ಪುಟಗಳು

ಸೋಮವಾರ, ಮೇ 7, 2018

ಯುಗದ್ರಷ್ಟ - ಕ್ರಾಂತಿಪಥದ ಸತ್ಯ-ಸತ್ವ ದರ್ಶನ

ಯುಗದ್ರಷ್ಟ - ಕ್ರಾಂತಿಪಥದ ಸತ್ಯ-ಸತ್ವ ದರ್ಶನ

ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ತಮ್ಮನ್ನು ಅಡಿಗಡಿಗೆ ನಡುಗಿಸಿದ 1857ರಂತಹ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಅದೇ ಸಮಯದಲ್ಲಿ ತಾಯಿ ಭಾರತಿಯ ರತ್ನಗರ್ಭದಿಂದ ಜನಿಸಿದ ಮಹರ್ಷಿ ದಯಾನಂದರು ಭಾರತೀಯರ ಜಡತೆಯನ್ನು ತೊಲಗಿಸಲು ಆರ್ಯಸಮಾಜವೆಂಬ ದೀಪವನ್ನು ಹಚ್ಚಿದರು. ಆ ದೀವಿಗೆಯ ಒಂದೊಂದು ಕಿಡಿಯೂ ಕ್ರಾಂತಿಯ ಕಿಡಿ! ಬ್ರಿಟಿಷ್ ಸರಕಾರದ ಆಶೀರ್ವಾದ ಪಡೆದು ಅವರ ಮಾತುಗಳಿಗೆ ಅನುಕೂಲಕರವಾಗಿ ನಡೆಯಬಲ್ಲ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ಸಿನದ್ದು ರಾಜಕೀಯ ಪಥವಾದರೆ ಭಾರತದ ವೇದಕಾಲೀನ ಮೌಲ್ಯಗಳನ್ನಾಧರಿಸಿ ಭಾರತದ ಪುನರ್ನಿರ್ಮಾಣ ಮಾಡಲು ಹೊರಟಿದ್ದ ಆರ್ಯ ಸಮಾಜದ್ದು ಭವ್ಯ ದೇಶಭಕ್ತ ಪಥ. ಈ ಎರಡೂ ಪಥಗಳಲ್ಲಿ ಒಂದೇ ಕುಟುಂಬದ ಬೇರೆ ಬೇರೆ ಕವಲುಗಳು ಇದ್ದಂತಹ ಉದಾಹರಣೆಗಳು ಅದೆಷ್ಟೋ? ಖೇಮ ಸಿಂಹನ ಅಗ್ರ ಪುತ್ರ ಸುರ್ಜನ ಸಿಂಹ ಬ್ರಿಟಿಷರ ಪಾದಸೇವೆ ಮಾಡುವುದರೊಂದಿಗೆ ಆ ಧಾರೆಯೇ ಭಾರತಕ್ಕೆ ವಿಷಧಾರೆಯಾದರೆ ಮಧ್ಯಮ ಅರ್ಜುನ ಸಿಂಹನ ಕ್ಷಾತ್ರ-ಬ್ರಹ್ಮತೇಜ ಕ್ರಾಂತಿಧಾರೆಯಾಗಿ ಅವನ ಪೀಳಿಗೆಯೇ ತಾಯಿ ಭಾರತಿಯ ಪಾಲಿಗೆ ಅಮೃತಧಾರೆಯಾಗಿ ಹರಿಯಿತು. ಅಂತಹ ಅಮೃತಧಾರೆಯ ಒಂದು ಬಿಂದುವೇ ಸರದಾರ ಭಗತ್ ಸಿಂಗ್!

ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲವೆಂಬ ಆರ್ಯ ಸಮಾಜದ ಚಿಂತನೆಯ ಅರಿವು, ಋಷಿ ದಯಾನಂದರ ದರ್ಶನದ ಜೊತೆಜೊತೆಗೆ ಆಗುವುದರೊಂದಿಗೆ ಅರ್ಜುನ ಸಿಂಹನ ವ್ಯಕ್ತಿತ್ವವೇ ಬದಲಾಯಿತು. ದೇವಸ್ಥಾನಗಳೇ ಆರ್ಯ ಸಮಾಜದಿಂದ ದೂರವಿದ್ದ ಕಾಲದಲ್ಲಿ ಬಹುದೂರದ ಗುರುದ್ವಾರದಿಂದ ಆತ ಆರ್ಯ ಸಮಾಜದ ಭವನವನ್ನು ಪ್ರವೇಶಿಸಿದಾಗಲೇ ಕ್ರಾಂತಿಯ ಬೀಜ ಆ ಪರಿವಾರದಲ್ಲಿ ಬಿತ್ತಲ್ಪಟ್ಟಿತು! ತನ್ನ ಮೂವರು ಪುತ್ರರಿಗೂ ಬುದ್ಧಿ ಪೂರ್ವಕ ಕ್ರಾಂತಿದೀಕ್ಷೆ ನೀಡಿದ ಆತ. ದೇಶಕ್ಕಾಗಿ ನಡೆದ ಯಾವುದೇ ಕ್ರಾಂತಿಯಾದರೂ ಭಾಗವಹಿಸುತ್ತಿದ್ದ ಅರ್ಜುನನ ಅಗ್ರ ಪುತ್ರ ಕಿಶನ್ ಸಿಂಹ ತುಂಬು ಯೌವನದಲ್ಲಿ ಅಮರನಾದ! ದ್ವಿತೀಯ ಅಜಿತ್ ಸಿಂಹ ಭಾರತ ಮಾತಾ ಸೊಸೈಟಿಯ ಮುಖೇನ ಚಾಪೇಕರ್ ಸಹೋದರರು ಹಾರಿಸಿದ್ದ ಕಿಡಿಯನ್ನು ವಿದೇಶಗಳಿಗೂ ಹಬ್ಬಿಸಿ, ತಾನೂ ಗಡೀಪಾರಾಗಿ ಹೋದ! ಮೂರನೆಯವ ಸ್ವರ್ಣ ಸಿಂಹ ಕೈಕೋಳ-ಬೇಡಿಗಳ ಚದುರಂಗದಾಟದಲ್ಲಿ ಜೀವನ ಪೂರ್ತಿ ಕಳೆದ! ಅರ್ಜುನ ಸಿಂಹ ತನ್ನ ಹಿರಿಯ ಮೊಮ್ಮಕ್ಕಳಾದ ಜಗತ್-ಭಗತ್ ರನ್ನು ಅವರ ಬ್ರಹ್ಮೋಪದೇಶದ ಸಮಯದಲ್ಲಿ ಯಜ್ಞವೇದಿಕೆಯ ಮೇಲೆ ನಿಲ್ಲಿಸಿಕೊಂಡು ದೇಶದ ಬಲಿ ವೇದಿಕೆಗೆ ದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ. ಅವರಿಬ್ಬರಿಗೂ ರಾಷ್ಟ್ರೀಯ ವಿಚಾರ-ಕ್ರಾಂತಿಯ ಸಂಸ್ಕಾರ ನೀಡಿದ. ಯಜ್ಞ ಕುಂಡದಲ್ಲಿ ಅಗ್ನಿಗೆ ಆಜ್ಯವೊದಗಿತ್ತು. ಪೂರ್ಣಾಹುತಿ ಬಾಕಿ ಇತ್ತು!

