ಪುಟಗಳು

ಮಂಗಳವಾರ, ಜನವರಿ 23, 2018

ಭಾರತೀಯರು ಹಿಂದುಳಿದಿದ್ದಾರೆ...ಕಾಂಗ್ರೆಸ್ಸಿನ ಕುಟಿಲ ನೀತಿಗಳನ್ನು ಅರಿಯುವಲ್ಲಿ!

ಭಾರತೀಯರು ಹಿಂದುಳಿದಿದ್ದಾರೆ...ಕಾಂಗ್ರೆಸ್ಸಿನ ಕುಟಿಲ ನೀತಿಗಳನ್ನು ಅರಿಯುವಲ್ಲಿ!


         ರಾಜಸ್ಥಾನದಲ್ಲಿ ಗುಜ್ಜರರನ್ನು ಮೀಸಲಾತಿಗಾಗಿ ಪ್ರತಿಭಟಿಸುವಂತೆ ಪ್ರೇರೇಪಿಸಿದರು. ಹರ್ಯಾಣದಲ್ಲಿ ಜಾಟರನ್ನು ಮೀಸಲಾತಿಯ ವಿಚಾರವನ್ನೇ ಹಿಡಿದುಕೊಂಡು ಎತ್ತಿ ಕಟ್ಟಿದರು. ಗುಜರಾತಿನಲ್ಲಿ ಪಟೇಲರ ನಡುವೆ ಒಡಕು ಮೂಡಿಸಿದರು. ಕರ್ನಾಟಕದಲ್ಲಿ ಲಿಂಗಾಯತರನ್ನು ಛಿದ್ರಗೊಳಿಸಿದರು. ಮೊನ್ನೆ ಮೊನ್ನೆ ಮಹಾರಾಷ್ಟ್ರದಲ್ಲಿ ದಲಿತರನ್ನು ಬೀದಿ ಕಾಳಗಕ್ಕೆ ಎಳೆತಂದರು. ಇವೆಲ್ಲವೂ ಕಾಂಗ್ರೆಸ್ ಅಧಿಕಾರವಿಲ್ಲದ, ಸುವ್ಯವಸ್ಥಿತವಾಗಿ ಸುಸೂತ್ರವಾಗಿ ಆಡಳಿತ ಯಂತ್ರ ಚಾಲನೆಯಲ್ಲಿರುವ, ಅಭಿವೃದ್ಧಿಯತ್ತ ಸಾಗುತ್ತಿರುವ ರಾಜ್ಯಗಳಲ್ಲೇ ಅದರಲ್ಲೂ ಚುನಾವಣೆ ಹತ್ತಿರ ಬಂದಾಗಲೇ ನಡೆಯುತ್ತವೆ! ಏಕೆ? ಕಾಂಗ್ರೆಸ್-ಕಮ್ಯೂನಿಸ್ಟರ ಮನಃಸ್ಥಿತಿ, ಚಿಂತನೆಯೇ ಅಂತಹದ್ದು. ಕಳೆದ ಏಳು ದಶಕಗಳಲ್ಲಿ ಅವರು ಮಾಡಿದ್ದೇ ಅದನ್ನು. ಹಾಗೆ ಜಾತಿ ಜಾತಿಗಳನ್ನು ಎತ್ತಿ ಕಟ್ಟಿಯೇ ಅವರು ಅಧಿಕಾರವನ್ನು ಅನುಭವಿಸಿದ್ದು. ಅಧಿಕಾರ ಕೈಯಲ್ಲಿ ಇಲ್ಲದೇ ಇದ್ದಾಗ ಕಾಕ(ಕಾಂಗಿ+ಕಮ್ಯೂನಿಸ್ಟ್)ಗಳ ಮೆದುಳಿನಲ್ಲಿ ಅಧಿಕಾರವನ್ನು ಮರಳಿ ಪಡೆಯುವುದು ಹೇಗೆಂಬ ಉಪಾಯಗಳೇ ಓತಪ್ರೋತವಾಗಿ ಹರಿದಾಡಲು ಶುರು ಮಾಡುತ್ತವೆ. ಅಂತಹ ಉಪಾಯಗಳೆಲ್ಲಾ ಕುತಂತ್ರಗಳೇ ಆಗಿದ್ದು ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಸರಕುಗಳೇ ಆಗಿರುತ್ತವೆ. ಆದರೆ ಕಾಂಗ್ರೆಸ್ಸಿನ ಬೆಣ್ಣೆಯಿಂದ ಕೂದಲೆಳೆದಂತಹ ನಯವಾದ ಮಾತುಗಳನ್ನೇ ಮತ್ತೆ ಮತ್ತೆ ಕುರುಡಾಗಿ ನಂಬುವ ಸಮಾಜ ತನ್ನೊಳಗೇ ಆಂತರಿಕ ಕ್ಷೋಭೆಯನ್ನು ಸೃಷ್ಟಿಸಿಕೊಂಡು ದೇಶವನ್ನು ಮತ್ತಷ್ಟು ಹಿಂದಕ್ಕೊಯ್ಯುತ್ತದೆ.

