ಪುಟಗಳು

ಮಂಗಳವಾರ, ಆಗಸ್ಟ್ 4, 2020

ಬಂಗಾಳಿ ಹಿಂದೂಗಳ ಜೀವ ಉಳಿಸಿದ ಗೋಪಾಲ

ಬಂಗಾಳಿ ಹಿಂದೂಗಳ ಜೀವ ಉಳಿಸಿದ ಗೋಪಾಲ


ಆಗಸ್ಟ್ 18 ಕೋಲ್ಕತ್ತಾಕ್ಕೆ ಮಹತ್ವದ ದಿನ. 1946ರ ಆಗಸ್ಟ್ 16ರಿಂದ ನಗರವನ್ನು ಹುರಿದು ಮುಕ್ಕಿದ ಘೋರ ಘಟನೆಗಳಿಗೆ ಮಹತ್ವದ ತಿರುವು ನೀಡಿದ ದಿನ. ಆ ಬಳಿಕ ಜರುಗಿದ ನಾಟಕೀಯ ತಿರುವಿನ ಘಟನೆಗಳು ನಗರವನ್ನು ಪಾಕಿಸ್ತಾನದ ಭಾಗವಾಗದಂತೆ ರಕ್ಷಿಸಿದವು. ಹಿಂದೂಗಳ ವಿರುದ್ಧದ ಮುಸ್ಲಿಂ ಲೀಗಿನ ಷಡ್ಯಂತ್ರವನ್ನು ವಿಫಲಗೊಳಿಸಿ, ಸಂದರ್ಭದ ಅಲೆಯನ್ನು ಮುಸ್ಲಿಂ ಲೀಗಿನ ವಿರುದ್ಧ ತಿರುಗಿಸಿ, ಹತ್ತಾರು ಸಾವಿರ ಹಿಂದೂಗಳನ್ನು ಸರ್ವನಾಶವಾಗುವುದರಿಂದ ಉಳಿಸಿದ
ಗೋಪಾಲ್ ಚಂದ್ರ ಮುಖೋಪಾಧ್ಯಾಯರೆಂಬ ವೀರ ಕಲಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆತ ಮತ್ತು ಅವರ ದೇಶಭಕ್ತ ಅನುಯಾಯಿಗಳಿಲ್ಲದಿರುತ್ತಿದ್ದರೆ ಕಲ್ಕತ್ತಾ ಮತ್ತು ಅದರ ನೆರೆಯ ಹಿಂದೂ-ಬಹುಸಂಖ್ಯಾತ ಜಿಲ್ಲೆಗಳು ಹಿಂದೂಗಳಿಂದ ಬರಿದಾಗಲ್ಪಟ್ಟು ಪೂರ್ವ ಪಾಕಿಸ್ತಾನದ ಭಾಗಗಳಾಗುತ್ತಿದ್ದವು.

ವಿಭಜನೆಯ ಪೂರ್ವದಲ್ಲಿ ಬಂಗಾಲ ಮುಸ್ಲಿಮ್ ಲೀಗ್ ನಾಯಕ ಸುಹ್ರಾವರ್ದಿಯ ಆಡಳಿತದಲ್ಲಿತ್ತು. 1940ರಲ್ಲಿ ಕಲ್ಕತ್ತಾದಲ್ಲಿ ಕೋಮುಗಲಭೆ ಸೃಷ್ಟಿಸಿ ಹಿಂದೂಗಳನ್ನು ಸರ್ವನಾಶ ಮಾಡಲು ಸುಹ್ರಾವರ್ದಿ ಸಂಚು ರೂಪಿಸಿದ್ದ. ಆದರೆ ಸುಹ್ರಾವರ್ದಿಯ ಕುಟುಂಬದ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸುತ್ತಿದ್ದ ಹರೇನ್‍ ಘೋಷನಿಗೆ ಈ ಸಂಚು ತಿಳಿದು ಆತ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಕಾರಣ ಈ ಸಂಚು ವಿಫಲವಾಯಿತು. ವಿಷಯ ತಿಳಿದ ಸುಹ್ರಾವರ್ದಿ ಹರೇನ್‍ ಘೋಷನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು, ಅವನ  ದೇಹವನ್ನು ತುಂಡು ತುಂಡು ಮಾಡಿ ಪೆಟ್ಟಿಗೆಯೊಂದರಲ್ಲಿ ಹಾಕಿ ಕಲ್ಕತ್ತಾದ ಬೀದಿಯೊಂದರಲ್ಲಿ ಬಿಸಾಕಿದ. 1942ರಲ್ಲಿ ಬಂಗಾಲ ಭೀಕರ ಕ್ಷಾಮಕ್ಕೆ ತುತ್ತಾಗಿತ್ತು. ಆಗ ಕಲ್ಕತ್ತಾದಲ್ಲಿ ಹಂಚಲು ತಂದಿದ್ದ ಪಡಿತರವನ್ನು ಸುಹ್ರಾವರ್ದಿ ತನ್ನ ವಶಕ್ಕೆ ಪಡೆದುಕೊಂಡು ಕಾಳಸಂತೆಯಲ್ಲಿ ಮಾರಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ. ಮುಖರ್ಜಿಯವರ ಆಪ್ತ ಶಿಷ್ಯರೂ, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಾಜಾ ರಾಮಮೋಹನ್ ರಾಯ್ ಮಹಾವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥರೂ ಆಗಿದ್ದ  ಅಮಲೇಂದು ಪ್ರಸಾದ್ ಮುಖೋಪಾಧ್ಯಾಯರು ಬಂಗಾಳದ ಪೂರ್ವ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿ ಸುಹ್ರಾವರ್ದಿಯ ಆಡಳಿತದಲ್ಲಿ ಹಿಂದೂಗಳ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು, ಶಂಖ ಊದುವುದು, ಸಿಂಧೂರವನ್ನು ಬಳಸುವುದು, ಮನೆಯ ಅಂಗಳದಲ್ಲಿ ತುಳಸಿ ಪೂಜೆಯನ್ನು ನಿಷೇಧಿಸಿ, ಶರಿಯತ್ ನಿಯಮಗಳನ್ನು ಜಾರಿಗೊಳಿಸಿದುದರ ಬಗೆಗೆ ಬರೆದಿದ್ದಾರೆ.  1946ರಲ್ಲಿ ಜಿನ್ನಾ "ನೇರ ಕಾರ್ಯಾಚರಣೆ" ಹೆಸರಿನಲ್ಲಿ ಗಲಭೆಗಳಿಗೆ ಕರೆ ನೀಡಿದಾಗ, ಕಲ್ಕತ್ತಾದಲ್ಲಿ ಮಾರಣಹೋಮಕ್ಕೆ ವೇದಿಕೆ ಕಲ್ಪಿಸಿದವನು ಸುಹ್ರಾವರ್ದಿಯೇ.

