ಪುಟಗಳು

ಸೋಮವಾರ, ಡಿಸೆಂಬರ್ 5, 2016

ಯಾರು ಮಹಾತ್ಮ? ಭಾಗ-೨೭

ಯಾರು ಮಹಾತ್ಮ?
ಭಾಗ-೨೭


            ಜಗತ್ತಿನಲ್ಲಿ ಸ್ವಾತಂತ್ರ್ಯ ಪಡೆದ ದೇಶಗಳೆಲ್ಲವೂ ಅತೀವ ಸಂತಸ-ಆನಂದ-ವಿಜೃಂಭಣೆಯಿಂದ ಆಚರಿಸುತ್ತವೆ. ಪ್ರತಿಯೊಂದರ ಸ್ವಾತಂತ್ರ್ಯಕ್ಕೂ ಶೌರ್ಯ, ಕ್ರಾಂತಿ, ಕಣ್ಣೀರು, ಬಲಿದಾನಗಳ ಸಹಿ ಇರುತ್ತವೆ. ಆದರೆ ಭಾರತದ ಸ್ವಾತಂತ್ರ್ಯದಲ್ಲಿ ಒಂದು ಹೆಚ್ಚಿನ ವಿಷಾದದ, ದೌರ್ಭಾಗ್ಯದ, ಇತಿಹಾಸದಿಂದ ಮರೆಮಾಚಲ್ಪಟ್ಟ "ಸಾಮೂಹಿಕ ಹತ್ಯೆ, ಭೀಕರ ಅತ್ಯಾಚಾರ, ಅಪಹರಣ, ಮತಾಂತರ, ಲೂಟಿ-ದರೋಡೆ, ಬಲಾತ್ಕಾರಗಳ" ಭಯಾನಕ ಊಹಿಸಲಾಸಾಧ್ಯವಾದ ಘಟನೆಗಳ ಕಪ್ಪು ಚುಕ್ಕೆಗಳಿವೆ. ವಾಸ್ತವದಲ್ಲಿ ಆ ಕಪ್ಪು ಚುಕ್ಕೆಗಳು ತಮ್ಮ ಸಂಖ್ಯಾ ಬಲದಿಂದ ಸ್ವಾತಂತ್ರ್ಯವೆಂಬ ಬಿಳಿ ಹಾಳೆಯನ್ನು ಮುಚ್ಚಿ ಬಿಟ್ಟಿವೆ. ಆದರೆ ಪ್ರಸಿದ್ಧಿಯ ಹುಚ್ಚು, ಅಹಿಂಸೆಯಿಂದಲೇ ಸ್ವಾತಂತ್ರ್ಯ ಬಂದಿತು ಎಂಬ ಮುಗಿಲುಮುಟ್ಟುವ ಘೋಷಣೆ, ಅಧಿಕಾರ ದಾಹಗಳ ಮಾಯೆ ಈ ಕಪ್ಪು ಬಣ್ಣವನ್ನು ಮರೆಮಾಚಿ ಬಿಳಿಯ ಬಣ್ಣವನ್ನು ಕಾಣಿಸುವ ಪ್ರಯತ್ನ ನಡೆಸಿದೆ. ಆದರೆ ಅವಿದ್ಯೆ ಎನ್ನುವುದು ಎಷ್ಟು ಕಾಲ ಉಳಿದೀತು? ಜ್ಞಾನವನ್ನು ಪಡೆದ ಆತ್ಮದಲ್ಲಿ ಮಾಯೆಯ ಛಾಯೆಯೂ ಉಳಿಯದಂತೆ ಈ ಮಾಯೆ ನಿಧಾನವಾಗಿ ಕರಗಿ ಇತಿಹಾಸದ ನೈಜತ್ವ ಅನವರತ ಅನಾವರಣವಾಗುತ್ತಲೇ ಇದೆ. ವಿಭಜನೆಯ ಭೂತಕ್ಕೆ ಮತಾಂಧತೆಯ ಲೇಪ ಸಿಕ್ಕಿದಾಗ ಕಾರುವ ರಕ್ತದಂತೆ ಭಾರತಾದ್ಯಂತ ನೆತ್ತರ ಕಾಲುವೆ ಹರಿದದ್ದು ಈಗ ನಿಧಾನವಾಗಿ ಕಣ್ಣ ಪೊರೆಯನ್ನೊಗೆದು ಕಾಣುತ್ತಿದೆ. ಹೌದು 1947ರ ಆಗಸ್ಟ್ 15ರಂದು ದೇಶದ ಒಂದು ಗುಂಪು ರಾಷ್ಟ್ರಧ್ವಜ ಹಾರಿಸುತ್ತಾ ಆನಂದ ಭಾಷ್ಫ ಸುರಿಸುತ್ತಿದ್ದರೆ ಇನ್ನೊಂದು ಬೃಹತ್ ಗುಂಪು ತಮ್ಮ ಪತ್ನಿ-ಪುತ್ರ-ಪುತ್ರಿ-ಸಂಬಂಧಿಕರನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿತ್ತು. ಒಂದೇ ದೇಶದಲ್ಲಿ, ಏಕ ಉದ್ದೇಶವಿದ್ದ, ಏಕ ಭಾವವಿದ್ದ, ಏಕ ರೀತಿಯ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದವರಲ್ಲಿ ಉದ್ದೇಶ ಈಡೇರಿಕೆಯ ಸಂದರ್ಭದಲ್ಲಿ ಕಂಡುಬಂದ ಈ ವೈರುಧ್ಯ ಬೇರಾವ ದೇಶದಲ್ಲೂ ಕಂಡುಬರಲಿಕ್ಕಿಲ್ಲ, ಬರಲೂ ಬಾರದು!


            ಇದಕ್ಕೂ ಗಾಂಧಿಗೂ ಏನು ಸಂಬಂಧ ಅನ್ನಬಹುದು. ವಿಭಜನೆಯನ್ನು ಒಪ್ಪಲಾರೆ, ಮಾಡಿದರೆ ಎನ್ನ ದೇಹದ ಮೇಲೆ ಎಂದು ಸೋಗು ಹಾಕಿ, ಕೊನೆಗೆ ವಿಭಜನೆಗೆ ಒಪ್ಪಿ, ಜನರನ್ನು ಒಪ್ಪಿಸಲು ಯತ್ನಿಸಿ; ಜನ, ವಿಭಜನೆಯ ವಿರುದ್ಧ ಹೋರಾಡಿ, ನಾವಿದ್ದೇವೆ ನಿಮ್ಮ ಬೆನ್ನ ಹಿಂದೆ ಎಂದಾಗ ಮುಗುಮ್ಮಾಗಿ ಉಳಿದು, ಮತಾಂಧ ಮುಸ್ಲಿಮರನ್ನು ಇನ್ನೇನು ಹಿಂದೂಗಳು ಶಿಕ್ಷಿಸುತ್ತಾರೆ ಎಂದಾಗ ಉಪವಾಸ ಕೂತು; ವಿಭಜನೆಗೆ ಪರೋಕ್ಷ ಕಾರಣನೂ ಆದ ವ್ಯಕ್ತಿ ಈ ರಕ್ತದೋಕುಳಿಗೆ ಕಾರಣನೂ ಆಗುತ್ತಾನಲ್ಲ. ಒಬ್ಬ ನಾಯಕ ಎಚ್ಚರತಪ್ಪಿ ನಡೆದರೆ ಏನಾಗಬಹುದು ಎನ್ನುವುದಕ್ಕೆ ನಿದರ್ಶನ ಗಾಂಧಿ. ಆದರೆ ಇಂತಹ ರಕ್ತಪಾತಕ್ಕೆ ಗಾಂಧಿ ಯಾವ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಲಿಲ್ಲ. ಹಿಂದೂಗಳಿಗೆ ಸಾಂತ್ವನವನ್ನೂ ಹೇಳಲಿಲ್ಲ. ಬದಲಾಗಿ ಯಾರು ಹಿಂದೂಗಳ ಅತ್ಯಾಚಾರ-ಕೊಲೆ-ಮತಾಂತರಕ್ಕೆ ಕಾರಣರಾದರೋ ಅವರ ಸಲುವಾಗಿ ಉಪವಾಸ ಕೂತರು. ಅಂತಹ ವ್ಯಕ್ತಿಯ ಆಚರಣೆಯೇ "ಜಾತ್ಯಾತೀತತೆ" ಎಂಬ ಪದದೊಳಗೆ ನುಸುಳಿ ಆ ಪದವೇ ಅಪಭೃಂಶಗೊಂಡಿತು. ಅವರ ಅನುಯಾಯಿಗಳು ಇದನ್ನೇ ಗಾಂಧಿವಾದ ಎಂದು ಹೆಸರಿಟ್ಟು ಹಣ್ಣು-ಕಾಯಿ ನೈವೇದ್ಯ ಅರ್ಪಿಸಿ ಪೂಜೆ ಮಾಡಿದರು. ಮಾಡುತ್ತಲೇ ಇದ್ದಾರೆ!


