ಪುಟಗಳು

ಬುಧವಾರ, ಅಕ್ಟೋಬರ್ 12, 2016

ಯಾರು ಮಹಾತ್ಮ? ಭಾಗ- ೧೦

ಯಾರು ಮಹಾತ್ಮ?ಭಾಗ- ೧೦

ನೌಕಾಲಿಯಲ್ಲಿ ಮನು ಜೊತೆ ಸಂಬಂಧ ಆರಂಭವಾಗುವ ಬಹಳ ಮೊದಲೇ ಗಾಂಧಿ ಬ್ರಹ್ಮಚರ್ಯ ಪ್ರಯೋಗ ಶುರುವಾಗಿತ್ತು. ಆಗಿನ್ನೂ ಕಸ್ತೂರಬಾ ಬದುಕಿದ್ದರು. ಈ ಪ್ರಯೋಗ ನಡೆಸಲು ಅವರು ಅನುಮತಿ ನೀಡಿದ್ದರು. ರಾಜಕುಮಾರಿ ಅಮೃತಕೌರ್ ಸೇರಿದಂತೆ ಗಾಂಧಿ ಜೊತೆ ಪ್ರವಾಸದಲ್ಲಿದ್ದ ಎಲ್ಲಾ ಮಹಿಳೆಯರೂ ಬ್ರಹ್ಮಚರ್ಯ ಪ್ರಯೋಗದಲ್ಲಿ ಭಾಗವಹಿಸಿದ್ದರು. ನೆಹರೂವಿನ ಕಾರ್ಯದರ್ಶಿ ಎಂ.ಓ. ಮಥಾಯ್ ಅವರ ಜೊತೆ ಈ ವಿಷಯವನ್ನು ಅಮೃತ ಕೌರ್ ಬಿಚ್ಚು ಮನಸ್ಸಿನಿಂದ ಹೇಳಿಕೊಂಡಿದ್ದರು. ರಾಜಕುಮಾರಿ ಅಮೃತಕೌರ್'ರಲ್ಲಿ ಗಾಂಧಿ ವಿಶ್ವಾಸವಿಟ್ಟಿದ್ದರು. ಪ್ರಯೋಗದ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಸಲ ಗಾಂಧಿಯಲ್ಲಿ ಕೆಟ್ಟ ಯೋಚನೆಗಳು ಪ್ರವೇಶಿಸಿದ್ದವು. ಈ ಆಚರಣೆಯನ್ನು ಗಾಂಧಿಯವರ ಪ್ರಮುಖ ಸಹೋದ್ಯೋಗಿಗಳು ಖಾಸಗಿಯಾಗಿ ಪ್ರತಿಭಟಿಸುತ್ತಿದ್ದರು. ಪ್ರಯೋಜನವಾಗಿರಲಿಲ್ಲ. ಗಾಂಧಿಯ ಮನವೊಲಿಸುವಂತೆ ನೆಹರೂರಲ್ಲಿ ವಿನಂತಿಸಿಕೊಂಡರು. ಆದರೆ ಇಂಥ ಖಾಸಗಿ ವಿಷಯದಲ್ಲಿ ಮಧ್ಯಪ್ರವೇಶಿಸಲು ನೆಹರೂ ಖಡಾಖಂಡಿತವಾಗಿ ನಿರಾಕರಿಸಿದರು.(ರೆಮಿನಿಸೆನ್ಸಸ್ ಆಫ್ ದಿ ನೆಹರೂ ಏಜ್, ಎಂ.ಓ.ಮಥಾಯ್)

