ಪುಟಗಳು

ಬುಧವಾರ, ಆಗಸ್ಟ್ 14, 2019

ಎಪ್ಪತ್ತರ ಬಳಿಕ ಸಿಕ್ಕಿತು ನಿಜ ಸ್ವಾತಂತ್ರ್ಯದ ಸಿಹಿ

ಎಪ್ಪತ್ತರ ಬಳಿಕ ಸಿಕ್ಕಿತು ನಿಜ ಸ್ವಾತಂತ್ರ್ಯದ ಸಿಹಿ


         ಸ್ವಾತಂತ್ರ್ಯ. ಅದರಿಚ್ಛೆ ಯಾರಿಗಿಲ್ಲ? ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಅಥವಾ ನಿತ್ಯರೂಢಿಯಿಂದ ಅದೇ ಅಭ್ಯಾಸವಾಗಿಬಿಡುವ ಕಾರಣ ಸುಮ್ಮನುಳಿಯುತ್ತದೆ. ಜಗತ್ತಿನ ಮೂಲೆ ಮೂಲೆಗಳಲ್ಲೂ ನಿತ್ಯ ಪ್ರತಿಧ್ವನಿಸುವ ಪದ ಸ್ವಾತಂತ್ರ್ಯ. ಪ್ರತಿಜೀವಿಗಳಲ್ಲೂ ಈ ಮೂರು ಪದವನ್ನು ತನ್ನದಾಗಿಸಿಕೊಳ್ಳುವ ಹಪಹಪಿ ಅದೆಷ್ಟು? ಈ ಪದ ಸ್ಫುರಿಸುವ ಭಾವವದೆಷ್ಟು? ಪ್ರತಿಯೊಬ್ಬರ ಅದರೆಡೆಗಿನ ಭಾವವೂ ಬೇರೆ ಬೇರೆಯೇ. ಪ್ರತಿಯೊಬ್ಬರಿಗೂ ಅದು ದಕ್ಕಿದ ಪ್ರಮಾಣವೂ ಬೇರೆ ಬೇರೆಯೇ. ಪ್ರತಿಯೊಬ್ಬರಿಗೂ ಅದು ಅರ್ಥವಾಗುವ ರೀತಿಯೂ ಬೇರೆ ಬೇರೆಯೇ! ಅದರ ಪ್ರಾಪ್ತಿಗಾಗಿ ಜೀವಿ ಪಡುವ ಪಾಡೆಷ್ಟು? ನಡೆದ ಯುದ್ಧಗಳೆಷ್ಟು? ಆದ ಬಲಿದಾನಗಳೆಷ್ಟು? ಅದರ ಪ್ರಾಪ್ತಿಗಾಗಿ ಹೆಣಗಾಡಿದ ಅದೆಷ್ಟು ಜೀವಗಳು ದನಿಯೂ ಹೊರಬರದಂತೆ ಹೆಣವಾಗಿ ಹೋದವು? ಅದರ ಉಳಿಕೆ-ಗಳಿಕೆಗಾಗಿ ಅದೆಷ್ಟು ಕಣ್ಣೀರಿನ ಕೋಡಿ ಹರಿಯಿತು; ಅದೆಷ್ಟು ರಕ್ತ ಮಣ್ಣಿಗಿಳಿಯಿತು. ಕೆಲವರು ತಾವು ಪಟ್ಟ ಪಾಡಿಗೆ ತಕ್ಕ ಪ್ರತಿಫಲವನ್ನಾದರೂ ಉಂಡರು. ಕೆಲವರಿಗೆ ತಮ್ಮ ಪಾಡನ್ನು ಅಕ್ಷರರೂಪಕ್ಕಿಳಿಸಿ ಇತರರ ನೆರವಿಂದ ಪ್ರತಿಫಲವೋ, ಕಾಲಗರ್ಭದಲ್ಲಿ ಅನುಕಂಪದ ಅಲೆಯಾದರೂ ಲಭಿಸಿತು. ಈ ವಿಶಾಲ ದಿಗಂತದಲ್ಲಿ ಅಂತಹಾ ಯಾವುದೇ ಪ್ರತಿಫಲವಿಲ್ಲದೆ, ಜೀವಿಯ, ಕಾಲದ ನೆರವಿಲ್ಲದೆ, ಕನಿಷ್ಟ ತನ್ನ ಕಿರುಚಾಟ-ಕಣ್ಣೀರಿಗೂ ಎಡೆ ಸಿಗದೆ ಗತಪ್ರಾಣರಾದವರೆಷ್ಟೋ?

             ಭಾರತ ಇದೆಲ್ಲವನ್ನೂ ಕಂಡಿದೆ. ಸ್ವಾತಂತ್ರ್ಯೇಚ್ಛೆ ಬರಿಯ ವ್ಯಕ್ತಿಯದ್ದಲ್ಲ. ಒಂದು ಸಮೂಹದ್ದೂ ಆಗಿರಬಹುದು; ಒಂದು ದೇಶದ್ದೂ ಆಗಿರಬಹುದು. ಆ ಇಚ್ಛೆಯಿಂದಲೇ ಹಲವು ಕಾಲ ಈ ದೇಶ ಹೋರಾಡಿತು. ಅದೆಷ್ಟು ಬಗೆಯ ಹೋರಾಟಗಳು; ಅದೆಷ್ಟು ರಣ ಕಲಿಗಳು; ಅದೆಷ್ಟು ಬಲಿದಾನಗಳು. ಆ ಸ್ವಾತಂತ್ರ್ಯ ಪ್ರಾಪ್ತಿಯ ಮನಸ್ಥಿತಿಯ ಉದ್ದೀಪನಕ್ಕೆ ಅದೆಷ್ಟು ಮಂತ್ರಗಳು, ತಂತ್ರಗಳು, ಮಾರ್ಗಗಳು! ಅವೆಲ್ಲದರ ಮೂಲ ಸ್ರೋತ ಯಾವುದು? ನಿಸ್ಸಂಶಯವಾಗಿ ವಂದೇ ಮಾತರಂ. ಭಾವಾವೇಶದ ದಿವ್ಯ ಸ್ಥಿತಿಯಲ್ಲಿ ಋಷಿ ಬಂಕಿಮರಿಗೆ ಅಪ್ರಯತ್ನವಾಗಿ ಆದ ಮಂತ್ರ ದರ್ಶನವದು. ಇಡಿಯ ಹಿಂದೂಸ್ಥಾನದಲ್ಲಿ ಮಿಂಚಿನ ಸಂಚಾರ ಮೂಡಿಸಿದ ಗೀತೆಯದು. ಅದರ ಪ್ರತಿಯೊಂದು ಶಬ್ಧವೂ ಸ್ವಾತಂತ್ರ್ಯದ ಅಪೇಕ್ಷಿಗಳಿಗೆ ರೋಮಾಂಚನವನ್ನುಂಟುಮಾಡಿತು. ಅದರಿಂದೆದ್ದ ಜ್ವಾಲಾಮುಖಿ ದಾಸ್ಯರಕ್ಕಸನನ್ನು ಸುಟ್ಟು ಹಾಕಿತು.

              ದೇಶವೇ ತಾಯಿ ಎನ್ನುವ ಭಾವ ಭಾರತೀಯರಿಗೇನೂ ಹೊಸದಾಗಿರಲಿಲ್ಲ. ಆದರೆ ಆ ಕಾಲಘಟ್ಟದಲ್ಲಿ ಪಾಶ್ಚಾತ್ಯಂಧಾನುಕರಣೆಯ ಸುಳಿಯಿಂದ ಜನತೆಯನ್ನು ತಪ್ಪಿಸಿ ರಾಷ್ಟ್ರವೆಂಬ ಭಾವಸಾಗರದಲ್ಲಿ ಈಜಲು ಅನುವು ಮಾಡಿಕೊಡಬೇಕಿತ್ತು. ಜೊತೆಗೆ ಪರಂಪರೆಯ ಸೊಬಗಿಗೆ ಆಧುನಿಕತೆಯ ಸ್ಪರ್ಷ ಬೇಕಿತ್ತು. ಸರಿಯಾದ ಸಮಯದಲ್ಲಿ ಪ್ರಕೃತಿ ಬಂಕಿಮರ ಚಿತ್ತಭಿತ್ತಿಯಲ್ಲಿ ಪ್ರತ್ಯಕ್ಷಳಾಗಿ ಅವರ ಭಾವದಲ್ಲಿ ಹೊನಲಾಗಿ ಕವನವಾಗಿ ಹರಿದಳು. ಅಮ್ಮಾ ಎನುವ ಭಾವೋದ್ದೀಪನವನ್ನು ವಂದೇ ಮಾತರಂ ಒದಗಿಸಿತು. ಭಾಷೆಯ ಹಂಗಿಲ್ಲದೆ ಭಾರತೀಯರನ್ನು ಬೆಸೆಯಿತು. ರಾಷ್ಟ್ರಧರ್ಮವೇ ಪರಮೋಧರ್ಮ ಎನ್ನುವುದು ಬುದ್ಧಿಗಿಂತಲೂ ಭಾವವಾಗಿ ಹರಿದುದರಿಂದ ಅದು ಬಂಕಿಮರ ಮಾತಿನಂತೆ ಕೆಲವೇ ವರ್ಷಗಳಲ್ಲಿ ಬಂಗಾಳವೇಕೆ ಇಡಿಯ ಭಾರತವನ್ನೇ ಹುಚ್ಚೆಬ್ಬಿಸಿತು. ರವೀಂದ್ರರಿಗೆ ಜ್ವಾಲಾಮುಖಿಯೆನಿಸಿತು. ಋಷಿಕಲ್ಪ ಅರವಿಂದರಿಗೆ ದರ್ಶನವೆನಿಸಿತು. ವೀರ ಸಾವರ್ಕರರ "ಸ್ವಾತಂತ್ರ್ಯ ಲಕ್ಷೀ ಕೀ ಜೈ"ಯ ಜೊತೆ ಸೇರಿತು. ಕ್ರಾಂತಿ ಸಂಘಟನೆಗಳನ್ನು ಪ್ರೇರೇಪಿಸಿತು. ಸ್ವಾಭಿಮಾನವನ್ನು ಉದ್ದೀಪಿಸಿತು. ರಾಷ್ಟ್ರಧ್ವಜದ ಪರಿಕಲ್ಪನೆಗೂ ಸೇರಿತು. ಪತ್ರಿಕೆ, ಸಂಘಟನೆಗಳಿಗೆ ಬೀಜರೂಪವಾಯಿತು. ಹಲವು ಭಾಷೆಗಳಲ್ಲಿ ಹಲವು ಕವಲುಗಳಾಗಿ ಹರಿಯಿತು. ಗಂಡುಗಲಿ ಚಂದ್ರಶೇಖರ ಆಜಾದನ ಗುಂಡುಗಳಲ್ಲಿ ಮೊರೆಯಿತು. ಭಗತ್-ಬಟುಕೇಶ್ವರರು ಎಸೆದ ಬಾಂಬುಗಳಲ್ಲಿ ಭೋರ್ಗರೆಯಿತು. ಸುಭಾಷರ "ಜೈ ಹಿಂದ್"ಗೆ ಸ್ಪೂರ್ತಿಯಾಯಿತು. ಆತ್ಮಹತ್ಯೆ ಮತ್ತು ಆತ್ಮಾಹುತಿಯ ನಡುವಿನ ವ್ಯತ್ಯಾಸವನ್ನು ತಿಳಿಯಪಡಿಸಿ ಸ್ವಾತಂತ್ರ್ಯ ಪ್ರಾಪ್ತಿಗೂ ಕಾರಣವಾಯಿತು. ಇಂದಿಗೂ ಅದು ಸತ್ತಂತಿಹರನು ಬಡಿದೆಚ್ಚರಿಸುತ್ತಲೇ ಇದೆ.

