ಪುಟಗಳು

ಮಂಗಳವಾರ, ಡಿಸೆಂಬರ್ 6, 2016

ಯಾರು ಮಹಾತ್ಮ? ಭಾಗ-೨೮

ಯಾರು ಮಹಾತ್ಮ?
ಭಾಗ-೨೮

          ಅಮೃತಸರದ ರೈಲ್ವೇ ನಿಲ್ದಾಣ. ಕಾಲು ಹಾಕಲು ಸಾಧ್ಯವಾಗದಷ್ಟು ಗಿಜಿಗಿಟ್ಟುವಷ್ಟು ಜನಸಂದಣಿ. ಪಾಕಿಸ್ತಾನದಿಂದ ಓಡಿಬಂದಿದ್ದ ಹಿಂದೂಗಳಿಂದಲೇ ತುಂಬಿತ್ತದು. ಅಲ್ಲಿಗೆ ಬರುವ ಪ್ರತಿಯೊಂದು ರೈಲಿನಲ್ಲೂ ತಮ್ಮ ಸಂಬಂಧಿಕರು, ಗೆಳೆಯರು, ಪರಿಚಿತರ್ಯಾರಾದರೂ ಇರುವರೋ ಎಂದು ಹುಡುಕಾಡುತ್ತಿದ್ದರು ಹಲವರು. ಸ್ಟೇಷನ್ ಮಾಸ್ಟರ್ ಚಾನಿ ಸಿಂಗ್ ಎಂದಿನಂತೆ ಆಗಸ್ಟ್ ಹದಿನೈದರ(1947) ಮಧ್ಯಾಹ್ನ 10 ಡೌನ್ ಎಕ್ಸ್ ಪ್ರೆಸ್ ಬರುತ್ತಿದೆ ಎಂದು ಬಾವುಟ ಹಾರಿಸುತ್ತಾ ಸೂಚನೆ ನೀಡಿದ. ರೈಲು ಬಂತು. ಎಲ್ಲಾ ಬೋಗಿಗಳ ಕಿಟಕಿ ಬಾಗಿಲುಗಳು ತೆರೆದೇ ಇದ್ದವು. ಯಾರೊಬ್ಬರೂ ಇಳಿದು ಬರಲಿಲ್ಲ. ಯಾರೊಬ್ಬರೂ ಕಾಣಲಿಲ್ಲ. ಚಾನಿ ಸಿಂಗ್ ಮೊದಲನೇ ಬೋಗಿ ಹತ್ತಿದವನೇ ಭೂತ ಬಡಿದವನಂತೆ ನಿಂತುಬಿಟ್ಟ. ಚೆಂಡಾಡಿದ್ದ ರುಂಡಗಳು, ಕೊಚ್ಚಿ ಹಾಕಿದ್ದ ಕೈಕಾಲುಗಳು, ಚೆಲ್ಲಾಡಿದ್ದ ಮಾನವ ಶರೀರಗಳು! ಅದರ ನಡುವೆ ಕ್ಷೀಣ ದನಿಯೊಂದು ಕೇಳಿತು. ಎಲ್ಲೋ ಯಾರೋ ಬದುಕಿದ್ದಾರೆ ಎಂದು ತಿಳಿದ ಆತ "ನೀವೀಗ ಅಮೃತಸರದಲ್ಲಿದ್ದೀರಿ. ಇಲ್ಲಿ ನಾವು ಹಿಂದೂಗಳು ಹಾಗೂ ಸಿಖ್ಖರೇ ಇದ್ದೇವೆ. ಪೊಲೀಸರೂ ಇದ್ದಾರೆ. ಭಯಪಡಬೇಡಿ" ಎಂದು ಕೂಗಿದ. ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಮುಂದುವರಿದು ಹೋದ ಚಾನಿ ಸ್ತಂಭೀಭೂತನಾಗಿ ನಿಂತುಬಿಟ್ಟ. ಆತ ಆ ದೃಶ್ಯವನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಒಬ್ಬ ಮಹಿಳೆ ಮುಂಡದಿಂದ ಬೇರ್ಪಡಿಸಿದ ತನ್ನ ಗಂಡನ ರುಂಡವನ್ನು ಕರಾಗ್ರದಲ್ಲಿ ಹಿಡಿದು ಕಂಪಿಸುತ್ತಿದ್ದಳು. ಕೊಲೆಗೀಡಾದ ತಾಯಂದಿರ ಶವವನ್ನು ಅಪ್ಪಿಕೊಂಡು ಮಕ್ಕಳು ರೋದಿಸುತ್ತಿದ್ದವು. ಶವಗಳ ರಾಶಿಯಿಂದ ಯಾರೋ ಮಗುವೊಂದನ್ನು ಹೊರಗೆಳೆದರು. ಆದರೆ ಸಿಕ್ಕಿದ್ದು ಮುಂಡ ಮಾತ್ರ! ಸ್ಟೇಷನ್ ಮಾಸ್ಟರ್ ನಂಬ್ ಬೋಗಿಯಿಂದ ಬೋಗಿಗೆ ಸಾಗಿದವ ಪ್ರತೀ ಬೋಗಿಯಲ್ಲೂ ಆ ಭೀಷಣತೆ ಕಂಡು ಬವಳಿ ಬೀಳುವಂತಾದ. ಆತ ರೈಲಿನಿಂದ ಹೊರಬಂದವನೇ ಏನೋ ಅನ್ನಿಸಿ ರೈಲಿನತ್ತ ನೋಡುತ್ತಾನೆ - ಕೊನೇ ಬೋಗಿಯ ಮೇಲೆ ಬಿಳಿಯ ಕಾಗದದಲ್ಲಿ "ನೆಹರೂ ಮತ್ತು ಪಟೇಲ್'ಗೆ ಈ ರೈಲು ನಮ್ಮ ಸ್ವಾತಂತ್ರ್ಯದ ಕಾಣಿಕೆ" ಎಂಬ ಒಕ್ಕಣೆಯಿತ್ತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        1947 ಆಗಸ್ಟ್ 11. ಲಾಹೋರಿನಲ್ಲಿದ್ದ ಹಿಂದೂಗಳು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಲಾರಂಭಿಸಿದ್ದರು. ಹಿಂದೂಗಳನ್ನು ತುಂಬಿಕೊಂಡು ರಾವಲ್ಪಿಂಡಿಯಿಂದ ಬರುತ್ತಿದ್ದ ಸಿಂಧ್ ಎಕ್ಸ್ ಪ್ರೆಸ್ ರೈಲನ್ನು ಅದರ ಮುಸ್ಲಿಮ್ ಚಾಲಕ ಉದ್ದೇಶಪೂರ್ವಕವಾಗಿ ಬಾದಾಮಿ ಬಾಗ್ ಮತ್ತು ಲಾಹೋರದ ನಿಲ್ದಾಣಗಳಲ್ಲಿ ನಿಲ್ಲಿಸಿದ. ಕೈಗೆ ಸಿಕ್ಕಿದ್ದನ್ನು ಹಿಡಿದು ಉನ್ಮತ್ತರಂತೆ ಅನೇಕ ಮುಸ್ಲಿಮರ ಗುಂಪುಗಳು ರೈಲನ್ನು ನಾಲ್ದೆಸೆಗಳಂದ ಸುತ್ತುವರಿದವು. ರೈಲಿನಲ್ಲಿದ್ದ ಹಿಂದೂಗಳೆಲ್ಲರನ್ನೂ ಕೊಚ್ಚಿ ಹಾಕಲಾಯಿತು. ಅವರು ಜೊತೆಗೆ ಒಯ್ಯುತ್ತಿದ್ದ ಸ್ವತ್ತುಗಳೆಲ್ಲ ಆ ಲೂಟಿಕೋರರ ಕೈ ಸೇರಿತು. ಬೆಹ್ರಾ, ಪಿಂಡ್-ದಡಾನ್, ಮಿಯಾನಿಯ ಹಿಂದೂಗಳು ತಮ್ಮ ಸ್ವತ್ತುಗಳೊಂದಿಗೆ ಪಾಕಿಸ್ತಾನಿ ಸೇನೆಯ ರಕ್ಷಣೆಯೊಂದಿಗೆ ಅಮೃತಸರಕ್ಕೆ ತೆರಳುತ್ತಿದ್ದರು. ಕಾಮೋಕೆ ರೈಲು ನಿಲ್ದಾಣ ದಾಟಿದ ಕೂಡಲೆ ರೈಲನ್ನು ನಿಲ್ಲಿಸಲಾಯಿತು. ಜೊತೆಗಿದ್ದ ಸೈನಿಕರು ಕ್ಷಣಾರ್ಧದಲ್ಲಿ ಅದೃಶ್ಯರಾದರು. ಎಲ್ಲರನ್ನೂ ಕೊಚ್ಚಿ ಕೊಲ್ಲಲಾಯಿತು. ಸಂಪತ್ತನ್ನೆಲ್ಲಾ ದೋಚಲಾಯಿತು. ರೈಲು ಅಮೃತಸರ ತಲುಪಿದಾಗ ಶವಗಳಿಂದ ತುಂಬಿತ್ತು. ರೈಲ್ವೇ ಬೋಗಿಗಳಲ್ಲಿ ಅರ್ಧ ಇಂಚಿನಷ್ಟು ರಕ್ತ ಚೆಲ್ಲಾಡಿಹೋಗಿತ್ತು. 1947ರ ಆಗಸ್ಟ್ 14 ಭಾರತದ ಬೇರೆ ಭಾಗಗಳಿಗೆ ಸಂತಸದ ದಿನವಾಗಿದ್ದರೆ ಲಾಹೋರ್ ಮತ್ತು ಪಶ್ಚಿಮ ಪಂಜಾಬಿನ ಹಿಂದೂಗಳಿಗೆ ಸರ್ವನಾಶದ ದಿನವಾಗಿತ್ತು. (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್. ಬಾಲಿ; ದಿ ಪಾರ್ಟಿಷನ್ ಆಫ್ ಇಂಡಿಯಾ - ಜಿ. ಬಿ. ಸುಬ್ಬರಾವ್).

          ಕತ್ತಲೆ ಗವಿಯಂತಿದ್ದ ಲಾಹೋರ್ ರೈಲ್ವೇ ನಿಲ್ದಾಣದಲ್ಲಿ ಬಾಂಬೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣಿಸಲು ಕೆಲ ಆಂಗ್ಲರು ಬರುತ್ತಿದ್ದರು. ಅಲ್ಲಿ ಕೆಲ ಸಿಬ್ಬಂದಿ ಪ್ಲಾಟ್ ಫಾರ್ಮನ್ನು ನೀರು ಹಾಯಿಸಿ ಸ್ವಚ್ಛಗೊಳಿಸುತ್ತಿದ್ದರು. ಕೆಲವೇ ಗಂಟೆಗಳ ಹಿಂದೆ ಭಾರತಕ್ಕೆ ತೆರಳುತ್ತಿದ್ದ ಹಿಂದೂಗಳನ್ನು ಅಟ್ಟಾಡಿಸಿ ಕೊಲ್ಲಲಾಗಿತ್ತು. ಕೆಲವೇ ಗಂಟೆಗಳ ಹಿಂದೆ ಲಾಹೋರ್ ಪೊಲೀಸ್ ಜವಾಬ್ದಾರಿಯನ್ನು ಹಸ್ತಾಂತರಿಸಿ ರೈಲು ಹತ್ತಲು ಬರುತ್ತಿದ್ದ ಬಿಲ್ ರಿಚ್'ನಿಗೆ ಕಾದಿದ್ದು ಇಂತಹ ಸ್ವಾಗತ! ಆತನ ಎದುರೇ ಪೋರ್ಟರುಗಳು ಲಗೇಜ್ ಗಾಡಿಗಳಲ್ಲಿ ಶವಗಳನ್ನು ಹೇರಿಕೊಂಡು ಹೋಗಿ ವ್ಯಾನಿಗೆ ತುಂಬುತ್ತಿದ್ದರು. ಆತ ಶವವೊಂದನ್ನು ದಾಟಿಕೊಂಡೇ ಮೆಟ್ಟಿಲು ಹತ್ತಬೇಕಾಯಿತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        ಗೂರ್ಖಾ ಪಡೆಯೊಂದಿಗೆ ಕ್ಯಾಪ್ಟನ್ ರಾಬರ್ಟ್ ಅಟ್ಕಿನ್ಸನ್ ಲಾಹೋರ್ ನಗರಕ್ಕೆ ಬಂದಾಗ ಮತಾಂಧತೆಯ ಆಟಾಟೋಪಕ್ಕೆ ಹೆದರಿ ಕಂಗಾಲಾಗಿದ್ದ ಹಿಂದೂ ಜನತೆ ಎದೆಗೆ ಮಕ್ಕಳನ್ನು ಅವುಚಿಕೊಂಡು, ಕಂಕುಳಲ್ಲಿ ತಮ್ಮ ಸೀಮಿತ ವಸ್ತುಗಳನ್ನು ಹಿಡಿದುಕೊಂಡು ಸುತ್ತುವರಿಯಿತು. ತಮಗೆ ರಕ್ಷಣೆ ನೀಡುವಂತೆ ಅವರು ಅಟ್ಕಿನ್ಸನಿಗೆ ಅಂಗಲಾಚಿದರು. ಹಳೇ ಲಾಹೋರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಲಕ್ಷಕ್ಕೂ ಮಿಗಿಲಾದ ಸಂಖ್ಯೆಯ ಹಿಂದೂಗಳು ಸುತ್ತ ಬೆಂಕಿ ಜ್ವಾಲೆ, ಅನ್ನ-ನೀರುಗಳಿಲ್ಲದೆ ತಮ್ಮ ಮೊಹಲ್ಲಾದ ಒಳಗೆ ಕುಳಿತುಕೊಳ್ಳುವ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದರು. ಸುತ್ತುವರಿದಿದ್ದ ಬೆಂಕಿಯ ಕೆನ್ನಾಲಿಗೆಗಿಂತಲೂ ಹೆಚ್ಚಾಗಿ ಹೊರಗಡೆ ಸುಳಿದಾಡುತ್ತಿದ್ದ ಮುಸ್ಲಿಮ್ ಗುಂಪುಗಳೇ ಘಾತಕವಾಗಿದ್ದವು. ಯಾರಾದರೂ ಹೊರಬಂದಾಕ್ಷಣ ಎರಗಲು ಆ ಗುಂಪುಗಳು ಸಿದ್ಧವಾಗಿದ್ದವು. ಷಾ ಅಲಿಮಿ ಗೇಟ್ ಪಕ್ಕದಲ್ಲಿದ್ದ ಗುರುದ್ವಾರಕ್ಕೆ ಮತಾಂಧ ಮುಸ್ಲಿಮರ ಗುಂಪು ಬಂದು ಬೆಂಕಿ ಇಟ್ಟಿತು. ಒಳಗಿದ್ದ ನೂರಾರು ಸಿಖ್ಖರು ಜೀವಂತ ಸುಟ್ಟು ಹೋದರು. ಅವರ ಆಕ್ರಂದನ ಕೇಳಿ ಹೊರಗಿದ್ದ ಗುಂಪು ಕೇಕೆ ಹಾಕಿ ಕುಣಿಯುತ್ತಿತ್ತು.(ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್)

