ಪುಟಗಳು

ಮಂಗಳವಾರ, ಜನವರಿ 23, 2018

ಭಾರತೀಯರು ಹಿಂದುಳಿದಿದ್ದಾರೆ...ಕಾಂಗ್ರೆಸ್ಸಿನ ಕುಟಿಲ ನೀತಿಗಳನ್ನು ಅರಿಯುವಲ್ಲಿ!

ಭಾರತೀಯರು ಹಿಂದುಳಿದಿದ್ದಾರೆ...ಕಾಂಗ್ರೆಸ್ಸಿನ ಕುಟಿಲ ನೀತಿಗಳನ್ನು ಅರಿಯುವಲ್ಲಿ!


         ರಾಜಸ್ಥಾನದಲ್ಲಿ ಗುಜ್ಜರರನ್ನು ಮೀಸಲಾತಿಗಾಗಿ ಪ್ರತಿಭಟಿಸುವಂತೆ ಪ್ರೇರೇಪಿಸಿದರು. ಹರ್ಯಾಣದಲ್ಲಿ ಜಾಟರನ್ನು ಮೀಸಲಾತಿಯ ವಿಚಾರವನ್ನೇ ಹಿಡಿದುಕೊಂಡು ಎತ್ತಿ ಕಟ್ಟಿದರು. ಗುಜರಾತಿನಲ್ಲಿ ಪಟೇಲರ ನಡುವೆ ಒಡಕು ಮೂಡಿಸಿದರು. ಕರ್ನಾಟಕದಲ್ಲಿ ಲಿಂಗಾಯತರನ್ನು ಛಿದ್ರಗೊಳಿಸಿದರು. ಮೊನ್ನೆ ಮೊನ್ನೆ ಮಹಾರಾಷ್ಟ್ರದಲ್ಲಿ ದಲಿತರನ್ನು ಬೀದಿ ಕಾಳಗಕ್ಕೆ ಎಳೆತಂದರು. ಇವೆಲ್ಲವೂ ಕಾಂಗ್ರೆಸ್ ಅಧಿಕಾರವಿಲ್ಲದ, ಸುವ್ಯವಸ್ಥಿತವಾಗಿ ಸುಸೂತ್ರವಾಗಿ ಆಡಳಿತ ಯಂತ್ರ ಚಾಲನೆಯಲ್ಲಿರುವ, ಅಭಿವೃದ್ಧಿಯತ್ತ ಸಾಗುತ್ತಿರುವ ರಾಜ್ಯಗಳಲ್ಲೇ ಅದರಲ್ಲೂ ಚುನಾವಣೆ ಹತ್ತಿರ ಬಂದಾಗಲೇ ನಡೆಯುತ್ತವೆ! ಏಕೆ? ಕಾಂಗ್ರೆಸ್-ಕಮ್ಯೂನಿಸ್ಟರ ಮನಃಸ್ಥಿತಿ, ಚಿಂತನೆಯೇ ಅಂತಹದ್ದು. ಕಳೆದ ಏಳು ದಶಕಗಳಲ್ಲಿ ಅವರು ಮಾಡಿದ್ದೇ ಅದನ್ನು. ಹಾಗೆ ಜಾತಿ ಜಾತಿಗಳನ್ನು ಎತ್ತಿ ಕಟ್ಟಿಯೇ ಅವರು ಅಧಿಕಾರವನ್ನು ಅನುಭವಿಸಿದ್ದು. ಅಧಿಕಾರ ಕೈಯಲ್ಲಿ ಇಲ್ಲದೇ ಇದ್ದಾಗ ಕಾಕ(ಕಾಂಗಿ+ಕಮ್ಯೂನಿಸ್ಟ್)ಗಳ ಮೆದುಳಿನಲ್ಲಿ ಅಧಿಕಾರವನ್ನು ಮರಳಿ ಪಡೆಯುವುದು ಹೇಗೆಂಬ ಉಪಾಯಗಳೇ ಓತಪ್ರೋತವಾಗಿ ಹರಿದಾಡಲು ಶುರು ಮಾಡುತ್ತವೆ. ಅಂತಹ ಉಪಾಯಗಳೆಲ್ಲಾ ಕುತಂತ್ರಗಳೇ ಆಗಿದ್ದು ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಸರಕುಗಳೇ ಆಗಿರುತ್ತವೆ. ಆದರೆ ಕಾಂಗ್ರೆಸ್ಸಿನ ಬೆಣ್ಣೆಯಿಂದ ಕೂದಲೆಳೆದಂತಹ ನಯವಾದ ಮಾತುಗಳನ್ನೇ ಮತ್ತೆ ಮತ್ತೆ ಕುರುಡಾಗಿ ನಂಬುವ ಸಮಾಜ ತನ್ನೊಳಗೇ ಆಂತರಿಕ ಕ್ಷೋಭೆಯನ್ನು ಸೃಷ್ಟಿಸಿಕೊಂಡು ದೇಶವನ್ನು ಮತ್ತಷ್ಟು ಹಿಂದಕ್ಕೊಯ್ಯುತ್ತದೆ.

         ಕೋರೇಗಾಂವ್. 1818ರಲ್ಲಿ ಭಾರತದ ಇತಿಹಾಸವನ್ನು ಬದಲಿಸಿದ ಒಂದು ಯುದ್ಧ ನಡೆದದ್ದು ಇದೇ ಸ್ಥಳದಲ್ಲಿ. ಯಾವ ಮರಾಠ ಸಾಮ್ರಾಜ್ಯ ಅಕ್ಷರಶಃ ಇಡಿಯ ಭಾರತವನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತೋ ಅದಕ್ಕೀಗ ಒಳಗೊಳಗೆ ಗೆದ್ದಲು ಹಿಡಿಯಲಾರಂಭಿಸಿತ್ತು.  ಹೋಳ್ಕರ್, ಗಾಯಕ್ವಾಡ್, ಸಿಂಧಿಯಾಗಳು ಎರಡನೇ ಬಾಜೀರಾಯನ ವಿರುದ್ಧ ಕತ್ತಿ ಮಸೆದಿದ್ದರು. ಯಾವ ಎರಡನೇ ಬಾಜೀರಾಯ 1775ರಲ್ಲಿ ನಿಜಾಮರೊಡನೆ ನಡೆದ ಯುದ್ಧದಲ್ಲಿ, ಮರಾಠ ಸೈನಿಕರಲ್ಲಿ ಕೆಲವರು, ಮಹಾರ್ ಸೈನಿಕರು ತಮ್ಮಿಂದ ಅಂತರವಿಟ್ಟುಕೊಂಡು ಡೇರೆ ಹಾಕಬೇಕು ಎಂದಾಗ "ಯುದ್ಧಭೂಮಿಯಲ್ಲಿ ಯಾರ ಖಡ್ಗ ಶತ್ರುವಿನ ರಕ್ತ ಹೀರುತ್ತದೋ ಅದೇ ಹೆಚ್ಚು ಪವಿತ್ರ" ಎಂದು ಘೋಷಿಸಿದ್ದನೋ ಅವನದ್ದೇ ಆಡಳಿತದ ಕೊನೆಗಾಲದಲ್ಲಿ ಕ್ಸುತಿತ ಬುದ್ಧಿಯ ಕೆಲವರಿಂದಾಗಿ ಮಹಾರ್ ಯೋಧರು ಹಾಗೂ ಪೇಶ್ವೆಗಳ ನಡುವಿನ ಸಂಬಂಧ ಹಳಸಲಾರಂಭಿಸಿತು. ಬಾಜೀರಾಯ ಹಣಕ್ಕಾಗಿ ಗ್ರಾಮಗ್ರಾಮಗಳನ್ನೇ ಗುತ್ತಿಗೆ ಕೊಡುವ ಮಟ್ಟಕ್ಕಿಳಿದ. ಅಲ್ಲಿವರೆಗೆ ಮರಾಠಾ ಸಾಮ್ರಾಜ್ಯದ ಪರವಾಗಿದ್ದ ಮಹಾರರು ಅಸ್ಪೃಶ್ಯತೆ ಹಾಗೂ ತಮಗಾಗಿದ್ದ ಅವಮಾನಗಳಿಂದ ಕುದ್ದು ಬಾಜೀರಾಯನ ವಿರುದ್ಧ ಟೊಂಕ ಕಟ್ಟಿದರು. ಹೀಗೆ ಅಖಂಡ ಭಾರತವನ್ನು ಅಖಂಡವಾಗಿ ಆಳುವ ಕನಸು ಕಂಡಿದ್ದ ಪೇಶ್ವೆಗಳ ಸಾಮ್ರಾಜ್ಯ ಆಂತರಿಕ ಕಲಹದಿಂದ ಗೆದ್ದಲು ಹಿಡಿದು ಟೊಳ್ಳಾದ ವಟ ವೃಕ್ಷದಂತೆ ನಿಂತಿತ್ತು. ಮೈಮರೆತ ಪೇಶ್ವೆಗಳು ಹಾಗೂ ತಮ್ಮ ನೈಜ ಶತ್ರುಗಳನ್ನು ಅಂದಾಜಿಸಲು ವಿಫಲರಾದ ಮಹಾರರ ನಡುವಿನ ಈ ವೈಷಮ್ಯದ ಲಾಭ ಪಡೆದ ಬ್ರಿಟಿಷರು ಮಹಾರರನ್ನು ತಮ್ಮ ಪರವಾಗಿ ತಿರುಗಿಸಿ ದುರ್ಬಲನಾದ ಎರಡನೇ ಬಾಜೀರಾಯನನ್ನು ಮಣಿಸಿಬಿಟ್ಟರು. ಅಸ್ಪೃಶ್ಯತೆಯೆನ್ನುವ ಮಹಾಮಾರಿ ಬ್ರಿಟಿಷರಿಗೆ ಸಾರ್ವಭೌಮರಾಗಲು ಹೆಬ್ಬಾಗಿಲನ್ನು ತೆರೆದಿರಿಸಿತು. ಮಹಾರರ ವಿಜಯೋತ್ಸವದ ಪ್ರತೀಕವಾಗಿ ವಿಜಯ ಸ್ತಂಭವೊಂದು ಕೋರೆಗಾಂವ್ನಲ್ಲಿ ಸ್ಥಾಪಿಸಲ್ಪಟ್ಟಿತು. ಯಾವ ವಿಜಯ ಭಾರತವನ್ನು ದುರ್ದೆಶೆಗೆ ತಳ್ಳಿದ ಕಹಿನೆನಪಾಗಿ ಆಚರಿಸಬೇಕಾಗಿತ್ತೋ ಅದು ಮೇಲ್ಜಾತಿಯ ವಿರುದ್ಧ ಕೆಳಜಾತಿಯ ಗೆಲುವು ಎಂಬ ಸೀಮಿತ ವಿಚಾರವಾಗಿ ವಿಜೃಂಭಣೆಯಿಂದ ಆಚರಿಸಲ್ಪಡಲಾರಂಭಿಸಿತು. ಈ ಬಾರಿಯ ಇನ್ನೂರನೇ ವರ್ಷಾಚರಣೆಗೆ ಸೇರಿದ್ದವರಾದರೂ ಯಾರು? ದಿಲ್ಲಿಯಲ್ಲಿ ರಾಮ್ ಪುನಿಯಾನಿಯನ್ನು ಕರೆಸಿ ಔರಂಗಜೇಬನ ಗುಣಗಾನ ಮಾಡಿ ಶಿವಾಜಿಯನ್ನು ಬಾಯಿಗೆ ಬಂದಂತೆ ನಿಂದಿಸುವ, ಸೈನಿಕರೆಲ್ಲಾ ಅತ್ಯಾಚಾರಿಗಳು ಎಂದ ಉಮರ್ ಖಾಲಿದ್, ಬೀದಿಕಾಳಗಕ್ಕೆ ಪ್ರೇರೇಪಿಸುತ್ತಾ ಪ್ರಜಾಪ್ರಭುತ್ವವನ್ನೇ ಅಣಕಿಸುವ ಜಿಗ್ಣೇಶ್ ಮೇವಾನಿ, ದುರ್ಗಾ ಮಾತೆಯನ್ನು ವೇಶ್ಯೆಯಂತೆ ಚಿತ್ರಿಸಿ ಕಾಲೇಜು ಕ್ಯಾಂಪಸಿನಲ್ಲಿ ಮಹಿಷಾಸುರ ಜಯಂತಿ ಆಚರಿಸಿದ ವೇಮುಲನ ತಾಯಿ! ಕಣ್ಣು ಕಿತ್ತು, ಕಿವಿಗೆ ಸೀಸ ಸುರಿದರೂ ಹಿಂದೂ ಧರ್ಮವನ್ನು ಬಿಡಲೊಪ್ಪದ ಸಂಭಾಜಿಯ ಹೆಸರಿಟ್ಟುಕೊಂಡ ಬ್ರಿಗೇಡ್ ಹೈಂದವಿ ಸ್ವರಾಜ್ಯದ ಬಗ್ಗೆ ವೇದಿಕೆಯ ಒಂದು ಪಾರ್ಶ್ವದಲ್ಲಿ ಹೇಳುತ್ತಿದ್ದರೆ ಇನ್ನೊಂದು ಪಾರ್ಶ್ವದಲ್ಲಿ ಹಿಂದೂಧರ್ಮವನ್ನು ಅಳಿಸಿದಾಗಲೇ ದಲಿತರ ಕಲ್ಯಾಣ ಎಂದು ಮೆವಾನಿ ಬೊಬ್ಬಿರಿಯುತ್ತಿದ್ದ. ಪೇಶ್ವೆಗಳ ಮಹಾ ಸೈನ್ಯಕ್ಕೆ ಎದುರಾಗಿ ಬ್ರಿಟಿಷರ ಪರವಾಗಿ ಹೋರಾಡಿದ್ದೇ ವಿಜಯಗಾಥೆ ಅನ್ನುವುದಾದರೆ ಅದಕ್ಕಿಂತಲೂ ಅಪಾರ ಸಂಖ್ಯೆಯ ತುರ್ಕರನ್ನು ಚಿಪ್ಳೂಣ್ ಹಾಗೂ ಪೋರ್ಚುಗೀಸರನ್ನು ವಸಾಯಿ ಯುದ್ಧದಲ್ಲಿ ಗೆದ್ದದ್ದು ಮಹಾರರಿಗೆ ಸ್ವಾಭಿಮಾನದ ವಿಜಯದ ಪ್ರತೀಕಗಳೇಕಾಗುವುದಿಲ್ಲ?

