ಪುಟಗಳು

ಬುಧವಾರ, ಮೇ 8, 2019

ಏಕತ್ವದ ಧೀಶಕ್ತಿ - ಜಗವ ಬೆಳಗಿದ ಆತ್ಮಜ್ಯೋತಿ

ಏಕತ್ವದ ಧೀಶಕ್ತಿ - ಜಗವ ಬೆಳಗಿದ ಆತ್ಮಜ್ಯೋತಿ
            ಕಿಂ ಜ್ಯೋತಿಸ್ತವ ಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ
ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ |
ಚಕ್ಷುಸ್ತಸ್ಯ ನಿಮೀಲನಾದಿ ಸಮಯೇ ಕಿಂ ಧೀರ್ಧಿಯೋದರ್ಶನೇ
ಕಿಂ ತತ್ರಾಹಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ ||
ಗುರು: ಯಾವುದು ಬೆಳಕು ನಿನಗೆ? ಶಿಷ್ಯ: ಹಗಲಿನಲ್ಲಿ ನನಗೆ ಸೂರ್ಯನೇ ಬೆಳಕು, ರಾತ್ರಿ ಚಂದ್ರ, ದೀಪ ಇತ್ಯಾದಿಗಳು. ಗುರು: ಸೂರ್ಯ,ಚಂದ್ರ, ದೀಪಗಳನ್ನು ನೋಡಲು ಯಾವುದು ಬೆಳಕು? ಶಿಷ್ಯ: ಅವುಗಳನ್ನು ನೋಡಲು ಕಣ್ಣೇ ನನಗೆ ಬೆಳಕು. ಗುರು: ಕಣ್ಣುಮುಚ್ಚಿದಾಗಲೂ ವಸ್ತು ಗೋಚರಿಸುತ್ತದೆ. ಕಣ್ಣು ಮುಚ್ಚಿದಾಗ ಬೆಳಕು ಕೊಡುವುದಾವುದು? ಶಿಷ್ಯ: ಅರಿಯುವ ಮನಸ್ಸೇ ಬೆಳಕು. ಗುರು: ಹಾಗೆ ಅರಿಯಲು ಮನಸ್ಸಿಗೆ ಯಾವುದು ಬೆಳಕು? ಮನಸ್ಸಿಗೂ ಅರಿವಾಗುವುದು ಸ್ವಯಂಜ್ಯೋತಿಯಾದ ಆತ್ಮನಿಂದ. ಅಂದರೆ ಎಲ್ಲಾ ಬೆಳಕುಗಳಿಗೂ ಬೆಳಕು ನಾನೇ(ಆತ್ಮನು, ಬ್ರಹ್ಮವು, ಬೆಳಕಿನ ಬೆಳಕು). ಸಕಲ ಶಾಸ್ತ್ರಗಳೂ, ಸಕಲ ಉಪನಿಷತ್ತುಗಳ ರಹಸ್ಯವನ್ನೊಳಗೊಂಡ, ಏಕಶ್ಲೋಕೀ ಎಂದೇ ಪ್ರಸಿದ್ಧವಾದ ಶ್ರೀಶಂಕರ ಭಗವತ್ಪಾದರ ರಚನೆ ಇದು. ಮಾತ್ರವಲ್ಲ ಶಂಕರರೆಂದರೆ ಯಾರು, ಏನು, ಅವರ ವಿದ್ವತ್ತೇನು, ಸಾಧನೆಯೇನು ಎಂದು ಒಂದೇ ಶ್ಲೋಕದಲ್ಲಿ ಬಿತ್ತರಿಸುವ ಆತ್ಮಸ್ವರೂಪ ಕಥನ ಇದು.

