ಯಾರು ಮಹಾತ್ಮ?
ಭಾಗ- ೯
1947ರ ಫೆಬ್ರವರಿ 24ರಂದು ಗಾಂಧಿ ತಮ್ಮ ನಿಕಟ ಸ್ನೇಹಿತರ ಅಭಿಪ್ರಾಯ ತಿಳಿಯ ಬಯಸಿ ಬಹಳಷ್ಟು ಪತ್ರಗಳನ್ನು ಕಳುಹಿದರು. ಒಂದು ದಿನವಂತೂ ಸುಮಾರು ಹನ್ನೆರಡು ಪತ್ರಗಳನ್ನು ಬರೆದರು. ಅವುಗಳೆಲ್ಲಾ ಸ್ವಯಂ ಆತ್ಮಾವಲೋಕನದ ಧಾಟಿಯಲ್ಲಿತ್ತು. ಆಚಾರ್ಯ ಕೃಪಲಾನಿಯವರಿಗೆ ಬರೆದ ಪತ್ರ,"ಇದು ತೀರಾ ವೈಯುಕ್ತಿಕ ಪತ್ರ, ಆದರೆ ಖಾಸಗಿಯಲ್ಲ. ನಾವು ರಕ್ತಸಂಬಂಧಿಗಳು ಎಂದು ಪರಿಗಣಿಸುವ, ನನ್ನ ಮೊಮ್ಮಗಳು ಮನು ನನ್ನ ಜೊತೆ ಹಾಸಿಗೆ ಹಂಚಿಕೊಂಡಿದ್ದಳು. ಇದರಿಂದ ನಾನು ನನ್ನ ಕೆಲ ಪ್ರೀತಿಪಾತ್ರ ಸಹವರ್ತಿಗಳನ್ನು ಕಳೆದುಕೊಳ್ಳಬೇಕಾಯಿತು. ನನ್ನ ಪ್ರಥಮ ಹಾಗೂ ಪ್ರೀತಿಯ ಕಾಮ್ರೇಡುಗಳಲ್ಲೊಬ್ಬರಾದ ನೀವು ನಿಮ್ಮ ಮನೋಭಾವವನ್ನು ಮರುಪರಿಶೀಲಿಸಿಕೊಳ್ಳಬೇಕು. ನಾನು ಈ ವಿಚಾರದಲ್ಲಿ ಮನಃಪೂರ್ವಕವಾಗಿದ್ದೇನೆ. ಜಗತ್ತೇ ಕೈಬಿಟ್ಟರೂ ನನಗೆ ಸತ್ಯ ಎಂದು ತೋಚಿದ್ದನ್ನು ತ್ಯಜಿಸುವ ಧೈರ್ಯ ನನಗಿಲ್ಲ. ಇದೊಂದು ಭ್ರಾಂತಿ ಮತ್ತು ಬಲೆಯಾಗಿರಬಹುದು. ಹಾಗೆ ಆಗಿದ್ದರೆ ನಾನು ಮನವರಿಕೆ ಮಾಡಿಕೊಳ್ಳುತ್ತೇನೆ. ನಾನೀಗ ವಿನಾಶದ ಅಪಾಯಕ್ಕೆ ಒಡ್ಡಿಕೊಂಡಿದ್ದೇನೆ. (ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್, ಪ್ಯಾರೇಲಾಲ್)
ಇದಕ್ಕೆ ಉತ್ತರಿಸಿದ(1947, ಮಾರ್ಚ್ 1) ಆಚಾರ್ಯ ಕೃಪಲಾನಿ "ನಿಮ್ಮೊಡನೆ ನಿಕಟ ಒಡನಾಟ ಇರುವ ಅನೇಕರಿಂದ ನಾನು ವಿಚಾರ ತಿಳಿದಿದ್ದೇನೆ. ಈ ಸುದ್ದಿ ನನ್ನನ್ನು ಶೂಲದಂತೆ ಚುಚ್ಚಿದೆ. ಈ ಕುರಿತು ಚಿಂತಿಸಲು ನಾನು ತಯಾರಿಲ್ಲ. ನನಗೆ ಯಾವ ಜವಾಬ್ದಾರಿಯನ್ನು ವಹಿಸಲಾಗಿದೆಯೋ ಅಷ್ಟಕ್ಕೆ ನನ್ನ ಕೆಲಸ ಮಿತಿಗೊಳಿಸಿದ್ದೇನೆ. ನೀವಾಗಿಯೇ ಈ ವಿಷಯದ ಕುರಿತು ಪತ್ರ ಬರೆದುದರಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ. "ಯಾವುದೇ ಪಾಪಿಷ್ಟ ವ್ಯಕ್ತಿ ಕೂಡಾ ನೀವು ಮಾಡಿದ ರೀತಿ ಮಾಡುವುದಿಲ್ಲ. ನೀವು ಲೋಕಸಂಗ್ರಹ ತತ್ವಕ್ಕೆ ಹಾನಿಯೆಸಗುತ್ತಿದ್ದೀರಿ. ಭಗವದ್ಗೀತೆಯಲ್ಲಿ ಈ ವಿಚಾರವನ್ನು ಚೆನ್ನಾಗಿ ವಿವರಿಸಲಾಗಿದೆ. ಆದರೆ ನೀವು ನಿಮ್ಮ ಪ್ರಯೋಗಕ್ಕೆ ಮುನ್ನ ಅದನ್ನು ಪರಿಗಣಿಸಲೇ ಇಲ್ಲ. ನಿಮ್ಮಿಂದ ದೂರದಲ್ಲಿದ್ದು ನಾನು ನನ್ನ ಬದುಕನ್ನು ರೂಪಿಸಿಕೊಂಡಿದ್ದೇನೆ. ನಿಮ್ಮೊಡನೆ ನನ್ನ ಸಂಪರ್ಕ ಯಾವಾಗಲೂ ರಾಜಕೀಯವಾಗಿ ಮಾತ್ರ. ವೈಯುಕ್ತಿಕ ಬದುಕಿನ ವಿಚಾರವಾಗಿ ನಾನೆಂದೂ ನಿಮ್ಮ ಸಲಹೆ ಕೇಳಿದ್ದಿಲ್ಲ."( ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್, ಪ್ಯಾರೇಲಾಲ್)
ಹೈಮಚಾರ್ ನಲ್ಲಿ 1947, ಫೆಬ್ರವರಿ 25ರಂದು ಥಕ್ಕರ್ ಬಾಪಾ(ಅಮೃತಲಾಲ್ ಥಕ್ಕರ್)ರನ್ನು ಗಾಂಧಿ ಭೇಟಿಯಾದರು. ಥಕ್ಕರ್ ಬಾಪಾ ಈ ಪ್ರಯೋಗವೇಕೆ ಎಂದು ಪ್ರಶ್ನಿಸಿದಾಗ ಗಾಂಧಿ, ಅದು ತನ್ನ ಯಜ್ಞದ ಅವಿಭಾಜ್ಯ ಅಂಗ. ಯಾರಾದರೂ ತಮ್ಮ ಪ್ರಯೋಗವನ್ನು ಬಿಡಬಹುದು. ಆದರೆ ಯಾರೂ ಕರ್ತವ್ಯ ತ್ಯಜಿಸಲಾಗದು. ಸಾರ್ವಜನಿಕ ಅಭಿಪ್ರಾಯ ಇದಕ್ಕೆ ಸಂಪೂರ್ಣ ವಿರುದ್ಧವಾಗಿದ್ದರೂ ತಾನಿದನ್ನು ಬಿಡಲಾರೆ. ಸ್ವಯಂಶುದ್ಧೀಕರಣ ಪ್ರಕ್ರಿಯೆಯಲ್ಲಿ ತಾನು ತೊಡಗಿರುವುದಾಗಿ ಹೇಳಿದರು. "ಬ್ರಹ್ಮಚರ್ಯವನ್ನು ಜಗತ್ತು ನೀವು ಮಾಡುವ ರೀತಿ ಯೋಚಿಸುವುದಿಲ್ಲ" ಎಂದು ಬಾಪಾ ಹೇಳಿದಾಗ ತನಗೆ ಸರಿಕಂಡದ್ದನ್ನು ತಾನು ಮಾಡುವುದಾಗಿ ಹೇಳಿದರು ಗಾಂಧಿ.
