ಪುಟಗಳು

ಭಾನುವಾರ, ಜೂನ್ 30, 2013

ಭಾಸವತೀ

ಚಿತ್ರ ಕೃಪೆ: ಪ್ರಕಾಶ್ ಹೆಗ್ಡೆಭಾಸವತೀ

ಭಾಸವತೀ ಪ್ರಸಂಗದ ಒಂದು ಸನ್ನಿವೇಶವನ್ನು ಪದ್ಯದ ರೂಪದಲ್ಲಿಳಿಸುವ ಸಣ್ಣ ಪ್ರಯತ್ನ. ಕ್ಷಮಿಸಿ ಛಂದೋಬದ್ಧವಲ್ಲ. ಈಗಿನ ಹುಡುಗಿಯರ ಮನೋಭೂಮಿಕೆ ಇದೇ ರೀತಿ ಇರುವುದೋ ಎಂದು ನಾನರಿಯೆ.
ಸ್ಪೂರ್ತಿ: ಯಕ್ಷಗಾನ: ಪ್ರಸಂಗ-ಭಾಸವತೀ

         ಹಸಿರ ಸೀರೆ ಹೊದ್ದು ಕುಳಿತ ರಮಣೀಯ ವನವದು. ಸುಸ್ವರ ನಿನಾದ ಗೈಯ್ಯುವ ಝರಿಗಳು, ನದಿಗಳು, ತೊರೆಗಳು. ವಸಂತಾಗಮನದಿ ನಲಿಯುವ, ಮಧುರವಾಗಿ ಉಲಿಯುವ, ಪ್ರಿಯತಮ(ಮೆ)ನಿಗೆ ಒಲಿಯುವ, ಇಂಪಾಗಿ ಹಾಡುವ ಪಶುಪಕ್ಷಿಗಳು. ಆಗ ತಾನೆ ಬಾನಂಚಿನಲ್ಲಿ ಉದಯಿಸಿದ ಭಾನು ತನ್ನ ಕಿರಣಗಳನ್ನು ಮರಗಳೆಡೆಯಲ್ಲಿ ತೂರಿ ಬಿಡುತ್ತಿದ್ದಾನೆ. ಅವನ ಕಿರಣ ಸೋಕಲು ಹೊಳೆಯುತಿದೆ ಇಬ್ಬನಿ. ಹೊನ್ನ ಬಣ್ಣದಿ ಕಂಗೊಳಿಸುತಿದೆ ಆ ಬೆಟ್ಟ.
ಅಲ್ಲಿ...ಅಲ್ಲಿ ತನ ಸಖಿಯರೊಡಗೂಡಿ ಜಲಕೇಳಿಯಾಡಿ ವನದ ಸೊಬಗು ಸವಿಯುತ್ತಾ ಬರುತ್ತಿದ್ದಾಳೆ ಅಪ್ರತಿಮ ಸುಂದರಿ ಭುವನ ಮೋಹಿನಿ ರಾಜಕುಮಾರಿ ಭಾಸವತೀ...ಪ್ರಕೃತಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾ...

ಸುಮಲತೆಯನನುಕರಿಸಿ ಬಳುಕಿದಳು
ಪಿಕದಿಂಚರಕೆ ದನಿಗೂಡಿದಳು|
ಸುಮಧುರ ಶುಕವಾಣಿಯನಣಕಿಸಿ ಗೋಣ ಕೊಂಕಿಸುತ
ಭ್ರಮರ ಝೇಂಕಾರದಿ ಮೈ ಮರೆವಳು||

ಮಾಡಿದಳು ಸುಮ ಮಾಲೆಯನು
ಬೀಸಾಡಿದಳು ಮೈಮರೆತು ನೋಡಿ ಗಗನವನು|
ನವಿಲಂತೆ ನರ್ತನ ಮಾಡಿದಳು
ಹರಿಣವ ನೇವರಿಸಿ ಜಿಗಿದಾಡಿದಳು||


ಆ ಕ್ಷಣ ಮರದ ನೆರಳಲ್ಲಿ ಪವಡಿಸಿದ್ದ ಮದನ ರೂಪಿ ರಾಜಕುಮಾರ ವಿಮಲಧ್ವಜನನ್ನು ಕಂಡು...

