ಆನಂದ ಕರುಣಿಸಿದ ತಾಂಡವ
ಭಾರತವು ಬ್ರಿಟಿಷರ ದಾಸ್ಯದಲ್ಲಿದ್ದ ಕಾಲ. ಬರಿಯ ರಾಜಕೀಯ ದಾಸ್ಯವಲ್ಲ. ನಮ್ಮ ಇತಿಹಾಸವನ್ನು ತಿರುಚಿ ನಮ್ಮ ಮೂಲವನ್ನೇ ಪ್ರಶ್ನಿಸಿದ್ದ ಕಾಲ. ಅಂತಹ ತಿರುಚಿದ ವಿಚಾರವನ್ನೇ ಶಿಕ್ಷಣದಲ್ಲಿ ಅಳವಡಿಸಿ ಉರು ಹೊಡೆಸಿ ಪೀಳಿಗೆಗಳನ್ನೇ ದಾಸ್ಯಕ್ಕೊಳಪಡಿಸಲು ತಯಾರಾಗಿರಿಸಿದ್ದ ಕಾಲ. ಆರ್ಯ ಆಕ್ರಮಣವಾದವನ್ನೇ ತಲೆಯಲ್ಲಿ ತುಂಬಿಕೊಂಡು ನಮ್ಮ ಅಸ್ಮಿತೆಗೆ, ಉತ್ಕರ್ಷಕ್ಕೆ, ಜಗದ್ಗುರು ಪಟ್ಟಕ್ಕೆ ಕಾರಣವಾದ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿಗಳನ್ನು ತುಚ್ಛವಾಗಿ ಕಾಣುವ ಪೀಳಿಗೆಯೇ ಸೃಷ್ಟಿಯಾಗಿದ್ದ ಕಾಲ. ಆದರೂ ಒಂದು ಕಡೆ ರಾಜಕೀಯ ದಾಸ್ಯವನ್ನು ಹೊಡೆದೋಡಿಸಲು ಹೋರಾಟ ನಡೆದಿತ್ತು. ಅದರ ನಡುವಲ್ಲೇ ನಮ್ಮ ಇತಿಹಾಸವನ್ನು ಶುದ್ಧೀಕರಿಸುವ ಪ್ರಕ್ರಿಯೆಯೂ ನಡೆದಿತ್ತು. ಭಾರತೀಯ ಕಲೆಯನ್ನು ಪೌರ್ವಾತ್ಯ, ಪಾಶ್ಚಿಮಾತ್ಯರಿಬ್ಬರೂ ತುಚ್ಛವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಪಾಶ್ಚಿಮಾತ್ಯರದ್ದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಮಹಾನುಭಾವ ಪಶ್ಚಿಮ ಮೂಲದ-ಪೂರ್ವದ ಮೇಲಿನ ಆದರ ಭಾವದ ಆನಂದ ಕುಮಾರ ಸ್ವಾಮಿ. ಭಾರತೀಯ ಕಲೆಯನ್ನು ಯೂರೋಪಿನ ಮಾನದಂಡಗಳಿಂದ ನೋಡದೆ ಭಾರತೀಯರು ಅದನ್ನು ಕಂಡುಕೊಂಡ ರೀತಿ, ಅವರ ಸಂಪ್ರದಾಯಗಳ ಮೂಲಕವೇ ಅರ್ಥೈಸಿಕೊಳ್ಳಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದ ವ್ಯಕ್ತಿ ಆತ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು ಕೂಡಾ. ಪಶ್ಚಿಮದ ಪರಿಕಲ್ಪನೆಗಳ ಪರಿಭಾಷೆಯಲ್ಲೇ ಪೂರ್ವದ ಮಹತ್ವವನ್ನು ಎತ್ತಿ ಹಿಡಿದು ಪಶ್ಚಿಮದ ದುರಹಂಕಾರವನ್ನು ಮುರಿದದ್ದೇ, ಸತ್ಯವನ್ನೊಪ್ಪಲು ಹೆದರುವ ಕೆಲ ಪಾಶ್ಚಿಮಾತ್ಯ-ಪೌರ್ವಾತ್ಯರು ಅವರನ್ನು ವಿರೋಧಿಸಲು ಕಾರಣವಾಗಿರಬಹುದು. ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿದ್ದ ಋಷಿ ಸದೃಶ ಕಲಾ ತಪಸ್ವಿ ಆತ ಎಂದು ಕುಮಾರಸ್ವಾಮಿಯವರನ್ನು ವಿಶ್ವದ ಅತಿರಥ ಮಹಾರಥ ವಿದ್ವಾಂಸರೇ ಕೊಂಡಾಡಿದ್ದು ಅವರು ಏರಿದ್ದ ಎತ್ತರಕ್ಕೆ ಸಾಕ್ಷಿ. ಒಬ್ಬ ವ್ಯಕ್ತಿ ತನ್ನ ಜೀವಮಾನವಿಡೀ ಓದಿ ಮುಗಿಸಲಾಗದಷ್ಟು ಬರೆದ ಮಹಾನ್ ವ್ಯಕ್ತಿ ಆನಂದ ಕುಮಾರ ಸ್ವಾಮಿ.