              ತಾಯಿಯ ಹಾಲಿನೊಂದಿಗೆ ಅವನು ಸಮಸ್ತ ವಿದ್ಯೆಯನ್ನು ಕುಡಿದಂತೆ ತೋರುತ್ತಿತ್ತು! ಉಣಬಡಿಸುವ ಪ್ರಕೃತಿಯೇ "ಅರಿವ"ನ್ನು ದಯಪಾಲಿಸುತ್ತದೆ. ಪ್ರಕೃತಿಯ ಕರೆಗೆ ಓಗೊಳ್ಳಬೇಕು, ತೆರೆದುಕೊಳ್ಳಬೇಕು. ಹೃದಯ ಬುದ್ಧಿಗಳೆರಡನ್ನೂ ತೆರೆದು ತೋರುವವನಿಗೆ "ಅರಿವು" ಆಗಲೇಬೇಕು. ತಾಯಿ ಎಂದರೆ ಮಾತೃಭೂಮಿ; ತಾಯಿಯ ಹಾಲು ಎಂದರೇನು? ಅದು ಮಾತೃಭೂಮಿಯ ಋಣ! ಅರಿವನ್ನು ಪಡೆವ ನಡೆಯನ್ನು ಮಣ್ಣಿನೊಡನೆ ಜೋಡಿಸಿದ ಬಗೆ ಇದು! ವಿದ್ಯೆ, ಬುದ್ಧಿಗೂ ಹೃದಯಕ್ಕೂ ನಾಟಬೇಕಾದರೆ ಮಣ್ಣಿಗಿಳಿಯಬೇಕು. ಎಂತಹಾ ಮಣ್ಣು? ಪವಿತ್ರ ಮಾತೃಭೂಮಿಯ ಮಣ್ಣು. ಅದೇ ಉದ್ದೇಶದಿಂದಲೇ  ಪರಿವಾರದ ಪ್ರೇಮವೆಂಬ ನದಿಯಲ್ಲಿ ಸ್ವಹಿತದ ಮೊಸಳೆಯ ಬಾಯಿಂದ ತಪ್ಪಿಸಿಕೊಂಡು ತಾಯಿ ಆರ್ಯಾಂಬಾಳಿಂದಲೇ ಅನುಮತಿ ಹೊರಡಿಸಿಕೊಂಡು ಆರ್ಯಮಾತೆಯ ಸೇವೆಗಾಗಿ ನದಿಯಿಂದ ಸಂನ್ಯಾಸಿಯಾಗಿ ಹೊರಬಿದ್ದ ಆರ್ಯಪುತ್ರ. ನಶ್ವರವಾದ ಸಂಸಾರ ಸಾಗರದಿಂದ ಹನಿ ಬಿಂದೊಂದು ಹೊರಬಿದ್ದು ಅಮೃತವಾಗಲು ಹೊರಟಿತ್ತು! ಗೋಕರ್ಣದ ಬಳಿ ಬಂದಾಗ ಕಾಲಟಿಯ ಸಹಪಾಠಿ ವಿಷ್ಣುಶರ್ಮನ ಕಣ್ಣಿಗೆ ಬಿದ್ದ. "ಧ್ರುವನಂತೆ ಕಾಡಿನಲ್ಲಿ ತಪಸ್ಸನ್ನಾಚರಿಸಲು ಹೊರಟೆಯೇನು? ಉಳಿದ ವರ್ಣಾಶ್ರಮಗಳನ್ನು ಪಾಲಿಸದೇ ನೇರವಾಗಿ ಸಂನ್ಯಾಸ ಸ್ವೀಕರಿಸುವುದು ಎಷ್ಟು ಸಮಂಜಸ? ನಾವೇ ರಚಿಸಿಕೊಂಡ ನಿಯಮಗಳನ್ನು ನಾವೇ ಪಾಲಿಸದಿದ್ದರೆ ಅಂತಹಾ ನಿಯಮಗಳಿಂದ ಉಪಯೋಗವಾದರೂ ಏನು?" ಎನ್ನುವ ವಿಷ್ಣುಶರ್ಮನ ಗೊಂದಲಕ್ಕೆ "ಸಂಸಾರಬಂಧನದಲ್ಲಿ ಸಿಲುಕಿದರೆ ಗುರಿಯನ್ನು ಸೇರಲಾಗದು. ಒಂದು ಮಹತ್ತರ ಉದ್ದೇಶವನ್ನು ಈಡೇರಿಸುವಲ್ಲಿ ವ್ಯವಸ್ಥೆ ಮತ್ತು ನಿಯಮಗಳು ಉಪಯೋಗವಾಗುತ್ತವೆ. ಅವು ಸಾಧನಗಳೇ ಹೊರತು ಸಾಧ್ಯಗಳಲ್ಲ. ಅವಲ್ಲದೆಯೂ ಅನೇಕ ದಾರಿಗಳಿವೆ. ಸಮಾಜವನ್ನು ಉದ್ಧರಿಸಲೆಂದೇ ತನ್ನ ಗುರಿಯೆಡೆಗೆ ಬದ್ಧನಾಗಿ ಸಾಗುವ ವ್ಯಕ್ತಿಯಿಂದ ಸಮಾಜಕ್ಕೆ, ಅದರ ಈಗಿನ ವ್ಯವಸ್ಥೆಗೆ ಹಾನಿಯಾಗದು.” ಎಂದು ಸಮಾಧಾನಿಸುತ್ತಾರೆ ಶಂಕರರು. ನಿಜ, ಆ ಸಂನ್ಯಾಸದಲ್ಲಿ ಪ್ರತ್ಯೇಕತೆಯಿರಲಿಲ್ಲ; ಎಲ್ಲರೂ ನನ್ನವರು ಎನ್ನುವ ಆತ್ಮೀಯತೆ ಇತ್ತು. ಅಲ್ಲಿ ಮೋಹ, ಬಂಧನಗಳಿರಲಿಲ್ಲ; ಪ್ರೀತಿಯಿತ್ತು. ಅದರಲ್ಲಿ ಸಂಕುಚಿತತೆಯಿರಲಿಲ್ಲ; ಹೃದಯ ವೈಶಾಲ್ಯತೆಯಿತ್ತು.