ಬಿಸಜಾಕ್ಷಿ ನೋಡಿದಳು ವಸುಧೆಗಿಳಿದರ್ಕನೋ ಎನುತ
ನಾಚಿ ಪೀತಾಂಬರವ ಮರೆ ಮಾಡಿದಳು|
ಮದನ ರೂಪವನವಲೋಕಿಸುತ
ವಿರಹದುರಿಯ ತಾಳಲಾರದೇ ಬಳಲಿದಳು||

ನಾಚಿದಳು ನಸು ನಾಚಿದಳು
ಭಾವ ಲಹರಿ ಮೀಟಿರಲು|
ಗೀಚಿದಳು ನೆಲವನು ಗೀಚಿದಳು
ಅನುರಾಗ ಸೆಲೆಯು ಚಿಮ್ಮಿರಲು||

ನೋಡು ನೋಡೆ ಗೆಳತಿ ಅವನೇನಿತು ಚಂದ
ಕುರುಳ ಸೌಂದರ್ಯ ಸುಮಶರದಂದ|
ನೋಡೆ ಆ ವದನ ರವಿ ತೇಜ ಸದನ
ಈ ಸೊಬಗ ಸವಿಯೆ ಧರೆಗಿಳಿದನೇನೋ ಆ ಮದನ||

ಇಂದ್ರ ಸುತನೋ ನಳಕೂಬರನೋ
ಪೂರ್ಣ ಚಂದಿರ ಧರೆಗೆ ಇಳಿದನೋ|
ಮುಸುಕಿ ಬಂದಿಹ ಮುಗಿಯಲೆಳಸುತಿಹ ಸೆಳೆ ಮಿಂಚದೋ
ಎನುತ ಸಖಿಯ ಮರೆಗೆ ಸರಿಯುತ ನಾಚಿ ವರ್ಣಿಸಿದಳು||