         1857ರ ಸ್ವಾತಂತ್ರ್ಯ ಸಂಗ್ರಾಮ ನೇತೃತ್ವ ವಹಿಸಿದವರು ಚಿತ್ಪಾವನ ಬ್ರಾಹ್ಮಣರಾದ ನಾನಾ ಸಾಹೇಬ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿ ರಾಣಿ ಲಕ್ಷ್ಮಿಭಾಯಿಯರು. ಆಗ ಬ್ರಿಟೀಷರ ಸೈನ್ಯದಲ್ಲಿದ್ದ ಮಹಾರ್ ರೆಜಿಮಂಟ್ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರಿಗೆ ಸಹಾಯ ಮಾಡಿತು. ಹಾಗಂತ ಈ ಯುದ್ಧವನ್ನೂ ಮಹಾರರ ವಿಜಯ ಎಂದು ಬಣ್ಣಿಸಲು ಸಾಧ್ಯವೇ? ಮೆವಾನಿ, ಖಾಲಿದ್ಗಳು ಅದಕ್ಕೂ ಹೇಸುವವರಲ್ಲ. ಯಾವ ಬ್ರಿಟಿಷರು ಮಹಾರರನ್ನು ಬಳಸಿಕೊಂಡರೋ ಅವರು ಕೆಲವೇ ಸಮಯದಲ್ಲಿ ಮಹಾರ್ ರೆಜಿಮೆಂಟನ್ನೇ ವಿಸರ್ಜಿಸಿದ್ದರು. ನಿನ್ನೆ ಮೊನ್ನೆಯವರೆಗೆ ಶಿವಾಜಿ, ಸಂಭಾಜಿಯವರನ್ನು ದರೋಡೆಕೋರರೆಂದು ಬಾಯಿಗೆ ಬಂದಂತೆ ಬಯ್ದು ಹೀಯಾಳಿಸುತ್ತಿದ್ದ ಕಾಕಗಳು ಈಗ ಇದ್ದಕ್ಕಿದ್ದಂತೆ ಶಿವಾಜಿಯ ಭಜನೆಯಲ್ಲಿ ತೊಡಗಿದ್ಯಾಕೆ ಎನ್ನುವುದನ್ನು ಯೋಚಿಸಬೇಕು. ಶಿವಾಜಿಯ ಬಗ್ಗೆ ಇರುವ ಜನಾದರವನ್ನು ಕಂಡು ಬೆದರಿರುವ ಈ ಗೋಸುಂಬೆಗಳಿಗೆ ಶಿವಾಜಿಯೂ ಓಟ್ ಬ್ಯಾಂಕ್ ಆಗಿ ಕಂಡ. ಪಕ್ಕಾ ಕಮ್ಯುನಿಷ್ಟ್ ಗೋವಿಂದ ಪನ್ಸಾರೆ ಶಿವಾಜಿಯನ್ನು ದಲಿತ ನಾಯಕನನ್ನಾಗಿಸಿ ಸಂಕುಚಿತಗೊಳಿಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ. ಭಗತ್ ಸಿಂಗರ ವಿಚಾರಧಾರೆಯನ್ನು ಸಂಘಪರಿವಾರ ಜನಮಾನಸಕ್ಕೆ ತಲುಪಿಸಲು ಯತ್ನಿಸಿದಾಗ ಕಾಕಗಳು ಅವನನ್ನು ಕಮ್ಯೂನಿಸ್ಟ್ ಮಾಡಿಬಿಟ್ಟರು. ಸ್ವಾಮಿ ವಿವೇಕಾನಂದರನ್ನೂ ತಮ್ಮ ಓಟ್ ಬ್ಯಾಂಕ್ ಹುಂಡಿಯೊಳಕ್ಕೆ ಇಳಿಸಲು ನೋಡಿದರು. ಅಷ್ಟಮಿಯ ದಿನ ಕೃಷ್ಣನಿಗೂ ಕೆಂಪು ಹಚ್ಚಿಬಿಟ್ಟರು. ಕಾಕಗಳ ಈ ರಾಜಕೀಯದಾಟ ಉಪೇಕ್ಷಿತ ಬಂಧುಗಳಿಗೆ ಅರ್ಥವಾಗಬೇಕು.

         1857ರಲ್ಲಿ ಮಂಗಲ್ ಪಾಂಡೆ ಸಿಡಿದೇಳಲು ಕಾರಣನಾದವ ಮತಾದಿನ್ ಬಾಂಗಿ ಎನ್ನುವ ಉಪೇಕ್ಷಿತನೇ. ಬರಾಕ್ ಪುರದಲ್ಲಿ ಸಿಡಿದೆದ್ದ "ಅಪರಾಧಿ"ಗಳ ಪಟ್ಟಿಯಲ್ಲಿ ಮೊದಲನೇ ಹೆಸರೇ ಮತಾದಿನ್ ಬಾಂಗಿಯದಾಗಿತ್ತು. 1857ರ ಮೇ 26ರಂದು ಚೇತಾರಾಮ್ ಜಟಾವ್, ಚತುರ್ಭುಜ ವೈಶ, ಸದಾಶಿವ ಮೆಹ್ರ ಮತ್ತು ಭಲ್ಲೂರಾಮ್ ಮೆಹತರ್ ಜೀವದ ಹಂಗು ತೊರೆದು ದಂಗೆಯೆದ್ದರು. ಭಲ್ಲೂರಾಮ್ ಹಾಗೂ ಚೇತಾರಾಮರನ್ನು ಮರಕ್ಕೆ ಕಟ್ಟಿ ಗುಂಡಿಟ್ಟು ಕೊಲ್ಲಲಾಯಿತು. ಉಳಿದವರನ್ನೆಲ್ಲಾ ಕಾಸ್ಗಂಜ್ನಲ್ಲಿ ಮರಕ್ಕೆ ನೇತುಹಾಕಲಾಯಿತು! ಬಂಕೀ ಚಾಮರ್ 18 ಜನರನ್ನು ಜತೆಗೂಡಿಸಿ ಅಲ್ಪ ಸ್ವಲ್ಪ ಶಸ್ತ್ರಾಸ್ತ್ರಗಳೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದ. ತಮ್ಮ ವಿರುದ್ಧ ದಂಗೆಯೆದ್ದ ರಾಯಬರೇಲಿಯ ರಾಜಾ ಬೇಣಿ ಮಾಧವನನ್ನು ಬ್ರಿಟಿಷರು ಕಾರಾಗೃಹಕ್ಕೆ ತಳ್ಳಿದಾಗ ಅವರ ಸರ್ಪಗಾವಲಿನಿಂದ ರಾಜನನ್ನು ಬಿಡಿಸಿಕೊಂಡ ದಲಿತ ವೀರಾಗ್ರಣಿ ವೀರ ಪಾಸೀ. ಅವನ ಹಾಗೂ ಮಕ್ಲಾ ಪಾಸೀಯ ನೇತೃತ್ವದಲ್ಲಿ ಪಾಸೀ ಜನರು ಬ್ರಿಟಿಷರನ್ನು ಅಕ್ಷರಶಃ ಅಟ್ಟಾಡಿಸಿದ್ದರು. ಈ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಪಾಸೀಗಳ ಸಂಖ್ಯೆ 2000ಕ್ಕೂ ಹೆಚ್ಚು. ಒಬ್ಬಂಟಿಗಳಾಗಿಯೇ ಹೆಬ್ಬುಲಿಯನ್ನು ಕೊಂದಿದ್ದ ಕೋರೀ ಜಾತಿಯ ಜಾಲ್ಕರೀ ಬಾ ರಾಣಿ ಲಕ್ಷ್ಮೀಬಾಯಿಯ ಪ್ರೀತಿಪಾತ್ರಳಾಗಿದ್ದವಳು. ಕೋಟೆಯ ದಂತೀಯದ್ವಾರ ಹಾಗೂ ಭಂಡಾರೀ ದ್ವಾರಗಳಲ್ಲಿ ಸೈನ್ಯವನ್ನು ಸಂಘಟಿಸಿ ಅದ್ಭುತ ಹೋರಾಟ ಮಾಡುತ್ತ ವೀರಮರಣವನ್ನಪ್ಪಿದ ವೀರ ನಾರಿ ಆಕೆ. ಬೇಗಂ ಹಜರತ್ ಮಹಲಳ ಸೇನಾನಿಯಾಗಿದ್ದ ಮಕ್ಕಾಪಾಸೀಯ ಮಡದಿ ಉದಾ ದೇವಿ ಮರವೇರಿ ಕುಳಿತು ಏಕಾಂಗಿಯಾಗಿ 36   ಬ್ರಿಟಿಷ್ ಸೈನಿಕರನ್ನು ಗುಂಡು ಹಾರಿಸಿ ಕೊಂದಿದ್ದಳು. ಆಶಾದೇವಿ ಗುರ್ಜರೀ, ಮಹಾವೀರೀ ದೇವಿ, ಇಂದ್ರಾಕೌರ್, ಭಗವಾನೀ ದೇವಿ, ರಾಜ್ಕೌರ್, ಭಗವತೀ ದೇವಿ, ನಾಮ್ಕೌರ್, ಅವಂತೀಬಾಯಿ, ರಣವೀರೀ ವಾಲ್ಮೀಕಿ, ಸೆಹೀಜಾ ವಾಲ್ಮೀಕಿ, ಶೋಭಾ ವಾಲ್ಮೀಕಿ ಮುಂತಾದ ಅನೇಕ ವೀರ ನಾರಿಯರು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖರು. ಇವರೆಲ್ಲಾ ದಲಿತರಿಗೆ ಆದರ್ಶಪ್ರಾಯರಾಗಬೇಕಿತ್ತು. ಇವರ ನಿತ್ಯಸ್ಮರಣೆಯಾಗಬೇಕಿತ್ತು.

         ಹೇಗೆ ಬ್ರಿಟಿಷರ ಸೇನೆಯಲ್ಲಿ ದಲಿತರಿದ್ದರೋ ಅದೇ ರೀತಿ ಬ್ರಿಟಿಷರ ವಿರುದ್ಧ ಸೈನ್ಯ ಸಂಘಟಿಸಿ ಹೋರಾಡಿದವರಲ್ಲಿಯೂ ದಲಿತರಿದ್ದರು. ಮೇಲ್ವರ್ಗ-ಕೆಳವರ್ಗ ಎಂಬ ಭೇದಭಾವವಿಲ್ಲದೆ ಎರಡೂ ಕಡೆ ಭಾರತೀಯರಿದ್ದರು. ಹೀಗಿರುವಾಗ ಯಾರು ತಮ್ಮ ತಮ್ಮ ನಡುವಿನ ಕಹಿಗಳನ್ನು ಮರೆತು ದೇಶ ಹಿತಕ್ಕಾಗಿ ಸ್ವಾತಂತ್ರ್ಯದ ಉತ್ಕಟ ಬಯಕೆಯಿಂದ ಹೋರಾಡಿದರೋ ಅವರು ಮೇಲ್ವರ್ಗ-ಕೆಳವರ್ಗ ಎಂಬ ಭೇದವಿಲ್ಲದೆ ಎಲ್ಲರಿಗೂ ಪ್ರಾತಃಸ್ಮರಣೀಯರಾಗಬೇಕಿತ್ತು. ಆದರೆ ಕೆಲವೊಮ್ಮೆ ಅಸಹಾಯಕನಾದ, ತಮ್ಮವರ ಹೀಗಳಿಕೆಯಿಂದ ಜರ್ಝರಿತನಾದ ಮನುಷ್ಯನಿಗೆ ಶತ್ರುವಿನ ಬಣ್ಣದ ಮಾತುಗಳು ಬೆಣ್ಣೆ ಸವಿದಂತೆ ಅನಿಸುತ್ತದೆ. ಕೋರೇಗಾಂವದಲ್ಲಿ ಆದದ್ದೂ ಅದೇ. ಇರಲಿ ಭಾರತದ ಇತಿಹಾಸವನ್ನು ಬದಲಿಸಿದ ಘಟನೆಯನ್ನು ತಮ್ಮ ಅಹಂಕಾರಕ್ಕೆ ಮೇಲ್ವರ್ಗ ಅನುಭವಿಸಿದ ಪಾಠ ಎಂದು ಕರೆದು ಮರೆತುಬಿಡೋಣವೇ ಎಂದರೆ ಅದನ್ನು ಮರೆಯಲು ಕಾಕಗಳು ಬಿಡುತ್ತಿಲ್ಲ. ಅಸ್ಪೃಶ್ಯತೆಯ ತುಣುಕು ತುಣುಕುಗಳೂ ಮರೆಯಾಗುತ್ತಿರುವ ಕಾಲದಲ್ಲಿ ಕೆಳವರ್ಗವನ್ನು ಮೇಲ್ವರ್ಗದ ವಿರುದ್ಧ ಎತ್ತಿಕಟ್ಟುತ್ತಿರುವ ಮೆವಾನಿಯಂತಹ ಕ್ರಿಮಿಯನ್ನು ಅಭಿನವ ಅಂಬೇಡ್ಕರರೆಂದು ಕರೆದು ಉಪಚರಿಸುತ್ತಿರುವವರ ಮೂರ್ಖತನಕ್ಕೆ ಏನೆನ್ನಬೇಕು? ಕೋರೇಗಾಂವಿನಲ್ಲಿ 22 ಮಹಾರರ ಬಲಿದಾನವೇ ಶ್ರೇಷ್ಠ ಎನ್ನುವುದಾದರೆ ಭಾರತೀಯ ಸೇನೆಯ ಮಹಾರ್ ರೆಜಿಮೆಂಟಿನಲ್ಲಿದ್ದುಕೊಂಡು ವೀರ ಮರಣವನ್ನಪ್ಪಿದ 400 ಮಹಾರರ ಬಲಿದಾನ ತುಚ್ಛವೇ? ಪರಮವೀರಚಕ್ರಾದಿಯಾಗಿ ಅವರು ಪಡೆದ ಸೇನಾಮೆಡಲ್ಲುಗಳು ಮಹಾರರ ವೀರತ್ವದ, ದೇಶಪ್ರೇಮದ ಪ್ರತೀಕವಲ್ಲವೇ? ಹಿಂದೂಸ್ಥಾನಕ್ಕೆ ಜೈಕಾರ ಹಾಕುವ ಮಹಾರ್ ರೆಜಿಮೆಂಟಿನ ರಣಘೋಷ ದಲಿತರಿಗೆ ಆದರ್ಶವಾಗಬೇಕೆ ಅಥವಾ ಹಿಂದೂ ಧರ್ಮವನ್ನು ಒದ್ದೋಡಿಸಬೇಕೆನ್ನುವ ಮೆವಾನಿಯೇ?