              ಗುರು ಗೋವಿಂದನ ಪಾದ ಒದಗಿತ್ತು. ಕೆಲದಿನಗಳ ಬಳಿಕ ಬಲಾಹಕನೇ ವ್ಯಾಕುಲಗೊಂಡಿದ್ದ. ಅವನ ಕ್ರೋಧಕ್ಕೆ ಸಿಡಿಲಾರ್ಭಟವೇ ಸಾಕ್ಷಿಯಾಗಿತ್ತು. ರಣಭೀಕರ ವರ್ಷಧಾರೆ, ಕೋಲ್ಮಿಂಚಿನ ನಾಟ್ಯ ಮೇಳೈಸಿ ರುದ್ರತಾಂಡವವೊಂದು ನಡೆದಿತ್ತು. ಧಾರಿಣಿಗೆ ತನ್ನ ಹೆಸರಿನ ಬಗೆಗೇ ಅನುಮಾನ ಹುಟ್ಟಿತ್ತು! ನರ್ಮದೆ ಉಕ್ಕಿ ಹರಿದಿದ್ದಳು. ಅಮರಕಾಂತದ ಪರ್ಣಕುಟೀರದಲ್ಲಿ ಕುಳಿತ ಆಚಾರ್ಯ ಶಂಕರರು ನಿರ್ಲಿಪ್ತರಾಗಿ ನರ್ಮದೆಯ ರಣಭೀಷಣ ಓಟವನ್ನು ನೋಡುತ್ತಿದ್ದರು. ಯಾವಾಗ ನೀರಿನಲ್ಲಿ ತಮ್ಮ ಸಂಪತ್ತುಗಳ ಜೊತೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನತೆಯನ್ನು ಕಂಡರೋ ಯಾವಾಗ ನೀರಿನ ಸೆಳವಿಗೆ ಸಿಕ್ಕ ಗೋವುಗಳ "ಅಂಬಾ" ಎನ್ನುವ ಆರ್ತನಾದ ಅವರ ಕರ್ಣಪಟಲಗಳನ್ನು ಈಟಿಯಂತೆ ಇರಿಯಿತೋ ಆಗ ಶಂಕರರ ಎದೆ ತಲ್ಲಣಿಸಿತು. ಅವರ ಅಂತರಾಳದಿಂದ ನರ್ಮದಾಷ್ಟಕವೊಂದು ಹೊರಬಂದು ನರ್ಮದೆಯನ್ನು ಶಾಂತಗೊಳಿಸಿತು. 