ಮಂಗಳವಾರ, ಜೂನ್ 4, 2013

ಸ್ವಾತಂತ್ರ್ಯದ ದಿವ್ಯಾಗ್ನಿ ಹವಿಸ್ಸು-೨

                       ಸ್ವಾತಂತ್ರ್ಯದ ದಿವ್ಯಾಗ್ನಿ: ಹವಿಸ್ಸು-


                   ನಾಸಿಕದ ಭಗೂರು. ಸುಸ್ವರ ನಿನಾದ ಹೊರಡಿಸುತ್ತಾ ಹರಿಯುತ್ತಿದ್ದಾಳೆ ದಾರಣಾ. 1883 ಮೇ 28 ವೈಶಾಖ ಮಾಸದ ಕೃಷ್ಣ ಷಷ್ಠಿಯ ಶುಭ ದಿನ. ಆಗ ತಾನೇ ಹುಟ್ಟಿದ ಮಗುವೊಂದು ಮೊಲೆ ಹಾಲು ಕುಡಿಯದೇ ಊರೆಲ್ಲಾ ಕೇಳುವಂತೆ ಕಿರುಚುತ್ತಿದೆ. ಮಗುವಿಗೆ ದೊಡ್ಡಪ್ಪ ಮಹಾದೇವ ಪಂತ(ಬಾಪು ಕಾಕ) ತನ್ನಪ್ಪ ವಿನಾಯಕ ದೀಕ್ಷಿತರನ್ನು ನೆನೆಸಿ ದೊಡ್ಡ ಕೂಗು ಹಾಕಿ ನೀನೇ ವಿನಾಯಕ ದೀಕ್ಷಿತನಾಗಿದ್ದರೆ ಹಾಲು ಕುಡಿ ಎಂದು ಭಸ್ಮ ಹಚ್ಚಿದ ತಕ್ಷಣ ಮಗು ಅಳು ನಿಲ್ಲಿಸಿ ಹಾಲು ಕುಡಿಯಲಾರಂಭಿಸಿತು! ಹೀಗೆ ಹೆಸರು ವಿನಾಯಕ ಎಂದಾಯಿತು. ಆಗ ಊರೆಲ್ಲಾ ಆಲಿಸಿದ ಧ್ವನಿ ಮುಂದೊಮ್ಮೆ ಇಡೀ ಜಗತ್ತೇ ನಿಬ್ಬೆರಗಾಗಿ ತನ್ನತ್ತ ನೋಡುವಂತೆ ಮಾಡೀತೆಂದು ಯಾರೂ ಎಣಿಸಿರಲಿಕ್ಕಿಲ್ಲ.
                ಪೂರ್ವಿಕರು ಪಾಲಶೇರ್ ಬಳಿ ಇದ್ದ ಸಾವರವಾಡಿಯ ವೇದ ವಿದ್ಯಾ ಸಂಪನ್ನ ಚಿತ್ಪಾವನ ಬ್ರಾಹ್ಮಣರು. ಹಾಗಾಗಿಯೇ ಸಾವರ್ಕರ್ ಎಂಬ ಹೆಸರು ಪರಿವಾರಕ್ಕೆ ಅಂಟಿಕೊಂಡಿತು. ತಂದೆ ದಾಮೋದರ ಪಂತರು. ಅಣ್ಣ ಗಣೇಶ(ಬಾಬಾ), ತಮ್ಮ ನಾರಾಯಣ(ಬಾಳಾ), ತಂಗಿ ಮಾಯಿ. ತಾಯಿ ಅನ್ನಪೂರ್ಣೆಯಂತೆ, ಊರಿಗೇ ಊರೇ ಗುಣಗಾನ ಮಾಡುತ್ತಿತ್ತು. ದೊಡ್ಡಪ್ಪ ಬಾಪು ಕಾಕಾ(ಮಹಾದೇವ ಪಂತ)ರಿಂದ ಇತಿಹಾಸದ ಪಾಠ. ಶಿವಾಜಿಯೇ ಆದರ್ಶನಾದ, ಮನಸ್ಸು ಮಹಾರಾಣಾ ಪ್ರತಾಪನನ್ನನುಕರಿಸಿತು, ಝಾನ್ಸಿಯ ರಣದುಂದುಭಿ ಕಿವಿಯಲ್ಲಿ ಮೊಳಗಿತು. ತಂದೆ, ತಾಯಿ, ಸೋದರ ಮಾವನಿಂದ ಕಾವ್ಯ, ಸಾಹಿತ್ಯದ ಸಮೃದ್ಧಿ. ಹೀಗೆ ಬಾಲ್ಯದಲ್ಲಿಯೇ ಅಪ್ರತಿಮ ಭಾಷಣಕಾರ, ಕವಿ, ಲೇಖಕ ಹೊರಹೊಮ್ಮಲಾರಂಭಿಸಿದ.

                ಮಾರಕವಾಗೆರಗಿದ ಪ್ಲೇಗ್ ಮೊದಲೇ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸೋದರರ ತಂದೆಯನ್ನೂ, ದೊಡ್ಡಪ್ಪನನ್ನೂ ಬಲಿತೆಗೆದುಕೊಂಡಿತು. ಗದ್ದೆ ತೋಟಗಳು ಅನ್ಯರ ವಶವಾದವು. ಶ್ರೀಮಂತ ಜಮೀನುದಾರರ ಮಕ್ಕಳಾಗಿದ್ದವರು ಕೇವಲ ಒಂದು ವಾರದೊಳಗೆ ಮನೆಯ ಹಿರಿಯರನ್ನೂ, ವಂಶದ ಸಂಪತ್ತನ್ನೂ ಕಳೆದುಕೊಂಡು ಅನಾಥರಾಗಿದ್ದರು. ಅದೃಷ್ಟವಶಾತ್ ಸಾವಿನೊಡನೆ ಸೆಣಸುತ್ತಿದ್ದ ಬಾಬಾ ಮತ್ತು ಬಾಳಾ ಗೆದ್ದು ಬಂದರು. ಮರಣದಿರುಳಿನ ಪ್ರಪಾತ ಕಳೆಯಿತು. ಜೀವನದಿರುಳಿನ ಪ್ರಭಾತ ಬೆಳಗಿತು. ನಾಲ್ವರ ಸಂಸಾರ ಶಕಟ ದೇಶ ಸವರಲೆಂದೇ ಚಲಿಸಿತು.
               ದಿನವೂ ನಾಟಕ, ಹರಟೆ, ಇಸ್ಪೀಟು, ತಂಬಾಕು ತಿನ್ನುತ್ತಾ, ಸ್ತ್ರೀ ಪುರುಷರನ್ನು ರೇಗಿಸುತ್ತಾ ಕುಚೇಷ್ಟೆ ಮಾಡುತ್ತಾ ಕಾಲಕಳೆಯುತ್ತಿದ್ದ ಉಂಡಾಡಿಗಳೆಲ್ಲಾ ತಾತ್ಯಾ ಸಹವಾಸದಿಂದ "ರಾಷ್ಟ್ರಭಕ್ತ ಸಮೂಹ" (ರಾಮ ಹರಿ) ಸದಸ್ಯರಾದರು. ಪಡ್ಡೆ ಹುಡುಗರ ನಾಯಕ ಹೆಳವ ಗೋವಿಂದ ದರೇಕರ್(ಆಬಾ ಪಾಂಗಳೆ) ಸಾವರ್ಕರ್ ಸಹವಾಸದಿಂದ "ಸ್ವಾತಂತ್ರ್ಯ ಕವಿ ಗೋವಿಂದ" ನಾಗಿ ಬಿರುದಾಂಕಿತನಾದ. ಆಗಿನ್ನೂ ಸಾವರ್ಕರರಿಗೆ ಹದಿನಾರು ವರ್ಷ.

