ಪುಟಗಳು

ಮಂಗಳವಾರ, ಆಗಸ್ಟ್ 4, 2020

ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯು ಎದ್ದು ನಿಲ್ಲುತಿದೆ...

ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯು ಎದ್ದು ನಿಲ್ಲುತಿದೆ...


ಪಂಚ ಶತಮಾನಗಳ ಕಾಯುವಿಕೆಗೆ ಮೋಕ್ಷ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಮತಾಂಧ-ಸೆಕ್ಯುಲರ್ ಪಾಳಯವೆಂಬ ಕೈಕೆ ವಿಧಿಸಿದ್ದ ಐತಿಹಾಸಿಕ ವನವಾಸ ಮುಗಿದು ಅವನ ಮನೆಯ ಮರುನಿರ್ಮಾಣದ ಶಿಲಾನ್ಯಾಸಕ್ಕೆ ಮುಹೂರ್ತ ಸಿದ್ಧವಾಗಿದೆ. ಸಪ್ತಮೋಕ್ಷದಾಯಕ ನಗರಗಳಲ್ಲಿ ಒಂದಾದ ಅಯೋಧ್ಯೆ ಮತ್ತೊಮ್ಮೆ ರಾಮಭದ್ರ ಜನಿಸಿದನೇನೋ ಎಂಬಂಥಾ ಸಡಗರದಲ್ಲಿ ಮಿಂದೇಳುತ್ತಿದೆ. ಈ ಮೋಕ್ಷಕ್ಕೂ ಈ ಹೊಸ ಸೃಷ್ಟಿಗೂ ಕಾರಣವಾದುದು ರಾಮನಾಮವೇ! ಭಾರತದ ರಾಷ್ಟ್ರೀಯ ಅಸ್ಮಿತೆಯ ಕುರುಹು ಎದ್ದು ನಿಲ್ಲುವ ಈ ಕ್ಷಣ ಭರತ ಭೂಮಿಯನ್ನು ಪೂಜಿಸುವ ಪ್ರತಿಯೊಬ್ಬನೂ ಧನ್ಯನಾಗುವ ಕ್ಷಣ. ಆದರ್ಶ ಪುರುಷನನ್ನು ಮರು ಪ್ರತಿಷ್ಠಾಪಿಸಲು ನಡೆದ ಅದಷ್ಟೂ ಹೋರಾಟಗಳೂ ಸಾರ್ಥಕಗೊಂಡ ಕ್ಷಣ. ಧರ್ಮದ ಹಾದಿಯಲ್ಲೇ ನಡೆದು ದೇವನಾದವನ ಮೂರ್ತಿಯನ್ನು ಮರುಸ್ಥಾಪಿಸಲು ಭಕ್ತರು ಆ ದೇವ ಪಥದಲ್ಲೇ ನಡೆಸಿದ ಹೋರಾಟಕ್ಕೆ ಸಿಕ್ಕ ಪೂರ್ಣಫಲದ ಭಾವುಕ ಕ್ಷಣ. ಪರಮ ಪುರುಷನ ಆಯನವನ್ನೇ ಸಂಶಯಿಸಿ ಸುಳ್ಳು - ಪೊಳ್ಳುಗಳನ್ನು ಹೆಣೆದವರ ಹಣಾಹಣಿ ನಿಂತು ಧರ್ಮದ ಹಣತೆ ಬೆಳಗುವ ದಿವ್ಯ ಕ್ಷಣ.



ಮನು ನಿರ್ಮಿತ ನಗರ, ಗೋ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಚಕ್ರವರ್ತಿ ದಿಲೀಪ ವಿಶ್ವಜಿತ್ ಯಾಗ ಮಾಡಿದ ತಾಣ, ಇಕ್ಷ್ವಾಕು ವಂಶವನ್ನೇ ತನ್ನ ಹೆಸರಿನಿಂದ ಕರೆವಂತಹ ಆಡಳಿತ ನೀಡಿದ ಶ್ರೇಷ್ಠ, ರಾಜಾ ರಘುವಿನ ರಾಜಧಾನಿ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನಾಳಿದ ಭೂಮಿ, ಬ್ರಹ್ಮರ್ಷಿ ವಸಿಷ್ಠರೇ ನೆಲೆ ನಿಂತ ಪುಣ್ಯ ಭೂಮಿ. ಯುದ್ಧದ ಕಲ್ಪನೆಯನ್ನೂ ಮಾಡದ ಈ ಶಾಂತಿಪ್ರಿಯ ನಾಡು, ಸಪ್ತ ಮೋಕ್ಷದಾಯಕ ನಗರ ಅಯೋಧ್ಯೆ ಪಾವನವಾದುದು ರಾಮಭದ್ರನ ಜನನದಿಂದ. ಅವನೆಂದರೆ ಅಯೋಧ್ಯೆ, ಅಯೋಧ್ಯೆಯೆಂದರೆ ಅವನು. ಅಷ್ಟೇಕೆ ಅವನೇ ಭಾರತ. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವನು ಪರಬ್ರಹ್ಮ ಸ್ವರೂಪವಾಗಿ ಕಂಡದ್ದು ಎಷ್ಟೊಂದು ಜನರಿಗೆ!ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು. 
ರಾಮನಿಗಾಗಿ ಯಾರು ಕಾಯಲಿಲ್ಲ ಹೇಳಿ? ಪುತ್ರಕಾಮೇಷ್ಠಿ ನಡೆಸಿ ಕ್ಷಣವನ್ನೂ ಯುಗದಂತೆ ಭ್ರಮಿಸಿ ಕಾಲವನ್ನು ನೂಕುತ್ತಾ ದಶರಥ ಚಕ್ರವರ್ತಿಯೇ ರಾಮನಿಗಾಗಿ ಕಾದಿದ್ದ. ಗರ್ಭದಲ್ಲಿ ಅಂಕುರಗೊಂಡ ರಾಮಭದ್ರನ ಕಿಲಕಿಲ ನಗುವಿಗೆ ಮಾತೆ ಕೌಸಲ್ಯೆ ಕಾದಿದ್ದಳು. ರಾಜನ ಕೊರಗು ರಾಜ್ಯದ ಕೊರಗಾಗಿತ್ತು. ರಾಜ ಪರಿವಾರ, ಪ್ರಜಾವರ್ಗ ಪರಮ ಪುರುಷೋತ್ತಮನಿಗಾಗಿ ಕಾದಿತ್ತು. ಜಗತ್ತಿಗೇ ಮಿತ್ರನನ್ನಾಗಿ ತಯಾರು ಮಾಡಲೋಸುಗ ವಿಶ್ವಾಮಿತ್ರನೇ ಬಾಲ ರಾಮ ಬೆಳೆಯುವುದನ್ನು ಕಾಯುತ್ತಿದ್ದ. ಭೂಮಿಯನ್ನು ಉಳುವಾಗ ಸಿಕ್ಕ ಭೂಜಾತೆಯನ್ನು ಭಗವಂತನಿಗೇ ಒಪ್ಪಿಸಲು ಉಪನಿಷತ್ತುಗಳನ್ನು ಅರೆದು ಕುಡಿದ ರಾಜರ್ಷಿ ಕಾದಿದ್ದ. ತನ್ನ ಉಸ್ತುವಾರಿಯನ್ನು ದಾಟಿಸಲು ಕೊಡಲಿ ರಾಮ ಕಾದಿದ್ದ. ಅಹಲ್ಯೆ ಕಲ್ಲಾಗಿ ಕಾದಳು. ತಮ್ಮ ಭರತ ಪಾದುಕೆ ಹೊತ್ತು ಕಾದ. ಹಣ್ಣಾಗಿ ಪಕ್ವವಾಗಿದ್ದ ಶಬರಿ ಹಣ್ಣುಹಣ್ಣು ಮುದುಕಿಯಾಗಿ ಬಾಗಿ ಕಾದಳು. ಪಂಚವಟಿ, ದಂಡಕಾರಣ್ಯದ ಋಷಿಗಳು ರಕ್ಕಸರ ಉಪಟಳವನ್ನು ಅಳಿಸುವವನನ್ನು ಕಾದರು. ರಾವಣನ ಕುತಂತ್ರಕ್ಕೆ ಸಿಲುಕಿ ರೆಕ್ಕೆ ಕತ್ತರಿಸಲ್ಪಟ್ಟು ಬಿದ್ದ ಜಟಾಯು ಕುಟುಕು ಜೀವ ಉಳಿಸಿಕೊಂಡು ಕಾದ. ತನ್ನೊಳಗಿರುವ, ತಾನೇ ಅವನಾಗಿರುವ ಭಗವಾನನಿಗಾಗಿ ಭಕುತ ಹನುಮ ಕಾದ. ರಾಮನಂಥ ಶಕ್ತಿವಂತ ಮಿತ್ರನಿಗಾಗಿ ವಾನರೇಂದ್ರ ಸುಗ್ರೀವ ಕಾದ. ಸೇತುವಿಗಾಗಿ ಸಮುದ್ರ ಕಾದಿತ್ತು. ಸೇವೆಗಾಗಿ ಅಳಿಲು ಕಾದಿತ್ತು. ಕಪಿಗಡಣ ಮಾನವೇಂದ್ರನ ಸಹಾಯಕ್ಕಾಗಿ ಶಿಸ್ತಿನಿಂದ ಕಾದಿತ್ತು. ಅಣ್ಣನ ಅಧರ್ಮದ ಅಂಕುಶದಿಂದ ಪಾರಾಗಿ ಧರ್ಮವನ್ನು ಅಪ್ಪಿಕೊಳ್ಳಲು ಶರಣ ಶ್ರೇಷ್ಠ ಕಾದಿದ್ದ. ರಾಮ ಬಾಣ ತಾಗಿ ಮೋಕ್ಷ ಪಡೆಯಲು ದುರುಳರೂ, ರಕ್ಕಸರೂ ಕಾದಿದ್ದರು. ಮಾತೆ ಸೀತೆ ತನ್ನಿನಿಯ ಬಂದು ಕಾಯ್ವನೆಂದು ಅಶೋಕ ವನದಲ್ಲಿ ಶೋಕತಪ್ತಳಾಗಿ ಕಾದಿದ್ದಳು. ವನವಾಸ ಮುಗಿಸಿ ಮರಳಿ ಬಂದು ಪಟ್ಟವೇರಿ ರಾಮರಾಜ್ಯವನ್ನಾಗಿಸಬೇಕೆಂದು ಅಯೋಧ್ಯೆಗೆ ಅಯೋಧ್ಯೆಯೇ ಕಾದು ಕುಳಿತಿತ್ತು. ಅಂತಹಾ ಪರಮ ಪುರುಷನ ಮಂದಿರವನ್ನು ಮರು ನಿರ್ಮಿಸಲು ಕೋಟಿ ಕೋಟಿ ಭಕ್ತಗಣ 492 ವರ್ಷ ರಾಮ ಮಂತ್ರ ಜಪಿಸುತ್ತಾ, ಕಾದುತ್ತಲೇ ಕಾದು ಕುಳಿತಿತ್ತು! ಕಾಯುವಿಕೆಗಿಂತ ಅನ್ಯ ತಪವೇನಿದೆ?

"ವ್ಯಸನೇಷು ಮನುಷ್ಯಾಣಾಂ ಭೃಷಂಭವತಿ ದುಃಖಿತಃ":- ಇನ್ನೊಬ್ಬನ ಸಂಕಟವನ್ನು ಕಂಡಾಗ ತೀವ್ರವಾದ ದುಃಖಕ್ಕೆ ಒಳಗಾಗುವವನು" ಎಂದು ರಾಮನನ್ನು ವರ್ಣಿಸಿದ್ದಾನೆ ಮಹರ್ಷಿ ವಾಲ್ಮೀಕಿ. ಅದಕ್ಕೇ ದುಃಖಿತರೆಲ್ಲರೂ ರಾಮನಿಗಾಗಿ ಕಾದದ್ದಿರಬೇಕು. ರಾಮ "ದೂರ್ವಾದಲ ಶ್ಯಾಮ". ದೂರ್ವೆ ಎಂಬ ಮಂಗಲ ಸಸ್ಯ ಒಂಟಿಯಾಗಿ ಬೆಳೆಯುವುದೇ ಇಲ್ಲ. ಅದು ಗುಂಪು ಗುಂಪಾಗಿಯೇ ಬೆಳೆಯುವುದು. ಮಂಗಲಪುರುಷ  ಶ್ರೀರಾಮನೂ ಹಾಗೆಯೇ. ಸಮಷ್ಠಿಯ ಹಿತವನ್ನಾತ ಬಯಸುತ್ತಿದ್ದ. ಆದುದರಿಂದಲೇ ರಾಮ ನಡೆದ ಹಾದಿಯಲ್ಲಿದ್ದು ಪುನೀತವಾದ ಕಲ್ಲುಗಳು, ಬೀಸುವ ಗಾಳಿ, ಅವನಿಗಾಗಿ ಬಾಗುವ ತರುಲತೆಗಳೂ ರಾಮನ ಕಥೆಯನ್ನು ಸಾರಿ ಹೇಳಿವೆ. ವಾನರರು ಸಮುದ್ರಕ್ಕೆ ಒಗೆದಿದ್ದ ಸೇತುವಿನ ಕಲ್ಲೂ ತಾನು ರಾಮನ ಕಾಲದವನೆಂದು ಸಾರಿ ಹೇಳುತ್ತಿದೆ. ಸ್ವತಃ ರಾಕ್ಷಸರುಗಳನ್ನು ಸಂಹಾರ ಮಾಡುವ ಸಾಮರ್ಥ್ಯವಿದ್ದಾಗ್ಯೂ ಬ್ರಹ್ಮರ್ಷಿ ವಿಶ್ವಾಮಿತ್ರ ರಾಮನನ್ನು ಮಾಧ್ಯಮವಾಗಿ ಬಳಸಿ ಧರ್ಮದ ಒಳಸೂಕ್ಷ್ಮತೆಯ ಅರಿವನ್ನೂ ಮೂಡಿಸಿದ. ಈ ಜಗದಲ್ಲಿ ಧರ್ಮದ-ಸಂಸ್ಕೃತಿಯ ರಕ್ಷಣೆಗೆ ತಾನೊಂದು ಮಾಧ್ಯಮ ಎನ್ನುವುದನ್ನು ಬಾಲರಾಮ ಅರ್ಥ ಮಾಡಿಕೊಂಡಿದ್ದ. ಮಾಧ್ಯಮಕ್ಕೆ ವೈಯುಕ್ತಿಕತೆ ಇರುವುದಿಲ್ಲ. ಅದಕ್ಕೆ ತನ್ನ ಪರಂಪರೆಯ ಬಗೆಗೆ ಪೂಜ್ಯ ಭಾವನೆ ಇರುತ್ತದೆ. ಸಂಸ್ಕೃತಿಯ ಉಳಿವಿಗೆ ಅದು ಹಾತೊರೆಯುತ್ತದೆ. ಧರ್ಮಪಥ ದರ್ಶಕವದು. ಹೇಗಿರಬೇಕೆಂದು ಆಚರಿಸಿ ತೋರಿಸುವುದಷ್ಟೇ ಅದರ ಕರ್ತವ್ಯ. ಆ ಮಾಧ್ಯಮ ಇಲ್ಲಿನ ಜನರನ್ನು ಜೀವನ ಪ್ರವಾಹದಲ್ಲಿ ಏಕತ್ರಗೊಳಿಸಿ ಹಿಡಿದಿಟ್ಟು ಈ ರಾಷ್ಟ್ರವನ್ನು ನಿರ್ಮಿಸಿದೆ ಎಂಬ ಸೂಕ್ಷ್ಮ ಬರ್ಬರನಾದ ಬಾಬರನಿಗೆ, ಅವನಿಗೆ ಸೂಚನೆ ಕೊಟ್ಟ ಪಾಪಿ ಸೂಫಿಗೆ ಗೊತ್ತಾಗಿತ್ತು. ಈ ನೆಲದಿಂದ ಬೇರ್ಪಡಿಸಲಾಗದ ಯುಗಯುಗದ ಅಸ್ಮಿತೆಯ ಮಂದಿರ ಧರೆಗುರುಳಿತ್ತು. ಆದರೆ ಆ ಅಸ್ಮಿತೆಯ ಮೇಲಿನ ಶ್ರದ್ಧೆ ಕೆಳಗುರುಳಲಿಲ್ಲ.

ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ ಶ್ರೀರಾಮನೇ ಹೀಗೆ ಹೇಳುತ್ತಾನೆ..."ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |
ನ ತು ಪ್ರತಿಜ್ಞಾಂ ಸಂಶ್ರುತ್ಯ  ಬ್ರಾಹ್ಮಣೇಭ್ಯೋ ವಿಶೇಷತಃ ||”
ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣವನ್ನಾದರೂ ಬಿಟ್ಟೇನು! ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು! ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು! ಆದರೆ ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ! ರಾಮಭಕ್ತರೂ ರಾಮಮಂದಿರವನ್ನು ರಾಮನ ಜನ್ಮಸ್ಥಾನದಲ್ಲೇ ಮರು ನಿರ್ಮಿಸುವ ತಮ್ಮ ಪ್ರತಿಜ್ಞೆಯಿಂದ ಒಂದಿನಿತೂ ಕದಲದೇ ಮಂದಿರಕ್ಕೆ ತಳಪಾಯ ಹಾಕಿಯೇ ಬಿಟ್ಟರು. ಅದೆಷ್ಟು ಕಾಲ, ಅದೆಷ್ಟು ಹೋರಾಟಗಳು! ಒಂದು ಲಕ್ಷದ ಎಪ್ಪತ್ತು ಸಾವಿರ ಯೋಧರು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆಗೆ, ಮೀರ್ ಬಾಕಿಯ ತೋಪಿಗೆ ಎದುರಾಗಿ ಹದಿನೈದು ದಿವಸಗಳ ಕಾಲ ರಾಮಚಂದಿರನ ಮಂದಿರವನ್ನು ಉಳಿಸಲು ಘನಘೋರವಾಗಿ ಕಾದಿದರು. ಆ ಬಳಿಕ ಎಪ್ಪತ್ತೈದು ಯುದ್ಧಗಳು, ಸಾಧುಸಂತರ, ರಾಮಭಕ್ತರ ಸತ್ಯಾಗ್ರಹ, ಉಪವಾಸ, ಪಾದಯಾತ್ರೆ, ರಾಮಜ್ಯೋತಿ ರಥಯಾತ್ರೆ, ರಾಮಪಾದುಕಾಯಾತ್ರೆ, ಕರಸೇವೆ, ಕರಸೇವಕರ ಬಲಿದಾನ; ಅದೆಷ್ಟು ಸಂತರು ರಾಮಮಂದಿರಕ್ಕಾಗಿ ಅಗ್ನಿಗುಂಡಕ್ಕೆ ಹಾರಿಯೋ, ಶೂಲಕ್ಕೇರಿಯೋ, ಉಪವಾಸಗೈದೋ ಬಲಿದಾನಗೈದರು! ಒಂದು ಬಾರಿಯಂತೂ 3500 ಮಾತಾಭಗಿನಿಯರು ಶಸ್ತ್ರ ಹಿರಿದು ಕಾದಿದರು. ಈ ಹೋರಾಟಗಳೆಲ್ಲವೂ ಕೇವಲ ಒಂದು ಮಂದಿರದ ಮರುನಿರ್ಮಾಣಕ್ಕಾಗಿ ನಡೆದ ಹೋರಾಟವಲ್ಲ; ಅದು ಒಂದು ಬದುಕಿನ ಉಳಿವಿಗಾಗಿ, ಒಂದು ಸಂಸ್ಕೃತಿಯ ರಕ್ಷಣೆಗಾಗಿ ನಡೆದ ಹೋರಾಟ. ಮನಸ್ಸು ಮಾಡಿದ್ದರೆ ನ್ಯಾಯಾಲಯದ ಪ್ರಕ್ರಿಯೆಯನ್ನು ವಿಳಂಬಪಡಿಸುವ ಗುಂಪುಗಳು, ಅವುಗಳ ಮಾನಸಿಕತೆ, ರಾಜಕೀಯ ಷಡ್ಯಂತ್ರ ಇವೆಲ್ಲವುಗಳನ್ನೂ ರಾಮಭಕ್ತರು ಒಂದೇ ಏಟಿಗೆ ಕೊನೆಗೊಳಿಸಬಹುದಿತ್ತು. ಆದರೆ ರಾಮಭಕ್ತರು ಈ ನೆಲದ ಕಾನೂನಿಗೆ ಗೌರವ ಕೊಟ್ಟು ರಾಮ ನಡೆದ ಹಾದಿಯಲ್ಲಿ ಸಾಗಿದರು, ಕಾದರು. ಆ ಕಾಯುವಿಕೆಯೆಂಬ ತಪಸ್ಸಿನ ಪುಣ್ಯಫಲವೇ ಶಿಲಾನ್ಯಾಸ. ಕೋಟಿ ಕೋಟಿ ಮನಸ್ಸುಗಳ ಐನೂರು ವರ್ಷಗಳ ಸಂಕಲ್ಪ ಇಂದು ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯಾಗಿ ಶಿಲಾನ್ಯಾಸಗೊಳ್ಳುತ್ತಿದೆ.



ಶಿಲೆಯನ್ನು ಅಹಲ್ಯೆಯಾಗಿಸಿದವನ ಮಂದಿರಕ್ಕೆ ಶಿಲಾನ್ಯಾಸ. ಪರಮ ಪುರುಷೋತ್ತಮನಿಗೆ ಮಂದಿರ ನಿರ್ಮಿಸಲು ಶಿಲಾನ್ಯಾಸ. ೫೦೦ ವರ್ಷಗಳ ಪರ್ಯಂತ ಭಕ್ತರ ಹೃದಯದಲ್ಲೇ ಪುತ್ಥಳಿಯಾಗಿದ್ದವನ ವಿಗ್ರಹ ಪ್ರತಿಷ್ಠಾಪನೆಗೆ ಶಿಲಾನ್ಯಾಸ. "ರಾಮೋ ವಿಗ್ರಹವಾನ್ ಧರ್ಮಃ"; ಧರ್ಮವೇ ವಿಗ್ರಹವಾಗಿದ್ದವನ ಮೂರ್ತಿಗೆ ಶಿಲಾನ್ಯಾಸ. ಅದು ಬರಿಯ ಕಲ್ಲು ಗುಡಿಯಲ್ಲ; ಅದು ಈ ದೇಶದ ಅಸ್ಮಿತೆಯ ಪ್ರತೀಕ. ಭಕ್ತರ ಹೃದಯದಲ್ಲಿ ಕುಳಿತಿರುವ ಮೂರ್ತಿ ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯಾಗಿ ಎದ್ದು ನಿಲ್ಲುತ್ತದೆ. ಅಲ್ಲಿ ರಾಮನ ಪದಸ್ಪರ್ಶದಿಂದ ಪುನೀತವಾದ ಈ ಮಣ್ಣಿನ ಕಣಕಣಗಳು ಹೇಳುವ ರಾಮಾಯಣದ ಮೂರ್ತ ರೂಪವಿದೆ. ಅಸಂಖ್ಯ ಯುದ್ಧಗಳಲ್ಲಿ ಮಂದಿರಕ್ಕಾಗಿ ರಕ್ತವನ್ನೇ ಬಸಿಬಸಿದು ಕೊಟ್ಟವರ ಪೌರುಷದ ಪ್ರತೀಕವಿದೆ. ಜಾತಿಯ, ಭಾಷೆಯ ದುರಭಿಮಾನಗಳಿಲ್ಲದೆ, ಗಡಿಗುಂಟಗಳ ಹಂಗಿಲ್ಲದೆ, ಆ ಧರ್ಮದೇವತೆಯನ್ನು ಪೂಜಿಸಿದ, ಪೂಜಿಸುವ ಮನಸ್ಸುಗಳ ಭಾವವಿದೆ. ಮಂದಿರದ ಉಳಿವಿಗಾಗಿ, ಮರುನಿರ್ಮಿತಿಗಾಗಿ ಹಣಿದು ಅಳಿದವರ ಪರಿವಾರಗಳ ರೋಷ, ಆಕ್ರೋಷ, ದುಃಖ, ಭಕ್ತಿ-ಭಾವಗಳ ಮೇಳೈಸುವಿಕೆಯಿದೆ. ತಮ್ಮ ಮನೆಯಲ್ಲೂ ರಾಮ ಹುಟ್ಟಬೇಕು, ಅವನ ಮಂದಿರದ ಮರು ನಿರ್ಮಾಣವಾಗಬೇಕು ಎಂದವರ ಹಪಹಪಿಕೆಯಿದೆ. ವಿದ್ವಜ್ಜನರ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ, ಕಾವ್ಯ, ಪದ್ಯ, ಗದ್ಯ, ನಾಟ್ಯ, ನಟನೆಗಳಲ್ಲಿ; ಜನಪದರ ಹಾಡುಗಬ್ಬಗಳಲ್ಲಿ, ಋತ್ವಿಜರ ಹೋಮ-ಹವನಗಳಲ್ಲಿ; ಪೂಜಕರ ಆರಾಧನೆಯಲ್ಲಿ, ಕ್ಷತ್ರಿಯರ ತೋಳ್ಬಲಗಳಲ್ಲಿ, ದಾನಿಗಳ ದಾನಗಳಲ್ಲಿ, ಶ್ರಮಿಕರ ಕೆಲಸಗಳಲ್ಲಿ; ಈ ನೆಲದ ಕಾನೂನಿನಂತೆಯೇ ಹೋರಾಡಿದ ಬಗೆಬಗೆಯ ಹೋರಾಟ-ಬುದ್ಧಿಮತ್ತೆಗಳಲ್ಲಿ ಕಂಡಂತಹಾ ಧರ್ಮದ ಮೂರ್ತ ರೂಪಕ್ಕೆ ಅಲ್ಲಿ ಶಿಲಾನ್ಯಾಸವಾಗುತ್ತಿದೆ. ಆಸೇತುಹಿಮಾಚಲಾದ್ಯಂತ ರಾಮ ನಡೆದ ಮಣ್ಣಿನ ಕಣಕಣಗಳ, ಪಾದ ತೊಳೆದ ಹಳ್ಳ-ಕೊಳ್ಳ, ನದಿ, ಸಮುದ್ರಗಳ, ಅಹಲ್ಯೆಯಾಗಿಸಿದ ಕಲ್ಲುಗಳ, ಉದ್ಧರಿಸಲ್ಪಟ್ಟ ಶಬರಿಯರ, ಪುನೀತರಾದ ಋಷಿಮುನಿಗಳ, ಭಕ್ತರಾದ ಹನುಮರ, ಛೇದನಗೊಂಡ ಸಾಲವೃಕ್ಷಗಳ, ಪಂಚವಟಿ-ದಂಡಕಾರಣ್ಯಗಳ, ಅವನಿಗಾಗಿ ಕಾದಿದ ಜಟಾಯು, ಕಪಿ ವೀರರ, ನೇವರಿಸಿಕೊಂಡ ಅಳಿಲುಗಳ, ಶರಣು ಬಂದ ವಿಭೀಷಣರ, ಮೋಕ್ಷ ಪಡೆದ ವಾಲಿ-ರಾವಣಾಖ್ಯರ, ತಪಸ್ವಿಗಳಂತೇ ಕಾದು ಕುಳಿತ ಮಾತೆ, ಅನಾಥ, ಪಾಮರ, ಭಕ್ತ, ಪ್ರಜಾಜನರ ರಾಮನಾಮ ಸ್ಮರಣೆಯ ಶಕ್ತಿ ಅಲ್ಲಿ ಸಂಚಯನವಾಗುತ್ತಿದೆ.


ದೇಶದೆಲ್ಲೆಡೆ ಸಾವಿರಾರು ರಾಮಮಂದಿರಗಳಿರಬಹುದು. ಆದರೆ ಅವಾವುವೂ ಜನ್ಮಸ್ಥಾನದ ರಾಮಮಂದಿರಕ್ಕೆ ಸಮವಲ್ಲ. ಈ ದೇಶದ ನದಿ, ಸರೋವರಗಳಿಗೆ ಸರಯೂ ಎನಿಸಿಕೊಳ್ಳುವ ಹಪಹಪಿ ಇದೆ. ಕಲ್ಲು ಕಲ್ಲುಗಳಿಗೂ ಅಹಲ್ಯೆಯಂತೆ ಉದ್ಧಾರವಾಗುವ ಮಹದಿಚ್ಛೆಯಿದೆ. ಪ್ರತಿಯೊಂದು ಕಾನನಕ್ಕೂ ಪಂಚವಟಿಯೆನ್ನಿಸಿಕೊಳ್ಳುವ ವಾಂಛೆ ಇದೆ. ಹಾಗೆಯೇ ಪ್ರತಿಯೊಂದು ಮಂದಿರಕ್ಕೂ ರಾಮನಿಗೆ ಗುಡಿಯಾಗುವ ಮಹೋದ್ದೇಶವಿದೆ. 492 ವರ್ಷಗಳ ಬಳಿಕ ರಾಷ್ಟ್ರೀಯ ಅಸ್ಮಿತೆಯ ಪುತ್ಥಳಿ ಎದ್ದು ನಿಲ್ಲುತ್ತಿದೆ. ಈ ಹೋರಾಟ, ಈ ಶಿಲಾನ್ಯಾಸ, ಈ ಮಂದಿರ, ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಪ್ರತಿಯೊಬ್ಬನೂ ರಾಮ ನಡೆದ ಹಾದಿಯಲ್ಲಿ ನಡೆಯುವಂತಾಗಲಿ.


ಬಂಗಾಳಿ ಹಿಂದೂಗಳ ಜೀವ ಉಳಿಸಿದ ಗೋಪಾಲ

ಬಂಗಾಳಿ ಹಿಂದೂಗಳ ಜೀವ ಉಳಿಸಿದ ಗೋಪಾಲ


ಆಗಸ್ಟ್ 18 ಕೋಲ್ಕತ್ತಾಕ್ಕೆ ಮಹತ್ವದ ದಿನ. 1946ರ ಆಗಸ್ಟ್ 16ರಿಂದ ನಗರವನ್ನು ಹುರಿದು ಮುಕ್ಕಿದ ಘೋರ ಘಟನೆಗಳಿಗೆ ಮಹತ್ವದ ತಿರುವು ನೀಡಿದ ದಿನ. ಆ ಬಳಿಕ ಜರುಗಿದ ನಾಟಕೀಯ ತಿರುವಿನ ಘಟನೆಗಳು ನಗರವನ್ನು ಪಾಕಿಸ್ತಾನದ ಭಾಗವಾಗದಂತೆ ರಕ್ಷಿಸಿದವು. ಹಿಂದೂಗಳ ವಿರುದ್ಧದ ಮುಸ್ಲಿಂ ಲೀಗಿನ ಷಡ್ಯಂತ್ರವನ್ನು ವಿಫಲಗೊಳಿಸಿ, ಸಂದರ್ಭದ ಅಲೆಯನ್ನು ಮುಸ್ಲಿಂ ಲೀಗಿನ ವಿರುದ್ಧ ತಿರುಗಿಸಿ, ಹತ್ತಾರು ಸಾವಿರ ಹಿಂದೂಗಳನ್ನು ಸರ್ವನಾಶವಾಗುವುದರಿಂದ ಉಳಿಸಿದ
ಗೋಪಾಲ್ ಚಂದ್ರ ಮುಖೋಪಾಧ್ಯಾಯರೆಂಬ ವೀರ ಕಲಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆತ ಮತ್ತು ಅವರ ದೇಶಭಕ್ತ ಅನುಯಾಯಿಗಳಿಲ್ಲದಿರುತ್ತಿದ್ದರೆ ಕಲ್ಕತ್ತಾ ಮತ್ತು ಅದರ ನೆರೆಯ ಹಿಂದೂ-ಬಹುಸಂಖ್ಯಾತ ಜಿಲ್ಲೆಗಳು ಹಿಂದೂಗಳಿಂದ ಬರಿದಾಗಲ್ಪಟ್ಟು ಪೂರ್ವ ಪಾಕಿಸ್ತಾನದ ಭಾಗಗಳಾಗುತ್ತಿದ್ದವು.

ವಿಭಜನೆಯ ಪೂರ್ವದಲ್ಲಿ ಬಂಗಾಲ ಮುಸ್ಲಿಮ್ ಲೀಗ್ ನಾಯಕ ಸುಹ್ರಾವರ್ದಿಯ ಆಡಳಿತದಲ್ಲಿತ್ತು. 1940ರಲ್ಲಿ ಕಲ್ಕತ್ತಾದಲ್ಲಿ ಕೋಮುಗಲಭೆ ಸೃಷ್ಟಿಸಿ ಹಿಂದೂಗಳನ್ನು ಸರ್ವನಾಶ ಮಾಡಲು ಸುಹ್ರಾವರ್ದಿ ಸಂಚು ರೂಪಿಸಿದ್ದ. ಆದರೆ ಸುಹ್ರಾವರ್ದಿಯ ಕುಟುಂಬದ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸುತ್ತಿದ್ದ ಹರೇನ್‍ ಘೋಷನಿಗೆ ಈ ಸಂಚು ತಿಳಿದು ಆತ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಕಾರಣ ಈ ಸಂಚು ವಿಫಲವಾಯಿತು. ವಿಷಯ ತಿಳಿದ ಸುಹ್ರಾವರ್ದಿ ಹರೇನ್‍ ಘೋಷನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು, ಅವನ  ದೇಹವನ್ನು ತುಂಡು ತುಂಡು ಮಾಡಿ ಪೆಟ್ಟಿಗೆಯೊಂದರಲ್ಲಿ ಹಾಕಿ ಕಲ್ಕತ್ತಾದ ಬೀದಿಯೊಂದರಲ್ಲಿ ಬಿಸಾಕಿದ. 1942ರಲ್ಲಿ ಬಂಗಾಲ ಭೀಕರ ಕ್ಷಾಮಕ್ಕೆ ತುತ್ತಾಗಿತ್ತು. ಆಗ ಕಲ್ಕತ್ತಾದಲ್ಲಿ ಹಂಚಲು ತಂದಿದ್ದ ಪಡಿತರವನ್ನು ಸುಹ್ರಾವರ್ದಿ ತನ್ನ ವಶಕ್ಕೆ ಪಡೆದುಕೊಂಡು ಕಾಳಸಂತೆಯಲ್ಲಿ ಮಾರಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ. ಮುಖರ್ಜಿಯವರ ಆಪ್ತ ಶಿಷ್ಯರೂ, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಾಜಾ ರಾಮಮೋಹನ್ ರಾಯ್ ಮಹಾವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥರೂ ಆಗಿದ್ದ  ಅಮಲೇಂದು ಪ್ರಸಾದ್ ಮುಖೋಪಾಧ್ಯಾಯರು ಬಂಗಾಳದ ಪೂರ್ವ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿ ಸುಹ್ರಾವರ್ದಿಯ ಆಡಳಿತದಲ್ಲಿ ಹಿಂದೂಗಳ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು, ಶಂಖ ಊದುವುದು, ಸಿಂಧೂರವನ್ನು ಬಳಸುವುದು, ಮನೆಯ ಅಂಗಳದಲ್ಲಿ ತುಳಸಿ ಪೂಜೆಯನ್ನು ನಿಷೇಧಿಸಿ, ಶರಿಯತ್ ನಿಯಮಗಳನ್ನು ಜಾರಿಗೊಳಿಸಿದುದರ ಬಗೆಗೆ ಬರೆದಿದ್ದಾರೆ.  1946ರಲ್ಲಿ ಜಿನ್ನಾ "ನೇರ ಕಾರ್ಯಾಚರಣೆ" ಹೆಸರಿನಲ್ಲಿ ಗಲಭೆಗಳಿಗೆ ಕರೆ ನೀಡಿದಾಗ, ಕಲ್ಕತ್ತಾದಲ್ಲಿ ಮಾರಣಹೋಮಕ್ಕೆ ವೇದಿಕೆ ಕಲ್ಪಿಸಿದವನು ಸುಹ್ರಾವರ್ದಿಯೇ.

1946ರ ಆಗಸ್ಟ್ 16 - ರಂಜಾನ್‌ನ ಹದಿನೆಂಟನೇ ದಿನ, ಪ್ರವಾದಿ ಮುಹಮ್ಮದ್ ಬದ್ರ್ ಕದನ (ಮೆಕ್ಕಾದ ರಕ್ತಸಿಕ್ತ ವಿಜಯಕ್ಕೆ ದಾರಿ ಮಾಡಿಕೊಟ್ಟ ಅನ್ಯಜನಾಂಗಗಳ ವಿರುದ್ಧದ ಮೊದಲ ನಿರ್ಣಾಯಕ ವಿಜಯ)ವನ್ನು ಗೆದ್ದ ದಿನ. ಅದನ್ನೇ ಉದ್ದೇಶಪೂರ್ವಕವಾಗಿ ಆರಿಸಿಕೊಂಡು ತಮ್ಮ ಸಮುದಾಯದವರನ್ನು ಪ್ರಚೋದಿಸಲು ಮುಸ್ಲಿಂ ನಾಯಕರು ಸಿದ್ಧತೆ ಮಾಡಿದ್ದರು. ಜಿನ್ನಾ ಖಡ್ಗವನ್ನು ಹಿರಿದು ನಿಂತ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಕೋಲ್ಕತ್ತಾದಲ್ಲಿ ವಿತರಿಸಲಾಯಿತು. ಮುಸ್ಲಿಂ ಲೀಗ್ ಮುಖವಾಣಿ "ದಿ ಸ್ಟಾರ್ ಆಫ್ ಇಂಡಿಯಾ" ಮತ್ತು ಇತರ ಮುಸ್ಲಿಂ ಪ್ರಕಟಣೆಗಳು ತಮ್ಮ ಸಮುದಾಯಕ್ಕೆ ಆ ದಿನದ ಮಹತ್ವವನ್ನು ನೆನಪಿಸುವ ಲೇಖನಗಳನ್ನು ಬರೆದು ಪ್ರವಾದಿಯ ಹಾದಿಯಲ್ಲಿ ನಡೆದು ಕಾಫಿರರನ್ನು ನಾಶ ಮಾಡಿ ಬಂಗಾಳವನ್ನು "ಶುದ್ಧ ಭೂಮಿ"(ಪಾಕಿಸ್ತಾನ)ಯನ್ನಾಗಿ ಮಾಡುವಂತೆ ಕರೆಕೊಟ್ಟರು. ಕಲ್ಕತ್ತಾದ ಮೇಯರ್ ಆಗಿದ್ದ ಸೈಯದ್ ಮುಹಮ್ಮದ್ ಉಸ್ಮಾನ್ ಬಿಡುಗಡೆಗೊಳಿಸಿದ, "ಕಾಫಿರರೇ, ನಿಮ್ಮ ಅಂತ್ಯವು ದೂರವಿಲ್ಲ! ನಿಮ್ಮನ್ನು ಹತ್ಯೆಗೈಯಲಾಗುವುದು" ಎಂಬ ಒಕ್ಕಣೆಯುಳ್ಳ ಕರಪತ್ರವನ್ನು ವ್ಯಾಪಕವಾಗಿ ಹಂಚಲಾಗಿತ್ತು.

ವಿಪರ್ಯಾಸವೆಂದರೆ ಆಗಸ್ಟ್ 16 ಶುಕ್ರವಾರ ಕೂಡಾ ಆಗಿತ್ತು! ಮಸೀದಿಗಳಲ್ಲಿ ಉಗ್ರ ಭಾಷಣಗಳನ್ನು ಮಾಡಿ ಮುಸ್ಲಿಂರನ್ನು ಪ್ರಚೋದಿಸುವಂತೆ ಮುಸ್ಲಿಂ ಲೀಗ್ ನಾಯಕರಿಂದ ಅಪ್ಪಣೆಯೂ ದೊರಕಿತ್ತು. ಅವರು ಯಥಾ ಪ್ರಕಾರಕ್ಕಿಂತಲೂ ಹೆಚ್ಚು ಉಗ್ರವಾಗಿ ಕಾಫಿರರನ್ನು ಶುದ್ದೀಕರಿಸುವಂತೆ ತಮ್ಮವರನ್ನು ಉತ್ತೇಜಿಸಿದರು. ಕಳ್ಳುಕುಡಿದ ಮಂಗನಿಗೆ ಚೇಳು ಕುಟುಕಿದಂತಾಯಿತು! ಮುಸ್ಲಿಮರು ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಹಿಂದೂಗಳ ವ್ಯಾಪಾರ ಮಳಿಗೆಗಳು ಹಾಗೂ ಕಟ್ಟಡಗಳ ಮೇಲೆ ದಾಳಿಗೆ ಶುರುವಿಟ್ಟುಕೊಂಡರು. ನಮಾಜಿನ ಬಳಿಕ ಸುಹ್ರಾವರ್ದಿ ಮತ್ತಿತರ ಮುಸ್ಲಿಂ ಲೀಗ್ ನಾಯಕರ ಭಾಷಣ ಕೇಳಲು ಮುಸ್ಲಿಮರ ಪ್ರವಾಹವೇ ಆಕ್ಟರ್ಲೋನಿ ಸ್ಮಾರಕಕ್ಕೆ (ಈಗ ಶಾಹಿದ್ ಮಿನಾರ್) ಹರಿದು ಬಂತು. ಹಿಂದೂಗಳನ್ನು ಕೋಲ್ಕತ್ತಾದಿಂದ ಓಡಿಸಿ ಜಿನ್ನಾನ ಪಾಕಿಸ್ತಾನದ ಕನಸು ನನಸು ಮಾಡುವಂತೆ ಒತ್ತಾಯಿಸುವ ಉಗ್ರತೆ ಆ ನಾಯಕರ ಭಾಷಣಗಳಲ್ಲಿತ್ತು. ಸುಹ್ರಾವರ್ದಿ ತನ್ನ ಭಾಷಣದಲ್ಲಿ ಸೈನ್ಯ ಹಾಗೂ ಪೋಲೀಸರನ್ನು ಸುಮ್ಮನಿರಿಸುವುದಾಗಿ ಭರವಸೆ ನೀಡಿದ. ಇದರಿಂದ ಹಿಂದೂಗಳ ಮೇಲೆ ದಾಳಿ ಮಾಡಲು ಮತ್ತು ಕೊಲ್ಲಲು ಮುಸ್ಲಿಮರಿಗೆ ನೇರ ಪ್ರೋತ್ಸಾಹ ದೊರೆತಂತಾಯಿತು. ಈಗ ಅದೇ ಕಳ್ಳುಕುಡಿದ, ಚೇಳು ಕುಟುಕಿದ ಮಂಗನ ದೇಹದಲ್ಲಿ ಪ್ರೇತ ಸಂಚಾರವಾದಂತಾಯಿತು! 

ಭಾಷಣ ಕೇಳಿ ತೆರಳಿದ ಹತ್ತಾರು ಸಾವಿರ ಮುಸ್ಲಿಮರು ನಗರದ ವಿವಿಧ ಭಾಗಗಳಲ್ಲಿ ಕಬ್ಬಿಣದ ಸರಳುಗಳು, ಕತ್ತಿಗಳು ಮತ್ತಿತರ ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತರಾದರು. ಎಸ್ಪ್ಲನೇಡ್ನಲ್ಲಿ (ಮುಸ್ಲಿಂ ಲೀಗ್ ರ್‍ಯಾಲಿ ನಡೆದ ಸಮೀಪದ ಸ್ಥಳ)ಹಿಂದೂಗಳು ಮೊದಲು ಆಹುತಿಯಾದರು. ಮನೆ, ಅಂಗಡಿಗಳ ಮೇಲೆ ದಾಳಿ ಮಾಡಿ ಪುರುಷರ, ಹುಡುಗರ ಕತ್ತುಕೊಯ್ಯಲಾಯಿತು, ಕೈಕಾಲುಗಳನ್ನು ಕತ್ತರಿಸಿ ಚಿತ್ರಹಿಂಸೆ ಕೊಡಲಾಯಿತು. ಮಹಿಳೆಯರನ್ನು ಅತ್ಯಾಚಾರಗೈದು ಕೊಲ್ಲಲಾಯಿತು. ಕೆಲವರನ್ನು ಲೈಂಗಿಕ ಗುಲಾಮಗಿರಿಗೆ ಒಯ್ಯಲಾಯಿತು. ಮುಸ್ಲಿಂ ಪ್ರಾಬಲ್ಯದ ಮೆಟಿಯಾಬ್ರೂಜ್ ಪ್ರದೇಶದ ಲಿಚುಬಾಗನ್‌ನ ಕೇಸರರಮ್ ಕಾಟನ್ ಮಿಲ್ಸ್‌ನಲ್ಲಿ ಅತ್ಯಂತ ಭೀಕರ ಹತ್ಯಾಕಾಂಡ ನಡೆಯಿತು. ಅಲ್ಲಿ ಮುಸ್ಲಿಂ ಲೀಗ್ ನಾಯಕ ಸೈಯದ್ ಅಬ್ದುಲ್ಲಾ ಫಾರೂಕಿ ನೇತೃತ್ವದಲ್ಲಿ ಮುಸ್ಲಿಮರು ಮಿಲ್ಲಿನೊಳಗಿದ್ದ 600ಕ್ಕೂ ಹೆಚ್ಚು ಹಿಂದೂ ಕಾರ್ಮಿಕರ(ಹೆಚ್ಚಿನವರು ಒರಿಸ್ಸಾದವರು) ಶಿರಚ್ಛೇದ ಮಾಡಿದರು. ಮುಸ್ಲಿಮ್ ಕ್ರೂರತೆಯ ಕಥೆ ಹೇಳಲು, ಕೈಗಳು ಕತ್ತರಿಸಲ್ಪಟ್ಟಿದ್ದ ಇಬ್ಬರು ಹೇಗೋ ಬದುಕುಳಿದರು.

ಸುಹ್ರಾವರ್ದಿ ಮೊದಲೇ ಊಹಿಸಿದಂತೆ ಮೊದಲ ಎರಡು ದಿನಗಳಲ್ಲಿ ಹಿಂದೂಗಳು ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಲಿಲ್ಲ. ಮುಸ್ಲಿಮರು ದೇಶದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಸಹಾ, ಶತಮಾನಗಳಿಂದ ಮುಸ್ಲಿಮರ ಅಧೀನಕ್ಕೆ ಒಳಪಟ್ಟಿದ್ದ ಹಿಂದೂಗಳು ಮುಸ್ಲಿಮರಿಗೆ ಯಾವುದೇ ಪ್ರತಿರೋಧವನ್ನು ತೋರಿಸುವ ಧೈರ್ಯವನ್ನು ಹೊಂದಿಲ್ಲ ಎಂದು ಆತ ತನ್ನ ಸಹಚಾರಿಗಳಿಗೆ ತಿಳಿಸಿದ್ದ. 1946ರಲ್ಲಿ ಕಲ್ಕತ್ತಾದಲ್ಲಿ 64 ಶೇಕಡಾದಷ್ಟು ಹಿಂದೂಗಳು ಮತ್ತು 33 ಶೇಕಡಾ ಮುಸ್ಲಿಮರು ಇದ್ದರು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅಲ್ಲದೇ ಕಲ್ಕತ್ತಾದ ನೆರೆಯ ಜಿಲ್ಲೆಗಳಾದ ಹೌರಾ ಮತ್ತು ಹೂಗ್ಲಿಗಳು ಹಿಂದೂ ಬಹುಸಂಖ್ಯಾತವಾಗಿದ್ದವು. "ಶತಮಾನಗಳ ಪರ್ಯಂತ ಮುಸ್ಲಿಮರ ಕೈಯಿಂದ ಆಳಿಸಿಕೊಂಡಿರುವ ಹಿಂದೂಗಳ ವಂಶವಾಹಿಯಲ್ಲಿ ಮುಸ್ಲಿಮರನ್ನು ವಿರೋಧಿಸುವ ಕೆಚ್ಚು ಇಲ್ಲ. ಹಿಂದೂಗಳು ತಾವು ದುರ್ಬಲರು ಮತ್ತು ಮುಸ್ಲಿಮರು ಬಲಶಾಲಿಗಳು ಹಾಗೂ ಉಗ್ರರು ಎಂಬ ನಂಬಿಕೆಗೆ ಪಕ್ಕಾಗಿದ್ದಾರೆ" ಎಂದು ಸುಹ್ರಾವರ್ದಿ ತನ್ನ ಮುಸ್ಲಿಂ ಲೀಗ್ ಸಹಚಾರಿಗಳಿಗೆ ಹೇಳಿದ್ದ.