1946ರ ಆಗಸ್ಟ್ 16 - ರಂಜಾನ್‌ನ ಹದಿನೆಂಟನೇ ದಿನ, ಪ್ರವಾದಿ ಮುಹಮ್ಮದ್ ಬದ್ರ್ ಕದನ (ಮೆಕ್ಕಾದ ರಕ್ತಸಿಕ್ತ ವಿಜಯಕ್ಕೆ ದಾರಿ ಮಾಡಿಕೊಟ್ಟ ಅನ್ಯಜನಾಂಗಗಳ ವಿರುದ್ಧದ ಮೊದಲ ನಿರ್ಣಾಯಕ ವಿಜಯ)ವನ್ನು ಗೆದ್ದ ದಿನ. ಅದನ್ನೇ ಉದ್ದೇಶಪೂರ್ವಕವಾಗಿ ಆರಿಸಿಕೊಂಡು ತಮ್ಮ ಸಮುದಾಯದವರನ್ನು ಪ್ರಚೋದಿಸಲು ಮುಸ್ಲಿಂ ನಾಯಕರು ಸಿದ್ಧತೆ ಮಾಡಿದ್ದರು. ಜಿನ್ನಾ ಖಡ್ಗವನ್ನು ಹಿರಿದು ನಿಂತ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಕೋಲ್ಕತ್ತಾದಲ್ಲಿ ವಿತರಿಸಲಾಯಿತು. ಮುಸ್ಲಿಂ ಲೀಗ್ ಮುಖವಾಣಿ "ದಿ ಸ್ಟಾರ್ ಆಫ್ ಇಂಡಿಯಾ" ಮತ್ತು ಇತರ ಮುಸ್ಲಿಂ ಪ್ರಕಟಣೆಗಳು ತಮ್ಮ ಸಮುದಾಯಕ್ಕೆ ಆ ದಿನದ ಮಹತ್ವವನ್ನು ನೆನಪಿಸುವ ಲೇಖನಗಳನ್ನು ಬರೆದು ಪ್ರವಾದಿಯ ಹಾದಿಯಲ್ಲಿ ನಡೆದು ಕಾಫಿರರನ್ನು ನಾಶ ಮಾಡಿ ಬಂಗಾಳವನ್ನು "ಶುದ್ಧ ಭೂಮಿ"(ಪಾಕಿಸ್ತಾನ)ಯನ್ನಾಗಿ ಮಾಡುವಂತೆ ಕರೆಕೊಟ್ಟರು. ಕಲ್ಕತ್ತಾದ ಮೇಯರ್ ಆಗಿದ್ದ ಸೈಯದ್ ಮುಹಮ್ಮದ್ ಉಸ್ಮಾನ್ ಬಿಡುಗಡೆಗೊಳಿಸಿದ, "ಕಾಫಿರರೇ, ನಿಮ್ಮ ಅಂತ್ಯವು ದೂರವಿಲ್ಲ! ನಿಮ್ಮನ್ನು ಹತ್ಯೆಗೈಯಲಾಗುವುದು" ಎಂಬ ಒಕ್ಕಣೆಯುಳ್ಳ ಕರಪತ್ರವನ್ನು ವ್ಯಾಪಕವಾಗಿ ಹಂಚಲಾಗಿತ್ತು.

ವಿಪರ್ಯಾಸವೆಂದರೆ ಆಗಸ್ಟ್ 16 ಶುಕ್ರವಾರ ಕೂಡಾ ಆಗಿತ್ತು! ಮಸೀದಿಗಳಲ್ಲಿ ಉಗ್ರ ಭಾಷಣಗಳನ್ನು ಮಾಡಿ ಮುಸ್ಲಿಂರನ್ನು ಪ್ರಚೋದಿಸುವಂತೆ ಮುಸ್ಲಿಂ ಲೀಗ್ ನಾಯಕರಿಂದ ಅಪ್ಪಣೆಯೂ ದೊರಕಿತ್ತು. ಅವರು ಯಥಾ ಪ್ರಕಾರಕ್ಕಿಂತಲೂ ಹೆಚ್ಚು ಉಗ್ರವಾಗಿ ಕಾಫಿರರನ್ನು ಶುದ್ದೀಕರಿಸುವಂತೆ ತಮ್ಮವರನ್ನು ಉತ್ತೇಜಿಸಿದರು. ಕಳ್ಳುಕುಡಿದ ಮಂಗನಿಗೆ ಚೇಳು ಕುಟುಕಿದಂತಾಯಿತು! ಮುಸ್ಲಿಮರು ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಹಿಂದೂಗಳ ವ್ಯಾಪಾರ ಮಳಿಗೆಗಳು ಹಾಗೂ ಕಟ್ಟಡಗಳ ಮೇಲೆ ದಾಳಿಗೆ ಶುರುವಿಟ್ಟುಕೊಂಡರು. ನಮಾಜಿನ ಬಳಿಕ ಸುಹ್ರಾವರ್ದಿ ಮತ್ತಿತರ ಮುಸ್ಲಿಂ ಲೀಗ್ ನಾಯಕರ ಭಾಷಣ ಕೇಳಲು ಮುಸ್ಲಿಮರ ಪ್ರವಾಹವೇ ಆಕ್ಟರ್ಲೋನಿ ಸ್ಮಾರಕಕ್ಕೆ (ಈಗ ಶಾಹಿದ್ ಮಿನಾರ್) ಹರಿದು ಬಂತು. ಹಿಂದೂಗಳನ್ನು ಕೋಲ್ಕತ್ತಾದಿಂದ ಓಡಿಸಿ ಜಿನ್ನಾನ ಪಾಕಿಸ್ತಾನದ ಕನಸು ನನಸು ಮಾಡುವಂತೆ ಒತ್ತಾಯಿಸುವ ಉಗ್ರತೆ ಆ ನಾಯಕರ ಭಾಷಣಗಳಲ್ಲಿತ್ತು. ಸುಹ್ರಾವರ್ದಿ ತನ್ನ ಭಾಷಣದಲ್ಲಿ ಸೈನ್ಯ ಹಾಗೂ ಪೋಲೀಸರನ್ನು ಸುಮ್ಮನಿರಿಸುವುದಾಗಿ ಭರವಸೆ ನೀಡಿದ. ಇದರಿಂದ ಹಿಂದೂಗಳ ಮೇಲೆ ದಾಳಿ ಮಾಡಲು ಮತ್ತು ಕೊಲ್ಲಲು ಮುಸ್ಲಿಮರಿಗೆ ನೇರ ಪ್ರೋತ್ಸಾಹ ದೊರೆತಂತಾಯಿತು. ಈಗ ಅದೇ ಕಳ್ಳುಕುಡಿದ, ಚೇಳು ಕುಟುಕಿದ ಮಂಗನ ದೇಹದಲ್ಲಿ ಪ್ರೇತ ಸಂಚಾರವಾದಂತಾಯಿತು! 

