ಪುಟಗಳು

ಗುರುವಾರ, ಜುಲೈ 31, 2014

ತಾಯಿ

ನಾಸ್ತಿ ಮಾತೃ ಸಮಾ ಛಾಯಾ ನಾಸ್ತಿ ಮಾತೃ ಸಮಾ ಗತಿಃ|
ನಾಸ್ತಿ ಮಾತೃ ಸಮಂ ತ್ರಾಣಂ ನಾಸ್ತಿ ಮಾತೃ ಸಮಾಪ್ರಿಯಾ|
ನಾಸ್ತಿ ವೇದಾತ್ಪರಂ ಶಾಸ್ತ್ರಂ ನಾಸ್ತಿ ಮಾತುಃ ಪರೋಗುರಃ||

ತಾಯಿಯಷ್ಟು ನೆರಳಂತೆ ಹೊಂದಿಕೊಳ್ಳುವವರು ಬೇರೆ ಯಾರೂ ಇಲ್ಲ. ಅವಳಷ್ಟು ಕಡೆಯವರೆಗೆ ಪ್ರೀತಿಸುವವರು ಯಾರೂ ಇಲ್ಲ. ಜೀವಕ್ಕೆ ಅವಳಷ್ಟು ಬಲಕೊಡುವವರು ಬೇರ್ಯಾರೂ ಇಲ್ಲ. ಅವಳಷ್ಟು ಸ್ವಾರ್ಥವಿಲ್ಲದ ಮಮತೆ ಇರುವವರು ಬೇರ್ಯಾರೂ ಇಲ್ಲ. ಹೇಗೆ ಶಾಸ್ತ್ರಗಳಲ್ಲಿ ವೇದಕ್ಕಿಂತ ಅತ್ಯುತ್ತಮ ಯಾವುದೂ ಇಲ್ಲವೋ ಅಂತೆಯೇ ಅವಳಂಥ ಶ್ರೇಷ್ಠ ಗುರು ಯಾರೂ ಇಲ್ಲ.

ಬುಧವಾರ, ಜುಲೈ 30, 2014

ಹರಿಯುತಿಹಳು ಶಾಲ್ಮಲಿ

ಈ ಕವಿತೆಗೆ ಪ್ರೇರಣೆಯಾದವಳು ಬೇರೆ ಯಾರೂ ಅಲ್ಲ "ಶಾಲ್ಮಲಿ"! ಶಾಲ್ಮಲಿ ಅಂದರೆ ಬೂರುಗದ ಮರವೆಂದು ಭಾವಿಸಬೇಡಿ. ಆಕೆಗೇನೂ ಹೆಸರಿರಲಿಲ್ಲ, ಹಿಂದೆ ಇದ್ದಿತೇನೋ... ಆದರೆ ಯಾರಿಗೂ ಗೊತ್ತಿರಲಿಲ್ಲ. ಆಕೆಯ ತಟ ನನ್ನ ಸಾಯಂ ಸಂಧ್ಯೆಯ ಪೀಠವಾದ ದಿನಗಳು ಹಲವು. ನನಗೆ ಈಜು ಕಲಿಸಿದ ಗುರು ಅವಳು. ನನ್ನ ಒಂಟಿತನದ ಬೇಸರ ನೀಗಿಸಿದವಳು ಅವಳು. ತನ್ನ ನೆರೆಯವರು ಬತ್ತಿದರೂ ವರ್ಷಪೂರ್ತಿ ಹರಿಯುವವಳು ಅವಳು. ನಮ್ಮ ಮನೆಯ ಸಮೀಪದ ಜೀವ ನದಿ ಅವಳು. ಹೀಗೇ ಒಮ್ಮೆ ಅವಳಿಗೇನಿದ್ದಿರಬಹುದು ಹೆಸರು, ಹೆಸರಿಲ್ಲದಿರೆ ಏನಿಡಬಹುದು ಎಂದು ಯೋಚಿಸುತ್ತಿದ್ದಾಗ ಥಟ್ಟನೆ ಹೊಳೆದ ಹೆಸರು "ಶಾಲ್ಮಲಿ"!

ಹರಿಯುತಿಹಳು ಶಾಲ್ಮಲಿ...

ನಗುನಗುತಲಿ ನಲಿನಲಿಯುತ
ವನಸಿರಿಯಲಿ ಮುಳುಗೇಳುತ
ಕರಿಶಿಲೆಗಳ ಮೇಲೇರುತ
ಕುಳಿಕುಳಿಯಲಿ ಬಿದ್ದೇಳುತ
||ಹರಿಯುತಿಹಳು ಶಾಲ್ಮಲಿ||

ಕಣಕಣದಲಿ ದಿವ್ಯೌಷಧ
ಒಡಲೊಳಗಿದೆ ಜೀವಾಮೃತ
ಚರಜೀವಿಗಳುದ್ದೀಪಿಸಿ
ಸ್ಥಿರಚರಗಳ ಉತ್ಪಾದಿಸಿ
||ಹರಿಯುತಿಹಳು ಶಾಲ್ಮಲಿ||

ಚೆಲುವೆ ಜವನಿಕೆಗೆ ಕನಸ ಕರುಣಿಸಿ
ಪ್ರಣಯ ಜೋಡಿಯ ಆಟ ಬೆಳೆಸಿ
ವಿರಹಿ ಬಾಲೆಯ ಉರಿಯ ಹೆಚ್ಚಿಸಿ
ಹೆಸರಿಟ್ಟವನ ಉಸಿರ ಉಳಿಸಿ
||ಹರಿಯುತಿಹಳು ಶಾಲ್ಮಲಿ||

ಶಿಲೆಯ ಬಲೆಯೊಳು ಬಿಳಿ ನೊರೆಯ ಆಟ
ಆಳ ಕುಳಿಯೊಳು ಸುಳಿಯ ಹೂಟ
ಶಿಖರದಂಚಲಿ ಧುಮ್ಮಿಕ್ಕುವ ಓಟ
ಧರಣಿ ಆಪೋಶನಗೈಯ್ಯುವ ಹಠ
||ಹರಿಯುತಿಹಳು ಶಾಲ್ಮಲಿ||

ಎಲ್ಲೋ ಹುಟ್ಟಿ ಎಲ್ಲೋ ಹರಿದೆ
ಇಲ್ಲೇ ನಿಂದಿರಲಾರದೆ
ಮನುಜ ಸ್ವಾರ್ಥವ ತಾಳಲಾರದೆ
ಕಣ್ಣೀರ್ಗರೆಯುತ ಓಡುವೆ
||ಹರಿಯುತಿಹಳು ಶಾಲ್ಮಲಿ||

ಉಳಿದುದೇನಿದೆ

ಬಹಳ ದಿವಸಗಳ ಬಳಿಕ ಗೀಚಿದ್ದೇನೆ...ವಿಪರ್ಯಾಸವೋ ವಿಶೇಷವೋ ತಿಳಿದಿಲ್ಲ, ಮನಸ್ಸು ಸ್ಥಿಮಿತದಲ್ಲಿಲ್ಲದಿರುವಾಗಲೇ ಬಂದ ಸಾಲುಗಳು(ಪೊಕ್ಕಡೆ ಮರ್ಲ್ ಮಾರಾಯರೇ)

ಮನವು ಸರಿಯಿಲ್ಲ
ತನುವು ಮೊದಲಿಲ್ಲ
ಬೆಳಕ ಸುಳಿವಿಲ್ಲ
ಯಾಕೋ ಅರಿವಿಲ್ಲ

ಕನಸು ಕಾಡಿದೆ
ಮನಸು ಒಡೆದಿದೆ
ತನುವು ಬಳಲಿದೆ
ಅನುವುದೇನಿದೆ

ನಯನ ಮುನಿದಿದೆ
ಕರ್ಣ ಕಠೋರವು
ಪರ್ಣಕುಟೀರದಿ
ಉಳಿದುದೇನಿದೆ!

ಭಾನುವಾರ, ಜುಲೈ 20, 2014

ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!

ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!
            ಭಾರತೀಯರು ತಮ್ಮಲ್ಲೇ ಹಿಮಾಲಯವಿದ್ದರೂ ಏರುವ ಸಾಹಸ ಪ್ರವೃತ್ತಿ ತೋರುವುದಿಲ್ಲ ಎಂಬ ಟೀಕೆಯೊಂದಿದೆ. ಆದರೆ  ವಿದೇಶಿಯರು ತಮ್ಮ ಸಾಹಸವನ್ನು ಜಗತ್ತಿಗೆ ತೋರ್ಪಡಿಸಲು "ಮೌಂಟ್ ಎವರೆಸ್ಟ್" ಏರಿದರೆ ಭಾರತೀಯರು ಭಕ್ತಿಯ ಗೌರೀಶಂಕರಕ್ಕೆ ಏರುತ್ತಾ ಅಮರನಾಥ-ಕೇದಾರ-ಬದರಿ-ಮಾನಸ-ಕೈಲಾಸವನ್ನೇ ಸಂದರ್ಶಿಸುತ್ತಾರೆ. ಹೌದು ಅಧ್ಯಾತ್ಮ ಭಾರತೀಯರಿಗೆ ಎಂತಹ ಸಾಹಸ ಪ್ರವೃತ್ತಿಯನ್ನಾದರೂ ತೋರಲು ಕಾರಣವಾಗುತ್ತದೆ.


