ಗ್ರಸ್ತ - ಜ್ಞಾನಿಯ ಏಕತ್ವದ ಗಾನ
ಶ್ರೀ ಎಸ್.ಎಲ್.ಭೈರಪ್ಪರ ಬಳಿಕ ನಾ ಮೆಚ್ಚಿದ ಕಾದಂಬರಿಕಾರ ಕರಣಂ ಪವನ್ ಪ್ರಸಾದ್. ಭೈರಪ್ಪರಂತೆಯೇ ಎತ್ತಿಕೊಂಡ ತಕ್ಷಣ ಸಮಯದ ಪರಿವೆಯೇ ಇಲ್ಲದಂತೆ ಓದಿಸಿಕೊಂಡು ಹೋಗುವ ಸಾಹಿತ್ಯ ಕರಣಂರದ್ದು. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಅವರ ಗ್ರಸ್ತ ಕಾದಂಬರಿಯೂ ಎಂದಿನ ಅವರ ಸಹಜ ಶೈಲಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. 143 ಪುಟಗಳ ಚಿಕ್ಕ, ಚೊಕ್ಕ ರಚನೆ. ವಿಜ್ಞಾನದ ಸಾಮಾನ್ಯ ಅರಿವು, ಭಾರತೀಯ ದರ್ಶನಗಳ ಸಾಮಾನ್ಯ ಪರಿಚಯವಿದ್ದಲ್ಲಿ ಗ್ರಸ್ತದ ಓದಿಗೊಂದು ಓಘವೂ, ನ್ಯಾಯವೂ ಸಿಕ್ಕೀತು. ಜಿಜ್ಞಾಸುಗಳಿಗೆ ಒಂದು ಹೊಸ ಹೊಳಹನ್ನು ಗ್ರಸ್ತ ಕೊಟ್ಟೀತು. ಬರಿಯ ಕಥೆ ಓದುವವರಿಗೆ ಇನ್ನೊಂದು ರೋಮಾಂಚಕ, ಸಸ್ಪೆನ್ಸ್ ಕಥೆಯೆಂದನಿಸೀತು. ಒಟ್ಟಿನಲ್ಲಿ ಆಯಾ ಓದುಗರ ಬುದ್ಧಿಮಟ್ಟಕ್ಕೆ ತಕ್ಕಂತೆ "output" ಒದಗಿಸುವ ಸಾಹಿತ್ಯ ಗ್ರಸ್ತ ಎಂದರೆ ಅದರ ಹಿರಿಮೆ ಕಡಿಮೆಯಾಗಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ.
ಬಡತನ, ಬಡತನದಲ್ಲೂ ಸ್ವಾಭಿಮಾನ ಉಳಿಸಿಕೊಂಡು ಬದುಕಲು ಹೋರಾಡುವ ಜೀವ, ಜಗತ್ತನ್ನು ಸರಿಯಾಗಿ ಅರಿಯುವ ಮುನ್ನವೇ ಪ್ರಾಯದ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿ ಆಗುವ ಅಂತರ್ಜಾತೀಯ ವಿವಾಹ, ಆದ ಮೇಲೆ ತಿಳಿಯುವ ನೈಜತೆ, ಅದರಲ್ಲೂ ಗೌರವದ ಬದುಕು ಕಟ್ಟಿಕೊಳ್ಳುವ ಕಲೆ, ಬಿಡುತ್ತೇನೆಂದು ಬಿಟ್ಟು ಬಂದರೂ ಬಿಡದ ಜಾತಿ, ಶ್ರೀಮಂತಿಕೆಯ ಹಿಂದಿನ ಬಡತನ, ಉದಾರತೆ(ಲಿಬರಲ್)ಯೊಳಗಿನ ಸಂಕುಚಿತತೆ, ಎಲ್ಲವನ್ನೂ ತಮ್ಮ ಅಗತ್ಯಕ್ಕೆ, ತಮ್ಮ ಸುಭದ್ರತೆಗೆ ತಕ್ಕಂತೆ ಬದಲಾಯಿಸಿಕೊಳ್ಳುವ ರೀತಿ-ನೀತಿ ಹೀಗೆ ಸಂಸಾರದ ಹಲವು ಮುಖಗಳನ್ನು ನಮ್ಮ ಸುತ್ತಮುತ್ತ ನಡೆಯುವ ರೀತಿಯಲ್ಲೇ ಕಟ್ಟಿಕೊಡುವ ರೀತಿ ಅನನ್ಯ. ಹರೆಯದ ಕಾಮನೆ-ಭಾವನೆ, ಸಂಸಾರದ ಬಂಧನ, ತಾವು ಅದೇ ತಪ್ಪನ್ನು ಎಸಗಿದ್ದರೂ ಅದು ತಪ್ಪಲ್ಲವೆಂಬ ಭಾವ, ಇನ್ನೊಬ್ಬರು ಅದೇ ತಪ್ಪು ಮಾಡಿದಾಗ ಮಹಾಪರಾಧ ಎನ್ನುವಂತೆ ಬಿಂಬಿಸುವ ಮಾನವ ಸಹಜ ಸ್ವಭಾವ, ಶೀಲ ಎಂಬ ಪದಕ್ಕೆ ಅರ್ಥವೇ ತಿಳಿಯದ-ಉಳಿಯದ ಪೀಳಿಗೆಯ ಮಾನಸಿಕತೆ ಮತ್ತು ಈ ಎಲ್ಲವುಗಳನ್ನೂ ಆಯಾ ಪಾತ್ರಗಳಿಗೆ ತಕ್ಕಂತೆ ಅವುಗಳಿಂದಲೇ ವಿಮರ್ಶೆಗೊಳಪಡಿಸುವ, ಹಾಗೆ ಮಾಡಿಕೊಂಡು ಯಾವುದೋ ಒಂದು ಎಳೆಯನ್ನು ಹಿಡಿದು ತನ್ನ ಕಾರ್ಯ ಸರಿಯಾದುದು ಎಂದು ಸಮಾಧಾನಪಡಿಸಿಕೊಳ್ಳುವ ಮನುಜ ಸ್ವಭಾವ ಇವೆಲ್ಲವೂ ಅವರ ಎಂದಿನ ಸಾಹಿತ್ಯದ ಶೈಲಿಯಂತೆ ಅನಿಸುತ್ತದೆ.
ಅದಕ್ಕಿಂತಲೂ ಸ್ವಲ್ಪ ಹೆಚ್ಚಾಗಿ ಎದ್ದು ಕಾಣುವುದು ವಿಜ್ಞಾನ-ವೇದಾಂತದ ನಡುವಿನ ಸಂವಾದ, ಚರ್ಚೆ. ವಿಜ್ಞಾನಿಯೊಬ್ಬನ ತಹತಹಿಕೆ, ಉಳಿದ ಜಗತ್ತು ಅವನನ್ನು ನೋಡುವ-ಕಾಡುವ-ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುವ ರೀತಿ, ನ್ಯಾಯನ್ಯಾಯಗಳನ್ನು ಮೀರಿದ ಕಾರ್ಪೋರೇಟ್ ಜಗತ್ತಿನ ಯಥಾವತ್ ಚಿತ್ರಣ, ನ್ಯಾಯ ವ್ಯವಸ್ಥೆಯ ಲೋಪ ಇವೆಲ್ಲವೂ ಕಾದಂಬರಿಕಾರನೊಬ್ಬ ಕಾಲದೊಡನೆ ಹೇಗೆ ಆಧುನೀಕರಿಸಿಕೊಳ್ಳುತ್ತಾ(ಅಪ್ ಡೇಟ್) ಸಾಗಬೇಕು, ಅವನು ಪ್ರಸಕ್ತ ಕಾಲದಲ್ಲಿಯೇ ಇರಬೇಕು, ನೈಜತೆಗೆ ಹತ್ತಿರವಾಗಿರಬೇಕು ಎನ್ನುವುದರ ದ್ಯೋತಕವಾಗಿ ಕಾಣ ಸಿಗುತ್ತವೆ. ಆಗ ಮಾತ್ರ ಅದು ಗಂಭೀರ ಓದುಗರನ್ನು ಸೆಳೆಯುವುದಲ್ಲವೇ?