ಭಾಷಣ ಕೇಳಿ ತೆರಳಿದ ಹತ್ತಾರು ಸಾವಿರ ಮುಸ್ಲಿಮರು ನಗರದ ವಿವಿಧ ಭಾಗಗಳಲ್ಲಿ ಕಬ್ಬಿಣದ ಸರಳುಗಳು, ಕತ್ತಿಗಳು ಮತ್ತಿತರ ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತರಾದರು. ಎಸ್ಪ್ಲನೇಡ್ನಲ್ಲಿ (ಮುಸ್ಲಿಂ ಲೀಗ್ ರ್‍ಯಾಲಿ ನಡೆದ ಸಮೀಪದ ಸ್ಥಳ)ಹಿಂದೂಗಳು ಮೊದಲು ಆಹುತಿಯಾದರು. ಮನೆ, ಅಂಗಡಿಗಳ ಮೇಲೆ ದಾಳಿ ಮಾಡಿ ಪುರುಷರ, ಹುಡುಗರ ಕತ್ತುಕೊಯ್ಯಲಾಯಿತು, ಕೈಕಾಲುಗಳನ್ನು ಕತ್ತರಿಸಿ ಚಿತ್ರಹಿಂಸೆ ಕೊಡಲಾಯಿತು. ಮಹಿಳೆಯರನ್ನು ಅತ್ಯಾಚಾರಗೈದು ಕೊಲ್ಲಲಾಯಿತು. ಕೆಲವರನ್ನು ಲೈಂಗಿಕ ಗುಲಾಮಗಿರಿಗೆ ಒಯ್ಯಲಾಯಿತು. ಮುಸ್ಲಿಂ ಪ್ರಾಬಲ್ಯದ ಮೆಟಿಯಾಬ್ರೂಜ್ ಪ್ರದೇಶದ ಲಿಚುಬಾಗನ್‌ನ ಕೇಸರರಮ್ ಕಾಟನ್ ಮಿಲ್ಸ್‌ನಲ್ಲಿ ಅತ್ಯಂತ ಭೀಕರ ಹತ್ಯಾಕಾಂಡ ನಡೆಯಿತು. ಅಲ್ಲಿ ಮುಸ್ಲಿಂ ಲೀಗ್ ನಾಯಕ ಸೈಯದ್ ಅಬ್ದುಲ್ಲಾ ಫಾರೂಕಿ ನೇತೃತ್ವದಲ್ಲಿ ಮುಸ್ಲಿಮರು ಮಿಲ್ಲಿನೊಳಗಿದ್ದ 600ಕ್ಕೂ ಹೆಚ್ಚು ಹಿಂದೂ ಕಾರ್ಮಿಕರ(ಹೆಚ್ಚಿನವರು ಒರಿಸ್ಸಾದವರು) ಶಿರಚ್ಛೇದ ಮಾಡಿದರು. ಮುಸ್ಲಿಮ್ ಕ್ರೂರತೆಯ ಕಥೆ ಹೇಳಲು, ಕೈಗಳು ಕತ್ತರಿಸಲ್ಪಟ್ಟಿದ್ದ ಇಬ್ಬರು ಹೇಗೋ ಬದುಕುಳಿದರು.

ಸುಹ್ರಾವರ್ದಿ ಮೊದಲೇ ಊಹಿಸಿದಂತೆ ಮೊದಲ ಎರಡು ದಿನಗಳಲ್ಲಿ ಹಿಂದೂಗಳು ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಲಿಲ್ಲ. ಮುಸ್ಲಿಮರು ದೇಶದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಸಹಾ, ಶತಮಾನಗಳಿಂದ ಮುಸ್ಲಿಮರ ಅಧೀನಕ್ಕೆ ಒಳಪಟ್ಟಿದ್ದ ಹಿಂದೂಗಳು ಮುಸ್ಲಿಮರಿಗೆ ಯಾವುದೇ ಪ್ರತಿರೋಧವನ್ನು ತೋರಿಸುವ ಧೈರ್ಯವನ್ನು ಹೊಂದಿಲ್ಲ ಎಂದು ಆತ ತನ್ನ ಸಹಚಾರಿಗಳಿಗೆ ತಿಳಿಸಿದ್ದ. 1946ರಲ್ಲಿ ಕಲ್ಕತ್ತಾದಲ್ಲಿ 64 ಶೇಕಡಾದಷ್ಟು ಹಿಂದೂಗಳು ಮತ್ತು 33 ಶೇಕಡಾ ಮುಸ್ಲಿಮರು ಇದ್ದರು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅಲ್ಲದೇ ಕಲ್ಕತ್ತಾದ ನೆರೆಯ ಜಿಲ್ಲೆಗಳಾದ ಹೌರಾ ಮತ್ತು ಹೂಗ್ಲಿಗಳು ಹಿಂದೂ ಬಹುಸಂಖ್ಯಾತವಾಗಿದ್ದವು. "ಶತಮಾನಗಳ ಪರ್ಯಂತ ಮುಸ್ಲಿಮರ ಕೈಯಿಂದ ಆಳಿಸಿಕೊಂಡಿರುವ ಹಿಂದೂಗಳ ವಂಶವಾಹಿಯಲ್ಲಿ ಮುಸ್ಲಿಮರನ್ನು ವಿರೋಧಿಸುವ ಕೆಚ್ಚು ಇಲ್ಲ. ಹಿಂದೂಗಳು ತಾವು ದುರ್ಬಲರು ಮತ್ತು ಮುಸ್ಲಿಮರು ಬಲಶಾಲಿಗಳು ಹಾಗೂ ಉಗ್ರರು ಎಂಬ ನಂಬಿಕೆಗೆ ಪಕ್ಕಾಗಿದ್ದಾರೆ" ಎಂದು ಸುಹ್ರಾವರ್ದಿ ತನ್ನ ಮುಸ್ಲಿಂ ಲೀಗ್ ಸಹಚಾರಿಗಳಿಗೆ ಹೇಳಿದ್ದ.

ಲಾಲ್‌ಬಜಾರ್‌ನಲ್ಲಿರುವ ಕಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಹೋಗಿ ಕೂತ ಸುಹ್ರಾವರ್ದಿ ಮುಸ್ಲಿಮರು ಹಿಂದೂಗಳ ಮೇಲೆ ಯಶಸ್ವಿಯಾಗಿ ಆಕ್ರಮಣ ಮಾಡುತ್ತಿರುವ ಪ್ರದೇಶಗಳಿಗೆ ಪಡೆಗಳನ್ನು ನಿಯೋಜಿಸದಂತೆ ಬ್ರಿಟಿಷ್ ಮತ್ತು ಆಂಗ್ಲೋ-ಇಂಡಿಯನ್ ಪೊಲೀಸ್ ಅಧಿಕಾರಿಗಳನ್ನು ತಡೆದ. ಇದಕ್ಕೂ ಮೊದಲೇ ಆತ ಬಿಹಾರಿ ಹಿಂದೂಗಳನ್ನು ಬದಲಾಯಿಸಿ ಅಲ್ಲಿ ಸಂಯುಕ್ತ ಪ್ರಾಂತ್ಯಗಳಲ್ಲಿದ್ದ ಪಠಾಣರು ಹಾಗೂ ಮತ್ತಿತರ ಮುಸ್ಲಿಂರನ್ನು ನೇಮಿಸಿ ನಗರ ಪೊಲೀಸ್ ಸಂಯೋಜನೆಯನ್ನೇ ಬದಲಾಯಿಸಿದ್ದ. ಆ ಪೊಲೀಸರು ಹಿಂದೂಗಳನ್ನು ಕೊಲ್ಲುವಲ್ಲಿ ಹಾಗೂ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗೈಯುವಲ್ಲಿ ಮುಸ್ಲಿಮರಿಗೆ ನೆರವಾದರು. ನಗರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮೊದಲ ಎರಡು ದಿನಗಳಲ್ಲಿ(ಆಗಸ್ಟ್ 16, 17) ಕೆಲವು ಸಾವಿರ ಹಿಂದೂಗಳು ಕೊಲ್ಲಲ್ಪಟ್ಟರು. ವಿವಿಧ ವರದಿಗಳು ಈ ಸಂಖ್ಯೆಯನ್ನು 4000-20000ದ ನಡುವೆ ಕೊಡುತ್ತವೆ. ಸುಮಾರು 3,500 ಹಿಂದೂಗಳ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಆದರೆ ಬ್ರಿಟಿಷ್ ಹಾಗೂ ಭಾರತೀಯ ಸಮಕಾಲೀನ ಇತಿಹಾಸಕಾರರು ಆ ಸಂಖ್ಯೆಯನ್ನು ಭೂಗತ ಚರಂಡಿಗಳಲ್ಲಿ ತುಂಬಿಸಲಾಯಿತು ಹಾಗೂ ಗಂಗಾ ಮತ್ತು ನಗರದ ವಿವಿಧ ಕಾಲುವೆಗಳಲ್ಲಿ ಸುರಿಯಲಾಯಿತೆಂದು ಬರೆದಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಂದಾಜಿನ ಪ್ರಕಾರ ಕೊಲ್ಲಲ್ಪಟ್ಟ ಅಥವಾ ಕಾಣೆಯಾದ ಹಿಂದೂಗಳ ಸಂಖ್ಯೆ 7,000 ಕ್ಕಿಂತ ಹೆಚ್ಚಾಗುತ್ತದೆ.