         ಕೋರೇಗಾಂವ್. 1818ರಲ್ಲಿ ಭಾರತದ ಇತಿಹಾಸವನ್ನು ಬದಲಿಸಿದ ಒಂದು ಯುದ್ಧ ನಡೆದದ್ದು ಇದೇ ಸ್ಥಳದಲ್ಲಿ. ಯಾವ ಮರಾಠ ಸಾಮ್ರಾಜ್ಯ ಅಕ್ಷರಶಃ ಇಡಿಯ ಭಾರತವನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತೋ ಅದಕ್ಕೀಗ ಒಳಗೊಳಗೆ ಗೆದ್ದಲು ಹಿಡಿಯಲಾರಂಭಿಸಿತ್ತು.  ಹೋಳ್ಕರ್, ಗಾಯಕ್ವಾಡ್, ಸಿಂಧಿಯಾಗಳು ಎರಡನೇ ಬಾಜೀರಾಯನ ವಿರುದ್ಧ ಕತ್ತಿ ಮಸೆದಿದ್ದರು. ಯಾವ ಎರಡನೇ ಬಾಜೀರಾಯ 1775ರಲ್ಲಿ ನಿಜಾಮರೊಡನೆ ನಡೆದ ಯುದ್ಧದಲ್ಲಿ, ಮರಾಠ ಸೈನಿಕರಲ್ಲಿ ಕೆಲವರು, ಮಹಾರ್ ಸೈನಿಕರು ತಮ್ಮಿಂದ ಅಂತರವಿಟ್ಟುಕೊಂಡು ಡೇರೆ ಹಾಕಬೇಕು ಎಂದಾಗ "ಯುದ್ಧಭೂಮಿಯಲ್ಲಿ ಯಾರ ಖಡ್ಗ ಶತ್ರುವಿನ ರಕ್ತ ಹೀರುತ್ತದೋ ಅದೇ ಹೆಚ್ಚು ಪವಿತ್ರ" ಎಂದು ಘೋಷಿಸಿದ್ದನೋ ಅವನದ್ದೇ ಆಡಳಿತದ ಕೊನೆಗಾಲದಲ್ಲಿ ಕ್ಸುತಿತ ಬುದ್ಧಿಯ ಕೆಲವರಿಂದಾಗಿ ಮಹಾರ್ ಯೋಧರು ಹಾಗೂ ಪೇಶ್ವೆಗಳ ನಡುವಿನ ಸಂಬಂಧ ಹಳಸಲಾರಂಭಿಸಿತು. ಬಾಜೀರಾಯ ಹಣಕ್ಕಾಗಿ ಗ್ರಾಮಗ್ರಾಮಗಳನ್ನೇ ಗುತ್ತಿಗೆ ಕೊಡುವ ಮಟ್ಟಕ್ಕಿಳಿದ. ಅಲ್ಲಿವರೆಗೆ ಮರಾಠಾ ಸಾಮ್ರಾಜ್ಯದ ಪರವಾಗಿದ್ದ ಮಹಾರರು ಅಸ್ಪೃಶ್ಯತೆ ಹಾಗೂ ತಮಗಾಗಿದ್ದ ಅವಮಾನಗಳಿಂದ ಕುದ್ದು ಬಾಜೀರಾಯನ ವಿರುದ್ಧ ಟೊಂಕ ಕಟ್ಟಿದರು. ಹೀಗೆ ಅಖಂಡ ಭಾರತವನ್ನು ಅಖಂಡವಾಗಿ ಆಳುವ ಕನಸು ಕಂಡಿದ್ದ ಪೇಶ್ವೆಗಳ ಸಾಮ್ರಾಜ್ಯ ಆಂತರಿಕ ಕಲಹದಿಂದ ಗೆದ್ದಲು ಹಿಡಿದು ಟೊಳ್ಳಾದ ವಟ ವೃಕ್ಷದಂತೆ ನಿಂತಿತ್ತು. ಮೈಮರೆತ ಪೇಶ್ವೆಗಳು ಹಾಗೂ ತಮ್ಮ ನೈಜ ಶತ್ರುಗಳನ್ನು ಅಂದಾಜಿಸಲು ವಿಫಲರಾದ ಮಹಾರರ ನಡುವಿನ ಈ ವೈಷಮ್ಯದ ಲಾಭ ಪಡೆದ ಬ್ರಿಟಿಷರು ಮಹಾರರನ್ನು ತಮ್ಮ ಪರವಾಗಿ ತಿರುಗಿಸಿ ದುರ್ಬಲನಾದ ಎರಡನೇ ಬಾಜೀರಾಯನನ್ನು ಮಣಿಸಿಬಿಟ್ಟರು. ಅಸ್ಪೃಶ್ಯತೆಯೆನ್ನುವ ಮಹಾಮಾರಿ ಬ್ರಿಟಿಷರಿಗೆ ಸಾರ್ವಭೌಮರಾಗಲು ಹೆಬ್ಬಾಗಿಲನ್ನು ತೆರೆದಿರಿಸಿತು. ಮಹಾರರ ವಿಜಯೋತ್ಸವದ ಪ್ರತೀಕವಾಗಿ ವಿಜಯ ಸ್ತಂಭವೊಂದು ಕೋರೆಗಾಂವ್ನಲ್ಲಿ ಸ್ಥಾಪಿಸಲ್ಪಟ್ಟಿತು. ಯಾವ ವಿಜಯ ಭಾರತವನ್ನು ದುರ್ದೆಶೆಗೆ ತಳ್ಳಿದ ಕಹಿನೆನಪಾಗಿ ಆಚರಿಸಬೇಕಾಗಿತ್ತೋ ಅದು ಮೇಲ್ಜಾತಿಯ ವಿರುದ್ಧ ಕೆಳಜಾತಿಯ ಗೆಲುವು ಎಂಬ ಸೀಮಿತ ವಿಚಾರವಾಗಿ ವಿಜೃಂಭಣೆಯಿಂದ ಆಚರಿಸಲ್ಪಡಲಾರಂಭಿಸಿತು. ಈ ಬಾರಿಯ ಇನ್ನೂರನೇ ವರ್ಷಾಚರಣೆಗೆ ಸೇರಿದ್ದವರಾದರೂ ಯಾರು? ದಿಲ್ಲಿಯಲ್ಲಿ ರಾಮ್ ಪುನಿಯಾನಿಯನ್ನು ಕರೆಸಿ ಔರಂಗಜೇಬನ ಗುಣಗಾನ ಮಾಡಿ ಶಿವಾಜಿಯನ್ನು ಬಾಯಿಗೆ ಬಂದಂತೆ ನಿಂದಿಸುವ, ಸೈನಿಕರೆಲ್ಲಾ ಅತ್ಯಾಚಾರಿಗಳು ಎಂದ ಉಮರ್ ಖಾಲಿದ್, ಬೀದಿಕಾಳಗಕ್ಕೆ ಪ್ರೇರೇಪಿಸುತ್ತಾ ಪ್ರಜಾಪ್ರಭುತ್ವವನ್ನೇ ಅಣಕಿಸುವ ಜಿಗ್ಣೇಶ್ ಮೇವಾನಿ, ದುರ್ಗಾ ಮಾತೆಯನ್ನು ವೇಶ್ಯೆಯಂತೆ ಚಿತ್ರಿಸಿ ಕಾಲೇಜು ಕ್ಯಾಂಪಸಿನಲ್ಲಿ ಮಹಿಷಾಸುರ ಜಯಂತಿ ಆಚರಿಸಿದ ವೇಮುಲನ ತಾಯಿ! ಕಣ್ಣು ಕಿತ್ತು, ಕಿವಿಗೆ ಸೀಸ ಸುರಿದರೂ ಹಿಂದೂ ಧರ್ಮವನ್ನು ಬಿಡಲೊಪ್ಪದ ಸಂಭಾಜಿಯ ಹೆಸರಿಟ್ಟುಕೊಂಡ ಬ್ರಿಗೇಡ್ ಹೈಂದವಿ ಸ್ವರಾಜ್ಯದ ಬಗ್ಗೆ ವೇದಿಕೆಯ ಒಂದು ಪಾರ್ಶ್ವದಲ್ಲಿ ಹೇಳುತ್ತಿದ್ದರೆ ಇನ್ನೊಂದು ಪಾರ್ಶ್ವದಲ್ಲಿ ಹಿಂದೂಧರ್ಮವನ್ನು ಅಳಿಸಿದಾಗಲೇ ದಲಿತರ ಕಲ್ಯಾಣ ಎಂದು ಮೆವಾನಿ ಬೊಬ್ಬಿರಿಯುತ್ತಿದ್ದ. ಪೇಶ್ವೆಗಳ ಮಹಾ ಸೈನ್ಯಕ್ಕೆ ಎದುರಾಗಿ ಬ್ರಿಟಿಷರ ಪರವಾಗಿ ಹೋರಾಡಿದ್ದೇ ವಿಜಯಗಾಥೆ ಅನ್ನುವುದಾದರೆ ಅದಕ್ಕಿಂತಲೂ ಅಪಾರ ಸಂಖ್ಯೆಯ ತುರ್ಕರನ್ನು ಚಿಪ್ಳೂಣ್ ಹಾಗೂ ಪೋರ್ಚುಗೀಸರನ್ನು ವಸಾಯಿ ಯುದ್ಧದಲ್ಲಿ ಗೆದ್ದದ್ದು ಮಹಾರರಿಗೆ ಸ್ವಾಭಿಮಾನದ ವಿಜಯದ ಪ್ರತೀಕಗಳೇಕಾಗುವುದಿಲ್ಲ?

