ಪುಟಗಳು

ಮಂಗಳವಾರ, ಜನವರಿ 24, 2017

ಮತಾಂತರಿಗಳಿಗೆ ಚಾದರ ಅರ್ಪಿಸುವ ಹಿಂದೂವಿನ ಭೋಳೇತನ

ಮತಾಂತರಿಗಳಿಗೆ ಚಾದರ ಅರ್ಪಿಸುವ ಹಿಂದೂವಿನ ಭೋಳೇತನ

                     ಸೂಫಿಗಳ ಬಗೆಗೆ ಭಾರತೀಯ ಸಮಾಜದಲ್ಲಿ ವಿಶೇಷ ಭಕ್ತಿ ಭಾವನೆಗಳಿವೆ. ಜಾತ್ಯಾತೀತ ಬುದ್ಧಿಜೀವಿಗಳಿಗೆ ಈ ಸೂಫಿಗಳಂತೂ ಕ್ರೌರ್ಯವೇ ಮೈವೆತ್ತ ಮುಸ್ಲಿಮ್ ಸಮಾಜದ ಸಮರ್ಥನೆಗೆ ದೊರಕುವ ಬೀಜರೂಪಗಳು. ಮುಸ್ಲಿಮರು ಭಯೋತ್ಪಾದಕರ ಸಮರ್ಥನೆಗೆ ಗುಂಪುಗುಂಪಾಗಿ ನಿಂತಾಗ, ಬೀದಿ ಬೀದಿಗಳಲ್ಲಿ ಪುಂಡಾಟ ನಡೆಸುತ್ತಾ ಹಿಂದೂಗಳ ಕಗ್ಗೊಲೆ ನಡೆಸಿದಾಗ ಸೆಕ್ಯುಲರುಗಳು ಆ ಕೃತ್ಯಗಳನ್ನು ಮರೆಮಾಚಲು ಸೂಫಿಗಳನ್ನು ಮುಂದೆ ತಂದು ನಿಲ್ಲಿಸುತ್ತಾರೆ. ಸೂಫಿಗಳನ್ನು ದೇವರಂತೆ ಕಂಡು ಪೂಜಿಸುವ, ಭಜಿಸುವ,  ಅವರನ್ನೇ ಗುರುಗಳಂತೆ ಗೌರವಿಸುವ ಹಲವಾರು ಹಿಂದೂ ಪರಿವಾರಗಳು ಭಾರತದಲ್ಲಿವೆ. ಮುಸ್ಲಿಮ್ ಸಮಾಜವನ್ನು ಸಹಜವಾಗಿ ಸಂಶಯದ ಕಣ್ಣುಗಳಿಂದ ನೋಡುವವರಿಗೂ ಸೂಫಿಗಳೆಂದರೆ ಆದರ ಭಾವನೆಗಳಿವೆ. ಆದರೆ ನಿಜವಾಗಿಯೂ ಸೂಫಿಗಳು ಅಂತಹ ಗೌರವಕ್ಕೆ ಪಾತ್ರರಾಗಬೇಕಾದವರೇ ಎಂದರೆ "ಇಲ್ಲ" ಎನ್ನುವ ಉತ್ತರವನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅದರಲ್ಲೂ ಭಾರತದ ಸೂಫಿಗಳಂತೂ ಭಾರತವನ್ನು ಸೂರೆಗೈಯಲು, ಸರ್ವನಾಶಗೈಯಲು ಮುಸ್ಲಿಮ್ ಮತಾಂಧ ಅರಸರಿಗೆ ಪ್ರೇರಕ ಶಕ್ತಿಯಾಗಿದ್ದರೆಂದೇ ಇತಿಹಾಸ ಬೊಟ್ಟು ಮಾಡಿ ಹೇಳುತ್ತದೆ. ಆದರೆ ಇತಿಹಾಸಕಾರರು ಇಲ್ಲೂ ತಮ್ಮ ಎಂದಿನ ದ್ರೋಹ ಕಾರ್ಯವನ್ನೆಸಗಿ ಪರದೆಯೊಂದನ್ನು ಎಳೆದುಬಿಟ್ಟಿದ್ದಾರೆ. ಇತಿಹಾಸವನ್ನು ಆವರಿಸಿರುವ ಈ ಸುಳ್ಳು ಪರದೆಯನ್ನು ಸರಿಸಿ ನೋಡಿದರೆ ಹಿಂದೂಗಳ ಭೋಳೆ ಸ್ವಭಾವವನ್ನು ಕ್ರೈಸ್ತರಂತೆ ಅನಾಯಾಸವಾಗಿ ಬಳಸಿಕೊಂಡು ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಿಸಿದ ಸೂಫಿಗಳ ಘಾತಕ ಕಾರ್ಯ ಸ್ಪಷ್ಟವಾಗಿ ಕಾಣುತ್ತದೆ.

               ಸೂಫಿಗಳಲ್ಲಿ ಚಿಸ್ತಿಯಾ, ನಶ್ಕ್ ಬಂದಿಯಾ, ಸುಹಾರ್ ವಾರ್ಡಿ ಮತ್ತು ಖ್ವಾದ್ರಿಯ ಮುಂತಾದ ಹಲವು ಗುಂಪುಗಳಿವೆ. ಆದರೆ ಭಾರತದಲ್ಲಿ ಬಲವಾಗಿ ಬೇರುಬಿಟ್ಟವರು ಚಿಸ್ತಿಯಾ ಗುಂಪಿನ ಸೂಫಿಗಳು. ಇರಾನ್, ಇರಾಕಿನಲ್ಲಿದ್ದ ಸೂಫಿಗಳು ಹಿಂಸೆಯನ್ನು ಪ್ರಚೋದಿಸದ ನೈಜ ಶಾಂತಿದೂತರು ಎನ್ನುತ್ತಾರಾದರೂ ಭಾರತಕ್ಕೆ ಎಲ್ಲೆಡೆಯಿಂದ ಬಂದ ಸೂಫಿಗಳು ಜಿಹಾದ್ ಎಂದು ಬೊಬ್ಬಿರಿಯುತ್ತಲೇ ಬಂದರು. ಭಾರತದ ಭಕ್ತಿ ಪರಂಪರೆಯನ್ನು ತಮ್ಮ ಮತಾಂತರ  ಕಾರ್ಯಕ್ಕೆ ಉಪಯೋಗವಾಗುವಂತೆ ಅಳವಡಿಸಿಕೊಂಡು ದೇವರು ಎಂದರೆ ಕಣ್ಣು ಮುಚ್ಚಿ ನಂಬುವ ಹಿಂದೂಗಳ ಸ್ವಭಾವವನ್ನು ಎಗ್ಗಿಲ್ಲದೆ ಬಳಸಿಕೊಂಡು ಹಿಂದೂ ಸಮಾಜದ ಸರ್ವನಾಶಕ್ಕೆ ಈ ಸೂಫಿಗಳು ಕಾರಣರಾದರು. ಅದರಲ್ಲೂ ಕಾಶ್ಮೀರ, ದೆಹಲಿ, ಗುಜರಾತ್, ಬಿಜಾಪುರಗಳು ಈ ಸೂಫಿಗಳ ಮತಾಂಧತೆಗೆ ಗಬ್ಬೆದ್ದು ಹೋದವು. ಎಂಟನೆಯ ಶತಮಾನದಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಬಂದ ಹಲವು ಸೂಫಿಗಳು ಕ್ರೈಸ್ತ ಮಿಷನರಿಗಳಂತೆ ಮತಪ್ರಚಾರ ಮಾಡಿ, ಪ್ರಾರ್ಥನಾ ಮಂದಿರ ಕಟ್ಟಿ, ಸ್ಥಳೀಯ ಜನರನ್ನು ಮತಾಂತರಗೊಳಿಸಿದರು. ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದ. ಹೀಗೆ ದೇಶದೆಲ್ಲೆಡೆ ಸೂಫಿಗಳ ಘಾತಕ ಕಾರ್ಯ ಕಾಣಸಿಗುತ್ತದೆ. ಪ್ರಸ್ತುತ ಲೇಖನದಲ್ಲಿ ಮದ್ದು ಕೊಂಡು ಹೋಗಲು ಬಂದು ರಣ ಹದ್ದಿನಂತೆ ಹಿಂದೂಗಳ ಮೇಲೆರಗಿದ ಸೂಫಿಯೊಬ್ಬನ ಘಾತಕ ಕಾರ್ಯದಿಂದ ದೇವ ದುರ್ಲಭ ಭೂಮಿ ದುರ್ಬಲವಾದ ಬಗೆಯನ್ನು ವಿಸ್ತರಿಸಲಾಗಿದೆ.