            ಒಟ್ಟಿಗೆ ಬಾಳಲು ಜನರು ತಾಳುವ ಇಚ್ಛಾಶಕ್ತಿ ರಾಷ್ಟ್ರವೊಂದನ್ನು ರೂಪಿಸುತ್ತದೆ. ಆದರೆ ರಾಷ್ಟ್ರವೆಂದರೆ ಬರಿಯ ಭೂಮಿಯ ತುಂಡಾಗಲೀ, ಜನಸಮೂಹವಾಗಲೀ ಅಲ್ಲವಲ್ಲ. ಅಂದರೆ ರಾಜ್ಯ ಮತ್ತು ರಾಷ್ಟ್ರವನ್ನು ಸಮಾನ ವ್ಯಾಪ್ತಿಯಲ್ಲಿ ನೋಡಿದ ಆಂಗ್ಲ ಮಾನಸಿಕತೆ ನಮ್ಮಲ್ಲೂ ನೆಲೆಯೂರಿ, ರಾಷ್ಟ್ರ ಸ್ವಾತಂತ್ರ್ಯಕ್ಕಿಂತಲೂ, ದೇಶ ಸ್ವಾತಂತ್ರ್ಯವೇ ಮೇಲಾಗಿ, ಕೆಲವರ ಹಿತಾಸಕ್ತಿಗೆ ಬಲಿಯಾಗಿ ರಾಜಕೀಯ ಸ್ವಾತಂತ್ರ್ಯವಷ್ಟೇ ನಮ್ಮ ಪಾಲಿಗಾಯಿತು. ಅದಕ್ಕಿಂತಲೂ ಹೆಚ್ಚಾಗಿ ಅದೇ ಕೆಲವರ ದುರಾಸೆಯಿಂದ ತಾಯಿ ಭಾರತಿ ತನ್ನ ಮುಕುಟಮಣಿಯನ್ನೂ ತನ್ನ ಹಲವು ಅಂಗಾಂಗಗಳನ್ನು ಕಳೆದುಕೊಂಡು ನಿಸ್ತೇಜಳಾದಳು. ಅಲ್ಲದೆ ನಮ್ಮದೇ ಬಂಧು ಬಾಂಧವರ ಅತ್ಯಾಚಾರ, ದುರ್ಮರಣ; ಸೂತಕ! ಹೀಗೆ ಸ್ವಾತಂತ್ರ್ಯ ದಿನವೆಂಬುದು ಸ್ವಾತಂತ್ರ್ಯದ ಸಂಭ್ರಮದ ಜೊತೆಗೆ ನಮ್ಮ ಅದೆಷ್ಟೋ ಬಂಧು ಭಗಿನಿಯರ ಶ್ರಾದ್ಧವನ್ನೂ ಮಾಡಬೇಕಾಗಿ ಬಂದ ದ್ವಂದ್ವದ ದಿನ! ರಾಜಕೀಯ ಸ್ವಾತಂತ್ರ್ಯವಾದರೂ ಉಳಿಯಿತೇ? ಅದೂ ಅದೇ ಕೆಲವರ ಕುಟುಂಬದ ಸೊತ್ತಾಯಿತು! ಚುಕ್ಕಾಣಿ ಹಿಡಿದವರ ಪಾಶ್ಚಾತ್ಯೀಕೃತ ಮಾನಸಿಕತೆಯಿಂದಾಗಿ ಪರೋಕ್ಷ ವಸಾಹತುಶಾಹಿ ಮುಂದುವರಿಯಿತು. ವಿಕೃತ ಜಾತ್ಯಾತೀತತೆ, ಮತ ಬ್ಯಾಂಕ್ ರಾಜಕಾರಣ, ರಾಷ್ಟ್ರ ವಿರೋಧಿ ನಡವಳಿಕೆ, ಇತಿಹಾಸದ ತಿರುಚುವಿಕೆ, ರಾಷ್ಟ್ರಭಾವ ತುಂಬದ ಶಿಕ್ಷಣ, ಧರ್ಮ-ನೀತಿಗಳಿಲ್ಲದ ವ್ಯವಹಾರ, ಭ್ರಷ್ಟಾಚಾರ, ವಿದೇಶನಿಷ್ಠೆ, ವಂಚಕ, ದೇಶದ್ರೋಹಿಗಳಿಗೆ ಕುಮ್ಮಕ್ಕು ಇವೆಲ್ಲವೂ ಅದೇ ಪರೋಕ್ಷ ವಸಾಹತುಶಾಹಿಯ ಫಲಶ್ರುತಿಗಳು!

           2014; ಈ ಎಲ್ಲಾ ಅಪಸವ್ಯಗಳನ್ನು ಮೆಟ್ಟಿ ನಿಂತು ನಿಜವಾದ ಸ್ವಾತಂತ್ರ್ಯವನ್ನು ಪಡೆಯಲು ಭಾರತ ಮುಂದಡಿಯಿಟ್ಟಿತು. ಅಂದಿನಿಂದ ಸೇನೆಯೂ ಸ್ವಾತಂತ್ರ್ಯದ ಸಂಭ್ರಮವನ್ನು ಸವಿಯಿತು. ಆಡಳಿತ, ರಾಜಕೀಯ, ಸಾಮಾಜಿಕ ಜೀವನದಲ್ಲಿ ನಿಧಾನವಾಗಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಸ್ವಾಭಿಮಾನವನ್ನು ಗಳಿಸಿಕೊಂಡ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾತಿಯಿಂದ ವರ್ತಿಸಿ ತನ್ನ ಶತಶತಮಾನಗಳ ಹಿಂದಿನ ಘನತೆಯನ್ನು ಮತ್ತೆ ಪಡೆಯುವತ್ತ ಸಾಗಿತು. ಭಯೋತ್ಪಾದನೆಯ ಮೂಲಕ ತನ್ನನ್ನು ನಾಶ ಮಾಡಲು ಯತ್ನಿಸುವವರಿಗೆ ಎರಡೆರಡು ಬಗೆಬಗೆಯ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ತನ್ನ ಶಕ್ತಿಯನ್ನೂ, ಬದಲಾವಣೆಗೊಂಡ ನೀತಿಯನ್ನು ನಿರೂಪಿಸಿತು. ಒಂದು ಕಾಲದಲ್ಲಿ ಜಗತ್ತಿಗೆ ಧನಾತ್ಮಕವಾದ ಎಲ್ಲವನ್ನೂ ಕೊಡುತ್ತಿದ್ದ ದೇಶ ಎಲ್ಲವನ್ನೂ ಪಡೆದುಕೊಳ್ಳಬೇಕಾದ ಸ್ಥಿತಿಗೆ ತಲುಪಿತ್ತು. ಆ ಪರಿಸ್ಥಿತಿಯೂ ಬದಲಾಯಿತು. ಇವೆಲ್ಲವೂ ಕಳೆದ ಐದು ವರ್ಷಗಳ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದ್ದವು.

             ಏನೇ ಬದಲಾದರೂ ಹಲವು ಕೊರಗುಗಳು ಉಳಿದು ಬಿಟ್ಟಿದ್ದವು. ಜಾತ್ಯತೀತ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದರೂ ಸಮುದಾಯವೊಂದರ ಸ್ತ್ರೀಯರ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು. ಟ್ರಿಪಲ್ ತಲಾಖ್ ಅನ್ನು ನಿಷೇಧಿಸುವ ಮೂಲಕ ಆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ಮಾತ್ರ ಸರಕಾರ ಮೊದಲ ಹೆಜ್ಜೆಯಿಟ್ಟದ್ದಲ್ಲ; ಸಮಾನ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೊಳಿಸಲೂ ಇದು ಮೊದಲ ಉಪಕ್ರಮವೇ. ಒಂದು ದೇಶದಲ್ಲಿ ಸ್ವಾತಂತ್ರ್ಯವೆಂಬುದು ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಎಂಬಂತಿದ್ದ ಸ್ಥಿತಿಯನ್ನು ಸರಿಪಡಿಸಲೂ ಸರಕಾರ ತೆಗೆದುಕೊಂಡ ಮೊದಲ ಹೆಜ್ಜೆ. ಚಂದ್ರಯಾನ-2ಕ್ಕೆ ಯಶಸ್ವಿಯಾಗಿ ಚಾಲನೆ ನೀಡುವ ಮೂಲಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು ಭಾರತ. ಎಪ್ಪತ್ತು ವರ್ಷಗಳ ಹಿಂದೆ ತನ್ನ ಮುಕುಟಮಣಿಯ ಅರ್ಧಭಾಗವನ್ನು ಕಳೆದುಕೊಂಡಿತ್ತು ಭಾರತ. ನೆಹರೂ ಎಂಬ ಮೂರ್ಖನ ನಿರ್ಧಾರದಿಂದ 370 ಎಂಬಾ ವಿಧಿಯಡಿಗೆ ಸಿಲುಕಿ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿಯ ಉಳಿದರ್ಧ ಭಾಗ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿತು. ವಿಧಿ 370 ಎಂಬ ಷರೀಯತ್ಗೆ ಸಮನಾದ ರಕ್ಕಸನಿಗೆ ಬಲಿಯಾಗಿ ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ, ಜಮ್ಮು ಕಾಶ್ಮೀರವನ್ನು ನರಕಕ್ಕೆ ತಳ್ಳಿದ ಮೂರು ಪರಿವಾರಗಳ ದಾಸ್ಯಕ್ಕೆ ತುತ್ತಾಗಿ; ಅಭಿವೃದ್ಧಿಯೂ ಮರೀಚಿಕೆಯಾಗಿ; ತಾಯ್ನೆಲವನ್ನು ಅಮ್ಮಾ ಎನ್ನುವ ಸೌಭಾಗ್ಯವೂ ಸಿಗದೆ; ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸ್ವಾತಂತ್ರ್ಯವೂ ಇಲ್ಲದೆ ನಲುಗಿದ್ದ ನಮ್ಮ ಬಂಧುಗಳು ಮುಕ್ತಿ ಪಡೆದು ಮುಖ್ಯಭೂಮಿಕೆಯಲ್ಲಿ ಸೇರುವ ಅಭೂತಪೂರ್ವ ಕ್ಷಣ ಮಹತ್ತರವಲ್ಲದೆ ಇನ್ನೇನು? ನಕಲಿ ಮಾನವೀಯತೆಯೆಂಬ ಮುಖ ಹೊಂದಿ ಲೇಖನಿಯ ತುದಿಯಲ್ಲಿ ನಲಿದು ಜಗದ ಜನರ ಮನಸ್ಸಿನಲ್ಲಿ ಆಶ್ರಯ ಪಡೆದಿದ್ದ ಕೆಲವೇ ಜನರ ಸ್ವಾರ್ಥದ ಪ್ರತ್ಯೇಕತೆಯ ಹೋರಾಟವು ಇದರಿಂದ ಕೊನೆಗೊಂಡು ಕಾಲಗರ್ಭದಲ್ಲಿ ಮುಚ್ಚಿಹೋಗಿದ್ದ ಬಹುಜನರ ಒಂದಾಗುವ ಬೇಡಿಕೆ ಈಡೇರಿದ ಪುಣ್ಯ ಕ್ಷಣವದು.