              ಬೇರೆಯವರನ್ನು ಬಲಿಕೊಟ್ಟು ನಾವು ಆಧ್ಯಾತ್ಮಿಕವಾಗಿ ಮುಂದುವರಿಯಲು ಸಾಧ್ಯವಿಲ್ಲ. ಅದೇ ಸಂದರ್ಭದಲ್ಲಿ ವಿವೇಚನಾಯುಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮನುಕುಲ ಮುನ್ನಡೆಯುವುದಿಲ್ಲ. ಆದರೆ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಗಾಂಧಿ "ಕುಂಬಾರನೊಬ್ಬ ಮಣ್ಣಿನ ಮಡಕೆ ತಯಾರು ಮಾಡಲು ಸಿದ್ಧನಾದಾಗ ಕುಲುಮೆಯಲ್ಲಿ ಬೆಂದ ನಂತರ ಅದು ಸೀಳು ಬಿಡುತ್ತದೆಯೋ ಅಥವಾ ಚೆನ್ನಾಗಿ ಸುಡುತ್ತದೆಯೋ ಎನ್ನುವುದು ಆತನಿಗೆ ಗೊತ್ತಿರುವುದಿಲ್ಲ. ಕೆಲವು ಮಾತ್ರ ಚೆನ್ನಾಗಿ ಬೆಂದು ಪರಿಪೂರ್ಣ ಮಡಕೆಯಾಗುತ್ತವೆ. ನಾನು ಸಹ ಕುಂಬಾರನಂತೆ. ಒಂದು ನಿರ್ದಿಷ್ಟ ಮಡಕೆಯಲ್ಲಿ ಬಿರುಕು ಉಂಟಾಗುವುದು ಹಣೆಬರಹವನ್ನು ಅವಲಂಬಿಸಿರುತ್ತದೆ. ಇದಕ್ಕಾಗಿ ಕುಂಬಾರ ಕಳವಳಬೇಕಾದ ಅವಶ್ಯಕತೆಯಿಲ್ಲ" ಎನ್ನುತ್ತಿದ್ದರು. ಗಾಂಧಿ ಏನು ಹೇಳಹೊರಟಿದ್ದಾರೆ. ಕುಂಬಾರ ಅವರೆಂದಾದರೆ ಮಣ್ಣು ಯಾರು? ಮಡಕೆ ಯಾರು? ಅದನ್ನು ಅವರೇ ಹೇಳಬೇಕು. ಮೊದಲನೆಯದಾಗಿ ಈ ಉದಾಹರಣೆ ಅವರ ಕಾರ್ಯಕ್ಕೆ ಯಾವ ಕಾಲ-ದೇಶಕ್ಕೂ ಪೂರಕವಲ್ಲ ಎನ್ನುವುದು ಗಾಂಧಿ ಮರೆಯುತ್ತಾರೆ. ಯಾವುದೇ ಮಣ್ಣಾದರೂ ಅದು ಪವಿತ್ರ ಎನ್ನುವ ಭಾವನೆ ಅವರಲ್ಲಿಲ್ಲ. ಯಾವುದೇ ಮಣ್ಣಾದರೂ ತಾನು ಉಪಯೋಗಿಸಬಹುದು ಎನ್ನುವ ದಾರ್ಷ್ಟ್ಯವೂ ಅವರ ಮಾತಲ್ಲಿ ಎದ್ದು ಕಾಣುತ್ತಿದೆ. ಮಡಕೆಯೊಂದು ಒಡೆದರೂ ಕುಂಬಾರ ಕಳವಳಪಡಬೇಕಾದ ಅವಶ್ಯಕತೆಯಿಲ್ಲ ಎನ್ನುವುದರಲ್ಲೇ ಅವರ ಹೀನಮನಃಸ್ಥಿತಿ ಗೋಚರವಾಗುತ್ತದೆ. ತಮ್ಮ ಆಧ್ಯಾತ್ಮಿಕ ಸಾಧನೆಗಾಗಿ ಯಾವ ಜೀವಿಯನ್ನೂ ಬೇಕಾಬಿಟ್ಟಿ ಬಳಸಿಕೊಳ್ಳಬಹುದು ಎನ್ನುವ ಮನಃಸ್ಥಿತಿಯುಳ್ಳವರನ್ನೂ ನಾಗರಿಕ ಸಮಾಜ ಎಂದಿಗೂ ತಮ್ಮೊಟ್ಟಿಗೆ ಇರಿಸಿಕೊಳ್ಳುವುದಿಲ್ಲ. ಅಂತಹ ವಿಧಾನವನ್ನು ಬಳಸುವ ಸಮುದಾಯಗಳಾದರೂ ನಾಗರಿಕ ಸಮಾಜದಿಂದ ದೂರವೇ ಇದ್ದು ಸಾಧನೆ ಮಾಡುತ್ತವೆ. ಅಲ್ಲದೆ ಆ ಸಮುದಾಯಗಳು ಎಂದಿಗೂ ತಮ್ಮ ತೀಟೆಗಾಗಿ ಇನ್ನೊಬ್ಬರನ್ನು ಬಳಸಿಕೊಳ್ಳುವ ಹಾಗಿರುವುದಿಲ್ಲ. ಆದರೆ ಗಾಂಧಿಯದ್ದು ಎರಡೂ ಸಮುದಾಯಗಳ ದೃಷ್ಟಿಯಿಂದ ಅಕ್ಷಮ್ಯ ಅಪರಾಧ. ತನ್ನ ಆಧ್ಯಾತ್ಮಿಕ ಸಾಧನೆ(?)ಗಾಗಿ ತನಗೆ ಮನಸ್ಸಿಗೆ ಬಂದವರೆಲ್ಲಾ ತನ್ನ ಜೊತೆ ಮಲಗಬೇಕೆನ್ನುವ ಈ ಮನಃಸ್ಥಿತಿಯ ವ್ಯಕ್ತಿಗೆ ಮಹಾತ್ಮ ಪಟ್ಟ ಕಟ್ಟಿದವರ ಮನಃಸ್ಥಿತಿ ಹೇಗಿರಬಹುದು. ಗಾಂಧಿಯನ್ನು ಮಹಾತ್ಮ ಎಂದು ಸುಭಾಷ್ ಕೂಡಾ ಕರೆದರು ಎನ್ನುವ ವಾದ ಹೂಡುವವರು ಗಮನಿಸಬೇಕಾದ ಅಂಶವೊಂದಿದೆ. ಸುಭಾಷ್ ಹೇಳಿದ ಕಾಲವೇ ಬೇರೆ. ಸುಭಾಷ್ ಹಾಗೆ ಕರೆದ ಬಳಿಕ ಈ ಮಹಾತ್ಮ ಅದೆಷ್ಟು ಬದಲಾದರು. ಸ್ವತಃ ಸುಭಾಷರನ್ನೇ ಕಾಂಗ್ರೆಸ್ಸಿನಿಂದ ಹೊರತಳ್ಳುವಷ್ಟು. ಗಾಂಧಿಯ ಕಂಡಕಂಡವರ ಜೊತೆ ಮಲಗುವ ಬ್ರಹ್ಮಚರ್ಯದ ಹುಚ್ಚು ಆರಂಭವಾದುದು 1946-47ರ ಅವಧಿಯಲ್ಲಿ ಇವ್ಯಾವುವೂ ಸುಭಾಷರಿಗೆ ತಿಳಿದಿರಲು ಸಾಧ್ಯವೂ ಇಲ್ಲ. ತಿಳಿದಿದ್ದರೆ ಸುಭಾಷರು ಅಂತಹ ಪಾಪಿಷ್ಟ ವ್ಯಕ್ತಿಯನ್ನು ಮಹಾತ್ಮ ಎಂದು ಖಂಡಿತ ಕರೆಯಲಾರರು!

