಚುರಪಡಿಸುತ್ತಾರಂತೆ! ನಮ್ಮ ಪೂರ್ವಿಕರ ತಮ್ಮ ಅಗಾಧ ತಪಸ್ಸು, ಸಂಶೋಧನೆ, ಜ್ಞಾನದಿಂದ ಒಂದು ಪಕ್ವವಾದ ನಾಗರೀಕತೆಯ ರೂಪುರೇಶೆಯನ್ನು ನಿರ್ಮಿಸಿದ್ದಾರೆ. ಅಂತಹ ನಿಯಮಗಳನ್ನು ಮುರಿಯಹೊರಟಿದ್ದಾರೆ ಗಾಂಧಿ. ಇದರಿಂದ ಸಮಾಜ ನೈತಿಕವಾಗಿ ಅವನತಿಯತ್ತ ಸಾಗಬಹುದು ಎಂದು ಸ್ವಲ್ಪವಾದರೂ ಯೋಚಿಸಿದ್ದಾರಾ ಗಾಂಧಿ. ಮೊದಲಾಗಿ ಈ ರೀತಿಯ ಬ್ರಹ್ಮಚರ್ಯ ಪ್ರಯೋಗವೇ ತಪ್ಪು. ಅದರ ಮೇಲೆ ಅದನ್ನು "ದರ್ಶನ" ಎನ್ನುವ ಈ ಮೂರ್ಖನಿಗೆ ಏನೆನ್ನೋಣ? ಗಾಂಧಿ ತಮ್ಮ ಪ್ರಯೋಗದಲ್ಲಿ ಪ್ರಾಮಾಣಿಕರಾಗಿರಬಹುದೆಂದೇ ನಂಬೋಣ. ಆದರೆ ಇದರಿಂದ ಅವರು ಪ್ರಯೋಗಕ್ಕೆಳೆಸಿದ ಮಹಿಳೆಯರನ್ನು ಸಮಾಜ ಯಾವ ರೀತಿ ನೋಡಬಹುದೆಂದು ಸ್ವಲ್ಪವಾದರು ಚಿಂತಿಸಿದ್ದಾರಾ ಗಾಂಧಿ?