                         "ರಾಮಹರಿ" "ಮಿತ್ರಮೇಳ"ವಾಯಿತು. ಶಿವಾಜಿ ಜಯಂತಿ, ಗಣೇಶ ಉತ್ಸವ, ಪ್ಲೇಗ್ ರೋಗಿಗಳ ಆರೈಕೆ,ಸಹಾಯ ಹಸ್ತ, ಅನಾಥ ರೋಗಿಗಳ ಶವ ಸುಡುವುದು...ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಮಿತ್ರಮೇಳ ಬೃಹದಾಕಾರವಾಗಿ ಬೆಳೆಯಿತು. ಯಾವ ಸತ್ಯದಿಂದ ಜನಹಿತ ಆಗುತ್ತದೆಯೋ ಅದೇ ಸತ್ಯ, ಧರ್ಮ, ಸದ್ಗುಣ. ಆದರೆ ಯಾವ ಸತ್ಯದಿಂದ ಕಳ್ಳನಿಗೆ ರಕ್ಷಣೆಯಾಗಿ ಸನ್ಯಾಸಿಗೆ ಶಿಕ್ಷೆಯಾಗುತ್ತದೋ ಅದು ಅಸತ್ಯ, ಅಧರ್ಮ, ದುರ್ಗುಣ. ಹೇಗೆ ರಾವಣ, ಕಂಸರ ಕೈಗಳಲ್ಲಿದ್ದ ಶಸ್ತ್ರಗಳು ರಾಮ, ಕೃಷ್ಣರ ಕೈಯಲ್ಲಿ ಪಾವನವಾಗಿ ಪೂಜಾರ್ಹವಾಗಿದ್ದವೋ ಅದೇ ರೀತಿ ಅಧಿಕಾಧಿಕ ಜನಹಿತಕ್ಕಾಗಿ ರಾಷ್ಟ್ರೀಯ ಅಧಿಕಾರಗಳ ರಕ್ಷಣೆ ಹಾಗೂ ವಿಕಾಸಕ್ಕಾಗಿ ಹೋರಾಡಲು ಪ್ರೇರಣೆ ನೀಡುವ ದೇಶಾಭಿಮಾನ ನಿಜಕ್ಕೂ ಧರ್ಮಸಮ್ಮತ, ಪ್ರಶಂಸನೀಯ. ಪರದೇಶಗಳನ್ನಾಕ್ರಮಿಸಿ ಜನಕ್ಷೋಭೆ ನಿರ್ಮಿಸುವ ಶೋಷಣೆ ನಡೆಸುವ ದೇಶಾಭಿಮಾನ ಅಧರ್ಮ, ದಂಡನೀಯ ಎಂಬುದು ಸಾವರ್ಕರ್ ಅಭಿಮತವಾಗಿತ್ತು, ಮಿತ್ರಮೇಳದ ತತ್ವವಾಯಿತು. ಮುಂದೆ ಅಸಂಖ್ಯ ಕ್ರಾಂತಿಕಾರಿಗಳ ನೀತಿಯಾಗಿ ಬೆಳೆಯಿತು.
ಮಿತ್ರಮೇಳ ಬೆಳೆಯುತ್ತಾ ಬೆಳೆಯುತ್ತಾ "ಅಭಿನವ ಭಾರತ"ವಾಯಿತು. ಮಹಾರಾಷ್ಟ್ರದಾದ್ಯಂತ ಹೆಮ್ಮರವಾಗಿ ಬೆಳೆಯಿತು.