             ಈ ಘನ ಕಾರ್ಯದ ಹಿಂದೆ "ಏಕ್ ದೇಶ್ ಮೇ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್ ನಹಿ ಚಲೇಗಾ" ಎನ್ನುತ್ತಾ ಹೋರಾಡಿದ ಶ್ಯಾಮ್ ಪ್ರಸಾದ್ ಮುಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ. ಪಾಕಿಸ್ತಾನ ಆಕ್ರಮಿಸಿಕೊಂಡ ಉಳಿದ ಭಾಗಗಳನ್ನು ಮರಳಿ ಪಡೆಯಲೂ ಈ ಮಹಾನ್ ಕಾರ್ಯ ವಿಶ್ವಾಸ ತುಂಬಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳೂ ಹತ್ತಿರವಾಗಿವೆ. ಭಾರತ ಮನಸ್ಸು ಮಾಡಿದರೆ ಏನು ಸಾಧಿಸಬಹುದು ಎನ್ನುವುದನ್ನೂ ಈ ಐತಿಹಾಸಿಕ ನಡೆ ಜಗತ್ತಿಗೆ ತೋರಿಸಿದೆ. ಬಲೂಚಿಗಳು, ಸಿಂಧಿಗಳ ಹೃದಯದಲ್ಲಿ ಸ್ವಾತಂತ್ರ್ಯದ ಭಾವನೆಯನ್ನು ತೀವ್ರಗೊಳಿಸಿದೆ. ಅಖಂಡ ಭಾರತದ ಸಾಕ್ಷಾತ್ಕಾರಕ್ಕೆ ದೇಶ ಮೊದಲ ಹೆಜ್ಜೆಯೆನ್ನಿರಿಸಿದೆ. ಅದೇ ಕಾರಣಕ್ಕೆ ಇಷ್ಟು ವರ್ಷವಿಲ್ಲದಿದ್ದ ವಿಶೇಷ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಬಂದಿದೆ. ಎಲ್ಲಾ ಭಾರತೀಯರು ಈ ಸವಿಯನ್ನುಂಡು ಪಾವನರಾಗೋಣ.

               ಪ್ರತಿಯೊಂದು ಶತಮಾನಗಳಲ್ಲೂ ಸ್ವಾತಂತ್ರ್ಯದ ಉಳಿಕೆಗೆ-ಗಳಿಕೆಗೆ ಮಹಾಯುದ್ಧಗಳೇ ನಡೆದವು. ಈಗಲೂ ನಡೆಯುತ್ತಲೇ ಇವೆ. ತನ್ನ ಲಾಭಕ್ಕಾಗಿ ಇನ್ನೊಬ್ಬರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು ವೀರರ ಲಕ್ಷಣವಂತೂ ಅಲ್ಲ. "ಮಾರಕ ಯಂತ್ರಗಳು, ಧನಬಲ, ಸರಕುರಾಶಿಗಳಿಂದ ಮೆರೆಯುವ ವಣಿಕರ ಜಗತ್ತಿನಲ್ಲಿ ಭಿಕ್ಷಾಪಾತ್ರೆಗೆ ಸ್ಥಾನವಿರದು. ಆ ಬಲದೆದುರು ಮಹಾಮಾಯೆಯ ವಾಣಿಯ, ಎಂದರೆ ಮಾನವನ ಅಂತಸ್ಥಶಕ್ತಿಯ ಸ್ಫೋಟ ಮಾತ್ರ ಮಾನವಗತಿಗೆ ಹೊಸ ದಿಕ್ಕನ್ನು ನೀಡೀತು" ಎಂದ ವಿವೇಕ ವಾಣಿ ಯಾರ ಕಿವಿಯಲ್ಲಿ ಮೊಳಗುತ್ತದೆಯೋ ಆತ ಸ್ವಾತಂತ್ರ್ಯದೆಡೆಗೆ ತೀವ್ರಗತಿಯಲ್ಲಿ ಸಾಗುತ್ತಾನೆ. ಅಲ್ಲದೆ ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಎಂದಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲ. ಭಾರತ ತನ್ನ ಆತ್ಮವನ್ನು ಸದಾ ಜಾಗೃತ ಸ್ಥಿತಿಯಲ್ಲಿಟ್ಟುಕೊಳ್ಳಲಿ ಎಂದು ಆಶಿಸೋಣ.

ಭಾನುವಾರ, ಆಗಸ್ಟ್ 11, 2019

ಕಾಶ್ಮೀರ "ಘರ್ ವಾಪಸಿ"ಯಾಗಿದೆ!

ಕಾಶ್ಮೀರ "ಘರ್ ವಾಪಸಿ"ಯಾಗಿದೆ!


            ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ ಮುಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ.

                1947ರ ಭಾರತ ಸ್ವಾತಂತ್ರೃ ಕಾಯಿದೆಯಂತೆ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಬಹುದಾದ ಆಯ್ಕೆಯಲ್ಲಿ ಭಾರತವನ್ನೇ ನಂಬಿ ಕಾಶ್ಮೀರದ ರಾಜ ಹರಿಸಿಂಗ್ ಜಮ್ಮು-ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ  1947ರ ಅಕ್ಟೋಬರ್ 26ರಂದು ಸಹಿಹಾಕಿದರು. ಅಕ್ಟೋಬರ್ 27ರಂದು ಗವರ್ನರ್ ಜನರಲ್ ಮೌಂಟ್ಬ್ಯಾಟನ್ನನ ಷರಾವು ಅದಕ್ಕೆ ಬಿದ್ದಿತ್ತು. ನೆಹರೂ ತನ್ನ ಮಿತ್ರ ಶೇಖ್ ಅಬ್ದುಲ್ಲಾನಿಗೆ ಸಹಾಯ ಮಾಡುವ ದೃಷ್ಟಿಯಿಂದ ಒತ್ತಡ ಹೇರಿದಾಗ, ಶೇಖ್ ಅಬ್ದುಲ್ಲಾನ ಆಶಯದಂತೆ ಕಾಶ್ಮೀರ ವ್ಯವಹಾರಗಳಿಗೆ ಸಂಬಂಧಿಸಿ ಕೇಂದ್ರ ಸಚಿವರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಸಂವಿಧಾನ ರಚನಾ ಸಮಿತಿ ಮುಂದೆ 306-ಎ ವಿಧಿಯನ್ನು  ಮಂಡಿಸುತ್ತಾರೆ. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ಇದನ್ನು ಒಪ್ಪುವುದಿಲ್ಲ. ಆಗ ನೆಹರೂ ಅಂಬೇಡ್ಕರ್ನ್ನು ಕಂಡು ಮನವೊಲಿಸುವಂತೆ ಅಬ್ದುಲ್ಲಾನಿಗೆ ಸೂಚಿಸುತ್ತಾರೆ. ಹಾಗೆ ಬಂದ ಅಬ್ದುಲ್ಲಾನಿಗೆ "ಕಾಶ್ಮೀರಿಗಳಿಗೆ ಭಾರತದ ಪ್ರಜೆಗಳಿಗಿರುವಂತೆ ಸಮಾನ ಹಕ್ಕುಗಳನ್ನು ಬಯಸುವ ನೀವು, ಭಾರತೀಯರಿಗೆ ಕಾಶ್ಮೀರದಲ್ಲಿ ಯಾವುದೇ ಹಕ್ಕುಗಳಿರಬಾರದು ಎನ್ನುತ್ತೀರಿ. ಕಾಶ್ಮೀರದ ರಕ್ಷಣೆಗೆ, ಅಭಿವೃದ್ಧಿಗೆ ಭಾರತ ಬೇಕು. ಆದರೆ ಅಲ್ಲಿ ಉಳಿದ ಭಾರತೀಯರಿಗೆ ಹಕ್ಕಿಲ್ಲ ಎಂದರೇನರ್ಥ? ಈ ದೇಶದ ಕಾನೂನು ಮಂತ್ರಿಯಾಗಿ ನಾನು ನನ್ನ ದೇಶೀಯರ ಹಿತಾಸಕ್ತಿಯನ್ನು, ದೇಶದ ಸಾರ್ವಭೌಮತ್ವವನ್ನು ಎಂದಿಗೂ ಕಡೆಗಣಿಸುವುದಿಲ್ಲ" ಎಂದು ಖಂಡತುಂಡವಾಗಿ ನಿರಾಕರಿಸುತ್ತಾರೆ ಅಂಬೇಡ್ಕರ್. ಆದರೆ ನೆಹರೂ ತನ್ನ ಮಿತ್ರನಿಗೋಸ್ಕರ 370ನೇ ವಿಧಿ ತಾತ್ಕಾಲಿಕ ಎಂದು ಸೇರಿಸುವಂತೆ ಪಟೇಲರನ್ನು ಒಪ್ಪಿಸಿ ಸಂವಿಧಾನ ಶಿಲ್ಪಿಯ ಬಾಯಿ ಮುಚ್ಚಿಸಿದ್ದರು. ಮುಂದೆ ವಿಧಿ 35ಎ ಯನ್ನು ಹಿಂಬಾಗಿಲ ಮೂಲಕ ಸೇರಿಸಿ ಮತ್ತಷ್ಟು ಗಬ್ಬೆಬ್ಬಿಸಲಾಯಿತು!