             ಶಂಸುದ್ದೀನ್ ಅರಾಖಿ. ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್" ಹಾಗೂ ಶ್ರೀವರನಿಂದ ರಚಿತವಾದ ರಾಜತರಂಗಿಣಿ ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.

                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ರಾಜತರಂಗಿಣಿ ಈ ದೇವಾಲಯಗಳಲ್ಲಿದ್ದ ದೇವತೆಗಳನ್ನು ರಣರಂಭಾದೇವ, ರಣರಂಭಾಸ್ವಾಮಿನ್ ಎಂದು ಹೆಸರಿಸಿದೆ. ಅಲ್ಲದೆ ಪ್ರದ್ಯುಮ್ನ ಪರ್ವತಾಗ್ರದಲ್ಲೇ ಪಾಶುಪತ ಮಠವನ್ನೂ ರಣಾದಿತ್ಯ ಕಟ್ಟಿಸಿದ್ದ ಎಂದು ರಾಜತರಂಗಿಣಿ ಉಲ್ಲೇಖಿಸಿದೆ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).

               "ಮುಕದ್ದಮ್ ಸಾಹಿಬ್ ಹಾಗೂ ಅಕುಂಡ್ ಮುಲ್ಲಾ ಶಾಹ್ ಮಸೀದಿಗಳ ಕೆಳಗೆ ಪುರಾತನ ಬೃಹತ್ ಹಿಂದೂ ದೇವಾಲಯವೊಂದರ ಅವಶೇಷಗಳಿವೆ" ಎಂದು ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್ ಸ್ಪಷ್ಟಪಡಿಸಿದ್ದಾನೆ. ಮುಂದುವರಿದು ಸ್ಟೈನ್ ಹೇಳುತ್ತಾನೆ, "ಭೀಮಸ್ವಾಮಿನ್ ಬಂಡೆಯ ಆಗ್ನೇಯ ದಿಕ್ಕಿನಲ್ಲಿರುವ ಬಹಾವುದೀನ್ ಸಾಹಿಬ್ ನಿಸ್ಸಂಶಯವಾಗಿ ದೇವಾಲಯದ ಭಗ್ನ ಅವಶೇಷವೊಂದರ ಮೇಲೆಯೇ ನಿರ್ಮಿಸಲ್ಪಟ್ಟಿದೆ. ಹಳೆಯ ಹಿಂದೂ ದೇವಾಲಯದ ಅಳಿದುಳಿದ ಗೋಡೆಗಳನ್ನು ಈ ಝಿಯಾರತ್ತಿನ ಒಳಗೆ ಇನ್ನೂ ಕಾಣಬಹುದು. ನೈರುತ್ಯ ದಿಕ್ಕಿನಲ್ಲಿ ನಾಶಗೊಳಿಸಲ್ಪಟ್ಟ ಕಲ್ಲಿನಿಂದ ನಿರ್ಮಿಸಲ್ಪಟ್ಟ ದೇವಾಲಯವೊಂದರ ಪ್ರವೇಶ ದ್ವಾರ ಕಾಶ್ಮೀರ ಪಂಡಿತರಿಂದ ಪೂಜಿಸಲ್ಪಡುತ್ತಿದ್ದ, ಪ್ರವರಸೇನ ತನ್ನ ಹೊಸ ರಾಜಧಾನಿಯಲ್ಲಿ ಕಟ್ಟಿಸಿದ್ದ ಪ್ರವೇಶ್ವರನ ದೇವಾಲಯದ್ದು ಎಂದು ನಿಖರವಾಗಿ ಹೇಳಬಹುದು. ಹಾಗೆಯೇ ಚಾಮುಂಡಿ ದೇವಳದ ಕಲ್ಲಿನಿಂದ ಕಟ್ಟಲ್ಪಟ್ಟ ಆರು ಯಾರ್ಡುಗಳಿಗೂ ಹೆಚ್ಚು ಎತ್ತರದ ಗೋಡೆಗಳು ಇತಿಹಾಸದ ಸಾಕ್ಷಿಯಾಗಿ ನಿಂತಿವೆ. ಒಳಗಿನ ಅಡಿಪಾಯ ಹಾಗೂ ಗೋಡೆಗಳ ಮೇಲೆ ಮಸೀದಿಯೊಂದು ನಿರ್ಮಿಸಲ್ಪಟ್ಟಿದೆ."

                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.

               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!

               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.

                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.

                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.

              ಇದು ಅರಾಖಿಯ ಕಥೆಯಾದರೆ ಭಾರತದ ಇತಿಹಾಸವನ್ನೇ ಬದಲಾಯಿಸಿದ ತರೈನ್ ಯುದ್ಧಕ್ಕೆ ಕಾರಣನಾದ ಮೊಯಿನುದ್ದೀನ್ ಚಿಸ್ತಿ ಎಂಬ ಸೂಫಿಯದ್ದು ಇನ್ನೊಂದು ಕಥೆ! ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಪತನವನ್ನು ಕಾಣಬೇಕಿರಲಿಲ್ಲ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಅದಕ್ಕೆ ಈ ಚಿಸ್ತಿಯ ಪ್ರೇರಣೆಯಿತ್ತು. ಇಂದು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಚಾದರ ಅರ್ಪಿಸಿ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು. ಎಂತಹಾ ವಿಚಿತ್ರ ನಮ್ಮವರ ಧಾರ್ಮಿಕ ಭಾವನೆ, ತಮ್ಮನ್ನು ಆಕ್ರಮಿಸಿದವರನ್ನೇ ಸಂತ ಎಂದು ಆರಾಧಿಸುವುದು! ನೈಜ ಇತಿಹಾಸ ತಿಳಿದಿಲ್ಲವಾದರೆ ಆಗುವ ಅನಾಹುತ ಇಂತಹುದ್ದೇ! ಸೂಫಿಗಳೆಂದರೆ ದೇವ ಮಾನವರೆಂಬ ಭಾವನೆ ಹಿಂದೂ ಸಮುದಾಯದಲ್ಲಿ ಬೀಡು ಬಿಟ್ಟಿದೆ. ಅದಕ್ಕಾಗಿಯೇ ಸಿಕ್ಕ ಸಿಕ್ಕ ದರ್ಗಾಗಳಿಗೆ ಚಾದರ ಅರ್ಪಿಸುವ ವೈಚಾರಿಕ ಮತಾಂತರಕ್ಕೆ ಹಿಂದೂಗಳು ಸದ್ದಿಲ್ಲದೆ ಗುರಿಯಾಗುತ್ತಿದ್ದಾರೆ. ದಾಡಿ ಬಿಟ್ಟ ಮುಲ್ಲಾಗಳು ಮುಸಿಮುಸಿ ನಗುವ ದೃಶ್ಯ ಮೀಸೆಯಿಲ್ಲದ ಮುಖದಲ್ಲಿ ಎದ್ದು ಕಾಣುತ್ತಿದೆ.

ಬುಧವಾರ, ಜನವರಿ 18, 2017

ಗ್ರಸ್ತ - ಜ್ಞಾನಿಯ ಏಕತ್ವದ ಗಾನ

ಗ್ರಸ್ತ - ಜ್ಞಾನಿಯ ಏಕತ್ವದ ಗಾನ

     
   ಶ್ರೀ ಎಸ್.ಎಲ್.ಭೈರಪ್ಪರ ಬಳಿಕ ನಾ ಮೆಚ್ಚಿದ ಕಾದಂಬರಿಕಾರ ಕರಣಂ ಪವನ್ ಪ್ರಸಾದ್. ಭೈರಪ್ಪರಂತೆಯೇ ಎತ್ತಿಕೊಂಡ ತಕ್ಷಣ ಸಮಯದ ಪರಿವೆಯೇ ಇಲ್ಲದಂತೆ ಓದಿಸಿಕೊಂಡು ಹೋಗುವ ಸಾಹಿತ್ಯ ಕರಣಂರದ್ದು. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಅವರ ಗ್ರಸ್ತ ಕಾದಂಬರಿಯೂ ಎಂದಿನ ಅವರ ಸಹಜ ಶೈಲಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. 143 ಪುಟಗಳ ಚಿಕ್ಕ, ಚೊಕ್ಕ ರಚನೆ. ವಿಜ್ಞಾನದ ಸಾಮಾನ್ಯ ಅರಿವು, ಭಾರತೀಯ ದರ್ಶನಗಳ ಸಾಮಾನ್ಯ ಪರಿಚಯವಿದ್ದಲ್ಲಿ ಗ್ರಸ್ತದ ಓದಿಗೊಂದು ಓಘವೂ, ನ್ಯಾಯವೂ ಸಿಕ್ಕೀತು. ಜಿಜ್ಞಾಸುಗಳಿಗೆ ಒಂದು ಹೊಸ ಹೊಳಹನ್ನು ಗ್ರಸ್ತ ಕೊಟ್ಟೀತು. ಬರಿಯ ಕಥೆ ಓದುವವರಿಗೆ ಇನ್ನೊಂದು ರೋಮಾಂಚಕ, ಸಸ್ಪೆನ್ಸ್ ಕಥೆಯೆಂದನಿಸೀತು. ಒಟ್ಟಿನಲ್ಲಿ ಆಯಾ ಓದುಗರ ಬುದ್ಧಿಮಟ್ಟಕ್ಕೆ ತಕ್ಕಂತೆ "output" ಒದಗಿಸುವ ಸಾಹಿತ್ಯ ಗ್ರಸ್ತ ಎಂದರೆ ಅದರ ಹಿರಿಮೆ ಕಡಿಮೆಯಾಗಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ.

             ಬಡತನ, ಬಡತನದಲ್ಲೂ ಸ್ವಾಭಿಮಾನ ಉಳಿಸಿಕೊಂಡು ಬದುಕಲು ಹೋರಾಡುವ ಜೀವ, ಜಗತ್ತನ್ನು ಸರಿಯಾಗಿ ಅರಿಯುವ ಮುನ್ನವೇ ಪ್ರಾಯದ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿ ಆಗುವ ಅಂತರ್ಜಾತೀಯ ವಿವಾಹ, ಆದ ಮೇಲೆ ತಿಳಿಯುವ ನೈಜತೆ, ಅದರಲ್ಲೂ ಗೌರವದ ಬದುಕು ಕಟ್ಟಿಕೊಳ್ಳುವ ಕಲೆ, ಬಿಡುತ್ತೇನೆಂದು ಬಿಟ್ಟು ಬಂದರೂ ಬಿಡದ ಜಾತಿ, ಶ್ರೀಮಂತಿಕೆಯ ಹಿಂದಿನ ಬಡತನ, ಉದಾರತೆ(ಲಿಬರಲ್)ಯೊಳಗಿನ ಸಂಕುಚಿತತೆ, ಎಲ್ಲವನ್ನೂ ತಮ್ಮ ಅಗತ್ಯಕ್ಕೆ, ತಮ್ಮ ಸುಭದ್ರತೆಗೆ ತಕ್ಕಂತೆ ಬದಲಾಯಿಸಿಕೊಳ್ಳುವ ರೀತಿ-ನೀತಿ ಹೀಗೆ ಸಂಸಾರದ ಹಲವು ಮುಖಗಳನ್ನು ನಮ್ಮ ಸುತ್ತಮುತ್ತ ನಡೆಯುವ ರೀತಿಯಲ್ಲೇ ಕಟ್ಟಿಕೊಡುವ ರೀತಿ ಅನನ್ಯ. ಹರೆಯದ ಕಾಮನೆ-ಭಾವನೆ, ಸಂಸಾರದ ಬಂಧನ,  ತಾವು ಅದೇ ತಪ್ಪನ್ನು ಎಸಗಿದ್ದರೂ ಅದು ತಪ್ಪಲ್ಲವೆಂಬ ಭಾವ, ಇನ್ನೊಬ್ಬರು ಅದೇ ತಪ್ಪು ಮಾಡಿದಾಗ ಮಹಾಪರಾಧ ಎನ್ನುವಂತೆ ಬಿಂಬಿಸುವ ಮಾನವ ಸಹಜ ಸ್ವಭಾವ, ಶೀಲ ಎಂಬ ಪದಕ್ಕೆ ಅರ್ಥವೇ ತಿಳಿಯದ-ಉಳಿಯದ ಪೀಳಿಗೆಯ ಮಾನಸಿಕತೆ ಮತ್ತು ಈ ಎಲ್ಲವುಗಳನ್ನೂ ಆಯಾ ಪಾತ್ರಗಳಿಗೆ ತಕ್ಕಂತೆ ಅವುಗಳಿಂದಲೇ ವಿಮರ್ಶೆಗೊಳಪಡಿಸುವ, ಹಾಗೆ ಮಾಡಿಕೊಂಡು ಯಾವುದೋ ಒಂದು ಎಳೆಯನ್ನು ಹಿಡಿದು ತನ್ನ ಕಾರ್ಯ ಸರಿಯಾದುದು ಎಂದು ಸಮಾಧಾನಪಡಿಸಿಕೊಳ್ಳುವ ಮನುಜ ಸ್ವಭಾವ ಇವೆಲ್ಲವೂ ಅವರ ಎಂದಿನ ಸಾಹಿತ್ಯದ ಶೈಲಿಯಂತೆ ಅನಿಸುತ್ತದೆ.