ಇವೆಲ್ಲವೂ ಅವರ ಹಿಂದಿನ ಕಾದಂಬರಿಗಳಲ್ಲಿ ನಾವು ಗುರುತಿಸಿದ್ದೇ. ಆದರೆ ಇದಕ್ಕಿಂತ ಹೊರತಾಗಿ ಇಲ್ಲಿ ಎತ್ತರದಲ್ಲಿ ಕಾಣಸಿಗುವುದು ಕಾದಂಬರಿಯ ಕಥಾವಸ್ತು. ಅದು ಎತ್ತರದಲ್ಲೇ ಇರಬೇಕು ಅನ್ನಿ. ಆದರೆ ಇಲ್ಲೊಂದು ವಿಶೇಷವಿದೆ. ಬಡತನದ ಬೇಗೆಯಲ್ಲಿ ಹುಟ್ಟಿ, ಅದರ ಬವಣೆಗಳನ್ನು ನೋಡುತ್ತಲೇ ಅಂತರ್ಮುಖಿಯಾಗಿ ಜೀವನದ ಪಾಠಗಳನ್ನು ಕಲಿಯುತ್ತಾ ಪ್ರತಿಯೊಂದು ಬಂಧನಕ್ಕೂ ಸಿಕ್ಕಿ ಹಾಕಿಕೊಂಡು ಮತ್ತೆ ಅದನ್ನೇ ಪ್ರಯತ್ನಪೂರ್ವಕವಾಗಿ, ನಿರ್ದಾಕ್ಷಿಣ್ಯವಾಗಿ ಕಳಚುತ್ತಾ ಎತ್ತರೆತ್ತರಕ್ಕೆ ಏರುವ ಕಥಾನಾಯಕನ ವ್ಯಕ್ತಿತ್ವ. ಕಾದಂಬರಿ ಆರಂಭವಾಗುವುದೇ "ಇರುವುದು ಒಂದೇ ಆತ್ಮ; ಒಂದು ದೇಹದಿಂದ ಆತ್ಮದಲ್ಲಿ ಉತ್ಪತ್ತಿಯಾದ ಸ್ಮೃತಿಯನ್ನು ಇನ್ನೊಂದು ದೇಹ ಗಳಿಸಬಹುದು" ಎನ್ನುವ ಸಂವಾದವೇ ಕಾದಂಬರಿಯ ವಸ್ತು ಇದೇ ಎನ್ನುವ ನಿರೀಕ್ಷೆಯನ್ನು ಮೂಡಿಸುತ್ತದೆ. ಬಾಲ್ಯದಲ್ಲಿಯೇ ಸ್ಮೃತಿಯಲ್ಲಿದ್ದುದನ್ನು ನಿದ್ದೆಗಣ್ಣಿನಲ್ಲೇ ಒರೆಯುವ ರೀತಿ ಮುಂದಿನ ವ್ಯಕ್ತಿತ್ವದ ಚಿತ್ರಣವನ್ನು ಕೊಡುತ್ತದೆ. ಜನ್ಮದಾತರ ಬಂಧನ, ಸಂಪರ್ಕಕ್ಕೆ ಬಂದವರ ಬಂಧನ ಇವೆಲ್ಲವೂ ಆತನನ್ನು ಕಾಡುತ್ತದೆ. ಎಲ್ಲವನ್ನೂ ಕಳಚಿ ಎಲ್ಲದರೊಳಗೊಂದಾದ ಬುದ್ಧನಂತೆ ಕಥಾನಾಯಕನ ಪಯಣವಾದರೂ ಅನಿರೀಕ್ಷಿತವಾದ, ಅನಗತ್ಯವಾದ ಬಂಧನಕ್ಕೆ ಸಿಲುಕಿ ಅವುಗಳನ್ನು ಕಳಚಿಕೊಳ್ಳುತ್ತಾ ಆತ ಸಾಗುತ್ತಾನೆ. ಬ್ರಹ್ಮವನ್ನು ವಿದ್ಯುತ್ತಿಗೆ ಸಮೀಕರಿಸುತ್ತಾ ಜೀವನದ ಸತ್ಯದ ಹುಡುಕಾಟದಲ್ಲಿ ಸಾಗುವಾಗ ಶಂಕರರು, ಉಪನಿಷತ್ತುಗಳು ಸಹಾಯಕವಾಗುತ್ತದೆ. ದ್ವೈತ ಮರೆಯಾಗುತ್ತದೆ. ತನ್ನೊಡನೆ ಆಪ್ತರು ಎಂದೆಣಿಸುವವರೂ ತಮ್ಮ ಸ್ವಾರ್ಥಕ್ಕಾಗಿ ಅಥವಾ ಬದುಕುವ ಅಗತ್ಯ(ದೇಹ ಭಾವ)ಕ್ಕಾಗಿ ಹೇಳುವ ಸುಳ್ಳು, ಆಡುವ ಕಾಪಟ್ಯವನ್ನು ಆ ಬಂಧನವನ್ನು ಕಳಚಿಕೊಳ್ಳುವ ಸಮಯದಲ್ಲಿ ನಿಷ್ಠುರವಾಗಿ ಹೇಳಿ ಮಾಯೆಯ ಅಥವಾ ಅವಿದ್ಯೆಯ ಪೊರೆಯನ್ನು ಕಳಚಿ ಒಗೆದು ಗಮ್ಯ ಸೇರುವ(ಇದ್ದುದೇ ಅಲ್ಲೇ ಅಲ್ಲವೇ, ಇನ್ನು ಗಮ್ಯವೇನು ಬಂತು) ಅಂದರೆ ತನ್ನನ್ನು ತಾನು ಅರಿತುಕೊಳ್ಳುವ ಪ್ರಕ್ರಿಯೆ ನಿಜವಾಗಿಯೂ ಅದ್ಭುತ.
"ಗೀತೆಯನ್ನು ಯಾರು ಬರೆದರು ಎನ್ನುವುದು ಮುಖ್ಯವಲ್ಲ. ಅದು ಮನುಷ್ಯನ ಒಟ್ಟು ಸ್ಮೃತಿ. ಒಬ್ಬನಿಗೆ ಅದು ಹೊಳೆದಿದೆ ಎಂದರೆ ಈ ವಿಶ್ವಾತ್ಮದಲ್ಲಿ ಸ್ಥಿತವಾಗಿದೆ ಎಂದರ್ಥ. ನಮ್ಮೆಲ್ಲರ ಆಲೋಚನೆ, ಸಂಶೋಧನೆ, ಆತ್ಮಶೋಧನೆಗೆ ಈ ಎಲ್ಲರ ಒಟ್ಟು ಸ್ಮೃತಿಯೇ ಕಾರಣವಾಗಿರುತ್ತದೆ. ಹೀಗೆ ಎತ್ತರದ ತರಂಗದಲ್ಲಿ ಉಂಟಾದ ಮಾತನ್ನು ನನ್ನ ಒಳಸ್ಮೃತಿ ಗ್ರಹಿಸಿ ಇಟ್ಟುಕೊಂಡಿದೆ. ಯಾವುದೋ ಒಂದು ತಂತು ಮಿಡಿದಾಗ ಅಪ್ರಯತ್ನವಾಗಿ ಅದು ಹೊರಬರುತ್ತದೆ. ನಮ್ಮೆಲ್ಲರ ಸ್ಮೃತಿಯೂ ಒಂದೇ. ಆದರೆ ಅದನ್ನು ಗ್ರಹಿಸುವ ಸಾಮರ್ಥ್ಯ ಕೆಲವು ದೇಹಕ್ಕೆ ಮಾತ್ರ ಇರುತ್ತದೆ" ಎಂದು