         ಇದಕ್ಕೆಲ್ಲ ಏನು ಕಾರಣವೇನು ಎಂದು ಅವಲೋಕಿಸಿದರೆ ಮತ್ತದೇ ಆರ್ಯ ಆಕ್ರಮಣವೆಂಬ ಹಳಸಲು ವಾದ. ಇದೇ ವಾದವನ್ನು ಬಳಸಿಕೊಂಡು ದಲಿತರು ಮಾತ್ರ ಇಲ್ಲಿನ ಮೂಲನಿವಾಸಿಗಳೆಂದೂ ಮೇಲ್ವರ್ಗವೆಲ್ಲಾ ಹೊರಗಿಂದ ಬಂದು ಇಲ್ಲಿನ ಜನರನ್ನು ತಮ್ಮಡಿಯಾಳಾಗಿ ಮಾಡಿಕೊಂಡರೆಂಬ ಮೆಕಾಲೆ-ಮುಲ್ಲರ್ ಚಿಂತನೆಯನ್ನೇ ಈ ಉಪೇಕ್ಷಿತರಲ್ಲಿ ಬಿತ್ತುವ ಮೂಲಕ ಕಾಕಗಳು ಅವರ ಬ್ರೈನ್ ವಾಶ್ ಎಷ್ಟು ಮಾಡಿದ್ದಾರೆಂದರೆ ಸ್ವತಃ ದಲಿತರ ಆರಾಧ್ಯ ದೈವ ಅಂಬೇಡ್ಕರರೇ ಬೆಚ್ಚಿ ಬೀಳಬೇಕು. ಆರ್ಯ ಆಕ್ರಮಣ ವಾದವನ್ನು ಸ್ವತಃ ಅಂಬೇಡ್ಕರರೇ ಅಲ್ಲಗಳೆದಿದ್ದರು ಎನ್ನುವುದು ಅವರನ್ನು ದೇವರಂತೆ ಆರಾಧಿಸುವವರಿಗೇ ಮರೆತು ಹೋಗಿದೆ. ಯಾವ ವೀರ ಸಾವರ್ಕರ್ ಉಪೇಕ್ಷಿತರನ್ನು ಒಟ್ಟುಗೂಡಿಸಿ ಅವರ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಅವರನ್ನು ಹಿಂದೂ ಧರ್ಮದ ಅಪೇಕ್ಷಿತರನ್ನಾಗಿ ಮಾಡಿದರೋ ಅಂತಹ ವೀರ ಸಾವರ್ಕರರನ್ನೇ ಇಂದಿನ ದಲಿತರು ದೂರ ಇಟ್ಟಿದ್ದಾರೆ. ಜಾತಿ ಭೇದವಿಲ್ಲದೆ ಸರ್ವರನ್ನು ಸಮಭಾವದಿಂದ ಕಾಣುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಅವರಿಗೆ ಶತ್ರುವಿನಂತೆ ಕಂಡಿದೆ! ಜೆನೆಟಿಕ್ ಥಿಯರಿಯ ಪ್ರಕಾರ ಭಾರತೀಯರ ಮೂಲವೆಲ್ಲಾ ಒಂದೇ ಎಂದರೂ ಅವರು ಒಪ್ಪಲಾರರು. ಅಂದರೆ ಕಾಕಗಳು ಅವರನ್ನು ಮರುಳುಗೊಳಿಸಿದ ಪರಿ ಅಂತಹದ್ದು. ಇಲ್ಲದೇ ಇದ್ದರೆ ಇಲ್ಲಿ ನಾವು ಕೆಳವರ್ಗ, ಮೇಲ್ವರ್ಗದವರೆಲ್ಲಾ ಸಹಬಾಳ್ವೆಯಿಂದ ಇದ್ದೇವೆ ಎಂಬ ಕೋರೆಗಾಂವಿನ ಜನರ ಕೂಗಿನ ಬದಲು ಬರ್ಬಾದಿಯ ಅಜಾನ್ ಕೂಗುವ ಉಮರ್, ಮೆವಾನಿಗಳ ಅಬ್ಬರವೇ ಮಹಾರಾಷ್ಟ್ರವಿಡೀ ಪ್ರತಿಧ್ವನಿಸಿ ಜನಜೀವನ ಅಸ್ತವ್ಯಸ್ತವಾಗುತ್ತಿರಲಿಲ್ಲ. ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಇದೇ. ಎಲ್ಲಿಯವರೆಗೆ ಆರ್ಯ ಆಕ್ರಮಣದ ಹುಸಿ ವಾದವನ್ನು ಪಠ್ಯಪುಸ್ತಕಗಳಿಂದ ಕಿತ್ತೆಸೆದು ಸತ್ಯವನ್ನು ಬೋಧಿಸುವುದಿಲ್ಲವೋ ಅಲ್ಲಿಯವರೆಗೆ ಕಾಕಗಳ ಕೈಯಲ್ಲಿ ಕಡಿವಾಣ ಇದ್ದೇ ಇರುತ್ತದೆ.

         "ಜಾತಿ ಮತ್ತು ಪಂಥಗಳ ರೂಪದಲ್ಲಿರುವ ನಮ್ಮ ಹಳೆಯ ಶತ್ರುಗಳ ಜೊತೆಯಲ್ಲಿ ಪರಸ್ಪರ ವಿರೋಧವುಳ್ಳ ರಾಜಕೀಯ ಸಿದ್ಧಾಂತಗಳನ್ನು ಹೊಂದಿದ ರಾಜಕೀಯ ಪಕ್ಷಗಳನ್ನು ನಾವು ಪಡೆಯಲಿದ್ದೇವೆ ಎಂಬುದೇ ನನ್ನನ್ನು ಆತಂಕಗೊಳಿಸುತ್ತದೆ. ಭಾರತೀಯರು ತಮ್ಮ ರಾಜಕೀಯ ಸಿದ್ಧಾಂತಕ್ಕಿಂತ ದೇಶ ಮುಖ್ಯವೆಂದು ಎತ್ತಿ ಹಿಡಿಯುವರೇ? ಅಥವಾ ದೇಶಕ್ಕಿಂತ ಅದನ್ನೇ ಮೇಲಿನ ಸ್ಥಾನದಲ್ಲಿ ಇಡುವರೇ? ನನಗೆ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ಖಂಡಿತ. ಪಕ್ಷಗಳು ಸಿದ್ಧಾಂತವನ್ನು ದೇಶಕ್ಕಿಂತ ಮೇಲೆ ಇಟ್ಟರೆ ನಮ್ಮ ದೇಶ ಮತ್ತೊಮ್ಮೆ ವಿಪತ್ತಿಗೀಡಾಗುವುದು ಮತ್ತು ಶಾಶ್ವತವಾಗಿ ಅದನ್ನು ಕಳೆದುಕೊಳ್ಳಲೂಬಹುದು. ಅದರ ವಿರುದ್ಧ ನಾವೆಲ್ಲರೂ ಒಂದಾಗಿರಬೇಕು. ನಮ್ಮ ಕೊನೆಯ ಹನಿ ರಕ್ತ ಇರುವ ತನಕವೂ ನಾವು ನಮ್ಮ ಸ್ವಾತಂತ್ಯ್ರ ಕಾಪಾಡಿಕೊಳ್ಳಲು ದೃಢ ನಿಶ್ಚಯ ಹೊಂದಿರಬೇಕು" ಎಂದು ಅಂಬೇಡ್ಕರ್ ಕಮ್ಯೂನಿಸ್ಟ್ ಹಾಗೂ ಮುಸ್ಲಿಂ ಲೀಗುಗಳನ್ನು ಝಾಡಿಸಿದ್ದ ನೆನಪು ಅವರ ಭಕ್ತರಿಗೆ ಅರ್ಥವಾಗದೇ ಹೋದದ್ದು ಮಾತ್ರ ವಿಶಾದನೀಯ. ಇಲ್ಲದೇ ಇದ್ದರೆ ದಲಿತರು ದೇಶದ್ರೋಹಿ ಕಮ್ಯೂನಿಸ್ಟರನ್ನು ತಮ್ಮೊಳಗೆ ಬಿಟ್ಟುಕೊಂಡಿರುವುದಾದರೂ ಏಕೆ? ದಲಿತರನ್ನು ಕೊಚ್ಚಿ ಕೊಂದ ಟಿಪ್ಪುವಿನಂತಹ ಮಾನವ ದ್ರೋಹಿ ಆದರ್ಶನಾಗುವುದು ಹೇಗೆ? ಜನರ ನಂಬಿಕೆ, ಆಚರಣೆಗಳನ್ನೇ ಕಿತ್ತೆಸೆವ, ದೇಶವೆನ್ನುವ ಪರಿಕಲ್ಪನೆಯೇ ಇರದ, ಅನವರತವೂ ಶತ್ರುಗಳನ್ನು ಬೆಂಬಲಿಸುತ್ತಾ ಉಂಡ ಮನೆಗೆ ದ್ರೋಹ ಬಗೆವ ಕಮ್ಯೂನಿಸ್ಟರು ದಲಿತ ಚಿಂತಕರಿಗೆ ಹತ್ತಿರವಾದದ್ದು ಹೇಗೆ? ಕಮ್ಯೂನಿಸ್ಟರು ಅಧಿಕಾರದಲ್ಲಿದ್ದ ಬಂಗಾಳ, ಕೇರಳಗಳಲ್ಲಿ ದಲಿತರ ಸ್ಥಿತಿಗತಿಯೇನಾದರೂ ಸುಧಾರಿಸಿದೆಯೇ? ದಲಿತರನ್ನು ಮುಖ್ಯಭೂಮಿಕೆಗೆ ತರುವಲ್ಲಿ ಕಮ್ಯೂನಿಸ್ಟರು ನಿಜವಾಗಿಯೂ ಪ್ರಯತ್ನಿಸಿದ್ದಾರೆಯೇ ಎನ್ನುವುದನ್ನು ದಲಿತರು ಯೋಚಿಸಲು ಇದು ಸಕಾಲ. ದಲಿತ ನಾಯಕರಿಗೆ ಇಂದು ಅಪ್ಯಾಯಮಾನವಾಗಿರುವ ಇಸ್ಲಾಮ್ ದಲಿತರ ಮೇಲೆ ಜಿಹಾದ್ ಘೋಷಿಸುವುದಿಲ್ಲವೆಂದೇನಾದರೂ ಬರೆದು ಕೊಟ್ಟಿದೆಯೇ? ಒಂದು ವೇಳೆ ಹಾಕಿದ್ದರೂ ಬೆನ್ನಿಗೆ ಚೂರಿ ಹಾಕುವುದನ್ನು ಹುಟ್ಟಿನಿಂದಲೇ ಸ್ವಭಾವಗತವಾಗಿಸಿಕೊಂಡ, ಆಣೆ-ಪ್ರಮಾಣಗಳನ್ನೆಲ್ಲಾ ಮಾನ್ಯವೇ ಮಾಡದ ಇಸ್ಲಾಮಿಂದ ಅದನ್ನು ನಿರೀಕ್ಷಿಸಬಹುದೇ? ಪ್ರತಿನಿತ್ಯ ಎಂಬಂತೆ ಆಗುತ್ತಿರುವ ಲವ್ ಜಿಹಾದ್ ಪ್ರಕರಣಗಳಲ್ಲಿ ದಲಿತ ಯುವತಿಯರೆಷ್ಟು ಬಲಿಯಾಗುತ್ತಿಲ್ಲ? ಹಾಗಾದರೆ ತಮಗೆ ಹಿತವರು ಯಾರೆಂದು ಸಾಮಾನ್ಯ ದಲಿತರು ನಿರ್ಧರಿಸಬೇಕಲ್ಲವೇ? ಇಲ್ಲದೇ ಇದ್ದರೆ ಅವರು ತಮ್ಮ ಸಂಪ್ರದಾಯ-ಸಂಸ್ಕೃತಿ-ಪೂಜಾಪದ್ದತಿಗಳನ್ನು ಸಂಸ್ಕೃತಿ ವಿರೋಧಿಗಳಾದ ಕಮ್ಯೂನಿಸ್ಟರಿಂದ, ವಿಗ್ರಹ ಭಂಜಕ ತುರ್ಕರಿಂದ ನಾಶಪಡಿಸಿಕೊಂಡು ತಮ್ಮದಾದ ಅಸ್ಮಿತೆಯನ್ನೇ ಕಳೆದುಕೊಳ್ಳುವುದು ನಿಶ್ಚಿತ.

         ಹಾಗೆಯೇ ದಲಿತ ಸಮುದಾಯ ತಾನು ನಾಯಕರೆಂದು ಭಾವಿಸಿದವರ ಕಡೆಗೆ ಕೊಂಚ ಗಮನ ಹರಿಸುವುದು ಒಳಿತು. ಆರ್ಥಿಕವಾಗಿ, ರಾಜಕೀಯವಾಗಿ ಸದೃಢವಾಗಿರುವ ಈ ನಾಯಕರು ತಮ್ಮ ಮೀಸಲಾತಿಯನ್ನು ಬಡ ದಲಿತರಿಗಾಗಿ ಬಿಟ್ಟು ಕೊಟ್ಟಿದ್ದಾರೆಯೇ? ಆರ್ಥಿಕವಾಗಿ ಪ್ರಬಲರಾಗುಳ್ಳ ದಲಿತರ ಮಕ್ಕಳೂ ಮೀಸಲಾತಿಯ ಮೂಲಕವೇ ಶಿಕ್ಷಣ ಪಡೆಯುವುದರ ಮೂಲಕ ಎಷ್ಟು ಜನ ಬಡ ದಲಿತರು ಶಿಕ್ಷಣ ವಂಚಿತರಾಗಿಲ್ಲ? ದಲಿತರ ನಾಯಕಿಯೆಂಬಂತೆ ಬಿಂಬಿಸಿಕೊಂಡು ಉತ್ತರಪ್ರದೇಶವನ್ನಾಳಿದ ಮಾಯಾವತಿ ಕಿ.ಮೀ.ಗೊಂದರಂತೆ ಪ್ರತಿಮೆಗಳನ್ನು ನೆಟ್ಟು ದಲಿತರನ್ನು ಪ್ರತಿಮೆಗಳನ್ನಾಗಿಯೇ ಮಾಡಿದರೇ ವಿನಾ ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆಯೇ? ತಮ್ಮದು ದಲಿತ ಪರ ಸರಕಾರ ಎಂದು ಅಡಿಗಡಿಗೆ ಹೇಳುತ್ತಾ ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ದಲಿತರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ಅಂಕಿ ಅಂಶಗಳೇ ಸಾರಿ ಹೇಳುತ್ತವೆ. ಅತ್ಯಾಚಾರ ಪ್ರಕರಣಗಳು 13%ನಷ್ಟು ಹೆಚ್ಚಾಗಿದ್ದರೆ, ಕೊಲೆ ಪ್ರಕರಣಗಳು 42%ನಷ್ಟು ಹೆಚ್ಚಾಗಿವೆ. ಸಂಘ ಕಾರ್ಯಕರ್ತರ, ಅಧಿಕಾರಿಗಳ ಕೊಲೆಯನ್ನು ವ್ಯವಸ್ಥಿತವಾಗಿ ಮಾಡುತ್ತಿರುವ, ಪ್ರಕರಣಗಳನ್ನು ಮುಚ್ಚಿ ಹಾಕುತ್ತಿರುವ ಸಿದ್ದರಾಮಯ್ಯನವರ ಕೊಲೆಗಡುಕ ಸರಕಾರಕ್ಕೆ ಇದೇನೂ ದೊಡ್ಡದಲ್ಲ ಬಿಡಿ. ಒಂದಷ್ಟು ಅಂಬೇಡ್ಕರ್ ಭವನಗಳನ್ನು ಸ್ಥಾಪಿಸಿ ಬಿಟ್ಟರೆ ದಲಿತರ ಉದ್ಧಾರವಾಗುತ್ತದೆಯೇ? ಊರೂರುಗಳಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನಗಳೆಲ್ಲಾ ಈಗ ಧೂಳು ಹಿಡಿದು ಕೂತಿರುವುದು ಕಾಂಗ್ರೆಸ್ಸಿನ ದಲಿತ ಕಾಳಜಿಗೆ ಕನ್ನಡಿ ಹಿಡಿದಿದೆ. ಆರು ದಶಕಗಳಲ್ಲಿ ತಮ್ಮ ಏಳಿಗೆಗೆ ಏನೂ ಮಾಡದ ಕಾಂಗ್ರೆಸ್ಸನ್ನು ದಲಿತರೂ ಇನ್ನು ಕಣ್ಣುಮುಚ್ಚಿ ನಂಬುತ್ತಾರೆಂದರೆ ಅವರಷ್ಟು ಮೂರ್ಖರು ಯಾರೂ ಇಲ್ಲ. ಕೇಂದ್ರದ ಭಾಜಪಾ ಸರಕಾರ ಸರ್ವರಿಗೂ ಸಮಪಾಲು ಎಂಬ ಸೂತ್ರದಡಿ ಪ್ರತಿಯೊಂದು ಯೋಜನೆಯನ್ನು ಕೈಗೊಂಡಿದೆ. ಮೋದಿಯವರ ಸ್ಮಾರ್ಟ್ ಸಿಟಿಯಲ್ಲಿ ದಲಿತನಿಗೂ ಜಾಗವಿದೆ, ಬಲಿತನಿಗೂ. ಬುಲೆಟ್ ರೈಲುಗಳಲ್ಲಿ ಪ್ರಯಾಣಿಸಲು ಮೇಲ್ವರ್ಗ, ಕೆಳವರ್ಗಗಳೆಂಬ ಭೇದಗಳೇನಾದರೂ ಇದೆಯೇ? ದಲಿತರು ಇನ್ನಾದರೂ ಕಾಕಗಳ ವಿಶ್ವಾಸಘಾತುಕತನವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