"ಶಂ ಕರೋತಿ ಇತಿ ಶಂಕರಃ"
ಶಂ ಎಂದರೆ ಶುಭ ಅಥವಾ ಕಲ್ಯಾಣ. ಯಾರು ಕಲ್ಯಾಣಕಾರಕನೋ ಅವನೇ ಶಂಕರ. ಶಿವ ಅಂದರೆ ಸ್ವಯಂ ಪ್ರಕಾಶ ಎಂದರ್ಥ. ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ, ಪರಿಪೂರ್ಣ ಸಾಧನೆಗಳು ಯಾರಲ್ಲಿರುತ್ತವೆಯೋ ಅವನೇ "ಮಹಾದೇವ"! ಅವನು ಕಾಲಪುರುಷ. ಭಾಲಚಂದ್ರನಿಗೆ ಪಿಂಗಲಾಕ್ಷ ಎನ್ನುವ ಹೆಸರೂ ಇದೆ. ಪಿಂಗಲಾ ಎಂದರೆ ಗೂಬೆಯ ಒಂದು ಜಾತಿ. ಈ ಪಕ್ಷಿಗೆ ಭೂತ, ವರ್ತಮಾನ, ಭವಿಷ್ಯದ ಬಗ್ಗೆ ತಿಳಿಯುತ್ತದೆ. ಚಿಂತೆಯಿಲ್ಲದಿರುವ ಅವನು ಅಘೋರ. ಸಹಜ ಭಾವದಲ್ಲಿ ಅಹಂ ರಹಿತ ಅವಸ್ಥೆಯಲ್ಲಿರುವ ಜೀವಕ್ಕೆ ಭೋಲಾ ಎಂದು ಹೆಸರು. ಯೋಗ ಶಾಸ್ತ್ರಕ್ಕನುಸಾರ ಮೂರನೇ ಕಣ್ಣೆಂದರೆ ಸುಷುಮ್ನಾ ನಾಡಿ. ಶಿವನು ಜಿತೇಂದ್ರಿಯ. ಸಮುದ್ರಮಥನದಿಂದ ಉದ್ಭವವಾದ ಹಾಲಾಹಾಲವನ್ನು ಕುಡಿದ ಈ ಮಹಾವೈರಾಗಿ. ವಿಷ ಉದರ ಸೇರದಿರಲೆಂದು ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು ಪಾರ್ವತಿ. ಶಿವ ನೀಲಕಂಠನೆನಿಸಿಕೊಂಡ. ನೆನೆದಾಕ್ಷಣ ಸುಪ್ರೀತನಾಗಿ ಅನುಗ್ರಹಿಸುವ ಕಾರಣ ಶಿವನು ಅಶುತೋಷ! ದಕ್ಷಿಣಾ ಎಂಬ ಶಬ್ಧ ಬುದ್ಧಿವಾಚಕ, ದಕ್ಷಿಣಾಮೂರ್ತಿಯು ಅದ್ವೈತದ ಸಾರ. ವೀಣಾಧರ, ಯೋಗ, ಜ್ಞಾನ ಹಾಗೂ ವ್ಯಾಖ್ಯಾನ ಇವು ದಕ್ಷಿಣಾ ಮೂರ್ತಿಯ ನಾಲ್ಕು ರೂಪಗಳು.
ನಟರಾಜನ ನಾಟ್ಯವನ್ನು ವಿಶ್ಲೇಷಿಸಿದ ಅದ್ಭುತ ಲೇಖನ ಆನಂದ ಕುಮಾರ ಸ್ವಾಮಿಯವರ "ಡಾನ್ಸ್ ಆಫ್ ಶಿವ". ಶಿವನು ನಾಟ್ಯದ ಗುರು. ಆದಿ ಗುರು. ನಟ ಸಾರ್ವ ಭೌಮ ಅವನು. ವಿಶ್ವವೆಂಬ ಪರದೆಯ ಮೇಲೆ ಅವನು ನೀಡುವ ಪ್ರದರ್ಶನಗಳಲ್ಲಿ ಅದೆಷ್ಟು ವಿಧಗಳು. ಆ ಪ್ರದರ್ಶನಗಳಲ್ಲಿ ನಟನೂ ಅವನೇ ನೋಟಕನೂ! ಅವನು ತನ್ನ ಡಮರುಗವನ್ನು ಬಾರಿಸಲು ಆರಂಭಿಸಿದನೆಂದರೆ ವಿಶ್ವ ವ್ಯಾಪಾರವೆಲ್ಲಾ ಆರಂಭವಾಗಲೇಬೇಕು. ಅವನ ಈ ನೃತ್ಯ ಮುಗಿದ ಮೇಲೆ ಉಳಿಯುವವ ಅವನೊಬ್ಬನೇ. ಹೀಗೆ ನಾಟ್ಯದ ಮೂಲವೇ ಶಿವ ಎಂದು ಅವರು ಕಟ್ಟಿ ಕೊಡುವಾಗ ಪ್ರಜ್ಞೆ ಯಾ ಅಪ್ರಜ್ಞಾಪೂರ್ವಕವಾಗಿ ವಿಶ್ವದ ಉಗಮದ ರಹಸ್ಯವನ್ನೇ ಅವರು ಪ್ರತಿಪಾದಿಸಿದಂತಾಯಿತು. ತನ್ನ ತಾಂಡವದ ವೀಕ್ಷಕನೂ, ಕೊನೆಗೆ ಉಳಿಯುವವನೂ ಅವನೊಬ್ಬನೇ ಎನ್ನುವಾಗಲೇ ಬ್ರಹ್ಮವೊಂದೇ ಸತ್ಯ ಎನ್ನುವ ಭಾವ ಸ್ಫುರಿಸಿತು. “ಶಕ್ತಿಯೆಲ್ಲವೂ ಬ್ರಹ್ಮದಲ್ಲಿದೆ. ಆ ಶಕ್ತಿಯಿಂದ ಜಗತ್ತಿನ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಬ್ರಹ್ಮವೇ ಪರಮೇಶ್ವರ. ಶಕ್ತಿಯೇ ಅಂಬಾಳ್. ಈ ಶಕ್ತಿಯಿಂದಲೇ ವಿಷ್ಣು ವಿಶ್ವವನ್ನು ಕಾಪಾಡುತ್ತಾನೆ. ಬ್ರಹ್ಮ, ಅದರ ಶಕ್ತಿ, ಅದು ಮಾಡುವ ಕಾರ್ಯ ಒಂದಕ್ಕೊಂದು ಬೇರೆಯಲ್ಲ. ಎಲ್ಲವೂ ಬ್ರಹ್ಮವೇ! ಅನವರತವೂ ಪರಮಾತ್ಮ ಸ್ವರೂಪದಲ್ಲಿರುವವರು ಈ ಮೂವರೇ” ಎನ್ನುವುದು ಅಪ್ಪಯ್ಯ ದೀಕ್ಷಿತರ ಉಕ್ತಿ. ಎರಡು ಸಭೆಗಳು. ಒಂದರಲ್ಲಿ ಎಲ್ಲವನ್ನೂ ಅಡಗಿಸುವವನು ತಾಂಡವಕ್ಕೆ ತೊಡಗಿದ್ದಾನೆ(ಚಿದಂಬರಂ). ಅವನಿಂದಲೇ ವಿಶ್ವ ವ್ಯಾಪಾರ ನಡೆಯುತ್ತಿದೆ. ಇನ್ನೊಂದರಲ್ಲಿ ಎಲ್ಲರನ್ನೂ ಕುಣಿಸಬೇಕಾದವ ನಿದ್ರಿಸುತ್ತಿದ್ದಾನೆ(ಶ್ರೀರಂಗಂ). ಯೋಗನಿದ್ರೆ! ಎರಡೂ ಸಭೆಗಳಲ್ಲಿರುವವನು ಒಬ್ಬನೇ! ಅದೇ ಬ್ರಹ್ಮ. ಅವನು ದಕ್ಷಿಣಾಮೂರ್ತಿ. ಅವನು ಜ್ಞಾನದ ಅಧಿದೇವತೆ. ಅವನು ರಮಣನಾಗಿ ಮೌನದಿಂದಲೇ ಜಗವ ಬೆಳಗಿದ. ಅವನು ಅರುಣಾಚಲ. ಅದನ್ನು ಅಪ್ರಜ್ಞೆ ಎನ್ನಲಾಗದು. ಆನಂದ ಕುಮಾರ ಸ್ವಾಮಿಯವರು ಇದನ್ನು ನಂಬುತ್ತಾರೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಅವರು ಶೈವ ಸಿದ್ಧಾಂತದ ಈ ಭಾಗವನ್ನು ಎತ್ತಿಕೊಂಡು ಬಿತ್ತರಿಸುವಾಗ ಆ ಸ್ವರೂಪವನ್ನು, ಜ್ಞಾನವನ್ನು ಎತ್ತಿ ಹಿಡಿದಿದ್ದಾರೆ ಎನ್ನುವುದು ಸ್ಪಷ್ಟ.