               ಶಂಕರರದ್ದು ಬರಿಯ ಬೋಧನೆಯಲ್ಲ. ಅವರು ಪ್ರತಿಯೊಂದನ್ನು ಆಚರಿಸಿ ತೋರಿದರು. ತಾಯಿಯ ವ್ರತ ಪೂರ್ಣಗೊಳಿಸಲು ಪೂರ್ಣಾ ನದಿಯನ್ನು ತಾಯ ಕಾಲ ಬಳಿ ಹರಿವಂತೆ ಮಾಡಿದರು. ಚಾಂಡಾಲನನ್ನೇ ಗುರುವೆಂದು ಬಗೆದು ಮನೀಷಪಂಚಕವನ್ನು ರಚಿಸಿದರು. ಅಕ್ಷಯ ವಟವೃಕ್ಷದ ಕೆಳಗೆ ಜನರ ಅನಾದರಣೆಗೊಳಗಾಗಿ ಬಿದ್ದಿದ್ದ ಕುಷ್ಠ ರೋಗಿಯನ್ನು ಉದ್ಧರಿಸಿ ಶಿಷ್ಯನನ್ನಾಗಿ ಮಾಡಿಕೊಂಡರು. ಅವನು ಉದಂಕನೆಂದೇ ಹೆಸರುವಾಸಿಯಾದ. ಅವರಲ್ಲಿ ಶ್ರದ್ಧೆಯನ್ನಿಟ್ಟು ನಡೆದು ಬಂದ ಪದ್ಮಪಾದನ ಪಾದಗಳಿಗೆ ಅಗಾಧ ಜಲರಾಶಿಯ ಮಡುವಿನಲ್ಲಿ ಪದ್ಮಪುಷ್ಪಗಳೇ ಆಸರೆಯಾದವು. ಮೀಮಾಂಸಕ ಪ್ರಭಾಕರಾಚಾರ್ಯನನ್ನು ಗೆದ್ದು ಶಿಷ್ಯನನ್ನಾಗಿ ಸ್ವೀಕಾರ ಮಾಡಿಕೊಂಡಾಗಲೇ ಆತನ ಮಗ ಪೃಥ್ವೀಧರನನ್ನು ಉದ್ಧರಿಸಿ ಕೈಯಲ್ಲಿಟ್ಟ ನೆಲ್ಲಿಕಾಯಿಯಂತೆ ಸುಸ್ಪಷ್ಟವಾಗಿದ್ದ ಅವನ ಜ್ಞಾನ ಪ್ರಭೆಯನ್ನು ಬೆಳಕಿಗೆ ತಂದರು. ಧರ್ಮದ ಅವನತಿಯನ್ನು ತಡೆಯಲು ಬೌದ್ಧರ ಪಾಳಯ ಹೊಕ್ಕು ಹೋರಾಡಿದ ಕುಮಾರಿಲ ಭಟ್ಟರನ್ನು ಅಡಿಗಡಿಗೆ ನೆನಪಿಸಿಕೊಳ್ಳುತ್ತಿದ್ದರು. ಧ್ಯೇಯದ ಒಳಿತು-ಕೆಡುಕಿನಿಂದ ಸಾಧನೆಯ ಒಳಿತು ಕೆಡುಕುಗಳನ್ನು ನಿರ್ಣಯಿಸಲಾಗುತ್ತದೆ. ಸಾಧನೆಗೆ ಯಾವುದೇ ಸ್ವತಂತ್ರ ಅಸ್ತಿತ್ವವಿಲ್ಲವೆನ್ನುವುದನ್ನು ಮರೆತ ಕುಮಾರಿಲರು ತುಷಾಗ್ನಿಯೊಳ ಹೊಕ್ಕಿದುದು ಅವರಿಗೆ ಆಘಾತ ತಂದಿತ್ತು. 