             ಸರದಾರ ಅರ್ಜುನ ಸಿಂಹ ಅತ್ಯಂತ ಸಾಹಸದಿಂದ ಅಂಧವಿಶ್ವಾಸ ಮತ್ತು ಪರಂಪರಾವಾದಗಳ ಜಡತೆಯಿಂದ ಮುಚ್ಚಿಹೋಗಿದ್ದ ತನ್ನ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದ. ಅಡ್ಡಾದಿಡ್ಡಿಯಾಗಿದ್ದ ಮಾರ್ಗವನ್ನು ಶುಚಿಗೊಳಿಸಿ ತನ್ನ ಮನೆಯಂಗಳದಲ್ಲಿ ಯಜ್ಞವೇದಿಕೆಗಳನ್ನು ಅಣಿ ಮಾಡಿದ. ಸರದಾರ್ ಕಿಶನ್ ಸಿಂಹ ಆ ಮನೆಯ ಅಂಗಳವನ್ನು ತೊಳೆದು ಸಾರಿಸಿ ಯಜ್ಞವೇದಿಕೆಯ ಮೇಲೆ ವಿಶಾಲವಾದ ಯಜ್ಞಕುಂಡವೊಂದನ್ನು ಸ್ಥಾಪಿಸಿದ. ಸರ್ದಾರ್ ಅಜಿತಸಿಂಹ್ ಆ ಯಜ್ಞಕುಂಡದಲ್ಲಿ ಸಮಿತ್ತುಗಳನ್ನು ಜೋಡಿಸಿ ಅದರಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿದ. ಸ್ವರ್ಣ ಸಿಂಹ ಅದನ್ನೂದಿ ಉರಿಯನ್ನೆಬ್ಬಿಸಿದ. ಅಜಿತ್ ಸಿಂಗ್ ಇಂಧನವನ್ನು ಹುಡುಕುತ್ತಾ ಹೋದಾಗ ಕಿಶನ್ ಸಿಂಹ ಅದರ ರಕ್ಷಣೆ ಮಾಡುತ್ತಿದ್ದ. 1964ನೇ ವಿಕ್ರಮ ಸಂವತ್ಸರದ ಆಶ್ವಯುಜ ಶುಕ್ಲ ತ್ರಯೋದಶಿ ಶನಿವಾರ ಬೆಳಿಗ್ಗೆ ಸೂರ್ಯ ತೇಜಸ್ಸೊಂದು ಭೂಮಿಗೆ ಬಿದ್ದಿತು! ಅದೇ ದಿನ ಚಿಕ್ಕಪ್ಪ ಅಜಿತನ  ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲರೂ ಮಗುವನ್ನು "ಭಾಗ್ಯವಂತ" ಎಂದು ಕರೆದರು. ಅಂತಹ ಪರಿವಾರದ ಭಾಗ್ಯವಂತ ಭಗತ್ ಅಲ್ಲಿ ಇಲ್ಲಿ ಎಂದು ಇಂಧನವನ್ನು ಹುಡುಕದೆ ತನ್ನ ಜೀವನವನ್ನೇ ಇಂಧನವಾಗಿ ಮಾಡಿ ಆ ಯಜ್ಞಕುಂಡಕ್ಕೆ ಧುಮುಕಿದ. ಅದರ ಜ್ವಾಲೆ ದೇಶದಾದ್ಯಂತ ಹರಡಿತು. ಒಂದಿಡೀ ಪರಿವಾರ ತಾನು ಇತಿಶ್ರೀಯಾಗುವ ಮೊದಲು ಇತಿಹಾಸವನ್ನೇ ಸೃಷ್ಟಿಸಿತು. ಇದು ಭಾರತದ ಕ್ರಾಂತಿ ಪರಿವಾರವೊಂದು ಯುಗದೃಷ್ಟವಾದ ಬಗೆ. ಅದನ್ನು ವಿಸ್ತಾರವಾಗಿ ಬರೆಯಲು ಅದೇ ಪರಿವಾರದ ವೀರೇಂದ್ರ ಸಿಂಧು ಹುಟ್ಟಿ ಬರಬೇಕಾಯಿತು. ಅದನ್ನು ಕನ್ನಡಕ್ಕೆ ಅನುವಾದಿಸಲು ಬಾಬುಕೃಷ್ಣಮೂರ್ತಿಯವರಂತಹ ಸಮರ್ಥರೇ ಇಳಿದರು. ಅದು "ಯುಗದೃಷ್ಟ ಭಗತ್ ಸಿಂಗ್" ಆಗಿ ಕ್ರಾಂತಿಪಥದ ಸತ್ಯ-ಸತ್ವ ದರ್ಶನವನ್ನು ಕನ್ನಡಿಗರಿಗೀಯುತ್ತಿದೆ.

ಸನಾತನಕ್ಕೆ ರಮಣರಿಗಿಂತ ಸಮಾನ ಪದ ಇನ್ಯಾವುದಿದ್ದೀತು?

ಸನಾತನಕ್ಕೆ ರಮಣರಿಗಿಂತ ಸಮಾನ ಪದ ಇನ್ಯಾವುದಿದ್ದೀತು?

           ಅಭಿವ್ಯಕ್ತಿ ಸ್ವಾತಂತ್ರ್ಯ. ಇಂದಿನ ದಿನಗಳಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ವಿಷಯ. ಅತೀ ಹೆಚ್ಚು ದುರ್ಬಳಕೆಯೂ ಆಗುತ್ತಿರುವ ಪದಗಳಿವು. ಮನಸ್ಸಿಗೆ ತೋಚಿದ್ದನ್ನು ಸತ್ಯಾಸತ್ಯ ಪರಾಮರ್ಶಿಸದೆ ಸಾರ್ವಜನಿಕವಾಗಿ ಗಳಹುವವರು ಒಂದೊಡೆಯಾದರೆ, ಮಾತಾಡಿದವನ ಮಾತಿನ ಮರ್ಮ, ಸತ್ಯವನ್ನು ಪರಿಗಣಿಸದೆ ತಾವೆಣಿಸಿದ್ದೇ, ತಮ್ಮದ್ದೇ ಸತ್ಯ ಎಂದು ಬೊಬ್ಬಿರಿಯುವವರು ಇನ್ನೊಂದೆಡೆ. ಎರಡೂ ಕಡೆಗಳಲ್ಲಿ ಅಸತ್ಯವೇ ತಾಂಡವವಾಡುತ್ತಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಸತ್ಯ ಹಾಸಿಗೆ ಬಿಟ್ಟು ಆಕಳಿಸುತ್ತಿರುವಾಗ ಸುಳ್ಳು ಜಾತ್ರೆಗದ್ದೆಯಲ್ಲಿ ನಲಿಯುತ್ತಿರುತ್ತದೆ ಎಂಬ ಮಾತು ಸಾರ್ವಕಾಲಿಕ ಸತ್ಯವಾಗಿರುವುದು ಅದೇ ಕಾರಣಕ್ಕಲ್ಲವೇ! ಆದರೆ ಇಂತಹಾ ಸುಳ್ಳುಗಳ ಸಾಮ್ರಾಜ್ಯಗಳನ್ನು ಕಟ್ಟಿಯೇ ಭಾರತೀಯತೆಯನ್ನು ಸಾಯಿಸುವ, ಸನಾತನ ಧರ್ಮವನ್ನು ಮರೆಯಾಗಿಸುವ ಯತ್ನದಲ್ಲಿರುವವರನ್ನು ಕಟ್ಟಿಹಾಕುವುದೇ ಈ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿರುವುಂತೂ ಸತ್ಯ. ಈ ಸುಳ್ಳುಗಳೆಲ್ಲಾ ಸುಳ್ಳು ಎಂದು ಜನಮಾನಸಕ್ಕೆ ಅರಿವಾಗುವ ಹೊತ್ತಿಗೆ ಸುಳ್ಳುಕೋರ ಪ್ರಭೃತಿಗಳು ಬಯಸಿದ ಹಾನಿ ಆಗಿರುತ್ತದೆ. ಸಂವಿಧಾನದ ಲೋಪದೋಷಗಳನ್ನಂತೂ ಅವರು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ.