                ಲಾಹೋರಿನ ಕಾಲುವೆಗಳು ರಕ್ತದಿಂದ ಕೆಂಪಾಗಿದ್ದವು. ಹಿಂದೂಗಳ ವಾಸದ ಓಣಿಗಳಲ್ಲಿ ಮುಗಿಲು ಮುಟ್ಟುತ್ತಿದ್ದ ಬೆಂಕಿಯ ಕೆನ್ನಾಲಿಗೆಗಳನ್ನು ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ತಮಗೆ ಸಂಬಂಧವೇ ಇಲ್ಲವೆಂಬಂತೆ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಮುಸ್ಲಿಂ ಲೀಗ್ ನಾಯಕರ ಮಾತುಗಳಿಂದ ಉತ್ತೇಜಿತಗೊಂಡಿದ್ದ ಮತಾಂಧರು "ಪಾಕಿಸ್ತಾನ ನಮ್ಮದೂ ಎಂದಾದರೆ ಹಿಂದೂಗಳ ಜಮೀನು, ಮನೆ, ಅಂಗಡಿ ಎಲ್ಲವೂ ನಮ್ಮದೇ" ಎಂದು ಭಾವಿಸಿದರು. ಪಾಕಿಸ್ತಾನದಲ್ಲಿ ಕಾಫಿರರಿಗೆ ಜಾಗವಿಲ್ಲ ಎಂದು ಜಿಹಾದ್ ಘೋಷಿಸಿಯೇ ಬಿಟ್ಟಿದ್ದರು. ಲೈಲಾಪುರದ ಜವಳಿ ಕಾರ್ಖಾನೆಯೊಂದರಲ್ಲಿ ಮುಸ್ಲಿಮ್ ಕೆಲಸಗಾರರು ತಮ್ಮ ಜೊತೆಯಲ್ಲಿದ್ದ ಹಿಂದೂ ಕೆಲಸಗಾರರನ್ನು ಕೊಚ್ಚಿ ಕೊಂದರು. ಅಲ್ಲಿನ ನೀರಾವರಿ ಕಾಲುವೆಯೊಂದು ಹಿಂದೂಗಳ ಶವ ಹಾಗೂ ರಕ್ತದಿಂದ ಕೆಂಪಾಗಿ ತುಂಬಿದ್ದನ್ನು ಕಣ್ಣಾರೆ ಕಂಡರೂ ನಂಬದಾದ ಕ್ಯಾಪ್ಟನ್ ಅಟ್ಕಿನ್ ಸನ್. ಶೇಖ್ ಪುರದ ಶಾಂತಿ ಸಮಿತಿ ಸದಸ್ಯನೂ, ಮುನ್ಸಿಪಲ್ ಕಮೀಷನರೂ ಆಗಿದ್ದ ಸ್ವಾಮಿ ನಂದ ಸಿಂಗನ ತಲೆಯನ್ನು ಮುಸ್ಲಿಂ ಲೀಗ್ ಸದಸ್ಯನೊಬ್ಬ ತನ್ನ ಖಡ್ಗದಿಂದ ಕತ್ತರಿಸಿ ಮುಸ್ಲಿಂ ಲೀಗ್ ಧ್ವಜಕ್ಕೆ ಅಂತಿಸಿಕೊಂಡು "ಮುಸ್ಲಿಂ ಲೀಗ್ ಜಿಂದಾಬಾದ್" ಎಂದು ಘೋಷಣೆ ಕೂಗಿದ. ಅದೇ ಸ್ಥಿತಿಯಲ್ಲಿ ಬೀದಿಬೀದಿಗಳಲ್ಲಿ ಮೆರವಣಿಗೆಯನ್ನೂ ಗೈಯಲಾಯಿತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