ಲಾಲ್‌ಬಜಾರ್‌ನಲ್ಲಿರುವ ಕಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಹೋಗಿ ಕೂತ ಸುಹ್ರಾವರ್ದಿ ಮುಸ್ಲಿಮರು ಹಿಂದೂಗಳ ಮೇಲೆ ಯಶಸ್ವಿಯಾಗಿ ಆಕ್ರಮಣ ಮಾಡುತ್ತಿರುವ ಪ್ರದೇಶಗಳಿಗೆ ಪಡೆಗಳನ್ನು ನಿಯೋಜಿಸದಂತೆ ಬ್ರಿಟಿಷ್ ಮತ್ತು ಆಂಗ್ಲೋ-ಇಂಡಿಯನ್ ಪೊಲೀಸ್ ಅಧಿಕಾರಿಗಳನ್ನು ತಡೆದ. ಇದಕ್ಕೂ ಮೊದಲೇ ಆತ ಬಿಹಾರಿ ಹಿಂದೂಗಳನ್ನು ಬದಲಾಯಿಸಿ ಅಲ್ಲಿ ಸಂಯುಕ್ತ ಪ್ರಾಂತ್ಯಗಳಲ್ಲಿದ್ದ ಪಠಾಣರು ಹಾಗೂ ಮತ್ತಿತರ ಮುಸ್ಲಿಂರನ್ನು ನೇಮಿಸಿ ನಗರ ಪೊಲೀಸ್ ಸಂಯೋಜನೆಯನ್ನೇ ಬದಲಾಯಿಸಿದ್ದ. ಆ ಪೊಲೀಸರು ಹಿಂದೂಗಳನ್ನು ಕೊಲ್ಲುವಲ್ಲಿ ಹಾಗೂ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗೈಯುವಲ್ಲಿ ಮುಸ್ಲಿಮರಿಗೆ ನೆರವಾದರು. ನಗರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮೊದಲ ಎರಡು ದಿನಗಳಲ್ಲಿ(ಆಗಸ್ಟ್ 16, 17) ಕೆಲವು ಸಾವಿರ ಹಿಂದೂಗಳು ಕೊಲ್ಲಲ್ಪಟ್ಟರು. ವಿವಿಧ ವರದಿಗಳು ಈ ಸಂಖ್ಯೆಯನ್ನು 4000-20000ದ ನಡುವೆ ಕೊಡುತ್ತವೆ. ಸುಮಾರು 3,500 ಹಿಂದೂಗಳ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಆದರೆ ಬ್ರಿಟಿಷ್ ಹಾಗೂ ಭಾರತೀಯ ಸಮಕಾಲೀನ ಇತಿಹಾಸಕಾರರು ಆ ಸಂಖ್ಯೆಯನ್ನು ಭೂಗತ ಚರಂಡಿಗಳಲ್ಲಿ ತುಂಬಿಸಲಾಯಿತು ಹಾಗೂ ಗಂಗಾ ಮತ್ತು ನಗರದ ವಿವಿಧ ಕಾಲುವೆಗಳಲ್ಲಿ ಸುರಿಯಲಾಯಿತೆಂದು ಬರೆದಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಂದಾಜಿನ ಪ್ರಕಾರ ಕೊಲ್ಲಲ್ಪಟ್ಟ ಅಥವಾ ಕಾಣೆಯಾದ ಹಿಂದೂಗಳ ಸಂಖ್ಯೆ 7,000 ಕ್ಕಿಂತ ಹೆಚ್ಚಾಗುತ್ತದೆ.

ಈ ಭೀಬತ್ಸ ಆಕ್ರಮಣದಿಂದ ಭೀತರಾದ ಹಿಂದೂಗಳು ಕೋಲ್ಕತ್ತಾವನ್ನು ತೊರೆಯಲಾರಂಭಿಸಿದರು. ಹೌರಾ ರೈಲು ನಿಲ್ದಾಣ, ಕಲ್ಕತ್ತಾ ತೊರೆದು ಗುಳೇ ಹೊರಟಿದ್ದ ಹಿಂದೂಗಳಿಂದ ತುಂಬಿಹೋಗಿತ್ತು. ನೂರಾರು ಹಿಂದೂಗಳು ಹೂಗ್ಲಿಯನ್ನು ದಾಟುತ್ತಿದ್ದಾಗ ಮುಸ್ಲಿಮರು ಅವರನ್ನು ಮುಳುಗಿಸಿ ಸಾಯಿಸಿದರು. ಸುಹ್ರಾವರ್ದಿ ಯೋಜಿಸಿದ್ದು ಇದನ್ನೇ. ಹಿಂದೂಗಳನ್ನು ಚಿತ್ರಹಿಂಸೆ ಕೊಟ್ಟು ಕೊಂದು ಭೀತಿಯನ್ನು ಸೃಷ್ಟಿಸಿದರೆ ಹಿಂದೂಗಳು ಕೋಲ್ಕತ್ತಾವನ್ನು ತೊರೆಯುತ್ತಾರೆ. ಆಗ ಅದು ಮುಸ್ಲಿಂ ಬಾಹುಳ್ಯದ ನಗರವಾಗುತ್ತದೆ. ಕೋಲ್ಕತ್ತಾವನ್ನು ಪಾಕಿಸ್ತಾನಕ್ಕೆ ಸೇರಿಸುವ ಮುಸ್ಲಿಂ ಲೀಗ್ ಬೇಡಿಕೆಯನ್ನು ಅದು ಹೆಚ್ಚಿಸುತ್ತದೆ! ಹಿಂದೂಗಳನ್ನು ಕಲ್ಕತ್ತಾದಿಂದ ಓಡಿಸಿದ ನಂತರ, ಹಿಂದೂ ಬಹುಸಂಖ್ಯಾತ ಜಿಲ್ಲೆಗಳಾದ ಹೌರಾ, ಹೂಗ್ಲಿ ಹಾಗೂ ಕೈಗಾರಿಕೀಕರಣಗೊಂಡ ಮತ್ತು ಬಂಗಾಳದ ಆರ್ಥಿಕತೆಯ ಚಾಲನಾ ಶಕ್ತಿ 24ಪರಗಣಗಳತ್ತ ತನ್ನ ಗಮನವನ್ನು ಹರಿಸುವುದಾಗಿ ಸುಹ್ರಾವರ್ದಿ ಯೋಜಿಸಿದ್ದ. ಈ ಜಿಲ್ಲೆಗಳಿಲ್ಲದಿದ್ದರೆ, ಪೂರ್ವ ಪಾಕಿಸ್ತಾನವು ಆರ್ಥಿಕವಾಗಿ ಪ್ರಬಲವಾಗುವುದಿಲ್ಲ ಎಂದು ಆತ ಅರಿತಿದ್ದ. ಆದ್ದರಿಂದ ಪಾಕಿಸ್ತಾನದಲ್ಲಿ ಈ ಜಿಲ್ಲೆಗಳನ್ನು ಸೇರ್ಪಡೆಗೊಳಿಸುವ ಲೀಗ್‌ನ ಬೇಡಿಕೆಯನ್ನು ಅವರು ವಿರೋಧಿಸದಂತೆ ತಡೆಯಲು ಹಿಂದೂಗಳನ್ನು ಈ ಜಿಲ್ಲೆಗಳಿಂದ ಓಡಿಸುವುದು ಅಥವಾ ಅವರನ್ನು ಭೀತಗೊಳಿಸಿ ಬಲವಂತವಾಗಿ ಒಪ್ಪುವಂತೆ ಮಾಡುವುದು ಅಗತ್ಯವಾಗಿತ್ತು. 

ಇಂತಹಾ ಘನಘೋರ ಪರಿಸ್ಥಿತಿಯಲ್ಲಿ ಪುಟ್ಟ ಹಣತೆಯೊಂದು ಬೆಳಗಿತು. ಅದು ಉಳಿದ ಹಣತೆಗಳನ್ನೂ ಬೆಳಗುತ್ತಾ ಹಿಂದೂಗಳ ಮನೆಯ ದೀಪಗಳನ್ನು ಉಳಿಸಿತು, ಬೆಳಗಿಸಿತು. ಆ ಹಣತೆಯೇ ರಾಷ್ಟ್ರೀಯವಾದಿಗಳ ಪರಿವಾರದಲ್ಲಿ ಉದಿಸಿದ್ದ, ಆಗ 33 ಹರೆಯದವರಾಗಿದ್ದ ಗೋಪಾಲ್ ಚಂದ್ರ ಮುಖೋಪಾಧ್ಯಾಯ. ನೇತಾಜಿ ಸುಭಾಸ್ ಚಂದ್ರ ಬೋಸರ ಪರಮ ಅನುಯಾಯಿಯಾಗಿದ್ದ ಆತ ಗಾಂಧಿಯ ಅಹಿಂಸಾ ಪದ್ದತಿಗೆ ತೀವ್ರ ಅಸಹ್ಯಪಟ್ಟಿದ್ದರು. ಆತ 1964 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಅಲಹಾಬಾದ್ ವಿಶ್ವವಿದ್ಯಾಲಯದ ರಾಷ್ಟ್ರೀಯವಾದಿ ಚಿಂತಕ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕ ಅನುಕೂಲ್ ಚಂದ್ರ ಮುಖೋಪಾಧ್ಯಾಯರ ಸೋದರಳಿಯ. ಮಾಂಸದ ವ್ಯಾಪಾರ ಮಾಡುತ್ತಿದ್ದ ಆತ ಗೋಪಾಲ್ ಪಾಥಾ(ಹೋತ) ಎಂದೇ ಕರೆಯಲ್ಪಡುತ್ತಿದ್ದರು. ಮಾಂಸದ ವ್ಯಾಪಾರ ಮಾಡುತ್ತಿದ್ದ ಕಾರಣ ಮುಸ್ಲಿಂ ವ್ಯಾಪಾರಿಗಳು, ಹಾಗೂ ಆಡುಗಳನ್ನು ಸಾಕುತ್ತಿದ್ದ ಮುಸ್ಲಿಮರೊಡನೆ ನಿಕಟ ಸಂಪರ್ಕವನ್ನು ಆತ ಹೊಂದಿದ್ದರು. ಸಂಕಷ್ಟಗೊಂಡಿರುವ ಜನರಿಗೆ ಸಹಾಯ ಮಾಡುವ ಸ್ವಭಾವ ಚಿಕ್ಕಂದಿನಿಂದಲೇ ಅವರಲ್ಲಿ ಬೆಳೆದು ಬಂದಿತ್ತು. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ವಿಪತ್ತುಗಳ ಸಮಯದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಯುವಕರನ್ನು ಒಳಗೊಂಡ ರಾಷ್ಟ್ರೀಯತಾವಾದಿ ಸಂಘಟನೆ "ಭಾರತ್ ಜತಿಯಾ ವಾಹಿನಿ"ಯನ್ನು ಗೋಪಾಲ್ ಅದಾಗಲೇ ಬೆಳೆಸಿದ್ದರು. ವಾಹಿನಿಯ ಬಹಳಷ್ಟು ಸದಸ್ಯರು ಕುಸ್ತಿಪಟುಗಳು.



ಆಗಸ್ಟ್ 17 ರ ರಾತ್ರಿ, ದೊಡ್ಡ ಪ್ರಮಾಣದ ಹಿಂದೂಗಳ ಹತ್ಯಾಕಾಂಡ ಮತ್ತು ಹಿಂದೂ ಮಹಿಳೆಯರ ಮೇಲಿನ ಅತ್ಯಾಚಾರದ ದುಃಖಕರ ವರದಿಗಳು ಗೋಪಾಲ್ ಕಿವಿಗೆ ಬಿದ್ದಾಗ, ಅವರು ಮುಸ್ಲಿಮರ ದಾಳಿಯನ್ನು ವಿರೋಧಿಸಲು ಹಿಂದೂ ಯುವಕರು ಹಾಗೂ ಅವರ ಭಾರತ್ ಜತಿಯಾ ವಾಹಿನಿ ಸದಸ್ಯರನ್ನು ಒಟ್ಟುಗೂಡಿಸಿದರು. ರಾತ್ರಿಯಿಡೀ, ಗೋಪಾಲ್ ಮತ್ತು ಅವರ ತಂಡ ಹಿಂದೂಗಳ ಮೇಲಿನ ಮುಸ್ಲಿಂ ದಾಳಿಯನ್ನು ತಡೆಯುವ ವಿವರವಾದ ಕ್ರಿಯಾ ಯೋಜನೆಗಳನ್ನು ರೂಪಿಸುವಲ್ಲಿ ವ್ಯಸ್ತವಾಯಿತು. ಗೋಪಾಲ್ ಅವರಿಂದ ಸ್ವರಕ್ಷಣಾ ಕಾರ್ಯತಂತ್ರವನ್ನು ಕೇಳಿದ ಅನೇಕ ಬಂಗಾಳಿಯೇತರ ಹಿಂದೂಗಳೂ ಅವರಿಗೆ ಸಹಾಯ ಮಾಡಲು ಮುಂದಾದರು. ಮುಸ್ಲಿಂ ದಾಳಿಯ ಭೀತಿಯನ್ನು ಸಹಿಸಿಕೊಂಡಿದ್ದ ಬುರ್ರಬಜಾರ್‌ನ ಮಾರ್ವಾರಿ ವ್ಯಾಪಾರಿಗಳು ಆರ್ಥಿಕ ಸಹಾಯವನ್ನು ನೀಡಿದರು. ಹಿಂದೂ ಕಮ್ಮಾರರು ತಮ್ಮ ಕಾರ್ಯಾಗಾರಗಳಲ್ಲಿ ರಾತ್ರಿಯಿಡೀ ಸಾವಿರಾರು ಕತ್ತಿಗಳು, ಈಟಿಗಳು ಮತ್ತು ಇತರ ಆಯುಧಗಳನ್ನು ತಯಾರಿಸಿದರು. ಆಗಸ್ಟ್ 18ರ ಮುಂಜಾನೆಗಾಗುವಾಗ, ಹಿಂದೂ ಯುವಕರ ಸಣ್ಣ ಸೇನೆಗಳು ಹಿಂದೂ ಪ್ರದೇಶಗಳಲ್ಲಿ ಮುಸ್ಲಿಂ ದಾಳಿಕೋರರನ್ನು ತಡೆಯಲು ಸಿದ್ಧವಾಗಿದ್ದವು. ಇದರ ಬಗ್ಗೆ ನಿರೀಕ್ಷೆಯೇ ಇರದ ಸುಹ್ರಾವರ್ದಿ ಹಾಗೂ ಮುಸ್ಲಿಂ ಲೀಗ್ ತಮ್ಮ ಅನುಚರರನ್ನು ಹಿಂದೂಗಳ ಕಡೆ ದಾಂಗುಡಿಯಿಡಲು ನಿರ್ದೇಶಿಸುವುದರಲ್ಲೇ ವ್ಯಸ್ತವಾಗಿತ್ತು. ಹತ್ಯೆಗಳ ಸುದ್ದಿ ದೆಹಲಿಗೆ ತಲುಪುತ್ತಿದ್ದು, ಅಲ್ಲಿಂದ ಇದನ್ನು ತಡೆಯುವಂತೆ ಒತ್ತಡ ಬರುತ್ತಿರುವುದರಿಂದ ಕಲ್ಕತ್ತಾವನ್ನು ಶುದ್ಧೀಕರಿಸಲು ಇನ್ನೆರಡು ದಿನಗಳು ಮಾತ್ರ ಉಳಿದಿವೆಯೆಂದು ಸುಹ್ರಾವರ್ದಿ ತನ್ನ ಬೆಂಬಲಿಗರಲ್ಲಿ ಆತುರ ವ್ಯಕ್ತಪಡಿಸುತ್ತಿದ್ದ. ವೈಸ್ರಾಯನ ಹಸ್ತಕ್ಷೇಪವನ್ನು ತಡೆದ ಸುಹ್ರಾವರ್ದಿಯ ಉದ್ದೇಶ ಎರಡು ದಿನಗೊಳಗಾಗಿ ಕೋಲ್ಕತ್ತಾ ಹಾಗೂ ಉಳಿದೆರಡು ಜಿಲ್ಲೆಗಳಿಂದ ಹಿಂದೂಗಳನ್ನು ನಿರ್ನಾಮ ಮಾಡುವುದಾಗಿತ್ತು.