ಅಮರನಾಥ!
              ಶಿವ ತನ್ನ ಶಿರದಲ್ಲಿದ್ದ ಚಂದ್ರನನ್ನು ಹಿಂಡಿ ಅಮೃತವನ್ನು ತೆಗೆದು ದೇವತೆಗಳಿಗೆ ಕೊಟ್ಟು ಅಮರರನ್ನಾಗಿಸಿದ ಸ್ಥಳ. ಆದ್ದರಿಂದಲೇ ಆತ ಅಮರನಾಥನೆನಿಸಿದ. ಶ್ರೀನಗರದಿಂದ 101 ಕಿ.ಮೀ. ಈಶಾನ್ಯಕ್ಕೆ ಸಮುದ್ರಮಟ್ಟದಿಂದ ಹದಿಮೂರು ಸಾವಿರ ಅಡಿಗಳಿಗೂ ಅಧಿಕ ಎತ್ತರದಲ್ಲಿರುವ ಪ್ರಕೃತಿ ನಿರ್ಮಿತ ಗುಹೆ ಅಮರನಾಥ. 50ಅಡಿ ಅಗಲ 55 ಅಡಿ ಉದ್ದ 45 ಅಡಿ ಎತ್ತರದ ಈ ಗುಹೆಯ ಉತ್ತರ ದಿಕ್ಕಿನ ಬಂಡೆಯಲ್ಲಿರುವ ರಂಧ್ರದಿಂದ ಜಿನುಗುವ ನೀರು ಶೈತ್ಯಾಧಿಕ್ಯದಿಂದ ಹೆಪ್ಪುಗಟ್ಟಿ ಶಿವಲಿಂಗದ ಆಕಾರ ಪಡೆಯುತ್ತದೆ. ಸುತ್ತಲೂ ಬೇಸಿಗೆಯಲ್ಲೂ ಹಿಮಚ್ಛಾದಿತವಾಗಿರುವ 5ಸಾವಿರ ಅಡಿಗಳಿಗೂ ಅಧಿಕ ಎತ್ತರದ ಶಿಖರಗಳು. ಶುಕ್ಲ ಪ್ರತಿಪದೆಯಿಂದ ಬೆಳೆಯತೊಡಗುವ ಹಿಮಲಿಂಗ ಪೌರ್ಣಿಮೆಯಂದು ಪೂರ್ಣವಾಗಿ ನಂತರ ಚಿಕ್ಕದಾಗತೊಡಗಿ ಅಮವಾಸ್ಯೆಯಂದು ಅದೃಶ್ಯವಾಗುತ್ತದೆ. ಶಿವಲಿಂಗದ ಎಡಪಕ್ಕದಲ್ಲಿ ಹೆಪ್ಪುಗಟ್ಟುವ ಇನ್ನೊಂದು ಸಣ್ಣ ಲಿಂಗವನ್ನು ಗಣೇಶಲಿಂಗವೆಂದೂ ಬಲಪಕ್ಕದಲ್ಲಿರುವ ಲಿಂಗಗಳನ್ನು ಪಾರ್ವತಿ ಹಾಗೂ ಭೈರವ ಎಂದೂ ಕರೆಯುತ್ತಾರೆ. ಗುಹೆಯ ಪಕ್ಕದಲ್ಲಿ ಅಮರಗಂಗೆಯೊಂದು ಹರಿದು ಬರುತ್ತದೆ. ಪಾರ್ವತಿಗೆ ರಾಮನಾಮ ಉಪದೇಶಿಸುವ ಸಲುವಾಗಿ ಪಹಲ್ ಗಾಂವ್ ದಾರಿಯಲ್ಲಿ ತನ್ನ ಗಣಗಳನ್ನು ಒಬ್ಬೊಬ್ಬರನ್ನಾಗಿ ತೊರೆದು ಕೊನೆಗೆ ಅಮರನಾಥ ಗುಹೆಯಲ್ಲಿ ಶ್ರಾವಣ ಪೌರ್ಣಿಮೆಯಂದು ರಾಮನಾಮ ಉಪದೇಶಿಸುತ್ತಾನೆ. ಆ ಸಂದರ್ಭದಲ್ಲಿ ಅಲ್ಲಿ ಪಾರಿವಾಳಗಳೆರಡು ಉಪಸ್ಥಿತವಿದ್ದವು. ಅಚ್ಚರಿಯೆಂದರೆ ಈಗಲೂ ಅಲ್ಲಿ ಎರಡು ಪಾರಿವಾಳಗಳು ಹಾಗೂ ಗೂಡೂ ಇದೆ.
             ಅಮರನಾಥನ ದರ್ಶನ ಮಾಡಲು ಎರಡು ಮಾರ್ಗಗಳಿವೆ. ಒಂದು ಅನುಪಮ ಪ್ರಕೃತಿ ಸೌಂದರ್ಯದ, ಸುಲಭವಾಗಿ ಸಂಚರಿಸಬಹುದಾದ ಪಹಲ್ ಗಾಂವ್ ದಾರಿ. ಅದು ಶಿವ ತನ್ನ ಗಣಗಳೊಡನೆ ಸಾಗಿದ ದಾರಿಯೂ ಹೌದು. ಶಿವ ನಂದಿಯನ್ನು ಬಿಟ್ಟ ಜಾಗ ಪಹಲ್ ಗಾಂವ್ ಅಥವಾ ಬೈಲ್ ಗಾಂವ್. ಪಹಲ್ ಗಾಂವ್ ನಿಂದ ಚಂದನವಾಡಿಗೆ ವಾಹನ ಸೌಕರ್ಯವಿದೆ. ಚಂದನವಾಡಿಯಿಂದ ಅಮರನಾಥ ಗುಹೆಗೆ ಇರುವ ದೂರ 34 ಕಿ.ಮೀ. ಅಡಿಗಡಿಗೆ ನದಿ, ಸರೋವರ, ಪರ್ವತ ಶಿಖರಗಳು ಸಿಗುವ ಈ ದಾರಿಯಲ್ಲಿ  ಪ್ರತಿಯೊಂದು ಪ್ರದೇಶವೂ ಐತಿಹಾಸಿಕ ಹಾಗೂ ಪ್ರೇಕ್ಷಣೀಯ. ದೇವ-ದಾನವರ ನಡುವಿನ ಕದನಕ್ಕೆ ಸಾಕ್ಷಿಯಾದ ಪಿಸ್ಸು ಘಾಟ್; ಶಿವ ತನ್ನ ಜೊತೆಯಿದ್ದ ನಾಗಗಳನ್ನು ಬಿಟ್ಟ ಸ್ಥಳ ನಾಗಕೋಟಿ; ಹೆಡೆಯೆತ್ತಿದ ಶೇಷನ ಆಕಾರದಲ್ಲಿರುವ ಪರ್ವತ ಹಾಗೂ ಶಿವ ತನ್ನ ಕೊರಳ ಬಳಸಿದ್ದ ಶೇಷನನ್ನು ತೊರೆದ ಎನ್ನಲಾಗುವ ಸುಂದರ ಸರೋವರವುಳ್ಳ ಶೇಷ ನಾಗ್; ಜೊತೆಯಾಗಿ ನಿಂತ ತ್ರಿಮೂರ್ತಿಗಳ ಪ್ರತಿರೂಪದ ಪರ್ವತಗಳು; ಅಮರನಾಥದ ದಾರಿಯಲ್ಲಿ ಸಿಗುವ ಅತೀ ಎತ್ತರದ(14500 ಅಡಿ) ಮಹಾಗುನುಸ್ ಅಥವಾ ಗಣೇಶ ಘಾಟ್; ಭೈರವಿ ಪರ್ವತದ ಅಡಿಯಲ್ಲಿರುವ, ಶಿವನ ಜಟೆಯಿಂದ ಹರಿದು ಬಂದವು ಎನ್ನಲಾದ ಪಂಚನದಿಗಳಿರುವ ಪಂಚತರಣಿ; ವಿಷಾದವೆಂದರೆ ಈ ಬಾರಿ ಹಿಮಪಾತದಿಂದಾಗಿ 5 ರಿಂದ 7 ಅಡಿ ಹಿಮಶೇಖರಣೆಯಾದುದರಿಂದ ಈ ದಾರಿಯಲ್ಲಿ ಯಾತ್ರೆಗೆ ಅವಕಾಶ ನೀಡಲಿಲ್ಲ. ಇನ್ನುಳಿದದ್ದು ಹದಿನಾರು ಕಿ.ಮೀ ನಡೆಯಬೇಕಾದ ಆದರೆ ಕ್ಲಿಷ್ಟಕರವಾದ ಬಾಲ್ತಾಲ್ ದಾರಿ. ಈ ಎರಡು ದಾರಿಗಳು ಒಂದಾಗುವ ಸ್ಥಳ ಸಂಗಮ. ಅಮರಗಂಗೆ ಹಾಗೂ ಪಂಚತರಣಿಗಳ ಸಂಗಮ ಸ್ಥಳವಿದು. ಇಲ್ಲಿಂದ ಅಮರನಾಥ ಗುಹೆಗೆ ಇರುವ ದೂರ ಮೂರು ಕಿ.ಮೀ. ಈ ಬಾರಿ ಕೊನೆಯ ಎರಡು ಕಿ.ಮೀ ದಾರಿ ಸಂಪೂರ್ಣ ಹಿಮಾವೃತವಾಗಿತ್ತು.
               ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಭೂಸ್ವರ್ಗ ಕಾಶ್ಮೀರದ ಮುಕುಟಮಣಿ ಅಮರನಾಥಕ್ಕೆ ಯೋಧಗಡಣದ ಕಾವಲಿನಲ್ಲೇ ಹೋಗಬೇಕೆಂದರೆ ಆಶ್ಚರ್ಯವಲ್ಲವೇ. ಭಯೋತ್ಪಾದಕರ ದಾಳಿಯ ಭಯ ಒಂದು ಕಡೆಯಾದರೆ ಕಡಿದಾದ ದಾರಿಯಲ್ಲಿ ಸಾಗುವಾಗಿನ ಕಾಲ್ತುಳಿತ-ಹವಾಮಾನ ವೈಪರೀತ್ಯ-ಭೂಕುಸಿತ-ಹಿಮಪಾತಗಳ ಭಯ. ಇವೆಲ್ಲವುಗಳಿಂದ ರಕ್ಷಣೆ ನೀಡುವವರು ನಮ್ಮ ಸೈನಿಕರೇ. ಕಡಿದಾದ ದಾರಿಯಲ್ಲಿ ಸಾಗುವಾಗ ಎಚ್ಚರತಪ್ಪಿದರೆ ಪ್ರಪಾತಕ್ಕೆ ಉರುಳುವುದು ಖಂಡಿತ. ಅದರಲ್ಲೂ ಪಾದಚಾರಿ ಯಾತ್ರಿಕರನ್ನು ತಳ್ಳಿಕೊಂಡೇ ಬರುವ ಪಲ್ಲಕಿ ಹೊರುವ ಹಾಗೂ ಕುದುರೆ ಸವಾರ ಕಾಶ್ಮೀರಿ ಮುಸ್ಲಿಮರು ಭಯ ಹುಟ್ಟಿಸಿಬಿಡುತ್ತಾರೆ. ಏಕಕಾಲಕ್ಕೆ ಮೂರು ಜನ ಸಾಗಬೇಕಾದ ದಾರಿಯಲ್ಲಿ ಆರು ಸಾಲುಗಳಲ್ಲಿ(ಕುದುರೆ, ಪಲ್ಲಕಿ, ಪಾದಚಾರಿಗಳು: ಆಗಮನ & ನಿರ್ಗಮನ) ಬಂದರೆ ಹೇಗಾದೀತು. ಕೆಲವು ಕಡೆ ಒಬ್ಬರೆ ಸಾಗಬೇಕಾಗುವ ಕಡಿದಾದ ದಾರಿ. ಸಮಧಾನದ ವಿಷಯವೆಂದರೆ CRPF ಯೋಧರು ಅಡಿಗಡಿಗೆ ನಿಂತಿದ್ದು ಯಾತ್ರಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆ. ಅಲ್ಲದೆ ಭಂಡಾರಗಳು ಇಲ್ಲದ ಕಡೆಯಲ್ಲಿ ನೀರು-ಆಹಾರಗಳನ್ನೂ ನೀಡುತ್ತಾರೆ. ಮುಂದೆ ಸಾಗಲಾರದೇ ಕುಸಿದು ಕುಳಿತವರನ್ನು ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿಸುತ್ತಾರೆ. ನಮ್ಮ ಯೋಧರಲ್ಲದಿದ್ದರೆ ಈ ಯಾತ್ರೆಯಲ್ಲಿ ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕಾಗಿ ಬರುತ್ತಿತ್ತೇನೋ? ಅಂತಹ ದಾರಿಯಲ್ಲಿ ಸಾಗುವಾಗ ಅಪ್ರತಿಮ ಭಾರತ ಭಕ್ತ ದಿವಂಗತ ವಿದ್ಯಾನಂದ ಶೆಣೈಯವರ ಮಾತುಗಳು ಪ್ರತಿಧ್ವನಿಸುತ್ತವೆ... "ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!"
               2008ರಲ್ಲಿ ಭಾರತ ಸರಕಾರ 99 ಎಕರೆ ಭೂಮಿಯನ್ನು ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಚಳಿ-ಮಳೆಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಯಾತ್ರಿಕರಿಗೆ ಕಲ್ಪಿಸಲು ಅಮರನಾಥ ದೇಗುಲ ಮಂಡಳಿಗೆ ಹಸ್ತಾಂತರಿಸಲು ನಿರ್ಧರಿಸಿತು. ಪ್ರತ್ಯೇಕತಾವಾದಿಗಳೆಲ್ಲಾ ಒಟ್ಟಾಗಿ ಪ್ರತಿಭಟಿಸಿದರು. ಕಾಶ್ಮೀರದ ಇತಿಹಾಸದಲ್ಲೇ ದೊಡ್ಡ ಸಂಖ್ಯೆಯಲ್ಲಿ ಸುಮಾರು ಐದು ಲಕ್ಷದಷ್ಟು ಜನ ಇದರಲ್ಲಿ ಪಾಲ್ಗೊಂಡಿದ್ದಾರೆಂದರೆ ಕಾಶ್ಮೀರವನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಪರಿಗಣಿಸಿದ್ದಾರೆಂಬುದೇ ಅರ್ಥವಲ್ಲವೇ? "ಹಿಂದೂಗಳಿಗೆ ಜಾಗ ಕೊಟ್ಟರೆ ನಾವು ಅಲ್ಪಸಂಖ್ಯಾತರಾಗಿ ಹೋಗುತ್ತೇವೆ. ಅದು ಅರಣ್ಯಭೂಮಿ, ಹಿಂದೂಗಳು ಪರಿಸರವನ್ನು ಹಾಳು ಮಾಡುತ್ತಾರೆ. ಮುಸ್ಲಿಮರನ್ನು ಹತ್ತಿಕ್ಕಲು ಭಾರತೀಯರು ಹೂಡಿದ ಸಂಚು ಇದು. 370ನೇ ವಿಧಿಯ ಪ್ರಕಾರ ಜಮ್ಮು ಕಾಶ್ಮೀರದವರಲ್ಲದ ಭಾರತೀಯರು ಇಲ್ಲಿ ಭೂಮಿ ಕೊಳ್ಳುವಂತಿಲ್ಲ" ಎಂದೆಲ್ಲಾ ಅಲ್ಲಿನ ರಾಜಕಾರಣಿಗಳು ಅಬ್ಬರಿಸಿದರು. ಒಂದೂ ಮರ ಬೆಳೆಯದ ಗುಡ್ಡವೊಂದರಲ್ಲಿ ಅರಣ್ಯ ನಾಶವಾಗುತ್ತದೆಯೆಂದರೆ ಹಾಸ್ಯಾಸ್ಪದವಲ್ಲವೇ? ರಾಜ್ಯಪಾಲರಾಗಿ ಬಂದ ಎನ್.ಎನ್.ವೋಹ್ರಾ ಮಾಡಿದ ಮೊದಲ ಕೆಲಸವೆಂದರೆ ಅಮರನಾಥ ದೇಗುಲ ಮಂಡಳಿಗೆ ಜಮೀನು ನೀಡುವ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದು. ತಮ್ಮ ಮತವಿರುವುದೇ ಶಾಂತಿ ಸಹಬಾಳ್ವೆಗಳಿಗೆ ಎಂದವರು, ಹಿಂದೂಗಳು ಸುರಿವ ಮಂಜಿನಿಂದ ರಕ್ಷಣೆ ಪಡೆಯಲು ಎರಡು ತಿಂಗಳುಗಳ ಮಟ್ಟಿಗೆ ತುಂಡು ಭೂಮಿ ಕೇಳಿದರೆ ಬೀದಿರಂಪ ನಡೆಸಿ ತುಂಡು ಭೂಮಿಯೂ ದೊರಕದಂತೆ ನೋಡಿಕೊಂಡರು. ಈ ರೀತಿ ಮಾಡಲು ಇನ್ನೊಂದು ಕಾರಣವಿದೆ. ಅಮರನಾಥ ಯಾತ್ರೆಯೆಂಬುದು ಕಾಶ್ಮೀರಿಗಳಿಗೆ ಹಣಗಳಿಸುವ ದೊಡ್ಡ ಬ್ಯುಸಿನೆಸ್. ಭೂಮಿ ನೀಡಿದರೆ ತಾವು ಲಂಗರುಗಳನ್ನು ಹಾಕಿ ಯಾತ್ರಿಕರಿಂದ ದೋಚಲು ಸಾಧ್ಯವಾಗುವುದಿಲ್ಲ. ಅಮರನಾಥನ ದರ್ಶನ ಮಾಡಲು ಕುದುರೆ-ಪಲ್ಲಕಿಗಳ ವ್ಯವಸ್ಥೆಯೂ ಇದೆ. ಸ್ಥಳೀಯ ಕಾಶ್ಮೀರಿ ಮುಸ್ಲಿಮರು ಈ ಸೌಕರ್ಯಗಳನ್ನು ಒದಗಿಸುತ್ತಾರೆ. ಉಚಿತವೆಂದುಕೊಂಡಿರೇನು? ಕುದುರೆಯ ಮೇಲೆ ಸಂಚರಿಸಲು 2500-5000 ರೂಪಾಯಿಗಳಾದರೆ ಪಲ್ಲಕಿಗೆ 18000ರೂಪಾಯಿಗಳವರೆಗೂ ಏರುತ್ತದೆ. ಜೊತೆಗೆ ಅವರ ಊಟತಿಂಡಿಯ ಖರ್ಚು ಬೇರೆ! ಕೆಲವು ಸಲ ಮುಂಗಡ ಹಣತೆಗೆದುಕೊಂಡು ನಾಪತ್ತೆಯಾಗುವುದೂ ಇದೆ. ಆಗ ನಿಮಗೆ ಮೋಸ ಮಾಡಿದಾತನನ್ನು ಗುರುತಿಸುವುದೂ ಕಷ್ಟವೇ. ಎಲ್ಲರ ಮುಖಚರ್ಯೆ ಸರಿಸುಮಾರು ಒಂದೇ ರೀತಿ ಇರುತ್ತದೆ. ಅದರೊಂದಿಗೆ ದಾಡಿ ಬೇರೆ ಕೇಡು! ನೀರು,ಇಂಧನ ಎಲ್ಲವೂ ಉಚಿತವಾಗಿ ಸಿಗುವಾಗ ಐದಾರು ಲೀ ಬಿಸಿನೀರಿಗೆ ಐವತ್ತು ರೂಪಾಯಿಗಳಷ್ಟು ದರ ವಿಧಿಸುತ್ತಾರೆಂದರೆ ದೋಚುವ ಪರಿ ಯಾವ ರೀತಿ ಇರಬಹುದು. ಹೀಗೆ ಅಮರನಾಥ ಯಾತ್ರೆಯೆಂಬುದು ಯಾತ್ರಿಕರನ್ನು ದೋಚಲು ಇರುವ ದೊಡ್ಡ ಹಬ್ಬವಾಗಿಬಿಟ್ಟಿದೆ ಅಲ್ಲಿನ ಬಾಂಧವರಿಗೆ. ಈ ಮೊದಲು ಆಹಾರ ವಸ್ತುಗಳಿಗೂ ಮನಸ್ಸಿಗೆ ತೋಚಿದ ದರ ಹಾಕಲಾಗುತ್ತಿತ್ತು. ಇದನ್ನು ನಿವಾರಿಸಲು ವಿಹಿಂಪ ಮತ್ತಿತರ ಹಿಂದೂ ಸಂಘಟನೆಗಳು ಸೇರಿ ಯಾತ್ರಿಕರಿಗೆ ಉಚಿತ ಭೋಜನ ನೀಡುವ ಭಂಡಾರಗಳನ್ನು ಆರಂಭಿಸಿದವು. ಈಗ ಕೆಲವು ಸಂಘ ಸಂಸ್ಥೆಗಳು ಇದರಲ್ಲಿ ಕೈ ಜೋಡಿಸಿವೆ. ಹೀಗಾಗಿ ಯಾತ್ರಿಕರು ಕೊಂಚ ನಿರಾಳರಾಗುವಂತಾಗಿದೆ. ಅಷ್ಟೂ ಯಾತ್ರಿಕರಿಗೆ ಅಲ್ಲಲ್ಲಿ ಭಂಡಾರಗಳನ್ನು ಸ್ಥಾಪಿಸಿ ವಿವಿಧ ತಿನಿಸುಗಳನ್ನೂ, ಸಂಜೆಯ ಹೊತ್ತಿಗೆ ವಿವಿಧ ಕಾರ್ಯಕ್ರಮಗಳನ್ನು ನೀಡುವ ಇವರ ಕಾರ್ಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಅಂದು ಯಾತ್ರಿಗಳ ಸೌಕರ್ಯಕ್ಕಾಗಿ ಅಮರನಾಥ ದೇಗುಲ ಮಂಡಳಿಗೆ ಜಮೀನು ನೀಡುವ ಪ್ರಸ್ತಾಪ ಬಂದಾಗ ಶರಂಪರ ಕಿತ್ತಾಡಿ ವಿರೋಧಿಸಿದ "ಬಾಂಧವರು" ಬಂದು ತಿನ್ನುವುದು ಧರ್ಮಾರ್ಥ ಆಹಾರ ಒದಗಿಸುವ ಭಂಡಾರಗಳಲ್ಲೇ!
               ಇಡೀ ಭಾರತ "ನಮೋ" ಎಂದಾಗಲೂ ಕಾಶ್ಮೀರಿ ಮುಸ್ಲಿಮರೇನಾದರೂ ಬದಲಾಗಿದ್ದಾರಾ ಎಂದರೆ ಇಲ್ಲ ಎಂಬುದೇ ಉತ್ತರ.. ಈ ಬಾರಿ ಜುಲೈ 18 ರ ಶುಕ್ರವಾರ ಯಾತ್ರಿಗಳ ಮೇಲೆ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಒಬ್ಬ ಯಾತ್ರಿಯೊಡನೆ ಕುದುರೆ ಮಾಲಿಕನೊಬ್ಬ ಅಸಭ್ಯವಾಗಿ ವರ್ತಿಸಿದಾಗ ಯಾತ್ರಿಗಳಿಗೆ ಧರ್ಮಾರ್ಥ ಭೋಜನ ಕೊಡುವ ಭಂಡಾರವೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಸೇವಾರ್ಥಿಯೊಬ್ಬರು ಅದನ್ನು ಆಕ್ಷೇಪಿಸಿದರು. ಮಾತಿಗೆ ಮಾತು ಬೆಳೆದಾಗ ಎಲ್ಲ ಮುಸ್ಲಿಮರು ಒಟ್ಟಾಗಿ ಭಂಡಾರಕ್ಕೆ ಬೆಂಕಿಯಿಟ್ಟರು. ಸುಮಾರು ಹತ್ತು ಭಂಡಾರಗಳನ್ನು "ಬಾಂಧವರು" ಸುಟ್ಟ ಪರಿಣಾಮ ಬೆಂಕಿ ವ್ಯಾಪಿಸಿ ಸುಮಾರು 150 ಭಂಡಾರಗಳು, ಲಂಗರುಗಳು ಸುಟ್ಟು ಹೋದವು. 60-70 ಗ್ಯಾಸ್ ಸಿಲಿಂಡರುಗಳು ಸ್ಫೋಟಗೊಂಡು ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡರು. ಲಂಗರುವಾಲಾಗಳು ಮತ್ತು ಕುದುರೆ ಮಾಲೀಕರ ನಡುವಿನ ವಾಗ್ಯುದ್ದ ಪರಿಹರಿಸಲು ಬಂದ CRPF ಯೋಧರ ಮೇಲೆ ಆಕ್ರಮಣಕ್ಕೆ ಮುಂದಾದ ದುರುಳರು ಹತ್ತು ಜನ ಯೋಧರನ್ನೂ ಮಾರಣಾಂತಿಕ ಗಾಯಕ್ಕೊಳಪಡಿಸಿದರು. ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ಸ್ಥಗಿತವಾಯಿತು.
           ಕಾಶ್ಮೀರದ ನೆಲದಲ್ಲಿರುವ ಪ್ರತಿಯೊಂದು ಸ್ಥಳದ ಹಿಂದೆ ಮನಸೂರೆಗೊಳ್ಳುವ ಐತಿಹಾಸಿಕ ಘಟನೆಗಳೆಷ್ಟಿದೆಯೋ ಅಷ್ಟೇ ಕರಾಳ ಅಧ್ಯಾಯಗಳೂ ಇವೆ. ಕಾಶ್ಮೀರದ ಚರಿತ್ರೆಯನ್ನು ಎಷ್ಟು ಬದಲಾಯಿಸಲಾಗಿದೆಯೆಂದರೆ ಅದು ಭರತಖಂಡದ ಭಾಗವಾಗಿತ್ತೋ ಇಲ್ಲವೋ ಎಂದು ಇಂದಿನ ಪೀಳಿಗೆ ಸಂಶಯಪಡುವಂತಾಗಿದೆ. ಕಾಶ್ಮೀರ ಎಂಬ ಹೆಸರು ಬಂದದ್ದೇ ಕಶ್ಯಪ ಋಷಿವರ್ಯರಿಂದ. ಆದರೆ ಆ ಇತಿಹಾಸ ಎಲ್ಲಿಯೂ ಪ್ರಸ್ತಾಪವಾಗದಂತೆ ನೋಡಿಕೊಳ್ಳಲಾಗಿದೆ. ಕಾಶ್ಮೀರದ ಜನಪ್ರಿಯ ದೊರೆ ಲಲಿತಾದಿತ್ಯನ ಹೆಸರನ್ನು ಜನಮಾನಸದಿಂದಲೇ ಅಳಿಸಲಾಗಿದೆ. ಮತೀಯತೆ ಎಷ್ಟಿದೆಯೆಂದರೆ ಇಲ್ಲಿನ ಅಧಿಕೃತ ಭಾಷೆ ಕಶ್ಮೀರಿಯಲ್ಲ. ಉರ್ದು! ಕಾಶ್ಮೀರದ ಭೂಸ್ವರ್ಗವಾಗಿಯೇ ಉಳಿಯಬೇಕೆಂದರೆ 370ನೇ ವಿಧಿಯನ್ನು ತೆಗೆದುಹಾಕಲೇಬೇಕು. ಇಲ್ಲದಿದ್ದಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯಂತವರ ಕೊಲೆಯಾಗುತ್ತಲೇ ಇರುತ್ತದೆ. ಅಳಿದುಳಿದ ಹಿಂದೂಗಳನ್ನೂ ಓಡಿಸುತ್ತಾರೆ. ರಘುನಾಥನ ಮೇಲೆ, ಅಮರನಾಥನ ಭಕ್ತರ ಮೇಲೆ ದಾಳಿಯಾಗುತ್ತಲೇ ಇರುತ್ತದೆ. ದಿವಂಗತ ವಿದ್ಯಾನಂದರ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಲೇ ಇದೆ...ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!