             ಮನುಳನ್ನು ಮಹಾಪ್ರಲೋಭನೆ ಎಂದು ಕರೆಯುವ ಮೂಲಕ ಗಾಂಧಿಯನ್ನು ಆ ಕೃತ್ಯದಿಂದ ಹೊರತರಲು ಅವರ ಅನೇಕ ಗೆಳೆಯರು ಪ್ರಯತ್ನಿಸಿದರು. ಋಷಿಗಳ ತಪಸ್ಸನ್ನು ಭಂಗಗೊಳಿಸಲು ದೇವತೆಗಳು ಅಪ್ಸರೆಯರನ್ನು ಪ್ರಯೋಗಗೊಡ್ಡುತ್ತಿದ್ದ ಪುರಾಣಕಥೆಗಳನ್ನು ಗಾಂಧಿಗೆ ಹೇಳಿ ಗಾಂಧಿಯನ್ನು ಈ ಪಥದಿಂದ ವಿಮುಖರನ್ನಾಗಿಸಲು ಯತ್ನಿಸಿದವರು ಅನೇಕ. "ಬ್ರಹ್ಮಚರ್ಯವನ್ನು ಸಾಧಿಸಲು ಮೂಲಭೂತ ಅವಲೋಕನದ ಪ್ರಯೋಗ ಎಂದಿಗೂ ಅವಶ್ಯಕವೂ ಅಲ್ಲ; ಹಾಗೆಯೇ ನಿರರ್ಥಕ ಕೂಡಾ. ಈ ರೀತಿ ತಾನು ಸಾಧಿಸಿದೆ ಎಂದುಕೊಂಡ ವ್ಯಕ್ತಿಯನ್ನು ಗುಪ್ತಪ್ರಭಾವಗಳು ಬಾಧಿಸದೇ ಇರುವುದಿಲ್ಲ. ಅಲ್ಲದೇ ಮನುಷ್ಯನ ಮೂಲಭೂತ ಅವಶ್ಯಕತೆಗಳಿಂದ ಸಮಾಜದ ಆತ್ಮ ನಾಶವಾಗುವುದಿಲ್ಲ. ಮೊದಲಾಗಿ ಪ್ರಯೋಗವೇ ನಿರರ್ಥಕ. ಹಾಗೆಯೇ ಅದನ್ನು ಇತರರ ಮೇಲೆ ಹೇರುವುದು, ಇತರರನ್ನು ಬಳಸಿಕೊಳ್ಳುವುದು ಸರ್ವಥಾ ಸರಿಯಲ್ಲ" ಎಂದು ಅವರ ಸಹವರ್ತಿಗಳನೇಕರು ಬುದ್ಧಿವಾದ ಹೇಳಿದರೂ ಗಾಂಧಿ ಒಪ್ಪಲಿಲ್ಲ.

               ಸಮಾಜ ತನ್ನ ಉಳಿವಿಗಾಗಿ ದೀರ್ಘಕಾಲದಿಂದ, ಶಿಸ್ತಿನಿಂದ ಕಟ್ಟಿಕೊಂಡಿರುವ ನೈತಿಕ ವ್ಯವಸ್ಥೆಯ ಅಡಿಪಾಯವನ್ನು ನೀವು ದುರ್ಬಲಗೊಳಿಸುತ್ತಿದ್ದೀರಿ. ಇದರಿಂದ ದುರಸ್ತಿಪಡಿಸಲಾಗದ ಹಾನಿಯಾಗುವುದು ಖಂಡಿತ ಎಂದು ಗಾಂಧಿಯ ಸ್ನೇಹಿತರನೇಕರು ಎಚ್ಚರಿಸಿದರೂ ಗಾಂಧಿ ತನ್ನ ಹಾದಿಯಿಂದ ಮರಳಲಿಲ್ಲ. ಗಾಂಧಿಯ ಮಿತ್ರರೋರ್ವರು  "ನಿಮ್ಮ ಪ್ರಯೋಗ ಅಷ್ಟು ಪ್ರಗತಿ ಸಾಧಿಸಿದೆಯೆಂದಾದರೆ ನಿಮ್ಮ ಸುತ್ತಲಿನವರಲ್ಲಿ ಅದರ ಪರಿಣಾಮವೇಕೆ ಕಂಡುಬರುತ್ತಿಲ್ಲ? ನಿಮ್ಮ ಸುತ್ತ ಅಷ್ಟು ವ್ಯಾಕುಲತೆ ಮತ್ತು ಅಸಂತೋಷವೇಕೆ? ನಿಮ್ಮ ಸಂಗಾತಿಗಳು ಭಾವನಾತ್ಮಕವಾಗಿ ಅಷ್ಟು ಕಿಲುಬುಗಟ್ಟಿದವರಂತೆ ಕಾಣುತ್ತಿರುವುದೇಕೆ?" ಎಂದು ಪ್ರಶ್ನಿಸಿದಾಗ  ಗಾಂಧಿ "ನನ್ನ ಸಂಗಾತಿಗಳ ಸದ್ಗುಣ ಹಾಗೂ ನ್ಯೂನತೆಗಳೆರಡೂ ನನಗೆ ಗೊತ್ತಿವೆ. ನೀವೆಣಿಸಿದಷ್ಟು ನಾನು ಕಳೆದು ಹೋಗಿಲ್ಲ" ಎಂದುತ್ತರಿಸಿದರು. ಆದರೆ ಗಾಂಧಿ ಎಷ್ಟರ ಮಟ್ಟಿಗೆ ಕಳೆದುಹೋಗಿದ್ದಾರೆ ಎನ್ನುವುದೂ ಪ್ರಶ್ನಾರ್ಥಕವೇ ಆಗಿ ಉಳಿಯಿತು. ಗಾಂಧಿ "ನನ್ನಲ್ಲಿ ಲೈಂಗಿಕ ಭಾವನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿಕೊಂಡಿದ್ದೇನೆ ಎಂದು ನಾನು ಪ್ರತಿಪಾದಿಸುವುದಿಲ್ಲ" (ಮಹಾತ್ಮಗಾಂಧಿ ಲಾಸ್ಟ್ ಫೇಸ್; ಪ್ಯಾರೇಲಾಲ್) ಎಂದು ಒಂದು ಕಡೆ ಹೇಳುತ್ತಾರೆ. ಮತ್ಯಾವ ಸೀಮೆಯ ಬ್ರಹ್ಮಚರ್ಯ?

               ನಾನು ರೂಪಿಸಿಕೊಂಡ ದೇವರ ಏಕಾಂಗಿ ಹಾದಿಯಲ್ಲಿ ನನಗೆ ಐಹಿಕ ಸಂಗಾತಿಗಳ ಅವಶ್ಯಕತೆಯಿಲ್ಲ ಎಂದ ಗಾಂಧಿ ತನ್ನ ಪ್ರಯೋಗಕ್ಕೆ ಮಾತ್ರ ನಿರ್ದಿಷ್ಟ ಸಂಗಾತಿಗಳನ್ನೇ ಬಯಸಿದರು. ಇಂತಹ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಇರಲೇಬಾರದು. ಜನರ ನಡುವೆ ಬದುಕುತ್ತಾ ನಾಯಕತ್ವ ವಹಿಸಿಕೊಂಡು ಅವರಿಗೆ ಮಾರ್ಗದರ್ಶನ ನೀಡುವ ವ್ಯಕ್ತಿ ತನ್ನ ವ್ಯಕ್ತಿತ್ವ ಹಾಗೂ ನಡಾವಳಿಗಳನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕಾಗುತ್ತದೆ. "ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ| ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||". ತಮ್ಮ ಹಿಂಬಾಲಕರು