ದಾಳಿಗೆ ಬಂದ ಮುಸಲರಿಗೆ ಹಿಂದೂ ಪ್ರತಿರೋಧದ ಬಿಸಿ ತಾಗಿತು. ಅವರು ಕಾಲಿಗೆ ಬುದ್ಧಿ ಹೇಳಬೇಕಾಯಿತು. "ಮುಸ್ಲಿಂ ದಾಳಿಕೋರರಿಗೆ ಎಲ್ಲೆಡೆ ಪ್ರತಿರೋಧ ಎದುರಾಯಿತು. ಹಿಂದೂಗಳ ಉಗ್ರ ಪ್ರತಿದಾಳಿಗೆ ಬೆದರಿ ಮುಸ್ಲಿಂ ಉಗ್ರರು ಪಲಾಯನ ಮಾಡಬೇಕಾಯಿತು. ಹಿಂದೂಗಳು ಈ ಹೋರಾಟವನ್ನು ಮುಸ್ಲಿಂ ಬಾಹುಳ್ಯವುಳ್ಳ ಪ್ರವೇಶಗಳಿಗೂ ಒಯ್ದರು. ಆದಾಗ್ಯೂ ಅವರು ಮುಸ್ಲಿಂ ಮಹಿಳೆ, ಮಕ್ಕಳು ಸಹಿತ ದುರ್ಬಲರ ಹಾಗೂ ಅಮಾಯಕರ ಕೂದಲನ್ನೂ ಕೊಂಕಿಸಲಿಲ್ಲ. ಗೋಪಾಲ್ ಎಂದಿಗೂ ಕೋಮುವಾದಿಯಾಗಿರಲಿಲ್ಲ. ಇಸ್ಲಾಮಿಸ್ಟ್ ಆಕ್ರಮಣಶೀಲತೆಯನ್ನು ಎದುರಿಸಲು ಹಿಂದೂ ಯುವಕರನ್ನು ಸಂಘಟಿಸುವ ಮೂಲಕ ಅವರು ಹಿಂದೂಗಳ ಆತ್ಮರಕ್ಷಣೆಯನ್ನು ಸಂಘಟಿಸಿದರು. ಅವರು ಮನೆಯಿಲ್ಲದವರಿಗೆ ಮತ್ತು ವಿಧವೆಯರಿಗೆ ಆಶ್ರಯ ನೀಡಿದರು ಮತ್ತು ಅವರನ್ನು ಕೊಲ್ಲುವುದು ಅಥವಾ ಬಲವಂತವಾಗಿ ಮತಾಂತರಗೊಳ್ಳುವುದನ್ನು ತಡೆದರು" ಎಂದು ಗೋಪಾಲ್ ಮುಖೋಪಾಧ್ಯಾಯರನ್ನು ವ್ಯಾಪಕವಾಗಿ ಸಂಶೋಧಿಸಿದ ಇತಿಹಾಸಕಾರ ಸಂದೀಪ್ ಬಂದೋಪಾಧ್ಯಾಯ ಬರೆಯುತ್ತಾರೆ.

ಮುಂದಿನ ಮೂರು ದಿನಗಳು(ಆಗಸ್ಟ್ 18-20) ಮುಸ್ಲಿಂ ಗೂಂಡಾಗಳಿಗೆ ಅವರದೇ ಭಾಷೆಯಲ್ಲಿ ಉತ್ತರಿಸಲಾಯಿತು. ಹಿಂದೂಗಳ ಮೇಲೆ ಹಲ್ಲೆ ನಡೆಸಲು ಜನಸಮೂಹವನ್ನು ಮುನ್ನಡೆಸಿದ ಎಲ್ಲಾ ಮುಸ್ಲಿಂ ಲೀಗ್ ಗೂಂಡಾಗಳು ಮತ್ತು ಹಿಂದೂಗಳ ವಿರುದ್ಧದ ಹತ್ಯಾಕಾಂಡದಲ್ಲಿ ಭಾಗವಹಿಸಿದವರನ್ನು ಗುರುತಿಸಿ, ಬೇಟೆಯಾಡಿ ಕೊಲ್ಲಲಾಯಿತು. ಮುಸ್ಲಿಮರಲ್ಲಿ ಭೀತಿ ಹರಡಿತು, ಕಲ್ಕತ್ತಾ ಇನ್ನು ಮುಂದೆ ತಮ್ಮ ಗೂಂಡಾಗಿರಿಗೆ ಸುರಕ್ಷಿತವಾಗಿಲ್ಲ ಎಂದು ಅವರಿಗೆ ಮನದಟ್ಟಾಯಿತು. ಹೀಗೆ ಆಗಸ್ಟ್ 18ರ ಬಳಿಕ ಅಲೆ ಹಿಂದೂಗಳ ಪರವಾಗಿ ತಿರುಗಿತು. ಈಗ ಮುಸ್ಲಿಮರು ಪಡೆದುಕೊಳ್ಳುವ ಹಂತಕ್ಕೆ ಮುಟ್ಟಿದ್ದರು. ಸುಹ್ರಾವರ್ದಿಯ ಜನರಿಗಾಗಲೀ ಅಥವಾ ಮುಸ್ಲಿಂ ಪರವಾದ ಪೊಲೀಸರು ಮತ್ತು ಅಧಿಕಾರಿಗಳಿಗಾಗಲೀ ಈ ಪ್ರತಿರೋಧವನ್ನು ತಡೆಯಲು ಸಾಧ್ಯವಾಗಲಿಲ್ಲ. ಹಿಂದೂ ಹೋರಾಟದ ನೇತೃತ್ವವನ್ನು ಗೋಪಾಲ್ ಮುಖೋಪಾಧ್ಯಾಯ ಮತ್ತು ಬೀಡಾನ್ ಸ್ಟ್ರೀಟ್‌ನ ಪ್ರಸಿದ್ಧ ಕುಸ್ತಿಪಟು ಬಸಂತಾ ಮುಂತಾದ ಕೆಲವರು ವಹಿಸಿದ್ದರು. ಆದರೆ ಈ ಹೋರಾಟಕ್ಕೆ ಬೇಕಾದ ಸ್ನಾಯುಬಲವನ್ನು ಒದಗಿಸಿದವರು ಬಿಹಾರ ಮತ್ತು ಸಂಯುಕ್ತ ಪ್ರಾಂತ್ಯದ ಉಪೇಕ್ಷಿತ ಬಂಧುಗಳು ಹಾಗೂ ಬಂಗಾಳಿಯೇತರ ಹಿಂದೂಗಳು. ಮಾರ್ವಾರಿ ವ್ಯಾಪಾರಿಗಳಿಂದ ಹಣಕಾಸು ಸಹಾಯವೂ ಒದಗಿಸಲ್ಪಟ್ಟು, ಹಿಂದೂಗಳ ಮೇಲಿನ ಆಕ್ರಮಣವನ್ನು ಅವರು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಮುಸ್ಲಿಂ ಗೂಂಡಾಗಳ ಮೇಲೆ ಪ್ರತಿದಾಳಿ ನಡೆಸುವ ಮೂಲಕ, ಹಿಂದೂಗಳು ಹೇಡಿಗಳು ಎಂಬ ಭ್ರಮೆಯನ್ನು ಮುಸ್ಲಿಮರು ತೊರೆಯುವಂತೆ ಮಾಡಿದರಲ್ಲದೆ, ಹಿಂದೂಗಳನ್ನು ಸರ್ವನಾಶ ಮಾಡುವ ವಿಶ್ವಾಸದಲ್ಲಿದ್ದ ಮುಸಲ್ಮಾನರೆದೆಯೊಳಗೆ ಭೀತಿಯನ್ನು ಸೃಷ್ಟಿಸಿದರು.

ಹಿಂದೂಗಳು ತಮಗೆ ಸುಲಭ ತುತ್ತಾಗುತ್ತಾರೆ ಎಂದು ಬಗೆದಿದ್ದ ಸುಹ್ರಾವರ್ದಿಗೆ ಹಿಂದೂಗಳ ಪ್ರತಿದಾಳಿ ಆಘಾತವನ್ನುಂಟುಮಾಡಿತ್ತು. ಆತ ತಲೆ ಮೇಲೆ ಕೈ ಹೊತ್ತು ಕೂತಿದ್ದ. ಹಿಂದೂಗಳನ್ನು ನಾಶ ಮಾಡಿ ಕೋಲ್ಕತ್ತಾ ಸಹಿತ ನೆರೆಯ ಜಿಲ್ಲೆಗಳನ್ನು ಪಾಕಿಸ್ತಾನಕ್ಕೆ ಸೇರಿಸುವ ಸುಹ್ರಾವರ್ದಿ ಕನಸು ನುಚ್ಚುನೂರಾಗಿತ್ತು. ಇದಕ್ಕೆ ಕಾರಣಕರ್ತರಾದ ಗೋಪಾಲ್ ಮುಖೋಪಾಧ್ಯಾಯರಿಗೆ ವಂದನೆಗಳನ್ನು ಸಲ್ಲಿಸಬೇಕು. ಆಗಸ್ಟ್ 21ಕ್ಕೆ ಬಂಗಾಳದಲ್ಲಿ ವೈಸ್ರಾಯ್ ಆಡಳಿತವನ್ನು ಹೇರಿದಾಗ, ಸುಹ್ರಾವರ್ದಿಯನ್ನು ವಜಾಗೊಳಿಸಲಾಯಿತು. ಬ್ರಿಟಿಷ್ ಮತ್ತು ಗೂರ್ಖಾ ಸೇನಾ ಪಡೆಗಳು ಕೋಲ್ಕತ್ತಾದ್ಯಂತ ನಿಯೋಜನೆಗೊಂಡು ಅಳಿದುಳಿದ ಮುಸಲ್ಮಾನ ಗೂಂಡಾಗಳೂ ಹತರಾಗಿ ಪರಿಸ್ಥಿತಿ ಹತೋಟಿಗೆ ಬಂತು. ತನ್ನ ಖುರ್ಚಿಯನ್ನು ಉಳಿಸಿಕೊಳ್ಳಲು ಮತ್ತು ಅಳಿದುಳಿದ ತನ್ನ ಅನುಚರರನ್ನು ಬದುಕಿಸಿಕೊಳ್ಳಲು ಸುಹ್ರಾವರ್ದಿ, ಮುಸ್ಲಿಂ ಲೀಗ್ ವಿದ್ಯಾರ್ಥಿ ವಿಭಾಗ ಮತ್ತು ಮುಸ್ಲಿಂ ನ್ಯಾಷನಲ್ ಗಾರ್ಡ್ ಸದಸ್ಯರಾಗಿದ್ದ ಜಿ ಜಿ ಅಜ್ಮೆರಿ ಮತ್ತು ಮುಜಿಬುರ್ ರಹಮಾನ್ (ಬಾಂಗ್ಲಾದೇಶದ ಸೃಷ್ಟಿಕರ್ತ) ಜೊತೆ ಸೇರಿ ಗೋಪಾಲ್ ಮುಖೋಪಾಧ್ಯಾಯರ ಬಳಿ ಬಂದು ಪ್ರತಿದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ. ಮುಸ್ಲಿಂ ಲೀಗ್ ತನ್ನ ಸದಸ್ಯರನ್ನು ನಿಶ್ಯಸ್ತ್ರೀಕರಣಗೊಳಿಸಬೇಕು ಹಾಗೂ ಹಿಂದೂಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎನ್ನುವ ಷರತ್ತಿನೊಂದಿಗೆ ಗೋಪಾಲ್ ಸಂಧಾನಕ್ಕೆ ಒಪ್ಪಿದರು. ಸುಹ್ರಾವರ್ದಿ ಮರುಮಾತಿಲ್ಲದೆ ಅದನ್ನು ಪಾಲಿಸಿದ. 

ಒಂದು ವೇಳೆ ಗೋಪಾಲ್ ಮುಖೋಪಾಧ್ಯಾರು ಇಲ್ಲದಿರುತ್ತಿದ್ದರೆ ...? ಆ ಸಮಯದಲ್ಲಿ ಕಲ್ಕತ್ತಾದ ಜನಸಂಖ್ಯೆಯು ಸುಮಾರು 20 ಲಕ್ಷವಾಗಿತ್ತು. ಅವರಲ್ಲಿ 12.8 ಲಕ್ಷ ಹಿಂದೂಗಳು ಮತ್ತು 6.6 ಲಕ್ಷ ಮುಸ್ಲಿಮರಿದ್ದರು. 12.8 ಲಕ್ಷ ಹಿಂದೂಗಳಲ್ಲಿ, ಸುಮಾರು 30 ಪ್ರತಿಶತದಷ್ಟು (ಅಥವಾ ಸುಮಾರು 3.84 ಲಕ್ಷ) ಬಂಗಾಳಿಯೇತರರಾಗಿದ್ದು, ಪೂರ್ವ ಪಾಕಿಸ್ತಾನಕ್ಕೆ ಕೋಲ್ಕತ್ತಾವನ್ನು ಸೇರ್ಪಡೆಗೊಳಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದರೆ ಅವರ ದನಿಗೆ ಹಾಗೂ ಅಭಿಪ್ರಾಯಕ್ಕೆ ಮನ್ನಣೆಯಿರುತ್ತಿರಲಿಲ್ಲ. ಆಗಸ್ಟ್ 17ರ ರಾತ್ರಿಯ ಹೊತ್ತಿಗೆ, ಅಂದಾಜು 7,000 ಹಿಂದೂಗಳನ್ನು ಮುಸ್ಲಿಮರು ಕೊಲೆಗೈದಿದ್ದರು. ಇದರಿಂದ ಬೆದರಿದ ಹಿಂದೂಗಳು ಬಂಗಾಳ ಬಿಟ್ಟು ತೆರಳಲು ಶುರುವಿಟ್ಟುಕೊಂಡಿದ್ದರು. ಮುಂದಿನ ಎರಡು ದಿನಗಳವರೆಗೆ ಈ ಹತ್ಯೆಗಳು ಮುಂದುವರಿದಿದ್ದರೆ, ಹೆಚ್ಚಿನ ಹಿಂದೂಗಳು ಸಾಯುತ್ತಿದ್ದರು ಮತ್ತು ನಗರದ ಹಿಂದೂ ಜನಸಂಖ್ಯೆ - ಹತ್ಯೆಗಳು ಮತ್ತು ನಿರ್ಗಮನಗಳು ಸೇರಿ - ಅಂದಾಜು 7.8 ಲಕ್ಷಕ್ಕೆ ಇಳಿಯಬಹುದಿತ್ತು. ನರಮೇಧ, ಜನಾಂಗೀಯ ಹತ್ಯೆಗಳು ಹಾಗೂ ದಾಳಿಗೊಳಗಾದ ಸಮುದಾಯದ ವಲಸೆಯನ್ನು ಅಧ್ಯಯನ ಮಾಡಿದ ಸಂಶೋಧಕರು ಪ್ರತಿ 100 ಜನರ ಹತ್ಯೆಯು ಕನಿಷ್ಠ 4,000 ಜನರ ವಲಸೆಯನ್ನು ಪ್ರಚೋದಿಸುತ್ತದೆ ಎನ್ನುತ್ತಾರೆ. ಹೀಗಾಗಿ 12,000 ಹಿಂದೂಗಳ ಹತ್ಯೆಗಳು (ಈಗಾಗಲೇ 7,000 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಇನ್ನೂ ಎರಡು ದಿನಗಳ ಕಾಲ ಹತ್ಯಾಕಾಂಡ ಮುಂದುವರೆದಿದ್ದರೆ ಇನ್ನೂ ಕನಿಷ್ಟ 5,000 ಜನರು ಕೊಲ್ಲಲ್ಪಡುತ್ತಿದ್ದರು) ಕಲ್ಕತ್ತಾದಿಂದ ಸುಮಾರು ಐದು ಲಕ್ಷ ಹಿಂದೂಗಳ ವಲಸೆಯನ್ನು ಪ್ರಚೋದಿಸುತ್ತಿತ್ತು. ಅದು ಕಲ್ಕತ್ತಾದ ಹಿಂದೂಗಳ ಜನಸಂಖ್ಯೆಯನ್ನು ಸುಮಾರು 7.8 ಲಕ್ಷಕ್ಕೆ ಇಳಿಸುತ್ತಿತ್ತು. ಇದು ಆಗಿನ ಮುಸ್ಲಿಂ ಜನಸಂಖ್ಯೆಗಿಂತ ಸ್ವಲ್ಪ ಮಾತ್ರ ಹೆಚ್ಚು! ಅಲ್ಲದೆ ಬಂಗಾಳದ ಬೇರೆ ಭಾಗಗಳಿಂದ ಮುಸ್ಲಿಮರನ್ನು ಕರೆತಂದು ಕೊಲ್ಲಲ್ಪಟ್ಟ ಹಾಗೂ ಓಡಿಹೋದ ಹಿಂದೂಗಳ ಆಸ್ತಿಯನ್ನು ಹಂಚಲು ಸುಹ್ರಾವರ್ದಿ ಮತ್ತು ಮುಸ್ಲಿಂ ಲೀಗ್ ಯೋಜಿಸಿತ್ತು. ಕಲ್ಕತ್ತಾದಲ್ಲಿ ಹಾಗೂ ನೆರೆಯ ಕೈಗಾರಿಕಾ ಮತ್ತು ಆರ್ಥಿಕವಾಗಿ ಮುಂದುವರಿದ ಜಿಲ್ಲೆಗಳಲ್ಲಿ ನೆಲೆಸಲು ಮುಸ್ಲಿಂ ಬಹುಸಂಖ್ಯಾತ ಮತ್ತು ಜನನಿಬಿಡ ಬಂಗಾಳದ ಪೂರ್ವ ಭಾಗದಿಂದ ಕನಿಷ್ಠ ನಾಲ್ಕು ಲಕ್ಷ ಮುಸ್ಲಿಮರನ್ನು ಕರೆತರುವ ಯೋಜನೆಯನ್ನು ಆತ ಮಾಡಿದ್ದ. ಹೀಗೆ ಅವೆಲ್ಲವೂ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳಾಗುತ್ತಿದ್ದವು. ಆಗ ಪಾಕಿಸ್ತಾನಕ್ಕೆ ಅವನ್ನು ಸೇರಿಸುವ ಆತನ ಯೋಜನೆ ಫಲಪ್ರದವಾಗುತ್ತಿತ್ತು. ಅಳಿದುಳಿದ ಹಿಂದೂಗಳ ಜೀವನ ನರಕಸದೃಶವಾಗುತ್ತಿತ್ತು.

