ಪುಟಗಳು

ಗುರುವಾರ, ಡಿಸೆಂಬರ್ 8, 2016

ಯಾರು ಮಹಾತ್ಮ? ಭಾಗ-೩೦

ಯಾರು ಮಹಾತ್ಮ?
ಭಾಗ-೩೦


              ತಾವು ಎರಡನೇ ಮಹಾಯುದ್ಧದಲ್ಲಿ ನೋಡಿದ್ದುದಕ್ಕಿಂತಲೂ ಎಷ್ಟೋ ಪಟ್ಟು ಭೀಕರತೆ ವಿಭಜನೆ ಸಂದರ್ಭದಲ್ಲಿ ನಡೆಯಿತು ಎಂದಿದ್ದಾರೆ ಪ್ರತ್ಯಕ್ಷದರ್ಶಿಗಳಾಗಿದ್ದ ಬ್ರಿಟಿಷ್ ಅಧಿಕಾರಿಗಳು. ಮತಾಂಧತೆಯ ಬರ್ಬರತೆಯನ್ನು ಪ್ರತ್ಯಕ್ಷವಾಗಿ ಕಂಡ ತನ್ನ ಪ್ರತಿನಿಧಿಗಳ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ "ಭಾರತದಲ್ಲಿ ಮಳೆಯ ನೀರಿನಂತೆ ರಕ್ತದ ಕೋಡಿಯೇ ಹರಿಯುತ್ತಿದೆ" ಎಂದು ದಾಖಲಿಸಿತು. ಪಾಕಿಸ್ತಾನದಿಂದ ಇರುವೆ ಸಾಲಿನಂತೆ ಬರುತ್ತಿತ್ತು ನಿರಾಶ್ರಿತರ ದಂಡು. ಇಂತಹ ಒಂದು ನಿರಾಶ್ರಿತರ ಸಮೂಹದಲ್ಲಿ ಎಂಟು ಲಕ್ಷ ಜನರಿದ್ದರು! ಇದು ಮಾನವ ಇತಿಹಾಸದಲ್ಲೇ ಅತ್ಯಂತ ಬೃಹತ್ ಜನಸಂಖ್ಯಾ ವಿನಿಮಯ. ಬೆಳಗಿನಿಂದ ಸಂಜೆಯವರೆಗೆ ಪರಿಶೋಧನೆ ನಡೆಸಿ ನಿರಾಶ್ರಿತರ ಸಾಲಿನ ಗಾತ್ರ, ಅದರ ಪ್ರಗತಿಯ ವಿವರಗಳನ್ನು ಗಂಟೆಗೊಮ್ಮೆ ನೀಡಲು ವಾಯುಸೇನೆಯ ವಿಮಾನಗಳು ನಿಯೋಜನೆಗೊಂಡಿದ್ದವು. ವಿಮಾನ ವೀಕ್ಷಣೆ ಸಮಯದಲ್ಲಿ ಇರುವೆ ಸಾಲುಗಳಂತೆ ಬರುವ ಜನ ಒಂದು ಕಡೆಯಾದರೆ ಹೊತ್ತಿ ಉರಿಯುತ್ತಿರುವ ಹಳ್ಳಿಗಳು ಇನ್ನೊಂದೆಡೆ ಗೋಚರಿಸುತ್ತಿದ್ದವು. ಗಂಟೆಗೆ ಇನ್ನೂರು ಕಿಮೀ ವೇಗದಲ್ಲಿ ಹದಿನೈದು ನಿಮಿಷ ಹೋದರೂ ನಿರಾಶ್ರಿತರ ಸಾಲು ಕೊನೆಯಾಗಲಿಲ್ಲ ಎಂದು ಓರ್ವ ಪೈಲಟ್ ಉಲ್ಲೇಖಿಸಿದ್ದಾನೆ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)

            ನಿಶ್ಯಕ್ತರಾದ ತಾಯಿ, ಪತ್ನಿ, ಮಕ್ಕಳು, ವೃದ್ಧರನ್ನು ತಲೆಯ ಮೇಲೆ ಹೆಗಲ ಮೇಲೆ ಹೊತ್ತು ಪುರುಷರು ಸಾಗುತ್ತಿದ್ದರು. ಕಣ್ಣು, ಕೈ ಕಾಲು ಕಳೆದುಕೊಂಡವರ ಸಂಖ್ಯೆಯೇ ದಿಗಿಲು ಹುಟ್ಟುವಷ್ಟಿತ್ತು. ಗರ್ಭಿಣಿ ಸ್ತ್ರೀಯರು ಗಂಡಂದಿರ ಆಸರೆ ಪಡೆದಿದ್ದರು. ಮಾರ್ಗ ಮಧ್ಯೆಯೇ ಅನೇಕ ಹೆರಿಗೆಯೂ ಆಗುತ್ತಿತ್ತು. ಬಾಣಂತನವಿಲ್ಲದೆ ಆಶ್ರಯದ ಆಶೆಯಿಂದ ಆ ಪರಿವಾರಗಳು ನಿರಂತರವಾಗಿ ಮುಂದುವರಿಯುತ್ತಲೇ ಇದ್ದವು. ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೆ, ಬಿಸಿಲ ಝಳಕ್ಕೆ ಸತ್ತವರೆಷ್ಟೋ? ಔಷಧ, ಶುಶ್ರೂಷೆಯಿಲ್ಲದೆ ಸತ್ತ ರೋಗಿಗಳೆಷ್ಟೋ? ರೋಗ ಬಂದು ಸತ್ತವರೆಷ್ಟೋ? ಮತಾಂಧ ಪುಂಡರಿಗೆ ಬಲಿಯಾದವರೆಷ್ಟೋ? ಮಲಿನವಾದ-ಹರಿದ ಅಂಗಿ, ಧೋತಿ, ಸೀರೆ, ಹರಿದ ಚಪ್ಪಲಿಗಳು, ಹಲವರಲ್ಲಿ ಅದೂ ಇಲ್ಲ, ಆಹಾರ ಸಿಗುವ ಸಂಭವವೂ ಇಲ್ಲ...ಎಂತಹಾ ದುರವಸ್ಥೆ! ಅವರಲ್ಲಿದ್ದುದು ಕೆಲವೇ ಕೆಲವು ಸಾಮಾನುಗಳು ಜೊತೆಗೇ ಶಿವನದ್ದೋ, ಗುರುನಾನಕರದ್ದೋ ಒಂದು ಪಟ ಅಷ್ಟೇ! ವಿಚಿತ್ರವೆಂದರೆ ಮನುಷ್ಯರ ಜೊತೆ ಸಾಕು ಪ್ರಾಣಿಗಳೂ ತಮ್ಮ ಒಡೆಯರ ದುಃಖದಲ್ಲಿ ಸಹಭಾಗಿಗಳಾಗಿದ್ದವು. ಕೆಲ ನಿರಾಶ್ರಿತ ರೈತರು ತಮ್ಮ ಮನೆ-ಕೃಷಿ ಸಾಮಗ್ರಿಗಳನ್ನು ತಮ್ಮ ಎತ್ತುಗಳು, ಕೋಣಗಳ ಮೇಲೆ ಹೇರಿದ್ದರು. ಅದು ಹಿಂದಿರುಗಿ ಬರಲಾಗದ ಪ್ರಯಾಣ! ಬದುಕಿನ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಪ್ರಯಾಣ! ನಡುನಡುವೆ ಕಾಡುವ ಮತಾಂಧರ ದಾಳಿಗಳನ್ನೂ, ಹಸಿವು-ನೀರಡಿಕೆ, ಕಾಲರಾಗಳನ್ನು ಲೆಕ್ಕಿಸದ ಪ್ರಯಾಣ! ಅದು "ಹಸಿವು-ದುಃಖ-ಅನ್ಯಾಯ-ಅಸುರಕ್ಷತೆ-ಅಭಯ-ಹಾದಿಗಳ ಅಂತ್ಯವಿಲ್ಲದ" ಪ್ರಯಾಣ! ಅವರಿಗಿದ್ದ ಅಂತಿಮ ಆಶಾಕಿರಣ ಒಂದೇ...ಅದು ಭಾರತ! ಹಿಂದೂಸ್ಥಾನ! ಅಬ್ಬಾ ಅದೆಷ್ಟು ಜನರಿಗೆ ಈ ನಾಡು ಮಾತೃ ಪ್ರೇಮದ ಸಿಂಚನವನ್ನುಣಿಸಿದೆ? ಅದೆಷ್ಟು ಜನರಿಗೆ ಈ ನಾಡು ಭಯಮುಕ್ತವಾಗಿ, ಸುರಕ್ಷತೆಯ ತಾಣವಾಗಿ, ಅಂತಿಮ ಆಶಾವಾದವಾಗಿ ಕಂಡಿದೆ? ಜಗತ್ತಿಗೆ ಧರ್ಮವನ್ನೂ, ಮೌಲ್ಯವನ್ನೂ, ನೀತಿಯನ್ನೂ, ಜೀವನಪದ್ದತಿಯನ್ನೂ ಬೋಧಿಸಿದ ಹಿಂದೂಧರ್ಮವಲ್ಲದೆ ಇನ್ನಾರು ಜಗತ್ತಿನ ಅಸಹಾಯಕರಿಗೆ ರಕ್ಷಣೆ ಕೊಟ್ಟಾರು?

         ದಿನದಲ್ಲಿ ಕೆಲಬಾರಿ ವಿಮಾನದಿಂದ ಆಹಾರ ಪೊಟ್ಟಣಗಳನ್ನು ಕೆಳಗುದುರಿಸಲಾಗುತ್ತಿತ್ತು. ಅದೇ ಆ ನಿರಾಶ್ರಿತರಿಗಿದ್ದ ಆಶಾವಾದ. ಅದೂ ಸಿಕ್ಕಿದವರಿಗೆ ಸಿಕ್ಕಿತು. ಅಸಹಾಯಕರಿಗೆ ಅದೂ ದುರ್ಲಭವೇ. ನಾಯಿಯೊಂದು ಚಪಾತಿಯೊಂದನ್ನು ಕಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಕಸಿದುಕೊಳ್ಳಲು ಕೆಲ ನಿರಾಶ್ರಿತರು ನಾಯಿಯ ಬೆನ್ನಟ್ಟಿ ಹೋಗುತ್ತಿದ್ದರು. ಅದನ್ನು ನೋಡಿದ ಕ್ಯಾಪ್ಟನ್ ಅಟ್ಕಿನ್'ನ ಕರುಳು ಚುರುಕ್ಕೆಂದಿತು. ಕೆಲವರು ಮಕ್ಕಳನ್ನು ಕರೆದೊಯ್ಯಲಾಗದೇ ವಿಧಿಯ ಕೈಗೆ ಒಪ್ಪಿಸಿ ಮುಂದೆ ಸಾಗುತ್ತಿದ್ದ ದೃಶ್ಯವಂತೂ ಕರುಣಾಜನಕವಾಗಿತ್ತು. ರಸ್ತೆಯ ಬದಿಯಲ್ಲೊಂದು ಮಗು ತನ್ನ ಪುಟಾಣಿ ಮೃದು ಹಸ್ತಗಳಿಂದ ತಾಯಿಯ ಕೈಯನ್ನು ಹಿಡಿದೆಳೆಯುತ್ತಿತ್ತು. ಅದಕ್ಕೇನು ಗೊತ್ತು ತನ್ನ ತಾಯಿ ತನ್ನನ್ನು ಬಿಗಿದಪ್ಪಿಕೊಳ್ಳಲಾಗದ ಲೋಕಕ್ಕೆ ಹೋಗಿದ್ದಾಳೆಂದು! ಲಾಹೋರದಿಂದ ಅಮೃತಸರದವರೆಗಿನ ನಲವತ್ತೈದು ಮೈಲುಗಳ ಹಾದಿ ಅಕ್ಷರಶಃ ಸ್ಮಶಾನವೇ ಆಗಿತ್ತು. ಅಡಿಗಡಿಗೂ ಶವ ಸಿಗುತ್ತಿತ್ತು. ಹಲವರನ್ನು ಕೊಲ್ಲಲಾಗಿತ್ತು. ಕೆಲವರು ಅನ್ನಾಹಾರವಿಲ್ಲದೆ ಸಾವನ್ನಪ್ಪಿದ್ದರು, ಕೆಲವರು ಕಾಲರಾದಿಂದ, ಕೆಲವರು ಅಶಕ್ತತೆಯಿಂದ, ಇನ್ನು ಕೆಲವರು ಆಘಾತದಿಂದ!

