ಪುಟಗಳು

ಬುಧವಾರ, ಡಿಸೆಂಬರ್ 7, 2016

ಯಾರು ಮಹಾತ್ಮ? ಭಾಗ-೨೯

ಯಾರು ಮಹಾತ್ಮ?
ಭಾಗ-೨೯


               ಕುಲದೀಪ್ ಸಿಂಗ್ ಎಂಬ 14 ವರ್ಷದ ಹುಡುಗ ತನ್ನ ತಂದೆಯೊಂದಿಗೆ ಎರಡು ಕೋಣೆಗಳಿದ್ದ ಮನೆಯೊಂದರಲ್ಲಿ ಲಾಹೋರಿನ ಉತ್ತರಕ್ಕಿದ್ದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಆ ರೈತ ಕುಟುಂಬದ ಬಳಿ ಇದ್ದ ಸಂಪತ್ತೆಂದರೆ ಎರಡು ಕೋಣ ಮತ್ತು ಒಂದು ಹಾಲು ಕರೆವ ದನ ಅಷ್ಟೇ. ಆ ಹಳ್ಳಿಯಲ್ಲಿ 600 ಮುಸ್ಲಿಮರಿದ್ದರೆ. ಹಿಂದೂಗಳ ಸಂಖ್ಯೆ ಕೇವಲ ಐವತ್ತು! ವಿಭಜನೆಯ ಹೊತ್ತಲ್ಲಿ ಒಂದು ದಿನ ಇವರ ಮನೆಯನ್ನು ಸುತ್ತುವರಿದ ಗುಂಪು "ಪಾಕಿಸ್ತಾನ ತ್ಯಜಿಸಿ, ಇಲ್ಲವಾದರೆ ಕೊಲ್ಲುತ್ತೇವೆ" ಎಂದು ಘೋಷಣೆ ಕೂಗಿತು. ಆ ಕುಟುಂಬ ತಕ್ಷಣ ಗ್ರಾಮದ ಸಿಖ್ ಪ್ರಮುಖನ ಮನೆಗೆ ಓಡಿತು. ಆ ಗುಂಪು ಇವರ ಮನೆಗೆ ಬೆಂಕಿ ಹಚ್ಚಿ ಅಟ್ಟಿಸಿಕೊಂಡು ಬಂದಿತು. ನೋಡಿದರೆ ಅಲ್ಲಿದ್ದ ಎಲ್ಲಾ ಸಿಖ್ ಮನೆಗಳು ಆಗಲೇ ಹೊತ್ತಿ ಉರಿಯುತ್ತಿತ್ತು. ಒಬ್ಬ ಸಿಖ್ಖನ ಗಡ್ಡಕ್ಕೆ ಬೆಂಕಿ ಕೊಟ್ಟರು. ಅಂತಹ ಸ್ಥಿತಿಯಲ್ಲೂ ಆತ ಇಟ್ಟಿಗೆಯೊಂದನ್ನು ಬೆಂಕಿ ಹಚ್ಚಿದವನ ತಲೆಗೆ ಗುರಿಯಿಟ್ಟು ಹೊಡೆದು ಕೊಂದು ಗುರುನಾನಕರ ನಾಮಸ್ಮರಣೆ ಮಾಡುತ್ತಾ ಕುಸಿದು ಬಿದ್ದು ಸತ್ತ. ಕುಲದೀಪ್ ಆ ಮನೆಯ ಛಾವಣಿ ಏರಿದ. ಅಲ್ಲಿ ಅಂಗಳದಲ್ಲಿ ಸಿಖ್ ಪುರುಷರನ್ನು ತಲವಾರಿನಿಂದ ಕತ್ತರಿಸುತ್ತಿದ್ದರು. ಅದನ್ನು ಮನೆಯ ಛಾವಣಿ ಮೇಲೆ ನಿಂತು ನೋಡುತ್ತಿದ್ದ ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಕ್ಕಿಂತ ಸಾಯುವುದು ಲೇಸು ಎಂದರಿತ ಆ ಮಹಿಳೆಯರ ಗುಂಪು ದೊಡ್ಡ ಬೆಂಕಿಯೊಂದನ್ನು ಹತ್ತಿಸಿ ಮಕ್ಕಳೊಂದಿಗೆ ಅಗ್ನಿಪ್ರವೇಶ ಮಾಡಿದರು. ಆ ಗುಂಪು ಇಬ್ಬರು ಹುಡುಗಿಯರನ್ನು ಎತ್ತಿಕೊಂಡು ಹೋಗುತ್ತಿದ್ದುದನ್ನು ಕುಲದೀಪ್ ನೋಡಿದ. ಕತ್ತಲೆಯಾಗುತ್ತಿದ್ದಂತೆ ಆತ ಮೆಲ್ಲನೆ ಛಾವಣಿಯಿಂದಿಳಿದು ಮರವೊಂದನ್ನೇರಿ ಆರು ತಾಸು ಕುಳಿತ. ಎಲ್ಲರೂ ಹೋದ ಮೇಲೆ ತಡರಾತ್ರಿ ಮರದಿಂದ ಇಳಿದ ಆತ ಮನೆಯೊಳಗೆ ಬಿದ್ದಿದ್ದ ರಕ್ತಸಿಕ್ತ ಚಾಕುವಿನಿಂದ ತಲೆಗೂದಲನ್ನು ಮುಸ್ಲಿಮರಂತೆ ಕತ್ತರಿಸಿ ಅಲ್ಲಿಂದ ತಪ್ಪಿಸಿಕೊಂಡ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್).

               ವಿಭಜನೆಯ ಸಂದರ್ಭದಲ್ಲಿ ಲೆಖ್ಖವಿಲ್ಲದಷ್ಟು ಅತ್ಯಾಚಾರಗಳು ನಡೆದವು. ಹಿಂದೂಗಳ ಮನೆಗಳು, ನಿರಾಶ್ರಿತರ ಶಿಬಿರಗಳು, ರೈಲುಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಹೊತ್ತೊಯ್ಯಲಾಯಿತು. ಹಿಂದೂ ಮಹಿಳೆಯರ ಸ್ತನಗಳನ್ನು ಕತ್ತರಿಸಿ ಅವರನ್ನು ಕೊಲೆಗೈಯ್ಯಲು ಕರೆದೊಯ್ಯುತ್ತಿದ್ದ ಮತಾಂಧ ಗುಂಪೊಂದನ್ನು ಪಂಜಾಬ್ ಗಡಿ ಪ್ರಾಂತ್ಯದ ಬ್ರಿಟಿಷ್ ಅಧಿಕಾರಿಯೊಬ್ಬ ಕಣ್ಣಾರೆಕಮ್ಡು ಬೆಚ್ಚಿಬಿದ್ದ. ಮಹಿಳೆಯರನ್ನು ಅಪಹರಿಸಿದ ಬಳಿಕ ಅಪಹರಣಕಾರನ ಮನೆಯಲ್ಲಿ ಉಳಿಸಿಕೊಳ್ಳಲು ಅವರನ್ನು ಬಲವಂತವಾಗಿ ಮತಾಂತರಿಸಲಾಗುತ್ತಿತ್ತು. ಗೋಮಾಂಸ ತಿನ್ನಿಸಿ, ಕುರಾನ್ ಹೇಳಿಸಿ ಕೇಕೆ ಹಾಕಿ ಕುಣಿಯಲಾಗುತ್ತಿತ್ತು. ಅವಳ ಹೆಸರು ಬದಲಾಯಿಸಿ ಮುಸ್ಲಿಮ್ ಹೆಸರು ಇಡಲಾಗುತ್ತಿತ್ತು. ಮತ್ತೆ ಸಾಲು ಸಾಲು ಅತ್ಯಾಚಾರ! ಕೆಲವರನ್ನು ಹರಾಜು ಹಾಕಲಾಗುತ್ತಿತ್ತು. ಮಿಯಾನ್ ವಾಲಿಯ ವಕೀಲನ ಮಗಳು ಹದಿನಾರು ವರ್ಷದ ನಂದಲಾಲಳನ್ನು ಅಪಹರಿಸಿ ಆ ಗ್ರಾಮದ ಮುಸ್ಲಿಮ್ ಪ್ರಮುಖನ ಮನೆಗೆ ಒಯ್ಯಲಾಯಿತು. ಆಕೆಗೆ ಹೊಡೆದು ಬಲವಂತವಾಗಿ ಗೋಮಾಂಸ ತಿನ್ನಿಸಲಾಯಿತು. ಕುರಾನ್ ಸಾಲುಗಳನ್ನು ಹೇಳಿ ಪುನರಾವರ್ತಿಸುವಂತೆ ಒತ್ತಾಯಿಸಲಾಯಿತು. ಆಕೆಯ ಹೆಸರು ಬದಲಾಯಿಸಿ "ಅಲ್ಲಾ ರಕಿಯಾ"(ದೇವರಿಂದ ರಕ್ಷಿಸಲ್ಪಟ್ತವಳು) ಎಂಬ ಹೆಸರಿಡಲಾಯಿತು. ಆಕೆಯನ್ನು ಹರಾಜು ಹಾಕಿದಾಗ ಮರಕೆಲಸದವನೊಬ್ಬ ಆಕೆಯನ್ನು ಖರೀದಿಸಿದ. ಪೂರ್ವ ಮತ್ತು ಪಶ್ಚಿಮ ಪಂಜಾಬಿನ ಹಳ್ಳಿಹಳ್ಳಿಗಳನ್ನೇ ದೋಚಲಾಯಿತು. ದೋಚಿದ ವಸ್ತುಗಳನ್ನು ಮುಸ್ಲಿಮರೊಳಗೆ ಹಂಚಲಾಗುತ್ತಿತ್ತು. ಶಿಶುಗಳನ್ನು ಅಪ್ಪಿಕೊಂಡಿದ್ದಂತೆಯೇ ಪುರುಷ ಸ್ತ್ರೀಯರನ್ನು ಹತ್ಯೆಗೈಯಲಾಯಿತು. ಹಳ್ಳಿಗಳೆಲ್ಲಾ ಹೊತ್ತಿ ಉರಿಯುತ್ತಿದ್ದವು. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್ ; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ).

          ಇದೇ ರೀತಿಯ ಹತ್ಯೆ, ಅತ್ಯಾಚಾರಗಳು ಪೂರ್ವ ಬಂಗಾಲದಲ್ಲೂ ನಡೆದವು. ಝೇಲಂನಲ್ಲಿ ಪುರುಷರನ್ನು ಬೇರ್ಪಡಿಸಿ ಗರಗಸದಿಂದ ಕೊಯ್ಯಲಾಯಿತು. ಒಂದು ವರದಿಯ ಪ್ರಕಾರ ಗುಜರಾತ್ ಪ್ರದೇಶದಲ್ಲೇ ಅಪಹರಣಕ್ಕೊಳಗಾದ ಹುಡುಗಿಯರ ಸಂಖ್ಯೆ 4000. ಅವರನ್ನು ಹರಾಜು ಹಾಕಲಾಯಿತು. ವರದಿಯಾಗದಿದ್ದುದೆಷ್ಟೋ? ಭಾರತದ ಸೀಮೆಯೊಳಗಿದ್ದ ಗುಜರಾತಿನಲ್ಲೇ ಈ ಪರಿಸ್ಥಿತಿಯಾದರೆ ಪಾಕಿಸ್ತಾನಕ್ಕೆ ಸೇರಿದ್ದ ಪ್ರಾಂತ್ಯಗಳಲ್ಲಿ ಹಿಂದೂಗಳ ಬದುಕು ಅದೆಷ್ಟು ಶೋಚನೀಯವಾಗಿರಲಿಕ್ಕಿಲ್ಲ? (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್ ಬಾಲಿ)