         ವಾಸ್ತವದಲ್ಲಿ ಬ್ರಿಟಿಷರು ಭಾರತ ಬಿಟ್ಟು ತೆರಳುವಾಗ ಬ್ರಿಟಿಷ್ ಮಾನಸಿಕತೆ, ಬ್ರಿಟಿಷೀಯತೆಯನ್ನೂ ಒದ್ದೋಡಿಸಬೇಕಿತ್ತು. ಏನೂ ಹೋರಾಟ ಮಾಡದೆ, ಬರಿಯ ಮನವಿ ಸಲ್ಲಿಸುತ್ತಾ, ಕ್ರಾಂತಿಕಾರಿಗಳನ್ನು ದಾರಿ ತಪ್ಪಿದ ದೇಶಭಕ್ತರೆಂದು ಹೀಗಳೆಯುತ್ತಾ, ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ತಮಗಾಗಿಯೇ ಮಾಡಿದ ಸೆರೆಮನೆಗಳೆಂಬ ಅರಮನೆಗಳಿಗೆ ಭೇಟಿ ಕೊಡುತ್ತಾ ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೊನೆಗೆ ಬ್ರಿಟಿಷರನ್ನು ಒದ್ದೋಡಿಸಿದ ಹಿರಿಮೆ-ಗರಿಮೆಯನ್ನು ತನ್ನ ಕಿರೀಟಕ್ಕೆ ಅನಾಯಾಸವಾಗಿ ಸಿಕ್ಕಿಸಿಕೊಂಡ ಕಾಂಗ್ರೆಸ್ ಆಡಳಿತ ಬಂದಾಕ್ಷಣ ಅಳವಡಿಸಿಕೊಂಡಿದ್ದು ಬ್ರಿಟಿಷ್ ಮಾನಸಿಕತೆಯನ್ನೇ, ಬ್ರಿಟಿಷ್ ನೀತಿಯನ್ನೇ! ಸ್ವಜನ ಪಕ್ಷಪಾತ, ಸಮಯಸಾಧಕತನ, ತುಷ್ಟೀಕರಣವನ್ನು ಸ್ವಾತಂತ್ರ್ಯಪೂರ್ವದಲ್ಲೇ ಸಮರ್ಥವಾಗಿ ಮೈಗೂಡಿಸಿಕೊಂಡು ಮೆರೆದ ಈ ಮೈಗಳ್ಳ ಪಕ್ಷ ಬ್ರಿಟಿಷರ ಒಡೆದಾಳುವ ನೀತಿಯನ್ನು ಸುವ್ಯವಸ್ಥಿತವಾಗಿ ತನ್ನ ರಾಜಕೀಯದಲ್ಲಿ ಸೇರಿಸಿಕೊಂಡು ಆರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದ ರುಚಿಯನ್ನುಂಡಿತು. ಅಂತಹ ಪಕ್ಷ ಈಗ ಅಧಿಕಾರದಿಂದ ದೂರ ಉಳಿಯುವುದೆಂದರೆ ಸಹಜವಾಗಿಯೇ ಅದಕ್ಕೆ ಪತರಗುಟ್ಟಿದ ಅನುಭವ. ತನ್ನ ರಾಜಕೀಯ ಪಟ್ಟುಗಳನ್ನೆಲ್ಲಾ ಜನತೆ ನೆನಪಲ್ಲಿಟ್ಟುಕೊಳ್ಳುವುದಿಲ್ಲ, ಜನರ ಜ್ಞಾಪಕ ಶಕ್ತಿ ಅತ್ಯಲ್ಪ ಎನ್ನುವ ಸತ್ಯ ಕಾಂಗ್ರೆಸ್ಸಿಗೆ ಗೊತ್ತು. ಹಾಗಾಗಿ ಇಂತಹ ಎಲ್ಲಾ ಅಪಸವ್ಯವನ್ನು ಮಾಡಿಯೂ ಅದು ಜನರ ಅನುಕಂಪವನ್ನು ಗಳಿಸಿಕೊಂಡು ಸಂಭಾವಿತನಂತೆ ವರ್ತಿಸುತ್ತಲೇ ಇರುತ್ತದೆ.

ಸೂತ್ರ

ಅಲ್ಪಾಕ್ಷರಮಸಂದಿಗ್ಧಂ ಸಾರವದ್ವಿತ್ವತೋಮುಖಮ್
ಅಸ್ತೋಭಮನವದ್ಯಂ ಚ ಸೂತ್ರಂ ಸೂತ್ರವಿದೋವಿದುಃ ||

- ಸೂತ್ರದ ಆಶಯವು ಆರು ಸಂಕೇತಗಳ ತತ್ವಗಳಿಗನುಸಾರವಾಗಿ ವ್ಯಾಖ್ಯಾನಕಾರನಿಂದ ರೂಪಿಸಲ್ಪಡುತ್ತದೆ. ಅವುಗಳೆಂದರೆ: 'ಉಪಕ್ರಮ' ಮತ್ತು 'ಉಪಸಂಹಾರ', 'ಅಭ್ಯಾಸ' (ಪುನರಾವರ್ತನೆ ಅಥವಾ ಪುನರುಕ್ತಿ), 'ಅಪೂರ್ವತಾ', 'ಫಲ' , 'ಅರ್ಥವಾದ' (ಸ್ತುತಿ ಅಥವಾ ಗುಣಗಾನ) ಮತ್ತು 'ಉಪಪತ್ತಿ' (ತರ್ಕಬದ್ಧತೆ). ಯಾವ ವಾಕ್ಯದಲ್ಲಿ ಅದರ ಉದ್ದೇಶಕ್ಕೆ ಅವಶ್ಯವಾದ ಮಾತೊಂದನ್ನೂ ಬಿಟ್ಟಿಲ್ಲವೋ ಮತ್ತು ಅನವಶ್ಯಕವಾದ ಮಾತೊಂದನ್ನೂ ಸೇರಿಸಿಲ್ಲವೋ ಮತ್ತು ಯಾವುದಕ್ಕೆ ಹೊಸ ಅಕ್ಷರವನ್ನು ಸೇರಿಸಿದರಾಗಲೀ, ಇರುವುದನ್ನು ತೆಗೆದುಹಾಕಿದರಾಗಲೀ ಅಥವಾ ಅಕ್ಷರಗಳನ್ನು ಸ್ಥಾನಾಂತರ ಮಾಡಿದರಾಗಲೀ ಅರ್ಥವು ಉದ್ದೇಶಕ್ಕಿಂತ ಹೆಚ್ಚಿನದೋ, ಕಡಿಮೆಯದೋ ಅಥವಾ ಬೇರೆಯದೋ ಆದೀತೋ ಅಂತಹ ಮಿತ ಪದ ಸಂಯೋಜನೆಗೆ ಸೂತ್ರ ಎಂದು ಹೆಸರು. ಅಂದರೆ ವ್ಯರ್ಥಾಕ್ಷರಗಳಿಲ್ಲದೇ, ಮಿತಾಕ್ಷರಗಳಿಂದೊಡಗೂಡಿ ಬಹುವಿಷಯ ನಿರ್ಣಾಯಕವಾಗಿ, ಇತರ ಪ್ರಮಾಣಗಳಿಂದ ಅಲಭ್ಯವಾದ ಅರ್ಥಗಳನ್ನು ಜ್ಞಾಪಿಸುವವುಗಳಾಗಿ ಬಹುಶಾಖಾನಿರ್ಣಾಯಕಗಳಾದ ವಾಕ್ಯಗಳು - ಸೂತ್ರಗಳು.

ಜನ್ಮಾದ್ಯಸ್ಯ ಯತಃ || #ಬ್ರಹ್ಮಸೂತ್ರ
ನಾಲ್ಕೇ ಪದಗಳು:
ಅಸ್ಯ = ಈ ಜಗತ್ತಿನ
ಜನ್ಮ = ಹುಟ್ಟುವಿಕೆ
ಆದಿ = ಮೊದಲಾದದ್ದು
ಯತಃ = ಯಾವುದರಿಂದ ಉಂಟಾಗಿದೆಯೋ
ಅದೇ ಬ್ರಹ್ಮ ಎಂದು ನಾವು ಅಧ್ಯಾಹಾರ ಮಾಡಿಕೊಳ್ಳಬೇಕು.
ಸೂತ್ರವು ನಾಲ್ಕು ಪದಗಳಲ್ಲಿ ಹೇಳಿದ್ದನ್ನು ತಿಳಿಸಲು #ತೈತ್ತಿರೀಯೋಪನಿಷತ್ತು ಹದಿನೈದು ಪದಗಳನ್ನು ತೆಗೆದುಕೊಂಡಿದೆ.
"ಯತೋ ವಾ ಇಮಾನಿ ಭೂತಾನಿ ಜಾಯನ್ತೇ
ಯೇನ ಜಾತಾನಿ ಜೀವನ್ತಿ |
ಯತ್ಪ್ರಯನ್ತ್ಯಭಿಸಂವಿಶನ್ತಿ
ತದ್ವಿಜಿಜ್ಞಾಸಸ್ವ | ತದ್ಬ್ರಹ್ಮೇತಿ ||

"ಸೂತ್ರಾರ್ಥೋ ವರ್ಣ್ಯತೇ ಯತ್ರ ಪದೈಸ್ಸೂತ್ರಾನುಕಾರಿಭಿಃ
ಸ್ವಪದಾನಿ ಚ ವರ್ಣ್ಯಂತೇ ಭಾಷ್ಯಂ ಭಾಷ್ಯವಿದೋವಿದುಃ ||"

- ಸೂತ್ರಾನುಕಾರಿಪದಗಳನ್ನೇ ಉಪಯೋಗಿಸಿ ಸೂತ್ರಾರ್ಥಗಳನ್ನು ಅರಹುತ್ತಾ ಗಂಭೀರಾರ್ಥಕ ಸ್ವಪದಗಳನ್ನೂ ವಿವರಿಸುವುದು ಭಾಷ್ಯಲಕ್ಷಣ

#ಡಿವಿಜಿಯವರ #ಜೀವನಧರ್ಮಯೋಗದಿಂದ ಪ್ರೇರಿತ.