         ಇವೆಲ್ಲದರ ನಡುವೆ ಇನ್ನೊಂದು ಆಘಾತ ಕಾದಿತ್ತು. ಆಗಸ್ಟ್ ಹಾಗೂ ಸೆಪ್ಟೆಂಬರುಗಳಲ್ಲಿ ಬಿರು ಬಿಸಿಲಿನಿಂದ ಬಳಲಿದ್ದ ನಿರಾಶ್ರಿತರ ಪ್ರಾರ್ಥನೆ ಎಂಬಂತೆ ಮಳೆ ಪ್ರಾರಂಭವಾಯಿತು. ಅದು ಎಂತಹ ಮಳೆ? ಕಳೆದೈವತ್ತು ವರ್ಷಗಳಲ್ಲಿ ದೇಶ ಕಂಡು ಕೇಳರಿಯದ ಧಾರಾಕಾರ ಮಳೆ. ಪಂಜಾಬದ ಐದೂ ನದಿಗಳೂ ಉಕ್ಕೇರಿ ಹರಿದವು ನಿರಾಶ್ರಿತರ ಕಣ್ಣೀರ ಧಾರೆಯೊಡನೆ! ರಾತ್ರೋರಾತ್ರಿಯ ಈ ಜಲಪ್ರಳಯದಲ್ಲಿ ನದಿಯ ಇಕ್ಕೆಲಗಳಲ್ಲಿ ಮಲಗಿ ನಿದ್ರಿಸುತ್ತಿದ್ದ ನಿರಾಶ್ರಿತರನ್ನು ನೀರು ತನ್ನ ತೆಕ್ಕೆಗೆ ಎಳೆದುಕೊಂಡಿತು. ಮನುಷ್ಯ, ಪ್ರಾಣಿ, ಸಜೀವ, ನಿರ್ಜೀವ ಎನ್ನದೇ ಎಲ್ಲವನ್ನೂ ನದಿಗಳು ತಮ್ಮೊಡಲಿಗೆ ಎಳೆದುಕೊಂಡವು. ಪ್ರವಾಹ ಕಡಿಮೆಯಾದ ಬಳಿಕ ನೋಡಿದರೆ ಹಲವಾರು ಶವಗಳು ನದಿಗಳ ಪಕ್ಕದ ಮರಗಳಲ್ಲಿ ನೇತಾಡುತ್ತಿದ್ದವು! ಸೆಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ಪೂರ್ವ ಪಂಜಾಬಿನಿಂದ ಹಿಂದೂ ನಿರಾಶ್ರಿತರ ದಂಡು ಪ್ರಯಾಣ ಆರಂಭಿಸಿತು. ಪ್ರತೀ ದಂಡಿನಲ್ಲಿ ನಲವತ್ತು ಸಾವಿರದಷ್ಟು ಜನವಿದ್ದರು. ಸೆಪ್ಟೆಂಬರ್ 18 - ಅಕ್ಟೋಬರ್ 20ರ ನಡುವೆ ಇಂತಹ 24 ದಂಡುಗಳು - ಸುಮಾರು 8,49,000 ಜನರು ಭಾರತದ ಗಡಿ ದಾಟಿದರು. ಲಿಯಾಲ್ ಪುರದಿಂದ ಎರಡು ಲಕ್ಷ ಜನರು ಪ್ರಯಾಣ ಆರಂಭಿಸಿದರು. ನಿರಾಶ್ರಿತರ ಸಾಲಿನ ಉದ್ದ ಐವತ್ತೇಳು ಮೈಲಿಗಳಷ್ಟಿತ್ತು. ಅವರಲ್ಲಿ ಹಲವರು ಮತಾಂಧರಿಗೆ ಬಲಿಯಾದರು. ಕೆಲವರು ಕಾಲರಾ ಹಾಗೂ ಉಳಿದವರು ಪ್ರವಾಹಕ್ಕೆ ಬಲಿಯಾದರು. ಮತಾಂಧರ ಪೈಶಾಚಿಕತೆ ಎಷ್ಟಿತ್ತೆಂದರೆ ನಿರಾಶ್ರಿತರ ಆಸ್ಪತ್ರೆಗಳಲ್ಲಿ ಮಹಿಳೆಯರ ಸ್ತನಗಳಿಂದ ಗುಂಡುಗಳನ್ನು ಹೊರತೆಗೆಯಲಾಗುತ್ತಿತ್ತು. ಸೆಪ್ಟೆಂಬರ್ ಹದಿನಾಲ್ಕರಂದು ದೆಹಲಿಯಲ್ಲಿ ಸುರಿದ ಮಳೆಗೆ ನಿರಾಶ್ರಿತ ಶಿಬಿರಗಳಲ್ಲಿದ್ದವರು ಮೊಣಕಾಲೆತ್ತರದ ನೀರಿನಲ್ಲಿ ರಾತ್ರಿ ಕಳೆಯಬೇಕಾಯಿತು. (ಮಹಾತ್ಮ ಗಾಂದಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್).