           ಅದಕ್ಕಿಂತಲೂ ಸ್ವಲ್ಪ ಹೆಚ್ಚಾಗಿ ಎದ್ದು ಕಾಣುವುದು ವಿಜ್ಞಾನ-ವೇದಾಂತದ ನಡುವಿನ ಸಂವಾದ, ಚರ್ಚೆ. ವಿಜ್ಞಾನಿಯೊಬ್ಬನ ತಹತಹಿಕೆ, ಉಳಿದ ಜಗತ್ತು ಅವನನ್ನು ನೋಡುವ-ಕಾಡುವ-ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುವ ರೀತಿ, ನ್ಯಾಯನ್ಯಾಯಗಳನ್ನು ಮೀರಿದ ಕಾರ್ಪೋರೇಟ್ ಜಗತ್ತಿನ ಯಥಾವತ್ ಚಿತ್ರಣ, ನ್ಯಾಯ ವ್ಯವಸ್ಥೆಯ ಲೋಪ ಇವೆಲ್ಲವೂ ಕಾದಂಬರಿಕಾರನೊಬ್ಬ ಕಾಲದೊಡನೆ ಹೇಗೆ ಆಧುನೀಕರಿಸಿಕೊಳ್ಳುತ್ತಾ(ಅಪ್ ಡೇಟ್) ಸಾಗಬೇಕು, ಅವನು ಪ್ರಸಕ್ತ ಕಾಲದಲ್ಲಿಯೇ ಇರಬೇಕು, ನೈಜತೆಗೆ ಹತ್ತಿರವಾಗಿರಬೇಕು ಎನ್ನುವುದರ ದ್ಯೋತಕವಾಗಿ ಕಾಣ ಸಿಗುತ್ತವೆ. ಆಗ ಮಾತ್ರ ಅದು ಗಂಭೀರ ಓದುಗರನ್ನು ಸೆಳೆಯುವುದಲ್ಲವೇ?

             ಇವೆಲ್ಲವೂ ಅವರ ಹಿಂದಿನ ಕಾದಂಬರಿಗಳಲ್ಲಿ ನಾವು ಗುರುತಿಸಿದ್ದೇ. ಆದರೆ ಇದಕ್ಕಿಂತ ಹೊರತಾಗಿ ಇಲ್ಲಿ ಎತ್ತರದಲ್ಲಿ ಕಾಣಸಿಗುವುದು ಕಾದಂಬರಿಯ ಕಥಾವಸ್ತು. ಅದು ಎತ್ತರದಲ್ಲೇ ಇರಬೇಕು ಅನ್ನಿ. ಆದರೆ ಇಲ್ಲೊಂದು ವಿಶೇಷವಿದೆ. ಬಡತನದ ಬೇಗೆಯಲ್ಲಿ ಹುಟ್ಟಿ, ಅದರ ಬವಣೆಗಳನ್ನು ನೋಡುತ್ತಲೇ ಅಂತರ್ಮುಖಿಯಾಗಿ ಜೀವನದ ಪಾಠಗಳನ್ನು ಕಲಿಯುತ್ತಾ ಪ್ರತಿಯೊಂದು ಬಂಧನಕ್ಕೂ ಸಿಕ್ಕಿ ಹಾಕಿಕೊಂಡು ಮತ್ತೆ ಅದನ್ನೇ ಪ್ರಯತ್ನಪೂರ್ವಕವಾಗಿ, ನಿರ್ದಾಕ್ಷಿಣ್ಯವಾಗಿ ಕಳಚುತ್ತಾ ಎತ್ತರೆತ್ತರಕ್ಕೆ ಏರುವ ಕಥಾನಾಯಕನ ವ್ಯಕ್ತಿತ್ವ. ಕಾದಂಬರಿ ಆರಂಭವಾಗುವುದೇ "ಇರುವುದು ಒಂದೇ ಆತ್ಮ; ಒಂದು ದೇಹದಿಂದ ಆತ್ಮದಲ್ಲಿ ಉತ್ಪತ್ತಿಯಾದ ಸ್ಮೃತಿಯನ್ನು ಇನ್ನೊಂದು ದೇಹ ಗಳಿಸಬಹುದು" ಎನ್ನುವ ಸಂವಾದವೇ ಕಾದಂಬರಿಯ ವಸ್ತು ಇದೇ ಎನ್ನುವ ನಿರೀಕ್ಷೆಯನ್ನು ಮೂಡಿಸುತ್ತದೆ. ಬಾಲ್ಯದಲ್ಲಿಯೇ ಸ್ಮೃತಿಯಲ್ಲಿದ್ದುದನ್ನು ನಿದ್ದೆಗಣ್ಣಿನಲ್ಲೇ ಒರೆಯುವ ರೀತಿ ಮುಂದಿನ ವ್ಯಕ್ತಿತ್ವದ ಚಿತ್ರಣವನ್ನು ಕೊಡುತ್ತದೆ. ಜನ್ಮದಾತರ ಬಂಧನ, ಸಂಪರ್ಕಕ್ಕೆ ಬಂದವರ ಬಂಧನ ಇವೆಲ್ಲವೂ ಆತನನ್ನು ಕಾಡುತ್ತದೆ. ಎಲ್ಲವನ್ನೂ ಕಳಚಿ ಎಲ್ಲದರೊಳಗೊಂದಾದ ಬುದ್ಧನಂತೆ ಕಥಾನಾಯಕನ ಪಯಣವಾದರೂ ಅನಿರೀಕ್ಷಿತವಾದ, ಅನಗತ್ಯವಾದ ಬಂಧನಕ್ಕೆ ಸಿಲುಕಿ ಅವುಗಳನ್ನು ಕಳಚಿಕೊಳ್ಳುತ್ತಾ ಆತ ಸಾಗುತ್ತಾನೆ. ಬ್ರಹ್ಮವನ್ನು ವಿದ್ಯುತ್ತಿಗೆ ಸಮೀಕರಿಸುತ್ತಾ ಜೀವನದ ಸತ್ಯದ ಹುಡುಕಾಟದಲ್ಲಿ ಸಾಗುವಾಗ ಶಂಕರರು, ಉಪನಿಷತ್ತುಗಳು ಸಹಾಯಕವಾಗುತ್ತದೆ. ದ್ವೈತ ಮರೆಯಾಗುತ್ತದೆ. ತನ್ನೊಡನೆ ಆಪ್ತರು ಎಂದೆಣಿಸುವವರೂ ತಮ್ಮ ಸ್ವಾರ್ಥಕ್ಕಾಗಿ ಅಥವಾ ಬದುಕುವ ಅಗತ್ಯ(ದೇಹ ಭಾವ)ಕ್ಕಾಗಿ ಹೇಳುವ ಸುಳ್ಳು, ಆಡುವ ಕಾಪಟ್ಯವನ್ನು ಆ ಬಂಧನವನ್ನು ಕಳಚಿಕೊಳ್ಳುವ ಸಮಯದಲ್ಲಿ ನಿಷ್ಠುರವಾಗಿ ಹೇಳಿ ಮಾಯೆಯ ಅಥವಾ ಅವಿದ್ಯೆಯ ಪೊರೆಯನ್ನು ಕಳಚಿ ಒಗೆದು ಗಮ್ಯ ಸೇರುವ(ಇದ್ದುದೇ ಅಲ್ಲೇ ಅಲ್ಲವೇ, ಇನ್ನು ಗಮ್ಯವೇನು ಬಂತು) ಅಂದರೆ ತನ್ನನ್ನು ತಾನು ಅರಿತುಕೊಳ್ಳುವ ಪ್ರಕ್ರಿಯೆ ನಿಜವಾಗಿಯೂ ಅದ್ಭುತ.

             "ಗೀತೆಯನ್ನು ಯಾರು ಬರೆದರು ಎನ್ನುವುದು ಮುಖ್ಯವಲ್ಲ. ಅದು ಮನುಷ್ಯನ ಒಟ್ಟು ಸ್ಮೃತಿ. ಒಬ್ಬನಿಗೆ ಅದು ಹೊಳೆದಿದೆ ಎಂದರೆ ಈ ವಿಶ್ವಾತ್ಮದಲ್ಲಿ ಸ್ಥಿತವಾಗಿದೆ ಎಂದರ್ಥ. ನಮ್ಮೆಲ್ಲರ ಆಲೋಚನೆ, ಸಂಶೋಧನೆ, ಆತ್ಮಶೋಧನೆಗೆ ಈ ಎಲ್ಲರ ಒಟ್ಟು ಸ್ಮೃತಿಯೇ ಕಾರಣವಾಗಿರುತ್ತದೆ. ಹೀಗೆ ಎತ್ತರದ ತರಂಗದಲ್ಲಿ ಉಂಟಾದ ಮಾತನ್ನು ನನ್ನ ಒಳಸ್ಮೃತಿ ಗ್ರಹಿಸಿ ಇಟ್ಟುಕೊಂಡಿದೆ. ಯಾವುದೋ ಒಂದು ತಂತು ಮಿಡಿದಾಗ ಅಪ್ರಯತ್ನವಾಗಿ ಅದು ಹೊರಬರುತ್ತದೆ. ನಮ್ಮೆಲ್ಲರ ಸ್ಮೃತಿಯೂ ಒಂದೇ. ಆದರೆ ಅದನ್ನು ಗ್ರಹಿಸುವ ಸಾಮರ್ಥ್ಯ ಕೆಲವು ದೇಹಕ್ಕೆ ಮಾತ್ರ ಇರುತ್ತದೆ" ಎಂದು ತನ್ನ ಬಾಲ್ಯದ ಬಡಬಡಿಸುವಿಕೆಗೆ ಕೊಡುವ ಕಾರಣ; "ವಿದ್ಯುತ್ ವಿದ್ಯುತ್ತಿನಲ್ಲಿ ಲೀನವಾಗುತ್ತದೆ. ಸ್ವರೂಪ ಬದಲಾಯಿಸುತ್ತದೆ, ವಿವಿಧ ರೂಪ ತಾಳುತ್ತದೆ, ಲೋಕೋಪಯೋಗಿಯಾಗುತ್ತದೆ. ಆದರೆ ವಿದ್ಯುತ್ ಎರಡಲ್ಲ; ಬ್ರಹ್ಮವೂ! ಆತ್ಮವೂ!" ಎನ್ನುವ ವಿಚಾರ; "...ನಾನು ಋತಕ್ಕೆ ಮೊದಲು ಹುಟ್ಟಿದವ, ದೇವತೆಗಳಿಗಿಂತ ಮೊದಲಿನವನು...ಅಹಮನ್ನಮಹಮನ್ನಮಹಮನ್ನಮ್...ಯೋ ಮಾ ದದಾತಿ ಸ ಇದೇವ ಮಾವಾಃ ಅಹಮನ್ನಮದಂತ ಮಾದ್ಮಿ...ಅಹಂ ವಿಶ್ವ ಭುವನಮಭ್ಯಭವಾಮ್...ಸುವರ್ಣ ಜ್ಯೋತಿಃ" ಎನ್ನುವ ಜ್ಞಾನಗಾನ; ಸ್ಮೃತಿಯೊಂದಿಗಿನ ಸಂವಹನ.....ವ್ಹಾಹ್ "ಯಾನ"ದ ನಂತರ ಕಾಯುತ್ತಿದ್ದ "ಓದು" ಇದು.

             "ನಾನು ಯಾರು?" ಎನ್ನುವ ಹುಡುಕಾಟವನ್ನು ಕೊನೆಗೆ ಅದರ ಉತ್ತರವನ್ನು ಆತ್ಮಕ್ಕೆ ಅನ್ವರ್ಥವಾದ "ಅವಿನಾಶ" ಎನ್ನುವ ಹೆಸರಿನಲ್ಲಿ-ಪಾತ್ರದಲ್ಲಿ ಕಟ್ಟಿಕೊಟ್ಟು ಲೇಖಕರು ಗೆಲ್ಲುತ್ತಾರೆ. "ಯಾನ"ದಲ್ಲಿ ಶ್ರೀ ಎಸ್.ಎಲ್.ಭೈರಪ್ಪರು ಕಂಡುಕೊಂಡ ಸತ್ಯಕ್ಕೆ "ಗ್ರಸ್ತ"ದಲ್ಲಿ ಕರಣಂರು ಪ್ರಾಯೋಗಿಕ ಅಂತ್ಯ ಕೊಟ್ಟಂತೆ ಅನಿಸಿತು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರೇ ಕಾದಂಬರಿಯಲ್ಲಿ ಒಂದು ಸನ್ನಿವೇಶದಲ್ಲಿ ಕಥಾನಾಯಕನಿಂದ ಹೇಳಿಸಿದಂತೆ "ಇದು ಜ್ಞಾನಿಯ ಏಕತ್ವದ ಗಾನ!".