ಹೇಗಿತ್ತು ಆರ್ಟಿಕಲ್ 370 ಹಾಗೂ 35ಎ?
          ಈ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರ ರಾಜ್ಯದ ಹೊರಗಿನವರಾರೂ ಅಲ್ಲಿ ಭೂಮಿ ಖರೀದಿಸುವಂತಿರಲಿಲ್ಲ. ಭಾರತದ ಉಳಿದ ಭಾಗದವರು ಅಲ್ಲಿ ಹೋಗಿ ನೆಲೆಸಿದರೆ ಅಲ್ಲವರಿಗೆ ಮತದಾನದ ಹಕ್ಕು ಇರಲಿಲ್ಲ. ಸರ್ಕಾರಿ ನೌಕರಿಯ ಹಕ್ಕೂ ಇರಲಿಲ್ಲ. ವ್ಯಾಪಾರ ಮಾಡುವಂತಿರಲಿಲ್ಲ. ಶಾಶ್ವತವಾಗಿ ನೆಲೆಸುವಂತಿರಲಿಲ್ಲ. ಹೊರಗಿನವರಾರೂ ಅಲ್ಲಿ ಆಸ್ತಿ ಖರೀದಿ ಮಾಡುವಂತಿರಲಿಲ್ಲ. ರಾಜ್ಯದ ಹೊರಗಿನವರನ್ನು ವಿವಾಹವಾಗುವ ಮಹಿಳೆಗೂ ಈ ವಿಧಿಯ ಪ್ರಕಾರ ಸಿಗುತ್ತಿದ್ದ ಹಕ್ಕು, ಸೌಲಭ್ಯಗಳೆಲ್ಲಾ ತಪ್ಪಿ ಹೋಗುತ್ತಿದ್ದವು. ಆದರೆ ಆಕೆ ಪಾಕಿಸ್ತಾನದವನೊಬ್ಬನನ್ನು ಮದುವೆಯಾದರೆ ಆಕೆಯ ಹಕ್ಕುಗಳೆಲ್ಲಾ ಹಾಗೆಯೇ ಉಳಿಯುತ್ತಿದ್ದವು. ಮಾತ್ರವಲ್ಲಾ ಆ ಪಾಕಿಸ್ತಾನಿಗೂ ಜಮ್ಮುಕಾಶ್ಮೀರದ ನಾಗರಿಕತ್ವ ತನ್ಮೂಲಕ ಭಾರತದ ನಾಗರಿಕತ್ವವೂ ಸಿಗುತ್ತಿತ್ತು. ಅಂದರೆ ಇದು ಭಯೋತ್ಪಾದಕರಿಗೆ ಭಾರತಕ್ಕೆ ಬರಲು ಇದ್ದ ರಹದಾರಿಯಾಗಿತ್ತು. ಹಾಗೆಯೇ ಜಮ್ಮು-ಕಾಶ್ಮೀರದ ಪುರುಷ ಹೊರ ರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕು ಅಬಾಧಿತ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತಿತ್ತು. ಷರಿಯಾ ಕಾನೂನಿನ ಕುಣಿಕೆ ಮಹಿಳೆಯರ ಮೇಲಿರುತ್ತಿತ್ತು. ಈ ಅಸಮಾನತೆಯ ಬಗ್ಗೆ ಯಾವುದೇ ಮಹಿಳಾ ಸಂಘಟನೆಗಳು ಹೋರಾಡಿದ್ದು ಕಾಣೆ. ಇಲ್ಲಿನವರು ಭಾರತ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗಿರಲಿಲ್ಲ. ಆದರೆ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಹಣ ಇಲ್ಲಿಗೆ ಹೋಗುತ್ತಿತ್ತು!

           ಈ 370ನೇ ವಿಧಿಯ ಲಾಭ ಪಡೆದು ಜಮ್ಮುಕಾಶ್ಮೀರ ರಾಜ್ಯ ತನ್ನದೇ ಆದ ಸಂವಿಧಾನವನ್ನು 1957ರಲ್ಲಿ ಅಳವಡಿಸಿಕೊಂಡಿತು. ಒಂದು ದೇಶದಲ್ಲಿ ಎರಡು ಸಂವಿಧಾನ! ಈಗ 370ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿರುವ ಜಾತ್ಯಾತೀತರು ಹಾಗೂ ಸಮಾಜವಾದಿಗಳೆಂದು ಕರೆಯಿಸಿಕೊಳ್ಳುತ್ತಿರುವವರೂ ಗಮನಿಸಬೇಕಾದ ವಿಷಯವೇನೆಂದರೆ ಅವೆರಡೂ ಪದಗಳಿಗೆ ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಜಾಗವೇ ಇರಲಿಲ್ಲ! ಕೇಂದ್ರ ಸರಕಾರ ಇತ್ತೀಚೆಗೆ ಆರ್.ಟಿ.ಐ ಕಾಯ್ದೆಗೆ ತಿದ್ದುಪಡಿ ತಂದಾಗ ಇದೇ 370ನೇ ವಿಧಿಯ ಪರವಾಗಿರುವವರು ವಿರೋಧಿಸಿದ್ದರು. ಆದರೆ 370ನೇ ವಿಧಿಯ ಕಾರಣ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಆರ್.ಟಿ.ಐಗೆ ಯಾವುದೇ ಕಿಮ್ಮತ್ತಿರಲಿಲ್ಲ. ಕೌಟುಂಬಿಕ ದೌರ್ಜನ್ಯ ಪರಿಹಾರ, ವನ್ಯಜೀವಿ ಸಂರಕ್ಷಣೆ,ಸಿಎಜಿ, ಭ್ರಷ್ಟಾಚಾರ ನಿಯಂತ್ರಣಗಳಂತಹಾ ಕಾಯ್ದೆಗಳ ಸಹಿತ ಯಾವುದೇ ಕಾಯ್ದೆ ಅನ್ವಯವಾಗುತ್ತಿರಲಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐಗೆ ಇಲ್ಲಿ ಅಧಿಕಾರವಿರಲಿಲ್ಲ. ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯ ಸರಕಾರದ ಅನುಮತಿ ಪಡೆಯಬೇ ಕಿತ್ತು! ಸರ್ವೋಚ್ಚ ನ್ಯಾಯಾಲಯ ಕೇವಲ ಮನವಿ ಮಾಡಬಹುದಿತ್ತು! ವಿಧಾನ ಸಭೆ ಅವಧಿ ಇಲ್ಲಿ 6 ವರ್ಷ. ಪಂಚಾಯತ್ಗಳಿಗೆ ಅಧಿಕಾರವಿಲ್ಲ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಾದರೂ ಅನುಮತಿ ಪಡೆದುಕೊಳ್ಳಬೇಕಿತ್ತು. ಬಳಿಕವೂ ಜಮ್ಮು ಕಾಶ್ಮೀರದ ಧ್ವಜದ ಜೊತೆಗೆಯೇ ಹಾರಿಸಬೇಕಿತ್ತು. ರಾಷ್ಟ್ರಧ್ವಜವನ್ನು ಸುಡುವ, ಹರಿಯುವ ಮುಂತಾದ ರಾಷ್ತ್ರೀಯ ಸಂಕೇತಗಳಿಗೆ ಮಾಡುವ ಅವಮಾನ ಇಲ್ಲಿ ಅಪರಾಧವಾಗಿರಲಿಲ್ಲ. ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ-ಸಂಪರ್ಕ ಕ್ಷೇತ್ರ ಬಿಟ್ಟು ಯಾವುದೇ ಕಾಯಿದೆ-ಕಾನೂನುಗಳನ್ನು ಜಮ್ಮು ಕಾಶ್ಮೀರದಲ್ಲಿ ಮಾಡಲು ಕೇಂದ್ರ ಸರಕಾರ ಅಲ್ಲಿನ ರಾಜ್ಯ ಸರಕಾರದ ಅನುಮತಿ ಪಡೆಯಬೇಕಿತ್ತು.

            ರಾಷ್ಟ್ರಾದ್ಯಂತ ಮಂಡಲ ಆಯೋಗದ ಬಗ್ಗೆ ಬೊಬ್ಬೆ ಕೇಳಿ ಬರುತ್ತದೆ. ಆದರೆ ಕಾಶ್ಮೀರದಲ್ಲಿ ಮಂಡಲ ಆಯೋಗದ ವರದಿ ಜಾರಿಗೇ ಬರಲಿಲ್ಲ. 1991ರವರೆಗೆ ಹಿಂದುಳಿದ ವರ್ಗಕ್ಕೆ ಯಾವುದೇ ಮೀಸಲಾತಿಯೇ ಸಿಗುತ್ತಿರಲಿಲ್ಲ. 91ರ ಬಳಿಕವೂ ರಾಜಕೀಯ ಮೀಸಲಾತಿ ಸಿಗಲಿಲ್ಲ. ಅಸಲಿಗೆ ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಎಷ್ಟಿದೆಯೆಂಬ ಅಂಕಿ ಅಂಶಗಳೇ ಇಲ್ಲ. 1956ರಲ್ಲಿ ಪಂಜಾಬಿಬಿಂದ ಕರೆತಂದ ವಾಲ್ಮೀಕಿ ಜನಾಂಗಕ್ಕೆ ಯಾವುದೇ ನಾಗರಿಕ ಹಕ್ಕುಗಳು ಸಿಕ್ಕಿಲ್ಲ. 1947ರಲ್ಲಿ ಅಪಾರ ಪ್ರಮಾಣದ ಹಿಂದೂಗಳು, ಸಿಕ್ಖರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. ಆಗ ಬಂದವರಲ್ಲಿ ಕೆಲವರು ಕಾಶ್ಮೀರದಲ್ಲಿ ನೆಲೆ ನಿಂತರು. ಆದರೆ ಅವರಿಗೆ ಯಾವ ನಾಗರಿಕ ಹಕ್ಕುಗಳೂ ಸಿಗಲಿಲ್ಲ. ಆದರೆ ವಿಭಜನೆ ಸಂದರ್ಭದಲ್ಲಿ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರು ಬೇಕಾದರೆ ಮರಳಿ ಬರಬಹುದು, ತಮ್ಮ ಭೂಮಿಯನ್ನು ಮರಳಿ ಪಡೆಯಬಹುದು, ಪರಿಹಾರವನ್ನೂ ಪಡೆದುಕೊಳ್ಳಬಹುದು!