            ಯಾರ ಸೇವಕ-ಸೇವಕಿಯರು ದೇವವಾಣಿ ಸಂಸ್ಕೃತದಲ್ಲಿ ಉಲಿಯುವರೋ, ಯಾರ ಮನೆಯ ಗಿಳಿ ಮೈನಾಗಳೂ ಸಂಸ್ಕೃತದಲ್ಲಿ ತತ್ವಶಾಸ್ತ್ರದ ಚರ್ಚೆಗಳನ್ನು ನಡೆಸುವವೋ ಅಂತಹಾ ಮನೆಯ ಸಾಹುಕಾರನ ಪಾಂಡಿತ್ಯ, ಸನಾತನ ಪರಂಪರೆ ಹಿಂದೂ ಧರ್ಮದ ಪುನರುತ್ಥಾನಕ್ಕೆ ಉಪಯೋಗಕ್ಕೆ ಬರದೇ ಇದ್ದೀತೇ? ಅದು ತಮ್ಮ ಅಭಿಪ್ರಾಯಗಳಿಗೆ ಅಂಟಿಕೊಳ್ಳುವ ದುರಾಗ್ರಹದ ವಾದವಲ್ಲ; ಅದು ಸತ್ಯವನ್ನರಸುವ ಜಿಜ್ಞಾಸೆ! ಆ ವಾಗ್ವಿಲಾಸಕ್ಕೆ ಸರಸ್ವತಿಯೇ ಮೈವೆತ್ತಂತಿದ್ದ ಮಂಡನರ ಸತಿ ಭಾರತಿಯೇ ತೀರ್ಪುಗಾರಳಾಗಿದ್ದಳು. ಆ ವಾಗ್ವೈಭವಕ್ಕೆ ಶಂಕರನ ಜಟೆಯಿಂದ ಇಳಿದು ಬಂದ ಸ್ವಚ್ಛ ಸಲಿಲ ಗಂಗೆ ನೀಲ ಯಮುನೆಯೊಂದಿಗೆ ಸಾಕ್ಷಿಯಾಗಿದ್ದಳು. ಅದೆಷ್ಟೋ ದಿನಗಳವರೆಗೆ ನಡೆದ ಈ ಜ್ಞಾನಪ್ರವಾಹದಲ್ಲಿ ಅನೇಕರು ಮಿಂದೆದ್ದರು. ಅಲ್ಲಿ ಪರಂಪರೆಯ ಪ್ರವಾಹವಿತ್ತು; ಗಂಗೆಯ ಕಲರವವಿತ್ತು; ಸನಾತನತೆಯ ಪ್ರಭಾವವಿತ್ತು. ಶಂಕರರ ವಾದದಲ್ಲಿ ರಾಮನ ಆದರ್ಶ, ಕೃಷ್ಣನ ತಂತ್ರ, ಚಾಣಕ್ಯನ ನೀತಿಯಿತ್ತು. ರುದ್ರನ ತಾಂಡವದಂತೆ ಅದನ್ನು ಕಂಡ ವಿಷ್ಣುವಿನ ಮಿಡುಕದಂತೆ ಸ್ಪೂರ್ತಿಗೊಂಡು ಒಡಮೂಡಿದ ಪತಂಜಲಿಯ ದರ್ಶನದಂತೆ ಶಂಕರರ ವಾದ ಸಂಪನ್ನಗೊಂಡಿತು. ಇಡಿಯ ಭಾರತವನ್ನು ಅದ್ವೈತದ ಏಕಸೂತ್ರದಲ್ಲಿ ಅದು ಸೆರೆಹಿಡಿದಿತ್ತು. ಸ್ವತಃ ಜೈಮಿನಿಯೇ ಪ್ರತ್ಯಕ್ಷಗೊಂಡು ಶಂಕರರಿಗೆ ಉಘೇ ಉಘೇ ಎಂದ. "ತಮ್ಮ ಮನೆಯೋ ಎಂಬಂತೆ" ಮಂಡನನ ಮನೆಯೊಳಹೊಕ್ಕಿದ್ದ ಶಂಕರರು ಮಂಡನನ ಮನಸ್ಸನ್ನೇ ಆವರಿಸಿಬಿಟ್ಟಿದ್ದರು! ಶಂಕರರೆಂಬ ಸರಸಿರೆಯಲ್ಲಿ ಮೀಯಲಿಳಿದಿದ್ದ ಮಂಡನ ಕರ್ಮಕಾಂಡವನ್ನು ತ್ಯಜಿಸಿ ಸುರೇಶ್ವರಾಚಾರ್ಯನಾಗಿ ಮೇಲೆದ್ದಿದ್ದ. ಭಾರತಿಯ ಸಂದೇಹಕ್ಕೂ ಪರಿಹಾರವೊದಗಿತ್ತು.