              ಈ ಸುಳ್ಳುಕೋರರ ದಾಳಿಗೆ ಈ ಸಲ ಬಲಿಯಾದದ್ದು ತನ್ನ ಪಾಡಿಗೆ ತಾನು ಹಾಡಿಕೊಂಡಿದ್ದ ಒಂದು ಕೋಗಿಲೆ. ಇಳಯರಾಜ; ಯಾವುದೇ ವಿವಾದಕ್ಕೊಳಗಾಗದೆ ಹಾಡುವ ಕಾಯಕದಲ್ಲಿ ತೊಡಗಿದ್ದ ಗಾನಗಂಧರ್ವ. ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿಗಳ ಬಗೆಗೆ ಹಾಡುಗಳ ಗುಚ್ಛವೊಂದನ್ನು ಮಾಡಿ ಗುರು ಕಾಣಿಕೆ ಸಲ್ಲಿಸಿದ್ದ ಇಳಯರಾಜ ಸಂದರ್ಶನವೊಂದರಲ್ಲಿ ರಮಣ ಮಹರ್ಷಿಗಳ ಬಗೆಗೆ ಮಾತಾಡುವಾಗ ಅವರ ಜೊತೆ ಯೇಸುವನ್ನು ತುಲನೆ ಮಾಡಿದ್ದರು. ಇಳಯರಾಜರನ್ನು ಇಕ್ಕಟ್ಟಿಗೆ ಸಿಕ್ಕಿಸಿಲು ಕಾಯುತ್ತಿದ್ದ ಮಿಷನರಿಗಳು ಹಾಗೂ ಅವುಗಳ ಬೆಂಬಲಿಗರಿಗೆ ಅಷ್ಟೇ ಸಾಕಿತ್ತು. ಅವು ಇಳಯರಾಜರ ಗೌರವವನ್ನು ಇಳೆಗಿಳಿಸಲು ವಾಮಮಾರ್ಗಕ್ಕಿಳಿದವು. ಅಷ್ಟಕ್ಕೂ ಇಳಯರಾಜ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಗೂಗಲ್'ನ ಮುಖ್ಯ ಕಛೇರಿಯಲ್ಲಿ ತಮ್ಮ ಸಂಗೀತದ ಬದುಕಿನ ಎಳೆಗಳನ್ನು ಬಿಚ್ಚಿಡುವಾಗ ಅವರ ಮಾತು ರಮಣರತ್ತ ಹೊರಳಿತು. ತಾವು ರಮಣರ ಬಗೆಗೆ ಮಾಡಿರುವ ಸಂಗೀತ ಸಂಕಲನದ ಬಗೆಗೆ ಹೇಳುತ್ತಾ ರಮಣರ ಜೊತೆ ಯೇಸು ಮಾಡಿದ್ದೆನ್ನಲಾದ ಪವಾಡಗಳನ್ನು ಹೋಲಿಸಿದರು. ಇಳಯರಾಜ ಹೇಳಿದ್ದಿಷ್ಟೇ - "ಯೇಸು ಕ್ರಿಸ್ತ ಪುನರ್ಜನ್ಮ ಪಡೆದು ಸಾವಿನ ಬಳಿಕ ಮತ್ತೆ ಬಂದ ಎನ್ನುತ್ತಾರೆ. ನಾನು ಸಮಯವಿದ್ದಾಗ ಯು-ಟ್ಯೂಬಿನಲ್ಲಿ ಡಾಕ್ಯುಮೆಂಟರಿಗಳನ್ನು ನೋಡುತ್ತೇನೆ. ಪುನರ್ಜನ್ಮವನ್ನು ನಿರಾಕರಿಸುವಂತಹ ಅನೇಕ ಡಾಕ್ಯುಮೆಂಟರಿಗಳು ಅಲ್ಲಿವೆ. ಅವು ಪುನರ್ಜನ್ಮದ ವಿರುದ್ಧವಾಗಿ ಅನೇಕ ಪೂರಕ ವಾದ, ದಾಖಲೆ ಹಾಗೂ ಮಾಹಿತಿಗಳನ್ನು ಕೊಡುತ್ತವೆ. ಕಳೆದ ಎರಡು ಸಾವಿರ ವರ್ಷಗಳಿಂದ ಕ್ರೈಸ್ತ ಮತ ಉಳಿದು ಬೆಳೆದದ್ದೇ ಯೇಸು ಪುನರ್ಜನ್ಮ ತಳೆದು ಬರುತ್ತಾನೆ ಎನ್ನುವ ನಂಬಿಕೆಯ ಮೇಲೆಯೇ! ಆದರೆ ಆತನ ಪುನರ್ಜನ್ಮವನ್ನು ನಿರಾಕರಿಸುವಂತಹ ಪೂರಕ ದಾಖಲೆ ಸಹಿತ ಡಾಕ್ಯುಮೆಂಟರಿಗಳನೇಕ ಸಿಗುತ್ತವೆ. ಯೇಸುವಿಗೆ ಪುನರ್ಜನ್ಮ ಇತ್ತೋ ಇಲ್ಲವೋ, ಆದರೆ ನಿಜವಾದ ಪುನರ್ಜನ್ಮ ರಮಣ ಮಹರ್ಷಿಗಳಿಗೆ ಮಾತ್ರ ಆಗಿತ್ತು. ಅದೂ ಅವರ ಹದಿನಾರನೆಯ ವಯಸ್ಸಿನಲ್ಲಿ ಉಂಟಾದ ಸಾವಿನ ಬಗೆಗಿನ ಭಯ, ನಿಜವಾಗಿ ಸಾವೆಂದರೆ ಏನು ಎನ್ನುವುದನ್ನು ತಿಳಿದುಕೊಳ್ಳುವ, ಸಾವನ್ನು ಅನುಭವಕ್ಕೆ ತಂದುಕೊಳ್ಳುವ ನಿರ್ಧಾರಕ್ಕೆ ತಂದಿರಿಸಿತು. ಆತ ಮಲಗಿಕೊಂಡು, ಉಸಿರಾಟ ಹಾಗೂ ದೇಹದ ಎಲ್ಲಾ ಕ್ರಿಯೆಗಳನ್ನು ನಿಲ್ಲಿಸಿ ತಾನು ಸಾವಿನತ್ತ ಸಾಗುತ್ತಿರುವುದನ್ನು ಸ್ವತಃ ವೀಕ್ಷಿಸಿದರು. ಅದರ ಪ್ರತಿಯೊಂದು ಹಂತದಲ್ಲೂ ಆತ ಸಾಯುತ್ತಿರುವುದು ಯಾರು ಎನ್ನುವ ಪ್ರಶ್ನೆಯನ್ನು ಹಾಕುತ್ತಾ ಕೊನೆಗೆ ಉತ್ತರ ಕಂಡುಕೊಂಡರು. ಮತ್ತೆ ಯಥಾ ಸ್ಥಿತಿಗೆ ಮರಳಿದರು. ಇದು ರಮಣರಿಗಾದ ಪುನರ್ಜನ್ಮ!"