ಗುರುವಾರ, ಜನವರಿ 12, 2017

ತೇಜಃ ಪುಂಜ

ತೇಜಃ ಪುಂಜ


                  ತಮಿಳುನಾಡಿನ ಒಂದು ಹಳ್ಳಿ.. ಮರವೊಂದರ ಕೆಳಗೆ ಕುಳಿತು ಸಂತನೊಬ್ಬ ತನ್ನ ಶಿಷ್ಯರಿಗೆ ಹೇಳುತ್ತಿದ್ದಾನೆ...
             "ಹಿಂದೂಸ್ಥಾನ ಮತಾಂಧರ ದಾಸ್ಯಕ್ಕೆ ಸಿಲುಕಿ ತನ್ನ ಕ್ಷಾತ್ರತ್ವ, ಸ್ವಾಭಿಮಾನ, ಅಸ್ಮಿತೆಯನ್ನು ಮರೆತು ನಿದಿರೆ, ಮದಿರೆ, ನಪುಂಸಕತ್ವದ ವಶವಾಗಿದ್ದಾಗ ದೇಶದ ಕ್ಷಾತ್ರ ತೇಜವನ್ನು ಬಡಿದೆಬ್ಬಿಸಿದನಾತ. ಮತಾಂಧ ಮೊಘಲ್, ಆದಿಲ್, ನಿಜಾಮ್, ಬರೀದ್, ಕುತುಬ್, ಇಮಾಮ್ ಶಾಹಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಹಿಂದೂಗಳ ಮಾನ, ಪ್ರಾಣ ರಕ್ಷಣೆ ಮಾಡಿದ. ತೋರಣ, ಚಾಕಣ, ಪನ್ನಾಳ, ಪುರಂದರ...ಹೀಗೆ ಕೋಟೆಗಳ ಮೇಲೆ ಕೋಟೆ ಗೆದ್ದು...ಛತ್ರಪತಿಯಾಗಿ ಹಿಂದೂಸಾಮ್ರಾಜ್ಯದ ಶೌರ್ಯ, ಸ್ಥೈರ್ಯ, ಸಾಹಸವನ್ನು ಜಗತ್ತಿಗೆ ಪ್ರಚುರಪಡಿಸಿದ...."

ಶಿಷ್ಯರಿಗೋ ಆಶ್ಚರ್ಯ. ತಮ್ಮ ಗುರುಗಳ್ಯಾಕೆ ಆ ದರೋಡೆಕೋರ ಶಿವಾಜಿಯ ಬಗ್ಗೆ ಹೇಳುತ್ತಿದ್ದಾರೆ?
ಆ ಗುರು ಮತ್ಯಾರು ಅಲ್ಲ. ಮುಂದೊಂದು ದಿನ ಐದೇ ಐದು ನಿಮಿಷಗಳ ಭಾಷಣದಲ್ಲಿ ಜಗತ್ತಿನ ಎದುರು ತನ್ನ ದೇಶ ಜಗತ್ತಿನ ಗುರು, ತನ್ನ ಸಂಸ್ಕೃತಿ ಉತ್ಕೃಷ್ಟವಾದ ಸನಾತನ ಸಂಸ್ಕೃತಿ, ತನ್ನ ನಾಗರೀಕತೆ ಇಂದಿಗೂ ಅಳಿದಿಲ್ಲ ಎಂದು ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆ, ಗರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟನೋ, ನನ್ನ ಭಾರತಕ್ಕೆ ಶಿವಾಜಿಯಂತಹ ೧೦೦ ಮಂದಿ ತರುಣರು ಸಾಕೆಂದು ಯುವ ಜನತೆಯನ್ನು ಬಡಿದೆಬ್ಬಿಸಿದನೋ ಅಂತಹ ಸಿಡಿಲ ಸಂತ ಸ್ವಾಮಿ ವಿವೇಕಾನಂದ.

                        ಹೌದು. ಭಾರತದ ಕ್ಷಾತ್ರ ತೇಜ ಬ್ರಿಟಿಷರ ಎದುರು ಮಕಾಡೆ ಮಲಗಿತ್ತು. ವಿದ್ಯಾವಂತರೆನಿಸಿಕೊಂಡವರು ಗುಲಾಮೀ ಮಾನಸೀಕತೆಯ ಆಳಾಗಿ ಆಂಗ್ಲ ಇತಿಹಾಸಕಾರರು ಬರೆದುದೇ, ಹೇಳಿದ್ದೇ ಸತ್ಯ ಅಂತ ನಂಬಿದ್ದ ಕಾಲವದು. ಅವರ ದೃಷ್ಟಿಯಲ್ಲಿ ಶಿವಾಜಿ, ರಾಣಪ್ರತಾಪ, ತಾತ್ಯಾಟೋಪೆ, ಫಡಕೆ, ಕೂಕಾ... ದರೋಡೆಕೋರರಾಗಿದ್ದರು! ಸ್ವಾತಂತ್ರ್ಯ ಸಂಗ್ರಾಮ ದಂಗೆಯೆನಿಸಿಕೊಂಡಿತ್ತು.( ಅದನ್ನು ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮ ಅಂತ ಮೊಟ್ಟಮೊದಲು ನಿರೂಪಿಸಿದವರು ಸಾವರ್ಕರ್). ಅಂತಹ ಸಂದರ್ಭದಲ್ಲಿ ಭಗವಂತನ ಅವತಾರ ಎಂದೆನಿಸಿಕೊಂಡಿದ್ದ ರಾಮಕೃಷ್ಣ ಪರಮಹಂಸರ ಅಮೃತ ಹಸ್ತದಿಂದ ರಾಷ್ಟ್ರ ನಿರ್ಮಾಣಕ್ಕಾಗಿ ಕಡೆಯಲ್ಪಟ್ಟ ಶಿಲ್ಪ ಅದು. ಅದು ಇಡೀ ದೇಶದಲ್ಲಿ ಬಿರುಗಾಳಿಯಂತೆ ಸಂಚರಿಸಿ ಧರ್ಮ, ಸಂಸ್ಕೃತಿ, ಕ್ಷಾತ್ರವನ್ನು ಬಡಿದೆಬ್ಬಿಸಿತು.

                      ಭಾರತೀಯರ ಸರಳತೆಯನ್ನು, ವ್ಯಕ್ತಿಯನ್ನು ಜಗತ್ತಿನೊಂದಿಗೆ ಸಮರಸಗೊಳಿಸಬಲ್ಲ ಇಲ್ಲಿಯ ಸಂಸ್ಕಾರವನ್ನು ಜಗತ್ತಿನಾದ್ಯಂತ ಸಾಧ್ಯಂತವಾಗಿ ವಿವರಿಸಿದರು. ವಿಶ್ವವಿರಾಟವನ್ನು ವ್ಯಾಪಿಸಬಲ್ಲ ಹಿಂದೂಗಳ ಮುಗ್ಧ ಪ್ರೀತಿಯನ್ನು ಮೆಚ್ಚಿದರು. ಬೆಂಕಿಯನ್ನು ಕೆಣಕಿದೊಡನೆ ಭಗ್ಗನೆ ಉರಿಯುವ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತು ಬೆರಗಾಗುವಂತೆ ನೆನಪಿಸಿದರು. ನೋವಿಗೆ ಮರುಗುವ ಕಣ್ಣ ನೀರ ದೃಷ್ಟಿಯನ್ನು ಶುಭ್ರಗೊಳಿಸಿ, ಮನುಷ್ಯ ಮರಕಲ್ಲುಗಳನ್ನು ಕಾಣುವ ನೋಟದ ದ್ವೈತ ಭಾವವನ್ನು ಮರೆಸುವ ಪಾರಮಾರ್ಥದ ಸಿದ್ಧಿಯನ್ನು ಪ್ರಪಂಚದ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ ವೇದಾಂತಿ ಅವರು.