          1951ರಲ್ಲಿ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರ ವಿಂಗಡಣೆ ನಡೆಯಿತು. ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾತ್ರವಲ್ಲ, ಅಲ್ಲಿನ ಭೌಗೋಳಿಕ ಸನ್ನಿವೇಶವನ್ನೂ ಪರಿಗಣಿಸಬೇಕು ಅಂತ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಮತ್ತು ಜಮ್ಮು-ಕಾಶ್ಮೀರ ಸಂವಿಧಾನದ 50ನೇ ವಿಧಿ ಇವೆರಡರಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕ್ಷೇತ್ರ ಮರುವಿಂಗಡಣಾ ಆಯೋಗಗಳು ಸಂವಿಧಾನ ಮತ್ತು ಪ್ರಜಾಪ್ರಾತಿನಿಧ್ಯ ಕಾಯಿದೆಯ ಆಶಯವನ್ನು ಎಂದೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. 2001ರಲ್ಲಿ ನಡೆಸಿದ ಜನಗಣತಿ ಪ್ರಕಾರ, ಜಮ್ಮುವಿನ 26 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 30,59,986 ಮತದಾರರಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಜಮ್ಮುವಿನ ಮೂರನೇ ಎರಡರಷ್ಟು ಪ್ರದೇಶ ದುರ್ಗಮ ಗುಡ್ಡಗಾಡು, ಪರ್ವತ ಪ್ರದೇಶಗಳಿಂದ ಕೂಡಿದೆ. ಅಲ್ಲಿ ಸುವ್ಯವಸ್ಥಿತವಾದ ರಸ್ತೆ ಸಂಪರ್ಕವೂ ಇಲ್ಲ. ಆದರೆ ಈ ಪ್ರದೇಶಕ್ಕೆ 37 ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೇವಲ 15,953 ಚ.ಕಿ.ಮೀ. ವಿಸ್ತಾರವಾದ ಪ್ರದೇಶ ಮತ್ತು 29 ಲಕ್ಷ ಮತದಾರರನ್ನಷ್ಟೇ ಹೊಂದಿರುವ ಕಾಶ್ಮೀರ ಕಣಿವೆಗೆ 46 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿದೆ! ಯಾಕೆ ಹೀಗೆ? ಕಾರಣ ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ!

           1992ರಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಅನುಸಾರ ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಯತ್ನ ನಡೆದಿತ್ತು. ಇನ್ನೇನು ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಬೇಕು ಅನ್ನುವಷ್ಟರಲ್ಲಿ ಆಯೋಗದ ಅಧ್ಯಕ್ಷ ಜಸ್ಟೀಸ್ ಕೆ.ಕೆ. ಗುಪ್ತಾ ಆ ಯೋಜನೆಯನ್ನು ತಿರಸ್ಕರಿಸಿಬಿಟ್ಟರು! ಕೇವಲ ರಾಜಕೀಯ ಮಾತ್ರವಲ್ಲ ಅಭಿವೃದ್ಧಿಯೂ ಜಮ್ಮು ಪಾಲಿಗೆ ಮರೀಚಿಕೆಯೇ! ಪ್ರವಾಸೋದ್ಯಮ ಬಜೆಟ್ನಲ್ಲಿ ಶೇ.90ರಷ್ಟನ್ನು ಕಾಶ್ಮೀರಕ್ಕೆ ಕೊಡಲಾಗಿದೆ.. ವ್ಯಾಪಾರ ಮತ್ತು ಪ್ರವಾಸೋದ್ಯಮದಿಂದ ಬರುವ ಬಹುತೇಕ ಆದಾಯ ಜಮ್ಮುವಿನಿಂದಲೇ ಆಗಿದ್ದರೂ ಅಲ್ಲಿಗೆ ಅನುದಾನವಿಲ್ಲ! ಮಾತ್ರವಲ್ಲ, ಕಾಶ್ಮೀರ ಕಣಿವೆಗೆ ಉಚಿತ ವಿದ್ಯುತ್, ಜಮ್ಮು ಪ್ರಾಂತ್ಯದಲ್ಲಿ ದುಬಾರಿ ವಿದ್ಯುತ್ ಶುಲ್ಕ, ಇವೆಲ್ಲವೂ 370ನೇ ವಿಧಿಯ ಅಪಸವ್ಯಗಳು! ಹೀಗೆ ದೇಶಕ್ಕೇ ಒಂದು ಕಾನೂನಿದ್ದರೆ ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು, ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನವಿತ್ತು.

         ದೇಶದ 1% ಜನಸಂಖ್ಯೆ ಇರುವ ಜಮ್ಮು ಕಾಶ್ಮೀರಕ್ಕೆ ಕೇಂದ್ರದ ಅನುದಾನದ ಪಾಲು 10%! ದೇಶದ 13% ಜನಸಂಖ್ಯೆಯುಳ್ಳ ಉತ್ತರ ಪ್ರದೇಶ ಪಡೆಯುವ ಪಾಲು 8.2%. 2000-2016ರ ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರತಿಯೊಬ್ಬ ವ್ಯಕ್ತಿ ತಲಾ 91,300 ರೂ. ಪಡೆದರೆ ಉತ್ತರಪ್ರದೇಶದ ವ್ಯಕ್ತಿಗೆ ಸಿಕ್ಕಿದ್ದು ಬರೇ 4300 ರೂ. ಈ ಅವಧಿಯಲ್ಲಿ ಜಮ್ಮು ಕಾಶ್ಮೀರ ಗಿಟ್ಟಿಸಿದ್ದು ಬರೋಬ್ಬರಿ 1.14 ಲಕ್ಷ ಕೋಟಿ ರೂ.! ಇವೆಲ್ಲವೂ ವಿಧಿ 370ರ ಫಲಶ್ರುತಿಗಳೇ. ಈ ಅವ್ಧಿಗೆ ಮುನ್ನವೂ ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಪ್ರಮಾಣದ ಅನುದಾನವನ್ನು ಜಮ್ಮು ಕಾಶ್ಮೀರ ಪಡೆದುಕೊಂಡು ಬಂದಿತ್ತು. ಆದರೆ ಆ ಹಣದ ಹಂಚಿಕೆ, ವಿನಿಯೋಗ, ಉಳಿತಾಯದಲ್ಲಿ ಯಾವುದೇ ಪಾರದರ್ಶಕತೆಯಿರಲಿಲ್ಲ ಎಂದು 2016ರ ಕೇಂದ್ರ ಸಿಎಜಿ ವರದಿ ಹೇಳಿದೆ. ಇಷ್ಟು ಅನುದಾನವಿದ್ದರೂ ಕಾಶ್ಮೀರ ಯಾಕೆ ಅಭಿವೃದ್ಧಿಯಾಗಲಿಲ್ಲ? ಕಾರಣ ಇವೆಲ್ಲವೂ ಮೂರು ಕುಟುಂಬಗಳ ಖಜಾನೆ ಸೇರಿತ್ತು!

        ಈಗ ಕೇಂದ್ರ ಸರಕಾರ ಆರ್ಟಿಕಲ್ 370ಯನ್ನು ಕಿತ್ತೊಗೆದಿದೆ. ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುವ ಕಾನೂನು, ಸಂವಿಧಾನ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಶಾಸನ ಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಢಕ್ ಶಾಸನ ಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ಆರ್ಟಿಕಲ್ 370 ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಹೈಕೋರ್ಟ್ 2015ರ ಅಕ್ಟೋಬರ್ ರಂದು ನೀಡಿದ್ದ ಆದೇಶದ ಪ್ರಕಾರ ಅನುಚ್ಛೇದ 3 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನಿರ್ಧರಿಸುವ ಹಕ್ಕು ಸಾಂವಿಧಾನಿಕ ಶಾಸನ ಸಭೆಗೆ ಇದೆ. ವಿಧಾನಸಭೆ ವಿಸರ್ಜನೆಯಾಗಿರುವ ಜಮ್ಮು ಕಾಶ್ಮೀರದಲ್ಲಿ ಈಗ ರಾಜ್ಯಪಾಲರ ಆಳ್ವಿಕೆ. ಹಾಗಾಗಿ ಕಾಶ್ಮೀರದ ರಾಜ್ಯಪಾಲರ ಸಹಿಯೊಂದು ಸಾಕು. ಯಾವ ರಾಷ್ಟ್ರಪತಿಗಳ ಹುದ್ದೆಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತೋ ಈಗ ಅದೇ ರಾಷ್ಟ್ರಪತಿಗಳ ಅಂಕಿತದ ಮೂಲಕ ವಿಧಿ 370ರ ವಿಧಿಬರೆಹವನ್ನು ಬದಲಾಯಿಸಿ ಅಂತಿಮ ಸಂಸ್ಕಾರ ಮಾಡಲಾಗಿದೆ. ಈಗ ಜಮ್ಮು ಕಾಶ್ಮೀರ ನಿಜಾರ್ಥದಲ್ಲಿ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಮರಳಿದೆ. ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ ಜಮ್ಮು ಕಾಶ್ಮೀರವನ್ನು ನರಕಕ್ಕೆ ತಳ್ಳಿದ ಮೂರು ಪರಿವಾರಗಳಿಗೆ ಇನ್ನು ಕಾದಿದೆ ಹಬ್ಬ! ಜಮ್ಮು ಕಾಶ್ಮೀರದ ಕ್ಷೇತ್ರ ಮರುವಿಂಗಡನೆಗೂ ಕಾಲ ಕೂಡಿ ಬಂದಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳು ಹತ್ತಿರವಾಗಿವೆ.