ವಿಭಜನೆಯ ದುರಂತ ಕಥೆಗಳು:
                   ಭಾರತ ವಿಭಜನೆಯೆಂದರೆ ಕೇವಲ ಎರಡು ಭೂಭಾಗಳ ನಡುವೆ ಬೇಲಿ ಕಟ್ಟಿಕೊಂಡುದುದಲ್ಲ. ಅಲ್ಲಿನ ಹಿಂದೂಗಳು ಇಲ್ಲಿಗೂ, ಇಲ್ಲಿನ ಮುಸ್ಲಿಮರೂ ಅಲ್ಲಿಗೂ ಎನ್ನುವ ಪಲ್ಲಟನವೂ ಜೊತೆಗಿತ್ತು. ಅದರ ಜೊತೆಗೆ ಲಕ್ಷಾಂತರ ಹಿಂದೂಗಳ ಕಗ್ಗೊಲೆ, ಸಾವಿರಾರು ಮಹಿಳೆಯರ ಅಪಹರಣ-ಮತಾಂತರ-ಭೀಕರ ಅತ್ಯಾಚಾರದ ಭೀಷಣತೆಯೂ ಸೇರಿಕೊಂಡಿತು. ಮೊದಲನೆಯದ್ದು ಭಾರತೀಯರಿಗೆ ಬ್ರಿಟಿಷರ ಕೊಡುಗೆ! ಎರಡನೆಯದ್ದು ಬ್ರಿಟಿಷ್-ಮುಸ್ಲಿಂ ಲೀಗ್-ಕಾಂಗ್ರೆಸ್ ಈ ಮೂವರ ಕೊಡುಗೆ!! ಹಾಗೂ ಮೂರನೆಯದ್ದು ಮತಾಂಧ ಮುಸ್ಲಿಮರ ಹಾಗೂ ಕಾಂಗ್ರೆಸ್ಸಿನ ಕೊಡುಗೆ!!! ಈ ವಿಭಜನೆಯಿಂದಾಗಿ ತಲೆತಲಾಂತರದಿಂದ ನೆರೆಹೊರೆಯಲ್ಲಿ ಬಾಳುತ್ತಿದ್ದ ಕುಟುಂಬಗಳೆರಡು ಒಂದೇ ದಿನದಲ್ಲಿ ಪರಸ್ಪರ ಬದ್ಧದ್ವೇಷಿಗಳಾಗಿಬಿಟ್ಟವು. ಲಾಹೋರ್, ಕರಾಚಿ, ಪೇಷಾವರ್, ರಾವಲ್ಪಿಂಡಿ, ದೆಹಲಿ, ಅಮೃತಸರ, ಬಿಹಾರ, ಬಂಗಾಳಗಳ ವ್ಯಾಪಾರ ಕೇಂದ್ರಗಳು, ಹಳ್ಳಿಗಳು, ಕೃಷಿ ಜಮೀನುಗಳು, ಅಂಗಡಿ-ಮುಂಗಟ್ಟು, ಗುಡಿಸಲು-ಮಹಲುಗಳ ಗೋಡೆಗಳಲ್ಲಿ ಹಸಿರು ಬಣ್ಣ ಬಳಿಯಲ್ಪಟ್ಟಿತು-ನೆಲದಲ್ಲಿ ರಕ್ತದ ಕೋಡಿಯೇ ಹರಿಯಿತು! ಇದು ಲೂಟಿ-ದರೋಡೆಯೂ ಅಲ್ಲ, ಆಂತರಿಕ ಸಮರವೂ ಅಲ್ಲ; ಜಿಹಾದ್ (ಧರ್ಮ ಯುದ್ಧ) ಎನ್ನುವ ಕೂಗು ಮುಗಿಲು ಮುಟ್ಟಿತು. ಆ ಗದಗುಟ್ಟಿಸುವ ಅಟ್ಟಹಾಸದ ಮಧ್ಯೆ ಮುಗಿಲು ಮುಟ್ಟುವ ಹಿಂದೂಗಳ ಆಕ್ರಂದನವೂ ಕೇಳದಾಯಿತು. ರಸ್ತೆಗಳ ಇಕ್ಕೆಲಗಳಲ್ಲಿ ಹಿಂದೂಗಳ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗರ್ಭ ಸೀಳಿ ಹೊರಬರುತ್ತಿರುವ ಮಗುವಿನ ರುಂಡವನ್ನು ಕತ್ತರಿಸಿದ ಸ್ಥಿತಿಯಲ್ಲಿ ರುಂಡ ಹೀನ ತಾಯಿಯ ಶವವೂ ದ್ವೇಷದ ವಿಕಾರತೆಯನ್ನು ಸಾರಿ ಹೇಳುತ್ತಿತ್ತು. ಆಗ ತಾನೆ ಬಿರಿದ ಕುಸುಮಗಳ ಪಕಳೆಗಳು ಛಿದ್ರವಾಗಿ ಬಿದ್ದಿದ್ದವು. ಮೊಗ್ಗನ್ನು ಅರ್ಧದಲ್ಲೇ ಚಿವುಟಲಾಗಿತ್ತು. ಅರಳಿದ ಹೂಗಳ ಬಿಳಿಚಿದ ಮುಖದ ಶವಗಳು ಭೀಷಣತೆಯ ಸಾಕ್ಷಿಗಳಾಗಿದ್ದವು.