                           "Who dares misery love and hugs the form of death, to him the mother comes" ಎಂಬ ಅವರ ಆವಾಹನ ಮಂತ್ರಕ್ಕೆ ಸಾವಿರಾರು ಯುವಕರು ಓಗೊಟ್ಟರು. ವಿನಂತಿ ಸರಣಿಗಳಿಂದಾಗಲಿ ಅಹಿಂಸಾದಿ ಮಾರ್ಗಗಳಿಂದಾಗಲಿ ಸ್ವಾತಂತ್ರ್ಯ ಸಾಧನೆ ಆಗದೆಂದು ಅವರು ಅಸಂದಿಗ್ಧವಾಗಿ ಸಾರಿದ್ದರು.
" ಮಾರಕ ಯಂತ್ರಗಳು, ಧನಬಲ, ಸರಕುರಾಶಿಗಳಿಂದ ಮೆರೆಯುವ ವಣಿಕರ ಜಗತ್ತಿನಲ್ಲಿ ಭಿಕ್ಷಾಪಾತ್ರೆಗೆ ಸ್ಥಾನವಿರದು. ಆ ಬಲದೆದುರು ಮಹಾಮಾಯೆಯ ವಾಣಿಯ, ಎಂದರೆ ಮಾನವನ ಅಂತಸ್ಥಶಕ್ತಿಯ ಸ್ಫೋಟ ಮಾತ್ರ ಮಾನವಗತಿಗೆ ಹೊಸ ದಿಕ್ಕನ್ನು ನೀಡೀತು" ಎಂದು ಜನರಿಗೆ ಕರೆ ಕೊಟ್ಟಿದ್ದರು.

                   ಭಾರತದ ರಾಷ್ಟ್ರೀಯತೆಗೆ ಸಕ್ರಿಯತೆ ತುಂಬಿ ಭಾರತೀಯರಲ್ಲಿ ರಾಜ್ಯಕ್ಕೆ ಅಧಿಸ್ಠಾನವಾಗಿ ಸಾಮುದಾಯಿಕ ಭಾವನೆಯನ್ನು ಉಂಟು ಮಾಡಿದ ಅವರು ಕಾಂಗ್ರೆಸ್ಸಿನ ಮನವಿ ರಾಶಿಗಳಿಂದ ಪ್ರಯೋಜನವಾಗದೆಂದು ಬಲವಾಗಿ ನಂಬಿದ್ದರು. ಮದ್ರಾಸಿನಲ್ಲಿ ಮಾಡಿದ ಭಾಷಣದಲ್ಲಿ  "Heaven is nearer through football than through Gita. We want men of strong biceps " ಎಂದು ಕಂಠೋಕ್ತವಾಗಿ ಸಾರಿದ್ದರು.

                  ಸ್ವಯಂ ವಿವೇಕಾನಂದರೇ ಹೇಮಚಂದ್ರ ಘೋಷ್ ಮತ್ತು ಸಂಗಡಿಗರ ಮೂಲಕ ೧೯೦೨ರಲ್ಲಿ ಕ್ರಾಂತಿ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದರು. ಮುಂದೆ ಬ್ರಹ್ಮಬಾಂಧವ ಉಪಧ್ಯಾಯ ಅದಕ್ಕೆ ಮುಕ್ತಿಸಂಘ ಎಂದು ಹೆಸರಿಟ್ಟು ಮುನ್ನಡೆಸಿದರು.
ವಿವೇಕಾನಂದರ ಕುರಿತು ಫ್ರಾನ್ಸಿನ ಅಗ್ರಮಾನ್ಯ ಚಿಂತಕ ರೋಮಾರೋಲಾ "The neo-Vedantism of swami vivekananda put new life in themoribund Indian nationalism" ಎಂದು ವಿವೇಕಾನಂದರಿಂದ ದೊರೆತ ಚೇತರಿಕೆಯನ್ನು ಬಣ್ಣಿಸಿದ್ದಾನೆ.

                   ಅವರ ದೃಷ್ಟಿಯಲ್ಲಿ ಭಾರತೀಯ ಹೇಗಿರಬೇಕು?
" ನಾನು ಹಲವು ವರ್ಷಗಳಿಂದ ಪಶ್ಚಿಮ ದೇಶಗಳಲ್ಲಿ ಇದ್ದುದರಿಂದ ನನಗೆ ಗೊತ್ತು. ಅಲ್ಲಿಯ ದೃಷ್ಟಿ ಬೇರೆ. ನಡೆಯುವ ದಾರಿ ಬೇರೆ. ಅದನ್ನು ಕುರುಡರಂತೆ ಅನುಸರಿಸಿದರೆ ನಮ್ಮ ದಾರಿಯು ತಪ್ಪುತ್ತದೆ. ನಾವು ಆದರ್ಶರೆನ್ನುವ ಸೀತೆ, ಸಾವಿತ್ರಿ, ದಮಯಂತಿಯರು ತ್ಯಾಗದ ಮೂರ್ತಿಗಳು. ನಾವು ಪೂಜಿಸುವ ದೇವರು ಕೂಡಾ ತ್ಯಾಗದ ಸಂಕೇತಗಳೇ. ಸಂನ್ಯಾಸಿಯಂತಿದ್ದ ಶಂಕರನೇ ನಮ್ಮ ಆರಾಧ್ಯದೈವ" ಇದು ಇಂದಿನ ಪಾಶ್ಚಾತ್ಯ ಮಾನಸಿಕತಾವಾದಿಗಳು ತಿಳಿಯಬೇಕಾದ ಅಪ್ಪಟ ಸತ್ಯವಲ್ಲವೇ?

                       ಮುಸ್ಲಿಂ ಮಾನಸಿಕತೆಯ ಒಳಹೊರಗುಗಳ ಬಗ್ಗೆ ಸ್ಪಷ್ಟ ವೈಚಾರಿಕ ವ್ಯಗ್ರತೆಯು ಅವರ ಮಾತುಗಳಲ್ಲಿ ಕಂಡುಬರುತ್ತಿತ್ತು. "ಮುಸಲ್ಮಾನರು ಯೆಹೂದಿಗಳನ್ನು ಮತ್ತು ಕ್ರೈಸ್ತರನ್ನು ದ್ವೇಷಿಸುವುದು ಯಾಕೆಂದರೆ ಅವರು ತಮಗಿಂತಲೂ ಕ್ಷುಲ್ಲಕವಾದ ನಂಬಿಕೆಗಳನ್ನು ಹೊಂದಿರುವ ಜನರೆಂದು. ಆದರೆ ಹಿಂದೂಗಳ ಬಗೆಗೆ ಅವರದ್ದು ತೀವ್ರವಾದ ದ್ವೇಷ ಭಾವನೆ. ಹಿಂದುಗಳು ವಿಗ್ರಹಗಳನ್ನು ಪೂಜಿಸುವುದರಿಂದ ಅವರು ಕಾಫಿರ ಜನರು. ಅಂತಹವರು ಬದುಕಲು ಯೋಗ್ಯರಲ್ಲ. ಅವರನ್ನು ನಿರ್ನಾಮ ಮಾಡುವುದೇ ನಮ್ಮ ಗುರಿ-ಇದು ಮುಸ್ಲಿಮರ ಮನಸ್ಸು" ಎಂಬುದು ಅವರ ವಿಶ್ಲೇಷಣೆ.