ಬೇಕಾದುದು ಕ್ಷಮೆಯಲ್ಲ; ಮತಾಂತರಕ್ಕೆ ಕಡಿವಾಣ

ಬೇಕಾದುದು ಕ್ಷಮೆಯಲ್ಲ; ಮತಾಂತರಕ್ಕೆ ಕಡಿವಾಣ


            ಒಬ್ಬ ಆರ್ಚ್ ಬಿಷಪ್ ಜಲಿಯನ್ ವಾಲಾಭಾಗ್'ನಲ್ಲಿ ಏನಾಗಿತ್ತು ಎನ್ನುವುದರ ಪೂರ್ಣ ಮತ್ತು ಪಾರದರ್ಶಕ ಮಾಹಿತಿಯನ್ನು ಕೊಡುವುದೆಂದರೇನರ್ಥ? ಆರ್ಚ್ ಬಿಷಪ್ ಏನು ಇತಿಹಾಸಕಾರನೇ ಅಥವಾ ಜಲಿಯನ್ ವಾಲಾಭಾಗಿನಲ್ಲಿ ನಡೆದ ಕ್ರೌರ್ಯ ಆತ ಮಾಹಿತಿ ಕೊಟ್ಟೊಡನೆ ಮರೆಯಾಗುವುದೇ? ಶತಮಾನದ ಬಳಿಕ ಬ್ರಿಟಿಷರು ತಮ್ಮ ಆರ್ಚ್ ಬಿಷಪ್ ಒಬ್ಬನನ್ನು ಜಲಿಯನ್ ವಾಲಾಭಾಗಿಗೆ ಕಳುಹುತ್ತಿದ್ದಾರೆ. ಆತನ ಸ್ವಾಗತಕ್ಕೆ ಭಾರತದಲ್ಲಿನ ಅವನ ವಂದಿಮಾಗಧರು ಅಣಿಯಾಗುತ್ತಿದ್ದಾರೆ. ಆದರೆ ಆತ ಬರುತ್ತಿರುವುದು ಕ್ಷಮೆ ಕೇಳಲಲ್ಲ; ಇತಿಹಾಸದಲ್ಲಿ ಏನಾಯಿತು ಎಂದು ವಿವರಿಸುವುದಕ್ಕೆ; ತಮ್ಮ ಇತಿಹಾಸದ ಪಾಪಗಳನ್ನು ಗುರುತಿಸಿಕೊಳ್ಳುವುದಕ್ಕೆ ಎನ್ನುವ ನುಡಿಮುತ್ತುಗಳು ಆತನಿಂದಲೇ ಬಂದಿವೆ!ಅಸಲಿಗೆ ನಮಗೆ ಬೇಕಾದುದು ಕ್ಷಮಾಪಣೆಯಲ್ಲ. ಪಂಜಾಬಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಸಿಖ್ ಬಂಧುಗಳ ಮತಾಂತರಕ್ಕೆ ಆತ ಕಡಿವಾಣ ಹಾಕಿದರೆ ಅದು ಆತ ಯಾಚಿಸುವ ಕ್ಷಮೆಗಿಂತಲೂ ದೊಡ್ಡದು. ಮಾತ್ರವಲ್ಲ ಜಲಿಯನ್ ವಾಲಾಭಾಗಿನಲ್ಲಿ ಹರಿದ ನೆತ್ತರಿಗೆ, ಅಳಿದ ಬಂಧುಗಳಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ! ಆದರೆ ಅಂತಹುದನ್ನು ಪಾದ್ರಿಯೊಬ್ಬನಿಂದ ನಿರೀಕ್ಷಿಸಬಹುದೇ? ಈಗಾಗಲೇ ಆತ ಬರುವುದು ತನ್ನ ಮತದ ಹಿರಿಮೆಯನ್ನು ಸಾರಲು ಎನ್ನುವುದು ಆತನಿಗೆ ಅಂತರ್ಮತೀಯ ಸಲಹೆಗಾರನಾಗಿರುವವನಿಂದ ಮಾಧ್ಯಮಗಳಿಗೆ ವಿವರಿಸಲ್ಪಟ್ಟಿದೆ!

               ರಾಜಕೀಯದ ಭೇಟಿ ಇದಲ್ಲ ಎನ್ನುತ್ತಾ ಹತ್ತು ದಿನಗಳ ಭಾರತ ಪ್ರವಾಸಕ್ಕೆಂದು ಆಗಸ್ಟ್ 31ರಂದು ಬರುತ್ತಿರುವ ಕ್ಯಾಂಟರ್ಬರಿಯ ಆರ್ಚ್ ಬಿಷಪ್ "ಭಾರತದಲ್ಲಿ ಗುಂಪುಗಲಭೆ ಇದೆ, ಭಾರತೀಯನೊಬ್ಬ ಹಿಂದೂವೇ ಆಗಿರಬೇಕು ಅನ್ನುವ ಪ್ರತಿಪಾದನೆ ಬಲವಾಗುತ್ತಿದೆ, ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳಾಗುತ್ತಿವೆ" ಎನ್ನುವ ತನ್ನವರ ಕಲ್ಪಿತ ವರದಿಯನ್ನು ಗಮನದಲ್ಲಿಟ್ಟುಕೊಂಡೇ ಭಾರತದಲ್ಲಿ ಕ್ರೈಸ್ತರ ನಿಜವಾದ ಸ್ಥಿತಿಯನ್ನು ಅರಿಯಲು ಬರುತ್ತಿದ್ದೇನೆ ಎಂದಿದ್ದಾನೆ. ಅದಕ್ಕಿಂತಲೂ ವಿಶೇಷವಾಗಿ ಗಮನಿಸಬೇಕಾದುದು "ಭಾರತದಲ್ಲಿ ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಪರಿವರ್ತಿಸಲಾಗುತ್ತಿದೆ; ಕ್ರೈಸ್ತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ; ಕ್ರೈಸ್ತರ ಕೊಲೆಯಾಗುತ್ತಿದೆ; ನರೇಂದ್ರ ಮೋದಿ ನೇತೃತ್ವದ ಬಲಪಂಥೀಯ ಸರಕಾರ ಬಂದ ನಂತರ ಇವು ಹೆಚ್ಚಾಗಿವೆ" ಎನ್ನುವಂತಹಾ ಆತನ ಹೇಳಿಕೆ. ರಾಜಕೀಯದ ಮಾತಿಲ್ಲ ಅನ್ನುವ ಆತನೇ ಈ ರೀತಿಯ ಬಿಡುಬೀಸಾದ ರಾಜಕೀಯ ಹೇಳಿಕೆ ನೀಡುತ್ತಾನೆ ಎನ್ನುವಾಗಲೇ ಆತನ ಮಾತಿನಲ್ಲಿರುವ ದ್ವಂದ್ವ ಭಾರತೀಯರಿಗೆ ಅರಿವಾಗಬೇಕು. ರಾಜಕೀಯದ ಮಾತಾಡುವುದಿಲ್ಲ ಅಂದವನು ಮೋದಿ ಸರಕಾರವನ್ನು ದೂಷಿಸುತ್ತಿರುವುದ್ಯಾಕೆ? ಅದಕ್ಕೆ ಕಾರಣ ಗುಂಪುಗಲಭೆಯೋ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೋ? ಯಾವುದೂ ಅಲ್ಲ ಅಸಲಿಗೆ "ಮಾಬ್ ಲಿಂಚಿಂಗ್" ಎನ್ನುವಂತಹಾ ಪದ ಅವರಿಂದ ಹಾಗೂ ಅವರ ಕೃಪಾ ಪೋಷಿತ ಮಾಧ್ಯಮಗಳಿಂದ ಹುಟ್ಟಿದ್ದೇ ಇವರ ಮತಾಂತರ ಪ್ರಕ್ರಿಯೆಗೆ ಮೋದಿ ಸರಕಾರದ ಕಠಿಣ ಕಾನೂನು ಅಡ್ಡಬಂದುದರಿಂದ!

               ಕಳೆದ ಮೂರು ವರ್ಷಗಳಲ್ಲಿ ಎಫ್.ಸಿ.ಆರ್.ಎ ನಿಯಮಗಳನ್ನು ಉಲ್ಲಂಘಿಸಿದ ಹದಿಮೂರು ಸಾವಿರಕ್ಕೂ ಹೆಚ್ಚು ಎನ್ಜಿಓಗಳ ಪರವಾನಗಿಯನ್ನು ಮೋದಿ ಸರಕಾರ ರದ್ದುಪಡಿಸಿದೆ. ಇದರಿಂದ ವಿದೇಶೀ ಹಣ ಬಳಸಿಕೊಂಡು ನಡೆಯುತ್ತಿದ್ದ ಅವ್ಯಾಹತ ಮತಾಂತರಕ್ಕೆ ಅಡ್ಡಿಯುಂಟಾಯಿತು. ಸೇವೆಯ ಹೆಸರಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಮತಾಂತರಿಸುತ್ತಿದ್ದ ಪ್ರಕ್ರಿಯೆಗಳು, ರಸ್ತೆ ಬದಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಗಳು ಹಠಾತ್ತನೆ ನಿಂತು ಹೋದವು. ಸಭೆಗಳನ್ನು ಮಾಡಿ ಜೋರಾಗಿ ಬೊಬ್ಬೆ ಹೊಡೆಯುತ್ತಾ ರೋಗಿಯ ದೇಹವನ್ನು ಮುಟ್ಟಿದ ತಕ್ಷಣ ರೋಗ ಗುಣವಾಯಿತೆಂದು ನಾಟಕ ಮಾಡುತ್ತಾ ಮುಗ್ಧರನ್ನು ಮೌಢ್ಯದ ಬಲೆಗೆ ಸಿಲುಕಿಸಿ ಮತಾಂತರ ನಡೆಸುತ್ತಿದ್ದ, ಹಣದ ಆಮಿಶವೊಡ್ಡಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಇವಾಂಜೆಲಿಸ್ಟುಗಳೆಲ್ಲಾ ಈಗ ಬೇರೆ ಕೆಲಸ ಹುಡುಕಲು ಅರ್ಜಿ ಸಲ್ಲಿಸುತ್ತಿದ್ದಾರೆ. 2016ರಲ್ಲಿ ದೇಣಿಗೆ ಸಂಗ್ರಹಿಸಿದ 19ಸಾವಿರ ಎನ್ಜಿಓಗಳಿಗೆ ಹಣ ನೀಡಿದ ಪ್ರಮುಖ ಹದಿನಾಲ್ಕು ಸಂಸ್ಥೆಗಳು ಕ್ರಿಶ್ಚಿಯನ್ ಸಂಘಟನೆಗಳಾಗಿವೆ ಕೇಂದ್ರ ಎಂದು ಗೃಹಸಚಿವಾಲಯ ಹೇಳಿತ್ತು. ಹೀಗೆ ತಮಗೆ ಬರುತ್ತಿದ್ದ ಅಕ್ರಮ ಹಣಕ್ಕೆ, ತಮ್ಮ ಮತಾಂತರ ಕಾರ್ಯಕ್ಕೆ ಅಡ್ಡಿಯುಂಟಾದಾಗ ಹುಟ್ಟಿಕೊಂಡದ್ದೇ ಗುಂಪುಗಲಭೆ, ಮಾಬ್ ಲಿಂಚಿಂಗ್, ಅಸಹಿಷ್ಣುತೆ ಮುಂತಾದ ಅರಚಾಟಗಳು. ಆರ್ಚ್ ಬಿಷಪನ ಭಾರತ್ ಭೇಟಿ ಹಾಗೂ ಹೇಳಿಕೆಗಳ ಹಿಂದಿನ ಕಾರಣವೂ ಇದೇ!