           ಲಾಹೋರ್-ಕರಾಚಿ ಹೆದ್ದಾರಿಯಲ್ಲಿ ಉಕ್ರಾನಾ ಎನ್ನುವ ಮುಸ್ಲಿಮ್ ಬಾಹುಳ್ಯದ ನಗರವೊಂದಿತ್ತು. ಭಾರತೀಯ ನೌಕಾದಳದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಹಿಂದೂ ತರುಣನೊಬ್ಬ ತನ್ನ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದ. ಸ್ವಾತಂತ್ರ್ಯ ಬಂದಾಗ ಉಳಿದ ಕಡೆಯಲ್ಲಿದ್ದಂತೆ ಆ ನಗರದಲ್ಲೂ ಮುಸಲ್ಮಾನರು ಉನ್ಮತ್ತರಂತೆ ಕುಣಿಯತೊಡಗಿದ್ದರು. "ಹಸ್ ಕೇ ಲಿಯಾ ಪಾಕಿಸ್ತಾನ್, ಲಡ್ ಕೇ ಲೇಂಗೇ ಹಿಂದೂಸ್ಥಾನ್" ಎನ್ನುವ ಘೋಷಣೆ ಪ್ರತಿಧ್ವನಿಸುತ್ತಿತ್ತು. ಆತ ತನ್ನ ಚಿಕ್ಕಪ್ಪ-ಚಿಕ್ಕಮ್ಮರೊಂದಿಗೆ ಬಸ್ಸಿನಲ್ಲಿ ಭಾರತದತ್ತ ಹೊರಟೇ ಬಿಟ್ಟ. ಆತನ ತಂದೆ ಜ್ಯೋತಿಷಿ ಹೇಳಿದ ಹೊರಡುವ ಶುಭಗಳಿಗೆಗಾಗಿ ಕಾಯುತ್ತಾ ಹಿಂದೆಯೇ ಉಳಿದ. ಕ್ಷಣ ಹೊತ್ತಲ್ಲೇ ಪಾಕ್ ಸೈನಿಕರು ಬಸ್ಸನ್ನು ತಡೆದು ಸರ್ವಸ್ವವನ್ನೂ ಲೂಟಿ ಮಾಡಿ ಬಸ್ಸನ್ನು ಹೋಗಗೊಟ್ಟರು. ಹೀಗೆ ಆತ ಉಟ್ಟಬಟ್ಟೆಯಲ್ಲಿ ಭಾರತದ ನೆಲ ಪ್ರವೇಶಿಸಿದಾಗ ತನ್ನ ತಂದೆ ರೈಲು ಸ್ಫೋಟದಲ್ಲಿ ಗಾಯಗೊಂಡ ಸುದ್ದಿ ತಿಳಿಯಿತು. ಗಾಯಾಳುಗಳಿಂದ ಕಿಕ್ಕಿರಿದು ತುಂಬಿದ್ದ ಆ ವಾರ್ಡು ಆತನಿಗೆ ಪರಿಸ್ಥಿತಿಯ ಭಯಾನಕ ಚಿತ್ರಣವನ್ನು ಕಟ್ಟಿಕೊಟ್ಟಿತ್ತು! ಮೈ ತುಂಬಾ ಬ್ಯಾಂಡ್-ಏಡ್ ಹಾಕಿಕೊಂಡ ಆತನ ತಂದೆ ಕಂಪಿಸುತ್ತಿದ್ದ. ಆಸ್ಪತ್ರೆಯಿಂದ ಹೊರಬಂದಾಗಲೂ ಆತನಿಗೆ ತನ್ನ ಅಂಗಹೀನ ತಂದೆಯ ಚಿತ್ರವೂ, ಅಸಂಖ್ಯಾತ ಹಿಂದೂಗಳ ಅಸಹಾಯಕ ಚಿತ್ರವೇ ಕಾಣುತ್ತಿತ್ತು, ಕಾಡುತ್ತಿತ್ತು! ಅವನಾಗಲೇ "ಸೇಡು ತೀರಿಸದೇ ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ. ಅವನು ಮದನ್ ಲಾಲ್ ಪಹವಾ! (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)













ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