ಬಂಗಾಳಿ ಹಿಂದೂಗಳು ಇಂದು ಕೋಲ್ಕತ್ತಾದಲ್ಲಿ ಜೀವಂತ ಉಳಿದಿದ್ದರೆ, ಮತ್ತು ಪಶ್ಚಿಮ ಬಂಗಾಳವು ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಕಾರಣರು ಗೋಪಾಲ್ ಮುಖೋಪಾಧ್ಯಾಯ, ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಮುಂತಾದವರು. ಅಂದು ಅವರು ಇರುತ್ತಿಲ್ಲದಿದ್ದರೆ, ಕಲ್ಕತ್ತಾ ಮತ್ತು ಇಂದಿನ ಬಂಗಾಳದ ಪ್ರಮುಖ ಭಾಗಗಳು ಪೂರ್ವ ಪಾಕಿಸ್ತಾನ ಬಳಿಕ ಬಾಂಗ್ಲಾದೇಶದ ಭಾಗವಾಗಿಬಿಡುತ್ತಿದ್ದವು. ಅಲ್ಲಿನ ಹಿಂದೂಗಳು ಮುಸಲರ ದೌರ್ಜನ್ಯದಿಂದ ಎರಡನೇ ದರ್ಜೆಯ ನಾಗರಿಕರಂತೆ ಶೋಚನೀಯವಾಗಿ ಬದುಕುತ್ತಿರುವ ಸ್ಥಿತಿ ಇವರಿಗೂ ಒದಗುತ್ತಿತ್ತು. ದುರದೃಷ್ಟವಶಾತ್, ಬಂಗಾಳಿ ಹಿಂದೂಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳಲು ಕಾರಣರಾದ ವೀರರಿಗೆ ಋಣಿಯಾಗಿರಬೇಕು ಎಂಬುದನ್ನು ಮರೆತಿದ್ದಾರೆ. ಇತಿಹಾಸವನ್ನು ಮರೆತ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರನ್ನು ತುಷ್ಠೀಕರಿಸುವ ವಿಭಜನಾ ಹಾಗೂ ವಿಧ್ವಂಸಕ ಮನಸ್ಥಿತಿಯ ಶಕ್ತಿಗಳು ರಾಜ್ಯದ ರಾಜಕೀಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಆಶಾದಾಯಕ ಬೆಳವಣಿಗೆಯೆಂದರೆ ಕಳೆದ ಹಲವಾರು ವರ್ಷಗಳಿಂದ "ಹಿಂದೂ ಸಂಹತಿ" ಆಗಸ್ಟ್ 16 ರಂದು ಗೋಪಾಲ್ ಮುಖೋಪಾಧ್ಯಾಯರ ಜೀವನ, ಬಂಗಾಳದ ಹಿಂದೂಗಳನ್ನು ಮತ್ತು ಕೋಲ್ಕತ್ತಾ ನಗರವನ್ನು ಪಾಕಿಸ್ತಾನದ ಭಾಗವಾಗದಂತೆ ಉಳಿಸುವಲ್ಲಿ ಅವರು ಮಾಡಿದ ಪ್ರಯತ್ನಗಳ ನೆನಪಿಗಾಗಿ ಬೃಹತ್ ರ್‍ಯಾಲಿಯನ್ನು ಆಯೋಜಿಸುತ್ತಿದೆ. ಕೆಲವು ಹಿಂದೂಗಳಾದರೂ ಇತಿಹಾಸವನ್ನು ನೆನಪಿಸಿಕೊಂಡು ಅದರಿಂದ ಪಾಠ ಕಲಿಯುತ್ತಿದ್ದಾರೆ.

ಇಂದಿರಾರ ಸ್ವಯಂ ವೈಭವೀಕರಣದ ಕಾಲಪಾತ್ರ

ಇಂದಿರಾರ ಸ್ವಯಂ ವೈಭವೀಕರಣದ ಕಾಲಪಾತ್ರ


ಪ್ರಪಂಚವೇ ವಿಚಿತ್ರ. ಯಾವುದೂ ಶಾಶ್ವತವಲ್ಲ ಎಂಬ ಅರಿವಿದ್ದೂ ಅಶಾಶ್ವತವಾದುದರ ಹಿಂದೆ ಬಿದ್ದೇ ಜೀವಿಸುವುದು ಜೀವಿಯ ಸಹಜ ಗುಣವಾಗಿ ಬಿಟ್ಟಿದೆ. ಒಂದಷ್ಟು ಹಣ ಮಾಡುವುದು, ಬಳಿಕ ಅಧಿಕಾರಕ್ಕಾಗಿ ಹಪಹಪಿಸುವುದು, ಅಧಿಕಾರವನ್ನು ಉಳಿಸಿಕೊಳ್ಳಲು ಒಂದಷ್ಟು ಜನರಿಗೆ ಹಣ ಹಂಚಿ ತನ್ನವರನ್ನಾಗಿಸಿಕೊಳ್ಳುವುದು, ಮತ್ತೆ ಹಣ ಮಾಡುವುದು, ಪ್ರಸಿದ್ಧಿಗಾಗಿ ಹಪಹಪಿಸುವುದು; ಇಷ್ಟು ಹೇಳಿದ ತಕ್ಷಣ ನೆನಪಾಗುವುದು ರಾಜಕಾರಣಿಗಳು. ಆದರೆ ಇದನ್ನೂ ಮೀರಿಸಿದ ದಾಹವುಳ್ಳ ಕುಟುಂಬವೊಂದು ಈ ದೇಶದ ಆಡಳಿತವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಡಿದ ಆಟಗಳು ಎಂತಹವನಿಗಾದರೂ ಹೇಸಿಗೆ ಹುಟ್ಟಿಸುವಂತಹವು. ಅದು ಅಧಿಕಾರಕ್ಕಾಗಿ, ಹಣಕ್ಕಾಗಿ, ಹೆಸರಿಗಾಗಿ ಆಡದ ಆಟವಿಲ್ಲ, ಹೂಡದ ಹೂಟವಿಲ್ಲ. ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕೆಂದು ಜೀವಂತವಿರುವಾಗಲೇ ತಮ್ಮ ಪ್ರತಿಮೆಗಳ ಸ್ಥಾಪನೆ, ವಿವಿಧ ವಿಶ್ವವಿದ್ಯಾಲಯಗಳು, ಸರಕಾರಿ ಯೋಜನೆಗಳು, ವಿಜ್ಞಾನ-ಕೈಗಾರಿಕ ಸಂಸ್ಥೆಗಳು, ವಿಮಾನ ನಿಲ್ದಾಣ, ಕ್ರೀಡಾಂಗಣ, ಪ್ರಶಸ್ತಿಗಳಿಗೆಲ್ಲಾ ತಮ್ಮ ಹೆಸರು ಇರಿಸಿ, ತಮಗೆ ತಾವೇ ಭಾರತ ರತ್ನದಂತಹಾ ಅತ್ಯುನ್ನತ ಪ್ರಶಸ್ತಿಗಳನ್ನೂ ಕೊಡಿಸಿಕೊಂಡ ಅದ್ಭುತ ಸಾಧನೆ ಆ ಕುಟುಂಬದ್ದು! 

  ಕೇಂದ್ರ ಸರಕಾರದ 12 ಯೋಜನೆಗಳು; ರಾಜ್ಯ ಸರಕಾರಗಳ 52 ಯೋಜನೆಗಳು; 98 ವಿಶ್ವವಿದ್ಯಾಲಯಗಳು; 6 ಬಂದರು & ವಿಮಾನ ನಿಲ್ದಾಣಗಳು; 66 ಪ್ರಶಸ್ತಿ ಮತ್ತು ವಿದ್ಯಾರ್ಥಿ ವೇತನಗಳು, 47 ವಿವಿಧ ಕ್ರೀಡೆ, ಕ್ರೀಡಾಂಗಣ, ಕ್ರೀಡಾ ಪುರಸ್ಕಾರಗಳು; 15 ವಿವಿಧ ಉದ್ಯಾನ, ಪಕ್ಷಿಧಾಮ, ಅಭಯಾರಣ್ಯಗಳು; 39 ಆಸ್ಪತ್ರೆಗಳು ಹಾಗೂ ವೈದ್ಯಕೀಯ ವಿದ್ಯಾಲಯಗಳು, 37 ಸಂಶೋಧನಾ ಸಂಸ್ಥೆಗಳು & ಸಮ್ಮೇಳನಗಳು, 74 ರಸ್ತೆ, ಭವನ, ಜಾಗಗಳಿಗೆ ಅದೇ ಕುಟುಂಬದ ಮೂವರ(ನೆಹರೂ, ಇಂದಿರಾ, ರಾಜೀವ್) ಹೆಸರು ಇಡಲಾಗಿದೆ. ಇವೆಲ್ಲವೂ ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಕ್ಷೇತ್ರಗಳು! ಹಣ ಜನರದ್ದು, ಹೆಸರು ಆ ಕುಟುಂಬದ್ದು! 2004-2014ರ ನಡುವೆಯಂತೂ ಈ ಹೆಸರಿಡುವ ಪ್ರಕ್ರಿಯೆಯಂತೂ ಸಭ್ಯತೆಯ ಗಡಿಯನ್ನೂ ಮೀರಿತು. ಇವೆಲ್ಲವನ್ನೂ ಮೀರಿಸಿದ, ಈಗಿನ ಪೀಳಿಗೆಗೆ ತಿಳಿದಿರದ ಅಸಭ್ಯವೂ, ದುರಾಚಾರವೂ ಆದಂತಹ ಪ್ರಕರಣವೊಂದು ಇಂದಿರಾ ಅವಧಿಯಲ್ಲಿ ನಡೆದಿತ್ತು. ಅದು ಇಂದಿರಾ ಗಾಂಧಿಯ "ಟೈಮ್ ಕ್ಯಾಪ್ಸೂಲ್" ಅಥವಾ ಸಮಯ ಸಂಪುಟ!

ಏನಿದು ಟೈಮ್ ಕ್ಯಾಪ್ಸೂಲ್? ಸಮಯ ಸಂಪುಟ ಅಂದರೆ ಮಿಶ್ರಲೋಹ, ಪಾಲಿಮರ್ ಹಾಗೂ ಪೈರೆಕ್ಸ್ ಗಳಿಂದ ಮಾಡಲ್ಪಟ್ಟ ನಿರ್ವಾತ ಕರಂಡಕ ಅಥವಾ ಸಂಪುಟ. ಯಾವುದೇ ಬಗೆಯ ಹವಾಮಾನ ಪರಿಸ್ಥಿತಿ ಅಥವಾ ವೈಪರೀತ್ಯಗಳನ್ನು ಇದು ತಾಳಿಕೊಳ್ಳಬಲ್ಲುದು. ಭೂಮಿಯ ಕೆಳಗೆ ಇದನ್ನು ಹೂತು ಹಾಕಿದರೂ ಸಾವಿರಾರು ವರ್ಷಗಳವರೆಗೆ ಹಾನಿಗೊಳಗಾಗದೇ ಉಳಿಸಿಕೊಳ್ಳಬಹುದಾದಂತಹ ಮುಚ್ಚಿದ ಪಾತ್ರೆ ಇದು. ಅಂದರೆ ಮುಂದಿನ ಜನಾಂಗಗಳಿಗೆ ಉಪಯೋಗವಾಗಬಲ್ಲಂತಹಾ ಅಥವಾ ಸಾರ್ವಕಾಲಿಕವಾಗಿಯೂ ಉಪಯೋಗಿಸಲ್ಪಡುವಂತಹಾ ಮಾಹಿತಿಯನ್ನೋ, ಸೂತ್ರವನ್ನೋ ಈ ಸಂಪುಟದಲ್ಲಿರಿಸಿ ಭೂಮಿಯಾಳದಲ್ಲಿ ಹುಗಿಯಬಹುದು. ಆ ಜನಾಂಗ ಇದನ್ನು ಗಿಟ್ಟಿಸಿಕೊಳ್ಳುವಲ್ಲಿ ತಜ್ಞವಾಗಿದ್ದರೆ ಉತ್ಖನನ ಮಾಡಿ ಈ ಮಾಹಿತಿಯನ್ನು ತನ್ನದಾಗಿಸಿಕೊಳ್ಳಬಹುದು. ಹೀಗೆ ಈ ಪಾತ್ರೆ ಒಂದು ಸಮಯದ ಚೌಕಟ್ಟಿನಿಂದ ಇನ್ನೊಂದಕ್ಕೆ ಮಾಹಿತಿಯನ್ನು ಸಾಗಿಸುವ ಸಂಪುಟದಂತೆ ಕಾರ್ಯ ನಿರ್ವಹಿಸುವ ಕಾರಣ ಅದಕ್ಕೆ ಟೈಮ್ ಕ್ಯಾಪ್ಸುಲ್ ಎಂದು ಹೆಸರು. 