          ರಾವಲ್ಪಿಂಡಿ ನಂತರ ಲಾಹೋರ್ ನಗರದಲ್ಲಿ ಹಿಂದೂಗಳ ಭಯಾನಕ ಸಾಮೂಹಿಕ ಹತ್ಯೆ ನಡೆಯಿತು. ಹತ್ಯೆಗೀಡಾದ ಸಾವಿರಾರು ಜನರ ಶವಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅನಾರ್ಕಲಿ ಮಾರುಕಟ್ಟೆಯಂತಹ ವ್ಯವಹಾರ ಸ್ಥಳಗಳು ಬೆಂಕಿಗೆ ಆಹುತಿಯಾಗಿದ್ದವು. ಹಿಂದೂಗಳು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಪಾರಾಗಲು ಯತ್ನಿಸಿದ ಹಿಂದೂಗಳು ಸೇನೆ ಮತ್ತು ಪೊಲೀಸರ ಗುಂಡಿಗೆ ಬಲಿಯಾದರು. ಸಾವಿರಾರು ಹಿಂದೂಗಳನ್ನು ಸಜೀವ ದಹಿಸಲಾಯಿತು. ಅಳಿದುಳಿದ ಹಿಂದೂಗಳು ಅನ್ನ-ನೀರುಗಳಿಲ್ಲದೆ ಬಳಲಿ ಬಸವಳಿದು ಜೀವವುಳಿಸಿಕೊಳ್ಳಲು ಭಾರತದತ್ತ ಓಡಿ ಬರುತ್ತಿದ್ದರು.(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್)