ಈ ಭೀಬತ್ಸ ಆಕ್ರಮಣದಿಂದ ಭೀತರಾದ ಹಿಂದೂಗಳು ಕೋಲ್ಕತ್ತಾವನ್ನು ತೊರೆಯಲಾರಂಭಿಸಿದರು. ಹೌರಾ ರೈಲು ನಿಲ್ದಾಣ, ಕಲ್ಕತ್ತಾ ತೊರೆದು ಗುಳೇ ಹೊರಟಿದ್ದ ಹಿಂದೂಗಳಿಂದ ತುಂಬಿಹೋಗಿತ್ತು. ನೂರಾರು ಹಿಂದೂಗಳು ಹೂಗ್ಲಿಯನ್ನು ದಾಟುತ್ತಿದ್ದಾಗ ಮುಸ್ಲಿಮರು ಅವರನ್ನು ಮುಳುಗಿಸಿ ಸಾಯಿಸಿದರು. ಸುಹ್ರಾವರ್ದಿ ಯೋಜಿಸಿದ್ದು ಇದನ್ನೇ. ಹಿಂದೂಗಳನ್ನು ಚಿತ್ರಹಿಂಸೆ ಕೊಟ್ಟು ಕೊಂದು ಭೀತಿಯನ್ನು ಸೃಷ್ಟಿಸಿದರೆ ಹಿಂದೂಗಳು ಕೋಲ್ಕತ್ತಾವನ್ನು ತೊರೆಯುತ್ತಾರೆ. ಆಗ ಅದು ಮುಸ್ಲಿಂ ಬಾಹುಳ್ಯದ ನಗರವಾಗುತ್ತದೆ. ಕೋಲ್ಕತ್ತಾವನ್ನು ಪಾಕಿಸ್ತಾನಕ್ಕೆ ಸೇರಿಸುವ ಮುಸ್ಲಿಂ ಲೀಗ್ ಬೇಡಿಕೆಯನ್ನು ಅದು ಹೆಚ್ಚಿಸುತ್ತದೆ! ಹಿಂದೂಗಳನ್ನು ಕಲ್ಕತ್ತಾದಿಂದ ಓಡಿಸಿದ ನಂತರ, ಹಿಂದೂ ಬಹುಸಂಖ್ಯಾತ ಜಿಲ್ಲೆಗಳಾದ ಹೌರಾ, ಹೂಗ್ಲಿ ಹಾಗೂ ಕೈಗಾರಿಕೀಕರಣಗೊಂಡ ಮತ್ತು ಬಂಗಾಳದ ಆರ್ಥಿಕತೆಯ ಚಾಲನಾ ಶಕ್ತಿ 24ಪರಗಣಗಳತ್ತ ತನ್ನ ಗಮನವನ್ನು ಹರಿಸುವುದಾಗಿ ಸುಹ್ರಾವರ್ದಿ ಯೋಜಿಸಿದ್ದ. ಈ ಜಿಲ್ಲೆಗಳಿಲ್ಲದಿದ್ದರೆ, ಪೂರ್ವ ಪಾಕಿಸ್ತಾನವು ಆರ್ಥಿಕವಾಗಿ ಪ್ರಬಲವಾಗುವುದಿಲ್ಲ ಎಂದು ಆತ ಅರಿತಿದ್ದ. ಆದ್ದರಿಂದ ಪಾಕಿಸ್ತಾನದಲ್ಲಿ ಈ ಜಿಲ್ಲೆಗಳನ್ನು ಸೇರ್ಪಡೆಗೊಳಿಸುವ ಲೀಗ್‌ನ ಬೇಡಿಕೆಯನ್ನು ಅವರು ವಿರೋಧಿಸದಂತೆ ತಡೆಯಲು ಹಿಂದೂಗಳನ್ನು ಈ ಜಿಲ್ಲೆಗಳಿಂದ ಓಡಿಸುವುದು ಅಥವಾ ಅವರನ್ನು ಭೀತಗೊಳಿಸಿ ಬಲವಂತವಾಗಿ ಒಪ್ಪುವಂತೆ ಮಾಡುವುದು ಅಗತ್ಯವಾಗಿತ್ತು. 