         1857ರ ಸ್ವಾತಂತ್ರ್ಯ ಸಂಗ್ರಾಮ ನೇತೃತ್ವ ವಹಿಸಿದವರು ಚಿತ್ಪಾವನ ಬ್ರಾಹ್ಮಣರಾದ ನಾನಾ ಸಾಹೇಬ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿ ರಾಣಿ ಲಕ್ಷ್ಮಿಭಾಯಿಯರು. ಆಗ ಬ್ರಿಟೀಷರ ಸೈನ್ಯದಲ್ಲಿದ್ದ ಮಹಾರ್ ರೆಜಿಮಂಟ್ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರಿಗೆ ಸಹಾಯ ಮಾಡಿತು. ಹಾಗಂತ ಈ ಯುದ್ಧವನ್ನೂ ಮಹಾರರ ವಿಜಯ ಎಂದು ಬಣ್ಣಿಸಲು ಸಾಧ್ಯವೇ? ಮೆವಾನಿ, ಖಾಲಿದ್ಗಳು ಅದಕ್ಕೂ ಹೇಸುವವರಲ್ಲ. ಯಾವ ಬ್ರಿಟಿಷರು ಮಹಾರರನ್ನು ಬಳಸಿಕೊಂಡರೋ ಅವರು ಕೆಲವೇ ಸಮಯದಲ್ಲಿ ಮಹಾರ್ ರೆಜಿಮೆಂಟನ್ನೇ ವಿಸರ್ಜಿಸಿದ್ದರು. ನಿನ್ನೆ ಮೊನ್ನೆಯವರೆಗೆ ಶಿವಾಜಿ, ಸಂಭಾಜಿಯವರನ್ನು ದರೋಡೆಕೋರರೆಂದು ಬಾಯಿಗೆ ಬಂದಂತೆ ಬಯ್ದು ಹೀಯಾಳಿಸುತ್ತಿದ್ದ ಕಾಕಗಳು ಈಗ ಇದ್ದಕ್ಕಿದ್ದಂತೆ ಶಿವಾಜಿಯ ಭಜನೆಯಲ್ಲಿ ತೊಡಗಿದ್ಯಾಕೆ ಎನ್ನುವುದನ್ನು ಯೋಚಿಸಬೇಕು. ಶಿವಾಜಿಯ ಬಗ್ಗೆ ಇರುವ ಜನಾದರವನ್ನು ಕಂಡು ಬೆದರಿರುವ ಈ ಗೋಸುಂಬೆಗಳಿಗೆ ಶಿವಾಜಿಯೂ ಓಟ್ ಬ್ಯಾಂಕ್ ಆಗಿ ಕಂಡ. ಪಕ್ಕಾ ಕಮ್ಯುನಿಷ್ಟ್ ಗೋವಿಂದ ಪನ್ಸಾರೆ ಶಿವಾಜಿಯನ್ನು ದಲಿತ ನಾಯಕನನ್ನಾಗಿಸಿ ಸಂಕುಚಿತಗೊಳಿಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ. ಭಗತ್ ಸಿಂಗರ ವಿಚಾರಧಾರೆಯನ್ನು ಸಂಘಪರಿವಾರ ಜನಮಾನಸಕ್ಕೆ ತಲುಪಿಸಲು ಯತ್ನಿಸಿದಾಗ ಕಾಕಗಳು ಅವನನ್ನು ಕಮ್ಯೂನಿಸ್ಟ್ ಮಾಡಿಬಿಟ್ಟರು. ಸ್ವಾಮಿ ವಿವೇಕಾನಂದರನ್ನೂ ತಮ್ಮ ಓಟ್ ಬ್ಯಾಂಕ್ ಹುಂಡಿಯೊಳಕ್ಕೆ ಇಳಿಸಲು ನೋಡಿದರು. ಅಷ್ಟಮಿಯ ದಿನ ಕೃಷ್ಣನಿಗೂ ಕೆಂಪು ಹಚ್ಚಿಬಿಟ್ಟರು. ಕಾಕಗಳ ಈ ರಾಜಕೀಯದಾಟ ಉಪೇಕ್ಷಿತ ಬಂಧುಗಳಿಗೆ ಅರ್ಥವಾಗಬೇಕು.