"ದೇವದೂತ ಗ್ರೇಬ್ರಿಯಲ್ ಒಂದು ದಿನ ಗುಹೆಯಲ್ಲಿ ತನ್ನ ಬಳಿ ಬಂದುದಾಗಿಯೂ, ದಿವ್ಯಾಶ್ವವಾದ ಹರಾಕ್ ಮೇಲೆ ತನ್ನನ್ನು ಕರೆದೊಯ್ದಿದ್ದಾಗಿಯೂ, ತಾನು ಸ್ವರ್ಗಕ್ಕೆ ಭೇಟಿ ನೀಡಿದ್ದಾಗಿಯೂ ಮಹಮ್ಮದ್ ತಿಳಿಸಿದ್ದಾರೆ.ನೀವು ಕುರಾನ್ ಓದಿದರೆ ಅಚ್ಚರಿಯ ಸತ್ಯಗಳು ಅಂಧವಿಶ್ವಾಸದೊಂದಿಗೆ ಮಿಶ್ರಣವಾದುದನ್ನ ಕಾಣುವಿರಿ. ನೀವದನ್ನು ಹೇಗೆ ವಿವರಿಸುತ್ತೀರಿ? ಅವರು ಪ್ರೇರಣೆ ಪಡೆದಿದ್ದಲ್ಲ. ಆಕಸ್ಮಿಕವಾಗಿ ಸಿಕ್ಕಿದ್ದು, ಅವರು ತರಬೇತಿ ಪಡೆದ ಯೋಗಿಯಲ್ಲ.ತಾವು ಮಾಡುತ್ತಿರುವ ಬಗ್ಗೆ ಅವರಿಗೆ ವಿವರಣೆ ತಿಳಿದಿರಲಿಲ್ಲ. ಮಹಮ್ಮದ್ ರಿಂದ ಜಗತ್ತಿಗೆ ಆದ ಒಳ್ಳೆಯದು ಮತ್ತು ಮತಾಂಧತೆಯಿಂದ ಆದ ಮಹಾ ಕೆಡುಕುಗಳ ಬಗ್ಗೆ ಚಿಂತಿಸಿ. ಅವರ ಭೋದನೆಗಳಿಂದ ಲಕ್ಷಾಂತರ ಜನರು ಸಾಮೂಹಿಕ ಕಗ್ಗೊಲೆಯಾದುದರ ಬಗ್ಗೆ ಮಕ್ಕಳಿಂದ ವಿಯೋಗ ಹೊಂದಿದ ತಾಯಂದಿರು, ಅನಾಥರಾದ ಮಕ್ಕಳು,ಅತ್ಯಾಚಾರಕ್ಕೊಳಗಾದ ಮಾನಿನಿಯರು, ಇಡೀ ದೇಶಗಳು ನಾಶವಾದ ಬಗ್ಗೆ ಯೋಚಿಸಿ. ಎಲ್ಲ ಕಾಲ ಮತ್ತು ದೇಶಗಳಲ್ಲಿ ಮಹಾನ್ ಆಧ್ಯಾತ್ಮಿಕ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನರಲ್ಲ. ನೈಜ ಧರ್ಮವಿರುವಲ್ಲಿ ದೈವಿಕ ಜ್ಯೋತಿ ವಿಶಾಲ ಮನಸ್ಸನ್ನು ಕಾಣುತ್ತೇವೆ. ಇದರಿಂದ ಎಲ್ಲೆಡೆ ಬೆಳಕು ಕಾಣಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಮುಸ್ಲಿಮರು ಅಪಕ್ವರು ಮತ್ತು ಭಿನ್ನ ವರ್ಗದವರು. ಒಬ್ಬನೇ ದೇವರು ಅದಕ್ಕಿಂತ ಮೀರಿದ್ದು ಕೆಟ್ಟದ್ದು ಮತ್ತದನ್ನು ನಂಬುವವರನ್ನು ನಾಶ ಮಾಡಬೇಕು ಬೇರೆಯವರ ಧರ್ಮಗ್ರಂಥಗಳನ್ನು ಸುಡಬೇಕು. ಫೆಸಿಫಿಕ್ ನಿಂದ ಅಟ್ಲಾಂಟದವರೆಗೆ 500 ವರ್ಷಗಳ ಕಾಲ ರಕ್ತದ ಕೋಡಿಯೇ ಹರಿಯಿತು ಅದು ಮಹಮ್ಮದೀಯರ ಧರ್ಮ!" ಎಂದಿದ್ದಾರೆ ಅವರು.

                     ಕೊಲಂಬೋದಿಂದ ಅಲ್ಮೋರಾದವರೆಗೆ ಉಪನ್ಯಾಸ ಮಾಲೆಯಲ್ಲಿ ವಿವೇಕಾನಂದರು ಯಾವ ಶಕ್ತಿಪಂಥದ ಪ್ರತಿಪಾದನೆ ಮಾಡಿದ್ದರೋ ಅದು ೧೯೦೫ರ ಸ್ವದೇಶೀ ಆಂದೋಲನದಲ್ಲಿ ಮೂರ್ತರೂಪದಲ್ಲಿ ಪ್ರಕಟಗೊಂಡಿತು. ಶಿಷ್ಯೆ ಭಗಿನಿ ನಿವೇದಿತಾರನ್ನು ರಾಷ್ಟ್ರಸೇವೆಗೆ ಸಮರ್ಪಿಸಿದರು. "ಭಗವತಿ ಬೇಡುತ್ತಿರುವುದು ರಾಷ್ಟ್ರೀಯತೆಯ ನೈವೇದ್ಯವನ್ನೇ ಹೊರತು ಸೌಮ್ಯ ವಿಧೇಯತೆಯನ್ನಲ್ಲ. ನನಗೆ ಧೃಢಕಾಯರಾದ, ಸಿಂಹದ ಗುಂಡಿಗೆಯುಳ್ಳ, ಮಿಂಚಿನೋಪಾದಿಯಲ್ಲಿ ಸಂಚರಿಸಬಲ್ಲ, ತನು ಮತ್ತು ಮನದಿಂದ ತರುಣರಾದ ೧೦೦ ಮಂದಿ ಯುವಕರನ್ನು ಕೊಡಿ. ಬಲಿಷ್ಠ ಭಾರತವನ್ನು ನಿರ್ಮಿಸಬಲ್ಲೆ. ಏಳಿ ಎದ್ದೇಳಿ" ಎಂದು ಭಾರತೀಯರ ಅಂತಃಸತ್ವವನ್ನು ಬಡಿದೆಬ್ಬಿಸಿದ ಆ ಸೂರ್ಯ ೩೯ರ ಎಳೇ ಪ್ರಾಯದಲ್ಲಿಯೇ ಅಸ್ತಮಿಸಿದ್ದು ಭಾರತದ ದೌರ್ಭಾಗ್ಯವಲ್ಲವೇ?

               ಆವರ ಕನಸು ನನಸು ಮಾಡುವಲ್ಲಿ ನಾವು ಪ್ರಯತ್ನ ಮಾಡಲೇ ಇಲ್ಲ... ೧೫೦ ಅಲ್ಲ ಸಾವಿರವಾದರೂ ಇದೇ ಮನಸ್ಥಿತಿ ಇದ್ದರೆ ಭಾರತದ ಸ್ಥಿತಿ ಅಧೋಗತಿ...ಎದ್ದೇಳು ಅರ್ಜುನ!