ಬುಧವಾರ, ಜನವರಿ 17, 2018

ಭೀಷ್ಮ

ಭೀಷ್ಮ

                  ಯುಗ ಸಂಧಿಕಾಲವೊಂದನ್ನು ಅದರ ಪೂರ್ವೇತಿಹಾಸ, ಧರ್ಮಗ್ಲಾನಿಯ ಕಾರಣ, ಪರಿಣಾಮ ಹಾಗೂ ನಾಶ ಜೊತೆಜೊತೆಗೆ ಜೀವನದ ಔನ್ನತ್ಯದ ಮೌಲ್ಯಾನುಸಂಧಾನಗಳನ್ನು ಸರಳವೂ ನೇರವಾಗಿಯೂ ಕಟ್ಟಿಕೊಟ್ಟ ಪಥದರ್ಶಕ ವಾಙ್ಮಯ ಮಹಾಭಾರತ. "ಅದರಲ್ಲಿರುವುದು ಎಲ್ಲೆಡೆಯೂ ಇದೆ; ಅಲ್ಲಿಲ್ಲದ್ದು ಎಲ್ಲಿಯೂ ಇಲ್ಲ" ಎಂಬ ಘನತೆಗೆ ಪಾತ್ರವಾದ ಏಕೈಕ ಇತಿಹಾಸ ಗ್ರಂಥ ಮಹಾಭಾರತ. ಅಂತಹ ಮಹಾಭಾರತ ಕವಿಗಳ ವರ್ಣನೆಯ ಭಾರಕ್ಕೆ ನಲುಗಿತು. ವಿದ್ವಾಂಸರ ವಾಗ್ವೈಭವಕ್ಕೆ ಸಿಲುಕಿತು. ಕೆಲವರು ಭಗವಾನ್ ಕೃಷ್ಣನನ್ನು ಕಥಾನಾಯಕನನ್ನಾಗಿಸಿ ಭಾರತವನ್ನೇ ಎತ್ತರಕ್ಕೇರಿಸಿದರು. ಮತ್ತೆ ಕೆಲವರಿಗೆ ಭೀಮ ಭಾರತಕ್ಕೆ ಬಲ ತುಂಬಿದಂತೆ ಕಂಡ. ಮಗದೊಬ್ಬರು ಅರ್ಜುನನ ಗಾಂಢೀವಕ್ಕೆ ಮನಸೋತರು. ಆದರೆ ಅವರ್ಯಾರೂ ಸಂಪೂರ್ಣ ಮಹಾಭಾರತದ ಉದ್ದಕ್ಕೂ ನಿಲ್ಲಲಿಲ್ಲ. ಆದರೆ ಅಲ್ಲೊಬ್ಬನಿದ್ದ. ಮಹಾ ಪ್ರತಾಪಿ; ತ್ಯಾಗಿ; ಪಿತಾಮಹ ಭೀಷ್ಮ; ಅಪ್ಪನಿಗೇ ಮದುವೆ ಮಾಡಿಸಿದವ! ಜಗಮಲ್ಲರೊಡನೆ ಬಡಿದಾಡಿ ತಮ್ಮನಿಗೆ ವಧುಗಳನ್ನು ತಂದು ಮದುವೆ ಮಾಡಿಸಿದವ! ಶತಾಯಗತಾಯ ಕುರುವಂಶದ ಏಳಿಗೆಗಾಗಿ ದುಡಿದವ. ಮೊಮ್ಮಕ್ಕಳು ಜಗಳವಾಡಿದಾಗ ಕಣ್ಣೀರ್ಗರೆದವ. ಉಪ್ಪು ತಿಂದ ಋಣಕ್ಕಾಗಿ ಪ್ರೀತಿಯ ಮೊಮ್ಮಕ್ಕಳಿಗೇ ಎದುರಾಗಿ ನಿಂದು ದಿನವೊಂದಕ್ಕೆ ದಶಸಹಸ್ರ ಯೋಧರನ್ನು ಯಮಸದನಕ್ಕಟ್ಟಿ ಭಾರತ ಯುದ್ಧವನ್ನೂ ಹತ್ತು ದಿವಸ ಆಳಿದವ. ಜಗತ್ತಿನ ಇತಿಹಾಸದಲ್ಲೇ ನಭೂತೋ ನಭವಿಷ್ಯತಿ ಎಂಬಂತೆ ಶರಶಯ್ಯೆಯಲ್ಲೇ ಮಲಗಿ ತನ್ನ ಆರಾಧ್ಯ ದೈವ ಪೂರ್ಣಪ್ರಜ್ಞನನ್ನು ಧನ್ಯತಾಭಾವದಿಂದ ನೋಡುತ್ತಲೇ ಪ್ರಾಣತ್ಯಾಗ ಮಾಡಿದ ಸ್ಥಿತಪ್ರಜ್ಞ ಇಚ್ಛಾಮರಣಿ! ಅವನು ಆವರಿಸಿದ್ದು ಇಡಿಯ ಭಾರತವನ್ನು. ಧರ್ಮವೇ ಅವನ ನಡೆಯ ಹಿಂದಿನ ಮೂಲಸ್ತ್ರೋತ. ಅಂತಹ ಭೀಷ್ಮನನ್ನು ತಾಳಮದ್ದಳೆಯ ಅರ್ಥಧಾರಿಗಳು ಅಭೂತಪೂರ್ವವಾಗಿ ಕಟ್ಟಿಕೊಟ್ಟಿರಬಹುದು. ಅದರೆ ಅವನನ್ನು ಕಥಾನಾಯಕನನ್ನಾಗಿಸಿ ಸಾವಿರಕ್ಕೂ ಹೆಚ್ಚಿನ ಪುಟಗಳ ಸಾವಿರದ ಗ್ರಂಥ ರಚಿಸಿದವರು ಸು. ರುದ್ರಮೂರ್ತಿ ಶಾಸ್ತ್ರಿಗಳು ಮಾತ್ರ. ಆ ದೃಷ್ಟಿಯಲ್ಲಿ ಅವರು ಭೀಷ್ಮರೇ!

                   ಶರಶಯ್ಯೆಯಲ್ಲಿ ಪವಡಿಸಿದ್ದ ಭೀಷ್ಮ ತನ್ನ ಬದುಕನ್ನು ಮತ್ತೊಮ್ಮೆ ಮೆಲುಕು ಹಾಕುತ್ತಾ ನಿಡುಸುಯ್ಯುವ ಸಂದರ್ಭದೊಂದಿಗೆ ಆರಂಭವಾಗುವ ವರ್ಣನೆಯೇ ಅತ್ಯಮೋಘ. ದ್ವಾಪರಯುಗವೇ ಬಳಲಿ, ಬಸವಳಿದು, ಇನ್ನು ಸಾಕು, ಎಂದು ಮಲಗಿರುವಂತಿತ್ತು ಎಂದು ಭೀಷ್ಮನ ಸ್ಥಿತಿಯನ್ನೂ, ದ್ವಾಪರ-ಕಲಿಯುಗಗಳೆರಡರ ಸಂಧಿ ಕಾಲದ ಸುಳಿವನ್ನು ಹೊರಗೆಳೆವ ಪರಿ ಅದ್ಭುತ. ಭೀಷ್ಮ ಪ್ರತಿಜ್ಞೆ, ತಾವು ಭೀಷ್ಮನ ಬಾಳಿಗೆ ಮಾಡಿದ ಅನ್ಯಾಯವೆಂದು ಶಂತನು, ಸತ್ಯವತಿಯರು ಭೀಷ್ಮಪ್ರತಿಜ್ಞೆಯೇ ತಮಗೆ ಶಾಪವಾಯಿತೆಂದು ಕೊರಗುವ ಪರಿ, ಅರಣ್ಯವಾಸಿಯಾಗಿ ಆತ್ಮಸಾಧನೆ ಮಾಡುವ ತುಡಿತವಿದ್ದರೂ ತನ್ನದೇ ಪ್ರತಿಜ್ಞೆಯ ಕಾರಣದಿಂದ ಕಾಣದ ದಾರಿ, ಕಾಶಿಯ ಪುಣ್ಯಭೂಮಿಯಲ್ಲಿ ಭರತಖಂಡದ ಬಲಾಢ್ಯರನ್ನೆಲ್ಲಾ ಕ್ಷಣಮಾತ್ರದಲ್ಲಿ ಬದಿಗೊತ್ತಿ ಪ್ರಕಟವಾಗುವ ವೀರ ವೃದ್ಧ ಯೋಧ, ಗುರುಶಿಷ್ಯರನ್ನೇ ಯುದ್ಧಕ್ಕೆಳೆದ ಹೆಣ್ಣಿನ ಕ್ರೋಧ, ಮೊಮ್ಮಕ್ಕಳ ಜಗಳ, ಭಾರತ ಕದನ ಹೀಗೆ ಭೀಷ್ಮರ ಜೀವನದ ವಿವಿಧ ಮಜಲು, ಸಂದರ್ಭಗಳಲ್ಲಿ ಅವರ ವರ್ತನೆಯ ಬಗೆಗೆ ಅವರಿಗೆ ಅಪರಾಧೀ ಪ್ರಜ್ಞೆ ಬಾಧಿಸಿದಾಗ ಶ್ರೀಕೃಷ್ಣ ಕೊಡುವ ಸಾಂತ್ವನ, ಧರ್ಮಜಾದಿಗಳ ಶೋಕತಪ್ತ ಬೀಳ್ಕೊಡುಗೆಗಳೆಲ್ಲವನ್ನೂ ಕಟ್ಟಿಕೊಡುವ ಕಥನ ಶೈಲಿ ಹಿಡಿದ ಪುಸ್ತಕವನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುತ್ತದೆ. ಮೌಲ್ಯಮೀಮಾಂಸೆ, ಸಂಕೀರ್ಣ ಸಮಾಜ ವ್ಯವಸ್ಥೆ, ಮಾನವ ಸಂಬಂಧ, ಜೀವನದ ಏಳಿಗೆ-ಅಳಿವುಗಳಲ್ಲಿ ಸೂಕ್ಷ್ಮವಾಗಿ ಕಾಣುವ ತತ್ತ್ವಜಿಜ್ಞಾಸೆ ಓದುಗರ ದ್ವೈಧಗಳಿಗೆ, ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಾಗುತ್ತವೆ.

                          ಭಾವಾತಿರೇಕಕ್ಕೆ ಒಳಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮಹಾಭಾರತ ಅಡಿಗಡಿಗೆ ಹೇಳುತ್ತದೆ. ಭೀಷಣ ಪ್ರತಿಜ್ಞೆ ದೇವವ್ರತನನ್ನು "ಭೀಷ್ಮ"ನನ್ನಾಗಿಸಿ ಕೀರ್ತಿಸಿರಬಹುದು. ಆದರೆ ಕುರುವಂಶದ ಅವಘಡಗಳಿಗೆ ಬೀಜರೂಪವಾಯಿತು. ಅದನ್ನು ಭೀಷ್ಮ ತನ್ನ ಕಣ್ಗಳಿಂದ ನೋಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ. ಜಗತ್ತಿನ ಅರಿವಿದ್ದೂ ಉಂಟಾಗುವ ದ್ವೈಧ, ದ್ವಿಮುಖತೆಗಳಿಗೆ ಸಂಕೇತ ಭೀಷ್ಮರೇ. ಭೀಷಣವಾದ ಪ್ರತಿಜ್ಞೆಯನ್ನು ಕೈಗೊಂಡವ ಅದರ ಉಳಿಕೆಗೋಸುಗ ಅನ್ಯಾಶ್ರಿತನಾಗಿ, ಸ್ವಾತಂತ್ರ್ಯವನ್ನು ಕಳೆದುಕೊಂಡು, ತನ್ನ ಆರಾಧ್ಯ ದೈವಕ್ಕೆದುರಾಗಿಯೇ ಸೆಣಸಾಡುವಂತಹ ಅನಿವಾರ್ಯತೆಗೆ ಸಿಲುಕಿದ ಪರಿ, ಎಲ್ಲಾ ಕಾಲಘಟ್ಟದಲ್ಲೂ ಕಾಣಬರುವಂತಹ ಘನವಾದ ಉದ್ದೇಶವನ್ನಿಟ್ಟುಕೊಂಡು ಅಸಹಾಯಕನಾಗುವ ಮನುಷ್ಯನ ಸ್ಥಿತಿಗೆ ರೂಪಕವೇ ಸರಿ. ಅತೀ ಆಯುಷ್ಯವೂ ಶಾಪವೇ ಎಂಬ ಮಾತು ಭೀಷ್ಮರ ವಿಚಾರದಲ್ಲಿ ನಿಜವಾಯಿತು. ಸಂನ್ಯಾಸಿಯಲ್ಲದಿದ್ದರೂ ಸಂನ್ಯಾಸಿಯ ಜೀವನ ಅವನದ್ದು. ಅರಮನೆಯಲ್ಲಿ, ಅಧಿಕಾರದ ತೋಳ್ತೆಕ್ಕೆಯಲ್ಲಿ, ಸಿರಿಸಂಪದಗಳ ನಡುವಿನಲ್ಲಿ ಸ್ಥಿತಪ್ರಜ್ಞನಂತೆ ತನ್ನ ಧ್ಯೇಯಕ್ಕಾಗಿ ಬದುಕಿದ. ಸಂಸಾರಿಯಲ್ಲದಿದ್ದರೂ ಅವನು ಸಂಸಾರಿ. ಕುರು ಸಾಮ್ರಾಜ್ಯದ ಪ್ರಜಾಜನರೆಲ್ಲಾ ಅವನ ಕುಟುಂಬ. ಅವರಿಗಾಗಿ ಮಿಡಿದವನು, ಬಡಿದಾಡಿದವನು ಅವನು. ದೇವವ್ರತನೆಂಬ ಬಾಲ, "ವ್ಯಕ್ತಿ"ಯಾಗಿ, ಭೀಷ್ಮನೆಂಬ ಮಹಾ "ವ್ಯಕ್ತಿತ್ವ"ವಾಗಿ ರೂಪುಗೊಂಡ ಪ್ರಕ್ರಿಯೆಯನ್ನು ಅಭೂತಪೂರ್ವವಾಗಿ "ಭೀಷ್ಮ"ಸದೃಶವಾಗಿಯೇ ಕಟ್ಟಿಕೊಟ್ಟಿದ್ದಾರೆ ಶ್ರೀಯುತ ಸು. ರುದ್ರಮೂರ್ತಿ ಶಾಸ್ತ್ರಿಗಳು.

ಜಗವ ಬೆಳಗಿದ ಪುಣ್ಯಗರ್ಭೆ ಸರಸ್ವತಿ ಮತ್ತೆ ಚಿಮ್ಮಿದಳು!

ಜಗವ ಬೆಳಗಿದ ಪುಣ್ಯಗರ್ಭೆ ಸರಸ್ವತಿ ಮತ್ತೆ ಚಿಮ್ಮಿದಳು!


                 ತಮಗಿಂತ ಶ್ರೇಷ್ಠರ್ಯಾರಿದ್ದಾರೆ ಎಂದು ಅಹಂನಿಂದ ಬೀಗಿದವರಿಗೆ ಅವಳು ಕ್ರಿಸ್ತನಿಂದೀಚೆಗೆ ಕಂಡಳು. ಅವರಲ್ಲೇ ಸ್ವಲ್ಪ ಮುಕ್ತ ಮನಸ್ಥಿತಿಯವರು ಕ್ರಿಸ್ತನಿಗಿಂತಲೂ ಒಂದೂವರೆ ಸಾವಿರ ವರ್ಷಗಳ ಹಿಂದಿನ ಜನ್ಮದಿನಾಂಕವನ್ನು ಅವಳಿಗೆ ಕೊಡುವ ಉದಾರತೆ ತೋರಿದರು. ಆದರೆ ಅವಳ ಕೃಪೆಯಿಂದ ಉತ್ತುಂಗಕ್ಕೇರಿದ್ದ ನಾಗರಿಕತೆಯನ್ನು ಹೊರಗಿನಿಂದ ಬಂದ ಇಂದಿನವರ ಪೂರ್ವಜರೆನಿಸಿಕೊಂಡವರು ನಾಶ ಮಾಡಿದರೆಂಬ ಕಟ್ಟು ಕತೆಯನ್ನು ಹರಿಯಬಿಟ್ಟರು. ಅಪ್ಪಟ ಸಂಶೋಧಕರು ಅವಳ ಹತ್ತಿರ ಬಂದು ಕೆದಕಿದಾಗ ಅವಳು ಮತ್ತೆ ಸಾವಿರ ವರ್ಷ ಹಿಂದೆ ಸರಿದಳು. ಆಗ ಅವಳು ಬೆಳಗಿದ್ದ ಸಂಸ್ಕೃತಿಯನ್ನು ಬೆಕ್ಕಸ ಬೆರಗಾಗಿ ಜಗತ್ತು  ನೋಡುತ್ತಿದ್ದಾಗಲೇ ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವವರ, ತಮ್ಮ ಪೂರ್ವಜರ ಬಗೆಗಿನ ಅಭಿಮಾನ ಶೂನ್ಯರ ಕಟ್ಟು ಕಥೆಗಳು ಅವಳ ಇಂದಿನ ಪೀಳಿಗೆಯವರನ್ನು ತಮ್ಮದೇ ನೈಜ ಇತಿಹಾಸವನ್ನು ನಂಬದ ಅಂಧಕಾರದಲ್ಲೇ ಉಳಿಸಿತು. ಆದರೂ ಜಗತ್ತಿಗೆ ಅವಳ ಬಗೆಗಿನ ಕುತೂಹಲ ಕಡಿಮೆಯಾಗಲೇ ಇಲ್ಲ. ಜಗವನ್ನೇ ಬೆಳಗಿದ ನಾಗರಿಕತೆಯ ಪುಣ್ಯಗರ್ಭೆಯೇ ಅವಳಲ್ಲವೇ? ಅಂತಹ ಅಪ್ಪಟ ಕುತೂಹಲಿಗಳು ಸಂಶೋಧಕರೂ ಆಗಿದ್ದು ಅವಳ ಒಡಲಿಗೆ ಇಳಿದಾಗ ಅಲ್ಲಿ ಕಂಡದ್ದು ಇನ್ನೊಂದು ಅಚ್ಚರಿ. ಅವಳು ಅದಕ್ಕಿಂತಲೂ ಮೂರು ಸಾವಿರ ವರ್ಷಗಳ ಹಿಂದೆಯೇ ಉಸಿರು ಬಿಗಿಹಿಡಿದು ಕೂತೇ ಈ ಸಂಸ್ಕೃತಿಯನ್ನು ಉದ್ಧರಿಸಿದ್ದಳು ಎನ್ನುವ ಮಹದಚ್ಚರಿ!