ಗುರುವಾರ, ಜುಲೈ 17, 2014

"ಬೋಕೋ ಹರಾಮ್" ಎಂಬ ಹರಾಮ್ ಕೋರ್!

"ಬೋಕೋ ಹರಾಮ್" ಎಂಬ ಹರಾಮ್ ಕೋರ್!

ಆಫ್ರಿಕಾ...
          ಒಂದು ಕಾಲದಲ್ಲಿ ಅಗಾಧ ನೈಸರ್ಗಿಕ ಸಂಪತ್ತಿನಿಂದ, ತಮ್ಮದೇ ಆದ ಸಂಸ್ಕೃತಿಯನ್ನು ಪಾಲಿಸಿಕೊಂಡು ಪ್ರಕೃತಿಯೊಡನೆ ಒಂದಾಗಿ ಬದುಕುತ್ತಿದ್ದ ವಿವಿಧ ಬುಡಕಟ್ಟು ಜನಾಂಗಗಳಿಂದ ತುಂಬಿದ್ದ ಸಂಪದ್ಭರಿತ ಭೂಖಂಡ. ಅಂತಹ ಭೂಖಂಡದ ಮೇಲೆ ಸಾಮ್ರಾಜ್ಯಶಾಹಿಗಳ ದೃಷ್ಠಿ ಬಿತ್ತು. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಈ ಭೂಖಂಡಕ್ಕೆ ಬಂದಿಳಿದ ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಬ್ರಿಟಿಷರು, ಇಟಾಲಿಯನ್ನರು, ಬೆಲ್ಜಿಯನ್ನರು ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ-ವೈಮನಸ್ಯಗಳನ್ನು ಬಳಸಿಕೊಂಡು ಸೈನಿಕ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ ಪ್ರಕೃತಿಯ ಆರಾಧಕರ ತಲೆಯೊಳಗೆ ತಮ್ಮದೇ ಮೌಢ್ಯದ ಮತವನ್ನು ತುಂಬಿ ಭೂಖಂಡದ ತುಂಬ ಅಶಾಂತಿ, ಮೌಢ್ಯ, ಬಡತನ, ಅರಾಜಕತೆಯನ್ನು ಹಬ್ಬಿಸಿದರು. ನೈಸರ್ಗಿಕ ಸಿರಿ ಸಂಪತ್ತು ಬರಿದಾಯಿತು. ಆಫ್ರಿಕಾ ಕಗ್ಗತ್ತಲ ಖಂಡವಾಗುಳಿಯಿತು. ಈಗ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ಹೊರತುಪಡಿಸಿದರೆ ಆಫ್ರಿಕಾದ ದೇಶಗಳು ಸುದ್ದಿಯಾಗುವುದು ಕೆಟ್ಟ ಕಾರಣಗಳಿಗಾಗಿಯೇ. ದರೋಡೆಕೋರರ, ಹಡಗುಗಳ್ಳರ ತಾಣ ಸೋಮಾಲಿಯಾ, ಮಾದಕ ವಸ್ತುಗಳ ಸಾಗಾಣಿಕೆಗಾರ ನೈಜೀರಿಯಾ, ಸರ್ವಾಧಿಕಾರಿಗಳಿಂದಾಗಿ ಸರ್ವನಾಶಗೊಂಡ ಜಿಂಬಾಬ್ವೆ, ಲಿಬಿಯಾ, ಸದಾ ಕಲಹದ ಗೂಡಾಗಿರುವ ಈಜಿಪ್ಟ್, ಅಂತಃಕಲಹದಿಂದ ಜರ್ಝರಿತಗೊಂಡ ಲೈಬೀರಿಯಾ, ಘಾನಾ, ಜನಾಂಗೀಯ ಕಲಹದಲ್ಲಿ ಮುಳುಗಿ ಹೋದ ಅಂಗೋಲಾ ಮತ್ತು ಮೊಜಾಂಬಿಕ್, ಯುದ್ದ ಮತ್ತು ಕ್ಷಾಮಗಳಿಂದ ನಶಿಸುತ್ತಿರುವ ಸೂಡಾನ್...!
2011!
ಆಫ್ರಿಕಾ ಖಂಡದ ಉತ್ತರ ಭಾಗದ ಅವಸಾನಕ್ಕೆ ಮುನ್ನುಡಿ ಬರೆದ ವರ್ಷ!
               ಪದೇ ಪದೇ ಅವಮಾನ-ಅನ್ಯಾಯಕ್ಕೊಳಕ್ಕಾಗುತ್ತಿದ್ದವರ ಸಹನೆಯ ಕಟ್ಟೆ ಒಡೆದು ಆರಂಭವಾದದ್ದು "ಅರಬ್ ಸ್ಪ್ರಿಂಗ್" ಕ್ರಾಂತಿ. 2010ರ ಡಿಸೆಂಬರಿನಲ್ಲಿ ಮೊಹಮ್ಮದ್ ಬುವಾಜಿಜಿ ಎಂಬ ಹಣ್ಣಿನ ವ್ಯಾಪಾರಿ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸುತ್ತಿದ್ದಾಗ ಪೊಲೀಸರು ಮಾರಾಟ ನಡೆಸದಂತೆ ತಡೆದರು. ಒಪ್ಪದಿದ್ದಾಗ ಕಪಾಳ ಮೋಕ್ಷವಾಯಿತು. ಅವಮಾನಗೊಂಡ ಆತ ಸರಕಾರೀ ಭವನದ ಎದುರು ತನ್ನನ್ನು ತಾನು ಸುಟ್ಟುಕೊಂಡಾಗ ಹಬ್ಬಿದ ಕಿಡಿ ಇಡೀ ಟ್ಯುನಿಷಿಯಾಕ್ಕೆ ಹಬ್ಬಿತು. ಎಸ್ರಾ ಅಬ್ಡೆಲ್ ಫತಾಹ್ ಎಂಬ ಸಾಮಾಜಿಕ ಕಾರ್ಯಕರ್ತೆಯೊಬ್ಬಳಿಂದ ಆರಂಭವಾದ ಪ್ರತಿಭಟನೆ ಕ್ರಾಂತಿಸ್ವರೂಪವಾಗಿ ಈಜಿಪ್ಟಿನ ಅಧ್ಯಕ್ಷ ಮುಬಾರಕ್ ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಎರಡೂ ದೇಶಗಳಲ್ಲಿ ಸರಕಾರಗಳು ಬದಲಾದವು. ಈ ಕ್ರಾಂತಿ ಲಿಬಿಯಾ, ಯೆಮೆನ್, ಬಹ್ರೈನ್, ಸಿರಿಯಾ, ಅಲ್ಜೀರಿಯಾ, ಮೊರಾಕ್ಕೋ, ಸೂಡಾನ್ ಮುಂತಾದ ದೇಶಗಳಲ್ಲೂ ಅಲ್ಲೋಲಕಲ್ಲೋಲವನ್ನುಂಟು ಮಾಡಿ ಸರಕಾರಗಳ ಬದಲಾವಣೆಗೂ ಕಾರಣವಾಯಿತು. ಆದರೆ ಈ ಕ್ರಾಂತಿಯಿಂದ ಬದಲಾವಣೆಯೇನಾದರೂ ಆಯಿತೇ ಎಂದರೆ ಶೂನ್ಯ! "ಮುಬಾರಕ್ ಸರಕಾರ ಇದ್ದಾಗಿನ ಸ್ಥಿತಿಗೂ ಈಗಿನ ಈಜಿಪ್ಟಿನ ಸ್ಥಿತಿಗೂ ಯಾವುದೇ ಬದಲಾವಣೆಯಿಲ್ಲ" ಎನ್ನುತ್ತಾಳೆ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಎಸ್ರಾ!
