ಪುಟಗಳು

ಬುಧವಾರ, ಜನವರಿ 17, 2018

ಭೀಷ್ಮ

ಭೀಷ್ಮ

                  ಯುಗ ಸಂಧಿಕಾಲವೊಂದನ್ನು ಅದರ ಪೂರ್ವೇತಿಹಾಸ, ಧರ್ಮಗ್ಲಾನಿಯ ಕಾರಣ, ಪರಿಣಾಮ ಹಾಗೂ ನಾಶ ಜೊತೆಜೊತೆಗೆ ಜೀವನದ ಔನ್ನತ್ಯದ ಮೌಲ್ಯಾನುಸಂಧಾನಗಳನ್ನು ಸರಳವೂ ನೇರವಾಗಿಯೂ ಕಟ್ಟಿಕೊಟ್ಟ ಪಥದರ್ಶಕ ವಾಙ್ಮಯ ಮಹಾಭಾರತ. "ಅದರಲ್ಲಿರುವುದು ಎಲ್ಲೆಡೆಯೂ ಇದೆ; ಅಲ್ಲಿಲ್ಲದ್ದು ಎಲ್ಲಿಯೂ ಇಲ್ಲ" ಎಂಬ ಘನತೆಗೆ ಪಾತ್ರವಾದ ಏಕೈಕ ಇತಿಹಾಸ ಗ್ರಂಥ ಮಹಾಭಾರತ. ಅಂತಹ ಮಹಾಭಾರತ ಕವಿಗಳ ವರ್ಣನೆಯ ಭಾರಕ್ಕೆ ನಲುಗಿತು. ವಿದ್ವಾಂಸರ ವಾಗ್ವೈಭವಕ್ಕೆ ಸಿಲುಕಿತು. ಕೆಲವರು ಭಗವಾನ್ ಕೃಷ್ಣನನ್ನು ಕಥಾನಾಯಕನನ್ನಾಗಿಸಿ ಭಾರತವನ್ನೇ ಎತ್ತರಕ್ಕೇರಿಸಿದರು. ಮತ್ತೆ ಕೆಲವರಿಗೆ ಭೀಮ ಭಾರತಕ್ಕೆ ಬಲ ತುಂಬಿದಂತೆ ಕಂಡ. ಮಗದೊಬ್ಬರು ಅರ್ಜುನನ ಗಾಂಢೀವಕ್ಕೆ ಮನಸೋತರು. ಆದರೆ ಅವರ್ಯಾರೂ ಸಂಪೂರ್ಣ ಮಹಾಭಾರತದ ಉದ್ದಕ್ಕೂ ನಿಲ್ಲಲಿಲ್ಲ. ಆದರೆ ಅಲ್ಲೊಬ್ಬನಿದ್ದ. ಮಹಾ ಪ್ರತಾಪಿ; ತ್ಯಾಗಿ; ಪಿತಾಮಹ ಭೀಷ್ಮ; ಅಪ್ಪನಿಗೇ ಮದುವೆ ಮಾಡಿಸಿದವ! ಜಗಮಲ್ಲರೊಡನೆ ಬಡಿದಾಡಿ ತಮ್ಮನಿಗೆ ವಧುಗಳನ್ನು ತಂದು ಮದುವೆ ಮಾಡಿಸಿದವ! ಶತಾಯಗತಾಯ ಕುರುವಂಶದ ಏಳಿಗೆಗಾಗಿ ದುಡಿದವ. ಮೊಮ್ಮಕ್ಕಳು ಜಗಳವಾಡಿದಾಗ ಕಣ್ಣೀರ್ಗರೆದವ. ಉಪ್ಪು ತಿಂದ ಋಣಕ್ಕಾಗಿ ಪ್ರೀತಿಯ ಮೊಮ್ಮಕ್ಕಳಿಗೇ ಎದುರಾಗಿ ನಿಂದು ದಿನವೊಂದಕ್ಕೆ ದಶಸಹಸ್ರ ಯೋಧರನ್ನು ಯಮಸದನಕ್ಕಟ್ಟಿ ಭಾರತ ಯುದ್ಧವನ್ನೂ ಹತ್ತು ದಿವಸ ಆಳಿದವ. ಜಗತ್ತಿನ ಇತಿಹಾಸದಲ್ಲೇ ನಭೂತೋ ನಭವಿಷ್ಯತಿ ಎಂಬಂತೆ ಶರಶಯ್ಯೆಯಲ್ಲೇ ಮಲಗಿ ತನ್ನ ಆರಾಧ್ಯ ದೈವ ಪೂರ್ಣಪ್ರಜ್ಞನನ್ನು ಧನ್ಯತಾಭಾವದಿಂದ ನೋಡುತ್ತಲೇ ಪ್ರಾಣತ್ಯಾಗ ಮಾಡಿದ ಸ್ಥಿತಪ್ರಜ್ಞ ಇಚ್ಛಾಮರಣಿ! ಅವನು ಆವರಿಸಿದ್ದು ಇಡಿಯ ಭಾರತವನ್ನು. ಧರ್ಮವೇ ಅವನ ನಡೆಯ ಹಿಂದಿನ ಮೂಲಸ್ತ್ರೋತ. ಅಂತಹ ಭೀಷ್ಮನನ್ನು ತಾಳಮದ್ದಳೆಯ ಅರ್ಥಧಾರಿಗಳು ಅಭೂತಪೂರ್ವವಾಗಿ ಕಟ್ಟಿಕೊಟ್ಟಿರಬಹುದು. ಅದರೆ ಅವನನ್ನು ಕಥಾನಾಯಕನನ್ನಾಗಿಸಿ ಸಾವಿರಕ್ಕೂ ಹೆಚ್ಚಿನ ಪುಟಗಳ ಸಾವಿರದ ಗ್ರಂಥ ರಚಿಸಿದವರು ಸು. ರುದ್ರಮೂರ್ತಿ ಶಾಸ್ತ್ರಿಗಳು ಮಾತ್ರ. ಆ ದೃಷ್ಟಿಯಲ್ಲಿ ಅವರು ಭೀಷ್ಮರೇ!

                   ಶರಶಯ್ಯೆಯಲ್ಲಿ ಪವಡಿಸಿದ್ದ ಭೀಷ್ಮ ತನ್ನ ಬದುಕನ್ನು ಮತ್ತೊಮ್ಮೆ ಮೆಲುಕು ಹಾಕುತ್ತಾ ನಿಡುಸುಯ್ಯುವ ಸಂದರ್ಭದೊಂದಿಗೆ ಆರಂಭವಾಗುವ ವರ್ಣನೆಯೇ ಅತ್ಯಮೋಘ. ದ್ವಾಪರಯುಗವೇ ಬಳಲಿ, ಬಸವಳಿದು, ಇನ್ನು ಸಾಕು, ಎಂದು ಮಲಗಿರುವಂತಿತ್ತು ಎಂದು ಭೀಷ್ಮನ ಸ್ಥಿತಿಯನ್ನೂ, ದ್ವಾಪರ-ಕಲಿಯುಗಗಳೆರಡರ ಸಂಧಿ ಕಾಲದ ಸುಳಿವನ್ನು ಹೊರಗೆಳೆವ ಪರಿ ಅದ್ಭುತ. ಭೀಷ್ಮ ಪ್ರತಿಜ್ಞೆ, ತಾವು ಭೀಷ್ಮನ ಬಾಳಿಗೆ ಮಾಡಿದ ಅನ್ಯಾಯವೆಂದು ಶಂತನು, ಸತ್ಯವತಿಯರು ಭೀಷ್ಮಪ್ರತಿಜ್ಞೆಯೇ ತಮಗೆ ಶಾಪವಾಯಿತೆಂದು ಕೊರಗುವ ಪರಿ, ಅರಣ್ಯವಾಸಿಯಾಗಿ ಆತ್ಮಸಾಧನೆ ಮಾಡುವ ತುಡಿತವಿದ್ದರೂ ತನ್ನದೇ ಪ್ರತಿಜ್ಞೆಯ ಕಾರಣದಿಂದ ಕಾಣದ ದಾರಿ, ಕಾಶಿಯ ಪುಣ್ಯಭೂಮಿಯಲ್ಲಿ ಭರತಖಂಡದ ಬಲಾಢ್ಯರನ್ನೆಲ್ಲಾ ಕ್ಷಣಮಾತ್ರದಲ್ಲಿ ಬದಿಗೊತ್ತಿ ಪ್ರಕಟವಾಗುವ ವೀರ ವೃದ್ಧ ಯೋಧ, ಗುರುಶಿಷ್ಯರನ್ನೇ ಯುದ್ಧಕ್ಕೆಳೆದ ಹೆಣ್ಣಿನ ಕ್ರೋಧ, ಮೊಮ್ಮಕ್ಕಳ ಜಗಳ, ಭಾರತ ಕದನ ಹೀಗೆ ಭೀಷ್ಮರ ಜೀವನದ ವಿವಿಧ ಮಜಲು, ಸಂದರ್ಭಗಳಲ್ಲಿ ಅವರ ವರ್ತನೆಯ ಬಗೆಗೆ ಅವರಿಗೆ ಅಪರಾಧೀ ಪ್ರಜ್ಞೆ ಬಾಧಿಸಿದಾಗ ಶ್ರೀಕೃಷ್ಣ ಕೊಡುವ ಸಾಂತ್ವನ, ಧರ್ಮಜಾದಿಗಳ ಶೋಕತಪ್ತ ಬೀಳ್ಕೊಡುಗೆಗಳೆಲ್ಲವನ್ನೂ ಕಟ್ಟಿಕೊಡುವ ಕಥನ ಶೈಲಿ ಹಿಡಿದ ಪುಸ್ತಕವನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುತ್ತದೆ. ಮೌಲ್ಯಮೀಮಾಂಸೆ, ಸಂಕೀರ್ಣ ಸಮಾಜ ವ್ಯವಸ್ಥೆ, ಮಾನವ ಸಂಬಂಧ, ಜೀವನದ ಏಳಿಗೆ-ಅಳಿವುಗಳಲ್ಲಿ ಸೂಕ್ಷ್ಮವಾಗಿ ಕಾಣುವ ತತ್ತ್ವಜಿಜ್ಞಾಸೆ ಓದುಗರ ದ್ವೈಧಗಳಿಗೆ, ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಾಗುತ್ತವೆ.