೧೯೦೫
                ದೇಶದಾದ್ಯಂತ ವಂಗಭಂಗ ಚಳುವಳಿ ಕಾವೇರಿತ್ತು. ಮಹಾರಾಷ್ಟ್ರವೂ ಇದಕ್ಕೆ ಹೊರತಾಗಿರಲಿಲ್ಲ. ಸಾವರ್ಕರ್ ಸುಮ್ಮನುಳಿಯಲಿಲ್ಲ. ತಿಲಕರ ಆಶೀರ್ವಾದದೊಂದಿಗೆ ಜಗತ್ತೇ ಅಚ್ಚರಿಗೊಳ್ಳುವಂತೆ ಪೂನಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸ್ವಾತಂತ್ರ್ಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವಿದೇಶೀ ವಸ್ತುಗಳ ದಹನ(ಹೋಳಿ) ನಡೆಸಿದರು.  ಆದರೆ ಭಾರತದ ತಥಾಕತಿಥ ಇತಿಹಾಸಕಾರರು ಶ್ರೇಯವನ್ನು ಅದಾರಿಗೋ ನೀಡಿ ಸಾವರ್ಕರ್ ಬಗ್ಗೆ ಭಾರತೀಯರಿಗೆ ತಿಳಿಯದಂತೆ ಮಾಡಲು ಯತ್ನಿಸಿದ್ದು ಮಾತ್ರ ವಿಪರ್ಯಾಸ. ತತ್ಪರಿಣಾಮ ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯದ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊದಲ ವಿದ್ಯಾರ್ಥಿ ಎಂಬ ಶ್ರೇಯ ಒದಗಿತು! ಇಂತಹ ವಿಪರೀತವಾದ ಅಡೆತಡೆಗಳ ನಡುವೆ ಸಾವರ್ಕರ್ ಫರ್ಗ್ಯುಸನ್ ಕಾಲೇಜಿನಲ್ಲಿ ತಮ್ಮ ಬಿಎ ಪದವಿ ಪೂರ್ಣಗೊಳಿಸಿದರು. ಅಷ್ಟರಲ್ಲೇ ಸಾವರ್ಕರ್ ಬರೆದ ಕವನ, ಲಾವಣಿಗಳು ಮನೆ ಮನೆಯಲ್ಲಿ ನಿತ್ಯಗಾಯನಗಳಾಗಿದ್ದವು. ಅವರ ಲೇಖನಗಳನ್ನೋದಲು ಜನ ಕಾತರಿಸುತ್ತಿದ್ದರು. ಅವರ ವಾಗ್ವೈಭವಕ್ಕೆ ಮರುಳಾಗುತ್ತಿದ್ದರು. ಯುವಕರು ಅವರ ಮಾತು, ವೈಖರಿಗಳಿಂದ ಪ್ರಭಾವಿತರಾಗಿ ಅಭಿನವ ಭಾರತ ಸೇರುತ್ತಿದ್ದರು. ಭವ್ಯ ಭಾರತದ ಭಾವೀ ಸೂರ್ಯ ಮಹಾರಾಷ್ಟ್ರದ ಮನೆಯಂಗಳದಲ್ಲಿ ಉದಯಿಸುತ್ತಿದ್ದ!