ಗಾಂಧಿ: "ನನ್ನ ಪ್ರಸ್ತುತ ಕಾರ್ಯವನ್ನು ಯಜ್ಞ ಎಂದು ಕರೆದಿದ್ದೇನೆ. ಒಂದು ತ್ಯಾಗ, ಒಂದು ತಪಸ್ಸು. ಇದರ ಅರ್ಥ ಆತ್ಯಂತಿಕ ಆತ್ಮ ಶುದ್ಧೀಕರಣ. ನನ್ನ ಮನಸ್ಸಿನಲ್ಲಿರುವುದನ್ನು ಬಹಿರಂಗವಾಗಿ ಆಚರಿಸುವ ಧೈರ್ಯ ತೋರದೆ ಇದ್ದರೆ ಅದು ಹೇಗೆ ಆತ್ಮ ಶುದ್ಧೀಕರಣವಾಗುತ್ತದೆ. ಒಬ್ಬಾತ ತಾನು ನಂಬಿದ್ದನ್ನು ನಡೆಸಲು ಬೇರೆಯವರ ಅನುಮತಿ ಬೇಕೇನು? ಇಂಥ ಪರಿಸ್ಥಿತಿಯಲ್ಲಿ ನನ್ನ ಸ್ನೇಹಿತರಿಗೆ ಎರಡು ಅವಕಾಶಗಳಿವೆ. ನನ್ನ ಹಾದಿಯನ್ನು ಅನುಸರಿಸಲು ಅವರು ಅಸಮರ್ಥರಾಗಿದ್ದರೂ ಅಥವಾ ನನ್ನ ನಿಲುವನ್ನು ಒಪ್ಪದೇ ಇದ್ದರೂ ನನ್ನ ಉದ್ದೇಶದಲ್ಲಿ ನಂಬಿಕೆ ಇಡಬೇಕು. ಅಥವಾ ನನ್ನೊಟ್ಟಿಗೆ ಭಾಗವಹಿಸಬೇಕು. ದೇವರ ಈ ಏಕಾಂಗಿ ಹಾದಿಯಲ್ಲಿ ನನಗೆ ಪ್ರಾಪಂಚಿಕ ಸಂಗಡಿಗರ ಅವಶ್ಯಕತೆಯಿಲ್ಲ. ನನ್ನನ್ನು ದೂಷಿಸುವವರು ದೂಷಿಸಲಿ. ಸಾವಿರಾರು ಹಿಂದೂ ಮುಸ್ಲಿಮ್ ಮಹಿಳೆಯರು ನನ್ನಲ್ಲಿ ಬರುತ್ತಾರೆ. ಅವರೆಲ್ಲಾ ನನ್ನ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರಿದ್ದಂತೆ. ಆದರೆ ಅವರಲ್ಲಿ ಯಾರೊಬ್ಬರೊಂದಿಗಾದರೂ ಹಾಸಿಗೆ ಹಂಚಿಕೊಳ್ಳುವ ಸಂದರ್ಭ ಉದ್ಭವಿಸಿದರೆ ನಿಜವಾಗಿಯೂ ನಾನು ಹೇಳಿಕೊಳ್ಳುವಂತೆ ಬ್ರಹ್ಮಚಾರಿಯಾಗಿದ್ದ ಪಕ್ಷದಲ್ಲಿ ಅದಕ್ಕೆ ಮುಜುಗರಪಡುವುದಿಲ್ಲ. ಈ ಪರೀಕ್ಷೆಯಲ್ಲಿ ನಾನು ಹಿಂದಕ್ಕೆಳೆಸಿದರೆ ನನ್ನನ್ನು ನಾನು ಹೇಡಿ ಮತ್ತು ವಂಚಕ ಎಂದು ಬರೆದುಕೊಳ್ಳುತ್ತೇನೆ."
ಅಂದರೆ ತನ್ನ ಮನಸ್ಸಿಗೆ ಬಂದುದೆಲ್ಲವನ್ನೂ ಅದು ಸಾರ್ವಜನಿಕ ನಂಬಿಕೆಯನ್ನು ಘಾಸಿ ಮಾಡುವಂತಿದ್ದರೂ ಯಾರಾದರೂ ಆಚರಿಸಬಹುದು ಎಂದು ಗಾಂಧಿ ಹೇಳಿದಂತಾಯಿತು. ಬ್ರಹ್ಮಚರ್ಯ ಪಾಲನೆಯಿಂದ ಆತ್ಮಶುದ್ಧೀಕರಣವಾಗುತ್ತದೆ ಎನ್ನುವುದು ಗಾಂಧಿಯ ಗಾಂಧಿಯೊಬ್ಬರದೇ ವಿಚಾರವಷ್ಟೇ. ಬ್ರಹ್ಮಚರ್ಯ ನಿಜವಾಗಿ ಆತ್ಮ ಶುದ್ಧೀಕರಣಗೊಂಡು ಆತ್ಮಜ್ಞಾನ ಪಡೆಯಲು ನೆರವಾಗಬಹುದಷ್ಟೇ. ಆದರೆ ಆ ಬ್ರಹ್ಮಚರ್ಯವೂ ಗಾಂಧಿಯವರು ಮಾಡಿದ ರೀತಿಯದ್ದಲ್ಲ. ಅವರ ನಿಲುವನ್ನು ಒಪ್ಪದಿದ್ದರೂ ಅವರ ಉದ್ದೇಶದಲ್ಲಿ ನಂಬಿಕೆಯಿಡಬೇಕೆನ್ನುವುದು ಉದ್ಧಟತನ ಹಾಗೂ ಎಡಬಿಡಂಗಿತನವಲ್ಲದೆ ಇನ್ನೇನು? ಪ್ರಾಪಂಚಿಕ ಸಂಗಡಿಗರ ಅವಶ್ಯಕತೆಯಿಲ್ಲ ಎಂದ ಗಾಂಧಿ ಅದಕ್ಕಾಗಿ ಹಲವಾರು ಹೆಂಗಳೆಯರನ್ನು ಬಳಸಿಕೊಂಡದ್ದೇಕೆ? ಇಂತಹ ಜೀವನ ಸಾಗಿಸುವವರು ಸಮಾಜದ ಮಧ್ಯೆ ಇರಬಾರದು ಎನ್ನುವ ಮೂಲ ವಿಚಾರವನ್ನೇ ಮರೆತುಬಿಟ್ಟರು ಗಾಂಧಿ! ಇದೆಲ್ಲವೂ ತನ್ನನ್ನು ತಾನು ಮಹಾ ವ್ಯಕ್ತಿ ಎಂದುಕೊಳ್ಳುವ ಮೂರ್ಖನ ವಿಚಾರವಲ್ಲದೆ ಮತ್ತೇನೂ ಅಲ್ಲ.