              ಈ ಹೇಳಿಕೆಯಿಂದ ಗರಂ ಆದ ಮಿಷನರಿಗಳು ಇಳಯರಾಜ ವಿರುದ್ಧ ಕಿಡಿಕಾರಲಾರಂಬಿಸಿದವು. ಕೆಲವು ಗುಂಪುಗಳು ಇಳಯರಾಜ ಮನೆಯೆದುರು ಪ್ರತಿಭಟನೆಯನ್ನೂ ಕೈಗೊಂಡವು. ಕೆಲವರು ಅವರ ಮೇಲೆ ದಾಳಿ ಮಾಡಲೂ ಅನುವಾದರು. ಅಂತಹವರನ್ನು ಪೊಲೀಸರು ಬಂಧಿಸಿದರು. ಪುಣ್ಯಕ್ಕೆ ಅಷ್ಟರಮಟ್ಟಿಗೆ ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಉಳಿದುಕೊಂಡಿದೆ! ಇಳಯರಾಜರಿಗೆ ನಗರ ಪೊಲೀಸ್ ಕಮೀಷನರ್ ಶಿಕ್ಷೆ ವಿಧಿಸಬೇಕೆಂದು ಸಹಿ ಸಂಗ್ರಹ ಅಭಿಯಾನವೂ ನಡೆಯಿತು. ಆದರೆ ಇಷ್ಟೆಲ್ಲಾ ನಡೆದರೂ ಸುಳ್ಳು ಸುಳ್ಳೇ ಹೇಳುವವರನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಮರ್ಥಿಸುತ್ತಿದ್ದ ವರ್ಗವೊಂದು ಇಳಯರಾಜರ ಬೆಂಬಲಕ್ಕೆ ನಿಲ್ಲದೆ ಮುಗುಮ್ಮಾಗಿ ಉಳಿಯಿತು! ಅಷ್ಟಕ್ಕೂ ಆ ವರ್ಗದ ಬೆಂಬಲ ಇಳಯರಾಜರಿಗೆ ಸಿಗುವ ಸಂಭವ ನೂರು ಪ್ರತಿಶತವೂ ಇಲ್ಲ. ಸನಾತನ ಧರ್ಮದ ಪ್ರತಿಯೊಂದನ್ನೂ ತುಚ್ಛವಾಗಿ ಕಾಣುವ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದಾಳುಗಳು ಸನಾತನ ಪರಂಪರೆಯನ್ನು ಗೌರವಿಸುವ, ಸತ್ಯವನ್ನು ಹೇಳುವಾತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ನಿರೀಕ್ಷೆಯನ್ನಾದರೂ ಇಟ್ಟುಕೊಳ್ಳಬಹುದೇ?

                ಭಾರತದಲ್ಲಿ ಅವ್ಯಾಹತವಾಗಿ ಕ್ರೈಸ್ತೀಕರಣಗೊಳ್ಳುತ್ತಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ ತಮಿಳುನಾಡು. ಅಲ್ಲಿ ಕ್ರೈಸ್ತರ ಸಂಖ್ಯೆಯ ಏರಿಕೆ ರಾಷ್ಟ್ರೀಯ ಜನಸಂಖ್ಯಾ ಏರಿಕೆಗಿಂತ ಜಾಸ್ತಿ! ಮಧುರೈ, ಕನ್ಯಾಕುಮಾರಿ, ರಾಮೇಶ್ವರಂನಂತಹ ತೀರ್ಥಕ್ಷೇತ್ರಗಳಲ್ಲೇ ಮತಾಂತರಕ್ಕೆ ಪೂರಕವಾದ ಗೋಡೆಬರಹಗಳು, ಫಲಕಗಳು ಸಾರ್ವಜನಿಕವಾಗಿಯೇ ಕಾಣಸಿಗುತ್ತವೆ. "ಯೇಸುವೊಬ್ಬನೇ ನಿಜವಾದ ದೇವರು" ಎನ್ನುವ ಫಲಕಗಳು ತಮಿಳುನಾಡಿನಾದ್ಯಂತ ರಾರಾಜಿಸುತ್ತಿವೆ. ಹಾಗಾದರೆ ಉಳಿದೆಲ್ಲಾ ದೇವರುಗಳು ಸುಳ್ಳು ಎಂದೇ? ಸಾರ್ವಜನಿಕವಾಗಿ ಅವರು ಹೇಳಿಕೊಳ್ಳುವ ನಿಜವಾದ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಹಕ್ಕು ಈ ನೆಲದ ಜನರಿಗೆ ಇದೆಯಲ್ಲವೇ? ಹೇಳಿ ಕೇಳಿ ಪ್ರತಿಯೊಂದನ್ನೂ ಓರೆಗೆ ಹಚ್ಚಿ, ಅರಿತು ಅದು ಸತ್ಯವೆಂದು ಕಂಡಾಗ ಅದನ್ನೊಪ್ಪಿ ನಡೆದ ದೇಶ ಇದು. ಹಾಗಾಗಿಯೇ ಇಲ್ಲಿ ಸತ್ಯದ ಭದ್ರ ತಳಪಾಯವಿದ್ದ ವಿಚಾರಗಳು ಮಾತ್ರ ನಿಂತವು. ದೇಶ ದೇಶಗಳನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡ ಹೊರಗಿನಿಂದ ಬಂದ ಸೆಮೆಟಿಕ್ ಮತಗಳು ಹಲವು ಶತಮಾನಗಳ ಕಾಲ ಬಗೆಬಗೆಯ ಉಪಾಯಗಳನ್ನು ಪ್ರಯೋಗಿಸಿದರೂ ಇಲ್ಲಿನವರನ್ನು ಸಂಪೂರ್ಣವಾಗಿ ಮತಾಂತರಿಸಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಇಲ್ಲಿನವರ ಪ್ರಶ್ನಿಸುವ ಗುಣ, ಮತಕ್ಕಿಂತಲೂ ಧರ್ಮಕ್ಕೆ ಪ್ರಾಶಸ್ತ್ಯ ಕೊಡುವ ಸನಾತನ ಪ್ರವೃತ್ತಿ. ಮಿಷನರಿಗಳು ಸುಮ್ಮನೆ ಹೇಳಿಕೊಂಡರೆ ನಮಗೇನು, ನಮ್ಮದ್ದನ್ನು ನಾವು ನೋಡಿಕೊಂಡರಾಯಿತು, ಇಳಯರಾಜರು ಸುಮ್ಮನೆ ಕೆದಕಿದರು ಅನ್ನುವವರಿರಬಹುದು. ಆದರೆ ಮಿಷನರಿಗಳು ಹೇಳುವಂತೆ ಕ್ರಿಸ್ತ ಪುನರ್ಜನ್ಮ ತಾಳಿದ್ದ ಎನ್ನುವುದು ಐತಿಹಾಸಿಕ ಸತ್ಯ ಎಂದಾದರೆ ಅದು ಐತಿಹಾಸಿಕ ಮಾನದಂಡಗಳುಳ್ಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಲ್ಲವೇ? ಇಳಯರಾಜ ಮಾಡಿದ್ದೂ ಅದನ್ನೇ! ಅವರ ಪ್ರಶ್ನೆಯೂ ಇತಿಹಾಸದ ಮಾನದಂಡಗಳನ್ನು ಅನುಸರಿಸಿಯೇ ಇತ್ತು. ಅವರ ನಿರ್ಣಯಾತ್ಮಕ ಉತ್ತರವೂ! ಯಾವ ಮತ ಪ್ರಶ್ನಿಸಿದಾಗ ಉತ್ತರ ಹೇಳಲು ಸೋಲುತ್ತದೋ ಅದು ಸತ್ಯ ಆಗುವುದಾದರೂ ಹೇಗೆ? ಅದರ ದೇವರು ಸತ್ಯದೇವನಾಗಿ ಉಳಿಯುವುದಾದರೂ ಹೇಗೆ? ಸ್ಥಾನ, ಧನ, ಪ್ರಾಣಗಳ ಲೋಭವೊಡ್ಡಿ ಒಂದು ಮತ ಎಷ್ಟು ಜನರನ್ನು ಮತಾಂತರಿಸಬಹುದು? ಎಷ್ಟು ವರ್ಷಗಳ ಕಾಲ?