         1857ರಲ್ಲಿ ಮಂಗಲ್ ಪಾಂಡೆ ಸಿಡಿದೇಳಲು ಕಾರಣನಾದವ ಮತಾದಿನ್ ಬಾಂಗಿ ಎನ್ನುವ ಉಪೇಕ್ಷಿತನೇ. ಬರಾಕ್ ಪುರದಲ್ಲಿ ಸಿಡಿದೆದ್ದ "ಅಪರಾಧಿ"ಗಳ ಪಟ್ಟಿಯಲ್ಲಿ ಮೊದಲನೇ ಹೆಸರೇ ಮತಾದಿನ್ ಬಾಂಗಿಯದಾಗಿತ್ತು. 1857ರ ಮೇ 26ರಂದು ಚೇತಾರಾಮ್ ಜಟಾವ್, ಚತುರ್ಭುಜ ವೈಶ, ಸದಾಶಿವ ಮೆಹ್ರ ಮತ್ತು ಭಲ್ಲೂರಾಮ್ ಮೆಹತರ್ ಜೀವದ ಹಂಗು ತೊರೆದು ದಂಗೆಯೆದ್ದರು. ಭಲ್ಲೂರಾಮ್ ಹಾಗೂ ಚೇತಾರಾಮರನ್ನು ಮರಕ್ಕೆ ಕಟ್ಟಿ ಗುಂಡಿಟ್ಟು ಕೊಲ್ಲಲಾಯಿತು. ಉಳಿದವರನ್ನೆಲ್ಲಾ ಕಾಸ್ಗಂಜ್ನಲ್ಲಿ ಮರಕ್ಕೆ ನೇತುಹಾಕಲಾಯಿತು! ಬಂಕೀ ಚಾಮರ್ 18 ಜನರನ್ನು ಜತೆಗೂಡಿಸಿ ಅಲ್ಪ ಸ್ವಲ್ಪ ಶಸ್ತ್ರಾಸ್ತ್ರಗಳೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದ. ತಮ್ಮ ವಿರುದ್ಧ ದಂಗೆಯೆದ್ದ ರಾಯಬರೇಲಿಯ ರಾಜಾ ಬೇಣಿ ಮಾಧವನನ್ನು ಬ್ರಿಟಿಷರು ಕಾರಾಗೃಹಕ್ಕೆ ತಳ್ಳಿದಾಗ ಅವರ ಸರ್ಪಗಾವಲಿನಿಂದ ರಾಜನನ್ನು ಬಿಡಿಸಿಕೊಂಡ ದಲಿತ ವೀರಾಗ್ರಣಿ ವೀರ ಪಾಸೀ. ಅವನ ಹಾಗೂ ಮಕ್ಲಾ ಪಾಸೀಯ ನೇತೃತ್ವದಲ್ಲಿ ಪಾಸೀ ಜನರು ಬ್ರಿಟಿಷರನ್ನು ಅಕ್ಷರಶಃ ಅಟ್ಟಾಡಿಸಿದ್ದರು. ಈ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಪಾಸೀಗಳ ಸಂಖ್ಯೆ 2000ಕ್ಕೂ ಹೆಚ್ಚು. ಒಬ್ಬಂಟಿಗಳಾಗಿಯೇ ಹೆಬ್ಬುಲಿಯನ್ನು ಕೊಂದಿದ್ದ ಕೋರೀ ಜಾತಿಯ ಜಾಲ್ಕರೀ ಬಾ ರಾಣಿ ಲಕ್ಷ್ಮೀಬಾಯಿಯ ಪ್ರೀತಿಪಾತ್ರಳಾಗಿದ್ದವಳು. ಕೋಟೆಯ ದಂತೀಯದ್ವಾರ ಹಾಗೂ ಭಂಡಾರೀ ದ್ವಾರಗಳಲ್ಲಿ ಸೈನ್ಯವನ್ನು ಸಂಘಟಿಸಿ ಅದ್ಭುತ ಹೋರಾಟ ಮಾಡುತ್ತ ವೀರಮರಣವನ್ನಪ್ಪಿದ ವೀರ ನಾರಿ ಆಕೆ. ಬೇಗಂ ಹಜರತ್ ಮಹಲಳ ಸೇನಾನಿಯಾಗಿದ್ದ ಮಕ್ಕಾಪಾಸೀಯ ಮಡದಿ ಉದಾ ದೇವಿ ಮರವೇರಿ ಕುಳಿತು ಏಕಾಂಗಿಯಾಗಿ 36   ಬ್ರಿಟಿಷ್ ಸೈನಿಕರನ್ನು ಗುಂಡು ಹಾರಿಸಿ ಕೊಂದಿದ್ದಳು. ಆಶಾದೇವಿ ಗುರ್ಜರೀ, ಮಹಾವೀರೀ ದೇವಿ, ಇಂದ್ರಾಕೌರ್, ಭಗವಾನೀ ದೇವಿ, ರಾಜ್ಕೌರ್, ಭಗವತೀ ದೇವಿ, ನಾಮ್ಕೌರ್, ಅವಂತೀಬಾಯಿ, ರಣವೀರೀ ವಾಲ್ಮೀಕಿ, ಸೆಹೀಜಾ ವಾಲ್ಮೀಕಿ, ಶೋಭಾ ವಾಲ್ಮೀಕಿ ಮುಂತಾದ ಅನೇಕ ವೀರ ನಾರಿಯರು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖರು. ಇವರೆಲ್ಲಾ ದಲಿತರಿಗೆ ಆದರ್ಶಪ್ರಾಯರಾಗಬೇಕಿತ್ತು. ಇವರ ನಿತ್ಯಸ್ಮರಣೆಯಾಗಬೇಕಿತ್ತು.