                  ಮಹಾರಾಷ್ಟ್ರದಾದ್ಯಂತ ಶಿವಾಜಿಯ ಅಪರಾವತಾರ ಎಂದು ಮನೆಮಾತಾದ ಸಾವರ್ಕರ್ ಮಿತ್ರಮೇಳ, ಅಭಿನವ ಭಾರತ ಕಟ್ಟಿ ಬೆಳೆಸಲು ಶಿವಾಜಿಯ ವಿಧಾನವನ್ನೆ ಆರಿಸಿದ್ದು ಕಾಕತಾಳೀಯವೇನೋ. ಹೇಗೆ ಶಿವ ಬಾ ಮರಾಠ ಹಾಗೂ ಮೊಘಲ್ ಎಂದು ವಿಂಗಡಿಸಿ ಯುದ್ಧವೆಂಬ ಆಟ ಆಡಿಸಿ ಮಾವಳಿ ವೀರರನ್ನು ಧರ್ಮಯೋಧರನ್ನಾಗಿಸಿದನೋ ಅದೇ ರೀತಿ ಬಾಲ ತಾತ್ಯಾ ಉಂಡಾಡಿ ಗುಂಡರಂತಿದ್ದ ಪುಂಡು ಪೋಕರಿಗಳನ್ನು ಭಾರತೀಯರು ಹಾಗೂ ಬ್ರಿಟಿಷರು ಎಂದು ವಿಂಗಡಿಸಿ ಯುದ್ಧದ ಆಟ ಆಡಿಸಿ ಅವರನ್ನು ಸ್ವಾತಂತ್ರ್ಯ ಯೋಧರನ್ನಾಗಿಸಿದ. ಪ್ರತಿನಿತ್ಯ ದಂಡ, ವ್ಯಾಯಾಮ, ಯೋಗಾಸನ, ಈಜು, ಆಟ, ಓಟ, ಬೆಟ್ಟಗಳನ್ನು ಸರಸರನೆ ಹತ್ತುವುದು, ಮುಂತಾದುವುಗಳ ಜೊತೆಗೆ ಇತಿಹಾಸದ ಪಾಠವನ್ನು ಕೂಡಾ ಕಲಿಸಿದರು. ತಮ್ಮ ಜೊತೆಗಾರರಲ್ಲಿದ್ದ ಕಾವ್ಯಶಕ್ತಿ, ಲೇಖನ ಕಲೆಯನ್ನು ಪ್ರೋತ್ಸಾಹಿಸಿ ಅಪ್ರತಿಮ ಸಾಹಿತ್ಯ ಸೃಷ್ಠಿಯಾಗುವಂತೆ ಮಾಡಿದರು.

                    ಬಿಎ ಪದವಿ ಮುಗಿಸಿ ಎಲ್ ಎಲ್ ಬಿ ಆಯ್ಕೆ ಮಾಡಿಕೊಂಡರು ಸಾವರ್ಕರ್. ಸಂದರ್ಭದಲ್ಲಿ ಲಂಡನ್ನಿನ ಭಾರತ ಭವನದ ಸಂಸ್ಥಾಪಕ ಶ್ಯಾಮಜೀ ಕೃಷ್ಣವರ್ಮರು ಭಾರತೀಯ ವಿದ್ಯಾರ್ಥಿಗಳನ್ನು "ಶಿವಾಜಿ ವಿದ್ಯಾರ್ಥಿ ವೇತನ" ಕೊಟ್ಟು ಲಂಡನ್ನಿಗೆ ಕರೆಸಿ ಕ್ರಾಂತಿಕಾರಿಗಳನ್ನಾಗಿ ಪರಿವರ್ತಿಸುವ ಸುದ್ದಿ ತಿಳಿಯಿತು. ಸಾವರ್ಕರ್ ಯೋಚಿಸಿದರು...ಶತ್ರುವಿನ ನೆಲದಲ್ಲಿದ್ದು ಆತನ ಬಲಾಬಲ ತಿಳಿದು, ಅನ್ಯಾನ್ಯ ದೇಶಗಳ ಕ್ರಾಂತಿವೀರರ ಪರಿಚಯ ಮಾಡಿಕೊಂಡು, ಅನ್ಯದೇಶಗಳ ಸಹಾಯ ಪಡೆದು ಶತ್ರುವಿಗೆ ಏಳಲಾಗದ ಏಟು ನೀಡಿದರೆ ಅರ್ಧ ಕೆಲಸ ಮುಗಿದಂತೆ. ಅದಕ್ಕಾಗಿ ಪರಾಂಜಪೆ ಹಾಗೂ ತಿಲಕರ ಶಿಫಾರಸು ಪತ್ರಗಳೊಂದಿಗೆ ಅರ್ಜಿ ಗುಜರಾಯಿಸಿದರು ಸಾವರ್ಕರ್. ಸಹಜವಾಗಿಯೇ ಶಿವಾಜಿಯ ಅಪರಾವತಾರಕ್ಕೆ ಶಿವಾಜಿಯ ವಿದ್ಯಾರ್ಥಿ ವೇತನ ಒಲಿದು ಬಂತು. ೧೯೦೬ರ ಮೇ ೨೮ರಂದು ಪ್ರಚಂಡ ಸಭೆಯಲ್ಲಿ ಹಿರಿಯರನೇಕರ ಆಶೀರ್ವಾದ ಪಡೆದು , ಜೂನ್ ೯ರಂದು "ಪರ್ಷಿಯಾ" ಹಡಗು ಹತ್ತಿದರು ಸಾವರ್ಕರ್.
ಸಿಂಹದ ಗುಹೆಗೆ ನರಸಿಂಹನ ಆಗಮನ!