                 ವಾಸ್ತವದಲ್ಲಿ ಯೇಸುವಿನ ಪುನರ್ಜನ್ಮದ ಕಲ್ಪನೆ ಹುಟ್ಟಿದ್ದು ಸುಮೇರಿಯನ್ನರ ಪುರಾಣ ಕಥೆಯನ್ನಾಧರಿಸಿ. ಸುಮೇರಿಯನ್ ಮತದಲ್ಲಿ ಅವರ ದೇವತೆ ಸತ್ತು ಮೂರು ರಾತ್ರಿ ಹಾಗೂ ಮೂರು ಹಗಲುಗಳ ಬಳಿಕ ಹುಟ್ಟಿ ಬರುವ ಕಥೆಯಿದೆ. ಅದನ್ನೇ ಆ ಬಳಿಕ ಬಂದ ಕ್ರೈಸ್ತ ಮತ ತನ್ನದಾಗಿಸಿಕೊಂಡಿತು. ನಿಜವಾಗಿಯೂ ಏಸು ಎಂಬ ವ್ಯಕ್ತಿ ಇದ್ದನೇ ಎನ್ನುವ ಸಂಶಯ ಹಲವು ಸಂಶೋಧಕರಲ್ಲಿದೆ. ಇದ್ದಿದ್ದರೂ ಹೊಸ ಒಡಂಬಡಿಕೆಯಲ್ಲಿ ಚಿತ್ರಿಸಿರುವ ರೀತಿಯಲ್ಲೇ ಇದ್ದನೇ ಎನ್ನುವ ಇನ್ನೊಂದು ಅನುಮಾನವೂ ಇದೆ. "ಡೆಡ್ ಸೀ ಸ್ಕ್ರಾಲ್ಸ್" ಸಂಶೋಧನೆಯ ಬಳಿಕ ಈ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಕ್ರೈಸ್ತ ಮತಕ್ಕೆ ಈಗಿರುವ ಸ್ವರೂಪ ಸಿಕ್ಕಿದ್ದು ಮೊದಲ ಚರ್ಚಿನ ಸ್ಥಾಪಕನಾದ ಪಾಲ್'ನಿಂದ. ಇಂದು ಅನೇಕ ಇತಿಹಾಸಕಾರರು, ವಿಚಾರವಾದಿಗಳು ಗೋಸ್ಪೆಲ್ಸ್ ನಲ್ಲಿ ವರ್ಣಿಸಿದ್ದೆಲ್ಲಾ ಕಟ್ಟುಕತೆಯಲ್ಲದೆ ಇನ್ನೇನೂ ಅಲ್ಲ ಎಂದು ಸಾಕ್ಷ್ಯ ಸಮೇತ ರುಜುವಾತುಪಡಿಸಿದ್ದಾರೆ. ಅದರಲ್ಲೂ "ಜೇಸಸ್ ಸೆಮಿನಾರ್" ಎನ್ನುವ ಕ್ರೈಸ್ತ ಮತದ ಆರಂಭದ ದಿನಗಳ ಬಗ್ಗೆ ಅಧ್ಯಯನದ ಸಲುವಾಗಿ ಹುಟ್ಟಿಕೊಂಡ ಕ್ರೈಸ್ತ ಇತಿಹಾಸಕಾರ ಹಾಗೂ ವಿಚಾರವಾದಿಗಳ ಸಂಸ್ಥೆ "ಫೈವ್ ಗಾಸ್ಪೆಲ್ಸ್"ನಲ್ಲಿ ಐತಿಹಾಸಿಕವಾದ ಯೇಸು ಗೋಸ್ಪೆಲ್ಸ್'ನಲ್ಲಿರುವ ಯಾವುದನ್ನೂ ಹೇಳಲಿಲ್ಲ. ಅದರಲ್ಲೂ "ಲಾರ್ಡ್ಸ್ ಪ್ರೇಯರ್"ನಲ್ಲಿ ಅವನು ಹೇಳಿರಬಹುದಾದ ಸಾಧ್ಯತೆ ಇರುವ ಪದ "ಅವರ್ ಲಾರ್ಡ್" ಮಾತ್ರ ಎನ್ನುವ ಐತಿಹಾಸಿಕ ಸತ್ಯವನ್ನು ಸಂಶೋಧಿಸಿದೆ! ಹೀಗೆ ಸುಳ್ಳಿನ ತಳಪಾಯದ ಮೇಲೆ ಸೌಧ ಕಟ್ಟುತ್ತಿರುವ ಮಿಷನರಿಗಳು ಸಾಧಿಸುವುದಾದರೂ ಏನನ್ನು? ವಿಗ್ರಹ ಪೂಜೆ, ವೇದ, ಯಾಗಗಳಂಥ ಧಾರ್ಮಿಕ ಆಚರಣೆಗಳಿಂದ ಹಿಡಿದು ಹೂ ಮುಡಿಯುವುದು, ಬಳೆ ತೊಡುವುದು, ತಿಲಕ ಧರಿಸುವಂತಹ ರೀತಿ-ರಿವಾಜು-ಸಂಪ್ರದಾಯಗಳೆಲ್ಲವೂ ಮೌಡ್ಯವೆನ್ನುವ ಮಿಷನರಿಗಳು ತಮ್ಮ ಹುಟ್ಟಿನಲ್ಲೇ ಮೌಢ್ಯವೊಂದು, ಸುಳ್ಳೊಂದು ಅಡಗಿರುವುದನ್ನು ಎಷ್ಟು ನಾಜೂಕಾಗಿ ಮರೆಯಾಗಿರಿಸುತ್ತಾರೆ! ಹೀಗೆ ಸ್ವಂತ ದೇವರಿಲ್ಲದ, ಸ್ವಂತದ್ದಾದ ಮತ ಗ್ರಂಥ-ವಿಚಾರಗಳಿಲ್ಲದ ಮತವೊಂದು ಆಮಿಷಗಳನ್ನೊಡ್ಡದೇ ಬದುಕುವುದಾದರೂ ಹೇಗೆ? ಯೇಸು ದೇವರ ಮಗ, ಜಗತ್ತಿನ ಜನರ ಪಾಪಗಳನ್ನು ಕಳೆಯುವುದಕ್ಕಾಗಿ ಸತ್ತು ಮತ್ತೆ ಜನ್ಮವೆತ್ತಿದ ಎನ್ನುವಂತಹ ತಥಾಕಥಿತ ಹೇಳಿಕೆಯನ್ನಿಟ್ಟುಕೊಂಡು ಜಗತ್ತನ್ನೇ ಆಳಲು ಶುರುವಿಟ್ಟುಕೊಂಡರು. ದೇಶ ದೇಶಗಳನ್ನೇ ಲೂಟಿ ಹೊಡೆದು ತಮ್ಮ ಖಜಾನೆ ತುಂಬಿಸಿಕೊಂಡರು. ವಸಾಹತುಗಳನ್ನೇ ನಿರ್ಮಿಸಿದರು, ಜಗದ ಇನ್ನುಳಿದ ನಂಬಿಕೆಯ ಜನರನ್ನು ಮತಾಂತರಿಸಿ ಗುಲಾಮರನ್ನಾಗಿಸಿದರು. ಹಲವು ದೇಶಗಳ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಿ ರಾಜಕೀಯವಾಗಿ ಬಲಿಷ್ಟಗೊಂಡರು. ಮತಾಂತರಿತರಿಂದ ಹಣ ಲೂಟಿ ಹೊಡೆದು ತಮ್ಮ ಭಂಡಾರ ಹೆಚ್ಚಿಸಿಕೊಂಡರು. ಅದರ ಒಂದಷ್ಟು ಪಾಲನ್ನು ಮತ್ತೆ ಮತಾಂತರಕ್ಕೆ ಬಳಸಿಕೊಂಡರು. ಮೂವತ್ತಮೂರು ಕೋಟಿ ದೇವತೆಗಳನ್ನು ಒಪ್ಪಿಕೊಂಡ ನಮಗೆ ಯೇಸುವೊಬ್ಬ ಹೆಚ್ಚಾಗುತ್ತಾನೆಯೇ ಎಂದು ಭಾಷಣ ಕುಟ್ಟುವವರೆಲ್ಲಾ ತಮ್ಮ ಚಿಂತನೆಯನ್ನು ಬದಲಿಸಿಕೊಳ್ಳಬೇಕಾದ ವಿಚಾರವಿದು. ಇಳಯರಾಜರು ತಮಗರಿವಿಲ್ಲದಂತೆಯೇ ಸತ್ಯವೊಂದನ್ನು ಹೇಳಿ ಸಮಾಜವನ್ನು ಚಿಂತನೆಗೆ ಹಚ್ಚಿದರು. ಈ ವಿಚಾರ ಮಾಧ್ಯಮಗಳಲ್ಲಿ ಚರ್ಚಿತವಾಗದೇ ಇರಬಹುದು, ಆದರೆ ಸಮಾಜದ ಕೆಲವೊಂದು ಭಾಗಕ್ಕಾದರೂ ತಲುಪಬಹುದು.