"ಶಿವನ ಎಷ್ಟು ಬಗೆಯ ನೃತ್ಯವನ್ನು ಅವನ ಭಕ್ತರು ತಿಳಿದಿದ್ದಾರೆ ಎನ್ನುವುದನ್ನು ನಾನು ಹೇಳಲಾರೆ. ಆದರೆ ಈ ಎಲ್ಲಾ ನಾಟ್ಯದ ಹಿಂದೆ ಇರುವುದು ಮೂಲಶಕ್ತಿ ಎನ್ನುವುದು ಸುಸ್ಪಷ್ಟ." ಎನ್ನುತ್ತಾರೆ ಆನಂದ ಕುಮಾರಸ್ವಾಮಿ. ನಾಟ್ಯವೇ ಮೊದಲ ಸೃಷ್ಟಿಶೀಲ ಚಟುವಟಿಕೆಯೇ? ನಾಟ್ಯಕ್ಕೂ ಕಾಮಕ್ಕೂ(Eros) ಬಿಡಿಸಲಾಗದ ನಂಟಿದೆಯೇ? ಪ್ರಕೃತಿಯ ನಡೆಯಲ್ಲಿರುವ "ಲಯ"ದ ಸಂವೇದನೆ ನಾಗರೀಕತೆಯ ಪೂರ್ವದ ನಮ್ಮ ಪೂರ್ವಜರ ನಾಟ್ಯದಲ್ಲಿ ಅಡಗಿತ್ತೇ? ಮುಂತಾದ ತಮ್ಮ ಚಿಂತನೆಯನ್ನು ಆನಂದ ಕುಮಾರಸ್ವಾಮಿ ಹೇಳುತ್ತಾ ಹೋಗುತ್ತಾರೆಯೇ ಹೊರತು ಅದನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇಲ್ಲಿ ಕಾಮ ಎನ್ನುವುದು ಇಚ್ಛೆ ಅಥವಾ ಸಂಕಲ್ಪ. ಅದು ಶಿವನಿಚ್ಛೆ...ಆದುದರಿಂದಲೇ ನರ್ತನ. ಅದೇ ವಿಶ್ವ ಪರದೆಯ ಮೇಲೆ ಮೂಡಿ ಬರುವ ಚಿತ್ರಣ. ಬಾಹ್ಯ ದೃಷ್ಟಿಗೆ ತೋರಿ ಬರುತ್ತಿರುವುದೆಲ್ಲಾ ಟಿವಿಯ ಪರದೆಯ ಮೇಲೆ ಮೂಡಿ ಬರುತ್ತಿರುವ ಚಿತ್ರಗಳಂತೆ. ಅವುಗಳನ್ನು ನಿರಾಕರಿಸಿ ನಿನ್ನನ್ನು ನೀನು ಹುಡುಕು ಎನ್ನುತ್ತಾರೆ ರಮಣ ಮಹರ್ಷಿಗಳು. ಆಗ ಶಿವನ ಲಯಬದ್ಧ ತಾಂಡವ ಕಂಡೀತು. ಆದರೆ ಇಲ್ಲಿ ಆನಂದ ಕುಮಾರಸ್ವಾಮಿ ಈ ನಾಟ್ಯವನ್ನು ಕೇವಲ ಕಲೆಯ ಕಾಣ್ಕೆಯ ದೃಷ್ಟಿಯಿಂದಷ್ಟೇ ನೋಡಿದಂತೆ ಭಾಸವಾಗುತ್ತದೆ. "ಮತ ಧರ್ಮ-ಕಲೆಗಳ ಇತಿಹಾಸದಲ್ಲಿ ಕಂಡುಬರುವ ಯಾವುದೇ ದೊಡ್ಡ ಸಂಕೇತಗಳು ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಕಂಡುಬಂದಿವೆ. ಕಾಲ ಕಾಲಕ್ಕೆ ಅವು ತಮ್ಮ ಎದೆಯಾಳದಲ್ಲೇ ಅಂತಹ ಸಂಪತ್ತನ್ನು ಮನುಷ್ಯರು ಕಂಡುಕೊಳ್ಳುವಂತೆ ತಮ್ಮನ್ನು ಅವರಿಗೆ ಕೊಟ್ಟುಕೊಂಡಿವೆ" ಎನ್ನುತ್ತಾರೆ ಅವರು. ಶಿವನ ನೃತ್ಯದ ಮೂಲ ಏನೇ ಇರಲಿ, ಅದು ಆ ಸಮಯಕ್ಕೆ ಯಾವುದೇ ಕಲೆ ಅಥವಾ ಪಂಥ ಗರ್ವ ಪಡುವಂತೆ ಭಗವಂತನ ಕಾರ್ಯವಾಗಿ ಸ್ಪಷ್ಟವಾಗಿ ಗೋಚರಿಸಿದೆ. ಇದು ಅವರವರ ಭಾವಕ್ಕೆ ಅವರವರ ಭಕುತಿಗೆ ಶಿವನ ತಾಂಡವ ಕಾಣುವ ರೀತಿ. ತಮ್ಮಲ್ಲಿರುವುದನ್ನೇ ತಾವು ಕಂಡುಕೊಳ್ಳುವುದು. ಕಲೆಯ ದೃಷ್ಟಿಯಿಂದ ಅದು ಹೊಸತನ. ನವೀನತೆಯೇ ಕಲೆಯ ಬದುಕಿನ ಜೀವಾಳವಲ್ಲವೇ? ಕಲಾತತ್ತ್ವದ ಜೊತೆಗೆ ತತ್ತ್ವಜ್ಞಾನವೂ ಮೇಳೈಸಿದ್ದು ಕುಮಾರ ಸ್ವಾಮಿಯವರ ವೈಶಿಷ್ಟ್ಯ.