"ನನ್ನ ದರ್ಶನದ ಪ್ರಾಮಾಣಿಕ ಪ್ರಯತ್ನ ನಡೆದರೆ ಸಮಾಜ ಅದನ್ನು ಸ್ವಾಗತಿಸಬೇಕು. ಅಂಥ ಪ್ರಯತ್ನದಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ನನ್ನ ಸಂಶೋಧನೆ ಪೂರ್ಣಗೊಂಡ ಕೂಡಲೇ ನಾನದರ ಫಲಿತಾಂಶವನ್ನು ವಿಶ್ವಕ್ಕೆ ತಿಳಿಸುತ್ತೇನೆ" ಎಂದರು ಗಾಂಧಿ.(ಮಹಾತ್ಮಗಾಂಧಿ - ದಿ ಲಾಸ್ಟ್ ಫೇಸ್, ಪ್ಯಾರೇಲಾಲ್). ಎಂತಹ ವಿಪರ್ಯಾಸ. ತನ್ನ ಹುಚ್ಚಾಟವನ್ನು ಗಾಂಧಿ ದರ್ಶನ ಎಂದು ಕರೆಯುತ್ತಾರೆ! ಸಮಾಜದಲ್ಲಿ ಯಾರಾದರೂ ಇದನ್ನು ಅನುಸರಿಸಬಹುದು ಅನ್ನುತ್ತಾರೆ ಕೂಡಾ. ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದಂತೆ! ಅದರ ಫಲಿತಾಂಶವನ್ನೂ ವಿಶ್ವಕ್ಕೆ ಪ್ರಚುರಪಡಿಸುತ್ತಾರಂತೆ! ನಮ್ಮ ಪೂರ್ವಿಕರ ತಮ್ಮ ಅಗಾಧ ತಪಸ್ಸು, ಸಂಶೋಧನೆ, ಜ್ಞಾನದಿಂದ ಒಂದು ಪಕ್ವವಾದ ನಾಗರೀಕತೆಯ ರೂಪುರೇಶೆಯನ್ನು ನಿರ್ಮಿಸಿದ್ದಾರೆ. ಅಂತಹ ನಿಯಮಗಳನ್ನು ಮುರಿಯಹೊರಟಿದ್ದಾರೆ ಗಾಂಧಿ. ಇದರಿಂದ ಸಮಾಜ ನೈತಿಕವಾಗಿ ಅವನತಿಯತ್ತ ಸಾಗಬಹುದು ಎಂದು ಸ್ವಲ್ಪವಾದರೂ ಯೋಚಿಸಿದ್ದಾರಾ ಗಾಂಧಿ. ಮೊದಲಾಗಿ ಈ ರೀತಿಯ ಬ್ರಹ್ಮಚರ್ಯ ಪ್ರಯೋಗವೇ ತಪ್ಪು. ಅದರ ಮೇಲೆ ಅದನ್ನು "ದರ್ಶನ" ಎನ್ನುವ ಈ ಮೂರ್ಖನಿಗೆ ಏನೆನ್ನೋಣ? ಗಾಂಧಿ ತಮ್ಮ ಪ್ರಯೋಗದಲ್ಲಿ ಪ್ರಾಮಾಣಿಕರಾಗಿರಬಹುದೆಂದೇ ನಂಬೋಣ. ಆದರೆ ಇದರಿಂದ ಅವರು ಪ್ರಯೋಗಕ್ಕೆಳೆಸಿದ ಮಹಿಳೆಯರನ್ನು ಸಮಾಜ ಯಾವ ರೀತಿ ನೋಡಬಹುದೆಂದು ಸ್ವಲ್ಪವಾದರು ಚಿಂತಿಸಿದ್ದಾರಾ ಗಾಂಧಿ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