                       ಸರಸ್ವತಿ! ಅಂಬೀತಮೇ, ನದೀತಮೇ, ದೇವೀತಮೇ ಎಂದು ಋಗ್ವೇದದ ಎರಡನೆಯ ಮಂಡಲದ ನಲವತ್ತೊಂದನೆಯ ಸೂಕ್ತಿಯಲ್ಲಿ ಋಷಿಪುಂಗವರಿಂದ ಸ್ತುತಿಸಲ್ಪಟ್ಟ ಪರಮ ಸರಸಿರೆ. ಪರ್ವತದಿಂದ ಸಮುದ್ರದವರೆಗೆ ವಿಶಾಲ ಪ್ರವಾಹದೊಂದಿಗೆ ಹರಿಯುತ್ತಾ ಜೀವಕೋಟಿಯನ್ನು ಉದ್ಧರಿಸುವುದೆಂದು ಋಗ್ವೇದದ ಏಳನೆಯ ಮಂಡಲದಲ್ಲಿ ಹೊಗಳಿಸಿಕೊಂಡ ಜೀವನದಿ. ಎಪ್ಪತ್ತೈದಕ್ಕೂ ಹೆಚ್ಚು ಬಾರಿ ಋಗ್ವೇದದಲ್ಲಿ ಸ್ಮರಿಸಲ್ಪಟ್ಟ ದೇವಿ! ಶಿವಾಲಿಕ್ ಶ್ರೇಣಿಯಲ್ಲಿರುವ ಹರ್-ಕಿ-ಧುನ್ ಎನ್ನುವ ಹಿಮನದಿಯಿಂದ ಜನ್ಮ ತಳೆದ ಪಾವನೆ. ಆಧುನಿಕ ವಿಜ್ಞಾನಕ್ಕೆ ದೊರಕಿದ ಸಾಕ್ಷ್ಯಗಳ ಪ್ರಕಾರ 1300 ಕಿ.ಮೀ. ಉದ್ದಕ್ಕೆ ಹರಿಯುತ್ತಿದ್ದ ನದಿ. ಕಾಲ ಕಳೆದಂತೆ ಸಂಶೋಧನೆ ಹೆಚ್ಚಿದಂತೆ ಅವಳ ಉದ್ದವೂ ಹೆಚ್ಚೀತು! ಕೆಲವೆಡೆ ಹದಿನಾಲ್ಕು ಕಿ.ಮೀ.ಗೂ ಅಧಿಕ ಅಗಲವಿದ್ದಾಕೆ. ಅವಳನ್ನು ದಾಟುವುದೂ ಹರಸಾಹಸವೇ. ಮಳೆಗಾಲದಲ್ಲಿ ಮಾತ್ರವಲ್ಲ ಅವಳದ್ದು ರೌದ್ರ ರೂಪ. ಹಿಮ ಕರಗಿದಾಗಲೂ ಅವಳು ಭೀಕರಳೇ! ಋಗ್ವೇದದ ಹತ್ತು ಮಂಡಲಗಳಲ್ಲಿ ಹರಡಿರುವ 75 ಮಂತ್ರಗಳು ಅವಳ ವೈಭವವನ್ನು ಸಾರುತ್ತವೆ. ಯಜುರ್ವೇದ ಮತ್ತು ಅಥರ್ವ ವೇದಗಳಲ್ಲೂ, ಬ್ರಾಹ್ಮಣ ಮತ್ತು ಮನುಸ್ಮೃತಿಯಲ್ಲೂ ಅವಳು ಸ್ತುತಿಸಲ್ಪಟ್ಟಿದ್ದಾಳೆ. ಅವಳು ವೇದಕಾಲೀನ ಜನರ ಕಣ್ಮಣಿ. ಸಪ್ತ ಸಿಂಧು (ಏಳು ಕವಲು) ಎಂದು ಕರೆಯಲ್ಪಟ್ಟ ಲೋಕ ಪಾವನೆ. ಯಮುನೆಯ ಉತ್ತರದಲ್ಲಿ ಇಂದಿನ ಹರ್ಯಾಣ, ಪಂಜಾಬ್, ರಾಜಸ್ಥಾನಗಳ ಮೂಲಕ ಪ್ರವಹಿಸಿ ಭೃಗುಕುಚ್ಛ(ಬಹುಷಃ ಇಂದಿನ ಕಛ್)ದ ಬಳಿ ರತ್ನಾಕರದೊಂದಿಗೆ ಸಂಗಮಿಸುತ್ತಿದ್ದಳಾಕೆ. ಇದು ಉಪಗ್ರಹಗಳು ತೆಗೆದ ಚಿತ್ರದಿಂದಲೂ, ಪುರಾತತ್ತ್ವ ಸಂಶೋಧನೆಗಳು, ಇನ್ನಿತರ ವೈಜ್ಞಾನಿಕ ಸಂಶೋಧನೆಗಳಿಂದಲೂ ದೃಢಪಟ್ಟಿದೆ.

                  ಇದು 5119ನೇ ಕಲಿ ವರ್ಷ. ಅಂದರೆ ಕ್ರಿ.ಪೂ 3138ರಲ್ಲಿ ಮಹಾಭಾರತ ಯುದ್ಧ ನಡೆಯಿತು. ಇದೇನೂ ಕಟ್ಟು ಕತೆಯಲ್ಲ. ಮಹಾಭಾರತ ಯುದ್ಧದ ಸಮಯದಲ್ಲಿ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಪರೀಕ್ಷಿತ. ಅಶ್ವತ್ಥಾಮ ದರ್ಭೆಯನ್ನು ಮಂತ್ರಿಸಿ ಗರ್ಭವನ್ನು ನಿರ್ಮೂಲಿಸಲು ಪ್ರಯೋಗಿಸಿದ ಪ್ರಕರಣ ನೆನಪಿರಬೇಕಲ್ಲಾ? ಪರೀಕ್ಷಿತ ಜನಿಸಿದಾಗ ಸಪ್ತರ್ಷಿ ಮಂಡಲ ಮಘ ನಕ್ಷತ್ರದಲ್ಲಿತ್ತು. ಖಗೋಳಶಾಸ್ತ್ರ ರೀತ್ಯಾ ಅದು ಮತ್ತೆ ಅದೇ ಸ್ಥಾನಕ್ಕೆ ಬರುವುದು 2700 ವರ್ಷಗಳ ಬಳಿಕ. ಹಾಗೆ ಬಂದದ್ದು ಕ್ರಿ.ಪೂ. 438ರಲ್ಲಿ, ಆಂಧ್ರರಾಜರ ಕಾಲದಲ್ಲಿ. ಇನ್ನೂ ಒಂದು ಆಧಾರ ಏನೆಂದರೆ ಕಲಿ ಪ್ರವೇಶಿಸಿದಾಗ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂಬುದು ನಮ್ಮ ಪೂರ್ವಜರು ದಾಖಲಿಸಿದ್ದ ಅಂಶ. ಅಂದು ಚೈತ್ರ ಶುದ್ಧ ಪಾಡ್ಯವೆಂದೂ ಅವರು ದಾಖಲಿಸಿದ್ದಾರೆ. ಖಗೋಳಶಾಸ್ತ್ರಜ್ಞರು ಇಂತಹಾ ಪ್ರಕರಣ ನಡೆದದ್ದು ಕ್ರಿ.ಪೂ. 3102ರ ಫೆಬ್ರವರಿ 20ರಂದು ಎಂದು ದಾಖಲಿಸಿದ್ದಾರೆ. ಮಹಾಭಾರತ ಯುದ್ಧಕಾಲಕ್ಕೆ ಬಲರಾಮನನ್ನು ಯುದ್ಧದಿಂದ ವಿಮುಖನನ್ನಾಗಿ ಮಾಡಲು ಗೋಪ್ರಕರಣವನ್ನು ಹೂಡಿ ಶ್ರೀಕೃಷ್ಣ ಆತನನ್ನು ಪಾಪ ಪ್ರಾಯಶ್ಚಿತ್ತಾರ್ಥ ತೀರ್ಥಯಾತ್ರೆಗೆ ಕಳುಹಿಸುತ್ತಾನಷ್ಟೇ. ಆಗ ರಾಜಸ್ಥಾನದ ವಿನಾಶನ(ಉಪಮಜ್ಜನಾ)ದಲ್ಲಿ ಸರಸ್ವತಿ ಕಣ್ಮರೆಯಾಗಿದ್ದುದನ್ನು ಮಹಾಭಾರತ ದಾಖಲಿಸಿದೆ. ಮಹಾಭಾರತ ಆಕೆಯನ್ನು ವೇದಸ್ಮೃತಿ, ವೇದವತಿ ಎ೦ದು ವರ್ಣಿಸಿದೆ. ಅಂದರೆ ಆಗ ಆಕೆಯದ್ದು ನಿರಂತರ ಹರಿವಾಗಿರದೆ ಅಲ್ಲಲ್ಲಿ ವೇದಸ್ಮೃತಿಯಂತೆ ಇದ್ದಳು ಎನ್ನುವುದೇ ಇದರ ತಾತ್ಪರ್ಯ. ಮಹಾಭಾರತದ ಕಾಲಕ್ಕೆ ಕುರುಕ್ಷೇತ್ರದಲ್ಲಿ ಬ್ರಹ್ಮಸರ, ಜ್ಯೋತಿಸರ, ಸ್ಥಾನೆಸರ, ಕಾಲೇಶ್ವರಸರ ಮತ್ತು ರಾಜಸ್ಥಾನದಲ್ಲಿ ರಾವತಸರ, ಜಗಸರ, ಧಾನಸರ, ಪಾಂಡುಸರ, ವಿಜರಸರ, ಮಾತಸರ, ಬಾತಸರ, ರಾಣಸರ ಇತ್ಯಾದಿ ಸಣ್ಣಸಣ್ಣ ಸರೋವರಗಳಾಗಿ ಪರಿವರ್ತನೆ ಹೊಂದಿದ್ದಳು ಆಕೆ. ಸರಸ್ವತಿಯನ್ನು ಸರೋವರಗಳ ಮಾಲೆಯೆಂದು ಕರೆದಿದೆ ಮಹಾಭಾರತ. ಸರಸ್ವತಿ ನದಿಯು ಹೀಗೆ ಲುಪ್ತವಾಗುತ್ತ ಆದ ಸಣ್ಣಸಣ್ಣ ನೀರಿನ ಮೂಲಗಳು ಮುಂದೆ ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಬದಲಾದವು. ಇದನ್ನು ಭಾಗವತ, ವಾಯುಪುರಾಣ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣಗಳು ವರ್ಣಿಸಿವೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ವಿನಾಶನದಲ್ಲಿ ಸರಸ್ವತಿ ಕಣ್ಮರೆಯಾಗುವುದನ್ನು ಬ್ರಾಹ್ಮಣಗಳಲ್ಲಿ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ "ಸಭ್ಯತೆ, ನಾಗರಿಕತೆಗೆ ಜನ್ಮ ನೀಡಿದ ನದಿ"ಯೆಂದು, "ಅನ್ನವತಿ", "ಉದಕವತಿ"ಯೆಂದು, ಭಾಷೆ, ಜ್ಞಾನ, ವಿಜ್ಞಾನ, ಕಲೆಗಳ ದೇವಿಯೆ೦ದೂ ಕೊಂಡಾಡಿದ್ದ ವೇದಗಳು ಸರಸ್ವತಿಯ ಕಣ್ಮರೆಯನ್ನು ಉಲ್ಲೇಖಿಸಿಲ್ಲ. ಅಂದರೆ ವೇದಕಾಲದಲ್ಲಿ ಸರಸ್ವತಿ ತುಂಬಿ ನಿರಂತರವಾಗಿ ಹರಿಯುತ್ತಿದ್ದ ಪ್ರಭಾವಿ ನದಿಯಾಗಿದ್ದಳು ಎಂದಾಯಿತು. ಈಗ ವೇದಗಳ ರಚನೆ ಕ್ರಿ.ಪೂ 3138ಕ್ಕಿಂತ ಎಷ್ಟೋ ಹಿಂದಕ್ಕೆ ಹೋಯಿತು.