         ಪಶ್ಚಿಮ ಪಾಕಿಸ್ತಾನದ ಹಳ್ಳಿಯೊಂದರಲ್ಲಿ ತಮ್ಮ ಮೇಲೆ ದಾಳಿ ಮಾಡಿದ ಮತಾಂಧ ಗುಂಪುಗಳ ವಿರುದ್ಧ ಸರ್ದಾರ್ ಪ್ರತಾಪ ಸಿಂಗ್ ಬಳಗ ತಿರುಗಿ ಬಿತ್ತು. ಮೂರು ದಿನಗಳವರೆಗೆ ಹೋರಾಡಿದ ಅವರು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದ್ದಂತೆ ಶರಣಾಗಬೇಕಾಯಿತು. ಕೂಡಲೆ ಅವರಿಗೆ ಮತಾಂತರವಾಗುವಂತೆ ಸೂಚಿಸಲಾಯಿತು. ಬೇಡಿಕೊಂಡಾಗ ಮರುದಿನದವರೆಗೆ ಅವಕಾಶ ನೀಡಲಾಯಿತು. ಮರುದಿನ ಬೆಳ್ಳಂಬೆಳಗ್ಗೆ ಆ ಗುಂಪು ಇವರನ್ನು ಮತಾಂತರಿಸಲು ಕತ್ತರಿ, ಚಾಕುಗಳೊಂದಿಗೆ ಸಿದ್ಧವಾಗಿ ನಿಂತಿತ್ತು. ಯಾವ ಮಹಿಳೆಯನ್ನು ಯಾರು ಪಡೆಯಬೇಕು ಎನ್ನುವುದರ ಬಗ್ಗೆ ಆ ಮತಾಂಧರು ತಮ್ಮೊಳಗೇ ಜೋರಾಗಿ ಚರ್ಚಿಸುತ್ತಿದ್ದರು. ಇದನ್ನು ಕೇಳಿಸಿಕೊಂಡ ಮಹಿಳೆಯರು ಮತಾಂತರವಾಗುವ ಮುನ್ನ ತಾವು ಕೊನೆಯ ಬಾರಿಗೆ ಪ್ರಾರ್ಥನೆ ಸಲ್ಲಿಸುವುದಾಗಿಯೂ, ಇತ್ತೀಚೆಗೆ ನೂತನವಾಗಿ ನಿರ್ಮಿಸಿದ ಬಾವಿಯ ನೀರು ಕುಡಿಯಲು ಅನುಮತಿ ನೀಡಬೇಕಂದು ಪ್ರಾರ್ಥಿಸಿದರು. ಅದಕ್ಕೆ ಒಪ್ಪಿದ ಗುಂಪು ಕೆಲವೊಂದು ಜನರ ಕಾವಲಿನಲ್ಲಿ ಆ 74 ಮಹಿಳೆಯರನ್ನು ಬಾವಿಯ ಬಳಿ ಕಳುಹಿಸಿಕೊಟ್ಟಿತು. ಸ್ನಾನ ಮಾಡಿ ಪ್ರಾರ್ಥನೆ ಆರಂಭಿಸಿದ ಆ ಮಹಿಳೆಯರು ಜೋರಾಗಿ "ಧೈರ್ಯವಿದ್ದರೆ ಮುಂದೆ ಬನ್ನಿ, ನೀವು ನಮ್ಮ ಮೈ ಮುಟ್ಟಲೂ ಸಾಧ್ಯವಿಲ್ಲ" ಎಂದು ಘರ್ಜಿಸುತ್ತಾ ಬಾವಿಗೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡರು. ಆ ಬಲಿದಾವನ್ನು ಕಂಡ ಅಂತಹ ಮತಾಂಧ ಪಡೆಯೂ ಬೆಚ್ಚಿಬಿತ್ತು. ಅದು ಮತಾಂತರಗೊಳಿಸಲು ಉದ್ದೇಶಿಸಿದ್ದ ಪುರುಷರನ್ನು ಅಲ್ಲೇ ಬಿಟ್ಟು ಪರಾರಿಯಾಯಿತು. ಗಾಂಧಿಯ ಕಾರ್ಯದರ್ಶಿ ಪ್ಯಾರೇಲಾಲ್ ಈ ಘಟನೆಯನ್ನು ಗಾಂಧಿಗೆ ತಿಳಿಸಿದಾಗ ಆತ "ಅಹಿಂಸಾತ್ಮಕ ಧೈರ್ಯ ಎಂದೂ ವಿಫಲವಾಗುವುದಿಲ್ಲ. ಪರಿಸ್ಥಿತಿ ತೀರಾ ಪ್ರತಿಕೂಲವಾಗಿದ್ದಾಗ ದೇವರೇ ನೆರವಿಗೆ ಬರುತ್ತಾನೆ" ಎಂದು ಪ್ರತಿಕ್ರಿಯಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ). ಕಚ್ಛೆಹರುಕ ಮಹಾತ್ಮನಿಂದ ಇಂತಹ ಪ್ರತಿಕ್ರಿಯೆ ಅನಿರೀಕ್ಷಿತವಾದುದೇನಲ್ಲ. ನಾಗರಿಕತೆಯ ಲವಲೇಶವೂ ಇಲ್ಲದ ವ್ಯಕ್ತಿಯಾದರೂ ಈ ಘಟನೆಗೆ ಬೆಚ್ಚಿಬಿದ್ದು ಕನಿಷ್ಟ ಸಹಾನುಭೂತಿಯನ್ನಾದರೂ ಪ್ರಕಟಿಸುತ್ತಿದ್ದ. ಆದರೆ ಮಾನವುಳಿಸಿಕೊಳ್ಳಲು ಆ ಹೆಂಗಸರು ಮಾಡಿದ ಬಲಿದಾನವೂ ಅಹಿಂಸೆಯ ದ್ಯೋತಕವಾಗಿ ಕಂಡಿತು. ಸಹಾನುಭೂತಿಯ ಕನಿಷ್ಟ ಒಂದು ಉದ್ಗಾರವೂ ಅವರಿಂದ ಹೊರಬರಲಿಲ್ಲ. ಮುಸ್ಲಿಮರಿಂದ ತೊಂದರೆಗೀಡಾಗುವುದೇ ಅವರ ಅಹಿಂಸೆಯೇ? ಆ ಲೆಖ್ಖದಲ್ಲಿ ಅದೆಷ್ಟು ಅಹಿಂಸಾತ್ಮಕ ಧೈರ್ಯ ವಿಫಲವಾಗಿಲ್ಲ? ಅದೆಷ್ಟು ಮಹಿಳೆಯರ ಅತ್ಯಾಚಾರವಾಗಿಲ್ಲ? ಈ ಅಹಿಂಸಾತ್ಮಕ ಧೈರ್ಯಗಳೆಲ್ಲಾ ವಿಫಲವಾದುದೇಕೆ ಎನ್ನುವ ಪ್ರಶ್ನೆಗೆ ಗಾಂಧಿಯ ಬಳಿ ಉತ್ತರವಿದೆಯೇ? ಈ ಸಂದರ್ಭಗಳಲ್ಲೆಲ್ಲಾ ಗಾಂಧಿ ಹೇಳುವ ದೇವರು ಯಾಕೆ ಕಾಪಾಡಲಿಲ್ಲ? ವಿಭಜನೆಯನ್ನು ತಪ್ಪಿಸುವ ಅವಕಾಶವಿದ್ದಾಗ್ಯೂ ಅದನ್ನು ಮಾಡದೆ ಕೈಕಟ್ಟಿ ಕುಳಿತ ವ್ಯಕ್ತಿ ಸಾಲುಸಾಲು ಅತ್ಯಾಚಾರಗಳು, ಕೊಲೆಗಳು, ಅಪಹರಣ, ದರೋಡೆಗಳಾಗುತ್ತಿದ್ದಾಗ ತನ್ನದೇ ತಥಾಕಥಿತ ಅಹಿಂಸೆಯನ್ನು ವೈಭವೀಕರಿಸುತ್ತಾನೆ ಎಂದಾದರೆ ಅತನಿಗೆ ಅರಳುಮರಳು ಎನ್ನದಿರಲಾದೀತೇ? ಛೇ, ಎಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿಸಿತು ಭಾರತ!






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