ತನ್ನ ಬಾಲ್ಯದ ಬಡಬಡಿಸುವಿಕೆಗೆ ಕೊಡುವ ಕಾರಣ; "ವಿದ್ಯುತ್ ವಿದ್ಯುತ್ತಿನಲ್ಲಿ ಲೀನವಾಗುತ್ತದೆ. ಸ್ವರೂಪ ಬದಲಾಯಿಸುತ್ತದೆ, ವಿವಿಧ ರೂಪ ತಾಳುತ್ತದೆ, ಲೋಕೋಪಯೋಗಿಯಾಗುತ್ತದೆ. ಆದರೆ ವಿದ್ಯುತ್ ಎರಡಲ್ಲ; ಬ್ರಹ್ಮವೂ! ಆತ್ಮವೂ!" ಎನ್ನುವ ವಿಚಾರ; "...ನಾನು ಋತಕ್ಕೆ ಮೊದಲು ಹುಟ್ಟಿದವ, ದೇವತೆಗಳಿಗಿಂತ ಮೊದಲಿನವನು...ಅಹಮನ್ನಮಹಮನ್ನಮಹಮನ್ನಮ್...ಯೋ ಮಾ ದದಾತಿ ಸ ಇದೇವ ಮಾವಾಃ ಅಹಮನ್ನಮದಂತ ಮಾದ್ಮಿ...ಅಹಂ ವಿಶ್ವ ಭುವನಮಭ್ಯಭವಾಮ್...ಸುವರ್ಣ ಜ್ಯೋತಿಃ" ಎನ್ನುವ ಜ್ಞಾನಗಾನ; ಸ್ಮೃತಿಯೊಂದಿಗಿನ ಸಂವಹನ.....ವ್ಹಾಹ್ "ಯಾನ"ದ ನಂತರ ಕಾಯುತ್ತಿದ್ದ "ಓದು" ಇದು.
"ನಾನು ಯಾರು?" ಎನ್ನುವ ಹುಡುಕಾಟವನ್ನು ಕೊನೆಗೆ ಅದರ ಉತ್ತರವನ್ನು ಆತ್ಮಕ್ಕೆ ಅನ್ವರ್ಥವಾದ "ಅವಿನಾಶ" ಎನ್ನುವ ಹೆಸರಿನಲ್ಲಿ-ಪಾತ್ರದಲ್ಲಿ ಕಟ್ಟಿಕೊಟ್ಟು ಲೇಖಕರು ಗೆಲ್ಲುತ್ತಾರೆ. "ಯಾನ"ದಲ್ಲಿ ಶ್ರೀ ಎಸ್.ಎಲ್.ಭೈರಪ್ಪರು ಕಂಡುಕೊಂಡ ಸತ್ಯಕ್ಕೆ "ಗ್ರಸ್ತ"ದಲ್ಲಿ ಕರಣಂರು ಪ್ರಾಯೋಗಿಕ ಅಂತ್ಯ ಕೊಟ್ಟಂತೆ ಅನಿಸಿತು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರೇ ಕಾದಂಬರಿಯಲ್ಲಿ ಒಂದು ಸನ್ನಿವೇಶದಲ್ಲಿ ಕಥಾನಾಯಕನಿಂದ ಹೇಳಿಸಿದಂತೆ "ಇದು ಜ್ಞಾನಿಯ ಏಕತ್ವದ ಗಾನ!".
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