ಇಂತಹಾ ಘನಘೋರ ಪರಿಸ್ಥಿತಿಯಲ್ಲಿ ಪುಟ್ಟ ಹಣತೆಯೊಂದು ಬೆಳಗಿತು. ಅದು ಉಳಿದ ಹಣತೆಗಳನ್ನೂ ಬೆಳಗುತ್ತಾ ಹಿಂದೂಗಳ ಮನೆಯ ದೀಪಗಳನ್ನು ಉಳಿಸಿತು, ಬೆಳಗಿಸಿತು. ಆ ಹಣತೆಯೇ ರಾಷ್ಟ್ರೀಯವಾದಿಗಳ ಪರಿವಾರದಲ್ಲಿ ಉದಿಸಿದ್ದ, ಆಗ 33 ಹರೆಯದವರಾಗಿದ್ದ ಗೋಪಾಲ್ ಚಂದ್ರ ಮುಖೋಪಾಧ್ಯಾಯ. ನೇತಾಜಿ ಸುಭಾಸ್ ಚಂದ್ರ ಬೋಸರ ಪರಮ ಅನುಯಾಯಿಯಾಗಿದ್ದ ಆತ ಗಾಂಧಿಯ ಅಹಿಂಸಾ ಪದ್ದತಿಗೆ ತೀವ್ರ ಅಸಹ್ಯಪಟ್ಟಿದ್ದರು. ಆತ 1964 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಅಲಹಾಬಾದ್ ವಿಶ್ವವಿದ್ಯಾಲಯದ ರಾಷ್ಟ್ರೀಯವಾದಿ ಚಿಂತಕ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕ ಅನುಕೂಲ್ ಚಂದ್ರ ಮುಖೋಪಾಧ್ಯಾಯರ ಸೋದರಳಿಯ. ಮಾಂಸದ ವ್ಯಾಪಾರ ಮಾಡುತ್ತಿದ್ದ ಆತ ಗೋಪಾಲ್ ಪಾಥಾ(ಹೋತ) ಎಂದೇ ಕರೆಯಲ್ಪಡುತ್ತಿದ್ದರು. ಮಾಂಸದ ವ್ಯಾಪಾರ ಮಾಡುತ್ತಿದ್ದ ಕಾರಣ ಮುಸ್ಲಿಂ ವ್ಯಾಪಾರಿಗಳು, ಹಾಗೂ ಆಡುಗಳನ್ನು ಸಾಕುತ್ತಿದ್ದ ಮುಸ್ಲಿಮರೊಡನೆ ನಿಕಟ ಸಂಪರ್ಕವನ್ನು ಆತ ಹೊಂದಿದ್ದರು. ಸಂಕಷ್ಟಗೊಂಡಿರುವ ಜನರಿಗೆ ಸಹಾಯ ಮಾಡುವ ಸ್ವಭಾವ ಚಿಕ್ಕಂದಿನಿಂದಲೇ ಅವರಲ್ಲಿ ಬೆಳೆದು ಬಂದಿತ್ತು. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ವಿಪತ್ತುಗಳ ಸಮಯದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಯುವಕರನ್ನು ಒಳಗೊಂಡ ರಾಷ್ಟ್ರೀಯತಾವಾದಿ ಸಂಘಟನೆ "ಭಾರತ್ ಜತಿಯಾ ವಾಹಿನಿ"ಯನ್ನು ಗೋಪಾಲ್ ಅದಾಗಲೇ ಬೆಳೆಸಿದ್ದರು. ವಾಹಿನಿಯ ಬಹಳಷ್ಟು ಸದಸ್ಯರು ಕುಸ್ತಿಪಟುಗಳು.ಆಗಸ್ಟ್ 17 ರ ರಾತ್ರಿ, ದೊಡ್ಡ ಪ್ರಮಾಣದ ಹಿಂದೂಗಳ ಹತ್ಯಾಕಾಂಡ ಮತ್ತು ಹಿಂದೂ ಮಹಿಳೆಯರ ಮೇಲಿನ ಅತ್ಯಾಚಾರದ ದುಃಖಕರ ವರದಿಗಳು ಗೋಪಾಲ್ ಕಿವಿಗೆ ಬಿದ್ದಾಗ, ಅವರು ಮುಸ್ಲಿಮರ ದಾಳಿಯನ್ನು ವಿರೋಧಿಸಲು ಹಿಂದೂ ಯುವಕರು ಹಾಗೂ ಅವರ ಭಾರತ್ ಜತಿಯಾ ವಾಹಿನಿ ಸದಸ್ಯರನ್ನು ಒಟ್ಟುಗೂಡಿಸಿದರು. ರಾತ್ರಿಯಿಡೀ, ಗೋಪಾಲ್ ಮತ್ತು ಅವರ ತಂಡ ಹಿಂದೂಗಳ ಮೇಲಿನ ಮುಸ್ಲಿಂ ದಾಳಿಯನ್ನು ತಡೆಯುವ ವಿವರವಾದ ಕ್ರಿಯಾ ಯೋಜನೆಗಳನ್ನು ರೂಪಿಸುವಲ್ಲಿ ವ್ಯಸ್ತವಾಯಿತು. ಗೋಪಾಲ್ ಅವರಿಂದ ಸ್ವರಕ್ಷಣಾ ಕಾರ್ಯತಂತ್ರವನ್ನು ಕೇಳಿದ ಅನೇಕ ಬಂಗಾಳಿಯೇತರ ಹಿಂದೂಗಳೂ ಅವರಿಗೆ ಸಹಾಯ ಮಾಡಲು ಮುಂದಾದರು. ಮುಸ್ಲಿಂ ದಾಳಿಯ ಭೀತಿಯನ್ನು ಸಹಿಸಿಕೊಂಡಿದ್ದ ಬುರ್ರಬಜಾರ್‌ನ ಮಾರ್ವಾರಿ ವ್ಯಾಪಾರಿಗಳು ಆರ್ಥಿಕ ಸಹಾಯವನ್ನು ನೀಡಿದರು. ಹಿಂದೂ ಕಮ್ಮಾರರು ತಮ್ಮ ಕಾರ್ಯಾಗಾರಗಳಲ್ಲಿ ರಾತ್ರಿಯಿಡೀ ಸಾವಿರಾರು ಕತ್ತಿಗಳು, ಈಟಿಗಳು ಮತ್ತು ಇತರ ಆಯುಧಗಳನ್ನು ತಯಾರಿಸಿದರು. ಆಗಸ್ಟ್ 18ರ ಮುಂಜಾನೆಗಾಗುವಾಗ, ಹಿಂದೂ ಯುವಕರ ಸಣ್ಣ ಸೇನೆಗಳು ಹಿಂದೂ ಪ್ರದೇಶಗಳಲ್ಲಿ ಮುಸ್ಲಿಂ ದಾಳಿಕೋರರನ್ನು ತಡೆಯಲು ಸಿದ್ಧವಾಗಿದ್ದವು. ಇದರ ಬಗ್ಗೆ ನಿರೀಕ್ಷೆಯೇ ಇರದ ಸುಹ್ರಾವರ್ದಿ ಹಾಗೂ ಮುಸ್ಲಿಂ ಲೀಗ್ ತಮ್ಮ ಅನುಚರರನ್ನು ಹಿಂದೂಗಳ ಕಡೆ ದಾಂಗುಡಿಯಿಡಲು ನಿರ್ದೇಶಿಸುವುದರಲ್ಲೇ ವ್ಯಸ್ತವಾಗಿತ್ತು. ಹತ್ಯೆಗಳ ಸುದ್ದಿ ದೆಹಲಿಗೆ ತಲುಪುತ್ತಿದ್ದು, ಅಲ್ಲಿಂದ ಇದನ್ನು ತಡೆಯುವಂತೆ ಒತ್ತಡ ಬರುತ್ತಿರುವುದರಿಂದ ಕಲ್ಕತ್ತಾವನ್ನು ಶುದ್ಧೀಕರಿಸಲು ಇನ್ನೆರಡು ದಿನಗಳು ಮಾತ್ರ ಉಳಿದಿವೆಯೆಂದು ಸುಹ್ರಾವರ್ದಿ ತನ್ನ ಬೆಂಬಲಿಗರಲ್ಲಿ ಆತುರ ವ್ಯಕ್ತಪಡಿಸುತ್ತಿದ್ದ. ವೈಸ್ರಾಯನ ಹಸ್ತಕ್ಷೇಪವನ್ನು ತಡೆದ ಸುಹ್ರಾವರ್ದಿಯ ಉದ್ದೇಶ ಎರಡು ದಿನಗೊಳಗಾಗಿ ಕೋಲ್ಕತ್ತಾ ಹಾಗೂ ಉಳಿದೆರಡು ಜಿಲ್ಲೆಗಳಿಂದ ಹಿಂದೂಗಳನ್ನು ನಿರ್ನಾಮ ಮಾಡುವುದಾಗಿತ್ತು.