                "ನೀವು ಪಾಪಿಗಳು. ದೇವರು ಮುಲಾಜಿಲ್ಲದೆ ನಿಮ್ಮನ್ನು ಶಿಕ್ಷಿಸುತ್ತಾನೆ. ಪ್ರವಾದಿಯಾದ ನನ್ನ ಬೋಧನೆಯಂತೆ ನಡೆದರೆ ಮಾತ್ರ ನಿಮಗೆ ಸ್ವರ್ಗ ಸಿಗುವುದು. ಇದನ್ನು ನೀನು ನಂಬಬೇಕು; ಬಲಪ್ರಯೋಗ ಮಾಡಿಯಾದರೂ ಇತರರನ್ನು ನಂಬಿಸಬೇಕು" ಇದು ಸೆಮೆಟಿಕ್ ಮತಗಳ ಮುಖ್ಯ ಬೋಧನೆ. ಬೈಬಲನ್ನು ನಂಬದಿದ್ದರೆ ನರಕವೇ ಗತಿ ಎನ್ನುವುದು ಕ್ರೈಸ್ತ ಮತದಲ್ಲಿರುವ ಮುಖ್ಯ ವಿಚಾರ. ಯೇಸುವನ್ನು ಶಿಲುಬೆಗೇರಿಸಿದವರು ಯೆಹೂದಿಗಳು ಎನ್ನುವ ತಪ್ಪು ಗ್ರಹಿಕೆಯಿಂದ ಅದೆಷ್ಟು ಯೆಹೂದ್ಯರನ್ನು ಕ್ರೈಸ್ತರು ಕೊಲ್ಲಲಿಲ್ಲ, ಮತಾಂತರಗೊಳಿಸಲಿಲ್ಲ. ಕ್ರೈಸ್ತನಾಗಿದ್ದ ಹಿಟ್ಲರ್ ಅರವತ್ತು ಲಕ್ಷ ಯೆಹೂದ್ಯರನ್ನು ಗ್ಯಾಸ್ ಚೇಂಬರಿಗೆ ತಳ್ಳಿ ಕೊಲ್ಲುವ ವಿಚಾರ ತಿಳಿದಿದ್ದೂ ಆಗಿನ ಪೋಪ್ ಮುಗುಮ್ಮಾಗಿ ಉಳಿದದ್ದು ಇತಿಹಾಸ ಮರೆತಿಲ್ಲ. ಗೋವಾದ ಸಮಾಜ, ಜನಜೀವನ ಹಾಗೂ  ಭವಿಷ್ಯವನ್ನೇ ಬದಲಿಸಿದ ಗೋವಾ ಇನ್ಕ್ವಿಷನ್, ಆಶ್ರಯ ಕೊಟ್ಟವರಿಗೇ ಬೆನ್ನಿಗೆ ಚೂರಿ ಹಾಕಿದ ಸಿರಿಯನ್ ಕ್ರೈಸ್ತರ ವಿಶ್ವಾಸದ್ರೋಹ, ಆಫ್ರಿಕಾದ ರೂಪುರೇಶೆಯನ್ನೇ ಬದಲಿಸಿದ ಮತಾಂತರ ಇವೆಲ್ಲಕ್ಕೂ ಕಾರಣ ಅದೇ - ಕ್ರೈಸ್ತ ಇತಿಹಾಸದ ಮೊದಲ ಹಸಿ ಸುಳ್ಳು!