               ತತ್ತ್ವದಿಂದ,ಪರಂಪರೆಯಿಂದ "ಶೂನ್ಯ"ವಾಗಿದ್ದ ಹೃದಯ ತಕ್ಷಶಿಲೆಯಲ್ಲಿ ತರ್ಕಪಂಡಿತನ "ಪೂರ್ಣ"ವಾದಕ್ಕೆ ಸೋತು ಹೋಯಿತು. ಶಂಕರರ ವಿಜಯಗಾಥೆಯ ರಾಷ್ಟ್ರೀಯ ಅಲೆಯಲ್ಲಿ ಲಕ್ಷಾಂತರ ಬೌದ್ಧರು ಮಜ್ಜನಗೈದರು. ಮನೆಯಿಂದ ಮುನಿಸಿಕೊಂಡು ಹೋದ ಬಾಲಕನನ್ನು ಸ್ವಾಮಿ ಶಂಕರರು ಮರಳಿ ಮನೆಗೆ ಕರೆತಂದರು. ನಿರ್ವ್ಯಾಜ ಪ್ರೇಮದಿಂದ ವಿಶಾಲ ಹೃದಯದಿಂದ ಎಲ್ಲರೊಡನೆ ಬೆರೆಯುತ್ತಿದ್ದ ಕಾರಣದಿಂದಲೇ ಅವರ ಸಂಪರ್ಕಕ್ಕೆ ಬಂದ ಎಲ್ಲರ ಹೃದಯದಲ್ಲೂ ಶಂಕರರಿಗೊಂದು ಅಪೂರ್ವ ಸ್ಥಾನ ಭದ್ರಗೊಳ್ಳುತ್ತಿತ್ತು. ತಮ್ಮ ದೇವ-ದೇವಿಯರೇ, ಪೂಜಾಕ್ರಮಗಳೇ ಶ್ರೇಷ್ಠ ಎಂದೇ ಪರಿಗಣಿಸುತ್ತಿದ್ದವರೆಲ್ಲಾ ಶಂಕರರನ್ನು ಭೇಟಿಯಾದ ಮಾತ್ರಕ್ಕೆ ತಮ್ಮ ಸಂಕುಚಿತತೆಯ ಪರಿಧಿಯನ್ನು ಕಿತ್ತೆಸೆದು ಬಿಟ್ಟರು. ವಿರೋಧ ಭಾವನೆಗಳನ್ನು ಹೊತ್ತು ಬಂದವರೆಲ್ಲಾ ಶಂಕರರ ಅನುಯಾಯಿಗಳಾಗಿ ಬದಲಾದರು. ಶಂಕರರನ್ನು ತಮ್ಮ ಮತಕ್ಕೆ ಸೆಳೆಯಲು ಯತ್ನಿಸಿದವರೆಲ್ಲಾ ಅವರ ಉದಾತ್ತತೆಯನ್ನು ಕಂಡು ನಾಚಿ ಮರಳಿದರು. ಶಂಕರರು ಯಾವ ದೇವರನ್ನೂ ಖಂಡಿಸಲಿಲ್ಲ. ಜನರ ಶ್ರದ್ಧೆಯನ್ನು ನಾಶಪಡಿಸಲಿಲ್ಲ.  ಅದರ ಕೇಂದ್ರವನ್ನಷ್ಟೇ ಬದಲಾಯಿಸಿದರು. ಯಾವ ದೇವರನ್ನು ಪೂಜಿಸಿದರೂ ಅದು ಅನಂತ ಜ್ಞಾನಸ್ವರೂಪಿಯ ಪೂಜೆಯೇ. ಚೇತನ-ಅಚೇತನಗಳಲ್ಲಿ ವ್ಯಾಪಿಸಿರುವುದು ಅದೇ. ತಮ್ಮದಾದ ಯಾವುದೊಂದನ್ನೂ ತ್ಯಜಿಸದೆ ಶ್ರೇಷ್ಠವಸ್ತುವೊಂದು ಜನರಿಗೆ ಸಿಕ್ಕಂತಾಯ್ತು; ತಮ್ಮ ಆರಾಧನೆಯ ಹಿಂದಿನ ಶ್ರೇಷ್ಠ ತತ್ತ್ವವೊಂದರ ಅರಿವಾಯಿತು. ಶಂಕರರು ಕೆಳಗಿನ ಸೋಪಾನದಲ್ಲೇ ಕೊಳೆಯುತ್ತಿದ್ದ ಇಡೀ ಸಮುದಾಯವನ್ನು ಮೇಲಕ್ಕೆತ್ತಿದರು. ಸಂಕುಚಿತ ಧ್ಯೇಯದೊಂದಿಗೆ ನೀರ ಹೊಂಡದಲ್ಲಿ ಕೊಳೆಯುತ್ತಿದ್ದ ಪ್ರವಾಸಿಗನನ್ನು ವಿಶಾಲ ರಾಷ್ಟ್ರಗಂಗೆಯಲ್ಲಿ ಮಿಂದೇಳುವ ಯಾತ್ರಿಕನನ್ನಾಗಿಸಿದರು! ದೇವ-ದೇವಿಯರೆಂಬ ಚಿಕ್ಕಪಾತ್ರೆಗಳಲ್ಲಿ ತುಂಬಲಾಗದೆ ಉಕ್ಕಿ ಇತರರ ಬಗ್ಗೆ ಟೀಕೆಯಲ್ಲೇ ಕಾಲವ್ಯರ್ಥ ಮಾಡುತ್ತಿದ್ದ ಹಿಂದೂ ಹೃದಯದ ಅಗಾಧ ಶ್ರದ್ಧೆ ವಿಶಾಲವಾದ ಏಕತ್ವದ ಅದ್ವೈತ ಸಾಗರದಲ್ಲಿ ಸ್ಥಾನ ಪಡೆಯಿತು. ಗಂಗೆಯಲ್ಲಿ ಹರಿವ ನೀರಿನಂತೆ ಧರ್ಮದ ಸನಾತನ ಸ್ರೋತ ನಿರಂತರವಾಗಿ ಹರಿಯಬೇಕೆಂಬುದೇ ಅವರ ಬಯಕೆಯಾಗಿತ್ತು. ಏಕತ್ವದ ಭಾವನೆ ಯುಗಯುಗಾಂತರದವರೆಗೂ ಹರಿಯುತ್ತಿರಬೇಕೆಂಬ, ವಿಚಾರ ಮತ್ತು ಆಚರಣೆಯ ಅಲೆ ಸದಾ ಇರುವಂತಹ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ದೇಶದ ನಾಲ್ದೆಸೆಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು.

              ಐದನೇ ವಯಸ್ಸಿನಲ್ಲಿ ಉಪನಯನ. ಎಂಟು ವರ್ಷ ತುಂಬುವಾಗ ಚತುರ್ವೇದಿ. ದ್ವಾದಶಕ್ಕೆ ಸಕಲ ಶಾಸ್ತ್ರಗಳ ಅಧ್ಯಯನ, ಷೋಡಷಕ್ಕೆ ಪ್ರಸ್ಥಾನ ತ್ರಯಗಳಿಗೆ ಭಾಷ್ಯರಚನೆ! ಅಖಂಡ ಭಾರತ ಭ್ರಮಣ! ಸರ್ವಜ್ಞ ಪೀಠಾರೋಹಣ! ಶಂಕರರು ಭುವಿಗಿಳಿದಾಗ ಭಾರತ ಕತ್ತಲಲ್ಲಿತ್ತು. ಅವರಲ್ಲಿ ಧನವಿರಲಿಲ್ಲ, ಜನಬಲವಿರಲಿಲ್ಲ, ರಾಜಾಶ್ರಯವಿರಲಿಲ್ಲ, ಆಯುಸ್ಸೂ ಇರಲಿಲ್ಲ. ಕೋಟಿ ಸಂಘಸಂಸ್ಥೆಗಳು ಮಾಡಲಾರದ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಿದರವರು. ಅವರದೆನ್ನುವುದೂ ಅವರಲ್ಲಿ ಏನೂ ಇರಲಿಲ್ಲ. ಆದರೆ ಸರ್ವ ಸಮಾಜವೇ ಅವರದಾಗಿತ್ತು. ಅವರ ಅಗಾಧ ಕಾರ್ಯಕ್ಕೆ ಉಘೇ ಉಘೇ ಎನ್ನುವುದು, ಅವರ ಅಪಾರ ಜ್ಞಾನಕ್ಕೆ "ಶರಣು" ಎನ್ನುವುದು, ಅವರು ರಚಿಸಿದ ಅಪಾರ ಜ್ಞಾನ ಭಂಡಾರಕ್ಕೆ "ಕೃತಜ್ಞ" ಎನ್ನುವುದು ಬಹು ಕಡಿಮೆಯದಾದೀತು. ಅವರ ಸತ್ತ್ವವನ್ನು ನಾವು ಅಳೆಯುವುದು ಅಳವಲ್ಲ! ಅದಕೆಂದೂ ಅಳಿವಿಲ್ಲ! ಅದು ಏಕತ್ವದ ಗಾನ!