         ಹೇಗೆ ಬ್ರಿಟಿಷರ ಸೇನೆಯಲ್ಲಿ ದಲಿತರಿದ್ದರೋ ಅದೇ ರೀತಿ ಬ್ರಿಟಿಷರ ವಿರುದ್ಧ ಸೈನ್ಯ ಸಂಘಟಿಸಿ ಹೋರಾಡಿದವರಲ್ಲಿಯೂ ದಲಿತರಿದ್ದರು. ಮೇಲ್ವರ್ಗ-ಕೆಳವರ್ಗ ಎಂಬ ಭೇದಭಾವವಿಲ್ಲದೆ ಎರಡೂ ಕಡೆ ಭಾರತೀಯರಿದ್ದರು. ಹೀಗಿರುವಾಗ ಯಾರು ತಮ್ಮ ತಮ್ಮ ನಡುವಿನ ಕಹಿಗಳನ್ನು ಮರೆತು ದೇಶ ಹಿತಕ್ಕಾಗಿ ಸ್ವಾತಂತ್ರ್ಯದ ಉತ್ಕಟ ಬಯಕೆಯಿಂದ ಹೋರಾಡಿದರೋ ಅವರು ಮೇಲ್ವರ್ಗ-ಕೆಳವರ್ಗ ಎಂಬ ಭೇದವಿಲ್ಲದೆ ಎಲ್ಲರಿಗೂ ಪ್ರಾತಃಸ್ಮರಣೀಯರಾಗಬೇಕಿತ್ತು. ಆದರೆ ಕೆಲವೊಮ್ಮೆ ಅಸಹಾಯಕನಾದ, ತಮ್ಮವರ ಹೀಗಳಿಕೆಯಿಂದ ಜರ್ಝರಿತನಾದ ಮನುಷ್ಯನಿಗೆ ಶತ್ರುವಿನ ಬಣ್ಣದ ಮಾತುಗಳು ಬೆಣ್ಣೆ ಸವಿದಂತೆ ಅನಿಸುತ್ತದೆ. ಕೋರೇಗಾಂವದಲ್ಲಿ ಆದದ್ದೂ ಅದೇ. ಇರಲಿ ಭಾರತದ ಇತಿಹಾಸವನ್ನು ಬದಲಿಸಿದ ಘಟನೆಯನ್ನು ತಮ್ಮ ಅಹಂಕಾರಕ್ಕೆ ಮೇಲ್ವರ್ಗ ಅನುಭವಿಸಿದ ಪಾಠ ಎಂದು ಕರೆದು ಮರೆತುಬಿಡೋಣವೇ ಎಂದರೆ ಅದನ್ನು ಮರೆಯಲು ಕಾಕಗಳು ಬಿಡುತ್ತಿಲ್ಲ. ಅಸ್ಪೃಶ್ಯತೆಯ ತುಣುಕು ತುಣುಕುಗಳೂ ಮರೆಯಾಗುತ್ತಿರುವ ಕಾಲದಲ್ಲಿ ಕೆಳವರ್ಗವನ್ನು ಮೇಲ್ವರ್ಗದ ವಿರುದ್ಧ ಎತ್ತಿಕಟ್ಟುತ್ತಿರುವ ಮೆವಾನಿಯಂತಹ ಕ್ರಿಮಿಯನ್ನು ಅಭಿನವ ಅಂಬೇಡ್ಕರರೆಂದು ಕರೆದು ಉಪಚರಿಸುತ್ತಿರುವವರ ಮೂರ್ಖತನಕ್ಕೆ ಏನೆನ್ನಬೇಕು? ಕೋರೇಗಾಂವಿನಲ್ಲಿ 22 ಮಹಾರರ ಬಲಿದಾನವೇ ಶ್ರೇಷ್ಠ ಎನ್ನುವುದಾದರೆ ಭಾರತೀಯ ಸೇನೆಯ ಮಹಾರ್ ರೆಜಿಮೆಂಟಿನಲ್ಲಿದ್ದುಕೊಂಡು ವೀರ ಮರಣವನ್ನಪ್ಪಿದ 400 ಮಹಾರರ ಬಲಿದಾನ ತುಚ್ಛವೇ? ಪರಮವೀರಚಕ್ರಾದಿಯಾಗಿ ಅವರು ಪಡೆದ ಸೇನಾಮೆಡಲ್ಲುಗಳು ಮಹಾರರ ವೀರತ್ವದ, ದೇಶಪ್ರೇಮದ ಪ್ರತೀಕವಲ್ಲವೇ? ಹಿಂದೂಸ್ಥಾನಕ್ಕೆ ಜೈಕಾರ ಹಾಕುವ ಮಹಾರ್ ರೆಜಿಮೆಂಟಿನ ರಣಘೋಷ ದಲಿತರಿಗೆ ಆದರ್ಶವಾಗಬೇಕೆ ಅಥವಾ ಹಿಂದೂ ಧರ್ಮವನ್ನು ಒದ್ದೋಡಿಸಬೇಕೆನ್ನುವ ಮೆವಾನಿಯೇ?

         ಇದಕ್ಕೆಲ್ಲ ಏನು ಕಾರಣವೇನು ಎಂದು ಅವಲೋಕಿಸಿದರೆ ಮತ್ತದೇ ಆರ್ಯ ಆಕ್ರಮಣವೆಂಬ ಹಳಸಲು ವಾದ. ಇದೇ ವಾದವನ್ನು ಬಳಸಿಕೊಂಡು ದಲಿತರು ಮಾತ್ರ ಇಲ್ಲಿನ ಮೂಲನಿವಾಸಿಗಳೆಂದೂ ಮೇಲ್ವರ್ಗವೆಲ್ಲಾ ಹೊರಗಿಂದ ಬಂದು ಇಲ್ಲಿನ ಜನರನ್ನು ತಮ್ಮಡಿಯಾಳಾಗಿ ಮಾಡಿಕೊಂಡರೆಂಬ ಮೆಕಾಲೆ-ಮುಲ್ಲರ್ ಚಿಂತನೆಯನ್ನೇ ಈ ಉಪೇಕ್ಷಿತರಲ್ಲಿ ಬಿತ್ತುವ ಮೂಲಕ ಕಾಕಗಳು ಅವರ ಬ್ರೈನ್ ವಾಶ್ ಎಷ್ಟು ಮಾಡಿದ್ದಾರೆಂದರೆ ಸ್ವತಃ ದಲಿತರ ಆರಾಧ್ಯ ದೈವ ಅಂಬೇಡ್ಕರರೇ ಬೆಚ್ಚಿ ಬೀಳಬೇಕು. ಆರ್ಯ ಆಕ್ರಮಣ ವಾದವನ್ನು ಸ್ವತಃ ಅಂಬೇಡ್ಕರರೇ ಅಲ್ಲಗಳೆದಿದ್ದರು ಎನ್ನುವುದು ಅವರನ್ನು ದೇವರಂತೆ ಆರಾಧಿಸುವವರಿಗೇ ಮರೆತು ಹೋಗಿದೆ. ಯಾವ ವೀರ ಸಾವರ್ಕರ್ ಉಪೇಕ್ಷಿತರನ್ನು ಒಟ್ಟುಗೂಡಿಸಿ ಅವರ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಅವರನ್ನು