             ಜನ ಬದಲಾವಣೆ ಬಯಸಿ ಕ್ರಾಂತಿ ನಡೆಸಿದರೂ ಬದುಕೇಕೆ ಬದಲಾಗಲಿಲ್ಲ? ಆ ದೇಶಗಳು ಅಭಿವೃದ್ಧಿಯ ಪಥವನ್ನೇಕೆ ತುಳಿಯಲಿಲ್ಲ? ಕಾರಣ ಒಂದೇ ಇಸ್ಲಾಂ! ಕ್ರಾಂತಿ ಜನಸಾಮಾನ್ಯರಿಂದ ಆರಂಭಗೊಂಡರೂ ಅದರ ಮೇಲೆ ಹತೋಟಿ ಸಾಧಿಸಿ ಮೆರೆದ ಮತಾಂಧ ಶಕ್ತಿಗಳು ತಮ್ಮ ಪ್ರಭುತ್ವವನ್ನು ಖಚಿತಪಡಿಸಿಕೊಂಡರು. ಈಜಿಪ್ಟಿನಲ್ಲಿ ನಡೆದ ಚುನಾವಣೆಯಲ್ಲಿ 2/3 ರಷ್ಟು ಸ್ಥಾನಗಳನ್ನು ಪಡೆದ ಮತೀಯವಾದಿಗಳು ಸ್ಪೀಕರ್ ಸ್ಥಾನದಲ್ಲಿ ಮುಸ್ಲಿಮನನ್ನೇ ಕೂರಿಸುವುದೆಂದು ನಿರ್ಣಯಿಸಿದ್ದಲ್ಲದೆ ಸಂವಿಧಾನವನ್ನು ತಮಗೆ ತಕ್ಕಂತೆ ಬದಲಾಯಿಸಿಕೊಂಡವು.  ಯಾವೆಲ್ಲಾ ರಾಷ್ಟ್ರಗಳಲ್ಲಿ ಕ್ರಾಂತಿ ನಡೆದಿತ್ತೋ ಅಲ್ಲೆಲ್ಲಾ ಆಲ್ ಕೈದಾ ಅನಾಯಾಸವಾಗಿ ನುಸುಳಿ ಕಾರ್ಯಾಚರಣೆ ಆರಂಭಿಸಿತು. ಇದರೊಂದಿಗೆ ಜನರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು! ಆಲ್ ಕೈದಾದ ನೈಜೀರಿಯಾದ ರೂಪವೇ "ಬೋಕೋ ಹರಾಮ್"!
ಏನಿದು ಬೋಕೋ ಹರಾಮ್?
              ಮತಾಂತರ ಹಾಗೂ ಜಿಹಾದನ್ನೇ ಮೂಲ ಧ್ಯೇಯವಾಗಿರಿಸಿಕೊಂಡು 2002ರಲ್ಲಿ ಮಹಮ್ಮದ್ ಯೂಸುಫ್ ಎಂಬಾತನಿಂದ ಆರಂಭವಾಯಿತು ಈ ಬೋಕೋ ಹರಾಮ್! "ಆಧುನಿಕ ಶಿಕ್ಷಣ ನಿಷಿದ್ದ" ಎನ್ನುವುದು ಬೋಕೋ ಹರಾಮಿನ ಅರ್ಥ. ದೇಶವನ್ನು ಸಂಪೂರ್ಣ ಇಸ್ಲಾಂಮಯಗೊಳಿಸಿ ಷರಿಯತ್ ಕಾನೂನನ್ನು ಜಾರಿಗೊಳಿಸುವುದೇ ಇದರ ಉದ್ದೇಶವಾಗಿತ್ತು. ಮುಸ್ಲಿಮನೊಬ್ಬ ದೇಶದ ಅಧ್ಯಕ್ಷನಾಗಿದ್ದರೂ ಈ ದೇಶ ಕಾಫಿರರಿಂದಲೇ ಆಳಲ್ಪಡುತ್ತಿದೆ ಎನ್ನುವ ಬೋಕೋ ಹರಾಮ್ ಸದಸ್ಯರು "ಯಾವುದೆಲ್ಲಾ ದೇಶಗಳು ಅಲ್ಲಾ ಹೇಳಿದ ರೀತಿಯ ಆಳ್ವಿಕೆಯಡಿಯಲ್ಲಿಲ್ಲವೋ ಅಂತಹ ದೇಶಗಳೆಲ್ಲವನ್ನೂ ಆಕ್ರಮಿಸಬಹುದು" ಎಂಬ ಕುರಾನಿನ ವಾಕ್ಯದಿಂದ ತಾವು ಪ್ರಭಾವಿಸಲ್ಪಟ್ಟಿದ್ದೇವೆ ಎನ್ನುತ್ತಾರೆ! ಮಾತ್ರವಲ್ಲ ಆಧುನಿಕವಾದ ಎಲ್ಲವನ್ನೂ ವಿರೋಧಿಸುತ್ತದೆ  ಬೋಕೋ ಹರಾಮ್. ಚುನಾವಣೆಯಿಂದ ಹಿಡಿದು ಜನರು ಅಂಗಿ-ಪ್ಯಾಂಟ್ ಹಾಕುವುದನ್ನು ವಿರೋಧಿಸುತ್ತದೆಯೆಂದಾದರೆ ಅದರ ಮೂಲಭೂತವಾದ ಯಾವ ಮಟ್ಟದಲ್ಲಿರಬಹುದು!
            2002ರಲ್ಲಿ ಮಹಮ್ಮದ್ ಯೂಸುಫ್ ಮೈದುಗುರಿಯಲ್ಲಿ ಸಂಘಟನೆಯೊಂದಿಗೆ ಮಸೀದಿ ಹಾಗೂ ಮದರಸಾಗಳನ್ನು ಕೂಡಾ ಆರಂಭಿಸಿದ. ನೈಜೀರಿಯಾ ಮಾತ್ರವಲ್ಲದೆ ನೆರೆಯ ದೇಶಗಳ ಅನೇಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದರು. ಆದರೆ ಶಿಕ್ಷಣ ಆತನ ಉದ್ದೇಶವಾಗಿರಲಿಲ್ಲ. ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಆತ ಶಾಲೆಯಲ್ಲಿ ಜಿಹಾದಿ ಶಿಕ್ಷಣ ನೀಡಲಾರಂಭಿಸಿದ. ಮುಂದೆ ಅದು ಬೋಕೋ ಹರಾಮಿನ ಭದ್ರ ನೆಲೆಯಾಗಿ ಜಿಹಾದಿ ನೇಮಕಾತಿಯ ತಾಣವಾಗಿ ಬದಲಾಯಿತು. 2009ರಲ್ಲಿ ಸಂಚಾರೀ ನಿಯಮಗಳನ್ನು ಉಲ್ಲಂಘಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದ ಯೂಸುಫ್, ಬೋರ್ನೋ, ಯೋಬ್, ಕಾನೋ ರಾಜ್ಯಗಳಲ್ಲಿ ನಾಗರಿಕ ಜೀವನ ಅಸ್ತವ್ಯಸ್ತಗೊಳ್ಳಲು ಕಾರಣನಾದ. ಈ ದಂಗೆಯಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಯೂಸುಫನ ಬಳಿಕ ಅಬೂಬಕರ್ ಶೇಖ್ ಬೋಕೋ ಹರಾಮಿನ ನೇತೃತ್ವ ವಹಿಸಿದ. 2010ರಲ್ಲಿ ಆತ್ಮಾಹುತಿ ಬಾಂಬರುಗಳನ್ನು ಬಳಸಿಕೊಂಡು ಬೌಚಿಯಲ್ಲಿದ್ದ ಕಾರಾಗೃಹವನ್ನೇ ಛಿದ್ರಗೊಳಿಸಿ ತನ್ನ 700 ಸಂಗಡಿಗರನ್ನು ಬೋಕೋಹರಾಮ್ ಬಿಡುಗಡೆಗೊಳಿಸಿತು.
                  ಕಳೆದ ಏಪ್ರಿಲ್ ನಲ್ಲಿ 300 ಬಾಲಕಿಯರನ್ನು ಅಪಹರಿಸಿದ ಬೋಕೋಹರಾಮ್ ಬಂಧನದಲ್ಲಿರುವ ತನ್ನ ಸದಸ್ಯರ ಬಿಡುಗಡೆಗೆ ಆಗ್ರಹಿಸಿತು. ಆದರೆ ನೈಜೀರಿಯಾ ಸರಕಾರ ಮನ್ನಿಸಲಿಲ್ಲ. ಇದರ ಬಳಿಕ ನಡೆದದ್ದು ಸಾಲು ಸಾಲು ಅಪಹರಣಗಳು! ಜೂನ್ ತಿಂಗಳಲ್ಲಿ ಮತ್ತೆ ಐವತ್ತು ಜನರನ್ನು ಅಪಹರಿಸಿತು. ಅದರ ಮರುವಾರ ಇಪ್ಪತ್ತು ಮಹಿಳೆಯರ ಅಪಹರಣ ನಡೆಯಿತು. ಚರ್ಚುಗಳ ಮೇಲೆ, ಆಡಳಿತಾತ್ಮಕ ಕಛೇರಿಗಳ ಮೇಲೆ ಮಾರುಕಟ್ಟೆಗಳ ಮೇಲೆ ಬಾಂಬು ದಾಳಿ ನಡೆಸಿ ಸಾವಿರಾರು ಜನರ ಮಾರಣ ಹೋಮವನ್ನೂ ನಡೆಸಿದೆ. ಹಳ್ಳಿಗರನ್ನೂ ಬಿಡಲಿಲ್ಲ ಈ ಖೂಳರು. ಹಳ್ಳಿಗಳನ್ನೂ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾ ಸಾಗಿರುವ ಈ ಭಯೋತ್ಪಾದಕರು ಕಳೆದ ಹನ್ನೆರಡು ವರ್ಷಗಳಲ್ಲಿ ಕೇವಲ ನೈಜೀರಿಯಾ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಾದ ಕ್ಯಾಮರೂನ್, ಚಾದ್, ನೈಜರ್ ಗಳಿಗೂ ತಮ್ಮ ಜಾಲವನ್ನು ವಿಸ್ತರಿಸಿದ್ದಾರೆ.

