ಪುಟಗಳು

ಭಾನುವಾರ, ಜೂನ್ 30, 2013

ಭಾಸವತೀ

ಚಿತ್ರ ಕೃಪೆ: ಪ್ರಕಾಶ್ ಹೆಗ್ಡೆಭಾಸವತೀ

ಭಾಸವತೀ ಪ್ರಸಂಗದ ಒಂದು ಸನ್ನಿವೇಶವನ್ನು ಪದ್ಯದ ರೂಪದಲ್ಲಿಳಿಸುವ ಸಣ್ಣ ಪ್ರಯತ್ನ. ಕ್ಷಮಿಸಿ ಛಂದೋಬದ್ಧವಲ್ಲ. ಈಗಿನ ಹುಡುಗಿಯರ ಮನೋಭೂಮಿಕೆ ಇದೇ ರೀತಿ ಇರುವುದೋ ಎಂದು ನಾನರಿಯೆ.
ಸ್ಪೂರ್ತಿ: ಯಕ್ಷಗಾನ: ಪ್ರಸಂಗ-ಭಾಸವತೀ

         ಹಸಿರ ಸೀರೆ ಹೊದ್ದು ಕುಳಿತ ರಮಣೀಯ ವನವದು. ಸುಸ್ವರ ನಿನಾದ ಗೈಯ್ಯುವ ಝರಿಗಳು, ನದಿಗಳು, ತೊರೆಗಳು. ವಸಂತಾಗಮನದಿ ನಲಿಯುವ, ಮಧುರವಾಗಿ ಉಲಿಯುವ, ಪ್ರಿಯತಮ(ಮೆ)ನಿಗೆ ಒಲಿಯುವ, ಇಂಪಾಗಿ ಹಾಡುವ ಪಶುಪಕ್ಷಿಗಳು. ಆಗ ತಾನೆ ಬಾನಂಚಿನಲ್ಲಿ ಉದಯಿಸಿದ ಭಾನು ತನ್ನ ಕಿರಣಗಳನ್ನು ಮರಗಳೆಡೆಯಲ್ಲಿ ತೂರಿ ಬಿಡುತ್ತಿದ್ದಾನೆ. ಅವನ ಕಿರಣ ಸೋಕಲು ಹೊಳೆಯುತಿದೆ ಇಬ್ಬನಿ. ಹೊನ್ನ ಬಣ್ಣದಿ ಕಂಗೊಳಿಸುತಿದೆ ಆ ಬೆಟ್ಟ.
ಅಲ್ಲಿ...ಅಲ್ಲಿ ತನ ಸಖಿಯರೊಡಗೂಡಿ ಜಲಕೇಳಿಯಾಡಿ ವನದ ಸೊಬಗು ಸವಿಯುತ್ತಾ ಬರುತ್ತಿದ್ದಾಳೆ ಅಪ್ರತಿಮ ಸುಂದರಿ ಭುವನ ಮೋಹಿನಿ ರಾಜಕುಮಾರಿ ಭಾಸವತೀ...ಪ್ರಕೃತಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾ...

ಸುಮಲತೆಯನನುಕರಿಸಿ ಬಳುಕಿದಳು
ಪಿಕದಿಂಚರಕೆ ದನಿಗೂಡಿದಳು|
ಸುಮಧುರ ಶುಕವಾಣಿಯನಣಕಿಸಿ ಗೋಣ ಕೊಂಕಿಸುತ
ಭ್ರಮರ ಝೇಂಕಾರದಿ ಮೈ ಮರೆವಳು||

ಮಾಡಿದಳು ಸುಮ ಮಾಲೆಯನು
ಬೀಸಾಡಿದಳು ಮೈಮರೆತು ನೋಡಿ ಗಗನವನು|
ನವಿಲಂತೆ ನರ್ತನ ಮಾಡಿದಳು
ಹರಿಣವ ನೇವರಿಸಿ ಜಿಗಿದಾಡಿದಳು||


ಆ ಕ್ಷಣ ಮರದ ನೆರಳಲ್ಲಿ ಪವಡಿಸಿದ್ದ ಮದನ ರೂಪಿ ರಾಜಕುಮಾರ ವಿಮಲಧ್ವಜನನ್ನು ಕಂಡು...

ಬಿಸಜಾಕ್ಷಿ ನೋಡಿದಳು ವಸುಧೆಗಿಳಿದರ್ಕನೋ ಎನುತ
ನಾಚಿ ಪೀತಾಂಬರವ ಮರೆ ಮಾಡಿದಳು|
ಮದನ ರೂಪವನವಲೋಕಿಸುತ
ವಿರಹದುರಿಯ ತಾಳಲಾರದೇ ಬಳಲಿದಳು||

ನಾಚಿದಳು ನಸು ನಾಚಿದಳು
ಭಾವ ಲಹರಿ ಮೀಟಿರಲು|
ಗೀಚಿದಳು ನೆಲವನು ಗೀಚಿದಳು
ಅನುರಾಗ ಸೆಲೆಯು ಚಿಮ್ಮಿರಲು||

ನೋಡು ನೋಡೆ ಗೆಳತಿ ಅವನೇನಿತು ಚಂದ
ಕುರುಳ ಸೌಂದರ್ಯ ಸುಮಶರದಂದ|
ನೋಡೆ ಆ ವದನ ರವಿ ತೇಜ ಸದನ
ಈ ಸೊಬಗ ಸವಿಯೆ ಧರೆಗಿಳಿದನೇನೋ ಆ ಮದನ||

ಇಂದ್ರ ಸುತನೋ ನಳಕೂಬರನೋ
ಪೂರ್ಣ ಚಂದಿರ ಧರೆಗೆ ಇಳಿದನೋ|
ಮುಸುಕಿ ಬಂದಿಹ ಮುಗಿಯಲೆಳಸುತಿಹ ಸೆಳೆ ಮಿಂಚದೋ
ಎನುತ ಸಖಿಯ ಮರೆಗೆ ಸರಿಯುತ ನಾಚಿ ವರ್ಣಿಸಿದಳು||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