ಶಿವನ ಹಲವು ನೃತ್ಯಗಳಲ್ಲಿ ಮೂರು ನೃತ್ಯಗಳ ಬಗೆಗಷ್ಟೇ ಆನಂದ ಕುಮಾರಸ್ವಾಮಿ ಹೇಳತೊಡಗುತ್ತಾರೆ. ಒಂದು "ಶಿವ ಪ್ರದೋಶ ಸ್ತೋತ್ರ"ದಲ್ಲಿ ವರ್ಣಿಸಲ್ಪಟ್ಟಿರುವ ಕೈಲಾಸ ಶಿಖರದ ಮೇಲಿನ ಸಾಯಂಕಾಲದ ನೃತ್ಯ. ಶೂಲಪಾಣಿಯಾಗಿ ಅವನು ನೃತ್ಯಗೈಯಲು ಸರಸ್ವತಿ ವೀಣೆಯನ್ನು, ಇಂದ್ರ ಕೊಳಲನ್ನು, ವಿಷ್ಣು ಡಮರುವನ್ನು ನುಡಿಸುತ್ತಿದ್ದರೆ ಲಕ್ಷಿ ಹಾಡುತ್ತಾಳೆ. ದೇವತೆಗಳು, ಯಕ್ಷ, ಕಿನ್ನರ, ಕಿಂಪುರುಷ, ಸಿದ್ಧ, ಸಾಧ್ಯ, ನಾಗ, ಅಪ್ಸರೆಯರೆಲ್ಲಾ ಶಿವನ ಸುತ್ತ ನಿಂತು ಆ ನಾಟ್ಯಕ್ಕೆ ಸಾಕ್ಷಿಯಾಗುತ್ತಾರೆ. ಎರಡನೆಯದ್ದು ತಾಂಡವ. ಶಿವನ ತಾಮಸಿಕ ರೂಪವಾದ ಭೈರವ ಅಥವಾ ವೀರಭದ್ರನಿಗೆ ಸಂಬಂಧಿಸಿದ್ದು. ರುದ್ರಭೂಮಿಗಳಲ್ಲಿ ದಶ ಕರಗಳೊಂದಿಗೆ ದೇವಿಯನ್ನೂ ಜೊತೆ ಸೇರಿಸಿಕೊಂಡು ಶಿವ ನರ್ತಿಸುತ್ತಾನೆ. ಎಲ್ಲೋರಾ, ಎಲಿಫೆಂಟಾ, ಭುವನೇಶ್ವರಗಳಲ್ಲಿ ಈ ನಾಟ್ಯದ ಭಂಗಿಗಳನ್ನು ಕಾಣಬಹುದು. ಮೂರನೆಯದ್ದು ನಟರಾಜನ ನಾದಾಂತ ನೃತ್ಯ. ತಾರಗ್ರಮ್ ಕಾನನದಲ್ಲಿ ಕರ್ಮನಿಷ್ಠ-ತರ್ಕನಿಷ್ಠ ಮೀಮಾಂಸಕರಿದ್ದರು. ಅವರನ್ನು ಭೇಟಿಯಾಗಲೆಂದು ಶಿವ ಸ್ತ್ರೀ ರೂಪ ಧರಿಸಿದ ವಿಷ್ಣು ಹಾಗೂ ಆದಿಶೇಷನ ಜೊತೆ ಹೊರಟ. ಇವರನ್ನು ನೋಡಿ ಋಷಿ ಮಂಡಲದಲ್ಲಿ ತೀವ್ರ ಜಿಜ್ಞಾಸೆ ಉಂಟಾಯಿತು. ಆ ಜಿಜ್ಞಾಸೆ ಕೋಪಕ್ಕೆ ತಿರುಗಿತು. ಋಷಿಗಳು ಹೆಬ್ಬುಲಿಯೊಂದನ್ನು ಸೃಷ್ಟಿಸಿ ಶಿವನ ವಿರುದ್ಧ ಪ್ರಯೋಗಿಸಿದರು. ಶಿವ ನಗುತ್ತಾ ಕಿರು ಬೆರಳ ಉಗುರ ಮೊನೆಯಿಂದ ಹುಲಿಯ ಚರ್ಮವನ್ನು ಸುಲಿದು ತನ್ನ ಸೊಂಟದ ಸುತ್ತಾ ಸುತ್ತಿಕೊಂಡ. ಅವರು ಭಯಾನಕ ಸರ್ಪವೊಂದನ್ನು ಸೃಷ್ಟಿಸಿದರೆ, ಶಿವ ಆ ಹಾವನ್ನೇ ಹೂವಿನ ಮಾಲೆಯಂತೆ ಕೊರಳಿಗೆ ಹಾಕಿಕೊಂಡ. ಅಲ್ಲದೇ ನರ್ತನಕ್ಕೆ ತೊಡಗಿದ. ಕೊನೆಯ ಪ್ರಯತ್ನವೆಂಬಂತೆ ಆ ಮುನಿಗಳು ವಿಕಾರ ರೂಪದ ಮಯಲಕ ಎನ್ನುವ ಕುಬ್ಜನೊಬ್ಬನನ್ನು ಸೃಷ್ಟಿಸಿ ಕಳುಹಿದರು. ಕಾಲಿಗೆ ತೊಡಕಾಗಿ ಬಂದ ಆ ಕುಬ್ಜನ ಮೇಲೆಯೇ ಶಿವ ತನ್ನ ಹೆಬ್ಬೆರಳನ್ನೂರಿದ. ಕುಬ್ಜನ ಬೆನ್ನೆಲುಬು ಮುರಿಯಿತು. ಅವನ ಆ ಸ್ಥಿತಿಯೇ ಶಿವನಿಗೆ ಪ್ರಣಾಮವಾಗಿಬಿಟ್ಟಿತು. ಹೀಗೆ ಈ ಪುರಾಣದ ಅನುಭವದ ಮೇಲೆಯೇ ಕಲೆ ಅರಳಿತು. ಮೈಯನ್ನು ತಿನ್ನಲು ಬರುವ ಹುಲಿಯೇ ಮೈಮುಚ್ಚುವ ಬಟ್ಟೆಯಾದದ್ದು, ಹಾವೇ ಹೂ ಮಾಲೆಯಂತೆ ಕೊರಳ ಬಳಸುವುದು...