ಮಾಹಿತಿಯನ್ನು ಹುದುಗಿಸಿಡುವುದೇನೂ ಹೊಸದಾದ ವಿಚಾರವಲ್ಲ. ಅದು ಪುರಾತನ ಭಾರತೀಯ ಪದ್ದತಿ. ಯಜ್ಞದ ಬಗೆಗಿನ ಮಾಹಿತಿಯನ್ನು ಯಜ್ಞಕುಂಡದಲ್ಲಿ ಹುದುಕಿಸಿಡುವುದು ಅದನ್ನು ಸಮರ್ಥನಾದವ ತೆಗೆಯುವುದು ತಂತ್ರವಿದ್ಯೆ. ವೈದ್ಯವಿದ್ಯೆ, ಜೀವ, ಭೌತ, ಖಗೋಳ.....ಬದುಕಿನ ವಿದ್ಯೆ, ಬ್ರಹ್ಮವಿದ್ಯೆಯಾದಿಯಾಗಿ ಎಲ್ಲಾ ವಿದ್ಯೆಗಳನ್ನು ಹುದುಗಿಸಿಟ್ಟ ವೇದಗಳು;  ಗಣಿತೀಯ ಸಮಸ್ಯೆಗಳನ್ನು ಬಿಡಿಸುವ ಸೂತ್ರವನ್ನು ಕಾವ್ಯಗಳಲ್ಲಿ ಕಟ್ಟಿಡುವುದು; ರಹಸ್ಯ ವಿಚಾರಗಳನ್ನು ಗೂಢವಾಗಿಸಿ ಸಂರಕ್ಷಿಸಿಡುವ ಎನ್ ಕ್ರಿಪ್ಶನ್; ಖಗೋಳ ವಿಸ್ಮಯಗಳನ್ನು, ಇತಿಹಾಸವನ್ನು ಪೌರಾಣಿಕ ಕಥೆಗಳ ಮೂಲಕ ಕಟ್ಟಿಕೊಟ್ಟು ಸಮರ್ಥನೂ ಸಂಯಮಿಯೂ ಮಾತ್ರ ತಿಳಿಯುವಂತೆ ಮಾಡಿದ ಕ್ರಮಗಳಿಗೆ ಹೋಲಿಸಿದರೆ ಈ ಪ್ರಕ್ರಿಯೆಯೇನೂ ಅಂತಹಾ ಮಹತ್ತಾದುದೇನಲ್ಲ. ಆದರೂ ಲೌಕಿಕ ಜಗತ್ತಿಗೆ ಸಹಾಯ ಮಾಡುವಂತಹಾ ತಂತ್ರವಂತೂ ಹೌದು.ಪ್ರಸಕ್ತ ಕಾಲದ ಮಹತ್ವದ ಘಟನೆಗಳು, ವ್ಯಕ್ತಿಯೊಬ್ಬನ ಸಾಧನೆಗಳು, ಇತಿಹಾಸದ ಬಗೆಗಿನ ಮಾಹಿತಿ, ಬಗೆಬಗೆಯ ಜ್ಞಾನ-ತಂತ್ರಜ್ಞಾನದ ಮಾಹಿತಿಗಳು ಹೀಗೆ ಯಾವುದೇ ಪ್ರಮುಖ ವಿಚಾರಗಳನ್ನು ಇದರಲ್ಲಿ ಸಂಗ್ರಹ ಮಾಡಿ ಹುದುಗಿಸಿಡಬಹುದು. ಹುದುಗಿಸಿಟ್ಟ ಮಾಹಿತಿಯು ಸತ್ಯವಾಗಿದ್ದರೆ ಮುಂದೆ ಉತ್ಖನನ ಮಾಡಿದವರಿಗೆ ಅದರ ಪ್ರಯೋಜನವಾಗಬಹುದು. ಆದರೆ ಸುಳ್ಳಾದರೆ...? ತಂತ್ರಜ್ಞಾನವೋ, ಸಂಶೋಧನಾತ್ಮಕ ವಿವರಗಳೋ ಸುಳ್ಳಾದರೆ ಅಷ್ಟೇನೂ ಹಾನಿಯಾಗಲಿಕ್ಕಿಲ್ಲ. ಸರಿಯಾದ ಪಥವನ್ನು, ಜ್ಞಾನವನ್ನು ಆ ಜನಾಂಗದ ಬುದ್ಧಿವಂತರು ಕಂಡುಕೊಂಡು ಅದರ ಪೊಳ್ಳುತನವನ್ನು ಬಯಲು ಮಾಡಬಹುದು. ಆದರೆ ಇತಿಹಾಸದ ಕುರಿತಾದ ಮಾಹಿತಿಯು ಸುಳ್ಳಾಗಿದ್ದರೆ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಸಾಧ್ಯತೆಯೇ ಇಲ್ಲ ಎನ್ನಬಹುದು. ಇಂದಿರಾಗಾಂಧಿ ಮಾಡಿದ್ದೂ ಅದನ್ನೇ. ಸ್ವಯಂ ವೈಭವೀಕರಣದ ಸುಳ್ಳು ಇತಿಹಾಸವನ್ನು ಇದರೊಳಗೆ ಅಡಗಿಸಿಟ್ಟದ್ದು. ಒಂದು ಒಳ್ಳೆಯ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡದ್ದು.

ಟೈಮ್ ಕ್ಯಾಪ್ಸೂಲು ಭಾರತಕ್ಕೇನೂ ಹೊಸದಲ್ಲ. ಇತ್ತೀಚೆಗೆ ಜನವರಿ 4, 2019ರಂದು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಧಿವೇಶನದ ಎರಡನೇ ದಿನದಂದು ಪಂಜಾಬ್‌ನ ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿವಿಯ ಆವರಣದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಟೈಮ್ ಕ್ಯಾಪ್ಸೂಲ್ ಒಂದನ್ನು ನೆಲದಾಳದಲ್ಲಿ ಹುದುಗಿಸಲಾಯಿತು. ಹಲವು ನೋಬೆಲ್ ಪ್ರಶಸ್ತಿ ವಿಜೇತರೂ, ಪ್ರಸಿದ್ಧ ವಿಜ್ಞಾನಿಗಳೂ ಭಾಗವಹಿಸಿದ್ದ ಸಮಾರಂಭವದು. ಸ್ಮಾರ್ಟ್ ಫೋನ್, ಸ್ಥಿರ ದೂರವಾಣಿ, ವಿಸಿಆರ್, ಸ್ಟಿರಿಯೊ ಪ್ಲೇಯರ್, ಸ್ಟಾಪ್ ವಾಚ್, ಹಾರ್ಡ್ ಡಿಸ್ಕ್, ಮೌಸ್, ಲ್ಯಾಪ್‌ಟಾಪ್, ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್, ಮದರ್ ಬೋರ್ಡ್, ಸಾಕ್ಷ್ಯಚಿತ್ರಗಳು, ಕ್ಯಾಮೆರಾ, ವಿಜ್ಞಾನ-ಪಠ್ಯ ಪುಸ್ತಕಗಳು, ರಿಯೊಸ್ಟಾಟ್, ರಿಫ್ರೆಕ್ಟರೋಸ್ಕೋಪ್ ಮತ್ತು ಡಬಲ್ ಮೈಕ್ರೋಸ್ಕೋಪ್ನಂತಹ ಉಪಕರಣಗಳು, ಮಂಗಳಯಾನ್, ಬ್ರಹ್ಮೋಸ್ ಕ್ಷಿಪಣಿ, ತೇಜಸ್ ಫೈಟರ್ ಜೆಟ್ ಗಳ ಪ್ರತಿಕೃತಿಗಳು, ವರ್ಚುವಲ್ ರಿಯಾಲಿಟಿ ಗ್ಲಾಸ್, ಇಂಡಕ್ಷನ್ ಕುಕ್‌ಟಾಪ್ ಮುಂತಾದುವುಗಳನ್ನು ಏರ್ ಪ್ಯೂರಿಫೈಯರ್ ಜೊತೆಗೆ ಇದರೊಳಗೆ ಇಡಲಾಗಿದೆ.

ಎಪ್ಪತ್ತರ ದಶಕದಲ್ಲಿ ಭೂಸುಧಾರಣೆ, ಬ್ಯಾಂಕುಗಳ ರಾಷ್ಟ್ರೀಕರಣ, ರಾಜರ ಸ್ವಂತ ವೆಚ್ಚಕ್ಕೆ ಸರಕಾರದ ಬೊಕ್ಕಸದಿಂದ ಕೊಡುವ ಹಣವನ್ನು ನಿಲ್ಲಿಸಿದ್ದು, ಅದಕ್ಕಿಂತಲೂ ಪ್ರಮುಖವಾಗಿ 1971ರ ಯುದ್ಧದಲ್ಲಿ ಪಾಕಿಸ್ತಾನ್ದ ವಿರುದ್ಧದ ಭರ್ಜರಿ ಗೆಲುವು ಜನಸಾಮಾನ್ಯರ ನಡುವೆ ಇಂದಿರಾ ಗಾಂಧಿಯ ಪ್ರಭೆಯನ್ನು ಎತ್ತರಕ್ಕೆ ಒಯ್ದಿತ್ತು. ಕಾಂಗ್ರೆಸ್ಸಿನ ಗುಲಾಮರಂತೂ ಹೋದಲ್ಲಿ ಬಂದಲ್ಲಿ "ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ" ಎನ್ನುವ ಘೋಷಣೆಯನ್ನು ಹಾಕಲು ಶುರುವಿಟ್ಟುಕೊಂಡಿದ್ದರು. ಸ್ವಪಕ್ಷೀಯರಲ್ಲದೆ ವಿರೋಧ ಪಕ್ಷದವರೂ ಇಂದಿರಾರ ಗತ್ತು ಗೈರತ್ತಿಗೆ ಭಯಭೀತರಾಗಿದ್ದರು. ಇಂತಹಾ ಸಮಯವನ್ನೇ "ಇಂದಿರಾ ಗಾಂಧಿ ಟೈಮ್ ಕ್ಯಾಪ್ಸುಲ್"ನ ಮೂಲಕ ತನ್ನ ಇತಿಹಾಸವನ್ನು ಪರಿಶುದ್ಧ ಮಾಡಿಡುವ ಕೆಲಸಕ್ಕೆ ಇಂದಿರಾ ಆಯ್ಕೆ ಮಾಡಿಕೊಂಡರು.

ಈ ಕಾರ್ಯಕ್ಕೆ ಭಾರತ ಸ್ವಾತಂತ್ರ್ಯಗೊಂಡ 25ನೇ ವರ್ಷಾಚರಣೆ ಇಂದಿರಾ ಗಾಂಧಿಗೆ ವರವಾಗಿ ಪರಿಣಮಿಸಿತು. 1973ರಲ್ಲಿ ದೇಶದ ಸ್ವಾತಂತ್ರ್ಯದ 25ನೇ ವರ್ಷಾಚರಣೆಯನ್ನು ಗುರುತಿಸಲು “ಸ್ವಾತಂತ್ರ್ಯಾ ನಂತರದ ಭಾರತ” ಎಂಬ ವಿಷಯದ ಕುರಿತು 10,000 ಪದಗಳ ಪ್ರಬಂಧವನ್ನು ಬರೆಯಲು ಕಾಂಗ್ರೆಸ್ ನಿಷ್ಠಾವಂತರ ಒಂದು ಸಣ್ಣ ಗುಂಪನ್ನು ನಿಯೋಜಿಸಿದರು ಇಂದಿರಾ. ಈ ಪ್ರಬಂಧವನ್ನು ಮೈಕ್ರೊ-ಫಿಲ್ಮ್‌ಗಳು ಮತ್ತು ಇತರ ದಾಖಲೆಗಳ ಜೊತೆಗೆ ಪೈರೆಕ್ಸ್ ಗಾಜಿನ ನಿರ್ವಾತ ಕೊಳವೆಯೊಳಗೆ ಹಾಕಿ ಮುಚ್ಚಲಾಯಿತು. ಬಳಿಕ ಅದನ್ನು ಭದ್ರವಾಗಿ ತಾಮ್ರದ ಕೊಳವೆಯೊಳಗೆ ಹಾಕಿ, ಮತ್ತೆ ಆ ತಾಮ್ರದ ಕೊಳವೆಯನ್ನು ಸ್ಟೈನ್ ಲೆಸ್ ಸ್ಟೀಲ್ ಕೊಳವೆಯೊಳಗೆ ಹಾಕಲಾಯಿತು. ಪರಿಣಾಮವಾಗಿ ಸುಮಾರು 5000 ವರ್ಷಗಳವರೆಗೆ ಹಾನಿಯಾಗದೆ ಉಳಿಯುವ ಕ್ಷಮತೆ ಅದಕ್ಕೆ ಬಂತು. ಇದನ್ನು ದೆಹಲಿಯ ಕೆಂಪು ಕೋಟೆಯ ಮುಂದೆ 1973 ರ ಆಗಸ್ಟ್ 15 ರಂದು ಬಹಳ ಆಡಂಬರದಿಂದ ಭೂಮಿಯಾಳಕ್ಕೆ ಹೂಳಲಾಯಿತು.



ಈ ಉಪಕ್ರಮವು ಶ್ಲಾಘನೀಯವೇ ಆದರೂ ಪ್ರಬಂಧದಲ್ಲಿದ್ದ ವಿಚಾರಗಳು ಹಾಗೂ ಸರಕಾರ ನಡೆದುಕೊಂಡ ರೀತಿ ಶ್ಲಾಘನೆಗೆ ಅರ್ಹವಾದುದಾಗಿರಲಿಲ್ಲ. ಅಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಪದೇ ಪದೇ ವಿನಂತಿಸಿದರೂ ಪ್ರಬಂಧದಲ್ಲಿನ ವಿವರಗಳನ್ನು ಇಂದಿರಾ ಗಾಂಧಿ ಸರಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಲಿಲ್ಲ. ಮುಂದಿನ ಪೀಳಿಗೆಗೆ ರವಾನಿಸಲಾಗುವ ಈ ವಿಚಾರಗಳನ್ನು ನಿಜವಾದ ಇತಿಹಾಸಕಾರರಿಂದ ಬರೆಯಿಸದೆ ಇಂದಿರಾಗೆ ನಿಷ್ಠರಾಗಿದ್ದ ಗುಂಪಿನಿಂದಲೇ ಏಕೆ ಬರೆಯಿಸಿದಿರಿ ಎಂಬ ಪ್ರಶ್ನೆಗೆ ಸರಕಾರದಿಂದ ಸಮರ್ಪಕ ಉತ್ತರವೇ ದೊರಕಲಿಲ್ಲ. ಇಂದಿರಾರ ವರ್ಚಸ್ಸನ್ನು ತಗ್ಗಿಸುವ ವಿಚಾರ ಸಿಗದೇ ಕುಗ್ಗಿ ಹೋಗಿದ್ದ ಪ್ರತಿಪಕ್ಷಗಳು ಇದನ್ನು ಸದನದೊಳಗೂ, ಜನಸಮುದಾಯದ ನಡುವೆಯೂ ಚರ್ಚೆಗೆ ತಂದು, ವಿವಿಧ ವೇದಿಕೆಗಳು ಹಾಗೂ ಬುದ್ಧಿ ಜೀವಿಗಳ ಮೂಲಕ ಪ್ರಶ್ನಿಸಿ ಬಗೆಬಗೆಯಲ್ಲಿ ಯತ್ನಿಸಿದರೂ ಇಂದಿರಾ ತನ್ನ ನಿಲುವಿನಿಂದ ಒಂದಿನಿತೂ ಜಗ್ಗಲಿಲ್ಲ. ಈ ವಿಷಯ ಲೋಕಸಭೆಯಲ್ಲಿ ಚರ್ಚೆಗೂ ಬಂತು. ದಿವಂಗತ ಶ್ರೀ ವಾಜಪೇಯಿ, ಶ್ಯಾಮನಂದನ್ ಮಿಶ್ರಾ ಸೇರಿದಂತೆ ಪ್ರತಿಪಕ್ಷ ನಾಯಕರು ವಿಷಯಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸರ್ಕಾರವನ್ನು ಕೋರಿದರು. 5000 ವರ್ಷಗಳ ಕಾಲ ಸಂರಕ್ಷಿಸಲ್ಪಟ್ಟು ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸಲ್ಪಡುವ ವಿಚಾರಗಳನ್ನು ರಹಸ್ಯವಾಗಿ ಇಡುವುದೇಕೆ ಎಂದು ಪ್ರಶ್ನಿಸಿದರು.  ಆದರೆ ಸರಕಾರ ಅದನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿ ನುಣುಚಿಕೊಂಡಿತು. 