                  2002-2014ರ ನಡುವೆ ನೈಜೀರಿಯಾದಲ್ಲೇ ಸುಮಾರು 12,000ಕ್ಕೂ ಅಧಿಕ ಜನರನ್ನು ಆಪೋಶನ ತೆಗೆದುಕೊಂಡಿದೆ ಬೋಕೋ ಹರಾಮ್. ಸುಮಾರು 8,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 2013ರಲ್ಲಿ ಅಮೇರಿಕಾದಿಂದ ಭಯೋತ್ಪಾದಕ ಸಂಘಟನೆಯೆಂದು ಗುರುತಿಸಲ್ಪಟ್ಟ ಬೋಕೋ ಹರಾಮಿನಿಂದಾಗಿ ಮೂರು ಮಿಲಿಯಕ್ಕೂ ಹೆಚ್ಚು ಜನ ಘಾಸಿಗೊಂಡಿದ್ದಾರೆ. ನೈಜೀರಿಯಾದಲ್ಲೀಗ ಬಾಂಬುದಾಳಿ ದಿನನಿತ್ಯದ ಸುದ್ದಿ. ಪ್ರತಿದಿನ ಕನಿಷ್ಟ ಐವತ್ತು ಜನರನ್ನು ಕೊಲ್ಲುವ, ಸೈನಿಕ ನೆಲೆಗಳನ್ನು ನಾಶಪಡಿಸುವ ಬೋಕೋ ಹರಾಮ್ ದೇಶವನ್ನು ಸಂಪೂರ್ಣ ಇಸ್ಲಾಮೀಕರಣಗೊಳಿಸುವುದೇ ತನ್ನ ಉದ್ದೇಶವೆಂದು ಬಹಿರಂಗವಾಗಿ ಸಾರುತ್ತದೆ. ಈ ಭಯೋತ್ಪಾದಕ ಸಂಘಟನೆ ಯಾವ ರೀತಿ ಹಬ್ಬಿದೆಯೆಂದರೆ ಈಶಾನ್ಯ ನೈಜೀರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಒಂದು ವರ್ಷ ಕಳೆದರೂ ಬೋಕೋ ಹರಾಮ್ ಅನ್ನು ನಿಗ್ರಹಿಸಲು ನೈಜೀರಿಯಾ ಸರಕಾರಕ್ಕೆ ಸಾಧ್ಯವಾಗಿಲ್ಲ. ನೈಜೀರಿಯಾದ ಸೇನೆಯ ಕ್ಷಮತೆಯೂ ಅಷ್ಟಕಷ್ಟೇ! ಉತ್ತರ ಭಾಗದ ಜನರಂತೂ ಸೇನೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಮೇಲೆ ಬೋಕೋ ಹರಾಮ್ ಮತ್ತಷ್ಟು ಆಕ್ರಮಕವಾಗಿರುವುದು ಜನ ಪ್ರಾಣವನ್ನು ಕೈಯಲ್ಲಿ ಹಿಡಿದು ಜೀವಿಸುವಂತಾಗಿದೆ. ಒಂದುಕಾಲದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದ ನೈಜೀರಿಯಾದ ಸೇನೆ ಈಗ ತನ್ನ ಸತ್ವವನ್ನೇ ಕಳೆದುಕೊಂಡಿರುವುದು ವಿಷಾದನೀಯ.
                    ನೈಜೀರಿಯಾ 174 ಮಿಲಿಯನ್ ಜನಸಂಖ್ಯೆಯುಳ್ಳ, 250 ಭಾಷೆಗಳನ್ನು ಮಾತನಾಡುವ ಸುಮಾರು 350 ಜನಾಂಗೀಯ ಗುಂಪುಗಳಿರುವ ಆಫ್ರಿಕಾದ ಅತ್ಯಂತ ಜನನಿಬಿಡ ದೇಶ. ಇಲ್ಲಿದ್ದ ಬಹುತೇಕ ಮೂಲನಿವಾಸಿಗಳನ್ನು ಮೊದಲು ಬಂದ ಕ್ರೈಸ್ತರು ಮತಾಂತರಗೊಳಿಸಿದರೆ, ಈಗ ಬೋಕೋ ಹರಾಮ್ ಇಸ್ಲಾಮಿಗೆ ಬಲವಂತವಾಗಿ ಮತಾಂತರಗೊಳಿಸುತ್ತಿದೆ. ಒಂದು ಕಾಲದಲ್ಲಿ ಕ್ರಿಸ್ತ-ಅಲ್ಲಾರ ಗೊಡವೆ ಇಲ್ಲದೆ ತಮ್ಮದೆ ಸಂಸ್ಕೃತಿಯನ್ನು ಪೋಷಿಸಿಕೊಂಡು ಶಾಂತಿಯುತವಾಗಿ, ಜಾಸ್ತಿಯೆಂದರೆ ತಮ್ಮಲ್ಲೇ ಜಗಳವಾಡಿಕೊಂಡು ಬದುಕುತ್ತಿದ್ದ ಈ ಶಕ್ತಿಶಾಲಿ ಜನಾಂಗದ ಮತಿ-ಸ್ಮೃತಿ ಎರಡೂ ಅಳಿದು ಹೋಗಿದೆ. ಈಗ ಈ ಜನಾಂಗದ ಸಂಖ್ಯೆ ಹತ್ತು ಪ್ರತಿಶತಗಳಿಗಿಂತಲೂ ಕಡಿಮೆಯಿದೆಯೆಂದರೆ ಅಲ್ಲಿ ಮತಾಂತರ ಯಾವ ಪರಿಯಲ್ಲಿದ್ದಿರಬಹುದು! ಈಗಂತೂ ಇಸ್ಲಾಂ ಹಾಗೂ ಕ್ರೈಸ್ತರದ್ದೇ ಆಟಾಟೋಪ. ಉತ್ತರ ಭಾಗದಲ್ಲಿ ಇಸ್ಲಾಂ ಪ್ರಬಲವಾಗಿದ್ದರೆ ದಕ್ಷಿಣದಲ್ಲಿ ಕ್ರೈಸ್ತರು! ಒಂದು ಕಾಲದಲ್ಲಿ ಪ್ರಬಲವಾಗಿದ್ದ ಯೇಸುವಿನ ಹಿಂಬಾಲಕರು ಇಲ್ಲಿನ ನೈಸರ್ಗಿಕ ಸಂಪತ್ತನ್ನು ಹಾಳುಗೆಡವಿದರೆ ಈಗ ಇಸ್ಲಾಂ ಮತಾಂಧತೆ ಕ್ರೈಸ್ತರನ್ನೆ ಭೀತರನ್ನಾಗಿಸಿದೆ. ನೈಜೀರಿಯಾದ ಗುಪ್ತಚರ ಇಲಾಖೆಯ ಮಾಹಿತಿಯಂತೆ 1999ರಿಂದ ಇಲ್ಲಿಯವರೆಗೆ 25000ಕ್ಕೂ ಹೆಚ್ಚು ಜನ ಮುಸ್ಲಿಮ್-ಕ್ರಿಶ್ಚಿಯನ್ನರ ಅಧಿಕಾರದ ಪೈಪೋಟಿಗೆ ಬಲಿಯಾಗಿದ್ದಾರೆ! ಮತೀಯ ಕಲಹದ ಪರಿಣಾಮ ಎಷ್ಟಿದೆಯೆಂದರೆ 70% ಜನ $1.25ಗಿಂತಲೂ ಕಡಿಮೆ ದೈನಂದಿನ ವೇತನ ಪಡೆಯುತ್ತಾರೆ. ಬೋಕೋ ಹರಾಮಿನಿಂದ ಹೆಚ್ಚು ತೊಂದರೆಗೊಳಗಾಗಿರುವ ಉತ್ತರ ಭಾಗದಲ್ಲಿ 72%ದಷ್ಟು ಜನ ಬಡತನದ ಬವಣೆಗೊಳಗಾಗಿ ಜೀವನ ನಡೆಸುತ್ತಿದ್ದಾರೆ. ನೈಜರ್ ಡೆಲ್ಟಾ ಭಾಗದಲ್ಲಿ ಸಿಗುವ ತೈಲ ಸಂಪತ್ತು ಉತ್ತರದ ಕೆಲವೇ ಕೆಲವು ಮುಸ್ಲಿಮರ ಹತೋಟಿಯಲ್ಲಿದ್ದು ದೇಶ ಆರ್ಥಿಕ ಅಸಮಾನತೆಯಿಂದ ಬಳಲುತ್ತಿದೆ. ಬೋಕೋ ಹರಾಮ್ ಜಾಗತಿಕ ಭಯೋತ್ಪಾದಕ ಸಂಘಟನೆಗಳಾದ ವಾಯುವ್ಯ ಆಫ್ರಿಕಾದಲ್ಲಿ ಕಾರ್ಯಾಚರಿಸುತ್ತಿರುವ ಆಲ್ ಕೈದಾ( al-Qaeda in the Islamic Maghreb (AQIM)), ಸೋಮಾಲಿಯಾದ ಆಲ್ ಶಬಾಬ್, ಹಾಗೂ ಅರಬ್ ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಆಲ್ ಕೈದಾ (al-Qaeda in the Arabian Peninsula)ಗಳ ಜೊತೆ ನಿರಂತರ ಸಂಪರ್ಕ ಕಾಯ್ದುಕೊಂಡು ಶಸ್ತ್ರಾಸ್ತ್ರ ಸಹಾಯವನ್ನು ಪಡೆಯುತ್ತಿದೆ.
              ಶಕ್ತಿವಂತನೊಬ್ಬನಲ್ಲಿ ಅಸಹನೆ, ಕ್ರೌರ್ಯ, ಅಸಹಿಷ್ಣುತೆ ತುಂಬಿದ್ದರೆ ಆತನಿಂದ ಜಗತ್ತಿಗೇ ಆಪತ್ತು. ಹಿಂದೆ ದಾನವರು ವರಬಲದಿಂದ ಕೊಬ್ಬಿ ಜನರ ಮಾರಣಹೋಮ ನಡೆಸುತ್ತಿದ್ದರು. ಇಂದು ಜನರಲ್ಲಿರುವ ಅಲ್ಪ ಸ್ವಲ್ಪ ಬುದ್ದಿಯನ್ನು ನಾಶ ಮಾಡಿ ಇಸ್ಲಾಂಗೆ ಮತಾಂತರ ಮಾಡಿ ಮತೀಯತೆಯನ್ನು ಮೆದುಳಲ್ಲಿ ತುಂಬಿಸಿ ಜಗತ್ತಿನೆದುರು ಕಾಳಗಕ್ಕಿಳಿಸಲಾಗುತ್ತಿದೆ. ಮೊದಲೇ ಬಲಯುತರಾಗಿರುವ ಆಫ್ರಿಕಾದ ಜನಾಂಗಗಳ ಮೆದುಳು ಕಿತ್ತೆಸೆದು ಇಸ್ಲಾಂ ಎಂಬ ಅಫೀಮನ್ನು ತಿನ್ನಿಸಿದರೆ ಏನಾಗಬಹುದು ಎಂಬುದು ಆ ದೇಶಗಳ ಪ್ರಸಕ್ತ ಸ್ಥಿತಿಯನ್ನು ನೋಡಿದರೆ ತಿಳಿಯುತ್ತದೆ. ಕೆಲವನ್ನು ಹುಟ್ಟುವಾಗಲೇ ಚಿವುಟಿ ಹಾಕಬೇಕು...ಇಲ್ಲದಿದ್ದರೆ ಜಗತ್ತಿಗೆ ನೆಮ್ಮದಿ ಇರುವುದಿಲ್ಲ. ನಮ್ಮಲ್ಲೂ ಅಲ್ಲಲ್ಲಿ ನಿರಂತರ ಇಂತಹ ಸಂಘಟನೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಒಂದಕ್ಕೊಂದು ಬೆಸೆಯುತ್ತಲೇ ಇವೆ. ನಾವು ನಮ್ಮದು ಆದಿ-ಅಂತ್ಯಗಳಿಲ್ಲದ ಸನಾತನ ಸಂಸ್ಕೃತಿ ಎಂದು ಹೇಳಿಕೊಂಡರೇನು ಪ್ರಯೋಜನ? ನಮ್ಮಲ್ಲಿರುವ ಮತಾಂಧರನ್ನು ಮಟ್ಟ ಹಾಕದಿದ್ದರೆ ಮುಂದೊಂದು ದಿನ ನನ್ನದು ಸನಾತನ ಸಂಸ್ಕೃತಿ ಎಂದು ಹೇಳಿಕೊಳ್ಳಲೂ ಯಾರೂ ಇರಲಾರರು! ಆಫ್ರಿಕಾದ ರೀತಿ ಭಾರತವೂ ಕಗ್ಗತ್ತಲ ದೇಶವಾಗಿ ಬದಲಾದೀತು!