              ಅದು ಹಿಂದೆಂದೂ ಕಾಣದ ಕ್ರೌರ್ಯದ ಪರಮಾವಧಿ. ಮಧ್ಯಯುಗದಲ್ಲಿ ಅಪ್ಪಳಿಸಿದ ಪ್ಲೇಗಿನಂತೆ ಆರು ವಾರಗಳ ಕಾಲ ಇಡೀ ಉತ್ತರ ಭಾರತಾದ್ಯಂತ ಕೊಲೆಯ ಸನ್ನಿ ಆವರಿಸಿಕೊಂಡಿತ್ತು. ಆ ಮರಣ ಶಾಸನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಯಾವ ಕೋನವೂ ಈ ವೈರಸ್ಸಿನಿಂದ ಮುಕ್ತವಾಗಿರಲಿಲ್ಲ. ಎರಡನೆ ಮಹಾಯುದ್ಧದಲ್ಲಿ ನಾಲ್ಕು ವರ್ಷಗಳಲ್ಲಿ ಅಮೇರಿಕನ್ನರು ಕಳೆದುಕೊಂಡ ಪ್ರಮಾಣದ ಅರ್ಧದಷ್ಟು ಜೀವಗಳನ್ನು ಭಾರತ ಕೇವಲ ಕೆಲವೇ ವಾರಗಳಲ್ಲಿ ಕಳೆದುಕೊಂಡಿತು. ಲಾಹೋರಿನ ಹಳೆಯ ನಗರದಲ್ಲಿ ಹಿಂದೂ ವಾಸದ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ತೀವ್ರ ಬೇಸಗೆಯ ದಿನಗಳಲ್ಲಿ ನೀರಿಲ್ಲದೆ ಹಿಂದೂಗಳು ಹಿಂಡಿ ಹಿಪ್ಪೆಯಾಗಿ ಹೋಗಿದ್ದರು. ನೀರು ಕೇಳಲು ಹೊರ ಬಂದ ಮಹಿಳೆಯರು ಮಕ್ಕಳನ್ನು ಮುಸ್ಲಿಂ ಗುಂಪುಗಳು ವಧಿಸಿದವು. ನಗರದ ಹೆಚ್ಚಿನ ಪ್ರದೇಶಗಳಲ್ಲಿ ಬೆಂಕಿಯ ಕೆನ್ನಾಲಿಗೆ ಮುಗಿಲ ಚುಂಬಿಸ ಹೊರಟಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)


         ಭಾರತದಲ್ಲಿ ಸಹಿಷ್ಣುತೆಯಿಂದ ಬದುಕಿ ಈಗ ಪಾಕಿಸ್ತಾನಕ್ಕೆ ಸ್ಥಾನಾಂತರಗೊಂಡಿದ್ದ ಮುಸ್ಲಿಮರನ್ನೂ ಈ ಮತಾಂಧ ಮುಸ್ಲಿಮರು ಬಿಡಲಿಲ್ಲ. ಅವರು ಬದುಕಿಕೊಳ್ಳಲು ತಮ್ಮ ಮನೆಗಳ ಬಾಗಿಲ ಮೇಲೆ ಹಸಿರು ಬಣ್ಣ ಹಚ್ಚಬೇಕಾಯಿತು. ಲಾರೆನ್ಸ್ ರಸ್ತೆಯಲ್ಲಿದ್ದ ಪಾರ್ಸಿ ಜನಾಂಗದ ವ್ಯಕ್ತಿಯೊಬ್ಬ ಮತಾಂಧ ಮುಸ್ಲಿಮರಿಂದ ಬಚಾವಾಗಲು ತನ್ನ ಮನೆಯ ಬಾಗಿಲ ಮೇಲೆ " ಮುಸ್ಲಿಮರು, ಹಿಂದೂಗಳು, ಸಿಖ್ಖರೆಲ್ಲಾ ಸಹೋದರರು. ಆದರೆ ಓ ನನ್ನ ಸೋದರರೇ, ಈ ಮನೆ ಪಾರ್ಸಿಯವನೊಬ್ಬನಿಗೆ ಸೇರಿದ್ದು" ಎಂಬ ಸಂದೇಶ ಬರೆದಿದ್ದ. ಅದು ವಿಭಜನೆಯ ನೆಪದಲ್ಲಿ ಕಳೆದು ಹೋದುದನ್ನು ನೆನಪಿಸುವಂತಿತ್ತು! ಶೇಖ್ ಪುರದ ಬ್ಯಾಂಕಿನಲ್ಲಿ ಸಾಲ ಸಂಬಂಧ ವಶ ಪಡಿಸಿಕೊಂಡ ಧಾನ್ಯಗಳನ್ನು ಉಗ್ರಾಣದಲ್ಲಿ ಪೇರಿಸಿಡಲಾಗಿತ್ತು. ಆ ಪ್ರದೇಶದ ಎಲ್ಲಾ ಹಿಂದೂಗಳು ಅದೇ ಉಗ್ರಾಣದಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿಗೆ ಬಂದ ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ಅಸಹಾಯಕ ಹಿಂದೂಗಳ ಮೇಲೆ ಗುಂಡಿನ ಮಳೆಗರೆದರು. ಉಗ್ರಾಣ ಸಮೇತ ಹಿಂದೂಗಳೆಲ್ಲಾ ಸುಟ್ಟು ಹೋದರು.(ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