ಆದರೆ 1973ರ ಡಿಸೆಂಬರ್ ವೇಳೆಗೆ ಕೆಲವು ಅಧಿಕಾರಿಗಳು ಅನಧಿಕೃತವಾಗಿ ಈ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ಸೋರಿಕೆ ಮಾಡುವುದರೊಂದಿಗೆ ಇಂದಿರಾಳ ಪ್ರಯತ್ನ ವ್ಯರ್ಥವಾಗಲು ಶುರುವಿಟ್ಟುಕೊಂಡಿತು. ಈ ಟೈಮ್ ಕ್ಯಾಪ್ಸೂಲಿಗೆ "ಕಾಲ ಪಾತ್ರ" ಎಂದು ಹೆಸರಿಡಲಾಗಿತ್ತು. ಪ್ರಬಂಧವನ್ನು ಸಿದ್ಧಪಡಿಸಿದವರು ಐ.ಸಿ.ಎಚ್.ಆರ್. ನಲ್ಲಿದ್ದ ಇಂದಿರಾ ಚೇಲಾಗಳು. ಹಸ್ತಪ್ರತಿಯನ್ನು ಸಿದ್ಧಪಡಿಸುವ ಹೊಣೆಗಾರಿಕೆಯಿದ್ದುದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಇತಿಹಾಸದ ಪ್ರಾಧ್ಯಾಪಕ ಎಸ್.ಕೃಷ್ಣಸ್ವಾಮಿ ಅವರಿಗೆ. ಅದರ ಚೌಕಟ್ಟು, ವಿಷಯಗಳು ಹೇಗಿರಬೇಕೆಂದು ಸೂಚಿಸಿದ್ದು ಭಾರತೀಯ ಇತಿಹಾಸವನ್ನು ತಿರುಚಿದವರಲ್ಲಿ ಅಗ್ರಗಣ್ಯರಾದ, ಮಾರ್ಕ್ಸ್ ವಾದಿ, ಐಸಿಎಚ್‌ಆರ್‌ನ ಸ್ಥಾಪಕ ಅಧ್ಯಕ್ಷ ಪ್ರೊ.ರಾಮ್ ಸರನ್ ಶರ್ಮಾ ಮತ್ತು ಐಸಿಎಚ್‌ಆರ್ ಸದಸ್ಯ, ನೆಹರೂ ಜೀವನಚರಿತ್ರೆಕಾರ ಡಾ.ಸರ್ವಪಲ್ಲಿ ಗೋಪಾಲ್! ಇದಲ್ಲದೆ ಹಲವಾರು ಇಂದಿರಾ ಚೇಲಾಗಳು ಇದರಲ್ಲಿ ಭಾಗಿಯಾಗಿದ್ದು ಅಂತಿಮ ನಿರೂಪಣೆಯು ಐಸಿಎಚ್ಆರ್ ನದಾಗಿತ್ತು. ವಿ.ಕೆ.ರಾಮಚಂದ್ರನ್ ಅವರ 1974 ರ "ಸಾಮಾಜಿಕ ವಿಜ್ಞಾನಿ" ಎಂಬ ಪ್ರಬಂಧ ಟೈಮ್ ಕ್ಯಾಪ್ಸೂಲಿನೊಳಗಿದ್ದ ರಹಸ್ಯ ಮಾಹಿತಿ ಹೇಗೆ ಸಾರ್ವಜನಿಕವಾಯಿತೆಂದು ವಿವರಿಸುತ್ತದೆ. ಕೆಂಪು ಕೋಟೆಯಲ್ಲಿ ನಡೆದ ಸಮಾರಂಭದ ಬಳಿಕ, ಕೃಷ್ಣಸ್ವಾಮಿ ಸಿದ್ಧಪಡಿಸಿದ ಪ್ರಬಂಧವನ್ನು ಸಾರ್ವಜನಿಕ ಸಂಗ್ರಹಾಗಾರ(ಆರ್ಕೈವ್ಸ್)ದ ಆಯುಕ್ತರೂ, ಪ್ರಸಿದ್ಧ ಇತಿಹಾಸಕಾರರೂ ಆಗಿದ್ದ ಟಿ.ಬದ್ರಿನಾಥ್ ಅವರ ಅಭಿಪ್ರಾಯ ಕೇಳಲು ಕಳುಹಿಸಿದ್ದರು. ಆತ ಇದು ಐತಿಹಾಸಿಕ ಸಂಗತಿಗಳನ್ನು ತಪ್ಪಾಗಿ ನಿರೂಪಿಸಿದೆ ಎಂದು ಬಹಿರಂಗವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡುವಾಗ ಬದ್ರಿನಾಥ್ ನಿಜ ಇತಿಹಾಸದಿಂದ ಸುಳ್ಳು ಇತಿಹಾಸದೆಡೆಗಿನ ಪಯಣ ಚಿಕ್ಕದಾಗಿರುತ್ತದೆ. ಅಲಂಕಾರಿಕವೂ ಆಗಿರುತ್ತದೆ. ಆದರದು ಸುಳ್ಳಿನ ಕಂತೆಯಾಗಿರುತ್ತದೆ ಎನ್ನುತ್ತಾ ಕಾವ್ಯಾತ್ಮಕವಾಗಿ ಇಂದಿರಾ ಟೈಮ್ ಕ್ಯಾಪ್ಸೂಲಿನ ವಿವರಗಳನ್ನು ಬಹಿರಂಗಪಡಿಸುತ್ತಾ ಸಾಗಿದರು. ಅಧಿಕೃತ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೃಷ್ಣಸ್ವಾಮಿಯನ್ನು ಎಳೆದೊಯ್ಯಲಾಯಿತಾದರೂ ಈ ವಿಚಾರ ಸಾರ್ವಜನಿಕ ಚರ್ಚೆಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 1974 ರ ಅಕ್ಟೋಬರ್‌ನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಾಲಿಟ್‌ಬ್ಯುರೊ ಸದಸ್ಯ ಪಿ.ರಾಮಮೂರ್ತಿ ಆ ಸುರುಳಿಯ ಪಠ್ಯದ ಪ್ರತಿಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವಾಗ, "ಇದನ್ನು ಓದುವಾಗ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯ ವರದಿಯಂತೆ ಭಾಸವಾಗುತ್ತಿದೆ. ಇದು ಭಾರತೀಯರಿಗೆ ಮಾಡಿದ ಅವಮಾನ" ಎಂದಿದ್ದರು. ಇಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಆ ಗುಂಪನ್ನು ಹೊರತುಪಡಿಸಿ ಬೇರೆ ಯಾರಿಗೂ ಸಿಗದ ಪಠ್ಯ ಮಾರ್ಕ್ಸ್ ವಾದಿಯೊಬ್ಬನಿಗೆ ಹೇಗೆ ಸಿಕ್ಕಿತು? ಆ ಗುಂಪಿನಲ್ಲಿ ಮಾರ್ಕ್ಸ್ ವಾದಿ ರಾಮ್ ಸರನ್ ಶರ್ಮಾ ಕೂಡಾ ಇದ್ದರು. ಅವರಿಂದಲೇ ಸಿಕ್ಕಿತೆಂದೇ ಊಹಿಸೋಣ. ಹಾಗಿದ್ದರೆ ಅಲ್ಲಿ ಮಾರ್ಕ್ಸ್ ವಾದಿಗಳಿಗೆ ಅಪ್ರಿಯವಾದದ್ದೇನೋ ಇರಬೇಕು. ಭಾರತದ ಇತಿಹಾಸವನ್ನು ತಿರುಚುವಲ್ಲಿ ಯಾವಾಗಲೂ ಕಾಂಗ್ರೆಸ್ಸಿನ ಜೊತೆಯಾಗಿರುವ ಮಾರ್ಕ್ಸ್ ವಾದಿಗಳಿಗೆ ಈ ಬಾರಿ ತಮಗೇನೂ ದಕ್ಕಿಲ್ಲ ಎಂಬ ಸಿಟ್ಟಿರಬೇಕು! ಅಥವಾ ಕಾಂಗ್ರೆಸ್-ಮಾರ್ಕ್ಸ್ ವಾದಿಗಳಿಬ್ಬರೂ ಜನರನ್ನು ಮೂರ್ಖರನ್ನಾಗಿಸಲು ಮಾಡಿದ ಕಸರತ್ತು ಈ ಪತ್ರಿಕಾಗೋಷ್ಠಿಯಾಗಿರಬಹುದು.  ಸ್ವಾತಂತ್ರ್ಯಾನಂತರದ ಭಾರತದ ಪಯಣಕ್ಕಿಂತಲೂ ನೆಹರೂ, ಇಂದಿರಾರ ಸಾಧನೆಗಳ ಸ್ವಯಂವೈಭವೀಕರಣದ ಪಠ್ಯಗಳನ್ನು ಆ ಪ್ರಬಂಧ ಹೊಂದಿದ್ದ ಮಾಹಿತಿ ಹೊರಬೀಳುತ್ತಿದ್ದಂತೆ ಅದು ಜನಸಾಮಾನ್ಯರನ್ನು ಕೆರಳಿಸಿತು.

ಮುಂದಿನ ವರ್ಷಗಳಲ್ಲಿ, ಇಂದಿರಾ ಗಾಂಧಿ ರಾಷ್ಟ್ರದ ವಿವಿಧ ಭಾಗಗಳಲ್ಲಿ ಇಂತಹ ಹಲವಾರು ಟೈಮ್  ಕ್ಯಾಪ್ಸುಲ್‌ಗಳನ್ನು ಭೂಮಿಯೊಳಕ್ಕೆ ಹುಗಿದರು. ತುರ್ತುಪರಿಸ್ಥಿತಿಯ ಸಮಯದಲ್ಲಂತೂ ಪ್ರತೀವಾರ ಒಂದೊಂದು ಟೈಮ್  ಕ್ಯಾಪ್ಸುಲ್ ನ್ನು ದೇಶದ ವಿವಿಧ ಕಡೆ ಹೂಳಲಾಯಿತು. ಅವೆಲ್ಲದರಲ್ಲಿ ಭವಿಷ್ಯದ ಇತಿಹಾಸಕಾರರನ್ನು ದಾರಿ ತಪ್ಪಿಸುವ, ನೆಹರೂ ಕುಟುಂಬವನ್ನು ವೈಭವೀಕರಿಸಿದ ವಿಚಾರಗಳೇ ತುಂಬಿದ್ದವು.

ಇಂದಿರಾ ಹೂತು ಹಾಕಿದ್ದ ವಿಕೃತಿಗೊಂಡ ಇತಿಹಾಸವನ್ನು ಪತ್ತೆಹಚ್ಚಿ ಮರುಮೌಲ್ಯಮಾಪನ ಮಾಡುವ ಭರವಸೆಯನ್ನು ಜನರಿಗಿತ್ತು ತುರ್ತು ಪರಿಸ್ಥಿತಿಯ ಬಳಿಕ ಅಧಿಕಾರಕ್ಕೆ ಬಂದ ಜನತಾ ಸರಕಾರ ಈ ಟೈಮ್ ಕ್ಯಾಪ್ಸೂಲುಗಳನ್ನು ತೆಗೆದು ಸಂಪೂರ್ಣ ನಾಶ ಮಾಡುವ ಅಥವಾ ಅವುಗಳಲ್ಲಿ ನಿಜವಾದ ಮಾಹಿತಿಯನ್ನು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಡಿಸೆಂಬರ್ 1977ರಂದು ಕೆಂಪುಕೋಟೆಯ ಮುಂದೆ ಮೂವತ್ತೆರಡು ಅಡಿ ಆಳದಲ್ಲಿ ಹೂತು ಹಾಕಿದ್ದ ಈ ತಿರುಚಿದ ಇತಿಹಾಸವುಳ್ಳ ಟೈಮ್ ಕ್ಯಾಪ್ಸೂಲನ್ನು ಜನತಾ ಸರಕಾರ ಹೊರತೆಗೆಯಿತು.

ಆದರೆ ಬಳಿಕ ಆ ಕ್ಯಾಪ್ಸೂಲ್ ಏನಾಯಿತೆಂದು ಯಾರಿಗೂ ತಿಳಿದಿಲ್ಲ. ಹೊರತೆಗೆದ ಕ್ಯಾಪ್ಸೂಲಿನಲ್ಲಿದ್ದ ವಿವರಗಳನ್ನು ಜನತಾ ಸರಕಾರವೂ ಬಿಚ್ಚಿಡಲಿಲ್ಲ. ಆ ಕ್ಯಾಪ್ಸೂಲ್ ಏನಾಯಿತೆಂದೂ ತಿಳಿಯಲಿಲ್ಲ. ಜನತಾ ಸರಕಾರ ಕೆಲವೇ ಸಮಯದಲ್ಲಿ ಬಿದ್ದು ಹೋದ ಕಾರಣ ಎಲ್ಲಾ ಟೈಮ್ ಕ್ಯಾಪ್ಸೂಲುಗಳನ್ನು ತೆಗೆಯಲೂ ಅದರಿಂದ ಸಾಧ್ಯವಾಗಲಿಲ್ಲ. ದಶಕಗಳಿಂದ ಹಲವಾರು ಕಾರ್ಯಕರ್ತರು ಮತ್ತು ಇತಿಹಾಸಕಾರರು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. 2012ರಲ್ಲಿ    ಮನುಷಿ ಪತ್ರಿಕೆಯ ಮಧುಕೀಶ್ವರ್ ಅವರು ಪ್ರಧಾನ ಮಂತ್ರಿಗಳ ಕಚೇರಿಯಿಂದ ಇಂದಿರಾ ಗಾಂಧಿ ಟೈಮ್ಸ್ ಕ್ಯಾಪ್ಸೂಲ್ ಅನ್ನು ಹೂತು ಹಾಕಿದ ನಿಖರವಾದ ದಿನಾಂಕ ಮತ್ತು ಸ್ಥಳದ ಮಾಹಿತಿ ಕೋರಿದಾಗ, ಪಿಎಂಒ ತನ್ನ ಬಳಿ ಯಾವುದೇ ವಿವರಗಳಿಲ್ಲ ಎಂದಿತು. ಆಕೆ ಕೇಂದ್ರ ಮಾಹಿತಿ ಆಯೋಗದ ಮೊರೆ ಹೊಕ್ಕಾಗ ಅದು  "ಪಿಎಂಒ ಅಥವಾ ಸರ್ಕಾರದ ಬೇರೆ ಇಲಾಖೆಗಳಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದು ನಿಜಕ್ಕೂ ಬಹಳ ವಿಚಿತ್ರ. ಟೈಮ್ ಕ್ಯಾಪ್ಸೂಲ್ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡುವುದನ್ನು ಸಂಪೂರ್ಣವಾಗಿ ನಿರಾಕರಿಸುವುದನ್ನು ಒಪ್ಪಲಿಕ್ಕಾಗದು. ಪ್ರಧಾನಿ ಕಛೇರಿಯು ಈ ಬಗ್ಗೆ ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿ ಪತ್ತೆ ಹಚ್ಚಬೇಕು" ಎಂದು ಮಧುಕೀಶ್ವರ್ ಪರವಾಗಿ ತೀರ್ಪು ನೀಡಿತು. ಪತ್ತೆ ಹಚ್ಚಲು ಏನು ಇರಲಿಲ್ಲವೆಂದಲ್ಲ. ಸರಕಾರಕ್ಕೆ ಹಳೆಯ ಚರ್ಚೆಯನ್ನು ಪುನರುಜ್ಜೀವನಗೊಳಿಸಿ ತನ್ನ ಕಾಲ ಮೇಲೆ ಚಪ್ಪಡಿ ಹಾಕಿಕೊಳ್ಳುವುದು ಬೇಕಿರಲಿಲ್ಲ. ಹೀಗೆ ಈ ಚರ್ಚೆ ಈಗ ನಿಂತಿದೆ. ಹಲವು ಶತಮಾನಗಳ ಬಳಿಕ ಯಾವುದೋ ಒಂದು ಜನಾಂಗ ಆ ಕ್ಯಾಪ್ಸೂಲುಗಳನ್ನು ಹೊರತೆಗೆಯಬಹುದು. ಆಗ ನಾವಿರುವುದಿಲ್ಲ. ಆದರೆ ನೆಹರೂ-ಇಂದಿರಾರ ಪೊಳ್ಳು ವೈಭವಗಳು ಶಾಶ್ವತವಾಗಿ ಜೀವಿಸುತ್ತವೆ!