ಇದು ಕಲೆಯ ವಿಶೇಷ. ಆಗ ಆದಿಶೇಷ ಶಿವನನ್ನು ಅರ್ಚಿಸಿ ಪುನಃ ನಾಟ್ಯವನ್ನು ನೋಡುವ ಸೌಭಾಗ್ಯವನ್ನು ಕರುಣಿಸು ಎಂದು ಶಿವನನ್ನು ಪ್ರಾರ್ಥಿಸಿದಾಗ ಅವನು ವಿಶ್ವದ ಕೇಂದ್ರವಾದ ಚಿದಂಬರಂನಲ್ಲಿ ಮತ್ತೆ ನಾಟ್ಯ ಮಾಡುತ್ತೇನೆಂದು ಮಾತು ಕೊಡುತ್ತಾನೆ. ಇದು ಆನಂದ ಕುಮಾರಸ್ವಾಮಿಯವರು ತಮಿಳಿನ ಕೊಯಿಲ್ ಪುರಾಣದ ಘಟನೆಯನ್ನು ಕಟ್ಟಿಕೊಡುವ ರೀತಿ. ಅಚ್ಚರಿಯೆಂದರೆ ಶ್ರೀಹರಿಯ ಮಿಡಿತಕ್ಕೆ ಅಚ್ಚರಿಗೊಂಡು ಅದರ ಹಿಂದಿನ ಕಾರಣ ಶಿವ ತಾಂಡವವೆಂದು ತಿಳಿದ ಆದಿಶೇಷ ಶಿವನ ತಾಂಡವವನ್ನು ವೀಕ್ಷಿಸಲೋಸುಗ ತಪಗೈಯ್ಯುತ್ತಿರುವಾಗ ನಂದಿಯೊಡನೆ ವಾಗ್ವಾದವಾಗಿ ಕೊಂಬು ಕೋಡುಗಳಿಲ್ಲದ ಅಕ್ಷರ ರಚಿಸುವೆನೆಂದು ಪ್ರತಿಜ್ಞೆ ಮಾಡಿ, ಯೋಗಿಭೂಷಣನ ಕೃಪೆಯಿಂದ ವೀಕ್ಷಿಸಿದ ತಾಂಡವವು ಯೋಗವಿದ್ಯೆಯಾಗಿ "ದರ್ಶನ"ವಾಗಿ ಪತಂಜಲಿಯಿಂದ ಹೊರಹೊಮ್ಮಿತಷ್ಟೇ. ಎರಡು ಬಾರಿಯೂ ತಾಂಡವದ ವೀಕ್ಷಣೆಯ ಆಸೆಯಿಂದ ಹೋದವ ಶೇಷನೇ. ನಾಗನಿಗೂ ನಾಟ್ಯಕ್ಕೂ ಏನು ಲಯಬಂಧ!
"ಚಿದಂಬರ ಮುಮ್ಮನಿ ಕೊವೈ" ವ್ಯಾಖ್ಯಾನದಂತೆ "ಡಮರುವನ್ನು ಹಿಡಿದ ಕೈ ಭೂ-ಸ್ವರ್ಗ ಮತ್ತಿತರ ಲೋಕಗಳನ್ನು, ಅಸಂಖ್ಯಾತ ಜೀವಿಗಳನ್ನೂ ಸೃಷ್ಟಿಸಿದೆ. ಅಭಯ ಹಸ್ತ ಅವೆಲ್ಲವನ್ನೂ ಪೊರೆಯುತ್ತದೆ. ಇವೆಲ್ಲವೂ ರೂಪ ಪಡೆದದ್ದು ಶಿವನ ಇನ್ನೊಂದು ಕೈಯಲ್ಲಿರುವ ಬೆಂಕಿಯಿಂದಲೇ. ಅಜ್ಞಾನದಿಂದ ನರಳಾಡುತ್ತಿರುವ ಜೀವಿಗೆ ನೆಲದಲ್ಲಿರಿಸಿರುವ ಶಿವನ ಪಾದವೇ ಗತಿ. ಮೇಲಕ್ಕೆತ್ತಿದ ಪಾದ ಮೋಹ ತ್ಯಜಿಸಿ ತನ್ನೆಡೆಗೆ ಬರುತ್ತಿರುವವರಿಗೆ ಅನುಗ್ರಹಕ್ಕಾಗಿ ಪುಟಿದೆದ್ದು ನಿಂತಿದೆ" ಎಂದು ನಟರಾಜನ ಸೃಷ್ಟಿ, ಸ್ಥಿತಿ, ಲಯ, ತಿರೋಭಾವ, ಅನುಗ್ರಹಗಳೆಂಬ ಪಂಚಕೃತ್ಯಗಳನ್ನು ವಿವರಿಸುತ್ತಾರೆ ಆನಂದ ಕುಮಾರ ಸ್ವಾಮಿ. "ತಿರುಕುಟ್ಟು ದರ್ಶನ"ದ ಸಾಲುಗಳನ್ನು ಉಲ್ಲೇಖಿಸುತ್ತಾ "ಅವನು ಎಲ್ಲೆಡೆಯೂ ಇದ್ದಾನೆ. ಎಲ್ಲಾ ಕಡೆಯೂ ಅವನ ನಾಟ್ಯವಿದೆ. ಎಲ್ಲವೂ ಅವನೇ ಹಾಗೂ ಅವನೊಬ್ಬನೇ ಇರುವವನು. ಅವನು ಕಾಲಾತೀತ. ಅವನ ನಾಟ್ಯವೂ! ಪಂಚಕೃತ್ಯಗಳನ್ನು ಮಾಡುವ, ಪೃಥ್ವಿ-ಜಲ-ಅಗ್ನಿ-ಗಾಳಿ-ಆಕಾಶಗಳಲ್ಲೂ ಕಾಣುವ ಅವನ ನೃತ್ಯ ಎಲ್ಲಾ ಕಡೆಯಲ್ಲೂ ಎಲ್ಲಾ ಕಾಲದಲ್ಲೂ ಇರುವ ಪರಮಸತ್ಯ." ಮಾಯೆಯ ಪೊರೆಯನ್ನು ಕಳಚಿಕೊಂಡವರಿಗೆ ಅದು ಕಾಣುತ್ತದೆ ಎಂದು ವಿಸ್ತರಿಸುತ್ತಾರೆ.
ವಾಸ್ತವವಾಗಿ ಆನಂದ ಕುಮಾರಸ್ವಾಮಿಯವರು ಹೇಳಿದ್ದು ಅನಂದ ತಾಂಡವದ ಒಂದು ಭಂಗಿಯ ಬಗೆಗೆ ಮಾತ್ರ. ತಾಂಡವದಲ್ಲೇ ಆನಂದ, ಸಂಧ್ಯಾ, ಕಾಳಿಕಾ, ತ್ರಿಪುರ, ಗೌರೀ, ಸಂಹಾರ, ಉಮಾ ತಾಂಡವಗಳೆಂಬ ಏಳು ಪ್ರಕಾರಗಳಿವೆ. ತಾಂಡವದ ಪ್ರತಿಯೊಂದು ಮುದ್ರೆಗೂ ವ್ಯಾಪಕ ಅರ್ಥವಿರುತ್ತದೆ. ಸಾಮಾನ್ಯವಾಗಿ ಕಾಣಸಿಗುವ ಶಿವನ ಆನಂದ ತಾಂಡವದ ಒಂದು ಮುದ್ರೆಯನ್ನು ನೋಡೋಣ. ಅಲ್ಲಿ ಕಿವಿಗಳಲ್ಲಿನ ವಿಭಿನ್ನ ಕುಂಡಲಗಳು ಅರ್ಧನಾರೀಶ್ವರನನ್ನು, ಹಿಂದಿನ ಬಲಗೈಯಲ್ಲಿನ ಡಮರುಗ ನಾದ ಹಾಗೂ ಶಬ್ಧ ಬ್ರಹ್ಮದ ಉತ್ಪತ್ತಿಯನ್ನು, ಹಿಂದಿನ ಎಡಗೈಯಲ್ಲಿನ ಅಗ್ನಿ ಚರಾಚರದ ಶುದ್ಧಿಯನ್ನು, ಮುಂದಿನ ಬಲಗೈ ಅಭಯವನ್ನು, ಮುಂದಿನ ಎಡಗೈ ಜೀವಗಳ ಮುಕ್ತಿಗಾಗಿ ಮೇಲೆ ಎತ್ತಿರುವ ಕಾಲಿನ ಕಡೆಗೆ ಸಂಕೇತವನ್ನು, ಬಲಗಾಲ ಕೆಳಗೆ ಬಿದ್ದಿರುವ ಅಪಸ್ಮಾರ ಅಥವಾ ಮಯಲಕ ಹೆಸರಿನ ದೈತ್ಯ ಅವಿದ್ಯೆ ಮತ್ತು ಅಜ್ಞಾನದ ನಾಶವನ್ನು, ಸುತ್ತಲಿನ ಚಕ್ರ ಮಾಯಾಚಕ್ರವನ್ನು, ಚಕ್ರಕ್ಕೆ ತಗಲಿಸಿರುವ ಕೈಕಾಲು ಮಾಯೆಯನ್ನು ಪವಿತ್ರಗೊಳಿಸುವುದನ್ನು, ಚಕ್ರದಿಂದ ಹೊರಡುವ ಜ್ವಾಲೆಗಳಿಂದ ಹೊರಹೊಮ್ಮುವ ಐದು ಸ್ಪುಲ್ಲಿಂಗಗಳು ಸೂಕ್ಷ್ಮ ಪಂಚತತ್ವಗಳನ್ನು ಪ್ರತಿಪಾಡಿಸುತ್ತವೆ. ಆನಂದ ತಾಂಡವದ ಒಂದು ಭಂಗಿಯೇ ಇಷ್ಟಾದರೆ ಸಂಪೂರ್ಣ ತಾಂಡವದ ಅದರಲ್ಲೂ ಅದರ ಎಲ್ಲಾ ಏಳು ಪ್ರಕಾರಗಳ ಗೂಢತೆ ಎಷ್ಟಿರಬಹುದು?