ತಮ್ಮನ್ನು ಅನುಸರಿಸುತ್ತಾರೆಂಬ ಅರಿವಿದ್ದು ಗಾಂಧಿ ಗೀತೆಯ ಈ ಬೋಧನೆಯನ್ನು ನಿರ್ಲಕ್ಷಿಸಿದರು. ಬಹುಷಃ ಭಗವದ್ಗೀತೆಗಿಂತ ಬಲಯುತವಾದ ಆಕರ್ಷಣೆಯನ್ನು ಅವರು ಕಂಡುಕೊಂಡಿರಬೇಕು. ಜಯ ಎಂದೇ ಹೆಸರಿದ್ದ ಮಹಾಭಾರತ ಹಾಗೂ ಮನುಸ್ಮೃತಿಯಲ್ಲಿ
"ನಜಾತು ಕಾಮ ಕಾಮಾನಾಂ ಉಪಭೋಗೇನ ಸಮ್ಯತಿ|
ಹವಿಷಾ ಕೃಷ್ಣ ವ್ರತಮೇನಾ ಭೂಯಾ ಏವಾಭಿ ವರ್ಧತೇ||" ಎಂದಿದೆ. ಎಲ್ಲಿಯವರೆಗೆ ಸ್ತ್ರೀಯರ ಸಹವಾಸ, ಒಡನಾಟ ಇರುವುದೋ ಅಲ್ಲಿಯವರೆಗೆ ಪುರುಷನಲ್ಲಿ ಇಂದ್ರಿಯ ಲಾಲಸೆ ಜಾಸ್ತಿಯಾಗುತ್ತಲೇ ಹೋಗುತ್ತದೆ. ಬಯಕೆಗಳ ಪೂರೈಕೆಯೊಡನೆ ಅವು ಮತ್ತಷ್ಟು ಜಾಸ್ತಿಯಾಗುತ್ತವೆ. ಬೆಂಕಿಗೆ ಎಣ್ಣೆ ಹಾಕಿದಷ್ಟು ಬೆಂಕಿ ಪ್ರಜ್ವಲಿಸುತ್ತಲೇ ಇರುತ್ತದೆ. ಪುರುಷ ಬೆಣ್ಣೆ, ಸ್ತ್ರೀಯು ಅಗ್ನಿಯಿದ್ದಂತೆ. ಮಹಿಳೆಯ ಸಾಮೀಪ್ಯದಲ್ಲಿ ಪುರುಷನ ಮನಸ್ಸು ಕರಗುತ್ತದೆ. "ನನಗೆ ಪುರುಷ ಮತ್ತು ಮಹಿಳೆಯ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ" ಎಂದು ಸುಲಭವಾಗಿ ಹೇಳಿದ ಮಾತ್ರಕ್ಕೆ ನಿಸರ್ಗದತ್ತವಾಗಿರುವುದು ಮರೆಯಾಗುತ್ತದೆಯೇ? ಸದಾ ಮಹಿಳೆಯರನ್ನು ನೋಡುವುದು, ಅವರದ್ದೇ ಕುರಿತ ಆಲೋಚನೆ, ಅವರೊಡನೆ ಮಾತು-ಸಂಪರ್ಕಗಳಿಂದ ಬ್ರಹ್ಮಚರ್ಯ ಆಚರಣೆ ಸಾಧ್ಯ ಎನ್ನುವುದನ್ನು ಈ ಲೋಕದಲ್ಲಿ ಗಾಂಧಿ ಮಾತ್ರ ಆಲೋಚಿಸಿದ್ದು. ಸೃಷ್ಟಿಕರ್ತನನ್ನೇ ಬಿಡದ ಈ ಮಾಯೆ ಹುಲುಮಾನವ ಗಾಂಧಿಯನ್ನು ಬಿಟ್ಟೀತೇ? ಹಾಗಾಗಿ ಇದು ಬ್ರಹ್ಮಚರ್ಯವೂ ಅಲ್ಲ ಯಾವುದೂ ಅಲ್ಲ, ಮುದಿ ವಯಸ್ಸಿನ ಮನೋವಿಕಾರವಷ್ಟೇ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