                 ಟಿವಿ ಚಾನಲ್ಲುಗಳಲ್ಲಿ "ಈ ಸಂಖ್ಯೆಗೆ ಕರೆ ಮಾಡಿ. ನಿಮ್ಮ ಪರವಾಗಿ ಯೇಸುವಿನಲ್ಲಿ ಪ್ರಾರ್ಥಿಸಿ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೇವೆಂಬ" ಎನ್ನುವಂತಹಾ ಮತಾಂತರದ ಗಿಮಿಕ್ಕುಗಳೂ ಅದೆಷ್ಟಿವೆ. 2014ರ ಕೊನೆಯ ಭಾಗದಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್ ನಗರಗಳಲ್ಲಿ "ಬದುಕು ಬದಲಾಯಿಸುವ ಪುಸ್ತಕ ಓದಲು ಈ ಸಂಖ್ಯೆಗೆ ಕರೆ ಮಾಡಿ" ಎಂದು ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಿ ಕತ್ತಲ ಕೂಪಕ್ಕೆ ದೂಡಿದ ಕೃತ್ಯವೇನು ಕಡಮೆಯದೇ? ಹಿಡಿಯಷ್ಟಿದ್ದ ಈ ಮತೀಯರಿಂದ ಹಿಂದೂ ಸಮಾಜ ಸದಾ ದೌರ್ಜನ್ಯಕ್ಕೆ ಗುರಿಯಾಗುತ್ತಲೇ ಬಂದಿದೆ. ವೇಗವಾಗಿ ವರ್ಧಿಸುತ್ತಿರುವ ಅವರ ಸಂಖ್ಯೆಯಿಂದಾಗಿ ಕೆಲ ದಶಕಗಳಲ್ಲಿ ಹಿಂದೂಗಳು ಸರ್ವನಾಶವಾಗುವ ಭೀಕರ ಪರಿಸ್ಥಿತಿ ತಲೆದೋರುತ್ತಿದೆ. ಇಲ್ಲಿನ ಸೆಕ್ಯುಲರ್ ಪಕ್ಷಗಳು ಮುಲ್ಲಾ ಹಾಗೂ ಮಿಷನರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಸವಲತ್ತುಗಳನ್ನು ನೀಡಲು ದೇಶದ ಸಂವಿಧಾನದಲ್ಲಿ ಒಪ್ಪಿಕೊಂಡಿವೆ. ಈ ಮತಗಳವರಿಗೆ ಸಾಧ್ಯವಾದಷ್ಟು ಪಂಥಗಳನ್ನು ಸೃಷ್ಟಿಸಿಕೊಳ್ಳಲು ಹಾಗೂ ವಿಸ್ತರಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದರಿಂದ ಅವರಿಗೆ ತಮ್ಮ ಕಬಂಧ ಬಾಹುಗಳನ್ನು ಚಾಚಲು ಅವಕಾಶ ಮಾಡಿಕೊಟ್ಟಂತಾಗಿದೆ. ವಿದೇಶಗಳಿಂದ ಬರುವ ಅಪಾರ ಪ್ರಮಾಣದ ನೆರವಿನ ಜೊತೆ ಸರಕಾರಗಳಿಂದ ಸಿಗುವ ಬಗೆಬಗೆಯ ಸವಲತ್ತುಗಳು ತಮ್ಮ ಸಂಖ್ಯಾಬಲ ವಿಸ್ತರಣೆಗೆ ಈ ಮತಗಳಿಗೆ ನೆರವಾಗಿವೆ. ರಾಜಕೀಯವಾಗಿ ನೆಲೆಗೊಳ್ಳಲು ಪಕ್ಷಗಳನ್ನು ಸ್ಥಾಪಿಸಿಕೊಂಡ ಈ ಮತಗಳು ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಅಥವಾ ತಮಗೆ ಸಹಕರಿಸುವ ರಾಷ್ಟ್ರೀಯ ಪಕ್ಷದೊಡನೆ ಸೇರಿ ಕೆಲಸ ಮಾಡುತ್ತವೆ. ಇದರ ಹಿಂದೆ ಅಧಿಕಾರ ಪಡೆಯುವುದು, ತನ್ಮೂಲಕ ತಮ್ಮ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವುದು, ತಮ್ಮ ಆಟಾಟೋಪಕ್ಕೆ ರಾಜಕೀಯ ರಕ್ಷಣೆಯನ್ನು ಪಡೆಯುವ ಸ್ಪಷ್ಟ ಉದ್ದೇಶವಿರುತ್ತದೆ. ಯಾವ ಉದ್ದೇಶ ಶತಶತಮಾನಗಳ ಪರ್ಯಂತ ಸಾಧ್ಯವಾಗಲಿಲ್ಲವೋ ಅವೆಲ್ಲವೂ ಅರೆಬೆಂದ ರಾಜಕಾರಣಿಗಳ ಅಧಿಕಾರದ ಹಪಹಪಿಯ ಕಾರಣ ಕೆಲವೇ ದಶಕಗಳಲ್ಲಿ ಸಾಧ್ಯವಾಗುವ ಲಕ್ಷಣಗಳು ಗೋಚರಿಸುತ್ತವೆ.

                  ಹಿಂದೂ ಧರ್ಮ ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಸೆಮೆಟಿಕ್ ಮತಗಳೆಲ್ಲಾ ತಾವು ಹೇಳಿದ್ದೇ ಸತ್ಯ ಎಂದರೆ ಭಾರತದಲ್ಲಿ ಹುಟ್ಟಿದ ಮತಗಳೆಲ್ಲಾ ತರ್ಕವನ್ನು ಒಪ್ಪಿಕೊಂಡವು. ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂದಿತು ವೇದ. ಪ್ರವಾದಿಗಳೆಲ್ಲಾ ತಮ್ಮ ಬಗೆಗೇ ಕೊಚ್ಚಿಕೊಂಡರೆ ಋಷಿಗಳೆಲ್ಲಾ ವಿಶ್ವಾತ್ಮಕ ಸತ್ಯದ ಬಗ್ಗೆ ಮಾತ್ರ ಹೇಳಿದರು. ಪ್ರವಾದಿಗಳೆಲ್ಲಾ ತಮಗೆ ಮಾತ್ರ ಸೃಷ್ಟಿಕರ್ತನ ಜೊತೆ ವಿಶೇಷ ಸಂಬಂಧವಿದೆಯೆಂದು ಹೇಳಿಕೊಂಡರೆ ಋಷಿಗಳಾದರೋ ಪ್ರಪಂಚದ ಪ್ರತಿಯೊಂದು ಜೀವಿಯೂ ಸಾಧನೆ ಮಾಡಿ ಆತ್ಮೋನ್ನತಿಯನ್ನು ಹೊಂದಬಹುದು ಎಂದರು. ಇಲ್ಲಿ ಅವಧೂತ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ಮಾತು ಉಲ್ಲೇಖಾರ್ಹ - "ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ. ಅದೇ ರೀತಿ ಈ ಅವಕಾಶವನ್ನು ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ನಿರಾಕರಿಸಬೇಕಾಗುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ?  ಇಲ್ಲವಾದಲ್ಲಿ ಮುಕ್ತಿಸಾಧನವನ್ನು ರೂಪಿಸುವಲ್ಲಿ ಅವನು ಎಚ್ಚರವಹಿಸಿದನೇ? ಹಾಗೆ ಎಚ್ಚರವಹಿಸಿದ್ದಲ್ಲಿ ಆತನ ಮುಕ್ತಿಸಾಧನವು ಮುಂದೆ ಜನಿಸುವ ಕ್ರಿಸ್ತನಲ್ಲಿನ ನಂಬಿಕೆಯು ಅದಕ್ಕೆ ಕಡ್ಡಾಯ ಎಂಬ ನಿಯಮವನ್ನು ಒಳಗೊಂಡಿರಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಆದ್ದರಿಂದ ಭಗವಂತನು ಜಗತ್ತಿನ ಮೊಟ್ಟಮೊದಲ ವ್ಯಕ್ತಿಯನ್ನು ಸೃಷ್ಟಿಸಿದಾಗಲೇ, ಅಂತಹ ಸೃಷ್ಟಿಯ ಆದಿಕಾಲವೊಂದಿತ್ತು ಎಂದು ನಂಬುವುದಾದಲ್ಲಿ, ಭಗವಂತನು ಆ ಮೊಟ್ಟಮೊದಲ ವ್ಯಕ್ತಿಗೂ ಮುಕ್ತಿಯ ಅವಕಾಶವನ್ನು ಕಲ್ಪಿಸಿರಲೇಬೇಕು. ಇದೇ ವೈಚಾರಿಕ ಉಪಕಲ್ಪನೆ. ಏಕೆಂದರೆ ಆ ಮೊಟ್ಟಮೊದಲ ಮಾನವನಿಗೂ ಮುಕ್ತಿಯ ಅಗತ್ಯವಿರುತ್ತದೆ. ಆದ್ದರಿಂದಲೇ ನಾವು ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ “ವ್ಯಕ್ತಗೊಂಡವು” ಅಥವಾ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ."