             ಭಾರತದಲ್ಲಿ ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎನ್ನುವ ಆತನ ಹೇಳಿಕೆಯೇ ಹಾಸ್ಯಾಸ್ಪದ. ಹಿಂದೂಗಳು ಎಂದಿಗೂ ಯಾರನ್ನೂ ಬಲವಂತವಾಗಿ ಮತಾಂತರ ಮಾಡಲೂ ಇಲ್ಲ; ಮಾಡಲು ಸಾಧ್ಯವೂ ಇಲ್ಲ. ವ್ಯತಿರಿಕ್ತವಾಗಿ ಮೋದಿ ನೇತೃತ್ವದ ಸರಕಾರ, ಅದು ಈಗಿದ್ದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ನಡುವೆಯೂ ಹಿಂದೂಗಳ ಮತಾಂತರ ನಿಂತಿಲ್ಲ. ನಮ್ಮ ಕಾನೂನು ಇನ್ನಷ್ಟು ಬಲಗೊಳ್ಳಬೇಕಾಗಿರುವುದು ಅತ್ಯಗತ್ಯ. ಉದಾಹರಣೆಗೆ "ವಾಟರ್ ಆಫ್ ಲೈಫ್" ಎನ್ನುವ ಅಮೇರಿಕಾ ಮೂಲದ ಸಂಸ್ಥೆಯೊಂದು ತಾನು ಸ್ವಚ್ಛ ಕುಡಿಯುವ ನೀರನ್ನು ದಲಿತರಿಗೆ ಕೊಡುತ್ತೇನೆ ಎನ್ನುತ್ತಾ ಮತಾಂತರ ಕಾರ್ಯವನ್ನು ಅವ್ಯಾಹತವಾಗಿ ನಡೆಸುತ್ತಿದೆ. ಅವರೇ ತಮ್ಮ ವೆಬ್ ಸೈಟಿನಲ್ಲಿ ಹೇಳಿಕೊಳ್ಳುವ ಪ್ರಕಾರ 2012ರಲ್ಲಿ ಹದಿನೈದು ಸಾವಿರ, 2013ರಲ್ಲಿ 37ಸಾವಿರ, 2014ರಲ್ಲಿ 2,92,000, 2015ರಲ್ಲಿ ಆರು ಲಕ್ಷ ಹಾಗೂ 2016ರಲ್ಲಿ 8,98,657 ಹಿಂದೂಗಳನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿದ್ದೇವೆ ಎಂದು ಹೇಳಿಕೊಂಡಿದೆ. ಅಲ್ಲದೆ ಆಂಧ್ರದ ಪ್ರಕಾಶಮ್ ಜಿಲ್ಲೆಯನ್ನು ಸಂಪೂರ್ಣವಾಗಿ ಕ್ರೈಸ್ತಮಯವನ್ನಾಗಿಸಿದ ತನ್ನ ಹೆಗ್ಗಳಿಕೆಯನ್ನು ಹೊಗಳಿಕೊಂಡಿದೆ. ಅಲ್ಲಿನ ಜನಸಂಖ್ಯೆ 3.5ಮಿಲಿಯನ್! ಹಿಂದೂಗಳಲ್ಲಿರುವ ಜಾತಿಪದ್ದತಿ ಹಾಗೂ ಅಸ್ಪೃಷ್ಯತೆಯಿಂದಾಗಿ ಕೆಳವರ್ಗದವರನ್ನು ಮನುಷ್ಯರನ್ನಾಗಿಯೇ ನೋಡುತ್ತಿಲ್ಲ; ಅವರಿಗೆ ಉದ್ಯೋಗವಕಾಶಗಳನ್ನು ಕೊಡದೇ ಬಡವರನ್ನಾಗಿಯೇ ಉಳಿಸಲಾಗಿದೆ; ಅಂಥವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿ ಗೌರವದ ಬದುಕನ್ನು ಕೊಡುತ್ತಿದ್ದೇವೆ- ಇದು ಮತಾಂತರಕ್ಕೆ ಅದು ಕೊಡುವ ಕಾರಣ! ಎಷ್ಟೊಂದು ಹಸಿ ಸುಳ್ಳು! ಭಾರತದಲ್ಲಿ ಶಿಕ್ಷಣಕ್ಕೆ, ಉದ್ಯೋಗಕ್ಕೆ ಇರುವಷ್ಟು ಮೀಸಲಾತಿ ಯಾವ ದೇಶದಲ್ಲಿದೆ? ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಡಿಸುವುದನ್ನು ಬಿಟ್ಟು ಸಂಸ್ಥೆ ಮಾಡುವ ಕೆಲಸ ಮತಾಂತರ! ಸ್ವಚ್ಛ ನೀರು ಕುಡಿಯಲು ವ್ಯಕ್ತಿಯೊಬ್ಬ ಕ್ರೈಸ್ತನಾಗಲೇಬೇಕೇ? ಸ್ವಚ್ಛ ನೀರು ಕೊಡುವ ಮನಸ್ಸಿನಲ್ಲಿ ಎಷ್ಟೆಲ್ಲಾ ಕೊಳಚೆ ಇದೆ! ಇದು ಒಂದು ಸಂಸ್ಥೆಯ ಲೆಕ್ಖ! ಇಂತಹಾ ಅನೇಕ ಸಂಸ್ಥೆಗಳು ಭಾರತಾದ್ಯಂತ ಕಾರ್ಯಾಚರಿಸುತ್ತಲೇ ಇವೆ. ಇಂತಹಾ ಆಮಿಶದ ಮತಾಂತರವನ್ನು ನಿಲ್ಲಿಸಲು ಆರ್ಚ್ ಬಿಷಪ್ ಕರೆಕೊಡಲಿ ನೋಡೋಣ.

             ಆತನ ಇನ್ನೊಂದು ಹೇಳಿಕೆ ಕ್ರೈಸ್ತ ಮಹಿಳೆಯರ ಅತ್ಯಾಚಾರವಾಗುತ್ತಿದೆ ಎಂದು. ಅತ್ಯಾಚಾರ ಎಸಗುವವರು ಯಾರು? ನನ್ಗಳನ್ನೂ ಬಿಡದೆ ಅತ್ಯಾಚಾರ ಎಸಗುತ್ತಿರುವವರು ಯಾರು? ನ್ಯಾಯ ಕೇಳಲೆಂದು ನ್ಯಾಯಾಲಯ ಬಾಗಿಲು ಬಡಿದ ನನ್ಗಳನ್ನು, ಬೀದಿಗಿಳಿದು ಪ್ರತಿಭಟನೆ ನಡೆಸಿದವರ ಮೇಲೆ ದೌರ್ಜನ್ಯ ನಡೆಸಿದವರು ಯಾರು? ಅತ್ಯಾಚಾರವೆಸಗಿದ ಆರೋಪಿಗಳನ್ನು ಹಾರ ತುರಾಯಿ ಹಾಕಿ ಸ್ವಾಗತಿಸಿದವರಾರು? ದೌರ್ಜನ್ಯಗಳಿಗೆ ಸಾಕ್ಷಿಯಾದವರನ್ನು ಸ್ಮಶಾನಕ್ಕಟ್ಟಿದವರು ಯಾರು? ಅತ್ಯಾಚಾರ ಎಸಗಿದ ಪಾದ್ರಿಗಳು ಹೇಗೆ ಬಚಾವಾಗುತ್ತಾರೆ ಎನ್ನುವುದನ್ನೆಲ್ಲಾ ಭಾರತದ ಚರ್ಚುಗಳಿಗೆ ಪ್ರಶ್ನಿಸುವ ತಾಕತ್ತು ಆರ್ಚ್ ಬಿಷಪ್ಗಿದೆಯೇ? ಸಾಧ್ಯವೇ ಇಲ್ಲ. ಯಾಕೆಂದರೆ ಅಂತಹಾ ನೈತಿಕತೆಯೇ ಆತನಿಗಿಲ್ಲ. ಕಾರಣ; ಕಳೆದ ಎಂಟು ವರ್ಷಗಳಲ್ಲಿ ಅಮೇರಿಕಾದ ಈಶಾನ್ಯ ಭಾಗವೊಂದರಲ್ಲೇ ಕ್ಯಾಥೋಲಿಕ್ ಚರ್ಚು 10.6 ಮಿಲಿಯನ್ ಡಾಲರ್ ಹಣವನ್ನು ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಪಾದ್ರಿಗಳ ಪರವಾದ ಕಾನೂನು ಹೋರಾಟಕ್ಕಾಗಿ ವ್ಯಯಿಸಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಕಡಮೆ ಮಾಡುವ ನಿಟ್ಟಿನಲ್ಲಿ ನ್ಯೂಯಾರ್ಕಿನಲ್ಲಿ ಕಳೆದ ಫೆಬ್ರವರಿಯಲ್ಲಿ ತಂದ ಕಾಯಿದೆ ಅನುಷ್ಠಾನವಾಗದಂತೆ ತಡೆಯಲು ಮೂರು ಮಿಲಿಯನ್ ಡಾಲರ್ ಹಣ ವ್ಯಯಿಸಿತ್ತು! ಪೆನ್ಸಿಲ್ವೇನಿಯಾದಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮುನ್ನೂರು ಪಾದ್ರಿಗಳನ್ನು ರಕ್ಷಿಸಲು ಐದು ಮಿಲಿಯನ್ ಹಣ ಕೊಟ್ಟು ಲಾಬಿ ಮಾಡಿತ್ತು! ಇವೆಲ್ಲಾ ಜಗತ್ತಿನ ಕೆಲವು ಭಾಗಗಳ, ಬೆಳಕಿಗೆ ಬಂದ ಸುದ್ದಿಗಳು. ಜಗತ್ತಿನೆಲ್ಲೆಡೆ ಹಬ್ಬಿರುವ ಈ ಮತಾಂತರಿಗಳು ಮಾಡಿರುವ ಪಾಪ ಅದೆಷ್ಟೋ? ಅವರೇ ಅತ್ಯಾಚಾರಕ್ಕೆ ಬೆಂಬಲವಾಗಿ ನಿಂತಿರುವಾಗ ಭಾರತದ ಪಾದ್ರಿಗಳು ಮಾಡುವ ಅತ್ಯಾಚಾರವನ್ನು ಖಂಡಿಸಲು ನಾಲಿಗೆಯಾದರು ಹೇಗೆ ಹೊರಳೀತು?