ಹಿಂದೂ ಧರ್ಮದ ಅಪೇಕ್ಷಿತರನ್ನಾಗಿ ಮಾಡಿದರೋ ಅಂತಹ ವೀರ ಸಾವರ್ಕರರನ್ನೇ ಇಂದಿನ ದಲಿತರು ದೂರ ಇಟ್ಟಿದ್ದಾರೆ. ಜಾತಿ ಭೇದವಿಲ್ಲದೆ ಸರ್ವರನ್ನು ಸಮಭಾವದಿಂದ ಕಾಣುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಅವರಿಗೆ ಶತ್ರುವಿನಂತೆ ಕಂಡಿದೆ! ಜೆನೆಟಿಕ್ ಥಿಯರಿಯ ಪ್ರಕಾರ ಭಾರತೀಯರ ಮೂಲವೆಲ್ಲಾ ಒಂದೇ ಎಂದರೂ ಅವರು ಒಪ್ಪಲಾರರು. ಅಂದರೆ ಕಾಕಗಳು ಅವರನ್ನು ಮರುಳುಗೊಳಿಸಿದ ಪರಿ ಅಂತಹದ್ದು. ಇಲ್ಲದೇ ಇದ್ದರೆ ಇಲ್ಲಿ ನಾವು ಕೆಳವರ್ಗ, ಮೇಲ್ವರ್ಗದವರೆಲ್ಲಾ ಸಹಬಾಳ್ವೆಯಿಂದ ಇದ್ದೇವೆ ಎಂಬ ಕೋರೆಗಾಂವಿನ ಜನರ ಕೂಗಿನ ಬದಲು ಬರ್ಬಾದಿಯ ಅಜಾನ್ ಕೂಗುವ ಉಮರ್, ಮೆವಾನಿಗಳ ಅಬ್ಬರವೇ ಮಹಾರಾಷ್ಟ್ರವಿಡೀ ಪ್ರತಿಧ್ವನಿಸಿ ಜನಜೀವನ ಅಸ್ತವ್ಯಸ್ತವಾಗುತ್ತಿರಲಿಲ್ಲ. ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಇದೇ. ಎಲ್ಲಿಯವರೆಗೆ ಆರ್ಯ ಆಕ್ರಮಣದ ಹುಸಿ ವಾದವನ್ನು ಪಠ್ಯಪುಸ್ತಕಗಳಿಂದ ಕಿತ್ತೆಸೆದು ಸತ್ಯವನ್ನು ಬೋಧಿಸುವುದಿಲ್ಲವೋ ಅಲ್ಲಿಯವರೆಗೆ ಕಾಕಗಳ ಕೈಯಲ್ಲಿ ಕಡಿವಾಣ ಇದ್ದೇ ಇರುತ್ತದೆ.

         "ಜಾತಿ ಮತ್ತು ಪಂಥಗಳ ರೂಪದಲ್ಲಿರುವ ನಮ್ಮ ಹಳೆಯ ಶತ್ರುಗಳ ಜೊತೆಯಲ್ಲಿ ಪರಸ್ಪರ ವಿರೋಧವುಳ್ಳ ರಾಜಕೀಯ ಸಿದ್ಧಾಂತಗಳನ್ನು ಹೊಂದಿದ ರಾಜಕೀಯ ಪಕ್ಷಗಳನ್ನು ನಾವು ಪಡೆಯಲಿದ್ದೇವೆ ಎಂಬುದೇ ನನ್ನನ್ನು ಆತಂಕಗೊಳಿಸುತ್ತದೆ. ಭಾರತೀಯರು ತಮ್ಮ ರಾಜಕೀಯ ಸಿದ್ಧಾಂತಕ್ಕಿಂತ ದೇಶ ಮುಖ್ಯವೆಂದು ಎತ್ತಿ ಹಿಡಿಯುವರೇ? ಅಥವಾ ದೇಶಕ್ಕಿಂತ ಅದನ್ನೇ ಮೇಲಿನ ಸ್ಥಾನದಲ್ಲಿ ಇಡುವರೇ? ನನಗೆ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ಖಂಡಿತ. ಪಕ್ಷಗಳು ಸಿದ್ಧಾಂತವನ್ನು ದೇಶಕ್ಕಿಂತ ಮೇಲೆ ಇಟ್ಟರೆ ನಮ್ಮ ದೇಶ ಮತ್ತೊಮ್ಮೆ ವಿಪತ್ತಿಗೀಡಾಗುವುದು ಮತ್ತು ಶಾಶ್ವತವಾಗಿ ಅದನ್ನು ಕಳೆದುಕೊಳ್ಳಲೂಬಹುದು. ಅದರ ವಿರುದ್ಧ ನಾವೆಲ್ಲರೂ ಒಂದಾಗಿರಬೇಕು. ನಮ್ಮ ಕೊನೆಯ ಹನಿ ರಕ್ತ ಇರುವ ತನಕವೂ ನಾವು ನಮ್ಮ ಸ್ವಾತಂತ್ಯ್ರ ಕಾಪಾಡಿಕೊಳ್ಳಲು ದೃಢ ನಿಶ್ಚಯ ಹೊಂದಿರಬೇಕು" ಎಂದು ಅಂಬೇಡ್ಕರ್ ಕಮ್ಯೂನಿಸ್ಟ್ ಹಾಗೂ ಮುಸ್ಲಿಂ ಲೀಗುಗಳನ್ನು ಝಾಡಿಸಿದ್ದ ನೆನಪು ಅವರ ಭಕ್ತರಿಗೆ ಅರ್ಥವಾಗದೇ ಹೋದದ್ದು ಮಾತ್ರ ವಿಶಾದನೀಯ. ಇಲ್ಲದೇ ಇದ್ದರೆ ದಲಿತರು ದೇಶದ್ರೋಹಿ ಕಮ್ಯೂನಿಸ್ಟರನ್ನು ತಮ್ಮೊಳಗೆ ಬಿಟ್ಟುಕೊಂಡಿರುವುದಾದರೂ ಏಕೆ? ದಲಿತರನ್ನು ಕೊಚ್ಚಿ ಕೊಂದ ಟಿಪ್ಪುವಿನಂತಹ ಮಾನವ ದ್ರೋಹಿ ಆದರ್ಶನಾಗುವುದು ಹೇಗೆ? ಜನರ ನಂಬಿಕೆ, ಆಚರಣೆಗಳನ್ನೇ ಕಿತ್ತೆಸೆವ, ದೇಶವೆನ್ನುವ ಪರಿಕಲ್ಪನೆಯೇ ಇರದ, ಅನವರತವೂ ಶತ್ರುಗಳನ್ನು ಬೆಂಬಲಿಸುತ್ತಾ ಉಂಡ ಮನೆಗೆ ದ್ರೋಹ ಬಗೆವ ಕಮ್ಯೂನಿಸ್ಟರು