ದಾಳಿಗೆ ಬಂದ ಮುಸಲರಿಗೆ ಹಿಂದೂ ಪ್ರತಿರೋಧದ ಬಿಸಿ ತಾಗಿತು. ಅವರು ಕಾಲಿಗೆ ಬುದ್ಧಿ ಹೇಳಬೇಕಾಯಿತು. "ಮುಸ್ಲಿಂ ದಾಳಿಕೋರರಿಗೆ ಎಲ್ಲೆಡೆ ಪ್ರತಿರೋಧ ಎದುರಾಯಿತು. ಹಿಂದೂಗಳ ಉಗ್ರ ಪ್ರತಿದಾಳಿಗೆ ಬೆದರಿ ಮುಸ್ಲಿಂ ಉಗ್ರರು ಪಲಾಯನ ಮಾಡಬೇಕಾಯಿತು. ಹಿಂದೂಗಳು ಈ ಹೋರಾಟವನ್ನು ಮುಸ್ಲಿಂ ಬಾಹುಳ್ಯವುಳ್ಳ ಪ್ರವೇಶಗಳಿಗೂ ಒಯ್ದರು. ಆದಾಗ್ಯೂ ಅವರು ಮುಸ್ಲಿಂ ಮಹಿಳೆ, ಮಕ್ಕಳು ಸಹಿತ ದುರ್ಬಲರ ಹಾಗೂ ಅಮಾಯಕರ ಕೂದಲನ್ನೂ ಕೊಂಕಿಸಲಿಲ್ಲ. ಗೋಪಾಲ್ ಎಂದಿಗೂ ಕೋಮುವಾದಿಯಾಗಿರಲಿಲ್ಲ. ಇಸ್ಲಾಮಿಸ್ಟ್ ಆಕ್ರಮಣಶೀಲತೆಯನ್ನು ಎದುರಿಸಲು ಹಿಂದೂ ಯುವಕರನ್ನು ಸಂಘಟಿಸುವ ಮೂಲಕ ಅವರು ಹಿಂದೂಗಳ ಆತ್ಮರಕ್ಷಣೆಯನ್ನು ಸಂಘಟಿಸಿದರು. ಅವರು ಮನೆಯಿಲ್ಲದವರಿಗೆ ಮತ್ತು ವಿಧವೆಯರಿಗೆ ಆಶ್ರಯ ನೀಡಿದರು ಮತ್ತು ಅವರನ್ನು ಕೊಲ್ಲುವುದು ಅಥವಾ ಬಲವಂತವಾಗಿ ಮತಾಂತರಗೊಳ್ಳುವುದನ್ನು ತಡೆದರು" ಎಂದು ಗೋಪಾಲ್ ಮುಖೋಪಾಧ್ಯಾಯರನ್ನು ವ್ಯಾಪಕವಾಗಿ ಸಂಶೋಧಿಸಿದ ಇತಿಹಾಸಕಾರ ಸಂದೀಪ್ ಬಂದೋಪಾಧ್ಯಾಯ ಬರೆಯುತ್ತಾರೆ.

ಮುಂದಿನ ಮೂರು ದಿನಗಳು(ಆಗಸ್ಟ್ 18-20) ಮುಸ್ಲಿಂ ಗೂಂಡಾಗಳಿಗೆ ಅವರದೇ ಭಾಷೆಯಲ್ಲಿ ಉತ್ತರಿಸಲಾಯಿತು. ಹಿಂದೂಗಳ ಮೇಲೆ ಹಲ್ಲೆ ನಡೆಸಲು ಜನಸಮೂಹವನ್ನು ಮುನ್ನಡೆಸಿದ ಎಲ್ಲಾ ಮುಸ್ಲಿಂ ಲೀಗ್ ಗೂಂಡಾಗಳು ಮತ್ತು ಹಿಂದೂಗಳ ವಿರುದ್ಧದ ಹತ್ಯಾಕಾಂಡದಲ್ಲಿ ಭಾಗವಹಿಸಿದವರನ್ನು ಗುರುತಿಸಿ, ಬೇಟೆಯಾಡಿ ಕೊಲ್ಲಲಾಯಿತು. ಮುಸ್ಲಿಮರಲ್ಲಿ ಭೀತಿ ಹರಡಿತು, ಕಲ್ಕತ್ತಾ ಇನ್ನು ಮುಂದೆ ತಮ್ಮ ಗೂಂಡಾಗಿರಿಗೆ ಸುರಕ್ಷಿತವಾಗಿಲ್ಲ ಎಂದು ಅವರಿಗೆ ಮನದಟ್ಟಾಯಿತು. ಹೀಗೆ ಆಗಸ್ಟ್ 18ರ ಬಳಿಕ ಅಲೆ ಹಿಂದೂಗಳ ಪರವಾಗಿ ತಿರುಗಿತು. ಈಗ ಮುಸ್ಲಿಮರು ಪಡೆದುಕೊಳ್ಳುವ ಹಂತಕ್ಕೆ ಮುಟ್ಟಿದ್ದರು. ಸುಹ್ರಾವರ್ದಿಯ ಜನರಿಗಾಗಲೀ ಅಥವಾ ಮುಸ್ಲಿಂ ಪರವಾದ ಪೊಲೀಸರು ಮತ್ತು ಅಧಿಕಾರಿಗಳಿಗಾಗಲೀ ಈ ಪ್ರತಿರೋಧವನ್ನು ತಡೆಯಲು ಸಾಧ್ಯವಾಗಲಿಲ್ಲ. ಹಿಂದೂ ಹೋರಾಟದ ನೇತೃತ್ವವನ್ನು ಗೋಪಾಲ್ ಮುಖೋಪಾಧ್ಯಾಯ ಮತ್ತು ಬೀಡಾನ್ ಸ್ಟ್ರೀಟ್‌ನ ಪ್ರಸಿದ್ಧ ಕುಸ್ತಿಪಟು ಬಸಂತಾ ಮುಂತಾದ ಕೆಲವರು ವಹಿಸಿದ್ದರು. ಆದರೆ ಈ ಹೋರಾಟಕ್ಕೆ ಬೇಕಾದ ಸ್ನಾಯುಬಲವನ್ನು ಒದಗಿಸಿದವರು ಬಿಹಾರ ಮತ್ತು ಸಂಯುಕ್ತ ಪ್ರಾಂತ್ಯದ ಉಪೇಕ್ಷಿತ ಬಂಧುಗಳು ಹಾಗೂ ಬಂಗಾಳಿಯೇತರ ಹಿಂದೂಗಳು. ಮಾರ್ವಾರಿ ವ್ಯಾಪಾರಿಗಳಿಂದ ಹಣಕಾಸು ಸಹಾಯವೂ ಒದಗಿಸಲ್ಪಟ್ಟು, ಹಿಂದೂಗಳ ಮೇಲಿನ ಆಕ್ರಮಣವನ್ನು ಅವರು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಮುಸ್ಲಿಂ ಗೂಂಡಾಗಳ ಮೇಲೆ ಪ್ರತಿದಾಳಿ ನಡೆಸುವ ಮೂಲಕ, ಹಿಂದೂಗಳು ಹೇಡಿಗಳು ಎಂಬ ಭ್ರಮೆಯನ್ನು ಮುಸ್ಲಿಮರು ತೊರೆಯುವಂತೆ ಮಾಡಿದರಲ್ಲದೆ, ಹಿಂದೂಗಳನ್ನು ಸರ್ವನಾಶ ಮಾಡುವ ವಿಶ್ವಾಸದಲ್ಲಿದ್ದ ಮುಸಲ್ಮಾನರೆದೆಯೊಳಗೆ ಭೀತಿಯನ್ನು ಸೃಷ್ಟಿಸಿದರು.