             ಮತಾಂತರಕ್ಕೆ ಹೊರಗಿನಿಂದ ಬರುತ್ತಿದ್ದ ಹಣ ಬಹುತೇಕ ನಿಂತ ಮೇಲೂ ಮತಾಂತರ ಏಕೆ ನಿಂತಿಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇತ್ತೀಚೆಗೆ ಆರ್ಗನೈಸರ್ ಪತ್ರಿಕೆ ಅದಕ್ಕಿರುವ ಕೆಲವು ಕಾರಣಗಳನ್ನು ವಿಶ್ಲೇಷಿಸಿದೆ. ಎನ್ಜಿಓಗಳಿಗೆ ವಿದೇಶದಿಂದ ನೇರ ದೇಣಿಗೆ ಬರುವುದಕ್ಕೆ ಕಡಿವಾಣ ಹಾಕಿದ ಬಳಿಕ, ಅವು ಬಹುರಾಷ್ಟ್ರೀಯ ಕಂಪೆನಿಗಳನ್ನು ಅಪ್ಪಿಕೊಂಡವು. ಬಹುರಾಷ್ಟ್ರೀಯ ಸಂಸ್ಥೆಗಳು ಈ ಮತಾಂತರಿ ಸಂಸ್ಥೆಗಳನ್ನು ತಮ್ಮ ಪಾಲುದಾರರನ್ನಾಗಿ ಮಾಡಿಕೊಂಡು ಅವುಗಳಿಗೆ ಹಣ ಪಾವತಿ ಮಾಡುತ್ತಿದ್ದು ಅವೆಲ್ಲಾ ಮತಾಂತರ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ. ಬ್ಲೂಡಾರ್ಟ್, ಓಯಸಿಸ್ನಂತಹಾ ಕಂಪೆನಿಗಳು ಹಳ್ಳಿಗಳಲ್ಲಿ ಶಿಕ್ಷಣ, ಪರಿಸರದ ಹಸಿರೀಕರಣ, ಅನಾಥ ಮಕ್ಕಳಿಗೆ ಆಶ್ರಯ ಮುಂತಾದ ಯೋಜನೆಗಳಡಿಯಲ್ಲಿ ಮತಾಂತರ ಕಾರ್ಯಕ್ಕೆ ಬೆಂಬಲ ನೀಡುತ್ತವೆ. ಓಯಸಿಸ್ ಅಂತೂ ನೇರವಾಗಿ ಭಾರತದ ಚರ್ಚುಗಳ ಜೊತೆಗೂಡಿ ಕೆಲಸ ಮಾಡುತ್ತದೆ. ತನ್ನ ಪ್ರತಿಯೊಂದು ಲೇಖನ, ಜಾಲತಾಣದಲ್ಲಿ ಬೈಬಲ್ಲಿನ ವಾಕ್ಯಗಳನ್ನು ಅಣಿಮುತ್ತಿನಂತೆ ಉದುರಿಸುತ್ತದೆ. ತನ್ನೆಲ್ಲಾ ಸಾಮಾಜಿಕ ಕಾರ್ಯಗಳಿಗೆ ಚರ್ಚುಗಳೇ ಪಾಲುದಾರರಾಗಬೇಕೆಂದು ನೇರವಾಗಿ ಹೇಳಿಕೊಳ್ಳುತ್ತದೆ. ಮತಾಂತರ ಪರವಾಗುಳ್ಳ ಲೇಖನಗಳನ್ನು ತನ್ನ ವೆಬ್ಸೈಟಿನಲ್ಲಿ ಪ್ರಕಟಿಸುತ್ತದೆ. ಮತಾಂತರಿ ಸಂಗೀತಗಾರರನ್ನೇ(ಕ್ರಿಸ್ತನ ಕೀರ್ತನೆ ಹಾಡುವವರು) ಕರೆದು ಸಮಾರಂಭ ಏರ್ಪಡಿಸುತ್ತದೆ! ಇಂತಹಾ ಹಲವು ಬಹುರಾಷ್ಟ್ರೀಯ ಸಂಸ್ಥೆಗಳು ಮತಾಂತರಕ್ಕೆ ಬೆಂಗಾವಲಾಗಿ ನಿಂತು ತಮ್ಮ ತೆರಿಗೆಯ ಕೆಲ ಭಾಗವನ್ನೂ ಉಳಿಸಿಕೊಳ್ಳುತ್ತವೆ! ಸ್ವಾಮಿ ಕಾರ್ಯ & ಸ್ವಕಾರ್ಯ! ಆರ್ಚ್ ಬಿಷಪ್ಗಳ ಆಶೀರ್ವಾದವಿಲ್ಲದೆ ಇದೆಲ್ಲಾ ಹೇಗೆ ನಡೆದೀತು?

              ಅಸ್ಪೃಶ್ಯತೆ ಒಂದು ಶಾಪವೇ. ಯಾರು ಮಾಡಿದರೂ ಅದು ತಪ್ಪೇ. ಆದರೆ ಅದು ಹಿಂದೂಗಳಲ್ಲಿ ಮಾತ್ರ ಇರುವುದೇ? ಕ್ರೈಸ್ತರಲ್ಲಿ ದಲಿತ ಕ್ರೈಸ್ತರಿಗೆಂದು ಪ್ರತ್ಯೇಕ ಚರ್ಚುಗಳು ಯಾಕಿವೆ? ಮೇಲ್ವರ್ಗದ ಕ್ರೈಸ್ತರು ಹಾಗೂ ದಲಿತ ಕ್ರೈಸ್ತರ ನಡುವೆ ವಿವಾಹಾದಿ ಸಂಬಂಧಗಳು ಏಕೆ ಏರ್ಪಡುವುದಿಲ್ಲ? ಇತ್ತೀಚೆಗಷ್ಟೇ ಕೆವಿನ್ ಎನ್ನುವ ದಲಿತ ಕ್ರೈಸ್ತನೊಬ್ಬ ಮೇಲ್ವರ್ಗದ ಕ್ರೈಸ್ತ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಆತನ ಕೊಲೆಯಾಗಿತ್ತು. ಚರ್ಚಿನ ಪಕ್ಕ ಬೋರ್ ವೆಲ್ ಹಾಕಿಸಿ ಕ್ರೈಸ್ತರಿಗೆ ಮಾತ್ರ ಎನ್ನುವಂತಹಾ ಪ್ರಕರಣಗಳು ಯಾಕೆ ನಡೆದವು? ಇವೆಲ್ಲಾ ಅಸ್ಪೃಶ್ಯತೆಯ ಪಟ್ಟಿಯೊಳಗೆ ಸೇರುವುದಿಲ್ಲವೇ? ಇಂತಹುದನ್ನು ಖಂಡಿಸುವ ಮಾತುಗಳು ಆತನಿಂದ ಬಂದೀತೇ? ಸಂಪೂರ್ಣ ಕ್ರೈಸ್ತ ಮಯವೇ ಆದ ಬಳಿಕವೂ ಆಫ್ರಿಕಾದ ದೇಶಗಳು ಯಾಕೆ ಬಡವರಾಗಿಯೇ ಉಳಿದಿವೆ? ಹಿಂದೂ ಧರ್ಮವನ್ನು, ದೇವತೆಗಳನ್ನು ನಿಂದಿಸುವಂತಹಾ ಪುಸ್ತಕಗಳು ಚರ್ಚುಗಳಿಂದ ಯಾಕೆ ಪ್ರಕಟಿಸಲ್ಪಟ್ಟವು? ಭಾರತೀಯ ಸಂವಿಧಾನದ ಪರಿಚ್ಛೇದ 25(1)ರ ಪ್ರಕಾರ ಮತ ಪ್ರಚಾರ ಮಾಡಬಹುದಾದರೂ ವ್ಯಕ್ತಿಯೊಬ್ಬನ ನಂಬಿಕೆಯ ವಿರುದ್ಧ ಪ್ರಚಾರ ಮಾಡಿ, ಆತನನ್ನು ಮರುಳುಗೊಳಿಸಿ ಮತಾಂತರ ಮಾಡುವ ಹಾಗಿಲ್ಲ. ಹಾಗಿದ್ದರೂ ಹಿಂದೂ ದೇವರುಗಳನ್ನು ಯೇಸು, ಮೇರಿಯಂತೆ ನಕಲಿಸಿ, ಹಿಂದೂ ಧರ್ಮಗ್ರಂಥಗಳನ್ನು, ಆಚರಣೆಗಳನ್ನು ನಕಲಿಸಿ, ಯೇಸುವಿನ ವಿಭೂತಿ ಎಂದು ಉತ್ತೇಜಕ ವಸ್ತುಗಳನ್ನು ಅದರಲ್ಲಿ ಹಾಕಿ, ವೃದ್ದಾಶ್ರಮ ,ಕುಷ್ಠರೋಗ ನಿರ್ಮೂಲನ ಕೇಂದ್ರದಂತಹಾ ಸೇವಾ ಸಂಸ್ಥೆಗಳ ಹೆಸರುಗಳಡಿಯಲ್ಲಿ, ಹಣ, ಉದ್ಯೋಗಗಳ ಆಮಿಶಗಳನ್ನೊಡ್ಡಿ ಮಾಡುವ ಕಾನೂನು ಬಾಹಿರ ಮತಾಂತರಗಳನ್ನು ಮಾಡದಿರುವಂತೆ ಆಜ್ಞಾಪಿಸಲು ಚರ್ಚ್ ಬಿಷಪ್ ಸಿದ್ಧನಿದ್ದಾನೆಯೇ?

              ಆರ್ಚ್ ಬಿಷಪ್ ಭಾರತಕ್ಕೆ ಬರುವುದಕ್ಕೆ ಯಾರದ್ದೂ ವಿರೋಧವಿಲ್ಲ. ಆದರೆ ಆತ ಹಿಂದೂಗಳನ್ನು, ಬಲಪಂಥೀಯ ಸರಕಾರವನ್ನು ವಿನಾ ಕಾರಣ ದೂಷಿಸುವ ಬದಲು ತನ್ನವರು ಮಾಡುವ ಮತಾಂತರವನ್ನು ನಿಲ್ಲಿಸಲು ಕರೆ ಕೊಡಲಿ; ಮತಾಂತರ ಕಾರ್ಯಗಳನ್ನು ನಿಲ್ಲಿಸಲಿ. ಆಗ ಆತನ ಆಗಮನವನ್ನೂ ಬಲಪಂಥೀಯರೂ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತಾರೆ. ಕೃಣ್ವಂತೋ ವಿಶ್ವಮಾರ್ಯಮ್ ಎಂದ ಹಿಂದೂಗಳಿಗೆ ಅದು ರಕ್ತಗುಣ. ಹಿಂದೂಗಳೂ ಮತಾಂತರದ ಕುರಿತು ಎಚ್ಚರಿಕೆ ವಹಿಸಬೇಕು. ಎಲ್ಲವನ್ನೂ ಸರಕಾರವೇ ಮಾಡಲು ಸಾಧ್ಯವಿಲ್ಲ. ಆಂಧ್ರದ ಕಡಪ ಜಿಲ್ಲೆಯ ಕೆಸಲಿಂಗಪಲ್ಲಿಯ ಗ್ರಾಮಸ್ಥರು 2017ರಲ್ಲಿ ಕೈಗೊಂಡಂತೆ ಮತಾಂತರವಾದವರನ್ನು ಶುದ್ಧೀಕರಣಗೊಳಿಸಿ, ಮತಾಂತರಿಗಳು ತಮ್ಮ ಊರೊಳಗೆ ಕಾಲಿಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಒಗ್ಗಟ್ಟಾಗಿ ಕೈಗೊಂಡರೆ ಮತಾಂತರ ತಾನೇ ತಾನಾಗಿ ನಿಲ್ಲುತ್ತದೆ.