ದಲಿತ ಚಿಂತಕರಿಗೆ ಹತ್ತಿರವಾದದ್ದು ಹೇಗೆ? ಕಮ್ಯೂನಿಸ್ಟರು ಅಧಿಕಾರದಲ್ಲಿದ್ದ ಬಂಗಾಳ, ಕೇರಳಗಳಲ್ಲಿ ದಲಿತರ ಸ್ಥಿತಿಗತಿಯೇನಾದರೂ ಸುಧಾರಿಸಿದೆಯೇ? ದಲಿತರನ್ನು ಮುಖ್ಯಭೂಮಿಕೆಗೆ ತರುವಲ್ಲಿ ಕಮ್ಯೂನಿಸ್ಟರು ನಿಜವಾಗಿಯೂ ಪ್ರಯತ್ನಿಸಿದ್ದಾರೆಯೇ ಎನ್ನುವುದನ್ನು ದಲಿತರು ಯೋಚಿಸಲು ಇದು ಸಕಾಲ. ದಲಿತ ನಾಯಕರಿಗೆ ಇಂದು ಅಪ್ಯಾಯಮಾನವಾಗಿರುವ ಇಸ್ಲಾಮ್ ದಲಿತರ ಮೇಲೆ ಜಿಹಾದ್ ಘೋಷಿಸುವುದಿಲ್ಲವೆಂದೇನಾದರೂ ಬರೆದು ಕೊಟ್ಟಿದೆಯೇ? ಒಂದು ವೇಳೆ ಹಾಕಿದ್ದರೂ ಬೆನ್ನಿಗೆ ಚೂರಿ ಹಾಕುವುದನ್ನು ಹುಟ್ಟಿನಿಂದಲೇ ಸ್ವಭಾವಗತವಾಗಿಸಿಕೊಂಡ, ಆಣೆ-ಪ್ರಮಾಣಗಳನ್ನೆಲ್ಲಾ ಮಾನ್ಯವೇ ಮಾಡದ ಇಸ್ಲಾಮಿಂದ ಅದನ್ನು ನಿರೀಕ್ಷಿಸಬಹುದೇ? ಪ್ರತಿನಿತ್ಯ ಎಂಬಂತೆ ಆಗುತ್ತಿರುವ ಲವ್ ಜಿಹಾದ್ ಪ್ರಕರಣಗಳಲ್ಲಿ ದಲಿತ ಯುವತಿಯರೆಷ್ಟು ಬಲಿಯಾಗುತ್ತಿಲ್ಲ? ಹಾಗಾದರೆ ತಮಗೆ ಹಿತವರು ಯಾರೆಂದು ಸಾಮಾನ್ಯ ದಲಿತರು ನಿರ್ಧರಿಸಬೇಕಲ್ಲವೇ? ಇಲ್ಲದೇ ಇದ್ದರೆ ಅವರು ತಮ್ಮ ಸಂಪ್ರದಾಯ-ಸಂಸ್ಕೃತಿ-ಪೂಜಾಪದ್ದತಿಗಳನ್ನು ಸಂಸ್ಕೃತಿ ವಿರೋಧಿಗಳಾದ ಕಮ್ಯೂನಿಸ್ಟರಿಂದ, ವಿಗ್ರಹ ಭಂಜಕ ತುರ್ಕರಿಂದ ನಾಶಪಡಿಸಿಕೊಂಡು ತಮ್ಮದಾದ ಅಸ್ಮಿತೆಯನ್ನೇ ಕಳೆದುಕೊಳ್ಳುವುದು ನಿಶ್ಚಿತ.

         ಹಾಗೆಯೇ ದಲಿತ ಸಮುದಾಯ ತಾನು ನಾಯಕರೆಂದು ಭಾವಿಸಿದವರ ಕಡೆಗೆ ಕೊಂಚ ಗಮನ ಹರಿಸುವುದು ಒಳಿತು. ಆರ್ಥಿಕವಾಗಿ, ರಾಜಕೀಯವಾಗಿ ಸದೃಢವಾಗಿರುವ ಈ ನಾಯಕರು ತಮ್ಮ ಮೀಸಲಾತಿಯನ್ನು ಬಡ ದಲಿತರಿಗಾಗಿ ಬಿಟ್ಟು ಕೊಟ್ಟಿದ್ದಾರೆಯೇ? ಆರ್ಥಿಕವಾಗಿ ಪ್ರಬಲರಾಗುಳ್ಳ ದಲಿತರ ಮಕ್ಕಳೂ ಮೀಸಲಾತಿಯ ಮೂಲಕವೇ ಶಿಕ್ಷಣ ಪಡೆಯುವುದರ ಮೂಲಕ ಎಷ್ಟು ಜನ ಬಡ ದಲಿತರು ಶಿಕ್ಷಣ ವಂಚಿತರಾಗಿಲ್ಲ? ದಲಿತರ ನಾಯಕಿಯೆಂಬಂತೆ ಬಿಂಬಿಸಿಕೊಂಡು ಉತ್ತರಪ್ರದೇಶವನ್ನಾಳಿದ ಮಾಯಾವತಿ ಕಿ.ಮೀ.ಗೊಂದರಂತೆ ಪ್ರತಿಮೆಗಳನ್ನು ನೆಟ್ಟು ದಲಿತರನ್ನು ಪ್ರತಿಮೆಗಳನ್ನಾಗಿಯೇ ಮಾಡಿದರೇ ವಿನಾ ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆಯೇ? ತಮ್ಮದು ದಲಿತ ಪರ ಸರಕಾರ ಎಂದು ಅಡಿಗಡಿಗೆ ಹೇಳುತ್ತಾ ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ದಲಿತರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ಅಂಕಿ ಅಂಶಗಳೇ ಸಾರಿ ಹೇಳುತ್ತವೆ. ಅತ್ಯಾಚಾರ ಪ್ರಕರಣಗಳು 13%ನಷ್ಟು ಹೆಚ್ಚಾಗಿದ್ದರೆ, ಕೊಲೆ ಪ್ರಕರಣಗಳು 42%ನಷ್ಟು ಹೆಚ್ಚಾಗಿವೆ. ಸಂಘ ಕಾರ್ಯಕರ್ತರ, ಅಧಿಕಾರಿಗಳ ಕೊಲೆಯನ್ನು ವ್ಯವಸ್ಥಿತವಾಗಿ ಮಾಡುತ್ತಿರುವ, ಪ್ರಕರಣಗಳನ್ನು ಮುಚ್ಚಿ ಹಾಕುತ್ತಿರುವ ಸಿದ್ದರಾಮಯ್ಯನವರ ಕೊಲೆಗಡುಕ ಸರಕಾರಕ್ಕೆ ಇದೇನೂ ದೊಡ್ಡದಲ್ಲ ಬಿಡಿ. ಒಂದಷ್ಟು ಅಂಬೇಡ್ಕರ್ ಭವನಗಳನ್ನು ಸ್ಥಾಪಿಸಿ ಬಿಟ್ಟರೆ ದಲಿತರ ಉದ್ಧಾರವಾಗುತ್ತದೆಯೇ? ಊರೂರುಗಳಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನಗಳೆಲ್ಲಾ ಈಗ ಧೂಳು ಹಿಡಿದು ಕೂತಿರುವುದು ಕಾಂಗ್ರೆಸ್ಸಿನ ದಲಿತ ಕಾಳಜಿಗೆ ಕನ್ನಡಿ ಹಿಡಿದಿದೆ. ಆರು ದಶಕಗಳಲ್ಲಿ ತಮ್ಮ ಏಳಿಗೆಗೆ ಏನೂ ಮಾಡದ ಕಾಂಗ್ರೆಸ್ಸನ್ನು ದಲಿತರೂ ಇನ್ನು ಕಣ್ಣುಮುಚ್ಚಿ ನಂಬುತ್ತಾರೆಂದರೆ ಅವರಷ್ಟು ಮೂರ್ಖರು ಯಾರೂ ಇಲ್ಲ. ಕೇಂದ್ರದ ಭಾಜಪಾ ಸರಕಾರ ಸರ್ವರಿಗೂ ಸಮಪಾಲು ಎಂಬ ಸೂತ್ರದಡಿ ಪ್ರತಿಯೊಂದು ಯೋಜನೆಯನ್ನು ಕೈಗೊಂಡಿದೆ. ಮೋದಿಯವರ ಸ್ಮಾರ್ಟ್ ಸಿಟಿಯಲ್ಲಿ ದಲಿತನಿಗೂ ಜಾಗವಿದೆ, ಬಲಿತನಿಗೂ. ಬುಲೆಟ್ ರೈಲುಗಳಲ್ಲಿ ಪ್ರಯಾಣಿಸಲು ಮೇಲ್ವರ್ಗ, ಕೆಳವರ್ಗಗಳೆಂಬ ಭೇದಗಳೇನಾದರೂ ಇದೆಯೇ? ದಲಿತರು ಇನ್ನಾದರೂ ಕಾಕಗಳ ವಿಶ್ವಾಸಘಾತುಕತನವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

         ವಾಸ್ತವದಲ್ಲಿ ಬ್ರಿಟಿಷರು ಭಾರತ ಬಿಟ್ಟು ತೆರಳುವಾಗ ಬ್ರಿಟಿಷ್ ಮಾನಸಿಕತೆ, ಬ್ರಿಟಿಷೀಯತೆಯನ್ನೂ ಒದ್ದೋಡಿಸಬೇಕಿತ್ತು. ಏನೂ ಹೋರಾಟ ಮಾಡದೆ, ಬರಿಯ ಮನವಿ ಸಲ್ಲಿಸುತ್ತಾ, ಕ್ರಾಂತಿಕಾರಿಗಳನ್ನು ದಾರಿ ತಪ್ಪಿದ ದೇಶಭಕ್ತರೆಂದು ಹೀಗಳೆಯುತ್ತಾ, ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ತಮಗಾಗಿಯೇ ಮಾಡಿದ ಸೆರೆಮನೆಗಳೆಂಬ ಅರಮನೆಗಳಿಗೆ ಭೇಟಿ ಕೊಡುತ್ತಾ ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೊನೆಗೆ ಬ್ರಿಟಿಷರನ್ನು ಒದ್ದೋಡಿಸಿದ ಹಿರಿಮೆ-ಗರಿಮೆಯನ್ನು ತನ್ನ ಕಿರೀಟಕ್ಕೆ ಅನಾಯಾಸವಾಗಿ ಸಿಕ್ಕಿಸಿಕೊಂಡ ಕಾಂಗ್ರೆಸ್ ಆಡಳಿತ ಬಂದಾಕ್ಷಣ ಅಳವಡಿಸಿಕೊಂಡಿದ್ದು ಬ್ರಿಟಿಷ್ ಮಾನಸಿಕತೆಯನ್ನೇ, ಬ್ರಿಟಿಷ್ ನೀತಿಯನ್ನೇ! ಸ್ವಜನ ಪಕ್ಷಪಾತ, ಸಮಯಸಾಧಕತನ, ತುಷ್ಟೀಕರಣವನ್ನು ಸ್ವಾತಂತ್ರ್ಯಪೂರ್ವದಲ್ಲೇ ಸಮರ್ಥವಾಗಿ ಮೈಗೂಡಿಸಿಕೊಂಡು ಮೆರೆದ ಈ ಮೈಗಳ್ಳ ಪಕ್ಷ ಬ್ರಿಟಿಷರ ಒಡೆದಾಳುವ ನೀತಿಯನ್ನು ಸುವ್ಯವಸ್ಥಿತವಾಗಿ ತನ್ನ ರಾಜಕೀಯದಲ್ಲಿ ಸೇರಿಸಿಕೊಂಡು ಆರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದ ರುಚಿಯನ್ನುಂಡಿತು. ಅಂತಹ ಪಕ್ಷ ಈಗ ಅಧಿಕಾರದಿಂದ ದೂರ ಉಳಿಯುವುದೆಂದರೆ ಸಹಜವಾಗಿಯೇ ಅದಕ್ಕೆ ಪತರಗುಟ್ಟಿದ ಅನುಭವ. ತನ್ನ ರಾಜಕೀಯ ಪಟ್ಟುಗಳನ್ನೆಲ್ಲಾ ಜನತೆ ನೆನಪಲ್ಲಿಟ್ಟುಕೊಳ್ಳುವುದಿಲ್ಲ, ಜನರ ಜ್ಞಾಪಕ ಶಕ್ತಿ ಅತ್ಯಲ್ಪ ಎನ್ನುವ ಸತ್ಯ ಕಾಂಗ್ರೆಸ್ಸಿಗೆ ಗೊತ್ತು. ಹಾಗಾಗಿ ಇಂತಹ ಎಲ್ಲಾ ಅಪಸವ್ಯವನ್ನು ಮಾಡಿಯೂ ಅದು ಜನರ ಅನುಕಂಪವನ್ನು ಗಳಿಸಿಕೊಂಡು ಸಂಭಾವಿತನಂತೆ ವರ್ತಿಸುತ್ತಲೇ ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