ಹಿಂದೂಗಳು ತಮಗೆ ಸುಲಭ ತುತ್ತಾಗುತ್ತಾರೆ ಎಂದು ಬಗೆದಿದ್ದ ಸುಹ್ರಾವರ್ದಿಗೆ ಹಿಂದೂಗಳ ಪ್ರತಿದಾಳಿ ಆಘಾತವನ್ನುಂಟುಮಾಡಿತ್ತು. ಆತ ತಲೆ ಮೇಲೆ ಕೈ ಹೊತ್ತು ಕೂತಿದ್ದ. ಹಿಂದೂಗಳನ್ನು ನಾಶ ಮಾಡಿ ಕೋಲ್ಕತ್ತಾ ಸಹಿತ ನೆರೆಯ ಜಿಲ್ಲೆಗಳನ್ನು ಪಾಕಿಸ್ತಾನಕ್ಕೆ ಸೇರಿಸುವ ಸುಹ್ರಾವರ್ದಿ ಕನಸು ನುಚ್ಚುನೂರಾಗಿತ್ತು. ಇದಕ್ಕೆ ಕಾರಣಕರ್ತರಾದ ಗೋಪಾಲ್ ಮುಖೋಪಾಧ್ಯಾಯರಿಗೆ ವಂದನೆಗಳನ್ನು ಸಲ್ಲಿಸಬೇಕು. ಆಗಸ್ಟ್ 21ಕ್ಕೆ ಬಂಗಾಳದಲ್ಲಿ ವೈಸ್ರಾಯ್ ಆಡಳಿತವನ್ನು ಹೇರಿದಾಗ, ಸುಹ್ರಾವರ್ದಿಯನ್ನು ವಜಾಗೊಳಿಸಲಾಯಿತು. ಬ್ರಿಟಿಷ್ ಮತ್ತು ಗೂರ್ಖಾ ಸೇನಾ ಪಡೆಗಳು ಕೋಲ್ಕತ್ತಾದ್ಯಂತ ನಿಯೋಜನೆಗೊಂಡು ಅಳಿದುಳಿದ ಮುಸಲ್ಮಾನ ಗೂಂಡಾಗಳೂ ಹತರಾಗಿ ಪರಿಸ್ಥಿತಿ ಹತೋಟಿಗೆ ಬಂತು. ತನ್ನ ಖುರ್ಚಿಯನ್ನು ಉಳಿಸಿಕೊಳ್ಳಲು ಮತ್ತು ಅಳಿದುಳಿದ ತನ್ನ ಅನುಚರರನ್ನು ಬದುಕಿಸಿಕೊಳ್ಳಲು ಸುಹ್ರಾವರ್ದಿ, ಮುಸ್ಲಿಂ ಲೀಗ್ ವಿದ್ಯಾರ್ಥಿ ವಿಭಾಗ ಮತ್ತು ಮುಸ್ಲಿಂ ನ್ಯಾಷನಲ್ ಗಾರ್ಡ್ ಸದಸ್ಯರಾಗಿದ್ದ ಜಿ ಜಿ ಅಜ್ಮೆರಿ ಮತ್ತು ಮುಜಿಬುರ್ ರಹಮಾನ್ (ಬಾಂಗ್ಲಾದೇಶದ ಸೃಷ್ಟಿಕರ್ತ) ಜೊತೆ ಸೇರಿ ಗೋಪಾಲ್ ಮುಖೋಪಾಧ್ಯಾಯರ ಬಳಿ ಬಂದು ಪ್ರತಿದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ. ಮುಸ್ಲಿಂ ಲೀಗ್ ತನ್ನ ಸದಸ್ಯರನ್ನು ನಿಶ್ಯಸ್ತ್ರೀಕರಣಗೊಳಿಸಬೇಕು ಹಾಗೂ ಹಿಂದೂಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎನ್ನುವ ಷರತ್ತಿನೊಂದಿಗೆ ಗೋಪಾಲ್ ಸಂಧಾನಕ್ಕೆ ಒಪ್ಪಿದರು. ಸುಹ್ರಾವರ್ದಿ ಮರುಮಾತಿಲ್ಲದೆ ಅದನ್ನು ಪಾಲಿಸಿದ. 