                        ವಿಪರ್ಯಾಸವೆಂದರೆ ಇಂದಿನ ಜನಾಂಗ ಆಧುನಿಕ ವಿಜ್ಞಾನ ಹೇಳಿದ್ದೇ ಸತ್ಯವೆಂದು ನಂಬುವಂತಹ ಶಿಕ್ಷಣ ಪಡೆದಿದ್ದು ರಾಮಾಯಣ, ಮಹಾಭಾರತ, ಪುರಾಣಾದಿಗಳು ಮಾತ್ರವಲ್ಲ ವೇದಗಳನ್ನೂ ಇತಿಹಾಸವೆಂದು ನಂಬದ ಪೀಳಿಗೆ. ಇತಿಹಾಸವನ್ನು ನಮ್ಮ ಪೂರ್ವಜರು ಕಾವ್ಯಗಳ ರೂಪದಲ್ಲಿ ಪೋಣಿಸಿದರು. ವಿಶೇಷವೆಂದರೆ ವೇದಗಳು, ಪುರಾಣಗಳಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ ಇತಿಹಾಸದ ಎಳೆಯೂ, ಶಕ್ತಿ ಸ್ವರೂಪವಾದ ಮಂತ್ರವೂ, ಮಂತ್ರದ ಮಹಿಮೆಯೂ, ಕಾವ್ಯ ಪ್ರತಿಭೆಯೂ ಕಂಡುಬರುವುದು. ಇದು ಇತ್ತೀಚೆಗೆ ಕೆಲವು ಸಾವಿರ ವರ್ಷಗಳ ಹಿಂದೆ ಬರೆದ ಪುರಾಣಗಳಲ್ಲೂ ಕಂಡು ಬರುವ ಸತ್ಯ. ಮಹಾಭಾರತದ ವಿರಾಟಪರ್ವದಲ್ಲಿ ವರುಣ ಮಂತ್ರ ಅಡಕವಾಗಿದೆ ಎಂದು ಶೃಂಗೇರಿಯನ್ನು ಬೆಳಗಿದ ಅವಧೂತ ಚಂದ್ರಶೇಖರ ಭಾರತೀ ಸ್ವಾಮಿಗಳು ಒಂದು ಕಡೆ ಹೇಳಿದ್ದನ್ನೂ, ಪ್ರಾಯೋಗಿಕವಾಗಿ ಅದನ್ನು ಮಾಡಿ ಬರದಿಂದ ನಲುಗಿದ್ದ ಹಳ್ಲಿಯಲ್ಲಿ ಮಳೆ ಬರಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು. ಹಾಗೆಯೇ ಪಾರಾಯಣಕ್ಕೆ ಯೋಗ್ಯ ಎಂದು ಸರ್ವತ್ರ ಗೌರವ ಪಡೆದುಕೊಂಡ ಎರಡೇ ಎರಡು ಪೌರಾಣಿಕ ಗ್ರಂಥಗಳಲ್ಲೊಂದಾದ ಸಪ್ತಶತೀಯಲ್ಲಿ ಇತಿಹಾಸವೂ, ಕಾವ್ಯವೂ, ಮಂತ್ರವೂ ಅಡಕವಾಗಿರುವುದು ಅದರ ಅಭ್ಯಾಸಿಗಳಿಗೆ ದೃಗ್ಗೋಚರವಾಗುವ ಸತ್ಯ. ವೇದಗಳಲ್ಲೂ ಹೀಗೆಯೇ. ಅಂದರೆ ನಮ್ಮ ಪೂರ್ವಜರ "ಎನ್ ಕೋಡಿಂಗ್" ಬಗೆಗೆ ನಾವು ಹೆಮ್ಮೆ ಪಡಬೇಕಿತ್ತು. ಆದರೇನು ಮಾಡೋಣ? ಮೆಕಾಲೆ ಶಿಕ್ಷಣಕ್ಕೆ ಪತರಗುಟ್ಟಿರುವ ಇಂದಿನ ಪೀಳಿಗೆಗೆ ಅಧ್ಯಯನದ ಆಸೆಯೂ ಇಲ್ಲ, ಇತಿಹಾಸದ ಬಗೆಗೆ ಆಸ್ಥೆಯೂ ಇಲ್ಲ. ಅವರು ನಂಬಬೇಕಾದರೆ ಆ ನಾಗರಿಕತೆಗೆ ಸಂಬಂಧಪಟ್ಟ ಕುರುಹುಗಳು ಸಿಕ್ಕಾಗಲೇ! ಹಾಗಂತ ಪುರಾತತ್ತ್ವ ಸಂಶೋಧನೆಗೆ ಹರಪ್ಪಾ, ಮೊಹೆಂಜೋದಾರೋಗಳಿಗಿಂತ ಪ್ರಾಚೀನ ನಗರಗಳು ಸಿಕ್ಕಿಲ್ಲವೆಂದಲ್ಲ. ಪಾಕಿಸ್ತಾನದ ಮೆಹರ್ ಗಢ್ ಪ್ರಾಂತ್ಯದಲ್ಲಿ ಕ್ರಿ.ಪೂ. 6500ಕ್ಕೆ ಸಂಬಂಧಿಸಿದ ಸಾಮಗ್ರಿಗಳು ಹೊರಬಿದ್ದಿತ್ತು. ಅಲ್ಲಿನ ಜನ ಕೃಷಿ ಮಾಡಿ ಜೀವಿಸುತ್ತಿದ್ದರು ಎನ್ನುವುದು ಇತಿಹಾಸ ತಿರುಚಿದವರನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಸಂಗತಿ. ಲುಂಕಾರಂಸಾರ್ನಲ್ಲಿ ದೊರೆತ ಕುರುಹುಗಳು ಕ್ರಿ.ಪೂ. 9,400ರಕ್ಕೆ ಕೊಂಡೊಯ್ದವು.

                    ಹರಪ್ಪಾ, ಮೊಹೆಂಜೋದಾರೋಗಳಿಗೆ ಸಿಂಧೂವಿದ್ದಳು. ಆದರೆ ಉಳಿದ ಕಡೆ ಸಿಕ್ಕ ನಗರಗಳು ನದಿಗಳಿಲ್ಲದೆ, ಅದೂ ಥಾರ್ ಮರುಭೂಮಿಯಲ್ಲಿ ಉಳಿದು ಬೆಳೆದಿದ್ದು ಹೇಗೆ? ಆಗ ಕಂಡವಳೇ ಸರಸ್ವತಿ. ಲ್ಯಾಂಡ್ ಸ್ಯಾಟ್, ಸ್ಪಾಟ್ ಉಪಗ್ರಹಗಳಿಗೆ ಸಿಕ್ಕಿದ ಸರಸ್ವತಿಯ ನದಿ ಪಾತ್ರ ಸಂಶೋಧಕರ ಕುತೂಹಲವನ್ನು ಹೆಚ್ಚಿಸಿತು. ಕೆಲವರು ನದಿಯ ಇಕ್ಕೆಲಗಳಲ್ಲಿ ಈ ನಾಗರಿಕತೆಗಳು ಬೆಳೆದಿದ್ದವು ಎಂದು ಊಹಿಸಿದರು. ಆದರೆ ಮಹಾಭಾರತದ ಪ್ರಕಾರ ಸರಸ್ವತಿ ಆಗ ಕಣ್ಮರೆಯಾಗಿದ್ದಳು. ಬಲರಾಮನ ತೀರ್ಥಯಾತ್ರೆಯ ಕಾಲಕ್ಕೆ ಸರಸ್ವತಿ ವಿನಾಶನದಲ್ಲಿ ಅದೃಶ್ಯಳಾಗುತ್ತಿದ್ದಳಲ್ಲಾ. ಅಲ್ಲಿಂದ ಮುಂದೆ ಒಣಗಿದ ಸರಸ್ವತಿಯ ನದೀಪಾತ್ರದಲ್ಲಿ ಸಂಶೋಧಕರು ಸಾಗಿದಾಗ ಅನೇಕ ಅಚ್ಚರಿಗಳು ಕಂಡು ಬಂದವು. ಹೀಗೆ ನಡೆದ ಉತ್ಖನನಗಳಲ್ಲಿ ಸರಸ್ವತಿ ಈ ನಾಗರಿಕತೆಗಳಿಗಿಂತ ಕನಿಷ್ಟ 3000 ವರ್ಷಗಳ ಮೊದಲೇ ಕಣ್ಮರೆಯಾಗಿದ್ದದ್ದು ಕಂಡು ಬಂತು. ಆದರೆ ಈ ನಾಗರಿಕತೆಗಳು ನೀರಿಲ್ಲದೆ ಉಳಿದದ್ದಾದರೂ ಹೇಗೆಂಬ ಸಂಶಯ ಕಾಡುವುದಿಲ್ಲವೇ? ಆ ರಹಸ್ಯವೂ ಸಂಶೋಧನೆಯಿಂದ ಹೊರ ಬಿತ್ತು. ಸರಸ್ವತಿ ಹಿಂದೆ ಹರಿದಿದ್ದ ಜಾಗಗಳಲ್ಲಿನ ಜೌಗು ನೆಲ, ಹಾಗೂ ಪ್ರಬಲವಾದ ಮುಂಗಾರಿನಿಂದಾಗಿ ತುಂಬಿ ಹರಿಯುತ್ತಿದ್ದ ಸರಸ್ವತಿ ನದೀಪಾತ್ರದ ಮೇಲೆ ಅವಲಂಬಿತವಾಗಿ ಆ ನಾಗರಿಕತೆಗಳು ಬದುಕಿದ್ದವು. ಈ ನದೀಪಾತ್ರದಲ್ಲಿ ಬೇರೆ ಬೇರೆ ಕಡೆಗಳಲ್ಲಿನ ಸುಮಾರು ನಲವತ್ತು ಮೀಟರ್ ಕೆಳಗಿನ ಮಣ್ಣಿನ ತುಣುಕುಗಳನ್ನು ಪರಿಶೀಲಿಸಿದಾಗ ಅದು ಹಿಮಾಲಯ ಶ್ರೇಣಿಯಿಂದ ಹರಿದು ಬರುವ ನದಿ ತರುವ ಮಣ್ಣನ್ನು ಪ್ರತಿಬಿಂಬಿಸಿತು. ಆ ಮಣ್ಣಿನ ಕಣಗಳಲ್ಲಿನ ಮೈಕಾ(ಕಾಗೆ ಬಂಗಾರ) ಹಾಗೂ ಝಿರ್ಕಾನ್'ಗಳನ್ನು ಡೇಟಿಂಗ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಅದು ಹೊಂದಾಣಿಕೆಯಾದದ್ದು ಒಂದೇ ನದಿಗೆ; ಅದು ಸಟ್ಲೇಜ್! ಅಲ್ಲಿಗೆ ಅದು ಸರಸ್ವತಿಯೇ ಎನ್ನುವುದು ಖಾತ್ರಿಯಾಯಿತು. ಸಿಂಧೂ, ಸಟ್ಲೇಜ್, ಚೀನಾಬ್, ಝೀಲಮ್, ರಾವಿ,ಜೋಅಬ್ ಹಾಗೂ ಬಿಯಾಸ್'ಗಳೆಂಬ ಸಪ್ತಸಿಂಧೂಗಳು ಉದ್ಭವವಾದದ್ದು ಸರಸ್ವತಿಯಿಂದಲೇ ತಾನೇ. ಅಲ್ಲಿಗೇ ನಿಲ್ಲಲಿಲ್ಲ ಈ ಸಂಶೋಧನೆ. ನಲವತ್ತು ಮೀಟರ್ ಕೆಳಗಿನ ಈ ಮಣ್ಣಿನಲ್ಲಿದ್ದ ಕ್ವಾರ್ಟ್ಜ್ ಹಾಗೂ ಇನ್ನಿತರ ಕಣಗಳ ಮೂಲಕ ವಿಕಿರಣವನ್ನು ಹಾಯಿಸಿದಾಗ ಅದರ ಎಲೆಕ್ಟ್ರಾನ್ಸ್'ಗಳು ಚದುರಿ ಒಟ್ಟಾಗಿ ಒಂದು ಸ್ಥಿರಸಮಯಗಣಕದಂತೆ ಕೆಲಸ ಮಾಡಿ ಅದು ಹಿಂದೆ ಕೊನೆಯ ಬಾರಿಗೆ ಸೂರ್ಯನ ಬೆಳಕಿಗೆ ತೆರೆದಿಟ್ಟ ಸಮಯವನ್ನು ಅಳೆಯುತ್ತದೆ. ಹೀಗೆ ದೊರೆತ ಆ ಮಣ್ಣುಗಳ ಕಣದ ಕಾಲವನ್ನು 4,800 ರಿಂದ 3,900 ವರ್ಷಗಳ ಹಿಂದಕ್ಕೊಯ್ದವು. ಇದರರ್ಥ ಆಗ ಸರಸ್ವತಿ ಹರಿಯುತ್ತಿತ್ತೆಂದಲ್ಲ; ಅದು ಹರಿದು ಹಿಮಾಲಯದಿಂದ ತಂದಿದ್ದ ಮಣ್ಣು ಕೊನೆಯ ಬಾರಿಗೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿದ್ದು ಆಗ ಎಂದು. ಅಂದರೆ ಅದಕ್ಕಿಂತ ಮೂರು ಸಾವಿರ ವರ್ಷಗಳ ಮುಂಚೆಯೇ ಸರಸ್ವತಿ ಒಣಗಿತ್ತು ಎನ್ನುವುದನ್ನು ಈ ಸಂಶೋಧನೆಯಿಂದ ಹೊರಬಿತ್ತು. ಇದು ಸರಸ್ವತಿಯ ಹರಿಯುವಿಕೆಯ ತಾಟಸ್ಥ್ಯವನ್ನು ಕ್ರಿ.ಪೂ 6000ಕ್ಕೆ ಒಯ್ಯಿತು. ಈ ಸಂಶೋಧನೆಯಲ್ಲಿ ದೊರೆತ ಇನ್ನೊಂದು ಅಂಶವೆಂದರೆ ಸರಸ್ವತಿಯ ನದಿ ಪಾತ್ರಗಳಲ್ಲಿ ಸಂಶೋಧನೆಗೆ ಉಪಯೋಗಿಸಿದ ಮಣ್ಣು ಸಣ್ಣ ಸಣ್ಣ ಸರೋವರಗಳದ್ದು ಎಂದು. ಅಲ್ಲಿಗೆ ಸರಸ್ವತಿ ಸರೋವರಗಳ ಮಾಲೆಯೆಂದು ಮಹಾಭಾರತ ಕರೆದದ್ದು ಸತ್ಯವೆಂದು ನಿರೂಪಿತವಾಯಿತು. ಹಾಗೆಯೇ ಮಹಾಭಾರತವನ್ನು ಇತಿಹಾಸವೆಂದು ಪರಿಗಣಿಸಲಾಗದು ಎನ್ನುವವರು ಬಾಯಿ ಮುಚ್ಚುವ ಕಾಲ ಬಂದಿತೆಂದು ಹೇಳಬಹುದು. ಸರಸ್ವತಿ ಈ ಹಿಂದೆ ಸುಮಾರು 15000-8000 ವರ್ಷಗಳ ನಡುವೆ ಗುಪ್ತಗಾಮಿನಿಯಾದಳು; ಆಕೆಯ ಪವಿತ್ರ ಕಣಕಣಗಳು ಇಂದಿಗೂ ಅಂತರ್ಜಲ ರೂಪದಲ್ಲಿ ಅವಳು ಹರಿದ ಭಾಗಗಳಲ್ಲಿ ನೆಲೆಯಾಗಿದ್ದು ಜೀವರಾಶಿಗೆ ಜೀವಸೆಲೆಯೇ ಆಗಿ ಉಳಿದಿದ್ದಾಳೆ ಎಂಬ ಅಂಶವೂ ಈ ಸಂಶೋಧನೆಯಲ್ಲಿ ತೋರಿಬಂತು.