ಅವನ ನಾಟ್ಯ ನಮ್ಮೊಳಗೇ ಇರುವಂತಹದ್ದು. ಅದನ್ನು ದರ್ಶಿಸುವವನಿಗೆ ಮಾಯೆಯೆ ಮೋಹ ಮುಸುಕದು. "ಮೇರು ಪ್ರಜ್ಞೆ"ಯನ್ನು ತಲುಪಿ ಆತ್ಮಾನಂದವನ್ನು ಅನುಭವಿಸುತ್ತಿರುವ ಮೌನಿ ಯೋಗಿಗಳು, ಕಟ್ಟಿರುವ ಈ ಮೂರು ಬಂಧಗಳನ್ನು ಬಿಚ್ಚಿ ವೇದಾಂತದ ತುತ್ತ ತುದಿ ತಲುಪಿದ, ಶಿವನ ಕೃಪೆಗೆ ಪಾತ್ರರಾದ ನಿಶ್ಚಲರು. ಶಿವ ಸ್ಮಶಾನದಲ್ಲಿ ನೃತ್ಯ ಮಾಡುತ್ತಾ ಜಗತ್ತನ್ನು ನಾಶಮಾಡುವುದಲ್ಲ. ಅವನು ನಮ್ಮ ಆತ್ಮದಲ್ಲಿ ನರ್ತಿಸುತ್ತಾ ಅಹಂ-ಮೋಹ-ಮಾಯೆಗಳನ್ನು ನಾಶ ಮಾಡುತ್ತಾನೆ. ಅಹಂನ ಕಾರಣದಿಂದ ಮಾಯಾ ಜಗತ್ತಿಗೆ ಬರುವುದು, ಮಾಯೆಯ ಮೋಹಕ್ಕೆ ಸಿಲುಕಿ ಮತ್ತೆ ಅಹಂಗೊಳಗಾಗುವುದು, ಮತ್ತೆ ಮಾಯಾ ಜಗತ್ತಿಗೆ ಬರುವುದು. ಪುನರಪಿ ಜನನಂ ಪುನರಪಿ ಮರಣಂ. ಅಹಂ ಪೊರೆ ಕಳಚಿದಾಗ ಶಿವನಾಗುವುದು. ಯಾವಾಗ "ನಾನು" ಅಳಿಯುವುದೋ ಆಗ "ನಾನು" ಯಾರೆಂದು ತಿಳಿಯುವುದು, ಶಿವನಾಗುವುದು ಎಂದರೆ ಇದೇ ಅಲ್ಲವೇ? ಎಷ್ಟು ಲಯವಿದೆ ಇಲ್ಲಿ! ನಮ್ಮೊಳಗೆ ನಡೆವ ನಾಟ್ಯ ಪಾಪವನ್ನು ಕಳೆಯಲು ಇರುವಂತಹದ್ದು. ಶಿವ ನಮ್ಮನ್ನು ಆವರಿಸಿರುವ ಮಾಯೆಯ ಪೊರೆಯನ್ನು ದೂರ ಮಾಡುತ್ತಾನೆ. ಕರ್ಮ ಬಂಧನವನ್ನು ಕಳಚುತ್ತಾನೆ. ಅವಿದ್ಯೆಯನ್ನು ದೂರ ಮಾಡಿ ಶಾಶ್ವತ ಆನಂದವನ್ನು, ಜ್ಞಾನವನ್ನು ಕರುಣಿಸುತ್ತಾನೆ. ಈ ಶಾಶ್ವತ ನಾಟ್ಯವನ್ನು ಯಾರು ತಮ್ಮೊಳಗೇ ಕಂಡುಕೊಳ್ಳುತ್ತಾರೋ ಅವರು ಮತ್ತೆ ಮತ್ತೆ ಹುಟ್ಟುವುದರಿಂದ ತಪ್ಪಿಸಿಕೊಳ್ಳುತ್ತಾರೆ.
ಶಿವನ ಲೀಲೆಯನ್ನು ವರ್ಣಿಸುವ "ಉನೈವಿಳಕ್ಕಮ್"ಗೆ ಸಂವಾದಿಯಾಗಿ ಕುಮಾರ ಸ್ವಾಮಿಯವರು Skryabin ಕವಿಯ "Poem of Ecstasy" ಯ ಕೆಲವು ಸಾಲುಗಳನ್ನು ಉದ್ಧರಿಸುತ್ತಾರೆ. ಹಾಗೆ ಉದ್ಧರಿಸುವಾಗ ಪುರುಷ, ಯೋಗ-ಮಾಯಾ, ಆನಂದ, ಪ್ರಕೃತಿ. ಸ್ವಭಾವ, ಲೀಲೆ, "ನೇತಿ-ನೇತಿ" ಇತ್ಯಾದಿ ಭಾವಗಳನ್ನು ಆರೋಪಿಸುತ್ತಾರೆ. "ಪುರುಷ ನರ್ತಿಸುತ್ತಿದ್ದಾನೆ, ಯೋಗಮಾಯೆ ಪುರುಷನ ಜೊತೆಗೂಡಿ ಎಲ್ಲವನ್ನೂ ಸೃಷ್ಟಿಸುತ್ತಿದ್ದಾಳೆ..." ಹೀಗೆ ಸಾಗುತ್ತದೆ ಕವನ. ಕೊನೆಗೆ "ನಾನು ಎಲ್ಲವನ್ನೂ ನಿರಾಕರಿಸುತ್ತೇನೆ. ಹಾಗೆ ನಿರಾಕರಿಸುತ್ತಾ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಆನಂದವನ್ನು ಪಡೆಯುತ್ತೇನೆ. ಯಾವುದು ಕೆಡುಕೆಂದು ಕಂಡಿದ್ದೆನೋ ಅದೀಗ ಜೀವನೋತ್ಸಾಹವಾಗಿಬಿಟ್ಟಿದೆ." ಶಿವನ ನಾಟ್ಯ ನಿರಂತರ, ಸ್ವಭಾವಗತ, ಅನುದ್ದೇಶಿತ, ಮೋಕ್ಷದಾಯಕ ಎನ್ನುವಾಗಲೇ ಭಾರತೀಯ ಕಲೆಗೆ ಅಧ್ಯಾತ್ಮವೇ ಮೂಲ ಎನ್ನುವುದನ್ನು ಎತ್ತಿ ಹಿಡಿಯುತ್ತಾರೆ ಆನಂದ ಕುಮಾರಸ್ವಾಮಿ. ಅಲ್ಲದೆ ಕಲೆಗೆ ನೇರ ಸಂಬಂಧವಿರುವ ಅಧ್ಯಾತ್ಮದಿಂದ ಅವರು ಪ್ರಭಾವಿತರಾಗುತ್ತಾರೆ. ಕಲೆಯ ವೈಶಿಷ್ಟ್ಯವೇ ಅದು. ಯಾರು ಒಳಹೊಕ್ಕು ನೋಡುತ್ತಾನೋ, ಅವನನ್ನು ಅದು ಅಪ್ಪಿ ಹಿಡಿಯುತ್ತದೆ.