ಒಂದು ವೇಳೆ ಗೋಪಾಲ್ ಮುಖೋಪಾಧ್ಯಾರು ಇಲ್ಲದಿರುತ್ತಿದ್ದರೆ ...? ಆ ಸಮಯದಲ್ಲಿ ಕಲ್ಕತ್ತಾದ ಜನಸಂಖ್ಯೆಯು ಸುಮಾರು 20 ಲಕ್ಷವಾಗಿತ್ತು. ಅವರಲ್ಲಿ 12.8 ಲಕ್ಷ ಹಿಂದೂಗಳು ಮತ್ತು 6.6 ಲಕ್ಷ ಮುಸ್ಲಿಮರಿದ್ದರು. 12.8 ಲಕ್ಷ ಹಿಂದೂಗಳಲ್ಲಿ, ಸುಮಾರು 30 ಪ್ರತಿಶತದಷ್ಟು (ಅಥವಾ ಸುಮಾರು 3.84 ಲಕ್ಷ) ಬಂಗಾಳಿಯೇತರರಾಗಿದ್ದು, ಪೂರ್ವ ಪಾಕಿಸ್ತಾನಕ್ಕೆ ಕೋಲ್ಕತ್ತಾವನ್ನು ಸೇರ್ಪಡೆಗೊಳಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದರೆ ಅವರ ದನಿಗೆ ಹಾಗೂ ಅಭಿಪ್ರಾಯಕ್ಕೆ ಮನ್ನಣೆಯಿರುತ್ತಿರಲಿಲ್ಲ. ಆಗಸ್ಟ್ 17ರ ರಾತ್ರಿಯ ಹೊತ್ತಿಗೆ, ಅಂದಾಜು 7,000 ಹಿಂದೂಗಳನ್ನು ಮುಸ್ಲಿಮರು ಕೊಲೆಗೈದಿದ್ದರು. ಇದರಿಂದ ಬೆದರಿದ ಹಿಂದೂಗಳು ಬಂಗಾಳ ಬಿಟ್ಟು ತೆರಳಲು ಶುರುವಿಟ್ಟುಕೊಂಡಿದ್ದರು. ಮುಂದಿನ ಎರಡು ದಿನಗಳವರೆಗೆ ಈ ಹತ್ಯೆಗಳು ಮುಂದುವರಿದಿದ್ದರೆ, ಹೆಚ್ಚಿನ ಹಿಂದೂಗಳು ಸಾಯುತ್ತಿದ್ದರು ಮತ್ತು ನಗರದ ಹಿಂದೂ ಜನಸಂಖ್ಯೆ - ಹತ್ಯೆಗಳು ಮತ್ತು ನಿರ್ಗಮನಗಳು ಸೇರಿ - ಅಂದಾಜು 7.8 ಲಕ್ಷಕ್ಕೆ ಇಳಿಯಬಹುದಿತ್ತು. ನರಮೇಧ, ಜನಾಂಗೀಯ ಹತ್ಯೆಗಳು ಹಾಗೂ ದಾಳಿಗೊಳಗಾದ ಸಮುದಾಯದ ವಲಸೆಯನ್ನು ಅಧ್ಯಯನ ಮಾಡಿದ ಸಂಶೋಧಕರು ಪ್ರತಿ 100 ಜನರ ಹತ್ಯೆಯು ಕನಿಷ್ಠ 4,000 ಜನರ ವಲಸೆಯನ್ನು ಪ್ರಚೋದಿಸುತ್ತದೆ ಎನ್ನುತ್ತಾರೆ. ಹೀಗಾಗಿ 12,000 ಹಿಂದೂಗಳ ಹತ್ಯೆಗಳು (ಈಗಾಗಲೇ 7,000 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಇನ್ನೂ ಎರಡು ದಿನಗಳ ಕಾಲ ಹತ್ಯಾಕಾಂಡ ಮುಂದುವರೆದಿದ್ದರೆ ಇನ್ನೂ ಕನಿಷ್ಟ 5,000 ಜನರು ಕೊಲ್ಲಲ್ಪಡುತ್ತಿದ್ದರು) ಕಲ್ಕತ್ತಾದಿಂದ ಸುಮಾರು ಐದು ಲಕ್ಷ ಹಿಂದೂಗಳ ವಲಸೆಯನ್ನು ಪ್ರಚೋದಿಸುತ್ತಿತ್ತು. ಅದು ಕಲ್ಕತ್ತಾದ ಹಿಂದೂಗಳ ಜನಸಂಖ್ಯೆಯನ್ನು ಸುಮಾರು 7.8 ಲಕ್ಷಕ್ಕೆ ಇಳಿಸುತ್ತಿತ್ತು. ಇದು ಆಗಿನ ಮುಸ್ಲಿಂ ಜನಸಂಖ್ಯೆಗಿಂತ ಸ್ವಲ್ಪ ಮಾತ್ರ ಹೆಚ್ಚು! ಅಲ್ಲದೆ ಬಂಗಾಳದ ಬೇರೆ ಭಾಗಗಳಿಂದ ಮುಸ್ಲಿಮರನ್ನು ಕರೆತಂದು ಕೊಲ್ಲಲ್ಪಟ್ಟ ಹಾಗೂ ಓಡಿಹೋದ ಹಿಂದೂಗಳ ಆಸ್ತಿಯನ್ನು ಹಂಚಲು ಸುಹ್ರಾವರ್ದಿ ಮತ್ತು ಮುಸ್ಲಿಂ ಲೀಗ್ ಯೋಜಿಸಿತ್ತು. ಕಲ್ಕತ್ತಾದಲ್ಲಿ ಹಾಗೂ ನೆರೆಯ ಕೈಗಾರಿಕಾ ಮತ್ತು ಆರ್ಥಿಕವಾಗಿ ಮುಂದುವರಿದ ಜಿಲ್ಲೆಗಳಲ್ಲಿ ನೆಲೆಸಲು ಮುಸ್ಲಿಂ ಬಹುಸಂಖ್ಯಾತ ಮತ್ತು ಜನನಿಬಿಡ ಬಂಗಾಳದ ಪೂರ್ವ ಭಾಗದಿಂದ ಕನಿಷ್ಠ ನಾಲ್ಕು ಲಕ್ಷ ಮುಸ್ಲಿಮರನ್ನು ಕರೆತರುವ ಯೋಜನೆಯನ್ನು ಆತ ಮಾಡಿದ್ದ. ಹೀಗೆ ಅವೆಲ್ಲವೂ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳಾಗುತ್ತಿದ್ದವು. ಆಗ ಪಾಕಿಸ್ತಾನಕ್ಕೆ ಅವನ್ನು ಸೇರಿಸುವ ಆತನ ಯೋಜನೆ ಫಲಪ್ರದವಾಗುತ್ತಿತ್ತು. ಅಳಿದುಳಿದ ಹಿಂದೂಗಳ ಜೀವನ ನರಕಸದೃಶವಾಗುತ್ತಿತ್ತು.

ಬಂಗಾಳಿ ಹಿಂದೂಗಳು ಇಂದು ಕೋಲ್ಕತ್ತಾದಲ್ಲಿ ಜೀವಂತ ಉಳಿದಿದ್ದರೆ, ಮತ್ತು ಪಶ್ಚಿಮ ಬಂಗಾಳವು ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಕಾರಣರು ಗೋಪಾಲ್ ಮುಖೋಪಾಧ್ಯಾಯ, ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಮುಂತಾದವರು. ಅಂದು ಅವರು ಇರುತ್ತಿಲ್ಲದಿದ್ದರೆ, ಕಲ್ಕತ್ತಾ ಮತ್ತು ಇಂದಿನ ಬಂಗಾಳದ ಪ್ರಮುಖ ಭಾಗಗಳು ಪೂರ್ವ ಪಾಕಿಸ್ತಾನ ಬಳಿಕ ಬಾಂಗ್ಲಾದೇಶದ ಭಾಗವಾಗಿಬಿಡುತ್ತಿದ್ದವು. ಅಲ್ಲಿನ ಹಿಂದೂಗಳು ಮುಸಲರ ದೌರ್ಜನ್ಯದಿಂದ ಎರಡನೇ ದರ್ಜೆಯ ನಾಗರಿಕರಂತೆ ಶೋಚನೀಯವಾಗಿ ಬದುಕುತ್ತಿರುವ ಸ್ಥಿತಿ ಇವರಿಗೂ ಒದಗುತ್ತಿತ್ತು. ದುರದೃಷ್ಟವಶಾತ್, ಬಂಗಾಳಿ ಹಿಂದೂಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳಲು ಕಾರಣರಾದ ವೀರರಿಗೆ ಋಣಿಯಾಗಿರಬೇಕು ಎಂಬುದನ್ನು ಮರೆತಿದ್ದಾರೆ. ಇತಿಹಾಸವನ್ನು ಮರೆತ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರನ್ನು ತುಷ್ಠೀಕರಿಸುವ ವಿಭಜನಾ ಹಾಗೂ ವಿಧ್ವಂಸಕ ಮನಸ್ಥಿತಿಯ ಶಕ್ತಿಗಳು ರಾಜ್ಯದ ರಾಜಕೀಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಆಶಾದಾಯಕ ಬೆಳವಣಿಗೆಯೆಂದರೆ ಕಳೆದ ಹಲವಾರು ವರ್ಷಗಳಿಂದ "ಹಿಂದೂ ಸಂಹತಿ" ಆಗಸ್ಟ್ 16 ರಂದು ಗೋಪಾಲ್ ಮುಖೋಪಾಧ್ಯಾಯರ ಜೀವನ, ಬಂಗಾಳದ ಹಿಂದೂಗಳನ್ನು ಮತ್ತು ಕೋಲ್ಕತ್ತಾ ನಗರವನ್ನು ಪಾಕಿಸ್ತಾನದ ಭಾಗವಾಗದಂತೆ ಉಳಿಸುವಲ್ಲಿ ಅವರು ಮಾಡಿದ ಪ್ರಯತ್ನಗಳ ನೆನಪಿಗಾಗಿ ಬೃಹತ್ ರ್‍ಯಾಲಿಯನ್ನು ಆಯೋಜಿಸುತ್ತಿದೆ. ಕೆಲವು ಹಿಂದೂಗಳಾದರೂ ಇತಿಹಾಸವನ್ನು ನೆನಪಿಸಿಕೊಂಡು ಅದರಿಂದ ಪಾಠ ಕಲಿಯುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