ಪುಟಗಳು

ಸೋಮವಾರ, ಫೆಬ್ರವರಿ 5, 2018

ಒಲವ ಮುದ್ರೆ

ಮೂಡಣದಿ ನೇಸರನು ಪಡುವಣದಿ ಸೋನೆಮಳೆ
ನಲಿವಿನಲಿ ಸ್ವಾಗತವ ಈಯುತಿರಲು।
ನಳನಳಿಪ ಸುಮವೊಂದು ಪದಕೆರಗಿತು ಬಂದು
ಕಾತರದಿ ಕಣ್ಣುಗಳು ಕಾಯುತಿರಲು॥

ಕಣ್ಣುಗಳು ಕಮಲಗಳು ನಾಸಿಕವೋ ಚಂಪಕವೋ
ತಿಳಿಗಾಳಿ ಕುರುಳಾನಾಡಿಸುತಿರುವ ರಾಗ ।
ಸುರುಚಿರಾನನವು ಕಿರುಗಣ್ಣ ನೋಟವೂ
ಎದೆಯಲ್ಲಿ ಮಂದಾನಿಲ ಬೀಸಿತಾಗ ॥

ಮೌನ ಗೌರಿಯ ಮಾತು ಮುತ್ತು ಸುರಿದಂತೆ
ಕಣ್ಣುಗಳು ಆಪ್ತತೆಯ ಭಾವ ಉಸುರಿ ।
ಒಪ್ಪಿಗೆಯ ಉಸುರುವೆಡೆ ಅಪ್ಪನೆಡೆ ತೋರುವಳು
ನಳಿನಾಕ್ಷಿ ಪೇಳೆನಲು ಲಜ್ಜೆ ತೋರಿ ॥

ಮನಸುಗಳು ಒಂದಾಯ್ತು ಮನೆಯು ನಂದನವಾಯ್ತು
ಬಂಧವಾಗುವ ಬಯಕೆ ಮೊಳಕೆಯೊಡೆಯಿತು ।
ಶಾರಧ್ವತ ಸನ್ನಿಧಿಯೇ ಚಂದ ವೇದಿಕೆಯಾಯ್ತು
ಒಲವ ಮುದ್ರೆಯು ಬೆರಳ ಸೇರಿ ಹೋಯಿತು ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