ಪಂಚಾಕ್ಷರಿಯನ್ನು, ಅದರ ಮಹತ್ವವನ್ನು, ಯಾವುದರಿಂದ ಶಿವತಾಂಡವವು ಬೇರ್ಪಡುವುದಿಲ್ಲವೋ ಅಂತಹ ಓಂಕಾರವನ್ನು ಸ್ವಾಮಿ ಪಿಳ್ಳೈಯವರ ವಿವರಣೆಯೊಂದಿಗೆ ದಾಖಲಿಸುತ್ತಾರೆ ಕುಮಾರಸ್ವಾಮಿ. "ಮೊದಲ ನಾಟ್ಯ ಶಕ್ತಿಯದ್ದು - ಅದು ಓಂಕಾರ, ಕಾಳಿಯ ನೃತ್ಯ. ಎರಡನೆಯದ್ದು ಶಿವನದ್ದು, ಓಂಕಾರದಿಂದ ಬೇರ್ಪಡಿಸಲಾಗದ್ದು(ಅರ್ಧಮಾತ್ರಾ ಹಾಗೂ ತುರೀಯಮ್). ಶಿವನಿಚ್ಛೆಯಿಲ್ಲದೆ ಮೊದಲ ನಾಟ್ಯವು ನಡೆಯದು. ಪ್ರಕೃತಿ-ಪುರುಷರ(ಶಿ-ವ & ನ-ಮ) ಈ ನಾಟ್ಯದ ನಡುವೆ ಇರುವವು ಜೀವಾತ್ಮಗಳು(ಯ). ಶಿವ ತಾಂಡವವೆಂದರೆ ಅದು ವಿಶ್ವದ ಸ್ಥಿತಿಯ ಮೂಲ. ಜೀವಿಗಳ ಭವಬಂಧನವನ್ನು ಬಿಡಿಸುವುದೇ ಅದರ ಉದ್ದೇಶ. ಚಿದಂಬರಂ(ಆಧ್ಯಾತ್ಮಿಕ ಹೃದಯ)ವೇ ಅದರ ಕೇಂದ್ರ.
ಮೊಟ್ಟ ಮೊದಲು ಶಿವನ ನಾಟ್ಯದ ಬಗೆಗೆ ಋಷಿಮುನಿಗಳಿಗೆ ಆದ "ದರ್ಶನ", ಅವರ ಚಿಂತನ-ಮಂಥನ, ಅವರು ಆಗ ಅನುಭವಿಸಿದ ಮಹದಾನಂದ, ಜೀವನದ ಸತ್ಯವನ್ನು ಅವರು ಕಂಡುಕೊಂಡ ರೀತಿ, ಶತಶತಮಾನಗಳು ಕಳೆದರೂ ಆ ಸತ್ಯ ಜಗತ್ತೇ ಒಪ್ಪುವಂತೆ ಸ್ಥಿರವಾಗಿರುವ ಬಗ್ಗೆ ಕುಮಾರಸ್ವಾಮಿಯವರು ರೋಮಾಂಚನಗೊಳ್ಳುತ್ತಾರೆ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಬಯಸುವ ತನಕ ನಾಟ್ಯದಲ್ಲಿ ತೊಡಗದು. ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ ಪ್ರಕಟರೂಪಗಳನ್ನು ಧಾರಣೆ ಮಾಡುವ ಶಿವ ಕಾಲದ ಆದ್ಯಂತ ನರ್ತಿಸುತ್ತಲೇ ನಾಮರೂಪಗಳನ್ನೆಲ್ಲಾ ಸಂಹರಿಸಿ ಹೊಸತೊಂದು ವಿಶ್ರಾಂತಿಯ ಅವಸ್ಥೆಗೆ ಕಳುಹುತ್ತಾನೆ. ಈ ನರ್ತನ ಕಾವ್ಯವೂ ಹೌದು, ವಿಜ್ಞಾನವೂ ಹೌದು. ಅದು ಪುರುಷ-ಪ್ರಕೃತಿಗಳ ಸತ್ತ್ವ ಚಲನೆಯ, ಕ್ರಿಯೆಯ ವಿಕಾಸದ ಒಂದು ಅಭಿವ್ಯಕ್ತಿ. ಯುಗಯುಗಗಳಿಂದ ದಾಟಿ ಬಂದಿರುವ ಒಂದು ನೈಜವಾದ ಸೃಜನ ಶಕ್ತಿ. ಆಧ್ಯಾತ್ಮಿಕ ಕಾವ್ಯವನ್ನು ರೂಪಿಸುವ ನಾದ ಮತ್ತು ಲಯಗಳ ಮೂರ್ತ ರೂಪ. ಸತ್ತೆಯ ಏಕತೆಯನ್ನರುಹುವ ಶಿವನ ತಾಂಡವದ ವೈಶ್ವಿಕ ಲಯವು ಪ್ರಾಣಗರ್ಭಿತ ವಸ್ತುದ್ರವ್ಯವನ್ನು ಸೆಳೆದು ಅನಂತ ಸೌಂದರ್ಯೋಪೇತ ವೈವಿಧ್ಯವನ್ನು ಪ್ರಕಟೀಕರಿಸುತ್ತದೆ. ಶಿವನ ಈ ನೃತ್ಯ ರೂಪಕವು ಆಧ್ಯಾತ್ಮಿಕ, ಕಲಾತ್ಮಕ, ತಾತ್ವಿಕ, ವೈಜ್ಞಾನಿಕ ವಲಯಗಳೆಲ್ಲವನ್ನೂ ಸಂಯುಕ್ತಗೊಳಿಸುವ ಶಕ್ತಿಯಿದ್ದ ಕಾರಣದಿಂದಲೇ ಇವೆಲ್ಲವನ್ನೂ ಪ್ರಭಾವಿಸಿತು. ಧಾರ್ಮಿಕರಿಗೆ ಆರಾಧನೆಯ ವಿಧಾನವಾಗಿ ಗೋಚರಿಸಿದರೆ, ಕಲಾವಿದರಿಗೆ ಕಲೆಯ ಮೂಲವಾಗಿ ಗೋಚರಿಸಿತು. ತತ್ವಶಾಸ್ತ್ರಜ್ಞರಿಗೆ ಸೃಷ್ಟಿಯ ಉಗಮದ ರಹಸ್ಯವನ್ನು ಉಣಿಸಿತು. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ. ಆನಂದ ಕುಮಾರಸ್ವಾಮಿಯವರಿಗೆ ಭಾರತೀಯ ಕಲೆಯ ಮೂಲವಾಗಿ ಅದು "ದರ್ಶನ" ಕೊಟ್ಟಿತು.