                          ಭಾವಾತಿರೇಕಕ್ಕೆ ಒಳಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮಹಾಭಾರತ ಅಡಿಗಡಿಗೆ ಹೇಳುತ್ತದೆ. ಭೀಷಣ ಪ್ರತಿಜ್ಞೆ ದೇವವ್ರತನನ್ನು "ಭೀಷ್ಮ"ನನ್ನಾಗಿಸಿ ಕೀರ್ತಿಸಿರಬಹುದು. ಆದರೆ ಕುರುವಂಶದ ಅವಘಡಗಳಿಗೆ ಬೀಜರೂಪವಾಯಿತು. ಅದನ್ನು ಭೀಷ್ಮ ತನ್ನ ಕಣ್ಗಳಿಂದ ನೋಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ. ಜಗತ್ತಿನ ಅರಿವಿದ್ದೂ ಉಂಟಾಗುವ ದ್ವೈಧ, ದ್ವಿಮುಖತೆಗಳಿಗೆ ಸಂಕೇತ ಭೀಷ್ಮರೇ. ಭೀಷಣವಾದ ಪ್ರತಿಜ್ಞೆಯನ್ನು ಕೈಗೊಂಡವ ಅದರ ಉಳಿಕೆಗೋಸುಗ ಅನ್ಯಾಶ್ರಿತನಾಗಿ, ಸ್ವಾತಂತ್ರ್ಯವನ್ನು ಕಳೆದುಕೊಂಡು, ತನ್ನ ಆರಾಧ್ಯ ದೈವಕ್ಕೆದುರಾಗಿಯೇ ಸೆಣಸಾಡುವಂತಹ ಅನಿವಾರ್ಯತೆಗೆ ಸಿಲುಕಿದ ಪರಿ, ಎಲ್ಲಾ ಕಾಲಘಟ್ಟದಲ್ಲೂ ಕಾಣಬರುವಂತಹ ಘನವಾದ ಉದ್ದೇಶವನ್ನಿಟ್ಟುಕೊಂಡು ಅಸಹಾಯಕನಾಗುವ ಮನುಷ್ಯನ ಸ್ಥಿತಿಗೆ ರೂಪಕವೇ ಸರಿ. ಅತೀ ಆಯುಷ್ಯವೂ ಶಾಪವೇ ಎಂಬ ಮಾತು ಭೀಷ್ಮರ ವಿಚಾರದಲ್ಲಿ ನಿಜವಾಯಿತು. ಸಂನ್ಯಾಸಿಯಲ್ಲದಿದ್ದರೂ ಸಂನ್ಯಾಸಿಯ ಜೀವನ ಅವನದ್ದು. ಅರಮನೆಯಲ್ಲಿ, ಅಧಿಕಾರದ ತೋಳ್ತೆಕ್ಕೆಯಲ್ಲಿ, ಸಿರಿಸಂಪದಗಳ ನಡುವಿನಲ್ಲಿ ಸ್ಥಿತಪ್ರಜ್ಞನಂತೆ ತನ್ನ ಧ್ಯೇಯಕ್ಕಾಗಿ ಬದುಕಿದ. ಸಂಸಾರಿಯಲ್ಲದಿದ್ದರೂ ಅವನು ಸಂಸಾರಿ. ಕುರು ಸಾಮ್ರಾಜ್ಯದ ಪ್ರಜಾಜನರೆಲ್ಲಾ ಅವನ ಕುಟುಂಬ. ಅವರಿಗಾಗಿ ಮಿಡಿದವನು, ಬಡಿದಾಡಿದವನು ಅವನು. ದೇವವ್ರತನೆಂಬ ಬಾಲ, "ವ್ಯಕ್ತಿ"ಯಾಗಿ, ಭೀಷ್ಮನೆಂಬ ಮಹಾ "ವ್ಯಕ್ತಿತ್ವ"ವಾಗಿ ರೂಪುಗೊಂಡ ಪ್ರಕ್ರಿಯೆಯನ್ನು ಅಭೂತಪೂರ್ವವಾಗಿ "ಭೀಷ್ಮ"ಸದೃಶವಾಗಿಯೇ ಕಟ್ಟಿಕೊಟ್ಟಿದ್ದಾರೆ ಶ್ರೀಯುತ ಸು. ರುದ್ರಮೂರ್ತಿ ಶಾಸ್ತ್ರಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