                 ಇಳಯರಾಜರು ಎತ್ತಿದ ಪ್ರಶ್ನೆ ಸಂಕ್ಷಿಪ್ತ ರೂಪದಲ್ಲಿರಬಹುದು. ಆದರೆ ಅವರು ಎತ್ತಿದ ಪ್ರಶ್ನೆ ಕ್ರೈಸ್ತ ಮೂಲವನ್ನೇ ಮತ್ತೊಮ್ಮೆ ನಡುಗುವಂತೆ ಮಾಡಿದ್ದು ಸತ್ಯ. ಇತಿಹಾಸದ ಒಂದು ಸುಳ್ಳು ಹೇಗೆ ಜಗತ್ತನ್ನು ಗುಲಾಮಗಿರಿಗೆ ತಳ್ಳುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಇಳಯರಾಜರು ಎತ್ತಿದ ಪ್ರಶ್ನೆಯಲ್ಲಿದೆ. ಗುಲಾಮಗಿರಿ ದೈಹಿಕವೇ ಆಗಬೇಕೆಂದಿಲ್ಲ, ಮಾನಸಿಕ ರೂಪದಲ್ಲೂ ಇರಬಹುದು. ಆದರೆ ಇಂದಂತೂ ಅದು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಲಿನಂತೆ ಹೊಕ್ಕಿಬಿಟ್ಟಿದೆ. ಯೇಸುವಿನ ಪುನರ್ಜನ್ಮದ ಕಥೆಯನ್ನು ಕ್ರೈಸ್ತ ಮತ ತನ್ನ ಸಂಖ್ಯಾವೃದ್ಧಿಗೆ, ಪ್ರತಿಷ್ಠೆಗೆ ಬಳಸಿಕೊಂಡಂತೆ ರಮಣರು ತಮ್ಮ ಪುನರ್ಜನ್ಮದ ನೈಜ ಘಟನೆಯನ್ನು ತನ್ನ ಪ್ರಸಿದ್ಧಿಗೆ ಬಳಸಲಿಲ್ಲ. ಅವರದನ್ನು ಆತ್ಮಸಾಧನೆಯ ಮಾರ್ಗಕ್ಕಾಗಿ ಬಳಸಿಕೊಂಡರು. ಬ್ರಹ್ಮವೊಂದೇ ಸತ್ಯ ಎನ್ನುವುದನ್ನು ಕಂಡುಕೊಂಡರು. ತಮ್ಮಂತೆಯೇ ಹುಡುಕಾಟದ ಆಸಕ್ತಿಯಿಂದ ಹತ್ತಿರ ಬಂದವರಿಗೆ ದಾರಿದೀಪವಾದರು. ಜಗದ ಮೂಲೆ ಮೂಲೆಯ ಜನರನ್ನು ಮೌನವಾಗಿ ಪ್ರೇರೇಪಿಸಿದರು. ಬಳಲಿ ಬಂದವರಿಗೆ ಆಸರೆಯಾದರು. ಮನುಷ್ಯ-ಮನುಷ್ಯೇತರ, ಹಿಂದೂ-ಹಿಂದೂವೇತರ, ಜೀವಿ-ನಿರ್ಜೀವಿ ಎಂಬ ಭೇದಗಳಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡು ಮೌನವಾಗಿಯೇ ಪ್ರಭಾವಿಸಿದರು. ಆತ ತಾನು ಭಗವಂತನೆಂದು ಸ್ವಯಂಘೋಷ ಮಾಡಲಿಲ್ಲ. ಅನೇಕ ಪವಾಡಗಳು ಅವರಿಂದ ಜರಗಿದವು. ಅವನ್ನೇನು ತನ್ನದೆಂದು ಅವರು ಹೇಳಲಿಲ್ಲ. ಆತ ಶಿಷ್ಯರೆಂದು ಯಾರನ್ನೂ ಬಹಿರಂಗವಾಗಿ ಘೋಷಿಸಲಿಲ್ಲ. ಆದರೆ ಬಳಿ ಬಂದವರೆಲ್ಲರಿಗೂ ಜ್ಞಾನವನ್ನು ಮೌನವಾಗಿ ಪಸರಿಸಿದರು. ವಿವಿಧ ಮತ-ಪಂಥಗಳ ಜನರು ಬಂದರೂ ಅವರಿಗೆ ಜ್ಞಾನದ ಸವಿಯನ್ನುಣಬಡಿಸಿದರು. ಅವರ್ಯಾರನ್ನೂ ಮತಾಂತರಿಸಲಿಲ್ಲ, ಯಾವುದೇ ಮಿಷನರಿ ಕಟ್ಟಲಿಲ್ಲ, ಯಾರಿಂದಲೂ ದೇಣಿಗೆ ಸ್ವೀಕರಿಸಲಿಲ್ಲ, ತನ್ನ ವಿಚಾರವನ್ನು ಯಾರ ಮೇಲೂ ಹೇರಲಿಲ್ಲ. ಜ್ಞಾನಾಕಾಂಕ್ಷಿಗಳಾಗಿ ಬಂದವರಿಗೆ ನೀನು ಯಾರು ಎನ್ನುವುದನ್ನು ನಿನ್ನಲ್ಲೇ ಕೇಳಿಕೋ, ಅರಿತುಕೋ ಎನ್ನುತ್ತಿದ್ದರು.  ಅವರ ಬಳಿ ಹೋದವರೂ ತಮ್ಮ ಮತವನ್ನೇನು ಬದಲಾಯಿಸಲಿಲ್ಲ. ಆ ರೀತಿ ಮತಾಂತರ ಮಾಡುತ್ತಿದ್ದರೆ ಇಂದು ಜಗತ್ತಿನಲ್ಲಿ ಹಿಂದೂಗಳೇ ತುಂಬಿಕೊಂಡಿರುತ್ತಿದ್ದರೇನೋ! ಪಶುಪಕ್ಷಿಗಳಿಗೂ ಆತ್ಮಭೋಧೆ ಉಂಟುಮಾಡಿದರು. ಅವುಗಳಿಗೂ ಆತ್ಮವಿದೆ ಎಂದ ಪ್ರಾಚೀನ ಭಾರತದ ಋಷಿವರ್ಯರ ಜೀವನವನ್ನು ಸ್ವತಃ ಬದುಕಿ ಜಗತ್ತಿಗೆ ನೆನಪು ಮಾಡಿಸಿದರು. ಮೌನವಾಗಿಯೇ ಜಗವನ್ನಾಳಿದರು. ಬಳಿ ಬಂದವರ ಅಹಂ ಅನ್ನು ಮೌನವಾಗಿಯೇ ಮುರಿದರು. ಮೌನವಾಗಿ ಹಲವರ ಅಹಂ ಮುರಿದು, ಕರುಣೆದೋರಿ, ಜ್ಞಾನ ನೀಡಿ ಮೌನದಿಂದಲೇ ಜಗತ್ತನ್ನು ಗೆದ್ದು ಬೆಳಗಿದ ಅರುಣಾಚಲದ ಆತ್ಮ ಜ್ಯೋತಿ ಅದು. ದಕ್ಷಿಣಾಮೂರ್ತಿಯ ಅಪರಾವತಾರ. ಇದೇ ಸನಾತನ ಧರ್ಮಕ್ಕೂ ಸೆಮೆಟಿಕ್ ಮತವೊಂದಕ್ಕೂ ಇರುವ ವ್ಯತ್ಯಾಸ! ಸನಾತನ ಧರ್ಮಕ್ಕೆ ರಮಣ ಎನ್ನುವ ಪದಕ್ಕಿಂತ ಸಮಾನ ಪದ ಬೇರಾವುದಿದ್ದೀತು?