                      ಸಿಂಧೂವಿನಿಂದ ಸರಸ್ವತಿಯ ಕಡೆಗೆ ಪ್ರಾಚ್ಯ ಸಂಶೋಧಕರು ಸಾಗುತ್ತಿದ್ದಂತೆ ಹರಪ್ಪಾ, ಮೊಹೆಂಜೋದಾರೋಗಳಿಗಿಂತ ಪ್ರಾಚೀನ ನಗರಿಗಳು ಒಂದರ ಹಿಂದೆ ಒಂದು ಸಿಗುತ್ತಲೇ ಇವೆ. ಸರಸ್ವತಿಯಿಂದ ಪಾಲಿತವಾದ ದೈತ್ಯ ನಗರಿ ರಾಖಿಗಡಿ ಅಥವಾ ರಾಖಿಗರ್ಹಿ. 25 ಲಕ್ಷ ಚದರ ಕಿಮೀಗಳ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿದ್ದ ಹರಪ್ಪಾ ನಾಗರಿಕತೆಯ ಮೊದಲ ಹಂತವೆಂದು ಸದ್ಯಕ್ಕೆ ಇತಿಹಾಸಕಾರರಿಂದ ಗುರುತಿಸಲ್ಪಟ್ಟ, 1200 ಎಕರೆಯಲ್ಲಿ ಹಬ್ಬಿರುವ ಅದ್ಭುತ ಪ್ರಾಚೀನ ನಗರಿ. ಅದರ ಅನುಭೂತಿಯನ್ನು ಪಡೆದುಕೊಳ್ಳಲು ನೀವು ಕನಿಷ್ಟ 10000 ವರ್ಷಗಳಿಗಿಂತಲೂ ಹಿಂದಕ್ಕೆ ಸಾಗಬೇಕು. ದೃಶದ್ವತೀಯ ದಡದಲ್ಲಿ ತೊನೆದಾಡುವ ತೆನೆಗಳು, ಜಗತ್ತಿನ ಪ್ರಥಮ ಒಳಚರಂಡಿಯ ವ್ಯವಸ್ಥೆಯುಳ್ಳ ಅಚ್ಚುಕಟ್ಟಾದ ಇಟ್ಟಿಗೆಯ ಹಾಸಿನ ರಸ್ತೆಯಲ್ಲಿ ಸಾಗುವ ಕುದುರೆಗಳ ಖರಪುಟದ ಸದ್ದು, ಪಕ್ಕದಲ್ಲೇ ಕಾಣುವ ಸುಟ್ಟ ಇಟ್ಟಿಗೆಯ, ರಸ್ತೆಯಿಂದ ನಿಗದಿಗೊಳಿಸಿದ ದೂರದಲ್ಲೇ ಕಟ್ಟಿರುವ ಎರಡು - ಮೂರಂತಸ್ತಿನ ಮನೆಗಳು, ಯಜ್ಞಶಾಲೆಯಿಂದ ಹೊರಬರುತ್ತಿರುವ ಸುಗಂಧಭರಿತ ಧೂಮ, ಕೇಳುತ್ತಲೇ ಇರಬೇಕೆನಿಸುವ ವೇದಘೋಷ, ಅದ್ಭುತ ನೀರು ಸರಬರಾಜು ವ್ಯವಸ್ಥೆ, ನೀರಾವರಿ ಕಾಲುವೆಗಳು, ಸುಸಜ್ಜಿತ ಸಾರ್ವಜನಿಕ ಉಗ್ರಾಣ, ಸುಂದರ ವಾಸ್ತುಶಿಲ್ಪವುಳ್ಳ ಕಲ್ಯಾಣಿ, ಬಗೆ ಬಗೆಯ ರತ್ನಹಾರ, ಮಣಿಹಾರಗಳನ್ನು ಧರಿಸಿದ ಲಲನೆಯರ ಕಿಲ ಕಿಲ ನಗು, ಜ್ಯಾಮಿತಿಯ ವಿವಿಧ ಆಕಾರಗಳನ್ನು ಕರಾರುವಕ್ಕಾಗಿ ಬಳಸಿ ಟೆರ್ರಾಕೋಟಾದಿಂದ ತಯಾರಿಸಿದ ನುಣುಪಾದ ಸಿಂಹ, ಚಿರತೆ, ನಾಯಿ, ಕುದುರೆ ಸಹಿತ ವಿವಿಧ ಬೊಂಬೆಗಳು, ಕುಶಲವಸ್ತುಗಳ ತಯಾರಿಕಾ ಘಟಕಗಳು, ರಸ್ತೆಯ ಪಕ್ಕದಲ್ಲೇ ಕಂಡುಬರುವ ಬಗೆಬಗೆಯ ಅಂಗಡಿಗಳು...ಅಬ್ಬಾ ಏನುಂಟು, ಏನಿಲ್ಲ; ಎಂತಹಾ ಶಿಸ್ತು! ಆದಿ ಹರಪ್ಪಾ, ಪ್ರೌಢ ಹರಪ್ಪಾ ನಾಗರಿಕತೆಯ ಒಟ್ಟು ಆರು ಹಂತದ ನಾಗರಿಕತೆಗಳನ್ನು ಈಗಲೂ ದೃಗ್ಗೋಚರಗೊಳಿಸುವ ವಿಸ್ಮಯ ನಗರಿ ರಾಖಿಗರ್ಹಿ. ಇಲ್ಲಿ ದೊರಕಿದ ಅಕ್ಕಿಕಾಳುಗಳಿಗೆ ಸರಸ್ವತಿಯ ನೀರಹನಿಗಳ ಋಣವಿದೆ. ಚೀನಾದಿಂದ ಭಾರತಕ್ಕೆ ಅಕ್ಕಿ ಬಂತು ಎನ್ನುವ ಬೊಗಳೆ ಪಂಡಿತರು ಗಮನಿಸಬೇಕಾದ ಅಂಶ ಇದು. ಬಿರ್ಹಾನದಲ್ಲಿ ದೊರಕಿದ ವಸ್ತುಗಳಂತೂ ಕಾರ್ಬನ್ ಡೇಟಿಂಗ್ ಮಾಡಿದಾಗ ಕ್ರಿ.ಪೂ 7400 ಕಾಲಕ್ಕೆ ಹೋಗಿ ಮುಟ್ಟಿದವು. ಘಗ್ಗರ್ – ಹಕ್ರಾ ನದಿಯೇ ಸರಸ್ವತೀ ಎನ್ನುವುದಕ್ಕೆ ನೈಜ ಸಂಶೋಧಕರಾರಿಗೂ ಅನುಮಾನ ಉಳಿದಿಲ್ಲ; ಭಾರತ ವಿರೋಧಿಗಳನ್ನು ಬಿಟ್ಟು! ಸರಸ್ವತಿ ನಾಗರಿಕತೆಯ ಕುರುಹುಗಳು ಕರ್ನಾಲ್, ಜಿಂದ್, ಸೋಮ್ಜತ್, ರೋಹ್ಟಕ್, ಭಿವಾನಿ, ಗುಡ್ಗಾಂವ್, ಹಿಸ್ಸಾರ್, ಕಪೂರ್ತಲ, ರೋಪಾರ್, ಮಹೇಂದ್ರಗಢ ಮುಂತಾದ ಜಿಲ್ಲೆಗಳಲ್ಲಿ ಕಂಡುಬಂದಿವೆ. ರುದ್ರನ ಆರಾಧನೆಗೆ ಬಳಸುವ ಶತಛಿದ್ರಕುಂಭವು ಸರಸ್ವತಿ ನದಿಯ ಬಹುತೇಕ ಅವಶೇಷಗಳಲ್ಲಿ ದೊರೆತಿದೆ.

                      ವಾಜಪೇಯಿ ಸರಕಾರ ಆರಂಭಿಸಿದ್ದ ಸರಸ್ವತಿಯ ಶೋಧ ಕಾರ್ಯವನ್ನು ಯುಪಿಎ ಸರಕಾರ ನಿಲ್ಲಿಸಿತ್ತು. ಆ ಸಕಾ೯ರದ ಸಚಿವ ಜೈಪಾಲ್ ರೆಡ್ಡಿ "ಸರಸ್ವತಿ ನದಿಯ ಅಸ್ತಿತ್ವವೇ ಇಲ್ಲ' ಎ೦ದು ಸ೦ಸತ್ತಿನಲ್ಲಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಹರ್ಯಾಣದಲ್ಲಿ ಹಾಗೂ ಕೇಂದ್ರದಲ್ಲಿ ಮೋದಿ ನೇತೃತ್ವದ ಭಾಜಪಾ ಸರಕಾರ ಬಂದ ಮೇಲೆ ಸರಸ್ವತಿಯ ಶೋಧಕ್ಕೆ ಮರುಜೀವ ಸಿಕ್ಕಿದೆ. ಸರಸ್ವತಿ ಹಳೆಯ ಹರಿವಿನ ಪಥದಲ್ಲಿ ಭವ್ಯ ಸರಸ್ವತಿ ಮಂದಿರವನ್ನು ಹೊಂದಿರುವ ಹರ್ಯಾಣದ ಯಮುನಾನಗರ ಜಿಲ್ಲೆಯ ಮುಸ್ತಫಾಬಾದನ್ನು ಸರಸ್ವತಿ ನಗರವೆ೦ದು ಬದಲಿಸಿಲಾಗಿದೆ. ಈಗ ಪ್ರಾಚ್ಯ ಸಂಶೋಧನ ಘಟಕಗಳಿಗೆ ಸುಗ್ಗಿಯ ಕಾಲ. ಕೇಂದ್ರ ಸರಕಾರದಿಂದ ಉನ್ನತ ಮಟ್ಟದ ಸಮಿತಿ, ಹರಿಯಾಣ ಸರಕಾರದಿಂದ "ಹರಿಯಾಣ ಸರಸ್ವತಿ ಪಾರ೦ಪರಿಕ ಅಭೀವೃದ್ಧಿ ಮ೦ಡಳಿ", ಸರಸ್ವತಿ ನದಿ ಪುನರುತ್ಥಾನ ಉದ್ದೇಶದಿ೦ದ ರಾಜಸ್ಥಾನ ಸರ್ಕಾರದಿಂದ "ರಾಜಸ್ಥಾನ ರಿವರ್ ಬೇಸಿನ್ ಅ೦ಡ್ ವಾಟರ್ ರಿಸೋಸ೯ಸ್ ಪ್ಲ್ಯಾನಿ೦ಗ್ ಅಥಾರಿಟಿ'ಗಳ ಸ್ಥಾಪನೆಯಾಗಿದೆ. ಹರಿಯಾಣ, ರಾಜಸ್ಥಾನಗಳಲ್ಲಿ ಉತ್ಖನನ ಭರದಿಂದ ನಡೆಯುತ್ತಿದೆ. ಹತ್ತುಸಾವಿರ ವರ್ಷಗಳ ಹಿಂದಿನ ರಾಖಿಗಢಿಯಂತೂ ಈಗ ಸಂಶೋಧನೆಯ ಕೇಂದ್ರ ಬಿಂದು. ಯಮುನಾ ನಗರ ಜಿಲ್ಲೆಯಲ್ಲಿ ಸರಸ್ವತಿ ಹಿಂದೆ ಹರಿದ ಜಾಗದಲ್ಲಿ ಇತ್ತೀಚೆಗೆ ಮತ್ತೆ ನೀರ ಹರಿವು ಕಾಣಿಸಿಕೊಂಡಿತ್ತು. ಹಾಗಾಗಿ ಸರಸ್ವತಿ ಮತ್ತೆ ಹುಟ್ಟುವ ನಿರೀಕ್ಷೆಗಳು ಗರಿಗೆದರಿದವು. ವಿಶ್ವದ ಮೊದಲ, ಅತ್ಯುತ್ತಮ, ಸುಸಂಸ್ಕೃತ, ಸುಸಜ್ಜಿತ ನಾಗರಿಕತೆಯ ತಾಯಿ ಮತ್ತೊಮ್ಮೆ ಇತಿಹಾಸ ಸೃಷ್ಟಿಗೆ ಮುಂದಾಗಿದ್ದಾಳೆಯೇ? ಅದಕ್ಕೆ ಸ್ವಾರ್ಥಿಗಳಾದ ಇಂದಿನ ಮಾನವರು ಅವಕಾಶ ಕೊಡುವರೇ ಎನ್ನುವುದನ್ನು ಕಾಲವೇ ಹೇಳಬೇಕು.

                     ನಮ್ಮ ಪೂರ್ವಜರ ಕಾಲಗಣನೆಯ ಪ್ರಕಾರ ದ್ವಾಪರಯುಗದ ಅವಧಿ 8,64,000 ವರ್ಷಗಳು. ತ್ರೇತೆಯದ್ದು 12,96,000. ಕೃತಯುಗದ್ದು 17,28,000 ವರ್ಷಗಳು. ಇದೇನು ಬಾಯಿಗೆ ಬಂದಂತೆ ತುರುಕಿದ ಸಂಖ್ಯೆಗಳಲ್ಲ. ಈ ರೀತಿಯಾಗಿ ಮಹಾಯುಗಗಳನ್ನು ಒಡಗೂಡಿ ನಮ್ಮ ಪೂರ್ವಜರು ಲೆಕ್ಕ ಹಾಕಿರುವ ಬ್ರಹ್ಮಾಂಡದ ಆಯುಷ್ಯ, ಆಧುನಿಕ ವಿಜ್ಞಾನದ ಬ್ರಹ್ಮಾಂಡದ ಆಯುಷ್ಯದ ಲೆಕ್ಕಾಚಾರಕ್ಕೆ ಅತ್ಯಂತ ಸಮೀಪವಾಗಿದೆ. ಆ ನಿಟ್ಟಿನಲ್ಲಿ ನೋಡಿದಾಗ ವೇದಕಾಲೀನ ನಾಗರಿಕತೆ ಎಷ್ಟು ಹಳೆಯದ್ದು. ಹಾಗಾಗಿ ಆಧುನಿಕ ವೈಜ್ಞಾನಿಕ ಸಂಶೋಧನೆಗೆಳು ಬಗೆದಷ್ಟು ವೇದ ಕಾಲೀನ ನಾಗರಿಕತೆಯ ಕಾಲ ಹಿಂದೆ ಹೋಗುತ್ತಲೇ ಇರುತ್ತದೆ. ಹಾಗೆ ನೋಡಿದರೆ ಆಧುನಿಕ ವಿಜ್ಞಾನ ಶೋಧಿಸಿದ್ದು ಎಷ್ಟು ಅತ್ಯಲ್ಪ! ಸರಸ್ವತಿಯ ಹರಿವಿನ ಮೊದಲ ಬಿಂದುಗಳನ್ನು ಶೋಧಿಸಲು ಇನ್ನೆಷ್ಟು ಸಂಶೋಧನೆಗಳು ನಡೆಯಬೇಕೋ? ಸರಸ್ವತಿಯ ಅನುಗ್ರಹವಿಲ್ಲದೆ ಅದು ಸಾಧ್ಯವಿದೆಯೇ? ಅದಕ್ಕಿಂತಲೂ ಮುಖ್ಯವಾಗಿ ಐತಿಹಾಸಿಕ ಸಂಶೋಧನೆಗಳು ಮತೀಯ ಹಾಗೂ ರಾಜಕೀಯ ಮರ್ಜಿಗೆ ಒಳಗಾಗದೆ ಇದ್ದರೆ ಮಾತ್ರ ಅದು ಸಾಧ್ಯ.