ಸೋಮವಾರ, ಜೂನ್ 3, 2013

ಶೂನ್ಯವೋ...ಪೂರ್ಣವೋ...?

ಶೂನ್ಯವೋ...ಪೂರ್ಣವೋ...?

ಅಳಿವ ಖುಶಿಯು ಕ್ಷಣಿಕ ಕೋಪವು
ಹರಿವ ಕಂಬನಿ ಮಿಡಿವ ಹೃದಯ
ಇಹವು ಸುಖವೋ ಪರದ ಒಲವೋ
ಮಾತು ಮರೆತು ಮೌನವರಿತು

ಕಣ್ಣು ಮುಚ್ಚಿದೆ ಕೇಳಲೊಲ್ಲದು ಕರ್ಣ
ಆ'ರಾಮ' ಆಯಾಮದೊಳು ಪ್ರಾಣ
ಮೂಲ ಕಾರಣ ವಿಶ್ವ ಸೃಷ್ಠಿ
ಹರಿಯ ಅರಿಯಲು ಏಕ ದೃಷ್ಠಿ

ತಿಳಿಗೊಳದ ತಳದಲ್ಲಿ ಪವಡಿಸಿದೆ ಮೌನ
ಆಜ್ಞಾ ಚಕ್ರದಾಣತಿಯಂತೆ ಸಹಸ್ರಾರದಲ್ಲಿ ನೆಲೆಸಿದೆ ಮನಸ್ಸು
ಆತ್ಮ ಸಂತುಲಿತವಾಗೆ ದೇಹ ಸಂಕುಚಿತವಾಗಿ ಪ್ರಕೃತಿಯೊಳು ಲೀನ
ದೇಹ ನಶ್ವರ ಆತ್ಮ ಈಶ್ವರ ಶೂನ್ಯವಿದಲ್ಲ, ಪೂರ್ಣ

ಶನಿವಾರ, ಜೂನ್ 1, 2013

ವೀರ ಸಾವರ್ಕರ್

"ರಾಜಕೀಯವನ್ನು ಹಿಂದೂಕರಣಗೊಳಿಸಿ ಮತ್ತು ರಾಷ್ಟ್ರವನ್ನು ಸೈನಿಕೀಕರಣಗೊಳಿಸಿ. ನೀವು ಬಲವಾಗಿದ್ದರೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಕ್ರುಶ್ಚೇವ್ ಬೂಟು ತೋರಿಸಿದಂತೆ ನೀವೂ ತೋರಿಸಬಹುದು. ಆದರೆ ನೀವು ದುರ್ಬಲರಾಗಿದ್ದರೆ ನಿಮ್ಮ ಹಣೆಬರಹ ಶಕ್ತಿಯುತ ಆಕ್ರಮಣಕಾರಿಯ ಕೈಯಲ್ಲಿರುತ್ತದೆ"
                        --ವೀರ ಸಾವರ್ಕರ್